Tuesday, April 29, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೪)

(ಹಿಂದಿನ ಭಾಗ -೧, ಭಾಗ -೨, ಭಾಗ - ೩)

ರಾಬರ್ಟ್ ಕೆನಡಿಯವರನ್ನು ಲಾಸ್ ಎಂಜೆಲ್ಸ್ ನಲ್ಲಿ ಕೊಂದವ 'ಸಿರ್ಹಾನ್ ಬಿಶಾರಾ ಸಿರ್ಹಾನ್' ಎನ್ನುವ ಜೋರ್ಡಾನ್ ಮೂಲದ ಪ್ಯಾಲೆಸ್ತೇನಿ ವಲಸಿಗ ಅಂತ ಸಾಧಿಸಲಾಯಿತು. ಅದು ನಿಜವೇ? ನೋಡೋಣ.

ರಾಬರ್ಟ್ ಕೆನಡಿ ಇಸ್ರೇಲನ್ನು ತುಂಬ ಬೆಂಬಲಿಸುತ್ತಾರೆ. ಅವರು ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷರಾಗಿಬಿಟ್ಟರೆ ಇಸ್ರೇಲಿಗೆ ಇನ್ನೂ ಹೆಚ್ಚಿನ ಮಟ್ಟದ ಸಹಾಯ ನೀಡಿ ಪ್ಯಾಲೆಸ್ತೇನ್ ಸಂಗ್ರಾಮವನ್ನು ಪೂರ್ತಿ ನಾಮಾನೇಷ ಮಾಡಿ, ಸ್ವತಂತ್ರ ಪ್ಯಾಲೆಸ್ತೇನ್ ದೇಶದ ಕನಸು ಯಾವಾಗಲೂ ಕನಸಾಗಿಯೇ ಉಳಿಯುವಂತೆ ಮಾಡಿಬಿಡುತ್ತಾರೆ. ಅದಕ್ಕೇ ಅವರನ್ನು ಮುಗಿಸಿಬಿಡಬೇಕು ಅಂತ ಅವರನ್ನು ಸಿರ್ಹಾನ್ ಬಿಶಾರಾ ಸಿರ್ಹಾನ್ ಕೊಂದುಬಿಟ್ಟ ಅಂತ ಸರಕಾರ ಹೇಳಿತು.

ಹಂತಕ ಸಿರ್ಹಾನ್ ಸಿರ್ಹಾನ್ ಗೆ ಮಾತ್ರ ಏನೂ ನೆನಪೇ ಇರಲಿಲ್ಲ! ಯಾಕೆ?

ಸಿರ್ಹಾನ್ ಸಿರ್ಹಾನ್ ಮನೆ ಇತ್ಯಾದಿ ಶೋಧಿಸಿದಾಗ, RFK (Robert F Kennedy) must die, ಅಂತ ಸಾಲು ಸಾಲಾಗಿ ಬರೆದಿದ್ದ ಹಲವಾರು ನೋಟ್ ಬುಕ್ಕುಗಳು ಸಿಕ್ಕವು.

ಯಾಕೆ ಹಾಗೆ ಬರೆದು ಬರೆದು ಇಟ್ಟಿದ್ದ ಸಿರ್ಹಾನ್? ಅಥವಾ ಯಾರೋ ಬರೆದು ಇಟ್ಟಿದ್ದರೋ?!!!!

ಇನ್ನು ಕೆಲವು ಹಣದ ಮೂಲ ಹುಡುಕುತ್ತ ಹೋದಾಗ ಸಿಕ್ಕಿದ ಮಾಹಿತಿ ಇನ್ನೂ ಆಶ್ಚರ್ಯಕರವಾಗಿತ್ತು. ಸಿರ್ಹಾನ್ ಸಿರ್ಹಾನ್ ಗೆ ಸುಮಾರು ದುಡ್ಡು ಪ್ಯಾಲೆಸ್ತೇನ್ ಲಿಬರೇಶನ್ ಆರ್ಗನೈಜೇಷನ್ (PLO) ಮೂಲದ ದೊಡ್ಡ ನಾಯಕ ಮಹಮೂದ್ ಹಂಶಾರಿ ಅನ್ನುವನಿಂದ ಬಂದಿತ್ತು ಅನ್ನುವ ಸುದ್ದಿ. ಈ ಹಂಶಾರಿ ಫ್ರಾನ್ಸ್ ದೇಶದಿಂದ ಹೆಚ್ಚಾಗಿ ಆಪರೇಟ್ ಮಾಡುತ್ತಿದ್ದ. ಹಂಶಾರಿಗೆ ದೊಡ್ಡ ಮೊತ್ತ ಯಾರು ಕೊಟ್ಟಿದ್ದರು? ಅದನ್ನ ಹುಡುಕುತ್ತ ಹೋದಂತೆ ತಿಳಿದ ಸಂಗತಿ ಅಂದರೆ, ಶಿಪ್ಪಿಂಗ್ ಟೈಕೂನ ಅರಿಸ್ಟಾಟಲ್ ಓನಾಸಿಸ್ ಕೊಟ್ಟಿದ್ದ!

ಓನಾಸಿಸ್, ಎಲ್ಲ ದೊಡ್ಡ ಬಿಸಿನೆಸ್ಸ್ ಜನ ಪ್ಯಾಲೆಸ್ತೇನ್ ಹೋರಾಟಕ್ಕೆ ಕೊಟ್ಟಂತೆ, ತಾನೂ ಎಲ್ಲೋ ದೇಣಿಗೆ ಕೊಟ್ಟು, ಅದರಲ್ಲಿನ ಸ್ವಲ್ಪ ದೇಣಿಗೆ ಯಾರೋ PLO ನಾಯಕ ರಾಬರ್ಟ್ ಕೆನಡಿ ಹಂತಕರಿಗೆ ಕೊಟ್ಟ ಅಂದ ಮಾತ್ರಕ್ಕೆ ಓನಾಸಿಸ್ಸನೇ ಹತ್ಯೆಗೆ ಸುಪಾರಿ ಕೊಟ್ಟ ಅನ್ನುವದು ಸಾಬೀತಾಗುತ್ತದೆಯೇ? ಇಲ್ಲ. ಆದರೆ ಓನಾಸಿಸ್ ಮೇಲೆ ಸಂಶಯ ಮೂಡುವದಂತೂ ಸಹಜ. ಹತ್ಯೆಯ ನಿಜವಾದ ಸಂಚು ರೂಪಿಸಿದವರೇ ಈ ಸುದ್ದಿ ಹಬ್ಬಿಸಿದರೋ ಹೇಗೆ? ಓನಾಸಿಸ್ ಮತ್ತು ಜಾಕಿ ಕೆನಡಿ ಸಂಬಂಧಕ್ಕೆ ರಾಬರ್ಟ್ ಕೆನಡಿಯ ಸಮ್ಮತಿ ಇರಲಿಲ್ಲ. ಅದಕ್ಕೆ ಓನಾಸಿಸ್ ಗೆ ರಾಬರ್ಟ್ ಕೆನಡಿಯನ್ನು ದ್ವೇಷಿಸುವ ಕಾರಣವಂತೂ ಇತ್ತು. ಹತ್ಯೆಯ ನಂತರ ಹಣದ ಮೂಲವನ್ನೂ ತೋರಿಸಿ, ಸುದ್ದಿ ಹರಿಬಿಟ್ಟರೆ, ಜನರ ಗಮನ ಆಕಡೆ ಹೋಗಿಬಿಡುತ್ತದೆ ಅಂತ ರಾಬರ್ಟ್ ಕೆನಡಿ ಹತ್ಯೆಯ ಷಡ್ಯಂತ್ರ ಮಾಡಿದವರ ಕಾರಸ್ತಾನವಾಗಿತ್ತೆ?

ಇನ್ನು ಈ ಮೆಹಮೂದ ಹಂಶಾರಿಯನ್ನು ಕೇಳೋಣ ಅಂದ್ರೆ ಪುಣ್ಯಾತ್ಮ ನಿಗೂಢವಾಗಿ ಸತ್ತು ಹೋದ. ಆತ ಮ್ಯುನಿಕ್ ಒಲಿಂಪಿಕ್ಸ್ ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ಮಾಡಿದ ಆರೋಪ ಹೊತ್ತಿದ್ದ. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೊಸ್ಸಾದಿನ ಕಮಾಂಡೋ  ತಂಡ ಅವನನ್ನೂ ಬೇಟೆ ಆಡುತ್ತಿತ್ತು. ಪ್ಯಾರಿಸ್ ನಲ್ಲಿ ಅವನ ಮನೆಯ ಬೀಗ ಮುರಿದ ಮೊಸ್ಸಾದ್ ತಂತ್ರಜ್ಞರು ಅವನ ಫೋನ್ ಒಳಗೆ ಚಿಕ್ಕ ಬಾಂಬೊಂದನ್ನು ಇಟ್ಟು ಬಂದಿದ್ದರು. ಮರುದಿನ ಫೋನ್ ಮಾಡಿದರು. ಹಂಶಾರಿಯೇ ಮಾತಾಡುತ್ತಿರುವದು ಅಂತ ಖಚಿತವಾದ ತಕ್ಷಣ, ರಿಮೋಟ್ ಕಂಟ್ರೋಲ್ ಉಪಯೋಗಿಸಿ ಬಾಂಬ್ ಸ್ಫೋಟಿಸಿದರು, ಭೀಕರವಾಗಿ ಗಾಯಗೊಂಡ ಹಂಶಾರಿ ಆಸ್ಪತ್ರೆಯಲ್ಲಿ ತುಂಬ ದಿನಗಳ ನಂತರ ಸತ್ತ. ಅವನು ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟದಿಂದಾದ ಗಾಯಗಳಿಂದ ಸತ್ತನೆ ಅಥವಾ ಇವನು ಬದುಕಿ ಬಂದರೆ ತೊಂದರೆ ಅಂತ ಮುಗಿಸಿಬಿಡಲಾಯಿತಾ?

ಇಸ್ರೇಲಿಗಳು ಹೇಳಿದ್ದಿಷ್ಟೇ. ನೋಡ್ರೀ, ನಾವು ಆ ಹಂಶಾರಿಯ ಗೇಮ್ ಬಾರಿಸಲು ನೋಡಿದ್ದು ನಿಜ. ಅವನು ಸಾಯಲಿಲ್ಲ, ಕೇವಲ ಗಾಯಗೊಂಡ. ಆಸ್ಪತ್ರೆಯಲ್ಲಿದ್ದ. ಅಲ್ಲಿ ಸತ್ತ. ಆಸ್ಪತ್ರೆಯಲ್ಲಿ ಅವನನ್ನು ಬದುಕಿಸಿಕೊಳ್ಳಬೇಕಾದವರೇ ಕೊಂದಿರಬಹುದು. ವಿಚಾರಿಸಿ, ಅಂತ ಹೇಳಿ ಮುಗುಮ್ಮಾಗಿ ನಕ್ಕರು.

ಅಂದರೆ, ಗಾಯಗೊಂಡರೂ ಬದುಕಬಹುದಾಗಿದ್ದ ಹಂಶಾರಿಯನ್ನು ಬೇಕಂತಲೇ ಮುಗಿಸಲಾಯಿತಾ? ಅವನ್ನು ಮುಗಿಸುವಂತೆ PLO ಮೇಲೆ ಒತ್ತಡ ರಾಬರ್ಟ್ ಕೆನಡಿಯ ನಿಜ ಹಂತಕರಿಂದ ಬಂದಿತ್ತಾ? ಹೀಗೂ ಸಂಶಯದ ಸರಣಿ ಮುಂದುವರಿಯುತ್ತದೆ. ಪ್ಯಾಲೆಸ್ತೇನ್ ಹೋರಾಟಗಾರರಲ್ಲಿ ಅಂತರಿಕ ಜಗಳಗಳು ಬೇಕಾದಷ್ಟು ಇದ್ದವು. ಅದೇ ಕಾರಣದಿಂದ ಹಂಶಾರಿಯನ್ನು ಅವರದ್ದೇ ಕಾರಣಕ್ಕೆ ಆಸ್ಪತ್ರೆಯಲ್ಲಿಯೇ ಮುಗಿಸಿದ್ದರೂ ಆಶ್ಚರ್ಯವಿಲ್ಲ. ಮೊದಲು ಕೆನಡಿ ಹತ್ಯೆಗೆ ಒಬ್ಬ ಪ್ಯಾಲೆಸ್ತೇನ್ ವಲಸಿಗನನ್ನು ಫಿಟ್ ಮಾಡುವದು, ಅವನಿಗೆ PLO ದುಡ್ಡು ಕೊಟ್ಟಿತು ಅಂತ ಸುದ್ದಿ ಹಬ್ಬಿಸುವದು, ಅದಕ್ಕೆ ಹಂಶಾರಿಯಂತಹ ಉಗ್ರವಾದಿ ನಾಯಕನ ಲಿಂಕ್ ಕೊಡುವದು, ನಂತರ ಅವನನ್ನೇ ತೆಗೆದುಬಿಡುವದು. ಹೀಗೆ ಮಾಡಿ ನೀರನ್ನು ಮತ್ತೂ ಬಗ್ಗಡ ಮಾಡಿ, ಯಾರಾದರೂ ತನಿಖೆ ಮಾಡಲು ಹೋದರೆ ಅವರಿಗೇ ಫುಲ್ ತಲೆ ಕೆಡುವಂತೆ ಮಾಡಿ ನಿಜ ಹಂತಕರು ಬಚಾವ್ ಆಗುವದು. ಮಾಸ್ಟರ್ ಪ್ಲಾನ ಹೀಗಿತ್ತೆ?

ಕೆನಡಿಗಳ ಹತ್ಯೆ, ಹಿನ್ನಲೆ, ಆಗಿನ ಸಂದರ್ಭ  ಗಮನಿಸಿದರೆ ತಾರ್ಕಿಕವಾಗಿ, ಹೀಗೆ ಆಗಿರಬಹುದು (plausible), ಅನ್ನುವ ಥಿಯರಿ ಇದೇ. ಐದು ವರ್ಷಗಳ ಹಿಂದೆ, ಅಂದರೆ ೧೯೬೩ ರಲ್ಲಿ, ಜಾನ್ ಕೆನಡಿಯನ್ನು ಕೊಂಡಿದ್ದ ಪಟ್ಟಭದ್ರ ಹಿತಾಸಕ್ತಿಗಳೇ ರಾಬರ್ಟ್ ಕೆನಡಿಯನ್ನೂ ಮುಗಿಸಿದ್ದವು. ಮೊಟ್ಟ ಮೊದಲ ಕಾರಣ ಅಂದರೆ ಒಂದು ವೇಳೆ ರಾಬರ್ಟ್ ಕೆನಡಿ ಏನಾದರೂ ಅಧ್ಯಕ್ಷನಾದನೋ ಜಾಕ್ ಕೆನಡಿ ಹತ್ಯೆಯ ತನಿಖೆಯನ್ನು ಮೊದಲಿಂದ ಸರಿಯಾದ ರೀತಿಯಲ್ಲಿ ಮಾಡಿ, ಮಾಡಿದವರ ಬುಡಕ್ಕೆ ಬೆಂಕಿ ತರುವದು ಖಾತ್ರಿ ಇತ್ತು. ಇನ್ನು ವಿಯೆಟ್ನಾಂ ಯುದ್ಧ ನಿಲ್ಲಿಸುವದೂ ಖಾತ್ರಿಯಿತ್ತು. ಇವೆಲ್ಲ ದೊಡ್ಡ ರಿಸ್ಕ್ ಅಂತ ಹೇಳಿ ರಾಬರ್ಟ್ ಕೆನಡಿಯನ್ನು ತೆಗೆಸಿಬಿಡಲಾಯಿತು. ಅದರ ಜಾಡು ತಪ್ಪಲು ಬೇರೆ ಬೇರೆ ತರಹದ false trails ಗಳನ್ನು ಸೃಷ್ಟಿಸಲಾಯಿತು.

ಯಾವ ರೀತಿ ಜಾನ್ ಕೆನಡಿ ಹತ್ಯೆಯಲ್ಲಿ ಓಸ್ವಾಲ್ಡ್ ಅನ್ನುವ ಅಬ್ಬೆಪಾರಿಯನ್ನು ಫಿಟ್ ಮಾಡಿ, ಅವನನ್ನೇ ಇನ್ನೊಬ್ಬವ ಕೊಂದು ಬಿಡುವಂತೆ ಮಾಡಿ, ಇಡೀ ಪ್ರಕರಣವನ್ನು ತಿಪ್ಪೆ ಸಾರಿಸಲಾಗಿತ್ತೋ ಅದೇ ತರಹ ರಾಬರ್ಟ್ ಕೆನಡಿ ಹತ್ಯೆ ಕೂಡ ತಿಪ್ಪೆ ಸಾರಿಸಲಾಯಿತು. ಕೆನಡಿಗಳ ಪರಮ ವೈರಿ ಜೆ.ಎಡ್ಗರ್ ಹೂವರ್ ಅವರೇ FBI ಡೈರೆಕ್ಟರ್ ಅಂತ ಕೂತಿದ್ದರು. ಮಸ್ತಾಗಿ ತಿಪ್ಪೆ ಸಾರಿಸಿ ರಂಗೋಲಿ ಸಹ ಹಾಕಿ ಬಿಟ್ಟರು.

ಈ ಸಿರ್ಹಾನ್ ಸಿರ್ಹಾನ್ ಅನ್ನುವವ ಸುಮಾರು ವರ್ಷದಿಂದ ಯಾವದೋ ಸಂಮೋಹಿನಿ ಡಾಕ್ಟರ್ (hypnotist)  ಹತ್ತಿರ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ಆ ಚಿಕಿತ್ಸೆ ನೆಪದಲ್ಲಿ ಅವನನ್ನು ಬ್ರೈನ್ ವಾಶ್ ಮಾಡಿ, ರಾಬರ್ಟ್ ಕೆನಡಿಯ ಹಂತಕನಾಗುವಂತೆ ತಯಾರುಮಾಡಲಾಗಿತ್ತೆ? ಇರಬಹದು. ಯಾಕೆಂದರೆ ಅಮೆರಿಕಾದ ರಹಸ್ಯ ರಕ್ಷಣಾ ಲ್ಯಾಬೊರೇಟರಿಗಳಲ್ಲಿ ಆ ತರಹದ ಸಂಶೋಧನೆಗಳು ನಡೆಯುತ್ತಿದ್ದವು ಅಂತ ಬಹಳ ವರ್ಷಗಳ ನಂತರ ಬಯಲಾಯಿತು. ಮತ್ತೆ ಸಿರ್ಹಾನ್ ಸಿರ್ಹಾನ್ ಗುಂಡು ಹಾರಿಸಿದ ಸ್ಥಳದಿಂದ ಹಾರಿದ ಗುಂಡುಗಳು ಮತ್ತೆ ರಾಬರ್ಟ್ ಕೆನಡಿಗೆ ಬಿದ್ದ ಗುಂಡುಗಳು ಬೇರೆ ಕಥೆಯನ್ನೇ ಹೇಳುತ್ತಿದ್ದವು. ಸಿರ್ಹಾನ್ ಸಿರ್ಹಾನ್ ಎನ್ನುವ ಹಂತಕ hypnotically program ಆಗಿದ್ದ. ಚುಕ್ಕೆ ಲಂಗದ ಹುಡುಗಿ ಸಂಜ್ಞೆ ಮಾಡಿದ ನಂತರ ತಲೆಯಲ್ಲಿನ ಪ್ರೊಗ್ರಾಮ್ ಹೇಳಿದಂತೆ ಗುಂಡು ಹಾರಿಸಿ ಗದ್ದಲ ಮಾಡಿದ. ಅದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅಲ್ಲೇ ಇದ್ದ ನುರಿತ ಹಂತಕರು ಸರಿಯಾಗಿ ಗುಂಡು ಹಾರಿಸಿ ಕೆನಡಿಯನ್ನು ಕೊಂದು, ಯಾರಿಗೂ ತಿಳಿಯದಂತೆ ಪರಾರಿಯಾದರು. ಅವರು ಸಿಐಎ rogue elements ಆಗಿದ್ದರು. ಸಿಕ್ಕಿಬಿದ್ದ ಸಿರ್ಹಾನ್ ಸಿರ್ಹಾನ್ ಗೆ ಏನೂ ನೆನಪೇ ಇರಲಿಲ್ಲ. 'ಮಂಚೂರಿಯನ್ ಕ್ಯಾಂಡಿಡೇಟ್' ಅನ್ನುವ ಟೈಪಿನ psychologically transformed ಹಂತಕನಾಗಿದ್ದ ಅವನನ್ನು ಆ ರೀತಿ ಪ್ರೊಗ್ರಾಮ್ ಮಾಡಲಾಗಿತ್ತು, ಹತ್ಯೆಯ ನಂತರ ಏನೂ ನೆನಪು ಇರದಂತೆ! ಇನ್ನೂ ಕೆಲ ಮೂಲಗಳ ಪ್ರಕಾರ, ಸಿರ್ಹಾನ್ ಹಾರಿಸಿದ್ದ ಗುಂಡುಗಳು ಕೇವಲ ಖಾಲಿ ಗುಂಡುಗಳು ಆಗಿದ್ದವು. ಕೆನಡಿಗೆ ಬಿದ್ದ ಗುಂಡುಗಳು ಬೇರೇನೆ ಇದ್ದವು.

ಇದೆಲ್ಲವನ್ನು ಪುಷ್ಟೀಕರಿಸುವಂತೆ ಮತ್ತೂ ಕೆಲ ಮಾಹಿತಿಗಳು ಬಹಳ ದಿವಸಗಳ ನಂತರ ಅಲ್ಲಿ ಇಲ್ಲಿ ಕೇಳಿ ಬಂದವು. ಡೇವಿಡ್ ಮೊರಾಲೆಸ್ - ಸಿಐಎ ಒಬ್ಬ ಖತರ್ನಾಕ್ ಅಧಿಕಾರಿ. ಕಮ್ಯುನಿಸ್ಟ್ ನಾಯಕ ಚೆ ಗುವೇರಾನನ್ನು ಬೋಲಿವಿಯಾದಲ್ಲಿ ಹಿಡಿದು ಕೊಂದಿದ್ದ. ವಿಯೆಟ್ನಾಂ ಯುದ್ಧದಲ್ಲಿ ದೊಡ್ಡ ಪಾತ್ರ ವಹಿಸಿದ್ದ. ಕ್ಯೂಬಾದ ಫೀಡೆಲ್ ಕ್ಯಾಸ್ಟ್ರೋನನ್ನು ಮುಗಿಸುವ ಸಂಚುಗಳಲ್ಲಿ ತುಂಬ active ಇದ್ದ. ಅವನು ತನ್ನ ಗೆಳೆಯನ ಮುಂದೆ ಒಮ್ಮೆ ಹೇಳಿಕೊಂಡಿದ್ದ. 'ಮೊದಲು ಡಲ್ಲಾಸ್ ನಲ್ಲಿ ದೊಡ್ದವನ್ನು ಮುಗಿಸಿದೆವು. ನಂತರ ಲಾಸ್ ಎಂಜೆಲ್ಸ್ ನಲ್ಲಿ ಚಿಕ್ಕ ಸೂಳೆಮಗನನ್ನು (little bastard) ಮುಗಿಸಿದೆವು! ಹೆಂಗೆ?'!!!!!!!!!! ಸಿಐಎ rogue elements ಗೆ ಕೆನಡಿ ಸಹೋದರ ಮೇಲೆ ಮೊದಲಿಂದ ಸಿಟ್ಟು. ಯಾಕೆಂದರೆ ಅವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಅಂತ. ಫೀಡೆಲ್ ಕ್ಯಾಸ್ಟ್ರೋವನ್ನು ಕೊಲ್ಲಲು ಹಾಕಿದ್ದ ಸ್ಕೆಚ್ ತಿರುಗಿಸಿ ಜಾನ್ ಕೆನಡಿಯನ್ನು ಮುಗಿಸಿದ್ದರು. ಈಗ ರಾಬರ್ಟ್ ಕೆನಡಿಯನ್ನು ಮುಗಿಸಿಯಾಗಿತ್ತು. ಬಿಲ್ ಕಿಂಗ್ ಹಾರ್ವಿ, ಎಡ್ವರ್ಡ್ ಹಂಟ್ ಮುಂತಾದ ಇತರೆ ಸಿಐಎ rogue elements ಹೆಸರು ಸಹಿತ ಆಗಾಗ ಕೇಳಿಬರುತ್ತದೆ.

ಆದರೆ ಅರಿಸ್ಟಾಟಲ್ ಓನಾಸ್ಸಿಸ್ ಕಾಸು ಕೊಟ್ಟು ಮರ್ಡರ್ ಮಾಡಿಸಿದ ಅಂತ false trail ಸೆಟ್ ಅಪ್ ಮಾಡಿದ್ದ ಸಂಚುಗಾರರು ಅವನನ್ನು ಬ್ಲಾಕ್ ಮೇಲ್ ಮಾಡಿದ್ದರಾ? ಗೊತ್ತಿಲ್ಲ.

ಇಂತದ್ದೆಲ್ಲ ದೊಡ್ಡ ಮಟ್ಟದ ರಾಜಕೀಯ ಹತ್ಯೆಗಳು ಒಂದು ಎರಡು ಕಾರಣಗಳಿಂದ ಮಾತ್ರ ಆಗುವದು ಕಮ್ಮಿ. ಹಲವಾರು ಶಕ್ತಿಗಳು, ಕಾಣದ ಕೈಗಳು ಪ್ರಯತ್ನ ಸದಾ ಮಾಡುತ್ತಿರುತ್ತವೆ. ಎಲ್ಲೋ, ಏನೋ, ಎಲ್ಲ ಗ್ರಹಗಳು ಕೂಡಿ ಬಂದು, ಒಂದು ಹಾಂ! ಅನ್ನುವಂತ ಘಟನೆ ಆಗಿ ಹೋಗಿರುತ್ತದೆ. ಮುಂದಿನ ದಿನಗಳಲ್ಲಿ ಅದನ್ನ dissect ಮಾಡಿ ಎಲ್ಲ reverse engineering ಮಾಡಿದರೆ ಒಂದು ಐಡಿಯಾ ಬಂದೀತು.

ಹೀಗೆ ಜಾಕಿ ಕೆನಡಿ ಮೇಡಮ್ಮು ಮತ್ತು ಕುಬೇರ ಓನಾಸ್ಸಿಸ್ ಮದುವೆಯಾಗಲು ರಾಬರ್ಟ್ ಕೆನಡಿ ದಾರಿಯಿಂದ ಸರಿದು ಹೋಗಬೇಕಾಗಿತ್ತು. ಹೋದ. ಕಾಕತಾಳೀಯ ಇದ್ದರೂ ಇದ್ದೀತು.

೧೯೬೮ ರಲ್ಲಿ ಜಾಕಿ ಕೆನಡಿಗೆ ಬರೋಬ್ಬರಿ ಮೂವತ್ತೊಂಬತ್ತು ವರ್ಷ. ಓನಾಸಿಸ್ಸ್ ಗೆ ಅರವತ್ತೆರಡು! ಕುರುಡು ಪ್ರೇಮ. ಕುರುಡು ಕಾಂಚಾಣ. ಎಲ್ಲ ಓಕೆ!

ಇಷ್ಟೆಲ್ಲ ಆದ ಮೇಲೆ ಕೆನಡಿ ಮತ್ತು ಓನಾಸಿಸ್ ವಿವಾಹವಾಗಿ ಸುಖವಾಗಿದ್ದರಾ? ಅಷ್ಟಕಷ್ಟೇ. ಇಬ್ಬರೂ ಸ್ವಚ್ಚಂದ ಜೀವಿಗಳು. ಎಲ್ಲಿ ಈ ಬಂಧನ? ಅಂತ ಶರಂಪರ ಜಗಳ ಶುರು ಮಾಡಿಬಿಟ್ಟರು. ಏ! ನಿಮ್ಮೌನ್! ಡೈವೋರ್ಸ್ ಕೊಡತೇನಿ. ಮ್ಯಾಲಿಂದ ಜಗ್ಗೆ ರೊಕ್ಕಾ ಕೊಡತೇನಿ. ನನ್ನ ಜೀವಾ ತಿನ್ನೋದು ಬಿಟ್ಟು ಹೋಗಬೇ! ಅಂತ ಓನಾಸಿಸ್ ಅಂಬೋ ಅಂದ. ಡೈವೋರ್ಸ್ ತೊಗೊಂಡ್ರೆ ಸ್ವಲ್ಪ ಮಾತ್ರ ಸಂಪತ್ತು ಬರುತ್ತದೆ. ಅದು ಬೇಡ, ಅಂತ ಅಮ್ಮಾವರು ಡೈವೋರ್ಸ್ ತೆಗೆದುಕೊಳ್ಳಲು ಒಪ್ಪಲಿಲ್ಲ. ತಿಂಗಳಿಗೆ ಇಷ್ಟು ಅಂತ ದೊಡ್ಡ ಮಟ್ಟದ allowance ಮಾತ್ರ ಕುಬೇರ ಓನಾಸ್ಸಿಸ್ ನಿಂದ ಬೋಳಿಸಿ  ಬೋಳಿಸಿ ಆ ಯಪ್ಪನ್ನ ಹೈರಾಣ ಮಾಡಿ ಹಾಕಿಬಿಟ್ಟರು. ಹೇಗೆ ಬೋಳಿಸಿಬೇಕು ಅಂತ  ಬರೋಬ್ಬರಿ ಸಲಹೆ ಕೊಡಲು ಜಾಕಿಗೆ ಬೇಕಾದಷ್ಟು ಜನ ಇದ್ದರು ಬಿಡಿ.

ಏಳು ವರ್ಷಗಳ ಹಾವು ಮುಂಗುಸಿ ಮದುವೆ ನಂತರ ೧೯೭೫ ರಲ್ಲಿ ಅರಿಸ್ಟಾಟಲ್ ಓನಾಸಿಸ್ ಶಿವನ ಪಾದ ಸೇರಿಕೊಂಡ. ಜಾಕಿಗೆ ಮತ್ತೆ ವಿಧವೆ ಪಟ್ಟ ಬಂತು. ದೊಡ್ಡ ಪ್ರಮಾಣದ ಆಸ್ತಿಯೂ ಬಂತು. ಜಾಕಿಗೆ ಕೇವಲ ನಲವತ್ತಾರು ವರ್ಷ. ನಂತರ ಜಾಕಿ ಮತ್ತೊಂದು ಮದುವೆ ಅದು ಇದು ಮಾಡಿಕೊಳ್ಳಲಿಲ್ಲ. ಸಾಹಿತ್ಯ, ಪುಸ್ತಕ ಪ್ರಕಾಶನ, ದೊಡ್ಡ ಮಂದಿ ನಡುವೆ ಸುತ್ತಾಟ, ಅದು ಇದು ಅಂತ ಮತ್ತೊಂದು ಇಪ್ಪತ್ತು ವರ್ಷ ಇದ್ದು ೧೯೯೪ ರಲ್ಲಿ ತೀರಿಹೋದರು.

ಒಂದು ವರ್ಣರಂಜಿತ ಅಧ್ಯಾಯ ಮುಗಿದಿತ್ತು.

ಜಾನ್ ಕೆನಡಿ ಹತ್ಯೆಯಾದಾಗ ಬಂದ ಮೊದಲ ವೈಧವ್ಯ ರಾಬರ್ಟ್ ಕೆನಡಿ ಹತ್ಯೆಯಾದಾಗ ಹೋಗಿತ್ತು.

ಆದ್ರೆ ಕೆನಡಿ ಹತ್ಯೆಗಳ ಹಿಂದಿನ ನಿಗೂಢತೆ, ರಹಸ್ಯಗಳು, ಕಾರ್ಯಾಚರಣೆಗಳು, ಮತ್ತೆ ಕೆನಡಿ ಹತ್ಯೆಗಳಲ್ಲಿ ಭಾಗಿಯಾಗಿರಬಹುದು ಅನ್ನುವ ಜನಗಳ systematic ಹತ್ಯೆಗಳು ಅವನ್ನೆಲ್ಲ ನೋಡುತ್ತ, ತಿಳಿಯುತ್ತ ಹೋದರೆ ಮನಸ್ಸಿಗೆ ಬರುವದು ಒಂದೇ ಒಂದು - reality is DEFINITELY stranger than fiction!

ರಾಬರ್ಟ್ ಕೆನಡಿ ಹತ್ಯೆಯಲ್ಲಿ ಫಿಟ್ಟಾದ ಸಿರ್ಹಾನ್ ಸಿರ್ಹಾನ್ ಮಾತ್ರ ಸರಿಸುಮಾರು ನಲವತ್ತಾರು ವರ್ಷಗಳಿಂದ ಸೆರೆಮನೆಯಲ್ಲಿ ಕೊಳೆಯುತ್ತಲೇ ಇದ್ದಾನೆ. ಅವನ ವಕೀಲರು ಆಗಾಗ  ಬಂದು, ನನ್ನ ಕಕ್ಷಿದಾರನಿಗೆ ಅನ್ಯಾಯವಾಗಿದೆ! ಮತ್ತೊಮ್ಮೆ ತನಿಖೆ ಮಾಡಿ, ಅಂತ ಪುಂಗಿ ಊದುತ್ತಲೇ ಇರುತ್ತಾರೆ.

ಸಿರ್ಹಾನ್ ಬಿಶಾರಾ ಸಿರ್ಹಾನ್ ಹೇಳುವದು ಒಂದೇ ಮಾತು - ನನಗೆ ಏನೂ ನೆನಪಿಲ್ಲ!

Kennedy Curse ಅನ್ನುವದು ಎಂದಿಗೆ ಮುಗಿಯುತ್ತದಯೋ! ಮೊತ್ತ ಮೊದಲು ಜಾನ್ ಕೆನಡಿಯವರ ಹಿರಿಯಣ್ಣ ಒಬ್ಬ ಎರಡನೇ ಮಹಾ ಯುದ್ಧದಲ್ಲಿ ವಾಯುಸೇನೆಯಲ್ಲಿ ಪೈಲಟ್ ಆಗಿದ್ದ. ಜರ್ಮನ್ನರು ವಿಮಾನ ಹೊಡೆದು ಉರುಳಿಸಿದರು. ಹೋದ. ಅಕ್ಕ ಒಬ್ಬಾಕೆ ವಿಮಾನ ಅಪಘಾತದಲ್ಲಿ ಸತ್ತಳು. ಜಾನ್ ಮತ್ತು ರಾಬರ್ಟ್ ಕೆನಡಿ ಅತ್ಯಂತ sensational ಅನ್ನುವ ರೀತಿಯಲ್ಲಿ ಹತ್ಯೆಗೊಳಗಾದರು. ಜಾನ್ ಕೆನಡಿಯ ಮಗನೊಬ್ಬ ತೀರ ಇತ್ತೀಚಿಗೆ ವಿಮಾನ ಅಪಘಾತವೊಂದರಲ್ಲಿ ಮೃತನಾದ. ಅವನನ್ನೂ ತೆಗೆಸಿಬಿಡಲಾಯಿತು ಅಂತ ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಲೇ ಇದೆ. ಇನ್ನೊಬ್ಬ ಟೆಡ್ ಕೆನಡಿ ೧೯೮೦ ರಲ್ಲಿ ಅಧ್ಯಕ್ಷರಾಗಲು ಹೊರಟಿದ್ದರು. ವಿಮಾನ ಅಪಘಾತ ಒಂದರಲ್ಲಿ ಸ್ವಲ್ಪದರಲ್ಲಿ ಬಚಾವಾದರು. ಮಗನೇ! ಮತ್ತೆ ಅಧ್ಯಕ್ಷ ಅದು ಇದು ಅಂತ ಬಂದ್ರೆ ಅಷ್ಟೇ! ಅಂತ ಬರೋಬ್ಬರಿ ಧಮಿಕಿ ಅವರಿಗೆ ರವಾನೆ ಆಗಿತ್ತು ಆ ಅಪಘಾತದ ಮೂಲಕ. ರಾಬರ್ಟ್ ಕೆನಡಿ ಮಗ ಸ್ವಲ್ಪ ದಿವಸ ರಾಜಕೀಯದಲ್ಲಿ ಇದ್ದವನು ಈಗ ಎಲ್ಲೋ ಕಳೆದು ಹೋಗಿದ್ದಾನೆ.

(ಮುಗಿಯಿತು)

ಪೂರಕ ಓದಿಗೆ:

Nemesis: The True Story of Aristotle Onassis, Jackie O, and the Love Triangle That Brought Down the Kennedys by Peter Evans 

The Assassination of Robert F. Kennedy by William Turner, Jonn Christian

3 comments:

angadiindu said...

ಮೊದಲನೇ ಮೂರು ಭಾಗಗಳು ಇಂಟ್ರೆಷ್ಟಾಗಿದ್ದವು. ನಾಲ್ಕನೇ ಭಾಗ ಯಾಕೋ ಅವಸರದಲ್ಲಿ ಮುಗಿಸಿರುವಂತಿದೆ. ಅಲ್ಪ ಸ್ವಲ್ಪ ಕೇಳಿದ್ದ ವಿಷಯದ ಬಗ್ಗೆ ಬಹಳ ಚನ್ನಾಗಿ ವಿವರಿಸಿ ಬರೆದಿರುವಿರಿ. ಹಾಗೇ ಲೇಡಿ ಡಯಾನಾಳ ಜಮ್ಮ-ಚಕ್ಕ ಸ್ಟೋರಿಯನ್ನೂ ಬರೆಯುತ್ತೀರಾ.ಅವಳ ಬಗ್ಗೆನೂ ಅಲ್ಪ ಸ್ವಲ್ಪ ಗೊತ್ತಿದ್ದರೂ, ಮಸಾಲೆಭರಿತ ನಿಮ್ಮ ಬರಹ ಚನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತೊಮ್ಮೆ ಧನ್ಯವಾದಗಳು.

angadiindu said...

ಮೊದಲನೇ ಮೂರು ಭಾಗಗಳು ಇಂಟ್ರೆಷ್ಟಾಗಿದ್ದವು. ನಾಲ್ಕನೇ ಭಾಗ ಯಾಕೋ ಅವಸರದಲ್ಲಿ ಮುಗಿಸಿರುವಂತಿದೆ. ಅಲ್ಪ ಸ್ವಲ್ಪ ಕೇಳಿದ್ದ ವಿಷಯದ ಬಗ್ಗೆ ಬಹಳ ಚನ್ನಾಗಿ ವಿವರಿಸಿ ಬರೆದಿರುವಿರಿ. ಹಾಗೇ ಲೇಡಿ ಡಯಾನಾಳ ಜಮ್ಮ-ಚಕ್ಕ ಸ್ಟೋರಿಯನ್ನೂ ಬರೆಯುತ್ತೀರಾ.ಅವಳ ಬಗ್ಗೆನೂ ಅಲ್ಪ ಸ್ವಲ್ಪ ಗೊತ್ತಿದ್ದರೂ, ಮಸಾಲೆಭರಿತ ನಿಮ್ಮ ಬರಹ ಚನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮತ್ತೊಮ್ಮೆ ಧನ್ಯವಾದಗಳು.

Mahesh Hegade said...

ಧನ್ಯವಾದ ಅಂಗಡಿಯವರಿಗೆ!

ಹೌದು, ಡಯಾನಾ ಬಗ್ಗೆ ಬರೆಯಬೇಕು. ನೆನಪಿಸಿದ್ದಕ್ಕೆ ಧನ್ಯವಾದ. ಆಕೆಯ ಸಾವಿನ ಹಿಂದಿರುವ conspiracy theories ಸಹ ತುಂಬ ರೋಚಕವಾಗಿವೆ.