ಅವತ್ತೊಂದು ದಿನ ನಮ್ಮ ಜಂಗಲ್ ಶಿಬಿರದಲ್ಲಿ ಕೂತಿದ್ವಿ. ಭಾರತದ ಶಾಂತಿ ಪಡೆಯ ಹೀಟ್ ಸಿಕ್ಕಾಪಟ್ಟೆ ಜಾಸ್ತಿಯಾಗಿ, ನಾಡು ಬಿಟ್ಟು ಕಾಡು ಸೇರುವ ಪ್ರಸಂಗ ನಮಗೆ ಅಂದ್ರೆ LTTE ಮಂದಿಗೆ. ಆ ಕಾಡೋ? ಕೇಳಬೇಡಿ ನಮ್ಮ ಹಾಲತ್. ಆ ತರಹ ಆಗಿತ್ತು.
ಅಚಾನಕ್ಕಾಗಿ LTTE No.2 ಲೀಡರ್ ಆಗಿದ್ದ ಮಹತ್ತಾಯ ಬಂದು ಬಿಟ್ಟರು. ಪ್ರಭಾಕರನ್ ನಂತರ ಅವರೇ. ಭಾರತದ ಶಾಂತಿಪಡೆಯ ಜೊತೆ ಏನು ಯುದ್ಧ ಆಯಿತು ನೋಡಿ, ಅದರ ಪೂರ್ತಿ ಉಸ್ತುವಾರಿ ಅವರದ್ದೇ.
ಸ್ವಲ್ಪ ಟೆನ್ಸ್ ಆಗಿದ್ದರು ಮಹತ್ತಾಯ. ಅವರ ಪೂರ್ತಿ ಹೆಸರು ಗೋಪಾಲಸ್ವಾಮಿ ಮಹೇಂದ್ರರಾಜ ಅಂತ. ಪ್ರಭಾಕರನ್ ಅವರ ಸಂಬಂಧಿ ಕೂಡ.
ಪೂರ್ತಿ ಲೇಡೀಸ್ ಶಿಬಿರ ನಮ್ಮದು. ಲೇಡಿ ಟೈಗರ್ಸ್ ಬೇರೆ. ಜೆಂಟ್ಸ್ ಟೈಗರ್ಸ್ ಬೇರೆ. ಗೆರಿಲ್ಲಾ ಕಾರ್ಯಾಚರಣೆ ಮಾಡುವಾಗ ಒಟ್ಟಿಗೆ ಮಾಡಿದರೂ, ಶಿಬಿರ ಬೇರೆ ಬೇರೆ. LTTE ನಲ್ಲಿ ಶಿಸ್ತು, ಮಡಿ ಜಾಸ್ತಿ. ಪರಮನಾಯಕ ಪ್ರಭಾಕರನ್ ಅವರ ಅನುಮತಿ ಇಲ್ಲದೆ ಯಾರೂ ಮದುವೆ ಗಿದುವೆ ಮಾಡಿಕೊಳ್ಳೋ ಸಾಧ್ಯತೆ ಇಲ್ಲ. ಅದೂ ಸುಮಾರು ವರ್ಷ LTTE ನಲ್ಲಿ ಸರ್ವೀಸ್ ಮಾಡಿ, ತಮ್ಮ ಲೋಯಲ್ಟಿ ಪ್ರೂವ್ ಮಾಡಿ, ಏನೋ ಸಾಧಿಸಿದವರಿಗೆ ಮಾತ್ರ ಪ್ರಭಾಕರನ್ ಮದ್ವೆ ಗಿದ್ವೆ ಮಾಡಿಕೊಳ್ಳೋಕೆ ಅನುಮತಿ ಕೊಡುತ್ತಿದ್ದರು. ಒಂದು ಕಾಲದಲ್ಲಿ LTTE ಅಂದ್ರೆ ಕೇವಲ ಅವಿವಾಹಿತ ಮಂದಿಯ ಸಂಘಟನೆ ಅಂತ ಇತ್ತು. ಆದ್ರೆ ಪರಮನಾಯಕ ಪ್ರಭಾಕರನ್ ಅವರೇ ವಿವಾಹ ಮಾಡಿಕೊಂಡ ಮೇಲೆ, ಕೆಲವರಿಗೆ, ಹಿರಿಯರಿಗೆ ಪರ್ಮಿಶನ್ ಸಿಗತೊಡಗಿತ್ತು.
ಆದ್ರೆ ಲವ್ವು ಗಿವ್ವು ಅಂತ ಮಾತ್ರ ಹೇಳಬೇಡಿ. ಅದು ಮಾತ್ರ LTTE ಗೆ ಒಪ್ಪೋ ಮಾತಾಗಿರಲಿಲ್ಲ. ಸುಮ್ಮನೆ ಇಲ್ಲದ ಕಿರಿಕ್ ಯಾಕೆ ಬೇಕು? ಅಂತ ಅದಕ್ಕೆ ಅನುಮತಿಯೇ ಇರಲಿಲ್ಲ. LTTE ಬಿಟ್ಟು ಹೋಗಿ ಅಂತ ಮುಲಾಜಿಲ್ಲದೆ ಹೇಳಿಬಿಡುತ್ತಿದ್ದರು. ಆದ್ರೆ ಬಿಟ್ಟು ಹೋಗುವದು ಎಲ್ಲಿಗೆ? ತಮಿಳರಲ್ಲೇ ಹತ್ತಾರು ಗುಂಪುಗಳು. LTTE ಬಿಟ್ಟು ಹೋದ ಅಂದ್ರೆ ತಲೆ ಮೇಲಿನ ಛತ್ರಛಾಯೆ ಹೋಗಿ ಆಪೋಸಿಟ್ ಪಾರ್ಟಿ ಆದ EPRLF, TELO, PLOTE ಹೀಗೆ ಬೇರೆ ಯಾವದೋ ಸಂಘಟನೆ ಮಂದಿ ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಾರೆ. ಇಲ್ಲಾಂದ್ರೆ ಕಾಸಿಗಾಗಿ ಹಿಡಿದು ಭಾರತದ ಶಾಂತಿ ಪಡೆಗೆ ಕೊಡುತ್ತಾರೆ. ಹಾಗಾಗಿ ಒಮ್ಮೆ LTTE ಸೇರಿದ ಮೇಲೆ ಬಿಟ್ಟು ಹೋಗೋದು ಸುಲಭ ಅಲ್ಲ.
ನಾಯಕ ಮಹತ್ತಾಯ ಬಂದವರೇ ಎಲ್ಲರಿಗೂ ಬಂದು ಕೂಡಲು ಹೇಳಿದರು. ಬಂದು ಕೂತ್ವಿ. ಮೂರು ಜನರ ಹೆಸರು ಹೇಳಿದರು. ಮೂವರು ಲೇಡಿ ಟೈಗರ್ಸ್. ಏನೋ ಲಫಡಾ ಮಾಡಿಕೊಂಡಿರಬೇಕು ಅನ್ನಿಸಿತು.
ಮೊದಲನೆಯಾಕೆ ಏನೋ ಕದಿಯುವಾಗ ಸಿಕ್ಕಿ ಬಿದ್ದಿದ್ದಳು. ಆಕೆಗೆ ಗೇಟ್ ಪಾಸ್ ಕೊಡಲಾಯಿತು. ಅಳುತ್ತ ಎದ್ದು ಹೋದಳು. ಆಕೆಯ ಪುಣ್ಯ. ಚಿತ್ರಹಿಂಸೆ ಕೊಟ್ಟು ಕೊಲ್ಲಲಿಲ್ಲ.
ಇನ್ನೊಬ್ಬಾಕೆಯ ಹೆಸರು ಹೇಳಿದರು. ಆಕೆಗೂ ಗೇಟ್ ಪಾಸು ಕೊಟ್ಟು ಡಿಸ್ಮಿಸ್ ಮಾಡಲಾಯಿತು. ಆಕೆಯೂ ತನ್ನ ಸೈನೈಡ್ ಕ್ಯಾಪ್ಸೂಲ್, ಬಂದೂಕು ಕೊಟ್ಟು ಅಳುತ್ತ ಹೋದಳು. ಈ ತರಹ ಡಿಸ್ಮಿಸ್ ಮಾಡಿಕೊಳ್ಳುವದು ಅಂದ್ರೆ ಅತಿ ಅವಮಾನದ ವಿಷಯ. ತಮಿಳ್ ಈಲಂಗೆ ಪ್ರಾಣ ಕೊಡಲು ಬಂದವರಿಗೆ ಡಿಸ್ಮಿಸ್ ಮಾಡಿಸಿಕೊಂಡು ಹೋಗುವದು ಅಂದರೇನು?
ಮೂರನೇ ಅಪರಾಧಿ ಯಾರು ಅಂತ ಎಲ್ಲರಿಗೂ ಕುತೂಹಲ ಮತ್ತೆ ಒಂದು ರೀತಿಯ ಟೆನ್ಷನ್ ಕೂಡ.
ಮಹತ್ತಾಯ ದೀರ್ಘವಾಗಿ ಉಸಿರು ಎಳೆದುಕೊಂಡು 'ನೋರಾ' ಎಂದರು. ಎಲ್ಲರೂ ನೋರಾಳ ಕಡೆ ನೋಡಿದೆವು. ಆಕೆಯ ಬಗ್ಗೆ ನನಗೇನೂ ಜಾಸ್ತಿ ಗೊತ್ತಿರಲಿಲ್ಲ.
ಮಹತ್ತಾಯ ಹೇಳುವಕಿಂತ ಮೊದಲೇ ನೋರಾಳಿಗೆ ಗೊತ್ತಾಗಿ ಅಳತೊಡಗಿದಳು. ಅದು ಭೀತಿಯ ಅಳುವಲ್ಲ. ಇದು ಒಂದು ತರಹ ಅಸಹಾಯಕತೆಯ ಅಳು. ಬಿಕ್ಕುತ್ತಿದ್ದಳು.
ಈಕೆ 'ಶಾಂತನ್' ಅನ್ನುವ ಇನ್ನೊಬ್ಬ ಟೈಗರ್ ನನ್ನು ಲವ್ ಮಾಡಿದ್ದಾಳೆ. ಅವನನ್ನ ಬೇರೆ ವಿಚಾರಿಸಿಕೊಳ್ಳುತ್ತೀನಿ. ಈಕೆಗೆ ಶಿಕ್ಷೆ ಅಂದ್ರೆ, ಮುಂದಿನ ನಾಲ್ಕಾರು ಚಕಮಕಿಯಲ್ಲಿ ಈಕೆಯೇ ಲೀಡ್ ಮಾಡಬೇಕು. ಮತ್ತೆ LTTE ಗೆ ನಿಷ್ಠೆ ಖಾತ್ರಿ ಮಾಡಲು ಭಾರತದ ಶಾಂತಿ ಪಡೆ ಕಡೆಯಿಂದ ಬಂದೂಕೋ, ರಾಕೆಟ್ ಲಾಂಚರೋ ಏನಾದರು ತರಬೇಕು. ಇದೇ ನೋರಾಗೆ ಶಿಕ್ಷೆ, ಅಂತ ಮಹತ್ತಾಯ ಘೋಷಿಸಿಯೇ ಬಿಟ್ಟರು. ದೂಸರಾ ಮಾತಿಲ್ಲ.
ಗೆರಿಲ್ಲಾ ಯುದ್ಧ ಮಾಡಿ ಗೊತ್ತಿದ್ದವರಿಗೆ ಈ ಶಿಕ್ಷೆ ಸಾವಿಗಿಂತ ಬೇರೆ ಅಲ್ಲ ಅಂತ ಗೊತ್ತಾಗಿತ್ತು. ಸೀರಿಯಲ್ಲಾಗಿ ಒಬ್ಬರೇ ನಾಲ್ಕಾರು ಚಕಮಕಿಯಲ್ಲಿ ಲೀಡ್ ಮಾಡಿದರೆ ಸಾಯುವದು ಗ್ಯಾರಂಟೀ. ಇನ್ನು ಭಾರತದ ಶಾಂತಿ ಪಡೆಯಿಂದ ಆ ಪರಿ ಗುಂಡು ಹಾರುತ್ತಿರುವಾಗ, ಯಾರನ್ನೋ ಕೊಂದು, ಅವರ ಬಂದೂಕು ಮತ್ತೊಂದು ತರೋದು ದೂರ ಉಳಿಯಿತು. ಇದಕ್ಕಿಂತ ನೋರಾಗೆ ಒಂದು ಗುಂಡು ಹಾಕಿದ್ದರೆ ಈ ಪರಿ ಮಾನಸಿಕ ತುಮುಲವಿಲ್ಲದೆ ನೆಮ್ಮದಿಯಿಂದ ಸಾಯುತ್ತಿದ್ದಳು. ಆದ್ರೆ ಅದು LTTE. ಎಲ್ಲದಕ್ಕೂ ಕ್ರೌರ್ಯ. ಮತ್ತೆ ಮಹತ್ತಯಾ ಅವರಿಗೆ ಮೊಸಳೆ ಅಂತ ಸುಮ್ಮನೆ ಹೆಸರು ಬಂದಿರಲಿಲ್ಲ. ಈ ತರಹದ ತಣ್ಣನೆಯ ಕ್ರೌರ್ಯ ನೋಡಿಯೇ ಇರಬೇಕು ಅವರಿಗೆ ಮೊಸಳೆ ಅಂತ ಅನ್ನುತ್ತಿದ್ದುದು.
ಒಮ್ಮೆಲೇ ಒಂದು ವ್ಯಾನ್ ಜೋರಾಗಿ ಬಂತು. ಬ್ರೇಕ್ ಹಾಕಿದ ಸೌಂಡ್ ಗೆ ಏನಾಯಿತೋ ಅಂತ ಬೆಚ್ಚಿ ಬಿದ್ದೆವು. ಮುಂದಿನ ಸೀಟಿನಿಂದ ಇಬ್ಬರು ಟೈಗರ್ಸ್ ಇಳಿದರು. ಬಂದೂಕು ಸರಿ ಮಾಡಿಕೊಂಡವರೇ ವ್ಯಾನಿನ ಹಿಂದಿನ ಬಾಗಿಲು ಓಪನ್ ಮಾಡಿದರು. ಅಲ್ಲೇ ಕೂತಿದ್ದ ನೋರಾಳ ಅಮರ ಪ್ರೇಮಿ 'ಶಾಂತನ್'.
ಶಾಂತನ್ ಮುಖದ ಮೇಲೆ ಯಾವ ಭಾವನೆಯೂ ಕಾಣಲಿಲ್ಲ. ಅಥವಾ ನಮಗೆ ಭಾವನೆಗಳು ಕಂಡು ಬರಲಿಲ್ಲವೋ. ನೋರಾ ಮಾತ್ರ ಏನೋ ಅನಾಹುತ ಆಗೇ ತೀರುತ್ತದೆ ಅನ್ನುವ ಸುಳಿವು ಸಿಕ್ಕ ಹಾಗೆ ಭೋರಿಟ್ಟು ಅಳತೊಡಗಿದಳು.
ಶಾಂತನ್ ಏನೂ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ. ವ್ಯಾನಿನಿಂದ ಕೆಳಗೆ ಇಳಿದು ಬಂದ. ಉಳಿದಿಬ್ಬರು ಟೈಗರ್ಸ್ ಅವನ ಕೈ ಹಿಡಿದುಕೊಂಡು ಬಂದು ಮಹತ್ತಯಾ ಅವರ ಮುಂದೆ ನಿಲ್ಲಿಸಿದರು. ಅಲ್ಲೇ ಪಕ್ಕದಲ್ಲಿ ಹಾಕಿದ್ದ ಟೆಂಟ್ ಒಳಗೆ ಕರೆದಕೊಂಡು ಹೋಗುವಂತೆ ಹೇಳಿದರು ಮಹತ್ತಾಯ. ಹಿಂದೆ ತಾವು ಹೊರಟರು.
ಈಗ ಮಾತ್ರ ನೋರಾಳ ಅಳು ಇನ್ನೂ ಜೋರಾಯಿತು. ಅವಳ ಕಡೆ ಒಂದು ಸಾರೆ ಕೂಡ ಶಾಂತನ್ ತಿರುಗಿ ನೋಡಲಿಲ್ಲ. ಅವನೆಂತ ಪ್ರೇಮಿಯೋ? ಅಥವಾ ನಮಗೆ ಗೊತ್ತಿಲ್ಲದ್ದು ಅವನಿಗೆ ಏನಾದರು ಗೊತ್ತಿತ್ತೋ? ಗೊತ್ತಿಲ್ಲ.
ಟೆಂಟ್ ಒಳಗಿಂದ ಒಂದು ಚಿಕ್ಕ ಟಪ್ ಅನ್ನುವ ಸೌಂಡ್. ಮುಂದಿನ ಕ್ಷಣದಲ್ಲಿ ಟೈಗರ್ಸ್ ಇಬ್ಬರು ಶಾಂತನ್ ನನ್ನು ದರ ದರ ಎಳೆದುಕೊಂಡು ವಾಪಸ್ ವ್ಯಾನಿಗೆ ಕರೆದೊಯ್ಯುತ್ತಿದ್ದರು. ಹಣೆ ಮೇಲೆ ಮತ್ತೊಂದು ಕಣ್ಣು ಮೂಡಿದ ಹಾಗೆ ಒಂದು ದೊಡ್ಡ ದೊಗರು. ಅದರಿಂದ ಬಳಬಳನೆ ಸೋರುತ್ತಿದ್ದ ರಕ್ತ. ಮಹತ್ತಾಯ ಅವನ ಹಣೆಗೆ ಗುಂಡು ನುಗ್ಗಿಸಿ ಅವನ ಕಥೆ ಮುಗಿಸಿದ್ದರು!!!!!
ಈಗ ಮಾತ್ರ ನೋರಾ ಅಳಲಿಲ್ಲ. ಆಕೆಯೂ ಸತ್ತಂತೆ ಆಗಿದ್ದಳು. ಶೂನ್ಯದತ್ತ ನೋಡುತ್ತಿದ್ದಳು. ಆಕೆಗೆ ಮತಿಭ್ರಮಣೆ ಆಯಿತೋ ಅಂತ ನಮಗೆ ಅನ್ನಿಸಿತು. ಯಾರಿಗೆ ಏನೇ ಆದರೂ, ತಮಗೆ ಮಾತ್ರ ಏನೂ ಆಗಿಲ್ಲ ಅನ್ನುವಂತೆ ಟೆಂಟ್ ನಿಂದ ಹೊರಗೆ ಬಂದರು ಮಹತ್ತಾಯ. ಮೊಸಳೆ ದಂಡೆಗೆ ಬಂದ ಹಾಗೆ. ಹೆಸರು ಸರಿಯಾಗಿಯೇ ಇದೆ. ಮೊಸಳೆ ಕಣ್ಣಲ್ಲಿ ಕಣ್ಣೀರಿನ ಸುಳಿವೂ ಇರಲಿಲ್ಲ. ಮೊಸಳೆ ಕಣ್ಣೀರೂ ಇರಲಿಲ್ಲ.
ಮೀಟಿಂಗ್ ಮುಗಿಯುತು ಅನ್ನೋ ಲುಕ್ ಕೊಟ್ಟರು ಮಹತ್ತಾಯ. ಎಲ್ಲರೂ ಎದ್ದು ಹೊಂಟೆವು.
"ನಿರೋಮೀ", ಅಂತ ಕರೆದರು ಮಹತ್ತಾಯ.
ಎದೆ ಝಲ್ಲೆಂದಿತು. ನನ್ನ ಲಫಡಾ ಕೂಡಾ ಗೊತ್ತಾಗಿ ಹೋಯಿತಾ? ಅಂತ ಬೆದರಿದೆ.
ಬೆದರುತ್ತಲೇ, "ಏನಣ್ಣಾ?", ಅಂತ ಕೇಳಿದೆ.
ನಂದೂ ಒಂದು ಚಿಕ್ಕ ಮೂಕಪ್ರೇಮ ನಡೆಯುತ್ತಿತ್ತು. ರೋಶನ್ ಇದ್ದನಲ್ಲ. ನನ್ನ ಮೇಲೆ ಫುಲ್ ಫಿದಾ ಅವನು. ಒಂದು ಲೆವೆಲ್ ಗೆ LTTE ನಾಯಕ ಅವನು. ನಾನು LTTE ಸೇರೋಕೆ ಮೊದಲಿಂದನೂ ನನಗೆ ಲೈನ್ ಹೊಡೆಯುತ್ತಿದ್ದ. ನಾನೂ ಸಣ್ಣ ಮಟ್ಟಿನ ಸಿಗ್ನಲ್ ಕೊಡುತ್ತಿದ್ದೆ. ಒಂದು ಲೆವೆಲ್ ನಲ್ಲಿ ಅವನು, ಅವನ ಪರ್ಸನಾಲಿಟಿ ತುಂಬಾ ಲೈಕ್ ಆಗಿದ್ದರೂ ಫುಲ್ ಆಗಿ ಪ್ರೇಮ ಗೀಮ ಮಾಡಲು ಧೈರ್ಯ ಇರಲಿಲ್ಲ. ಮತ್ತೆ ಒಳ್ಳೆ ಸುಸಂಸ್ಕೃತ ಮನೆತನದಿಂದ ಬಂದಿದ್ದ ನಾನು LTTE ಸೇರಿದ್ದು, ಅದೂ ವಿದ್ಯಾಭ್ಯಾಸ ಅರ್ಧಕ್ಕೆ ಬಿಟ್ಟು ಸೇರಿದ್ದು, ತಮಿಳ್ ಈಲಂ ಮೇಲಿನ ಪ್ರೀತಿಯಿಂದಲೇ ಹೊರತು ಸುಮ್ಮನೆ ಲವ್ ಗಿವ್ ಅಂತ ಟೈಮ್ ವೇಸ್ಟ್ ಮಾಡಲು ಅಲ್ಲ. ಹಾಂಗಾಗಿ ನನ್ನ ಮತ್ತು ರೋಶನ್ ನಡುವೆ ಕೇವಲ ಒಂದು ತರಹದ ಭೆಟ್ಟಿಯಾದಾಗೊಮ್ಮೆ ಪರಸ್ಪರ ಎಕ್ಸೈಟ್ಮೆಂಟ್ ಫೀಲ್ ಮಾಡಿಕೊಳ್ಳೋದು ಬಿಟ್ಟರೆ ಮತ್ತೇನೂ ಇರಲಿಲ್ಲ. ಈ ಯುದ್ಧದ ಮಧ್ಯೆ ಅವನನ್ನ ನೋಡದೇ ಐದಾರು ತಿಂಗಳಾಗಿ ಹೋಗಿತ್ತು. ನೆನಪಿಗೆ ಬಂದಾಗ ಮಾತ್ರ ಒಂದು ತರಹದ ಖುಷಿ ಕೊಟ್ಟು ಹೋಗುತ್ತಿದ್ದವು ರೋಶನ್ನನ ನೆನಪುಗಳು.
ಇವೆಲ್ಲ ನೆನಪಾಯಿತು. ಇದೆಲ್ಲ ಮಹತ್ತಾಯ ಅಣ್ಣಾ ಅವರಿಗೆ ತಿಳಿದು, ನನನ್ನೂ ತರಾಟೆಗೆ ತೆಗೆದುಕೊಳ್ಳುವರು ಇದ್ದಾರೋ ಏನೋ? ಅಂತ ಭೀತಳಾದೆ. ಮತ್ತೆ, ನಿರೋಮೀ, ಈಗ ಶಾಂತನನ್ನು ಕೊಂದ ಹಾಗೆ, ರೋಶನನ್ನು ಕೂಡ ಕೊಂದಿದ್ದೇನೆ, ಅಂತ ಹೇಳಲಿದ್ದಾರೋ ಅಂತ ಊಹಿಸಿಕೊಂಡು ಎದೆ ಧಸಕ್ ಅಂದಿತು.
"ಏನಿಲ್ಲ, ನಿರೋಮೀ. ನಿನಗೂ ಅಲ್ಸರ್ ಇದೆ ಅಂತ ಗೊತ್ತಾಯಿತು. ನನಗೂ ಅಲ್ಸರ್ ಇದೆ ನೋಡು ತಂಗಿ. ಈ ನಮ್ಮ ಜನ ಬೇರೆ ಅಡುಗೆಗೆ ಸಿಕ್ಕಾಪಟ್ಟೆ ಖಾರ ಹಾಕುತ್ತಾರೆ. ನಾನು ಹೇಳಿದ್ದೇನೆ ಅಂತ ಹೇಳು ಅಡಿಗೆ ಮಾಡುವವರಿಗೆ. ಖಾರ ಹಾಕುವ ಮೊದಲು ಬೇರೆ ತೆಗದಿಡೋಕೆ ಹೇಳು. ನಿನ್ನ ಸಲುವಾಗಿ ಒಂದೆರಡು ಹಾಲಿನ ಪುಡಿಯ ಡಬ್ಬಿ ಕಳಿಸಿಕೊಡುತ್ತೇನೆ. ಈಗಿನ ಪರಿಸ್ಥಿತಿಯಲ್ಲಿ ಇಷ್ಟೇ ನನ್ನತ್ರ ಮಾಡಲು ಸಾಧ್ಯ ತಂಗಿ", ಅಂದರು ತಣ್ಣಗೆ ಮಹತ್ತಾಯ.
ಇವರೇನಾ? ಈಗ ಕೆಲ ನಿಮಿಷದ ಹಿಂದೆ ಯಾವದೇ ಭಾವನೆಗಳಿಲ್ಲದೆ ಒಬ್ಬ ನಿಷ್ಪಾಪಿಯನ್ನು ಕೊಂದ ಮನುಷ್ಯ ಇವರೇನಾ? ಈಗ ನನ್ನ ಸಣ್ಣ ಪ್ರಮಾಣದ ಎಸಿಡಿಟಿ ಬಗ್ಗೆ ಈ ಪರಿ ಕಾಳಜಿ ತೋರಿಸುತ್ತಿದ್ದಾರೆ!!!!!!!
ಯಾವ ತರಹದ ಮನುಷ್ಯ ಈ ಮಹತ್ತಾಯ? ಅಂತ ಅನ್ನಿಸಿತು. ಅರ್ಥ ಮಾಡಿಕೊಳ್ಳುವದು ಅಸಾಧ್ಯ.
ಕೊಟ್ಟ ಮಾತಿಗೆ ತಪ್ಪದ ಮಹತ್ತಾಯ ಅಣ್ಣ ಹಾಲಿನ ಪುಡಿಯ ಡಬ್ಬಿ ಕಳಿಸಿ ಕೊಟ್ಟರು. ಆದ್ರೆ ಅವರ ತಣ್ಣನೆಯ ಕ್ರೌರ್ಯ ನೋಡಿದ್ದ ನನಗೆ ಆ ಹಾಲಿನ ಪುಡಿಯಿಂದ ಹಾಲು ಮಾಡಿಕೊಂಡು, ನನ್ನ ಅಲ್ಸರಗೆ ತಂಪು ತಂದುಕೊಳ್ಳೋ ಆಸಕ್ತಿ, ದರ್ದು ಒಂದೂ ಉಳಿದಿರಲಿಲ್ಲ. ಬೇರೆಯವರಿಗೆ ಕುಡಿದುಕೊಳ್ಳಿ ಅಂತ ಕೊಟ್ಟು ಬಿಟ್ಟೆ.
ಮೊದಲು ವೆಳ್ಳಯಿಯ ಹತ್ಯೆ, ಈಗ ಶಾಂತನ್ ಹತ್ಯೆ ನೋಡಿದ ಮೇಲೆ 'ದಿಲ್ ಉಠ್ ಗಯಾ' ಅನ್ನುವಂತೆ LTTE ಮೇಲಿನ ಭಕ್ತಿ, ಪ್ರೀತಿ, ಕಮಿಟ್ಮೆಂಟ್ ಎಲ್ಲಾ ಹೋಗಿ ಬಿಟ್ಟಿತ್ತು. ಬಿಟ್ಟು ಹೋದರೆ ಸಾಕು ಅನ್ನಿಸಿತ್ತು.
ಈ ಪರಿ ಮೆರೆದ ಮಹತ್ತಾಯ ಮುಂದೆ 1993-94 ಟೈಮ್ ನಲ್ಲಿ ಗದ್ದಾರ್ ಅನ್ನುವ ಸಂಶಯಕ್ಕೆ ಒಳಗಾದರು. ಇಂಡಿಯಾದ ಬೇಹುಗಾರಿಕೆ ಸಂಸ್ಥೆ R&AW ಜೊತೆ ಹೊಂದಾಣಿಕೆ ಮಾಡಿಕೊಂಡು, ಪರಮ ನಾಯಕ ಪ್ರಭಾಕರನ್ ವಿರುದ್ಧ ಕಾರಸ್ತಾನ ಮಾಡುತ್ತಿದ್ದಾರೆ, ಅಂತ LTTE ಇಂಟರ್ನಲ್ ಬೇಹುಗಾರಿಕೆ ಸಂಸ್ಥೆ ಮಹತ್ತಾಯ ಮತ್ತು ಅವರ ಸಹಚರನನ್ನು ಸಂಶಯಿಸಿತು.
ಮಹತ್ತಾಯ ಮತ್ತು ಅವರ ಸುಮಾರು 250 ಜನರನ್ನು ಹಿಡಿದು ತೀವ್ರ ಟಾರ್ಚರ್ ಗೆ ಒಳಪಡಿಸಲಾಯಿತು. ನಂತರ ತಪ್ಪಿತಸ್ತರು ಅಂತ ನಿರ್ಧರಿಸಿ ಸಾಮೂಹಿಕವಾಗಿ ಹತ್ಯೆ ಮಾಡಲಾಯಿತು. ಕೆಲವರು ಅಂದರು, ಮಹತ್ತಾಯ ತುಂಬಾ ಪಾವರಫುಲ್ ಆಗುತ್ತಿದ್ದಾರೆ, ಅಂತ ಪ್ರಭಾಕರನ್ ಅವರಿಗೆ ಅನ್ನಿಸಿಬಿಟ್ಟಿತ್ತು. ಅದಕ್ಕೇ ತೆಗೆಸಿಬಿಟ್ಟರು. ಸತ್ಯ ಎಲ್ಲೋ ಮಧ್ಯ ಇರಬೇಕು.
ನಿರೋಮೀ ಡೇಸೌಜಾ ಬರೆದ Tamil Tigress: My Story as a Child Soldier in Sri Lanka's Bloody Civil War ಪುಸ್ತಕದಿಂದ ಆರಿಸಿ ಬರೆದಿದ್ದು.
ಇದೇ ಪುಸ್ತಕದ ಬಗ್ಗೆ, ಮತ್ತೊಂದು ಮನಕಲಕುವ ಘಟನೆ ಬಗ್ಗೆ ಹಿಂದಿನ ವಾರ ಬರೆದಿದ್ದೆ. ಆ ಪೋಸ್ಟ್ ಇಲ್ಲಿದೆ - ಪೋಡಿ ನಂಗಿ ತಮಿಳ್ ಪುಲಿಯಾದದ್ದು.
ಬ್ಲಾಗ್ ಪೋಸ್ಟ್ ಟೈಟಲ್ - LTTE ಸೇರಬಾರದು. ಸೇರಿದರೆ ಪ್ರೀತಿ ಮಾಡಬಾರದು- ಇದು, ರವಿಚಂದ್ರನ್ ಚಿತ್ರದ ಹಾಡು, 'ಪ್ರೀತಿ ಮಾಡಬಾರದು. ಮಾಡಿದರೆ ಜಗಕೆ ಹೆದರಬಾರದು', ಪ್ರೇರಿತ. ಹಾಡು ಎಂಜಾಯ್ ಮಾಡಿ.
ಮಹತ್ತಾಯ ಅವರ ಬಗ್ಗೆ ಮಾಹಿತಿಗೆ - http://en.wikipedia.org/wiki/Gopalaswamy_Mahendraraja
ವೇಲುಪಿಳ್ಳಯಿ ಪ್ರಭಾಕರನ್ - http://en.wikipedia.org/wiki/Prabhakaran
3 comments:
ಅಬ್ಬಾ!ವಿವರಗಳು ರೋಚಕ ಮತ್ತು ಅಷ್ಟೇ ಭಯಾನಕ! ಆ ಪುಸ್ತಕ ಓದಬೇಕೆನಿಸಿದೆ.
ಇಂತಹ ಘಟನೆ ಹೇಳುವಾಗಲೂ ರವಿಚಂದ್ರನ್ ಹಾಡು ನೆನಪಾಗಿದ್ದು ಸಾಕು ಮಾರಾಯ! :)
Thank you, Vikas!!!! :) :)
Good book read it!!!
I couldn't have really asked for a much better blog. You are always at hand to provide excellent information, going straight away to the point for easy understanding of your subscribers. You're really a terrific pro in this arena. Many thanks for remaining there humans like me.
Post a Comment