Tuesday, August 06, 2013

ಹಸಿ ಹಸಿ ತಾಳೆನು ಈ ಹಸಿಯ, ಚೊಣ್ಣವ ನೀನು ಒಣಗಿಸೆಯಾ?....ಮಳೆಗಾಲದ ಒಣಗದ ಬಟ್ಟೆಯ ಕಥೆ ವ್ಯಥೆ

ಈಗ ಒಂದು ವಾರದಿಂದ ಧಾರವಾಡ ಒಳಗ ಏನು ಮಳಿ ಅಂತೇನಿ! ಈ ಪರಿ ಮಳಿ ನೋಡದೇ ಎಷ್ಟೋ ವರ್ಷ ಆಗಿ ಬಿಟ್ಟಿತ್ತು ಬಿಡ್ರೀ. ಏನು ಒಳ್ಳೆ ಸಿರ್ಸಿ ಮಲೆನಾಡು ಕಡೆ ವಾರಗಟ್ಟಲೆ ಹಿಡಕೊಂಡು ಹೊಯ್ಯೋ ಮಳಿ ಹಾಂಗ ಹಿಡಕೊಂಡು ಮಳಿ ಜಡಿಲಿಕತ್ತುಬಿಟ್ಟದ. ಸೂಡ್ಲಿ. ಸೂಡ್ಲಿ ಯಾಕ? ಮಳಿ ಇರದಿದ್ದರ ಬೆಳಿ ಎಲ್ಲಾ ಸುಟ್ಟು ಹೋಗ್ತಾವ. ಮಳಿ ಬರಲಿ ಬರಲಿ. ತೊಂದ್ರಿ ಇಲ್ಲ.

ಆವತ್ತು ಒಂದಿನ ಹಾಕ್ಕೊಂಡು ಮಳಿ ಹೊಡೀತು. ಅಂತೂ ಇಂತೂ ಸುಮಾರು ರಾತ್ರಿ ಹತ್ತರ ಹೊತ್ತಿಗೆ ಸ್ವಲ್ಪ ನಿಂತಂಗ ಆತು. ಈಗ ನಿಂತಾಗ ಲಗೂನ ಹೋಗಿ ರಾತ್ರಿಗೆ ಮತ್ತ ನಾಳೆ ಮುಂಜಾನಿಗೆ ಬೇಕಾಗುವಷ್ಟು ಎಲಿ, ಅಡಿಕಿ, ತಂಬಾಕು, ಗುಟಕಾ ಮತ್ತೊಂದು ಎಲ್ಲ ತಂದು ಇಟ್ಟಗೊಂಡು ಬಿಡಬೇಕು ಅಂತ ಲುಂಗಿ ಎತ್ತಿ, ಹವಾಯಿ ಚಪ್ಪಲ್  ಮೆಟ್ಟಿ ಹೊಂಟೆ. ಆಹಾ!!! ಆ ಹವಾಯಿ ಚಪ್ಪಲ್ ಟಪ್ ಟಪ್ ಅಂತ ಹನಿ ಹನಿ ಕಾಲಿನ ಹಿಂದ ಸಿಡಿಸಿದರೆ ಏನೋ ಒಂದು ತರಹ ಕರಡಿ ಕಚಗುಳಿ ಇಟ್ಟಂಗ. ಕರಡಿ ಕಚಗುಳಿ ಇಟ್ಟರ ಹ್ಯಾಂಗ ಅನ್ನಸ್ತದ? ಅಂತ ಕೇಳವರು ಕರಡಿಗೆ ಕೇಳಿ ಬರ್ರಿ!ನನ್ನೇನು ಕೇಳ್ತೀರಿ? ಅ....ಅ.....!!!!

ಭೀಮ್ಯಾನ ಚುಟ್ಟಾ ಅಂಗಡಿ ಮುಂದ ರಶ್ ಅಂದರ ರಶ್. ಮಳಿ ಕಡಿಮಿ ಆಗ್ಯದ ಅಂತ ಎಲ್ಲಾ 'ಚಟ ಸಾರ್ವಭೌಮರು' ಒಂದೇ ಸಲ ಎಲಿ, ಅಡಿಕಿ, ಚುಟ್ಟಾ, ಸಿಗರೇಟ್ ಮತ್ತೊಂದಕ್ಕ ಲಗ್ಗೆ ಹಾಕಿದಂಗ ಕಾಣ್ತದ. ರಾಜ್ ಕುಮಾರ್ 'ನಟ ಸಾರ್ವಭೌಮ' ಆದ್ರ ಇವರೆಲ್ಲಾ ಚಟ ಸಾರ್ವಭೌಮರು.

ಅಲ್ಲೇ ಮೂಲ್ಯಾಗ ಅಂಗಡಿ ತಗಡಿನ ಕೆಳಗ ಛಳಿಯೊಳಗ ಗಡಗಡ ನಡಿಕ್ಕೋತ್ತ ನಿಂತಾಗ ಯಾರೋ ಮಂಕಿಕ್ಯಾಪ್, ಉದ್ದನೆ ಫುಲ್ ತೋಳಿನ ಸ್ವೆಟರ್, ಅದರ ಮ್ಯಾಲೆ ಹಾಪ್ ಶರ್ಟ್ ಹಾಕಿಕೊಂಡು ಬರೋದು ಕಾಣಿಸ್ತು. ಹತ್ರ ಬಂದ ಕೂಡಲೇ ಗೊತ್ತಾತು ಇವಾ ನಮ್ಮ ದೋಸ್ತ ಚೀಪ್ಯಾ ಉರ್ಫ್ ಶ್ರೀಪಾದ ಖಂಡುರಾವ್ ಧಕ್ಕನೆಕರ್ ಉರ್ಫ್ ಶ್ರೀಖಂಡ ಅಂತ.

ಏನಲೇ ಚೀಪ್ಯಾ? ಫುಲ್ ಮಂಗ್ಯಾನ್ ಗೆಟಪ್ಪಿನ್ಯಾಗ ಬಂದು ಬಿಟ್ಟಿ? ಏನು ಒಂದು ಎರಡು ದಿನಾ ಹಿಡಕೊಂಡು ಮಳಿ ಹೊಡೆದಿದ್ದ ಹೊಡೆದಿದ್ದು ಮನ್ಯಾಗಿನ ಎಲ್ಲರ ಪಾಲಿನ ಉಣ್ಣಿ ಬಟ್ಟಿ ನೀನs ಹಾಕಿಕೊಂಡು ಬಂದಂಗ ಕಾಣ್ತದ ನೋಡಲೇ. ಈ ಅವತಾರ ಮಾಡಿಕೊಂಡು ನಾಳೆ ಯಾವದಾರ ಬ್ಯಾಂಕಿಗೆ ಮಾತ್ರ ಹೋಗ ಬ್ಯಾಡಪಾ! - ಅಂತ ಹೇಳಿದೆ.

ಬ್ಯಾಂಕಿಗೆ ಯಾಕ ಹೋಗಬಾರದೋ? - ಅಂತ ಕೇಳಿದ ಚೀಪ್ಯಾ.

ಹೀಂಗ ಮಾರಿ ಮುಚ್ಚೋ ಮಂಗ್ಯಾನ ಟೊಪ್ಪಿಗಿ ಹಾಕ್ಕೊಂಡು ಬ್ಯಾಂಕಿಗೆ ಹೋದ್ರ ಯಾರರ ಬ್ಯಾಂಕ್ ಲೂಟಿ ಮಾಡಲಿಕ್ಕೆ ಬಂದವರು ಇರಬೇಕು ಅಂತ ತಿಳ್ಕೊಂಡು ಅಲ್ಲೇ ಬ್ಯಾಂಕಿನ ಮುಂದೆ ಇರೊ ಕೋವಿ ರಾವ್ ತನ್ನ ಬಂದೂಕಿಂದ ಎಲ್ಲೆರೆ ಗುಂಡು ಗಿಂಡು ಹಾರಿಸಿ ಬಿಟ್ಟಾನು ಮತ್ತ, ಅಂತ ಹೇಳಿದೆ.

ಕೋವಿ ರಾವ್ ಯಾರೋ? ಆವಾ ಕೆನರಾ ಬ್ಯಾಂಕಿನ ಮುಂದ ಬಂದೂಕು ಹಿಡಕೊಂಡು ನಿಲ್ಲವನ ಹೆಸರು ಕೇವೀ ರಾವ್ ಅಲ್ಲೇನು? ಮತ್ತ ಅವನ ಗುಂಡು ಬ್ರಿಟಿಷರ ಕಾಲದ್ದು ಮಾರಾಯ. ಅವೇನು ಹಾರಂಗಿಲ್ಲ ಬಿಡು. ನಾಳೆನೂ ಹೀಂಗ ಥಂಡಿ ಇದ್ದರ ನಾ ಹೀಂಗ ಹೋಗವ. ಏನಪಾ, ಅಂತ ಹೇಳಿದ ಚೀಪ್ಯಾ.

ಆ ಕೆನರಾ ಬ್ಯಾಂಕ ಸೆಕ್ಯೂರಿಟಿ ಮನುಷ್ಯಾನ ಹೆಸರು ಕೇವೀ ರಾವ್ ಏನು? ನಾ ಎಲ್ಲೋ ಕೋವಿ ಹಿಡಕೊಂಡು ನಿಂತ ರಾಹು ಕೇತು ಹಾಂಗ ಇರೋ ಆ ರಾವ್ ನ ಹೆಸರೇ ಕೋವಿ ರಾವ್ ಅಂತ ತಿಳ್ಕೊಂಡಿದ್ದೆ ಬಿಡು, ಅಂತ ಹೇಳಿದೆ. ಕೇವೀ ರಾವ್ ಅಂತ ಕೋವಿ ಹಿಡಕೊಂಡು ನಿಂತವನ ಹೆಸರು. ಈಗ ಗೊತ್ತಾತು.

ಏನು ಚೀಪ್ಯಾ ರಾತ್ರಿ ಈ ಹೊತ್ತಿನ್ಯಾಗ ಭೀಮ್ಯಾನ ಅಂಗಡಿಗೆ ಬಂದು ಬಿಟ್ಟಿ? ನಿನಗೇನ ಯಾವ ಚಟಾನೂ ಇಲ್ಲ. ಮತ್ತೇನು ನಾಳೆ ಸತ್ನಾರಣ ಪೂಜಾ ನೈವೇದ್ಯಕ್ಕ ಕೊಳೆತ ಅಲ್ಲಲ್ಲ ಕಳಿತ ಬಾಳಿಹಣ್ಣು ತೊಗೊಂಡು ಹೋಗಲಿಕ್ಕೆ ಬಂದಿ ಏನು? - ಅಂತ ಚಾಸ್ಟಿ ಮಾಡಿದೆ.

ಏ ನಾಳೆ ಎಲ್ಲಿ ಸತ್ನಾರಣ ಪೂಜಾ? ಇಲ್ಲ ಇಲ್ಲ. ಎಲ್ಲರೆ ಊಟಕ್ಕ ಬಂದು ಕೂತಿ ಮತ್ತ. ಕೆಟ್ಟ ಥಂಡಿ ನೋಡು. ಒಂದು ಸಿಗರೇಟ್ ಹಚ್ಚಿ, ಒಂದು ನಾಕು ಬೆಚ್ಚನೆ ದಮ್ಮು ಹೊಡೆದು ಗರಂ ಮಾಡಿಕೊಂಡು ಹೋಗಿ ಬಿಡೋಣ ಅಂತ ಅಷ್ಟ. ನಾ ಏನ ರೆಗ್ಯುಲರ್ ಸೇದಂಗಿಲ್ಲ. ಇವತ್ತು ತಲಬು ಎದ್ದು ಬಿಟ್ಟದ, ಅಂತ ಹೇಳಿ ಭಿಮೂನ ಕಡೆ ಕೇಳಿ ಅದ್ಯಾವದೋ ನೇವಿ ಕಟ್ಟೋ ಮತ್ಯಾವದೋ ಸುಡುಗಾಡೋ ಸಿಗರೇಟ್ ಇಸಕೊಂಡ. ಮಸ್ತ ಹಚ್ಚಿ ಪುಸು ಪುಸು ಅಂತ ಹೊಗಿ ಬ್ಯಾರೆ ಬಿಟ್ಟ. ನನಗೂ ಘಾಟು ಬಂತು.

ಸಿಗರೇಟ್ ಅಂತೂ ಸೇದಿ ಬಿಟ್ಟಿ. ಮನಿಗೆ ಹೋಗವ್ನೋ ಅಥವಾ ನನ್ನ ರೂಮಿಗೆ ಬರವನೋ? ಮನಿಗೆ ಹೋಗಿ ರೂಪಾ ವೈನಿ ಕಡೆ ನಾದಿಸಿಕೊಂಡಿ ಮಾರಾಯಾ. ಅವರಿಗೆ ನೀನು ಸಿಗರೇಟ್ ಅದು ಇದು ಚಟಾ ಮಾಡೋದು ಸೇರಂಗಿಲ್ಲ. ಹೋಗಿ ಹೋಗಿ ಸಿಗರೇಟ್ ವಾಸನಿ ಹೊಡೆದು ಯಕ್ಕಾ ಮಕ್ಕಾ ಕಟಿಸಿಕೋ ಬ್ಯಾಡೋ! - ಅಂತ ವಾರ್ನ್ ಮಾಡಿದೆ.

ಎಲ್ಲಿದು? ಯಾಲಕ್ಕಿ ಲವಂಗ ಜಕ್ಕೋತ್ತ ಹೋಗಿ ಬಿಡ್ತೇನಿ. ಎಲ್ಲಿ ವಾಸನಿ? ಓನ್ಲಿ ಸುವಾಸನಿ, ಅಂತ ಹೆಂಡ್ತಿನ ಹ್ಯಾಂಗ ಮಂಗ್ಯಾ ಮಾಡತೇನಿ ಅಂತ ಕಣ್ಣು ಹೊಡೆದು, ಭೀಮೂ ಒಂದೆರಡು ಯಾಲಕ್ಕಿ ಕಾಳು, ಒಂದೆರಡು ಲವಂಗ ಕೊಡಪಾ, ಅಂತ ಕೇಳಿದ. ಒಂದು ಸಿಗರೇಟ್ ತೊಗೊಂಡು, ಅದರ ಮ್ಯಾಲೆ ಬಿಟ್ಟಿ ಯಾಲಕ್ಕಿ ಲವಂಗ ಬ್ಯಾರೆ ಕೇಳವರು ಯಾಕ ಅಷ್ಟು ದೊಡ್ಡ ಡೌಲ ಬಡಿದು ಸಿಗರೇಟ್ ಸೇದಬೇಕು, ಅನ್ನೋ ಲುಕ್ ಕೊಟಗೋತ್ತ ಭೀಮು ಕೊಟ್ಟ ಅಂತ ಆತು. ಕೊಡುವಾಗ ಭೀಮು ಮಾಡಿದ ಮಸಡಿ ನೋಡಿದರ ಮುಂದಿನ ಸರೆ ಯಾಲಕ್ಕಿ ಲವಂಗಕ್ಕ ಮುದ್ದಾಂ ಎಕ್ಸಟ್ರಾ ಚಾರ್ಜ್ ಮಾಡೋದು ಗ್ಯಾರಂಟಿ.

ಲವಂಗ ಜಕ್ಕೋತ್ತ ವೈನಿ ಬಾಜೂಕ ಪಲ್ಲಂಗ ಹತ್ತಿ ಬಿಡ್ತೀ ಪ್ಲವಂಗದ ಗತೆ. ಹೌದಿಲ್ಲೋ? - ಅಂತ ಕೇಳಿದೆ.

ಹ್ಞೂ....ಪಲ್ಲಂಗ ಹತ್ತೋದು ಖರೆ. ಆದ್ರ ಪ್ಲವಂಗ ಅಂದ್ರ? - ಅಂತ ಕೇಳಿದ ಚೀಪ್ಯಾ.

ಪ್ಲವಂಗ ಅಂದ್ರ ಸಂಸ್ಕೃತ ಒಳಗ ಮಂಗ್ಯಾ ಅಂತಲೇ! ಹೀ.....ಹೀ..... ಅಂತ ನಕ್ಕೆ.

ಲವಂಗ, ಪಲ್ಲಂಗ ಮತ್ತ ಪ್ಲವಂಗ ಅಂತ ಮಸ್ತ ಪ್ರಾಸಾ ಕೂಡಿಸಿ ಚಾಸ್ಟಿ ಮಾಡಿ ನಗ್ತಿಯೇನೋ ಮಂಗ್ಯಾನಿಕೆ?! - ಅಂತ ಬೈದಾ ಚೀಪ್ಯಾ.

ಮಸ್ತ ಮಳಿ ಆತಲಾ ಚೀಪ್ಯಾ? ಬೆಸ್ಟ್ ಆತು ನೋಡು. ಈ ನಮ್ನಿ ಮಳಿ ಆಗದ ಭಾಳ ವರ್ಷ ಆಗಿತ್ತು ನೋಡಪಾ, ಅಂತ ಮಳಿ ಬಗ್ಗೆ ಹೇಳಿದೆ.

ಏನು ಚೊಲೊ ಆತೋ? ಭಾಳ ತೊಂದ್ರೀ ಆಗಿ ಬಿಟ್ಟದ ಮಾರಾಯಾ. ಭಾಳ ಅಂದ್ರ ಭಾಳ, ಅಂತ ಚೀಪ್ಯಾ ಕೆಟ್ಟ ಮಸಡಿ ಮಾಡಿ ಹೇಳಿದ.

ಏನಲೇ ಅಂತಾ ತೊಂದ್ರೀ ಮಳಿಂದ? - ಅಂತ ಕೇಳಿದೆ.

ವಾರಗಟ್ಟಲೆ ಹಿಡಕೊಂಡು ಮಳಿ ಹೊಡದ್ರ ವಸ್ತ್ರ ಒಣಗೋದು ಹ್ಯಾಂಗೋ? ಅದೂ ಅಂಡರ್ವೇರ್ ಚಡ್ಡಿ, ಕಾಚಾ ಸಹಿತ ಒಣಗದ ಭಾಳ ಪ್ರಾಬ್ಲಮ್ ಆಗಿ ಬಿಟ್ಟದ, ಅನ್ಕೊತ್ತನ ಎಲ್ಲೆಲ್ಲೊ ಕರಾ ಪರಾ ಕರಾ ಪರಾ ಅಂತ ಕೆರಕೊಂಡು ಬಿಟ್ಟ.

ಏನಲೇ ಚೀಪ್ಯಾ ಕನ್ನಡ ವ್ಯಾಕರಣ ಒಳಗ 'ಗಡಬಾದೇಶ ಸಂಧಿ' ಇದ್ದಂಗ ಎಲ್ಲಾರ ಮುಂದನ ನಿನ್ನ 'ಕೆರತಾದೇಶ ಸಂಧಿ' ಒಳಗ ಮುಲಾಜಿಲ್ಲದ ಕೆರಕೊಂಡು ಬಿಟ್ಟಿಯಲ್ಲೋ? ಯಾರರ ನೋಡಿದ್ರ? ಛೀ!!! ಛೀ!!! ಕೆರಾ ಪರಾ ಅಂತ ಕೆರಕೊಂಡು ಸ್ವಾಮಿ ಕೆರಪರಾನಂದ ಸರಸ್ವತಿ ಆಗಿ ಬಿಟ್ಟಿ ನೋಡು!!! - ಅಂತ ಮೈಲ್ಡ್ ಆಗಿ ಝಾಡಿಸಿದೆ.

ಈ ಮಳಿ ಕಾಲದಾಗ  ಮಾರಾಯಾ! ಅರಿವಿ ಸರಿ ಒಣಗವಲ್ಲವು. ಮತ್ತ ದಿನಾ ಬ್ಯಾರೆ ವಸ್ತ್ರ, ಕಮ್ಮಿ ಕಮ್ಮಿ ಅಂದ್ರೂ ಚಡ್ಡಿ ಬನಿಯನ್, ಬ್ಯಾರೆ ಹಾಕ್ಕೊಳ್ಳಿಕ್ಕೆ ಬೇಕು ನೋಡು. ಅರ್ದಂಬರ್ಧಾ ಒಣಗಿದ್ದನ್ನೇ ಹಾಕ್ಕೊಂಡು ಏನೇನೋ ಕೆರತ ಮಾರಾಯಾ. ಒಮ್ಮೆ ಈ ಶನಿ ಅಂತಹ ಮಳಿ ಕಮ್ಮಿ ಆಗಿ, ಸೂರ್ಯಾ ಖಡಕ್ ಆಗಿ ಬಂದ ಅಂದ್ರ, ಗೋವಾ ಬೀಚ್ ಮ್ಯಾಲೆ ಎಲ್ಲಾ ಬಟ್ಟಿ ಕಳೆದು ಸೂರ್ಯ ಸ್ನಾನ ಮಾಡೋ ಹಿಪ್ಪಿಗಳ ಹಾಂಗ ಎಲ್ಲಾ ಕಳೆದು ಮಲಕೊಂಡು ಬಿಡೋ ಹಾಂಗ ಆಗಿ ಬಿಟ್ಟದ ನನ್ನ ಪರಿಸ್ಥಿತಿ. ಒದ್ದಿ ವಸ್ತ್ರಾ ಹಾಕ್ಕೊಂಡು ಹಾಕ್ಕೊಂಡು ಎಲ್ಲಾ ಒದ್ವದ್ದಿ ಆಗಿ, ಸೀದಾ ಗರಂ ಖಡಕ್ ಸೂರ್ಯಸ್ನಾನ ಮಾಡಿ, ಸೀದಾ ಬಾಡಿನೇ ಒಣಗಿಸಿಕೊಂಡು ಬಿಡೋದು. ಮಾಡೋಣ ಅಂದ್ರ ಮಳಿ ಬಿಟ್ಟರ ಅಲ್ಲಾ, ಅನಕೋತ್ತ ಚೀಪ್ಯಾ ಮತ್ತ ಕೈ ಕೆರತಾದೇಶ ಸಂಧಿ ಹತ್ರ ತೊಗೊಂಡು ಹೊಂಟಿದ್ದ. ಏ!!!ಖಬರದಾರ!!! ಆ ಸಂದ್ಯಾಗ ಕೈ ಹಾಕಿ, ಸಂಧಿಯೊಳಗ ಸಮಾರಾಧಿನಿ ಮಾಡಿ, ಕೆರಕೊಂಡರ ನೋಡು!!! ಅನ್ನೋ ಲುಕ್ ಕೊಟ್ಟೆ. ಕೈ ಸುಮ್ಮನೆ ತೊಗೊಂಡು ಬಂದ.

ಹೀಂಗ ಕಥಿ ಅದ ಅಂತ ಆತು. ಏನು ಮಂದಿಲೇ ನೀವು? ಒಂದು ಎರಡು ದಿವಸ ಮಳಿ ಬಂದರ ಅಂಗಿ ಚಡ್ಡಿ ಒಣಗಿಸಲಿಕ್ಕೆ ಇಷ್ಟು ತಿಣಕತೀರಿ. ನಮ್ಮ ಸಿರ್ಸಿ ಕಡೆ ಹೋಗಿ ನೋಡಿ ಬಾ. ತಿಳಿತದ. ತಿಂಗಳಾನಗಟ್ಟಲೆ ಬಿಟ್ಟು ಬಿಡದ ಮಳಿ ಹೊಡಿತದ. ಅಲ್ಲಿ ಮಂದಿ ಅಂಗಿ ಚಡ್ಡಿ ಒಂದs ಅಲ್ಲ, ಅವರು ತ್ವಾಟಕ್ಕ ರೇನ್ ಕೋಟ್ ಗತೆ ಹಾಕ್ಕೊಂಡು ಹೋಗೋ ಕಂಬಳಿ ಕೊಪ್ಪಿ ಸಹಿತ ಎರಡ ಮೂರ ತಾಸಿನೊಳಗ ಒಣಗಿಸಿಕೊಂಡು ಬಿಡ್ತಾರ. ಹೋಗಿ ಕಲಿತು ಬಾರೋ ಆ ಪದ್ಧತಿ. ಅದನ್ನ ಬಿಟ್ಟುಹಶಿ ವಸ್ತ್ರಾ ಹಾಕ್ಕೊಂಡು, ಕೆರತಾ ಎಬ್ಬಿಸಿಕೊಂಡು, ಕೆರತಾದೇಶ ಸಂಧಿಯೊಳಗ ಕೈ ಬಿಟಗೋತ್ತ ಕೂತಿ, ಅಂತ ಸಿರ್ಸಿ ಮಂದಿ ಹೊಗಳಿದೆ.

ಹಾಂಗ? ಅದು ಹ್ಯಾಂಗಪಾ? ಆ ಪರಿ ಮಳಿಗಾಳದಾಗ ಕಂಬಳೀ ಸಹಿತ ಒಣಗಿಸಿ ಬಿಡ್ತಾರ ಅಂದ್ರ? ಹಾಂ? ಏನು ಮ್ಯಾಜಿಕ್ ಮಾಡ್ತಾರೋ ಸಿರ್ಸಿ ಮಂದಿ? - ಅಂತ ಭಾರಿ ಆಶ್ಚರ್ಯದಿಂದ ಕೇಳಿದ ಚೀಪ್ಯಾ.

ಏ.... ಏನೂ ಮ್ಯಾಜಿಕ್ ಅದು ಇದು ಇಲ್ಲ. ಮಸ್ತ ಬೆಂಕಿ ಹಚ್ಚಿ, ಬೆಂಕಿ ಹೊಗಿ ಎಲ್ಲಾ ಸೀದಾ ಹಶಿ ವಸ್ತ್ರದ ಮ್ಯಾಲೆ ಫೋಕಸ್ ಮಾಡಿ ಬಿಡ್ತಾರ. ಅದಕ್ಕ 'ಹೊದಲು' ಅಂತ ಅಂತಾರ ಅಂತ ನೆನಪು. ಒಂದು ಎರಡು ಘಂಟೆ ಒಳಗ ಏಕದಂ ಗರಂ ಗರಂ ಅರಿವಿ. ಅದು ಅಡಿಕಿ ಸಿಪ್ಪಿಲೆ ಬೆಂಕಿ ಹಾಕ್ತಾರ ನೋಡು ಅದು ಭಾಳ ಗರಂ ಬೆಂಕಿ, ಅಂತ ಹೊದಲಿನ ಬಗ್ಗೆ ಹೇಳಿದೆ.

ನಾವು ಎಲ್ಲಿಂದ ಅಡಿಕಿ ಸಿಪ್ಪಿ ತಂದು ಬೆಂಕಿ ಹಾಕೋಣ ಮಾರಾಯಾ? ನಮ್ಮ ಕಷ್ಟ ನಮಗ, ಅಂತ ಮತ್ತ ಕೆರತಾದೇಶ ಸಂಧಿಯೊಳಗ ಅರ್ಜೆಂಟ್ ಕೆಲಸ ಅದ ಅನ್ನೋ ನೆನಪು ಆದ ಮಸಡಿ ಮಾಡಿದ.

ಮತ್ತ ನೀವು ಹ್ಯಾಂಗ ವಸ್ತ್ರಾ ಒಣಗಿಸಿಕೋತ್ತೀರಿ ಈಗ ಈ ಪರಿ ಮಳಿಗಾಲದಾಗ? - ಅಂತ ಕೇಳಿದೆ.

ಕುಕ್ಕರ್ ಮ್ಯಾಲೆ, ತವಾ ಮ್ಯಾಲೆ ವಸ್ತ್ರಾ ಇಟ್ಟು ಇಟ್ಟು ಅಷ್ಟೋ ಇಷ್ಟೋ ಒಣಗಿಸೋದು ನೋಡಪಾ. ಭಾಳ ತೊಂದ್ರೀ. ಮ್ಯಾಲಿಂದ ಹಶಿ ವಸ್ತ್ರಾ ಹಾಕಿಕೊಂಡರ ಕೆರತ ಬ್ಯಾರೆ, ಅಂತ ಹಶಿ ವಸ್ತ್ರಾಂಬರ ಚೀಪ್ಯಾ ಬೇಜಾರು ಮಾಡಿಕೊಂಡ. ಗಜಚರ್ಮಾಂಬರ ಶಿವ ಆದ್ರ ಹಶಿ ಹಶಿ ವಸ್ತ್ರಾಂಬರ ನಮ್ಮ ಚೀಪ್ಯಾ!

ಹಾಂ!!! ಏನು? ಕುಕ್ಕರ್ ಮ್ಯಾಲೆ ಮತ್ತ ತವಾ ಅಂದ್ರ ಚಪಾತಿ ಭಕ್ಕರಿ ಮಾಡೋ ತವಾ ಮ್ಯಾಲೆ ವಸ್ತ್ರಾ ಇಟ್ಟು ಹಶಿ ವಸ್ತ್ರಾ ಸ್ವಲ್ಪ ಗರಂ ಮಾಡಿಕೋತ್ತೀರಿ ಏನು? ಹ್ಯಾಂಗ ಅದು? - ಅಂತ ಕೇಳಿದೆ.

ನೋಡೋ! ಸಿಂಪಲ್ ಅದು. ಒಂದು ಬರ್ಶನ್ (ಗ್ಯಾಸ್ ಸ್ಟವ್) ಗೆ ನಾಕು ಒಲಿ ಇರ್ತಾವ. ಒಂದರ ಮ್ಯಾಲೆ ಕುಕ್ಕರ್ ಇಡ್ತೇವಿ. ಉಳಿದ ಮೂರರ ಮ್ಯಾಲೆ ತವಾ ಇಟ್ಟು ಬಿಡ್ತೇವಿ. ಒಂದು ತವಾ ಮ್ಯಾಲೆ ಚಪಾತಿ, ಭಕ್ಕರಿ ಮಾಡ್ತೇವಿ. ಇನ್ನೆರಡು ತವಾ ಮ್ಯಾಲೆ ಹಶಿ ವಸ್ತ್ರಾ ಇಟ್ಟು ಬಿಡ್ತೇವಿ. ಕುಕ್ಕರ್ ಮ್ಯಾಲೂ ಹಶಿ ವಸ್ತ್ರಾ ಹಾಕಿ ಬಿಡ್ತೇವಿ. ಚಪಾತಿ ಭಕ್ಕರಿ ಹೀಂಗ ಹಾಂಗ ಆ ಕಡೆ ಈ ಕಡೆ ತಿರುವಿ ಹಾಕಿದಂಗ ಹಶಿ ಅರವಿನೂ ತಿರುಗಿ ತಿರುಗಿ ಹಾಕ್ತೇವಿ. ಏನಪಾ? ಒಟ್ಟಿನ್ಯಾಗ ಸುಮಾರು ಹೊತ್ತು ಆದ ಮ್ಯಾಲೆ ಬಟ್ಟಿ ಏನೋ ಒಂದು ತರಹ ಸುಮಾರು ಒಣಾ ಒಣಾ ಆಗ್ತಾವ. ಅವನ್ನs ಹಾಕ್ಕೊಂಡು ಕರಾ ಪರಾ ಕೆರಕೋತ್ತ ಇರೋದು. ಸೂಡ್ಲಿ ಮಳಿಗಾಲ. ಪೂರ್ತಿ ಒದ್ದಿ ಅರಿವಿ ಹಾಕಿಕೊಳ್ಳೋದ್ರಕಿಂತ ಎಷ್ಟೋ ಬೆಟರ್, ಅಂತ ಅವರ ಮನಿಯೊಳಗ ಹ್ಯಾಂಗ ಅಂಗಿ ಚಡ್ಡಿ ಒಣಗಿಸ್ತಾರ ಅಂತ ಹೇಳಿದ.

ವಾರೇ ವಾಹ್!!! ಏನ್ ಮಸ್ತ ತಲಿ ಇಟ್ಟೀರಿಪಾ? ಕ್ಯಾ ಐಡಿಯಾ ಸರ್ ಜೀ? ಅಂತೂ ಹ್ಯಾಂಗೋ ಮಾಡಿ ಏನೋ ಒಂದು ನಮೂನಿ ಒಣಾ ವಸ್ತ್ರಾ ಹಾಕಿಕೊಂಡು ಹೋಗ್ತೀರಿ ಅಂತ ಆತು. ಒಳ್ಳೇದು, ಅಂತ ಹೇಳಿದೆ.

ಹೀಂಗ ವಸ್ತ್ರಾ ಒಣಗಿಸೋ ಕಾರಬಾರ ಒಳಗಾ ಮೊನ್ನೆ ಒಂದು ಗಡಬಿಡಿ ಆಗಿ ಬಿಟ್ಟಿತ್ತು. ಗೊತ್ತದ ಏನು? - ಅಂತ ಕೇಳಿದ ಚೀಪ್ಯಾ.

ಏನಾಗಿತ್ತಪಾ ಗಡಿಬಿಡಿ? ನಿಮ್ಮ ಹೆಂಡ್ರು ರೂಪಾ ವೈನಿ ನಿನ್ನ ಅಂಡರ್ವೇರ್ ಚಡ್ಡಿ ಎಲ್ಲೆರೆ ಸುಟ್ಟು ಬಿಟ್ಟಿದ್ದರು ಏನು? ಅಂತ ಕೇಳಿದೆ.

ಏನಾಗಿತ್ತಪಾ ಅಂದ್ರ, ನಿನಗ ಗೊತ್ತಲ್ಲ ನಮ್ಮ ಬಾಜೂ ಮನಿ ಯಾರದ್ದು ಅಂತ? ಅವ ಯಬಡ ಗಂಡಾ ಹೆಂಡ್ತೀದು. ಮ್ಯಾಲಿಂದ ಆ ಗೋಪ್ಯಾ ಅನ್ನೋ ಸಣ್ಣ ಕೂಸು ಕುನ್ನಿ ಬ್ಯಾರೆ, ಅಂತ ಹೇಳಿ ಒಂದು ಸಣ್ಣ ಬ್ರೇಕ್ ತೊಗೊಂಡ ಚೀಪ್ಯಾ.

ಓಹೋ ಅವರು! ಬ್ರಹ್ಮಾನಂದ ಮತ್ತ ಕಾವೇರಿ ದಂಪತಿಗಳು. ನಿಮ್ಮ ಬಾಜೂ ಮನಿಯನವರು. ಇಬ್ಬರೂ ನೌಕರಿ ಮಾಡ್ತಾರ. ಭಾಳ ಗಡಬಿಡಿ ಒಳಗ ಇರ್ತಾರ. ಅವರ ಮಗಾ ಗೋಪಾಲ. ನಿಮ್ಮ ಕುಂತಿ ನಿಂತಿ ಜೋಡಿಯವ ಇರಬೇಕು ಅಲ್ಲ? - ಅಂತ ಕೇಳಿದೆ.

ಬರೋಬ್ಬರಿ. ಅವನ ಗೋಪ್ಯಾ. ಕುಂತಿ ನಿಂತಿಗಿಂತ ಇನ್ನೂ ಸಣ್ಣವ. ಈಗ ಒನ್ನೆತ್ತಾ ಅವಾ. ಆವಾ ಕುಂತಿ ನಿಂತಿ ಜೊತಿಗೇ ಸಾಲಿಗೆ ಹೋಗ್ತಾನ. ಸಾಲಿ ಯುನಿಫಾರ್ಮ್ ಅಂಗಿ ಚೊಣ್ಣ ಹಾಕಿಕೊಂಡು ಬಂದಾ. ನಾವೆಲ್ಲಾ ಇನ್ನೂ ಊಟ ಮಾಡ್ಲಿಕತ್ತಿದ್ದಿವಿ. ಬಂದಾ ಗೋಪ್ಯಾ. ವಾಡಿಕಿ ಪ್ರಕಾರ ನಮ್ಮ ಮಿಸೆಸ್ ಉರ್ಫ್ ನಿಮ್ಮ ರೂಪಾ ವೈನಿ, ಗೋಪು ಊಟ ಮಾಡ್ತಿ ಏನಪಾ? ಅಂತ ಕೇಳಿದಳು. ಆವಾ ಗೋಪ್ಯಾ, ನಂದು ಊಟ ಆತ್ರೀ ಮಾಮಿ, ಅಂತ ಅಂದ. ನಿಮ್ಮ ರೂಪಾ ವೈನಿಗೆ ಕಂಡ ಕಂಡವರ ಚಡ್ಡಿ ಮುಟ್ಟಿ ರೂಢಾ ನೋಡು. ಅಂದ್ರ ಮಳಿಗಾಲದಾಗ ಸಣ್ಣ ಹುಡುಗುರ ಚಡ್ಡಿ ಚೊಣ್ಣ ಮುಟ್ಟಿ ಮುಟ್ಟಿ, ನೋಡಿ ನೋಡಿ, ಒಣ ಅವನೋ ಇಲ್ಲೋ ಅಂತ ಟೆಸ್ಟ್ ಮಾಡ್ತಾಳ ಅಂತ ಅಷ್ಟ ಮತ್ತ. ಮತ್ತೆಲ್ಲರ ರೂಪಾ ವೈನಿ ಎಲ್ಲಾರ ಚಡ್ಡಿ ಮುಟ್ಟತಾಳ, ಚೊಣ್ಣ ಕಳಿತಾಳ ಅಂತ ಹೇಳಿ ಬಿಟ್ಟಿ ಮಾರಾಯಾ. ಅಪಾರ್ಥ ಆಗಿ ಬಿಡ್ತದ, ಅಂತ ಅಂದ ಚೀಪ್ಯಾ.

ಇಲ್ಲಪಾ!!! ಹಂಗೆಲ್ಲ ಹೇಳಂಗಿಲ್ಲ. ರೂಪಾ ವೈನಿ ಗೋಪೂನ ಚೊಣ್ಣ ಮುಟ್ಟಿ ನೋಡಿದಳು ಅಂತ ಆತು. ಚೊಣ್ಣ ಹಶಿ ಇತ್ತೋ ಇಲ್ಲ ಅವನವ್ವ ಕಾವೇರಿ ಚೊಣ್ಣ ಒಣಿಗಿಸಿ ಹಾಕಿ ಕಳಿಸಿದ್ದಳೋ ? - ಅಂತ ಕೇಳಿದೆ.

ಗೋಪ್ಯಾನ ಅವ್ವ ಎಲ್ಲಿಂದ ಚಡ್ಡಿ ಚೊಣ್ಣ ಒಣಿಗಿಸಿ ಹಾಕಿ ಕಳಿಸ್ಯಾಳೋ? ಹುಡುಗನ ಚೊಣ್ಣ ಹಶಿ ಹಶಿನs ಇತ್ತು. ಪಾಪ! - ಅಂತ ಕಾವೇರಿಯೆಂಬ ಮಾತೆ ಮಗನಿಗೆ ಹಶಿ ಚೊಣ್ಣ ಹಾಕಿ ಕಳಿಸಿಬಿಟ್ಟಿದ್ದಳು ಅಂತ ಹೇಳಿದ.

ಹಾಂಗ? ನಿಮ್ಮಗತೆ ಒಲಿ ಮ್ಯಾಲೆ, ಕುಕ್ಕರ್ ಮ್ಯಾಲೆ, ತವಾ ಮ್ಯಾಲೆ ಚೊಣ್ಣ ಇಟ್ಟು ಸ್ವಲ್ಪ ಒಣಗಿಸಿ ಹಾಕಿ ಕಳಿಸಲಿಕ್ಕೆ ಏನು ಧಾಡಿ ಆಗಿತ್ತೋ ಅಕಿ ಕಾವೇರಿಗೆ? ಕೆಲಸಕ್ಕ ಹೋಗ್ತಾಳ ಖರೆ. ಆದ್ರ ಹಶಿ ಚೊಣ್ಣ ಹಾಕ್ಕೊಂಡ ಸಣ್ಣ ಹುಡುಗಾ ಜ್ವರಾ ಆಗಿ ಮಲಕೊಂಡರ ಏನ ಮಾಡ್ತಾಳ ಮಹಾ ಮಾತೆ? - ಅಂತ ಆಕ್ಷೇಪ ಮಾಡಿ ಕೇಳಿದೆ.

ಅಯ್ಯೋ! ಒಲಿ ಮ್ಯಾಲೆ, ತವಾ ಮ್ಯಾಲೆ, ಕುಕ್ಕರ್ ಮ್ಯಾಲೆ ಇಟ್ಟು ಹಶಿ ವಸ್ತ್ರಾ ಒಣಗಿಸಲಿಕ್ಕೆ ಅಕಿ ಕಾವೇರಿ ಒಲಿ ಹಚ್ಚಿದರ ಅಲ್ಲಾ. ಅಕಿ ಮೈಕ್ರೋವೇವ್ ಒಳಗ ಹಳೆ ಪಳೆ ಅಡಿಗಿ ಬಿಸಿ ಮಾಡಾಕಿ ಅಷ್ಟ ನೋಡು. ವಾರಕ್ಕೊಮ್ಮೆ ಅಡಿಗಿಯಾಕಿ ಬಂದು ಅಡಿಗಿ ಮಾಡಿ ಹೋಗ್ತಾಳ. ಇಕಿ ಫ್ರಿಜ್ ಒಳಗ ಹೆಟ್ಟಿ ಇಡ್ತಾಳ ಏನಪಾ. ಊಟದ ಹೊತ್ತಿಗೆ ತೆಗೆದು ಸುತ್ತಿಗಿ ತೊಗೊಂಡು ಢಂ ಢಂ ಅಂತ ಕಲ್ಲು ವಡ್ಡರು ಕಲ್ಲು ಒಡದಂಗ ಮೊದಲು ಒಡಿತಾಳ. ಯಾಕಂದ್ರ ಫ್ರೀಜರ್ ಒಳಗ ಇಟ್ಟ ಅಡಿಗಿ ಎಲ್ಲಾ ಘಟ್ಟೆ ಕಲ್ಲು ಆದಂಗ ಆಗಿ ಬಿಟ್ಟಿರ್ತಾವ ನೋಡು. ಕಲ್ಲಿನ ಗತೆ ಒಡದು, ಅದರ ಮ್ಯಾಲೆ ನೀರು ಗೊಜ್ಜಿ, ಮೈಕ್ರೋವೇವ್ ಒಳಗ ಬಿಸಿ ಮಾಡಲಿಕ್ಕೆ ಇಟ್ಟಳು ಅಂದ್ರ ಕಾವೇರಮ್ಮನ ಅಡಿಗಿ ಮುಗದಂಗ. ಮೂರು ಪ್ಲೇಟ್ ಬಿಸಿ ಮಾಡಿ ಮೂರು ಮಂದಿ ಗಡಿಬಿಡಿಯಾಗ ಮುಕ್ಕಿ ಹೋದರು ಅಂದ್ರ ಮುಗೀತು. ಸಂಜಿ ಮುಂದ ಬಂದು ಮತ್ತ ಅದ ಚಾಲೂ. ಆ ಫ್ರೀಜರ್ ಒಳಗ ಇಟ್ಟ ತೊವ್ವಿ ನೋಡಿದರ ಒಳ್ಳೆ ಝುಣಕದ ವಡಿ ಹಾಂಗ ಆಗಿ ಬಿಟ್ಟಿರ್ತದ. ಇನ್ನೂ ಸ್ವಲ್ಪ ದಿನದ ಮ್ಯಾಲೆ ಅದನ್ನ ಒಡಿಲಿಕ್ಕೆ ಇಕಿ ಕಡೆ ಸಾಧ್ಯ ಇಲ್ಲ ನೋಡಪಾ. ಅದಕ್ಕ ಪ್ರೊಫೆಷನಲ್ ವಡ್ಡರೇ ಬರಬೇಕಾದೀತು, ಅಂತ ಹೇಳಿದ ಚೀಪ್ಯಾ.

ಹ್ಞೂ....ಮೈಕ್ರೋವೇವ್ ಅಡಿಗಿ ಕಾರಣದಿಂದ ಸಣ್ಣ ಹುಡುಗ ಗೋಪು ಹಶಿ ಚೊಣ್ಣ ಹಾಕಿಕೊಂಡು ಬಂದಿದ್ದ ಅಂತ ಆತು. ಗೋಪುನ್ನ ಚೊಣ್ಣ ಹಾಕಿ ಮೈಕ್ರೋವೇವ್ ಒಳಗs ಒಂದು ಐದು ನಿಮಿಷ ಕೂಡಿಸಿ ಬಿಟ್ಟಿದ್ದರ ಮಸ್ತ ಗರಂ ಆಗಿ ಬರ್ತಿತ್ತು ಹುಡುಗ. ಆ ಐಡಿಯಾ ಕಾವೇರಿಗೆ ಬರಲಿಲ್ಲ ಅಂತ ಅನ್ನಸ್ತದ. ನಾ ಹೇಳತೇನಿ ತೊಗೋ ಅಕಿಗೆ, ಅಂತ ಹೇಳಿದೆ.

ಆ ಐಡಿಯಾ ಒಂದು ಕೊಡಬ್ಯಾಡ ಅಕಿಗೆ ಮಾರಾಯಾ. ಪಾಪ ಸಣ್ಣ ಹುಡುಗನ್ನ ಮೈಕ್ರೋವೇವ್ ಒಳಗ ಕೂಡಿಸಿ ವಸ್ತ್ರಾ ಒಣಗಿಸಿ ಬಿಡಾಕಿನ ಅಕಿ. ಅಕಿ ಗಂಡ ಬ್ರಹ್ಮಾನಂದನ ಕುಂಡಿ ಸುಟ್ಟು ಬಿಟ್ಟಿದ್ದಳು ಕಾವೇರಿ. ಗೊತ್ತದ ಏನು? - ಅಂತ ಏನೋ ರಹಸ್ಯ ಹೇಳೋವಾಂಗ ಹೇಳಿದ ಚೀಪ್ಯಾ.

ಹಾಂ!!! ಏನು? ಬ್ರಹ್ಮಾನಂದನ ಬ್ರಹ್ಮಾಂಡವನ್ನೇ ಸುಟ್ಟಿದ್ದಳಾ ಕಾವೇರಿ? ಹ್ಯಾಂಗ? - ಅಂತ ಕೇಳಿದೆ.

ಇಕಿ ಆಲಸಿ ಕಾವೇರಿ ಒಮ್ಮೆ ಅವನ ಪ್ಯಾಂಟಿಗೆ ಇಸ್ತ್ರಿ ಹಾಕೋದ ಮರ್ತು ಬಿಟ್ಟಾಳ. ಮಂಡೆ  ಅಂದ್ರ ಸೋಮವಾರ ಮುಂಜಾನೆ ಮಂಡೆ (ತಲೆ) ಬಿಸಿ. ತಾವೂ ನೌಕರಿಗೆ ಹೋಗಬೇಕು. ಹುಡುಗನ್ನ ಸಾಲಿಗೆ ಕಳಿಸಬೇಕು. ಅಂತಾದ್ರಾಗ ಇವಾ ಬ್ರಹ್ಮಾನಂದ ಬ್ಯಾರೆ ತನ್ನ ಪ್ಯಾಂಟ್ ಇಸ್ತ್ರಿ ಆಗಿಲ್ಲ ಅಂತ ಶಟಗೊಂಡು ಕೂತಿದ್ದ ಅಂತ. ಕಾವೇರಿಗೆ ಕಾವು ಏರಿತು ನೋಡು. ಹಾಕ್ಕೊರೀ ಪ್ಯಾಂಟು! ಹಾಕ್ಕೊತ್ತಿರೋ ನಾಕು ಹಾಕಲೋ, ಅಂತ ಗಂಡಗ ಧಮಿಕಿ ಕೊಟ್ಟಾಳ. ಕಾವೇರಿದ ಕಾವೇರಿ ಖರೇನಾ ಕಡತಾ ಹಾಕಿ ಬಿಟ್ಟಾಳು ಅಂತ ಇಸ್ತ್ರಿ ಇಲ್ಲದ ಪ್ಯಾಂಟ್ ಹಾಕ್ಕೊಂಡ ಅಂತ ಬ್ರಹ್ಮ್ಯಾ. 

ಇಸ್ತ್ರೀ ಬೇಕಾ ನಿಮಗ ಇಸ್ತ್ರೀ? ಮಾಡ್ತೇನಿ ತಡೀರಿ, ಅಂತ ಇಸ್ತ್ರಿ ಗರಂ ಮಾಡ್ಯಾಳ ಇಕಿ ಕಾವೇರಿದ ಕಾವೇರಿ ಎಂಬ ಸ್ತ್ರೀ. ಶಟಗೊಂಡು ಕೂತಿದ್ದು ಉಪಯೋಗ ಆತು, ಪ್ಯಾಂಟ್ ಇಸ್ತ್ರಿ ಮಾಡಿ ಕೊಡ್ತಾಳ ಅಂತ ಬ್ರಹ್ಮ್ಯಾ ಕಾದು ಕೂತಾನ. ಕಾದು ಮಸ್ತ ಕೆಂಪ ಆದ ಇಸ್ತ್ರಿ ತಂದು, ಬ್ರಹ್ಮಾನಂದನ ಹಾಕ್ಕೊಂಡ ಪ್ಯಾಂಟ್ ಮ್ಯಾಲೇ ಜರಾ ಬರಾ ಅಂತ ತಿಕ್ಕಿ ಬಿಡಬೇಕಾ ಇಕಿ ಸೂಡ್ಲಿ ಕಾವೇರಿ?!!! ಬ್ರಹ್ಮ್ಯಾ ಹೀಂಗ ಹೊಯ್ಕೊಂಡಾ ಅಂದ್ರ ಇಡೀ ಓಣಿ ಮಂದಿ ಓಡಿ ಹೋಗಿ ನೋಡಿದ್ರ ಕುಂಡಿ ಮ್ಯಾಲೆ ಪರ್ಮನೆಂಟ್ ಇಸ್ತ್ರಿ ಕೂತು ಬಿಟ್ಟದ. permanent press ಅನ್ನೋ ಇಸ್ತ್ರೀ ಬ್ಯಾಡದಿರುವ ಪ್ಯಾಂಟ್ ನೋಡಿದ್ದೇ ಮಾರಾಯಾ. ಈಗ ಬ್ರಹ್ಮಾನಂದನ ಕುಂಡಿ ಹೀಂಗ ಇಸ್ತ್ರೀ ಆಗಿ ಬಿಟ್ಟದ ಅಂದ್ರ ಎಂತಾ ಮುದ್ದಿ ಮುದ್ದಿ ಆದ ಪ್ಯಾಂಟ್ ಹಾಕ್ಕೊಂಡ್ರೂ ಏಕದಂ ಖಡಕ್ ಇಸ್ತ್ರಿ ಹಾಕಿಕೊಂಡವರ ಗತೆ ಕಾಣ್ತಾನ ನಮ್ಮ ದೋಸ್ತ! - ಅಂದ ಚೀಪ್ಯಾ.

ಹೋಗ್ಲಿ ಬಿಡಪಾ. ಎಲ್ಲಾರ ಮನಿ ದ್ವಾಶಿ (ದೋಸೆ) ತೂತ ನೋಡಪಾ. ಅಕಿ ಕಾವೇರಿ ಗಂಡ ಬ್ರಹ್ಮಾನಂದನ ಕುಂಡಿಯಾರ ಸುಡಲಿ ಇಲ್ಲಾ ಉಂಡಿಯಾರ ಕೊಡಲಿ, ನಮಗೇನು? ನಿನ್ನ ಹೆಣ್ತೀ ಉರ್ಫ್ ರೂಪಾ ವೈನಿ ಹ್ಯಾಂಗ ಆ ಸಣ್ಣ ಹುಡುಗ ಗೋಪೂನ ಚೊಣ್ಣ ಒಣಗಿಸದಳು ಅದನ್ನು ಹೇಳಪಾ, ಅಂತ ಚೀಪ್ಯಾನ ಬ್ಯಾಕ್ ಟು ಟಾಪಿಕ್ ತೊಗೊಂಡು ಬಂದೆ.

ನಮ್ಮ ರೂಪಾ ಗೋಪೂನ ಚೊಣ್ಣ ಮುಟ್ಟಿ ನೋಡಿ, ಇನ್ನೂ ಹಶಿ ಹಶಿ ಇರೋದು ನೋಡಿ, ಫೀಲ್ ಮಾಡಿಕೊಂಡು, ಗಂಡ ಮಕ್ಕಳು ಇಲ್ಲ ನೋಡು, ಗೋಪ್ಯಾನ್ನ ತನ್ನ ಮಗಾ ಅಂತ ತಿಳ್ಕೊಂಡು ಬಿಟ್ಟಾಳ ನೋಡು, ಅಯ್ಯ ನನ್ನ ಮುದ್ದು ಕೂಸ! ಗೋಪು!!! ಏನಪಾ ನಿಮ್ಮ ಅವ್ವಾ ಹಶಿ ಚೊಣ್ಣನ ಹಾಕಿ ಕಳಿಸಿ ಬಿಟ್ಟಾಳಲ್ಲೋ!!!ನನ್ನ ಕೂಸ!!! ತೆಗೆದು ಕೊಡಪಾ. ಒಳ್ಳೆ ಹುಡುಗ. ನಿಮ್ಮ ನಿಂತಿ ಅಕ್ಕಾ ಕುಂತಿ ಅಕ್ಕಾದು ಊಟ ಆಗೋ ತನಕಾ ನಿಂದೂ ಚೊಣ್ಣ ಒಣಗಿಸಿ ಕೊಟ್ಟು ಬಿಡ್ತೇನಿ. ಕೊಡಪಾ ರಾಜಾ!!! ಕೊಡೋ ರಾಜಾ!!ಬಂಗಾರದಂತ ಗೋಪು! - ಅಂತ ಗೋಪ್ಯಾನ ಕಡೆ ಚೊಣ್ಣ ಬಿಚ್ಚಿ ಕೊಡಲಿಕ್ಕೆ ಕೇಳ್ಯಾಳ ನಮ್ಮ ರೂಪಾ. 

ಹುಡುಗ ಗೋಪಾಲ ಸಣ್ಣವ ಇದ್ದರ ಏನಾತು, ಎಲ್ಲರ ಮುಂದ ಚೊಣ್ಣ ಹ್ಯಾಂಗ ಬಿಚ್ಚಿ ಕೊಟ್ಟಾನು? ಅವನೂ ತನ್ನ ಆಟ ಶುರು ಮಾಡಿದ. 

ರೂಪಾ ಮಾಮಿ, ರೂಪಾ ಮಾಮಿ! ನನಗ ನಾಚಿಗಿ ಬರ್ತದರೀ! - ಅಂದಾ ಗೋಪು. 

ಏನು ನಾಚಿಗಿಯೋ? ಅದೂ ಒನ್ನೆತ್ತಾ ಹುಡುಗಗ? ಯಾಕ ನಾಚಿಗಿ? - ಅಂತ ಕೇಳ್ಯಾಳ ರೂಪಾ. 

ಮಾಮಿ...ಮಾಮಿ....ಮತ್ತ ಮತ್ತ ....ನಿಂತಿ ಕುಂತಿ ಇದ್ದಾರ, ಶ್ರೀಪೂ (ಶ್ರೀಪಾದ) ಮಾಮ ಇದ್ದಾರ. ಅದಕ್ಕ ನಾಚಿಗಿ ಬರ್ತದರೀ , ಅಂತ ಗೋಪು ನಾಚಿಕೊಂಡ. 

ಗೋಪು!! ನಾ ಭಾಳ ಗಡಿಬಿಡಿ ಒಳಗ ಇದ್ದೇನಿ. ಸುಮ್ಮನ ಲಗೂನ ಚೊಣ್ಣ ಬಿಚ್ಚಿ ಕೊಡು. ತಲಿಹರಟಿ ಮಾಡಬ್ಯಾಡ. ಹಶಿ ಚೊಣ್ಣ ಹಾಕ್ಕೊಂಡು ಹೋಗಿ ನಾಳೆ ಜ್ವರಾ ಬಂದ್ರ ಏನು ಮಾಡ್ತೀ? ಡಾಕ್ಟರ ದೊಡ್ಡ ದೊಡ್ಡ ಸೂಜಿ ಒಳಗ ನಿನ್ನ ಸಣ್ಣ ಸಣ್ಣ ಕುಂಡಿ ಮ್ಯಾಲೆ ಇಂಜೆಕ್ಷನ್ ಕೊಡ್ತಾರ. ಕುಂಡಿ ಪೂರ್ತಿ ತೂತು ಬಿದ್ದು ಹೋಗ್ತಾವ. ತೊಗೋತ್ತಿ ಅಷ್ಟು ಇಂಜೆಕ್ಷನ್? ಹಾಂ? ಹಾಂ? ನಾಚಿಗಿ ಅಂತ ನಾಚಿಗಿ!!!ಲಗೂನ ಚೊಣ್ಣ ಬಿಚ್ಚಿ ಕೊಡೊ! ಕಾಡಬ್ಯಾಡ!! - ಅಂತ ಸಣ್ಣ ಹುಡುಗ ಗೋಪೂಗ ರೂಪಾ ವೈನಿ ಸ್ಟ್ರಿಕ್ಟ್ ಆಗಿ ಹೇಳಿದರು ಅಂತ ಆತು. 

ಇಲ್ಲರೀ ಮಾಮಿ, ನಾ ಚೊಣ್ಣ ಬಿಚ್ಚಿ ಕೊಡಂಗಿಲ್ಲರೀ, ಅಂತ ಹಠ ಹಿಡಿದು ಕೂತಾ ಗೋಪು. 

ನಿಮ್ಮ ರೂಪಾ ವೈನಿ ಅಂದ್ರ ಏನಂತ ತಿಳ್ಕೊಂಡಿ? ಯಾರ ಯಾರದ್ದೋ ಚೊಣ್ಣ ಕಳದು ಬಿಟ್ಟಾಳ. ಇನ್ನು ಒಂದು ಛೋಟ್ಯಾನ ಚೊಣ್ಣ ಕಳಿಯೋದು ದೊಡ್ಡದ? - ಅಂತ ಚೀಪ್ಯಾ ಅವನ ಹೆಂಡತಿಯ ಚೊಣ್ಣ ಕಳಿಯೋ ಸ್ಕಿಲ್ ಬಗ್ಗೆ ಹೆಮ್ಮೆ ಪಟ್ಟುಗೊಂಡ. 

ಚೀಪ್ಯಾ....ಚೀಪ್ಯಾ....ನೋಡ್ಕೊಂಡು ಮಾತಾಡಪಾ ರೂಪಾ ವೈನಿ ಯಾರ್ಯಾರದ್ದೋ ಚೊಣ್ಣ ಕಳದು ಬಿಟ್ಟಾರ ಅಂದ್ರ ತಪ್ಪು ಅರ್ಥ ಬರ್ತದಪಾ, ಅಂತ ಮೈಲ್ಡ್ ಆಗಿ ಹೇಳಿದೆ. 

ಹೌದ!!! ಹೌದ!!! ಮಾತಿಗೆ ಹೇಳಿದರ literal ಆಗಿ ತಿಳಕೊಂಡು, ನಿಮ್ಮ ರೂಪಾ ವೈನಿ ಎಲ್ಲಾ ರಾಜಾ ಮಹಾರಾಜರದ್ದು ಚೊಣ್ಣ ಕಳೆದು ಬಿಟ್ಟಾಳೋ ಅನ್ನೋ ಹಾಂಗ ಮಾತಾಡ್ತೀ, ಅಂತ ನನಗs ಬಾರಿಸಿದ. ಕೆಲೊ ಮಂದಿಗೆ subtle ಆಗಿ ಹೇಳಿದರ ತಿಳಿಯಂಗಿಲ್ಲ. 

ಮುಂದ ಏನು ಮಾಡಿದ್ರು ರೂಪಾ ವೈನಿ? ಗೋಪಾಲನ ಚೊಣ್ಣ ಕಳದರೋ ಇಲ್ಲೋ? - ಅಂತ ಕೇಳಿದೆ.

ಏನ ಆಟಾ ಹಚ್ಚಿ ಏನು? ಯಾರ್ಯಾರದ್ದೋ ಚೊಣ್ಣ ಚಡ್ಡಿ ಕಳೆದು ಒಣಗಿಸಿ ಕೊಟ್ಟೇನಿ ಅಂತ, ನಿನ್ನ ಚೊಣ್ಣ ಕಳಿಯೋದೇನು ದೊಡ್ಡದೋ ಛೋಟ್ಯಾ ಮಂಗ್ಯಾನಿಕೆ, ಅಂದವರ ರೂಪಾ ವೈನಿ ಸೀದಾ ಅವನ ಚೊಣ್ಣದ ಮುಂದ ಕೈ ಹಾಕ್ಯಾರ. by instinct ಗೋಪಾಲನ ಕೈ ಮುಂದ ಬಂದು ಹಿಂದ ಪೂರ್ತಿ expose ಆಗ್ಯದ. ರೂಪಾ ವೈನಿ ಏಕ್ದಂ ಬ್ಯಾಕ್ ಫುಟ್ ಮ್ಯಾಲೆ ಹೋಗಿ ಕವರ್ ಡ್ರೈವ್ ಮಾಡಿದ ಹೊಡೆತಕ್ಕ ಹುಡುಗನ ಚೊಣ್ಣ ಫುಲ್ ಕೆಳಗ ಇಳಿದು, ಹಿಂಬಾಗ ಫುಲ್ uncover ಆಗಿ, ಹುಡುಗ ಏಕ್ದಂ ಘಾಬ್ರ್ಯಾಗಿ,  ಕೈ ಹಿಂದ ತೊಗೊಂಡು ಹೋಗ್ಯಾನ. ಇದs ಚಾನ್ಸ್ ಅಂತ ಹೇಳಿ, ಕುಂತಿ ನಿಂತಿಯರ ಹರ್ಷೋದ್ಗಾರದ ನಡುವೆ ಗೋಪ್ಯಾನ ಚೊಣ್ಣ ಮುಂದೂ ಸಹ ಇಳಿಸಿ, ಕಾಲು ಎತ್ತಿಸಿ, ಕೈಯಾಗ ತೊಗೊಂಡು ಬಿಟ್ಟರು ವೈನಿ. 'ಆಪರೇಷನ್ ಚೊಣ್ಣ ಕಳಿ' ಮುಗೀತು!

ಮಾಮಿ!!! ನನ್ನ ಚೊಣ್ಣ ಕಳದ್ರೀ!!!!ಊ.... ಊ....ರೂಪಾ ಮಾಮಿ ಕೆಟ್ಟ ಇದ್ದಾರ.....ಊ.... ಊ....ಅಂತ ಸಣ್ಣ ಗೋಪು ಅತ್ತ. ಅಥವಾ ಅತ್ತಂಗ ಮಾಡಿದ. 

ಶೇಮ್ ಶೇಮ್ ಪಪ್ಪಿ ಶೇಮ್, ಅಂತ ನಿಂತಿ ಕುಂತಿ ಆ ಗೋಪಾಲನ್ನ ಕಾಡಿಸಿದರು. ಆವಾ ಆವಾಜ ಇನ್ನೂ ಜೋರ್ ಮಾಡಿದ. ಚೊಣ್ಣ ಕಳಿಸಿಕೊಂಡಿದ್ದು ಒಂದು ಕಡೆ ಆದ್ರ ನಿಂತಿ ಕುಂತಿ ಅಂತಹ ಹುಡುಗ್ಯಾರ ಕಡೆ ಚಾಸ್ಟಿ ಬ್ಯಾರೆ ಮಾಡಿಸ್ಕೋಬೇಕು. ಡಬಲ್ ಟ್ರಾಜೆಡಿ. 

ಏ!!! ನಿಂತಿ ಕುಂತಿ!!! ಸುಮ್ಮನ ಊಟ ಮಾಡ್ರೀ. ಗೋಪೂಗ ಯಾಕ ಕಾಡ್ತೀರಿ? ಆವಾ ಇನ್ನೂ ಸಣ್ಣವ ಇದ್ದಾನ, ಅಂತ ಮಕ್ಕಳಿಗೆ ಝಾಡಿಸಿ, ಗೋಪಣ್ಣ!!! ಗೋಪೂ!!! ನೀನು ಈ ತಂಬಿಟ್ಟು ತಿನ್ನು. ಏನೂ? ಅಲ್ಲಿ ತನಕಾ ನಿನ್ನ ಚೊಣ್ಣ ಒಲಿ ಮ್ಯಾಲಿರೋ ಬಿಸಿ ಬಿಸಿ ತವಾ ಮ್ಯಾಲೆ ಹಾಕಿ ಗರಮಾ ಗರಮಾ ಮಾಡಿ ಒಣಗಿಸಿ ಕೊಡ್ತೇನಿ. ಹಾಂ? ಅಳಬ್ಯಾಡ, ಅಂತ ಹೇಳಿ ಒಂದು ನಾಗರ ಪಂಚಿಮಿ ತಂಬಿಟ್ಟು ಕೊಟ್ಟರು ಗೋಪೂಗ ರೂಪಾ ವೈನಿ. 

ಲೇ ಗೋಪ್ಯಾ! ನೀನs ತಿನ್ನು ತಂಬಿಟ್ಟು ಮತ್ತ. ಎಲ್ಲೆರೆ ನಿನ್ನ ಸಣ್ಣ ನಾಗಪ್ಪ ಗಬಕ್ಕನ ತಂಬಿಟ್ಟು ತಿಂದು ಬಿಟ್ಟೀತು, ಅಂತ ಕುಂತಿ, ದೊಡ್ಡ ಹುಡುಗಿ, ಜೋಕ್ ಹೊಡೆದಳು. 

ಫುಲ್ confuse ಆದ ಚೊಣ್ಣ ರಹಿತ ಸಣ್ಣ ಹುಡುಗ ಗೋಪ್ಯಾ, ಎಲ್ಲೆ ಬಂತಪಾ ನಾಗಪ್ಪಾ, ಅಂತ ಮ್ಯಾಲೆ ಕೆಳಗ ನೋಡಿ, ನಾಗಪ್ಪಾ ಅಂತ ಯಾವದಕ್ಕ ಅಂದರು ಅಂತ ತಿಳ್ಕೊಂಡು, ನೋಡ್ರೀ ರೂಪಾ ಮಾಮಿ!!!! ಕುಂತಿ ನನಗ ಏನೇನೋ ಅಂತಾಳ!! ಅಂತ ಚೀರಿಕೊಂಡ. 

ಕುಂತಿ!!! ಯಾಕ ಕಾಡ್ತೀಯ ಪಾಪ ಸಣ್ಣ ಹುಡುಗಂಗ? ಸುಮ್ನಿರು ನೋಡೋಣ, ಅಂತ ಹೇಳಿ ರೂಪಾ ವೈನಿ ಗೋಪಾಲನ ಹಸಿ ಚೊಣ್ಣವನ್ನ ತವಾ ಮ್ಯಾಲೆ ಒಗೆದರು. ಈ ಕಡೆ ಇನ್ನೊಂದು ತವಾ ಮ್ಯಾಲೆ ಭಕ್ಕರಿ ಮಡಚಿ ಹಾಕಿದರು. ಕುಕ್ಕರ್ ಮತ್ತ ಇನ್ನೂ ಒಂದು ತವಾ ಮ್ಯಾಲೆ ಮತ್ಯಾರವೋ ಅಂಡರ್ವೇರ್ ಬಿಸಿ ಆಗಲಿಕತ್ತಿದ್ದವು. 

ಮಸ್ತ ಆತ ಬಿಡಲೇ ಚೀಪ್ಯಾ.....ಬಾಜೂ ಮನಿ ಹುಡುಗನ್ನ ಇಷ್ಟು ಪ್ರೀತಿ ಮಾಡ್ತಾರ ನಿಮ್ಮ ಹೆಂಡ್ರು ಅಂತ ಗೊತ್ತು ಇರಲಿಲ್ಲ ಬಿಡು. ಹುಡುಗನ ಹಸಿ ಚೊಣ್ಣ ಒಣಗಿಸಿ ಕೊಡೋದು ಭಾಳ ಪುಣ್ಯದ ಕೆಲಸ. ಮುಂದೇನಾತು? ಚೊಣ್ಣ ಒಣಗಿದ ಮ್ಯಾಲೆ ಗೋಪಾಲಂಗ ಚೊಣ್ಣ ಹಾಕಿಸಿ ಸಾಲಿಗೆ ಕಳಸಿದರ ವೈನೀ? - ಅಂತ ಕೇಳಿದೆ. 

ನಮ್ಮ ಮನ್ಯಾಗ ಎಲ್ಲಾ ಅಷ್ಟು ಸುಸೂತ್ರ ನೆಡದರ ಹ್ಯಾಂಗೋ? - ಅಂತ ಹೇಳಿದ ಚೀಪ್ಯಾ ಒಂದು ಲಾಂಗ್ ಸಿಗರೇಟ್ ದಮ್ಮು ಎಳದ. 

ಏನಾತೋ? - ಅಂತ ಕೇಳಿದೆ.

ಒಂದು ಭಕ್ಕರಿ ಹಾಕ್ರೀ - ಅಂತ ಚೀಪ್ಯಾ ಕೇಳ್ಯಾನ. 

ಹ್ಞೂ.....ತೊಗೊರೀ, ಅಂದ ರೂಪಾ ವೈನಿ ಯಾವದೋ ಒಂದು ತವಾ ಮ್ಯಾಲಿಂದು ತೆಗದಾಕಿನs ಚೀಪ್ಯಾನ ತಾಟಿಗೆ ಒಗದಾಳ. 

ರೂಪಾ ವೈನಿ ಎಲ್ಲಿ ನೋಡಿಕೋತ್ತ ಯಾವ ತವಾ ಮ್ಯಾಲಿನ ಏನು ಎತ್ತಿ ತಾಟಿಗೆ ಒಗದರೋ, ಚೀಪ್ಯಾ ಎಲ್ಲಿ ನೋಡಿಕೋತ್ತ ಕೂತಿದ್ದನೋ!!! ಚೀಪ್ಯಾ ಭಕ್ಕರಿ ಬಿದ್ದದ ಅಂತ ಅಂತ ಹೇಳಿ ತಿಳಕೊಂಡು, ತುಪ್ಪಾ ಹಾಕ್ರೀ, ಬಿಸಿ ಬಿಸಿ ಭಕ್ಕರಿ ಮ್ಯಾಲೆ ತುಪ್ಪ ಬೇಕ್ರೀ, ಅಂತ ತುಪ್ಪಾ ಕೇಳ್ಯಾನ. 

ತುಪ್ಪಾ ತಿಂದು ನಿಮ್ಮ ಬಡ್ಡ ತಲಿ ಶಾಣ್ಯಾ ಆಗೋದು ಅಷ್ಟರಾಗ ಅದ ಬಿಡ್ರೀ. ಆದರೂ ಹಾಕ್ಕೊಳ್ಳ್ರೀ. ಆ ಮ್ಯಾಲೆ ನಿಮ್ಮ ಅವ್ವಾ ಅಂದ್ರ ನಮ್ಮ ಅತ್ತಿ ನನಗ ಬೈದಾಳು, ನನ್ನ ಮಗ್ಗ ನನ್ನ ಸೊಸಿ ಸರಿ ಊಟಾನೂ ಹಾಕಂಗಿಲ್ಲ, ಅಂತ ಇಲ್ಲದ ಅತ್ತಿ ಬೈಕೋತ್ತ ಎತ್ತಲಾಗೋ ನೋಡ್ಕೊತ್ತ ತುಪ್ಪಾ ಸುರಿದಳು ರೂಪಾ ವೈನಿ. 

ಭಕ್ಕರಿ ಮ್ಯಾಲೆ ಮಸ್ತ ತುಪ್ಪ ಬಿದ್ದದ ಅಂತ ಚೀಪ್ಯಾ ಭಕ್ಕರಿ ಹರಿಲಿಕ್ಕೆ ಹೋಗ್ಯಾನ.  ಆದ್ರ ಏನೋ ಬ್ಯಾರೇನs ಫೀಲ್ ಆಗ್ಯದ. 

ನೋಡಿದರ ಚೀಪ್ಯಾನ ತಾಟಿನ್ಯಾಗ ಗೋಪೂನ ಚೊಣ್ಣ ಮತ್ತ ಅದರ ಮ್ಯಾಲೆ ಒಂದರೆಡು ಮಿಳ್ಳೆ ತುಪ್ಪ!!!!!!

ಅದನ್ನು ಮೊದಲು ನೋಡಿದವ ತಂಬಿಟ್ಟು ತಿನ್ನುತ್ತಿದ್ದ ಹಾಪ್ ಗೋಮಟೇಶ್ವರ ಗೋಪಾಲನೆಂಬ ಬಾಲವಿಲ್ಲದ ಬಾಲಕ. 

ಮಾಮಿ!!!!! ನನ್ನ ಚೊಣ್ಣ ಮಾಮಾನ ತಾಟಿಗೆ ಹಾಕಿ ಬಿಟ್ಟಿರೀ!!!! ಮ್ಯಾಲಿಂದ ತುಪ್ಪಾ ಬ್ಯಾರೆ ಸುರುವಿ ಬಿಟ್ಟಿರೀ!!! ನಾ ಈಗ ಆ ಚೊಣ್ಣ ಹ್ಯಾಂಗ ಹಾಕಿಕೊಳ್ಳಲೀ? - ಅಂತ ರಾಗಾ ತೆಗೆದ ಗೋಪಾಲ. 

ಹಾಂ!!! ಅಂತ ಚೀಪ್ಯಾ, ರೂಪಾ ವೈನಿ ಇಬ್ಬರೂ simultaneously ಶಾಕ್ ಆಗಿ ನೋಡಿದರ!!!!

ತಾಟಿನ್ಯಾಗ ಒನ್ನೆತ್ತಾ ಹುಡುಗನ ನೀಲಿ ಚೊಣ್ಣ ತುಪ್ಪದಾಗ ನೆನಿಲಿಕತ್ತದ!!!

ಹೋಗ್ಗೋ!!!! ಅಂತ ರೂಪಾ ವೈನಿ ತಾಟಿನ್ಯಾಗಿಂದ ತುಪ್ಪದ ಚೊಣ್ಣ ತೆಗೆದು ಕೈಯಾಗ ಹಿಡಕೊಂಡು, ಚೀಪ್ಯಾನ ಮಾರಿ ಮುಂದ ಝೇಂಡಾ ಆಡಿಸಿದಂಗ ಆಡಿಸುತ್ತ, ನಾನು ನಾಕು ಒಲಿ ಸಂಭಾಳಿಸಬೇಕು ಇಲ್ಲೆ. ಭಕ್ಕರಿ ತವಾ ಬಿಟ್ಟು ವಸ್ತ್ರದ ತವಾಯಿಂದ ಏನೋ ಮಿಸ್ಟೇಕ್ ಒಳಗ ಗೋಪೂನ ಚೊಣ್ಣ ತೆಗೆದು ಹಾಕ್ಲಿಕ್ಕೆ ಬಂದ್ರ ನಿಮ್ಮ ಬುದ್ಧಿ ಕಣ್ಣು ಮತ್ತೊಂದು ಎಲ್ಲೆ ಹೋಗಿತ್ತರೀ ಶ್ರೀಪಾದ ರಾವ್? ಇಂತಾ ಬಡ್ಡ ತಲಿಗೆ ತುಪ್ಪ ಬ್ಯಾರೆ! ಕರ್ಮ ಕರ್ಮ!!! - ಅಂತ ಉಲ್ಟಾ ಚೀಪ್ಯಾಗ ಬೈದು ಬಿಟ್ಟರು ರೂಪಾ ವೈನಿ. 

ತಡೀಪಾ ಗೋಪು. ಇನ್ನೊಮ್ಮೆ ತವಾ ಮ್ಯಾಲೆ ಹಾಕಿ ಒಣಗಿಸಿ ಕೊಡತೇನಿ. ಓಕೆ? ಅಂತ ಹೇಳಿಕೋತ್ತ ತುಪ್ಪದಾಗ ನೆನದ ಆ ಚೊಣ್ಣವನ್ನು ಬಿಸಿಯಾಗಿದ್ದ ತವಾ ಮ್ಯಾಲೆ ಮತ್ತ ಒಗೆದರು ರೂಪಾ ವೈನಿ. 

ghee fried rice ಕೇಳಿದ್ದೆ! ಇದು ghee fried ಚೊಣ್ಣ!!! ಯಾರಿಗೆ ಅದ ತುಪ್ಪದೊಳಗ ಕರಿದ ಚೊಣ್ಣ ಹಾಕಿಕೊಂಡು ಸಾಲಿಗೆ ಹೋಗೋ ನಸೀಬಾ?! ಸಣ್ಣ ಹುಡುಗ ಗೋಪಾಲನs ಲಕ್ಕಿ!!!!

ಹೋಗ್ಗೋ ನಿನ್ನ ಚೀಪ್ಯಾ!!!! ಭಕ್ಕರಿ ಅಂತ ಗೋಪೂನ ಚೊಣ್ಣಕ್ಕ ತುಪ್ಪಾ ಹಾಕಿಸಿಕೊಂಡು ತಿನ್ನಲಿಕ್ಕೆ ಹೊಂಟಿದ್ಯಲ್ಲೋ ಮಾರಾಯಾ!!! ಇಷ್ಟು ಅದ ಕಥಿ ಅಂತ ಆತು, ಅಂತ ಹೇಳಿದೆ. 

ನಕ್ಕು ನಕ್ಕು ಸಾಕಾತು.

ಚೀಪ್ಯಾ!!! ಚೀಪ್ಯಾ!!! ನಿಮ್ಮ ಹಶಿ ಅಂಡರ್ವೇರ್, ಅವನ್ನ ಒಣಿಗಿಸೋ ಕೆಲಸ ಎಲ್ಲ ಕೇಳಿದರ ನನಗ 'ಚಕ್ರವ್ಯೂಹ' ಸಿನೆಮಾದ ಹಾಡು ನೆನಪು ಆಗ್ತದ ನೋಡಪಾ - ಅಂತ ಒಂದು ೧೯೮೩ ಟೈಮ್ ಹಳೆ ಸಿನೆಮಾ ನೆನಪು ಮಾಡಿಕೊಂಡೆ. 

ಚಕ್ರವ್ಯೂಹ ಅಂದ ಕೂಡಲೇ ಚೀಪ್ಯಾ ಎದ್ದು ಬಿಟ್ಟ. ಎದ್ದು ನಿಂತ ಬಿಟ್ಟ!

ಯಾವ ಹಾಡೋ? ಛಳಿ ಛಳಿ ತಾಳೆನು ಈ ಛಳಿಯ, ಗೆಳತಿಯೆ ನೀನು ಚಡ್ಡಿ ಕಳೆಯಾ, ಆಹಾ!! ಓಹೋ!! ಈ ಹಾಡೇನು? ಅಂತ ಕೇಳಿ ಬಿಟ್ಟ ಚೀಪ್ಯಾ. ಹಾಕ್ಕ!!

ಚೀಪ್ಯಾ! ಚೀಪ್ಯಾ!!ಛಳಿ ಛಳಿ ತಾಳೆನು ಈ ಛಳಿಯ, ಗೆಳತಿಯೆ ನೀನು ಚಡ್ಡಿ ಕಳೆಯಾ - ಅಲ್ಲೋ ಮಾರಾಯ!!! ಅದು ಹುಂಚಿಮರದ ಹಿರೇಮಠ ಹದಗೆಡಸಿದ ಹಾಡು, ಅಂತ ಹೇಳಿದೆ. 

ಮತ್ತ ಒರಿಜಿನಲ್ ಏನೋ? - ಅಂತ ಕೇಳಿದ. 

ಒರಿಜಿನಲ್ ಹಾಡು ಭಾಳ ರೋಮ್ಯಾಂಟಿಕ್ ಇತ್ತಪಾ. ಛಳಿ ಛಳಿ ತಾಳೆನು ಈ ಛಳಿಯ, ಗೆಳತಿಯೆ ಬಾರೆಯ ನೀ ಸನಿಹ, ಅಂತ ಮಸ್ತ ಹಾಡು ಇತ್ತೋ, ಅಂತ ಕರೆಕ್ಟ್ ಮಾಡಿ ಹೇಳಿದೆ. 

ಈಗ ಅದಕ್ಕ ಏನು? - ಅಂತ ಕೇಳಿದ ಚೀಪ್ಯಾ. 

ಆ ಹಾಡು ಸ್ವಲ್ಪ ಚೇಂಜ್ ಮಾಡಿದರ ನಿಮ್ಮ ಹಶಿ ವಸ್ತ್ರಾ ಒಣಗಸಲಿಕ್ಕೆ ಸರಿ ಆಗ್ತದ ನೋಡು. ಹಶಿ ಹಶಿ ತಾಳೆನು ಈ ಹಶಿಯ, ಚೊಣ್ಣವ ನೀನು ಒಣಗಿಸೆಯಾ? ಚೊಣ್ಣದ ಕಥೆಯಾ ಹೇಳುವೆನು, ಕೆರತದ ವ್ಯಥೆಯಾ ಹೇಳುವೆನು, ಹಶಿ ಹಶಿ..ಹಾ!!!ಹಾ!!! - ಮಸ್ತ ಹಾಡು ನೋಡಲೇ ಚೀಪ್ಯಾ!!! ಲಗೂನ ಸಿರ್ಸಿ ಕಡೆ ಹೋಗಿ 'ಹೊದಲು' ಹ್ಯಾಂಗ ಹಾಕೋದು ಅಂತ ಕಲಿತು ಬಾ. ಆ ಮ್ಯಾಲೆ ತವಾ ಮ್ಯಾಲೆ ಚೊಣ್ಣ ಚಡ್ಡಿ ಒಣಗಿಸೋ ತಾಪತ್ರಯ ಇರೋದಿಲ್ಲ. ತಿಳೀತ? - ಅಂತ ಬಿಟ್ಟಿ ಉಪದೇಶ ಮಾಡಿದೆ. 

ಹೂನಪಾ....ಹೂ.....ನಾ ಬರಲೇ? - ಅಂತ ಕೇಳಿದ ಚೀಪ್ಯಾ. 

ಓಕೆ!ಹಶಿ ಹಶಿ ತಾಳೆನು ಈ ಹಶಿಯ, ಚೊಣ್ಣವ ನೀನು ಒಣಗಿಸೆಯಾ? ಚೊಣ್ಣದ ಕಥೆಯಾ ಹೇಳುವೆನು, ಕೆರತದ ವ್ಯಥೆಯಾ ಹೇಳುವೆನು, ಹಶಿ ಹಶಿ.....ಈ ಹಾಡು ಬಾಯಿಪಾಠ ಮಾಡಿ ರೂಪಾ ಬಾಯಿಗೆ ಹೇಳು. ಖುಷ್ ಆಗ್ತಾಳ, ಅಂತ ಹೇಳಿದೆ. 

ನಿನ್ನ ತಲಿ, ಅಂತ ಹೇಳಿಕೋತ್ತ ಲವಂಗ ಯಾಲಕ್ಕಿ ಜಕ್ಕೋತ್ತ ಜಗಾ ಖಾಲಿ ಮಾಡಿದ ಚೀಪ್ಯಾ.

ನಾನೂ ತಿರಗಿ ಬಂದೆ.

** ಸಿಕ್ಕಾಪಟ್ಟೆ ಮಳೆಗಾಲದಲ್ಲಿ ಬಾಕಿ ಜನ ಚಡ್ಡಿ ಒಣಗಿಸಲೂ ಮೇಲೆ ಕೆಳಗೆ ನೋಡುವ ಸಂದರ್ಭ. ಆದ್ರೆ ಸಿರ್ಸಿ ಕಡೆ ಜನ ಚಡ್ಡಿ ಒಂದೇ ಏನು, ಅದರ ಹತ್ತು ಪಟ್ಟು ಧಪ್ಪ ಇರುವ ಕಂಬಳಿ ಕೊಪ್ಪೆ ಒಣಗಿಸಿ ಬಿಡುತ್ತಾರೆ. ಹ್ಯಾಗೆ? ಹೊಗೆ ಹಾಕಿ. ಅದೇ 'ಹೊಡತಲು'. ವಿವರಣೆಗೆ ಇಲ್ಲಿ ನೋಡಿ. 
----------------------------------------
ಧಾರವಾಡ ಪದಾರ್ಥ ಸೂಚಿ. 

ಕಳಿ = ಬಿಚ್ಚು

ತವಾ = ಬಂಡಿ

ಹಶಿ = ಹಸಿ

ಚಾಸ್ಟಿ  = ತಮಾಷೆ, ಕುಶಾಲು

ಸತ್ನಾರಣ = ಸತ್ಯನಾರಾಯಣ

ನಾದು = ಹೊಡಿ, ಬಡಿ

ಅರಿವಿ = ಬಟ್ಟೆ 

ಪಲ್ಲಂಗ = ಮಂಚ

ಮಸಡಿ = ಮುಖ

ಶಟಗೊಂಡು = ಸಿಟ್ಟು ಮಾಡಿಕೊಂಡು
----------------------------------------

ಛಳಿ ಛಳಿ ಹಾಡು.....ಅಂಬರೀಶ, ಅಂಬಿಕಾ .... ಚಕ್ರವ್ಯೂಹ

No comments: