Sunday, April 29, 2018

'ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ!' ಎಂದಿತ್ತು ಹಾರ್ವರ್ಡ್ ವಿಶ್ವವಿದ್ಯಾಲಯ

೧೯೬೦ ನೇ ಇಸವಿಯ ಕಾಲ. ಅವನೊಬ್ಬ ಆಗಷ್ಟೇ ಹೈಸ್ಕೂಲ್ (12th class) ಮುಗಿಸಿದ್ದ ಹುಡುಗ. ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸವಾಗಿದ್ದ. ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದರು.

ಹೈಸ್ಕೂಲ್ ಮುಗಿಯಿತು. ಕಾಲೇಜು ಸೇರಲು ದೆಹಲಿಯ ಪ್ರಖ್ಯಾತ ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಅರ್ಜಿ ಹಾಕೋಣ ಎಂದು ಫಾರ್ಮ್ ತರಲು ಕಾಲೇಜಿಗೆ ಹೋಗಿದ್ದ. ಬೇಸಿಗೆ ಸಮಯ. ಸರಳವಾಗಿ ಹಾಫ್ ಶರ್ಟ್ ಮತ್ತು ಹಾಫ್ ಪ್ಯಾಂಟ್ ಹಾಕಿಕೊಂಡೇ ಹೋಗಿದ್ದ. ಅದು ಆಗಿನ ಕಾಲದ ಮಧ್ಯಮವರ್ಗದ ಹುಡುಗರ ಸ್ಟ್ಯಾಂಡರ್ಡ್ ಡ್ರೆಸ್. ಮೊದಲು ತಲೆ ಮೇಲೆ ಗಾಂಧಿ ಟೋಪಿ ಕೂಡ ಇರುತ್ತಿತ್ತು. ಸ್ವಾತಂತ್ರ್ಯದ ನಂತರ ಗಾಂಧಿ ಟೋಪಿ ರಾಜಕಾರಣಿಗಳ ಪಾಲಾಗಿ, ಅದಕ್ಕೊಂದು ಕೆಟ್ಟ ಹೆಸರು ಬಂದು, ಹುಡುಗರು ಟೋಪಿ ಹಾಕುವದನ್ನು ಬಿಟ್ಟಿದ್ದರು.

ಸೇಂಟ್ ಸ್ಟೆಫೆನ್ಸ್ ದೇಶದಲ್ಲೇ ಹೆಸರಾಂತ ಕಾಲೇಜು. ಬ್ರಿಟಿಷರು ಎಂದೋ ದೇಶ ಬಿಟ್ಟು ಹೋಗಿದ್ದರು. ಅವರೂ ಸಹಿತ ಎಂದೋ ಬಿಟ್ಟಿರಬಹುದಾದ ಸಂಪ್ರದಾಯಗಳನ್ನೂ ಸಹ ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದ ಸಂಸ್ಥೆಗಳಲ್ಲಿ ಸೇಂಟ್ ಸ್ಟೆಫೆನ್ಸ್ ಕೂಡ ಒಂದು. ಅಲ್ಲಿ ಒಂದು ರೀತಿಯ superiority complex. ಥಳಕುಬಳುಕಿಲ್ಲದ ಸಾಮಾನ್ಯ ದೇಶಿ ಜನರ ಬಗ್ಗೆ ಮತ್ತು ಅವರ ಸರಳ ಮತ್ತು ಸಹಜ ಜೀವನಶೈಲಿಯ ಬಗ್ಗೆ ಕಾರಣವಿಲ್ಲದ ಅಸಡ್ಡೆ ಮತ್ತು ಹೇವರಿಕೆ. ಎಲ್ಲ ಮೆಕಾಲೆಯ ಶನಿ ಸಂತಾನಗಳು.

ಈ ಹುಡುಗ ಹೋಗಿ 'ಪ್ರವೇಶ ಪಡೆಯಬೇಕಾಗಿದೆ. ಒಂದು ಅರ್ಜಿ ಫಾರ್ಮ್ ಕೊಡಿ,' ಅಂದ.

ಅರ್ಜಿ ಕೊಡುವ ಕ್ಲಾರ್ಕ್ ಕೂಡ ಮೆಕಾಲೆ ಸಂತಾನಿಯೇ. ಹತ್ತಿಯ ಶುದ್ಧ ಶುಭ್ರ ದೇಶಿ ದಿರುಸಿನಲ್ಲಿ ಕಂಗೊಳಿಸುತ್ತಿದ್ದ ಈ ಹುಡುಗನಿಗೆ ಅರ್ಜಿ ಫಾರ್ಮ್  ಏನೋ ಕೊಟ್ಟ. ಅಸಡ್ಡೆಯಿಂದ ನೋಡುತ್ತಾ ಹೇಳಿದ, 'ಹಳ್ಳಿ ಹುಂಬನಂತವರಿಗೆ ಈ ಕಾಲೇಜಿನಲ್ಲಿ ಪ್ರವೇಶ ದೊರೆಯುವದಿಲ್ಲ!' ಯಾರ ಬಗ್ಗೆ ಹೇಳಿದ ಎಂದು ತಿಳಿಯದಷ್ಟು ದಡ್ಡನಾಗಿರಲಿಲ್ಲ ಆ ಹುಡುಗ. ಸಾಕಷ್ಟು ಪ್ರತಿಭಾವಂತನಾಗಿದ್ದ ಅವನಿಗೆ ಆ ಕಾಲೇಜೊಂದರಲ್ಲೇ ಅಲ್ಲ ದೆಹಲಿಯ ಬೇಕಾದ ಕಾಲೇಜಿನಲ್ಲಿ ಪ್ರವೇಶ ಸಿಗುತ್ತಿತ್ತು.

'ಎಲಲಾ, ನಿನ್ನ ಸೊಕ್ಕೇ! ನೀನೂ ಬೇಡ, ನಿನ್ನ ಅರ್ಜಿಯೂ ಬೇಡ, ನಿನ್ನ ಕಾಲೇಜೂ ಬೇಡ,' ಎಂದು ಆ ಕಾರಕೂನನ ಮುಖದ ಮೇಲೆ ಅರ್ಜಿ ಎಸೆದು ಬಂದ ಆ ಹುಡುಗ ಅದೇ ಕಾಲೇಜಿನ ಎದುರಿಗೇ ಇದ್ದ ಹಿಂದೂ ಕಾಲೇಜ್ ಸೇರಿದ. ಅಂದು ಸೇಂಟ್ ಸ್ಟೆಫೆನ್ಸ್ ಕಾಲೇಜಿಗೆ ಗೊತ್ತಿರಲಿಕ್ಕಿಲ್ಲ ತಾವು ಎಂತಹ ಮೇಧಾವಿ ವಿದ್ಯಾರ್ಥಿಯೊಬ್ಬನನ್ನು ಕಳೆದುಕೊಂಡೆವು ಎಂದು. ಅದು ಅವರ ಅರಿವಿಗೆ ಬರಲು ಐದಾರು ವರ್ಷ ಕಾಯಬೇಕಾಯಿತು. ನಂತರ ವರ್ಷಾನುಗಟ್ಟಲೆ, ಈಗಲೂ ಸಹ, ಆ ಕಹಿಯನ್ನು ಅನುಭವಿಸುತ್ತಿರಬೇಕು.

ಹಿಂದೂ ಕಾಲೇಜಿನಲ್ಲಿ ಪದವಿಗೆ ಪ್ರವೇಶ ಪಡೆದ ಹುಡುಗ ಅತ್ಯಂತ ಉತ್ತಮ ಅಂಕಗಳೊಂದಿಗೆ ಗಣಿತ, ಸಂಖ್ಯಾಶಾಸ್ತ್ರಗಳಲ್ಲಿ ಪದವಿ ಗಳಿಸಿದ. ಉನ್ನತ ಶಿಕ್ಷಣಕ್ಕಾಗಿ ಎಲ್ಲೂ ಹೋಗಬಹುದಾಗಿತ್ತು. ಅಷ್ಟು ಉತ್ಕೃಷ್ಟವಾಗಿತ್ತು ಆತನ ಸಾಧನೆ. ಆತ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಮಾಡಲು ಹೋಗಿದ್ದು ಕಲ್ಕತ್ತಾದ ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಗೆ (Indian Statistical Institute).  ಅನೇಕ ಮೇಧಾವಿ ಶಿಕ್ಷಕರನ್ನು ಹೊಂದಿದ್ದ ಆ ಸಂಸ್ಥೆಗೆ ದೊಡ್ಡ ಪ್ರಮಾಣದ ಪ್ರತಿಷ್ಠೆ, ಮನ್ನಣೆ ಎಲ್ಲ ಇತ್ತು.

ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಅಂದಿನ ಮುಖ್ಯಸ್ಥರು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಅಥವಾ ಹಾಗಂತ ಬಿಲ್ಡಪ್ ಕೊಟ್ಟುಕೊಂಡು, ರಾಜಕಾರಣಿಗಳ ಸಖ್ಯ ಮಾಡಿಕೊಂಡು, ತಮ್ಮ ಸುತ್ತ ಒಂದು ಪ್ರಭಾವಳಿ ಸೃಷ್ಟಿಸಿಕೊಂಡು ಕೂತಿದ್ದರು. ಮೇಲಿಂದ ದೊಡ್ಡ ಮಟ್ಟದ ಅಹಂ ಬೇರೆ.

ಈ ಹುಡುಗನ ತಂದೆ ಕೂಡ ದೊಡ್ಡ ಸಂಖ್ಯಾಶಾಸ್ತ್ರಜ್ಞರೇ. ಅವರು ಸರ್ಕಾರಿ ನೌಕರಿ ಮಾಡಿಕೊಂಡಿದ್ದರು. ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆಯ ಮುಖ್ಯಸ್ಥರಿಗೂ ಮತ್ತು ಈ ಹುಡುಗನ ತಂದೆಗೂ ಏನೋ ಒಂದು ತರಹದ ego clash. ಒಮ್ಮೊಮ್ಮೆ ಮೇಧಾವಿಗಳಲ್ಲಿ, ಅದರಲ್ಲೂ ತಾವೇ ದೊಡ್ಡ ಜ್ಞಾನಿಗಳು, ತಮ್ಮನ್ನು ಬಿಟ್ಟರೆ ಬೇರೆ ಯಾರಿಲ್ಲ ಅಂತೆಲ್ಲ ಅಂದುಕೊಂಡವರ ಮಧ್ಯೆ ಅಹಂ ಯುದ್ಧಗಳು ಆಗುತ್ತಿರುತ್ತವೆ. ಅದೇ ರೀತಿಯ ಅಹಂ ಯುದ್ಧ ಆ ಇಬ್ಬರು ಹಿರಿಯರಲ್ಲಿ.

ತನ್ನ ವೈರಿಯ ಪುತ್ರ ತನ್ನ ಸಂಸ್ಥೆಗೆ ಪೋಸ್ಟ್ ಗ್ರ್ಯಾಜುಯೆಟ್ ಡಿಗ್ರಿ ಓದಲು ಬರುತ್ತಿದ್ದಾನೆ ಎನ್ನುವ ವಿಷಯ ತಿಳಿದ ಆ ಸಂಸ್ಥೆಯ ಮುಖ್ಯಸ್ಥರಿಗೆ ಸಮ್ಮಿಶ್ರ ಭಾವನೆ. ಒಮ್ಮೆ ಆ ಹುಡುಗನ ತಂದೆ ಭೇಟಿಯಾದಾಗ, 'ನಿಮ್ಮ ಹುಡುಗನ ಚಿಂತೆ ಬಿಡಿ. ಈಗ ನಮ್ಮ ಉಸ್ತುವಾರಿಯಲ್ಲಿದ್ದಾನೆ. ಸರಿಯಾಗಿ ನೋಡಿಕೊಳ್ಳುತ್ತೇವೆ,' ಎಂದು ತುಂಬಾ patronizing ಮಾಡಿದ ರೀತಿಯಲ್ಲಿ ಹೇಳಿದ್ದರು. ಹಾಗೆ ಹೇಳಿದ್ದರ ಹಿಂದಿನದರ ಮರ್ಮ, 'ಈಗ ನಿಮ್ಮ ಹುಡುಗನ ಜುಟ್ಟು ನಮ್ಮ ಕೈಯಲ್ಲಿದೆ. ದುವಾ ಸಲಾಮಿ ಮಾಡಿಕೊಂಡು, ನಮಗೆ ತಗ್ಗಿ ಬಗ್ಗಿ ನಡೆದುಕೊಂಡು ಹೋದರೆ ಬಚಾವ್. ಇಲ್ಲವಾದರೆ ಅಷ್ಟೇ ಮತ್ತೆ!' ಅನ್ನುವ ಸಂದೇಶವಿತ್ತು. ಹುಡುಗನ ತಂದೆಗೆ ಆ ಸಂದೇಶದ ಮರ್ಮ ತಿಳಿಯಿತು. ಅವರಿಗೇನು ಆತ್ಮಾಭಿಮಾನ, ಮಗನ ಮೇಲೆ ಅಭಿಮಾನ ಇರುವದಿಲ್ಲವೇ? ಉರಿದುಕೊಂಡ ಅವರು, 'ನಿಮ್ಮ ಕೆಲಸ ನೀವು ಮಾಡಿಕೊಳ್ಳಿ. ನನ್ನ ಮಗ ಖುದ್ದಾಗಿ ಎಲ್ಲ ಸಂಬಾಳಿಸಿಕೊಂಡು ಹೋಗುತ್ತಾನೆ. ನಿಮ್ಮ ಸಹಾಯವೇನೂ ಬೇಕಾಗಿಲ್ಲ,' ಎಂದು ಮುಖದ ಮೇಲೆ ತಪರಾಕಿ ಬಾರಿಸಿದಂತೆ ಹೇಳಿದ್ದರು. 'ನೀವೇ ದೇವರು. ನನ್ನ ಮಗನನ್ನು ನಿಮ್ಮ ಸುಪರ್ದಿಯಲ್ಲಿ ತೆಗೆದುಕೊಂಡು ಚೆನ್ನಾಗಿ ತಯಾರು ಮಾಡಿ ಮಹಾಪ್ರಭುಗಳೇ,' ಎಂದು ಹೇಳುತ್ತಾರೇನೋ, ಹಾಗೆ ಹೇಳಲಿ ಎಂದು ಬಯಸಿದ್ದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಅವಮಾನವಾಗಿತ್ತು. ಅದನ್ನು ಅವರು ಮರೆಯಲು ಸಾಧ್ಯವೇ ಇರಲಿಲ್ಲ. ಕಲ್ಕತ್ತಾಗೆ ಬಂದವರೇ ಕತ್ತಿ ಮಸೆಯತೊಡಗಿದರು. 'ನೀನು ಹೇಗೆ ಇಲ್ಲಿಂದ ಪಾಸಾಗಿ, ಡಿಗ್ರಿ ತೆಗೆದುಕೂಂಡು ಹೋಗುತ್ತೀಯೋ ಎಂದು ನೋಡೇಬಿಡುತ್ತೇನೆ!' ಎಂದು ಅವಡುಗಚ್ಚಿ ಕೊಕ್ಕೆ ಹಾಕಲು ಕುಳಿತರು.

ಕಲ್ಕತ್ತಾದ ಆ ಸಂಸ್ಥೆಗೆ ಅನಭಿಷಿಕ್ತ ಮಹಾರಾಜ ಅವರು. ಮೇಲಿಂದ ಅಂದಿನ ಪ್ರಧಾನಿ ನೆಹರೂವಿಗೆ ಏಕ್ದಂ ಖಾಸಮ್ ಖಾಸ್. ಅಂತಹ ಪ್ರಭಾವಿಗಳು ಕೈತೊಳೆದುಕೊಂಡು ಹಿಂದೆ ಬಿದ್ದರೆ ಒಬ್ಬ ವಿದ್ಯಾರ್ಥಿಗೆ ತೊಂದರೆ ಕೊಟ್ಟು, ಹಣ್ಣು ಮಾಡಿ, ಹೈರಾಣ ಮಾಡಿ ಒಗೆಯುವದು ಒಂದು ದೊಡ್ಡ ಮಾತೇ? ತುಂಬಾ ಸುಲಭ ಅದು. ಮತ್ತೆ ಭಾರತೀಯ ವಿದ್ಯಾಸಂಸ್ಥೆಗಳಲ್ಲಿ ಪಾರದರ್ಶಕತೆ ಬಹಳ ಕಮ್ಮಿ. ದೊಡ್ಡ ಮಂದಿಯ ಅಂದಾದುಂಧಿ ಮನ್ಮಾನಿಯನ್ನು ಯಾರೂ ಕೇಳುವದಿಲ್ಲ. ಕೇಳಿದರೆ ಅವರ ಜೀವನವನ್ನು ನರಕ ಮಾಡಿ ಒಗೆಯುತ್ತಾರೆ.

ಮುಖ್ಯಸ್ಥರು ಒಂದು ಅಲಿಖಿತ ಆಜ್ಞೆ ಹೊರಡಿಸಿದರು. 'ಆ ಹುಡುಗ ಉತ್ತೀರ್ಣನಾಗಕೂಡದು. ಅವನಿಗೆ ಎಲ್ಲಾ ವಿಧದ ತೊಂದರೆ ಕೊಡಿ. ಫೇಲ್ ಮಾಡಿ ಒಗೆಯಿರಿ. ತಾನಾಗಿಯೇ ಬಿಟ್ಟು ಹೋಗಬೇಕು ಅನ್ನುವಷ್ಟು ತೊಂದರೆ, ತಾಪತ್ರಯ ಕೊಡಿ. ಉಳಿದ ಚಿಂತೆ ನನಗಿರಲಿ!' ಎಂಬ ಠರಾವು ಪಾಸ್ ಮಾಡಿದರು.

ಮೊದಲಿನ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ್ದ ಹುಡುಗ ಒಮ್ಮೆಲೇ ಫೇಲಾಗತೊಡಗಿದ. ಫೇಲ್ ಆದ ಅನ್ನುವದಕಿಂತ ಫೇಲ್ ಮಾಡಲ್ಪಟ್ಟ. ಯಾಕೆ ಎಂದು ಕೇಳಿದರೆ ಕೆಲವು ಶಿಕ್ಷಕರು ಉಡಾಫೆಯ ಉತ್ತರ ಕೊಟ್ಟರು. ಉಳಿದ ಕೆಲವರು ಏನೇನೋ ಹೇಳಿ ಜಾರಿಕೊಂಡರು. ಆತ್ಮಸಾಕ್ಷಿ ಇದ್ದ ಕೆಲವರು ಮತ್ತು ಈ ಹುಡುಗನನ್ನು ಇಷ್ಟಪಡುತ್ತಿದ್ದ ಕೆಲವರು ಮಾತ್ರ ಹುಡುಗ ಸಡನ್ನಾಗಿ ಫೇಲ್ ಆಗುತ್ತಿರುವ ಹಕೀಕತ್ತಿನ ಹಿಂದಿನ ನಿಜವಾದ ಕಾರಣ ಹೇಳಿದರು. ಆ ಸಂಸ್ಥೆಯನ್ನು ಬಿಟ್ಟು ಹೋಗಿ ಬೇರೆ ಎಲ್ಲಿಯಾದರೂ ಓದುವಂತೆ ಹೇಳಿದರು.

ಹುಡುಗನಿಗೆ ಬೇಜಾರಾಗಿದ್ದು ನಿಜ. ಈ ದೊಡ್ಡವರ ಸಣ್ಣತನ ನೋಡಿ ಹೇವರಿಕೆ, ಹೇಸಿಗೆ ಕೂಡ ಮನದಲ್ಲಿ ಮೂಡಿತು. ಈ ಸಂಸ್ಥೆಯಲ್ಲಿ ಪ್ರವೇಶ ಪಡೆದದ್ದಾಗಿದೆ. ಶಿಷ್ಯವೇತನ ಬರುತ್ತಿದೆ. ಈ ಶಿಕ್ಷಕರು ಪರೀಕ್ಷೆಯಲ್ಲಿ ಫೇಲ್ ಮಾಡಿದರೆ ಏನಂತೆ? ಸ್ವಂತ ಓದಿ ಜ್ಞಾನ ಸಂಪಾದಿಸುತ್ತೇನೆ ಎಂದು ಖುದ್ದಾಗಿ ಓದಲು ಕೂತ. ಸಂಸ್ಥೆಯ ಗ್ರಂಥಾಲಯವೇ ಅವನ ಮನೆಯಾಗಿ ಹೋಯಿತು. ಸದಾ ಅಲ್ಲೇ ಇದ್ದು ಸಾಧಾರಣ ವಿದ್ಯಾರ್ಥಿಗಳು ಓದದ ಪುಸ್ತಕಗಳನ್ನು ಮತ್ತು ದೇಶವಿದೇಶಗಳ ಮೇಧಾವಿ ಪತ್ರಿಕೆಗಳನ್ನು ವಿವರವಾಗಿ ಓದತೊಡಗಿದ.

ಆ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಮಟ್ಟದ ಮನ್ನಣೆ ಇತ್ತು. ಸಂಖ್ಯಾಶಾಸ್ತ್ರದ ಅತಿ ಕ್ಲಿಷ್ಟ ಸಮಸ್ಯೆಯೊಂದನ್ನುಜಗತ್ತಿನಲ್ಲೇ 'ಪಪ್ರಥಮವಾಗಿ'  ಬಗೆಹರಿಸಿದ್ದಕ್ಕಾಗಿ ಅವರಿಗೆ ದೊಡ್ಡ ಹೆಸರು ಬಂದಿತ್ತು.  ಅವರು ಬಗೆಹರಿಸಿದ್ದ ಆ ಕ್ಲಿಷ್ಟ ಪ್ರಮೇಯ ದೇಶವಿದೇಶಗಳ ಸಂಖ್ಯಾಶಾಸ್ತ್ರದ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.  ಅದಾದ ನಂತರ ಅವರನ್ನು ಹಿಡಿಯುವರೇ ಇರಲಿಲ್ಲ. ತಮ್ಮ ಸುತ್ತ ಪ್ರಭಾವಳಿ ಸೃಷ್ಟಿಸಿಕೊಂಡು, ಬಿಲ್ಡಪ್ ಕೊಟ್ಟುಕೊಂಡು, ಭೋ ಪರಾಕ್ ಹೇಳುವ ಭಟ್ಟಂಗಿಗಳ ಸಮೂಹ ಸೃಷ್ಟಿಸಿಕೊಂಡು, ತಮ್ಮದೇ ಅಹಂನ ಅಮಲಿನ ಮಹಲಿನಲ್ಲಿ ಇರುತ್ತಿದ್ದರು ಅವರು.

ವಿಧಿಯ ಲೀಲೆಗಳು ವಿಚಿತ್ರವಾಗಿರುತ್ತವೆ. ಈ ಹುಡುಗ ಕೂಡ ಸಂಖ್ಯಾಶಾಸ್ತ್ರದ ಅದೇ ಸಮಸ್ಯೆಯನ್ನು ಅಧ್ಯಯನ ಮಾಡತೊಡಗಿದ. ಆಳವಾಗಿ ಅಧ್ಯಯನ ಮಾಡಿದ. ಏನೋ ಹೊಳೆಯಿತು. 'ಅರೇ! ಈ ಸಮಸ್ಯೆಯನ್ನು ಈಗ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬೇರೆ ರೀತಿಯಲ್ಲಿ ಬಿಡಿಸಿದ್ದಾನೆ. ನಮ್ಮ ಸಂಸ್ಥೆಯ ಮುಖ್ಯಸ್ಥರು ಬೇರೆ ರೀತಿಯಲ್ಲಿ ಬಿಡಿಸಿದ್ದಾರೆಯೇ ವಿನಃ ಈ ಸಮಸ್ಯೆಯನ್ನು ಬಿಡಿಸಿದವರಲ್ಲಿ ಇವರು ಮೊದಲನೆಯವರು ಖಂಡಿತ ಅಲ್ಲ. ಮೊದಲು ಬಿಡಿಸಿದ ಗಣಿತಜ್ಞ ಅಷ್ಟು ವಿವರವಾಗಿ ಬಿಡಿಸಿರಲಿಕ್ಕಿಲ್ಲ. ನಾನು ಅದನ್ನು ವಿವರವಾಗಿ ಬಿಡಿಸಿದರೆ ನಿಖರ ಉತ್ತರ ದೊರೆಯುತ್ತದೆ,' ಎಂದು ಫ್ಲಾಶ್ ಆಯಿತು.

ನಾಲ್ಕು ಶತಮಾನಗಳ ಹಿಂದೆ ಗಣಿತಜ್ಞ ಹೇಗೆ ಬಿಡಿಸಿದ್ದನೋ ಅದನ್ನು ಮತ್ತೂ ಉತ್ತಮಗೊಳಿಸಿ, ಪರಿಹಾರವನ್ನು ಸರಳೀಕರಿಸುವ ಕೆಲಸಕ್ಕೆ ಪದ್ಮಾಸನ ಹಾಕಿ ಕುಳಿತುಬಿಟ್ಟ ಈ ಹುಡುಗ. ಎಷ್ಟೇ ಓದಿದರೂ ಶಿಕ್ಷರು ಫೇಲ್ ಮಾಡಿ ಒಗೆಯತೊಡಗಿದ್ದರು ಅಥವಾ ಜಸ್ಟ್ ಪಾಸ್ ಮಾಡುತ್ತಿದ್ದರು. ಹಾಗಾಗಿ ಡಿಗ್ರಿಗಾಗಿ ಓದುವದರಲ್ಲಿ ಮಜವೇ ಇರಲಿಲ್ಲ. ಈಗ ಈ ಕ್ಲಿಷ್ಟ ಸಮಸ್ಯೆಯನ್ನು ಬಿಡಿಸಿ, ಅದೇನಾದರೂ ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿಬಿಟ್ಟರೆ.... ಎನ್ನುವುದನ್ನು ಊಹಿಸಿಕೊಂಡರೆ ಸಿಕ್ಕಾಪಟ್ಟೆ ಹುರುಪು, ಉಮೇದಿ ಬರತೊಡಗಿತು.

ಬಹಳ ಶ್ರಮಪಟ್ಟು ಒಂದು ಪ್ರೌಢ ಪ್ರಬಂಧವನ್ನು ಸಿದ್ಧಪಡಿಸಿದ. ಅಡಿಯಲ್ಲಿ ಒಂದು ಖಡಕ್ ಟಿಪ್ಪಣಿ ಬರೆಯುವದನ್ನು ಮರೆಯಲಿಲ್ಲ, 'ಭಾರತದ ಸಂಖ್ಯಾಶಾಸ್ತ್ರಜ್ಞರೊಬ್ಬರು graph theory ಉಪಯೋಗಿಸಿ ಈ ಸಮಸ್ಯೆಯನ್ನು ಬಿಡಿಸಿದ್ದಾರೆ. ಈ ಸಮಸ್ಯೆಯನ್ನು ಮೊತ್ತ ಮೊದಲನೆಯದಾಗಿ ತಾವೇ ಬಿಡಿಸಿದ್ದು ಎಂದು ಬಿಂಬಿಸಿಕೊಂಡಿದ್ದಾರೆ. ನಿಮ್ಮ ಪತ್ರಿಕೆ ಕೂಡ ಅದನ್ನು ಒಪ್ಪಿಕೊಂಡಿದೆ. ನನ್ನ ಈ ಪ್ರಬಂಧದ ತಿರುಳೇನೆಂದರೆ - ಈ ಸಮಸ್ಯೆಯನ್ನು integral calculus ಉಪಯೋಗಿಸಿ ನಾಲ್ಕು ಶತಮಾನಗಳ ಹಿಂದೆಯೇ ಬೇರೊಬ್ಬ ಗಣಿತಜ್ಞ ಬಿಡಿಸಿದ್ದಾನೆ. ಆತನ ಸಿದ್ಧಾಂತವನ್ನು ಮತ್ತೂ ಸರಳೀಕರಿಸಿದ್ದೇನೆ ಮತ್ತು ಸಮಸ್ಯೆಗೆ ಉತ್ತರವನ್ನು ನೇರವಾಗಿ ಕಂಡುಕೊಂಡಿದ್ದೇನೆ. ಈ ಪ್ರಬಂಧವನ್ನು ನಿಮ್ಮ ಪತ್ರಿಕೆಯಯಲ್ಲಿ ಪ್ರಕಟಿಸಿ. ಈ ಸಮಸ್ಯೆಯನ್ನು ಬಿಡಿಸಿದ ಮೊದಲಿಗರು ಭಾರತದ ಈ ಸಂಖ್ಯಾಶಾಸ್ತ್ರಜ್ಞರು ಅಲ್ಲ ಎಂಬ ತಿದ್ದುಪಡಿಯನ್ನು ಕೂಡ ಪ್ರಕಟಿಸಿ.'

ಹೀಗೆ ಸಿದ್ಧಪಡಿಸಿದ ಪ್ರಬಂಧವನ್ನು ಅಮೇರಿಕಾದ ಖ್ಯಾತ ಸಂಖ್ಯಾಶಾಸ್ತ್ರದ ಪತ್ರಿಕೆಗೆ ಕಳುಹಿಸಿಬಿಟ್ಟ. ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ ಪ್ರಬಂಧಗಳು ಹಾಗೇ ಸುಮ್ಮನೆ ಪ್ರಕಟವಾಗುವದಿಲ್ಲ. ಹಲವಾರು ಖ್ಯಾತ ಪಂಡಿತರಿಂದ peer review ಮಾಡಲ್ಪಡುತ್ತವೆ. ತಪ್ಪುಗಳೇನಾದರೂ ಇವೆಯೋ ಎಂದು ಭೂತಗನ್ನಡಿ ಹಿಡಿದು ನೋಡುತ್ತಾರೆ. ಆಕ್ಷೇಪಣೆಗಳನ್ನು ಎತ್ತುತ್ತಾರೆ. ಒಮ್ಮೊಮ್ಮೆ ಒಂದು ಪ್ರಬಂಧ peer review ಆಗಿ, ಎತ್ತಿದ ಎಲ್ಲ ಆಕ್ಷೇಪಣೆಗಳಿಗೆ ತಕ್ಕ ಉತ್ತರ ಕೊಟ್ಟು, ಬೇಕಾದ ತಿದ್ದುಪಡಿಗಳನ್ನು ಮಾಡಿದ ನಂತರ ಪ್ರಕಟವಾಗಲು ಒಂದೆರೆಡು ವರ್ಷ ಹಿಡಿದರೂ ಆಶ್ಚರ್ಯವಿಲ್ಲ.

ಈ ಹುಡುಗನ ಪ್ರಬಂಧವನ್ನು ತಪಾಸಣೆ ಮಾಡಲು ಕುಳಿತವರು ಅಮೇರಿಕಾದ ಪ್ರಖ್ಯಾತ ಹಾರ್ವರ್ಡ್ ವಿಶ್ವವಿದ್ಯಾಲಯದ ಒಬ್ಬ ಖ್ಯಾತ ಪ್ರೊಫೆಸರ್. ಇನ್ನೂ ಸ್ನಾತ್ತಕೋತ್ತರ ಪದವಿ ಮಾಡುತ್ತಿರುವ ಹುಡುಗನ ಪ್ರಬಂಧ ಅವರನ್ನು ತುಂಬಾ ಇಂಪ್ರೆಸ್ ಮಾಡಿತ್ತು. ಇಂತಹ ಮೇಧಾವಿ ಹುಡುಗ ತಮ್ಮ ವಿಶ್ವವಿದ್ಯಾಲಯವಾದ ಹಾರ್ವರ್ಡಿಗೆ ಮುದ್ದಾಂ ಬರಬೇಕು ಎಂದೆನ್ನಿಸಿತು ಅವರಿಗೆ. ಅಮೇರಿಕಾದ ಖ್ಯಾತ ವಿಶ್ವವಿದ್ಯಾಲಯಗಳಿಗೆ ಒಂದು ವಿಷಯ ಬರೋಬ್ಬರಿ ಗೊತ್ತಿರುತ್ತದೆ. ತಮ್ಮ ವಿಶ್ವವಿದ್ಯಾಲಯದ ಪ್ರತಿಷ್ಠೆ ನಿಂತಿರುವದೇ ಮೇಧಾವಿ ಶಿಕ್ಷಕರ ಮತ್ತು ಜಾಣ ವಿದ್ಯಾರ್ಥಿಗಳಿಂದ ಮೇಲೆ ಎಂದು. ಬಾಕಿ ಎಲ್ಲ ನಗಣ್ಯ. ಹಾಗಾಗಿ ಅತ್ಯುತ್ತಮ ವಿಶ್ವವಿದ್ಯಾಲಯಗಳು ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ ಸದಾ ಬಲೆ ಹಾಕಿಕೊಂಡು ಕುಳಿತಿರುತ್ತವೆ.

ಈ ಹುಡುಗ ಕಲ್ಕತ್ತಾದಿಂದ ಬರೆದು ಕಳಿಸಿದ್ದ ಅತ್ಯುತ್ತಮ ಮತ್ತು landmark ಅನ್ನಿಸುವಂತಹ ಪ್ರಬಂಧವನ್ನು ಮುದ್ದಾಂ ಪ್ರಕಟಿಸುವಂತೆ ಟಿಪ್ಪಣಿ ಬರೆದು ಸಂಪಾದಕ ಮಂಡಳಿಗೆ ಕಳಿಸಿದ ಆ ಹಾರ್ವರ್ಡ್ ಯೂನಿವರ್ಸಿಟಿ ಅಧ್ಯಾಪಕರು ಮತ್ತೊಂದು ಖತರ್ನಾಕ್ ಕೆಲಸ ಮಾಡಿಬಿಟ್ಟರು.

ಅದೇನೆಂದರೆ.....

ಹಾರ್ವರ್ಡ್ ಯೂನಿವರ್ಸಿಟಿಯ ಪ್ರವೇಶ ಮಂಡಳಿಯ ಮುಖ್ಯಸ್ಥರಿಗೆ ಒಂದು ಪತ್ರ ಬರೆದರು. 'ಕಲ್ಕತ್ತಾದ ಸಂಸ್ಥೆಯೊಂದರಲ್ಲಿ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯೊಬ್ಬನಿದ್ದಾನೆ. ಅಂತಹ ಪ್ರತಿಭಾನ್ವಿತ ಹಾರ್ವರ್ಡಿನಲ್ಲಿ ಓದಲಿಲ್ಲ ಅಂದರೆ ಅದು ನಮಗೇ ನಷ್ಟ. ತ್ವರಿತವಾಗಿ ಅವನಿಗೆ ಪ್ರವೇಶ ಮಂಜೂರು ಮಾಡಿ. ದೊಡ್ಡ ಪ್ರಮಾಣದ ಪೂರ್ತಿ ಶಿಷ್ಯವೇತನ, ಇತರೆ ಆರ್ಥಿಕ ಸಹಾಯದ ಬಗ್ಗೆ ಖಾತ್ರಿ ಕೊಟ್ಟು ಆದಷ್ಟು ಬೇಗ ಸಂದೇಶ ಕಳುಹಿಸಿ. ಮುಂದಿನ ಟರ್ಮಿನಲ್ಲಿ ಆತ ನನ್ನ ಜೊತೆ ಮತ್ತು ಇತರೆ ಹಾರ್ವರ್ಡ್ ಪ್ರೊಫೆಸರ್ ಜನರ ಜೊತೆ ಕೆಲಸ ಮಾಡಲು ಇಲ್ಲಿ ಬಂದರೆ ಅದಕ್ಕಿಂತ ದೊಡ್ಡ ಸಂತೋಷ ಮತ್ತು ಗೆಲುವು ಇನ್ನೊಂದಿಲ್ಲ. ಆ ವಿದ್ಯಾರ್ಥಿ ನಮ್ಮ ಹಾರ್ವರ್ಡ್ ಆಹ್ವಾನವನ್ನು ಸ್ವೀಕರಿಸಿದ ಬಗ್ಗೆ ಮಾಹಿತಿ ನೀಡುತ್ತಿರಿ.'

ಹೀಗೆ ಕಲ್ಕತ್ತಾದಲ್ಲಿ ಅಲ್ಲಿನ ಪ್ರೊಫೆಸರ್ ಮಂದಿ ಕೊಡಬಾರದ ಕಾಟ ಕೊಟ್ಟು, ಫೇಲ್ ಮಾಡುತ್ತಾ, ಕೊಕ್ಕೆ ಹಾಕುತ್ತಿದ್ದರೆ ಈ ಕಡೆ ಹಾರ್ವರ್ಡ್ PhD ಗೆ ಬರುವಂತೆ ಆಹ್ವಾನ ಕಳಿಸಿತ್ತು. ಏನೇನೋ ಕಷ್ಟಪಟ್ಟು ಅರ್ಜಿ ಹಾಕಿದ ೦.೦೫% ಜನರಿಗೂ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಪ್ರವೇಶ ಸಿಗುವದಿಲ್ಲ. ಅಂತದ್ದರಲ್ಲಿ ಈ ಹುಡುಗನ ಅಸಾಧಾರಣ ಬುದ್ಧಿಮತ್ತೆಯಿಂದ ತುಂಬಾ ಪ್ರಭಾವಿತವಾಗಿದ್ದ ಹಾರ್ವರ್ಡ್ ಯೂನಿವರ್ಸಿಟಿ ತಾನೇ ಆಹ್ವಾನ ಕಳಿಸಿತ್ತು. Pure meritocracy ಅಂದರೆ ಅದು.

ಹಾರ್ವರ್ಡ್ ಯೂನಿವರ್ಸಿಟಿಯಿಂದ ಬಂದ ಅನಿರೀಕ್ಷಿತ ಆಹ್ವಾನ ನೋಡಿ ಹುಡುಗನಿಗೆ ಆಶ್ಚರ್ಯ ಮತ್ತು ಖುಷಿ. ಅದಕ್ಕಿಂತ ಹೆಚ್ಚಾಗಿ ತನ್ನ ಬುದ್ಧಿಮತ್ತೆಗೆ, ಶ್ರದ್ಧೆಗೆ ಸಿಕ್ಕ ಗೌರವದಿಂದ ನೆಮ್ಮದಿ ಮತ್ತು ಆತ್ಮತೃಪ್ತಿ. ಕಲ್ಕತ್ತಾದ ಸಂಸ್ಥೆಯಿಂದ ಡಿಗ್ರಿ ಕೂಡ ಸಿಗದಿದ್ದರೆ ಮುಂದೇನು ಎಂಬ ಚಿಂತೆ ಗಾಢವಾಗಿ ಕಾಡಿತ್ತು. ಕುಹಕಿಗಳು, ವಿಘ್ನಸಂತೋಷಿಗಳು ಹೇಳಿದ್ದರು - 'ಉಕ್ಕಿನ ಕಾರ್ಖಾನೆಗಳಲ್ಲಿ ಲೆಕ್ಕ ಬರೆಯುವ ಗುಮಾಸ್ತನ ಕೆಲಸ ಖಾಲಿ ಇವೆ. ನಿನ್ನ BSc ಡಿಗ್ರಿ ಸಾಕು ಅವುಗಳಿಗೆ. ಅರ್ಜಿ ಹಾಕು. ಜೀವನೋಪಾಯಕ್ಕೆ ಒಂದು ಕೆಲಸ ಅಂತಾದೀತು!' ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು.

ಹುಡುಗ ಕಳಿಸಿದ್ದ ಪ್ರಬಂಧ ಪ್ರಕಟವೂ ಆಯಿತು. ಆ ಕ್ಲಿಷ್ಟಕರ ಸಮಸ್ಯೆಯನ್ನು ಬಗೆಹರಿಸಿದ ಮೊದಲಿಗ ಆ ಸಂಸ್ಥೆಯ ಮುಖ್ಯಸ್ಥರು ಅಲ್ಲ ಎನ್ನುವ ತಿದ್ದುಪಡಿ ಕೂಡ ಪ್ರಕಟವಾಯಿತು. ನಾಲ್ಕು ಶತಮಾನಗಳ ಹಿಂದಿನ ಗಣಿತದ ಪ್ರಮೇಯವನ್ನು ಮುಂದುವರೆಸಿ ಶುದ್ಧ ಗಣಿತದಿಂದಲೇ ಅದನ್ನು ಸೃಜನಾತ್ಮಕವಾಗಿ ಬಿಡಿಸಿದ್ದಕ್ಕೆ ಹುಡುಗನಿಗೆ ಅಭಿನಂದನೆಯನ್ನು ವಿಶ್ವದ ಅತಿ ದೊಡ್ಡ ದೊಡ್ಡ ಗಣಿತಜ್ಞರು ಮತ್ತು ಸಂಖ್ಯಾಶಾಸ್ತ್ರಿಗಳು ಸಲ್ಲಿಸಿದ್ದರು.

ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರಿಗೆ ದೊಡ್ಡ ಪ್ರಮಾಣದ ಮುಖಭಂಗ. ಆದರೂ ಆ ಹುಡುಗನ ಭವಿಷ್ಯಕ್ಕೆ ಕೊಕ್ಕೆ ಹಾಕಿ ಮುಗಿದಿರಲಿಲ್ಲ. ಕೊನೆಯ ಬ್ರಹ್ಮಾಸ್ತ್ರ ಬಿಟ್ಟರು. ಹಾರ್ವರ್ಡ್ ಯೂನಿವರ್ಸಿಟಿಗೆ ಅಧಿಕೃತವಾಗಿ ಒಂದು ಪತ್ರ ಬರೆದರು. ಅದರಲ್ಲೂ ತಮ್ಮ ಕಾರ್ಕೋಟಕ ವಿಷ ಕಾರಿಕೊಂಡಿದ್ದರು.

ಆ ಪತ್ರದ ಸಾರಾಂಶ ಇಷ್ಟು. 'ನಿಮ್ಮ ಹಾರ್ವರ್ಡ್ ವಿಶ್ವವಿದ್ಯಾಲಯ ನಮ್ಮ ಸಂಸ್ಥೆಯ ವಿದ್ಯಾರ್ಥಿಗೆ PhD ಪದವಿಗೆ ಆಹ್ವಾನ ನೀಡಿರುವ ವಿಷಯ ತಿಳಿದುಬಂದಿದೆ. ಈ ಸದರಿ ವಿದ್ಯಾರ್ಥಿ MSc ಪದವಿಯನ್ನು ಮುಗಿಸುವ ಬಗ್ಗೆ ಖಾತ್ರಿ ಇಲ್ಲ. ಅವನ ಶೈಕ್ಷಣಿಕ ಪ್ರಗತಿ ಸಮಾಧಾನಕರವಾಗಿಲ್ಲ. ನಿಗದಿತ ಸಮಯದಲ್ಲಿ MSc ಡಿಗ್ರಿ ಮುಗಿಸುತ್ತಾನೆ ಎನ್ನುವ ನಂಬಿಕೆಯ ಮೇಲೆ ನೀವು ಅವನಿಗೆ PhD ಪದವಿಗಾಗಿ ಪ್ರವೇಶದ ಆಹ್ವಾನ ಕೊಟ್ಟಿದ್ದರೆ ನೀವು ನಿಮ್ಮ ನಿರ್ಧಾರವನ್ನು ಮರುಪರಿಶೀಲಿಸುವದು ಉತ್ತಮ.'

ಇಂತಹ ಪತ್ರ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರವೇಶ ವಿಭಾಗದ ಡೀನ್ ಅವರ ಮೇಜಿಗೆ ಬಂದಿತು. ಆ ವಿದ್ಯಾರ್ಥಿಯ ಬಗ್ಗೆ ಹಾರ್ವರ್ಡ್ ತನ್ನದೇ ಆದ ರೀತಿಯಲ್ಲಿ ಎಲ್ಲ ಮಾಹಿತಿ ಸಂಗ್ರಹಿಸಿತ್ತು. ಅದೆಷ್ಟೋ ಪ್ರಬಂಧಗಳನ್ನು ಆತ ಆಗಲೇ ಪ್ರಕಟಿಸಿದ್ದ. ಅದೆಷ್ಟೋ ಪ್ರಬಂಧಗಳ ಮೇಲೆ ವಿಮರ್ಶೆಗಳನ್ನು ಬರೆದು ಪ್ರಕಟಿಸಿದ್ದ. ಅವೆಲ್ಲವನ್ನು ಗಣನೆಗೆ ತಗೆದುಕೊಡಿತ್ತು ಹಾರ್ವರ್ಡ್.

ಹಾರ್ವರ್ಡ್ ಚಿಕ್ಕದಾಗಿ ಒಂದು ಪತ್ರ ವಾಪಸ್ ಬರೆಯಿತು. 'ನಿಮ್ಮ ಸಂಸ್ಥೆ ಕೊಡಬಹುದಾದ ಅಥವಾ ಕೊಡದೇಇರಬಹುದಾದ ಡಿಗ್ರಿಯನ್ನು ನಾವು ಗಣನೆಗೆ ತೆಗೆದುಕೊಂಡಿಲ್ಲ. ವಿದ್ಯಾರ್ಥಿಯನ್ನು ಬೇರೆ ಬೇರೆ ಕೋನಗಳಿಂದ ನಮ್ಮದೇ ರೀತಿಯಲ್ಲಿ ಮೌಲ್ಯಮಾಪನ ಮಾಡಿ PhD ಆಹ್ವಾನ ಕಳಿಸಿದ್ದೇವೆ. ಹಾಗಾಗಿ ನಿಮ್ಮ ಸಂಸ್ಥೆಯ ಡಿಗ್ರಿಯ ಮೇಲೆ ನಮ್ಮ ಆಹ್ವಾನ ನಿಂತಿಲ್ಲ!'

In short, ಹಾರ್ವರ್ಡ್ ಪತ್ರದ ಧಾಟಿ ನೋಡಿದರೆ, ಅವರ ಸಂದೇಶ ಹೀಗಿತ್ತು - ನಿಮ್ಮ ಡಿಗ್ರಿ ನೀವೇ ಇಟ್ಟುಕೊಳ್ಳಿ ಅಥವಾ ಹೆಟ್ಟಿಕೊಳ್ಳಿ!

ಹೀಗೆ ಕಪಾಳಕ್ಕೆ ರಪ್ರಪಾ ಎಂದು ಬಾರಿಸಿದಂತೆ ಬರೆದಿದ್ದ ಹಾರ್ವರ್ಡ್ ಪತ್ರ ನೋಡಿ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ದಂಗಾದರು. ಭಗ ಭಗ ಉರಿದುಕೊಂಡರು. ಎಷ್ಟು ಬರ್ನಾಲ್ ಎಲ್ಲೆಲ್ಲಿ ಹಚ್ಚಿಕೊಂಡು ಉಫ್ ಉಫ್ ಅಂತ ಗಾಳಿಯಾಡಿಸಿಕೊಂಡರೋ ಅವರಿಗೇ ಗೊತ್ತು. ಇಲ್ಲದ ಕೆತ್ತೆಬಜೆ ಮಾಡಲು ಹೋದವರಿಗೆ ಬರೋಬ್ಬರಿ ಮಂಗಳಾರತಿ ಆಗಿತ್ತು.

ಹಾರ್ವರ್ಡ್ ಮಂಗಳಾರತಿ ಮಾಡಿತು. ಆದರೆ ಪೂಜೆಯ ಪ್ರಸಾದವನ್ನು ಇವರೇ ಕೊಟ್ಟುಕೊಳ್ಳಬೇಕಾಯಿತು. ಇವರು ಡಿಗ್ರಿ ಕೊಡಲಿ ಬಿಡಲಿ ಹಾರ್ವರ್ಡ್ ಅಂತೂ ಪ್ರವೇಶ ಕೊಟ್ಟುಬಿಟ್ಟಿದೆ. ಹುಡುಗ ಹಾರ್ವರ್ಡ್ ಯೂನಿವರ್ಸಿಟಿಯನ್ನು ಹೋಗಿ ಸೇರಿಕೊಳ್ಳುತ್ತಾನೆ. ಹಾರ್ವರ್ಡ್ ಸೇರಿಕೊಳ್ಳುವ ಬುದ್ಧಿಮತ್ತೆ ಇರುವ ಹುಡುಗ ಕಲ್ಕತ್ತಾದ ಸಂಸ್ಥೆಯಲ್ಲಿ ಫೇಲಾದವ ಅಂದರೆ ಯಾರೂ ನಂಬುವದಿಲ್ಲ. ಇಂತಹ ಬುದ್ಧಿವಂತನನ್ನು ಫೇಲ್ ಮಾಡಿದ್ದಾರೆ ಅಂದ ಮೇಲೆ ಆ ಸಂಸ್ಥೆಯ ಬಗ್ಗೆಯೇ ಸಂಶಯ ವ್ಯಕ್ತಪಡಿಸುತ್ತಾರೆ. ಹಾಗಾಗಿಬಿಟ್ಟರೆ ಕಲ್ಕತ್ತಾದ ಸಂಸ್ಥೆಯ ಹೆಸರು ಹಾಳಾಗುತ್ತದೆ. ಹೀಗಾಗಿ ಹುಡುಗನನ್ನು ನಪಾಸ್ ಮಾಡಿದರೆ ತಮ್ಮ ಸಂಸ್ಥೆಯ ಪ್ರತಿಷ್ಠೆಗೇ ಕುತ್ತು ಬರುತ್ತದೆ. ಒಟ್ಟಿನಲ್ಲಿ ಅವರ ಬ್ರಹ್ಮಾಸ್ತ್ರ ಅವರಿಗೇ ಬೂಮ್ ರಾಂಗ್ ಆಗಿ ತಿರುಗಿ ಬಂದು ಬಡಿದಿತ್ತು! ಕಪಾಳಕ್ಕೆ ರಪ್ ಅಂತ ಅಪ್ಪಳಿಸಿತ್ತು!

ಮುಂದಾಲೋಚನೆ ಮಾಡಿದ ಕಲ್ಕತ್ತಾದ ಸಂಸ್ಥೆಯ ಮುಖ್ಯಸ್ಥರು ಒಮ್ಮೆಲೇ ಪ್ಲೇಟ್ ಬದಲಾಯಿಸಿದರು. ಎಲ್ಲ ಶಿಕ್ಷಕರನ್ನು ಕರೆದರು. ತಮ್ಮ ಹಿಂದಿನ ಅಲಿಖಿತ ಆಜ್ಞೆಗಳನ್ನು ಹಿಂದೆ ತೆಗೆದುಕೊಂಡರು. ಆ ಹುಡುಗನಿಗೆ ಪರೀಕ್ಷೆಯಲ್ಲಿ ಸರಿಯಾಗಿ ಮಾರ್ಕ್ ಹಾಕುವಂತೆ ಹೇಳಿ ಮುಖ ಮುಚ್ಚಿಕೊಂಡು ಎದ್ದು ಹೋದರು. ತಮ್ಮದೇ ಅಸ್ತ್ರ ತಮಗೇ ರಿವರ್ಸ್ ಹೊಡೆದಿತ್ತು. ಎಲ್ಲರ ದೃಷ್ಟಿಯಲ್ಲಿ ಅಷ್ಟು ದೊಡ್ಡ ಸಂಖ್ಯಾಶಾಸ್ತ್ರಜ್ಞರು. ಆದರೆ ವಿಷಸರ್ಪ. ಪಾಪದ ಹುಡುಗನ ಮೇಲೆ, ಅವನ ತಂದೆ ಮೇಲೆ ತಮಗಿದ್ದ ಅಹಂನ ಕಾರಣದಿಂದ, ದ್ವೇಷ ಸಾಧಿಸಲು ಹೋಗಿ ವಿಧಿಯಿಂದ ತಾರಾಮಾರಾ  ಬಾರಿಸಿಕೊಂಡಿದ್ದರು. ಬರೋಬ್ಬರಿಯಾಯಿತು.

ಮೊದಲು ಹುಡುಗನನ್ನು ಫೇಲ್ ಮಾಡುವ ಆತುರವಾದರೆ ಈಗ ಹೇಗಾದರೂ ಮಾಡಿ ಪಾಸ್ ಮಾಡಿ ಸಾಗಹಾಕುವ ಆತುರ. ಫೇಲ್ ಆಗಿಬಿಟ್ಟ ಅಂದರೆ ಸಂಸ್ಥೆಯ ಮಾನ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ. ಹಿಂದೆ ಬೇಕಂತಲೇ ಕಮ್ಮಿ ಮಾರ್ಕ್ ಹಾಕಿದ್ದ ಪರೀಕ್ಷೆಗಳನ್ನು ಮತ್ತೊಮ್ಮೆ ಇವನೊಬ್ಬನಿಗಾಗಿಯೇ ಪ್ರತ್ಯೇಕವಾಗಿ ಮಾಡಲಾಯಿತು. ಒಳ್ಳೊಳ್ಳೆ ಅಂಕಗಳನ್ನು ನೀಡಲಾಯಿತು. ಹೊಡೀರಿ ಹಲಗಿ!

ಅಂದು ಗುರುವಿಗೇ ತಿರುಮಂತ್ರ ಹಾಕಿದ್ದ ಆ ವಿದ್ಯಾರ್ಥಿ ಮತ್ಯಾರೂ ಅಲ್ಲ. ಅವರೇ ಇಂದಿನ ಖತರ್ನಾಕ್ ರಾಜಕಾರಣಿ - ಸುಬ್ರಮಣಿಯನ್ ಸ್ವಾಮಿ. ತಿರುಮಂತ್ರ ಹಾಕಿಸಿಕೊಂಡಿದ್ದ ಗುರುಗಳೂ  ದೊಡ್ಡ ಮನುಷ್ಯರೇ. ಅವರು ಯಾರೆಂದರೆ ದೊಡ್ಡ ಸಂಖ್ಯಾಶಾಸ್ತ್ರಜ್ಞ ಪ್ರಸನ್ನ ಚಂದ್ರ ಮಹಾಲನೋಬಿಸ್. ದೊಡ್ಡ ಮಿದುಳು ಇತ್ತು. ಏನುಪಯೋಗ? ಹೃದಯ ಸಂಕುಚಿತವಾಗಿತ್ತು. ಎಲ್ಲವನ್ನೂ ಮೀರಿದ ಅಹಂಕಾರ ಬೇರೆ.

ಇಪ್ಪತ್ತೂ ಚಿಲ್ಲರೆ ವಯಸ್ಸಿನ ವಿದ್ಯಾರ್ಥಿ ಸುಬ್ರಮಣಿಯನ್ ಸ್ವಾಮಿ ಹಾರ್ವರ್ಡ್ ಯೂನಿವರ್ಸಿಟಿ ಸೇರಿಕೊಂಡರು. ಅಲ್ಲೂ ದಾಖಲೆಗಳ ಮೇಲೆ ದಾಖಲೆ ಮಾಡಿದರು. ಅರ್ಥಶಾಸ್ತ್ರದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿ PhD ಗಳಿಸಿದ ದಾಖಲೆ ಇನ್ನೂ ಸ್ವಾಮಿಯವರ ಹೆಸರಲ್ಲೇ ಇದೆ. ನೊಬೆಲ್ ಪ್ರಶಸ್ತಿ ವಿಜೇತ ಪ್ರೊಫೆಸರ್ ಮಂದಿಯೊಂದಿಗೆ ಅನೇಕ ಪ್ರೌಢ ಪ್ರಬಂಧಗಳನ್ನು ಪ್ರಕಟಿಸಿದರು. ದೇಶಗಳ GDP ಅಳೆಯುವ ಸೂತ್ರವನ್ನು ಸ್ವಾಮಿಯವರ ಮತ್ತು ಅವರ ಗುರುಗಳಾದ ನೊಬೆಲ್ ಪ್ರಶಸ್ತಿ ವಿಜೇತ ಪಾಲ್ ಸ್ಯಾಮ್ಯುಯೆಲ್ಸೆನ್ ಹೆಸರಿಂದ ಕರೆಯಲಾಗುತ್ತದೆ.

ಈ ಘಟನೆಯ ತಮಾಷೆಯ ಕ್ಲೈಮಾಕ್ಸ್ ಅಂದರೆ.... ಕೆಲ ವರ್ಷಗಳ ನಂತರ ಇದೇ ಸಣ್ಣ ಮನಸ್ಸಿನ ದೊಡ್ಡ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್ ಹಾರ್ವರ್ಡ್ ಯೂನಿವರ್ಸಿಟಿಗೆ ಭೇಟಿ ಕೊಟ್ಟಿದ್ದರು. ಎಲ್ಲರೂ ಅವರ ಮುಂದೆ ಸುಬ್ರಮಣಿಯನ್ ಸ್ವಾಮಿಗಳ ಪ್ರಶಂಸೆ ಮಾಡಿದರು. ಸ್ವಾಮಿ ಆಗಲೇ ಹಾರ್ವರ್ಡ್ ಮತ್ತು ಪಕ್ಕದ MIT ಯಲ್ಲಿ ದೊಡ್ಡ ಹೆಸರು ಮಾಡಿದ್ದರು. ಹಾಗಾಗಿ ಅಲ್ಲಿನ ಜನ ತೆರೆದ ಮನಸ್ಸಿನಿಂದ ಭಾರತದಿಂದ ಬಂದ ಅತಿಥಿಯ ಮುಂದೆ ಸ್ವಾಮಿಗಳ ಪ್ರಶಂಸೆ ಮಾಡಿದ್ದರು. ಅವರಿಗೇನು ಗೊತ್ತು ಈ ಗುರು ಹೇಗೆ ತಮ್ಮ ಶಿಷ್ಯನಿಗೆ ಕೊಕ್ಕೆ ಹಾಕಿದ್ದರು ಮತ್ತು ಶಿಷ್ಯ ಹೇಗೆ ಗುರುವಿಗೇ ತಿರುಮಂತ್ರ ಹಾಕಿದ್ದ ಎಂತೆಲ್ಲ.

ತಮ್ಮ ಒಂದು ಕಾಲದ ಶಿಷ್ಯನ ಪ್ರಶಂಸೆ ಕೇಳಿದ ಮಹಾಲನೋಬಿಸ್ ಒಳೊಳಗೇ ಉರಿದುಕೊಂಡಿರಬೇಕು. ಆದರೆ ಮೇಲಿಂದ ಮಾತ್ರ ದೊಡ್ಡದಾಗಿ ಗಫಾ ಹೊಡೆದರು. ಏನೆಂದುಬಿಟ್ಟರು ಗೊತ್ತೇ? 'ಸುಬ್ರಮಣ್ಯ ಸ್ವಾಮಿ ಅಂದರೆ ಯಾರ ಶಿಷ್ಯ ಅಂದುಕೊಂಡಿದ್ದೀರಿ? ನನ್ನ ಶಿಷ್ಯ ಕಣ್ರೀ ಅವನು. ನನ್ನ ಶಿಷ್ಯ. ನನ್ನ ಶಿಷ್ಯ ಅಂದ ಮೇಲೆ ಇಷ್ಟು ಮೇಧಾವಿಯಾಗಿರಲೇಬೇಕು ತಾನೇ!? ಅದರಲ್ಲಿ ಆಶ್ಚರ್ಯವೇನಿದೆ!?'

ಇದನ್ನು ಕೇಳಿ, ಮಹಾಲನೋಬಿಸರ ಕೊಕ್ಕೆ ಕಾಮಗಾರಿ ಬಗ್ಗೆ ಗೊತ್ತಿದ್ದವರು ಎಲ್ಲೆಲ್ಲಿಂದ ನಕ್ಕರೋ ದೇವರಿಗೇ ಗೊತ್ತು.

ಸುಬ್ರಮಣಿಯನ್ ಸ್ವಾಮಿ ಅಂದರೆ ಅಷ್ಟೇ ಮತ್ತೆ! deadly and lethal!

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.





5 comments:

sunaath said...

ಮಹೇಶ,
ಸುಬ್ರಮಣಿಯಮ್ ಸ್ವಾಮಿ ಅವರ ಬಗೆಗೆ ನೀವು ಬರೆದ ಲೇಖನ ಹಾಗು ಬರೆದ ಶೈಲಿ ನನಗೆ ತುಂಬಾ ಖುಶಿಯನ್ನು ಕೊಟ್ಟಿತು. ಮಹಾಲ್‍ನೋಬೀಸ್ ಶ್ರೇಷ್ಠ ಅರ್ಥಶಾಸ್ತ್ರಜ್ಞರು ಹಾಗು ನೆಹರೂಗೆ ಹತ್ತಿರವಾದವರು ಎಂದಷ್ಟೇ ನಾನು ತಿಳಿದಿದ್ದೆ. ನೀವು ಅವರ ಕಪಾಳಕ್ಕೆ ಹೊಡೆದವರಂತೆ ಬರೆದಿದ್ದೀರಿ. ಜೊತೆಗೇ, ಸ್ವಾಮಿಯವರ ಬಗೆಗೆ ಅಭಿಮಾನ ಪಡೆವಂತೆ ಬರೆದಿದ್ದೀರಿ. ಸುಬ್ರಮಣಿಯಮ್ ಸ್ವಾಮಿಯವರ ಶ್ರೇಷ್ಠ ಸಾಧನೆಯ ಬಗೆಗೂ ನನಗೆ ತಿಳಿದಿರಲಿಲ್ಲ. ಧನ್ಯವಾದಗಳು.

anni said...

ಸುಬ್ರಮಣಿಯಮ್ ಸ್ವಾಮಿ ಅವರು ಈಗಲೂ ತುಂಬಾ ಜನರ ಬೆವೆರಿಳಿಸುತಿದ್ದರೆ .ಧನ್ಯವಾದಗಳು ಉತ್ತಮ ಮಾಹಿತಿಗಾಗಿ

ramegowda said...

Good one.Your style of writing made it more interesting.

Shailesh Hegde said...


Excellent!

Top-notch US universities are known for competing for top-notch talent; just the TALENT and nothing else matters. And because of that, they have become marvellously successful.

Mahesh Hegade said...

ಸುನಾಥ್ ಸರ್, ನವೀನ್ ಕುಮಾರ್, ಶೈಲೇಶ ಹೆಗಡೆ, ರಾಮೇಗೌಡ - ಎಲ್ಲರಿಗೂ ಧನ್ಯವಾದಗಳು.