Thursday, July 05, 2012

ಪೂರ್ವಜನ್ಮದ ನೆನಪುಗಳೇಕೆ ನೆನಪಾಗುವದಿಲ್ಲ?

ಪೂರ್ವಜನ್ಮ, ಮರುಜನ್ಮ ಎಲ್ಲ ಇದ್ದರೆ, ನಮಗೆ ಹಿಂದಿನ ಜನ್ಮಗಳ ನೆನಪು ಏಕೆ ಇರುವದಿಲ್ಲ?

ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾಗಿದ್ದ ಸ್ವಾಮಿ ಅಭೇದಾನಂದರು ಪುನರ್ಜನ್ಮದ ಕುರಿತಾಗಿ ಬರೆದ ಪುಸ್ತಕವೊಂದರಲ್ಲಿ (Five Lectures on Reincarnation) ಈ ಪ್ರಶ್ನೆಗೆ ಅತ್ಯಂತ ಒಳ್ಳೆ ರೀತಿಯಲ್ಲಿ ಸಮಾಧಾನಕರ ಉತ್ತರ ನೀಡಿದ್ದಾರೆ.

ನೀವು ನಿಮ್ಮ ಮನೆಯಲ್ಲಿ ಹಾಲಿನಲ್ಲಿ ಕುಳಿತುಕೊಂಡು ಸಿನಿಮಾ ನೋಡುತ್ತಾ ಇರುತ್ತೀರಿ ಅಂದುಕೊಳ್ಳಿ. ಸಿನಿಮಾ ಚೆನ್ನಾಗಿ ಕಾಣಲಿ ಎಂದು ಎಲ್ಲ ಕಿಡಿಕಿ, ಬಾಗಿಲು ಎಲ್ಲ ಮುಚ್ಚಿ ಪೂರ್ತಿ ಕತ್ತಲೆ ಮಾಡಿಕೊಂಡರೆ ಪ್ರಾಜೆಕ್ಟರ್ ನಿಂದ ಪರದೆ ಮೇಲೆ  ಬಿಂಬಿತವಾಗುತ್ತಿರುವ  ಚಿತ್ರ ಒಳ್ಳೆ ರೀತಿಯಲ್ಲಿ ನಿಮಗೆ ಕಾಣುತ್ತದೆ. ಈಗ ನೀವು ಒಂದೊಂದೇ ಕಿಡಕಿ, ಬಾಗಿಲು ತೆಗೆಯುತ್ತೀರಿ ಅಂದುಕೊಳ್ಳಿ. ಏನಾಗುತ್ತದೆ?

ನಿಮ್ಮ ಕೋಣೆಯಲ್ಲಿ ಬೆಳಕು ಹೆಚ್ಚಾದ ಹಾಗೆ, ಪರದೆ ಮೇಲಿನ ಸಿನಿಮಾ ಮಸುಕಾಗುತ್ತ ಹೋಗುತ್ತದೆ. ನೀವು ಸಾಕಷ್ಟು ಬೆಳಕು ಬರಲು ಬಿಟ್ಟು ಬಿಟ್ಟರೆ, ಪರದೆ ಮೇಲೆ ಚಿತ್ರ ಕಾಣುವದೇ ಇಲ್ಲ. ಹಾಗೆಂದ ಮಾತ್ರಕ್ಕೆ ಪರದೆ ಮೇಲೆ ಚಿತ್ರ ಬಿಂಬಿತವಾಗುತ್ತಿರುವದು ಸುಳ್ಳೆ?

ಒಳ್ಳೆ ಬಯಲಿನಲ್ಲಿ, ಮಟ ಮಟ ಮಧ್ಯಾನ್ನ ಟೈಮ್ನಲ್ಲಿ ಸಿನಿಮಾ ತೋರಿಸಿದರೆ ಏನೂ ಕಾಣುವದಿಲ್ಲ. ಸುತ್ತಾ ಮುತ್ತಾ ಶಾಂತಿ ಇದ್ದರೆ, ಹೆಚ್ಚೆಂದರೆ ಸಿನೆಮಾದ ಶಬ್ದ ಕೇಳಿತು. ಚಿತ್ರ ಇಲ್ಲ. ಕೇವಲ ಶಬ್ದ. ಸಂತೆಯಲ್ಲಿ, ಹಗಲಿನಲ್ಲಿ ಸಿನಿಮಾ ತೋರಿಸಿದರೆ. ಚಿತ್ರವೂ ಕಾಣೋದಿಲ್ಲ. ಶಬ್ದವೂ ಕೇಳುವದಿಲ್ಲ. ಹಾಗಂತ ಪರದೆ ಮೇಲೆ ಚಿತ್ರವೇ ಇಲ್ಲ ಅನ್ನೋದು ತಪ್ಪಾಗುತ್ತದೆ.

ನಮ್ಮ ಪೂರ್ವ ಜನ್ಮದ ನೆನಪೂಗಳೂ ಹಾಗೆ. ಇರುತ್ತವೆ. ಆದರೆ ಈ ಜನ್ಮದ ಸಂತೆಯಲ್ಲಿ, ಈ ಜನ್ಮದಲ್ಲಿ ಆಗುತ್ತಿರುವ ಹಾಲೀ ಅನುಭವಗಳ ಪ್ರಖರತೆ ಮತ್ತು ಗದ್ದಲಗಳಲ್ಲಿ  ಹಿಂದಿನ ಜನ್ಮದ ಸಿನಿಮಾ ಕಾಣುವದಿಲ್ಲ. ಅಷ್ಟೇ.

ಅಷ್ಟೆಲ್ಲಾ ಆಸಕ್ತಿ ಇದ್ದರೆ, ಈ ಜನ್ಮದ ಬೆಳಕು, ಗದ್ದಲಗಳನ್ನು ಯೋಗ ಸಾಧನೆಯಿಂದ ಕಡಿಮೆ ಮಾಡಿಕೊಳ್ಳುತ್ತಾ ಬಂದರೆ, ಪೂರ್ವ ಜನ್ಮದ್ದು ಒಂದೇ ಯಾಕೆ, ಮುಂದಿನ ಜನ್ಮದ್ದು ಸಹ ಕಾಣುತ್ತದೆ. ಪತಂಜಲಿಯ ಯೋಗ ಸೂತ್ರಗಳಲ್ಲಿ ಹೇಳಿದ ಪ್ರಕಾರ  ಅನುಕ್ರಮವಾಗಿ ಲಭ್ಯವಾಗುವ ಸಿದ್ಧಿಗಳಲ್ಲಿ ಪೂರ್ವ ಜನ್ಮದ ನೆನಪುಗಳ ರಿಕವರಿಯೂ ಒಂದು.

ಇಷ್ಟೆಲ್ಲಾ ಹೇಳಿದ  ಅಭೇದಾನಂದರು ಮುಂದುವರಿಸುತ್ತಾರೆ - ಹಿಂದಿನ ಜನ್ಮದ ನೆನಪುಗಳು ಅಷ್ಟು ಸುಲಭವಾಗಿ ಸಿಗುವಂತಿದ್ದರೆ, ಸುಮಾರು ಜನ ಈ ಜನ್ಮವನ್ನು ಒಳ್ಳೆ ರೀತಿಯಿಂದ ಉಪಯೋಗಿಸುವದರ ಬಗ್ಗೆ ಕಡಿಮೆ ಗಮನ ಕೊಟ್ಟು, ಕೇವಲ ಹಿಂದಿನ ಜನ್ಮಗಳ ನೆನಪುಗಳ ಬಗ್ಗೆನೇ ಯೋಚನೆ ಮಾಡುತ್ತಾ ಕುಳಿತು, ಅಮೂಲ್ಯ ಮಾನವ ಜನ್ಮವನ್ನು ಹಾಳು ಮಾಡಿಕೊಳ್ಳುತ್ತಿದ್ದರು.  ಹಳೆ ನೆನಪುಗಳು ಈ ಜನ್ಮದ್ದೇ ಇರಲಿ, ಹಿಂದಿನ ಜನ್ಮದ್ದೇ ಇರಲಿ, ಅವುಗಳಲ್ಲಿ ವಿಹರಿಸುತ್ತಾ ಕಾಲ ಹರಣ ಮಾಡೋದು ಮಾನವರ ಫೇವರೆಟ್ ಪಾಸ್ ಟೈಮ್. ಹಿಂದೆ ಆಗಿಹೋಗಿರುವದರ ಬಗ್ಗೆ ಒಂದು ತರಹದ ಸುರಕ್ಷತೆ ಮತ್ತು ಹಾಯ್ ಅನ್ನೋ ರಿಲೀಫ್ ಫೀಲಿಂಗ್ ಇರುತ್ತದೆ ಯಾಕೆಂದರೆ ಅದರಲ್ಲಿ ಅನಿಶ್ಚಿತತೆ ಇಲ್ಲ. ಎಲ್ಲವೂ ಖಚಿತ ಖಚಿತ. ಅದಕ್ಕೇ ಯಾವಾಗಲೂ ಖಚಿತತೆಗಾಗಿ ಮಾನವ ಕಾತರಿಸುವದು ಮತ್ತು ಅದನ್ನು ಭೂತಕಾಲದಲ್ಲಿ ಕಂಡು ಭೂತಕಾಲದಲ್ಲೇ ಇರಬಯಸುವದು.

ಕೇವಲ 10-15 ವರ್ಷದ ಹಿಂದೆ, ಏನೋ ಎಲ್ಲೋ ಒಂದು ಚೂರು ಪಾರು ಪ್ರೈಜೋ, ಅವಾರ್ಡೋ, ಬಿರುದೋ, ಬಾವಲಿಯೋ  ಮತ್ತೊಂದೋ ಬಂದಿದ್ದರೆ, ಆ ಯಶಸ್ಸಿನ ಗುಂಗಿನಲ್ಲೇ ಇವತ್ತೂ ಇರೋದು ಮನುಷ್ಯನ ನೇಚರ್. ಇನ್ನು ಪೂರ್ವಜನ್ಮದಲ್ಲಿ ಎಲ್ಲಿಯಾದರೂ ರಾಜನೋ, ರಾಣಿಯೋ, ಮಂತ್ರಿಯೋ, ಮಾಗದನೋ ಆಗಿದ್ದರಂತೂ ಮುಗಿದೇ ಹೋಯಿತು. ಅಯ್ಯೋ......ಲಾಸ್ಟ್ ಜನ್ಮ ಎಷ್ಟು ಮಸ್ತ ಇತ್ತು. ಈ ಜನ್ಮ ಕಷ್ಟ ಕಷ್ಟ ಅನ್ನುತ್ತ ಹುಶ್ ಅನ್ನುತ್ತ ಕುಳಿತು ಬಿಡುತ್ತಿದ್ದಿವಿಯೇನೋ? ಅದಕ್ಕೆ ಅಂತಹ ಸಿದ್ಧಿಗಳನ್ನ ಹುಲು ಮಾನವರಿಗೆ ಸಹಜವಾಗಿ ಲಭ್ಯವಾಗುವಂತೆ ಮಾಡಿಲ್ಲ ಆ ಪರಮಾತ್ಮ.

ತಮ್ಮ  ಅಧ್ಯಾತ್ಮಿಕ ವಿಕಸನವನ್ನ (spiritual evolution) ತಮ್ಮ ಕೈಯಲ್ಲಿ ತೆಗೆದುಕೊಂಡು, ಹತ್ತಾರು  ಜನ್ಮದಲ್ಲಿ ಆಗೋದನ್ನಾ ಈ ಜನ್ಮದಲ್ಲೇ ಮಾಡಿಕೊಂಡು ಮುಕ್ತಿ ಪಡೆಯೋ ಪ್ರಯತ್ನ ಯೋಗಿಗಳದ್ದು. ಅಂಥವರಿಗೆ ಪೂರ್ವಜನ್ಮದ ನೆನಪುಗಳ ಮಾಹಿತಿ ಬೇಕಾಗುತ್ತದೆ ಕೆಲವೊಂದು ಸಲ. ಅದಕ್ಕೆ ಅವರು ಆ ಸಿದ್ಧಿಗಳನ್ನು ಸಂಪಾದಿಸಿ, ಅಗತ್ಯಕ್ಕೆ ತಕ್ಕಂತೆ ಅತ್ಯಂತ ವಿವೇಚನೆಯೊಂದಿಗೆ ಉಪಯೋಗ ಮಾಡಿಕೊಳ್ಳುತ್ತಾರೆ. ಕೆಲವರು ಆ ಹಾದಿಯಲ್ಲಿ ಸಿಕ್ಕ ಸಿದ್ಧಿಗಳಲ್ಲೇ ಕಳೆದು ಹೋಗಿ ಬಿಡುತ್ತಾರೆ.

ಪಶ್ಚಿಮದಲ್ಲಿ ಹಿಂದಿನ ಜನ್ಮದ ನೆನಪುಗಳನ್ನು ಮತ್ತೆ ಪಡೆದುಕೊಳ್ಳುವದಕ್ಕೆ 'Past Life Regression' ಅನ್ನುತ್ತಾರೆ. ಅದರಲ್ಲಿ ಆಸಕ್ತಿ ಇರುವವರು ಈ ಪುಸ್ತಕ ಓದಬಹುದು - Past Lives, Present Miracles: The Most Empowering Book on Reincarnation You'll Ever Read...in this Lifetime! by Denise Linn

** PS: Five Lectures on Reincarnation - Kindle edition is available for free. 

No comments: