Friday, July 31, 2015

'ಚೇಳಿನ ಮಂತ್ರ ಬಾರದವರು ಹಾವಿನ ಬುಟ್ಟಿಗೆ ಕೈಹಾಕಬಾರದು'...ಎನ್ಕೌಂಟರ್ ಸ್ಪೆಷಲಿಸ್ಟ್ ಆಗಲು ಹೋದವ ಉತ್ತರ ಕುಮಾರನಾಗಿ ಮರಳಿದ ಕಥೆ

ನಾವೆಲ್ಲಾ ಶಾಲೆಗೆ ಹೋಗಿದ್ದು ಮೂವತ್ತು ವರ್ಷಗಳ ಹಿಂದೆ. ಆಗೆಲ್ಲ ಕ್ಯಾಪಿಟಲ್ ಪನಿಶ್ಮೆಂಟ್ ಅಂದರೆ ಓಕೆ. ಹುಡುಗರನ್ನು ಎಷ್ಟು ಬಾರಿಸಿದರೂ, ಹೇಗೆ ಬಾರಿಸಿದರೂ ಓಕೆ. ಮತ್ತೆ ಆಗಿನ ಪಾಲಕರೂ ಸಹ ಮಾಸ್ತರರು ಮಕ್ಕಳಿಗೆ ಬಾರಿಸಿದರೆ, ಹೊಡೆದರೆ, ಬಡಿದರೆ, ದವಡೆ ಹಲ್ಲುಗಳೆಲ್ಲ ಚದುರಿ ಹೋಗುವಂತೆ ಕಪಾಳಕ್ಕೆ ಇಕ್ಕಿದರೆ, TK ಎಲ್ಲ ಕರಗಿ ಅಂಡು ಚಪ್ಪಟೆಯಾಗಿ ಹೋಗುವಂತೆ ಝಾಡಿಸಿ ಅಂಡಿಗೆ ಒದ್ದರೆ, ಚಮಡಾ ನಿಕಾಲಿ ಮಾಡಿದರೆ ಮಕ್ಕಳ ಒಳ್ಳೇದಕ್ಕೇ ಮಾಡುತ್ತಾರೆ ಅಂತ ಅಂದುಕೊಂಡು ಏನೂ ಹೇಳುತ್ತಿರಲಿಲ್ಲ. 'ಬೇಕಾದರೆ ಇನ್ನೂ ನಾಲ್ಕು ಹಾಕಿ ಈ ನನ್ಮಗನಿಗೆ!' ಅನ್ನುತ್ತಿದ್ದರು. ಈಗ ಎಲ್ಲ ಬದಲಾಗಿದೆ ಬಿಡಿ. ಶಾಲಾ ಮಕ್ಕಳ ಮೇಲೆ ಮಾಸ್ತರ್ ಮಂದಿ ಕೈ ಮತ್ತೊಂದು ಎತ್ತುವಂತೆಯೇ ಇಲ್ಲ.

ಆಗಿನ ಎಲ್ಲ ಶಿಕ್ಷಕರೂ, ಶಿಕ್ಷಕಿಯರೂ ತಕ್ಕ ಮಟ್ಟಿಗೆ ಬಾರಿಸುವದನ್ನು ಕಲಿತೇ ಇರುತ್ತಿದ್ದರು. ತರಗತಿಯಲ್ಲಿ ಗಲಾಟೆ ಮಾಡಿದ, ಹೋಂವರ್ಕ್ ಮಾಡಿ ತರಲಿಲ್ಲ, ಇತ್ಯಾದಿ, ಇತ್ಯಾದಿ ಕಾರಣಗಳಿಗೆ ಮಕ್ಕಳಿಗೆ ತಪರಾಕಿ ಹಾಕಿ, ಕಿವಿ ಹಿಂಡಿ, ತಿದ್ದಿ ತೀಡುವ ಕೆಲಸ ಎಲ್ಲರಿಗೂ ಬರುತ್ತಿತ್ತು. ಆದರೆ ಪ್ರತಿ ಶಾಲೆಯಲ್ಲಿ 'ಅವರೂ' ಇರುತ್ತಿದ್ದರು. ಕಮ್ಮಿ ಕಮ್ಮಿ ಅಂದರೆ ಒಂದಿಬ್ಬರು. ಅವರೇ ಖತರ್ನಾಕ್ 'ಎನ್ಕೌಂಟರ್ ಸ್ಪೆಷಲಿಸ್ಟ್' (encounter specialist) ಶಿಕ್ಷಕರು. ದೊಡ್ಡ ಪ್ರಮಾಣದಲ್ಲಿ ಬಾರಿಸುವದು, ಚಮಡಾ ನಿಕಾಲಿ ಮಾಡುವದು, ಮಸಡಿ ಕಿತ್ತುಹೋಗುವಂತೆ, ಮುಖದ ಚಹರಾಪಟ್ಟಿಯೇ ಬದಲಾಗಿ ಹೋಗುವಂತೆ ಕಪಾಳ ಗೆಡ್ಡಿಗೆ ಜಪ್ಪುವದು ಇತ್ಯಾದಿ ಥರ್ಡ್ ಡಿಗ್ರಿ ಟಾರ್ಚರ್ ಮಾಡುವದು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರುಗಳ ಸ್ಪೆಷಾಲಿಟಿ. ಶಾಲೆಯಲ್ಲಿ ದೊಡ್ಡ ಪ್ರಮಾಣದ ಅಶಿಸ್ತು, ಗದ್ದಲ, ಮನ್ಮಾನಿ, ಲಫಡಾ ಬಾಜಿ ಎಲ್ಲ ಆದಾಗ ಅವರೇ ಬೇಕು. ಶಾಲೆಗೆ ಒಂದಿಬ್ಬರು ಅಂತಹ ಖಡಕ್ ಮಾಸ್ತರರು ಇರುತ್ತಿದ್ದರು ಅಂತ ಶಾಲೆ ಬಚಾವು. ಯಾಕೆಂದರೆ ಶಾಲೆಯ ಶಿಸ್ತು ಕಾಪಾಡಲು ಪೊಲೀಸರಿಗೆ ಕರೆ ಮಾಡುವದು, ಶಾಲೆ ಗೇಟಿನ ಮುಂದೆ ಪೋಲೀಸ್ ವ್ಯಾನ್ ನಿಲ್ಲುವದು ಇತ್ಯಾದಿ ಆ ಕಾಲದ ಸಂಪ್ರದಾಯವಾಗಿರಲಿಲ್ಲ. ಈಗ ಅದೆಲ್ಲ ಆಗಿಹೋಗಿದೆ. ಶಾಲೆ ಕಾಲೇಜುಗಳಲ್ಲಿ ಪೋಲೀಸ್ ವ್ಯಾನ್ ಕಾಣುವದು ಅಪರೂಪವೇನಲ್ಲ ಈ ಕಾಲದಲ್ಲಿ.

ಇಂತಹ ಅರಿಭಯಂಕರ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರುಗಳು ಕೆಲವು ಪರ್ಟಿಕ್ಯುಲರ್ ಟೈಪಿನ ಕೇಸುಗಳನ್ನು ಹ್ಯಾಂಡಲ್ ಮಾಡುತ್ತಿದ್ದರು. ಸಣ್ಣ ಪ್ರಮಾಣದ ಗೂಂಡಾಗಿರಿ ಮಾಡುವವರು, ಶಾಲೆಯ ಆಸ್ತಿ ಪಾಸ್ತಿಗೆ ಹಾನಿ ಮಾಡುವವರು, ಶಾಲೆಯಿಂದ ಕದಿಯುವವರು, ಸೌಮ್ಯ ಸ್ವಭಾವದ ಶಿಕ್ಷಕ ಶಿಕ್ಷಕಿಯರಿಗೆ ಬೆದರಿಕೆ ಹಾಕುವವರು, ಹುಡುಗಿಯರನ್ನು ಅಸಭ್ಯವಾಗಿ ಚುಡಾಯಿಸಿ ತೊಂದರೆ ಕೊಡುವವರು, ಹೊರಗಿನಿಂದ ಸಣ್ಣ ಪ್ರಮಾಣದ ರೌಡಿಗಳನ್ನು, ಗೂಂಡಾಗಳನ್ನು ಕರೆಯಿಸಿಕೊಂಡು ತೋಳ್ಬಲ ಪ್ರದರ್ಶನ ಮಾಡಿಸಿ ತಮ್ಮ ಹವಾ ಮೈಂಟೈನ್ ಮಾಡುವವರು, ಶಾಲೆಯಲ್ಲಿ ಪಾನ್, ಬೀಡಿ, ಸಿಗರೇಟ್ ಸೇವನೆ ಮಾಡಿ ಸಿಕ್ಕಿಕೊಂಡವರು, ಇತ್ಯಾದಿ ಮಂದಿ... ಇಂತವರೇ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರ ಕಣ್ಣಿಗೆ ಬೀಳುತ್ತಿದ್ದರು. ಬರೋಬ್ಬರಿ ವಿಚಾರಿಸಿಕೊಳ್ಳುತ್ತಿದ್ದರು. ಹದ ಹಾಕುತ್ತಿದ್ದರು. ಪ್ರಯೋಗ ಶಾಲೆಯಿಂದ ಏನೋ ಕದ್ದವನನ್ನು ರವಿವಾರ ಮನೆಯಿಂದ ಮಾಲು ಸಮೇತ ಎತ್ತಾಕಿಕೊಂಡು ಬಂದು, ಶಾಲಾ ಆವರಣದಲ್ಲಿನ ಗಿಡಕ್ಕೆ ಕಟ್ಟಿ ಹಾಕಿ, ದನಕ್ಕೆ ಬಡಿದಂತೆ ಬಡಿದಿದ್ದರು. ರೌಡಿಸಂ ಮಾಡಿ ಸಣ್ಣ, ಸಭ್ಯ ಹುಡುಗರಿಗೆ ಬಾರಿಸಿ ಓಡಿಹೋಗಿದ್ದ ಪೊರ್ಕಿ ರೌಡಿಗಳನ್ನು (ಅವರು ಅದೇ ಶಾಲೆಯ ಮಾಜಿ ವಿದ್ಯಾರ್ಥಿಗಳು) ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಮನೆಗೇ ಹೋಗಿ ಹೊಡೆದು, ಒದ್ದು ಬಂದಿದ್ದರು. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಮನೆಗೇ ಬಂದರು ಅಂತ ಸಂಡಾಸ್ ಒಳಗೆ ಓಡಿದ್ದನಂತೆ ಆ ಪೊರ್ಕಿ. ಆ ಚಾಳಿನ ಸಮುದಾಯ ಸಂಡಾಸದ ಬಾಗಿಲು ತೆಗೆಯಿಸಿ, ಅಲ್ಲಿಯೇ ಉಳ್ಳಾಡಿಸಿ ಉಳ್ಳಾಡಿಸಿ ಹೊಡೆದು ಬಂದಿದ್ದರು. ಮುಂದೆ ಆ ಪುಡಿ ರೌಡಿ ನಮ್ಮ ಶಾಲೆ ಕಡೆ ಬಂದರೆ ಕೇಳಿ. ಅದೇ ಪ್ರಕರಣದ ಮತ್ತೊಬ್ಬ ಪುಡಿ ರೌಡಿ ಬಳ್ಳಾರಿ ಸೇರಿಕೊಂಡಿದ್ದ. ತಮ್ಮ ವಶೀಲಿ ಉಪಯೋಗಿಸಿ, ಆಗಿನ ಬಳ್ಳಾರಿ ಪೋಲೀಸ್ ವರಿಷ್ಠನಿಗೆ ಫೋನ್ ಮಾಡಿಸಿ, ಧಾರವಾಡದಲ್ಲಿ ಆ ಪುಡಿ ರೌಡಿ ಶಾಲೆಗೆ ಬಂದು ಮಾಡಿದ ಹಾವಳಿಯ ಬಗ್ಗೆ ವಿವರಿಸಿ, ಅವನಿಗೆ ಬಳ್ಳಾರಿ ಪೋಲೀಸರ ಮುಖಾಂತರವೇ ಪೂಜೆ ಮಾಡಿಸಿದ್ದ ಲೆವೆಲ್ಲಿನ influential ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ನಮ್ಮ ಕಾಲದಲ್ಲಿ ನಮ್ಮ ಶಾಲೆಯಲ್ಲಿ ಇದ್ದರು ಅನ್ನುವದು ಹೆಮ್ಮೆಯ ವಿಷಯ. ಬಳ್ಳಾರಿಯ ಪೋಲೀಸ್ ವರಿಷ್ಠ ಅಲ್ಲಿಗೆ ಹೋಗುವ ಮೊದಲು ಧಾರವಾಡದಲ್ಲಿಯೇ ಇದ್ದ. ಆಗ ಮಾಡಿಕೊಂಡಿದ್ದ ದೋಸ್ತಿಯನ್ನು ಉಪಯೋಗಿಸಿಕೊಂಡಿದ್ದರು ನಮ್ಮ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು. ಬಳ್ಳಾರಿ ಪೊಲೀಸರು ಆ ಪೊರ್ಕಿಯನ್ನು ಅವನಿದ್ದ ಹಾಸ್ಟೆಲ್ ರೂಮಿನಿಂದಲೇ ಎತ್ತಾಕಿಕೊಂಡು ಹೋಗಿ, ಲಾಕಪ್ಪಿನಲ್ಲಿ ಹಾಕಿಕೊಂಡು ಅದು ಹೇಗೆ ರುಬ್ಬಿದ್ದರು ಅಂದರೆ ಹದಿನೈದು ದಿನ ಸರ್ಕಾರಿ ಆಸ್ಪತ್ರೆಯಲ್ಲಿದ್ದು ಬಂದ. ಟೋಟಲ್ ಸ್ಕ್ರಾಪ್ ಆಗಿದ್ದ ಮಗನ ವಾಗಾತಿ ಮಾಡಲು ಧಾರವಾಡದಿಂದ ಅಮ್ಮ ಅಪ್ಪ ಹೋಗಬೇಕಾಯಿತು. ಆ ಮಾದರಿಯ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ಇದ್ದರು ನಮ್ಮ ಕಾಲದಲ್ಲಿ, ನಮ್ಮ ಶಾಲೆಯಲ್ಲಿ. ಅವರ ಹವಾ ಅಪಾರ.

ಹೀಗೆ ಶಾಲೆಯಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಶಿಕ್ಷಕರು ಅಂದರೆ ಅವರಿಗೆ ಸಿಕ್ಕಾಪಟ್ಟೆ ಭಾವ್ ಇರುತ್ತಿತ್ತು. ಎಲ್ಲರೂ ಅವರನ್ನು ಒಂದು ಟೈಪಿನ ಭಯ ಮಿಶ್ರಿತ ಅಚ್ಚರಿಯಿಂದ ನೋಡುತ್ತಿದ್ದರು. ಆದರೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಅವತಾರ ತಾಳಲು ಸಾಕಷ್ಟು ದಮ್, ಗಂಡೆದೆ ಬೇಕಾಗುತ್ತಿತ್ತು. ಯಾಕೆಂದರೆ ಮಾಸ್ತರ್ ಮಂದಿ ಶಾಲೆಯ ಆವರಣದಲ್ಲಿ ಏನೇ ಆವಾಜ್ ಹಾಕಿದರೂ, ಏನೇ ಮನ್ಮಾನಿ ಮಾಡಿದರೂ, ಹೊರಗೆ ಬಂದಾಗ ಅವರೂ ಆರ್ಡಿನರಿ ಜನರೇ ತಾನೇ!!?? ಯಾವದ್ಯಾವದೋ ಸಂತೃಸ್ತ ಮಂದಿ, ಇವರಿಂದ ಗಜ್ಜು ತಿಂದು ಹೋದ ಪುಡಿ ರೌಡಿಗಳು ಇವರನ್ನೇ ಆಟಕಾಯಿಸಿಕೊಳ್ಳುವ ಅಪಾಯವಿದ್ದೇ ಇರುತ್ತಿತ್ತು. ಪ್ರತಿ ವರ್ಷ ವಾರ್ಷಿಕ ಪರೀಕ್ಷೆ ಮುಗಿದ ಮೇಲೆ ಆ ಮಾಸ್ತರರನ್ನು ಆಟಕಾಯಿಸಿಕೊಂಡು ತಪರಾಕಿ ಕೊಟ್ಟರು, ಈ ಮಾಸ್ತರನನ್ನು ಹಾಕಿಕೊಂಡು ನಾದಿದರು, ಈ ಮಾಸ್ತರಣಿಯ ಮೈಮೇಲೆ ಕೈ ಹಾಕಿದರು ಅಂತ ಸುದ್ದಿ ಬರುತ್ತಿತ್ತು. ಎಷ್ಟು ನಿಜವೋ ಗೊತ್ತಿಲ್ಲ. ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ತಮ್ಮ ಮೋಟಾರ್ ಬೈಕಿನ ಬಾಕ್ಸಿನಲ್ಲಿ ಸದಾ ಒಂದು ಸೈಕಲ್ ಚೈನ್ ಇಟ್ಟಿರುತ್ತಾರೆಂದೂ, ಮತ್ತೆ ರೌಡಿಗಳು ಆಟಕಾಯಿಸಿಕೊಂಡಾಗ ಮುಲಾಜಿಲ್ಲದೇ ಅದನ್ನು ತೆಗೆದು ಅದರಲ್ಲೇ ಬಾರಿಸಿ ತಮ್ಮ ಸ್ವರಕ್ಷಣೆ ಮಾಡಿಕೊಳ್ಳುತ್ತಾರೆಂದೂ ದೊಡ್ಡ ಮಟ್ಟದ ಹವಾ ಇತ್ತು. ಅದು ನಿಜ. ಯಾಕೆಂದರೆ ಅವರೇ ಆ ಕಾಲದ ದೊಡ್ಡ ರೌಡಿ. ಶಾಲೆ ಒಳಗೆ ಹೊರಗೆ ಎಲ್ಲ ಅವರದ್ದೇ ಹವಾ. ಹೀಗೆ ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು, ಇರುವ ಅಪಾಯಗಳನ್ನು ನಗಣ್ಯ ಮಾಡಿ, ಪರಿಸ್ಥಿತಿ ಹತೋಟಿ ಮೀರಿದಾಗ, ಒಂದು ಎನ್ಕೌಂಟರ್ ಮಾಡಬೇಕಾದ ಸಂದರ್ಭ ಬಂದಾಗ, ಎನ್ಕೌಂಟರ್ ತರಹದ ಕಾರ್ಯಾಚರಣೆ ಮಾಡಿ ಖಡಕ್ ಶಿಸ್ತು ಕಾದುಕೊಂಡು ಬರುತ್ತಿದ್ದರು.

೧೯೮೭-೮೮. ನಾವು ಆವಾಗ ಹತ್ತನೇ ಕ್ಲಾಸ್. ಆವಾಗ ನಮ್ಮ ಶಾಲೆಗೆ ಎಂಟ್ರಿ ಕೊಟ್ಟವರು ಬಲರಾಮ ಭಟ್ಟಿ ಸರ್. ವಿಜಾಪುರ ಕಡೆಯ ಶುದ್ಧ ಆಚಾರ್ರು. ತುಂಬಾ handsome ಅನ್ನುವಂತಹ ಸಾಂಪ್ರದಾಯಕ ಸುಂದರ ವ್ಯಕ್ತಿತ್ವ. ಮೊದಲು ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ತುಂಬಾ ಶ್ರಮಜೀವಿ. ಏನೇನೋ ಓದಿಕೊಂಡರು. ಏನೇನೋ ಪರೀಕ್ಷೆ ಪಾಸ್ ಮಾಡಿಕೊಂಡರು. ನಂತರ ಅವನ್ನು ಉಪಯೋಗಿಸಿಕೊಂಡು ಹೈಸ್ಕೂಲಿಗೆ ಜಂಪ್ ಹೊಡೆದು ದೊಡ್ಡ ಶಾಲೆ ಮಾಸ್ತರರು ಆಗಿಬಿಟ್ಟರು. ಅದು ಮೇಲ್ಮಟ್ಟದ ಹುದ್ದೆ. ಯಾಕೆಂದರೆ ನಮ್ಮ ಶಾಲೆ ಕ್ಯಾಂಪಸ್ಸಿನಲ್ಲಿ ಪ್ರೈಮರಿ ಶಾಲೆ ದಿಬ್ಬದ ಕೆಳಗೆ. ಹೈಸ್ಕೂಲ್ ದಿಬ್ಬದ ಮೇಲೆ. Literally it was a promotion.

ಹೀಗೆ ಹೈಸ್ಕೂಲಿಗೆ ಭಡ್ತಿ ಪಡೆದುಕೊಂಡ ಬಲರಾಮ ಭಟ್ಟಿ ಸರ್ ಮತ್ತೂ ಸುಂದರರಾಗಿ ಶಾಲೆಗೆ ಬರತೊಡಗಿದರು. ಮೊದಲೇ ತಕ್ಕಮಟ್ಟಿನ ಸುಂದರರು. ಈಗ ಪಗಾರ್ ಕೂಡ ಮೊದಲಿನಿಗಿಂತ ಜಾಸ್ತಿ. ಭಟ್ಟಿ ಸರ್ ಇನ್ನೂ ಮದುವೆ, ಮಕ್ಕಳಿಲ್ಲದ ಬ್ರಹ್ಮಚಾರಿ. ಹಾಗಾಗಿ ಪಗಾರಿನ ರೊಕ್ಕ ಎಲ್ಲ ಇವರಿಗೇ. ತುಂಬಾ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡು ಬರತೊಡಗಿದರು. ನೀಟಾಗಿ ತಮಗೆ ಹೊಂದುವಂತಹ ಪ್ಯಾಂಟು, ಶರ್ಟು. ಅವಕ್ಕೆ ಖಡಕ್ ಇಸ್ತ್ರಿ. ಕಾಲಿಗೆ ಬರೋಬ್ಬರಿ ಪಾಲಿಶ್ ಮಾಡಿದ ಮಿರಿಮಿರಿ ಮಿಂಚುವ ಕರಿ ಬೂಟು. ಕಣ್ಣಿಗೆ ಕಪ್ಪು ಕನ್ನಡಕ. ಸಾಂಪ್ರದಾಯಿಕ ಕೇಶ ಶೈಲಿಯೇ ಆದರೂ ಅದನ್ನೇ ಸಾಕಷ್ಟು ಉದ್ದ ಬಿಟ್ಟಿದ್ದರು. ಓಡಾಡಲು ಒಂದು ಹೊಚ್ಚ ಹೊಸ BSA ಸೈಕಲ್ ಖರೀದಿ ಮಾಡಿದ್ದರು. ಕಡು ಹಸಿರು ಬಣ್ಣದ್ದು ಬರುತ್ತಿತ್ತು ನೋಡಿ ಆಗಿನ ಜಮಾನಾದಲ್ಲಿ. ಅದೇ. ಅದನ್ನು ಹತ್ತಿ ಬಲರಾಮ ಆಚಾರ್ ಭಟ್ಟಿ ಸರ್ ಹೊರಟರು ಅಂದರೆ ನೋಡಿದ ಮಂದಿ ಮತ್ತೊಮ್ಮೆ ತಿರುಗಿ ನೋಡಬೇಕು. ನಾವು ನಮಸ್ಕಾರ ಮಾಡಿದರೆ, ಅವರು ತಿರುಗಿ ನೋಡಿ, 'ಹೂಂ! ಹೂಂ! ಸಲಾಂ ಕಬೂಲ್ ಕಿಯಾ!' ಅನ್ನುವಂತೆ ರಿವರ್ಸ್ ಸಲಾಂ ಮಾಡಿ, ಕೂದಲನ್ನು ಒಂದು ತರಹ ಹಾರಿಸಿ, ಸ್ಟೈಲ್ ಹೊಡೆಯುತ್ತಿದ್ದರು. ಬಂವ್ವಂತ ಮತ್ತೂ ಜೋರಾಗಿ ಸೈಕಲ್ ಹೊಡೆಯುತ್ತಿದ್ದರು. ಜವಾನಿಯ ಗರಂ ಖೂನಿನ ತಿಮಿರು ಅಂದರೆ ಅದು!

ಭಟ್ಟಿ ಸರ್ ಮೊದಲು ಪ್ರೈಮರಿಯಲ್ಲಿ ಇದ್ದಾಗ ತಮ್ಮ ಪೂಜೆ, ಪುನಸ್ಕಾರ ಎಲ್ಲ ಮಾಡಿ, ಅವರ ಮತದ ಪದ್ಧತಿ ಪ್ರಕಾರ ಎಲ್ಲ ಮುದ್ರೆಗಳನ್ನು ಒತ್ತಿಕೊಂಡು, ನಾಮಗಳನ್ನು ಎಲ್ಲ ಬರೋಬ್ಬರಿ ಹಾಕಿಕೊಂಡು, ಊಟ ಮುಗಿದ ನಂತರ ನಾಮದ ಕೆಳಗೆ ಅಕ್ಷಂತಿ ಬೊಟ್ಟು ಸಹಿತ ಇಟ್ಟುಕೊಂಡು ಬರುತ್ತಿದ್ದರು. ತುಂಬಾ ಲಕ್ಷಣವಾಗಿ ಕಾಣುತ್ತಿದ್ದ ಆಚಾರಿ ಸುಂದರ. ಆವಾಗ ಅವರಿಗೆ ಇಷ್ಟೆಲ್ಲಾ ಫ್ಯಾಷನ್ ಗೀಶನ್ ಇರಲಿಲ್ಲ ಅನ್ನಿ. ಈಗ ಹೈಸ್ಕೂಲಿಗೆ ಬಂದ ಮೇಲೆ ಜೋರಾಗಿ ಡ್ರೆಸ್ ಮಾಡುವದು, ಬೂಟ್ ಹಾಕುವದು, ಗಾಗಲ್ ಹಾಕುವದು, ಸ್ಟೈಲ್ ಹೊಡೆಯುವದು ಎಲ್ಲ ಶುರುವಾದ ಮೇಲೆ ಪಕ್ಕಾ ಆಚಾರರ ಹಾಗೆ ಮೊದಲಿನ ತರಹ ಇದ್ದರೆ ಅದೆಂತ ಚಂದ? ನೋಡಿದವರು ಏನೆಂದುಕೊಂಡಾರು??? ಹಾಗಂತ ವಿಚಾರ ಮಾಡಿಯೋ ಏನೋ ಗೊತ್ತಿಲ್ಲ ಆದರೆ ಈಗ ಪೂಜೆ ಮುಗಿಸಿ, ಎಲ್ಲ ಮುದ್ರೆ, ನಾಮ ಇತ್ಯಾದಿಗಳನ್ನು ಅಳಿಸಿಕೊಂಡು ಬರುವ ಪ್ರಯತ್ನ ಮಾಡುತ್ತಿದ್ದರು. ಪ್ರಯತ್ನ ಮಾಡುತ್ತಿದ್ದರು. ಆದರೂ ಅದು ಪೂರ್ತಿ ಸಫಲವಾಗುತ್ತಿರಲಿಲ್ಲ. ಗಡಿಬಿಡಿಯಲ್ಲಿ ಮುದ್ರೆ, ನಾಮ ಅಳಿಸಿಕೊಂಡು ಸರ್ ಸೈಕಲ್ ಹತ್ತಿದ್ದಾರೆ ಅಂತ ಗೊತ್ತಾಗುತ್ತಿತ್ತು. ಮನೆಯಲ್ಲಿ ಅಳಿಸಿಕೊಳ್ಳೋಣ ಅಂದರೆ ಮನೆ ಮಂದಿ ಬೈಯ್ಯುತ್ತಾರೆ. ಅಳಿಸಿಕೊಳ್ಳದೇ ಬರಲಿಕ್ಕೆ ಭಟ್ಟಿ ಅವರಿಗೇ ಒಂದು ನಮೂನಿ. ಸಂಪ್ರದಾಯಸ್ತ ಮಂದಿಗೆ ಫ್ಯಾಷನ್ ಮಾಡಬೇಕು ಅಂದರೆ ತೊಂದರೆ ಒಂದೇ ಎರಡೇ!!??

ಮತ್ತೆ ಆಗ ಬಲರಾಮ ಭಟ್ಟಿ ಸರ್ ಅವರಿಗೆ ಹೆಚ್ಚೆಂದರೆ ಎಷ್ಟು ವಯಸ್ಸು? ಒಂದು ಇಪ್ಪತ್ತಮೂರು ಇಪ್ಪತ್ನಾಲ್ಕು ವರ್ಷ ಅಷ್ಟೇ. ಬರೋಬ್ಬರಿ ಕೊತ ಕೊತ ಕುದಿಯುವ ಜಲ್ತೀ ಜವಾನಿ. ಆವಾಗಲೇ ತಲೆಗೆ ಏನೇನೋ ವಿಚಾರ ಬರುತ್ತವೆ. ಏನೇನೋ ಮಾಡಬೇಕು ಅನ್ನಿಸುತ್ತದೆ. ನೌಕರಿ ಹತ್ತಿದ ಗಂಡುಮಕ್ಕಳಿಗೆ, 'ಮದುವೆ ಮಾಡಿಕೋ! ಮಕ್ಕಳ ಮಾಡಿಕೋ! ಮನೆ ಮಾಡಿಕೋ!' ಅಂತ ಎಲ್ಲರ ಒತ್ತಾಯ. ಅದರಲ್ಲೂ ಸ್ವಲ್ಪ ಲಕ್ಷಣವಂತರು ಇದ್ದರೆ ಮುಗಿದೇ ಹೋಯಿತು. 'ಭಾಳ ಚೆನ್ನಾಗಿದ್ದೀರಿ. ಬಹಳ handsome ಇದ್ದೀರಿ. ಎಲ್ಲ ಹುಡುಗಿಯರೂ, ಹೆಂಗಸರೂ ನಿಮ್ಮ ಮೇಲೆಯೇ ಫಿದಾ. ಎಷ್ಟು ಚಂದ ಇದ್ದೀರಿ ಅಂದರೆ ದೃಷ್ಟಿ ತೆಗೆಯಬೇಕು,' ಅದು ಇದು ಅಂತ ಮಂದಿ ಪಂಪ್ ಹೊಡೆದೇ ಹೊಡೆಯುತ್ತಾರೆ. ಭಟ್ಟಿ ಸರ್ ಅವರಿಗೂ ಸಾಕಷ್ಟು ಜನ ಹೀಗೆಯೇ ಹೇಳುತ್ತಿರಬೇಕು. ಸಹಜವಲ್ಲವೇ? ಅವರೂ ಇದ್ದಿದ್ದು ನಮ್ಮ ಸಮಾಜದಲ್ಲೇ ತಾನೇ??

ಮೊದಲೆಲ್ಲ ಪ್ರೈಮರಿ ಶಾಲೆಯಲ್ಲಿ ಕೇವಲ ಚಿಣ್ಣ ಚಿಣ್ಣ ಹುಡುಗ, ಹುಡುಗಿಯರಿಗೇ ಮಾತ್ರ ಪಾಠ ಮಾಡಿಕೊಂಡಿದ್ದವರಿಗೆ ಹೈಸ್ಕೂಲ್ ಶಾಲೆಯಲ್ಲಿ ಮತ್ತೊಂದು ಮಹಾ ದೊಡ್ಡ attraction ಅಂದರೆ ಹುಡುಗಿಯರು. ಕನ್ಯಾಕುಮಾರಿಯರು. ಆಗತಾನೆ ಪ್ರಾಯಕ್ಕೆ ಬರುತ್ತಿದ್ದ  ಎಳೆ ಜಿಂಕೆಮರಿಯಂತಹ ಹುಡುಗಿಯರಿಗೂ ಇಂತಹ handsome ಮಾಸ್ತರುಗಳನ್ನು ಕಂಡರೆ ಏನೋ, ಎಲ್ಲೋ, ಯಾವದೋ ತರಹದ 'ಬವ್ವಾ ಕಡಿದ' ಫೀಲಿಂಗ್. ಅದಕ್ಕೇನೋ crush ಅಂತಾರಂತಪ್ಪಾ! ನಮ್ಮ ಕ್ಲಾಸಿನ ಅಂದಿನ ಸುಂದರಿಯರು, ಇಂದಿನ ಆಂಟಿಯರು ಯಾವ್ಯಾವ ಮಾಸ್ತರ್ ಮೇಲೆ ಅವರಿಗೆ ಕ್ರಶ್ ಇತ್ತು, ಹ್ಯಾಗೆ ಇತ್ತು, ಅಂತ ಇವಾಗಲೂ ನೆನಪಿಟ್ಟು ಮಾತಾಡಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಆವಾಗಲೂ. ಕಾಲ ಯಾವಾಗಲೂ ಕಾಲವೇ. ಮತ್ತೆ ಹುಡುಗಿಯರು ಯಾವಾಗಲೂ ಪ್ರಾಕ್ಟಿಕಲ್ ನೋಡಿ. ಸ್ವಲ್ಪ ವಯಸ್ಸಿನ ಅಂತರ ಇದ್ದರೇ ಒಳ್ಳೇದು, ನೌಕರಿ ಗೀಕರಿ ಇದ್ದು, ಶುದ್ಧ ಸುಂದರ ಮಾಣಿಯಾದರೆ ಮತ್ತೂ ಚೊಲೋ ಅಂತ ಅವರ ವಿಚಾರ. ಮುಂದೆ ಸಂಸಾರ ಬೆಳೆಸಬೇಕಾದ maternal instinct  ಅವರನ್ನು ಆ ರೀತಿ ವಿಚಾರಕ್ಕೆ ಹಚ್ಚುತ್ತದೆ. ಹಾಗಾಗಿ ಭಟ್ಟಿ ಸರ್ ಅಂತಹ ಸ್ವಲ್ಪ ಹಿರಿಯ ವಯಸ್ಸಿನ ಸುಂದರಾಂಗ ಮಾಸ್ತರ್ ಕಂಡರೆ ಹುಡುಗಿಯರು ಸಹ ಯಾವದೋ ಲೋಕದಲ್ಲಿ ಕಳೆದು ಹೋಗುತ್ತಿದ್ದರು ಅಂತ ಸುದ್ದಿಯಿತ್ತು.

ಬಲರಾಮ ಭಟ್ಟಿ ಸರ್ ಸಹಿತ ಪ್ರಾಯದ ಹುಡುಗಿಯರು ಆಗಾಗ ತಮಗೆ ಸಿಗ್ನಲ್ ಕೊಡುತ್ತಿರುವದನ್ನು ಗಮನಿಸಿರಬೇಕು. ಗಮನಿಸದೇ ಇರಲಿಕ್ಕೆ ಅವರೇನು ಪ್ರಾಯದ ತರುಣರಲ್ಲವೇ? ಹಾಗಾಗಿ ಅವರೂ ಸ್ವಲ್ಪ ಜಾಸ್ತಿಯೇ ಸ್ಟೈಲ್ ಹೊಡೆಯತೊಡಗಿದರು. ಮತ್ತೂ ನಾಲ್ಕಾರು ದುಬಾರಿ ಹೊಸ ಪ್ಯಾಂಟ್, ಷರ್ಟುಗಳನ್ನು ಹೊಲೆಯಿಸಿಕೊಂಡರು. ಲೇಟೆಸ್ಟ್ ಫ್ಯಾಷನ್. ಮತ್ತೂ ಒಂದರೆಡು ಜೊತೆ ಬೂಟು ಬಂತು. ಸೈಕಲ್ ಅದೇ ಇತ್ತು. ಪ್ರೈಮರಿಯಲ್ಲಿ ಪಾಯಿಜಾಮ, ಜುಬ್ಬಾ ಹಾಕಿಕೊಂಡು, ಮಾಳಮಡ್ಡಿಯ ಚಮಗಾರ ರಾಜಪ್ಪ ಮಾಡಿಕೊಡುತ್ತಿದ್ದ ಚರಾ ಪರಾ ಅನ್ನುವ ಚಪ್ಪಲಿ ಮೆಟ್ಟಿ ಓಡಾಡುತ್ತಿದ್ದ ಭಟ್ಟಿ ಸರ್ ಎಲ್ಲಿ! ಇವತ್ತಿನ ಹೀರೋ ಮಾದರಿಯ ಹೈಸ್ಕೂಲ್ ಮಾಸ್ತರ್ ಭಟ್ಟಿ ಸರ್ ಎಲ್ಲಿ! ಅಜಗಜಾಂತರ!

ಬಲರಾಮ ಭಟ್ಟಿ ಸರ್ ನಮಗೇನೂ ಪಾಠ ಮಾಡುತ್ತಿರಲಿಲ್ಲ. ಅವರು ನಮ್ಮ ಕ್ಲಾಸಿಗೆ ಜಾಸ್ತಿ ಬಂದಿದ್ದೂ ಇಲ್ಲ. ಆದರೆ ನಾವು ಹತ್ತನೇ ಕ್ಲಾಸಿನಲ್ಲಿ ಇದ್ದಾಗ ಭಟ್ಟಿ ಸರ್ ಚಿತ್ತ ಮಾತ್ರ ಒಂಬತ್ತನೇ ಕ್ಲಾಸಿನ ಒಬ್ಬ ಅಪ್ರತಿಮ ಸುಂದರಿಯ ಮೇಲೆ ಇದ್ದಿದ್ದು ರಹಸ್ಯವೇನೂ ಇರಲಿಲ್ಲ. ಪಾಪ! ಆಕೆಗೂ ಒದ್ದುಕೊಂಡು ಬರುತ್ತಿರುವ ಹರೆಯ. ಚಡ್ತಿ ಜವಾನಿ! ಮೇಲಿಂದ ಸಿಕ್ಕಾಪಟ್ಟೆ ಸುಂದರಿ ಬೇರೆ. ಅದೂ ಸರಿಯಾಗಿ ಮುಂದಿನ ಬೆಂಚಲ್ಲೇ ಕೂತು ಪಾಠ ಕೇಳುತ್ತಿರುವಾಕೆ. ಸುಂದರ ಮಾಸ್ತರ್ ಬಂದರೆ ನೋಡಲೂ ಬೆಸ್ಟ್ ಜಾಗ. ಈ ಭಟ್ಟಿ ಮಾಸ್ತರರು ಆಕೆಯ ಕ್ಲಾಸಿಗೆ ಯಾವದಾದರೂ ವಿಷಯ ಪಾಠ ಮಾಡುತ್ತಿದ್ದರೇ? ನೆನಪಿಲ್ಲ. ಆದರೆ absent ಪಿರಿಯಡ್ ಇದ್ದಾಗ, ಅವಕಾಶ ಸಿಕ್ಕಾಗ, ಕ್ಲಾಸಿನಲ್ಲಿ ಗಲಾಟೆ ಹೆಚ್ಚಾಗಿ ಹುಡುಗರನ್ನು ಸುಮ್ಮನಿರಿಸಲು ಆ ಸುಂದರಿಯ ಕ್ಲಾಸಿಗೆ ಹೋಗುವದೆಂದರೆ ಭಟ್ಟಿ ಮಾಸ್ತರರಿಗೆ ಖುಷಿಯೋ ಖುಷಿ. ಮುದ್ದಾಂ ಕೇಳಿ ಕೇಳಿ ಅದೇ ಕ್ಲಾಸಿಗೆ ಹಾಕಿಸಿಕೊಂಡು ಹೋಗಿ absent ಪಿರಿಯಡ್ ಸಂಬಾಳಿಸಿ ಬರುತ್ತಿದ್ದರು. ಹೋಗಿ ಸುಂದರಿಯನ್ನು ಕಣ್ತುಂಬಾ ನೋಡಿ ಬರುತ್ತಿದ್ದರು. ಆಕೆಗೂ ಭಟ್ಟಿ ಸರ್ ಮೇಲೆ crush ಇತ್ತೇ? ಗೊತ್ತಿಲ್ಲ. ಆ ವಯಸ್ಸೇ ಹಾಗೆ. ಹೃದಯ ಗುಟರ್ ಗುಟರ್ ಅಂತ ಬಿಳೆ ಪಾರಿವಾಳದ ಹಾಗೆ ರೆಕ್ಕೆ ಹಾರಿಸುತ್ತದೆ. ಎದ್ದು ಎದ್ದು ಛಲಾಂಗ್ ಹೊಡೆಯುತ್ತದೆ. ಕಣ್ಣುಗಳು ಎಲ್ಲೆಲ್ಲೋ ತಿರುಗುತ್ತವೆ. ಮತ್ತೊಂದು ಜೋಡಿ ಸುಂದರ ಕಣ್ಣುಗಳ ಜೊತೆ ಕಲೆತುಬಿಡುತ್ತವೆ. ಮನಸ್ಸು ಚಂದ ಕಂಡಿದ್ದೆಲ್ಲ ಬೇಕು ಬೇಕು ಅಂತ ರಚ್ಚೆ ಹಿಡಿಯುತ್ತದೆ. ಅದು ಹುಡುಗರಿಗೂ ಅಷ್ಟೇ. ಹುಡುಗಿಯರಿಗೂ ಅಷ್ಟೇ. ಮೈಯಲ್ಲಿ ಹಾರ್ಮೋನುಗಳು ಹಾರ್ಮೋನಿಯಂ ಬಾರಿಸುತ್ತಿದ್ದರೆ ಮತ್ಯಾರೋ ವೀಣೆ ಶ್ರುತಿ ಮಾಡುತ್ತಿರುತ್ತಾರೆ. ಹೃದಯ ತಂತಾನೇ ಬಾರಿಸಿಕೊಂಡು ತಂತಿ ಮೀಟಿಕೊಂಡರೆ ಒಂದು ತರಹದ ಹಾಯೆನ್ನಿಸುವ ನೋವು. ದಿಲ್ ಮೇ ಮೀಠಿ ಸಿ ಚುಬನ್!

ಭಟ್ಟಿ ಮಾಸ್ತರರೋ ಕೆಲಸ ಗಿಲಸ ಹಿಡಿದು ಸೆಟಲ್ ಆದ ಸುಂದರ ಆಸಾಮಿ. ಸಂಸಾರಸ್ಥರಾಗಲು ಎತ್ತಿ ನಿಂತವರು. ಅಂದರೆ ಕಾಲು ಎತ್ತಿ ತಯಾರಾಗಿ ನಿಂತವರು ಅಂತ. ಅವರೂ ಸಹ ಏನೇನು ಕನಸು ಕಾಣುತ್ತಿದ್ದರೋ ಏನೋ? ಆವಾಗಲೇ ಈ ಒಂಬತ್ತನೇ ಕ್ಲಾಸಿನ ಸುಂದರಿ ಮೋಹಿನಿ ಬೇರೆ ಕಂಡುಬಿಟ್ಟಿದ್ದಾಳೆ. ಇಬ್ಬರದೂ ಜಾತಿ, ಗೀತಿ, ಕುಲ ಎಲ್ಲ ಒಂದೇ. ಆಕೆಯ ಗೋತ್ರವೂ ಓಕೆ. ಇವರ ಧೋತ್ರವೂ ಓಕೆ. ಆಕೆಯದು ಆವಾಗ ಯುನಿಫಾರ್ಮ್ ಸ್ಕರ್ಟ್ ಮತ್ತು ಶರ್ಟ್ ಆದರೆ ಭಟ್ಟಿ ಸರ್ ದು ಪ್ಯಾಂಟ್ ಶರ್ಟ್. ಮುಂದೆ ಇವರದ್ದು ಧೋತ್ರ, ಆಕೆಯದ್ದು ಕಚ್ಚೆ ಸೀರೆ. ಆಚಾರ್ ಮಂದಿಯ ಡ್ರೆಸ್ ಕೋಡ್. ಆಕೆ ಬಗ್ಗೆ ಇದೆಲ್ಲ ಮಾಹಿತಿ ಸಂಗ್ರಹಿಸಿದ್ದರು ಭಟ್ಟಿ ಸರ್. ಕುಂಡಲಿ ಸಹ ಮ್ಯಾಚ್ ಮಾಡಿಸಿಬಿಟ್ಟಿದ್ದರು ಅಂತ ನಮ್ಮ ಕಿತಬಿ ಜೋಕ್.  ಹೀಗೆಲ್ಲಾ ಆಗಿ ಭಟ್ಟಿ ಸರ್ ಏನೇನು ಕನಸು ಕಂಡರೋ ಏನೋ. ಇನ್ನು ಇಬ್ಬರ ನಡುವಿನ ವಯಸ್ಸಿನ ಅಂತರ? ಹೆಚ್ಚೆಚ್ಚು ಅಂದರೆ ಹತ್ತು ವರ್ಷ. ಏ! ಅದೆಲ್ಲ ಓಕೆ. ಎಲ್ಲಿಯಾದರೂ ಈ ಡಿಂಗ್ ಡಾಂಗ್ ಲಫಡಾ ವರ್ಕ್ ಔಟ್ ಆಗಿಬಿಟ್ಟರೆ ಇಂದಿನ ವಿದ್ಯಾರ್ಥಿನಿ ಸುಂದರಿ ಮೋಹಿನಿ ಮುಂದೆ ತಮ್ಮ ಮಡದಿ. ಆ ಪರಿ ಖತರ್ನಾಕ್ ಸುಂದರಿ. ಮೇಲೆ ದೊಡ್ಡ ಮಾಲದಾರ್ ಮಂದಿಯ ಮಗಳು. ಯಾರಿಗಿದೆ ಯಾರಿಗಿಲ್ಲ ಈ ಭಾಗ್ಯ? ಭಟ್ಟಿ ಸರ್ ಹೀಗೆಲ್ಲಾ ವಿಚಾರ ಮಾಡಿದರೋ ಏನೋ ಗೊತ್ತಿಲ್ಲ. ಆದರೆ ಒಂದು ವಿಚಿತ್ರ ಅನ್ನುವಂತಹ ಅಭ್ಯಾಸ ಶುರು ಮಾಡಿಕೊಂಡುಬಿಟ್ಟರು.

ಅದೇನೆಂದರೆ ದಿನಾ ಸಂಜೆ ಮೋಹಿನಿ ಎಂಬ ಸುಂದರಿಯ ಮನೆ ಮುಂದೆ ಒಂದು ನಾಲ್ಕು ಬಾರಿ ರೊಂಯ್ ರೊಂಯ್ ಅಂತ ಸೈಕಲ್ ಮೇಲೆ ರೌಂಡ್ ಹೊಡೆಯುವದು. ಆಕೆಯ ಮನೆಯ ಮುಂದಿನ ರಸ್ತೆಯೋ ಉದ್ದನೆಯ ರಸ್ತೆ. ಒಂದು ತುದಿಯಿಂದ ಇನ್ನೊಂದು ತುದಿಗೆ ಕಮ್ಮಿ ಕಮ್ಮಿ ಅಂದರೂ ಒಂದು ಒಂದೂವರೆ ಕಿಲೋಮೀಟರ್.

ಶಾಲೆ ಮುಗಿದ ನಂತರ ಆ ಮೋಹಿನಿ ಹೋಗಿ ಮನೆ ಸೇರಿಕೊಂಡು, ಯುನಿಫಾರ್ಮ್ ಬದಲು ಮಾಡಿ, ಅದೇನು ನೈಟಿಯೋ ಅಥವಾ ಮ್ಯಾಕ್ಸಿ ತರಹದ ಉದ್ದನೆಯ ಲಂಗವನ್ನು ಹಾಕಿಕೊಂಡು, ತಿಂಡಿ ಪಂಡಿ ಮುಗಿಸಿ, ಅವರ ಮನೆಯ ದೊಡ್ಡ ಕಾಂಪೌಂಡಿನಲ್ಲಿ ಓಡಾಡಿಕೊಂಡು ಇರುತ್ತಿದ್ದಳು. ಸಹಜವಾಗಿ. ಸಂಜೆಯ ಹವಾ ಸೇವನೆ. ವಾಕಿಂಗ್ ಬೇಜಾರು ಬಂದಾಗೊಮ್ಮೆ ಆಕೆಯ  ಮನೆಯ ಕಂಪೌಂಡ್ ಗೇಟ್ ಮೇಲೆ ಆಕೆಯ ಕ್ಯೂಟ್ ಗದ್ದವನ್ನು (chin) ಊರಿಕೊಂಡು, ಎರಡೂ ಕೈಯಿಂದ ತನ್ನ ಕೆಂಪು ಸೇಬು ಗಲ್ಲಗಳನ್ನು ಒತ್ತಿಕೊಂಡು, ಎತ್ಲಾಗೋ ನೋಡುತ್ತಾ ನಿಂತುಬಿಡುತ್ತಿದ್ದಳು. ಅದ್ಭುತ ದೃಶ್ಯ! ನಾವೂ ನೋಡಿ ಜೊಲ್ಲು ಸುರಿಸಿದವರೇ! ಗೇಟ್ ಮೇಲೆ ಗದ್ದವೂರಿ ನಿಂತಿದ್ದು ಬೇಸರವಾಯಿತು ಅಂದರೆ ಮತ್ತೆ ಓಡಾಟ ಶುರು. ಹೀಗೆ ಮಾಡಿ ಒಂದಿಷ್ಟು ಹವಾ ಕುಡಿದ ನಂತರ ಮನೆ ಒಳಗೆ ಸೇರಿಕೊಳ್ಳುತ್ತಿದ್ದಳು. ಅದೇನೋಪಾ ಗೊತ್ತಿಲ್ಲ ಆದರೆ ಆಕೆ ಧರಿಸುತ್ತಿದ್ದುದು ಯಾವಾಗಲೂ ಹೆಚ್ಚಾಗಿ ಬಿಳಿಯ ಬಣ್ಣದ ನೈಟಿಯೇ. ತುಂಬಾ ಅಂದವಾಗಿ ಕಾಣುತ್ತಿದ್ದಳು ಬಿಡಿ. ನೋಡಲಿಕ್ಕೆ ಮಾತ್ರ ಪಕ್ಕಾ ಮೋಹಿನಿ. ಬೇಗ ಕತ್ತಲಾಗುವ ದಿನಗಳಲ್ಲಿ ನೀಳಕಾಯದ ಈ ಖತರ್ನಾಕ್ ಸುಂದರಿ ಬಿಳಿ ನೈಟಿ ಧರಿಸಿ, ಗೇಟಿನ ಮೇಲೆ ಗದ್ದವೂರಿ ಒಂದು ತರಹದ 'ತನಹಾ ತನಹಾ ಪ್ಯಾಸಿ ಪ್ಯಾಸಿ' ಲುಕ್ ಕೊಡುತ್ತಾ ನಿಂತಳು ಅಂದರೆ ಅಷ್ಟೇ ಮತ್ತೆ.  ನೋಡಿದವರು ಮೊದಲು ಆಕರ್ಷಿತರಾಗಬೇಕು. ನಂತರ ಹತ್ತಿರ ಹೋದಾಗ ಮೋಹಿನಿ ದೆವ್ವ ನೆನಪಾಗಿಬಿಟ್ಟರೆ ಅಷ್ಟೇ ಮತ್ತೆ. ಹೆದರಿ ಏನೇನೋ ಆಗಿ ಪತರುಗುಟ್ಟಬೇಕು. ಹಾಗಿರುತ್ತಿತ್ತು ಮೋಹಿನಿ ಮಾಹೋಲ್!

ಮೋಹಿನಿ (ಸ್ಯಾಂಪಲ್ ಮಾತ್ರ)

ಇಂತಹ ಮೋಹಿನಿ ಮನೆಯ ಮುಂದೆ ಭಟ್ಟಿ ಸರ್ ದಿನಾ ಸಂಜೆ ಒಂದು ಸಾರೆ ಸೈಕಲ್ ಹೊಡೆಯಲಿಲ್ಲ ಅಂದರೆ ಅವರಿಗೆ ಸಮಾಧಾನವೇ ಇಲ್ಲ. ಒಮೊಮ್ಮೆ ಮೊದಲನೇ ಸಲ ರೌಂಡ್ ಹೊಡೆದಾಗಲೇ ಮೋಹಿನಿ ಕಂಡು ಭಟ್ಟಿ ಸರ್ ಫುಲ್ ಖುಷ್. ಒಮ್ಮೊಮ್ಮೆ ನಾಲ್ಕಾರು ರೌಂಡ್ ಹೊಡೆಯಲೇಬೇಕಾಗುತ್ತಿತ್ತು. ಭಟ್ಟಿ ಸರ್ ಆಕಡೆಯಿಂದ ಈಕಡೆ ರೌಂಡ್ ಹೊಡೆದೇ ಹೊಡೆಯುತ್ತಿದ್ದರು. ಅವರದ್ದೇ ಒಂದು ಲೆಕ್ಕ ಇತ್ತು ಅಂತ ನೆನಪು. ನಾಲ್ಕೋ ಆರೋ ರೌಂಡ್ ಹೊಡೆದಾದ ಮೇಲೂ ಮೋಹಿನಿ ಕಾಣಲಿಲ್ಲ ಅಂದರೆ ಹಾಂಗೆ ಎತ್ತಿಕೊಂಡು, ಮತ್ಲಬ್ ಸೈಕಲ್ ಎತ್ತಿಕೊಂಡು, ವಾಪಸ್ ಮಾಳಮಡ್ಡಿ ಮನೆ ಕಡೆ ಹೋಗುತ್ತಿದ್ದರು ಅಂತ ನೆನಪು. ಕಂಡರೂ ಮೋಹಿನಿ ಜೊತೆ ಮಾತು ಕತೆ ಎಲ್ಲ ಇಲ್ಲ. ಆಗಿನ ಕಾಲದ ಧಾರವಾಡದಲ್ಲಿ ಅಂತದ್ದಕ್ಕೆಲ್ಲ ಅವಕಾಶ ಇರಲೇ ಇಲ್ಲ. ತನ್ನ ಮಾಸ್ತರರು ಕಂಡರು, ಅದೂ crush ಇದ್ದಿರಬಹುದಾದ ಭಟ್ಟಿ ಸರ್ ಕಂಡರು ಅಂತ ಮೋಹಿನಿ ಒಂದು ನಮಸ್ಕಾರವನ್ನೋ, ಸುಂದರ ನಗೆಯನ್ನೋ ಕೊಟ್ಟು, ನಾಚಿ, ನೈಟಿಯನ್ನು ಸ್ವಲ್ಪೇ ಎತ್ತಿಕೊಂಡು, ಗೆಜ್ಜೆ ಘಲ್ ಘಲ್ ಮಾಡುತ್ತಾ ಮನೆ ಒಳಗೆ ಓಡಿದಳು ಅಂದರೆ ಅದೇ ದೊಡ್ಡ ಮಾತು. ಒಮ್ಮೆ ಭಟ್ಟಿ ಸರ್ ದರ್ಶನವಾಯಿತು ಅಂದರೆ ಮೋಹಿನಿ ಸಹಿತ ಜಾಗಾ ಖಾಲಿ ಮಾಡುತ್ತಿದ್ದಳು. ಹೇಳಿ ಕೇಳಿ ಒಳ್ಳೆ ಸಂಪ್ರದಾಯಸ್ತ ಮನೆತನದ ಹುಡುಗಿ. ಆಕೆಗೂ ಎಲ್ಲ ಟ್ರೇನಿಂಗ ಬರೋಬ್ಬರಿ ಆಗಿಯೇ ಇರುತ್ತದೆ. ಶಾಲೆಯಿಂದ ಬಂದ ಮೇಲೆ ಒಂದು ಸ್ವಲ್ಪ ಹೊತ್ತು ಆರಾಮವಾಗಿ ಕಾಂಪೌಂಡ್ ತುಂಬಾ ಗಾರ್ಡನ್ ಒಳಗೆ ಓಡಾಡಿಕೊಂಡು ಇರೋಣ ಅಂದರೆ ಈ ಭಟ್ಟಿ ಸರ್ ಒಬ್ಬರು ಬಂದು ಮೌನವಾಗಿ ಕಣ್ಣಲ್ಲೇ ಕಾಡುತ್ತಾರೆ.

ತುಂಬಾ ದಿನ ಇದು ಹೀಗೆಯೇ ನಡೆದಿತ್ತು. ನಾವೂ ದಿನಾ ನೋಡುತ್ತಿದ್ದೆವು. ಯಾಕೆಂದರೆ ನಾವು ಸಹ ಸುಮಾರು ಅದೇ ಹೊತ್ತಿಗೆ ಶಾಲೆಯಿಂದ ಮನೆ ಕಡೆ ಸೈಕಲ್ ಮೇಲೆ ಬರುತ್ತಿದ್ದೆವು. ಅದೇ ಏರಿಯಾದ ಮಂದಿ ನಾವು. ಮತ್ತೆ SSLC ಅಂತ ನಮಗೆ ಶಾಲೆ ಬಿಟ್ಟ ನಂತರ ಒಂದು ತಾಸು ಹೆಚ್ಚಿನ ಕೋಚಿಂಗ್ ಕ್ಲಾಸ್ ಇರುತ್ತಿತ್ತು. ನಾವು ಹೊರಡುವ ಹೊತ್ತಿಗೇ, ಭಟ್ಟಿ ಸರ್ ಸಹಿತ ತಮ್ಮ ಕೆಲಸ ಮುಗಿಸಿ, ಮೋಹಿನಿ ಮನೆ ಕಡೆ ಹೊರಡುತ್ತಿದ್ದರು. ಅವರಿಗೆ ಮುಜುಗರವಾಗಬಾರದು ಅಂತ ನಾವು ಸ್ವಲ್ಪ ದೂರದಲ್ಲಿ, ಅಥವಾ parallel ರೋಡಿನಲ್ಲಿ ಈ ಹಂಗಾಮಾ ನೋಡುತ್ತಾ ಬರುತ್ತಿದ್ದೆವು. ನಾವು ಮನೆಗೆ ಹೋಗಿ, ತಿಂಡಿ ಮುಗಿಸಿ, ಹರಟೆಕಟ್ಟೆಗೆ ಬರಬೇಕು ಅಂದರೆ ಅದೇ ಸುಂದರಿಯ ಮನೆಯ ಪಕ್ಕಕ್ಕೇ ಬರಬೇಕು. ಆಗ ಸಾಕಷ್ಟು ಹೊತ್ತಾಗಿರುತ್ತಿತ್ತು. ಮೋಹಿನಿ ಆಗಲೇ ಒಳಗೆ ಸೇರಿಕೊಂಡುಬಿಟ್ಟಿರುತ್ತಿದ್ದಳು. ಹರಟೆಕಟ್ಟೆಯ ಸ್ನೇಹಿತರು ಅಂದಿನ 'ಮೋಹಿನಿ ಭಸ್ಮಾಸುರ' ಪ್ರಸಂಗದ ವಿವರಣೆ ನೀಡುತ್ತಿದ್ದರು. ಸಿಕ್ಕಾಪಟ್ಟೆ ಮಷ್ಕಿರಿ ಹರಟೆ ಹೊಡೆದು, ಎಲ್ಲ ಮಾಹಿತಿ ಸಂಗ್ರಹಿಸಿ ವಾಪಸ್ ಬರುತ್ತಿದ್ದೆವು. ಮರುದಿನ ಅದನ್ನು ಶಾಲೆಯಲ್ಲಿ ಮಸಾಲೆ ಹಾಕಿ ಫುಲ್ broadcast ಮಾಡುವ ತನಕ ಸಮಾಧಾನವೇ ಇಲ್ಲ.

ಭಟ್ಟಿ ಸರ್ ಮಂಡೆಯಲ್ಲಿ ಅದ್ಯಾವ ಹುಳ ಮೊಟ್ಟೆ ಇಟ್ಟುಬಿಟ್ಟಿತೋ ಏನೋ ಗೊತ್ತಿಲ್ಲ. ಅವರಿಗೆ ತಾವೂ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಿಬಿಡಬೇಕು ಅಂತ ತಲೆಗೆ ಬಂದುಬಿಡ್ತು. ಕೇವಲ handsome ಇದ್ದರೆ ಮಾತ್ರ ಸಾಕೇ? ಹುಡುಗಿಯರನ್ನು ಅದರಲ್ಲೂ ಮೋಹಿನಿಯನ್ನು ಇಂಪ್ರೆಸ್ ಮಾಡಲು ಒಂದಿಷ್ಟು brawn ಬೇಡವೇ!?? ರಫ್ ಅಂಡ್ ಟಫ್ ಅನ್ನುವ ಇಮೇಜ್ ಬೇಡವೇ??? angry young man ಇದ್ದರೆ ಹುಡುಗಿಯರು ಪಟಪಟಾ ಅಂತ ಬೀಳುತ್ತಾರೆ. Nice guys always finish last. ಅಂತೆಲ್ಲ ತಲೆಗೆ ಬಂದಿರಬೇಕು. ಏನೇನೋ ವಿಚಾರ ಮಾಡಿ ತಾವೂ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗುವ ನಿರ್ಧಾರ ತೆಗೆದುಕೊಂಡರು. ಅದೇ ರೀತಿ ಕಾರ್ನಾಮೆ ಶುರುವಿಟ್ಟುಕೊಂಡರು.

'ನಾನು ಭಟ್ಟರ ಶಾಲೆಯ ಹೊಸಾ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್!' ಅಂತ ಹೇಳಿಕೊಂಡು ಅಡ್ಯಾಡಲಿಲ್ಲ ಭಟ್ಟಿ ಸರ್. ಮಾಡಿ ತೋರಿಸಲು ಶುರು ಮಾಡಿಬಿಟ್ಟರು! ಕಂಡ ಕಂಡ ಮಂದಿಯನ್ನು ಹಿಡಕೊಂಡು ಬಾರಿಸಲು ಶುರು ಮಾಡಿಬಿಟ್ಟರು. ಮೊದಲು ಸಣ್ಣ ಕ್ಲಾಸಿನಿಂದ ಶುರು ಹಚ್ಚಿಕೊಂಡರು. ನಮ್ಮಲ್ಲಿ ಐದನೇ ಕ್ಲಾಸಿನಿಂದ ಹತ್ತನೆಯ ಕ್ಲಾಸಿನವರೆಗಿನ ತರಗತಿಗಳು ಹೈಸ್ಕೂಲ್ ಅಂತಲೇ ಇದ್ದವು. ಐದರಿಂದ ಎಂಟನೆಯ ಕ್ಲಾಸಿನ ಮಕ್ಕಳನ್ನು ಯಾರು ಬೇಕಾದರೂ ಬಾರಿಸುತ್ತಿದ್ದರು. ಅದಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್ ಜನರೇ ಬೇಕು ಅಂತೇನೂ ಇರಲಿಲ್ಲ. ಪಾಪ ಚಿಕ್ಕ ಮಕ್ಕಳು! ಬಡಿಸಿಕೊಳ್ಳಬಾರದ ರೀತಿಯಲ್ಲಿ ಬಡಿಸಿಕೊಂಡು, ಅತ್ತು ಅತ್ತು, ಕಣ್ಣೀರು ಇಂಗಿ ಹೋಗಿ, ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದರು ಚಿಣ್ಣ ಮಕ್ಕಳು. ಮೊದಮೊದಲು ಅಂತಹ ಚಿಣ್ಣರನ್ನು ಬಡಿದು, ಮೀಸೆ ತಿರುವಿ, ಅದೇ ಕ್ಲಾಸಿನ ಚಿಣ್ಣ ಹುಡುಗಿಯರ ಕಡೆ ನೋಡಿ, 'ಹೆಂಗೆ????' ಅಂತ ಖತರ್ನಾಕ್ ಲುಕ್ ಕೊಡಲು ಶುರುಮಾಡಿಕೊಂಡುಬಿಟ್ಟರು ಭಟ್ಟಿ ಸರ್. ಭಟ್ಟಿ ಸರ್ ಅಂದರೆ ಮುಂದೆ ಆ ಚಿಕ್ಕಮಕ್ಕಳ ಚಡ್ಡಿ ಒದ್ದೆಯಾಗತೊಡಗಿತು. ಹುಡುಗಿಯರು ರೋಪ್ ಹಾಕಲು ಶುರು ಮಾಡಿದರು. 'ಭಟ್ಟಿ ಸರ್ ಕಡೆ ಹೋಗಿ ಹೇಳ್ತೇನಾ ಮತ್ತ!' ಅಂತ blackmail ಮಾಡುವ ಲಫಡಾ ಕೂಡ ಶುರುವಾಯಿತು. 'ಅಬಬಬಬಾ! ಭಟ್ಟಿ ಸರ್ ಮಹಿಮೆಯೇ!' ಅಂತ ಅಂದುಕೊಂಡೆವು.

ಆದರೆ ನಿಜವಾದ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಅಂತ ಒಂದು ಹವಾ ಬರಬೇಕು ಅಂದರೆ ಒಂಬತ್ತು, ಹತ್ತನೇ ಕ್ಲಾಸಿನ ಹುಡುಗರನ್ನು ಎನ್ಕೌಂಟರ್ ಮಾಡಬೇಕು. ಅದರಲ್ಲೂ ದಾಣಿಗ್ಯಾ ಹಾಂಗೆ ದೈತ್ಯ ಸೈಜಿಗೆ ಬೆಳೆದ ದಾಂಡಿಗರನ್ನು ಬಡಿದು, ಮರ್ದನ ಮಾಡಿ, ಮಟ್ಟ ಹಾಕಿ, ನೆಲಕ್ಕೆ ಬಿದ್ದ ಅವರ ಮೇಲೆ 'ರಂಭಾ ಹೋ!! ಹೋ!! ಹೋ!! ಸಂಭಾ ಹೋ!! ಹೋ!! ಹೋ!!' ಅಂತ ಡಿಸ್ಕೋ ಡಾನ್ಸ್ ಹೊಡೆದು, ಮದಕರಿನಾಯಕನ ಹಾಗೆ ಬೇಡರ ಕೇಕೆ ಹೊಡೆದು ಅಬ್ಬರಿಸಬೇಕು. ಅದು ನಿಜವಾದ ಎನ್ಕೌಂಟರ್. ಅಂತಹ ಒಂದು ಹತ್ತಾರು ಎನ್ಕೌಂಟರ್ ಮಾಡಿ, ನಂತರ ಏನೇ ಆದರೂ, ಏನೇ ಬಂದರೂ ಅವನ್ನೆಲ್ಲ  ನಿಪಟಾಯಿಸಿಕೊಂಡರೆ ಮಾತ್ರ ಖರೆ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್. ಇಲ್ಲವಾದರೆ ಇಲ್ಲ. ಅದು ಭಟ್ಟಿ ಸರಿಗೂ ಗೊತ್ತು.

ಆದರೆ ಒಂಬತ್ತು, ಹತ್ತನೇ ಕ್ಲಾಸಿನ ಹುಡುಗರನ್ನು ತಡವಿಕೊಳ್ಳುವದು ಸ್ವಲ್ಪ ಕಷ್ಟ. ವಯೋಸಹಜ teenage rebellion ಸಿಕ್ಕಾಪಟ್ಟೆ ಇರುತ್ತದೆ. ತಿರುಗಿ ತಿರಸಟ್ಟಾಗಿ ಮಾತಾಡುತ್ತಾರೆ. ಮತ್ತೆ ಕೆಲವರು ಹೊನಗ್ಯಾ ಮಾದರಿಯಲ್ಲಿ ದೈತ್ಯರಂತೆ ಬೆಳೆದುಬಿಟ್ಟಿರುತ್ತಾರೆ. ಕೈ ತಿರುವಲು ಹೋದರೆ ಕೈಯನ್ನು ಘಟ್ಟಿಯಾಗಿ ಹಿಡಿದು ಮಾಸ್ತರರ ಕೈಯನ್ನೇ ನೋಯಿಸುತ್ತಾರೆ. ತಲೆಗೆ ಫಟ್ ಅಂತ ಕೊಟ್ಟರೆ, ತಲೆ ಬಗ್ಗಿಸಿ ನಿಲ್ಲುವ ಬದಲು ತಲೆ ಎತ್ತಿ ಕೆಕ್ಕರಿಸಿ ನೋಡುತ್ತಾರೆ. ಓಪನ್ ಆಗಿ ಚಾಲೆಂಜ್ ಮಾಡುತ್ತಾರೆ. ನಂತರ ನೋಡಿಕೊಳ್ಳುವದಾಗಿ ಹೇಳುತ್ತಾರೆ. ಧಾರವಾಡದಲ್ಲಿ ಆ ಕಾಲದಲ್ಲಿ ಹೆಸರು ಮಾಡಿದ್ದ ರೌಡಿಗಳ ಹೆಸರನ್ನು ಚಿಲ್ಲರೆಯಂತೆ ಉದುರಿಸುತ್ತಾರೆ. ಒಂದೇ ಎರಡೇ ತಲೆಬಿಸಿ ದೊಡ್ಡ ಕ್ಲಾಸಿನ ದೊಡ್ಡ ಮಂದಿಯನ್ನು ಬೆಂಡ್ ಎತ್ತೋದು ಅಂದರೆ!?

ಆದರೂ ಭಟ್ಟಿ ಸರ್ ಅವರಿಗೆ ತಾಪಡ್ತೋಪ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಿಯೇಬಿಡಬೇಕು ಅಂತ ಹಂಬಲ. ತುಂಬಾ ವತ್ರ. ಅರ್ಜೆಂಟ್. ಮೋಹಿನಿಗೆ ರಫ್ ಅಂಡ್ ಟಫ್ ಆಚಾರಿಯೇ ಇಷ್ಟವೇನೋ. ಯಾರಿಗೆ ಗೊತ್ತು!?

ಹೀಗೆಲ್ಲಾ ವಿಚಾರ ಮಾಡಿದ ಭಟ್ಟಿ ಸರ್ ತಮ್ಮ ಮೊದಲ ನಿಜವಾದ ಎನ್ಕೌಂಟರ್ ಕಾರ್ಯಾಚರಣೆಗೆ ಸ್ಕೆಚ್ ಹಾಕಿದರು. ಅನಾಹುತ ಮಾಡಿಕೊಳ್ಳುತ್ತೇನೆ ಅಂತ ಅವರಿಗೆ ಗೊತ್ತಿರಲಿಲ್ಲ. ನಸೀಬ್ ಕೆಟ್ಟಿತ್ತು. ಶನಿ ವಕ್ಕರಿಸಿತ್ತು. ಭಂಡಿವಡ್ಡರನೆಂಬ notorious ದೈತ್ಯನನ್ನು ತಡವಿಕೊಂಡು ತಪ್ಪು, ಮಹಾ ತಪ್ಪು ಮಾಡಿಕೊಂಡುಬಿಟ್ಟರು. ಅಕಟಕಟಾ!

ಭಂಡಿವಡ್ಡರ - ದುಷ್ಟನಲ್ಲ. ಆದರೆ ದೈತ್ಯ. ಎಷ್ಟೋ ವರ್ಷಗಳಿಂದ 10th D ಕ್ಲಾಸಿನಲ್ಲಿ ಝೇಂಡಾ ಹೊಡೆದಿದ್ದ ಭೂಪ. ನಮಗೆ ಮೂರ್ನಾಲ್ಕು ವರ್ಷಕ್ಕೆ ಸೀನಿಯರ್ ಇದ್ದವ ನಮ್ಮ ಜೊತೆಗೇ ಮತ್ತೆ SSLC ಪರೀಕ್ಷೆಗೆ ಕೂತಿದ್ದ. ಮುಗಿಸಿದನೋ ಇಲ್ಲವೋ ಗೊತ್ತಿಲ್ಲ. ವಡ್ಡರ ಓಣಿಯ ಮನುಷ್ಯ. ರಫ್ ಅಂಡ್ ಟಫ್. ಸ್ವಲ್ಪ ಮಷ್ಕಿರಿ, ತುಂಟಾಟ ಜಾಸ್ತಿ. ನಾವು ಸಣ್ಣವರು ಯಾರಾದರೂ ಸಿಕ್ಕರೆ ಸುಮ್ಮನೆ ಲೋಚಾ ಮಾಡಿ, ಸ್ವಲ್ಪ ಗೋಳು ಹೊಯ್ದುಕೊಳ್ಳುತ್ತಿದ್ದ ಅಷ್ಟೇ. ಅವನ ಜೊತೆ ಉಲ್ಟಾ ಮಾತು ಗೀತು ಇಲ್ಲ. ಬಾರಿಸಿಬಿಡುತ್ತಿದ್ದ. ಮತ್ತೆ ಅವನ ವಡ್ಡರ ಓಣಿಯ ಜನರೆಲ್ಲಾ ಖತರ್ನಾಕ್ ಮಂದಿಯೇ. ಆಗಾಗ ಶಾಲೆ ಹೊರಗೆ ಅವರನ್ನು ಕರೆಯಿಸಿ ತನ್ನ ತೋಳ್ಬಲ (muscle power) ಹೇಗಿದೆ ನೋಡಿ ಅಂತ ಜಬರ್ದಸ್ತ್ show ಬೇರೆ ಕೊಡುತ್ತಿದ್ದ. ಹಾಗಾಗಿ ಭಂಡಿವಡ್ಡರನನ್ನು ಕಂಡರೆ ಕೈಮುಗಿದು ದುವಾ ಸಲಾಮಿ ಮಾಡಿಕೊಂಡು ಇರುತ್ತಿದ್ದವರೇ ಭಾಳ ಜನ. ಇನ್ನು ಅವನ ದೋಸ್ತರೆಲ್ಲ ಹೆಚ್ಚಿನವರು ಹೊರಗಿನವರೇ. ಬೇರೆ ಬೇರೆ ಕಾರಣಕ್ಕೆ ಅವನನ್ನು ಹುಡುಕಿಕೊಂಡು ಶಾಲೆಗೆ ಬರುತ್ತಿದ್ದರು. ಭಂಡಿವಡ್ಡರನಿಗೆ ಖಡಕ್ ವಾರ್ನಿಂಗ್ ಕೊಡಲಾಗಿತ್ತು. 'ನಿನ್ನ ವಡ್ಡರ ಓಣಿಯ ರೌಂಡಿ ಗ್ಯಾಂಗ್ ಯಾವದೇ ಕಾರಣಕ್ಕೂ ಸ್ಕೂಲ್ ಒಳಗೆ ಬರಬಾರದು. ಬಂದರೆ ನಿನ್ನ ಪರಿಸ್ಥಿತಿ ನೆಟ್ಟಗಿರುವದಿಲ್ಲ! ಹುಷಾರ್!' ಹೀಗಂತ ಒರಿಜಿನಲ್ ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರೇ ಎಚ್ಚರಿಕೆ ಕೊಟ್ಟಿದ್ದರು. ಮತ್ತೆ ಭಂಡಿವಡ್ಡರ ಸಹಿತ ಅದನ್ನು ಪಾಲಿಸಿಕೊಂಡು ಬಂದಿದ್ದ. ಆದರೆ ಭಂಡಿವಡ್ಡರನ ಪರವಾಗಿ ಅವನ ವಡ್ಡರ ಓಣಿ ಗ್ಯಾಂಗ್ ಶಾಲೆ ಮುಂದೆ ಬಂದಿದ್ದು ಒಂದೇ ಅಲ್ಲ, ನುಗ್ಗಿ ರೈಡ್ ಮಾಡುತ್ತೇವೆ, 'ಒಬ್ಬರನ್ನು' ಹಿಡಿದು ಬಡಿಯುತ್ತೇವೆ ಅಂತ ಕೂತುಬಿಡುವಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಅದಕ್ಕೆ ಕಾರಣೀಭೂತರಾದವರು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಬೇಕು ಅಂತ ಹುಚ್ಚು ಹಿಡಿಸಿಕೊಂಡಿದ್ದ ಇದೇ ಭಟ್ಟಿ ಸರ್!

ಭಂಡಿವಡ್ಡರನ ಖತರ್ನಾಕ್ ಹಿನ್ನೆಲೆ ಗೊತ್ತಿಲ್ಲದ ಭಟ್ಟಿ ಸರ್ ಹೋಗಿ ಹೋಗಿ ಅವನನ್ನು ತಡವಿಕೊಂಡುಬಿಟ್ಟಿದ್ದಾರೆ. ಯಾವದೋ ಕಾರಣಕ್ಕೆ 10th  D ಕ್ಲಾಸಿಗೆ ಹೋಗಿದ್ದಾರೆ. ಏನೋ ಲೋಚಾ ಆಗಿದೆ. ಮತ್ತೆ ಭಂಡಿವಡ್ಡರ scanner ಒಳಗೆ ಬಂದಿದ್ದಾನೆ. ಅವನನ್ನು ಅಲ್ಲೇ ಎನ್ಕೌಂಟರ್ ಮಾಡಲು ಹೋಗಿದ್ದಾರೆ ಭಟ್ಟಿ ಸರ್. ಒಂದೆರೆಡು ಬಾರಿಸಿದ್ದಾರೆ. ಬಗ್ಗಿ ತಪ್ಪಿಸಿಕೊಂಡ ಅವನು ಉಲ್ಟಾ ಆವಾಜ್ ಹಾಕಿದ್ದಾನೆ. ಪುಣ್ಯಕ್ಕೆ ತಿರುಗಿ ಬಾರಿಸಿಲ್ಲ. ಮಾಸ್ತರರಿಗೇ ತಿರುಗಿ ಬಾರಿಸುವಷ್ಟು ಖರಾಬ್ ಪರಿಸ್ಥಿತಿ ಇನ್ನೂ ಬಂದಿರಲಿಲ್ಲ. ಭಂಡಿವಡ್ಡರ ಆವಾಜ್ ಹಾಕಿದ ಅಬ್ಬರಕ್ಕೆ ಭಟ್ಟಿ ಸರ್ ಬೆಚ್ಚಿಬಿದ್ದಿದ್ದಾರೆ. ಜಾಸ್ತಿ ಹೊಡೆಯಲು ಹೋಗಿಲ್ಲ. ಆದ್ರೆ ತಮ್ಮ ಕೀರಲು ದನಿಯಲ್ಲಿಯೇ 'ಖಡಕ್'(!) ವಾರ್ನಿಂಗ್ ಕೊಟ್ಟಿದ್ದಾರೆ. ಆರ್ತನಾದದ ಹಾಗಿದ್ದ ವಾರ್ನಿಂಗ್ ಕೇಳಿದ ಭಂಡಿವಡ್ಡರ ಅಸಡ್ಡೆಯಿಂದ ನೋಡಿದ್ದಾನೆ. ನಂತರ ನೋಡಿಕೊಳ್ಳುತ್ತೇನೆ ಅನ್ನುವ ಲುಕ್ ಕೊಟ್ಟಿದ್ದನ್ನು ಮಾತ್ರ ಭಟ್ಟಿ ಸರ್ ಗಮನಿಸಿಲ್ಲ. ಗಮನಿಸಿದರೂ ಅವರಿಗೆ ಅದರ ಅರಿವಿಲ್ಲ. ಅರಿವಿರಲು ಅವರೇನು ಮಹಾ veteran ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರೇ? ಇನ್ನೂ ಆ ಫೀಲ್ಡಿನಲ್ಲಿ ಅವರು ಬಚ್ಚಾ! ಬಚ್ಚಾಗಳಿಗೆ ಮಚ್ಚಾಗಳ ಬಗ್ಗೆ ಲುಚ್ಚಾಗಳ ಬಗ್ಗೆ ಹೇಗೆ ಗೊತ್ತಾಗಬೇಕು?????

ಮುಂದೆ ಒಂದು ವಾರದ ನಂತರ ದೊಡ್ಡ ಲಫಡಾ ಆಗಿದೆ. ಒಂದು ದಿನ ಸಂಜೆ ಶಾಲೆ ಮುಗಿದ ನಂತರ ಭಟ್ಟಿ ಸರ್ ಸೈಕಲ್ ತೆಗೆದುಕೊಂಡು ಸ್ಕೂಲ್ ಕ್ಯಾಂಪಸ್ ಬಿಟ್ಟು ಹೊರಗೆ ಹೊರಟಿದ್ದಾರೆ. ಮೋಹಿನಿ ಮನೆ ಕಡೆ. ಅದು ಸಂಜೆಯ ಖಾಯಂ ಕಾಯಕ. ವೈಷ್ಣವ ಆಚಾರರಾದ ಅವರಿಗೆ ಆ ಕಾಯಕವೊಂದೇ ಕೈಲಾಸ. ಬಾಕಿ ಎಲ್ಲ ವೈಕುಂಠ. ಶಾಲೆಯ ಮೇನ್ ಗೇಟ್ ವರೆಗೆ ಹೋಗಿದ್ದಾರೆ. ಆದರೆ ಅಲ್ಲಿ ದೆವ್ವ ಕಂಡವರಂತೆ ಬೆಚ್ಚಿಬಿದ್ದು ರಿವರ್ಸ್ ಗಾಡಿ ಹೊಡೆದುಕೊಂಡು ಬಂದುಬಿಟ್ಟಿದ್ದಾರೆ. ಅಷ್ಟೇ ಅಲ್ಲ. ಸೀದಾ ಹೆಡ್ ಮಾಸ್ಟರ್ ಕೋಣೆ ಹೊಕ್ಕಿ ಕೂತು ಬಿಟ್ಟಿದ್ದಾರೆ. ಕಾರಣ?? ಗೇಟ್ ಹೊರಗಡೆ ಖತರ್ನಾಕ್ ವಡ್ಡರ ಓಣಿ ರೌಡಿ ಗ್ಯಾಂಗ್ ಬಂದು ನಿಂತಿದೆ! ಭಟ್ಟಿ ಮಾಸ್ತರರಿಗೆ ಸಿಕ್ಕಾಪಟ್ಟೆ ಆವಾಜ್ ಹಾಕಿದೆ. 'ನೀ ಹ್ಯಾಂಗ ಇವತ್ತು ಈ ಸಾಲಿ ಬಿಟ್ಟು ಹೊರಗ ಹೋಗ್ತಿ ನೋಡೋಣ. ನಿನ್ನ ಒಂದು ಕೈ ನೋಡೇ ಹೋಗವರು ನಾವು. ನಮ್ಮ ಓಣಿ ಹುಡುಗಗ, ನಮ್ಮ ತಮ್ಮಗ ಹೆಟ್ಟಾಕ ಹೋಗಿದ್ದಿ??? ಹಾಂ? ಮೈಯಾಗ ಹ್ಯಾಂಗ ಐತಿ? ನೀ ಹೊರಗ ಬಂದಾರೆ ಬಾ, ಭಾಡ್ಕೋ. ನಿನ್ನ ಹಾಕ್ಕೊಂಡು ನಾದತೇವಿ!' ಅಂತ ನಾದಮಯ ಆವಾಜ್ ಹಾಕಿದ ಅಬ್ಬರಕ್ಕೆ, ಭಟ್ಟಿ ಸರ್ ತೊಳ್ಳೆ ನಡುಗಿ, ಥಂಡಾ ಹೊಡೆದು, ಸೀದಾ ವಾಪಸ್ ಓಡಿಬಂದು, ವೈಶಂಪಾಯನ ಸರೋವರದ ಮಾದರಿಯ ಹೆಡ್ ಮಾಸ್ಟರ್ ಕೋಣೆಯಲ್ಲಿ ಮುಳುಗಿ ಕೂತುಬಿಟ್ಟಿದ್ದಾರೆ. ಹೊರಗೆ ವಡ್ಡರ ಗ್ಯಾಂಗ್ ಇವರಿಗಾಗಿ ಕಾದು ನಿಂತೇ ಇದೆ. ಮೋಹಿನಿ ಮನೆ ಮುಂದೆ ಆವತ್ತು ಸೈಕಲ್ ಹೊಡೆಯೋದು ದೂರ ಉಳಿಯಿತು, ಬೆನ್ನೇರಿದ ಬೇತಾಳ ಇಳಿದರೆ ಸಾಕಾಗಿದೆ ಭಟ್ಟಿ ಸರ್ ಅವರಿಗೆ. ಆದಿನ ಮೋಹಿನಿಗೆ ಫುಲ್ ಟೈಮ್ ಹವಾ ಸೇವನೆ. ಯಾಕೆಂದರೆ ಭಟ್ಟಿ ಮಾಸ್ತರ್ ಕಂಡ ಕೂಡಲೇ ನಾಚಿ ಒಳಗೆ ಓಡುವ ಪ್ರಾರಬ್ಧ ಆವತ್ತಿಗಿಲ್ಲ ಆಕೆಗೆ. ಆಕೆ ಗೇಟಿನ ಮೇಲೆ ತನ್ನ ಕೆಂಪು ಕೆಂಪು ಸೇಬು ಗಲ್ಲ ಊರಿ ಅದೆಷ್ಟು ಹೊತ್ತು ನಿಂತೇ ಇದ್ದಳೋ! ಪಾಪ ಅಂತಹ ಕೋಮಲೆಯ ಕ್ಯೂಟ್ ಗದ್ದಕ್ಕೆ ಅದೆಂತಾ ಶಿಕ್ಷೆ ಹರಿಯೇ!

ನಮ್ಮ SSLC ಹೆಚ್ಚಿನ ಕೋಚಿಂಗ್ ಕ್ಲಾಸ್ ಆಗ ತಾನೇ ಮುಗಿದಿದೆ. ಸಮಯ ಸುಮಾರು ಸಂಜೆ ೬. ೧೫. ನಾವು ಇನ್ನೇನು ಮನೆ ಕಡೆ ಸೈಕಲ್ ಹೊಡೆಯೋಣ ಅನ್ನುವ ತನಕ ಅಲ್ಲೇ ಲಾಂಗ್ ಜಂಪ್, ಹೈ ಜಂಪ್ ಪ್ರಾಕ್ಟೀಸ್ ಮಾಡಿಕೊಂಡಿದ್ದ ಕಿಡಿಗೇಡಿಯೊಬ್ಬನಿಗೆ ಎಲ್ಲ ಅರಿವಾಗಿಬಿಟ್ಟಿದೆ. ಅವನಿಗೆ ವಡ್ಡರ ಓಣಿ ಗ್ಯಾಂಗ್ ಎಲ್ಲ ಗೊತ್ತು. ಅವರು ಬಂದಿದ್ದು, ಭಟ್ಟಿ ಮಾಸ್ತರರನ್ನು ಹಿಡಿದು ಝಾಡಿಸಿದ್ದು, ತೊಳ್ಳೆ ನಡಗಿಸಿಕೊಂಡು ಉತ್ತರ ಕುಮಾರನಂತೆ ಓಡಿ ಬಂದ ಭಟ್ಟಿ ಸರ್, ಆತ ಎಲ್ಲ ನೋಡಿಬಿಟ್ಟಿದ್ದಾನೆ, ತಿಳಿದುಕೊಂಡುಬಿಟ್ಟಿದ್ದಾನೆ. ಶಾಲೆಯಲ್ಲಿ ಉಳಿದುಕೊಂಡಿದ್ದ ನಮ್ಮಂತಹ ಮಂದಿಗೆ ಡಂಗುರ ಹೊಡೆದೇಬಿಟ್ಟಿದ್ದಾನೆ. ಸುದ್ದಿ ಕೇಳಿ ನಾವೆಲ್ಲಾ ಒಮ್ಮೆ ಘಾಬರಿಯಾಗಿದ್ದೇವೆ. ಘಾಬರಿ ತಮಾಷೆಯಾಗಿ ಬದಲಾಗಲಿಕ್ಕೆ ಜಾಸ್ತಿ ಹೊತ್ತು ಬೇಕಾಗಿಯೇ ಇಲ್ಲ. ಹಾ! ಹಾ! ಅಂತ ರಾಕ್ಷಸ ನಗೆ ನಗುತ್ತ ಮುಂದೆ ನಡೆಯಲಿರುವ ದೊಂಬರಾಟ ನೋಡಿ ಮಜಾ ತೆಗೆದುಕೊಳ್ಳಲು ತಯಾರಾಗಿ ಕೂತಿದ್ದೇವೆ.

ಅಂದು ನಮ್ಮ ಶಾಲೆಯ ದೌರ್ಭಾಗ್ಯಕ್ಕೆ, ಮಾಸ್ತರರ ಕೆಟ್ಟ ಗ್ರಹಚಾರಕ್ಕೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ಇಬ್ಬರೂ ಮಾಸ್ತರರೂ ಶಾಲೆಯಲ್ಲಿ ಇಲ್ಲವೇ ಇಲ್ಲ. ನಾಸ್ತಿ. ಹೊರಗೆ ಖಾಕ್ ಲಗಾಕೆ, baying for blood ಮಾದರಿಯಲ್ಲಿ ಅಬ್ಬರಿಸುತ್ತಿರುವ ವಡ್ಡರ ಓಣಿ ಗ್ಯಾಂಗನ್ನು ನಿಪಟಾಯಿಸುವ 'ಗಂಡಸರು' ಯಾರೂ ಇಲ್ಲ. ಭಟ್ಟಿ ಸರ್ ಅಂತೂ ಹೆಡ್ ಮಾಸ್ಟರ್ ರೂಂ ಬಿಟ್ಟು ಹೊರಗೆ ಬರಲು ತಯಾರೇ ಇಲ್ಲ. ಬಾಕಿ ಎಲ್ಲರಿಗೂ ಬೀಗ ಹಾಕಿ, ಶಾಲೆ ಬಂದು ಮಾಡಿಕೊಂಡು ಹೋಗಬೇಕು. ನೋಡಿದರೆ ಲಫಡಾ ಆಗಿ ಕೂತಿದೆ. ಮತ್ತೆ ಮೊದಲೇ ಹೇಳಿದಂತೆ ಆಗೆಲ್ಲ ಪೊಲೀಸರಿಗೆ ಫೋನ್ ಗೀನ್ ಮಾಡುವ ಪದ್ಧತಿ ಇಲ್ಲವೇ ಇಲ್ಲ. ಹೆಡ್ ಮಾಸ್ತರರಿಗೆ ಎಲ್ಲ ಅರ್ಥವಾಗಿಬಿಟ್ಟಿದೆ. ಒಂದಲ್ಲ ಒಂದು ತರಹದಲ್ಲಿ, ಏನಾದರೂ ಮಾಡಿ ಒಡ್ಡರ ಓಣಿ ಗ್ಯಾಂಗನ್ನು ಶಾಲೆಯಿಂದ ಸಾಗಹಾಕಲೇಬೇಕಾಗಿದೆ. ಏನು ಮಾಡಬೇಕು? ಕ್ಲಿಷ್ಟ ಪರಿಸ್ಥಿತಿ ಸಂಬಾಳಿಸಲು ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು ಯಾರೂ ಇಲ್ಲ. ಹೆಡ್ ಮಾಸ್ತರ್ ತಲೆ ಓಡಿಸಿದ್ದಾರೆ. ತಲೆ ಓಡಿದೆ. ಅದಕ್ಕೆ ಕಾರಣ ಆಗ ಕಂಡುಬಂದವರು ಒಬ್ಬ ಒಳ್ಳೆ ಮಾಸ್ತರರು. ಅವರ ಹೆಸರು ಮಳಗಿ ಮಾಸ್ತರ್. ತುಂಬಾ ಒಳ್ಳೆ ಸರ್. ತುಂಬಾ ಸಾತ್ವಿಕರು. ಪಾಪದವರು. ಎಲ್ಲರಿಗೂ ಅವರನ್ನು ಕಂಡರೆ ಒಂದು ತರಹದ ಗೌರವ. 'ಪಾಪದವರು ನಮ್ಮ ಮಳಗಿ ಸರ್,' ಅನ್ನುವ ಭಾವನೆ. ಅವರು ಒಂದು ವಿನಂತಿ ಮಾಡಿಕೊಂಡರು ಅಂದರೆ ಅದನ್ನು ಯಾರೂ ತೆಗೆದು ಹಾಕಲು ಸಾಧ್ಯವೇ ಇಲ್ಲ. ಮಹಾಭಾರತದ ವಿದುರನ ಮಾದರಿಯ ಹಿರಿಯ ಮಾಸ್ತರರು ಅವರು. ಮಳಗಿ ಸರ್ ಅವರಿಗೆ ಹೆಡ್ ಮಾಸ್ತರರು ಎಲ್ಲ ವಿಷಯ ವಿವರಿಸಿದ್ದಾರೆ. ವಡ್ಡರ ಗ್ಯಾಂಗಿನ ಜೊತೆ ಅವರನ್ನು ಸಂಧಾನಕ್ಕೆ ಕಳಿಸಿದ್ದಾರೆ.

ಡೊಳ್ಳು ಹೊಟ್ಟೆ ಕುಣಿಸುತ್ತ, ಬಿಳಿ ಕೂದಲನ್ನು ಕೆರೆದುಕೊಳ್ಳುತ್ತ, ತಮ್ಮ ವಿದುರನ ಶೈಲಿಯಲ್ಲಿ ಸಾವಕಾಶವಾಗಿ ನಡೆದುಕೊಂಡು ಹೋದರು ಮಳಗಿ ಸರ್. ವಡ್ಡರ ಓಣಿ ಗ್ಯಾಂಗ್ ಅವರನ್ನು ನೋಡಿದೆ. ವಡ್ಡರಲ್ಲಿ ಕೆಲವರು ಅವರನ್ನು ಗುರುತಿಸಿದ್ದಾರೆ. ಹಳೆ ಮಾಸ್ತರರು ಅಂತ ಅವರಲ್ಲೇ ಸ್ವಲ್ಪ ಸಂಸ್ಕಾರ ಇದ್ದ ರೌಡಿಗಳು ಅವರಿಗೆ ಒಂದು ನಮಸ್ಕಾರ ಹಾಕಿದ್ದಾರೆ. ಅವರು ಮನೆಗೆ ಹೊರಟಿರಬೇಕು ಅಂದುಕೊಂಡಿದ್ದಾರೆ. ಆದರೆ ಅವರು ಸಂಧಾನಕ್ಕೆ ಬಂದಿದ್ದಾರೆ ಅಂತ ತಿಳಿದು ಅಪ್ರತಿಭರಾಗಿದ್ದಾರೆ. ಬೇರೆ ಯಾರೋ ಮಾಸ್ತರರು ಸಂಧಾನಕ್ಕೆ ಹೋಗಿದ್ದರೆ ಅವರಿಗೂ ನಾಕು ತಟ್ಟಿ ಕಳಿಸುತ್ತಿದ್ದರೋ ಏನೋ! ಆದರೆ ಇವರು ಮಳಗಿ ಸರ್! ಅಷ್ಟು ಪಾಪದವರು. ಸಾತ್ವಿಕರು. ಅವರ ಜೊತೆ ಸಂಧಾನಕ್ಕೆ ಒಪ್ಪುವದೋ ಬಿಡುವದೋ ಮುಂದಿನ ಮಾತು. ಆದರೆ ಮಾತಾಡದೇ ಇರಲಿಕ್ಕಂತೂ ಸಾಧ್ಯವೇ ಇಲ್ಲ. ಅಷ್ಟು ಮಟ್ಟಿನ ಮರ್ಯಾದೆ, ಗೌರವದ ಹವಾವನ್ನು ಮಳಗಿ ಸರ್ ಕೂಡ maintain ಮಾಡಿದ್ದಾರೆ. ಅಷ್ಟು ಮಾಡಲು ತಮ್ಮ ಮೂವತ್ತೂ ಚಿಲ್ಲರೆ ವರ್ಷದ ನೌಕರಿಯನ್ನು ಪಣಕ್ಕೆ ಇಟ್ಟಿದ್ದಾರೆ. ಬಿಸಿಲಿನಲ್ಲಿ ತಲೆ ಕೂದಲನ್ನು ಖಾಲಿಪೀಲಿ ಬಿಳೆ ಮಾಡಿಕೊಂಡಿಲ್ಲ ಅವರು. ವಯೋವೃದ್ಧರಷ್ಟೇ ಅಲ್ಲ ಜ್ಞಾನವೃದ್ಧರೂ ಕೂಡ.

ಮಳಗಿ ಸರ್ ವಡ್ಡರ ಮಂದಿಯನ್ನು ಪರಿಪರಿಯಾಗಿ ಕೇಳಿಕೊಂಡಿದ್ದಾರೆ. ಭಟ್ಟಿ ಸರ್ ಅವರನ್ನು ರುಬ್ಬವ ವಿಚಾರವನ್ನು ಬಿಟ್ಟು, ವಾಪಸ್ ಹೋಗುವಂತೆ ವಡ್ಡರ ಓಣಿ ಗ್ಯಾಂಗಿಗೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಬಡಪಟ್ಟಿಗೆ ವಡ್ಡರು ಒಪ್ಪಿಲ್ಲ. 'ನೋಡ್ರೀ ಮಳಗಿ ಸರ್ರಾ, ನಿಮಗ respect ಕೊಡತೇವರಿ ಸರ್. ಆದರೆ ಆ ಭಾಡ್ಯಾ ಭಟ್ಟಿ ಆಚಾರಿನ ಮಾತ್ರ ಬಿಡವರಲ್ಲ ನಾವು! ಅವಂಗ ಬಡಿದೇ ಹೋಗವರು ನಾವು. ನೀವು ಸುಮ್ಮನೆ ಇದರಾಗ ನಡು ಬರಾಕ ಹೋಗಬ್ಯಾಡ್ರೀ! ಸುಮ್ಮ ಮನಿ ಹಾದಿ ಹಿಡೀರಿ ಸರ್! ನಿಮಗ್ಯಾಕ ಈ ತಲಿಬ್ಯಾನಿ?? ನೀವು ಒಳ್ಳೆಯವರು ಅದೀರಿ. ಹೋಗ್ರೀ ಹೋಗ್ರೀ!' ಅಂತ brush off  ಮಾಡುವ ರೀತಿಯಲ್ಲಿ ಮಾತಾಡಿದ್ದಾರೆ. ನಾವು ಸಹ ಅಲ್ಲೇ ಸನಿಹದಲ್ಲೇ ಸೈಕಲ್ ಹೊಡೆಯುತ್ತ ಎಲ್ಲ ಗಮನಿಸುತ್ತಿದ್ದೇವೆ. ನಾವು ಎಲ್ಲ ಕಿಡಿಗೇಡಿಗಳು ಘಟನೆ ಸ್ಥಳದ ಹತ್ತಿರ ಒಮ್ಮೆಲೇ ಹೋಗಿ, ಮಾಸ್ತರ್ ಮಂದಿಗೆ ಮತ್ತೂ embarrass ಮಾಡಿದರೆ ನಂತರ ಮರುದಿವಸ ನಮಗೆ ಕಡತ ಬೀಳುತ್ತದೆ ಅಂತ ಗೊತ್ತಿದೆ. ಅದಕ್ಕೇ ಶಿಫ್ಟ್ ಹಾಕಿಕೊಂಡು, ಒಬ್ಬರಾದ ನಂತರ ಒಬ್ಬರು ಲಫಡಾ ನಡೆಯುತ್ತಿದ್ದ ಜಾಗದ ಹತ್ತಿರ ಹೋಗಿ ಹೋಗಿ, ಮಳಗಿ ಸರ್ ಮತ್ತು ವಡ್ಡರ ಓಣಿ ಗ್ಯಾಂಗಿನ ಮಧ್ಯೆ ನಡೆಯುತ್ತಿರುವ ಶತಮಾನದ ಅಭೂತಪೂರ್ವ ಮಾಂಡವಲಿಯನ್ನು (ಸಂಧಾನವನ್ನು) ನೋಡಿ ಮಜಾ ತೆಗೆದುಕೊಳ್ಳುತ್ತಿದ್ದೇವೆ.

ಮೊದಲನೇ ಸುತ್ತಿನ ಸಂಧಾನ ವಿಫಲವಾಗಿದೆ. ಮಳಗಿ ಸರ್ ಮರಳಿ ಹೆಡ್ ಮಾಸ್ಟರ್ ರೂಮಿನತ್ತ ತಮ್ಮ ದೊಡ್ಡ ದೇಹದ ಸವಾರಿಯನ್ನು ವಾಪಸ್ ತೆಗೆದುಕೊಂಡು ಬಂದಿದ್ದಾರೆ. ಗೇಟಿನ ಹೊರಗೆ ವಡ್ಡರ ಓಣಿ ಗ್ಯಾಂಗ್ ಸೀಟಿ ಹೊಡೆದು, ಕೇಕೆ ಹಾಕಿದೆ. ರಣಕೇಕೆ ಅಂದರೆ ಅದೇ ಇರಬೇಕು. 'ಬಾರಲೇ ಭಟ್ಟಿ ಆಚಾರಿ!' ಅಂತ ರಣಭೇರಿ ಬಾರಿಸಿದೆ.

ಹೆಡ್ ಮಾಸ್ತರ್ ಮತ್ತು ಮಳಗಿ ಸರ್ ಮಧ್ಯೆ ಮತ್ತೆ ಏನೋ ವಿಚಾರ ವಿನಿಮಯ ಆಗಿದೆ. ಮತ್ತೆ ಮುಂದಿನ ಸುತ್ತಿನ ಮಾತುಕತೆಗೆ ಹೊರಟಿದ್ದಾರೆ ಮಳಗಿ ಸರ್. ಮತ್ತೆ ಅದೇ ತಣ್ಣನೆಯ ನಡೆ. ಏನೂ ಹೆಚ್ಚು ಕಮ್ಮಿ ಇಲ್ಲ. ಅದೇ ಭೋಳೆತನ. ಅದೇ ನಮ್ಮ ಪ್ರೀತಿಯ ಮಳಗಿ ಸರ್! ಮಳಗಿ ಸರ್ ಅವರದ್ದು ಯಾವಾಗಲೂ BJP ಪಕ್ಷ. ಅಂದರೆ ಭೋಳೆ ಜನರ ಪಾರ್ಟಿ ಅಂತ. ಅಷ್ಟು ಭೋಳೆ ಶಂಕರ ನಮ್ಮ ಮಳಗಿ ಸರ್. ಅವರ ಹೆಸರು ಕೂಡ ಶಂಕರ ಅಂತಲೇ ನೆನಪು.

ಎರಡನೇ ಸುತ್ತಿನ ಸಂಧಾನದಲ್ಲಿ ಮಳಗಿ ಸರ್ ಬಾಂಬ್ ಹಾಕಿಬಿಟ್ಟಿದ್ದಾರೆ. ಭಟ್ಟಿ ಸರ್ ಅವರಿಗೆ ಹೊಡೆಯುವ ಮೊದಲು ತಮಗೇ (ಮಳಗಿಯವರಿಗೇ) ಹೊಡೆಯಬೇಕೆಂದೂ, ಅವರು ಸಹಿತ ಭಟ್ಟಿ ಸರ್ ಅವರ ಜೊತೆಗೇ ಇರುವ ನಿರ್ಧಾರ ಮಾಡಿರುವದಾಗಿ ಹೇಳಿಬಿಟ್ಟಿದ್ದಾರೆ. ಸೆಂಟಿಮೆಂಟಲ್ ಫಿಟ್ಟಿಂಗ್ ಬರೋಬ್ಬರಿ ಮಡಗಿದ್ದಾರೆ. ಮಳಗಿ ಸರ್ ಇಟ್ಟ ಸೆಂಟಿಮೆಂಟಲ್ ಫಿಟ್ಟಿಂಗಿಗೆ ವಡ್ಡರ ಓಣಿ ಗ್ಯಾಂಗ್ ಮೆಂಟಲ್ ಆಗಿಬಿಟ್ಟಿದೆ. ಅವರೂ ಮನುಷ್ಯರಲ್ಲವೇ!!?? ಮತ್ತೆ ಹಾಗೆ emotional blackmail ಮಾಡಿದವರು ವಯೋವೃದ್ಧ, ಜ್ಞಾನವೃದ್ಧ ಮಳಗಿ ಸರ್. ಭಟ್ಟಿ ಸರ್ ಅವರಿಗೆ ಹೊಡೆಯಬೇಕೆಂಬ ಛಲದಲ್ಲಿ, ಆಕ್ರೋಶದಲ್ಲಿ, ಅಬ್ಬರದಲ್ಲಿ ಎಲ್ಲಾದರೂ, ಯಾರಾದರೂ ಮಳಗಿ ಸರ್ ಮೇಲೆ ಕೈಮಾಡಲು ಸಾಧ್ಯವೇ? ಅದನ್ನು ವಡ್ಡರ ದೇವರೂ ಕೂಡ ಮೆಚ್ಚಲಾರ. ಅವರ ದೇವರು ಯಾರು? ಈಗ ಮರೆತು ಹೋಗಿದೆ. ಅಲ್ಲೇ ಧಾರವಾಡದ ಲಕ್ಷ್ಮಿ ಸಿಂಗನ ಕೆರೆಯ ಆ ಕಡೆ ಇತ್ತು ಅವರ ಒಂದು ಗುಡಿ. ಅದರಲ್ಲಿದ್ದ ದೇವರೇ ವಡ್ಡರ ದೇವರು.

ಈಗ ವಡ್ಡರ ಓಣಿಯ ಮಂದಿ ಒಂದು ತರಹದ ಸಂದಿಗ್ಧಕ್ಕೆ ಬಿದ್ದಿದ್ದಾರೆ. ಪೂರ್ತಿ confuse ಆಗಿಬಿಟ್ಟಿದ್ದಾರೆ. 'ಕಬ್ಬಿಣ ಕಾದಿದೆ. ಈಗಲೇ ಹತೋಡಾ ಹೊಡೆಯಬೇಕು,' ಅಂತ ಮಳಗಿ ಸರ್ ಮತ್ತೊಂದು ಫಿಟ್ಟಿಂಗ್ ಇಟ್ಟೇಬಿಟ್ಟಿದ್ದಾರೆ.

'ನೋಡ್ರೀಪಾ! ನನಗ ನೀವು ಇನ್ನೊಂದು ಮಾತು ಕೊಡಬೇಕು. ಇವತ್ತು ಒಂದೇ ಅಲ್ಲ ಮುಂದೆ ಎಂದೂ ಭಟ್ಟಿ ಸರ್ ಅವರಿಗೆ ಹೊಡೆಯುವ ವಿಚಾರ ನೀವು ಮಾಡಲೇಬಾರದು. ಆ ಮಾತು ನೀವು ನನಗ ಕೊಡಲಿಕ್ಕೇಬೇಕು. ಅಲ್ಲಿ ತನಕಾ ನಾನೂ ಇವತ್ತು ಮನಿಗೆ ಹೋಗವಾ ಅಲ್ಲಾ. ನಾ ಮಧ್ಯಾನ ಊಟಾ ಸುದಾ ಮಾಡಿಲ್ಲ. ಇರಲಿ. ಹಾಂಗೇ ಇರ್ತೇನಿ. ನೀವು ಬಡಿದು ಕೊಂದು ಒಗೆದರೆ, ಸತ್ತೂ ಹೋಗ್ತೇನಿ. ನಾವೇ ವಿದ್ಯೆ ಕಲಿಸಿದ ಹುಡುಗುರ ಕಡೆ ಬಡಿಸಿಕೊಂಡು ಸತ್ತು ಹೋಗೋ 'ನಸೀಬಾ' ಎಷ್ಟು ಮಂದಿಗೆ ಇರ್ತದ? ಹಾಂ!? ಮಾತು ಕೊಡ್ರೋ. ಪ್ರಾಮಿಸ್ ಮಾಡ್ರೋ! ಏನೋ ನಿಮ್ಮ ತಮ್ಮ, ನಿಮ್ಮ ಓಣಿ ಹುಡುಗ ಭಂಡಿವಡ್ಡರಗ ಒಂದು ಮಾತು ಹೇಳಿದರು ಅಂದ್ರ ಭಟ್ಟಿ ಮಾಸ್ತರರಿಗೆ ಹೊಡಿಲಿಕ್ಕೆ ಬಂದು ಬಿಡೋದಾ? ಏನು ಇದ್ದೀರೀಪಾ? ಕಾಲ ಕೆಟ್ಟದ!' ಅಂತ ಅಂಬೋ ಅಂದು, ಮಳ್ಳ ಮಾರಿ, ಪಾಪದ ಮುಖ ಮಾಡಿಕೊಂಡು ನಿಂತೇ ಇದ್ದಾರೆ ಮಳಗಿ ಸರ್. ಅಲ್ಲಿಂದ ಸರಿದೇ ಇಲ್ಲ.

ಈಗ ಮಾಡಿದ ಖತರ್ನಾಕ್ emotional blackmail ನಿಂದ ಪಂಟರ್ ವಡ್ಡರ ರೌಡಿಗಳೂ ಸಹ ಹೈರಾಣಾಗಿ ಹೋಗಿದ್ದಾರೆ. ಲಫಡಾ ಶುರುವಾಗಿ ಸುಮಾರು ಒಂದು ತಾಸಾಗುತ್ತ ಬಂದಿದೆ. ಸಮಯ ಸುಮಾರು ಏಳು ಘಂಟೆ. ಅವರಿಗೆಲ್ಲ 'ದೇವಸ್ಥಾನಕ್ಕೆ' ಹೋಗಿ 'ತೀರ್ಥ' ತೆಗೆದುಕೊಳ್ಳುವ ಸಮಯ. ಹೇಗೂ ಭಟ್ಟಿ ಮಾಸ್ತರ್ ಸಿಗುತ್ತಾರೆ, ನಾಲ್ಕು ರಪಾರಪಾ ಅಂತ ಬಾರಿಸಿ, ಬೈದು, ಒದ್ದು, ಹೋಗಿ ವಿಜಯೋತ್ಸವ ಆಚರಿಸುತ್ತ 'ಎಣ್ಣೆ' ಹಾಕೋಣ ಅಂದರೆ ಇಲ್ಲಿ ಫುಲ್ KLPD ಆಗಿಬಿಟ್ಟಿದೆ. ಮಳಗಿ ಮಾಸ್ತರ್ ಫಿಟ್ಟಿಂಗ್ ಇಟ್ಟೂ ಇಟ್ಟೂ ಮಲಗಿಸಿಬಿಟ್ಟಿದಾರೆ. ಹೆಸರು ಮಳಗಿ. ಮಾಡಿದ ಕೆಲಸ ವಡ್ಡರ ಗ್ಯಾಂಗನ್ನು 'ಮಲಗಿ'ಸಿಬಿಟ್ಟಿದ್ದು. ಇದು ಒಂದು ತರಹದ ಗಾಂಧೀಜಿ ಟೈಪಿನ ಅಹಿಂಸಾತ್ಮಕ ಎನ್ಕೌಂಟರ್. ಅಂದು ಮಳಗಿ ಸರ್ ಅವರಿಗೆ ಕೂಡ ಗಾಂಧಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಂತ ನಾಮಕರಣ ಮಾಡಿದೆವು.

ಮತ್ತೆ ಮತ್ತೆ ಅದೇ ಸೊಳೆ ರಾಗ ಹಾಡೀ ಹಾಡೀ ವಡ್ಡರ ಮಂದಿಯಿಂದ ಭಾಷೆಯನ್ನು ಪಡೆದುಕೊಂಡ ಮಳಗಿ ಸರ್ ಮುಖದಲ್ಲಿ ವಿಜಯದ ನಗೆ. ಆದರೆ ಅವರು ನಗಲಿಲ್ಲ. ನಕ್ಕರೆ ಸೌದಾ ಫೋಕ್! (deal is off) ಅಂತ ಗೊತ್ತು ಅವರಿಗೆ. ವಡ್ಡರ ಮಂದಿಗೆ ಮೈಯೆಲ್ಲಾ ಹಿಡಿ ಮಾಡಿಕೊಂಡು, ತಗ್ಗಿ ಬಗ್ಗಿ ನಮಸ್ಕಾರ ಮಾಡಲು ಸಹ ಹೋಗಿಬಿಟ್ಟರು. ಮಳಗಿ ಸರ್ ಅವರ ದೈನೇಸಿ ಸ್ಥಿತಿಯನ್ನು ನೋಡಿ ವಡ್ಡರ ಮಂದಿಗೇ ಸಿಕ್ಕಾಪಟ್ಟೆ embarrassment ಆಗಿ, ತಮ್ಮಲ್ಲೇ ತಮ್ಮ ಹಕ್ಕಿಪಿಕ್ಕಿ ಕನ್ನಡದಲ್ಲಿ ಏನೇನೋ ಮಾತಾಡಿಕೊಳ್ಳುತ್ತ ಅಲ್ಲಿಂದ ಜಾಗ ಖಾಲಿ ಮಾಡಿದರು. Deal clinched! Victory moment!

ಮುಂದೇನಾಯಿತು ಅಂತ ನೋಡಲಿಕ್ಕೆ ನಾವು ಅಲ್ಲಿ ಇರಲಿಲ್ಲ. ಬೇಗನೆ ಹೋಗಿ ನಮ್ಮ ಏರಿಯಾದ ಹರಟೆಕಟ್ಟೆಯಲ್ಲಿ ಕೂತಿದ್ದ ಗೆಳೆಯರಿಗೆ ಸುದ್ದಿ ಮುಟ್ಟಿಸಬೇಕಾಗಿತ್ತು. ಪ್ರತಿದಿನ ನಮಗೆ ಅವರು ಸುದ್ದಿ ಹೇಳುತ್ತಿದ್ದರು. ಇವತ್ತು ನಾವು ಹೋಗಿ ಹೇಳಬೇಕು. ಅದೂ ಖತರ್ನಾಕ್ ಸುದ್ದಿ. ಬ್ರೇಕಿಂಗ್ ನ್ಯೂಸ್ ಬ್ರೇಕ್ ಮಾಡಲು ಬಂವ್ವನೆ ಮನೆ ಕಡೆ ಸೈಕಲ್ ಹೊಡೆದೆ. ಈ ಕಡೆ ಶಾಲೆಯಲ್ಲಿ ಇನ್ನೂ ನಡೆಯುತ್ತಿದ್ದ ಪಂಚಾಯಿತಿ ಗಮನಿಸಲು ಬೇರೆ ಜನ ಇದ್ದರು. ನಾಳೆ ಉಳಿದ ಸುದ್ದಿ ಹೇಳುತ್ತಾರೆ. ಮುಖ್ಯ ಭಾಗವಂತೂ ಮುಗಿದೇಹೋಗಿದೆ. ಇನ್ನು ವೈಶಂಪಾಯನ ಸರೋವರದ ಮಾದರಿಯ ಹೆಡ್ ಮಾಸ್ತರ್ ರೂಮಿನಲ್ಲಿ ಅಡಗಿ ಕೂತಿರುವ ಉತ್ತರ ಕುಮಾರನ ಮಾದರಿಯ ಭಟ್ಟಿ ಸರ್ ಅವರಿಗೆ ಸಮಾಧಾನ ಮಾಡಿ, ಕಂಟಕ ನಿವಾರಣೆ ಆಗಿದೆ, ಶಾಶ್ವತವಾಗಿ ನಿವಾರಣೆ ಆಗಿದೆ ಅಂತ ಹೇಳಿ, ಮನದಟ್ಟು ಮಾಡಿಕೊಟ್ಟು ಮನೆಗೆ ಕಳಿಸಬೇಕು. ಅದೆಲ್ಲ ಓಕೆ. ಸಿನಿಮಾದಲ್ಲಿ ಎಲ್ಲ ಮುಗಿದ ಕೊನೆಗೆ ಪೊಲೀಸರು ಬಂದು 'ನಮ್ಮದು ಎಲ್ಲಿ ಇಡಲೀ??' ಅನ್ನುವ ರೀತಿಯ ಸೀನ್ ಅವೆಲ್ಲ. ಬ್ರೇಕಿಂಗ್ ನ್ಯೂಸ್ ಕೊಡುವದು ಅದಕ್ಕಿಂತ ಮುಖ್ಯ. ಅದಕ್ಕೇ ಮನೆ ಕಡೆ ಗಾಡಿ ಬಿಟ್ಟೆ.

ಮೊದಲಾಗಿದ್ದರೆ ಮೊದಲು ಮನೆ, ತಿಂಡಿ ನಂತರ ಹರಟೆಕಟ್ಟೆ. ಇವತ್ತು ಸೀದಾ ಹರಟೆಕಟ್ಟೆ. ಅದೂ ಮೋಹಿನಿ ಮನೆಯ ಎದುರಿಂದಲೇ ಹೋದೆ. ಕಂಡೇಬಿಟ್ಟಳು ಮೋಹಿನಿ! ಮತ್ತೆ ಅದೇ ತನಹಾ ತನಹಾ ಪ್ಯಾಸಾ ಪ್ಯಾಸಾ ಭಂಗಿ. ಗೇಟಿನ ಮೇಲೆ ಗದ್ದ ಊರಿ, ಮುಷ್ಟಿಗಳಿಂದ ತನ್ನ ಸೇಬು ಕೆನ್ನೆಗಳನ್ನು ಒತ್ತಿಕೊಂಡು, ಯಾರದೋ ನಿರೀಕ್ಷೆಯಲ್ಲಿ ನಿಂತ ಬೊಂಬಾಟ್ ಮೋಹಿನಿ. ಮತ್ತೆ ಅದೇ ಫುಲ್ ಬಿಳುಪಿನ ನೈಟಿ. ನಾನೂ ಆಕೆಯನ್ನೂ ಪಿಕಿಪಿಕಿ ನೋಡುತ್ತಾ ಸೈಕಲ್ ಹೊಡೆದೆ. ಆಕೆ ನನಗೇನೂ ಭಾವ್ ಕೊಟ್ಟ ನೆನಪಿಲ್ಲ. ಅಥವಾ ಕೊಟ್ಟಳೇ? ಕತ್ತಲಿತ್ತು. ಕತ್ತಲಲ್ಲಿ ಆಕೆ ಕಣ್ಣು ಹೊಡೆದರೆ ಕಾಣಲಿಕ್ಕೆ ನಮ್ಮ ಹತ್ತಿರ ಏನು ನೈಟ್ ವಿಷನ್ ಗಾಗಲ್ ಇತ್ತೇ ಆವಾಗ!? ನಾವು ಸೋಡಾ ಗ್ಲಾಸಿನ ಲಾಟನ್ ಮಂದಿ. ಮೊದಲೇ ಏನೂ ಸರಿಯಾಗ ಕಾಣಿಸದ ಚಸ್ಮಿಸ್ ಕುಡ್ಡರು! ಇನ್ನು ಕತ್ತಲಲ್ಲಿ ನಮ್ಮ ಸ್ಕೂಲ್ ಜೂನಿಯರ್ ಮೋಹಿನಿ ಭಾವ್ ಕೊಟ್ಟಳೋ ಇಲ್ಲವೋ ಹೇಗೆ ಗೊತ್ತಾಗಬೇಕು?!

ಹರಟೆಕಟ್ಟೆಯಲ್ಲಿ ಭರಪೂರ ನೆರೆದಿದ್ದ ಮಂದಿಗೆ ಸುದ್ದಿಯನ್ನು ಸಂಕ್ಷಿಪ್ತವಾಗಿ ಹೇಳಿದೆ. ಬಿದ್ದೂ ಬಿದ್ದೂ ನಕ್ಕೆವು. ಭಟ್ಟಿ ಸರ್ ಅವರಿಂದ ಬರೋಬ್ಬರಿ ನಾದಿಸಿಕೊಂಡಿದ್ದ ಮಂದಿಯೂ ಸಹ ಅವರಲ್ಲಿದ್ದರು. ನಮ್ಮ ಜೂನಿಯರ್ ಮಂದಿ. ಅವರಂತೂ ಅಲ್ಲಿಯೇ ಝಕ್ಕ ನಕ್ಕ ಅಂತ ಅಕಾಲದಲ್ಲಿ ಹೋಳಿ ಹುಣ್ಣಿಮೆ ಡಾನ್ಸ್ ಮಾಡಿ, ಲಬೋ ಲಬೋ ಅಂತ ಬಾಯ್ಬಾಯಿ ಬಡಕೊಂಡು, ಸಿಳ್ಳೆ ಹೊಡೆದೂ ಹೊಡೆದೂ, ಉಳ್ಳಾಡಿ ಉಳ್ಳಾಡಿ ನಕ್ಕರು. ಆವತ್ತಿನ ಹರಟೆ ಬಹಳ ಕಾಲ ನಡೆದಿತ್ತು. ಮೋಹಿನಿ ಕೂಡ ಆವತ್ತು ಸ್ವಲ್ಪ ಜಾಸ್ತಿ ಹೊತ್ತೇ ಕಂಪೌಂಡ್ ತುಂಬಾ ಓಡ್ಯಾಡಿ ಓಡ್ಯಾಡಿ, ಅವರ ಅಮ್ಮ 'ಒಳಗೆ ಬಾ ಅವ್ವಿ. ಕತ್ತಲಾತು,' ಅಂತ ಕರೆದ ಮೇಲೆಯೇ ಒಳಗೆ ಹೋದಳು.  'ಏ, ಮೋಹಿನಿ ಅವ್ವಿ! ಇವತ್ತು ಭಟ್ಟಿ ಮಾಸ್ತರ್ ಬರಂಗಿಲ್ಲ ಬೇ! ಹೋಗಿ ಊಟಾ ಮಾಡಿ ಲಗೂನೆ ಮಕ್ಕೋಳವಾ! ರಸ್ತೆದಾಗ ಬರದವ ಕನಸಿನ್ಯಾಗ ಬಂದರೂ ಬಂದ ನಿಮ್ಮ ಭಟ್ಟಿ ಆಚಾರಿ!' ಅಂತ ಕೂಗಿ ಹೇಳೋಣ ಅಂತ ಅನ್ನಿಸಿತು. ಮತ್ತೆ ಮನೆ ಮಂದಿ ಹೊರಗೆ ಬಂದು, ಹಿಡಕೊಂಡು ಒದ್ದಾರು ಅಂತ ನಮ್ಮಲ್ಲೇ ಹೇಳಿಕೊಂಡು ನಕ್ಕಿದ್ದೇ ನಕ್ಕಿದ್ದು. ಈ ಕಾರಣ ಮೋಹಿನಿಯ ಮನೆಯಲ್ಲಿ ಆಕೆಯನ್ನು ಕರೆಯುವ ಹೆಸರು ಅವ್ವಿ ಅಂತಲೂ ಗೊತ್ತಾಯಿತು. ಮರುದಿನ ನಮ್ಮ ಲಾಸ್ಟ್ ಬೆಂಚಿನಲ್ಲಿ ತಟ್ಟಿಕೊಂಡು ನಗಲಿಕ್ಕೆ ಒಂದು ವಿಷಯ ಸಿಕ್ಕಂತಾಯಿತು.

ಸರಿ, ಮರುದಿವಸ ಶಾಲೆಗೆ ಹೋಗಿ ನೋಡಿದರೆ ಭಟ್ಟಿ ಸರ್ ಬಂದಿದ್ದಾರೆ. ಎಲ್ಲಿ ವಡ್ಡರ ಗ್ಯಾಂಗಿನ ಭಯದಿಂದ ತಮ್ಮ ಮೂಲ ವಿಜಾಪುರದ ಕಡೆಗೇ ಹೋಗಿ, ಯಾವದಾದರೂ ರಾಯರ ಮಠದಲ್ಲಿ ಠಿಕಾಣಿ ಹಾಕಿದರೋ ಅಂತ ವಿಚಾರ ಮಾಡಿದರೆ ಠಾಕುಠೀಕಾಗಿ ಮೊದಲಿನ ಹಾಗೆ ಬಂದೇಬಿಟ್ಟಿದ್ದಾರೆ. ಒಂದೇ ವ್ಯತ್ಯಾಸ ಎದ್ದು ಕಂಡಿತು. ತಮ್ಮ ಸಂಪ್ರದಾಯದ ಎಲ್ಲ ನಾಮಗಳನ್ನು, ಮುದ್ರೆಗಳನ್ನು ಬರೋಬ್ಬರಿ ಹೊಡೆದುಕೊಂಡು, ಅಳಿಸಿಕೊಳ್ಳದೇ ಬಂದುಬಿಟ್ಟಿದ್ದಾರೆ! ಎಲ್ಲಿ ಮೊದಲೆಲ್ಲ ನಾಮ, ಮುದ್ರೆ ಅಳಿಸಿಕೊಂಡು ಸ್ಟೈಲ್ ಹೊಡೆದಿದ್ದಕ್ಕೆ ದೇವರು ಸಿಟ್ಟಿಗೆದ್ದು ಹಿಂದಿನ ದಿನದ ವಡ್ಡರ ಅವಗಢ ಸೃಷ್ಟಿ ಮಾಡಿದ್ದನೋ ಏನೋ ಅಂತ ವಿಚಾರ ಮಾಡಿದರೋ ಏನೋ ಭಟ್ಟಿ ಸರ್!? ಯಾರಿಗೆ ಗೊತ್ತು? ನಂತರ ಸುಮಾರು ದಿವಸ ಹಾಗೆಯೇ ಸರ್ವನಾಮಮುದ್ರಾಲಂಕೃತರಾಗಿಯೇ ಬರುತ್ತಿದ್ದರು. ಒಳ್ಳೆ ಸಕೇಶಿ ಮುತ್ತೈದೆಯ ತರಹ. ಒಳ್ಳೇದು ಬಿಡಿ. ಅಚಾರ್ರು ಸಂಪ್ರದಾಯ ಪಾಲಿಸಿಲ್ಲ ಅಂದರೆ ಹೇಗೆ!?

ಈ ಐತಿಹಾಸಿಕ ಘಟನೆಯಾದ ನಂತರ ಭಟ್ಟಿ ಸರ್ ಅವರಿಗೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗುವ ಹುಚ್ಚು ಬಿಟ್ಟುಹೋಯಿತು ಅಂತ ಅನ್ನಿಸುತ್ತದೆ. ಸಣ್ಣ ಕ್ಲಾಸಿನ ಮಂದಿಗೆ ಅಷ್ಟಿಷ್ಟು ಬಾರಿಸಿಕೊಂಡು, ರುಬ್ಬಿಕೊಂಡು ಇದ್ದರು. ಭಂಡಿವಡ್ಡರನ ಮೇಲಿನ ಸೇಡನ್ನು ಚಿಕ್ಕಮಕ್ಕಳ ಮೇಲೆ ತೀರಿಸಿಕೊಳ್ಳುತ್ತಿದ್ದರೆ ಭಟ್ಟಿ ಸರ್!? ಅವರನ್ನೇ ಕೇಳಬೇಕು.

ಹಿಂದಿನ ದಿವಸ ನಾವು ಮನೆ ಕಡೆ ಹೋದ ಮೇಲೆ ಏನಾಯಿತು ಅಂತ ಅಲ್ಲೇ ಉಳಿದುಕೊಂಡಿದ್ದ ನಮ್ಮ ಬಂಟರು ಮರುದಿನ ಹೇಳಿದರು. ನಂತರ ಜಾಸ್ತಿಯೇನೂ exciting ಆಗಲಿಲ್ಲವಂತೆ. ಮಳಗಿ ಸರ್ ಮತ್ತು ಭಟ್ಟಿ ಸರ್ ಇಬ್ಬರೂ ಕೂಡಿಯೇ ಹೋದರಂತೆ. ಮನೆ ಮುಟ್ಟುವ ತನಕ ಸೇಫ್ಟಿಗಾಗಿ ಇರಲಿ ಮಳಗಿ ಸರ್ ಅವರನ್ನು ಕರೆದುಕೊಂಡು ಹೋಗಿರಬೇಕು ಉತ್ತರ ಕುಮಾರ ಅಲ್ಲಲ್ಲ ಬಲರಾಮ ಭಟ್ಟಿ ಸರ್!

ಮೊದಲೇ ಹೇಳಿದಂತೆ ಭಟ್ಟಿ ಸರ್ ಬಹಳ ಶಾಣ್ಯಾ ಮನುಷ್ಯ. ಕಷ್ಟಪಡುವ ಪ್ರವೃತ್ತಿ ಇತ್ತು. ಮೊದಲು ಕೇವಲ SSLC, TCH ಮಾಡಿಕೊಂಡು ಪ್ರೈಮರಿ ಶಾಲೆ ಮಾಸ್ತರಾಗಿದ್ದವರು ಅವರು. ಆ ಕೆಲಸ ಮಾಡುತ್ತಲೇ ಡಿಗ್ರಿ, ಮಾಸ್ಟರ್ ಡಿಗ್ರಿ, BEd ಎಲ್ಲ ಮಾಡಿಕೊಂಡಿದ್ದರು. ಅದು ಸಣ್ಣ ಮಾತಲ್ಲ. ಅದಾದ ನಂತರವೇ ನಮ್ಮ ಹೈಸ್ಕೂಲಿಗೆ ಬಂದವರು ಅವರು. ನಡುವೆ ಏನೋ ಮನ್ಮಥನ ಪ್ರಭಾವಕ್ಕೆ ಒಳಗಾಗಿದ್ದರು ಅಂತ ಕಾಣುತ್ತದೆ. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರ್ ಆಗಲು ಹೋಗಿ ಮಾಡಿಕೊಂಡ ಈ ಲಫಡಾ ಒಳ್ಳೆಯದನ್ನೇ ಮಾಡಿತು. ಮತ್ತೆ ಅವರನ್ನು ಓದಿನತ್ತ ನೂಕಿತು. ನೌಕರಿ ಮಾಡುತ್ತಲೇ ಮತ್ತೊಂದು ಮಾಸ್ಟರ್ ಡಿಗ್ರಿ, PhD ಸಹಿತ ಮಾಡಿಕೊಂಡರು ಅಂತ ಈಗಿತ್ತಲಾಗಿ ಕೇಳ್ಪಟ್ಟೆ. ನಂತರ ಶಾಲೆ ಬಿಟ್ಟು ಯಾವದೋ ಹೊಸದಾಗಿ ಸ್ಥಾಪಿತವಾದ ಯೂನಿವರ್ಸಿಟಿಯಲ್ಲಿ ಕೆಲಸಕ್ಕೆ ಸೇರಿಕೊಂಡರು ಅಂತ ಕೇಳಿದೆ. ಈಗ ಅವರಿಗೂ ಸುಮಾರು ಐವತ್ತರ ಮೇಲೆ. ಇಷ್ಟೆಲ್ಲಾ ನೆನಪಿದ್ದರೂ ಭಟ್ಟಿ ಸರ್ ಯಾವ ವಿಷಯ ಕಲಿಸುತ್ತಿದ್ದರು ಅನ್ನುವದೇ ಮರೆತು ಹೋಗಿದೆ. ಅವರು ನಮಗೆ ಕಲಿಸಿರಲಿಲ್ಲ ನೋಡಿ, ಅದಕ್ಕೇ ಮರೆತು ಹೋಗಿದೆ. ಹಾಳು ಮರೆವು!

ಮೋಹಿನಿಯೂ ಒಳ್ಳೆ ರೀತಿಯಿಂದ ಜೀವನ ಕಟ್ಟಿಕೊಂಡಳು ಅಂತ ತಿಳಿಯಿತು. ಕೆಟ್ಟದಾಗಿ ಕಟ್ಟಿಕೊಳ್ಳಲಿಕ್ಕೆ ಅವಳಿಗೇನು ಹುಚ್ಚೇ? ಭಾಳ ಒಳ್ಳೆ ಸ್ವಭಾವದ, ಒಳ್ಳೆ ಮನೆತನದ ಸಭ್ಯ ಹುಡುಗಿ ಅವಳು. ಅಪ್ರತಿಮ ಸುಂದರಿಯಾಗಿದ್ದರೂ ಒಟ್ಟೇ ನಖರಾ ಬಾಜಿ ಇಲ್ಲ. ಪಿಯೂಸಿ ನಮ್ಮ ಕಾಲೇಜಿನಲ್ಲಿಯೇ ಮಾಡುತ್ತಿದ್ದಳು. ಮುಂದೇನು ಮಾಡಿದಳು ಅಂತ ಗೊತ್ತಿರಲಿಲ್ಲ. ಆಮೇಲೆ ದೋಸ್ತರನ್ನು ಕೇಳಿದಾಗ ಆಕೆ ವೃತ್ತಿಪರ ಶಿಕ್ಷಣ ಪೂರೈಸಿ, ಅದೇ ವೃತ್ತಿಯ ಒಳ್ಳೆ ವರನನ್ನು ಮದುವೆಯಾಗಿ, ಎರಡು ಮಕ್ಕಳು ಮಾಡಿಕೊಂಡು, ಎಲ್ಲೋ ವಿದೇಶದಲ್ಲಿ ಸೆಟಲ್ ಆಗಿದ್ದಾಳೆ ಅಂತ ಗೆಳೆಯರು ಹೇಳಿದರು. ಒಳ್ಳೆಯದಾಯಿತು. ಮುಂದೂ ಒಳ್ಳೆಯದೇ ಆಗಲಿ.

ಮೋಹಿನಿಯ ತವರು ಮನೆ ಮಾತ್ರ ಅಲ್ಲೇ ಇದೆ. ನಾವು ಧಾರವಾಡಕ್ಕೆ ಹೋದಾಗ ಆ ರೋಡಿಗೂ ಹೋಗುತ್ತೇವೆ. ಅರ್ರೆ! ನಮ್ಮ ಏರಿಯಾ ಮಾರಾಯರೇ! ಅಲ್ಲೆಲ್ಲ ನಮ್ಮ ನೆಂಟರು, ಪರಿಚಿತರು ಎಲ್ಲ ಇದ್ದಾರೆ. ಹಾಗಾಗಿ ರೌಂಡ್ ಹೊಡೆಯುತ್ತೇವೆ. ಆದರೆ ಮೋಹಿನಿಯಾಗಲಿ ಬೇರೆ ಯಾರೇ ಆಗಲಿ ಮಾತ್ರ ಮೊದಲಿನ ರೀತಿಯಲ್ಲಿ ಬಿಳಿ ನೈಟಿ ಹಾಕಿಕೊಂಡು, ಗೇಟ್ ಮೇಲೆ  ಗದ್ದ ಊರಿಕೊಂಡು, ಗಲ್ಲವನ್ನು ವಾಕಡಾ ಮಾಡಿ ಗೇಟಿನ ಪಟ್ಟಿ ಮೇಲೆ ಮಲಗಿಸಿ, ತನಹಾ ತನಹಾ ಪ್ಯಾಸಾ ಪ್ಯಾಸಾ ಲುಕ್ ಕೊಡುತ್ತ ನಿಂತಿದ್ದು ಮಾತ್ರ ಕಂಡುಬಂದಿಲ್ಲ. ಹಳೆ ಹರಟೆಕಟ್ಟೆ ಹಾಗೇ ಇದೆ. ಹರಟೆಕಟ್ಟೆ ಮತ್ತೆ ಮೋಹಿನಿ ಮನೆ ಮಧ್ಯೆ ಇದ್ದ ಖಾಲಿ ಜಾಗ ಭರ್ತಿಯಾಗಿದೆ. ಈಗ ಹರಟೆಕಟ್ಟೆಯಿಂದ ಮೋಹಿನಿಯ ದರ್ಶನ ಸಾಧ್ಯವಿಲ್ಲ. ಹರಟೆ ಹೊಡೆಯುವ ಮಂದಿ ಕಮ್ಮಿ. ಕಟ್ಟೆ ಮೇಲೆ ಕೂತಿದ್ದರೂ ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಮಗ್ನರು. ನಾನು ಹಳೆ ನೆನಪುಗಳನ್ನು ಮೆಲುಕಾಡುತ್ತ ಒಂದೆರೆಡು ನಿಮಿಷ ಹರಟೆಕಟ್ಟೆ ಮೇಲೆ ಧ್ಯಾನ ಮಾಡಿ ಬಂದೆ. ಯಾರ ಧ್ಯಾನ? ಏ ಅದೆಲ್ಲಾ ಹೇಳಲಿಕ್ಕೆ ಆಗೋದಿಲ್ಲ.

'ಚೇಳಿನ ಮಂತ್ರ ಬಾರದವರು ಹಾವಿನ ಬುಟ್ಟಿಗೆ ಕೈಹಾಕಬಾರದು' ಅಂತ ಒಂದು ಗಾದೆ ಮಾತಿದೆ. ಭಟ್ಟಿ ಸರ್ ಅವರ ಈ ಪುರಾನಿ ಕಹಾನಿ ನೆನಪಾದಾಗ ಅದೇ ಗಾದೆ ಮಾತು ನೆನಪಿಗೆ ಬರುತ್ತದೆ. ಅಲ್ಲರೀ! ರೌಡಿಗಳ ಎನ್ಕೌಂಟರ್ ಮಾಡುವದು ಅಂದರೆ ಏನು, ಅದರಲ್ಲಿ ಏನೇನು ಖತರಾ ಇರುತ್ತವೆ, ಅವರು ವಾಪಸ್ ಗ್ಯಾಂಗ್ ಕಟ್ಟಿಕೊಂಡು ಕಟಿಯಲು ಬಂದರೆ ಏನು ಮಾಡಬೇಕು, ಅದನ್ನೆಲ್ಲಾ ಮ್ಯಾನೇಜ್ ಮಾಡಲು ಬೇಕಾಗಿರುವ ಬುದ್ಧಿ ಮಂಡೆಯಲ್ಲಿಯೂ, ದಮ್ಮು (ಬಲ) ಕುಂಡೆಯಲ್ಲಿಯೂ ಇದೆಯೋ ಇಲ್ಲವೋ ಅಂತ ಎಲ್ಲವನ್ನೂ ತಿಳಿದುಕೊಂಡು, ಇರಬೇಕಾಗಿರುವ ಜಾಗದಲ್ಲಿ ಬುದ್ಧಿ, ದಮ್ಮು ಇಲ್ಲದಿದ್ದರೆ ಮೊದಲು ಅವನ್ನೆಲ್ಲ ಬೆಳೆಸಿಕೊಂಡುಬಂದ ನಂತರ, ಇದ್ದ ಇಬ್ಬರಲ್ಲಿ ಒಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಗುರುಗಳ ಶಿಷ್ಯನಾಗಿ, ಬರೋಬ್ಬರಿ ಎನ್ಕೌಂಟರ್ ವಿದ್ಯೆ ಕಲಿತಿದ್ದರೆ ಅದು ಒಂದು ಪದ್ಧತಿ. ಅದು ಬಿಟ್ಟು ಒಮ್ಮೆಲೇ ಹತ್ತನೇ ಕ್ಲಾಸಿನ ಅದೂ ಡಿ ಕ್ಲಾಸಿನ ದೊಡ್ಡ ಪೊರ್ಕಿ ದೈತ್ಯ ಭಂಡಿವಡ್ಡರನನ್ನು ತಡವಿಕೊಳ್ಳುವದು ಅಂದರೆ ಚೇಳಿನ ಮಂತ್ರವಲ್ಲ ಹಾವರಾಣಿ ಮಂತ್ರವೂ ಗೊತ್ತಿಲ್ಲದ ಗಾವಿಲ ಸಾಧಾರಣ ಹಾವಲ್ಲ ಕಾಳಿಂಗಸರ್ಪದ ಬುಟ್ಟಿಗೆ ಕೈಹಾಕಿದಂತೆಯೇ!! ಮಹಾ ಯಬಡತನದ ಕೆಲಸ. ಕೆಲವರಿಗೆ ಬಡತನವಲ್ಲದ ಬಡತನ ಬಂದು ಬಿಡುತ್ತದೆ. ಅದೇ ಯಬಡತನ. ಅದು ಬಂದು ತಲೆಗೆ ಏರಿದಾಗ ಇಂತಹ ಐತಿಹಾಸಿಕ ಲಫಡಾ ಆಗಿಬಿಡುತ್ತವೆ.

ವಿ. ಸೂ: ಸತ್ಯ ಘಟನೆಯ ಮೇಲೆ ಆಧಾರಿತ. ಹೆಸರುಗಳನ್ನು ತಕ್ಕ ಮಟ್ಟಿಗೆ ಬದಲಾಯಿಸಿದ್ದೇನೆ. ಸಾಕಷ್ಟು ಮಸಾಲೆ ಸೇರಿಸಿದ್ದೇನೆ. ಸಾಕಷ್ಟು obfuscate ಮಾಡಲು ಪ್ರಯತ್ನಿಸಿದ್ದೇನೆ. ಅದರೂ ನಮ್ಮ ಸಮಕಾಲೀನರಿಗೆ ನೆನಪಾಗಬಹುದು, ಒಳಗಿನ ಹೂರಣ ತಿಳಿಯಬಹುದು. ತಿಳಿದರೆ ಸುಮ್ಮನೆ ಇರಿ, ಪ್ಲೀಸ್. ಯಾರಿಗೂ embarrass ಮಾಡುವ, hurt ಮಾಡುವ ಇರಾದೆ ನಮ್ಮದಲ್ಲ. ನಿಮಗೂ ಅದು ಬೇಡ. ಇದು ನಮ್ಮ ನಮ್ರಂತಿ! (ನಮ್ರ + ವಿನಂತಿ)

ದಯಾ ನಾಯಕ್ - ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್, ಮುಂಬೈ ಪೋಲೀಸ್. ಕನ್ನಡದ ಹೆಮ್ಮೆಯ ಕಂದ!

* ಚಿತ್ರಗಳನ್ನು ಅಂತರ್ಜಾಲದಿಂದ ಆರಿಸಿದ್ದು. ಅವುಗಳ ಕಾಪಿ ರೈಟ್ಸ್ ಅವುಗಳ ಮಾಲೀಕರದ್ದು.

7 comments:

sunaath said...

ಯಪ್ಪಾ ಮಹೇಶಾ! ಈ ಲೇಖನದಾಗಿನ ೩೩೦(+ or - 0.1%)ಸಾಲುಗಳು, ಪ್ರತಿಯೊಂದೂ ರಸಘಟ್ಟಿ ಕಾಣಾ! ಪ್ರತಿ ಸಾಲಿಗೂ ನಕ್ಕು ನಕ್ಕು ಒದ್ದಾಡಿದೆ. ಧಾರವಾಡೀ ಪದಗಳ ಪ್ರಯೋಗ, ವಿಶಿಷ್ಟವಾದ ಮಹೇಶ-ಶೈಲಿ ನನ್ನನ್ನು ಎನ್‍ಕೌಂಟರ ಮಾಡಿ ಒಗದವು. ನನ್ನ ನೆನಪಿನಲ್ಲಿ ಉಳಿಯುವಂತಹ ಈ ಲೇಖನಕ್ಕಾಗಿ ಧನ್ಯವಾದಗಳು ಹಾಗು ಅಭಿನಂದನೆಗಳು.

Mahesh Hegade said...

ಧನ್ಯವಾದ ಸುನಾಥ್ ಸರ್! ನಿಮಗೆ ಇಷ್ಟೊಂದು ಹಿಡಿಸಿದ್ದು ನಮಗೆ ಸಂತೋಷ! :)

Vimarshak Jaaldimmi said...


Fantastic!

Bandivaddar (wonderful name!!) might have gone on to become a leader of handi-catching experts, and a motivational speaker for bacon producers assoc!!!

Kushi said...

Nice one ....enjoyed reading

Mahesh Hegade said...

Thank you very much, Kushi.

ವಿ.ರಾ.ಹೆ. said...

mast mast mast... enjoyed reading...

KLPD .. ha ha...

Mahesh Hegade said...

Thanks Vikas