Monday, November 26, 2012

Winey ಆದ ವೈನಿ

ಶನಿವಾರ ಮುಂಜಾನೆ ಮುಂಜಾನೆ ಫೋನ್ ಟ್ರೋಯ್  ಟ್ರೋಯ ಅಂತು.

ಯಾರಪಾ? ಶನಿವಾರ ಮುಂಜಾನೆ ಮುಂಜಾನೆ ಫೋನ್ ಮಾಡಿದ ಶನಿ ಅಂತ ನೋಡಿದೆ. 

ಅರ್ರೇ !!! ನನ್ನ ದೋಸ್ತ ಚೀಪ್ಯಾ. ಅವನ ಶ್ರೀಪಾದ ಖಂಡುರಾವ್ ಡಕ್ಕನೆಕರ್. 

ಯಾಕ ಇಷ್ಟು ಲಗೂನ ಫೋನ್ ಮಾಡ್ಯಾನ? 

ಆವಾ ಮತ್ತ ಅವನ ಹೆಂಡ್ತಿ ರೂಪಾ ವೈನಿ ಇಬ್ಬರೂ ಪ್ರತಿ ಶನಿವಾರ ಸಪ್ತಾಪುರ ಹನುಮಪ್ಪನ ಗುಡಿಗೆ ಹೋಗಿರ್ತಾರ ಈ ಹೊತ್ತಿನ್ಯಾಗ. ಇವತ್ತ ಹೋಗಿಲ್ಲೇನು ಹಾಂಗಿದ್ರಾ?

ಹೀಂಗ ಭಾಳ ಪ್ರಶ್ನೆ ಬಂದವು.

ಇರಲಿ, ನೋಡೋಣ ಅಂತ ಫೋನ್ ಎತ್ತಿ ಹಲೋ ಅನ್ನೂದ ತಡ, ಆಕಡಿಂದ ಚೀಪ್ಯಾ ಹೊಯ್ಕೊಳ್ಳೋದು ಕೇಳಿಸ್ತು.

ಏ!!!!ಇವನ!!!!ಅದು...ಅದು....ಇಕಿ ಕುಡುದು ಕೂತಾಳೋ! ಲಗೂನ ಬಾರೋ ದೋಸ್ತ. ಅಯ್ಯೋ!!!! ನಾ ಸತ್ತೆ!!!!, ಅಂತ ಚೀಪ್ಯಾ ಹೇಳ್ಕೊತ್ತ ಇದ್ದಾಗ ಏನೋ ಆ ಕಡೆ ಧಡ್ ಅಂತ ಸದ್ದ ಬ್ಯಾರೆ ಆತು. ಬಿದ್ದಿರಬೇಕು ಗಜ್ಜು ಯಾರಿಗೋ.

ಏನ ಚೀಪ್ಯಾ? ಏನಾತೋ? ಸ್ವಲ್ಪ ಸಮಾಧಾನದಿಂದ ಹೇಳು, ಅಂತ ಹೇಳಿದೆ.

ಏನ ಸುದ್ದಿನ ಇಲ್ಲ. ಆ ಕಡೆ ಪಿನ್ಡರಾಪ್(pin drop) ಸೈಲೆನ್ಸ್.

ಚೀಪ್ಯಾ?ಚೀಪ್ಯಾ? ಇದ್ದಿಯೇನೋ? ಯಾರು ಏನು ಕುಡದರು?, ಅಂತ ಮತ್ತ ಕೇಳಿದೆ.

ಇಕಿನನೋ. ನಿಮ್ಮ ರೂಪಾ ವೈನಿ, ಅಂತ ಹೇಳಿದ ಚೀಪ್ಯಾ ಮಾತ ನಿಲ್ಲಿಸಿದ.

ಏನು!!?? ರೂಪಾ ವೈನಿ ವಿಷಾ ಕುಡದಾರ? ವೈನಿ!!........ವೈನಿ!!....ಯಾಕ್ರೀ ಹಿಂಗ ಮಾಡಿದ್ರೀ? ಚೀಪ್ಯಾ!! ಚೀಪ್ಯಾ!! ವೈನಿ ಹೋಗಿ ಬಿಟ್ರೇನೋ? ಪಾಪ....ಪಾಪ....ಆದರೂ ಮುತ್ತೈದಿ ಸಾವು ತಂದಕೊಂಡರು ಬಿಡು.....ವೈನಿ....ವೈನಿ......, ಅಂತ ನಾನೂ ಫೋನಿನ್ಯಾಗ ಸ್ವಲ್ಪ ದುಃಖ ವ್ಯಕ್ತ ಪಡಿಸಿದೆ.

ಲೇ....ಹುಸ್ಸೂಳೆಮಗನ....ವಿಷಾ ಕುಡದಿಲ್ಲೋ ನಮ್ಮಪ್ಪಾ. ಮತ್ತ ಸತ್ತಿಲ್ಲ. ಅಂತಾ ಲಕಿ ನಾ ಇಲ್ಲಪಾ. ನನಗೆಲ್ಲೆ ಅಂತಾ ಅದೃಷ್ಟ? ಸತ್ತ ಮ್ಯಾಲೂ ದೆವ್ವ ಆಗಿ ಕಾಡೋ ಪೈಕಿ ನಿಮ್ಮ ವೈನಿ. ಎಣ್ಣಿ ಕುಡಕೊಂಡ ಕೂತಾಳೋ. ಕುಡದ ಹಾಪ್ ಆಗಿ ಕೂತು ಬಿಟ್ಟಾಳ. ನೀ ಬಂದ್ರ ಅಕಿನ್ನ ಹಿಡಿಬೋದು ಅಂತ ಆಶಾ ಅದ, ಅಂದಾ ಚೀಪ್ಯಾ.

ಎಣ್ಣಿ ಕುಡದ ಕೂತಾಳ ವೈನಿ? ಏನು "ಅಯಿಲ್ ಪುಲ್ಲಿಂಗ್"(oil pulling) ಅನ್ನೋ ಚಿಕಿತ್ಸಾ ಶುರು ಮಾಡ್ಯಾರ ಏನು ವೈನಿ? ಮುಂಜಾನೆ ಎದ್ದ ಕೂಡಲೇ ಮುಖಾ ತೊಳಿಯೋಕಿಂತ ಮೊದಲು ಒಂದು ಚಮ್ಮಚ ಒಳ್ಳೆಣ್ಣಿ ಬಾಯಾಗ ಹಾಕ್ಕೊಂಡು, ಬಾಯ್ತುಂಬಾ ಓಡಾಡಿಸಿ, ಉಗಳಿದ್ರಾ ಭಾಳ ಚೊಲೋ ಅಂತ ಹೆಲ್ತಿಗೆ. ಮನ್ನೆ  "ಲಂಕೇಶ್ ಪತ್ರಿಕೆ" ಒಳಗೂ ಬಂದಿತ್ತು, ಅಂತ ನಾ ಹೇಳಿದೆ.

ಏ!!!!ಏನ್ ಪುಲ್ಲಿಂಗ ಹಚ್ಚಿ? ನಿಮ್ಮ ವೈನಿ ಅನ್ನಲಿಕತ್ತೇನಿ, ಪುಲ್ಲಿಂಗ ಅನ್ತಿಯಲ್ಲಲೇ ಹಾಪಾ. ಅಕಿ ಏನಿದ್ರೂ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅಪವಾದನಾ ಇರಬಹುದು ಅಕಿ. ಆದರೂ ಗವರ್ನಮೆಂಟ್ ಪ್ರಕಾರ್ ಅಕಿ ಸ್ತ್ರೀಲಿಂಗ. ಹಾಂಗಿದ್ದಾಗ ಆಯಿಲ್ ಮಾಡೋ ಪುಲ್ಲಿಂಗ ಅದು ಇದು ಅಂತಿಯಲ್ಲೋ! ಥತ್ ನಿನ್ನ. ಲಗೂನ ಬಾರೋ. ಇಕಿನ ಹಿಡಿಲಿಕ್ಕೆ ಆಗವಲ್ಲದು, ಅಂತ ಮತ್ತ ಹೇಳಿದ ಚೀಪ್ಯಾ.

ಚೀಪ್ಯಾ ಭಾಳ್  ಟೆನ್ಷನ್ ಒಳಗ ಇದ್ದಾಂಗ ಅನ್ನಿಸ್ತು. ಅದಕ್ಕ ನಾ ಆಯಿಲ್ ಪುಲ್ಲಿಂಗ್ (oil pulling) ಚಿಕಿತ್ಸಾ ಅಂದ್ರಾ, ಹೆಂಡ್ತಿ ಸ್ತ್ರೀಲಿಂಗ ಅಂತಾನ. ಹಾಪಾ. ಬರೇ ಹೆಸರಿಗೆ ಮಾತ್ರ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅವಮಾನ ಅಂತಾನ. ಪಾಪ! ರೂಪಾ ವೈನಿಗೆ ಅಂಥಾ ರೂಪಾ ಇರಲಿಕ್ಕೆ ಇಲ್ಲ. ಹಂಗಂತ ಗವರ್ನಮೆಂಟ್ ಸ್ತ್ರೀಲಿಂಗ ಅಂತ ಅನ್ನೋದ? ಇವಾ ಏನ ಮಹಾ ಚಂದ ಇದ್ದಾನೋ ಆಚಾರಿ! ಅದು ಇದು ಅಂತಾನ. ಏನೋ ಬ್ಯಾರೇನ ಕಾರಣ ಇರಬೇಕು ಅನ್ನಿಸ್ತು.

ಮತ್ತೆಂತಾ ಎಣ್ಣಿ ತೊಗೊಂಡಾರೋ ವೈನಿ? ಏನು ಜುಲಾಬಿಗೆ ಅಂತ ಹರಳೆಣ್ಣಿ ಅಥವಾ ಔಡಲ ಎಣ್ಣಿ ತೊಗೊಂಡು ಕೂತಾರ ಏನು? ಅದು ಒಳ್ಳೇದೋ. ವರ್ಷಕ್ಕ ಒಂದೆರೆಡು ಸಲ ಹರಳೆಣ್ಣಿ ತೊಗೊಂಡು, ಸಿಸ್ಟಮ್ ಸ್ವಚ್ಛ ಮಾಡ್ಕೊಂಡ್ರ ಭಾಳ್ ಚೊಲೋ. ಅದಕ್ಕ ನೀ ಯಾಕ್ ಚಿಟಿ ಚಿಟಿ ಚೀರ್ಲಿಕತ್ತಿಯೋ ನಮ್ಮಪ್ಪಾ?, ಅಂತ ಕೇಳಿದೆ.

ಹೋಗ್ಗೋ ನಿನ್ನ. ಎಲ್ಲಿ ಹರಳೆಣ್ಣಿ ಹಚ್ಚಿ. ನಿಮ್ಮ ರೂಪಾ ವೈನಿ ಮಸಡಿ ಯಾವಾಗಲೂ ಹರಳೆಣ್ಣಿ ಕುಡದವರಾಂಗ ಇರ್ತದ. ಆ ಎಣ್ಣಿ ಯಾವದೂ ಅಲ್ಲ. ಲಗೂನ ಬಾರೋ ದೋಸ್ತಾ. ಹಿಡಿಲಿಕ್ಕೆ ಆಗವಲ್ಲದು ಇಕಿನ. ಇಕಿ ಎಣ್ಣಿ ಕುಡದು ಯಾವ ಯಾವ್ದೋ ಭಾಷಾದಾಗ, ಏನೇನೋ ಮಾತಾಡ್ಲಿಕತ್ತಾಳ. ನೀ ಬಾರಪಾ. ಇಲ್ಲಂದ್ರಾ ನನಗ ಮೆಂಟಲ್ ಹಾಸ್ಪಿಟಲ್ ಗೆ ಫೋನ್ ಮಾಡೋ ಪರಿಸ್ಥಿತಿ ಬರ್ತದ ನೋಡೋ. ನಮ್ಮ ಮನಿತನದ ಮರ್ಯಾದಿ ಹೋಗ್ತದೋ. ನನಗ ಇಬ್ಬರು ಹೆಣ್ಣ್ಮಕ್ಕಳು ಇದ್ದಾರೋ. ಅವ್ವಾ ಮೆಂಟಲ್ ಹಾಸ್ಪಿಟಲ್ ಗೆ ಹೋಗಿ ಬಂದಾಕಿ ಅಂದ್ರಾ ಯಾರು ಅವರನ್ನ ಯಾರು ಮದ್ವಿ ಮಾಡ್ಕೊತ್ತಾರೋ? ಬಾರೋ. ಬಾರೋ, ಅಂತ ಭಾಳ ಅಂಗಾಲಾಚಿ ಬೇಡಿಕೊಂಡ ನಮ್ಮ ದೋಸ್ತ ಚೀಪ್ಯಾ.

ಮತ್ತೂ ಜಟಿಲ ಆಗುತ್ತಲೇ ಹೋತು. ಯಾವ ಎಣ್ಣಿ ತೊಗೊಂಡು ಕೂತಿರಬಹದು ರೂಪಾ ವೈನಿ?

ಚೀಪ್ಯಾ, ಚಿಂತಿ ಮಾಡಬ್ಯಾಡ ನೀ. ನಾ ಬಂದ ಬಿಟ್ಟೆ. ನಂದು ಧೋತ್ರಾ ಸುಮಾರ ಒಣಿಗ್ಯದ. ಅದರ ಮ್ಯಾಲೆ ಒಂದು ಸ್ವಲ್ಪ ಗರಂ ಇಸ್ತ್ರೀ ತಿಕ್ಕಿ, ಪೂರ್ತಿ ಒಣಿಗಿಸಿಕೊಂಡು ಹೊಂಟ ಬಿಡ್ತೇನಿ. ಓಕೆ ಏನಪಾ? ಆದ್ರಾ ಒಂದು ಮಾತು ಹೇಳೋ. ಯಾವ ಎಣ್ಣಿ ಅಂತ, ಅಂತ ಕೇಳಿದೆ.

ನಾವು ಶನಿವಾರ ಹನುಮಪ್ಪನ ವೃತಾ ಅಂತಾ ಹೇಳಿ ಇಡೀ ದಿವಸ ಧೋತ್ರಾ ಮಾತ್ರ ಧರಿಸ್ತೇವಿ. ಏನೋ ನಮ್ಮ ಮನಿ ಪದ್ಧತಿ. ನಾವೂ ನಡಸಬೇಕಲ್ಲ. ಅದಕ್ಕ. 

ಏ, ಒಳಗ ಅಂಡರ್ವೇರ್ ಇರ್ತದ್ರೀ. ಬರೇ ಧೋತ್ರಾ ಅಂದ್ರ ಶನಿವಾರ ಪ್ಯಾಂಟ್ ಹಾಕಂಗಿಲ್ಲ ಅಂತ. ಅಷ್ಟ. ಮತ್ತ ಏನರ ಏನರ ಊಹಾ ಮಾಡಿಕೊಂಡು ಕಾಡಿಸಬ್ಯಾಡ್ರೀ. ಈಗ ಹೇಳೇನಿ.

ಎಣ್ಣಿ ಅಂದ್ರಾ...ಅಂದ್ರಾ...ಶೆರೆ ಕುಡ್ಕೊಂಡು ಕೂತಾಳೋ. ನಿಮ್ಮ ರೂಪಾ ವೈನಿ ಒಂದು ಫುಲ್ ಬಾಟಲ್ ವೈನ್ ಕುಡದು ಕೂತಾಳೋ. ಅದ ಎಣ್ಣಿ. ಹೊಟ್ಟಿಯೊಳಗ ಹೋದ ಪರಮಾತ್ಮಾ ಏನೇನೋ ಮಾತಾಡ್ಸ್ಲಿಕತ್ತಾನ. ಅದ ಕಂಟ್ರೋಲಿಗೆ ಬರ್ವಲ್ಲದು. ಓಣಿ ಮಂದಿ ಎಲ್ಲಾ ಹಣಿಕಿ ಹಣಿಕಿ ನೋಡಿ, ಕಿಸಿ ಕಿಸಿ ನಗ್ಲಿಕತ್ತಾರ. ಬಾರೋ!!!!, ಅಂತ ಅಂದಾ ಚೀಪ್ಯಾ.

ಹೋಗ್ಗೋ ನಿನ್ನ, ಚೀಪ್ಯಾ. ರೂಪಾ ವೈನಿ ವೈನ್ ಕುಡದು ಖರೇನಾ winey ಆಗ್ಯಾರ ಅಂತ ಆತು. ನಾ ಬಂದಾ ಬಿಟ್ಟೆ. ಹಿಂಗ ಪರಿಸ್ಥಿತಿ ಅದ ಅಂದಾ ಮ್ಯಾಲೆ ನಾ ಧೋತ್ರಾ ಒಣಗಿಸಿಕೋತ್ತ ಕೂಡಂಗಿಲ್ಲ. ಹ್ಯಾಂಗೂ ಇವತ್ತು ನಂದು ಉಪವಾಸ ಅದ. ಹಶಿ ಧೋತ್ರಾ ಇದ್ದರೂ ಏನ ಡೇಂಜರ್ ಇಲ್ಲ. ಅದನ್ನಾ ಉಟ್ಟಗೋಂಡವನ ಬಂದ ಬಿಡ್ತೇನಿ. ನೀ ಏನ ಚಿಂತಿ ಮಾಡ ಬ್ಯಾಡ. ಓಕೆ? ಓಕೆ?, ಅಂತ ಹೇಳಿ ಸ್ವಲ್ಪ ಧೈರ್ಯ ಕೊಟ್ಟು ಫೋನ್ ಇಟ್ಟೆ.

ಹಸಿ ಧೋತ್ರ ಹಸಿ ಬಟ್ಟಿ ಯಾಕ ಹಾಕ್ಕೋಬಾರದು ಅಂತ ಮತ್ತ ಯಾವಾಗರ ಹೇಳತೇನಿ. ಈಗ ಟೈಮಿಲ್ಲ.

ಧೋತ್ರಾ ಉಟ್ಟಗೋಂಡು, ಮ್ಯಾಲೆ ಜುಬ್ಬಾ, ತಲಿ ಮ್ಯಾಲೆ ಕರಿ ಟೊಪ್ಪಿಗಿ ಹಾಕ್ಕೊಂಡು, ಓಲ್ಡ್ ಲ್ಯಾಮ್ಬ್ರೆಟ್ಟಾ ಸ್ಕೂಟರ್ ಹತ್ತಿ ಚೀಪ್ಯಾನ ಮನಿಗೆ ಬಂದು ಮುಟ್ಟಿದೆ ಅಂತ ಆತು.

ಪಡಸಾಲ್ಯಾಗ ಕೂತಿದ್ರು ವೈನಿ. ಬಾಜೂಕ ಚೀಪ್ಯಾ ಪಾಪದ ಲುಕ್ ಕೊಟ್ಟಗೋತ್ತ ನಿಂತಿದ್ದ.

ನಮಸ್ಕಾರ ವೈನಿ. ಹ್ಯಾಂಗಿದ್ದೀರಿ? ಎಲ್ಲಾ ಆರಾಮ ಏನು?, ಅಂತ ಕೇಳಿದೆ.

ರೂಪಾ ವೈನಿ ಗಹಗಹಿಸಿ ನಕ್ಕರು. ಚಾವಣಿ ಹಾರಿ ಹೋಗು ಹಾಂಗ ನಕ್ಕರು. 

ಪಕ್ಕದ ಮನಿ ಫಣಿಯಮ್ಮ ತಮ್ಮ ಬೋಡ ತಲಿ ಮ್ಯಾಲೆ ಕೆಂಪ ಸೀರಿ ಸೆರಗ ಸರಿ ಮಾಡ್ಕೋತ್ತನ ಕಿಸಿ ಕಿಸಿ ನಕ್ಕರು. ಸಂಡಾಸಕ್ಕ ಹೊಂಟಿದ್ದರು ಅಂತ ಅನ್ನಸ್ತದ. ಸೊಕ್ಕು ನೋಡ್ರೀ. 

ಬಾರೋ...ಮಂಗ್ಯಾ....ಮಂಗೇಶ್....ಬಾರಪಾ ನನ್ನ ಪ್ರೀತಿ ಮೈದುನಾ....ಏ ಮಂಗ್ಯಾ...ಅಂದವರಾ ಅವನೌನ್ ಬಾಯಾಗ ಬೆಟ್ಟ ಹೆಟ್ಟಿ ಸೀಟಿ ಹೊಡದ ವೈನಿ ಮತ್ತ ಪೆಕಪೆಕಾ ಅಂತ ನಕ್ಕರು.

ನಾ ಫುಲ್ ದಂಗಾದೆ! ಏನು ಬ್ರಾಹ್ಮರ ಮುತ್ತೈದಿ ವೈನಿ ರೆಡ್ ಲೈಟ್ ಮಂದಿ ಗತೆ ಸೀಟಿ ಹೊಡೆಯೋದು ಅಂದ್ರಾ!!!!ಶಿವ ಶಿವಾ!

ಒಹೋ! ವೈನಿ ಮ್ಯಾಲೆ ವೈನಿನ ಪ್ರಭಾವ ಜೋರ್ ಆದಂಗ ಅದ ಅಂತ ಅನ್ನಿಸ್ತು. ಸ್ಟ್ರಾಂಗ್ ವೈನ್ ಇರಬೇಕು. ಮತ್ತ ಮುಂಜಾನೆ ನಾಷ್ಟಾ ಬ್ಯಾರೆ ಆಗಿಲ್ಲ ಹೆಚ್ಚಾಗಿ. ಹಸಿದ ಹೊಟ್ಟಿಯೊಳಗ ಫುಲ್ ಬಾಟಲ್ ಎತ್ತಿ ಬಿಟ್ಟಾರ. ಅದಕ್ಕ ಮಸ್ತ ಕಿಕ್ ಕೊಟ್ಟು ವೈನಿ ಪರಿಸ್ಥಿತಿ ಹಿಂಗ ಆಗ್ಯದ ಅಂತ ಅನ್ನಿಸ್ತು.

ರೀ...ವೈನಿ.....ನಾನು ಮಹೇಶ. ಮಂಗೇಶ ನನ್ನ ಕಸಿನ್. ಯಾಕ? ಗುರ್ತು ಹತ್ತಲಿಲ್ಲ ಏನು?, ಅಂತ ಕೇಳಿದೆ.

ರೂಪಾ ವೈನಿ ಮತ್ತ ನಕ್ಕರು. ವಿಕಾರವಾಗಿ ತೊಡಿ ತಟ್ಟಿ ತಟ್ಟಿ ನಕ್ಕರು.

ಏ....ಗೊತ್ತಾತೋ. ಆದ್ರಾ ನಿನಗ ಒಂದು ಮಾತ ಗೊತ್ತದ ಏನು? ನಿನಗ ನಾವು ಮಂಗ್ಯಾ ಅಂತೇವಿ. ಎಂದರಾ ಕನ್ನಡಿ ಒಳಗ ಮಸಡಿ ನೋಡಿಕೊಂಡಿಯೇನು? ಹೆಸರು ಮಹೇಶ. ಮಂಗೇಶ ಇದ್ದಾಂಗ ಇದ್ದಿ. ಅದೂ ದೊಡ್ಡ ಸೈಜಿನ ಹೊನಗ್ಯಾ ಮಂಗ್ಯಾ, ಅಂದ ವೈನಿ ನಕ್ಕೋತ್ತನ, ಅಲ್ಲೇನ್ರೀ ಶ್ರೀಪಾದ ರಾವ್?, ಅಂತ ಅಕಿ ಗಂಡ ಉರ್ಫ್ ಚೀಪ್ಯಾನ ಕೇಳಿದಳು.

ಆವಾ ಏನು ಅಂದಾನ? ಬೆಬ್ಬೆ...ಬೆಬ್ಬೆ..ಅಂದಾ.

ಶೆರೆ ಕುಡದವರು ಸುಳ್ಳು ಹೇಳಂಗಿಲ್ಲ ನೋಡ್ರೀ. ನಮ್ಮ ರೂಪಾ ವೈನಿ ಸಹಿತ ನನ್ನ ಮ್ಯಾಲಿನ ಖರೆ ಫೀಲಿಂಗ್ ಏನು ಅಂತ ಹೇಳಿಯೇ ಬಿಟ್ಟಳು. ಭಾಳ ಏನೂ ಬೇಜಾರ ಆಗಲಿಲ್ಲ. ಹೊನಗ್ಯಾ ಹಾಂಗ ಇದ್ದಿದ್ದು ಖರೆ. ಅದರ ಮ್ಯಾಲೆ ಮಂಗ್ಯಾನ ತರಹ ಕಂಡ್ರ ನಾವೇನ ಮಾಡೋಣ?

ಏನ ವೈನಿ? ಯಾಕೋ ಮುಂಜಾನೆ ಮುಂಜಾನೆ ಫುಲ್ ಮೂಡಿನ್ಯಾಗ ಬಂದೀರಿ? ಏನು ವಿಶೇಷಾ?, ಅಂತ ಕೇಳಿದೆ.

ಏನಿಲ್ಲೋ ಮಂಗೇಶ. ಅಲ್ಲಲ್ಲ ಮಹೇಶ. ನಿನ್ನೆ ನಿಮ್ಮ ದೋಸ್ತ ಕರೀಂ ಬಂದಿದ್ದ. ಏನೋ ಒಂದು ಬಾಟಲ್ ಕೊಟ್ಟು ಇವರಿಗೆ ಕೊಡ್ರೀ ಅಂದಾ. ಏನೋ ಇದು? ಅಂತ ಕೇಳಿದೆ. ಅವಾ ಕರೀಂ, ಏನಿಲ್ಲ ಒಂದಿಷ್ಟು ಇಂಪೋರ್ಟೆಡ್ ದ್ರಾಕ್ಷಾ ರಸಾ ಅಂತ ಹೇಳಿ ಕೊಟ್ಟು ಹೋಗಿದ್ದ. ಇವತ್ತು ಮುಂಜಾನೆ ನೆನಪಾತು. ಅದಕ್ಕ ಚಾ ಕುಡಿಯೋಕಿಂತ ಮೊದಲು ಒಂದು ಸ್ವಲ್ಪ ಫ್ರುಟ್ ಜೂಸ್ ಕುಡಿಯೋಣ  ಅಂತ ಕುಡದೆ. ಏನಪಾ! ಮಸ್ತ ರುಚಿ ಇತ್ತು. ಸ್ವಲ್ಪ ಒಗರು ಒಗರು ಇತ್ತು. ಸ್ವಲ್ಪ ಉಪ್ಪಿನಕಾಯಿ ನಾಲಿಗ್ಗೆ ಹಚ್ಚಿಕೊಂಡೆ ನೋಡು ಇವನ, ಏನ ಮಸ್ತ ಟೇಸ್ಟ್ ಬಂತು ಅಂತಿ. ಹಾಂಗ ಪಾವ್ ಶೇರ್ ಉಪ್ಪಿನಕಾಯಿ ನಂಜಕೋತ್ತ  ಪೂರ್ತಿ ಬಾಟಲ್ ಕುಡಿದು ಬಿಟ್ಟೆ ಏನಪಾ. ಏನು ಮಸ್ತ ಅದನೋ!, ಅನ್ನುತ್ತ ವೈನಿ winey ಹ್ಯಾಂಗ ಆದ್ರು ಅನ್ನೋದನ್ನ ತಿಳಿಸಿದರು.

ಒಟ್ಟಿನ್ಯಾಗ ವೈನಿ ಫುಲ್ ಬಾಟಲ್ ವೈನ್ ಕುಡದು ವೈನಿ winey ಆಗಿ ಬಿಟ್ಟಿದ್ದರು.

ಚೀಪ್ಯಾನ ಈ ಕಡೆ ಕರದೆ. ಬಂದಾ.

ಚೀಪ್ಯಾ....ವೈನಿ ಗಿಚ್ಚಾಗಿ, ಕರೀಂ ನಿನಗ ಅಂತ ತಂದು ಕೊಟ್ಟ, ವೈನ್ ಕುಡದು ಫುಲ್ ಚಿತ್ತ ಆಗಿ ಬಿಟ್ಟಾರ. ಏನ ಚಿಂತಿ ಮಾಡು ಕಾರಣ ಇಲ್ಲ. ವೈನೀನ ಇರಿಟೇಟ್ ಮಾಡಬ್ಯಾಡ. ಈಗ ಅವರಿಗೆ ಮಂಪರು ಬಂದು ಸ್ವಲ್ಪ ಹೊತ್ತು ಮಲ್ಕೊತ್ತಾರ. ಮಲ್ಕೊಳ್ಳಲಿ. ಎದ್ದ ಮ್ಯಾಲೆ ಚಾ ಕಾಫಿ ಕುಡಿಸು. ಎಲ್ಲಾ ಸರಿ ಆಗ್ತದ, ಅಂತ ಹೇಳಿದೆ.

ಖರೇನಾ ಸರಿ ಆಗ್ತದ ಏನು? ಮೆಂಟಲ್ ಹಾಸ್ಪಿಟಲ್ ಗೆ ಹಾಕೋದು ಬ್ಯಾಡ ಹೌದಿಲ್ಲೋ?, ಅಂತ ಡಬಲ್ ಖಾತ್ರಿ ಮಾಡಿಕೊಂಡ ಚೀಪ್ಯಾ.

ಏ...ಚಿಂತಿ ಬ್ಯಾಡೋ. ನೋಡಲ್ಲೇ....ಅಲ್ಲೇ ವೈನಿ ಅಡ್ಡಾಗೇ ಬಿಟ್ಟರು. ಒಂದು ಕೌದಿನೋ, ದುಪ್ಪಟಿನೋ ತಂದು ಹೊದಸು. ಇನ್ನ ನಾಕ ತಾಸ್ ಏಳಂಗಿಲ್ಲ ಅಕಿ, ಅಂತ ಹೇಳಿದೆ.

ಚೀಪ್ಯಾ ದುಪ್ಪಟಿ ತರಲಿಕ್ಕೆ ಅಂತ ಒಳಗ ಹೊಂಟಾ.

ಅಣ್ಣಾ!!! ನಮಗ ಹಶಿವಿ. ಏನಾರಾ ತಿನ್ನಲಿಕ್ಕೆ ಕೊಡು. ಅವ್ವಾ ಯಾಕ ಹೀಂಗ ಮಲ್ಕೊಂಡಾಳ?, ಅಂತ ಕೇಳಿದ್ರು ಚೀಪ್ಯಾನ ಇಬ್ಬರು ಕನ್ಯಾರತ್ನಗಳು.

ಚೀಪ್ಯಾಗ ಎಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ.

ನಿಮ್ಮೌರಾ!!!!ಎಲ್ಲಾ ನಿಮ್ಮ ಅವ್ವನಿಂದ. ಇವತ್ತ ಶನಿವಾರ. ಉಪವಾಸ. ಓಡ್ರೀ. ಓಡ್ರೀ, ಅಂತ ಚೀರಿಬಿಟ್ಟ ಪಿತಾಶ್ರೀ ಚೀಪ್ಯಾ.

ಪಾಪ! frustration ಒಳಗ ಬಂದ ಆದ್ಮಿ ಇನ್ನೇನು ಮಾಡಿಯಾನು?

ಒಟ್ಟಿನಲ್ಲಿ ನಮ್ಮ ದೋಸ್ತ ಕರೀಂ ಸಾಬ್ ಚೀಪ್ಯಾಗ ಅಂತ ತಂದು ಕೊಟ್ಟಿದ್ದ ವೈನ್ ರೂಪಾ ವೈನಿಯವರ ಪಾಲಾಗಿ ವೈನಿ ಖರೇನಾ winey ಆಗಿದ್ದು ಮಾತ್ರ.....ಏನು ದುರಂತ ಅಂತೀರೇನು?

** ಚೀಪ್ಯಾ, ರೂಪಾ ವೈನಿ ಅವರ ಪಾತ್ರ ಪರಿಚಯಕ್ಕಾಗಿ ಓದಿ - ಟಗರ್ಮಂಗೋಲಿ!

** oil pulling  - http://oilpulling.com/

5 comments:

Anonymous said...

ಮಹೇಶ್,

ನಿಮ್ಮ ನಗೀ-ಲೇಖನಾ ಓದಿ ಅರ್ಧಾ ತಾಸು ನಕ್ಕೆ. ಅಗದೀ ಮಸ್ತ ಬರದೀರಿ. ಮದ್ಲೆ ಸರ್ತಿ ’ಎಣ್ಣಿ ಕುಡದಾಳೋ’ ಅಂದಾಗ ಅನಿಸಿತ್ತು ಏನಂತ. ಆದರೂ ಸಂಭಾಷ್ಣಿ ಬರ್ದಿದ್ದ ಧಾಟಿ ಭಾಳ ಹಿಡಸ್ತು.

ಇದರ ಹಿಂದ ಏನೇನ್ ಬರ್ದೀರಿ ಅಂತ ಓದ್ಬೇಕಾತು ನೋಡ್ರಿ ಈಗ.

...ಅಶೋಕ ಹಂದಿಗೋಳ

Mahesh Hegade said...

ನಮಸ್ಕಾರ್ರಿ ಹಂದಿಗೋಳ ಅವರ.

ಓದಿ ಕಾಮೆಂಟ್ ಹಾಕಿದ್ದಕ್ಕ ಧನ್ಯವಾದ.

ಹೀಂಗ ಓದಿ ತಿಳಿಸಿರಿ. ನಮಗೂ ಖುಶಿ.

Vijay Aivalli said...

Bhala cholo baridiri. Naanoo bhala nakke. Thanks.

Mahesh Hegade said...

ವಿಜಯ ಅವರಿಗೆ ಧನ್ಯವಾದ.

Anonymous said...

specially strilling and pulling meaning and explanation made me laugh for longer time.....it’s really funny.....