Thursday, August 15, 2013

ಆನೆಯ ಮೇಲೆ ಅಂಬಾರಿ ಕಂಡೆ. ಅಂಬಾರಿ ಒಳಗೆ ಕುಂಬಾರಿ ಕಂಡೆ.....ಫೇಸ್ಬುಕ್ ಪ್ರೊಫೈಲ್ ಫೋಟೋ ಪುರಾಣ


ಫೇಸ್ಬುಕ್ ಮ್ಯಾಲೆ ಬರದೇ ಭಾಳ ದಿವಸ ಆಗಿತ್ತು. notifications pending ಅಂತ ಇಮೇಲ್ ಮ್ಯಾಲೆ ಇಮೇಲ್ ಬಂದು ಬೀಳಲಿಕತ್ತಿದ್ದವು. ಫೇಸ್ಬುಕ್ ಮ್ಯಾಲೆ ಯಾರ್ಯಾರು ಏನೇನು ಹೊಲಗೇರಿ ಎಬ್ಬಿಸ್ಯಾರ ಅಂತ ನೋಡೋಣ ಅಂತ ಫೇಸ್ಬುಕ್ ಹೊಕ್ಕೆ ಅಂತ ಆತು.

ಹೆಚ್ಚಿನ notifications ಇದ್ದಿದ್ದು ಮಂದಿ ಅವರವರ ಪ್ರೊಫೈಲ್ ಫೋಟೋ ಚೇಂಜ್ ಮಾಡಿಕೊಂಡಿದ್ದರ ಬಗ್ಗೆ. ಹೆಸರೇ ಫೇಸ್ಬುಕ್. ಅಂದ್ರ ಮುಖ ಪುಸ್ತಕ. ಹಾಂಗಾಗಿ ಆಗಾಗ  ಮುಖ, ಮಾರಿ, ಮಸಡಿ ಫೋಟೋ ಅಂದ್ರ ಪ್ರೊಫೈಲ್ ಫೋಟೋ ಚೇಂಜ್ ಮಾಡಿಕೊಳ್ಳೋದ್ರಾಗ ಏನೂ ತಪ್ಪಿಲ್ಲ ಬಿಡ್ರೀ.

ಯಾರ್ಯಾರು ಪ್ರೊಫೈಲ್ ಫೋಟೋ ಚೇಂಜ್ ಮಾಡಿಕೊಂಡಾರ ಅಂತ ನೋಡಿಕೋತ್ತ ಹೊಂಟೆ. ಯಾಕೋ ಏನೋ ಮೊದಲು ಬರೆ ಗಂಡಸೂರ profiles ಬಂದವು. ಯಾರೂ ಅವರ ಫೋಟೋ ಮ್ಯಾಲೆ ಜಾಸ್ತಿ ಲೈಕ್ಸ್ ಒತ್ತಿದ್ದಿಲ್ಲ. ಅದು ಗಂಡಸೂರ ಕರ್ಮ. ಏನು ಮಾಡೋದು? ಯಾವದಕ್ಕೂ ಇರಲಿ ಅಂತ ಎಲ್ಲರಿಗೂ ಒಂದೊಂದು ಲೈಕ್ ಒತ್ತಿ ಹೊಂಟೆ. ಎಷ್ಟೋ ಮಂದಿ ಗಂಡು ಮುಂಡೆಮಕ್ಕಳ ಫೋಟೋಕ್ಕ ಲೈಕ್ ಒತ್ತಿದ್ದು ನಾನೇ ಮೊದಲು. ಅಲ್ಲಿ ತನಕಾ ಒಂದೂ ಲೈಕ್ ಬಿದ್ದಿದ್ದಿಲ್ಲ. ಫ್ರೆಂಡ್ಸ್ ಅಂದ್ರ ಅಷ್ಟರ ಮಾಡಬೇಕಲ್ಲ.

ಮೊದಲು ಒಬ್ಬವ ಬಕ್ಕ ತಲಿ ಬಕ್ಕಾಸುರ ಕಂಡ. ಯಪ್ಪಾ! ಈ ಬಕ್ಕ ತಲಿಯವರಿಗೆ ಬೆಷ್ಟ್ ಹೇರ್ ಸ್ಟೈಲ್ ಅಂದ್ರ ಇದ್ದ ನಾಕು ಕೂದಲಾ ಸಹಿತ ಬೋಳಿಸಿ ಫುಲ್ ಟಕಳು ಅಥವಾ ಬೋಡಾ ಲುಕ್ ಕೊಡೋದು. ಇವರಿಗೆ ಗೊತ್ತೇ ಇಲ್ಲ, ಬಾಲ್ಡೀ ತಲಿಯವರು ಲೇಡೀಸ್ ಗೆ ಎಷ್ಟು ಸೇರತಾರ ಅಂತ. ಆದ್ರ ಹಿಂಗ ನನ್ನ ಗತೆ ಅವರಿಗೆ ಬ್ಯೂಟಿ ಅಡ್ವೈಸ್ ಕೊಡವರು ಇರಂಗಿಲ್ಲ. ಈ ಬಕ್ಕಾಸುರ ಏನೇನೋ ಕಸರತ್ತು ಮಾಡಿ ಇದ್ದ ಕೂದಲಾ ಹಿಂದ ತೊಗೊಂಡು ಹೋಗಿ, ಅದನ್ನ ಮುಂದ ತಂದು, ಬಾಲ್ಡ್ ಪ್ಯಾಚ್ ಕವರ್ ಮಾಡಿಕೊಂಡಿದ್ದ. ತಲಿ ಮ್ಯಾಲೆ ಕೂದಲ ಇರಲಿಲ್ಲ ಅಂದ್ರ ಏನಾತು ಬ್ಯಾರೆ ಕಡೆ ಕೂದಲಾ ಬಿಟ್ಟು compensate ಮಾಡಿಕೊಂಡರ ಆತು ಅಂತೋ ಏನೋ, ಒಂದು ಹೋತದ ಗಡ್ಡಾ ಬಿಟ್ಟಿದ್ದ. ಆದರೂ ಕೂದಲಾ ಕಮ್ಮಿ ಆತು ಅಂತ ಅನ್ನಿಸಿತೋ ಏನೋ, ಯಾವದಕ್ಕೂ ಇರಲಿ ಅಂತ ಕಿವಿಯೊಳಗೂ ಒಂದು ಕೂದಲದ ಪೊದಿ ಬೆಳಿಸಿ ಜೈ ಅಂದು ಬಿಟ್ಟಿದ್ದ ಹೀರೋ. ಕಿವಿ ಕೂದಲದ ಪೊದಿ ಯಾವ ಸೈಜಿಗೆ ಬಂದಿತ್ತು ಅಂದ್ರ ಏನರ ಚಿಟಗುಬ್ಬಿ ಅಂತಹ ಸಣ್ಣ ಹಕ್ಕಿ ನೋಡಿ ಬಿಟ್ಟರೆ, ಗೂಡು ಕಟ್ಟು ಉಸಾಬರಿನೇ ಬ್ಯಾಡ ಅಂತ ಹೇಳಿ, ಇವನ ಕಿವಿ ಕೂದಲ ಪೊದಿಯಾಗs ಗೂಡು ಮಾಡಿ, ಮೊಟ್ಟಿ ಇಟ್ಟು, ಕಾವು ಕೊಟ್ಟು, ಮರಿ ಮಾಡಿಕೊಂಡು ಹೋಗಿ ಬಿಡ್ತಿತ್ತು. ಆ ಪರಿ 'ಖೋಸ್ಲಾ ಕಾ ಘೋಸಲಾ' ಅನ್ನೋ ಹಾಂಗ ಕಿವಿಕೂದಲದ ಪೊದಿ ಈ ಬಕ್ಕ ತಲಿ ಬಕ್ಕಾಸುರಂದು. ದೇವರು ಒಂದು ಕೈಯಾಗ ಕಿತ್ತುಗೊಂಡರ ಇನ್ನೊಂದು ಕೈಯ್ಯಾಗ ಕೈ ಬಿಚ್ಚಿ ಕೊಡ್ತಾನ ಅನ್ನೋದು ಸುಳ್ಳಲ್ಲ ನೋಡ್ರೀ. ತಲಿ ಮ್ಯಾಲಿನ ಕೂದಲಾ ಕಿತ್ತುಗೊಂಡು ಕಿವಿಯೊಳಗ ಕೂದಲಾ ಹುಲುಸಾಗಿ ಕೊಟ್ಟು ಬಿಟ್ಟಿದ್ದ. ನಾವೂ ಜೈ ಅಂದು ಒಂದು ಲೈಕ್ ಒತ್ತಿಬಿಟ್ಟೆ. ಚೈನಿ ಮಾಡ ನೀ ಚಿಟಗುಬ್ಬಿ ಗೂಡಿನ ಮಾಲೀಕ ಮಂಗ್ಯಾನಿಕೆ!

ಮುಂದ ಇನ್ನೊಬ್ಬವಾ ರೇಲ್ವೆ ಹಳಿ ಮ್ಯಾಲೆ ಊದ್ದಕ್ಕ ಮಲ್ಕೊಂಡು ಬಿಟ್ಟಿದ್ದ. ಆ ಫೋಟೋ ಪ್ರೊಫೈಲ್ ಫೋಟೋ ಅಂತ ಹಾಕಿಕೊಂಡು ಬಿಟ್ಟಿದ್ದ! ಯಾಕೋ ಏನೋ?! ಘಾಬರಿ ಆತು. ಇದ್ದಾನೋ ಸತ್ತಾನೋ ಅಂತ ಡೌಟ್ ಬಂತು. ಆವ ಅಲ್ಲೇ ಫೇಸ್ಬುಕ್ ಚಾಟ್ ಮ್ಯಾಲೆ ಕಂಡ. ಹಾಯ್, ಅಂದೆ. ಏನಲೇ! ಇನ್ನೂ ಜೀವಂತ ಇದ್ದೀಯಾ? ತೆಗಿ ಆ ದರಿದ್ರ ಫೋಟೋ, ಅಂತ ಝಾಡಿಸಿದೆ. ಯಾಕ? ಅಂತ ಕೇಳಿದ. ಮಂಗ್ಯಾನಿಕೆ! ಅದನ್ನ ಈಗ ತೆಗಿಲಿಲ್ಲ ಅಂದ್ರ ಸುಯಿಸೈಡ್ ಅಟೆಂಪ್ಟ್ ಅಂತ ಪೊಲೀಸರಿಗೆ ಹೇಳಿ ಬಿಡ್ತೇನಿ ನೋಡು! ಅಂತ ಹೇಳಿದ ಮ್ಯಾಲೆ ಆವಾ ಆ ಫೋಟೋ ತೆಗೆದ. ಬ್ಯಾರೆ ಫೋಟೋ ಇನ್ನೂ ಹಾಕಿಲ್ಲ. ಏನು ಕಥಿನೋ ಏನೋ?

ಮುಂದಿನವಾ ಡೊಳ್ಳು  ಹೊಟ್ಟಿ ಒಳಗ ಎಳಕೊಂಡು ಸಿಕ್ಸ್ ಪ್ಯಾಕ್ ಪೋಸ್ ಕೊಟ್ಟಿದ್ದ. ಸಾಕು ಬಿಡಪಾ! ನೀವೆಲ್ಲಾ ಫ್ಯಾಮಿಲಿ ಪ್ಯಾಕ್ ಮಂದಿ.  ಹೊಟ್ಟಿ ಮತ್ತೊಂದು ಎಷ್ಟೇ ಒಳಗ ಎಳಕೊಂಡರೂ ಏನೂ ಫರಕ್ ಆಗೋದಿಲ್ಲ. ಸುಮ್ಮನ ಇದ್ದ ಹೊಟ್ಟಿ ಆರಾಮ ಬಿಟ್ಟುಗೊಂಡು, ತೋರಿಸಿಕೊಂಡು, ಆ ಪರಿ ಉಸರ ಕಟ್ಟಿ ಸಾಯದೇ, ಆರಾಮ ಇರಪಾ, ಅಂತ ಹೇಳೋಣ ಅಂತ ಮಾಡಿದೆ. ಬ್ಯಾಡ ಅಂತ ಬಿಟ್ಟೆ. ಅವಂಗೂ ಒಂದು ಲೈಕ್ ಒತ್ತಿದೆ.

ಮುಂದ ಸುಮಾರು ಗಂಡಸೂರ ಪ್ರೊಫೈಲ್ ಫೋಟೋ ಚೇಂಜ್ ಆಗಿದ್ದನ್ನ ನೋಡಿಕೋತ್ತ ಹೋದೆ. ಎಷ್ಟೋ ಫೋಟೋಗಳಿಗೆ ಲೈಕ್ ಒತ್ತಿದವರೊಳಗ ನಾನೇ ಮೊದಲು. ಗಂಡು ಮುಂಡೇವುಗಳ ನಸೀಬಾ ಅಷ್ಟ. ಯಾರೂ ಲೈಕ್ ಒತ್ತಂಗಿಲ್ಲ.

ಇರಲಿ ಅಂತ ಮುಂದಿನ ಪ್ರೊಫೈಲ್ ಫೋಟೋ ಯಾರು ಚೇಂಜ್ ಮಾಡ್ಯಾರ ಅಂತ ನೋಡಿದೆ. ಬಂದಳು ಒಬ್ಬಾಕಿ. ಹ್ಞೂ....ಚಂದ ಇದ್ದಾಳ. ಏನು ಚೇಂಜ್ ಆಗ್ಯಾಳ ಅಂತ ಪ್ರೊಫೈಲ್ ಫೋಟೋ ಚೇಂಜ್ ಮಾಡಿರಬಹುದು ಅಂತ ನೋಡಿದೆ. ರವಗಾಜು (magnifying glass) ಹಚ್ಚಿ ನೋಡಿದೆ. ಏನೂ ಫರಕ್ ಕಾಣಲೇ ಇಲ್ಲ. ಹಳೇ ಫೋಟೋ ಹ್ಯಾಂಗ ಅದನೋ ಹಾಂಗೇ ಇದ್ದಾಳ. ಮತ್ತ ಎಲ್ಲೆ ಹಳೆ ಫೋಟೋನೇ ಹಾಕಿಬಿಟ್ಟಾಳೋ ಅಂತ ನೋಡಿದೆ. ಆದ್ರ ಟೈಮ್ ಅಂಡ್ ಡೇಟ್ ಲೇಟೆಸ್ಟ್ ಇತ್ತು. ಯಾಕ ಹಳೆ ಲುಕ್ಕಿನ ಹೊಸಾ ಫೋಟೋ ಹಾಕ್ಕೊಂಡಿ ಅಂತ ಕೇಳಬೇಕು ಅಂತ ಮಾಡಿದೆ. ಕೇಳೇ ಬಿಟ್ಟೆ. ಆ ಗೂಳವ್ವಾ ಅಲ್ಲೇ ಫೇಸ್ಬುಕ್ ಚಾಟ್ ಮ್ಯಾಲೆ ಇದ್ದಳು.

ಅಯ್ಯ ಇಕಿನ!ಯಾಕ ಬ್ಯಾರೆ ಫೋಟೋ ಹಾಕ್ಕೊಂಡಿ? ಅಂತ ಕೇಳೇ ಬಿಟ್ಟೆ.

ಅಕಿ ವಾಪಸ್ ನನಗೇ ಕೇಳಿದಳು, ಏನಂತ ಗೊತ್ತಾಗಲಿಲ್ಲ ನಿನಗ? - ಅಂತ.

ಇಲ್ಲ ಗೊತ್ತಾಗಲಿಲ್ಲ. ನಮ್ಮ ಮನಿ ದೇವರಾಣಿ ಗೊತ್ತಾಗಲಿಲ್ಲ, ಅಂತ ಹೇಳಿದೆ.

ಸರೀತ್ನಾಗಿ ನೋಡೋ, ಅಂತ ಮತ್ತ ಹೇಳಿದಳು.

ನಮ್ಮ ಸೋಡಾ ಗ್ಲಾಸ್ ಮ್ಯಾಲೆ ರವಗಾಜು ಹಚ್ಚಿ ನೋಡಿದೆ. ಆದರೂ ಏನಂತ ತಿಳಿಲಿಲ್ಲ.

ಇಲ್ಲವಾ, ಏನೂ ತಿಳಿಲಿಲ್ಲ. ಈ ಫೋಟೋಕ್ಕ ಮತ್ತ ಹಳೆ ಫೋಟೋಕ್ಕ ಏನು ವ್ಯತ್ಯಾಸ? ವಸ್ತ್ರಾ, ನಿನ್ನ ತಲಿ ರಿಬ್ಬನ್ನು ಸಹಾ ಸೇಮ್ ಅದ. ಹಾಂಗಿದ್ದಾಗ ಏನು ವ್ಯತ್ಯಾಸ? ಯಾಕ ಬ್ಯಾರೆ ಫೋಟೋ ಹಾಕ್ಕೊಂಡಿ? ಅಂತ ಕೇಳಿದೆ.

ಅಕಿ ಸ್ವಲ್ಪ ಇರ್ರಿಟೇಟ್ ಆಗಿ, ಸರಿ ಮಾಡಿ ನೋಡೋ ಕುಡ್ಡ ಮಂಗ್ಯಾನಿಕೆ. ಒಂದು ಕೇಜೀ ವೇಟ್ ಕಮ್ಮಿ ಮಾಡಿಕೊಂಡೇನಿ. ಮತ್ತ ಕೂದಲಕ್ಕ ಮೆಹಂದಿ ಹಚ್ಚಿಗೊಂಡೆನೀ. ಅಷ್ಟೂ ಗೊತ್ತಾಗಲಿಲ್ಲ? ಈಡಿಯಟ್, ಅಂತ ಬೈದು ಬಿಡಬೇಕಾ!!! ಹಾಂ!!!!

ಏನು ಮಂದಿ ಇರ್ತಾರಪಾ? ಒಂದು ಕೇಜೀ ತೂಕ ಯಾವಾಗ ಹೆಚ್ಚು ಆಗ್ತದೋ ಕಮ್ಮಿ ಆಗ್ತದೋ? ಒಂದು ಸರೆ ಹೋಗಿ ಒಂದು ಶ್ರಾದ್ಧದ ಊಟ ಮಾಡಿ ಬಂದ್ರ ಒಂದಲ್ಲ ಎರಡು ಕೇಜೀ ತೂಕ ಜಾಸ್ತಿ ಆಗ್ತದ. ಒಂದು ದಿವಸ ಉಪವಾಸ ಮಾಡಿಬಿಟ್ಟರ ಎರಡು ಕೇಜೀ ಕಮ್ಮಿ ಆಗಿ ಬಿಡ್ತದ. ಏನು ಇಷ್ಟು ತಾತ್ಕಾಲಿಕ ಧಪ್ಪ ಆಗೋದು ತೆಳ್ಳಗ ಆಗೋದಕ್ಕೆಲ್ಲಾ ತಲಿ ಕೆಡಿಸಿಕೊಂಡು ಫೋಟೋ ಹಾಕ್ಕೋತ್ತಾರೋ. ಮತ್ತ ಅದನ್ನ ಮಂದಿ ಬ್ಯಾರೆ ನೋಟೀಸ್ ಮಾಡ್ಲಿ ಅಂತ ಬ್ಯಾರೆ. ಇನ್ನ ಮೆಹಂದಿ ಬ್ಯಾರೆ. ಅದೂ ತಲಿಗೆ!

ಏನು ಮೆಹಂದಿನೇ? ತಲಿಗ್ಯಾಕ ಹಚ್ಚಿಗೊಂಡಿ? - ಅಂತ ಕೇಳಿದೆ.

ಅಕಿ ತಲಿ ಕೆಟ್ಟಿತ್ತು ಅಂತ ಅನ್ನಸ್ತದ. ತಲಿ ಅಲ್ಲದ ಮತ್ತೆಲ್ಲೆ? ಮಾರಿಗೆ ಹಚ್ಚಿಗೊಳ್ಳಲಿ ಏನು? ಅಂತ ಕೇಳಿದಳು.

ಏ ಮಾರಿಗೆ ಯಾಕ? ಮಾರಿಗೆ ಮೆಹಂದಿ ಬ್ಯಾಡವಾ. ಮಾರಿಗೆ ಅರಿಶಿಣ ಹಚ್ಚಕೋ. ಮುತ್ತೈದಿ ಮಾರಿಗೆ ಅರಿಶಿಣ ಶೋಭಿಸ್ತದ. ಮೆಹಂದಿ ಕೈಗೆ ಹಚ್ಚಿಗೊಳ್ಳೋದು ಗೊತ್ತಿತ್ತು. ತಲಿಗೆ ಹಚ್ಚಿಗೊಳ್ಳೋದು ಗೊತ್ತ ಇರಲಿಲ್ಲ ಬಿಡು. ಏನೋ ಏನೋ. ಹಚ್ಚಿಗೊಂಡಿ ಅಂದ್ರ ಬೆಷ್ಟ ಆತು ತಗೋ. ಎಲ್ಲೆ ಲಗ್ನಕ್ಕ ಹೋಗಿದ್ದಿ ಏನು? ಅಂತ ಕೇಳಿದೆ.

ಅದೆಲ್ಲಾ ಆ ಮ್ಯಾಲೆ ಹೇಳ್ತೆನಿ. ಫೋಟೋದಾಗ ಹ್ಯಾಂಗ ಕಾಣ್ತೀನಿ? ಹೇಳೋ. ಚಂದ ಕಾಣ್ತೆನಿ ಅಂತೇ ಹೇಳಬೇಕು ಮತ್ತ, ಅಂತ ತಾಕೀತು ಮಾಡಿ ಕಣ್ಣು ಹೊಡೆದಳು.

ಮತ್ತ ಹೋಗಿ ಫೋಟೋ ನೋಡಿದೆ. ಎಣಿಸಿ ಎಣಿಸಿ ಒಂದು ನೂರಾ ತೊಂಬತ್ತ್ರೋಂಬತ್ತು (೧೯೯) ಮಂದಿ ಒತ್ತಿ ಬಿಟ್ಟಿದ್ದರು ಇಕಿದು. ಅಂದ್ರ ಇಕಿ ಫೋಟೋ ಮ್ಯಾಲೆ ಲೈಕ್ ಒತ್ತಿ ಬಿಟ್ಟಿದ್ದರು ಅಂತ ಅಷ್ಟ. ಮೊದಲೇ ಹಾಪ್ ತಲಿ ಮಂದಿ ನೀವೆಲ್ಲಾ . ಅಕಿದು ಏನು ಒತ್ತಿಬಿಟ್ಟರೋ ಅಂತ ಘಾಬರಿ ಆಗ ಬ್ಯಾಡ್ರೀ.

ಒಂದು ನೂರಾ ತೊಂಬತ್ತ್ರೋಂಬತ್ತು ಭಾಳ ಅಡ್ಡ ನಂಬರ್ ಅಂತ ಹೇಳಿ ನಾನೂ ಒಂದು ಲೈಕ್ ಒತ್ತಿ ಫುಲ್ ಎರಡನೂರು ಮಾಡಿಬಿಟ್ಟೆ.

ನಾ ಈ ಕಡೆ ಒತ್ತಿದ್ದ ಒತ್ತಿದ್ದು ಆ ಕಡೆ ಅಕಿ ಏಕ್ದಂ ಝಟಕಾ ಹೊಡದವರಾಂಗ, ಆವ್(aaawww), ಆವ್(Awww) ಅಂತ ಉದ್ಗಾರ ತೆಗೆದಳು. ಅದು ನಾ ಅಕಿ ಫೋಟೋಕ್ಕ ಲೈಕ್ ಒತ್ತಿದ್ದಕ್ಕ ಅಕಿ ಲೈಕ್ ಮಾಡಿದ ಪರಿ ಅದು. ಅದೇನು ಈ ಹೆಂಗಸೂರು ಮಾತಿಗೊಮ್ಮೆ ಆವ್ ಆವ್ ಅಂತಾವೋ? ಆವ್ ಆವ್ ಅನ್ನೋದಕ್ಕ ಇರಬೇಕು ಇವರಿಗೆ 'ಆವ್ ರತ್' (ಔರತ್) ಅಂತ ಅನ್ನೋದು. ಆವ್ ರತ್ (ಔರತ್) ಆವ್ ಆವ್ ನ ಕರೇಗೀ ತೋ ಕವ್ವೆ ಕಿ ತರಹ ಕಾವ್ ಕಾವ್ ಕರೇಗೀ ಕ್ಯಾ? ಇರಲಿ ಅಂತ ಬಿಟ್ಟೆ.

ಲೈಕ್ ಒತ್ತಿಸಿಕೊಂಡು ಖುಷಿ ಆದ ಅಕಿ ಕೇಳಿದಳು. ನನ್ನ ತಲಿ ಮೆಹಂದಿ ನೋಡಿ, ಯಾಕ ಲಗ್ನಕ್ಕ ಹೋಗಿದ್ದಿ ಅಂತ ಕೇಳಿದಿ? ಅಂತ ಕೇಳಿದಳು.

ಅಲ್ಲಾ ನೋಡು...ಲಗ್ನದಾಗ ಹುಡುಗಿಗೆ ಕೈ ಮ್ಯಾಲೆ ಮತ್ತೊಂದು ಕಡೆ ಡಿಸೈನ್ ಡಿಸೈನ್ ಆಗಿ ಮೆಹಂದಿ ಹಚ್ಚತಾರ ನೋಡು. ಕನ್ಯಾಕ್ಕ ಹಚ್ಚಿ ಮುಗಿದ ಮ್ಯಾಲೆ ಉಳಿದ ಪಳಿದ ಮೆಹಂದಿ ನಿನ್ನ ತಲಿಗೆ ಪೇಂಟ್ ಹೊಡೆದಾಂಗ ಹೊಡೆದು ಹೋದಂಗ ಕಾಣ್ತದ. ಅದಕ್ಕ ಕೇಳಿದೆ ಎಲ್ಲೆ ಲಗ್ನಕ್ಕ ಹೋದಾಗ ಫ್ರೀ ಒಳಗ ನಿನ್ನ ತಲಿಗೆ ಮೆಹಂದಿ ಪೇಂಟ್ ಹೊಡಿಸಿಕೊಂಡು ಬಂದು ಬಿಟ್ಟಿಯೋ ಅಂತ? ಹೊಡೆಸಿಕೊಂಡು ಬಂದಿ? ಯಾವ ನಮ್ಮನಿ ಬ್ರಷ್ ಒಳಗ ನಿನ್ನ ತಲಿಗೆ ಪೇಂಟ್ ಅಲ್ಲಲ್ಲ ಮೆಹಂದಿ ಹೊಡೆದಳು ಮೆಹಂದಿ ಪೇಂಟರ್? ಅಂತ ಕೇಳಿ ಬಿಟ್ಟೆ.

ಅಕಿ ಏಕದಂ ಸಿಟ್ಟಿಗೆದ್ದು, ಈಡಿಯಟ್, ಅಂತ ಫೇಸ್ಬುಕ್ ಚಾಟ್ ಮ್ಯಾಲೇ ಚಿಟಿ ಚಿಟಿ ಚೀರಿಕೊಂಡಳು.

ಮಂಗ್ಯಾನಿಕೆ.....ನಾನು ಕಷ್ಟ ಪಟ್ಟು ಬಿಳಿ ಆದ ಒಂದೊಂದೇ ಕೂದಲಾ ಹುಡುಕಿ ಹುಡುಕಿ, ತಾಸು ಗಟ್ಟಲೇ ಶ್ರಮಾ ತೊಗೊಂಡು, ಡೆಲಿಕೇಟ್ ಆಗಿ ಮೆಹಂದಿ ಹಚ್ಚಿಗೊಂಡರಾ, ಮನಿಗೆ ಸುಣ್ಣಾ ಬಣ್ಣಾ ಮಾಡಿಸಿದಾಂಗ ಪೇಂಟ್ ಹೊಡಿಸಿಕೊಂಡು ಬಂದೇನೇನು ಅಂತ ಕೇಳ್ತಿಯಲ್ಲೋ!? ಖಬರಗೇಡಿ ತಂದು, ಅಂತ ಸಿಟ್ಟಿನ್ಯಾಗ ಹೇಳಿದಾಕಿನೇ bye ಸಹಾ ಹೇಳದೇ ಹೋಗಿ ಬಿಟ್ಟಳು.

ನನಗೇನು ಗೊತ್ತು ತಲಿಗೆ ಬ್ಯಾರೆ ಮೆಹಂದಿ ಹಚ್ಚಗೋತ್ತಾರ ಅಂತ. ಲಗ್ನದಾಗ ಕನ್ಯಾ ಕೈ ಮ್ಯಾಲೆ ಮೆಹಂದಿ ಹಚ್ಚಾಕಿ ಕಡೆ ತಲಿಗೆ ಪೇಂಟ್ ಹೊಡಿಸಿಕೊಂಡು ಬಂದಿ ಅಂತ ಕೇಳಿದರ ಶಟಗೊಂಡು ಬಿಟ್ಟಳು. ತಲಿಗೆ ಪೇಂಟ್ ಸರ್ವಿಸ್ ಆಗ್ಯದ ಅಂತ ಗೊತ್ತಾತು ನೋಡ್ರೀ, ಮತ್ತ ಫೋಟೋ ನೋಡಿದೆ. ರವಗಾಜು ಹಚ್ಚಿ ನೋಡಿದೆ. ಹಾಂ ಈಗ ಕರಿ ಕೆಂಪು ಮಂಡೆ ಕಂಡ್ತು. ಹಿಂದಿನ ಫೋಟೋ ಒಳಗ ಕೇವಲ ಕರಿ ಮಂಡೆ ಇತ್ತು. ಇವರ ಮಂಡೆ ಕಲರ್ ಚೇಂಜ್ ಆಗಿ ನಮಗ ಗೊತ್ತಾಗಲಿಲ್ಲ ಅಂದ್ರ ಅವರೂ ಅವರ ಮಂಡೆ ಬಿಸಿ ಮಾಡಿಕೊಂಡು ನಮ್ಮದೂ ಮಂಡೆ ಮತ್ತೊಂದು ಬಿಸಿ ಮಾಡಿ ಬಿಡ್ತಾರ. ಇಷ್ಟರಾಗ ಇನ್ನೂ ಮೂವತ್ರೋಂಬತ್ತು (೩೯) ಮಂದಿ ಮತ್ತ ಲೈಕ್ ಒತ್ತಿ ಬಿಟ್ಟಿದ್ದರು. ಎರಡು ನೂರಾ ಮೂವತ್ರೋಂಬತ್ತು ಮಂದಿ ಲೈಕ್ ಒತ್ತ್ಯಾರ ಇಕಿ ಹೊಸಾ (?) ಫೋಟೋ ಮ್ಯಾಲೆ. ಏನು ಕಂಡು ಒತ್ತಿದರೋ ಏನೋ? ಅಥವಾ ನನಗ ಝಾಡಿಸಿದಾಂಗ ಅವರಿಗೂ ಝಾಡಿಸಿ ಝಾಡಿಸಿ ಒತ್ತಿಸಿಕೊಂಡಿರಬೇಕು. ಈ ಹೆಂಗಸೂರೋ ಇವರ ವೇಷವೋ! ದೇವರಿಗೂ ಗೊತ್ತಾಗಂಗಿಲ್ಲ ಬಿಡ್ರೀ.

ಮುಂದಿನ ಪ್ರೊಫೈಲ್ ಗೆ ಹೋದೆ. ಮತ್ತೊಬ್ಬ ಔರತ್ ಪ್ರೊಫೈಲ್. ಇಕಿನೂ ಬ್ಯಾರೆ ಫೋಟೋ ಹಾಕಿಕೊಂಡು ಬಿಟ್ಟಾಳ. ಹಾಂ! ಇಕಿ ಫೋಟೋ ನೋಡಿದರ ಬ್ಯಾರೆ ಅದ ಅಂತ ಗೊತ್ತಾತು. ಮೊದಲು ಇದ್ದ ಹೇರ್ ಸ್ಟೈಲ್ ಈಗ ಇದ್ದ ಹೇರ್ ಸ್ಟೈಲ್ ಬ್ಯಾರೆ ಇತ್ತು. ಫುಲ್ ಫರಕ್ ಅದ. ಹಾಂಗಾಗಿ ರವಗಾಜು ಹಚ್ಚಿ ಡೀಪ್ ಸ್ಕ್ಯಾನ್ ಮಾಡೋದು ಬೇಕಾಗಲಿಲ್ಲ. ಒತ್ತಿ ಬಿಟ್ಟೆ ಇಕಿದೂ....ಪ್ರೊಫೈಲ್ ಫೋಟೋ ಮ್ಯಾಲೆ ಲೈಕ್.

ಒತ್ತಿದಾಕ್ಷಣ ಅದನ್ನೇ ಕಾಯ್ಕೋತ್ತ ಇದ್ದವರಂಗ ಫೇಸ್ಬುಕ್ ಮ್ಯಾಲೆ, ಹಾಯ್!, ಅಂದೇ ಬಿಟ್ಟಳು. ಹೈರಾಣ ಆದೆ. ಏನಪಾ ಆ ಫೇಸ್ಬುಕ್ notification ಕ್ಯಾಂ ಕ್ಯೂಂ ಅಂದ ಕೂಡಲೇ ತಾಪಡತೋಪ್ ನೋಡಿ ಹೈ ಅಂತಾರ.  ಅದು ಹ್ಯಾಂಗೋ ಏನೋ?

ಏನ ಹುಡಗಿ? ಹೊಸಾ ಫೋಟೋ ಹಾಕ್ಕೊಂಡು ಬಿಟ್ಟಿ? ಏನು ಸ್ಪೆಷಲ್? ಅಂತ ಕೇಳಿದೆ.

ಏನಿಲ್ಲಪಾ, ಹಳೆ ಫೋಟೋ ನೋಡಿ ನೋಡಿ ಬ್ಯಾಸರಾ ಆತು. ಭಾಳ ದಿವಸಾ ಆಗಿತ್ತು ಯಾರೂ ಏನೂ ಒತ್ತೇ ಇರಲಿಲ್ಲ. ಅಂದ್ರ ಲೈಕ್ ಒತ್ತೇ ಇರಲಿಲ್ಲ. ದಿನಕ್ಕ ಒಂದು ಹದಿನೈದಿಪ್ಪತ್ತ ಮಂದಿ ಒತ್ತಲಿಲ್ಲ ಅಂದ್ರ ನನಗ ನಿದ್ದಿ ಬರಂಗಿಲ್ಲ ನೋಡು. ಮಂದಿ ಒತ್ತಲಿ ಅಂದ್ರ ಲೈಕ್ ಒತ್ತಲಿ ಅಂತ ಬ್ಯಾರೆ ಫೋಟೋ ಹಾಕಿ ಬಿಟ್ಟೆ. ಅಷ್ಟ. ಹ್ಯಾಂಗ ಕಾಣ್ತೇನಿ? - ಅಂತ ಕೇಳೇ ಬಿಟ್ಟಳು.

ಈ ಆವ್ ಆವ್ ಮಾಡೋ ಆವ್ ರತ್ ಮಂದಿ ಕಡೆ ಕಾವ್ ಕಾವ್ ಬೈಸ್ಕೊಂಡು ಗೊತ್ತಾಗಿತ್ತಲ್ಲ, ಲಗೂನ ಲೈಕ್ ಒತ್ತಿ, ಮಸ್ತ ಕಾಣಸ್ತಿ ಅಂತ ಮೆಸೇಜ್ ಮಾಡಿ ಕೈಮುಗದು ನಿಂತೆ. ಥೇಟ್ ಭಕ್ತ ಪ್ರಹಲ್ಲಾದನ ಹಾಂಗ.

ಇಕಿನೂ, ಆವ್!!! ಆವ್!!! ಸೋ ಸ್ವೀಟ್!! ಅಂತ ಇಲ್ಲದ ನಕರಾ ಮಾಡಿ ಥ್ಯಾಂಕ್ಸ್ ಹೇಳಿದಳು. ಅದೂ ಪ್ರಸಾದ ಕೊಡೋ ಹಾಂಗ. ಇಕಿ ಫೋಟೋ ನೋಡಿ, ಲೈಕ್ ಮಾಡಿ, ಚಂದ ಇದ್ದಿ ಅಂತ ಹೇಳಿದ್ದು ನನ್ನ ಪುಣ್ಯಾ ಏನೋ ಅನ್ನವರಂಗ, ಫುಲ್ ಸ್ಕೋಪ್ ತೊಗೊಂಡು, ನಕರಾ ಮಾಡಿಕೋತ್ತ ಥ್ಯಾಂಕ್ಸ್ ಅಂತಾಳ. ಅ.....ಅ.....!!! ಇದೊಳ್ಳೆ ಅದೇನೋ ಅಂತಾರಲ್ಲ ರೊಕ್ಕಾ ಕೊಟ್ಟು ಏನೋ ಕೊಯಿಸಿಕೊಂಡರು ಅನ್ನೋ ಹಾಂಗ ಆತು.

ನಾ ಬರ್ತೇನವಾ. ಹೀಂಗಾ ಮ್ಯಾಲಿಂದ ಮ್ಯಾಲೆ ಪ್ರೊಫೈಲ್ ಫೋಟೋ ಚೇಂಜ್ ಮಾಡಿಕೋತ್ತ ಇರು, ಆಗಾಗ ಬಂದು ಒತ್ತಿ ಅಂದ್ರ ಲೈಕ್ ಒತ್ತಿ ಹೋಗ್ತೇನಿ ಅಂತ ಹೇಳಿ ಬಂದೆ. ನೋಡಿದರ ಇಕಿಗೂ ಸುಮಾರು ನೂರಾ ಐವತ್ತು ಮಂದಿ ಒತ್ತಿ ಹೋಗಿ ಬಿಟ್ಟಾರ. ಹೋಗ್ಗೋ!!! ಅವನೌನ್!!!!ಹುಡುಗುರು ಪ್ರೊಫೈಲ್ ಫೋಟೋ ಚೇಂಜ್ ಮಾಡಿಕೊಂಡರ ಒಂದು ಹತ್ತು ಮಂದಿ ಲೈಕ್ ಒತ್ತಿದರ ಮ್ಯಾಕ್ಸಿಮಮ್. ಹುಡುಗುರು ಒತ್ತಿಂಗಿಗೆ ಅಷ್ಟು ಅಡಿಕ್ಟ್ ಆಗಿಲ್ಲ ಅಂತ ಅನ್ನಸ್ತದ. ಇಕಿ ಒತ್ತಿಂಗಿಗೆ ಇಷ್ಟು ಅಡಿಕ್ಟ್ ಆಗಿ ಬಿಟ್ಟಾಳ! ಪಾಪ ಹುಡುಗಿ! ಅದ್ಯಾವದೋ ಹಾಲಿವುಡ್ ಫಿಲಂ ಆಕ್ಟರ್ ಇದ್ದ ಅಂತ. ಆವಾ ರಾತ್ರಿ ಮಲಗೋವಾಗ ಅವನ ಯಾವದೋ ಒಂದು ಫಿಲ್ಮಿಗೆ ಅವಾರ್ಡ್ ಬಂದಾಗ ಮಂದಿ ಚಪ್ಪಾಳಿ ಹೊಡೆಯೋ ರೆಕಾರ್ಡಿಂಗ್ ಕೇಳಿಕೋತ್ತ ಮಲ್ಕೋತ್ತಿದ್ದ ಅಂತ. ಮಂದಿ ಚಪ್ಪಾಳಿ ಹೊಡೆಯೋದು ಕೇಳಲಿಲ್ಲ ಅಂದ್ರ ಅವಂಗ ನಿದ್ದಿ ಬರ್ತಿದ್ದಿಲ್ಲ ಅಂತ. ಇಕಿಗೆ (ಲೈಕ್) ಒತ್ತಿಸಿಕೊಳ್ಳದಿದ್ದರ ನಿದ್ದಿ ಇಲ್ಲ. ಅವಂಗ (ಚಪ್ಪಾಳಿ) ಹೊಡೆಸಿಕೊಳ್ಳಲಿಲ್ಲ ಅಂದ್ರ ನಿದ್ದಿ ಇಲ್ಲ. ಇದು ಎಂಥಾ ಲೋಕವಯ್ಯಾ?!!!! ಒತ್ತಿಸಿಕೊಳ್ಳದೆ, ಹೊಡೆಸಿಕೊಳ್ಳದೆ, ಜಡಿಸಿಕೊಳ್ಳದೆ ನಿದ್ದೆ ಬರದ ಇದು ಎಂತಾ ಲೋಕವಯ್ಯಾ?!!!ಇದು ಎಂಥಾ ಲೋಕವಯ್ಯಾ?!!!!

ಮುಂದಿನದು ಮತ್ತೊಬ್ಬಾಕಿದು. ವಿಚಿತ್ರ ಫೋಟೋ ಇತ್ತು. ಎಲ್ಲೋ ಬಸ್ಸಿನಾಗ ನಿದ್ದಿಗಣ್ಣು ಮಸಡಿ ಮಾಡಿಕೊಂಡು ಕೂತಾಳ. ಬಾಜೂಕ ಯಾರೋ ಬಿಳಿ ಕೂದಲದ ಅಜ್ಜನ ಲುಕ್ ಇರೋ ಆದಮೀ ಬ್ಯಾರೆ. ಇಬ್ಬರೂ ಕೂಡೇ ಒಂದೇ ರಗ್ಗೋ ಶಾಲೋ ಏನೋ ಹೊದಕೊಂಡು ಕೂತಾರ. ಆ ಅಜ್ಜಾವರ ಲುಕ್ ಏನು ಹೇಳಲಿ?! ಇಕಿದು ನಿದ್ದಿಗಣ್ಣು ಆದರ ಅಕಿ ಬಾಜೂಕ ಕೂತ ಅಜ್ಜಾವರು ಫುಲ್ ನಿದ್ದಿ ಹೊಡೆದೇ ಬಿಟ್ಟಾರ. ಅವರಿಗೆ ಫೋಟೋ ತೆಗೆದಿದ್ದು ಖಬರೂ ಇದ್ದಂಗ ಇಲ್ಲ. ಫುಲ್ ಕಣ್ಣು ಮುಚ್ಚಿ, ಬಾಯಿ ಇಷ್ಟು ದೊಡ್ಡ ಹಾ ಅಂತ ಬಿಟಗೊಂಡು, ಕಟಬಾಯಿ ಒಳಗ ಜೊಲ್ಲು ಸುರಿಸಿಕೋತ್ತ, ಅಜ್ಜಾವರ ತಲಿ ಜೋಲಿ ಹೊಡದು ಹೊಡದು, ಇಕಿ ತೊಡಿಗಳ ನಡು ಬಂದು ಬಿದ್ದದ. ಇಕಿ ಮಾತ್ರ  ಅಂತಾ ನಿದ್ದಿಗಣ್ಣಾಗೂ ನಿದ್ದಿಬಡಕ ಸ್ಮೈಲ್ ಕೊಟ್ಟು ಬಿಟ್ಟಾಳ. ಅದನ್ನ ಯಾರೋ ಫೋಟೋ ತೆಗೆದು ಬಿಟ್ಟಾರ. ಇಕಿ ಅದನ್ನ ಪ್ರೊಫೈಲ್ ಫೋಟೋ ಅಂತ ಹಾಕಿಕೊಂಡು ಬಿಟ್ಟಾಳ. ಏನರೆ ಇರಲಿ. ಆವ್ ಆವ್  ಮಾಡೋ ಆವ್ ರತ್ ಫೋಟೋ ಅಂದ್ರ ಒಂದು ಲೈಕ್ ಒತ್ತೇ ಮುಂದಿನ ಮಾತು. ಒತ್ತೇ ಬಿಟ್ಟೆ. ಇಕಿನೂ ಫೇಸ್ಬುಕ್  ಮ್ಯಾಲೆ ಇದ್ದಳು ನೋಡ್ರೀ. ಶುರು ಮಾಡೇ ಬಿಟ್ಟಳು.

Awww!!!Awww!!! you liked my new pic? ಅಂತ ಕೇಳಿದಳು.

ಏನು ಹೇಳಲಿ? ಅರನಿದ್ದಿ ಒಳಗ ಯಾಕ ಫೋಟೋ ತೆಗೆಸಿಕೊಂಡಿ? ಫುಲ್ ನಿದ್ದಿ ಹೊಡದು, ಫುಲ್ ಮುಸುಕು ಹಾಕಿಕೊಂಡ ಫೋಟೋ ಹಾಕಿಬಿಡಬೇಕಿತ್ತು. ಸಿವಿಲ್ ಹಾಸ್ಪಿಟಲ್ ಶವಾಗಾರದಾಗಿನ ಬೇವರ್ಸಿ ಹೆಣದ ಫೋಟೋ ಗತೆ. ಬಾಜೂಕ ಕೂತ ಅಜ್ಜಾವರಿಗೂ ಹಾಂಗ ಮಾಡಿ ಬಿಟ್ಟಿದ್ದರ ಎಲ್ಲೋ ಡಬಲ್ ಮರ್ಡರ್ ಕೇಸ್, ಎರಡು 'ಸತ್ತ ಹೆಣ' ಅಂತ ಮಂದಿ ಲೈಕ್ ಒತ್ತಿ RIP (rest in peace) ಅಂತ ಕಾಮೆಂಟ್ ಹಾಕಿ ಹೋಗ್ತಿದ್ದರು, ಅಂತ ಹೇಳಬೇಕು ಅಂತ ಮಾಡಿದೆ. ಮತ್ತ ಎಲ್ಲರೆ ನನ್ನ ಫೇಸ್ಬುಕ್ ಮ್ಯಾಲೆ unfriend ಮಾಡಿ ಬಿಟ್ಟಾಳು ಅಂತ ಹೆದರಿ, ಭಾರಿ ಮಸ್ತ ಅದ ಫೋಟೋ. ಎಲ್ಲೆ ತೆಗೆಸಿಕೊಂಡಿ? ಎಲ್ಲೋ ಪ್ರಯಾಣದ ಟೈಮ್ ಒಳಗ ತೆಗದಂಗ ಅದಲ್ಲಾ? VRL ಬಸ್ ಒಳಗ ವಿಜಾಪುರಕ್ಕ ಹೊಂಟಿದ್ದಿ ಏನು? ಆ ಹೊದಕೊಂಡ ರಗ್ ನೋಡಿದರ VRL ನವರು ಕೊಡೋ ಕೆಟ್ಟ ವಾಸನಿ ರಗ್ ಕಂಡಂಗ ಕಾಣ್ತದ. ಯಾರ್ಯಾರದ್ದು ಏನೇನು ವಾಸನಿ ಹೀರಿಕೊಂಡಿರ್ತದೋ ಆ ಹೇಶಿ ರಗ್ಗು. VRL ಒಳಗ ನೈಟ್ ಜರ್ನೀ ಫೋಟೋ ಏನು? - ಅಂತ ಕೇಳಿಬಿಟ್ಟೆ.

ಅನಾಹುತ ಆತು ನೋಡ್ರೀ!!!!!

ಚಿಟ್ಟ ಅಂತ ಚೀರಿಕೊಂಡೇ ಬಿಟ್ಟಳು ಅಕಿ. ಚಿಟಿ ಚಿಟಿ ಚೀರಿಕೊಂಡಳು.

ಈಡಿಯಟ್!!!! ಮಂಗ್ಯಾನಿಕೆ!!!!ಅದು ನಮ್ಮ ಯುರೋಪ್ ಟೂರಿನ ಫೋಟೋ. ಫ್ರಾನ್ಸ್ ಒಳಗ ಟ್ರಿಪ್ ಗೆ ಹೋಗಿದ್ದಿವಿ. ಸುತ್ತ ಸೀನರಿ ನೋಡು ಸ್ವಲ್ಪ. ಅದು ವಿಜಾಪುರಕ್ಕ ಹೊಂಟಾಂಗ ಕಾಣಸ್ತದ? ಧಾರವಾಡ ಬಿಟ್ಟು ಎಲ್ಲೂ ಹೋಗದವಾ ನೀ. VRL ಅಂತ VRL!!! ನನ್ನ ಮೂಡು ಪೂರ್ತಿ ಹಾಳು ಮಾಡಿ ಬಿಟ್ಟಿ. ಸ್ವಲ್ಪ ನೋಡಿಕೊಂಡು ಮಾತಾಡು. ಮಂಗ್ಯಾನಿಕೆ, ಅಂತ ಬೈದ ಬಿಟ್ಟಳು.

ಹಾಂ!!!! ಏನು ವಿದೇಶ ಪರದೇಶ? ಎಲ್ಲಾ ನಮ್ಮ ಊರು ಇದ್ದಂಗ ಅದ. ನಿದ್ದಿ ಹೊಡೆಯೋ ಮಂದಿ, ಬಸ್ಸು ಎಲ್ಲಾ ಸೇಮ್ ಅದ ಅಂತ ಅನ್ಕೋತ್ತನ ಫೋಟೋ ಒಳಗ ಡೀಪ್ ಸ್ಕ್ಯಾನ್ ಮಾಡಿ ನೋಡಿದರ ಒಂದಿಷ್ಟು ಹಿಮಾ ಇರೋ ಗುಡ್ಡ, ಬಿಳೆ ಬಿಳೆ ಮಂದಿ ಕಂಡರು. ಆ ಬಿಳೆ ಬಿಳೆ ಮಂದಿ ಎಲ್ಲಾ ಕೆಟ್ಟ ಶಕಿನೋ ಏನೋ ಅನ್ನೋ ಹಾಂಗ ಬರೆ ಚಡ್ಡಿ ಬ್ರಾ ಹಾಕ್ಕೊಂಡು ಕೂತಿದ್ದರ ಇಕಿ ಮತ್ತ ಇಕಿ ಬಾಜೂಕ ಕೂತ ಅಜ್ಜಾವರು ಯಾಕ ರಗ್ಗು ಹೊಚಗೊಂಡು ನಿದ್ದಿ ಹೊಡೆದಾರ ಅಂತ ತಿಳಿಲಿಲ್ಲ.

sorry sorry ಮಾರಳಾ. ತಿಳಿಲಿಲ್ಲ. ನಿನ್ನ ಬಾಜೂಕ ಕೂತವರು ಯಾರು? - ಅಂತ ಕೇಳಿದೆ.

He is my dear Subbs, ಅಂತ ಹೇಳಿ ನಾಚಿಗೊಂಡ ಸ್ಮೈಲ್ ಕೊಟ್ಟಳು.

ಹಾಂ??? ಏನು ಸುಬ್ಬ್ಸ್? ಅಂದ್ರ? - ಅಂತ ಕೇಳಿದೆ.

He is my dear hubby Subby, ಅಂದು ಬಿಟ್ಟಳು.

ಇದು ಇನ್ನೂ ಕಾಂಪ್ಲಿಕೇಟೆಡ್ ಆತಲ್ಲರೀ.

ಮೊದಲು ಸುಬ್ಬಿ ಅಂದಳು. ಈಗ ಹಬ್ಬಿ ಅಂತಾಳ. ಏನು ಸುಬ್ಬಿಯೋ? ಏನು ಹಬ್ಬಿಯೋ?

ಅಂದ್ರಾ? ಯಾರವರು? ನಿನ್ನ ಬಾಜೂಕ ಕೂತ ಅಜ್ಜಾವರು? ನಿಮ್ಮ ಅಜ್ಜಾ? ಏನು ಅವರ ಹೆಸರು? ಸುಬ್ಬರಾವ್ ಅಂತ ಏನು? ಅಜ್ಜನ್ನ ಕರ್ಕೊಂಡು ಯುರೋಪ್ ಟೂರ್ ಮಾಡಿಸಿಕೊಂಡು ಬಂದಿ? ಮುದಕರನ್ನ ಕರಕೊಂಡು ಕಾಶಿಯಾತ್ರಾ ಮಾಡಿಸೋದು ಗೊತ್ತಿತ್ತು. ಇದು ಏನೋ ವಿಶೇಷ. ಅಜ್ಜಾ ಟೂರ್ ಎಂಜಾಯ್ ಮಾಡಿದರು? ಏನು ಆ ಪರಿ ಮಲಕೊಂಡು ಬಿಟ್ಟಾರ? - ಅಂತ ಕೇಳಿ ಬಿಟ್ಟೆ. ಇದೊಂದು ದೊಡ್ಡ ಅನಾಹುತಕ್ಕ ಅಣಿ ಮಾಡ್ತದ ಅಂತ ನನಗೇನು ಗೊತ್ತಿತ್ತು.

ಮತ್ತ ಚಿಟ್!!!! ಅಂತ ಚಿಟಿ ಚಿಟಿ ಚೀರಿಕೊಂಡಳು. ಈ ಸಲೆ ಲಬೋ ಲಬೋ ಅಂತ ಬ್ಯಾರೆ ಹೊಯ್ಕೊಂಡು ಬಿಟ್ಟಳು.

ಏನಾತಾ? ಅಂತ ಘಾಬ್ರಿಲೆ ಕೇಳಿದೆ.

ಹಾಪ್ ಮಂಗ್ಯಾನಿಕೆ!!!!! ಅವರು ನಮ್ಮ ಮನಿಯವರು. ಹಬ್ಬಿ ಅಂತ ಹೇಳಲಿಕತ್ತೇನಿ. ಡಿಯರ್ ಹಬ್ಬಿ ಅಂದ್ರೂ ತಿಳಿಲಿಲ್ಲ ನಿನಗಾ? - ಅಂತ ಚೀರಿಕೊಂಡಳು.

ನನಗ ಈಗೂ ಖರೇ ಅಂದ್ರೂ ತಿಳಿಲಿಲ್ಲ. ಹಬ್ಬಿ, ಸುಬ್ಬಿ, ಡಿಯರ್ ಅಂದ್ರ ಚಿಗರಿ, ಮನಿಯವರು ಎಲ್ಲಾ ವಿಚಿತ್ರ ಅನ್ನಿಸಿತು.

ಗೊತ್ತಾತು ಬಿಡ. ಅಜ್ಜಾ ಅಂದ್ರ ಮನಿಯವರೇ ನೋಡು. ಮನಿ ಮಂದಿ ಎಲ್ಲರೂ ಮನಿಯವರೇ. ಆದರೂ ಆ ಅಜ್ಜಾವರು ಯಾರು ಅಂತ. ಮತ್ತ ಅಜ್ಜಂಗ ಅಜ್ಜಾ ಅಂತ ಕರಿಯೋದು ಬಿಟ್ಟು ಹೆಸರು ಹಿಡದು ಯಾಕ ಕರೀತಿ? ಅದು ನಮ್ಮ ಪದ್ಧತಿ ಏನು? ಬ್ರಾಹ್ಮರ ಮುತ್ತೈದೆಯರಿಗೆ ಇದು ಶೋಭಾ ತರೋದಿಲ್ಲ ನೋಡು, ಅಂತ ಹೇಳಿದೆ.

ಮತ್ತ ಚಿಟ್!!!! ಅಂತ ಚಿಟಿ ಚಿಟಿ ಚೀರಿಕೊಂಡಳು. ಈ ಸಲೆ ಲಬೋ ಲಬೋ ಅಂತ ಬ್ಯಾರೆ ಹೊಯ್ಕೊಂಡು ಬಿಟ್ಟಳು. ಈ ಸರೆ ವಾಲ್ಯೂಮ್ ಮತ್ತೂ ಜೋರ್ ಇತ್ತು.

ಯಾಕ? ಅಂತ ಕೇಳಿದೆ. ಇಕಿಗೆ ಹುಚ್ಚ ಹಿಡಿತೋ ಏನೋ ಅಂತ ಚಿಂತಿ ಆತು.

ಏ.....ಹುಚ್ಚ ಮಂಗ್ಯಾನಿಕೆ ಮಂಗೇಶ್!!! SSLC ಒಳಗಾ ಇಂಗ್ಲೀಷ್ ಡುಮ್ಕಿ ಹೊಡದಿದ್ದಿ ಏನು? ಅದಕ್ಕ ನಿನಗ ಹಬ್ಬಿ ಅಂದ್ರ ತಿಳಿವಲ್ಲತು. ಹೋಗ್ಲೀ. ಬಡ್ಡ ತಲಿ ನಿಂದು ಅಂತ ಹೇಳಿ ಮನಿಯವರು ಅಂದೆ. ಅದೂ ತಿಳಿಲಿಲ್ಲ. ನನ್ನ ಬಾಜೂಕ ಕೂತವರು ನನ್ನ ಗಂಡಾ ಮಾರಾಯಾ! ಕೈ ಮುಗಿತೇನಿ. ನನ್ನ ಮೂಡು ಫುಲ್ ಆಫ್ ಮಾಡಿಬಿಟ್ಟಿ. ಛೆ!!! - ಅಂತ ಹೇಳಿ ದುಃಖ ಪಟ್ಟಳು. ನನಗೂ ಕೆಟ್ಟ ಅನ್ನಿಸ್ತು.

ಸುಬ್ಬಿ ಉರ್ಫ್ ಸುಬ್ಬರಾವ್ ನಿನ್ನ ಗಂಡನಾ?! ಎಂತಾ ಬ್ರಾಹ್ಮರ ಮುತ್ತೈದಿ ಇದ್ದಿ!? ಗಂಡನ ಹೆಸರು ತೊಗೊ ಬಾರದು ಅಂತ ಗೊತ್ತಿಲ್ಲ? ಏನು ಅದು ಗಂಡನ ಚಂದ ಇರೋ ಸುಬ್ಬರಾವ್ ಅನ್ನೋ ಹೆಸರನ್ನ ಸುಬ್ಬಿ ಅಂತ ಹಾಪ್ ಮಾಡಿ ಡಿಯರ್ ಅಂದ್ರ ಚಿಗರಿ ಅದು ಇದು ಅಂತೀ ಅಲ್ಲಾ?! ರಾಯರ ಮಠಕ್ಕ ಹೋಗಿ ಪಂಚಗವ್ಯಾ ಕುಡದು ಪ್ರಾಯಶ್ಚಿತ ಮಾಡ್ಕೋ, ಅಂತ ಹೇಳಿ ರಿವರ್ಸ್ ಝಾಡಿಸಿದೆ.

ಮೊದಲೇ ಕೇಳಿದಾಗ, ಇವರು ನಮ್ಮ ಮನಿಯವರು, ಸುಬ್ಬರಾವ್ ಅಂತ ಹೇಳಿಬಿಟ್ಟಿದ್ದರ ಮುಗೀತಿತ್ತು. ಅದರ ಬದಲಿ ಹಬ್ಬಿ, ಸುಬ್ಬಿ, ಡಿಯರ್ ಅಂದ್ರ ಚಿಗರಿ ಅದು ಇದು ಅಂತ ಎಲ್ಲಾ ಕೆಟ್ಟ confuse ಮಾಡಿ ನನ್ನ ಮ್ಯಾಲೆ ಚೀರತಾಳ. ಅ!!!! ಅ!!!! ಇಕಿ ಹೀಂಗ ಇದ್ದಿದ್ದಕ್ಕ ಇರಬೇಕು, ಇಕಿಗಿಂತ ಕೇವಲ ಐದೇ ಐದು ವರ್ಷ ದೊಡ್ಡವರಾದ ಸುಬ್ಬ ರಾವ್ ಎಂಬ ಮಹನೀಯರು ಫುಲ್ ಮುದುಕ ಆಗಿ ಇಕಿ ಅಜ್ಜನ ಲುಕ್ಕಿಗೆ ಬಂದಾರ. ಪಾಪ ಸುಬ್ಬ ರಾವ್!!!!

ಅಲ್ಲ....ನೀ ಲಗ್ನದಾಗ ಒಗಟಾ ಹಾಕಿ ಗಂಡನ್ನ ಹೆಸರು ಹೇಳು ಅಂತ ಹೇಳಿದರ ಎಷ್ಟು ನಾಚಿಕೊಂಡು ನಿನಗ ಒಗಟಾ ಸಹಾ ಮರೆತು ಹೋಗಿತ್ತು. ಯಾವ ಒಗಟಾ ಹಾಕಿ ಗಂಡನ ಹೆಸರು ಹೇಳಬೇಕು ಅಂತ ಗೊತ್ತಾಗದ ನನ್ನ ಮಾರಿ ನೋಡಿದ್ದಿ. ನಾನೇ ಅಲ್ಲೇನು ನಿನಗ ಐತಾ ವೇಳ್ಯಾದಾಗ ಒಗಟಾ ಹೇಳಿ ಕೊಟ್ಟಿದ್ದೆ? ಆವಾಗೂ ನನಗ ಹಾಕ್ಕೊಂಡು ಬೈದಿದ್ದಿ, ಅಂತ ಅಕಿ ಲಗ್ನದಾಗ ಗಂಡನ ಹೆಸರು ಒಗಟಾ ಹಾಕಿ ಹೇಳಿದ್ದರ ನೆನಪು ಮಾಡಿ ಕೊಟ್ಟೆ. ಅಕಿಗೆ ಮರ್ತು ಹೋಗಿತ್ತು. ಈಗ ಮೂಡು ಬ್ಯಾರೆ ಆಫ್ ಆಗ್ಯದ. ಹಳೆ ಮುದಕನ ಜೋಡಿ ಮಾಡಿಕೊಂಡ ಲಗ್ನದ ನೆನಪು ಎಲ್ಲಿಂದ ಬರಬೇಕು?

ಏನು ಒಗಟಾ ಹೇಳಿ ಕೊಟ್ಟಿದ್ದಿ? ಚೀರಿ ಬೈದಿದ್ದೆ ಅಂದ ಮ್ಯಾಲೆ ಏನರ ಹಾಪ್ ಒಗಟಾನೇ ಹೇಳಿರ್ತೀ. ಏನು ಒಗಟಾ? ಅದೂ ನಮ್ಮ ಮನಿಯವರ ಹೆಸರು ಬರುವಂತದ್ದು? ಹಾಂ? ಹಾಂ? - ಅಂತ ಕೇಳಿದಳು.

ಧಾರವಾಡ ಒಳಗಿರೋದು ಮಾಳಮಡ್ಡಿ
ನನ್ನ ಸುಬ್ಬರಾವ್ ಹಾಕ್ಕೊಂಡಿದ್ದು ಹರಕ್ ಚಡ್ಡಿ

.....ಅಂತ ಹೇಳಿ ಚಂದ ಒಗಟಾ, ಅದೂ on the spot, ತಯಾರಿ ಮಾಡಿ ಕೊಟ್ಟರ ಹಾಕ್ಕೊಂಡು ಬೈದು ಬಿಟ್ಟಿದ್ದಿ. ಈಗ ನೋಡಿದರ ಸುಬ್ಬಿ, ಹಬ್ಬಿ, ಡಿಯರ್, ಚಿಗರಿ ಅದು ಇದು ಅಂತಿಯಲ್ಲಾ? ಹಾಂ?ಹಾಂ? - ಅಂತ ಹಳೆ ನೆನಪು ಮಾಡಿಕೊಟ್ಟೆ.

ಈಡಿಯಟ್!!!! ಅಂತ ಬೈದಾಕಿನೇ ಹೋಗಿ ಬಿಟ್ಟಳು.

ಏ!!!! ಎಲ್ಲಿ ಹೋದಿ? ಅನ್ನೋದ್ರಾಗ ಎಲ್ಲಾ ಮುಗಿದು ಹೋಗಿತ್ತು. ಅನಾಹುತ ಆಗಿ ಬಿಟ್ಟಿತ್ತು. ಅಂದುಕೊಂಡಂಗ unfriend ಮಾಡೇ ಬಿಟ್ಟಳು. ಯಾಕ unfriend ಮಾಡಿದಳು?

ಮತ್ತ ನಾನೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಇಕಿ ಎಲ್ಲಾ ಫೋಟೋ ಮ್ಯಾಲೆ ಲೈಕ್ ಒತ್ತತೇನಿ ಅಂತ ಪ್ರಾಮಿಸ್ ಮಾಡಿ, ನೀ ಭಾಳ ಚಂದ ಇದ್ದೀ, ಮುದುಕ ಸುಬ್ಬರಾವ್ ಏಕ್ದಂ (ಮುದುಕ) ಹೃತಿಕ್ ರೋಶನ್ ಇದ್ದಂಗ ಇದ್ದಾರ, ಏನು ಮಸ್ತ ಜೋಡಿ ನಿಮ್ಮದು, ಅಂತ ಓಳು ಬಿಟ್ಟು ಕರ್ಕೊಂಡು ಬರ್ತೇನಿ ತೊಗೊರೀ. ಅದೇನು ನಮಗ ಹೊಸಾದ? ಟೊಪ್ಪಿಗಿ ಹಾಕಿ ಗೋಕರ್ಣ ಹಜಾಮತಿ ಮಾಡೋದು. expert ನಾವು.

ಆದ್ರ ನಿಮಗ ಹೇಳತೇನಿ ನೋಡ್ರೀ....ಅಕಿ ಮತ್ತ ಅಕಿ ಗಂಡ ನಿದ್ದಿಗಣ್ಣಾಗ ಇದ್ದ ಫೋಟೊಕ್ಕೂ ಸಹಿತ ಅರವತ್ತ್ರೊಂಬತ್ತು ಅಂದ್ರ ಸಿಕ್ಸ್ಟಿ ನೈನ್ (69) ಲೈಕ್ ಬಿದ್ದಿದ್ದವು.  ಅರವತ್ತ್ರೊಂಬತ್ತು ಯಾಕ ಅಂತ ಹೇಳಿ ನಾನೂ ಒಂದು ಲೈಕ್ ಒತ್ತಿ ಎಪ್ಪತ್ತು ಮಾಡಿಬಿಟ್ಟೆ. ಸಿಕ್ಸ್ಟಿ ನೈನ್ ನಿಂದ ಸೆವಂಟಿ ಮಾಡಿದೆ ಅಂತ ಹೇಳೋಣ ಅಂತ ಮಾಡಿದ್ರ unfriend ಮಾಡಿಬಿಟ್ಟಾಳ. ಸೂಡ್ಲಿ!!!!

ನಿದ್ದಿಬಡಕ ಸುಬ್ಬಾ ಮತ್ತ ಇಕಿ ನಿದ್ದಿಗಣ್ಣ ಸುಂದರಿ ರಗ್ ಹೊಚಗೊಂಡು ಕೂತಿದ್ದ ಫೋಟೋ ಮ್ಯಾಲೆ ಲೈಕ್ ಬೀಳೋದು ಹಾಳಾಗಿ ಹೋಗಲಿ, ಅದರ ಮ್ಯಾಲೆ ಬಿದ್ದ ಕಾಮೆಂಟ್ ನೋಡಿದರ ಎದಿ ಒಡದು ಹೋಗಬೇಕು! ಅಂತಾ ಕಾಮೆಂಟ್ ಬಿದ್ದಿದ್ದವು. ಮೋಸ್ಟ ಕಾಮನ್ ಕಾಮೆಂಟ್ ಅಂದ್ರ, aaww!!! aaww!!!!! so romantic!!!, ಅಂತ. ಯಪ್ಪಾ!!!! ಹಾ ಅಂತ ಇಷ್ಟು ದೊಡ್ಡ ಬಾಯಿ ಬಿಟಗೊಂಡು, ಜೊಲ್ಲು ಸುರಿಸ್ಕೋತ್ತ, ನಿದ್ದಿ ಮಾಡಿಕೋತ್ತ, ಜೋಲಿ ಹೊಡದು, ಹೆಂಡ್ತಿ ತೊಡಿ ಮ್ಯಾಲೆ ಕೂಸಿನ ಗತೆ ಮಲಕೊಂಡ ಮುದಕಾ ಮತ್ತ ಅವನ ಜೊತಿ ನಿದ್ದಿಗಣ್ಣಾಗ ವಿಚಿತ್ರ ರೀತಿ ನಕ್ಕ ಅವನ ಹೆಂಡ್ತಿ. ಇದಕ್ಕ ಆವ್ ಆವ್ ಅನ್ಕೋತ್ತ ರೋಮ್ಯಾಂಟಿಕ್ ಅಂತ ಕಾಮೆಂಟ್ ಹಾಕೋ ಮಂದಿ. ಜನ ಮರುಳೋ ಜಾತ್ರೆ ಮರುಳೋ!! ಇದೇ ರೋಮ್ಯಾನ್ಸ್ ಆದರೆ ಎಲ್ಲರೂ ಯಾವಾಗಲೂ ರೋಮ್ಯಾಂಟಿಕ್ ಬಿಡ್ರೀ. ಮತ್ತ ಲೈಕ್ ಎಲ್ಲರೂ ಒತ್ತಿದರೂ, ನಿದ್ದಿ ಬಡಕ ಮುದಕನ ಜೊತಿ ಹೆಂಗಸು ಕೂತಿದ್ದು ರೋಮ್ಯಾಂಟಿಕ್ ಆಗಿ ಕಂಡಿದ್ದು ಮಾತ್ರ ಬರೇ ಹೆಂಗಸೂರಿಗೆ ಮಾತ್ರ. ಕಾಮೆಂಟ್ ಹಾಕಿದವರು ಆವ್ ಆವ್ 'ಆವ್ ರತ್' (ಔರತ್) ಗಳೇ. ಹುಡುಗುರು, ಇಕಿ ಹುಡುಗಿ ಎಲ್ಲರೆ ಬೈದು unfriend ಮಾಡಿ ಬಿಟ್ಟಾಳು, ಅಂತ ಹೆದರಿ ಸುಮ್ಮನ ಲೈಕ್ ಒತ್ತಿ ಹಿಂದಿಂದ ಉಳ್ಳಾಡಿ ಉಳ್ಳಾಡಿ ನಕ್ಕಿರಬೇಕು ಬಿಡ್ರೀ. ನನ್ನ ಗತೆ.

ನೆಕ್ಸ್ಟ್ ಪ್ರೊಫೈಲ್ ಗೆ ಹೋದೆ. ಹುಡುಗಿ ಪ್ರೊಫೈಲ್ ಪಿಕ್ಚರ್ ನೋಡಿ ಹಾಂ!!!!! ಅಂತ ಬೆಚ್ಚಿ ಬಿದ್ದೆ.

ಇದೇನು ಇಕಿ 'ಆಫ್ರಿಕಾದಲ್ಲಿ ಶೀಲಾ' ಅನ್ನೋ ಟಾರ್ಜನ್ ಸಿನೆಮಾ ಗತೆ ಆನಿ ಮ್ಯಾಲೆ ಹೊಂಟು ಬಿಟ್ಟಾಳ!!?? ಆನಿ, ಅದರ ಮ್ಯಾಲೆ ಅಂಬಾರಿ, ಅದರಾಗ ಇಕಿ. ಹಾಕ್ಕ!! ಮಸ್ತ ಇತ್ತು ಫೋಟೋ.

ಮುಲಾಜಿಲ್ಲದೆ ಲೈಕ್ ಒತ್ತಿ ಬಿಟ್ಟೆ. ಮತ್ತ ಕಾಮೆಂಟ್ ಬ್ಯಾರೆ ಹಾಕಿದೆ.

ಆನೆಯಾ ಮೇಲೆ ಅಂಬಾರಿ ಕಂಡೆ
ಅಂಬಾರಿ ಒಳಗೆ ಕುಂಬಾರಿ ಕಂಡೆ
.....ROTFL

ಅಂತ ಕಾಮೆಂಟ್ ಹಾಕಿ ಉಳ್ಳಾಡಿ ಉಳ್ಳಾಡಿ ನಕ್ಕು ಮುಗಿಸಿದ್ದಿಲ್ಲ ಅಷ್ಟರಾಗ ಮೆಸೇಜ್ ಮಾಡೇ ಬಿಟ್ಟಳು ಅಂಬಾರಿ ಮ್ಯಾಲೆ ಕೂತಿದ್ದ ಕುಂಬಾರಿ.

ಏ..... ನನಗ ಯಾಕ ಕುಂಬಾರಿ ಅಂದಿ? ಆನಿ ಮ್ಯಾಲೆ ಅಂಬಾರಿ ಒಳಗ ಕೂತರ ನಾ ಕುಂಬಾರಿ ಏನು?  ಕುಂಬಾರಿ ಗಿಂಬಾರಿ ಅಂದ್ರ ನಿನ್ನ ಭಕ್ತ ಕುಂಬಾರನ್ನ ಗತೆ, ರಂಗಾ ಮಂಗಾ ಎಲ್ಲಿ ಮರೆಯಾದೆ? ವಿಟ್ಟಲಾ ಏಕೆ ದೂರಾದೆ?, ಅಂತ ಡಾನ್ಸ್ ಮಾಡಿಸಿ ಬಿಡ್ತೇನಿ. ಹುಷಾರ್! ಮೊದಲು ಆ ಕಾಮೆಂಟ್ ತೆಗಿ. ಇಲ್ಲಾ ಚೇಂಜ್ ಮಾಡು. ನೋ ಕುಂಬಾರಿ! ಪ್ಲೀಸ್, ಅಂತ ತಾಕೀತು  ಮಾಡಿಬಿಟ್ಟಳು.

ಇದೊಳ್ಳೆ ಕಥಿ ಆತು. ಆನೆಯಾ ಮೇಲೆ ಅಂಬಾರಿ ಕಂಡೆ, ಅಂಬಾರಿ ಒಳಗೆ ಕುಂಬಾರಿ ಕಂಡೆ, ಅಂತ ಚಂದಾಗಿ ಕಾಮೆಂಟ್ ಹಾಕಿದರ ಬೈತಾಳ. ಡಿಲೀಟ್ ಮಾಡು ಅಂತಾಳ. ಅಂಥಾ ತಪ್ಪು ಏನು ಬರದೆ ಅಂತ ನೋಡಿ ಬಿಡೋಣ ಅಂತ ಮತ್ತ ಅಕಿ ಫೋಟೋ ಮ್ಯಾಲೆ ಹೋಗಿ ಕಾಮೆಂಟ್ ಓದಿದೆ. ಹೋಗ್ಗೋ!!!! ಅನಾಹುತ ಆಗಿ ಬಿಟ್ಟದ!! ಅಕಿಗೆ ಇನ್ನೂ ಗೊತ್ತಾಗಿಲ್ಲ. ಗೊತ್ತಾಗೊಕಿಂತ ಮೊದಲು ತಿದ್ದಿ ಬಿಡಬೇಕು.

ಅದು ಏನು ಅನಾಹುತ ಆಗಿತ್ತು ಅಂದ್ರ 'ಕಂಡೆ' ಹೋಗಿ 'ಕುಂಡೆ' ಆಗಿ ಬಿಟ್ಟಿತ್ತು.  ಅಕಿ ಅದನ್ನ ಗ್ರಹಿಸಿಲ್ಲ ಪುಣ್ಯಕ್ಕ.

ಆನೆಯಾ ಮೇಲೆ ಅಂಬಾರಿ ಕುಂಡೆ
ಅಂಬಾರಿ ಒಳಗೆ ಕುಂಬಾರಿ ಕುಂಡೆ
.....ROTFL

ಈ ಕಾಮೆಂಟ್ ಹಾಕಿದ ಕೂಡಲೇ ನೋಡಿ ಕ್ವಾಲಿಟಿ ಚೆಕ್ ಮಾಡಿದೆ ಛೋಲೋ ಆತು. ಇಲ್ಲಂದ್ರ ಅಷ್ಟ. ಲಗೂನ ಕಾಮೆಂಟ್ ಡಿಲೀಟ್ ಮಾಡಿ, ಹೊಸಾ ಕಾಮೆಂಟ್ ಹಾಕಿದೆ. ಕಂಡೆ ಮತ್ತ ಕುಂಡೆ ಆಗಿಲ್ಲ ಅಂತ ಡಬಲ್ ಖಾತ್ರಿ ಮಾಡಿಕೊಂಡು, ಇಕಿಗೆ ಮೆಸೇಜ್ ಮಾಡಿದೆ. ನನ್ನಂತ ಕಿಡಿಗೇಡಿ ಮತ್ತ ಏನೇನು ಕೆತ್ತೆಬಜೆ ಕಾರಬಾರ ಮಾಡಿ ಬಿಟ್ಟಾನು ಅಂತ ಅಕಿ ಆನಿ ಮ್ಯಾಲೆ ಹೊಂಟಿದ್ದ ಫೋಟೋ hide ಮಾಡಿ ಬಿಟ್ಟಳು. ಆನಿನೂ ಇಲ್ಲ, ಅಂಬಾರಿನೂ ಇಲ್ಲ, ಜೊತಿಗೆ ಕುಂಬಾರಿನೂ ಇಲ್ಲ. ಮಾಡ್ತೇನಿ ತಡೀರಿ ಅಕಿಗೆ. ಕುಂಬಾರಿ, ಭಕ್ತ ಕುಂಬಾರಿ, ಕಟಿಂಗ್ ಕುಂಬಾರಿ ಅದು ಇದು ಅಂತ ಹೆಸರು ಇಟ್ಟು ಸಾಕಷ್ಟು ಕಾಡಿಸ್ತೇನಿ. ಆ ಆನಿ ಫೋಟೋ ವಾಪಸ್ ತರೋ ತನಕಾ!!!!

ಹೀಂಗ ಎಲ್ಲಾರ ಫೇಸ್ಬುಕ್ ಪ್ರೊಫೈಲ್ ಫೋಟೋ ನೋಡಿ, ಲೈಕ್ ಒತ್ತಿಗೋತ್ತ, ಕಾಮೆಂಟ್ ಹಾಕಿಕೋತ್ತ, ಬೈದವರ ಕಡೆ ಬೈಸಿಕೊಂಡು, ಕೆಲೊ ಮಂದಿ ಕಡೆ unfriend ಸಹಾ ಮಾಡಿಸಿಕೊಂಡು ಹೋಗ್ತಾ ಇದ್ದಾಗ ಇನ್ನೊಬ್ಬಾಕಿ ಗೂಳವ್ವ ಮೆಸೇಜ್ ಮಾಡಿ, ಹಾಯ್!!!! ಮಲಕೊಂಡಿ? - ಅಂತ ಕೇಳಿದಳು. ಇಕಿ ಮಲಕೊಂಡಿ ಅಂತ ಕೇಳೋದು ನೋಡಿದರ ತೊಡಿ ಮ್ಯಾಲೆ ಹಾಕ್ಕೊಂಡು, ಕುಟ್ಟಿ ಕುಟ್ಟಿ ಮಲಗಿಸಿಯೇ ಬಿಡು ಹಾಂಗ ಕೇಳ್ತಾಳ ಗೂಳವ್ವ.

ಏನ? ನಿಂದೇನು? ನಿನ್ನ ಪ್ರೊಫೈಲ್ ಫೋಟೋ ಏನೂ ಚೇಂಜ್ ಆಗಿಲ್ಲ. ನಿಂದು ಒತ್ತಿ ಆಗ್ಯದ. ಅಂದ್ರ ಫೋಟೋ ಮ್ಯಾಲೆ ಲೈಕ್ ಒತ್ತಿ ಆಗ್ಯದ. ಮತ್ತ ಮತ್ತ ಒತ್ತಿದರ ಫೇಸ್ಬುಕ್ 'ಘಟ್ಟೆ ಒತ್ತ ಬ್ಯಾಡೋ!' ಅಂತ ಹೊಯ್ಕೋತ್ತದ. ಏನು ಮಾಡಲಿ ಈಗ? ಲೈಕ್ ಒತ್ತಿದ್ದನ್ನ unlike ಮಾಡಿ ಮತ್ತ ಲೈಕ್ ಒತ್ತಲಿ ಏನು? ನಿನಗೂ ಒತ್ತಿಸಿಕೊಳ್ಳೋ ಹುಚ್ಚು ಹಿಡೀತು ಏನು? ಹಾಂ? ಹಾಂ? - ಅಂತ ಕೇಳಿದೆ.

ಹೌದು!!! ಎಲ್ಲಾ ಹುಡುಗ್ಯಾರಿಗೆ ಹಿಡದಂಗ ನಂಗೂ ಸ್ವಲ್ಪ ಒತ್ತಿಸಿಕೊಳ್ಳೋ ಫೇಸ್ಬುಕ್ ಹುಚ್ಚು ಹಿಡದದ. ನೀನು ಒತ್ತಿದ್ದ ಮತ್ತ ಮತ್ತ ಒತ್ತಂಗಿಲ್ಲ ಅಂತ ಹೇಳಿ ಹೊಸಾ ಫೋಟೋ ಹಾಕಾಕಿ ಇದ್ದೇನಿ. ನಾಕು ಫೋಟೋ ಕಳಿಸೇನಿ ನೋಡು. ಯಾವದನ್ನ ಪ್ರೊಫೈಲ್ ಫೋಟೋ ಮಾಡಿಕೊಳ್ಳಲಿ? ಹೇಳಲಾ, ಅಂದಳು ಸುಂದರಿ.

ಯಾವದಾರ ಮಾಡ್ಕೋ ಮಾರಳಾ. ಅಷ್ಟ ಹೈಸ್ಕೂಲ್ ಗೂಳವ್ವನ ಫೋಟೋ ಒಂದು ಹಾಕಿ ಬಿಡಬ್ಯಾಡ, ಅಂತ ಹೇಳಿ ಇಕಿ ಯಾವ ಫೋಟೋ ಕಳಿಸ್ಯಾಳ ಅಂತ ನೋಡಲಿಕ್ಕೆ ಹೋದೆ.

ಮಸ್ತ ಮಸ್ತ ಫೋಟೋಗಳು.

ಗೂಳವ್ವಾ! ಎಲ್ಲಾ ಮಸ್ತ ಮಸ್ತ ಫೋಟೋ ಅವ. ಆದ್ರ ಒಂದ್ರಾಗ ಮಾರಿ ಚಂದ ಬಂದದ. ಇನ್ನೊಂದ್ರಾಗ ಮತ್ತೇನೋ ಚಂದ ಬಂದದ. ಎಲ್ಲಾ ಫುಲ್ ಪ್ಯಾಕೇಜ್ ಚಂದ ಬರೋ ಹಾಂಗ ಒಂದು ಫೋಟೋ ತೆಗೆಸಿ ಹಾಕ್ಕೊಂಡು ಬಿಡು, ಅಂತ  ಅಂದೆ.

ಹೋಗೋ....ಎಲ್ಲಿದ ಹಚ್ಚಿ? ಕಳಸಿದ ನಾಕರಾಗ ಒಂದು ಫೋಟೋ ಹೇಳಪಾ. ಪ್ಲೀಸ್, ಅಂತ ಕೇಳಿದಳು.

ಹಾಂಗಾ? ತಡಿ ಹಾಂಗಿದ್ದರ. ಸ್ವಲ್ಪ ಡೀಪ್ ಸ್ಕ್ಯಾನ್ ಮಾಡಿ ಹೇಳ್ತೆನಿ, ಅಂತ ಹೇಳಿ ಇಕಿ ಕಳಸಿದ ಫೋಟೋ ನೋಡಲಿಕ್ಕೆ ಹೋದೆ ಅಂತ ಆತು.

ಒಂದು ಫೋಟೋದಾಗ ಫ್ರೆಶ್ ಆಗಿ ಹಜಾಮತಿ ಮಾಡಿಸಿಕೊಂಡ ಫೋಟೋ ಇತ್ತು. ಏನೋ ಹೊಸಾ ಹೇರ್ ಸ್ಟೈಲ್ ಇಕಿದು ಈ ಸರೆ. ಕುತ್ತಿಗಿಕಿಂತ ಮ್ಯಾಲೆ ಕಟಿಂಗ್ ಮಾಡಿಸಿ ಏನೋ ಒಂದು ತರಹದ Ponds ಕೋಲ್ಡ್ ಕ್ರೀಮ್ ಬಾಚಿ ಹಲ್ಲಿನ ಸುಂದರಿ ಲುಕ್ಸ್ ಇತ್ತು. ಮಸ್ತ ಇತ್ತು. ಇದನ್ನ ಹಾಕ್ಕೋ ಅಂತ ಹೇಳೋಣ ಅಂತ ಮಾಡಿದೆ.

ಏ ಗೂಳವ್ವಾ!! ಈ ಶಾರ್ಟ್ ಹೇರ್ ಕಟ್ ಫೋಟೋ ಹಾಕ್ಕೋ. ಅದ್ಯಾಕ ಮಸ್ತ ಕುತ್ತಿಗಿ ಕಾಣೋ ಹಂಗ ಬಾಬ್ ಕಟ್ ಮಾಡಿಸಿಕೊಂಡಿ? ಅಂತ ಕೇಳಿದೆ.

ಸಿಕ್ಕಾಪಟ್ಟೆ ನಾಚಿಕೊಂಡು ಬಿಟ್ಟಳು. ಯಾಕೋ ಏನೋ? ಕುತ್ತಿಗಿ ಕಾಣಿಸೋ ಹಾಂಗ ಅಂದ್ರ ನಾಚಿಗೊಳ್ಳೋದ??? ಹಾಂ!!!

ನೀನಾ ಹೇಳಿದ್ದಿ ನನಗ. ನೀ ಹೇಳಿ ಅಂತ ಆ ಸ್ಟೈಲ್ ಮಾಡಿಸಿದರ ಯಾಕ ಅಂತ ಕೇಳ್ತೀ ಅಲ್ಲಾ? ಎಲ್ಲಾ ಮರತಿ ಏನು? - ಅಂತ ನನಗೇ ಕೇಳಿ ಬಿಟ್ಟಳು.

ಹಾಂಗಾ? ನಾ ಹೇಳಿದ್ದು ಎಲ್ಲಾ ನೀ ಫಾಲೋ ಮಾಡ್ತೀ ಅಂತ ಗೊತ್ತಿದ್ದರ ಇನ್ನೂ ಮಸ್ತ ಸಲಹೆ ಕೊಡ್ತಿದ್ದೆ. ಅದರ ಪ್ರಕಾರ ಫೋಟೋ ತೆಗೆಸಿ ಹಾಕ್ಕೊಂಡು ಬಿಟ್ಟಿದ್ದರ ನಿನ್ನ ಪ್ರೊಫೈಲ್ ಫೋಟೋ ಮ್ಯಾಲೆ ಮಂದಿ ಲೈಕ್ ಒತ್ತಿ ಒತ್ತಿ, ಆ ಪರಿ ಒತ್ತಿಸಿಕೊಂಡು ನೀನೇ ಫುಲ್ ಸುಸ್ತಾಗಿ ಹೋಗ್ತಿದ್ದಿ ನೋಡು ಸುಂದರಿ, ಅಂತ ಹೇಳಿದೆ.

ಇರಲಿ.....ಕಟಿಂಗ್ ಯಾವಾಗ ಮಾಡಿಸಿಕೊಂಡಿ? - ಅಂತ ಕೇಳಿದೆ. subconsciously ಏನೋ ನೆನಪಾಗಿ ಬಿಡ್ತು.

ಮೊನ್ನೆ. ಒಂದೆರಡು ದಿನದ ಹಿಂದ. ಫ್ರೆಶ್ ಕಟಿಂಗ್ ಮಾರಾಯಾ, ಅಂದಳು ಅಕಿ.

ಹಾಂ!!!! ದೊಡ್ಡ  ಘಾತ ಆತಲ್ಲವಾ, ಅಂತ ಆತಂಕ ವ್ಯಕ್ತಪಡಿಸಿದೆ.

ಏನಾತೋ? ಹೇಳೋ ಪುಣ್ಯಾತ್ಮಾ, ಅಕಿನೂ ಆತಂಕ ವ್ಯಕ್ತ ಪಡಿಸಿದಳು.

ಶ್ರಾವಣ ಮಾಸ ನೆಡದದ. ಗಂಡಸೂರೇ ಈ ಮಾಸದಾಗ ಕಟಿಂಗ್ ಹಜಾಮತಿ ಮತ್ತೊಂದು ಮಾಡಿಸೋದಿಲ್ಲ. ಹಂತಾದ್ರಾಗ ನೀ ಬ್ರಾಹ್ಮರ ಮುತ್ತೈದಿ ಹಜಾಮತಿ ಮಾಡಿಸಿಕೊಂಡು ಮ್ಯಾಲೆ ಅಲಂಕಾರ ಬ್ಯಾರೆ ಮಾಡಿಕೊಂಡು ಫೋಟೋ ತೆಗೆಸಿಕೊಂಡಿಯಲ್ಲವಾ? ಏನು ಮಾಡೋದು? ಆಗಿ ಹೋತು. ರಾಯರ ಮಠಕ್ಕ ಹೋಗಿ ನೀನೂ ಪಂಚಗವ್ಯ ಕುಡಿದು ಪ್ರಾಯಶ್ಚಿತ ಮಾಡ್ಕೋ. ಓಕೆ? - ಅಂತ ಉದ್ರಿ ಉಪದೇಶ ಮಾಡಿದೆ.

ಸ್ಟುಪಿಡ್....ಮಾತು ಎತ್ತಿದರ ಪಂಚೆ ಎತ್ತಿ ಪಂಚಾಂಗ ನೋಡ್ತೀ. ಶ್ರಾವಣ ಶುರು ಆಗ್ಯದ ಅಂತ ಒಂದು ಮಾತು ಹೇಳಲಿಕ್ಕೆ ಏನು ಧಾಡಿ ಆಗಿತ್ತು ನಿನಗ? ಆ ಪರಿ ಪಂಚಾಂಗ ನೋಡ್ತೀ. ಏನು ನೋಡ್ತಿಯೋ ಸ್ಟುಪಿಡ್? ಮೊದಲು ಕಟಿಂಗ್ ಮಾಡಿಸ್ಕೋ ಅಂತ ಹೇಳಿ ನಂತರ ಶ್ರಾವಣ ಆಷಾಢ ಅದು ಇದು ಅಂತಿ, ಆಷಾಢಭೂತಿ ಭೂತಯ್ಯನ ತಂದು..... ಸ್ಟುಪಿಡ್, ಅಂತ ಹಾಕ್ಕೊಂಡು ಬೈದಳು.

ಮುಂದಿನ ಸರೆ ಪೂರ್ತಿ ಪಂಚಾಂಗನ ನಿನ್ನ ಕೈಯ್ಯಾಗ ಕೊಟ್ಟು ಬಿಡ್ತೇನಿ. ನೀನs ನೋಡ್ಕೋ. ಆತಾ? - ಅಂತ ಕೇಳಿದೆ.

ಪಂಚಾಂಗ ಕೊಡ್ತೀ? ಆವ್.... ಆವ್.....ಸೊ ಸ್ವೀಟ್.... ಸೊ ಸ್ವೀಟ್.....ಅಂತ ಆವ್ ಆವ್ ಮಾಡಿಕೋತ್ತ ಕಣ್ಣು ಹೊಡೆದಳು.

ಅಯ್ಯ ಇಕಿನ.....ಪಂಚಾಂಗ ಕೊಡ್ತೀನಿ ಅಂದ್ರ ಇಕಿ ಯಾಕ ಆ ಪರಿ ರೈಸ್ ಆಗಿ ಆವ್ ಆವ್ ಅಂತ ಹೊಯ್ಕೊಳ್ಳಿಕ್ಕತಾಳ ಅಂತ ತಿಳಿಲಿಲ್ಲ.

ಯಾಕ? ಪಂಚಾಂಗ ಅಂದ್ರ ಅಷ್ಟ್ಯಾಕ excite ಆಗ್ತೀ? - ಅಂತ ಕೇಳಿದೆ.

ಕಿಸಿ ಕಿಸಿ ಅಂತ ಸಿಕ್ಕಾಪಟ್ಟೆ ನಕ್ಕಳು.

ಮತ್ತೇನು?! - ಅಂತ ಹೇಳಿ ನಿಗೂಢವಾಗಿ ಕಣ್ಣು ಹೊಡೆದಳು.

ಥೋ.... ಥೋ..... ಇದು ಕೆಲಸ ಕೆಟ್ಟು ಹೋತು. ಇಕಿ ಸಿಕ್ಕಾಪಟ್ಟೆ ಕೆಟ್ಟು ಕೆರಾ ಹಿಡಿದು ಹೋಗ್ಯಾಳ. ಪಂಚಾಂಗ ಅದು ಇದು ಅಂತ ಭಾಳ ಡಬಲ್ ಮೀನಿಂಗ್ ಮಾತಾಡ್ತಾಳ ಅಂತ ಹೇಳಿ bye ಅಂತ ಹೇಳಿದೆ.

ನನ್ನ ಖಾಸ್ ದೋಸ್ತ ಕರೀಂ ಹುಸ್ಸೂಳೆಮಗ, ಪಂಚೆಯಲ್ಲಿರುವ ಅಂಗ ಪಂಚಾಂಗ, ಅಂತ ಕೆಟ್ಟದಾಗಿ ಸಮಾಸ ಬಿಡಿಸ್ಕೋತ್ತ ಇರ್ತಾನ. ಇಕಿ ದೋಸ್ತ ಬ್ಯಾರೆ ಆವಾ. ಅವನ  ಜೋಡಿ ಸೇರಿ ಇಕಿನೂ ಕಿಡಿಗೇಡಿ ಆಗಿ ಬಿಟ್ಟಾಳ. ಸಹವಾಸ ದೋಷ ಅಂದ್ರ ಇದೇ ಇರಬೇಕು. ಕರೀಮಗ ಸ್ಟ್ರಿಕ್ಟ್ ಆಗಿ ವಾರ್ನಿಂಗ್ ಮಾಡಬೇಕು. ಹುಡುಗ್ಯಾರ ಮುಂದ ಹೋಗಿ ಡಬಲ್ ಮೀನಿಂಗ್ ಎಲ್ಲಾ ಹೇಳಬ್ಯಾಡ. ತಲಿ ಇಲ್ಲದ ಈ ಹಾಪ್ ಸುಂದರಿ ಅಂತವರು ಅದನ್ನ ತಂದು ನಮ್ಮ ಬುಡಕ್ಕ ಬತ್ತಿ ಇಡ್ತಾರ ಅಂತ. 

ಏ....ಪಂಚಾಂಗ ಕೊಡೊ....ಸ್ಟುಪಿಡ್....ಕೊಡ್ತಿಯೋ? ಅಥವಾ ಕಸಗೊಳ್ಳಲೋ ನಿನ್ನ ಪಂಚಾಂಗ? ಹಾಂ? ಹಾಂ? ಅಂತ ಮೆಸೇಜ್ ಮಾಡಿಕೋತ್ತ ಇದ್ದಳು.

ಕೊಟ್ಟ ಪಂಚಾಂಗ ವಾಪಸ್ ಬರದಿದ್ದರ ಕಷ್ಟ ಅಂತ ಹೇಳಿ ಸುಮ್ಮನ ಕೂತೆ. ಅದೇನೋ ಅಂತಾರಲ್ಲ.....ಕೊಟ್ಟ ಪಂಚಾಂಗ, ಕೆಟ್ಟ ಪಚನಾಂಗ ಎರಡೂ gone case ಅಂತ.

ಇಕಿನೂ ಹೋಗಿ ಕುತ್ತಿಗಿ ಕಾಣೋ ಶ್ರಾವಣದ ಹಜಾಮತಿ ಫೋಟೋ ಹಾಕಿದಳು. ಪ್ರೊಫೈಲ್ ಫೋಟೋ ಚೇಂಜ್ ಆತು ಅಂತ notification ಬಂದೇ ಬಿಡ್ತು. ಒತ್ತೇ ಬಿಟ್ಟೆ.....ಲೈಕ್.

ಮ್ಯಾಲೆ ಒಂದು ಕಾಮೆಂಟ್ ಸಹಿತ ಹಾಕಿ ಬಿಟ್ಟೆ....'ಶ್ರಾವಣದಲ್ಲೇ ಸಾಫಾದ ಸುಂದರಿ.....ಮಸ್ತ ಚಂದ ಬಂದಿ....ಮಸ್ತ ಅದ ಹೊಸಾ ಹಜಾಮತಿ' ಅಂತ ಕಾಮೆಂಟ್ ಹಾಕಿದೆ.

ಮತ್ತ ಮೆಸೇಜ್ ಬಂತು.

ಸ್ಟುಪಿಡ್..... ಆ ಕಾಮೆಂಟ್ ಡಿಲೀಟ್ ಮಾಡು. ಶ್ರಾವಣಾ ಗೀವಣಾ ಎಲ್ಲಾ ತೆಗಿ. ಬರೆ 'ಮಸ್ತ ಚಂದ ಬಂದಿ' ಅಷ್ಟಾ ಇಡು. ಏನದು ಹೊಲಸ ಶಬ್ದ ಹಜಾಮತಿ? ಸ್ಟುಪಿಡ್.....ಅದನ್ನೂ ತೆಗಿ. ಹೇರ್ ಸ್ಟೈಲ್ ಅನ್ನು. ಲಗೂನ ಬ್ಯಾರೆ ಕಾಮೆಂಟ್ ಹಾಕು. ಇಲ್ಲಂದ್ರ ನಿನ್ನ ಕಾಮೆಂಟ್ ಡಿಲೀಟ್ ಮಾಡಿ ಬಿಡ್ತೇನಿ, ಅಂತ ವಾರ್ನಿಂಗ್ ಕೊಟ್ಟಳು.

ಹೋಗ್ಗೋ!!!! ಅಂತ ಹೇಳಿ, ಕಾಮೆಂಟ್ ಡಿಲೀಟ್ ಮಾಡಿ, 'ಮಸ್ತ ಚಂದ ಬಂದಿ' ಅಂತ ಹೇಳಿ ಸುಮ್ಮನಾದೆ.

ಹೀಂಗ ನೋಡ್ರೀ ಈ ಫೇಸ್ಬುಕ್ ಪ್ರೊಫೈಲ್ ಫೋಟೋ ಪುರಾಣ ಅಂದ್ರ.

No comments: