ಅದೊಂದು ದಿನ ಕಾವಲು ಕೆಲಸದ ಪಾಳಿ ಮುಗಿಸಿ ವರಾಂಡಕ್ಕೆ ಬಂದು ಕೂತಿದ್ದೆ. 1987 ರ ಖತರ್ನಾಕ್ ದಿನಗಳು ಅವು. ಭಾರತದ ಶಾಂತಿ ಪಡೆ ಜೊತೆ ನಮ್ಮ LTTE ಗೆರಿಲ್ಲಾ ಯುದ್ಧ ನೆಡದಿತ್ತು. ನಮ್ಮ ಹುಡುಗರು ಒಬ್ಬನನ್ನ ಹಿಡಿದು ತದಕುತಿದ್ದರು. ವಿಪರೀತ ಹೊಡೆಯುತ್ತಿದ್ದರು. ಯಾರಂತ ಕಣ್ಣಗಲಿಸಿ ನೋಡಿದೆ. ಅರೇ!!!ಇವನು ನಮ್ಮ ವೆಳ್ಳಯಿ ಅಲ್ಲವಾ? ಇವನೇನು ಮಾಡಿದ? ಆ ಪರಿ ಹೊಡೆಯುತ್ತಿದ್ದಾರೆ? ಕೊಂದೇ ಬಿಡುವ ಪ್ಲಾನ್ ಇದ್ದಾಗೆ ಇದೆ. ಛೆ!!!!!
ಪಕ್ಕದಲ್ಲಿ ಇದ್ದವರು ಯಾರೋ ಹೇಳಿದರು, ಈ ವೆಳ್ಳಯಿ ದ್ರೋಹಿ. ಕದ್ದು ಮುಚ್ಚಿ ನಮ್ಮ ಮಾಹಿತಿ ಇಂಡಿಯಾದ ಶಾಂತಿ ಪಡೆಗೆ ಮುಟ್ಟಿಸುತ್ತಿದ್ದಾನೆ. ಇವನಿಂದಾಗಿಯೇ ನಮ್ಮ ಮೇಲೆ ಪದೇ ಪದೇ ದಾಳಿ ಆಗುತ್ತಿರುವದು ಮತ್ತು ನಮ್ಮ ಕಾಮ್ರೇಡಗಳು ಸಾಯುತ್ತಿರುವದು. ಮೊನ್ನೆ ನಿಜಾಮ್ ಸೆರೆ ಸಿಕ್ಕಿದ್ದು ಸಹಿತ ಇವನಿಂದೇ ಅಂತೆ. ಅಲ್ಲಿ ಪಟ್ಟಣದ ಮಧ್ಯೆ ಚೌಕ್ ನಲ್ಲಿ, ನಿಜಾಮನ ತಲೆ ಬೋಳಿಸಿ, ಬೆತ್ತಲೆ ಮಾಡಿ, ಚಿತ್ರಹಿಂಸೆ ಕೊಟ್ಟು, ಕಂಭಕ್ಕೆ ಕಟ್ಟಿ ಹಾಕಿದ್ದಾರಂತೆ. ಅಲ್ಲಿ ಮಾರುವೇಷದಲ್ಲಿ ಹೋಗಿದ್ದ ನಮ್ಮ ಕಡೆಯವನಿಗೆ ನಿಜಾಮನೇ ನರಳುತ್ತ ಕೋಡೆಡ್ ಮೆಸೇಜ್ ಕೊಟ್ಟನಂತೆ. ಯಾರೋ ನಮಕ್ ಹರಾಮ್ ಇದ್ದಾನೆ. ಅವನನ್ನು ಬಿಡಬೇಡಿ, ಅಂತ. ಅದಕ್ಕೇ ಚಚ್ಚುತ್ತಿದ್ದಾರೆ.
ಹಾಗಾ? ಏನು ಪ್ರೂಫ್ ಇದೆ ಇವನೇ ಗದ್ದಾರ್ ಅನ್ನೋಕೆ ?, ಅಂತ ಕೇಳಿದೆ.
ಗೊತ್ತಿಲ್ಲ ಅನ್ನುವಂತೆ ಎದ್ದು ಹೋದಳು ಗೆಳತಿ.
ಈ ಕಡೆ ವೆಳ್ಳಯಿಯನ್ನು ಸಿಕ್ಕಾಪಟ್ಟೆ ಹೊಡೆದಿದ್ದ ನಮ್ಮ ಹುಡುಗರು ಮುಂದಿನ ಕೆಲಸಕ್ಕೆ ರೆಡಿ ಆದರು. ಒಬ್ಬ ಗುದ್ದಲಿ, ಸಲಿಕೆ ತಂದು ಗುಂಡಿ ತೋಡತೊಡಗಿದ. ಮತ್ಯಾರೋ ಹೇಳಿದರು, ಜೀವಂತ ಹೂತು ಬಿಡುವ ಪ್ಲಾನ್ ಇದೆ ಅಂತ. ನಮಕ್ ಹರಾಮಿ, ಗದ್ದಾರಿ ಮಾಡಿದವರಿಗೆ ಅದೇ ಶಿಕ್ಷೆ.
ಮುಂದೆ ಆಗುವದನ್ನು ಊಹಿಸ್ಕೊಂಡೆ. ಅಲ್ಲಿ ಇರಲಾಗಲಿಲ್ಲ. ಒಳಗೆ ಬಂದೆ. ಎಷ್ಟೋ ಹೊತ್ತಿನವರಗೆ ಅವರ ಚಿತ್ರಹಿಂಸೆ, ವೆಳ್ಳಯಿಯ ನರಳಾಟ ಕೇಳುತ್ತಲೇ ಇತ್ತು. ಸುಸ್ತಾದ ದೇಹಕ್ಕೆ ಯಾವಾಗ ನಿದ್ದೆ ಬಂತೋ ಗೊತ್ತಿಲ್ಲ.
ಮರುದಿನ ಕೇಳಿದೆ. ವೆಳ್ಳಯಿ ಉಳಿದಿರಬಹುದಾ ಎಂಬ ಚಿಕ್ಕ ಆಸೆ ಇತ್ತು. ಚಾನ್ಸೇ ಇರಲಿಲ್ಲ. ವೆಳ್ಳಯಿ ಮೇಲೆ ಹೋದ ಅಂದ ಒಬ್ಬ. ಅಯ್ಯೋ ಜೀವಂತ ಹೂತು ಬಿಟ್ಟಿರಾ? ಅಂತ ಕಿರುಚಿ ಕೇಳಿದೆ. ಇಲ್ಲ. ಕತ್ತಿನ ತನಕ ಹುಗಿದಿವಿ. ನಂತರ ಸೈನಡ್ ಕಾಪ್ಸೂಲಿನಿಂದ ಸೈನಡ್ ತೆಗೆದು, ಅದನ್ನ ಬಿಸಿ ಮಾಡಿ, ಸೈನಡ್ ಹೊಗೆ ಕುಡಿಸಿದಿವಿ ನನ್ನ ಮಗಂಗೆ. ಉಸಿರಾಡಲು ಹ್ಯಾಂಗೆ ಚಡಪಡಿಸುತ್ತಿದ್ದ ನೋಡಬೇಕಿತ್ತು. ಗದ್ದಾರಿ ಮಾಡಿದ್ದ. ನಂತರ ಸಾಕು ಅನ್ನಿಸಿತು. ಜಸ್ಟಿನ್ ಕೊಡಲಿಂದ ತಲೆಗೆ ಎರಡು ಕೊಟ್ಟ. ಬುರುಡೆ ಬಿಚ್ಚಿತು. ಸತ್ತ.
ಹಿಂದಿನಿಂದ ಯಾರೋ ಗಹಗಹಿಸಿ ನಕ್ಕರು. ತಿರುಗಿ ನೋಡಿದೆ. ಜಸ್ಟಿನ್ ನಿಂತಿದ್ದ.
ಅಯ್ಯೋ ಬಿಡಕ್ಕ. ಆ ಗದ್ದಾರ್ ಸತ್ತರೆ ಯಾಕಿಷ್ಟು ಟೆನ್ಷನ್ ನಿನಗೆ? ಅವನು TELO ಅಂದ್ರೆ ನಮ್ಮ ಒಂದು ಕಾಲದ ದುಶ್ಮನ್ ಗುಂಪಿನವನಾಗಿದ್ದ. ಈಗ ನಾಕು ವರ್ಷದ ಹಿಂದೆ ಸಾಮೂಹಿಕವಾಗಿ TELO ಜನರನ್ನು ಕೊಂದಾಗಲೇ ಇವನು ಹೋಗಬೇಕಾಗಿತ್ತು. ಏನೋ ನಸೀಬ್ ಸರಿ ಇತ್ತು. ಮಾಫಿ ಸಿಕ್ಕಿ ಟೈಗರ್ ಆಗಿದ್ದ. ಈಗ ಗದ್ದಾರಿ ಮಾಡಿದ್ದ. ಅದಕ್ಕೇ ಕೊಂದ್ವಿ. ತಿಳೀತಾ? - ಅಂತ ಕೂಲಾಗಿ ಹೇಳಿದ ಜಸ್ಟಿನ್.
ಅವನೇ ಗದ್ದಾರ್ ಅನ್ನೋಕೆ ಪ್ರೂಫ್ ಏನು ಜಸ್ಟಿನ್? ನಿಜಾಮ್ ಅಣ್ಣಾ ಕೂಡ ಯಾರೋ ಗದ್ದಾರ್ ಇದ್ದಾನೆ ಅಂತ ಹೇಳಿದ್ದಾರೆಯೇ ಹೊರತು ಈ ವೆಳ್ಳಯಿಯೇ ಅಂತ ಹೇಳಿಲ್ಲವಲ್ಲ. ಅಂತದ್ರಲ್ಲಿ ಎಂತಹ ಪಾಪ ಮಾಡಿ ಬಿಟ್ರೋ ಪಾಪಿಗಳಿರಾ?, ಅಂತ ನಾನು ಸಿಡಿಮಿಡಿಗೊಂಡೆ.
ಅಯ್ಯೋ.....ಹೋಗಕ್ಕ.....ಒಂದು ಕಾಲದ ದುಶ್ಮನ್ ಇವತ್ತಿನ ಗದ್ದಾರ್. ಮತ್ತೆ ಪ್ರೂಫ್ ಅಂತೆ ಪ್ರೂಫ್. ಬೇರೆ ಕೆಲಸವಿಲ್ಲವ? ಹೋಗೋಗ್, ಅಂತ ಅಂದ ಹುಡುಗರು ಹೋಗಿ ಬಿಟ್ಟರು.
ನನಗೆ ಅವತ್ತೇ ಅನ್ನಿಸಿತ್ತು ಈ ತರದ ಸಂಶಯ, ದ್ವೇಷ, ಕ್ರೌರ್ಯ ತುಂಬಿದ ಸಂಘಟನೆಯಿಂದ ಎಂದೂ ಸ್ವಾತಂತ್ರ ಇತ್ಯಾದಿ ಸಿಗುವದಿಲ್ಲ ಅಂತ.
ಅಲ್ಲ....ಆ ವೆಳ್ಳಯಿ ಕೂಡ ನಮ್ಮವನೇ. ತಮಿಳ. ಯಾವದೋ ಕಾಲದಲ್ಲಿ ಯಾವದೋ ಬೇರೆ ಸಂಘಟನೆಯಲ್ಲಿ ಇದ್ದನಂತೆ. ಅದು ಅವನ ತಪ್ಪಾ? ಇಲ್ಲಿ ಜಾಫ್ನಾದಲ್ಲಿ LTTE ಜೋರು. ಪಾಪ ವೆಳ್ಳಯಿ ಮನ್ನಾರ್ ಕಡೆ ಹುಡುಗ. ಅಲ್ಲಿ TELO ಜೋರಾಗಿತ್ತು. ಅಲ್ಲ....ಅವನ ವಯಸ್ಸೇನು? ಭಾಳ ಅಂದ್ರೆ 16-17. ನನ್ನ ವಯಸ್ಸೇ. ಅವನು TELO ದಲ್ಲಿ ಇದ್ದಾಗ 10-12 ವರ್ಷದ ಬಾಲಕ. ಅವನಿಗೇನು ಗೊತ್ತು ದೊಡ್ಡವರ ದ್ವೇಷ, ಪೊಲಿಟಿಕ್ಸ್, ಪವರ್ ಗೆ ಹಪಾಹಪಿ. ಈ ಟೈಗರ್ ಗಳು ಎಂದೂ ಉದ್ಧಾರವಾಗೋದಿಲ್ಲ. ಎಕ್ಕುಟ್ಟಿ ಹೋಗುತ್ತಾರೆ.
ಹೀಗಂತ ಬರೆಯುತ್ತ ಹೋಗುವವರು ನಿರೋಮಿ ಡೇಸೌಜಾ. ಶ್ರೀಲಂಕಾದ ಮಹಿಳೆ. ಈಗ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದಾರೆ. ಒಂದು ಕಾಲದಲ್ಲಿ LTTE ಲೇಡೀಸ್ ಪಡೆಯಲ್ಲಿ ಕೆಲಸ ಮಾಡಿದವರು. ಸಾಕಷ್ಟು ಗೆರಿಲ್ಲಾ ಯುದ್ಧ ಮಾಡಿದ್ದಾರೆ. ಆಲ್ಮೋಸ್ಟ್ 25 ವರ್ಷಗಳ ನಂತರ ತಮ್ಮ ಆ ಕಾಲದ ಕಥೆ ಬರೆದು ಕೊಂಡಿದ್ದಾರೆ.
ತುಂಬ ಮನ ಕಲಕುವ ಪುಸ್ತಕ.
ತುಂಬ ಒಳ್ಳೆ ಮನೆತನದ ತಮಿಳ ಹೆಣ್ಣುಮಗಳೊಬ್ಬಳು LTTE ಸುಪ್ರಿಮೋ ಪ್ರಭಾಕರನ್ ಅವರ ಆದರ್ಶದಿಂದ ಪ್ರಭಾವಿತರಾಗಿ, LTTE ಉಗ್ರಗಾಮಿಯಾಗಿ, ಹಲವಾರು ಸಲ ಸಾವಿನ ಹತ್ತಿರಕ್ಕೆ ಬಂದು, ಪಡಬಾರದ ಕಷ್ಟ ಪಟ್ಟು, ನಂತರ ಮೇಲೆ ಹೇಳಿದ ವೆಳ್ಳಯಿ ಹತ್ಯೆಯಂತಹ ಹಲವಾರು ಅರ್ಥಹೀನ ಹತ್ಯೆಗಳನ್ನು ನೋಡಿ ಒಂದು ತರಹದ ಭ್ರಮನಿರಸನವಾಗಿ, ಕ್ರಮಬದ್ಧವಾಗಿಯೇ LTTE ಬಿಟ್ಟು, ಇಂಡಿಯನ್ ಶಾಂತಿ ಪಡೆಯಿಂದ ಹೇಗೋ ಬಚಾವ್ ಆಗಿ, ಇಂಡಿಯಾಕ್ಕೆ ಬಂದು ಎಲ್ಲೆಲ್ಲೋ ಓದಿ, ಮುಂದೆ ಆಸ್ಟ್ರೇಲಿಯಾಕ್ಕೆ ಹೋಗಿ ಒಳ್ಳೆ ರೀತಿಯಿಂದ ಸೆಟಲ್ ಆಗಿದ್ದಾರೆ ಲೇಖಕಿ.
ಪೋಡಿ ನಂಗಿ = ಚಿಕ್ಕ ಹುಡುಗಿ (ಸಿಂಹಳ ಭಾಷೆಯಲ್ಲಿ ಚಿಕ್ಕ ಹುಡುಗಿಯರನ್ನು ಕರೆಯುವ ರೀತಿ)
ಪುಲಿ = ಹುಲಿ. ತಮಿಳ್ ಪುಲಿಗಳ್ ಅಂದ್ರೆ ತಮಿಳ್ ಟೈಗರ್ಸ್.
2 comments:
ಮಹೇಶಣ್ನ,ವಿಶಯ ಎಲ್ಲಿಂದ ಸಂಗ್ರಹ ಮಾಡ್ತ್ರಿ,ಆಹಾ ಅದ್ಭುತ ಬರಹ
ಧನ್ಯವಾದ ಭಾಗೋತ್ರೆ! :)
ಆ ಶ್ರೀ ಲಂಕಾದಲ್ಲಿ ಆದ ಭಾನಗಡಿ ಮ್ಯಾಲೆ ಮೊದಲಿಂದಲೂ ಆಸಕ್ತಿ. ಹಾಂಗಾಗಿ ಸುಮಾರು ಪುಸ್ತಕ ಓದಿದ್ದೆ. ಇದೊಂದು ಹೊಸ ಪುಸ್ತಕ ಬಂತು. ಓಜ್ಜೆ. ಅದರಿಂದಾನೇ ಒಂದು ಸಣ್ಣ ಘಟನೆ ಎತ್ತಿ ಇಲ್ಲಿ ಬರದ್ದೆ. ಅಷ್ಟೇ.
ಪ್ರೀತಿಯಿಂದ ಹಾಕಿದ ಕಾಮೆಂಟಿಗೆ ಧನ್ಯವಾದ.
Post a Comment