Friday, October 21, 2016

ಒಮ್ಮೊಮ್ಮೆ ಹೀಗೂ ಆಗಿಬಿಡುತ್ತದೆ...

ಈಗ ಒಂದು ಏಳೆಂಟು ವರ್ಷಗಳ ಹಿಂದೆ ಆದ ಘಟನೆ. ಆಕೆ ನಮ್ಮದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವಳು. ಹಾಗಂತ ನಂತರ ಗೊತ್ತಾಯಿತು. ಭಾರತೀಯ ಮಹಿಳೆ. ಯಾರು ಅಂತ ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ.

ಹೊಸ ಕಾರು ಖರೀದಿಸಿದ್ದಾಳೆ. ಹೆಚ್ಚಾಗಿ ಅಮೇರಿಕಾಗೆ ಬಂದ ನಂತರದ ಮೊದಲನೇ ಕಾರಿರಬೇಕು. ಆವಾಗಲೇ ಲಫಡಾವೊಂದು ಆಗಿಯೇಬಿಡಬೇಕೇ? ಶಿವಾಯ ನಮಃ!

ಏನು ಪೊರಪಾಟಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ಅಪಘಾತ ಮಾಡಿಕೊಂಡಿದ್ದಾಳೆ. ಹೋಗಿ ಒಬ್ಬನಿಗೆ ಗುದ್ದಿದ್ದಾಳೆ. ಅವನೋ ಮೊದಲೇ ವಿಕಲಚೇತನ (handicapped). ಇವಳ ಕಾರು ಬಂದು ಗುದ್ದಿದ ಅಬ್ಬರಕ್ಕೆ ಬರೋಬ್ಬರಿ ಗುಜರಿಯಾಗಿ ಹೋಗಿದ್ದಾನೆ.

ಅಪಘಾತಗಳು ಆಗುತ್ತವೆ ಬಿಡಿ. ಯಾರೂ ಬೇಕು ಅಂತ ಅಪಘಾತ ಮಾಡಲು ಹೋಗುವದಿಲ್ಲ. ಆದರೆ ಅಪಘಾತ ಆಯಿತು ಅಂತಾದರೆ ಕೆಲವೊಂದು ಕೆಲಸಗಳನ್ನು ಕ್ರಮಬದ್ಧವಾಗಿ ಮಾಡಬೇಕು. ಕೆಲವೊಂದನ್ನು ಮಾನವೀಯತೆಯ ದೃಷ್ಟಿಯಿಂದ ಮಾಡಬೇಕು. ಇನ್ನು ಕೆಲವನ್ನು ಕಾನೂನು ಪರಿಪಾಲನೆ ದೃಷ್ಟಿಯಿಂದ ಮಾಡಬೇಕು. ಮಾಡಲೇಬಾರದ ಕೆಲಸವೆಂದರೆ ಒಂದೇ ಇರಬೇಕು. ಅದೇನೆಂದರೆ ಅಪಘಾತದ ಸ್ಥಳದಿಂದ ಯಾರಿಗೂ ಏನೂ ಮಾಹಿತಿ ಕೊಡದೆ ಎಸ್ಕೇಪ್ ಆಗಿಬಿಡುವದು. ಅದೊಂದನ್ನು ಮಾತ್ರ ಎಂದೂ ಮಾಡಬಾರದು. ಅದರಲ್ಲೂ ಮತ್ತೊಬ್ಬರು ಗಾಯಗೊಂಡಾಗಲಂತೂ ಹಾಗೆ ಮಾಡುವದು ದೊಡ್ಡ ಅಪರಾಧ.

ಈ ಪುಣ್ಯಾತ್ಗಿತ್ತಿ ಅದನ್ನೇ ಮಾಡಿದ್ದಾಳೆ. ಹೇಗೂ ಮುಸ್ಸಂಜೆ ಸಮಯದಲ್ಲಿ ಆದ ಅಪಘಾತ. ಸುತ್ತಮುತ್ತ ಕೂಡ ಯಾರೂ ಕಂಡುಬಂದಿಲ್ಲ. ಗಾಯಗೊಂಡ ವಿಕಲಾಂಗನಂತೂ ಫುಲ್ ಲ್ಯಾಪ್ಸ್ ಆಗಿದ್ದಾನೆ. ಸತ್ತೇಹೋಗಿದ್ದರೂ ಆಶ್ಚರ್ಯವಿಲ್ಲ. ಇವಳು ಆಚೀಚೆ ನೋಡಿದವಳೇ ತನ್ನ ಗಾಡಿಯೆತ್ತಿಕೊಂಡು ಎಸ್ಕೇಪ್ ಆಗಿಬಿಟ್ಟಿದಾಳೆ. ಅಲ್ಲಿಗೆ ಸಾಧಾರಣ ಅಪಘಾತವೊಂದು ಗುದ್ದೋಡು (hit and run) ಪ್ರಕರಣವಾಗಿದೆ. ಇದು ಈಗ ದೊಡ್ಡ ಸೀರಿಯಸ್ ಕೇಸ್.

ಗಾಯಗೊಂಡ ವಿಕಲಾಂಗನಿಗೆ ಸಂತಾಪದ, ಅನುಕಂಪದ ಮಹಾಪೂರ ಹರಿದುಬಂದಿದೆ. ಆತ ಲೋಕಲ್ ಏರಿಯಾದಲ್ಲಿ ತುಂಬಾ ಪಾಪ್ಯುಲರ್ ಅಂತೆ. ಕಾರಣ ಆತ ವಿಕಲಾಂಗನಾಗಿದ್ದರೂ ಯಾರ ಮೇಲೂ ಹೊರೆಯಾಗದಂತೆ, ಆದಷ್ಟು ಕೆಲಸ ಮಾಡಿಕೊಂಡು, ಕೊಂಚ ಕಾಸು ಸಂಪಾದಿಸಿಕೊಂಡು, ತಕ್ಕಮಟ್ಟಿಗೆ ತನ್ನ ಕಾಲ ಮೇಲೆ ತಾನು ನಿಂತ ಮಹನೀಯ. ಸ್ಥಳೀಯ ಸೂಪರ್ ಮಾರ್ಕೆಟ್ ಒಂದರಲ್ಲಿ ದಿನಸಿ ಸಾಮಾನು ಕಟ್ಟುವ ಕೆಲಸ ಮಾಡುತ್ತಿದ್ದಂತೆ. ಅಲ್ಲಿಗೆ ಹೋಗುತ್ತಿದ್ದ ಜನರಿಗೆಲ್ಲ ಆತ ಚಿರಪರಿಚಿತ. ಹಾಗಾಗಿ ಅವನ ಮೇಲೆ ಒಂದು ತರಹದ ಅನುಕಂಪ ಮತ್ತು ಕರುಣೆ ಎಲ್ಲರಿಗೆ. ಅಂತಹ ಪಾಪದವನನ್ನು ಯಾರೋ ಗುದ್ದುತ್ತಾರೆ. ಅಷ್ಟೇ ಅಲ್ಲ ಆತನನ್ನು ಸಾಯಲಿಕ್ಕೆ ಅಲ್ಲೇ ಬಿಟ್ಟು ಓಡಿಹೋಗುತ್ತಾರೆ. ಹೀಗಾಗಿ ದೊಡ್ಡ ಮಟ್ಟದ ಆಕ್ರೋಶ. ಆರೋಪಿಯನ್ನು ಹಿಡಿಯಲು ಪೊಲೀಸರ ಮೇಲೆ ಒತ್ತಡ.

ಪೊಲೀಸರು ಅಲ್ಲಿ ಆಸುಪಾಸಿನಲ್ಲಿದ್ದ CC ಟೀವಿ ಕ್ಯಾಮರಾಗಳನ್ನು ಚೆಕ್ ಮಾಡಿದ್ದಾರೆ. ಗುದ್ದೋಡಿದ್ದು  ದಾಖಲಾಗಿದೆ. ಸಂಜೆ ಹೊತ್ತಾಗಿದ್ದರಿಂದ ಸ್ಪಷ್ಟವಾಗಿ ಮೂಡಿಬಂದಿಲ್ಲ. ಆದರೂ ಕಾರಿನ ಮಾಡೆಲ್ ಮತ್ತು ಬಣ್ಣದ ಬಗ್ಗೆ ಮಾಹಿತಿ ಸಿಕ್ಕಿದೆ. ಪೊಲೀಸರು ಪ್ರಕಟಣೆ ಕೊಟ್ಟು ಸುಮ್ಮನಾಗಿದ್ದಾರೆ.

ಈಕಡೆ ಗುದ್ದೋಡು ಮಾಡಿದ ಮಹಿಳೆ ಮನೆ ಸೇರಿಕೊಂಡಿದ್ದಾಳೆ. ಒಂದೆರೆಡು ದಿನ ಸುಮ್ಮನೆ ಇದ್ದಾಳೆ. ನಂತರ ಯಾಕೋ ಏನೋ ಸೀದಾ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ. ತಾನು ಮಾಡಿದ ಅಪಘಾತದ ಬಗ್ಗೆ ರಿಪೋರ್ಟ್ ಮಾಡಲು ಅಲ್ಲ. ಬೇರೆ ಸ್ಕೀಮ್ ಹಾಕಿಕೊಂಡು ಹೋಗಿದ್ದಾಳೆ. ಆದರೆ ಅಲ್ಲಿ ಬೇರೇನೋ ಆಗಿಬಿಟ್ಟಿದೆ....ಶಿವನೇ ಶಂಭುಲಿಂಗ ಮಾದರಿಯಲ್ಲಿ.

ಗುದ್ದೋಡು ಪ್ರಕರಣವಾದಾಗ ಆಕೆಯ ಹೊಚ್ಚಹೊಸ ಕಾರಿಗೂ ಡ್ಯಾಮೇಜ್ ಆಗಿದೆ. ಅದನ್ನು ರಿಪೇರಿ ಮಾಡಿಸಲು ಕಾರಿನ ವಿಮೆ claim ಮಾಡಲು ಹೊರಟಿದ್ದಳೋ ಏನೋ ಗೊತ್ತಿಲ್ಲ. ಕಾರಿನ ವಿಮೆ claim ಮಾಡಬೇಕು ಅಂದರೆ ಒಮ್ಮೊಮ್ಮೆ ವಿಮಾ ಕಂಪನಿಯವರು ಪೊಲೀಸರಿಗೆ ರಿಪೋರ್ಟ್ ಮಾಡಿ, ಪೊಲೀಸ್ ರಿಪೋರ್ಟ್ ತನ್ನಿ ಅನ್ನುತ್ತಾರೆ. ಒಟ್ಟಿನಲ್ಲಿ ಈಕೆ ಪೊಲೀಸರಿಗೆ ರಿಪೋರ್ಟ್ ಮಾಡಲು ಹೋಗಿದ್ದಾಳೆ.

ಆದರೆ ಅಲ್ಲಿ ಹೋಗಿ ಬೇರೆಯೇ ರೀತಿಯಲ್ಲಿ ರೈಲು ಬಿಡಲು ನೋಡಿದ್ದಾಳೆ. 'ಯಾವದೋ ಕಾರು ಬಂದು ಗುದ್ದಿದೆ. ನನ್ನ ಕಾರ್ ಡ್ಯಾಮೇಜ್ ಆಗಿದೆ,' ಅಂದಿದ್ದಾಳೆ. 'ಎಲ್ಲಿ? ತೋರಿಸಿ?' ಅಂದಿದ್ದಾರೆ ಪೊಲೀಸರು. ಪೊಲೀಸರನ್ನು ಯಾಮಾರಿಸುವದು ಅಂದರೆ ಆಟವೇ? ಡ್ಯಾಮೇಜ್ ಆಗಿರುವದು ಕಾರಿನ ಮುಂದಿನ ಭಾಗ. ಹಿಂದಿಂದ ಬೇರೆ ಕಾರು ಬಂದು ಗುದ್ದಿತು ಅನ್ನುತ್ತಿದ್ದಾಳೆ. ಹೇಗೆ ಸಾಧ್ಯ? ಪೊಲೀಸರು ತಲೆಕೆಡಿಸಿಕೊಂಡಿದ್ದಾರೆ. ಮೊದಲೇ ಪೊಲೀಸ್ ಬುದ್ಧಿ. ಅದೆಂಗೆ ಹೋದೀತು? ಅವರಿಗೆ ಏನೋ ಸಂಶಯ ಬಂದಿದೆ. ಅವರಲ್ಲೇ ಯಾರಿಗೋ ಎರಡು ದಿವಸಗಳ ಹಿಂದಾದ ಗುದ್ದೋಡು ಪ್ರಕರಣ ನೆನಪಾಗಿದೆ. ಸುಮ್ಮನೆ ಹೋಗಿ ಮತ್ತೊಮ್ಮೆ CC ಟೀವಿ ಫೂಟೇಜ್ ನೋಡಿದ್ದಾರೆ. ನೋಡಿದರೆ ಅದೇ ಕಾರು, ಅದೇ ಮಹಿಳೆ! ಅಲ್ಲಿಗೆ ಪೊಲೀಸರು ಹುಡುಕುತ್ತಿದ್ದ ಆರೋಪಿ ತಾನೇ ಬಕರಾ ಮಾದರಿಯಲ್ಲಿ ಬಂದು ಬೋನಿಗೆ ಬಿದ್ದಿದೆ.

'ಸ್ವಲ್ಪ ಒಳಗೆ ಬನ್ನಿ ಮೇಡಂ. ನಿಮ್ಮ ಕಾರಿನ ಡ್ಯಾಮೇಜ್ ಬಗ್ಗೆ ಮಾತಾಡೋಣ,' ಅಂತ ಪೂಸಿ ಹೊಡೆದು ಒಳಗೆ ವಿಚಾರಣೆ ಕೋಣೆಗೆ ಕರೆದೊಯ್ದಿದ್ದಾರೆ. ಇವಳು ಖುಷ್ ಆಗಿ ಅವರ ಹಿಂದೆ ಹೋಗಿದ್ದಾಳೆ.

ಪೋಲೀಸ್ ರೀತಿಯಲ್ಲಿ ವಿಚಾರಣೆ ಮಾಡಿರಬೇಕು. CC ಟೀವಿ ಫೂಟೇಜ್ ಮುಖಕ್ಕೆ ಹಿಡಿದು,'ಇದಕ್ಕೆ ಏನಂತೀರಿ???' ಅಂತ ಬೆಂಡೆತ್ತಿರಬೇಕು. ಇವಳು ಗೊಳೋ ಅಂತ ಎಲ್ಲ ಒಪ್ಪಿಕೊಂಡಿದ್ದಾಳೆ. ಅಲ್ಲಿಯೇ ಬಂಧಿಸಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗುದ್ದೋಡುವದು ತುಂಬಾ ಸೀರಿಯಸ್ ಪ್ರಕರಣ. ಅದರಲ್ಲೂ ಗಾಯಗೊಂಡಿದ್ದ ವಿಕಲಾಂಗ ಸತ್ತೇಹೋದ ಅಂತಲೂ ಸುದ್ದಿಯಾಗಿತ್ತು. ಅದು ನಿಜವಾಗಿದ್ದರೆ ಮತ್ತೂ ಭೀಕರ ಪ್ರಕರಣ.

ಒಟ್ಟಿನಲ್ಲಿ ಏನೋ ಮಾಡಲು ಹೋಗಿ ಏನೋ ಆಗಿದೆ. ನಂತರ ಕೋರ್ಟು ಕೇಸು ಎಲ್ಲ ಆಯಿತು. ಈಗ ಐದು ವರ್ಷದ ನಂತರ ಎಲ್ಲಾ ಮುಗಿಯಿತು ಅಂತ ಯಾರೋ ಅಂದರು. ಪ್ರಕರಣದಲ್ಲಿ ಅಂದರ್ ಆಗಿ ಒಳಗೆ ಹೋದಾಗಲೇ ಕೆಲಸ ಕೂಡ ಹೋಗಿತ್ತು. ನಂತರದ ವಿಷಯ ಗೊತ್ತಿರಲಿಲ್ಲ.

ಇಲ್ಲಿ ತಿಳಿಯಬೇಕಾದ ವಿಷಯವೆಂದರೆ - ತಪ್ಪುಗಳು, ಅಪಘಾತಗಳು ಆಗುತ್ತವೆ. ಬೇಕೆಂದೇ ಯಾರೂ ಮಾಡುವದಿಲ್ಲ. ಆದರೆ ಹಾಗಾದಾಗ ಅವುಗಳನ್ನು ಮುಚ್ಚಿಡಲು, ಬಚ್ಚಿಡಲು ಪ್ರಯತ್ನಿಸುವದು ಮಾತ್ರ ಅಕ್ಷಮ್ಯ. ಮುಂದೆ ಒಂದಲ್ಲ ಒಂದು ರೀತಿಯಲ್ಲಿ ಉಲ್ಟಾ ಹೊಡೆಯುವ ಸಾಧ್ಯತೆಗಳೇ ಜಾಸ್ತಿ. ಇಲ್ಲೂ ಆಗಿದ್ದು ಅದೇ. ಮುಚ್ಚಿಟ್ಟುಕೊಂಡು ಸುಮ್ಮನಾದರೂ ಕೂತಿದ್ದರೆ ಅದೊಂದು ಮಾತು. ಆದರೆ ದುರಾಸೆ ಅಂತ ಒಂದಿರುತ್ತದೆ ನೋಡಿ. ಡ್ಯಾಮೇಜ್ ಆದ ಕಾರಿನ ರಿಪೇರಿಗೆ ವಿಮೆ claim ಮಾಡಲು ಹೋಗಿದ್ದಾಳೆ. ಅದಕ್ಕಾಗಿ ಅಲ್ಲೊಂದು ಸುಳ್ಳಿನ ಕಂತೆ ಬಿಚ್ಚಲು ನೋಡಿದ್ದಾಳೆ. ಆವಾಗ ಫುಲ್ ಭಾಂಡಾ ಹೊರಬಿದ್ದು ಲಫಡಾ ಆಗಿದೆ.

ಕಾನೂನುಬದ್ಧವಾಗಿ ರಿಪೋರ್ಟ್ ಮಾಡಿದ್ದರೆ ನಿಮಿಷಮಾತ್ರದಲ್ಲಿ ಪೊಲೀಸರು ಸ್ಪಾಟಿಗೆ ಬರುತ್ತಿದ್ದರು. ಆಂಬುಲೆನ್ಸ್ ಬಂದು ಗಾಯಾಳುವನ್ನು ಆಸ್ಪತ್ರೆಗೆ ಒಯ್ಯುತ್ತಿತ್ತು. ಇವಳ ಹತ್ತಿರ ಒಂದು ಸ್ಟೇಟ್ಮೆಂಟ್ ತೆಗೆದುಕೊಂಡು ಮನೆಗೆ ಕಳಿಸುತ್ತಿದ್ದರು. ಗಾಯಾಳುವಿಗೆ ಏನು compensation ಕೊಡಬೇಕೋ ಅದನ್ನು ವಿಮಾ ಕಂಪನಿ ಕೊಡುತ್ತಿತ್ತು. ಇವಳ ಗಾಡಿಯೂ ರಿಪೇರಿ ಆಗುತ್ತಿತ್ತು.

ಅದೇನು ಮಾಹಿತಿಯ ಕೊರತೆಯೋ, ಸಾಮಾನ್ಯಜ್ಞಾನದ ಕೊರತೆಯೋ, ಅಪಘಾತದ ನಂತರ ಆಕೆಗೆ ಆದ ಆಘಾತವೋ ಅಥವಾ ಎಲ್ಲವನ್ನೂ ಮುಚ್ಚಿಟ್ಟು ಜೈಸಬಲ್ಲೆ ಎಂಬ ಹುಂಬ ಧೈರ್ಯವೋ ಗೊತ್ತಿಲ್ಲ. ಒಟ್ಟಿನಲ್ಲಿ ಲಫಡಾ.

ಹಿಂದೆ ಅಮೇರಿಕಾದ ಪ್ರೆಸಿಡೆಂಟ್ ಬಿಲ್ ಕ್ಲಿಂಟನ್ ಕೂಡ ಇಂತಹದೇ ಲಫಡಾ ಮಾಡಿಕೊಂಡು ಕೂತಿದ್ದ. ಬೇರೆ ಯಾವದೋ ವಿಷಯವಾಗಿ ಅವನ ಮತ್ತು ಮೋನಿಕಾ ಲೆವಿನ್ಕ್ಸಿ ಎಂಬ ಯುವತಿಯ ಮಧ್ಯೆ ಇದ್ದ ಸಂಬಂಧ ಹೊರಗೆ ಬಂತು. ಕೋರ್ಟಿನಲ್ಲಿ ಸತ್ಯ ಹೇಳುವ ಪ್ರಮಾಣ ಸ್ವೀಕರಿಸಿ ನಿಂತಾಗಲೂ ಸುಳ್ಳು ಹೇಳಿದ. ಆ ಯುವತಿಯೊಂದಿಗೆ ತನಗೆ ಯಾವದೇ ಸಂಬಂಧವೂ ಇಲ್ಲ ಅಂದುಬಿಟ್ಟ. 'ಜನರನ್ನು ಮಂಗ್ಯಾ ಮಾಡುತ್ತೇನೆ. ಮಾಡಿ ದಕ್ಕಿಸಿಕೊಳ್ಳುತ್ತೇನೆ,' ಎಂದು ಅಂದುಕೊಂಡಿದ್ದ ಅಂತ ಕಾಣುತ್ತದೆ. ನಿಜ ಹೇಳಬೇಕು ಅಂದರೆ ಅವನ ಮೇಲೆ ನಡೆಯುತ್ತಿದ್ದ ವಿಚಾರಣೆಗೆ ಅವನ ವಿವಾಹೇತರ ಸಂಬಂಧ ದೊಡ್ಡ ಮಾತಾಗಿರಲೇ ಇಲ್ಲ. ಯಾವಾಗ ಈ ಪುಣ್ಯಾತ್ಮ ಅದನ್ನು ಒಪ್ಪಿಕೊಳ್ಳದೇ under the sacred oath ಇದ್ದಾಗ ಸುಳ್ಳು ಹೇಳಿದನೋ ಆವಾಗ ಅಮೇರಿಕಾದ ಸಂಪೂರ್ಣ ವ್ಯವಸ್ಥೆ ಅವನ ಮೇಲೆ ಮುರಿದುಕೊಂಡು ಬಿತ್ತು. ಸದನದ ಒಂದು ಮನೆ ಅವನನ್ನು ಪದಚ್ಯುತ ಸಹ ಮಾಡಿಬಿಟ್ಟಿತು. ಮತ್ತೊಂದು ಮನೆ ಸದಸ್ಯರ ಕಾಲು ಹಿಡಿದ. ಅವರು ದೊಡ್ಡ ಮನಸ್ಸು ಮಾಡಿ ಪದಚ್ಯುತಿ ಮಾಡಲಿಲ್ಲ. ಹಾಗಾಗಿ ಬಿಲ್ ಕ್ಲಿಂಟನ್ ಬಚಾವಾದ. ಇಲ್ಲವಾದರೆ ಅವಧಿ ಮುಗಿಯುವ ಮಧ್ಯವೇ ಪೆಟ್ಟಿಗೆ ಕಟ್ಟಿಕೊಂಡು ಮನೆಗೆ ಹೋಗಬೇಕಾಗಿತ್ತು. ಇಷ್ಟೆಲ್ಲಾ ಆಗಿದ್ದು ಒಂದು ಸುಳ್ಳಿಗೆ. ಅದೂ ಹಸಿ ಸುಳ್ಳಿಗೆ. 'ಹೌದು. ಆ ಮೋನಿಕಾ ಲೆವಿನ್ಸ್ಕಿ ಜೊತೆಗೆ ಸಣ್ಣ ಪ್ರಮಾಣದಲ್ಲಿ ಸಂಬಂಧ ಇತ್ತು. ಆಗಾಗ ಅಲ್ಲಿಲ್ಲಿ ಕೈಬಿಟ್ಟಿದ್ದೆ. ಅದೇನಿದ್ದರೂ ನನ್ನ ಮತ್ತು ನನ್ನ ಪತ್ನಿಯ ಮಧ್ಯದ ವಿಷಯ. ಬೇರೆಯವರು ಅದರಲ್ಲಿ ತಲೆಹಾಕುವ ಜರೂರತ್ತಿಲ್ಲ,' ಅಂದುಬಿಟ್ಟಿದ್ದರೆ ಮುಗಿದುಹೋಗುತ್ತಿತ್ತು. ಕೊನೆಗೂ ಕ್ಲಿಂಟನ್ ಹೇಳಿದ್ದು ಅದನ್ನೇ. ಆದರೆ ಕೆಟ್ಟ ಮೇಲೆ ಬುದ್ಧಿ ಬಂತು ಅಷ್ಟೇ.

ಈ ಮಹಿಳೆ ಗುದ್ದೋಡಿದ ನಂತರ ಮಾಡಿಕೊಂಡ ಲಫಡಾ ಕೇಳಿದಾಗ ಇದೇ ನೆನಪಾಯಿತು. ಇದು ಈಗ ಸುಮಾರು ವರ್ಷಗಳ ಹಿಂದಿನ ಮಾತು. ಈಗಿನ ಮಾತು ಬಿಡಿ. ಎಲ್ಲ ಕಡೆಗೆ ಸಿಕ್ಕಾಪಟ್ಟೆ ಶಕ್ತಿಶಾಲಿ ಕ್ಯಾಮೆರಾ ಅಳವಡಿಸಿರುತ್ತಾರೆ. ಅಪಘಾತವಾದಾಗ, 'ಸುತ್ತಮುತ್ತ ಯಾರೂ ಇಲ್ಲ. ಸೈಲೆಂಟ್ ಆಗಿ ಎಸ್ಕೇಪ್ ಆಗಿಬಿಡೋಣ,' ಅಂದುಕೊಂಡರೆ ಅದಕ್ಕಿಂತ ದೊಡ್ಡ ಮೂರ್ಖತನ ಮತ್ತೊಂದಿಲ್ಲ.

4 comments:

sunaath said...

ಅಮೇರಿಕಾದಲ್ಲಿ ಗುದ್ದೋಡಿ, ಸಿಕ್ಕಿ ಬೀಳದೆ ಇರುವುದು ಕಠಿಣವಿರಬಹುದು. ಭಾರತದಲ್ಲಿ ಹಾಗೇನಿಲ್ಲ. ಒಂದು ವೇಳೆ ಯಾರಾದರೂ ಸಿಕ್ಕಿ ಬಿದ್ದರೆ, ಆತ ಪೋಲೀಸರ ಎದುರಿಗೇ, ಒಬ್ಬ ಎಮ್.ಎಲ್.ಏಗೆ ಫೋನ್ ಮಾಡುತ್ತಾನೆ. ತಕ್ಷಣವೇ ಪೋಲೀಸರು ಆತನಿಗೆ ಚಾ ತರಿಸಿಕೊಟ್ಟು, ಸಲಾಮ್ ಹೊಡೆಯುತ್ತಾರೆ!

Mahesh Hegade said...

ನೀವು ಹೇಳಿದ್ದು ಸರಿಯಿದೆ. ಅದು ಈಗಿನ ವಾಸ್ತವಿಕತೆ. ಥ್ಯಾಂಕ್ಸ್ ಸರ್!

Stevekumar Siddankoppa said...


Similar incident shown on YesTV!

Arvind Patil said...

Very good North Karnataka writing style. Your blog's are very natural in nature. I felt like reading Tesasvi article.