Sunday, May 07, 2017

ಅಮೇರಿಕಾ Vs ಭಾರತ....ಕೆಲವು ಇಂಟೆರೆಸ್ಟಿಂಗ್ ವಿಭಿನ್ನತೆಗಳು

ಕೆಲವೊಂದು ವಿಷಯಗಳಲ್ಲಿ ಅಮೇರಿಕಾ ಮತ್ತು ಭಾರತದ ಮಧ್ಯೆ ಇರುವ ವಿಭಿನ್ನತೆಗಳು ಆಸಕ್ತಿದಾಯಕವಾಗಿವೆ.

ವೇಶ್ಯಾವಾಟಿಕೆ - ಸ್ವಚ್ಛಂದತೆ ಮತ್ತು ಸ್ವೇಚ್ಛಾಚಾರಕ್ಕೆ ಹೆಸರಾದ ಅಮೇರಿಕಾದಲ್ಲಿ ವೇಶ್ಯಾವಾಟಿಕೆ ಕಾನೂನುಬಾಹಿರ (illegal) ಅಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ ಕಾನೂನು ಮಾತ್ರ ಹಾಗಿದೆ. 'ಪಾಪಗಳ ನಗರ' (Sin City) ಎಂದೇ ಹೆಸರಾದ ಕ್ಯಾಸಿನೋಗಳ ರಾಜಧಾನಿ ಲಾಸ್ ವೇಗಸ್ ನಗರ ಮತ್ತು ಅದಿರುವ ನೆವಾಡಾ ರಾಜ್ಯದ ಕೆಲ ಪ್ರದೇಶಗಳನ್ನು ಬಿಟ್ಟರೆ ಬಾಕಿ ಎಲ್ಲಕಡೆ ವೇಶ್ಯಾವಾಟಿಕೆ ಕಾನೂನುಬಾಹಿರ / ನಿಷಿದ್ಧ. ಹಾಗೆಂದ ಮಾತ್ರಕ್ಕೆ ವೇಶ್ಯಾವಾಟಿಕೆ ಇಲ್ಲವೆಂದಲ್ಲ. ಬೇಕಾದಷ್ಟಿದೆ. ಕಾನೂನು ಕೂಡ ಬೇಕಾದಷ್ಟು ಟೈಟಾಗಿಯೇ ಇದೆ. ಆದರೆ ಅಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಿಲ್ಲ. ಜಾರಿಗೊಳಿಸುವದೂ ಕಷ್ಟ. ಆ ದಂಧೆ ನಡೆಸುವ ಮಂದಿ ಏನು ಕಮ್ಮಿ ಜಾಣರಿರುತ್ತಾರೆಯೇ? ಅವರೂ ಕೂಡ ಕಾನೂನಿನಲ್ಲಿರುವ ಎಲ್ಲಾ loopholes ನೋಡಿಟ್ಟುಕೊಂಡಿರುತ್ತಾರೆ. ಹೆಚ್ಚಿನ ದಂಧೆ consensual sex ಲೇಬಲ್ಲಿನಡಿ ನಡೆದುಹೋಗುತ್ತದೆ. ದುಡ್ಡು ಕಾಸಿನ ವಿಷಯ? ಕಾಣಿಕೆ ಅಂತ ಸಂದಾಯವಾಗುತ್ತದೆ. ಅದೂ ಡಿಜಿಟಲ್ ಕಾಣಿಕೆ. ಯಾವ ಪೊಲೀಸರು ಏನು ಮಾಡಿಯಾರು? ಮತ್ತೆ ಇಲ್ಲಿನ ಪೊಲೀಸರಿಗೆ conviction rate ಮುಖ್ಯ. ಸುಖಾಸುಮ್ಮನೆ, ಸಾಕ್ಷಿ ಪುರಾವೆಗಳಿಲ್ಲದೆ ಕೇಸ್ ಹಾಕಿ, ಅದು ಬಿದ್ದುಹೋದರೆ ಆಕಡೆ ಕೋರ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆ ಪೊಲೀಸರಿಗೆ ಲೆಫ್ಟ್ ರೈಟ್ ತೆಗೆದುಕೊಳ್ಳುತ್ತದೆ. ಸಂಪನ್ಮೂಲಗಳನ್ನು ಸರಿಯಾಗಿ ಉಪಯೋಗ ಮಾಡಲಿಲ್ಲ ಅಂತ ಈಕಡೆ ಸಾರ್ವಜನಿಕರು ಬೆಂಡೆತ್ತುತ್ತಾರೆ. ಮತ್ತೆ ಪೊಲೀಸರ ಮಂಡೆ ಬಿಸಿಯಾಗಿಸುವ ಬೇರೆ ಹೆಚ್ಚಿನ ತೀವ್ರತೆಯ ಅಪರಾಧಗಳು ಬೇಕಾದಷ್ಟಿರುತ್ತವೆ. ಹಾಗಾಗಿ, 'ದಂಧೆ ಮಾಡಿಕೊಂಡು ಹೋಗಿ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬಂದರೆ ಮಾತ್ರ ಬಂದು ಬೆಂಡೆತ್ತುತ್ತೇವೆ' ಅಂತ ಹೇಳಿ ಬಿಟ್ಟಿರುತ್ತಾರೆ ಎಂದು ಕಾಣುತ್ತದೆ. ಹಾಗಾಗಿ ದಂಧೆ ಎಗ್ಗಿಲ್ಲದೆ ನಡೆಯುತ್ತದೆ. ಎಲ್ಲಿಯವರೆಗೆ ದಂಧೆ ಮಾಡುವವರು ಹೊದಿಕೆ ಕೆಳಗೆ ಮಾಡಿಕೊಂಡು ಹೋಗುತ್ತಿರುತ್ತಾರೋ ಅಲ್ಲಿಯವರೆಗೆ ಪೊಲೀಸರೂ ಸಹ ಜಾಸ್ತಿ ತಲೆಕೆಡಿಸಿಕೊಳ್ಳುವದಿಲ್ಲ.

ಒಮ್ಮೊಮ್ಮೆ high profile ವೇಶ್ಯಾವಾಟಿಕೆ ಕೇಸ್ ಸಿಕ್ಕಾಗ ಮಾತ್ರ ಪೊಲೀಸರು ಬಿಡುವದಿಲ್ಲ. ಉದಾಹರಣೆಗೆ ನಮ್ಮ ಎಲಿಯಟ್ ಸ್ಪಿಟ್ಜರ್ ಸಾಹೇಬರ ಕೇಸ್. ಉದಯೋನ್ಮುಖ ರಾಜಕಾರಣಿ. ಮುಂದೊಮ್ಮೆ ದೇಶದ ಪ್ರೆಸಿಡೆಂಟ್ ಆಗಬಲ್ಲ potential ಇರುವ ವ್ಯಕ್ತಿ  ಅಂತೆಲ್ಲ ಹೊಗಳಿಸಿಕೊಂಡವರು. ಇಂತಹ ಮಹಾತ್ಮರು ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿದ್ದಾಗಲೇ high profile ವೇಶ್ಯಾವಾಟಿಕೆ ಸುಂದರಿಯಿಂದ ಸರ್ವಿಸ್ ಮಾಡಿಸಿಕೊಂಡು ಸಿಕ್ಕಾಕಿಕೊಂಡುಬಿದ್ದಿದ್ದರು. ಗವರ್ನರಗಿರಿ ಗೋವಿಂದಾ ಗೋವಿಂದಾ ಆಯಿತು. ಮುಂದಿನ ರಾಜಕೀಯ ಭವಿಷ್ಯ ಕೂಡ ಹರೋಹರ.

ಇದು ಅಮೇರಿಕಾದ ಕಥೆ. ಎಲ್ಲ ಕಡೆ ಫುಲ್ ಬಿಚ್ಚಾಕಿಕೊಂಡು, ಕಂಡಲ್ಲಿ ಕಿಸ್ ಹೊಡೆದುಕೊಂಡು, ಟೋಟಲ್ ಸ್ವೇಚ್ಛಾಚಾರದಿಂದ ಇರುವ ದೇಶದಲ್ಲಿ ವೇಶ್ಯಾವಾಟಿಕೆ ಮಾತ್ರ ನಿಷಿದ್ಧ ಎಂಬ ಮಡಿವಂತಿಕೆ. ಮೊನ್ನಿತ್ತಲಾಗೆ ಏನೋ ಹುಡುಕುತ್ತಿದ್ದಾಗ ವಿಷಯ ತಿಳಿದು ಆಶ್ಚರ್ಯವಾಗಿತ್ತು. ವಿವರಗಳಿಗೆ ಇಲ್ಲಿ ನೋಡಿ.

ಇನ್ನು ನಮ್ಮ ಭಾರತದ ವಿಷಯಕ್ಕೆ ಬಂದರೆ ಮತ್ತೂ ದೊಡ್ಡ ಆಶ್ಚರ್ಯವಾಗುತ್ತದೆ. ಭಾರತದಲ್ಲಿ ಸಂಘಟಿತ ವೇಶ್ಯಾವಾಟಿಕೆ ಮಾತ್ರ ಕಾನೂನುಬಾಹಿರ. ಸಂಘಟಿತವಲ್ಲದ, ಸಾರ್ವಜನಿಕರಿಗೆ ಕಿರಿಕಿರಿ ತರದ ವೇಶ್ಯಾವಾಟಿಕೆ ಅಂತಾದರೆ ಅದು  ಓಕೆ! ಆದರೆ ಭಾರತದ ಕಾನೂನು ಸಿಕ್ಕಾಪಟ್ಟೆ ಕ್ಲಿಷ್ಟವಾಗಿ ಇರುವದರಿಂದ ಯಾವದು ಓಕೆ ಯಾವದು ಓಕೆ ಅಲ್ಲ ಎಂಬುದು ಸರಿಯಾಗಿ ಗೊತ್ತಾಗದೇ, ಒಟ್ಟಿನಲ್ಲಿ ಎಲ್ಲರಿಗೂ ಅದೊಂದು ರೊಕ್ಕ ಮಾಡುವ ದಂಧೆಯಾಗಿದೆ. ಎಲ್ಲರೂ ರೊಕ್ಕ ಮಾಡಿಕೊಳ್ಳುತ್ತಾರೆ except ವೇಶ್ಯೆ. ಯಾಕೆಂದರೆ ಅವಳನ್ನು ಎಲ್ಲರೂ ಹುರಿದು ಮುಕ್ಕುತ್ತಾರೆ. ಗಿರಾಕಿಗಳನ್ನು ತರುವ ತಲೆಹಿಡುಕ, ಏರಿಯಾದ ರೌಡಿ, ಪೊಲೀಸರು, ರಾಜಕಾರಣಿಗಳು, ಹೀಗೆ ಎಲ್ಲರಿಗೂ ಪರ್ಸಂಟೇಜ್ ಕೊಟ್ಟ ಮೇಲೆ ಆಕೆಗೆ ಉಳಿಯುವದು ಅಷ್ಟರಲ್ಲೇ ಇದೆ. ಹೈಟೆಕ್, ಲೋಟೆಕ್ ಅಂತಿಲ್ಲ. ಎಲ್ಲ ಕಡೆ ಅಷ್ಟೇ. ಶೋಷಣೆ ಸರ್ವೇ ಸಾಮಾನ್ಯ ಮತ್ತು ದೌರ್ಜನ್ಯ ಊಹಿಸಲಾಗದಷ್ಟು ಕ್ರೂರ ಮತ್ತು ಭೀಕರ. ಆದರೂ ದಂಧೆ ಎಗ್ಗಿಲ್ಲದೆ ನಡೆಯುತ್ತದೆ.

ಭಾರತದ ಕಾನೂನಿನ ಪ್ರಕಾರ ವೇಶ್ಯಾವಾಟಿಕೆಯ ಮೇಲೆ ದಾಳಿ ಮಾಡಿದ್ದೇ ಹೌದಾದರೆ ವೇಶ್ಯೆಯರನ್ನು ರಕ್ಷಿಸಬೇಕು. ವಿಟರಿಗೆ (ಗ್ರಾಹಕರಿಗೆ) ಯಾವದೇ ತೊಂದರೆ ಕೊಡಬಾರದು. ಸಂಘಟಿಸಿ ದಂಧೆ ಮಾಡುವ ಮೇಡಂಗಳ, ಪಿಂಪುಗಳ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಅನ್ನುತ್ತದೆ ನಮ್ಮ ಸಂವಿಧಾನ. ಹೆಚ್ಚಿನ ಕೇಸುಗಳಲ್ಲಿ ಪೊಲೀಸರು ಎಲ್ಲರ ಜೊತೆ ಡೀಲಿಗೆ ಇಳಿಯುತ್ತಾರೆ. ಡೀಲು ಕುದುರಿದರೆ ರೊಕ್ಕ ಎಣಿಸುತ್ತ ಹೋಗುತ್ತಾರೆ. ಇಲ್ಲವಾದರೆ ಎಲ್ಲರ ಮೇಲೆ ಕೇಸ್ ಜಡಿದು ಕಳಿಸುತ್ತಾರೆ. ರೊಕ್ಕ ಬರಲಿಲ್ಲ ಎಂಬ ರೋಷದಲ್ಲಿ ಕೇಸ್ ಜಡಿಯುತ್ತಾರೆ. ವೇಶ್ಯಾವಾಟಿಕೆಗೆ ಸಂಬಂಧಿಸಿದ ಕಾನೂನಿನ ಬಗ್ಗೆ ಕೊಂಚವೂ ಜ್ಞಾನವಿಲ್ಲದ ಮಾಧ್ಯಮಗಳು ಅದೇ ಸುದ್ದಿಯನ್ನು ರುಚಿರುಚಿಯಾಗಿ ಮತ್ತೆ ಮತ್ತೆ ಬಿತ್ತರಿಸುತ್ತವೆ. ಅದರಲ್ಲೂ ಎಲ್ಲಿಯಾದರೂ ಹೈಪ್ರೊಫೈಲ್ ಮಂದಿ ಸಿಕ್ಕಿಬಿದ್ದರಂತೂ ಮುಗಿದೇಹೋಯಿತು. ಆಗಾಗ ಆ ಚಿತ್ರನಟಿ ವೇಶ್ಯಾವಾಟಿಕೆಯಡಿ ಬಂಧಿತಳಾದಳು. ಈ ಮಹನೀಯರು ಅಂತಹ ಅಡ್ಡೆಯೊಂದರಲ್ಲಿ ಸಿಕ್ಕಿಬಿದ್ದರು ಅಂತೆಲ್ಲ ಬ್ರೇಕಿಂಗ್ ನ್ಯೂಸ್ ಕೊಟ್ಟೂ ಕೊಟ್ಟೂ ಅವರ ಮಾನ ಕಳೆದಿರುತ್ತಾರೆ. ಅದೆಲ್ಲ ಯಾಕಾಗಿರುತ್ತದೆ ಅಂದರೆ ಆಗಬೇಕಾದ ಡೀಲ್ ಆಗಿರುವದಿಲ್ಲ. ನಂತರ ಅವರೆಲ್ಲ ಬಿಡುಗಡೆಯಾಗಿ ಬಂದಿದ್ದು ಮಾತ್ರ ಸುದ್ದಿಯಾಗಿದ್ದನ್ನು ಎಲ್ಲೂ ನೋಡಿಲ್ಲ.

ಮೊನ್ನೆ ಕರ್ನಾಟಕದ ಹೈಕೋರ್ಟ್ ಐತಿಹಾಸಿಕ ಎನ್ನುವಂತಹ ತೀರ್ಪು ಕೊಟ್ಟಿದೆ. ವೇಶ್ಯಾವಾಟಿಕೆ ಮೇಲೆ ದಾಳಿ ಮಾಡಿದರೆ ವಿಟಪುರುಷರ (ಗ್ರಾಹಕರ) ವಿರುದ್ಧ ವೇಶ್ಯಾವಾಟಿಕೆಗೆ ಹೋಗಿದ್ದರು ಎನ್ನುವ ಕಾರಣಕ್ಕೆ ಕೇಸ್ ಹಾಕುವಂತಿಲ್ಲ. ಅರ್ಥವಾಗದ ಸಂಗತಿಯೆಂದರೆ ಇಂತಹ frivolous ಕೇಸ್ ಹಾಕುವ ಮುನ್ನ ಪೊಲೀಸರಿಗೆ ಇದು ಗೊತ್ತಿರಲಿಲ್ಲವೇ? ಹೋಗಲಿ, ಪೊಲೀಸರು ಕಾನೂನು ಪಂಡಿತರಲ್ಲ ಅಂದಿಟ್ಟುಕೊಂಡರೂ ಸರ್ಕಾರಿ ವಕೀಲರು ಅದ್ಯಾವ ಕಾನೂನಿನ ಆಧಾರ ಇಟ್ಟುಕೊಂಡು ಕೇಸ್ ನಡೆಸಲು ಹೋಗಿದ್ದರು?? ಶಿವನೇ ಬಲ್ಲ. ಹೀಗೆ ಸುಖಾಸುಮ್ಮನೆ ಕೇಸ್ ಜಡಿದು, ಅದನ್ನು ಕೋರ್ಟಿನಲ್ಲಿ ನಡೆಸಲು ಖರ್ಚಾಗುವ ರೊಕ್ಕ ಮಾತ್ರ ಸರ್ಕಾರದ್ದು. ನಿಮ್ಮ ತೆರಿಗೆ. ಅದು ಹೀಗೆ ಉಪಯೋಗವಾಗಬೇಕೇ!?

ದಕ್ಷಿಣದ ನಟಿ ಯಮುನಾ ಕೇಸಿನಲ್ಲೂ ಆಗಿದ್ದೂ ಅದೇ. ಆಕೆಯನ್ನು ಒಳಗಾಕಿದಾಗ ತರಹತರಹದ ರಂಗ್ರಂಗೀನ್ ಸುದ್ದಿ ಮಾಡಿದ ಮಾಧ್ಯಮಗಳು ಆಕೆಯ ಮೇಲಿನ ಕೇಸ್ ವಜಾ ಆದಾಗ ಅದರ ಬಗ್ಗೆ ಜಾಸ್ತಿ ಸುದ್ದಿ ಮಾಡಲೇ ಇಲ್ಲ. ಮತ್ತೊಬ್ಬ ನಟಿ ಶ್ವೇತಾ ಪ್ರಸಾದ್ ಬಸುವನ್ನು ಬಂಧಿಸಿದ್ದ ಪೊಲೀಸರು ಕೇಸ್ ಹಾಕದೇ ಬಿಟ್ಟು ಕಳಿಸಿದರು. ವೇಶ್ಯಾವಾಟಿಕೆಯಡಿ ಕೇಸ್ ಜಡಿಯುವಾಗ ಒಟ್ಟಿನಲ್ಲಿ ಒಂದು clarity ಇಲ್ಲ. Sensitivity ಕೂಡ ಇಲ್ಲ. ಮಾಧ್ಯಮಗಳಂತೂ ಬಿಡಿ. ಎಲ್ಲವೂ TRP ಹಿಂದೆ ಹುಚ್ಚು ಕುದುರೆಯಂತೆ ಓಡುತ್ತವೆ. ಇವೆಲ್ಲದರ ನಡುವೆ ಕೇವಲ ಆರೋಪ ಬಂದ ಮಾತ್ರಕ್ಕೆ ಜನರು ನಲುಗಿ ಹೋಗಿರುತ್ತಾರೆ. ಅದು ದೊಡ್ಡ ದುರಂತ.

ಒಟ್ಟಿನಲ್ಲಿ ವಿಚಿತ್ರ ಆದರೂ ಸತ್ಯ. ಅಮೇರಿಕಾದಂತಹ ಸ್ವೇಚ್ಛಾಚಾರಿ ಜೀವನಶೈಲಿಯ ದೇಶದಲ್ಲಿ ವೇಶ್ಯಾವೃತ್ತಿ ನಿಷಿದ್ಧ. Relatively ಮಡಿವಂತ, ಸುಸಂಸ್ಕೃತ ಭಾರತದಲ್ಲಿ ಚಲ್ತಾ ಹೈ. At least ಪೇಪರ್ ಮೇಲೆ ಓಕೆ.

**

ಮುಂದಿನ ವಿಷಯ - ಶಿಕ್ಷಣ.

ಬಂಡವಾಳಶಾಹಿಯ (capitalism) ಬುನಾದಿಯ ಮೇಲೆಯೇ ಕಟ್ಟಿದ ದೇಶ ಅಮೇರಿಕಾ. ಎಲ್ಲವೂ ಇಲ್ಲಿ ಬಿಸಿನೆಸ್. ರೊಕ್ಕ ಕೊಟ್ಟರೆ ಸಿಗದೇ ಇರುವ ವಸ್ತು ಏನಾದರೂ ಇದೆಯೇ ಎಂದು ಬ್ಯಾಟರಿ ಬೆಳಕಿನಲ್ಲಿ ಹುಡುಕಬೇಕಾಗುತ್ತದೆ. ಹಾಗಿದೆ ಪರಿಸ್ಥಿತಿ.

ರಾಷ್ಟ್ರದ ಆಂತರಿಕ ಮತ್ತು ಬಾಹ್ಯ ರಕ್ಷಣೆಯೊಂದನ್ನು (defense) ಸರ್ಕಾರ ತನ್ನ ಸುಪರ್ದಿಯಲ್ಲಿ ಇಟ್ಟುಕೊಂಡಿದೆ. ಅದು ಬಿಟ್ಟರೆ ಬಾಕಿ ಎಲ್ಲ ಹೆಚ್ಚಿನ ಮಟ್ಟಿಗೆ ಪೂರ್ತಿಯಾಗಿ ಖಾಸಗಿ ಮತ್ತು ಪೂರ್ತಿಯಾಗಿ for profit.

ಹೆದ್ದಾರಿಗಳಲ್ಲಿ ಸಾಕಷ್ಟು ಹೆದ್ದಾರಿಗಳಿಗೆ ಟೋಲ್ ಕೊಡಬೇಕು. ಆರೋಗ್ಯಸೇವೆ almost ಪೂರ್ತಿ ಖಾಸಗಿ. ಅದೂ ಕೂಡ for profit. ನಿಮ್ಮ ಹತ್ತಿರ ಹೆಚ್ಚಿನ ಮೆಡಿಕಲ್ ವಿಮಾ ಮೊತ್ತ ಕಟ್ಟಿಸಿಕೊಂಡು, ಅತಿ ಕಮ್ಮಿ ಚಿಕಿತ್ಸೆ ಕೊಟ್ಟು, ಹೆಚ್ಚೆಚ್ಚು ಲಾಭಾಂಶ ಹಡಪ್ ಮಾಡುವ ಹಪಾಹಪಿ.

ನಂಬಿದರೆ ನಂಬಿ ಬಿಟ್ಟರೆ ಬಿಡಿ, ಆದರೆ ಸುಮಾರು ಕಾರಾಗೃಹಗಳೂ ಇಲ್ಲಿ ಖಾಸಗಿ. ಹೋಟೆಲ್ ನಡೆಸಿದಂತೆಯೇ ಕಾರಾಗೃಹ ನಡೆಸುತ್ತಾರೆ. ಈ ಕಾರಣಗಳಿಂದಲೇ ಅಮೇರಿಕಾದಲ್ಲಿ per capita ಕೈದಿಗಳ ಸಂಖ್ಯೆ ಜಗತ್ತಿನಲ್ಲೇ ಗರಿಷ್ಠ. ಕಾರಾಗೃಹಗಳನ್ನು ನಡೆಸುವ ಮಂದಿ ರೊಕ್ಕ ಮಾಡಿಕೊಳ್ಳುವದು ಬೇಡವೇ? ಹಾಗಾಗಿ ಜನರನ್ನು ಹಿಡಿದು ಒಳಗೆ ತಳ್ಳಿದ್ದೇ ತಳ್ಳಿದ್ದು.

ಇನ್ನು ಯುದ್ಧದ ಸಮಯದಲ್ಲಿ ಹೋರಾಡುವ ಸೈನಿಕರು ಸರ್ಕಾರದವರಾದರೂ ಅವರಿಗೆ ಬೇಕಾಗುವ support system ಒದಗಿಸುವ ವ್ಯವಸ್ಥೆ ಎಲ್ಲಾ ಪೂರ್ತಿ ಖಾಸಗಿ.

ಹೀಗೆ ಎಲ್ಲವೂ ಫುಲ್ ಕಮರ್ಷಿಯಲ್ ಆಗಿ, ಎಲ್ಲ ರಂಗದವರೂ ಪಕ್ಕಾ ಬಂಡವಾಳಶಾಹಿಗಳಾಗಿ, ಗರಿಷ್ಠ ಮೊತ್ತದ ರೊಕ್ಕ ಮಾಡಿಕೊಂಡುಬಿಡೋಣ ಅಂತ ಸೋಪ್ ಹಚ್ಚಿ ಕೈತೊಳೆದು ನಿಂತಿರುವಾಗ ಈ ದೇಶದಲ್ಲಿ ಲಾಭಾಂಶದ ಉದ್ದೇಶವಿಲ್ಲದ (non-profit) ರಂಗ ಯಾವದಾರೂ ಇದೆಯೋ ಅಂತ ನೋಡಲು ಹೋದರೆ ಕಂಡಿದ್ದು ಶಿಕ್ಷಣ ಕ್ಷೇತ್ರ. Very surprising!

ಅಮೇರಿಕಾದಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳು non-profit. ಹೆಚ್ಚಿನವು ಖಾಸಗಿ (Private). ಆದರೆ ಅವೂ ಕೂಡ non-profit. ಶಿಕ್ಷಣ ಸಂಸ್ಥೆಗಳು ಪೂರ್ತಿ ಖಾಸಗಿಯಾಗಿದ್ದರೂ ರೊಕ್ಕದ ಹಿಂದೆ, ಲಾಭಾಂಶದ ಹಿಂದೆ ಬಿದ್ದಿಲ್ಲ ಅನ್ನುವದೇ ಒಂದು ದೊಡ್ಡ ಆಶ್ಚರ್ಯದ ಸಂಗತಿ.

ವಿಶ್ವವಿಖ್ಯಾತ ಹಾರ್ವರ್ಡ್, MIT, ಯೇಲ್, ಕೋಲಂಬಿಯಾ, ಕಾರ್ನೆಲ್, ಡಾರ್ಟ್ ಮೋಥ್, CalTech ಮುಂತಾದ ವಿಶ್ವದ ಟಾಪ್ ಟೆನ್ ವಿಶ್ವವಿದ್ಯಾಲಯಗಳೆಲ್ಲವೂ ಖಾಸಗಿ. ಆದರೆ ಎಲ್ಲವೂ non-profit. ಖಾಸಗಿ ಆಗಿರುವದರಿಂದ ಶಿಕ್ಷಣದ ಶುಲ್ಕ ಜಾಸ್ತಿ ಇರುತ್ತದೆ. ಆದರೆ ವಿದ್ಯಾರ್ಥಿಗಳ ತಲೆಗೆ ಹೆಚ್ಚಿನ ಫೀಸ್ ಕಟ್ಟಿ, ಅದರಿಂದ ಲಾಭ ಮಾಡಿಕೊಂಡು, ತಮ್ಮ ಕಿಸೆ ತುಂಬಿಸಿಕೊಳ್ಳುವ ಉದ್ದೇಶ ಬಿಲ್ಕುಲ್ ಇರುವದಿಲ್ಲ. ವರ್ಷದಿಂದ ವರ್ಷಕ್ಕೆ ಖರ್ಚುವೆಚ್ಚದ ನಂತರ ಲಾಭ ಅಂತ ಏನಾದರೂ ಬಂದರೆ ಅದು ಮರಳಿ ವಿಶ್ವವಿದ್ಯಾಲಯದ ಹುಂಡಿಗೆ ಹೋಗುತ್ತದೆಯೇ ವಿನಃ ಯಾರ ಕಿಸೆಯನ್ನೂ ಸೇರುವದಿಲ್ಲ.

ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಬಾರದು ಅಂತೇನೂ ಕಠಿಣ ಕಾಯ್ದೆ ಇಲ್ಲ. ಆದರೆ ಶಿಕ್ಷಣವನ್ನು ೧೦೦% ವ್ಯಾಪಾರೀಕರಣದಿಂದ ರಕ್ಷಿಸಿಕೊಂಡುಬಂದಿರುವದು ಮೊದಲಿಂದ ನಡೆದುಕೊಂಡು ಬಂದ ಪದ್ಧತಿ. Self imposed moral law. ಶಿಕ್ಷಣ ಪೂರ್ತಿಯಾಗಿ ವ್ಯಾಪಾರೀಕರಣವಾಗಿ, ಲಾಭಾಂಶದ ಹಿಂದೆ ಜನ ಬಿದ್ದರೆ, ಶಿಕ್ಷಣದ ಮಟ್ಟ ಎಕ್ಕುಟ್ಟಿಹೋಗಿ ಸಮಾಜ ಹಾಳಾಗುತ್ತದೆ ಎಂಬ ಭಯ ಮತ್ತು ನಂಬಿಕೆ ಇರುವದರಿಂದ ಶಿಕ್ಷಣ ಪೂರ್ತಿಯಾಗಿ ವ್ಯಾಪಾರೀಕರಣವಾಗಿಲ್ಲ.

ಶಿಕ್ಷಣ ಕ್ಷೇತ್ರದಲ್ಲೂ ಖಾಸಗಿ ಕಂಪನಿಗಳು ಬಂದಿವೆ. ಅವು ಲಾಭಕ್ಕಾಗಿಯೇ ಇದ್ದರೂ ಕೆಲವು ಕಡೆ ಒಳ್ಳೆ ಶಿಕ್ಷಣ ಕೊಡುತ್ತಿವೆ. ಆದರೆ ಅವು ಇನ್ನೂ core ಆಗಿಲ್ಲ. ಆಗುವದೂ ಇಲ್ಲ. ಯಾಕೆಂದರೆ for-profit ವಿಶ್ವವಿದ್ಯಾಲಯಗಳು ಕೊಡುವ ಡಿಗ್ರಿ ಎಷ್ಟೋ ಕಡೆ ಮನ್ನಣೆ ಪಡೆದಿಲ್ಲ. ಹಾಗಾಗಿ ಅವುಗಳ ಆಧಾರದ ಮೇಲೆ ನೌಕರಿ ಸಿಗುವದಿಲ್ಲ. ಏನೋ ಹೆಸರಿನ ಮುಂದೆ ಒಂದು ಡಿಗ್ರಿ ಬೇಕು ಅಂತ ಆಸೆಯಿರುವವರು ಅಂತಹ ಯೂನಿವರ್ಸಿಟಿಗಳಿಂದ ಡಿಗ್ರಿ ತೆಗೆದುಕೊಳ್ಳುತ್ತಾರೆ. ಕೆಲವು ಒಂದಿಷ್ಟು ವಿದ್ಯಾಭ್ಯಾಸ ಮಾಡಿಸಿ ಡಿಗ್ರಿ ಕೊಟ್ಟರೆ ಮತ್ತೆ ಕೆಲವು ಕಾಣಿಕೆಯೊಂದನ್ನು ಕೊಟ್ಟುಬಿಟ್ಟರೆ ಬೇಕಾದ ಡಿಗ್ರಿ ಕೊಡುತ್ತವೆ. ಅಷ್ಟೇ ಅವಕ್ಕೆ ಕಿಮ್ಮತ್ತು ಇಲ್ಲ.

ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ಡೊನೇಷನ್ ಹಾವಳಿ ಇಲ್ಲ. ಹೆಚ್ಚಿನವು ಖಾಸಗಿ ವಿಶ್ವವಿದ್ಯಾಲಯಗಳೇ ಆದರೂ ಎಲ್ಲವೂ ಮೆರಿಟ್ ಆಧಾರಿತ. ಡೊನೇಷನ್ ತೆಗೆದುಕೊಂಡು ಸೀಟ್ ಕೊಡುವ ಪದ್ಧತಿಯಿಲ್ಲ. ಐತಿಹಾಸಿಕವಾಗಿ ಕೆಲವು ಶ್ರೀಮಂತ ಮನೆತನಗಳು ಕೆಲವು ವಿಶ್ವವಿದ್ಯಾಲಯಗಳಿಗೆ ಹಲವಾರು ಮಿಲಿಯನ್ ಡಾಲರ್ ದೇಣಿಗೆ ಕೊಟ್ಟಿರುವದರಿಂದ ಆ ವಂಶದ ಕುಡಿಗಳಿಗೆ ಕೆಲವು ಕಡೆ ಸ್ವಲ್ಪ ಮಟ್ಟಿನ preferential consideration ಇರುತ್ತದೆಯೇ ವಿನಃ ಫುಲ್ ರಿಯಾಯತಿ ಅಥವಾ reservation ಇರುವದಿಲ್ಲ. ಬೇರೆ ಯಾವ ತರಹದ reservation ಇತ್ಯಾದಿ ಇಲ್ಲ. ಹಾಗಾಗಿ ವಿದ್ಯಾರ್ಥಿಗಳ ಗುಣಮಟ್ಟದಲ್ಲಿ ಒಂದು consistency ಕಂಡುಬರುತ್ತದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಶತಶತಮಾನಗಳಿಂದ ತಮ್ಮ ಗುಣಮಟ್ಟ ಮತ್ತು ಪ್ರತಿಷ್ಠೆ ಕಾದುಕೊಂಡುಬರಲು ಮುಖ್ಯ ಕಾರಣ ಇದೇ - Meritocracy.

ಹೀಗೆ ಬಂಡವಾಳಶಾಹಿಗಳ ಸ್ವರ್ಗವಾದ ಅಮೇರಿಕಾದಲ್ಲಿ ಶಿಕ್ಷಣ ಕ್ಷೇತ್ರ ಮಾತ್ರ ಇನ್ನೂ ಫುಲ್ ಕಮರ್ಷಿಯಲ್ ಆಗಿಲ್ಲವೆನ್ನುವದು really refreshing. ಆಗುವದೂ ಇಲ್ಲ ಎಂಬುದು ಮನಸ್ಸಿಗೆ ಶಾಂತಿ ಕೊಡುವ ವಿಷಯ. ಯಾವ ರಂಗ commercial ಆದರೂ ಇದೊಂದು ರಂಗ ಸುತಾರಾಂ commercial ಆಗಬಾರದು ಎಂಬುದಾಗಿ ಇಲ್ಲಿನ ಸಮಾಜ ನಿರ್ಧರಿಸಿರುವದು ನಿಜವಾಗಿಯೂ ಒಂದು ಒಳ್ಳೆ ನಿರ್ಧಾರ.

ಅದೇ ನಮ್ಮ ಭಾರತದಲ್ಲಿ ಶಿಕ್ಷಣ ಫುಲ್ ಕಮರ್ಷಿಯಲ್. ಗುರುಕುಲದಂತಹ ಶ್ರೇಷ್ಠ ಪದ್ಧತಿಯನ್ನು ಕೊಟ್ಟ ದೇಶದಲ್ಲಿ ಶಿಕ್ಷಣ ಫುಲ್ ವ್ಯಾಪಾರೀಕರಣವಾಗಿದೆ. ಅತಿ ಕಮ್ಮಿ ಬಂಡವಾಳ ಹಾಕಿ ಅತಿ ಹೆಚ್ಚಿನ ಲಾಭಾಂಶ ತೆಗೆಯುವ ದಂಧೆಯಾಗಿ ಮಾರ್ಪಟ್ಟಿದೆ ಶಿಕ್ಷಣ. ಡೊನೇಷನ್ ಅಂತ ಈಗ ಇರಲಿಕ್ಕಿಲ್ಲ. ಆದರೆ ಅದರ ಜಾಗದಲ್ಲಿ ಮ್ಯಾನೇಜ್ಮೆಂಟ್ ಕೋಟಾ, ಅದು ಇದು ಅಂತ ಬಂದಿದೆ. ಒಟ್ಟಿನಲ್ಲಿ ಪಾರದರ್ಶಕತೆ ಇಲ್ಲ. Meritocracy ಇಲ್ಲ. Reservation ಸುಮಾರು ೭೦% ಇದೆ. Quite depressing.

ಒಂದು ಕಾಲದಲ್ಲಿ ಶಿಕ್ಷಣವೊಂದೇ ಅಲ್ಲ ವಿದ್ಯಾರ್ಥಿಯ ಜೀವನ ನಿರ್ವಹಣೆ ಕೂಡ ಗುರುವಿನ ಜವಾಬ್ದಾರಿಯಾಗಿತ್ತು. ಗುರುಕುಲಕ್ಕೆ ಹೋದ ಮೇಲೆ ಎಲ್ಲವೂ ಗುರುವಿನ ಜವಾಬ್ದಾರಿ. ಒಂದು ಪೈಸೆ ಖರ್ಚಿಲ್ಲ. ಈಗ ಬಿಡಿ. ಎಲ್ಲವೂ ಗುರುಕುಲ ಅಂತಲೇ ಹೇಳಿಕೊಳ್ಳುತ್ತವೆ. ಆದರೆ ಲಾಭಾಂಶ ಬರಲಿಲ್ಲ ಅಂದರೆ ಶಿಕ್ಷಣ ಸಂಸ್ಥೆಯೊಂದು ಶೆಟ್ಟರ ಅಂಗಡಿಯೋ ಎಂಬಂತೆ ಬಾಗಿಲು ಹಾಕಿಕೊಂಡು ಹೋಗುತ್ತಾರೆ. ಅಲ್ಲಿಗೆ ಅಂತಹ ಶಿಕ್ಷಣ ಸಂಸ್ಥೆಗಳು ಕೊಟ್ಟ ಡಿಗ್ರಿ, ಡಿಪ್ಲೋಮಾ, ಸರ್ಟಿಫಿಕೇಟ್ ಇತ್ಯಾದಿಗಳಿಗೆ ಉಪ್ಪಿನಕಾಯಿ ಹಾಕಿಕೊಂಡು ನೆಕ್ಕಬಹುದು ಅಷ್ಟೇ.

ಮೊನ್ನಿತ್ತಲಾಗೆ ಏನೋ ಹುಡುಕುತ್ತಿದ್ದಾಗ ಅಚಾನಕ್ ಆಗಿ ಕಣ್ಣಿಗೆ ಬಿದ್ದ ವಿಷಯಗಳು ಇವು. ಸ್ವಲ್ಪ ರಿಸರ್ಚ್ ಮಾಡಿದಾಗ ಇಂಟೆರೆಸ್ಟಿಂಗ್ ಅನ್ನಿಸುವಂತಹ ಮಾಹಿತಿಗಳು ಸಿಕ್ಕವು. ಹಂಚಿಕೊಂಡೆ ಅಷ್ಟೇ.

2 comments:

sunaath said...

(೧)ವೇಶ್ಯಾವ್ಯಾಪಾರದ ಬಗೆಗೆ ಓದಿದಾಗಲೊಮ್ಮೆ ಮನಸ್ಸು ಖಿನ್ನವಾಗಿ ಬಿಡುತ್ತದೆ. ಹೆಣ್ಣುಮಕ್ಕಳ ಶೋಷಣೆಗೆ ಕೊನೆ ಇಲ್ಲವೆ, ದೇವರೆ?
(೨) ಅಮೆರಿಕದಲ್ಲಿ ಶಿಕ್ಷಣದ ವ್ಯಾಪಾರೀಕರಣವಾಗಿಲ್ಲ ಹಾಗು ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎನ್ನುವುದು ಸಂತಸದ ಸಂಗತಿ.
(೩)ವ್ಹಿ.ಕೆ. ಗೋಕಾಕರು ಇಂಗ್ಲಂಡಿನಲ್ಲಿ ಬಿ.ಎ. ಪದವಿಗೆ ಕಲಿಯುತ್ತಿದ್ದಾಗ, ಲಿಖಿತ ಪರೀಕ್ಷೆಗಳು ಮುಗಿದ ಬಳಿಕ, ಜಡ್ಡು ಬಿದ್ದರು. ಮೌಖಿಕ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಅವರಿಗೆ ಸಾಧ್ಯವಾಗಲಿಲ್ಲ. ಆದರೂ ಸಹ ಅವರು ವಿಶ್ವವಿದ್ಯಾಲಯಕ್ಕೆ ಪ್ರಥಮರೆಂದು ಘೋಷಿತರಾದರು!
(೪)ಕೃಷ್ಣಾನಂದ ಕಾಮತರು ಅಮೆರಿಕೆಯ ಒಂದು ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಗ್ರ್ಯಾಜುಯೇಟ್ ವರ್ಗಕ್ಕೆ ಪ್ರವೇಶ ಪಡೆಯಲು ಅಲ್ಲಿಯ ಮುಖ್ಯಸ್ಥರನ್ನು ಭೇಟಿಯಾದರು. ಆ ಮುಖ್ಯಸ್ಥರು ತಮ್ಮ ಮನೆಯ ಹುಲ್ಲುಹಾಸಿನ ಮೇಲೆ ಇವರ ಜೊತೆಗೆ ಒಂದರ್ಧ ಘಂಟೆ ತಿರುಗಾಡಿದ ಬಳಿಕ, ‘ನೀವು ಆಯ್ಕೆಯಾಗಿದ್ದೀರಿ, ನಾಳೆ ವರ್ಗಗಳಿಗೆ ಬನ್ನಿರಿ’ ಎಂದು ಹೇಳಿದರಂತೆ!

Mahesh Hegade said...

ಧನ್ಯವಾದಗಳು, ಸುನಾಥ್ ಸರ್.

೧)ವೇಶ್ಯಾವ್ಯಾಪಾರವನ್ನು ಕಾನೂನುಬದ್ಧ ಮಾಡಿ, ಉಳಿದ ವ್ಯಾಪಾರಗಳಂತೆ regulate ಮಾಡುವದು ಒಂದು ದಾರಿ. ಯೂರೋಪಿನ ಹೆಚ್ಚು ಕಡೆ ಹಾಗೇ ಇದೆ. ಯಾವುದನ್ನು ನಿರ್ಬಂಧಿಸುತ್ತೀರೋ ಅಲ್ಲಿ ಶೋಷಣೆ, ಅಂಡರ್ವರ್ಲ್ಡ್, ಲಂಚ ಬರುತ್ತವೆ. ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆದರೆ ಕಾನೂನುಬದ್ಧ ಮಾಡಲು ನಮ್ಮ ಸಮಾಜ ಅದಕ್ಕೆ ಒಪ್ಪುತ್ತದೆಯೇ? Vices can not be banned but only regulated ಅಂತಿರುವ ಮಾತು ಸತ್ಯವೆನಿಸುತ್ತದೆ.

೩)ವ್ಹಿ.ಕೆ. ಗೋಕಾಕರ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದ. ಗೋಕಾಕರು ಲಿಖಿತ ಪರಿಕ್ಷೆಗಳಲ್ಲಿಯೇ ಟಾಪ್ ಮಾರ್ಕ್ಸ್ ಗಳಿಸಿಬಿಟ್ಟಿದ್ದರು ಅಂತ ಕಾಣುತ್ತದೆ!

ಅನಿವಾರ್ಯ ಕಾರಣಗಳಿಂದ ಪರೀಕ್ಷೆ ಬರೆಯಲು ಆಗದಿದ್ದರೆ ಅದಕ್ಕೆ ತುರ್ತಾಗಿ ಪೂರಕ ಪರೀಕ್ಷೆಗೆ ಅನುವು ಮಾಡಿಕೊಡುವ ಸಂಪ್ರದಾಯ ವಿದೇಶದಲ್ಲಿ ಇದೆ. ಆ ಕಾರಣದಿಂದ ಪೂರ್ತಿ ಒಂದು ವರ್ಷ, ಒಂದು ಸೆಮಿಸ್ಟರ್ ಕಳೆದುಕೊಳ್ಳಬೇಕಾಗಿಲ್ಲ. ಈ ಉತ್ತಮ ವ್ಯವಸ್ಥೆ ನಮ್ಮ ಬಿಟ್ಸ್, ಪಿಲಾನಿಯಲ್ಲಿ ಕೂಡ ಇತ್ತು.

೪) ಕೃಷ್ಣಾನಂದ ಕಾಮತರ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದ. ನಮ್ಮೂರಿನವರು (ಹೊನ್ನಾವರ). ಮತ್ತೆ ತಂದೆಯವರ ಮಿತ್ರರೂ ಆಗಿದ್ದರು.