1990 ರ ಜುಲೈ ಮಧ್ಯ ಭಾಗ ಅಂತ ನೆನಪು. ಒಂದು ದಿವಸ ಮಧ್ಯಾನ ತಂದೆಯವರ ಜೋಡಿ ಹುಬ್ಬಳ್ಳಿಗೆ ಹೋಗಿದ್ದೆ. ವೈಶ್ಯ ಬ್ಯಾಂಕ್ ಒಳಗ ಕೆಲಸ ಇತ್ತು. ಆ ಕಾಲದಲ್ಲಂತೂ ಧಾರವಾಡದಲ್ಲಿ ವೈಶ್ಯ ಬ್ಯಾಂಕಿನ ಶಾಖೆ ಇದ್ದಂಗೆ ಇರಲಿಲ್ಲ. ಅದಕ್ಕೆ ಅವತ್ತು ಹುಬ್ಬಳ್ಳಿಗೆ ಪಯಣ. ಹೋಗಿದ್ದು ನಮ್ಮ ನೆರೆಮನೆಯವರಾದ ಸವದತ್ತಿ ಮಲ್ಲಣ್ಣನ ಮಾರುತಿ ಒಮ್ನಿ ವ್ಯಾನಿನಲ್ಲಿ. ಮಲ್ಲಣ್ಣ ಎಲ್ಲೆ ಹೋಗೋದಿರಲೀ, ಆಜು ಬಾಜು ಮಂದಿನ ಕೇಳಿ, ಪ್ರೀತಿಯಿಂದ ಅವರ ಮಾರುತಿ ವ್ಯಾನಿನಲ್ಲಿ ಹತ್ತಿಸಿಕೊಂಡು, ದಾರಿ ತುಂಬ ಅವರದ್ದೇ ಆದ ಸ್ಟೈಲಿನಲ್ಲಿ ಜೋಕ್ ಹೊಡೆಯುತ್ತ, ನಮ್ಮ ಗಮ್ಯಕ್ಕೆ ನಮ್ಮನ್ನು ಮುಟ್ಟಿಸೋ ಮಂದಿ. ಭಾಳ ಆತ್ಮೀಯರು. ಅವತ್ತು ಸಹಿತ ಹಾಂಗೇ ಆತು. ಅವರು ಇಷ್ಟು ಮಸ್ತಾಗಿ ಕರಕೊಂಡು ಹೋಗ್ತೇನಿ ಅನ್ನಲಿಕತ್ತಾಗ ಎಲ್ಲಿ ಬಸ್ ಗಿಸ್ ಹಚ್ಚಿ ಅಂತ ಹೇಳಿ ಅವರ ಜೋಡಿನೇ ಹೋದ್ವಿ. ಮಲ್ಲಣ್ಣ ತಮ್ಮ ಅವ್ವ ಉರ್ಫ್ ಸವದತ್ತಿ ಅಜ್ಜಿ ಕರಕೊಂಡು ಹುಬ್ಬಳ್ಳಿಯ ಪಾಟೀಲ ಪುಟ್ಟಪ್ಪ (ಪಾಪು) ಅವರ ಮನೆಗೆ ಹೊರಟಿದ್ದರು. ಸವದತ್ತಿ ಕುಟುಂಬ, ಪಾಪು ಕುಟುಂಬ ಭಾಳ ಕ್ಲೋಸ್ ಅಂತ. ನಿಮ್ಮ ಕೆಲಸ ಮುಗಿದ ಮ್ಯಾಲೆ ಕೆನರಾ ಹೋಟೆಲ್ ಮುಂದಿಂದ ಒಂದು ಫೋನ್ ಮಾಡ್ರೀ. ಬಂದು ಕರಕೊಂಡು ಹೋಗ್ತೇನಿ. ಎಲ್ಲಾ ಕೂಡೆ ವಾಪಸ್ ಹೋಗೋಣ, ಅಂತ ಹೇಳಿದ್ದರು. ರೌಂಡ್ ಟ್ರಿಪ್ ಅವರೇ sponsor ಮಾಡಿದಂಗೆ. ಆವಾಗ ಮಳಿ ಬ್ಯಾರೆ ಶುರು ಆಗಿತ್ತು. ಬೆಚ್ಚಗೆ ಕಾರೊಳಗೆ ಹೋಗೋದೇ ಮಸ್ತ. ಕೆಟ್ಟ ಕಿಚಿ ಪಿಚಿ ರಾಡಿಯೊಳಗ ಎಲ್ಲಿ ಬಸ್ಸು, ಎಲ್ಲಿ ಆಟೋ? ಜೈ ಮಲ್ಲಣ್ಣ!
ನಮ್ಮ ಕೆಲಸ ಮುಗಿತು ಸುಮಾರು ನಾಕು ಗಂಟೆ ಹೊತ್ತಿಗೆ. NH-4 ಮೇಲೆ ಇರುವ ಕೆನರಾ ಹೋಟೆಲ್ಲಿಗೆ ಬಂದು, ಚಹಾ ಪಹಾ ಕುಡಿದು, ಬಾಜೂ ಇದ್ದ ಫೋನ್ ಬೂತಿನಿಂದ, ಮಲ್ಲಣ್ಣ ಕೊಟ್ಟಿದ್ದ ನಂಬರಿಗೆ ಫೋನ್ ಹಚ್ಚಿ ತಂದೆಯವರ ಕೈಗೆ ಕೊಟ್ಟೆ. ನಮ್ಮ ಕೆಲಸ ಎಲ್ಲ ಮುಗಿದದ. ನೀವು ಯಾವಾಗ ಅಂತ ಹೇಳಿ ಬಂದು ನಮ್ಮನ್ನ ಕರಕೊಂಡು ಹೋಗ್ರೀ. ಗಡಿಬಿಡಿ ಇಲ್ಲ, ಅಂತ ಹೇಳಿ ಇಟ್ಟಿವಿ. ಮಸ್ತ ಜಿಟಿ ಜಿಟಿ ಮಳಿ ನೋಡಿಕೋತ್ತ ನಿಂತಿವಿ. ನಾ ಒಂದು ಜರ್ದಾ ಪಾನ್ ಹೆಟ್ಟಿದೆ. ಮಳಿಗಾಲದಾಗ ಥಂಡಿ ಒಳಗ ಜರ್ದಾ ಪಾನ್ ಮೆಲ್ಲೋದೇ ದೊಡ್ಡ ಸುಖ.
ಸ್ವಲ್ಪ ಹೊತ್ತಿನ್ಯಾಗೇ ಮಲ್ಲಣ್ಣ ತಮ್ಮ ಬಿಳೆ ಮಾರುತಿ ವ್ಯಾನ ತೊಗೊಂಡು ಬರ್ರ ಅಂತ ಬಂದೇ ಬಿಟ್ಟರು. ಅವರು ಮಾಡೋದೆಲ್ಲಾ ಒಂದು ಹೀರೋ ಸ್ಟೈಲಿನಲ್ಲಿಯೇ. ಚಪಾತಿ ಹಿಟ್ಟು ನಾದೋವಾಗ ಹಿಟ್ಟಿನ ಮ್ಯಾಲೆ ಕೈ ರೌಂಡ್ ರೌಂಡ್ ಆಡಿಸಿದಂತೆ ಸ್ಟಿಯರಿಂಗ್ ವೀಲ್ ನಾದಿದಂತೆ ಡ್ರೈವ್ ಮಾಡೋದು ಅವರ ಸ್ಟೈಲ್. ಬಂದು ಗಕ್ಕನೆ ಬ್ರೇಕ್ ಹಾಕಿದರು. ನಾವು ಅವರ ವ್ಯಾನಿನ ಹತ್ತಿರ ಹೋದ್ವಿ. ಹನಿ ಹನಿ ಮಳಿ.
ಡ್ರೈವರ್ ಬಾಜೂಕ ಕೂಡೋದು ಒಂದು ದೊಡ್ಡ privilege. ಆ ಸೀಟು ಖಾಲಿ ಇತ್ತು. ಮಲ್ಲಣ್ಣನ ಅವ್ವ ಹಿಂದ ಕೂತಿದ್ದರು. ನಮ್ಮ ತಂದೆಯವರು, ನಮಸ್ಕಾರ್ರೀ, ನಮಸ್ಕಾರ್ರೀ, ಅನಕೋತ್ತ ಹಿಂದ ಹೋಗಿ ಕೂತರು. ನಾ ಮಲ್ಲಣ್ಣನಿಗೆ ಒಂದು ಸಲ್ಯೂಟ್ ಕೊಟ್ಟು, ಅಜ್ಜಿಗೆ ನಮಸ್ಕಾರ ಗೊಣಗಿ, ಖುಷಿಂದ ಡ್ರೈವರ್ ಬಾಜೂ ಸೀಟಿನ್ಯಾಗ ಕೂತು, ಥ್ಯಾಂಕ್ಸ್ ರೀ! ಅನ್ನೋ ಲುಕ್ ಮಲ್ಲಣ್ಣನಿಗೆ ಕೊಟ್ಟೆ. ವೆಲ್ಕಮ್! ಯು ಆರ್ ವೆಲ್ಕಮ್! ಅನ್ನೋ ಲುಕ್ ಮಲ್ಲಣ್ಣ ಕೊಟ್ಟರು. ವ್ಯಾನಿನ accelerator ರೊಂಯ್ ರೊಂಯ್ ಅಂತ ಒತ್ತಿ ರೈಟ್ ರೈಟ್ ಅನ್ನೋ ರೀತಿಯಲ್ಲಿ ಸಿಗ್ನಲ್ ಕೊಟ್ಟರು ಸವದತ್ತಿ ಮಲ್ಲಣ್ಣ. ಅವರ ಮಾರುತಿ ಓಮ್ನಿ ವ್ಯಾನಿಗೆ ಅವರೇ ಡ್ರೈವರ್, ಕಂಡಕ್ಟರ್ ಎಲ್ಲ.
ಏ ಹೀರೋ! ಅಂದ್ರು ಮಲ್ಲಣ್ಣ. ಕೈ ತಟ್ಟಿ ಅಂದ್ರು. ಏನರೆ ತಟ್ಟದೇ ಅವರು ಮಾತಾಡೋದೇ ಇಲ್ಲ.
ಏನ್ರೀ? ಅಂತ ಕೇಳಿದೆ. ಅವರು ನನ್ನ ಕರೆಯೋದೇ ಹಾಗೆ. ಹೀರೋ. ಹತ್ತು ವರ್ಷದಿಂದ ಪರಿಚಯವಾದ ಮಲ್ಲಣ್ಣ ಮೈಲು ದೂರದಲ್ಲಿ ಕಂಡರೂ ಹೀರೋ ಅಂತ ಒದರೇ ಬಿಡ್ತಿದ್ದರು.
ಒಂದು ಚಿಗರಿ ಸಿಕ್ಕೈತಂತ. ಹೋಗಿ ತರೋಣೇನೋ ಹೀರೋ? ಅಂತ ಕೇಳಿದರು ಮಲ್ಲಣ್ಣ.
ಅವರ ಮಾತೇ ಹಾಗೆ. ಒಂದೇ ಹೊಡೆತಕ್ಕೆ ತಿಳಿಯೋದೇ ಇಲ್ಲ.
ಏನ್ರೀ...? ಅಂತ ಕೇಳಿದೆ.
ಚಿಗರಿ, ಸಿಕ್ಕೈತಿ, ತರೋಣೇನು, ಒಂದಕ್ಕೊಂದು ಸೇರಿಸಿದರೂ ಏನು ಅಂತ ಅರ್ಥ ಆಗಲಿಲ್ಲ.
ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಲ್ಲಣ್ಣನ ತಾಯಿ ಉರ್ಫ್ ಸವದತ್ತಿ ಅಜ್ಜಿ ಶಂಖಾ ಹೊಡೆದರು.
ಮಲ್ಲಣ್ಣ! ಏ ಮಲ್ಲಣ್ಣ! ಸುಮ್ಮ ಕುಂದ್ರೋ. ಅದೇನು ಚಿಗರಿ ಹುಚ್ಚ ಹಿಡದೈತಿ ನಿನಗ? ಎಲ್ಲಾ ಮುಗಿಸಿ ಈಗ ಮನಿಗೆ ಚಿಗರಿ ಒಂದು ತರವನಾ? ಹಾಂ? ಅಂತ ಅಂದು ಮಲ್ಲಣ್ಣ ಏನೋ ಹೊಸ ಹುಚ್ಚಾಟ ಮಾಡಲು ರೆಡಿ ಆಗಿದ್ದಾರೆ ಅನ್ನೋ ಸೂಚನೆ ಕೊಟ್ಟರು.
ನೀವಾರೇ ಒಂದೀಟ ಹೇಳ್ರೀ ಸರ್ರಾ, ಅನ್ನೋ ರೀತಿಯಲ್ಲಿ ಅವರ ಪಕ್ಕ ಕೂತಿದ್ದ ನಮ್ಮ ತಂದೆಯವರ ಕಡೆ ನೋಡಿದರು. ತಂದೆಯವರು ಏನಂದಾರು? ಮಾತಿಗೊಮ್ಮೆ, ಸರ್ರಾ, ಸರ್ರಾ, ಅಂತ ಅನಕೋತ್ತ, ನಮಸ್ಕಾರ ಹೊಡ್ಕೋತ್ತ, ತಾವು ಹೋಗೋ ಕಡೆ ಎಲ್ಲ, ಬರ್ರಿ ಸರ್ರಾ, ಡ್ರಾಪ್ ಕೊಡತೇನಿ, ಯಾವಾಗ ಬಂದು ವಾಪಸ್ ಕರ್ಕೊಂಡು ಹೋಗ್ಲೀ? ಅಂತ ಬಹಳ ಪ್ರೀತಿಯಿಂದ ಕೇಳುತ್ತ ಒಂದು ತರಹದ ಪ್ರೀತಿಯ ಶಿಷ್ಯ ಈ ಮಲ್ಲಣ್ಣ ನಮ್ಮ ತಂದೆಯವರಿಗೆ. ಮಲ್ಲಣ್ಣನ ಇತರೆ ಹುಚ್ಚಾಟ ನೋಡಿದ್ದರೂ ಈ ಸರದ ಚಿಗರಿ ಹುಚ್ಚಾಟ ಅಂದ್ರ ಏನಂತ ತಂದೆಯವರಿಗೂ ತಿಳಿದಾಂಗ ಇರಲಿಲ್ಲ ಬಿಡ್ರೀ. ಸವದತ್ತಿ ಅಜ್ಜಿ ಉರ್ಫ್ ಮಲ್ಲಣ್ಣನ ತಾಯಿ ಕಡೆ ನೋಡಿ, ಮಾಡ್ಲೀ ಬಿಡ್ರೀ ಮಲ್ಲಣ್ಣ ಅವರ ಹುಚ್ಚಾಟ, ಅಂತ ದೇಶಾವರಿ ನಗೆ ನಕ್ಕರು. ಶಿಷ್ಯರು ಹತೋಟಿಗೆ ಬರದಿದ್ದಾಗ ಮಾಸ್ತರ್ ಮಂದಿ ಮಾಡೋದೇ ಅಷ್ಟು.
ಇಷ್ಟೆಲ್ಲ ಮಾತುಕತಿ ಆದರೂ, ನನಗ ಈ ಸವದತ್ತಿ ಮಲ್ಲಣ್ಣ ಮೊದಲು ಹೇಳಿದ, ಚಿಗರಿ ಸಿಕ್ಕೈತಿ, ಹೋಗಿ ತರೋಣ, ಅಂದ್ರ ಏನು? ಅಂತನೇ ತಿಳಿದೇ ಸುಮ್ಮ ಕೂತಿದ್ದೆ.
ಏ! ಹೀರೋ! ಅಂತ ಮತ್ತ ಅಂದ್ರು ಮಲ್ಲಣ್ಣ.
ಚಿಗಿರಿಯೋ ಮಾರಾಯ! ಚಿಗರಿ ಮರಿ! ಜಿಂಕಿ ಮರಿ! ಸಿಕ್ಕೈತಿ. ಅಲ್ಲೆ ಗೌಡರ ಮನಿಯಾಗ ಬಂದು ಕುಂತೈತಿ. ಹೋಗ್ತ ತೊಗೊಂಡು ಹೋಗೋಣ? ಹಾಂ? ಅಂದಾಗ ಈ ಮಲ್ಲಣ್ಣ ಮಾತಾಡುತ್ತಿದ್ದುದು ಜಿಂಕೆ ಮರಿ ಬಗ್ಗೆ ಅಂತ ತಿಳೀತು.
ಧಾರವಾಡ ಪ್ರಾಣಿ ಸಂಗ್ರಹಾಲಯದಲ್ಲಿ ಭರಪೂರ ಚಿಗರೆಗಳಿದ್ದವು. ಅದನ್ನು ಬಿಟ್ಟು ಜಿಂಕೆ ನೋಡಿದ್ದು ಯಾವದೋ ಮಠದಲ್ಲಿ ಸ್ವಾಮಿಗಳ ಬಳಿ ಅಂತ ನೆನಪು. ಅದು ಬಿಟ್ಟರೆ ಚಿಗರೆ ನೋಡಿದ್ದೇ ಇಲ್ಲ. ಹಾಂಗಿದ್ದಾಗ ಈ ಮಲ್ಲಣ್ಣ ಅನ್ನೋ ನಮ್ಮ neighbour ಎಲ್ಲೋ ಹೋಗಿ ಚಿಗರಿ ಮರಿ ತರೋಣ ಅನ್ನುತ್ತಿದ್ದಾರೆ. ಏ, ಬ್ಯಾಡ್ರೀ. ನಾ ಬರಂಗಿಲ್ಲರಿ, ಅನ್ನಲಿಕ್ಕೆ ನಮಗೇನು ಹುಚ್ಚೆ? ಹುಚ್ಚಾಟ ಮಾಡುವದರಲ್ಲಿ ಮಲ್ಲಣ್ಣನೇ ನಮಗೆ ಹೀರೋ. ಆಗ ತಾನೇ ಪಿಯೂಸಿ ಮುಗಿಸಿ ಪಿಲಾನಿ ಇಂಜಿನಿಯರಿಂಗ್ ಕಾಲೇಜ್ ಸೇರಲು ಇನ್ನು ಎರಡೇ ವಾರವಿತ್ತು. ಕಳೆದ ಎರಡು ವರ್ಷಗಳಲ್ಲಿ ಸವದತ್ತಿ ಮಲ್ಲಣ್ಣ ಭಾಳ ಕ್ಲೋಸ್ ಆಗಿದ್ದರು. Work hard. Play even harder - ಅನ್ನೋದನ್ನ ಅವರಿಂದ ನೋಡಿ ಕಲಿಯೋ ಹಾಗಿತ್ತು. ಅಷ್ಟು ದಿಲ್ದಾರ ಆದ್ಮಿ ಆವರು. ಕೆಲಸ ಕವಿವಿಯಲ್ಲಿ ಲೈಬ್ರರಿಯನ್ ಅಂತ ಹೇಳಿ. ಅದನ್ನ ಬಿಟ್ಟು ಹಲವು ಕಾರೋಬಾರು ಅವರದು. ಮಾಡದ ಬಿಸಿನೆಸ್ಸು ಇಲ್ಲ. ಲೇಬರ್ ಗುತ್ತಿಗೆ ಅವರ ಸೈಡ್ ಬಿಸಿನೆಸ್ಸ್. ನ್ಯಾಯವಾಗಿ ದುಡಿದೇ ಚಮಕ್ ಚಮಕ್ ಲೈಫ್ ಸ್ಟೈಲ್ ಎಂಜಾಯ್ ಮಾಡೋ ದೌಲತ್ತು ಅವರದ್ದು. ಅದನ್ನೇ ಬೆರಗುಗಣ್ಣಿನಿಂದ ನೋಡಿ, ಲೈಫ್ ಎಂಜಾಯ್ ಮಾಡಿದರೆ ಮಲ್ಲಣ್ಣನ ಹಾಗೆ ಎಂಜಾಯ್ ಮಾಡಬೇಕು ಅನ್ನಿಸುವ ಹಾಗಿದ್ದರು ಅವರು. ಧಾರವಾಡದಲ್ಲಿ ನಮ್ಮ ನೆರೆಮನೆಯವರು. ಅದಕ್ಕಿಂತ ತುಂಬಾ ಆತ್ಮೀಯರು.
ನಡ್ರೀ ಹೋಗೋಣ. ಚಿಗರಿ ಸಿಕ್ಕದ ಅಂದ್ರ ಯಾಕ ಬ್ಯಾಡ? ಅಂದೆ. ಫುಲ್ excitement. ಜೀವಂತ ಚಿಗರಿ ಮರಿ ತರೋದು. ಯಾರಿಗದ ಆ ಭಾಗ್ಯ?
ಸವದತ್ತಿ ಅಜ್ಜಿ ಅವರ ಮಗ ಮಲ್ಲಣ್ಣನಿಗೆ ಪ್ರೀತಿಯಿಂದನೇ ಬೈಯುತ್ತಿದ್ದರೂ, ಅದನ್ನು ಕೇರ್ ಮಾಡದ ಮಲ್ಲಣ್ಣ ಗಾಡಿ ತಿರುಗಿಸಿದ್ದು ಹಳೆ ಧಾರವಾಡದ ಯಾವದೋ ಮೂಲೆಯ ಕಡೆ. ಸುಮಾರು ಸಂದಿ ಗೊಂದಿ ತಿರುಗಿದ ಮೇಲೆ ಗಾಡಿ ಹೋಗಿ ನಿಂತಿದ್ದು ಒಂದು ದೊಡ್ಡ ಮನೆಯ ಮುಂದೆ. ಹಳೆ ಕಾಲದ್ದು.
ಯಾರೋ ದೊಡ್ಡ ಪೇಟ ಸುತ್ತಿಕೊಂಡಿದ್ದ ಗೌಡರು ಬಂದು, ಬರ್ರಿ, ಬರ್ರಿ ಅಂತ ಬಹಳ ಗೌರವದಿಂದ ಎಲ್ಲರನ್ನೂ ಒಳಗೆ ಕರೆದುಕೊಂಡು ಹೋದರು. ಭರ್ಜರಿ ಇತ್ತು ಮನೆ.
ಎಲ್ಲೈತ್ರೀ ಚಿಗರಿ ಮರಿ? ಅಂತ ಮಲ್ಲಣ್ಣ ತಮ್ಮ ದೊಡ್ಡ ದನಿಯಲ್ಲಿ ಕೇಳಿದರು. ಒಳ್ಳೆ booming ದನಿ ಅವರದ್ದು. ಆರಡಿ ಮೀರಿದ್ದ ದೈತ್ಯಾಕಾರದ ಮಲ್ಲಣ್ಣ ಒಂದು ಆವಾಜ್ ಹಾಕಿದರೆ ಸುಮಾರಿನಂತವರು ಬೆಚ್ಚಿ ಬೀಳಬೇಕು. ಅದು ಅವರ personality.
ಬರ್ರಿ, ಅಂತ ಗೌಡರು ಮಲ್ಲಣ್ಣನನ್ನು ಕರೆದೊಯ್ದದ್ದು ಅವರ ಆಕಳು, ಎಮ್ಮೆ ಕಟ್ಟಿದ್ದ ಕೊಟ್ಟಿಗೆಗೆ. ನಾನೂ ಹಿಂದೆ ಹೋದೆ.
ಹಳೆ ಧಾರವಾಡದಾಗಿನ ಹಳೆ ಮನಿನೇ ಕತ್ತಲಿ ಕತ್ತಲಿ ಇತ್ತು. ಇನ್ನು ದನಾ ಕಟ್ಟೋ ತಬೇಲಾ ಅಂತೂ ಕಗ್ಗತ್ತಲೆ. ಗೌಡರ ಕಡೆಯವರು ಯಾರೋ ಬಾಗಲಾ ತೆಗೆದರು. ಕರ್ರ್! ಅಂತ ಆವಾಜ ಮಾಡಿಕೋತ್ತ ಬಾಗಿಲಾ ತೆಗಿತು. ಒಳಗ ಕಟ್ಟಿದ್ದ ಒಂದಿಷ್ಟು ದನಾ, ಎಮ್ಮಿ, ಎತ್ತು, ಸಣ್ಣ ಕರುಗಳು ಎಲ್ಲ ಯಾರು ಬಂದ್ರಪಾ? ಅಂತ ತಿರುಗಿ ಲುಕ್ ಕೊಟ್ಟವು. ಸುಮಾರು ದೊಡ್ಡದಿತ್ತು ಕೊಟ್ಟಿಗೆ.
ಬರ್ರಿ, ಬರ್ರಿ ಅಂತ ದನಗಳ ಮಧ್ಯೆ ಕರಕೊಂಡು ಹೋದರು ಗೌಡರು ಮತ್ತ ಅವರ ಆಳು ಮಂದಿ.
ಒಂದು ಹತ್ತು ಹೆಜ್ಜೆ ಹಾಕಿದ ಮೇಲೆ ಮೂಲೆಯಲ್ಲಿ ಸುಮಾರು ಒಂದು ಸಣ್ಣ ಕರುವಿನ ಸೈಜಿನ ಪ್ರಾಣಿಯನ್ನು ಬೇರೇನೇ ಕಟ್ಟಿ ಹಾಕಿದ್ದರು. ಕತ್ತಲಿದ್ದರಿಂದ ಸರಿ ಕಾಣುತ್ತಿರಲಿಲ್ಲ. ಗೌಡರು ಆ ಕಡೆ ಇರೋ ಕಿಡಕಿ ತೆಗೆಯಲು ಹೇಳಿದರು. ಆವಾಗ ಕಂಡಿತು!
ಚಿಗರೆ ಮರಿ!!!! ಚುಕ್ಕೆಗಳಿದ್ದ ಜಿಂಕೆ ಮರಿ!!!
so cute! so cute! ಅಂತ ಈಗ ಹಂದಿಮರಿಗಳಂತಹ ಮಂದಿಮರಿಗಳಿಗೆಲ್ಲ ಹೇಳಿ ಹೇಳಿ ಅದರ ಅರ್ಥವೇ ಹೋಗಿ ಬಿಟ್ಟಿದೆ. ಜೀವನದಾಗ ಖರೆ ಅಂದ್ರೂ, so cute, ಅಂತ ಏನರೆ ಅನ್ನಿಸಿದ್ದರೆ ಆ ಚಿಗರೆ ಮರಿ ಒಂದೇ.
ಪಾಪ!!! ಸಣ್ಣ ಮರಿ. ಆಕಳ ಕರುವಿನ ಸೈಜಿಗೆ ಇತ್ತು. ಇನ್ನೂ ಸ್ವಲ್ಪ ಸಣ್ಣ ಸೈಜೇ ಅಂತ ಹೇಳಬಹುದು.
ಇಷ್ಟೆಲ್ಲ ಜನ ನೋಡಿ ಬೆದರಿತು. ಬೆದರಿದ ಹುಲ್ಲೆ ಅನ್ನೋ literary expression ಅಂದ್ರ ಏನು ಅಂತ ತಿಳೀತು. ಇಷ್ಟೆಲ್ಲ ಮಂದಿ ನೋಡಿ ಚಿಗರಿ ಮರಿ survival instinct ಜಾಗೃತ ಆಗೇ ಆಗಿರ್ತದ. ಹೆದರಿ ಬೆದರಿ ಸ್ವಲ್ಪ ಜಿಗಿದಾಡಿತು. ಸುಸ್ತಾಗಿ ಥರ ಥರ ನಡುಗುತ್ತ, ಪಾಪದ ಕಣ್ಣುಗಳಿಂದ ನೋಡುತ್ತ ನಿಂತು ಬಿಟ್ಟಿತು. ಪಾಪ! ಚಿಗರಿ ಮರಿ!
ಅದು ಏನು ಆಗಿತ್ತು ಅಂದ್ರೆ, ಸ್ವಲ್ಪ ದಿನಗಳ ಹಿಂದೆ ಈ ಚಿಗರೆ ಮರಿ, ಗೌಡರ ಹೊಲದಲ್ಲಿ ಸಿಕ್ಕಿತ್ತಂತೆ. ಮಳೆ ಬಿದ್ದು, ಕರಿ ಮಣ್ಣು ಒಳ್ಳೆ ಫೆವಿಕಾಲ್ ಹಾಂಗೆ ಅಂಟಂಟಾಗಿತ್ತು. ಆ ಭಾಗದಲ್ಲಿ ಇರುವ ಚಿಗರೆಗಳ ಹಿಂಡು ಒಂದು ರಾತ್ರಿ ಅಲ್ಲಿ ಬಂದಿವೆ. ಹೋಗುವ ಸಮಯದಲ್ಲಿ, ನೆಗೆದು ಓಡುತ್ತಿರುವಾಗ, ಈ ಚಿಗರೆ ಮರಿ ಆ ಜಿಗುಟು ಮಣ್ಣಿನಲ್ಲಿ ಸಿಕ್ಕಿಕೊಂಡು ಬಿಟ್ಟಿದೆ. ಹೊರ ಬರಲು ಆಗೇ ಇಲ್ಲ. ಉಳಿದ ಜಿಂಕೆಗಳು ಅದೇನು ಪ್ರಾಣಭೀತಿಯಿಂದ ಓಡಿ ಹೋಗುತ್ತಿದ್ದವೋ ಏನೋ? ಈ ಮರಿಯನ್ನು ಹಾಗೇ ಬಿಟ್ಟು ಹೋಗಿಬಿಟ್ಟಿವೆ. ಪಾಪ! ಹೆಚ್ಚೆಚ್ಚ ಅಂದ್ರೆ ಒಂದು ತಿಂಗಳ ಮರಿ ಅಷ್ಟೇ. ಅದರಕಿಂತ ದೊಡ್ಡದು ಇರಲು ಸಾಧ್ಯವೇ ಇಲ್ಲ ಅಂತ ಗೌಡರು ಹೇಳಿದರು. ಮರುದಿವಸ ಗೌಡರ ಕಣ್ಣಿಗೆ ಬಿದ್ದಿದೆ ಈ ಚಿಗರೆ ಮರಿ. ಏನು ಮಾಡಬೇಕು? ಅಂತ ವಿಚಾರ ಮಾಡಿದ್ದಾರೆ. ಅಲ್ಲೇ ಬಿಟ್ಟರೆ ನಾಯಿ ನರಿಗಳ ಬಾಯಿಗೆ ಸಿಕ್ಕು ಹರೋಹರ ಆಗಲಿಕ್ಕೆ ಜಾಸ್ತಿ ಹೊತ್ತು ಬೇಕಿಲ್ಲ. ರಾತ್ರಿ ಸಿಕ್ಕಿಬಿದ್ದಿದ್ದರಿಂದ ಹೇಗೋ ಬೆಳತನಕ ಬಚಾವ್ ಆಗಿದೆ. ನಾಯಿ ನರಿ ಇಲ್ಲ ಅಂದ್ರೆ ಕಾಗೆ ಹದ್ದುಗಳಿಗೆ ಕುಕ್ಕಿ ಕುಕ್ಕಿ ತಿನ್ನಲು ಪ್ಲೇಟಿನಲ್ಲಿ ಇಟ್ಟುಕೊಟ್ಟಂತೆ ಇದೆ ಅದರ ಹಾಲತ್. ಇನ್ನೊಂದು ಅಂದ್ರೆ ಅರಣ್ಯ ಇಲಾಖೆಯವರಿಗೆ ತಿಳಿಸುವದು. ಅವರು ಯಾವಾಗ ಬರುತ್ತಾರೋ? ಅಲ್ಲಿ ತನಕಾ ಗದ್ದೆಯಲ್ಲಿ ಆ ಚಿಗರೆ ಮರಿ ಕಾದು ಕೂಡಲು ಗೌಡರಿಗೆ ಬೇರೆ ಕೆಲಸ ಇದೆ. ಹಾಗಾಗಿ ಆಳುಗಳಿಗೆ ಹೇಳಿ, ಹಳ್ಳಿಯಲ್ಲಿದ್ದ ತಮ್ಮ ಮನೆಗೆ ಆ ಮರಿಯನ್ನು ಸಾಗಿಸಿದ್ದರು. ಅದೆಲ್ಲಿ ಮಲ್ಲಣ್ಣನಿಗೆ ಆ ಸುದ್ದಿ ಗೊತ್ತಾತೋ ಅಥವಾ ಗೌಡರಿಗೆ ಮಲ್ಲಣ್ಣನ ನೆನಪಾತೋ, ಒಟ್ಟಿನಲ್ಲಿ ಮಲ್ಲಣ್ಣನಿಗೆ ಬುಲಾವಾ ಹೋಗಿದೆ. ಚಿಗರಿ ಸಿಕ್ಕೈತಿ. ಬಂದು ತೊಗೊಂಡು ಹೋಗ್ರೀ. ಅದಕ್ಕೇ ನಾವು ಈಗ ಬಂದು ಈ ಚಿಗರಿ ಮರಿ ಮುಂದೆ ನಿಂತು ನೋಡುತ್ತಿದ್ದೇವೆ. ಮಲ್ಲಣ್ಣ network ಅಂದ್ರೆ ಆ ಮಟ್ಟದ್ದು.
ಇಷ್ಟೆಲ್ಲ ಸುದ್ದಿ ಹೇಳಿ, ಕೇಳಿ ಆಗುವಷ್ಟರಲ್ಲಿ ಚಿಗರಿ ಮರಿಯ tension ಕಮ್ಮಿ ಆಗಿ, ಅದು ಶಾಂತ ಆಗಿ, ಎಲ್ಲರನ್ನೂ ತನ್ನ ಚಿಗರೆ ಕಣ್ಣು (ಹರಿಣಾಕ್ಷಿ) ಇಷ್ಟಗಲ ಬಿಟ್ಟುಕೊಂಡು ಪಿಳಿ ಪಿಳಿ ನೋಡುತ್ತ ನಿಂತಿತ್ತು. so cute! ಅದನ್ನು ತಂದಾಗಿಂದ ಅದರ ದೇಖರೇಕಿ ಮಾಡಿದ್ದ ಗೌಡರ ಆಳು ಹತ್ತಿರ ಹೋದರೆ, ಅವನ ಕೈ ಮೈ ನೆಕ್ಕಿ ಬಿಡ್ತು. ಪಾಪ! ಈಗ so sweet!
ಮಲ್ಲಣ್ಣ ಡಿಸೈಡ್ ಮಾಡೇ ಬಿಟ್ಟರು. ಈ ಚಿಗರಿ ಮರಿ ಮನಿಗೆ ತೊಗೊಂಡು ಹೋಗಿ ಪೆಟ್ ಅಂತ ಇಟ್ಟುಕೊಳ್ಳಲಿಕ್ಕೇ ಬೇಕು. ಸಾಧಾರಣ ಮಂದಿ ಯಾರೂ ಕಾಡು ಪ್ರಾಣಿಯನ್ನ ಮನಿಯೊಳಗೆ ಪೆಟ್ ಅಂತ ಇಟ್ಟುಕೊಳ್ಳೋ ವಿಚಾರ ಮಾಡೋದಿಲ್ಲ. ಆದ್ರ ಮಲ್ಲಣ್ಣ ಸಾಮಾನ್ಯ ಅಲ್ಲ. ಕಾಡು ಪ್ರಾಣಿ ಹಿಡಿದು ಮನಿಯೊಳಗ ಇಟ್ಟುಕೊಂಡಿದ್ದು ಅರಣ್ಯ ಇಲಾಖೆಯವರಿಗೆ ಗೊತ್ತಾತು ಅಂದ್ರ ಬಂದು ಕೇಸ್ ಹಾಕಿ, ರೊಕ್ಕಾ ತಿಂದು, ಪ್ರಾಣಿನೂ ತೊಗೊಂಡು ಹೋಗ್ತಾರ. ಮಲ್ಲಣ್ಣ ಬಿಡ್ರೀ. ಪೋಲಿಸರೂ, ಪೋದ್ದಾರರೂ, ಫಾರೆಸ್ಟ್ ಎಲ್ಲ ಅವರ ದೋಸ್ತರೇ. ಮಠದಾಗ ಚಿಗರಿ ಇಟಗೋಳ್ಳಾಕ ಕೊಡ್ತೀರಿ. ನಾ ಚಿಗರಿ ಸಾಕಿಕೊಂಡ್ರ ಏನ್ರೀ ನಿಮಗ? ಹಾಂ? ಅಂತ ದೊಡ್ಡ ಆವಾಜ್ ಹಾಕಿ, ಅವರಿಗೆಲ್ಲ ಕೊಡುವ ಕಾಣಿಕೆ ಕೊಟ್ಟು, ಸಂಜೆಯ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಿ, ಇಂತದ್ದನ್ನೆಲ್ಲ ದಕ್ಕಿಸಿಕೊಳ್ಳುವದು ಅವರಿಗೆ ಯಾರೂ ಹೇಳಿ ಕೊಡಬೇಕಾಗಿಯೇ ಇರಲಿಲ್ಲ. ಆ ಲೆವೆಲ್ಲಿಗೆ ಅವರಿಗೆ ತಾಕತ್ತು ಇತ್ತು ಬಿಡ್ರೀ.
ಕಾಡು ಚಿಗರಿ ತಂದು ಮನಿಯೊಳಗ ಸಾಕೋ ವಿಚಾರ ಮಾಡಿದರು ಅಂದ್ರ ಇದೆಂತ ಹುಚ್ಚಾಟದ ವಿಚಾರ ಅಂತ ನಿಮಗ ಅನ್ನಿಸಿಬಹುದು. ನಮ್ಮ ಪ್ರೀತಿಯ ಮಲ್ಲಣ್ಣನ ವಿಚಿತ್ರ ಹುಚ್ಚಾಟಗಳ ಬಗ್ಗೆ ಬರೆದರೆ ಅದೇ ಒಂದು ದೊಡ್ಡ ಪುಸ್ತಕ ಆಗಿಬಿಡ್ತದ. ಸಂಕ್ಷಿಪ್ತವಾಗಿ ಹೇಳತೇನಿ ಅವರ ಕೆಲೊ ಹುಚ್ಚಾಟಗಳನ್ನ. ತಿಳಿದಿದ್ದು ನೆನಪಿದ್ದಿದ್ದು ಮಾತ್ರ. ಇದರ ಹತ್ತು ಪಟ್ಟು ಊಹಾ ಮಾಡಿಕೊಳ್ಳಿರಿ. ಅಂದ್ರ ನಿಮಗ ಐಡಿಯಾ ಬರ್ತದ ಸವದತ್ತಿ ಮಲ್ಲಣ್ಣ ಅನ್ನೋ ದಿಲ್ದಾರ್ ಆದ್ಮಿ ಬಗ್ಗೆ.
ಆಗ ಅವರ ಹತ್ತು ವರ್ಷದ ಮಗನಿಗೆ ಸುಮಾರು ಆವ ಎಂಟು ವರ್ಷದವ ಇದ್ದಾಗಿಂದ ಮಾರುತಿ ವ್ಯಾನ್ ಹೊಡಿಲಿಕ್ಕೆ ಕಲಿಸಿ ಬಿಟ್ಟಿದ್ದರು! ಮಸ್ತ ಹೊಡಿತಿದ್ದ. ಬಾಜು ಇವರು ಕೂತರು ಅಂದ್ರ ಅವರ ಮಗ ಆರಾಮ ಅಂದ್ರ ಆರಾಮ ಎಂತಾ ಟ್ರಾಫಿಕ್ ಇದ್ದರೂ ಗಾಡಿ ಹೊಡಿತಿದ್ದ. ಅದು ಅವರು ಅಪ್ಪ ಮಗ ಇದ್ದಾಗ ಮಾತ್ರ ಮಾಡ್ತಿದ್ದ ಹುಚ್ಚಾಟ. ಮಂದಿ ಕೂಡಿಸ್ಕೊಂಡು ಹೊಂಟಾಗ ಇವರೇ ಡ್ರೈವ್ ಮಾಡ್ತಿದ್ದರು. ಇಂತಹ ಮಗನ ಕಡೆ ಮುಂಬೈದಿಂದ ಬೆಂಗಳೂರು ವರೆಗೆ ಡ್ರೈವ್ ಮಾಡಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಒಳಗ ಒಂದು ದೇಶದ ಮಟ್ಟದ ಗಿನ್ನೆಸ್ ದಾಖಲೆ ಮಾಡಿಬಿಡಬೇಕು ಅಂತ ಹುಚ್ಚು. ಅವರ ಮಿತ್ರನೇ ಆದ ಧಾರವಾಡದ ಸಾರಿಗೆ ಆಫೀಸರ್ ಮಲ್ಲಣ್ಣನಿಗೆ ಬೈದು ಈ ಹುಚ್ಚಿಂದ ಬಿಡಿಸಬೇಕಾತು.
ನಂತರದ ಹುಚ್ಚು ಅಂದ್ರ ದಾವಣಗೆರೆ ಬೆಣ್ಣೆ ದೋಸೆ ಧಾರವಾಡಕ್ಕೆ ತರಬೇಕು ಅಂತ. ಎಲ್ಲೋ ಹೋಗಿ, ಯಾವದೋ ಬೆಣ್ಣೆ ದೋಸೆ ಅಡಿಗಿ ಭಟ್ಟನನ್ನು ಹಿಡಕೊಂಡು ಬಂದು, ಅಲ್ಲೆ ವಿದ್ಯಾಗಿರಿಯೊಳಗ, ಹೈವೇ ಮ್ಯಾಲೆ ಒಂದು ಬೆಣ್ಣೆ ದೋಸೆ ಹೋಟೆಲ್ ತೆಗೆದೇ ಬಿಟ್ಟರು. ಅದು ಏನೋ ಎಂತೋ? ಬೆಣ್ಣಿ ದ್ವಾಸಿ ತಿಂದವರು ಕೆಟ್ಟ ಮಾರಿ ಮಾಡಿಕೊಂಡು ಹೊರಗೆ ಬಂದು ಆ ಹೋಟೆಲ್ ಬರಕತ್ತಾಗಲೇ ಇಲ್ಲ. ಭಟ್ಟನ ಕಡೆ ಕೇಳಿದರೆ, ಮಾರಾಯ್ರೇ! ಈ ಬೆಣ್ಣೆಯೇ ಸರಿ ಇಲ್ಲ. ಅದಕ್ಕೆ ಜನಕ್ಕೆ ಈ ದ್ವಾಸೆ ಸೇರೋದಿಲ್ಲ ಅಂದು ಬಿಟ್ಟ. ನಿನ್ನಾಪನಾ ಭಟ್ಟಾ! ನಿನಗ ಚಂದಾಗಿ ದಾವಣಗೆರೆ ಬೆಣ್ಣಿ ದ್ವಾಸಿ ಮಾಡಾಕ ಬರಂಗಿಲ್ಲ ಅಂದ್ರ ಬೆಣ್ಣಿಗೆ ಯಾಕ ಏನೇನರೆ ಅಂತೀಲೇ ಮಂಗ್ಯಾನಿಕೆ? ಅಂತ ಭಟ್ಟನ ಬುರುಡೆಗೆ ಕೊಟ್ಟು, ಅವ ಓಡಿ ಹೋಗಿ, ಮಲ್ಲಣ್ಣನ ಬೆಣ್ಣೆ ದೋಸೆ ಹೋಟೆಲ್ ಲಗೂನೆ ಮುಚ್ಚಿತ್ತು. ಆ ಮ್ಯಾಲೆ ಬೆಣ್ಣೆ ದೋಸೆ ಹೋಟೆಲ್ ನೆಡಸಿದ್ದನ್ನ ಒಂದು ದೊಡ್ಡ ಜೋಕ್ ಮಾಡಿ, ಎಲ್ಲರ ಎದುರು ಹೇಳಿ, ತಮ್ಮನ್ನು ತಾವೇ ಜೋಕ್ ಮಾಡಿಕೊಂಡು, ದೊಡ್ಡ ಸೈಜಿನ laughing ಬುದ್ಧನ ಹಾಗೆ, ಇಡೀ ಮೈ ಗಲ ಗಲ ಅಲುಗಾಡಿಸಿ ನಕ್ಕು ಬಿಟ್ಟರು ಮಲ್ಲಣ್ಣ. ಅದು ಅವರ ದೊಡ್ಡ ಗುಣ. ಸೋಲು ಗೆಲವು ಎಲ್ಲ ಒಂದೇ. ಎಲ್ಲದರಲ್ಲೂ ಹಾಸ್ಯ ಕಂಡು ನಕ್ಕು ನಗಿಸಿಬಿಡೋದು. ದೊಡ್ಡ ಗುಣ.
ಮುಂದಿನದು ತೀರ ಇತ್ತೀಚಿನ ದಿನಗಳ ಹುಚ್ಚು. ಅದು ಏನು ತಲಿಯಾಗ ಬಂತೋ ಏನೋ! ಒಂದು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಹುಯ್ಯ ಅಂತ ಒಂದಿಷ್ಟು ಕನ್ನಡ ಪುಸ್ತಕ ಖರೀದಿ ಮಾಡಿ, ಮೊಬೈಲ್ ಲೈಬ್ರರಿ ಶುರು ಮಾಡಿಬಿಟ್ಟರು. ವಾರದ ಒಂದು ದಿವಸ ಮುಂಜಾನೆ ಎಲ್ಲ ಪುಸ್ತಕ ವ್ಯಾನಿನೊಳಗ ಹಾಕಿಕೊಂಡು ಹೋಗೋದು, ಕರ್ನಾಟಕ ಯೂನಿವರ್ಸಿಟಿ ಕ್ಯಾಂಪಸ್ಸಿನ ಕೂಟಿನಲ್ಲಿ ಒಂದು ಝಮಖಾನ ಹಾಸಿ, ಪುಸ್ತಕ ಹರಡಿಕೊಂಡು ಕೂಡೋದು. ಯಾರು ಬೇಕಾದರೂ ಬಂದು ಒಂದೋ ಎರಡೋ ಪುಸ್ತಕ ಒಯ್ಯಬಹುದು. ನೀವು ಯಾರು ಅಂತ ಮಲ್ಲಣ್ಣ ಕೇಳಂಗಿಲ್ಲ. ಮುಂದಿನ ವಾರ ಅದೇ ಟೈಮಿಗೆ ಅಲ್ಲೇ ಮಲ್ಲಣ್ಣ ಮತ್ತೆ ಬರುತ್ತಾರೆ. ಆವಾಗ ಪುಸ್ತಕ ತಿರುಗಿ ಕೊಟ್ಟು ಬೇಕಾಗಿದ್ದನ್ನ ಮತ್ತೆ ತೊಗೊಂಡು ಹೋಗಬಹುದು. ಹೆಸರು ವಿಳಾಸ ಅದೆಲ್ಲ ಮಲ್ಲಣ್ಣನಿಗೆ ಬೇಕೇ ಇಲ್ಲ. ಹೇಳಿ ಕೇಳಿ ಲೈಬ್ರರಿಯನ್ ಅವರು. ರಿಟೈರ್ ಆದ ಮ್ಯಾಲೆ ಕನ್ನಡದ ಸೇವೆ ಮಾಡಿದ್ದು ಹೀಗೆ. ಈ ತರಹ ಯಾರೂ ಲೈಬ್ರರಿ ನೆಡಸಿರಲಿಕ್ಕೆ ಇಲ್ಲ. ಅಷ್ಟು ನಂಬಿಕೆ ಜನರ ಮೇಲೆ. ಇನ್ನು ಎಲ್ಲೋ ಒಬ್ಬರೋ ಇಬ್ಬರೋ ಪುಸ್ತಕ ತೊಗೊಂಡು ಹೋಗಿ ತಂದು ಕೊಡಲಿಲ್ಲ ಅಂದ್ರೆ ಹೋಗ್ಲಿ ಬಿಡು ಅನ್ನೋ ದೊಡ್ಡ ಮನಸ್ಸು.
ಪ್ರೀತಿಯ ಹುಂಬತನಕ್ಕೆ ಮಲ್ಲಣ್ಣ ಮತ್ತೊಂದು ಹೆಸರು. ೧೯೮೬ ರಲ್ಲಿ ಶೃಂಗೇರಿ ಸ್ವಾಮಿಗಳು ಬಂದಾಗ ಅವರ ಪೂಜೆಗೆ ಬೇಕಾಗುವ ಹೂವುಗಳನ್ನು ತರುವ ಕೆಲಸ ನಮ್ಮ ತಂದೆ ಮಲ್ಲಣ್ಣನಿಗೆ ಹಚ್ಚಿದ್ದರು. ಮುಂಜಾನೆ ನಸುಕಿನಲ್ಲಿ ಒಂದು ಲಾರಿ ತುಂಬಾ ಹೂವು ತಂದು ಮಲ್ಲಣ್ಣ ಸ್ವಾಮಿಗಳ ಮುಂದೆ ಕೂತು ಬಿಟ್ಟಿದ್ದರು. ಎಲ್ಲರಿಗೂ ಘಾಬರಿ. ಏನಪಾ ಈ ಮನುಷ್ಯಾ ಸ್ವಾಮಿಗಳ ಪೂಜೆಗೆ ಹೂವು ತಂದಿದ್ದಾರೋ ಅಥವಾ ಹೂವುಗಳಲ್ಲೇ ಸ್ವಾಮಿಗಳನ್ನ ಮುಚ್ಚಿ ಹಾಕಿ ಬಿಡೋ ಪ್ಲಾನ್ ಏನರೆ ಅದ ಏನು ಇವರದ್ದು ಅಂತ? ಅದಕ್ಕೆ ಅವರಿಗೆ ರಾಮಭಕ್ತ ಹನುಮಂತ ಅಂತ ತಂದೆಯವರು ಪ್ರೀತಿಯಿಂದ ಹೆಸರು ಇಟ್ಟಿದ್ದರು. ಹನುಮಂತ ಸಂಜೀವಿನಿ ಬೇರು ತೊಗೊಂಡು ಬಾ ಅಂದ್ರ ಈಡೀ ಗುಡ್ಡಾ ಕಿತ್ತುಕೊಂಡ ಬಂದ ಲೆವೆಲ್ಲಿನಲ್ಲಿ ಮಲ್ಲಣ್ಣನ ಕೆಲಸ. ಏನ್ರೀ ಮಲ್ಲಣ್ಣ ಪೂಜಿಗೆ ಅಂದ್ರ ಎಷ್ಟು ಹೂವು ತಂದು ಬಿಟ್ಟೀರಿ? ಅಂತ ಕೇಳಿದರೆ, ನನಗೇನ ಗೊತ್ತರೀ ಸರ್ರಾ ನಿಮ್ಮ ಸ್ವಾಮಿಗಳ ಬಗ್ಗೆ? ಅದೂ ಇಬ್ಬಿಬ್ಬರು ಸ್ವಾಮಿಗಳು ಬಂದು ಕುಂತಾರ. ಪೂಜಿಗೆ ಹುವ್ವಾ ಕಮ್ಮಿ ಬೀಳಬಾರದು ನೋಡ್ರೀ. ಅದಕ್ಕೇ ಒಂದೀಟ ಜಾಸ್ತಿ ತಂದು ಬಿಟ್ಟೆರೀ, ಅಂದು ಮತ್ತೆ laughing ಬುದ್ಧನ ಗಲ ಗಲ ನಗೆ ನಕ್ಕಿದ್ದರು ಮಲ್ಲಣ್ಣ. ಸ್ವಾಮಿಗಳು ಇದ್ದ ಅಷ್ಟೂ ದಿವಸವೂ ಮುಂಜಾನೆ ಬರೋಬ್ಬರಿ ನಾಕೋ ಐದೋ ಘಂಟೆಗೆ ಹೂವಿನ ಬುಟ್ಟಿ ಹಿಡಕೊಂಡು ಹೋಗಿ ಕೂತು ಬಿಡ್ತಿದ್ದರು ಮಲ್ಲಣ್ಣ. ಅದು ಅವರ ಕಾರ್ಯನಿಷ್ಠೆಗೆ ಒಂದು ಉದಾಹರಣೆ. ಯಾವಾಗ ಮಲ್ಕೋತ್ತಿದ್ದರೋ, ಯಾವಾಗ ಎದ್ದು ಹೂವು ಹುಡಿಕಿಕೊಂಡು ಹೋಗಿ ತರ್ತಿದ್ದರೋ ಗೊತ್ತಿಲ್ಲ. ಬಂದವರು ಬ್ರಾಹ್ಮ್ಮರ ಸ್ವಾಮಿಗಳು. ಪೂಜೆಗೆ ಹೂವು ತಂದು ಕೊಟ್ಟವರು ಮಲ್ಲಣ್ಣ ಲಿಂಗಾಯಿತ. ಜಾತಿ ಪಾತಿ ಅದೆಲ್ಲ ಅವರ ಹತ್ತಿರ ಸುಳಿದಿದ್ದೇ ಇಲ್ಲ.
ಆ ಕಾಲದಲ್ಲೇ ಅವರು ಯೂರೋಪಿನ ಯಾವದೋ ಒಂದು ಲಾಟರಿ ಆಡುವದನ್ನ ಕಲಿತುಬಿಟ್ಟಿದ್ದರು. ಅದರ ಬಗ್ಗೆ ಪೂರ್ತಿ ಮಾಹಿತಿ ಹೇಗೋ ಮಾಡಿ ತೆಗೆದು ಬಿಟ್ಟಿದ್ದರು. ಹಾಕಿದ ದುಡ್ಡಿಗೆ ಲಾಸಿಲ್ಲ ಅನ್ನೋ ರೀತಿಯಲ್ಲಿ ಒಂದು ಪದ್ಧತಿ ಮಾಡಿಕೊಂಡು, ಕಮ್ಮಿ ಕಮ್ಮಿ ಅಂದ್ರೂ ಮೂವತ್ತು ಪೆರ್ಸೆಂಟ್ ಲಾಭ ಮಾಡಿಕೊಳ್ಳುತ್ತಿದ್ದರು. ನಮಗೂ ಆಡು ಅಂತ ಇವತ್ತಿಗೂ ಹೇಳುತ್ತಿರುತ್ತಾರೆ. ಅದೇನೋ ಲಾಟರಿಯಂತೆ. ದುಡ್ಡು ಲಾಸ್ ಆಗುವದೇ ಇಲ್ಲವಂತೆ. ಕೇವಲ ಕರ್ನಾಟಕ ಭಾಗ್ಯಲಕ್ಷ್ಮಿ ಲಾಟರಿ ಟಿಕೆಟ್ ತೊಗೊಂಡ ನಾವು ಅವೆಲ್ಲಗಳಿಂದ ದೂರ ಇದ್ದೇವೆ.
ಅವರ ಹೆಸರು ಮಲ್ಲಿಕಾರ್ಜುನ. ಆದರೆ ಸರ್ವರಿಗೂ ಅವರು ಮಲ್ಲಣ್ಣ. ಮಲ್ಲಿಕಾರ್ಜುನ ಅಂದ್ರ ಅವರಿಗೇ ಗೊತ್ತಾಗ್ತದೋ ಇಲ್ಲೋ ಅಷ್ಟರಮಟ್ಟಿಗೆ ಸವದತ್ತಿ ಮಲ್ಲಣ್ಣ ಅಂತೇ ಅವರು ಫೇಮಸ್. ಮಲ್ಲಣ್ಣ ನಮಗೆ ಭಾಳ ಸೇರಿದ್ದು ಅವರ ದಿಲ್ದಾರ ಲೈಫ್ ಸ್ಟೈಲಿನಿಂದ. ಆರಡಿ ಎತ್ತರದ ಆಜಾನುಬಾಹು. ದೊಡ್ಡ ಶರೀರ. ಸಣ್ಣ ಗುಡಾಣದಂತಹ ಗೌರವಯುಕ್ತ ಹೊಟ್ಟೆ. ತಲೆ ಮೇಲೆ ದೊಡ್ಡ ಕುದರೆ ಲಾಳಾಕಾರದ ಬಕ್ಕ ಬಾಲ್ಡ್ ಸ್ಪಾಟ್. ಉಳಿದ ಕಡೆ ದಟ್ಟ ಗುಂಗರು ಕೂದಲ. ಅದಕ್ಕೆ ತರೇವಾರಿ ಬಣ್ಣ. ಕೆಲವೊಮ್ಮೆ ಬಿಳೆ ಬಣ್ಣ ಕೂಡ ಹೊಡೆದುಬಿಡ್ತಾರೆ ಅಂತ ನಮ್ಮ ಜೋಕ್. ಮಸ್ತ ಶೋಕಿವಾಲ. ಮುದಕ ಅಂಕಲ್ಲುಗಳು ಹಾಕಿದಂತೆ ಮಲ್ಲಣ್ಣ ಡ್ರೆಸ್ ಹಾಕಿದ್ದು ಎಂದೂ ಇಲ್ಲವೇ ಇಲ್ಲ. ಯಾವಾಗಲೂ ಜಗ್ ಮಗ್ ಜಗ್ ಮಗ್ ಡ್ರೆಸ್. ಬಾಕಿ ಮಧ್ಯವಯಸ್ಕರೆಲ್ಲ ಹೊಟ್ಟೆ ಮೇಲೆ ಪ್ಯಾಂಟ್ ನಿಲ್ಲದೆ ನಿಮಿಷಕ್ಕೊಮ್ಮೆ ಪ್ಯಾಂಟ್ ಮೇಲೆತ್ತಿಕೊಳ್ಳುತ್ತಿದ್ದರೆ, ಮಲ್ಲಣ್ಣ ಆ ಕಾಲದಲ್ಲೇ ಮ್ಯಾಚಿಂಗ್ suspenders ತಂದುಕೊಂಡು ಹಾಕಿಕೊಂಡು ಬಿಟ್ಟಿದ್ದರು. ತಲೆ ಮೇಲೆ ಆಗಾಗ ಒಂದು ಕ್ಯಾಪ್. ಮೂಗಿನ ಮೇಲೆ ಬಂದು ಕೂತ ಒಂದು ಇಂಪೋರ್ಟೆಡ್ ಕನ್ನಡಕ. ಸೇದಬೇಕು ಅಂದ್ರೆ ಸ್ಟೈಲಿಶ್ ಪೈಪ್. ಸ್ಟೈಲ್ ಮಾಡೋದು ಅಂದರೆ ಅವರನ್ನ ನೋಡಿ ಕಲಿಯಬೇಕು. ಏನರೆ ಅವರ ವಸ್ತ್ರ ನೋಡಿ, ಏನ್ರೀ ಮಲ್ಲಣ್ಣ ಭಾರಿ ಅದ ಅಲ್ಲರೀ ನಿಮ್ಮ ಡ್ರೆಸ್? ಅಂದು ಬಿಟ್ಟರೆ ಮುಗೀತು ಅಷ್ಟೇ. ನಡಿಯೋ ಹೀರೋ, ಮನ್ನೆ ಬೆಳಗಾವ ಹೋದಾಗ ತೊಗೊಂಡೆ ಈ ಜೀನ್ಸ್ ಪ್ಯಾಂಟ್, ನಡಿ ನಾಳೆ ಹೋಗಿ ಬಂದು ಬಿಡೋಣ, ನಿನಗೂ ಒಂದು ನಾಕು ಕೊಡಿಸಿ ಒಗೆದು ಬಿಡ್ತೇನಿ, ಅಂತ ಹೇಳಿ ಮರುದಿವಸದ ಶಾಪಿಂಗ್ ಟ್ರಿಪ್ ಗೆ ಮಲ್ಲಣ್ಣ ತಯಾರು. ಅವರು ಹಾಕ್ಕೊಂಡಿದ್ದ ಜಾಕೆಟ್ ಒಂದನ್ನ ಹೊಗಳಿ, ಅವರು ಅದನ್ನ ಬಲವಂತದಿಂದ ನನಗೇ ಕೊಟ್ಟು, ಧಾರವಾಡ ಥಂಡಿಯಲ್ಲಿಯೂ ಆ ಜಾಕೆಟ್ ಹಾಕಿಕೊಂಡರೆ ಬೆವರು ಬಂದು, ಏ ಮಲ್ಲಣ್ಣ! ಈ ಜಾಕೆಟ್ ಧಾರವಾಡಕ್ಕ ಭಾಳ ಧಪ್ಪ ಆತ್ರೀ, ಅಂತ ಹೇಳಿ ಅವರಿಗೆ ಹಿಂತಿರುಗಿಸುವದರಲ್ಲಿ ಸಾಕೋ ಬೇಕಾಗಿ ಹೋಗಿತ್ತು. ಅಷ್ಟು ಪ್ರೀತಿ, ದೊಡ್ಡ ಮನಸ್ಸು ಅವರದ್ದು.
ಇಂತಹ ಹುಚ್ಚಾಟಗಳನ್ನೆಲ್ಲಾ ಮಾಡಿದ್ದ ಮಲ್ಲಣ್ಣ ಚಿಗರೆ ಮರಿ ತಂದು ಸಾಕಲು ಹೊರಟಿದ್ದರು ಅಂದ್ರೆ ಅದೇನು ಮಹಾ? ಚಿಗರೆ ಸಾಕಿದ ಹುಚ್ಚಾಟಕ್ಕೆ ಒಂದು background ಇರಲಿ ಅಂತ ಮಲ್ಲಣ್ಣನ ಬಗ್ಗೆ, ಅವರ personality ಬಗ್ಗೆ ಬರಿಬೇಕಾತು.
ಅಂತೂ ಇಂತೂ ಚಿಗರಿ ತೊಂಗೊಂಡು ಹೋಗೋದು ಅಂತ ಆತು. ಗೌಡರು ಅವರ ಆಳುಗಳಿಗೆ ಚಿಗರಿ ರೆಡಿ ಮಾಡಲಿಕ್ಕೆ ಹೇಳಿದರು. ಸವದತ್ತಿ ಮಲ್ಲಣ್ಣ, ಗೌಡರು ದೊಡ್ಡ ದನಿಯೊಳಗ ಏನೋ ಮಾತಾಡಿಕೋತ್ತ, ಒಬ್ಬರ ಡುಬ್ಬದ ಮೇಲೆ ಇನ್ನೊಬ್ಬರು ಪ್ರೀತಿಯಿಂದ ಹೊಡ್ಕೋತ್ತ, ಕೊಟ್ಟಿಗೆಯಿಂದ ಹೊರಗ ಬಂದ್ರು. ಹಿಂದ ನಾವು.
ಹೊರಗ ಬಂದು, ಮತ್ತೊಂದು ರೌಂಡ್ ಚಹಾ ಕುಡಿದು, ಹೊರಡಲಿಕ್ಕೆ ಎದ್ದಿವಿ. ಅಷ್ಟರಾಗ ಗೌಡರ ಆಳುಗಳು ಏನೇನೋ ಸಾಹಸ ಮಾಡಿ ಆ ಚಿಗರಿ ಮರಿಯನ್ನ ಒಂದು ಹಗ್ಗ ಕಟ್ಟಿ ಹ್ಯಾಂಗೋ ಮಾಡಿ ತಂದು ಮಾರುತಿ ವ್ಯಾನಿನ ಮುಂದ ನಿಲ್ಲಿಸಿದ್ದರು. ಹಗ್ಗಾ ಕಟ್ಟಿ ಕರ್ಕೊಂಡು ಬರಲಿಕ್ಕೆ ಅದೇನು ಆಕಳ ಕರಾ ಏನು? ಜಿಗಿದಾಡಿ ಬಿಡ್ತು. ಅದಕ್ಕ, ಅವನೌನ್, ಅಂತ ಹೇಳಿ, ಆ ಆಳುಮಗ ಕೊನೆಯ ಕೆಲೊ ಹೆಜ್ಜೆ ಅದನ್ನ ಎತ್ತಿಕೊಂಡೇ ಬಂದುಬಿಟ್ಟ. ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ಅನ್ನೋ ಹಾಂಗ ಕೂತಿತ್ತು ಚಿಗರಿ ಮರಿ. so cute!
ಮೊದಲು ದೊಡ್ಡವರು ಒಳಗ ಕೂತರು. ನಾನು, ಮಲ್ಲಣ್ಣ, ಆಳುಗಳು ಎಲ್ಲ ಕೂಡಿ ಚಿಗರಿ ಮರಿಯನ್ನ ಮಾರುತಿ ವ್ಯಾನಿನ ಹಿಂದೆ ಇರುವ ಡಿಕ್ಕಿ ಅಂತಹ ಸಣ್ಣ ಜಾಗದಲ್ಲಿ ಹಾಕಿ, ಬಾಗಲಾ ಬಂದು ಮಾಡಿದಿವಿ. ಹೋಗ್ಗೋ!!! ಆ ಚಿಗರಿ ಮರಿ ಕೆಟ್ಟ ಹೆದರಿ, ಇದೆಲ್ಲಿ ಡಬ್ಬಿ ಒಳಗ ನನ್ನ ಕೂಡಿ ಹಾಕಿದರೋ, ಅಂತ ತಿಳಕೊಂಡು ಅಷ್ಟೇ ಸಣ್ಣ ಜಾಗಾದಾಗ ಫುಲ್ ಡಿಸ್ಕೋ, ಭಾಂಗ್ರಾ, ಎಲ್ಲಾ ಡಾನ್ಸ್ ಮಾಡಿ, ವ್ಯಾನಿನ ಮ್ಯಾಲಿನ ರೂಫಿಗೆ ಬಡಕೊಂಡು, ರಾಮಾ, ರಾಮಾ! ಬ್ಯಾಡಾ!
ಹಿಂದಿನ ಸೀಟಿನಲ್ಲಿ ಕೂತಿದ್ದ ಸವದತ್ತಿ ಅಜ್ಜಿ ಮತ್ತ ಶಂಖಾ ಹೊಡೆದರು.
ಏ! ಮಲ್ಲಣ್ಣ! ನಿನ್ನ ಚಿಗರಿ ಹಿಡಕೋಳೋ! ಅಂತ.
ಅಲ್ಲ ಮಲ್ಲಣ್ಣ ಪಾಪ ಗಾಡಿ ಹೊಡಿತಾರೋ ಅಥವಾ ಹಿಂದ ಕೂತು ಚಿಗರಿ ಹಿಡ್ಕೊತ್ತಾರೋ?
ಮಲ್ಲಣ್ಣ ನನ್ನ ಕಡೆ ನೋಡಿದರು.
ಹೀರೋ! ಹಿಂದ ಹೋಗಿ ಚಿಗರಿ ಹಿಡಕೊಂಡು ಕುಂದ್ರಲ್ಲಾ? ಇಲ್ಲ ಅಂದ್ರ ಅದು ಜಿಗಿದಾಡಿ, ಜಿಗಿದಾಡಿ ವ್ಯಾನ ಮುರದ ಒಗದೇ ಬಿಡತೈತಿ, ಅಂದ್ರು ಮಲ್ಲಣ್ಣ.
ಹೀಗೆ ಚಿಗರಿ ಹ್ಯಾಂಡ್ಲರ್ ಅಂತ ನಮಗೆ ಪದವಿ ಪ್ರಧಾನ ಮಾಡಿದರು ಮಲ್ಲಣ್ಣ.
ಹಿಂದ ಹೋಗಿ, ಮಾರುತಿ ವ್ಯಾನಿನ ಬಾಗಿಲಾ ತೆಗೆದಿವಿ. ಭಾಳ ಕೇರ್ಫುಲ್ ಆಗಿ. ಎಲ್ಲರೆ ಚಿಗರಿ ಮರಿ ಚಂಗನೆ ಜಿಗಿದು ಓಡಿ ಹೋತು ಅಂದ್ರ ಅಷ್ಟೇ ಮತ್ತ. ಅದರ ಹಿಂದ ಹಳೆ ಧಾರವಾಡ ತುಂಬಾ ನಾವೆಲ್ಲಾ ಓಡಬೇಕು.
ಕಾರಿನ ಡಿಕ್ಕಿ ಬಾಗಿಲಾ ತೆಗೆದ ಕೂಡಲೇ ಚಿಗರಿ ಓಡಿ ಹೋಗಲಿಕ್ಕೆ ರೆಡಿ ಇತ್ತು. ಸ್ವಲ್ಪೇ ಬಾಗಿಲಾ ತೆಗೆದು ಈಗ ನನ್ನ ಒಳಗ ದೂಕಿದರು. ಬೇಬಿ ಚಿಗರಿ ವಾಸನಿ ಮೂಗಿಗೆ ಈಗ ಸರಿ ಬಂತು. ಮಸ್ತ ಇತ್ತು. ಕಸ್ತೂರಿ ಮೃಗ ಅಲ್ಲ. ಆದರೂ ಚಿಗರಿ ವಾಸನಿ ಬೆಷ್ಟ.
ಇದ್ದ ಜಾಗಾದಾಗ ಹ್ಯಾಂಗೋ ಹೋಗಿ ಸೆಟಲ್ ಆದೆ. ಚಿಗರಿ ನಾನು ಕೂಡಿ ಅಲ್ಲೆ ಮಿಸುಕಾಡಲಿಕ್ಕೆ ಜಗಾ ಇರಲಿಲ್ಲ. ಚಿಗರಿ ಇನ್ನೆಲ್ಲಿಂದ ಜಿಗಿದಾಡೀತು? ಅದೂ ಸಹ ಸುಮ್ಮನೇ ಸೆಟಲ್ ಆತು. ಅದಕ್ಕ ಸೇರಲೀ ಬಿಡಲೀ, ನನ್ನ ಬಾಜೂಕೇ ಸೆಟಲ್ ಆತು. ನಾಯಿ ಮೈದಡವಿದಾಂಗ ಅದರ ಮೈಮ್ಯಾಲೆ ಕೈಯಾಡಿಸಿಕೋತ್ತ, ಅದರ ಕಿವಿ ಮೈಲ್ಡ್ ಆಗಿ ಜಕ್ಕೋತ್ತ ಕೂತೆ. ಮಲ್ಲಣ್ಣ ಮುಂದೆ ಡ್ರೈವರ್ ಸೀಟ್ ಒಳಗ ಸ್ಥಾಪಿತರಾಗಿ, ರೈಟ್ ರೈಟ್, ಅಂದು ಮನಿ ಕಡೆ ಗಾಡಿ ತಿರುಗಿಸಿದರು.
ದಾರಿಯೊಳಗೂ ಚಿಗರಿ ಒಂದೆರಡು ಸಲೆ ಮಿಸುಕಾಡಲಿಕ್ಕೆ ನೋಡಿತು. ಘಟ್ಟೆ ಅಪ್ಪಿ ಹಿಡಕೊಂಡು ಬಿಟ್ಟೆ. ಮಸ್ತ ಅಂದ್ರ ಮಸ್ತ ಫೀಲಿಂಗ್ ಚಿಗರಿ ಅಪ್ಪಿಕೊಳ್ಳೋದು. ಅದಕ್ಕೇ ಇರಬೇಕು ಭಗವದ್ಗೀತಾ ಒಳಗ ಸಹಿತ ಕೃಷ್ಣ ಹೇಳಿಬಿಟ್ಟಾನ. ಧ್ಯಾನಕ್ಕ ಕೂಡವರು ಚಿಗರಿ ಚರ್ಮದ ಮ್ಯಾಲೆ ಕೂಡ್ರಿ, ಅಂತ. ಸಂಸಾರಿಗಳಿಗೆ ಚಿಗರೆ ಚರ್ಮ, ಸನ್ಯಾಸಿಗಳಿಗೆ ಹುಲಿ ಚರ್ಮ ಅಂತ ಹೇಳಲಾಗಿದೆ. ವಿಪರೀತ ತಾಮಸಿಕ, ರಾಜಸಿಕ ಗುಣಗಳಿರುವ ಸಂಸಾರಿಗಳಲ್ಲಿ ಚಿಗರೆ ಚರ್ಮ ಸಾತ್ವಿಕ ಮನೋಭಾವ ಹುಟ್ಟಲು ಸಹಾಯ ಮಾಡುತ್ತದೆ. ಕೇವಲ ಸಾತ್ವಿಕ ಭಾವ ಮಾತ್ರ ಇದ್ದು, ಜಗತ್ತನ್ನೇ ಬಿಟ್ಟಿರುವ ಸನ್ಯಾಸಿಗಳಲ್ಲಿ ಹುಲಿ ಚರ್ಮ ತಕ್ಕ ಮಟ್ಟಿನ ರಾಜಸಿಕ ಮನೋಭಾವ ಹುಟ್ಟಿಸುತ್ತದೆ. ಸನ್ಯಾಸಿಗಳಲ್ಲಿ ಸ್ವಲ್ಪ ಮಟ್ಟಿನ ರಾಜಸಿಕ ಭಾವ ಬರಲಿಲ್ಲ ಅಂದ್ರ ಅವರು ಜಗತ್ತಿನ ಉದ್ಧಾರ ಮಾಡೋದು ಹ್ಯಾಂಗ? ಮತ್ತ ಇದಕೆಲ್ಲಾ ಸೈಂಟಿಫಿಕ್ ವಿವರಣೆ ಸಹಿತ ಅವ. ಇಂಟರ್ನೆಟ್ ಮ್ಯಾಲೆ ಎಲ್ಲ ಮಾಹಿತಿ ಸಿಗ್ತಾವ ಆಸಕ್ತರಿಗೆ.
ದಾರಿಯೊಳಗ ನನ್ನ ತಲಿಯೊಳಗ ವಿಚಾರ ಅಂದ್ರ, ಈ ಮಲ್ಲಣ್ಣ, ಮನಿಗೆ ತೊಗೊಂಡು ಹೋಗಿ, ಚಿಗರಿ ಎಲ್ಲೆ ಇಡವರು ಇದ್ದಾರ? ನಾಯಿ ಹಾಂಗ ಹೊರಗ ಕಟ್ಟಿ ಹಾಕಲಿಕ್ಕೆ ಸಾಧ್ಯವೇ ಇಲ್ಲ. ಬ್ಯಾರೆ ನಾಯಿ ಬಂದು, ಕಾಂಪೌಂಡ್ ಜಿಗಿದು ಬಂದು, ಕಡಿದು ಕೊಂದು ಹೋಗ್ತಾವ. ಮನಿಯೊಳಗ ಇಟ್ಟುಕೊಳ್ಳಲಿಕ್ಕೆ ಸಾಧ್ಯ ಇಲ್ಲ. ಅದರ ಮ್ಯಾಲೆ ಮನಿಯೊಳಗ ಅವರ ಕೆಟ್ಟ ಒದರೋ ಒಂದು ಛೋಟ್ಯಾ ಪಮೇರಿಯನ್ ನಾಯಿ ಸಹಾ ಅದ. ಎಲ್ಲೆ ಇಡವರು ಇವರು ಚಿಗರಿ? ಅಂತ ತಲ್ಯಾಗ ಬಂತು. ಮಲ್ಲಣ್ಣ ಅದಕೆಲ್ಲಾ ಒಂದು ಪ್ಲಾನ್ ಮಾಡಿಕೊಂಡೇ ಚಿಗರಿ ತರೋ ನಿರ್ಧಾರ ಮಾಡಿದ್ದರು. ಅದು ಆ ಮೇಲೆ ಗೊತ್ತಾತು. ಸಾವಿರ ದಂಧೆ ಮಾಡಿದ್ದ ಮಲ್ಲಣ್ಣ ಎಲ್ಲ ಪ್ಲಾನ್ ಮಾಡೇ ಮಾಡ್ತಾರ.
ಮನಿ ಬಂತು. ಮೊದಲು ನಮ್ಮ ಮನಿ ಮುಂದ ನಮ್ಮ ತಂದೆಯವರನ್ನ ಇಳಿಸಿ, ಮುಂದ ಒಂದು ನೂರು ಫೀಟ್ ದೂರದಲ್ಲಿದ್ದ ಮಲ್ಲಣ್ಣನ ಸವದತ್ತಿ ನಿವಾಸದ ಮುಂದ ಗಾಡಿ ನಿಲ್ಲಿಸಿದಿವಿ. ನಾನು ಚಿಗರಿ ಕೊರಳಿಗೆ ಕಟ್ಟಿದ ಹಗ್ಗ ಘಟ್ಟೆ ಹಿಡಕೊಂಡೆ.
ಹೀರೋ! ಚಿಗರಿ ಘಟ್ಟೆ ಹಿಡ್ಕೊಳೋ ಮಾರಾಯ! ಅಂತ ಅನಕೋತ್ತ ಮಲ್ಲಣ್ಣ ಹಿಂದಿನ ಡಿಕ್ಕಿ ತೆಗಿಲಿಕ್ಕೆ ಬಂದ್ರು.
ಏನ ಹುಚ್ಚ ಅದಾನ ಇವಾ, ಅಂತ ಮಗನ ಬೈಕೋತ್ತ ಸವದತ್ತಿ ಅಜ್ಜಿ ಇಳಿದು ಹೋದರು. ಆ ತಾಯಿ ಈ ಮಗನ ಅದೆಷ್ಟು ಹುಚ್ಚಾಟ ನೋಡಿದ್ದರೋ?
ಮಲ್ಲಣ್ಣ ಬಂದು ವ್ಯಾನಿನ ಹಿಂದಿನ ಡಿಕ್ಕಿ ಬಾಗಿಲಾ ತೆಗೆದರು. ಈ ಸರೆ ಯಾಕೋ ಚಿಗರಿ ಓಡಿ ಹೋಗೋ ಪ್ರಯತ್ನ ಮಾಡಲಿಲ್ಲ. ಅದಕ್ಕ ಅನಿಸಿರಬೇಕು, ಇನ್ನೆಲ್ಲಿ ಓಡಲಿ? ನಮ್ಮ ನಸೀಬದಾಗ ಇನ್ನು ಈ ಮಂದಿ ಜೋಡಿನೇ ಇರೋದು ಅದನೋ ಏನೋ? ಅಂತ ತಿಳಕೊಂಡು ಮಳ್ಳ ಮಾರಿ ಮಾಡಿಕೊಂಡು, ಪಿಕಿ ಪಿಕಿ ಕಣ್ಣು ಪಿಳಿಕಿಸುತ್ತ ಕೂತಿತ್ತು.
ಈ ಚಿಗರಿ ಮರಿ ನೆಡಿಸಿಕೊಂಡು ಹೋಗೋದೆಲ್ಲಾ ಆಗೋ ಮಾತಲ್ಲ ಅಂತ ಹೇಳಿ ಮಲ್ಲಣ್ಣ ಚಿಗರಿ ಮರಿ ಎತ್ತಿಕೊಂಡೇ ಬಿಟ್ಟರು. ಮತ್ತ, ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ಲುಕ್ ಕೊಟಗೋತ್ತ ಚಿಗರಿ ಕೂತಿತ್ತು. ಸೇಫ್ಟಿಗೆ ಅಂತ ಹೇಳಿ ನಾ ಹಗ್ಗಾ ಹಿಡಕೊಂಡಿದ್ದೆ. ಮಲ್ಲಣ್ಣ ಈ ಚಿಗರಿ ಮರಿ ತೊಗೊಂಡು ಹೋಗಿ ಎಲ್ಲೆ ಇಡವರು ಇದ್ದಾರ ಅಂತನೇ ಕುತೂಹಲ.
ದೊಡ್ಡ ಸೈಜಿನ ಮಲ್ಲಣ್ಣ ಸಣ್ಣ ಸೈಜಿನ ಚಿಗರೆ ಮರಿ ತೊಗೊಂಡು ಹೋಗಿ ಇಟ್ಟಿದ್ದು ಸೀದಾ ಅವರ ಮನೆ ಮೇಲಿನ terrace ಮೇಲೆ. ಎಲ್ಲಾ ವಿಚಾರ ಮಾಡಿಯೇ ಮಲ್ಲಣ್ಣ ಚಿಗರಿ ಮರಿ ತಂದಿದ್ದರು. ಅವರ terrace ಒಂದು ತರಹದ ಗ್ರೀನ್ ಹೌಸ್ ಇದ್ದಂಗೆ ಇತ್ತು. ಸುತ್ತಲೂ ಜಾಳಗಿ ಹಾಕಿಸಿದ್ದರು. ಬಳ್ಳಿ ಹಬ್ಬಿಸಿದ್ದರು. ಎಲ್ಲಾರ ಮನಿ ಬೋಳು terrace ಅಲ್ಲ. ಒಂದು ರೀತಿ ಒಳಗ ಚೊಲೋನೇ ಆತು. ಜಿಗರಿಗೆ ಮಸ್ತ. ಅಟ್ಟದ ಮ್ಯಾಲಿನ ಗ್ವಾಡಿ ಜಿಗದು ಕೆಳಗ ಬೀಳ್ತದ ಅಂತ ಹೆದರಿಕೆ ಇಲ್ಲ. ಫುಲ್ ಸೇಫ್ಟಿ. ಅಲ್ಲೆ ತೊಗೊಂಡು ಹೋಗಿ, ಒಂದು ಮೂಲ್ಯಾಗ ಒಂದಿಷ್ಟು ಹುಲ್ಲು, ನೀರು ಇಟ್ಟು, ಚಿಗರಿ ಅಲ್ಲೆ ಬಿಟ್ಟು ಬಿಟ್ಟಿವಿ. ಆಪರೇಷನ್ ಚಿಗರಿ ಮರಿ, ಮೊದಲನೇ ಭಾಗ ಹೀಂಗ ಮುಗಿದಿತ್ತು. ಚಿಗರಿ ಮರಿ ಅಲ್ಲೆ ಅಟ್ಟದ ಮ್ಯಾಲೆ ಬಿಟ್ಟು ಬರಲಿಕ್ಕೆ ಮನಸ್ಸೇ ಇರಲಿಲ್ಲ. ಆ ತಂಪು ತಂಪು ಜಿಟಿ ಜಿಟಿ ಮಳಿ ಹವಾ, ಹಸಿರು ಹಸಿರಾದ ಮಲ್ಲಣ್ಣನ ಮನಿ ಅಟ್ಟ, ಚಂದ ಚಿಗರಿ ಮರಿ, ಸ್ವರ್ಗಕ್ಕೇ ಗುಂಡು ಹೊಡಿ ಅಂದ ಸರ್ವಜ್ಞ.
ಮಲ್ಲಣ್ಣ ನಮ್ಮ ಏರಿಯಾಕ್ಕ ಬಂದು ಹತ್ತು ವರ್ಷದ ಮ್ಯಾಲೆ ಆಗಿತ್ತು. ನಾ ಅವರ ಮನಿಗೆ ಹೋಗಿದ್ದು ಭಾಳ ಕಮ್ಮಿ. ಅದೂ ಕಳೆದ ಎರಡು ವರ್ಷದಾಗ, ನಮ್ಮ ಮನಿಗೆ ಫೋನ್ ಬಂದ ಮ್ಯಾಲೆ, ಎಲ್ಲೋ ವಾರಕ್ಕ ಒಂದೋ ಎರಡೋ ಸರೆ, ಮಲ್ಲಣ್ಣನಿಗೆ ಫೋನ್ ಬಂದ್ರ ಮೆಸೇಜ್ ಕೊಟ್ಟು ಬರಲಿಕ್ಕೆ ಹೋಗ್ತಿದ್ದೆ ಅಷ್ಟೇ. ಅದೂ ಮೆಸೇಜ್ ಕೊಟ್ಟು ಬಂದು ಬಿಡ್ತಿದ್ದೆ. ಅವರ ಜೋಡಿ ಹರಟಿ ಇತ್ಯಾದಿ ಎಲ್ಲ ನಮ್ಮ ಮನಿಗೆ ಅವರು ಬಂದಾಗ ಮಾತ್ರ. ಅವರು ಬರತಿದ್ದರು. ದಿನಾ ಸಂಜಿ. ಒಂದೋ ಎರಡೋ ಫೋನ್ ಮಾಡಲಿಕ್ಕೆ. ಮಾಡಿ, ದೊಡ್ಡ ದನಿ ಒಳಗ ಹರಟಿ ಹೊಡದು, ನಗಿಸಿ ಹೋಗ್ತಿದ್ದರು.
ಈಗ ಮಲ್ಲಣ್ಣನ ಮನಿಗೆ ಪದೇ ಪದೇ ಹೋಗಬೇಕು ಅಂತ ಭಾಳ ಅನ್ನಿಸಿಲಿಕತ್ತುಬಿಡ್ತು. ಯಾಕಂದ್ರ ಅಲ್ಲೆ ಚಿಗರಿ ಮರಿ ಅದ. ಚಿಗರಿ ಹುಚ್ಚು ಹತ್ತಿ ಬಿಡ್ತು. ನಮ್ಮ ಮನಿಗೆ ಚಿಗರಿ ತರೋಣ ಅಂದ್ರ ನಮ್ಮ ಮನಿಯಾಗ ನಾಯಿ ಅದ. ಬ್ಯಾಡ. ಅದು ಡೇಂಜರ್. ಅದಕ್ಕ ಅಲ್ಲೇ ಮಲ್ಲಣ್ಣನ ಮನಿಗೇ ಹೋಗಿ ಚಿಗರಿ ಜೋಡಿ ಆಡಿ ಬರೋದು ಬೆಟರ್ ಅಂತ ಹೇಳಿ, ಪದೇ ಪದೇ ಮಲ್ಲಣ್ಣನ ಮನಿಗೆ ಹೋಗಲಿಕ್ಕೆ ಶುರು ಮಾಡಿದೆ. ಹೋದ್ರ ಒಂದೆರಡು ತಾಸು ಸೀದಾ ಅಟ್ಟಾ ಹತ್ತಿ ಬಿಡೋದು. ನಜರ್ ಕೆ ಸಾಮನೇ, ಜಿ(ಚಿ)ಗರ್ ಕೆ ಪಾಸ್, ಕೋಯಿ ರೆಹತಾ ಹೈ, ವೋ ಹೊ ಚಿಗರಿ ಚಿಗರಿ!
ಚಿಗರಿ ತಂದ ಮರುದಿವಸ ಮತ್ತ ಮಲ್ಲಣ್ಣನ ಮನಿಗೆ ಹೋದೆ. ಅವರು ಇರಲಿಲ್ಲ. ಅವರೇ ಇರಬೇಕು ಅಂತ ಏನೂ ಇರಲಿಲ್ಲ. ಎದುರಿಗೆ ಅವರ ಮಗ ಸಿದ್ದು ಕಂಡ. ಚಿಗರಿ, ಅಂತ ಅನ್ನೋದ್ರಾಗ ಅವರ ಅಟ್ಟದ ಬಾಗಿಲಿಗೆ ಹಾಕಿದ ಕೀಲಿಕೈ ತಂದು ಕೈಯ್ಯಾಗ ಇಟ್ಟ. ಥ್ಯಾಂಕ್ಸ್ ಅಂತ ಹೇಳಿ ಸೀದಾ ಅಟ್ಟ ಹತ್ತಿ, ಭಾಳ ಜಾಗರೂಕತೆಯಿಂದ ಬಾಗಿಲಾ ಸ್ವಲ್ಪೇ ತೆಗದೆ. ಎಲ್ಲರೆ ಚಿಗರಿ ಜಿಗಿದು ಓಡಿ ಬಿಟ್ಟರ ಅಂತ tension. ಮಲ್ಲಣ್ಣ ಬ್ಯಾರೆ ಮನಿಯಾಗ ಇಲ್ಲ.
ಚಿಗರಿ ಮೂಲ್ಯಾಗ ಕೂತಿತ್ತು. ನನ್ನ ನೋಡಿ ಘಾಬರಿ ಬಿದ್ದು, ಇದ್ದ ಜಾಗಾದಲ್ಲೇ ಚಂಗ ಚಂಗ ಅಂತ ಜಿಗಿದು ಡಾನ್ಸ್ ಮಾಡ್ತು. ಹೆದರಿಕಿ ಅದಕ್ಕ. ಪಾಪ! ಅದು ಯಾವದೋ ಉಪನಿಷತ್ತಿನ್ಯಾಗ ಹೇಳಿದಂಗ, ಜಿಗಿದು ಜಿಗಿದು ಸುಸ್ತಾಗಿ ಅಲ್ಲೇ ತಳ ಊರಿತು. ಮುಗಿತೇನು ನಿಂದು ಹುಚ್ಚಾಟ? ಅನ್ನೋ ಲುಕ್ ಕೊಟ್ಟೆ. ಪ್ರೀತಿ ಮಾಡಲಿಕ್ಕೆ ಬಂದ್ರ, ತಿನಲಿಕ್ಕೆ ಬಂದೆನೋ ಅನ್ನೋ ಹಾಂಗ ಯಾಕ ಮಾಡ್ತೀ ಮೈ ಡಿಯರ್ ಚಿಗರಿ ಮರಿ? ಅಂತ ಪ್ಯಾರಿ ಪ್ಯಾರಿ ಮಾಡಿಕೋತ್ತ ಹತ್ತಿರ ಹೋದೆ. ಈ ಸರೆ ಬಂದು ಗುದ್ದಿ ಬಿಡ್ತು. ಸಣ್ಣ ಮರಿ ಇತ್ತು ಓಕೆ. ದೊಡ್ಡ ಚಿಗರಿ ಬಂದು ಗುದ್ದಿ ಬಿಟ್ಟರೆ, ಜಗ್ಗೇಶ ಹೇಳಿದಾಂಗ, ಜನರೇಟರ್ ಜಾಮ್ ಆಗೋ ರಿಸ್ಕ್ ಇರ್ತದ.
ಪ್ರೀತಿ ಮಾಡಲಿಕ್ಕೆ ಬಂದ್ರ ಬಂದು ಗುದ್ದತಿ ಏನಲೇ ಚಿಗರಿ ಮಂಗ್ಯಾನಿಕೆ? ಅಂತ ಹೇಳಿ ಹಿಡಕೊಂಡು ಬಿಟ್ಟೆ. ಒಮ್ಮೆ ನಮ್ಮ ಕೈಯಾಗ ಸಿಕ್ಕಿದ ಚಿಗರಿಗೆ ಗೊತ್ತಾತು, ಈ ಹಾಪಾ ಬಿಡೋ ಪೈಕಿ ಅಲ್ಲ ಅಂತ. ಸುಮ್ಮನ ಮಂಗ್ಯಾನ ಮಾರಿ ಮಾಡಿಕೊಂಡು, ಪಿಳಿ ಪಿಳಿ ನೋಡಿಕೋತ್ತ ಕೂತು ಬಿಡ್ತು. ಹಾಕ್ಕೊಂಡು ಮುದ್ಯಾಡಿ ಬಿಟ್ಟೆ. ಏ ಸಾಕ್ ಬಿಡಲೇ, ಅನ್ನೋ ಹಾಂಗ ಚಿಗರಿ ಮಾರಿ ಆ ಕಡೆ ತಿರಗಿಸ್ತು. ಆ ಪರಿ ಪ್ರೀತಿ ಮಾಡಿಸಿಕೊಳ್ಳಲಿಕ್ಕೆ ಅದು ನಾಯಿ ಅಲ್ಲ. ಅಷ್ಟು ಪ್ರೀತಿ ಮಾಡಿಬಿಟ್ಟರೆ ನಾಯಿ ಸಂತೋಷ ತಡಿಲಾಗದೆ ಸತ್ತೇ ಹೋಗ್ತಾವ. ಆದ್ರ ಇದು ಚಿಗರಿ. ಹಾಪ್ ಕಾಡು ಚಿಗರಿ. ಅದನ್ನ ನಾಯಿ ಹಾಂಗ ಪ್ರೀತಿ ಮಾಡಲಿಕ್ಕೆ ಬರೋದಿಲ್ಲ ಅಂತ ಗೊತ್ತಾತು. ಅದಕ್ಕೆ ಅದನ್ನ ಬಿಟ್ಟೆ. ಚಿಗರಿ ಚಂಗ ಅಂತ ಹಾರಿ ತನ್ನ ಮೂಲಿಗೆ ಹೋಗಿ ಕೂತುಬಿಡ್ತು. ಗಟ ಗಟ ಅಂತ ನೀರು ಕುಡೀತು. ಅಬ್ಬಾ! ಈ ಹುಚ್ಚ ಮನುಷ್ಯಾನಿಂದ ಬಿಡುಗಡೆ ಆತು ಅನ್ನೋ ರೀತಿಯಲ್ಲಿ ನೀರು ಕುಡೀತು. ನಾ ಮತ್ತ ಅದನ್ನ ಹಿಡಿಲಿಕ್ಕೆ ಹೋಗಲಿಲ್ಲ. ಸುಮ್ಮನೆ ನೋಡಿಕೋತ್ತ ನಿಂತೆ. ಅಷ್ಟರಾಗ ಯಾರೋ ಬಾಗಿಲಾ ಬಡಿದರು. ಏ ಹೀರೋ! ಏನು ಮಾಡಾಕತ್ತಿಯೋ? ಚಿಗರಿ ಹುಚ್ಚು ಮಸ್ತ ಹಿಡಿದಂಗೈತಿ ನಿನಗ, ಅಂತ ಅನ್ಕೋತ್ತ ಮಲ್ಲಣ್ಣ ಬಂದರು. ಎಲ್ಲಾ ನಿಮ್ಮ ಕೃಪೆ, ಆಶೀರ್ವಾದ ಅನ್ನೋ ರೀತಿಯಲ್ಲಿ ತಲಿ ಬಗ್ಗಿಸಿ ಸಲಾಮ್ ಹೊಡದೆ. ಅವರು ಚಿಗರಿ ಹತ್ತಿರ ಹೋದ್ರ, ಮೊದಲು ಆವಾ ಒಬ್ಬನೇ ಹಾಪ ಇದ್ದ. ಈಗ ಇಬ್ಬರು ಹಾಪರು. ಎಲ್ಲಿಂದ ಬಂದಾರಪಾ ಈ ಮಂದಿ? ಜೀವಾ ತಿನ್ನಲಿಕ್ಕೆ ಅನ್ನೋ ಹಾಂಗ ಚಿಗರಿ ಮತ್ತ ಎದ್ದು ತನ್ನ ಜಿಗಿದಾಟ ಶುರು ಮಾಡೇ ಬಿಡ್ತು. ಪಾಪ ಅದು ಇನ್ನೂ ಮಂದಿಗೆ ಹೊಂದಿಕೊಂಡಿರಲಿಲ್ಲ. ಪಾಪ ಚಿಗರಿ!
ದಿನಾ ಒಂದು ಎರಡು ತಾಸು ಮಲ್ಲಣ್ಣನ ಅಟ್ಟದ ಮ್ಯಾಲೆ ಚಿಗರಿ ಜೋಡಿ ಪರ್ಸನಲ್ ಟೈಮ್ ಈಗ. ಏನು ಮಲ್ಲಣ್ಣನ ಮನಿಗೆ ಜೋರ್ ಹೊಂಟೀ? ಅದೂ ಅಷ್ಟೊತ್ತು? ಅಲ್ಲೇ ಇದ್ದು ಬಿಡು, ಅಂತ ಅಮ್ಮ ಬೈದರು. ಯಾರ ಮನಿಗೂ ಹೋಗು ಅಂದರೂ ಹೋಗದ ನಾವು ಇದ್ದಕಿದ್ದಂತೆ ಮಲ್ಲಣ್ಣನ ಮನಿಯಾಗ ಅಷ್ಟೊತ್ತು ಇರೋದು ನೋಡಿ ಕೇಳಿದ್ದು ಸಹಜ ಇತ್ತು ಬಿಡ್ರೀ. ಏ! ನೀ ಸುಮ್ಮನಿರು. ಚಿಗರಿ ಅದ ಅಂತ ಹೋಗ್ತೇನಿ,ಅಂತ ಹೇಳಿ ಅವರ ಬಾಯಿ ಮುಚ್ಚಿಸಿ ಪ್ರತಿದಿನ ಮುಂಜಾನೆ ಮಧ್ಯಾನ ಮಲ್ಲಣ್ಣನ ಮನಿಗೆ ಚಿಗರಿ ಜೋಡಿ ಪ್ಯಾರ ಮೊಹಬ್ಬತ್ ಮಾಡಲಿಕ್ಕೆ ಹೋಗಿದ್ದೇ ಹೋಗಿದ್ದು. ಅದೂ ಇನ್ನು ಎರಡೇ ವಾರದಾಗ ಧಾರವಾಡ ಬಿಟ್ಟು ಪಿಲಾನಿಗೆ ಹೋಗೋ ಟೈಮ್ ಬ್ಯಾರೆ ಬಂದು ಬಿಡ್ತದ. ನಂತರ ಬರೋದು ನಾಕು ತಿಂಗಳ ಆದ ಮ್ಯಾಲೇ. ಹೋಗೋದ್ರಾಗ ಎಷ್ಟು ಆಗ್ತಿದ ಅಷ್ಟು ಚಿಗರಿ ಜೋಡಿ ವೇಳೆ ಕಳಿದು ಬಿಡಬೇಕು ಅಂತ ನಮ್ಮ ಇರಾದಾ.
ಹೀಂಗ ಚಿಗರಿ ಜೋಡಿ ವೇಳ್ಯಾ ಕಳಿಯೋದ್ರಾಗ ಎರಡು ವಾರ ಮುಗಿದು ಬಿಡ್ತು. ಆಗಸ್ಟ್ ಒಂದೋ ಎರಡೋ ತಾರೀಕಿಗೆ ಪಿಲಾನಿಗೆ ಹೋಗೋ ಟೈಮ್ ಬಂದು ಬಿಡ್ತು. ಮನಿ ಬಿಟ್ಟು ಹೋಗಲಿಕ್ಕೆ ಏನೂ ಬೇಜಾರ ಇರಲಿಲ್ಲ ಬಿಡ್ರೀ. ಆ ಪರಿ ಮನಿಗೆ, ಮನಿ ಮಂದಿಗೆ ಗೂಟಾ ಹೊಡಕೊಂಡು ಕೂತವರು ನಾವು ಅಲ್ಲೇ ಅಲ್ಲ. ಮತ್ತ ಯಾರೂ ಹೋಗು ಅಂತ ಹೇಳಿರಲಿಲ್ಲ. ಎಲ್ಲಾ ನಮ್ಮದೇ ನಿರ್ಧಾರ. ಆದ್ರ ಒಂದಕ್ಕೆ ಮಾತ್ರ prepare ಆಗಿರಲಿಲ್ಲ. ಈ ಚಿಗರಿ ಮರಿ ನಮ್ಮ ಲೈಫ್ ಒಳಗ ಬಂದು ಭಾಳ ಕಾಡಿ ಬಿಡ್ತು. ಅದನ್ನ ಬಿಟ್ಟು ಹೋಗಲಿಕ್ಕೆ ಮಾತ್ರ ಭಾಳ ಕೆಟ್ಟ ಅನ್ನಿಸ್ತು. ಧಾರವಾಡ ಬಿಟ್ಟು ಹೋಗಬೇಕಾದ್ರ ಮಿಸ್ ಮಾಡಿಕೊಂಡಿದ್ದು ಏನರೆ ಇದ್ದರ ಒಂದು ಆ ಚಿಗರಿ ಮರಿ, ಇನ್ನೊಂದು ನಮ್ಮ ಭೀಮ್ಯಾನ ಚುಟ್ಟಾ ಅಂಗಡಿ. ಅವೆರೆಡು ಭಾಳ ಮಿಸ್ ಆದವು. ಏನು ಮಾಡಲಿಕ್ಕೆ ಬರ್ತದ?
ಧಾರವಾಡ ಬಿಡೋ ದಿವಸ ಸಹಿತ ಒಂದೆರಡು ತಾಸು ಚಿಗರಿ ಪ್ರೀತಿ ಮಾಡಿ ಬಂದಿದ್ದೆ. ಈಗ ಸುಮಾರು ಹೊಂದಿಕೊಂಡಿತ್ತು ಚಿಗರಿ. ಮೊದಲಿನ ಗತೆ ಹುಚ್ಚು ಬಿದ್ದು ಜಿಗಿದಾಟ ಮಾಡ್ತಿರಲಿಲ್ಲ. ಯಾರೋ ಹುಚ್ಚ ಬರ್ತಾನ. ಬಂದು ಉಸಿರುಗಟ್ಟೋ ಹಾಂಗ ಅಪ್ಪಿ, ಮುದ್ದಾಡಿ, ತ್ರಾಸು ಕೊಟ್ಟು ಹೋಗ್ತಾನ. ಏನು ಕಾಡ್ತಾನಪಾ ಇವಾ, ಅಂತ ಆ ಚಿಗರಿ ಪಾಪ ನಮ್ಮ ಜೋಡಿ ಹೊಂದಿಕೊಂಡು ಹೊಂಟಿತ್ತು. ಅಷ್ಟೊತ್ತಿಗೆ ನಮಗೂ ಸಹಿತ ಚಿಗರಿಗೆ ನಾಯಿ ಗತೆ physical ಟಚ್ ಅಷ್ಟು ಸೇರೋದಿಲ್ಲ, ದೂರದಿಂದ ನಮಸ್ಕಾರ ನಮಸ್ಕಾರ ಅಂದ್ರೇ ಅದಕ್ಕ ಸೇರ್ತದ ಅಂತ ಹೇಳಿ ಬರೆ ದೂರಿಂದ ನೋಡಿ ಬರ್ತಿದ್ದೆ. ಆದ್ರ ಅದು ಎಷ್ಟು ಚಂದ ಇತ್ತು ಅಂದ್ರ ನೋಡಿದಾಗೊಮ್ಮೆ ಅದನ್ನ ಅಪ್ಪಿ, ಪಚ್ ಪಚ್ ಅಂತ ಒಂದೆರೆಡು ಪಪ್ಪಿ ಕೊಡದೇ ಬರಲಿಕ್ಕೆ ಮನಸ್ಸೇ ಬರ್ತಿರಲಿಲ್ಲ.
ಇಲ್ಲದ ಮನಸ್ಸಿಂದ ಧಾರವಾಡ ಬಿಟ್ಟು ಹೋಗಬೇಕಾತು. ಇರಲಿ ಮುಂದಿನ ಸರೆ ಸೆಮೆಸ್ಟರ್ ರಜಾ ಒಳಗ ಬಂದಾಗ ಚಿಗರಿ ಕರಕೊಂಡು ಎಲ್ಲರೆ ಹಳ್ಳಿಗೆ ಹೋಗಿ ಬಿಡೋಣ. ಆರಾಮ ಇದ್ದು ಬರೋಣ ಅಂತ ನಮಗೆ ನಾವೇ ಹೇಳಿಕೊಂಡು ಪಿಲಾನಿಗೆ ಹೋಗಿ ಬಿಟ್ಟೆ. good bye ಚಿಗರಿ ಮರಿ!
ಪಿಲಾನಿಗೆ ಹೋಗಿ, ಸೆಟಲ್ ಆಗಿ, ವಾರಕ್ಕೊಂದು ಪೋಸ್ಟ್ ಕಾರ್ಡ್ ಬರಿಯೋ ಪದ್ಧತಿ ಹಾಕಿಕೊಂಡೆ. ಎಲ್ಲ ಹಾಸ್ಟೆಲ್ ಹುಡುಗರ ಪದ್ಧತಿ ಅದು. ನಾನು ಕ್ಷೇಮ. ನೀವು ಕ್ಷೇಮ. ಅಷ್ಟೇ. ಆದ್ರ ಈಗ ಚಿಗರಿ ನೆನಪು ಭಾಳ ಆಗ್ತಿತ್ತು. ಹಾಂಗಾಗಿ ಪತ್ರದಾಗ ಮನಿ ಮಂದಿಗೆ ಹ್ಯಾಂಗಿದ್ದೀರಿ ಅಂತ ಕೇಳೋ ಮೊದಲೇ ಮಲ್ಲಣ್ಣನ ಚಿಗರಿ ಹ್ಯಾಂಗ ಅದ ಅಂತ ಕೇಳೋದು ರೂಢಿ ಆತು. ಆದ್ರ ಅದನ್ನ ಭಾಳ ದಿನ ಕೇಳೋ ಪ್ರಸಂಗ ಬರಲೇ ಇಲ್ಲ.
ನನಗ ನೆನಪು ಇರೋ ಮಟ್ಟಿಗೆ, ಧಾರವಾಡದಿಂದ ಬಂದ ಮೊದಲನೇ ಪತ್ರದೊಳಗೇ ತಾಯಿಯವರು ಬರೆದಿದ್ದರು. ಮಲ್ಲಣ್ಣನ ಚಿಗರಿ ಮರಿ ಸತ್ತು ಹೋತು ಅಂತ. ದೊಡ್ಡ ಶಾಕ್! ನಂಬಲಿಕ್ಕೆ ಆಗಲಿಲ್ಲ. ಒಂದೇ ತಿಂಗಳದಾಗ ಸತ್ತು ಹೋತಾ? ದೇವರೇ ನೀ ಎಷ್ಟು ಕ್ರೂರಿ ಮಾರಾಯಾ? ಅಂತ ಅಂದುಕೊಂಡೆ. ಪಾಪ ಆ ಚಿಗರಿಗೆ ಏನೋ intestinal infection ಆಗಿ, ಸಿಕ್ಕಾಪಟ್ಟೆ dehydrate ಆಗಿ, veterinary ಡಾಕ್ಟರ treatment ಏನೂ ಫಲ ಕೊಡದೇ, ನಮ್ಮ ಪ್ರೀತಿ ಚಿಗರಿ ಮರಿ ಸತ್ತು ಹೋಗಿತ್ತು. ಭಾಳ ಅಂದ್ರ ಭಾಳ ಸಂಕಟ ಆತು. ಆ ಮ್ಯಾಲೆ ಆ ತರಹದ ಸಂಕಟ ಆಗಿಲ್ಲ. ಆಗೋದು ಮಾತ್ರ ಬ್ಯಾಡ. ಆ ಪರಿ attachment ಬಂದು ಬಿಟ್ಟಿತ್ತು ಆ ಚಿಗರಿ ಮರಿ ಮ್ಯಾಲೆ. ಅದೂ ಕೇವಲ ಎರಡೇ ವಾರದಲ್ಲಿ. ಎರಡೇ ವಾರದಲ್ಲಿ ಕಳೆದ ಕೆಲವೇ ಘಂಟೆಗಳಲ್ಲಿ ಆ ರೀತಿಯ ಗಾಢ ಅನುಬಂಧ ಆ ಚಿಗರಿ ಮರಿ ಜೋಡಿ. ಯಾವ ಜನ್ಮದಾಗ ನಮ್ಮ ಆಪ್ತ ಮಿತ್ರ ಆಗಿತ್ತೋ ಏನೋ?
ಮಲ್ಲಣ್ಣನಿಗೆ ಹಾಕ್ಕೊಂಡು ಬೈಯ್ಯಿ. ಚಿಗರಿ ಮರಿ ಸರಿ ನೋಡಿಕೊಳ್ಳಲಿಲ್ಲ ಅವರು. ನಾ ಬಿಟ್ಟು ಬಂದಾಗ ಎಷ್ಟು ಮಸ್ತ ಇತ್ತು. ಅದೆಂಗ ಇದ್ದಕ್ಕಿದ್ದಂಗ ಸತ್ತು ಹೋತು? ಅಂತ ಮುಂದಿನ ಪತ್ರದಲ್ಲಿ ತಾಯಿಯವರಿಗೆ ಬರೆದಿದ್ದೆ. ಮಲ್ಲಣ್ಣನಿಗೆ ಪ್ರೀತಿಯಿಂದ ಬೈದು ಬಾ ಅನ್ನೋದರ ಹಿಂದೆ ಇದ್ದಿದ್ದು ಒಂದು ತರಹದ ವಿಷಾದ, ಸಂಕಟ ಮತ್ತು frustration ಮಾತ್ರ. ಏನರೆ ಬೇಕಾಗಿದ್ದು ಕುಲಗೆಟ್ಟು ಹೋದರೆ ಹತ್ತಿರದ ಆಪ್ತರಿಗೆ ಒಂದು ರೀತಿಯೊಳಗ ಬೈತೇವಿ ನೋಡ್ರೀ, ಆ ತರಹದ ಫೀಲಿಂಗ್. ಇಲ್ಲಂದ್ರ ಪ್ರೀತಿ ಮಲ್ಲಣ್ಣನಿಗೆ ಯಾಕ ಬೈಯ್ಯೋಣ?
ತಾಯಿಯವರು ಮಲ್ಲಣ್ಣನಿಗೆ, ನೋಡ್ರೀ ನಿಮ್ಮ ಹೀರೋ ಏನಂತ ಬರದಾನ ಅಂತ. ನೀವು ಚಿಗರಿ ಮರಿ ಸರಿ ಮಾಡಿ ನೋಡಿಕೊಳ್ಳಲಿಲ್ಲ ಅಂತ. ಅದಕ್ಕ ನಾನು ನಿಮಗ ಬೈಬೇಕಂತ. ಬೈಲೇನು ನಿಮಗ? ಹಾಂ? ಅಂತ ತಾಯಿಯವರು ನಗುತ್ತಲೇ ಕೇಳಿದ್ದಕ್ಕೆ ಮಲ್ಲಣ್ಣ ಏನು ಅನ್ನಬೇಕು? ಆಕ್ಕಾರ, ನನಗೇನು ಬೈತೀರೀ? ಆ ಹೀರೋಗೇ ಹಾಕ್ಕೊಂಡು ಬೈರೀ. ಆ ಚಿಗರಿ ಮರಿ ತಂದಾಗಿಂದ ಅದರ ಜೋಡಿ ಹೆಚ್ಚಿಗಿ ಹೊತ್ತು ಇದ್ದವರು ಯಾರು? ಅವನೇ. ಅದನ್ನ ಆ ಪರಿ ಮುದ್ದು ಮಾಡಿ, ಒಮ್ಮಲೆ ಬಿಟ್ಟು ಹೋಗಿ ಬಿಟ್ಟ. ಅದಕ್ಕ ಆ ಚಿಗರಿ ಮನಸ್ಸಿಗೆ ಹಚ್ಚಿಕೊಂಡು, ಮಾನಸಿಕ್ ಆಗಿ, ಬ್ಯಾನಿ ತಂದುಕೊಂಡು ಸತ್ತು ಹೋತು. ಯಾಕ ಚಿಗರಿ ಬಿಟ್ಟು ಅಷ್ಟು ದೂರ ಹೋಗಿ ಕುಂತಾನ? ಅದನ್ನ ಕೇಳ್ರೀ. ಕೇಳಿ ಅವಂಗ ಬೈರೀ. ಒಳ್ಳೆ ಹೀರೋ. ಒಳ್ಳೆ ಹೀರೋನ ಅವ್ವ ನೀವು, ಅಂತ ದೊಡ್ಡ ದನಿಯಲ್ಲಿ ಆವಾಜ್ ಹಾಕಿ, ಗಲ ಗಲ ನಕ್ಕು ಹೋಗಿದ್ದರು ಮಲ್ಲಣ್ಣ. ಅದನ್ನ ತಾಯಿಯವರು ಮುಂದಿಂದ ಪತ್ರದಲ್ಲಿ ಯಥಾವತ್ತಾಗಿ ಬರೆದು, ಹೀಗೂ ಇರಬಹುದಾ? ಅಂತ ಅನ್ನಿಸಿತ್ತು. ನಮ್ಮನ್ನು ಅಷ್ಟೊಂದು ಮಿಸ್ ಮಾಡಿಕೊಂಡು ನಮ್ಮ ಪ್ರೀತಿಯ ಚಿಗರೆ ಮರಿ ಸತ್ತು ಹೋಯಿತಾ? ಛೆ! ಇರಲಿಕಿಲ್ಲ. ಏನೇ ಇರಲಿ, ಭಾಳ ದೊಡ್ಡ ಲಾಸ್ ಆಗಿದ್ದು ಮಾತ್ರ ಹೌದು. ಮುಂದೆ ಆರೇ ತಿಂಗಳಲ್ಲಿ ಹತ್ತು ವರ್ಷದಿಂದ ಇದ್ದ ಸಾಕಿದ ನಾಯಿ ಸಹಿತ ಸತ್ತು ಹೋಯಿತು. ಸುಮಾರು ಅದೇ ರೀತಿಯ intestinal infection ಆಗಿ. ಚಿಗರೆ ಸಾವಿನಿಂದ ಒಂದು ತರಹದ numbness ಬಂದು ಬಿಟ್ಟಿತ್ತಾ? ಗೊತ್ತಿಲ್ಲ. ಯಾಕೋ ಏನೋ ಮುದಿಯಾದ ನಾಯಿ ಸತ್ತು ಹೋಯಿತು ಅಂತ ತಿಳಿದಾಗ, ಒಂದು ಕ್ಷಣ ಪಾಪ ಅನ್ನಿಸಿ ಅದು ಅಷ್ಟಕ್ಕೇ ಮುಗಿದುಹೋಯಿತು. ಆದರೆ ಚಿಗರೆ ಮರಿ ಸತ್ತ ದುಃಖ? ಅದು ನಿರಂತರ.
ಚಿಗರಿ ಶೋಕಂ ನಿರಂತರಂ. ಪುತ್ರ ಶೋಕಂ ನಿರಂತರಂ ಅಂದ ಹಾಗೆ.
ಆ ಚಿಗರಿ ಮರಿಯೊಂದಿಗೆ ಇದ್ದ ಒಂದು ಫೋಟೋ ಸಹಿತ ಇಲ್ಲ. ಅದೇ ದೊಡ್ಡ ಆಶ್ಚರ್ಯ. ಯಾಕೆಂದ್ರೆ ಮಲ್ಲಣ್ಣನ ಹಾಬಿ ಅಂದ್ರೆ ಫೋಟೋ ತೆಗೆಯೋದು. ಅವರನ್ನ ಮೊದಲು ಸಲ ನೋಡಿದ್ದೇ ಕೊರಳಲ್ಲಿ ಕ್ಯಾಮೆರಾ ಹಾಕಿಕೊಂಡ ಅವತಾರದಲ್ಲಿ. ಕಂಡಾಗೊಮ್ಮೆ, ಏ ಹೀರೋ! ನಿಂದ್ರೋ, ಒಂದು ಫೋಟೋ ಹೊಡಿತೀನಿ, ಅಂತ ಹೇಳಿ, ಎಂತಾ ಕೆಟ್ಟ ರೂಪದಲ್ಲಿ ಇದ್ದರೂ ಒಂದು ಫೋಟೋ ಹೊಡೆದು, ಅದನ್ನ develop ಮಾಡಿದ ಮ್ಯಾಲೆ ಮನಿಗೆ ಬಂದು ಒಂದು ಕಾಪಿ ಕೊಟ್ಟು ಹೋದವರು ಮಲ್ಲಣ್ಣ. ಅಂತವರು ಸಹಿತ ಫೋಟೋ ತೆಗಿಲಿಲ್ಲ ಅನ್ನೋದೇ ಆಶ್ಚರ್ಯ. ಮತ್ತ ಆವಾಗ ನನಗೇ ಸುಮಾರು ಫೋಟೋ ತೆಗೆಯೋ ಹುಚ್ಚಿತ್ತು. ಅಮೇರಿಕಾದಿಂದ ಅಣ್ಣ ತಂದು ಕೊಟ್ಟಿದ್ದ ಒಳ್ಳೆ Nikon ಕ್ಯಾಮೆರಾ ಇತ್ತು. ಸುಮಾರು ಫೋಟೋ ಅಲ್ಲಿ ಇಲ್ಲಿ ತೆಗೆದಿದ್ದೆ. ಯಾಕೋ ಏನೋ ಚಿಗರಿ ಜೋಡಿ ಮಾತ್ರ ಫೋಟೋ ತೆಗಿಸಿಕೊಳ್ಳಲೇ ಇಲ್ಲ. ಯಾವದೇ ಫೋಟೋ ಇಲ್ಲ ಅಂತ ಇನ್ನೂ ತನಕಾ ಅನ್ನಿಸಿಲ್ಲ. ಕೆಲವೊಂದು ಬಹಳ ಬೇಕಾಗಿದ್ದ ಫೋಟೋ ಕಳೆದು ಹೋದಾಗೂ ಇಷ್ಟು ಬೇಸರವಾಗಿಲ್ಲ. ಆದ್ರೆ ನಮ್ಮ ಪ್ರೀತಿ ಚಿಗರಿ ಮರಿ ಜೋಡಿ ಇದ್ದ ಒಂದೇ ಒಂದು ಫೋಟೋ ಇಲ್ಲ ಅನ್ನೋದು ಮಾತ್ರ ಆಗಾಗ ಕೊರೆಯುತ್ತಲೇ ಇರುತ್ತದೆ. ಏನು ಮಾಡೋದು? ಮನದಲ್ಲಿ ಇದೆ. ಅಷ್ಟೇ ಸಾಕು.
ಇಂತದ್ದೆಲ್ಲಾ ಹುಚ್ಚಾಟ ಮಾಡಲು ಅನುವು ಮಾಡಿಕೊಟ್ಟಿದ್ದ ಸವದತ್ತಿ ಮಲ್ಲಣ್ಣನಿಗೆ ಸಹಿತ ಅರವತ್ತರ ಮೇಲಾಗಿ ಹೋಗಿದೆ. ಹಾಗಂತ ಹುಚ್ಚಾಟಗಳು, ವಿಚಿತ್ರ ಪ್ರಯೋಗಗಳು ಮಾತ್ರ ಕಮ್ಮಿ ಆಗಿಲ್ಲ. ಈಗಿತ್ತಲಾಗೆ ಏನೋ ಕಿಡ್ನಿ ಬ್ಯಾನಿ ಅಂತ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಾರೆ ಮಲ್ಲಣ್ಣ. ಅವರು ಬೇಗ ಚೇತರಿಸಿಕೊಳ್ಳಲಿ. ಮತ್ತೆ ಹೊಸ ಹುಚ್ಚಾಟಗಳಿಗೆ ತೆರೆದುಕೊಳ್ಳಲಿ ಅಂತನೇ ನಮ್ಮ ಆಶಯ. ನೀವೂ ಸಹಿತ ಮಲ್ಲಣ್ಣನನ್ನು ಬಲ್ಲವರಾದರೆ ಒಂದು ಪ್ರಾರ್ಥನೆ ಅವರ ಹೆಸರಲ್ಲಿ ಮಾಡಿ ಬಿಡಿ.
(30 December 2014: ಮಲ್ಲಣ್ಣ ನಿಧನರಾದರು ಅಂತ ತಿಳಿಸಲು ತುಂಬಾ ವಿಷಾದವೆನಿಸುತ್ತದೆ. RIP, ಮಲ್ಲಣ್ಣ)

ಮಲ್ಲಣ್ಣನ ಚಿಗರೆ ಮರಿ ಸುಮಾರು ಹೀಂಗೇ ಇತ್ತು. so cute! so sweet! |

13 comments:
Excellent!
Hope Mr. Mallanna gets well soon.
Did a bade-vaasne kunni accompany you en route Yogaville?
ನನಗೆ ತಿಳಿದ ಮಟ್ಟಿಗೆ ಸವದತ್ತಿ ಮಲ್ಲಣ್ಣ ಅವರ ಹೋಟೆಲ್ ವಿದ್ಯಾಗಿರಿಯಲ್ಲಿತ್ತು. ಅದರ ಹೆಸರು " ಸಂಘಮಿತ್ರ " ಬೆಣ್ಣೆ ದೋಸೆ ಹೋಟೆಲ್. ಅಂತಾ. ಹೌದಲ್ರೀ ?
ನೀವು ಹೇಳಿದ್ದು ಸರಿ ಅನ್ನಿಸ್ತದ, ಅಂಗಡಿಯವರೇ.
ವಿದ್ಯಾಗಿರಿ ಒಳಗ ಇದ್ದಿದ್ದು ಹೌದು. 'ಸಂಘಮಿತ್ರಾ' ಅದೂ ಸರಿನೆ ಅನ್ನಿಸ್ತದ. ಯಾಕಂದ್ರ ಮಲ್ಲಣ್ಣನ ತಮ್ಮನ ಮಗಳ ಹೆಸರು ಅದು ಅಂತ ನೆನಪು.
ಓದಿ, ಕಾಮೆಂಟ್ ಹಾಕಿದ್ದಕ್ಕೆ ಧನ್ಯವಾದ.
Savadatti Mallannavara Omni Car nalli naanu tirugidde.....Dwd ge bandaga Prajavani Printing Press torisalu Karedukondu hogiddru..
Mallnnanavaru bega husharu aagali
Thank you.
Hi Mahesh,
I have tried to download Kannada books, some how I could not. Do I need to login to mediafire before downloading?Pls suggest.
Thanks,
Shweta
Just click on the link. It will take you to location. Click on the 'download' button next to 'view' button and it should start the download.
Hope this helps.
Thanks. I'm able to download.
ಮಹೇಶ್, ಚಿಗರಿ ಕಥಿ ಭಾಳ ಛೆಂದ ಬರ್ದೀರಿಪಾ. ಮಲ್ಲಣ್ಣವರ ಪರಿಚಯ ನನಗಿದ್ದಿಲ್ಲ. ಆದರ ನಿಮ್ಮ ಕಥೀ ಮೂಲಕ ಆಪ್ತರನ್ನಸ್ತಾರ. ಅವ್ರು ಲಗೂ ಆರಾಮಾಗ್ಲಿ.
...ಅಶೋಕ ಹಂದಿಗೋಳ
ತುಂಬಾ ಧನ್ಯವಾದ, ಅಶೋಕ ಅವರೇ!
Girija Yandigeri: After his retirement he collected books as donation from many of his freinds and weekly one used to issue books early in the morning near university for one week insisting simply to read and give back without any conditions. that was great.
ಮಹಾಂತೇಶ ಗುಂಜೆಟ್ಟಿ Also use to give free checkup for Sugar and BP patients. He use to mingle with young ones and used to be young with all of us. Very entertaining at the same time very resourceful (By knowledge) to all of us. We really miss him
ಚಿಗರಿ ಕತಿ ಮಸ್ತ್ ಇದ್ದು. ನಂಗೆ ಮಲ್ಲಣ್ಣನವರ ನೋಡಿದ್ದು ನೆನಪಿಲ್ಲೆ. ಒಂದ್ಸಲ ಆ ಬೆಣ್ಣೆ ದೋಸೆ ಹೋಟೆಲ್ ವಿಷಯ ದೊಡ್ಡಮ್ಮನ ಬಾಯಲ್ಲಿ ಕೇಳಿದ್ದು ನೆನಪಿದ್ದು.
Thanks Vikas.
Post a Comment