ಕಥೆ - ೧
ಆಕೆ ಕನ್ನಡಿ ನೋಡುವದನ್ನು ಬಿಟ್ಟು ಸುಮಾರು ವರ್ಷಗಳೇ ಆಗಿಹೋಗಿವೆ. ಅದಕ್ಕೆ ಕಾರಣ ಕೇಳಿದರೆ ಆಕೆ ಕಾರಣ ಹೇಳುತ್ತಾಳೆ. ಒಂದು ವಿಚಿತ್ರ ಕಾರಣ. ಆಕೆಗೆ ಕನ್ನಡಿಯಲ್ಲಿ ಆಕೆಯ ಜೊತೆಗೆ ಇನ್ನೊಬ್ಬಾಕೆ ಸಹಿತ ಕಾಣುತ್ತಾಳೆ! ಕೇವಲ ಕಾಣುವದೊಂದೇ ಅಲ್ಲ, ಇವಳ ಕುತ್ತಿಗೆ ಸಹಿತ ಹಿಚುಕಿಬಿಡುತ್ತಾಳೆ! ಹಾಗಾಗಿ ಈಕೆಗೆ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುವದು ಅಂದರೆ ಪರಮ ಭೀತಿ. ಇವಳ ಹೆಣ್ಣುಮಕ್ಕಳು ತಲೆ ಬಾಚಿ, ಜಡೆ ಹಾಕಿ ಸಿಂಗಾರ ಮಾಡುತ್ತಾರೆ. ಮಾಡಿದ ಬಳಿಕ, ಮುಖ ನೋಡಲು ಕನ್ನಡಿ ಕೊಟ್ಟರೆ ಈಕೆ ಕಿಟಾರನೆ ಚೀರುತ್ತಾಳೆ, 'ಬ್ಯಾಡಾ! ಬ್ಯಾಡಾ! ಮುಲ್ಲಾ ಬಾಯಿ ಕಾಣಿಸ್ತಾಳ. ನನ್ನ ಕುತ್ತಿಗಿ ಹಿಚಕ್ತಾಳ!' ಇವಳು ಬ್ಯಾಡ ಬ್ಯಾಡ ಅನ್ನುತ್ತ ಕೈಗಳನ್ನು ಎತ್ತರ ಪತ್ತರ ಆಡಿಸುವ ಅಬ್ಬರಕ್ಕೆ ಎಷ್ಟೋ ಕನ್ನಡಿಗಳು ಬಿದ್ದು ಒಡೆದು ಹೋಗಿವೆ. ಕನ್ನಡಿ ಚೂರುಗಳಲ್ಲೂ ಈಕೆಗೆ ಎಂದೋ ಸತ್ತು ಹೋದ ಮುಲ್ಲಾ ಬಾಯಿಯೇ ಕಾಣುತ್ತಾಳೆ. ಮತ್ತೆ ಕುತ್ತಿಗೆ ಒತ್ತಿ ಕೊಲ್ಲಲು ಬರುತ್ತಾಳೆ. ಈಕೆ ಚೀರುತ್ತಾ ಓಡುತ್ತಾಳೆ. ಎಷ್ಟೋ ಬಾರಿ ಕನ್ನಡಿ ಕಾಜಿನ ಚೂರುಗಳ ಮೇಲೆ ಕಾಲೂರಿ, ಗಾಜು ಕಾಲು ಕತ್ತರಿಸಿ, ರಕ್ತ ಹರಿದರೂ ಈಕೆಗೆ ಪರಿವೆಯಿರುವದಿಲ್ಲ. ಯಾಕೆಂದರೆ ಮುಲ್ಲಾ ಬಾಯಿಯ ಹೆದರಿಕೆ ಅಷ್ಟಿದೆ.
ಕನ್ನಡಿಯಲ್ಲಿ ಮಾತ್ರ ಮುಲ್ಲಾ ಬಾಯಿಯ ದೆವ್ವ ಈಕೆಗೆ ಕಾಣುತ್ತದೆ. ಹಾಗಂತ ಬೇರೆ ಕಡೆ, ಅಂದರೆ ಕಿಡಕಿ ಗಾಜಿನಲ್ಲಿ ಇತ್ಯಾದಿ, ಪ್ರತಿಬಿಂಬ ಮೂಡಿದಲ್ಲೆಲ್ಲ ಕಾಣುವದಿಲ್ಲ. ಅದೇ ದೊಡ್ಡ ಪುಣ್ಯ. ಇಲ್ಲವಾದರೆ ಅಷ್ಟೇ ಮತ್ತೆ.
ಈ ನಿಗೂಢ ಮುಲ್ಲಾ ಬಾಯಿ ಯಾರು ಅಂತ ನೋಡುತ್ತ ಹೋದರೆ ಅವಳು ಈಕೆಯ ಪಕ್ಕದ ಮನೆಯಾಕೆ. ಆಕೆಯ ಗಂಡನೋ! ಪರಮ ಲಂಪಟ. ದೊಡ್ಡ ಹುದ್ದೆಯಲ್ಲಿದ್ದಾನೆ. ಅದೂ ಸರಿಯಾಗಿ ಗಿಂಬಳ ಮೇಯಲಾಗುವಂತಹ ಫಲವತ್ತಾದ ಹುದ್ದೆ. ಮೇಲಿಂದ ಪಠಾಣ. ಲಂಬಾ ಚೌಡಾ ಪಠಾಣ. ಈಕೆಯ ಮನೆ ಪಕ್ಕ ಬಂದು ವಕ್ಕರಿಸಿದ್ದೇ ವಕ್ಕರಿಸಿದ್ದು ಎರಡು ದಾಂಪತ್ಯ ಎಕ್ಕುಟ್ಟಿ ಹೋದವು. ಈಕೆ ಪಠಾಣನಲ್ಲಿ ಅನುರಕ್ತಳಾಗಿಬಿಟ್ಟಳು. ಅವನೋ ದೊಡ್ಡ ಲಂಪಟ. ಸಿಕ್ಕದ್ದೇ ಸಿಕ್ಕಿದ್ದು ಅಂತ ಜಮ್ಮ ಚಕ್ಕಾ ಮಾಡೇಬಿಟ್ಟ. ಇವರ ನಡುವಿನ ಲಫಡಾ ಮುಲ್ಲಾ ಬಾಯಿಗೂ ಗೊತ್ತಾಯಿತು. ಆಕೆಯೇನೂ ಸುಬಗಳಲ್ಲ ಬಿಡಿ. ಆಕೆಗೂ ಊರ ತುಂಬಾ ಗೆಣೆಕಾರರು ಇದ್ದೇ ಇದ್ದರು. ಆದರೂ ಗಂಡ ಪಕ್ಕದ ಮನೆ ಸುಪನಾತಗಿತ್ತಿ ಜೊತೆ ಸರಸ ಶುರುವಿಟ್ಟುಕೊಂಡಿದ್ದಾನೆ ಅಂತ ಗಂಡ ಪಠಾಣನ ಜೊತೆ ಜಗಳ ಶುರು ಹಚ್ಚಿಕೊಂಡಳು. ದಿನವೂ ಶರಂಪರ ಜಗಳ.
ಒಂದು ದಿನ ಅದೇ ರೀತಿ ಜಗಳವಾಗುತ್ತಿತ್ತು ಪಠಾಣ ಮತ್ತು ಮುಲ್ಲಾ ಬಾಯಿಯ ನಡುವೆ. ಸಿಟ್ಟಿನಲ್ಲಿ ಒಂದೇಟು ಹಾಕಿದ. ಕಾನ್ಪಟ್ಟಿ ಕೆಳಗೆ ಸೆನ್ಸಿಟಿವ್ ಜಾಗದಲ್ಲಿ ಎಲ್ಲೋ ಬರೋಬ್ಬರಿ ಏಟು ಬಿದ್ದಿರಬೇಕು. 'ಯಾ ಖುದಾ!' ಅಂತ ಆಖ್ರೀ ಚೀಕ್ ಚೀರಿದ ಮುಲ್ಲಾ ಬಾಯಿ ಅಲ್ಲಾಕೋ ಪ್ಯಾರೆ ಆಗಿಬಿಟ್ಟಳು. ಅಂದರೆ ಮಟಾಶ್! ಸತ್ತೇಹೋದಳು.
ಗಂಡ ಪಠಾಣ ಹೇಳಿ ಕೇಳಿ ದೊಡ್ಡ ಸಾಹೇಬ. ಎಷ್ಟೆಷ್ಟೋ ರೊಕ್ಕ ಖರ್ಚು ಮಾಡಿ ಕೊಲೆ ಕೇಸನ್ನು ಸಹಜ ಸಾವು ಅಂತ ತಿಪ್ಪೆ ಸಾರಿಸಿಬಿಟ್ಟ. ರಂಗೋಲಿ ಸಹ ಹಾಕಿಬಿಟ್ಟ. ನಿರುಮ್ಮಳನಾಗಿ ನಿಟ್ಟುಸಿರು ಬಿಟ್ಟ.
ಮುಲ್ಲಾ ಬಾಯಿ ಹೋಗಿದ್ದೇ ಹೋಗಿದ್ದು ಈಕೆಗೆ ಕನ್ನಡಿಯಲ್ಲಿ ಆಕೆ ಕಂಡುಬರುತ್ತಾಳೆ. ಎಲ್ಲರ ಪಾಲಿಗೆ ಮುಲ್ಲಾ ಬಾಯಿ ಖಲಾಸ್. ಆದರೆ ಈಕೆಯ ಕನ್ನಡಿಯಲ್ಲಿ ಮಾತ್ರ ಸದಾ ಜೀವಂತ. ಇದೆಲ್ಲ ಆಗಿ ಈಗ ಇಪ್ಪತ್ತು ವರ್ಷಗಳ ಮೇಲಾಗಿ ಹೋಯಿತು. ಆವತ್ತಿಂದ ಕನ್ನಡಿ ನೋಡದ ಈಕೆಗೂ ಈಗ ಸುಮಾರು ಅರವತ್ತರ ಮೇಲೆ. ಪಠಾಣ ಸಾಹೇಬ ಮಾತ್ರ ಮುಲ್ಲಾ ಬಾಯಿ ತೀರಿ ಹೋದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆ ಮಾಡಿಕೊಂಡು, ಒಂದೆರೆಡು ಮಗೂ ಸಹಿತ ಮಾಡಿಕೊಂಡು ಆರಾಮ್ ಇದ್ದಾನೆ. ಅವನಿಗೆ ಈಗ ಎಪ್ಪತ್ತರ ಮೇಲೆ. ಸಣ್ಣ ವಯಸ್ಸಿನ ಎರಡನೇ ಬೇಗಂ ಎಲ್ಲಿ ಬೇಲಿ ಹಾರುತ್ತಾಳೋ ಅಂತ ಚಿಂತೆ ಅವನಿಗೆ. ಆದರೆ ಆಕೆ ಒಳ್ಳೆಯವಳು. ಮಕ್ಕಳನ್ನು ಸಂಬಾಳಿಸಿಕೊಂಡು, ಅವುಗಳ ದೇಖರೇಖಿ ಮಾಡುತ್ತ ಬ್ಯುಸಿ ಇದ್ದಾಳೆ.
ಈಕಡೆ ಪಠಾಣನ ಹಳೆ ರಖಾವು ಕನ್ನಡಿಯೆಂದರೆ ದೂರ ಜಿಗಿಯುತ್ತಾಳೆ. ಪಠಾಣ ಸದಾ ಕರಿ ಕನ್ನಡಕ ಗಾಗಲ್ಸ್ ಹಾಕಿರುತ್ತಾನೆ. ಅದರಲ್ಲೂ ತನ್ನ ಪ್ರತಿಬಿಂಬವನ್ನೇ ಕಾಣುತ್ತಾಳೆ. ಕನ್ನಡಿಯಲ್ಲದ ಕಾರಣ ಅಲ್ಲಿ ಮುಲ್ಲಾ ಬಾಯಿ ಕಂಡುಬರುವದಿಲ್ಲ. ನಿರಾಳವಾಗಿ, 'ಸಲಾಂ!' ಅನ್ನುತ್ತಾಳೆ. ಹಳೆಯ ಗರ್ಮಿ, ಮಷ್ಕಿರಿ ನೆನಿಸಿಕೊಂಡ ಪಠಾಣ, 'ವಾಲೈಕುಂ ಸಲಾಂ!' ಅಂದು ತುಂಟ ನಗೆ ಬೀರುತ್ತಾನೆ. ಗೋರಿಯಲ್ಲಿ ಮಲಗಿರುವ ಮುಲ್ಲಾ ಬಾಯಿಯ ಆತ್ಮ ಆಚೀಚೆ ಹೊರಳುತ್ತದೆ. ಎದ್ದು ಕನ್ನಡಿಯಲ್ಲಿ ಬಂದು ಕೂಡುತ್ತದೆ. ಈಕೆ ಕನ್ನಡಿ ನೋಡುವದನ್ನು ಬಿಟ್ಟಿದ್ದಾಳೆ ಅಂತ ಮುಲ್ಲಾ ಬಾಯಿಯ ಆತ್ಮಕ್ಕೆ ಗೊತ್ತಿಲ್ಲವೇ?!
ಕಥೆ - ೨
ಆತ ಮಧ್ಯಮವರ್ಗದ ಆದಮೀ. ಜೀವನ ಪೂರ್ತಿ ಮೊದಲು ಸೈಕಲ್, ನಂತರ ಮೊಪೆಡ್, ನಂತರ ಸ್ಕೂಟರ್ ಹೊಡೆದ. ರಿಟೈರ್ ಆಗುವ ಹೊತ್ತಿಗೆ ಸ್ಕೂಟರ್ ಮಾರಿದ. ಅಷ್ಟೆಲ್ಲ ವಯಸ್ಸಾದ ಮೇಲೆ ಸ್ಕೂಟರ್ ಬೇಡ ಅಂತ ಹೇಳಿದ್ದರು ಮಕ್ಕಳು. ಮಕ್ಕಳು ಸುಮ್ಮನೇ ಹೇಳಲಿಲ್ಲ. ಒಳ್ಳೆ ಕೆಲಸದಲ್ಲಿದ್ದರು. ವಿದೇಶದಲ್ಲಿದ್ದರು. ಅಪ್ಪನಿಗೆ ಒಂದು ಕಾರ್ ಕೊಡಿಸಲು ಮುಂದಾದರು. ಅಪ್ಪನಿಗೆ ಮೊದಲು ಕಾರ್ ಚಾಲನೆ ಮಾಡುವದನ್ನು ಕಲಿಯಲು ಹೇಳಿದರು. ಕಾರ್ ಚಾಲನೆ ಮಾಡುವ ಕೋರ್ಸಿಗೆ ಸೇರಿಕೊಂಡ. ಒಂದು ತಿಂಗಳಲ್ಲಿ ಕಾರ್ ಬಿಡುವದನ್ನು ಕಲಿತ. ಅಷ್ಟರಲ್ಲಿ ಮಗ ರೊಕ್ಕ ಕಳಿಸಿದ್ದ. ಕಾರ್ ಕೊಳ್ಳಲು ಹೋದ.
ಫುಲ್ ಕ್ಯಾಶ್ ಕೊಟ್ಟು ಕಾರ್ ಖರೀದಿ ಮಾಡಿದ. ತಾಪಡ್ತೋಪ್ ಡೆಲಿವರಿ ಸಿಕ್ಕೇಬಿಟ್ಟಿತು. ಕೀಲಿ ತೆಗೆದುಕೊಂಡು ಬಂದು ಕಾರಲ್ಲಿ ಕೂತ. ಗಾಡಿ ಸ್ಟಾರ್ಟ್ ಮಾಡಿದ. ಸುತ್ತ ಮುತ್ತ ನೋಡಿದ. ಕಾರ್ ಮಾರಿದ್ದ ಡೀಲರಶಿಪ್ ಮನುಷ್ಯ ಹೆಬ್ಬೆರಳನ್ನು ನಿಗರಿಸಿ, 'ಓಕೆ' ಅಂದ. ಸೈಡ್ ಮಿರರ್ ಎರಡನ್ನೂ ಸರಿಯಾಗಿ ಅಡ್ಜಸ್ಟ್ ಮಾಡಿಕೊಂಡ. ಮುಖದ ಮುಂದೆ, ತಲೆ ಮೇಲಿರುವ rear view ಮಿರರ್ ಸಹ ಸರಿಮಾಡಿಕೊಳ್ಳೋಣ ಅಂತ ಅಡ್ಜಸ್ಟ್ ಮಾಡಿಕೊಳ್ಳತೊಡಗಿದ. ಅದರಲ್ಲಿ ಏನು ಕಂಡಿತೋ ಏನೋ! ಭೂತ ದರ್ಶನವಾದವನಂತೆ ಬೆದರಿದ. ಬೆಚ್ಚಿದ. ಚಿಟ್ಟನೆ ಚೀರಿದ. ಅದ್ಯಾವದೋ ಮಾಯೆಯಲ್ಲಿ ಕಾರಿನ ಆಕ್ಸಿಲರೇಟರ್ ಒತ್ತೇಬಿಟ್ಟ. ಹೊಚ್ಚ ಹೊಸ ಕಾರು. ಬಾಣದಂತೆ ಮುಂದೆ ಚಿಮ್ಮಿತು. ಹೆದ್ದಾರಿಯಲ್ಲಿ ಹಾಗೆ ಚಿಮ್ಮಿದ್ದರೆ ಓಕೆ. ಇದು ಆದದ್ದು ಕಾರ್ ಡೀಲರಶಿಪ್ ಆವರಣದಲ್ಲಿ. ಚಿಮ್ಮಿದ ಇವನ ಕಾರು ಮುಂದೆ ಸಾಲಾಗಿ ನಿಲ್ಲಿಸಿದ್ದ ಹೊಚ್ಚ ಹೊಸ ಕಾರುಗಳಿಗೆ ಹೋಗಿ ಅಪ್ಪಳಿಸಿತು. ಚೈನ್ ರಿಯಾಕ್ಷನ್ ಮಾದರಿಯಲ್ಲಿ ಅವು ಒಂದಕ್ಕೊಂದು ಜಜ್ಜಿಕೊಂಡು ಸುಮಾರು ಆರೇಳು ಕಾರುಗಳು ಮಟಾಶ್! ಅದ್ಯಾವ ಸ್ಪೀಡಿನಲ್ಲಿ ಡಿಕ್ಕಿ ಹೊಡೆದಿದ್ದ ಅಂದರೆ ಇವನ ಮುಖ ಹೋಗಿ ಸ್ಟಿಯರಿಂಗ್ ವ್ಹೀಲ್ ಮೇಲೆ ಕೂತಿತ್ತು. ಈ ಆದಮೀ ಫುಲ್ ಬೇಹೋಶ್! ಪ್ರಜ್ಞೆ ಕಳೆದುಕೊಂಡಿದ್ದ.
ಇವನಿಗೆ ಒಂದು ಕಾರ್ ಮಾರಿ ಆರೇಳು ಕಾರುಗಳಿಗೆ ಸುಕಾಸುಮ್ಮನೆ ನುಕ್ಸಾನ್ ಮಾಡಿಸಿಕೊಂಡ ಡೀಲರ್ ಮಂದಿ ತಲೆ ತಲೆ ಚಚ್ಚಿಕೊಳ್ಳುತ್ತ ಇವನ ಗಾಡಿ ಹತ್ತಿರ ಬಂದರು. ಒಳಗೆ ಇವನು ಪ್ರಜ್ಞೆ ತಪ್ಪಿ ಬಿದ್ದಿದ್ದ. ಹಾರ್ನ್ ಒಂದೇ ಸಮನೆ ಕರ್ಕಶವಾಗಿ ಊಳಿಡುತ್ತಿತ್ತು. ಕಿಡಕಿ ಒಡೆದು ಬಾಗಿಲು ತೆಗೆದರು. ಮುಖದ ಮೇಲೆ ನೀರು ಗೊಜ್ಜಿ ಎಬ್ಬಿಸಿದರು. ಎದ್ದ. ಎದ್ದವನೇ, 'ಅಯ್ಯೋ! ನನ್ನ ಬಚಾವ್ ಮಾಡ್ರೀ! ಅಕಿ ನನಗ ವಿಷಾ ಕೊಟ್ಟು ಕೊಲ್ಲಾಕ ಬಂದಾಳ್ರೀ! ಕಾರಿನ ಕನ್ನಡಿಯಾಗ ಕಾಣ್ತಾಳ್ರೀ!' ಅಂತ ಚೀರಿದವನೇ, ಕಾರಿಂದ ಹೊರಗೆ ಬಂದವನೇ ದಡ ದಡ ನಡೆದು ಹೊರಟುಬಿಟ್ಟ. ರಸ್ತೆ ಕ್ರಾಸ್ ಮಾಡಿದ. ಸಿಟಿ ಬಸ್ ಸ್ಟಾಪಿನಲ್ಲಿ ನಿಂತ. ಬಸ್ ಬಂತು. ಹತ್ತಿದವನೇ ಗಾಯಬ್ ಆಗಿಬಿಟ್ಟ. ಕಾರ್ ಡೀಲರಶಿಪ್ಪಿನ ಮಂದಿ ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತ ನಿಂತಿದ್ದರು.
ಫುಲ್ ಕ್ಯಾಶ್ ಕೊಟ್ಟು ಕಾರ್ ತೆಗೆದುಕೊಂಡ ದೊಡ್ಡ ಶ್ರೀಮಂತ ಗಿರಾಕಿ ಅಂದುಕೊಂಡರೆ ಚಿತ್ರ ವಿಚಿತ್ರ ಘಟನೆಗಳು ನಡೆದುಹೋಗಿದ್ದವು. ಬಂದಾಗ ಎಲ್ಲ ಸರಿಯಿದ್ದ ಗಿರಾಕಿ, ಕಾರಿನ ರಿಯರ್ ವ್ಯೂ ಕನ್ನಡಿಯಲ್ಲಿ ದೆವ್ವ(?) ಕಂಡು ಬೆಚ್ಚಿಬಿದ್ದು, ಎತ್ತರ ಪತ್ತರ ಗಾಡಿ ಚಲಾಯಿಸಿ, ತಾನೂ ಅಪಘಾತ ಮಾಡಿಕೊಂಡು, ಆರೇಳು ಕಾರುಗಳನ್ನೂ ಟೋಟಲ್ ಸ್ಕ್ರಾಪ್ ಮಾಡಿ, ಜೀವ ಉಳಿಸಿಕೊಳ್ಳಲು ಓಡುವವರಂತೆ ಓಡಿಹೋಗಿಬಿಟ್ಟ. 'ಅಯ್ಯೋ ಕರ್ಮವೇ!' ಅಂದುಕೊಳ್ಳುತ್ತ ಅಲ್ಲಿ ಆಗಿದ್ದ ರಾಡಿಯನ್ನು ಸ್ವಚ್ಚ ಮಾಡುವತ್ತ ಗಮನ ಹರಿಸಿದರು.
ಅವನಿಗೆ ಕಾರ್ ರಿಯರ್ ವ್ಯೂ ಕನ್ನಡಿಯಲ್ಲಿ ಯಾರು ಕಂಡಿದ್ದರು? ವಿಷ ಕೊಡಲು ಯಾರು ಬಂದಿದ್ದರು? ಕೇಳಿದರೆ ಅವನಲ್ಲಿ ಉತ್ತರವಿಲ್ಲ. ಜನರಿಗೆ ಗೊತ್ತು. ಅವರು ಆಡಿಕೊಂಡರು - ಮೊದಲ ಹೆಂಡತಿಗೆ ತುಂಬ ತೊಂದರೆ ಕೊಡುತ್ತಿದ್ದ. ಮಾತಿಗೊಮ್ಮೆ ವಿಷ ತೆಗೆದುಕೊಂಡು ಸಾಯಿ ಅನ್ನುತ್ತಿದ್ದ. ಒಂದು ದಿವಸ ಅದೇನಾಯಿತೋ? ಇವನ ಕಾಟ ತಾಳದ ಆಕೆಯೇ ವಿಷ ಕುಡಿದು ಸತ್ತಳೋ ಅಥವಾ ಇವನೇ ಆಕೆಯ ಬಾಯಿಯನ್ನು ಬಲವಂತವಾಗಿ ತೆಗೆಯಿಸಿ ವಿಷ ಕುಡಿಸಿಬಿಟ್ಟನೋ ಗೊತ್ತಿಲ್ಲ. ಒಟ್ಟಿನಲ್ಲಿ ವಿಷ ತೆಗೆದುಕೊಂಡು ಸತ್ತಳು. ವಶೀಲಿ ಹಚ್ಚಿ, ಪೊಲೀಸರಿಗೆ ರೊಕ್ಕ ಕೊಟ್ಟು, ಆತ್ಮಹತ್ಯೆ ಅಂತ ತಿಪ್ಪೆ ಸಾರಿಸಿದ. ಬಚಾವಾದ.
ಇದೆಲ್ಲ ಭಾಳ ಹಳೆಯ ಮಾತು. ಅದಾದ ನಂತರ ಮತ್ತೊಂದು ಮದುವೆ ಇತ್ಯಾದಿ ಮಾಡಿಕೊಂಡು ಆರಾಮ್ ಇದ್ದ. ಅದೇನು ಕರ್ಮವೋ ಏನೋ. ಈಗ ಹೊಸ ಕಾರು ತೆಗೆದುಕೊಳ್ಳುವಾಗ ಹಳೆಯ ಹೆಂಡತಿಯ ದೆವ್ವ ಕಾರ್ ಕನ್ನಡಿಯಲ್ಲಿ ಪ್ರತ್ಯಕ್ಷವಾಗಿಬಿಟ್ಟಿದೆ. ಇವನಿಗೇ ವಿಷ ಕೊಡಲು ಬಂದುಬಿಟ್ಟಿದೆ. ಶಿವನೇ ಶಂಭುಲಿಂಗ!
ಮುಂದೆ ಎಂದೂ ಅವನು ಮತ್ತೊಂದು ಕಾರ್ ಕೊಳ್ಳಲಿಲ್ಲ. ಕೊಳ್ಳುವದು ದೂರದ ಮಾತು. ಕಾರಿನಲ್ಲಿ ಕೂರಲೂ ಹೆದರಿಕೆ. ಯಾಕೆಂದರೆ ಎಲ್ಲ ಕಾರಿನಲ್ಲಿ ರಿಯರ್ ವ್ಯೂ ಕನ್ನಡಿ ಇದ್ದೇ ಇರುತ್ತದೆ. ಕಾರು ಯಾವದೇ ಇರಲಿ, ಇವನಿಗೆ ಅದರ ರಿಯರ್ ವ್ಯೂ ಕನ್ನಡಿಯಲ್ಲಿ ಮೊದಲ ಹೆಂಡತಿ ಕಂಡುಬರುತ್ತಾಳೆ. ಆಕೆಯ ಕೈಯಲ್ಲಿ ವಿಷದ ಬಾಟಲಿ. 'ರೀ! ತೊಗೊರೀ! ಕುಡಿರೀ! ನಾನೇ ಕುಡಿಸಲಿ ಏನು ನಿಮಗ????' ಅನ್ನುತ್ತಾಳೆ. ಇವನು ಮುಖ ಮುಚ್ಚಿಕೊಂಡು No!! ಅಂತ ಚೀರುತ್ತಾನೆ. ಇವನು ಕುಳಿತ ಕಾರಿನ ರಿಯರ್ ವ್ಯೂ ಕನ್ನಡಿ ಮೇಲೆ ಡ್ರೈವರ್ ತನ್ನ ಕರ್ಚೀಪ್ ಮುಚ್ಚುತ್ತಾನೆ. ಬುರ್ಕಾ ಧರಿಸಿದ ಕನ್ನಡಿಯಲ್ಲಿ ದೆವ್ವ ಕಾಣುವದಿಲ್ಲ. 'ಸರ್ರಾ! ಕನ್ನಡಿ ವಸ್ತ್ರದಾಗ ಮುಚ್ಚಿದೆ. ಕಣ್ಣು ಬಿಟ್ಟು ಆರಾಮ್ ಕೂಡ್ರಿ,' ಅಂತ ಡ್ರೈವರ್ ಅಂದ ಮೇಲೆಯೇ ಈತ ಕಣ್ಣು ಬಿಡುತ್ತಾನೆ. ಪ್ಯಾಂಟಿನ ಹಿಪ್ಪಾಕೇಟಿನಿಂದ ಸಣ್ಣ ಫ್ಲಾಸ್ಕ್ ತೆಗೆದು ಒಂದೆರೆಡು ಗುಟುಕು ರಮ್ ಕುಡಿಯುತ್ತಾನೆ. ಗಂಟಲು ಸುಡುತ್ತ ಇಳಿವ ದ್ರವ ಎಷ್ಟೋ ನೆಮ್ಮದಿ ನೀಡುತ್ತದೆ.
ಕಥೆ -೩
ಆಕೆ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ. ಹಾಸ್ಟೆಲ್ಲಿನಲ್ಲಿ ಇರುತ್ತಾಳೆ. ದೊಡ್ಡ ಪ್ರಮಾಣದ ಡೊನೇಷನ್ ಕೊಟ್ಟಿದ್ದಕ್ಕೆ ಸೀಟು ಸಿಕ್ಕಿದೆ. ರೊಕ್ಕ ಮಾಡುವ ಕಾಲೇಜ್. ಹಾಸ್ಟೆಲ್ ಪೂರ್ತಿ ತಗಡು. ಒಂದು ರೂಮಿನಲ್ಲಿ ನಾಲ್ಕು ಹುಡುಗಿಯರು. ಇವಳು ಮತ್ತು ಉಳಿದ ಮೂರು ಜನ. ಇವಳ ರೂಂಮೇಟ್ಸ್ ಶುಕ್ರವಾರ ರಾತ್ರಿ ಮಾತ್ರ ಈಕೆಯನ್ನು ರೂಮಿನಿಂದ ಮುದ್ದಾಂ ಓಡಿಸುತ್ತಾರೆ. ಈಕೆ ಸ್ಟೇರ್ ಕೇಸ್ (staircase) ಕೆಳಗಿರುವ ಚಿಕ್ಕ ಗೂಡಿನಲ್ಲಿ ರಾತ್ರೆ ಕಳೆಯುತ್ತಾಳೆ. ಏಕೆ?!
ಮೆಡಿಕಲ್ ಕಾಲೇಜ್ ಸೇರಿದ ಈಕೆಯ ತಲೆಯಲ್ಲಿ ಅದೇನು ಬಂತೋ ಏನೋ ಗೊತ್ತಿಲ್ಲ. ಪ್ರತಿ ಶುಕ್ರವಾರ ರಾತ್ರಿ ಈಕೆ ಪೂರ್ತಿ ಬದಲಾಗತೊಡಗಿದಳು. ಆತ್ಮವೊಂದರ ಆಹ್ವಾಹನೆ ಮಾಡಲು ಶುರು ಹಚ್ಚಿಕೊಂಡುಬಿಟ್ಟಳು. ಅದೆಲ್ಲಿಂದಲೋ ಒಂದು ವೀಜಾ (Ouija) ಬೋರ್ಡ್ ತಂದಳು. ಅದರ ಮೇಲೆ ಒಂದು ನಾಣ್ಯ ಇಡುತ್ತಾಳೆ. ಆತ್ಮವನ್ನು ಆಹ್ವಾನಿಸುತ್ತಾಳೆ. ಈಕೆ ಕರೆದ ಆತ್ಮ ಬಂದು, ತನ್ನ ಶಕ್ತಿಯಿಂದ ನಾಣ್ಯವನ್ನು ವೀಜಾ ಬೋರ್ಡ್ ಮೇಲೆ ಹಿಂದೆ ಮುಂದೆ ಮಾಡುತ್ತದೆ. ಅದರಲ್ಲಿ ಏನೋ ಸಂದೇಶ ಇರುತ್ತದೆ. ಈಕೆಗೆ ಅದು ತಿಳಿಯುತ್ತದೆ. ಹಾಗಂತ ಈಕೆ ಭಾವಿಸಿದ್ದಾಳೆ.
ಇವಳ ಇಂತಹ ಖತರ್ನಾಕ್ ಮಂಗ್ಯಾನಾಟ ನೋಡಿದ ಉಳಿದ ರೂಂಮೇಟ್ಸ್ ಫುಲ್ ಥಂಡಾ ಹೊಡೆದು ಆಕೆಯನ್ನು ಶುಕ್ರವಾರ ರಾತ್ರಿ ರೂಮಿನಿಂದ ಓಡಿಸಿಬಿಡುತ್ತಾರೆ. ಏನು ಮಾಡುವದು? ವಾರ್ಡನ್ ಮೇಡಂ ಅವರಿಗೆ ಇಂತಹ ಹುಚ್ಚಾಟ ತಿಳಿದರೆ ಹಾಸ್ಟೆಲ್ಲಿನಿಂದಲೇ ಓಡಿಸಿಬಿಡುತ್ತಾರೆ. ಹಾಗಾಗಿ ಮುಚ್ಚಿಕೊಂಡು, ತನ್ನ ವೀಜಾ ಬೋರ್ಡ್ ಇತರ ಸಲಕರಣೆ ಎತ್ತಿಕೊಂಡು, ರೂಂ ಬಿಟ್ಟು ಹೊರಗೆಬಂದು, staircase ಕೆಳಗೆ ಕೂಡುತ್ತಾಳೆ. ರಾತ್ರಿ ಪೂರ್ತಿ ಆತ್ಮವನ್ನು ಆಹ್ವಾನಿಸುತ್ತಾಳೆ. ನಡುವೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾಳೆ. ಪುಣ್ಯಕ್ಕೆ ಯಾರೂ ಅದನ್ನು ನೋಡಿಲ್ಲ. ನೋಡಿದ್ದರೆ ಅಷ್ಟೇ ಮತ್ತೆ. ಒಂದೋ ಅವರು ಹುಚ್ಚರಾಗಿಬಿಡುತ್ತಿದ್ದರು. ಇಲ್ಲಾ ಈಕೆಯನ್ನು ಮೆಡಿಕಲ್ ಕಾಲೇಜಿನಿಂದ ಓಡಿಸಿ ಮೆಂಟಲ್ ಹಾಸ್ಪಿಟಲಗೆ ಹಾಕಿ ಬರುತ್ತಿದ್ದರು.
ಇಷ್ಟಕ್ಕೂ ಆಕೆ ಯಾರ ಆತ್ಮವನ್ನು ಆಹ್ವಾನಿಸುತ್ತಿದ್ದಳು? ಆಕೆ ಕರೆಯುತ್ತಿದ್ದುದು ಅವಳ ಪುರಾತನ ಪ್ರೇಮಿಯ ಆತ್ಮವನ್ನು. ಪುರಾತನ ಪ್ರೇಮಿಯೋ ಅಥವಾ ಪುರಾತನ ಕಾಮಿಯೋ? ಪಿಯೂಸಿಯಲ್ಲೇ ಒಬ್ಬನ ಜೊತೆ ಲಫಡಾ ಶುರುಮಾಡಿಕೊಂಡಿದ್ದಳು. ಹೇಳಿ ಕೇಳಿ ಮಾಡರ್ನ್ ಹುಡುಗಿ. ಅಷ್ಟೇ ಮಾಡರ್ನ್ ತಂದೆ ತಾಯಿ. ಎಲ್ಲ ಓಕೆ. ಫುಲ್ ಬಿಂದಾಸ್. ಗೆಣೆಕಾರ ತುಂಬಾ ಶ್ರೀಮಂತ. ಆವಾಗಲೇ ಸ್ವಂತದ ಕಾರ್ ಮಡಗಿದ್ದ. ಒಮ್ಮೆ ಈಕೆಯನ್ನು ಎಲ್ಲೋ ಟ್ರಿಪ್ಪಿಗೆ ಕರೆದುಕೊಂಡು ಹೋಗಿದ್ದಾನೆ. ಬರುವಾಗ ಎಲ್ಲೋ ನಿರ್ಜನ ಪ್ರದೇಶ ಬಂದಾಗ ಇಬ್ಬರಿಗೂ ಮೂಡ್ ಬಂದುಬಿಟ್ಟಿದೆ. ಬಟ್ಟೆ ಬಿಚ್ಚಿ ಎಸೆದವರೇ ಕಾರಿನಲ್ಲೇ ಮನ್ಮಥ ಕ್ರೀಡೆ ಶುರು ಮಾಡಿಕೊಂಡುಬಿಟ್ಟಿದ್ದಾರೆ. ಆತ ಕಾರ್ ಟೇಪ್ ರೆಕಾರ್ಡರನ ರೆಕಾರ್ಡ್ ಬಟನ್ ಒತ್ತಿಬಿಟ್ಟಿದ್ದಾನೆ. ಆಗೆಲ್ಲ ಸ್ಮಾರ್ಟ್ ಫೋನ್ ಇರಲಿಲ್ಲ ನೋಡಿ. ಹಾಗಾಗಿ MMS, ವೀಡಿಯೊ ಮಾಡಿಕೊಂಡಿಲ್ಲ ಈಗಿನವರ ಹಾಗೆ. ವೀಡಿಯೊ ಇಲ್ಲದಿದ್ದರೂ ಪ್ರಥಮ ಅನುಭವದ, ಮೊದಲ ಪಾಪದ ಸುಖದ ನರಳುವಿಕೆಯಾದರೂ ರೆಕಾರ್ಡ್ ಆಗಲಿ ಅಂತ ಟೇಪ್ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಯಾರೋ ಹಳ್ಳಿ ಜನ ನೋಡಿದ್ದಾರೆ. ಇನ್ನಷ್ಟು ಮಂದಿಯನ್ನು ಸೇರಿಸಿದ್ದಾರೆ. ಗದ್ದಲ ಮಾಡಿ, ಇಬ್ಬರನ್ನೂ ಹೊರಗೆ ಕರೆಯಿಸಿ, ಇಬ್ಬರಿಗೂ ಎರಡೆರೆಡು ತಟ್ಟಿ, ಬುದ್ಧಿ ಹೇಳಿ ಅಲ್ಲಿಂದ ಓಡಿಸಿದ್ದಾರೆ. ಇಷ್ಟಾಗಿದೆ.
ಇದಾದ ಮುಂದೆ ಸ್ವಲ್ಪ ದಿವಸದಲ್ಲಿ ಈಕೆಯ ಗೆಣೆಕಾರ ಮತ್ತೆ ಗಾಡಿ ಓಡಿಸಿಕೊಂಡು ಹೋಗಿದ್ದಾನೆ. ಜೊತೆಗೆ ಈಕೆ ಇರಲಿಲ್ಲ. ಪುಣ್ಯ. ಜೊತೆಗೆ ಮತ್ತೊಬ್ಬ ದೋಸ್ತನನ್ನು ಕರೆದುಕೊಂಡು ಹೋಗಿದ್ದಾನೆ. ಎಲ್ಲರೂ ಚಟ ಭಯಂಕರರು. ಎಲ್ಲೋ ಗಿಚ್ಚಾಗಿ ಪಾರ್ಟಿ ಮಾಡಿದ್ದಾರೆ. ಆ ಪರಿ ಎಣ್ಣೆ ಹಾಕಿದ ನಂತರ ಅಮಲಿನಲ್ಲಿ, ತಿಮಿರಿನಲ್ಲಿ ಸಿಕ್ಕಾಪಟ್ಟೆ ಸ್ಪೀಡಿನಲ್ಲಿ ಗಾಡಿ ಓಡಿಸಿಕೊಂಡು ಬಂದಿದ್ದಾರೆ. ಅದೂ ಹಳೆ ಕಾಲದ NH - 4. ಸಣ್ಣ ರಸ್ತೆ. ಓವರ್ಟೇಕ್ ಮಾಡಲು ಹೋಗಿದ್ದಾನೆ. ಮುಂದಿಂದ ಮತ್ತೊಂದು ಲಾರಿ ಬಂದಿದೆ. ಡೆಲಿಕೇಟ್ ಮಾರುತಿ ಕಾರು ಹೋಗಿ ಅಪ್ಪಳಿಸಿ ಇಬ್ಬರೂ ಮಟಾಶ್! ಸ್ಪಾಟ್ ಡೆಡ್! ಕಾರು ಯಾವ ರೀತಿಯಾಗಿತ್ತು ಅಂದರೆ ಅದನ್ನು ಸೀದಾ ಮೋಡ್ಕಾಕ್ಕೇ (scrap) ಕಳಿಸಿಬಿಟ್ಟರು.
ಹೀಗೆ ಸತ್ತ ಮಾಜಿ ಪ್ರಿಯಕರನ ಆತ್ಮವನ್ನು ಈಕೆ ಆಹ್ವಾನಿಸುತ್ತಾಳೆ. ಅದನ್ನು ಯಾವಾಗ ಶುರು ಮಾಡಿದಳು ಗೊತ್ತಿಲ್ಲ. ಒಟ್ಟಿನಲ್ಲಿ ಮೆಡಿಕಲ್ ಕಾಲೇಜಿಗೆ ಹೋದಾಗ ಬಾಕಿ ರೂಂಮೇಟ್ಸ್ ನೋಡಿ ಥಂಡಾ ಹೊಡೆದಾಗ ಸುದ್ದಿಯಾಗಿದೆ.
ಅವಳು ಈಗಲೂ ಆತನ ಆತ್ಮವನ್ನು ಆಹ್ವಾನಿಸುತ್ತಾಳೆಯೇ? ಗೊತ್ತಿಲ್ಲ. ಕೇಳೋಣ ಅಂದರೆ ಇವತ್ತು ಆಕೆ ದೊಡ್ಡ ಡಾಕ್ಟರಿಣಿ ಬಾಯಿ!
ಕಥೆ - ೪
'ಬಗ್ಗಿ ನೋಡಿದರೆ ಬಾಳು ಬಂಗಾರ,' ಅಂತ ಕನ್ನಡದ ತುಂಟ ನಟ ಜಗ್ಗೇಶನ ಡೈಲಾಗ್. ಜೀವನ ಪೂರ್ತಿ ಬಗ್ಗಬಾರದಲ್ಲೆಲ್ಲ ಬಗ್ಗಿ, ನೋಡಬಾರದ್ದನ್ನು ನೋಡಿ, ಮಾಡಬಾರದ್ದನ್ನು ಮಾಡಿಬಿಟ್ಟ ಮಹನೀಯರೊಬ್ಬರು ಭಾವಿಯನ್ನು ಮಾತ್ರ ಬಗ್ಗಿ ನೋಡುವದಿಲ್ಲ. ಮೊದಲು ಭಾವಿಯನ್ನೂ ಸಹಿತ ಬಗ್ಗಿ ನೋಡುತ್ತಿದ್ದರು. ಒಮ್ಮೆ ಭಾವಿಯ ಪಕ್ಕದಲ್ಲೇ ಎಚ್ಚರ ತಪ್ಪಿ ಬಿದ್ದಿದ್ದರು. ಅಂದಿನಿಂದ ಭಾವಿಯಲ್ಲಿ ಬಗ್ಗಿ ನೋಡುವದು ದೂರ ಉಳಿಯಿತು. ಭಾವಿಯ ಸಮೀಪ ಸಹಿತ ಹೋಗುವದಿಲ್ಲ ಅವರು.
ಒಮ್ಮೆ ಸ್ನಾನ ಮಾಡಲು ಭಾವಿ ಕಡೆ ಹೋದರು. ಸಹಜವಾಗಿ ಬಗ್ಗಿ ನೋಡಿದರು. ಅಲ್ಲಿ ಏನು ಕಂಡುಬಂತೋ ಏನೋ, 'ಏ!!! ಏ!!!! ನೀನು!!!! ನೀ ಇಲ್ಲ್ಯಾಂಗ???!' ಅನ್ನುತ್ತ ಭೀಕರವಾಗಿ ಚೀರಿದವರೇ ತಿರುಗಿ ಓಡಲು ನೋಡಿದರು. ಉಟ್ಟುಕೊಂಡಿದ್ದ ಧೋತ್ರ ಅಡ್ಡ ಬಂತು. ಮುಕ್ಕರಿಸಿ ಬಿದ್ದರು. ಬಿದ್ದವರೇ ಪ್ರಜ್ಞೆ ಕಳೆದುಕೊಂಡರು. ನಂತರ ಯಾರೋ ನೋಡಿ, ನೀರು ಗೊಜ್ಜಿ, ಎಬ್ಬಿಸಿಕೊಂಡು ಬಂದು ಮನೆ ಮುಟ್ಟಿಸಿದ್ದರು. ಅದೇ ಕೊನೆ. ನಂತರ ಭಾವಿ ಕಡೆ ಹೋದರೆ ಕೇಳಿ.
ಭಾವಿಯಲ್ಲಿ ಬಗ್ಗಿ ನೋಡಿದರೆ ಏನು ಕಾಣುತ್ತದೆ? ಅದಕ್ಯಾಕೆ ಇವರು ಅಷ್ಟು ಹೆದರುತ್ತಾರೆ? ಯಾವದೋ ಪಾನ ಗೋಷ್ಠಿಯಲ್ಲಿದ್ದಾಗ ಅವರೇ ಹೇಳಿದ್ದರಂತೆ. ಅದೇ ಸುದ್ದಿಯಾಗಿದೆ. 'ಮಾರಾಯಾ! ಯಾವದೇ ಭಾವಿ ಬಗ್ಗಿ ನೋಡಿದರೆ ಮುಗೀತು ನನ್ನ ಕಥಿ. ಭಾವಿ ತಳದಿಂದ ನನ್ನ ಮೊದಲ ಹೆಂಡತಿ ಛಂಗ್ ಅಂತ ಜಿಗಿದು ಬಂದು ನನ್ನ ಕುತ್ತಿಗಿ ಹಿಡಿತಾಳ ನೋಡು. ಭಾವ್ಯಾಗ ಬಿದ್ದು ಸತ್ತಾಕಿ ಅಕಿ. ಆದ್ರ ನನ್ನ ಕಾಡ್ತಾಳ ನೋಡೋ!'
ಭಾವಿಯಲ್ಲಿ ಆಕೆಯೇ ಬಿದ್ದು ಸತ್ತಳೋ ಅಥವಾ.........?? ಹಳೆ ಜನ ಹೇಳುವ ಪ್ರಕಾರ ಈ ಪುಣ್ಯಾತ್ಮ ಮತ್ತು ಇವನ ಅವ್ವ ಕೂಡಿ ಮೊದಲ ಹೆಂಡತಿಯನ್ನು ಮನೆಯಲ್ಲೇ ಮನಗಂಡ ಬಡಿದ್ದಾರೆ. ಇವರ ಸೈಜೋ. ಕೇಳಲೇಬೇಡಿ. ದೊಡ್ಡ ಹೊನಗ್ಯಾ ಸೈಜ್. ಅಮ್ಮ ಮತ್ತು ಮಗನ ಕೈಯಲ್ಲಿ ಬರೋಬ್ಬರಿ ನಾದಿಸಿಕೊಂಡ ಆಕೆ 'ಶಿವಾಯ ನಮಃ!' ಆಗಿಹೋಗಿದ್ದಾಳೆ. ಶಿವನ ಪಾದ ಸೇರಿಕೊಂಡಿದ್ದಾಳೆ. ಮುಂಜ್ಮುಂಜಾನೆ ಹೊತ್ತು. ಬಡಿಸಿಕೊಂಡು ಸತ್ತವಳ ಹೆಣವನ್ನು ಅಮ್ಮ, ಮಗ ಎತ್ತಿಕೊಂಡು ಬಂದವರೇ ಢಂ ಅಂತ ಭಾವಿಯಲ್ಲಿ ಒಗೆದಿದ್ದಾರೆ. ಅಷ್ಟು ಮಾಡಿದ ನಂತರ ಇವರ ಅವ್ವ ಬಾಯ್ಬಾಯಿ ಬಡೆದುಕೊಂಡು, 'ನನ್ನ ಸೊಸಿ ಭಾವಿ ಜಿಗದಳೋ! ಯಾರರೆ ಬರ್ರಿ. ಅಕಿನ್ನ ಕಾಪಾಡ್ರೀ. ಯಾಕ ಭಾವಿಗೆ ಜಿಗದಿ ನಮ್ಮವ್ವಾ???' ಅಂತ ಬೊಬ್ಬೆ ಹೊಡೆದಿದ್ದಾಳೆ. ಈಕಡೆ ಮಗ ಎಲ್ಲ ಅಡ್ಜಸ್ಟ್ ಮಾಡಿದ್ದಾನೆ. ಮತ್ತೊಮ್ಮೆ ಭಾವಿಗೆ ಬಿದ್ದು ಸೆಲ್ಫ್ ಸುಯಿಸೈಡ್ ಅಂತ ತಿಪ್ಪೆ ಸಾರಿಸಲಾಗಿದೆ.
ಭಾವಿಯಲ್ಲಿ ಬಗ್ಗಿ ನೋಡಿದಾಗ ಛಂಗ್ ಅಂತ ಜಿಗಿದು ಬರುತ್ತಿದ್ದ ಹಳೆ ಹೆಂಡತಿಯ ದೆವ್ವ ಇವನೊಬ್ಬನನ್ನೇ ಕಾಡುತ್ತಿದ್ದಳೋ ಅಥವಾ ಇವನ ತಾಯಿಯನ್ನೂ ಕಾಡುತ್ತಿದ್ದಳೋ? ಕೇಳೋಣ ಅಂದರೆ ಇಬ್ಬರೂ ಶಿವಾಯ ನಮಃ!
***
ಇವೆಲ್ಲ ಎಲ್ಲೆಲ್ಲೋ ಕೇಳಿದ ಕಥೆಗಳು. ಇವುಗಳ ಸತ್ಯಾಸತ್ಯತೆ ಬಗ್ಗೆ ಯಾವದೇ ಗ್ಯಾರಂಟಿ ಇರುವದಿಲ್ಲ. ಕಥೆ ಹೇಳಿದವರಿಗೆಲ್ಲ ದೊಡ್ಡ ಧನ್ಯವಾದ.
4 comments:
ಮಹೇಶ,
ಈ ದಿನ ನಿಮ್ಮ blog post ಕಂಡ ಕೂಡಲೇ, chocolate ಕಂಡ ಹುಡುಗನ ಹಾಗೆ ಗಬಳಿಸಿದೆ. ಏನು ಭಯಾನಕ ಕಥೀ ಅವರಿ! ಓದೋ ಮುಂದ ನನಗ ಇಷ್ಟು ಹೆದರಿಕಿ ಬಂತು, ಬರೆಯೊ ಮುಂದ ನಿಮಗ ಏನೂ ಭಯಾ ಆಗಲಿಲ್ಲ ಏನ್ರೀ? ಕಥಿ ಛಲೋ ಬರದೀರಿ. ಈ ಥರದ ಕಥಿಗಳಿಗೆ ಬೇಕಾಗೋ style, ಅಂದರ objective narration style ಬಳಸೀರಿ. ಅಭಿನಂದನೆಗಳು.
ಓದಿ, ಕಾಮೆಂಟ್ ಹಾಕಿದ್ದಕ್ಕೆ ಬಹಳ ಧನ್ಯವಾದ ಸುನಾಥ್ ಸರ್! :)
Very good!
Next title: Hello Veena, Halloween approaching!!
Interesting stories!
Post a Comment