ಕ್ಯೂಬಾದಲ್ಲಿ ಹೊಲಗೇರಿ ಎದ್ದು ಹೋಗಿತ್ತು. ಫೀಡೆಲ್ ಕಾಸ್ಟ್ರೋ ಎಂಬ ಕಮ್ಯುನಿಸ್ಟ್ ಕ್ರಾಂತಿಕಾರಿ ಬತಿಸ್ತಾ ಎಂಬ ಸರ್ವಾಧಿಕಾರಿಯನ್ನು ಓಡಿಸಿ ಕಮ್ಯುನಿಸ್ಟ್ ರಾಜ್ಯ ಸ್ಥಾಪಿಸುವದರಲ್ಲಿ ನಿರತನಾಗಿದ್ದ. ಅಮೇರಿಕಾದ ಫ್ಲೋರಿಡಾ ಕಡಲ್ತೀರದಿಂದ ಕೇವಲ 90 ಮೈಲಿ ದೂರದಲ್ಲಿರುವ ಕ್ಯೂಬಾದಲ್ಲಿ ಕಮ್ಯುನಿಸ್ಟ್ ರಾಜ್ಯ?!!!!! ಬಂಡವಾಳಶಾಹಿಗಳಿಗೆ ನುಂಗಲಾರದ ತುತ್ತು.
ಕಾಸ್ಟ್ರೋ ಬರುವ ಮೊದಲು ಕ್ಯೂಬಾ ಅಂದ್ರೆ 'ಪಾಪಗಳ ದ್ವೀಪ'. ತಿನ್ನಬಾರದ್ದು ತಿಂದು, ಕುಡಿಯಬಾರದ್ದು ಕುಡಿದು, ಸೇದಬಾರದ್ದು ಸೇದಿ, ಮಾಡಬಾರದ್ದು ಮಾಡಿ ಬರುವ ಎಲ್ಲ ತರಹದ ಅವಕಾಶ. ಹೇರಳ ಅವಕಾಶ. ಕ್ಯಾಸಿನೋಗಳಿದ್ದವು, ಕ್ಯಾಬರೆಗಳಿದ್ದವು. ಎಲ್ಲಾ ತರಹದ ವಿಕೃತಿಗಳಿಗೆ ಫುಲ್ ಅನುಮತಿ. ಕಾಸ್ ಒಂದು ಇದ್ದರೆ ಸಾಕು. ಮಾಫಿಯಾ ಸಿಕ್ಕಾಪಟ್ಟೆ ದುಡ್ಡು ಹಾಕಿತ್ತು. ಮೊದಲಿನ ಬತಿಸ್ತಾಗೆ ಇಷ್ಟು ಅಂತ ಕಟ್ ಹೋಗುತ್ತಿತ್ತು. ಅವನು ತನ್ನ ಜನರನ್ನು ಹಿಡಿದು ಚಿತ್ರಹಿಂಸೆ ಮಾಡುತ್ತಾ, ಹೆದರಿಸುತ್ತ ಒಂದು ತರಹದ ನರಕ ಸೃಷ್ಟಿ ಮಾಡಿಟ್ಟುಕೊಂಡಿದ್ದ. ಫ್ಲೋರಿಡಾದಿಂದ ಕೆಲವೇ ನಿಮಿಷಗಳ ವಿಮಾನ ಪಯಣ. ಇಲ್ಲಾ 1-2 ಘಂಟೆಗಳ ಬೋಟ್ ಪಯಣ.
ಕಾಸ್ಟ್ರೋ ಬಂದಿದ್ದು ಹಡಬೆ ದಂಧೆ ಮಾಡುವವರ ಗಂಟಲಲ್ಲಿ ಮುಳ್ಳು ಸಿಕ್ಕಿಕೊಂಡಂಗಾಗಿತ್ತು. ಅವನೇನು ದೊಡ್ಡ ಸುಬಗನಲ್ಲ. ಆದರೂ ಕಮ್ಯುನಿಸ್ಟ್, ಕಾಮ್ರೇಡ್ ಅಂತೆಲ್ಲಾ ಭೊಂಗು ಬಿಟ್ಟು, ಕ್ಯಾಸಿನೋ ಇತ್ಯಾದಿಗಳ ಮೇಲೆ ಒಂದು ತರಹದ ನಿರ್ಬಂಧ ಹೇರಿದ್ದ. ಜಾಸ್ತಿ ಕಾಸು ಕೇಳುತ್ತಿದ್ದ. ಕೆಲವೊಂದು ವಿಕೃತಿಗಳಾದ ಬಾಲ್ಯ ವೇಶ್ಯಾವೃತ್ತಿ, ಲೈವ್ ಸೆಕ್ಸ್ ಶೋ ಇತ್ಯಾದಿಗಳನ್ನು ಬಂದ್ ಮಾಡಿಸಿದ್ದ. ಸುಮಾರು ಏಳಡಿ ಮೇಲೆ ಎತ್ತರವಿದ್ದು ಜಂಬೋ ಎಂದೇ ಫೇಮಸ್ ಆಗಿದ್ದ ನೀಗ್ರೋ ಸೆಕ್ಸ್ ಶೋ ಸ್ಪೆಷಲಿಸ್ಟ ಒಬ್ಬ ಕ್ಯೂಬಾ ಬಿಟ್ಟು ಓಡಿದ್ದ. ಒಟ್ಟಿನಲ್ಲಿ ಮಜಾ ಹೋಗಿತ್ತು. ಎಲ್ಲಾ ಸಪ್ಪೆ ಸಪ್ಪೆ.
ಅದಕ್ಕೇ ಕಾಸ್ಟ್ರೋನನ್ನು ಹ್ಯಾಂಗಾರೂ ಮಾಡಿ ಓಡಿಸಿ ಅಂತ ಅಮೇರಿಕಾದ ಸರಕಾರದ ಮೇಲೆ ಪ್ರೆಶರ್. ಅದೂ ದೊಡ್ಡ ದೊಡ್ಡ ದುಡ್ಡಿರುವ ಕುಳಗಳೇ ಪ್ರೆಶರ್ ಹಾಕತೊಡಗಿದ್ದರು. ಅವರದೇ ಕಾಸಿಂದ ಆರಿಸಿ ಬಂದಿದ್ದ ಜನರು ಇನ್ನೇನು ಮಾಡಿಯಾರು? "ಹ್ಞೂ.....ಸೀಕ್ರೆಟ್ ಆಗಿ ಏನಾರು ಮಾಡಿಕೊಳ್ಳಿ. ಡೈರೆಕ್ಟ್ ಆಗಿ ಅಮೇರಿಕಾ ಕ್ಯೂಬಾ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ಯಾಕೆಂದ್ರೆ, ಕ್ಯೂಬಾ ಮೇಲೆ ಅಮೇರಿಕಾ ದಾಳಿ ಮಾಡಿದರೆ, ಅಲ್ಲಿ ಬರ್ಲಿನ್ ನಲ್ಲಿ ಸೋವಿಯೆಟ್ ಯೂನಿಯನ್ ಪಶ್ಚಿಮ ಜರ್ಮನಿಯ ಮೇಲೆ ದಾಳಿ ಮಾಡುತ್ತದೆ. ಅದೆಲ್ಲ ದೊಡ್ಡ ತಲೆನೋವು. ಹೇಗೂ ಕ್ಯೂಬಾ ಬಿಟ್ಟು ಓಡಿ ಬಂದ ಸಾಕಷ್ಟು ಜನರಿದ್ದಾರೆ. ಅವರದೇ ಒಂದು ಗೆರಿಲ್ಲಾ ಪಡೆ ಮಾಡಿ, ತರಬೇತಿ ಕೊಟ್ಟು, ಕ್ಯೂಬಾದೊಳಗೆ ನುಗ್ಗಿಸಿ. ಅವರೇ ಕ್ಯಾಸ್ಟ್ರೋನನ್ನು ಓಡಿಸಿ, ದ್ವೀಪ ಗೆದ್ದುಕೊಂಡರೆ, ಅಮೇರಿಕಾ ಅವರ ಸರ್ಕಾರವನ್ನು ಮಾನ್ಯ ಮಾಡುತ್ತದೆ," ಅಂದ ಆ ಕಾಲದ ಅಧ್ಯಕ್ಷರಾದ ಐಸೆನ್ಹೊವರ್ ಸಾಹೇಬರು ಮುಗುಮ್ಮಾಗಿ ಹೇಳಿ ತಮ್ಮ ಎರಡನೇ ಅವಧಿ ಮುಗಿದು ಪೆನಶನ್ ಸಿಕ್ಕರೆ ಸಾಕಪ್ಪ ಅಂತ ಕೂತಿದ್ದರು.
ಐಸೆನ್ಹೊವರ್ ಸಾಹೇಬರು ಹೋದರು. ಜಾನ್ ಕೆನಡಿ ಬಂದು ಕೂತರು. ಅವರಿಗೆ ಹಿಂದಿನ ಸರ್ಕಾರದ ಕಾರಸ್ತಾನ ಎಲ್ಲ ಸರಿಯಾಗಿ ಗೊತ್ತಿರಲಿಲ್ಲ. ಕಮ್ಯುನಿಸ್ಟ ಕಾಸ್ಟ್ರೋ ಹೋದರೆ ಹೋಗಲಿ ಅಂತ ಅವರೂ ಗೆರಿಲ್ಲಾ ಪಿರಿಲ್ಲಾ ಮಾಡಿಕೊಳ್ಳಿ ಅಂತ ಬಿಟ್ಟಿದ್ದರು.
ಈ ಕಡೆ ಕ್ಯೂಬಾ ಬಿಟ್ಟು ಓಡಿ ಬಂದಿದ್ದ ಜನರಿಗೆ ನಿಕಾರಾಗುವಾ ದೇಶದ ರಹಸ್ಯ ಶಿಬಿರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಸುಮಾರು ತರಬೇತಿಯ ನಂತರ 1961 ರ ಆದಿ ಭಾಗದಲ್ಲಿ ಈ ಗೆರಿಲ್ಲಾಗಳನ್ನು ಕ್ಯೂಬಾದೊಳಗೆ ನುಗ್ಗಿಸುವದು ಅಂತ ತೀರ್ಮಾನ ಮಾಡಲಾಯಿತು. ತರಬೇತಿ ಕೊಟ್ಟವರಿಗೆ ಆ ಕಾರ್ಯಾಚರಣೆ ಪೂರ್ತಿ ಯಶಸ್ವಿ ಆಗುವ ಬಗ್ಗೆ ಖಾತ್ರಿ ಇರಲಿಲ್ಲ. ಆದ್ರೆ ಪೂರ್ತಿ ಹದಗೆಟ್ಟು ಹೋದರೆ, ಕೆನಡಿ ಅವರ ಮೇಲೆ ಒತ್ತಡ ತಂದು, ಅಮೇರಿಕಾ ಡೈರೆಕ್ಟ್ ಆಗಿ ಯುದ್ಧದೊಳಗೆ ತೊಡಗುವಂತೆ ಮಾಡಿದರಾಯಿತು ಎಂಬ ಕುತಂತ್ರಿ ಬುದ್ಧಿ ಕೆಲ ಸರ್ಕಾರಿ ಪಟ್ಟಭದ್ರ ಹಿತಾಸಕ್ತಿಗಳದು.
ಕ್ಯೂಬಾದ ಗೆರಿಲ್ಲಾಗಳನ್ನು ಅಮೇರಿಕಾ ನುಗ್ಗಿಸಿದ್ದು 'ಹಂದಿ ಕೊಲ್ಲಿ' (bay of pigs) ಎಂಬ ಜಾಗದಲ್ಲಿ. ರಾಜಧಾನಿ ಹವಾನಾ ಸಮೀಪ ಹೆಚ್ಚಿನ ಸೈನಿಕ ಬಲ ಇರುತ್ತದೆ. ಹಾಗಾಗಿ ಸ್ವಲ್ಪ ನಿರ್ಜನ ಪ್ರದೇಶ ದಾಳಿಗೆ ಬೆಟರ್. ಅಲ್ಲಿ ಹೋಗಿ ಲ್ಯಾಂಡ್ ಆದ ಮೇಲೆ ಒಂದೊಂದೇ ಜಾಗ ವಶಪಡಿಸಿಕೊಳ್ಳುತ್ತ ಹೋಗುವದು ಗೆರಿಲ್ಲಾಗಳ ಪ್ಲಾನ್.
ಕ್ಯಾಸ್ಟ್ರೋ ಏನು ಕಡಿಮೆ ಪ್ರಚಂಡನೇ? ಅವನ ಗೂಢಚಾರರು ಫ್ಲೋರಿಡಾದ ತುಂಬೆಲ್ಲ ಹರಡಿದ್ದರು. ಗೆರಿಲ್ಲಾಗಳಲ್ಲೇ ಹಲವಾರು ಒಡಕು ಬಾಯಿಯ ಜನರಿದ್ದರು. ಅವರಲ್ಲೇ ಕಚ್ಚಾಟ. ಕುಡಿದ ಮತ್ತಿನಲ್ಲಿ ಸಣ್ಣ ಪ್ರಮಾಣದ ಹಿಂಟ್ಸ ಕೊಟ್ಟಿದ್ದರು. ಸೋವಿಯೆಟ್ ಯೂನಿಯನ್ ಸಹ ಮಾಹಿತಿ ಸಂಗ್ರಹಣೆ ಮಾಡಿ ಕೊಟ್ಟಿತ್ತು. ಕಾಸ್ಟ್ರೋ ಮತ್ತು ಅವನ ಪಡೆಗಳು ಸನ್ನದ್ಧವಾಗಿ ಕೂತಿದ್ದರು. ಬಕರಾಗಳು ಬಂದು ಬಲೆಗೆ ಬೀಳಲಿ ಅಂತ.
ಗೆರಿಲ್ಲಾಗಳು ಬಂದು ಹಂದಿ ಕೊಲ್ಲಿಯ ಬಳಿ ಇಳಿದರು. ಕ್ಯೂಬಾದ ಚಿಕ್ಕ ವಾಯುಪಡೆ ಅವರನ್ನು ಇಲ್ಲದಂತೆ ಅಟ್ಟಿಸಿಕೊಂಡು ಓಡಾಡಿಸಿತು. ಮೇಲಿಂದ ಗನ್ ಶಿಪ್ಸ್ ಗುಂಡಿನ ಮಳೆಗರೆಯುತ್ತಾ ಗೆರಿಲ್ಲಾಗಳನ್ನು ಓಡಿಸುತ್ತಿದ್ದರೆ, ಗೆರಿಲ್ಲಾಗಳು ಓಡುತ್ತಾ, ಕ್ಯಾಸ್ಟ್ರೋ ಸರಿಯಾಗಿ ನಿಲ್ಲಿಸಿದ್ದ ಸ್ನೈಪರ್ ಗಳ ಗುಂಡು ತಿಂದು ನೆಲಕ್ಕೆ ಉರಳುತ್ತಿದ್ದರು. ಇತ್ತ ಕಡೆ ಅಮೇರಿಕಾದಲ್ಲಿ ಕಾರ್ಯಾಚರಣೆ ಕುಲಗೆಟ್ಟು ಹೋಗಿದ್ದರ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಪ್ರೆಸಿಡೆಂಟ್ ಕೆನಡಿ ಅವರ ಮೇಲೆ ಪ್ರೆಶರ್ ಹಾಕುವ ಕಾರ್ಯ ಆರಂಭವಾಯಿತು. ಆದ್ರೆ ಕೆನಡಿ ಅವರಿಗೆ ಅಮೇರಿಕಾದ ವಾಯುಪಡೆ ಕಳಿಸಿ ಮೂರನೇ ಮಹಾಯುದ್ಧ ಶುರು ಮಾಡುವ ದರ್ದು ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮನ್ನು ಕತ್ತಲೆಯಲ್ಲಿಟ್ಟು, ಈಗ ಒಮ್ಮೆಲೇ ವಾಯುಪಡೆ ಡಿಮಾಂಡ್ ಮಾಡುತ್ತಿದ್ದ CIA ಅಧಿಕಾರಿಗಳ ಮೇಲೆ ಸಿಕ್ಕಾಪಟ್ಟೆ ಎಗರಾಡಿ ಬಿಟ್ಟರು ಕೆನಡಿ. ಸುಮಾರು ಹಿರಿ ತಲೆಗಳು ಮನೆಗೆ ಹೋದವು.
ಕಾಸ್ಟ್ರೋನ ಪಡೆಗಳು ಗೆರಿಲ್ಲಾಗಳನ್ನು ಹಿಡಿದು ಬಡಿಯುತ್ತಿದ್ದರೆ, ತರಗೆಲೆಗಳಂತೆ ನೆಲಕ್ಕೆ ಬೀಳುತ್ತಿದ್ದರು ಗೆರಿಲ್ಲಾಗಳು. ಅಮೇರಿಕಾದಿಂದ ಸಹಾಯ ಬರುವದಿಲ್ಲ ಎಂದು ಗೊತ್ತಾದಂತೆ ಸುಮಾರು ಜನ ಶರಣಾಗತೊಡಗಿದರು. ಕೆಲವರು ಮಾತ್ರ ಫೈಟ್ ಟು ಫಿನಿಶ್ ಎಂಬಂತೆ ಹೋರಾಡುತ್ತಲೇ ಇದ್ದರು.
ಅಂತವರಲ್ಲಿ ಒಬ್ಬವ ಹ್ಯಾರಿ ವಿಲಿಯಮ್ಸ್. ಮೂಲತ ಅವನು ಒಬ್ಬ ಚನ್ನಾಗಿ ಕಲಿತ ಮೈನಿಂಗ್ ಇಂಜಿನಿಯರ್. ಕ್ಯೂಬಾದಲ್ಲಿ ಹಾಯಾಗಿದ್ದ. ಕಾಸ್ಟ್ರೋ ಅವನಿಗೆ ಗೊತ್ತು ಸಹ. ಆದರೂ ಕ್ಯಾಸ್ಟ್ರೋ ಒಳ್ಳೆ ದೋಸ್ತನೇ ಹೊರತು ಒಳ್ಳೆ ಆಡಳಿತಗಾರನಲ್ಲ ಎಂದು ಹ್ಯಾರಿ ವಿಲಿಯಮ್ಸ್ ನಂಬಿದ್ದ. ಅದಕ್ಕೇ ಕ್ಯೂಬಾ ಬಿಟ್ಟು ಓಡಿ ಬಂದು ಫ್ಲೋರಿಡಾದಲ್ಲಿ ಸೆಟಲ್ ಆಗಿದ್ದ. ಕ್ಯಾಸ್ಟ್ರೋ ವಿರುದ್ಧದ ಚಟುವಟಿಕೆಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದ.
ಇಂತಹ ಹ್ಯಾರಿ ವಿಲಿಯಮ್ಸ್ ಮಾತ್ರ ಗುಂಡು ಹಾರಿಸುತ್ತಲೇ ಇದ್ದ. ಅವನಿಗೇ ಸುಮಾರು ಗುಂಡುಗಳು ಬಿದ್ದಿದ್ದವು. ರಕ್ತ ಹರಿಯುತ್ತಿತ್ತು. ನಿಧಾನವಾಗಿ ಪ್ರಜ್ಞೆ ತಪ್ಪುತ್ತಿತ್ತು. ಪೂರ್ತಿ ಪ್ರಜ್ಞೆ ತಪ್ಪುವ ಮೊದಲು ಮಾಡಿದ ಆಖರೀ ಕೆಲಸವೆಂದರೆ ತನ್ನ ಪಿಸ್ತೂಲಿನಲ್ಲಿ ಗುಂಡುಗಳು ಇವೆಯೋ ಇಲ್ಲವೋ ಅಂತ ನೋಡಿಕೊಂಡಿದ್ದು. ಇದೆ ಅಂತ ಖಚಿತ ಮಾಡಿಕೊಂಡೇ ಪಿಸ್ತೂಲ್ ಸೊಂಟದಲ್ಲಿ ಸಿಗಿಸಿಕೊಂಡ ಹ್ಯಾರಿ ವಿಲಿಯಮ್ಸ್ ಪ್ರಜ್ಞೆ ತಪ್ಪಿ ಬಿದ್ದ.
ಎಷ್ಟೇ ಅಂದ್ರೂ ಯುದ್ಧ ಕೈದಿಗಳು. ಸ್ವಲ್ಪಾದರೂ ಮಾನವೀಯತೆ ತೋರಿಸಲೇ ಬೇಕು. ಅದಕ್ಕೇ ಗಾಯಾಳುಗಳನ್ನು ಹವಾನಾದ ಆಸ್ಪತ್ರೆಗೆ ಸಾಗಿಸಲಾಯಿತು. ಅಂತವರಲ್ಲಿ ಹ್ಯಾರಿ ವಿಲಿಯಮ್ಸ್ ಕೂಡ ಇದ್ದ.
ಸ್ವಲ್ಪ ದಿವಸದ ನಂತರ ಹ್ಯಾರಿ ವಿಲಿಯಮ್ಸ್ ಗೆ ಪ್ರಜ್ಞೆ ಬಂತು. ಬಾಡಿ ಪೂರ್ತಿ ಲ್ಯಾಪ್ಸ್ ಆಗಿತ್ತು. ಏನೇನೋ ಮುರಿದು, ಏನೇನೋ ಹರಿದು, ಒಟ್ಟಿನಲ್ಲಿ ಎಕ್ಕುಟ್ಟಿ ಹೋಗಿದ್ದ. ಜೀವಂತ ಶವ ಅಷ್ಟೇ. ಅಂತಾದ್ರಲ್ಲೂ ಹೇಗೋ ಮಾಡಿ ಪಿಸ್ತೂಲ್ ತಡವಿಕೊಂಡ ಹ್ಯಾರಿ ವಿಲಿಯಮ್ಸ್. ಕ್ಯಾಸ್ಟ್ರೋ ಸಿಕ್ಕರೆ ಗುಂಡು ಹಾಕಿಯೇ ಬಿಡಬೇಕು ಅಂತ ಹಲ್ಲು ಕಡಿದ.
ಯಾರ ಅದೃಷ್ಟಕ್ಕೋ ಅಥವಾ ದುರಾದೃಷ್ಟಕ್ಕೋ ಒಂದಿನ ಫೀಡೆಲ್ ಕ್ಯಾಸ್ಟ್ರೋ ಆಸ್ಪತ್ರೆಗೆ ಬಂದೇ ಬಿಟ್ಟ. ಗಾಯಾಳುಗಳಲ್ಲಿ ಅವನ ಹಳೆ ಮಿತ್ರರಿದ್ದರು. ಅವನ ಅನುಚರರ ಬಂಧುಗಳಿದ್ದರು. ಮತ್ತೆ ಗಾಯಾಳುಗಳನ್ನು ಒತ್ತೆಯಿಟ್ಟುಕೊಂಡು ಅಮೇರಿಕಾದಿಂದ ಕಾಸ್ ಎತ್ತುವ ಪ್ಲಾನ್ ಕೂಡ ಇದ್ದಂಗೆ ಇತ್ತು.
ಕ್ಯಾಸ್ಟ್ರೋ ತನ್ನ ಹಸಿರು ಬಣ್ಣದ ಮಿಲಿಟರಿ ಯುನಿಫಾರ್ಮ್ ಧರಿಸಿ, ಬಾಯಲ್ಲಿ ತನ್ನ ಟ್ರೇಡ್ ಮಾರ್ಕ್ ಸಿಗಾರ್ ಕಚ್ಚಿಕೊಂಡು, ಗಡ್ಡ ಕೆರೆಯುತ್ತಾ, ದೊಡ್ಡ ದನಿಯಲ್ಲಿ ಕಮ್ಯೂನಿಸ್ಟ್, ಕಾಮ್ರೇಡ್ ಅದು ಇದು ಅನ್ನುತ್ತ ಬಂದ. ಅವನ ಹಿಂದೆ ಅವನ ಅನುಚರರು.
ಆಸ್ಪತ್ರೆಯಲ್ಲಿದ್ದ ಗಾಯಾಳುಗಳಿಗೆ ಹಲೋ, ಹಾಯ್ ಅನ್ನುತ್ತ ಕೈ ಕುಲುಕುತ್ತ ಬಂದ ಕ್ಯಾಸ್ಟ್ರೋ. ಹ್ಯಾರಿ ವಿಲಿಯಮ್ಸ್ ಮಲಗಿದ್ದ ಹಾಸಿಗೆಯ ಪಕ್ಕ ಬಂದು ಒಂದು ಕ್ಷಣ ಜಾಸ್ತಿಯೇ ನಿಂತ. ಹಳೆ ಕಾಲದ ದೋಸ್ತಿ. ಕಲೆತ ಕಣ್ಣುಗಳು ಏನೇನು ಮಾತಾಡಿಕೊಂಡವೋ?
ಆ ಪರಿ ಗಾಯಗೊಂಡಿದ್ದರೂ ಹ್ಯಾರಿ ವಿಲಿಯಮ್ಸ್ ಕೊತ ಕೊತ ಕುದ್ದುಹೋದ. ಅದೆಲ್ಲಿಂದ ಶಕ್ತಿ ತಂದನೋ? ಅಡಗಿಸಿ ಇಟ್ಟುಕೊಂಡಿದ್ದ ಪಿಸ್ತೂಲ್ ತೆಗೆದವನೇ, ಟ್ರಿಗರ್ ಒತ್ತೇ ಬಿಟ್ಟ!!!
ರಿವಾಲ್ವರ್ ಚೇಂಬರ್ ಕ್ಲಿಕ್, ಕ್ಲಿಕ್, ಕ್ಲಿಕ್ ಅಂದಿತೇ ವಿನಹಾ ಗೋಲಿ ಹಾರಲೇ ಇಲ್ಲ. ಕೇವಲ ಎರಡು ಮೂರು ಅಡಿ ದೂರದಲ್ಲಿ ನಿಂತಿದ್ದ ಕ್ಯಾಸ್ಟ್ರೋ ಕಣ್ಣಲ್ಲಿ ಭೀತಿಯೋ, ಆಶ್ಚರ್ಯವೋ, ಮತ್ತೇನು ಭಾವವೋ ಗೊತ್ತಿಲ್ಲ. ತಕ್ಷಣ ಕ್ಯಾಸ್ಟ್ರೋನ ಅಂಗರಕ್ಷಕರು ಪಿಸ್ತೂಲ್ ವಶಪಡಿಸಿಕೊಂಡಿದ್ದರು. ಹ್ಯಾರಿ ವಿಲಿಯಮ್ಸ್ ಮಾತ್ರ ಹತಾಶೆಯಿಂದ ಹಾಸಿಗೆ ಗುದ್ದುತ್ತಾ, ಪರಿತಪಿಸುತ್ತಾ ಮಗ್ಗುಲು ಬದಲಾಯಿಸಿದ. ತಾನೇ ಗುಂಡು ತುಂಬಿಸಿ ರೆಡಿ ಇಟ್ಟಿದ್ದ ಪಿಸ್ತೂಲ್ ಕೈಕೊಟ್ಟಿತಲ್ಲ. ಛೆ!!ಛೆ!! ಅವನ ವಿಷಾದಕ್ಕೆ ಎಲ್ಲೆ ಇರಲಿಲ್ಲ.
ಆಗಿದ್ದು ಇಷ್ಟೇ. ಆ ಪರಿ ಗಾಯಗೊಂಡಿದ್ದ ಹ್ಯಾರಿ ವಿಲಿಯಮ್ಸ್ ಕಡೆ ಪೂರ್ತಿ ತುಂಬಿದ ಪಿಸ್ತೂಲ್ ನೋಡಿದ ಅವನ ಗೆಳೆಯನೊಬ್ಬ ಗುಂಡು ತೆಗೆದು ಖಾಲಿ ಪಿಸ್ತೂಲ್ ಇಟ್ಟು ಬಿಟ್ಟಿದ್ದ. ಆ ಗೆಳಯನಿಗೆ ಒಂದೇ ಅನುಮಾನ- ಈ ಪರಿ ಗಾಯಗೊಂಡಿರುವ ಹ್ಯಾರಿ ವಿಲಿಯಮ್ಸ್ ಆತ್ಮಹತ್ಯೆ ಮಾಡಿಕೊಳ್ಳಲು ಎಂದೇ ತುಂಬಿದ ಪಿಸ್ತೂಲ್ ಇಟ್ಟುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದನೋ ಏನೋ? ಅಷ್ಟರಲ್ಲಿ ಪ್ರಜ್ಞೆ ತಪ್ಪಿಹೋಗಿದೆ. ಇನ್ನು ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಕ್ಷಣ ಇದೇ ಪಿಸ್ತೂಲಿನಿಂದ ಕೊಂದುಕೊಂಡಾನು - ಅಂತ ಸ್ನೇಹಿತನ ಮೇಲಿನ ಕಾಳಜಿಯಿಂದ ಗುಂಡು ತೆಗೆದು ಇಟ್ಟು ಬಿಟ್ಟಿದ್ದ ಆ ಗೆಳೆಯ!!!!
ಒಟ್ಟಿನಲ್ಲಿ ಕ್ಯಾಸ್ಟ್ರೋ ಬಚಾವಾಗಿದ್ದ. ಕ್ಯಾಸ್ಟ್ರೋ ಮೇಲೆ ಆದ ಹತ್ಯಾ ಪ್ರಯತ್ನಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಇದೂ ಒಂದು ಸೇರಿ ಹೋಯಿತು. ಆದ್ರೆ ಇದಕ್ಕೆ ಬೇರೆಯದೇ ಒಂದು ಮಹತ್ವ ಬಂದು ಬಿಟ್ಟಿತು.
ಮುಂದೆ ಎರಡೇ ವರ್ಷಗಳಲ್ಲಿ ಪ್ರೆಸಿಡೆಂಟ್ ಜಾನ್ ಕೆನಡಿ ಗುಂಡು ತಿಂದು ಸತ್ತು ಹೋದರು. ಈಗ ಹೊರಬರುತ್ತಿರುವ ಮಾಹಿತಿಗಳ ಪ್ರಕಾರ - ಕ್ಯೂಬಾದ ಗೆರಿಲ್ಲಾಗಳೇ ಅವರು ಹಂದಿ ಕೊಲ್ಲಿಯಲ್ಲಿ ಸಹಾಯ ಮಾಡಲಿಲ್ಲ ಎಂಬ ಸಿಟ್ಟಿನಿಂದ ಅವರನ್ನು ಶೂಟ್ ಮಾಡಿ ಬಿಟ್ಟರು - ಅಂತ. ಕೆನಡಿಗೆ ಗುಂಡು ಅವರೇ ಹೊಡೆದಿದ್ದರೂ ಷಡ್ಯಂತ್ರ ಮಾತ್ರ ದೊಡ್ಡದಿತ್ತು. ಹಿಂದಿನ ಸೂತ್ರಗಳನ್ನು ಎಳೆದವರು ಬೇರೆಯವರೇ ಇದ್ದರು.
ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರೋ? ಅಂತ ಅಮೇರಿಕಾದ ಅಧ್ಯಕ್ಷರುಗಳನ್ನು ಹಂಗಿಸುತ್ತಾ ಕ್ಯಾಸ್ಟ್ರೋ ಇಂದಿಗೂ ಆರಾಮ ಇದ್ದಾನೆ.
** ಬರೆದಿರುವ ಮಾಹಿತಿ ಹಲವಾರು ಪುಸ್ತಕಗಳಿಂದ ಆರಿಸಿ ಬರೆದಿದ್ದು. Lamar Waldron ಎಂಬವರು ಕ್ಯೂಬಾ, ಕೆನಡಿ ಹತ್ಯೆ, ನಿಕ್ಸನ್ ರಾಜಿನಾಮೆ ಕುರಿತಂತೆ ಹಲವಾರು ಒಳ್ಳೆಯ ಪುಸ್ತಕ ಬರೆದಿದ್ದಾರೆ. ಅವುಗಳಲ್ಲಿ ಸಿಕ್ಕ ಮಾಹಿತಿ.
** ಹಡಾಗತಿ = fiasco
** ಹಡಾಗತಿ = fiasco