Friday, July 25, 2014

ತಾರಾ ವಿವಾಹಕ್ಕೆ ಮಾಫಿಯಾ ಪೌರೋಹಿತ್ಯ

ಇನ್ಸ್ಪೆಕ್ಟರ್ ರುದ್ರಮೂರ್ತಿ ಎದ್ದಾಗ ಆಗಲೇ ಏಳು ಘಂಟೆಯಾಗಿ ಹೋಗಿತ್ತು. ನಿನ್ನೆ ಬಂದು ಮಲಗಿದಾಗ ರಾತ್ರಿ ಮೂರರ ಮೇಲಾಗಿತ್ತು. ಯಾವದೋ ಡೀಲಿನ ಕುರಿತಾಗಿ ಪಾರ್ಟಿ ಇತ್ತು. ದೊಡ್ಡ ದೊಡ್ಡ ಸಾಹೇಬರೆಲ್ಲ ಕೂಡಿದ್ದರು. ಖಾನಾ, ಪೀನಾ ಎಲ್ಲ ಮುಗಿಯುವ ಹೊತ್ತಿಗೆ ಸರಿಯಾಗಿ ಖತರ್ನಾಕ್ ಘರವಾಲಿ ಕಾವೇರಮ್ಮ ತನ್ನ ಬಣ್ಣದ ಹಕ್ಕಿಗಳೊಂದಿಗೆ ಬಂದುಬಿಟ್ಟಿದ್ದಳು. ಪಾರ್ಟಿ ಕೊಟ್ಟ ದೊಡ್ಡ ಕುಳಕ್ಕೆ ಸಾಹೇಬರುಗಳ ನಾಡಿ ಮಿಡಿತ ಎಲ್ಲ ಸರಿಯಾಗೇ ತಿಳಿದಿತ್ತು. ಹಕ್ಕಿಗಳೊಂದಿಗೆ ಕೋಣೆ ಹೊಕ್ಕ ಸಾಹೇಬರುಗಳು ಹೊರಬಂದಾಗ ಅವರ ಮೈಮೇಲೆ ಅರ್ಧ ಯುನಿಫಾರ್ಮ್ ಮಾತ್ರ ಇತ್ತು. ಉಳಿದರ್ಧ ಅವರ ಹಿಂದೆಯೇ ಬಂದ ಹಕ್ಕಿಗಳ ಕೈಯಲ್ಲಿತ್ತು. ಆಪರಿ ಚಿತ್ತಾಗಿದ್ದ ಸಾಹೇಬರುಗಳನ್ನು ಮನೆ ಮುಟ್ಟಿಸಿ ಬರುವ ತನಕ ಅಷ್ಟೊತ್ತಾಗಿತ್ತು.

ಇನ್ಸ್ಪೆಕ್ಟರ್ ರುದ್ರಮೂರ್ತಿಗೆ ನೆನಪಾಯಿತು, ಇವತ್ತು ಮಧ್ಯಾನ ಕಮಿಷನರ್ ಸಾಹೇಬರ ಮೀಟಿಂಗ್ ಇದೆ ಅಂತ. ಅಷ್ಟರಲ್ಲಿ ಅವರ ಸಹಾಯಕ ಪೇದೆ ಖಡಕ್ ಆಗಿ ಇಸ್ತ್ರಿ ಮಾಡಿದ ಯುನಿಫಾರ್ಮ್ ತಂದಿಟ್ಟ. 'ಓಕೆ, ದೊಡ್ಡ ಮೀಟಿಂಗಿಗೆ ಹೋಗಲಿಕ್ಕೆ ಸರಿಯಾದ ಬಟ್ಟೆ ಅಂತೂ ಇದೆ ಅಂತಾಯಿತು,' ಅಂತ ಅಂದುಕೊಂಡರು ರುದ್ರಮೂರ್ತಿ ಸಾಹೇಬರು. ತಲೆ ಮೇಲೆ ಕೈಯಾಡಿಸಿದರು. ಒಂದು ಖಡಕ್ ಪೋಲೀಸ್ ಕಟಿಂಗ್ ಇದ್ದರೇ ಒಳ್ಳೇದು ಅಂತ ಹೇಳಿ ಎದ್ದರು. ಲುಂಗಿ ಎತ್ತಿ, ಹವಾಯಿ ಚಪ್ಪಲ್ ಮೆಟ್ಟಿ, ಬೀದಿಯ ಕೊನೆಯಲ್ಲಿದ್ದ ತಮ್ಮ ಎಂದಿನ ಬಾರ್ಬರ್ ಶಾಪಿಗೆ ಹೊರಟರು.

ಬಾರ್ಬರ್ ವೆಂಕಿ ಸ್ವಾಗತಿಸಿದ. 'ಸರ್, ಒಂದೇ ನಿಮಿಷ. ಇವರದ್ದು ಶೇವಿಂಗ್ ಮಾಡಿ ಮುಗಿಸಿ ಬಿಡ್ತೀನಿ. ನೆಕ್ಸ್ಟ್ ನೀವೇ ಸಾರ್. ಕೂತ್ಗೊಳ್ಳಿ. ತೊಗೊಳ್ಳಿ ಪೇಪರ್,' ಅಂತ ಹೇಳಿ ಪೇಪರ್ ಕೊಟ್ಟು ಅವನ ಗಡ್ಡ ಕೆರೆಯುವ ಕೆಲಸ ಮುಂದುವರಿಸಿದ. ಇನ್ಸ್ಪೆಕ್ಟರ್ ರುದ್ರಮೂರ್ತಿ ಪೇಪರ್ ಮೇಲೆ ಕಣ್ಣಾಡಿಸತೊಡಗಿದರು.

ಮುಖಪುಟದ ಹೆಡ್ ಲೈನ್ ನೋಡಿ ಒಂದು ಕ್ಷಣ 'ಹಾಂ!' ಅಂದುಕೊಂಡರು. ಸುದ್ದಿ ಹಾಗಿತ್ತು.

'ಖ್ಯಾತ ಸಿನೆಮಾ ನಟ ಗೌರವ್ ದಿಢೀರ್ ವಿವಾಹ'.

'ಯಾರ ಜೊತೆ ಈ ಪಂಚರಂಗಿ ಪುಣ್ಯಾತ್ಮ ಗೌರವ ಮದುವೆಯಾದ?' ಅಂತ ನೋಡಲು ಸುದ್ದಿ ಓದುತ್ತ ಹೋದರು. ಸುಮಾರು ತಿಂಗಳುಗಳಿಂದ ಗೌರವನ ಹೆಸರು ಅವನ ಸಹತಾರೆಯಾದ ಪ್ರತೀಕ್ಷಾ ಜೊತೆ ತಳಕು ಹಾಕಿಕೊಂಡಿತ್ತು. ಚಿಟ್ಟೆಯಂತಹ ಗೌರವ ಒಂದು ಹೂವಿನೊಂದಿಗೆ ಸೆಟಲ್ ಆಗುತ್ತಾನೆ ಅಂತ ಯಾರಿಗೂ ಅನ್ನಿಸಿರಲಿಲ್ಲ. ಬೆಂಗಳೂರಿನಲ್ಲಿ ಪ್ರತೀಕ್ಷಾ ಗೌರವ್ ಎಲ್ಲಿ ಅಂತ ಹುಡುಕುತ್ತಿದ್ದರೆ ಮಂಗಳೂರಿನಲ್ಲಿ ಯಾವದೋ ಹೊಸ ಹೂವಿನೊಂದಿಗೆ ಮಧು ಹೀರುತ್ತ ಕೂಡೋ ಪೈಕಿ ಗಂಡು ಗೌರವ್. ಹೀಗಿರುವಾಗ 'ಸಡನ್ ಆಗಿ ಫ್ಯಾಮಿಲಿ ಮ್ಯಾನ್ ಆಗಿಬಿಟ್ಟ ಅಂದರೆ ಏನಪ್ಪಾ?' ಅಂತ ಅಂದುಕೊಂಡು ಪುಟ ತಿರುಗಿಸುತ್ತ ಹೋದರು ಇನ್ಸ್ಪೆಕ್ಟರ್ ರುದ್ರಮೂರ್ತಿ.

ನಾಲ್ಕನೇ ಪುಟದಲ್ಲಿ ಕಂಡ ಇನ್ನೊಂದು ಸುದ್ದಿ ನೋಡಿ ಮತ್ತೆ 'ಹಾಂ!' ಅಂತ ಬೆಚ್ಚಿಬಿದ್ದರು. ಅದೂ ಅಂತಹದೇ ಸುದ್ದಿಯಾಗಿತ್ತು.

'ಎನ್ಕೌಂಟರಿನಲ್ಲಿ ಡಾನ್ ಗನ್ನು ಶೆಟ್ಟಿ ಹತ್ಯೆ!'

ಗನ್ನು ಶೆಟ್ಟಿ ಉರ್ಫ್ ಗಜಾನನ ಶೆಟ್ಟಿ ಮುಂಬೈನಲ್ಲಿ ಹೆಸರು ಮಾಡಿದ್ದ ದೊಡ್ಡ ಡಾನ್. ಮೂಲತ ದಕ್ಷಿಣ ಕನ್ನಡದವನು. ಸ್ವಲ್ಪ ವರ್ಷದ ಹಿಂದೆ ಮುಂಬೈನಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟಗಳ ಹೀಟ್ ಜಾಸ್ತಿಯಾದಾಗ ಮತ್ತೆ ಮಂಗಳೂರ ಕಡೆ ಬಂದಿದ್ದ. ನಂತರ ಮತ್ತೆ ನಾಪತ್ತೆಯಾಗಿದ್ದ. ಎಲ್ಲೋ ಬ್ಯಾಂಕಾಕಿನಲ್ಲಿ ಬಾಸ್ ಛೋಟಾ ರಾಮನ್ ಜೊತೆ ಇದ್ದಾನೆ ಅಂತ ಸುದ್ದಿಯಾಗಿತ್ತು. ಮತ್ತೆ ಬೆಂಗಳೂರಿನಲ್ಲಿ ಗನ್ನು ಶೆಟ್ಟಿಯ ಹಾವಳಿ ಏನೂ ಇರಲಿಲ್ಲ. ಹಾಗಾಗಿ ಬೆಂಗಳೂರು ಪೋಲೀಸರಿಗೆ ಅವನ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ.

ಮುಂಬೈ ಪೋಲೀಸರಲ್ಲಂತೂ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳದ್ದೇ ದರ್ಬಾರು. 'ಇದ್ದ ಹತ್ತಾರು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳಲ್ಲಿ ಯಾರು ಮಾಡಿದರು ಗನ್ನು ಶೆಟ್ಟಿಯ ಎನ್ಕೌಂಟರ್?' ಅಂತ ವಿಚಾರ ಮಾಡಿದರು ರುದ್ರಮೂರ್ತಿ. ಅವರು ಯೋಚಿಸಿದಂತೆಯೇ ಮುಂಬೈನ ಖತರ್ನಾಕ್ ಇನ್ಸ್ಪೆಕ್ಟರ್ ಪಾವಸ್ಕರ್ ಗನ್ನು ಶೆಟ್ಟಿಯನ್ನು ಮುಗಿಸಿದ್ದರು.

ಇನ್ಸ್ಪೆಕ್ಟರ್ ಪಾವಸ್ಕರ್ ಅಂತ ಸುದ್ದಿ ಓದಿದ ಕೂಡಲೇ ಏನೋ ನೆನಪಾಯಿತು ರುದ್ರಮೂರ್ತಿಯವರಿಗೆ. ಇದೇ ಪಾವಸ್ಕರರೇ ಅಲ್ಲವಾ ಈಗ ಒಂದು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು? ಮತ್ತೇ ಅದೇ ಯಾವದೋ ಎನ್ಕೌಂಟರ್ ಸಲುವಾಗಿ. ಯಾರೋ ಇಬ್ಬರು ಮುಂಬೈ ಗ್ಯಾಂಗಸ್ಟರ್ ಜನರನ್ನು ಬೆನ್ನಟ್ಟಿ ಬೆಂಗಳೂರಿಗೆ ಬಂದಿದ್ದರು. ಹಿರಿಯ ಅಧಿಕಾರಿ ರುದ್ರಮೂರ್ತಿಯವರನ್ನು ಕರೆದು, 'ಅವರು ಕೇಳಿದ ಎಲ್ಲ ಸಹಾಯ ಮಾಡಿ,' ಅಂತ ಆಜ್ಞೆ ಮಾಡಿದ್ದರು. ಅದರ ಪ್ರಕಾರ ಲೋಕಲ್ ಪೊಲೀಸರು ಏನು ಸಹಾಯ ಮಾಡಬೇಕೋ ಅದೆಲ್ಲ ಸಹಾಯ ಮಾಡಿದ್ದರು ರುದ್ರಮೂರ್ತಿ. ಮುಂಬೈ ಇನ್ಸ್ಪೆಕ್ಟರ್ ಪಾವಸ್ಕರ್ ಅದೆಲ್ಲಿಂದ ಎರಡು ರೌಡಿಗಳನ್ನು ಎತ್ತಾಕಿಕೊಂಡು ಬಂದಿದ್ದರೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಬೆಂಗಳೂರಿಗೆ ಬಂದು ಎನ್ಕೌಂಟರ್ ಮಾಡಿದ್ದರು. ಇನ್ಸ್ಪೆಕ್ಟರ್ ರುದ್ರಮೂರ್ತಿ ಪಂಚನಾಮೆ ಮಾಡಿಕೊಂಡು ಬೆಂಗಳೂರಲ್ಲಿ ಆದ ಎನ್ಕೌಂಟರಿಗೆ ಒಂದು ಅಂತ್ಯ ಕಾಣಿಸಿದ್ದರು. ಆವಾಗಲೇ ಇನ್ಸ್ಪೆಕ್ಟರ್ ಪಾವಸ್ಕರ್ ಜೊತೆ ಗುರ್ತು ಪರಿಚಯ ಎಲ್ಲ ಆಗಿತ್ತು. ಆಮೇಲೆ ಸಹಿತ ಆಗಾಗ ಹಲೋ, ಹಾಯ್ ಅಂತ ಸಂಪರ್ಕ ಇತ್ತು. ಒಮ್ಮೆ ದೋಸ್ತಿಯಾದ ಮೇಲೆ ಪೊಲೀಸರು ಯಾವಾಗಲೂ ಸಂಪರ್ಕದಲ್ಲಿ ಇರುತ್ತಾರೆ. ಯಾರ ಸಹಾಯ ಯಾರಿಗೆ ಯಾವಾಗ ಬೇಕಾಗುತ್ತದೆ ಅಂತ ಹೇಳಲಿಕ್ಕೆ ಆಗುವದಿಲ್ಲ ನೋಡಿ.

ಇಷ್ಟೆಲ್ಲ ನೆನಪಾಗುವ ಹೊತ್ತಿಗೆ ಬಾರ್ಬರ್ ವೆಂಕಿ ಕರೆದ. ಪೇಪರ್ ಕೆಳಗಿಟ್ಟು ಹೋಗಿ ಕೂತರು ರುದ್ರಮೂರ್ತಿ. ಫಟಾ ಫಟ್ ಅಂತ ಅವರ ರೆಗ್ಯುಲರ್ ಪೋಲೀಸ್ ಕಟಿಂಗ್ ಮಾಡಿದ ಬಾರ್ಬರ್. ತಲೆ ಸವರಿಕೊಳ್ಳುತ್ತ, ಅವನಿಗೆ ಕಾಸು ಕೊಟ್ಟು ಮನೆ ಕಡೆ ಹೊರಟು ಬಂದರು ರುದ್ರಮೂರ್ತಿ.

ಮನೆ ಕಡೆ ಬರುತ್ತಿರುವಾಗ ತಲೆಯಲ್ಲಿ ಎರಡೇ ಸುದ್ದಿ ಗಿರಕಿ ಹೊಡೆಯುತ್ತಿದ್ದವು. ಒಂದು ನಟ ಗೌರವನ ಸಡನ್ ಮದುವೆ. ಇನ್ನೊಂದು ಡಾನ್ ಗನ್ನು ಶೆಟ್ಟಿಯ ಅಂತ್ಯ.

**

ಮಧ್ಯಾನ ಸುಮಾರು ನಾಕು ಘಂಟೆಗೆ ಪೋಲೀಸ್ ಕಮಿಷನರ್ ಸಾಹೇಬರು ಕರೆದಿದ್ದ ಮೀಟಿಂಗ್ ಮುಗಿಯಿತು. ಹೊರ ಬಂದು ತಮ್ಮ ಜೀಪ್ ಹತ್ತುತ್ತಿದ್ದ ಇನ್ಸ್ಪೆಕ್ಟರ್ ರುದ್ರಮೂರ್ತಿ ಅವರ ಫೋನ್ ರಿಂಗ್ ಆಯಿತು. ಯಾರು ಅಂತ ನೋಡಿದರೆ ಕಾಲರ್ ಐಡಿ ಪಾವಸ್ಕರ್ ಅಂತ ತೋರಿಸುತ್ತಿತ್ತು.

'ಹಲೋ ಪಾವಸ್ಕರ್. ಹೇಗಿದ್ದೀರಿ? ಕಾಂಗ್ರಾಟ್ಸ್. ಮತ್ತೊಂದು ಎಂಟ್ರಿ ಆಯಿತು ನಿಮ್ಮ ಎನ್ಕೌಂಟರ್ ಪಟ್ಟಿಯಲ್ಲಿ. ಅಲ್ಲವಾ?' ಅಂದರು ರುದ್ರಮೂರ್ತಿ.

ಮುಂಬೈನ ಎನ್ಕೌಂಟರ್ ಸ್ಪೆಷಲಿಸ್ಟ್ ಪಾವಸ್ಕರ್ ಮೂಲತ ಕಾರವಾರ ಕಡೆಯವರು. ಅವರಿಗೆ ಕನ್ನಡ ಸುಮಾರು ಬರುತ್ತದೆ.

'ಹಲೋ ದೋಸ್ತ್! ಥ್ಯಾಂಕ್ಸ್. ಒಂದು ಸುದ್ದಿ ಗೊತ್ತಾ?' ಅಂತ ಅಂದರು ಆಕಡೆಯಿಂದ ಪಾವಸ್ಕರ್.

'ಏನು ಹೇಳಿ. ಗನ್ನು ಶೆಟ್ಟಿ ಎನ್ಕೌಂಟರ್ ಅಂತೂ ಓದಿದೆ. ಮತ್ಯಾವ ಸುದ್ದಿ? ಮತ್ತೆ ಬೆಂಗಳೂರು ಕಡೆ ಬರುತ್ತಿದ್ದೀರಾ ಎನ್ಕೌಂಟರ್ ಮಾಡಲು? ನೀವು ಮುಂಬೈ ಪೊಲೀಸರು ಬಿಡಿ. ಎಲ್ಲದಕ್ಕೂ ಎನ್ಕೌಂಟರ್ ಅಂತ ಒಂದು ಮದ್ದು ಕಂಡು ಹಿಡಿದು ಬಿಟ್ಟಿದ್ದೀರಿ,' ಅಂದರು ರುದ್ರಮೂರ್ತಿ.

'ನಿಮ್ಮ ನಟ ಗೌರವ್ ಮದುವೆ ಸುದ್ದಿ ಗೊತ್ತಾಯಿತಾ?' ಅಂತ ಕೇಳಿದರು ಪಾವಸ್ಕರ್.

'ಹಾಂ, ಓದಿದೆ ಇವತ್ತು. ಅದೇ ಫ್ರಂಟ್ ಪೇಜ್ ಹೆಡ್ ಲೈನ್ ಇತ್ತು. ಏನೋ ಗಡಿಬಿಡಿಯಲ್ಲಿ ಸೆಟಲ್ ಆಗಿಬಿಟ್ಟ ನಮ್ಮ ಲೋಕಲ್ ಕ್ಯಾಸಾನೋವಾ. ಒಂದಿಷ್ಟು ಹುಡುಗಿಯರು ಬಚಾವ್ ಬಿಡಿ. ಹಾ! ಹಾ!' ಅಂತ ನಕ್ಕು ಹೇಳಿದರು ಇನ್ಸ್ಪೆಕ್ಟರ್ ರುದ್ರಮೂರ್ತಿ.

'ನಿಮ್ಮ  ಇಂಡಸ್ಟ್ರಿ ನಟ ಗೌರವ್ ಸಡನ್ ಆಗಿ ಮದ್ವೆ ಆಗಲು ಕಾರಣ ಯಾರು ಗೊತ್ತಾ?' ಅಂತ ಪಾವಸ್ಕರ್ ಕೇಳಿದರು.

'ಮತ್ಯಾರು? ಅವನ ಹುಡುಗಿ ಪ್ರತೀಕ್ಷಾ. ಗಟ್ಟಿಗಿತ್ತಿ. ಹಿಡಿದವನನ್ನು ಬಿಡಲಿಲ್ಲ. ಸುಮಾರು ಜನ ಹುಡುಗಿಯರನ್ನು ಸುತ್ತಿಸಿ ಕೈಬಿಟ್ಟಿದ್ದ ಗೌರವ್. ಇವಳು ಬಿಡಲಿಲ್ಲ ನೋಡಿ,' ಅಂತ ಸಹಜವಾಗಿ ಹೇಳಿದರು ರುದ್ರಮೂರ್ತಿ. ಆದರೂ ಪಾವಸ್ಕರ್ ಏನೋ ಬೇರೇನೇ ಕ್ಲೂ ಕೊಡುತ್ತಿದ್ದಾರೆ ಅನ್ನಿಸಿತು.

'ನಿಮ್ಮ ಗೌರವ್ ಅಷ್ಟು ಗಡಿಬಿಡಿಯಲ್ಲಿ ಮದ್ವೆಯಾಗಿದ್ದು ಯಾಕೆಂದರೆ ಡಾನ್ ಗನ್ನು ಶೆಟ್ಟಿ ಅವನಿಗೆ ಧಮಕಿ ಹಾಕಿದ್ದ!' ಅಂದು ಬಿಟ್ಟರು ಪಾವಸ್ಕರ್.

ಈಗ ಫುಲ್ ಬೆಚ್ಚಿ ಬಿದ್ದರು ರುದ್ರಮೂರ್ತಿ. ಮುಂಬೈ ಡಾನ್ ಗನ್ನು ಶೆಟ್ಟಿ ನಟ ಗೌರವನಿಗೆ ಧಮಕಿ ಹಾಕಿದ್ದನಾ? ಧಮಿಕಿ ಕಾಸಿಗೂ ಅಲ್ಲ, ಸಿನೆಮಾ ಶೂಟಿಂಗ್ ಡೇಟಿಗೂ ಅಲ್ಲ. ಯಾರನ್ನೋ ಮದುವೆಯಾಗಲು. ಇದೆಂತಾ ಸುಪಾರಿಯಪ್ಪಾ? ಅಂದುಕೊಂಡರು ರುದ್ರಮೂರ್ತಿ.

'ಇದು ಭಾಳ ಇಂಟೆರೆಸ್ಟಿಂಗ್ ಆಗಿದೆ ಪಾವಸ್ಕರ್. ನಿಮ್ಮ ಮುಂಬೈ ಅಂಡರ್ವರ್ಲ್ಡ್ ಜನ ನಮ್ಮ ಸ್ಯಾಂಡಲವುಡ್ಡಿಗೆ ಸಹಿತ ಕಾಲಿಡುತ್ತಿದ್ದಾರೆ ಅಂತ ಆಯಿತು. ಒಳ್ಳೆ ಖಬರ್ ಕೊಟ್ಟಿರಿ. ನಾವೂ ಸಹ ಒಂದು ಕಣ್ಣಿಡಬೇಕಾಯಿತು ಅಂತಾಯಿತು,' ಅಂದರು ರುದ್ರಮೂರ್ತಿ.

'ಗನ್ನು ಶೆಟ್ಟಿಗೆ ಸುಪಾರಿ ಯಾರು ಕೊಟ್ಟಿದ್ದರು ಗೊತ್ತೇ?' ಅಂತ ಕೇಳಿದರು ಪಾವಸ್ಕರ್.

'ಯಾರು?!' ಅಂತ ಕೇಳಿದರು ರುದ್ರಮೂರ್ತಿ. ಈಗ ದೊಡ್ಡ ಸಸ್ಪೆನ್ಸ್ ಬಿಲ್ಡ್ ಅಪ್.

'ಖುದ್ದು ನಟಿ ಪ್ರತೀಕ್ಷಾ!!' ಅಂದು ಸ್ಪೋಟಕ ಸುದ್ದಿ ಹೇಳಿಬಿಟ್ಟರು ಪಾವಸ್ಕರ್.

'ಹಾಂ!? ನಟಿ ಪ್ರತೀಕ್ಷಾ ಗನ್ನು ಶೆಟ್ಟಿಗೆ ಸುಪಾರಿ ಕೊಟ್ಟಳಾ? ಅದೂ ನಟ ಗೌರವ್ ಕಾನಪಟ್ಟಿಗೆ ಘೋಡಾ ಇಟ್ಟು ಮದುವೆ ಆಗಲು ಹೇಳುವಂತೆ? ಬಹಳ ಆಶ್ಚರ್ಯ. ಅಲ್ಲಿ ಇಲ್ಲಿ ಅವಳ ಹೆಸರು ಬಂದಿತ್ತು. ಆದ್ರೆ ಅಂಡರ್ವರ್ಲ್ಡ್ ಜೊತೆ ಸಂಪರ್ಕ ಇದ್ದಿದ್ದು ನಮಗೆ ಗೊತ್ತಿರಲಿಲ್ಲ ಬಿಡಿ,' ಅಂದರು ರುದ್ರಮೂರ್ತಿ.

'ರುದ್ರಾ ನಿನಗೆ ಖಡಕ್ ಪ್ರೂಫ್ ಕೊಡುತ್ತೇನೆ. ಕೇಳಿಬಿಡು ಈ ರೆಕಾರ್ಡಿಂಗ್. ಒಂದು ನಿಮಿಷ,' ಅಂದ ಪಾವಸ್ಕರ್ ತಾವು ರೆಕಾರ್ಡ್ ಮಾಡಿಕೊಂಡಿದ್ದ ಒಂದು ಕ್ಲಿಪ್ ಫೋನಲ್ಲೇ ಕೇಳಿಸಿದರು.

ಇನ್ಸ್ಪೆಕ್ಟರ್ ರುದ್ರಮೂರ್ತಿ ಕ್ಲಿಪ್ ಕೇಳುತ್ತ ಹೋದರು. ಒಂದು ಧ್ವನಿ ನಟ ಗೌರವನದು ಅಂತ ತಿಳಿಯಲು ತೊಂದರೆ ಇರಲಿಲ್ಲ. ಇನ್ನೊಂದು ದನಿ ಡಾನ್ ಗನ್ನು ಶೆಟ್ಟಿಯದು ಅಂತ ತಿಳಿಯಿತು. ಸಂದರ್ಭ ಹಾಗಿತ್ತಲ್ಲ.

'ಹಲೋ' ಆಕಡೆಯಿಂದ ಗಡಸು ದನಿ.

'ಅಣ್ಣಾ. ಗನ್ನು ಅಣ್ಣಾ. ಎಂತದು ಈ ಹೊತ್ತಲ್ಲಿ ಫೋನ್ ಅಣ್ಣಾ? ಎಂತ ಸಮಾಚಾರ?'

'ಗೌರವ್ ಒಂದು ಕೆಲಸ ಆಗಬೇಕು ಮಾರಾಯ'

'ಎಂತದು ಅಣ್ಣಾ? ಹೇಳಿ ನೀವು. ಎಂತದು ಹೊಸಾ ಸಿನೆಮಾ ಮಾಡೋ ಪ್ಲಾನ್ ಉಂಟಾ? ಡೇಟ್ಸ್ ಬೇಕಾ? ನೀವು ಕೇಳಿ ಅಣ್ಣಾ. ನಿಮಗೆ ಇಲ್ಲ ಅನ್ನೋಕೆ ಉಂಟಾ?'

ಡಾನ್ ಗನ್ನು ಶೆಟ್ಟಿಯ ಅಪರಾತ್ರಿಯ ಕರೆಗೆ ಚಡ್ಡಿ ಒದ್ದೆ ಆದವನಂತೆ ಮಾತಾಡುತ್ತಿದ್ದ ನಟ ಗೌರವ್ ಗನ್ನು ಶೆಟ್ಟಿಗೆ ಇಲ್ಲದ ಬೆಣ್ಣೆ ಹಚ್ಚುತ್ತಿದ್ದ.

'ಒಂದು ಮದುವೆ ಆಗಲಿಕ್ಕಿದೆ'

'ಯಾರದ್ದು ಅಣ್ಣ ಮದುವೆ? ನಾ ಎಂತ ಮಾಡಲಿ ಅಣ್ಣಾ? ಅವರ ಮದುವೆಯಲ್ಲಿ ಡಾನ್ಸ್ ಮಾಡಲಾ? ಅಲ್ಲಿ ಬಾಲಿವುಡ್ ನಲ್ಲಿ ಶಾರುಕ್ ಖಾನ್ ಸಹಿತ ದುಡ್ಡು ಕೊಟ್ಟರೆ ಮದುವೆಯಲ್ಲಿ ಹೋಗಿ ಡಾನ್ಸ್ ಮಾಡಿ ಬರುತ್ತಾನಂತೆ. ನಾನೂ ಮಾಡ್ತೇನೆ. ನೀವು ಹೇಳಿ ಅಣ್ಣಾ. ಯಾರದ್ದು ಮದುವೆ ಅಣ್ಣಾ?'

'ಮದುವೆ ನಿನ್ನದೇ ಗೌರವ್. ತಾಪಡ್ ತೋಪ್ ಆಗಲಿಕ್ಕೆ ಉಂಟು. ಮತ್ತೊಂದು ಮಾತು ಹೇಳಲಿಕ್ಕೆ ಇಲ್ಲ. ತಿಳಿಯಿತಾ?!ಹಾಂ!?'

ಈಗ ಡಾನ್ ಗನ್ನು ಶೆಟ್ಟಿ ಒಂದು notch ದನಿ ಏರಿಸಿದ್ದ. ಫೈನಲ್ ಬೆದರಿಕೆ ಎಂಬಂತೆ ಕೊಟ್ಟ ಧಮಕಿ. ಫೋನಲ್ಲೇ ಕಾನಪಟ್ಟಿಗೆ ಘೋಡಾ ಇಟ್ಟಿದ್ದ. ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಡಾನ್ ಗಳಿಂದ ಘೋಡಾ ಇಡಿಸಿಕೊಂಡು ರೂಢಿಯಿದ್ದ ಗೌರವಗೆ ಡಾನ್ ಮಾತಿನಲ್ಲಿದ್ದ ಖತರ್ನಾಕ್ ಗಂಭೀರತೆಯ ಅರಿವಾಗಲು ಜಾಸ್ತಿ ಟೈಮ್ ಹಿಡಿಯಲಿಲ್ಲ.

'ಅಣ್ಣಾ.... ಮದುವೆ....ನಂದು....... ಯಾರ..... ಜೊತೆ?' ಅಂತ ನಟ ಗೌರವ್ ತೊದಲಿದ. ಗಟ ಗಟ ಏನೋ ಕುಡಿದ ಸೌಂಡ್ ಸಹ ರೆಕಾರ್ಡ್ ಆಗಿತ್ತು. ಡಾನ್ ಮಂದಿ ನೋಡಿಕೊಂಡೇ ಫೋನ್ ಮಾಡುತ್ತಾರೆ. ಕುಡಿದಾಗ ಎಲ್ಲರೂ vulnerable. ಅಲ್ಲವಾ?

'ಪ್ರತೀಕ್ಷಾ ಜೊತೆ. ಬೇಗನೆ ಆಗಿ ಬಿಡಬೇಕು ಗೌರವ್. ತಡವಾದರೆ ಸುದ್ದಿ ಬಾಸ್ ಛೋಟಾ ರಾಮನ್ ಗೆ ಹೋಗಿ ಮುಟ್ಟಿದರೆ ಕಷ್ಟ. ನೀನು ನಮ್ಮವ ಅಂತ ನಾನೇ ಮಾತಾಡುತ್ತಿದ್ದೇನೆ. ಗೊತ್ತಲ್ಲ ನಿನಗೆ ಛೋಟಾ ರಾಮನ್ ಬಗ್ಗೆ? ಪ್ರತೀಕ್ಷಾ ಅಂದ್ರೆ ಅವರಿಗೆ ಭಾಳ ಇಷ್ಟ.ಅವರ ಖಾಸಂ ಖಾಸ್ ಆಕೆ. ಬೇಗನೆ ಪೇಪರ್ ಒಳಗೆ ಬಂದು ಬಿಡಬೇಕು ಸುದ್ದಿ. ಉಳಿದ ಶಾಸ್ತ್ರ ಕಡೆಗೆ. ಆಯಿತು ಇಡ್ತೇನೆ ಫೋನ್. ಇನ್ನೊಂದು ಲೈನಲ್ಲಿ ಬಾಸ್ ಛೋಟಾ ರಾಮನ್ ಫೋನ್ ಬರ್ತಾ ಇದೆ'

'ಅಣ್ಣಾ! ಅಣ್ಣಾ! ಅದು.... ಅದು.....' ಅನ್ನುವಷ್ಟರಲ್ಲಿ ಫೋನ್ ಕಟ್ಟಾಗಿತ್ತು. ಈ ಕಡೆ ನಟ ಗೌರವ್ ಥರ ಥರ ನಡಗುತ್ತಿದ್ದ.

ಗನ್ನು ಶೆಟ್ಟಿ ಸರಿಯಾಗೇ ಹಣಿದಿದ್ದ. ಸರಿಯಾದ ಟೈಮ್ ನಲ್ಲಿ ಸೂಪರ್ ಡಾನ್ ಛೋಟಾ ರಾಮನ್ ಹೆಸರನ್ನು ತೇಲಿ ಬಿಟ್ಟಿದ್ದ ಗನ್ನು ಶೆಟ್ಟಿ. ತಾನು ಗೌರವನ ಫ್ರೆಂಡ್, ಹಿತಚಿಂತಕ ಅನ್ನುವ ರೀತಿಯಲ್ಲಿ ತೋರಿಸಿಕೊಂಡಿದ್ದ. ಬೇಕಂತಲೇ ಫೋನ್ ಕಟ್ ಮಾಡಿದ್ದ. ಅದೆಲ್ಲ ಅಂಡರ್ವರ್ಲ್ಡ್ ಜನರ ಟ್ರಿಕ್. ಪೂರ್ತಿ ವಿಷಯ ತಿಳಿಯದ ಮನುಷ್ಯ ಹೆದರಿಕೆಯಿಂದ ಬಗ್ಗುತ್ತಾನೆ. ಜೀವಭಯದಿಂದ ಗಡಿಬಿಡಿಯಲ್ಲಿ ಕಮಿಟ್ ಆಗಿಬಿಡುತ್ತಾನೆ.

'ಕೇಳಿದಿರಾ ರುದ್ರಮೂರ್ತಿ? ಇದೇ ನಿಮ್ಮ ಸ್ಯಾಂಡಲವುಡ್ ಮದುವೆ ಹಿಂದಿನ ಹಕೀಕತ್ತು. ನಟಿ ಪ್ರತೀಕ್ಷಾ ಪಹೂಂಚ್ ಎಷ್ಟಿದೆ ಅಂತ ಗೊತ್ತಾಯಿತಾ? ಏಕದಂ ಕುತ್ತೀ ಚೀಜ್ ಅವಳು,' ಅಂದರು ಪಾವಸ್ಕರ್.

'ನಿಮಗೆಲ್ಲಿ ಸಿಕ್ಕಿತು ಈ ಟೇಪ್ ಪಾವಸ್ಕರ್?' ಅಂದರು ರುದ್ರಮೂರ್ತಿ.

'ಈ ಸಾಲಾ ಗನ್ನು ಶೆಟ್ಟಿಯ ಎನ್ಕೌಂಟರ್ ಆರ್ಡರ್ ಮೇಲಿಂದ ಬಂದಾಗಿಂದ ಅವನ ಫೋನ್ ಟ್ಯಾಪ್ ಮಾಡುತ್ತಿದ್ದೆವು. ಒಂದರಲ್ಲಿ ಇದು ಸಿಕ್ಕಿತು ನೋಡಿ. ಮತ್ತೆ ಇನ್ನೊಂದು ವಿಷಯ ಗೊತ್ತಾ?' ಅಂದರು ಪಾವಸ್ಕರ್.

'ಏನು?' ಅಂತ ಕೇಳಿದರು ರುದ್ರಮೂರ್ತಿ.

'ಎನ್ಕೌಂಟರ್ ಮಾಡುವ ಮೊದಲು ಗನ್ನು ಶೆಟ್ಟಿಯನ್ನು ಕೇಳಿದ್ದೆ, 'ಕ್ಯಾ ರೇ ಶೆಟ್ಟಿ, ಜೀವನದಲ್ಲಿ ಒಂದಾದರೂ ಒಳ್ಳೆ ಕೆಲಸ ಮಾಡಿದ್ದಿಯೇನೋ?' ಅಂತ. ಏನು ಹೇಳಬೇಕು ಸಾಲಾ? 'ಸಾಬ್, ಒಂದು ಬೆಹೆನ್ ಶಾದಿ ಮಾಡಿಸಿದೆ ಸಾಬ್' ಅಂದ. ಯಾರದ್ದು ಅಂತ ಕೇಳಿದರೆ, 'ಈ ಕನ್ನಡ ಹೀರೋಯಿನ್ ಪ್ರತೀಕ್ಷಾ ನಮಗೆ ಸಿಸ್ಟರ್ ಇದ್ದಂಗೆ ಸಾಬ್. ನಟ ಗೌರವ್ ಆಕೆಗೆ ಕೈಕೊಡಬೇಕು ಅಂತಿದ್ದ. ನಾನೇ ನಿಪಟಾಯಿಸಿದ್ದೇನೆ ಸಾಬ್. ನೋಡ್ತಾ ಇರಿ. ನಾಳೆ ನಾಡಿದ್ದರ ಹಾಗೆ ಪೇಪರ್ ಒಳಗೆ ಬರುತ್ತದೆ,' ಅಂದ ಗನ್ನು. 'ಅಚ್ಚಾ ಕಾಮ್ ಕಿಯಾರೇ ಶೆಟ್ಟಿ. ಅಭಿ ಚಲ್ ಊಪರ್,' ಅಂದು ಮಾತು ಮುಗಿಸಿದ್ದೆ. ಒಂದು ಗುಂಡು ನುಗ್ಗಿಸಿ ಕೆಲಸ ಮುಗಿಸಿದ್ದೆ,' ಅಂದರು ಪಾವಸ್ಕರ್.

'ಇಷ್ಟಿದೆ ಅಂತಾಯಿತು ಕಥೆ. ಪ್ರತೀಕ್ಷಾಗೆ ಡಾನ್ ಛೋಟಾ ರಾಮನ್ ಕನೆಕ್ಷನ್ ಇತ್ತಾ ಪಾವಸ್ಕರ್?' ಅಂತ ಕೇಳಿದರು ರುದ್ರಮೂರ್ತಿ.

'ಅಯ್ಯೋ ಇರದೇ ಏನು? ಕನ್ನಡಕ್ಕೆ ಬರುವ ಮೊದಲು ಆಕೆ ಇಲ್ಲೇ ಬಾಲಿವುಡ್ಡಿನಲ್ಲೇ ಇದ್ದವಳು ಅಲ್ಲವೇ? ಆಗಲೇ ದುಬೈ ಟ್ರಿಪ್ ಜೋರಾಗಿತ್ತು ಅವಳದ್ದು. ಆಗಲೇ ಅವಳಿಗೆ ಛೋಟಾ ರಾಮನ್, ಗನ್ನು ಶೆಟ್ಟಿಯ ಪರಿಚಯ ಎಲ್ಲ ಆಗಿದ್ದು. ಆಗ ದುಬೈನಲ್ಲೇ ಇದ್ದ ಛೋಟಾ ರಾಮನ್ ಇವಳನ್ನು ದುಬೈಗೆ ಕರೆಸಿಕೊಂಡ ಅಂದ್ರೆ ಇವಳನ್ನು ಏರ್ಪೋರ್ಟ್ ನಲ್ಲಿ ರಿಸೀವ್ ಮಾಡುವದರಿಂದ ಹಿಡಿದು, ಕೊನೆಯ ಶಾಪಿಂಗ್ ಮಾಡಿಸಿ, ವಾಪಾಸ್ ಪ್ಲೇನ್ ಹತ್ತಿಸಿ ಕಳಿಸುವದು ಇದೇ ಗನ್ನು ಶೆಟ್ಟಿಯ ಕೆಲಸವಾಗಿತ್ತು. ಹಾಗೆ ಅವರಿಬ್ಬರ ಪರಿಚಯವಾದದ್ದು. ಮತ್ತೆ ಬಾಸ್ ಛೋಟಾ ರಾಮನ್ ಮಾಲು ಅಂದಾದ ಮೇಲೆ ಆಕೆ ಇವರೆಲ್ಲರ ರಾಖಿ ಬೆಹೆನ್ ತಾನೇ? ಅದೇ ಸಂಬಂಧ ಇಟ್ಟುಕೊಂಡು ಗನ್ನು ಭಯ್ಯಾನ ಹತ್ತಿರ ಪ್ರತೀಕ್ಷಾ ತನ್ನ ಕಷ್ಟ ಹೇಳಿಕೊಂಡಿದ್ದಳು ಅಂತ ಕಾಣಿಸುತ್ತದೆ. ತಾನೇ ನಿಪಟಾಯಿಸಲಿಲ್ಲ ಅಂದರೆ ಅದು ಬಾಸ್ ಛೋಟಾ ರಾಮನ್ ವರೆಗೆ ಹೋಗಿ ತನ್ನ ಬೆಲೆ ಕಮ್ಮಿ ಆದೀತು ಅಂತ ಹೇಳಿ ಗನ್ನು ಶೆಟ್ಟಿ ತಾನೇ ಗೌರವಗೆ ಧಮಕಿ ಕೊಟ್ಟು ಕೆಲಸ ಮುಗಿಸಿಬಿಟ್ಟಿದ್ದಾನೆ ನೋಡಿ,' ಅಂದರು ಪಾವಸ್ಕರ್.

'ಸರಿ ರುದ್ರಾ. ಫೋನ್ ಇಡ್ಲಾ? ಬನ್ನಿ ಮುಂಬೈ ಕಡೆ. ಬೇಕಾದರೆ ನಿಮ್ಮ ಕಡೆ ರೌಡಿಗಳನ್ನು ಎತ್ತಾಕಿಕೊಂಡು ಬನ್ನಿ. ಮುಂಬೈನಲ್ಲಿ ಎನ್ಕೌಂಟರ್ ಮಾಡಿ ಮುಗಿಸೋಣ. ಹಾ!!! ಹಾ!!!' ಅಂತ ಗಹಗಹಿಸಿ ನಕ್ಕ ಪಾವಸ್ಕರ್ ಫೋನ್ ಕಟ್ ಮಾಡಿದರು.

ಫೋನ್ ಸಂಭಾಷಣೆ ಮುಗಿಸಿದ ಇನ್ಸ್ಪೆಕ್ಟರ್ ರುದ್ರಮೂರ್ತಿ ಆಕಡೆ ನೋಡಿದರೆ ಒಂದು ದೊಡ್ಡ ಮೆರವಣಿಗೆ ಹೋಗುತ್ತಿತ್ತು. ಯಾರದ್ದು ಅಂತ ನೋಡಿದರೆ ನಟ ಗೌರವ್ ಅಭಿಮಾನಿಗಳದ್ದು. ದೊಡ್ಡ ಬ್ಯಾನರ್ ಬೇರೆ ಇತ್ತು. ಕಣ್ಣು ಬಿಟ್ಟು ನೋಡಿದರು ರುದ್ರಮೂರ್ತಿ. ಬ್ಯಾನರ್ ಮೇಲೆ ಬರೆದಿತ್ತು.

'ಗೌರವ್ ಅಣ್ಣಾ ಮತ್ತು ಪ್ರತೀಕ್ಷಾ ಅತ್ತಿಗೆಗೆ ಅಭಿನಂದನೆಗಳು' !

! ! ! ! ! ! !

(ಇದೊಂದು ಕಾಲ್ಪನಿಕ ಕಥೆ. ಅಲ್ಲಿ ಇಲ್ಲಿ ಓದಿದ ಭೂಗತ ಜಗತ್ತು, ಸಿನೆಮಾ ಜಗತ್ತು, ಅವುಗಳ ನಡುವಿನ ಚಿತ್ರ ವಿಚಿತ್ರ ಸಂಬಂಧಗಳು, ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಳ್ಳುವ ಪೊಲೀಸರು, ರಾಜಕಾರಣಿಗಳು ಇತ್ಯಾದಿಗಳ ಮೇಲೆ ಆಧಾರಿತ ಕಪೋಲಕಲ್ಪಿತ ಕಥೆ)

1 comment:

Vimarshak Jaaldimmi said...


Very good! Full of suspense!!