ಅಜಿತ್ ಕುಮಾರ್ ದೋವಲ್ |
ಪುರಾತನ ಪೋಲೀಸ್ ಆಫೀಸರ್ ಅಜಿತ್ ಕುಮಾರ್ ದೋವಲ್ ಮತ್ತೆ ವಾಪಸ್ ಬಂದಿದ್ದಾರೆ. ಈಸಲ ಪ್ರಧಾನಿ ನರೇಂದ್ರ ಮೋದಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಂತ.
ಈ ಅಜಿತ್ ಕುಮಾರ್ ಸಾಹೇಬರು IPS ಶ್ರೇಣಿಯ ಪೋಲೀಸ್ ಅಧಿಕಾರಿಯೇ ಆದರೂ ಅವರು ಯುನಿಫಾರ್ಮ್ ಹಾಕಿ, ಲಾಠಿ ಬೀಸಿ ಪೋಲೀಸಗಿರಿ ಮಾಡಿದ್ದು ಇಲ್ಲವೇ ಇಲ್ಲ. ಅವರದ್ದು ಏನಿದ್ದರೂ ಛುಪಾ ರುಸ್ತಂ ಎಂಬಂತೆ ಬೇಹುಗಾರಿಕೆ ಕೆಲಸ. ಅವರು ಮೊದಲಿಂದಲೂ ಭಾರತದ ಆಂತರಿಕ ಬೇಹುಗಾರಿಕೆ ಸಂಸ್ಥೆ - ಇಂಟೆಲಿಜೆನ್ಸ್ ಬ್ಯೂರೋನಲ್ಲಿ (IB) - ಸೇವೆ ಆರಂಭಿಸಿ, ಹಂತ ಹಂತವಾಗಿ ಬೆಳೆದು, ಕೊನೆಯಲ್ಲಿ ಅಲ್ಲಿಯೇ ಡೈರೆಕ್ಟರ್ ಅಂತ ರಿಟೈರ್ ಆದವರು.
ಈ ಅಜಿತ್ ಕುಮಾರ್ ದೋವಲ್ covert operations ಅನ್ನುವಂತಹ ಪರಮ ರಹಸ್ಯ ಕಾರ್ಯಾಚರಣೆಗಳಿಗೆ ಹೆಸರಾದವರು. ಅಂತಹ ಕಾರ್ಯಾಚರಣೆಗಳೇ ಹಾಗೆ, ಬಾಯಿಬಿಟ್ಟು ಮಾತಾಡಲು ಆಗುವದಿಲ್ಲ. ಎಲ್ಲೋ ಯಾರೋ ದೊಡ್ಡ ಉಗ್ರವಾದಿಯೋ, ಶತ್ರು ದೇಶದ ನಾಯಕನೋ ನಿಗೂಢ ರೀತಿಯಲ್ಲಿ ಸಾಯುತ್ತಾರೆ. ಎಲ್ಲೋ ಕಾರಣವಿಲ್ಲದೆ ವಿಮಾನವೊಂದು ಆಕಾಶದಲ್ಲೇ ಢಂ ಅಂದು ಕೆಲವರು ಹರೋ ಹರ ಅಂದು ಬಿಡುತ್ತಾರೆ. ಅಲ್ಲಲ್ಲಿ ಗುಸು ಗುಸು ಸುದ್ದಿ. ಇದು ಯಾವದೋ ಬೇಹುಗಾರಿಕೆ ಸಂಸ್ಥೆ ಮಾಡಿದ, ಮಾಡಿಸಿದ ಒಂದು ರಹಸ್ಯ ಕಾರ್ಯಾಚರಣೆ ಅಂತ. ಮಾಡಿದವರ, ಮಾಡಿಸಿದವರ ಹೆಜ್ಜೆ ಗುರುತು ಎಲ್ಲೂ ಸಿಗದಂತೆ ಮಾಡಿ ಬರುವದೇ ಇಂತಹ covert operators ಗಳ ವಿಶೇಷತೆ. ಅಜಿತ್ ಕುಮಾರ್ ದೋವಲ್ ಈತರಹದ ದೊಡ್ಡ ಮಟ್ಟದ ಖತರ್ನಾಕ್ ರಹಸ್ಯ ಕಾರ್ಯಾಚರಣೆಗಳಿಗೆ ಫೇಮಸ್.
ಅಲ್ಲೋ ಇಲ್ಲೋ ಅವರು ಮಾಡಿದ, ಮಾಡಿಸಿದ ಕೆಲವು ಕಾರ್ಯಾಚರಣೆಗಳ ಝಲಕ್ ಬಂದು ಹೋಗಿವೆ. ಅವೆಲ್ಲ ಮಾಹಿತಿ ಸಂಗ್ರಹಿಸಿ, connect the dots ಅನ್ನೋ ತರಹ puzzle pieces ಕೂಡಿಸುತ್ತ ಹೋದರೆ ಇವರ ಬಗ್ಗೆ ಒಂದು ಸಮಗ್ರ ಚಿತ್ರಣ ಸಿಗುತ್ತದೆ.
ಲಾಲ್ ಡೆಂಗಾ - ಪುರಾತನ ಉಗ್ರಗಾಮಿ. ೧೯೬೦ ರ ದಶಕದಿಂದಲೇ ಭಾರತದ ವಿರುದ್ಧ ಮಿಜೋರಾಂ ಪ್ರತ್ಯೇಕ ಬೇಕು ಅಂತ ಚೀನಾ ಇತರರು ಕೊಟ್ಟ ಕುಮ್ಮಕ್ಕಿನೊಂದಿಗೆ ಇಲ್ಲದ ತೊಂದರೆ ಕೊಟ್ಟವ. ಸಂಧಾನದ ನೆಪದಲ್ಲಿ ಅಜಿತ್ ಕುಮಾರ್ ದೋವಲ್ ಇಂತಹ ಲಾಲ್ ಡೆಂಗನ ಜೊತೆ ಮಾತುಕತೆ ಶುರುವಿಟ್ಟುಕೊಂಡರು. ಮಾತುಕತೆ ನಡೆಸುತ್ತಲೇ ಲಾಲ್ ಡೆಂಗನ ಸಂಘಟನೆಯನ್ನು ಬರೋಬ್ಬರಿ ಒಡೆದರು. ಲಾಲ್ ಡೆಂಗನ ಅತಿ ಪ್ರಮುಖ ಕೆಲ ಅನುಯಾಯಿಯಗಳನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದರು. ಇದಾದ ನಂತರ ಇಲ್ಲದ ರೋಪು ಹಾಕಿ ಸಂಧಾನಕ್ಕೆ ಬರಲು ನಕರಾ ಮಾಡುತ್ತಿದ್ದ ಲಾಲ್ ಡೆಂಗಾ ತೆಪ್ಪಗೆ ಬಂದು ಸಂಧಾನಕ್ಕೆ ಕೂತು, ಮಿಜೋ ಸಮಸ್ಯೆಗೆ ಒಂದು ತರಹದ ಮಂಗಳ ಹಾಡಿ ಹೋದ. ನಂತರ ಲಾಲ್ ಡೆಂಗ್ ಅವನೇ ಹೇಳಿಕೊಂಡಿದ್ದ - ಸಂಧಾನಕ್ಕೆ ಬಂದ ಅಜಿತ್ ದೋವಲ್ ಸಾಹೇಬರು ನನ್ನ ಖಾಸ್ ಜನರನ್ನು ಎಳೆದುಕೊಂಡು ಹೋಗಿಬಿಟ್ಟರು. ಮತ್ತೇನು ಮಾಡಲಿ? ಸಂಧಾನಕ್ಕೆ ಹೋಗಲೇ ಬೇಕಾಯಿತು, ಅಂತ. ಹೀಗೆ ಲಾಲ್ ಡೆಂಗನಂತಹ ಖದೀಮನಿಗೇ ಡಿಂಗ್ ಡಾಂಗ್ ಮಾಡಿದ ಪ್ರಳಯಾಂತಕ ಈ ಅಜಿತ್ ಕುಮಾರ್ ದೋವಲ್. ಇಂತಹ ಕಾರ್ಯಾಚರಣೆ ಮಾಡುವದು ಎಷ್ಟು ಅಪಾಯಕಾರಿ ಕೆಲಸ ಅಂತ ತಿಳಿಯಲು ಇಂತಹ ಕೆಲ ಕಾರ್ಯಾಚರಣೆ ಮಾಡಿ ತಮ್ಮ ಅನುಭವ ಬರೆದುಕೊಂಡ ಇನ್ನೊಬ್ಬ ಇಂಟೆಲಿಜೆನ್ಸ್ ಬ್ಯೂರೋ ಅಧಿಕಾರಿ M.K. ಧಾರ್ ಬರೆದ ಪುಸ್ತಕ ಓದಬೇಕು. ಸದಾ ಕತ್ತಿ ಅಲುಗಿನ ಮೇಲೆ ನಡೆದಷ್ಟು ರಿಸ್ಕಿ. ಏನೋ ಒಂದು ತರಹದ ಇಲ್ಲದ ನಂಬಿಕೆಯಿಟ್ಟು ತಮ್ಮೊಳಗೆ ಬಿಟ್ಟುಕೊಂಡಿರುತ್ತಾರೆ ಉಗ್ರರು. ಸಂಧಾನದ ನೆಪದಲ್ಲಿ ಹೋಗಿ, ಅವರ ಬುಡಕ್ಕೇ ಬತ್ತಿ ಇಟ್ಟು, ಅವರ ಸಂಘಟನೆ ಒಡೆಯುವ ಇತ್ಯಾದಿ 'ವಿದ್ರೋಹಿ' ಕೆಲಸ ಮಾಡುವದು ಗೊತ್ತಾದರೆ ಅಷ್ಟೇ ಮತ್ತೆ! ಸಂಧಾನಕ್ಕೆ ಹೋದವರ ಹೆಣ ಕೂಡ ವಾಪಸ್ ಬರೋದಿಲ್ಲ. ಎಷ್ಟೋ ಸಲ ಹಾಗೆ ಆಗಿದ್ದೂ ಇದೆ.
ಮುಂದೆ ೧೯೮೦ ರ ದಶಕ. ಪಂಜಾಬಿನಲ್ಲಿ ಸಿಖ್ ಉಗ್ರವಾದ. ಅದಕ್ಕೆ ಪಕ್ಕದ ಪಾಕಿಸ್ತಾನದ ಸಂಪೂರ್ಣ ಸಹಾಯ. ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ISI ನ ಅಧಿಕಾರಿಗಳು ಬಂದು ತಿಂಗಳುಗಟ್ಟಲೆ ಅಮೃತಸರದ ಸ್ವರ್ಣಮಂದಿರದಲ್ಲಿ ಝೇಂಡಾ ಹೊಡೆದು, ಸರಿಯಾಗಿ ಹೇಗೆ ಕಿತಾಪತಿ ಮಾಡಬೇಕು ಅಂತ ಸಿಖ್ ಉಗ್ರವಾದಿಗಳಿಗೆ ಸ್ಕೆಚ್ ಹಾಕಿ ಕೊಡುತ್ತಿದ್ದರು. ಒಮ್ಮೆ ಒಬ್ಬ ISI ಅಧಿಕಾರಿ ಬರುತ್ತಿರುವ ವಿಚಾರ ಭಾರತದ ಬೇಹುಗಾರರಿಗೆ ತಿಳಿಯಿತು. ಅವನನ್ನು ಮೊದಲೇ intercept ಮಾಡಿ ಒಳಗೆ ಹಾಕಲಾಯಿತು. ಅಜಿತ್ ಕುಮಾರ್ ದೋವಲ್ ಮತ್ತೆ ಫೀಲ್ಡಿಗೆ ಇಳಿದರು. ಈ ಸರೆ ದೊಡ್ಡ ಖರ್ತನಾಕ್ ಕಾರ್ಯಾಚರಣೆ. ಸ್ವಲ್ಪ ಹೆಚ್ಚು ಕಮ್ಮಿ ಆದರೂ ಸಾವು ಖಚಿತ. ವೇಷ ಭೂಷಣ ಬದಲಾಯಿಸಿಕೊಂಡ ಅಜಿತ್ ಕುಮಾರ್ ತಾವೇ ಆ ISI ಆಫೀಸರ್ ಅನ್ನುವ ಗೆಟಪ್ಪಿನಲ್ಲಿ ಅಮೃತಸರದ ಸಿಖ್ ದೇಗುಲ ಹೊಕ್ಕಿಬಿಟ್ಟರು. ಎಲ್ಲ ಪರ್ಫೆಕ್ಟ್ ತಯಾರಿ ಮಾಡಿಕೊಂಡೇ ಹೋಗಿದ್ದರು. ಸಿಖ್ ಉಗ್ರವಾದಿಗಳಿಗೆ ಸ್ವಲ್ಪೂ ಸಂಶಯ ಬರದಂತೆ ಸಿಂಹದ ಗುಹೆಯಂತಿದ್ದ ಆ ಕಾಲದ ಸ್ವರ್ಣಮಂದಿರ ಹೊಕ್ಕಿದ್ದರು ಇವರು. ತಮ್ಮ ಬುದ್ಧಿವಂತಿಕೆ, ಸಮಯ ಪ್ರಜ್ಞೆ, ಅಪಾರ ಅನುಭವ, ಧೈರ್ಯ ಬಿಟ್ಟರೆ ಬೇರೆ ಏನೂ ಬೆಂಬಲಕ್ಕೆ ಇಲ್ಲ. ಹೀಗೆ ಮಾರುವೇಷದಲ್ಲಿ ಸ್ವರ್ಣಮಂದಿರ ಹೊಕ್ಕು, ಸುಮಾರು ದಿನ ಅಲ್ಲಿದ್ದು, ಎಲ್ಲ ಮಾಹಿತಿ ಬರೋಬ್ಬರಿ ಒಟ್ಟಾಕಿಕೊಂಡು ಬಂದು, ಕೊಡಬೇಕಾದ ಸೈನ್ಯದವರಿಗೆ, ಪೊಲೀಸರಿಗೆ ಕೊಟ್ಟು, ಮುಂದಿನ ಕೆಲಸ ನಿಮ್ಮದು, ಅನ್ನುವಂತೆ ತಮ್ಮ ಮುಂದಿನ covert operation ಗೆ ಹೇಳ ಹೆಸರಿಲ್ಲದಂತೆ ಹೋಗಿ ಬಿಟ್ಟರು ದೋವಲ್. ಇವರು ಸಂಗ್ರಹಿಸಿ ತಂದು ಕೊಟ್ಟ ಮಾಹಿತಿಯನ್ನೇ ಉಪಯೋಗಿಸಿಕೊಂಡು ಸರ್ಕಾರ 'ಆಪರೇಷನ್ ಬ್ಲಾಕ್ ಥಂಡರ್' ಮಾಡಿ ಸಿಖ್ ಉಗ್ರವಾದ ಬೆನ್ನೆಲಬನ್ನು ಮುರಿದು ಹಾಕಿತು. ಅದೇ ಕೊನೆ. ನಂತರ ಸಿಖ್ ಉಗ್ರವಾದ ಮೊದಲಿನ ರೀತಿಯಲ್ಲಿ ಮೇಲೆದ್ದು ಬರಲೇ ಇಲ್ಲ. ಆ ಪರಿ ಬಾರಿಸಲಾಗಿತ್ತು ಸಿಖ್ ಉಗ್ರರನ್ನು. ಅದರ ಕ್ರೆಡಿಟ್ ಎಲ್ಲ KPS ಗಿಲ್ ಎಂಬ ಖಡಕ್ ಪೋಲೀಸ್ ಅಧಿಕಾರಿಗೆ ಹೋಯಿತು. ಆದರೆ ದೋವಲ್ ತರಹದ ಬೇಹುಗಾರರು ಮಾಹಿತಿ ಸಂಗ್ರಹಿಸಿ, ಸರಿಯಾಗಿ ಸ್ಕೆಚ್ ಹಾಕಿ ಕೊಡದಿದ್ದರೆ overt operations ಯಶಸ್ವಿಯಾಗುವದು ಅಷ್ಟರಲ್ಲೇ ಇದೆ.
೧೯೯೯ ರಲ್ಲಿ ಪಾಕಿ ಉಗ್ರರು ನೇಪಾಳದ ಖಾಟಮಾಂಡುವಿನಿಂದ ಇಂಡಿಯನ್ ಏರ್ಲೈನ್ಸ್ ವಿಮಾನ ಅಪಹರಿಸಿ ಸೀದಾ ಅಫಘಾನಿಸ್ತಾನದ ಕಂದಹಾರಕ್ಕೆ ಒಯ್ದುಬಿಟ್ಟರು. ಅವರ ಬೇಡಿಕೆ ಅಂದರೆ ಭಾರತದ ಜೈಲಿನಲ್ಲಿ ಇರುವ ಸುಮಾರು ಜನ ದೊಡ್ಡ ಉಗ್ರಗಾಮಿಗಳನ್ನು ಬಿಡುವದು ಮತ್ತು ಹಲವಾರು ಮಿಲಿಯನ್ ಡಾಲರ್ ರೊಕ್ಕ ಕೊಡುವದು. ಅಷ್ಟು ಮಾಡಿದರೆ ಮಾತ್ರ ಪ್ರಯಾಣಿಕರು ವಾಪಸ್ ಬರುತ್ತಾರೆ. ಇಲ್ಲಂದ್ರೆ ಇಲ್ಲ, ಅಂತ ಖಡಕ್ ಆಗಿ ಹೇಳಿಬಿಟ್ಟಿದ್ದರು ಆ ವಿಮಾನ ಅಪಹರಣ ಮಾಡಿದ ಉಗ್ರರು. ಅವರ ಜೊತೆ ಮಾತುಕತೆ ನಡೆಸಿದ ರಕ್ಷಣಾ ಅಧಿಕಾರಿಗಳಲ್ಲಿ ಅಜಿತ್ ಕುಮಾರ್ ದೋವಲ್ ಮುಂಚೂಣಿಯಲ್ಲಿದ್ದರು. hostage rescue & negotiation ಅವರ ಸ್ಪೆಷಾಲಿಟಿ. ಕಮಾಂಡೋ ಕಾರ್ಯಾಚರಣೆ ಮಾಡಿ, ಅಪಹರಣಕಾರರನ್ನು ಸದೆಬಡಿದು, ವಿಮಾನ ಅಪಹೃತರನ್ನು ಬಿಡುಗಡೆ ಮಾಡುವ ಯೋಜನೆಯನ್ನೂ ಸಹ ಹಾಕಿದ್ದರು. ಆದರೇನು ಮಾಡುವದು? ಪರಿಸ್ಥಿತಿ ಬಹಳ ನಾಜೂಕಾಗಿತ್ತು. ಆಗಲೇ ಒಬ್ಬ ನಿಷ್ಪಾಪಿ ನವವಿವಾಹಿತನನ್ನು ಎಲ್ಲರೆದುರೇ ಇರಿದು ಕೊಂದಿದ್ದ ಉಗ್ರರು ತಮ್ಮ ಪೈಶಾಚಿಕತೆ ಮೆರೆದಿದ್ದರು. ಮತ್ತೆ ಇನ್ನೊಂದು ದೊಡ್ಡ ಕಾರಣವೂ ಇತ್ತು ಅತಿ ಕಡಿಮೆ ರಿಸ್ಕ್ ತೆಗೆದುಕೊಳ್ಳಲು. ಅದೇನೆಂದರೆ ಅಪಹೃತ ಪ್ರಯಾಣಿಕರಲ್ಲಿ ರಿಸರ್ಚ್ & ಅನಾಲಿಸಿಸ್ ವಿಂಗ್ ಎಂಬ ಭಾರತದ ಹೊರ ಬೇಹುಗಾರಿಕೆ ಸಂಸ್ಥೆಯ (external intelligence agency) ದೊಡ್ಡ ಕುಳವೊಬ್ಬ ಕೂಡ ಇದ್ದ. ಪುಣ್ಯಕ್ಕೆ ಉಗ್ರರಿಗೆ ಅದು ಗೊತ್ತಿರಲಿಲ್ಲ. ಗೊತ್ತಿದ್ದರೆ ಅವನಿಗೆ ಏನೇನು ಹಿಂಸೆ ಕೊಟ್ಟು ಏನೆಲ್ಲಾ ರಹಸ್ಯಗಳನ್ನು ಅರಿಯುತ್ತಿದ್ದರೋ ಏನೋ! ಮತ್ತೆ ಆಗಿನ ಪ್ರಧಾನಿ ವಾಜಪೇಯಿ ಅವರ ಮೇಲೆ ಎಲ್ಲಿಲ್ಲದ ಒತ್ತಡ. ಸೆರೆಯಲ್ಲಿರುವ ಉಗ್ರರು ಹಾಳಾಗಿ ಹೋಗಲಿ. ನಮ್ಮ ಬಂಧುಗಳನ್ನು ಬೇಗ ಬಿಡಿಸಿಕೊಂಡು ಬನ್ನಿ, ಅಂತ. ಒಟ್ಟಿನಲ್ಲಿ ಮಾನ ಹೋದರೂ ಚಿಂತೆ ಇಲ್ಲ, ಅತಿ ಕಡಿಮೆ ರಿಸ್ಕಿನಲ್ಲಿ ಎಲ್ಲ ಬಗೆಹರಿದು ಹೋಗಲಿ ಅನ್ನುವದು ಎಲ್ಲರ ಇರಾದೆಯಾಗಿತ್ತು. ಹಾಗಾಗಿ ಕಮಾಂಡೋ ಕಾರ್ಯಾಚರಣೆ ಮಾಡುವದಕ್ಕೆ ಎಳ್ಳು ನೀರು ಬಿಟ್ಟಿತ್ತು ಸರಕಾರ. ಆದರೆ ದೋವಲ್ ಒಂದು ಯೋಜನೆಯನ್ನು ಮಾತ್ರ ಹಾಕಿ ಕೊಟ್ಟಿದ್ದರು. ಮುಂದೆ ಏನಾಯಿತು ಅಂತ ಗೊತ್ತೇ ಇದೆಯಲ್ಲ. ಮಸೂದ್ ಅಝರ್ ಮತ್ತಿತರ ಉಗ್ರರನ್ನು ಕಾರಾಗೃಹದಿಂದ ಬಿಡುಗಡೆ ಮಾಡಿ, ವಿಶೇಷ ವಿಮಾನದಲ್ಲಿ ಕಂದಹಾರಕ್ಕೆ ಒಯ್ದು, ಅವರನ್ನು ಅಪಹರಣಕಾರರಿಗೆ ಒಪ್ಪಿಸಿ, ರೊಕ್ಕದ ಕಪ್ಪು ಕಾಣಿಕೆ ಸಲ್ಲಿಸಿ, ಕೈಮುಗಿದು, ನಮ್ಮ ಮಂದಿಯನ್ನು ಬಿಡಿಸಿಕೊಂಡು ಬಂದಾಯಿತು. ಆಗಿನ ದೊಡ್ಡ ಮಂತ್ರಿ ಜಸ್ವಂತ್ ಸಿಂಗರೇ ಹೋಗಿ ಸೆರೆಯಲ್ಲಿದ್ದ ಉಗ್ರರನ್ನು ತವರಿಗೆ ಕಳಿಸಿಕೊಟ್ಟು ಬಂದರು. ಜೊತೆಗೆ ಅಜಿತ್ ಕುಮಾರ್ ದೋವಲ್ ಸಹಿತ ಹೋಗಿದ್ದರು. ಯಾವದಕ್ಕೂ ಇರಲಿ ಅಂತ ಕಮಾಂಡೋ ಪಡೆ ಸಹಿತ ಹೋಗಿತ್ತು. ಆದರೆ ಕಂದಹಾರನಲ್ಲಿ ಪೂರ್ತಿ ತಲೆಕೆಟ್ಟ ತಾಲಿಬಾನಿಗಳೇ ತುಂಬಿದ್ದರು. ಹಾಗಾಗಿ ಏನೂ ಸ್ಕೋಪ್ ತೆಗೆದುಕೊಳ್ಳದೇ ಉಗ್ರರನ್ನು ಬಿಟ್ಟು, ಮಿಲಿಯ ಗಟ್ಟಲೆ ರೊಕ್ಕ ಕೊಟ್ಟು, ನಮ್ಮ ಜನರನ್ನು ಬಿಡಿಸಿಕೊಂಡು ಬಂದಿತ್ತು ಭಾರತ. ಆವತ್ತು ಖಡಕ್ ಅಧಿಕಾರಿ ಅಜಿತ್ ಕುಮಾರ್ ದೋವಲ್ ಅದೆಷ್ಟು ಉರಿದುಕೊಂಡರೋ ಏನೋ!
೨೦೦೫ ರಲ್ಲಿ ಮುಂಬೈ ಪೋಲೀಸರ ಕ್ರೈಂ ಬ್ರಾಂಚ್ ತಂಡಕ್ಕೆ ಒಂದು ಭಯಂಕರ ಮಾಹಿತಿ ದೊರಕಿತ್ತು. ಮಾಫಿಯಾ ಡಾನ್ ಛೋಟಾ ರಾಜನ್ನನ ಬಲಗೈ ಬಂಟ ವಿಕಿ ಮಲೋತ್ರಾ ದಿಲ್ಲಿಯಲ್ಲಿ ಕಾಣಿಸಿಕೊಂಡಿದ್ದಾನೆ ಅಂತ. ಅವನು ಮುಂಬೈನಲ್ಲಿ ಮೋಸ್ಟ್ ವಾಂಟೆಡ್. ಆಗಿನ ಮುಂಬೈ ಪೋಲೀಸ್ ಕಮಿಷನರ್ A. N. Roy ಒಂದು ತಂಡ ರೆಡಿ ಮಾಡಿ ಇಮ್ಮಿಡಿಯೆಟ್ ಆಗಿ ದೆಲ್ಲಿಗೆ ರವಾನೆ ಮಾಡಿದರು. ದೊಡ್ಡ ದೊಡ್ಡ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೇ ಆ ತಂಡದಲ್ಲಿ ಇದ್ದರು. ಆದರೆ ಆಜ್ಞೆ ಪಕ್ಕಾ ಇತ್ತು. ವಿಕಿ ಮಲೋತ್ರಾನನ್ನು ಎನ್ಕೌಂಟರ್ ಮಾಡೋ ಹಾಗಿಲ್ಲ. ಜೀವಂತ ಬಂಧಿಸಿಯೇ ತರಬೇಕು. ಮತ್ತೆ ದಿಲ್ಲಿ ಪೊಲೀಸರಿಗೆ ಈ ಕಾರ್ಯಾಚರಣೆಯ ಸುಳಿವು ಸಹಿತ ಸಿಗಬಾರದು.
ಮುಂಬೈ ಕ್ರೈಂ ಬ್ರಾಂಚಿನ DCP ಧನಂಜಯ್ ಕಮಲಾಕರ್ ನೇತೃತ್ವದಲ್ಲಿ ಖತರ್ನಾಕ್ ಪೋಲೀಸರ ತಂಡ ದಿಲ್ಲಿಗೆ ಹಾರಿತು. ವಿಕಿ ಮಲೋತ್ರಾ ಎಂಬ ಛೋಟಾ ರಾಜನ್ ಬಂಟನಿಗಾಗಿ ಫೀಲ್ಡಿಂಗ್ ಹಾಕಿಕೊಂಡು ಕಾದು ಕೂತರು.
ಒಂದು ದಿವಸ ಬರೋಬ್ಬರಿ ಅವಕಾಶ ನೋಡಿಕೊಂಡು ವಿಕಿ ಮಲೋತ್ರಾ ಎಂಬ ಖತರ್ನಾಕ್ ಗ್ಯಾಂಗಸ್ಟರ್ ಹೋಗುತ್ತಿದ್ದ ಕಾರನ್ನು ಮುಂಬೈ ಪೊಲೀಸರು ಆಟಕಾಯಿಸಿಕೊಂಡು ಒಳಗೆ ನೋಡಿದರೆ ವಿಕಿ ಮಲೋತ್ರಾ ಜೊತೆ ಇನ್ನೊಬ್ಬ ವ್ಯಕ್ತಿ ಕೂತಿದ್ದರು. ಯಾರು ಅಂತ ಮುಂಬೈ ಪೊಲೀಸರಿಗೆ ಗೊತ್ತಾಗಲಿಲ್ಲ. ಯಾರೇ ಇರಲಿ, ವಿಕಿ ಮಲೋತ್ರಾ ತರಹದ ದೊಡ್ಡ ಮಾಫಿಯಾ ಕುಳದ ಜೊತೆ ಸಿಕ್ಕಿದ್ದಾರೆ ಅಂದರೆ ಬಿಡಲಾಗುತ್ತದಯೇ? ಅಂತ ಹೇಳಿ ಆ ಇನ್ನೊಬ್ಬ ವ್ಯಕ್ತಿಯನ್ನೂ ಸಹ ವಿಕಿ ಮಲೋತ್ರಾ ಜೊತೆ ಬಂಧಿಸಿ ಎಳೆದುಕೊಂಡು ಹೋಗಲಿಕ್ಕೆ ರೆಡಿ ಆದರು.
ಅ ವ್ಯಕ್ತಿ ತಣ್ಣಗೆ ತಮ್ಮ ಐಡೆಂಟಿಟಿ ಕಾರ್ಡ್ ತೋರಿಸಿದರು. ನೋಡಿದ ಮುಂಬೈ ಪೊಲೀಸರು ಒಂದು ಕ್ಷಣ ಫುಲ್ ಥಂಡಾ ಹೊಡೆದು, ಫುಲ್ ಅಟೆನ್ಷನ್ ಗೆ ಬಂದು, ಬೂಟು ಕುಟ್ಟಿ, ಸಲ್ಯೂಟ್ ಹೊಡೆದು, ಸರ್! ತಪ್ಪಾಯಿತು, ಗೊತ್ತಾಗಲಿಲ್ಲ ನೀವು ಅಂತ, ಅಂದು ಬಿಟ್ಟು ಕಳಿಸಿದ್ದರು.
ಯಾರಾಗಿದ್ದರು ಅವರು!?
ವಿಕಿ ಮಲೋತ್ರಾ ಎಂಬ ಭೂಗತ ಡಾನ್ ಜೊತೆ ಅವತ್ತು ಇದ್ದವರು ಮತ್ಯಾರೂ ಅಲ್ಲ, ಇದೇ ಅಜಿತ್ ಕುಮಾರ್ ದೋವಲ್! ಆಗ ಇಂಟೆಲಿಜೆನ್ಸ್ ಬ್ಯೂರೋಯಿಂದ ರಿಟೈರ್ ಆಗಿದ್ದರು. ಆ ಮಾತು ಬೇರೆ ಬಿಡಿ.
ಹಾಂ! ವಾಂಟೆಡ್ ಭೂಗತ ಡಾನ್ ಜೊತೆ ಮಾಜಿ IB ಮುಖ್ಯಸ್ಥರಾ? ಏನು ಕಳ್ಳರು, ಪೊಲೀಸರು ಎಲ್ಲ ಒಂದಾಗಿ ಬಿಟ್ಟರಾ? ಏನಂತ ಮಾತಾಡುತ್ತೀರಾ? ಅಂತ ಅಚ್ಚರಿ ಪಡುವವರಿಗೆ ಅಂತರಾಷ್ಟ್ರೀಯ ಭೂಗತ ಜಗತ್ತಿನಲ್ಲಿ ಆಗಿದ್ದ ಕೆಲವು ದೊಡ್ಡ ಲೆವೆಲ್ಲಿನ ಬದಲಾವಣೆಗಳು ಗೊತ್ತಿಲ್ಲ ಅಂತ ಭಾವಿಸಬೇಕಾಗುತ್ತದೆ.
೧೯೯೩ ಮುಂಬೈ ಸ್ಪೋಟಗಳ ನಂತರ ದಾವೂದ್ ಇಬ್ರಾಹಿಮ್ಮನ D ಕಂಪನಿ ಒಡೆದಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯವೇ. ದಾವೂದನ ಆ ಕಾಲದ ರೈಟ್ ಹ್ಯಾಂಡ್ ಆಗಿದ್ದ ಛೋಟಾ ರಾಜನ್ ಬೇರೆಯಾಗಿದ್ದ. D ಕಂಪನಿಯ ಎಲ್ಲರೂ ದುಬೈನಲ್ಲಿ ಇದ್ದ ಸಮಯ ಅದು. ಒಂದು ದಿವಸ ಛೋಟಾ ರಾಜನ್ನನಿಗೆ ದಾವೂದ್ ಇಬ್ರಾಹಿಮ್, ಅವನ ತಮ್ಮ ಅನೀಸ್ ಇಬ್ರಾಹಿಂ, ಮತ್ತೊಬ್ಬ ಬಂಟ ಛೋಟಾ ಶಕೀಲ ಎಲ್ಲ ಕೂಡಿ ಅವನನ್ನು ಒಂದು ಹಡಗಿನ ಮೇಲೆ ಪಾರ್ಟಿಗೆ ಅಂತ ಕರೆದು ಕೊಲ್ಲಲಿದ್ದಾರೆ ಅಂತ ಖಚಿತ ವರ್ತಮಾನ ಬಂದಿತ್ತು. D ಕಂಪನಿಯಲ್ಲಿ ಛೋಟಾ ರಾಜನ್ ಬೆಳವಣಿಗೆ ಸಹಿಸದ ಛೋಟಾ ಶಕೀಲ್ ದಾವೂದನ ಕಿವಿ ಊದಿದ್ದ. ಸ್ಕೆಚ್ ರೆಡಿ ಆಗಿತ್ತು. ಛೋಟಾ ರಾಜನ್ ಪುಣ್ಯ. ಪಾರ್ಟಿಗೆ ಹೋಗದೆ ಬಚಾವ್ ಆದ.
ಹೀಗೆ ತನಗೆ ಹಾಕಿದ್ದ ಸ್ಕೆಚ್ಚಿನಿಂದ ಬಚಾವಾದ ರಾಜನ್ ಹೋಗಿ ನಿಂತಿದ್ದು UAE ನಲ್ಲಿದ್ದ ಭಾರತ ದೂತಾವಾಸದ ಮುಂದೆ. ರಕ್ಷಣೆ ಕೋರಿ ಬಂದ ಛೋಟಾ ರಾಜನ್ ಭಾರತದ ಬೇಹುಗಾರಿಕೆ ಸಂಸ್ಥೆಗಳ ಉಸ್ತುವಾರಿಯಲ್ಲಿ ಬಂದ. ಪಾಕಿಸ್ತಾನದಲ್ಲಿ ಅಡಗಿ ಕೂತು, ಅಲ್ಲಿಯ ISI ರಕ್ಷಣೆಯಲ್ಲಿದ್ದ ದಾವೂದ್ ಇಬ್ರಾಹಿಂನನ್ನು ಭಾರತ ಸರಕಾರ ಏನೂ ಮಾಡುವ ಹಾಗಿರಲಿಲ್ಲ. ಬೆಂಕಿಯನ್ನು ಬೆಂಕಿಯಿಂದಲೇ ಬಡಿದಾಡಬೇಕು ಅನ್ನುವಂತೆ ಛೋಟಾ ರಾಜನ್ನನನ್ನು ದಾವೂದ್ ಇಬ್ರಾಹಿಮ್ಮನ ವಿರುದ್ಧ ಸರಿಯಾಗಿ ಎತ್ತಿ ಕಟ್ಟಿದವು ಭಾರತದ ಬೇಹುಗಾರಿಕೆ ಸಂಸ್ಥೆಗಳಾದ IB ಮತ್ತು R&AW. (Dongri to Dubai: Six Decades of the Mumbai Mafia by S Hussain Zaidi ಪುಸ್ತಕದಲ್ಲಿ ಪೂರ್ತಿ ವಿವರಣೆ ಇದೆ)
ಛೋಟಾ ರಾಜನ್ ಹಿಂದೂ ಡಾನ್ ಅಂತ ಪ್ರಚಲಿತನಾದ. ಭಾರತ ಮತ್ತು ಪಾಕಿಸ್ತಾನದ ನಡುವಿನ ಮುಸುಕಿನ ಗುದ್ದಾಟಕ್ಕೆ ಛೋಟಾ ರಾಜನ್ ಮತ್ತು ದಾವೂದ್ ಇಬ್ರಾಹಿಮ್ proxy ಆದರು. ಯುದ್ಧ ಜೋರಾಗಿಯೇ ನಡೆಯಿತು. ಗುರುತು ಹಾಕಿಕೊಟ್ಟ ದಾವೂದ್ ಇಬ್ರಾಹಿಮ್ಮನ ಜನರನ್ನು ಛೋಟಾ ರಾಜನ್ ಭಾರತದ ಬೇಹುಗಾರಿಕೆ ಸಂಸ್ಥೆಗಳು ಹೇಳಿದಂತೆ ಕೊಂದು ಹಾಕಿದ. ಪ್ರತಿಕಾರವೆಂಬಂತೆ ದಾವೂದ್ ಇಬ್ರಾಹಿಮ್ ಸಹ ಛೋಟಾ ರಾಜನ್ ಜನರನ್ನು ಗ್ಯಾಂಗ್ ವಾರ್, ಎನ್ಕೌಂಟರ್ ಗಳಲ್ಲಿ ಕೊಂದ, ಕೊಲ್ಲಿಸಿದ. ಸಾಕಷ್ಟು ನೆತ್ತರು ಹರಿಯಿತು. ಎಲ್ಲೋ ಹೊರದೇಶದಲ್ಲಿ ಭಾರತದ ಬೇಹುಗಾರಿಕೆ ಸಂಸ್ಥೆಗಳ ಛತ್ರಛಾಯೆಯಡಿ ಛೋಟಾ ರಾಜನ್ ದಾವೂದ್ ಇಬ್ರಾಹಿಂ ಹಾಕುತ್ತಿದ್ದ ಸ್ಕೀಮುಗಳಿಂದ ಹೇಗೋ ಬಚಾವಾಗಿ ಇದ್ದ. ಎಷ್ಟೇ ರಕ್ಷಣೆ ಇದ್ದರೂ ೨೦೦೦ ಸೆಪ್ಟೆಂಬರಿನಲ್ಲಿ ದಾವೂದ್ ಗ್ಯಾಂಗು ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿತು. ಮೂರ್ನಾಕು ಗುಂಡು ತಿಂದರೂ, ಕಿಡಕಿ ಜಿಗಿದು, ಎದ್ದೋ ಬಿದ್ದು ಓಡಿದ್ದ ಛೋಟಾ ರಾಜನ್ ಹೇಗೋ ಆಸ್ಪತ್ರೆ ಸೇರಿಕೊಂಡಿದ್ದ. ಭಾರತದ ಬೇಹುಗಾರಿಕೆ ಸಂಸ್ಥೆಗಳ ಬಿಗಿ ಕಣ್ಗಾವಲು ಇಲ್ಲದಿದ್ದರೆ ಮತ್ತೊಂದು ಹತ್ಯೆಯ ಯತ್ನ ಆಸ್ಪತ್ರೆಯಲ್ಲಿಯೇ ಆಗುತ್ತಿತ್ತು. ಮುಂದೆ ಭಾರತದ ಬೇಹುಗಾರಿಕೆ ಸಂಸ್ಥೆಗಳು ಛೋಟಾ ರಾಜನ್ನನನ್ನು ಬೇರೆ ಬೇರೆ ದೇಶಗಳಲ್ಲಿ ರಹಸ್ಯವಾಗಿ ಅಡಗಿಸಿಟ್ಟು ಇಲ್ಲಿಯವರೆಗೂ ಕಾಪಾಡಿಕೊಂಡು ಬಂದಿವೆ. ಅವರು ಹೇಳಿದಂತೆ ಛೋಟಾ ರಾಜನ್ D ಕಂಪನಿಯ ಎಷ್ಟೋ ವಿಕೆಟ್ಟುಗಳನ್ನು ಉರುಳಿಸಿ ಹೇಳಿದ 'ದೇಶ ಸೇವೆ' ಮಾಡಿಕೊಟ್ಟಿದ್ದ. ಪ್ರತಿಫಲವಾಗಿ ಮುಂಬೈ ಭೂಗತ ಲೋಕದ ಪಾರುಪತ್ಯ ತಕ್ಕ ಮಟ್ಟಿಗೆ ರಾಜನ್ ಪಡೆದುಕೊಂಡಿದ್ದ. ಹಾಗಂತ ದಾವೂದ್ ಹಿಡಿತವೇನೂ ಕಮ್ಮಿಯಾಗಿರಲಿಲ್ಲ.(Byculla to Bangkok by S Hussain Zaidi- ಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ)
ಮಿರ್ಜಾ ಇಸ್ಮೈಲ್ ಬೇಗ್ - ನೇಪಾಳದ ಪ್ರಬಲ ರಾಜಕಾರಣಿ. ಆದರೆ ಪಾಕಿಸ್ತಾನದ ISI ಏಜೆಂಟ್. ದಾವೂದ್ ಇಬ್ರಾಹಿಮ್ಮನ D ಕಂಪನಿಗೆ ನೇಪಾಳದಲ್ಲಿ ಅಪ್ಪ, ಅಮ್ಮ ಎಲ್ಲ ಇವನೇ. ಭಾರತ ಇಂತಹ ಮಿರ್ಜಾ ಇಸ್ಮೈಲ್ ಬೇಗನ ಸುಪಾರಿ ಛೋಟಾ ರಾಜನ್ನನಿಗೆ ಕೊಟ್ಟಿತು. ನೀಟಾಗಿ ತನ್ನ ಜನರನ್ನು ಖಾಟಮಾಂಡುಗೆ ಕಳಿಸಿ, ಮಿರ್ಜಾ ಇಸ್ಮೈಲ್ ಬೇಗನ ಮನೆ ಮುಂದೆಯೇ ಗುಂಡು ಹಾರಿಸಿ ಕೊಂದು ಬಂತು ರಾಜನ್ ತಂಡ. ದಾವೂದನಿಗೆ ಆ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟೆವು ಅಂತ ಭಾರತ ಅದರಲ್ಲೂ ಛೋಟಾ ರಾಜನ್ನನ್ನು ಸಾಕಿ ಬೆಳೆಸಿದ್ದ ಬೇಹುಗಾರಿಕೆ ಸಂಸ್ಥೆಗಳು ಗರ್ವ ಪಟ್ಟವು.
ಬ್ಯಾಂಕಾಕಿನಲ್ಲಿ ಪಿಲೂ ಖಾನ್ ಎಂಬ ದಾವೂದ್ ಬಂಟನನ್ನು ರಾಜನ್ ಕಡೆಯವರು ಮುಗಿಸಿದರು. ಸುನಿಲ್ ಸಾವಂತ್, ಶರದ್ ಶೆಟ್ಟಿ ಎಂಬ ದಾವೂದ್ ಬಣದ ದೊಡ್ಡ ಕುಳಗಳನ್ನು ದುಬೈನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಮುಂಬೈ ಸ್ಪೋಟಕ್ಕೆ ಸಂಬಂಧಿಸಿದ್ದ ಸುಮಾರು ಜನರನ್ನು ರಾಜನ್ ಹುಡುಕಿ ಹುಡುಕಿ ಕೊಂದ. ಹೀಗೆಯೇ proxy ಸಮರ ನಡೆದಿತ್ತು. ಪಾಕಿಸ್ತಾನದ ಕಡೆಯಿಂದ ಅವರ ಬೇಹುಗಾರಿಕೆ ಸಂಸ್ಥೆ ISI, ಭಾರತದ ಕಡೆಯಿಂದ IB ಮತ್ತು R&AW ತಮಗೆ ಬೇಕಾದ ಟಾರ್ಗೆಟ್ ಹುಡುಕಿಕೊಟ್ಟು, ಎಲ್ಲ ಮಾಹಿತಿ ಕೊಡುತ್ತಿದ್ದವು. ದಾವೂದ್, ರಾಜನ್ ತಮ್ಮ ತಮ್ಮ ಗ್ಯಾಂಗುಗಳನ್ನು ಉಪಯೋಗಿಸಿ ಕೆಲಸ ಮಾಡಿಕೊಡುತ್ತಿದ್ದರು. ಅವರಿಗೆ ಜೈ ಪಾಕಿಸ್ತಾನ! ಇವರಿಗೆ ಜೈ ಹಿಂದುಸ್ತಾನ!
೧೯೯೮ ಅಂತ ಕಾಣಿಸುತ್ತದೆ. ಒಂದು ದೊಡ್ಡ ಕೆಲಸಕ್ಕೆ ರಾಜನ್ ಗ್ಯಾಂಗನ್ನು ರೆಡಿ ಮಾಡಲಾಯಿತು. ಸೀದಾ ಕರಾಚಿಗೆ ಹೋಗಿ ದಾವೂದ ಇಬ್ರಾಹಿಂನನ್ನೇ ಉಡಾಯಿಸಿಬಿಡುವದು. ಮಜಬೂತಾದ ಪ್ಲಾನಿಂಗ್ ಆಗಿತ್ತು. ಮೂರು ಹಂತಕರೂ ಹೋಗಿ ಕರಾಚಿ ಸೇರಿಕೊಂಡಿದ್ದರು. ದಾವೂದ್ ನಮಾಜ್ ಮಾಡಲು ಬರುವ ಮಸೀದಿಯನ್ನು ನೋಡಿ ಅಲ್ಲಿಯೇ ಫೀಲ್ಡಿಂಗ್ ಹಾಕಿದ್ದರು. ಸಂಶಯ ಬರದಿರಲಿ ಅಂತ ಆಯುಧ ತೆಗೆದುಕೊಂಡು ಹೋಗಿರಲಿಲ್ಲ. ಹತ್ಯೆಯ ಟೈಮಿಗೆ ಸರಿಯಾಗಿ ಬೇರೆ ಯಾರೋ ಆಯುಧ ತಂದು, ಮಸೀದಿಗೆ ಪ್ರಾರ್ಥನೆ ಮಾಡಲು ಬಂದವರಂತೆ ಬಂದಿದ್ದ, ಹಂತಕರಿಗೆ ತಲುಪಿಸುವರಿದ್ದರು. ಸರಿಯಾಗಿ ದಾವೂದನ ಎದುರಿಗೆ ಬಂದಿದ್ದ ಹಂತಕರ ಕೈಗೆ ಅವತ್ತು ಟೈಮಿಗೆ ಸರಿಯಾಗಿ ಆಯುಧ ಬರಲೇ ಇಲ್ಲ. ಆಯುಧ ತಲುಪಿಸುವವನು ಎಲ್ಲೋ ಲೇಟ್ ಮಾಡಿಕೊಂಡಿದ್ದ. ಎದುರಿಗೆ ಕಂಡ ದಾವೂದನಿಗೆ ಸಂಶಯ ಬರದಂತೆ ಸುಮ್ಮನೆ ಸಲಾಂ ಹೇಳಿ ಹಾಗೇ ವಾಪಸ್ ಬಂದಿದ್ದರು ಛೋಟಾ ರಾಜನ್ ಕಡೆ ಹಂತಕರು. ಅವರನ್ನು ಮಾರುವೇಷದಲ್ಲಿ ಪಾಕಿಸ್ತಾನಕ್ಕೆ ಕಳಿಸಿ, ಎಲ್ಲ ಸ್ಕೆಚ್ ಹಾಕಿಕೊಟ್ಟು, ಮತ್ತೆ ವಾಪಸ್ ಕರೆಸಿಕೊಂಡಿದ್ದೆಲ್ಲ ಭಾರತದ ಬೇಹುಗಾರಿಕೆ ಸಂಸ್ಥೆಗಳು. ಆವತ್ತು ಬದುಕುಳಿವ ಅದೃಷ್ಟ ದಾವೂದನದಾಗಿತ್ತು.(Byculla to Bangkok by S Hussain Zaidi- ಪುಸ್ತಕದಲ್ಲಿ ಹೆಚ್ಚಿನ ಮಾಹಿತಿ ಇದೆ)
ಆ ಮೂವರು ಹಂತಕರಲ್ಲಿ ಈ ವಿಕಿ ಮಲೋತ್ರಾ ಸಹಿತ ಇದ್ದ! ಅದಾದ ನಂತರ ಬಹಳ ವರ್ಷಗಳ ಕಾಲ ದೇಶ ವಿದೇಶ ಸುತ್ತಿಕೊಂಡು, ಛೋಟಾ ರಾಜನ್ ಬಲಗೈ ಬಂಟನಾಗಿ, ಭಾರತೀಯ ಬೇಹುಗಾರಿಕೆ ಸಂಸ್ಥೆಗಳ covert operations ಮಾಡಿಕೊಡುತ್ತ ಇದ್ದವನು ಯಾಕೋ ದಿಲ್ಲಿಗೆ ಬಂದಿದ್ದ. ಅದೇನು ಮೀಟಿಂಗ್ ಮಾಡುವದಿತ್ತೋ ಮಾಜಿ IB ಮುಖ್ಯಸ್ಥ ಅಜಿತ್ ಕುಮಾರ್ ದೋವಲ್ ಸಾಹೇಬರ ಜೊತೆಗೆ. ಪೊರಪಾಟಿನಲ್ಲಿ ಮುಂಬೈ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಜೊತೆಗೆ ದೋವಲ್ ಸಾಹೇಬರೂ ಸಿಕ್ಕಿ ಬಿದ್ದಿದ್ದರು. ಒಂದು ತರಹದ embarrassment ದೋವಲ್ ಸಾಹೇಬರಿಗೆ.
ಮುಂಬೈ ಪೊಲೀಸರು ವಿಕಿ ಮಲೋತ್ರಾನನ್ನು ಬಂಧಿಸಿ ಕರೆದುಕೊಂಡು ಹೋದರು. ದೋವಲ್ ಸಹಿತ ತಮ್ಮ ದಾರಿ ಹಿಡಿದು ಹೋದರು. ದೊಡ್ಡ ಸುದ್ದಿಯಂತೂ ಆಯಿತು. ಮಾಜಿ IB ಡೈರೆಕ್ಟರ್ ಒಬ್ಬ ಭೂಗತ ಡಾನ್ ಜೊತೆ ಏನು ಮಾಡುತ್ತಿದ್ದರು? ಅಂತ. ಯಾವ ರಹಸ್ಯ ಕಾರ್ಯಾಚರಣೆಗೆ ಸ್ಕೆಚ್ ಹಾಕುತ್ತಿದ್ದರೋ ಏನೋ? ಅದಕ್ಕೆಲ್ಲ ಓಪನ್ ಆಗಿ ಉತ್ತರ ಹೇಳಲು ಆಗುತ್ತದೆಯೇ? ಮತ್ತೆ dots connect ಮಾಡಿ ನಮ್ಮದೇ ಆದ hypothesis ಮಾಡಿಕೊಳ್ಳಬೇಕಾಗುತ್ತದೆ. ಏನೋ covert operation ಗೆ ಸ್ಕೆಚ್ ಹಾಕುತ್ತಿರಬೇಕು. ಇಂಟೆಲಿಜೆನ್ಸ್ ಇತ್ಯಾದಿ ಫೀಲ್ಡಿನಲ್ಲಿ ಇರುವವರಿಗೆ ನಿವೃತ್ತಿ ಅನ್ನೋದು ಇರೋದಿಲ್ಲ. ಒಮ್ಮೊಮ್ಮೆ ನಿವೃತ್ತಿ ಆದ ಮೇಲೆಯೇ ಹೆಚ್ಚಿನ ಕೆಲಸ. ಯಾಕೆಂದರೆ ' ದೇಶಕ್ಕೆ ಸಂಬಂಧವಿಲ್ಲ' (deniability) ಅಂತ ತೋರಿಸಿಕೊಳ್ಳಲು ನಿವೃತ್ತರು, ನಿಕೃಷ್ಟರು (ಮಾಫಿಯಾ) ತುಂಬ ಸಹಕಾರಿ.
ಹೀಗೆಲ್ಲ ಖತರ್ನಾಕ್ ಹಿನ್ನಲೆ ಇರುವ ಜಬರ್ದಸ್ತ್ ಬೇಹುಗಾರ ಅಜಿತ್ ಕುಮಾರ್ ದೋವಲ್ ಈಗ ಮೋದಿಯವರ ರಾಷ್ಟ್ರೀಯ ರಕ್ಷಣಾ ಸಲಹೆಗಾರರಾಗಿ ಬಂದಿದ್ದಾರೆ. ಇವರು ಹಿಂದೆಲ್ಲ ದಾವೂದ್ ವಿರುದ್ಧ ಹಾಕಿರಬಹುದಾದ ಸ್ಕೆಚ್ಚೆಲ್ಲ ಅರಿತಿರುವ ದಾವೂದ್ ಇಬ್ರಾಹಿಂ ಕರಾಚಿ ಬಿಟ್ಟು ಆಫ್ಘನ್ ಗಡಿ ಸೇರಿಕೊಂಡಿದ್ದಾನೆ. ರಕ್ಷಣೆ ಹೆಚ್ಚಿಸಿಕೊಂಡಿದ್ದಾನೆ.
ಇನ್ನು ಮುಂದೆ D ಕಂಪನಿಯ ಅಡಿಪಾಯ ಅಲುಗಾಡಲು ಶುರುವಾದರೆ ಅಂತಹ ಕಾರ್ನಾಮೆಗಳಲ್ಲಿ ದೋವಲ್ ಸಾಹೇಬರು ಮತ್ತು ಅವರ ಖಡಕ್ ತಂಡದ ಕಾಣದ ಕೈಗಳ ಕೈವಾಡ ಇರುವ ಎಲ್ಲ ಸಾಧ್ಯತೆಗಳಿವೆ. ಕಾದು ನೋಡೋಣ.
ಹೆಚ್ಚಿನ ಮಾಹಿತಿಗೆ:
Dongri to Dubai: Six Decades of the Mumbai Mafia by S Hussain Zaidi
Byculla to Bangkok by S Hussain Zaidi
Open Secrets: The Explosive Memoirs of an Indian Intelligence Officer by Maloy Krishna Dhar
ಗೂಗಲ್ ಮಾಡುತ್ತ ಹೋದರೆ ಸಿಗುವ ಮಾಹಿತಿ ರೋಚಕ. ಭೂಗತ ಜಗತ್ತು, ಬೇಹುಗಾರಿಕೆ, ಮಾಫಿಯಾ ಎಲ್ಲಿ ಶುರು, ಎಲ್ಲಿ ಕೊನೆ ಅಂತ ತಿಳಿಯುವದಿಲ್ಲ.
7 comments:
INTERESTING ! ಇವರ ಸಹಾಯದಿಂದ ದಾವೂದನ್ನ ಎತ್ತುತ್ತಾರಾ ಮೋದಿ? ಕಾದುನೋಡೋಣ!
ಮೊದಲು ಅವನ ಚೇಲಾಗಳನ್ನುಹಿಡಿದು ಜಪ್ಪಲಿ. ಎತ್ತೋದು ಮುಂದಿನದು! :)
Sir, M.K. Dhar avara yava book chanagide? Neevu odhidira ankondidini, dayavittu thilisi
ಬಡಿಗೇರ್ ಅವರೇ!
ಅವರ ಎಲ್ಲ ಪುಸ್ತಕಗಳೂ ತುಂಬ ಚನ್ನಾಗಿವೆ.ಮೊದಲ ಪುಸ್ತಕ ಓದುವವರಾದರೆ ಕೆಳಗಿನ ಪುಸ್ತಕದಿಂದ ಶುರು ಮಾಡಿ. ಅದು ಇಷ್ಟವಾದರೆ ಉಳಿದಿದ್ದನ್ನು ಓದಬಹುದು ಅಂತ ಒಂದು ಸಲಹೆ.
OPEN SECRETS INDIA'S INTELLIGENCE UNVEILED
http://www.flipkart.com/open-secrets-indias-intelligence-unveiled-01/p/itmdytychz2b5rgk?pid=9788170492160&otracker=from-search&srno=t_3&query=maloy+krishna+dhar&ref=59143318-5be8-46f7-af2b-4c8fcc3bc5c5
ಧನ್ಯವಾದ ಹೆಗಡೆಜೀ!!
NSA Doval went on secret mission to Iraq http://www.thehindu.com/news/national/article6187353.ece
ಹೌದಲೋ! ಜೋರಾತು! :)
Post a Comment