Saturday, January 28, 2017

ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ನಡಿತದಂತ. ಹೌದೇನ್ರೀ!!??

'ಬರೋಬ್ಬರಿ ಝಾಡಿಸಿ ಬಂದೆ. ಬಿಡಲಿಲ್ಲ. ಏನಂತ ಮಾತಾಡೋಡು? ಹಾಂ?' ಅಂತ ಹೂಂಕರಿಸುತ್ತಲೇ ಅಮ್ಮ ಮನೆ ಒಳಹೊಕ್ಕರು.

ಸಂಜೆ ಒಂದು ಸುತ್ತು ವಾಯುವಿಹಾರ ಮಾಡಿ, ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನು ತೆಗೆದುಕೊಂಡು, ಟೈಮ್ ಇದ್ದರೆ ಮತ್ತು ಮೂಡ್ ಇದ್ದರೆ ಯಾರಾದರೂ ಆತ್ಮೀಯರ ಮನೆಗೆ ಹೋಗಿ ಸ್ವಲ್ಪ ಹರಟೆ ಹೊಡೆದು, ರಾತ್ರಿ ಊಟದ ತಯಾರಿ ಹೊತ್ತಿಗೆ ಮನೆಗೆ ಬರುವದು ಮಾತಾಶ್ರೀ ಅವರ ರೂಢಿ. ಅವತ್ತೂ ಹಾಗೆಯೇ. ಯಾರಿಗೋ ಬೆಂಡೆತ್ತಿ ಬಂದೆ ಅಂತ ಏರುದನಿಯಲ್ಲಿ ಹೂಂಕರಿಸುತ್ತ ಎಂಟ್ರಿ ಕೊಟ್ಟಿದ್ದು ಅಂದಿನ ವಿಶೇಷ.

'ಯಾರಿಗೆ ಝಾಡಿಸಿ ಬಂದಿಬೇ?' ಎಂದು ಕೇಳಿದೆ. ಕಿತಬಿ ಮಾಡಬೇಕಾದರೆ 'ಬೇ' ಅನ್ನುವ 'ಗೌರವಸೂಚಕ' ಪದ ಬಳಸುತ್ತಿದ್ದೆ. ಯಾಕೋ ಗೊತ್ತಿಲ್ಲ. 'ಏನಾತಬೇ??', 'ಎಲ್ಲಿಗೆ ಹೊಂಟಿಬೇ??' ಇತ್ಯಾದಿ.

'ಮತ್ಯಾರಿಗೆ? ಅವರಿಗೇ. ನಮ್ಮ ಮಾಸ್ತರ್ರಿಗೆ. ಅವರಿಗೆ ಝಾಡಿಸಿಬಂದೆ,' ಅಂದ ಅಮ್ಮ ಮುಂದುವರೆದು, 'ನಮ್ಮ ಮಾಸ್ತರ್ರು, ಕ್ಲಾಸಿನ್ಯಾಗ ವಿದ್ಯಾ ಕಲಿಸ್ಯಾರ ಅಂತ ಅಷ್ಟಕ್ಕೇ ಬಿಟ್ಟುಬಂದೆ. ಬ್ಯಾರೆ ಯಾರರ ಆಗಿದ್ದರ ಹಾಕ್ಕೊಂಡು ಒಂದು ಕೈ ನೋಡಿ, ಬರೋಬ್ಬರಿ ತಿರುವ್ಯಾಡಿ ಬರಾಕಿ ನಾ. ಪಾಪ ಮಾಸ್ತರ್ ಅಂತ ಹೇಳಿ ಸ್ವಲ್ಪೇ ಝೋರ್ ಮಾಡಿ ಬಂದೆ. ಪಕ್ಕಾ ಮಳ್ಳ ಮಾಸ್ತರ್ರು.... ' ಅಂತ ಅಮ್ಮ ವಿವರಣೆ ಕೊಟ್ಟರು.

ಯಾರೋ ಅಮ್ಮನ ಪುರಾತನ ಮಾಸ್ತರರು ಏನೋ ಆಕ್ಷೇಪಾರ್ಹವಾದುದನ್ನು ಹೇಳಿದ್ದಾರೆ. ಅದಕ್ಕೇ ಅವರಿಗೆ ಲೈಟಾಗಿ ಬೆಂಡೆತ್ತಿ ಬಂದಿದ್ದಾಳೆ. ಇಷ್ಟು ತಿಳಿಯಿತು.

'ಯಾವ ಮಾಸ್ತರ್ರು? ಏನಂದ್ರು? ಝಾಡಿಸಿ ಬರುವಂತ್ತಾದ್ದೇನಾಗಿತ್ತಬೇ?' ಎಂದು ಕೇಳಿದೆ. ಫುಲ್ ಮಾಹಿತಿ ತೆಗೆಯಬೇಕಲ್ಲ.

ಯಾವ ಮಾಸ್ತರರು ಅನ್ನುವದನ್ನು ಹೇಳಿದರು. ಗೊತ್ತಾಯಿತು. ಅಮ್ಮ BA ಮಾಡುತ್ತಿರುವಾಗ ಪಾಠ ಮಾಡುತ್ತಿದ್ದರು. ಮಾಳಮಡ್ಡಿಯಲ್ಲಿ ನಮ್ಮ ನೆರೆಹೊರೆಯವರಾಗಿದ್ದರು. ನಾವು ಮುಂದೆ ಕಲ್ಯಾಣನಗರಕ್ಕೆ ಬಂದ ಮೇಲೂ ಮನೆ ಹತ್ತಿರದಲ್ಲೇ ಇದ್ದರು. ಅವರ ಪತ್ನಿ ಅಮ್ಮನ ಆತ್ಮೀಯ ಹಿರಿಯ ಸ್ನೇಹಿತೆ. ಕುಟುಂಬಗಳ ಮಧ್ಯೆ ಬಹಳ ಆತ್ಮೀಯತೆ ಮತ್ತು ಒಳ್ಳೆ ಸಂಬಂಧ ಇತ್ತು. ನಮ್ಮೆಲ್ಲರ ಶ್ರೇಯೋಭಿಲಾಷಿಗಳು. ಎಲ್ಲ ಸರಿ. ಹೀಗೆಲ್ಲ ಇದ್ದಾಗ ಅಮ್ಮನ ಕೈಯಲ್ಲಿ ಬೆಂಡೆತ್ತಿಕೊಳ್ಳುವಂತಹಹ ಲಫಡಾ ಏನು ಮಾಡಿದ್ದರು ಆ ಮಾಸ್ತರರು? ಅದನ್ನೂ ಅಮ್ಮನೇ ಹೇಳಿದಳು.

'ಮತ್ತೇನೋ?? ಹೋಗಿ ಹೋಗಿ ಏನು ಹೇಳಬೇಕು ಅವರು? ಏನಂತ ಕೇಳಬೇಕು??ಹಾಂ??' ಅಂತ ಪೀಠಿಕೆ ಇಟ್ಟರು ಅಮ್ಮ.

'ಏನಂದ್ರು?' ಅಂತ ಸಾಥ್ ಕೊಟ್ಟ ಮಾದರಿಯಲ್ಲಿ ಕೇಳಿದೆ.

'ಅಲ್ಲೋ. ನನ್ನ ಕೇಳ್ತಾರ. 'ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ಇದ್ದರ ನಡಿತದಂತ. ಹೌದೇನು?' ಅಂತ ಕೇಳ್ಬೇಕಾ? ಇದು ಕೇಳೋ ಮಾತಾ? ನನಗ ಸರ್ರ ಅಂತ ಸಿಟ್ಟು ಬಂತು ನೋಡು. ಝಾಡಿಸಿದೆ!' ಅಂದರು ಅಮ್ಮ.

ಅಲ್ಲಿಗೆ ಒಂದು ಮಟ್ಟಕ್ಕೆ ಪರಿಸ್ಥಿತಿ ಅರ್ಥವಾಯಿತು. ಸ್ಮಾರ್ತ ಬ್ರಾಹ್ಮಣರು ದೇವರಿಗೆ ಇಡುವ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇದ್ದರೆ ಅಡ್ಡಿಯಿಲ್ಲ ತಾನೇ ಅಂತ ಅಮ್ಮನ ಆ ಪುಣ್ಯಾತ್ಮ ಮಾಸ್ತರರು ಕೇಳಿಬಿಟ್ಟಿದ್ದರು! ಅಲ್ಲಿಗೆ ತಮ್ಮ ಎನ್ಕೌಂಟರಿನ ಸುಪಾರಿಯನ್ನು ತಾವೇ ಕೊಟ್ಟುಕೊಂಡಿದ್ದರು.

'ಯಾರೋ ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದೇನು, ನಡಿತದೇನು ಅಂತ ಅವರು ಕೇಳಿದರ ನಿಂಗ್ಯಾಕ ಇಷ್ಟು ಸಿಟ್ಟು ಬೇ? ಯಾವ ಸ್ಮಾರ್ತರೋ, ಅವರೇನು ಕೇಳಿದರೋ, ನೀ ಏನು ಕೇಳಿಸಿಕೊಂಡಿಯೋ? ಹ್ಯಾಂ??' ಅಂತ ಕೊಕ್ಕೆ ಇಟ್ಟೆ.

'ಈಗಷ್ಟೇ ಆ ಮಳ್ಳ ಮಾಸ್ತರ್ರು ಇದನ್ನೇ ಕೇಳಿ ಮುಗಿಸಿದರು. ಈಗ ನೀ ಮತ್ತ ಅದನ್ನೇ ಕೇಳ್ತಿಯಲ್ಲಾ? ಯಾರೋ ಸ್ಮಾರ್ತರು ಅಂತಿಯಲ್ಲಾ? ನಾವೂ ಸ್ಮಾರ್ತರಲ್ಲಾ!? ಅಲ್ಲಾ?? ನಮ್ಮ ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದ? ಇರ್ತದೇನು!? ಅವರೊಂದು ಪೈಕಿ ಮಳ್ಳರಾದ್ರ ನೀ ಮತ್ತೊಂದು ಪೈಕಿ ಯಬಡಾ!' ಅಂತ ನನಗೂ ಮೈಲ್ಡಾಗಿ ಬೆಂಡೆತ್ತಿದರು. ನಾನು ಪೆಕಪೆಕಾ ಅಂತ ನಕ್ಕೆ. ಮೊದಲೇ ಉರಿದುಕೊಂಡವರನ್ನು ಮತ್ತೊಂದಿಷ್ಟು ಉರಿಸಿ ಪೆಕಪೆಕಾ ಅಂತ ನಗುವದರಲ್ಲಿರುವ ಮಜಾ ಮತ್ಯಾವದರಲ್ಲಿಯೂ ಇಲ್ಲ.

'ನಾವು ಸ್ಮಾರ್ತರಾ? ನಾವು ಹವ್ಯಕರಲ್ಲಾ??? ಹಾಂ?' ಅಂತ ಮುಗ್ಧನಾಗಿ ಕೇಳಿದೆ. ಅವತ್ತಿಗೆ ಗೊತ್ತಿದ್ದದ್ದು ಅಷ್ಟೇ.

'ಏ ನಿನ್ನ! ಹವ್ಯಕರೂ ಸಹಾ ಸ್ಮಾರ್ತರು. ಅಷ್ಟೂ ಗೊತ್ತಿಲ್ಲಾ?' ಅಂದು, 'ಬ್ರಾಹ್ಮಣಾಗಿ ಹುಟ್ಟಿದ್ದು ಸಾರ್ಥಕಾತು. ಎಂತಾ ಬ್ರಾಹ್ಮಣ ಅಂತೂ ಗೊತ್ತಿಲ್ಲ. ಹುಚ್ಚಾ' ಅಂತ ಎತ್ತಿದರು, ಮಂಗಳಾರತಿ.

'ಒಹೋ. ಹೀಂಗದ ಅಂತಾತು. ಸ್ಮಾರ್ತರ, ಅಂದ್ರ ನಮ್ಮ ಮಂದಿ, ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದ? ಇರ್ತದ??' ಅಂತ ಕೇಳಿದೆ. ಪೂರ್ತಿ ವಿಷಯ ತಿಳಿಯಬೇಕಲ್ಲ?

'ಅಯ್ಯೋ! ಎಷ್ಟು ಸರೆ ಅದನ್ನೇ ಹೇಳಬೇಕೋ? ಅಲ್ಲಿ ನಮ್ಮ ಕಾಲೇಜ್ ಮಾಸ್ತರರಿಗೆ ಸ್ಮಾರ್ತ ಬ್ರಾಹ್ಮಣರ ನೈವೇದ್ಯದಾಗ ಉಳ್ಳಾಗಡ್ಡಿ ಗಿಳ್ಳಾಗಡ್ಡಿ ಇರಂಗಿಲ್ಲ. ಇರೋದು ದೂರ ಉಳೀತು. ಅವೆಲ್ಲ ವರ್ಜ್ಯ ಸಹ ಅಂತ ದಬಾಯಿಸಿ ಹೇಳಿಬಂದೇನೀ. ಮನಿಗೆ ಬಂದ್ರ ನೀ ಮತ್ತ ಅದನ್ನೇ ಹಚ್ಚಿಯಲ್ಲಾ? ನಮ್ಮ ಮಾಸ್ತರ್ ಕಡೆನೇ ಹೋಗಿ ಕೂಡು. ಅವರ ಕಡೆನೇ ಟ್ರೇನಿಂಗ ತೊಗೋ. ಅವರಂಗss ಯಬಡ ಆಗು,' ಅಂತ ಬೈದರು. ಮತ್ತೂ ನಗು ಬಂತು.

ಅಮ್ಮನ ಮಾಸ್ತರರೋ ಶುದ್ಧ ವೈಷ್ಣವ ಬ್ರಾಹ್ಮಣರು. ಅದರಲ್ಲೂ ಆಚಾರರು. ಅದೂ ಮೈಸೂರ್ ಕಡೆಯವರು. ಅವರು ವೈಷ್ಣವರು ಅಂತ ಕರೆದುಕೊಳ್ಳುವದಿಲ್ಲ. ಮಾಧ್ವರು ಅಂತ ಕರೆದುಕೊಳ್ಳುತ್ತಾರೆ. ನೌಕರಿಗೆ ಅಂತ ಧಾರವಾಡಕ್ಕೆ ಬಂದು ನೆಲೆಸಿದ್ದರು. ಧಾರವಾಡದಲ್ಲಿ ಅವರ ಸಂಪ್ರದಾಯದ ಜನರಿದ್ದರೂ ಇವರಿಗೆ ಪೂರ್ತಿ ಸರಿಯಾಗುತ್ತಿರಲಿಲ್ಲ. ಏಕೆಂದರೆ ಮಠ ಬೇರೆ. ಇವರು ಬೆಂಗಳೂರು ಕಡೆ ಇರುವ ಮಾಧ್ವ ಸಂಪ್ರದಾಯದ ಮಠಕ್ಕೆ ಸೇರಿದವರು. ಧಾರವಾಡ ಕಡೆ ಬೇರೆ ಮಠದ ಸಂಪ್ರದಾಯ. ಹಾಗಾಗಿ ಇವರಿಗೆ ಭಾವ್ (ಮಹತ್ವ) ಕಮ್ಮಿ. ಅಥವಾ ಹಾಗಂತ ಅವರ ಕೊರಗು. ಇಷ್ಟರ ಮೇಲೆ ಆಗಾಗ ವೈಷ್ಣವರು, ಸ್ಮಾರ್ತರು, ದ್ವೈತ, ಅದ್ವೈತ, ಅದು ಇದು, ಅಂತೆಲ್ಲ ಜಿಜ್ಞಾಸೆ ಮಾಡುವದು ಅವರ ಸ್ವಭಾವ. ಅಮ್ಮನಂತಹ ರೈಸ್ ಆಗುವ ಜನ ಸಿಕ್ಕರೆ ಜಿಜ್ಞಾಸೆ ಮಾಡುವ ನೆಪದಲ್ಲಿ ಬೇರೆ ಸಂಪ್ರದಾಯದವರನ್ನು ಸಣ್ಣದಾಗಿ ಕೆಣಕುವದೂ ಸಹ ಅವರ ಹವ್ಯಾಸ. ಉದಾಹರಣೆ: ಸ್ಮಾರ್ತರ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇರುತ್ತದೆಯೇ? ಇದ್ದರೆ ಅಡ್ಡಿಯಿಲ್ಲವಂತೆ. ಹೌದೇ?......ಹೀಗೆ ಸಣ್ಣ ಹಿಡಿದು ಕಿರಿಕ್ ಮಾಡುವ ಪಾರ್ಟಿ.

ಉನ್ನತ ಮಟ್ಟದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಥವಾ ಪಂಡಿತರು ಮಾತ್ರ ಉತ್ತರಿಸಬಹುದಾದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದ್ದರೆ, 'ಅದೆಲ್ಲಾ ನಮಗ ಗೊತ್ತಿಲ್ಲರೀ ಸರ್. ನೀವು ಯಾರಾದರೂ ಸ್ಮಾರ್ತ ಪಂಡಿತರನ್ನು ಕೇಳ್ರೀ,' ಅಂತ ಹೇಳಿ ಬರುತ್ತಿದ್ದರೇನೋ ಅಮ್ಮ. ಆದರೆ ಕೊಂಚ ಸಂಸ್ಕಾರವಿದ್ದ ಯಾವ ಬ್ರಾಹ್ಮಣರೂ ಆಕ್ಷೇಪಿಸುವಂತಹ ಸಂದೇಹ ಕೇಳಿಬಿಟ್ಟಿದ್ದಾರೆ. ಅದರಲ್ಲೂ 'ಸ್ಮಾರ್ತರ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇದ್ದರೆ ನಡೆಯುತ್ತದೆ. ಸಬ್ ಚಲ್ತಾ ಹೈ! ಅಲ್ಲಾ??' ಅನ್ನುವ ಕೊಂಕು ರೀತಿಯಲ್ಲಿ ಕೇಳಿದ್ದಾರೆ. ಬರೋಬ್ಬರಿ ಬೆಂಡೆತ್ತಿಸಿಕೊಂಡಿದ್ದಾರೆ.

ನಾವೆಲ್ಲ ಮೂರನೇ ತಲೆಮಾರಿನ ಧಾರವಾಡಿಗರು. ಹಾಗಾಗಿ ನಮಗೆ ಇಂತಹ ಅನುಭವಗಳು ಕಮ್ಮಿ. ಮತ್ತೆ ನಾವೆಲ್ಲಾ ಹುಟ್ಟಿ ದೊಡ್ಡವರಾಗುತ್ತಿರುವಾಗ ಜಾತಿ ಪದ್ಧತಿ ಕಮ್ಮಿಯಾಗಿತ್ತು. ಬ್ರಾಹ್ಮಣರಲ್ಲಿ ಒಳಪಂಗಡಗಳ ಮಧ್ಯೆ ಕೋಳಿಜಗಳ ಇತ್ತಾದರೂ ನಮಗೆ ಅದರ ಅನುಭವವಾಗಲಿಲ್ಲ. ಪಂಡಿತರ ಮಧ್ಯೆ ದ್ವೈತ ಶ್ರೇಷ್ಠವೋ ಅದ್ವೈತ ಶ್ರೇಷ್ಠವೋ ಅಂತ ವಾದ ವಿವಾದ ನಡೆಯುತ್ತಿತ್ತೇ ವಿನಃ ಸಾಮಾನ್ಯರಿಗೆ ಸಂಬಂಧವಿರಲಿಲ್ಲ. ಹಾಗಾಗಿ ನಮಗೆ ಅದೆಲ್ಲ ಗೊತ್ತಿರಲಿಲ್ಲ. 'ಕೆಟ್ಟು ಪಟ್ಟಣ ಸೇರು' ಅಂತ ಮಾತಿದೆ. ಹಳ್ಳಿ ಕಡೆಯಿದ್ದ ನಮ್ಮ ಪೂರ್ವಜರು ನಮ್ಮನ್ನೆಲ್ಲ ಕುರಿತು, 'ನೀವೆಲ್ಲ ಪಟ್ಟಣ ಸೇರಿ ಕೆಟ್ಟವರು,' ಅನ್ನುತ್ತಿದ್ದರು. ಪಾಲಕರನ್ನೂ ಸೇರಿಸಿ. ಅರ್ಥಾತ್ ಪಟ್ಟಣ ಸೇರಿದ್ದ ಪಾಲಕರು ಹಳ್ಳಿಯ ಸಂಪ್ರದಾಯಗಳನ್ನೆಲ್ಲ ಬಿಟ್ಟುಬಿಟ್ಟಿದ್ದಾರೆ. ತಾವೂ ಬಿಟ್ಟಿದ್ದಾರೆ, ಮಕ್ಕಳಿಗೂ ಕಲಿಸಿಲ್ಲ ಅಂತ ಸಣ್ಣ ಆಕ್ಷೇಪ ಇರುತ್ತಿತ್ತು. ಅದರಲ್ಲಿ ತಪ್ಪಿರಲಿಲ್ಲ ಬಿಡಿ. ನಮ್ಮದೇ ವಯಸ್ಸಿನ ಹಳ್ಳಿ ಕಡೆ ಮಕ್ಕಳಿಗೆ ಎಷ್ಟೊಂದು ಸಂಪ್ರದಾಯ ಗೊತ್ತಿರುತ್ತಿತ್ತು. ಧಾರ್ಮಿಕ ಸಾಮಾನ್ಯಜ್ಞಾನ ಎಷ್ಟೊಂದು ಇರುತ್ತಿತ್ತು. ನಮಗೆ ಅದೆಲ್ಲ ಗೊತ್ತೇ ಇರಲಿಲ್ಲ. ಮನೆಯಲ್ಲಿ ಭಕ್ತಿ ಇತ್ತು. ಶ್ರದ್ಧೆ ಇತ್ತು. ಆದರೆ ಆಚರಣೆಗಳು ಕಮ್ಮಿ. ಆಡಂಬರ ಇಲ್ಲವೇ ಇಲ್ಲ. ಅವರವರ ಭಕ್ತಿಗೆ ಅವರವರ ಭಾವಕ್ಕೆ ತಕ್ಕಂತೆ ಪೂಜೆ ಪುನಸ್ಕಾರ. ಹಾಗಾಗಿ ನಮಗೆ ಇದೆಲ್ಲ ಸಂಕೀರ್ಣತೆಗಳು ಗೊತ್ತಿರಲಿಲ್ಲ.

ಅಮ್ಮನ ಮೇಲೆ ಹೇಳಿದ ಮಾಸ್ತರರು ಮಜಾ ಇದ್ದರು. ಒಮ್ಮೆ ಏನೋ ಮಾತುಬಂದಾಗ, 'ನಾವು ಬದನೆಕಾಯಿ ತಿನ್ನುವದಿಲ್ಲ,' ಅಂದಿದ್ದರು. ತಿನ್ನುತ್ತಲೂ ಇರಲಿಲ್ಲ ಬಿಡಿ. ಆದರೆ ಒಮ್ಮೆ ಅವರ ಮನೆಯಲ್ಲಿ ಬದನೆಕಾಯಿಯಂತಹ ತರಕಾರಿ ನೋಡಿದ ಅಮ್ಮ, 'ಬದನಿಕಾಯಿ ತಿನ್ನೋದಿಲ್ಲ ಅಂದಿದ್ರಿ. ಇದೇನು ಮತ್ತ?' ಅಂತ ಅವರ ಮಾಸ್ತರರಿಗೆ ಚುಚ್ಚಿದ್ದಾಳೆ. 'ಏ, ಇದು ಸಾದಾ ಬದನಿಕಾಯಿ ಅಲ್ಲ. ವಾದಿರಾಜಗುಳ್ಳ. ಇದು ನಡಿತದ,' ಅಂದುಬಿಟ್ಟಿದ್ದಾರೆ ಅವರ ಮಾಸ್ತರರು. 'ಇದು ವಾದಿರಾಜಗುಳ್ಳ. ನಮ್ಮ ಸ್ವಾಮಿಗಳೇ ಇದನ್ನ ತಿನ್ನಬಹುದು ಅಂತ ಹೇಳ್ಯಾರ!!' ಅಂತ ಆ ಮಾದರಿಯ ಬದನೇಕಾಯಿ ಹೇಗೆ approved and sanctioned ಅನ್ನುವದನ್ನು ವಿವರಿಸಿದ್ದಾರೆ. 'ಹೇಳುವದು ಶಾಸ್ತ್ರ ಆದರೆ ತಿನ್ನುವದು ಬದನೇಕಾಯಿ' ಅನ್ನುವ ಮಾತಿಗೆ ಹೊಸ ಪರಿಭಾಷ್ಯೆ ವಾದಿರಾಜಗುಳ್ಳ. ಮುಂದೆ ಮನೆಯಲ್ಲಿ ಬಂದನೆಕಾಯಿಯ ಏನೇ ಅಡಿಗೆ ಮಾಡಿದರೂ ವಾದಿರಾಜಗುಳ್ಳ ಅದು ಇದು ಅಂತ ಹಾಸ್ಯ ಇದ್ದೇ ಇರುತ್ತಿತ್ತು.

ವಾದಿರಾಜಗುಳ್ಳದ ಬಗ್ಗೆ ಹುಡುಕಿದಾಗ ಕೆಳಗಿನ ಮಾಹಿತಿ ಸಿಕ್ಕಿತು. ಅಮ್ಮನ ಮಾಸ್ತರರು ಹೇಳಿದ್ದರಲ್ಲಿ ಸತ್ಯವಿತ್ತು.

>>
ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. ‘ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ'.  ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -

ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ

<<

ನಮ್ಮ ಮಂದಿಯ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇರುವದು ದೂರದ ಮಾತು. ಅಡಿಗೆಯಲ್ಲೂ ಉಳ್ಳಾಗಡ್ಡೆ ಇರುತ್ತಿರಲಿಲ್ಲ. ನಮ್ಮ ಹಳ್ಳಿಕಡೆ ಮಾಡುವ ಅಡಿಗೆಗಳಲ್ಲಿ ಇಂದಿಗೂ ಉಳ್ಳಾಗಡ್ಡೆ ಇಲ್ಲ ಅಥವಾ ಕಮ್ಮಿ. ಮೊದಲೆಲ್ಲ ಮನೆ ಹಿತ್ತಲಿನಲ್ಲಿ ಬೆಳೆದುಕೊಂಡ ತರಕಾರಿಗಳಿಂದಲೇ ಅಡಿಗೆ. ಬೇಕಾದರೆ ಕಾಡುಮೇಡಿನಲ್ಲಿ ಸಿಗುತ್ತಿದ್ದ ಸೊಪ್ಪು, ಹಣ್ಣು ಇತ್ಯಾದಿ. ಉಳ್ಳಾಗಡ್ಡೆ ಬೆಳೆಯುವ ನೆಲವಲ್ಲ ಅದು. ಹಾಗಾಗಿ ಅಡಿಗೆಯಲ್ಲಿ ಉಳ್ಳಾಗಡ್ಡೆ ಉಪಯೋಗವಿರುತ್ತಿರಲಿಲ್ಲ. ಮತ್ತೆ ಉಳ್ಳಾಗಡ್ಡೆ, ಬಳ್ಳೊಳ್ಳಿ, ಮೂಲಂಗಿ ಇತ್ಯಾದಿಗಳು ರಾಜಸಿಕ ಆಹಾರ ಪದಾರ್ಥಗಳು. ಸಾತ್ವಿಕರಿಗೆ, ಸಾಧಕರಿಗೆ ನಿಷಿದ್ಧ. ಹಾಗಾಗಿ ಅವನ್ನು ಬಳಸುತ್ತಿರಲಿಲ್ಲ. ಈಗ ಹಳ್ಳಿ ಕಡೆ ಜನರೂ ತರಕಾರಿಗೆ ಪೇಟೆಗೇ ಬರಬೇಕಾಗಿದೆ. ತೋಟ, ಗದ್ದೆ ಮಾಡುವವರೇ ವಿರಳವಾಗಿದ್ದಾರೆ. ಹಾಗಿರುವಾಗ ಹೆಚ್ಚಿನ ಶ್ರಮ ಬೇಡುವ ಹಿತ್ತಿಲು ಮಾಡಿ ತರಕಾರಿ ಬೆಳೆಯುವವರು ಬಹಳ ಕಮ್ಮಿ. ಹಾಗಾಗಿ ನಮ್ಮ ಕಡೆಯ ಜನರ ಅಡಿಗೆಯಲ್ಲೂ ಉಳ್ಳಾಗಡ್ಡೆ ಬಂದಿರಬಹುದು. ಮತ್ತೆ ಅದರ ರುಚಿ ಹತ್ತಿದರೆ ಅದಿಲ್ಲದ ಅಡಿಗೆ ರುಚಿಸುವದಿಲ್ಲ ನೋಡಿ. ಕೆಲವರಿಗಂತೂ ಉಳ್ಳಾಗಡ್ಡೆ ಒಂದು ತರಹದ addiction.

ಮುಂಬೈನ ದೊಡ್ಡ ದ್ವೈತ ಪಂಡಿತರಾದ ಮಾಹುಲಿ ಆಚಾರ್ಯರ ಯಾವದೋ ಪ್ರವಚನವನ್ನು ಮೊನ್ನೆ YouTube ನಲ್ಲಿ ನೋಡುತ್ತಿದ್ದೆ. ಅವರ ಒಂದು ಮಾತು rhetorical ಅನ್ನಿಸಿದರೂ ವಿಚಾರ ಮಾಡಲು ಹಚ್ಚಿತು. 'ಉಳ್ಳಾಗಡ್ಡೆ ಆರೋಗ್ಯಕ್ಕೆ ಉತ್ತಮ. ಬಳ್ಳೊಳ್ಳಿ ಆರೋಗ್ಯಕ್ಕೆ ಉತ್ತಮ. ಮೂಲಂಗಿ ಆರೋಗ್ಯಕ್ಕೆ ಉತ್ತಮ. ಕೋಳಿತತ್ತಿಯಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ. ಹೀಗೆ ನಿಷಿದ್ಧ ಪದಾರ್ಥಗಳನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮ ಅಂತ ತಿನ್ನುವ ಅಭ್ಯಾಸ ಮಾಡಿಕೊಂಡವರಿದ್ದಾರೆ. ಆರೋಗ್ಯಕ್ಕೆ ಒಳ್ಳೆಯದು ಅಂತ ಸಮರ್ಥಿಸಿಕೊಳ್ಳುತ್ತಾರೆ ಸಹ. ಇರಬಹದು. ಆರೋಗ್ಯಕ್ಕೆ ಸಹಕಾರಿಯಾಗಿರಬಹುದು. ಅವನ್ನೆಲ್ಲ ತಿನ್ನುವದರಿಂದ ದೇಹದ ಆಯುಷ್ಯ ಒಂದೈದು ವರ್ಷ ಜಾಸ್ತಿಯೂ ಆಗಬಹದು. ಆದರೆ ಧರ್ಮಶಾಸ್ತ್ರಗಳಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ಸೇವಿಸಿ ಆಯುಷ್ಯವನ್ನು ಹೆಚ್ಚುಮಾಡಿಕೊಳ್ಳಬೇಕೇ? ಅದು ಸಾಧುವೇ? ಅಂತಹ ನಿಷಿದ್ಧ ಮೂಲಗಳಿಂದ ಆಯುರಾರೋಗ್ಯ ಪಡೆದ ದೇಹ ಎಂತಹ 'ಘನ' ಕಾರ್ಯಗಳನ್ನು ಮಾಡೀತು? ಅದೆಂತಹ ಪುಣ್ಯವನ್ನು ಸಂಪಾದಿಸೀತು???' ಅಂದರು ಆಚಾರ್ಯರು. Something to think about.

ಇಷ್ಟೆಲ್ಲ ಹೇಳಿ ಆದ ಮೇಲೂ ಒಂದು ಆಖ್ರೀ ಮಾತು ಉಳಿಯುತ್ತದೆ. ಅದೇ ಹಳೆಯ ಗಾದೆಮಾತು. 'ಊಟ ತನ್ನಿಚ್ಛೆ. ನೋಟ ಪರರಿಚ್ಛೆ.'

8 comments:

sunaath said...

ಒಂದು ಜೋಕನ್ನು ನೀವು ಕೇಳಿರಬಹುದು. ಈಗಾಗಲೇ ಕೇಳಿದ್ದರೆ, ಮತ್ತೊಮ್ಮೆ ನಕ್ಕು ಬಿಡಿ!
‘ಉಳ್ಳಾಗಡ್ಡಿ ಅತ್ಯಂತ ಪವಿತ್ರ ವಸ್ತು. ಅದನ್ನು ಉದ್ದ ಹೆಚ್ಚಿದರೆ ಶಂಖವಾಗುತ್ತದೆ;ಅಡ್ಡ ಹೆಚ್ಚಿದರೆ ಚಕ್ರವಾಗುತ್ತದೆ.’

Mahesh Hegade said...

ಜೋಕ್ ನೆನಪಿಸಿದ್ದಕ್ಕೆ ಧನ್ಯವಾದಗಳು, ಸುನಾಥ್ ಸರ್.

ಬೀಚಿಯವರು ಇದನ್ನೇ ಉಪಯೋಗಿಸಿಕೊಂಡು ತಿಂಮನ ಮುದ್ರಾಧಾರಣದ ಬಗ್ಗೆ ಜೋಕ್ ಬರೆದಿದ್ದರು. ಆಯ್ತ ವೇಳೆಗೆ ಶಂಖ, ಚಕ್ರ ಇತ್ಯಾದಿ ಸಿಗದೇಹೋಗಿ, ತಿಂಮ ಈರುಳ್ಳಿಯನ್ನು ನೀವು ಹೇಳಿದ ಹಾಗೆಯೇ ಕತ್ತರಿಸಿ,ಅವುಗಳಿಂದಲೇ ಮುದ್ರಾಧಾರಣ ಮಾಡಿದ್ದನಂತೆ. ಬೀಚಿಯವರ ಜೋಕು!

Bob Byatnal said...


ತುಂಬಾ ಛೆನ್ನಾಗಿದೆ! Smart ಸಿಟಿಗಳು ಸ್ಮಾರ್ತರಿಗಾಗೇ ತಯಾರಾಗುತ್ತಿವೆ!!

Arvind Patil said...

Very good, enjoyed!

Arvind Patil said...

Very good, enjoyed!

Mahesh Hegade said...

Thanks, Arvind.

Anonymous said...

ನನ್ನ ಮಡಿವಂತ ಸ್ನೇಹಿತರೊಬ್ಬರು ಪ*ಮಾ*ಚಾರ್ ಅಂತ ರಾಮನವಮಿಗೆ ಮನೆಗೆ ಕರೆದಿದ್ದೆ. ಬೇಯಿಸಿದ್ದು ಏನೂ ಮಾಡಿರುಲ್ಲ ಇವತ್ತು ಬರಿ ಕೋಸಂಬರಿ,ಪಾನಕ,ಮಜ್ಜಿಗೆ-ದಯವಿಟ್ಟು ಸ್ವೀಕರಿಸಿ ಅಂದರೆ ಆಗಲಿ ಅಂದರು.
ನಮ್ಮ ಮನೆಯವರು ಒಂದು ಮುತ್ತಗದೆಲೆ ದೊನ್ನೆಲಿ ತಂದು ಕೊಟ್ಟಾಗ "ನಾ ಕ್ಯಾರಟ್ ತಿನ್ನುಲ್ಲ, ನಿಷಿದ್ಧ" ಅಂದು ಬಿಟ್ಟರು!!!
ಮಜ್ಜಿಗೆ, ಪಾನಕ ಏನೋ ಸ್ವೀಕರಿಸಿದರು ಆದರೆ ಕ್ಯಾರಟ್, ಟೊಮೇಟೊ(???)ಗಳನ್ನ ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ವರ್ಗಕ್ಕೆ ಸೇರಿಸಿದರು. ಗೆಣಸು,ಆಲೂಗಡ್ಡೆ,ಶೇಂಗಾ,ಅರಿಷಿನ,ಶುಂಠಿ ಇವೆಲ್ಲನು ಸಹ ಭೂಮಿ ಕೆಳಗೆ ಅಲ್ವೆ ಬೆಳೆಯೋದು ಅಂತ ಕೇಳಿದರೆ ಅವೆಲ್ಲಾ ತರ್ಕ ಮಾಡುಕಾಗುಲ್ಲ ಅಂದರು.

Mahesh Hegade said...

@Anonymous - ತುಂಬಾ ಚೆನ್ನಾಗಿದೆ ನಿಮ್ಮ ಅನುಭವ! :) ಕಾಮೆಂಟಿಗೆ ಧನ್ಯವಾದ!