Wednesday, April 16, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೧)

ಅಮೇರಿಕಾದ ಕೆನಡಿ ಕುಟುಂಬದ ಚಿತ್ರ ವಿಚಿತ್ರಗಳು ಮುಗಿಯುವಂತದ್ದಲ್ಲ. ಒಮ್ಮೆ, ಇನ್ನೂ ಅಮೇರಿಕಾದ ಅಧ್ಯಕ್ಷರಾಗುವ ಮೊದಲು, ಜಾನ್ ಎಫ್ ಕೆನಡಿ ಸಾಹೇಬರು ಯಾವದೋ ಒಂದು ದೊಡ್ಡ ಚುನಾವಣೆಯಲ್ಲಿ ಸೋತು ಹೋದರು. ಕೆನಡಿಗಳಿಗೆ ಕೇವಲ ಗೆದ್ದು ಮಾತ್ರ ರೂಢಿ. ಸೋಲು ಅರಗಿಸಿಕೊಳ್ಳುವದು ಕಷ್ಟ ಕಷ್ಟ. ಅವನೌನ್! ಅಂದವರೇ ಕೆನಡಿ ಸಾಹೇಬರು ಹೆಂಡ್ತಿ ಬಿಟ್ಟು, ಒಬ್ಬರೇ ತಮ್ಮ ಪುಂಡು ಪೋಕರಿ ಗೆಳೆಯರ ಸಂಗಡ ದಕ್ಷಿಣದ ಫ್ಲೋರಿಡಾ ಕಡಲ ತೀರಕ್ಕೆ ಹೋಗಿ ಬಿಟ್ಟರು. ಅಲ್ಲಿ ಅವರದ್ದೇ ಜಾತಿಯ, ಎಲ್ಲ ಚಟಗಳಿದ್ದ, ಕೆನಡಿ ಸಾಹೇಬರಿಗೆ ಒಂದು ತರಹದ ರಾಜಕೀಯ ಗುರು ಆಗಿದ್ದ, ಸೆನೆಟರ್ ಜಾರ್ಜ್ ಸ್ಮಿದರ್ಸ್ ಇದ್ದರು. ಚುನಾವಣೆಯಲ್ಲಿ ಸೋತರೇನಂತೆ ಜಾಕ್, ಮಜಾ ಮಾಡೋಣ ಬಾ, ಅಂತ ಒಂದು ಹಡಗಿನ ತುಂಬಾ ಹೈ ಕ್ಲಾಸ್ ವೇಶ್ಯೆಯರನ್ನು ತುಂಬಿಕೊಂಡು ವಾರಗಟ್ಟಲೆ ಕೆರಿಬಿಯನ್ ಸಮುದ್ರದ ವಿಹಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟರು. ಚುನಾವಣೆಯಲ್ಲಿ ಸೋತ ಸಂಕಟವನ್ನು ಕೆನಡಿ ಸಾಹೇಬರು ಸಮುದ್ರದ ಮಧ್ಯೆ ಮದಿರೆ, ಮಾನಿನಿಯರ ಮಧ್ಯೆ ಕಳೆದು ಹಗುರಾಗಿ ಬಂದರು.

ಈ ಕಡೆ ಅಂದ್ರೆ ಮನೆ ಕಡೆ ಸ್ಥಿತಿಯೇ ಒಂದು ತರಹ ಇತ್ತು. ಕೆನಡಿ ಪತ್ನಿ ಜಾಕಿ ಕೆನಡಿ ಆವಾಗ ತುಂಬು ಗರ್ಭಿಣಿ. ಕೆನಡಿ ಸಾಹೇಬರು ಚುನಾವಣೆಯಲ್ಲಿ ಸೋತ ಸಂಕಟದಲ್ಲಿ ಆ ಕಡೆ ಹೋಗಿದ್ದೆ ಹೋಗಿದ್ದು ಈಕೆಗೆ ಈಕಡೆ ಹೆರಿಗೆ ನೋವು ಬಂತು. ಗಂಡ ಎಲ್ಲಿ? ಇಲ್ಲೆ. ಪೋಯಾಚ್ಚ. ಹಾಳಾಗಿ ಹೋಗಲಿ ಅಂದುಕೊಳ್ಳಲಿಕ್ಕೆ ಒಂದು ಸರಿಯಾದ ಮಗುವಾದರು ಹುಟ್ಟಿತಾ? ಅದೂ ಇಲ್ಲ. ಸತ್ತ ಮಗುವಿಗೆ ಜನ್ಮ ನೀಡಿ ಕೆನಡಿ ಪತ್ನಿ ಹೈರಾಣ ಆಗಿ ಹೋದರು. ಸಾಂತ್ವನ ಹೇಳಬೇಕಾಗಿದ್ದ ಪತಿ ಎತ್ತಲೋ ಬಾಟಲಿ ಎತ್ತುತ್ತ ಯಾರದ್ದೋ ಚಲುವೆಯ ಏನು ಬಿಚ್ಚುತ್ತಿದ್ದರೋ!? ದೇವರೇ ಬಲ್ಲ.

ಅದು ಜಾಕಿ ಕೆನಡಿ ಮನಸ್ಸಿಗೆ ಮಾಯಲಾಗದ ಗಾಯ. ಮುಂದೊಮ್ಮೆ ಮಾಡ್ತೀನಿ ತಡಿ ನಿನಗೆ ಮಗನೇ! ಅಂತ ಮನಸ್ಸಿನಲ್ಲೇ ಅಂದುಕೊಂಡ ಜಾಕಿ ಕೆನಡಿ, ಸತ್ತ ಮಗುವಿಗೆ ಜನ್ಮ ಕೊಟ್ಟ ಶೋಕ, ತಾಪಗಳಿಗೆ ತಾವೇ ಮರಹಮ್ಮು ಪಟ್ಟಿ ಮಾಡಿಕೊಂಡರು. ಬಂಧು ಬಳಗದವರು ಎಷ್ಟೇ ಏನೇ ಸಮಾಧಾನ ಮಾಡಿದರೇನು, ಅಂತಹ ಸಮಯದಲ್ಲಿ ಪತಿ ಇರಲಿಲ್ಲ ಅನ್ನುವ ಕೊರಗು ಮಾತ್ರ ಜಾಕಿಯನ್ನು ಬಿಡಲಿಲ್ಲ. ಆಕೆ ಕೊನೆ ತನಕ ಅದನ್ನ ಮರಿಯಲಿಲ್ಲ.

ಮುಂದೆ ಏನೇನೋ ಆಯಿತು ಬಿಡಿ. ಕೆನಡಿ ಸಾಹೇಬರು ಗೆದ್ದು ಅಧ್ಯಕ್ಷರಾದರು. ಮನೆ ಕಡೆ ಅಷ್ಟಕಷ್ಟೇ. ಜಾಕಿ ಕೆನಡಿ ಶ್ವೇತ ಭವನ ಬಿಟ್ಟು ಮಾರ್ಕೆಟ್ಟಿಗೆ ಹೋದರೂ ಸಾಕು ಕೆನಡಿ ಸಾಹೇಬರ ಖಾಸ್ ದೋಸ್ತ ಕಮ್ ಪಿಂಪ್ ಡೇವಿಡ್ ಪಾವರ್ಸ್ ಅನ್ನುವಾತ ಹೊಸ ಹೊಸ ಹಕ್ಕಿ ತಂದು ಸಾಹೇಬರ ತಲೆಗೆ ಅಮೃತಾಂಜನ ತಿಕ್ಕೇ ಬಿಡುತ್ತಿದ್ದ. ದಿನಕ್ಕೊಂದು ಹೊಸ ಮಾಲು ಇಲ್ಲ ಅಂದ್ರೆ ನನಗೆ ನಿದ್ದೆ ಬರೋದಿಲ್ಲ ಡೇವ್, ಅಂತ ಕೆನಡಿ ಸಾಹೇಬರು ಆಗಾಗ ಕಂಪ್ಲೇಂಟ್ ಮಾಡಿ ಮಾಡಿ, ಇವರ ರಿಪಿ ರಿಪಿಯೇ ಬೇಡ ಅಂತ ಡೇವಿಡ್ ಪಾವರ್ಸ್ ಫುಲ್ ಟೈಮ್ ಪಿಂಪ್ ಆಗಿ ಒಂದು ದೊಡ್ಡ ಹ್ಯಾರೆಮ್ ಮಾಡಿ ಬಿಟ್ಟಿದ್ದ. ಯಾವಾಗ ಬೇಕೆಂದಾಗ, ಮಿ. ಪಾವರ್ಸ್ + ಒಂದು ಎಕ್ಸಟ್ರಾ ಅಂತ ಶ್ವೇತ ಭವನದ ಪುಸ್ತಕದಲ್ಲಿ ಎಂಟ್ರಿ ಹಾಕಿಸಿ, ಕೆನಡಿ ಸಾಹೇಬರ ನೂರಾರು ಬೆಡ್ ರೂಮುಗಳಲ್ಲಿ ಒಂದರಲ್ಲಿ ಹಕ್ಕಿ ನುಗ್ಗಿಸಿ, ಬಾವುಗ ಬೆಕ್ಕಿನಂತಿದ್ದ ಕೆನಡಿ ಸಾಹೇಬರನ್ನು, ಅವರ ಸೋದರರನ್ನು, ಗೆಳೆಯರನ್ನು ಬಿಟ್ಟು ಸಮೃದ್ಧ 'ಮಾಂಸ'ದೂಟ  ಮಾಡಿಸಿಬಿಡುತ್ತಿದ್ದ. ಜಾಕಿ ಕೆನಡಿ ಮೇಡಂ ವಾಪಸ್ ಬರುವ ಮೊದಲು ಎಲ್ಲವನ್ನೂ ಸಾಫ್ ಸಾಫ್ ಮಾಡುವ ಕೆಲಸ ಸಹಾ ಅವನದೇ. ಸುಮಾರು ಸರಿಯಾಗೇ ಮಾಡುತ್ತಿದ್ದ ಅನ್ನಿ.

ಜಾಕಿ ಕೆನಡಿ ಮೇಡಂಗೆ ಕೆನಡಿಗಳ ಹಗ್ಗ ಕಡಿಯುವ ವಿಷಯ ಏನೂ ಅಪರಿಚಿತವಾಗಿರಲಿಲ್ಲ. ಕೆನಡಿ ಕುಟುಂಬ ಅದಕ್ಕೆ ಫೇಮಸ್. ಕೆನಡಿಗಳ ತಂದೆ ಜೋಸೆಫ್ ಕೆನಡಿಗೆ ಊರು ತುಂಬಾ ಸಂಸಾರ. ಗ್ಲೋರಿಯಾ ಸ್ವಾನ್ಸನ್ ಎನ್ನುವ ನಟಿ ಅವರ ಹಲುವಾರು ಉಪಪತ್ನಿಯರಲ್ಲಿ ಒಬ್ಬಳು. ಹಸು ಮಾತ್ರ ಒಂದೇ ಸಾಕಿ, ಹಾಲು ಎಲ್ಲೆ ಬೇಕಾದರೂ ಕುಡಿಯಿರಿ, ಕ್ಯಾಥೊಲಿಕ್ ಪದ್ಧತಿ ಪ್ರಕಾರ ದೇವರು ಕೊಟ್ಟ ಮಕ್ಕಳು ಅಂತ ಒಂದಾದ ಮೇಲೊಂದು ಮಕ್ಕಳನ್ನು ಮಾಡುತ್ತ, ಅಧಿಕೃತ ಧರ್ಮಪತ್ನಿಯನ್ನು ಸದಾ ಗಬ್ಬದ   ಹಸುವಿನಂತೆ ಇಟ್ಟು, ಬಾಕಿ ಕಡೆ ಬೇಕಾದಲ್ಲಿ ಬೇಕಾಗಿದ್ದು ಮೇಯಿದು ಮೇಯರ್ ಮುತ್ತಣ್ಣರಾಗಿ ನೂರ್ಕಾಲ್ ಬಾಳಿ, ಅಂತ ಉಪದೇಶ ತಂದೆ ಕೆನಡಿಯಿಂದ ತಮ್ಮ ಮಕ್ಕಳಿಗೆ. ಇನ್ನು ಕೇಳಬೇಕೆ!?

ಮುಂದೆ ಕೆನಡಿ ಅಧ್ಯಕ್ಷರಾದ ಮೇಲೆ ಏನೋ ಒಂದು ದಿವಸ ಜಾಕಿ ಕೆನಡಿಗೆ ಗಂಡನ ಮೇಲೆ ಮುನಿಸು. ದುಮು ದುಮು ಗುಡುತ್ತ ಸೀದಾ ಮನೆ ಬಿಟ್ಟು ಹೋಗಿಯೇ ಬಿಟ್ಟರು. ಎಲ್ಲ ದೊಡ್ಡ ಮಂದಿ. ಮನೆ ಬಿಟ್ಟು ತವರು ಮನೆಗೆ ಹೋಗುತ್ತಾರೆಯೇ? ಜಾಕಿ ಕೆನಡಿ ಸೀದಾ ದೇಶ ಬಿಟ್ಟು, ಯೂರೋಪಿನ ಗ್ರೀಸ್ ದೇಶದ ಕಡೆ ಎಲ್ಲೋ ಹೋಗಿ ಬಿಟ್ಟರು.

ಅಲ್ಲಿದ್ದ ನೋಡಿ ಅವರ ಆಶಿಕ಼್!

ಜಾಕಿ ಕೆನಡಿ ಅಂತೂ ತ್ರಿಲೋಕ ಸುಂದರಿ. ಅಷ್ಟೇ ಬುದ್ಧಿವಂತೆ ಕೂಡ. ಸೌಂದರ್ಯ, ಬುದ್ಧಿವಂತಿಕೆ, ರೊಕ್ಕ, ಸ್ಟೇಟಸ್ ಎಲ್ಲ ಇದ್ದ ಮೇಲೆ ಸ್ವಲ್ಪ ಚಲ್ಲಾಟ ಇರದೇ ಹೋಗುತ್ತದಯೇ? ಗಂಡ ಬೇರೆ ಪರಮ ಲಂಪಟ. ಹಾಗಾಗಿ ಮಾಡ್ತೀನಿ ತಡಿ ನಿನಗೆ, ಅಂದವರೇ ಅವರಿಗೆ (ಜಾಕಿ ಕೆನಡಿಗೆ) ತುಂಬಾ ವರ್ಷಗಳಿಂದ ಕಾಳು ಹಾಕುತ್ತಿದ್ದ ಗಂಡು ಗೂಳಿಯೊಬ್ಬನಿಗೆ ಹಾಯ್! ಅಂದೇ ಬಿಟ್ಟರು.

ಅವನೇ ಅರಿಸ್ಟಾಟಲ್ ಓನಾಸಿಸ್! ಆ ಕಾಲದ ದೊಡ್ಡ ಶಿಪ್ಪಿಂಗ್ ಮ್ಯಾಗ್ನೆಟ್! ನೂರಾರು ಸರಕು ಸಾಗಾಣಿಕೆ ಹಡಗುಗಳ ಮಾಲೀಕ. ಗ್ರೀಕ್ ದೇಶದ ಸಮೀಪದಲ್ಲಿ ಅವನದೇ ಆದ ಒಂದು ಪ್ರೈವೇಟ್ ಐಲ್ಯಾಂಡ್ ಇತ್ತು. ಅಲ್ಲಿ ದೊಡ್ಡ ಮಹಲು. ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ದಿಂದ ಸ್ವಲ್ಪ ದೂರ ಮಾತ್ರ. ಅರ್ಜೆಂಟ್ ಹೋಗಬೇಕು ಅಂದ್ರೆ ಹೆಲಿಕಾಪ್ಟರ್. ಆರಾಮ ಹೋಗಲು ಅವನದೇ ದೊಡ್ಡ ಐಶಾರಾಮಿ ಹಡಗು.

ಅರಿಸ್ಟಾಟಲ್ ಓನಾಸಿಸ್ ದೊಡ್ಡ ಮಟ್ಟದ ಪ್ಲೇಬಾಯ್. ಸುಮಾರು ವಯಸ್ಸಾಗಿತ್ತು. ಹುಣಸೆ ಮುಪ್ಪಾದರೆ ಹುಳಿ ಮುಪ್ಪೆ ಅನ್ನುವಂತೆ ಹೊಸ ಹೊಸ ಮಾಲುಗಳ ಬೇಟೆ ಮಾತ್ರ ಬಿಟ್ಟೇ ಇರಲಿಲ್ಲ. ಆ ಕಾಲದಲ್ಲೇ ವಿಶ್ವದ ದೊಡ್ಡ ಶ್ರೀಮಂತರಲ್ಲಿ ಒಬ್ಬ. ಎಲ್ಲ ದೇಶದ ದೊಡ್ಡ ದೊಡ್ಡ ಜನರಿಗೆ ಎಲ್ಲ ತರಹದ ಸೇವೆ ಮಾಡಿ ಇಡೀ ವಿಶ್ವದ ಶಿಪ್ಪಿಂಗ್ ಮೇಲೆ ಒಂದು ತರಹದ ಮೊನೋಪೋಲಿ ಸಾಧಿಸಿಬಿಟ್ಟಿದ್ದ. ಯಾವ ಪರಿ ಲಂಪಟ ಅಂದರೆ, ಮಾಜಿ ಇಂಗ್ಲಂಡ ಪ್ರಧಾನಿ ವಿನ್ಸ್ಟನ್ ಚರ್ಚಿಲ್ಲ ಅವರ ಸೊಸೆಯನ್ನೇ ಪಟಾಯಿಸಿ, ಚರ್ಚಿಲ್ಲರ ಮಗನ ಕೈಗೆ ಚಿಪ್ಪು ಕೊಟ್ಟ ಪಮೇಲಾ ಚರ್ಚಿಲ್ಲ ಎಂಬಾಕೆ ಈ ಓನಾಸಿಸ್ ಎಂಬ ಶಿಪ್ಪಿಂಗ್ ಟೈಕೂನ್ ಸಂಗಡ ಹೊಡೆಯುವಷ್ಟು ಕೇಕೆ ಹೊಡೆದು, ಜಮ್ಮಚಕ್ಕ ಮಾಡಿ, ಇಂಗ್ಲಂಡ ದೇಶಕ್ಕೆ ದೊಡ್ಡ ನಮಸ್ಕಾರ ಹಾಕಿ, ಅಮೇರಿಕಾ ಸೇರಿಕೊಂಡು, ಕೆನಡಿ ಸಹೋದರರ ಏನೇನೋ ಸೇವೆ ಮಾಡಿ, ಅಲ್ಲಿಯ ಪ್ರಜೆಯಾಗಿ ಮುಂದೊಂದು ದಿವಸ ಕ್ಲಿಂಟನ್ ಸಾಹೇಬರ ಕಾಲದಲ್ಲಿ ದೊಡ್ಡ ಮಟ್ಟದ ರಾಯಭಾರಿಯೂ ಆಗಿ ಹೋದಳು. ಏನೇನೋ ಕಥೆ ಬಿಡಿ. ಅದೆಲ್ಲ ಇಲ್ಲಿ ಬರೆಯುತ್ತ ಹೋದರೆ ವಿಷಯಾಂತರ ಆಗುತ್ತದೆ.

ಜಾಕಿ ಕೆನಡಿ ಮನೆ ಬಿಟ್ಟು ಓಡಿ ಬಂದಿದ್ದೇ ಬಂದಿದ್ದು ಅರಿಸ್ಟಾಟಲ್ ಓನಾಸಿಸ್ ಫುಲ್ ಥ್ರಿಲ್ಲಾಗಿ ಹೋದ. ಅಕ್ಕನಿಗೆ ಕಂಪನಿ ಕೊಡಲು ಜಾಕಿ ಕೆನಡಿ ಮೇಡಂ ತಂಗಿ ಸಹಿತ ಹೋಗಿ ಬಿಟ್ಟಿದ್ದಳು. ಮುದುಕ ಓನಾಸಿಸ್ ಗೆ ಖುಷಿಯೋ ಖುಷಿ. ಎರ್ರಾ ಬಿರ್ರಿ ರೈಸ್ ಆದವನೇ ತನ್ನ ಪ್ರೈವೇಟ್ ದ್ವೀಪದ ಕಡೆ ಹೋಗಲು ತನ್ನ ಐಶಾರಮಿ ಹಡಗನ್ನು ಸಿದ್ದ ಮಾಡಿಯೇ ಬಿಟ್ಟ. ಹಡಗಿನ ತುಂಬ ಬೆಸ್ಟ್ ಕ್ವಾಲಿಟಿಯ ಗುಂಡು, ತುಂಡು ತುಂಬಿಯೇ ತುಂಬಿದರು. ದೂರದಿಂದ ಬಂದ ಹೆಣ್ಣು ಮಕ್ಕಳು ಎಷ್ಟು ಹಸಕೊಂಡು, ಬಾಯಾರಿಕೊಂಡು ಬಂದಿರುತ್ತಾರೋ ಏನೋ ಅನ್ನುವ ರೀತಿಯಲ್ಲಿ. ಎಲ್ಲರನ್ನೂ ತುಂಬಿಕೊಂಡ ಹಡಗು ಓನಾಸಿಸ್ ನ ಖಾಸಗಿ ದ್ವೀಪದತ್ತ ಹೊರಟಿತು.

ಹುಚ್ಚು ಹೆಂಗಸರಿಗೆ ಸೂರ್ಯ ಸ್ನಾನ ಮಾಡುವ ತಲುಬು. ಅಕ್ಕ ಜಾಕಿ ಮತ್ತು ತಂಗಿ ಎಲ್ಲಾ ಬಿಚ್ಚಿ, ಕಾಟಾ(ಚಾ)ಚಾರಕ್ಕೆ ಎನ್ನುವಂತೆ ಕಾಚಾ ಬಾಡಿ ಒಂದಿಷ್ಟು ಮಾತ್ರ ಹಾಕಿಕೊಂಡು, ಮೈಗೆಲ್ಲ ಎಣ್ಣೆ ಒತ್ತಿಕೊಂಡು, ಉಧೋ ಯಲ್ಲಮ್ಮ! ಅನ್ನುವ ರೀತಿಯಲ್ಲಿ ಹಡಗಿನ ಡೆಕ್ಕಿನ ಮೇಲೆ ಅಂಬೋ ಅನ್ನುತ್ತ ಸುತ್ತ ಮುತ್ತಲ ಖಬರಿಲ್ಲದೆ ಡಬ್ಬು ಮಲಗಿ ಬಿಟ್ಟರು. ಹಿತವಾದ ಸೂರ್ಯ ಮೈ ಕಾಯಿಸುತ್ತಿದ್ದರೆ, ಖುದ್ದು ಆಗರ್ಭ ಶ್ರೀಮಂತ ಓನಾಸಿಸ್ ಹುಡುಗಿಯರಿಗೆ ಶಾಂಪೇನ್ ಕುಡಿಸುತ್ತ, ಸ್ಟ್ರಾಬೆರಿ ಹಣ್ಣು ತಿನ್ನಿಸುತ್ತ ಹರಕೆಗೆ ಕುರಿ ಸಿದ್ಧ ಮಾಡುತ್ತಿದ್ದ.

ಅವರಿಗೇನು ಗೊತ್ತಿತ್ತು ಆಗ ಆಗುತ್ತಿದೆ ದೊಡ್ಡ ಲಫಡಾ ಒಂದು ಅಂತ!

(ಮುಂದುವರಿಯಲಿದೆ) (ಮುಂದಿನ ಭಾಗ -೨ ಇಲ್ಲಿದೆ)

ಜಾಕಿ ಮತ್ತು ಆಕೆಯ ತಂಗಿ ಓನಾಸಿಸ್ ಹಡಗಿನಲ್ಲಿ

1 comment:

Vimarshak Jaaldimmi said...


Very good! New thread from an old needle!!

Is there a third person in that picture? Looks like (s)he is doing a Surya Namaskara - better, do it "gajam" style!