Tuesday, December 30, 2014

'ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂದ್ರ ನನ್ನ ಚಡ್ಡಿ ಕಳದಿರಲ್ಲರೀ!' - ರೂಪಾ ವೈನಿ ಅನಾಹುತ ಉವಾಚ

ಮಂಗಳವಾರ. ಧಾರವಾಡ ಪ್ಯಾಟ್ಯಾಗ ಸಂತಿ. ಕೆಲಸ ಇರ್ಲಿ ಬಿಡಲಿ ಒಂದು ರೌಂಡ್ ಹಾಕಿ ಬಂದುಬಿಡೋದು ನೋಡ್ರೀ. ಹಾಂಗಂತ ಹೇಳಿ ಆವತ್ತೂ ಸಹಿತ ಪ್ಯಾಟಿ ಕಡೆ ಹೋಗಿದ್ದೆ. ಏನೂ ಕೆಲಸ ಇರಲಿಲ್ಲ. ಆದರೂ ಹೋಗಿದ್ದೆ. ಸುಮ್ಮನೆ ಒಂದು ಹಾಪ್ ಚಹಾ ಕುಡದು, ಒಂದು 420 (300 ರತ್ನಾ + 120 ಬಾಬಾ) ಜರ್ದಾ ಪಾನ್ ಹಾಕಿಕೊಂಡು, ಊರ ತುಂಬಾ ಉಗಳ್ಯಾಡಿ, ಅಡ್ಯಾಡಿ, ಓಡ್ಯಾಡಿ ಬಂದರಾತು ಅಂತ ಪ್ಯಾಟಿಗೆ ಹೋಗಿದ್ದೆ.

ಮೊದಲಾಗಿದ್ರ, "ನಾ ಸಂತೀಗಿ ಹೋಗಿದ್ನೀ. ಅಕಿ ತಂದಿದ್ದಳೋ ಬೆಣ್ಣಿ" ಅಂತ ಹಾಡ್ಕೋತ್ತ ಹೋಗಿ, ಧಾರವಾಡದ ಪುರಾತನ ಗೌಳ್ಯಾರ ಸುಂದರಿ ಒಬ್ಬಾಕಿ ತಂದು ಮಾರುತ್ತಿದ್ದ ಬೆಣ್ಣಿ ಖರೀದಿ ಮಾಡ್ತಿದ್ದೆ. ತುಪ್ಪ ಮಾಡ್ಲಿಕ್ಕೆ. ಕದ್ದಾದರೂ ತುಪ್ಪ ತಿನಬೇಕು ನೋಡ್ರೀ. ಅದಕ್ಕೆ. "ಇನ್ನೂ ಯಾಕ ಬರಲಿಲ್ಲವಾ ಮಾಳಮಡ್ಡಿಯವಾ. ಬಂದ ಕೂಡಲೇ ಬೆಣ್ಣಿ ತೊಗೊಂಡು ಓಡಿ ಹೋಗವಾ," ಅಂತ ಹಾಡಿ ಅಕಿನೂ ನನ್ನ ಜೋಡಿ ಭಾಳ ಮಷ್ಕಿರಿ ಮಾಡಾಕಿ. ಆದ್ರ ಈಗ ಏನ್ಯಾಗ್ಯದ ಅಂದ್ರ - ನಾವು ರಿಟೇಲ್ ಒಳಗ ಬೆಣ್ಣಿ ತೊಗೊಳ್ಳವರು. ಎಲ್ಲೋ ಪಾವ್ ಕಿಲೋ ಅಷ್ಟು ಇಷ್ಟು. ನಮ್ಮ ಕಡೆ ಇರೋ ರೊಕ್ಕಕ್ಕೆ ಅಷ್ಟೇ ಸಾಧ್ಯ. ಅಕಿ ಗೌಳ್ಯಾರ ಸುಂದರಿ ನಾ  ಹೋದಾಗೊಮ್ಮೆ 'ಸಾಹೇಬ್ರಾ, ಅಷ್ಟೂ ಬೆಣ್ಣಿ ತೆಗೊಂಡು ಬಿಡರಲ್ಲಾ. ಏನು ಪಾವ್ ಪಾವ್ ಕಿಲೋ ಹಚ್ಚೀರಿ?' ಅಂತ ಕೆಣಕಾಕಿ. 'ಬೇಕಾದ್ರ ನನ್ನು ನಾಕ ಎಮ್ಮಿನೂ ಹೊಡಕೊಂಡು ಬಂದು ನಿಮ್ಮ ಜೋಡಿ ಸೆಟಲ್ ಆಗಿ ಬಿಡ್ಲೇನ್ರೀ???' ಅಂತ ಮ್ಯಾಲಿಂದ ಇಲ್ಲದ ಉಪದ್ವಾಪಿತನ ಬ್ಯಾರೆ. 'ಏ, ಬ್ಯಾಡ ಮಾರಾಳ. ತಿನ್ನೋ ಪಾವ್ ಸೇರ್ ತುಪ್ಪಕ್ಕ ಎಮ್ಮಿ ಕಟ್ಟಿ ನಾ ಕ್ವಾಣ ಆಗವ ಅಲ್ಲ,' ಅಂತ ಹೇಳಿ ಓಡಿ ಬರ್ತಿದ್ದೆ. ಅಕಿ ಆಮ್ಯಾಲೆ ಯಾರೋ ಕ್ವಾಣದಂತ ಆದಮೀ ಜೋಡಿ ಲಗ್ನಾ ಮಾಡಿಕೊಂಡು ಹೋದಳು. ಊರು ಬಿಟ್ಟಾಳ ಅಂತ ತಿಳೀತು. ಅದಾದಗಿಂದ ಪ್ಯಾಟಿ ಒಳಗ, ಸಂತಿ ಒಳಗ ಮಜಾನೇ ಇಲ್ಲ. ನಾಸ್ತಿ.

ಸುಮಾರು ಸಂಜಿ ಏಳು ಆಗಿತ್ತು ನೋಡ್ರೀ. ನಾನು ಇನ್ನು ರಾಯರ ಮಠದ ಸಿಟಿ ಬಸ್ ಹಿಡಿದು ಮನಿ ಸೇರಿಕೊಳ್ಳೋಣ ಅಂತ ಸಿಟಿ ಬಸ್ ಸ್ಟಾಂಡ್ ಕಡೆ ಬರ್ಲಿಕತ್ತಿದ್ದೆ. ಅಲ್ಲೇ 'ಧಾರವಾಡ ಕ್ಯಾಪ್ ಮಾರ್ಟ್' ಅನ್ನೋ ರೆಡಿಮೇಡ್ ಅರವಿ ಅಂಗಡಿ ಮುಂದ ನಮ್ಮ ಗೆಳೆಯಾ ಚೀಪ್ಯಾ, ಅವನ ಹೆಂಡತಿ ರೂಪಾ ವೈನಿ, ಹೆಣ್ಣು ಮಕ್ಕಳಾದ ಕುಂತಿ, ನಿಂತಿ (ಉರ್ಫ್ ನಿಯತಿ) ಎಲ್ಲ ಭೆಟ್ಟಿಯಾದರು.

ಮೊದಲು 'ಧಾರವಾಡ ಕ್ಯಾಪ್ ಮಾರ್ಟ್' ಬಗ್ಗೆ ಸ್ವಲ್ವ ವಿವರಣೆ ಕೊಟ್ಟೇ ಬಿಡ್ತೇನಿ. ನಮ್ಮ ಕಾಲದಾಗ ಧಾರವಾಡದ ಪ್ರೀಮಿಯರ್ ರೆಡಿಮೇಡ್ ಅರವಿ (ಬಟ್ಟೆ) ಅಂಗಡಿ ಅದಾಗಿತ್ತು. ಮುಂಜವಿ (ಉಪನಯನ) ಕ್ಯಾಪಿನಿಂದ ಹಿಡಿದು ಮಂಕಿ ಕ್ಯಾಪ್ ತನಕಾ ಸರ್ವ ತರಹದ ಕ್ಯಾಪ್ ಅಲ್ಲೇ ಸಿಗ್ತಾವ. ಹೆಸರಲ್ಲೇ 'ಕ್ಯಾಪ್ ಮಾರ್ಟ್' ಅಂತದ ನೋಡ್ರೀ. ಒಂದು ಕಾಲದಾಗ ಬರೇ ಟೊಪಿಗಿ ಮಾರೋ ಅಂಗಡಿ ಆಗಿತ್ತು ಅಂತ ಕಾಣ್ತದ. ಅದಕ್ಕೇ ಕ್ಯಾಪ್ ಮಾರ್ಟ್ ಅಂತ ಹೆಸರು. ಬರೇ ಟೊಪಿಗಿ ಮಾರಿದ್ರ ಸಾಕಾಗಂಗಿಲ್ಲ, ಬ್ಯಾರೆ ಬ್ಯಾರೆ ಅರವಿನೂ ಮಾರಿ, ಅದ್ರಾಗೂ ಮಂದಿಗೆ ಟೊಪಿಗಿ ಹಾಕಿದರೆ ಮತ್ತೂ ಜಾಸ್ತಿ ಲಾಭ ಅಂತ ಹೇಳಿ, ಈಗ ಟೊಪಿಗಿ ಜೋಡಿ ಬಾಕಿ ಎಲ್ಲಾ ಅರವಿನೂ ಮಾರ್ತಾರ. ಆದ್ರ ಹೆಸರು ಮಾತ್ರ ಕ್ಯಾಪ್ ಮಾರ್ಟ್ ಅಂತನೇ ಉಳಕೊಂಡು ಬಂದದ.

ಧಾರವಾಡ ಕ್ಯಾಪ್ ಮಾರ್ಟ್ ಫೇಮಸ್ ಆಗಿದ್ದೇ ಮುಂಜವಿ ಟೊಪಿಗಿಯಿಂದ ಅಂತ ನನ್ನ ಭಾವನಾ. ಮುಂಜವ್ಯಾಗ ತಲಿ ಬೋಳಿಸ್ಕೊಂಡು, ಚಂಡ್ಕಿ ಬಿಟ್ಟ ನಂತರ ಮತ್ತ ಕೂದಲ ಬೆಳೆದು ಬರೋ ತನಕಾ ತಲಿ ಕಾಪಾಡಿಕೊಳ್ಳಲಿಕ್ಕೆ ಒಂದು ಟೊಪಿಗಿ ಅಥವಾ ಕ್ಯಾಪ್ ಬೇಕು ನೋಡ್ರೀ. ಅಂತಾ ಟೊಪಿಗಿ ಆ ಅಂಗಡಿ ಒರಿಜಿನಲ್ ಸ್ಪೆಷಾಲಿಟಿ ಆಗಿತ್ತಂತ. ಎಲ್ಲಾರೂ ಬಡ ಬ್ರಾಹ್ಮಂಡರು. ರೊಕ್ಕಾ ಮೊದಲೇ ಇರೋದಿಲ್ಲ. ಇದ್ದ ಬಿದ್ದ ಚೂರು ಪಾರು ರೊಕ್ಕಾ ಮುಂಜವಿ ಮಾಡಿ ಢಂ ಅನ್ನಿಸಿ ಬಿಟ್ಟಿರ್ತಾರ. as an after thought ಮುಂಜವಿ ಹುಡುಗಗ ಒಂದು ಟೊಪಿಗಿ ಕೊಡಿಸಬೇಕು ಬೇಕು ಅಂತ ನೆನಪಾಗ್ತದ. ಇಲ್ಲಂದ್ರ ಕಂಡಕಂಡವರು ಕಂಡಕಂಡಲ್ಲೆ ಬೋಳು ತಲಿ ತಬಲಾದ ಗತೆ ತಟ್ಟತಾರ. ಹಾಂಗ ನೆನಪಾದಾಗ, ಆವಾಗ last resort ಅನ್ನೋ ಹಾಂಗ ಧಾರವಾಡ ಕ್ಯಾಪ್ ಮಾರ್ಟ್ ಕಡೆ ಓಡ್ತಾರ. ಬಡ ಬ್ರಾಮಂಡರ ಅತಿ ಸಣ್ಣ ಬಜೆಟ್ಟಿಗೆ ತಕ್ಕ ಟೊಪಿಗಿ ಅಲ್ಲೆ ಸಿಗ್ತಾವ. ಆದ್ರ ಅಂಗಡಿಯವ ಒಂದು ಮಾತು ಹೇಳೇ ಕೊಡ್ತಾನ - 'ನೀರಿಗೆ ಹಾಕ ಬ್ಯಾಡ್ರಾ ಮತ್ತ!' ಯಾಕ ಅಂತ ನನಗೂ ಗೊತ್ತಿದ್ದಿಲ್ಲ. ಆದ್ರ ನನ್ನ ಮುಂಜವಿ ಟೊಪಿಗಿ ಒಮ್ಮೆ ಮಳ್ಯಾಗ ತೊಯ್ದು ಬಿಡ್ತು. ಮರುದಿನ ನೋಡಿದರ ಟೊಪಿಗಿ ಫುಲ್ ಶ್ರಿಂಕ್ ಆಗಿ, ಅರ್ಧಾ ಗಿರ್ಧಾ ಆಗಿ, ಪೂರ್ತಿ ಬೋಳು ತಲಿ ಮುಚ್ಚೋ ಬದಲಿ ಬರೇ ಚಂಡ್ಕಿ ಅಷ್ಟೇ ಮುಚ್ಚೋ ಹಾಂಗ ಆಗಿಬಿಟ್ಟಿತ್ತು. ಅವನೌನ್! ಆ ಶ್ರಿಂಕ್ ಆಗಿದ್ದ ಟೊಪಿಗಿ ಹಾಕ್ಕೊಂಡ್ರ ಮುಂಜುವಿ ಮಾಡ್ಕೊಂಡ ಬ್ರಾಹ್ಮಣ ಕಮ್ಮಿ, ಸುಂತಿ ಮಾಡಿಸ್ಕೊಂಡ ಸಾಬಾ (ಮುಸ್ಲಿಂ) ಜಾಸ್ತಿ ಕಾಣಬೇಕು. ಹಾಂಗಾಗಿತ್ತು. ಟೊಪಿಗಿ ಅಷ್ಟು ಸಣ್ಣಾಗಿ, ಸಾಬರು, ಯಹೂದಿಗಳು ಹಾಕ್ಕೊಳೋ ಸಣ್ಣ ಸ್ಕಲ್ ಕ್ಯಾಪ್ ಸೈಜಿಗೆ ಬಂದು ಬಿಟ್ಟಿತ್ತು. ಆವಾಗ ಗೊತ್ತಾತು ಆ ಟೊಪಿಗಿ ಕ್ವಾಲಿಟಿ ಭಾಳ ಖರಾಬ್ ಇರ್ತದ ಅಂತ. ಮತ್ತ ಅಷ್ಟು ಕಮ್ಮಿ ರೇಟಿಗೆ ಇನ್ನೆಂತಾ ಟೊಪಿಗಿ ಸಿಗಬೇಕು? ಮತ್ತ ಹ್ಯಾಂಗೂ ಒಂದು ತಿಂಗಳ ಮಟ್ಟಿಗೆ ತಾಳಿಕೆ ಬಾಳಿಕೆ ಬಂದ್ರ ಸಾಕು ನೋಡ್ರೀ. ಅದಕ್ಕೆ ಮಂದಿ ಸಹಿತ ಅದನ್ನ ಒಂದು ತಿಂಗಳ ತೊಳಿಲಿಕ್ಕೆ ಹೋಗೋದಿಲ್ಲ. ಆದ್ರ ಮಳಿ ಗಿಳಿಯೊಳಗ ಸಿಕ್ಕರೆ ಮಾತ್ರ ಗೋವಿಂದಾ! ಗೋssssವಿಂದಾ!

ಈಗ ಮೊದಲಿನ ವಿಷಯಕ್ಕೆ ಬರ್ತೇನಿ. ಎಲ್ಲಿದ್ದೆ? ಹಾಂ! ಧಾರವಾಡ ಕ್ಯಾಪ್ ಮಾರ್ಟ್ ಮುಂದೇ ಇದ್ದೆ. ಅಲ್ಲೇ ಚೀಪ್ಯಾ, ರೂಪಾ ವೈನಿ ಅಂಡ್ ಫ್ಯಾಮಿಲಿ ಭೆಟ್ಟಿ ಆದರು.

'ಬಾರಲೇ ಮಂಗೇಶ್! ನೀನೂ ನಮ್ಮ ಜೋಡಿ ಬಾ. ಏನರೆ ಅರವಿ ಖರೀದಿ ಮಾಡೋದಿದ್ದರ ಮಾಡಿಯಂತ ಬಾ. ಆಮೇಲೆ ಎಲ್ಲಾರೂ ಕೂಡೆ ಮನಿ ಕಡೆ ಹೋಗೋಣಂತ,' ಅಂದಾ ಚೀಪ್ಯಾ.

ಆವಾ ಹಾಂಗ ಹೇಳಿದ ಕೂಡಲೇ ನಾ ಮೊದಲು ರೂಪಾ ವೈನಿ ಮುಖಾ ನೋಡಿದೆ. ಗಂಡ ಪ್ರಾಣಿ ಏನೇ ಹೇಳಿದರು ಅದಕ್ಕೆ ತಡೆಯಾಜ್ಞೆ ಹೆಂಡತಿಯಿಂದ ಬರೋ ಎಲ್ಲಾ ಸಾಧ್ಯತೆಗಳು ಇರ್ತಾವ ನೋಡ್ರೀ.

'ಸೂಡ್ಲೀ! ಅವನ್ಯಾಕ ಕರೀಲಿಕತ್ತೀರಿ? ನಿಮ್ಮ ಗೆಳೆಯಾ ಅಂದ್ರ ದೊಡ್ಡ ಪೀಡಾ!' ಅನ್ನೋ ಲುಕ್ ರೂಪಾ ವೈನಿ ಮಾರಿ ಮ್ಯಾಲೆ ಇತ್ತು. ಚೀಪ್ಯಾ ದಡ್ಡ ಸೂಳಿಮಗ. ಅವಂಗೆಲ್ಲೆ ಅವೆಲ್ಲಾ ಗೊತ್ತಾಗಬೇಕು?

'ಬಾರಲೇ, ಬಾರಲೇ, ನೀನೂ ಬಾರಲೇ,' ಅಂತ ಚೀಪ್ಯಾ ಭಾಳ ಜುಲ್ಮಿ ಮಾಡಿದ.

'ನನದೇನೂ ಖರೀದಿ ಇಲ್ಲ ಮಾರಾಯ. ಮತ್ತ ನಮ್ಮಮಹಾ ದೊಡ್ಡ  XXXL ಸೈಜಿನ ಅಂಗಿ ಆವಾ ಇಡೋದೇ ಇಲ್ಲ. ಕೇಳಿದರ, 'ನಾವು ಸರ್ಕಸ್ ಟೆಂಟ್ ಮಾರಂಗಿಲ್ಲರೀ ಸರ್ರಾ,' ಅಂದು ಅಪಮಾನ ಬ್ಯಾರೆ ಮಾಡ್ತಾನ. ಅದಕ ಬ್ಯಾಡಲೇ,' ಅಂದೆ.

ಆದ್ರ ಚೀಪ್ಯಾ ಕೇಳೋ ಮೂಡಿನ್ಯಾಗ ಇರಲಿಲ್ಲ. 'ಇರ್ಲಿ ಬಾರಲೇ. ನಾ ನಿನಗ ಒಂದು ಗಿಫ್ಟ್ ಕೊಡಸ್ತೇನಿ. ಬಾರಲೇ,' ಅಂತ ಗಿಫ್ಟಿನ ಆಶಾ ಹಚ್ಚಿಬಿಟ್ಟ. ಹಡಬಿಟ್ಟಿ ಮನಸ್ಸು. ಬಿಟ್ಟಿ ಸಿಗ್ತದ ಅಂದ್ರ ನನಗೊಂದು ಇರ್ಲಿ, ನಮ್ಮಪ್ಪಗೂ ಒಂದು ಇರಲಿ ಅಂತದ.

'ಏನು ಗಿಫ್ಟ್ ಕೊಡಸ್ತೀ?' ಅಂತ ಕೇಳಿದೆ.

'ಬಾರಲೇ. ನಿನಗೊಂದು ಚಂದನೆ ಮಂಕಿ ಕ್ಯಾಪ್ ಕೊಡಸ್ತೇನಿ ಬಾ. ಹೆಸರಂತೂ ಮಂಗೇಶ್ ಅಂತ ಅದ. ಹಾಂಗಾಗಿ ನೀ ಯಾವ ಕ್ಯಾಪ್ ಹಾಕ್ಕೊಂಡ್ರೂ ಅದು ಆಟೋಮ್ಯಾಟಿಕ್ ಆಗಿ ಮಂಕಿ ಕ್ಯಾಪ್ ಆಗಿಬಿಡ್ತದ. ಜೀವನಪೂರ್ತಿ ಮುಂಜವಿ ಟೊಪಗಿಯನ್ನೇ ಮಂಕಿ ಕ್ಯಾಪ್ ಮಾಡಿ ಹಾಕಿಕೊಂಡು ಅರ್ಧಾ ಜೀವನಾ ಕಳೆದುಬಿಟ್ಟಿ. ಈಗರೆ ಒಂದು ಖರೆ ಮಂಕಿ ಕ್ಯಾಪ್ ಹಾಕ್ಕೊಂಡು, ನಿನ್ನ ಹೆಸರಿಗೆ ತಕ್ಕಂತೆ ಫುಲ್ ಮಂಗ್ಯಾನ ಗತೆ ಉಳಿದ ಜೀವನ ಕಳದಿಯಂತ. ಬಾ ಬಾ. ಫ್ರೀ ಗಿಫ್ಟಲೇ. ಯಾರಿಗದ ಯಾರಿಗಿಲ್ಲ. ಬಾರೋಪಾ!' ಅಂತ ಹೇಳಿ ಭಯಂಕರ ಆಶಾ ಹಚ್ಚಿಬಿಟ್ಟ.

ಹ್ಯಾಂಗೂ ಸಿಕ್ಕಾಪಟ್ಟೆ ಥಂಡಿ ಬ್ಯಾರೆ ಅದ. ಒಂದು ಮಂಕಿ ಕ್ಯಾಪ್ ಇದ್ದರೇ ಚೊಲೊ ಅಂತ ಅನ್ನಿಸ್ತು. ಅದು ನಮ್ಮ ಅಜ್ಜಾ ಸತ್ತ ಮ್ಯಾಲೆ ನನಗ ಆಸ್ತಿ ಅಂತ ಬಿಟ್ಟು ಹೋದ ಒಂದು ಮಂಕಿ ಕ್ಯಾಪ್ ಇತ್ತು. ನಮ್ಮಜ್ಜಾ ಖಾಯಂ ಅಮೃತಾಂಜನ ಗಿರಾಕಿ ನೋಡ್ರೀ. ಹಾಂಗಾಗಿ ಅದು ಭಾಳ ಅಮೃತಾಂಜನ ವಾಸನಿ ವಾಸನಿ ಆಗಿಬಿಟ್ಟದ. ತೊಳೆಯೋಣ ಅಂದ್ರ ಮತ್ತ ಇದೇ ಧಾರವಾಡ ಕ್ಯಾಪ್ ಮಾರ್ಟ್ ಕ್ವಾಲಿಟಿ. ಶ್ರಿಂಕ್ ಆಗಿ ಬಿಡ್ತದ. ಹಾಂಗಾಗಿ ನನಗ ಒಂದು ಹೊಸಾ ಮಂಕಿ ಕ್ಯಾಪ್ ಖರೆನೇ ಬೇಕಾಗ್ಯದ.

ಸರಿ ಅಂತ ಹೇಳಿ, ನಾನೂ ಸಹ ಚೀಪ್ಯಾ ಅಂಡ್ ಕಂಪನಿ ಜೋಡಿ ಧಾರವಾಡ ಕ್ಯಾಪ್ ಮಾರ್ಟ್ ಒಳಗ ಹೊಕ್ಕೆ.

'ಕೊನಿಗೂ ಈ ಪೀಡಾನ್ನ ಕರಕೊಂಡೇ ಬಂದ್ರೀ. ಹೌದಿಲ್ಲೋ? ಅದ ನಿಮಗ ಇವತ್ತು ಮನಿಗೆ ಹೋದ ಮ್ಯಾಲೆ ಪೂಜಿ' ಅನ್ನೋ ಲುಕ್ ರೂಪಾ ವೈನಿ ಚೀಪ್ಯಾಗ ಕೊಟ್ಟರು. ನಮಗೇನಾಗಬೇಕು? ನಮಗ ಒಟ್ಟ ಬಿಟ್ಟಿ ಮಂಕಿ ಕ್ಯಾಪ್ ಸಿಕ್ಕರೆ ಸಾಕು. ಈ ರೂಪಾ ವೈನಿ ಮನಿಗೆ ಹೋಗಿ ಚೀಪ್ಯಾಗ ಪೂಜಿನಾರ ಮಾಡ್ಲೀ ಇಲ್ಲಾ ಪುನಸ್ಕಾರಾರ ಮಾಡ್ಲೀ. ಹಮ್ಕೋ ಕ್ಯಾ?????

ಆವತ್ತು ಧಾರವಾಡ ಕ್ಯಾಪ್ ಮಾರ್ಟ್ ಒಳಗ ಅಷ್ಟೇನೂ ರಶ್ ಇರಲಿಲ್ಲ. ಹಾಂಗಾಗಿ ಇದ್ದ ಬಿದ್ದ ಕೆಲಸದವರೆಲ್ಲ ನಮ್ಮ ಖಾತಿರ್ದಾರಿಗೇ ನಿಂತರು. ಪೂರ್ತ ರಾಯಲ್ ಟ್ರೀಟ್ಮೆಂಟ್.

'ಏನು ತೋರಿಸಲಿರೀ ಸಾಹೇಬ್ರಾ? ಏನು ತೋರಿಸಲಿರೀ ಬಾಯಾರ? ಸರ್ ನಿಮಗ್ರೀ?' ಅಂತ ಚೀಪ್ಯಾನ್ನ, ರೂಪಾ ವೈನಿನ, ನನ್ನ ಕೇಳ್ಕೊತ್ತ ಅಲ್ಲಿ ಕೆಲಸದ ಮಂದಿ ಬಂದರು. ಒಂದಿಬ್ಬರು ಕೆಲಸದವರು ಹುಡುಗಿಯರಾದ ಕುಂತಿ, ನಿಂತಿಯನ್ನ ಗಮನಸಿಕೊಳ್ಳಲು ಹೋದರು. ರೂಪಾ ವೈನಿ ಅವರನ್ನ ತಡೆದರು. ಇಲ್ಲಂದ್ರ ಆ ಯಬಡ ಕುಂತಿ, ನಿಂತಿ ಏನೇನೋ ಬೇಕು  ಅಂತಾವ. ಅಂಗಡಿಯವರಿಗೆ ಏನು. ಅವರು ತಂದು ತಂದು ಸುರಿತಾರ. ನಂತರ ಸಣ್ಣ ಮಕ್ಕಳು ಬೇಕೇ ಬೇಕು ಅಂತ ಹಟಾ ಹಿಡಿತಾವ. ಅಂಗಡಿಯವರಿಗೆ ಅದೇ ಬೇಕು. ಮಕ್ಕಳ ಹಟಾ ತಡಕೊಳ್ಳಲಿಕ್ಕೆ ಆಗದೇ, ರೊಕ್ಕ ಇಲ್ಲದಿದ್ದರೂ ಮುದ್ರಿ ಒತ್ತಿಯಿಟ್ಟು ಉದ್ರಿ ಹಚ್ಚಿ ಹ್ಯಾಂಗೋ ಮಾಡಿ ಕೊಡಿಸ್ಕೊಂಡು ಬರ್ತಾರ. ಅವೆಲ್ಲಾ ಜಂಜಡ ಬ್ಯಾಡೇ ಬ್ಯಾಡ ಅಂತ ಹೇಳಿ, 'ಆ ಸಣ್ಣು ಹುಡುಗ್ಯಾರಿಗೆ ಏನೂ ತಂದು ತೋರ್ಸೋದು ಬ್ಯಾಡ. ನಾ ಏನು ಬೇಕು ಅಂತ ಹೇಳತೇನಿ. ಅವಿಷ್ಟು ತೋರಿಸರಿ ಸಾಕು. ತಿಳೀತಾ????' ಅಂತ ಅಂಗಡಿ ಮಂದಿಗೆ ವಾರ್ನಿಂಗ್ ಕೊಟ್ಟು, 'ಕುಂತಿ! ಏ ನಿಂತಿ! ಗಪ್ಪ್ ಇರಬೇಕಾ ಮತ್ತ. ಇಲ್ಲಂದ್ರ ಏನೂ ಕೊಡಸಂಗಿಲ್ಲ ನೋಡ್ರೀ!' ಅಂತ ಖಡಕ್ ಆವಾಜ್ ಹಾಕಿದರು ಮಾತಾಶ್ರಿ ರೂಪಾ ವೈನಿ. ಕುಂತಿ, ನಿಂತಿ ಸುಮ್ಮನಾಗಿ ಒಬ್ಬರಿಗೊಬ್ಬರು ಚೂಟಿಗೋತ್ತ, ಪರಿಚಿಗೋತ್ತ, ಬೈಕೋತ್ತ, ಜಗಳ ಮಾಡಿಕೋತ್ತ ಟೈಮ್ ಪಾಸ್ ಮಾಡ್ಲಿಕತ್ತವು.

'ನನಗ ಬರ್ಮುಡಾ ಚೊಣ್ಣಾ (ಚಣ್ಣ) ತೋರಸ್ರೀ. ಮತ್ತ ಇವಾ ನಮ್ಮ ದೋಸ್ತಗ ಮಂಕಿ ಕ್ಯಾಪ್ ತೋರಸ್ರೀ,' ಅಂದ ಚೀಪ್ಯಾ.

'ಯಾಕ್ರೀ ಅವು ಬರ್ಮುಡಾ ಚೊಣ್ಣಾ? ಸುಮ್ಮನ ರೊಕ್ಕ ದಂಡ. ನಿಮ್ಮ ಪಟ್ಟಾ ಪಟ್ಟಿ ಪೈಜಾಮಾನೇ ಮೊಣಕಾಲ ಹತ್ತಿರ ಕತ್ತರಿಸಿ ಕೊಡತೇನಿ. ಒಂದು ಕೈ ಹೊಲಿಗಿ ಹಾಕಿಸಿ ಕೊಡತೇನಿ. ಅದನ್ನ ಹಾಕ್ಕೋರಿ. ಬರ್ಮುಡಾ ಚೊಣ್ಣಾ ಅಂತ ಬರ್ಮುಡಾ. ಅವೆಲ್ಲಾ  ಬ್ಯಾಡ, ' ಅಂತ ರೂಪಾ ವೈನಿ ಚೀಪ್ಯಾಗ ಹೇಳಿದರು. ಬೈದರು. request denied.

'ಏ ರೂಪಾ! ನನಗ ಬೇಕೇ ಬೇಕು. ಪೈಜಾಮಾ ಬ್ಯಾರೆ ಮತ್ತ ಬರ್ಮುಡಾ ಚೊಣ್ಣಾ ಬ್ಯಾರೆ. ಹಿಂದ ಗೋವಾದಾಗ ಬೀಚ್ ಮ್ಯಾಲೆ ಪಟ್ಟಾಪಟ್ಟಿ ಪೈಜಾಮಾ ಹಾಕ್ಕೊಂಡು ಅಡ್ಯಾಡಿದ್ದಕ್ಕ ಎಲ್ಲಾರೂ ನನ್ನ ನೋಡಿ ನಕ್ಕಿದ್ದರು. ಮುಂದಿನ ಸರೆ ಗೋವಾಕ್ಕ ಹೋದಾಗರೆ ಬೇಕು ಅಂತ ಹೇಳ್ಯಾರೆ ಕೊಡಸ, ಕೊಡಸ, ಪ್ಲೀಸ್ ಕೊಡಸ,' ಅಂತ ಚೀಪ್ಯಾ ಗೋಗೆರೆದ.

ನೋಡಿ ಪಾಪ ಅನ್ನಿಸ್ತು. ದುಡಿಯವಾ ಅವಾ. ಆದ್ರ ನೋಡ್ರೀ,  ಒಂದು ಚೊಣ್ಣಾ ತೊಗೋ ಬೇಕು ಅಂದ್ರೂ ಹೆಂಡತಿಗೆ ದುವಾ ಸಲಾಂ ಮಾಡ್ಬೇಕು. ತಿಂಗಳ ಪಗಾರ್ ಪೂರ್ತಿ ಹೆಂಡ್ತಿ ಕೈಯಾಗ ಕೊಟ್ಟು ಕೂಡಬ್ಯಾಡಲೇ, ಅಂತ ಬಡಕೊಂಡರೂ ಕೇಳೋದಿಲ್ಲ. ಮತ್ತ ರೂಪಾ ವೈನಿ ಭಾಳ ಜಾಬಾದ್. payslip ನೋಡಿಕೊಂಡೇ ಇರ್ತಾರ. ಕರೆಕ್ಟ್ ಲೆಕ್ಕಾ ಇಟ್ಟಿರ್ತಾರ. ಅವರದ್ದೂ ಪಾಯಿಂಟ್ ಅದ ಬಿಡ್ರೀ. ಮನಿ ನಡಿಸ್ಕೊಂಡು ಹೋಗವರು ಹೆಂಗಸೂರು. ಗಂಡಸೂರೇ ಪಗಾರ್ ಇಟ್ಟುಗೊಂಡರು ಅಂದ್ರ ಮನಿಯಾಗಿನ ಎಲ್ಲಾರಿಗೆ ನಾಕ್ನಾಕು ಬರ್ಮುಡಾ ಚೊಣ್ಣಾನೇ ಖರೀದಿ ಮಾಡಿ, ಅಷ್ಟೂ ರೊಕ್ಕಾ ಖರ್ಚು ಮಾಡಿಕೊಂಡು ಕೂಡ್ತಾರ. ಆಮೇಲೆ ಊಟಕ್ಕ ಏನ್ರೀ? ಅಂತ ಕೇಳಿದರೆ, ಹೊಟ್ಟಿ ಮ್ಯಾಲೆ ತಣ್ಣೀರ ಬಟ್ಟಿ ಹಾಕ್ಕೊಂಡು ಮಲ್ಕೊರೀ ಅನ್ನೋ ಪೈಕಿ  ಈ ಗಂಡು ಮುಂಡೇವು. ಬೇಕಾದ್ರ ಬರ್ಮುಡಾ ಚೊಣ್ಣಾನೆ ಒದ್ದಿ ಮಾಡಿ ಹೊಟ್ಟಿ ಮ್ಯಾಲೆ ಹಾಕ್ಕೊಂಡು ಮಲ್ಕೊಬೇಕು. ಅದಕ್ಕೆ ಭಾಳ ಮಂದಿ ಮಧ್ಯಮ ವರ್ಗದ ಗಂಡಸರು ತಿಂಗಳ ಪಗಾರ್ ಫುಲ್ ಹೆಂಡ್ತಿ ಕೈಯಾಗ ಕೊಟ್ಟು, ಕೃಷ್ಣಾರ್ಪಣಮಸ್ತು, ಅಂದು ಬಿಡ್ತಾರ. ಏನು ಮಸ್ತೋ ಏನು ಸುಡುಗಾಡೋ!?

ಚೀಪ್ಯಾ ಆ ಪರಿ ಕಾಡೋದು ನೋಡಿ, ಪಾಪ ಅನ್ನಿಸ್ತು ಅಂತ ಕಾಣಸ್ತದ ರೂಪಾ ವೈನಿಗೆ. 'ಹೂಂ! ಒಂದೇ ಬರ್ಮುಡಾ ತೊಗೋರಿ. ಒಂದೇನಾ ಮತ್ತ. ಒಂದೇ ಒಂದು. ಭಾಳ ತುಟ್ಟಿದು ಬ್ಯಾಡ ಮತ್ತ. ಆ ನಿಮ್ಮ ಹೊಟ್ಟಿಯಂತೂ ಮುಂದ ಬಂದ್ಕೊತ್ತss ಹೊಂಟದ. ಆ ಹೊಟ್ಟಿ ಬೆಳೆಯೋ ರೇಟ್ ನೋಡಿದ್ರ ತೊಗೊಂಡು ಮನಿಗೆ ಹೋಗಿ ಮುಟ್ಟೋದ್ರಾಗ ಆ ಬರ್ಮುಡಾನೋ ಗಿರ್ಮುಡಾನೋ ಟೈಟ್ ಆದರೂ ಆತು. ಟೈಟ್ ಆತು ಅಂದ್ರ ಅಸಡ್ಡಾಳ ಟೈಟ್ ಬರ್ಮುಡಾ ಹಾಕ್ಕೊಂಡು ಅಡ್ಯಾಡ್ಬೇಕಾಗ್ತದ. ಒಂದು ನೋಡಿ ತೊಗೋರಿ. ಸ್ವಲ್ಪ ರಬ್ಬನೇ ಬಣ್ಣದ್ದೇ ತೊಗೋರಿ. ಹೊಲಸಾದ್ರೂ ಕಾಣಬಾರದು ನೋಡ್ರೀ,' ಅಂತ ಹೇಳಿದರು.

ಶಿವನೆ! ಒಂದು ಬರ್ಮುಡಾ ಚೊಣ್ಣಾ ತೊಗೊಳ್ಳಿಕ್ಕೆ ತ್ರೀ ಪೀಸ್ ಸೂಟ್ ಹೊಲಿಸಿದ್ದರಿಕಿಂತ ಹೆಚ್ಚಿನ ಮಾತು. ಒಂದು ಬರ್ಮುಡಾ ಚೊಣ್ಣದ ಕಥೆ.

ನಮಗ ತೋರಿಸಲಿಕ್ಕೆ ಅಂತ ಬರ್ಮುಡಾ ಚೊಣ್ಣಾ, ಮಂಕಿ ಕ್ಯಾಪ್ ತರಲಿಕ್ಕೆ ಒಳಗ ಹೋದಾ ಅಂಗಡಿ ಕೆಲಸದವ.

ಮತ್ತೊಬ್ಬ ಕೆಲಸದವ, 'ನಿಮಗೇನು ಕೊಡ್ಲಿರೀ ಬಾಯಾರ?' ಅಂತ ರೂಪಾ ವೈನಿನ ಕೇಳಿದ.

ಅವರಿಗೆ ಏನು ಬೇಕು ಅಂತ ಹೇಳಲಿಕ್ಕೆ ರೂಪಾ ವೈನಿ ಯಾಕೋ ಸ್ವಲ್ಪ ಹಿಂದ ಮುಂದ ನೋಡಿದರು. ನಾ ಇದ್ದೆ ಅಂತನೋ ಏನೋ. ಗೊತ್ತಿಲ್ಲ. ಸಣ್ಣ ದನಿಯೊಳಗ ಏನೋ ಹೇಳಿದರು. ಕುಸು ಪುಸು. ನನಗ ಕೇಳಲಿಲ್ಲ.

'ಪ್ಯಾಂತೀಸ್ (ಪೈಂತೀಸ್) ಸೈಜ್ ಶರ್ಟ್ ಲೇಕೆ ಆಬಾ' ಅಂತ ಒಬ್ಬ ಕೆಲಸದವ ಇನ್ನೊಬ್ಬಗ ಧಾರವಾಡ ಉರ್ದು ಒಳಗ ಹೇಳಿದ. ಒಂದಿಷ್ಟು ಡಬ್ಬಿ ಬಂದವು. ಅವನ್ನು ತಂದು ವೈನಿ ಮುಂದ ಸುರಿದರು. ವೈನಿ ಫುಲ್ ಘಾಬರಿಯಾದ್ರು. ಅವರಿಗೆ ಒಟ್ಟ ತಿಳಿವಲ್ತು ಯಾಕ ಅವರ ಮುಂದ ಗಂಡಸೂರ ಶರ್ಟ್ ತಂದು ಸುರಿಲಿಕತ್ತಾರ ಅಂತ.

'ಏನು ಇವು? ಇವನ್ಯಾಕ ತಂದ್ರಿ? ಈ ಗಂಡಸೂರ ಅಂಗಿ ತೊಗೊಂಡು ಹೋಗಿ ನಾ ಏನ ಮಾಡ್ಲೀ? ಅದೂ ಯಾವ ಸೈಜಿನ ಅಂಗಿ ಇವು? ಎಷ್ಟು ಸಣ್ಣು ಅವ. ನಾ ಏನು ಮಂಗ್ಯಾ ಸಾಕೇನಿ ಅಂತ ಮಾಡಿರೇನು? ನಾ ಹೇಳಿದ್ದು ಏನು ನೀವು ತಂದು ತೋರಸ್ಲಿಕತ್ತಿದ್ದು ಏನು? ಹಾಂ?' ಅಂತ ಅವಂಗ ಬೈದರು. ಮಂಕಿ ಕ್ಯಾಪ್ ಇಲ್ಲದೇ ಮಂಗ್ಯಾನ ಮಾರಿ ಆತು ಅವಂದು.

'ನೀವೇ ಹೇಳಿದರಲ್ಲರೀ ಪೈಂತೀಸ್ ಅಂತ. ಅದಕ್ಕೆ 35 ಸೈಜಿನ ಶರ್ಟ್ ತರಿಸಿದೆ. ಏನು ಹೇಳಿದಿರಿ ನೀವು?' ಅಂತ ಕೇಳಿದ.

'ಅಯ್ಯೋ! ರಾಮಾ! ನಾ ಹೇಳಿದ್ದು ಅದಲ್ಲಾ,' ಅಂದ್ರು ರೂಪಾ ವೈನಿ.

'ಮತ್ತರೀ? ಏನು??????' ಅಂತ ವಾಪಸ್ ಪ್ರಶ್ನೆ ಒಗದಾ ಆವಾ.

ರೂಪಾ ವೈನಿ ಮತ್ತ ಒಂದು ತರಹದ ಸಂಕೋಚ ಮಾಡಿಕೊಂಡರು. ಮತ್ತ ಸಣ್ಣ ದನಿಲೆ ಏನೋ ಕುಸು ಪುಸು ಅಂದ್ರು. ಭಾಳ ಸಣ್ಣ ದನಿಲೆ ಅಂದ್ರು.

'ಇವೆಲ್ಲಾ ಪ್ಯಾಂತೀಸ್ ನಂಬರ್ ಸೈಜಿನವೇ ಅವರೀ ಬಾಯಾರ. ಬೇಕಾದ್ರ ಹಾಕಿಸಿ ನೋಡ್ರೀ. ಇಲ್ಲಾ ಮನಿಗೆ ಹೋಗಿ ನೋಡಿ, ಸರಿಯಾಗಿಲ್ಲಾ ಅಂದ್ರ ವಾಪಸ್ ತಂದು ಕೊಡ್ರೀ. ಪ್ಯಾಂತೀಸ್ ಪ್ಯಾಂತೀಸ್ ಅನ್ನಲಿಕತ್ತೀರಿ. ಪ್ಯಾಂತೀಸ್ ಸೈಜಿನ ಶರ್ಟ್ ತೊರಿಸಿದರ ಬ್ಯಾಡ ಅಂತೀರಿ. ಏನು ಬೇಕು ಅಂದ್ರ ಮತ್ತ ಪ್ಯಾಂತೀಸ್ ಅಂತೀರಿ. ಸ್ವಲ್ಪ ಜೋರಾಗಿ ಹೇಳ್ರೀ. ನನಗ ಸರಿ ಕೇಳದಿದ್ದರೂ ನಮ್ಮ ಸಾವಕಾರ್ರಿಗೆ ಸರಿ ಕೇಳಲಿ.  ಆವಾಗರೆ ನಿಮಗ ಏನು ಬೇಕು ಅಂತ ನಮಗ ಗೊತ್ತಾದೀತು,' ಅಂತ ಹೇಳಿ, ಶಿವಾಯ ನಮಃ ಅನ್ನೋ ಹಾಂಗ ಅಂಗಡಿಯವ ಕೈ ಚಲ್ಲಿಬಿಟ್ಟ.

ಶಿವನೇ ಶಂಭುಲಿಂಗ!

ಇಷ್ಟೆಲ್ಲಾ ಆಗೋ ತನಕಾ ಆ ಅಂಗಡಿ ಮಾಲೀಕ ಬಂದ. ಅವನೇ ಮುದ್ದಾಂ ಕೇಳಿದ, 'ಏನು ಬೇಕ್ರೀ ಬಾಯಾರ? ನನಗ ಹೇಳ್ರೀ,' ಅಂತ ಭಾಳ ವಿನಮ್ರತೆಯಿಂದ ಕೇಳಿದ.

ರೂಪಾ ವೈನಿ ಮತ್ತ ಸಣ್ಣ ದನಿಲೆ ಏನೋ ಕುಸು ಪುಸು ಅಂದ್ರೂ. ಯಾಕೋ ಏನೋ? ಎಲ್ಲದನ್ನೂ ಏರು ದನಿಯೊಳಗ ಮಾತಾಡೋ ಇವರು ಈಗ್ಯಾಕ ಸಣ್ಣ ದನಿಲೆ ಕುಸು ಪುಸು ಅನಲಿಕತ್ತಾರೋ ಏನೋ. ಅವರಿಗೇ ಗೊತ್ತು.

ಅವರು ಕುಸು ಪುಸು ಅಂದಿದ್ದು ಮಾಲೀಕನಿಗೆ ತಿಳೀತು ಅಂತ ಅನ್ನಸ್ತದ. ಆವಾ ದೊಡ್ಡ ದನಿಯೊಳಗ, ನಗರೇಶ್ವರ ಗುಡಿ ತನಕಾ ಕೇಳೋವಾಂಗ, 'ಚಡ್ಡಿ  ರೀ??? ಹೆಂಗಸೂರ ಚಡ್ಡಿಗೆ ಪ್ಯಾಂತೀಸ್ ಅಂತಾರೇನ್ರೀ? ನಮಗ ಗೊತ್ತಿಲ್ಲ ಬಿಡ್ರೀ. ಆವಾ ನಮ್ಮ ಹುಡುಗ ನೀವು ಪ್ಯಾಂತೀಸ್ ಅಂದ್ರ ಪೈಂತೀಸ್ ಸೈಜಿನ ಶರ್ಟ್ ತೋರಿಸಿಬಿಟ್ಟ. ಗೊತ್ತಾಗಲಿಲ್ಲ ಅವಂಗ. ಈಗ ತರಿಸಿಬಿಡ್ತೇನಿ . ಒಂದ ನಿಮಿಷ. ನಿಮ್ಮ ಚಡ್ಡಿ ಬಂದ ಬಿಡ್ತಾವು. ಚಡ್ಡಿ ನಿಮಗೊಂದನೋ ಅಥವಾ ಸಾಹೇಬರಿಗೆ, ನಿಮ್ಮ ಹುಡುಗ್ಯಾರಿಗೆ ಎಲ್ಲರಿಗೂ  ತರಿಸಿಬಿಡಲೋ?' ಅಂತ ಜೋರ್ ಹೋಯ್ಕೊಂಡ. ಹಾಕ್ಕ! ಶಿವನೇ!

ಹೋಗ್ಗೋ! ಇದೇ ಆಗಬಾರದು ಅಂತ ಹೇಳಿ ರೂಪಾ ವೈನಿ ಕುಸು ಪುಸು ಅಂತ ಸಣ್ಣ ದನಿಯೊಳಗ ಮಾತಾಡ್ಲಿಕತ್ತಿದ್ದರ ಈ ಪುಣ್ಯಾತ್ಮ ಊರಿಗೆಲ್ಲ ಕೇಳೋ ಹಾಂಗ ಜಾಗಟಿ ಬಾರಿಸಿಬಿಟ್ಟ. ಹಾಕ್ಕ! ಈ ವೈನಿಗಾದ್ರೂ ಬುದ್ಧಿ ಬ್ಯಾಡ? ಹ್ಯಾಂ? ಸಣ್ಣ ದನಿಯಾಗ ಹೇಳಿದರೂ, ಸಿಂಪಲ್ ಆಗಿ ಚಡ್ಡಿ ಅಂತನೋ, ಕಾಚಾ ಚಡ್ಡಿ ಅಂತನೋ ಸಿಂಪಲ್ಲಾಗಿ ಹೇಳಿದ್ರ ಅವಂಗ ತಿಳಿತಿತ್ತು. ಹೋಗಿ ಇಲ್ಲದ ಇಂಗ್ಲೀಷ್ ಡೌಲ್ ಬಡಿಲಿಕ್ಕೆ ಹೋಗ್ಯಾರ. ಇವರು panties ಅಂದಿದ್ದು ಅವಂಗ ಪ್ಯಾಂತೀಸ್ ಅಂದಾಂಗ ಕೇಳಿ, ಆವಾ ಹುಚ್ಚಾ 35 (ಪ್ಯಾಂತೀಸ್ / ಪೈಂತೀಸ್ ) ಸೈಜಿನ ಶರ್ಟ್ ತೋರಿಸಿ, ಏನೇನೋ ಆಗಿ, ಮಾಲೀಕ ದೊಡ್ಡ ದನಿಯೊಳಗ 'ಚಡ್ಡೆ ರೇ??????' ಅಂತ ಕೇಳಿ, ರಾಮಾ ರಂಪಾ. ಅದಕ್ಕೆ ಹೇಳೋದು - Keep it simple and stupid ಅಂತ. ಚಡ್ಡಿ ಕೋ ಚಡ್ಡಿ ಹೀ ರಹನೇ ದೋ ಕೋಯಿ ನಾಮ ನ ದೋ. ಹಮನೇ ದೇಖಿ ಹೈ.....ಅಂತ ಹಾಡು ನೆನಪಾತು.

ಹೆಂಗಸೂರ ವಸ್ತ್ರಗಳು ಬಂದವು. ರೂಪಾ ವೈನಿ, ಕುಂತಿ, ನಿಂತಿ ಎಲ್ಲಾ ಆಕಡೆ ಹೋದವು. ಅಷ್ಟರಾಗ ನನ್ನ ಮಂಕಿ ಕ್ಯಾಪೂ ಸಹ ಬಂತು. ಹಾಂಗೆ ಚೀಪ್ಯಾನ ಬರ್ಮುಡಾ ಚೊಣ್ಣ ಸಹಿತ ಬಂದವು. ಧೇಡ್ ಸಾರೆ ತಂದು ತಂದು ಗುಡ್ಡೆ ಹಾಕಿದ. ಮಂಕಿ ಕ್ಯಾಪ್ ಸಹಿತ ಭಾಳ ತಂದ. ಆದರೆ ಮಂಕಿ ಕ್ಯಾಪ್ ತೊಗೊಂಡ್ರ ಒಂದು ಕರೇ ಬಣ್ಣದ ಬ್ಲಾಕ್ ಮಂಕಿ ಕ್ಯಾಪ್ ತೊಗೋಬೇಕು ಇಲ್ಲ ಅಂದ್ರ ಸ್ವಲ್ಪ ಬ್ರೌನ್ ಇರೋದು ತೊಗೋಬೇಕು. ಇವೆರೆಡು ಕಲರ್  ಬಿಟ್ಟು ಬ್ಯಾರೆ ಯಾವದೇ ಬಣ್ಣದ ಮಂಕಿ ಕ್ಯಾಪ್ ತೊಗೊಳ್ಳೇಬಾರದು.  ಯಾಕಂದ್ರ ಹಾಕ್ಕೊಂಡ ಮ್ಯಾಲೆ ಪರ್ಫೆಕ್ಟ್ ಮಂಗ್ಯಾ ಕಂಡಂಗ ಕಾಣಬೇಕು ನೋಡ್ರೀ. ಖರ್ರನೆ ಕರೆ ಮಂಗ್ಯಾ ಅಥವಾ ಕೆಂಪ ಮುಶ್ಯಾ ಕಂಡಂಗ ಕಾಣಬೇಕು. ಎಲ್ಲರೆ ಬ್ಯಾರೆ ಬಣ್ಣದ್ದು ಮಂಗ್ಯಾ ನೋಡೀರಿ ಏನು? ಹಳದಿ ಬಣ್ಣದ್ದು? ಜಾಂಬಳಿ ಬಣ್ಣದ್ದು???? ತಲಿ ಇಲ್ಲದ ಮಂದಿ ಮಾತ್ರ ಯಾವ್ಯಾವದೋ ಬಣ್ಣದ ಮಂಕಿ ಕ್ಯಾಪ್ ಹಾಕ್ಕೊಂಡು genetically mutated ಮಂಗ್ಯಾಗಳ ಗತೆ ಅವತಾರ ಮಾಡಿಕೊಂಡು ಅಡ್ಯಾಡ್ತಿರ್ತಾರ. ಹುಚ್ಚ ಖೋಡಿಗಳು! ಅದಕ್ಕೆ ನಾ ಸುಮ್ಮನೆ ಒಂದು ಬ್ಲಾಕ್ ಕಲರ್ ಮಂಕಿ ಕ್ಯಾಪ್ ಆರಿಸಿಕೊಂಡೆ.

ಚೀಪ್ಯಾ ಬಣ್ಣ ಬಣ್ಣದ ಬರ್ಮುಡಾ ಚೊಣ್ಣ ನೋಡಿ ಖುಷ್ ಆಗಿಬಿಟ್ಟ. ಅವಂಗ ಯಾವದು ತೊಗೋಬೇಕು ಯಾವದನ್ನ ಬಿಡಬೇಕು ಅಂತ ತಿಳಿವಲ್ದಾಗಿತ್ತು. ಹೆಂಡ್ತಿ ಬ್ಯಾರೆ ಒಂದೇ ಒಂದು ಬರ್ಮುಡಾ ತೊಗೊಳ್ಳಿಕ್ಕೆ ಪರ್ಮಿಷನ್ ಕೊಟ್ಟಾಳ. ಒಳ್ಳೆ ಧರ್ಮ ಸಂಕಟ ಅವಂಗ. ಆದರೂ ನೋಡೋಣ ಅಂತ ಹೇಳಿ ಹಾಪ್ ಚೀಪ್ಯಾ ಒಂದು ನಾಲ್ಕು ಬರ್ಮುಡಾ ಆರಿಸಿಬಿಟ್ಟ.

ಇಷ್ಟು ಆಗೋ ತನಕಾ ಆಕಡೆ ಹೆಂಗಸೂರದ್ದೂ ಚಿತ್ರ ವಿಚಿತ್ರ ಅರಿವಿಗಳ ಖರೀದಿ ಮುಗೀತು ಅಂತ ಅನ್ನಸ್ತದ. ಅವರೂ ಸಹಿತ ಎಲ್ಲರೂ ಈಕಡೆ ಬಂದರು. ಆಕಡೆ ಅವರ ಅರಿವಿ ಬಿಲ್ಲಿಂಗ್, ಪ್ಯಾಕಿಂಗ್ ಎಲ್ಲಾ ನಡೆದಿತ್ತು. ಚೀಪ್ಯಾನ ನಾಕು ಬರ್ಮುಡಾ, ನಂದು ಒಂದು ಮಂಕಿ ಕ್ಯಾಪ್ ಸಹಿತ ಎಲ್ಲಾ ಆಕಡೆನೇ ತೊಗೊಂಡು ಹೋದ. ಎಲ್ಲಾ ಒಂದೇ ಬಿಲ್ ಒಳಗ ಬರಬೇಕು ನೋಡ್ರೀ.

ಎಲ್ಲಾದನ್ನೂ ಬಿಲ್ ಮಾಡಿ, ಬಿಲ್ ಎಲ್ಲಾ ಬರೆದು, ಟೋಟಲ್ ಮಾಡಿ, ಎಷ್ಟು ಅಂತ ಹೇಳಿದ. ಜಗ್ಗೆ ಆಗಿತ್ತು ಬಿಲ್. ರೂಪಾ ವೈನಿನೇ ಹೋಂ ಮಿನಿಸ್ಟರ್. ಅವರೇ ಫೈನಾನ್ಸ್ ಮಿನಿಸ್ಟರ್. ರೊಕ್ಕಾ ಕೊಟ್ಟು ಬಿಲ್ ಚುಕ್ತಾ ಮಾಡವರು ಅವರೇ. ಹಾಂಗಾಗಿ ಅವರು ಡೀಟೇಲ್ ಆಗಿ ಬಿಲ್ ಚೆಕ್ ಮಾಡೇ ರೊಕ್ಕಾ ಕೊಡವರು. ಹಾಂಗಾಗಿ ಬಿಲ್ ಇಸ್ಕೊಂಡು, ಒಂದೊಂದೇ ಲೈನ್ ಐಟಂ ನೋಡ್ಕೋತ್ತ, ಖರೆನೇ ಆ ಸಾಮಾನು ತೊಗೋಂಡೇವೋ ಇಲ್ಲೋ ಅಂತ ನೋಡಿಕೋತ್ತ ಹೊಂಟರು. ಬಿತ್ತಲ್ಲ ಕಣ್ಣಿಗೆ ಚೀಪ್ಯಾನ ನಾಕು, ನಾಕ್ನಾಕು, ಬರ್ಮುಡಾ ಚೊಣ್ಣ. ವೈನಿ ಚಿಟ್ ಅಂತ ಚೀರಿಕೊಂಡರು.

'ಶ್ರೀಪಾದ್ ರಾವ್! ನಾ ನಿಮಗ ಏನು ಹೇಳಿದ್ದೆ? ಹಾಂ? ಒಂದೇ ಒಂದು ಬರ್ಮುಡಾ ಚೊಣ್ಣ ಅಂತ. ಇದ್ಯಾಕ ನಾಕ್ನಾಕು ಚೊಣ್ಣ ತೊಗೊಂಡೀರಿ? ಏನು ಇನ್ನು ಮುಂದೆ ಬರೇ ಚೊಣ್ಣಾನೇ ಹಾಕ್ಕೊಂಡು ಇರವರು ಏನು? ಆವಾ ಅಣ್ಣಾ ಹಜಾರೆ ಅವತಾರ ಮುಗೀತು. ಈಗ ನೀವು ಚೊಣ್ಣಾ ಹಜಾರೆ ಆಗವರು ಏನು? ಏ.....ನಿಮ.... ನಿಮ ತಂದು. ಯಾವದಾರ ಒಂದೇ ಒಂದು ಬರ್ಮುಡಾ ಆರಿಸ್ಕೊಂಡು, ಬಾಕಿದು ಬ್ಯಾಡ ಅನ್ನರೀ,' ಅಂತ ರೂಪಾ ವೈನಿ ಗಂಡಗ ಜಬರಿಸಿದರು.

'ಈ ಬಿಲ್ ಒಳಗಿಂದ ಮೂರು ಬರ್ಮುಡಾ ಚೊಣ್ಣಾ ಕಮ್ಮಿ ಮಾಡಿ ಹೊಸಾ ಬಿಲ್ ಮಾಡಪಾ. ಆಮ್ಯಾಲೆ ಮತ್ತೊಮ್ಮೆ ಟೋಟಲ್ ಹೇಳು,' ಅಂದ್ರು. ಅಂಗಡಿ ಮಂದಿ ಕೆಟ್ಟ ಮಾರಿ ಮಾಡಿದರು. ಚೀಪ್ಯಾ ಮೂರು ಬರ್ಮುಡಾ ಹಿಂದೆ ಕೊಡಬೇಕಾಗಿ ಬಂತಲ್ಲಾ ಅಂತ ಮತ್ತೂ ಕೆಟ್ಟ ಮಾರಿ ಮಾಡಿದ. ಕೇವಲ ಅಮೇರಿಕಾ ಧ್ವಜದ ಪ್ಯಾಟರ್ನ್ ಇದ್ದ ಬರ್ಮುಡಾ ಒಂದನ್ನೇ ಇಟ್ಟುಕೊಂಡು, ಬಾಕೀದು ಮೂರು ಬ್ಯಾಡ ಅಂದ. ಅಂಗಡಿಯವ ಅವನ್ನ ತೆಗೆದು, ಬಿಲ್ ಅಡ್ಜಸ್ಟ್ ಮಾಡಲಿಕ್ಕೆ ಶುರು ಮಾಡಿದ. ನಾವು ವೇಟ್ ಮಾಡಿಕೋತ್ತ ನಿಂತವಿ. ವೈನಿ ತಮ್ಮ ಮೊಳಕೈ ತೊಗೊಂಡು ಚೀಪ್ಯಾನ ಪಕ್ಕೆಲೆಬಿನ್ಯಾಗ ಹೆಟ್ಟಿ ಹೆಟ್ಟಿ ಸುಮಡಿ ಒಳಗ ಬೈಲಿಕತ್ತಿದ್ದರು - ಯಾಕ ನಾಕ್ನಾಕ ಬರ್ಮುಡಾ ತೊಗೊಂಡಿದ್ದಿರಿ ಅಂತ. ಪಾಪ ಚೀಪ್ಯಾ. ಬರ್ಮುಡಾ ಚೊಣ್ಣ ಅಂತೂ ಹೋಗಿಬಿಟ್ಟವು. ಮ್ಯಾಲಿಂದ ಪಕ್ಯಾಗ ತಿವಿಸಿಕೊಳ್ಳೋ ಚಿತ್ರಹಿಂಸೆ. ಹೈರಾಣ ಆಗಿದ್ದ ಗಂಡ ಪ್ರಾಣಿ.

ಮತ್ತ ಹೊಸಾ ಬಿಲ್ ಬಂತು. ರೂಪಾ ವೈನಿ ಮತ್ತ ಒಂದೊಂದಾಗಿ ಚೆಕ್ ಮಾಡಲು ಶುರು ಮಾಡಿದರು. ನಡು ಮತ್ತ ಒಮ್ಮೆಲೇ ಚೀರಿಕೊಂಡರು. ಬೋಂಗಾ ಸೌಂಡ್ ಮಾಡೇ ಬಿಟ್ಟರು. ಹಾಕ್ಕ!

ಅಂಗಡಿಯವ ಘಾಬ್ರಿಯಾಗಿ, 'ಈಗ ಮತ್ತೇನಾತ್ರೀ ಬಾಯಾರ?' ಅಂತ ಭಾಳ anxiety ಯಿಂದ ಕೇಳಿದ.

'ಬಿಲ್ ತಪ್ಪು ಮಾಡಿರಲ್ಲರೀ? ಹೀಂಗ ಮಾಡೋದು? ನಾ ಹೇಳಿದ್ದು ತಿಳಿಲಿಲ್ಲ ನಿಮಗ? ಹಾಂ?' ಅಂತ ರೂಪಾ ವೈನಿ ಅಂಗಡಿ ಕಾರಕೂನಗ ಹೇಳಿದರು. ಕಾಡಕೋಣದಂತಹ ಕಾರಕೂನ. ಅದೂ ರಾತ್ರಿ ಎಂಟೂವರಿ ಟೈಮ್. ಅಂಗಡಿ ಮುಚ್ಚೋ ಹೊತ್ತು. ಆವಾ ಬಿಲ್ಲಿನ್ಯಾಗ ಏನು ಭಾನಗಡಿ ಮಾಡಿ ಕೂತಿದ್ದನೋ ಏನೋ.

'ಬಿಲ್ಲಿನ್ಯಾಗ ಏನು ತಪ್ಪಾತ್ರೀ ಬಾಯಾರ? ಕೊಡ್ರೀ ಇಲ್ಲೆ,' ಅಂತ ಹೇಳಿ ಕಾರಕೂನ ಬಿಲ್ ಇಸ್ಕೊಂಡು, ಚಸ್ಮಾ ಮ್ಯಾಲೆ ಏರಿಸಿಕೊಂಡು ಅವನೂ ಚೆಕ್ ಮಾಡಿದ. ಮೊದಲೇ ಹೇಳಿದಂಗ ಕಾಡಕೋಣ ಸೂಳಿಮಗಾ. ತಲಿ ಎಲ್ಲೆ ಇರಬೇಕು? ಇಲ್ಲ.

'ಎಲ್ಲಾ ಬರೋಬ್ಬರಿ ಅದಲ್ಲರೀ. ನೀವು ಹೇಳಿದಂಗ ಯಾವದನ್ನು ತೆಗಿಬೇಕೋ ಅವನ್ನು ತೆಗೆದು, ಹೊಸಾ ಬಿಲ್ ಮಾಡಿ, ಹೊಸದಾಗಿ ಟೋಟಲ್ ಮಾಡೆನಲ್ಲರೀ! ಏನು ತಪ್ಪದರೀ?' ಅಂತ ಹೇಳಿ ಬಿಲ್ ವಾಪಸ್ ಕೊಟ್ಟ. ಈ ಹೌಸ್ ವೈಫ್ ಹೆಂಗಸಿಗೆ ಏನು ಗೊತ್ತದ ಅನ್ನೋ ಕಿಂಡಲ್ ಲುಕ್ ಕೊಟ್ಟ ಕಾರಕೂನ.

ನಮ್ಮ ರೂಪಾ ವೈನಿ ಎಮ್ಮಿಕೇರಿ ಸಾಲಿಗೇ ಹೋಗಿರಬಹುದು. SSLC ಭಾಳ ಸಲೆ ಡುಮ್ಕಿ ಹೊಡೆದ ಮ್ಯಾಲೇ ಪಾಸ್ ಆಗಿರಬಹುದು. ಆದ್ರ ಕಿರಾಣಾ ಲೆಕ್ಕಾ, ಅರವಿ ಅಂಗಡಿ ಲೆಕ್ಕದೊಳಗ ಮಾತ್ರ ಅವರು ಗಣಿತದಾಗ ಮಾಸ್ಟರ್ ಡಿಗ್ರಿ ಮಾಡಿದವರಿಗಿಂತ ಮುಂದು. ಅದರಾಗ ಸಂಶಯ ಬ್ಯಾಡೇ ಬ್ಯಾಡ.

ಕಾಡಕೋಣ ಕಾರಕೂನನ ಮಾತಿನಿಂದ ಅವರಿಗೆ ಸರ್ರ್ ಅಂತ ಸಿಟ್ಟು ಬಂತು. ಸಿಟ್ಟು ಬಂದಿದ್ದೊಂದೇ ಅಲ್ಲ. ಅದು ಸೀದಾ ನೆತ್ತಿಗೇ ಏರಿಬಿಡ್ತು. ಆವಾಗ ಆತು ಅನಾಹುತ!

'ಏ! ನಿಮ್ಮ! ಏನು ಸರಿ ಅದರೀ??? ನಾ ಏನು ಹೇಳಿದೆ ನಿಮಗ??? ಹಾಂ???? ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂತ ಹೇಳಿದೆ. ನೀವು ಏನು ಮಾಡಿದಿರಿ? ಹಾಂ? ನನ್ನ ಚಡ್ಡಿ ಕಳೆದುಬಿಟ್ಟೀರಿ. ಹ್ಯಾಂ? ಥೂ ನಿಮ್ಮ!' ಅಂತ ಒದರಿಬಿಟ್ಟರು.

ಅಕಟಕಟಾ!!!!!!

ಅದನ್ನು ಕೇಳಿ ಅಲ್ಲಿದ್ದ ಎಲ್ಲರೂ ಒಂದು ಕ್ಷಣ ಸ್ಥಂಭೀಭೂತರೂ, ಚಂಬೀಭೂತರೂ ಆಗಿಬಿಟ್ಟರು. Frozen!!!!

ಯಜಮಾನರ ಚೊಣ್ಣಾ ಕಳಿ ಅಂದಿದ್ದರಂತ ಆವಾ ಇವರ ಚಡ್ಡಿ ಕಳೆದು ಬಿಟ್ಟನಂತ!!!!!!!!!!!!!!!!!!!!!!!!!!!!!

Out of context ಒಳಗ ಫುಲ್ ಡಬಲ್ ಮೀನಿಂಗ್. ಡಬಲ್ 'ಮೀನ್' ಇಂಗ್  ಅಲ್ಲ ಇದು ಡಬಲ್ 'ತಿಮಿಂಗಲ' ಇಂಗ್!!!!!!!! ಆ ಮಟ್ಟದ ಅನಾಹುತ!

ಎಲ್ಲರೂ pin drop ಸೈಲೆನ್ಸ್ ಒಳಗ ನಿಂತಿದ್ದು ನೋಡಿದ ರೂಪಾ ವೈನಿ ಅವರು ಹೇಳಿದ್ದು ಯಾರಿಗೂ ತಿಳಿಲಿಲ್ಲ ಅಂತ ತಿಳಕೊಂಡು ಮತ್ತ ಅದನ್ನೇ ಒದರಿದರು. ಜೋರಾಗೇ ಒದರಿದರು. ಈಗ ಬಾಜೂಕಿನ ಕಠಾರೆ ಅಂಗಡಿಯವ ಸಹಿತ ಹಣಿಕಿ ನೋಡಿದ. ಆ ಮಟ್ಟಿನ ಎಫೆಕ್ಟ್ ಇತ್ತು. ಜೋರ್ದಾರ್ ಬಾಯಿ ಅದ. ಅದಕ್ಕೆ ಅವರಿಗೆ ರೂಪಾ ಬಾಯಿ ಅನ್ನೋದು ಒಪ್ತದ.

ಕಾರಕೂನ ದೊಡ್ಡ ಬಾಯಿ ಬಿಟ್ಟುಕೊಂಡು ಹ್ಯಾಂ???????? ಅನ್ನೋ ಲುಕ್ ಕೊಟ್ಟು ಕೂತಿದ್ದ. ಅವನ ಗಲ್ಲಾ ಅನ್ನೋದು ಮುಂದಿದ್ದ ಗಲ್ಲಾದ (cash box) ಮೇಲೆ ಹೋಗಿ ಕೂತುಬಿಟ್ಟಿತ್ತು.

'ಏ!!! ಥೂ ನಿಮ್ಮ! ನಮ್ಮ ಯಜಮಾನರ ಮೂರು ಬರ್ಮುಡಾ ಚೊಣ್ಣಾ ಬಿಲ್ಲಿನಾಗಿಂದ ಕಳೆದು ಹೊಸಾ ಬಿಲ್ ಮಾಡ್ರೀ ಅಂದ್ರ ನೀವು ನನ್ನು ಮೂರು ಚಡ್ಡಿ ಬಿಲ್ಲಿನಾಗಿಂದ ಕಳೆದು ಬಿಲ್ ಮಾಡಿರೀ ನೋಡ್ರೀ. ಅದು ತಪ್ಪು. ತಿಳೀತಾ?' ಅಂತ ಫುಲ್ ವಿವರಣೆ ಕೊಟ್ಟರು.

ಆಗ ಎಲ್ಲರೂ ದೊಡ್ಡ ಹುಸ್! ಅಂತ ಶ್ವಾಸ ಮತ್ತೊಂದು ಬಿಟ್ಟರು. ಇಲ್ಲಂದ್ರ ಧಾರವಾಡ ಕ್ಯಾಪ್ ಮಾರ್ಟ್ ಮಂದಿ ಕೇವಲ ದ್ರೌಪದಿ ವಸ್ತ್ರಾಪಹರಣ ಕೇಳಿದ್ದರು. ಈಗ ಈ ರೂಪಾ ಬಾಯಿದು, ಚೀಪ್ಯಾಂದು ವಸ್ತ್ರಾಪಹರಣ ಮಾಡಿದ ಆರೋಪಕ್ಕ ಒಳಗಾಗಿದ್ದರು. ಅದೂ ಬರೆ ವಸ್ತ್ರಾಪಹರಣ ಅಲ್ಲ. ಒಳವಸ್ತ್ರಾಪಹರಣ. ದ್ವಾಪರಯುಗದಾಗ ಇನ್ನೂ decency ಉಳಿದಿತ್ತು ಅದಕ್ಕೇ ಬರೆ ವಸ್ತ್ರಾಪಹರಣ ಮಾಡಲಿಕ್ಕೆ ನೋಡಿದರು. ಈಗ ಕಲಿಯುಗ, ಸೀದಾ ಒಳವಸ್ತ್ರಾಪಹರಣ.

ರೂಪಾ ವೈನಿ ಕೊಟ್ಟ ಭೀಕರ ಆಘಾತದಿಂದ ಕಾರಕೂನ ಹ್ಯಾಂಗೋ ಸುಧಾರಿಕೊಂಡು ಈ ಸಲ ಚೀಪ್ಯಾನ ಚೊಣ್ಣಗಳನ್ನೇ  ಕಳೆದ. ಅಂದ್ರ ಬಿಲ್ಲಿಂದ ಕಳೆದ ಅಂತ. ಯಾರ ಚಡ್ಡಿ ಕಳಿಯುವ ಅಥವಾ ಕೂಡುವ ಸುದ್ದಿಗೂ ಹೋಗಲಿಲ್ಲ. ಹೊಸಾ ಬಿಲ್ ಮಾಡಿ ಕೊಟ್ಟ. ಮೂರನೇ ಬಿಲ್ಲಿಗೆ ಮುಕ್ತಾಯ. ರೂಪಾ ವೈನಿ ಮತ್ತ ಚೌಕಾಶಿ ಮಾಡಿದರು. ಅವರ ಕಾಟ ತಡಿಲಾಗದೇ, ಈ ಹುಚ್ಚ ಹೆಂಗಸು ಹೋದ್ರ ಸಾಕು ಅಂತ ಹೇಳಿ ಮತ್ತೊಂದಿಷ್ಟು ಡಿಸ್ಕೌಂಟ್ ಸಹಿತ ಕೊಟ್ಟಾ. ರೂಪಾ ವೈನಿ ಬೈಕೊತ್ತನೇ ಬಿಲ್ ಚುಕ್ತಾ ಮಾಡಿದರು.

ಹೊರಗ ಬರೋವಾಗ ಕೇಳಿದೆ, 'ಲೇ! ಚೀಪ್ಯಾ, ಮಂಗ್ಯಾನ ಟೊಪ್ಪಿಗಿ ರೊಕ್ಕಾ ಆಮ್ಯಾಲೆ ಕೊಡ್ತೀನಿ. ಓಕೆ?'. ಆವಾ ಏನೋ ಗಿಫ್ಟ್ ಅಂದಿದ್ದಾ. ಆದರೂ ಕೇಳಬೇಕಲ್ಲ, at least for formality. ಮುಂದ ಕೊಡೋದು ಬಿಡೋದು ಬ್ಯಾರೆ ಮಾತು. ಹೇಳಿ ಕೇಳಿ ನಾವು ಹೊಯ್ಸಳ ವಂಶಸ್ಥ ಬಿಟ್ಟಿದೇವನ ವಂಶಜರು.

'ಏ! ಸುಮ್ಮಿರೋ ಮಾರಾಯ. ಮಂಕಿ ಕ್ಯಾಪ್ ಫ್ರೀ ಸ್ಕೀಮ್ ಇತ್ತು. ಅದರಾಗ ಫ್ರೀ ಬಂತು. ಅದಕ್ಕೇ ನಿನ್ನ ಜುಲ್ಮೀ ಮಾಡಿ ಕರ್ಕೊಂಡು ಹೋಗಿದ್ದೆ,' ಅಂದು ಬಿಟ್ಟ ಚೀಪ್ಯಾ! ಭಾರಿ ಶಾಣ್ಯಾ ಸೂಳಿಮಗ.

moral of the story: ನೀವು ಕಳೆಯೋವಾಗ ಹ್ಯಾಂಗ ಕಳೆದರೂ, ಕಳೀರಿ ಅಂತ ಮತ್ತೊಬ್ಬರಿಗೆ ಹೇಳೋವಾಗ ಭಾಳ careful ಆಗಿ ಏನು ಕಳಿಬೇಕು ಅಂತ ಕ್ಲಿಯರ್ ಆಗಿ ಹೇಳಬೇಕು. ಇಲ್ಲಂದ್ರ ದೊಡ್ಡ misunderstanding ಆಗೋ ಚಾನ್ಸ್ ಭಾಳ ಇರ್ತಾವ.

* ಧಾರವಾಡ ಭಾಷೆಯಲ್ಲಿ ಕಳೆಯೋದು / ಕಳಿಯೋದು ಅಂದ್ರೆ ಬಿಚ್ಚೋದು ಅಂತ ಸಹಿತ ಅರ್ಥ ಇದೆ.

ಬರ್ಮುಡಾ ಚೊಣ್ಣಾ. ಚಡ್ಡಿ ಅಲ್ಲ ಮತ್ತ!

5 comments:

Abhyarthi Gurugolla said...

Ha! Ha!! Very good!!!

Sounds like Chonnmaya mission hankering after donations like some mismanaged private schools!!!!

jayakeerthi.m said...

awesome blog loved it :)

Shree said...

Hilarious!
Could not stop myself laughing out loud!

Mahesh Hegade said...

Thank you very much, Jayakeerthi.m

Mahesh Hegade said...

Thank you very much, Shree!