Monday, September 22, 2014

ಜೋಡಿ ಕೊಲೆ ಪ್ರೇತಾತ್ಮಗಳು ಹೊಟ್ಟೆ ಹುಳಗಳಾಗಿ ಕಾಡಿದ್ದವೇ?

೧೯೮೦ ನೇ ಇಸವಿ. ಜುಲೈ, ಆಗಸ್ಟ್ ತಿಂಗಳ ಒಂದು ದಿನ. ಮೂರನೇ ಕ್ಲಾಸಿನಲ್ಲಿದ್ದೆ. ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಮನೆ ಹತ್ತಿರ ಸಿಕ್ಕಾಪಟ್ಟೆ ಪೋಲೀಸರು. ನಮ್ಮನೆ ಮುಂದಲ್ಲ. ಅಲ್ಲೇ ಸ್ವಲ್ಪ ಮುಂದೆ. ಸ್ವಲ್ಪ ಆಕಡೆ. ಯಾಕೆ ಅಷ್ಟೊಂದು ಪೋಲೀಸ್ ಅಂತ ನೋಡಿದರೆ ಅಲ್ಲೊಂದು ಜೋಡಿ ಕೊಲೆ (ಡಬಲ್ ಮರ್ಡರ್) ಆಗಿ ಹೋಗಿತ್ತು!

ಇನ್ನೂ ಕಟ್ಟುತ್ತಿದ್ದ ಮನೆ ಅದು. ಅದೇ ಪ್ಲಾಟಿನಲ್ಲಿ ಒಂದು ಚಿಕ್ಕ ಶೆಡ್ ಹಾಕಿಟ್ಟಿದ್ದರು. ಎಲ್ಲರೂ ಮನೆ ಕಟ್ಟುವಾಗ ಮಾಡುತ್ತಿದ್ದ ಕೆಲಸ ಅದು. ಮೊದಲು ಒಂದು ತಾತ್ಕಾಲಿಕ ಶೆಡ್ ಕಟ್ಟುವದು. ಸಿಮೆಂಟ್, ಕಬ್ಬಿಣ, ಮರ, ಇತ್ಯಾದಿ ಸಾಮಾನು ಇಡಲು ಅಂತ. ಕಾಯಲು ಇಡುತ್ತಿದ್ದ ಕಾವಲುಗಾರ ಉರ್ಫ್ ವಾಚ್ಮನ್ ಗೆ ಉಳಿಯಲೂ ಸಹ ಒಂದು ವ್ಯವಸ್ಥೆ ಮಾಡಿದ ಹಾಗೆ. ಆ ಮನೆ ಶೆಡ್ಡಿನಲ್ಲಿ ಇದ್ದಿದ್ದು ಒಂದು ವೃದ್ಧ ವಾಚ್ಮನ್ ದಂಪತಿ. ಅವರೂ ನಮಗೆ ಗೊತ್ತಿತ್ತು ಬಿಡಿ. ಯಾಕೆಂದರೆ ಅದೇ ದಂಪತಿಗಳ ಅಳಿಯ ನಮ್ಮನೆ ವಾಚ್ಮನ್ ಆಗಿದ್ದ. ನಮ್ಮ ಹೊಸ ಮನೆ ಕಟ್ಟಿ ಮುಗಿದು, ನಾವು ಆ ಏರಿಯಾಕ್ಕೆ ಬಂದು ಸಹ ಕೇವಲ ಒಂದೋ ಎರಡೋ ತಿಂಗಳಾಗಿತ್ತು ಅಷ್ಟೇ. ಹಾಗಿರುವಾಗ ಒಂದೆರೆಡು ಸೈಟ್ ಬಿಟ್ಟು ಇದ್ದಂತಹ ಆ ಸೈಟಿನಲ್ಲಿ ಡಬಲ್ ಮರ್ಡರ್! ವೃದ್ಧ ವಾಚ್ಮನ್ ದಂಪತಿಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು.

ಸಹಜವಾಗಿ ನಮಗೆ ಕೆಟ್ಟ ಕುತೂಹಲ. ಸುತ್ತುವರಿದಿದ್ದ ಜನರ ಮಧ್ಯೆ ಹೋಗಿ ತೂರಿಕೊಂಡೆವು. ಸಿಕ್ಕಾಪಟ್ಟೆ ಸಂಖ್ಯೆಯಲ್ಲಿ ಪೊಲೀಸರು ಇದ್ದರು. ಧಾರವಾಡ ಮಟ್ಟಿಗೆ ಡಬಲ್ ಮರ್ಡರ್ ಅಂದ್ರೆ ದೊಡ್ಡದೇ ಬಿಡಿ. ಸುಮಾರು ಜನ ಪೋಲೀಸ್ ಸಾಹೇಬರು ಎಲ್ಲ ಬಂದಿದ್ದರು ಅಂತ ಕಾಣುತ್ತದೆ. ಸುಮಾರು ಜೀಪು, ಕೆಂಪು ಗೂಟದ ಒಂದು ಬಿಳೆ ಕಾರು ಎಲ್ಲ ಬಂದಿತ್ತು. ದೊಡ್ಡ ಆಕರ್ಷಣೆ ಅಂದರೆ ಕೊಲೆ ಮಾಡಿದವರನ್ನು ಹಿಡಿಯಲು ಬಂದಿದ್ದ ಪೋಲೀಸ್ ನಾಯಿ. ಅದನ್ನು ನೋಡಿ, 'ಅವನೌನ್! ನಮ್ಮ ಏರಿಯಾಕ್ಕೆ ಇದೆಲ್ಲಿ ಹೊಸ ನಾಯಿ ಬಂತಲೇ!?' ಅಂತ ಸಾಯೋ ರೀತಿಯಲ್ಲಿ ಏರಿಯಾದ ಸಾಕಿದ ನಾಯಿಗಳ, ಬೀದಿ ನಾಯಿಗಳ ಬೊಗಳುವಿಕೆ, ಊಳಿಡುವಿಕೆ. ಅವನ್ನು ಓಡಿಸುತ್ತಿದ್ದ ಹೊಟ್ಟೆ ಬಿಟ್ಟ ಪೋಲೀಸರ ಕಷ್ಟ. ಎಲ್ಲ ಮಜವಾಗಿತ್ತು. ನೋಡವರಿಗೆ ಎಲ್ಲ ಮಜಾನೇ ಬಿಡಿ. ಪೋಲೀಸರ ಕರ್ಮ ಯಾರಿಗೂ ಬ್ಯಾಡಾ. ಮಳೆ ಬೇರೆ ಜಿನುಗುತ್ತಿತ್ತು.

ಕತ್ತಲಾಗುತ್ತ ಬಂತು. ಪೋಲೀಸರ ತನಿಖೆ ಕ್ಲೈಮಾಕ್ಸ್ ಗೆ ಬರುತ್ತಿತ್ತು. ಸುತ್ತ ನೆರದವರಲ್ಲಿ ಚಿತ್ರ ವಿಚಿತ್ರ ಸುದ್ದಿಗಳು. 'ಏ, ಪಿಕಾಸಿಲೇ ಹೆಟ್ಟಿ ಬಿಟ್ಟಾರ್ರಿ ಮೇಡಂ! ಹೊಟ್ಟಿ ನಟ್ಟ ನಡು ಹೆಟ್ಟಿ ಕೊಂದಾರ ನೋಡ್ರೀ,' ಅಂತ ಹೇಗೆ ಮರ್ಡರ್ ಮಾಡಲಾಗಿದೆ ಅಂತ ಅಂಕಲ್ ಒಬ್ಬರು ಆಂಟಿ ಒಬ್ಬರಿಗೆ ಹೇಳುತ್ತಿದ್ದರು. ತಾವೇ ಹೋಗಿ, ಪಿಕಾಸಿ ಹೆಟ್ಟಿ, ಮರ್ಡರ್ ಮಾಡಿ ಬಂದವರಂತೆ ಹೇಳುತ್ತಿದ್ದರು. ಆಂಟಿ ಮುಖ ಕಿವುಚಿದರು. ಕೆಟ್ಟ ಮಾರಿ ಮಾಡಿದರು. ಅದನ್ನ ನೋಡಿ ಅಂಕಲ್ ಸ್ವಲ್ಪ ಮೀಟರ್ ಕಮ್ಮಿ ಮಾಡಿಕೊಂಡರು. ಅಂಕಲ್ ಮೀಟರ್ ಕಮ್ಮಿಯಾಗಿದ್ದು ನೋಡಿ, ಬಾಯಿ ಬಿಟ್ಟು ಕೇಳುತ್ತಿದ್ದ ನಾವು ತಾತ್ಕಾಲಿಕವಾಗಿ ಬಾಯಿ ಬಂದು ಮಾಡಿಕೊಂಡೆವು.

Yes! ಅಷ್ಟರಲ್ಲಿ ಪೋಲೀಸ್ ನಾಯಿ ಹೊರಗೆ ಬಂತು. ಅದನ್ನು ಕೊಲೆಯಾಗಿದ್ದ ಶೆಡ್ಡ ಒಳಗೆ ಕರೆದುಕೊಂಡು ಹೋಗಿ, ಎಲ್ಲ ಮೂಸಿಸಿಕೊಂಡು ಕರೆದುಕೊಂಡು ಬಂದರು. ನಾಯಿ ಅಲ್ಲಿ ಇಲ್ಲಿ ಮೂಸುತ್ತ, ತನ್ನ ಜೊತೆ ಇದ್ದ ಪೊಲೀಸನನ್ನು ಎಳೆದುಕೊಂಡು ಓಡಿ ಹೋಗಿ ನಿಂತಿದ್ದು ಮುಂದಿದ್ದ ಇನ್ನೊಂದು ಸೈಟಿನಲ್ಲಿ. ಅಲ್ಲೂ ಮತ್ತೊಂದು ಮನೆಯ ನಿರ್ಮಾಣ ನಡೆಯುತ್ತಿತ್ತು. ಅಲ್ಲೂ ಒಂದು ಶೆಡ್ ಇತ್ತು. ಒಬ್ಬ ವಾಚ್ಮನ್ ಅಲ್ಲೂ ಇದ್ದ. ಪೋಲೀಸ್ ನಾಯಿ ಹೋಗಿ ಅವನನ್ನು ಹಿಡಿದು ಬಿಡಬೇಕೇ! 'ಇವನೇ ಕೊಲೆ ಮಾಡಿದ್ದಾನೆ. ಹಿಡೀರಿ ಇವನ್ನ,' ಅನ್ನುವ ರೀತಿಯಲ್ಲಿ ಬೊಗಳುತ್ತ ನಿಂತು ಬಿಟ್ಟಿತು. ಪೊಲೀಸರಿಗೆ ಮತ್ತೇನು ಬೇಕು!? ಒಂದಿಬ್ಬರು ಪೇದೆಗಳು ಬಂದವರೇ ಅವನಿಗೆ ರಪ್ರಪಾ ರಪ್ರಪಾ ಅಂತ ಬಡಿದರು. ಬಗ್ಗಿಸಿ ಬಗ್ಗಿಸಿ ಬಡಿದರು. 'ನಾ ಅಲ್ರೀ ಸಾಹೇಬ್ರ! ನಾ ಖೂನ್ ಮಾಡಿಲ್ಲರೀ! ನನಗೇನ್ ಗೊತ್ತಿಲ್ಲರೀ. ಆಣಿ ಮಾಡಿ ಹೇಳ್ತೇನ್ರೀ! ಯಪ್ಪಾ! ಹೊಡಿಬ್ಯಾಡ್ರೀ ಸಾಹೇಬ್ರಾ!' ಅಂತ ಆ ಇನ್ನೊಬ್ಬ ವಾಚ್ಮನ್ನನ ರೋಧನ. ಅದನ್ನೆಲ್ಲ ಕೇಳುವರು ಯಾರು? 'ನಮ್ಮ ನಾಯಿ ನಿನ್ನs ಹಿಡದೈತಿ. ಎಲ್ಲಾರನ್ನೂ ಬಿಟ್ಟು ನಿನ್ನs ಹಿಡಿಯಾಕ ಅದಕ್ಕೇನ ಹುಚ್ಚೇನಲೇ ಮಗನs? ನೀ ಹೀಂಗs ಬಗ್ಗೋ ಪೈಕಿ ಅಲ್ಲ ಅನಸ್ತೈತಿ. ತಡಿ, ನಿನ್ನ ಒಳಗ ಹಾಕಿ ನಾದ್ತೇವಿ. ಮಸ್ತ ರುಬ್ಬತೇವಿ. ಆವಾಗ ಹೇಳಿಯಂತ ಯಾರು ಖೂನ್ ಮಾಡಿದ್ರು ಅಂತ. ಭೋಸಡೀಕೆ!' ಅಂತ ಫುಲ್ ಪೋಲೀಸ್ ಭಾಷೆ ಪ್ರಯೋಗ ಮಾಡುತ್ತ, 'ಜೀಪ್ ತರ್ರಿ ಸರ್ರಾ. ಹಾಕ್ಕೊಂಡ ಹೋಗಿ ಬಿಡೋಣ,' ಅಂತ ಒದರುತ್ತ, ಇನ್ನೊಂದು ನಾಕು ಹೊಡೆತ ಹಾಕಿ, ಬೇಡಿ ಹಾಕಿ, ಅವನನ್ನ ಎತ್ತಾಕಿಕೊಂಡು ಹೋಗೇ ಬಿಟ್ಟರು. ಜೋಡಿ ಮರ್ಡರ್ ಕೇಸ್ ಖಲಾಸ್. ಮರ್ಡರ್ ಆಗಿ ಇಪ್ಪತ್ನಾಕು ತಾಸಿನೊಳಗೇ ಆರೋಪಿ ಬಂಧನ. ಇನ್ನು ನಾಳೆ ಪೇಪರಿನಲ್ಲಿ ಸುದ್ದಿ ಬಂದರೆ ಎಲ್ಲ ಮುಗಿದ ಹಾಗೆಯೇ.

ಮನೆಗೆ ಓಡಿ ಬಂದು ಫುಲ್ ಎಕ್ಸೈಟ್ ಆಗಿ ಹೇಳಿದೆ. 'ಪೊಲೀಸರು ಇನ್ನೊಬ್ಬ ವಾಚ್ಮನ್ನನ ಹಿಡಕೊಂಡು ಹೋದರು. ಪೋಲೀಸ್ ನಾಯಿ ಬಂದು ಅವನ್ನೇ ಹಿಡೀತು. ಅವನೇ ಖೂನ್ ಮಾಡಿದ್ನಂತ. ಅವಂಗೇನು ಮಾಡ್ತಾರ ಇನ್ನು?' ಅಂತೆಲ್ಲ ಫುಲ್ ಕಥೆ ಹೇಳಿದ ಮೇಲೆ ಲಕ್ಷಕ್ಕೆ ಬಂತು ಯಾರೋ ಹಿರಿಯ ಅಂಕಲ್ ಒಬ್ಬರು ಅಪ್ಪನ ಜೊತೆ ಕೂತು ಮಾತಾಡುತ್ತಿದ್ದರು ಅಂತ. ಪೋಲೀಸ್ ನಾಯಿ ಖೂನಿ ಮಾಡಿದವನ ಹಿಡಿಯಿತು, ಅದನ್ನು ನಾವು ನೋಡಿದೆವು ಅನ್ನೋ excitement ನಲ್ಲಿ ಅವರು ಬಂದಿದ್ದನ್ನೇ ಗಮನಿಸಿರಲಿಲ್ಲ. ಅವರಿಗೆ ನಮಸ್ಕಾರ ಅನ್ನೋದು ದೂರ ಉಳಿತು.

ಅಂದು ಮನೆಗೆ ಬಂದಿದ್ದ ಅಂಕಲ್ ಒಂದು ಮಹತ್ವದ ಮಾತು ಹೇಳಿದ್ದರು. 'ಅರೆಸ್ಟ್ ಆದವ ಮರ್ಡರ್ ಆದವರ ಮನೆಯ ಮುಂದೇ ಇದ್ದವ ಅಂತೀ. ಮತ್ತೆ ಇಬ್ಬರೂ ವಾಚ್ಮನ್ ಜನರು. ಹೋಗಿ ಬಂದು, ಕೊಟ್ಟು ತೊಗೊಳ್ಳೋದು, ಎಲ್ಲ ಅವರ ಮಧ್ಯೆ ಇದ್ದೇ ಇರ್ತದೆ. ಆ ಸಂಪರ್ಕದ ವಾಸನೆ ಸುಳಿವಿನ ಮೇಲೆ ಪೋಲೀಸ್ ನಾಯಿ ಅವನನ್ನೇ ಹಿಡಿದಿದ್ದು ಸಹಜನೇ ಇದೆ. ಅದೊಂದೇ ಕಾರಣದ ಮೇಲೆ ಅವನೇ ಖೂನ್ ಮಾಡಿದ್ದ ಅಂತ ಹೇಳಲಿಕ್ಕೆ ಬರೋದಿಲ್ಲ. ಹೌದೋ ಅಲ್ಲೋ?' ಅಂತ ಒಂದು ಖರೆ ಮಾತು ಹೇಳಿದ್ದರು. ಬರೋಬ್ಬರಿ ಪಾಯಿಂಟ್ ಹಾಕಿದ್ದರು. ಅವರು ಕ್ರಿಮಿನಲ್ ವಕೀಲರಾಗಿದ್ದರಾ? ನೆನಪಿಲ್ಲ. ಅಂಕಲ್ ಮಾತು ಕೇಳಿ ಒಂದು ಕ್ಷಣ ಫುಲ್ ಟೆನ್ಷನ್ ಆಗಿದ್ದು ಹೌದು. ಯಾಕೆಂದರೆ ನಾವೂ ಸಹ ಮರ್ಡರ್ ಆದ ಮನೆಯ ಹತ್ತಿರದಲ್ಲೇ ಇದ್ದೆವು. ಆ ಕೊಲೆಯಾದ ವಾಚ್ಮನ್ ಗೊತ್ತೂ ಇದ್ದ. ನಮ್ಮ ಫೇರಿ ಅಲ್ಲೆಲ್ಲ ಹೋಗುತ್ತಲೂ ಇತ್ತು. ಎಲ್ಲಿಯಾದರೂ ಪುಣ್ಯಾತ್ಮನ ಕೊಲೆಯಾಗುವ ಹಿಂದಿನ ದಿನ ನಾವೆಲ್ಲಾದರೂ ಅಲ್ಲಿ ಹೋಗಿ, ಮರುದಿವಸ ಪೋಲೀಸ್ ನಾಯಿ ನಮ್ಮ ಚೊಣ್ಣ ಜಗ್ಗಿ ಬಿಟ್ಟಿದ್ದರೆ ಅಂತ ಟೆನ್ಷನ್ ಆಯಿತು. ಹಾಗಾಗಲಿಲ್ಲ ಅಂತ ಆವತ್ತಿಗೆ ಅದೇ ನೆಮ್ಮದಿ.

ಎಲ್ಲಿ ಜೋಡಿ ಕೊಲೆಯಾಗಿದ್ದವೋ ಅಲ್ಲಿ ಮನೆ ಕಟ್ಟುವ ಕೆಲಸ ಮುಂದುವರಿಯಿತು. ಮುಂದೆ ಒಂದೋ ಒಂದೂವರೆ ವರ್ಷದಲ್ಲೋ ಅಲ್ಲಿ ಒಂದು ದೊಡ್ಡ ಮನೆಯೂ ತಯಾರಾಯಿತು. ದೊಡ್ಡ ಸೈಟಿನಲ್ಲಿ ಒಂದು ದೊಡ್ಡ ಮನೆ. ಮೊದಲು ಹಾಕಿದ್ದ ಶೆಡ್ ಸಹಿತ ಒಳ್ಳೆ ರೀತಿಯಲ್ಲಿ ಕಟ್ಟಿ, ಒಂದು ಕೆಲಸದವರ ಕ್ವಾರ್ಟರ್ ತರಹ ತಯಾರು ಮಾಡಿಟ್ಟರು. ಮನೆ ಮಾಲೀಕರು ಎಲ್ಲೋ ಬೇರೆ ಕಡೆ ಇದ್ದರು. ಮನೆ ಭಾಡಿಗೆಗೆ ಕೊಟ್ಟರು.

ಆ ಮನೆಗೆ ಮೊದಲು ಭಾಡಿಗೆಗೆ ಬಂದವರು ಸಕ್ಸೇನಾ ಅಂತ. ಉತ್ತರ ಭಾರತದವರು. ಆ ಕಾಲದಲ್ಲಿ ಧಾರವಾಡದಲ್ಲಿ ಹೆಚ್ಚು ಕೈಗಾರಿಕೆಗಳು ಇರಲಿಲ್ಲ. ಸ್ವಸ್ತಿ ಟೆಕ್ಸ್ಟೈಲ್ಸ್ ಅಂತ ಒಂದು ಸುಮಾರು ದೊಡ್ಡ ಕಂಪನಿ ಧಾರವಾಡಕ್ಕೆ ಬಂದಿತ್ತು. ಊರ ಹೊರಗೆ, ಹುಬ್ಬಳ್ಳಿ ಹೆದ್ದಾರಿ ಮೇಲೆ ದೊಡ್ಡ ಫ್ಯಾಕ್ಟರಿ ಬಂದಿತ್ತು. ಅದರ GM, ದೊಡ್ಡ ಸಾಹೇಬರು ಅಂತ ಹೇಳಿ ಈ ಸಕ್ಸೇನಾ ಬಂದಿದ್ದರು. ಎಲ್ಲೋ ಉತ್ತರದ ಕಡೆಯಿಂದ ಬಂದಿದ್ದರು ಅಂತ ನೆನಪು.

ಈ ಸಕ್ಸೇನಾ ಕುಟುಂಬ ಅಂದರೆ ಗಂಡ, ಹೆಂಡತಿ, ಮೂವರು ಮಕ್ಕಳು. ಒಬ್ಬವ ನನಗಿಂತ ಒಂದು ಮೂರು ವರ್ಷ ದೊಡ್ಡವ. ನಂತರದವ ನನ್ನ ವಯಸ್ಸಿನವ. ಅವನ ತಂಗಿ ಒಂದೆರೆಡು ವರ್ಷ ಚಿಕ್ಕವಳು. ನಮಗೆ ಅವರ ಪರಿಚಯ ಜಾಸ್ತಿ ಇರಲಿಲ್ಲ. ಆಮೇಲೆ ನಮ್ಮ ಪಾಲಕರಿಗೆ ಸುಮಾರು ಪರಿಚಯವಾಗಿ ಹೋಗೋದು ಬರೋದು ಎಲ್ಲ ಶುರುವಾಯಿತು. ಅವರ ಮಕ್ಕಳಿಗೋ ಇಂಗ್ಲೀಷ್, ಹಿಂದಿ ಬಿಟ್ಟರೆ ಬೇರೆ ಭಾಷೆ ಬರದು. ಕನ್ನಡ ನಾಸ್ತಿ. ನಮಗೆ ಕನ್ನಡ ಬಿಟ್ಟರೆ ಬೇರೆ ಭಾಷೆ ಗೊತ್ತಿಲ್ಲ. 'ಹಿಂದಿ ಮುಲಾಮ್ (ಮಾಲೂಮ್) ನಹಿ. ನೋ ಇಂಗ್ಲೀಷ್ ಕಮಿಂಗ್,' ಅಂತ ಹೇಳಿ, ಅವರೆಡೂ ಭಾಷೆ ಬರೋದಿಲ್ಲ ಅಂತ ಹೇಳಲೂ ಸಹಿತ ಸರಿ ಬರುತ್ತಿದ್ದಿಲ್ಲ. ಹೊರಗೆ ಧಾರವಾಡ ಕನ್ನಡ, ಮನೆಯಲ್ಲಿ ಹವ್ಯಕ ಕನ್ನಡ. ಅಷ್ಟೇ. ಗ್ರಂಥ ಕನ್ನಡವೂ ಸರಿಯಾಗಿ ಬರದ ಕಾಲ. ಹಾಂಗಾಗಿ ಸಕ್ಸೇನಾ ಮಕ್ಕಳ ಜೊತೆ ನಮ್ಮ ದೋಸ್ತಿ ಆಗಲೇ ಇಲ್ಲ. ಮುಂದೆ ನಾಲ್ಕಾರು ವರ್ಷಗಳ ನಂತರ ತಕ್ಕ ಮಟ್ಟಿಗೆ ದೋಸ್ತಿ ಆಯಿತು ಅನ್ನಿ.

ಸಕ್ಸೇನಾ ಕುಟುಂಬ ಆ ಜೋಡಿ ಕೊಲೆಯಾಗಿದ್ದ ಕಾಂಪೌಂಡ್ ಗೆ ಬಂದ ಮೊದಲ ಒಂದಿಷ್ಟು ದಿವಸ ಏನೂ ಹೆಚ್ಚಿನ ವಿಶೇಷವಿರಲಿಲ್ಲ. ದೊಡ್ಡ ಮನೆ, ಮನೆ ಮುಂದೆ ಒಂದೋ ಎರಡೋ ಕಾರು, ಕಾಂಪೌಂಡ್ ತುಂಬ ಚೆಂದದ ಲಾನ್, ಗಾರ್ಡನ್, ನಾಲ್ಕಾರು ಕೆಲಸದವರು, ಎಲ್ಲ ಇತ್ತು. ಕೊಲೆಯಾಗಿದ್ದ ಶೆಡ್ ಔಟ್ ಹೌಸ್ ಆಗಿ, ನಂತರ ಸರ್ವಂಟ್ ಕ್ವಾರ್ಟರ್ ಆಗಿತ್ತು. ಅಲ್ಲಿ ಒಬ್ಬ ನೌಕರ, ಅವನ ಸಂಸಾರ ಸಹ ಇತ್ತು. ಅವನ ಹೆಂಡತಿ, ಮಕ್ಕಳು ಎಲ್ಲ ಸಕ್ಸೇನಾ ಮನೆಯಲ್ಲೇ ಕೆಲಸ ಮಾಡುತ್ತಿದ್ದರು ಅಂತ ನೆನಪು.

ಸಕ್ಸೇನಾ ಒಳ್ಳೆ ಖಾತೆ ಪೀತೇ ಮನೆಯವರು. ಅದೂ ಉತ್ತರ ಭಾರತದ ಜನ. ಅವರಲ್ಲಿ ಎಣ್ಣೆ, ತುಪ್ಪ ಎಲ್ಲ ಸ್ವಲ್ಪ ಜಾಸ್ತಿಯೇ. ಹಾಗಾಗಿ ದೊಡ್ಡವರು, ಮಕ್ಕಳು ಎಲ್ಲ ದಷ್ಟ ಪುಷ್ಟರಾಗಿಯೇ ಇದ್ದರು. ಧಾರವಾಡ ಭಾಷೆಯಲ್ಲಿ ಹೇಳುವದಾದರೆ ಎಲ್ಲರೂ ಸ್ವಲ್ಪ ಢಬ್ಬರೇ.

ಹೀಗಿದ್ದಾಗ ದೊಡ್ಡ ಮಗ ಒಮ್ಮೆಲೇ ಬಿಳುಚಿಕೊಳ್ಳತೊಡಗಿದ. ತೂಕ ಒಮ್ಮೆಲೇ ಕಮ್ಮಿಯಾಗತೊಡಗಿತು. ಅವನಿಗೆ ಆಗ ಹನ್ನೆರೆಡು, ಹದಿಮೂರು ವರ್ಷ. ಆ ವಯಸ್ಸಿನಲ್ಲಿ ಎಲ್ಲರಿಗೂ ಪ್ರಾಯ ಬರುವ ಸಮಯ. ಎತ್ತರ, ತೂಕ ಎಲ್ಲ ಹೆಚ್ಚಾಗುವದು ಸಹಜ. ಇವನದು ಉಲ್ಟಾನೇ ಆಯಿತು. ಕೇವಲ ತೂಕವೊಂದೇ ಕಮ್ಮಿಯಾಗಿ, ಸ್ವಲ್ಪ ಬಿಳುಚಿಕೊಂದಿದ್ದರೆ ಅಷ್ಟೆಲ್ಲ ತೊಂದರೆಯಿರಲಿಲ್ಲ ಬಿಡಿ. ಆದರೆ ಹುಡುಗನ ಹಸಿವೆ ಕಮ್ಮಿ ಆಗುತ್ತ ಹೋಯಿತು. ಏನು ಕೊಟ್ಟರೂ, 'ಬಾಯಿ ರುಚಿ ಇಲ್ಲ. ಬೇಡ,' ಅಂತ ತಟ್ಟೆ ಪಕ್ಕಕ್ಕೆ ಸರಿಸತೊಡಗಿದ ಹುಡುಗ. ಜಬರ್ದಸ್ತಿ ಮಾಡಿ ಊಟ ತುರುಕಿಕೊಂಡರೆ ಅದು ಒಳಗೆ ನಿಲ್ಲುತ್ತಲೇ ಇರಲಿಲ್ಲ. ಒಟ್ಟಿನಲ್ಲಿ ಊಟ ಇಲ್ಲ. ಉಂಡಿದ್ದು ಮೈಗೆ ಹಿಡಿಯುತ್ತಿಲ್ಲ. ಆ ಪರಿಸ್ಥಿತಿ ಬಂದು ಬಿಟ್ಟಿತು ಹುಡಗನಿಗೆ. ದಪ್ಪ ದಪ್ಪಗೆ, ಗುಂಡು ಗುಂಡಾಗಿದ್ದ ಹುಡುಗ ಆರೇಳು ತಿಂಗಳಲ್ಲಿ ಅರ್ಧಕ್ಕಿಂತ ಹೆಚ್ಚು ತೂಕ ಕಳೆದುಕೊಂಡು ಕಡ್ಡಿಯಾಗಿ ಹೋದ. ಮೇಲಿಂದ ಯಾವಾಗಲೂ ಸುಸ್ತು. ಆಟ ಪಾಠದಲ್ಲಿ ಆಸಕ್ತಿ ಇಲ್ಲ. ಒಟ್ಟಿನಲ್ಲಿ ಹುಡುಗನ ಆರೋಗ್ಯ ಸರಿ ಇಲ್ಲ. ಫುಲ್ ಖರಾಬ್! ಫುಲ್ ಬರ್ಬಾದ್!

ಮನೆಯವರು ಡಾಕ್ಟರ ಮಂದಿಗೆ ತೋರಿಸಿದರು. ಎಲ್ಲಿ ಪೋಷಕಾಂಶಗಳು ಕಮ್ಮಿಯಾಗಿವೆಯೋ ಏನೋ ಅಂತ ಡಾಕ್ಟರ ಜನ ದಬಾಯಿಸಿ ಆ ಟಾನಿಕ್, ಈ ಟಾನಿಕ್, ಆ ವಿಟಾಮಿನ್ ಗುಳಿಗೆ, ಈ ಬಿ-ಕಾಂಪ್ಲೆಕ್ಸ್ ಅಂತ ಏನೇನೋ ಔಷಧಿ, ಗುಳಿಗೆ ಕೊಟ್ಟಿದ್ದೇ ಕೊಟ್ಟಿದ್ದು. ಹಾಗೆಯೇ ಅವರು ಇವರು ಹೇಳಿದ್ದು ಅಂತ ಹೇಳಿ ಮನೆ ಔಶಧಗಳು, ಲೇಹ್ಯ, ಚೂರ್ಣ ಮತ್ತೊಂದು ಮಗದೊಂದು ಕೂಡ. ಅದೆಲ್ಲ ಟಾನಿಕ್ ಕುಡಿಯುತ್ತ, ಗುಳಿಗೆ ನುಂಗುತ್ತ ಹುಡುಗ ಹೈರಾಣಾಗಿ ಹೋದ. ಬಾಯಿಗೆ ರುಚಿಯೇ ಇಲ್ಲ. ಇನ್ನೆಲ್ಲಿ ಅವೆಲ್ಲ ಟಾನಿಕ್ ಕುಡಿದಾನು? ಎಲ್ಲಿ ಲೇಹ್ಯ ನೆಕ್ಕಿಯಾನು? ಔಷದಿ ಅಂಗಡಿಯವರು ಉದ್ಧಾರ ಆದರೇ ವಿನಃ ಹುಡುಗನ ಆರೋಗ್ಯದಲ್ಲಿ ಏನೂ ಸುಧಾರಣೆ ಆಗಲಿಲ್ಲ.

ಹುಡುಗನ ಸ್ಥಿತಿ ಬಗ್ಗೆ ಪಾಲಕರು ಈಗ ನಿಜವಾಗಿಯೂ ಚಿಂತಾಕ್ರಾಂತರಾದರು. ಹುಬ್ಬಳ್ಳಿ ಧಾರವಾಡದಲ್ಲಿ ತೋರಿಸದ ವೈದ್ಯರಿಲ್ಲ. ಮತ್ತೆ ಆವತ್ತಿನ ಕಾಲದಲ್ಲಿ ಅವಳಿ ನಗರಲ್ಲಿ ಅದೆಷ್ಟು ಜನ ಸ್ಪೆಷಲಿಸ್ಟ್ ಗಳು ಇದ್ದಾರು? ಇದ್ದವರೆಲ್ಲ ಪರಸ್ಪರ ದೋಸ್ತರೇ. ಒಬ್ಬ ಸ್ಪೆಷಲಿಸ್ಟ್ ನೋಡಿದ್ದರು ಅಂತ ಇನ್ನೊಬ್ಬರು ಜಾಸ್ತಿ ತಲೆ ಕೆಡಿಸಿಕೊಳ್ಳದೆ, ಚಿಕಿತ್ಸೆ ಪದ್ಧತಿ, ಬರೆದು ಕೊಟ್ಟ ಟಾನಿಕ್, ಇತ್ಯಾದಿ ನೋಡಿ, 'ಎಲ್ಲಾ ಬರೋಬ್ಬರಿ ಅದ. ಆ ಡಾಕ್ಟರ್ ಹೇಳಿದ್ದನ್ನೇ ಮಾಡಿಕೋತ್ತ ಹೋಗ್ರೀ. ಎಲ್ಲಾ ಸರಿಯಾಗ್ತದ,' ಅಂತ ಹೇಳಿ ಕೈ ತೊಳೆದುಕೊಂಡರು. ಅದೇನೋ ಅಂತಾರಲ್ಲ, ನಸೀಬ್ ಸರಿಯಿಲ್ಲ ಅಂದರೆ ಏನೂ ಉಪಯೋಗವಾಗುವದಿಲ್ಲ.

'ಧಾರವಾಡ ಹುಬ್ಬಳ್ಳಿ ಡಾಕ್ಟರಗಳನ್ನ ನಂಬಿಕೊಂಡರೆ ಅಷ್ಟೇ ಇನ್ನು. ಹುಡುಗನನ್ನು ಕರೆದುಕೊಂಡು ಮುಂಬೈಗೆ ಹೋಗಬೇಕು. ಅಲ್ಲಿನ ದೊಡ್ಡ ಡಾಕ್ಟರಿಗೆ ತೋರಿಸಬೇಕು. ಹೇಗೂ ಮುಂದಿನ ಸ್ವಲ್ಪ ದಿನಗಳಲ್ಲೇ ರಜಾ ಬರಲಿದೆ. ಆವಾಗ ಹೋಗಿ ಬಂದು ಬಿಟ್ಟರಾಯಿತು,' ಅಂತ ಸಕ್ಸೇನಾ ಮುಂಬೈ ಟ್ರಿಪ್ಪಿಗೆ ತಯಾರಿ ಮಾಡಿಕೊಳ್ಳತೊಡಗಿದ್ದರು.

ಅಷ್ಟರಲ್ಲಿ ಹುಡುಗ ಮತ್ತೊಂದು ಅತಿ ವಿಚಿತ್ರ ಅನ್ನಿಸುವಂತಹ ತೊಂದರೆ ಬಗ್ಗೆ ಹೇಳತೊಡಗಿದ. 'ರಾತ್ರಿ ನಿದ್ದೆ ಸರಿಯಾಗಿ ಆಗುತ್ತಿಲ್ಲ. ಯಾರೋ ಎದೆ ಮೇಲೆ ಬಂದು ಕುಳಿತ ಹಾಗೆ ಆಗುತ್ತದೆ. ಕುತ್ತಿಗೆ ಹಿಚುಕಿ, ಉಸಿರುಗಟ್ಟಿಸಿದ ಹಾಗೆ ಆಗುತ್ತದೆ. ತುಂಬ ತ್ರಾಸಾಗುತ್ತದೆ. ಸ್ವಲ್ಪ ಹೊತ್ತು ಕೊಸರಾಡಿದ ನಂತರ ಎದೆ ಮೇಲಿಂದ ಯಾರೋ ಎದ್ದು, ಇಳಿದು ಹೋದ ಫೀಲಿಂಗ್ ಬರುತ್ತದೆ. ದಿನಾ ಹೀಗೇ ಆಗುತ್ತಿದೆ. ಯಾಕೋ ಏನೋ?!'

ಅದೇ ಮನೆಯಲ್ಲಿ ಭೀಕರ ಜೋಡಿ ಕೊಲೆ ಬೇರೆ ಆಗಿತ್ತಲ್ಲ!

ಅಲ್ಲಿ ಭೂತ ಚೇಷ್ಟೆ, ಅತೃಪ್ತ ಆತ್ಮಗಳ ಆರ್ತನಾದ ಏನಾದರೂ ಶುರುವಾಗಿತ್ತೇ?

ಯಾವತ್ತೋ ಒಂದು ದಿವಸ ತಂದೆಯವರು ಅವರ ಮನೆಗೆ ಹೋಗಿದ್ದರು. ಸಕ್ಸೇನಾ ಕುಟುಂಬ ಆ ಮನೆಗೆ ಬಂದು ಅಷ್ಟೊತ್ತಿಗೆ ಎರಡು ಮೂರು ವರ್ಷದ ಮೇಲಾಗಿ ಹೋಗಿತ್ತು. ನಮ್ಮ ಕುಟುಂಬದ ಜೊತೆ ಒಳ್ಳೆ ಪರಿಚಯ ಎಲ್ಲ ಆಗಿತ್ತು. ಒಂದು ದಿವಸ ಹೀಗೆ ಮಾತಾಡುತ್ತ  ಇದ್ದಾಗ, ಸಕ್ಸೇನಾ ಅವರು ಹೇಳಿದರಂತೆ, 'ನೋಡಿ, ನಮ್ಮ ಹುಡುಗನಿಗೆ ಮೊದಲು ತೂಕ ಕಮ್ಮಿಯಾಗುವದು, ಸುಸ್ತು, ಹಸಿವೆ ಇಲ್ಲದಿರುವದು, ಇತ್ಯಾದಿ ಆರೋಗ್ಯದ ತೊಂದರೆ ಇತ್ತು. ಈಗ ಮತ್ತೊಂದು ಶುರು ಆಗಿದೆ. ರಾತ್ರಿ ನಿದ್ರೆಯೇ ಸರಿಯಾಗುತ್ತಿಲ್ಲ ಅಂತಾನೆ. ಅದಕ್ಕೇ ದಿನವಿಡೀ ಮತ್ತೂ ಹೆಚ್ಚಿನ ಸುಸ್ತು. ಎದೆ ಮೇಲೆ ಯಾರೋ ಬಂದು ಕೂತಂಗೆ ಆಗುತ್ತದೆ. ಉಸಿರುಗಟ್ಟಿಸಿದ ಹಾಗೆ ಆಗುತ್ತದೆ ಅಂತ ಹೊಸ ಹೊಸ ಸಮಸ್ಯೆ ಶುರುವಾಗಿದೆ ಅವನಿಗೆ. ನಮಗೆ ಏನೂ ತಿಳಿಯುತ್ತಿಲ್ಲ. ಹೇಗೂ ಇನ್ನೊಂದೆರೆಡು ತಿಂಗಳಲ್ಲಿ ರಜೆ ಬರುವದಿದೆ. ಮುಂಬೈಗೆ ಹೋಗಿ ದೊಡ್ಡ ಆಸ್ಪತ್ರೆಯಲ್ಲಿ, ದೊಡ್ಡ ದೊಡ್ಡ ಸ್ಪೆಷಲಿಸ್ಟ್ ಗಳ ಹತ್ತಿರ ಎಲ್ಲ ಚೆಕ್ ಮಾಡಿಸಿಕೊಂಡು ಬರಬೇಕು ಅಂತ ಮಾಡಿದ್ದೇವೆ ನೋಡಿ. ಆವಾಗಾದರೂ ಆರಾಮಾದರೇ ಸಾಕು ಅನ್ನುವಂತಾಗಿ ಬಿಟ್ಟಿದೆ. ನೋಡೋಕಾಗಲ್ಲ ಅವನ ಪರಿಸ್ಥಿತಿ, ಪಡೋ ಕಷ್ಟ. ಪಾಪದ ಹುಡುಗ. ಎಷ್ಟು ಚೂಟಿಯಾಗಿದ್ದ. ಈಗ ಆರು ತಿಂಗಳಲ್ಲಿ ನೋಡಿ ಹೇಗಿದ್ದವ ಹೇಗಾಗಿ ಬಿಟ್ಟಿದ್ದಾನೆ?' ಅಂತ ತಮ್ಮ ಸಂಕಟ ತೋಡಿಕೊಂಡರು. ಒಬ್ಬ ನೆರೆಮನೆಯವರು ಇನ್ನೊಬ್ಬರ ಹತ್ತಿರ ಕಷ್ಟ ಸುಖ ಹೇಳಿಕೊಂಡಂತೆ. ಅಷ್ಟರಲ್ಲಿ ಜೀವಚ್ಚವದಂತಾಗಿದ್ದ ಅದೇ ಹುಡುಗ ಬಂದ. ನಾಕು ಹೆಜ್ಜೆ ನಡೆದು ಬರುವಷ್ಟರಲ್ಲಿ ಅವನಿಗೆ ಸಾಕಾಗಿತ್ತು. ಶ್ವಾಸ ಬಿಡುತ್ತಲೇ, 'ನಮಸ್ತೇ ಅಂಕಲ್,' ಅಂತ ಟೀವಿ ಮುಂದೆ ಹುಸ್ಸ್ ಅಂತ ಕುಸಿದು ಕೂತ. ಚೈತನ್ಯವೆಲ್ಲ ಬಸಿದು ಹೋದವನ ರೀತಿಯಲ್ಲಿ. ನೋಡಿದವರಿಗೆ ಪಾಪ ಅನ್ನಿಸಬೇಕು.

'ಎದೆ ಮೇಲೆ ಯಾರೋ ಬಂದು ಕೂತಂಗೆ ಅನ್ನಿಸುವದು. ಕುತ್ತಿಗೆ ಹಿಚುಕಿದಂತೆ ಅನ್ನಿಸುವದು,' ಇದೆಲ್ಲ ಕೇಳಿದ ನಮ್ಮ ತಂದೆಯವರಿಗೆ ಅನ್ನಿಸಿದ್ದು, 'ಎಲ್ಲಾದರೂ ಭೂತ ಚೇಷ್ಟೆ ಆರಂಭವಾಗಿದೆಯೋ ಹೇಗೆ?' ಅಂತ. ಯಾಕೆಂದರೆ ಹಾಗಾಗುವಂತಹ ಕಾರಣ ಇತ್ತು ನೋಡಿ. ಕೆಲವೇ ವರ್ಷಗಳ ಹಿಂದೆ ಆಗಿದ್ದ ಭಯಂಕರ ಜೋಡಿ ಕೊಲೆ. ಡಬಲ್ ಮರ್ಡರ್. ಅದಾದ ನಂತರ ಆ ಮನೆ ಕಟ್ಟಿಸುತ್ತಿದ್ದವರು ಸರಿಯಾದ ರೀತಿಯಲ್ಲಿ ಶಾಂತಿ, ಪರಿಹಾರ ಎಲ್ಲ ಮಾಡಿಸಿದ್ದರೋ ಇಲ್ಲವೋ, ಯಾರಿಗೆ ಗೊತ್ತು? ಮತ್ತೆ ಹುಡುಗನ ಗ್ರಹಗತಿ ಕೂಡ ಹೆಚ್ಚು ಕಮ್ಮಿಯಾಗಿ, ಎಲ್ಲಾದರೂ ಭೂತ ಚೇಷ್ಟೆ ಶುರುವಾಗಿರಬಹುದಾ? ಜನರು ಜೀವನದ ಕೆಲವೊಂದು ಘಟ್ಟಗಳಲ್ಲಿ, ಬೇರೆ ಬೇರೆ ಕಾರಣಕ್ಕೆ, ಬೇರೆ ಬೇರೆ ಶಕ್ತಿಗಳಿಗೆ, ಬೇರೆ ಬೇರೆ ರೀತಿಯಲ್ಲಿ vulnerable ಆಗಿರುತ್ತಾರೆ. ಅಂತಹ vulnerability ಗಳನ್ನು ಅವರವರ ಕರ್ಮಕ್ಕೆ ತಕ್ಕಂತೆ exploit ಮಾಡಿಕೊಂಡು, ಸರಿಯಾದ ವೇಳೆ ವೇಳೆ ನೋಡಿ ಕ್ಷುದ್ರ ಶಕ್ತಿಗಳು ತೊಂದರೆ ಕೊಡಲು ಆರಂಭಮಾಡುತ್ತವೆ ಅನ್ನುವದು ಒಂದು ಥಿಯರಿ. ಅದು  ಒಂದು ಮೆಟಾಫಿಸಿಕಲ್ ಮಾಡೆಲ್. ಚಿಕ್ಕ ತೂತು ಬಿದ್ದ ದೋಣಿಯಲ್ಲಿ ನೀರು ನಿಧಾನಕ್ಕೆ ನುಗ್ಗಿ, ದೋಣಿಯನ್ನೇ ಮುಳುಗಿಸಿಬಿಟ್ಟಂತೆ ದೆವ್ವಗಳ ಕಾರ್ನಾಮೆ ಇರುತ್ತದೆ. ಆಟಕಾಯಿಸಕೊಂಡವ ಸರಿ ಸಮಯಕ್ಕೆ ಪೂಜೆ ಗೀಜೆ ಆಗಿ ಬಚಾವ್ ಆದ ಸರಿ. ಇಲ್ಲ ಅಂದರೆ ಹರೋ ಹರ!

ಆ ಮನೆಯಲ್ಲಿದ್ದ ಸಕ್ಸೇನಾ ಫ್ಯಾಮಿಲಿಗೆ ಅಲ್ಲಿ ಆಗಿಹೋಗಿದ್ದ ಭೀಕರ ಜೋಡಿ ಕೊಲೆ ಬಗ್ಗೆ ಗೊತ್ತಿತ್ತಾ? ಹೆಚ್ಚಾಗಿ ಗೊತ್ತಿರಲಿಕ್ಕೆ ಇಲ್ಲ. ಯಾಕೆಂದರೆ ಗೊತ್ತಿದ್ದರೆ, ನಮ್ಮ ಪ್ರಕಾರ, ಅವರು ಅಂತಹ ಮನೆಗೆ ಕಾಲಿಡುತ್ತಲೇ ಇರಲಿಲ್ಲ. ದೇವರು, ದಿಂಡರು ಅಂತ ಎಲ್ಲ ಸ್ವಲ್ಪ ಜಾಸ್ತಿಯೇ ನಂಬಿಕೆ ಅವರಿಗೆ. ಸ್ವಂತ ಪೂಜೆ ಪುನಸ್ಕಾರ ಅಷ್ಟೊಂದು ಮಾಡದಿದ್ದರೂ ನಂಬಿಕೆ ತುಂಬಾ ಇತ್ತು. ಅವರು ಬಂದ ಒಂದೆರೆಡು ವರ್ಷದಲ್ಲಿ ನಾವೇ ಅವರಿಗೆ ಪೂಜೆಗೆ, ಅದಕ್ಕೆ ಇದಕ್ಕೆ ಅಂತ ಭಟ್ಟರನ್ನು ಹುಡುಕಿ ಕೊಟ್ಟಿದ್ದೆವು. ಬೇರೆ ಬೇರೆ ಕಾರಣಕ್ಕೆ ಪೂಜೆ ಬಿಡಿ. ಭೂತ ಪ್ರೇತ ನಿವಾರಣೆಗೆ ಅಲ್ಲ.

ಮೊದಲೇ ಮಗನ ಅನಾರೋಗ್ಯದಿಂದ ಚಿಂತಿತ ತಂದೆ ತಾಯಿ. ಇದರ ಮೇಲೆ ಹಳೆ ಸುದ್ದಿ, ಜೋಡಿ ಕೊಲೆ, ಭೂತ ಪ್ರೇತ, ಅದು ಇದು ಅಂತ ಹೇಳಿ, ಅವರು ಮತ್ತೂ ತಲೆಕೆಡಿಸಿಕೊಂಡು ಕಷ್ಟ ಪಡುವದು ಬೇಡ ಅಂತ ಅವರಿಗೆ ಅದೆಲ್ಲ ಹೇಳಲು ಹೋಗಲಿಲ್ಲ ನಮ್ಮ ತಂದೆಯವರು. ಆದರೂ ಒಂದು ಮಾತು ಕೇಳಿದರು, 'ಯಾವದಕ್ಕೂ ಇರಲಿ ಅಂತ ಒಂದು ಮಹಾ ಮೃತ್ಯುಂಜಯ ಜಪ ಮಾಡಿಸಿಬಿಡೋಣ. ಏನಂತೀರಿ?' ಅಂತ. 'ಒಂದು ಸತ್ಯನಾರಾಯಣ ಪೂಜೆ ಮಾಡಿಸಿಬಿಡಿ,' ಅನ್ನುವ ಹಾಗೆ ಸರಳವಾಗಿಯೇ, ಸಹಜವಾಗಿ ಯಾವದೇ ತರಹದ ವಿಶೇಷ ಇಲ್ಲ ಅನ್ನುವ ಹಾಗೆ ಹೇಳಿದರು. ಅಷ್ಟೊತ್ತಿಗೆ ನಮ್ಮ ಕುಟುಂಬದ ಮೇಲೆ ತುಂಬ ವಿಶ್ವಾಸ ಬೆಳೆಸಿಕೊಂಡಿದ್ದ ಸಕ್ಸೇನಾ, 'ಸರಿ. ಮಾಡಿಸಿ, ಅದೇನೋ ಅಂದರಲ್ಲ ಮೃತ್ಯುಂಜಯ್ ಕಾ ಜಾಪ್,' ಅಂತ ಹಿಂದಿಯಲ್ಲಿ ಹೇಳಿದರು. ಮುಳುಗುವವನಿಗೆ ಹುಲ್ಲುಕಡ್ಡಿಯೂ ಓಕೆ, ಕಡ್ಡಿಪುಡಿಯೂ ಓಕೆ. ಮಗನ ತೀವ್ರ ಅನಾರೋಗ್ಯ ಅವರನ್ನು ಒಂದು ರೀತಿಯ ದೈನೇಸಿ ಪರಿಸ್ಥಿತಿಗೆ ತಂದು ನಿಲ್ಲಿಸಿತ್ತು. ಹಾಗಾಗಿ ಏನೇ ಹೇಳಿದರೂ ಒಂದು ಪ್ರಯತ್ನ ಮಾಡಲಿಕ್ಕೆ ಅವರು ತಯಾರಿದ್ದರು. ಅವರಿಂದ ಸಂಕಲ್ಪದ ರೀತಿಯಲ್ಲಿ ಒಂದು ಮಾಡಿಸಿ, ಹೋಗಿ ಮಹಾ ಮೃತ್ಯುಂಜಯ ಜಪ ಮಾಡಲು ಹಿಡಿದದ್ದು ಬ್ರಹ್ಮರ್ಷಿ ಬಾಲಚಂದ್ರ ಶಾಸ್ತ್ರಿಗಳನ್ನು. ಮಹಾ ಪಂಡಿತರು ಅವರು. ಅವರು ಒಂದಿಷ್ಟು ದೊಡ್ಡ ಪಂಡಿತರನ್ನು ಹುಡುಕಿ ಕೊಟ್ಟರು. ಅವರಿಗೆ ಎಲ್ಲ ವಿವರಿಸಿ, ಜೋಡಿ ಕೊಲೆ, ವಕ್ಕರಿಸಿಕೊಂಡಿರಬಹುದಾದ ಭೂತ ಚೇಷ್ಟೆ, ಹುಡುಗನ ಜಾತಕ ವಿವರ ಎಲ್ಲ ಹೇಳಿ, ಮಹಾ ಮೃತ್ಯುಂಜಯ ಜಪಕ್ಕೆ ವ್ಯವಸ್ಥೆ ಮಾಡಲಾಯಿತು.

ಮಹಾ ಮೃತ್ಯುಂಜಯ ಜಪ - ಒಂದು ದೊಡ್ಡ ಯಜ್ಞದ ಮಾದರಿಯ ಪೂಜೆ. ಅದೆಷ್ಟೋ ಲಕ್ಷವೋ ಕೊಟಿಯೋ ಸಲ ಮಹಾ ಮೃತ್ಯುಂಜಯ ಮಂತ್ರವನ್ನು ಪದ್ಧತಿ ಪ್ರಕಾರ ಜಪಿಸಬೇಕು. ಏನೇನೋ ಪೂಜೆಯಾಗಬೇಕು. ಅಷ್ಟೊಂದು ಜಪ ಮಾಡಲು ಸುಮಾರು ಜನ ವೈದಿಕರು  ಬೇಕಾಗುತ್ತಾರೆ. ಅಂತ್ಯದಲ್ಲಿ ಪೂರ್ಣಾಹುತಿ ತರಹದ ಏನೋ ದೊಡ್ಡ ಪೂಜೆ ಇರುತ್ತದೆ. ಸುಮಾರು ಕೆಲವು ವಾರಗಳ ಲೆಕ್ಕದಲ್ಲಿ ಆಗುವ ದೊಡ್ಡ ಮಟ್ಟದ ಪೂಜೆ ಅದು. ಭೂತ, ಪ್ರೇತ, ಇತ್ಯಾದಿ ಕ್ಷುದ್ರಶಕ್ತಿ ಪೀಡೆಗಳಿಗೆ ಒಂದು ತರಹದ wide spectrum, high potency ಔಷದಿ ಇದ್ದಂಗೆ ಅದು ಅಂತ ಯಂತ್ರ, ತಂತ್ರ, ಮಾಟ ಇತ್ಯಾದಿ ತಿಳಿದವರ ಹೇಳಿಕೆ. ಮತ್ತೆ ಇದು ವೈದಿಕರು ಮಾಡಬಹುದಾದಂತಹ, ಯಾವದೇ ತರಹದ ವಾಮಾಚಾರದ (black magic) ಕಳಂಕವಿಲ್ಲದಂತಹ ಪೂಜೆ. ಮಾಟ, ಮಂತ್ರ, ತಂತ್ರ ಬಲ್ಲ ವಾಮಾಚಾರಿಗಳು ಬೇರೆಯೇ ತರಹ ಪೂಜೆ ಮಾಡುತ್ತಾರೋ ಏನೋ. ಆದರೆ ಸರಿಯಾಗಿ ಗೊತ್ತಿಲ್ಲದ ವಾಮಾಚಾರಿಗಳು ಮಾಡುವ ಅಂತಹ ಪೂಜೆಗಳು ಉಲ್ಟಾ ಹೊಡೆದ ಪ್ರಕರಣಗಳೇ ಜಾಸ್ತಿ. ತಂದೆಯವರಿಗೆ ಅದೆಲ್ಲ ಗೊತ್ತಿದ್ದದ್ದೇ. ಅವರ ತಂದೆಯೇ (ನಮ್ಮ ಅಜ್ಜ) ಅದೆಲ್ಲ ಕಲಿತಿದ್ದರಲ್ಲ. ಹಾಗಾಗಿ ತಂದೆಯವರೂ ಎಲ್ಲ ಕಲಿತಿದ್ದರು. ಆಚರಣೆ, ಅನುಷ್ಠಾನ ಮಾಡುತ್ತಿರಲಿಲ್ಲ ಅಷ್ಟೇ. ಹಾಗಾಗಿ ಮೊದಲ ಹೆಜ್ಜೆ ಅಂತ, ಎಲ್ಲ ದೃಷ್ಟಿಯಿಂದ ಸೇಫ್ ಅನ್ನುವಂತಹ ಮಹಾ ಮೃತ್ಯುಂಜಯ ಜಪವನ್ನೇ ಹೇಳಿದ್ದರು. ಅದು ಫಲ ನೀಡಲಿಲ್ಲ ಅಂದರೆ ಮುಂದೆ ಬೇರೆ ನೋಡಿದರಾಯಿತು ಅಂತ ಯೋಚನೆ.

ಸರಿ ಆಕಡೆ ಶುರುವಾಯಿತು ಮಹಾ ಮೃತ್ಯುಂಜಯ ಜಪದ ಅನುಷ್ಠಾನ. ಈಕಡೆ ಹುಡುಗನ ಆರೋಗ್ಯದಲ್ಲಿ ಹೇಳುವಂತಹ ಏರು ಪೇರು ಏನೂ ಕಾಣಲಿಲ್ಲ. ಮೊದಲಿನ ಹಾಗೇ ಒಂದಲ್ಲ ಒಂದು ರೀತಿಯ ತೊಂದರೆ ಅನುಭವಿಸುತ್ತ, ಏನೋ ಒಂದು ತರಹದಲ್ಲಿ ಇದ್ದ ಹುಡುಗ.

ಒಂದು ದಿನ ಪರಮ ವಿಚಿತ್ರ ಅನ್ನಿಸುವಂತಹ ಘಟನೆಯೊಂದು ಸಂಭವಿಸಿ ಹೋಯಿತು. ಒಂದು ದಿನ ಅಂದರೆ ಯಾವದೋ ಸಾಮಾನ್ಯ ದಿನ ಅಲ್ಲ. ಮಹಾ ಮೃತ್ಯುಂಜಯ ಜಪದ ಸಮಾರೋಪದ ದಿನ. ಆಕಡೆ ಮಹಾ ಮೃತ್ಯುಂಜಯ ಜಪ ಮುಕ್ತಾಯಕ್ಕೆ ಬಂದು, ಪೂರ್ಣಾಹುತಿ ಮುಗಿದು, 'ಹುಡುಗನಿಗೆ ಮತ್ತು ಅವರ ಕುಟುಂಬಕ್ಕೆ ಪ್ರಸಾದ ಮುಟ್ಟಿಸಿಬಿಡಿ. ಎಲ್ಲ ಒಳ್ಳೆದಾಗುತ್ತೆ,' ಅಂತ ಮುಖ್ಯ ವೈದಿಕರು ಪ್ರಸಾದ ನಮ್ಮ ತಂದೆಯವರ ಕೈಗೆ ಕೊಡುತ್ತಿದ್ದರೆ ಈ ಕಡೆ ಸಕ್ಸೇನಾ ಅವರ ಮನೆಯಲ್ಲಿ ಆದ ಘಟನೆ ನೋಡಿ ಮನೆಯವರು, ಡಾಕ್ಟರು ಎಲ್ಲ ಬೆಚ್ಚಿ ಬಿದ್ದಿದ್ದರು. ಮನೆಯಲ್ಲಿ ಆ ಘಟನೆ ನೋಡಿದ ಕೆಲವರು ಎಚ್ಚರ ಕೂಡ ತಪ್ಪಿ ಬಿದ್ದರು. ಹಾಗಿತ್ತು ಆ ಭೀಕರ ಘಟನೆ!

ಮಹಾ ಮೃತ್ಯುಂಜಯ ಜಪದ ಶುಭ ಪರಿಣಾಮ ಆಗಲೇ ಗೋಚರಿಸಲು ಶುರುವಾಗಿ ಬಿಟ್ಟಿತ್ತೇ!? ಆವರಿಸಿಕೊಂಡಿದ್ದ ಕ್ಷುದ್ರಶಕ್ತಿಗಳ ಅಂತ್ಯ ಸನ್ನಿಹಿತವಾಗಿತ್ತೇ!?

ಆವತ್ತು ಹುಡುಗನ ಆರೋಗ್ಯ ತುಂಬ ಬಿಗಡಾಯಿಸಿತ್ತು ಅಂತ ಕಾಣಿಸುತ್ತದೆ. ಮನೆಯಲ್ಲೇ ಇದ್ದ ಹುಡುಗ. ಆರೋಗ್ಯದ ತೊಂದರೆಯಾಗಿ ಶಾಲೆ ತಪ್ಪುವದು ಜಾಸ್ತಿಯಾಗಿತ್ತು. ಹೊಟ್ಟೆ ತುಂಬ ನೋಯುತ್ತಿದೆ ಅಂತ ಮಂಚದ ಮೇಲೆ ಹಾಗೇ ಸುಮ್ಮನೆ ಅಡ್ಡಾಗಿದ್ದ ಹುಡುಗ. ಹೊಟ್ಟೆಯಲ್ಲಿ ಏನೋ ತಳಮಳ. ತಳಮಳ ಎಂದಿನಗಿಂತ ಆವತ್ತು  ಜಾಸ್ತಿಯೇ ಆಗುತ್ತಿತ್ತು. ಹೊಟ್ಟೆ ನೀವಿಕೊಳ್ಳುತ್ತ, 'ಮಮ್ಮಿ,' ಅಂತ ನರಳುತ್ತ ಮಲಗಿದ್ದ ಹುಡುಗ. ಒಮ್ಮೆಲೇ ಹೊಟ್ಟೆಯಲ್ಲಿ ಹಾರೆ ಹಾಕಿ, ತಿರುವಿ ಮೀಟಿದಂತಾಯಿತು. ಕರುಳನ್ನೆಲ್ಲ ಕೈ ಹಾಕಿ ಬಗೆದಂತಾಯಿತು. ಸಿಕ್ಕಾಪಟ್ಟೆ ನೋವು. ಆ ತಳಮಳಕ್ಕೆ ಒಂದು ಟೈಪ್ ವಾಕರಿಕೆ ಬಂದಂತಾಯಿತು. ಹೊಟ್ಟೆಯಲ್ಲಿ ಏನೂ ಇಲ್ಲದಾಗಲೂ ಒಮ್ಮೊಮ್ಮೆ ವಾಕರಿಕೆ ಬಂದು, ವಾಂತಿಯೇ ಬಂದು ಬಿಟ್ಟಿತೆನೋ ಅಂತ ಬಚ್ಚಲಿಗೆ ಓಡುತ್ತೇವಲ್ಲ ಆ ತರಹ ಆಯಿತು. ಬಚ್ಚಲಿಗೆ ಓಡಿ ಬೇಸಿನ್ ಮುಂದೆ ನಿಂತು ಕ್ಯಾಕರಿಸಿ ಉಗಿದ. ಒಳಗಿನ ಒತ್ತಡಕ್ಕೆ ಕರುಳು ಕಿತ್ತು ಹೋಗೋ ಹಾಗೆ ಕೆಮ್ಮು ಬಂತು ಅಷ್ಟೇ. ಕೇವಲ dry retching. ಕರುಳು ಕಿತ್ತು ಹೋದಷ್ಟು ನೋವು. ಅಮ್ಮಾ! ಅಂತ ಮುಲುಗಿ, ಸುಧಾರಿಸ್ಕೊಂಡು ವಾಪಸ್ ಬಂದು ಬಿದ್ದುಕೊಳ್ಳೋಣ ಅನ್ನುವಷ್ಟರಲ್ಲಿ ಒಳಗಿಂದ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ ಅನುಭವ. ಹೊಟ್ಟೆ ಕೆಳಗಿಂದ, ಅನ್ನನಾಳದ ಗುಂಟ, ಗಂಟಲಿನ ಮೂಲಕ, ಹಾವಿನ ಮಾದರಿಯಲ್ಲಿ ಏನೋ ಗುಳುಗುಳು ಅಂತ ಹರಿದು, ಬಾಯಿಗೆ ಬಂದು ಒಂದು ತರಹದ ಜಿಗುಪ್ಸೆ ಫೀಲಿಂಗ್. ತಿರುಗಿ ಹಾಸಿಗೆ ಸಮೀಪ ಹೋದವ ಓಡಿ ಬಂದ.  ವ್ಯಾಕ್! ಅನ್ನುತ್ತ ತಿರುಗಿ ಬಂದು ವಾಶ್ ಬೇಸಿನ್ನಲ್ಲಿ ಉಗುಳಿದ. ಉಗುಳಿದ ಮರುಕ್ಷಣ ಸಾಯುತ್ತಿರುವವನಂತೆ ಚೀತ್ಕಾರ ಮಾಡಿದ. ಚೀತ್ಕಾರ ಕೇಳಿದ ಮನೆಯಲ್ಲಿದ್ದವರೆಲ್ಲ ಬೆಚ್ಚಿ ಬಿದ್ದರು. ಏನಾಯಿತೋ ಏನೋ ಅಂತ ಬಂದು ನೋಡಿದರು. ವಾಶ್ ಬೇಸಿನ್ ಮುಂದೆ ದೆವ್ವ ಬಡಿದಂತೆ ನಿಂತಿದ್ದ ಹುಡುಗ. 'ಏನಾಯಿತೋ!?' ಅಂತ ಕೇಳಿದರೆ ಮಾತಿಲ್ಲ, ಕಥೆಯಿಲ್ಲ. ಸುಮ್ಮನೆ ಬೇಸಿನ್ ಕಡೆ ಕೈಸನ್ನೆ ಮಾಡಿ ತೋರಿಸಿದ. ಅವನು ತೋರಿಸಿದ್ದನ್ನ ನೋಡಿದವರೂ ಸಹ ಬೆಚ್ಚಿ ಬಿದ್ದರು.

ಆಕಡೆ ಮಹಾ ಮೃತ್ಯುಂಜಯ ಜಪದ ಪೂಜೆ ಮುಗಿದು ಪ್ರಸಾದ ಕೈಗೆ ಬರುತ್ತಿದ್ದರೆ ಈಕಡೆ ಹುಡುಗ ಉಗುಳಿದ್ದು ಏನು ಅಂತ ತಿಳಿಯದ ಮನೆ ಮಂದಿ ಕಕ್ಕಾಬಿಕ್ಕಿಯಾಗಿ ಚಿಟ್ಟ ಅಂತ ಚೀರಿ ಬಿಟ್ಟಿದ್ದರು.

ಏನಾಗಿತ್ತು!?

ಅಂಥದ್ದೇನು ಭಯಾನಕ ಚೀಜ್ ಕಂಡಿತು ಬಾತ್ ರೂಂ ವಾಶ್ ಬೇಸಿನ್ ನಲ್ಲಿ?

ವಾಶ್ ಬೇಸಿನ್ ನಲ್ಲಿ ಕಂಡಿದ್ದು ಬರೋಬ್ಬರಿ ಒಂದು ಫೂಟಿಗೂ ಮೀರಿದ ಹಾವು! ಅಥವಾ ಹಾವಿನಂತೆ ಕಂಡಿತು. ನೋಡಿದರೆ ಹುಳ! ಹೊಟ್ಟೆ ಹುಳ! ಅದು ಏನು, ಎಂತ ಅಂತ ಮನೆಮಂದಿಗೆ ಆವಾಗ ತಿಳಿಯಲಿಲ್ಲ ಬಿಡಿ.

ಸಣ್ಣ ಹಾವಿನ ಸೈಜಿನ ಹುಳ! ಅದೂ ಬಾಯಿಂದ ಹೊರಗೆ ಬಂದು ಬಿಳೋದು! ಯಾರೂ ನೋಡಿರಲಿಕ್ಕೆ ಇಲ್ಲ ಬಿಡಿ ಅಂತಹ ಭೀಕರ ದೃಶ್ಯ. ನೋಡೋದು ದೂರ ಉಳಿಯಿತು ಕೇಳಿರಲಿಕ್ಕೂ ಇಲ್ಲ ಬಿಡಿ. ಆಮೇಲೆ ವೈದ್ಯರುಗಳೇ ಹೇಳಿದರು,'ಇಂತಹ ಕೇಸ್ ನೋಡಿಲ್ಲ ಬಿಡ್ರೀ. ಹೆಚ್ಚಂದ್ರ ಓದಿರಬಹುದು ಅಷ್ಟೇ,' ಅಂತ.

ಮುಂದೆ ಏನೇನೋ ಆಯಿತು ಅನ್ನಿ. ಡಾಕ್ಟರ ಹತ್ತಿರ ಓಡಿದರು. ಜೊತೆಗೆ ಹಾವಿನ ಸೈಜಿನ ಹುಳವನ್ನೂ ತೆಗೆದುಕೊಂಡು ಹೋಗಿ ತೋರಿಸಿದರೇ? ನೆನಪಿಲ್ಲ. ಆದರೆ ಹುಡುಗನ ಬಾಯಿಂದ ಹಾವಿನ ಸೈಜಿನ ಹುಳ ಹೊರಗೆ ಬಿತ್ತು ಅಂತ ಕೇಳಿದ ಡಾಕ್ಟರ ಮಲ ಪರೀಕ್ಷೆ, ಬೇರೆ ಬೇರೆ ತರಹದ ಪರೀಕ್ಷೆ ಮಾಡಿಸಿ ನೋಡಿದರೆ ಸ್ಪೆಷಲಿಸ್ಟ್ ವೈದ್ಯರುಗಳೇ ಎಚ್ಚರ ತಪ್ಪಿ ಬೀಳಬೇಕು ಹಾಗಿತ್ತು ಬಂದ ರಿಪೋರ್ಟ್. ಅದ್ಯಾವ ಮಟ್ಟದ ಸಾಂದ್ರತೆಯಲ್ಲಿ ಹೊಟ್ಟೆಯಲ್ಲಿ ಹುಳು ತುಂಬಿಕೊಂಡಿದ್ದವು ಅಂದರೆ ಯಾವದೇ ಡಾಕ್ಟರ ಆ ಲೆವೆಲ್ಲಿನ ಹೊಟ್ಟೆ ಹುಳುಗಳ ಪ್ರಾಬ್ಲಮ್ ತಮ್ಮ ವೃತ್ತಿ ಜೀವನದಲ್ಲಿ ನೋಡಿರಲಿಲ್ಲ. 'ಹೊಟ್ಟೆಯಲ್ಲಿ ಹುಳುಗಳ ಸಾಂದ್ರತೆ ತೀವ್ರ ಹೆಚ್ಚಾಗಿ ಹೆಚ್ಚಾಗಿ, ಒಳಗೆ ಹುಳಗಳಿಗೇ ಇರಲು ಆಗದಂತಾಗಿ, ಒಂದು ಹುಳ ಬುಳಕ್ ಅಂತ ಹಾರಿ ಹೊರಗೆ ಬಂದಿತ್ತು!' ಅಂತ ಡಾಕ್ಟರ ವಿವರಣೆ.

ಡಾಕ್ಟರ್ ಮಂದಿಗೆ ಈಗ ಗೊತ್ತಾಯಿತಲ್ಲ ತೊಂದರೆ ಏನು ಅಂತ. ಅವರು ಮಾಡದಿದ್ದ diagnosis ವಿಧಿಯೇ ಮಾಡಿಕೊಟ್ಟಿತ್ತು. 'Doctor treats. But, God cures,' ಅಂತ ಇದ್ದ ಮಾತನ್ನು 'Destiny diagnoses, doctor treats and God cures,' ಅಂತ ಬದಲು ಮಾಡಬೇಕೋ ಏನೋ? ಇವರು ಈಗ ಟ್ರೀಟ್ಮೆಂಟ್ ಕೊಟ್ಟರು. ಭಯಂಕರ ಶಕ್ತಿಶಾಲಿ (high potency), ಎಲ್ಲ ತರಹದ ಹುಳು ನಿವಾರಕ (wide spectrum) ಔಷದಿ ಕೊಟ್ಟರು. ತೆಗೆದುಕೊಂಡ ಹುಡುಗ ಪಟಕ್ ಅಂತ ಚೇತರಿಸಿಕೊಂಡ. ಎಲ್ಲ ತೊಂದರೆ ನಿವಾರಣೆಯಾಗಿ ಹೋಯಿತು. ಮುಂದೆ ಒಂದೆರೆಡು ತಿಂಗಳಲ್ಲಿ ಪೂರ್ತಿ ಆರಾಮಾಗಿ, ತೂಕ ಎಲ್ಲ ಮೊದಲಿನ ಲೆವಲ್ಲಿಗೆ ಬಂತು.

ಮಹಾ ಮೃತ್ಯುಂಜಯ ಜಪದ ಸಮಾರೋಪವಾಗುವದಕ್ಕೂ, ಹಾವಿನ ಸೈಜಿನ ಹೊಟ್ಟೆ ಹುಳವೊಂದು ಹೊರಬಿದ್ದು, ತೊಂದರೆ ಏನೆಂದು ಗೊತ್ತಾಗುವದಕ್ಕೂ ಒಂದಕ್ಕೊಂದು ಸಂಬಂಧವಿತ್ತೇ ಅಥವಾ ಶುದ್ಧ ಕಾಕತಾಳಿಯವೇ (just coincidence)? ಜೋಡಿ ಕೊಲೆಯಾದವರು ಅತೃಪ್ತ ಆತ್ಮಗಳಾಗಿ ಹೊಟ್ಟೆ ಹುಳದ ರೂಪದಲ್ಲಿ ತೊಂದರೆ ಕೊಡುತ್ತಿದ್ದವೇ? ಮಹಾ ಮೃತ್ಯುಂಜಯ ಜಪದ ಪರಿಣಾಮವಾಗಿ, ದೇವರ ಶಕ್ತಿ ದೆವ್ವಗಳ ಶಕ್ತಿಗಿಂತ ಹೆಚ್ಚಾಗಿ, ಹುಳದ ರೂಪದಲ್ಲಿದ್ದ ಪ್ರೇತಾತ್ಮಗಳು ಹೊರಬಿದ್ದು ಹೋದವೇ?

ಎಲ್ಲ ಉತ್ತರಗಳು, ವಿವರಣೆಗಳು ಅವರ ಅವರ ಭಾವಕ್ಕೆ ಭಕುತಿಗೆ ಬಿಟ್ಟಿದ್ದು.

ಒಟ್ಟಿನಲ್ಲಿ ಆ ಜೋಡಿ ಕೊಲೆಯಾಗಿದ್ದ ಮನೆಗೆ ಬಂದಿದ್ದ ಸಕ್ಸೇನಾ ಅವರಿಗೆ ಒಂದಲ್ಲ ಒಂದು ರೀತಿ ತೊಂದರೆ. ಮಗನ ಹೊಟ್ಟೆ ಹುಳದ ಕಾಟ ಮುಗಿಯುವಷ್ಟರಲ್ಲಿ ಫ್ಯಾಕ್ಟರಿಯಲ್ಲಿ ಕಾರ್ಮಿಕರ ತೊಂದರೆ ಶುರುವಾಯಿತು. ಒಮ್ಮೆ ಕಾರ್ಮಿಕರ ಸ್ಟ್ರೈಕ್ ಹಿಂಸಾಚಾರಕ್ಕೆ ತಿರುಗಿತು. ಸೆಕ್ಯೂರಿಟಿ ಗಾರ್ಡ್ ಒಂದು ಸುತ್ತು ಗುಂಡು ಹಾರಿಸಿಯೇ ಬಿಟ್ಟ. ಒಬ್ಬರೋ ಇಬ್ಬರೋ ಸತ್ತರು ಅಂತ ನೆನಪು.  ಒಂದೋ ಎರಡೋ ಸೆಕ್ಯೂರಿಟಿ ಗಾರ್ಡುಗಳು ಸಹಿತ ಕ್ರುದ್ಧ ಕಾರ್ಮಿಕರ ಕೈಗೆ ಸಿಕ್ಕು, ತಾರಾಮಾರಾ  ಬಡಿಸಿಕೊಂಡು ಸತ್ತರೋ ಅಥವಾ ಅರೆಜೀವವಾದರೋ ಏನೋ ಆಗಿತ್ತು. ದೊಡ್ಡ ತಲೆ ಬಿಸಿ. ಲಕ್ಷಗಟ್ಟಲೆ ದುಡ್ಡು ಖರ್ಚು ಮಾಡಿ ಹೇಗೋ ಎಲ್ಲ ಬಗೆಹರಿಸಿಕೊಂಡರು.

ಮುಂದೆ ಸುಮಾರು ಎರಡು ವರ್ಷಗಳ ನಂತರ ಸಕ್ಸೇನಾ, ಬೇರೆ ಯಾವದೋ ಕಾರಣಕ್ಕೆ, ಆ ಮನೆ ಬಿಟ್ಟು ಹೋದರು. ಬೇರೆ ಮನೆಗೆ ಶಿಫ್ಟ್ ಆದರು. ಮುಂದೆ ಬೇರೆ ಕಂಪನಿಗೆ ಅಂತ ಕೊಲ್ಕೊತ್ತಾಗೆ ಹೋದರು. ಈ ಕಂಪನಿಗೆ GM ಅಂತ ಬೇರೆ ಯಾರೋ ಬಂದರು. ಒಟ್ಟಿನಲ್ಲಿ ಧಾರವಾಡದ ಆ ಕಂಪನಿ ಬರ್ಕತ್ತಾಗಲಿಲ್ಲ. ಸುಮಾರು ವರ್ಷದ ನಂತರ ಲಾಕ್ ಔಟ್ ಆಗಿ, ಪೂರ್ತಿ ಬಂದಾಗಿ ಹೋಯಿತು. ಈಗ ಆ ಜಾಗ ಧರ್ಮಸ್ಥಳದವರು ತೆಗೆದುಕೊಂಡು ಏನೋ ಶೈಕ್ಷಣಿಕ ಸಂಸ್ಥೆ ಶುರು ಮಾಡಿದ್ದಾರಂತೆ.

ಇದೆಲ್ಲ ಹಳೆ ಸುದ್ದಿ ಯಾಕೆ ನೆನಪಾಯಿತು ಅಂದರೆ ಮೊನ್ನೆ ಫೇಸ್ಬುಕ್ ನಲ್ಲಿ  ಆಪ್ತರೊಬ್ಬರು ತಮ್ಮ ಮೆಚ್ಚಿನ ಹತ್ತು ಪುಸ್ತಕಗಳ ಪಟ್ಟಿ ಮಾಡಿ ಹಾಕಿ ನನ್ನನ್ನೂ ಸಹ ಟ್ಯಾಗ್ ಮಾಡಿದ್ದರು. ನಾನೂ ಸಹ ಹೋಗಿ, ನನಗೆ ತುಂಬಾ ಹಿಡಿಸಿದ ಹತ್ತು ಪುಸ್ತಗಳನ್ನು ದಾಖಲಿಸಿ ಬಂದೆ. ಅದರಲ್ಲಿ ಒಂದು ಪುಸ್ತಕ 'ತುಳಸಿ ದಳ'. ಯಂಡಮೂರಿ ವೀರೇಂದ್ರನಾಥ ಅವರ ಅದ್ಭುತ ಕಾದಂಬರಿ. ಕನ್ನಡಕ್ಕೆ ವಂಶಿ ಅನ್ನುವವರು ತಂದಿದ್ದರು ಅಂತ ನೆನಪು. ಇವತ್ತಿಗೂ ತುಂಬ ಕಾಡುವ ಕಾದಂಬರಿ ಅದು. ೧೯೮೬ ರಲ್ಲಿ ಮೊದಲ ಸಲ ಓದಿದ್ದು.

ತುಳಸಿ ದಳ - ಮಾಟ, ಮಂತ್ರ, ತಂತ್ರ, ವಾಮಾಚಾರ ಇತ್ಯಾದಿಗಳಿಂದ ಕೂಡಿದ ಭಯಂಕರ ಕುತೂಹಲ ಭರಿತ ಕಾದಂಬರಿ. ತುಳಸಿ ಅನ್ನುವ ಚಿಕ್ಕ ಮಗುವಿಗೆ ಚಿತ್ರ ವಿಚಿತ್ರ ತೊಂದರೆಗಳು ಶುರುವಾಗುತ್ತವೆ. ಮಾಟ ಮಂತ್ರದ ಕುರುಹುಗಳು ಎಲ್ಲ ಕಡೆ ಕಂಡು ಬರುತ್ತವೆ. ಹುಡುಕುತ್ತ ಹೋದ ತಂದೆಗೆ ಆಕೆಯ ಮೇಲೆ ವಾಮಾಚಾರ ಪ್ರಯೋಗ ಮಾಡುತ್ತಿದ್ದ ಮಾಂತ್ರಿಕನ ಬಗ್ಗೆ ತಿಳಿಯುತ್ತದೆ. ಮಾಟದ ಪ್ರಯೋಗ ಅಂತಿಮ ಹಂತದಲ್ಲಿದೆ, ಹೋಗಿ ತಡೆಯದಿದ್ದರೆ ಚಿಕ್ಕ ಮಗು ಕೈಬಿಟ್ಟು ಹೋಗುತ್ತದೆ ಅಂತ ತಿಳಿದ ತಂದೆ ಮಾಂತ್ರಿಕನನ್ನು ಹುಡುಕುತ್ತಾನೆ. ಹುಡುಕಿ ಮಾಟದ ಅಂತಿಮ ಪೂಜೆಯನ್ನು ತಡೆಯುತ್ತಾನೆ. ಮಗು ಉಳಿಯುತ್ತದೆ. ಇಷ್ಟೇ ಕಥೆಯಾಗಿದ್ದರೆ ದೊಡ್ಡ ಮಾತಿರಲಿಲ್ಲ. ಯಂಡಮೂರಿ ಅವರ ವೈಶಿಷ್ಟ್ಯವೆಂದರೆ ಅವರು ಮಾಟಕ್ಕೆ, ವಾಮಾಚಾರಕ್ಕೆ parallel track ಅನ್ನುವ ಹಾಗೆ ವೈಜ್ಞಾನಿಕವಾಗಿ ಇನ್ನೊಂದು ಜಾಡಿನಲ್ಲಿಯೂ ಕಥೆಯನ್ನು ಸಮಾನಾಂತರವಾಗಿ ಡೆವಲಪ್ ಮಾಡುತ್ತ ಹೋಗುತ್ತಾರೆ. ಎಲೆಕ್ಟ್ರಾನಿಕ್ಸ್, ಸಮ್ಮೋಹಿನಿ ವಿದ್ಯೆಯ ಉಪಯೋಗ ಮುಂತಾದವನ್ನೂ ಸಹ ಉಪಯೋಗಿಸಿ, 'ಮಗುವಿನ ಮೇಲೆ ಆದ ವೈಪರೀತ್ಯಗಳು ಆ ಕಾರಣಗಳಿಂದಲೂ ಇರಬಹುದೇ?' ಅನ್ನುವ ಸಂದೇಹ ಮೂಡಿಸುತ್ತಾರೆ. ಅತ್ತ ಕಡೆ ಸ್ಮಶಾನದಲ್ಲಿ ಮಾಂತ್ರಿಕನ ಬುರುಡೆ ಒಡೆದು ಮಾಟದ ಪೂಜೆಯನ್ನು ತುಳಸಿಯ ತಂದೆ ಭಗ್ನಗೊಳಿಸುತ್ತಿದ್ದರೆ, ಈಕಡೆ ಆಸ್ಪತ್ರೆಯಲ್ಲಿ ಮಲಗಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ತಾಯಿತವನ್ನೂ ಕಿತ್ತೆಸೆಯಲಾಗುತ್ತದೆ. ಆ ತಾಯಿತದಲ್ಲಿ ಇಟ್ಟಿದ್ದ ಸಣ್ಣ ಟ್ರಾನ್ಸಮೀಟರ್ ಮುಖಾಂತರ ಸಾವಿನ ಸೂಚನೆಗಳನ್ನು hypnotic suggestions ಮೂಲಕ ಕಳಿಸಿ ಮಗುವನ್ನು ಸಾವಿನ ಸಮೀಪ ತಳ್ಳಲಾಗುತ್ತಿತ್ತು ಅಂತ ಇನ್ನೊಂದು ಥಿಯರಿ. ಯಾವದರ ಪರಿಣಾಮ ಮಗುವಿನ ಮೇಲಾಗಿತ್ತು? ಮಾಟದ ಪರಿಣಾಮವೋ ಅಥವಾ ಹೈಟೆಕ್ ಯಂತ್ರದ ಮೂಲಕ ಮಾಡಿದ ಸಮ್ಮೋಹಿನಿ ಪರಿಣಾಮವೋ? ಅಥವಾ ಮಾಟ ಮಾಡಿಯಾಗಿತ್ತು, ಅದರ ಪರಿಣಾಮ ಹೈಟೆಕ್ ರೂಪದಲ್ಲಿ ಬಂದಿತ್ತು ಅಂತಲೋ? ಅದೆಲ್ಲ ಜಿಜ್ಞಾಸೆ ಯಂಡಮೂರಿ ನಿಮ್ಮ ನಿಮ್ಮ ಭಾವಕ್ಕೆ ಭಕುತಿಗೆ ಎಂಬಂತೆ ಬಿಟ್ಟು ಬಿಡುತ್ತಾರೆ. ಅವರ ಕಥೆ ಹೇಳುವ ಕೌಶಲ್ಯ ಅಂದರೆ ಮೇಲೆ ಹೇಳಿದ ಮೂರು ಸಾಧ್ಯತೆಗಳಲ್ಲಿ ಮೂರಕ್ಕೂ ಫಿಟ್ ಆಗುವ ರೀತಿಯಲ್ಲಿ ಆ ಕಾದಂಬರಿ ಇದೆ. (ಕನ್ನಡಲ್ಲಿ ಇದು ಅದೇ ಹೆಸರಿನ ಒಳ್ಳೆಯ ಸಿನಿಮಾ ಕೂಡ ಆಗಿದೆ. ಲಿಂಕ್ ಇಲ್ಲಿದೆ ನೋಡಿ.)

ಈ ಸಕ್ಸೇನಾ ಅವರ ಪ್ರಕರಣ ನೆನಪಿಗೆ ಬಂದಾಗೊಮ್ಮೆ ಅದೇ 'ತುಳಸಿದಳ' ಕಾದಂಬರಿ ನೆನಪಾಗುತ್ತದೆ.

ಸಕ್ಸೇನಾ ಅವರ ಹುಡುಗನಿಗೆ ದೆವ್ವದ ಗಿವ್ವದ ಕಾಟ ಗೀಟ ಏನೂ ಇರಲಿಲ್ಲ. ಹೊಟ್ಟೆ ಹುಳದ ತೊಂದರೆ ಇತ್ತು. ಹೊರಬಿದ್ದ ಹುಳ ನೋಡಿದ ಕೂಡಲೇ ಗೊತ್ತಾಯಿತು, ಚಿಕಿತ್ಸೆ ಕೊಟ್ಟರು, ಗುಣಮುಖನಾದ. ಅಷ್ಟೇ. ಜಪ ಗಿಪ ಎಲ್ಲ just coincidence. ಇದು ಒಂದು ವಿವರಣೆ. ಇದು ದೇವರು, ದೆವ್ವ ಎಲ್ಲವನ್ನೂ discount ಮಾಡಿದ ದೃಷ್ಟಿಕೋನದಿಂದ ಕೊಟ್ಟ ವಿವರಣೆ.

ದೆವ್ವದ ಕಾಟ ಗ್ಯಾರಂಟಿ ಇತ್ತು. ಪ್ರೇತ ಚೇಷ್ಟೆ ನಡೆಯುತ್ತಿತ್ತು. ಹಾಗಾಗಿಯೇ ಹುಡುಗನಿಗೆ ಆ ಮಟ್ಟದ ತೊಂದರೆಯಾಯಿತು. ಕ್ಷುದ್ರಶಕ್ತಿಗಳ ಕರಾಮತ್ತಿನಿಂದಲೇ ಹೊಟ್ಟೆ ಹುಳದಂತಹ ಸಾಮಾನ್ಯ ತೊಂದರೆ ಸಹ ವೈದ್ಯರ ಗಮನಕ್ಕೂ ಬರಲಿಲ್ಲ. ಇಲ್ಲವಾದರೆ ವೈದ್ಯರು ಅಷ್ಟು ತೀವ್ರ ಮಟ್ಟದ ತೊಂದರೆಯನ್ನು wrong diagnose ಮಾಡಿ, ಕೇವಲ ಟಾನಿಕ್ಕು, ವಿಟಾಮಿನ್ನು,  ಮತ್ತೊಂದು ಕೊಟ್ಟಿದ್ದು ಹೇಗೆ? ಮಹಾ ಮೃತ್ಯುಂಜಯ ಜಪ ಮಾಡಿಸಿದ ಪರಿಣಾಮವಾಗಿ ಭೂತಗಳಿಗೆ ಮುಕ್ತಿ ಸಿಕ್ಕಿತೋ, ಹೆದರಿ ಓಡಿ ಹೋದವೋ ಗೊತ್ತಿಲ್ಲ. ಒಟ್ಟಿನಲ್ಲಿ ನಿವಾರಣೆಯಾಯಿತು. ಭೂತ ಚೇಷ್ಟೆ ನಿವಾರಣೆಯಾಗಿ, ನಿಜವಾದ ತೊಂದರೆ ಏನೆಂದು ತಿಳಿದಿದ್ದು ಸಹ ಜಪದ ಪ್ರಭಾವದಿಂದಲೇ. ಇಲ್ಲವಾದರೆ ಜಪ ಮುಗಿದ ತಕ್ಷಣವೇ ತೊಂದರೆ ನಿವಾರಣೆಯಾಗಿದ್ದು ಹೇಗೆ? ಇದು ಇನ್ನೊಂದು ವಿವರಣೆ. ಮತ್ತೊಂದು ದೃಷ್ಟಿಕೋನದಿಂದ.

'ದೆವ್ವ ಇದ್ದರೆ ಆ ಹುಡುಗನಿಗೇ ಯಾಕೆ ಬಡಿದುಕೊಂಡಿತು? ಮನೆಯಲ್ಲಿ ಬೇರೆಯವರೂ ಇದ್ದರಲ್ಲ? ಅವರಿಗೇಕೆ ಏನೂ ಆಗಲಿಲ್ಲ? ಹಾಂ?' ಅಂದರೆ ಅದಕ್ಕೆ ಅವನ ಕರ್ಮ ಅನ್ನಬೇಕಾಗುತ್ತದೆ. ನಿಜವಾಗಿ. ತಮಾಷೆಯಲ್ಲ. ಉದಾಹರಣೆಗೆ - ರೋಗಾಣುಗಳು ಗಾಳಿಯಲ್ಲಿ ಎಲ್ಲ ಕಡೆ ಇದ್ದೇ ಇರುತ್ತವೆ. ನೀವೇ ಒಬ್ಬರು ಜಡ್ಡು ಬೀಳುತ್ತೀರಿ. ಯಾಕೆ? 'ನಿಮ್ಮ immune system ದುರ್ಬಲವಾಗಿತ್ತು. ಅದಕ್ಕೇ ರೋಗಾಣುಗಳು ನಿಮ್ಮನ್ನು ಸುಲಭವಾಗಿ ಆಟಕಾಯಿಸಿಕೊಂಡವು,' ಅಂತ 'ವೈಜ್ಞಾನಿಕ' ವಿವರಣೆ ಹಲವರಿಗೆ ಪಥ್ಯವಾಗುತ್ತದೆ. ಅದೇ ರೀತಿಯಲ್ಲಿ, 'ಅವನ spiritual immune system ಯಾವದೋ ಕಾರಣಕ್ಕೆ ದುರ್ಬಲವಾಗಿತ್ತು. ಅದೇ ಕಾರಣಕ್ಕೆ spiritual ರೋಗಾಣುಗಳಂತಹ ದೆವ್ವ, ಭೂತ, ಕ್ಷುದ್ರ ಶಕ್ತಿಗಳು ಆಟಕಾಯಿಸಿಕೊಂಡವು,' ಅಂತ ಹೇಳಿದರೆ ನಂಬುವವರು ಕಮ್ಮಿ. ಅದಕ್ಕೆಲ್ಲ ವಿವರಣೆ ಬೇರೆ ಬೇರೆ ಗ್ರಂಥಗಳಲ್ಲಿ ಇದೆ. ಅಷ್ಟೇ ನಮಗೆ ತಿಳಿಯುವಂತೆ ಹೇಳುವವರು ಸಿಗುವದು ಕಷ್ಟ. ಮತ್ತೆ ಅದೆಲ್ಲ ತಿಳಿಯಲು ಸಾಧನೆಯ ಒಂದು ಮಟ್ಟಕ್ಕೆ ಹೋಗಿರಬೇಕಾಗಿರುತ್ತದೆ. ಆಗ ಮಾತ್ರ ಮನಸ್ಸು, ಬುದ್ಧಿ ಅಂತಹ ವಿವರಣೆಗಳಿಗೆ ತೆರೆದುಕೊಳ್ಳುವದು. ಮತ್ತೆ ಹೋಗಬೇಕಾದ ದಿಕ್ಕು ಕೂಡ ಬೇರೆಯೇ. 'ನೀವು ಹೊರಜಗತ್ತಿಗೆ ತೆರೆದುಕೊಂಡಿರಿ. ದೂರದರ್ಶನ (ಟೀವಿ) ಕಂಡುಹಿಡಿದಿರಿ. ಯೋಗಿಗಳು ಒಳಜಗತ್ತಿಗೆ ತೆರೆದುಕೊಂಡರು. ಅವರು ಅಂತರ್ದರ್ಶನ ಕಂಡುಹಿಡಿದರು,' ಅಂತ ಒಂದೇ ಮಾತಲ್ಲಿ ಹೇಳುತ್ತಾರೆ ಪತಂಜಲಿ ಯೋಗ ಸೂತ್ರವನ್ನು ಇಂಗ್ಲೀಷಿಗೆ ಭಾಷಾಂತರ ಮಾಡಿ, ಅದ್ಭುತ ಭಾಷ್ಯ ಬರೆದ ಸ್ವಾಮೀ ಪ್ರಭವಾನಂದರು. ಪತಂಜಲಿಯ ಯೋಗ ಸೂತ್ರಗಳಲ್ಲಿ ಹೇಳಿರುವ ಸಿದ್ಧಿಗಳಲ್ಲಿ ಅನೇಕ ಅತೀಂದ್ರಿಯ ಶಕ್ತಿಗಳ ವಿವರಣೆ, ಸಾಧನೆ ಎಲ್ಲ ಇದೆ. ಅದನ್ನು ಸಿದ್ದಿಸಿಕೊಂಡ ಸಿದ್ಧರೂ ಇದ್ದಾರೆ. ಅದೆಲ್ಲ ತಿಳಿಯದ, ತಿಳಿಯದಿದ್ದರ ಬಗ್ಗೆ ತೆರದಿರುವ ಮನವೂ (open mind) ಸಹ ಇರದ 'ಗುಳಿಗೆ ಸಿದ್ಧರು', 'ಎಲ್ಲ ಸುಳ್ಳು. ವಿಜ್ಞಾನದ ಪ್ರಕಾರ ಪ್ರೂವ್ ಮಾಡಿ,' ಅಂದರೆ ಏನು ಮಾಡುವದು? 'ನಿಮಗೆ ತಿಳಿದಿರುವ ವಿಜ್ಞಾನದ ಲಿಮಿಟ್ ತಿಳಿದುಕೊಂಡು ಬನ್ನಿ,' ಅಂತ ಕಳಿಸೋದು ಒಳ್ಳೆಯದು. ಬಾಹ್ಯದ ವಿಜ್ಞಾನ (physical sciences) ಒಂದು ದಿವಸ ಅಭಿವೃದ್ಧಿ ಆಗಿ ಆಗಿ, ಒಂದು ತರಹದ convergence ಬಂದು,  ಆಧುನಿಕ ವಿಜ್ಞಾನ, ಋಷಿ ಮುನಿಗಳ ಅಂತರ್ಜ್ಞಾನ ಎಲ್ಲ ಒಂದಾಗಿ, ಒಂದು unified model of reality ಬರಬಹುದು ಬಿಡಿ. ಎಲ್ಲ ಸಂಶೋಧನೆಗಳ ('re'search) ಹಿಂದಿನ ಮೂಲ ಧ್ಯೇಯ ಅದೇ ತಾನೇ? ಅಲ್ಲಿ ತನಕ ಏನು ಮಾಡಬೇಕು? Patience & Open mind ನಿಂದ ಕಾದು, ಆದಷ್ಟು ಜ್ಞಾನಾರ್ಜನೆ ಮಾಡಿಕೊಳ್ಳುವದು :)

'ನಾವು ಹಾಕಿಕೊಂಡು ಕೂತಿದ್ದ ಬಲೆಗೆ ಒಂದೂ ಮೀನ ಬೀಳಲಿಲ್ಲ ಅಂದ ಮೇಲೆ ಈ ಕೆರೆಯಲ್ಲಿ ಮೀನಗಳು ಇಲ್ಲವೇ ಇಲ್ಲ ಬಿಡಿ,' ಅನ್ನುತ್ತ ಬರುವವರು ಮರೆಯುವ ವಿಷಯ ಏನೆಂದರೆ, 'ಅಲ್ಲಿದ್ದ ಮೀನಗಳು ಸಣ್ಣ ಸೈಜಿನವು ಇರಬಹದು. ನಮ್ಮ ಬಲೆಯಲ್ಲಿ ಬಂದು, ಅವಕ್ಕಿಂತ ದೊಡ್ಡದಿದ್ದ ಬಲೆಯ ತೂತುಗಳಲ್ಲಿ ನುಸುಳಿ, ತಪ್ಪಿಸಿಕೊಂಡು ಹೋಗಿ ಬಿಟ್ಟವು. ಬೇರೆ ಬಲೆ, ಇನ್ನೂ ಸಣ್ಣ ತೂತುಗಳಿದ್ದಿದ್ದು, ತೆಗೆದುಕೊಂಡು ಹೋದರೆ ಮೀನ ಸಿಕ್ಕರೂ ಸಿಕ್ಕಾವು,' ಅನ್ನುವ ವಿವೇಕ, ತಿಳುವಳಿಕೆ. ನಮಗೆ ಅರ್ಥವಾಗದ, ಪಥ್ಯವಾಗದ ಕೆಲವು ಸಂಗತಿಗಳೂ, ಹಲವು ಸತ್ಯಗಳೂ ಸಹ ಅದೇ ರೀತಿ ಇರುತ್ತವೆ. ನಮ್ಮ ಬುದ್ಧಿಯ ಬಲೆ ಆ ಮಟ್ಟದ್ದು ಇರುವದಿಲ್ಲ. ಹಾಗಾಗಿಯೇ ಅಂತಹ ಸತ್ಯದ ಆ ಮೀನುಗಳು ನಮ್ಮ ಬಲೆಗೆ ಬೀಳುವದಿಲ್ಲ. ಬಿದ್ದರೂ ನುಸುಳಿ ಹೋಗಿರುವದು ನಮಗೆ ತಿಳಿದಿರುವದಿಲ್ಲ. ಅದಕ್ಕೇ ನಮಗೆ ತಿಳಿಯದ್ದಿದ್ದೆಲ್ಲ ಸುಳ್ಳು, ಅರ್ಥವಾಗದ್ದೆಲ್ಲ impossible, ನಮ್ಮ ಥಿಯರಿಗೆ ಫಿಟ್ ಆಗದ್ದು improbable, implausible ಅಂದು ಬಿಡುತ್ತೇವೆ. ಮಾಟ, ಮಂತ್ರ, ತಂತ್ರ, ವಾಮಾಚಾರ, ಅತೀಂದ್ರಿಯ ಶಕ್ತಿಗಳು ಇತ್ಯಾದಿಗಳ ವಿಷಯದಲ್ಲಿ ಆಗಿರುವದೂ ಅದೇ.

'ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ,'  ಬಾಲವಾಡಿ ಮಾಣಿಗೆ ಅರ್ಥವಾಗಬಹುದಾದ ಸತ್ಯ ಅಷ್ಟೇ. 'ಸೂರ್ಯ ಹುಟ್ಟುವದೂ ಇಲ್ಲ, ಮುಳುಗುವದೂ ಇಲ್ಲ. ಇದ್ದಲ್ಲೇ ಇರುತ್ತದೆ. ಭೂಮಿ ತಿರುಗುತ್ತದೆ. ಅಷ್ಟೇ,' ಹೈಸ್ಕೂಲ್ ಮಾಣಿಗೆ ಅದು ಸತ್ಯ. ಜ್ಞಾನಿಗೆ ಇಡೀ so called reality ಒಂದು ಭ್ರಮೆ, ಒಂದು illusion. ಅದರ ಹೊರಗೆ ನಿಂತು ನೋಡಬಲ್ಲ ಯೋಗಿಗೆ ಯಾವದೇ physical theory, ಮೆಟಾಫಿಸಿಕಲ್ ಮಾಡೆಲ್ ಬೇಕಾಗಿಯೇ ಇಲ್ಲ. ಅವನಿಗೆ ಕಾಣುವ ರಿಯಾಲಿಟಿ ಬೇರೆಯೇ ಇರುತ್ತದೆ. ಬೇರೆ ಇರುತ್ತದೆಯೋ ಅಥವಾ ರಿಯಾಲಿಟಿಯೇ ಅವನಾಗಿ ಹೋಗಿರುತ್ತಾನೋ?

ಮಾಟ, ಮಂತ್ರ, ಪಾಪ, ಪುಣ್ಯ, ಕರ್ಮ ಫಲ, ಮರುಜನ್ಮ, relativity, quantum mechanics ಎಲ್ಲವೂ ಮಾಡೆಲ್ಲುಗಳು. ಕಂಡದ್ದನ್ನು ವಿವರಿಸಲು ಉಪಯುಕ್ತವಾದ ಮಾಡೆಲ್ಲುಗಳು.  'All models are wrong. But, some are useful,' ಅಂತ ಅದಕ್ಕೇ ತಾನೇ ಹೇಳುವದು?

ಹಲವರು ಮಾಟ, ಮಂತ್ರ, ಭೂತ, ಪ್ರೇತ, ಅತೀಂದ್ರಿಯ ಶಕ್ತಿಗಳು ಎಲ್ಲ ವೈಜ್ಞಾನಿಕವಾಗಿ incompatible ಅನ್ನುತ್ತಾರೆ. Quantum, Relativity, Consciousness And Beyond: A Scientific Quest for Ultimate Reality by Shan Gao ಅನ್ನುವ ಪುಸ್ತಕ ಓದಿ ನೋಡಿ. ಎಷ್ಟು ಫಿಸಿಕ್ಸ್ ಥಿಯರಿಗಳು ಒಂದಕ್ಕೊಂದು contradictory ಮತ್ತು incompatible ಇವೆ ಅಂತ ತಿಳಿಯುತ್ತ ಹೋಗುತ್ತದೆ. ಆದರೆ ಎಲ್ಲವೂ ಬೇರೆ ಬೇರೆ ಕಾರಣಕ್ಕೆ ಉಪಯುಕ್ತವಾಗಿವೆ.

***

ಭೂತ, ಪ್ರೇತ, ಅತೀಂದ್ರಿಯ ಶಕ್ತಿಗಳು, ಇತ್ಯಾದಿ ಎಲ್ಲ ಪೂರ್ತಿ ಸುಳ್ಳು, ಆಧಾರ ರಹಿತ ಅನ್ನುವ ಕಾಲ ಈಗಿಲ್ಲ. ಎರಡು ಸಲ ನೊಬೆಲ್ ಪ್ರಶಸ್ತಿ ಗಳಿಸಿದ್ದ ಭೌತವಿಜ್ಞಾನಿ ಜಾನ್ ಬಾರ್ಡೀನ್ ಅವರ ಪಟ್ಟದ ಶಿಷ್ಯ ಡೀನ್ ರಾಡಿನ್ ಅನ್ನುವವರು ಈ ಬಗ್ಗೆ ಬಹಳ ಸಂಶೋಧನೆ ಮಾಡಿದ್ದಾರೆ. ಭೌತಶಾಸ್ತ್ರದ ತುಂಬ ಕ್ಲಿಷ್ಟಕರವಾದ ಕ್ವಾಂಟಮ್ ಮೆಕ್ಯಾನಿಕ್ಸ್ ನಲ್ಲಿ ಬರುವ entanglement effect ಅನ್ನುವ ಥಿಯರಿ ಉಪಯೋಗಿಸಿ ಕೆಲವು ಅತೀಂದ್ರಿಯ ಶಕ್ತಿಗಳಿಗೆ ಸಮರ್ಪಕವಾದ ವಿವರಣೆಗಳನ್ನು ಅವರು ನೀಡಿದ್ದಾರೆ. ಪ್ರಯೋಗಗಳನ್ನೂ ಮಾಡಿ, ಡಾಟಾ ಸಂಗ್ರಹಿಸಿ, ಅದರ ಸಹಿತ ವಿಶ್ಲೇಷಣೆ ಮಾಡಿದ್ದಾರೆ.

'ಎಲ್ಲದರ ಮೂಲ ಒಂದು ಶಕ್ತಿ. ಅದೇ ಶಕ್ತಿ ಬೇರೆ ಬೇರೆ ರೂಪದಲ್ಲಿ manifest ಆಗುತ್ತದೆ,' ಅನ್ನುವದು ಎಲ್ಲದರ ಹಿಂದಿರುವ ವಿವರಣೆ.

ರಾಡಿನ್ ಅವರ ಎರಡು ಪುಸ್ತಕಗಳನ್ನೂ ಓದಿದ್ದೇನೆ. ಒಂದೇ ಸುತ್ತಿನ ಓದಿಗೆ ಎಲ್ಲ ಅರ್ಥವಾಗಲಿಕ್ಕಿಲ್ಲ ಯಾಕೆಂದರೆ ಸ್ವಲ್ಪ advanced physics ಮತ್ತೊಮ್ಮೆ refresh ಮಾಡಿಕೊಳ್ಳಬೇಕಾಗುತ್ತದೆ.

ನಾನು ಓದಿರುವ ಡೀನ್ ರಾಡಿನ್ ಬರೆದಿರುವ ಪುಸ್ತಕಗಳು.

Entangled Minds: Extrasensory Experiences in a Quantum Reality by Dean Radin

Supernormal: Science, Yoga, and the Evidence for Extraordinary Psychic Abilities by Dean Radin

ಡೀನ್ ರಾಡಿನ್ ಅವರ ವೆಬ್ ಸೈಟಿನಲ್ಲಿ ಸಹ ಬೇಕಾದಷ್ಟು ಮಾಹಿತಿ ಸಿಗುತ್ತದೆ. (http://www.deanradin.com/)

***

Quantum Physics and Ultimate Reality: Mystical Writings of Great Physicists by Michael Green ಪುಸ್ತಕ ಓದಿ. ದೊಡ್ಡ ದೊಡ್ಡ ಭೌತಶಾಸ್ತ್ರ ಪಂಡಿತರು, ಖ್ಯಾತನಾಮರು ಭೌತಶಾಸ್ತ್ರದ, ವಿಜ್ಞಾನದ ಸೀಮೆಯ ಆಚೆ ಇರುವ ಅನೇಕ concept ಗಳ ಬಗ್ಗೆ ಬಹಳ ಸೊಗಸಾಗಿ ಹೇಳಿದ್ದಾರೆ. ಉಪನಿಷತ್ತುಗಳ ಬಗ್ಗೆ, ಶಾಸ್ತ್ರಗಳ ಬಗ್ಗೆ ಹಲವರ ಅಭಿಪ್ರಾಯ ತುಂಬ ಆಸಕ್ತಿದಾಯಕವಾಗಿದೆ.

***

ಇದೇ ಮಾದರಿಯ ಹಳೆಯ ಬ್ಲಾಗ್ ಪೋಸ್ಟುಗಳು ಕೆಳಗೆ ಇವೆ:

ಭೂತ, ಪಿಶಾಚಿ, ಪ್ರೇತಾತ್ಮ, ಕ್ಷುದ್ರಶಕ್ತಿಗಳು 

ಪೂರ್ವಜನ್ಮದ ನೆನಪುಗಳೇಕೆ ನೆನಪಾಗುವದಿಲ್ಲ?

ಪರಕಾಯ ಪ್ರವೇಶ

***

ಪಾತ್ರಗಳ ಹೆಸರುಗಳನ್ನು ಬದಲಾಯಿಸಿದ್ದೇನೆ. ಉಳಿದದ್ದೆಲ್ಲ ಸತ್ಯ ಘಟನೆ ಮೇಲೆ ಆಧಾರಿತ.

ಸ್ಯಾಂಪಲ್ ದೆವ್ವ :)

5 comments:

ವಿ.ರಾ.ಹೆ. said...

very interesting... ಬರೆದದ್ದು ಮಸ್ತ್ ಆಗ್ಯದ. ನಮ್ ಸಾಲೀನಾಗೂ ಒಬ್ಬವಂಗೆ ಹಿಂಗಾ ಬಾಯಿಂದ ಜಂತುಹುಳ ಹೊರಬಿದ್ದಿತ್ತು.


sample devva is awesome :)

Mahesh Hegade said...

Thanks Vikas. Good that you are aware of such thing. Hard to believe!

Gururaj Jamkhandi said...

Mahesh, Is it the house of Major Hotti which is now housing the Siddarameshwar Margadarshi? I am not very sure. But I had reported a murder for newspaper. It was murder of a watchman of an under construction house.

Mahesh Hegade said...

@Jamkhandi Sir - You are correct sir. It was a double murder. Watchman and wife.

Vimarshak Jaaldimmi said...


Very good analysis!

Many things go beyond the boundaries of "current science."