Tuesday, July 17, 2018

ಉಳಿದವರು ಕಂಡಂತೆ...

ವಿಶ್ವಾದ್ಯಂತ ಜನರಲ್ಲಿ ಖಿನ್ನತೆ (depression) ಜಾಸ್ತಿಯಾಗುತ್ತಿದೆಯಂತೆ. ಸಾಮಾಜಿಕ ಜಾಲತಾಣಗಳಾದಂತಹ Facebook, Instagram, Twitter, WhatsApp ಇತ್ಯಾದಿಗಳ ವ್ಯಾಪಕ ಬಳಕೆ (ದುರ್ಬಳಕೆ) ಕೂಡ ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಕೆಲ ಸಂಶೋಧಕರು. ಅವರು ಕೊಡುವ ಕಾರಣ ಏನೆಂದರೆ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜನರು ತಮ್ಮ ನಿಜ ಜೀವನವನ್ನು ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಅದೇ ಖಿನ್ನತೆಗೆ ಗುರಿಮಾಡುತ್ತದೆ. ಇಂದೊಂದು ತರಹದ self-inflicted injury. ತಮ್ಮ ಕಾಲ ಮೇಲೆ ತಾವೇ ಕೊಡಲಿಯಿಂದ ಹೊಡೆದುಕೊಂಡಂತೆ.

ಎಲ್ಲರ ಜೀವನದಲ್ಲೂ ಏಳುಬೀಳುಗಳು ಇದ್ದೇ ಇರುತ್ತವೆ. ಸಂಸಾರದಲ್ಲಿ ಇರುವ ಕಾರಣದಿಂದ ಕಿರಿಕಿರಿ, ಲಫಡಾ ಎಲ್ಲ ಇದ್ದೇ ಇರುತ್ತವೆ. ಆದರೆ ಇವನ್ನೆಲ್ಲ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುವದಿಲ್ಲ. ಏನಿದ್ದರೂ ತಮ್ಮ ಜೀವನ ಏಕ್ದಂ ಸೂಪರ್ ಇದೆ ಅನ್ನುವ ಹಾಗೆ ಪೋಸ್ಟ್, ಫೋಟೋ ಹಾಕಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. Always best face and best foot forward. ಒಳಗೆ ಹರಿದು ಜಾಳಿಜಾಳಿಯಾಗಿರುವ ಅಂಡರ್ವೇರ್ ಮತ್ತು ಬನಿಯನ್ ಹಾಕಿದ್ದರೂ ಮೇಲಿಂದ ದುಬಾರಿ ಅರ್ಮಾನಿ ಸೂಟ್ ಹಾಕಿಕೊಂಡ ಮಾದರಿ.

ಉದಾಹರಣೆಗೆ, ಪ್ರೊಫೈಲ್ ಫೋಟೋಗಳ ಮಿಥ್ಯೆ. ಫ್ಯಾಮಿಲಿ ಪ್ಯಾಕ್ ಹೊಟ್ಟೆ ಬಂದಿರುವ ಪುಣ್ಯಾತ್ಮ ಉಸಿರುಗಟ್ಟಿ ಸತ್ತೇಹೋಗುವಂತಾದರೂ ಹೊಟ್ಟೆ ಒಳಗೆಳೆದುಕೊಂಡು ಸಿಕ್ಸ್ ಪ್ಯಾಕ್ ಇದೆಯೇನೋ ಎಂಬಂತೆ ಬಿಂಬಿಸಿಕೊಳ್ಳುವ ವಿಫಲ ಯತ್ನ ಮಾಡುತ್ತಾನೆ. ಬೋಳು ತಲೆ ಬೋಡ ಮತ್ತೇನೋ ಮಾಡುತ್ತಾನೆ. ಕೆಲ ಹೆಂಗಸರು ಇಡೀ ಮುಖ ಮುಚ್ಚುವ ಗಾಗಲ್ ಹಾಕಿರುತ್ತಾರೆ. ಅದರ ಬದಲಿ ಬುರ್ಕಾ ಬೆಟರ್. ಫಿಗರ್ ಕೆಟ್ಟುಹೋದವರು ಮುಖದ ಫೋಟೋ ಹಾಕುತ್ತಾರೆ. ಮುಖ ಸುಟ್ಟುಹೋದವರು ಫಿಗರ್ ಫೋಟೋ ಹಾಕಿಕೊಳ್ಳುತ್ತಾರೆ. ಫೋಟೋ ಶಾಪ್ ಮಾಡುತ್ತಾರೆ. ಒಟ್ಟಿನಲ್ಲಿ ಪೂರ್ತಿ ಮೇಕ್ಅಪ್ ಮಾಡಿಯೇ ಫೇಸ್ಬುಕ್ ಮೇಲೆ ಬಿಟ್ಟಿರುತ್ತಾರೆ.

ಗಂಡ ಹೆಂಡತಿ ಸಂಬಂಧ ಎಕ್ಕುಟ್ಟಿಹೋಗಿರುತ್ತದೆ. ಆದರೂ 20 years of togetherness ಅಂತ ಹಾಕಿಕೊಂಡು ಸಂಭ್ರಮಿಸುತ್ತಾರೆ. ಎಂತಾ ಆದರ್ಶ ದಂಪತಿಗಳು ಎಂದು ನೋಡಿದವರು ಅಂದುಕೊಳ್ಳಬೇಕು. ನೋಡಿದವರು ಹಾಗೇ ಕಲ್ಪಿಸಿಕೊಂಡು ಕೊರಗುತ್ತಾರೆ ಕೂಡ. ಇವರೂ ಅಷ್ಟೇ. ಇನ್ನೊಬ್ಬರನ್ನು ನೋಡಿ ಒಂದೋ ಕೊರಗುತ್ತಾರೆ ಇಲ್ಲ ಕರುಬುತ್ತಾರೆ. ಕೊರಗುವದು (brooding) ಮತ್ತು ಕರುಬುವದು (jealousy) ಎರಡೂ ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿಕಾರಕ.

ಹೀಗೆ ನಮ್ಮ ನಿಜಜೀವನವನ್ನು (ನಾವೇ ಕಲ್ಪಿಸಿಕೊಂಡ) ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಕೆ ಮಾಡಿಕೊಂಡು ಖಿನ್ನತೆಗೊಳಗಾಗುತ್ತೇವೆ.

ನನಗೇ ಆದ ಒಂದು ವಿಚಿತ್ರ ಅನುಭವ ಕೇಳಿ.

ಆ ದಿನ ರವೀಂದ್ರನಾಥ ಟಾಗೋರರ ಬಗ್ಗೆ ಇಂಟರ್ನೆಟ್ ಮೇಲೆ ಏನೋ ಹುಡುಕುತ್ತಿದ್ದೆ. ಯಾಕೋ ಗೊತ್ತಿಲ್ಲ, ಅಂಜಲಿ ಎಂಬ ಹೆಸರು ನೆನಪಾಗಬೇಕೇ?

ಯಾವ ಅಂಜಲಿ?

ಯಾವ ಅಂಜಲಿ ಅಂತ ನನಗೂ ಗೊತ್ತಿಲ್ಲ. ಈಗ ಸುಮಾರು ಮೂರು ವರ್ಷದ ಹಿಂದೆ ಫೇಸ್ಬುಕ್ ಮೇಲೆ ಕಣ್ಣಿಗೆ ಬಿದ್ದ ಹೆಸರು ಅದು. ಅದು ಯಾವ ಆಧಾರದ ಮೇಲೆ ಫೇಸ್ಬುಕ್ ಆಕೆಯ ಪ್ರೊಫೈಲ್ ನನಗೆ ತೋರಿಸುತ್ತಿತ್ತೋ ಗೊತ್ತಿಲ್ಲ. ನಮಗಿಬ್ಬರಿಗೆ ಯಾವ ಸಾಮಾನ್ಯ ಸ್ನೇಹಿತರೂ ಇರಲಿಲ್ಲ. ಯಾವುದೇ ಸಾಮ್ಯತೆ ಇರಲಿಲ್ಲ. ಆದರೂ ಫೇಸ್ಬುಕ್ ಮಾತ್ರ ಆಗಾಗ ಅಂಜಲಿಯ ಪ್ರೊಫೈಲ್ ತೋರಿಸುತ್ತಿತ್ತು. ಬಲಭಾಗದ ಅಂಚಿನಲ್ಲಿ You may know this person ಅಂತ ಬಿಟ್ಟಿ ಸಲಹೆ ಕೊಡುತ್ತದಲ್ಲ? ಆ ಜಾಗದಲ್ಲಿ.

ಕಂಪ್ಯೂಟರ್ ಮುಂದೆ ಸದಾ ಸ್ಥಾಪಿತರಾಗಿರುವ ಜನರಿಗೆ ಇರುವ (ಕೆಟ್ಟ) ಚಾಳಿ ನಮಗೂ ಇತ್ತು. ಅದೇನೆಂದರೆ ಕಂಡಿದ್ದನ್ನೆಲ್ಲ ಗೂಗಲ್ ಒಳಗೆ ತುರುಕಿ ಏನು ಹೊರಬರುತ್ತದೆ ಎಂದು ನೋಡುವದು.

ಈ ಅಂಜಲಿಯ ಪೂರ್ಣ ಹೆಸರನ್ನೂ ಗೂಗಲ್ ಒಳಗೆ ಹಾಕಿ ನೋಡಿದೆ. ಬಂದವಲ್ಲ ಢಾಳಾಗಿ ಒಂದಿಷ್ಟು ಲಿಂಕುಗಳು. ನೋಡಿದರೆ ಆಕೆ ದೊಡ್ಡ ವೃತ್ತಿಪರೆ. ತನ್ನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ವೃತ್ತಿ ಮಾಡಿಕೊಂಡಿರುವಾಕೆ. ಒಳ್ಳೇದು. ಮತ್ತೊಂದಿಷ್ಟು ಲಿಂಕುಗಳು ಎಲ್ಲೋ ಶಾದಿ.ಕಾಂ, ಬರ್ಬಾದಿ.ಕಾಂ ಮಾದರಿಯ ವೈವಾಹಿಕ ವೆಬ್ ಸೈಟುಗಳಾಗಿದ್ದವು. ಅಲ್ಲಿ ಕ್ಲಿಕ್ ಮಾಡಿದರೆ ಮೊದಲು ನೋಂದಣಿ ಮಾಡಿಕೊಳ್ಳಿ ನಂತರ ಆಕೆಯ ವಿವರ ತೋರಿಸುತ್ತೇವೆ ಅಂದರು. ಅದು ಕಾಮನ್. ನಾವು ಅದೆಷ್ಟೇ ಬೇಕಾರ್ (ನಿರುದ್ಯೋಗಿ) ಇದ್ದರೂ ಅಷ್ಟೆಲ್ಲ ಬೇಕಾರ್ ಅಲ್ಲ ತೊಗೊಳ್ಳಿ. ಕೆಟ್ಟ ಕುತೂಹಲಕ್ಕೆ ಎಂದು ಶಾದಿ. ಕಾಂ ನಲ್ಲಿ ರಿಜಿಸ್ಟರ್ ಮಾಡಲೇ? ನಮಗೇನು ಹುಚ್ಚೇ? ಅಷ್ಟೆಲ್ಲಾ ಹಾಪರಲ್ಲ ಬಿಡಿ ನಾವು.

'ಓಹೋ! ಈ ಅಂಜಲಿ ಮೇಡಂ ಇನ್ನೂ ವಿವಾಹವಾಗಿರದ ಮಹಿಳೆ. ಆಗಲೇ expiration date ಸಮೀಪಿಸುತ್ತಿದೆ. ತುರ್ತಾಗಿ ವಿವಾಹವಾಗಬೇಕು ಎಂದು ಹಲವಾರು ವೈವಾಹಿಕ ಜಾಲತಾಣಗಳಲ್ಲಿ ಪ್ರೊಫೈಲ್ ಹಾಕಿದ್ದಾರೆ. ಒಳ್ಳೆದಾಗಲಿ,' ಎಂದು ತಿಳಿದು, ಶುಭ ಹಾರೈಸಿ ಅಷ್ಟಕ್ಕೇ ಬಿಟ್ಟೆ. ಆದರೆ ಫೇಸ್ಬುಕ್ ಮೇಲೆ ಕಂಡಾಗೊಮ್ಮೆ ಪ್ರೊಫೈಲ್ ನೋಡುತ್ತಿದ್ದೆ. ಆಕೆಯೇನೂ ಜಾಸ್ತಿ update ಮಾಡುತ್ತಿರಲಿಲ್ಲ. ಅಥವಾ ನಾನು ಆಕೆಯ  ಫ್ರೆಂಡ್ ಇರದ ಕಾರಣ ನನಗೆ ಆವು ಕಾಣಿಸುತ್ತಿರಲಿಲ್ಲವೋ ಏನೋ. ಯಾರಿಗೆ ಗೊತ್ತು?

೨೦೧೬ ರ ಮಧ್ಯಭಾಗದಲ್ಲಿ ನಾನು ಫೇಸ್ಬುಕ್ಕಿಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಸೋಶಿಯಲ್ ಮೀಡಿಯಾ ಬೋರಾಗಿತ್ತು. ಮೊದಲಿನ ಆಸಕ್ತಿ ಇರಲಿಲ್ಲ. ಎಷ್ಟೋ ದಿನ ಲಾಗಿನ್ ಮಾಡಲಿಲ್ಲ. ಫೇಸ್ಬುಕ್ ಮೇಲೆ ಸದಾ ಸಂಪರ್ಕದಲ್ಲಿರುತ್ತಿದ್ದ ಮಿತ್ರರು ಅವರ ಸಂದೇಶಗಳಿಗೆ ನನ್ನಿಂದ ಉತ್ತರ ಬಾರದಿದ್ದಾಗ ಕಳವಳಪಟ್ಟುಕೊಂಡು ಫೋನ್ ಮಾಡಿದರು. ಇಮೇಲ್ ಮಾಡಿದರು. ಕಾಳಜಿಯಿಂದ ವಿಚಾರಿಸಿಕೊಂಡರು. ಫೇಸ್ಬುಕ್ ಪ್ರೊಫೈಲ್ ಇಟ್ಟುಕೊಂಡು ಆಗಾಗ ನೋಡಲಿಲ್ಲ ಅಂದರೆ ಉಳಿದವರಿಗೆ ವಿನಾಕಾರಣ ಆತಂಕ ಮತ್ತು ತೊಂದರೆ ಎಂದುಕೊಂಡು ಪ್ರೊಫೈಲ್ ನಿಷ್ಕ್ರಿಯಗೊಳಿಸಿದೆ. ಕೆಲವು ತಿಂಗಳ ನಂತರ ಯಾವುದೋ ಕಾರಣಕ್ಕೆ ತಾತ್ಕಾಲಿಕವಾಗಿ ಮತ್ತೆ activate ಮಾಡಿದೆ. ಕೊಂಚ ಅತ್ತಿತ್ತ ನೋಡುವಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಈ ಅಂಜಲಿಯೇ ಕಾಣಬೇಕೇ!? ಆಕೆಯ ಪ್ರೊಫೈಲ್ ಕ್ಲಿಕ್ ಮಾಡಿದರೆ ದೊಡ್ಡ ಮಟ್ಟದ ಅಪ್ಡೇಟ್ ಕಾಣುತ್ತಿತ್ತು.

ಹೊಸ ಪ್ರೊಫೈಲ್ ಫೋಟೋ ರಾರಾಜಿಸುತ್ತಿತ್ತು. ಪಕ್ಕದಲ್ಲಿ ಜೊತೆಗೊಬ್ಬ ಸರ್ದಾರ್ಜೀ, ಸಿಖ್ಖರ ಪೇಟ ಧರಿಸಿ ಸ್ಮೈಲ್ ಕೊಟ್ಟು ನಿಂತಿದ್ದ. ಇಬ್ಬರ ಬೆರಳುಗಳಲ್ಲೂ ಉಂಗುರ ಫಳಫಳ. engagement ring, wedding ring ಬಂದಾಗಿತ್ತು. ಶಿವಾಯ ನಮಃ! ಮದುವೆಯಾಗಿತ್ತು. ಪಕ್ಕದಲ್ಲಿದ್ದ ಸರ್ದಾರ್ಜಿ ಪ್ರೊಫೈಲ್ ಟ್ಯಾಗ್ ಆಗಿತ್ತು. ಕ್ಲಿಕ್ ಮಾಡಿದರೆ ಯಾರೋ ಹರ್ಮಿನ್ದರ್ ಸಿಂಗ್ ಅನ್ನುವವನ ಪ್ರೊಫೈಲ್ ಗೆ ಹೋಯಿತು. ಅಲ್ಲಿ ನೋಡಿದರೆ ಕ್ಲೀನ್ ಕಿಟ್ಟಪ್ಪ ಸರ್ದಾರ್ಜೀ. ತಲೆ ಅದಾಗೇ ಬೋಳಾಗಿಬಿಟ್ಟಿದೆ. ಗಡ್ಡ ಇವನು ಬೋಳಿಸಿದ್ದಾನೆ. ಮದುವೆಗಾಗಿ ಫುಲ್ ರೂಪಾಂತರ. ಬೋಳು ತಲೆ ಮೇಲೆ ಪಗಡಿ ಕಟ್ಟಿದ್ದ. ಗಡ್ಡ ಬಿಟ್ಟಿದ್ದನೋ ಅಥವಾ ಅದೂ ನಕಲಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಗಾಗಿ ಸಿಖ್ ಆಗಿದ್ದ. ಈ ಅಂಜಲಿಯೇನೂ ಜಾಸ್ತಿ ಬದಲಾಗಿರಲಿಲ್ಲ. ಕನ್ನಡಕ ಹೋಗಿತ್ತು. ಮೇಕ್ಅಪ್ ಭರ್ಜರಿಯಾಗಿತ್ತು. ಒಳ್ಳೆ ಜೋಡಿ. ಒಳ್ಳೆದಾಗಲಿ ಎಂದು ಹಾರೈಸಿ ಬಂದೆ.

ಮುಂದೆ ಕೆಲವೇ ದಿವಸಗಳ ನಂತರ ಫೇಸ್ಬುಕ್ ಪ್ರೊಫೈಲ್ ಫುಲ್ ಡಿಲೀಟ್ ಮಾಡಿಬಿಟ್ಟೆ. ಶಾಶ್ವತವಾಗಿ ಡಿಲೀಟ್.  ಅಲ್ಲಿಗೆ ಐದು ವರ್ಷಗಳ ಫೇಸ್ಬುಕ್ ಸಾಂಗತ್ಯಕ್ಕೆ ಅಂತಿಮ ಮಂಗಳ ಹಾಡಿದೆ. ಬೋರಾಗಿತ್ತು. ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಬಹಳ ಮೊದಲೇ ತ್ಯಜಿಸಬೇಕು ಎಂದಿತ್ತು. ಅದೇನೋ ಅಂತಾರಲ್ಲ...ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಒಟ್ಟಿನಲ್ಲಿ ಫೇಸ್ಬುಕ್ ಎನ್ನುವ ಸಂಸ್ಕಾರ ಮುಗಿದಾಕ್ಷಣ ಆ ವ್ಯಸನ ತಂತಾನೇ ಬಿಟ್ಟುಹೋಯಿತು. ಎಲ್ಲ ವ್ಯಸನಗಳಿಗೂ ಜನ್ಮಾದಿಜನ್ಮಗಳಿಂದ ಸಂಚಿತವಾಗಿರುವ ಕರ್ಮಸಂಸ್ಕಾರಗಳೇ ಕಾರಣ. ಅವು ಖರ್ಚಾದಂತೆ ವ್ಯಸನಗಳೂ ಕಳಚಿಕೊಳ್ಳುತ್ತವೆ.

Fast forward. ಅದಾದ ಎರಡು ವರ್ಷಗಳ ನಂತರ. ಮೊನ್ನೆ ರವೀಂದ್ರನಾಥ ಟಾಗೋರರ ಬಗ್ಗೆ ಏನೋ ಹುಡುಕುತ್ತಿದ್ದಾಗ ಮತ್ತೆ ಅಂಜಲಿ ನೆನಪಾದಳು. ನೋಡೋಣ ಅಂದರೆ ಈಗ ಫೇಸ್ಬುಕ್ ಅಕೌಂಟ್ ಇಲ್ಲ. ಗೂಗಲ್ ಸರ್ಚ್ ಕೊಟ್ಟರೆ ಮತ್ತೆ ಅವೇ ಹಳೇ ಮಾಹಿತಿ.

ಆಗ ತುಂಬಾ ವಿಚಿತ್ರವೆನ್ನಿಸುವಂತೆ ಒಂದು ಐಡಿಯಾ ಬಂತು. ಆಕೆ ಮತ್ತು ಆಕೆಯ ಪತಿ ಇಬ್ಬರ ಹೆಸರನ್ನೂ ಕೂಡಿ ಗೂಗಲ್ ಒಳಗೆ ಸರ್ಚ್ ಕೊಟ್ಟೆ ನೋಡಿ. ಆಶ್ಚರ್ಯ! ಪರಮಾಶ್ಚರ್ಯ! ಒಂದು ಲಿಂಕ್ ಇಲ್ಲಿನ ಕೋರ್ಟ್ ಒಂದರ ಜಾಲತಾಣಕ್ಕೆ ಕರೆದೊಯ್ಯಿತು. ಅಲ್ಲಿ ನೋಡಿದರೆ ಅದೊಂದು ಡೈವೋರ್ಸ್ ಕೇಸ್. ಕುತೂಹಲದಿಂದ ನೋಡಿದರೆ ಇವರದ್ದೇ ಕೇಸ್. ಡೌಟೇ ಇಲ್ಲ. ಮದುವೆಯಾದ ಎರಡೇ ತಿಂಗಳಿಗೆ ಡೈವೋರ್ಸ್. ಶಿವಾಯ ನಮಃ. ಡೈವೋರ್ಸ್ ಕೊಟ್ಟವ ಗಂಡ. ಮತ್ತೆ ಹೆಚ್ಚಿನ ಗಲಾಟೆಯಿಲ್ಲದ ಕಾರಣ ಕೆಲವೇ ತಿಂಗಳುಗಳಲ್ಲಿ ಡೈವೋರ್ಸ್ ಮಂಜೂರ್ ಕೂಡ ಆಗಿಬಿಟ್ಟಿದೆ.

ಮೊನ್ನೆ ಎರಡು ವರ್ಷಗಳ ಬಳಿಕ ಅಂಜಲಿ ನೆನಪಾದಾಗ ನನ್ನ ಕಲ್ಪನೆ ಹೇಗಿತ್ತು? ಎರಡು ವರ್ಷದ ಹಿಂದಿನ ಕಲ್ಪನೆಯೇ ಇತ್ತು. ಮಕ್ಕಳು ಮರಿ ಕೂಡ ಆಗಿರಬಹುದೇ ಎನ್ನುವ ಒಂದಿಷ್ಟು ಹೆಚ್ಚಿನ ಕಲ್ಪನೆ, ಕುತೂಹಲ. ಎಲ್ಲ ಧನಾತ್ಮಕ ಕಲ್ಪನೆ. ನೀವೇ ನೋಡಿ. ಬೇರೋಬ್ಬರ ಕಲ್ಪಿತ ಜೀವನದ ಬಗ್ಗೆ ಧನಾತ್ಮಕ ಕಲ್ಪನೆಗಳೇ ಇರುತ್ತವೆ. ನಮ್ಮ ಜೀವನದ ಬಗ್ಗೆ ಮಾತ್ರ ಋಣಾತ್ಮಕ ಕಲ್ಪನೆಗಳು, ಕೊರತೆಗಳು ಗೋಚರಿಸುತ್ತವೆ. ಆದರೆ ವಾಸ್ತವಿಕತೆ ಬೇರೆಯೇ ಇತ್ತು. ಈಗ ಮೊದಲಿನ ಹಾಗೆ ನಾನು ಗೂಗಲ್ ಮೇಲೆ ಅಷ್ಟೆಲ್ಲ ಹುಡುಕಲು ಹೋಗುವದಿಲ್ಲ. ಆದಿನ  ಅದೇನು ಪಾಠ ಕಲಿಸಬೇಕೆಂದುಕೊಂಡಿತ್ತೋ ವಿಧಿ. ವಿಚಿತ್ರ ರೀತಿಯಲ್ಲಿ ಗೂಗಲ್ ಸರ್ಚ್ ಮಾಡಿಸಿತು. ಡೈವೋರ್ಸ್ ನ್ಯಾಯಾಲಯದ ಜಾಲತಾಣಕ್ಕೆ ಕರೆದೊಯ್ಯಿತು. ವಿಷಯ ತಿಳಿಯಿತು. ಕಲ್ಪನೆ ನುಚ್ಚುನೂರಾಗಿ ವಾಸ್ತವಿಕತೆ ತಿಳಿಯಿತು.

ಅಂಜಲಿಯ ಅದೆಷ್ಟು ಜನ ಪರಿಚಿತರು ಆಕೆಯ ಫೇಸ್ಬುಕ್ ಪ್ರೊಫೈಲ್ ನೋಡಿ ಏನೇನೋ ಕಲ್ಪಿಸಿಕೊಂಡು ಅದೆಷ್ಟು ಕರುಬಿ ಅದೆಷ್ಟು ಖಿನ್ನತೆಗೆ ಒಳಗಾಗಿದ್ದರೋ.

www.unicourt.com - ಇಲ್ಲಿ ಸರ್ಚ್ ಮಾಡಿಬಿಟ್ಟರೆ ಅಮೇರಿಕಾದಲ್ಲಿ ಯಾರ ಮೇಲೆ ಯಾವ ಕೇಸಿದ್ದರೂ ಮಾಹಿತಿ ಸಿಕ್ಕಿಬಿಡುತ್ತದೆ. ನಂತರ ಆ ಆ ಕೋರ್ಟುಗಳ ಜಾಲತಾಣಗಳಿಗೆ ಹೋಗಿಬಿಟ್ಟರೆ ಎಲ್ಲರ ಜನ್ಮಕುಂಡಲಿ ಬೆರಳತುದಿಯಲ್ಲಿ. ಹಾಗೆಂದ ಮಾತ್ರಕ್ಕೆ ಎಲ್ಲರ ವೈಯಕ್ತಿಕ ಜೀವನದ ರಾಮರಾಡಿಯೆಲ್ಲವನ್ನೂ ಹಾಕಿಬಿಟ್ಟಿರುತ್ತಾರೆ ಎಂದಲ್ಲ. ಸಾರ್ವಜನಿಕವಾಗಿ ಏನೆಲ್ಲಾ ಮಾಹಿತಿ ಹಾಕಬಹುದೋ ಅದನ್ನೆಲ್ಲ ಹಾಕಿರುತ್ತಾರೆ. ಕೆಲವೊಂದು ಹೆಚ್ಚಿನ ಮಾಹಿತಿಯನ್ನು ಶುಲ್ಕ ಕೊಟ್ಟು ಪಡೆಯಬಹುದು. ಆದರೆ ಗಂಡಹೆಂಡಿರ ಮಧ್ಯದ ಬೆಡ್ರೂಮ್ ಬೊಗಳೆ, ರಗಳೆ, ಕಿಚೆನ್ ಕಹಳೆ, ನಗ್ನ ನಗಾರಿ ಇತ್ಯಾದಿಗಳ ಮಾಹಿತಿ ಸಿಗುವದಿಲ್ಲ. ಅವೆಲ್ಲ ಕೋರ್ಟಿಗೆ ಬೇಕಾಗೂ ಇಲ್ಲ. ನಿಮ್ಮ ಮಾಹಿತಿಗೆ ಹೇಳಿದೆ ಅಷ್ಟೇ! :)

ನನ್ನ ಹೆಸರನ್ನೂ ಸರ್ಚ್ ಕೊಟ್ಟು ನೋಡಿದೆ. ಏನೂ ಮಾಹಿತಿ ಬರಲಿಲ್ಲ. ನಂದೂ ಒಂದು ಕೇಸ್ ಇತ್ತಲ್ಲ. ಹಳೆಯ ಕೇಸು. ಅಯ್ಯೋ! ಆ ತರಹದ ಕೇಸ್ ಅಲ್ಲ ಮಾರಾಯರೇ. ಚಿಂತೆ ಬೇಡ. ಈಗ ಇಪ್ಪತ್ತು ವರ್ಷಗಳ ಹಿಂದೆ ವಿಮಾನದ ಟಿಕೆಟ್ ವಿಷಯದಲ್ಲಿ ಗಾಂಚಾಲಿ ಮಾಡಿದ್ದ ಟ್ರಾವೆಲ್ ಏಜೆಂಟ್ ಒಬ್ಬಾಕೆಯನ್ನು small claims ಕೋರ್ಟಿಗೆ ಎಳೆದು, ನಾನೇ ವಕೀಲಿಕೆಯನ್ನೂ ಮಾಡಿ, ಪರಿಹಾರ ವಸೂಲಿ ಮಾಡಿದ್ದೆ. ಮತ್ತೆಲ್ಲಾದರೂ ಆ ಕೇಸ್ ಕೂಡ ಇಂಟರ್ನೆಟ್ ಮೇಲೆ ಬಂದಿದೆಯೋ ಎನ್ನುವ ಕುತೂಹಲ ಇತ್ತು. ಬಂದಿಲ್ಲ. ಅಂತದ್ದೆಲ್ಲಾ ಚುಲ್ಟು ಕೇಸ್ ಮಾಹಿತಿ ಅಲ್ಲಿ ಇರುವದಿಲ್ಲ ಎಂದು ಕಾಣಿಸುತ್ತದೆ. ಆ ಕೇಸು, ನನ್ನ ಕಾನೂನು ಹೋರಾಟ, ಇತ್ಯಾದಿಗಳ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ. ಬರೋಬ್ಬರಿ ಕಾನೂನಿನ ಗೂಟ ಜಡಿದಿದ್ದೆ ಆ ಹರಾಮಿ ಟ್ರಾವೆಲ್ ಏಜೆಂಟ್ ಗೆ!

ಅವೆಲ್ಲ ಇರಲಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಅವುಗಳಿಂದ ಆಗುತ್ತಿರುವ ಹಾನಿಗಳ ಬಗ್ಗೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದವರು ಪ್ರೊಫೆಸರ್  ಕ್ಯಾಲ್ ನ್ಯೂಪೋರ್ಟ್. ಅದ್ಭುತ ಚಿಂತಕ. Original thinker.

ಈ ಸಾಮಾಜಿಕ ಜಾಲತಾಣಗಳ ವಿವೇಚನಾರಹಿತ ದುರ್ಬಳಕೆ ನಿಲ್ಲದೇ ಹೋದರೆ ಒಂದು ಮಾತ್ರ ಗ್ಯಾರಂಟಿ - we will be a society of smart phones but dumb people. Guided missiles in the hands of misguided people.

ಪ್ರೊಫೆಸರ್ ನ್ಯೂಪೋರ್ಟ್ ಅವರ ಒಂದು ಅದ್ಭುತ ಭಾಷಣ - Why you should quit social media

ಸಾಮಾಜಿಕ ಜಾಲತಾಣಗಳಿಂದ ಉಪಯೋಗಗಳೂ ಇವೆ. ಆದರೆ ಹಾನಿಗಳೇ ಜಾಸ್ತಿ. ಹಾಗಾಗಿ ಸೋಶಿಯಲ್ ಮೀಡಿಯಾ ಉಪಯೋಗಿಸಲೇಬೇಕು ಅಂತಾದರೆ ವಿವೇಕ ಇರಲಿ. ಪ್ರಜ್ಞೆ ಕಳೆದುಹೋಗದಿರಲಿ.

ಹಿಂದೊಮ್ಮೆ ಬರೆದಿದ್ದ ಲೇಖನ. ಧಾರವಾಡ ಮಂದಿ ಭಾಳ ಮೆಚ್ಚಿದ್ದರು! :)

ಆನೆಯ ಮೇಲೆ ಅಂಬಾರಿ ಕಂಡೆ. ಅಂಬಾರಿ ಒಳಗೆ ಕುಂಬಾರಿ ಕಂಡೆ.....ಫೇಸ್ಬುಕ್ ಪ್ರೊಫೈಲ್ ಫೋಟೋ ಪುರಾಣ

Monday, July 16, 2018

ನಮ್ಮ ಜೀವನವೇ ಬೆಸ್ಟ್... ನಮಗೆ ನಮ್ಮ ಜೀವನವೇ ಬೆಸ್ಟ್

ಎಲ್ಲೋ ಓದಿದ ನೆನಪು. ಅದರ ತಿರುಳೇನೆಂದರೆ -  ನಾವು ನಮ್ಮ ನಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ತಲೆಬಿಸಿ ಮಾಡಿಕೊಂಡರೂ ಇನ್ನೊಬ್ಬರ ಸಮಸ್ಯೆಯ ಆಳ ತಿಳಿದರೆ, 'ಅವರ ಸಮಸ್ಯೆಗೆ ಹೋಲಿಸಿಕೊಂಡರೆ ನಮ್ಮದೇ ಎಷ್ಟೋ ಮೇಲು,' ಅಂದುಕೊಳ್ಳುತ್ತೇವೆ.

ನಾವೆಲ್ಲಾ ನಮ್ಮ ನಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಕಾಗದದ ಚೀಟಿಗಳ ಮೇಲೆ ಬರೆದು ಒಂದು ಪಾತ್ರೆಯಲ್ಲಿ ಹಾಕಿದೆವು ಎಂದಿಟ್ಟುಕೊಳ್ಳಿ. ನಂತರ random ಆಗಿ ಕೈಗೆ ಬಂದ ಚೀಟಿ ಎತ್ತಿಕೊಳ್ಳಿ. ಅದರಲ್ಲಿ ಬರೆದಿರುವ ಸಮಸ್ಯೆ ಓದಿ. ನಂತರ ನಿರ್ಧರಿಸಿ - ಸದ್ಯಕ್ಕೆ ನಿಮಗಿರುವ ಸಮಸ್ಯೆ 'ಒಳ್ಳೆಯದೋ' ಅಥವಾ ಬೇರೊಬ್ಬರ ಸಮಸ್ಯೆ ಒಳ್ಳೆಯದೋ? ಶತಪ್ರತಿಶತ ಖಾತ್ರಿ, ನೀವು ಕೈಗೆ ಬಂದ ಚೀಟಿಯನ್ನು ಮರಳಿಸುತ್ತೀರಿ. ನಿಮ್ಮದೇ ಸಮಸ್ಯೆ ಬರೆದ ಚೀಟಿ ಸಿಗುವವರೆಗೂ ಒಂದಾದಮೇಲೊಂದು ಚೀಟಿಯನ್ನು ತೆಗೆದು, ಓದಿ, ಮತ್ತೆ ವಾಪಸ್ ಮಾಡುತ್ತಲೇ ಇರುತ್ತೀರಿ. ಬೇರೋಬ್ಬರ ಸಮಸ್ಯೆಗಳನ್ನು ತಿಳಿದಾಗ ನಮ್ಮ ಸಮಸ್ಯೆಗಳೇ ಎಷ್ಟೋ ಮೇಲು ಎಂದೆನಿಸಿಬಿಡುತ್ತವೆ.

ಬೇರೆಯವರ ಬದುಕನ್ನು ನೋಡಿ ಒಮ್ಮೊಮ್ಮೆ ಅಂದುಕೊಂಡಿರುತ್ತೇವೆ, 'ಆಹಾ! ಎಷ್ಟು ಅದೃಷ್ಟಶಾಲಿಗಳು!' ಎಂದು. ಅವರ ಬಾಹ್ಯ ಜೀವನವೊಂದೇ ನಮಗೆ ಕಂಡಿರುತ್ತದೆ. ಅವರ ಜೀವನ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂದು ಅನ್ನಿಸುತ್ತದೆ.

ಆದರೆ...

ಕೆಳಗಿನ ಕಥೆ ಓದಿ.

ಸತ್ಯ ನಾಡೆಲ್ಲಾ. ಹೆಚ್ಚಾಗಿ ಎಲ್ಲರೂ ಇವರ ಹೆಸರು ಕೇಳಿರುತ್ತಾರೆ. ಕೊಂಚ ತಿಳಿದಿರುತ್ತಾರೆ ಕೂಡ. ಜಗತ್ತಿನ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ (CEO). ವಯಸ್ಸು ಐವತ್ತು ವರ್ಷಗಳು ಮಾತ್ರ. ವಾರ್ಷಿಕ ವೇತನ ಇಪ್ಪತ್ತು ಮಿಲಿಯನ್ ಡಾಲರ್. ಅಂದರೆ ಸುಮಾರು ೧೪೦ ಕೋಟಿ ರೂಪಾಯಿಗಳು. ಒಟ್ಟು ಆಸ್ತಿ ಸಾವಿರಾರು ಕೋಟಿ. ತುಂಬಾ ಯಶಸ್ವಿಯಾಗಿರುವ  ಮುಖ್ಯ ನಿರ್ವಾಹಣಾಧಿಕಾರಿ ಎಂದೆನಿಸಿಕೊಂಡಿದ್ದಾರೆ. ಮಣಿಪಾಲ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಯಗಳಲ್ಲಿ ಓದಿ, ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಂತಹಂತವಾಗಿ ಮೇಲೆ ಬಂದು, ವಿಪರೀತ ಸ್ಪರ್ಧೆಯ ನಡುವೆಯೂ CEO ಎಂದು ಆಯ್ಕೆಯಾದ ಮಹಾನ್ ಪ್ರತಿಭಾವಂತ. ಭಾರತೀಯ ಸಂಜಾತರಾದ್ದರಿಂದ, ಎಲ್ಲ ರೀತಿಯ ಪಕ್ಷಪಾತಗಳ ನಡುವೆಯೂ, ಈ ಮಟ್ಟದ ಯಶಸ್ಸನ್ನು ಗಳಿಸಲು ಪಟ್ಟಿರಬಹುದಾದ ಪರಿಶ್ರಮ ಅಗಾಧ.

ಇವರದು ಸುಖೀ ಸಂಸಾರ. ಕುಟುಂಬಸ್ನೇಹಿತರ ಪುತ್ರಿ, ಬಾಲ್ಯಸ್ನೇಹಿತೆ ಅನುಪಮಾ ಇವರ ಪತ್ನಿ. ಮೂರು ಮಕ್ಕಳು. ಅಮೇರಿಕಾದ ಸಿಯಾಟಲ್ ನಗರದಲ್ಲಿ ಅರಮನೆಯಂತಹ ಬಂಗಲೆಯಲ್ಲಿ ವಾಸವಾಗಿದ್ದಾರೆ.

ಇಷ್ಟೇ ಮಾಹಿತಿ ತಿಳಿದರೆ 'ಲೈಫ್ ಅಂದರೆ ಹೀಗಿರಬೇಕು. ಅವರ ಲೈಫ್ ನಮಗಿರಬಾರದಿತ್ತೇ?' ಎಂದು ಜನ ಅಂದುಕೊಳ್ಳಬಹುದು.

'ಸತ್ಯ ನಾಡೆಲ್ಲಾ ತರಹದ ಜನರಿಗೆ ಎಂತಹ ಸಮಸ್ಯೆಗಳು ಮಾರಾಯ್ರೇ? ಸಮಸ್ಯೆಗಳೆಲ್ಲ ನಮ್ಮಂತವರಿಗೇ ನೋಡಿ. ಎಲ್ಲಾ ಪಡೆದುಕೊಂಡು ಬಂದಿರಬೇಕು,' ಎಂದು ನಿಡುಸುಯ್ಯಬಹುದು.

ಈಗ ಕೇಳಿ...

ಸತ್ಯರ ಹಿರಿಯ ಮಗನಿಗೆ ಈಗ ೨೧ ವರ್ಷ. ಅವನು ವಿಕಲಾಂಗ. ಗಾಲಿಚಕ್ರದ ಖುರ್ಚಿಯಲ್ಲೇ ಅವನ ಜೀವನ. ಅವನು ಎಲ್ಲ ಅಂಗಾಂಗಳ ಸ್ವಾಧೀನ ಕಳೆದುಕೊಂಡಿರುವ Quadriplegic.

ಸತ್ಯರ ಪುತ್ರಿಯೊಬ್ಬಳಿಗೆ ಏನೋ ಬೌದ್ಧಿಕ ಸಮಸ್ಯೆ. Learning disability.

ಈಗ ವಿಚಾರ ಮಾಡಿ. ವರ್ಷಕ್ಕೆ ೧೪೦ ಕೋಟಿ ಸಂಬಳದ ದೊಡ್ಡ ಹುದ್ದೆ, ಸಾವಿರಾರು ಕೋಟಿಯ ಅಸ್ತಿ ಎಲ್ಲ ಸಿಗುತ್ತದೆ. ಆದರೆ ಪ್ಯಾಕೇಜ್ ಡೀಲ್ ಎಂಬಂತೆ ಇವೆಲ್ಲಾ ಸಮಸ್ಯೆಗಳೂ ಜೊತೆಗೆ ಬರುತ್ತವೆ ಎಂತಾದರೆ ನಿಮ್ಮ ಸದ್ಯದ ಜೀವನವನ್ನು ಬದಲಾಯಿಸಿಕೊಳ್ಳುವಿರೇ???

ಸತ್ಯರ ಜೀವನದ ಬಗ್ಗೆ ನನಗೂ ಜಾಸ್ತಿ ಗೊತ್ತಿರಲಿಲ್ಲ. ಸತ್ಯ ನಾಡೆಲ್ಲಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದು ಕಮ್ಮಿ. ಅವರು ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುತ್ತಾರೆ. ಉಳಿದವರೂ ಗೌರವಿಸಬೇಕು. ಆದರೆ ತಮ್ಮ ಜೀವನದ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಎದುರಿಸಿ ಗೆದ್ದ ಹಾದಿಯ ಬಗ್ಗೆ ಮಾಹಿತಿ ಹಂಚಿಕೊಂಡರೆ ಬೇರೆಯವರಿಗೂ ಕೂಡ ಜೀವನವನ್ನು ಎದುರಿಸಲು ಬೇಕಾಗುವ ಧೈರ್ಯ, ಸ್ಥೈರ್ಯ ಸಿಗಬಹುದು ಎನ್ನುವ ಸದುದ್ದೇಶದಿಂದ ಸತ್ಯ ಮತ್ತು ಅವರ ಪತ್ನಿ ಅನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡಿದ್ದಾರೆ. ಅದಕ್ಕೊಂದು ಸಲಾಂ! ಪೂರ್ತಿ ಲೇಖನ ಕೆಳಗಿನ ಲಿಂಕಿನಲ್ಲಿದೆ. ತುಂಬಾ ಸ್ಪೂರ್ತಿದಾಯಕವಾಗಿದೆ. ಜೀವನ್ಮುಖಿಯಾಗಿದೆ. ಓದಿ.

Satya and Anu Nadella Open Up About Their Family Life 

For the first time ever, the Microsoft CEO and his wife share honest truths about raising three kids with unexpected challenges and lots of joy.

ಸತ್ಯರಂತಹ ಜನ ಯಾವುದನ್ನೂ ಸಮಸ್ಯೆ ಎಂದು ಭಾವಿಸುವದೇ ಇಲ್ಲ. ಎಲ್ಲವನ್ನೂ ಅವಕಾಶ ಅಥವಾ ಸವಾಲು ಎಂದು ಸ್ವೀಕರಿಸಿ ಯಶಸ್ವಿಯಾಗುತ್ತಾರೆ. ಅದೇ ಅವರ ಖಾಸಿಯತ್ತು.

ಸತ್ಯ ನಾಡೆಲ್ಲಾ  'Hit Refresh' ಎನ್ನುವ ತಮ್ಮ ಜೀವನಾನುಭವಗಳ ಪುಸ್ತಕವನ್ನು ಬರೆದುಕೊಂಡಿದ್ದಾರೆ. ಇನ್ನೂ ಓದಿಲ್ಲ. ಮುಂದೆ ಓದಬೇಕು.

ಒಟ್ಟಿನಲ್ಲಿ ನಮ್ಮ ನಮ್ಮ ಲೈಫ್ ನಮಗೇ ಹೇಳಿಮಾಡಿಸಿದ್ದು ನೋಡಿ.

Nobody's burden is even one gram more than they can carry but not one gram less either.

Tuesday, July 03, 2018

ಕಾಮಧೇನು

ಭಕ್ತನೊಬ್ಬ ದೇವರಿಗೆ ಅದನ್ನು ಕರುಣಿಸು, ಇದನ್ನು ಕರುಣಿಸು ಎಂದು ತುಂಬಾ ಕಾಡುತ್ತಿದ್ದ. ಭಕ್ತನ ಕಿರಿಕಿರಿ ತಾಳಲಾಗದ ಭಗವಂತ ಸಕಲ ಇಷ್ಟಾರ್ಥಗಳನ್ನೂ ಪೂರೈಸಬಲ್ಲ ಪೂಜ್ಯ ಕಾಮಧೇನುವನ್ನೇ ಭಕ್ತನಿಗೆ ಕರುಣಿಸಿಬಿಟ್ಟ. ಕಾಮಧೇನು ದೊರಕಿದ ಮೇಲಾದರೂ ಭಕ್ತನ ಕಿರಿಕಿರಿ ತಪ್ಪಬಹುದು ಎಂದು ದೇವರ ನಿರೀಕ್ಷೆ.

ಭಕ್ತನಿಗೆ ಆ ಪೂಜ್ಯ ಗೋವು ಕಾಮಧೇನು ಎಂದಾದರೂ ತಿಳಿಯಿತೋ ಇಲ್ಲವೋ ಗೊತ್ತಿಲ್ಲ. ದೇವರು ಕೊಟ್ಟ 'ದನ' ಎಂದು ಭೂಮಿಗೆ ಕರೆತಂದ. ಮನೆಗೆ ಬಂದರೆ ಒಂದು ಕೊರತೆ ತುರ್ತಾಗಿ ಕಾಡುತ್ತಿತ್ತು. ಅದೇನೆಂದರೆ ಗದ್ದೆ ಊಳಲು (ಸಾಗುವಳಿ ಮಾಡಲು) ಎತ್ತು ಇರಲಿಲ್ಲ. ಅರ್ಜೆಂಟಾಗಿ ಗದ್ದೆ ಊಳಿ, ಬೀಜ ಬಿತ್ತಬೇಕಿತ್ತು.

ಎತ್ತಿಗಾಗಿ ಏನು ಮಾಡಲಿ? ಎಂದು ಯೋಚಿಸಿದ ಭಕ್ತ. ಎದುರಲ್ಲೇ ಕಂಡಿತು ಭವ್ಯ ಕಾಮಧೇನು. ಮತ್ತೇನೂ ವಿಚಾರ ಮಾಡಲಿಲ್ಲ. ಕಾಮಧೇನುವನ್ನು ಎಳೆದೊಯ್ದವನೇ ನೇಗಿಲಿಗೆ ಕಟ್ಟಿಬಿಟ್ಟ. ತಬ್ಬಿಬ್ಬಾದ ಪುಣ್ಯಕೋಟಿ ಕಾಮಧೇನುವಿಗೆ ಬಾರಕೋಲಿನಲ್ಲಿ ಚಟಾರ್ ಎಂದು ಎರಡು ಬಿಟ್ಟವನೇ ಹೊಲಕ್ಕೆ ಕರೆದೊಯ್ದ.

ಅದು ಹೇಳಿಕೇಳಿ ಕಾಮಧೇನು. ಆಕಳು. ಹಸು. ಎತ್ತಂತೂ ಅಲ್ಲವೇ ಅಲ್ಲ. ಅದರಲ್ಲೂ ದೇವಲೋಕದ ಆಕಳು. ಇಂತಹ ಆಕಳಿಗೆ ಗದ್ದೆ ಊಳುವ ಕರ್ಮ.

ಕಾಮಧೇನುವನ್ನು ಗದ್ದೆ ಊಳಲು ಬಳಸುವದೇ? ಎಲ್ಲಾದರೂ ಉಂಟೇ? ಗದ್ದೆ ಊಳಲು ತುರ್ತಾಗಿ ಎತ್ತು ಬೇಕಾಗಿತ್ತು ಅಂತಲೇ ಅಂದುಕೊಳ್ಳೋಣ. ಕಾಮಧೇನುವನ್ನು ಕೇಳಿದ್ದರೆ ಸಕಲವನ್ನೂ ಕರುಣಿಸುವ ಶಕ್ತಿಯುಳ್ಳ ಅದು ಒಂದು ಎತ್ತಲ್ಲ ಬದಲಿಗೆ ಒಂದು ಜೋಡಿ ಎತ್ತುಗಳನ್ನೇ ಕರುಣಿಸುತ್ತಿತ್ತು. ಅವನ್ನು ಉಪಯೋಗಿಸಿ ಉಳುಮೆ ಮಾಡಬಹುದಿತ್ತು. ಅದರ ಬದಲಿಗೆ ಕಾಮಧೇನುವನ್ನೇ ಬಳಸಿ, ಅದನ್ನು ಹಿಂಸಿಸಿ ಉಳುಮೆ ಮಾಡಿಬಿಟ್ಟಿದ್ದ ಭಕ್ತ ಭೂಪ.

ಕಥೆ ಬಾಲಿಶ ಅನಿಸಿದರೂ ಯೋಚಿಸಿ ನೋಡಿ. ಅಜ್ಞಾನದಲ್ಲಿ ನಾವು ಹೆಚ್ಚಿನವರು ಮಾಡುತ್ತಿರುವದು ಇದೇ ಅಲ್ಲವೇ? ಮಾನವಜನ್ಮವೆಂಬ ಅಮೂಲ್ಯ ಕಾಮಧೇನುವನ್ನು ಜೀವನವೆಂಬ ಹೊಲವನ್ನು ಊಳಿ, ಲೌಕಿಕ ಸುಖವೆಂಬ ಬೆಳೆ (ಕಳೆ) ತೆಗೆಯಲು ಉಪಯೋಗಿಸುತ್ತಿದ್ದೇವೆ. ಮೇಲಿಂದ ಕಾಮಧೇನುವಿಗೆ ಬಾರಕೋಲಿನ 'ಪೂಜೆ' ಬೇರೆ! ಆಹಾ ನಮ್ಮ (ಅ)ಜ್ಞಾನವೇ!

ತುಂಬಾ ಯೋಚಿಸಲು ಹಚ್ಚಿದ ಚಿಕ್ಕ  ಕಥೆ.

ವಿ.ಸೂ: ಓದಿದ್ದು ಚೆನ್ನಾಗಿ ನೆನಪಿರಬೇಕು ಅಂದರೆ ಓದಿದ್ದನ್ನು ಬರೆದು ತೆಗೆಯಬೇಕು ಎಂದು ಗುರುಗಳು ಹೇಳುತ್ತಿದ್ದರು. ಅದನ್ನೇ ಮಾಡುತ್ತಿರುವದು. ಅಷ್ಟೇ ವಿನಃ ಬೇರೆ ಏನೂ ಇಲ್ಲ.