Thursday, July 02, 2015

ಎಂದೂ ಮರೆಯದ 'ಟ್ರೀಟ್ಮೆಂಟ್' ಕೊಟ್ಟ ವೈದ್ಯರೊಬ್ಬರ ನೆನಪು....ವಿಶ್ವ ವೈದ್ಯರ ದಿನದ ಸ್ಪೆಷಲ್

ಜುಲೈ ೧, ವಿಶ್ವ ವೈದ್ಯರ ದಿವಸವಂತೆ. ಭಾರತದಲ್ಲಂತೂ ಹೌದು. ಇಲ್ಲಿ ನಮ್ಮ ಅಮೇರಿಕಾದಲ್ಲಿ ಮಾರ್ಚ್ ೩೦ ರಂದು ವಿಶ್ವ ವೈದ್ಯರ ದಿವಸ ಆಚರಿಸುತ್ತಾರೆ.

ವೈದ್ಯೋ ನಾರಾಯಣೋ ಹರಿಃ - ಸತ್ಯವಾದ ಮಾತು. ಹುಟ್ಟಿದಾಗಿಂದ ಇಲ್ಲಿಯವರೆಗೆ ಅದೆಷ್ಟು ಮಂದಿ ವೈದ್ಯರು ಈ ನಮ್ಮ ಬಾಡಿಯನ್ನು, ಮಂಡೆಯನ್ನು ಕಾಪಾಡಿದರೋ ಏನೋ. ನೂರಾರು ಮಂದಿ. ಅವರಲ್ಲಿ ನೆನಪಾದವರಷ್ಟು ಮಂದಿಯನ್ನು ನೆನೆಯೋಣ. ಕೃತಜ್ಞತೆ ಅರ್ಪಿಸೋಣ. ಒಂದಿಷ್ಟು ಹಳೆಯ ನೆನಪುಗಳನ್ನು ಕಚಪಚಾ ಅಂತ ಅಗಿದು ಅಗಿದು ಮೆಲುಕಾಡೋಣ ಅಂತ.

ತುಂಬಾ ಪುರಾತನ ಡಾಕ್ಟರ್ ನೆನಪಾಗುವವರು ಅಂದರೆ ಧಾರವಾಡದ ಉಪಾಧ್ಯೆ ಡಾಕ್ಟರ್. ನಮ್ಮ ತಂದೆಯವರು ಐವತ್ತರ ದಶಕದಲ್ಲಿ ವಿದ್ಯಾರ್ಥಿಯಾಗಿ ಧಾರವಾಡಕ್ಕೆ ಬಂದಾಗ ಅವರ ವೈದ್ಯರು ಡಾ. ಉಪಾಧ್ಯೆ. ಮುಂದೆ ನಮ್ಮ ಕುಟುಂಬದ friend, philosopher, guide ಎಲ್ಲ ಆಗಿಹೋದರು. ಮನೆಯ ಮಂದಿಯಷ್ಟೇ ಕ್ಲೋಸ್ ನಮಗೆ ಡಾ. ಉಪಾಧ್ಯೆ ಕುಟುಂಬ. ಮತ್ತೆ ನಾವು ಮುಂದೆ ನಿರ್ಮಲ ನಗರ ಬಡಾವಣೆಯಲ್ಲಿ ಅವರ neighbor ಕೂಡ ಆಗಿಬಿಟ್ಟೆವು. ನಾವು ಹುಟ್ಟುವ ಹೊತ್ತಿಗೆ ಉಪಾಧ್ಯೆ ಡಾಕ್ಟರ್ ವಯಸ್ಸಾಗಿತ್ತು ಅಂತ ಪ್ರಾಕ್ಟೀಸ್ ನಿಲ್ಲಿಸಿದ್ದರು. ಆದರೂ ಆಗಾಗ ಮನೆಗೆ ಬರುತ್ತಿದ್ದರು. ನಮಗೆ ಒಮ್ಮೆ ಅವರದ್ದೇ ರೀತಿಯಲ್ಲಿ 'ಟ್ರೀಟ್ಮೆಂಟ್' ಕೊಟ್ಟಿದ್ದರು. ಡಾಕ್ಟರ್ ಮಂದಿ ಕೇವಲ ಮೆಡಿಕಲ್ ಟ್ರೀಟ್ಮೆಂಟ್ ಒಂದೇ ಅಲ್ಲ ಬೇರೆ ಬೇರೆ ತರಹದ ಟ್ರೀಟ್ಮೆಂಟ್ ಕೂಡ ಕೊಡುತ್ತಾರೆ ಅಂತ ತೋರಿಸಿಬಿಟ್ಟಿದ್ದರು.

ಒಮ್ಮೆ ಅವರು ಬೆಳಿಗ್ಗೆ ವಾಕಿಂಗ್ ಮುಗಿಸಿ ತಮ್ಮ ಮನೆಗೆ ಮರಳುವ ಮೊದಲು ನಮ್ಮ ಮನೆಗೆ ಬಂದಾಗ ನನ್ನದು ಏನೋ ಶರಂಪರ ಹಟ. ಮನೆಯವರಿಗೆ ಅದನ್ನು ಸಹಿಸಿಕೊಳ್ಳುವ ಕರ್ಮ. ಅವರಿಗೆಲ್ಲ ನಮ್ಮ ಹಟಮಾರಿತನ ರೂಢಿಯಾಗಿತ್ತು. ಸಮಾಧಾನಕ್ಕೆಲ್ಲ ಬಗ್ಗುವ ಮಾತೇ ಇಲ್ಲ. ಹಾಗಾಗಿ ಹೇಳುವಷ್ಟು ಹೇಳಿ ನಂತರ ಮಾಡಿದಷ್ಟು ಹೊತ್ತು ಹಟ ಮಾಡಲಿ ಅಂತ ಬಿಟ್ಟಿರುತ್ತಿದ್ದರು.

ಆದರೆ ಇವರು ಉಪಾಧ್ಯೆ ಡಾಕ್ಟರ್. ಸಿಕ್ಕಾಪಟ್ಟೆ ಶಿಸ್ತಿನ ಮನುಷ್ಯ. ಸ್ವಾತಂತ್ರ ಹೋರಾಟಗಾರರು ಕೂಡ. ಮತ್ತೆ ಸಣ್ಣ ಮಕ್ಕಳನ್ನು ನೋಡಿ, ಅವರ ಪಿರಿಪಿರಿಗಳನ್ನು ಸಹಿಸಿಕೊಂಡು ಯಾವ ಕಾಲವಾಗಿತ್ತೋ ಏನೋ. ಮತ್ತೆ ಹಿಂದೆ ಒಮ್ಮೆ ಅವರು ಮನೆಗೆ ಬಂದಾಗ ನಾನು ಆರಾಮ್ ಖುರ್ಚಿಯ (easy chair) ದಂಡವನ್ನು ತೆಗೆದು ಇಟ್ಟುಬಿಟ್ಟಿದ್ದೆನಂತೆ. ಅದು ಗೊತ್ತಿಲ್ಲದೇ ತಳ ಊರಿದ ಮುದುಕರು ಹರಕೊಂಡು ಬಿದ್ದಿದ್ದರು. ತಂದೆ ತಾಯಿ ಅವರನ್ನು ಎಬ್ಬಿಸಿ ಕೂಡಿಸಿದ್ದರು. ಪುಣ್ಯಕ್ಕೆ ಮುದುಕರ ಏನೂ ಮುರಿದಿರಲಿಲ್ಲ. ಅವತ್ತೇ ಕೊನೆ. ನಮ್ಮ ಮನೆಯಿಂದ ದಂಡದ ಆರಾಮ್ ಕುರ್ಚಿಗಳು ಗಾಯಬ್ ಆದವು. ಯಾಕೆಂದರೆ ಕುರ್ಚಿಯ ದಂಡ ತೆಗೆದಿಟ್ಟು, ಕೂಡುವ ಮಂದಿಯನ್ನು ಬೀಳಿಸಿ, ಮಜಾ ತೆಗೆದುಕೊಳ್ಳುತ್ತಿದ್ದ ಕಿರಾತಕನೊಬ್ಬ (ಉರ್ಫ್ ನಾನು) ಮನೆಯಲ್ಲಿ ತಯಾರಾಗಿದ್ದೆ. ನಮ್ಮ ಬಾಲಲೀಲೆಗಳ ಅಬ್ಬರದಲ್ಲಿ ಯಾರದಾದರೂ ಸೊಂಟ ಮುರಿದೀತು ಅಂತ ಹೇಳಿ ಆರಾಮ್ ಕುರ್ಚಿಗಳಿಗೆ ರೈಟ್ ಹೇಳಿಸಿದ್ದರು. ಸಾದಾ ಕುರ್ಚಿಗಳು ಬಂದಿದ್ದವು.

ಡಾ. ಉಪಾಧ್ಯೆಯವರಿಗೆ ಕುರ್ಚಿಯಿಂದ ಉರುಳಿ ಬಿದ್ದಿದ್ದೂ ಸಹ ನೆನಪಿರಬೇಕು. ಈಗ ಮತ್ತೆ ಶರಂಪರ ಹಟ ಮಾಡುತ್ತ, ಎಲ್ಲರ ತಲೆ ತಿನ್ನುತ್ತಿರುವ ನಾನು. ಆ ಮುದುಕರಿಗೆ ಅದೆಲ್ಲಿಂದ ಸಿಟ್ಟು ಬಂತೋ. 'ಇವಂದು ಹಟಾ ಭಾಳ ಜಾಸ್ತಿ ಆಗ್ಯದ. ನೀವೂ ಅಪ್ಪಾ, ಅವ್ವಾ ಎಂತವರು ಇದ್ದೀರಿ?? ಭಾಳ ಅಚ್ಛಾ ಮಾಡಿ ಮಾಡಿ ಮಾಡಿ, ತಲಿ ಮ್ಯಾಲೆ ಏರಿಸಿಕೊಂಡು ಕೂತಿರಿ. ಅದಕ್ಕೇ ಹೀಂಗ ಹಟಾ ಮಾಡ್ತಾನ,' ಅಂತ ಮೊದಲು ಅಮ್ಮ ಅಪ್ಪನಿಗೆ ಗದರಿಸಿದವರೇ, ತಮ್ಮ ವಾಕಿಂಗ್ ಸ್ಟಿಕ್ ಎತ್ತಿಕೊಂಡು ಬಂದವರೇ, ಎರಡೂವರೆ ಮೂರು ವರ್ಷದ ಮಾಣಿಯಾಗಿದ್ದ ನಮ್ಮ ಕುಂಡೆ ಮೇಲೆ ಒಂದೆರೆಡು ಏಟು ಹಾಕಿಯೇಬಿಟ್ಟರು. ಬಟ್ಟೆ ಹಾಕಿಕೊಳ್ಳದೇ ಬರಿ ಮೈಯಲ್ಲಿ ಹಟ ಮಾಡುತ್ತಾ, ನೆಲದ ಮೇಲೆ ಉರುಳಾಡುತ್ತಿದ್ದ ನಮ್ಮ ಅಂಡು ಬರೋಬ್ಬರಿ ಚುರು ಚುರು ಅಂದಿತ್ತು. ಅಳುತ್ತ ಅಡಿಗೆ ಮನೆಗೆ ಅಮ್ಮನ ಬಳಿ ಓಡಿದ್ದೆ. ಮೊದಲು ಚಡ್ಡಿ ಹಾಕಿಸಿಕೊಂಡಿದ್ದೆ. ಎಲ್ಲಿ ಒಳಗೆ ಬಂದು ಸಹಿತ ಮತ್ತೆ ಬಾರಿಸಿಬಿಟ್ಟಾರು ಅಂತ ಅಂಜಿಕೆ. ಆವತ್ತೇ ಕೊನೆ. ಮುಂದೆ ಎಂದಾದರೂ ಉಪಾಧ್ಯೆ ಡಾಕ್ಟರ್ ಮನೆಗೆ ಬಂದರೆ ಅಥವಾ ಅವರ ಮನೆಗೆ ಹೋಗೋಣ ಅಂತ ಹೇಳಿದರೂ ಸಾಕು ಬೆಚ್ಚಿಬಿದ್ದು ಸಿಂಕಾಗಿ ಬಿಡುತ್ತಿದ್ದೆ. ಆ ಡಾಕ್ಟರ್ ಪುಣ್ಯಾತ್ಮ ಅಂತಹ ಟ್ರೀಟ್ಮೆಂಟ್ ಕೊಟ್ಟುಬಿಟ್ಟಿದ್ದರು. ಎಂದೂ ಮರೆಯದ ಟ್ರೀಟ್ಮೆಂಟ್. ಮೆಡಿಕಲ್ ಟ್ರೀಟ್ಮೆಂಟ್ ಅಲ್ಲದ ಟ್ರೀಟ್ಮೆಂಟ್.

ಮುಂದೆ ಜಾಸ್ತಿ ದಿನ ಉಪಾಧ್ಯೆ ಡಾಕ್ಟರ್ ಉಳಿಯಲಿಲ್ಲ. ವಯಸ್ಸಾಗಿದ್ದರಿಂದ ಸಹಜವಾಗಿ ತೀರಿಹೋದರು. ಅವರು ತೀರಿಹೋದಾಗ ನಾವೆಲ್ಲಾ ಸಿರ್ಸಿ ಕಡೆ ಹಳ್ಳಿಯಲ್ಲಿ ರಜೆ ಮೇಲಿದ್ದೆವು. ತಂದೆಯವರು ಧಾರವಾಡದಲ್ಲಿ ಇದ್ದರು. ಡಾ. ಉಪಾಧ್ಯೆ ಅವರ ಮನೆಯಲ್ಲಿ ಗಂಡಸರು ಇರಲಿಲ್ಲ. ಹಾಗಾಗಿ ಇವರೇ ಎಲ್ಲ ಸಂಸ್ಕಾರ ಮಾಡಿಮುಗಿಸಿದ್ದರು. ನಂತರ ಊರಿಗೆ ಒಂದು ಪತ್ರ ಬರೆದು ವಿಷಯ ತಿಳಿಸಿದ್ದರು. ಪತ್ರ ಓದಿದ ಅಮ್ಮ, 'ಏ, ಕೇಳೋ. ನಿನ್ನ ಕಕ್ಕರಜ್ಜ ಹೋದರಂತ ನೋಡು,' ಅಂದರು. ಡಾಕ್ಟರಜ್ಜ ನಮ್ಮ ಬಾಲಭಾಷೆಯಲ್ಲಿ ಕಕ್ಕರಜ್ಜ. 'ಹಾಂ!' ಅಂತ ಹೇಳಿ ಫುಲ್ excitement ನಮ್ಮ ಮುಖದಲ್ಲಿ. 'ಅರೇ ಇವನ! ಅವರು ಸತ್ತು ಹೋದರು ಅಂದರೆ ಇವನಿಗ್ಯಾಕೆ ಇಷ್ಟು excitement,' ಅಂತ ಮನೆಮಂದಿಗೆ ಗೊತ್ತಾಗಲಿಲ್ಲ. ಕೇಳಿದರೆ ನಮ್ಮದು ಒಂದೇ ಮಾತಿನಲ್ಲಿ ಉತ್ತರ. 'ಅವರು ಸತ್ತು ಹೋದರು. ಈಗ ಅವರ ವಾಕಿಂಗ್ ಸ್ಟಿಕ್ ನಾನು ತಂದುಕೊಳ್ಳಬಹುದು!' ಅದೇ ನಮಗೆ ಬಾರಿಸಿದ್ದ ವಾಕಿಂಗ್ ಸ್ಟಿಕ್. ಕೇಳಿದ ಮಂದಿ ನಕ್ಕು ನಕ್ಕು ಇಟ್ಟಿದ್ದರು. 'ಅಜ್ಜನಗಿಂತ ಅಜ್ಜನ ಬಡಿಗೆಯದೇ ಮಸ್ತ ನೆನಪದ ನೋಡು. ಇರಲೇ ಬೇಕು. ಕುಂಡಿ ಇನ್ನೂ ಚುರು ಚುರು ಅಂತದೇನು???' ಅಂತ ಸುಮ್ಮನೆ ರೇಗಿಸಿದ್ದರು.

ಅವರು ತೀರಿಹೋದ ನಂತರ ಒಮ್ಮೆ ಅವರ ಮನೆಗೆ ಹೋಗಿದ್ದೆವು. ಅಲ್ಲಿ ಮೂಲೆಯಲ್ಲಿ ಅವರ ವಾಕಿಂಗ್ ಸ್ಟಿಕ್ ಇತ್ತು. ಆದೇ ವಾಕಿಂಗ್ ಸ್ಟಿಕ್ ಯಾವುದರಿಂದ ನನಗೆ ಬಾರಿಸಿದ್ದರು ಅದೇ! ಮತ್ತೆ ಅವರ ಮನೆಯಲ್ಲೇ ಸಿಕ್ಕಾಪಟ್ಟೆ ಹಟ ಮಾಡಿದೆ. ಡಾ. ಉಪಾಧ್ಯೆ ಅವರ ವೃದ್ಧ ಪತ್ನಿ, ಮಗಳು ಎಲ್ಲ, 'ಏನಾತೋ? ಯಾಕ ಅಷ್ಟು ಹಟಾ?' ಅಂತ ಕೇಳಿದರೆ, ನಾವು ಮಾತಾಡಲಿಲ್ಲ. ಸುಮ್ಮನೆ ಬೆರಳು ಮುಂದೆ ಮಾಡಿ ಅಲ್ಲಿದ್ದ ವಾಕಿಂಗ್ ಸ್ಟಿಕ್ ತೋರಿಸಿದೆವು. ಅದು ಬೇಕು ಎಂಬಂತೆ ತಲೆಯಾಡಿಸಿದೆವು. ಅವರಿಗೇನು ಗೊತ್ತು ನಾವು ಯಾಕೆ ಆ ತೀರಿಹೋದ ಡಾಕ್ಟರರ ವಾಕಿಂಗ್ ಸ್ಟಿಕ್ ಕೇಳುತ್ತಿದ್ದೇವೆ ಅಂತ. ಏನೋ ಚಿಕ್ಕ ಹುಡುಗ ಕೇಳುತ್ತಿದ್ದಾನೆ. ತಡೆಯಲಾಗದ ಹಟ ಬೇರೆ ಮಾಡುತ್ತಿದ್ದಾನೆ. ಕೇಳಿದ್ದನ್ನು ಕೊಟ್ಟು ಕಾಟದಿಂದ ತಪ್ಪಿಸಿಕೊಂಡರಾಯಿತು ಅಂತ ಹೇಳಿ ನನಗೆ ಅದನ್ನು ಕೊಟ್ಟು ಕಳಿಸಿದ್ದರು. ನಮಗೆ ಬಾರಿಸಿದ್ದ ವಾಕಿಂಗ್ ಸ್ಟಿಕ್ ಈಗ ನಮ್ಮ ಕೈಯಲ್ಲೇ ಬಂದಿತ್ತು. ಸೇಡು ತೀರಿಸಿಕೊಳ್ಳಲು ತಿರುಗಿ ಬಾರಿಸೋಣ ಅಂದರೆ ಉಪಾಧ್ಯೆ ಡಾಕ್ಟರರಂತೂ ತೀರಿಹೋಗಿದ್ದಾರೆ. ಸರಿಯಂತ ವಾಕಿಂಗ್ ಸ್ಟಿಕ್ ನಲ್ಲಿ ಸಿಕ್ಕ ಸಿಕ್ಕವರಿಗೆ ಬಾರಿಸಿದ್ದೇ ಬಾರಿಸಿದ್ದು. ಬಾರಿಸಿಕೊಂಡರೂ ಸುಮ್ಮನಿರುತ್ತಾರೆ, ಚಿಕ್ಕ ಹುಡುಗ ಅಂತ ಸುಮ್ಮನೆ ಬಿಡುತ್ತಾರೆ ಅಂತ ಕಂಡುಬಂದ ಎಲ್ಲರಿಗೂ ನಾನು ಆ ವಾಕಿಂಗ್ ಸ್ಟಿಕ್ ನಿಂದ ಬಾರಿಸಿದೆ. ಮುಂದೆ ನಾಲ್ಕಾರು ತಿಂಗಳು ಬಾರಿಸಿದೆ. ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ ಎಲ್ಲರಿಗೂ ಬಾರಿಸುತ್ತಿದ್ದೆ. ಬಂದ ನೆಂಟರಿಗೂ ಬಾರಿಸಿದ್ದೆ. ಮೊದಲು ಕೇವಲ ಹಟ ಒಂದೇ ಆಗಿದ್ದರೆ ಈಗ ಕೈಗೆ ಬಂದ ವಾಕಿಂಗ್ ಸ್ಟಿಕ್ ಒಂದು ಎಕ್ಸಟ್ರಾ ಬೇರೆ. ಬಾರಿಸಿಕೊಂಡವರು ಸಹ ಪಾಪ ಮಗ ಅಂತ ಅಪ್ಪ ಅಮ್ಮ, ಪಾಪ ತಮ್ಮ ಅಂತ ಅಣ್ಣ ಸಹಿಸಿಕೊಂಡರು. ಒಮ್ಮೊಮ್ಮೆ ತಡೆಯಲಾಗದೇ, 'ನಿನಗ ಅದರಲ್ಲೇ ಬಾರಿಸ್ತಿನಿ ನೋಡು,' ಅಂತ ಜಬರಿಸಿದಾಗ ಮತ್ತೆ ಉಪಾಧ್ಯೆ ಡಾಕ್ಟರ ನೆನಪಾಗಿ ಸ್ವಲ್ಪ ಹೊತ್ತಿನ ಮಟ್ಟಿಗೆ ಸುಮ್ಮನಾಗುತ್ತಿದ್ದೆ. ಕೆಲವರು ಬಲಹೀನ ಗೆಳೆಯರೂ ನಮ್ಮಿಂದ ಕಡ್ತಾ ತಿಂದು ಅಳುತ್ತ ಮನೆಗೆ ಹೋದರು. ಹಿಂದೆ ಅದೇ ವಾಕಿಂಗ್ ಸ್ಟಿಕ್ ನಿಂದ ಉಪಾಧ್ಯೆ ಡಾಕ್ಟರ ನಮಗೆ ಬಾರಿಸಿದ್ದರು. ಈಗ ಅವರಿಲ್ಲ ಅಂತ ರೊಚ್ಚಿನಲ್ಲಿ ಮೊದಲು ಮನುಷ್ಯರು ನಂತರ ಅದು ಸಾಕಾಗಲಿಲ್ಲ ಅಂತ ಗಿಡ, ಮರ, ನಾಯಿ, ಬೆಕ್ಕುಗಳ ಮೇಲೆಲ್ಲಾ ದಂಡ ಪ್ರಯೋಗ ಮಾಡಿ ಮಾಡಿ ಅಂತೂ ಆ ವಾಕಿಂಗ್ ಸ್ಟಿಕ್ ಮುರಿದು ಹೋಗುವ ಹೊತ್ತಿಗೆ ನಮ್ಮ ಕೋಪ, ತಾಪ, ರೋಷ ಎಲ್ಲ ಒಂದು ಹಂತಕ್ಕೆ ಮುಗಿದಿತ್ತು.

೧೯೭೬ - ೭೭ ರಲ್ಲಿ ತೀರಿಹೋದ ಡಾ. ಉಪಾಧ್ಯೆ ಮತ್ತೊಮ್ಮೆ ನೆನಪಿಗೆ ಬಂದಿದ್ದು ಈಗ ಒಂದು ಹದಿನೈದು ಇಪ್ಪತ್ತು ವರ್ಷದ ಹಿಂದೆ, ೧೯೯೫ ರ ಆಸುಪಾಸಿನಲ್ಲಿ. ಮೊದಲೇ ತಿಳಿಸಿದಂತೆ ನಿರ್ಮಲ ನಗರ ಬಡಾವಣೆಯಲ್ಲಿ ನಮ್ಮ ಪಕ್ಕದ ಮನೆಯವರು ಅವರು. ಮನೆಯಲ್ಲಿ ಅವರ ವೃದ್ಧ ಪತ್ನಿ, ಅವಿವಾಹಿತೆ ಮಗಳು ಇದ್ದರು. ಕುಟುಂಬಕ್ಕೆ ತುಂಬಾ ಕ್ಲೋಸ್. ಬಂದುಹೋಗಿ ಮಾಡುವದು ಎಲ್ಲ ಇತ್ತು. ಮಗಳು ಶಾಲಾ ಶಿಕ್ಷಕಿಯಾಗಿ ನಿವೃತ್ತಳಾಗಿದ್ದಳು.

ಒಂದು ದಿವಸ ಡಾ. ಉಪಾಧ್ಯೆಯವರ ಮಗಳು ನಮ್ಮ ಮನೆಗೆ ಬಂದು ವಾಪಸ್ ಹೊರಟಿದ್ದಾರೆ. ಅದೇ ಸಮಯಕ್ಕೆ ನಮ್ಮ ಗೇಟಿನ ಮುಂದೆ ಬಂದು ನಿಂತವ ಧಾರವಾಡದ ಖತರ್ನಾಕ್ ಭಿಕ್ಷುಕ - 'ಪಿಕಲ್ ಪೋಲೀಸ್'. ಖರೆ ಹೇಳಬೇಕು ಅಂದರೆ ಅವನು ಭಿಕ್ಷುಕ ಅಲ್ಲವೇ ಅಲ್ಲ. ಏನೋ ವಯಸ್ಸಾಗಿತ್ತು. ಸ್ವಲ್ಪ ಬುದ್ಧಿ ಭ್ರಮಣೆಯಾಗಿತ್ತು. ಮನೆ ಕಡೆ ಸಪೋರ್ಟ್ ಇರಲಿಲ್ಲ ಅಂತ ಕಾಣುತ್ತದೆ. ಮೊದಲು ಪೋಲಿಸ್ ಕಾನ್ಸ್ಟೇಬಲ್ ಆಗಿದ್ದನಂತೆ. ಆಗಾಗ ಬಂದು, ಊಟ ತಿಂಡಿ ಕೇಳಿ ಇಸಿದುಕೊಂಡು, ಒಂದಿಷ್ಟು ಹರಟೆ ತನ್ನದೇ ಶೈಲಿಯಲ್ಲಿ ಹೊಡೆದುಹೋಗುತ್ತಿದ್ದ ನಿರುಪದ್ರವಿ ಮುದುಕ. ಅವನಿಗೆ ಏನೇ ತಿನ್ನಲು ಉಣ್ಣಲು ಕೊಟ್ಟರೂ ಜೊತೆಗೆ ಇಷ್ಟಿಷ್ಟು ಉಪ್ಪಿನಕಾಯಿ ಕೊಡಲೇಬೇಕು. ಇಲ್ಲವೆಂದರೆ ಹಟ ಮಾಡುತ್ತಾ ಕೂಡುತ್ತಿದ್ದ. ಭಿಕ್ಷುಕ ಮೇಲಿಂದ ಹಟ ಮಾಡಿ ಉಪ್ಪಿನಕಾಯಿ ಕೇಳಿ ಪಡೆದುಕೊಳ್ಳುವ ಮಹಾನ್ ಭಿಕ್ಷುಕ. ಮೇರಾ ಧಾರವಾಡ ಮಹಾನ್!

ದಿವಂಗತ ಡಾ. ಉಪಾಧ್ಯೆಯವರ ಮಗಳು ನಮ್ಮ ಗೇಟ್ ದಾಟಿ ಹೋಗುತ್ತಿರುವದನ್ನು ಕಣ್ಣರಳಿಸಿ, ಮುಖ ತಿರುಗಿಸಿ ನೋಡುತ್ತಾ ನಮ್ಮ ಮನೆ ಕಾಂಪೌಂಡ್ ಒಳಗೆ ಎಂಟ್ರಿ ಕೊಟ್ಟ ಪಿಕಲ್ ಪೋಲೀಸ್. ಅಮ್ಮ ಅಲ್ಲೇ ಕಂಡಳು. 'ಏ ಇವರೇ, ಈಗ ಹೋದರಲ್ಲಾ ಅವರು ಉಪಾಧ್ಯೆ ಡಾಕ್ಟರ್ ಮಗಳು ಅಲ್ಲಾ?' ಅಂತ ಕೇಳಿಬಿಟ್ಟ. 'ಹಾಂ! ಹೌದು. ನಿನಗೆಂಗ ಗೊತ್ತೋ?' ಅಂತ ಅಚ್ಚರಿಯಿಂದ ಕೇಳಿದ್ದಾರೆ ಅಮ್ಮ. 'ಏ, ನಾ ಯಾರಂತ ಗೊತ್ತಿಲ್ಲೇನು ನಿಮಗ? ನಾ ಪೋಲಿಸ್. ರಿಟೈರ್ಡ್ ಆಗೇನಿ. ಆದ್ರ ಎಲ್ಲಾ ಗೊತ್ತದ. ಎಲ್ಲಾ ನೆನಪದ,' ಅಂದುಬಿಟ್ಟ. ಮುಂದುವರೆದು, 'ನಿಮಗ ಒಂದು ವಿಷಯ ಗೊತ್ತದ ಏನ್ರೀ ಮೇಡಂ?' ಅಂತ ಏನೋ ರಹಸ್ಯ ಹೇಳುವವನಂತೆ ಅಮ್ಮನ ಹತ್ತಿರ ಕೇಳಿದ್ದಾನೆ. 'ಏನೋ ಅದು? ಅಂತಾ ಮಹಾ ವಿಷಯ. ಹೇಳು ಲಗೂನೆ,' ಅಂದಿದ್ದಾರೆ ಅಮ್ಮ. ಸಣ್ಣ ದನಿಯಲ್ಲಿ ಹೇಳಿಬಿಟ್ಟಿದ್ದಾನೆ, 'ಆವಾ ಉಪಾಧ್ಯೆ ಡಾಕ್ಟರ್ ಇದ್ದನಲ್ಲಾ ಆವಾ ಅಮ್ಮಗೋಳ ಅಬಾರ್ಶನ್ ಮಾಡಿಸ್ತಿದ್ದಾ!'

ಹೋಗ್ಗೋ ಶಿವನೇ ಶಂಭುಲಿಂಗ! ಉಪಾಧ್ಯೆ ಡಾಕ್ಟರ್, ಅಮ್ಮಗಳು ಅಂದರೆ ಕೇಶಮುಂಡನ ಮಾಡಿಸಿಕೊಂಡಿದ್ದ ವಿಧವೆಯರು, ಗರ್ಭಿಣಿಯರಾದರೆ ಗರ್ಭಪಾತ ಮಾಡಿಸುತ್ತಿದ್ದರು ಅಂತ ಪಿಕಲ್ ಪೋಲೀಸ್ ಹೇಳಿದ ಮಾತಿನ ಅರ್ಥ. ಇದೊಂದು ಹೊಸ ಆಯಾಮ ಗೊತ್ತಿರಲಿಲ್ಲ ಬಿಡಿ. ಸುಮಾರು ೧೯೬೦ ರ ವರೆಗೂ ಬ್ರಾಹ್ಮಣರಲ್ಲಿ ವಿಧವೆಯರಿಗೆ ಕೇಶಮುಂಡನ ಮಾಡಿ ಕೆಂಪು ಸೀರೆ ಉಡಿಸುವ ಪದ್ಧತಿ ಇತ್ತು. ಮತ್ತೆ ಡಾ. ಉಪಾಧ್ಯೆ ೧೯೪೦-೬೦ ರ ವೇಳೆಯಲ್ಲಿ ಜಾಸ್ತಿ ಪ್ರಾಕ್ಟೀಸ್ ಮಾಡಿದವರು. ಆ ಕಾಲದಲ್ಲಿ ವಿಧವೆಯರು, ಅದೂ ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು ಮಡಿ ಅಮ್ಮಗಳಾದ ಮಹಿಳೆಯರ ಸಂಖ್ಯೆಯೂ ಜಾಸ್ತಿಯೇ. ಏನೇ ಮಾಡಿದರೂ ಪ್ರಾಯದ ಯುವತಿಯರು ಗರ್ಭಿಣಿಯರಾಗುವದನ್ನು ತಡೆಯಲು ಸಾಧ್ಯವೇ? ಬ್ರಾಹ್ಮಣ ವಠಾರಗಳಲ್ಲಿ ಅಂತಹ ಲೋಚಾಗಳು ಆಗೇ ಆಗುತ್ತಿದ್ದವು. ಕಳ್ಳ ಬಸಿರು. ಅದಕ್ಕಿಂತ ಹೆಚ್ಚಿನ ರಹಸ್ಯದಲ್ಲಿ ಅದನ್ನು ತೆಗೆಸುವದು. ಏನೋ ಮಾಡಿ ಮಾನ ಕಾಪಾಡಿಕೊಳ್ಳುವದು. ಇಲ್ಲವಾದರೆ ಮಠದಿಂದ ಬಹಿಷ್ಕಾರ ಬೀಳುತ್ತಿತ್ತು. 'ಪಣಿಯಮ್ಮ' ಚಿತ್ರದಲ್ಲಿ ಎಲ್ಲ ವಿವರವಾಗಿ ತೋರಿಸಿದ್ದಾರೆ.

ಎಷ್ಟು ಜನ ಡಾಕ್ಟರುಗಳು ಅಂತಹ ಅಬಾರ್ಶನ್ ಮಾಡಿಸುತ್ತಿದ್ದರೋ ಏನೋ. ಮಾಡಿಸಿದ್ದರಲ್ಲಿ ತಪ್ಪು ಒಪ್ಪು ಅಂತ ಏನೂ ಇಲ್ಲ. No judgement over that. ನಮ್ಮ ಡಾ. ಉಪಾಧ್ಯೆ ಸಹಿತ ಅದನ್ನು ಮಾಡಿರಬಹುದು. ಅದನ್ನು ಯಾರೋ ಒಬ್ಬ ಪುರಾತನ ಪೋಲೀಸ್ ಪೇದೆ ಐವತ್ತು ವರ್ಷಗಳ ಬಳಿಕವೂ ನೆನಪಿಟ್ಟು ಒಂದು ವಿಶಿಷ್ಟ ರೀತಿಯಲ್ಲಿ ಹೇಳಿದ ಎಂಬುದೇ ಅಂದಿನ ವಿಶೇಷ ಅಷ್ಟೇ.  ಮುಂದೆ ಬೇರೆ ಯಾವದೋ ಕಾರಣಕ್ಕೆ ಏನನ್ನೋ ಕೆದಕುತ್ತ ಹೋದಂತೆ ಧಾರವಾಡದ ಬಾಲ ವಿಧವೆಯರ ಬಗ್ಗೆ ಅನೇಕಾನೇಕ ಸಂಗತಿಗಳು ತಿಳಿದವು. ತಿಳಿದು ಮನಸ್ಸು ತುಂಬಾ ಕಸಿವಿಸಿಗೊಂಡಿತ್ತು. Water ಅನ್ನುವ ಒಂದು ಸಿನಿಮಾ ಬಂದಿತ್ತು. ವೃಂದಾವನದಲ್ಲಿ ನೆಲೆಸಿರುವ ನಿರ್ಗತಿಕ ವಿಧವೆಯರ ಬಗ್ಗೆ ಮತ್ತು ಅವರ ಶೋಷಣೆಯ ಬಗ್ಗೆ. ಸ್ವಾತಂತ್ರದ ಮೊದಲು ಧಾರವಾಡದಲ್ಲೂ ಅಂತಹದೇ ಪರಿಸ್ಥಿತಿ ಇತ್ತು ಗೊತ್ತಾಯಿತು. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ. ದೊಡ್ಡ ಕರ್ಮಕಾಂಡ ಅದು.

'ಸಾಕು, ಇಂತಾ ಹಾಳುವರಿ ಸುದ್ದಿ ಎಲ್ಲ ನೀನೇ ಇಟ್ಟುಕೋ. ಊಟ ತರ್ತೇನಿ ನಿನಗ,' ಅಂತ ಹೇಳಿ ಅಮ್ಮ ಒಳಗೆ ಹೋದಳು. 'ರೀ, ಪಿಕಲ್ ತರೋದು ಮಾತ್ರ ಮರಿಬ್ಯಾಡ್ರೀ. ಪಿಕಲ್, ಪಿಕಲ್, I want pickle' ಅಂತ ಹಿಂದಿಂದ ಹೊಯ್ಕೊಂಡ ಪಿಕಲ್ ಪೋಲೀಸ್. ನಾನು ಪಿಕಲ್ ಪೋಲೀಸನನ್ನೇ ನೋಡುತ್ತಾ ಉಳಿದೆ. ಖತರ್ನಾಕ್ ಸುದ್ದಿಯ ಬಾಂಬ್ ಹಾಕಿದ್ದ!

ವಿಶ್ವ ವೈದ್ಯರ ದಿನದಂದು ವೈದ್ಯರುಗಳನ್ನು ನೆನಪುಮಾಡಿಕೊಳ್ಳುತ್ತ ಹೋದಂತೆ ಮೊದಲು ನೆನಪಾದವರು ಡಾ. ಉಪಾಧ್ಯೆ. ಕೇವಲ ಅವರ ನೆನಪುಗಳನ್ನೇ ಬರೆದರೆ ಇಷ್ಟು ಉದ್ದವಾಗಿಬಿಟ್ಟಿತು. ಇನ್ನೂ ಇಂತಹ ಹತ್ತು ಬರಹಗಳನ್ನು ಧಾರವಾಡದ ಇತರ ಆತ್ಮೀಯ ವೈದ್ಯರುಗಳ ಬಗ್ಗೆ ಬರೆಯಬಹುದು. ದೇಶ ವಿದೇಶದಲ್ಲಿ ಸಿಕ್ಕ ವೈದ್ಯರುಗಳ ಕೂಡ ಮತ್ತೊಂದಿಷ್ಟು ಬರೆಯಬಹುದು. ಈ ವರ್ಷದ ವಿಶ್ವ ವೈದ್ಯ ದಿನಕ್ಕೆ ಇಷ್ಟು ಸಾಕು. ಮುಂದಿನ ವರ್ಷ ಮತ್ತೊಬ್ಬ ಮಹಾನ್ ವೈದ್ಯರನ್ನು ನೆನಪಿಸಿಕೊಂಡು ಬರೆಯುತ್ತೇನೆ.

ಎಲ್ಲ ವೈದ್ಯರಿಗೆ ವಿಶ್ವ ವೈದ್ಯ ದಿವಸದ ಶುಭಕಾಮನೆಗಳು, ಶುಭಾಶಯಗಳು. You doctors are really great. All the doctors that have treated me in the past and continue to treat me have my highest regards and appreciation for their dedication, compassion and commitment. Never once in my life so far have I come across a bad doctor. May your tribe grow.

ವಾಕಿಂಗ್ ಸ್ಟಿಕ್ಕಿನಿಂದ ಬಾರಿಸಿದ್ದ ಡಾ. ಉಪಾಧ್ಯೆ ಹೀಗೇ ಇದ್ದರು :)

4 comments:

sunaath said...

ಮಹೇಶ,ಚುರುಗುಟ್ಟುವ ನೆನಪನ್ನು ಮೆಲುಕಾಡಿಸಿದ ರೀತಿ ಸೊಗಸಾಗಿದೆ. ಇಂತಹ ನೆನಪುಗಳು ಇನ್ನಷ್ಟು ಹೊರಬರಲಿ; ನಮಗೆ ಖುಶಿಯನ್ನು ತರಲಿ!

Mahesh Hegade said...

ಜರೂರ್ ಸರ್. ಓದಿ, ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.

kushi N said...

Chennagide....:-) pickle police.... Bhuthayyana maga ayyu chitrada bikshukana nenapige thanda ..

Mahesh Hegade said...

Thank you, Kushi.