Friday, June 22, 2012

ವಿಲಾಯತಿ ಸಂತನೂ, ದೇಸಿ Love Day ಯೂ


ಕರೀಂ ಮತ್ತ ಸಿಕ್ಕಿದ್ದ.

ಈ ಸರೆ ಏನೋ ಕೆಂಪ ಗುಲಾಬಿ ಹೂವಿನ ಗೊಂಚಲ ಹಿಡಕೊಂಡ ಹೊಂಟಿದ್ದ. ನಿಲ್ಲಿಸಿದೆ.

ಸಾಹೇಬರ....ಏನು  ಇವತ್ತು ಕೈಯಲ್ಲಿ  ಕೆಂಪ ಗುಲಾಬಿ....ಏನು ವಿಶೇಷ?............. ಅಂದೆ.

ಸಾಬ್ ಇಂದು ಪ್ಯಾರ್ ಕಾ ದಿನ್ ಸಾಬ್....ಇವತ್ತು ಎಲ್ಲರಿಗೂ ಕೆಂಪ ಗುಲಾಬಿ ಕೊಡೋದು....ಅಂತ ಫುಲ್ excite ಆಗಿ ಹೇಳಿದ ಕರೀಂ.

ಏನೋ ಹಾಂಗ ಅಂದ್ರ? ಪ್ಯಾರ್ ಕಾ ದಿನ್ ಅಂತ....ಸರೀತ್ನಾಗಿ ಹೇಳಪಾ....ಸ್ವಲ್ಪ ತಿಳಿಯೋಹಾಂಗ...ಅಂದೆ.

ಸಾಬ್....ನೋಡಿ...ಅದಕ್ಕೆ ಏನೋ ಇಂಗ್ಲಿಷ್ ಹೆಸರು ಅದೆ ....ನಿಮಗೆ ಗೊತ್ತು ನಂದು ಇಂಗ್ಲಿಷ್ ಭಾಳ ತುಟ್ಟಿ ಅಂತ....ಅದಕ್ಕೆ ಯಾರಿಗೋ ಕೇಳಿದಕ್ಕೆ ಹೇಳಿದ್ರು ಇವತ್ತು 'ಪ್ಯಾರ್ ಕಾ ದಿನ್' ಹಬ್ಬ ಇದೆ ....ಎಲ್ಲರಿಗೂ ಕೆಂಪ ಗುಲಾಬಿ ಕೊಡಬೇಕು ಅಂತ....ಅಂದ ಕರೀಂ.

ಏನ ಇರಬಹುದು 'ಪ್ಯಾರ್ ಕಾ ದಿನ್' ?....ನನ್ನ ಬಡ್ಡ ತಲಿಗೆ ಏನೂ ಹೊಳಿಲಿಲ್ಲ.

ಸಾಬ್...ಈ ಹಬ್ಬಕ್ಕೆ ಇಂಗ್ಲಿಷ್ ನ್ಯಾಗೆ ಏನು ಅಂತಾರೆ ಸಾಬ್....? ಅಂತ ಕೇಳಿದ ಕರೀಂ.

ಅವನಿಗೂ ಇಂಗ್ಲಿಷ್ ಕಲಿಬೇಕು ಅಂತ ಆಸೆ.

ನೀವು ಬರೆ  "ಪ್ಯಾರ್ ಕಾ ದಿನ" ಅಂತ ಹೇಳಿಕೊತ್ತಾ  ಬಂದೀರಿ....ಈ ಹೆಸರಿಲೆ ಯಾವದೂ ಇಂಗ್ಲಿಷ್ ಹಬ್ಬ ಇಲ್ಲರೀಪಾ......ಅಂದೆ.

ಇಲ್ಲಾ ಸಾಬ್ ನಮ್ಮ ಬೇಗಂ ಹೇಳ್ಯಾರೆ ....ಹಬ್ಬ ಅದೆ...ನಂದು ಎಲ್ಲ ಹಳೆ ಹಳೆ ಆಶಿಕ್ ಗಳನ್ನ ಭೆಟ್ಟಿ ಮಾಡಿ ಬರ್ತೀನಿ ಅಂತ ಹೇಳಿ ಹೋಗಿ ಬಿಟ್ಟಿದ್ದಾಳೆ ಸಾಬ್.....ಅಂತ - ಆಕಳ ನಾ ಸಾಕೇನಿ, ಹಾಲ್ ಇನ್ನ್ಯಾರೋ ಕುಡಿತಾರ - ಅನ್ನೋ  ವಿಷಾದದ ಫೀಲಿಂಗ್ ನಲ್ಲಿ ಹೇಳಿಕೊಂಡ ಕರೀಂ.

ಸಾಬ್ರಾ...ನೋಡ್ರಿ....ಪ್ಯಾರ್ ಕಾ ದಿನ...ಇದನ್ನ ಇಂಗ್ಲಿಷ್ ನ್ಯಾಗ ಹೇಳ್ಬೇಕು ಅಂದ್ರ....Love Day  ಅಂತ ಆಗ್ತದ ನೋಡ್ರಿ.....ಅಂದೆ

ಕ್ಯಾ ಸಾಬ್? ಸಚ್  ಮೇ Love Day ಕ್ಯಾ?....ತೋಬಾ ತೋಬಾ....ಎಂತಾ ಹೊಲಸು ಹೆಸರಿನ ಹಬ್ಬ ಸಾಬ್.....ಅಂದ ಕರೀಮ್ ಮಾರಿ ಕಿವಿಚಿಕೋತ್ತ .

ಕ್ಯಾ ಸಾಬ್... Love Day ನಾಮ್ ದು ಹಬ್ಬ ಕೆ ಲಿಯೇ ನಂದು ಕಡೆ ಕೆಂಪು ಗುಲಾಬಿ ಖರೀದಿ ಮಾಡ್ಸಿದಳು  ಕ್ಯಾ ನಮ್ಮ ಹಾಪ್ ಬೇಗಂ ? ಕ್ಯಾ ಸಾಬ್.....? ಬಹುತ್ ನಾ ಇನ್ಸಾಫಿ ಹೈ ಸಾಬ್.....ಫುಲ್ ಧೋಕಾ ಸಾಬ್.....ಅಂದು ತಲಿ ಹಿಡಕೊಂಡ ಕೂತ ಕರೀಂ.

ಯಾಕೋ upset ಆದಿ? Love Day ಹಬ್ಬ ಇದ್ದರ ಚೊಲೋ ಅಲ್ಲೇನು?....ಎಟ್ಲೀಸ್ಟ್  ಅವತ್ತರ ಎಲ್ಲರೂ ಪ್ಯಾರ್ ಪ್ಯಾರ್ ಸೆ ಇರಬಹುದು ನೋಡು.....ಏನಂತಿ ಕರೀಂ?......ಅಂದೆ

ಕ್ಯಾ ಸಾಬ್ Love Day ಅಂತ ಹಬ್ಬದ ಹೆಸರು ಇಟ್ಟಗೊಂಡು ಹ್ಯಾಂಗೆ ಸಾಬ್ ಪ್ಯಾರ್ ಮೊಹಬ್ಬತ್ ಫೀಲಿಂಗ್ ತಂದುಕೊಳ್ಳುದು......ಸಾಧ್ಯಾನೇ ಇಲ್ಲ ಸಾಬ್.....ಅಂದ ಕರೀಂ.

ನಕೋ ಸಾಬ್....ನಮಗೆ ಈ Love Day ಹಬ್ಬ ಬಿಲಕುಲ್ ಬ್ಯಾಡ....ಅದೆಲ್ಲ ಆ ಅಂಗರೆಜೀ ಮಂದೀಗೆ ಸರಿ ಸಾಬ್....ಅವರಿಗೆ  ರೀತಿ ಬ್ಯಾಡಾ, ನೀತಿ  ಬ್ಯಾಡಾ.....ಕಂಠದ ಮಟ ತಿಂದೂ, ಕರಳು ತುಂಬಾ ಕುಡಿದೂ, ಹರ್ರೋಜ್ Love Day ಹಬ್ಬ ಮಾಡೋರು ಸಾಬ್ ಆ ಗೋರಾ ಮಂದಿ.....ಅಂತ ಹಬ್ಬ ನಮಗೆ ಯಾಕೆ???.......ಅಂದ ಕರೀಂ.

ತಡಿ ಸ್ವಲ್ಪ...ಇನ್ನೂ ಸ್ವಲ್ಪ ವಿಚಾರ ಮಾಡೋಣ ....ಅಂತ ತಲಿ ಕೆರ್ಕೊಂಡೆ.

ಕರೀಮ...ನಿನ್ನ ಹೆಂಡ್ತಿ ಬರೇ Love Day ಹಬ್ಬ ಅಂತ ಹೇಳಿದಳೋ ಅಥವಾ ಏನರ ಜಾಸ್ತಿ ಮಾಹಿತಿ ಕೊಟ್ಟಳು ಏನು?.....ಅಂತ ಕೇಳಿದೆ.

ಹಾಂ ಸಾಬ್....ಅದು ಯಾರೋ ವಿಲಾಯತಿ ಪಕೀರ್ ಅಂತೆ....ಅವನೂ ಭಾಳ ಪ್ಯಾರ್ ಮೊಹಬ್ಬತ್ ಮಾಡಿ ಮಾಡಿ ಅಂತ ಎಲ್ಲರಿಗೂ ಹೇಳಿದಾನೆ ಅಂತೆ...ಅವನ ಹೆಸರಲ್ಲಿ ಈ ಹಬ್ಬ ಸಾಬ್...ಅಂದ ಕರೀಂ.

ಏಕ್ದಂ ಏನೋ ಫ್ಲಾಶ್ ಆದವರಾಂಗ ಕರೀಂ ಹೇಳಿದ.

ಸಾಬ್...ಆ ಫಕೀರ ಹೆಸರೂ ಕೂಡ ಏನೋ ವಿಲಾಯತಿ ಅಂತ ಇದೆ...ಹಾಂ...ಈಗ ಸ್ವಲ್ಪ ಸ್ವಲ್ಪ ನೆನಪ ಆತು ನೋಡಿ....ಏನೋ ಸಂತ ವಿಲಾಯತೀನ್ ಅಂತೆ....ವಿಲಾಯತಿ ಸಂತಾ ನೋಡಿ....ಅದಕ್ಕೆ ಸಂತ ವಿಲಾಯತೀನ್ ಅಂತ ಹೆಸರ ಇಟ್ಟಿರಬೇಕು.....ಅಂತ ಇಲ್ಲದ ಜನರಲ್ ನಾಲೆಜ್ ಉಪಯೋಗಿಸಿ ಗೆಸ್ ಮಾಡಿದ ಕರೀಂ.

ಹಾಂಗ ಹೇಳಪಾ ....ಇವತ್ತು Saint Valentine's Day ಅನ್ನೋ ಹಬ್ಬ ಮಾರಾಯ....ಇದು ಖರೆ ಹಬ್ಬ ಹೌದು...ನೀನು ಕೂಡ ಇದನ್ನ ಆಚರಿಸಿ ಮಜ ಮಾಡು....ಕೆಂಪ ಗುಲಾಬಿ ಬೇಕು ಇದಕ್ಕೆ....ಅಂದೆ .

ಆಚರಿಸಿ ಅಂದ್ರೆ ಸಾಬ್ ಕ್ಯಾ ಮತಲಬ್ ?....ಅಂದ್ರೆ ನಾನು ಈಗ ನಿಮ್ಮಾ ಆಚಾರ್ರು ಸಾಬ್ ಗೆ ಕರಕೊಂಡ ಬಂದಿ ಈ Love Day ಹಬ್ಬಾ ಮಾಡಬೇಕು ಕ್ಯಾ?....ಅಂತ ತಲಿ ಕೆಡಿಸ್ಕೊಂಡ ಕರೀಂ.

ಇಲ್ಲಪಾ ...ಈ ಹಬ್ಬ ಮಾಡ್ಲಿಕ್ಕೆ ಆಚಾರ್ರು ಬ್ಯಾಡ....ಭಟ್ಟರು ಬ್ಯಾಡ....ನಿಮ್ಮ ಮೌಲವಿನೂ  ಬ್ಯಾಡ....ನಿನ್ನ ಬೇಗಂ ಇದ್ದರ ಸಾಕು..... ಅಂದೆ.

ಪಾಪ ಎಷ್ಟು ಮುಗ್ಧ ನಮ್ಮ ಕರೀಂ ಅನ್ನಿಸ್ತು.

ಇಲ್ಲಾ ಸಾಬ್....ಯಾಕೋ ಈ Love Day ಹಬ್ಬ ಮಾಡೋ ಮನಸ್ಸು ಬರ್ತಾ ಇಲ್ಲಾ....ಇದು ಖರೇನೆ  ಪ್ಯಾರ್ ಕಾ ಹಬ್ಬ ಇದ್ದರೂ ನಮ್ಮ ಬೇಗಂ ನಂದು ಬಿಟ್ಟಿ ಪುರಾನಾ ಆಶಿಕ್ ಹಿಂದೆ ಹೋದಳು ಅಂದ್ರೆ ಈ ಹಬ್ಬ ನಮಗೆ ಏನೂ ಮಾಯ್ನಾ ಇಲ್ಲ ಸಾಬ್.....ಅಂದ ಕರೀಂ.

ಇವನದು ಇನ್ನು ನಾಕನೇ ಮದ್ವಿ ಇನ್ನ ಲಗೂನ ಆಗೋದು ಅದ  ಅನ್ನೋ ಫೀಲಿಂಗ್ ನನಗ ಬಂತು.

ಬ್ಯಾಡಂದ್ರ ಬಿಡಪಾ.....ಕೆಂಪ ಗುಲಾಬಿ ಹುವ್ವಾ ಇಲ್ಲೇ ಕೊಟ್ಟ ಹೋಗು....ನಾ ದೇವರಿಗೆ ಏರಸತೇನಿ .....ಅಂದೆ.

ಅದು ಬೆಷ್ಟ ನೋಡಿ ಸಾಬ್.....Love Day ಹಬ್ಬಕಿಂತ  ಖುದಾಗೆ ಹುವ್ವಾ ಕೊಡೋದು ಚೊಲೋ ಸಾಬ್..... ಅಂದ ಕರೀಂ.

ಸಾಬ್ ಏನು ಇದು ಈ ಇಂಗ್ಲಿಷ್ ಮಂದಿ ಪ್ಯಾರ್ ಕಾ  ದಿನ್, ಪ್ಯಾರ್ ಕಾ  ಬರಸ್, ಪ್ಯಾರ್ ಕಾ  ಮಹಿನ ಅಂತ ಹೇಳ್ತಾರೆ ಸಾಬ್.....? ನಮ್ದೂಕೆ ನೋಡಿ ಹರ್  ದಿನ್ ಪ್ಯಾರ್ ಕಾ  ದಿನ ಅಂತ ಜೀವನ ಮಾಡ್ತೇವಿ .....ಭಾರಿ ಹೆಮ್ಮೆಯಿಂದ ಹೇಳಿದ ಕರೀಂ.

ಸಾಬ್ ನಾವು "ಹರ್  ದಿನ್ ಪ್ಯಾರ ಕಾ ದಿನ್" ಅಂತ ಹಬ್ಬ ಶುರು ಮಾಡಿದ್ರೆ ಹ್ಯಾಗೆ ಸಾಬ್? ಅದನ್ನ ಇಂಗ್ಲಿಷ್ ನ್ಯಾಗೆ ಹೇಳಿ ಬಿಡಿ ಸಾಬ್.  ನಾ ಎಲ್ಲರಿಗೂ ಹೇಳಿ ಬಂದು ಬಿಡತೇನಿ ಸಾಬ್.....ಅರ್ಜೆಂಟ್ ಸಾಬ್....ಆ ಗೋರಾ ಮಂದಿಗೆ ತೋರ್ಸೋಣ ಸಾಬ್.....ನಿಮ್ಮದು ಒಂದು ದಿನ Love Day ಆದ್ರೆ ನಮ್ಮದು ನೋಡಿ ಹರ್  ದಿನ್ ಪ್ಯಾರ್ ಕಾ ದಿನ್....ಅಂದ ಕರೀಂ.

ಭಾರಿ ಉತ್ಸಾಹ ಕರೀಮನಿಗೆ.

ಹರ್  ದಿನ್ ಪ್ಯಾರ್  ಕಾ ದಿನ್ ಇಂಗ್ಲಿಷ್ ನಲ್ಲಿ ಹೇಳಿ ಕೊಡಿ ಸಾಬ್.....ಪ್ಲೀಸ್.? - ಅಂದ ಕರೀಂ.

ಸಾಬ್ರಾ....ಇದನ್ನ ಇಂಗ್ಲಿಶ್ನ್ಯಾಗ ಹೇಳಿದ್ರಾ ಏನ್ ಆಗ್ತದ ಅಂದ್ರ....ಹೇಳಲೋ ಬ್ಯಾಡೋ ಅಂತ ವಿಚಾರ ಮಾಡ್ಲಿಕತ್ತೇನಿ. - ಅಂತ ಅಂದೆ.

ಹೇಳಿ ಸಾಬ್....ಏನೇ ಇರಲಿ....ಹೇಳಿಬಿಡಿ....ಅಂತ ಫೋರ್ಸ ಮಾಡಿದ ಕರೀಂ 

ನೋಡ್ರೀ ಸಾಬರ.. ...Everyday is a Love Day....ಅಂತ ಆಗ್ತದ. ನೆಡಿತದ  ಏನು ?

ತೋಬಾ ....ತೋಬಾ....ಮತ್ತೆ Love Day ಹ್ಯಾಂಗೆ ಬಂತೂ ಸಾಬ್? Love Day ಕೆ ಬಿನಾ ಪ್ಯಾರ್ ಮೊಹಬ್ಬತ್ ಮಾಡ್ಲಿಕ್ಕೆ ಬರೋದೆ ಇಲ್ಲ ಕ್ಯಾ ಈ ಇಂಗ್ಲಿಷ್ ಮಂದಿಗೆ...ಏನು ಇದು...? ಅಸಹ್ಯ...ಸಿಕ್ಕಾಪಟ್ಟೆ ಸಿಟ್ಟಿಗೆದ್ದು ಇಂಗ್ಲಿಷ್ ಮಂದೀಗೆ ಶಾಪ ಹಾಕಿದ ಕರೀಂ.

Love Day ಕೆ ಬಿನಾ ಪ್ಯಾರ್ ಮೊಹಬ್ಬತ್ ಮಾಡ್ಲಿಕ್ಕೆ ಬರೋದೆ ಇಲ್ಲ ಕ್ಯಾ...ಅಂತ ಏನು ಕೇಳಿದಿ ನೋಡು ಕರೀಂ....ಇದು ಸಾಮಾನ್ಯರು ಕೇಳುವಂತ ಪ್ರಶ್ನೆ ಅಲ್ಲವೇ ಅಲ್ಲ....ನೀನು ಯಾವದೋ ಕಾಲದಾಗ ನಮ್ಮ ಶಂಕರಾಚಾರ್ಯರ ಶಿಷ್ಯಾ ಆಗಿರಬೇಕು ನೋಡಪಾ.....ಏನು ಪ್ರಶ್ನೆ ಕೇಳಿದ್ಯೋ ಮಾರಾಯ....ಅಂತ ಅಂದೆ.

ಯಾಕೆ ಸಾಬ್ ನಿಮ್ಮ ಅದು ಶಂಕರಿ ಆಚಾರ್ರು ಹ್ಯಾಗೆ ಪ್ಯಾರ್ ಮೊಹಬ್ಬತ್ ಮಾಡ್ತಿದ್ರು ಸಾಬ್?....ಅಂದ ಕರೀಂ.

ನಮ್ಮ ಪರಮ ಪೂಜ್ಯ ಆದಿ ಶಂಕರಾಚಾರ್ಯರ ಹೆಸರ ಇವನಿಗೆ ಹೇಳಲಿಕ್ಕೆ ಬರವಲ್ಲತು. ಇನ್ನು ಅವರು ಪರಕಾಯ ಪ್ರವೇಶ ಮಾಡಿ ಒಂದಲ್ಲ ಮೂರು ಮೂರು ಮಂದಿ ರಾಣಿಯರಿಗೆ ಒಂದೇ ಸಲಕ್ಕ  ಪ್ಯಾರ್ ಮೊಹಬ್ಬತ್ ಹ್ಯಾಂಗ ಮಾಡಿದರು ಅಂತ ಇವಗ ನಾ ಹೇಳಿದ್ರೂ ಇವ ಏನರ ಅಪಾರ್ಥ ಮಾಡಿಕೊಂಡು ಊರ ತುಂಬಾ ಏನರ ಹೇಳಿ ನನ್ನ ಮಾನ ತೆಗೆದು ನನಗ ಮಠದಿಂದ ಬಹಿಷ್ಕಾರ ಹಾಕ್ಸೋ ಪೈಕಿ ಇವ. ಅದಕ್ಕ ಬ್ಯಾಡ ಅಂತ ಬಿಟ್ಟೆ.

ಸಾಬ್ ನನಗೆ ಈಗ ತಿಳೀತು ನಮ್ಮ ಮಿಸ್ಟೇಕ್ ಎಲ್ಲಿ ಅಂತ....ಏನೋ ಫ್ಲಾಶ್ ಆದಂಗೆ ಇತ್ತು ಕರೀಂಗೆ.

ನೋಡಿ ಸಾಬ್...ದಿನದ ಲೆಕ್ಕದಲ್ಲಿ ಪ್ಯಾರ್ ಮೊಹಬ್ಬತ್ ಮಾಡೋಕೆ ಹೋದ್ರೆ "ಡೆ"(day) ಬಂದು ಲವ್ (love)  ಗೆ ಸೇರಿ Love Day ಆಗಿ ಎಲ್ಲ ಹಾಳು ಮಾಡಿ ಬಿಡ್ತದೆ....ಅದಕ್ಕೆ ಒಂದು ಐಡಿಯಾ ಸಾಬ್....ಅಂದ ಕರೀಂ.

ಏನಪಾ  ಐಡಿಯಾ? Love Day ಬರದೇ ಇರೋ ಯಾವ ಶಬ್ದ ಇಲ್ಲಪಾ.....ಅಂತ ಅಂದೆ.

ಅದಲ್ಲ ಸಾಬ್.....ದಿವಸದ ಲೆಕ್ಕದಲ್ಲಿ ಯಾಕೆ ಪ್ಯಾರ್ ಮೊಹಬ್ಬತ್ ಮಾಡ್ಬೇಕು ಸಾಬ್? ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಲೆಕ್ಕದಲ್ಲಿ ಎಲ್ಲರೂ ಎಲ್ಲರಿಗೂ ಪ್ಯಾರ್ ಮಾಡಿ ಬಿಟ್ಟರೆ ಎಲ್ಲ ಪ್ರಾಬ್ಲೆಮ್ ಸಾಲ್ವ....ಏನು ಖಯಾಲ್ ಸಾಬ್ ನಿಮ್ಮದು? - ಅಂತ ಕೇಳಿದ ಕರೀಂ.

ಏನು ಮುತ್ತಿನಂತ ಅಮೋಘ ಸಂದೇಶ ಕೊಟ್ಟಿಯೋ ನಮ್ಮಪ್ಪ....ಗುರುವೇ ಕರೀಂ.... ನಿನಗೆ ಅಡ್ಡ ಬಿದ್ದೆ...ಪಾದದ ಜೆರಾಕ್ಸ್ ಮಾಡಿ ಕೊಡಪಾ ....ಇಟ್ಟು ಪೂಜಾ ಮಾಡತೇನಿ ....ಅಂದು ಅಡ್ಡಬಿದ್ದೆ.

ಏನು ಸಂದೇಶ ಕೊಟ್ಟೆ ಸಾಬ್? ಬರೇ ಗುಲಾಬಿ ಹುವ್ವ ಅಲ್ಲವ ನಾನು ನಿಮಗೆ ಕೊಟ್ಟಿದ್ದು?.....ಅಂದ ಕರೀಂ.

ಅದೇ ಹೇಳಿದಿ ಅಲ್ಲೋ....ಎಲ್ಲಾರೂ ಎಲ್ಲರನೂ ಕೇವಲ Love Day ಒಂದೇ ಅಲ್ಲ ಪ್ರತಿ ನಿಮಿಷ ಪ್ರತಿ ಸೆಕೆಂಡ್ ಪ್ರೀತಿ ಮಾಡ್ರಿ  ಅಂತ...ಅದೇನ್ ಕಮ್ಮಿ ಏನು?

ಹಾಂಗಾಗಿ ಫೆಬ್ರವರಿ ೧೪ ಅಂದ್ರ ಇನ್ನ ಮುಂದ ಸೇಂಟ ಕರೀಂಡೇ ಅಂತ ಫೇಮಸ್ ಆಗ್ತದ.

ಕರೀಂಡೇ ಓಕೆ ಸಾಬ್...Love Day  ಅಷ್ಟು ಹೊಲಸ ಫೀಲಿಂಗ್ ಬರೋದಿಲ್ಲ ಸಾಬ್..ಆದರೂ ಒಂದು ರಿಕ್ವೆಸ್ಟ್ ಸಾಬ್.

ಏನಪಾ  ಅದು?

ಇಂಗ್ಲಿಷ್ನಲ್ಲಿ ಸಂತ ಅನ್ನೋಕೆ ಇರೋ ಶಬ್ದಾನೂ ಬ್ಯಾಡ ಸಾಬ್....ಅದೂ ಅಷ್ಟು ಒಳ್ಳೆ ಫೀಲಿಂಗ್ ಕೊಡೋದಿಲ್ ಸಾಬ್ .

ಯಾವದೋ?

ಅದೇ ಹೇಳಿದ್ರಲ್ಲ ಸಾಬ್.
 
ಸೇಂಟ ಬಗ್ಗೆನೂ objection ಅದನಾ?

ಹ್ಞೂ.ಸಾಬ್....ಅದು ಬ್ಯಾಡ.

ಓಕೆ ....ಫೆಬ್ರುವರಿ ೧೪ ಕರೀಂಡೇ

ಕರೀಂ.....ಕರೀಂಡೇ ಸಲುವಾಗಿ ಒಂದ ಸಂದೇಶ್ ಕೊಡಪಾ .

ಕರೀಂ ವಿಚಾರ ಮಾಡಿ....ಸೀರಿಯಸ್ ಆಗಿ ಹೇಳಿದ.

ಹರ ಘಡಿ ಪ್ಯಾರ್ ಕಿ ಘಡಿ. ಸಬ್ ಅಪನೇ. ಹಂ ಸಬಕೇ.

ವಾಹ್ ವಾಹ್ ಕ್ಯಾ ಬಾತ್ ಹೈ....ಖುದಾ  ಹಾಫಿಜ್ ಕರೀಂ...ಭಾಳ ಸತ್ಯ ತಿಳ್ಸಿ ಕೊಟ್ಟಿ....ಶುಕ್ರಿಯಾ.....ಮೆರ್ಹರ್ಬಾನಿ...




** "ಪ್ರೀತಿಯ ದಿನ" ಎನ್ನುವದಕ್ಕೆ  Love Day ಅನ್ನೋ ಶಬ್ದ ಉಪಯೋಗಿಸಿ ನಮ್ಮನ್ನ  ನಗಿಸಿದವರು ಖ್ಯಾತ ನಾಟಕ ಕಲಾಕಾರ ದಿವಂಗತ ಧೀರೇಂದ್ರ ಗೋಪಾಲ್ ಅವರು. ಅವರಿಗೆ ಇದು ಅರ್ಪಣೆ. ಇಂದು ಅವರು ಇಲ್ಲದೆ ಇರಬಹದು. ಸರಿ ಸುಮಾರು 500 ಕೆಸೆಟ್ ನಾಟಕ ಮಾಡಿ ಕರ್ನಾಟಕದ ಜವಾರಿ ಭಾಷೆ ಮನೆ ಮನೆ ಮನ ಮನ  ಮುಟ್ಟುವ ಹಾಗೆ  ಮಾಡಿದ್ದು ಅವರು. ಅವರ ಡೈಲಾಗ್ಸ್ ನಲ್ಲಿ ಕೆಲವರಿಗೆ ಡಬಲ್ ಮೀನಿಂಗ್, ಅಶ್ಲೀಲತೆ ಕಾಣಬಹುದು. ನಮ್ಮಲ್ಲಿ ಏನು ಇದೆಯೋ ಅದೇ ನಮಗೆ ಕಾಣುತ್ತೆ. ಅಷ್ಟೇ.  ಆದರೆ ಗೋಪಾಲರ ನಾಟಕಗಳು ಇವತ್ತಿಗೂ ನನ್ನಂತ ಹಲವರನ್ನು ನಗಿಸೋದು ಮಾತ್ರ ಖರೆ. ಹ್ಯಾಟ್ಸ್ ಆಫ್ ಧೀರೇಂದ್ರ ಗೋಪಾಲ್.

2 comments:

Manju said...

ಭಾಳ ಛಲೊ ಆರ್ಟಿಕಲ್ ಮಹೇಶ್:) ಧೀರೇಂದ್ರ ಗೋಪಾಲ ನೆನಪ್ಶಿದ್ದಕ್ಕ ಧನ್ಯವಾದ ನೋಡ್ರಿ

Mahesh Hegade said...

ಧನ್ಯವಾದ ಮಂಜು ಅವರೇ!