ಭಾಳ ದಿವಸ ಆದ ಮ್ಯಾಲೆ ಕರೀಂ ಸಿಕ್ಕಿದ್ದ.
ಸಲಾಂ ಸಾಬ್, ಅಂದ ಕರೀಂ.
ವಾಲೇ ಕುಮ್ ಸಲಾಂ ಕರೀಮಾ. ಏನಪಾ ಸುದ್ದಿ? - ಅಂತ ಕೇಳಿದೆ.
ಸಾಬ್! ನಿಮಗೆ ಗೊತ್ತು ಕ್ಯಾ, ಕುಲಕರ್ಣಿ ಮಮ್ಮಿ ಸನ್ಯಾಸ ತೊಗೊಂಡು ಬಿಟ್ಟಿದೆ?! ಹಾಂ! ಹಾಂ! - ಅಂತ ಏನೋ ದೊಡ್ಡ ನಿಗೂಢ ರಹಸ್ಯ ಹೇಳಿದಾಂಗ ಹೇಳಿದ ಕರೀಮಾ.
ಯಾವ ಕುಲಕರ್ಣಿ ಅವರ ಅವ್ವಾ ಸನ್ಯಾಸ ತೊಗೊಂಡ್ರು? ಹಾಂ? - ಅಂತ ಕೇಳಿದೆ.
ಕುಲಕರ್ಣಿ ಮಮ್ಮಿ ಅಂದ್ರ ಯಾರೋ ಕುಲಕರ್ಣಿ mummy ಅಂತ ನಾ ತಿಳಕೊಂಡೆ. ನಮ್ಮ ಕಾಲದಾಗೆಲ್ಲ ಮುಂದವರದವರು ಅಥವಾ ಮುಂದುವರದೇವಿ ಅಂತ ತಿಳಕೊಂಡವರು ತಾಯಿಗೆ ಮಮ್ಮಿ ಅಂತಿದ್ದರು.
ಏನ ಹಚ್ಚಿಯೋ ಕರೀಂ?! ನಮಗ ಎಷ್ಟು ಮಂದಿ ಕುಲಕರ್ಣಿ ಗೊತ್ತು ಇದ್ದಾರ. ಎಷ್ಟು ಮಂದಿ ಕುಲಕರ್ಣಿ ಮಮ್ಮಿ ಅಂದ್ರ ತಾಯಂದಿರು ನಮಗ ಮಾತೃ ಸಮಾನ. ಅವರ್ಯಾರೂ ಸಂಸಾರ ಬಿಟ್ಟು ಸನ್ಯಾಸ ತೊಗೊಂಡಿರಲಿಕ್ಕೆ ಇಲ್ಲ ಬಿಡು. ಏನೇನರೆ ಹೇಳ್ತೀ ನೋಡು. ಹಾಪಾ! - ಅಂತ ಹೇಳಿದೆ.
ಸಾಬ್!!! ಕುಲಕರ್ಣಿ ಮಮ್ಮಿ ಸಾಬ್!! ಕುಲಕರ್ಣಿ ಮಮ್ಮಿ!!! ಯಾವದೇ ಕುಲಕರ್ಣಿ ಅವರ ಅಮ್ಮೀಜಾನ ಅಲ್ಲ ಸಾಬ್. ಹುಡುಗಿ ಸಾಬ್ ಹುಡುಗಿ. ಕುಲಕರ್ಣಿ ಮಮ್ಮಿ ಅನ್ನೋ ಲಡಿಕಿ ಸಾಬ್! ಅದು ಸನ್ಯಾಸ ತೊಗೊಂಡು ಬಿಟ್ಟಿದೆ, ಅಂತ ಕರೀಮ ಅಲವತ್ತುಕೊಂಡ.
ಒಹೋ! ಇದು ಆ ತರಹದ ಮಮ್ಮಿ. ಧಾರವಾಡ ಕಡೆ ಹುಡುಗ ಹುಡುಗ್ಯಾರ ಹೆಸರಿಗೆ ಏನೇನೋ ಸೇರಿಸಿ ಕಲಾವತಿಗೆ ಕಲ್ಲಿ, ಕಲ್ಪನಾಗ ಕಪ್ಪಿ, ಮಮತಾಗ ಮಮ್ಮಿ ಅಂತ ಶಾರ್ಟ್ ಮಾಡಿ ಕರಿತಾರ. ಇದು ಹಾಂಗ ಆದ ಮಮ್ಮಿ ಉರ್ಫ್ ಮಮತಾ ಅಂತ ಗೊತ್ತಾತು.
ಕರೀಮಾ...ನಮ್ಮ ಪರಿಚಯದೊಳಗ ಮಮತಾ ಅಂತ ಹುಡುಗ್ಯಾರು ಇದ್ದರು. ಆದ್ರ ಕುಲಕರ್ಣಿ ಅನ್ನೋ ಅಡ್ಡಹೆಸರಿನ ಯಾವದೇ ಮಮತಾ ಉರ್ಫ್ ಮಮ್ಮಿ ಇರಲಿಲ್ಲ ಬಿಡಪಾ. ಹಾಂಗಿದ್ದಾಗ ಯಾವ ಕುಲಕರ್ಣಿ ಮಮ್ಮಿ ಸನ್ಯಾಸ ತೊಗೊಂಡಳೋ ಮಾರಾಯಾ!? - ಅಂತ ಕೇಳಿದೆ.
ಅವಳೇ ಸಾಬ್, ಅವಳೇ 'ಭೋಲಿ ಭಾಲಿ ಲಡಿಕಿ'. ಅಕಿನೇ ಸನ್ಯಾಸ ತೊಗೊಂಡಿದೆ, ಅಂದ ಕರೀಮ.
ಇವನೋ ಇವನ ಕನ್ನಡ ಭಾಷಾನೋ! ದೇವರಿಗೇ ಪ್ರೀತಿ! ಹುಡುಗಿ ತೊಗೊಂಡಿದೆ ಅಂತ ನಪುಂಸಕ ಲಿಂಗ ಹಚ್ಚಿ ಮಾತಾಡ್ತಾನ. ಲಿಂಗದ ಬಗ್ಗೆ ಮಾತ್ರ ಕರೀಮನ ಜೋಡಿ ಮಾತಾಡೇಬಾರದು. ಅದು ಕೆಲಸಿಲ್ಲ ಅಂತ ಕಟ್ಟಿರುವಿ ಎಲ್ಲೆಲ್ಲೋ ಬಿಟಗೊಂಡು, ಆ ಮ್ಯಾಲೆ ಅದು ಕಡಿಬಾರದ ಜಗಾ ಒಳಗ ಕಡಿದಾಗ ಜಿಗದು ಜಿಗದು ಒದ್ಯಾಡಿದಾಂಗ! ಇವನ ಜೋಡಿ ಲಿಂಗದ ಸುದ್ದಿ ಬ್ಯಾಡ. ಅದು ವ್ಯಾಕರಣದ ಲಿಂಗನೇ ಇರಲಿ ಅಥವಾ.....
ಈ ಸನ್ಯಾಸ ತೊಗೊಂಡ ಕುಲಕರ್ಣಿ ಮಮ್ಮಿ ಭೋಲಿ ಭಾಲಿ ಲಡಿಕಿ ಅಂದ್ರ ಭಾಳ ಸಂಭಾವಿತ ಇದ್ದಳು ಏನು? ಹಾಂಗಾಗಿ ಯಾವದೋ ಸನ್ಯಾಸಿ ಅಕಿಗೆ ಮೋಡಿ ಮಾಡಿ ಅಕಿನ್ನೂ ಸನ್ಯಾಸಿ ಮಾಡಿ ಬಿಟ್ಟ ಏನು? ಭಾಳ ಅನ್ಯಾಯ ಆತು. ಲಗ್ನ ಆಗಿತ್ತೇನು ಅಕಿದು? ಯಾಕ ಕೇಳಿದೆ ಅಂದ್ರ ಇಕಿ ಏನೋ ಸನ್ಯಾಸಿ ಆಗಿ ಅಲಖ್ ನಿರಂಜನ್ ಅಂತ ಹೊಂಟು ಹೋದಾಳು. ಗಂಡಾ ಮಕ್ಕಳ ಗತಿ? ಅವರ ಕೈಯಾಗ ಚಿಪ್ಪು ಬಂತಲ್ಲೋ! - ಅಂತ ಸಂತಾಪ ವ್ಯಕ್ತಪಡಿಸಿದೆ.
ಸಾಬ್!!!! 'ಭೋಲಿ ಭಾಲಿ ಲಡಿಕಿ' ಅಂದ್ರೆ ಕುಲಕರ್ಣಿ ಮಮ್ಮಿ ಅಲ್ಲಾ ಸಾಬ್! ಅಕಿ ಆ 'ಭೋಲಿ ಭಾಲಿ ಲಡಿಕಿ' ಹಾಡಿಗೆ ಡಾನ್ಸ್ ಮಾಡಿದ್ದಳು ಸಾಬ್! - ಅಂತ ಮತ್ತೂ ತಲಿ ಕೆಡಿಸಿಬಿಟ್ಟ.
ಹಾಂ!? 'ಭೋಲಿ ಭಾಲಿ ಲಡಿಕಿ' ಅನ್ನೋದು ಹಾಡs? ಯಪ್ಪಾ! ಆ ಹಾಡಿಗೆ ಯಾವ ಕುಲಕರ್ಣಿ ಮಮ್ಮಿ ಡಾನ್ಸ್ ಮಾಡಿದ್ದಳೋ ಮಾರಾಯ? ಯಾರ ಜೋಡಿ? ನಿನ್ನ ಜೋಡಿ? - ಅಂತ ಕೇಳಿದೆ.
ಅಕ್ಷಯ ಕುಮಾರ್ ಜೋಡಿ ಕುಲಕರ್ಣಿ ಮಮ್ಮಿ ಡಾನ್ಸ್ ಮಾಡಿದ್ದಳು ಸಾಬ್. ನೋಡಿಲ್ಲ ಕ್ಯಾ? - ಅಂತ ಮತ್ತೂ ಒಂದು ಹೊಸಾ ಕ್ಯಾರೆಕ್ಟರ್ ಹಾಕಿ ಬಿಟ್ಟ.
ಈಗ ಈ ಅಕ್ಷಂತಿ ಕುಮಾರ್ ಯಾರಪಾ? ಅಕ್ಷಂತಿ ಕುಮಾರ ಅಂತ ಹೆಸರು ಅದ ಅಂದ ಮ್ಯಾಲೆ ಆವಾ ನನಗ ಅನ್ನಿಸೋಮಟ್ಟಿಗೆ ಹೊಸೆಲ್ಲಾಪುರ ಕಡೆ ಅವನೇ ಇರಬೇಕು. ಯಾರಲೇ ಆವಾ ಅಕ್ಷಂತಿ ಕುಮಾರಾ? ದೊಡ್ಡ ಅಕ್ಷಂತಿ ಹಚ್ಚಿಗೋತ್ತಾನ ಏನು? ಆಚಾರ್ರು ಏನು? ಮತ್ತ ಅವಂಗ ಅಕ್ಷಂತಿ ಕುಮಾರ್ ಆಚಾರ್ ಅನ್ನಬೇಕೋ ಬ್ಯಾಡೋ? ಹಾಂ? ಅದೇನು ಆ ಅಕ್ಷಂತಿ ಆಚಾರೀ ಕುಲಕರ್ಣಿ ಮಮ್ಮಿ ಜೋಡಿ ಡಾನ್ಸ್ ಮಾಡಿದ? ಅದಕ್ಕೇನು ಈಗ? - ಅಂತ ಕೇಳಿದೆ.
ಸಾಬ್!!! ಅಕ್ಷಂತಿ ಕುಮಾರ ಅಲ್ಲಾ ಸಾಬ್!!! ಅಕ್ಷಯ ಕುಮಾರ್!!! ಅಕ್ಷಯ ಕುಮಾರ್!!! ಅವನು ಪಂಜಾಬಿ ಮುಂಡಾ ಸಾಬ್!!! - ಅಂದ ಕರೀಮ.
ಏನಲೇ ಹಾಪಾ!? ಅಕ್ಷಂತಿ ಕುಮಾರಾ ಅಂತೀ! ಆ ಮ್ಯಾಲೆ ಪಂಜಾಬಿ ಮುಂಡೆ ಅಂತಿ! ಎಲ್ಲಾ ವಿಚಿತ್ರ ಅದ. ಕುಲಕರ್ಣಿ ಮಮ್ಮಿ ಅಕ್ಷಯ ಕೌರ್ ಅನ್ನೋ ಪಂಜಾಬಿ widow ಅಂದ್ರ ಮುಂಡೆ ಜೋಡಿ ಡಾನ್ಸ್ ಮಾಡಿದಳಾ? ಏನೇನೋ ಹೇಳ್ತೀಪಾ. ವಿಚಿತ್ರ ಅದಲ್ಲಾ. ಮುಂದ? - ಅಂತ ಕೇಳಿದೆ.
ಸಾಬ್!!! ಪಂಜಾಬಿ ಮುಂಡಾ ಅಂದ್ರೆ ಪಂಜಾಬಿ ಹುಡುಗ ಅಂತ. ನಿಮಗೆ ಕುಲಕರ್ಣಿ ಮಮ್ಮಿ ಅಂದ್ರೆ ಯಾರು ಅಂತ ತಿಳೀತಾ ಇಲ್ಲ. ಅದಕ್ಕೆ ನಾನು clue ಮೇಲೆ clue ಕೊಟ್ಟರೆ ಏನೇನೋ ಕೇಳ್ತೀರಿ, ಅಂತ ಕರೀಮ ಹೇಳಿದ.
ಹಾಂಗss? ಈಗ ಧಾರವಾಡ ಒಳಗಾ ಭಾಳ ಇಂಜಿನಿಯರಿಂಗ್, ಡೆಂಟಲ್, ಮೆಂಟಲ್, ಮೆಡಿಕಲ್ ಎಲ್ಲಾ ಕಾಲೇಜ್ ಅವು ಇವು ಬಂದು ಈ ಪಂಜಾಬಿ ಮುಂಡಾಗಳು, ಹರ್ಯಾಣಾದ ಗುಂಡಾಗಳು, ಉತ್ತರ ಪ್ರದೇಶದ ಬಯ್ಯಾಗಳು, ತಮಿಳ ತಂಬಿಗಳು, ಆಂಧ್ರದ ಗುಲ್ಟಿಗಳು, ಅವರು ಇವರು ಬಂದು ಪಾಪ ನಮ್ಮ ಲೋಕಲ್ ಕುಲಕರ್ಣಿ ಮಮ್ಮಿ ಅಂತಹ ಹುಡಿಗ್ಯಾರಿಗೆ ಮಂಗ್ಯಾ ಮಾಡ್ಲಿಕತ್ತಾರ. ನಾಕೈದ ವರ್ಷ ಚೈನೀ ಮಾಡಿ ಅವರು ವಾಪಸ್ ಪಂಜಾಬಿಗೆ, ಅವರ ಊರಿಗೆ ಹೋಗಿ ಬಿಡ್ತಾರ. ಪಾಪ ಕುಲಕರ್ಣಿ ಮಮ್ಮಿ ಅಂತಹವರು ಈ ಮುಂಡಾ ಗುಂಡಾಗಳ ಗುಂಗಿನ್ಯಾಗ ಮಾನಸಿಕ್ ಆಗಿ ಆಮ್ಯಾಲೆ ಪಾಪ ಸನ್ಯಾಸ ತೊಗೋತ್ತಾರ. ಇಕಿದೂ ಅದೇ ಕೇಸ್ ಏನು? ಆದರೂ ಈ ಕುಲಕರ್ಣಿ ಮಮ್ಮಿ ಯಾರೋ? ತಿಳಿವಲ್ಲತು - ಅಂತ ಹೇಳಿದೆ.
ಸಾಬ್ ನಿಮ್ಮದು ಎಂತಾ ದಡ್ಡ ಖೋಪಡೀ ಸಾಬ್? ಇರಲಿ ಕುಲಕರ್ಣಿ ಮಮ್ಮಿ ಬಗ್ಗೆ ಇನ್ನೊಂದು clue ಕೊಡೋಣ ನಿಮಗೆ. ಮಸ್ತ ಐಟಂ ಗರ್ಲ್ ಅಂತಾ ಬ್ಯಾರೆ ಭಾಳ ಫೇಮಸ್ ಆಗಿದ್ದಳು. ಗೊತ್ತು ಕ್ಯಾ? - ಅಂತ ಕುಲಕರ್ಣಿ ಮಮ್ಮಿಯ ತಿಳಿಯದಿದ್ದ ಇನ್ನೊಂದು ರೂಪದ ಬಗ್ಗೆ ಹೇಳಿಬಿಟ್ಟ.
ಹಾಂ!!?? ಈ ಕುಲಕರ್ಣಿ ಮಮ್ಮಿ ಕ್ಯಾಬರೆ ಡಾನ್ಸ್ ಬ್ಯಾರೆ ಮಾಡತಿದ್ದಳಾ? ಭಾಳ ಜಾಬಾದ ಇದ್ದಾಳ ಅನ್ನು. ಎಲ್ಲೆ ಲೇಡೀಸ್ ಹಾಸ್ಟೆಲ್ ಒಳಗ ಹಾಸ್ಟೆಲ್ ಡೇ ಸೆಲೆಬ್ರೇಶನ್ ಗೆ ಕ್ಯಾಬರೆ ಡಾನ್ಸ್ ಹೊಡೆದಿದ್ದಳು ಏನು? ಅಥವಾ ಕ್ಯಾಬರೆ, ಐಟಂ ನಂಬರ್, ಎಲ್ಲಾ ಕೇವಲ ಹುಡುಗುರಿಗೆ ಮಾತ್ರ ಅಂತ ಹೇಳಿ, ಸೀದಾ KCD ಗುಡ್ಡಾ ಇಳಿದು ಬಂದು, ಸೀದಾ ಉದಯಾ ಬಾಯ್ಸ್ ಹಾಸ್ಟೆಲ್ ಒಳಗೇ ಕ್ಯಾಬರೆ ಹೊಡೆದು ಬಿಟ್ಟಿದ್ದಳೋ? ಹಾಂ? ಹಾಂ? - ಅಂತ ಕೇಳಿದೆ.
ಹೋಗ್ಗೋ ನಿಮ್ಮಾ!!! ಹಾಪ್ ಸಾಬ್!!! ನಿಮಗೆ ಕುಲಕರ್ಣಿ ಮಮ್ಮಿ ಅಂದ್ರೆ ಯಾರು ಅಂತ ತಿಳೀತಾ ಇಲ್ಲ ನೋಡಿ. ಏನು ಮಾಡೋದು? ಹ್ಯಾಂಗೆ ಹೇಳೋದು? ಹಾಂ? ಹಾಂ? ಕುಲಕರ್ಣಿ ಮಮ್ಮಿ ಸನ್ಯಾಸಿ ಆದ ಇಂಟರೆಸ್ಟಿಂಗ್ ವಿಷಯ ಹೇಳೋಣ ಅಂದ್ರೆ ನಿಮಗೆ ಕುಲಕರ್ಣಿ ಮಮ್ಮಿ ಯಾರು ಅಂತ ಗುರ್ತು ಮಾಡಿಸೋದರಲ್ಲೇ ನನ್ನ ಆಧಾ ಜಿಂದಗಿ ಖಾಲಿ ಆಗ್ತಾ ಇದೆ. ಏನು ಮಾಡೋಣ? - ಅಂತ ತಲಿ ಹಿಡಕೊಂಡು ಕೂತ ಕರೀಂ.
ಕುಲಕರ್ಣಿ ಮಮ್ಮಿದು ಲಗ್ನ ಆಗ್ಯದ ಏನು? ಲಗ್ನದ ನಂತರ ಅಕಿ ಅಡ್ಡಹೆಸರು ಚೇಂಜ್ ಆಗಿರಬೇಕಲ್ಲಾ. ಏನು ಅಕಿ ಗಂಡನ ಮನಿ ಅಡ್ಡಹೆಸರು? - ಅಂತ ಕೇಳಿದೆ.
ಅಕಿ ಕುಲಕರ್ಣಿ ಮಮ್ಮಿದು ನೆನಪ ಆಗಲಿಲ್ಲ ಅಂದ್ರೂ ಆಕಸ್ಮಾತ ಅಕಿ ಗಂಡ ಭಾಳ ಫೇಮಸ್ ಇದ್ದರ ಅವಂದಾರ ಕನೆಕ್ಷನ್ ಹಚ್ಚಿ ಅದರ ಮೂಲಕ ಈ ಕುಖ್ಯಾತ ಕುಲಕರ್ಣಿ ಮಮ್ಮಿ ಅಂದ್ರ ಯಾರು ಅಂತ ನೋಡೋಣ ಅಂತ ನಮ್ಮ ವಿಚಾರ.
ಶಾದಿ ಆಗಿದೆ ಅಂತೇ ಸಾಬ್. ಗಂಡಾದು ಹೆಸರು ಏನೋ ಗಾಯ್ಸಾಮಿ ಅಂತೆ ನೋಡಿ. ಏನಾರು ತಿಳೀತು ಕ್ಯಾ? ಹಾಂ? - ಅಂತ ಕೇಳಿದ.
ಏನು ಗಂಡನ ಅಡ್ಡಹೆಸರು ಗಾಯ್ಸಾಮಿ ಅಂತನೇ? ಏನಲೇ ಇದು ಅವನೇ ಸಾಮಿ ಅವನ ಹೆಂಡ್ತಿ ಇಕಿ ಕುಲಕರ್ಣಿ ಮಮ್ಮಿ ಸನ್ಯಾಸಿ. ಮಸ್ತ ಅದ ತೊಗೋ ಕಾಂಬಿನೇಶನ್. ಗಾಯ್ಸಾಮಿ ಅಂದ್ರ ಏನಲೇ? - ಅಂತ ಕೇಳಿದೆ.
ಗಾಯ್ಸಾಮಿ ಸಾಬ್. ಗಾಯ್ ಅಂದ್ರೆ ಆಕಳಾ ಮತ್ಲಬ್ ಅಂಗ್ರೇಜೀ ಮೇ cow. ಅದರ ಮುಂದೆ ಸ್ವಾಮಿ. ಈಗ ತಿಳೀತು ಕ್ಯಾ? - ಅಂತ ಹೇಳಿದ ಕರೀಂ.
ಅಂದ್ರ ಗೋಸ್ವಾಮಿ ಏನ್ರೀ!? ಅಕಿ ಗಂಡನ ಅಡ್ಡಹೆಸರು ಗೋಸ್ವಾಮಿ ಏನು? ಗೋಸ್ವಾಮಿ ಅಂದ್ರ ಅಸ್ಸಾಂ ಕಡೆ ಬ್ರಾಹ್ಮಣರು. ಸಿನೆಮಾ ಆಕ್ಟರ್ ಮನೋಜ್ ಕುಮಾರ್ ಇದ್ದ ನೋಡ್ರೀ. ಆವಾ ಗೋಸ್ವಾಮಿ. ಅವನ ಮಗಾ ಕುಣಾಲ್ ಗೋಸ್ವಾಮಿ. ಅವರ ಪೈಕಿ ಯಾರನ್ನಾರ ಲಗ್ನಾ ಮಾಡಿಕೊಂಡಳು ಏನು ನಮ್ಮ ಕುಲಕರ್ಣಿ ಮಮ್ಮಿ? ಅವರು ಹೆಸರಾಗಷ್ಟೇ ಸ್ವಾಮಿ ಇಟ್ಟುಗೊಳ್ಳೋ ಗೋಸ್ವಾಮಿಗಳು. ಈಗ ಸುಬ್ರಮಣ್ಯಮ್ ಸ್ವಾಮಿ ಇದ್ದಾರ. ಅವರು ಸ್ವಾಮಿ ಏನು? ಅಲ್ಲ. ಹಾಂಗೇ ಈ ಗೋಸ್ವಾಮಿಗಳೂ ಸಹ. ಅವರನ್ನ ಮದ್ವಿ ಆದ್ರಾ ಕುಲಕರ್ಣಿ ಮಮ್ಮಿ ಯಾಕ ಸನ್ಯಾಸಿ ಆಗಲಿಕ್ಕೆ ಹೊಂಟಾಳರೀ? - ಅಂತ ಕೇಳಿದೆ.
ಹಾಂ! ಕರೆಕ್ಟ್. ಗೋಸ್ವಾಮಿ. ಅದೇ ಕುಲಕರ್ಣಿ ಮಮ್ಮಿ ಗಂಡನ ಮನಿ ಅಡ್ಡಹೆಸರು. ಆದ್ರೆ ಮನೋಜ್ ಕುಮಾರ ಮಗ ಕುಣಾಲ್ ಗೋಸ್ವಾಮಿ ಜೊತೆ ಅಲ್ಲ ನಮ್ಮ ಕುಲಕರ್ಣಿ ಮಮ್ಮಿ ಶಾದಿ ಮಾಡಿಕೊಂಡಿದ್ದು. ಬೇರೆ ಗೋಸ್ವಾಮಿ ಜೊತೆ - ಅಂದ ಕರೀಂ.
ಮತ್ತೆ ಯಾವ ಗೋಸ್ವಾಮಿ ಜೋಡಿ ಮದ್ವೀ ಮಾಡಿಕೊಂಡಳು ಕುಲಕರ್ಣಿ ಮಮ್ಮಿ? ಎಲ್ಲೆ ಇರ್ತಾನ ಅಕಿ ಗಂಡ ಗೋಸ್ವಾಮಿ? - ಅಂತ ಕೇಳಿದೆ.
ಅದು ಯಾರೋ ವಿಕ್ಕಿ ಗೋಸ್ವಾಮಿ ಅಂತೆ ನೋಡಿ. ದುಬೈನಲ್ಲಿ ಇದ್ದಾ ಅಂತೆ. ಈಗ ಎಲ್ಲಾ ಕೂಡಿ ಫ್ಯಾಮಿಲಿ ಕೀನ್ಯಾಗೋ ಎಲ್ಲೋ ಶಿಫ್ಟ್ ಮಾಡಿದೇವೆ ಅಂತ ಮಮ್ಮಿ ಹೇಳ್ತಾ ಇದ್ದಳು ನೋಡಿ ಸಾಬ್ - ಅಂದ ಕರೀಂ.
ಇಷ್ಟೆಲ್ಲಾ ಆದ ಮ್ಯಾಲೆ ತಲಿಯೊಳಗ ಏನೋ ಟ್ಯೂಬ್ ಲೈಟ್ ಹತ್ತಿತು.
ಸಾಬ್ರಾ.....ನೀವು ಕುಲಕರ್ಣಿ ಮಮ್ಮಿ, ಕುಲಕರ್ಣಿ ಮಮ್ಮಿ ಅನ್ನಾಕಿ ಮಾಜಿ ಬಾಲಿವುಡ್ ಸಿಕ್ಕಾಪಟ್ಟೆ ಖತರ್ನಾಕ್ ಹೀರೋಯಿನ್ ಮಮತಾ ಕುಲಕರ್ಣಿ ಏನ್ರೀ? - ಅಂತ ಕೇಳಿದೆ.
ಯಾ ಖುದಾ! ಇದನ್ನ ತಿಳಿದುಕೊಳ್ಳಲಿಕ್ಕೆ ನಿಮಗೆ ಇಷ್ಟೊತ್ತು ಬೇಕಾತಾ!? ಏನು ಬಡ್ಡು ತಲಿ ನಿಮ್ಮದು! ಅಕಿ ಹಾಡಿದ ಹಾಡು, ಮಾಡಿದ ಡಾನ್ಸ್ ಬಗ್ಗೆ ಹೇಳಿದೆ. ನಿಮಗೆ ತಿಳಿಲಿಲ್ಲ. ಈಗ ತಿಳೀತಲ್ಲ ಸಾಕು ಬಿಡೀ - ಅಂತ ಕರೀಂ ನನ್ನ ಮ್ಯಾಲೆ ಎಲ್ಲಾ ತಪ್ಪು ಹೊರೆಸಿದ.
ಸಾಬ್ರಾ!!! ಕೂಡ್ರೀ ಸುಮ್ಮ! ಮಮತಾ ಕುಲಕರ್ಣಿ, ಹಿಂದಿ ಸಿನಿಮಾ ಹೀರೋಯಿನ್, ಸನ್ಯಾಸಿ ಆಗ್ಯಾಳ ಅಂತ ಮೊದಲೇ ಹೇಳಿದ್ದರೆ ನಮಗೆ ಕೇವಲ ಗೊತ್ತಾಗೋದೇನು ಬಂತು ನಿಮಗೆ ಗೊತ್ತಿರದಿದ್ದ ಸುದ್ದಿ ಎಲ್ಲಾ ನಾವೇ ಮಸ್ತಾಗಿ ಹೇಳ್ತಿದ್ದಿವಿ. ಅದನ್ನು ಬಿಟ್ಟು ಕುಲಕರ್ಣಿ ಮಮ್ಮಿ, ಕುಲಕರ್ಣಿ ಮಮ್ಮಿ ಅಂತ ಹುಚ್ಚರ ಹಾಪರ ಗತೆ ಹೇಳಿಕೋತ್ತ ಕೂತು, ನನ್ನ ಎಲ್ಲಾ ಕಡೆ ಒಡ್ಯಾಡಿಸಿ, ಕೊಂಕಣ ಸುತ್ತಿಸಿ ಮೈಲಾರಕ್ಕ ತೊಗೊಂಡು ಬಂದಿ. ಮಂಗ್ಯಾನಿಕೆ ಕರೀಂ! - ಅಂತ ಬೈದೆ.
ನಿಮಗೆ ಗೊತ್ತಿತ್ತು ಕ್ಯಾ ಕುಲಕರ್ಣಿ ಮಮ್ಮಿ ಸನ್ಯಾಸಿ ಆಗಿದ್ದು? ಭಾರೀ ಇದ್ದೀರಿ ಬಿಡ್ರೀ - ಅಂತ ಹೇಳಿದ ಕರೀಮಾ.
ಗೊತ್ತಿಲ್ಲದ ಏನು? ಎಲ್ಲಾ ಪೇಪರ್ ಒಳಗಾ ಬಂದಿತ್ತು. ಅಕಿ ಮಮತಾ ಕುಲಕರ್ಣಿ ಯಾರೋ ವಿಕ್ಕಿ ಗೋಸ್ವಾಮಿ ಅನ್ನೋವನ್ನ ಲಗ್ನಾ ಮಾಡಿಕೊಂಡು ಬಾಲಿವುಡ್ ಬಿಟ್ಟು ದುಬೈ ಒಳಗ ಸೆಟಲ್ ಆಗಿದ್ದಳು. ಅಲ್ಲೆ ಏನೋ ತೊಂದ್ರೀ ಆಗಿ ಅಕಿ ಗಂಡಾ ಗೋಸ್ವಾಮಿ ಜೈಲಿಗೆ ಹೋದ. ಜೇಲಿಂದ ಹೊರಗ ಬಂದ ಮ್ಯಾಲೆ ಇಬ್ಬರೂ ಕೀನ್ಯಾಕ್ಕ ಹೋಗಿ ಸೆಟಲ್ ಆಗ್ಯಾರ. ನಡು ಇಕಿಗೆ ಅಧ್ಯಾತ್ಮದ ಬಗ್ಗೆ ಸೆಳತ ಶುರು ಆತು. ಯಾವದೋ ಗುರುಗಳನ್ನ ಹಿಡಕೊಂಡು ಹಿಮಾಲಯಕ್ಕ ಹೋಗಿ ಸಾಧನಾ ಮಾಡಿ ಬಂದಾಳ ಅಂತ ಮಮತಾ ಕುಲಕರ್ಣಿ ಅನ್ನೋ ಮಾಜಿ ಸುಂದರಿ. ಇಷ್ಟು ಅದ ನೋಡಪಾ ಸುದ್ದಿ - ಅಂತ ಹೇಳಿದೆ.
ಯೋಗಿನಿ ಮಮತಾ ಕುಲಕರ್ಣಿ |
ಹೌದು ಕ್ಯಾ?! - ಅಂತ ಸಾಬ್ರು ಇಷ್ಟು ದೊಡ್ಡ ಬಾಯಿ ತೆಗೆದರು.
ಹ್ಞೂ...ಆ ಸುದ್ದಿಗೆ ಸಂಬಂಧಿಸಿದ ಕೆಲವು ಲಿಂಕ್ ಗಳನ್ನ ಕೆಳಗ ಹಾಕೇನಿ. ಓದಿಕೋ ಟೈಮ್ ಸಿಕ್ಕಾಗ, ಅಂತ ಹೇಳಿ ಖುದಾ ಹಾಫಿಜ್ ಹೇಳಿ ಬಂದೆ.
ಸಿನೆಮಾ ತಾರೆ ಮಮತಾ ಕುಲಕರ್ಣಿ ಸನ್ಯಾಸಿ ಆದ್ರಾ ಯಾರೋ ಧಾರವಾಡ ಹುಡುಗಿ ಕುಲಕರ್ಣಿ ಮಮ್ಮಿನೇ ಸನ್ಯಾಸ ತೊಗೋಂಡಳೋ ಅನ್ನೋ ಹಾಂಗ ಹೇಳ್ತಾನ ಹಾಪ್ ಸಾಬಾ!
** Mamta Kulkarni’s Life, Another Dirty Picture in Making
** Mamata Kulkarni, the yogini
** Mamta Kulkarni’s Life, Another Dirty Picture in Making
** Mamata Kulkarni, the yogini
** ಭೋಲಿ ಭಾಲಿ ಲಡಿಕಿ
** ಮಮತಾ ಕುಲಕರ್ಣಿಯ ಒಂದು ಹಳೆಯ ಫೇಮಸ್ ಐಟಂ ನಂಬರ್.....ಕೋಯೀ ಆಯೇ ತೊ ಲೇ ಜಾಯೇ!