Tuesday, April 11, 2017

Necrophilia (ನೆಕ್ರೊಫಿಲಿಯಾ) - ಶವಸಂಭೋಗ / ಶವಗಳತ್ತ ಲೈಂಗಿಕ ಆಕರ್ಷಣೆ

ಪಾರ್ಸಿ ಸಮುದಾಯದ ಜನರಲ್ಲಿ ಒಂದು ವಿಶಿಷ್ಟ ಪದ್ಧತಿಯಿದೆ. ಅವರು ಮೃತದೇಹಗಳನ್ನು ಸುಡುವದಿಲ್ಲ. ಹೂಳುವದೂ ಇಲ್ಲ. ಬದಲಾಗಿ ಹದ್ದುಗಳಿಗೆ ಆಹಾರವಾಗಿ ಹಾಕಿಬಿಡುತ್ತಾರೆ. ನಮ್ಮ ಹಳ್ಳಿ ಕಡೆ ಎಮ್ಮೆ, ದನ, ಇತ್ಯಾದಿ ಪ್ರಾಣಿಗಳು ಸತ್ತಾಗ ಅವುಗಳ ಕಳೇಬರವನ್ನು ಎಳೆದುಕೊಂಡು ಹೋಗಿ ಬೆಟ್ಟದ ಒಂದು ಮೂಲೆಯಲ್ಲಿ ಹಾಕಿ ಬರುತ್ತಾರೆ. ಹದ್ದುಗಳು ಬಂದು ಪ್ರಾಣಿಗಳ ಮೃತದೇಹವನ್ನು ಕುಕ್ಕಿ ಕುಕ್ಕಿ ತಿಂದು ಎಲ್ಲ ಚೊಕ್ಕ ಮಾಡುತ್ತವೆ. ಪಾರ್ಸಿಗಳ ಶವಸಂಸ್ಕಾರವೂ ಅದೇ ರೀತಿ. ಮರಣಾನಂತರವೂ ದೇಹ ಬೇರೆಯವರಿಗೆ ಉಪಯೋಗವಾಗಲಿ, ಆಹಾರವಾಗಿ ಹೊಟ್ಟೆ ತುಂಬಿಸಲಿ ಅನ್ನುವ ಉದಾತ್ತ ಉದ್ದೇಶ. ಕೊನೆಯಲ್ಲೂ, ‘ಪರೋಪಕಾರಾರ್ಥಮಿದಂ ಶರೀರಂ.’

ಈ ಘಟನೆ ತುಂಬಾ ವರ್ಷಗಳ ಹಿಂದೆ ಆಗಿದ್ದಂತೆ. ಹೆಚ್ಚಾಗಿ ೧೯೩೦-೪೦ ರ ಸಮಯದಲ್ಲಿರಬಹುದು. ಸ್ಥಳ - ಮುಂಬೈ / ಬಾಂಬೆ. ಒಬ್ಬ ಪಾರ್ಸಿ ಯುವತಿ ಸತ್ತುಹೋದಳು. ಪದ್ಧತಿಯಂತೆ ಅವಳ ಶವವನ್ನೂ ಹದ್ದುಗಳಿಗೆ ಹಾಕಿ ಬಂದರು. ಪಾರ್ಸಿಗಳ ದೇವಸ್ಥಾನದ ತೆರೆದ ಮೇಲ್ಛಾವಣಿಯೇ ಅವರ ಶವಾಗಾರ. ಅಲ್ಲಿ ಶವವನ್ನು ಹಾಕಿ, ಬಾಗಿಲು ಹಾಕಿಕೊಂಡು, ಕೆಳಗೆ ಬಂದರು. ಎಂದಿನಂತೆ ಹದ್ದುಗಳು ಬರುತ್ತವೆ. ಶವವನ್ನು ಪೂರ್ತಿ ಸಾಫ್ ಮಾಡಿ ಹೋಗುತ್ತವೆ.

ಸತ್ತುಹೋಗಿದ್ದ ಆ ಯುವತಿಗೆ ಒಬ್ಬ ಪ್ರೇಮಿ ಇದ್ದ. ಪಾಗಲ್ ಪ್ರೇಮಿ. ಅದೇನು ಆ ನಮೂನಿ ಉತ್ಕಟ ಪ್ರೇಮವೋ ಅಥವಾ ವಿಚಿತ್ರವೆನ್ನಿಸುವಂತಹ ಕಾಮವೋ ಗೊತ್ತಿಲ್ಲ. ಆಕೆ ಸತ್ತುಹೋದರೂ ಆಕೆಯನ್ನು ಈತ ಬಿಡಲೊಲ್ಲ. ಇವನು ಅದೇಗೋ ಮಾಡಿ ಪಾರ್ಸಿ ಶವಾಗಾರದ ಮೇಲ್ಛಾವಣಿಯಲ್ಲಿ ಯಾರಿಗೂ ಕಾಣದಂತೆ ಅವಿತಿಟ್ಟುಕೊಂಡಿದ್ದ. ಯುವತಿಯ ಶವವನ್ನು ಅಲ್ಲಿ ಬಿಟ್ಟು ಉಳಿದ ಜನ ಹೋಗಿದ್ದೇ ತಡ ಈ ಪಾಗಲ್ ಪ್ರೇಮಿ ಯುವತಿಯ ಹೆಣದೊಂದಿಗೆ ಪ್ಯಾರ್ ಮೊಹಬ್ಬತ್ ಶುರು ಮಾಡಿದ. ಅದೆಷ್ಟು ಸಮಯ ಪ್ರೇಮಿಯ ಶವವನ್ನು ತಬ್ಬಿಕೊಂಡೇ ಇದ್ದನೋ ಗೊತ್ತಿಲ್ಲ. ಆದರೆ ಹೆಣ ಪತ್ತೆ ಮಾಡಿದ ಹದ್ದುಗಳು ಬಂದವು. ನೂರಾರು ಬಂದವು. ಆ ಪಾರ್ಸಿ ಮಂದಿರದ ಛಾವಣಿ ಮೇಲೆ ಯಾವಾಗಲೂ ಹೆಣಗಳು ಸಿಗುತ್ತಿದ್ದವು. ಹದ್ದುಗಳಿಗೆ ಅದು ರೂಢಿಯಾಗಿತ್ತು. ಈ ಬಾರಿ ಎರಡು ದೇಹಗಳು! ಅದರಲ್ಲಿ ಒಂದು ಜೀವಂತ ಮನುಷ್ಯ ಅಂತ ಅವಕ್ಕೇನು ಗೊತ್ತಾಗಬೇಕು!? ‘ಸಕತ್ತಾಗಿ ಡಬಲ್ ಊಟ ಸಿಕ್ಕಿತು,’ ಅಂದುಕೊಂಡು ಎರಗಿದವು. ಎರಡೂ ದೇಹಗಳನ್ನು ಕುಕ್ಕಿ ಕುಕ್ಕಿ ತಿಂದುಹಾಕಿಬಿಟ್ಟವು!

ಸತ್ತ ಪ್ರೇಯಸಿಯನ್ನು ತಬ್ಬಿ ಮಲಗಿದ್ದ ಜೀವಂತ ಪ್ರೇಮಿ ಏನು ಮಾಡಿದ? ಗೊತ್ತಿಲ್ಲ. ಮೈಮೇಲೆ ಹದ್ದುಗಳು ಎರಗಿದ್ದು ಅರಿವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಅದೆಲ್ಲಿ ಸಾಧ್ಯ, ಅದೂ ನೂರಾರು ಹಸಿದ ರಣಹದ್ದುಗಳು ಒಮ್ಮೆಲೇ ಬಂದೆರುಗಿದಾಗ!? ಒಟ್ಟಿನಲ್ಲಿ ಅವನೂ ಹದ್ದುಗಳಿಗೆ ಬಲಿಯಾದ. ಅನಿರೀಕ್ಷಿತವಾಗಿ ಜೀವಂತ ಮನುಷ್ಯನನ್ನು ನೋಡಿ ಗೊಂದಲಕ್ಕೀಡಾದ ರಣಹದ್ದುಗಳು ಮತ್ತೂ ferocious ಆಗಿ ದಾಳಿ ಮಾಡಿರಬಹುದು. ಸಿಕ್ಕ ಬೇಟೆ ತಪ್ಪಿಹೋದೀತು ಅಂತ ಹೆಣವನ್ನು ಬಿಟ್ಟು ಇವನನ್ನೇ ಮೊದಲು ಸ್ವಾಹಾ ಮಾಡಿದವೋ ಏನೋ! ಹದ್ದುಗಳು ಜೀವಂತ ಮನುಷ್ಯನನ್ನು ಅಟ್ಟಾಡಿಸಿಕೊಂಡು ಕುಕ್ಕಿ ಕುಕ್ಕಿ ಕೊಂದು ತಿಂದ ಆ ದೃಶ್ಯ ಒಟ್ಟಿನಲ್ಲಿ ಸಿಕ್ಕಾಪಟ್ಟೆ ಖರಾಬ್ ಆಗಿರಬೇಕು ಬಿಡಿ! ಒಳ್ಳೆ ಹಾರರ್ ಮೂವಿ ಕಹಾನಿ ಇದ್ದಂತಿದೆ.

ಬಹಳ ವರ್ಷಗಳ ಹಿಂದೆ ಈ ಘಟನೆಯನ್ನು ಕೇಳಿದ್ದೆ. ಮುಂದೊಮ್ಮೆ ೧೯೮೪ ರಲ್ಲಿ ಮುಂಬೈಗೆ ಹೋದಾಗ ಆ ಪಾರ್ಸಿ ಮಂದಿರವನ್ನು ರಸ್ತೆ ಮೇಲಿಂದ ನೋಡಿದ್ದೆ ಕೂಡ. ಆಗ ಕೂಡ ಹಿರಿಯರು casual ಆಗಿ ಮೇಲಿನ ಕಥೆಯನ್ನು ಮತ್ತೊಮ್ಮೆ ಮಾತಾಡಿಕೊಂಡಿದ್ದರು. ಅದನ್ನು ಕೇಳಿ, ಅದು ನಡೆದಿದ್ದು ಎನ್ನಲಾದ ಆ ಜಾಗವನ್ನು ನೋಡಿ ಮೈ ಜುಮ್ ಎಂದಿತ್ತು.

ಅಷ್ಟೇ, ಆವಾಗ necrophilia ಬಗ್ಗೆ ಗೊತ್ತಿರಲಿಲ್ಲ. ಮೊನ್ನಿತ್ತಲಾಗೆ ನೆಕ್ರೊಫಿಲಿಯಾ ಬಗ್ಗೆ ತಿಳಿದಾಗ ಈ ಘಟನೆ ನೆನಪಾಯಿತು. ಆದರೆ ಆ ಪಾರ್ಸಿ ಪಾಗಲ್ ಪ್ರೇಮಿಯ ಪ್ರಕರಣ ನೆಕ್ರೊಫಿಲಿಯಾ ಕೇಸೋ ಅಥವಾ ಸತ್ತುಹೋದ ಪ್ರೇಮಿಯ ಅಗಲಿಕೆಯನ್ನು ತಾಳಲಾಗದೇ ಆಕೆಯ ಹೆಣದೊಂದಿಗೆ ಒಂದಿಷ್ಟು ಸಮಯ ಕಳೆದು ದುಃಖವನ್ನು ಶಮನ ಮಾಡಿಕೊಳ್ಳೋಣ ಅಂತ ಹೋದ ಹುಚ್ಚು ಪ್ರೇಮಿಯ ಖತರ್ನಾಕ್ ಹರಕತ್ತೋ ಗೊತ್ತಾಗಲಿಲ್ಲ.

ನೆಕ್ರೊಫಿಲಿಯಾ ಒಂದು ತರಹದ ಮಾನಸಿಕ / ಲೈಂಗಿಕ ಅಸ್ವಸ್ಥತೆ ಅಂತ ತಜ್ಞರು ನಿರ್ಧರಿಸಿದ್ದಾರೆ. ಅದರ ಬಗ್ಗೆ ಬೇಕಾದಷ್ಟು ಸಂಶೋಧನೆಗಳೂ ಆಗಿವೆ. ಬೇರೆ ತರಹದ ಮಾನಸಿಕ ಅಸ್ವಸ್ಥರಿಗೆ ಸಿಕ್ಕಂತೆ ಇದಕ್ಕೂ ಚಿಕಿತ್ಸೆ ಸಿಗುತ್ತದೆ. ವಿರಳ ಆದರೆ ಅತಿ ಭಯಾನಕ ಅನ್ನಿಸುವಂತಹ ಶವಸಂಭೋಗ ಅಥವಾ ಶವಗಳತ್ತ ಲೈಂಗಿಕ ಆಕರ್ಷಣೆಗೆ ಒಳಗಾದ ವಿಚಿತ್ರ ಜನ ಅದೊಂದು ಮಾನಸಿಕ ರೋಗ ಅಂತ ಅರಿತುಕೊಂಡು ಚಿಕಿತ್ಸೆ ಪಡೆಯಲು ಮುಂದಾದರೆ ಮಾತ್ರ ಚಿಕಿತ್ಸೆ ಸಿಕ್ಕೀತು.

ಪುರಾತನ ಹಾಲಿವುಡ್ ನಟಿ ಮರ್ಲಿನ್ ಮುನ್ರೋ


ಮರ್ಲಿನ್ ಮುನ್ರೋ - ೧೯೫೦ - ೬೦ ರ ದಶಕದಲ್ಲಿ ದೊಡ್ಡ ಹೆಸರು ಮಾಡಿದ ಹಾಲಿವುಡ್ ನಟಿ. ಜಗದೇಕಸುಂದರಿ. ರೂಪದಲ್ಲಿ ಅಪ್ಸರೆಯರನ್ನೂ ಮೀರಿಸಿದಾಕೆ. ಯಾವ ಮಾದರಿಯ ಅಪ್ಸರೆ ಅಂದರೆ ಅಂದಿನ ಅಮೇರಿಕಾದ ಅಧ್ಯಕ್ಷ ಜಾನ್ ಕೆನಡಿ, ಅವರ ತಮ್ಮ ಅಟಾರ್ನಿ ಜನರಲ್ ರಾಬರ್ಟ್ ಕೆನಡಿ ಸಹ ಆಕೆಗೆ ಫಿದಾ ಆಗಿದ್ದರು. ಒಂದಿಷ್ಟು ತಿಂಗಳು ಕೆನಡಿ ಸಹೋದರರ ಖಾಸ್ ರಖಾವ್ ಅವಳು. ಇಂತಹ ಮರ್ಲಿನ್ ಮುನ್ರೋ ಹೊತ್ತಲ್ಲದ ಹೊತ್ತಿನಲ್ಲಿ ಶ್ವೇತಭವನಕ್ಕೆ ಫೋನ್ ಮಾಡಿದರೆ ಕೆನಡಿ ಎಲ್ಲ ಕೆಲಸ ಬಿಟ್ಟು ಇವಳೊಂದಿಗೆ ಲಲ್ಲೆಗರಿಯುತ್ತ ಕೂತುಬಿಡುತ್ತಿದ್ದರು. ಕೆನಡಿ ಸಾಹೇಬರ ಹುಟ್ಟುಹಬ್ಬಕ್ಕೆ ಅವಳೇ ಮುಖ್ಯ ಅತಿಥಿ. ತನ್ನ ದೇಹಸಿರಿಯನ್ನಷ್ಟೂ ಜಗತ್ತಿಗೆ ತೋರಿಸುವಂತಹ ಬಿಗಿಯಾದ ಪಾರದರ್ಶಕ ಡ್ರೆಸ್ ಹಾಕಿದ್ದ ಮರ್ಲಿನ್ ಮುನ್ರೋ ತನ್ನ ಮಾದಕ ಧ್ವನಿಯಲ್ಲಿ happy birthday ಹಾಡಿದಾಗ ಕೆನಡಿ ಕರಗಿಹೋಗಿದ್ದರು. ಹಾಡಿನಲ್ಲೇ ಮೋಡಿ ಮಾಡಿ ತುಂಬಿದ ಸಭೆಯಲ್ಲೇ ಕೆನಡಿ ಸಾಹೇಬರಿಗೆ ಬೆತ್ತಲಾದ ಫೀಲಿಂಗ್ ಬರುವಂತೆ ಮಾಡಿದ ಧೀರೆ ಆಕೆ!

ಮುಂದೆ ೧೯೬೨ ರಲ್ಲಿ ಇದೇ ಮರ್ಲಿನ್ ಮುನ್ರೋ ಸಂಶಯಾಸ್ಪದ ರೀತಿಯಲ್ಲಿ ನಿಗೂಢವಾಗಿ ಸತ್ತಳು. ಒಂದೇ ಸಲಕ್ಕೆ ವಿಪರೀತವಾಗಿ ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡಿದ್ದೇ ಸಾವಿಗೆ / ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಯಿತು.  ಆಕೆಯ ಸಾವಿನ ಹಿಂದಿರಬಹುದಾದ ಕಾಣದ ಕೈಗಳು, ಷಡ್ಯಂತ್ರದ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಆಸಕ್ತಿಯಿದ್ದರೆ ಓದಿಕೊಳ್ಳಿ. ರೋಚಕ ವಿವರಗಳಿವೆ. 

ಈಗಿತ್ತಲಾಗೆ ಹೊರಬಂದಿರುವ ಭೀಕರ ಸಂಗತಿಯೆಂದರೆ ಸಾವಿನ ನಂತರ ಮರ್ಲಿನ್ ಮುನ್ರೋಳ ಮೃತದೇಹ ಕೂಡ ಶವಸಂಭೋಗಕ್ಕೆ ಒಳಗಾಗಿತ್ತು!

ಮರಣಾನಂತರ ಮರ್ಲಿನ್ ಮನ್ರೋಳ ಮೃತದೇಹ ಸರಿಸುಮಾರು ಆರು ಘಂಟೆಗಳ ಕಾಲ ನಾಪತ್ತೆ ಆಗಿತ್ತು. ದೇಹವನ್ನು ಮನೆಯಿಂದ ಶವಾಗಾರಕ್ಕೆ ಕಳಿಸಿದ್ದರು. ಲಾಸ್ ಏಂಜಲ್ಸ ನಗರದ ಆಕೆಯ ಮನೆಯಿಂದ ಆಸ್ಪತ್ರೆಯ ಶವಾಗಾರ ಮುಟ್ಟಲು ಗರಿಷ್ಠ ಒಂದು ಘಂಟೆ ಸಾಕಾಗಿತ್ತು. ಆದರೆ ಆರು ಘಂಟೆಗಳ ಕಾಲ ಆಕೆಯ ಮೃತದೇಹ ಆಸ್ಪತ್ರೆ ತಲುಪಲೇ ಇಲ್ಲ. ಶವಸಂಭೋಗಿಗಳು ಆಕೆಯ ಮೃತದೇಹವನ್ನು ಅಪಹರಿಸಿದ್ದರು!

ಅಮೇರಿಕಾದಲ್ಲಿ ಶವಸಂಭೋಗಿಗಳ ಪರಮರಹಸ್ಯ ಭೂಗತ ಸಂಘಟನೆಯೊಂದು ಇದೆಯಂತೆ. ಅದು ಕೇವಲ ರಹಸ್ಯ ಸಂಘಟನೆ ಅಷ್ಟೇ ಅಲ್ಲ. ಕೆಲವೇ ಕೆಲವು ತುಂಬಾ ಪ್ರಖ್ಯಾತರೂ, ಬಲಶಾಲಿಗಳೂ, influential, powerful ಆಗಿರುವ ಟಾಪ್ ಲೆವೆಲ್ಲಿನ ಜನಗಳು ಅದರ ಸದಸ್ಯರಂತೆ.

ಸತ್ತವಳು ಆ ಕಾಲದ ಬಾಂಬ್ ಸುಂದರಿ ಮರ್ಲಿನ್ ಮನ್ರೋ. ವಿಕೃತ ಮನಸ್ಸಿನ ಶವಸಂಭೋಗಿಗಳಿಗೆ ಅದೇನು ಚಿತ್ರ ವಿಚಿತ್ರ ತೆವಲುಗಳು ಇದ್ದವೋ ಏನೋ. ಅದರಲ್ಲೂ ದಿವ್ಯ ಸುಂದರಿಯೊಬ್ಬಳ ಮೃತದೇಹವನ್ನು ಊಹಿಸಿಕೊಂಡು ತಲೆ ಹೇಗೇಗೆ ಓಡಿತೋ ಏನೋ. ಅವರಿಗೆ ಹಬ್ಬ! ಹಬ್ಬ! ಒಟ್ಟಿನಲ್ಲಿ ತಮ್ಮ ಶಕ್ತಿ, influence ಎಲ್ಲಾ ಬರೋಬ್ಬರಿ ಉಪಯೋಗಿಸಿಕೊಂಡು ಮರ್ಲಿನ್ ಮುನ್ರೋಳ ಮೃತದೇಹವನ್ನು ಅಪಹರಿಸಿದ್ದಾರೆ. ಆರು ಘಂಟೆಗಳ ಕಾಲ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ನಂತರ ನಡೆದಿದ್ದು ಆಕೆಯ ಮೃತದೇಹದೊಂದಿಗೆ ಚಿತ್ರವಿಚಿತ್ರ ಲೈಂಗಿಕ ಕ್ರಿಯೆಗಳು.

ಶವಸಂಭೋಗಿಗಳ ರಹಸ್ಯ ಸಂಘಟನೆಯ ಸದಸ್ಯರಿಂದ ಭೋಗಿಸಲ್ಪಟ್ಟ ಮರ್ಲಿನ್ ಮುನ್ರೋಳ ಮೃತದೇಹ ಕೊನೆಗೊಮ್ಮೆ ಶವಾಗಾರಕ್ಕೆ ಬಂತು. ಆಕೆಯ ಶವಪರೀಕ್ಷೆ ಮಾಡಿದ್ದ ವೈದ್ಯ ಆಕೆಯ ದೇಹದ ಸ್ಥಿತಿ ನೋಡಿ ದೊಡ್ಡ ಮಟ್ಟದ ಚೀತ್ಕಾರ ಮಾಡಿದ್ದ. ಆಪರಿ ಆಕೆಯ ಮೃತದೇಹವನ್ನು ಪಶುಗಳಂತೆ ಹರಿದು ಮುಕ್ಕಲಾಗಿತ್ತು. ಆಕೆಯ ಶವಪರೀಕ್ಷೆ ಮಾಡಿದ ಡಾ. ನಗೋಚಿ ನುರಿತ autopsy ವೈದ್ಯ. ಅವನೇ ದಾಖಲಿಸಿದ್ದ - ಮರ್ಲಿನ್ ಮುನ್ರೋಳ ಮೃತದೇಹವನ್ನು ಹರಿದು ಮುಕ್ಕಲಾಗಿದೆ. ಚಿಂದಿ ಚಿತ್ರಾನ್ನ ಮಾಡಲಾಗಿದೆ. Necrophiliacs had ravaged her dead body like savages!

ಅಮೇರಿಕಾದಲ್ಲಿ ಶವಸಂಭೋಗಿಗಳ ರಹಸ್ಯ ಸಂಘಟನೆ ಇದ್ದರೆ ಅದು ದೊಡ್ಡ ಆಶ್ಚರ್ಯವಂತೂ ಅಲ್ಲ. ಇಲ್ಲೂ ಕ್ಷುದ್ರಶಕ್ತಿಗಳ ಉಪಾಸನೆ (Satanic Worship) ದೊಡ್ಡ ಪ್ರಮಾಣದಲ್ಲಿ ಇದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ಕಾರಣಗಳಿಗೆ Satanic Worship ಮಾಡುತ್ತಾರೆ. ಅಷ್ಟೇ ಎಲ್ಲ ಗುಪ್ತ ಗುಪ್ತವಾಗಿ ನಡೆಯುತ್ತದೆ. ಕೆಲವು ಅತ್ಯಂತ ಬಲಶಾಲಿ, ಪರಮ ಶ್ರೀಮಂತ, ಸಿಕ್ಕಾಪಟ್ಟೆ influential ಜನರೇ ಅವುಗಳಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಗುಸುಗುಸು. ದೇಶದಲ್ಲಿ ನಡೆಯುವ ಎಷ್ಟೋ ಮಕ್ಕಳ ಅಪಹರಣಗಳ ಹಿಂದೆ ಅದರಲ್ಲೂ ಶಿಶುಗಳ ಅಪಹರಣದ ಹಿಂದೆ ಇಂತಹ ಕ್ಷುದ್ರಶಕ್ತಿ ಉಪಾಸಕರ ಕೈವಾಡವಿರುತ್ತದೆ ಅಂತ ಸುದ್ದಿ. ಇಲ್ಲಿನ ಶವಸಂಭೋಗಿಗಳೂ ಅಂತಹವರೇ ಇರಬೇಕು.

ಶವಾಗಾರಗಳಲ್ಲಿ ಕೆಲಸ ಮಾಡುವ ಅನೇಕ ಕರ್ಮಚಾರಿಗಳಿಗೆ ಈ ನೆಕ್ರೊಫಿಲಿಯಾದ ತೊಂದರೆ ಇರುವದು ಕಂಡುಬಂದಿದೆ. ಶವಗಳ ಜೊತೆಗೇ ಸದಾ ಇದ್ದೂ ಇದ್ದೂ, ಏನೋ ಒಂದು ತರಹದ ಮನಃಪರಿವರ್ತನೆಯಾಗಿ, ಶವಗಳತ್ತ ಲೈಂಗಿಕ ಆಕರ್ಷಣೆಗೆ ಒಳಗಾಗುತ್ತಾರೋ ಅಥವಾ ನೆಕ್ರೊಫಿಲಿಯಾ ಪೀಡಿತರೇ ಶವಾಗಾರದ ಕೆಲಸಗಳತ್ತ ಆಕರ್ಷಿತರಾಗುತ್ತಾರೋ ಗೊತ್ತಿಲ್ಲ. ಶವಾಗಾರದ ಕರ್ಮಚಾರಿಗಳು ಶವಗಳನ್ನು ಭೋಗಿಸಿದ, ವಿರೂಪಗೊಳಿಸಿದ ಪ್ರಕರಣಗಳು ಬೇಕಾದಷ್ಟಿವೆ.

ಇಲ್ಲಿ ಶವಸಂಸ್ಕಾರದ ಮನೆಗಳು (funeral homes) ಅಂತಿರುತ್ತವೆ. ಯಾರಾದರೂ ಸತ್ತಾಗ ಅವರ ಅಂತಿಮ ಸಂಸ್ಕಾರ ಮಾಡುವ ಮೊದಲು ದರ್ಶನಕ್ಕೆ ಇಡುವ ಪದ್ಧತಿಯಿದೆ. ಅದರ ಪೂರ್ತಿ ಉಸ್ತುವಾರಿಯನ್ನು ವಹಿಸಿಕೊಂಡು, ಶವದ ದರ್ಶನಕ್ಕೆ ಎಲ್ಲವನ್ನೂ ಸಂಘಟಿಸುವದು ಈ funeral homes ಗಳ ಜವಾಬ್ದಾರಿ. ಶವವನ್ನು ತೆಗೆದುಕೊಂಡು ಬಂದು, ಅದು ಕೆಡದಂತೆ embalm ಮಾಡಿ, ಅದನ್ನು ಗಾಜಿನ ಕೇಸಿನಲ್ಲಿಟ್ಟು ದರ್ಶನಕ್ಕೆ ಅಣಿಮಾಡುವವರು ಶವಸಂಸ್ಕಾರದ ಮನೆಗಳ ಕರ್ಮಚಾರಿಗಳು. ಇವರಲ್ಲೂ ಹಲವರು ನೆಕ್ರೊಫಿಲಿಯಾ ಪೀಡಿತರು. ಹೇಗೂ ಶವವನ್ನು ದರ್ಶನಕ್ಕೆ ಅಣಿ ಮಾಡಲು ಹಲವಾರು ಘಂಟೆಗಳು ಬೇಕು. ನಂತರವೂ ಎಷ್ಟೋ ಘಂಟೆಗಳ ಕಾಲ ಶವ ಇವರ ಸುಪರ್ದಿಯಲ್ಲೇ ಇರುತ್ತದೆ. ಇವರಲ್ಲೂ ಕೆಲವರು ಶವಗಳನ್ನು ಚಿತ್ರವಿಚಿತ್ರ ರೀತಿಯಲ್ಲಿ ಭೋಗಿಸಿದವರಿದ್ದಾರೆ. ಅದಕ್ಕಾಗಿಯೇ ಶಿಕ್ಷೆ ಅನುಭವಿಸಿದವರೂ ಇದ್ದಾರೆ.

ಶವದ ಉಪಾಸನೆಯಂತೂ ತಂತ್ರ / ವಾಮಾಚಾರದಲ್ಲಿ ಬಹಳ ಸಾಮಾನ್ಯ. ಆದರೆ ಶವಸಂಭೋಗದ ಬಗ್ಗೆ ತಂತ್ರದಲ್ಲಿ ಉಲ್ಲೇಖವಿದೆಯೇ? ಗೊತ್ತಿಲ್ಲ. ವಾಮಾಚಾರಿಗಳಿಗೆ ಶವ ಸಿಗದಿರಲಿ ಅನ್ನುವದೂ ಒಂದು ಕಾರಣ ಹಿಂದೂಗಳಲ್ಲಿ ಹೆಚ್ಚಿನವರು ಶವಗಳನ್ನು ಸುಡುವದು. ಶವ ಸಿಕ್ಕರೆ ತಾನೇ ಅವರು ವಾಮಾಚಾರಕ್ಕೆ ಬಳಸಿಕೊಳ್ಳುವದು? ಅದಕ್ಕೇ ಸುಟ್ಟು ಬೂದಿ ಮಾಡಿಬಿಡೋದು. ಆ ಬೂದಿ ಸಹ ಮಾಂತ್ರಿಕರಿಗೆ ತುಂಬಾ ಪ್ರೀತಿ. ತಾಂತ್ರಿಕರ ಪರಮಗುರು ಶಿವನೇ ಶವದ ಬೂದಿ ಬಳಿದುಕೊಂಡಿರುತ್ತಾನೆ ನೋಡಿ. ಹಿಂದೂಗಳ ಸ್ಮಶಾನದಲ್ಲಿ ಹೆಣ ಸಿಗುವದಿಲ್ಲ ಎಂಬ ಕಾರಣಕ್ಕೋ ಏನೋ ವಾಮಾಚಾರಿಗಳು ಸದಾ ಬೇರೆ ಧರ್ಮೀಯರ ಸ್ಮಶಾನಗಳಲ್ಲಿ ತಡಕಾಡುತ್ತಿರುತ್ತಾರೆ. ಆಗಾಗ ಗೋರಿಗಳನ್ನು ಅಗೆದು ಹಾಕಿದ ಬಗ್ಗೆ, ಸಮಾಧಿಗಳನ್ನು ಧ್ವಂಸ ಮಾಡಿದ ಬಗ್ಗೆ ಸುದ್ದಿ ಕೇಳುತ್ತಿರುತ್ತೇವೆ. ಹೀಗೆಲ್ಲ ಮಾಡುವದು ಬೇರೆ ಯಾವ ಕಾರಣಕ್ಕೂ ಅಲ್ಲ.  All for the precious corpse or its parts!

ಏನೋ ಮಾಹಿತಿ ಹುಡುಕುತ್ತಿದ್ದಾಗ ಧುತ್ತೆಂದು ಕಣ್ಣಿಗೆ ಬಿದ್ದಿದ್ದು ನೆಕ್ರೊಫಿಲಿಯಾ ಎಂಬ ವಿಚಿತ್ರ ಶಬ್ದ. 'ಏನಪಾ ಹೀಗೆಂದ್ರೆ?' ಅಂತ ಅರ್ಥವನ್ನು ಕೆದಕುತ್ತ ಹೋದರೆ ಸಿಕ್ಕಿದ್ದು ಮಾತ್ರ ಚಿತ್ರವಿಚಿತ್ರ ಮಾಹಿತಿ!

ಕೊನೆಗೊಂದು ಕ್ವಿಜ್ - ಕನ್ನಡ ಸಿನೆಮಾ ಒಂದರಲ್ಲಿ ನೆಕ್ರೊಫಿಲಿಯಾವನ್ನು ಲೈಟಾಗಿ ಬಳಸಿಕೊಳ್ಳಲಾಗಿದೆ. ಆ ಸಿನೆಮಾದ ಹೆಸರು ನೆನಪಿದೆಯೇ? hint: ಅದರಲ್ಲಿ ಶವಸಂಭೋಗವಿಲ್ಲ. ಕೇವಲ ಶವಗಳತ್ತ ಒಂದು ಆಕರ್ಷಣೆ ಮಾತ್ರ. ಸಿನೆಮಾದ ಹೆಸರು ನೆನಪಿದ್ದರೆ ಕಾಮೆಂಟಿನಲ್ಲಿ ಹಾಕಿ. ಮತ್ತೊಂದು hint: ಅದು ೧೯೯೦ ರ ದಶಕದ ಒಂದು ಹಿಟ್ ಸಿನೆಮಾ. :)

ಉತ್ತರ: ಶ್! ಎನ್ನುವ ಕನ್ನಡ ಮೂವಿ. ಉಪೇಂದ್ರ ನಿರ್ದೇಶನ. ೧೯೯೩ ಬಿಡುಗಡೆಯಾದ ಒಂದು ಅತ್ಯುತ್ತಮ ಸಿನೆಮಾ. ಮಾಡಿದರೆ ಅಂತಹ ಸಸ್ಪೆನ್ಸ್ ಥ್ರಿಲ್ಲರ್ ಸಿನೆಮಾ ಮಾಡಬೇಕು. ನೋಡಿದರೆ ಅಂತಹ ಮೂವಿ ನೋಡಬೇಕು. ಹಾಟ್ಸ್ ಆಫ್!

8 comments:

Eknath Tookaram Ekbote said...


Some similarities in the "Khatarnak" movie!

ವಿ.ರಾ.ಹೆ. said...

ಅಯ್ಯಪ್ಪ! ಹೀಗೂ ಉಂಟೇ!!
ಮೂವಿ ಯಾವುದೋ ಗೊತ್ತಾಗ್ತಿಲ್ವಲ್ಲ!
ಅಂದಹಾಗೆ, 'ವಾಯ್ಲೆಟ್ ಫಿಲಂಸ್' ಅಂದರೆ ಗೊತ್ತಿರಬಹುದಲ್ಲ?

Mahesh Hegade said...

ಥ್ಯಾಂಕ್ಸ್ ವಿಕಾಸ್.

ಕನ್ನಡ ಸಿನಿಮಾ ಹೆಸರು ಮುಂದಿನ ವಾರ ಹಾಕ್ತಿ. ಅಲ್ಲಿವರಿಗೆ ಮತ್ತೂ ವಿಚಾರ ಮಾಡು. ಮತ್ತೊಂದು ಹಿಂಟ್ ಅಂದರೆ ಅದರಲ್ಲಿ ಒಂದು ವಿಶಿಷ್ಟ ಪಾತ್ರದಲ್ಲಿ ಕಾಶಿನಾಥ್, ಸುರೇಶ ಹೆಬ್ಳಿಕರ್, ಉಪೇಂದ್ರ ಇದ್ದ :)

'ವಾಯ್ಲೆಟ್ ಫಿಲಂಸ್' ಅಂದ್ರೆ ಎಂತದು? ಮೇಲ್ ಮಾಡು. :)

sunaath said...

ಎಷ್ಟು ಭೀಭತ್ಸವಾಗಿದೆ ಈ ಶವಸಂಭೋಗ! ಓರ್ವ ವ್ಯಕ್ತಿಯ ಮರಣದ ನಂತರ, ಆ ಶವವು ಎರಡರಿಂದ ಎಂಟು ಗಂಟೆಗಳವರೆಗೆ ಬಿಸಿಯಾಗಿ ಹಾಗು ಮೃದುವಾಗಿ ಇರುತ್ತದೆ. ಮರಣಾನಂತರದ ಪೆಡಸು ವಿಭಿನ್ನ ಅಂಗಗಳಲ್ಲಿ ವಿಭಿನ್ನ ಅವಧಿಯಲ್ಲಿ ಉಂಟಾಗುತ್ತದೆ. ಹೀಗಾಗಿ ಶವಸಂಭೋಗಿಗಳಿಗೆ ಈ ಕಾಲಾವಧಿಯು ಮಹತ್ವದ್ದಾಗಿದೆ.(ವಿಕಿಪೀಡಿಯಾದಲ್ಲಿ rigor mortis ನೋಡಿರಿ.) ಇತ್ತೀಚೆಗೆ ಕನ್ನಡ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಸಮಾಚಾರ ಹೀಗಿತ್ತು: ತಮ್ಮ ಮೇಲಧಿಕಾರಿಯ ಮೇಲಿನ ಸಿಟ್ಟಿನಿಂದ ಅವನ ಹೆಂಡತಿಯನ್ನು ಹೊಡೆದ ಇಬ್ಬರು ಯುವಕರು, ಅವಳ ದೇಹದ ಮೆಲೆ ‘ಅತ್ಯಾಚಾರ’ ಮಾಡುತ್ತಾರೆ. ಆದರೆ ಅವಳು ಸತ್ತು ಶವವಾಗಿರುವುದು ಅವರಿಗೆ ಗೊತ್ತಾಗಿರುವುದಿಲ್ಲ!

ಮರ್ಲಿನ್ ಮುನ್ರೋಳನ್ನು ಬದುಕಿದ್ದಾಗಲೇ ಹರಿದವರು ಅವಳು ಸತ್ತ ಮೇಲೂ ಅವಳನ್ನು ಬಿಡಲಿಲ್ಲವಲ್ಲ!

Mahesh Hegade said...

ಕಾಮೆಂಟಿಗೆ ಮತ್ತು ಹೆಚ್ಚಿನ ಮಾಹಿತಿಗೆ ಧನ್ಯವಾದಗಳು, ಸುನಾಥ್ ಸರ್.

ವಿ.ರಾ.ಹೆ. said...

ಕನ್ನಡ ಸಿನೆಮಾ 'ಶ್ಶ್.....' ?

Mahesh Hegade said...

@vikas - correct. same movie.

Unknown said...

ಸರ್, ನಿಮ್ಮ ಕನ್ನಡ ತುಂಬಾ ಇಷ್ಟವಾಯಿತು. ಬಹಳ ದಿನಗಳಾಗಿತ್ತು, ಒಂದೊಳ್ಳೆ ಲೇಖನ ಓದಿ..ನಿಮ್ಮ ಬರಹಗಳನ್ನ ಒಂದೊಂದೇ ಓದುತ್ತಿದ್ದೇನೆ. plz dont stop writing, specially Kannada writing. Tanq