Thursday, June 21, 2012

ಬೇಗಂಗೆ ಪಾಸ್ ಬುಕ್ ಹುಚ್ಚು

ಸಾಬ್,  ನಿಮ್ಮದು ಕಡೆ ಪಾಸ್ ಬುಕ್ ಐತೆ ಕ್ಯಾ ಸಾಬ್? ಅಂದ ಕರೀಂ.

ಹಾಂ! ಪಾಸ್ ಬುಕ್ ಅದ, ಖಾತಾ ಅದ, ಬ್ಯಾಂಕ್ ಅದ. ಎಲ್ಲ ಅದ. ಆದ್ರ ರೊಕ್ಕ ಮಾತ್ರ ಇಲ್ಲ ನೋಡಪಾ, ಅಂತ ಅಂದೆ . 

ಎಲ್ಲೆರೆ  ಮಂಗ್ಯಾನ್ ಮಗ ರೊಕ್ಕ ಗಿಕ್ಕ ಕೇಳಿದ್ರ ಕಷ್ಟ. ಮೊದಲ  ಕಡ್ಕಿ ದಿನಗಳು. ಕಿಸೆ  ತೂತ್ ಆಗ್ಯಾವ್.

ಆ ಬ್ಯಾಂಕ್ ಪಾಸ್ ಬುಕ್ ಅಲ್ಲ ಸಾಬ್. ಕಂಪ್ಯೂಟರ್ ಡಬ್ಬಿನಲ್ಲಿ ಇರ್ತದೆ ನೋಡಿ. ಏನೋ ಒಂದ ತರಹದ ಪಾಸ್ ಬುಕ್. ಅದು ಸಾಬ್. ಗುರುತು ಆಯ್ತು? ಅಂದ ಕರೀಂ.

ಓಹೋ! ಭಾರಿ ಮುಂದವರದಿ ನೋಡು. ಆನ್ ಲೈನ್ ಬ್ಯಾಂಕಿಂಗ್ ಮಾಡ್ತಿ ಏನು? ಅಂದೆ.

ಕ್ಯಾ ಮಜಾಕ್ ಕರ್ತಾ ಸಾಬ್? ಬ್ಯಾಂಕಿನಲ್ಲಿ ಇರೋ ಆ ಹುಡುಗಿ ಸ್ವಲ್ಪ ದಪ್ಪ ಇದ್ದಾರೆ. ಮಸ್ತ ಮಾಲ್. ಅದಕ್ಕೆ ನೀವು ಹಾಥಿ, ಆನಿ ಅನ್ನೋದು? ಮತ್ತೆ ನಾನು ಮುದ್ಕಾ  ಆಗ್ತಾ ಬಂದೇನಿ.  ನಾನು ಆ ಹುಡುಗಿಗೆ ಲೈನ್ ಹೊಡಿಯೋದು ? ಕ್ಯಾ ಸಾಬ್?  ಹುಸಿಮುನಿಸು ತೋರುತ್ತ ಅಂದ ಕರೀಂ.

ಹೋಗ್ಗೋ ನಿನ್ನ! ನಾ ಏನ ಹೇಳಿದೆ? ನೀ ಏನ್ ತಿಳ್ಕೊಂಡಿ? ಮಂಗ್ಯಾನಕೆ?!!!!!!!! ಅಂತ ಸ್ವಲ್ಪ ದನಿ ಏರ್ಸಿ ಒದರೀದೆ.

ಮತ್ತೆ??? ಆನೆ ಲೈನ್ ಅಂತ ಅಂದ್ರಿ ಅಲ್ಲ ಸಾಬ್?? ನಾನು ಅಂದುಕೊಂಡೆ ಅಲ್ಲಿ ಬ್ಯಾಂಕ್ ಒಳಗೆ ಒಬ್ಬ ಹುಡುಗಿ ಸ್ವಲ್ಪ ದಪ್ಪ ಹಾಥಿ ಗತೆ ಇದ್ದಾಳೆ ಸಾಬ್. ನೋಡಿಲ್ಲ ನೀವು? ಅವಳಿಗೆ ನನಗೆ ಸೆಟ್ಟಿಂಗ್ ಮಾಡಿದರೋ ಅಂತ ತಿಳ್ದೆ ಸಾಬ್, ಅಂತ ಎಲ್ಲ ಹಲ್ಲು ಬಿಟ್ಟು ನಕ್ಕೊತ್ತ  ಹೇಳಿದ ಕರೀಮ್. 

ಹೋಗ್ಗೋ ನಿನ್ನ ಸಾಬರ....ಬರೆ ಅಪಾರ್ಥ ಮಾಡ್ಕೊತ್ತಿ ನೋಡು.....ಅದಲ್ಲಪ ನಾ ಹೇಳಿದ್ದು ....ನೀನು ಎಲ್ಲ ಬ್ಯಾಂಕ್ ವ್ಯವಹಾರ ಕಂಪ್ಯೂಟರ್ ಮ್ಯಾಲೆ ಮಾಡ್ತಿ ಏನು ಅಂತ ಕೇಳಿದೆ....ಅಂತ ಕ್ಲಾರಿಫಿಕೆಶನ್ ಕೊಟ್ಟೆ ನಾನು.

ಎಲ್ಲಿದು ಸಾಬ್? ಬ್ಯಾಂಕ್, ಮನೆ, ರೊಕ್ಕ, ಖಾತಾ ಎಲ್ಲ ನಮ್ಮದು ಹೊಸ ಬೇಗಂ ನೋಡ್ತದೆ ಸಾಬ್.....ಅಂದ ಕರೀಂ.

ಹೋಗ್ಗೋ ನಿನ್ನ......... ಮೊನ್ನೆ ಮೊನ್ನೆ ಡೈವರ್ಸ   ಆಗಿ ಬಂದವ ನೀ....ಇಷ್ಟ ಲಗೂನ ಮತ್ತೊಂದು ಲಗ್ನ ಮಾಡಿಕೊಂಡು   ಬಿಟ್ಟಿ  ಏನು? ಭಲೇ ಭಲೇ....ಬಹದೂರ್ ಗಂಡು ಅಂದ್ರ ನೀ ನೋಡಪ .....ನಾನು ಫುಲ್ ಶಬಾಶ್ ಕೊಟ್ಟೆ.

ಹೌದು ಸಾಬ್...ಒಂದು "ಮೀಠಾ ಸಿಗಸ್ತೀನ್" ಹುಡುಗಿ ಸಿಕ್ಕು ಬಿಡ್ತು ಸಾಬ್...ಅದಕ್ಕೆ ಮಾಡಿಕೊಂಡ ಬಿಟ್ಟೆ.....ಅಂದ ಕರೀಂ ಖುಷಿಂದ.

ಏನೋ ಇದು "ಮೀಠಾ ಸಿಗಸ್ತೀನ್" ಹುಡುಗಿ? ಏನು ಹುಡುಗಿಗೆ ಮಿಠಾಯಿ  ತಿನ್ನಿಸಿ  ತಿನ್ನಿಸಿ ಪಟಾಯಿಸಿ ಅಂದರ ಮಾಡಿಕೊಂಡಿ ಏನು? ಮಿಠಾಯಿ  ತಿನ್ನಸ್ತೇನಿ ಅನ್ನೋ ಬದಲಿ, ಮಿಠಾಯಿ ಸಿಗಸ್ತೇನಿ ಅಂತಿ ಅಲ್ಲೋ? ಏನ ಕನ್ನಡ ನಿಂದು? ಯಾವದನ್ನ ಸಿಗಿಸಬೇಕು, ಯಾವದನ್ನ ತಿನ್ನಿಸಬೇಕು ಅನ್ನೋದರ ಖಬರ ಅದನೋ ಇಲ್ಲೋ?.......ಅಂದೆ .....ನಗು ಮಾತ್ರ ಭಾಳ್ ಬರಲಿಕ್ಕೆ ಹತ್ತಿತ್ತು.

ಅಲ್ಲ ಸಾಬ್....ನಮಗೆ ಗೊತ್ತಿಲ್ಲ ಕ್ಯಾ? ನಮ್ಮದು ಇದು ಮೂರನೆ ಶಾದಿ ಸಾಬ್..... ಕ್ಯಾ ಸಾಬ್ ಒಂದೂ ತಿಳಿಯೋದಿಲ್ಲ ನಿಮಗೆ?.....ಅಂದ ಕರೀಂ...ಸ್ವಲ್ಪ irritate ಆಗಿದ್ದ.

ನೋಡಿ ಸಾಬ್ ಅದು ಏನೋ ಇಂಗ್ಲಿಷ್ ನಲ್ಲಿ ಹುಡುಗಿರಿಗೆ ಅಂತಾರೆ .....ಶ್ವೀಟ ಸಿಗಸ್ತೀನ್. ಶ್ವೀಟ ಸಿಗಸ್ತೀನ್ ...ಅಂತ....ನನಗೆ ಸಿಗಸ್ತೀನ್ ಗೊತ್ತಾಯ್ತು...ಆದ್ರೆ ಶ್ವೀಟ ಅಂದ್ರೆ ತಿಳಿಲಿಲ್ಲ ಸಾಬ್...ಆಗ ಯಾರೋ ಶ್ವೀಟ ಅಂದ್ರೆ ಮೀಠಾ ಅಂದ್ರು...ಮೀಠಾ ಅಂದ್ರೆ ಸಿಹಿ ಸಾಬ್...ತಿಳೀತು? ಅದಕ್ಕೆ ನಾನು ನಮ್ಮ ಬೆಗುಂ ಗೆ "ಮೀಠಾ ಸಿಗಸ್ತೀನ್" ಅಂದೇ ಸಾಬ್.... ಸಿಗಸ್ತೀನ್ ಅಂದ್ರೆ ಇಂಗ್ಲಿಷ್ ನಲ್ಲಿ ಸೋಲಾ  ನಂಬರ್ (16). ಅಲ್ಲ ಸಾಬ್? ಸೋಲಾ ಅಂದ್ರೆ ಹದಿನಾರು.....ಏನು ಸಾಬ್ ಎಲ್ಲ ತಿಳ್ಸಿ ತಿಳ್ಸಿ ಹೇಳ್ಬೇಕು ನಿಮಗೆ.....ಅಂದ ಕರೀಂ.

ಗಾನಾ  ಕೇಳಿಲ್ಲ ನೀವು? ಸೋಲಾ ಬರಸ್ ಕಿ ಬಾಲಿ ಉಮರ್ ಕೊ ಸಲಾಂ ಅಂತ....ಏಕ ದುಜೆ ಕೆ ಲಿಯೇ ಫಿಲ್ಮ್....ನೆನಪ ಆಯ್ತು? ಸೋಲಾ ಬರಸ್ ಗೆ ಇಂಗ್ಲಿಷ್ ನಲ್ಲಿ "ಮೀಠಾ ಸಿಗಸ್ತೀನ್" ಅಂತರಂತೆ ಸಾಬ್....ಏನು ಕಲ್ತೀರಿ ನೀವು?......ಅಂದು ನನ್ನ ಎಜುಕೇಶನ್ ಮಾನ ಕಳದ  ಕರೀಂ .

ಹೋಗ್ಗೋ ಸಾಬರ....ಅದು ಸ್ವೀಟ್ ಸಿಕ್ಸ್ ಟೀನ್ (sweet sixteen) ಅಂತ ರೀ....ಅದಕ್ಕ ನೀವು ತಪ್ಪ ತಪ್ಪ ಕೇಳಿಸ್ಕೊಂಡು "ಮೀಠಾ ಸಿಗಸ್ತೀನ್" "ಮೀಠಾ ಸಿಗಸ್ತೀನ್" ಅನ್ನಕೊತ್ತ ಹೊಂಟೀರಿ. ಏನ್ ಹೇಳೋಣ ನಿಮಗ??.....ನಗು ಛಾವಣಿ ಹಾರಿಸ್ಕೊಂಡು  ಹೋಗಿ ಆಕಾಶ ಬೋಳಾಗಿ  ಕಾಣಿಸ್ತು.

ಕಂಗ್ರಾಟ್ಸ್ ರೀ ಸಾಬರ....ಅಂತೂ ಸ್ವೀಟ್ ಸಿಕ್ಷ್ ಟೀನ್ ಬೇಗಂ ಮಾಡ್ಕೊಂಡು ಬಂದ್ರಿ....ಅದಕ್ಕ ಮತ್ತ ಪಾಸ್ ಬುಕ್ ಗೆ ಏನು ಕನೆಕ್ಷನ್? ಲಗೂನ ಹೇಳ್ರಿ.....ಅಂದೆ.

ಅದೇ ಸಾಬ್.... ನಮ್ಮದು ಹೊಸ ಬೇಗಂ ಇಲ್ಲಾ?......ಆ ಕಂಪ್ಯೂಟರ್ ಡಬ್ಬಿ ಮುಂದೆ ಕೂತಿ, ಅದು ಏನೋ ಪಾಸ್ ಬುಕ್ ತೆಗೆದು,  ಪೂರ ದಿನ ಅದರ ಮ್ಯಾಲೆ ಇರ್ತಾಳೆ ಸಾಬ್....ಮನಿ ಕೆಲಸ ಇಲ್ಲ, ಅಡಿಗಿ ಇಲ್ಲ.....ಹೋಟೆಲ್ ಸೆ ಖಾನ ಲಾಕೆ ಲಾಕೆ ನಾನು ಬರ್ಬಾದ್ ಹೋಗಯ ಸಾಬ್.....ಮನಿ ಅಡಗಿ ಮಿಸ್ ಮಾಡಿಕೊಂಡ ಕರೀಂ ನೊಂದಕೊಂಡ.

ಏನಪ ಇದು?...ಇದೆಂತ ಪಾಸ್ ಬುಕ್? ಅದೂ ಕಂಪ್ಯೂಟರ್ ನ್ಯಾಗ?.....ಏನು ಅಂತ ತಿಳಿಲಿಲ್ಲ ನನಗ.

ಮತ್ತೇನ್ ಮಾಡತಾಳರೀ ಸಾಬರ ನಿಮ್ಮ ಹೆಂಡ್ರು ಪಾಸ್ ಬುಕ್ ಮ್ಯಾಲೆ?....ಅಂದೆ.

ಸ್ವಲ್ಪ ಹೆಚ್ಚಗಿ ಮಾಹಿತಿ ಸಿಕ್ಕಿದ್ದರ ಚೊಲೋ ಇತ್ತು. ಏನು ಅಂತ ತಿಳ್ಕೊಬೋದಿತ್ತು.

ಅದೇ ಸಾಬ್.... ಯಾವಾಗಲೂ ಏನೋ ವತ್ತಾನೇ ಇರ್ತಾಳೆ....ಮತ್ತೆ ನಗ್ತಾಳೆ....ಅದು ಏನೋ ಕ್ಯಾಮೆರಾ ಹಾಕ್ಕೊಂಡು ಯಾರ್ ಯಾರ್ ದೋ ಜೊತೆ ಮಾತಾಡಿ ಮಾತಾಡಿ ನಗ್ತಾಳೆ ಸಾಬ್....ರಾತ್ರಿ  ರಾತ್ರಿ ಎದ್ದು ಅದನ್ನೇ ಮಾಡ್ತಾಳೆ ಸಾಬ್....ಎಲ್ಲ ಭೂಲ್ ಗಯಿ ಸಾಬ್....ಪಕ್ಕಾ ಹಾಪ್ ಆಗಿ ಬಿಟ್ಟಿದೆ ನಮ್ಮ ಹೊಸ ಬೇಗಂ ......ಮನಿ  ಖಬರ್ ಇಲ್ಲ...ಗಂಡಾದು ಖಬರ್ ಇಲ್ಲ....ಮನಿ ಕಬ್ರಸ್ತಾನ್ ಮಾಡಿ ಬಿಟ್ಟಾಳೇ ಸಾಬ್....ನಾನು ಸೈತಾನ್ ಆಗೋದು ಬಾಕಿ ಅದೆ ಸಾಬ್....ಭಾಳ ಖರಾಬ್ ಹಾಲತ್ ಸಾಬ್.....ಅಂದ ಕರೀಂ.

ಸಾಬರ.... ವಟ್ಟಾ  ತಿಳಿವಲ್ಲತು .....ಇನ್ನೂ ಸ್ವಲ್ಪ ವಿವರಿಸಿ ಹೇಳ್ರಿ.....ಅಂದೆ.

ಸಾಬ್...ಏನ್ ಹೇಳೂದು? ಎಲ್ಲಾ  ಅದು ಇದು ಎಲ್ಲ ಫೋಟೋ ಅದ್ರಾಗೆ ಹಾಕಿ ಬಿಟ್ಟಾಳೆ ಸಾಬ್....ಕೆಲವೊಂದು ಆಧಾ ನಂಗಾ ಪಂಗಾ ತಸ್ವೀರ್ ಸಹ ಅವೆ ಸಾಬ್. ಆದ್ರೆ ನಂದು ಫೋಟೋ ಮಾತ್ರ ಇಲ್ಲ  ಸಾಬ್....ನಂದು ಒಂದು ಪಾಸ್ ಬುಕ್ ತೆಗೆದು ಅದರಲ್ಲಿ ನಂದು ಮುದ್ಕಾ ಬುಡ್ಡಾ ಬುಡ್ಡಾ ಫೋಟೋ ಹಾಕ್ಯಾಳೆ ಸಾಬ್....ಅದ್ನೂ ಆಕಿನೇ ನೋಡ್ಕೊತ್ತಾಳೆ ಸಾಬ್....ನನಗೆ ಅದ್ರ  ಹತ್ರ ಬಿಡೋದಿಲ್ಲ ಸಾಬ್.....ಆಕೀದು ಫೋಟೋ ಮ್ಯಾಲೆ ವತ್ತಲಿಲ್ಲ ಅಂದ್ರೆ ತಲಿ ಬಿಸಿ ಮಾಡಿಕೊಂಡು ಶಟಗೊಂಡು ಬಿಡ್ತಾಳೆ ಸಾಬ್.....ಆ ಮ್ಯಾಲೆ ಬೇರೆ ಬೇರೆ ದೇಶದ ಮಂದಿ ಬಂದಿ ಆಕೀದು ವತ್ತತಾರೆ ಸಾಬ್....ಆಗ ಆಕಿ ಖುಷ್ .....ವತ್ತಿಸ್ಕೊಂಡ ಮ್ಯಾಲೆ ಫುಲ್ ಖುಷ್......ಅಂದ ಕರೀಂ ಬೇಜಾರಿಂದ.

ಸಾಬರ ಏನಂತ ಮಾತಾಡ್ಲಿಕತ್ತಿರಿ?......ಕಂಪ್ಯೂಟರ್ ಮ್ಯಾಲೆ ಏನ ವತ್ತತಾರ್ರಿ ನಿಮ್ಮ ಹೆಂಡತೀದು ಬ್ಯಾರೆ ಬ್ಯಾರೆ ದೇಶದ ಮಂದಿ....ಏನು ಕಥಿ?...ನಾ ಘಾಬ್ರಿಂದ ಕೇಳಿದೆ.

ಸಾಬ್....ನಾ ಏನು ಹೇಳಿದ್ದು ಅಂದ್ರೆ....ಬಾಹರ್ ದೇಶದ ಮಂದಿ ಆಕಿದು ಪಾಸ್ ಬುಕ್ ಮ್ಯಾಲಿನ ಫೋಟೋ ಮ್ಯಾಲೆ ವತ್ತಿದ್ರೆ  ಆಕಿಗೆ ಭಾಳ ಖುಷಿ ಅಂದೇ ಸಾಬ್.....ನೀವು ಒಬ್ಬರು....ತಪ್ಪು ತಪ್ಪು ತಿಳ್ಕೊತ್ತಿರಿ.....ಬದ್ಮಾಶ್ ಸಾಬ್....ಅಂದು ಕಣ್ಣು ಹೊಡೆದ ಕರೀಂ..

ವತ್ತೋದ....Like ವತ್ತೋದ...ಇಡಿ ಪ್ರಪಂಚದ ಮಂದಿ ಬಂದು ವತ್ತೋದು....ರಾತ್ರಿ ರಾತ್ರಿ ಕಂಪ್ಯೂಟರ್ ಮುಂದ ಕೂತು ಏನೋ ನೋಡುದು, ನಗೋದು,  ಶಟಗೋಳ್ಳುದು, ಕ್ಯಾಮೆರಾ ಹಾಕ್ಕೊಂಡು ಮಾತಾಡೋದು, ಫೋನ್ ಮಾಡಿ ಲವಿ ಡವಿ ಮೆಸೇಜ್ ಬಿಡೋದು ....ಯಾಕೋ ಇದು facebook ಇರಬೋದ ಅಂತ ಸಂಶಯ ಬಂತು....

ಆದ್ರ ಕೇಳಿ, ನೋಡಿ, ಪರಾಮರ್ಶಿಸಿ ನೋಡಿಯೇ ಸತ್ಯ ತಿಳಿಯೋದು ಅಂತ ನಾನು ಸಾಬರ ಜೊತಿ ಅವರ ಮನಿಗೆ ಹೊಂಟೆ.

ಏನ ದೃಶ್ಯ ಮನಿವಳಗ ಅಂತಿರಿ!!!! ಅಬ್ಬ....ಭೂತ ಕಂಡಂಗೆ ಬೆಚ್ಚಿ ಬಿದ್ದೆ.

ಕರೀಮನ ಸ್ವೀಟ್  sixteen ಬೇಗಂ ಸೀದಾ ಟೇಬಲ್ ಮ್ಯಾಲೆ ತುದಿಗಾಲ ಮ್ಯಾಲೆ  ಕೂತು ಮಸಡಿ screen ಹತ್ತರ ತೊಗೊಂಡು ಹೋಗಿ, ಮೌಸ್ ನ್ನ ಕೆಟ್ಟ ಬಿಗಿ ಮಾಡಿ ಹಿಡ್ಕೊಂಡು ಏನೋ ಮಾಡ್ಲಿಕತ್ತಾಳ್ ....ಕೂದಲ ಎಲ್ಲ ಕೆದರ್ಯಾವ....ನಡು ನಡು ವಿಚಿತ್ರ ದನಿಲೆ ಕ್ಯಾಕಿ ಹಾಕಿ ಹಾಕಿ ನಗ್ತಾಳ...ತೊಡಿ ತಟ್ಟಿ ತಟ್ಟಿ ನಗ್ತಾಳ....ನಮ್ಮ ಕಡೆ ವಮ್ಮೆ ಕೆಕ್ಕರಿಸಿ ನೋಡಿದಳು...ಏಕ್ದಂ ದೆವ್ವದ ದರ್ಶನ ಆದಂಗ ಆತ....ನಿದ್ದಿ ಮಾಡದ ಇದ್ದಿದ್ದಕ್ಕ ಕಣ್ಣ ಕೆಂಪ ಆಗಿತ್ತ.....ಅಕಿ ಸುತ್ತ ಮುತ್ತ ಅರ್ಧ ಮರ್ಧ ತಿಂದು ಮುಗ್ಸಿದ ಪ್ಲೇಟ್ ಚಮ್ಮಚೆ.....ಬಲಗೈಯಾಗ ಮೌಸ್ ನಿಂದ ವತ್ತಿಕೊತ್ತ , ಹುಚ್ಚಿ ಗತೆ ನಕ್ಕೊತ್ತ, ಮೈಮ್ಯಾಲೆ ಖಬರ ಇಲ್ಲದೇ  ಎಡಗೈಯಿಂದ ಒಂದ ಮುಷ್ಠಿ ಬಿರ್ಯಾನಿ ತೆಗೆದು ಮುಕ್ಕಿದಳು. ಮುಕ್ಕೊತ್ತ ಮುಕ್ಕೊತ್ತ ನಕ್ಕ ಅಬ್ಬರಕ್ಕ ಅಥವಾ ನಕ್ಕೊತ್ತ ನಕ್ಕೊತ್ತ ಮುಕ್ಕಿದ ಅಬ್ಬರಕ್ಕ ಅರ್ಧ ಬಿರ್ಯಾನಿ ಬೇಗಂ ಬಾಯಿಂದ ಸೋಯ್ಯ್ ಅಂತ ಜಿಗದು ಕಂಪ್ಯೂಟರ್ ಮ್ಯಾಲೆ ಹೋಗಿ deposit ಆತ. ಒಟ್ಟಿನಲ್ಲಿ ಸಿಕ್ಕಾಪಟ್ಟೆ ಘೋರ ಭಯಂಕರ ದೃಶ್ಯ....ರಾಮ್ಸೆ ಹಾರರ್ ಫಿಲಂ.

ಈಗ confirm ಆತು ಇದು ಪಾಸ್ ಬುಕ್ ಕೇಸ್ ಅಲ್ಲ...ಆದ್ರ confirmed Facebook addicted ಕೇಸ್ ಅಂತ.

ಅವನ ಬೇಗಂ ನ ಹುಚ್ಚಾಟ ನೋಡಿ ಕರೀಂ...ಕ್ಯಾ ಸಾಬ್...ಅನ್ನೋ ಪಾಪದ  ಲುಕ್ ಕೊಟ್ಟ....

ಹೊರಗ ಹೋಗಿ ಮಾತಾಡೋಣ ಬಾ ಅಂತ ಸನ್ನಿ ಮಾಡಿದೆ.

ಬಂದ ಕರೀಂ......

ಕರೀಂ ನಿಮ್ಮ ಹೆಂಡತಿಗೆ Facebook ಹುಚ್ಚು ಹಿಡದಿದೆ....ಲಗೂನ treatment ಮಾಡ್ಸ್ರಿ....ಇಲ್ಲ ಅಂದ್ರ ಹೆಂಡತಿ ಕಳಕೊತ್ತೀರಿ  ....ಭಾಳ ಡೇಂಜರ್ ಹುಚ್ಚು ಇದು....ಅಂದೆ.

ಏನು treatment ಸಾಬ್?....ಅಂದ ಕರೀಂ.

ಏನಿಲ್ಲ.... ನಿಮ್ಮ ಬೇಗಮ್ಗೆ ಎಲ್ಲಾದ್ರೂ ದರ್ಗಾ ಕ್ಕೆ ಕರ್ಕೊಂಡು ಹೋಗಿ ಒಂದು ಎರಡು ವರ್ಷ ಬಿಟ್ಟು ಬರ್ರಿ.....ಅಲ್ಲೇ ಗಿಡಕ್ಕೆ ಕಟ್ಟಿ ಹಾಕಿ ದಿನಕ್ಕೆ ನಾಕ ಬಾರಿ ಬೇವಿನ ತೊಪ್ಪಲದಿಂದ ಬಾರಿಸ್ತಾರೆ ನೋಡಿ....ಅದರಿಂದ ಎಲ್ಲ ಸರಿ ಆಗ್ತದೆ.....ನೋಡಿ ಆಕಿ ಮೆಂಟಲ್ condition ಹ್ಯಾಂಗ ಅದ ಅಂದ್ರ ಕಂಪ್ಯೂಟರ್ ಸುತ್ತ ಮುತ್ತ ಇದ್ದ್ರ ಅಕಿ Facebook ನಿಂದ ದೂರ ಆಗೋದಿಲ್ಲ....ಸ್ವಲ್ಪ harsh ಹೌದು...ಆದ್ರ ನಿಮಗ ಹೆಂಡ್ತಿ ಬೇಕು ಅಂದ್ರ ಇದ ವಂದಾ treatment ನೋಡ್ರಿ ಸಾಬರ....ಅಂದೆ ನಾನು.

ಕ್ಯಾ ಸಾಬ್.....ಫುಲ್ ಹತ್ತು ಲಾಖ್ ರೂಪಾಯಿ ಮೆಹೆರ್ ( ವಧು ದಕ್ಷಿಣೆ) ಕೊಟ್ಟು ಶಾದಿ ಮಾಡ್ಕೊಂಡು ಬಂದು 'ಹನುಮಾನ್ಮನಿನೂ' ಮಾಡದೆ ಸೀದಾ 2 ವರ್ಷ ದರ್ಗಾದಲ್ಲಿ ಬಿಟ್ಟು ಬಾ ಅಂದ್ರೆ ಏನು ಸಾಬ್???....ಅಂದ ಕರೀಂ.

ಈ ಸಾರೆ ನನಗ ಸೀದಾ ಗೊತ್ತಾತ್ ಇವನ  "ಹನುಮಾನ್ ಮನಿ" ಅಂದ್ರ ಏನು ಅಂತ. ಹನಿಮೂನ್ ಗೆ ಹನುಮ್ಯಾನ್ ಮನಿ ಅಂದಿದ್ದ ಕರೀಂ..ಬ್ರಹ್ಮಚಾರಿ ಹನುಮಾನ್ ಕಡೆ ಹನಿಮೂನ್ ಮಾಡಿಸಲಿಕ್ಕೆ ಹೊಂಟಾನ್ ಮಂಗ್ಯಾನ್ ಮಗ. 

ಸಾಬರ  "ಹನುಮಾನ್ ಮನಿ" ಎಲ್ಲೇ ಹೋಗುದಿಲ್ಲ...ನೀವು ಜವಾನ್....ನಿಮ್ಮ ಬೀವಿ ಅಂತೂ ಸ್ವೀಟ್ sixteen....ಚಿಂತಿ ಯಾತಕೋ ಸಾಬಣ್ಣ ನಿನಗೆ ಚಿಂತಿ ಯಾತಕೋ? ಹುಚ್ಚ್ ಬಿಟ್ ಮ್ಯಾಲೆ ಹನುಮ್ಯಾನ್ ಮನಿಗೆ ಹೊಗೀರಿ ಅಂತ....ಓಕೆ ಏನ್ರಿ?....ಅಂದೆ ...

ಆದರೂ ಸಾಬ್.....2 ವರ್ಷ....ಬಿನಾ ಬಿವಿ?ಅದೂ ......ಅಂತ ರಾಗ ಎಳದ ಕರೀಂ.....

ಸಾಬರ....ಖುದಾ ಹಾಫಿಜ್ ಅಂತ ಹೇಳಿ ಬಂದೆ.

PS: Facebook addiction is being talked about like we talk about other kinds of addictions. When reading a news report about a real life story, outline for this blog post came to mind. Facebook is being blamed increasingly for broken relationships, marital discord and all sorts of social maladies. You can find several references by Googling. Enjoy Facebook responsibly like everything else.

No comments: