Sunday, August 30, 2015

ಡಾ. ಕಲಬುರ್ಗಿ ಹತ್ಯೆ ಮತ್ತು ಜೊತೆಗೇ ಮರುಕಳಿಸಿದ ಬಂದೂಕಿನ ನೆನಪುಗಳು...


ದಿವಂಗತ ಡಾ. ಕಲಬುರ್ಗಿ
ಧಾರವಾಡದ ಕಲ್ಯಾಣ ನಗರ ಬಡಾವಣೆಯಲ್ಲಿ ಮತ್ತೊಮ್ಮೆ ಬಂದೂಕು ಘರ್ಜಿಸಿದೆ. ಗುಂಡು ಹಾರಿದೆ. ಯಾರೋ ಆಯುಧ ಪೂಜೆಯಂದು, ಮನೆಯಲ್ಲಿನ ಬಂದೂಕನ್ನು ಪೂಜಿಸಿ, ಗಾಳಿಯಲ್ಲಿ ಹಾರಿಸಿದ ಗುಂಡಿನ ಸದ್ದಲ್ಲ ಇದು. ಪಕ್ಕಾ ಕಸಬುದಾರ ಹಂತಕರ ಗುಂಡು. Lift to aim. Aim to shoot. Shoot to kill - ಅನ್ನುವ ಮಾದರಿಯಲ್ಲಿ ಕೊಲ್ಲಲೆಂದೇ ಹಾರಿಸಿದ ಗುಂಡು. ಹಿರಿಯ ಕನ್ನಡ ಪಂಡಿತ ಡಾ. ಎಂ. ಎಂ. ಕಲಬುರ್ಗಿ ಹಂತಕನ ಗುಂಡಿಗೆ ಬಲಿಯಾಗಿ ಹೋಗಿದ್ದಾರೆ.

ಈ ಕಲಬುರ್ಗಿ ಧಾರವಾಡದಲ್ಲಿ ನಮ್ಮ ನೆರೆಹೊರೆಯವರು. ಅವರದ್ದು ಕಲ್ಯಾಣ ನಗರದ ಒಂಬತ್ತನೇ ಕ್ರಾಸ್. ನಮ್ಮದು ಹತ್ತನೇ ಕ್ರಾಸಿನ A by-lane. ನಮ್ಮದು technically ನಿರ್ಮಲ ನಗರ. ಅದರೂ ಮೊದಲಿನಿಂದಲೂ ಕಲ್ಯಾಣ ನಗರ ಅಂತಲೇ ಆ ಪೂರ್ತಿ ಏರಿಯಾವನ್ನು ಕರೆಯುವದು. ನಮ್ಮ ಮನೆಯಿಂದ ಅವರ ಮನೆಗೆ ನಡೆದು ಹೋಗಲು ಐದು-ಏಳು ನಿಮಿಷ ಸಾಕು. ಹೆಚ್ಚೆಂದರೆ ಅರ್ಧ ಕೀಲೋಮೀಟರ್. ಕಲಬುರ್ಗಿ ಮತ್ತು ಅವರ ಕುಟುಂಬ ನಮ್ಮ ಕುಟುಂಬಕ್ಕೆಲ್ಲ ಪರಿಚಿತರೇ. ಅವರನ್ನು ಧಾರವಾಡದಲ್ಲಿ, ನಮ್ಮ ಬಡಾವಣೆಯಲ್ಲಿ ಬೇಕಾದಷ್ಟು ಸಲ ನೋಡಿದ್ದರೂ ನನಗೆ ವೈಯಕ್ತಿಕವಾಗಿ ಅವರ ಪರಿಚಯವಿರಲಿಲ್ಲ. ಅವರ ಪುತ್ರನೊಬ್ಬ ಧಾರವಾಡದ ಶಾಲೆಯಲ್ಲಿ ನಮಗೆ ಮೂರು ವರ್ಷಕ್ಕೆ ಹಿರಿಯ. ಆತನ ಮುಖ ಪರಿಚಯವಿತ್ತು ಅಷ್ಟೇ.

ನಮ್ಮ ಮನೆ ಎಲ್ಲಿ, ಕಲಬುರ್ಗಿಯವರ ಮನೆ ಎಲ್ಲಿ ಅಂತ ತೋರಿಸುವ ಚಿತ್ರ.

ಕಲ್ಯಾಣ ನಗರದ ಎಂತಾ ಜಾಗದಲ್ಲಿ ಕನ್ನಡ ಪಂಡಿತ ಕಲಬುರ್ಗಿ ಅವರ ಮನೆ ಇತ್ತು ಅಂತೀರಿ! ಅವರ ಪಕ್ಕದ ಮನೆಯವರು ಯಾರು ಗೊತ್ತೇನು? ಖ್ಯಾತ ಕವಿ ಚೆನ್ನವೀರ ಕಣವಿಯವರು. ಕಣವಿಯವರ ಪತ್ನಿ ಕೂಡ ಸಾಹಿತಿಯೇ. ಚೆನ್ನವೀರ ಕಣವಿಯವರ ಪಕ್ಕದ ಮನೆಯವರು ಯಾರು ಗೊತ್ತೇ? ಅವರೇ ಹಳೆ ಕಾಲದ ಸಾಹಿತಿಗಳಾಗಿದ್ದ ದಿವಂಗತ ಮಾಳವಾಡ ದಂಪತಿಗಳು. ಹೀಗಾಗಿ ಕಲ್ಯಾಣ ನಗರದ ಒಂಬತ್ತನೇ ಕ್ರಾಸಿನ ಒಂದು ತುದಿಯ ಕೊನೆಯ ಮೂರೂ ಮನೆಗಳು ಕನ್ನಡಮ್ಮನ ಹೆಮ್ಮೆಯ ಮಕ್ಕಳ ಮನೆಗಳೇ. ಈಗ ನಡುವೆ ಬೇರೆ ಯಾರದ್ದಾದರೂ ಮನೆ ಬಂದಿರಬಹುದು ಬಿಡಿ. ಆದರೆ ಕಲಬುರ್ಗಿ, ಕಣವಿ, ಮಾಳವಾಡ ಒಂದು ಕಾಲದಲ್ಲಿ, ನಡುವೆ ಎಲ್ಲ ಖಾಲಿ ಖಾಲಿ ಇದ್ದಾಗ, ಅಕ್ಕಪಕ್ಕದ ಮನೆಯವರೇ. 

ಧಾರವಾಡದಲ್ಲಿ ಎಲ್ಲಿ ನಿಂತು ಒಂದು ಕಲ್ಲು ಬೀರಿದರೂ ಅದು ಯಾವದಾದರೂ ಸಾಹಿತಿಯ ಮನೆಗೇ ಹೋಗಿ ಬೀಳುತ್ತದೆ ಅಂತ ಒಂದು ಆಡು ನುಡಿ. ಕಲ್ಯಾಣ ನಗರ ಬಡಾವಣೆಯ ಆ ಒಂಬತ್ತನೇ ಕ್ರಾಸಿನ ಸುತ್ತಮುತ್ತಲಿನ ಒಂದು ಚದುರ ಕಿಲೋಮೀಟರ ಪ್ರದೇಶಕ್ಕಂತೂ ಅದು ಅನ್ವಯಿಸುತ್ತದೆ. ಕಲಬುರ್ಗಿ, ಕಣವಿ, ಮಾಳವಾಡ ಒಂದು ಕಡೆ. ಕಲಬುರ್ಗಿ ಅವರ ಮನೆಯ ಮೇಲಿನ ಕ್ರಾಸ್ ಅಂದರೆ ಎಂಟನೇ ಕ್ರಾಸಿನಲ್ಲಿ ಮತ್ತೊಬ್ಬ ಕನ್ನಡ ಪಂಡಿತ ಪ್ರೊ. ವೃಷಭೇಂದ್ರ ಸ್ವಾಮಿ ಇದ್ದರು. ಈಗ ಕೆಲವು ತಿಂಗಳ ಹಿಂದೆ ನಿಧನರಾದರು. ಏಳನೇ ಕ್ರಾಸ್ ಒಂದು ಬಿಟ್ಟು ಆರನೇ ಕ್ರಾಸಿಗೆ ಹೋದರೆ ಅಲ್ಲಿ ನಮ್ಮ ಆತ್ಮೀಯರೂ, ಸಂಬಂಧಿಕರೂ ಆದ ಡಾ. ಜೀ. ಎಂ. ಹೆಗಡೆ ಇದ್ದಾರೆ. ಅವರೂ ಕನ್ನಡ ಸಾಹಿತಿಗಳೇ. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು. ಕಲಬುರ್ಗಿ, ಕಣವಿ ಅಂತಹ ಹಿರಿಯ ಸಾಹಿತಿಗಳಿಗೆ ಕಿರಿಯ ಸಾಹಿತಿ ನಮ್ಮ ಜೀಎಂನನ್ನು ಕಂಡರೆ ಸಿಕ್ಕಾಪಟ್ಟೆ ಪ್ರೀತಿ, ಅಭಿಮಾನ. ಅವರ ಏನೇ ಕೆಲಸವಿದ್ದರೂ ಹೆಗಡೆಯವರು ಬೇಕೇಬೇಕು. ಜೀಎಂ ಹೆಗಡೆ ಕೂಡ ಅಷ್ಟೇ ಭಕ್ತಿಯಿಂದ ಗುರುಸೇವೆ ಮಾಡಿಕೊಂಡು ಬಂದಿದ್ದಾನೆ. ತನ್ನ ಹಿರಿಯ ಮಿತ್ರ ಕಲಬುರ್ಗಿ ಅವರ ನಿಧನದಿಂದ ಅದೆಷ್ಟು ನೊಂದುಕೊಂಡನೋ ನಮ್ಮ ಜೀಎಂ. ತುಂಬಾ ಸೂಕ್ಷ್ಮ ಮನಸ್ಸಿನ, ಸಹೃದಯದ ಮನುಷ್ಯ ಅವನು. ಕಲಬುರ್ಗಿ, ಕಣವಿ, ಮಾಳವಾಡ, ವೃಷಭೇಂದ್ರ ಸ್ವಾಮಿ, ಜೀಎಂ ಹೆಗಡೆ ಮುಂತಾದ ಕನ್ನಡ ಪಂಡಿತರು ಮಾತ್ರವಲ್ಲ, ಅದೇ ಏರಿಯಾದಲ್ಲಿ ಮತ್ತೂ ಕೆಲವು ಕನ್ನಡ ಪಂಡಿತರು ಇದ್ದ ನೆನಪು. ಒಂಬತ್ತನೇ ಕ್ರಾಸಿನ ಕಲಬುರ್ಗಿ ಅವರ ಮನೆಯ ಕಡೆಯಿಂದ ಈಕಡೆ ನಡೆದು ಬಂದು, ಕಲ್ಯಾಣ ನಗರ ಬಸ್ ಸ್ಟಾಪ್ ದಾಟಿಕೊಂಡು ಬಂದು, ಸ್ವಲ್ಪ ಪಕ್ಕಕ್ಕೆ ತಿರುಗಿದರೆ ಅಲ್ಲಿ ಡಾ. ಜವಳಿ ಇದ್ದಾರೆ. ಅವರೂ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡದ ನಿವೃತ್ತ ಪ್ರಾಧ್ಯಾಪಕರೇ. ಅವರ ಮನೆ ಮುಂದಿನಿಂದ ಸ್ವಲ್ಪ ಮೇಲೆ ಹೋಗಿ, ಎಡಕ್ಕೆ ತಿರುಗಿದರೆ ಡಾ. ಗುಂಜೆಟ್ಟಿ ಇದ್ದಾರೆ. ಕಲಬುರ್ಗಿ, ವೃಷಭೇಂದ್ರ ಸ್ವಾಮಿ, ಜವಳಿ, ಗುಂಜೆಟ್ಟಿ ಇವರೆಲ್ಲ ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ಸಹೋದ್ಯೋಗಿಗಳು. ಎಲ್ಲರೂ ಮಾಜಿ ಅಧ್ಯಾಪಕರು. ಅಷ್ಟು ದೊಡ್ಡ ಕವಿಯಾದರೂ ಚೆನ್ನವೀರ ಕಣವಿಯವರು ತರಗತಿಯಲ್ಲಿ ಕನ್ನಡ ಪಾಠ ಮಾಡಲಿಲ್ಲ. ಕವಿವಿಯ ಪ್ರಸಾರಾಂಗ ವಿಭಾಗದಲ್ಲಿ ಪುಸ್ತಕ ಪ್ರಕಟಣೆಯ ಕೆಲಸ ಮಾಡಿಕೊಂಡಿದ್ದರು ಅಂತ ನೆನಪು. ಹಳೆಯ ತಲೆಮಾರಿನ ಸಾಹಿತಿ ಮಾಳವಾಡರು ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿದ್ದರು. ಪ್ರಿನ್ಸಿಪಾಲ್ ಆಗಿ ನಿವೃತ್ತರಾಗಿದ್ದರು. ಇನ್ನು ನಮ್ಮ ಪ್ರೀತಿಯ ಜೀಎಂ ಹೆಗಡೆ ಧಾರವಾಡದ ಕಿಟ್ಟೆಲ್ ಕಾಲೇಜಿನಲ್ಲಿ ನಿರಂತರವಾಗಿ ಮೂವತ್ತೈದು ವರ್ಷ ಕನ್ನಡದ ಡಿಂಡಿಮವನ್ನು ಬಾರಿಸಿ ನಿವೃತ್ತನಾಗಿದ್ದಾನೆ. ಆದರೆ ಈಗಲೂ ಬಾರಿಸುತ್ತಲೇ ಇದ್ದಾನೆ. ಅವನ ಬಾರಿಸುವಿಕೆ ನಿರಂತರ. ಅಂದರೆ ಕನ್ನಡ ಡಿಂಡಿಮ ಬಾರಿಸುವದು ಅಂತ ಅರ್ಥ. ಒಟ್ಟಿನಲ್ಲಿ ನಮ್ಮ ಕಲ್ಯಾಣ ನಗರ ಬಡಾವಣೆಯ ಒಂಬತ್ತನೇ ಕ್ರಾಸಿನ ಒಂದು ಚದುರ ಕಿಲೋಮೀಟರ್ ಸುತ್ತಮುತ್ತಲಿನ ಜಾಗದಲ್ಲಿ ಇಷ್ಟೊಂದು ಜನ ಕನ್ನಡದ ಕಟ್ಟಾಳು ಮಂದಿ ಇದ್ದಾರೆ. ಇನ್ನೂ ಒಂದಿಷ್ಟು ಜನ ಇರಬಹುದು. ಸದ್ಯಕ್ಕೆ ಇಷ್ಟು ಜನ ನೆನಪಿಗೆ ಬರುತ್ತಾರೆ.

ನಮ್ಮ ಮಾತಾಶ್ರೀ, ಶ್ರೀಮತಿ ಜೀಎಂ ಹೆಗಡೆ, ಡಾ. ಜೀಎಂ ಹೆಗಡೆ (ದೊಡ್ಡ ಸಾಹಿತಿ), ನಾನು (೨೦೧೨ ಮಾರ್ಚ್, ಧಾರವಾಡ)

ಖ್ಯಾತ ಸಾಹಿತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ನಮ್ಮ ಆತ್ಮೀಯ ಡಾ. ಜೀಯಂ  ಹೆಗಡೆ ಮತ್ತು ನಾನು. ೧೯೯೯ ಸೆಪ್ಟೆಂಬರ್. ಅವರ ಮನೆಯಲ್ಲಿ. ಫೋಟೋವೊಂದರ ಫೋಟೋ ಇದು.

ನಮ್ಮ ಏರಿಯಾದ ಕಲಬುರ್ಗಿ ಅವರಿಗೆ ಇಂತಹ ಭೀಕರ ಸಾವು ಬಂದಿದ್ದು ದುಃಖಕರ ವಿಷಯ. ಒಮ್ಮೆ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಸಂಪಾದಕ ರವಿ ಬೆಳಗೆರೆ ಅವರು ಕಲಬುರ್ಗಿ ಅವರ ಸರಳತೆ ಬಗ್ಗೆ ಒಂದು ಮಾತು ಬರೆದಿದ್ದರು. ಅದು ಮನದಲ್ಲಿ ಉಳಿದಿದೆ. ಕಲಬುರ್ಗಿ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗಿದ್ದರು. ಅಲ್ಲಿನ ಅವಧಿ ಮುಗಿದ ನಂತರ ಏನೂ ಗಾಂಚಾಲಿ ಮಾಡದೆ, ಚುಪ್ಚಾಪ್ ಮನೆ ಖಾಲಿ ಮಾಡಿ, ಸಾಮಾನು ಟ್ರಕ್ಕಿಗೆ ಹಾಕಿಸಿ, ತಾವು ಸಾಮಾನ್ಯರಂತೆ ಕೆಂಪು ಬಸ್ಸು ಹಿಡಿದು ಧಾರವಾಡಕ್ಕೆ ಬಂದಿದ್ದರು. ನಿವೃತ್ತ ಕುಲಪತಿಯಾದರೂ ಯಾವದೇ ತರಹದ ಸೌಲಭ್ಯ, extra consideration, favors ಇತ್ಯಾದಿ ಬಯಸದ ಪ್ರಾಮಾಣಿಕ, ಸರಳ, ಸಜ್ಜನ ಮನುಷ್ಯ ಅಂತ ಅವರ ಬಗ್ಗೆ ಪತ್ರಿಕೆಯಲ್ಲಿ ಬಂದಿದ್ದ ಆ ಒಂದು ಚಿಕ್ಕ ಬಾಕ್ಸ್ ಐಟಮ್ಮಿನ ಸಾರಾಂಶ.

ವಿವಾದ, controversy - ಕಲಬುರ್ಗಿಯವರ ಮತ್ತೊಂದು ಹೆಸರು. ಮೊದಲಿಂದಲೂ ಅವರನ್ನು ವಿವಾದಗಳು ಸುತ್ತಿಗೊಂಡೇ ಬಂದಿವೆ. ಮೊದಲೆಲ್ಲ ನಮಗೆ ಏನೂ ಸರಿಯಾಗಿ ಗೊತ್ತಿರಲಿಲ್ಲ. ಧಾರವಾಡದಲ್ಲಿದ್ದಾಗ ಸಾಹಿತಿಗಳು, ಅವರ ವಿವಾದಗಳು ಅಂದರೆ ನಮಗೆ ಅಷ್ಟಕಷ್ಟೇ. ಈಗ ಅವುಗಳನ್ನು ಮತ್ತೆ ನೆನಪು ಮಾಡಿಕೊಟ್ಟಿವೆ ಇಂದಿನ ಪತ್ರಿಕಾ ವರದಿಗಳು. ತುಂಬಾ ಹಿಂದೆ ಕಲಬುರ್ಗಿ ಯಾವದೋ ಪುಸ್ತಕ ಬರೆದಿದ್ದರು. ಆ ಪುಸ್ತಕ ಅವರ ಸಮಾಜದ ಸ್ವಾಮೀಜಿಗಳನ್ನು ಕೆರಳಿಸಿತ್ತು. ಇವರ ಅಭಿಪ್ರಾಯ ಮತ್ತು ಅದರ ಪ್ರತಿಪಾದನೆ ಅವರ ಸಮುದಾಯದ ಗುರು ಸಮೂಹಕ್ಕೆ ಸೇರಿಬಂದಿರಲಿಲ್ಲ. ಇದು ಸುಮಾರು ೧೯೮೦ ರ ಮಾತಿರಬಹದು. ಸ್ವಾಮೀಜಿಗಳ ಜೊತೆ ಕಲಬುರ್ಗಿ ಸಾಕಷ್ಟು ವಾದ, ವಿವಾದ ಮಾಡಿದ್ದರು. ನಂತರ ಏನೋ ಒಂದು ತರಹದ ಸಂಧಾನ ಮಾಡಿಕೊಂಡಿದ್ದರು ಅಂತ ಓದಿದ ನೆನಪು.

ಕನ್ನಡದ ಮತ್ತೊಬ್ಬ ದೊಡ್ಡ ಪಂಡಿತ ಚಿದಾನಂದ ಮೂರ್ತಿಗಳಿಗೂ ಕಲಬುರ್ಗಿಯವರಿಗೂ ಯಾವಾಗಲೂ ವಾಗ್ವಾದ. ಕಲಬುರ್ಗಿ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಚಿದಾನಂದ ಮೂರ್ತಿಗಳು, 'ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ನಮ್ಮ ಭಿನ್ನಾಭಿಪ್ರಾಯ ಏನೇ ಇದ್ದರೂ ಅದು ಸಾಹಿತ್ಯ, ಇತಿಹಾಸ ಮುಂತಾದ ವಿಚಾರಗಳಿಗೆ ಮಾತ್ರ ಸೀಮಿತವಾಗಿತ್ತು,' ಅಂತ ಹೇಳಿ ದೊಡ್ಡತನ ಮೆರೆದಿದ್ದಾರೆ.

ಅಣ್ಣಿಗೇರಿ ಎಂಬ ಊರಿನಲ್ಲಿ ನೆಲವನ್ನು ಅಗೆಯುತ್ತಿದ್ದಾಗ ಅನಾಮತ್ತಾಗಿ ಒಂದು ನಲವತ್ತು ತಲೆಬುರುಡೆಗಳು ಕಂಡುಬಿಟ್ಟವು. ಸಂಶೋಧಕ ಕಲಬುರ್ಗಿ ಆ ತಲೆಬುರುಡೆಗಳು ಆತ್ಮಾಹುತಿ ಮಾಡಿಕೊಂಡ ಶರಣರವು ಅಂತ ತಮ್ಮ ಸಿದ್ಧಾಂತ ಮಂಡಿಸಿದರು. ಅದನ್ನು ಖಂಡಿಸಿದ ಚಿದಾನಂದ ಮೂರ್ತಿ ಬೇರೆ ಏನೋ ಥಿಯರಿ ಹೇಳಿದರು. ಆಗ ಸುಮಾರು ವಾದ ವಿವಾದ ನಡೆದಿತ್ತು ಅಂತ ಓದಿದ ನೆನಪು.

ಜ್ಞಾನಪೀಠಿ ಸಾಹಿತಿ ದಿವಂಗತ ಅನಂತ ಮೂರ್ತಿಗಳು ದೇವರ ವಿಗ್ರಹದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದರು. ಹಾಗಂತ ಅವರೇ ಅವರ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾರೆ ಅಂತ ಅನಂತ ಮೂರ್ತಿಗಳ ಯಾವದೋ ಲೇಖನವನ್ನು ಉಲ್ಲೇಖಿಸಿ ಭಾಷಣವೊಂದರಲ್ಲಿ ಕಲಬುರ್ಗಿ ಅವರು ಆಡಿದ ಮಾತು ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿತ್ತು. ಚಿದಾನಂದ ಮೂರ್ತಿಗಳು ಎಂದಿನಂತೆ ತಮ್ಮ ಮಿತ್ರನನ್ನು ಪತ್ರಿಕೆಗಳಲ್ಲಿ ಝಾಡಿಸಿದ್ದರು. ಆ ವಿವಾದದ ಕೇಂದ್ರವಾಗಿದ್ದ ಅನಂತ ಮೂರ್ತಿಗಳು ಆಗ ತುಂಬಾ ಅನಾರೋಗ್ಯದಲ್ಲಿದ್ದರು. ಹಾಗಿದ್ದರೂ ಮಾತಾಡಿ, ಅವರು ಬರೆದಿದ್ದನ್ನು out of context ಆಗಿ ಉಪಯೋಗಿಸಿ, ಸುಮ್ಮನೆ ಇಲ್ಲದ ಸಲ್ಲದ ವಿವಾದ ಆರಂಭವಾಗಲು ಕಲಬುರ್ಗಿ ಕಾರಣರಾಗಿದ್ದಾರೆ ಅಂತ ಉರಿದುಕೊಂಡು ಹೇಳಿದ್ದರು ಅನಂತ ಮೂರ್ತಿ. ನಂತರ ಕೆಲವೇ ದಿನಗಳಲ್ಲಿ ಅನಂತ ಮೂರ್ತಿ ತೀರಿಹೋದರು.

ಆಗ 'ಸಮಯ ಟೀವಿ'ಯ anchor ರಂಗನಾಥ್ ಭಾರದ್ವಾಜ ಕಲಬುರ್ಗಿಯವರನ್ನು ಟೀವಿ ಸ್ಟುಡಿಯೋಗೆ ಕರೆಯಿಸಿಕೊಂಡು ಒಳ್ಳೆ ರೀತಿಯಲ್ಲಿ ಆ ವಿಷಯದ ಬಗ್ಗೆ ಚರ್ಚಿಸಿದ್ದರು. ಅದರ ಒಂದು ಝಲಕ್ ಕೆಳಗಿದೆ ನೋಡಿ. ಕೆಳಗಿನದು ಭಾಗ - ೧. ಉಳಿದ ಭಾಗಗಳ ಲಿಂಕೂ ಕೆಳಗೆ ಇದೆ. ಆಸಕ್ತರು ನೋಡಬಹುದು.



ಭಾಗ - ೨
ಭಾಗ  - ೩
ಭಾಗ - ೪ 

ಕಲಬುರ್ಗಿಯವರ ಕೊನೆಯ ವಿವಾದ, ನನಗೆ ನೆನಪಿರುವ ಹಾಗೆ, ನಡೆದಿದ್ದು ಕೆಲವು ತಿಂಗಳ ಹಿಂದೆ. ಹಿಂದೂ ಧರ್ಮದ ಬಗ್ಗೆ ಏನೋ ಒಂದು ಹೇಳಿಕೆ ಕೊಟ್ಟಿದ್ದರು. ಅದು ಹಲವರಿಗೆ ಪಥ್ಯವಾಗಿರಲಿಲ್ಲ. ಮತ್ತೆ ವಾದ ವಿವಾದ ನಡೆದಿತ್ತು.

'ವಿಗ್ರಹದ ಮೇಲೆ ಮೂತ್ರ ವಿಸರ್ಜನೆ' ವಿವಾದದ ನಂತರ ಯಾರೋ ಪೊರ್ಕಿಗಳು ಅವರ ಮನೆ ಮುಂದೆ ಗಲಾಟೆ ಮಾಡಿ, ಖಾಲಿ ಬಿಯರ್ ಬಾಟಲಿ ಎಸೆದು ಓಡಿಹೋಗಿದ್ದರು. ಆಗ ಅವರಿಗೆ ಪೋಲೀಸ್ ರಕ್ಷಣೆ ಕೊಟ್ಟಿದ್ದು ಕೂಡ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಈ ಸಲ ಬಂದೂಕು, ಗುಂಡಿನ ದೊಡ್ಡ ದಾಳಿಯೇ ಆಗಿ ಕಲಬುರ್ಗಿ ತಮ್ಮ ಎಪ್ಪತ್ತೇಳನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಆ ಭಗವಂತ ಶಾಂತಿ ಕೊಡಲಿ. ಅವರ ಕುಟುಂಬಕ್ಕೆ ನೆಮ್ಮದಿ, ದುಃಖ ಭರಿಸುವ ಶಕ್ತಿ ಎಲ್ಲ ನೀಡಲಿ.

ಕಲಬುರ್ಗಿಯವರನ್ನು ಯಾಕೆ ಕೊಂದರು, ಅದೂ ಗುಂಡಿಟ್ಟು? ಅದಕ್ಕೆ ಪೋಲೀಸರ ತನಿಖೆಯೇ ಉತ್ತರ ಹೇಳಬೇಕು. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹಲವು ಜನರ, ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದರು ಅವರು. ಅದೇ ಕಾರಣವೇ ಅವರ ಕೊಲೆಗೆ? ಅಥವಾ ಅವರ ಅಭಿಪ್ರಾಯ, ಸಿದ್ಧಾಂತ, ಮೌಲ್ಯಗಳನ್ನು ಮೀರಿದ ಕಾರಣಗಳೂ ಇವೆಯೋ? 

ಈ ಲೇಖನದ ಮೊದಲ ವಾಕ್ಯದಲ್ಲಿ ಬರೆದೆ, 'ಧಾರವಾಡದ ಕಲ್ಯಾಣ ನಗರ ಬಡಾವಣೆಯಲ್ಲಿ "ಮತ್ತೊಮ್ಮೆ" ಬಂದೂಕು ಘರ್ಜಿಸಿದೆ' ಅಂತ. 'ಮತ್ತೊಮ್ಮೆ' ಅಂತ ಹೇಳಲಿಕ್ಕೆ ಮೊದಲು ಅಲ್ಲಿ ಯಾವಾಗ ಬಂದೂಕು ಮೊರೆಯುತ್ತಿತ್ತು? ಯಾಕೆ ಮೊರೆಯುತ್ತಿತ್ತು? ಯಾರು ಆ ಟೈಪಿನ ಕೋವಿ ಹುಚ್ಚಿನ ಕೋವಿದರಿದ್ದರು? ಅಂತೆಲ್ಲ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಬಂದರೆ ಅದಕ್ಕೆ ವಿವರಣೆ ಕೂಡ ಇದೆ. ನಮ್ಮ ಧಾರವಾಡದ ಮನೆಯಲ್ಲಿಯೇ ಕೋವಿ ಮೊರೆಯುತ್ತಿತ್ತು. ಪ್ರತಿವರ್ಷ ಆಯುಧ ಪೂಜೆಯಂದು, ಬರೋಬ್ಬರಿ ಆಯುಧವನ್ನೇ, ಅಂದರೆ ದೊಡ್ಡ ನಿಜವಾದ ಬಂದೂಕನ್ನೇ, ಪೂಜೆ ಮಾಡಿ, ಸಾಂಪ್ರದಾಯಕವಾಗಿ ಒಂದು ಗುಂಡನ್ನು ಗಾಳಿಯಲ್ಲಿ ಹಾರಿಸುವ ಸಂಪ್ರದಾಯ ಮೊದಲು ನಮ್ಮ ಹಳ್ಳಿ ಕಡೆ ಇತ್ತು. ಸಿರ್ಸಿ ಕಡೆ ಹಳ್ಳಿಯಲ್ಲಿದ್ದ ಬಂದೂಕನ್ನು ೧೯೯೫-೯೬ ರ ಹೊತ್ತಿಗೆ ತಂದೆಯವರು ಅವರ ಮಾವ ಅಂದರೆ ನಮ್ಮ ಅಜ್ಜನ (ಅಮ್ಮನ ಅಪ್ಪ) ಹತ್ತಿರ ಕೊಂಡುಕೊಂಡು, ಧಾರವಾಡಕ್ಕೆ ತಂದಿಟ್ಟುಕೊಂಡಿದ್ದರು. ಅಜ್ಜನಿಗೆ ಬೇಟೆ ಹುಚ್ಚಿತ್ತು. ಪ್ರಾಯದಲ್ಲಿ ದೊಡ್ಡ ಮಟ್ಟದ ಬೇಟೆ ಆಡಿದವನು ನಮ್ಮ ಮಾತಾಮಹ. ನಂತರ ೧೯೫೦ ರ ಹೊತ್ತಿಗೆ ಬೇಟೆಯನ್ನು ನಿಷೇಧಿಸಿ ಕಾನೂನುಗಳು ಬಂದ ನಂತರ ಬೇಟೆ ಕಮ್ಮಿಯಾಗಿತ್ತು. ಆದರೆ ತೋಟ, ಗದ್ದೆ ಹಾಳು ಮಾಡಲು ಬರುತ್ತಿದ್ದ ಕಾಡು ಹಂದಿ, ಮಂಗ ಇತ್ಯಾದಿಗಳ ಬೇಟೆ ಇತ್ತೀಚಿನವರೆಗೂ ನಡೆಯುತ್ತಿತ್ತು. ಕೊಂದ ಪಾಪ ತಿಂದು ಪರಿಹಾರ. ಹೆಗಡೆಗಳು ತೋಟ ಗದ್ದೆ ರಕ್ಷಿಸಿಕೊಳ್ಳಲು ಪ್ರಾಣಿಗಳನ್ನು ಕೊಂದರೆ ಕೆಲಸದವರು ತೆಗೆದುಕೊಂಡು ಹೋಗಿ ಮಸಾಲೆ ಹಾಕಿಕೊಂಡು ಸ್ವಾಹಾ ಮಾಡುತ್ತಿದ್ದರು. ಈಗ ಬಿಡಿ. ಗದ್ದೆ ಮಾಡುವದನ್ನೇ ಬಿಟ್ಟಾಗಿದೆ. ಭತ್ತದ, ಕಬ್ಬಿನ ಗದ್ದೆಗಳಲ್ಲಿ ಕಾಡು ಹುಲ್ಲು ಬೆಳೆಯುತ್ತದೆ. ಅದು ದನಗಳಿಗೆ ಆಗುತ್ತದೆ. ಕೃಷಿ ಕಾರ್ಮಿಕರದ್ದು ಅಷ್ಟು ತೊಂದರೆ, ಅಭಾವ. ಗದ್ದೆಯಂತೂ ಇಲ್ಲವೇ ಇಲ್ಲ. ಅಡಿಕೆ ತೋಟ ಅಷ್ಟಕಷ್ಟೇ. ಹಾಗಾಗಿ ಈಗ ಹಲವು ವರ್ಷಗಳಿಂದ ಬೇಟೆಯ ಪ್ರಶ್ನೆಯೇ ಬರುವದಿಲ್ಲ.

ಹೀಗೆಲ್ಲ ಆಗಿ ಅಜ್ಜನ ಮನೆಯ, ಹಳೇ ಕಾಲದ, ಮೇಡ್ ಇನ್ ಇಂಗ್ಲೆಂಡ್,  Webley & Scott of Birmingham, UK, ಬಂದೂಕನ್ನು ಅಜ್ಜನ ಮನೆಯವರು ಮಾರಲು ಹೊರಟಿದ್ದರು. ಕುಟುಂಬದ ಹಳೆಯ ಕಾಲದ ವಸ್ತು antique ಅಂತಾದರೂ ಸರಿ ಮನೆಯಲ್ಲೇ ಇರಲಿ ಅಂತ ನಮ್ಮ ತಂದೆಯವರು ಅದನ್ನು ತಂದಿಟ್ಟುಕೊಂಡಿದ್ದರು. ಬಂದೂಕನ್ನು ಹಾಗೇ ತಂದಿಟ್ಟುಕೊಳ್ಳಲು ಅದೇನು ಆಟಿಕೆ ಬಂದೂಕೇ? ಅಲ್ಲ. ಹಾಗಾಗಿ ಅದಕ್ಕೆ ಲೈಸೆನ್ಸ್ ಮಾಡಿಸಬೇಕು. ೧೯೯೬ ರಲ್ಲಿ, ತಮ್ಮ ಅರವತ್ತೆರೆಡು ಚಿಲ್ಲರೆ ವರ್ಷ ಇಳಿವಯಸ್ಸಿನಲ್ಲಿಯೂ ಇಲ್ಲದ ಖಟ್ಪಿಟಿ ಮಾಡಿ ಗನ್ ಲೈಸೆನ್ಸ್ ಮಾಡಿಸಿಕೊಂಡಿದ್ದರು ತಂದೆಯವರು. ಇಪ್ಪತ್ತು ವರ್ಷ ಲೈಸೆನ್ಸ್ ಇತ್ತು. ಈಗ ಅವರಿಗೆ ವಯಸ್ಸು ಎಂಬತ್ತರ ಮೇಲಾಯಿತು. ಈ ವಯಸ್ಸಿನಲ್ಲಿ ಗನ್ ಲೈಸೆನ್ಸ್ ನವೀಕರಣವಾಗುವದು ಕಷ್ಟ. ಮತ್ತೆ ಆ ಬಂದೂಕಿನ ವಾಗೈತಿ (maintenance) ಮಾಡುವದೂ ಸಾಧ್ಯವಿಲ್ಲ. ವಾಗೈತಿ ಮಾಡದೇ ಇಟ್ಟರೆ ತುಕ್ಕು ಹಿಡಿದು ಹಾಳಾಗಿ ಹೋಗುತ್ತದೆ. ಇವೆಲ್ಲ ಕಾರಣಗಳಿಂದ ಈಗ ಒಂದು ಆರು ತಿಂಗಳ ಹಿಂದೆ ನಮ್ಮ ಮನೆ ಬಂದೂಕನ್ನು ಮಾರಾಟ ಮಾಡಿದೆವು. ಮಾರಾಟ ಮಾಡಲು ತಂದೆಯವರಿಗೆ ಮನಸ್ಸೇ ಇರಲಿಲ್ಲ. ನನಗೆ, ಅಣ್ಣನಿಗೆ, 'ಲೈಸೆನ್ಸ್ ಮಾಡಿಸಿಕೊಳ್ಳಿ. ಅಮೇರಿಕಾಗೇ ತೆಗೆದುಕೊಂಡು ಹೋಗಿ ಇಟ್ಟುಕೊಳ್ಳಿ,' ಅಂತ ಬಹಳ ಹೇಳಿದ್ದರು. ಆದರೆ ನಮಗೆ ಅದು ಪ್ರಾಕ್ಟಿಕಲ್ ಅನ್ನಿಸಲಿಲ್ಲ. ಹೀಗಾಗಿ ಮನೆ ಬಂದೂಕನ್ನು ಆಪ್ತರೊಬ್ಬರ ಮೂಲಕ ಧಾರವಾಡ ಸಮೀಪದ ರೈತಾಪಿ ಜನರೊಬ್ಬರಿಗೆ ಮಾರಾಟ ಮಾಡಿದ್ದಾಯಿತು. ಹೀಗಾಗಿ ಇನ್ನು ಮುಂದೆ ನಮ್ಮ ಮನೆಯಲ್ಲಿ ಆಯುಧ ಪೂಜೆ ದಿವಸ ಬಂದೂಕು ಘರ್ಜಿಸುವದಿಲ್ಲ.

ಆ ಬಂದೂಕಿನಲ್ಲಿ ನಾನು ಗುಂಡು ಹಾರಿಸಿದ್ದು ಒಂದೇ ಒಂದು ಸಲ. ೧೯೯೬ ರಲ್ಲಿ. ಹುಟ್ಟಿದಾಗಿಂದ ಹೊನ್ನೆಗದ್ದೆ (ಸಿರಸಿ ಸಮೀಪ) ಹಳ್ಳಿಯ ಅಜ್ಜನ ಮನೆಯಲ್ಲಿ ಆ ಖತರ್ನಾಕ್ ಬಂದೂಕನ್ನು ಅಚ್ಚರಿಯಿಂದ ನೋಡುತ್ತಾ ಬೆಳೆದವನು ನಾನು. ಆ ಬಂದೂಕು, ಅದಕ್ಕೆ ಲೋಡ್ ಮಾಡುವ ದೊಡ್ಡ ಸೈಜಿನ ಕಡುಗೆಂಪು ಬಣ್ಣದ ಕಾರ್ತೂಸು ಎಲ್ಲ ದೊಡ್ಡ ಅಚ್ಚರಿಗಳೇ. ಅಜ್ಜನ ದೊಡ್ಡ ಮಂಚದ ಹಿಂದೆ ಸದಾ ತೂಗಾಡುತ್ತ ಇರುತ್ತಿತ್ತು ಆ ಬಂದೂಕು. ಅದನ್ನು ಮುಟ್ಟಿ, ಸಂಭ್ರಮಿಸಿ, ಕುದರೆ (ಟ್ರಿಗರ್) ಎಳೆದು, ಗುಂಡಿಲ್ಲದ ಖಾಲಿ ಬಂದೂಕನ್ನು ಕ್ಲಿಕ್ ಕ್ಲಿಕ್ ಅನ್ನಿಸಿಬಿಟ್ಟರೆ ಏನೋ ಸಾಧಿಸಿದ ಹೆಮ್ಮೆ. ೧೯೯೬ ರಲ್ಲಿ ಆವತ್ತು ಆಯುಧ ಪೂಜೆಯ ದಿನವಲ್ಲ. ಆದರೆ ಗನ್ ಹೊಸದಾಗಿ ಮನೆಗೆ ಬಂದಿತ್ತು. ಆಗಷ್ಟೇ ನಾನೂ ಸಹ  ಆಫ್ರಿಕಾದ ಟಾಂಜಾನಿಯದಲ್ಲಿ ಒಂದು ವರ್ಷ ಕೆಲಸ ಮಾಡಿ ವಾಪಸ್ ಭಾರತಕ್ಕೆ ಬಂದಿದ್ದೆ. ಬೆಂಗಳೂರಿಗೆ ಬಂದು ಇಳಿದಿವ ನಂತರ ಧಾರವಾಡಕ್ಕೆ ಬಂದಿದ್ದೆ. ನನಗೆ ಗುಂಡು ಹಾರಿಸುವ ಆಸಕ್ತಿಯೇನೂ ಜಾಸ್ತಿ ಇರಲಿಲ್ಲ. ಆದರೆ ತಂದೆಯವರಿಗೆ ಸಿಕ್ಕಾಪಟ್ಟೆ ಹುರುಪು. ಆಗ ಮಾತ್ರ ಲೈಸೆನ್ಸ್ ತೆಗೆದುಕೊಂಡಿದ್ದರು. ಸಿಕ್ಕಾಪಟ್ಟೆ ಉಪಟಳ ಕೊಡುತ್ತಿದ್ದ ಮಂಗಗಳನ್ನು ಬರೋಬ್ಬರಿ ಕೋವಿ ಉಪಯೋಗಿಸಿ ತಹಬಂದಿಗೆ ತಂದುಕೊಂಡಿದ್ದರು. ಸರಿಯಾಗಿ ಗುರಿಯಿಟ್ಟು ಮಂಗಗಳ ಗುಂಪಿನ ನಾಯಕನನ್ನೇ 'ಢಂ!' ಅನ್ನಿಸಿಬಿಟ್ಟಿದ್ದರು. ಅಷ್ಟೇ ಮಾಡಿದ್ದು. ಖಡಕ್ ಗುರಿಯೆಂದರೆ ಅದು! ಹೇಳಿಕೇಳಿ ಬಾಲ್ಯದಲ್ಲಿ ಕಾಡು ಮೇಡು ಅಲೆದು, ಕಬ್ಬಿನ ಗದ್ದೆಗೆ ಬರುವ ಪ್ರಾಣಿಗಳನ್ನು ಬೇಟೆಯಾಡಿ ಬರೋಬ್ಬರಿ ಗುರಿಯಿಡುವದನ್ನು ಕಲಿತವರು ನಮ್ಮ ತಂದೆಯವರು. ಇನ್ನು ಅವರ ಅಣ್ಣ, ಅಂದರೆ ನಮ್ಮ ದಿವಂಗತ ದೊಡ್ಡಪ್ಪ ಮತ್ತು ಅವನ ಮಕ್ಕಳ ಕತೆಯಂತೂ ಬಿಡಿ. ಈಗಲೂ ದಟ್ಟ ಕಾಡಿನ ನಡುವೆ ಒಂಟಿ ಮನೆಯಲ್ಲಿ ಇರುತ್ತಾರೆ. ಪಕ್ಕದಲ್ಲೇ ಹುಲಿ ಘರ್ಜಿಸುತ್ತದೆ. ಮನೆಯಿಂದ ಅನತಿ ದೂರದಲ್ಲಿ ಆನೆಗಳು ಘೀಳಿಡುತ್ತಾ ಸಾಗುತ್ತವೆ. ಅವರು ಅವೆಷ್ಟು ಪ್ರಾಣಿಗಳನ್ನು ಮಟಾಶ್ ಮಾಡಿಬಿಟ್ಟಿದ್ದಾರೋ! ನಮ್ಮ ದೊಡ್ಡಪ್ಪನಂತೂ ೧೯೪೦, ೫೦ ರ ದಶಕದಲ್ಲಿ ಹುಲಿ, ಆನೆ ಇತ್ಯಾದಿ ಎಲ್ಲ ಬೇಟೆ ಆಡಿದವರೇ. ಬೇಟೆ ಆಡಲಿಲ್ಲ ಅಂದರೆ ಅವು ಇವರನ್ನು ಬೇಟೆಯಾಡಿಬಿಡುತ್ತಿದ್ದವು. ಹಾಗಿತ್ತು ಪರಿಸ್ಥಿತಿ. Hunting was then an absolute necessity for survival . ಪಶ್ಚಿಮ ಘಟ್ಟಗಳ ದಟ್ಟ ಅಡವಿ ಮಧ್ಯೆ ಹೋಗಿ, ಹೊಸ ಗದ್ದೆ ತೋಟ ಮಾಡಿಕೊಂಡು, ಬಾಳು ಕಟ್ಟಿಕೊಳ್ಳುವದು ಅಂದರೆ ಹುಡುಗಾಟದ ಮಾತೇ?? ಅದನ್ನು ಮಾಡಿ ತೋರಿಸಿದವರು ನಮ್ಮ ದೊಡ್ಡಪ್ಪ. ಅವರ ಬೇಟೆಯ ಕಥನಗಳನ್ನು ಬರೆದರೆ ಬೇಟೆಗಾರ ಕಮ್ ಲೇಖಕ ಕೆದಂಬಾಡಿ ಜತ್ತಪ್ಪ ರೈ ಅವರ ಬೇಟೆಯ ಪುಸ್ತಕಗಳಿಗೆ ಸಡ್ಡು ಹೊಡೆದಾವು!

ಸರಿ, ಬಂದೂಕು ಹಾರಿಸಬೇಕು. ತಂದೆಯವರು ನನ್ನ ಕೈಗೆ ಒಂದು ಒಂದು ಕಾರ್ತೂಸು ಕೊಟ್ಟರು. ಎಲ್ಲ ವಿವರವಾಗಿ ಹೇಳಿದರು. ಗಮನವಿಟ್ಟು ಕೇಳಿಸಿಕೊಂಡೆ. ಅದರೂ ಒಂದು ತರಹದ ಅಳುಕು. ಬರಿ ಖಾಲಿ ಕೋವಿಯಿದ್ದಾಗ ಏನೂ ಅನ್ನಿಸುವದಿಲ್ಲ. ಜೊತೆಗೆ  ಹೆಬ್ಬೆರಳಿನ ಗಾತ್ರದ ಕೆಂಪು ಬಣ್ಣದ ಕಾರ್ತೂಸು ಕೈಯಲ್ಲಿ ಬಂದರೆ ಅಷ್ಟೇ ಮತ್ತೆ. ಇಡೀ ದೇಹ ಕಂಪಿಸಿಹೋಗುತ್ತದೆ. ಕಾರ್ತೂಸ್ ಜೊತೆಗಿದ್ದರೆ ಒಂದು ಒಲೆ ಊದುವ ಕೊಳವೆಯಂತಹ ಸಾಮಾನ್ಯ ನಳಿಕೆಯಂತಹ ಬಂದೂಕು ಎಂತಹ ಶಕ್ತಿಶಾಲಿ ಆಯುಧವಾಗಿ ಬಿಡುತ್ತದೆ! ಒಂದು ಆನೆಯನ್ನೂ ಸಹ ಒಂದು ಹೆಬ್ಬರಳಿನ ಗಾತ್ರದ ಕಾರ್ತೂಸು ಅಡ್ಡಡ್ಡ ಮಲಗಿಸಿಬಿಡುತ್ತದೆ. ಏನಾದರೂ ಹೆಚ್ಚು ಕಮ್ಮಿಯಾದರೆ ಮತ್ತೊಬ್ಬರ ಪ್ರಾಣ ಹೋಗುತ್ತದೆ. ಅದೆಷ್ಟು ಮಂದಿ ಪೊರಪಾಟಿನಲ್ಲಿ ತಮ್ಮದೇ ಮನೆ ಮಂದಿಯ ಪ್ರಾಣ ತೆಗೆದಿಲ್ಲ? ಇನ್ನೂ ಕೆಲವರು ಬಂದೂಕು ಕ್ಲೀನ್ ಮಾಡುವಾಗ ತಮ್ಮದೇ ಪ್ರಾಣ ಕಳೆದುಕೊಂಡಿದ್ದಾರೆ.


ನಮ್ಮ ಬಂದೂಕಿನ ಕಾರ್ತೂಸುಗಳು ಸುಮಾರು ಹೀಗೇ ಇದ್ದವು.


ಕಡುಗೆಂಪು ಬಣ್ಣದ ಕಾರ್ತೂಸು ಕೈಗೆ ಬಂದಾಗ ನನ್ನ ಎದೆ ಧಕ್ ಧಕ್. ಮಹಾ ತೂಕದ ಸಿಕ್ಕಾಪಟ್ಟೆ ವಜನದ ಬಂದೂಕು ಅದು. ಅದನ್ನು ಮಧ್ಯದಲ್ಲಿ ಮುರಿದಂತೆ ಮಾಡಿ ತೆಗೆದೆರೆ ಕಾರ್ತೂಸ್ ತುಂಬುವ ಚೇಂಬರ್ ಕಾಣುತ್ತಿತ್ತು. ಮುರಿದಂತೆ ಮಾಡಿ, ಸಾವಕಾಶವಾಗಿ ಚೇಂಬರ್ ಒಳಗೆ ಕಾರ್ತೂಸನ್ನು ಲೋಡ್ ಮಾಡಿದೆ. ಮತ್ತೆ ಒಂದು ಝಟಕಾ ಕೊಟ್ಟು ಬಂದೂಕನ್ನು ಸೀದಾ ಮಾಡಿಕೊಂಡೆ. ಮುಂದಿನದು ದೊಡ್ಡ ಖತರ್ನಾಕ್ ಕೆಲಸ. ಬರೋಬ್ಬರಿ ಸೂಚನೆ ಕೊಡುತ್ತ ತಂದೆಯವರು ಪಕ್ಕಕ್ಕೇ ನಿಂತಿದ್ದರು. ಮೊದಲು ಬಂದೂಕನ್ನು ಎತ್ತಿ, ಹೆಗಲಿಗೆ ಆನಿಸಿಕೋ ಅಂದರು. recoil ಸಿಕ್ಕಾಪಟ್ಟೆ ಆಗಿ ಬರೋಬ್ಬರಿ ಒದೆಯುತ್ತದೆ ಅಂತ ಗೊತ್ತಿತ್ತು. ಮತ್ತೆ ಒಳಗಿರುವದು ದೊಡ್ಡ ಪ್ರಮಾಣದ ಆನೆ ಕೊಲ್ಲುವ ಕಾರ್ತೂಸು. ಸಿಕ್ಕಾಪಟ್ಟೆ recoil ಆಗೇ ಆಗುತ್ತದೆ. ಹಾಗಾಗಿ ಸರಿಯಾಗಿ ಭುಜಕ್ಕೆ ಒತ್ತಿ ಇಟ್ಟುಕೊಳ್ಳಬೇಕು. ನಂತರ ಮೇಲಿನ ಒಂದು ಲೀವರ್ ಎಳೆಯಬೇಕು. ಈಗ ಶೂಟ್ ಮಾಡಲು ಬಂದೂಕು ರೆಡಿ. ಇದಾದ ಮೇಲೆ ಏಕಾಗ್ರತೆ ಇರಬೇಕು. ಯಾಕೆಂದರೆ ಈಗ ಕುದುರೆ ಎಳೆದುಬಿಟ್ಟರೆ 'ಢಂ!' ಅಂತ ಫೈರ್ ಆಗೇಬಿಡುತ್ತದೆ. ಸರಿ. ಲೀವರ್ ಎಳೆದು, ಬಂದೂಕನ್ನು ಕಾಕ್ (cock) ಮಾಡಿ, ಕುದುರೆ ಎಳೆದೆ ನೋಡಿ! ಅಬ್ಬಾ! ಅದು ಎಂತಹ ಅನುಭವ ಮಾರಾಯರೇ! ವರ್ಣಿಸಲು ಅಸಾಧ್ಯ! ಹಾಗಿರುತ್ತದೆ ಬಂದೂಕು ಹಾರಿಸಿದ ಮೊದಲ ಅನುಭವ. 'ಢಂ!' ಅಂತ ದೊಡ್ಡ ಶಬ್ದ ಮಾಡುತ್ತಾ ಫೈರ್ ಆಯಿತು. ಎಣಿಸಿದಂತೆ ಬಂದೂಕು ಝಾಡಿಸಿ ಒದೆಯಿತು. ಸರಿಯಾಗಿ ಭುಜಕ್ಕೆ ಆನಿಸಿಟ್ಟುಕೊಂಡಿದ್ದರಿಂದ ಗನ್ನು ಕೈಯಲ್ಲೇ ಉಳಿಯಿತು. ಇಲ್ಲವಾದರೆ ಬಂದೂಕು ಕೈತಪ್ಪಿ ಕೆಳಗೆ ಬೀಳುವದು ಖಾತ್ರಿಯಿತ್ತು.

ಹೀಗೆ ೧೯೯೬ ರಿಂದ ನಮ್ಮ ಧಾರವಾಡದ ಮನೆಯಲ್ಲಿ ನಿಜವಾದ ದೊಡ್ಡ ಬಂದೂಕೇ ಇತ್ತು. ಪ್ರತಿ ವರ್ಷ ಆಯುಧ ಪೂಜೆಯ ದಿವಸ, ತಂದೆಯವರು ಬರೋಬ್ಬರಿ ಆ ಬಂದೂಕೆಂಬ ಆಯುಧವನ್ನೇ ಪೂಜೆ ಮಾಡಿ, ಒಂದು ಕಾರ್ತೂಸ್ ಗಾಳಿಯಲ್ಲಿ ಹಾರಿಸಿ, ಇಡೀ ಬಡಾವಣೆಯೇ ಬೆಚ್ಚಿಬೀಳುವಂತಹ 'ಢಂ!' ಅನ್ನುವ ಸದ್ದು ಮಾಡುತ್ತಿದ್ದರು ಅಂತ ನೆನಪು. ಒಂದೆರೆಡು ಬಾರಿ ದೊಡ್ಡ ಗುಂಡಿನಲ್ಲೇ ಮಂಗಗಳನ್ನು ಹೊಡೆದು ಕೊಂದಿದ್ದರೂ ಅದು ರಿಸ್ಕಿ ಅಂತ ನಂತರ ವಿಚಾರ ಮಾಡಿದರು. ಮತ್ತೆ ಅಕ್ಕಪಕ್ಕಕ್ಕೆ ತುಂಬಾ ಮನೆಗಳು ಬೇರೆ ಬಂದುಬಿಟ್ಟವಲ್ಲ. ಎಲ್ಲಿಯಾದರೂ ಗುರಿ ಮಿಸ್ಸಾಗಿ ಯಾರಿಗಾದರೂ ತಾಗಿದರೆ ಅದು ಮಹಾ ದೊಡ್ಡ ಲಫಡಾ ಆದೀತು ಅಂತ ವಿಚಾರ ಮಾಡಿದರು. ಆದರೆ ಆವಾಗ ಮಂಗನ ಹಾವಳಿ ಇಷ್ಟಿತ್ತು ಅಂದರೆ ಹೇಳಲು ಸಾಧ್ಯವಿಲ್ಲ. ಅಷ್ಟಿತ್ತು. ಅಷ್ಟೂ ತೆಂಗಿನ ಕಾಯಿಯ ಮಿಡಿಗಳನ್ನೇ ತಿಂದೋ, ರುಚಿ ನೋಡೋ ಹಾವಳಿ ಎಬ್ಬಿಸಿಬಿಡುತ್ತಿದ್ದವು ಆ ಮಂಗಗಳು. ನಮ್ಮ ಕಂಪೌಂಡಿನಲ್ಲಿ ಅಷ್ಟೊಂದು ತೆಂಗಿನ ಮರಗಳಿದ್ದರೂ ಒಂದೇ ಒಂದು ಕಾಯಿ ಸಿಕ್ಕರೆ ಕೇಳಿ. ಕೆಲವು ಮಂಗಗಳು ಅದರಲ್ಲೂ ಕೆಂಪು ಮಂಗಗಳು ಅದೆಷ್ಟು ಜೋರಿರುತ್ತಿದ್ದವು ಅಂದರೆ ಯಾವದೇ ಭಯವಿಲ್ಲದೆ ಮನೆಯೊಳಗೇ ನುಗ್ಗಿ, ಸೀದಾ ಅಡುಗೆ ಮನೆಗೆ ನುಗ್ಗಿ,  ತರಕಾರಿ, ಹಣ್ಣು ಹಂಪಲಗಳನ್ನು ಕದ್ದೊಯ್ಯುವದು ಒಂದೇ ಅಲ್ಲ ಅಲ್ಲೇ ಡೈನಿಂಗ್ ಟೇಬಲ್ ಮೇಲೆಯೇ ಕೂತು ಸ್ವಾಹಾ ಮಾಡುತ್ತಿದ್ದವು. ಅಷ್ಟರ ಮಟ್ಟಿಗೆ ಮಂಗಗಳ ಹಾವಳಿ. ಹಾಗಾಗಿ ಏನಾದರೂ ಉಪಾಯ ಮಾಡಲೇಬೇಕಿತ್ತು. ಆಗ ಮತ್ತೆ ಬಂದೂಕು ಬೇಕಾಯಿತು. ಮಂಗಗಳನ್ನು ಬೆದರಿಸಲು ಅಂತಲೇ ಒಂದು ಏರ್ ಗನ್ ಖರೀದಿ ಮಾಡಿ ತಂದರು. ಅದಕ್ಕೆ ಲೈಸೆನ್ಸ್ ಏನೂ ಬೇಕಿಲ್ಲ. ಮತ್ತೆ ಮಂಗಗಳನ್ನು ಓಡಿಸಲು ಕೂಡ ಬರೋಬ್ಬರಿ ಆಗುತ್ತದೆ. ಏರ್ ಗನ್ನಿನಿಂದ ಗುಂಡು ಬರೋಬ್ಬರಿ ಬಿದ್ದರೆ ಮಂಗ ಸತ್ತರೂ ಸತ್ತಿತೇ. ಆಯಕಟ್ಟಿನ ಜಾಗಕ್ಕೆ ಬಿದ್ದರೆ ಮಂಗವೇನು ಮನುಷ್ಯ ಸಹ ಖಲಾಸ್. ಹಾಗಿರುತ್ತವೆ ಏರ್ ಗನ್ನಿನ ಸಣ್ಣ ಸಣ್ಣ ಗುಂಡುಗಳು. ಆದರೆ ರಿಸ್ಕ್ ಕಮ್ಮಿ. ದೂರದಿಂದ ಹಾರಿಸಿದಾಗ ನೋವಾಗುತ್ತದೆಯೇ ವಿನಹ ಸಾಯುವದು ಕಮ್ಮಿ. ಹಕ್ಕಿ ಪಿಕ್ಕಿ ಮಾತ್ರ ಮಟಾಶ್! ಡೌಟೇ ಬೇಡ.


ನಮ್ಮನೆ ಏರ್ ಗನ್. ಸುಮಾರು ಹೀಗೇ ಇತ್ತು. ಇಷ್ಟು polished ಇರಲಿಲ್ಲ. ಹೇಳಿಕೇಳಿ ದೇಸಿ ಮಾಲು.

ಏರ್ ಗನ್ನಿನ ಸಣ್ಣ ಸಣ್ಣ ಬುಲೆಟ್ಸ್

ಆದರೆ ಆ ಏರ್ ಗನ್ನಿನಿಂದ ಒಂದು ದೊಡ್ಡ fatal ಲಫಡಾ ಆಗುವದು ಸ್ವಲ್ಪದರಲ್ಲೇ ತಪ್ಪಿದ್ದು ದೇವರ ದೊಡ್ಡ ಅನುಗ್ರಹವೇ. ಆ ಏರ್ ಗನ್ ಸದಾ ಅಲ್ಲೇ ಹಿಂದಿನ ವರಾಂಡಾದಲ್ಲಿ ಹೊರಗೇ ಇರುತ್ತಿತ್ತು. ಎಲ್ಲರಿಗೂ ಕಾಣುತ್ತಿತ್ತು. ಮತ್ತೆ ಮನೆಯಲ್ಲಿ ಅಮ್ಮ, ಅಪ್ಪ ಇಬ್ಬರೇ. ಚಿಕ್ಕ ಮಕ್ಕಳಿಲ್ಲ. ಹಾಗಾಗಿ ಅದನ್ನು ಬೇರೆ ಯಾರೋ ತೆಗೆದುಕೊಂಡು, ಏನೇನೋ ಮಾಡಿಯಾರು ಅಂತ ತಲೆಬಿಸಿ ಇಲ್ಲ. ಆವತ್ತು ದಾಂಡೇಲಿಯಿಂದ ನಮ್ಮ ಯಾರೋ ಆಪ್ತರು ಕುಟುಂಬ ಸಮೇತ ಬಂದಿದ್ದಾರೆ. ಅವರ ನಾಲ್ಕೈದು ವರ್ಷದ ಚಿಕ್ಕ ಮಗ ಸಿಕ್ಕಾಪಟ್ಟೆ ಕಿಲಾಡಿ. ಅವನಿಗೆ ಆ ಏರ್ ಗನ್ನಿನ ಮೇಲೆ ಕಣ್ಣು. ಹಿಂದೆ ಮುಂದೆ ನೋಡಿಲ್ಲ. ಕಂಡಿದ್ದನ್ನು ಎತ್ತಿಕೊಂಡೇಬಿಟ್ಟಿದ್ದಾನೆ. ದೊಡ್ಡವರು ಗಮನಿಸಿಲ್ಲ. ಗನ್ ಎತ್ತಿಕೊಂಡವ ಆಟದ ಮಾದರಿಯಲ್ಲಿ ಆತನ ಅಕ್ಕನಿಗೆ ಗುರಿಯಿಟ್ಟು ಗನ್ನಿನ ಕುದುರೆ ಎಳೆದೇಬಿಟ್ಟಿದ್ದಾನೆ. ಯಾವಾಗಲೂ ಖಾಲಿ ಇರುತ್ತಿದ್ದ ಆ ಏರ್ ಗನ್ನಿನಲ್ಲಿ ಅಂದು ಯಾವದೋ ಮಿಸ್ಟೇಕಿನಲ್ಲಿ ಒಂದು ಗುಂಡು ಉಳಿದುಕೊಂಡಿತ್ತು. 'ಫಟ್!' ಅಂತ ಚಿಕ್ಕ ಪಟಾಕಿ ಹೊಡೆದ ಮಾದರಿಯಲ್ಲಿ ಏರ್ ಗನ್ ಫೈರ್ ಆಗೇಬಿಟ್ಟಿದೆ. ನಾಲ್ಕೈದು ವರ್ಷದ ಆ ಹುಡುಗ ಫುಲ್ ಥಂಡಾ! ಆ ಹುಡುಗನ ಖಾಸಾ ಅಕ್ಕ ಅವನ ಮುಂದೆ ಕೆಲವೇ ಅಡಿಗಳ ಅಂತರದಲ್ಲಿ ನಿಂತಿದ್ದಾಳೆ. ಹಾಗಿದ್ದರೂ ಅವನ ಗುರಿ ತಪ್ಪಿದೆ. ದೇವರೇ ತಪ್ಪಿಸಿದ್ದಾನೆ. ಶಬ್ದ ಕೇಳಿದ ಹಿರಿಯರು ಓಡಿ ಬಂದು ನೋಡಿದರೆ ಕಂಡವರು ಥಂಡಾ ಹೊಡೆದು ನಿಂತಿದ್ದ ಈ ಇಬ್ಬರು ಸಣ್ಣ ಹುಡುಗರು. ಆಗಿದ್ದನ್ನು ಕೇಳಿದ ದೊಡ್ಡವರು ದೇವರಿಗೆ ಸಾವಿರ ನಮಸ್ಕಾರ ಹಾಕಿದ್ದಾರೆ. ದೊಡ್ಡದೊಂದು ಅವಘಡ ತಪ್ಪಿಸಿದ್ದಕ್ಕೆ ಕಪ್ಕಪಾಳಕ್ಕೆ ರಪ್ರಪಾ ಅಂತ ತಟ್ಟಿಕೊಂಡು ದೇವರ ದಯೆಗೆ ಧನ್ಯವಾದ ಹೇಳಿದ್ದಾರೆ. ಅಷ್ಟು ಹತ್ತಿರದಿಂದ ಆ ಏರ್ ಗನ್ನಿನ ಸಣ್ಣ ಗುಂಡೇ ತಾಗಿದ್ದರೂ ಆ ಏಳೆಂಟು ವರ್ಷದ ಹುಡುಗಿಗೆ ಏನಾಗುತ್ತಿತ್ತೋ ಅಂತ ನೆನಸಿಕೊಂಡರೆ ಇವತ್ತಿಗೂ ಮೈ ಜುಮ್ ಅನ್ನುತ್ತದೆ. ಮಂಗಗಳನ್ನು ಓಡಿಸಿದ ನಂತರ ಯಾವದೋ ಪೊರಪಾಟಿನಲ್ಲಿ ಒಂದು ಗುಂಡು ಉಳಿದುಬಿಟ್ಟಿತ್ತು ಅಂತ ಕಾಣುತ್ತದೆ. ಏರ್ ಗನ್ನಿಗೆ ಒಂದೇ ಸಲಕ್ಕೆ ಸುಮಾರು ಗುಂಡುಗಳನ್ನು ತುಂಬಬಹದು. ಒಂದರ ನಂತರ ಇನ್ನೊಂದು ಚೇಂಬರಿಗೆ ಬರುವ ವ್ಯವಸ್ಥೆ ಇರುತ್ತದೆ.

ಅಂದು ಆ ಏರ್ ಗನ್ನಿನಿಂದ ಡೇಂಜರಸ್ ಭಾನಗಡಿ ಮಾಡಿಕೊಂಡಿದ್ದ ಆ ಸಣ್ಣ ಮಾಣಿಯ ಹೆಸರು ಗಜಾನನ ಉರ್ಫ್ ಗಜೂ ಅಂತಾಗಿತ್ತು. ಮೂರು ಜನ ಅಕ್ಕಂದಿರ ನಂತರ ಹುಟ್ಟಿದ ಅಪರೂಪದ ಹುಡುಗ. ಈ ಲಫಡಾ ಆದ ನಂತರ ಅವನಿಗೆ 'ಗನ್ ಗಜಾನನ' ಅಂತಲೇ nickname ಕೊಟ್ಟಿದ್ದರು ನಮ್ಮ ಅಮ್ಮ. ನಾನು ಅವನನ್ನು ನೋಡಿಲ್ಲ. ನಮಗಿಂತ ತುಂಬಾ ಚಿಕ್ಕವನು. ಬದುಕಿದ್ದರೆ ಇವತ್ತಿಗೆ ಒಂದು ೨೦-೨೨ ವರ್ಷದ ಚಂದದ ಹುಡುಗನಾಗುತ್ತಿದ್ದನೋ ಏನೋ. ದುರಾದೃಷ್ಟ! ಚಿಕ್ಕವನಿದ್ದಾಗ ಏರ್ ಗನ್ನಿನಿಂದ ಆಕಸ್ಮಿಕ ಪೊರಪಾಟಿನಲ್ಲಿ ಅಕ್ಕನನ್ನೇ  ಕೊಂದುಬಿಡಬಹುದಾಗಿದ್ದ ಗನ್ ಗಜಾನನ ಭೀಕರ ರಸ್ತೆ ಅಪಘಾತವೊಂದರಲ್ಲಿ ಈಗ ಒಂದೆರೆಡು ವರ್ಷದ ಹಿಂದೆ ತೀರಿಹೋದ. ಛೇ! ಎಂತಹ ಕೆಟ್ಟ ಘಟನೆ ಮಾರಾಯರೇ! ಅದಾಗುವ ಸ್ವಲ್ಪೇ ದಿವಸಗಳ ಹಿಂದೆ ಅವನ ತಂದೆಯವರು ಸಹಜವಾಗಿಯೇ ನಿಧನರಾಗಿದ್ದರು. ಅವರಿಗೆ ಒಂದು ಅರವತ್ತು ವರ್ಷವಾಗಿತ್ತು. ಹೃದಯಾಘಾತವಾಗಿ ಸಾವು ಬಂತು. ಅದು ಒಂದು ಮಾತು. ಆದರೆ ಈ ಗನ್ ಗಜಾನನ ಇನ್ನೂ ಸಣ್ಣ ಮಾಣಿ. ಮೋಟಾರ್ ಬೈಕ್ ಅಪಘಾತದಲ್ಲಿ ಹೋಗಿಬಿಟ್ಟ ಅಂತ ಕೇಳಿ ತುಂಬಾ ದುಃಖವಾಗಿತ್ತು. ಅವನ ತಾಯಿಯ ದುಃಖಕ್ಕೆ ಏನು ಹೇಳೋಣ? ಮೂರು ಹೆಣ್ಣು ಮಕ್ಕಳ ನಂತರ ಅವನನ್ನು ಹೆತ್ತಿದ್ದರು. ಅಕ್ಕರೆಯಿಂದ ಬೆಳೆಸಿದ್ದರು. ಈಗ ಅವನೇ ಇಲ್ಲ. ಪುತ್ರ ಶೋಕ. ಅದು ನಿರಂತರ. ಉಳಿದ ಹುಡುಗಿಯರು ಒಳ್ಳೆ ರೀತಿಯಲ್ಲಿ ಬಾಳು ಕಟ್ಟಿಕೊಂಡಿದ್ದಾರೆ. ಅವರನ್ನು ನೋಡುತ್ತಾ ದಿನ ದೂಡುತ್ತಿದ್ದಾರೆ ಆಕೆ. ಛೇ!

ಗನ್ ಗಜಾನನನ ಈ ಭಾನಗಡಿ ಆದ ಮೇಲೆ ಏರ್ ಗನ್ನಿಗೂ ವಿಶೇಷ ರಕ್ಷಣೆ. ಒಳಗೆ ಬರೋಬ್ಬರಿ under lock and key. ಮುಂದೆ ಏರ್ ಗನ್ ಸಹಿತ ಜಾಸ್ತಿ ಉಪಯೋಗ ಮಾಡುವ ಸಂದರ್ಭ ಕೂಡ ಬರಲೇ ಇಲ್ಲ. ಏರ್ ಗನ್ನಿನ ಸಣ್ಣ ಗುಂಡುಗಳಿಂದ ಬರೋಬ್ಬರಿ ಏಟು ತಿಂದಿದ್ದ ಮಂಗಗಳು ನಮ್ಮ ಕಂಪೌಂಡ್ ಕಡೆ ಬರುವದನ್ನೇ ಕಮ್ಮಿ ಮಾಡಿದವು. ಬಂದರೂ ಗನ್ ಹಾರಿಸುವ ಅವಶ್ಯಕತೆ ಅಷ್ಟಾಗಿ ಬರುತ್ತಿರಲಿಲ್ಲ. ಗನ್ ತೋರಿಸಿದರೂ ಸಾಕು ಓಡಿ ಹೋಗುತ್ತಿದ್ದವು. ನಮ್ಮ ತಾಯಿಯವರೂ ಸಹ ಗನ್ ಕೇವಲ ತೋರಿಸಿ ತೋರಿಸಿಯೇ ಎಷ್ಟೋ ಮಂಗಗಳನ್ನು ಓಡಿಸಿಬಿಟ್ಟಿದ್ದರು. ಒಂದು ಕೈಯಲ್ಲಿ ಅಡಿಗೆ ಸೌಟು, ಇನ್ನೊಂದು ಕೈಯಲ್ಲಿ ಖಾಲಿ ಏರ್ ಗನ್. ಆ ದೃಶ್ಯವನ್ನು ನೆನಪಿಸಿಕೊಂಡರೂ ಸಾಕು ಈಗಲೂ ಸಿಕ್ಕಾಪಟ್ಟೆ ನಗು ಬರುತ್ತದೆ.

ಆಗ ಮತ್ತೊಂದು ತೊಂದರೆ ಶುರುವಾಯಿತು. ಮಂಗಗಳು ನಮ್ಮ ಮನೆಯ ಏರ್ ಗನ್ ನೋಡಿದರೂ ಸಾಕು ಓಡಿಹೋಗುತ್ತವೆ ಅಂತ ತಿಳಿದ ನೆರೆಹೊರೆಯ ಮಂದಿ, 'ಆಂಟಿ, ಗನ್ ಕೊಡ್ರಿ. ಅಂಕಲ್, ಸ್ವಲ್ಪ ಗನ್ ಕೊಡ್ರಿ. ಮಂಗ್ಯಾನ್ನ ಓಡಿಸಿ, ವಾಪಸ್ ತಂದು ಕೊಡ್ತೇವಿ. ಖಾಲಿ ಗನ್ ಕೊಡ್ರಿ ಸಾಕು,' ಅಂತ ಇಲ್ಲದ ಲೊಟ್ಟೆ ಶುರು ಮಾಡಿಕೊಂಡರು. ಅದೊಂದು ದೊಡ್ಡ ತಲೆನೋವು. ನಾವು ಖಾಲಿ ಕೋವಿಯನ್ನೇ ಕೊಟ್ಟರೂ, ಇವರು ತಮ್ಮದೇ ಗುಂಡು ತುಂಬಿಕೊಂಡು ಏನಾದರೂ ಅನಾಹುತ ಮಾಡಿಕೊಂಡರೆ ಅಂತ ಚಿಂತೆ ಮನೆಯವರಿಗೆ. ಆದರೂ ಖಾಸ್ ನೆರೆಹೊರೆಯವರಿಗೆ ಗನ್ ಕೊಡುತ್ತಿದ್ದರು ಅಂತ ನೆನಪು. ಮತ್ತೆ ಇದೆಲ್ಲ ಹಳೆಯ ಮಾತು. ಆಗ ತಂದೆಯವರಿಗೂ ಮಂಗನ ಬೇಟೆ ಅಂದರೆ ಸಿಕ್ಕಾಪಟ್ಟೆ ಹುರುಪು. 'ನಡೀರಿ. ಮಂಗ್ಯಾ ಎಲ್ಲದ ಅಂತ ತೋರಿಸಿರಿ. ನಾನೇ ಗುಂಡು ಹೊಡೆದು ಓಡಿಸಿಬಿಡ್ತೇನಿ!' ಅಂತ ಒಮ್ಮೊಮ್ಮೆ ಅವರೇ ಏರ್ ಗನ್, ಸಣ್ಣ ಗುಂಡುಗಳನ್ನು ತೆಗೆದುಕೊಂಡು ಹೊರಟೇಬಿಡುತ್ತಿದ್ದರು. ಅದು ಅವರ 'ಸಮಾಜ ಸೇವೆ'ಯ ಮತ್ತೊಂದು ಮುಖ! ಒಟ್ಟಿನಲ್ಲಿ ಮಾಸ್ತರ್ ಮಂದಿಗೆ ಮಂಗ್ಯಾಗಳಿಂದ ಮುಕ್ತಿಯಿಲ್ಲ ಅಂತ ನಮ್ಮ ಜೋಕು. ಮಾಸ್ತರಿಕೆ ಮಾಡುತ್ತಿದ್ದಾಗ ಮಂಗ್ಯಾನಂತಹ 'ಒಳ್ಳೆ' ವಿದ್ಯಾರ್ಥಿಗಳು. ರಿಟೈರ್ ಆದ ನಂತರ ನಿಜವಾದ ಮಂಗಗಳ ಉಪದ್ರವ. ಏನು ಕೇಳ್ತೀರಿ! ತಂದೆಯವರ ಮಂಗನ ಬೇಟೆಯನ್ನು ನೆನಸಿಕೊಂಡು, ಆಡಿಕೊಂಡು ಇಂದಿಗೂ ನಗುತ್ತಲೇ ಇರುತ್ತೇವೆ.

ನೋಡಿ. ನೆನಪುಗಳೇ ಹೀಗೆ. ನಮ್ಮ ನೆರೆಹೊರೆಯವರಾಗಿದ್ದ ಕಲಬುರ್ಗಿ ಅವರು ಬಂದೂಕಿನ ಗುಂಡಿಗೆ ಬಲಿಯಾದರು ಅಂತ ಕೇಳಿದ್ದೇ ಕೇಳಿದ್ದು ಏನೇನೋ ನೆನಪಿಗೆ ಬಂದೇಬಿಟ್ಟವು!

೨೦೧೨ ರ ಮಾರ್ಚಿನಲ್ಲಿ ಧಾರವಾಡಕ್ಕೆ ಹೋಗಿದ್ದೆ. ಆಗ ಸುಮ್ಮನೆ ತಮಾಷೆಗೆಂದು ಒರಿಜಿನಲ್ Webley & Scott of Birmingham, UK ಬಂದೂಕು ಹಿಡಿದುಕೊಂಡು ಒಂದೆರೆಡು ಫೋಟೋ ತೆಗೆಯಿಸಿಕೊಂಡಿದ್ದೆ. ಸುಮ್ಮನೆ ಮಷ್ಕಿರಿಗೆ. ಖಾಲಿ ಬಂದೂಕು. ಖತರ್ನಾಕ್ ಕಾರ್ತೂಸುಗಳು ಭದ್ರವಾಗಿ ತಿಜೋರಿಯೊಳಗೆ ಇದ್ದವು.

ದೊಡ್ಡ ಬಂದೂಕಂತೂ ಇಲ್ಲ. ಸದ್ಯಕ್ಕೆ ಏರ್ ಗನ್ ಆದರೂ ಇದೆಯೋ ಇಲ್ಲವೋ ಗೊತ್ತಿಲ್ಲ. ಇದ್ದರೆ ಅದನ್ನು ಫೈರ್ ಮಾಡಿ ನೋಡಬೇಕು ಮುಂದಿನ ಸಲ.

ಬಂದೂಕೆಂದರೆ ಆಟವೇ?? ಅಲ್ಲ!

ಕಾರ್ತೂಸ್ ತುಂಬುವ ಮೊದಲು ಹೀಗೆ ಮಾಡಿಕೊಳ್ಳಬೇಕು!
ಇದನ್ನು ನೋಡಿದ ಮಂದಿ ಡಾಕು ಗಬ್ಬರ್ ಸಿಂಗ್ ಅಂದರು!

6 comments:

Unknown said...

Very nice write up. Interesting also.

Unknown said...

Very nice write up. Interesting also.

Mahesh Hegade said...

Thank you, Kiran Hiremath Sir.

Vimarshak Jaaldimmi said...


May he rest in peace!

Hope the culprits are brought to justice soon.

Nice pics!

sunaath said...

ಸ್ವಾರಸ್ಯಕರವಾದ ನೆನಪುಗಳು.
(ಈಗಲೂ ನೀವು ಗುಂಡು ಹಾರಿಸುತ್ತೀರಿ, ಪೆನ್ನಿನಿಂದ!)

Mahesh Hegade said...

ಥ್ಯಾಂಕ್ಸ್ ಸುನಾಥ್ ಸರ್! ಪೆನ್ನಿನಿಂದ ಗುಂಡು!!! ಕಾಮಿಡಿ ಗುಂಡಾಗಲಿ ಅಂತ ಬಯಸಿ! :)