ಇಂತಹ ವಿದ್ಯಾಭೂಷಣರು ತಮ್ಮ ಜೀವನ ಕಥನ ಬರೆದುಕೊಂಡಿದ್ದಾರೆ. ಅದರ ಹೆಸರು - ನೆನಪೇ ಸಂಗೀತ.
ಜೀವನ ಕಥನ, ಆತ್ಮಚರಿತ್ರೆಗಳನ್ನು ಓದುವಾಗ ಒಂದು ನಿಯಮ ಪಾಲಿಸಬೇಕಂತೆ. ಅದರಲ್ಲೂ ಓದಲು ಸಮಯವಿಲ್ಲ, ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿ ಅನ್ನುವವರಂತೂ ಮುದ್ದಾಂ ಪಾಲಿಸಲೇಬೇಕಾದ ನಿಯಮ ಒಂದಿದೆ. ಒಂದು ನೂರು ನೂರೈವತ್ತು ವರ್ಷಗಳ ಹಿಂದೆ ಪ್ರಕಟವಾಗಿ, ಇಂದಿಗೂ ಜನಪ್ರಿಯ ಮತ್ತು ಪ್ರಸ್ತುತವಾಗಿರುವ ಜೀವನಚರಿತ್ರೆಗಳನ್ನು ಮಾತ್ರ ಓದಬೇಕಂತೆ. ಏಕೆಂದರೆ ಕಾಲಚಕ್ರ ಯಾವುದೇ ಮುಲಾಜಿಲ್ಲದೆ ಹೆಚ್ಚಿನ ವ್ಯಕ್ತಿಗಳನ್ನು ಮತ್ತು ಅವರ ಜೀವನ ಚರಿತ್ರೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತದೆ. ನಮ್ಮಲ್ಲಿ ಹೆಚ್ಚಿನವರ ಜೀವನ ಇರುವದೇ ಹಾಗೆ. ಕಸದ ಬುಟ್ಟಿಗೇ ಲಾಯಕ್ಕು. ಏನು ಮಾಡಲಿಕ್ಕೆ ಬರುತ್ತದೆ. ಗಾಂಧೀಜಿಯವರ ಆತ್ಮಕಥೆ, ಸ್ವಾಮಿ ಯೋಗಾನಂದರ 'The autobiography of a yogi' ಮುಂತಾದವನ್ನು ನೋಡಿ. ಪ್ರಕಟವಾಗಿ ನೂರು ವರ್ಷಗಳ ಮೇಲಾದರೂ ಮುದ್ರಣದ ಮೇಲೆ ಮರುಮುದ್ರಣ, ಆವೃತ್ತಿಯ ಮೇಲೆ ಹೊಸ ಆವೃತ್ತಿ ಬರುತ್ತಲೇ ಇರುತ್ತವೆ. ಇನ್ನು ನಮ್ಮ ಗುರುಗಳಾದ ಸ್ವಾಮಿ ಅನುಭವಾನಂದರಂತೂ ಎಲ್ಲ ಜೀವನ ಚರಿತ್ರೆಗಳನ್ನು ಸಾರಾಸಗಟಾಗಿ ಕಸದಬುಟ್ಟಿಗೆ ಎಸೆಯಿರಿ ಎಂದುಬಿಡುತ್ತಾರೆ. ಖಡಕ್ ಅದ್ವೈತಿಯಾಗಿರುವ ಅವರಿಗೆ ಈ ಜಗತ್ತೇ ಒಂದು ಭ್ರಮೆ. ಭ್ರಮೆ ಬಗ್ಗೆ ಬರೆದ ಪುಸ್ತಕ ಮತ್ತೂ ದೊಡ್ಡ ಭ್ರಮೆ. ಅದನ್ನೇನು ಓದೋದು ಎನ್ನುವ ಅಸಡ್ಡೆ. ಹಾಗಾಗಿಯೇ ಅವರು ಜೀವನ ಕಥನಗಳನ್ನು 'Autobiography of a dumbo' ಎಂದು ಹಾಸ್ಯ ಮಾಡುತ್ತಿರುತ್ತಾರೆ.
ವಿದ್ಯಾಭೂಷಣರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಕುತೂಹಲ ಇದ್ದೇ ಇತ್ತು. ಸನಾತನ ಸಂಪ್ರದಾಯದ ಸ್ವಾಮಿಯೊಬ್ಬರು ಸನ್ಯಾಸ ಬಿಟ್ಟು ಸಂಸಾರ ಸೇರಿದ್ದು ಆಗಿನ ಕಾಲದಲ್ಲಿ ದೊಡ್ಡ ಬಂಡಾಯವೇ. ಅದರಲ್ಲೂ ಪ್ರತಿಷ್ಠಿತ ಅಷ್ಟಮಠಗಳ ಸನ್ಯಾಸಿಯೊಬ್ಬರು ಹಾಗೆ ಮಾಡಿದರು ಅಂದರೆ ಅಕಟಕಟಾ!
೧೯೯೭ ರ ಮೇ ಅಥವಾ ಜೂನ್ ಇರಬಹುದು ಅಂತ ನೆನಪು. ಒಂದು ಸಮಾರಂಭದಲ್ಲಿ, ಆಗತಾನೇ ಮದುವೆಯಾಗಿದ್ದ, ವಿದ್ಯಾಭೂಷಣ ಮತ್ತು ಅವರ ಪತ್ನಿ ರಮಾರನ್ನು ನೋಡುವ ಅವಕಾಶ ಸಿಕ್ಕಿತ್ತು. ಆಮೇಲೆ ನೋಡಿಲ್ಲ. ಆದರೆ ಸುಮಾರು ವರ್ಷ ಸುದ್ದಿಯಲ್ಲಿತ್ತು ವಿದ್ಯಾಭೂಷಣರ ಸಂಸಾರ ಜೀವನ. ರಂಗುರಂಗಾದ ಗಾಸಿಪ್ ಕೇಳಿಬರುತ್ತಿತ್ತು. ಅವೆಲ್ಲ ಎಷ್ಟು ನಿಜ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲವಿತ್ತು. ಹಾಗಾಗಿ ವಿದ್ಯಾಭೂಷಣರ ಜೀವನ ಕಥನದ ಪುಸ್ತಕ ಎತ್ತಿಕೊಂಡೆ. ಮತ್ತೆ ನಾನು ಆತ್ಮಚರಿತೆಗಳ ಬಗ್ಗೆ ಇರುವ, ಮೇಲೆ ಹೇಳಿದ, ನಿಯಮವನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವದಿಲ್ಲ. ಏಕೆಂದರೆ ಓದುವುದೇ ಜೀವ, ಓದುವುದೇ ಜೀವನ ನಮಗೆ. ಅದರಲ್ಲೂ ವೈಯಕ್ತಿವಾಗಿ ಗೊತ್ತಿಲ್ಲದವರ ಜೀವನ ಚರಿತ್ರೆಗಳನ್ನು ಯಾವುದೇ ಪೂರ್ವಗ್ರಹಗಳಿಲ್ಲದೇ ಎತ್ತಿಕೊಳ್ಳುತ್ತೇನೆ. ಅದೇ ಪರಿಚಯದವರು ಬರೆದ ಆತ್ಮಕಥೆಗಳನ್ನು ಹಾಗೇ ಇಟ್ಟಿರುತ್ತೇನೆ. ನಮ್ಮ ಧಾರವಾಡ ಹೇಳಿ ಕೇಳಿ ಸಾಹಿತಿಗಳ ಊರು. ಎಲ್ಲರೂ ತಮ್ಮ ತಮ್ಮ ಜೀವನಚರಿತೆ ಬರೆಯುವವರೇ. ಒತ್ತಾಯ ಮಾಡಿ ಒಂದು ಕಾಪಿ ಕೊಟ್ಟು ಅಥವಾ ಮಾರಿ ಹೋಗುವವರೇ. ಹೆಚ್ಚಿನವು ಸೀದಾ ರದ್ದಿಗೆ ಹಾಕಲು ಯೋಗ್ಯವಾಗಿರುತ್ತವೆ.
೧೯೯೭ ರಲ್ಲಿ ಸಮಾರಂಭವೊಂದರಲ್ಲಿ ವಿದ್ಯಾಭೂಷಣ ದಂಪತಿಗಳನ್ನು ನೋಡಿದ್ದೆ ಅಂದೆನಲ್ಲ. ಅದು ಪತ್ರಕರ್ತ, ಲೇಖಕ, 'ಹಾಯ್ ಬೆಂಗಳೂರ್' ಪತ್ರಿಕೆಯ ಸಂಪಾದಕ ರವಿ ಬೆಳೆಗೆರೆ ಅವರು ಆಯೋಜಿಸಿದ್ದ ಸಮಾರಂಭವಾಗಿತ್ತು. ರವಿಯವರ ಕೆಲವೊಂದು ಪುಸ್ತಕಗಳು ಬಿಡುಗಡೆಯಾಗಲಿದ್ದವು, ಅದಕ್ಕಾಗಿ ಆಯೋಜಿಸಿದ್ದ ಸಮಾರಂಭ ಎಂದು ನೆನಪು. ಬೆಂಗಳೂರಿನ ಹೈಕೋರ್ಟ್ ಹಿಂದಿರುವ ಪ್ರೆಸ್ ಕ್ಲಬ್ ಆವರಣದಲ್ಲಿ ಇತ್ತು.
೧೯೯೬ ಅಕ್ಟೋಬರ್ ಸಮಯದಿಂದ ರವಿ ಬೆಳಗೆರೆ ನನ್ನನ್ನು ಇನ್ನಿಲ್ಲದಂತೆ impress ಮಾಡಿದ್ದರು. 'ಹಾಯ್ ಬೆಂಗಳೂರ್' ಎನ್ನುವ ಅಂದಿನ ಸ್ಪೋಟಕ ಟ್ಯಾಬ್ಲಾಯ್ಡ್ ಹಾಗಿತ್ತು. ಜೇನುಗೂಡಿಗೆ ಕೈಹಾಕಿದಂತೆ, ಖದೀಮರ ಚಡ್ಡಿ ಬಿಚ್ಚಿದಂತೆ...ಹಾಗೆ ಬರೆಯುತ್ತಿದ್ದರು ರವಿ. ಓದಿದ ನಾನು ಫುಲ್ ಫ್ಲಾಟ್. ಬಿಗ್ ಫ್ಯಾನ್ ಆಗಿಬಿಟ್ಟೆ.
ಧಾರವಾಡದವರಾದ ನಮಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಬೆಳಗೆರೆ ಹೆಸರೇನೂ ಅಪರಿಚಿತವಾಗಿರಲಿಲ್ಲ. ಅವರು ಮೊದಲು 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ನಾವಿನ್ನೂ ಆಗ ತುಂಬಾ ಚಿಕ್ಕವರು. ಅವನ್ನೆಲ್ಲ ಅಷ್ಟೊಂದು ಓದುತ್ತಿರಲಿಲ್ಲ. 'ತರಂಗ' ಪತ್ರಿಕೆಗಾಗಿ ರವಿ ಬೆಳಗೆರೆ ಖುಷ್ವಂತ್ ಸಿಂಗರ 'ದಿಲ್ಲಿ' ಎಂಬ ಕಾದಂಬರಿಯನ್ನು ಅನುವಾದಿಸಿದ್ದರು ಎಂದು ನೆನಪು. ಬೋಳು ಕುಂಡೆ ಬಿಟ್ಟುಕೊಂಡು ಮುಘಲ್ ಅರಸನ ಮುಂದೆ ಮೈಮೇಲೆ ವಸ್ತ್ರವಿಲ್ಲದ ದ್ರೌಪದಿಯಂತಹ ಹೆಣ್ಣುಮಗಳೊಬ್ಬಳ ಚಿತ್ರ ಆ ಧಾರಾವಾಹಿಗೆ ಇರುತ್ತಿತ್ತು. ಅದನ್ನು ನೋಡಿದರೇ ಇರುಸುಮುರುಸಾಗುತ್ತಿತ್ತು. ಅಂತಹ ಚಿಣ್ಣ ವಯಸ್ಸು ನಮ್ಮದು. ಹಾಗಾಗಿ ರವಿ ಬೆಳಗೆರೆ ಬರೆದಿದ್ದನ್ನು ೧೯೯೦ ರ ವರೆಗೆ ಜಾಸ್ತಿ ಓದಿರಲಿಲ್ಲ.
ಮುಂದೆ ರವಿ ಬೆಂಗಳೂರು ಭೂಗತಲೋಕದ ಬಗ್ಗೆ ವ್ಯಾಪಕವಾಗಿ ಬರೆಯತೊಡಗಿದರು. ಆಗ ಬಂತು ನೋಡಿ ಮಜಾ. 'ಕರ್ಮವೀರ' ಪತ್ರಿಕೆಯಲ್ಲಿ 'ಪಾಪಿಗಳ ಲೋಕದಲ್ಲಿ' ಎನ್ನುವ ಹೆಸರಿನಲ್ಲಿ ಸರಣಿ ಲೇಖನ ಬರೆದು ಸಂಚಲನ ಸೃಷ್ಟಿಸಿಬಿಟ್ಟರು. ಭೂಗತಲೋಕ ಅಸಲಿಯಲ್ಲಿ ಹೇಗಿರುತ್ತದೆ, ಮಾಫಿಯಾ ಡಾನ್ಸ್ ಹೇಗಿರುತ್ತಾರೆ, ಭೂಗತಲೋಕ, ಪೊಲೀಸ್, ಸಿನಿಮಾ ನಟನಟಿಯರು, ರಾಜಕಾರಣಿಗಳು ಮತ್ತು ಅವರ ನಡುವಿನ ಅತಿ ವಿಚಿತ್ರ ಅನ್ನಿಸುವಂತಹ ಸಮೀಕರಣಗಳು, ಸಂಬಂಧಗಳ ಬಗ್ಗೆ ರವಿ ಬೆಳಗೆರೆ ತುಂಬಾ ರೋಚಕವಾಗಿ ಬರೆಯುತ್ತಿದ್ದರು. ಅವರ ಶೈಲಿಗೆ, ಮಾಹಿತಿಗೆ ಫುಲ್ ಫಿದಾ ನಾನು.
ಮುಂದೆ 'ಕರ್ಮವೀರ' ಬಿಟ್ಟ ರವಿ ತಮ್ಮದೇ 'ಹಾಯ್ ಬೆಂಗಳೂರ್' ಟ್ಯಾಬ್ಲಾಯ್ಡ್ ಮಾಡಿಕೊಂಡ ಮೇಲಂತೂ ಮುಗಿದೇಹೋಯಿತು. ಅವರ 'ಖಾಸ್ ಬಾತ್' ಅಂಕಣಗಳಿಂದ ಅತ್ಯಾಪ್ತ ಮಿತ್ರನಂತಾಗಿಹೋಗಿದ್ದರು ರವಿ. ಫೋನ್ ಮಾಡಿದರೆ ಅವರೇ ಫೋನ್ ಎತ್ತುತ್ತಿದ್ದರು. ಸಮಯವಿದ್ದರೆ ನಾಲ್ಕು ಮಾತಾಡುತ್ತಿದ್ದರು. ಅವರ ಸಮಾರಂಭಗಳಿಗೆ ಹೋದರೆ ಪರಿಚಯ ಮಾಡಿಕೊಳ್ಳುತ್ತಿದ್ದರು. ಅದಕ್ಕೂ ಹೆಚ್ಚಾಗಿ ಒಮ್ಮೆ ಪರಿಚಯವಾದವರನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಹೀಗೆಲ್ಲ ಇದ್ದಾಗ ನಾನು ಅವರ ದೊಡ್ಡ ಫ್ಯಾನ್ ಆಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.
ಆಗ ನಾನೂ ಬೆಂಗಳೂರಿನಲ್ಲಿ ಓತ್ಲಾ ಹೊಡೆದುಕೊಂಡು ಇದ್ದೆ. ಆಫ್ರಿಕಾದ ಟಾಂಜಾನಿಯಾದಲ್ಲಿ ಒಂದು ವರ್ಷ ಸಾಫ್ಟ್ವೇರ್ ಕೂಲಿ ಕೆಲಸ ಮಾಡಿಬಂದಿದ್ದೆ. ಅಮೇರಿಕಾಗೆ ಹೊರಡುವ ತಯಾರಿಯಲ್ಲಿದ್ದೆ. ವೀಸಾ ಕೊಂಚ ತಡವಾಗಿತ್ತು. ಚಾಯ್ ಪಾನಿ ಮತ್ತು ಜರ್ದಾ ಕವಳದ ಖರ್ಚಿಗೆ ಇರಲಿ ಅಂತ ಒಂದು ನೌಕರಿ ಮಾಡಿಕೊಂಡಿದ್ದೆ. ಇರಲು ಅಣ್ಣನ ಮನೆಯಿತ್ತು. ರಿಕ್ಷಾ ಮತ್ತು ಪುಷ್ಪಕ್ ಬಸ್ ಹಿಡಿದು ಊರೆಲ್ಲ ಓಡಾಡಿಕೊಂಡಿರುತ್ತಿದ್ದೆ. ಹೀಗಿರುವಾಗ ರವಿ ಬೆಳಗೆರೆಯವರ ಪುಸ್ತಕ ಬಿಡುಗಡೆ ಸಮಾರಂಭ ಇತ್ತು. ಹೋಗಿದ್ದೆ. ಅಲ್ಲೇ ದರ್ಶನವಾಗಿತ್ತು ನವವಿವಾಹಿತ ವಿದ್ಯಾಭೂಷಣ ದಂಪತಿಗಳದ್ದು.
ಇದಾಗುವ ಹಿಂದಿನ ವಾರ ಮಾತ್ರ ತಮ್ಮ ಪತ್ರಿಕೆಯಲ್ಲಿ exclusive scoop ಎಂಬಂತೆ ರವಿ ಬೆಳಗೆರೆ ವಿದ್ಯಾಭೂಷಣರ ವಿವಾಹದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಎಲ್ಲೋ ರಹಸ್ಯ ಸ್ಥಳದಲ್ಲಿ ಅವರು ಮದುವೆಯಾದರೆ ಈ ಖತರ್ನಾಕ್ ಪತ್ರಕರ್ತ ಅಲ್ಲೂ ಹೋಗಿ, ಯಾರಿಗೂ ಸಿಗದ ಫೋಟೋಗಳು, ನವದಂಪತಿಗಳ ಸಂದರ್ಶನ ಮತ್ತು ವಿಸ್ತೃತ ವರದಿ ಪ್ರಕಟಿಸಿದ್ದರು. ಮತ್ತೊಂದು ಸ್ಪೋಟಕ ಸಂಚಿಕೆಯಾಗಿತ್ತು. ಆ ಸಂಚಿಕೆಯಲ್ಲೇ ವಿದ್ಯಾಭೂಷಣ ದಂಪತಿಗಳು ಮುಂದಿನ ವಾರದ ಸಮಾರಂಭಕ್ಕೆ ಬರಲಿದ್ದಾರೆ ಅಂತ ಹಾಕಿದ್ದರೇ? ನೆನಪಿಲ್ಲ.
ತಮ್ಮ ಜೀವನ ಚರಿತೆಯಲ್ಲಿ ವಿದ್ಯಾಭೂಷಣರು ರವಿ ಬೆಳಗೆರೆ ಹೇಗೆ ಬ್ರೇಕಿಂಗ್ ನ್ಯೂಸ್ ಕೊಟ್ಟರು ಅನ್ನುವ ವಿಷಯವನ್ನು ವಿವರಿಸಿದ್ದಾರೆ. ವಿದ್ಯಾಭೂಷಣರು ಮದುವೆಯಾಗಲು ನಿರ್ಧರಿಸಿದಾಗ ಅವರ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತೀರಾ ಬಹಿರಂಗವಾಗಿ ವಿವಾಹವಾದರೆ ಮತ್ತೂ ಹೆಚ್ಚಿನ ದಾಂಧಲೆಯಾಗಿ ಲಫಡಾ ಆದೀತು ಎಂದು ವಿಚಾರ ಮಾಡಿದ ವಿದ್ಯಾಭೂಷಣರು ತಮ್ಮ ಆಪ್ತರ ಮೂಲಕ ಅದೆಲ್ಲೋ ಮಳವಳ್ಳಿ ಬಳಿ ಕಾಡಿನ ಮಧ್ಯೆ ಇರುವ ದೇವಾಲಯವೊಂದರಲ್ಲಿ ವಿವಾಹವಾಗುವ ಸ್ಕೆಚ್ ಹಾಕಿದ್ದರು. ಒಬ್ಬ ದೊಡ್ಡ ಮನುಷ್ಯರು ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದರು. ಯಾರಿಗೂ ಸುಳಿವು ಸಹಿತ ಬಿಟ್ಟುಕೊಟ್ಟಿರಲಿಲ್ಲ. ಆದರೇನು ಮಾಡುತ್ತೀರಿ? ಆ ದೊಡ್ಡ ಮನುಷ್ಯರೂ ಸಹ ರವಿ ಬೆಳಗೆರೆಯವರ ದೊಡ್ಡ ಅಭಿಮಾನಿಯಾಗಿದ್ದರಂತೆ. ತಮ್ಮ ನೆಚ್ಚಿನ ಪತ್ರಕರ್ತನಿಗೆ ಒಂದು exclusive scoop ಸಿಗಲಿ ಅಂದು ರವಿ ಬೆಳಗೆರೆಯವರಿಗೆ ಸುದ್ದಿ ಮುಟ್ಟಿಸಿದ್ದರು. ಇಂತಹ ಸುದ್ದಿ ಸಿಕ್ಕರೆ ತಮ್ಮ ಮೋಟಾರ್ ಬೈಕ್ ಹತ್ತಿ ರವರವ ನರಕಕ್ಕೆ ಸಹ ಹೋಗಲು ಸಿದ್ಧವಿರುತ್ತಿದ್ದ ರವಿ ಬರೋಬ್ಬರಿ ಹಾಜರಾಗಿದ್ದರು. ಇನ್ನಿಲ್ಲದಂತೆ ಗಂಟು ಬಿದ್ದು exclusive ಫೋಟೋಗಳನ್ನು ಮತ್ತು ಸಂದರ್ಶನವನ್ನು ಸಂಪಾದಿಸಿಕೊಂಡು ಬಂದಿದ್ದರು. ಜೊತೆಗೆ ನವದಂಪತಿಗಳಿಗೆ ನೈತಿಕ ಬೆಂಬಲ ಸೂಚಿಸಿದ್ದರು. ತಮ್ಮದೇ ಹವಾ ಮೇಂಟೈನ್ ಮಾಡಿದ್ದ ರವಿಯವರ ಬೆಂಬಲ ತುಂಬಾ ಉಪಯುಕ್ತ ಅನ್ನಿಸಿರಬೇಕು ವಿದ್ಯಾಭೂಷಣರಿಗೆ. ಇಡೀ ಸಮಾಜವೇ ಅವರ ವಿರುದ್ಧ ನಿಂತಿತ್ತು. It must have meant a great deal to him. So ಹೀಗೆ ವಿದ್ಯಾಭೂಷಣರ ಬಂಡಾಯಕಾರಿ ಮದುವೆ ವಿಷಯ 'ಹಾಯ್ ಬೆಂಗಳೂರ್' ನಲ್ಲಿ ಪ್ರಕಟವಾಗುವಂತಾಗಿದ್ದು ಎಂದು ವಿದ್ಯಾಭೂಷಣರು ಬರೆದುಕೊಂಡಿದ್ದಾರೆ.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿದ್ಯಾಭೂಷಣ ದಂಪತಿಗಳನ್ನು ನೋಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ವಿದ್ಯಾಭೂಷಣರ ಪತ್ನಿ ರಮಾ ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಆಗ ಅವರಿಗೆ ಇನ್ನೂ ೨೦-೨೧ ವರ್ಷವಿರಬಹುದು ಅಷ್ಟೇ. ವಿದ್ಯಾಭೂಷಣರನ್ನು ನೋಡಿದರೆ ನಲವತ್ತು ದಾಟಿದವರ ಹಾಗೆ ಕಾಣುತ್ತಿದ್ದರು. ನೆರೆದಿದ್ದ ಜನ ತರೇವಾರಿ ಮಾತಾಡಿಕೊಂಡರು. ಕೆಲವರು ಕೊಂಚ ಅಸಭ್ಯ lewd ಅನ್ನುವಂತಹ ಜೋಕ್ ಹೊಡೆದರು. ಎಲ್ಲ ರೀತಿಯಿಂದ ಸರಿಯಿದ್ದು, ಸಮಾಜದ ಒಪ್ಪಿಗೆ, ಗುರುಹಿರಿಯರ ಅನುಮತಿಯೊಂದಿಗೆ ಶಾಸ್ತ್ರೋತ್ರವಾಗಿ ಮದುವೆಯಾದಾಗಲೇ ನಮ್ಮ ಜನ, ಬಿಟ್ಟಿ ಊಟ ಗದುಮಿದ ನಂತರವೂ, ಟೀಕೆ ಟಿಪ್ಪಣಿ ಮಾಡುವುದನ್ನು ಬಿಡುವದಿಲ್ಲ. ಹಾಗಿರುವಾಗ ಇಲ್ಲಿ ನಲವತ್ತು ವರ್ಷದ ಸನ್ಯಾಸಿಯೊಬ್ಬ, ಕೆಟ್ಟು ಪಟ್ಟಣ ಸೇರಿದ ಮಾದರಿಯಲ್ಲಿ, ೨೦-೨೧ ವರ್ಷದ ಸುಂದರಿಯನ್ನು ಮದುವೆಯಾದರೆ ಅನ್ನದೇ ಬಿಟ್ಟಾರೆಯೇ?? ಅಂದರು. ಬಾಯಿತುರಿಕೆ ತೀರಿಸಿಕೊಂಡರು. ವೇದಿಕೆ ಮೇಲಿದ್ದ ವಿದ್ಯಾಭೂಷಣ ದಂಪತಿಗಳಿಗೆ ಅದೆಲ್ಲ ಕೇಳಿದ್ದು ಸುಳ್ಳು. ಆ ಹೊತ್ತಿಗಾಗಲೇ ಅಂತಹ ಅದೆಷ್ಟು ಬೆಂಕಿಯಲ್ಲಿ ಬೆಂದಿದ್ದವೋ ಅವೆರೆಡು ಮುಗ್ಧ ಜೀವಗಳು.
ವಿದ್ಯಾಭೂಷಣರ ಪತ್ನಿ ರಮಾರ ಮುಖದ ಮೇಲೆ ದೈವೀ ಕಳೆಯಿತ್ತು. ಮೊದಲೇ ಸುಂದರಿ ಆಕೆ. ಮೇಲಿಂದ ನವವಿವಾಹಿತೆ. ಕೇಳಬೇಕೇ? ಮುಖದ ಮೇಲೆ ಲಕ್ಷ್ಮಿ ಕಳೆ ಬಂದಿದ್ದು ಸಹಜ ಬಿಡಿ. ವಿದ್ಯಾಭೂಷಣರ ಮುಖದ ಮೇಲೆ ಮಾತ್ರ ಚಿಂತೆಯ ಕಳೆ. ಅದೂ ಸಹಜವೇ ಬಿಡಿ. ಪೇಜಾವರರಿಂದ ಹಿಡಿದು ಮಾಧ್ವ ಸಮಾಜದ ಹಿರಿಕಿರಿ ಸ್ವಾಮಿಗಳೆಲ್ಲ ಅವರ ಮೇಲೆ ಸನ್ಯಾಸ ತ್ಯಜಿಸದಂತೆ ಮತ್ತು ವಿವಾಹವಾಗದಂತೆ ಸಿಕ್ಕಾಪಟ್ಟೆ ಒತ್ತಡ ಹಾಕಿದ್ದರಂತೆ. ಒತ್ತಡ ವಿಫಲವಾದಾಗ ಅವೆಲ್ಲ ಧಮ್ಕಿಯಾಗಿ ಪರಿವರ್ತನೆಯಾಗಿರಲು ಸಾಕು. ಸಮಾರಂಭದಲ್ಲಿ ಮಾತಾಡಿದ ರವಿ ಬೆಳಗೆರೆ ಹೇಳಿದ ಮಾತು ಇನ್ನೂ ನೆನಪಿದೆ. 'ವಿದ್ಯಾಭೂಷಣರನ್ನು ಈ ಸಮಾರಂಭಕ್ಕೆ ಕರೆತರಲು ಸಾಕಷ್ಟು ಕಷ್ಟ ಪಟ್ಟೆ. ಅವರ ವಿರೋಧಿಗಳು ಈ ಸಮಾರಂಭಕ್ಕೂ ಬಂದು, ಇಲ್ಲೂ ಪ್ರತಿಭಟನೆ ಮಾಡಿ, ಸಮಾರಂಭಕ್ಕೆ ವಿಘ್ನ ತಂದಾರು ಎನ್ನುವ ಆತಂಕವನ್ನು ವಿದ್ಯಾಭೂಷಣರು ವ್ಯಕ್ತಪಡಿಸಿದ್ದರು. ಅದಕ್ಕೆ ನಾನು ಹೇಳಿದೆ, 'ನೀವು ಬನ್ನಿ ಸ್ವಾಮೀ. ನಿಮಗೆ ಯಾರು ಏನು ಮಾಡುತ್ತಾರೆ ನೋಡೋಣ. ಅಂತವರನ್ನು ಎತ್ತಿ ಹೊರಗೆ ಒಗೆಯಲೆಂದೇ ನನ್ನ ಕಡೆಯ ಟಫ್ ಹುಡುಗರು ಇರುತ್ತಾರೆ. ನೀವು ಚಿಂತೆ ಮಾಡದೇ ಬನ್ನಿ,' ಎಂದು ಸಾವಿರ ಬಾರಿ ಹೇಳಿದ ಮೇಲೆ ಬರುವ ನಿರ್ಧಾರ ಮಾಡಿದರು,' ಎಂದು ಫುಲ್ ಆತ್ಮವಿಶ್ವಾಸದಿಂದ ರವಿ ಬೆಳಗೆರೆ ಹೇಳಿದಾಗ ಸಿಕ್ಕಾಪಟ್ಟೆ ಕರತಾಡನ ಮತ್ತು ವಿಶಿಲ್ ಸೀಟಿ. ತಿರುಗಿ ನೋಡಿದರೆ ಎಲ್ಲ ಕಡೆ ಟಫ್ ಜನ ತೋಳೇರಿಸುತ್ತ ನಿಂತಿದ್ದರು. ರವಿ ಬೆಳಗೆರೆಯವರ ಭೂಗತಲೋಕದ ಹಲವಾರು ಅಭಿಮಾನಿಗಳು ಬಂದಿದ್ದರು. ಹಾಗಾಗಿ ವಿದ್ಯಾಭೂಷಣರ ವಿರುದ್ಧ ಪ್ರತಿಭಟನೆ ಮಾಡಲು ಯಾರಾದರೂ ಬಂದಿದ್ದರೆ ಅಂತವರು ಟಫ್ ಜನರನ್ನು ನೋಡಿ ಸುಮ್ಮನೆ ಹೋಗಿರಬೇಕು.
ವಿದ್ಯಾಭೂಷಣರು ಸನ್ಯಾಸ ಬಿಟ್ಟರು. ಸಂಸಾರಿಯಾದರು. ಹೊಸ ಜೀವನ ಶುರುಮಾಡಿಕೊಂಡರು. ಆಗ ಶುರುವಾದವು ನೋಡಿ ಗಾಸಿಪ್ ಮತ್ತು ಗಾಳಿಸುದ್ದಿಗಳು. ಆಗ ಹರಡಿದ್ದ ಖತರ್ನಾಕ್ ಸುದ್ದಿಯೆಂದರೆ - ಅವರ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲವಂತೆ. ಡೈವೋರ್ಸಿಗೆ ಬಂದು ನಿಂತಿದೆಯಂತೆ. ಆ ಹುಡುಗಿಗೆ ಮದುವೆ ಇಷ್ಟವಿರಲಿಲ್ಲವಂತೆ. ಗೆಳತಿಯರ ಜೊತೆ ಚಾಲೆಂಜ್ ಮಾಡಿದ್ದಳಂತೆ. ಈ ಸನ್ಯಾಸಿಯ ಸನ್ಯಾಸತ್ವವನ್ನು ಭಂಗ ಮಾಡಿ, ತನ್ನ ವಶ ಮಾಡಿಕೊಳ್ಳದಿದ್ದರೆ ತನ್ನ ಹೆಸರೇ ರಮಾ ಅಲ್ಲ ಎಂದು ಚಾಲೆಂಜ್ ಮಾಡಿದ್ದಳಂತೆ. ಆ ಚಾಲೆಂಜಿಗಾಗಿ ಲವ್ ನಾಟಕ ಮಾಡಿದಳಂತೆ. ಈಗ ಬಿಟ್ಟು ಹೊರಟಿದ್ದಾಳಂತೆ. ವಿದ್ಯಾಭೂಷಣರು ತುಂಬಾ ಖಿನ್ನರಾಗಿದ್ದಾರಂತೆ...ಎಂದೆಲ್ಲಾ ಸುದ್ದಿಗಳು.
ಇದನ್ನು ಕೇಳಿ ತುಂಬಾ ಬೇಜಾರಾಗಿತ್ತು. ಮಾಧ್ವ ಸಮಾಜದವರೊಂದಿಗೆ ತುಂಬಾ ಒಡನಾಟ ಇಟ್ಟುಕೊಂಡಿರುವ ನಮ್ಮ ಚಿಕ್ಕಮ್ಮನೇ ಈ ಸುದ್ದಿ ಹೇಳಿದಾಗ ಒಂದು ತರಹದ ನಂಬಿಕೆ ಬಂದು ಹೆಚ್ಚಿನ ಬೇಸರವಾಗಿತ್ತು. ಮುಂದೊಂದು ದಿವಸ ಯಾವುದೋ ಪತ್ರಿಕೆಯಲ್ಲಿ ವಿದ್ಯಾಭೂಷಣರು ಎಲ್ಲವನ್ನೂ ಅಲ್ಲಗೆಳೆದು, ಅವರೆಲ್ಲ ಸುಖಸಂತೋಷದಿಂದಿರುವ ಬಗ್ಗೆ ಖಾತ್ರಿ ಕೊಟ್ಟಿದ್ದರು. ಓದಿ ಸಂತೋಷವಾಗಿತ್ತು. ಆದರೂ ಪೂರ್ತಿ ನಂಬಿಕೆ ಬಂದಿರಲಿಲ್ಲ. ಸಂಸಾರ ಢಮ್ ಅಂದಾಗ ಎಲ್ಲರೂ ಸುಳ್ಳು ಹೇಳಿ ತ್ಯಾಪೆ ಹಚ್ಚುವವರೇ ನೋಡಿ. ಡೈವೋರ್ಸ್ ಆಗುವ ಹಿಂದಿನ ದಿನದ ವರೆಗೂ ಫೇಸ್ಬುಕ್ ಮೇಲೆ ಗಂಡಹೆಂಡತಿ ಸಿಕ್ಕಾಪಟ್ಟೆ ಪ್ರೀತಿ ಮಾಡುವ ಕಾಲ ಇದು.
ಇಂತಹ ಕುಹಕಗಳಿಗೆಲ್ಲ ವಿದ್ಯಾಭೂಷಣರು ತಮ್ಮ ಜೀವನ ಕಥನದಲ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಲವ್ ಮಾಡಿದವರು ಇವರಂತೆ. ಪ್ರಸ್ತಾವ ಇಟ್ಟವರೂ ಇವರೇ. ಪತ್ನಿ ಕೇವಲ ಭಕ್ತೆಯಾಗಿದ್ದಳು. ಇವರಿಗೆ ಸನ್ಯಾಸ ಬಿಡಲೇಬೇಕಾಗಿತ್ತು. ಹಾಗಾಗಿ ಮದುವೆಯಾಗಲೇಬೇಕಿತ್ತು. ಅದಕ್ಕಾಗಿ ಯಾರನ್ನಾದರೂ ಪ್ರೀತಿಸಲೇಬೇಕಾಗಿತ್ತು. ಇವಳು ಕಂಡಳು. ಕೇಳಿಯೇಬಿಟ್ಟೆ. ನಾನು ಆತುರಾತುರವಾಗಿ ಕೇಳಿದರೂ ಆಕೆ ಮಾತ್ರ ಎಲ್ಲ ತರಹದ ಪರಾಮರ್ಶೆ ಮಾಡಿ, ನಮಗೂ ವಿವೇಕ ಹೇಳಿ, ನಾವೆಲ್ಲದಕ್ಕೂ ಒಪ್ಪಿದ ಮೇಲೆಯೇ ಆಕೆ ಒಪ್ಪಿದ್ದು ಎಂದು ವಿದ್ಯಾಭೂಷಣರು ಬರೆದಿದ್ದನ್ನು ಓದಿದಾಗ ಪೂರ್ಣ ನೆಮ್ಮದಿ. ಮತ್ತು ಅವರ ಪತ್ನಿಯ ಬಗ್ಗೆ ಹೆಮ್ಮೆ. ೨೦-೨೧ ವರ್ಷದ ಯುವತಿಗೆ ಎಂತಹ ಪ್ರಬುದ್ಧತೆ ನೋಡಿ.
೧೫೦ ಚಿಲ್ಲರೆ ಪುಟಗಳ ಚಿಕ್ಕ ಪುಸ್ತಕ. ಚೆನ್ನಾಗಿ ಬರೆದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಸನ್ಯಾಸ ಕೊಡುವುದು, ಕುಟುಂಬ ವರ್ಗದಲ್ಲೇ ಸನ್ಯಾಸ ಕೊಡುವುದನ್ನು ವಿರೋಧಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದೆ.
ನಮ್ಮ ತಂದೆಯವರು ಸದಾ ಹೇಳುತ್ತಿದ್ದರು. ಯಶಸ್ವಿ ಸನ್ಯಾಸಿಯಾಗಲು ೧) ಜಾತಕದಲ್ಲಿ ಖಡಕ್ ಸನ್ಯಾಸಯೋಗವಿರಬೇಕು ೨) ಸಾಂಪ್ರದಾಯಿಕ ಗುರುಕುಲದಲ್ಲಿ ೧೨-೧೫ ವರ್ಷಗಳ ಅಧ್ಯಯನ ದೊಡ್ಡ ಸ್ವಾಮಿಗಳ ನಿಗರಾಣಿಯಲ್ಲಿ ಆಗಬೇಕು. ಇವೆರೆಡೂ ಆದರೆ ಮಾತ್ರ ಸನ್ಯಾಸ ಯಶಸ್ವಿಯಾಗುತ್ತದೆ ಎಂದು. ಅದು ನಿಜ ಅನ್ನಿಸುತ್ತದೆ. ೧೨-೧೫ ವರ್ಷಗಳ ಕಾಲ ಖಡಕ್ ಅಧ್ಯಯನ ಮಾಡಿದವನಿಗೆ ಒಂದೋ ವೈರಾಗ್ಯ ಮೂಡಿ ಸನ್ಯಾಸಕ್ಕೆ ಅವನಾಗೇ ಹಾತೊರೆಯುತ್ತಾನೆ. ಇಲ್ಲವಾದರೆ ಬೋರೆದ್ದು ಸಂಸಾರಿಯಾಗುತ್ತಾನೆ. ತೀರಾ ಚಿಕ್ಕವಯಸ್ಸಿಗೇ ಸನ್ಯಾಸ ಕೊಟ್ಟು ನಂತರ ಉಪದೇಶ ಮಾಡುತ್ತೇವೆ, ಅಧ್ಯಯನ ಮಾಡಿಸುತ್ತೇವೆ ಅನ್ನುವುದೆಲ್ಲ ಭಾಳ ರಿಸ್ಕಿ.
'ನೆನಪೇ ಸಂಗೀತ' ಓದಿ ಮುಗಿಸಿದಾಗ ವಿದ್ಯಾಭೂಷಣರ ಬಗ್ಗೆ ಮತ್ತು ಅವರ ಪತ್ನಿ ಬಗ್ಗೆ ತುಂಬಾ ಗೌರವ ಮೂಡಿಬಂತು. ಅವರಿಬ್ಬರ ಬಗ್ಗೆ ಅಷ್ಟೇ ಅಲ್ಲ. ವಿದ್ಯಾಭೂಷಣರ ಪತ್ನಿಯ ತಂದೆ ಬಳ್ಳಾರಿಯಲ್ಲಿ ತುಂಬಾ ದೊಡ್ಡ ವೈದ್ಯರು. ಸಮಾಜದಲ್ಲಿ ದೊಡ್ಡ ಹೆಸರು ಮಾಡಿದವರು. ಅಂತವರೂ ಸಹ ಒಂದು ಹಂತದ ನಂತರ ಎಲ್ಲವನ್ನೂ ಬೆಂಬಲಿಸಿದ್ದಕ್ಕೆ ಅವರಿಗೂ ಒಂದು ದೊಡ್ಡ ಸಲಾಂ.
1 comment:
ವಯಸ್ಸಿನ ವಿಷಮವಿವಾಹಗಳು ಅಪರೂಪವೇನಲ್ಲ. ಮದುವೆಯಾದಾಗ ಶಿವರಾಮ ಕಾರಂತರಿಗೆ ೩೬ ವರ್ಷ ವಯಸ್ಸು.ಕನ್ಯೆಗೆ (ಲೀಲಾರಿಗೆ) ೧೭ ವರ್ಷ. ತ್ರಿವೇಣಿಯವರು ಬರೆದ ‘ಹೃದಯಗೀತ’ ಕಾದಂಬರಿಯಲ್ಲಿ ಹುಡುಗಿಯೊಬ್ಬಲು ತನ್ನ ಸಹಪಾಠಿನಿಯೊಬ್ಬಳ ತಂದೆಯನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಸಿತಾರವಾದಕ ರವಿಶಂಕರ, ನಟ ಎನ್.ಟಿ.ಆರ್. ಅವರಗಳದೂ ಇಂತಹದೇ ಮದುವೆಗಳು. ಆದುದರಿಂದ ವಯಸ್ಸಿನ ಅಂತರವು ಮದುವೆಯಲ್ಲಿ ಮುಖ್ಯ ಅಂಶವಾಗಿರಬೇಕಿಲ್ಲ. ಆದರೆ ನನ್ನ ಊಹಾbased ತಳಮಳ ಬೇರೆಯೇ ಇದೆ.
ವಿದ್ಯಾಭೂಷಣರಿಗೆ ಹೆಣ್ಣಿನ companionship ಬೇಕಾಗಿದ್ದುದರಿಂದ ಅವರು ಮದುವೆಯಾದರು ಎನ್ನುವುದು ನನ್ನ ಮೊದಲನೆಯ ಊಹೆ. ರಮಾ ಅವರು ವಿದ್ಯಾಭೂಷಣರಿಗೆ ಮಾರು ಹೋಗಿದ್ದು ನನಗನಿಸುವ ಕಾರಣವೆಂದರೆ ವಿದ್ಯಾಭೂಷಣರ ಸಾತ್ವಿಕ ಹಾಗು ಧಾರ್ಮಿಕ ವ್ಯಕ್ತಿತ್ವ coupled with his ಸಂಗೀತಕುಶಲತೆ. ಇದು ಎರಡನೆಯ ಊಹೆ. ಮದುವೆಯ ನಂತರ ಈ ಪುರುಷನಿಗೆ ಬೇಕಾಗಿದ್ದದ್ದು ಒಂದು ಹೆಣ್ಣು ಎಂದು ಹೆಂಡತಿಗೆ ಅನಿಸಲಿಕ್ಕಿಲ್ಲವೆ? ಇವೆಲ್ಲ ನನ್ನ ಊಹೆಗಳು ಮಾತ್ರ. ಅವರ ಆತ್ಮಚರಿತ್ರೆಯನ್ನು ನಾನು ಓದಿಲ್ಲ; ನೀವು ಓದಿದ್ದೀರಿ. ಆದುದರಿಂದ ನನ್ನ ಊಹೆಗಳು ಮೂರ್ಖತನದ ಊಹೆಗಳೋ ಎನ್ನುವುದನ್ನು ನೀವೇ ಹೇಳಬೇಕು!
Post a Comment