Wednesday, May 28, 2014

'ಅಜಿತ್ ಕುಮಾರ್ ದೋವಲ್' ಎಂಬ ಖತರ್ನಾಕ್ ಮಾಜಿ ಗೂಢಚಾರ ಈಗ ಹೊಸ 'ರಾಷ್ಟ್ರೀಯ ಭದ್ರತಾ ಸಲಹೆಗಾರ'

ಅಜಿತ್ ಕುಮಾರ್ ದೋವಲ್

ಪುರಾತನ ಪೋಲೀಸ್ ಆಫೀಸರ್ ಅಜಿತ್ ಕುಮಾರ್ ದೋವಲ್ ಮತ್ತೆ ವಾಪಸ್ ಬಂದಿದ್ದಾರೆ. ಈಸಲ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ.

ಈ ಅಜಿತ್ ಕುಮಾರ್ ಸಾಹೇಬರು IPS ಶ್ರೇಣಿಯ ಪೋಲೀಸ್ ಅಧಿಕಾರಿಯೇ ಆದರೂ ಅವರು ಯುನಿಫಾರ್ಮ್ ಹಾಕಿ, ಲಾಠಿ ಬೀಸಿ ಪೋಲೀಸಗಿರಿ ಮಾಡಿದ್ದು ಇಲ್ಲವೇ ಇಲ್ಲ. ಅವರದ್ದು ಏನಿದ್ದರೂ ಛುಪಾ ರುಸ್ತಂ ಎಂಬಂತೆ ಬೇಹುಗಾರಿಕೆ ಕೆಲಸ. ಅವರು ಮೊದಲಿಂದಲೂ ಭಾರತದ ಆಂತರಿಕ ಬೇಹುಗಾರಿಕೆ ಸಂಸ್ಥೆ - ಇಂಟೆಲಿಜೆನ್ಸ್ ಬ್ಯೂರೋನಲ್ಲಿ (IB) - ಸೇವೆ ಆರಂಭಿಸಿ, ಹಂತ ಹಂತವಾಗಿ ಬೆಳೆದು, ಕೊನೆಯಲ್ಲಿ ಅಲ್ಲಿಯೇ ಡೈರೆಕ್ಟರ್ ಅಂತ ರಿಟೈರ್ ಆದವರು.

ಈ ಅಜಿತ್ ಕುಮಾರ್ ದೋವಲ್ covert operations ಅನ್ನುವಂತಹ ಪರಮ ರಹಸ್ಯ ಕಾರ್ಯಾಚರಣೆಗಳಿಗೆ ಹೆಸರಾದವರು. ಅಂತಹ ಕಾರ್ಯಾಚರಣೆಗಳೇ ಹಾಗೆ, ಬಾಯಿಬಿಟ್ಟು ಮಾತಾಡಲು ಆಗುವದಿಲ್ಲ. ಎಲ್ಲೋ ಯಾರೋ ದೊಡ್ಡ ಉಗ್ರವಾದಿಯೋ, ಶತ್ರು ದೇಶದ ನಾಯಕನೋ ನಿಗೂಢ ರೀತಿಯಲ್ಲಿ ಸಾಯುತ್ತಾರೆ. ಎಲ್ಲೋ ಕಾರಣವಿಲ್ಲದೆ ವಿಮಾನವೊಂದು ಆಕಾಶದಲ್ಲೇ ಢಂ ಅಂದು ಕೆಲವರು ಹರೋ ಹರ ಅಂದು ಬಿಡುತ್ತಾರೆ. ಅಲ್ಲಲ್ಲಿ ಗುಸು ಗುಸು ಸುದ್ದಿ. ಇದು ಯಾವದೋ ಬೇಹುಗಾರಿಕೆ ಸಂಸ್ಥೆ ಮಾಡಿದ, ಮಾಡಿಸಿದ ಒಂದು ರಹಸ್ಯ ಕಾರ್ಯಾಚರಣೆ ಅಂತ. ಮಾಡಿದವರ, ಮಾಡಿಸಿದವರ ಹೆಜ್ಜೆ ಗುರುತು ಎಲ್ಲೂ ಸಿಗದಂತೆ ಮಾಡಿ ಬರುವದೇ ಇಂತಹ covert operators ಗಳ ವಿಶೇಷತೆ. ಅಜಿತ್ ಕುಮಾರ್ ದೋವಲ್ ಈತರಹದ ದೊಡ್ಡ ಮಟ್ಟದ ಖತರ್ನಾಕ್ ರಹಸ್ಯ ಕಾರ್ಯಾಚರಣೆಗಳಿಗೆ ಫೇಮಸ್.

ಅಲ್ಲೋ ಇಲ್ಲೋ ಅವರು ಮಾಡಿದ, ಮಾಡಿಸಿದ ಕೆಲವು ಕಾರ್ಯಾಚರಣೆಗಳ ಝಲಕ್ ಬಂದು ಹೋಗಿವೆ. ಅವೆಲ್ಲ ಮಾಹಿತಿ ಸಂಗ್ರಹಿಸಿ, connect the dots ಅನ್ನೋ ತರಹ puzzle pieces ಕೂಡಿಸುತ್ತ ಹೋದರೆ ಇವರ ಬಗ್ಗೆ ಒಂದು ಸಮಗ್ರ ಚಿತ್ರಣ ಸಿಗುತ್ತದೆ.

ಲಾಲ್ ಡೆಂಗಾ - ಪುರಾತನ ಉಗ್ರಗಾಮಿ. ೧೯೬೦ ರ ದಶಕದಿಂದಲೇ ಭಾರತದ ವಿರುದ್ಧ ಮಿಜೋರಾಂ ಪ್ರತ್ಯೇಕ ಬೇಕು ಅಂತ ಚೀನಾ ಇತರರು ಕೊಟ್ಟ ಕುಮ್ಮಕ್ಕಿನೊಂದಿಗೆ ಇಲ್ಲದ ತೊಂದರೆ ಕೊಟ್ಟವ. ಸಂಧಾನದ ನೆಪದಲ್ಲಿ ಅಜಿತ್ ಕುಮಾರ್ ದೋವಲ್ ಇಂತಹ ಲಾಲ್ ಡೆಂಗನ ಜೊತೆ ಮಾತುಕತೆ ಶುರುವಿಟ್ಟುಕೊಂಡರು. ಮಾತುಕತೆ ನಡೆಸುತ್ತಲೇ ಲಾಲ್ ಡೆಂಗನ ಸಂಘಟನೆಯನ್ನು ಬರೋಬ್ಬರಿ ಒಡೆದರು. ಲಾಲ್ ಡೆಂಗನ ಅತಿ ಪ್ರಮುಖ ಕೆಲ ಅನುಯಾಯಿಯಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಇದಾದ ನಂತರ ಇಲ್ಲದ ರೋಪು ಹಾಕಿ ಸಂಧಾನಕ್ಕೆ ಬರಲು ನಕರಾ ಮಾಡುತ್ತಿದ್ದ ಲಾಲ್ ಡೆಂಗಾ ತೆಪ್ಪಗೆ ಬಂದು ಸಂಧಾನಕ್ಕೆ ಕೂತು, ಮಿಜೋ ಸಮಸ್ಯೆಗೆ ಒಂದು ತರಹದ ಮಂಗಳ ಹಾಡಿ ಹೋದ. ನಂತರ ಲಾಲ್ ಡೆಂಗ್ ಅವನೇ ಹೇಳಿಕೊಂಡಿದ್ದ - ಸಂಧಾನಕ್ಕೆ ಬಂದ ಅಜಿತ್ ದೋವಲ್ ಸಾಹೇಬರು ನನ್ನ ಖಾಸ್ ಜನರನ್ನು ಎಳೆದುಕೊಂಡು ಹೋಗಿಬಿಟ್ಟರು. ಮತ್ತೇನು ಮಾಡಲಿ? ಸಂಧಾನಕ್ಕೆ ಹೋಗಲೇ ಬೇಕಾಯಿತು, ಅಂತ. ಹೀಗೆ ಲಾಲ್ ಡೆಂಗನಂತಹ ಖದೀಮನಿಗೇ ಡಿಂಗ್ ಡಾಂಗ್ ಮಾಡಿದ ಪ್ರಳಯಾಂತಕ ಈ ಅಜಿತ್ ಕುಮಾರ್ ದೋವಲ್.  ಇಂತಹ ಕಾರ್ಯಾಚರಣೆ ಮಾಡುವದು ಎಷ್ಟು ಅಪಾಯಕಾರಿ ಕೆಲಸ ಅಂತ ತಿಳಿಯಲು ಇಂತಹ ಕೆಲ ಕಾರ್ಯಾಚರಣೆ ಮಾಡಿ ತಮ್ಮ ಅನುಭವ ಬರೆದುಕೊಂಡ ಇನ್ನೊಬ್ಬ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ M.K. ಧಾರ್ ಬರೆದ ಪುಸ್ತಕ ಓದಬೇಕು. ಸದಾ ಕತ್ತಿ ಅಲುಗಿನ ಮೇಲೆ ನಡೆದಷ್ಟು ರಿಸ್ಕಿ. ಏನೋ ಒಂದು ತರಹದ ಇಲ್ಲದ ನಂಬಿಕೆಯಿಟ್ಟು ತಮ್ಮೊಳಗೆ ಬಿಟ್ಟುಕೊಂಡಿರುತ್ತಾರೆ ಉಗ್ರರು. ಸಂಧಾನದ ನೆಪದಲ್ಲಿ ಹೋಗಿ, ಅವರ ಬುಡಕ್ಕೇ ಬತ್ತಿ ಇಟ್ಟು, ಅವರ ಸಂಘಟನೆ ಒಡೆಯುವ ಇತ್ಯಾದಿ 'ವಿದ್ರೋಹಿ' ಕೆಲಸ ಮಾಡುವದು ಗೊತ್ತಾದರೆ ಅಷ್ಟೇ ಮತ್ತೆ! ಸಂಧಾನಕ್ಕೆ ಹೋದವರ ಹೆಣ ಕೂಡ ವಾಪಸ್ ಬರೋದಿಲ್ಲ. ಎಷ್ಟೋ ಸಲ ಹಾಗೆ ಆಗಿದ್ದೂ ಇದೆ.

ಮುಂದೆ ೧೯೮೦ ರ ದಶಕ. ಪಂಜಾಬಿನಲ್ಲಿ ಸಿಖ್ ಉಗ್ರವಾದ. ಅದಕ್ಕೆ ಪಕ್ಕದ ಪಾಕಿಸ್ತಾನದ ಸಂಪೂರ್ಣ ಸಹಾಯ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ISI ನ ಅಧಿಕಾರಿಗಳು ಬಂದು ತಿಂಗಳುಗಟ್ಟಲೆ ಅಮೃತಸರದ ಸ್ವರ್ಣಮಂದಿರದಲ್ಲಿ ಝೇಂಡಾ ಹೊಡೆದು, ಸರಿಯಾಗಿ ಹೇಗೆ ಕಿತಾಪತಿ ಮಾಡಬೇಕು ಅಂತ ಸಿಖ್ ಉಗ್ರವಾದಿಗಳಿಗೆ ಸ್ಕೆಚ್ ಹಾಕಿ ಕೊಡುತ್ತಿದ್ದರು. ಒಮ್ಮೆ ಒಬ್ಬ ISI ಅಧಿಕಾರಿ ಬರುತ್ತಿರುವ ವಿಚಾರ ಭಾರತದ ಬೇಹುಗಾರರಿಗೆ ತಿಳಿಯಿತು. ಅವನನ್ನು ಮೊದಲೇ intercept ಮಾಡಿ ಒಳಗೆ ಹಾಕಲಾಯಿತು. ಅಜಿತ್ ಕುಮಾರ್ ದೋವಲ್ ಮತ್ತೆ ಫೀಲ್ಡಿಗೆ ಇಳಿದರು. ಈ ಸರೆ ದೊಡ್ಡ ಖರ್ತನಾಕ್ ಕಾರ್ಯಾಚರಣೆ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಸಾವು ಖಚಿತ. ವೇಷ ಭೂಷಣ ಬದಲಾಯಿಸಿಕೊಂಡ ಅಜಿತ್ ಕುಮಾರ್ ತಾವೇ ಆ ISI ಆಫೀಸರ್ ಅನ್ನುವ ಗೆಟಪ್ಪಿನಲ್ಲಿ ಅಮೃತಸರದ ಸಿಖ್ ದೇಗುಲ ಹೊಕ್ಕಿಬಿಟ್ಟರು. ಎಲ್ಲ ಪರ್ಫೆಕ್ಟ್ ತಯಾರಿ ಮಾಡಿಕೊಂಡೇ ಹೋಗಿದ್ದರು. ಸಿಖ್ ಉಗ್ರವಾದಿಗಳಿಗೆ ಸ್ವಲ್ಪೂ ಸಂಶಯ ಬರದಂತೆ ಸಿಂಹದ ಗುಹೆಯಂತಿದ್ದ ಆ ಕಾಲದ ಸ್ವರ್ಣಮಂದಿರ ಹೊಕ್ಕಿದ್ದರು ಇವರು. ತಮ್ಮ ಬುದ್ಧಿವಂತಿಕೆ, ಸಮಯ ಪ್ರಜ್ಞೆ, ಅಪಾರ ಅನುಭವ, ಧೈರ್ಯ ಬಿಟ್ಟರೆ ಬೇರೆ ಏನೂ ಬೆಂಬಲಕ್ಕೆ ಇಲ್ಲ. ಹೀಗೆ ಮಾರುವೇಷದಲ್ಲಿ ಸ್ವರ್ಣಮಂದಿರ ಹೊಕ್ಕು, ಸುಮಾರು ದಿನ ಅಲ್ಲಿದ್ದು, ಎಲ್ಲ ಮಾಹಿತಿ ಬರೋಬ್ಬರಿ ಒಟ್ಟಾಕಿಕೊಂಡು ಬಂದು, ಕೊಡಬೇಕಾದ ಸೈನ್ಯದವರಿಗೆ, ಪೊಲೀಸರಿಗೆ ಕೊಟ್ಟು, ಮುಂದಿನ ಕೆಲಸ ನಿಮ್ಮದು, ಅನ್ನುವಂತೆ ತಮ್ಮ ಮುಂದಿನ covert operation ಗೆ ಹೇಳ ಹೆಸರಿಲ್ಲದಂತೆ ಹೋಗಿ ಬಿಟ್ಟರು ದೋವಲ್. ಇವರು ಸಂಗ್ರಹಿಸಿ ತಂದು ಕೊಟ್ಟ ಮಾಹಿತಿಯನ್ನೇ ಉಪಯೋಗಿಸಿಕೊಂಡು ಸರ್ಕಾರ 'ಆಪರೇಷನ್ ಬ್ಲಾಕ್ ಥಂಡರ್' ಮಾಡಿ ಸಿಖ್ ಉಗ್ರವಾದ ಬೆನ್ನೆಲಬನ್ನು ಮುರಿದು ಹಾಕಿತು. ಅದೇ ಕೊನೆ. ನಂತರ ಸಿಖ್ ಉಗ್ರವಾದ ಮೊದಲಿನ ರೀತಿಯಲ್ಲಿ ಮೇಲೆದ್ದು ಬರಲೇ ಇಲ್ಲ. ಆ ಪರಿ ಬಾರಿಸಲಾಗಿತ್ತು ಸಿಖ್ ಉಗ್ರರನ್ನು. ಅದರ ಕ್ರೆಡಿಟ್ ಎಲ್ಲ KPS ಗಿಲ್ ಎಂಬ ಖಡಕ್ ಪೋಲೀಸ್ ಅಧಿಕಾರಿಗೆ ಹೋಯಿತು. ಆದರೆ ದೋವಲ್ ತರಹದ ಬೇಹುಗಾರರು ಮಾಹಿತಿ ಸಂಗ್ರಹಿಸಿ, ಸರಿಯಾಗಿ ಸ್ಕೆಚ್ ಹಾಕಿ ಕೊಡದಿದ್ದರೆ overt operations ಯಶಸ್ವಿಯಾಗುವದು ಅಷ್ಟರಲ್ಲೇ ಇದೆ.

೧೯೯೯ ರಲ್ಲಿ ಪಾಕಿ ಉಗ್ರರು ನೇಪಾಳದ ಖಾಟಮಾಂಡುವಿನಿಂದ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಿಸಿ ಸೀದಾ ಅಫಘಾನಿಸ್ತಾನದ ಕಂದಹಾರಕ್ಕೆ ಒಯ್ದುಬಿಟ್ಟರು. ಅವರ ಬೇಡಿಕೆ ಅಂದರೆ ಭಾರತದ ಜೈಲಿನಲ್ಲಿ ಇರುವ ಸುಮಾರು ಜನ ದೊಡ್ಡ ಉಗ್ರಗಾಮಿಗಳನ್ನು ಬಿಡುವದು ಮತ್ತು ಹಲವಾರು ಮಿಲಿಯನ್ ಡಾಲರ್ ರೊಕ್ಕ ಕೊಡುವದು. ಅಷ್ಟು ಮಾಡಿದರೆ ಮಾತ್ರ ಪ್ರಯಾಣಿಕರು ವಾಪಸ್ ಬರುತ್ತಾರೆ. ಇಲ್ಲಂದ್ರೆ ಇಲ್ಲ, ಅಂತ ಖಡಕ್ ಆಗಿ ಹೇಳಿಬಿಟ್ಟಿದ್ದರು ಆ ವಿಮಾನ ಅಪಹರಣ ಮಾಡಿದ ಉಗ್ರರು. ಅವರ ಜೊತೆ ಮಾತುಕತೆ ನಡೆಸಿದ ರಕ್ಷಣಾ ಅಧಿಕಾರಿಗಳಲ್ಲಿ ಅಜಿತ್ ಕುಮಾರ್ ದೋವಲ್ ಮುಂಚೂಣಿಯಲ್ಲಿದ್ದರು. hostage rescue & negotiation ಅವರ ಸ್ಪೆಷಾಲಿಟಿ. ಕಮಾಂಡೋ ಕಾರ್ಯಾಚರಣೆ ಮಾಡಿ, ಅಪಹರಣಕಾರರನ್ನು ಸದೆಬಡಿದು, ವಿಮಾನ ಅಪಹೃತರನ್ನು ಬಿಡುಗಡೆ ಮಾಡುವ ಯೋಜನೆಯನ್ನೂ ಸಹ ಹಾಕಿದ್ದರು. ಆದರೇನು ಮಾಡುವದು? ಪರಿಸ್ಥಿತಿ ಬಹಳ ನಾಜೂಕಾಗಿತ್ತು. ಆಗಲೇ ಒಬ್ಬ ನಿಷ್ಪಾಪಿ ನವವಿವಾಹಿತನನ್ನು ಎಲ್ಲರೆದುರೇ ಇರಿದು ಕೊಂದಿದ್ದ ಉಗ್ರರು ತಮ್ಮ ಪೈಶಾಚಿಕತೆ ಮೆರೆದಿದ್ದರು. ಮತ್ತೆ ಇನ್ನೊಂದು ದೊಡ್ಡ ಕಾರಣವೂ ಇತ್ತು ಅತಿ ಕಡಿಮೆ ರಿಸ್ಕ್ ತೆಗೆದುಕೊಳ್ಳಲು. ಅದೇನೆಂದರೆ ಅಪಹೃತ ಪ್ರಯಾಣಿಕರಲ್ಲಿ ರಿಸರ್ಚ್ & ಅನಾಲಿಸಿಸ್ ವಿಂಗ್ ಎಂಬ ಭಾರತದ ಹೊರ ಬೇಹುಗಾರಿಕೆ ಸಂಸ್ಥೆಯ (external intelligence agency) ದೊಡ್ಡ ಕುಳವೊಬ್ಬ ಕೂಡ ಇದ್ದ. ಪುಣ್ಯಕ್ಕೆ ಉಗ್ರರಿಗೆ ಅದು ಗೊತ್ತಿರಲಿಲ್ಲ. ಗೊತ್ತಿದ್ದರೆ ಅವನಿಗೆ ಏನೇನು ಹಿಂಸೆ ಕೊಟ್ಟು ಏನೆಲ್ಲಾ ರಹಸ್ಯಗಳನ್ನು ಅರಿಯುತ್ತಿದ್ದರೋ ಏನೋ! ಮತ್ತೆ ಆಗಿನ ಪ್ರಧಾನಿ ವಾಜಪೇಯಿ ಅವರ ಮೇಲೆ ಎಲ್ಲಿಲ್ಲದ ಒತ್ತಡ. ಸೆರೆಯಲ್ಲಿರುವ ಉಗ್ರರು ಹಾಳಾಗಿ ಹೋಗಲಿ. ನಮ್ಮ ಬಂಧುಗಳನ್ನು ಬೇಗ ಬಿಡಿಸಿಕೊಂಡು ಬನ್ನಿ, ಅಂತ. ಒಟ್ಟಿನಲ್ಲಿ ಮಾನ ಹೋದರೂ ಚಿಂತೆ ಇಲ್ಲ, ಅತಿ ಕಡಿಮೆ ರಿಸ್ಕಿನಲ್ಲಿ ಎಲ್ಲ ಬಗೆಹರಿದು ಹೋಗಲಿ ಅನ್ನುವದು ಎಲ್ಲರ ಇರಾದೆಯಾಗಿತ್ತು. ಹಾಗಾಗಿ ಕಮಾಂಡೋ ಕಾರ್ಯಾಚರಣೆ ಮಾಡುವದಕ್ಕೆ ಎಳ್ಳು ನೀರು ಬಿಟ್ಟಿತ್ತು ಸರಕಾರ. ಆದರೆ ದೋವಲ್ ಒಂದು ಯೋಜನೆಯನ್ನು ಮಾತ್ರ ಹಾಕಿ ಕೊಟ್ಟಿದ್ದರು. ಮುಂದೆ ಏನಾಯಿತು ಅಂತ ಗೊತ್ತೇ ಇದೆಯಲ್ಲ. ಮಸೂದ್ ಅಝರ್ ಮತ್ತಿತರ ಉಗ್ರರನ್ನು ಕಾರಾಗೃಹದಿಂದ ಬಿಡುಗಡೆ ಮಾಡಿ, ವಿಶೇಷ ವಿಮಾನದಲ್ಲಿ ಕಂದಹಾರಕ್ಕೆ ಒಯ್ದು, ಅವರನ್ನು ಅಪಹರಣಕಾರರಿಗೆ ಒಪ್ಪಿಸಿ, ರೊಕ್ಕದ ಕಪ್ಪು ಕಾಣಿಕೆ ಸಲ್ಲಿಸಿ, ಕೈಮುಗಿದು, ನಮ್ಮ ಮಂದಿಯನ್ನು ಬಿಡಿಸಿಕೊಂಡು ಬಂದಾಯಿತು. ಆಗಿನ ದೊಡ್ಡ ಮಂತ್ರಿ ಜಸ್ವಂತ್ ಸಿಂಗರೇ ಹೋಗಿ ಸೆರೆಯಲ್ಲಿದ್ದ ಉಗ್ರರನ್ನು ತವರಿಗೆ ಕಳಿಸಿಕೊಟ್ಟು ಬಂದರು. ಜೊತೆಗೆ ಅಜಿತ್ ಕುಮಾರ್ ದೋವಲ್ ಸಹಿತ ಹೋಗಿದ್ದರು. ಯಾವದಕ್ಕೂ ಇರಲಿ ಅಂತ ಕಮಾಂಡೋ ಪಡೆ ಸಹಿತ ಹೋಗಿತ್ತು. ಆದರೆ ಕಂದಹಾರನಲ್ಲಿ ಪೂರ್ತಿ ತಲೆಕೆಟ್ಟ ತಾಲಿಬಾನಿಗಳೇ ತುಂಬಿದ್ದರು. ಹಾಗಾಗಿ ಏನೂ ಸ್ಕೋಪ್ ತೆಗೆದುಕೊಳ್ಳದೇ ಉಗ್ರರನ್ನು ಬಿಟ್ಟು, ಮಿಲಿಯ ಗಟ್ಟಲೆ ರೊಕ್ಕ ಕೊಟ್ಟು, ನಮ್ಮ ಜನರನ್ನು ಬಿಡಿಸಿಕೊಂಡು ಬಂದಿತ್ತು ಭಾರತ. ಆವತ್ತು ಖಡಕ್ ಅಧಿಕಾರಿ ಅಜಿತ್ ಕುಮಾರ್ ದೋವಲ್ ಅದೆಷ್ಟು ಉರಿದುಕೊಂಡರೋ ಏನೋ!

೨೦೦೫ ರಲ್ಲಿ ಮುಂಬೈ ಪೋಲೀಸರ ಕ್ರೈಂ  ಬ್ರಾಂಚ್ ತಂಡಕ್ಕೆ ಒಂದು ಭಯಂಕರ ಮಾಹಿತಿ ದೊರಕಿತ್ತು. ಮಾಫಿಯಾ ಡಾನ್ ಛೋಟಾ ರಾಜನ್ನನ ಬಲಗೈ ಬಂಟ ವಿಕಿ ಮಲೋತ್ರಾ ದಿಲ್ಲಿಯಲ್ಲಿ ಕಾಣಿಸಿಕೊಂಡಿದ್ದಾನೆ ಅಂತ. ಅವನು ಮುಂಬೈನಲ್ಲಿ ಮೋಸ್ಟ್ ವಾಂಟೆಡ್. ಆಗಿನ ಮುಂಬೈ ಪೋಲೀಸ್ ಕಮಿಷನರ್ A. N. Roy ಒಂದು ತಂಡ ರೆಡಿ ಮಾಡಿ ಇಮ್ಮಿಡಿಯೆಟ್ ಆಗಿ ದೆಲ್ಲಿಗೆ ರವಾನೆ ಮಾಡಿದರು. ದೊಡ್ಡ ದೊಡ್ಡ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೇ ಆ ತಂಡದಲ್ಲಿ ಇದ್ದರು. ಆದರೆ ಆಜ್ಞೆ ಪಕ್ಕಾ ಇತ್ತು. ವಿಕಿ ಮಲೋತ್ರಾನನ್ನು ಎನ್ಕೌಂಟರ್ ಮಾಡೋ ಹಾಗಿಲ್ಲ. ಜೀವಂತ ಬಂಧಿಸಿಯೇ ತರಬೇಕು. ಮತ್ತೆ ದಿಲ್ಲಿ ಪೊಲೀಸರಿಗೆ ಈ ಕಾರ್ಯಾಚರಣೆಯ ಸುಳಿವು ಸಹಿತ ಸಿಗಬಾರದು. 

ಮುಂಬೈ ಕ್ರೈಂ ಬ್ರಾಂಚಿನ DCP ಧನಂಜಯ್ ಕಮಲಾಕರ್ ನೇತೃತ್ವದಲ್ಲಿ ಖತರ್ನಾಕ್ ಪೋಲೀಸರ ತಂಡ ದಿಲ್ಲಿಗೆ ಹಾರಿತು. ವಿಕಿ ಮಲೋತ್ರಾ ಎಂಬ ಛೋಟಾ ರಾಜನ್ ಬಂಟನಿಗಾಗಿ ಫೀಲ್ಡಿಂಗ್ ಹಾಕಿಕೊಂಡು ಕಾದು ಕೂತರು.

ಒಂದು ದಿವಸ ಬರೋಬ್ಬರಿ ಅವಕಾಶ ನೋಡಿಕೊಂಡು ವಿಕಿ ಮಲೋತ್ರಾ ಎಂಬ ಖತರ್ನಾಕ್ ಗ್ಯಾಂಗಸ್ಟರ್ ಹೋಗುತ್ತಿದ್ದ ಕಾರನ್ನು ಮುಂಬೈ ಪೊಲೀಸರು ಆಟಕಾಯಿಸಿಕೊಂಡು ಒಳಗೆ ನೋಡಿದರೆ ವಿಕಿ ಮಲೋತ್ರಾ ಜೊತೆ ಇನ್ನೊಬ್ಬ ವ್ಯಕ್ತಿ ಕೂತಿದ್ದರು. ಯಾರು ಅಂತ ಮುಂಬೈ ಪೊಲೀಸರಿಗೆ ಗೊತ್ತಾಗಲಿಲ್ಲ. ಯಾರೇ ಇರಲಿ, ವಿಕಿ ಮಲೋತ್ರಾ ತರಹದ ದೊಡ್ಡ ಮಾಫಿಯಾ ಕುಳದ ಜೊತೆ ಸಿಕ್ಕಿದ್ದಾರೆ ಅಂದರೆ ಬಿಡಲಾಗುತ್ತದಯೇ? ಅಂತ ಹೇಳಿ ಆ ಇನ್ನೊಬ್ಬ ವ್ಯಕ್ತಿಯನ್ನೂ ಸಹ ವಿಕಿ ಮಲೋತ್ರಾ ಜೊತೆ ಬಂಧಿಸಿ ಎಳೆದುಕೊಂಡು ಹೋಗಲಿಕ್ಕೆ ರೆಡಿ ಆದರು.

ಅ ವ್ಯಕ್ತಿ ತಣ್ಣಗೆ ತಮ್ಮ ಐಡೆಂಟಿಟಿ ಕಾರ್ಡ್ ತೋರಿಸಿದರು. ನೋಡಿದ ಮುಂಬೈ ಪೊಲೀಸರು ಒಂದು ಕ್ಷಣ ಫುಲ್ ಥಂಡಾ ಹೊಡೆದು, ಫುಲ್ ಅಟೆನ್ಷನ್ ಗೆ ಬಂದು, ಬೂಟು ಕುಟ್ಟಿ, ಸಲ್ಯೂಟ್ ಹೊಡೆದು, ಸರ್! ತಪ್ಪಾಯಿತು, ಗೊತ್ತಾಗಲಿಲ್ಲ ನೀವು ಅಂತ, ಅಂದು ಬಿಟ್ಟು ಕಳಿಸಿದ್ದರು.

ಯಾರಾಗಿದ್ದರು ಅವರು!?

ವಿಕಿ ಮಲೋತ್ರಾ ಎಂಬ ಭೂಗತ ಡಾನ್ ಜೊತೆ ಅವತ್ತು ಇದ್ದವರು ಮತ್ಯಾರೂ ಅಲ್ಲ, ಇದೇ ಅಜಿತ್ ಕುಮಾರ್ ದೋವಲ್! ಆಗ ಇಂಟೆಲಿಜೆನ್ಸ್ ಬ್ಯೂರೋಯಿಂದ ರಿಟೈರ್ ಆಗಿದ್ದರು. ಆ ಮಾತು ಬೇರೆ ಬಿಡಿ.

ಹಾಂ! ವಾಂಟೆಡ್ ಭೂಗತ ಡಾನ್ ಜೊತೆ ಮಾಜಿ IB ಮುಖ್ಯಸ್ಥರಾ? ಏನು ಕಳ್ಳರು, ಪೊಲೀಸರು ಎಲ್ಲ ಒಂದಾಗಿ ಬಿಟ್ಟರಾ? ಏನಂತ ಮಾತಾಡುತ್ತೀರಾ? ಅಂತ ಅಚ್ಚರಿ ಪಡುವವರಿಗೆ ಅಂತರಾಷ್ಟ್ರೀಯ ಭೂಗತ ಜಗತ್ತಿನಲ್ಲಿ ಆಗಿದ್ದ ಕೆಲವು ದೊಡ್ಡ ಲೆವೆಲ್ಲಿನ ಬದಲಾವಣೆಗಳು ಗೊತ್ತಿಲ್ಲ ಅಂತ ಭಾವಿಸಬೇಕಾಗುತ್ತದೆ.

೧೯೯೩ ಮುಂಬೈ ಸ್ಪೋಟಗಳ ನಂತರ ದಾವೂದ್ ಇಬ್ರಾಹಿಮ್ಮನ D ಕಂಪನಿ ಒಡೆದಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ದಾವೂದನ ಆ ಕಾಲದ ರೈಟ್ ಹ್ಯಾಂಡ್ ಆಗಿದ್ದ ಛೋಟಾ ರಾಜನ್ ಬೇರೆಯಾಗಿದ್ದ. D ಕಂಪನಿಯ ಎಲ್ಲರೂ ದುಬೈನಲ್ಲಿ ಇದ್ದ ಸಮಯ ಅದು. ಒಂದು ದಿವಸ ಛೋಟಾ ರಾಜನ್ನನಿಗೆ ದಾವೂದ್ ಇಬ್ರಾಹಿಮ್, ಅವನ ತಮ್ಮ ಅನೀಸ್ ಇಬ್ರಾಹಿಂ, ಮತ್ತೊಬ್ಬ ಬಂಟ ಛೋಟಾ ಶಕೀಲ ಎಲ್ಲ ಕೂಡಿ ಅವನನ್ನು ಒಂದು ಹಡಗಿನ ಮೇಲೆ ಪಾರ್ಟಿಗೆ ಅಂತ ಕರೆದು ಕೊಲ್ಲಲಿದ್ದಾರೆ ಅಂತ ಖಚಿತ ವರ್ತಮಾನ ಬಂದಿತ್ತು. D ಕಂಪನಿಯಲ್ಲಿ ಛೋಟಾ ರಾಜನ್ ಬೆಳವಣಿಗೆ ಸಹಿಸದ ಛೋಟಾ ಶಕೀಲ್ ದಾವೂದನ ಕಿವಿ ಊದಿದ್ದ. ಸ್ಕೆಚ್ ರೆಡಿ ಆಗಿತ್ತು. ಛೋಟಾ ರಾಜನ್ ಪುಣ್ಯ. ಪಾರ್ಟಿಗೆ ಹೋಗದೆ ಬಚಾವ್ ಆದ.

ಹೀಗೆ ತನಗೆ ಹಾಕಿದ್ದ ಸ್ಕೆಚ್ಚಿನಿಂದ ಬಚಾವಾದ ರಾಜನ್ ಹೋಗಿ ನಿಂತಿದ್ದು UAE ನಲ್ಲಿದ್ದ ಭಾರತ ದೂತಾವಾಸದ ಮುಂದೆ. ರಕ್ಷಣೆ ಕೋರಿ ಬಂದ ಛೋಟಾ ರಾಜನ್ ಭಾರತದ ಬೇಹುಗಾರಿಕೆ ಸಂಸ್ಥೆಗಳ ಉಸ್ತುವಾರಿಯಲ್ಲಿ ಬಂದ. ಪಾಕಿಸ್ತಾನದಲ್ಲಿ ಅಡಗಿ ಕೂತು, ಅಲ್ಲಿಯ ISI ರಕ್ಷಣೆಯಲ್ಲಿದ್ದ ದಾವೂದ್ ಇಬ್ರಾಹಿಂನನ್ನು ಭಾರತ ಸರಕಾರ ಏನೂ ಮಾಡುವ ಹಾಗಿರಲಿಲ್ಲ. ಬೆಂಕಿಯನ್ನು ಬೆಂಕಿಯಿಂದಲೇ ಬಡಿದಾಡಬೇಕು ಅನ್ನುವಂತೆ ಛೋಟಾ ರಾಜನ್ನನನ್ನು ದಾವೂದ್ ಇಬ್ರಾಹಿಮ್ಮನ ವಿರುದ್ಧ ಸರಿಯಾಗಿ ಎತ್ತಿ ಕಟ್ಟಿದವು ಭಾರತದ ಬೇಹುಗಾರಿಕೆ ಸಂಸ್ಥೆಗಳಾದ IB ಮತ್ತು R&AW. (Dongri to Dubai: Six Decades of the Mumbai Mafia by S Hussain Zaidi ಪುಸ್ತಕದಲ್ಲಿ ಪೂರ್ತಿ ವಿವರಣೆ ಇದೆ)

ಛೋಟಾ ರಾಜನ್ ಹಿಂದೂ ಡಾನ್ ಅಂತ ಪ್ರಚಲಿತನಾದ. ಭಾರತ ಮತ್ತು ಪಾಕಿಸ್ತಾನದ ನಡುವಿನ ಮುಸುಕಿನ ಗುದ್ದಾಟಕ್ಕೆ ಛೋಟಾ ರಾಜನ್ ಮತ್ತು ದಾವೂದ್ ಇಬ್ರಾಹಿಮ್ proxy ಆದರು. ಯುದ್ಧ ಜೋರಾಗಿಯೇ ನಡೆಯಿತು. ಗುರುತು ಹಾಕಿಕೊಟ್ಟ ದಾವೂದ್ ಇಬ್ರಾಹಿಮ್ಮನ ಜನರನ್ನು ಛೋಟಾ ರಾಜನ್ ಭಾರತದ ಬೇಹುಗಾರಿಕೆ ಸಂಸ್ಥೆಗಳು ಹೇಳಿದಂತೆ ಕೊಂದು ಹಾಕಿದ. ಪ್ರತಿಕಾರವೆಂಬಂತೆ ದಾವೂದ್ ಇಬ್ರಾಹಿಮ್ ಸಹ ಛೋಟಾ ರಾಜನ್ ಜನರನ್ನು ಗ್ಯಾಂಗ್ ವಾರ್, ಎನ್ಕೌಂಟರ್ ಗಳಲ್ಲಿ ಕೊಂದ, ಕೊಲ್ಲಿಸಿದ. ಸಾಕಷ್ಟು ನೆತ್ತರು ಹರಿಯಿತು. ಎಲ್ಲೋ ಹೊರದೇಶದಲ್ಲಿ ಭಾರತದ ಬೇಹುಗಾರಿಕೆ ಸಂಸ್ಥೆಗಳ ಛತ್ರಛಾಯೆಯಡಿ ಛೋಟಾ ರಾಜನ್ ದಾವೂದ್ ಇಬ್ರಾಹಿಂ ಹಾಕುತ್ತಿದ್ದ ಸ್ಕೀಮುಗಳಿಂದ ಹೇಗೋ ಬಚಾವಾಗಿ ಇದ್ದ. ಎಷ್ಟೇ ರಕ್ಷಣೆ ಇದ್ದರೂ ೨೦೦೦ ಸೆಪ್ಟೆಂಬರಿನಲ್ಲಿ ದಾವೂದ್ ಗ್ಯಾಂಗು ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿತು. ಮೂರ್ನಾಕು ಗುಂಡು ತಿಂದರೂ, ಕಿಡಕಿ ಜಿಗಿದು, ಎದ್ದೋ ಬಿದ್ದು ಓಡಿದ್ದ ಛೋಟಾ ರಾಜನ್ ಹೇಗೋ ಆಸ್ಪತ್ರೆ ಸೇರಿಕೊಂಡಿದ್ದ. ಭಾರತದ ಬೇಹುಗಾರಿಕೆ ಸಂಸ್ಥೆಗಳ ಬಿಗಿ ಕಣ್ಗಾವಲು ಇಲ್ಲದಿದ್ದರೆ ಮತ್ತೊಂದು ಹತ್ಯೆಯ ಯತ್ನ ಆಸ್ಪತ್ರೆಯಲ್ಲಿಯೇ ಆಗುತ್ತಿತ್ತು. ಮುಂದೆ ಭಾರತದ ಬೇಹುಗಾರಿಕೆ ಸಂಸ್ಥೆಗಳು ಛೋಟಾ ರಾಜನ್ನನನ್ನು ಬೇರೆ ಬೇರೆ ದೇಶಗಳಲ್ಲಿ ರಹಸ್ಯವಾಗಿ ಅಡಗಿಸಿಟ್ಟು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿವೆ. ಅವರು ಹೇಳಿದಂತೆ ಛೋಟಾ ರಾಜನ್ D ಕಂಪನಿಯ ಎಷ್ಟೋ ವಿಕೆಟ್ಟುಗಳನ್ನು ಉರುಳಿಸಿ ಹೇಳಿದ 'ದೇಶ ಸೇವೆ' ಮಾಡಿಕೊಟ್ಟಿದ್ದ. ಪ್ರತಿಫಲವಾಗಿ ಮುಂಬೈ ಭೂಗತ ಲೋಕದ ಪಾರುಪತ್ಯ ತಕ್ಕ ಮಟ್ಟಿಗೆ ರಾಜನ್ ಪಡೆದುಕೊಂಡಿದ್ದ. ಹಾಗಂತ ದಾವೂದ್ ಹಿಡಿತವೇನೂ ಕಮ್ಮಿಯಾಗಿರಲಿಲ್ಲ.(Byculla to Bangkok by S Hussain Zaidi- ಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ)

ಮಿರ್ಜಾ ಇಸ್ಮೈಲ್ ಬೇಗ್ - ನೇಪಾಳದ ಪ್ರಬಲ ರಾಜಕಾರಣಿ. ಆದರೆ ಪಾಕಿಸ್ತಾನದ ISI ಏಜೆಂಟ್. ದಾವೂದ್ ಇಬ್ರಾಹಿಮ್ಮನ D ಕಂಪನಿಗೆ ನೇಪಾಳದಲ್ಲಿ ಅಪ್ಪ, ಅಮ್ಮ ಎಲ್ಲ ಇವನೇ. ಭಾರತ ಇಂತಹ ಮಿರ್ಜಾ ಇಸ್ಮೈಲ್ ಬೇಗನ ಸುಪಾರಿ ಛೋಟಾ ರಾಜನ್ನನಿಗೆ ಕೊಟ್ಟಿತು. ನೀಟಾಗಿ ತನ್ನ ಜನರನ್ನು ಖಾಟಮಾಂಡುಗೆ ಕಳಿಸಿ, ಮಿರ್ಜಾ ಇಸ್ಮೈಲ್ ಬೇಗನ ಮನೆ ಮುಂದೆಯೇ ಗುಂಡು ಹಾರಿಸಿ ಕೊಂದು ಬಂತು ರಾಜನ್ ತಂಡ. ದಾವೂದನಿಗೆ ಆ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟೆವು ಅಂತ ಭಾರತ ಅದರಲ್ಲೂ ಛೋಟಾ ರಾಜನ್ನನ್ನು ಸಾಕಿ ಬೆಳೆಸಿದ್ದ ಬೇಹುಗಾರಿಕೆ ಸಂಸ್ಥೆಗಳು ಗರ್ವ ಪಟ್ಟವು.

ಬ್ಯಾಂಕಾಕಿನಲ್ಲಿ ಪಿಲೂ ಖಾನ್ ಎಂಬ ದಾವೂದ್ ಬಂಟನನ್ನು ರಾಜನ್ ಕಡೆಯವರು ಮುಗಿಸಿದರು. ಸುನಿಲ್ ಸಾವಂತ್, ಶರದ್ ಶೆಟ್ಟಿ ಎಂಬ ದಾವೂದ್ ಬಣದ ದೊಡ್ಡ ಕುಳಗಳನ್ನು ದುಬೈನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮುಂಬೈ ಸ್ಪೋಟಕ್ಕೆ ಸಂಬಂಧಿಸಿದ್ದ ಸುಮಾರು ಜನರನ್ನು ರಾಜನ್ ಹುಡುಕಿ ಹುಡುಕಿ ಕೊಂದ. ಹೀಗೆಯೇ proxy ಸಮರ ನಡೆದಿತ್ತು. ಪಾಕಿಸ್ತಾನದ ಕಡೆಯಿಂದ ಅವರ ಬೇಹುಗಾರಿಕೆ ಸಂಸ್ಥೆ ISI, ಭಾರತದ ಕಡೆಯಿಂದ IB ಮತ್ತು R&AW ತಮಗೆ ಬೇಕಾದ ಟಾರ್ಗೆಟ್ ಹುಡುಕಿಕೊಟ್ಟು, ಎಲ್ಲ ಮಾಹಿತಿ ಕೊಡುತ್ತಿದ್ದವು. ದಾವೂದ್, ರಾಜನ್ ತಮ್ಮ ತಮ್ಮ ಗ್ಯಾಂಗುಗಳನ್ನು ಉಪಯೋಗಿಸಿ ಕೆಲಸ ಮಾಡಿಕೊಡುತ್ತಿದ್ದರು. ಅವರಿಗೆ ಜೈ ಪಾಕಿಸ್ತಾನ! ಇವರಿಗೆ ಜೈ ಹಿಂದುಸ್ತಾನ!

೧೯೯೮ ಅಂತ ಕಾಣಿಸುತ್ತದೆ. ಒಂದು ದೊಡ್ಡ ಕೆಲಸಕ್ಕೆ ರಾಜನ್ ಗ್ಯಾಂಗನ್ನು ರೆಡಿ ಮಾಡಲಾಯಿತು.  ಸೀದಾ ಕರಾಚಿಗೆ ಹೋಗಿ ದಾವೂದ ಇಬ್ರಾಹಿಂನನ್ನೇ ಉಡಾಯಿಸಿಬಿಡುವದು. ಮಜಬೂತಾದ ಪ್ಲಾನಿಂಗ್ ಆಗಿತ್ತು. ಮೂರು ಹಂತಕರೂ ಹೋಗಿ ಕರಾಚಿ ಸೇರಿಕೊಂಡಿದ್ದರು. ದಾವೂದ್ ನಮಾಜ್ ಮಾಡಲು ಬರುವ ಮಸೀದಿಯನ್ನು ನೋಡಿ ಅಲ್ಲಿಯೇ ಫೀಲ್ಡಿಂಗ್ ಹಾಕಿದ್ದರು. ಸಂಶಯ ಬರದಿರಲಿ ಅಂತ ಆಯುಧ ತೆಗೆದುಕೊಂಡು ಹೋಗಿರಲಿಲ್ಲ. ಹತ್ಯೆಯ ಟೈಮಿಗೆ ಸರಿಯಾಗಿ ಬೇರೆ ಯಾರೋ ಆಯುಧ ತಂದು, ಮಸೀದಿಗೆ ಪ್ರಾರ್ಥನೆ ಮಾಡಲು ಬಂದವರಂತೆ ಬಂದಿದ್ದ, ಹಂತಕರಿಗೆ ತಲುಪಿಸುವರಿದ್ದರು. ಸರಿಯಾಗಿ ದಾವೂದನ ಎದುರಿಗೆ ಬಂದಿದ್ದ ಹಂತಕರ ಕೈಗೆ ಅವತ್ತು ಟೈಮಿಗೆ ಸರಿಯಾಗಿ ಆಯುಧ ಬರಲೇ ಇಲ್ಲ. ಆಯುಧ ತಲುಪಿಸುವವನು ಎಲ್ಲೋ ಲೇಟ್ ಮಾಡಿಕೊಂಡಿದ್ದ. ಎದುರಿಗೆ ಕಂಡ ದಾವೂದನಿಗೆ ಸಂಶಯ ಬರದಂತೆ ಸುಮ್ಮನೆ ಸಲಾಂ ಹೇಳಿ ಹಾಗೇ ವಾಪಸ್ ಬಂದಿದ್ದರು ಛೋಟಾ ರಾಜನ್ ಕಡೆ ಹಂತಕರು. ಅವರನ್ನು ಮಾರುವೇಷದಲ್ಲಿ ಪಾಕಿಸ್ತಾನಕ್ಕೆ ಕಳಿಸಿ, ಎಲ್ಲ ಸ್ಕೆಚ್ ಹಾಕಿಕೊಟ್ಟು, ಮತ್ತೆ ವಾಪಸ್ ಕರೆಸಿಕೊಂಡಿದ್ದೆಲ್ಲ ಭಾರತದ ಬೇಹುಗಾರಿಕೆ ಸಂಸ್ಥೆಗಳು. ಆವತ್ತು ಬದುಕುಳಿವ ಅದೃಷ್ಟ ದಾವೂದನದಾಗಿತ್ತು.(Byculla to Bangkok by S Hussain Zaidi- ಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ)

ಆ ಮೂವರು ಹಂತಕರಲ್ಲಿ ಈ ವಿಕಿ ಮಲೋತ್ರಾ ಸಹಿತ ಇದ್ದ! ಅದಾದ ನಂತರ ಬಹಳ ವರ್ಷಗಳ ಕಾಲ ದೇಶ ವಿದೇಶ ಸುತ್ತಿಕೊಂಡು, ಛೋಟಾ ರಾಜನ್ ಬಲಗೈ ಬಂಟನಾಗಿ, ಭಾರತೀಯ ಬೇಹುಗಾರಿಕೆ ಸಂಸ್ಥೆಗಳ covert operations ಮಾಡಿಕೊಡುತ್ತ ಇದ್ದವನು ಯಾಕೋ ದಿಲ್ಲಿಗೆ ಬಂದಿದ್ದ. ಅದೇನು ಮೀಟಿಂಗ್ ಮಾಡುವದಿತ್ತೋ ಮಾಜಿ IB ಮುಖ್ಯಸ್ಥ ಅಜಿತ್ ಕುಮಾರ್ ದೋವಲ್ ಸಾಹೇಬರ ಜೊತೆಗೆ. ಪೊರಪಾಟಿನಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಜೊತೆಗೆ ದೋವಲ್ ಸಾಹೇಬರೂ ಸಿಕ್ಕಿ ಬಿದ್ದಿದ್ದರು. ಒಂದು ತರಹದ embarrassment ದೋವಲ್ ಸಾಹೇಬರಿಗೆ.

ಮುಂಬೈ ಪೊಲೀಸರು ವಿಕಿ ಮಲೋತ್ರಾನನ್ನು ಬಂಧಿಸಿ ಕರೆದುಕೊಂಡು ಹೋದರು. ದೋವಲ್ ಸಹಿತ ತಮ್ಮ ದಾರಿ ಹಿಡಿದು ಹೋದರು. ದೊಡ್ಡ ಸುದ್ದಿಯಂತೂ ಆಯಿತು. ಮಾಜಿ IB ಡೈರೆಕ್ಟರ್ ಒಬ್ಬ ಭೂಗತ ಡಾನ್ ಜೊತೆ ಏನು ಮಾಡುತ್ತಿದ್ದರು? ಅಂತ. ಯಾವ ರಹಸ್ಯ ಕಾರ್ಯಾಚರಣೆಗೆ ಸ್ಕೆಚ್ ಹಾಕುತ್ತಿದ್ದರೋ ಏನೋ? ಅದಕ್ಕೆಲ್ಲ ಓಪನ್ ಆಗಿ ಉತ್ತರ ಹೇಳಲು ಆಗುತ್ತದೆಯೇ? ಮತ್ತೆ dots connect ಮಾಡಿ ನಮ್ಮದೇ ಆದ hypothesis ಮಾಡಿಕೊಳ್ಳಬೇಕಾಗುತ್ತದೆ. ಏನೋ covert operation ಗೆ ಸ್ಕೆಚ್ ಹಾಕುತ್ತಿರಬೇಕು. ಇಂಟೆಲಿಜೆನ್ಸ್ ಇತ್ಯಾದಿ ಫೀಲ್ಡಿನಲ್ಲಿ ಇರುವವರಿಗೆ ನಿವೃತ್ತಿ ಅನ್ನೋದು ಇರೋದಿಲ್ಲ. ಒಮ್ಮೊಮ್ಮೆ ನಿವೃತ್ತಿ ಆದ ಮೇಲೆಯೇ ಹೆಚ್ಚಿನ ಕೆಲಸ. ಯಾಕೆಂದರೆ ' ದೇಶಕ್ಕೆ ಸಂಬಂಧವಿಲ್ಲ' (deniability) ಅಂತ ತೋರಿಸಿಕೊಳ್ಳಲು ನಿವೃತ್ತರು, ನಿಕೃಷ್ಟರು (ಮಾಫಿಯಾ) ತುಂಬ ಸಹಕಾರಿ.

ಹೀಗೆಲ್ಲ ಖತರ್ನಾಕ್ ಹಿನ್ನಲೆ ಇರುವ ಜಬರ್ದಸ್ತ್ ಬೇಹುಗಾರ ಅಜಿತ್ ಕುಮಾರ್ ದೋವಲ್ ಈಗ ಮೋದಿಯವರ ರಾಷ್ಟ್ರೀಯ ರಕ್ಷಣಾ ಸಲಹೆಗಾರರಾಗಿ ಬಂದಿದ್ದಾರೆ. ಇವರು ಹಿಂದೆಲ್ಲ ದಾವೂದ್ ವಿರುದ್ಧ ಹಾಕಿರಬಹುದಾದ ಸ್ಕೆಚ್ಚೆಲ್ಲ ಅರಿತಿರುವ ದಾವೂದ್ ಇಬ್ರಾಹಿಂ ಕರಾಚಿ ಬಿಟ್ಟು ಆಫ್ಘನ್ ಗಡಿ ಸೇರಿಕೊಂಡಿದ್ದಾನೆ. ರಕ್ಷಣೆ ಹೆಚ್ಚಿಸಿಕೊಂಡಿದ್ದಾನೆ.

ಇನ್ನು ಮುಂದೆ D ಕಂಪನಿಯ ಅಡಿಪಾಯ ಅಲುಗಾಡಲು ಶುರುವಾದರೆ ಅಂತಹ ಕಾರ್ನಾಮೆಗಳಲ್ಲಿ ದೋವಲ್ ಸಾಹೇಬರು ಮತ್ತು ಅವರ ಖಡಕ್ ತಂಡದ ಕಾಣದ ಕೈಗಳ ಕೈವಾಡ ಇರುವ ಎಲ್ಲ ಸಾಧ್ಯತೆಗಳಿವೆ. ಕಾದು ನೋಡೋಣ.

ಹೆಚ್ಚಿನ ಮಾಹಿತಿಗೆ:

Dongri to Dubai: Six Decades of the Mumbai Mafia by S Hussain Zaidi

Byculla to Bangkok by S Hussain Zaidi 

Open Secrets: The Explosive Memoirs of an Indian Intelligence Officer by Maloy Krishna Dhar

ಗೂಗಲ್ ಮಾಡುತ್ತ ಹೋದರೆ ಸಿಗುವ ಮಾಹಿತಿ ರೋಚಕ. ಭೂಗತ ಜಗತ್ತು, ಬೇಹುಗಾರಿಕೆ, ಮಾಫಿಯಾ  ಎಲ್ಲಿ ಶುರು, ಎಲ್ಲಿ ಕೊನೆ ಅಂತ ತಿಳಿಯುವದಿಲ್ಲ.

Wednesday, May 07, 2014

ಮುಂಬೈ ಭೂಗತ ಲೋಕದಲ್ಲೊಬ್ಬ ಎರಡು ಸಲ ಸಾವನ್ನು ಗೆದ್ದು ಬಂದ ಮೃತ್ಯುಂಜಯ!

೧೧ ನವೆಂಬರ್ ೧೯೯೮. ಮುಂಬೈ.

ಹಿಂದೆಂದೂ ಆಗಿರದಂತ ವಿಸ್ಮಯ ಘಟನೆಯೊಂದಕ್ಕೆ ಮಹಾನಗರಿ ತೆರೆದುಕೊಳ್ಳುತ್ತಿತ್ತು.

ಮುಂಬೈನ KEM ಆಸ್ಪತ್ರೆಯ ಶವಾಗಾರದ ಮುಂದಿರುವ ಬೆಂಚುಗಳ ಮೇಲೆ ಹೆಣ ಎತ್ತುವ ಕೆಲವು ವಾರ್ಡ್ ಬಾಯ್ಸ್ ಹರಟೆ ಹೊಡೆಯುತ್ತ ಕೂತಿದ್ದರು. ಬಿಳಿ ಅಂಗಿ, ಬಿಳಿ ಚಡ್ಡಿ, ಬಿಳಿ ಟೊಪ್ಪಿ ಅವರ ಟ್ರೇಡ್ ಮಾರ್ಕ್ ಸಮವಸ್ತ್ರ. ಹೆಣ ಎತ್ತೀ ಎತ್ತೀ ಯಾವದೋ ಬಣ್ಣಕ್ಕೆ ತಿರುಗಿತ್ತು. ಕೆಲವರು ಕೈಯಲ್ಲಿ ಗಾಯ್ ಛಾಪ್ ತಂಬಾಕು ಸುರುವಿಕೊಂಡು, ಸುಣ್ಣದ ಒಂದು ಸಣ್ಣ ಉಂಡೆಯನ್ನು ಅದರ ಮೇಲಿಟ್ಟು, ಅದರ ಮೇಲೆ ಹೆಬ್ಬಟ್ಟು ಒತ್ತಿ, ತಿಕ್ಕಿ ತಿಕ್ಕಿ, ಆ ಹೊತ್ತಿನ ತಂಬಾಕಿನ ಡೋಸಿಗೆ ತಯಾರಿ ಮಾಡಿಕೊಳ್ಳುತ್ತಿದ್ದರು.  ಹೆಣ ಎತ್ತೋ ತಮ್ಮ 'ಅದೃಷ್ಟದ' ಹಸ್ತರೇಖೆಗಳನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದ್ದಾರೋ ಎಂಬಂತೆ ತಂಬಾಕು ತಿಕ್ಕುತ್ತಿದ್ದರು. ಅಷ್ಟರಲ್ಲಿ ಒಂದು ಹಳೆಯ ಲಟಾರಿ ಪೋಲೀಸ್ ವ್ಯಾನ್ ಆಕಡೆ ಬರುತ್ತಿರುವದು ಕಂಡಿತು. ತುಂಬಿದ ಬಸುರಿಯಂತೆ ಆಕಡೆ ಈಕಡೆ ಒಲಿಯುತ್ತ, ಜೋಲಿ ಹೊಡೆಯುತ್ತ, ಕೆಟ್ಟ ಕರಿ ಹೊಗೆ ಬಿಡುತ್ತ ಬರುತ್ತಿರುವ ವ್ಯಾನ್ ನೋಡಿದಾಕ್ಷಣ ವಾರ್ಡ್ ಬಾಯ್ಸಗೆ ಗೊತ್ತಾಯಿತು ಪೊಲೀಸರು ಹೆಣ ತರುತ್ತಿದ್ದಾರೆ ಅಂತ. ಆಕ್ಸಿಡೆಂಟ್, ಗೂಂಡಾಗಳ ಎನ್ಕೌಂಟರ್ ಆದಾಗೆಲ್ಲ ಪೊಲೀಸರು ಹೆಣ ತರುತ್ತಿದ್ದುದೇ ಅದರಲ್ಲಿ. ತಿಕ್ಕುತ್ತಿದ್ದ ತಂಬಾಕನ್ನು ದವಡೆ ಮೂಲೆಯಲ್ಲಿ ಹೆಟ್ಟಿಕೊಂಡ ವಾರ್ಡ್ ಬಾಯ್ಸ್ ಪೋಲೀಸ್ ವ್ಯಾನ್ ಬಂದು ನಿಲ್ಲುವದನ್ನೇ ಕಾಯತೊಡಗಿದರು.

ಪೋಲೀಸ್ ವ್ಯಾನಿನ ಕಪ್ಪು ಹೊಗೆಯನ್ನು ಚೀರಿಕೊಂಡು ಗಕ್ಕನೆ ಬಂದು ನಿಂತಿದ್ದು ಬಿಳೆ ಬಣ್ಣದ ಮಾರುತಿ ಜಿಪ್ಸಿ ಜೀಪು. ಬಿಳೆ ಮಾರುತಿ ಜಿಪ್ಸಿ ಜೀಪು ಅಂದ ಮೇಲೆ ಮುಗಿಯಿತು. ದೂಸಾರಾ ಮಾತೇ ಇಲ್ಲ. ಮುಂಬೈ ಪೋಲೀಸ ಇಲಾಖೆಯ ಖತರ್ನಾಕ್ ಕ್ರೈಂ ಬ್ರಾಂಚಿನವರದು. ಖಾತ್ರಿಯಾಗಿ ಎನ್ಕೌಂಟರ್ ಆಗಿದೆ. ಲಟಾರಿ ಪೋಲೀಸ್ ವ್ಯಾನ್ ಬರುತ್ತಿರುವದು ಕ್ರೈಂ ಬ್ರಾಂಚಿನ ಪೊಲೀಸರು ಎನ್ಕೌಂಟರಿನಲ್ಲಿ ಢಂ ಅನ್ನಿಸಿದ ಗೂಂಡಾಗಳ ಹೆಣ ಹೊತ್ತೇ ಅಂತ ವಾರ್ಡ್ ಬಾಯ್ಸಿಗೆ ಗೊತ್ತಾಗಲಿಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಪೋಲೀಸ್ ಎನ್ಕೌಂಟರಿನಲ್ಲಿ ಸತ್ತವರ ಹೆಣ ಎತ್ತುವದು ಸ್ವಲ್ಪ ಬೇರೆ ತರಹದ ಕೆಲಸ. ಅದಕ್ಕೆ ತಯಾರಾದರು.

ಬಂದು ನಿಂತ ಕ್ರೈಂ ಬ್ರಾಂಚಿನ ಮಾರುತಿ ಜಿಪ್ಸಿ ಜೀಪಿನಿಂದ ಚಕ್ಕಂತ ಇಳಿದು ನಿಂತವರು ಸೀನಿಯರ್ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ, ಎನ್ಕೌಂಟರ್ ಸ್ಪೆಷಲಿಸ್ಟ್. ಅವರನ್ನು ನೋಡಿದ ವಾರ್ಡ್ ಬಾಯ್ಸಿಗೂ ಒಮ್ಮೆ ಬೆನ್ನುಹುರಿಯಾಳದಲ್ಲಿ ಯಾಕೋ ಒಂತರಹದ ಅಳುಕು ಛಳಕ್ ಅಂದಿತ್ತು. ಅರಿಭಯಂಕರ ಇನ್ಸಪೆಕ್ಟರ್ ಪೋಟೆ ಎನ್ಕೌಂಟರ್ ಮಾಡಿಕೊಂಡೇ ಬಂದಿರುತ್ತಾರೆ. ಸಂಶಯವೇ ಇಲ್ಲ. ಎಷ್ಟು ಹೆಣ ಎತ್ತಬೇಕಾಗಬಹುದು ಎಂಬುದೇ ಉಳಿದಿದ್ದ ಪ್ರಶ್ನೆ.

ಅಷ್ಟರಲ್ಲಿ ಜೋಲಿ ಹೊಡೆಯುತ್ತ ಬರುತ್ತಿದ್ದ ಹೆಣದ ವ್ಯಾನ್ ಸಹಿತ ಬಂದು ನಿಂತಿತು. ಹೆಣ ಎತ್ತುವ ಎರಡು ಸ್ಟ್ರೆಚರ್ ತೆಗೆದುಕೊಂಡ ನಾಲ್ಕು ವಾರ್ಡ್ ಬಾಯ್ಸ್ ವ್ಯಾನಿನ ಹಿಂದಿನ ಬಾಗಿಲ ಕಡೆ ಓಡಿದರು. ಇನ್ಸಪೆಕ್ಟರ್ ಪೋಟೆ ತಮ್ಮ ಸಹಾಯಕನಿಗೆ ಸಂಜ್ಞೆ ಮಾಡಿದರು. ಹೋಗಿ ವ್ಯಾನಿನ ಹಿಂದಿನ ಬಾಗಿಲು ತೆಗೆ ಅಂತ. ಅವನು ತೆಗೆದ. ಕಂಡ ದೃಶ್ಯ ಬಹಳ ಖರಾಬ್ ಆಗಿತ್ತು. ಬೀಭತ್ಸವಾಗಿತ್ತು. ಎಷ್ಟೋ ಎನ್ಕೌಂಟರ್, ಆಕ್ಸಿಡೆಂಟ್ ಆದಾಗ ಬಂದಿದ್ದ ಹೆಣ ಎತ್ತಿದ್ದ ವಾರ್ಡ್ ಬಾಯ್ಸ್ ಸಹಿತ ಆ ದೃಶ್ಯ ನೋಡಿ ಥಂಡಾ ಹೊಡೆದರು. ಹಾಂ! ಅಂತ ಬೆರಗಾದರು.

ಸುಮಾರು ಅರ್ಧ ಡಜನ್ ಹೆಣಗಳನ್ನು ಒಂದರ ಮೇಲೊಂದರಂತೆ ಅಸಡಾ ಬಸಡಾ ಪೇರಿಸಿಡಲಾಗಿತ್ತು. ಎಲ್ಲ ಕಡೆ ಸುರಿದಿರುವ ರಕ್ತ. ರಾಮಾ ರಕ್ತ. ಅಕರಾಳ ವಿಕರಾಳವಾಗಿ ಹರಡಿಕೊಂಡಿರುವ ಕೈ ಕಾಲುಗಳು. ಸತ್ತವರ ಮುಖದ ಮೇಲೆ ಚಿತ್ರ ವಿಚಿತ್ರ ಕೊನೆಯ ಭಾವನೆಗಳು. ಅವನ್ನು ತೊಳೆಯುವಂತೆ ಹರಿದಿರುವ ರಕ್ತ. ಬುರುಡೆ ಬಿಚ್ಚಿ ಪಚಕ್ ಅಂತ ಹೊರಗೆ ಹಾರಿರುವ ಲೋಳೆ ಲೋಳೆ ಬಿಳೆ ಬಿಳೆ ಮೆದುಳಿನ ಚೂರುಗಳು. ಅವು ಹರಿದ ರಕ್ತದಲ್ಲಿ ಕೆಂಪಾಗಿ ಭಯಾನಕವಾಗಿ ಕಾಣುತ್ತಿದ್ದವು. ಹಾರಿಬಲ್! ಮುನ್ಸಿಪಾಲಿಟಿಯವರು ಬೀದಿ ನಾಯಿಗಳನ್ನು ಕೊಂದು, ಕಚರಾ ಎಂಬಂತೆ ದರಾ ದರಾ ಎಳೆದುಕೊಂಡು ಬಂದಿರುತ್ತಾರಲ್ಲ ಹಾಗೆ ಹೆಣಗಳನ್ನು ಪೇರಿಸಿ ಒಗೆದಿದ್ದರು. ವ್ಯತ್ಯಾಸ ಅಂದ್ರೆ ಇವು ನಾಯಿಗಳದ್ದಲ್ಲ ಮನುಷ್ಯರವು. ನೋಡಿದ ವಾರ್ಡ್ ಬಾಯ್ಸ್ ಹಾಂ! ಅಂತ ಬೆಚ್ಚಿ ಬಿದ್ದರು. ಎಲ್ಲೋ ಒಂದೋ ಎರಡೋ ಗೂಂಡಾಗಳನ್ನು ಎನ್ಕೌಂಟರ್ ಮಾಡಿ ಹೆಣ ತಂದಿದ್ದಾರೋ ಅಂತ ನೋಡಿದರೆ ಆವತ್ತು ಇನ್ಸಪೆಕ್ಟರ್ ಪೋಟೆ ದೊಡ್ಡ ಭರ್ಜರಿ ಬೇಟೆಯನ್ನೇ ಆಡಿದ ಹಾಗೆ ಕಾಣುತ್ತಿತ್ತು.

ಎಷ್ಟು ಸಾಹೇಬ್? ಅಂತ ಕೇಳಿದ ಒಬ್ಬ ವಾರ್ಡ್ ಬಾಯ್.

ಅರ್ಧ ಡಜನ್ನಿಗೆ ಒಂದೇ ಕಮ್ಮಿ. ಐದು, ಅಂತ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ನಿರ್ಭಾವುಕರಾಗಿ ಹೇಳಿದರು.

ಏ, ತುಕಾರಾಂ, ಇನ್ನೂ ಮೂರು ಸ್ಟ್ರೆಚರ್ ತಗೊಂಡು ಬಾರಪ್ಪಾ, ಅಂತ ಬಾಯಲ್ಲಿದ್ದ ತಂಬಾಕನ್ನು ಉಗಿದು ಹೇಳಿದ ಒಬ್ಬ ವಾರ್ಡ್ ಬಾಯ್.

ಹೋ, ಭಾವು (ಸರಿ ಅಣ್ಣ) ಅಂತ ಮರಾಠಿಯಲ್ಲಿ ಹೇಳಿದ ತುಕಾರಾಮ ಎಂಬ ವಾರ್ಡ್ ಬಾಯ್ ಮತ್ತೂ ಮೂರು ಸ್ಟ್ರೆಚರ್ ತರಲು ಶವಾಗಾರದ ಒಳಗೆ ಓಡಿದ.

ಏನು ಸಾಹೇಬ್, ಬಹಳ ದೊಡ್ಡ ಬೇಟೆಯೇ ಆದಂತೆ ಇದೆ ಇವತ್ತು? ಏನಿದು ದಾಖಲೆಯೇ? ಅಂತ ಸುಮ್ಮನೆ ಕೇಳಿದ ವಾರ್ಡ್ ಬಾಯ್.

ಹಾಂಗೆ ಅಂತ ತಿಳ್ಕೋ. ಐದು ಜನ. ದೊಡ್ಡ ಗೂಂಡಾಗಳು. ಎಲ್ಲ ಛೋಟಾ ರಾಜನ್ ಗ್ಯಾಂಗ್. ದಾವೂದ್ ಇಬ್ರಾಹಿಮ್ ಕಡೆಯವರನ್ನು ಮುಗಿಸಲು ಹೋಗುತ್ತಿದ್ದರು. ಪಕ್ಕಾ ಖಬರ್ ಬಂದಿತ್ತು. ಎಲ್ಲರನ್ನೂ ಮೇಲೆ ಕಳಿಸಿಬಿಟ್ಟೆವು. ಖೇಲ್ ಖತಂ. ಕಚರಾ ಸಾಫ್. ಬೇಗ ಬೇಗ ಪೋಸ್ಟ್ ಮಾರ್ಟಂ ಇತ್ಯಾದಿ ಮಾಡಿಸಿ ಮುಗಿಸಯ್ಯ, ಅಂತ ಅವಸರ ಮಾಡಿದರು ಇನ್ಸಪೆಕ್ಟರ್ ಪೋಟೆ.

ಹೋ ಸಾಹೇಬ್! ಜರೂರ್, ಅಂತ ಒಪ್ಪಿಗೆ ಸೂಚಿಸಿದ ವಾರ್ಡ್ ಬಾಯ್ಸುಗಳ ಕಣ್ಣಲ್ಲಿ ದೊಡ್ಡ ಅಚ್ಚರಿ.

ಬೀದಿನಾಯಿಗಳಂತೆ ಹತ್ತಾರು ಗುಂಡು ತಿಂದು, ಹೆಣವಾಗಿ, ಲಟಾರಿ ಪೋಲೀಸ್ ವಾಹನದಲ್ಲಿ ಬಿದ್ದಿದ್ದ ಹೆಣಗಳನ್ನು ಒಂದೊಂದಾಗಿ ಎತ್ತಿ ಸ್ಟ್ರೆಚರ್ ಮೇಲಿಟ್ಟು ಶವಾಗಾರದ ಒಳಗೆ ಸಾಗಿಸತೊಡಗಿದರು. ಎಲ್ಲ ಹೆಣಗಳು ಒಳಗೆ ಹೋದವು ಅಂತಾದ ಮೇಲೆ ಒಮ್ಮೆ ತನ್ನ ತಂಡದೊಂದಿಗೆ ಇನ್ಸಪೆಕ್ಟರ್ ಪೋಟೆ ಶವಾಗಾರದ ಒಳಗೆ ಹೊಕ್ಕರು. ಪೋಸ್ಟ್ ಮಾರ್ಟಂ ಮೊದಲು ಒಂದು ಸಲ ಎಲ್ಲ ಸರಿಯಾಗಿದೆ ಅಂತ ಖಾತ್ರಿ ಮಾಡಿಕೊಳ್ಳುವದು ಅವರ ಪದ್ಧತಿ.

ಐದೂ ಗ್ಯಾಂಗಸ್ಟರುಗಳ ಶವಗಳನ್ನು ಸಾಲಾಗಿ ಮಲಗಿಸಿದ್ದರು. ಮೇಲೆ ಒಂದು ಬಟ್ಟೆ ತರಹದ್ದೇನೋ ಮುಚ್ಚಿದ್ದರು. ಒಂದು ಸರೆ ಆಕಡೆಯಿಂದ ಈಕಡೆ ಸರಿಯಾಗಿ ನೋಡಿದ ಇನ್ಸಪೆಕ್ಟರ್ ಪೋಟೆ ಹೊರಡಲು ತಯಾರಾದರು. ಇನ್ನು ಹೋಗಿ, ಯಾವಾಗಲೂ ಬಿಡುಗಡೆ ಮಾಡುವಂತಹ ಒಂದು ಪ್ರೆಸ್ ನೋಟ್ ಬಿಡುಗಡೆ ಮಾಡಿಬಿಟ್ಟರೆ ಕೆಲಸ ಮುಗಿದಂತೆ. ಈ ಗ್ಯಾಂಗಸ್ಟರುಗಳು ಬರುತ್ತಿದ್ದಾರೆ ಅಂತ ಖಚಿತ ಮಾಹಿತಿ ನಮಗೆ ಬಂದಿತ್ತು. ಅದರಂತೆ ನಾವು ಹೋಗಿ, ಅವರನ್ನು ಆವರಸಿಕೊಂಡು, ಶರಣಾಗಲು ಹೇಳಿದೆವು. ಆಗ ಅವರು ನಮ್ಮ ಮೇಲೆ ಗುಂಡು ಹಾರಿಸಿದರು. ಪೊಲೀಸರು ಸ್ವರಕ್ಷಣೆಗಾಗಿ ಗುಂಡು ಹಾರಿಸಿದರು. ಆ ಗುಂಡಿನ ಚಕಮಕಿಯಲ್ಲಿ ಗ್ಯಾಂಗಸ್ಟರುಗಳು ಗಾಯಗೊಂಡರು. ಹತ್ತಿರದ KEM ಆಸ್ಪತ್ರೆಗೆ ತರಲಾಯಿತು. ಅಲ್ಲಿ ವೈದ್ಯರು ಅವರೆಲ್ಲ ನಿಧನರಾಗಿದ್ದಾರೆ ಅಂತ ಘೋಷಿಸಿದರು. ಇದು ಪ್ರತಿ ಎನ್ಕೌಂಟರ್ ನಂತರ ಪೊಲೀಸರು ಕೊಡುತ್ತಿದ್ದ ಮಾಮೂಲಿ ವರದಿ. ಶತಪ್ರತಿಶತ ಫುಲ್ ಭೋಂಗು. ಎಲ್ಲರಿಗೂ ಗೊತ್ತಿದ್ದದ್ದೇ. ಆದರೂ ಪ್ರತಿ ಎನ್ಕೌಂಟರ್ ಆದ ಮೇಲೆ ಒಂದು ಅಂತಹ ಫೇಕ್ ವರದಿ ಬರಲಿಲ್ಲ ಅಂದ್ರೆ ಹೇಗೆ?

ಇನ್ಸಪೆಕ್ಟರ್ ಪೋಟೆ, ಅವರ ತಂಡ, ವಾರ್ಡ್ ಬಾಯ್ಸ್ ಎಲ್ಲ ಹೊರಗೆ ಬರಲು ತಿರುಗಿ ಎರಡು ಹೆಜ್ಜೆ ಹಾಕಿದ್ದರೋ ಇಲ್ಲವೋ, ಆವಾಗ ಅವರೆಲ್ಲರ ರೋಮಗಳೆಲ್ಲ ಎದ್ದು ನಿಲ್ಲುವಂತಹ ವಿಚಿತ್ರ ಘಟನೆಯೊಂದು ನಡೆದುಹೋಯಿತು. ಆ ನಮೂನಿ ಘಟಾನುಘಟಿ ಪೊಲೀಸರೇ ಅದಕ್ಕೆ ರೆಡಿ ಇರಲಿಲ್ಲ. ಹರ್ಗೀಸ್ ತಯಾರ ಇರಲೇ ಇಲ್ಲ! ಊಹಿಸಿಕೊಳ್ಳಲೂ ಅಸಾಧ್ಯ!

ಎನ್ಕೌಂಟರಿನಲ್ಲಿ ಗುಂಡು ತಿಂದು 'ಸತ್ತಿದ್ದ' ಅಂದುಕೊಂಡಿದ್ದ 'ಶವ'ವೊಂದು ಎದ್ದು ಕುಳಿತುಬಿಟ್ಟಿತು! ಎದ್ದು ಕುಳಿತಿದದ್ದು ಒಂದೇ ಅಲ್ಲ. ನಾನು ಸತ್ತಿಲ್ಲ!!! ನಾನು ಸತ್ತಿಲ್ಲ!!! ಅಂತ ಬೊಬ್ಬೆ ಹೊಡೆಯಿತು.

ಎಲ್ಲರ ಎದೆ ಒಂದು ಕ್ಷಣ ಝಲ್ ಅಂತು. ಕಮ್ಮಿ ಕಮ್ಮಿ ಅಂದರೂ ನೂರು ಗುಂಡುಗಳನ್ನು ಐದು ಮಂದಿ ರೌಡಿಗಳ ದೇಹದೊಳಕ್ಕೆ ನುಗ್ಗಿಸಿದ್ದರು. ಪ್ರತಿಯೊಬ್ಬರಿಗೆ ಸರಾಸರಿ ಇಪ್ಪತ್ತು ಗುಂಡು. ಒಂದು ಹೆಚ್ಚು ಒಂದು ಕಮ್ಮಿ. ಬದುಕುಳಿವ ಚಾನ್ಸೇ ಇರಲಿಲ್ಲ. ಅಂತದ್ದರಲ್ಲಿ ಅವರಲ್ಲೊಬ್ಬ ಎದ್ದು ಕೂತು, ನಾನು ಸತ್ತಿಲ್ಲ!! ಅಂತ ಬೊಂಬಡಾ ಹೊಡೆಯುತ್ತಿದ್ದಾನೆ. ಇದೇನು ಕನಸಾ ನನಸಾ? ಅಂತ ಕಣ್ಣು ತಿಕ್ಕಿಕೊಂಡರು ಪೋಟೆ. ನೋಡಿದರೆ ಆ ಪರಿ ಗುಂಡುಗಳನ್ನು ತಿಂದಿದ್ದರೂ ಅವನು ಮಾತ್ರ ಎದ್ದು ಕೂತು, ಸತ್ತಿಲ್ಲ, ಬದುಕಿಸಿ, ಅಂತ ಅಂಗಾಲಾಚುತ್ತಲೇ ಇದ್ದಾನೆ. ಆಸ್ಪತ್ರೆಯ ಶವಾಗಾರ ಅಲ್ಲದಿದ್ದರೆ ಅಂಬಾದಾಸ್ ಪೋಟೆ ಮತ್ತೊಮ್ಮೆ ರಿವಾಲ್ವರ್ ಲೋಡ್ ಮಾಡಿಕೊಂಡವರೇ ಮತ್ತೊಮ್ಮೆ ಢಂ! ಢಂ! ಅಂತ ಇನ್ನೊಂದಿಷ್ಟು ಗುಂಡು ನುಗ್ಗಿಸಿ ಅವನ ಕಥೆ ಮುಗಿಸುತ್ತಿದ್ದರೋ ಏನೋ. ಆದರೇನು ಮಾಡುವದು? ಅಷ್ಟು ಓಪನ್ ಆಗಿ ಎನ್ಕೌಂಟರ್ ಮಾಡಿದರೆ ಆಪತ್ತು ಅಂತ ಬಿಟ್ಟರು.

ಬದುಕಿದವ ಯಾರು ಅಂತ ನೋಡಿದರೆ ಅವರಿಗಾಗಲಿ ಅವರ ತಂಡದವರಿಗಾಗಲಿ ನಂಬಿಕೆ ಬರಲಿಲ್ಲ. ಬದುಕಿದ್ದ ಗ್ಯಾಂಗಸ್ಟರ್ ಯಾರಾಗಿದ್ದ ಅಂದರೆ ಡಿ.ಕೆ.ರಾವ್ ಉರ್ಫ್ ರವಿ ಮಲ್ಲೇಶ್ ಬೋರಾ.

ಇಸ್ಕಿ ಮಾಯಿಲಾ! ಅನ್ನುವ ಬೈಗುಳ ಅವರಿಗೆ ತಿಳಿಯದೇ ಅವರ ಬಾಯಿಂದ ಬಂತು. ಈ ಡಿ. ಕೆ. ರಾವ್ ಅನ್ನುವ ರೌಡಿಯದು ಏನು ನಸೀಬ ದೇವರೇ!? ಅಂತ ಅಂದುಕೊಂಡಿರಬೇಕು ಪೋಟೆ. ಈ ಪುಣ್ಯಾತ್ಮ ಬಚಾವಾಗಿದ್ದು ಇದು ಎರಡನೇ ಎನ್ಕೌಂಟರ್ ಆಗಿತ್ತು. ಕೇವಲ ಐದು ವರ್ಷದ ಹಿಂದೆ ಡಕಾಯಿತಿ ಮಾಡುತ್ತಿದ್ದಾಗ ಮೃದುಲಾ ಅನ್ನುವ ಲೇಡಿ ಇನ್ಸಪೆಕ್ಟರ್ ಗುಂಡು ಹಾರಿಸಿದ್ದರು. ಕಾಲಿಗೆ ಗುಂಡು ತಿಂದಿದ್ದ ಪುಣ್ಯಾತ್ಮ ಅವತ್ತೂ ಬಚಾವಾಗಿದ್ದ. ಇವತ್ತು ಕೊಲ್ಲಲೇ ಬೇಕು ಅಂತ ಮಾಡಿದ ಎನ್ಕೌಂಟರಿನಲ್ಲಿ ಸಹಿತ ಬಚಾವಾಗಿಬಿಟ್ಟಿದ್ದಾನೆ. ಏನು ಮಾಡುವದು? ಅವನ ಪುಣ್ಯ. ನಮ್ಮ ಕರ್ಮ, ಅಂದುಕೊಂಡರು ಪೋಟೆ.

ಮಾಡಲಿಕ್ಕೆ ಏನೂ ಇರಲಿಲ್ಲ. ಸತ್ತಿಲ್ಲ ಅಂದ ಮೇಲೆ ಬದುಕಿಸಿಕೊಳ್ಳಲಿಕ್ಕೇ ಬೇಕು. ಅವನನ್ನು ಶವಾಗಾರದಿಂದ ಎಮರ್ಜೆನ್ಸಿ ವಾರ್ಡಿಗೆ ಶಿಫ್ಟ್ ಮಾಡಿ ಬಂದರು. ಅಲ್ಲಿ ಡಾಕ್ಟರುಗಳು ಚಿಕಿತ್ಸೆ ಶುರು ಮಾಡಿ ಒಂದೊಂದೇ ಆಗಿ ಎಲ್ಲ ಹತ್ತೊಂಬತ್ತು ಗುಂಡು ತೆಗೆದು ಹಾಕುತ್ತಿದ್ದರೆ ಅವರೇ ಆಶ್ಚರ್ಯ ಪಡುತ್ತಿದ್ದರು, ಈ ಪುಣ್ಯಾತ್ಮ ಹೇಗೆ ಬದುಕಿ ಉಳಿದಿದ್ದಾನೆ ಅಂತ?

ಬರೋಬ್ಬರಿ ಹತ್ತೊಂಬತ್ತು ಗುಂಡು ತಿಂದು ಎರಡನೇ ಬಾರಿ ಸಾವನ್ನು ಗೆದ್ದು ಬಂದಿದ್ದ ಈ ಮೃತ್ಯುಂಜಯನಂತಹ ಡಿ.ಕೆ.ರಾವ್!!!!

ಡಿ. ಕೆ. ರಾವ್
 ಆಗಿದ್ದೇನಾಗಿತ್ತು ಅಂದು ೧೧ ನವೆಂಬರ್ ೧೯೯೮ ರಂದು ಮುಂಬೈನಲ್ಲಿ?

ಒಂದು ದೊಡ್ಡ ಎನ್ಕೌಂಟರ್ ಆಗಿ ಹೋಗಿತ್ತು. ಕ್ರೈಂ ಬ್ರಾಂಚಿನ ಸೀನಿಯರ್ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ಮತ್ತವರ ತಂಡ ಅರ್ಧ ಡಜನ್ನಿಗೆ ಒಂದು ಕಮ್ಮಿ ಅಂದ್ರೆ ಐದು ವಿಕೆಟ್ ಹೊಡೆದ ಖುಷಿಯಲ್ಲಿದ್ದರು. ಒಂದೇ ಎನ್ಕೌಂಟರಿನಲ್ಲಿ ಛೋಟಾ ರಾಜನ್ ಕಡೆಯ ಐದು ಖತರ್ನಾಕ್ ರೌಡಿಗಳನ್ನು ಬಲಿ ಹಾಕಿತ್ತು ಆ ಪೋಲೀಸ್ ತಂಡ.

ಐದು ಜನರಲ್ಲಿ ಎಲ್ಲರೂ ಮುಂಬೈ ಭೂಗತ ಜಗತ್ತಿನಲ್ಲಿ ದೊಡ್ಡ ಹೆಸರು ಮಾಡಿದವರೇ. ಕೇವಲ ಮುಂಬೈ ಮಾತ್ರವಲ್ಲದೆ ಮಂಗಳೂರು, ಬೆಂಗಳೂರಲ್ಲಿ ಸಹ ಹವಾ ಎಬ್ಬಿಸಿ ಹೋಗಿದ್ದ ರಮೇಶ ಪೂಜಾರಿಯಿದ್ದ. ರಾಜಾ ಗೋರೆ, ವಿಪಿನ್ ಖಂಡೇರಾವ್, ಜೈರಾಮ್ ಶೆಟ್ಟಿ ಎಂಬ ದೊಡ್ಡ ದೊಡ್ಡ ರೌಡಿಗಳೂ ಇದ್ದರು. ಚಿಂದಿ ಚೋರನಾಗಿ ಶುರು ಮಾಡಿ ಆಗಲೇ ಒಂದು ಎನ್ಕೌಂಟರಿನಲ್ಲಿ ಕಾಲಿಗೆ ಮಾತ್ರ ಒಂದು ಗುಂಡು ತಿಂದು ಬದುಕಿ ಬಂದಿದ್ದ ಇದೇ ಡೀಕೆ ರಾವ್ ಸಹಿತ ಇದ್ದ.

ಇದಿಷ್ಟು ಜನರ ತಂಡ ಅವರ ವಿರುದ್ಧ ಪಾರ್ಟಿಯ ಇಬ್ಬರನ್ನು ಮುಗಿಸಲು ಹೊರಟಿದೆ ಅಂತ ಖಚಿತ ಮಾಹಿತಿ ಬಂದಿತ್ತು ಇನ್ಸಪೆಕ್ಟರ್ ಪೋಟೆ ಅವರಿಗೆ. 'ಗೇಮ್ ಬಜಾಕೆ ಖತಮ್ ಕರ್ ಡಾಲೋ!' ಅಂತ ಆದೇಶ ಮೇಲಿನ ಹಿರಿಯ ಅಧಿಕಾರಿಗಳಿಂದ ಬಂದಿತ್ತು. ಆ ಕಾಲದಲ್ಲಿ ದಿನ ಬೆಳಗಾದರೆ ಶುರುವಾಗಿ, ಸಿಕ್ಕಾಪಟ್ಟೆ ರಕ್ತ ಹರಿಸುತ್ತಿದ್ದ ಗ್ಯಾಂಗ್ ವಾರ್ ತಡೆಗಟ್ಟಲು ಪೊಲೀಸರು ಕಂಡುಕೊಂಡಿದ್ದ ಉಪಾಯ ಅಂದ್ರೆ ಎನ್ಕೌಂಟರ್. ಯಾವ ಕೋರ್ಟೂ ಇಲ್ಲ, ಯಾವ ಕೇಸೂ ಇಲ್ಲ, ತಲೆ ಬಿಸಿ ಇಲ್ಲವೇ ಇಲ್ಲ. ಗೋಲಿ ಅಂದರ್, ಭೇಜಾ ಬಾಹರ್, ಆದಮೀ ಊಪರ್, ಖೇಲ್ ಖತಮ್ - ಅನ್ನುವ ಹಾಗೆ ರೌಡಿಗಳು ಸಿಕ್ಕರೆ ಹಿಂದೆ ಮುಂದೆ ನೋಡದೆ ಉಡಾಯಿಸಿಬಿಡಿ. ಅವರೊಂದು ಸಮಾಜದ ಖಚ್ರಾ (ಕೊಳಕು) ಇದ್ದ ಹಾಗೆ. ಸಾಫ್ ಕರೋ! ಅಂತ summary ಆರ್ಡರ್ ಮೇಲಿಂದ. ಅದನ್ನೇ ಅವತ್ತು ಅಂಬಾದಾಸ್ ಪೋಟೆ ಪಾಲಿಸಲು ಹೊರಟಿದ್ದರು.

ರೌಡಿಗಳು ಮಾರುತಿ ಎಸ್ಟೀಮ್ ಕಾರಿನಲ್ಲಿ ಬರುತ್ತಿರುವದು ಕಂಡು ಬಂತು. ಕ್ರೈಂ ಬ್ರಾಂಚ್ ಪೋಲೀಸರ ತಂಡ ಆ ಕಾರನ್ನು ಫಾಲೋ ಮಾಡಲು ಆರಂಭಿಸಿತು. ಎನ್ಕೌಂಟರ್ ಮಾಡಲು ಆಯಕಟ್ಟಿನ ಸರಿಯಾದ ಜಾಗ ಸಿಕ್ಕಿದ್ದೇ ಸಿಕ್ಕಿದ್ದು, ರೌಡಿಗಳ ಕಾರನ್ನು ಹಿಂದೆ ಹಾಕಿದ ಪೋಲೀಸ್ ಡ್ರೈವರ್ ಬರೋಬ್ಬರಿ ಪೋಲೀಸ್ ಜೀಪನ್ನು ರೌಡಿಗಳ ಕಾರಿಗೆ ಅಡ್ಡ ಹಾಕಿಬಿಟ್ಟ. ರೌಡಿಗಳ ಕಾರು ಗಕ್ಕನೆ ನಿಂತಿತು. ಕೈಯಲ್ಲಿ ರಿವಾಲ್ವರ್ ಹಿರಿದ ನಾಲ್ಕೈದು ಪೋಲೀಸ್ ಅಧಿಕಾರಿಗಳು ಜೀಪಿಂದ ಜಿಗಿದವರೇ ಪೊಸಿಶನ್ ತೆಗೆದುಕೊಂಡರು. ನಂತರ ನಿರಂತರವಾಗಿ ಕೆಲ ನಿಮಿಷ ಮಾತಾಡಿದ್ದು ಪೊಲೀಸರೂ ಅಲ್ಲ, ರೌಡಿಗಳೂ ಅಲ್ಲ. ಪೋಲೀಸರ ಬಂದೂಕುಗಳು ಮಾತ್ರ.  ಢಮ್!!!ಢಮ್!! ಅಂತ ಪೋಲೀಸರ ಸರ್ವೀಸ್ ರಿವಾಲ್ವರುಗಳು ಎಲ್ಲ ಕಡೆಯಿಂದ ರೌಡಿಗಳ ಕಾರಿನತ್ತ ಮೊರೆದವು. ರೌಡಿಗಳಿಗೆ ಏನಾಯಿತು ಅಂತ ಗೊತ್ತಾಗುವದರಲ್ಲಿ ನೂರಾರು ಗುಂಡುಗಳು ಕಾರಿನ ಗ್ಲಾಸನ್ನು ಒಡೆದು ಬಂದು ಅವರ ದೇಹ ಸೀಳಿದ್ದವು. ಬದುಕುವ ಚಾನ್ಸೇ ಇಲ್ಲ(?) ಅಂತ ಹಲವಾರು ಎನ್ಕೌಂಟರ್ ಮಾಡಿ ಅನುಭವಸ್ಥರಾಗಿದ್ದ ಪೋಟೆ ಮತ್ತಿತರಿಗೆ ಗೊತ್ತಾಗಿತ್ತು.

ಎಲ್ಲ ರೌಡಿಗಳು ಸತ್ತಿದ್ದಾರೆ ಅಥವಾ ಫುಲ್ ಸ್ಕ್ರಾಪ್ ಆಗಿದ್ದಾರೆ ಅಂತ ಖಚಿತವಾಗುತ್ತಲೇ ಪೋಲೀಸ್ ಅಧಿಕಾರಿಗಳು ಕಾರಿನ ಸಮೀಪ ಬಂದರು. ಒಳಗೆ ಕೂತಿದ್ದ ರೌಡಿಗಳು ಬಿದ್ದ ಗುಂಡುಗಳ ಅಬ್ಬರಕ್ಕೆ ಫುಲ್ ಛಿದ್ರ ಛಿದ್ರ. ಛಲ್ಲಿ! ಛಲ್ಲಿ! ಒಬ್ಬರ ಮೇಲೆ ಒಬ್ಬರು ಬಿದ್ದು ಸತ್ತು ಹೋಗಿದ್ದರು. ಮುಂದಿನ ಸೀಟಿನಲ್ಲಿ ಎರಡು, ಹಿಂದೆ ಮೂರು. ಐದು ವಿಕೆಟ್ ಪೂರ್ತಿ ಡೌನ್.

ಅಷ್ಟರಲ್ಲಿ 'ಅಮ್ಮಾsss!' ಅಂತ ಯಾರೋ ಸಣ್ಣಗೆ ನರಳಿದ ದನಿ ಕೇಳಿತು. ಅದು ಜಯರಾಂ ಶೆಟ್ಟಿಯದು. ಗುಟುಕು ಜೀವ ಇತ್ತು. ಹತ್ತಿರ ಬಂದು ಗಮನಿಸುತ್ತಿದ್ದ ಇನ್ಸಪೆಕ್ಟರ್ ಅಂಬಾದಾಸ್ ಪೋಟೆ ಒಂದು ಕ್ಷಣ ಅವಾಕ್ಕಾದರು. ತೇರಿ ಮಾಯಿಲಾ! ಇನ್ನೂ ಸತ್ತಿಲ್ಲ ನನ್ಮಗ! ಅಂತ ಬೈಕೊಂಡವರೇ ಮತ್ತೊಮ್ಮೆ ಢಂ!!!ಢಂ!!! ಅಂತ ಮತ್ತೊಂದು ಪೂರ್ತಿ ಮ್ಯಾಗಜಿನ್ ಗುಂಡುಗಳನ್ನು ಗಾಯಗೊಂಡು, ಒಬ್ಬರ ಮೇಲೊಬ್ಬರು ಬಿದ್ದಿದ್ದ ರೌಡಿಗಳ ಮೇಲೆ ಹಿಂದೆ ಮುಂದೆ ನೋಡದೆ ಹಾರಿಸಿಬಿಟ್ಟರು. ಗುಟುಕು ಜೀವ ಹಿಡಿದುಕೊಂಡಿದ್ದ ಮೂವರು ರೌಡಿಗಳು ಒಮ್ಮೆ ಕೊನೆಯ ಬಾರಿಗೆ 'ಅಮ್ಮಾ!!!!' ಅಂತ ಚೀತ್ಕಾರ ಉದ್ದಕ್ಕೆ ತೆಗೆದು ಗೊಕ್ಕ್ ಅಂತ ಶಬ್ದ ಹೊರಡಿಸಿ ಸುಮ್ಮನಾಗಿದ್ದರು. ದೀರ್ಘ ನಿದ್ದೆಗೆ ಜಾರಿದ್ದರು. ಮುಗೀತು ಕಥೆ ಅಂತ ಪೋಟೆ ಸಾಹೇಬರು ಮುಂದಿನ ಕಾರ್ಯ ನಿರ್ವಹಿಸಲು ಆ ಕಡೆ ಹೋದರು. ಎಲ್ಲ ರೌಡಿಗಳು ನಿಜವಾಗಿ ಸತ್ತಿದ್ದರಾ? ಅಥವಾ..................

ಎಲ್ಲರೂ ಸತ್ತಿರಲಿಲ್ಲ. ಡಿ. ಕೆ. ರಾವ್ ಅನ್ನುವ ಮೃತ್ಯುಂಜಯ ಹತ್ತೊಂಬತ್ತು ಗುಂಡು ತಿಂದೂ ಬದುಕಿ ಉಳಿದಿದ್ದ. ಇಂದಿಗೂ ಇದ್ದಾನೆ. ಸುದ್ದಿಯಲ್ಲಿಯೂ ಇದ್ದಾನೆ. ಗೂಗಲ್ ಮಾಡಿದರೆ ಪುಟಗಟ್ಟಲೆ ಮಾಹಿತಿ ಸಿಗುತ್ತದೆ.

ಗುಂಡು ಬಿದ್ದ ನಂತರ 'ಅಮ್ಮಾ' ಅಂತ ನೋವಿನಿಂದ ಮುಲುಗಿದ ಜೈರಾಮ್ ಶೆಟ್ಟಿ ಬದುಕಲು ಇದ್ದ ಚಾನ್ಸ್ ಕಳೆದುಕೊಂಡಿದ್ದ. ಅವನ ಅಮ್ಮಾ ಅಂತ ನರಳುವಿಕೆಯಿಂದ ಎಚ್ಚತ್ತಿದ್ದ ಪೊಲೀಸರು ಒಂದೆರಡು ಗುಂಡು ಜಾಸ್ತಿಯೇ ಹಾಕಿ ಕಥೆ ಮುಗಿಸಿದ್ದರು. ರಮೇಶ ಪೂಜಾರಿ ಮತ್ತು ಜೈರಾಮ್ ಶೆಟ್ಟಿಯ ದೇಹಗಳ ನಡುವೆ ಎಲ್ಲೋ ಎಜ್ಜೆಯಲ್ಲಿ ಸಿಕ್ಕುಬಿದ್ದಿದ್ದ ಡಿ.ಕೆ. ರಾವ್ ಹೇಗೋ ಬಚಾವ್ ಆಗಿದ್ದ. ಎಕ್ಕಾ ಮಕ್ಕಾ ಗುಂಡು ಬಿದ್ದಿದ್ದವು. ಸಿಕ್ಕಾಪಟ್ಟೆ ನೋವಾಗುತ್ತಿತ್ತು. ಕಮಕ್ ಕಿಮಕ್ ಅಂದ್ರೆ ಮತ್ತೂ ಒಂದಿಷ್ಟು ಗುಂಡು ಬಿದ್ದು ಸಾಯುವದು ಗ್ಯಾರಂಟಿ ಇತ್ತು. ಹೇಗೋ ಮಾಡಿ ಸುಮ್ಮನೆ ಮಲಗಿದ್ದ. ಅದು ಹೇಗೆ ಅಷ್ಟು ನಿಶಬ್ದವಾಗಿ ಉಳಿದಿದ್ದನೋ? ಅದು ಹೇಗೆ ಒಂದಿಷ್ಟೂ ಆಚೀಚೆ ಅಲುಗದೆ ಸತ್ತಂತೆ ನಟಿಸುತ್ತ ಮಲಗಿದ್ದನೋ? ಅದು ಹೇಗೆ ಪೊಲೀಸರು ಮೋಸ ಹೋದರೋ? ಅಥವಾ ಬದುಕಿರುವ ಚಾನ್ಸೇ ಇರಲಿಕ್ಕೆ ಸಾಧ್ಯವಿಲ್ಲ ಅಂತ ಉಡಾಫೆಯೋ? ಒಟ್ಟಿನಲ್ಲಿ ಈ ಡಿ. ಕೆ. ರಾವ್ ಬದುಕಿ ಬಂದಿದ್ದ. ಶವಾಗಾರದಲ್ಲಿ ಹೆಣದಂತೆಯೇ ಕಫನ್ ಹೊದ್ದು ಮಲಗಿದ್ದ. ಇನ್ನೇನು ಪೋಸ್ಟ್ ಮಾರ್ಟಂ ಮಾಡಲು ವೈದ್ಯರು ಬಂದು, ಸತ್ತಿದ್ದಾನೋ ಬದುಕಿದ್ದಾನೋ ಅಂತ ಸಹಿತ ನೋಡದೆ, ಕರಪರಾ ಅಂತ ಕತ್ತರಿಸಿ ಪೋಸ್ಟ್ ಮಾರ್ಟಂ ಮಾಡಿ ಬಿಟ್ಟಾರು ಅಂತ ಎಚ್ಚೆತ್ತುಕೊಂಡು, ನಾ ಸತ್ತಿಲ್ಲ!!!! ನಾ ಸತ್ತಿಲ್ಲ!!!! ಅಂತ ಕೂಗಿ ಬಿಟ್ಟಿದ್ದ. ಲೀಟರ್ ಗಟ್ಟಲೆ ಹರಿದಿದ್ದ ರಕ್ತದೊಂದಿಗೆ ಇದ್ದ ಬದ್ದ ಶಕ್ತಿಯೆಲ್ಲ ಬಸಿದು ಹೋಗಿತ್ತು. ಅದರೂ ಹೇಗೋ ಮಾಡಿ ತಾನು ಸತ್ತಿಲ್ಲ ಅಂತ ಘೋಷಿಸಿಬಿಟ್ಟಿದ್ದ!

ಮೂಲತ ಕರ್ನಾಟಕದ ಗುಲಬುರ್ಗಾ ಕಡೆಯವನಾದ ರಾವ್ ನ ಮೂಲ ಹೆಸರು ರವಿ ಮಲ್ಲೇಶ್ ಬೋರಾ ಅಂತೇನೋ ಅಂತೆ. ಮೊದಲ ಬಾರಿಗೆ ಪೊಲೀಸರು ಬಂಧಿಸಿದಾಗ ಡಿ. ಕೆ. ರಾವ್ ಅನ್ನುವ ಯಾರದ್ದೋ ಫೇಕ್ ಐಡಿ ಕಾರ್ಡ್ ಇಟ್ಟುಕೊಂಡಿದ್ದ. ಪೋಲೀಸರ ಕಡತಗಳಲ್ಲಿ ಹಾಗೆಯೇ ಬಂದು ಬಿಟ್ಟಿತ್ತು. ಅವನ ಹಿಸ್ಟರಿ ಎಲ್ಲ ನಂತರ ಗೊತ್ತಾಗುತ್ತ ಹೋಯಿತು. ಅಷ್ಟರಲ್ಲಿ ಅಂಡರ್ವರ್ಲ್ಡನಲ್ಲಿ ತುಂಬ ಆಳಕ್ಕೆ ಇಳಿದು ಹೋಗಿದ್ದ. ಈಗಂತೂ ವಿದೇಶದಲ್ಲೆಲ್ಲೋ ಸೆಟಲ್ ಆಗಿರುವ ಛೋಟಾ ರಾಜನ್ ಎಂಬ ಭೂಗತ ಡಾನ್ ನ ಬಲಗೈ ಆಗಿಹೋಗಿದ್ದಾನೆ ಡಿ.ಕೆ. ರಾವ್.

ಪುಣ್ಯಾತ್ಮ ಮನ್ನಿತ್ತಲಾಗೆ ಹೊಸ ವರ್ಷದ ಪಾರ್ಟಿ ಕೊಟ್ಟರೆ  DCP ಒಬ್ಬರು ಬಂದು ಪಾರ್ಟಿಯಲ್ಲಿ ಡಾನ್ಸ್ ಮಾಡಿ ಮುಜುಗರಕ್ಕೀಡಾಗಿದ್ದರು. ದೊಡ್ಡ ಮಟ್ಟದ ಸಂಪರ್ಕಗಳು ಈ ಛೋಟಾ ಡಾನ್ ನವು. 

ಕೇಳಿದರೆ ಎಲ್ಲ ಬಿಟ್ಟಿದ್ದೇನೆ. ಅಂಡರ್ವರ್ಲ್ಡ್ ಜೊತೆ ಸಂಪರ್ಕವೇ ಇಲ್ಲ ಅನ್ನುತ್ತಾನೆ. ಪೊಲೀಸರು ಬೇರೆಯೇ ಸುದ್ದಿ ಹೇಳುತ್ತಾರೆ. ಸತ್ಯ ಎಲ್ಲೋ ಮಧ್ಯೆ ಇರಬೇಕು.

ರೌಡಿಗಳು ಅಂದ್ರೆ ದೊಡ್ಡ ಮಹಾ ವೀರರು, ಧೀರರು, ಶೂರರು ಅಲ್ಲ. ಮಾಧ್ಯಮಗಳು ಅವರನ್ನು ತುಂಬ ವೈಭವೀಕರಿಸಿ larger than life ಅನ್ನುವಂತೆ ಬಿಂಬಿಸುತ್ತವೆ, ಅಂತ ರೌಡಿಗಳು ಅಂದ್ರೆ ಕಸದಂತೆ ನೋಡುವ ಖಡಕ್ ಪೋಲೀಸ್ ಅಧಿಕಾರಿ ರಾಕೇಶ ಮಾರಿಯಾ ಸಹಿತ ಈ ಡಿ.ಕೆ. ರಾವ್ ಮತ್ತು ಅವನ ಕಾರ್ನಾಮೆಗಳನ್ನು ಒಂದು ತರಹದ ಅಚ್ಚರಿಯಿಂದ ನೋಡಿ ಅವನಿಗೆ 'black mamba' ಅಂದ್ರೆ 'ಕಪ್ಪು ಹೆಬ್ಬಾವು' ಅಂತ ಹೆಸರಿಟ್ಟಿದ್ದಾರೆ.

ಮುಂದೆ ಏನೇನು ಆಗುವದಿದೆಯೋ? ಕಾಲ ಎಲ್ಲ ಹೇಳುತ್ತದೆ.

ಆ ಪರಿ ಗುಂಡೇಟು ತಿಂದರೂ ಅದೆಂಗೆ ಬದುಕಿ ಬಂದೆ ಮಾರಾಯಾ? ಅಂತ ಕೇಳಿದರೆ, ಡಿ.ಕೆ. ರಾವ್, ಎಲ್ಲದೂ  ಅದೃಷ್ಟ ಸ್ವಾಮೀ, ಅಂತ ಹೇಳಿ ದೇವರಿಗೆ ಕೈ ಮುಗಿಯುತ್ತಾನೆ. ನೀನೇನಾದರು ಯೋಗಾ ಗೀಗಾ ಕಲಿತು, ಏನೇನೋ ಸಾಧನೆ ಮಾಡಿ, ತಾಸುಗಟ್ಟಲೆ ಉಸಿರು ಗಿಸಿರು ಹಿಡಿದಿಟ್ಟುಕೊಂಡು ಬದುಕಿ ಬಂದೆಯಾ ಹೇಗೆ? ಅಂತ ಕೇಳಿದರೆ, ಅದೆಲ್ಲ ಗೊತ್ತಿಲ್ಲ ಬಿಡಿ, ಅಂದುಬಿಡುತ್ತಾನೆ ಡಿ.ಕೆ. ರಾವ್.

ಪುಣ್ಯಾತ್ಮನೇ, ಯಾವ ಜನ್ಮದಲ್ಲಿ, ಅದೆಷ್ಟು ಕೋಟಿ ಮಹಾ ಮೃತ್ಯುಂಜಯ ಮಂತ್ರ ಜಪಿಸಿ, ಸಿದ್ಧಿ ಮಾಡಿಕೊಂಡು ಬಂದಿದ್ದಿ ಮಾರಾಯ? ಅಂತ ಯಾರೂ ಕೇಳಲಿಲ್ಲ ಅಂತ ಕಾಣುತ್ತದೆ.

ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ। ಊರ್ವಾರುಕಮಿವ ಬಂಧನಾನ್ ಮೃತ್ಯೋರ್ಮೂಕ್ಷಿಯ ಮಾ ಮೃತಾತ್।। ಅನ್ನುವ ಸಾವನ್ನು ದೂರವಿಡಲು ಜಪಿಸುವ ಮಹಾ ಮೃತ್ಯುಂಜಯ ಮಂತ್ರ ಒಂದು ತರಹ ಬೇರೆಯಾಗಿಯೇ ಕೇಳುತ್ತದೆ ಈ ಡಿ. ಕೆ. ರಾವ್ ಅನ್ನುವ 'ಡಬಲ್' ಮೃತ್ಯುಂಜಯನ ಕಥೆ ಕೇಳಿದ ಮೇಲೆ!

ಡಿ. ಕೆ. ರಾವ್ ಅನ್ನುವ ಭೂಗತ ಜೀವಿಯ ಬಗ್ಗೆ ಅಲ್ಲಿ ಇಲ್ಲಿ ಓದಿದ್ದರೂ, ಪುಣ್ಯಾತ್ಮನ ಎರಡೆರಡು ಎನ್ಕೌಂಟರ್ ಕಥೆ ಅಲ್ಪ ಸ್ವಲ್ಪ ಗೊತ್ತಿದ್ದರೂ, ಪೂರ್ತಿ ಮಾಹಿತಿ ಸಿಕ್ಕಿದ್ದು ಮುಂಬೈನ ಪ್ರಖ್ಯಾತ ಕ್ರೈಂ ಜರ್ನಾಲಿಸ್ಟ್ ಹುಸೇನ್ ಝೈದಿ ಬರೆದ ಹೊಸ ಪುಸ್ತಕ 'Byculla to Bangkok' ನಲ್ಲಿ. ಅದ್ಭುತವಾದ ವಿವರಗಳಿವೆ. ಮುಂಬೈ ಅಂಡರ್ವರ್ಲ್ಡ್ ಬಗ್ಗೆ walking encyclopedia ಅಂತಲೇ ಖ್ಯಾತರಾಗಿರುವ ಹುಸೇನ್ ಝೈದಿ ಬರೆದಿರುವ ಮುಂಬೈ ಭೂಗತ ಜಗತ್ತಿನ ವಿವರಗಳನ್ನು ಓದುತ್ತ ಹೋದಂತೆ ಅಲ್ಲಿರುವ ಕ್ಯಾರಕ್ಟರುಗಳು ಪೂರ್ತಿಯಾಗಿ ನಮ್ಮನ್ನು ಆವರಿಸಿಕೊಂಡು ತಲೆಯಲ್ಲಿಯೇ ಗ್ಯಾಂಗ್ ವಾರ್ ಶುರುವಾಗಿ ಬಿಡುವಂತೆ ಬರೆದಿದ್ದಾರೆ. ಅವರ ಇತರೆ ಪುಸ್ತಕಗಳನ್ನು ಓದಿದವರು, ಇದೇನು ಮಹಾ? ಆ ಯಪ್ಪಾ ಬರೆಯೋದೇ ಹಾಂಗೆ. ಕಣ್ಣಿಗೆ ಕಟ್ಟುವಂತೆ, ಅಂತ ಹೇಳಿ ನಾನು ಹೇಳಿದ ಹಾಗೆ ಇನ್ನೊಂದು ಭೂಗತ ಲೋಕದ ಕಥೆ ನಿಮ್ಮುಂದೆ ಬಿಚ್ಚಿಕೊಂಡಾರು! ಖಬರ್ದಾರ್! :)



ವಿ. ಸೂ : ವಿವರವನ್ನೆಲ್ಲ ಮೇಲೆ ಹೇಳಿದ ಪುಸ್ತಕದಿಂದ ಎತ್ತಿದ್ದು. ಆಸ್ಪತೆಯ ಸನ್ನಿವೇಶವನ್ನು ಸ್ವಲ್ಪ ನಾಟಕೀಯ ಮಾಡಿದ್ದು ನಾನು. ರಿಯಲ್ ಲೈಫಿನಲ್ಲಿ ಅದು ಬರೆದಿದ್ದರ ಹತ್ತು ಪಟ್ಟು fascinatingly dramatic ಆಗಿರಬೇಕು ಬಿಡಿ ಆ 'ಹೆಣ' ಎದ್ದು ಕೂತು ಲಬೋ ಲಬೋ ಅನ್ನುವ ದೃಶ್ಯ. ಅದನ್ನು ಇನ್ಸಪೆಕ್ಟರ್ ಪೋಟೆ ಸಾಹೇಬರು ಮಾತ್ರ ಕಂಡಂಗೆ ಕಂಡ ಹಾಗೆ ಹೇಳಿಯಾರು. ಬೇರೆ ಯಾರಿಗೂ ಸಾಧ್ಯವಿಲ್ಲ.

Sunday, May 04, 2014

LoC - ಲೈನ್ ಆಫ್ ಕಂಟ್ರೋಲ್ ( ಗುಲ್ಜಾರ್ ಹೇಳಿದ ಕಥೆ)

೧೯೪೮ ರಲ್ಲಿ  ಪಾಕಿಸ್ತಾನದ ಜೊತೆ ಆದ ಯುದ್ಧದ ನಂತರ ಎರಡೂ ಕಡೆಯ ಸೇನೆಗಳು ಕಾಶ್ಮೀರ ಗಡಿಯಲ್ಲಿ ಪರ್ಮನೆಂಟ್ ಆಗಿ ಝೇಂಡಾ ಹೊಡೆದುಬಿಟ್ಟವು. ತಾತ್ಕಾಲಿಕವಾಗಿ ಯುದ್ಧದ ಸಂದರ್ಭಕ್ಕೆ ಅಂತ ಮಾಡಿದ್ದ ಕ್ಯಾಂಪುಗಳು ಈಗ ಬ್ಯಾರಕ್ಕುಗಳಾಗಿ ಒಂದು ತರಹದ ಶಾಶ್ವತ ಅನ್ನುವ ಹಾಗೆ ಆಗಿಬಿಟ್ಟಿದ್ದವು. ೧೯೬೫ ಬರುವ ಹೊತ್ತಿಗೆ ಬಾರ್ಡರ್ ಏರಿಯಗಳಲ್ಲಿ ಒಂದು ತರಹದ 'ಸದಾ ಹೀಗೆ' ಅನ್ನುವಂತಹ ಬಿಗಿ ವಾತಾವರಣ ಬಂದು ಬಿಟ್ಟಿತ್ತು. ಗಡಿಯಲ್ಲಿ ಗುಂಡಿನ ಚಕಮಕಿ, ದಿಲ್ಲಿ ಮತ್ತು ಇಸ್ಲಾಮಾಬಾದಗಳಲ್ಲಿ ರಾಜಕೀಯ ನಾಟಕ ಎಲ್ಲ ಸಹಜವಾಗಿಬಿಟ್ಟಿದ್ದವು. ಯಾವದಾದರೂ ಮಂತ್ರಿ ಗಡಿ ವೀಕ್ಷಣೆಗೆ ಬರುತ್ತಿದ್ದಾನೆ ಅಂತಾದರೆ ಸ್ಪೆಷಲ್ ಎಫೆಕ್ಟ್ ಸಲುವಾಗಿ ಅಂತ ಒಂದು ಗುಂಡಿನ ಚಕಮಕಿ ಮಾಡುವದು ಸಹಜವಾಗಿಬಿಟ್ಟಿತ್ತು. ಎರಡೂ ಕಡೆಯ ಸೈನಿಕರು ಗಡಿ ದಾಟಿ ಆಕಡೆ ಹೋಗಿ, ಈಕಡೆ ಬಂದು, ಗಡಿಯಲ್ಲಿರುವ ಹಳ್ಳಿಗಳಿಂದ ಮೇಕೆ, ಕೋಳಿ ಎತ್ತಾಕಿಕೊಂಡು ಹೋಗಿ, ಮಟನ್ ಬಿರ್ಯಾನಿ, ಚಿಕನ್ ಬಿರ್ಯಾನಿ ಮಾಡಿಕೊಂಡು ತಿಂದರೆ ಯಾರೂ ಹುಬ್ಬೇರಿಸುತ್ತಿರಲಿಲ್ಲ. ಎಲ್ಲ ನಾರ್ಮಲ್. ಎಲ್ಲ ಕಾಮನ್. ಎಲ್ಲ ರೂಟೀನ್.

ಗಡಿಗುಂಟ ಸೈನ್ಯಗಳ ಮಧ್ಯೆ ಗುಂಡಿನ ಚಕಮಕಿ ಸಹಜವೇ ಆಗಿದ್ದರೂ, ಅದರಲ್ಲಿ ಎಲ್ಲಿಯಾದರೂ ನಾಗರೀಕರು ಸಿಕ್ಕಿಕೊಂಡು ಪ್ರಾಣಹಾನಿ ಆದರೆ ಮಾತ್ರ ಪರಿಸ್ಥಿತಿ ಗರಂ ಆಗಿ ಬಿಡುತ್ತಿತ್ತು. ಪತ್ರಿಕೆಗಳಲ್ಲಿ, ಪುಡಾರಿಗಳ ಭಾಷಣಗಳಲ್ಲಿ ತುಂಬ ಪ್ರಚೋದನಕಾರಿ ಹೇಳಿಕೆಗಳು ಇತ್ಯಾದಿ ಬಂದು ಗಡಿ ಸುತ್ತ ಮುತ್ತ ಎಲ್ಲ ಕೊತಕೊತ ಕುದಿಯುತ್ತಿತ್ತು.

ಕೆಲವೊಮ್ಮೆ ಎಷ್ಟೋ ದಿನಗಟ್ಟಲೆ, ತಿಂಗಳುಗಟ್ಟಲೆ ಎಲ್ಲ ಶಾಂತವಾಗಿರುತ್ತಿತ್ತು. ಗಡಿಗುಂಟ ಒಂದು ಸ್ಮಶಾನ ಮೌನ. ಎರಡೂ ದೇಶಗಳ ನಡುವೆ ಎಲ್ಲ ಮುಗಿದು ಹೋದ ಥಂಡಾ ಥಂಡಾ ಫೀಲಿಂಗ್. ಹಳೆ ಸಂಬಂಧ, ಜಗಳ ಮತ್ತೆ ಶುರು ಮಾಡಲೂ ಸಹಿತ ಮತ್ತೆ ಅದೇ ಬೇಕು - ಒಂದು ಚಿಕ್ಕ ಗುಂಡಿನ ಚಕಮಕಿ. ಸಂಬಂಧ ಮುಗಿಯಲು, ಶುರುಮಾಡಲು ಎಲ್ಲದಕ್ಕೂ ಅದೇ. ಆ ಕಡೆ ಮೂವರು ಸತ್ತರು ಈ ಕಡೆ ನಾಲ್ವರು ಸತ್ತರು. ಖಾತೆಗಳಲ್ಲಿ ಜಮಾ, ಖರ್ಚು ಬರೆದಂತೆ. ಈ LoC ಎಂಬುದೊಂದು ಖಾತೆ ಖಿರ್ದಿ ಪುಸ್ತಕ. ಆ ಕಡೆ ಜಮಾ ಆದರೆ ಈ ಕಡೆ ಖರ್ಚು.

ಗಡಿಯಲ್ಲಿ ನಮ್ಮವರ ಬಂಕರುಗಳು ಮತ್ತು ಪಾಕಿಗಳ ಬಂಕರುಗಳು ಅದೆಷ್ಟು ಹತ್ತಿರವಿದ್ದವೆಂದರೆ, ಈಕಡೆಯವರು ಆಕಡೆಯವರು ಅಂತಾಕ್ಷರಿ ಹಾಡಿಕೊಂಡು, ಒಬ್ಬರಿಗೊಬ್ಬರು ರೇಗಿಸುವಂತಹ ಹಾಡು ಹಾಡಿ, ಮನೋರಂಜನೆ ಮಾಡಿಕೊಂಡು ಬಂದೂಕುಗಳಿಗೆ ವಿಶ್ರಾಂತಿ ಕೊಡುತ್ತಿದ್ದರು. ಆಕಡೆಯವ ಸಿಗರೇಟ್ ಬಾಯಲ್ಲಿಟ್ಟುಕೊಂಡರೆ ಈಕಡೆಯವ ಬೆಂಕಿ ಕೊಡುವಷ್ಟು ಹತ್ತಿರ. ಅಷ್ಟು ಹತ್ತಿರತ್ತಿರ.

ಒಮ್ಮೆ ಅಲ್ಲಿದ್ದ ಮೇಜರ್ ಕುಲವಂತ್ ಸಿಂಗ್ ತನ್ನ ಜೂನಿಯರ್ ಕ್ಯಾಪ್ಟನ್ ಮಜೀದನಿಗೆ ಕೇಳಿದ್ದನು. ಅಲ್ಲಯ್ಯಾ, ಈಗ ಮಾತ್ರ ಸ್ವಲ್ಪ ಹೊತ್ತಿನ ಹಿಂದೆ ನಮಾಜಿನ ಕರೆ ಕೇಳಿ ಬಂತು. ಇದೇನು ಅರ್ಧ ಘಂಟೆ ನಂತರ ಮತ್ತೊಮ್ಮೆ?

ಮಜೀದ್ ನಕ್ಕು ಹೇಳಿದ. ಸರ್, ಅದೇನು ಅಂದ್ರೆ, ಪಾಕಿಸ್ತಾನ ನಮಗಿಂತ ಅರ್ಧ ಘಂಟೆ ಹಿಂದಿದೆ ನೋಡಿ ಅದಕ್ಕೆ. ಮೊದಲು ಕೇಳಿದ್ದು ನಮ್ಮವರದ್ದು. ಈಗ ಕೇಳಿದ್ದು ಅವರದ್ದು.

ಹಾಗಿದ್ದರೆ ಮಜೀದ್ ನೀನು ಯಾರ ಕರೆ ಕೇಳಿದಾಗ ನಮಾಜ್ ಮಾಡುತ್ತಿ? ಅಂತ ಕೇಳಿದ ಮೇಜರ್ ಕುಲವಂತ ಸಿಂಗ್.

ಆವತ್ತಿನ ಮಟ್ಟಿಗೆ, ಆಹೊತ್ತಿನ ಮಟ್ಟಿಗೆ ಯಾರದ್ದು ಅನುಕೂಲವೋ ಆ ಕರೆಯ ಪ್ರಕಾರ ಆಹೊತ್ತಿನ ನಮಾಜು ಸರ್, ಅಂತ ಹೇಳಿದ ಮಜೀದ್ ಖಡಕ್ಕಾಗಿ ಒಂದು ಸಲ್ಯೂಟ್ ಹೊಡೆದು ತನ್ನ ಕೆಲಸ ನೋಡಿಕೊಂಡು ಹೋಗಿದ್ದ.

ಮಜೀದ್ ಹೋದಾಕ್ಷಣ ಕುಲವಂತ್ ಸಿಂಗನಿಗೆ ಏನೋ ಒಂದು ತರಹ ಅನ್ನಿಸಿತು. ಇವನ ಜೊತೆ ತನಗೇಕೆ ಇಷ್ಟು ಪ್ರೀತಿ, ಗೆಳೆತನ ಎಲ್ಲ? ಈ ಮಜೀದನ ಮುಖ ನೋಡಿದಾಗೆಲ್ಲ ಅನ್ನಿಸುತ್ತದೆ ಇವನು ನನ್ನ ತಮ್ಮನಂತವನು ಅಂತ. ಯಾಕೋ, ಏನೋ?

ಒಂದು ದಿವಸ ರಾತ್ರಿ ಮೇಜರ್ ಕುಲವಂತ ಸಿಂಗನ ಟೆಂಟಿಗೆ ಕ್ಯಾಪ್ಟನ್ ಮಜೀದ್ ಬಂದ. ಬಂದವನೇ ಮೇಜರ್ ಮುಂದಿದ್ದ ಸಣ್ಣ ಟೀಪಾಯಿ ಮೇಲೆ ಒಂದು ಟಿಫನ್ ಕ್ಯಾರಿಯರ್ ಇಟ್ಟ.

ಏನಿದು? ಅಂದ ಮೇಜರ್ ಕುಲವಂತ ಸಿಂಗ.

ಸರ್, ಮಟನ್. ಮನೆಯಲ್ಲಿ ಮಾಡಿದ್ದು, ಅಂದ ಕ್ಯಾಪ್ಟನ್ ಮಜೀದ್.

ಕೈಲಿದ್ದ ವಿಸ್ಕಿ ಗ್ಲಾಸನ್ನು ಮೇಜಿನ ಮೇಲಿಟ್ಟ ಮೇಜರ್ ಎದ್ದು ನಿಂತ.

ಭಾಳ ಒಳ್ಳೇದು. ಏನಿವತ್ತು ಮಟನ್? ಏನು ವಿಶೇಷ? ಅಂತ ಕೇಳಿದ ಮೇಜರ್ ಕುಲವಂತ ಸಿಂಗ.

ಸರ್, ಇವತ್ತು ಬಕ್ರೀದ್ ಅಲ್ಲವಾ? ಇದು ಕುರ್ಬಾನಿ ಮಾಡಿದ ಮೇಕೆ ಸರ್. ನೀವು ತಿಂತೀರಿ ತಾನೇ? ಅಂತ ಕೇಳಿದ ಮಜೀದ್.

ಎಸ್, ಎಸ್, ಖಂಡಿವಾಗಿ, ಅಂದ ಮೇಜರ್ ಕುಲವಂತ್ ಸಿಂಗ್, ಟಿಫನ್ ಕ್ಯಾರಿಯರ್ ಬಿಚ್ಚಿ ಒಂದಿಷ್ಟು ರೋಸ್ಟ್ ಮಟನ್ ಬಾಯಿಗೆ ಹಾಕಿಕೊಂಡ. ಮಜೀದ್, ನೀನೂ ಒಂದು ಡ್ರಿಂಕ್ ಮಾಡಿಕೋ, ಅಂತ ಹೇಳುವದನ್ನು ಮರೆಯಲಿಲ್ಲ.

ಏ! ಬೇಡ ಸರ್! ಅಂತ ಮಜೀದ್ ಸಂಕೋಚದಿಂದ ಹೇಳಿದ.

Come on! ಒಂದು ಡ್ರಿಂಕ್ ಮಾಡಿಕೋ ಮಾರಾಯಾ. ಈದ್ ಮುಬಾರಕ್, ಅಂತ ಸ್ವಲ್ಪ ಒತ್ತಾಯ ಮಾಡಿದ ಮೇಜರ್.

ಕೈಯಲ್ಲಿ ಮಟನ್ ಚಾಪ್ಸ್ ಹಿಡಿದುಕೊಂಡೇ ಮಜೀದನನ್ನು ಅವರ ಸಂಪ್ರದಾಯದ ಪ್ರಕಾರ ಮೂರು ಸಾರಿ ಆಲಂಗಿಸಿ ಈದ್ ಮುಬಾರಕ್ ಹೇಳಿದ ಮೇಜರ್ ಕುಲವಂತ್ ಸಿಂಗ್.

ಒಂದಾನೊಂದು ಕಾಲದಲ್ಲಿ ಫತ್ತು ಮೌಶಿ ಈ ತರಹದ ಮಟನ್ ಚಾಪ್ಸ್ ನಮಗಾಗಿ ಮಾಡುತ್ತಿದ್ದಳು. ಫತ್ತು ಮೌಶಿ ಅಂದ್ರೆ ಅವಳೇ, ಅದೇ ಮುಷ್ತಾಕನ ತಾಯಿ, ಫಾತಿಮಾ. ಇದೆಲ್ಲ ತುಂಬಾ ಹಳೆಯ ಮಾತು. ನಾವು ಸಹಾರನಪುರದಲ್ಲಿ ಇದ್ದಾಗಿನ ಮಾತು, ಅಂತ ಹಳೆಯದನ್ನು ಏನನ್ನೋ ನೆನಪಿಸಿಕೊಂಡ ಮೇಜರ್ ಕುಲವಂತ್ ಸಿಂಗ್ ಕ್ಯಾಪ್ಟನ್ ಮಜೀದ್ ಕಡೆ ತಿರುಗಿ, ನೀನು ಎಂದಾದರೂ ಕಪ್ಪು ಕಡಲೆ ಹಾಕಿ ಮಾಡಿದ ಘುಗ್ಗನಿ ತಿಂದಿದ್ದಿಯಾ? ಮಟನ್ ಚಾಪ್ಸ್ ಜೊತೆ ಸಕತ್ತಾಗಿರತ್ತೆ. ಈ ಮಟನ್ ಚಾಪ್ಸ್ ಜೊತೆ ಘುಗ್ಗನಿ ಸಿಗುತ್ತದೆ ಅಂದ್ರೆ ಸಾಯಲಿಕ್ಕೂ ಸಿದ್ಧ ನೋಡಯ್ಯ. ಅಷ್ಟು ರುಚಿ ಅದು, ಅಂತ ಹೇಳಿದ ಮೇಜರ್.

ಮಜೀದ್ ಏನೋ ಹೇಳಬೇಕೆಂದುಕೊಂಡ. ಆದರೆ ಹೇಳಲೋ ಬೇಡವೋ ಅನ್ನುವಂತೆ ವಿಚಾರ ಮಾಡಿ ಹೇಳಲಿಲ್ಲ. ಆದರೆ ಮತ್ತೂ ಸ್ವಲ್ಪ ವಿಚಾರ ಮಾಡಿದ ನಂತರ ಹೇಳಿದ. ಸರ್, ಈ ಮಟನ್ ರೋಸ್ಟ್ ನನ್ನ ತಂಗಿ ಮಾಡಿ ಕಳಿಸಿದ್ದು.

ಹಾಂ!? ನಿನ್ನ ತಂಗಿ ಇಲ್ಲಿರುತ್ತಾಳೆಯೇ? ಅದೂ ಇಲ್ಲಿ ಕಾಶ್ಮೀರದಲ್ಲಿ? ಗಡಿಯಲ್ಲಿ? ಅಂತ ಆಶ್ಚರ್ಯದಿಂದ ಕೇಳಿದ ಮೇಜರ್ ಕುಲವಂತ್ ಸಿಂಗ್.

ಹೌದು ಸರ್. ಇಲ್ಲೇ ಕಾಶ್ಮಿರದಲ್ಲೇ. ಆದರೆ.................... ಅಂತ ಮಜೀದ್ ಮಾತು ನಿಲ್ಲಿಸಿದ.

ಆದರೆ....ಏನು ಆದರೆ? ಅಂತ ಕೇಳಿದ ಮೇಜರ್.

ಸರ್, ಅವಳು ಝಾರ್ಗಲ್ಲಿನಲ್ಲಿ ಇರುತ್ತಾಳೆ. ಗಡಿಯ ಆಕಡೆ. ಪಾಕಿಸ್ತಾನದಲ್ಲಿ! ಅಂದುಬಿಟ್ಟ ಮಜೀದ್.

ಮಟನ್ ಚಾಪ್ಸ್ ಮೂಳೆಯೊಳಗಿನ ನೆಣ ಚೀಪಿ ಚೀಪಿ ಆಹ್ಲಾದಿಸುತ್ತಿದ್ದ ಮೇಜರ್ ಕುಲವಂತ್ ಸಿಂಗ್, ಅರ್ರೇ ವಾಹ್! ಅಂತ ದೊಡ್ಡ ದನಿಯಲ್ಲಿ ಹೇಳಿದವನೇ, ಮಜೀದನಿಗಾಗಿ ಅಂತ ಒಂದು ಡ್ರಿಂಕ್ ಮಾಡಿಕೊಟ್ಟವನೇ, ಚೀಯರ್ಸ್! ಮತ್ತೊಮ್ಮೆ ಈದ್ ಮುಬಾರಕ್! ಅಂತ ಶುಭಾಶಯ ಹೇಳಿದ.

ಮಜೀದನ ಗ್ಲಾಸಿಗೆ ತನ್ನ ಗ್ಲಾಸನ್ನು ಕಿಂಕಿಣಿಸಿದ ಮೇಜರ್ ಕೇಳಿದ, ನಿನ್ನ ತಂಗಿ ಇದನ್ನು ಗಡಿ ಈಕಡೆ ಹೇಗೆ ಕಳಿಸಿಕೊಟ್ಟಳು? ಹಾಂ?

ಮಜೀದನಿಗೆ ಸ್ವಲ್ಪ ಕಸಿವಿಸಿಯಾಯಿತು. ಇಲ್ಲಿ ತನಕ ಹಾಯಾಗಿದ್ದ ವಾತಾವರಣ ಸ್ವಲ್ಪ ಉಸಿರುಗಟ್ಟಲು ಶುರುವಾಯಿತು. ಏನೂ ಹೇಳದೆ ಸುಮ್ಮನೆ ನಿಂತಿದ್ದ.

ನೀನು ಗಡಿಯಾಚೆ ಪಾಕಿಸ್ತಾನದೊಳಕ್ಕೆ ಹೋಗಿದ್ದೆಯಾ ಮಜೀದ್? ನಿಜ ಹೇಳು! ಅಂತ ಮಿಲಿಟರಿ ಅಧಿಕಾರಿ ತನ್ನ ಕೆಳಗಿನ ಆಧಿಕಾರಿಯನ್ನು ಕೇಳುವ ಗತ್ತಿನಿಂದ ಕಠಿಣವಾಗಿ ಕೇಳಿದ ಮೇಜರ್ ಕುಲವಂತ್ ಸಿಂಗ್.

ಇಲ್ಲ ಸರ್! ನಾನು ಗಡಿಯಾಚೆ ಹೋಗಿಲ್ಲ. ಒಂದು ಸಲವೂ ಹೋಗಿಲ್ಲ, ಅಂತ ಹೇಳಿದ ಮಜೀದ್.

ಮತ್ತೆ!!!!!!?????? ಅಂತ ಹೂಂಕರಿಸಿದ ಮೇಜರ್ ಕುಲವಂತ್ ಸಿಂಗ್.

ನನ್ನ ಭಾವ (ತಂಗಿ ಗಂಡ) ಲೆಫ್ಟಿನೆಂಟ್ ಕಮಾಂಡರ್. ಗಡಿಯ ಆಕಡೆ. ಪಾಕಿಸ್ತಾನದ ಸೈನ್ಯದಲ್ಲಿ. ನನ್ನ ತಂಗಿ ಅವನನ್ನು ಭೆಟ್ಟಿ ಮಾಡಲು ಬಂದಿದ್ದಳು, ಅಂದ ಮಜೀದ್.

ತನ್ನ ವಿಸ್ಕಿ ಗ್ಲಾಸ್ ಎತ್ತಿದ ಮೇಜರ್ ಕುಲವಂತ್ ಸಿಂಗ್ ಒಂದು ಗುಟುಕು ಹೀರಿದ. ಟೆಂಟಿನ ಒಳಗೆ ವಾತಾವರಣ ಬೇರೆ ಬೇರೆ ಕಾರಣಗಳಿಂದ ಗರಂ ಆಗುತ್ತಿತ್ತು. ಟೇಬಲ್ ಮೇಲಿದ್ದ ಟಿಫನ್ ಕ್ಯಾರಿಯರನ್ನು ದಡ ಬಡ ಅನ್ನುವಂತೆ ಮುಚ್ಚಿದ ಮೇಜರ್ ಕುಲವಂತ್ ಸಿಂಗ್ ಗತ್ತಿನಿಂದ ಸೀರಿಯಸ್ ದನಿಯಲ್ಲಿ ಕೇಳಿದ, ಇದನ್ನು ನೀನು ಗಡಿಯ ಈಕಡೆ ಹೇಗೆ ತಂದೆ? ಅದು ನನಗೆ ತಿಳಿಯಲೇ ಬೇಕು. ನಿನ್ನ ಮತ್ತು ಗಡಿಯಾಚೆ ಇರುವ ನಿನ್ನ ತಂಗಿ ಗಂಡನ ನಡುವೆ ಅದೇನು ವ್ಯವಸ್ಥೆ ಇದೆ? ಏನು ಮಸಲತ್ತು ನಡೆಯುತ್ತಿದೆ? ಹಾಂ!?

ಮಜೀದ್ ಸುಮ್ಮನೆ ನಿಂತಿದ್ದ. ಮೌನವೇ ಸ್ವಾಮಿ ಶರಣು ಅಯ್ಯಪ್ಪ!

ಏನು ಮಸಲತ್ತು ನಿಮ್ಮಿಬ್ಬರ ಮಧ್ಯೆ ಅಂತ ಕೇಳಿದೆ! ಅಂತ ಮೇಜರ್ ಕುಲವಂತ್ ಸಿಂಗ್ ಏರಿದ ದನಿಯಲ್ಲಿ ಅಬ್ಬರಿಸಿದ.

ಸರ್, ಅದು ಏನು ಅಂದ್ರೆ, ಕೆಳಗಿರುವ ಹಳ್ಳಿಯಲ್ಲಿ ಹೇಗಿದೆ ಅಂದ್ರೆ ಭಾಳ ಜನರ ಮನೆ ಗಡಿಯ ಈಕಡೆ ಇದೆ. ಹೊಲಗದ್ದೆ ಎಲ್ಲ ಗಡಿಯ ಆಕಡೆಯಿವೆ. ಗಡಿಯ ಆಕಡೆ ಪಾಕಿಸ್ತಾನದ ಕಡೆ ಸಹಿತ ಹಾಗೆ ಇದೆ. ಕುಟುಂಬ, ಸಂಬಂಧಗಳೂ ಸಹಿತ ಹೊಲಗದ್ದೆಗಳ ಹಾಗೆ ಈಕಡೆ ಆಕಡೆ ಆಗಿಬಿಟ್ಟಿವೆ....................... ಅಂತ ತಡವರಿಸುತ್ತ ಹೇಳಿದ ಮಜೀದ್.

ಮೇಜರ್ ಕುಲವಂತ್ ಸಿಂಗನಿಗೆ ಮಜೀದನ ಮಾತುಗಳಿಗಿಂತ ಧ್ವನಿಯಲ್ಲಿಯೇ ನಂಬುಗೆ ಹೆಚ್ಚು. ಪದಗಳಲ್ಲಿ ಇರಬಹುದಾದ ಸುಳ್ಳು ದನಿಯಲ್ಲಿ ನುಸುಳಿದರೆ ಆರಾಮಾಗಿ ತಿಳಿಯುತ್ತಿತ್ತು ಮೇಜರ್ ಸಿಂಗನಿಗೆ. ಮಜೀದ್ ನಿಜ ಹೇಳುತ್ತಿದ್ದಾನೆ ಅಂತ ಅನ್ನಿಸಿತು.

ಒಂದು ಧೀರ್ಘ ಮೌನದ ನಂತರ ಮುಚ್ಚಿಟ್ಟಿದ್ದ ಟಿಫನ್ ಕ್ಯಾರಿಯರ್ ಮತ್ತೆ ತೆಗೆದ ಮೇಜರ್ ಕುಲವಂತ್ ಸಿಂಗ್ ಮತ್ತೊಂದಿಷ್ಟು ಮಟನ್ ಚಾಪ್ಸ್ ತಟ್ಟೆಗೆ ಹಾಕಿಕೊಂಡ. ಅಲ್ಲಿಯ ತನಕ ತುಂಬಾ ಆತಂಕಗೊಂಡಿದ್ದ ಮಜೀದನಿಗೆ ನಿರಾಳವಾದ ಅನುಭವ.

ಸರ್,  ಗಡಿ ಆಕಡೆಯಿರುವ ಪಾಕಿಸ್ತಾನಿ ಕಮಾಂಡರ್ ನಿಮ್ಮ ಗೆಳೆಯ. ಅಲ್ಲವಾ ಸಾರ್? ನನಗೆ ಗೊತ್ತು. ಯಾಕೆಂದರೆ ನೀವು ಅವನ ಬಗ್ಗೆ ಒಂದು ಲೇಖನ ಬರೆದಿದ್ದೀರಿ. ಅಲ್ಲವಾ? ಅಂತ ಕೇಳಿದ ಮಜೀದ್.

ಮೇಜರ್ ಕುಲವಂತ್ ಸಿಂಗ್ ಫುಲ್ ಥಂಡಾ ಹೊಡೆದ. ವಿಸ್ಕಿ ನಶೆಯೆಲ್ಲ ಪೂರ್ತಿ ಇಳಿದು ಹೋದ ಅನುಭವ. ಅವನಿಗೆ ಒಂದೇ ಒಂದು ಹೆಸರು ನೆನಪಿಗೆ ಬಂತು. ಅದೇ ಹೆಸರನ್ನು ಮಜೀದ್ ಉಸುರಿದಾಗ ಮೇಜರ್ ಕುಲವಂತ್ ಸಿಂಗ್ ಕಣ್ಣಿನಲ್ಲಿ ನೀರು!

ಮುಷ್ತಾಕ್ ಅಹಮದ್ ಖೋಕರ್......ಸಹಾರನಪುರದವರು!

ಮೇಜರ್ ಕುಲವಂತ್ ಸಿಂಗನ ಕೈಗಳು ಗಡಗಡ ನಡುಗತೊಡಗಿದವು. ಟೆಂಟಿನ ಕಿಟಕಿ ಮುಂದೆ ನಿಂತ ಮೇಜರ್ ಹೊರಗೆ ನೋಡಿದ. ಹೊರಗೆ ಒಂದಿಷ್ಟು ಸೈನಿಕರು ಅಲ್ಲಲ್ಲಿ ಓಡಾಡುತ್ತಿದ್ದರು.

ಸರ್, ಕಮಾಂಡರ್ ಮುಷ್ತಾಕ್ ಅಹಮದ್ ನನ್ನ ತಂಗಿಯ ಮಾವ, ಅಂತ ಸಣ್ಣ ದನಿಯಲ್ಲಿ ಹೇಳಿದ ಕ್ಯಾಪ್ಟನ್ ಮಜೀದ್.

ಮಾವ!? ಓಯ್! ನಿನ್ನ ತಂಗಿ ಗಂಡ ಮುಷ್ತಾಕ ನಸೀಮಾ ದಂಪತಿಗಳ ಮಗನೇ?  ಅಂತ ಆಶ್ಚರ್ಯದಿಂದ ಕೇಳಿದ ಮೇಜರ್ ಕುಲವಂತ್ ಸಿಂಗ್.

ಹೌದು ಸರ್! ಅಂದು ಸುಮ್ಮನಾದ ಮಜೀದ್.

ಏ! ಇವನೇ.....ಮಜೀದ್, ಅನ್ನುವಷ್ಟರಲ್ಲಿ ಮೇಜರ್ ಕುಲವಂತ ಸಿಂಗನ ಮಾತು ನಿಂತು ಹೋಯಿತು. ಕೊರಳು ಕಟ್ಟಿಹೋಯಿತು. ಮುಂದೆ ಮಾತಾಡಲು ಆಗಲೇ ಇಲ್ಲ. ಗ್ಲಾಸನ್ನು ಎತ್ತಿದವನೇ ಅದರಲ್ಲಿದ್ದಷ್ಟೂ ವಿಸ್ಕಿಯನ್ನು ಒಂದೇ ಗುಕ್ಕಿಗೆ ಸೀದಾ ಗಂಟಲಿಗೆ ಸುರಿದುಕೊಂಡು ಬಿಟ್ಟ. ಕೊರಳಲ್ಲಿ ಕಟ್ಟಿಕೊಂಡು ಮಾತು ನಿಲ್ಲಿಸಿದ್ದ ಗಡ್ಡೆಯನ್ನು ಕರಗಿಸಲೋ ಎಂಬಂತೆ.

ಮುಷ್ತಾಕ್ ಮತ್ತು ಕುಲವಂತ್ ಇಬ್ಬರೂ ಉತ್ತರ ಪ್ರದೇಶದ ಸಹಾರನಪುರದವರು. ಒಂದು ಕಾಲದಲ್ಲಿ ಇಬ್ಬರೂ ಡೂನ್ ಕಾಲೇಜಿನಲ್ಲಿ ಕೂಡಿ ಓದಿದ್ದರು. ಇಬ್ಬರೂ ಕೂಡಿಯೇ ಡೂನ್ ಮಿಲಿಟರಿ ಅಕಾಡೆಮಿಯಲ್ಲಿ ಸೈನಿಕರಾಗಿ ತಯಾರಾಗಿದ್ದರು. ಅವರಿಬ್ಬರ ತಾಯಂದಿರು ಸಹ ಅತಿ ಆತ್ಮೀಯ ಗೆಳತಿಯರು. ನಂತರ ಹಿಂದುಸ್ತಾನ, ಪಾಕಿಸ್ತಾನ ಅಂತ ಭಾರತ ವಿಭಜನೆಯಾಯಿತು. ಹಾಗೆಯೇ ಸೈನ್ಯ ಕೂಡ ವಿಭಜನೆಯಾಯಿತು. ಮುಷ್ತಾಕ್ ಅಹಮದ್ ತನ್ನ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ಹೊರಟು ಹೋದ. ಕುಲವಂತ್ ಸಿಂಗ್ ಈಕಡೆ ಉಳಿದ. ನಂತರ ಎರಡೂ ಕುಟುಂಬಗಳ ಮಧ್ಯೆ ಏನೂ ಸಂಪರ್ಕವಿರಲಿಲ್ಲ.

ಈ ಕಡೆ  ಭಾರತ ಸೈನ್ಯದಲ್ಲಿ ಕುಲವಂತ್ ಸಿಂಗ್ ಕಾಶ್ಮೀರ ಗಡಿಗೆ ಬಂದ. ಬಂದ ಸ್ವಲ್ಪೇ ದಿವಸದಲ್ಲಿ ಗಡಿಗುಂಟ ತನ್ನ ಜೂನಿಯರ್ ಆಫೀಸರ್ ವಿಶ್ವ ಅನ್ನುವವನೊಡನೆ ಹೋಗುತ್ತಿದ್ದ ಮೇಜರ್ ಕುಲವಂತ್ ಸಿಂಗನಿಗೆ ಒಂದು ವಿಚಾರ ಬಂತು. ಗಡಿಯಾಚೆ ಇರುವ ಪಾಕಿಸ್ತಾನದ ಅಧಿಕಾರಿ ಜೊತೆ ಯಾಕೆ ರೇಡಿಯೋ ಸಂಪರ್ಕ ಮಾಡಬಾರದು? ಅಂತ. ತಲೆಗೆ ಹೊಳೆದಿದ್ದನ್ನ ಮಾಡಿಯೇ ರೂಢಿ ಸರ್ದಾರ್ಜಿಗೆ. ರೇಡಿಯೋ ಸಂಪರ್ಕ ಮಾಡಿ ಆಕಡೆಯಿದ್ದ ಪಾಕಿ ಅಧಿಕಾರಿಗೆ ಹಲೋ ಅಂದೇ ಬಿಟ್ಟ ಮೇಜರ್ ಕುಲವಂತ್ ಸಿಂಗ್!

ಅದೇನು ಮಾಯೆಯೋ! ಗಡಿಯ ಆಕಡೆ ಪಾಕಿಸ್ತಾನದಲ್ಲಿ ರೇಡಿಯೋ ಸಂದೇಶ ಸ್ವೀಕರಿಸಿದವನು ಅದೇ ಬಾಲ್ಯ ಸ್ನೇಹಿತ ಮುಷ್ತಾಕ್ ಅಹಮದ್ ಖೋಕರ್!

ಮುಷ್ತಾಕ್ ಅಹಮದ್ ಒಂದು ಕ್ಷಣ ಅಪ್ರತಿಭನಾದ. ಸುಧಾರಿಸಿಕೊಳ್ಳಲು ಸುಮಾರು ಹೊತ್ತು ಬೇಕಾಯಿತು. ನಂತರ ನೋಡಿ ಇಬ್ಬರೂ ಮಿತ್ರರೂ ಫಾರ್ಮಿಗೆ ಬಂದು ಬಹೆನ್ ಚೋದ್, ಅದು, ಇದು ಅಂತ  ಪಂಜಾಬಿಯಲ್ಲಿ ಟಿಪಿಕಲ್ ಹಳೆ ಗೆಳೆಯರ ರೀತಿಯಲ್ಲಿ 'ಪ್ರೀತಿಯಿಂದ' ಬೈದುಕೊಳ್ಳಲಿಕ್ಕೆ ಶುರುಮಾಡಿಕೊಂಡರೆ ಇಬ್ಬರ ಕಣ್ಣಲ್ಲೂ ನೀರು ಧಾರಾಕಾರ.

ಮೊದಲು ಸುಧಾರಿಸಿಕೊಂಡ ಮೇಜರ್ ಕುಲವಂತ್ ಸಿಂಗ್ ಕೇಳಿದ ಮೊದಲ ಪ್ರಶ್ನೆ: ಫತ್ತು ಮೌಶಿ ಹೇಗಿದ್ದಾಳೆ ಮಾರಾಯಾ?

ಹಾಂ! ಅಮ್ಮನಿಗೆ  ತುಂಬ ವಯಸ್ಸಾಗಿ ಹೋಗಿದೆ. ಅಜ್ಮೀರದ ಖ್ವಾಜಾ ಮೋಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ಏನೋ ಹರಕೆ ಹೊತ್ತಿದ್ದಾಳೆ. ಒಮ್ಮೆ ಅಜ್ಮೇರಿಗೆ ಬಂದು, ಆಕೆಯ ಕೈಯಾರೆ ದರ್ಗಾದಲ್ಲಿ ಚಾದರ್ ಸೇವೆ ಮಾಡಿ ಹೋಗಬೇಕು ಅಂತ ಅಮ್ಮನ ಆಸೆ. ಆದರೆ ಆಕೆಯನ್ನು ಒಬ್ಬಳೇ ಕಳಿಸಲು ಸಾಧ್ಯವಿಲ್ಲ. ಸೊಸೆ ರಬಿಯಾನ ಜೊತೆ ಕಳಿಸೋಣ ಅಂದರೆ ಆಕೆಯ ಮಕ್ಕಳು ಚಿಕ್ಕವರು. ಅವರ ಶಾಲೆ ಅದು ಇದು ಅಂತ. ಹಾಗಾಗಿ ರಬಿಯಾ ಅಮ್ಮನ ಜೊತೆ ಹೋಗಲು ಸಾಧ್ಯವಿಲ್ಲ. ಅದೆಲ್ಲ ಇರಲಿ. ನನ್ನ ತಲೆ. ಏನೇನೋ ಕೊರೆಯಲು ಶುರುಮಾಡಿಬಿಟ್ಟೆ ನಾನು. ಅಲ್ಲ? ನಿನಗೆ ರಬಿಯಾ ಯಾರು ಅಂತ ಗೊತ್ತಿರಲಿಕ್ಕೆ ಸಾಧ್ಯವಿಲ್ಲ. ಅಲ್ಲವಾ? ಅಂತ ಹೇಳಿ ಮುಷ್ತಾಕ್ ಒಂದು ಸಲಕ್ಕೆ ಮಾತು ನಿಲ್ಲಿಸಿದ.

ಗೊತ್ತಿಲ್ಲದೇ ಏನು? ನಮ್ಮ ಮಜೀದನ ತಂಗಿ. ನಿನ್ನ ಸೊಸೆ. ಅವಳೇ ತಾನೇ ರಬಿಯಾ? ಸರಿಯಾ? ಅಂತ ಕೇಳಿದ ಕುಲವಂತ್ ಸಿಂಗ್, ಮಜೀದ್ ಸೈನ್ಯದಲ್ಲಿ ನನ್ನ ಜೂನಿಯರ್ ಮಾರಾಯಾ, ಅಂತ ವಿವರಣೆ ನೀಡಿದ.

ಮುಷ್ತಾಕನಿಗೆ ಡಬಲ್ ಆಶ್ಚರ್ಯ. ಬಾಲ್ಯದ ಗೆಳೆಯ ಸಿಕ್ಕಿದ್ದು ಒಂದಾದರೆ, ಸೊಸೆಯ ಅಣ್ಣ ಗೆಳೆಯನ ಜೂನಿಯರ್ ಎಂಬುದು.

ಓಯ್! ಓಯ್! ಅಂತ ಮತ್ತೆ ಖುಷಿಯಿಂದ ಕೂಗಲು ಶುರುಮಾಡಿದ ಮುಷ್ತಾಕ್ ಮತ್ತೊಂದಿಷ್ಟು ಬೈಗಳ ಮಳೆ ಸುರಿಸಿದ. ಎಲ್ಲ ಪ್ರೀತಿಯಿಂದ.

ನಮ್ಮ ಸೊಸೆ ಅಣ್ಣ ಮಜೀದನ ಒಳ್ಳೆ ರೀತಿಯಿಂದ ನೋಡಿಕೋ, ಅಂತ ಹೇಳಿದ ಮುಷ್ತಾಕ್ ಫುಲ್ ಸೆಂಟಿ ಸೆಂಟಿ ಆದ.

ಹೀಗೆ ಬಾಲ್ಯಮಿತ್ರರಿಬ್ಬರು ಅತಿ ವಿಚಿತ್ರವೆಂಬಂತೆ ಮತ್ತೆ ಜೋತೆಗೂಡಿದ್ದರು. ಅವರ ನಡುವೆ ಮನುಷ್ಯ ಅಡ್ಡಾದಿಡ್ಡಿಯಾಗಿ ಎಳೆದಿದ್ದ LoC ಇತ್ತು ನಿಜ. ಆದರೆ ರೇಡಿಯೋ ತರಂಗಗಳಿಗೆ, ಹೃದಯದ ಭಾವನೆಗಳಿಗೆ ಎಲ್ಲಿಯ ಗಡಿ, ಎಲ್ಲಿಯ LoC, ಎಲ್ಲಿಯ ಅಡೆತಡೆ? ಇಲ್ಲವೇ ಇಲ್ಲ.

ಕುಲವಂತ್ ಮತ್ತು ಮುಷ್ತಾಕ್ - ಮಿತ್ರರಿಬ್ಬರೂ ನಿರ್ಧರಿಸಿಯೇ ಬಿಟ್ಟರು. ಪಾಕಿಸ್ತಾನದಿಂದ ಮುಷ್ತಾಕ್ ಅಹಮದ್ ತನ್ನ ತಾಯಿ ಫಾತಿಮಾಳನ್ನು ವಾಘ್ ಬಾರ್ಡರ್ ಪೋಸ್ಟಿಗೆ ತರುವದು. ಅಲ್ಲಿ ಕುಲವಂತ್ ಸಿಂಗನ ಹೆಂಡತಿ ಸಂತೋಷ್ ಕೌರ್ ಬಂದು ಆಕೆಯನ್ನು ಬರಮಾಡಿಕೊಳ್ಳುತ್ತಾಳೆ. ನಂತರ ಸಂತೋಷ್ ಕೌರ್ ಫಾತಿಮಾಳನ್ನು ದೆಲ್ಲಿಗೆ ಕರೆದೊಯ್ಯುತ್ತಾಳೆ. ಮೊದಲು ಅಜ್ಮೇರಿಗೆ ಕರೆದುಕೊಂಡು ಹೋಗಿ ಫಾತಿಮಾಳ ಹರಕೆ ತೀರಿಸಿ ನಂತರ ಸಹಾರನಪುರಕ್ಕೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿರುತ್ತಾಳೆ ಕುಲವಂತ್ ಸಿಂಗನ ವೃದ್ಧ ತಾಯಿ. ಅಲ್ಲಿ ಹಳೆ ಗೆಳತಿಯರಿಬ್ಬರ ಸಮ್ಮಿಲನ. ಇದು ಮಾಡಿದ್ದ ಪ್ಲಾನ್. ತಾಯಿಯ ಹರಕೆ ಪೂರೈಸುವದು ಹೇಗಪ್ಪಾ ಅಂತ ಚಿಂತೆಯಲ್ಲಿದ್ದ ಮುಷ್ತಾಕ್ ಅಹಮದ್ ಗೆ ಎದೆಯಿಂದ ಬಂಡೆ ಎತ್ತಿಟ್ಟಷ್ಟು ನಿರಾಳ.

ನಂತರ ಒಂದು ದಿವಸ ಪಾಕಿಸ್ತಾನದ ಮುಷ್ತಾಕನ ಕಡೆಯಿಂದ ಸಂದೇಶವೊಂದು ಬಂತು. ತಾಯಿಯ ಭಾರತದ ವೀಸಾ ಬಂದಿದೆ ಅಂತ. ಈಕಡೆ ಮೇಜರ್ ಕುಲವಂತ್ ಸಿಂಗ್ ತನ್ನ ಪತ್ನಿ ಸಂತೋಷ್ ಕೌರಳಿಗೆ ಫೋನ್ ಮಾಡಿ ವಾಘ್ ಗಡಿಗೆ ಬರುವ ದಿನ ನಿಕ್ಕಿ ಮಾಡಲು ಹೇಳಿದ. ಎಲ್ಲ ವ್ಯವಸ್ಥೆ ಮಾಡಿಯಾಗಿತ್ತು. ಆಕಡೆಯಿರುವ ಮುಷ್ತಾಕನಿಗೆ ತಿಳಿಸುವದೊಂದೇ ಬಾಕಿ ಇತ್ತು.

ಆವಾಗಲೇ ರಕ್ಷಣಾ ಮಂತ್ರಿ ಗಡಿಗೆ ಬಂದು ವಕ್ಕರಿಸಬೇಕೆ! ಎರಡೂ ಕಡೆಯಿಂದ ಬಂದೂಕುಗಳು ಮೊರೆಯತೊಡಗಿದವು. ಮಂತ್ರಿ ಮಹೋದಯರು ಬಾರ್ಡರಿಗೆ ಬಂದಾಗೆಲ್ಲ ಅವರಿಗೆ ಸ್ವಾಗತ ಮಾಡಲೋ ಏನೋ ಎಂಬಂತೆ ಗುಂಡಿನ ಚಕಮಕಿ. ಮೇಜರ್ ಕುಲವಂತ್ ಸಿಂಗನಿಗೆ ಗೊತ್ತಿತ್ತು ಇದೂ ಕೂಡ ತಾತ್ಕಾಲಿಕ, ಮುಗಿದು ಹೋಗಲಿದೆ ಅಂತ. ಈ ಗದ್ದಲದ ನಡುವೆ ಆಕಡೆಯಿರುವ ಮುಷ್ತಾಕನನ್ನು ರೇಡಿಯೋ ಮೇಲೆ ಸಂಪರ್ಕಿಸಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಕೆಳಗಿನ ಹಳ್ಳಿಯಲ್ಲಿರುವ ಯಾರನ್ನಾದರೂ ಕಳಿಸಿ ಸಂದೇಶ ಮುಟ್ಟಿಸಬಹುದು ಬಿಡಿ. ಮಜೀದನಿಗೆ ಅಂತವರು ಬೇಕಾದಷ್ಟು ಜನ ಗೊತ್ತಿದ್ದರು. ಗಡಿಯಿಂದ ಆಚೆ ಈಚೆ ಹೋಗಿ ಬಂದು ಮಾಡುವದು ಅವರಿಗೆ ಮನೆಯಂಗಳ ದಾಟಿ ಪಕ್ಕದ ಮನೆಗೆ ಹೋಗಿ ಬಂದಷ್ಟೇ ಸಹಜ. ಆದರೂ ಕುಲವಂತ್ ಸಿಂಗನಿಗೆ ಚಿಂತೆ. ಪತ್ನಿ ಸಂತೋಷ್ ಕೌರ್ ಬೇರೆ ಫೋನ್ ಮಾಡಿ ಮಾಡಿ ಹೇಳುತ್ತಿದ್ದಳು. ಅಯ್ಯೋ! ಸಹಾರನಪುರದಿಂದ ನಿಮ್ಮ ತಾಯಿ ಕೂಡ ಪದೇ ಪದೇ ಫೋನ್ ಮಾಡುತ್ತಿದ್ದಾರೆ. ಅವರದ್ದು ಒಂದೇ ಗೋಳು. ಫಾತಿಮಾ ಬರುತ್ತಿದ್ದಾಳೆ ತಾನೇ? ಖಂಡಿತ ಬರುತ್ತಿದ್ದಾಳೆ ತಾನೇ? ನಿನಗೆ ಒಬ್ಬಳೇ ವಾಘ್ ಬಾರ್ಡರಿಗೆ ಹೋಗಲಾಗುತ್ತದಯೇ? ನೀನು ಫಾತಿಮಾಳನ್ನು ಹೇಗೆ ಗುರುತು ಹಿಡಿಯುತ್ತಿ ಸಂತೋಷ್? ನಾನೂ ಬಂದು ಬಿಡಲೇ ನಿನ್ನ ಜೊತೆ ವಾಘ್ ಗಡಿ ತನಕ? ಅಂತ. ಎಂದು ತನ್ನ ಹಳೆಯ ಗೆಳತಿಯನ್ನು ಭೆಟ್ಟಿಯಾದೇನೋ ಅಂತ ಕುಲವಂತ್ ಸಿಂಗನ ವೃದ್ಧ ತಾಯಿಯ ಕಾತುರ.

ಸರ್! ಪಾಕಿಸ್ತಾನಿಗಳು ತುಂಬ ಜೋರಾಗಿ ಶೆಲ್ಲಿಂಗ್ ಶುರುಮಾಡಿಬಿಟ್ಟಿದ್ದಾರೆ, ಅಂತ ಅಷ್ಟರಲ್ಲಿ ಬಂದ ಮಜೀದ್ ವರದಿ ಒಪ್ಪಿಸಿದ.

ಕುಲವಂತ್ ಸಿಂಗ್ ಉರಿದುಕೊಂಡ. ಹಾಳಾಗಿ ಹೋಗಲಿ ಆ ಪಾಕಿಸ್ತಾನದವರು. ಫತ್ತು ಮೌಶಿಯ ಗತಿಯೇನು? ಅವರು ಈಕಡೆ ಬರುವದು ಹೇಗೆ? ಇಗಲೇ ಈ ಪಾಕಿಗಳದೊಂದು ಪೀಡೆ, ಅಂತ upset ಆದ.

ಇದಾದದ್ದು ಆಗಸ್ಟ್ ೫, ೧೯೬೫.

ಅದೇ ದಿವಸ ಪಾಕಿಸ್ತಾನಿ ಪಡೆಗಳು ಚಾಂಬ ಪ್ರದೇಶದಲ್ಲಿ ಭಾರತೀಯ ಪಡೆಗಳ ಆಕ್ರಮಣ ಮಾಡಿದವು ಮತ್ತು LoC ಕ್ರಾಸ್ ಮಾಡಿಬಿಟ್ಟವು.

ಆಗಸ್ಟ್ ೨೮, ೧೯೬೫ ರಂದು ಭಾರತೀಯ ಪಡೆಗಳು ತಿರುಗಿ ಸರಿಯಾಗಿ ಉತ್ತರ ಕೊಟ್ಟವು. ಹಾಜಿ ಪೀರ್ ಪಾಸನ್ನು ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಗಡಿ ದಾಟಿ ಎಂಟು ಕಿಲೋಮೀಟರ್ ಪಾಕಿಸ್ತಾನದೊಳಗೆ ನುಗ್ಗಿ ತಿರಂಗಾ ಧ್ವಜ ಹಾರಿಸಿಯೇ ಬಿಟ್ಟವು.

ಅದೇ ದಿವಸ, ಆಗಸ್ಟ್ ೨೮, ೧೯೬೫ ರಂದು ಅಲ್ಲಿ ಪಾಕಿಸ್ತಾದಲ್ಲಿ ಫಾತಿಮಾ ಮಟನ್ ರೋಸ್ಟ್ ಮಾಡುತ್ತಿದ್ದಳು. ಈ ಕಡೆ ಸಹಾರನಪುರದಲ್ಲಿ ಕುಲವಂತ್ ಸಿಂಗನ ವೃದ್ಧ ತಾಯಿ ಘುಗ್ಗನಿ ಮಾಡಲು ಕಪ್ಪು ಕಡಲೆ ಬೇಯಿಸುತ್ತಿದ್ದಳು. ಎರಡೂ ಮೇಜರ್ ಕುಲವಂತ್ ಸಿಂಗನಿಗೆ ತುಂಬ ಪ್ರಿಯವಾದ ಖಾದ್ಯಗಳೇ.

ಆಗ ಬರಸಿಡಿಲಿನಂತೆ ಬಂದು ಅಪ್ಪಳಿಸಿತು ಸುದ್ದಿ.

LoC ಬಳಿ ಹನ್ನೊಂದು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅವರಲ್ಲಿ ಮೇಜರ್ ಕುಲವಂತ್ ಸಿಂಗ ಸಹಿತ ಇದ್ದ.

ಆಕಡೆ ಫತ್ತು ಮೌಶಿಯ ಮಟನ್ ಚಾಪ್ಸ್ ರೋಸ್ಟ್ ಆಗುತ್ತಲೇ ಇತ್ತು. ಈಕಡೆ ಸಹಾರನಪುರದಲ್ಲಿ ಕರಿ ಕಡಲೆ ಬೇಯುತ್ತಲೇ ಇತ್ತು. ಅವಕ್ಕೇನು ಗೊತ್ತು ರುಚಿ ರುಚಿ ಮಾಡಿಕೊಂಡು ಚಪ್ಪರಿಸಬೇಕಾದವ LoC ಬಳಿ ಹೆಣವಾಗಿ ಮಲಗಿದ್ದ ಅಂತ.


(ಗುಲ್ಜಾರರ ಅಠಣ್ಣಿ (ಎಂಟಾಣೆ) ಎಂಬ ಕಥಾಸಂಕಲನದಿಂದ ಆಯ್ದ ಕಥೆ. ಒಂದಕ್ಕಿಂತ ಒಂದು ಅದ್ಭುತ ಕಥೆಗಳಿವೆ. )

ಗುಲ್ಜಾರ್