Tuesday, November 06, 2012

ಸೂಪರ್ ಸೋಮಾಲಿಯೊಬ್ಬಳ ಸತ್ಯಕಥೆ


ಅಯ್ಯೋ ಬಿಡ್ರೀ. ನಮ್ಮ ಸೋಮಾಲಿಯಾದಲ್ಲಿ ಮಹಿಳೆಯರ ಮೇಲೆ ಆಗೋ ಲೈಂಗಿಕ ದೌರ್ಜನ್ಯದ ಮುಂದೆ ಬೇರೆ ಕಡೆ ಆಗೋದೆಲ್ಲ ಏನೂ ಅಲ್ಲ ಬಿಡಿ. ನಿಮ್ಮೂರಲ್ಲಿ ರಶ್ ಬಸ್ಸಿನಲ್ಲೋ, ಟ್ರೇನಿನಲ್ಲೋ ಯಾರೋ ಮೈಗೆ ಮೈ ಹೊಸೆದಾನು. ಇನ್ನೊಬ್ಬವ ಅಂಡು ಚಿಗುಟಿಯಾನು. ಮತ್ತೊಬ್ಬ ವಿಕೃತ ಎದೆ ಮೇಲೆ ಕೈ ಆಡಿಸಿಯಾನು. ಇನ್ನೊಬ್ಬ ಯಾರೂ ಸುತ್ತ ಮುತ್ತ ಇಲ್ಲ ಅಂದ್ರೆ ವಿಕೃತ ಸನ್ನೆ ಮಾಡಿ ಬಾ ಅಂದಾನು. ಒಬ್ಬನಿಗೆ ಚಪ್ಪಲಿಯಲ್ಲಿ ನಾಕು ಕೊಡ್ತೀರಿ. ಇನ್ನೊಬ್ಬನಿಗೆ ಕಪಾಳಕ್ಕೆ ಕೊಡ್ತೀರಿ. ಸುತ್ತ ಮುತ್ತ ಇರೋ ಜನ ಕೂಡ ನಿಮ್ಮ ಬೆಂಬಲಕ್ಕೆ ಬಂದು, ಅವರೂ ನಾಕು ಧರ್ಮದೇಟು ಹಾಕಿ, ನೀವು ಎಷ್ಟೋ ಮಟ್ಟಿಗೆ ಸೇಫ್. ನಮ್ಮ ಸೋಮಾಲಿಯಾದಲ್ಲಿ ಮಾತ್ರ ಮಹಿಳೆಯರ ಮೇಲೆ ಆಗುವ ಅತ್ಯಾಚಾರ ಏನಿದೆಯಲ್ಲ ಅದು ಘೋರ. ಘನ ಘೋರ.

ಮೊದಲೇ ಸಿಕ್ಕಾಪಟ್ಟೆ ಪುರುಷ ಪ್ರಧಾನ ಸಮಾಜ. ಸಿಕ್ಕಾಪಟ್ಟೆ ಮಹಿಳೆಯರ ಶೋಷಣೆ. ಏನೇ ಗೆದ್ದರೂ, ಏನೇ ಸೋತರೂ ಕಡೆಗೆ ಯಾರೋ ಪಾಪದ ಮಹಿಳೆ ಮೇಲೆ ಸಿಕ್ಕಾಪಟ್ಟೆ ದೌರ್ಜನ್ಯ ಮಾಡದಿದ್ದರೆ ದುಷ್ಟ ಬುದ್ಧಿಯ ಗಂಡಸರಿಗೆ ಸಮಾಧಾನವಿಲ್ಲ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಇರುವ ಒಂದು ಭಾವನೆ ಅಂದರೆ - ಹೆಣ್ಣು ಭೋಗದ ವಸ್ತು ಅಂತ. ಅದರ ಮೇಲೆ ಕಮ್ಮಿ ಶಿಕ್ಷಣ. ಒಂದು ತರಹದ ಅದುಮಿಟ್ಟ (repressed) ಸಮಾಜ. ಹಾಂಗಾಗಿ ಹೆಂಗಸರ ಮೇಲೆ ಆಗುವ ದೌರ್ಜನ್ಯ ಸಿಕ್ಕಾಪಟ್ಟೆ ಕ್ರೌರ್ಯಭರಿತ ಮತ್ತು ಹೇಳಲು ಕೇಳಲು ಸಹ ಕಷ್ಟ.

ಇದರ ಮೇಲೆ ಸಿಕ್ಕಾಪಟ್ಟೆ ಪಂಗಡಗಳು. ಅವರಲ್ಲೇ ಜಗಳ. ಹೊಡೆದಾಟ. ಸೋತವರ ಗಂಡಸರೆಲ್ಲರನ್ನೂ ಕೊಂದು, ಹೆಂಗಸರನ್ನು ಗೆದ್ದವರ ಹಾರೆಮ್ ಗೆ ಭರ್ತಿ ಮಾಡುವದು ಪದ್ಧತಿ. ಅದು ಹಣೆಬರಹ ಅಂತ ಒಪ್ಪಿಕೊಂಡು ಇರುವ ಮಹಿಳೆಯರೇ ಹೆಚ್ಚು.

ಇನ್ನೂ ಮದುವೆ ಆಗದ ಹುಡುಗಿಯರ ಕಥೆ ಕೇಳಲೇ ಬೇಡಿ. ಅವರ ಮೇಲೆಯೇ ಬಲಾತ್ಕಾರ ಆದರೂ ಅದಕ್ಕೂ ಅವರೇ ಹೊಣೆ. ಇದೆಲ್ಲಿಯ ನ್ಯಾಯವೋ? ಗೊತ್ತಿಲ್ಲ. ಎಲ್ಲದಕ್ಕೂ ಒಂದು ಧಾರ್ಮಿಕ ಮುದ್ರೆ ಹಾಕಿ ತಿಪ್ಪೆ ಸಾರಿಸಿ ಬಿಡುವ ಹಿರಿಯರು, ಧಾರ್ಮಿಕ ಮುಖಂಡರು. ಇದೆಲ್ಲ ಅಲ್ಲಾಹುವಿನ ಖುಷಿಗಂತೆ.

ಹೀಗೆ ಇರುವಾಗ, ನಾವು ಮಹಿಳೆಯರು ನಮ್ಮನ್ನು ಬಚಾವ್ ಮಾಡಿಕೊಳ್ಳುವ ತಂತ್ರಗಳೇ ಬೇರೆ ಇರುತ್ತವೆ. ಪಶ್ಚಿಮದ ದೇಶಗಳಲ್ಲಿ ಸ್ತ್ರೀಯರು ರಕ್ಷಣೆಗೆ ಪೆಪ್ಪರ್ ಸ್ಪ್ರೇ(pepper spray) ಇಟ್ಟುಕೊಳ್ಳುತ್ತಾರೆ. ಮತ್ತೇನೋ ಮಾಡುತ್ತಾರೆ. ನಾವು ಸೋಮಾಲಿಯಾ ಎಂಬ ಬಡ ದೇಶದವರು. ನಾವೇನು ಮಾಡೋಣ? ನಮ್ಮದು  do-or-die ಪರಿಸ್ಥಿತಿ. ಯಾಕೆಂದ್ರೆ ಹುಡುಗಿ ಬಲಾತ್ಕಾರಕ್ಕೆ ಒಳಗಾದರೆ, ಮತ್ತೆ ಒಳಗಾದ ನಂತರ ಬದುಕಿ ಉಳಿದರೆ ಸಮಾಜ ಅವಳನ್ನು ಅಂತ್ಯಂತ ಕ್ರೂರ ರೀತಿಯಲ್ಲಿ ನಡೆಸಿಕೊಂಡು ಅಣು ಅಣುವಾಗಿ ಕೊಲ್ಲುತ್ತದೆ. ಅದಕ್ಕಿಂತ do-or-die ಫೈಟ್ ಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವದು ಬೆಟರ್. ಗೆದ್ದರೆ ಬದುಕಲು ಒಂದು ಚಾನ್ಸ್. ಇಲ್ಲಾಂದ್ರೆ ಅಲ್ಲಾಕೋ ಪ್ಯಾರೆ.

ನಮ್ಮ ಅಜ್ಜಿ ಹೇಳಿ ಕೊಟ್ಟಿದ್ದ ಟೆಕ್ನಿಕ್ ಇದು. ಈ ಟೆಕ್ನಿಕ್ ಎಲ್ಲ ಹುಡುಗಿಯರಿಗೂ ಬುದ್ಧಿ ಬಂದಾಗಿಂದ ಹೇಳಿ ಕೊಡಲಾಗುತ್ತದೆ. ಹುಡುಗಿಯರಿಗೆ ಕನಸಲ್ಲೂ ಇದೆ ಕಂಡು, ಅಲ್ಲೇ ಪ್ರಾಕ್ಟಿಸ್.

ನೋಡು ಮೊಮ್ಮಗಳೇ....ಯಾರಾದರು ಬಂದು ನಿನ್ನ ಬಲಾತ್ಕಾರಕ್ಕೆ ಯತ್ನಿಸಿದರು ಅಂದುಕೋ. ಮೊದಲು ಅಲ್ಲಾಹುವಿನ ಹೆಸರು ತೆಗೆದುಕೊಂಡು, ಏನೂ ಮಾಡದೇ ಇರುವಂತೆ ಕೇಳಿಕೋ. ಅಂಗಾಲಾಚಿ ಬೇಡಿಕೋ. ಪರಿಪರಿಯಾಗಿ ಬೇಡಿಕೋ. ಕಾಲಿಗೆ ಬಿದ್ದು ಉಳ್ಳಾಡಿ ಉಳ್ಳಾಡಿ  ಕೇಳಿಕೋ. ಒಮ್ಮೊಮ್ಮೆ ಅಲ್ಲಾಹುವಿನ ಹೆಸರು ಕೇಳಿದಾಕ್ಷಣ ಕಾಮಾಂಧರ ಹುಚ್ಚು ಇಳಿದು ಏನೂ ಮಾಡದೆ ನಿಮ್ಮನ್ನು ಬಿಟ್ಟು ಬಿಡುವ ಚಾನ್ಸ್ ಇರುತ್ತದೆ. ಹಾಗೆ ಆಗಲಿ ಅಂತಾನೇ ದೇವರಲ್ಲಿ ಕೇಳಿಕೋ. ಇದಕ್ಕೆ ಬಗ್ಗಲಿಲ್ಲ ಅಂದ್ರೆ, ನೆಕ್ಸ್ಟ್ do-or-die ಫೈಟ್. ಟೆಕ್ನಿಕ್ ಇಷ್ಟೇ. ಮಿಂಚಿನ ವೇಗದಲ್ಲಿ ಅವನ ಕಡೆ ನುಗ್ಗು. ಅವನ ಸರೋಂಗ್ (ಲುಂಗಿ) ಎತ್ತೇ ಬಿಡು. ಎತ್ತಿದಾಕ್ಷಣ ಅವನ ತೊಡೆ ಮಧ್ಯೆ ಕೈ ಹಾಕಿ, ವೃಷಣಗಳ ಹಿಡಿದೇ ಬಿಡು. ಉಕ್ಕಿನ ಗ್ರಿಪ್ಪಲ್ಲಿ ಹಿಡಿದು, ಇದ್ದಷ್ಟೂ ಕಸು ಹಾಕಿ ಒತ್ತೇ ಬಿಡು. ಎರಡೂ ಕೈ, ಇದ್ದಷ್ಟೂ ಬಲ ಉಪಯೋಗಿಸು. ಗಂಡಸು ಕಾಡು ಮೃಗದಂತಾಗುತ್ತಾನೆ. ನೋವಿನಿಂದ ಅಬ್ಬರಿಸುತ್ತಾನೆ. ಒದೆಯುತ್ತಾನೆ. ಹೊಡೆಯುತ್ತಾನೆ. ನಿನ್ನ ತಲೆ ಬೊಂಡ ಒಡೆದಾನು. ಏನೇ ಆಗಲಿ ಉಕ್ಕಿನ ಹಿಡಿತ ತಪ್ಪಿಸದಿರು. ಹಿಡಿದದ್ದು ಬಿಟ್ಟಿಯೋ? ಅಮುಕೋದ ನಿಲ್ಲಿಸಿದೆಯೋ? ಸತ್ತೆ ಅಂತ ತಿಳಿ. ನೀನು ಸರಿಯಾಗಿ ಮಾಡಿದ್ದೇ ಹೌದಾದರೆ ಕೆಲವೇ ಕೆಲವು ನಿಮಿಷಗಳಲ್ಲಿ ಗಂಡು ನೋವು ತಡೆಯಲಾರದೆ ಪ್ರಜ್ಞೆ ತಪ್ಪುತ್ತಾನೆ. ಎಷ್ಟೋ ಸಲ ಗಂಡು ಗುಂಡು ಹಾರಿಸಿಯಾನು. ಕತ್ತಿಯಿಂದ ತಿವಿದಾನು. ನೆನಪಿರಲಿ ಬಲಾತ್ಕಾರ ಮಾಡಿಸಿಕೊಂಡ ಹೆಣ್ಣಿನ ಸ್ಥಿತಿ ಏನು ಅಂತ. ಅದಕ್ಕಿಂತ ಸಾಯುವದೇ ಒಳ್ಳೇದು. ಅದಕ್ಕೇ ಈ ಟೆಕ್ನಿಕ್. ತಿಳಿಯಿತಾ ಮೊಮ್ಮಗಳೇ? ತಲೆತಲಾಂತರಗಳಿಂದ ಇದೇ ನಮ್ಮ ಲಾಸ್ಟ್ ರೆಸಾರ್ಟ್ ಅನ್ನುವಂತ ಟೆಕ್ನಿಕ್. ವರ್ಕ್ ಕೂಡ ಆಗುತ್ತದೆ ಸರಿಯಾಗಿ ಮಾಡಿದರೆ! ಸಂಶಯ ಬೇಡ.

ಹೀಗಂತ ಸೀದಾ ಸೀದಾ ಯಾವದೇ ಉತ್ಪ್ರೇಕ್ಷೆ (exaggeration) ಇಲ್ಲದೆ ಬರೆಯುತ್ತ ಹೋಗುವವರು ಅಯಾನ್ ಹರ್ಸಿ ಅಲಿ ಎಂಬ ಸೋಮಾಲಿ ಮಹಿಳೆ.

ಅವರ ಆತ್ಮಕಥೆ 'Infidel' ಎಂಬ ಪುಸ್ತಕ.

ಮೈ ಗಾಡ್! ಓದಿಯೇ ತಿಳಿಯಬೇಕು ಸೋಮಾಲಿಯದ ಜನರ ಬವಣೆ. ಕಳೆದ ಸರಿ ಸುಮಾರು 35-40 ವರ್ಷದಿಂದ ನಡೆಯುತ್ತಿರುವ ಸಿವಿಲ್ ವಾರ್. ಭೀಕರ ಬರಗಾಲ. ಡಜನ್ಗಟ್ಟಲೆ ಪಂಗಡಗಳು. ಅವರಲ್ಲೇ ಜಗಳ. ಹಿಂಸೆ. ಶಿಕ್ಷಣ ಇಲ್ಲ. ಧರ್ಮಾಂಧತೆ. ಒಂದಾ, ಎರಡಾ?!!!!

ಇಂತಹದರಲ್ಲಿ ಮುಂದಿನ ಪೀಳಿಗೆಗಳಿಗೆ ಆಸೆಯ ನಕ್ಷತ್ರದಂತೆ ಎದ್ದು ಬರುವವರು ಲೇಖಕಿ - ಅಯಾನ್ ಹರ್ಸಿ ಅಲಿ.

ಅವರ ಲೈಫೇನೂ ಸ್ಮೂತ್ ಇರಲಿಲ್ಲ. ಪರದೇಶದಲ್ಲಿ ಓದಿ ಬಂದ ತಂದೆ ರಾಜಕೀಯ ಮುಖಂಡ. ವಿರೋಧ ಪಕ್ಷ. ಸರ್ವಾಧಿಕಾರಿ ಸಯ್ಯದ್ ಬ್ಯಾರೆಯ ವಿರುದ್ಧ ಹೋರಾಟ. ಬಂಧನ. ಹೇಗೋ ತಪ್ಪಿಸಿಕೊಂಡು ಓಡಿ ಪಕ್ಕದ ಇಥಿಯೋಪಿಯ, ಕೀನ್ಯಾ ದಲ್ಲಿ ನಿರಾಶ್ರಿತ್ರರ ಜೀವನ. ಅಲ್ಲಿಯೂ ಸೋಮಾಲಿ ಸಮಾಜದ ಉಸಿರುಗಟ್ಟುವ ವಾತಾವರಣ.

ಇಂತಹ ವಾತಾವರಣದಲ್ಲಿ ಲೇಖಕಿ ಮತ್ತು ಆಕೆಯ ಒಬ್ಬ ಅಣ್ಣ ಮತ್ತು ತಂಗಿ ಬೆಳೆಯುತ್ತಾರೆ. ಅಬ್ಬಾ!! ಆ ಮಕ್ಕಳು ಅನುಭವಿಸಿದ ಅನುಭವ ಓದುತ್ತ ಹೋದರೆ, ಮೈ ಗಾಡ್! ಏನು ಹೇಳಬೇಕೋ ತಿಳಿಯುವದಿಲ್ಲ. ಕೆಲವೊಂದು ಮಾತ್ರ ತುಂಬಾ ಗ್ರಾಫಿಕ್ ಇವೆ. ಲೇಖಕಿ ಹೇಳೇ ಬಿಡುತ್ತಾರೆ. ಇದ್ದದ್ದು ಇದ್ದಾಂಗೆ ಹೇಳಿದ್ದೇನೆ. ರೋಚಕ ಅಥವಾ ಭೀಭತ್ಸ ಮಾಡುವ ಇರಾದೆ ಇಲ್ಲ. ಇಷ್ಟು ಓದಿದ ಮೇಲೆ ಆದರೂ ನಮ್ಮ ಜನ ಎಚ್ಚೆತ್ತುಕೊಂಡು ಏನು ಬದಲಾಗ ಬೇಕೋ ಬದಲಾದಾರಾ ಅಂತ ಅವರ ಆಸೆ.

ಮುಂದೆ ಬಲವಂತದ ಮದುವೆಗೆ ಒಳಗಾಗುವ ಲೇಖಕಿ ಕೀನ್ಯಾ ಬಿಟ್ಟು ಓಡುತ್ತಾರೆ. ಅದೇ ಒಂದು ರೋಚಕ ಗಾಥೆ. ಹೇಗೋ ಮಾಡಿ ಹಾಲಂಡ್ ತಲಪುತ್ತಾರೆ. ಅಲ್ಲಿ ಮೊದಲು ನಿರಾಶ್ರಿತರಾಗಿ ಜೀವನ. ನಂತರ ಚಿಕ್ಕಪುಟ್ಟ ಕೆಲಸ. ಸುಮಾರು ದಿನಗಳ ನಂತರ ಅವರಿಗೆ ಅಲ್ಲಿ ರಾಜಕೀಯ ಸಂತ್ರಸ್ತರು ಅಂತ ವಲಸೆ ಪರ್ಮಿಟ್ ಸಿಕ್ಕು ಓದಲು ಶುರು ಮಾಡುತ್ತಾರೆ. ಪಾಲಿಟಿಕಲ್ ಸೈನ್ಸ್ ನಲ್ಲಿ ಓದಿ, ಗಮನಾರ್ಹ ಲೇಖನಗಳನ್ನು ಬರೆದು, ಸಿಕ್ಕಾಪಟ್ಟೆ ಭಾಷಣ ಬಿಗಿದು, ಹಾಲಂಡಿನ ರಾಜಕೀಯ ಮುತ್ಸದ್ದಿಗಳ, ಚಿಂತಕರ ಕಣ್ಣಿಗೆ ಬಿದ್ದು ಭಲೇ ಭಲೇ ಅಂತ ಅನ್ನಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಅವರಿಗೆ ಹಾಲಂಡಿನ ಪೌರತ್ವ ಕೂಡ ಸಿಗುತ್ತದೆ.

ಇವರ ಕಥೆ, ಇವರು ಮಾಡಿಧ ಸಾಧನೆಗಳನ್ನು ಗಮನಿಸಿದ ಕೆಲವು ಸಮಾನಮನಸ್ಕ ನಾಯಕರು ಇವರನ್ನು ಚುನಾವಣೆಗೆ ನಿಲ್ಲುವಂತೆ ಹೇಳುತ್ತಾರೆ. ನಿಂತು ಗೆದ್ದೇ ಬಿಡುತ್ತಾರೆ ಅಯಾನ್ ಹರ್ಸೀ ಅಲಿ!!!! ಕೆಲವೇ ವರ್ಷಗಳ ಹಿಂದೆ ಕೀನ್ಯಾದ ಕೊಳಗೇರಿಗಳಲ್ಲಿ ಇದ್ದವರು ಈಗ ಹಾಲಂಡಿನ ಪಾರ್ಲಿಮೆಂಟ್ ಮೆಂಬರ್.

ಬೇರೆ ಯಾರೋ ಆಗಿದ್ದರೆ ಗ್ರೀನ್ ಕಾರ್ಡ್ ಸಿಕ್ಕಿತು, ಪೌರತ್ವ ಸಿಕ್ಕತು, ಒಳ್ಳೆ ಸರ್ಕಾರಿ ನೌಕರಿ, ಮತ್ತೇನು ಬೇಕು? ಆರಾಮ ಇದ್ದು ಬಿಡೋಣ ಅಂತ ಹಳೆಯದ್ದೆಲ್ಲ ಮರೆತು ಇದ್ದು ಬಿಡುತ್ತಿದ್ದರೋ ಏನೋ? ಆದ್ರೆ ಹುಟ್ಟು ಹೋರಾಟಗಾರ್ತಿಯಾದ ಇವರು ಹಾಗೆ ಹೇಗೆ ಮಾಡಿಯಾರು?

ಆಗಲೇ ಸಿಗುತ್ತಾನೆ ವ್ಯಾನ್ ಗೋ ಎಂಬ ಒಬ್ಬ ಪಿರ್ಕೀ ಫಿಲಂ ಮೇಕರ್. ಇಬ್ಬರೂ ಕೂಡಿ ಧರ್ಮಾಂಧತೆಯ ಬಗ್ಗೆ Submission ಎಂಬ ಒಂದು ಚಿಕ್ಕ ಸಿನೆಮಾ ಮಾಡೇ ಬಿಡುತ್ತಾರೆ. ಸಿನೆಮಾ ರಿಲೀಸ್ ಆದ ತಕ್ಷಣ ಇಡೀ ಜಗತ್ತು, ಅದರಲ್ಲೂ ಅರಬ್ ಮುಸ್ಲಿಂ ಜಗತ್ತೇ ಫುಲ್ ತಲ್ಲಣವಾಗಿ ಬಿಡುತ್ತದೆ. ಇಬ್ಬರ ಮೇಲೂ ಫತ್ವಾ ಮೇಲೆ ಫತ್ವಾ. ತಲೆ ತೆಗದೇ  ಬಿಡಿ. ಕೊಂದೇ ಬಿಡಿ ಅಂತ.

ಆ ಪಿರ್ಕಿ ಫಿಲಂ ಮೇಕರ್ ನಸೀಬ್ ಖರಾಬಿತ್ತು. ಯಾವದೋ ಒಬ್ಬ ಮೊರೊಕ್ಕೋ ದೇಶದ ಧರ್ಮಾಂಧ ಹಾಲಂಡ್ ವಲಸಿಗ, ಯಾವದೇ ರಕ್ಷಣೆ ಇಲ್ಲದೆ ಬಿಂದಾಸ್ ಓಡಾಡುತ್ತಿದ್ದ ಅವನನ್ನು ಹಿಡಿದು ಕೊಂದೇ ಬಿಟ್ಟ. ಮತ್ತೆ ಬೇರೆಯವರಿಗೆ ಒಂದು ಪಾಠ ಅನ್ನುವಂತೆ ಒಂದು ಕಠಾರಿ ಅವನ ಎದೆಯಲ್ಲಿ ಹುಗಿಸಿ ಹೋಗಿದ್ದ. ಸತ್ಯದ ಒಂದು ಮುಖ ತೋರಿಸಿದವರಿಗೆ ಸಿಕ್ಕ ಬಹುಮಾನ.

ಪುಣ್ಯಕ್ಕೆ ಅಯಾನ್ ಹರ್ಸಿ ಅಲಿ ಮಾತ್ರ ಸಾಕಷ್ಟು ರಕ್ಷಣೆ ಇಟ್ಟುಗೊಂಡು ತಿಂಗಳು ಎರಡು ತಿಂಗಳಿಗೊಮ್ಮೆ ಮನೆ ಬದಲು ಮಾಡುತ್ತ ತಮ್ಮ ಕಾಳಗ ಮುಂದುವರೆಸಿದ್ದಾರೆ. ಅದೆಂದೂ ಮುಗಿಯದ ಕಾಳಗ. ಸೋಮಾಲಿಯ, ಅಲ್ಲಿನ ಜನ ಇತ್ಯಾದಿಗಳ ಬಗ್ಗೆ ಅವರಿಗೆ ಇರುವ ಕಾಳಜಿ ಮಾತ್ರ ಏನೂ ಕಮ್ಮಿ ಆಗಿಲ್ಲ. ಜಾಸ್ತಿನೇ ಆಗಿರಬಹುದು.

ತಣ್ಣನೆಯ ಮನಸಿಟ್ಟುಕೊಂಡು ಓದಿದರೆ ಒಂದು ಒಳ್ಳೆ ಪುಸ್ತಕ. ಕೆಲವು ಕಡೆ ತುಂಬಾ ಡಾರ್ಕ್ ಶೇಡ್ಸ್ ಅನ್ನುವಂತ ಘಟನೆ ಬರುತ್ತವೆ. ಸಿಕ್ಕಾಪಟ್ಟೆ ಕಳವಳ, ಚಡಪಡಿಕೆ, ತುಮುಲ, ನೋವು, trauma ಆದೀತು. ಜೋಕೆ.

4 comments:

Anonymous said...

There are thousands of blogs that requires comments on them. What is the intention of blog comments? Sent From Blackberry.

ವಿ.ರಾ.ಹೆ. said...

Why Vango is mentioned as 'ಪಿರ್ಕೀ ಫಿಲಂ ಮೇಕರ್' ?

Mahesh Hegade said...

ಪುಸ್ತಕದಲ್ಲಿ ವ್ಯಾಂಗೋ ಚಿತ್ರಣ ನೋಡಿರೇ ಹಾಂಗೆ ಕಾಣ್ತಾ. ಸೃಜನಶೀಲತೆ ಒಂದು ಕ್ಲೈಮ್ಯಾಕ್ಸ್ ಮುಟ್ಟಿದಾಗ ಜನ ಒಂದ ನಮ್ಮನಿ ಪಿರ್ಕಿ ಕಂಡಂಗೆ ಕಾಣ್ತಾ! ಆರ್ಡಿನರಿ ಜನರಿಗೆ. ಪಿರಕೀ ಅಂದ್ರೆ idiosyncratic ಹೇಳ ಅರ್ಥದಲ್ಲಿ. ಅಂಡೆಪಿರ್ಕಿ ಅಲ್ಲ! :) :)

ವಿ.ರಾ.ಹೆ. said...

Oh..ok.. I thought you are calling him as 'pikri' because they went againt Muslim world by making that film on 'ಧರ್ಮಾಂಧತೆ'.