Monday, January 30, 2023

Supplementary ಮತ್ತು ಸಪ್ಲಿಮೆಂಟ್ ರೀ …

ಪರೀಕ್ಷೆ ನಡೆದಿತ್ತು. ರೇಖಾಗಣಿತ ವಿಷಯ. 

ಹಿಂದಿ ಕಲಿಸುವ ಟೀಚರ್ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿ.

"ಟೀಚರ್!"

"ಯಾರೋ ಅದು? ಏನು? ಈಗಷ್ಟೇ ಪರೀಕ್ಷಾ ಶುರು ಆಗ್ಯದ? ಏನು?"

"ಸಪ್ಲಿಮೆಂಟ್ ರೀ?"

"ಸಪ್ಲಿಮೆಂಟ್ ಬೇಕಾ? ಇಷ್ಟ ಲಗೂ? ಏನೆಲ್ಲಾ ಬರೆದು ಒಗೆದುಬಿಟ್ಟಿ ಇಷ್ಟ ಲಗೂ??"

ಎನ್ನುತ್ತಾ ತಮ್ಮ ಪೀಠದಿಂದ ಕೆಳಗಿಳಿದು ಬಂದು ಸಪ್ಲಿಮೆಂಟ್ ಕೊಡಲು ಹೋದರೆ…

"ಇದಲ್ಲರೀ…" ಎನ್ನುತ್ತಾ ಪ್ರಶ್ನೆ ಪತ್ರಿಕೆ ತೋರಿಸಿ ಮತ್ತೆ "ಸಪ್ಲಿಮೆಂಟ್ ರೀ" ಅನ್ನುತ್ತಾನೆ.

ಟೀಚರ್ ಫುಲ್ ತಲೆ ಹಾಪ್.

"ಸಪ್ಲಿಮೆಂಟ್ ರೀ ಅಂತಿ. ಕೊಡಲಿಕ್ಕೆ ಬಂದ್ರ question ಪೇಪರ್ ತೋರಸ್ತೀ!! ಏನು? ಆಟಾ ಹಚ್ಚೀ?"

"ಅಲ್ಲರೀ…."ಸಪ್ಲಿಮೆಂಟ್ ರೀ" ಅಂದರೇನ್ರೀ???"

ಇವನಿಗೋ ಜಾಮಿಟ್ರಿ ಪ್ರಶ್ನೆ ಪತ್ರಿಕೆಯಲ್ಲಿದ್ದ supplementary angle ಎಂದರೇನು ತಿಳಿದಿಲ್ಲ. ಅದನ್ನು ಕೇಳಿ ತಿಳಿದುಕೊಳ್ಳಲು ಸಪ್ಲಿಮೆಂಟ್ ರೀ ಸಪ್ಲಿಮೆಂಟ್ ರೀ ಅಂದ. ಅವರು ಸಪ್ಲಿಮೆಂಟ್ ಕೊಡಲು ಬಂದರು. ಇವನು ಪ್ರಶ್ನೆ ಪತ್ರಿಕೆ ತೋರಿಸಿ ಸಪ್ಲಿಮೆಂಟ್ ರೀ ಅಂದರೆ ಅವರು ಉತ್ತರ ಪತ್ರಿಕೆಗೆ ಸಂಬಂಧಿಸಿದ ಸಪ್ಲಿಮೆಂಟ್ ಕೊಡಲು ಹೋಗಿದ್ದರು.

ಮುಂದೆ ಅವನು ಪ್ರಶ್ನೆ ಪತ್ರಿಕೆ ಹಿಡಿದುಕೊಂಡು ಊರೆಲ್ಲಾ ಅಂದರೆ ಶಾಲೆಯೆಲ್ಲಾ ಅಡ್ಯಾಡಿ ಬಂದ ….ಯಾರಾದ್ರೂ "ಸಪ್ಲಿಮೆಂಟ್ ರೀ " supplementary ಅಂದರೆ ಏನೆಂದು ಹೇಳುತ್ತಾರೋ ಎಂದು.

ಕನ್ನಡ ಮಾಧ್ಯಮದಿಂದ ಎಂಟನೇ ಕ್ಲಾಸಿಗೆ ಒಮ್ಮೆಲೇ ಇಂಗ್ಲಿಷ್ ಮಾಧ್ಯಮಕ್ಕೆ ಬರುವುದಿದೆಯೆಲ್ಲಾ…ಶಿವ ಶಿವಾ! ಆ ಫಜೀತಿ ಯಾರಿಗೂ ಬೇಡ.

*****

ಆಗಾಗ ಏನೇನೋ "ಗೀಚಿ" ಇಟ್ಟಿದ್ದರೂ, ಅವನ್ನು ತಿದ್ದಿ, ಬ್ಲಾಗ್ 'ಪ್ರಕಟಿಸದೇ' ವರ್ಷದ ಮೇಲಾಗಿ ಹೋಗಿತ್ತು. ಕಾರಣ ಒಂದು ಅಂತಿಲ್ಲ. ಆಸಕ್ತಿಯ ಕೊರತೆ. ಅಷ್ಟೇ. ಮೇಲಿಂದ ಹೆಚ್ಚಾದ ತಿರುಗಾಟ. ಕೋವಿಡ್ ಕಾಲದಲ್ಲಿ ಮನೆಯಲ್ಲಿ ಕೂತವರು revenge travel ಮಾದರಿಯಲ್ಲಿ ಯದ್ವಾತದ್ವಾ ತಿರುಗಾಡಿದ್ದಾಯಿತು. ಹಾಗಾಗಿ ಬರವಣಿಗೆ ಹಿಂದೆ ಹೋಗಿದೆ. 

ಆಸಕ್ತಿಯ ಹಣೆಬರಹವೇ ಅಷ್ಟು. ಹೇಗೆ ಬರುತ್ತದೆಯೋ ಹಾಗೇ ಹೋಗಿಬಿಡುತ್ತದೆ ಕೂಡ. ಸ್ವಾಮಿ ಅನುಭವಾನಂದರು "ಆಸಕ್ತಿ" ಮತ್ತು "ಜಾಸಕ್ತಿ" ಎಂದು ಜೋಕ್ ಹೊಡೆಯುತ್ತಾರೆ. ಬರುವುದು ಆಸಕ್ತಿಯಾದರೆ ಹೋಗುವುದು ಜಾಸಕ್ತಿ ಎಂದು ಅರ್ಥ. :)

ಸಂದೇಶ ಕಳಿಸಿ ಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದ. ನೀವೂ ಎಲ್ಲ ಕ್ಷೇಮ ಎಂದು ಭಾವಿಸುವೆ.

2 comments:

sunaath said...

ಮಾರಾಯ್ರೆ, ಈ ಮಹೇಶ ಹೆಗಡೆ ಏನಾದರೂ ಸನ್ಯಾಸಿಯಾಗಿ ಹಿಮಾಲಯಕ್ಕೆ ಹೋದನೇ ಎಂದು ಹೆದರಿದ್ದೆ ನಾನು. ಆದರೆ ಈದೀಗ ‘ಪುನರಾಯಾನ್ ಮಹಾಕಪಿಃ" ಎನ್ನುವಂತೆ ಪ್ರತ್ಯಕ್ಷ (Thank God)! ನಿಮ್ಮ ಲೇಖನಗಳಿಗಾಗಿ ಹಪಿಹಪಿಸುತ್ತ ಕುಳಿತಿರುವ ನನ್ನ ಮೇಲೆ ದಯೆ ತೋರೊ, ಮಹಾ ಈಶ!

Mahesh Hegade said...

ನನ್ನ 'ಬ್ಲಾಗ್ ವಾಪಸಿ' ಮೇಲೆ ತಮ್ಮ ಆತ್ಮೀಯ ಸ್ವಾಗತಿಸುವ ಸಂದೇಶಕ್ಕೆ ಧನ್ಯವಾದಗಳು ಸರ್!