ಸೆಪ್ಟೆಂಬರ್ ೫. ಶಿಕ್ಷಕರ ದಿನಾಚರಣೆ. ನೆನಪಿದೆ. ಆದರೆ ಯಾವದೇ ಟೀಚರ್ ಅಥವಾ
ಮಾಸ್ತರ್ ಬಗ್ಗೆ ಬರೆದಿಲ್ಲ. 'ಅಯ್ಯೋ! ಬರೆಯಲೇ ಇಲ್ಲವಲ್ಲ,' ಎಂದು ಜಾಸ್ತಿ ಕೊರಗಬೇಕಾಗಿ
ಬರಲಿಲ್ಲ. ಇವತ್ತಿನ ವಿಜಯವಾಣಿಯಲ್ಲಿ ಹಲವಾರು ಶಿಕ್ಷಕರ ಬಗ್ಗೆ ಅವರ ವಿದ್ಯಾರ್ಥಿಗಳಾಡಿದ ನಾಲ್ಕು ಮಾತುಗಳನ್ನು ಹಾಕಿದ್ದಾರೆ. ನಮಗೆ ಪಾಠ ಮಾಡಿದ್ದ 'ಭಾರತಿ ನಾಯಕ್ ಉಣಕಲ್' ಟೀಚರ್ ಬಗ್ಗೆನೂ ಅವರ ವಿದ್ಯಾರ್ಥಿಗಳು ಹೇಳಿದ ಮಾತುಗಳು ಬಂದಿವೆ. ನೋಡಿ ಸಂತೋಷವಾಯಿತು.
ನಮ್ಮ
ಕಾಲದಲ್ಲಿ ಅವರು ನಮಗೆಲ್ಲ ಬಿ.ಆರ್.ನಾಯಕ್ ಟೀಚರ್ ಅಂತಲೇ ಪರಿಚಿತರು. ೧೯೮೩-೮೪ ರ
ಸಮಯದಲ್ಲಿ, ಆರನೇ ಕ್ಲಾಸಿನಲ್ಲಿದ್ದಾಗ, ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಆಗ ಮಾತ್ರ
ನೌಕರಿಗೆ ಸೇರಿದ್ದರು ಅಂತ ನೆನಪು. ಸಿಕ್ಕಾಪಟ್ಟೆ ಜೋಷ್ ಇತ್ತು. ದಬಾಯಿಸಿ ಪಾಠ
ಮಾಡುತ್ತಿದ್ದರು. ಉತ್ಸಾಹದ ಚಿಲುಮೆ ಅನ್ನುವ ಮಾತಿಗೆ ಉದಾಹರಣೆ ಬೇಕೆಂದರೆ ನಾಯಕ್ ಟೀಚರ್
ಅವರನ್ನು ತೋರಿಸಬಹುದಿತ್ತು. ಸಿಕ್ಕಾಪಟ್ಟೆ ಚಟುವಟಿಕೆಯ ಮಾಸ್ತರಿಣಿ.
ಅವರು
ಮೂಲತಃ ಅಂಕೋಲಾ ಕಡೆಯವರು ಅಂತ ನೆನಪು. ಧಾರವಾಡ ಭಾಷೆ ಮಾತಾಡುತ್ತಿದ್ದರೂ ಉತ್ತರಕನ್ನಡದ
ನಾಡವರ ಭಾಷೆಯ ಛಾಪು ಬರೋಬ್ಬರಿ ಇರುತ್ತಿತ್ತು. ಒಮ್ಮೆ ಅವರು ಯಾವದೋ ವಿಷಯವನ್ನು
ಹೇಳುತ್ತ 'ಕೆಲಶಿ' ಅನ್ನುವ ಪದ ಉಪಯೋಗಿಸಿದ್ದರು. ಎಷ್ಟೋ ಜನ 'ಕೆಲಶಿ' ಅಂದರೆ ಕೆಲಸ
ಮಾಡುವವರು ಅಂದುಕೊಂಡು ಸುಮ್ಮನೆ ಕೂತಿದ್ದರು. ಸದಾ ಪ್ರಶ್ನೆ ಕೇಳುತ್ತಿದ್ದ
ವಿದ್ಯಾರ್ಥಿಯೊಬ್ಬ ಎದ್ದು ನಿಂತು, 'ಟೀಚರ್, ಕೆಲಶಿ ಅಂದರೇನ್ರೀ??'
ಎಂದು ಕೇಳಿದ್ದ. ನಾಯಕ್ ಟೀಚರ್ ಉತ್ತರಿಸಿದ್ದನ್ನು ನೆನಪಿಸಿಕೊಂಡರೆ ಸಿಕ್ಕಾಪಟ್ಟೆ ನಗು
ಬರುತ್ತದೆ. 'ಕೆಲಶಿ ಅಂದ್ರೆ ಗೊತ್ತಿಲ್ಲ ನಿನಗೆ? ತಲೆ ಕಟಿಂಗ್ ಮಾಡ್ತಾರಲ್ಲಾ?
ಗೊತ್ತಾಯ್ತು? ತಲೆ ಕಟ್ ಮಾಡುವವರು. ಅವರೇ ಕೆಲಶಿ,' ಅಂದುಬಿಟ್ಟಿದ್ದರು. ತಲೆಕೂದಲನ್ನು
ಕಟ್ ಮಾಡುವವ ಕೆಲಶಿ ಉರ್ಫ್ ನಾಪಿತ ಅಂತ ಹೇಳುವ ಭರಾಟೆಯಲ್ಲಿ ತಲೆ ಕಟ್ ಮಾಡುವವ
ಅಂದುಬಿಟ್ಟಿದರು. ಅದನ್ನು ಕ್ಯಾಚ್ ಮಾಡಿದ ನಮ್ಮಂತವರು ತಟ್ಟಿಕೊಂಡು ಪೆಕಪೆಕಾ ನಕ್ಕರೆ ಟೀಚರಿಗೆ ಯಾಕೆ
ನಗುತ್ತಿದ್ದಾರೆ ಅಂತ ತಿಳಿಯದೆ, 'ಅದೇನು ಹೆಗಡೆ ನಗೋದು? ಏನು ತಮಾಷೆ ಉಂಟು
ಅದರಲ್ಲಿ!?' ಅಂದು ಬೈದಿದ್ದರು. ನೆನಪಾಗಿ ನಗು ಬಂತು.
ನಮ್ಮ
ಹವ್ಯಕ ಭಾಷೆಯಲ್ಲೂ ನಾಪಿತನಿಗೆ ಕೆಲಶಿ ಅಂತಲೇ ಹೇಳುತ್ತಾರೆ. ಹಾಗಾಗಿ ಅವರು ಮೊದಲನೇ
ಬಾರಿಗೆ 'ಕೆಲಶಿ' ಅಂದಾಗಲೇ ನನಗೆ ಗೊತ್ತಾಗಿತ್ತು. 'ಟೀಚರ್, ಕೆಲಶಿ ಅಂದರೇನ್ರೀ??' ಅಂತ
ಬೇರೊಬ್ಬ ವಿದ್ಯಾರ್ಥಿ ಕೇಳಿದಾಗ ತಾವೇ ಉತ್ತರ ಕೊಡುವ ಬದಲಿಗೆ, 'ಹೆಗಡೆ, ನೀ ಹೇಳು
ನೋಡುವಾ. ನಿನಗೆ ಗೊತ್ತಿರಬೇಕಲ್ಲ ಕೆಲಶಿ ಅಂದರೆ ಏನು ಅಂತ. ನೀನೂ ಆಕಡೆಯವನೇ,' ಅಂತ ನನ್ನನ್ನು ಕೇಳಿದ್ದರೆ ಮುದ್ದಾಂ ಹೇಳುತ್ತಿದ್ದೆ with action ಬೇಕಾದ್ರೆ! 'ಉತ್ತರ ಹೇಳು ನೋಡೋಣ!' ಎಂದು ಸದಾ ನನ್ನನ್ನು ಎಬ್ಬಿಸುತ್ತಿದ್ದ ಟೀಚರ್ ಅಂದೇಕೋ ನನ್ನನ್ನು ಕೇಳಲಿಲ್ಲ. ತಾವೇ ಹೇಳಲು ಹೋಗಿ, ಅದು ಏನೋ ಆಗಿಹೋಗಿತ್ತು. ನೆನಸಿಕೊಂಡು ಇವತ್ತು ಸಿಕ್ಕಾಪಟ್ಟೆ ನಕ್ಕೆ.
೨೦೧೨ ಡಿಸೆಂಬರಿನಲ್ಲಿ ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವಕ್ಕೆ ಹೋದಾಗ ನಾಯಕ್ ಟೀಚರ್ ಸಿಕ್ಕಿದ್ದರು. ಶಾಲೆಯಲ್ಲಿದ್ದಾಗ ಅವರದ್ದು ಮತ್ತು ನಂದು ಆರನೇ ಕ್ಲಾಸಿನಲ್ಲಿ ಒಂದು ತರಹದ ವಿಚಿತ್ರ ಸಂಬಂಧ. ತುಂಬಾ ಪ್ರೀತಿಸುತ್ತಿದ್ದರು. ಆದರೆ ಸಿಕ್ಕಾಪಟ್ಟೆ ಕಿತಾಪತಿ ಮಾಡುತ್ತಾನೆ,
ಗದ್ದಲ ಹಾಕುತ್ತಾನೆ, ಕಿರಿಕಿರಿ ಮಾಡುತ್ತಾನೆ, ಗೆಳೆಯರ ಗುಂಪು ಕಟ್ಟಿಕೊಂಡು ಏನೇನೋ ಜೋಕ್
ಮಾಡುತ್ತಾನೆ ಅಂತ ಅವರಿಗೆ ಸಿಕ್ಕಾಪಟ್ಟೆ ಕೋಪ ಕೂಡ ಬರುತ್ತಿತ್ತು. ಆದರೂ ಪ್ರೀತಿ
ಜಾಸ್ತಿಯಿತ್ತು. ಹಾಗಾಗಿ ಕೋಪ ಬಂದರೂ ಆ ಕ್ಷಣದಲ್ಲಿ ಒಂದೆರೆಡು ಮಾತು ಬೈದಿದ್ದು
ಬಿಟ್ಟರೆ ಒಳ್ಳೆ ಮಾರ್ಕ್ಸ್ ತೆಗೆದಾಗ ಪ್ರೀತಿಯಿಂದ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದೇ
ಜಾಸ್ತಿ. ೨೦೧೨ ರಲ್ಲಿ ಇಪ್ಪತ್ತೈದು ವರ್ಷಗಳ ನಂತರ ಸಿಕ್ಕ ನಾಯಕ್ ಟೀಚರ್ ಅದೆಷ್ಟು
ಮಾತಾಡಿದರು, ಅದೆಷ್ಟು ಪ್ರೀತಿ ತೋರಿಸಿದರು ಅಂದರೆ ಅವರ ಮನೆಗೆ ಊಟಕ್ಕೆ ಬರಲೇಬೇಕು ಅಂತ ಕೂತಿದ್ದರು. 'ಟೀಚರ್, ನಿಮ್ಮ
ಮನಿ ಊಟ ಇನ್ನೊಮ್ಮೆ ನೋಡೋಣಂತ್ರಿ. ಇವತ್ತಿನ ಊಟ ನಿಮ್ಮ ಜೋಡಿನೇ ಕೂತು ಮಾಡೋಣಂತ,' ಎಂದು
ಹೇಳಿ ಅವರ ಜೊತೆಯೇ ಉಳಿದ ಕೆಲ ಮಿತ್ರರ ಜೊತೆ ಊಟ ಮಾಡಿದ್ದು ಇವತ್ತಿಗೆ ಸವಿನೆನಪು.
ಟೀಚರ್ ಬಗ್ಗೆ ಒಳ್ಳೆ ಮಾತಾಡಿದ ನಂತರದ ತಲೆಮಾರಿನ ವಿದ್ಯಾರ್ಥಿಗಳಿಗೆ, ಪ್ರಕಟಿಸಿದ ವಿಜಯವಾಣಿ ಪತ್ರಿಕೆಗೆ ಧನ್ಯವಾದಗಳು.
ಬಿ.
ಆರ್. ನಾಯಕ್ ಟೀಚರ್ ಅವರಿಗೆ ಶಿಕ್ಷಕರ ದಿನದ ಶುಭಾಶಯಗಳು. ನಮ್ಮಂತಹ ಮಂಗ್ಯಾಗಳನ್ನು
ಸಹಿಸಿಕೊಂಡು ಪಾಠ ಮಾಡಿ ವಿದ್ಯೆ ಕಲಿಸಿದ್ದಕ್ಕೆ ಒಂದು ದೊಡ್ಡ ನಮೋ ನಮಃ. ದೇವರು
ನಿಮ್ಮನ್ನು ಚೆನ್ನಾಗಿಟ್ಟಿರಲಿ ಟೀಚರ್!
2 comments:
ನಿಮ್ಮ ಲೇಖನ ಓದಿ ಮನಸ್ಸು ತುಂಬಿ ಬಂದಿತು. ಒಳ್ಳೆಯ ಶಿಕ್ಷಕರು ಸಿಗಲೂ ಪುಣ್ಯ ಮಾಡಿರಬೇಕು. ನನಗೂ ಸಹ ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲೆಗಳಲ್ಲಿ great ಶಿಕ್ಷಕರು ಸಿಕ್ಕಿದ್ದರು. ಅವರ ನೆನಪು ನನ್ನಲ್ಲಿ ಚಿರಸ್ಥಾಯಿಯಾಗಿದೆ.
ಥ್ಯಾಂಕ್ಸ್ ಸುನಾಥ್ ಸರ್!
Post a Comment