Tuesday, August 26, 2014

ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!

೧೯೯೦ ರ ಸಮಯ. ಸ್ಥಳ ಅಮೇರಿಕಾದ ನ್ಯೂಯಾರ್ಕ್ ನಗರ.

ಆ ಸಮಯದಲ್ಲಿ ಸ್ವಾಮೀಜಿ ನ್ಯೂಯಾರ್ಕಿಗೆ ಬಂದಿದ್ದರು. ಇಂಡಿಯಾದ ಭಾರಿ ತಾಕತ್ತಿರುವ ತಾಂತ್ರಿಕ ಸ್ವಾಮೀಜಿ ಅವರು. ಅವರಿಗೆ ಸಿಕ್ಕಾಪಟ್ಟೆ ದೊಡ್ಡ ಮಟ್ಟದ ಸಂಪರ್ಕಗಳಿದ್ದವು. ಭಾರತದ ರಾಜಕಾರಣಿಗಳಂತೂ ಸ್ವಾಮೀಜಿಯವರ ಪಾದ ತೊಳೆದು, ಅದೇ ನೀರನ್ನು ತೀರ್ಥ ಅಂತ ತೆಗೆದುಕೊಳ್ಳುತಿದ್ದರು. ಹಾಗಂತ ಸ್ವಾಮೀಜಿ ಮತ್ತು ಅವರ ಹಿಂಬಾಲಕರು ಹೇಳುತ್ತಿದ್ದರು. ವಿಶ್ವದ ಎಲ್ಲ ಕಡೆ ದೊಡ್ಡ ಹವಾ ಇತ್ತು ಸ್ವಾಮೀಜಿಯವರದು.

ಹೀಗಿರುವಾಗ ಒಂದು ದಿವಸ ಸ್ವಾಮೀಜಿಯಿದ್ದ ನ್ಯೂಯಾರ್ಕ್ ಫ್ಲಾಟಿಗೆ (ಅಪಾರ್ಟ್ಮೆಂಟಗೆ) ಒಬ್ಬ ಮನುಷ್ಯ ಬಂದ. ನೋಡಿದರೆ ಇಂಡಿಯನ್ ಅಥವಾ ಪಾಕಿಸ್ತಾನಿ ಕಂಡಂಗೆ ಕಾಣುತ್ತಿದ್ದ. ಒಳ್ಳೆ ಕಟ್ಟು ಮಸ್ತಾಗಿದ್ದ.  ಸ್ವಾಮೀಜಿಯವರ ಹಳೆ ಭಕ್ತನಿರಬೇಕು. ಬಂದವನೇ ಸ್ವಾಮೀಜಿಯವರಿಗೆ ದುವಾ, ಸಲಾಂ ಮಾಡಿ ಹೋಗಿಬಿಟ್ಟ.

ಸ್ವಾಮೀಜೀಯವರ ನ್ಯೂಯಾರ್ಕ್ ಫ್ಲಾಟ್ ಒಂದು ನಮೂನಿ ಗಬ್ಬು ವಾಸನೆ ಹೊಡೆಯುತ್ತಿತ್ತು. ಹೋದಲ್ಲೆಲ್ಲ ರಾಡಿ ಎಬ್ಬಿಸಿ, ವಾಸನೆ ಹೊಡೆಸುವದು ಸ್ವಾಮೀಜಿಯವರ ಸ್ಪೆಷಾಲಿಟಿ. ಪೂಜೆ ಪುನಸ್ಕಾರ ಅಂತ ಹೇಳಿ ಅಗರಬತ್ತಿ, ಕರ್ಪೂರ, ಅದು, ಇದು ಅಂತ ಒಂದು ನಮೂನಿ ಪೂಜೆಯ ವಾಸನೆ. ಇನ್ನು ಅಡುಗೆಮನೆ ಕಡೆಯಿಂದ ಮೂರೂ ಹೊತ್ತು ಒಂದಲ್ಲ ಒಂದು ರೀತಿ ಇಂಡಿಯನ್ ಸಾಂಬಾರ್ ವಾಸನೆ. ಇದರ ಮೇಲೆ ಅವರಿಗೇ ವಾಯು ಪ್ರಕೋಪವಾದಾಗೊಮ್ಮೆ ಸ್ವಾಮೀಜಿ ತಮ್ಮ ಕಾವೀ ನಿಲುವಂಗಿ ಹಿಂದೆ ಎತ್ತಿದವರೇ ಡರ್ರಾ ಬರ್ರಾ ಅಂತ ಗ್ಯಾಸ್ ಬಿಟ್ಟೇ ಬಿಡುತ್ತಿದ್ದರು. ಆ ಪರಿ ಬೇಳೆ ಸಾರು, ಬೇಳೆ ಕಿಚಡಿ, ಬೇಳೆ ಸಾಂಬಾರ್ ಅಂತ ಮೂರೂ ಹೊತ್ತು ಮಟ್ಟಸವಾಗಿ ಬೇಳೆ ಕತ್ತರಿಸಿದರೆ ಪರಿಸ್ಥಿತಿ ಮತ್ತೇನಾಗಬೇಕು? ತಾವು ಬಿಟ್ಟ ವಾಯುವೂ ಒಂದು ತರಹ ದಿವ್ಯ ಪ್ರಸಾದ ಅನ್ನುವಂತೆ ಇದ್ದುಬಿಡುತ್ತಿದ್ದರು ಸ್ವಾಮೀಜಿ. ಇದೆಲ್ಲ ಕೂಡಿ ಸ್ವಾಮೀಜಿ ಇದ್ದಲ್ಲಿ ಒಂದು ತರಹ ವಿಚಿತ್ರ ವಾಸನೆ.

ಹೀಗೆ ತರಹ ತರಹ ವಾಸನೆ ಹೊಡೆಯುತ್ತಿದ್ದ ಸ್ವಾಮೀಜಿಯವರ ಫ್ಲಾಟಿನಲ್ಲಿ ಉಳಿಯದೇ ದುಬಾರಿ ಹೋಟೆಲ್ಲಿಗೆ ಹೊರಟು ಬಿಟ್ಟ ಅವನು. ಒಳ್ಳೆ ನಿರ್ಧಾರವನ್ನೇ ತೆಗೆದುಕೊಂಡಿದ್ದ ಅನ್ನಿಸುತ್ತದೆ ಆ ಹಟ್ಟಾ ಕಟ್ಟಾ ಆದಮೀ.

ಅವನು ಆಕಡೆ ಹೋದ ಮೇಲೆ ಕೇಳಿದೆ, 'ಸ್ವಾಮೀಜಿ, ಯಾರ್ರೀ ಅವನು?' ಅಂತ.

'ದಾವೂದ್ ಇಬ್ರಾಹಿಮ್! ಕಿಂಗ್ ಆಫ್ ಗೋಲ್ಡ್. ಕಿಂಗ್ ಆಫ್ ಹವಾಲಾ. ದುಬೈ ಸ್ಮಗ್ಲರುಗಳ ರಾಜ. ನಮ್ಮ ಶಿಷ್ಯ,' ಅಂದ ಸ್ವಾಮೀಜಿ ಗರ್ವದಿಂದ 'ಹ್ಯಾಂಗೆ?!' ಅನ್ನೋ ಲುಕ್ ಕೊಟ್ಟರು.

ದಾವೂದ್ ಇಬ್ರಾಹಿಂ

ನನಗೆ ದಾವೂದ್ ಇಬ್ರಾಹಿಮ್ ಬಗ್ಗೆ ಗೊತ್ತಿರಲಿಲ್ಲ ಬಿಡಿ. ಇದೇ ಮೊದಲ ಸಲ ಅವನ ಹೆಸರು ಕೇಳಿದ್ದು ಮತ್ತೆ ನೋಡಿದ್ದು.

ನಾನು ನಿಜವಾಗಿ ದಂಗು ಹೊಡೆದದ್ದು ಸಂಜೆ ಪಾರ್ಟಿಯೊಂದರಲ್ಲಿ ಈ ದಾವೂದ್ ಇಬಾಹಿಂ ಎಂಬ ಆದ್ಮಿ ನಮ್ಮ ಬಾಸ್ ಅದ್ನಾನ್ ಖಶೋಗೀ ಅವರಿಗೆ ಒಂದು ಚೆಕ್ ಕೊಟ್ಟಾಗ. ಬರೋಬ್ಬರಿ ಒಂದು ಮಿಲಿಯನ್ ಡಾಲರುಗಳಿಗೆ ಚೆಕ್ ಬರೆದು ಕೊಟ್ಟುಬಿಟ್ಟ ದಾವೂದ್ ಇಬ್ರಾಹಿಮ್! ಚೆಕ್ ಕೊಟ್ಟಿದ್ದೊಂದೇ ಅಲ್ಲದೇ 'ಒಪ್ಪಿಸ್ಕೊಳ್ಳಿ, ಸಾರ್,' ಅಂತ ತುಂಬ ವಿನಯದಿಂದ ಕೇಳಿಕೊಂಡ. ಗುರು ದ್ರೋಣಾಚಾರ್ಯರಿಗೆ ಶಿಷ್ಯ ಏಕಲವ್ಯ ಗುರುದಕ್ಷಿಣೆ ಕೊಟ್ಟ ಪರಿಯಲ್ಲಿ ಅದ್ನಾನ್ ಖಶೋಗಿಗೆ ಮಿಲಿಯನ್ ಡಾಲರ್ ಚೆಕ್ ಕೊಟ್ಟಿದ್ದ ದಾವೂದ್. ಅಷ್ಟೊಂದು ಭಕ್ತಿ, ಕೃತಜ್ಞತೆ, ಏನೇನೋ ದಿವ್ಯ ಫೀಲಿಂಗ್ಸ್.

ಸ್ವಾಮೀಜಿ ಮುಗುಳ್ನಗುತ್ತ ನಿಂತಿದ್ದರು. 'ತೊಗೊಳ್ಳಿ. ನಮ್ಮವನೇ,' ಅಂತ ಆಶ್ವಾಸನೆ ಬೇರೆ ಕೊಟ್ಟರು.

ದಿನ ನಿತ್ಯದ ಖರ್ಚಿಗೆ ರೊಕ್ಕದ ತುಂಬ ತೊಂದರೆಯಲ್ಲಿದ್ದ ಆ ಕಾಲದ ಕುಬೇರ ಅದ್ನಾನ್ ಖಶೋಗಿ ಚೆಕ್ ತೆಗೆದುಕೊಂಡು, ತುಂಬಾ ಭಾವುಕರಾಗಿ ದಾವೂದನಿಗೆ ಧನ್ಯವಾದ ಅರ್ಪಿಸಿದರು. ದಾವೂದ್ ಮುಖದಲ್ಲಿ ಧನ್ಯನಾದೆ ಅನ್ನುವ ಭಾವ. ನನಗೆ ಆವತ್ತು ಗೊತ್ತಿರಲಿಲ್ಲ, ಈ ಅದ್ನಾನ್ ಖಶೋಗೀ ಅನ್ನುವ ಶಸ್ತ್ರಾಸ್ತ್ರಗಳ ಅತಿ ದೊಡ್ಡ ದಲ್ಲಾಳಿ ದಾವೂದನಿಗೆ ಮಾದರಿ / ರೋಲ್ ಮಾಡೆಲ್ ಆಗಿದ್ದ ಮತ್ತು ಆಗ ಕೇವಲ ಮಿಲಿಯನ್ ಡಾಲರುಗಳ ಲೆಕ್ಕದಲ್ಲಿ ಆಟ ಆಡುತ್ತಿದ್ದ ದಾವೂದ್ ಇಬ್ರಾಹಿಂ ಒಂದು ದಿವಸ ಖಶೋಗಿಯ ಲೆವೆಲ್ಲಿಗೆ ಬಂದು ಮುಟ್ಟಬೇಕು ಅಥವಾ ಮೀರಬೇಕು ಅಂತ ನಿರ್ಧರಿಸಿದ್ದ ಅಂತ. ಈ ಘಟನೆ  ಮೂಲಕ ಸ್ವಾಮೀಜಿ ದಾವೂದನಿಗೆ ಒಂದು ದೊಡ್ಡ ಪರಿಚಯ ಮಾಡಿಸಿದ್ದರು. ತನ್ನ ರೋಲ್ ಮಾಡೆಲ್, ಗುರುವಲ್ಲದ ಗುರು ಖಶೋಗೀ ಸ್ವಲ್ಪ ರೊಕ್ಕದ ತೊಂದರೆಯಲ್ಲಿ ಇದ್ದಾನೆ ಅಂತ ತಿಳಿದ ದಾವೂದ್ ಹಿಂದೆ ಮುಂದೆ ನೋಡದೇ ಬರೋಬ್ಬರಿ ಒಂದು ಮಿಲಿಯನ್ ಡಾಲರುಗಳಿಗೆ ಚೆಕ್ ಬರೆದುಕೊಟ್ಟುಬಿಟ್ಟಿದ್ದ. ಅರ್ಪಿಸಿಬಿಟ್ಟಿದ್ದ.

ದಾವೂದ್ ಇಬ್ರಾಹಿಂ ತನ್ನ ಗುರು ಅಂತ ಪರಿಗಣಿಸಿ, ಆಪರಿ ಪೂಜನೀಯ ಭಾವದಿಂದ ನೋಡುತ್ತಿದ್ದ ಈ ಅದ್ನಾನ್ ಖಶೋಗೀ ಯಾರು ಅಂದ್ರಾ?

ಅದ್ನಾನ್ ಖಶೋಗಿ

ಅದ್ನಾನ್ ಖಶೋಗೀ - ೧೯೮೦ ರ ದಶಕದ ವಿಶ್ವದ ಅತೀ ಶ್ರೀಮಂತ ವ್ಯಕ್ತಿ. ವೃತ್ತಿಯಿಂದ ಶಸ್ತ್ರಾಸ್ತ್ರಗಳ ದಲ್ಲಾಳಿ. ವ್ಯಾಪಾರಿಯಲ್ಲ ಮತ್ತೆ. ಕೇವಲ ದಲ್ಲಾಳಿ. ಶಸ್ತ್ರಾಸ್ತ್ರ ತಯಾರು ಮಾಡುವವರನ್ನು, ಶಸ್ತಾಸ್ತ್ರ ಬೇಕು ಅಂದವರನ್ನು ಒಂದು ಕಡೆ ತಂದು, ಇಬ್ಬರ ತಲೆಯನ್ನೂ ಸವರಿ, ಬೆಲೆ, ಕಮಿಷನ್, ಲಂಚ, ಮಂಚ, ಇತ್ಯಾದಿಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ನೈಸಾಗಿ ಬಗೆಹರಿಸಿ, ಡೀಲ್ ಕುದುರಿಸಿಕೊಟ್ಟು, ಮಾರಾಟಗಾರರು, ಗ್ರಾಹಕರು ಶೇಕ್ ಹ್ಯಾಂಡ್ ಮಾಡುವಂತೆ ಡೀಲ್ ಮಾಡಿಸಿ, ಆ ಖರೀದಿ ವ್ಯವಹಾರದ ಒಂದು ಪರ್ಸಂಟೇಜ್ ಮೊತ್ತವನ್ನು ಕಮಿಷನ್ ಅಂತ ಪಡೆದು ರೊಕ್ಕಾ ಮಾಡುತ್ತಿದ್ದ ಭಾರಿ ಕುಳ ಅದ್ನಾನ್ ಖಶೋಗೀ. ಬಿಲಿಯನ್ ಗಟ್ಟಲೆ ಡಾಲರುಗಳ ಲೆಕ್ಕದ ವ್ಯವಹಾರ. ಕಮಿಷನ್ ಕೆಲವು ಶತ ಮಿಲಿಯನ್ ಡಾಲರುಗಳಲ್ಲಿ ಇರುತ್ತಿತ್ತು. ಹೀಗಾಗೇ ಆ ಕಾಲದಲ್ಲೇ ಖಶೋಗೀಯ ಒಟ್ಟು ಸಂಪತ್ತು ಕೆಲವು ಬಿಲಿಯನ್ ಡಾಲರುಗಳಲ್ಲಿತ್ತು. ಅವನ ದಿನದ ಖರ್ಚಿನ ಲೆಕ್ಕವೇ ಬರೋಬ್ಬರಿ ಎರಡೂವರೆ ಲಕ್ಷ ಡಾಲರ್ ಅಂದರೆ ನೀವು ನಂಬಲೇ ಬೇಕು. ವಿಶ್ವದ ದೊಡ್ಡ ದೊಡ್ಡ ಊರುಗಳಲ್ಲಿ ಅರಮನೆಯಂತಹ ಬಂಗಲೆಗಳು, ಆರೋ ಎಂಟೋ ದುಬಾರಿ ಜೆಟ್ ವಿಮಾನಗಳು, ಸಣ್ಣ ಓಡಾಟಕ್ಕೆ ಹೆಲಿಕಾಪ್ಟರುಗಳು, ಐಶಾರಾಮಿ ಹಡಗುಗಳು, ದುಬಾರಿ ಕಾರುಗಳು, ಇವೆಲ್ಲೆದರ ಧೇಕರೇಕಿ ನೋಡಲು ಸಾವಿರಾರು ಮಂದಿ ಕೆಲಸದವರು, ಕುದುರೆ, ಕತ್ತೆ, ನಾಯಿ, ಅದು, ಇದು ಅಂತ ಹೇಳಿ ಖರ್ಚು ಲೆಕ್ಕ ಹಾಕುತ್ತ ಹೋಗಿ ನೋಡಿ, ಲೆಕ್ಕ ಎಲ್ಲ ಸರಿಯಾಗುತ್ತದೆ. ದಿನಕ್ಕೆ ಬರೋಬ್ಬರಿ ಎರಡೂವರೆ ಲಕ್ಷ ಡಾಲರ್. ಅದೂ ಆ ಜಮಾನಾದಲ್ಲಿ. 'ನಬೀಲಾ' ಅನ್ನುವ ಅವನ ಐಶಾರಾಮಿ ಹಡಗಿನಲ್ಲೇ ಜೇಮ್ಸ್ ಬಾಂಡ್ ಮೂವಿಯೊಂದರ ಶೂಟಿಂಗ ಕೂಡ ಆಗಿತ್ತು.

'ಏ! ಬರಿ ದಲ್ಲಾಳಿ ಮಾಡೋ ಅದ್ಯಾರೋ ಖಶೋಗಿಗೆ ಅಷ್ಟೆಲ್ಲ ದುಡ್ಯಾಕೆ ಕೊಡಬೇಕು? ಯಾರು ಕೊಡ್ತಾರೆ?' ಅನ್ನುವದನ್ನ ತಿಳಿಯಬೇಕಾದರೆ ನೀವು ಶಸ್ತ್ರಾಸ್ತ್ರಗಳ ದಂಧೆಯ ಹಿಂದಿನ ಕರಾಳ ಸತ್ಯ ಅರಿಯಬೇಕು. ಶಸ್ತ್ರಾಸ್ತ್ರ ತಯಾರು ಮಾಡುವವರೇನೋ ಇರುತ್ತಾರೆ ಬಿಡಿ. ಆದರೆ ಅವುಗಳ ಉಪಯೋಗ ಮಾಡುವವರು ಹುಟ್ಟಿ, ಬೇಡಿಕೆ ಬರಬೇಕು ಅಂದ್ರೆ ಏನು ಮಾಡಬೇಕು? ಯುದ್ಧ! ಯುದ್ಧ ಮಾಡುವವಂತಹ ಸನ್ನಿವೇಶ ತಯಾರು ಮಾಡುವದು ಅಂದ್ರೆ ಹುಡುಗಾಟವೇ? ಕಂಡಾಪಟ್ಟೆ ದುಡ್ಡು ಖರ್ಚು ಮಾಡಬೇಕು. ಎಲ್ಲ ಸರಿ ಇದ್ದಲ್ಲೂ ಹೋಗಿ, ಕಡ್ಡಿ ಕೊರೆದು ಬೆಂಕಿ ಹಚ್ಚಬೇಕು. ಆಸೆಬುರುಕ ಸರ್ವಾಧಿಕಾರಿಗಳಿಗೆ ಲಂಚ, ಮಂಚ ಎಲ್ಲ ವ್ಯವಸ್ಥೆ ಮಾಡಿ ಪಟಾಯಿಸಬೇಕು. ಹಾಗೇ ಇನ್ನೊಂದು ಕಡೆ ಏನೇನೋ ಆದರ್ಶವಿಟ್ಟುಕೊಂಡು ಹೋರಾಡೋ ವಿರೋಧಿ ಸಂಘಟನೆಗಳಿಗೆ ಮೊದಲು ಬಿಟ್ಟಿ ಅಂತಲೇ ಒಂದಿಷ್ಟು ಶಸ್ತ್ರಾಸ್ತ್ರ ಕೊಟ್ಟು, ರುಚಿ ಹತ್ತಿಸಿ, ಯುದ್ಧ ಶುರು ಆಗೋ ಹಾಗೆ ಮಾಡಬೇಕು. ಹೀಗೆ ಒಂದು ದೊಡ್ಡ ಡೀಲಿಗೆ ದಲ್ಲಾಳಿತನ ಮಾಡೋದು ಅಂದರೆ ಅದೊಂದು turnkey project ಇದ್ದಂತೆ. ಇದಕ್ಕೆಲ್ಲ ವ್ಯಾಪಕ ಸಂಪರ್ಕಬೇಕು. ಇದ್ದ ಸಂಪರ್ಕ ನಿಭಾಯಿಸೋ ಕೌಶಲ್ಯ ಬೇಕು. ಮಾಡಿದ ಡೀಲು ಉಲ್ಟಾ ಹೊಡೆದು, ಕಮಿಷನ್ ಕೊಟ್ಟವರು ಬಂದು ಹಣೆಗೆ ಘೋಡಾ ಇಟ್ಟರೆ ಸಂಬಾಳಿಸೋ ಛಾತಿ ಬೇಕು.  ಅಗತ್ಯ ಬಿದ್ದರೆ ಅವರಿಗಿಂತ ದೊಡ್ಡ ಖತರ್ನಾಕ್ ಮಂದಿ ಹಿಡಿದು ಅವರನ್ನೇ ಖತಂ ಮಾಡಿಸಿಬಿಡುವ ತಲೆ ಬೇಕು. ಒಂದು ದೇಶದ ಸರ್ಕಾರ ಒಪ್ಪಲಿಲ್ಲ ಅಂದರೆ ಸರ್ಕಾರ ಬದಲಾಯಿಸಲಿಕ್ಕೆ ವ್ಯವಸ್ಥೆ ಮಾಡಬೇಕು. ಯಾರೋ ಪ್ರಧಾನಿಯೋ, ಅಧ್ಯಕ್ಷನೋ ಡೀಲಿಗೆ ಒಪ್ಪಲಿಲ್ಲ ಅಂದರೆ covert operators ಹಿಡಿದು ರಾಜಕೀಯ ಹತ್ಯೆ(assassinations) ಸಹಿತ ಮಾಡಿಸಿ, ಸುಳಿವು ಹತ್ತದಂತೆ ಬಚಾವಾಗಬೇಕು. ಇದೆಲ್ಲ ಇದ್ಡಿದ್ದಕ್ಕೆ, ಮಾಡಿಸಿ ಅರಗಿಸಿಕೊಳ್ಳೋ ತಾಕತ್ತು ಇದ್ದಿದ್ದಕ್ಕೇ ಈ ಖಶೋಗೀ ಅನ್ನೋ ಮಹಾನುಭಾವ ಅಷ್ಟು ಫೇಮಸ್ ಆಗಿ, ಎಲ್ಲ ಶಸ್ತ್ರಾಸ್ತ್ರ ತಯಾರಿಕೆ ಕಂಪನಿಗಳಿಗೆ ಅಪ್ಪ, ಅಮ್ಮನಂತೆ ಇದ್ದಿದ್ದು.

ಹಲವಾರು ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಇತರೆ ಸುಂದರಿಯರು ಖಶೋಗಿಯ ಫೋನಿನ ಸ್ಪೀಡ್ ಡೈಲಿನಲ್ಲಿ ಇದ್ದರು. ಮಾಜಿ ಮಿಸ್ ಇಂಡಿಯಾ ಪಮೇಲಾ ಬೋರ್ಡೆಸ್ ಅಂತೂ ಖಶೋಗಿಗೆ ಏಕದಂ ಖಾಸಂ ಖಾಸ್. ಪ್ರತಿ ರಾತ್ರಿಗೆ ಬರೋಬ್ಬರಿ ಹತ್ತು ಸಾವಿರ ಪೌಂಡ್ ಆಕೆಯ ರೇಟ್. ಲಿಬಿಯಾದ ಹುಚ್ಚ ಸರ್ವಾಧಿಕಾರಿ ಗಡಾಫಿ ಜೊತೆ ವ್ಯವಹಾರ ಕುದುರಿಸಲು ಹಚ್ಚಬೇಕಾದ ಅಮೃತಾಂಜನ ಹಚ್ಚಿ, ತಲೆ ತಿಕ್ಕಿ ಬಂದವಳೇ ಆಕೆ. ಅದೊಂದು ಉದಾಹರಣೆ ಅಷ್ಟೇ. ಖಶೋಗಿ ಫೋನ್ ಮಾಡಿದ ಅಂದರೆ ಹಾಲಿವುಡ್, ಬಾಲಿವುಡ್, ಎಲ್ಲ ಕಡೆಯಿಂದ ಆ ಟೈಪಿನ ಸುಂದರಿಯರು ಬಂದು, ಹೇಷಾರವ ಮಾಡುತ್ತ ಪಾರ್ಟಿ ಶುರು ಮಾಡಿಬಿಡುತ್ತಿದ್ದರು. ಎಲ್ಲರ ಕೈಯಲ್ಲಿ ಅಮೃತಾಂಜನ. ಖಶೋಗಿ ತೋರಿಸಿದ ಗಿರಾಕಿಗಳ ಮಂಚ ಹತ್ತುವದಷ್ಟೇ ಅವರ ಕೆಲಸ. ಗಿರಾಕಿಗಳ ಸರ್ವೀಸ್ ಮಾಡಿದ್ದಕ್ಕೆ ಅವರಿಗೆಲ್ಲ ಸಾವಿರ, ಲಕ್ಷ ಡಾಲರುಗಳ ಲೆಕ್ಕದಲ್ಲಿ ನಂತರ ಕಾಣಿಕೆ ಸಂದಾಯವಾಗುತ್ತಿತ್ತು . ಅಂತದ್ದೆಲ್ಲ ಲಂಚ, ಮಂಚ ಇಲ್ಲದೇ ಬಿಲಿಯನ್ ಡಾಲರುಗಳ ಡೀಲ್ ಕುದುರುತ್ತಲೇ ಇರಲಿಲ್ಲ. ಯಾವದಕ್ಕೂ ಇರಲಿ ಅಂತ  ಬೇಹುಗಾರಿಕೆ ಸಂಸ್ಥೆಗಳು ಅಂತಹ ಕಾಮಕೇಳಿಗಳ ವೀಡಿಯೊ ರೆಕಾರ್ಡಿಂಗ್ ರಹಸ್ಯವಾಗಿ ಮಾಡಿಕೊಳ್ಳುತ್ತಿದ್ದವು. ಮುಂದೆ ಆಸಾಮಿಗಳು ಉಲ್ಟಾ ಹೊಡೆದರೆ ಬ್ಲಾಕ್ ಮೇಲ್ ಮಾಡಲು ಬೇಕಾದರೆ ಅಂತ ದೂರಾಲೋಚನೆ!

ಒಂದು ಕಾಲದಲ್ಲಿ ಬಿಲಿಯನ್ ಗಟ್ಟಲೆ ಡಾಲರು ತೂಗುತ್ತಿದ್ದ ಈ ಖಶೋಗೀ ೧೯೯೦ ರ ಆಸುಪಾಸಿನಲ್ಲಿ ಸ್ವಲ್ಪ 'ಅಮ್ಮಾ, ತಾಯಿ' ಲೆವೆಲ್ಲಿಗೆ ಇಳಿದು ಬಿಟ್ಟಿದ್ದ. ಅವನ ಬ್ಯಾಡ್ ಲಕ್ ಖರಾಬಾಗಿತ್ತು. ಹೆಂಡತಿ ಡೈವೋರ್ಸ್ ತೆಗೆದುಕೊಂಡು ಹೋಗಿದ್ದಳು. ಅದು ಇತಿಹಾಸದಲ್ಲೇ ಅತ್ಯಂತ ದುಬಾರಿ ಡೈವೋರ್ಸ್ ಅಂತಲೇ ಫೇಮಸ್ ಆಯಿತು. ಆಕೆಗೆ ಒಂದಿಷ್ಟು ಬಿಲಿಯನ್ ಡಾಲರ್ ಕಾಸು ಕೊಟ್ಟು ಧರ್ಮಪತ್ನಿಯ ಕರ್ಮ ಕಳೆದುಕೊಂಡ ಖಶೋಗೀ ಜೊತೆಗೆ ಅಪಾರ ಸಂಪತ್ತನ್ನೂ ಕಳೆದುಕೊಂಡ. 'ಏ, ಮಕ್ಕಳೂ ಇವೆ. ನಿಂದೇ. ಅವುಗಳ ಖರ್ಚಿಗೆ ಅಂತ ಬೇರೆ ಕಾಸು ಕೊಡಯ್ಯೋ!' ಅಂತ ಹೆಂಡತಿ ಬೊಂಬಡಾ ಬಾರಿಸಿದರೆ, 'ಯಮ್ಮೋ, ಅವು ನನ್ನ ಮಕ್ಕಳಲ್ಲ. ಯಾರೋ ಬ್ರಿಟಿಷ್ ಸಂಸದರ ಜೊತೆ ಮಲಗಿದ್ದಕ್ಕೆ ಆಗಿವೆಯಂತೆ. DNA ಟೆಸ್ಟ್ ಮಾಡ್ಸಾವಾ? ಹಾಂ!?' ಅಂತ ವಾಪಸ್ ರೋಪ್ ಹಾಕಿ, ಆಕೆ ಇವನನ್ನು ಪೂರ್ತಿಯಾಗಿ ತೊಳೆದು, ರಂಗೋಲಿ ಹಾಕಿ ಹೋಗುವದರಿಂದ ತಪ್ಪಿಸಿಕೊಂಡಿದ್ದ ಖಶೋಗಿ. ಅಪ್ರತಿಮ ಸುಂದರಿಯಾಗಿದ್ದ ಆಕೆ ಕೂಡ ಒಮ್ಮೊಮ್ಮೆ ಶಸ್ತ್ರಾಸ್ತ್ರಗಳ ಡೀಲಿನಲ್ಲಿ ಕೀಲಿನೆಣ್ಣೆ (lubricant) ತರಹ ಕೆಲಸ ಮಾಡುತ್ತಿದ್ದಳು. ಒಮ್ಮೆ ಈ ಖಶೋಗಿ ಕಾಂಗೋದ ಸರ್ವಾಧಿಕಾರಿ ಮೊಬುಟು ಜೊತೆ ಏನೋ ಡೀಲ್ ಕುದುರಿಸುತ್ತಿದ್ದ. ಮೊಬುಟುಗೆ ಖಶೋಗಿ ಬೇಗಂ ಮೇಲೆ ಆಸೆ. 'ಸ್ವಲ್ಪ ಕಳಿಸಿ ನಿಮ್ಮ ಬೇಗಂ. ಭಜನೆ ಮಾಡಬೇಕು ಅನ್ನಿಸ್ತಿದೆ,' ಅಂದುಬಿಟ್ಟ ಮೊಬುಟು. ಭಜನೆ ಆಗದಿದ್ದರೆ ಬಿಲಿಯನ್ ಡಾಲರುಗಟ್ಟಲೆ ಡೀಲು ಎಕ್ಕುಟ್ಟಿ ಹೋಗುತ್ತದೆ ಅಂದವನೇ ಖಶೋಗಿ ಹೆಂಡತಿ ಕಡೆ ನೋಡಿದ. ಸನ್ನೆ ಅರಿತ ಬೇಗಂ, 'ಭಜನೆಯೇನು ಪೂರ್ತಿ ಆರಾಧನೆಗೂ ಸಿದ್ಧ,' ಅನ್ನುತ್ತ  ಫಣಂಗನೆ ಮೊಬುಟುನ ತೆಕ್ಕೆಗೆ ಹಾರಿದ ಅಬ್ಬರಕ್ಕೆ ಮೊಬುಟುನ ಪೆಟ್ ಮಂಗ್ಯಾ ಅವನ ಭುಜ ಬಿಟ್ಟು ಹಾರಿತ್ತು. ಕೋಣೆ ಕದವಿಕ್ಕಿಕೊಂಡ ಮೊಬುಟು ಅದೇನು ಭಜನೆ ಮಾಡಿದನೋ ಗೊತ್ತಿಲ್ಲ. ಒಂದು ವಾರದ ನಂತರ ಹೊರಬಂದವ ಶಸ್ತ್ರಾಸ್ತ್ರದ ಖರೀದಿಯ ದೊಡ್ಡದೊಂದು ಕಾಂಟ್ರಾಕ್ಟ್ ಗೆ ಸಹಿ ಹಾಕಿದ್ದ. ಹಲವಾರು ಮಿಲಿಯನ್ ಡಾಲರ್ ಕಮಿಷನ್ ಎಣಿಸುತ್ತ ಬೇಗಂ ಹೊರಗೆ ಬಂದಿದ್ದಳು.

ಮತ್ತೆ ೧೯೮೬ ಆಸುಪಾಸಿನಲ್ಲಿ ಆದ ಇರಾನ್ ಕಾಂಟ್ರಾ ಹಗರಣ ಸಹಿತ ಖಶೋಗಿಗೆ ದೊಡ್ಡ ಹೊಡೆತ ಕೊಟ್ಟಿತ್ತು. ಆಗಿನ ಅಧ್ಯಕ್ಷ ರೀಗನ್ ಸಾಹೇಬರ ನೌಕರಿಯನ್ನು ಕಳದೇ ಬಿಟ್ಟಿದ್ದ ಹಗರಣ ಅದು. ಖಶೋಗಿ ಮೇಲೂ ಕೇಸಾಗಿ, ದೊಡ್ಡ ದೊಡ್ಡ ವಕೀಲರಿಗೆ ಸಿಕ್ಕಾಪಟ್ಟೆ ರೊಕ್ಕಾ ಕೊಟ್ಟು ಖಶೋಗೀ ಸುಸ್ತಾಗಿ ಹೋಗಿದ್ದ. ಸಾಕಷ್ಟು ಆಸ್ತಿಗಳಿದ್ದವು ನಿಜ. ಆದರೆ cash-flow  ತುಂಬ ತೊಂದರೆಯಾಗಿತ್ತು. ಖಶೋಗಿ ಮೇಲೆ ನಂಬಿಕೆಯಿದ್ದ ಜನ, ಅಲ್ಲಿ ಇಲ್ಲಿ, ಆವಾಗ ಈವಾಗ, ಒಂದೋ ಎರಡೋ ಮಿಲಿಯನ್ ಕೈಯಲ್ಲಿಟ್ಟು, ಅದರಿಂದ  ಹೇಗೋ ತನ್ನ ಅದ್ದೂರಿ ಜೀವನ ನಡೆಸಿದ್ದ ಖಶೋಗಿ.

ಇಂತಹ ಸಂದರ್ಭದಲ್ಲೇ ದಾವೂದ್ ಭಾಯಿ ಬಂದು ಒಂದು ಮಿಲಿಯನ್ ಡಾಲರ್ ಚೆಕ್ ಕೈಯ್ಯಲ್ಲಿಟ್ಟು ಒಪ್ಪಿಸಿಕೊಳ್ಳಿ ಅಂದಿದ್ದ. ತಾನು ರೋಲ್ ಮಾಡೆಲ್ ಅಂತ ಅಂದುಕೊಂಡಿದ್ದ ಗುರುವಿನ cash-flow ಕಷ್ಟ ನೋಡಲಾಗಿರಲಿಲ್ಲ ಡಾನ್ ಗೆ.

ದುಬೈ ಬ್ಯಾಂಕಿನ ಮೇಲೆ ತೆಗೆದಿದ್ದ ಆ ಚೆಕ್ಕನ್ನು ಇಲ್ಲಿ ನ್ಯೂಯಾರ್ಕ್ ಬ್ಯಾಂಕಿಗೆ ಹಾಕಿ ಕ್ಯಾಶ್ ತೆಗೆದುಕೊಳ್ಳೋಣ ಅನ್ನುವಷ್ಟರಲ್ಲಿ ಖಶೋಗೀಯ ಮಗ ಲಂಡನ್ನಿಂದ ಬಂದ. ಅವನಿಗೂ ಸುದ್ದಿ ಗೊತ್ತಾಯಿತು. ಹೀಗೆ ಯಾರೋ ದಾವೂದ್ ಇಬ್ರಾಹಿಮ್ ಅನ್ನುವ ಇಂಡಿಯಾ ಮೂಲದ ದುಬೈ ಭೂಗತ ಡಾನ್ ಒಂದು ಮಿಲಿಯನ್ ಡಾಲರಿಗೆ ಚೆಕ್ ಕೊಟ್ಟಿದ್ದಾನೆ ಅಂತ. 'ಯಾರ್ರೀ ಈ ದಾವೂದ್? ಇಲ್ಲಿ ತನಕ ಹೆಸರೇ ಕೇಳಿಲ್ಲ. ಸ್ವಲ್ಪ ವಿಚಾರಿಸಿ ನಂತರ ಚೆಕ್ ಕ್ಯಾಶ್ ಮಾಡುವ ಬಗ್ಗೆ ವಿಚಾರ ಮಾಡಿ,' ಅಂದವನೇ ದಾವೂದನ ಪೂರ್ವಾಪರ ವಿಚಾರಣೆಗೆ ನಿಂತ ಖಶೋಗಿಯ ಮಗ.

ದಾವೂದನ ಪೂರ್ವಾಪರ, ಚೆಕ್ಕಿನ ಹಿನ್ನಲೆ ಇತ್ಯಾದಿಗಳ ಬಗ್ಗೆ ಮಾಹಿತಿ ತೆಗೆಯಲು ವೇಳೆ ಬೇಕು ನೋಡಿ. ನನಗೆ ಹೇಳಿದರು, 'ದಾವೂದನನ್ನು ಕರೆದುಕೊಂಡು ಹೋಗಿ ನ್ಯೂಯಾರ್ಕ್ ಸುತ್ತಾಡಿಸಿಕೊಂಡು ಬಾ,' ಅಂತ. ಸರಿ ಅಂತ ಕರೆದುಕೊಂಡು ಹೋದೆ. ದಾವೂದನಿಗೆ ಇಂಗ್ಲೀಷ್ ಬರುತ್ತಿದ್ದಿಲ್ಲ. ಹೇಗೋ ಮಾಡಿ, ಏನೋ ಒಂದು ತರದಲ್ಲಿ ಸಂಭಾಷಣೆ ಮಾಡಿದೆವು. ಆತ್ಮೀಯರಾಗಿಬಿಟ್ಟೆವು. ರಾತ್ರಿ ದೊಡ್ಡದೊಂದು ರೆಸ್ಟೋರೆಂಟಿನಲ್ಲಿ ಊಟ ಮಾಡಿದೆವು. ಪಕ್ಕಾ ಅರಬರ ಶೈಲಿಯಲ್ಲಿ ನಾನೇ ದಾವೂದನಿಗೆ ಅರಬರಂತೆ ಕೈತುತ್ತು ತಿನ್ನಿಸಿದೆ. ದಾವೂದ್ ಭಾವುಕನಾಗಿ ಭಾಯಿ! ಅಂದ. ನಂತರ ಡಾನ್ಸ್ ಕ್ಲಬ್ ಒಂದಕ್ಕೆ ಹೋದೆವು. ನಾನು ಮತ್ತೆ ನನ್ನ ಹೆಂಡತಿ ಕಿಮ್ ಡಾನ್ಸ್ ಮಾಡುವದನ್ನು ದಾವೂದ್ ಸುಮ್ಮನೆ ನೋಡುತ್ತಾ ಕೂತ. ಮೊದಲ ಬಾರಿಗೆ ನ್ಯೂಯಾರ್ಕಿಗೆ ಬಂದಿದ್ದ ಅವನಿಗೆ ಎಲ್ಲದೂ ಹೊಸತು. ಕಣ್ಣು ಬಿಟ್ಟು ನೋಡುತ್ತಲೇ ಇದ್ದ. 'ನೀನೂ ಡಾನ್ಸ್ ಮಾಡು ಬಾ,' ಅಂದೆ. ಇಂಡಿಯನ್ ಶೈಲಿಯಲ್ಲಿ,' ಇಲ್ಲೇ ಹಾಯಾಗಿದಿನಿ. ನಕ್ಕೋ ಭಾಯಿ ನಕ್ಕೋ' ಅಂದುಬಿಟ್ಟ. 'ಓಕೆ,' ಅಂತ ಬಿಟ್ಟು ನಾನು ಕಿಮ್ ಡಾನ್ಸ್ ಮುಂದುವರಿಸಿದೆವು.

ಎಲ್ಲ ಮುಗಿಸಿ, ದಾವೂದನನ್ನು ಅವನ ಹೋಟೆಲ್ಲಿಗೆ ಬಿಟ್ಟು ಬಂದೆವು. ಅಷ್ಟರಲ್ಲಿ ಇಲ್ಲಿ ದಾವೂದ್ ಕೊಟ್ಟಿದ್ದ ಚೆಕ್ಕಿನ ಬಗ್ಗೆ ಚರ್ಚೆಯೋ ಚರ್ಚೆ. ಅಷ್ಟೊತ್ತಿಗಾಗಲೇ ದಾವೂದ್ ಬಗ್ಗೆ, ಅವನ ವ್ಯವಹಾರಗಳ ಬಗ್ಗೆ ಎಲ್ಲ ಮಾಹಿತಿ ಬಂದಿತ್ತು.

ದುಬೈ ಬ್ಯಾಂಕಿಗೆ ಫೋನ್ ಮಾಡಿ, 'ಹೀಗೆ ದಾವೂದ್ ಇಬ್ರಾಹಿಮ್ ಅಂತ ಒಬ್ಬರು ಒಂದು ಮಿಲಿಯನ್ ಡಾಲರಿಗೆ ಚೆಕ್ ನಿಮ್ಮ ಬ್ಯಾಂಕ್ ಮೇಲೆ ತೆಗೆದು ಕೊಟ್ಟಿದ್ದಾರೆ. ಹೇಗೆ ಅವರು? ರೊಕ್ಕಾ ಗಿಕ್ಕಾ ಇರೋ ಪೈಕೀನಾ ಅಥವಾ ಚೆಕ್ ಹಾಕಿದರೆ ಬೌನ್ಸ್ ಆದೀತೋ?' ಅಂತ ಕೇಳಿದರೆ ಆ ಬ್ಯಾಂಕ್ ಮ್ಯಾನೇಜರ್ ಏನು ಅನ್ನಬೇಕು ಊಹಿಸಿ. 'ದಾವೂದ್ ಸಾಬ್ ಅಂದರೆ ನಮಗೆ ದೇವರು ಇದ್ದಂತೆ. ಅವರ ಬಿಸಿನೆಸ್ಸ್ ಇದೆ ಅಂತ ನಮ್ಮ ಬ್ಯಾಂಕ್ ಇದೆ. ಅವರು ಅಕೌಂಟ್ ಕ್ಲೋಸ್ ಮಾಡಿಕೊಂಡು ಹೋದರೆ ಅಷ್ಟೇ ಮತ್ತೆ. ನಾವೂ ಸಹ  ಬ್ಯಾಂಕ್ ಕ್ಲೋಸ್ ಮಾಡಿಕೊಂಡು ಹೋಗೋದೇ. ಅಷ್ಟು ದೊಡ್ಡ ಕಸ್ಟಮರ್ ಕಣ್ರೀ ಅವರು. ಅವರ ಚೆಕ್ ಬಗ್ಗೆ ಕೇಳ್ತೀರಾ ಅಂದರೆ..... ಥೂ ನಿಮ್ಮ! ಇಡ್ರೀ ಫೋನ್!' ಅಂತ ಬೈದು ಬಿಟ್ಟಿದ್ದ. ಅಷ್ಟು ದೊಡ್ಡ ರೊಕ್ಕದ ಕುಳ. ದುಬೈ ಬ್ಯಾಂಕಿನ ಅಪ್ಪ ಅಮ್ಮ ಎಲ್ಲ ಈ ದಾವೂದ್ ಅಂತ ಗೊತ್ತಾಯಿತು.

ಇದೆಲ್ಲ ಖಾತ್ರಿ ಆದರೂ ಯಾಕೋ ಏನೋ ಅದ್ನಾನ್ ಖಶೋಗಿ ಅವನ ಚೆಕ್ ತೆಗೆದುಕೊಳ್ಳಬಾರದು ಅಂತ ನಿರ್ಧರಿಸಿದರು. ಯಾಕೋ ಏನೋ? ಯಾರೋ ಏನೋ ಹೇಳಿರಬೇಕು. ಏನೋ ಎಚ್ಚರಿಸಿರಬೇಕು. ಅವನ ಚೆಕ್ ತೆಗೆದುಕೊಂಡು, ಕ್ಯಾಶ್ ಮಾಡಿಕೊಂಡರೆ ಮತ್ತೂ ತೊಂದರೆಯಾದೀತು ಅಂತ ಎಚ್ಚರಿಕೆ ನೀಡಿರಬೇಕು. ಆಗಲೇ ಅಮೇರಿಕಾದ ಕಾನೂನುಗಳೊಂದಿಗೆ ತುಂಬ ತೊಂದರೆಯಲ್ಲಿ ಸಿಕ್ಕಾಕಿಕೊಂಡಿದ್ದ ಖಶೋಗಿ ಮತ್ತೂ ಹೆಚ್ಚಿನ ತೊಂದರೆಯಾದೀತು ಅಂತ ದಾವೂದನ ಚೆಕ್ ತೆಗೆದುಕೊಳ್ಳದೇ ಬಿಟ್ಟರೋ  ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಹೇಗೋ ಒಂದು ರೀತಿಯಲ್ಲಿ, ಏನೋ ಒಂದು ಸಬೂಬು ನೀಡಿ, ಯಾರಿಗೂ ನೋವಾಗದಂತೆ ದಾವೂದನ ಮಿಲಿಯನ್ ಡಾಲರ್ ಚೆಕ್ಕನ್ನು ಅವನಿಗೇ ಹಿಂತಿರುಗಿಸಲಾಯಿತು.

ನಂತರ ದಾವೂದ್ ವಾಪಸ್ ದುಬಾಯಿಗೆ ಹೊರಟ. ನಾನೇ ಹೋಗಿ ಬೀಳ್ಕೊಟ್ಟು ಬಂದೆ. ಆವಾಗ ನನ್ನ ಜೊತೆ ನನ್ನ ಬೇಹುಗಾರಿಕೆ ಗುರು ಮೈಲ್ಸ್ ಕೋಪ್ಲ್ಯಾಂಡ್ ಸಹಿತ ಇದ್ದರು. ಅವರು ಹಳೆಯ ಸಿಐಎ ಬೇಹುಗಾರ. ಅಮೇರಿಕಾದ ಗೂಢಚರ್ಯೆಯ ಪಿತಾಮಹ. ಅವರು ಹೇಳಿದ್ದ ಒಂದು ಖಡಕ್ ಮಾತು ಇನ್ನೂ ಕಿವಿಯಲ್ಲಿ ಮೊಳಗುತ್ತಿದೆ.  'ಲ್ಯಾರಿ, ದಾವೂದನ ಜೊತೆ ಒಳ್ಳೆ ಪರಿಚಯ, ಸಂಪರ್ಕ ಎಲ್ಲ ಮಾಡಿಟ್ಟುಕೋ. ಮುಂದೆ ಬಹಳ ಉಪಯೋಗಕ್ಕೆ ಬರುತ್ತಾನೆ ಈ ಆಸಾಮಿ,' ಅಂದಿದ್ದರು ನನ್ನ ಗುರುವರ್ಯ. 'ಹಾಂ!? ನನಗೇ ಗೊತ್ತಿಲ್ಲದ್ದು ನಿಮಗೆ ಗೊತ್ತಿದೆಯೇ!?' ಅನ್ನುವ ನನ್ನ ಮುಖದ ಮೇಲಿನ ಲುಕ್ ನೋಡಿದ ಮೈಲ್ಸ್ ಕೋಪ್ಲ್ಯಾಂಡ್ ತಲೆಯಾಡಿಸಿದ್ದು ನೋಡಿದರೆ, 'ಮಧ್ಯಪ್ರಾಚ್ಯದಲ್ಲೇ ನನ್ನ ಜೀವನ ಸವೆಸಿ, ಅಲ್ಲಿಯ ಎಲ್ಲ ಕಳ್ಳರು, ಸುಳ್ಳರ ನಾಡಿ ಬಡಿತ ನನಗೆ ಗೊತ್ತಪ್ಪ,' ಅನ್ನುವ ಹಾಗಿತ್ತು. ಸರಿ ಅಂದೆ. 'ಆಗಲೇ ದಾವೂದ್ ಜೊತೆ ಬೇಕಾದಷ್ಟು ಗುರ್ತು, ಪರಿಚಯ ಎಲ್ಲ ಆಗಿದೆ ಸರ್,' ಅಂತ ಹೇಳಿದೆ.

'ಭಾಯಿ, ಲ್ಯಾರಿ ಭಾಯಿ, ನೀವು ದುಬೈಗೆ ಮುದ್ದಾಂ ಬರಲೇ ಬೇಕು. ಬಂದು ನಮ್ಮ ಆತಿಥ್ಯ ಸ್ವೀಕರಿಸಲೇ ಬೇಕು,' ಅಂತ ಅರ್ಧ ಉರ್ದುವಿನಲ್ಲಿ, ಮತ್ತರ್ಧ ಸನ್ನೆ ಭಾಷೆಯಲ್ಲಿ ಹೇಳುತ್ತ, ಸಿಕ್ಕಾಪಟ್ಟೆ ಕೈ ಕುಲುಕುತ್ತ, ಬೆನ್ನು ಚಪ್ಪರಿಸುತ್ತ ದಾವೂದ್ ಆಖ್ರೀ ಬಾರಿಗೊಮ್ಮೆ ಕೈಬೀಸಿ ದುಬೈ ವಿಮಾನ ಹತ್ತಿದ. ನಾನೂ ಕೈಬೀಸಿ ವಾಪಸ್ ಬಂದೆ.

ಮುಂದೆ ದಾವೂದ್ ಏನೇನೋ ಆದ ಅಂತ ಕೇಳಿದೆ. ತುಂಬ ಮಹತ್ವಾಕಾಂಕ್ಷಿಯಾಗಿದ್ದ ಅವನು ಮುಂದೆ ಸಂಪತ್ತಿನಲ್ಲಿ ಬಿಲಿಯನಿಯರ್ ಆಗಿದ್ದೊಂದೇ ಅಲ್ಲದೇ ವಿಶ್ವದಲ್ಲೇ ದೊಡ್ಡ ಭೂಗತ ಡಾನ್ ಅನ್ನಿಸಿಕೊಂಡ ಮತ್ತು ಎಲ್ಲ ವ್ಯವಹಾರದಲ್ಲೂ ತೊಡಗಿಸಿಕೊಂಡ ಅಂತ ಕೇಳಿದೆ. ಈ ಕಡೆ ಒಂದು ರೀತಿಯಲ್ಲಿ ಅದ್ನಾನ್ ಖಶೋಗಿ ರಿಟೈರ್ ಆದರು. ದಾವೂದ್ ಮಾತ್ರ ಎಲ್ಲ ಕ್ಷೇತ್ರದಲ್ಲೂ ಅಧಿಪತ್ಯ ಸಾಗಿಸುತ್ತ ಹೋಗಿದ್ದಾನೆ.

ಹಾಗೆ ನ್ಯೂಯಾರ್ಕಿನಲ್ಲಿ ಭೆಟ್ಟಿಯಾಗಿದ್ದೆ ಕೊನೇ. ನಂತರ ಮತ್ತೆ ದಾವೂದ್ ಜೊತೆ ಭೇಟಿಯಾಗುವ ಸಂದರ್ಭ ಬರಲಿಲ್ಲ.

ಇದೆಲ್ಲ ಚರಿತೆ ಬರೆದುಕೊಂಡವರು ಲ್ಯಾರಿ ಕೋಲ್ಬ್. ಅಮೇರಿಕಾದ ಖಾಸಗೀ ಬೇಹುಗಾರ. ಸಿಐಎ ಸಂಸ್ಥೆಗೂ ಕೆಲಸ ಮಾಡಿದ್ದಾರೆಯಂತೆ. ಕಾಂಟ್ರಾಕ್ಟ್ ತೆಗೆದುಕೊಂಡು ಖತರ್ನಾಕ್ covert operations  ಮಾಡುವ ಸ್ಪೆಷಲಿಸ್ಟ್. ಅವರ ಆತ್ಮಕಥೆಯಂತಿರುವ ಪುಸ್ತಕ - Overworld.  ಅದ್ಭುತ ವಿವರಗಳಿರುವ ಪುಸ್ತಕ. ಅನೇಕಾನೇಕ ಭಾರತದ ರಾಜಕಾರಣಿಗಳು, ಅಧಿಕಾರಿಗಳು, ಎಲ್ಲರ ಜುಟ್ಟು ಹಿಡಿದಿರುವ ಸ್ವಾಮೀಜಿಗಳು, ಅಂಡರ್ವರ್ಲ್ಡ್ ಡಾನ್ಸ್, ಉಗ್ರವಾದಿಗಳು ಎಲ್ಲ ಬಂದು ಹೋಗುತ್ತಾರೆ ಲ್ಯಾರಿ ಕೊಲ್ಬ್ ಹೇಳುವ ಕಥೆಗಳಲ್ಲಿ.

* ಅದ್ನಾನ್ ಖಶೋಗೀ ಬಗ್ಗೆ ಕೆಲವೊಂದು ವಿವರಗಳನ್ನು ಬೇರೆ ಬೇರೆ ಪುಸ್ತಕ, ವೆಬ್ ಸೈಟ್ ಗಳಿಂದ ಆರಿಸಿದ್ದು.

3 comments:

Subrahmanya said...

WOW !, ಸಿಕ್ಕಾಪಟ್ಟೆ ಪುಸ್ತಕ ಇದ್ದಂಗಿದೆ ಇದು. ಓದಬೇಕು.
ದಾವೂದ್ ಭಾಯ್ ಜತೆ ಇದ್ದೋರು ನೀವೇಯೇನೋ ಅಮ್ತ ಅನ್ಕಂಬಿಟ್ಟಿದ್ದೇ ಒಂದ್ ಕ್ಷಣ :D.

Mahesh Hegade said...

Thank you :)

Vimarshak Jaaldimmi said...


Interesting!

Did those jummies also go for helicopter rides?