Thursday, August 08, 2019

ಕುಸಿದ ಷೇರುಪೇಟೆಯಲ್ಲಿ ರೊಕ್ಕ ಮಾಡಿಕೊಳ್ಳುವ 'ಕುಳ್ಳ ವ್ಯಾಪಾರಿಗಳು'

ಪಕ್ಕದ ಮನೆ ಹೊತ್ತಿ ಉರಿಯುತ್ತಿದ್ದರೆ, ಅದರಲ್ಲೇ ಬೀಡಿ ಹಚ್ಚಿಕೊಂಡನಂತೆ. ಷೇರುಪೇಟೆಯಲ್ಲಿನ 'ಕುಳ್ಳ ಮಾರಾಟ' (short selling) ಎನ್ನುವುದು ಇದೇ ಮಾದರಿಯದ್ದು. ಷೇರುಪೇಟೆ ಕುಸಿದಾಗ ಹೆಚ್ಚಿನ ಹೂಡಿಕೆದಾರರು ನಷ್ಟ ಅನುಭವಿಸಿದರೆ ಈ ಪ್ರಚಂಡ ಕುಳ್ಳರು (short sellers) ಬರೋಬ್ಬರಿ ಲಾಭ ಕಮಾಯಿಸುತ್ತಾರೆ. ಅದೇ ಷೇರುಪೇಟೆ ಮೇಲಕ್ಕೆ ಹೋದರೆ ಕುಳ್ಳರು ವಿಲವಿಲ ಒದ್ದಾಡಿಬಿಡುತ್ತಾರೆ. ಒಮ್ಮೊಮ್ಮೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳದೇ ಷೇರುಪೇಟೆಗೆ ಬರುವ ಕುಳ್ಳ ಮಾರಾಟಗಾರರು ಅಂಗಿ ಚಡ್ಡಿ ಸಮೇತ ಸರ್ವಸ್ವವನ್ನೂ ಕಳೆದುಕೊಂಡ ಉದಾಹರಣೆಗಳಿಗೆ ಏನೂ ಕಮ್ಮಿಯಿಲ್ಲ ಬಿಡಿ.

ಏನಿದು 'ಕುಳ್ಳ ಮಾರಾಟ' ಅಥವಾ short selling?

ನಿಮ್ಮ ಹತ್ತಿರ ಎಬಿಸಿಡಿ ಕಂಪನಿಯ ೧೦೦ ಷೇರುಗಳು ಇವೆ ಎಂದಿಟ್ಟುಕೊಳ್ಳಿ. ಕುಳ್ಳ ಬರುತ್ತಾನೆ. 'ಸಾರ್, ನಿಮ್ಮ ಷೇರುಗಳನ್ನು ಒಂದಿಷ್ಟು ಕಾಲ ಭಾಡಿಗೆಗೆ ಕೊಡುತ್ತೀರಾ?' ಎಂದು ಕೇಳುತ್ತಾನೆ. ಪುಗಸಟ್ಟೆ ಕೇಳುವುದಿಲ್ಲ. ಭಾಡಿಗೆ ಕೊಡುತ್ತೇನೆ ಅನ್ನುತ್ತಾನೆ. ಕುಳ್ಳನಿಗೆ ಷೇರುಗಳನ್ನು ಭಾಡಿಗೆ ಕೊಟ್ಟ ಸಮಯದಲ್ಲಿ ಡಿವಿಡೆಂಡ್ ಬಂದರೆ ಅದನ್ನೂ ನಿಮಗೇ ಕೊಡುತ್ತಾನೆ. ಒಪ್ಪಂದದಂತೆ ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ವಾಪಸ್ ಮಾಡುತ್ತೇನೆ ಅನ್ನುತ್ತಾನೆ. ಕುಳ್ಳನ ಪರವಾಗಿ ಒಬ್ಬ ಬ್ರೋಕರ್ ಗ್ಯಾರಂಟಿ ಕೊಡುತ್ತಾನೆ. ಬ್ರೋಕರ್ ಏನೂ ಸುಮ್ಮನೇ ಗ್ಯಾರಂಟಿ ಕೊಡುವುದಿಲ್ಲ. ಕುಳ್ಳನ ಹತ್ತಿರ ಡೆಪಾಸಿಟ್ ಇಸಿದುಕೊಂಡಿರುತ್ತಾನೆ. ಭಾಡಿಗೆಗೆ ಷೇರುಗಳನ್ನು ತೆಗೆದುಕೊಂಡ ಕುಳ್ಳ ನಾಪತ್ತೆಯಾದರೆ ಕುಳ್ಳನ ಡೆಪಾಸಿಟ್ ಹಣದಲ್ಲಿ ಷೇರುಗಳನ್ನು ಖರೀದಿ ಮಾಡಿ ಮೂಲ ಮಾಲೀಕನಿಗೆ ಮುಟ್ಟಿಸುವ ಜವಾಬ್ದಾರಿ ಬ್ರೋಕರನದು.

ಷೇರುಗಳನ್ನು ಭಾಡಿಗೆ ಮೇಲೆ ಕೊಡುವುದೇ? ಭಾಡಿಗೆ ರೊಕ್ಕ ಬಂದರೆ ಯಾರಿಗೆ ಬೇಡ? ಡಿವಿಡೆಂಡ್ ಸಹಿತ ಬರುತ್ತದೆ. ಮೇಲಿಂದ ಬ್ರೋಕರ್ ಗ್ಯಾರಂಟಿ ಬೇರೆ ಕೊಡುತ್ತಾನೆ. ಷೇರುಪೇಟೆಯಲ್ಲಿ ರೊಕ್ಕ ಬಂದರೆ ಯಾರಿಗೆ ಬೇಡ ಹೇಳಿ. ಹಾಗಾಗಿ ಕುಳ್ಳನಿಗೆ ಷೇರುಗಳು ಭಾಡಿಗೆಗೆ ಸಿಗುತ್ತವೆ.

ಭಾಡಿಗೆ ಷೇರುಗಳು ಸಿಕ್ಕ ತಕ್ಷಣ ಕುಳ್ಳ ಮಾಡುವ ಕೆಲಸವೇನು ಗೊತ್ತೇ? ಭಾಡಿಗೆ ಷೇರುಗಳನ್ನು ಮಾರುಕಟ್ಟೆಯಲ್ಲಿ ತನ್ನದೇ ಷೇರುಗಳೇನೋ ಅನ್ನುವಂತೆ ಮಾರಾಟ ಮಾಡಿಬಿಡುತ್ತಾನೆ. ಬಂದ ರೊಕ್ಕ ಎಣಿಸುತ್ತಾನೆ.

ಭಾಡಿಗೆಗೆ ತಂದುಕೊಂಡ ಷೇರುಗಳನ್ನು ಮಾರಿಬಿಡುವ ಕುಳ್ಳನ ಯೋಜನೆ ಏನಿರುತ್ತದೆ? ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ಮರಳಿಸಬೇಕಲ್ಲ??

ಕುಳ್ಳ ಸುಖಾಸುಮ್ಮನೆ ಷೇರುಪೇಟೆಗೆ ಬಂದಿರುವುದಿಲ್ಲ. ಅವನ ಯೋಜನೆ ಮತ್ತು ಯೋಚನೆ ಖತರ್ನಾಕ್.

ಮುಂದೊಂದು ದಿನ ಷೇರುಪೇಟೆಯಲ್ಲಿ ಎಬಿಸಿಡಿ ಕಂಪನಿಯ ಷೇರುಗಳು ಮಕಾಡೆಯಾಗಿ ಬಿದ್ದವು ಅಂದುಕೊಳ್ಳಿ. ಕುಳ್ಳ ಹೋದವನೇ ಕಮ್ಮಿ ಬೆಲೆಯಲ್ಲಿ ಆ ಷೇರುಗಳನ್ನು ಕೊಳ್ಳುತ್ತಾನೆ. ವಾಯಿದೆ ಪ್ರಕಾರ ಅವನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಿ ರೊಕ್ಕ ಎಣಿಸುತ್ತ ಹೋಗುತ್ತಿರುತ್ತಾನೆ.

ಇಲ್ಲಿ ಕುಳ್ಳ ರೊಕ್ಕ ಎಲ್ಲಿ ಮಾಡಿಕೊಂಡ?

ಕುಳ್ಳ ಎಬಿಸಿಡಿ ಕಂಪನಿಯ ಷೇರುಗಳನ್ನು ಭಾಡಿಗೆಗೆ ತೆಗೆದುಕೊಂಡಾಗ ಅದರ ಬೆಲೆ ೧೦೦ ರೂಪಾಯಿ ಇತ್ತು ಎಂದಿಟ್ಟುಕೊಳ್ಳಿ. ಅದನ್ನು ಮಾರಿದ ಕುಳ್ಳ ೧೦೦ ರೂಪಾಯಿ ಗಳಿಸಿದ. ನಂತರ ಆ ಷೇರುಗಳು ಬಿದ್ದುಹೋಗಿ ೭೫ ರೂಪಾಯಿ ಆಯಿತು ಅಂದಿಟ್ಟುಕೊಳ್ಳಿ. ಕುಳ್ಳ ಆವಾಗ ಖರೀದಿ ಮಾಡಿದ. ಇದರಲ್ಲಿ ೨೫ ಪರ್ಸೆಂಟ್ ಲಾಭ ಮಾಡಿಕೊಂಡ. ಷೇರುಗಳ ಮೇಲೆ ಒಂದಿಷ್ಟು ಭಾಡಿಗೆ ಅಂತ ಕೊಟ್ಟ. ಒಟ್ಟಿನಲ್ಲಿ ಷೇರು ಬೆಲೆ ಬಿದ್ದಷ್ಟೂ ಕುಳ್ಳನಿಗೆ ಲಾಭ.

ಆಕಸ್ಮಾತ ಷೇರಿನ ಬೆಲೆ ಏರಿಬಿಟ್ಟರೇ? ಕುಳ್ಳನಿಗೆ ನಷ್ಟ. ೧೦೦ ರೂಪಾಯಿಗೆ ಮಾರಿದ ಭಾಡಿಗೆ ಷೇರುಗಳನ್ನು ೧೦೫ ರೂಪಾಯಿಗೆ ಖರೀದಿಸಿ ಮರಳಿಸಬೇಕು ಅಂದರೆ ಕುಳ್ಳನಿಗೆ ಜೀವ ಹೋದಷ್ಟು ನೋವಾಗುತ್ತದೆ. ಮತ್ತೆ ಆಗಬಹುದಾದ ನಷ್ಟಕ್ಕೆ ಲಿಮಿಟ್ ಇಲ್ಲ. ಷೇರುಗಳು ಸಿಕ್ಕಾಪಟ್ಟೆ ಜಂಪ್ ಆಗಿ ೧೦೦ ಬೆಲೆಯ ಎಬಿಸಿಡಿ ಕಂಪನಿ ಷೇರುಗಳು ೧೫೦, ೨೦೦ ಎಲ್ಲ ತಲುಪಿಬಿಟ್ಟರೆ ಕುಳ್ಳ ಮಟಾಷ್!! ಕುಳ್ಳ ರಿಯಾಕ್ಟ್ ಮಾಡುವ ಮೊದಲೇ ಬ್ರೋಕರ್ ಇವನ ಡೆಪಾಸಿಟ್ ಜಪ್ತಿ ಮಾಡಿ, ಅದರಲ್ಲೇ ಬಂದಷ್ಟು ಷೇರುಗಳನ್ನು ಖರೀದಿಸಿ, 'ಯೋ ಕುಳ್ಳ, ಜಾಸ್ತಿ ಡೆಪಾಸಿಟ್ ಕೊಡ್ತೀಯಾ ಅಥವಾ ಅಕೌಂಟ್ ಬಂದ್ ಮಾಡಲಾ?' ಎಂದು ರೋಪ್ ಹಾಕುತ್ತಾನೆ. ಅದೇ ಮಾರ್ಜಿನ್ ಕಾಲ್! ಷೇರುಪೇಟೆಯಲ್ಲಿನ ಧಮ್ಕಿ! ಕುಳ್ಳನ ಮನೆ ಮುಂದೆ ಜನ ಪ್ರತ್ಯಕ್ಷರಾಗುತ್ತಾರೆ. ದೊಡ್ಡ ಪ್ರಮಾಣದ ಲಫಡಾ ಆದರೆ ಕುಳ್ಳ ಮನೆಮಠ ಕಳೆದುಕೊಂಡು ಬೀದಿಗೆ ಬರುತ್ತಾನೆ.

ವೃತ್ತಿಪರ ಕುಳ್ಳರು ತಮ್ಮ ರಿಸರ್ಚ್ ಮಾಡಿಕೊಂಡೇ ಬಂದಿರುತ್ತಾರೆ. ಅವರೂ ನುರಿತ ಪಟುಗಳೇ. ಯಾವ ಕಂಪನಿಯ ಷೇರುಗಳು ಬೀಳಲಿವೆ ಎನ್ನುವ ಅಂದಾಜು ಇಟ್ಟುಕೊಂಡೇ 'ಕುಳ್ಳ ಮಾರಾಟಕ್ಕೆ' ಇಳಿದಿರುತ್ತಾರೆ. ಮತ್ತೆ ತಾವು ಕುಳ್ಳ ವ್ಯಾಪಾರಕ್ಕೆ ಸ್ಕೆಚ್ ಹಾಕಿದ ಷೇರುಗಳ ಮೇಲೆ ಹದ್ದಿನಕಣ್ಣು ಇಟ್ಟಿರುತ್ತಾರೆ. ಷೇರಿನ ಬೆಲೆ ತಾವು ಮಾರಿದ ಬೆಲೆಗಿಂತ ಕೊಂಚ ಮೇಲೆ ಹೋಗುವ ಲಕ್ಷಣ ಕಂಡುಬಂದರೂ ಸಾಕು. ಕುಳ್ಳ ಪಟಾಕ್ ಅಂತ ಷೇರು ಖರೀದಿ ಮಾಡಿಬಿಡುತ್ತಾನೆ. ನಷ್ಟವನ್ನು ಅಷ್ಟಕ್ಕೇ ಲಿಮಿಟ್ ಮಾಡಿಕೊಳ್ಳುತ್ತಾನೆ.

ಒಂದು ಕಂಪನಿಯ ಷೇರುಗಳು ಬೀಳಬಹುದು ಎನ್ನುವ ಮಾಹಿತಿ ಕುಳ್ಳರಿಗೆ ಎಲ್ಲಿಂದ ದೊರೆಯುತ್ತದೆ? ಒಮ್ಮೊಮ್ಮೆ ಆ ಮಾಹಿತಿ ಪಬ್ಲಿಕ್ ಆಗಿಯೇ ಸಿಗುತ್ತದೆ. ಕಂಪನಿ ತೊಂದರೆಯಲ್ಲಿದೆ ಅಂತ ಗೊತ್ತಾದರೆ ಅದರ ಷೇರು ಬೀಳುತ್ತದೆ. ಆದರೆ ಕುಳ್ಳರಿಗೆ ಒಳಗಿನ ಖಾಸಗಿ ಮಾಹಿತಿ ಕೂಡ ಇರುವ ಸಾಧ್ಯತೆಗಳನ್ನು ತೆಗೆದುಹಾಕಲಿಕ್ಕೆ ಸಾಧ್ಯವಿಲ್ಲ. ಅದು insider information. ಅಂತಹ ಮಾಹಿತಿ ಉಪಯೋಗಿಸಿಕೊಂಡು ಕುಳ್ಳ ಮಾರಾಟ ಮಾಡುವುದು ತಪ್ಪು ಮತ್ತು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದು. ಆದರೆ ಅದನ್ನು ಕೋರ್ಟಿನಲ್ಲಿ ಸಿದ್ಧ ಮಾಡುವುದು ಅಷ್ಟೇ ಕಷ್ಟ. ಹಾಗಾಗಿ short sellers walk a fine line between legal and illegal.

ಕಂಪನಿಯ ಷೇರುಗಳ ಪೈಕಿ ಎಷ್ಟು ಷೇರುಗಳು ಕುಳ್ಳರ ಹತ್ತಿರ ಇವೆ ಎನ್ನುವ ಮಾಹಿತಿ ಸಾರ್ವಜನಿಕವಾಗಿ ಸಿಗುತ್ತದೆ. ಸ್ಟಾಕ್ ಎಕ್ಸ್ಚೇಂಜ್ ಅವನ್ನು ಕ್ರೋಢೀಕರಿಸಿ ಷೇರುದಾರರಿಗೆ ಸಿಗುವಂತೆ ಮಾಡಿರುತ್ತಾರೆ. ಅದನ್ನೇ short ratio ಅನ್ನುತ್ತಾರೆ. ಕುಳ್ಳ ಅನುಪಾತ! :)

ಕುಳ್ಳ ಅನುಪಾತ ಏರುತ್ತಿದೆ ಅಂದರೆ ಕಂಪನಿಯ ಷೇರು ಬೆಲೆ ಕುಸಿಯಲಿದೆ ಎನ್ನುವ ಲೀಡಿಂಗ್ ಇಂಡಿಕೇಟರ್. ಕುಳ್ಳ ಅನುಪಾತ ಇಳಿಯುತ್ತಿದೆ ಅಂದರೆ ಉಲ್ಟಾ. ಷೇರು ಬೆಲೆ ಏರಲಿದೆ. ಹಾಗಾಗಿ ಕುಳ್ಳರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನುವ ಸೂಚನೆ.

ದೊಡ್ಡ ದೊಡ್ಡ ಅನಾಹುತಗಳಾದಾಗ ತನಿಖಾಧಿಕಾರಿಗಳು ಇದೇ ಕುಳ್ಳ ಅನುಪಾತವನ್ನು ಗಮನಿಸುತ್ತಾರೆ. ಅಮೇರಿಕಾದಲ್ಲಿ ೯/೧೧ ದುರಂತವಾಯಿತು. ಕೆಲ ದಿವಸಗಳ ಮೊದಲು ಅನೇಕ ವಿಮಾನ ಕಂಪನಿಗಳ ಕುಳ್ಳ ಅನುಪಾತ ಏರಿತ್ತು. ಅರ್ಥ ಏನು? ೯/೧೧ ಆಗಲಿದೆ ಎಂದು ಮೊದಲೇ ಗೊತ್ತಿತ್ತು ಅಂತ ತಾನೇ? ವಿಮಾನ ಕಂಪನಿಗಳ ಷೇರುಗಳನ್ನು ಕುಳ್ಳ ಮಾರಾಟ ಮಾಡಲು ಯಾರು ಕೂತಿದ್ದರು? ಅವರಿಗೆ ಮತ್ತು ೯/೧೧ ದುರಂತಕ್ಕೆ  ಕಾರಣನಾದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ಕೈದಾಕ್ಕೆ ಏನು ಸಂಬಂಧ? ಅಮೇರಿಕಾ ಹೊತ್ತಿ ಉರಿದರೆ ಇವರು ಅದರಲ್ಲೇ ಬೀಡಿ ಹಚ್ಚಿ ರೊಕ್ಕ ಮಾಡಿಕೊಂಡರೇ? ಆ ದಿಕ್ಕಿನಲ್ಲಿ ತನಿಖೆ ಹೋಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ೯/೧೧ ಆಗುವ ಕೆಲ ದಿವಸಗಳ ಮೊದಲು ಅನೇಕ ಕಂಪನಿಗಳ, ಅದರಲ್ಲೂ ದೊಡ್ಡ ದೊಡ್ಡ ವಿಮಾನಯಾನ ಕಂಪನಿಗಳ, ಕುಳ್ಳ ಅನುಪಾತ ಗಣನೀಯವಾಗಿ ಏರಿತ್ತು.

ಮೊನ್ನೆ ಕೆಫೆ ಕಾಫಿ ಡೇ ಪ್ರೊಮೋಟರ್ ಸಿದ್ಧಾರ್ಥ್ ಮೃತರಾದರು. ಮರುದಿವಸವೇ ಆ ಕಂಪನಿಯ ಷೇರುಗಳು ೧೦-೨೦% ಬಿದ್ದವು. ಯಾರಾದರೂ ಆ ಕಂಪನಿಯ ಕುಳ್ಳ ಮಾರಾಟದ ಪೊಸಿಷನ್ ತೆಗೆದುಕೊಂಡು ಕೂತಿದ್ದೇ ಹೌದಾದರೆ ಅವರು ಸಿಕ್ಕಾಪಟ್ಟೆ ಕಮಾಯಿಸಿಬಿಟ್ಟರು. ಅವರಿಗೆ ಒಳಗಿನ ಮಾಹಿತಿ ಏನಾದರೂ ಗೊತ್ತಿತ್ತೇ? ತನಿಖಾಧಿಕಾರಿಗಳು ಆ ಬಗ್ಗೆ ವಿಚಾರಣೆ ಮಾಡಿರುತ್ತಾರೆ ಬಿಡಿ. ಈಗ ಅದೊಂದು ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ಟಿದೆ. ತನಿಖಾ ಸಂಸ್ಥೆಗಳು ಮತ್ತು ಸ್ಟಾಕ್ ಎಕ್ಸ್ಚೇಂಜ್ ಗಳು ಕುಳ್ಳ ಅನುಪಾತದ ಮೇಲೆ ಮತ್ತು ಖತರ್ನಾಕ್ ಕುಳ್ಳರ ಮೇಲೆ ಒಂದು ಕಣ್ಣು ಇಟ್ಟಿರುತ್ತವೆ. ಖತರ್ನಾಕ್ ಕುಳ್ಳರು ಎಷ್ಟು ಜಾಬಾದ್ ಇರುತ್ತಾರೆ ಅಂದರೆ ದೊಡ್ಡ ದೊಡ್ಡ ಕುಳಗಳಿಗೇ ಗುಂಡು ತುಂಡು ಎಲ್ಲ ಸಮರ್ಪಣೆ ಮಾಡಿ ಅವರನ್ನೂ ಒಳಗಾಕಿಕೊಂಡಿರುತ್ತಾರೆ. ಒಂದು ತರಹದ ಮ್ಯಾಚ್ ಫಿಕ್ಸಿಂಗ್. ಎಲ್ಲರೂ ಬಿಕರಿಯಾಗುವವರೇ! ಅಷ್ಟೇ ಸರಿಯಾದ ಬೆಲೆ ಬಂದಾಗ ಮಾತ್ರ. ಸರಿಯಾದ ಬೆಲೆಗೆ  ಎಲ್ಲರೂ ಬಿಕರಿಯಾಗಿ ಷೇರುಪೇಟೆ ತನ್ನ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ. ಷೇರುಪೇಟೆಯಲ್ಲಿ ಭೂಗತಲೋಕದ ಹೂಡಿಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಕೆಲವು ದೊಡ್ಡ ಪಂಟರುಗಳು, ಅವರು ಸಾಮಾನ್ಯ ಹೂಡಿಕೆದಾರರು ಇರಬಹುದು ಅಥವಾ ಕುಳ್ಳರಿರಬಹುದು, ಅವರು ಭೂಗತ ಲೋಕದ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೆ ಆಶ್ಚರ್ಯವಿಲ್ಲ.

ಕೆಲವು ದೇಶಗಳು ಈ ಕುಳ್ಳ ಮಾರಾಟ ಪದ್ಧತಿಯನ್ನು ನಿಷೇಧಿಸಿವೆ. ಹೆಚ್ಚಿನ ದೇಶಗಳು 'ನಗ್ನ ಕುಳ್ಳ ಮಾರಾಟ' (naked short selling) ಮಾತ್ರ ನಿಷೇಧಿಸಿವೆ. ನಗ್ನ ಕುಳ್ಳ ಮಾರಾಟದಲ್ಲಿ ಕುಳ್ಳರು ಷೇರುಗಳನ್ನು ಭಾಡಿಗೆಗೂ ತೆಗೆದುಕೊಳ್ಳುವುದಿಲ್ಲ. ಷೇರುಗಳು ಇವೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿಕೊಂಡು ಗಾಯಬ್ ಆಗುತ್ತಾರೆ. ಮೂರು ದಿವಸಗಳ ನಂತರ ಕುಳ್ಳರಿಂದ ಷೇರು ಕೊಂಡವನಿಗೆ ಷೇರು ಸಿಗದೇ ಆ ಟ್ರೇಡ್ ಫೇಲ್ ಆಗುತ್ತದೆ. ಮತ್ತೂ ಇನ್ನಿತರ ತೊಂದರೆಗಳೂ ಆಗಿ ಮಾರುಕಟ್ಟೆ ಮೇಲೆ ಮತ್ತು ಕಂಪನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ನಗ್ನ ಕುಳ್ಳರನ್ನು ಶಿಕ್ಷಿಸುವ ಕಾನೂನುಗಳೂ ಇವೆ.

ಒಮ್ಮೊಮ್ಮೆ ಸರ್ಕಾರವೇ ಕುಳ್ಳ ಮಾರಾಟವನ್ನು ನಿಷೇಧಿಸುತ್ತದೆ. ೨೦೦೮ ರಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಡಾಗತಿ ಆಗಿ, ಅಮೇರಿಕಾದ ಆರ್ಥಿಕ ವ್ಯವಸ್ಥೆ ಅದರಲ್ಲೂ ಅಮೇರಿಕಾದ ಬ್ಯಾಂಕುಗಳೆಲ್ಲ ತಲೆ ಮೇಲೆ ಟಾವೆಲ್ ಹಾಕಿಕೊಂಡು ಮಕಾಡೆ ಮಲಗಿದಾಗ ಅವುಗಳ ಷೇರುಗಳ ಕುಳ್ಳ ವ್ಯಾಪಾರ ಮಾಡುವುದನ್ನು ತಾತ್ಕಾಲಿಕವಾಗಿ ಸರ್ಕಾರ ನಿಷೇಧಿಸಿತ್ತು. ಮೊದಲೇ ಸಾಯಲು ಬಿದ್ದಿದ್ದ ಬ್ಯಾಂಕುಗಳು. ಕುಳ್ಳರು ಅವಕ್ಕೂ ಸ್ಕೆಚ್ ಹಾಕಿದ್ದರೆ ಅಮೇರಿಕಾ ಜೊತೆಗೆ ವಿಶ್ವದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಗೋವಿಂದಾ ಗೋವಿಂದಾ ಆಗುತ್ತಿತ್ತು ಅನ್ನುವ ಭಯ. ಆದರೂ Lehman Brothers ಎನ್ನುವ ದೊಡ್ಡ investment bank ಢಮ್ ಅಂದುಹೋಗಲು ಈ ಕುಳ್ಳರ ಕಾಣಿಕೆ ಸಹಿತ ದೊಡ್ಡ ಮಟ್ಟದಲ್ಲಿ ಕಾರಣ.

ಇಷ್ಟೆಲ್ಲಾ ಹೇಳಿದ ಮೇಲೆ ಕುಳ್ಳ ಮಾರಾಟ ತಪ್ಪು ಅಂತಲ್ಲ. ಅದು ಒಂದು stock portfolio management ಮಾಡುವ ವಿಧಾನ. ರಿಸ್ಕ್ ಮ್ಯಾನೇಜ್ ಮಾಡಲು ತುಂಬಾ ಸಹಾಯಕಾರಿ. ಕೆಲವು ಷೇರುಗಳ ಮೇಲೆ ಲಾಂಗ್ ಪೊಸಿಷನ್ ತೆಗೆದುಕೊಂಡರೆ, ಅವುಗಳ ಮೇಲಿನ ರಿಸ್ಕ್ ಮ್ಯಾನೇಜ್ ಮಾಡಲು ಬೇರೆ ಕೆಲವು ಷೇರುಗಳ ಮೇಲೆ ಶಾರ್ಟ್ (ಕುಳ್ಳ) ಪೊಸಿಷನ್ ತೆಗೆದುಕೊಂಡರೆ ಅಲ್ಲಿಗಲ್ಲಿಗೆ ರಿಸ್ಕ್ ತಕ್ಕಮಟ್ಟಿಗೆ hedge ಆದಂತೆ. Hedge funds ಇಂತಹ ಅನೇಕಾನೇಕ ಟೆಕ್ನೀಕುಗಳನ್ನು ಉಪಯೋಗಿಸುತ್ತವೆ. ಹಾಗಾಗಿಯೇ ಷೇರುಪೇಟೆ ಹೇಗೇ ಇದ್ದರೂ ಅವು ಸದಾ ಲಾಭದಲ್ಲೇ ಇರುತ್ತವೆ. ಅಥವಾ ಲಾಭದಲ್ಲಿ ಇರಲು ಸಾಧ್ಯ ಅಂತ ತಮ್ಮ ಹೂಡಿಕೆದಾರರಿಗೆ ಹೇಳುತ್ತವೆ.

ಕುಳ್ಳ ಮಾರಾಟದಲ್ಲಿ ಷೇರನ್ನು ಭಾಡಿಗೆಗೆ ತೆಗೆದುಕೊಳ್ಳುವುದು, ಅದಕ್ಕೆ ಭಾಡಿಗೆ ಕೊಡುವುದು, ಮಾರಾಟ ಮಾಡುವುದು, ಬೆಲೆ ಕಮ್ಮಿಯಾದಾಗ ವಾಪಸ್ ಖರೀದಿ ಮಾಡುವುದು ಎಲ್ಲ automated. ಎಲ್ಲ ಕಂಪ್ಯೂಟರಗಳ ಮೂಲಕ ಆಗಿಹೋಗುತ್ತದೆ. ಅಲ್ಲಿ ಯಾರು ಕುಳ್ಳ, ಯಾರು ಲಂಬೂ, ಯಾರು ಬ್ರೋಕರ್ ಏನೂ ತಿಳಿಯುವುದಿಲ್ಲ. ಷೇರುಪೇಟೆಯ ಗೂಳಿ, ಕರಡಿಗಳ ಮಧ್ಯೆ ಎಲ್ಲರೂ ಕಳೆದುಹೋಗುತ್ತಾರೆ!

ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದಂತೆ. ಆದರೆ ಷೇರುಪೇಟೆಯ ಕುಳ್ಳರನ್ನು ನಂಬಿ. ಏಕೆಂದರೆ ಅವರಿಗೆ ಗೊತ್ತಿರುವ ಮಾಹಿತಿ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟೇ ಅವರನ್ನೂ ಸಹ ಅಳೆದೂ ತೂಗಿಯೇ ನಂಬಿ!

4 comments:

sunaath said...

ಕುಳ್ಳರ ಕಥೆಯನ್ನು ಓದಿ ದಿಗ್ಭ್ರಮೆಯಾಯಿತು. ಇನ್ನೂ ಸರಿಯಾಗಿ ಅರ್ಥವಾಗಿಲ್ಲ. ಅರ್ಥಪ್ರಪಂಚದಲ್ಲಿ ಏನೂ ಸಾದಾ ಇಲ್ಲ ಎಂದಷ್ಟೇ ಅರ್ಥವಾಯಿತು! ಈ ಪ್ರಪಂಚದ ಮೇಲೆ ಬೆಳಕು ಬೀರಿದ ನಿಮಗೆ ಧನ್ಯವಾದಗಳು.

Mahesh Hegade said...

ಧನ್ಯವಾದಗಳು, ಸುನಾಥ್ ಸರ್.

short selling ಬಗ್ಗೆ ಹೆಚ್ಚಿನ ಮಾಹಿತಿಗಾಗಿ - https://www.investopedia.com/terms/s/shortselling.asp

ವಿ.ರಾ.ಹೆ. said...

ಶೇರುಗಳನ್ನ ಬಾಡಿಗೆಗೆ ಪಡೆಯುವುದು ಅಂದ್ರೆ ಹೆಂಗೆ ಹೇಳಿ ಅರ್ಥಾಜಿಲ್ಲೆ! ಹಂಗೆ ಮಾಡಲು ಅವಕಾಶ ಇದ್ದ? ಹೆಂಗೆ?! ಮತ್ತು ನೇಕೆಡ್ ಶಾರ್ಟ್ ಸೆಲ್ಲಿಂಗಲ್ಲಿ ಶೇರುಗಳು ಇಲ್ಲದಿದ್ದರೂ ಮಾರಿ ವಹಿವಾಟು ಫೇಲ್ ಆಗುವಂತೆ ಮಾಡಲು ಹೇಗೆ ಸಾಧ್ಯ? ಇದು ಅಧಿಕೃತ ಬ್ರೋಕರುಗಳ ಸಹಾಯದಿಂದಲೇ ಆಗಬೇಕು ಅನಿಸುತ್ತದೆ. ಅಂದ್ರೆ ಇದು ಇಲ್ಲೀಗಲ್ ಬಿಸಿನೆಸ್.

Mahesh Hegade said...

@ವಿ.ರಾ.ಹೆ.

Borrowing shares is implemented via systems. Mostly book entry. So not a very visible activity.

Naked short selling can happen because it takes 3 days to settle the transaction. In the era of real time transactions, I am not sure if it has become less common.