Friday, February 01, 2013

ಗೌಡಾ

ಕರೀಂ ಮತ್ತ ಸಿಕ್ಕಿದ್ದ.

ಸಾಬ್.....ನಮ್ಮದು ಬೇಗಂ ಲೌಡಾ (!) ತಂದುಕೊಂಡುಬಿಟ್ಟಿದೆ - ಅಂದ ಕರೀಂ ಉಸ್ಸಪ್ಪಾ ಅಂತ ಹಸಿರ ಶಾಲಿಂದ ಬಕ್ಕ ತಲಿ ಒರೆಸಿಕೊಂಡು ಸ್ವಲ್ಪ ಹಗುರಾದ.

ಸಾಬ್ರಾ!!!!! - ಅಂತ ಚೀರಿದೆ.

ಕ್ಯಾ ಸಾಬ್.....ನಮ್ಮದು ತಲಿ ಇಲ್ಲೆ ಬಾರಾ ಆಣಾ ಆದ್ರೆ, ಮತ್ತೂ ಚೀರಿ ನಮ್ಮದೂಕೆ ತಲಿ ತೇರಾ ಆಣಾ ಯಾಕೆ ಮಾಡ್ತೀರಿ? - ಅಂತ ಕೊಂಚ ಅಸಹನೆಯಿಂದ ಹೇಳಿದ ಕರೀಂ ಒಂದು ಜರ್ದಾ ಪಾನ್ ಒಳಗ ಹೆಟ್ಟಿಗೊಂಡ. ಬಾಯಿಯೊಳಗ ಹೆಟ್ಟಿಗೊಂಡ. ಮತ್ತೆಲ್ಲೂ ಅಲ್ಲ.

ಮತ್ತೇನ್ರೀ.....????? ಹಿಂದ ಮುಂದ ನೋಡ್ಕೊಳ್ಳದ, ಶುಕ್ರವಾರ ದಿನ ಎಲ್ಲಾ ಹೆಂಗಸೂರು ಮಹಾಲಕ್ಷ್ಮಿ ವಾರ ಅನಕೋತ್ತ, ಬಾಗೀನ  ಅದು ಇದು ಅಂತ ಏನೇನೋ ಕೊಟ್ಟು ಏನೇನೋ ತಂದುಕೊಂಡ್ರಾ, ನಿಮ್ಮ ಬೇಗಂ, ಅಯ್ಯೋ ನಾ ಹೇಳಲಾರೆ, "ಅದನ್ನ" ತಂದುಕೊಂಡಾಳ, ಅಂತ ಹೇಳ್ತೀರಲ್ಲಾ? ಚೀರದ ಮತ್ತೇನು ಮಾಡ್ಬೇಕು? ಶಾಂತಂ, ಪಾಪಂ - ಅಂದು ಗಲ್ಲಾ ಗಲ್ಲಾ ಬಡಕೊಂಡೆ.

ನಾ ಗಲ್ಲಾ ಬಡುಕೊಂಡ್ರ ಮಂಗ್ಯಾನ್ ಕೆ ಕರೀಂ ಅಂಡು ತಟ್ಟಿಕೊಂಡು ಪೆಕ ಪೆಕಾ,  ಕೆರಾ ಪೆರಾ ಅಂತ ನಕ್ಕ. ನಗು ಅಬ್ಬರದೊಳಗ ಜರ್ದಾ ಪಾನ್ ಪಿಚಕಾರಿ ಸಹಿತ ಹಾರಿತು. ಇಶ್! ಕೆಂಪ ರಾಮ ರಾಡಿ.

ಸಾಬ್....ನಿಮ್ಮದು ಕಿವಿ ಸಚ್ಚಿ ಮೆ ಬರ್ಬಾದ್ ಆಗಿದೆ. ನಾವು ಅಂದಿದ್ದು ಗೌಡಾ ಅಂತಾ. ನಿಮಗೆ ಅದು ಲೌಡಾ ಅಂತಾ ಕೇಳಿದ್ರೆ ನಾವೇನು ಮಾಡೋಣಾ? - ಅಂದ ಕರೀಂ ಮತ್ತೂ ನಕ್ಕ.

ಯಾಕ ಹೀಂಗಾಗ್ತದ? ಆವಾ ಹೇಳೋ ಸ್ಟೈಲೋ ಏನೋ? ಗೊತ್ತಿಲ್ಲ. ಬರೆ ಮನಿಹಾಳ ಶಬ್ದನ ಕೇಳ್ತಾವ.

ಓಹೋ! ಗೌಡನ್ನ ಕರ್ಕೊಂಡು ಬಂದ್ರ ನಿಮ್ಮ ಬೇಗಂ? ಯಾಕ?- ಅಂತ ಕೇಳಿದೆ.

ಅಯ್ಯೋ....ಗೌಡನ್ನ ಕರ್ಕೊಂಡು ಬರಲಿಲ್ಲ ಸಾಬ್. ಗೌಡಾನ ತೊಗೊಂಡು ಬಂದ್ರು - ಅಂದ ಕರೀಂ.

ಇವಂಗ ಮೊದಲ ಕನ್ನಡ ಸರಿ ಬರಂಗಿಲ್ಲ. ಹಿಂದೊಮ್ಮೆ ಹೆಂಡ್ತೀಗೆ ಮಿಠಾಯಿ ತಿನ್ನಸ್ತೇನಿ ಅನ್ನೋದಕ್ಕ ಮಿಠಾಯಿ ಸಿಗಸ್ತೇನಿ ಅಂದಿದ್ದ. ಹೀಂಗ ಇರೋ ಇವನ ಕನ್ನಡಕ್ಕ ನಾವ ಹೊಂದ್ಕೊಬೇಕು.

ಅಲ್ಲ...ಗೌಡನ್ನ ಕರ್ಕೊಂಡು ಬರಲಿಕ್ಕೆ ನಿಮ್ಮ ಬೇಗಂ ಅವರದ್ದು ಅಡಕಿ ತ್ವಾಟ ಅದ ಏನು? - ಅಂತ ಕೇಳಿದೆ.

ಅಯ್ಯೋ ಸಾಬ್....ನಿಮಗೆ ಸುಬೆ ಸುಬೆ ಚಾಯ್ ನಾಷ್ಟಾ ಆಗಿಲ್ಲ ಕ್ಯಾ? ನಮ್ಮ ಬೇಗಂ ಗೌಡಾನ ತೊಗೊಂಡು ಬರೋದಕ್ಕೂ ಅಡಿಕಿ ತ್ವಾಟಕ್ಕೂ ಏನು ಸಂಬಂಧ? ಕುಚ್ ಭೀ ಬೋಲ್ತಾ ಹಾಪ್ ಸಾಬ್ - ಅಂದ ಕರೀಂ. ಸ್ವಲ್ಪ ಇರಿಟೇಟ್ ಆಗಿದ್ದ.

ಅಲ್ಲರೀ ಸಾಬ್ರಾ...ಅಡಿಕಿ ತ್ವಾಟಕ್ಕ ಭಾಳ ನಮ್ಮನಿ ಗೌಡಗುಳು ಬರ್ತಾರ. ಅಡಕಿ ಕೊನೆ ಕೊಯ್ಯೋ ಕೊನೆ ಗೌಡ. ತ್ವಾಟಕ್ಕ ಮಣ್ಣು ಹಾಕೋ ಮಣ್ಣು ಗೌಡ. ಗೊಬ್ಬರದ ಗುಂಡಿ ಖಾಲಿ ಮಾಡ್ಸೋ ಗುತ್ತಗಿ ಹಿಡಿಯೋ ಜಿ.ಜಿ.ಗೌಡ. ಮತ್ತ ತಂಡದ ಶೇರುಗಾರ ಗೌಡ. ಹೀಂಗ ಎಲ್ಲಾ ತರಹದ ಆಳುಗಳು ಒಂದಲ್ಲ ಒಂದು ತರಹದ ಗೌಡಗಳೇ ನೋಡ್ರೀ. ಅದಕ್ಕ ಕೇಳಿದೆ. ಯಾವ ನಮೂನಿ ಗೌಡನ್ನ ನಿಮ್ಮ ಮಿಸೆಸ್ ಕರ್ಕೊಂಡು ಬಂದಾರ ಅಂತ? ತಿಳೀತ? - ಅಂತ ಕೇಳಿದೆ.

ಜಿ ಜಿ ಗೌಡಾ ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

ಅಷ್ಟು ಮಂದಿ ಅಡಿಕಿ ಗೌಡರ ಬಗ್ಗೆ ಹೇಳಿದರ ಅದೊಂದ ಅವನ  ತಲಿಯೊಳಗ ನಿಂತದ - ಜಿ ಜಿ ಗೌಡಾ.

ಅದರೀ....ಜಿ ಜಿ ಗೌಡಾ ಅಂದ್ರ ಗೊಬ್ಬರ ಗುಂಡಿ ಗೌಡಾ ಅಂತ. ಶಾರ್ಟ್ ಮಾಡಿ ಹೇಳ್ತೇವಿ. ಅಷ್ಟ. - ಅಂದೆ.

ಈ ಪೈಕಿ ಯಾವದೇ ಗೌಡ ಅಲ್ಲ ಬಿಡಿ ಸಾಬ್. ಮುಂದೆ ಗೆಸ್ ಮಾಡಿ ನೋಡೋಣ. ಏನು ಭಾಳಾ ಹೋಶಿಯಾರ್ ಅಂತಾ ತಿಳಕೊಂಡೀರಿ ಕ್ಯಾ? ಗೆಸ್ ಮಾಡಿ. ಮಾಡಿ - ಅಂದ ಕರೀಂ. ಚಾಲೆಂಜ್ ಮಾಡಿದ. 

ಹಾಂಗ? ಮತ್ಯಾವ ಗೌಡಾ ಇರಬಹುದು? ಅಂತ ವಿಚಾರ ಮಾಡಿದೆ.

ಅಡಿಕಿ ತ್ವಾಟದ ಗೌಡಗೋಳು ಅಲ್ಲಾ ಅಂದ್ರ, ಮತ್ತೇನು ರಾಜಕೀಯದ ಗೌಡರೇನ್ರೀ ಸಾಬ್ರಾ? ಅಂದ್ರ ದೇವೇಗೌಡ, ಮಾದೇಗೌಡ, ಹುಚ್ಚ ಮಾಸ್ತಿ ಗೌಡ, ಚಿಗರೆ ಮಾಚಿ ಗೌಡ, ನಾಗೇಗೌಡ ಅಂತ ದೊಡ್ಡ ದೊಡ್ಡ ರಾಜಕೀಯ ಮುಖಂಡರು ಗೌಡ ಅನ್ನೊ ಹೆಸರೀಲೆ ಇದ್ದರು. ಅವರ ಪೈಕಿ ಯಾರನ್ನಾರ ಕರ್ಕೊಂಡು ಬಂದಾರೇನು? ಯಾಕ? - ಅಂತ ಕೇಳಿದೆ.

ಅಯ್ಯೋ....ಇಲ್ಲ ಸಾಬ್. ಮತ್ತೆ ಗಲತ್ ಜವಾಬ್. ಇದು ಆದಮೀ ಗೌಡಾ ಅಲ್ಲವೇ ಅಲ್ಲ. ಸಮಝೆ ಕ್ಯಾ? - ಅಂತ ನಿಗೂಢ ಲುಕ್ ಕೊಟ್ಟ ಕರೀಂ.

ಮತ್ತೆಂತಾ ಗೌಡಾ? ನೀನ ಹೇಳಪಾ. ಭಾಳ ಶಾಣ್ಯಾ ಆಗಿ. ಏನೇನೋ ಕೊಸ್ಚನ್ ಕೇಳಿ ಮಂಗ್ಯಾ ಮಾಡ್ತೀ. ಹಾಂ...ಹಾಂ...- ಅಂದು ಶರಣು ಶರಣಾರ್ಥಿ ಪೋಸಿನ್ಯಾಗ ನಿಂತೆ.

ಸಾಬ್...ಗೌಡಾ ಅಂದ್ರೆ ಹರಿನರಿ ಡಾಕ್ಟರೇಟ್. ಸಮಝೆ ಕ್ಯಾ? - ಅಂದ ಕರೀಂ ಮತ್ತೊಂದು ಹೊಸ ಬಾಂಬ್ ಹಾಕಿದ.

ಹರಿನರಿ ಡಾಕ್ಟರೇಟ್!!!!!?????

ಅಂದ್ರ ಏನು? ನಿಮ್ಮ ಬೇಗಂ ಹರಿಗೂ ನರಿಗೂ ಔಷಧ ಕೊಡೋ ಡಾಕ್ಟರ್ ಆಗ್ಯಾರ ಏನು? ಇಷ್ಟ ಲಗೂ? ಒಂದೊಂದಕ್ಕ ಕಮ್ಮಿ ಕಮ್ಮಿ ಅಂದ್ರೂ ಐದು ಐದು ವರ್ಷ ಬೇಕು. ಹ್ಯಾಂಗ ಇಷ್ಟು ಲಗು ಡಾಕ್ಟರ್ ಆದರು? - ಅಂತ ಫುಲ್ ಕಂಫ್ಯೂಸ್ ಆಗಿ ಕೇಳಿದೆ.

ಅಯ್ಯೋ....ಜನದ್ದು ದನದ್ದು ಡಾಕ್ಟರ್ ಅಲ್ಲ ಸಾಬ್. ಗೌಡಾ ಅಂದ್ರೆ ಒಂದು ತರಹರದ ಡಾಕ್ಟರ್ ಹೌದು. ಆದ್ರೆ ದವಾ ಕೊಟ್ಟು ಇಲಾಜ್ ಮಾಡೋ ಡಾಕ್ಟರ್ ಅಲ್ಲ - ಅಂದ ಕರೀಂ.

ಅದಲ್ಲ ಅಂದ್ರ, ದುವಾ ಮಾಡಿ ಇಲಾಜ್ ಮಾಡೋ ಡಾಕ್ಟರ್ ಏನು? ನಿಮ್ಮ ಹೆಂಡ್ತೀ ನಿಮ್ಮ ಪದ್ಧತಿ ಪ್ರಕಾರ ಪೂಜಾ ಅದು ಇದು ಮಾಡೋ ಭಡ್ತೀ ಆಗ್ಯಾರೇನೂ ? - ಅಂತ ಕೇಳಿದೆ.

ಇಲ್ಲಾ ಸಾಬ್....ನಿಮಗೆ ತಿಳಿಯೋದಿಲ್ಲ. ಗೌಡಾ ಅಂದ್ರೆ ಒಂದು ತರಹದ ಇಜ್ಜತವಾಲಾ ಡಾಕ್ಟರೇಟ್. ಅದಕ್ಕೆ ಏನೋ ಗುರವ್ವಂದು ಡಾಕ್ಟರೇಟ್ ಅಂತಾರಂತೆ. ಅದಕ್ಕೆ ಶಾರ್ಟ್ ಆಗಿ ಗೌಡಾ ಅಂತ ಹೇಳ್ತಾರೆ. ನಿಮಗೆ ತಿಳದೀತು ಅಂತ ಹಾಗೆ ಅಂದ್ರೆ, ಏನೇನೋ ಇಲ್ಲದ ಕಹಾನಿ ಹೇಳ್ತೀರಿ. ಇದ್ದ ಅಕಲ್ ಎಲ್ಲಾ ಎಲ್ಲಿ ಗಾಯಬ್ ಆತು ಸಾಬ್? - ಅಂದು ಅಣಕಿಸಿದ ಕರೀಂ.

ಹಾಂ?!!!!ಗುರವ್ವಂದು ಡಾಕ್ಟರೇಟ್!!! ಅಂದ್ರ? ಇನ್ನು ಮುಂದ ಲಿಂಗವ್ವಂದು, ಮಂಗವ್ವಂದು ಅಂತ ಎಲ್ಲಾ ಬ್ಯಾರೆ ಬ್ಯಾರೆ ಮಂದಿ ಡಾಕ್ಟರೇಟ್ ಸಹಿತ ಬರ್ತಾವೇನು? ಅಂತ ಸಂಶಯ ಬಂತು.

ಏನೋ ಹೊಳಿತು. ಇಜ್ಜತವಾಲಾ ಡಾಕ್ಟರೇಟ್. ಇಜ್ಜತ್ ಅಂದ್ರ.....ಗೌರವ. ಗೌರವ ಡಾಕ್ಟರೇಟ್. ಅಂದ್ರ....ಗೌಡಾ!!!!!! ಅಂದ್ರ ಆನರರಿ (honorary) ಡಾಕ್ಟರೇಟ್. ಇವ ಹರಿನರಿ ಅಂದಾನ. ಏನೂ ಹೊಸದಲ್ಲ. ಅವನ ಕನ್ನಡ ಇಂಗ್ಲಿಶ್ ಎಲ್ಲ ಭಾಳ ತುಟ್ಟಿ.

ಸಾಬ್ರ....ನಿಮ್ಮ ಮಿಸೆಸ್ ಗೌರವ ಡಾಕ್ಟರೇಟ್ ತಂದುಕೊಂಡಾರ? ಅದಕ್ಕ ಗೌಡಾ, ಹರಿನರಿ ಡಾಕ್ಟರೇಟ್, ಇಜ್ಜತವಾಲ ಡಾಕ್ಟರೇಟ್ ಅಂತ ಏನೇನೋ ಅನ್ತೀರಲ್ಲರೀ. ಏನ್ರೀ? ಅವರು ಅಲ್ಲೆ  ಡಾಕ್ಟರೇಟ್ ಅದು ಇದು ತೊಗೊಂಡರ ನಿಮ್ಮ ಅಕಲ್ ಎಲ್ಲೆ ಹೊಂಟದ ದನಾ ಕಾಯಲಿಕ್ಕೆ? ಸರೀತ್ನಾಗಿ ಕನ್ನಡ ಸಹಿತ ಮಾತಾಡೋದಿಲ್ಲ ನೀವು - ಅಂತ ಕಾಡಸಿದೆ.

ಸಾಬ್....ನಮಗೇನು ಗೊತ್ತು ಸಾಬ್? ಯಾವದೋ ಪತ್ರಿಕೆಯಲ್ಲಿ  "ಮೆಹರುನ್ನೀಸಾ ಬೇಗಂ ತಂದುಕೊಂಡ ಗೌಡಾ" ಅಂತ ಬಂದಿತ್ತು ಸಾಬ್. ನಾವು ಕೇಳಿದ್ದಕ್ಕೆ, ನಮ್ಮ ಬೇಗಂ, ಅವರಿಗೆ ಯಾವದೋ ಯೂನಿವರ್ಸಿಟಿ ಆಕಿಗೆ ಇಜ್ಜತವಾಲಾ ಡಾಕ್ಟರೇಟ್ ಕೊಟ್ಟಿದೆ, ಅಂತ ಹೇಳಿದಳು ಸಾಬ್ - ಅಂತ ಹೇಳಿದ ಕರೀಂ ಅವನ ಹಾಪ್ ಬೇಗಂಗೆ ಗೌಡಾ ಹ್ಯಾಂಗ ಸಿಕ್ಕಿತು ಅನ್ನೋದನ್ನ ಹೇಳಿದ.

ಅಲ್ಲ ಸಾಬ್ರ...ಗೌಡಾ ನಾರ್ಮಲೀ ದೊಡ್ಡ ದೊಡ್ಡ ಕೆಲಸ ಮಾಡಿದ ಮಂದಿಗೆ ಯೂನಿವರ್ಸಿಟಿಗಳು ಅವಾಗೇ ಕೊಟ್ಟು ತಮ್ಮ ಗೌರವ ಹೆಚ್ಚು ಮಾಡಿಕೊಳ್ಳತಾವ. ಹಾಂಗಿರೋವಾಗ ನಿಮ್ಮ ಹೆಂಡ್ರು ಗೌಡಾ ತಂದುಕೊಂಡ್ರು ಅಂದ್ರ ಏನು ಅರ್ಥ? - ಅಂತ ಕೇಳಿದೆ.

ಹೌದು ಸಾಬ್....ನಮ್ಮದೂಕೆ ೫ ಲಕ್ಷ ರೂಪಾಯಿ ಮುಂಡಾಯಿಸಿ ಅವಳು ಗೌಡಾ ತಂದುಕೊಂಡಿದ್ದಾಳೆ - ಅಂದ ಕರೀಂ ಒಂದು ದೊಡ್ಡ ನುಕ್ಸಾನ್ ಆದ ಬಗ್ಗೆ ವಿಷಾದ ಭಾವದಿಂದ ಹೇಳಿದ. 

ಹೋಗ್ಗೋ ನಿಮ್ಮ!!!! ರೊಕ್ಕಾ ಕೊಟ್ಟು ಗೌಡಾ ತಂದುಕೊಂಡ್ರ? ಯಾವ ಯೂನಿವರ್ಸಿಟಿಯಿಂದ? ಚೊಲೋ ರೆಪ್ಯೂಟೆಡ್ ಯೂನಿವರ್ಸಿಟಿ ಯಾವದೂ ಹಾಂಗ ಕೊಡೋದಿಲ್ಲ. ಹಾಂ ಹಾಂ? - ಅಂತ ಕೇಳಿದೆ.

ಸಾಬ್....ನಮ್ಮದು ಬೇಗಂ ಆಫ್ಘಾನಿಸ್ತಾನದ TITS ಅನ್ನೋ ಯೂನಿವರ್ಸಿಟಿಯಿಂದ ಗೌಡಾ ತಂದುಕೊಂಡಿದ್ದಾಳೆ - ಅಂದ ಕರೀಂ ಮತ್ತೊಂದು ಬಾಂಬ್ ಹಾಕಿದ.

ಶಂಭೋ ಶಂಕರ!!!!ಶಿವಾ ಶಿವಾ!!! ನೀನು ಗೌಡಾ ಅಂದಿದ್ದು ನನಗ ಲೌಡಾ ಅಂತ ಕೇಳಿದ್ದು ಈ TITS ಯೂನಿವರ್ಸಿಟಿ ಮಹಿಮೆ ಇರಬೇಕು ನೋಡು. ಅಸಡ್ಡಾಳ್ ಡಿಗ್ರೀ, ಅಸಡ್ಡಾಳ್ ಯೂನಿವರ್ಸಿಟಿ ಹೆಸರು. ಛೀ...ಛೀ....ಅಸಹ್ಯ.....TITS ಅಂತ ಯಾವ ಯೂನಿವರ್ಸಿಟಿ ಹೆಸರು ಇರ್ತದೋ? - ಅಂತ ಹೇಳಿದೆ.

ಕರೀಂ ತನ್ನ ಸ್ಮಾರ್ಟ್ ಫೋನ್ ತೆಗೆದವನ ಏನೇನೋ ಕುಟುಕುಟು ಕುಟ್ಟಿ TITS ಯೂನಿವರ್ಸಿಟಿ ವೆಬ್ ಸೈಟ್ ತೋರ್ಸೇ ಬಿಟ್ಟ.

ತಾಲಿಬಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ & ಸಾಯಿನ್ಸ್ (TITS) ಅಂತ ಒಂದು ಆಫ್ಘಾನಿಸ್ತಾನದ ಯುನಿವರ್ಸಿಟಿ ನನ್ನ ಮಸಡಿ ಮುಂದ ರಾರಾಜಿಸುತ್ತಿತ್ತು. 

ಏನು ಸಾಬ್? TITS ಅಂದ್ರೆ ಏನು ಪ್ರಾಬ್ಲೆಮ್? ನೀವೂ ಸಹಿತ TITS ನಿಂದಾನೇ ಡಿಗ್ರಿ ಮಾಡಿದ್ದು. ಅಲ್ಲಾ?  - ಅಂದ ಕರೀಂ.

ಇಲ್ಲೋ ಪುಣ್ಯಾತ್ಮಾ ...ನಾ ಡಿಗ್ರಿ ಮಾಡಿದ್ದು BITS ನಲ್ಲಿ ಮಾರಾಯಾ. TITS ಅಲ್ಲ - ಅಂತ ವಿವರಣೆ ಕೊಟ್ಟೆ.

TITS, BITS ಎಲ್ಲಾ ಒಂದೇ ಅನ್ನೋ ಲುಕ್ ಕೊಟ್ಟ ಕರೀಂ. ನಮ್ಮ ಕರ್ಮ.

ಮತ್ತ ಒಂದೆರಡು ಲಿಂಕ್ ವತ್ತಿ ಅವನ ಬೇಗಂ ಡಿಗ್ರಿ ತೊಗೊಳ್ಳೋ ಫೋಟೋ ತೋರ್ಸೀದಾ. ಯಾರೋ ಪಠಾಣಿ ಸೂಟ್ ಹಾಕಿ ಕೊಂಡಿದ್ದ ದೊಡ್ಡ ದೊಡ್ಡ ಗಡ್ಡದ ತಾಲಿಬಾನ್ ಮೌಲವೀ ಅಂತಹ  ಮಂದಿ ಫುಲ್ ಪರ್ದಾದಿಂದ ಕವರ್ ಆಗಿದ್ದ ಆಕಾರ ಒಂದಕ್ಕ ಡಿಗ್ರಿ ಹಂತಾದ್ದೇನೋ ಕೊಡಲಿಕತ್ತಿದ್ದರು.

ಸಾಬ್ರಾ...ಯಾವಾಗ ಹೋಗಿ ಬಂದ್ರೀ ಅಫ್ಘಾನಿಸ್ತಾನಕ್ಕ? ಅಥವಾ ಬೇಗಂ ಒಬ್ಬರ ಹೋಗಿ ಡಿಗ್ರಿ ತೊಗೊಂಡು ಬಂದರೋ? ಅಲ್ಲಿಗೆ ಹೋಗೋದು ಭಾಳ ಕಠಿಣ ಅಂತ ಕೇಳೇನಿ. ಏನ್ ಕಥಿ? - ಅಂತ ಕೇಳಿದೆ.

ಯಾರೂ ಹೋಗಿಲ್ಲ ಸಾಬ್. ರೊಕ್ಕಾ ದುಬೈಗೆ ಹವಾಲಾ ಮೂಲಕ ಕಳಸಿದ್ವಿ. ಅಲ್ಲಿ ನಮ್ಮ ಮಾಮೂಜಾನ್ ಛೋಟಾ ವಕೀಲ್ ಇದ್ದಾರೆ ನೋಡಿ. ಅವರು ತಾಲಿಬಾನ್ ಮಂದಿಗೆ ರೊಕ್ಕಾ ಹೋಗಿ ಮುಟ್ಟುವ ಹಾಗೆ ಮಾಡಿದ್ರು. ನಮ್ಮ ಬೇಗಂಗೆ ಗೌಡಾ ಪೋಸ್ಟಲ್ಲಿ ಬಂತು. ರಿಜಿಸ್ಟರ್ಡ್ ಪೋಸ್ಟ್ ಮತ್ತೆ  - ಅಂತ ತಣ್ಣಗ ಹೇಳಿದ ಕರೀಂ.

ಮತ್ತ ನಿಮ್ಮ ಹೆಂಡ್ತಿ ಡಿಗ್ರಿ ತೊಗೊಳ್ಳೋ ಫೋಟೋ? ಅದೂ ವೆಬ್ ಸೈಟಿನ್ಯಾಗ? ಹ್ಯಾಂಗ ಬಂತ್ರೀ? - ಅಂತ ಕೇಳಿದೆ.

ಸಾಬ್ ಅವರದ್ದು ಒಂದು ಸ್ಟ್ಯಾಂಡರ್ಡ್ ಫೋಟೋ ಇರ್ತದೆ. ಫುಲ್ ಪರ್ದಾ ಹಾಕಿಕೊಂಡ ಯಾವದೋ ಒಂದು ಬೇಗಂ ಡಿಗ್ರಿ ತೊಗೊಳ್ಳೋ ಫೋಟೋ ಇರ್ತದೆ. ಹೊಸಾ ಹೊಸಾ ಗೌಡಾ ಕೊಟ್ಟ ಹಾಗೆ, ಅದೇ ಫೋಟೋ ಕಾಪಿ ಮಾಡೋದು ಮತ್ತೆ ಹೆಸರು ಚೇಂಜ್ ಮಾಡ್ಬಿಟ್ಟಿ ವೆಬ್ ಸೈಟಲ್ಲಿ ಹಾಕಿ ಬಿಡೋದು. ಫುಲ್ ಪರ್ದಾ ಇರ್ತದೆ. ಎಲ್ಲಾ ಒಂದೇ ತರಹ ಕಾಣ್ತಾರೆ. ಪರ್ದಾ ಪಾಶ್ ಮಾಡೋರು ಯಾರು? ಗೌಡಾ ತೊಗೊಂಡವರು ತಮಗೆ ಹ್ಯಾಗೆ ಬೇಕು ಹಾಗೆ ರೈಲು ಬಿಟ್ಟುಗೊಂಡು, ಬ್ಹೊಂಗು ಹೊಡೆದುಕೊಂಡು ಇರಬಹದು. ಹ್ಯಾಗೆ ಇದೆ ನಮ್ಮ ಬೇಗಂ ಗೌಡಾ ಕಮಾಲ್? ನಿಮ್ಮ ಕಡೆ ಐತೆ ಕ್ಯಾ ಡಾಕ್ಟರೇಟ್ ಡಿಗ್ರಿ? ಎಷ್ಟೆಷ್ಟೋ ವರ್ಷ ಓದ್ಬಿಟ್ಟಿ ಬರೇ ಮಾಸ್ತರ್ ಡಿಗ್ರಿ ಮಾಡ್ಕೊಂಡ್ರೀ. ನಮ್ಮದು ಬೇಗಂ ನೋಡಿ ಹೇಗೆ ಗೌಡಾ ಆಗಿದೆ ಅಂತಾ? - ಅಂದ ಕರೀಂ.

ಮಾಸ್ತರ್ ಡಿಗ್ರೀ ಅಲ್ಲೋ ಪುಣ್ಯಾತ್ಮಾ. ಮಾಸ್ಟರ್ ಡಿಗ್ರೀ ಅನ್ನೋ - ಅಂತ ನನ್ನ ಡಿಗ್ರಿಯ ಸ್ವಲ್ಪ ಮರ್ಯಾದೆ ಉಳಿಸಿಕೊಳ್ಳೋ ಪ್ರಯತ್ನ ಮಾಡಿದೆ.

ಈಗ ನಮ್ಮ ಕರೀಂ ಅಂದ್ರ ಬರೇ ಕರೀಂ ಅಲ್ಲ. ಹಸ್ಬಂಡ್ ಆಫ್ ಡಾ!! ಮೆಹರುನ್ನೀಸಾ ಬೇಗಂ.

* ನನಗೆ ತಿಳಿದ ಮಟ್ಟಿಗೆ ಗೌರವ ಡಾಕ್ಟರೇಟ್ ಅನ್ನು ಗೌಡಾ ಅಂತ ಮೊದಲ ಬಾರಿಗೆ ಶಾರ್ಟ್ ಮಾಡಿ, ಬೇಕಾಬಿಟ್ಟಿ ಗೌಡಾ ಕೊಡುವ ಯೂನಿವರ್ಸಿಟಿಗಳನ್ನು ಮತ್ತು ದುಡ್ಡು ಕೊಟ್ಟು ಗೌಡಾ ಖರೀದಿ ಮಾಡುವ ಜನರನ್ನು ಟೀಕಿಸಿದವರು ಪತ್ರಕರ್ತ ವಿಶ್ವೇಶ್ವರ ಭಟ್ಟರು.

No comments: