ಕರೀಂ ಸಿಕ್ಕಿದ್ದ.
ನೋಡಿದರೂ ನೋಡದವರಾಂಗ ಮಾಡಿ ಮಾರಿ ತಿರಿಸ್ಕೊಂಡು ಓಡಿ ಹೊಂಟಿದ್ದ.
ಬಿಡ್ತೇನಿ ಏನು? ಹಿಡದೆ. ನಿಲ್ಲಿಸಿದೆ.
ಯಾಕೋ.....ಕರೀಂ? ಮಾರಿ ಆ ಕಡೆ ಹಾಕ್ಕೊಂಡು ಹೊಂಟಿ? ಯಾಕ.....ಮಾತಾಡೋ ಇಂಟರೆಸ್ಟ್ ಇಲ್ಲೇನು? ಬಿಜಿ ಇದ್ದರ ಹೇಳೋ. ನಾ ಏನ ನಿನ್ನ ಹಿಡಕೊಂಡು ಕೂಡಂಗಿಲ್ಲ. ಅರ್ಜೆಂಟ್ ಅದ ಏನು? - ಅಂತ ಕೇಳಿದೆ.
ಅಯ್ಯೋ ಇಲ್ಲಾ ಸಾಬ್. ಗೊತ್ತಿದ್ದ ಮಂದಿಗೆ ಮಾರಿ ತೋರ್ಸೋ ಹಾಗೆ ಇಲ್ಲ. ಆ ಕಂಡೀಶನ್ ಗೆ ತಂದು ನಿಲ್ಲಿಸಿದಾಳೆ ಬೇಗಂ. ಮಾರಿಗೆ ಮುಸುಕು ಹಾಕೋದು ಬಾಕಿ ಇನ್ನು. ನಿಮಗೂ ಗೊತ್ತಿರಬಹುದು ಅಂತ ತಿಳ್ದೆ. ನಿಮಗೆ ಗೊತ್ತಿಲ್ಲ ಕ್ಯಾ? ನೀವು ಇಂಟರ್ನೆಟ್, ಫೇಸ್ಬುಕ್ ಮೇಲೆ ಹೋಗೋದಿಲ್ಲ ಕ್ಯಾ? - ಅಂತ ಕೇಳಿದ.
ಏನಾತೋ? ಈ ಸಲ ಏನು ಮಾಡಿದಳು? ಹೋದ ಸಾರೆ ವಿಗ್ಗ್ ಹಾಕ್ಸಿದ್ದಳು. ಮತ್ತ ನಾನು ಬರೇ ಓದೋದು, ಬರೆಯೋದು ಮಾತ್ರ ನೋಡಪಾ. ಈ ಹಾಳುವರಿ ಇಂಟರ್ನೆಟ್, ಫೇಸ್ಬುಕ್ ಎಲ್ಲಾ ಕಡಿಮಿ ಮಾಡಿ ಬಿಟ್ಟೇನಿ. ಟೀವಿ ಅಂತೂ ಇಲ್ಲೇ ಇಲ್ಲ. ಹಾಂಗಾಗಿ ನೀನು ನಿನ್ನ ಬೇಗಂ ಏನಾರಾ ಇಂಟರ್ನೆಟ್ ಮೇಲೆ ಗುದಮುರಗಿ ಹಾಕ್ಕೊಂಡಿದ್ದರ ನನಗ ಗೊತ್ತಿರೋದಿಲ್ಲ. ತಿಳಿತ? - ಅಂದೆ.
ಹಾಗೆ ಕ್ಯಾ? ನೀವು ಭಾರಿ ಶಾಣ್ಯಾ ನೋಡಿ. ಒಳ್ಳೆ ಒಳ್ಳೆ ಪುಸ್ತಕ ಓದಿ, ಮಸ್ತ ಬರೆದು, ಒಳ್ಳೆ ರೀತಿಯಲ್ಲಿ ಟೈಮ್ ಯೂಸ್ ಮಾಡ್ತೀರಿ. ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ಒಂದು ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಮೇಲೆ ಬಂದು ಬಿಟ್ಟಿದೆ. ಅದೇ ಪ್ರಾಬ್ಲೆಮ್ ಸಾಬ್. ಎಲ್ಲಾರೂ ನೋಡಿ, ಅಂಡು ತಟ್ಟಿ ನಕ್ಕು, ಬೇರೆಯವರಿಗೆ ಫಾರ್ವರ್ಡ್ ಮಾಡಿ ಮಾಡಿ, ಎಲ್ಲರೂ ನೋಡಿಬಿಟ್ಟು, ನಮಗೆ ನೋಡಿದ ಕೂಡಲೇ ಕಿಸಿಕಿಸಿ ನಗ್ತಾರೆ ಸಾಬ್. ಏನು ಮಾಡೋದು ಸಾಬ್? ಎಲ್ಲಾ ಬೇಗಂ ಕಿತಬಿ - ಅಂತ ಅತ್ತುಕೊಂಡ.
ಹೋಗ್ಗೋ....ಸಾಬ್ರಾ! ಏನ್ರೀ ಇದು? ನಿಮ್ಮ ನಗ್ನ ಚಿತ್ರ ಇಂಟರ್ನೆಟ್ ನ್ಯಾಗ ಬಂದು ಬಿಡ್ತ? ಛೆ....ಛೆ.....ಇದು ಕೆಟ್ಟ ಅಸಹ್ಯ. ಏನು ಮಾಡಲಿಕ್ಕೆ ಹೋಗಿದ್ರಿ? ಫುಲ್ ಕಥಿ ಹೇಳ್ರಿ - ಅಂದೆ.
ಅಯ್ಯೋ.....ಅದು ದೊಡ್ಡ ಕಥಿ ಸಾಬ್? ಏನು ಹೇಳೋದು? - ಅಂತ ರಾಗ ಎಳೆದ ಕರೀಂ.
ಗೊತ್ತಾತ ಬಿಡ್ರೀ. ಬೆಡ್ರೂಮ್ ನ್ಯಾಗ ಕ್ಯಾಮೆರಾ ಇಟ್ಟಗೊಂಡು, ಆನ್ ಮಾಡಿ ಮಲ್ಕೊಂಡಬಿಟ್ಟೀರಿ. ಎಲ್ಲಾ ರೆಕಾರ್ಡ್ ಆಗಿ ಬಿಟ್ಟದ. ನಂತರ ಕಂಪ್ಯೂಟರ್ ಗೆ ಕನೆಕ್ಟ್ ಮಾಡಿದಾಗ ಏನೋ ಆಗಿ ಎಲ್ಲಾ ಇಂಟರ್ನೆಟ್ ಗೆ ಅಪ್ಲೋಡ್ ಆಗಿ ಬಿಟ್ಟಿರಬೇಕು. ಅಲ್ಲ? - ಅಂತ ಕೇಳಿದೆ.
ಭಾಳ ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಮ್ಯಾಲೆ ಬರೋದು ಹೀಂಗ. ಅದಕ್ಕ ಕೇಳಿದೆ. ಈಗೆಲ್ಲಾ ಚೀಪ್ ಮತ್ತು ಸಸಾರ ಡಿಜಿಟಲ್ ಕ್ಯಾಮೆರಾ, ವಿಡಿಯೋ ಎಲ್ಲಾ ಬಂದು, ಮಂದಿ ಮಾಡಬಾರದ್ದೆಲ್ಲಾ ರೆಕಾರ್ಡ್ ಮಾಡಿ, ಈರೇಸ್ ಮಾಡೇವಿ ಅಂತ ಅಂದುಕೊಂಡು, ಅದು ಈರೇಸ್ ಆಗದ, ಎಲ್ಲೆಲ್ಲೋ ಅಪ್ಲೋಡ್ ಆಗಿ, ಇಂಟರ್ನೆಟ್ ತುಂಬಾ ಪುಕ್ಕಟ ನಂಗಾ ಪಂಗಾ ತಸ್ವೀರ್.
ಇಲ್ಲಾ ಸಾಬ್..... ಅದು ಏನು ಆಯ್ತು ಅಂದ್ರೆ........ನಿಮಗೆ ಗೊತ್ತು ಅಲ್ಲಾ......? ನಮ್ಮ ಬೇಗಂಗೆ ಫೇಸ್ಬುಕ್ ಹುಚ್ಚು. ನಿಮಗೆ ಗೊತ್ತೇ ಅದೇ. ಅದೇನೋ ಅವತ್ತು ಆಕಿಗೆ ಅಕಿ ಮಾಜಿ ಡೌ ಕೃಷ್ಣಾ ಇಲ್ಲಾ, ಅವನ ಜೊತಿ ಇಂಟರ್ನೆಟ್ ಮ್ಯಾಲೆ ರಾಧಾ ಕೃಷ್ಣಾ ಸರಸ ಸಲ್ಲಾಪ ಆಡೋ ಹುಚ್ಚು ಮೂಡು ಬಂತು. ಅದರಿಂದಾಗಿ ನಮ್ಮ ನಂಗಾ ತಸ್ವೀರ್ ಇಂಟರ್ನೆಟ್ ಮೇಲೆ ಬಂತು. ಕ್ಯಾ ಮುಸೀಬತ್ ಸಾಬ್?! - ಅಂತ ಅಂದು ನಿಲ್ಲಿಸಿದ ಕರೀಂ.
ಏನ್ರೀ.....ಹೀಂಗ ಅಂದ್ರ? ರಾಧಾ ಯಾರು? ಕೃಷ್ಣ ಯಾರು? ಇಂಟರ್ನೆಟ್ ಮ್ಯಾಲೆ ಸರಸ ಸಲ್ಲಾಪ ಹ್ಯಾಂಗ? ಏನು ಕಥಿ? ಹಾಂ? ಹಾಂ? - ಅಂತ ಕೇಳಿದೆ.
ತಲಿ ಬಗ್ಗಡ ಆಗಿತ್ತು.
ನೋಡಿ ಸಾಬ್.....ಅವನು ಯಾರೋ ಹಲ್ಕಟ್ ಆಶಿಕ್ ಅಲ್ಲೆಲ್ಲೋ ದೂರ ಕೂತು ಇಂಟರ್ನೆಟ್ ಮ್ಯಾಲೆ ಬಾಸುರೀ (ಕೊಳಲು) ಬಾರಿಸ್ತಾನಂತೆ, ನಮ್ಮ ಬೇಗಂ ಇಲ್ಲಿ ಸ್ವಿಮಿಂಗ್ ಪೂಲಿನಲ್ಲಿ ಆ ಮ್ಯೂಜಿಕ್ ಗೆ ಸ್ವಿಮ್ಮಿಂಗ್ ಮಾಡ್ತಾಳಂತೆ. ಒಂದೇ ಡಿಫರನ್ಸ್ ಅಂದ್ರೆ ಕಪಡೆ ಹೋಗಿ ಗಿಡದ ಮ್ಯಾಲೆ ಕೂಡೋದಿಲ್ಲ. ಅಷ್ಟೇ. ಅಕಿ ಮತ್ತೆ ಅಕಿ ಡೌ ಇಬ್ಬರೂ ಕೂಡಿ ಡೇಟ್ ಫಿಕ್ಸ್ ಮಾಡ್ಬಿಟ್ಟಿ ರೆಡಿ ಆದ್ರು. ಮುಂದೆ ಆದದ್ದೇ ದೊಡ್ಡ ಕಿತಾಪತಿ. ಅದರಿಂದ ನಮಗೆ ನಂಗಾಪನ್ ಬಂತು ಸಾಬ್!!!! - ಅಂತ ಹೇಳಿ ನಿಲ್ಲಿಸಿದ ಕರೀಂ.
ಹಾಂ? ಏನೋ ಭಾರಿ ಸುದ್ದಿ ಅದನಲ್ಲೋ ಇದು? ಎಲ್ಲೆ ಸ್ವಿಮ್ಮಿಂಗ್ ಹೊಡಿಲಿಕ್ಕೆ ಹೋಗಿದ್ದಳು ನಿಮ್ಮ ಬೇಗಂ? ಅಲ್ಲೆ DC ಕಂಪೌಂಡ್ ಕೆಳಗ ಇರೊ ಮುನ್ಸಿಪಾಲಿಟಿ ಪೂಲಿಗೆ ಹೋಗಿದ್ದಳು ಏನು? ಏ.....ಇವನ.....ನೋಡ್ಕೋ ಮತ್ತ.....ಆ ಪೂಲಿನ್ಯಾಗ ಸ್ವಿಮ್ ಮಾಡಿ ಬಂದ್ರ ಗಜಕರ್ಣ, ಇಸಬು ಮತ್ತೊಂದು ಅಂತ ಚರ್ಮರೋಗ ಬರ್ತಾವು. ಆ ಮ್ಯಾಲೆ ಜಿಂದಗೀ ಪೂರ 'ಸಪಟ್' ಮುಲಾಮೋ, ಹರ್ಬಾಲ ಮುಲಾಮೋ ಹಚ್ಚಿಗೋತ್ತ ಕೂಡಬೇಕಾದೀತು. ನೆನಪ ಇಟ್ಟಿರು ಅಂತ ಹೇಳು ಅಕಿಗೆ - ಅಂತ ನನಗ ತಿಳಿದ ವಾರ್ನಿಂಗ್ ಕೊಟ್ಟೆ.
ಧಾರವಾಡದ ಪಬ್ಲಿಕ್ ಸ್ವಿಮಿಂಗ್ ಪೂಲ ಅಂದ್ರ......ರಾಮಾ.....ನಾ ಹೇಳಲಾರೆ!!! ಅಷ್ಟು ಕೊಳಕ್ ರಾಡಿ!
ಇಲ್ಲಾ ಸಾಬ್. ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮದು ವಾಡೆದು ಒಳಗೆ ಒಂದು ಸ್ವಿಮಿಂಗ್ ಪೂಲ್ ಇದೆ - ಅಂತ ಹೊಸಾ ಸುದ್ದಿ ಹೇಳಿಬಿಟ್ಟ ಕರೀಂ.
ಹಾಂ!!! ಏನು? ನಿಮ್ಮ ವಾಡೆಯೊಳಗ ಸ್ವಿಮಿಂಗ್ ಪೂಲಾ? ಯಾವಾಗ ಬಂತೋ? ಮಸ್ತ ರಾಜಾ ಆದ್ಮಿ ಬಿಡಪಾ ನೀ. ಸವಣೂರ ನವಾಬರ ವಂಶದವರು ಹ್ಯಾಂಗ ಇರಬೇಕು ಹಾಂಗ ಮಸ್ತ ಲಕ್ಸುರಿ ಜೀವನ ನಿಂದು - ಅಂತ ಕಾಂಪ್ಲಿಮೆಂಟ್ ಕೊಟ್ಟೆ.
ಸಾಬ್.....ನಮ್ಮದು ವಾಡೆ ಹಿಂದೆ ಒಂದು ದೊಡ್ಡ ಭಾವಿ ಇತ್ತು. ಯಾದ್ ಹೈ ಕ್ಯಾ? ನಾವು, ನೀವು ಎಲ್ಲಾ ಕೂಡಿ ಮಸ್ತ ಜಿಗದು ಅಲ್ಲೆ ಸ್ವಿಮ್ ಮಾಡತಿದ್ವಿ. ಛೋಟಾ ಬಚ್ಚಾ ಇದ್ದಾಗ. ನೆನಪು ಆಯಿತು? - ಅಂತ ಕೇಳಿದ.
ಹೌದೋ.....ನೆನಪ ಅದ. ಆದ್ರಾ ಅದು ದೊಡ್ಡ ಭಾವಿ. ಸ್ವಲ್ಪ ಪಾಳು ಬಿದ್ದಿತ್ತು. ಅದರಾಗ ನಿಮ್ಮ ಬೇಗಂ. ಅದೂ ನಿಮ್ಮ ಡೆಲಿಕೇಟ್ ಡಾರ್ಲಿಂಗ್ ಬೇಗಂ ಈಜು ಹೊಡೆಯೋದು ಅಂದ್ರ.....ಹ್ಯಾಂಗ ಸಾಧ್ಯ ಅದನೋ? - ಅಂತ ಕೇಳಿದೆ.
ಆ ಭಾವಿಯೊಳಗ ಹಾವು, ಹರಣಿ ಮತ್ತೊಂದು ಎಲ್ಲಾ ಇದ್ದವು. ಇವನ ಹೆಂಡತಿ ಅಲ್ಲಿ ಹೋಗಿ ಸ್ವಿಮ್ ಮಾಡೋದು ಊಹಿಸಿಕೊಳ್ಳಲಿಕ್ಕೆ ಸಾಧ್ಯ ಇಲ್ಲ.
ಅಯ್ಯೋ.....ನಿಮಗೆ ಗೊತ್ತಿಲ್ಲ ಕ್ಯಾ? ನಮ್ಮ ಕಡೆ ಪಂದ್ರಾ ಲಾಖ್ ರೂಪಾಯಿ ಖರ್ಚು ಮಾಡ್ಸಿಬಿಟ್ಟಿ ಅದನ್ನ ಮಸ್ತ ನ್ಯಾಚುರಲ್ ಪೂಲ್ ಮಾಡಸಿಕೊಂಡಾಳೆ. ಏನು ಅಂತ ಮಾಡೀರಿ? ನಮ್ಮದು ಕಡೆ ರೊಕ್ಕಾ ಇರೋ ತನಕ ಅಕಿದು ಏಷ್ ಸಾಬ್. ಅದು ಯಾರೋ ಕೇರಳಾದಿಂದ ಸ್ಪೆಷಲ್ ಆದ್ಮಿ ಬಂದು, ಏನೇನೋ ಮಾಡಿ ಮಸ್ತ ಪೂಲ್ ಮಾಡಿ ಕೊಟ್ಟಾನೆ. ಒಳ್ಳೆ ಫೈವ್ ಸ್ಟಾರ್ ಹೋಟೆಲ್ ಪೂಲ್ ಆದಂಗೆ ಆಗಿದೆ. ನಮ್ಮ ಬೇಗಂ ಒಂದು ದೊಡ್ಡ ಫೂಲ್. ಅವಳಿಗೆ ಒಂದು ಸ್ವಿಮ್ಮಿಂಗ್ ಪೂಲ್. ನಮ್ಮದು ಬಾಲ್ಡೀ ತಲಿನಾ ಇನ್ನೂ ಎಷ್ಟು ಬೋಳಿಸ್ತಾಳೋ ಗೊತ್ತಿಲ್ಲ ಸಾಬ್! - ಅಂತ ಹೇಳಿದ ಕರೀಂ. ಒಂದು ದೊಡ್ಡ ಉಸಿರು ತೊಗೊಂಡ.
ಹೋಗ್ಗೋ.....ನಿಮ್ಮ....ಸಾಬ್ರಾ.....ಏನ ಕಥಿ ಇದು? ಗೊತ್ತ ಇರಲಿಲ್ಲ ನಮಗ. ಭಾರಿ ಆತ ಬಿಡ್ರೀ. ಅಲ್ಲೆ ಏನು ನಿಮ್ಮ ಬೇಗಂ ಅವರದ್ದು ಸ್ನಾನ ಮತ್ತೊಂದು? - ಅಂತ ಕೇಳಿದೆ.
ಖರೆ ಸ್ನಾನ ಅಂತ ಅಂದ್ರೆ ಕೇವಲ ಜುಮ್ಮಾಕೋ ಮಾತ್ರ. ಆದ್ರೆ ಆಗಾಗ ಹೋಗಿ ಸ್ವಿಮ್ ಹೊಡೆದು ಬರ್ತದೆ ಬೇಗಂ. ಸ್ವಿಮಿಂಗ್ ಮಾಡಿ ಸುಸ್ತಾದ ಅಕಿಗೆ ಶರಬತ್ ಸಪ್ಲೈ ಮಾಡೋ ಕೆಲಸ ನಮಗೆ. ನಮ್ಮ ಕರ್ಮ.....ಕರ್ಮ..... - ಅಂತ ಹೇಳಿ ಹಣಿ ಹಣಿ ಚಚ್ಚಿಕೊಂಡ ಕರೀಂ.
ಹ್ಮ.....ಮುಂದ ಹೇಳ್ರೀ ಕಥಿ...ಸಾಬ್ರಾ - ಅಂದೆ.
ನೋಡಿ ಸಾಬ್.....ಅಕಿ ಮತ್ತು ಅಕಿ ಮಾಜಿ ಆಶಿಕ್ ಡಿಸೈಡ್ ಮಾಡಿದ ಟೈಮ್ ಗೆ ಇಕಿ ಸ್ವಿಮಿಂಗ್ ಪೂಲ್ ಗೆ ಹೋಗಿದ್ದಾಳೆ. ನಮಗೆ ಬರಬೇಡಿ ಅಂತ ಹೇಳ್ಬಿಟ್ಟು ಹೋದಳು. ನಮಗೆ ಎಲ್ಲಾ ರೂಢಿ ಆಗಿ ಬಿಟ್ಟಿದೆ. ಅಲ್ಲಿ ಹೋದಾಗ ಏನು ಆಯ್ತು ಅಂತ ಗೊತ್ತು ಕ್ಯಾ? - ಅಂತ ಕೇಳಿ ಅರ್ಧಕ್ಕ ನಿಲ್ಲಿಸಿದವನ ಖೀ.....ಖೀ........ ಅಂತ ಮೊಣಕಾಲ ಮ್ಯಾಲೆ ಬಡಕೋತ್ತ ನಗಲಿಕ್ಕೆ ಹತ್ತಿದ ಕರೀಂ.
ಸಾಬ್....ಏನಾಯ್ತು ಅಂದ್ರೆ....ಇಕಿ ತನ್ನದು ಕಪಡಾ ಎಲ್ಲಾ ತೆಗೆದಿಟ್ಟು.....ಸ್ವಿಮ್ಮಿಂಗ್ ಶುರು ಮಾಡಿದಾಳೆ. ಅಲ್ಲಿ ಫೇಸ್ಬುಕ್ ಮೇಲೆ ಅವನು ಹರಾಮಕೋರ್ ಮಾಜಿ ಆಶಿಕ್ ಬಾಸುರೀ ಬಾರಿಸ್ತಾ ಇದಾನೆ. ಅದು ಇಕಿ ಸಾಮ್ಸಂಗ್ ಗೆಲಾಕ್ಸಿ ಫೋನ್ ಒಳಗೆ ಕೇಳಿಕೋತ್ತ ಇಕಿದು ಸ್ವಿಮ್ಮಿಂಗ್ ನೆಡದಿತ್ತು. ಇದೇ ಇವರ ರಾಧಾ ಕೃಷ್ಣ ಸರಸ ಸಲ್ಲಾಪ. ಆವಾಗ ಏನಾಯ್ತು ಗೊತ್ತು ಕ್ಯಾ? - ಅಂತ ಹೇಳಿ ಪೂರ್ತಿ ಮಾಡಲಿಕ್ಕೆ ಆಗದ ಮತ್ತ ನಗಲಿಕ್ಕೆ ಶುರು ಮಾಡಿದ.
ಏನಾತು ಅಂತ ಹೇಳೋ.....ಪುಣ್ಯಾತ್ಮಾ......ನಿಮ್ಮ ಹಾಪ್ ಬೇಗಂದು ಏನರ ಇದ್ದ ಇರ್ತದ ಖತರ್ನಾಕ್ ಸುದ್ದಿ. ಆ ಮ್ಯಾಲೆ ಇಬ್ಬರೂ ಕೂಡೆ ನಗೋಣ. ಓಕೆ? - ಅಂತ ಹೇಳಿದೆ.
ಸಾಬ್....ನಮ್ಮದು ಭಾವಿ ಹಿಂದೇನೇ ನಮ್ಮದು ಪ್ಯಾರಲ ತೋಟಾ ಐತೆ ನೋಡಿ. ಅಲ್ಲಿ ಬಂದಿದ್ದ ಮಂಗ್ಯಾ ಒಂದು ಬಂದ್ಬಿಟ್ಟಿ, ಪೂಲ್ ದಂಡಿ ಮ್ಯಾಲೆ ಇರೋ ನಮ್ಮ ಬೇಗಂ ಬಟ್ಟಿ ಎಲ್ಲ ತೊಗೊಂಡು, ಬಾಜೂಕೆ ಇರೊ ಒಂದು ಮರ ಹತ್ತಿ ಕೂತು ಬಿಟ್ಟಿತು ಸಾಬ್! ಎಲ್ಲಾ ಕಪಡಾ ಒಂದೂ ಬಿಡದೆ ತೊಗೊಂಡು ಹೋತು. ಮರದ ಮ್ಯಾಲೆ ಕೂತ್ಗೊಂಡು ಅದಕ್ಕೆ ಹ್ಯಾಂಗೆ ತಲಿಗೆ ಬಂತೋ ಹಾಗೆ ನಮ್ಮ ಬೇಗಂ ಬಟ್ಟಿ ಹಾಕೊಂಡು ಬಿಟ್ಟಿ, ಹಲ್ಲು ತೋರಿಸ್ಕೋತ್ತಾ ನಮ್ಮ ಬೇಗಂಗೆ ಅಣಿಕಿಸಲಿಕ್ಕೆ ಶುರು ಮಾಡಿತ್ತು ಸಾಬ್! ಏನು ಸೀನ್ ಅಂತೀರಿ - ಅಂತ ಮತ್ತ ಸಿಕ್ಕಾಪಟ್ಟೆ ನಕ್ಕ.
ಹೋಗ್ಗೋ ಸಾಬ್ರಾ.....ಇದು ಅತಿ ಆತ ಬಿಡ್ರಿ. ಅಷ್ಟೂ ಅರವಿ ತೊಗೊಂಡು ಹೋಗಿ ಬಿಡ್ತಾ ಮಂಗ್ಯಾ? ಏನ ಮಂಗ್ಯಾರೀ ಅದು? ನಿಮ್ಮ ಬೇಗಂ ಏನು ಸ್ವಿಮಿಂಗ್ ಅಂಡರ್ವೇರ್ ಬನಿಯನ್ ಹಾಕ್ಕೊಂಡ ಈಜು ಹೊಡಿಲಿಕತ್ತಿದ್ದರು ಏನು? ಅದಾರ ಮೈಮ್ಯಾಲೆ ಇತ್ತಲ್ಲ...........ಅದಾ ಪುಣ್ಯಾ. ಇಲ್ಲಾಂದ್ರಾ......ಅಯ್ಯೋ.....ನಾ ಹೇಳಲಾರೆ.........- ಅಂತ ಅಂದೆ.
ಇಲ್ಲಾ ಸಾಬ್. ನಿಮಗೆ ರಾಧಾ ಕೃಷ್ಣ ಸರಸ ಸಲ್ಲಾಪ ಕಥಿ ಸರಿಯಾಗಿ ಗೊತ್ತಿಲ್ಲ ಕ್ಯಾ? ಮತ್ತೆ ಏನು ಅಸದ್ಡಾಳ್ ಸ್ವಿಮಿಂಗ್ ಅಂಡರ್ವೇರ್ ಬನಿಯನ್ ಅಂತೀರಿ? ಹಾಂ? ಅದಕ್ಕೆ ಬಿಕಿನಿ.....ಬಿಕಿನಿ.....ಅಂತಾರೆ. ಒಳ್ಳೆ ಗಾವಟಿ ಮಂದಿ ಆಗ್ಲಿಕತ್ತೀರಿ ನೋಡಿ. ದ್ವಾಪರಯುಗದಲ್ಲಿ ಬಿಕಿನಿ ಪಿಕಿನಿ ಇರಲಿಲ್ಲ. ಅದಕ್ಕೆ ನಮ್ಮ ಬೇಗಂ ಕೂಡ......- ಅಂತ ನಿಲ್ಲಿಸಿದ. ಮುಂದ ನೀವ ತಿಳಕೊಳ್ಳರಿ ಅನ್ನೋ ರೀತಿಯಲಿ. ಗೊತ್ತಾತು ನಮಗ. ಬೇಗಂ ಬರ್ತ್ ಡೆ ಡ್ರೆಸ್ಸಿನ್ಯಾಗ ರಾಧಾ ಕೃಷ್ಣ ಸರಸ ಸಲ್ಲಾಪ ನೆಡಿಸಿದ್ದರು ಅಂತ.
ಹೋಗ್ಗೋ ನಿಮ್ಮ.......ಅದು ರಿಸ್ಕ್ ಅಲ್ಲೇನ್ರೀ? ಸುತ್ತ ಮುತ್ತ ಮಂದಿ ಕಂಪೌಂಡ್ ಗ್ವಾಡಿ ಹತ್ತಿ ನೋಡಿದ್ರ ಏನು ಗತಿ ರೀ? ಪರ್ದಾವಾಲಿ ಬೇಗಂ ಫುಲ್ ಖಾಲಿ ಖಾಲಿ ಆಗಿ ಸ್ವಿಮಿಂಗ್ ಅಂದ್ರ.......ಛೆ.....ಛೆ......- ಅಂತ ಅಂದೆ. ಸುತ್ತಮುತ್ತಲ ಪಡ್ಡೆ ಹುಡುಗರಿಗೆ ಫ್ರೀ ಮನೋರಂಜನೆ.
ಇಲ್ಲಾ.....ಇಲ್ಲಾ.....ಸಾಬ್! ಹಾಗೇನೂ ಇಲ್ಲ. ಪಂದ್ರಾ ಲಾಖ್ ರೂಪಾಯಿ ಸ್ವಿಮಿಂಗ್ ಪೂಲ್ ಅಂದ್ರೆ ಏನು ಅಂತ ತಿಳ್ಕೊಂಡೀರಿ? ಒಂದು ಸ್ವಿಚ್ ಒತ್ತಿ ಬಿಟ್ಟರೆ ನಾಟಕಾದು ಪರದೆ ಇದ್ದಂಗೆ ನಾಕು ಕಡೆ ಪರದೆ ಬಿದ್ದು ಫುಲ್ ಕವರ್ ಆಗಿಬಿಡ್ತದೆ. ಹಾಗೆ ಇದೆ ಸಿಸ್ಟಮ್. ಕಂಪೌಂಡ್ ಹತ್ತಿ ನೋಡಿದರೂ ಯಾರಿಗೂ ಏನೂ ಕಾಣೋದಿಲ್ಲ. ಮತ್ತೆ ನನ್ನ ಕಾಯೋಕೆ ಇಟ್ಟಿರ್ತಾಳೆ. ಬದ್ಮಾಶ್ ಮಂದಿ ಗ್ವಾಡಿ ಹತ್ತಿದರೆ ಓಡ್ಸೋದು ನನ್ನ ಕೆಲಸ - ಅಂತ ಫುಲ್ ವಿವರಣೆ ಕೊಟ್ಟ ಕರೀಂ.
ಬೇಗಂ ಭಾರಿ ಶಾಣ್ಯಾ ಇದ್ದಾಳ. ಅಕಿ ಸ್ವಿಮಿಂಗ್ ಮಾಡೋದನ್ನ ಪುಕ್ಕಟ ಧರ್ಮ ದರ್ಶನ ಮಾಡಸಂಗಿಲ್ಲ. ಎಲ್ಲದಕ್ಕೂ ಮಸ್ತ ಸಿಸ್ಟಮ್ ಇಟ್ಟಾಳ. ಭಲೇ!
ಹ್ಮ ......ಹ್ಮ ......ಮುಂದೇನಾತೋ? ಮಂಗ್ಯಾ ಎಲ್ಲಾ ವಸ್ತ್ರಾ ತೊಗೊಂಡು ಮ್ಯಾಲೆ ಹೋತು. ನೀರಾಗ ನಂಗಾ ಪಂಗಾ ನಿಮ್ಮ ಬೇಗಂ. ಮುಂದ? - ಅಂತ ಕೇಳಿದೆ.
ಮುಂದೇನು ಸಾಬ್? ನಮ್ಮ ಕೆಟ್ಟಕಾಲ ಶುರು ಆಯಿತು. ಹಾಪ್ ಬೇಗಂ ನೀರಾಗೆ ಇದ್ದುಕೊಂಡೇ ನನಗೆ ಫೋನ್ ಮಾಡಿ........ಜಲ್ದೀ ಆವೋಜೀ......ಅಂದಳು. ಯಾವಾಗಲೂ ಆವೋ, ಜಾವೋ ಅನ್ನಾಕಿ ಆವೋಜಿ ಅಂದಿದ್ದು ಕೇಳಿದಾಗ ನಮಗೆ ಡೌಟ್ ಬಂತು. ಏನೋ ಕೆಲಸ ಕೆಟ್ಟಿದೆ. ಅದಕ್ಕೇ ಮಸ್ಕಾ ಹೊಡೆದು ಸ್ವೀಟಾಗಿ ಆವೋಜೀ ಅಂತಾ ಇದಾಳೆ. ನಾನು ತಾಪಡತೊಪ್ ಓಡಿದೆ - ಅಂತ ಹೇಳಿದ ಕರೀಂ.
ಹ್ಞೂ.....ಏನು ಮಾಡಿದಿ? ಅಲ್ಲೆ ಹ್ಯಾಂಗ ಇತ್ತು ದೃಶ್ಯ? - ಅಂತ ಕೇಳಿದೆ.
ಅವನು ಹರಾಮಕೋರ ಪರದೇಶಿ ಕೃಷ್ಣ ಆಗಲೂ ಬಾಸುರಿ ಊದ್ತಾ ಇದ್ದ. ನಮ್ಮ ಬೇಗಮ್ಮೇ ಅವನಿಗೆ ಸಾಕು ಮಾಡು ಅಂತ ಹೇಳಿ ಕಳಿಸಿದಳು. ಅವನು ಬಾಸುರಿ ಬ್ಯಾಡ ಅಂದ್ರೆ ಪುಂಗಿ ಬಾರಿಸಲಿ ಏನು ಅಂತ ಕೇಳಿದ. ಆವಾಗ ಮಾತ್ರ ಅವನಿಗೆ...... ಜಾಬೆ....ಜಾಬೆ.....ಮೇರಾ ಯಹಾನ್ ಫಟೀ ಹೈ. ಇಸಕೋ ಪುಂಗಿ ಸೂಜತಾ ಹೈ. ಜಾ ಭಾಡ್ಕೊವ್ ಅಂತ ಬೈದಾಗ ಮಾತ್ರ ನಮಗೆ ಖುಷಿ ಆಯಿತು ಸಾಬ್. ಅವನು ಹೋದ. ಈಗ ನಮ್ಮ ಕಷ್ಟ ಶುರು ಆಯಿತು - ಅಂತ ಹೇಳಿ ಕರೀಂ ಒಂದು ಬ್ರೇಕ್ ತೊಗೊಂಡ.
ಹ್ಯಾಂಗಾರು ಮಾಡಿ ಮಂಗ್ಯಾ ಕಡೆಯಿಂದ ವಸ್ತ್ರ ಇಸ್ಕೊಂಡು ಕೊಡಿ ಅಂತ ಗಂಟು ಬಿದ್ದಳು ಸಾಬ್. ನಾನು ಹೇಳಿದೆ......ಹೋಗ್ಲೀ ಬಿಡು ಬೇಗಂ. ನಾನು ಮನಿಗೆ ಹೋಗಿ ಬ್ಯಾರೆ ಕಪಡಾ ತಂದು ಕೊಡಲಿ ಕ್ಯಾ? ಅಂತ ಕೇಳಿದೆ. ಬ್ಯಾಡ.....ಬ್ಯಾಡ....ಅದು ನನ್ನ ತವರು ಮನಿ ಅವರು ಕೊಟ್ಟ ಡ್ರೆಸ್. ಅದು ನನಗೆ ಬೇಕೇ ಬೇಕು. ಜಾಕೆ ಲಾವೊಜೀ, ಕರೀಂ ಖಾನ್ ಸಾಬ್.....ಪ್ಲೀಸ್ ಜೀ.....ಅಂತ ನಮ್ಮ ಬೇಗಂ ಹಟಾನೇ ಹಿಡಿದು ಬಿಡ್ತು ಸಾಬ್- ಅಂದ ಕರೀಂ.
ಹ್ಮ....ಹ್ಮ.....ಏನ ಹಾಪ ಇದ್ದಾಳೋ? ಮಂಗ್ಯಾ ವಾಪಸ್ ಕೊಡು ಅಂದ್ರ ಕೊಡ್ತದ ಏನು? ಏನು ಮಾಡಿದಿ? - ಅಂತ ಕೇಳಿದೆ.
ಸಾಬ್.....ನಾನು ನಮ್ಮ ಬಂದೂಕ್ ತೊಗೊಂಡು ಬಂದು ಮಂಗ್ಯಾಗೆ ಗೋಲಿ ಶೂಟ್ ಮಾಡಿಬಿಡೋಣ ಅಂತ ಗನ್ ತರೋಣ ಅಂತ ಮನಿ ಕಡೆ ಹೊಂಟೆ. ಬೇಗಂ ಚೀರಿ......ಮಂಗ್ಯಾ ಅಂದ್ರೆ ಹನುಮಾನ್ ದೇವ್ರು....ಅದನ್ನ ಹೊಡೆದರೆ ನಿಮಗೆ ಒಳ್ಳೆದಾಗೋದಿಲ್ಲ. ಅದನ್ನ ಹೊಡಿದೇ ಅದರ ಕಡೆಯಿಂದ ವಸ್ತ್ರ ಇಸಿದು ಕೊಡಿ ಅಂತ ಕೂತ ಬಿಟ್ಟಳು ಸಾಬ್.....ಅಂದ ಕರೀಂ.
ಭಾಳ ಕಷ್ಟಕ್ಕ ಬಂತಲ್ಲರೀ ಇದು ಸಾಬ್ರಾ ? ಮುಂದ ಏನು ಮಾಡಿದ್ರಿ? - ಅಂದೆ.
ನಾವು ಕ್ಯಾ ಬೇವಕೂಫ್ ಏನು ಸಾಬ್? ನಿಮಗೆ ಬಿನ್ನೆತ್ತಾ ಒಳಗೆ ಕೇಳಿದ ಕಥಿ ನೆನಪ ಐತಿ ಕ್ಯಾ? ಆ ಟೆಕ್ನಿಕ್ ಉಪಯೋಗಿಸಿದೆ ಸಾಬ್ - ಅಂದ ಕರೀಂ.
ಯಾವ ಕಥೀನೋ? - ಅಂತ ಕೇಳಿದೆ.
ಅದೇ ಸಾಬ್....ಒಬ್ಬ ಟೋಪಿ ವ್ಯಾಪಾರಿ ಇರ್ತಾನೆ. ಅವನು ಸುಸ್ತಾಗಿ ತನ್ನ ಟೊಪಿಗಿ ಎಲ್ಲಾ ಇಟ್ಟು ಬಿಟ್ಟಿ ಸ್ವಲ್ಪ ಹೊತ್ತು ಮಲ್ಕೊಂಡು ಇರ್ತಾನೆ. ಆವಾಗ ಮಂಗ್ಯಾ ಎಲ್ಲಾ ಬಂದು ಅವನ ಟೊಪಿಗಿ ತೊಂಗೊಂಡು ಹೋಗಿ ಗಿಡದ ಮ್ಯಾಲೆ ಕೂತು ಬಿಡ್ತವೆ. ಏನು ಮಾಡೋದು ಅಂತ ವಿಚಾರ ಮಾಡ್ತಾನೆ. ಒಂದು ಐಡಿಯಾ ಬರ್ತದೆ. ತನ್ನ ಟೋಪಿ ತೆಗೆದು ಹಾಕ್ಕೊತ್ತಾನೆ. ನೋಡಿದ ಮಂಗ್ಯಾ ಎಲ್ಲಾ ಕೂಡ ಟೊಪಿಗಿ ತೆಗೆದು ಹಾಕ್ಕೊತ್ತಾವೆ. ಟೋಪಿವಾಲಾ ಟೊಪಿಗಿ ತೆಗೆದು ಕೆಳಗೆ ಒಗಿತಾನೆ.ಮಂಗ್ಯಾ ಎಲ್ಲ ಕೂಡ ಟೊಪಿಗಿ ತೆಗೆದು ಕೆಳಗೆ ಒಗಿತಾವೆ. ಯಾದ್ ಆಯಾ ಕ್ಯಾ? ನೀವು ಮಂಗ್ಯಾಂದು ಪಾರ್ಟ್ ಮಾಡಿದ್ರೀ ಆ ಸ್ಕಿಟ್ ಒಳಗೆ - ಅಂದ.
ನಾ ಮಂಗ್ಯಾ ಆದ ಸಂದರ್ಭ ಎಲ್ಲಾ ಮಸ್ತ ನೆನಪ ಇಟ್ಟಾನ ಮಂಗ್ಯಾನ್ ಕೆ.
ಹ್ಞೂ.....ಹ್ಞೂ.....ನೆನಪ ಆತು? ಅದನ್ನ ಹ್ಯಾಂಗ ಉಪಯೋಗ ಮಾಡಿಕೊಂಡಿ? - ಅಂತ ಕೇಳಿದೆ.
ನೋಡಿ ಸಾಬ್....ಗಿಡದ ಮ್ಯಾಲೆ ಮಂಗ್ಯಾ ನಮ್ಮ ಬೇಗಂ ವಸ್ತ್ರ ಅಸಡಾ ಬಸಡಾ ಹಾಕ್ಕೊಂಡು ಏನೇನೋ ಮಾಡಿಕೋತ್ತ ಕೂತಿತ್ತು. ಸ್ವಿಮಿಂಗ್ ಪೂಲ್ ದಂಡಿ ಮ್ಯಾಲೆ ನಾನು ನನ್ನ ಕಪಡಾ ಎಲ್ಲ ತೆಗೆದು ತೆಗೆದು ನೆಲದ ಮ್ಯಾಲೆ ಒಗದೆ. ಮಂಗ್ಯಾ ಭಾರಿ ಶಾಣ್ಯಾ ಇತ್ತು. ಅದೂ ಕೂಡ ಕಪಡೆ ಬಿಚ್ಚಿ ಗಿಡದ ಮ್ಯಾಲೆ ಬಾಜೂಕ ಇಟ್ಟು.......ಹ್ಯಾಂಗ.....ಅನ್ನೋಹಾಂಗ ಹಲ್ಲು ಕಿರೀತು. ನೆಲಕ್ಕೆ ಒಗಿಲಿಲ್ಲ. ಭಾರಿ ಮಂಗ್ಯಾ. ಇದೆ ಟೈಮ್ ನಲ್ಲಿ ನಾವು ಪೂಲ್ ದಂಡಿ ಮ್ಯಾಲೆ ಫುಲ್ ನಂಗಾ ಆಗಿ ಮಂಗ್ಯಾಗೆ ಕೆಳಗೆ ಒಗಿ......ಹುಸ್....ಹುಸ್....ಅಂತ ಹೇಳಿಕೊತ್ತಾ ನಿಂತಿದ್ರೆ, ನಮ್ಮ ಹಾಪ್ ಬೇಗಂ ನಮ್ಮದು ನಂಗಾ ತಸ್ವೀರ್ ತೆಗೆದು ಬಿಟ್ಟಳು ಅಕಿ ಮೊಬೈಲ್ ನ್ಯಾಗೆ. ಅದರ ಮ್ಯಾಲೆ ಅಂತಾಳೆ......ಕ್ಯಾ ಕರೀಂ ಖಾನ್ ಸಾಬ್......ಏಕ್ದಂ ಸಲ್ಮಾನ್ ಖಾನ್ ದಿಖ್ತೂ.....ಅಂತೆ.....ಸಿಟ್ಟು ಬಂದಿತ್ತು. ಆದರೂ ಮಂಗ್ಯಾ ಮಿಶನ್ ಮೇಲೆ ಇದ್ದೆ ನೋಡಿ. ಸುಮ್ಮನಿದ್ದೆ. ಅದು ಫೋಟೋ ಹ್ಯಾಂಗೋ ಆಗಿ ಅಕಿ ಮೊಬೈಲಿನಿಂದ ಇಂಟರ್ನೆಟ್ ಗೆ ಹೋಗಿ ಬಿಡ್ತು. ಸ್ಮಾರ್ಟ್ ಫೋನ್ ಅಂತೆ ಸ್ಮಾರ್ಟ್ ಫೋನ್. ಗಧಾ ಕಹೀಂಕಾ ಫೋನ್ - ಅಂತ ಹೇಳಿದ ಕರೀಂ.
ಹೋಗ್ಗೋ ನಿಮ್ಮ. ನೀವು ಮಂಗ್ಯಾ ಮಿಶನ್ ಮ್ಯಾಲೆ ನಂಗ್ಯಾ ಆದಾಗ ನಿಮ್ಮ ಧರ್ಮಪತ್ನಿ ನಿಮ್ಮ ಫೋಟೋ ತೆಗೆದು ಇಂಟರ್ನೆಟ್ ಗೆ ಹಾಕಿಬಿಡ್ತಾಳ ಅಂದ್ರ.....ಏನ್ರೀ ಇದು? ಮುಂದ? - ಅಂತ ಸಂತಾಪ ತೋರಿಸಿದೆ.
ಮುಂದೆ ಏನು ಸಾಬ್? ನಮ್ಮ ಟೆಕ್ನಿಕ್ ಇಂಪ್ರೂವ್ ಮಾಡಬೇಕಾಯಿತು - ಅಂದ ಕರೀಂ.
ಏನು ಇಂಪ್ರೂವ್ ಮಾಡಿದಿ ನಿನ್ನ ಮಂಗ್ಯಾ ಟೊಪಿಗಿ ಕಥಿ ಟೆಕ್ನಿಕ್ ಸಾಬ್ರಾ? - ಅಂತ ಕೇಳಿದೆ.
ಸಾಬ್ ನೋಡಿ ನಮಗೆ ಗೊತ್ತಾಯ್ತು ಇದು ಮಂಗ್ಯಾ ಭಾಳಾ ಜಾಬಾದ್ ಅದೆ. ಇದು ಕಪಡಾ ಕೆಳಗೆ ಒಗಿಬೇಕು ಅಂದ್ರೆ ನಾನೂ ಕೂಡ ಇನ್ನೊಂದು ಗಿಡ ಹತ್ತಿ, ಅಲ್ಲಿ ಎಲ್ಲಾ ಕಪಡಾ ಬಿಚ್ಚಿ, ಮ್ಯಾಲಿಂದ ಕೆಳಗೆ ಒಗೆದ್ರೆ ಅದೂ ಕೂಡ ಕೆಳಗೆ ಒಗಿತದೆ. ಅದಕ್ಕೆ ನಾನು ಬಿಚ್ಚಿದ್ದ ಕಪಡಾ ಎಲ್ಲಾ ಮತ್ತೆ ಹಾಕ್ಕೊಂಡು ಮಂಗ್ಯಾ ಇರೋ ಮುಂದಿನ ಗಿಡಾ ಹತ್ತಿದೆ ಸಾಬ್. ಮಂಗ್ಯಾನ ಕಣ್ಣಾಗ ಕಣ್ಣಿಟ್ಟು ನೋಡಿ, ನಾನೂ ಹಲ್ಲು ಕಿರಿದು ಕಿರಿದು, ಮಂಗ್ಯಾ ಗತೆ ಬಗಲು ಕೆರಕೋತ್ತ ಮಂಗ್ಯಾ ಸೌಂಡ್ ಮಾಡಿದೆ. ಮಂಗ್ಯಾ ಕೂಡ ಹಲ್ಲು ತೋರಿಸಿ ನಕ್ಕಿತು. ನನ್ನ ನೋಡಿ ಆಣಿಕಿಸಿತು. ಸಿಟ್ಟು ಬಂತು. ಕೈಯಾಗೆ ಬಂದೂಕ್ ಇದ್ದಿದ್ದರೆ ಆ ಮಂಗ್ಯಾನ ಅಲ್ಲೇ ಡಮಾರ್ ಅನ್ನಿಸಿಬಿಡ್ತಿದ್ದೆ. ಏನು ಮಾಡೋದು? ಗಿಡದ ಮ್ಯಾಲೆ ಹ್ಯಾಂಗೋ ಬ್ಯಾಲನ್ಸ್ ಮಾಡಿಕೊಂಡು, ಹ್ಯಾಂಗೋ ಮಾಡಿ ಎಲ್ಲಾ ಬಟ್ಟಿ ಬಿಚ್ಚಿದೆ. ಬಿಚ್ಚಿ ಎಲ್ಲಾ ಕಪಡೆ ಕೈಯಾಗೆ ಹಿಡಕೊಂಡು, ಮಂಗ್ಯಾ ಕಡೆ ನೋಡುವಾಗ ನಮ್ಮ ಹಾಪ್ ಬೇಗಂ ಮತ್ತೊಮ್ಮೆ ಕ್ಲಿಕ್ ಮಾಡಿರಬೇಕು. ಮತ್ತೊಂದು ನಂಗಾ ಪಂಗಾ ತಸ್ವೀರ್ ಇಂಟರ್ನೆಟ್ ಗೆ ಹೋಗಿ ಬಿಟ್ಟಿದೆ. ಇದರಲ್ಲಿ ಆ ಮಂಗ್ಯಾ ಕೂಡ ಹಲ್ಲು ಕಿರಿದು ನನ್ನ ಅಣಕಿಸೋದೂ ಕೂಡ ಇದೆ. ಮಂಗ್ಯಾ ಮೈಮೇಲೆ ಕಪಡೆ ಅದೆ. ನನ್ನ ಮೈಮೇಲೆ ಇಲ್ಲ - ಅಂದ ಕರೀಂ ದೊಡ್ಡ ವಿವರಣೆ ಕೊಟ್ಟ.
ಹೋಗ್ಗೋ ಸಾಬ್ರಾ.....ಭಾರಿ ತಲಿ ಓಡ್ಸಿರಲ್ಲರೀ. ಮುಂದ?
ನಾನು ಮಂಗ್ಯಾನ ನೋಡಿ, ಭಗವಾನ್ ಕೋ ಹೇಳಿ, ದುವಾ ಕೇಳಿ, ನಂದು ಕಪಡಾ ಎಲ್ಲ ಕೆಳಗೆ ಒಗದೆ. ಮಂಗ್ಯಾ ಒಂದು ಕ್ಷಣ ವಿಚಾರ ಮಾಡಿದಂಗೆ ಮಾಡಿ, ತಾನೂ ಎಲ್ಲಾ ಕಪಡಾ ಬಿಚ್ಚಿ ಬಿಚ್ಚಿ ಕೆಳಗೆ ಒಗಿತು. ಬೇಗಂ ಕೆಳಗಿಂದ ಚಪ್ಪಾಳೆ ಹೊಡೆದ ಅಬ್ಬರಕ್ಕೆ ಮಂಗ್ಯಾ ಘಾಬರಿ ಆಗಿ ಕೇವಲ ಅಕಿ ಚಡ್ಡಿ ಒಂದೇ ಹಾಕ್ಕೊಂಡು ಅಲ್ಲಿಂದ ಓಡಿ ಬಿಡ್ತು. ಚಡ್ಡಿ ಒಂದು ಬಿಟ್ಟರೆ ಬಾಕಿ ಎಲ್ಲಾ ಕಪಡಾ ರಿಕವರ್ ಆಯಿತು ಸಾಬ್. ನಾನು ಗಿಡ ಇಳಿದು ಬಂದು ಕಪಡಾ ಹಾಕಿಕೊಂಡೆ. ಬೇಗಂ ಕೂಡ ಪೂಲ ಬಿಟ್ಟು ಎದ್ದು ಬಂದು, ಮೈ ಇನ್ನೊಂದು ವರೆಸಿಕೊಂಡು ಸಿಕ್ಕ 'ಮಂಗ್ಯಾ ರಿಟರ್ನ್ಡ್ ವಸ್ತ್ರಾ' ಹಾಕಿಕೊಂಡು....ನಂದು ವಿಕ್ಟರೀ ಸಿಗರೇಟ್ (Victoria secret) ಚಡ್ಡಿ ಲೇಕೆ ಗಯಾ ರೆ....ಬಂದರ್ ಭಾಡ್ಕೊವ್....ಬಂದರ್ ಕಹೀಂಕಾ ಅಂತ ಫೋನ್ ನಲ್ಲಿ ಯಾರಿಗೋ ಹೇಳುತ್ತಾ ಮನಿಗೆ ಬಂದಳು - ಅಂತ ಕಥಿ ಮುಗಿಸಿದ ಕರೀಂ.
ದೊಡ್ಡ ಕಥಿ ಬಿಡ್ರೀ ಸಾಬ್ರಾ. ನಿಮ್ಮ ನಂಗಾ ತಸ್ವೀರ್ ಇಂಟರ್ನೆಟ್ ನ್ಯಾಗ್ ಬಂದಿದ್ದು ನಿಮಗ ಹ್ಯಾಂಗ ಗೊತ್ತಾತು? -ಅಂತ ಕೇಳಿದೆ.
ಸಾಬ್....ಅದು ದೊಡ್ಡ ದರ್ದಭರಿ ಕಹಾನಿ ಸಾಬ್ - ಅಂತ ಹೇಳಿ ಕಣ್ಣು ಒರೆಸಿಕೊಂಡ ಕರೀಂ.
ಸಾಬ್.....ಯಾರೋ.....ಹೆಚ್ಚಾಗಿ ಪರದೇಶಿ ಕೃಷ್ಣಾನೇ ಇರಬೇಕು. ನನ್ನ ಫೋಟೋ ಫೇಸ್ಬುಕ್ ನಲ್ಲಿ ಹಾಕ್ಬಿಟ್ಟಿ, ಅದರ ಮ್ಯಾಲೆ ನಮ್ಮ ಬೇಗಂ ಟ್ಯಾಗ್ ಮಾಡಿ ROTFL ಅಂತ ಕಾಮೆಂಟ್ ಮಾಡಿದ. ಹಾಗಾಗಿ ಅದು ನಮ್ಮ ವಾಲ್ ಮ್ಯಾಲೆ ಬಂತು ಸಾಬ್. ಆ ಮ್ಯಾಲೆ ಎಲ್ಲೆಲ್ಲೋ ಹೋಗಿ, ಏನೇನೋ ಆಗಿ, ಎಲ್ಲರಿಗೂ ಸಿಕ್ಕಿಬಿಡ್ತು. ಮತ್ತೆ ಎರಡನೇ ನಂಗಾ ಪಂಗಾ ಫೋಟೋ.....ಗಿಡದ ಮೇಲೆ ಬಂದರ್ ಜೊತೆ....ಅದನ್ನು ಹಾಕಿ, ನಮ್ಮ ಬೇಗಮ್ಗೆ ಟ್ಯಾಗ್ ಮಾಡಿ......ಇದರಲ್ಲಿ ನಿನ್ನ ಕರೀಂ ಯಾರು ಅಂತ ಕೇಳಿ ಮತ್ತೆ ಅದೇನೋ ROTFL ಅಂತ ಹಾಕ್ಕೊಂಡಾನೆ.....ಏನು ಮಾಡೋದು ಸಾಬ್? ROTFL ಅಂದ್ರೆ ಏನು ಸಾಬ್? - ಅಂತ ಇನ್ನೋಸೆಂಟ್ ಆಗಿ ಕೇಳಿದ ಕರೀಂ.
ಸಾಬ್ರಾ ಅದೆಲ್ಲ ಇರಲಿ. ಆ ಹರಾಮಕೋರ, ನಿಮ್ಮ ಬೇಗಂ ಮಾಜಿ ಡೌ ಗೆ ಮಾಡೋಣ ಇರ್ರಿ. ಅವಂದು ಫೋಟೋ ಡೌನ್ಲೋಡ್ ಮಾಡಿ, ಫೋಟೋಶಾಪ್ ಮಾಡಿ, ಅವನೂ ನಂಗಾ ಮತ್ತ ಅವನ ಜೊತಿ ಕಪಡಾ ಹಾಕ್ಕೊಂಡ ಒಂದು ಗೊರಿಲ್ಲಾ ಇಟ್ಟು ನಾವೂ ಕೂಡ ಅದನ್ನ ಫೇಸ್ಬುಕ್ ಗೆ ಹಾಕಿ, ನಿಮ್ಮ ಬೇಗಂ ಟ್ಯಾಗ್ ಮಾಡೋಣ. ಆವಾಗ ಅವನಿಗೆ ಕಾಣ್ತದೆ. ಮತ್ತು ಗೊತ್ತಾಗ್ತದೆ ಕರೀಂ ಏನು ಆರ್ಡಿನರಿ ಅಲ್ಲಂತ. ಚಿಂತಿ ಮಾಡಬ್ಯಾಡ್ರೀ ನೀವು - ಅಂತ ಮಸ್ತ ಸ್ಕೀಮ್ ಹಾಕಿ ಕೊಟ್ಟೆ.
ಇನ್ನ ಇಡ್ತೇವಿ ನೋಡ್ರೀ ಆವಂಗ ಬತ್ತಿ.
ಸಾಬ್ರಾ......ಅವ ನಿಮ್ಮ ಬೇಗಂ ಮಾಜಿ ಆಶಿಕ್ ತನ್ನ ಕೊಳಲಿನ್ಯಾಗ ದ.ರಾ. ಬೇಂದ್ರೆ ಅವರ "ಗಂಗಾವತರಣಂ" ಒಳಗಿನ "ಇಳಿದು ಬಾ ತಾಯೇ" ಹಾಡು ಬಾರ್ಸಿದ ಏನು? ಅದ ಕೇಳಿ ಗಿಡದ ಮ್ಯಾಲಿನ ಮಂಗ್ಯಾ ಕೆಳಗ ಇಳಿದು ಬಂದು ವಸ್ತ್ರಾ ತೊಗೊಂಡು ಮ್ಯಾಲೆ ಓಡಿ ಹೋಗಿತ್ತೇನು? - ಅಂತ ಕೇಳಿದೆ.
"ಮಂಗಾವತರಣಂ"!!!!? ಅಂದ್ರೆ ಕ್ಯಾ ಸಾಬ್? - ಅಂತ ಕೇಳಿದ ಕರೀಂ.
ಸಾಬ್ರಾ....ನೀವು ಒಮ್ಮೊಮ್ಮೆ ತಪ್ಪ ತಪ್ಪ ಹೇಳಿದ್ರೂ, ಸಂದರ್ಭಕ್ಕ ಸರಿ ಇರೋ ಹಾಂಗ ಹೇಳ್ತೀರಿ ನೋಡ್ರೀ. ನಾ ಗಂಗಾವತರಣಂ ಅಂದೆ. ಮಂಗ್ಯಾನ ಗುಂಗಿನ್ಯಾಗ ಇದ್ದ ನಿಮಗ ಅದು ಮಂಗಾವತರಣಂ ಅಂತ ಕೇಳಿದ್ರ ತಪ್ಪಿಲ್ಲ. ಮತ್ತ ಈ ಸಂದರ್ಭಕ್ಕೂ ಹೊಂದ್ತದ. ಮಂಗಾವತರಣಂ ಆತು. ಹಾಂಗಾ ವಸ್ತ್ರಾಪಹರಣಂ ಕೂಡ ಆತು - ಅಂತ ಹೇಳಿದೆ.
ಹೌದು ಸಾಬ್.....ಹೌದು....ಆ ಬಡ್ಡಿದು ಮಗನಿಗೆ ಬತ್ತಿ ಯಾವಾಗ ಇಡೋದು ಸಾಬ್ - ಅಂತ ಕೇಳಿದ ಕರೀಂ.
ಅದರ ಚಿಂತಿ ಬಿಡ್ರೀ. ಅವನೌನ ಆ ಬದ್ಮಾಶನ FB ಪ್ರೊಫೈಲ್ ಫಾರ್ವರ್ಡ್ ಮಾಡ್ರೀ. ಹ್ಯಾಂಗ ಫೋಟೋಶಾಪ್ ಮಾಡಸ್ತೇನಿ ಅಂತ ನೋಡೀರಿ ಅಂತ - ಅಂತ ಹೇಳಿ ಫುಲ್ ಆಶ್ವಾಸನೆ ಕೊಟ್ಟೆ.
ಆಯ್ತು ಸಾಬ್....ಖುದಾ ಹಾಫಿಜ್.ಬರ್ತೀನಿ - ಅಂತ ಟಾವೆಲ್ ನಿಂದ ಮುಖ ಮುಚ್ಚಿಗೊಂಡು ಹೋದ ಕರೀಂ.
ಪಾಪ..... ಮಂಗಾವತರಣಂ ವಸ್ತ್ರಾಪಹರಣಂ. ಮಂಗ್ಯಾ ಇಳಿದು ಬಂದು, ಸಾಬ್ರು ನಂಗ್ಯಾ ಆಗಿ, ಫೋಟೋ ಅಪ್ಲೋಡ್ ಆಗಿ.....ರಾಮಾ....ರಾಮಾ.
** ಈ ಲೇಖನದ ಐಡಿಯಾ ಬಂದಿದ್ದು ಈ ಹಾಡು ನೋಡಿದಾಗ. ಸಾಬರ ಮನೆ ಭಾವಿ ಸ್ವಿಮಿಂಗ್ ಪೂಲ್ ಹೀಗೇ ಇರಬಹುದೇನೋ? ಬೇಗಂ ಮಾತ್ರಾ ಹೀಗೆ ಇದ್ದಾರೆ......:) :) ಮೂವತ್ತು ವರ್ಷದ ಹಿಂದಿನ ಈ ಹಾಡು ಇವತ್ತಿಗೂ ಮಸ್ತ ಇದೆ.
** ಈ ಲೇಖನದ ಐಡಿಯಾ ಬಂದಿದ್ದು ಈ ಹಾಡು ನೋಡಿದಾಗ. ಸಾಬರ ಮನೆ ಭಾವಿ ಸ್ವಿಮಿಂಗ್ ಪೂಲ್ ಹೀಗೇ ಇರಬಹುದೇನೋ? ಬೇಗಂ ಮಾತ್ರಾ ಹೀಗೆ ಇದ್ದಾರೆ......:) :) ಮೂವತ್ತು ವರ್ಷದ ಹಿಂದಿನ ಈ ಹಾಡು ಇವತ್ತಿಗೂ ಮಸ್ತ ಇದೆ.
8 comments:
Very nice and funny... he he :)
ಓದಿ ಕಾಮೆಂಟ್ ಹಾಕಿದ್ದಕ್ಕೆ ತುಂಬಾ ಧನ್ಯವಾದ.
ಆಗಾಗ ಬಂದು, ಓದಿ, ಅಭಿಪ್ರಾಯ ತಿಳಿಸುತ್ತಾ ಇರಿ.
-ಮಹೇಶ
channagide.. :)
ಧನ್ಯವಾದ ಸತೀಶ ರಾಮಚಂದ್ರಪ್ಪ ಅವರೇ.
ಆಗಾಗ ಬಂದು, ಓದಿ, ಅಭಿಪ್ರಾಯ ತಿಳಿಸುತ್ತಾ ಇರಿ.
-ಮಹೇಶ
Kandita Mahesh avare
ಪಂದ್ರಾ ಲಾಖ್ ಸ್ವಿಮ್ಮಿಂಗ್ ಪೂಲ್ ಧಾರವಾಡದಾಗ ಎಲ್ಲೈತ್ರೀಪಾ ? ಇರೋ ಒಂದ್ ಮುನಸೀಪಾಲ್ಟಿ ಸ್ವಿಮ್ಮಿಂಗ್ ಪೂಲ್ ಬಂದ್ ಆಗಿ ಎರ್ಡು ವರ್ಷ ಆತು. ಈಗ ಏನ್ ಇದ್ರೂ ಈಸ್ಯಾಡಾಕ ಕೆಲಗೇರಿ ಕೆರಿನ ಗತಿ.ಅದೂ ಬಾಳಾ ಡೇಂಜರ್ ಕೆರಿ.ವರ್ಷಕ್ಕ ಒಬ್ಬರು- ಇಬ್ಬರನ ಬಲೀ ತೊಗೋತೈತಿ. ದನಾ ತೊಳೀಲಿಕ್ಕೂ ನೀರು ಇಲ್ಲಾ.ಎಮ್ಮಿಕೆರಿಯೊಳಗನೂ ಪೂರಾ ಮಣ್ಣು ಹಾಕಿ ಬಿಲ್ಡಿಂಗ್ ಕಟ್ಟ್ಯಾರು.....ಅಂಗಡಿ
ಅಂಗಡಿ ಅವರ ನಮಸ್ಕಾರ....ನೀವು ಹೇಳಿದ್ದು ಖರೆ. ನೀರಿನ ಪ್ರಾಬ್ಲೆಮ್ ಭಾಳ ಅದ. ಅದಕ್ಕ ನಾವು 'ಊಹಾ' ಮಾಡಿ ಯಾರರ ಮನಿ ಒಳಗ ಇರೋ ಹಳೆ ಭಾವಿನ ಸ್ವಿಮಿಂಗ್ ಪೂಲ್ ಮಾಡಿಸಿಕೊಳ್ಳಲಿ ಅಂತ ಸಲಹಾ ಕೊಟ್ಟ್ವಿ.:) :) :)
ಪಬ್ಲಿಕ್ ಸ್ವಿಮಿಂಗ್ ಪೂಲ್ ಬಂದಾಗಿದ್ದು ಗೊತ್ತಿರಲಿಲ್ಲ.
ಕೆಲಗೇರಿ ಕೆರಿ ಅಂದ ಕೂಡಲೇ ನೆನಪ ಆತು. ನಮ್ಮ ಅಣ್ಣ, ನಿಮ್ಮ ದೋಸ್ತ ಅಲ್ಲೇ ಸ್ವಿಮಿಂಗ್ ಕಲ್ತಿದ್ದ. ನಿಮಗ ನೆನಪ ಇರಬಹುದು.......ದಿವಂಗತ ಪ್ರೊ.ಬಾರಿಗಿಡದ (ಫಿಸಿಕ್ಸ್ ಡಿಪಾರ್ಟ್ಮೆಂಟ್) ಅವರ ಅವಂಗ ಈಜು ಕಲ್ಸಿದ್ದರು. ನಾವು ಮಾತ್ರ ಪಬ್ಲಿಕ್ ಸ್ವಿಮಿಂಗ್ ಪೂಲಿನ್ಯಾಗ ಕಲಿತವರು.
ಅವ ನಿಮ್ಮ ಇನ್ನೊಬ್ಬ ದೋಸ್ತ / ಕ್ಲಾಸ್ಮೇಟ್ ತಾಡಮರಿ ಅನ್ನೋವ ಇದ್ದ ನೋಡ್ರೀ....ಅವಾ ಪಬ್ಲಿಕ್ ಸ್ವಿಮಿಂಗ್ ಪೂಲಿಗೆ ಹೋಗ್ತಿದ್ದ. ಇವತ್ತು ನೆನಪ ಆತು.
ಬ್ಲಾಗಿಗೆ ಬಂದು ಓದಿ ಕಾಮೆಂಟ್ ಮಾಡಿದ್ದಕ್ಕೆ ಥ್ಯಾಂಕ್ಸ್ ರೀ!
So funny
Post a Comment