Tuesday, February 23, 2016

ಖುಷ್ವಂತ್ ಸಿಂಗ್ ಅದು ಹೇಗೆ ಅಷ್ಟೆಲ್ಲ ಬರೆದರು?

ಖುಷ್ವಂತ್ ಸಿಂಗ್ ನೆನಪಿರಬೇಕಲ್ಲ? ದೊಡ್ಡ ಲೇಖಕರು, ಪತ್ರಕರ್ತರು, ಸಂಪಾದಕರು, ಅಂಕಣಕಾರರು ಎಲ್ಲ ಆಗಿದ್ದವರು. ಒಂದೆರೆಡು ವರ್ಷಗಳ ಹಿಂದೆ ಮಾತ್ರ ತಮ್ಮ ತೊಂಬತ್ತು ಚಿಲ್ಲರೆ ವಯಸ್ಸಿನಲ್ಲಿ ನಿಧನರಾದರು.

ಖುಷ್ವಂತ್ ಸಿಂಗ್ ಮೊದಲು ಭಾರತೀಯ ವಿದೇಶಾಂಗ ಸೇವೆಯಲ್ಲಿದ್ದರು. ನಿವೃತ್ತಿಯ ಅಂಚಿಗೆ ಬಂದಾಗ ಲೇಖಕರಾದರು, ಪತ್ರಕರ್ತರಾದರು. ಅವರು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಅವರಿಗೆ ಸುಮಾರು ಐವತ್ತೈದು ವರ್ಷಗಳಾದ ನಂತರವೇ. ಆ ವಯಸ್ಸಿನಲ್ಲಿ ಒಮ್ಮೆ ಲೇಖನಿ ಕೈಗೆತ್ತಿಕೊಂಡರು ನೋಡಿ! ನಂತರ ಅದನ್ನು ಕೆಳಗಿಳಿಸಿದ್ದು ಈಗ ಒಂದೆರೆಡು ವರ್ಷಗಳ ಹಿಂದೆ ನಿಧನರಾದಾಗೆಯೇ. ಸುಮಾರು ನಲವತ್ತು ವರ್ಷಗಳ ಕಾಲ ನಿರಂತರ ಬರವಣಿಗೆ. ಸುಮಾರು ನಲವತ್ತು ಕಾದಂಬರಿ, ಒಂದು ಹದಿನೈದು ಕಥಾ ಸಂಕಲನ, ಮತ್ತೊಂದಿಷ್ಟು ಬೇರೆ ಬೇರೆ ತರಹದ ಪುಸ್ತಕಗಳು, ಸರ್ದಾರ್ಜೀ ಜೋಕುಗಳ ಸಂಗ್ರಹ, ಇತ್ಯಾದಿ. ಇನ್ನು ಪತ್ರಿಕೆಗಳಿಗೆ ಬರೆದ ಅಂಕಣಗಳು ಲೆಕ್ಕವಿಲ್ಲದಷ್ಟು. ತಮ್ಮ ಅಂತಿಮ ದಿನಗಳಲ್ಲಿಯೂ ಪ್ರತಿ ವಾರ ಕಮ್ಮಿ ಕಮ್ಮಿಯೆಂದರೂ ಐದಾರು ರಾಷ್ಟ್ರೀಯ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಅಂಕಣ ಬರೆಯುತ್ತಿದ್ದರು. ಅವೆಲ್ಲವೂ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಯಾಗಿ ಪ್ರಾದೇಶಿಕ ಭಾಷೆಗಳ ಪತ್ರಿಕೆಗಳಲ್ಲಿಯೂ ಮೂಡಿಬರುತ್ತಿದ್ದವು. ಹೀಗಾಗಿ ಎಲ್ಲ ಪತ್ರಿಕೆಗಳಲ್ಲಿಯೂ ಖುಷ್ವಂತ್ ಸಿಂಗರ ಅಂಕಣವೊಂದು ಇದ್ದೇ ಇರುತ್ತಿತ್ತು.

'ಸಿಂಗ್ ಸಾಹೇಬರೇ, ಇದೆಂಗೆ ಮಾರಾಯರೇ, ಈ ಪರಿ ನಿರಂತರವಾಗಿ, ಧಾರಾಕಾರವಾಗಿ ಬರೆಯುತ್ತೀರಿ?' ಅಂತ ಯಾರಾದರೂ ಕೇಳಿದರೆ ಪೋಲಿ ಅಜ್ಜನ ತುಂಟ ಉತ್ತರ ರೆಡಿ ಇರುತ್ತಿತ್ತು.

'ನನ್ನ ಪೆನ್ನಿಗೆ ಇನ್ನೂ ತನಕ ಯಾರೂ ನಿರೋಧ ತಯಾರಿಸಿಲ್ಲ!'

ಅಷ್ಟು ಹೇಳಿ ಪೆಕಪೆಕಾ ಅಂತ ನಕ್ಕು ಬಿಡುತ್ತಿದ್ದರು. ಪಕ್ಕಾ ಸರ್ದಾರ್ಜೀ!



ಖುಷ್ವಂತ್ ಸಿಂಗ್ ಅದು ಹೇಗೆ ಅಷ್ಟೆಲ್ಲ ಬರೆದರು ಅಂತ ನೋಡುತ್ತಾ ಹೋದರೆ ಗೋಚರಿಸುತ್ತದೆ ಅವರ ಶಿಸ್ತುಬದ್ಧ ಜೀವನಶೈಲಿ. ಅದೊಂದರ ಜೊತೆಗೆ ಮಾತ್ರ ಅವರು ಎಂದೂ compromise ಮಾಡಿಕೊಳ್ಳಲಿಲ್ಲ. ಹಾಗಾಗಿಯೇ ಅಷ್ಟೊಂದು ಬರೆದು ಬರೆದು ಬಿಸಾಡಿಬಿಟ್ಟರು.

ದಿನಾ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಬರೆಯಲು ಕೂತರು ಅಂದರೆ ಬರವಣಿಗೆ ಬಿಟ್ಟು ಏಳುವದು ಎಂಟು ಘಂಟೆ ಹೊತ್ತಿಗೆ. ನಾಲ್ಕು ಘಂಟೆಗಳ ನಿರಾತಂಕ ಬರವಣಿಗೆ. ಆ ಅವಧಿಯಲ್ಲಿಯೇ ಸುಮಾರು ಎಲ್ಲ ಅಂಕಣಗಳೂ ತಯಾರಾಗಿಬಿಡುತ್ತಿದ್ದವು. ನಂತರ ಬೆಳಗಿನ ಉಪಹಾರ ಮುಗಿಸಿ ಒಂದೆರೆಡು ಘಂಟೆ ಟೆನಿಸ್, ಗಾಲ್ಫ್ ಇತ್ಯಾದಿ. ವ್ಯಾಯಾಮವೂ ಆಯಿತು ಜೊತೆಗೆ ಸ್ನೇಹಿತರು, ಅವರು ಇವರು ಸಿಗುತ್ತಿದ್ದರು. ಅಂಕಣಗಳಿಗೆ ಬೇಕಾದ ವಸ್ತುಗಳೂ ಸಿಗುತ್ತಿದ್ದವು.

ಆಟ ಮುಗಿಸಿ ಮನೆಗೆ ಬಂದ ನಂತರ ಓದು. ಅಷ್ಟೆಲ್ಲ ಬರೆಯಬೇಕು ಅಂದರೆ ಸುಮ್ಮನೇ ಆಗುತ್ತದೆಯೇ? ಅದಕ್ಕೆಲ್ಲ ಎಷ್ಟೊಂದು ಮಾಹಿತಿ ಸಂಗ್ರಹಿಸಬೇಕು. ಮನೆಯಲ್ಲೇ ಕುಳಿತು ಓದಿದರು, ನೋಟ್ಸ್ ಮಾಡಿಕೊಂಡರು. ಸಂಜೆಯವರೆಗೆ ಓದಿದ್ದು ಬರೆದಿದ್ದು.

ಸಿಂಗ್ ಸಾಹೇಬರಿಗೆ ಸ್ಕಾಚ್ ವಿಸ್ಕಿ ಅದರಲ್ಲೂ ದುಬಾರಿ ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿಯೆಂದರೆ ತುಂಬಾ ಇಷ್ಟ. ದಿನಾ ಸಂಜೆ ಬೇಕೇಬೇಕು. ಘಂಟೆ ಏಳಾಯಿತು ಅಂದರೆ ಮುಗಿಯಿತು. ಎಲ್ಲೇ ಇದ್ದರೂ, ಏನೇ ಮಾಡುತ್ತಿದ್ದರೂ ಸಿಂಗ್ ಸಾಹೇಬರು 'ತೀರ್ಥ'ಯಾತ್ರೆಗೆ ಹೊರಟುಬಿಡುತ್ತಿದ್ದರು. ತೀರ್ಥ ಸೇವಿಸುವದರಲ್ಲೂ ಸಿಕ್ಕಾಪಟ್ಟೆ ಶಿಸ್ತು ಅವರದು. ಒಮ್ಮೆ ವಿಮಾನದಲ್ಲಿ ಎಲ್ಲೋ ಹೊರಟಿದ್ದರು. ಭಾರತದಲ್ಲಿ ಡೊಮೆಸ್ಟಿಕ್ ವಿಮಾನಗಳಲ್ಲಿ ಡ್ರಿಂಕ್ಸ್ ಕೊಡುವದಿಲ್ಲ. ಮದ್ಯ ಸೇವನೆ ನಿಷೇಧಿತ ಕೂಡ. ಸಿಂಗ್ ಸಾಹೇಬರು ಎಲ್ಲ ತಯಾರಿ ಮಾಡಿಕೊಂಡೇ ವಿಮಾನ ಹತ್ತಿದ್ದರು. ಕಿಸೆಯಲ್ಲಿದ್ದ ಚಿಕ್ಕ ಫ್ಲಾಸ್ಕಿನಲ್ಲಿ ಇತ್ತು ಅವರ ಪ್ರೀತಿಯ ಸ್ಕಾಚ್. ಸಂಜೆ ಏಳು ಘಂಟೆಯಾಯಿತು. ವಿಮಾನ ಎಲ್ಲೋ ಹಾರುತ್ತಿತ್ತು. ಸಿಂಗ್ ಸಾಹೇಬರು ತಮ್ಮ ಫ್ಲಾಸ್ಕ್ ತೆಗೆದವರೇ ಗುಟುಕು ಗುಟುಕಾಗಿ ಎಣ್ಣೆ ಹೀರುತ್ತ ಕುಳಿತು ವಿಮಾನ ಪ್ರಯಾಣವನ್ನು ಎಂಜಾಯ್ ಮಾಡಿದರು. 'ಏನು ಸರ್ ಇದು? ಇದನ್ನೆಲ್ಲ ಮಾಡಬಾರದು,' ಅಂದ ಗಗನಸಖಿಗೆ, 'ನಿನ್ನ ಕೆಲಸ ನೀನು ಮಾಡಮ್ಮಾ. ಯಾಕೆ ತಲೆ ತಿಂತೀಯಾ?' ಅನ್ನುವ ಲುಕ್ ಕೊಟ್ಟು ತಮ್ಮ ಪಾನ ಸೇವನೆ ಮುಂದುವರೆಸಿದರು. ಅದು ಖುಷ್ವಂತ್ ಸಿಂಗ್ ಅವರ ಹಿಮ್ಮತ್ತು!

ಸಂಜೆ ಏಳರಿಂದ ರಾತ್ರಿ ಒಂಬತ್ತರವೆರೆಗೆ ನಿಯಮಿತ ಪಾನ ಸೇವನೆ. ಯಾರಾದರೂ ಸಹೃದಯಿಗಳು ಸೇರಿದರೆ ಪಾನ ಗೋಷ್ಠಿ. ಒಂಬತ್ತಕ್ಕೆ ಬಂದ್. ಬಾಟಲಿ ಮುಚ್ಚಿದವರೇ ಊಟಕ್ಕೆ ಎದ್ದೇ ಬಿಡುತ್ತಿದ್ದರು ಲೇಖಕರು.

ನಂತರ ಒಂದು ಚಿಕ್ಕ ಊಟ ಮಾಡಿ ಬಂದರು ಅಂದರೆ ಆ ದಿನ ಮುಗಿದ ಹಾಗೆಯೇ. ಒಂದು ಹಾಟ್ ಐಟಂ ತಬ್ಬಿಕೊಂಡು ನಿದ್ರಾದೇವಿ ಮಡಿಲಿಗೆ ಜಾರುತ್ತಿದ್ದರು. ತಬ್ಬಿಕೊಂಡು ಮಲಗುತ್ತಿದ್ದ ಹಾಟ್ ಐಟಂ ಮತ್ತೇನೂ ಅಲ್ಲ ಮಾರಾಯರೇ ಹಾಟ್ ವಾಟರ್ ಬ್ಯಾಗ್!

ಮರುದಿನ ನಾಲ್ಕು ಘಂಟೆಗೆ ಮತ್ತೆ ಮೊದಲಿನ ದಿನಚರಿ ಶುರು! ಮತ್ತೆ ಬರವಣಿಗೆ. ಅದರ ಮೆರವಣಿಗೆ. ನಿರಂತರ. ಧಾರಾಕಾರ.

4 comments:

sunaath said...

ನಿಮ್ಮ ಲೇಖನ ಓದಿದ ಬಳಿಕ ನಾನು ಗ್ರಹಿಸಿದ್ದು ಹೀಗಿದೆ: ಖುಶವಂತ ಸಿಂಗರು ಇಷ್ಟೆಲ್ಲ ಬರೆಯಲು ಕಾರಣವೆಂದರೆ: (೧) ನಿಯಮಿತ ಪಾನಸೇವನೆ, (೨)ಅವರು ನಿರೋಧ ಹಾಕಿರಲಿಲ್ಲ (ಪೆನ್ನಿಗೆ). ಆದರೆ ನೀವು ಸುಮಾರು ಒಂದೂವರೆ ತಿಂಗಳಿನ ಅವಧಿಯಲ್ಲಿ ಲೇಖನ ಬರೆದಿಲ್ಲ. ಇದರರ್ಥ ನೀವು ಮೇಲಿನ ಎರಡೂ ನಿಯಮಗಳನ್ನು ಪಾಲಿಸಲಿಲ್ಲ!

Mahesh Hegade said...

ಹಾ..ಹಾ....ಅದ್ಭುತ ಹಾಸ್ಯಪ್ರಜ್ಞೆ ನಿಮ್ಮದು ಸುನಾಥ್ ಸರ್!

ಅವರ ಶಿಸ್ತುಬದ್ಧ ಜೀವನಶೈಲಿ ಮತ್ತು ಅಗಾಧ ಮಾಹಿತಿ,ಜ್ಞಾನ ಅವರ ನಿರಂತರ ಬರವಣಿಗೆಗೆ ಕಾರಣ ಅನ್ನೋದು stress ಆಗಲೇ ಇಲ್ಲ ಅನ್ನಿಸುತ್ತದೆ! :)

ಹೆಚ್ಚಿನ ಉದಯೋನ್ಮುಖ ಲೇಖಕರು ಬೇರೇನೂ ಮಾಡದಿದ್ದರೂ ತಮ್ಮ idol ಗಳ ದುಶ್ಚಟಗಳನ್ನು ಮಾತ್ರ ಅನುಕರಣೆ ಮಾಡೇ ಮಾಡುತ್ತಾರೆ. ಖುಷ್ವಂತ್ ಸಿಂಗರು ನಿಯಮಿತವಾಗಿ, ಹಿತಮಿತವಾಗಿ ಪಾನ ಸೇವನೆ ಮಾಡಿದರು ಅನ್ನುವದನ್ನು ಮಾತ್ರ ಗಮನಿಸಿ ಪಾನ ಸೇವನೆ ಮಾತ್ರ ಮಾಡಿಬಿಡುತ್ತಾರೆ! :)

anni said...

sir waiting from one month to read your article

Mahesh Hegade said...

Thanks so much Naveen Kumar!