ವಿವಾಹಿತರಿಗೆ ದೆವ್ವದ ಸಿನಿಮಾ ನೋಡಿದರೆ ಅಷ್ಟೇನೂ ಭಯವಾಗುವುದಿಲ್ಲ...!
- ವಕ್ರೋಕ್ತಿ
ಆದರೆ ಕೆಲವು ವಿವಾಹಿತರ ವೈವಾಹಿಕ ಬದುಕಿನ ರಿಯಲ್ ಸಿನಿಮಾ ನೋಡಿಬಿಟ್ಟರೆ ದೆವ್ವಕ್ಕೂ ಭಯವಾಗಿ ಬಿಡುವ ಚಾನ್ಸ್ ಮಾತ್ರ ಇದೆ. ಅಬಬಬಾ!! ಈಗಿತ್ತಲಾಗೆ ಎಂತೆಂತಾ ಕೇಸುಗಳು ಮಾರಾಯರೇ! ಒಂದೊಂದರ ಮೇಲೆ ಒಂದಲ್ಲ ನಾಲ್ಕು ಹಾರರ್ ಮೂವಿ ಮಾಡಬಹುದು.
ಬದುಕಿನಲ್ಲಿ ಅಷ್ಟೆಲ್ಲಾ ಹಾರರ್ ಮಾಡಿಕೊಂಡ ನಂತರವೂ ಎಲ್ಲರ 'ದಿ ಎಂಡ್' ಮಾತ್ರ ಫುಲ್ predictable. ಅದೇ ಸೋಡಾ ಚೀಟಿ. ಅದೇ ನಾಮ ಹಾಕಿದ / ಹಾಕಿದಳು ಅನ್ನುವ ದೂರು, ಬೊಬ್ಬೆ. ಮಕ್ಕಳ ಕಸ್ಟಡಿಗಾಗಿ ಯುದ್ಧ. ಇಬ್ಬರೂ ಕೂಡಿ ಮಾಡಿದ ಒಂದು ತುಂಡು ಆಸ್ತಿಗೆ, ಚಿಲ್ಲರೆ ರೊಕ್ಕಕ್ಕಾಗಿ ಬಡಿದಾಟ. ನಂತರ ನೋಡಿದರೆ ಅದರ ದುಪ್ಪಟ್ಟು ಸಾಲ. ಬಡಿದಾಡಲು ವಕೀಲರಿಗೆ ಫೀಸ್ ಕೊಡಬೇಕಲ್ಲ!? ಅಂತ್ಯದಲ್ಲಿ ಡೈವೋರ್ಸ್ ಮಾಡಿಕೊಂಡು ಫುಲ್ ಡ್ರೈವಾಶ್. ಆ ಭಾಗ್ಯಕ್ಕೆ ಅಷ್ಟೊಂದು ಗುದ್ದಾಡಬೇಕೇ? ಎಲ್ಲರಿಗೂ, ಅದರಲ್ಲೂ ತಂದೆತಾಯಿಗೆ, ಆ ಪರಿ ನೋವು ಕೊಡಬೇಕೇ? ತಲೆ ಹನ್ನೆರೆಡಾಣೆ ಮಾಡಿಕೊಳ್ಳಬೇಕೇ?
ಶಿವಾ ಶಿವಾ ಎಂತಾ ಮಂದಿಗೆ ಬೇಕಾದರೂ ಕೌನ್ಸೆಲಿಂಗ್ ಮಾಡಬಹುದು. ಈ ವೈವಾಹಿಕ ಜೀವನದ ಹಾರರ್ ಮೂವಿ ತೋರಿಸಿ ತಲೆತಿನ್ನುವವರನ್ನು ಮಾತ್ರ ಸಹಿಸಿಕೊಳ್ಳೋದು ಕಷ್ಟ ಸ್ವಾಮಿ. ಅಂತವರಿಗೆ ಕೌನ್ಸೆಲಿಂಗ್ ಮಾಡಿ ಕೊನೆಗೆ ಕೆಟ್ಟವರಾಗುವವರು ನಾವೇ. ಯಾಕೆಂದರೆ ಅವರ ವೈವಾಹಿಕ ಹಾರರ್ ಮೂವಿಗೆ ಬೇರೆ ತರಹದ ಎಂಡಿಂಗ್ ಬರೆಯಲು ಸಾಧ್ಯವೇ ಇರುವದಿಲ್ಲ. ನಾವು ಕೌನ್ಸೆಲಿಂಗ್ ಮಾಡುವವರು ಏನು ಬ್ರಹ್ಮ ದೇವರೇ ಇವರ ಹಣೆಬರಹ ಬದಲಾಯಿಸಲಿಕ್ಕೆ??? ಹಾಂ???
ಇಂತವರದು ಅಪ್ಪಟ ಹಾರರ್ ಮೂವಿ. ಅದರ ಎಂಡಿಂಗ್ ಹ್ಯಾಪಿ ಹ್ಯಾಪಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅಷ್ಟೇ least painful ಅಂದರೆ ಕಮ್ಮಿ ತೊಂದರೆಯಲ್ಲಿ ಇವರ ಕೇಸ್ ನಿಪಟಾಯಿಸೋಣ ಅಂದ್ರೆ ನಮಗೇ ಉಲ್ಟಾ ಡೈಲಾಗ್ ಬಾಜಿ, 'ನಿನಗೆ ನಾವು ಹ್ಯಾಪಿ ಆಗಿ ಇರೋದು ಬೇಕಾಗಿಲ್ಲ!' ಅದೇನೋ ಅಂತಾರಲ್ಲ ಬಿಟ್ಟಿಯಲ್ಲಿ ಸಹಾಯ ಮಾಡಿದರೆ ಉದ್ರಿಯಲ್ಲಿ ತೀರಿಸಿದರು ಅಂತ. ಹಾಗಾಯಿತು ಕಥೆ. ಹೀಗಾಗಿ ಅಂತವರಿಗೆ ಶಿವಾಯ ನಮಃ ಅಂತ ದೊಡ್ಡ ನಮಸ್ಕಾರ ಹಾಕಿಬಿಟ್ಟಿದ್ದೇವೆ. ತಮ್ಮ ಬಾಳನ್ನು ಭಯಾನಕ ಹಾರರ್ ಮೂವಿ ಮಾಡಿಕೊಂಡಿದ್ದ ಮೂರು ದಂಪತಿಗಳ ಡೈವೋರ್ಸ್ ಮಾಡಿಸಿದ್ದೇವೆ. ಅವರ ಪೈಕಿ ಇಬ್ಬರು ಮಾತು ಬಿಟ್ಟಿದ್ದಾರೆ. ಮಾತು ಬಿಟ್ಟವರು ಇಬ್ಬರ ಮಾಜಿ ಹೆಂಡತಿಯರು. ಒಂದು ದಂಪತಿ ಸಂಪರ್ಕದಲ್ಲಿದ್ದಾರೆ. ಈ ಮಾಜಿ ಗಂಡ ಹೆಂಡತಿ ಮಾತ್ರ ನಮಗೆ ಚಿರಋಣಿಯಾಗಿದ್ದಾರೆ. ಯಾಕೆಂದರೆ ಅವರಿಗೆ ತಲೆ, ಅದರ ಒಳಗೆ ಮೆದುಳು ಎರಡೂ ಇವೆ. ಅದೇ ಸಂತೋಷ. ಗಂಡ ಒಂದು ತರಹದ ಸನ್ಯಾಸ ಸ್ವೀಕರಿಸಿ ಭಾರತದಲ್ಲಿ ಸೆಟಲ್ ಆಗಿದ್ದಾರೆ. ಪತ್ನಿ ಇಲ್ಲೇ ಅಮೇರಿಕಾದಲ್ಲೇ ಒಳ್ಳೆಯ ಬಾಳು ಕಟ್ಟಿಕೊಂಡು ಆರಾಮ್ ಇದ್ದಾರೆ.
ಅಂತಹ ಹಾರರ್ ಕೇಸುಗಳಿಗೆ ಹೇಳುವದು ಇಷ್ಟೇ....ಹೊಂದಾಣಿಕೆ ಮಾಡಿಕೊಂಡು ಇರುತ್ತೀರಿ ಅಂತಾದರೆ ಇರಿ. irreconcilable differences ಅಂತ ಕಾರಣ ಕೊಟ್ಟುಬಿಡುವದು ಈಗಿತ್ತಲಾಗೆ ಫ್ಯಾಷನ್ ಆಗಿಹೋಗಿದೆ. ನಿಜವಾಗಿ ಹಾಗೆನ್ನಿಸಿಬಿಟ್ಟರೆ ತಾಪಡ್ತೋಪ್ ಸೋಡಾ ಕುಡಿದುಬಿಡಿ....ಅಲ್ಲಲ್ಲ ಸೋಡಾ ಚೀಟಿ ಕೊಟ್ಟುಬಿಡಿ. ಅದು ಬಿಟ್ಟು ಏನು ರಗಳೆ, ಗದ್ದಲ, ರಾಮಾ ರಂಪ. ನಿಮ್ಮ ನಿಮ್ಮ ಅಪ್ಪ ಅಮ್ಮನ ಮುಖ ನೋಡಿಯಾದರೂ ಸ್ವಲ್ಪ ಬದಲಾಗಿ. ಮೊನ್ನೆ ಒಬ್ಬ ಆಪ್ತ ಹಿರಿಯರು ಭಾಳ ಫೀಲ್ ಮಾಡಿಕೊಂಡರು. ಅದೆಷ್ಟೋ ಲಕ್ಷ ಲಕ್ಷ ಖರ್ಚು ಮಾಡಿ ಮಗನ / ಮಗಳ ಮದುವೆ ಮಾಡಿದ್ದರಂತೆ. ಮದುವೆಯಾಗಿ ಒಂದು ವರ್ಷವಾಗಿಲ್ಲ. ಆಗಲೇ ಅದು ಢಮಾರ್. ಲಕ್ಷ್ಮಿದೇವಿಯ ಹೆಸರಿನ ಹುಡುಗಿ ಲಕ್ಷ್ಮಿ ಪಟಾಕಿ, ಆನೆ ಪಟಾಕಿ ಎಲ್ಲ ಹೊಡೆದು ಹೊಡೆದು ಹಾಕಿಬಿಟ್ಟಿದ್ದಾಳೆ. ಹಾಗಂತ ಹುಡುಗನ ಕಡೆಯವರ ಪಿರಿಪಿರಿ. ಹುಡುಗ ರಾಕೆಟ್ ಹಾರಿಸಿದನೋ, ಭೂಚಕ್ರ ಹಚ್ಚಿದನೋ, ಅಥವಾ ಥಂಡಿ ಹಿಡಿದ ಪಟಾಕಿ ಹಾರುವದಿಲ್ಲ ನೋಡಿ ಹಾಗೆ ಟಿಸಿಮದ್ದಾಗಿ ಹೋದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆ ಮಟಾಶ್! ಕ್ಲೀನ್ ಡ್ರೈಕ್ಲೀನ್ ಡೈವೋರ್ಸ್.
ಕಾಲ ಎಲ್ಲಿಗೆ ಬಂದು ಮುಟ್ಟಿದೆ ಅಂದರೆ ಹೊಸ ಕಾರುಗಳಿಗೆ ಮೂರು ವರ್ಷ / ೩೬, ೦೦೦ ಮೈಲಿ ವಾರಂಟಿ ಇರುವ ಹಾಗೆ ಮದುವೆಗಳಿಗೂ ಕಂಡೀಶನ್ ಹಾಕುವ ಪರಿಸ್ಥಿತಿ ಬಂದಿದೆ. 'ನೀವು ಗಂಡ ಹೆಂಡತಿ ಮೂರು ವರ್ಷ ಸಂಸಾರ ಮಾಡಿ ತೋರಿಸಿ. ನಂತರ ದೊಡ್ಡ ಪ್ರಮಾಣದ ಸಮಾರಂಭ, ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ರಿಸೆಪ್ಶನ್ ಎಲ್ಲ ಮಾಡೋಣ. ಬೇಕಾದರೆ ಈಗಿನಕಿಂತ ಅದ್ದೂರಿಯಾಗಿಯೇ ಮಾಡೋಣ. ಮೊದಲು ನಮಗೆ ಮೂರು / ಐದು ವರ್ಷದ ವಾರಂಟಿ ಕೊಡಿ.'
ಏನ್ರೀ ಇದು ಅಸಹ್ಯ!? ಬೆಡ್ರೂಮಿನ ಕಥೆಗಳನ್ನು ಬೋರ್ಡ್ ರೂಮಿಗೆ ತರುತ್ತಾರೆ? ಇವರ ಲೈಫೇನು ಪ್ರೈವೇಟ್ ಲಿಮಿಟೆಡ್ ಕಂಪನಿಯಾ ಅಥವಾ ಪಬ್ಲಿಕ್ ಲಿಮಿಟೆಡ್ ಕಂಪನಿಯಾ????
ಇನ್ನೂ ಕೆಲವರಿದ್ದಾರೆ. ಗಂಡ ಹೆಂಡತಿ ಇಬ್ಬರೇ ಇರಬೇಕು ಅಂತ ಗಂಡನ ಅಮ್ಮ ಅಪ್ಪನನ್ನು ಮನೆ ಬಿಟ್ಟು ಓಡಿಸಿದವರು. ಅವರು ಇವರಿಗಿಂತ ಕೀಳು. ಅಂತಹ ಬಿಕನಾಶಿ ಮಹಿಳೆಯರಿಗೆ ದೂಸರಾ ಮಾತಿಲ್ಲದೇ ಸೋಡಾ ಚೀಟಿ ಕೊಟ್ಟವರು ನಮ್ಮ ಗೆಳೆಯರಲ್ಲೇ ಇದ್ದಾರೆ. ಹೆಂಡತಿ ಹಾಳಾಗಿ ಹೋಗಲಿ ಅಂತ ಅಪ್ಪ ಅಮ್ಮನ ಜೊತೆ ಇದ್ದಾರೆ. ಅವರಿಗೆ ಒಂದು ದೊಡ್ಡ ಶಬ್ಬಾಸ್! ಎಲ್ಲೋ ಅಪರೂಪಕ್ಕೆ ಒಬ್ಬರು ಬೀವಿ ಕಾ ಗುಲಾಂ ಆಗಿ ಅನಧೀಕೃತ ಮನೆಯಾಳತನಕ್ಕೆ ಮಾವನ ಮನೆಗೇ ಹೋಗಿಬಿಟ್ಟಿದ್ದಾರೆ. ಜೋರು ಕಾ ಗುಲಾಂ! ಅವರದು ಮನೆಯಾಳತನವೋ ಮನೆಹಾಳತನವೋ! ಅಂತವರ ಶ್ರಾದ್ಧವನ್ನು ಮನೆಯವರೇ ಮಾಡಿದ್ದಾರೆ. ನೊಂದುಕೊಂಡ ಅಮ್ಮ ಅಪ್ಪನೇ ಎಳ್ಳು ನೀರು ಬಿಟ್ಟು ಆ ಮಗ ಸತ್ತ ಅಂತ ಅಂದುಕೊಂಡು ಇನ್ನೊಬ್ಬ ಮಗನ ಜೊತೆ ಇದ್ದಾರೆ. ಅದು ಅವರಿಗೂ ಗೊತ್ತಿದೆ. ಜೀವಂತವಿದ್ದಾಗಲೇ ತಿಥಿ ಶ್ರಾದ್ಧ ಮಾಡಿಸಿಕೊಳ್ಳುವವರು ಸನ್ಯಾಸಿಗಳು. ಇವರೋ ಸಂಸಾರಿಗಳು! ಆಹಾ ಏನು ಭಾಗ್ಯವಯ್ಯಾ! ಹಿರಿಯರನ್ನು ಹಾಗೆ ಕಣ್ಣೀರು ಹಾಕಿಸಿದ ಈ ಮಂದಿ ಉದ್ಧಾರ ಆಗ್ತಾರೇನ್ರೀ???? ಮೈ ಫುಟ್.
ಬರೆದಿದ್ದು ತಪ್ಪೆನ್ನಿಸಿದರೆ ಕ್ಷಮಿಸಿಬಿಡಿ. ಓದಿದ ಈ ಒಂದು ವಕ್ರೋಕ್ತಿ ಏನೇನೋ ಬರೆಯಿಸಿಬಿಟ್ಟಿತು. ಯಾರನ್ನೂ ಟಾರ್ಗೆಟ್ ಮಾಡಿಕೊಂಡು ಬರೆದಿದ್ದಲ್ಲ. ಆದರೆ ಕೆಲವು couple ಗಳು ಬುದ್ಧಿಯಿಲ್ಲದವರಂತೆ ಹುಚ್ಚಾಟ ಆಡುವದನ್ನು ಮಾತ್ರ ಸಹಿಸಲು ಸಾಧ್ಯವಿಲ್ಲ. ಅದೂ ಮೊನ್ಮೊನ್ನೆ ಆಪ್ತ ಹಿರಿಯ ಜೀವಗಳು ಇಂತವರ ವೈವಾಹಿಕ ಲಫಡಾ ಬಾಜಿಯ ವಿವರಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದಾಗ ಆಕ್ರೋಶ ಉಕ್ಕಿ ಬಂತು. ಹಿಂದೆ ಇಂತಹದೇ ಹಾರರ್ ಮೂವಿ ಮಂದಿಗೆ ಸಹಾಯ ಮಾಡಲು ಹೋಗಿ ನಾವೇ ಕೆಟ್ಟವರಾಗಿ unjustified ನೋವು ಅನುಭವಿಸಿದ್ದು ಕರಪರಾ ಅಂತ ಕೆರೆಕೆರೆದು ನೆನಪಿಗೆ ಬಂತು.
2 comments:
‘ತಾಳಿ ಕಟ್ಟಿದವನು ಹಾಗು ಕಟ್ಟಿಸಿಕೊಂಡವಳು ತಾಳ್ಮೆಯಿಂದ ಬಾಳಿದರೆ, ವೈವಾಹಿಕ ಜೀವನ ಸ್ವರ್ಗವಾದೀತು!’
ಸುನಾಥ್ ಸರ್, ಇಂತಾ ಬುದ್ಧಿಮಾತು ಹೇಳುವ ಹಿರಿಯರೂ ಕಮ್ಮಿಯಾಗಿ, ಮಕ್ಕಳ ಮನ್ಮಾನಿಗಳನ್ನು, ಒಬ್ಬರ ಬಗ್ಗೆ ಇನ್ನೊಬ್ಬರು ಮಾಡಿದ complaint ಗಳನ್ನೇ ಸತ್ಯ ಅಂತ ನಂಬಿ, ತಾವೇ ಮದುವೆ ಮಾಡಿದ ಮಕ್ಕಳನ್ನು ಡೈವೋರ್ಸ್ ತೆಗೆದುಕೊಳ್ಳಿ ಅಂತ ಪ್ರಚೋದಿಸುವ ತಂದೆ ತಾಯಿಗಳೂ ತಯಾರಾಗಿ ಬಿಡುತ್ತಿದ್ದಾರೆ. ಅದು ದುರ್ದೈವ!
Post a Comment