Wednesday, March 20, 2013

ಬೇಬಿ ಗಂಡಾಮೃಗ

ನಮ್ಮ ಕರೀಂ ಸಾಬರು ಮತ್ತ ಸಿಕ್ಕಿದ್ದರು. ಯಾಕೋ ಸ್ವಲ್ಪ ಚಿಂತಾಕ್ರಾಂತರಾಗಿದ್ದಾಂಗ ಕಂಡರು.

ಏನ್ ಕರೀಂ? ಆರಾಮ್ ಏನಪಾ? - ಅಂತ ಕೇಳಿದೆ.

ಎಲ್ಲಿ ಆರಾಮ್ ಸಾಬ್? ಎಲ್ಲಾ ಹರಾಮ್ ಆಗಿಬಿಟ್ಟಿದೆ. ಈ ಹಾಪ್ ಬೇಗಂ ಕಾಲದಲ್ಲಿ. ಈಗ ಅಕಿಗೆ ಬೇಬಿ ಗಂಡಾಮೃಗದ ಹುಚ್ಚು ಹತ್ತಿದೆ. ಬೇಬಿ ಗಂಡಾಮೃಗ ತಂದುಕೊಡ್ರೀ ಅಂತ ತಾಕೀತ್ ಮಾಡಿಬಿಟ್ಟಿದ್ದಾಳೆ. ಈಗ ನಾವು ಬೋಟ್ಸವನಕ್ಕೋ, ನಮೀದ ಮಿಯಾಕ್ಕೋ ಹೋಗಿ ಬೇಬಿ ಗಂಡಾಮೃಗ ಹುಡುಕಿ, ಆರಿಸಿ ತಂದು ಕೊಡಬೇಕು. ಯಾ ಅಲ್ಲಾ!!!ಯಾ ರಬ್ಬಾ!!!, ಅಂತ ಹೇಳುತ್ತಾ ಕೂತ ಬಿಟ್ಟ.

ಒಂದರ ಮ್ಯಾಲೊಂದು ಅನರ್ಥದ ಬಾಂಬ್ ಸುರಿಮಳೆ. ಏನಂತ ತಿಳಿಲಿಲ್ಲ. ಎಲ್ಲದಕ್ಕೂ ವಿವರಣೆ ಕೇಳಿಕೋತ್ತ ಕೂತರ ಇವ ಒಂದಕ್ಕ ಎರಡು ಹೇಳಿ ಹರೋ ಹರ ಮಾಡಿ ಬಿಡ್ತಾನ. ನಾವ ಸ್ವಲ್ಪ ಊಹಾ  ಮಾಡಿ ವಿವರಣೆ ತೆಗೆದು ಖಾಲಿ ಬಿಟ್ಟ ಜಾಗಗಳಲ್ಲಿ ಟಿಮ್ ಟಿಮ್ ಹೊಡಕೋಬೇಕು, ಅಲ್ಲಲ್ಲ ತುಂಬಿಕೋಬೇಕು.

ಸಾಬ್ರಾ..... ಕಂಗ್ರಾಟ್ಸ್ ರೀ!!! ಅಂತೂ ನಿಮ್ಮ ಹಾಪ್ ಬೇಗಂ ನಿಂದ ನಿಮಗ ಛುಟ್ಕಾರಾ ಅಂದ್ರ ಬಿಡುಗಡೆ ಸಿಕ್ಕತು ಅಂತ ಆತು. ಕಂಗ್ರಾಟ್ಸ್!!!ಕಂಗ್ರಾಟ್ಸ್!!!, ಅಂತ ಅಭಿನಂದನೆ ಸಲ್ಲಿಸಿದೆ.

ಹಾಂ? ಏನು ಛುಟ್ಕಾರಾ? ಆ ಹಾಪ್ ಬೇಗಂ ನಮ್ಮದೂಕೆ ಬಿಟ್ಟಿಲ್ಲ ಸಾಬ್. ಬೇಬಿ ಗಂಡಾಮೃಗಕ್ಕೆ ಹೊಸಾ ಡಿಮಾಂಡ್ ಮಾಡಿದ್ದಾರೆ ಅಂದ್ರೆ ತಲಾಕ್ ಕೊಟ್ಟಿದಾರೆ ಅಂತೀರಲ್ಲ? ಆ ನಸೀಬ್ ನಮಗೆ ಇಲ್ಲಾ ಸಾಬ್, ಅಂತ  ನಾ ಊಹೆ ಮಾಡಿದ ಅನುಕೂಲಕರ  ಪರಿಸ್ಥಿತಿ ಇಲ್ಲ ಅಂತ ಖಚಿತ ಪಡಿಸಿದ.

ಮತ್ತೇನ್ರೀ???? ಬೇಬಿ ಗಂಡಾಮೃಗ ಅಂದ್ರ ಏನು? ನಾ ಏನೋ ನಿಮ್ಮ ಬೇಗಂ ನೀವು ಬ್ಯಾಸರ ಆಗಿ, ಮೃಗದಂತೆ ಇರೋ, ಜಾನ್ಸನ್  ಬೇಬಿ ಪೌಡರ್ ಬೇಬಿ ಫೇಸ್ ಇರೋ ಹೊಸ ಗಂಡನ್ನು ಹುಡುಕಿಕೊಟ್ಟು, ನೀವು ಪೆಟ್ಟಿಗಿ ಕಟ್ಟಿ, ಮನಿ ಮನ ಎರಡೂ ಖಾಲಿ ಮಾಡಿ ಹೊಂಡ್ರೀ , ಅಂತ ನಿಮ್ಮ ಬೇಗಂ ನಿಮಗ ಹುಕುಂನಾಮಾ ಕೊಟ್ಟು ನಿಮಗ ನಾಮಾ ಹಾಕಿದರೋ ಏನೋ ಅಂತ ತಿಳ್ಕೊಂಡಿದ್ದೆ. ನೋಡಿದರ ಪರಿಸ್ಥಿತಿ ಬೇರೇನೋ ಅದ. ಸಿಂಹದಂತೆ ಇರುವ  ಪುರುಷಂಗ ಪುರಷಸಿಂಹ ಅಂದಾಂಗ ಮೃಗದಂಗ ಅಂದ್ರ ಕಾಡಹಂದಿ ಹಾಂಗ ಹಟ್ಟಾ ಕಟ್ಟಾ ಇರೋ ಆದ್ಮಿಗೆ ಎಲ್ಲೆ ನಿಮ್ಮ ಮಿಸೆಸ್ ಗಂಡಾಮೃಗ ಅಂತ ಅಂದರೋ ಅಂತ ನಮ್ಮ ಡೌಟ್. ಯಾಕಂದ್ರ ಅವರಿಗೆ ನಿಮ್ಮ ಹಕ್ಕಿ ಪಿಕ್ಕಿ ಭಾಷಾ ಒಂದು ಬಿಟ್ಟರ ಯಾವದಾ ಭಾಷಾ ಸರೀತ್ನಾಗಿ ಬರೋದಿಲ್ಲ ನೋಡ್ರೀ, ಅದಕ್ಕ, ಅಂತ ಹೇಳಿದೆ.

ಅಷ್ಟಕ್ಕೂ ಕಾಡಹಂದಿ ಹಾಂಗ ಇರೋ ಗಂಡನ ಯಾಕ ಬೇಕಂತ ನಿಮ್ಮ ಬೇಗಂಗ? ಹಂದಿಯಂತ ಕ್ವಾರೀಲೆ (ಕೋರೆ) ತಿವಿಸ್ಕೊಬೇಕಾಗ್ಯದ ಏನು ನಮ್ಮ ಹೆಂಡರಿಗೆ? ಏನು ವಿಚಿತ್ರ ಆಶಾರಿ?, ಅಂತ ಮತ್ತೂ ಕೇಳಿದೆ. 

ಅಯ್ಯೋ.... ಸಾಬ್.... ನಿಮಗೆ ತಲಿ ಇಲ್ಲ ಕ್ಯಾ? ಗಂಡಾಮೃಗ ಅಂದ್ರೆ ಕಾಡಹಂದಿ ಗತೆ ಇರೋ ಗಂಡಾ ಅಂತೆ!!!ಏನಂತ ಹೇಳ್ತೀರಿ???ಹಾಂ? ಹಾಂ? ಮತ್ತೆ ನಮ್ಮ ಬೇಗಂ ಬೇರೆ ಮತ್ತೊಂದು ಗಂಡಾಗೆ ಕೇಳಿಲ್ಲ. ಬೇಬಿ ಗಂಡಾಮೃಗ ಅಂದ್ರೆ ಒಂದು ಟೈಪ್ ಜಾನ್ವರ್. ಅಂದ್ರೆ ಪ್ರಾಣಿ. ಅದರದ್ದು ಬಚ್ಚಾ ಮಾಫಿಕ್ ಅಂದ್ರೆ ಸಣ್ಣ ಮರಿಗೆ ತಂದು ಕೊಡಿ ಅಂತ ಹೇಳಿದಾರೆ, ಅಂತ ನನ್ನ ತಪ್ಪು ತಿದ್ದಿದ.

ಹಾಂ!?  ಹಾಂ!? ಏನಪಾ ಇದು ಗಂಡಾಮೃಗ ಅನ್ನೋ ಪ್ರಾಣಿ? ಎಲ್ಲ ಸಿಗ್ತದ ಇದು ಸಾಬ್ರಾ? - ಅಂತ ಕೇಳಿದೆ.

ಸಾಬ್.... ಅದು ಆಫ್ರಿಕಾ ಒಳಗೆ ಸಿಗ್ತದೆ. ಒಂದು ಕೊಂಬು ಇರ್ತದೆ ನೋಡಿ. ಭಾಳ ಹೊನಗ್ಯಾ ಇದ್ದಂಗೆ ಇರ್ತದೆ. ನಮ್ಮಲ್ಲಿ ಕೇವಲ ಅಲ್ಲೆಲ್ಲೋ ಆಸಾಂ ಒಳಗೆ ಮಾತ್ರ ಇರ್ತದೆ. ನಮ್ಮ ಮುಲ್ಕನಲ್ಲಿ ಇರೋ ಗಂಡಾಮೃಗಕ್ಕೆ ಒಂದೇ ಕೋಡ ಇರ್ತದೆ. ಆಫ್ರಿಕಾ ಗಂಡಾಮೃಗಕ್ಕೆ ಎರಡು ಇರ್ತದೆ, ಅಂದ ಕರೀಂ.

ಆಫ್ರಿಕಾ, ಕೋಡು, ಹೊನಗ್ಯಾ ಸೈಜಿನ ಪ್ರಾಣಿ, ನಮ್ಮ ದೇಶದಲ್ಲೂ ಅದ, ನಮ್ಮಲ್ಲಿ ಇರೋದಕ್ಕೆ ಒಂದು ಕೋಡು, ಅಲ್ಲಿ ಇರೋದಕ್ಕೆ ಎರಡು ಕೋಡು.

ಏನೋ ಹೊಳಿತು.


 ಹಾಂ!!!ಇದು ಘೇಂಡಾಮೃಗ ಇರಬೆಕು.

ಅಕಿ ಹಾಪ್ ಬೇಗಂ ಏನು ಹೇಳಿದಳೋ, ಇವನು ಏನು ಕೇಳಿದನೋ ಗಂಡಾಮೃಗ ಅನಕೋತ್ತ ಓಡಾಡ್ಲಿಕತ್ತಾನ.

ಸಾಬ್ರಾ.....ಅದು  ಘೇಂಡಾಮೃಗ ಏನ್ರೀ? ಕೊಡ್ರೀ ಇಲ್ಲೆ ನಿಮ್ಮ ಸ್ಮಾರ್ಟ್ ಫೋನ್, ಅಂತ ಫೋನ್ ಇಸ್ಕೊಂಡೆ. rhinoceros ಅಂತ ಗೂಗಲ್ ಮಾಡಿದೆ. ಬಂತು ಘೇಂಡಾದ ಚಿತ್ರ.

ಸಾಬ್ರಾ ಇದ ಏನ್ರೀ? ನಿಮ್ಮ ಬೇಗಂ ತೊಗೊಂಡು ಬಾ ಅಂದ ಪ್ರಾಣಿ? ಇದರ ಮರಿ ಯಾಕ ಬೇಕಂತ? ಏನು ಮನಿಯೊಳಗ ಝೂ ಮಾಡೋ ಇರಾದಾ ಅದ ಏನು? ಹಾಂ? ಹ್ಯಾಂಗೂ ಒಂದು ಹಳೆ ಹೆಣ್ಣ ಕುದರಿ ಒಂದು ಮುದಕ ಧೋಭಿ ಕತ್ತಿ ವಾಡೆಯೊಳಗ ಇಟ್ಟೀರಿ. ಅವಕ್ಕ ಇದು ಒಂದು ಬೇಬಿ ಗಂಡಾಮೃಗ ಅಲ್ಲಲ್ಲ ಘೇಂಡಾಮೃಗ ಸೇರಿಸಿ ಒಂದು ಝೂ ಮಾಡೋ ಪ್ಲಾನ್ ಅದ ಏನು? - ಅಂತ ಕೇಳಿದೆ.

ಇಲ್ಲ ಸಾಬ್.... ಅದು ಘೇಂಡಾದು ಮೃಗ ಇರ್ತದೆ ನೋಡಿ, ಅದರ ಕೊಂಬು ಇರ್ತದೆ ನೋಡಿ, ಅದರಲ್ಲಿ ಭಾರಿ ಪಾವರ್ ಇರ್ತದೆ ಅಂತೆ. ಅದನ್ನ ತೇಯಿದು ಜೇನತುಪ್ಪಾ ಜೊತೆ ತೊಗೊಂಡ್ರೆ ಭಾರಿ ಪಾವರ್ ಬರ್ತದೆ ಅಂತೆ. ನಮ್ಮ ಬೇಗಂ ತಲಿ ಒಳಗೆ ಅದನ್ನ ಯಾರೋ ಹಾಕಿ ಬಿಟ್ಟಿದ್ದಾರೆ. ಅದಕ್ಕೇ ಒಂದು ಬೇಬಿ ಘೇಂಡೇಕೊ ತಂದು ಕೊಡಿ ಅಂತ ಗಂಟು ಬಿದ್ದಿದ್ದಾಳೆ, ಅಂತ ವಿವರಣೆ ಕೊಟ್ಟ ಕರೀಂ.

ಓಹೋ!!! ಇದು ಯಾವದೋ ಉಳ್ಳಾಗಡ್ಡಿ ಡಾಕ್ಟರ್ ನವತಾರುಣ್ಯಕೆ ಕೊಟ್ಟ ಔಷಧಿ ಇರಬೇಕು ಅನ್ನಿಸ್ತು. ಆ ಮ್ಯಾಲೆ ಕೇಳೋಣ ಅಂತ ಬಿಟ್ಟೆ.

ಸಾಬ್ರಾ..... ಈಗ ಎಲ್ಲಿಂದ ಬೇಬಿ ಘೇಂಡಾಮೃಗ ತಗೊಂಡು ಬರೋರು ನೀವು? - ಅಂತ ಕೇಳಿದೆ.

ಸಾಬ್ ಅದು ಬೋಟ್ಸವನದಲ್ಲಿ ಸಿಗ್ತದೆ ಅಂತೆ. ಅಲ್ಲಿ ಇಲ್ಲಾ ಅಂದ್ರೆ ನವೀದ್ ಮಿಯಾ ಕಡೆ ಹೋಗಿ ತರಬೇಕು ನೋಡಿ ಸಾಬ್. ಭಾಳ ಖರ್ಚಿನ ಕೆಲಸ, ಅಂದ ಕರೀಂ.

ಬೋಟ್ಸವನ, ನವೀದ್ ಮಿಯಾ!!!!! ಏನು ಇವು?!!!!, ನನಗ ತಿಳಿಲಿಲ್ಲ.

ಸಾಬ್ರಾ.....ಬೋಟ್ಸವನ ಅಂದ್ರ ನಮ್ಮ ತಪೋವನ ಇದ್ದಂಗ ಯಾವದರ ಸ್ವಾಮಿಗಳ ಆಶ್ರಮ ಏನು? ಯಾವ ಸ್ವಾಮಿಗಳು ಇದ್ದಾರ ಅಲ್ಲೇ? ಎಲ್ಲಾ ಸ್ವಾಮಿಗಳು ತಮ್ಮ ಆಶ್ರಮ ಒಳಗ ಚಿಗರಿ ಸಾಕಿದರ ನಿಮ್ಮ ಬೋಟ್ಸವನದ ಸ್ವಾಮಿಗಳು ಘೇಂಡಾಮೃಗ ಸಾಕಿದ್ದು ಅಲ್ಲದ ಅಲ್ಲೇ ಅವನ್ನ ಬ್ರೀಡ್ ಮಾಡಿ ನಾಯಿ ಮರಿ ಮಾರಿದಾಂಗ ಘೇಂಡಾಮೃಗ ಮರಿ ಸಹಿತ ಮಾರತಾರ ಏನು? ಯಾವ ಸ್ವಾಮಿಗಳೋ ಮಾರಾಯ ಅವರು? ಹೆಣ್ಣ ಮರಿ ತರವನೋ ಗಂಡ ಮರಿ ತರವನೋ ಘೇಂಡಾಮೃಗದ್ದು? - ಅಂತ ಕೇಳಿದೆ.

ಅಯ್ಯೋ!!!!!ಸಾಬ್!!!!ನಿಮಗೆ ಕಾಮನ್ ಸೆನ್ಸ್ ಇಲ್ಲ ಕ್ಯಾ? ಬೋಟ್ಸವನ ಅಂದ್ರೇ ತಪೋವನದ ಹಾಗೆ ಯಾವದೋ ಸ್ವಾಮಿಯ ಆಶ್ರಮ ಅದು ಇದು ಅಂತೀರಲ್ಲ. ಅದು ಆಫ್ರಿಕಾದಲ್ಲಿ ಒಂದು ದೇಶ. ಜನರಲ್ ನಾಲೆಜ್ ಇಲ್ಲ ಕ್ಯಾ? ಹಾಂ? ಹಾಂ? - ಅಂತ ನನಗ ಜಬರಿಸಿಬಿಟ್ಟ ಹುಸ್ಸೂಳೆಮಗ.

ಯಾವ ದೇಶರೀ? ಹಂಗಂತ ಯಾವ ದೇಶ ಇಲ್ಲ. ಸುಮ್ಮ ಸುಮ್ಮನ ಚೋಡ್ತೀರಿ ಕ್ಯಾ? - ಅಂತ ನಾನೂ ರಿವರ್ಸ್ ಬಾರ್ಸಿದೆ.

ನೋಡಿ ಇದೇ ದೇಶ.....Botswana.... ಅಂತ ಒಂದು ದೇಶ ತೋರಿಸಿದ, ಕರೀಂ ಅವನ ಸ್ಮಾರ್ಟ್ ಫೋನ್ ಒಳಗ.

ಮಾರಾಯ!!! ಅದು ಬೋಟ್ಸವಾನಾ ಅಂತಪಾ. ನೀ  ಬೋಟ್ಸವನ ಬೋಟ್ಸವನ ಅಂದಿ. ತಪೋವನ ಅದು ಇದು ಅಂತ ಆಶ್ರಮ ಗುಂಗಿನ್ಯಾಗ ಇದ್ದ ನನಗ ನಿನ್ನ ಬೋಟ್ಸವನ ಯಾವದೋ ಆಶ್ರಮದ ಹೆಸರು ಕೇಳಿದಂಗ ಆತು. ಅದಕ್ಕ ಗೊಂದಲ. ಇರಲಿ ನವೀದ್ ಮಿಯಾ ಅವರ ಕಡೆ ಘೇಂಡಾಮೃಗದ ಮರಿ ಅದ ಅಂದಿ. ಅವರು ಯಾರು? ನಿಮ್ಮ ಮಾಮಾ ಛೋಟಾ ವಕೀಲ್ ಪೈಕಿ ಏನು? ಅವರ್ಯಾಕ ಘೇಂಡಾಮೃಗ ಸಾಕ್ಯಾರ? - ಅಂತ ಕೇಳಿದೆ.

ಅಯ್ಯೋ..... ನವೀದ್ ಮಿಯಾ, ಜಾವೇದ್ ಮಿಯಾ ಅನ್ನೋಕೆ ಅವರು ಕ್ಯಾ ನಮ್ಮ ಸಾಲೇಗಳು ಅಂತ ತಿಳದೀರಿ ಕ್ಯಾ? ಅದೂ ಒಂದು ದೇಶ. ಆಫ್ರಿಕಾ ಒಳಗೆ ಅದೇ. ಬೋಟ್ಸವಾನಾ ಬಾಜೂಕೇ ಅದೇ. ಬೋಟ್ಸವಾನಾ ಒಳಗೆ ಘೇಂಡಾ ಮರಿ ಸಿಗಲಿಲ್ಲ ಅಂದ್ರೆ ನವೀದ್ ಮಿಯಾ ಒಳಗೆ ಹೋಗ್ಬಿಟ್ಟು, ಅಲ್ಲಿಂದ ತರೋದು, ಅಂದ ಕರೀಂ. 

ಏ....ಎಲ್ಲಿ ಹಚ್ಚಿ!!! ಹೋಗಲೇ..... ನವೀದ್ ಮಿಯಾ ಅಂತ ಯಾವದೇ ದೇಶ ಇಲ್ಲ. ತೋರ್ಸು ನೋಡೋಣ, ಅಂತ ಹೇಳಿದೆ.

ತೋರ್ಸಿದ. ನೋಡಿದ್ರ Namibia ಅನ್ನೋ ಆಫ್ರಿಕಾದ ದೇಶ ಕಾಣಿಸ್ತು. ಪಾಪ ಯಾರೋ ಏನೋ ಹೇಳ್ಯಾರ. ಇವಾ ನಮೀಬಿಯಾ ದೇಶಕ್ಕ ನವೀದ್ ಮಿಯಾ ಅನ್ನಕೋತ್ತ ಅಡ್ಡಾಡಲಿಕತ್ತಾನ. ಹಾಪಾ!!!

ಹ್ಞೂ.... ಅಂತೂ ಆಫ್ರಿಕಾಕ್ಕ ಹೊಂಟಿ ಅಂತ ಆತು. ಚೊಲೋದು. ನೋಡಿಕೊಂಡು ಹೋಗಿ ಬಾ. ಎಲ್ಲಾ ಕಾಡು ಮಂದಿ, ಕಾಡು ಪ್ರಾಣಿ ಇರೋ ಖತರ್ನಾಕ್ ಜಾಗ. ಲಗೂನ ಹೋಗಿ, ಭರಕ್ಕನ ಒಂದು ಘೇಂಡಾಮೃಗದ ಮರಿ ತೊಗೊಂಡು ಬಂದು ಬಿಡು. ಎಷ್ಟು ದಿವಸದ ಪ್ಲಾನ್? - ಅಂತ ಕೇಳಿದೆ.

ಇವ ಎಲ್ಲರ ಆಫ್ರಿಕಾ ಒಳಗ ಕಳಕೊಂಡರ, ಇವನ್ನ ಹುಡಕಲಿಕ್ಕೆ ನಾ ಹೋಗಬೇಕಾದೀತು ಅದೂ ಕಪ್ಪು ಖಂಡ ಆಫ್ರಿಕಾಕ್ಕ. ಬ್ಯಾಡಪ್ಪೋ ಬ್ಯಾಡ!

ಸಾಬ್... ನಮ್ಮದು ಒಂದು ದೊಡ್ಡ ಪ್ಲಾನ್ ಅದೆ. ಕಮ್ಮಿ ಕಮ್ಮಿ ಅಂದ್ರೂ ಒಂದು ತಿಂಗಳ ಆಗ್ತದೆ ಸಾಬ್, ಅಂದ ಕರೀಂ.

ಒಂದು ತಿಂಗಳ??!!! ಭಾಳ ಜಾಸ್ತಿ ಆತು. ಹೆಚ್ಚಂದ್ರ ಎರಡು ವಾರ ಸಾಕಪಾ. ಮೊದಲು ಬೋಟ್ಸವಾನಾಕ್ಕ ಹೋಗು. ಅಲ್ಲೇ ಮರಿ ಸಿಕ್ಕಿಬಿಡ್ತು ಅಂದ್ರ ಒಂದ ವಾರದಾಗ ವಾಪಾಸ್ ಬರಬಹುದು. ಇಲ್ಲಂದ್ರ ಬಾಜೂಕ ನಮಿಬಿಯಾಕ್ಕೂ ಹೋದ್ರ ಇನ್ನೊಂದು ವಾರ. ಒಂದು ತಿಂಗಳು ಯಾಕಪಾ? - ಅಂತ ಕೇಳಿದೆ. 

ಆಫ್ರಿಕಾ ಒಳಗೂ ಏನೋ ಕಿತಬಿ ಮಾಡೋ ಪ್ಲಾನ್ ಇಟ್ಟಂಗ ಕಾಣ್ತಾನ.

ಸಾಬ್....  ನಾವು ಮೊದಲು ಎರಡು ವಾರ ಅಲ್ಜೇರಿಯಾ ಮತ್ತ ಟ್ಯೂನಿಸಿಯಾಕ್ಕೆ ಹೋಗ್ತೇವೆ ಸಾಬ್. ನಿಮಗೆ ಗೊತ್ತು ಅಲ್ಲ? ನಮಗೆ ಅಲ್ಲಿ ಇಬ್ಬರು ಫೇಸ್ಬುಕ್ ಮೇಲೆ ಸಿಕ್ಕ ಆಂಟಿ ಮಾಲ್ ಅವೇ ಅಂತ. ಅವರು ನಮ್ಮ ಸಲುವಾಗಿ ಬೆಲ್ಲಿ ಡಾನ್ಸ್ ಸಹ ಮಾಡ್ತಾರೆ. ಈಗ ನಾವು ಆಫ್ರಿಕಾಕ್ಕೆ ಬರ್ತಾ ಇದ್ದೇವೆ ಅಂತ ಕೇಳಿದ ಮೇಲೆ ಇಬ್ಬರೂ ಆಂಟಿಗಳು ನಮ್ಮ ಮನೆಗೂ ಬಂದು, ನಮ್ಮ ಬೆಲ್ಲಿ ಡಾನ್ಸ್ ನೋಡಿಬಿಟ್ಟಿ , ನಮ್ಮ ಮೆಹಮಾನ್ ನವಾಜಿ ಎಲ್ಲ ತೊಗೊಂಡು ಹೋಗಬೇಕು ಅಂತ ಫೇಸ್ಬುಕ್ ಮೇಲೆ ಮೆಸೇಜ್ ಮೇಲೆ ಮೇಲೆ ಮೆಸೇಜ್ ಮಾಡಿ ಕರೀತಾ ಇದ್ದಾರೆ ಸಾಬ್. ಹಾಗೆ ಇರುವಾಗ ಆ ಆಂಟಿಗಳ ಮನಸ್ಸು ನೋಯಿಸಬಾರದು ನೋಡಿ. ಅದಕ್ಕೇ ಒಂದು ವಾರ ಇಬ್ಬರ ಜೊತೆಗೂ ಇದ್ದು ಮಜಾ ಮಾಡಿ ಬರೋಣ ಅಂತ ಹೇಳಿ ನಮ್ಮ ಪ್ಲಾನ್, ಅಂತ ಕರೀಂ ಸಾಬರು ಹೇಳಿದರು.

ಭಲೇ !!!!ಮಂಗ್ಯಾನ ಕೆ!!!! ಮಸ್ತ ಆಂಟೀಸ್ ಪಟಾಯಿಸಿ ಅಂತ ಆತು. ನಿನಗ ಈ ಪರಿ ಕಾಡ್ಲಿಕತ್ತಾರ ಅಂದ್ರ ಅವರಿಗೆ ಯಾವ ಪರಿ ಮೋಡಿ ಮಾಡಿ ಮಾರಾಯಾ ನೀನು?ಹಾಂ?ಹಾಂ? ಹ್ಞೂ!!! ನೆಡಿಲಿ ನೆಡಿಲಿ ಸಾಬ್ರ ಕಾರ್ಬಾರ. ಅಷ್ಟ, ಅವೆಲ್ಲಾ ಭಾಳ ಕಟ್ಟರ್ ದೇಶ. ಹಾಂಗೆಲ್ಲಾ ಮಾಲು ಗೀಲು ಪಟಾಯಿಸಿದ್ರ ಕಲ್ಲ ಹೊಡದ ಹೊಡದ ಕೊಲ್ಲತಾರ, ನಿನ್ನೂ ಮತ್ತ ಅವರನ್ನೂ. ಜ್ವಾಕಿ. ನೋಡಿಕೊಂಡು ಕಿತಬಿ ಮಾಡು ಮತ್ತ. ಇಲ್ಲಂದ್ರ ಸುಮ್ಮನ ಅವರ ಬೆಲ್ಲಿ ಡಾನ್ಸ್ ನೋಡಿಕೊಂಡು ವಾಪಸ್ ಬಾ, ಅಂತ ಮೈಲ್ಡ್ ವಾರ್ನಿಂಗ್ ಕೊಟ್ಟೆ.

ಏ...ಹಾಗೇನೂ ಇಲ್ಲ ಸಾಬ್. ಎಲ್ಲಾ ಸೆಟ್ ಅಪ್ ಆಗಿ ಬಿಟ್ಟಿದೆ. ಏನೂ ರಿಸ್ಕ್ ಇಲ್ಲವೇ ಇಲ್ಲ. ಚಿಂತಿ ನಕೋ, ಅಂತ ತಿರುಗಿ ನನಗ ಆಶ್ವಾಸನಿ ಕೊಟ್ಟು ಬಿಟ್ಟ. ಕಾನ್ಫಿಡೆನ್ಸ್ ನೋಡ್ರೀ.

ಹ್ಞೂ.....ಸಾಬ್ರಾ.... ಘೇಂಡಾಮೃಗ ತರಲಿಕ್ಕೆ ಅಂತ ಆಫ್ರಿಕಾಕ್ಕ ಹೊಂಟವರು ನೀವಾ ಝೇಂಡಾಮೃಗ ಆಗಲಿಕತ್ತೀರಿ ಅಂತ ಆತು. ಆಗ್ರೀ.... ಆಗ್ರೀ.... ಮಸ್ತಾಗಿ ಝೇಂಡಾಮೃಗ ಆಗಿ, ನಿಮ್ಮ ಆಫ್ರಿಕಾ ಮಾಲುಗಳ ಅತಿಥಿ ಸತ್ಕಾರ ಸ್ವೀಕರಿಸಿ ಮಾಲಾ ಮಾಲ್ ಆಗಿ ಬರ್ರಿ, ಅಂದೆ ನಾನು.

ಅಯ್ಯೋ!!!ಸಾಬ್!!! ಈಗ ಝೇಂಡಾಮೃಗ ಅಂದ್ರೆ ಏನು? ನಾವು ಯಾಕೆ ಅದು ಆಗಬೇಕು? ನಮಗೆ ಬೇಬಿ ಗಂಡಾಮೃಗ ತರೋದೆ ದೊಡ್ಡ ಮಗಜ್ ಮಾರಿ ಆಗಿದೆ. ಅದರ ಮ್ಯಾಲೆ ಝೇಂಡಾಮೃಗ ಆಗೋದು ಅಂದ್ರೇ ಕ್ಯಾ? ನಿಮಗೆ ಝೇಂಡಾಮೃಗ ಬೇಕು ಕ್ಯಾ? ಅದನ್ನ ನಾವು ಆಫ್ರಿಕಾಯಿಂದ ತರಬೇಕು ಕ್ಯಾ? - ಅಂತ ಕೇಳಿದ ಕರೀಂ.

ಅವಂಗ ನಾ ಎಲ್ಲೆರೆ ಝೇಂಡಾಮೃಗ ತೊಗೊಂಡು ಬಾ ಅಂತೇನೋ ಅಂತ ಸಿಕ್ಕಾಪಟ್ಟೆ ಟೆನ್ಶನ್.

ಸಾಬ್ರಾ..... ನೀವು ಹೋಗಿ ಒಂದು ವಾರ ನಿಮ್ಮ ಟ್ಯೂನಿಸಿಯಾದ ಮಾಲ್ ಮನಿಯೊಳಗ, ಇನ್ನೊಂದು ವಾರ ನಿಮ್ಮ ಅಲ್ಜೀರಿಯಾ  ಮಾಲ್  ಮನಿಯೊಳಗ ಮಸ್ತಾಗಿ  ಝೇಂಡಾ ಹೊಡಿಲಿಕತ್ತೀರಿ ನೋಡ್ರೀ, ಅದಕ್ಕ ನಿಮಗ ಝೇಂಡಾಮೃಗ ಅಂತ ಹೊಸಾ ಹೆಸರ ಕೊಟ್ಟೆ. ಅಷ್ಟ. ಏನ್ ಕಾಳಜಿ ಮಾಡ ಬ್ಯಾಡ್ರೀ. ನೀವೇನೂ ನನ್ನ ಸಲುವಾಗಿ ಝೇಂಡಾಮೃಗ ಮತ್ತೊಂದು ಮೃಗ ತರೋದು ಬ್ಯಾಡ. ಮೃಗ ಇದ್ದಂಗ ಇರೋ ನೀವು ವಾಪಸ ಸಹೀ ಸಲಾಮತ್ ವಾಪಸ್ ಬರ್ರಿ ಸಾಕು, ಅಂದೆ.

ಕರೀಂ ಸ್ವಲ್ಪ ರಿಲಾಕ್ಸ್ ಆದ.

ಸಾಬ್ರಾ.....ಟ್ಯೂನಿಸಿಯಾ ಒಳಗಾ ನಿಮ್ಮ ಫೇಸ್ಬುಕ್ ಮ್ಯಾಲೆ ಸಿಕ್ಕ ಆಂಟಿ ಏನೇನು ತೋರಸ್ತೇನಿ ಅಂದಾಳ? - ಅಂತ ಕೇಳಿದೆ.

ಕರೀಂ ಬಾಂಬ್ ಹಾಕೇ ಬಿಟ್ಟ. ದೊಡ್ಡ ಅನಾಹುತ. 

ನಾ ಅ ಶಬ್ದ ಕೇಳಲಾಗದೆ, ಶಿವಾ!!ಶಿವಾ!!, ಅನಕೋತ್ತ ಕಿವಿ ಮತ್ತೊಂದು ಮುಚ್ಚಿಕೊಂಡೆ.

ಯಾಕೆ ಸಾಬ್ ನಮ್ಮ ಬೇಗಂ ಅವರ ಊರು ತೋರಿಸ್ತಾರೆ ನಮಗೆ ಅಂದ್ರೆ, ನೀವ್ಯಾಕೆ ಹೀಂಗೆ ಚಿಟಿ ಚಿಟಿ ಚೀರ್ತೀರಿ? - ಅಂತ ಇನ್ನೋಸೆಂಟ್ ಆಗಿ ಕೇಳಿದ ಕರೀಂ.

ಅವರ ಊರಿನ ಹೆಸರು ಏನಂದಿ? ಹೇಶಿ ಮಂಗ್ಯಾನ್ ಕೆ.... ಇನ್ನೊಮ್ಮೆ ಹೇಳಬ್ಯಾಡ. ಬರೆ ಸ್ಪೆಲ್ಲಿಂಗ್ ಹೇಳು ಸಾಕು, ಅಂತ ಝಾಡಿಸಿದೆ.

ಸಾಬ್.... ಆ ಬೇಗಂ TUNIS ಒಳಗೆ ಇರ್ತಾರೆ. ಅದು Tunisia ರಾಜಧಾನಿ. ಅವರು ನಮಗೆ ಅವರ Tunis ತೋರಸ್ತೀನಿ ಮಸ್ತ ಅದೇ, ಸಮುದ್ರದ ದಂಡಿ ಮ್ಯಾಲೆ Tunis ಉದ್ದ ಅದೇ. ದೊಡ್ಡ ಸಿಟಿ ಇದ್ದರಿಂದ ಅಗಲನೂ ಅದೇ ಅಂದ್ರು. ಹಾಗೆ ಉದ್ದ, ಅಗಲ ಇರೋ TUNIS ನೋಡೋದು ತಪ್ಪು ಕ್ಯಾ? ಏನು ತಪ್ಪು? - ಅಂತ ಕೇಳಿದ.

ಸಾಬ್ರಾ.....ನಿಮ್ಮ ಗಲತ್ ಉಚ್ಚಾರದಿಂದ ಪ್ರಾಬ್ಲೆಮ್. ಉದ್ದ ಇರಲಿ ದಪ್ಪ ಇರಲಿ ತೊಂದ್ರೀ ಇಲ್ಲ. ನಿಮಗ ಮೊದಲ ಹೇಳೇನಿ....Tunisia ಒಳಗಾ ಬರೋ N ಹ್ಯಾಂಗ ಉಚ್ಚಾರ ಮಾಡಬೇಕು ಅಂತ. ಅದನ್ನ ನವಿಲಿನ ಹಾಂಗ ಉಚ್ಚಾರ ಮಾಡ್ರೀ. ಬೆಣ್ಣಿ ಉಣ್ಣಿ ಹಾಂಗ ಣಕಾರ ಹಾಕಬ್ಯಾಡ್ರೀ. ಮತ್ತ T ಕ್ಕ ಟಕಾರ ಹಚ್ಚರೀಪಾ. ನೀವು ತಕಾರ ಮತ್ತ ಣಕಾರ ಹಚ್ಚಿ ಬೆಣ್ಣಿ ಉಣ್ಣಿ ಹಾಂಗ TUNIS ಅನ್ನೋ ಅವರ ದೇಶದ ಚಂದ ಸಿಟಿ ಹೆಸರು ಹೇಳಿದ್ರ ಮತ್ತ ಅದನ್ನ ಯಾರೋ ನಿಮ್ಮ ಫೇಸ್ಬುಕ್ ಗೆಳತಿ ತೋರಿಸ್ತಾರ ಅಂದ್ರಾ ಏನ್ರೀ???!!!! ಹಾಂ?ಹಾಂ?, ಅಂತ ತಿದ್ದಿ ಝಾಡಿಸಿದೆ.

ಓಹೋ!!!ಅದು ಟ್ಯೂನಿಸ್ ಅಂತ ಕ್ಯಾ? ನಮಗೆ ಏನು ಗೊತ್ತು ಸಾಬ್? ಆಕಿ ನಮ್ಮ ಊರು ತೋರಸ್ತೀನಿ. ಅದರ ಹೆಸರು ಟ್ಯೂನಿಸ್. ನಮ್ಮ ಟ್ಯೂನಿಸ್ ಮಸ್ತ ಉದ್ದ, ಅಗಲ ಅದೇ ಅಂದ್ರು. ನಾವು ನಿಮಗೆ ಅದೇ ಹೇಳಿದ್ದು. ನೀವು ಏನೇನೋ ಕೇಳಿಸಿಕೊಂಡು ಏನೇನೋ ತಿಳಕೊಂಡರೆ ನಾವೇನು ಮಾಡೋಣ? - ಅಂತ ನನಗ ರಿವರ್ಸ್ ಕೊಶ್ಚನ್ ಒಗದು ಕೂತ.

ಸಾಬ್ರಾ.....ಅದೆಲ್ಲ ಇರಲೀ. ನಿಮಗ ಘೇಂಡಾಮೃಗದ ಮರಿ ಯಾಕ ಬೇಕು? ಅದರ ಕೋಡು ಬೇಕು ಅಂತೀರಿ. ಮರಿಗೆ ಕೋಡು ಬರೋದು ದೊಡ್ಡದು ಆದ ಮ್ಯಾಲೆ. ಅದು ದೊಡ್ದದಾಗಲಿಕ್ಕೆ ಭಾಳ ವರ್ಷ ಬೇಕು. ಹೀಂಗ ಇದ್ದಾಗ ಯಾಕ ಸುಮ್ಮನ ಒಂದು ಬೆಳೆದು ನಿಂತ ದೊಡ್ಡ ಘೇಂಡಾಮೃಗ ತಂದು ಬಿಡಬಾರದು? ಯಾರರ ಹಾಲಿಗೆ ಅಂತ ಗಬ್ಬದ ಎಮ್ಮಿ ತರತಾರೋ ಅಥವಾ ಸಣ್ಣ ವಯಸ್ಸಿನ ಎಮ್ಮಿ ಮಣಕಾ ತಂದು ದೊಡ್ಡದು ಮಾಡ್ತಾರೋ? ಹಾಂ? ಹಾಂ? - ಅಂತ ಲಾಜಿಕಲ್ ಪ್ರಶ್ನೆ ಕೇಳಿದೆ.

ಹಾಂ.. ಕರೆಕ್ಟ್ ಪೂಚ್ಯಾ ಆಪ್. ಅದು ಏನು ಅಂದ್ರೆ, ಸಣ್ಣದು ಮರಿ ಘೇಂಡಾಮೃಗ ತಂದು, ಪ್ಯಾರ ಮೊಹಬ್ಬತ್ ಸೆ ದೊಡ್ಡದು ಮಾಡಿದ್ರೆ ಮುಂದೆ ಅದರ ಕೋಡು ಕೊಂಬು ಕತ್ತರಿಸೋಕೆ ಬಿಡ್ತದೆ. ದೊಡ್ಡದು ತಂದು ಬಿಟ್ಟರೆ ಹತ್ತರ ಹೋದ್ರೆ ಕೊಂದೇ ಬಿಡ್ತದೆ. ಅದರದ್ದು ಕೊಂಬು ಬೋಳಿಸೋದು ದೂರ ಉಳಿತು. ಗೊತ್ತಾಯ್ತು ಕ್ಯಾ? ಅದಕ್ಕೇ ಸಣ್ಣ ಮರಿ ತೊಗೊಂಡು ಬಾ ಅಂತ ಹೇಳಿದಾರೆ ನಮ್ಮ ಹಾಪ್ ಬೇಗಂ, ಅಂತ ಫುಲ್ ವಿವರಣೆ ಕೊಟ್ಟ ಕರೀಂ. 

ಓಹೋ!!!ನಿಮ್ಮ ಬೇಗಂ ಸಣ್ಣ ಘೇಂಡಾಮೃಗದ ಮರಿ ದೊಡ್ಡ ಮಾಡಿ, ಅದರ ಕೊಂಬು ಕೋಡು ಉಗರ್ ತೆಗದಂಗ ತೆಗೆದು, ಅದನ್ನ ಅರೆದು ಜೇನುತುಪ್ಪದ ಜೊತಿ ಮಿಕ್ಸ್ ಮಾಡಿ, ನಿಮಗ ನೆಕ್ಕಿಸ್ತಾರ ಅಂತ ಆತು. ಹೌದಲ್ಲೋ ಸಾಬ್ರಾ? - ಅಂತ ಕೇಳಿದೆ. 

ಬರೋಬ್ಬರ್ ಸಾಬ್. ಆ ಹಾಪ್ ಬೇಗಂದು ಅದೇ ಪ್ಲಾನ್ ಇದ್ದಂಗೆ ಅದೆ. ಅದು ವರ್ಕ್ ಔಟ್ ಆಗ್ತದೆ ಕ್ಯಾ? - ಅಂತ ಕೇಳಿದ ಕರೀಂ. 

ದೇವರಿಚ್ಚಾ ಇದ್ದಂಗ ಆಗ್ತದ ನೋಡಪಾ ಕರೀಂ. ಎಲ್ಲಿಂದಲೋ ಘೇಂಡಾಮೃಗದ ಕೊಂಬು ತರಿಸ್ಕೊಂಡು ಅದನ್ನ ಅರೆದು, ನೆಕ್ಕಿ ಏನೇನೋ ಮಾಡಿಕೊಂಡವರ ಬಗ್ಗೆ ಕೇಳೇನಿ. ಆದ್ರ ಒಂದು ಸಣ್ಣ ಘೇಂಡಾಮೃಗದ ಮರಿ ತಂದು, ಅದನ್ನ ಬೆಳಿಸಿ, ಅದರ ಕೊಂಬು ಕತ್ತರಿಸಿ, ಅದನ್ನ ಜೇನತುಪ್ಪದಾಗ ಕಲಿಸಿ, ಅದನ್ನ ಗಂಡಂಗ ನೆಕ್ಕಿಸಿ, ಏನೇನೋ ಮಾಡಿದ ನಾರಿ ಶಿರೋಮಣಿ ಅಂದ್ರ ನಿಮ್ಮ ಬೇಗಂ ಮೊದಲನೇಯಾಕಿ ಇರಬೇಕು ನೋಡ್ರೀ ಸಾಬ್ರಾ!!!!, ಅಂತ ಹೇಳಿದೆ. 

ಬೇಗಂ ಹುಚ್ಚಿನ ಎಷ್ಟನೇ ಅವತಾರವೋ ಇದು!!!! ಇಕಿ ವಾಹನನ ಒಂದು ಘೇಂಡಾಮೃಗ ಮಾಡಿಬಿಟ್ಟರ ಚೊಲೋ ಇತ್ತು. ನಮ್ಮ ಸಾಬರನ್ನ ಬಿಟ್ಟು ಮಾಳಮಡ್ಡಿ ತುಂಬಾ ಒಂದು ಮೂಗದಾರ, ಕೊರಳಿಗೆ ಘಂಟಿ ಕಟ್ಟಿಸಿಕೊಂಡ ಘೇಂಡಾಮೃಗ ಹತ್ತಿ ಓಡ್ಯಾಡೋ ಕಾಡಮಂದಿ ಪೈಕಿ ರಾಣಿ ಗತೆ ಕಾಣ್ತಾಳ ನಮ್ಮ ಸಾಬ್ರಾ ಬೇಗಂ.

ಘೇಂಡಾ ಮ್ಯಾಲೆ ಕುಂತ ಬೇಗಂ ಸಾಹಿಬಾ!

ಸಾಬ್ರಾ....ಆಫ್ರಿಕಾಕ್ಕ  ಹೋಗಿ ಮೊದಲು ನಿಮ್ಮ ಫೇಸ್ಬುಕ್ ಮಾಲಗಳ ಮನಿಯಲ್ಲಿ  ಝೇಂಡಾಮೃಗ ಆಗಿ, ಸಕಲ ಸವಲತ್ತು ಅನುಭವಿಸಿ ಬರ್ರಿ. ನಿಮ್ಮ ಘೇಂಡಾ  ಹನಿಮೂನ್ ಲಗೂನೆ ಆಗ್ಲಿ ಸಾಬ್ರಾ, ಅಂತ ಹೇಳಿ ವಿಶ್ ಮಾಡಿದೆ. 

ಘೇಂಡಾ  ಹನಿಮೂನ್???!!!ವೋ ಕ್ಯಾ ಸಾಬ್? ಔರ್ ಏಕ ಶಾದಿ ಕರ್ಕೆ ಉಸ್ಕೆ ಬಾದ್ ಕಿ ಹನಿಮೂನ್ ಕ್ಯಾ? ನಕ್ಕೋ ಸಾಬ್. ನಕ್ಕೋ!!! ಅಂತ ಕರೀಂ ಶಂಖಾ ಹೊಡೆದ. 

ಅಲ್ಲೋ.... ಮಾರಾಯ.... ನಿನ್ನ ಘೇಂಡಾಮೃಗದ ಮರಿ ಬಂದು, ದೊಡ್ಡದಾಗಿ, ಕೋಡು, ಕೊಂಬು ಬಿಟ್ಟು, ಅದನ್ನ ನಿಮ್ಮ ಬೇಗಂ ಬೋಳಿಸಿ, ಅದನ್ನ ತೇಯ್ದು, ಜೇನುತುಪ್ಪಾ (ಹನಿ) ಒಳಗಾ ಸೇರಿಸಿ, ಹುಣ್ಣಿಮಿ ರಾತ್ರಿ (ಮೂನ್) ದಿವಸ ನಿನಗ ದೆವ್ವದ ಗತೆ ಬಿಳಿ ಸೇರಿ ಉಟ್ಟುಗೊಂಡು ಬಂದು, ಇದನ್ನ ನೆಕ್ಕರೀ...... ಘೇಂಡಾ ಕೊಂಬಿನ ಪುಡಿ ಮತ್ತ ಜೇನುತುಪ್ಪ..... ಇದನ್ನ ನೆಕ್ಕರೀ......ಇಲ್ಲಂದ್ರ ಮೂಗ ಹಿಡದು, ಬಾಯಿ ಬಿಡಿಸಿ, ಕಲ್ಲೂ ಮಾಮಾ, ಕಲ್ಲೂ ಮಾಮಿ ಕಡೆ ಕಾಲು ಕೈ ಹಿಡಿಸಿ ನೆಕ್ಕಿಸಿ ಬಿಡ್ತೀನಿ ಅಂತ ನಿಮ್ಮ ಬೇಗಂ ಧಮಕಿ ಹಾಕ್ತಾಳ ನೋಡ್ರೀ ಮತ್ತ  ನೀವು ಮೂಗು ಹಿಡಿಸಿಕೊಂಡ ಸಣ್ಣ ಹುಡುಗುರು ಔಷಧ ಕುಡದಾಂಗ ಅದನ್ನ ನೆಕ್ಕತೀರಿ ನೋಡ್ರೀ, ಅದss ನಿಮ್ಮ ಘೇಂಡಾ  ಹನಿಮೂನ್. ಏನಂತೀರಿ? - ಅಂತ ಮಸ್ತ ಕಾಡಿಸಿದೆ. 

ಕ್ಯಾ ಸಾಬ್? ನಮ್ಮದು ಹಾಲತ್ ನಮಗೆ ಇಲ್ಲಿ. ನಿಮಗೆ ಇಲ್ಲೂ ಸಹ ಮಸ್ಕಗಿರಿ ಕ್ಯಾ? ಇದು ಚೊಲೊ ಅಲ್ಲಾ ನೋಡಿ. ದೋಸ್ತ್ ಗೆ ಹೆಲ್ಪ್ ಮಾಡೋದು ಬಿಟ್ಟು ಹೀಗೆ ಘೇಂಡಾ  ಹನಿಮೂನ್ ಅಂತ ಕಾಡಿಸೋದು ಕ್ಯಾ?- ಅಂತ ಕರೀಂ ಲಬೋ ಲಬೋ ಅಂದ. 

ನೀ ಹೋಗಪಾ. ಟ್ಯೂನಿಸಿಯಾ, ಆಲ್ಜೀರಿಯಾ, ಬೋಟ್ಸವಾನಾ, ನಮೀಬಿಯಾ ಎಲ್ಲಾ ಕಡೆ ಹೊಂಟೀ. ಪಾಸ್ಪೋರ್ಟ್, ವೀಸಾ, ಟಿಕೆಟ್ ಇತ್ಯಾದಿ ಭಾಳ ಕೆಲಸ ಇರ್ತಾವು. ಮಾಡ್ಕೋ ಹೋಗ್ರೀ ಸಾಬ್ರಾ. ಖುದಾ ಹಾಫಿಜ್, ಅಂತ ಹೇಳಿ ನಾ ಬಂದೆ. 

ಬೇಬಿ ಘೇಂಡಾಮೃಗ..... ಮುಂದಿನ ಸಲೆ ಇನ್ನು ಬೇಬಿ ಗೊರಿಲ್ಲಾ ತೊಗೊಂಡು ಬಾ ಅಂತಾಳೋ ಏನೋ ಹಾಪ್ ಬೇಗಂ?

ಯಾರಿಗ್ಗೊತ್ತು?

ಶಿವನೇ ಶಂಭುಲಿಂಗ. ಕಾಪಾಡಪ್ಪ  ನಮ್ಮ ಸಾಬ್ರನ್ನ.

Monday, March 11, 2013

ಗಂಡಾಂತರ ಸೆ ಹೆಂಡಾಂತರ ತಕ್


ಅವತ್ತೊಂದಿನ ಸಂಜಿ ಮುಂದ ಅಲ್ಲೇ ಮನೋಹರ ನಿವಾಸ ಹೋಟೆಲ್ ಮುಂದ ನಿಂತಿದ್ದೆ. ದೋಸ್ತ ಕರೀಂ ಬಂದ. ನಾವೇನ ಆ ಹೋಟೆಲ್ ಒಳಗಾ ಚಾ ಕುಡಿಯೋದಿಲ್ಲ. ಇವ ಕರೀಂ ನೋಡಿದ್ರ, ಸೀದಾ ಅಲ್ಲೇ ರೂಂ ಮಾಡಿದವರಾಂಗ ಒಳಗ ಹೋಗಿ, ಗಲ್ಲಾ ಮ್ಯಾಲೆ ಕುತಗೊಂಡಿದ್ದ ಮ್ಯಾನೇಜರ್ ಕಡೆ ಏನೋ ಕೇಳಲಿಕತ್ತಿದ್ದ. 

ನನಗೋ ಕುತೂಹಲ. ಕೆಟ್ಟ ಕುತೂಹಲ. ನಾನೂ ಹಿಂದ ಓಡಿದೆ. ಸದ್ದಿಲ್ಲದ ಓಡಿ ಹೋಗಿ, ಅವನ ಹಿಂದ ನಿಂತು, ಮೈಲ್ಡಾಗಿ ಕಿವಿ ಚಟ್ಟಿಗೆ  ಚಟ್ ಅಂತ ಶಾಕ್ ಬರೋ ರೀತಿಲೆ ಕೊಟ್ಟೆ. ನಾವು ಸಣ್ಣವರಿದ್ದಾಗೂ ಹಾಂಗ ಮಾಡಿ ಅವನ ಕಿವಿಗೆ ಭಾಳ ಶಾಕ್ ಕೊಡ್ತಿದ್ದಿವಿ. ಬುದ್ಧನ ಗತೆ ಮಸ್ತ ಉದ್ದ ಕಿವಿ ಇಟ್ಟಾನ. ಚಟ್ ಅಂತ ಶಾಕ್ ಕೊಡಲಿಕ್ಕೆ ಹೇಳಿ ಮಾಡಿಸಿದ ಹಾಂಗ ಅದ.

ಕರೀಮ್ಗ ಮಸ್ತ ಶಾಕ್ ಹೊಡಿತು ಅನ್ನಸ್ತದ. ಸುವ್ವರ್ ಕೆ......ಅಂತ ಹಿಂದ ತಿರುಗಿದ. ನಾ ಬತ್ತೀಸೂ ತೋರ್ಸಿಕೊತ್ತ ನಿಂತಿದ್ದೆ.

ಕ್ಯಾ ಸಾಬ್? ನೀವು ಕ್ಯಾ? ಹೀಗೆ ಮಸ್ಕಿರಿ ಮಾಡೋದು ಕ್ಯಾ? - ಅಂದ ಕರೀಂ.

ಮತ್ತೇನೋ? ನೀ ಏನ್ ಇಲ್ಲೆ? ಇಲ್ಲೆ ರೂಂ ಹಾಕಿ ಏನು? ಮತ್ತೇನರಾ ಮಾಲು ಅದು ಇದು ವ್ಯವಹಾರ ಏನೋ? ನೋಡಿಕೊಂಡು ಮಾಡಪಾ. ಈಗಿತ್ತಲಾಗ ಪೋಲಿಸ್ ರೇಡ್ ಭಾಳ್ ಆಗ್ಲಿಕತ್ತಾವ. ಸುಮ್ಮನ ಯಾಕ ಭಾನಗಡಿ? ನಿನ್ನ ಡೌ ಎಲ್ಲ ಏಕ್ದಂ ಖಾಂದಾನಿ ಇದ್ದಾರ. ಹೀಂಗೆಲ್ಲಾ ಇಂತಾ ಲಾಜಿಗೆ ಬರಂಗಿಲ್ಲ. ಆದರೂ, ಕಾಮಾತುರಾಣಾಂ ನ ಲಜ್ಜಾ ನ ಭಯಂ, ಅನ್ನೋ ಹಾಂಗ ಏನಾರಾ ಭಾನಗಡಿ ಪ್ಲಾನ್ ಅದನೋ ಏನೋ ಅಂತ ನಮಗ ಸಂಶಯ ನೋಡಪಾ, ಅಂದು ಮಸಡಿ ಮ್ಯಾಲೆ ದೊಡ್ಡ ಕೊಶ್ಚನ್ ಮಾರ್ಕ್ ಹಾಕಿಕೊಂಡು ನಿಂತೆ.

ಕ್ಯಾ ಸಾಬ್? ಕ್ಯಾ ಬಾತ್ ಕರ್ತಾ? ಪ್ಯಾರ್ ಮೊಹಬ್ಬತ್ ಮಾಡ್ಬೇಕು ಅಂದ್ರೆ ನಾವು ನಮ್ಮ ಡೌ ಕರ್ಕೊಂಡು ಎಲ್ಲೋ ರೆಸಾರ್ಟ್ ಗೆ ಹೋಗ್ತೀವಿ ಸಾಬ್. ಇಲ್ಲೆ ಎಲ್ಲಾರಿಗೂ ಕಾಣೋ ಹಾಗೆ ಮನೋ ನಿವಾಸಗೆ ಬರ್ತೀವಿ ಕ್ಯಾ? ಅದಕ್ಕೆ ಬೇರೆ ಕಾರಣ ಇದೆ. ಬನ್ನಿ ಚಾ ಕುಡಿತಾ ಮಾತಾಡೋಣ. ಕ್ಯಾ ಬೋಲ್ತಾ?, ಅಂದ ಕರೀಂ.

ಚಾ ನೀ ಕುಡೀಪಾ. ನಮಗ ಏನರ ಸೇಹೆತ್ ಬನಾನೇ ವಾಲಾ ಡ್ರಿಂಕ್ಸ್ ಕುಡಿಸು, ಅಂದು ಅವನ ಹಿಂದೆ ಹೋಗಿ ಕೂತೆ.

ನೀವು ಚಾ ಕುಡಿಯೋದಿಲ್ಲ ಅಂದ್ರೆ ಬೋರಮ್ಮನ ಮಿಟಾ ಕುಡಿತೀರೋ? ಅಥವಾ ಮಲ್ಲಮ್ಮನ ತವಾ ಕುಡಿತೀರೋ? - ಅಂತ ಕರೀಂ ಜೋಕ್ ಹೊಡೆದ.

ಅದು ನಮ್ಮ ಹಳೇ ಜೋಕ್. ಬೋರ್ನ್ವಿಟಾಕ್ಕ ಬೋರಮ್ಮನ ಮಿಟಾ, ಮಾಲ್ಟೋವಾಕ್ಕ ಮಲಮ್ಮನ ತವಾ ಅಂತ ಹೇಳಿ ನಗೋದು ನಮ್ಮ ರೂಢಿ. ಅದು ಎಂದೋ ನೋಡಿದ ಉಪೇಂದ್ರನ 'ತರ್ಲೆ ನನ್ನ ಮಗ' ಪಿಚ್ಚರ್ರ್ ಡೈಲಾಗ್.

ಬೋರಮ್ಮನ ಮಿಟಾ ಬೋರ್ ಆಗ್ಯದೋ. ಇವತ್ತು ಮಲ್ಲಮ್ಮನ ತವಾನ ಚೊಲೊ ಅನ್ನಸಲಿಕತ್ತದ. ಆದ್ರ ಈ ಮನೋಹರ್ ನಿವಾಸ ಒಳಗ ಮಾಲ್ಟೋವಾ ಮಳ್ಳಮ್ಮನ ತವಾ ಮಾಡಿದಂಗ ಮಾಡ್ತಾನ. ಇರಲೀ. ಕುಡದು ಮಳ್ಳ ಆಗೋಣ. ನಡಿ ಅಂತ ಹೇಳಿ ಒಳಗ ಹೋಗಿ ಕೂತು ಸೆಟಲ್ ಆದ್ವಿ.

ವೇಟರ್ ಕರೀಮಂಗ ಚಾ, ನನಗ ಮಾಲ್ಟೋವಾ ತಂದು ಇಟ್ಟ. ಓಕೆ ಇತ್ತು. ಬಿಸಿ ಇತ್ತು. ಮಸ್ತ ಸ್ವೀಟ್ ಇತ್ತು. ಇಂತಾ ಮಳ್ಳಮ್ಮನ ಮಾಲ್ಟೋವಾ ಕುಡಿದ ನಂತರ ಮಾಣಿಕ್ ಚಂದ ಹಾಕಿಬಿಟ್ಟರ ಮಸ್ತ. ಸ್ವರ್ಗ ಅಲ್ಲೇ!

ಈಗ ಹೇಳಪಾ ಕರೀಂ ಭೈ....ಏನು ಕೆತ್ತೆಬಜೆ ನೆಡಸಿ ಅಂತ. ಯಾಕ ಇಲ್ಲೆ ರೂಂ ಮಾಡಿ? - ಅಂತ ಕೇಳಿದೆ.

ಸಾಬ್... ಏನು ಹೇಳುದು? ಎಲ್ಲಾ ಆ ಸ್ವಾಮಿ ಗರಮಾನಂದನಿಂದ ಸಾಬ್. ನಮ್ಮ ಬೇಗಂಗೆ ಗಂಡನ್ನ ದೂರ ಓಡಿಸು ಅಂತ ಹೇಳಿ ಬಿಟ್ಟಿದ್ದಾನೆ. ಅದಕ್ಕೆ ನಮ್ಮ ಬೇಗಂ ನಮ್ಮನ್ನು ವಾಡೆಯಿಂದ ಹೊರಗೆ ಹಾಕಿ ಬಿಟ್ಟರು. ಅದಕ್ಕೆ ಇಲ್ಲಿ ಬಂದು ರೂಂ ಮಾಡಿದ್ದು ಸಾಬ್. ನಮ್ಮದೂ ಕಡೆ ರೋಕಡಾ ಬ್ಯಾರೆ ಸ್ವಲ್ಪ ಕಮ್ಮಿ ಐತೆ. ಈ ಹೋಟೆಲ್ ನಲ್ಲಿ ರೂಂ ಸಸ್ತಾ ನೋಡಿ. ಅದಕ್ಕೇ ಇಲ್ಲಿ ರೂಂ ಮಾಡಿದ್ದು, ಅಂತ ಹೇಳಿ ಕರೀಂ ಸೊರ್ರ ಅಂತ ಚಾ ಬಸಿಯಿಂದ ಜಗ್ಗಿ ಕುಡಿದ. ಮಸ್ತ ಸೌಂಡ್ ಬಂತ. ಸೊರ್ರ ಅಂತ.

ಹಾಂ!? ಗರಮಾನಂದ!? ಏನು ಹೆಸರೋ ಮಾರಾಯ? ಗರಂ ಅಂದ್ರ ಬಿಸಿ. ಆನಂದ ಅಂದ್ರ ಆನಂದ. ಏನು ಎಲ್ಲರಿಗೂ ಬಿಸಿ ಮಾಡಿ ಆನಂದ ಕೊಡ್ತಾನ ಏನು? ಅಥವಾ ಎಲ್ಲರಿಗೂ ಬಿಸಿ ಮುಟ್ಟಿಸಿ ಆನಂದ ಕೊಡ್ತಾನೋ? ಎಂತಾ ಸ್ವಾಮಿನೋ ಮಾರಾಯಾ ನಿಮ್ಮ ಗರಮಾನಂದ? - ಅಂತ ಕೇಳಿದೆ.

ಹಾಗೇನೂ ಇಲ್ಲ ಸಾಬ್. ಅದು ಸ್ವಾಮೀಜಿ ಹೆಸರು ಅಷ್ಟೇ. ಅವರೇನೂ ಯಾರಿಗೂ ಗರಂ ಅಥವಾ ಥಂಡಾ ಮಾಡಿದ್ದು ನಮಗೆ ಗೊತ್ತಿಲ್ಲ, ಅಂದ ಕರೀಂ.

ನಿಮ್ಮ ಬೇಗಂ ಯಾಕೆ ಅವರ ಕಡೆ ಹೋಗಿದ್ದರು? ಅಂತ ಕೇಳಿದೆ.

ಏನು ಹೇಳೋದು ಸಾಬ್? ಅಕಿ ಹೇಳಿ ಕೇಳಿ ಹಾಪ್. ಮಂಗ್ಯಾ. ನಿಮಗೇ ಗೊತ್ತು ಅಕಿ ಎಂತಾ ಹಾಪ್ ಅಂತ? ಹೋಗಿ ಹೋಗಿ ಉಳ್ಳಾಗಡ್ಡಿ ಡಾಕ್ಟರ ಕಡೆ ಪುಂಗಿ ಟ್ರೀಟ್ಮೆಂಟ್ ತೊಗೊಂಡು ಬಂದ ಮಹಾತ್ಮೀ ಅಕಿ. ಇನ್ನು ಸ್ವಾಮೀ ಗರಮಾನಂದ ಕಡೆ ಹೋದ್ರೆ ಏನು ಆಶ್ಚರ್ಯ ಸಾಬ್? - ಅಂತ ಅವನ ಬೇಗಂ ಎಂದೂ ಬಗೆಹರಿಯದ ಪ್ರಾಬ್ಲೆಮ್ ಕೇಸ್ ಅಂತ ಕರೀಂ ಹೇಳಿದ.

ಮಹಾತ್ಮೀ??!!!!

ಮಹಾತ್ಮೀ ಅಂದ್ರ ಏನೋ? ಏನೋ ವಿಚಿತ್ರ ಶಬ್ದ ನಿನ್ನ ಶಬ್ದ ಭಂಡಾರಕ್ಕ ಸೇರಿಸಿಕೊಂಡಿ ಏನು? ಹಾಂ? - ಅಂತ ಕೇಳಿದೆ.

ಕ್ಯಾ ಸಾಬ್? ಮಹಾತ್ಮ ಗಾಂಧೀ ಇದ್ದಾಗೆ ಇಕಿ ಮಹಾತ್ಮೀ ಬೇಗಂ. ಮಹಾತ್ಮ ಇದರ ಸ್ತ್ರೀಲಿಂಗ ಮಹಾತ್ಮೀ, ಅಂದ ಕರೀಂ.

ಆತ್ಮಕ್ಕೂ ಲಿಂಗ ಇರ್ತದ ಏನು? ಗೊತ್ತಿಲ್ಲ. ಭಾಳ ಗಹನವಾದ ವಿಷಯ.

ಸಾಬ್ ಅದು ಏನೋ ಭಂಡಾರ ಅಂದ್ರಲ್ಲ. ಏನು? ನಮ್ಮ ಹಣಿ ಮ್ಯಾಲೆ ನಿಮಗೆ ಭಂಡಾರ ಕಾಣ್ತು ಕ್ಯಾ? ಇವತ್ತು ಯಾವ ಜೋಗವ್ವಾನೂ ನಮಗೆ ಸಿಕ್ಕಿಲ್ಲ. ಹಾಂಗಾಗಿ ಭಂಡಾರ್ ಕೂಡ ಯಾರೂ ಕೊಟ್ಟಿಲ್ಲ. ಮತ್ತೆ ಆ ಸ್ನಾನ ಮಾಡದೇ,  ವಾಸನಿ ಹೊಡೆವ ಜೋಗವ್ವಾ ಕೊಡೊ ಭಂಡಾರ ಯಾರು ಹಚ್ಚಿಗೊತ್ತಾರೆ ಸಾಬ್? ಕೇವಲ ಹಾಪ್ ಮಂದಿ ಮಾತ್ರ ಅವರು ಕೊಟ್ಟ ಭಂಡಾರ ಹಣಿ ಮ್ಯಾಲೆ ಹಚ್ಚಿಗೊಂಡು ಹಳದಿ ಬಂದರ್ ಹಾಗೆ ಕಾಣ್ತಾರೆ ಸಾಬ್, ಅಂದ ಕರೀಂ.

ಹಳದಿ ಭಂಡಾರದ ಜೋಗವ್ವ 
 ಏ....ಹೋಗ್ಗೋ  ನಿನ್ನ!!!!!! ಆ ಭಂಡಾರ ಅಲ್ಲೋ. ಇದು ಶಬ್ದ ಭಂಡಾರ ಅಂದ್ರ ನಿಮ್ಮ ಭಾಷಾ ಒಳಗಾ ಖಜಾನಾ ಅಂತಾರ ನೋಡು ಅದು. ಅಂದ್ರ ಇಂಗ್ಲಿಷ್ ಒಳಗ ವೊಕ್ಯಾಬುಲರಿ (vocabulary) ಅಂತ.  ಫುಲ್ ವಿವರಣೆ ಕೊಟ್ಟೆ.

ಚಾ ಸೊರ್ರ ಸೊರ್ರ ಅಂತ ಕುಡಕೋತ್ತ ಕೂತಿದ್ದ ಮಂಗ್ಯಾ ಕರೀಂ. ಸರಿ ಕೇಳಿಲ್ಲ ನಾ ಹೇಳಿದ್ದು.

ಕ್ಯಾ????!!!! ಬುಲ್ಲಾರೀ  ಗಿಲ್ಲಾರೀ  ಅಂತ ಏನೇನೋ ಗಂದಾ ಗಂದಾ ಮಾತಾಡ್ತೀರಿ ಸಾಬ್? ಶರಮ್ ಬರೋದಿಲ್ಲ ಕ್ಯಾ? - ಅಂತ ಕೇಳಿದ ಕರೀಂ.

ಅಯ್ಯೋ!!!!ಇಲ್ಲ ಮಾರಾಯ. ನಾನು ಹೇಳಿದ್ದು ಸಮಾ ಕೇಳಿಕೋ. ಏನೇನ್ರರ ಹೇಳ್ತೀ. ಹಾಪಾ!!! - ಅಂತ ಬೈದೆ.

ಇಂತಾ ಮಂದಿಗೆ ಹೊಸಾದು ಹೇಳಲಿಕ್ಕೆ ಹೋಗಬಾರದು. ತಮ್ಮ ತಲಿಯೊಳಗ ಏನು ತಿರಗಲಿಕತ್ತಿರ್ತದ ಅದನ್ನ ಫಿಟ್ ಮಾಡಿ ಏನೇನೋ ಹೇಳಿ ಬಿದ್ತಾರ. ಹಾಪ್ ಮಂದಿ.

ಅಂತೂ ಇಂತೂ ವೊಕ್ಯಾಬುಲರಿ (vocabulary) ಯಾವದೇ ತರಹದ ಬುಲ್ಲಾಗೆ ಮುಲ್ಲಾಗೆ ಸಂಬಂಧಿಸಿದ್ದು ಅಲ್ಲ ಅಂತ ಅವನ್ನ ನಂಬಿಸಲಿಕ್ಕೆ ಹೋಗಿ ನನ್ನ ತಲಿ ಬಾರಾ ಆಣಾ ಆತು.

ಸಾಬ್ರಾ..... ಅದೆಲ್ಲ  ಇರಲೀ. ನಿಮ್ಮನ್ನ ನಿಮ್ಮ ಹಾಪ್ ಬೇಗಂ ಮನಿ ಬಿಟ್ಟು ಯಾಕ ಓಡಿಸಿದರು? ಇಲ್ಲೆ ಎಷ್ಟು ದಿವಸ ನಿಮ್ಮ ರೂಂ?ಹಾಂ?ಹಾಂ? - ಅಂತ ಕೇಳಿದೆ.

ಸಾಬ್.... ನಮಗೆ ಏನು ಗೊತ್ತು. ನಮ್ಮದು ಬೇಗಂಗೆ ಗಂಡಾಂತರ ಹೋಗೋ ತನಕ ನಾವು ನಮ್ಮದು ವಾಡೆ ಕಡೆ ಹೋಗೋ ಹಾಗೇ ಇಲ್ಲ. ಯಾ ಅಲ್ಲಾ.... ಯಾ ಖುದಾ..... ಮಹಲ್ ಅಂತಾ ವಾಡೆ ಇಟ್ಟಿಗೊಂಡು ಈ ದರಿದ್ರಾದು ಮನೋ ನಿವಾಸ ಜೈಸಾ ಮುಸಾಫಿರಖಾನಾ ಒಳಗೆ ಇರೋ ಪರಿಸ್ತಿತಿ ಬಂತಲ್ಲಾ ನಮಗೆ..... ಅಂತ ಕರೀಂ ಅಲವತ್ತುಗೊಂಡ.

ಸಾಬ್ರಾ...... ಮುಸಾಫಿರಖಾನಾ ಇದ್ದರ ಏನಾತ್ರೀ? ಮುಸಾಫಿರಖಾನಾಕ್ಕ ಎಟ್ಯಾಚಡ್ (attached) ಪಾಯಖಾನ ಅದಲ್ಲಾ? ಅದು ದೊಡ್ಡ ಮಾತು. ನಿಮ್ಮ ವಾಡೆ ಒಳಗಾ ರಾತ್ರಿ ಎದ್ದು  ದೂರ ಇರೋ ಪಾಯಖಾನಿಗೆ ಹೋಗಿ ಬರೋದು ಅಂದ್ರ ವಾಪಸ್ ಬರೋ ತನಕಾ ಮುಂಜಾನಿ ಆಗಿಬಿಡ್ತದ. ಆ ದೃಷ್ಟಿಯಿಂದ ನೋಡಿದ್ರ ಒಳ್ಳೇದು ಅಲ್ಲಾ? - ಅಂತ ಕೇಳಿದೆ. ಬಿ ಪಾಸಿಟಿವ್ ಅನ್ನೋ ತತ್ವ ನಮ್ಮದು.

ಇಲ್ಲಾ ಸಾಬ್ ಕಡಕಿ ಆಗಿ ಬಿಟ್ಟಿದೆ. ರೋಕ್ಕಾನೇ  ಇಲ್ಲ. ಅದಕ್ಕೇ ಸಾದಾ ರೂಂ. attached ಇಲ್ಲಾ ಸಾಬ್, ಅಂತ ತಾನೂ ಸಹಿತ ಸುಲಭ್ ಮಾದರಿ ಟಾಯಿಲೆಟ್ ಉಪಯೋಗ ಮಾಡಬೇಕು ಅಂತ ನಿಟ್ಟುಸಿರು ಬಿಟ್ಟ.

ಸಾಬ್ರಾ..... ನಿಮ್ಮ ಬೇಗಂಗೆ ಗಂಡಾತರ ಬರೋದಕ್ಕೂ ನಿಮಗ ಮನಿ ಬಿಟ್ಟು ಓಡಿ ಬರೋ ಸ್ಥಿತಿ ಬರೋದಕ್ಕೂ ಏನು ಸಂಬಂಧ ಅದ? - ಅಂತ ಕೇಳಿದೆ. 

ನೋಡಿ ಸಾಬ್..... ನಮ್ಮದು ಬೇಗಂ ಕುಂಡಲಿ ನೋಡ್ಬಿಟ್ಟಿ ಸ್ವಾಮೀ ಗರಮಾನಂದಾ ಅಕಿಗೆ ಹೇಳಿದ, ನಿಮಗೆ ಭಾರಿ ದೊಡ್ಡ ಗಂಡಾಂತರ ಇದೆ. ಗಂಡಾಂತರ ದೂರ ಮಾಡಿಕೊಳ್ಳಿ ಅಂತ. ಅದು ಕೇಳಿಕೊಂಡು ಬಂದವಳೇ ನಮ್ಮ ಬೇಗಂ ನಮ್ಮನ್ನು ಮನೆಯಿಂದ ಓಡಿಸಿಬಿಟ್ಟಳು ಸಾಬ್.... ಅಂದ ಕರೀಂ.

ಯಾಕ ಸಾಬ್ರಾ?

ಅದೇ ಸಾಬ್....ಗಂಡಾಂತರ  ಅಂದ್ರೆ ಗಂಡನಿಂದ ಅಂತರ. ಗಂಡಾಂತರ ದೂರ ಮಾಡಿಕೊಳ್ಳಿ ಅಂದ್ರೆ ಗಂಡಾದು ಜೊತೆ ಇರೋ ಅಂತ್ರಾನ ಇನ್ನೂ ದೂರ ಮಾಡಿಕೊಳ್ಳಿ ಅಂತ. ಹಾಂಗಂತ ವಿಚಾರ ಮಾಡ್ಬಿಟ್ಟಿ ನಮ್ಮ ಬೇಗಂ ನಮ್ಮನ್ನು ಮನೆಯಿಂದ ಓಡಿಸಿಬಿಟ್ಟಳು. ಗಂಡಾಂತರ ಅಂದ್ರೆ ಗಂಡಾನಿಂದ ದೂರ ಇರ್ಬೇಕು ಅಂತ ಕ್ಯಾ ಸಾಬ್? - ಅಂತ ಕೇಳಿಬಿಟ್ಟ ಕರೀಂ.

ಈಗ ನಗಬಾರದ ಜಾಗದಿಂದ ನಗೋ ಸರದಿ ನಂದು.

ಸಾಬ್ರಾ.....ಗಂಡಾಂತರ ಅದ ಅದಕ್ಕ ಗಂಡನ್ನ ಓಡಿಸಬೇಕು ಅನ್ನೋದನ್ನ ಸಹಿತ ಸ್ವಾಮಿ ಗರಮಾನಂದ ಅವರ ಹೇಳಿದರೋ ಅಥವಾ ಬ್ಯಾರೆ ಯಾರರ ಹೇಳಿದರೋ? - ಅಂತ ಕೇಳಿದೆ.

ಇಲ್ಲ  ಸಾಬ್. ಸ್ವಾಮೀಜಿ ಹೇಳಿಲ್ಲ. ಯಾಕೆಂದ್ರೆ ಅವರು, ನಿಮಗೆ ಗಂಡಾಂತರ ಐತೆ. ದೂರ ಮಾಡಿಕೊಳ್ಳಿ ಅಂತ ಇಷ್ಟೇ ಹೇಳಿಬಿಟ್ಟು ಸೈಲೆಂಟ್ ಆಗಿ ಬಿಟ್ಟರು. ಪರಿಹಾರ ಕೇಳಿದ್ರೆ, ಅದಕ್ಕೆ  ಬೇರೆ ಕಾಸು extra ಕೇಳಿದರಂತೆ. ಅದರ ಪ್ರಕಾರ ನಮ್ಮ ಬೇಗಂ, ಸ್ವಾಮೀಜಿ ಪರಿಹಾರ ಬ್ಯಾಡಾ ನಮಗೆ. ಹೇಗೂ ಗಂಡಾಂತರ ಅದೇ ಅಂತ ಗೊತ್ತಾದ ಮೇಲೆ ಅದನ್ನ ದೂರ ಮಾಡೋದು ಏನು ಮಹಾ? ಅಂತ ಸೆಲ್ಪ್ ಸರ್ವೀಸ್ (self  service) ಮಾಡಿಕೊಂಡು ಬಿಟ್ಟರು. ರೊಕ್ಕಾ ಉಳೀತು ನೋಡ್ರೀ, ಅಂದ ಕರೀಂ.

ಆಗಿದ್ದು ಇಷ್ಟ. ಕರೀಮನ ಹೆಂಡ್ತೀಗೆ ಅವರ ಹಕ್ಕಿ ಪಕ್ಕಿ ಉರ್ದು ಒಂದು ಬಿಟ್ಟರ ಬಾಕಿ ಎಲ್ಲಾ ಭಾಷಾ ಅಂದ್ರ ಭಾಳ ತುಟ್ಟಿ. ಗಂಡನಿಂದ ಅಂತರ ಗಂಡಾಂತರ ಅಂತ ಎಂದೋ ಕಲಿತ ಕನ್ನಡ ತಪ್ಪು ತಪ್ಪಾಗಿ ಉಪಯೋಗಿಸಿ, ಗಂಡಾಂತರ ದೂರ ಮಾಡಿಕೊಳ್ಳಬೇಕು ಅಂದ್ರ ನಮ್ಮ ಕರೀಮನ್ನ ಮನಿಯಿಂದ ದೂರ ಓಡಿಸಬೇಕು ಅಂತ ಹೇಳಿ ಓಡಿಸಿಬಿಟ್ಟಾಳ.

ಸಾಬ್ರಾ ಬೆಷ್ಟ ಆತ ಬಿಡ್ರೀ. ನಿಮ್ಮ ಹಾಪ ಬೇಗಂ ಗಂಡಾಂತರ ದೂರ ಮಾಡಿಕೊಂಡರ ನೀವು ಸ್ವಲ್ಪ ಹೆಂಡಾಂತರ ಹತ್ತಿರ ಮಾಡಿಕೊಳ್ಳರೀ. ಚೈನಿ ಮಾಡ್ರೀ, ಅಂದೆ ನಾನು ಸಾಬರಿಗೆ.

ಹೆಂಡಾಂತರ?!!!ಅಂದ್ರೇ ಸಾಬ್? ಹೆಂಡಾಂತರ ಹತ್ತಿರ ಮಾಡಿಕೊಳ್ಳೋದು ಅಂದ್ರೆ ಸಾಬ್? - ಅಂತ ಭಾಳ ಇನ್ನೋಸೆಂಟ್ ಆಗಿ ಕೇಳಿದ ನಮ್ಮ ಕರೀಂ.

ನಿಮ್ಮ ಬೇಗಂ ಗಂಡನಿಂದ ಅಂತರ ಗಂಡಾಂತರ ಅಂತ ಸಂಧಿನೋ ಸಮಾಸನೋ   ಬಿಡಿಸಿದರ ನೀವೂ ಹಾಂಗss ಹೆಂಡಾಂತರ ಬಿಡಸ್ರೀ...ಅಂತ ಸ್ವಲ್ಪ ಜುಲ್ಮೀ ಮಾಡಿದೆ.

ಹೆಂಡತಿಯಿಂದ ಅಂತರ  ಹೆಂಡಾಂತರ ಅಂತ ಸಮಾಸ ಬಿಡಸ್ತಾನೋ ಅಂತ ನಿರೀಕ್ಷೆ ಇತ್ತು.  ಆದ್ರ ಆಗಿದ್ದೇ ಬ್ಯಾರೆ.

ಸಾಬ್.... ನೋಡೋಣ ತಡೀರಿ. ಹೆಂಡಾಂತರ...... ಹೆಂಡದಿಂದ ಅಂತರ ಹೆಂಡಾಂತರ. ಹೆಂಡ ಅಂದ್ರೆ ಶೆರೆ. ನಮಗೆ RC ನಿಮಗೆ KF. ಹೆಂಡಾಂತರ ಕಡಿಮೆ ಮಾಡಿಕೊಳ್ಳೋದು ಅಂದ್ರೆ ಗಿಚ್ಚಾಗಿ ಶೆರೆ ತಂದು ನಮ್ಮ ಹೋಟೆಲ್ ರೂಮಲ್ಲೇ ಸ್ಟಾಕ್ ಮಾಡಿ ಬಿಡೋದು. ಅಂದ್ರೆ ಎಲ್ಲೇ ಕೈ ಇಟ್ಟರೂ RC ಇಲ್ಲ KF ಸಿಕ್ಕೇ ಬಿಡಬೇಕು. ಅಲ್ಲಾ? - ಅಂತ ಹೇಳಿ, ಹ್ಯಾಂಗೆ, ಅಂತ ಕಣ್ಣು ಹೊಡೆದ ಕರೀಂ.

ಸಾಬ್ರಾ.....ಭಾರಿ ಸಮಾಸ ಬಿಡಿಸಿ ಬಿಟ್ಟಿರಿ ನೋಡ್ರೀ. ಮಾನ್ ಗಯೇ ಉಸ್ತಾದ್. ಭಾರಿ ಪ್ರಳಯಾಂತಕ ಇದ್ದಿ ಬಿಡು. ಮತ್ತ RC, KF ತರಿಸಿ ಬಿಡು. ತೀರ್ಥಯಾತ್ರೆ ಶುರು ಮಾಡಿ ಬಿಡೋಣ. ಶುಭಸ್ಯ ಶೀಘ್ರಂ. ತಡಾ ಯಾಕ? - ಅಂತ ಕೇಳಿದೆ.

ಹೋಟೆಲ್ ಒಳಗ ರೂಮಿ ಹಾಕಿ ಗಿಚ್ಚಾಗಿ ಕುಡಿಯೋದು ಅನ್ನೋದರ ಬಗ್ಗೆ ಕೇಳಿದ್ದಿವಿ. ಅನುಭವ ಇರಲಿಲ್ಲ. ನಮ್ಮ ಕರೀಮನ
ಗಂಡಾಂತರ ಹೆಂಡಾಂತರ ಲಫಡಾಯಿಂದ ಅದೂ ಕೂಡ ಅನುಭವ ಆಗಿ ಒಂದು ಐಟಂ ಟಿಕ್ ಮಾಡಿಬಿಡೋದು. ತಣ್ಣನೆ KF ಬಂದ್ರ  ಸಾಕು.

ಚಿಂತಾ ನಕೋಜಿ ಸಾಬ್. ಈಗ ಫೋನ್ ಮಾಡಿ ಬಿಡ್ತೇನಿ. ಸ್ನಾನಕ್ಕೆ ಸಾಕಾಗುವಷ್ಟು ಹೆಂಡ ಪ್ಯಾಟಿಂದ ಹೊಂಟು ಹೆಂಡಾಂತರ ಕಮ್ಮಿ ಆಗ್ತಾ ಆಗ್ತಾ ಬಂದು ಮುಟ್ಟೇ ಬಿಡ್ತದೆ. ನಂತರ ನೀವು KF ಕುಡೀರಿ ನಾವೂ RC ಶುರು ಮಾಡ್ತೇವೆ. ಓಕೆ? - ಅಂದ ಕರೀಂ ತನ್ನ ಹೆಂಡಾಂತರ ಕಾರಾವಾಯಿ ಶುರು ಮಾಡಿದ.

ನಾ ಬರಬಹುದಾದ KF ಕ್ರೇಟಿಗೆ ಕಾದು ಕೂತೆ.

Sunday, March 03, 2013

ಹೋಮಿಯೋಪತಿ ಕು(o)ಚ ಬ್ರಹ್ಮ

ನಮ್ಮ ರೂಪಾ ವೈನಿಗೆ ಇಂಗ್ಲೀಷ್ ಅಂದ್ರ ಭಾಳ ಹುಚ್ಚು. ಆದ್ರ ಅವರ ಇಂಗ್ಲೀಷ್ ಸ್ವಲ್ಪ ತುಟ್ಟಿನೂ ಅದ. ಏನೇನರ ಹೇಳಿ ಒಂದಕ್ಕ ಎರಡು ಅರ್ಥ ಅನರ್ಥ ತಂದು ಇಡೋದ್ರಲ್ಲಿ ಎತ್ತಿದ ಕೈ ಅವರದ್ದು.

ಮೊನ್ನೆ ಸಂಜಿಕ್ಕ ಸಿಕ್ಕಿದ್ದರು. ರೂಪಾ ವೈನಿ ಮತ್ತ ನಮ್ಮ ದೋಸ್ತ ಉರ್ಫ್ ವೈನಿ ಗಂಡ ಚೀಪ್ಯಾ. ಚೀಪ್ಯಾ ಯಾಕೋ ಸ್ವಲ್ಪ ಡಲ್ ಹೊಡೆದಿದ್ದ. ಮೂಡ್ ಸ್ವಿಂಗ್ ಇರಬೇಕು. ಎಲ್ಲರಿಗೂ ಮೂಡ್ ಸ್ವಲ್ಪ ಸ್ವಲ್ಪ ಸ್ವಿಂಗ್ ಆದ್ರಾ ನಮ್ಮ ಚೀಪ್ಯಾಗ ಮೂಡ್ ಸ್ವಿಂಗ ಆತಂದ್ರ ಅದು ರಿವರ್ಸ್ ಸ್ವಿಂಗ್ ಆಗಿ ಏನೇನೋ ಆಗಿ ಬಿಡ್ತದ.

ನಮಸ್ಕಾರ ವೈನಿ, ಚೀಪ್ಯಾ. ಏನ್ ಸುದ್ದಿ? - ಅಂತ ಸಹಜ ಕೇಳಿದೆ.

ವೈನಿ ಕೈಯಾಗ ರೆಪೆಡೆಕ್ಸ್ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಅನ್ನೋ ಬುಕ್ ಬ್ಯಾರೆ ಇತ್ತು. ಇವತ್ತು ಆತು ತೊಗೋ ಇಂಗ್ಲೀಷ್ ಭಾಷೆಯ ತಿಥಿ ಅಂತ ಮನಸ್ಸಿನ್ಯಾಗ ಅಂದುಕೊಂಡೆ.

ಏನ ಹೇಳೋಣ ಮಂಗೇಶ್. ನಮ್ಮ ನಸೀಬ್ ಸರಿ ಇಲ್ಲೋ, ಅಂದ ವೈನಿ ಒಂದು ದೊಡ್ಡ ಹುಶ್ ಅಂತ ಉಸಿರು ಬಿಟ್ಟರು. ಚೀಪ್ಯಾ ಸಹಿತ ಅದಕ್ಕ ಸಾಥ್ ಕೊಟ್ಟ.

ಯಾಕ್ರೀ ವೈನಿ? ಏನಾತು?  - ಅಂತ ಸ್ವಲ್ಪ ಘಾಬ್ರೀ ಕಾಳಜಿಯಿಂದ ಕೇಳಿದೆ.

ನೋಡೋ.... ನಮ್ಮನಿಯವ್ರು ಹೋಮಿಯೋಪತಿ ಆಗಿ ಬಿಟ್ಟಾರ, ಅಂತ ವೈನಿ ಒಂದು ಬಾಂಬ್ ಒಗದ್ರು.

ಹಾಂ?!!!! ಹೋಮಿಯೋಪತಿ ................ ಅಂದ್ರ??? ಹೋಮಿಯೋಪತಿ ಚಿಕಿತ್ಸೆ ತೊಗೊಳ್ಳೋದು ಗೊತ್ತಿತ್ತು.  ಆದ್ರ ಹೋಮಿಯೋಪತಿ ಆಗಿಬಿಡೋದು ಅಂದ್ರ? ಅದೇನು ರಾಷ್ಟ್ರಪತಿ, ಸಭಾಪತಿ, ಸೇನಾಪತಿ, ದಳಪತಿ ಏನು? ಆಗಲಿಕ್ಕೆ? ಕಿತಾಪತಿ ಹೋಮಿಯೋಪತಿ ಎರಡ ಆಗಲಿಕ್ಕೆ ಬರೋದಿಲ್ಲ. ಕಿತಾಪತಿ ಮಾಡ್ಬೇಕು. ಹೋಮಿಯೋಪತಿ ಚಿಕಿತ್ಸೆ ತೊಗೋಬೇಕು.

ಏನ್ರೀ ವೈನಿ? ಹೋಮಿಯೋಪತಿ ಆಗಿ ಬಿಟ್ಟಾನ ಅಂದ್ರ? - ಅಂತ ವೈನಿ ಕೇಳಿದೆ.

You see....Mangesh....your friend Cheepyaa got laid and became homeopathy!!!!!! - ಅಂತ ವೈನಿ ತಮ್ಮ ಇಂಗ್ಲೀಷ್ ಪುಸ್ತಕ ನೋಡಿ ಇಂಗ್ಲೀಷ್ ಭಾಷೆಯ ಶವಪೆಟ್ಟಿಗೆಗೆ ಅವತ್ತಿನ ಮೊದಲನೆ ಮೊಳೆ ಹೊಡದ ಬಿಟ್ರು.

ಹಾಕ್ ಅವನೌನ!!!!

ಅಯ್ಯೋ.... ವೈನಿ!!!! ಹಾಂಗೆಲ್ಲ ಹೇಳಬ್ಯಾಡ್ರೀ. ತಪ್ಪು ಅರ್ಥ ಬರ್ತದ. ಸರಳ ಕನ್ನಡ ಒಳಗಾ ಹೇಳ್ರೀ. ಏನಾತು ಅಂತ, ಅಂದೆ.

ಇವರದ್ದು ನೌಕರೀ ಹೋತೋ ಮಂಗೇಶ್. ಮನಿಯೊಳಗ ಕೂತಾರ. ನಾನ ಈಗ ನೌಕರಿ ಮಾಡ್ಲಿಕತ್ತೇನಿ. ನಾ ಭಾಳ ಹಿಂದ SSLC ಆದ ಮ್ಯಾಲೆ TCH ಟ್ರೇನಿಂಗ ಮಾಡಿದ್ದೆ. ಅದು ಈಗ ಉಪಯೋಗಕ್ಕ ಬಂತು. ಏನೋ ಒಂದು ಸಣ್ಣ ನೌಕರೀ ನೋಡಪಾ. ಜೀವನ ನೆಡಿಬೇಕಲ್ಲೋ, ಅಂದ್ರು ವೈನಿ.

ಹಾಂಗ? ಪಾಪ. ನೌಕರೀ ಹೊತೇನೋ ಚೀಪ್ಯಾ? ನಾ ನಿನಗ ಹೆಲ್ಪ್ ಮಾಡ್ತೇನಿ. ಆದ್ರ ಹೋಮಿಯೋಪತಿ ಆದ ಅಂದರೀ. ಅದು ಹ್ಯಾಂಗ? - ಅಂತ ಕೇಳಿದೆ.

ಹೋಮಿಯೋಪತಿ ತಲಿಯೊಳಗ ಕಿತಾಪತಿ ಮಾಡ್ಲಿಕತ್ತಿತ್ತು.

ಮತ್ತೇನೋ ಮಂಗೇಶ್.... ಮನಿಯೊಳಗ ಇರೋ ಹೆಂಗಸೂರಿಗೆ ಹೌಸ್ ವೈಫ್ ಅಂತಾರ. ಈಗ ನಮ್ಮನಿಯವ್ರು ನೌಕರೀ ಹೋಗಿ ಮನಿಯೊಳಗ ಕೂತಾರ. ಅವರು ಹೋಮಿಯೋಪತಿ ಆದಂಗ ಆಗಿಲ್ಲ? ಹೋಂ ಅಂದ್ರ ಮನಿ. ಪತಿ ಅಂದ್ರ ಗಂಡ. ಮನಿಯೊಳಗ ಇರೋ ಗಂಡ ಹೋಮಿಯೋಪತಿ. ಕರೆಕ್ಟ್ ಅದನೋ ಇಲ್ಲೋ? - ಅಂದ್ರು ವೈನಿ.

ಏನೋ ವಿಚಿತ್ರ ಲಾಜಿಕ್ ನಮ್ಮ ವೈನಿದು. ಆದರೂ ಫುಲ್ ಗಲತ್ ಅನ್ನಲಿಕ್ಕೆ ಬರೋದಿಲ್ಲ.

ಯಾಕೋ ಚೀಪ್ಯಾ? ಏನಾತು? ನೀ ಆ ಮಾರವಾಡಿ ಕಂಪನಿ ಒಳಗ ಎಷ್ಟೋ ವರ್ಷದಿಂದ ಕೆಲಸಾ ಮಾಡ್ಲಿಕತ್ತಿದ್ದಿ. ಏನಾತು? ಒಮ್ಮೆಲೇ ನೌಕರೀ ಹೋಗುವಂತಾದ್ದು? - ಅಂತ ಕೇಳಿದೆ.

ನಮ್ಮ ಸೇಠಜೀಗೆ ದುಬೈ ಇಂದ  ಭಾಳ ಖೋಕಾ ರೂಪಾಯಿಗೆ ಫೋನ್ ಮ್ಯಾಲೆ ಫೋನ್ ಬರ್ಲಿಕತ್ತಿದ್ದವು ಅಂತ. extortion ವಸೂಲಿ ಕಾಲ್ಸ್. ಯಾರೋ ಒಬ್ಬವ ಮೊನ್ನೆ ಆಫಿಸಿಗೂ ಬಂದು ಕಣಪಟ್ಟಿಗೆ ಘೋಡಾ ಇಟ್ಟು, ಮಾಲ್ ದೇತಾ ಕಿ ನಹಿ? ಭೇಜಾ ಉಡಾವೂ ಕ್ಯಾ? ಅಂತ ಧಮ್ಕಿ ಬ್ಯಾರೆ ಹಾಕಿ ಬಿಟ್ಟನಂತ. ಅದಕ್ಕ ಸೇಠಜೀ ಕಾರೋಬಾರ್ ಎಲ್ಲಾ ಬಂದು ಮಾಡಿಕೊಂಡು, ವಾಪಸ್ ರಾಜಸ್ಥಾನಕ್ಕ ಹೋಗಿ ಬಿಟ್ಟರು. ಎಲ್ಲರದ್ದೂ ಜಾಬ್ ಹೋತು, ಅಂದ ಚೀಪ್ಯಾ.

ಒಹೋ... ಹಾಂಗ? ಅಂದ್ರ ಲೇ ಆಫ್(layoff) ಅಲ್ಲ. ಕಂಪನಿನ ಮುಚ್ಚಿಗೊಂಡು ಹೋದ್ರ ಏನು ಮಾಡಲಿಕ್ಕೆ ಬರ್ತದ? ಮುಂದ ಏನರ ಜುಗಾಡ ಮಾಡೋಣ ತಡಿ, ಅಂತ ಹೇಳಿದೆ.

ಹಾಂ.... ಮಂಗೇಶ್.....layoff ಅದನ್ನ  ನಾ ಹೇಳಬೇಕು ಅಂತ ಮಾಡಿದ್ದೆ. ಅದರ ಬದಲಿ laid ಅಂದುಬಿಟ್ಟೆ. ಒಂದು off ಬಿಟ್ಟು ಬಿಟ್ಟೆ. ಅಷ್ಟ. ಏನು ದೊಡ್ಡ ತಪ್ಪಾತು? ಆ ಪರಿ ಹೊಯ್ಕೊಂಡಿ? got laid ಮತ್ತ laid off ಎಲ್ಲ ಒಂದ. ಅಲ್ಲ? - ಅಂತ ಕೇಳಿಬಿಟ್ಟರು ವೈನಿ.

ಏನು ಹೇಳೋದು?

ಸರಿ... ಸರಿ.... ಅಂತ ಆ ಟಾಪಿಕ್  ಅಷ್ಟಕ್ಕ ಕ್ಲೋಸ್ ಮಾಡಿದೆ.

ಚೀಪ್ಯಾ ನೀನು ಡಿಪ್ಲೋಮಾ ಮಾಡಿದ ಮ್ಯಾಲೆ BF.....ಮಾಡಬೇಕಾಗಿತ್ತು. ನಿನ್ನ ಖರೆ ಟ್ಯಾಲೆಂಟ್ ಅಲ್ಲೇ ಇತ್ತು, ಅಂತ ಏನೋ ಹೇಳಲಿಕ್ಕೆ ಹೊಂಟಿದ್ದೆ.

ಏ!!!!!!!ಮಂಗ್ಯಾನ್ ಕೆ!!!!ಹುಸ್ಸೂಳೆಮಗನ!!!!ಏನನ್ನಲಿಕತ್ತಿ? ಮೈ ಮ್ಯಾಲೆ ಖಬರ್ ಅದನೋ ಇಲ್ಲೋ? ನಾ ಏನ್ BF ಮಾಡಬೇಕೋ? ಯಾರ ಜೊತಿ? ಅದನ್ನೂ ಹೇಳಿಬಿಡು. ನಿಮ್ಮ ರೂಪಾ ವೈನಿ ಜೊತಿ BF ಮಾಡಲಾ? ಅಥವಾ ನೀನ ಯಾರರ ಮಲಯಾಳೀ ಹುಡುಗಿ ರೆಡಿ ಮಾಡಿ ಕೊಡ್ತಿಯೋ? ಫುಲ್ ಕ್ಯಾಮೆರಾ ಸೆಟಪ್ ಇಟ್ಟಿ ಏನು? ನೀ ಏನ್ BF ಪ್ರೊಡ್ಯೂಸರ್ ಏನು? ಕೆಲಸ ಇಲ್ಲ ಅಂತ ಹೀಂಗ ಅನ್ನೋದ? ಉಪವಾಸ ಸಾಯತೇನಿ ಆದ್ರ  BF ಗಿಯಫ್ ಮಾತ್ರ ಒಲ್ಲೆ. ಹೊಲಸ್ ಹೊಲಸ್ ಐಡಿಯಾ ಕೊಡ್ತಾನ. ಹೇಶಿ ಮಂಗ್ಯಾನ ಕೆ, ಅಂತ ಚೀಪ್ಯಾ ನನಗ ಬೈದ.

ವೈನಿ ಫುಲ್ ರೈಸ್ ಆಗಿ ಬಿಟ್ಟರು. ಅವರಿಗೆ BF ಅಂದ್ರ ದೇವರಾಣಿ ಗೊತ್ತಿಲ್ಲ. ಅವರು ನೋಡಿಯೂ ಇಲ್ಲ.

ಯಾಕ್ರೀ ಶ್ರೀಪಾದ ರಾವ್? ಯಾಕ್ ನೀವು BF ಮಾಡಬಾರದು?ಹಾಂ? ಹಾಂ? ರೊಕ್ಕ ಬರ್ತದ ಅಂದ್ರ BF ಮಾಡ್ಲಿಕ್ಕೆ ಏನು ಧಾಡಿ ನಿಮಗ? BF ಹ್ಯಾಂಗ ಮಾಡೋದು ಮಂಗೇಶ್? ನೀ ಹೇಳಪಾ. ಅದೇನು ನಿಮ್ಮ ದೋಸ್ತ ಒಬ್ಬರ ಮಾಡಬೇಕೋ? ಅಥವಾ ನಾನು ಸಾಥ ಕೊಡಬೇಕೋ? ಏನು? ಫುಲ್ ಆಗಿ ಹೇಳಿಬಿಡಪಾ, ಅಂತ ರೂಪ ವೈನಿ ಹೇಳಿ ಬಿಟ್ಟರು.

ಅಯ್ಯೋ!!!ದೇವರಾ!!!! ಇಬ್ಬರೂ ತಪ್ಪು ತಿಳಕೊಂಡು ನನ್ನ ಒಂದ ಸಲೇ ಆಟಕಾಯಿಸಿಕೊಂಡು ಬಿಟ್ಟರಲ್ಲಪಾ. ಶಿವನೇ ಶಂಭುಲಿಂಗ.

ಚೀಪ್ಯಾ..... ನೀ ನಾ ಹೇಳೋದನ್ನ ಫುಲ್ ಕೇಳದ ನನ್ನ ಮ್ಯಾಲೆ ಚೀರ್ಯಾಡಿ ಬಿಟ್ಟಿ. ನಾ ಏನು ಹೇಳಲಿಕ್ಕೆ ಹೊಂಟಿದ್ದೆ ಅಂದ್ರ ನೀನು BFA ಅಂದ್ರ Bachelor of Fine Arts ಅಂತ ಡಿಗ್ರಿ ಮಾಡಿಕೊಂಡು ಬಿಟ್ಟಿದ್ದರ ಎಷ್ಟು ಚೊಲೊ ಇತ್ತು ಅಂತ. ಮಂಕಿ ಮಾಸ್ತರ್ ಪಟ್ಟದ ಶಿಷ್ಯಾ ನೀ. ಎಷ್ಟು ಚಂದ ಡ್ರಾಯಿಂಗ್ ಮಾಡ್ತಿದ್ದಿ. ಎಷ್ಟು ಚಂದ ಪೇಂಟಿಂಗ್ ಮಾಡ್ತಿದ್ದಿ. ಏನು ಕಥಿ? ಹಾಂ? ಹಾಂ? ನಾ BFA ಅನ್ನೋದನ್ನ ಹೇಳಿ ಮುಗಿಸೋಕಿಂತ ಮೊದಲಾ ಬರೆ BF ಅಂತ ಕೇಳಿಕೊಂಡು, ಎಂದೋ ನೋಡಿರಬಹುದಾದ ಮಲಯಾಳೀ ಸಿನಿಮಾ ನೆನಪ ಮಾಡಿಕೊಂಡು ನನ್ನ ಮ್ಯಾಲೆ ಚಿಟಿ ಚಿಟಿ ಚೀರಿ ಬಿಟ್ಟಿಯಲ್ಲೋ? ವೈನಿ ಬ್ಯಾರೆ BF ಅಂದ್ರ ಏನು ಅಂತ ಕೇಳಲಿಕ್ಕೆ ಹತ್ಯಾರ. ಹೇಳಲಿ ಏನು ಅವರಿಗೆ? ತೋರಸ್ತೀ ಅವರಿಗೆ? ಹಾಂ? ಹಾಂ? - ಅಂತ ನಾನೂ ಅವಂಗ ಸ್ವಲ್ಪ ಗೂಟಾ ಬಡದೆ.

ನನ್ನ ನಸೀಬ್ ಅವತ್ತು ಚೊಲೊ ಇತ್ತು ಅಂತ ಕಾಣಸ್ತದ. ರೂಪಾ ವೈನಿ BF ಅಂದ್ರ ಏನು ಎತ್ತ ಅಂತ ಭಾಳ ಪಿರಿಪಿರಿ ಮಾಡಲಿಲ್ಲ. ಇಲ್ಲಂದ್ರ ಅವರಿಗೆ ಅದರ ಬಗ್ಗೆ ಹೇಳೋದು ಹ್ಯಾಂಗ ಅಂತ ನನಗ ಭಾಳ ಟೆನ್ಶನ್ ಆಗಿತ್ತು.

BFA ಅಂದ್ಯಾ? ನಾನು ಡಿಪ್ಲೋಮಾ ಆದ ಮ್ಯಾಲೆ BE ಮಾಡಬೇಕು ಅಂತ ಮಾಡಿದ್ದೆ. ಆದ್ರ ಲಗ್ನ ಆಗಿ ಹೋತು. ಮಕ್ಕಳು ಹುಟ್ಟೇ ಬಿಟ್ಟರು. ಆಗಲಿಲ್ಲ. ಚೀಪ್ಯಾ ನೀ BE  ಬ್ಯಾಡ BF ಮಾಡಲೇ ಅಂತ ಗೆಳಯಾರೆಲ್ಲ ಕಾಡಸ್ತಿದ್ದರು. ಅದ ತಲ್ಯಾಗ ಇತ್ತು. ಮತ್ತ ಒಮ್ಮೆ ರಾಮನಗರ ಒಳಗ ಕದ್ದು BF ನೋಡುವಾಗ ಪೋಲಿಸ್ ರೈಡ್ ಆಗಿ ಕುಂಡಿ ಮ್ಯಾಲೆ ಬಾಸುಂಡಿ ಬರೋ ಹಾಂಗ ಹೊಡಿಸಿಕೊಂಡೇನಿ. ಹಾಂಗಾಗಿ BF ಅಂತ ಕೇಳಿದ ಕೂಡಲೇ ಮಾನಸಿಕ್ ಆಗಿ ಬಿಡ್ತದ, ಅಂತ ಚೀಪ್ಯಾ ಹೇಳಿದ.

ಪುಣ್ಯಕ್ಕ ರೂಪಾ ವೈನಿ ಅಲ್ಲೇ ಸಿಕ್ಕ ಬ್ಯಾರೆ ಯಾರೋ ಮಹಿಳಾಮಣಿ ಜೊತಿ ಹರಟಿ ಶುರು ಹಚ್ಚಿದ್ದರು. ಇಲ್ಲಂದ್ರ  ಮುಗಿತಿತ್ತು ಚೀಪ್ಯಾನ ಕಥಿ.

ಧಾರವಾಡ ಒಳಗ ಅಲ್ಲೆಲ್ಲೋ ರಾಮನಗರ ಒಳಗ ಯಾರೋ ಒಬ್ಬಾಕಿ ಘರವಾಲಿ ಧಂಧಾ ನೆಡಸ್ತಿದ್ದಳು. ಸೈಡ್ ಬೈ ಸೈಡ್ ಒಂದು ವೀಡಿಯೊ ಹಾಕಿ ಬ್ಲೂ ಫಿಲಂ ಸಹಿತ ತೋರಿಸುತ್ತಿದ್ದಳು ಅಂತ ಭಾಳ ಹವಾ ಅಂತೂ ಇತ್ತು. ಚೀಪ್ಯಾ ಒಮ್ಮೆ ಅಲ್ಲೇ ಹೋಗಿದ್ದ. ಬರೆ ಬ್ಲೂ ಫಿಲಂ ನೋಡಲಿಕ್ಕೆ ಹೋಗಿದ್ದೆ ಅಂತಾನ. ಅಂತಾ ಕಡೆ ಹೋದವರು ಏನೇನು ಮೇಯ್ದು ಬಂದಿರ್ತಾರ ಅಂತ ಹೇಳೋದು ಕಷ್ಟ. ಅವಾ ಹೋದಾಗ ಪೋಲಿಸ್ ರೈಡ್ ಆಗಿ, ಏನೇನೋ ಆಗಿ, ಪುಣ್ಯಕ್ಕ ಬರೆ ಕುಂಡಿ ಮ್ಯಾಲೆ ಬಾಸುಂಡಿ ಒಂದ ಬರಿಸ್ಕೊಂಡು ಪೋಲಿಸ್ ಕಡೆಯಿಂದ ಚೀಪ್ಯಾ ತಪ್ಪಿಸಿಕೊಂಡು ಹ್ಯಾಂಗೋ ಬಂದಿದ್ದ. ಈ ಸುದ್ದಿನೂ ಅಷ್ಟು ಪಬ್ಲಿಕ್ ಆಗಿರಲಿಲ್ಲ. 

ಏ ಚೀಪ್ಯಾ. ಎಲ್ಲಿ BE ಹಚ್ಚಿ? ಬಿಡ ಅದನ್ನ. ಡಿಗ್ರಿ ಇಂಪಾರ್ಟೆಂಟ್ ಅಲ್ಲವೇ ಅಲ್ಲ. ನಮ್ಮದ ಎಷ್ಟೋ ಮಂದಿ ದೋಸ್ತರು ಡಿಗ್ರಿ ಮತ್ತೊಂದು ಇಲ್ಲದ ಏನೇನೋ ಮಾಡಿಕೊಂಡು ದಿಲ್ದಾರ್ ಇದ್ದಾರ. ಎಷ್ಟೋ ಮಂದಿ ಸಿಕ್ಕಾ ಪಟ್ಟೆ ರೊಕ್ಕಾ ಇನ್ನೊಂದು ಕೊಟ್ಟು ಏನೇನೋ ಡಿಗ್ರಿ ಮಾಡಿಕೊಂಡರೂ ಕೂಲಿ ಕೆಲಸದಂತಾ ಕೆಲಸಾ ಮಾಡಿಕೋತ್ತ ಇದ್ದಾರ. ಆದ್ರ ನೀ BFA ಮಾಡಿದ್ರಾ ನಿನ್ನ ಡ್ರಾಯಿಂಗ್ ಸ್ಕಿಲ್ಸ್ ಇನ್ನೂ ಇಂಪ್ರೂವ್ ಆಗಿ, ಮಸ್ತ ಆರ್ಟಿಸ್ಟ್ ಅಂತ ಪ್ಯಾರಲಲ್ ಕೆರಿಯರ್ ಮಾಡ್ಕೊತ್ತಿದ್ದಿ ಏನೋ ಅಂತ ವಿಚಾರ, ಅಂತ ಅಂದೆ.

ಅಷ್ಟರಾಗ ರೂಪಾ ವೈನಿ ಮತ್ತ ಬ್ಯಾಕ್ ಟು ನಮ್ಮ ಹರಟಿ. ಅಕಿ ಯಾರೋ ಇನ್ನೊಬ್ಬ ಮಹಿಳಾಮಣಿ ಬಹುಷಾ ನಮ್ಮ ರೂಪಾ ವೈನಿ ಇಂಗ್ಲಿಷ್ ದಾಳಿ ತಡಿಲಾಗದ, ನಮ್ಮನಿವರು ಕಾಯಲಿಕತ್ತಾರ, ಅಂತ ಹೇಳಿ ಜಾಗಾ ಖಾಲಿ ಮಾಡಿ, ತಿರುಗಿ ತಿರುಗಿ ನೋಡಿಕೋತ್ತ ಹೋಗಿ ಬಿಟ್ಟರು. ತಿರುಗಿ ತಿರುಗಿ ಯಾಕ ಅಂದ್ರ ಮತ್ತ ಎಲ್ಲರ ಇಂಗ್ಲಿಷ್ ದೆವ್ವ ಆಟಕಾಯಿಸಿಕೊಂಡ್ರಾ ಕಷ್ಟ ಅಂತ ಇರಬೇಕು.

ಅಯ್ಯೋ...... ಆ ಡ್ರಾಯಿಂಗ್ ಮಾತ್ರ ಬ್ಯಾಡೋ!!! ಅದು ಮಾತ್ರ ಹರ್ಗೀಸ್ ಬ್ಯಾಡ. ಇವರು ಮನಿಯೊಳಗ ಬೇಕಾದ್ರ blow job ಮಾಡಿಕೋತ್ತ ಕೂಡಲಿ. ನನದೇನೂ ಅಭ್ಯಂತರ ಇಲ್ಲ. ಆ ಡ್ರಾಯಿಂಗ್, ಕಲೆ ಮಾತ್ರ ಬ್ಯಾಡ ಬ್ಯಾಡ, ಅಂತ ವೈನಿ ಇಂಗ್ಲಿಷ್ ಭಾಷೆಯ ತಿಥಿ ಮುಂದುವರ್ಸಿದರು.

ಶಿವ!!!ಶಿವ!!! ಶಂಬೋ ಶಂಕರ!!!!!ಏನು ಕೇಳಲಿಕತ್ತೇನಿ ನಾನು? ರೂಪಾ ವೈನಿ ಅಂತಹ ಬ್ರಾಹ್ಮರ ಮುತ್ತೈದೆ ಬಾಯಿಂದ ಇಂತಾ ಶಬ್ದವೇ!!!ಅಕಟಕಟಾ!!!!

ವೈನಿ!!!!!!!!!!!!!!!!!!ಏನಂತ ಮಾತಾಡ್ಲಿಕತ್ತೀರಿ? - ಅಂತ ಚೀರಿದೆ.

ಯಾಕೋ ಮಂಗೇಶ್? ದೆವ್ವಾ ನೋಡಿದವರಾಂಗ ಚೀರ್ಲಿಕತ್ತಿ? blow job ಇವರಿಗೆ ಈಗ. ಇದ್ದ ಜಾಬ್ ಅಂತೂ ಹೋತು. ಗ್ಯಾಸ್ ಸಿಲಿಂಡರ್ ಖಾಲಿ ಆಗ್ಯದ. ಮತ್ತ ಗ್ಯಾಸ್ ಸಿಗೋದ ಇಲ್ಲ. ನಾ ಅಂತೂ ಮತ್ತ ಸಾಲಿಗೆ ನೌಕರಿ ಹೋಗ್ತೇನಿ. ನಿಮ್ಮ ಶ್ರೀಪಾದ್ ರಾವ್ ಒಲಿ ಮುಂದ ಕೂತು, ಊದು ಕೊಳವಿ ತೊಗೊಂಡು ಊದಿ ಊದಿ ಉರಿ ಹಚ್ಚಿ,  ಏನೇನೋ ಅಡಿಗಿ ಅಂತ ಒಂದು ಮಾಡ್ತಾರ. ಅದಕ್ಕ blow job ಅಂದೆ. ಏನು ತಪ್ಪದ? ನನಗೇನ ಇಂಗ್ಲಿಷ್ ಬರಂಗಿಲ್ಲ ಅಂತ ತಿಳ್ಕೊಂಡಿ ಏನು? ಚೀರ್ತಾನ ಮಂಗ್ಯಾನ ತಂದು. ಒಲಿ ಊದೋ ಕೆಲಸಕ್ಕ  blow job ಅಂತ ಹೇಳೋದು. ಗೊತ್ತಿಲ್ಲ ಅಂದ್ರ ತಿಳ್ಕೋ, ಅಂತ ವೈನಿ ನನಗ ಝಾಡಿಸಿ ಬಿಟ್ಟರು.

ಹೌದಲ್ಲ? ಮಸ್ತ ಪಾಯಿಂಟ್ ಅದ ವೈನಿದು. ಈಗ ನಮ್ಮ ಧಾರವಾಡ ಒಳಗ ಗ್ಯಾಸ್ ಸಿಲಿಂಡರ್ ಭಾಳ ಅಭಾವ ಆಗಿ ಎಷ್ಟೋ ಮಂದಿ ಒಲಿ ಊದಕೋತ್ತ ಕೂತಿರತಾರ. ಅದಕ್ಕ blow job ಅಂದ್ರ ತಪ್ಪಿಲ್ಲ. ಎಷ್ಟೋ ಒಳ್ಳೆ ಕೆಲಸ ಅದು.

ಮತ್ತ ಒರಿಜಿನಲ್ ಪಾಯಿಂಟ್ ಗೆ ಬಂದೆ.

ಯಾಕ ವೈನಿ ನಮ್ಮ ಚೀಪ್ಯಾ ಡ್ರಾಯಿಂಗ್ ಮಾಡೋದು ಬ್ಯಾಡ ಅಂತೀರಿ? ಆವಾ ಎಷ್ಟು ಟಾಲೆಂಟೆಡ್ ಅಂತ ಗೊತ್ತದ ಏನು? ಮಂಕಿ ಮಾಸ್ತರ್ ಪಟ್ಟದ ಶಿಷ್ಯಾ ಅವಾ. ಭಾಳ ಚಂದ ಚಿತ್ರಾ ಮತ್ತೊಂದು ತೆಗಿತಿದ್ದ. ಯಾಕ ಬ್ಯಾಡ ಅಂತೀರಿ? - ಅಂತ ಕೇಳಿದೆ.

ಎಲ್ಲಾ ಗೊತ್ತದ. ಸುಮ್ಮನಿರು ನೀ. ಒಮ್ಮೆ ಚಿತ್ರಾ ತೆಗೆದು, ಅದನ್ನ ಪ್ರದರ್ಶನಕ್ಕ ಇಟ್ಟು, ಅದರಾಗ ಏನೇನೋ ಬರೆದು, ಹೆಂಗಸೂರ ಕಡೆ ಚಪ್ಪಲಿಯೊಳಗ ಹೊಡಿಸ್ಕೊಂಡ ಬಂದ ಮಹಾನುಭಾವ ನಿಮ್ಮ ಈ ಚೀಪ್ಯಾ. ಅವರು ಏನರ ಮತ್ತ ಆ ಪೇಂಟಿಂಗ್ ಗೀನಟಿಂಗ್ ಅಂತ ಶುರು ಮಾಡ್ಲೀ, ನೋಡ್ಕೊತ್ತೀನಿ. ಈ ಸಲೆ ನಾನ ಹಿಡದು ಬಾರ್ಸಿ ಬಿಡ್ತೇನಿ. ಬ್ಯಾರೆ ನೌಕರೀ ಸಿಗೋ ತನಕಾ blow job, ಅಡಿಗಿ, ಮನಿ ಕೆಲಸ ಮಾಡಕೋತ್ತ  ಇರಲೀ ಸಾಕು, ಅಂದ್ರು ವೈನಿ.

ಹಾಂ!!! ನನಗೇ ಗೊತ್ತಿಲ್ಲ ಚೀಪ್ಯಾ ಡ್ರಾಯಿಂಗ್ ಪೇಂಟಿಂಗ್ ಮಾಡಿ ಏನ ಭಾನಗಡಿ ಮಾಡಿಕೊಂಡಿದ್ದ ಅಂತ.

ಏನಾಗಿತ್ತರೀ ವೈನಿ? ಚೀಪ್ಯಾ ಏನು ಭಾನಗಡಿ ಮಾಡಿಕೊಂಡಿದ್ದ? ಸ್ವಲ್ಪ ಹೇಳ್ರೀ. ನನಗ ಗೊತ್ತಿಲ್ಲ, ಅಂತ ವೈನಿ ಕೇಳಿದೆ

ಏನಂತ ಹೇಳೋದೋ ಮಂಗೇಶ್!!!!ಭಾಳ ಅಸಹ್ಯ. ನಿಮ್ಮ ಚೀಪ್ಯಾ ಮೊದಲು ಆರ್ಡರ್ ತೊಂಗೊಂಡು ಮಂದಿ ಚಿತ್ರಾ ತೆಗೆದು ತೆಗೆದು ಕೊಡ್ತಿದ್ದರು. ನಮ್ಮ ಸವಿತಾ ಕುಮಾರಿ.... ನಮ್ಮ ಧಾರವಾಡ ಹುಡುಗಿ. ಸಿನಿಮಾ ಹೆರೊಯಿನ್. ಗೊತ್ತಿರಬೇಕಲ್ಲ? ಅಕಿ ಸಹಿತ ಇವರ ಕಡೆ ಒಂದು ದೊಡ್ಡ ಸೈಜಿಂದು ಪೇಂಟಿಂಗ್ ಆರ್ಡರ್ ಮಾಡಿದಳು ಏನಪಾ. ಅಕಿದು ಅಲ್ಲೆಲ್ಲೋ ಬೆಂಗಳೂರು ಒಳಗ ಏನೋ ಪ್ರೊಗ್ರಾಮ್ ಇತ್ತಂತ. ಅದಕ್ಕ ದೊಡ್ಡ ಸೈಜಿನದು ಫೋಟೋ ಬೇಕು. ಅಲ್ಲೇ ಮೇನ್ ಡೋರ್ ಒಳಗ ಇಡಲಿಕ್ಕೆ ಅಂತ ಹೇಳಿದ್ರು. ಸವಿತಾ ಕುಮಾರಿ.... ದೊಡ್ಡ ನಟಿ. ಅಂತಾ ದೊಡ್ಡ ಆರ್ಡರ್ ಸಿಕ್ಕದ ಅಂತ ನಮ್ಮನಿಯವ್ರು ಸಿಕ್ಕಾ ಪಟ್ಟೆ ರೈಸ್ ಆಗಿ ಪೇಂಟಿಂಗ್ ಮಾಡಿದ್ದ ಮಾಡಿದ್ದು. ಸವಿತಾ ಕುಮಾರಿ ಮುಂದ ಕೂತಿದ್ದ ಕೂತಿದ್ದು. ಮಂಕಿ ಮಾಸ್ತರ್ ನೆನಪ ಮಾಡಿಕೊಂಡು ಮಾಡಿಕೊಂಡು ಚಿತ್ರಾ ತೆಗೆದಿದ್ದ ತೆಗದಿದ್ದು. ಅಂತೂ ಒಂದು ತಿಂಗಳ ಕೂಡಿ ಚಿತ್ರಾ ತೆಗೆದು, ಫ್ರೇಮ್ ಹಾಕಿಸಿ, ಸವಿತಾ ಕುಮಾರಿಗೆ ಕಳಿಸಿ ಕೊಟ್ಟರು. ಮುಂದಿನ ಸಲೆ ಸವಿತಾ ಕುಮಾರಿ ಧಾರವಾಡಕ್ಕ ಬಂದಾಗ ಮಸ್ತ ಬಹುಮಾನ ಮತ್ತೊಂದು ಕೊಟ್ಟಾಳು ಅಂತ ಕಾದು ಕೂತಿದ್ದರು. ಸಿಕ್ಕಿತಲ್ಲ ಬಹುಮಾನ!!!!ಸವಿತಾ ಕುಮಾರಿ ಮನಿಗೆ ಕರಿಸ್ಕೊಂಡು ಚಪ್ಪಲ್ ಚಪ್ಪಲ್ ತೊಗೊಂಡು ಹಾಕಿದಳು ಇವರಿಗೆ. ಅಕಿ ಬಾಡಿ ಗಾರ್ಡ್ಸ್  ಸಹಿತ ಹಾಕಿ ಹಾಕಿ ಒದ್ದರು. ಕಾರಾಗ ತಂದು ಮನಿ ಮುಂದ ಒಗದು ಹೋಗಿದ್ದರು, ಅಂತ ರೂಪಾ ವೈನಿ ನನಗೇ ಗೊತ್ತಿರದಿದ್ದ ಒಂದು ಕಥಿ ಹೇಳಿ ಬಿಟ್ಟರು.

ಲೇ..... ಚೀಪ್ಯಾ? ಏನು ಮಾಡಿದ್ದಿ ಮಾರಾಯ? ಸವಿತಾ ಕುಮಾರಿ ಆ ಪರಿ ಕಟಿಯುಹಾಂಗ? ಮತ್ತೆಲ್ಲೆರ ಅಕಿದು ಫುಲ್ ಸೈಜಿನ ನ್ಯೂಡ್ ಪೇಂಟಿಂಗ್ ಮಾಡಿ ಕಳಿಸಿ ಬಿಟ್ಟಿದ್ದಿ ಏನು? ಹಾಂ? ಹಾಂ? - ಅಂತ ಕೇಳಿದೆ.

ಇಲ್ಲೋ ಮಾರಾಯ..... ನ್ಯೂಡ್ ಪೇಂಟಿಂಗ್ ಮಾಡಿಸಿಕೊಳ್ಳಲಿಕ್ಕೆ ಅಕಿ ಏನ್ ಫಿರಂಗಿ ಏನು? ಏನಿಲ್ಲ. ನಾ ಚಿತ್ರ ತೆಗೆದು ತುದೀ ಒಳಗ ಹಾಕಿದ ನನ್ನ ಸಿಗ್ನೇಚರ್ ಒಳಗ ಒಂದು ಮಿಸ್ಟೇಕ್ ಆಗಿ ಲಫಡಾ ಆಗಿ ಸವಿತಾ ಕುಮಾರಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದು ನನಗ ಹಾಕಿದ್ದಳು ಕಡತಾ, ಅಂತ ಹೇಳಿದ ಚೀಪ್ಯಾ ಸೈಲೆಂಟ್ ಆದ.

ಏನಲೇ? ಏನಂತ ಹಾಕಿದ್ದಿ? ಸ್ಟ್ಯಾಂಡರ್ಡ್ art by ಶ್ರೀಪಾದ್ ರಾವ್ ಅಂತ ಹಾಕಿರ್ತೀ. ಅದಕ್ಕ ಏನು ಪ್ರಾಬ್ಲಮ್ ಆ ಸವಿತಾ ಕುಮಾರಿದು?  - ಅಂತ ಕೇಳಿದೆ.

ಅವಾಗ ಕನ್ನಡದ ದೆವ್ವ ಮೈಯಾಗ ಹೊಕ್ಕಿತ್ತು ನಮ್ಮ ಸಾಹೇಬರಿಗೆ, ಅಂತ ರೂಪಾ ವೈನಿ ಚುಚ್ಚಿದರು.

ದೋಸ್ತ...ಅದೇನು ಆಗಿತ್ತು ಅಂದ್ರ.... ನಾನು ಸ್ಟ್ಯಾಂಡರ್ಡ್ ಸಹಿ ಬ್ಯಾಡ, ಇಕಿ ಸವಿತಾ ಕುಮಾರಿ ಹೇಳಿ ಕೇಳಿ ಕನ್ನಡದ ಲೀಡಿಂಗ್ ನಟಿ ಅಂತ ಕನ್ನಡ ಒಳಗ ಹಾಕೋಣ ಅಂತ ಭಾಳ ವಿಚಾರ ಮಾಡಿದೆ. art by ಅನ್ನೋದಕ್ಕ ಕನ್ನಡ ಒಳಗ  ಏನು ಅನ್ನಬಹುದು ಅಂತ ಭಾಳ ತಲಿ ಕೆಡಿಸ್ಕೊಂಡೆ. ಭಾಳ ವಿಚಾರ ಮಾಡಿದ ಮ್ಯಾಲೆ, ಕುಂಚವನ್ನು ಆಡಿಸಿದವರು ಶ್ರೀಪಾದ ರಾವ್, ಅಂತ ಬರದರ ಹ್ಯಾಂಗ ಅಂತ ಅನ್ನಿಸ್ತು. ಮಂಕಿ ಮಾಸ್ಟರ್ ಕೇಳಿದೆ. ಅವರೂ ಓಕೆ ಅಂದ್ರು. ಬರದ ಬಿಟ್ಟೆ. ಅದ ಲಫಡಾ ಆಗಿ ಬಿಡಬೇಕ? ಹಾಂ? - ಅಂದು ಚೀಪ್ಯಾ ಕ್ಲೈಮಾಕ್ಸ್ ಗೆ ಒಯ್ದು ಬಿಟ್ಟ.

ವಾಹ್!!!ವಾಹ್!!!art by ಬದಲೀ  ಕುಂಚವನ್ನು ಆಡಿಸಿದವರು....ಮಸ್ತ ಅದ. ಏನಾತು? ಕುಂಚವನ್ನು ಆಡಿಸಿದವರು ಅಂದ್ರ ಲಫಡಾ ಯಾಕೋ?ಹಾಂ? ಹಾಂ? - ಅಂತ ಕೇಳಿದೆ.

ಅದು ಗಡಿಬಿಡಿಯೊಳಗ  ಕುಂಚ ಬರಿಯೋವಾಗ ಸ್ಪೆಲ್ಲಿಂಗ್ ಮಿಸ್ಟೇಕ್ ಆಗಿ ಓಂಕಾರ  ಹೋಗಿ ಬಿಟ್ಟಿತ್ತು. ಅದು ಕುಂಚ ಹೋಗಿ ಕುಚ ಆಗಿ ರಾಡಿ ಎದ್ದಿತ್ತು. ಕುಚವನ್ನು ಆಡಿಸಿದವರು ಶ್ರೀಪಾದ ರಾವ್, ಅನ್ನೋದನ್ನ ಎಲ್ಲರೂ ನೋಡಿ, ಅಂಡು ತಟ್ಟಿ ಪೆಕ ಪೆಕ ಅಂತ ನಕ್ಕರು. ಫೋಟೋ ಬ್ಯಾರೆ ಬಾಗಿಲದಾಗ ಇತ್ತಂತ. ಎಲ್ಲ ಪೇಪರ್ ಒಳಗೂ ಬಂದು ಬಿಡ್ತು. ಟ್ಯಾಬ್ಲಾಯ್ಡ್ ಪತ್ರಿಕೆಯವರಂತೂ ಏನೇನೋ ಬರೆದು ಬಿಟ್ಟರು. ಒಬ್ಬ  ಟ್ಯಾಬ್ಲಾಯ್ಡ್ ಸಂಪಾದಕ ಅಂತೂ 'ಸವಿತಾ ಕುಮಾರಿಯ ಕುಚ ಮರ್ದನ ಮಾಡಿದ ಕುಂಚ ಬ್ರಹ್ಮ!' ಅಂತ ಹೆಡ್ಡಿಂಗ್ ಕೊಟ್ಟು ಬಿಟ್ಟಿದ್ದ. ಏನು ಮಾಡೋದು? ಹಾಂಗಾಗಿ ಸವಿತಾ ಕುಮಾರಿ ಸಿಕ್ಕಾಪಟ್ಟೆ ಸಿಟ್ಟಿಗೆದ್ದು ಬಿಟ್ಟಳು. ಧಾರವಾಡಕ್ಕ ಬಂದಾಗ ಹಾಕ್ಕೊಂಡು ಹೊಡದಳು, ಅಂತ ಹೇಳಿ ಚೀಪ್ಯಾ ತನ್ನ ಕಹಾನಿ ಹೇಳಿದ.

ಚೀಪ್ಯಾ!!!!ಚೀಪ್ಯಾ!!!ಒಟ್ಟಿನ್ಯಾಗ ದೊಡ್ಡ ಅನಾಹುತ ಮಾಡಿಕೊಂಡಿ ನೀ. ಕುಂಚ ಬ್ರಹ್ಮ ಹಾಲಭಾವಿ ಅಂತ ಇದ್ದರು. ನಿನಗ ಏನು ಅನ್ನೋಣ? ಕುಚ ಬ್ರಹ್ಮ ಶ್ರೀಪಾದ್ ರಾವ್ ಅನ್ನೋಣ?ಹಾ!!!!ಹಾ!!!! ವರ್ಷಕ್ಕ ಸಾಕಾಗವಷ್ಟು ನಗಿ ವಸ್ತು  ಕೊಟ್ಟಿ ನೋಡ..... ಮಂಗ್ಯಾನ್ ಕೆ..... ಅಂತ ಕಾಡಿಸಿದೆ.

ದಿನಕ್ಕ ಹತ್ತ ಸರೆ ಆ 'ರವಿವರ್ಮನ ಕುಂಚದ ಕಲೆಯೋ ಬಲೆಯೋ ಸಾಕಾರವೋ' ಅನ್ನೋ ಹಾಡು ಕೇಳಿ ಕೇಳಿ ಕುಂಚ ಬರಿಯೋವಾಗ ಮಾತ್ರ ಕುಚ ಅಂತ ಬರೆದ ಮಹಾತ್ಮ ನಿಮ್ಮ ದೋಸ್ತ ನೋಡು ಇವರು ಮಂಗೇಶ್, ಅಂತ ರೂಪಾ ವೈನಿ ಮತ್ತ ತಿವಿದರು. ತೋಳ ಹಳ್ಳಕ್ಕ ಬಿದ್ದರ ಕಲ್ಲು ಒಗಿಯವರು ಏನೂ ಕಮ್ಮಿ ಇಲ್ಲ ನೋಡ್ರೀ.

ಹ್ಞೂ..... ಇಷ್ಟದ ಕಥಿ ಅಂತ ಆತು. ಚೀಪ್ಯಾ ಮತ್ತೇನರ ದಂಧೆ ಮಾಡಪಾ. ನಾನೂ ವಿಚಾರ ಮಾಡ್ತೇನಿ.  ನೀ ಅಂತೂ ಯಾವಾಗ ಬೇಕಾದರೂ ನನ್ನ ರೂಮಿಗೆ ಬಾ. ಹರಟಿ ಮತ್ತೊಂದು ಹೊಡಿಲಿಕ್ಕೆ ನಾ ಇದ್ದ ಇರ್ತೇನಿ. ಜಾಬ್ ಹೋತು ಅಂತ ಚಿಂತಿ ಅಂತೂ ಮಾಡ ಬ್ಯಾಡ. ಇದರಕಿಂತ ಚೊಲೋದು ಆಗಲಿಕ್ಕೆ ಅಂತ ಈ ಜಾಬ್ ಹೋತು ಅಂತ ತಿಳ್ಕೊಂಡು ಬಿಡು. ಓಕೆ? ನಾ ಬರಲೀ? ವೈನಿ..... ನಾ ಹೊಂಟೆ - ಅಂತ ಜಾಗ ಖಾಲಿ ಮಾಡಲಿಕತ್ತಿದ್ದೆ.

ರೂಪಾ ವೈನಿ ಮತ್ತ ಆಟಕಾಯಿಸಿಕೊಂಡ್ರು.

ಏ..... ಮಂಗೇಶ್!!!!ಅದೇನೋ BF ಅಂದಿ ಅಲ್ಲ? ಆ BF ಇವರು ಮಾಡ್ಲೀ ಅಂತಿ ಏನು? ಕೊಡಸಲ್ಲ ಆ ಜಾಬ್? ಪಗಾರ್ ಚೊಲೊ ಇದ್ದರ ಆತು. BF ಇರ್ಲಿ ಮತ್ತೊಂದು ಇರಲಿ, ಅಂತ ವೈನಿ ಫೈನಲ್ ಬಾಂಬ್ ಹಾಕೇ ಬಿಟ್ಟರು.

ಅಯ್ಯೋ ಶಿವನ!!!!!!

ವೈನಿ!!!!! ನನಗ BF ದಂಧಾ ಮಾಡೋರು ಯಾರು ಗೊತ್ತಿಲ್ಲ, ಅಂತ ಹೇಳಿ ಜಾಗ ಖಾಲಿ ಮಾಡಿದೆ.

ಹುಚ್ಚ ಮಂಗೇಶ್!!!!ನೀ ಮೊದಲು BF ಮಾಡಿ ಕಲಿ. ಆಮ್ಯಾಲೆ ನಮ್ಮನಿಯವರಿಗೆ ಹೇಳಿಯಂತ. ಏನೇನೋ ಹೇಳ್ತಾನ. ಮಂಗ್ಯಾನ ತಂದು, ಅಂತ ವೈನಿ ವಟ ವಟ ಅನ್ನಕೋತ್ತ ಚೀಪ್ಯಾನ್ನ ಕರ್ಕೊಂಡು ಹೋದರು.

ನಾನೂ ವಾಪಸ್ ಬಂದೆ.