Monday, March 11, 2013

ಗಂಡಾಂತರ ಸೆ ಹೆಂಡಾಂತರ ತಕ್


ಅವತ್ತೊಂದಿನ ಸಂಜಿ ಮುಂದ ಅಲ್ಲೇ ಮನೋಹರ ನಿವಾಸ ಹೋಟೆಲ್ ಮುಂದ ನಿಂತಿದ್ದೆ. ದೋಸ್ತ ಕರೀಂ ಬಂದ. ನಾವೇನ ಆ ಹೋಟೆಲ್ ಒಳಗಾ ಚಾ ಕುಡಿಯೋದಿಲ್ಲ. ಇವ ಕರೀಂ ನೋಡಿದ್ರ, ಸೀದಾ ಅಲ್ಲೇ ರೂಂ ಮಾಡಿದವರಾಂಗ ಒಳಗ ಹೋಗಿ, ಗಲ್ಲಾ ಮ್ಯಾಲೆ ಕುತಗೊಂಡಿದ್ದ ಮ್ಯಾನೇಜರ್ ಕಡೆ ಏನೋ ಕೇಳಲಿಕತ್ತಿದ್ದ. 

ನನಗೋ ಕುತೂಹಲ. ಕೆಟ್ಟ ಕುತೂಹಲ. ನಾನೂ ಹಿಂದ ಓಡಿದೆ. ಸದ್ದಿಲ್ಲದ ಓಡಿ ಹೋಗಿ, ಅವನ ಹಿಂದ ನಿಂತು, ಮೈಲ್ಡಾಗಿ ಕಿವಿ ಚಟ್ಟಿಗೆ  ಚಟ್ ಅಂತ ಶಾಕ್ ಬರೋ ರೀತಿಲೆ ಕೊಟ್ಟೆ. ನಾವು ಸಣ್ಣವರಿದ್ದಾಗೂ ಹಾಂಗ ಮಾಡಿ ಅವನ ಕಿವಿಗೆ ಭಾಳ ಶಾಕ್ ಕೊಡ್ತಿದ್ದಿವಿ. ಬುದ್ಧನ ಗತೆ ಮಸ್ತ ಉದ್ದ ಕಿವಿ ಇಟ್ಟಾನ. ಚಟ್ ಅಂತ ಶಾಕ್ ಕೊಡಲಿಕ್ಕೆ ಹೇಳಿ ಮಾಡಿಸಿದ ಹಾಂಗ ಅದ.

ಕರೀಮ್ಗ ಮಸ್ತ ಶಾಕ್ ಹೊಡಿತು ಅನ್ನಸ್ತದ. ಸುವ್ವರ್ ಕೆ......ಅಂತ ಹಿಂದ ತಿರುಗಿದ. ನಾ ಬತ್ತೀಸೂ ತೋರ್ಸಿಕೊತ್ತ ನಿಂತಿದ್ದೆ.

ಕ್ಯಾ ಸಾಬ್? ನೀವು ಕ್ಯಾ? ಹೀಗೆ ಮಸ್ಕಿರಿ ಮಾಡೋದು ಕ್ಯಾ? - ಅಂದ ಕರೀಂ.

ಮತ್ತೇನೋ? ನೀ ಏನ್ ಇಲ್ಲೆ? ಇಲ್ಲೆ ರೂಂ ಹಾಕಿ ಏನು? ಮತ್ತೇನರಾ ಮಾಲು ಅದು ಇದು ವ್ಯವಹಾರ ಏನೋ? ನೋಡಿಕೊಂಡು ಮಾಡಪಾ. ಈಗಿತ್ತಲಾಗ ಪೋಲಿಸ್ ರೇಡ್ ಭಾಳ್ ಆಗ್ಲಿಕತ್ತಾವ. ಸುಮ್ಮನ ಯಾಕ ಭಾನಗಡಿ? ನಿನ್ನ ಡೌ ಎಲ್ಲ ಏಕ್ದಂ ಖಾಂದಾನಿ ಇದ್ದಾರ. ಹೀಂಗೆಲ್ಲಾ ಇಂತಾ ಲಾಜಿಗೆ ಬರಂಗಿಲ್ಲ. ಆದರೂ, ಕಾಮಾತುರಾಣಾಂ ನ ಲಜ್ಜಾ ನ ಭಯಂ, ಅನ್ನೋ ಹಾಂಗ ಏನಾರಾ ಭಾನಗಡಿ ಪ್ಲಾನ್ ಅದನೋ ಏನೋ ಅಂತ ನಮಗ ಸಂಶಯ ನೋಡಪಾ, ಅಂದು ಮಸಡಿ ಮ್ಯಾಲೆ ದೊಡ್ಡ ಕೊಶ್ಚನ್ ಮಾರ್ಕ್ ಹಾಕಿಕೊಂಡು ನಿಂತೆ.

ಕ್ಯಾ ಸಾಬ್? ಕ್ಯಾ ಬಾತ್ ಕರ್ತಾ? ಪ್ಯಾರ್ ಮೊಹಬ್ಬತ್ ಮಾಡ್ಬೇಕು ಅಂದ್ರೆ ನಾವು ನಮ್ಮ ಡೌ ಕರ್ಕೊಂಡು ಎಲ್ಲೋ ರೆಸಾರ್ಟ್ ಗೆ ಹೋಗ್ತೀವಿ ಸಾಬ್. ಇಲ್ಲೆ ಎಲ್ಲಾರಿಗೂ ಕಾಣೋ ಹಾಗೆ ಮನೋ ನಿವಾಸಗೆ ಬರ್ತೀವಿ ಕ್ಯಾ? ಅದಕ್ಕೆ ಬೇರೆ ಕಾರಣ ಇದೆ. ಬನ್ನಿ ಚಾ ಕುಡಿತಾ ಮಾತಾಡೋಣ. ಕ್ಯಾ ಬೋಲ್ತಾ?, ಅಂದ ಕರೀಂ.

ಚಾ ನೀ ಕುಡೀಪಾ. ನಮಗ ಏನರ ಸೇಹೆತ್ ಬನಾನೇ ವಾಲಾ ಡ್ರಿಂಕ್ಸ್ ಕುಡಿಸು, ಅಂದು ಅವನ ಹಿಂದೆ ಹೋಗಿ ಕೂತೆ.

ನೀವು ಚಾ ಕುಡಿಯೋದಿಲ್ಲ ಅಂದ್ರೆ ಬೋರಮ್ಮನ ಮಿಟಾ ಕುಡಿತೀರೋ? ಅಥವಾ ಮಲ್ಲಮ್ಮನ ತವಾ ಕುಡಿತೀರೋ? - ಅಂತ ಕರೀಂ ಜೋಕ್ ಹೊಡೆದ.

ಅದು ನಮ್ಮ ಹಳೇ ಜೋಕ್. ಬೋರ್ನ್ವಿಟಾಕ್ಕ ಬೋರಮ್ಮನ ಮಿಟಾ, ಮಾಲ್ಟೋವಾಕ್ಕ ಮಲಮ್ಮನ ತವಾ ಅಂತ ಹೇಳಿ ನಗೋದು ನಮ್ಮ ರೂಢಿ. ಅದು ಎಂದೋ ನೋಡಿದ ಉಪೇಂದ್ರನ 'ತರ್ಲೆ ನನ್ನ ಮಗ' ಪಿಚ್ಚರ್ರ್ ಡೈಲಾಗ್.

ಬೋರಮ್ಮನ ಮಿಟಾ ಬೋರ್ ಆಗ್ಯದೋ. ಇವತ್ತು ಮಲ್ಲಮ್ಮನ ತವಾನ ಚೊಲೊ ಅನ್ನಸಲಿಕತ್ತದ. ಆದ್ರ ಈ ಮನೋಹರ್ ನಿವಾಸ ಒಳಗ ಮಾಲ್ಟೋವಾ ಮಳ್ಳಮ್ಮನ ತವಾ ಮಾಡಿದಂಗ ಮಾಡ್ತಾನ. ಇರಲೀ. ಕುಡದು ಮಳ್ಳ ಆಗೋಣ. ನಡಿ ಅಂತ ಹೇಳಿ ಒಳಗ ಹೋಗಿ ಕೂತು ಸೆಟಲ್ ಆದ್ವಿ.

ವೇಟರ್ ಕರೀಮಂಗ ಚಾ, ನನಗ ಮಾಲ್ಟೋವಾ ತಂದು ಇಟ್ಟ. ಓಕೆ ಇತ್ತು. ಬಿಸಿ ಇತ್ತು. ಮಸ್ತ ಸ್ವೀಟ್ ಇತ್ತು. ಇಂತಾ ಮಳ್ಳಮ್ಮನ ಮಾಲ್ಟೋವಾ ಕುಡಿದ ನಂತರ ಮಾಣಿಕ್ ಚಂದ ಹಾಕಿಬಿಟ್ಟರ ಮಸ್ತ. ಸ್ವರ್ಗ ಅಲ್ಲೇ!

ಈಗ ಹೇಳಪಾ ಕರೀಂ ಭೈ....ಏನು ಕೆತ್ತೆಬಜೆ ನೆಡಸಿ ಅಂತ. ಯಾಕ ಇಲ್ಲೆ ರೂಂ ಮಾಡಿ? - ಅಂತ ಕೇಳಿದೆ.

ಸಾಬ್... ಏನು ಹೇಳುದು? ಎಲ್ಲಾ ಆ ಸ್ವಾಮಿ ಗರಮಾನಂದನಿಂದ ಸಾಬ್. ನಮ್ಮ ಬೇಗಂಗೆ ಗಂಡನ್ನ ದೂರ ಓಡಿಸು ಅಂತ ಹೇಳಿ ಬಿಟ್ಟಿದ್ದಾನೆ. ಅದಕ್ಕೆ ನಮ್ಮ ಬೇಗಂ ನಮ್ಮನ್ನು ವಾಡೆಯಿಂದ ಹೊರಗೆ ಹಾಕಿ ಬಿಟ್ಟರು. ಅದಕ್ಕೆ ಇಲ್ಲಿ ಬಂದು ರೂಂ ಮಾಡಿದ್ದು ಸಾಬ್. ನಮ್ಮದೂ ಕಡೆ ರೋಕಡಾ ಬ್ಯಾರೆ ಸ್ವಲ್ಪ ಕಮ್ಮಿ ಐತೆ. ಈ ಹೋಟೆಲ್ ನಲ್ಲಿ ರೂಂ ಸಸ್ತಾ ನೋಡಿ. ಅದಕ್ಕೇ ಇಲ್ಲಿ ರೂಂ ಮಾಡಿದ್ದು, ಅಂತ ಹೇಳಿ ಕರೀಂ ಸೊರ್ರ ಅಂತ ಚಾ ಬಸಿಯಿಂದ ಜಗ್ಗಿ ಕುಡಿದ. ಮಸ್ತ ಸೌಂಡ್ ಬಂತ. ಸೊರ್ರ ಅಂತ.

ಹಾಂ!? ಗರಮಾನಂದ!? ಏನು ಹೆಸರೋ ಮಾರಾಯ? ಗರಂ ಅಂದ್ರ ಬಿಸಿ. ಆನಂದ ಅಂದ್ರ ಆನಂದ. ಏನು ಎಲ್ಲರಿಗೂ ಬಿಸಿ ಮಾಡಿ ಆನಂದ ಕೊಡ್ತಾನ ಏನು? ಅಥವಾ ಎಲ್ಲರಿಗೂ ಬಿಸಿ ಮುಟ್ಟಿಸಿ ಆನಂದ ಕೊಡ್ತಾನೋ? ಎಂತಾ ಸ್ವಾಮಿನೋ ಮಾರಾಯಾ ನಿಮ್ಮ ಗರಮಾನಂದ? - ಅಂತ ಕೇಳಿದೆ.

ಹಾಗೇನೂ ಇಲ್ಲ ಸಾಬ್. ಅದು ಸ್ವಾಮೀಜಿ ಹೆಸರು ಅಷ್ಟೇ. ಅವರೇನೂ ಯಾರಿಗೂ ಗರಂ ಅಥವಾ ಥಂಡಾ ಮಾಡಿದ್ದು ನಮಗೆ ಗೊತ್ತಿಲ್ಲ, ಅಂದ ಕರೀಂ.

ನಿಮ್ಮ ಬೇಗಂ ಯಾಕೆ ಅವರ ಕಡೆ ಹೋಗಿದ್ದರು? ಅಂತ ಕೇಳಿದೆ.

ಏನು ಹೇಳೋದು ಸಾಬ್? ಅಕಿ ಹೇಳಿ ಕೇಳಿ ಹಾಪ್. ಮಂಗ್ಯಾ. ನಿಮಗೇ ಗೊತ್ತು ಅಕಿ ಎಂತಾ ಹಾಪ್ ಅಂತ? ಹೋಗಿ ಹೋಗಿ ಉಳ್ಳಾಗಡ್ಡಿ ಡಾಕ್ಟರ ಕಡೆ ಪುಂಗಿ ಟ್ರೀಟ್ಮೆಂಟ್ ತೊಗೊಂಡು ಬಂದ ಮಹಾತ್ಮೀ ಅಕಿ. ಇನ್ನು ಸ್ವಾಮೀ ಗರಮಾನಂದ ಕಡೆ ಹೋದ್ರೆ ಏನು ಆಶ್ಚರ್ಯ ಸಾಬ್? - ಅಂತ ಅವನ ಬೇಗಂ ಎಂದೂ ಬಗೆಹರಿಯದ ಪ್ರಾಬ್ಲೆಮ್ ಕೇಸ್ ಅಂತ ಕರೀಂ ಹೇಳಿದ.

ಮಹಾತ್ಮೀ??!!!!

ಮಹಾತ್ಮೀ ಅಂದ್ರ ಏನೋ? ಏನೋ ವಿಚಿತ್ರ ಶಬ್ದ ನಿನ್ನ ಶಬ್ದ ಭಂಡಾರಕ್ಕ ಸೇರಿಸಿಕೊಂಡಿ ಏನು? ಹಾಂ? - ಅಂತ ಕೇಳಿದೆ.

ಕ್ಯಾ ಸಾಬ್? ಮಹಾತ್ಮ ಗಾಂಧೀ ಇದ್ದಾಗೆ ಇಕಿ ಮಹಾತ್ಮೀ ಬೇಗಂ. ಮಹಾತ್ಮ ಇದರ ಸ್ತ್ರೀಲಿಂಗ ಮಹಾತ್ಮೀ, ಅಂದ ಕರೀಂ.

ಆತ್ಮಕ್ಕೂ ಲಿಂಗ ಇರ್ತದ ಏನು? ಗೊತ್ತಿಲ್ಲ. ಭಾಳ ಗಹನವಾದ ವಿಷಯ.

ಸಾಬ್ ಅದು ಏನೋ ಭಂಡಾರ ಅಂದ್ರಲ್ಲ. ಏನು? ನಮ್ಮ ಹಣಿ ಮ್ಯಾಲೆ ನಿಮಗೆ ಭಂಡಾರ ಕಾಣ್ತು ಕ್ಯಾ? ಇವತ್ತು ಯಾವ ಜೋಗವ್ವಾನೂ ನಮಗೆ ಸಿಕ್ಕಿಲ್ಲ. ಹಾಂಗಾಗಿ ಭಂಡಾರ್ ಕೂಡ ಯಾರೂ ಕೊಟ್ಟಿಲ್ಲ. ಮತ್ತೆ ಆ ಸ್ನಾನ ಮಾಡದೇ,  ವಾಸನಿ ಹೊಡೆವ ಜೋಗವ್ವಾ ಕೊಡೊ ಭಂಡಾರ ಯಾರು ಹಚ್ಚಿಗೊತ್ತಾರೆ ಸಾಬ್? ಕೇವಲ ಹಾಪ್ ಮಂದಿ ಮಾತ್ರ ಅವರು ಕೊಟ್ಟ ಭಂಡಾರ ಹಣಿ ಮ್ಯಾಲೆ ಹಚ್ಚಿಗೊಂಡು ಹಳದಿ ಬಂದರ್ ಹಾಗೆ ಕಾಣ್ತಾರೆ ಸಾಬ್, ಅಂದ ಕರೀಂ.

ಹಳದಿ ಭಂಡಾರದ ಜೋಗವ್ವ 
 ಏ....ಹೋಗ್ಗೋ  ನಿನ್ನ!!!!!! ಆ ಭಂಡಾರ ಅಲ್ಲೋ. ಇದು ಶಬ್ದ ಭಂಡಾರ ಅಂದ್ರ ನಿಮ್ಮ ಭಾಷಾ ಒಳಗಾ ಖಜಾನಾ ಅಂತಾರ ನೋಡು ಅದು. ಅಂದ್ರ ಇಂಗ್ಲಿಷ್ ಒಳಗ ವೊಕ್ಯಾಬುಲರಿ (vocabulary) ಅಂತ.  ಫುಲ್ ವಿವರಣೆ ಕೊಟ್ಟೆ.

ಚಾ ಸೊರ್ರ ಸೊರ್ರ ಅಂತ ಕುಡಕೋತ್ತ ಕೂತಿದ್ದ ಮಂಗ್ಯಾ ಕರೀಂ. ಸರಿ ಕೇಳಿಲ್ಲ ನಾ ಹೇಳಿದ್ದು.

ಕ್ಯಾ????!!!! ಬುಲ್ಲಾರೀ  ಗಿಲ್ಲಾರೀ  ಅಂತ ಏನೇನೋ ಗಂದಾ ಗಂದಾ ಮಾತಾಡ್ತೀರಿ ಸಾಬ್? ಶರಮ್ ಬರೋದಿಲ್ಲ ಕ್ಯಾ? - ಅಂತ ಕೇಳಿದ ಕರೀಂ.

ಅಯ್ಯೋ!!!!ಇಲ್ಲ ಮಾರಾಯ. ನಾನು ಹೇಳಿದ್ದು ಸಮಾ ಕೇಳಿಕೋ. ಏನೇನ್ರರ ಹೇಳ್ತೀ. ಹಾಪಾ!!! - ಅಂತ ಬೈದೆ.

ಇಂತಾ ಮಂದಿಗೆ ಹೊಸಾದು ಹೇಳಲಿಕ್ಕೆ ಹೋಗಬಾರದು. ತಮ್ಮ ತಲಿಯೊಳಗ ಏನು ತಿರಗಲಿಕತ್ತಿರ್ತದ ಅದನ್ನ ಫಿಟ್ ಮಾಡಿ ಏನೇನೋ ಹೇಳಿ ಬಿದ್ತಾರ. ಹಾಪ್ ಮಂದಿ.

ಅಂತೂ ಇಂತೂ ವೊಕ್ಯಾಬುಲರಿ (vocabulary) ಯಾವದೇ ತರಹದ ಬುಲ್ಲಾಗೆ ಮುಲ್ಲಾಗೆ ಸಂಬಂಧಿಸಿದ್ದು ಅಲ್ಲ ಅಂತ ಅವನ್ನ ನಂಬಿಸಲಿಕ್ಕೆ ಹೋಗಿ ನನ್ನ ತಲಿ ಬಾರಾ ಆಣಾ ಆತು.

ಸಾಬ್ರಾ..... ಅದೆಲ್ಲ  ಇರಲೀ. ನಿಮ್ಮನ್ನ ನಿಮ್ಮ ಹಾಪ್ ಬೇಗಂ ಮನಿ ಬಿಟ್ಟು ಯಾಕ ಓಡಿಸಿದರು? ಇಲ್ಲೆ ಎಷ್ಟು ದಿವಸ ನಿಮ್ಮ ರೂಂ?ಹಾಂ?ಹಾಂ? - ಅಂತ ಕೇಳಿದೆ.

ಸಾಬ್.... ನಮಗೆ ಏನು ಗೊತ್ತು. ನಮ್ಮದು ಬೇಗಂಗೆ ಗಂಡಾಂತರ ಹೋಗೋ ತನಕ ನಾವು ನಮ್ಮದು ವಾಡೆ ಕಡೆ ಹೋಗೋ ಹಾಗೇ ಇಲ್ಲ. ಯಾ ಅಲ್ಲಾ.... ಯಾ ಖುದಾ..... ಮಹಲ್ ಅಂತಾ ವಾಡೆ ಇಟ್ಟಿಗೊಂಡು ಈ ದರಿದ್ರಾದು ಮನೋ ನಿವಾಸ ಜೈಸಾ ಮುಸಾಫಿರಖಾನಾ ಒಳಗೆ ಇರೋ ಪರಿಸ್ತಿತಿ ಬಂತಲ್ಲಾ ನಮಗೆ..... ಅಂತ ಕರೀಂ ಅಲವತ್ತುಗೊಂಡ.

ಸಾಬ್ರಾ...... ಮುಸಾಫಿರಖಾನಾ ಇದ್ದರ ಏನಾತ್ರೀ? ಮುಸಾಫಿರಖಾನಾಕ್ಕ ಎಟ್ಯಾಚಡ್ (attached) ಪಾಯಖಾನ ಅದಲ್ಲಾ? ಅದು ದೊಡ್ಡ ಮಾತು. ನಿಮ್ಮ ವಾಡೆ ಒಳಗಾ ರಾತ್ರಿ ಎದ್ದು  ದೂರ ಇರೋ ಪಾಯಖಾನಿಗೆ ಹೋಗಿ ಬರೋದು ಅಂದ್ರ ವಾಪಸ್ ಬರೋ ತನಕಾ ಮುಂಜಾನಿ ಆಗಿಬಿಡ್ತದ. ಆ ದೃಷ್ಟಿಯಿಂದ ನೋಡಿದ್ರ ಒಳ್ಳೇದು ಅಲ್ಲಾ? - ಅಂತ ಕೇಳಿದೆ. ಬಿ ಪಾಸಿಟಿವ್ ಅನ್ನೋ ತತ್ವ ನಮ್ಮದು.

ಇಲ್ಲಾ ಸಾಬ್ ಕಡಕಿ ಆಗಿ ಬಿಟ್ಟಿದೆ. ರೋಕ್ಕಾನೇ  ಇಲ್ಲ. ಅದಕ್ಕೇ ಸಾದಾ ರೂಂ. attached ಇಲ್ಲಾ ಸಾಬ್, ಅಂತ ತಾನೂ ಸಹಿತ ಸುಲಭ್ ಮಾದರಿ ಟಾಯಿಲೆಟ್ ಉಪಯೋಗ ಮಾಡಬೇಕು ಅಂತ ನಿಟ್ಟುಸಿರು ಬಿಟ್ಟ.

ಸಾಬ್ರಾ..... ನಿಮ್ಮ ಬೇಗಂಗೆ ಗಂಡಾತರ ಬರೋದಕ್ಕೂ ನಿಮಗ ಮನಿ ಬಿಟ್ಟು ಓಡಿ ಬರೋ ಸ್ಥಿತಿ ಬರೋದಕ್ಕೂ ಏನು ಸಂಬಂಧ ಅದ? - ಅಂತ ಕೇಳಿದೆ. 

ನೋಡಿ ಸಾಬ್..... ನಮ್ಮದು ಬೇಗಂ ಕುಂಡಲಿ ನೋಡ್ಬಿಟ್ಟಿ ಸ್ವಾಮೀ ಗರಮಾನಂದಾ ಅಕಿಗೆ ಹೇಳಿದ, ನಿಮಗೆ ಭಾರಿ ದೊಡ್ಡ ಗಂಡಾಂತರ ಇದೆ. ಗಂಡಾಂತರ ದೂರ ಮಾಡಿಕೊಳ್ಳಿ ಅಂತ. ಅದು ಕೇಳಿಕೊಂಡು ಬಂದವಳೇ ನಮ್ಮ ಬೇಗಂ ನಮ್ಮನ್ನು ಮನೆಯಿಂದ ಓಡಿಸಿಬಿಟ್ಟಳು ಸಾಬ್.... ಅಂದ ಕರೀಂ.

ಯಾಕ ಸಾಬ್ರಾ?

ಅದೇ ಸಾಬ್....ಗಂಡಾಂತರ  ಅಂದ್ರೆ ಗಂಡನಿಂದ ಅಂತರ. ಗಂಡಾಂತರ ದೂರ ಮಾಡಿಕೊಳ್ಳಿ ಅಂದ್ರೆ ಗಂಡಾದು ಜೊತೆ ಇರೋ ಅಂತ್ರಾನ ಇನ್ನೂ ದೂರ ಮಾಡಿಕೊಳ್ಳಿ ಅಂತ. ಹಾಂಗಂತ ವಿಚಾರ ಮಾಡ್ಬಿಟ್ಟಿ ನಮ್ಮ ಬೇಗಂ ನಮ್ಮನ್ನು ಮನೆಯಿಂದ ಓಡಿಸಿಬಿಟ್ಟಳು. ಗಂಡಾಂತರ ಅಂದ್ರೆ ಗಂಡಾನಿಂದ ದೂರ ಇರ್ಬೇಕು ಅಂತ ಕ್ಯಾ ಸಾಬ್? - ಅಂತ ಕೇಳಿಬಿಟ್ಟ ಕರೀಂ.

ಈಗ ನಗಬಾರದ ಜಾಗದಿಂದ ನಗೋ ಸರದಿ ನಂದು.

ಸಾಬ್ರಾ.....ಗಂಡಾಂತರ ಅದ ಅದಕ್ಕ ಗಂಡನ್ನ ಓಡಿಸಬೇಕು ಅನ್ನೋದನ್ನ ಸಹಿತ ಸ್ವಾಮಿ ಗರಮಾನಂದ ಅವರ ಹೇಳಿದರೋ ಅಥವಾ ಬ್ಯಾರೆ ಯಾರರ ಹೇಳಿದರೋ? - ಅಂತ ಕೇಳಿದೆ.

ಇಲ್ಲ  ಸಾಬ್. ಸ್ವಾಮೀಜಿ ಹೇಳಿಲ್ಲ. ಯಾಕೆಂದ್ರೆ ಅವರು, ನಿಮಗೆ ಗಂಡಾಂತರ ಐತೆ. ದೂರ ಮಾಡಿಕೊಳ್ಳಿ ಅಂತ ಇಷ್ಟೇ ಹೇಳಿಬಿಟ್ಟು ಸೈಲೆಂಟ್ ಆಗಿ ಬಿಟ್ಟರು. ಪರಿಹಾರ ಕೇಳಿದ್ರೆ, ಅದಕ್ಕೆ  ಬೇರೆ ಕಾಸು extra ಕೇಳಿದರಂತೆ. ಅದರ ಪ್ರಕಾರ ನಮ್ಮ ಬೇಗಂ, ಸ್ವಾಮೀಜಿ ಪರಿಹಾರ ಬ್ಯಾಡಾ ನಮಗೆ. ಹೇಗೂ ಗಂಡಾಂತರ ಅದೇ ಅಂತ ಗೊತ್ತಾದ ಮೇಲೆ ಅದನ್ನ ದೂರ ಮಾಡೋದು ಏನು ಮಹಾ? ಅಂತ ಸೆಲ್ಪ್ ಸರ್ವೀಸ್ (self  service) ಮಾಡಿಕೊಂಡು ಬಿಟ್ಟರು. ರೊಕ್ಕಾ ಉಳೀತು ನೋಡ್ರೀ, ಅಂದ ಕರೀಂ.

ಆಗಿದ್ದು ಇಷ್ಟ. ಕರೀಮನ ಹೆಂಡ್ತೀಗೆ ಅವರ ಹಕ್ಕಿ ಪಕ್ಕಿ ಉರ್ದು ಒಂದು ಬಿಟ್ಟರ ಬಾಕಿ ಎಲ್ಲಾ ಭಾಷಾ ಅಂದ್ರ ಭಾಳ ತುಟ್ಟಿ. ಗಂಡನಿಂದ ಅಂತರ ಗಂಡಾಂತರ ಅಂತ ಎಂದೋ ಕಲಿತ ಕನ್ನಡ ತಪ್ಪು ತಪ್ಪಾಗಿ ಉಪಯೋಗಿಸಿ, ಗಂಡಾಂತರ ದೂರ ಮಾಡಿಕೊಳ್ಳಬೇಕು ಅಂದ್ರ ನಮ್ಮ ಕರೀಮನ್ನ ಮನಿಯಿಂದ ದೂರ ಓಡಿಸಬೇಕು ಅಂತ ಹೇಳಿ ಓಡಿಸಿಬಿಟ್ಟಾಳ.

ಸಾಬ್ರಾ ಬೆಷ್ಟ ಆತ ಬಿಡ್ರೀ. ನಿಮ್ಮ ಹಾಪ ಬೇಗಂ ಗಂಡಾಂತರ ದೂರ ಮಾಡಿಕೊಂಡರ ನೀವು ಸ್ವಲ್ಪ ಹೆಂಡಾಂತರ ಹತ್ತಿರ ಮಾಡಿಕೊಳ್ಳರೀ. ಚೈನಿ ಮಾಡ್ರೀ, ಅಂದೆ ನಾನು ಸಾಬರಿಗೆ.

ಹೆಂಡಾಂತರ?!!!ಅಂದ್ರೇ ಸಾಬ್? ಹೆಂಡಾಂತರ ಹತ್ತಿರ ಮಾಡಿಕೊಳ್ಳೋದು ಅಂದ್ರೆ ಸಾಬ್? - ಅಂತ ಭಾಳ ಇನ್ನೋಸೆಂಟ್ ಆಗಿ ಕೇಳಿದ ನಮ್ಮ ಕರೀಂ.

ನಿಮ್ಮ ಬೇಗಂ ಗಂಡನಿಂದ ಅಂತರ ಗಂಡಾಂತರ ಅಂತ ಸಂಧಿನೋ ಸಮಾಸನೋ   ಬಿಡಿಸಿದರ ನೀವೂ ಹಾಂಗss ಹೆಂಡಾಂತರ ಬಿಡಸ್ರೀ...ಅಂತ ಸ್ವಲ್ಪ ಜುಲ್ಮೀ ಮಾಡಿದೆ.

ಹೆಂಡತಿಯಿಂದ ಅಂತರ  ಹೆಂಡಾಂತರ ಅಂತ ಸಮಾಸ ಬಿಡಸ್ತಾನೋ ಅಂತ ನಿರೀಕ್ಷೆ ಇತ್ತು.  ಆದ್ರ ಆಗಿದ್ದೇ ಬ್ಯಾರೆ.

ಸಾಬ್.... ನೋಡೋಣ ತಡೀರಿ. ಹೆಂಡಾಂತರ...... ಹೆಂಡದಿಂದ ಅಂತರ ಹೆಂಡಾಂತರ. ಹೆಂಡ ಅಂದ್ರೆ ಶೆರೆ. ನಮಗೆ RC ನಿಮಗೆ KF. ಹೆಂಡಾಂತರ ಕಡಿಮೆ ಮಾಡಿಕೊಳ್ಳೋದು ಅಂದ್ರೆ ಗಿಚ್ಚಾಗಿ ಶೆರೆ ತಂದು ನಮ್ಮ ಹೋಟೆಲ್ ರೂಮಲ್ಲೇ ಸ್ಟಾಕ್ ಮಾಡಿ ಬಿಡೋದು. ಅಂದ್ರೆ ಎಲ್ಲೇ ಕೈ ಇಟ್ಟರೂ RC ಇಲ್ಲ KF ಸಿಕ್ಕೇ ಬಿಡಬೇಕು. ಅಲ್ಲಾ? - ಅಂತ ಹೇಳಿ, ಹ್ಯಾಂಗೆ, ಅಂತ ಕಣ್ಣು ಹೊಡೆದ ಕರೀಂ.

ಸಾಬ್ರಾ.....ಭಾರಿ ಸಮಾಸ ಬಿಡಿಸಿ ಬಿಟ್ಟಿರಿ ನೋಡ್ರೀ. ಮಾನ್ ಗಯೇ ಉಸ್ತಾದ್. ಭಾರಿ ಪ್ರಳಯಾಂತಕ ಇದ್ದಿ ಬಿಡು. ಮತ್ತ RC, KF ತರಿಸಿ ಬಿಡು. ತೀರ್ಥಯಾತ್ರೆ ಶುರು ಮಾಡಿ ಬಿಡೋಣ. ಶುಭಸ್ಯ ಶೀಘ್ರಂ. ತಡಾ ಯಾಕ? - ಅಂತ ಕೇಳಿದೆ.

ಹೋಟೆಲ್ ಒಳಗ ರೂಮಿ ಹಾಕಿ ಗಿಚ್ಚಾಗಿ ಕುಡಿಯೋದು ಅನ್ನೋದರ ಬಗ್ಗೆ ಕೇಳಿದ್ದಿವಿ. ಅನುಭವ ಇರಲಿಲ್ಲ. ನಮ್ಮ ಕರೀಮನ
ಗಂಡಾಂತರ ಹೆಂಡಾಂತರ ಲಫಡಾಯಿಂದ ಅದೂ ಕೂಡ ಅನುಭವ ಆಗಿ ಒಂದು ಐಟಂ ಟಿಕ್ ಮಾಡಿಬಿಡೋದು. ತಣ್ಣನೆ KF ಬಂದ್ರ  ಸಾಕು.

ಚಿಂತಾ ನಕೋಜಿ ಸಾಬ್. ಈಗ ಫೋನ್ ಮಾಡಿ ಬಿಡ್ತೇನಿ. ಸ್ನಾನಕ್ಕೆ ಸಾಕಾಗುವಷ್ಟು ಹೆಂಡ ಪ್ಯಾಟಿಂದ ಹೊಂಟು ಹೆಂಡಾಂತರ ಕಮ್ಮಿ ಆಗ್ತಾ ಆಗ್ತಾ ಬಂದು ಮುಟ್ಟೇ ಬಿಡ್ತದೆ. ನಂತರ ನೀವು KF ಕುಡೀರಿ ನಾವೂ RC ಶುರು ಮಾಡ್ತೇವೆ. ಓಕೆ? - ಅಂದ ಕರೀಂ ತನ್ನ ಹೆಂಡಾಂತರ ಕಾರಾವಾಯಿ ಶುರು ಮಾಡಿದ.

ನಾ ಬರಬಹುದಾದ KF ಕ್ರೇಟಿಗೆ ಕಾದು ಕೂತೆ.

1 comment:

Anonymous said...

Mahesh,

Gr8 Job!

Shiv