Showing posts with label ಶ್ರದ್ಧಾಂಜಲಿ. Show all posts
Showing posts with label ಶ್ರದ್ಧಾಂಜಲಿ. Show all posts

Sunday, September 08, 2019

ಅಂಧ ಪೈಲಟ್ಟುಗಳು ವಿಮಾನ ಹಾರಿಸಿದ್ದು!

ಅದೊಂದು ದೊಡ್ಡ ವಿಮಾನನಿಲ್ದಾಣ. ಒಂದು ವಿಮಾನ ಹಾರಲು ಸಜ್ಜಾಗಿ ನಿಂತಿತ್ತು. ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿ ಸಿದ್ಧರಾಗಿ ಕುಳಿತಿದ್ದರು. ವಿಮಾನ ಹಾರಿಸುವ ಪೈಲಟ್ಟುಗಳು ಮಾತ್ರ ನಾಪತ್ತೆ!

ಅಷ್ಟರಲ್ಲಿ ಹಿಂದಿಂದ ಇಬ್ಬರು ವ್ಯಕ್ತಿಗಳು ಬರುತ್ತಿರುವುದು ಕಂಡಿತು. ಇಬ್ಬರೂ ಕಪ್ಪು ಕನ್ನಡಕ ಧರಿಸಿದ್ದರು. ಒಬ್ಬ ಕೈಯಲ್ಲಿ ಬಿಳಿ ಕೋಲು ಹಿಡಿದಿದ್ದ. ಮತ್ತೊಬ್ಬ ಬಿಳಿ ಕೋಲಿನೊಂದಿಗೆ ಕುರುಡರಿಗೆ ಸಹಾಯ ಮಾಡುವ ನಾಯಿಯನ್ನೂ ತಂದಿದ್ದ.

ಈ ಕುರುಡರಿಬ್ಬರೂ ತಡಕಾಡುತ್ತ, ಅಕ್ಕಪಕ್ಕದವರಿಗೆ ಡಿಕ್ಕಿ ಹೊಡೆಯುತ್ತ,ಬಿಳಿ ಕೋಲು ಮತ್ತು ನಾಯಿಯ ಸಹಾಯದಿಂದ ವಿಮಾನದ cockpit ತಲುಪಿಕೊಂಡರು. ಹೇಗೋ ಮಾಡಿ ವಿಮಾನ ಹಾರಿಸುವ ಕುರ್ಚಿಗಳ ಮೇಲೆ ಆಸೀನರಾದರು. ತಡಕಾಡುತ್ತಲೇ ವಿಮಾನ ಹಾರಿಸುವ ಮೊದಲು ಮಾಡಬೇಕಾದ ಕೆಲಸಗಳನ್ನು ಏನೋ ಒಂದು ರೀತಿಯಲ್ಲಿ ಮಾಡತೊಡಗಿದರು. ಒಬ್ಬ ಪೆನ್ನು ಕೆಳಗೆ ಬೀಳಿಸಿದರೆ ಮತ್ತೊಬ್ಬ ಹೇಗೋ ಮಾಡಿ ಎತ್ತಿಕೊಡುತ್ತಿದ್ದ. ಒಬ್ಬ ತಪ್ಪಾಗಿ ಯಾವುದೋ ಸ್ವಿಚ್ ಹಾಕಿದರೆ ಮತ್ತೊಬ್ಬ ತಡಕಾಡುತ್ತ ಹೇಗೋ ಸರಿ ಮಾಡುತ್ತಿದ್ದ. ಒಟ್ಟಿನಲ್ಲಿ ರೂಢಿ ಮೇಲೆ ಏನೋ ಮಾಡುತ್ತಿದ್ದರು.

ಇದನ್ನು ನೋಡಿದ ಪ್ರಯಾಣಿಕರಿಗೆ ಆಶ್ಚರ್ಯ. ಇದೇನು ತಮಾಷೆ ಮಾಡುತ್ತಿದ್ದಾರೋ ಎಂದುಕೊಂಡರು. ಎಲ್ಲ ಅಂಗಾಂಗಳು ಸರಿಯಿರುವ ಮನುಷ್ಯರೂ ಸಹ, ತರಬೇತಿಯ ನಂತರವೂ, ಎಲ್ಲ ವಿಮಾನ ಹಾರಿಸಲಾರರು. ಇಲ್ಲಿ ನೋಡಿದರೆ ಇಬ್ಬರು ಅಂಧರು ವಿಮಾನ ಹಾರಿಸಲು ತಯಾರಾಗುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ ಎಂದು ಯಾತ್ರಿಕರು ಆತಂಕಗೊಂಡರು.

ಅಷ್ಟರಲ್ಲಿ ವಿಮಾನದ ಇಂಜೀನುಗಳು ಆರಂಭವಾಗಿ ಗುಡುಗತೊಡಗಿದವು. ಅಂಧ ಪೈಲಟ್ ಪ್ಲೇನ್ ಎತ್ತಿಯೇಬಿಟ್ಟ. ಅಂದಾಜಿನ ಮೇಲೆ ಅತ್ತಿತ್ತ ಓಲಾಡಿಸುತ್ತ ವಿಮಾನವನ್ನು runway ಮೇಲೆ ತಂದವನೇ ಫುಲ್ ವೇಗ ಕೊಟ್ಟ. ಎತ್ತರ ಪತ್ತರ ಓಲಾಡುತ್ತ, ಎಲ್ಲಿ runway ಬಿಟ್ಟು ಹೋಗಿ ಅಪಘಾತವಾಗಿಬಿಡುತ್ತದೋ ಮಾದರಿಯಲ್ಲಿ ವಿಮಾನ ವೇಗವಾಗಿ ಚಲಿಸತೊಡಗಿತು.

ಈಗ ಮಾತ್ರ ಪ್ರಯಾಣಿಕರಿಗೆ ಖಾತ್ರಿಯಾಯಿತು, ಇದು ತಮಾಷೆ ಅಲ್ಲ. ಖಂಡಿತ ತಮಾಷೆಯೆಲ್ಲ. ಜೀವ ಬಾಯಿಗೆ ಬಂತು. ಈ ಕುರುಡ ಪೈಲಟ್ಟುಗಳು ತಮ್ಮನ್ನು ಸ್ವರ್ಗಕ್ಕೋ ನರಕಕ್ಕೋ ಕಳಿಸುವದು ಖಾತ್ರಿಯೆಂದುಕೊಂಡು, ಪ್ರಾಣಭಯದಿಂದ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದರು.

runway ಮೇಲೆ ಕೇವಲ ಇಪ್ಪತ್ತು ಅಡಿ ಮಾತ್ರ ಉಳಿದಿತ್ತು. ಮುಂದೆ ಕಂದಕ. ಅಷ್ಟರಲ್ಲಿ ವಿಮಾನ ಮೇಲೆ ಹಾರಬೇಕು. ಹಾರಿದರೆ ಬಚಾವು. ಇಲ್ಲವಾದರೆ ಗೋವಿಂದಾ ಗೋವಿಂದಾ!

ಪ್ರಯಾಣಿಕರ ಆರ್ತನಾದ ತಾರಕಕ್ಕೆ ಏರಿತು. ಹತ್ತಡಿ, ಐದಡಿ..... ಆರ್ತನಾದ ಈಗ ಉತ್ತುಂಗದ ಸ್ಥಿತಿಯಲ್ಲಿ. ಇನ್ನೇನು runway ಮುಗಿದೇಹೋಯಿತೇನೋ ಅನ್ನುವಷ್ಟರಲ್ಲಿ ವಿಮಾನ ಪವಾಡಸದೃಶವಾಗಿ ಮೇಲಕ್ಕೇರಿತು.

ನಿರುಮ್ಮಳರಾದ ಪ್ರಯಾಣಿಕರು ಬದುಕಿದೆಯಾ ಬಡಜೀವವೇ ಎಂಬಂತೆ ನಿಟ್ಟುಸಿರು ಬಿಟ್ಟು ಎಲ್ಲ ದೇವರಿಗೂ ದೊಡ್ಡ ನಮಸ್ಕಾರ ಹಾಕಿದರು.

ಆಗ ಪೈಲಟ್ಟುಗಳು ಮಾತಾಡಿಕೊಂಡರು, 'ಗುರೂ, ಒಂದು ದಿನ ಈ ಪ್ರಯಾಣಿಕರು ಕೂಗುವುದನ್ನು ನಿಲ್ಲಿಸುತ್ತಾರೆ. ಅಂದು ದೊಡ್ಡ ಅಪಘಾತವಾಗಲಿದೆ. ಎಲ್ಲರೂ ಸಾಯುತ್ತೇವೆ!!'

ಅರ್ಥವಾಯಿತು ತಾನೇ? ಪೈಲಟ್ಟುಗಳು ನಿಜವಾಗಿಯೂ ಕುರುಡರೇ ಆಗಿದ್ದರು. ಪುಣ್ಯಕ್ಕೆ ಕಿವುಡರಾಗಿರಲಿಲ್ಲ. ಪ್ರಯಾಣಿಕರ ಆರ್ತನಾದದ ಅಂದಾಜಿನ ಮೇಲೆ ವಿಮಾನ ಹಾರಿಸುತ್ತಿದ್ದರು. runway ಯಾವಾಗ ಮುಗಿಯುತ್ತದೆ ಅಂತ ಗೊತ್ತೂ ಆಗುತ್ತಿರಲಿಲ್ಲ. ಆದರೆ runway ಮುಗಿಯಲಿದೆ, ವಿಮಾನ ಮೇಲಕ್ಕೆ ಏರದಿದ್ದರೆ ಢಮ್ ಅನ್ನಲಿದೆ ಅನ್ನುವುದು ಪ್ರಯಾಣಿಕರಿಗೆ ಗೊತ್ತಾಗುತ್ತಿತ್ತು. ಅವರ ಆರ್ತನಾದ ತಾರಕಕ್ಕೆ ಏರುತ್ತಿತ್ತು. ಪ್ರಯಾಣಿಕರ ಆರ್ತನಾದ ಒಂದು ಲೆವೆಲ್ಲಿಗೆ ಬಂತು ಅಂದಾಗ ಪೈಲಟ್ಟುಗಳಿಗೆ ಗೊತ್ತಾಗುತ್ತಿತ್ತು, 'runway ಮುಗಿಯಲಿದೆ. ವಿಮಾನವನ್ನು ಎತ್ತಲು ಸರಿಯಾದ ಸಮಯ,' ಎಂದುಕೊಂಡು ಎತ್ತುತ್ತಿದ್ದರು.

ಪ್ರಜಾಪ್ರಭುತ್ವಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ದೇಶದ ಚುಕ್ಕಾಣಿ ಹಿಡಿದ ನಾಯಕರೂ ಸಹ ಅಂಧರೇ. ನಾವು ಕೂಗುವುದನ್ನು, ಅಂದರೆ ಪ್ರತಿಭಟನೆ ಮಾಡುವುದನ್ನು, ನಿಲ್ಲಿಸಿದ ದಿನ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಾರೆ. ಹಾಗಾಗಿ ಕೂಗುತ್ತಲೇ ಇರಬೇಕು. ಪ್ರತಿಭಟಿಸುತ್ತಲೇ ಇರಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ಅವಶ್ಯ. ನಮ್ಮ ಆರ್ತನಾದದ ಮರ್ಮ ಅರಿತಿರುವ "ನಾಯಕರು" ಹೇಗೋ ಮಾಡಿ ದೇಶವನ್ನು ಏನೋ ಒಂದು ತರಹ ಮುನ್ನೆಡಿಸುತ್ತಾರೆ. ಹಾಗಂತ ಆಶಿಸಬಹುದು.

ನಿನ್ನೆ ನಿಧನರಾದ ಖ್ಯಾತ ವಕೀಲ ರಾಮ್ ಜೇಠಮಲಾನಿ ತಮ್ಮ ಪುಸ್ತಕದಲ್ಲಿ ಹೀಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ.

ಮಾಹಿತಿ ಆಧಾರ: Maverick Unchanged, Unrepentant by Ram Jethmalani

 

ರಾಮ್ ಜೇಠಮಲಾನಿ ಬಗ್ಗೆ ಹಿಂದೆ ಬರೆದಿದ್ದ ಲೇಖನಗಳು.

* ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

* ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

* ಕಿಸ್ಸಿಂಗ್ ಕಿಡಿಗೇಡಿ

Tuesday, April 26, 2016

ಅಂದು ಊಟವನ್ನು ತ್ಯಜಿಸಿದವ ನಿನ್ನೆ ಲೋಕವನ್ನೇ ತ್ಯಜಿಸಿದ...

'ಒಂದ ವಾರ ಊಟ ಬಿಟ್ಟಿದ್ದ ಆಂವಾ! ಗೊತ್ತದ ಏನ?' ಅಂದರು ಕಾತ್ರಾಳೆ ಸರ್. ೧೯೮೧ ಜೂನ್. ಆಗ ಮಾತ್ರ ಮೂರನೆಯ ಕ್ಲಾಸ್ ಮುಗಿಸಿ ದೂರ್ವಾಸ ಮುನಿಯ ಪ್ರತಿರೂಪದಂತಿದ್ದ ಕಾತ್ರಾಳೆ ಸರ್ ಅವರ ನಾಲ್ಕನೆಯ ಕ್ಲಾಸಿಗೆ ಎಂಟ್ರಿ ಕೊಟ್ಟಿದ್ದೆವು. ಅವತ್ತೇ ಮೊದಲನೇ ದಿನ. ಬೆಳಗಿಂದ ಒಬ್ಬರ ನಂತರ ಒಬ್ಬರನ್ನು ಬರೋಬ್ಬರಿ ರುಬ್ಬಿದ್ದರು ಸರ್. ಬೈದಿದ್ದರು. ಹೊಡೆದಿದ್ದರು. ಕಪ್ಕಪಾಳಕ್ಕೆ ರಪ್ ರಪ್ ಅಂತ ಬಾರಿಸಿದ್ದರು. ಅವರ ಭರ್ಜರಿ ಹೊಡೆತ ಬಡಿತದ ಕಹಾನಿ ಕೇಳಿದ್ದೆವು. ಈಗ ಖುದ್ ನೋಡುವ 'ಸೌಭಾಗ್ಯ'. ಅದು ಅವರ ಪದ್ಧತಿ. ಸುಖಾಸುಮ್ಮನೆ ಮಾತಾಡಿದ್ದೇ ಇಲ್ಲ. ನಾಲ್ಕು ಕೊಟ್ಟೇ ಮುಂದಿನ ಮಾತು. ಆದರೆ ಅದ್ಭುತ ಶಿಕ್ಷಕರು. ಮತ್ತೆ ಕನ್ನಡ ಸಾಹಿತಿ ಬೇರೆ.

'ಒಂದ ವಾರ ಊಟ ಬಿಟ್ಟಿದ್ದ ಆಂವಾ!' ಅಂತ ಮತ್ತೊಮ್ಮೆ ಹೇಳಿದರು ಸರ್. ನಮಗೇನೂ ಗೊತ್ತಾಗಲಿಲ್ಲ. ಸರ್ ತಮ್ಮ ಹಿಂದಿನ ವರ್ಷದ ನಾಲ್ಕನೆಯ ವರ್ಗದ ಬ್ಯಾಚಿನ ಬಗ್ಗೆ ಹೇಳುತ್ತಿದ್ದರು. ಅಂದರೆ ನಮಗಿಂತ ಒಂದು ವರ್ಷದ ಹಿರಿಯ ವಿದ್ಯಾರ್ಥಿಗಳ ಬಗ್ಗೆ. ನಾವು ನಾಲ್ಕನೆಯ ಕ್ಲಾಸಿಗೆ ಬಂದವರಾಗಿದ್ದರೆ, ಸರ್ ಅವರ ಕೈಯಲ್ಲಿ ಬರೋಬ್ಬರಿ ತಯಾರಾಗಿ ನಾಲ್ಕನೆಯ ಕ್ಲಾಸ್ ಮುಗಿಸಿ ಐದನೆಯ ಕ್ಲಾಸಿಗೆ ಹೋದ ವಿದ್ಯಾರ್ಥಿಗಳ ಬಗ್ಗೆ ಮಾತಾಡುತ್ತಿದ್ದರು.

'ಆಂವಾ ಒಂದು ಮಾರ್ಕಿನಿಂದ ಫಸ್ಟ್ ರಾಂಕ್ ತಪ್ಪಿಸಿಕೊಂಡ. ಒಂದೇ ಮಾರ್ಕ್. ಅದಕs ಫುಲ್ ಒಂದು ವಾರ ಊಟ ಬಿಟ್ಟಿದ್ದ. ಅವನೇ ಬಸವರಾಜ! ಗೊತ್ತದ ಏನ?' ಅಂದರು ಸರ್. ಆವಾಗ ಏನೋ ಗೊತ್ತಾಯಿತು. ಬಸವರಾಜ ಅಪರಿಚಿತನೇನೂ ಅಲ್ಲ. ಮುಖ ಪರಿಚಯವಿತ್ತು. ಹಲೋ, ಹಾಯ್, ಬಾಯ್ ಮಟ್ಟದ ದುವಾ ಸಲಾಮಿ ಇತ್ತು. ಒಂದೇ ವರ್ಷಕ್ಕೆ ಹಿರಿಯನಾಗಿದ್ದರಿಂದ ಅಲ್ಲಿಲ್ಲಿ ಕಾಣುತ್ತಿದ್ದ. ಆದರೆ ಬಸವರಾಜ ಒಂದನೇ ರಾಂಕ್, ಅದೂ ಯಕಶ್ಚಿತ ನಾಲ್ಕನೆಯ ಕ್ಲಾಸಿನಲ್ಲಿ, ಒಂದು ಮಾರ್ಕಿನಿಂದ ತಪ್ಪಿಸಿಕೊಂಡಿದ್ದಕ್ಕೆ ಒಂದು ವಾರ ಊಟ ಬಿಟ್ಟಿದ್ದ ಅಂತ ಕೇಳಿ ಒಂದು ತರಹದ ಆಶ್ಚರ್ಯವಾಗಿತ್ತು. ಕಾತ್ರಾಳೆ ಸರ್ ಸ್ವಲ್ಪ ಮಸಾಲೆ ಹಾಕಿ ಹೇಳಿರಬಹುದು ಬಿಡಿ. ಆದರೂ ಆ ವಯಸ್ಸಿನಲ್ಲಿ ಊಟ ಬಿಡೋದು ಅಂದರೆ.....ಗ್ರೇಟ್!

ಬಸವರಾಜ ಬಾರಿಸುತ್ತಿದ್ದ. ಮಸ್ತಾಗಿ ಬಾರಿಸುತ್ತಿದ್ದ. ಅಂದರೆ ದೈಹಿಕ ಶಿಕ್ಷಣ (physical education) ತರಗತಿಯಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಶಾಲೆಯ ಬ್ಯಾಂಡಿನಲ್ಲಿ ದೊಡ್ಡ ಡ್ರಮ್ ಬಾರಿಸುತ್ತಿದ್ದ. ಒಂದು ವರ್ಷದ ಹಿಂದೆ ನಮ್ಮ ಪ್ರಾಥಮಿಕ ಶಾಲೆ ವ್ಯಾಯಾಮ ಮಾಡುವ ಸ್ಪರ್ಧೆಯಲ್ಲಿ ಮೂರನೆಯ ಸ್ಥಾನ ಪಡೆದಿತ್ತು. ಮೊದಲನೆಯ, ಎರಡೆನೆಯ ಸ್ಥಾನ ತಪ್ಪಿಹೋಗಲು ನಾನು ಮತ್ತು ಈ ಬಸವರಾಜನೇ ಕಾರಣ ಅಂತ ಕಾತ್ರಾಳೆ ಸರ್ ಅಭಿಪ್ರಾಯ. ತಿಂಗಳಾನುಗಟ್ಟಲೆ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿದ್ದರೂ, ಅದೇನು ಕಾರಣವೋ, ಬ್ಯಾಂಡ್ ಬಾರಿಸುತ್ತಿದ್ದ ಬಸವರಾಜ ಅಂದು ಮಾತ್ರ ಒಮ್ಮೆ ತಾಳ ತಪ್ಪಿ ಬ್ಯಾಂಡ್ ಬಾರಿಸಿಬಿಟ್ಟಿದ್ದ. ಒಳ್ಳೆ ಸರ್ಕಸ್ ಮಂಗಗಳ ಹಾಗೆ ತರಬೇತಾಗಿ, ಬ್ಯಾಂಡಿನ rhythmic ಢಮ್ ಢಮ್ ಶಬ್ದಕ್ಕೆ ವ್ಯಾಯಾಮ ಮಾಡುತ್ತಿದ್ದ ನಾವೆಲ್ಲ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಸುತ್ತ ಮುತ್ತ ನಿಂತಿದ್ದ ಮಾಸ್ತರು, ಟೀಚರುಗಳನ್ನು ನೋಡಿದ್ದೆವು. ಹಣೆ ಹಣೆ ಚಚ್ಚಿಕೊಂಡಿದ್ದ ಅವರು ಏನೇನೋ ಸನ್ನೆ ಮಾಡಿದ್ದರು. ಹೇಗೋ ಮಾಡಿ ಸುಧಾರಿಸಿಕೊಂಡು ಮೊದಲಿನ rhythm ಗೆ ಬಂದು ವ್ಯಾಯಾಮ ಮುಂದುವರೆಸಿದ್ದೆವು. ಎಲ್ಲೋ ಏನೋ ಪೊರಪಾಟಾಗಿ ಒಮ್ಮೆ ತಾಳ ತಪ್ಪಿ ಬಾರಿಸಿಬಿಟ್ಟಿದ್ದ ಬಸವರಾಜ ಸಹ ಸುಧಾರಿಸಿಕೊಂಡು ಮುಂದೆ ಹುರುಪಿನಿಂದ ಭರ್ಜರಿ ಬಾರಿಸಿದ್ದ. ಢಮ್! ಢಮ್!

ಬಸೂ ಮಾಡಿದ ಲಫಡಾ ಅದಾದರೆ ಮೊದಲ ಸ್ಥಾನ ತಪ್ಪಿ, ಎರಡನೆಯ ಸ್ಥಾನ ಕೂಡ ತಪ್ಪಿಹೋಗುವಂತಹ ಲಫಡಾ ನಾನೇನು ಮಾಡಿದ್ದೆ? ಜಾಸ್ತಿ ಏನಿಲ್ಲ. ನಿಂತು ಮಾಡುವ ವ್ಯಾಯಾಮಗಳು ಮುಗಿದು ಕುಳಿತು ಮಾಡುವ ವ್ಯಾಯಾಮ ಶುರುವಾಗಲಿತ್ತು. ಚಕ್ಕನೆ ನೆಲಕ್ಕೆ ಕುಳಿತು ತಕ್ಷಣ ಶುರುಮಾಡಬೇಕಿತ್ತು. ಬಿಳಿ ಚೊಣ್ಣ (nicker, shorts) ಹಾಕಿದ್ದೆವು. ಆವತ್ತು ನಮ್ಮ ತಲೆಗೆ ಏನೆನ್ನಿಸಿತೋ ಏನೋ. ಮಣ್ಣಿನ ನೆಲದ ಮೇಲೆ ಕೂಡುವ ಮೊದಲು ಚೊಣ್ಣ ಮಣ್ಣಾಗದಿರಲಿ ಅಂತ ಉಧೋ ಅಂತ ಕರ್ಚೀಪ್ ಹಾಸಲು ಮುಂದಾಗಿಬಿಟ್ಟೆ. ಬಾಕಿ ಎಲ್ಲರೂ ಕೂತು, ಬಸವರಾಜನ ಬ್ಯಾಂಡಿನ ತಾಳಕ್ಕೆ ಏಕ್, ದೋ, ತೀನ್, ಚಾರ್ ಅಂತ ವ್ಯಾಯಾಮ ಶುರು ಮಾಡಿದ್ದರು. ನಾನು ಮಾತ್ರ ಪಾಂಗಿತವಾಗಿ ಕರ್ಚೀಪ್ ಹಾಸಿಕೊಳ್ಳುತ್ತಿದ್ದೆ. ನಮ್ಮ ಕ್ಲಾಸ್ ಟೀಚರ್ ಆಗಿದ್ದ ಗ್ರಾಮಪುರೋಹಿತ ಸರ್, 'ಎಲ್ಲಾ ಕೆಲಸ ಕೆಡಿಸಿಬಿಟ್ಟಿಯಲ್ಲೋ ಪುಣ್ಯಾತ್ಮ! ರಾಡಿ ಎಬ್ಬಿಸಿಬಿಟ್ಟಿಯಲ್ಲೋ!' ಅನ್ನುವ ಮಾದರಿಯಲ್ಲಿ, ಒಂದು ತರಹದ ಅವಮಾನದಿಂದ ಮುಖದ ಮೇಲೆ ಕರ್ಚೀಪ್ ಮುಚ್ಚಿಕೊಳ್ಳುತ್ತಿದ್ದರೆ (ಅಲ್ಲಿ ತುರ್ತಾಗಿ ಟಾವೆಲ್ ಇರಲಿಲ್ಲ ಅವರ ಹತ್ತಿರ), ನನ್ನ ಉಪದ್ವ್ಯಾಪಿತನದಿಂದ ಉರಿದುಹೋಗಿದ್ದ ಕಾತ್ರಾಳೆ ಸರ್ ಹಲ್ಲು ಕಡಿಯುತ್ತ, ಚಿತ್ರ ವಿಚಿತ್ರ ಹಾವಭಾವ ತೋರಿಸುತ್ತ, 'ಮುಗಿಸಿ ಬಾ! ನಿನಗ ಐತಿ! ಮಾಡ್ತೇನಿ!' ಅನ್ನುವ ಖತರ್ನಾಕ್ ಲುಕ್ ಕೊಟ್ಟಿದ್ದರು.

ಹೀಗೆ ಬಸವರಾಜ ಒಮ್ಮೆ ತಾಳ ತಪ್ಪಿ ಬಾರಿಸಿದ್ದಕ್ಕೆ ಮತ್ತು ನಾನು ದೊಡ್ಡ ಮನುಷ್ಯನ ಹಾಗೆ ಕರ್ಚೀಪ್ ಹಾಕಿಕೊಂಡು ಕೂಡಲು ಹೋಗಿದ್ದಕ್ಕೆ ತೀರ್ಪುಗಾರರು ಒಂದೆರೆಡು ಅಂಕ ಕಟ್ ಮಾಡಿ ನಮ್ಮ ಶಾಲೆಗೆ ಮೂರನೆಯ ಸ್ಥಾನ ಬಂದಿತ್ತು. ಹಾಗಂತ ಶಿಕ್ಷಕರೆಲ್ಲರ ಅಭಿಪ್ರಾಯ.

ಸ್ಪರ್ಧೆಯಲ್ಲಿ ಪ್ರದರ್ಶನ ನೀಡಿ ವಾಪಸ್ ಬಂದೆವು. ಕಾತ್ರಾಳೆ ಸರ್ ತಮ್ಮ ಪ್ರಿಯ ಶಿಷ್ಯ ಬಸವರಾಜನ ತಲೆ ಸವರುತ್ತ, 'ಏನಪಾ ಬಸೂ, ತಪ್ಪು ಮಾಡಿಬಿಟ್ಟಿಯಲ್ಲೋ!? ಎಷ್ಟು ಪ್ರಾಕ್ಟೀಸ್ ಮಾಡಿಸಿದ್ದಿವಿ. ಯಾವಾಗಲೂ ಅಷ್ಟು ಮಸ್ತ ಬಾರಿಸವ ಇವತ್ಯಾಕ ತಪ್ಪು ಮಾಡಿದೆಯೋ!? ಅದೂ ಇವತ್ತು ಫೈನಲ್ ಇತ್ತು. ಛೇ!' ಅಂದು, ಮೊದಲ ಪ್ರೈಜ್ ತಪ್ಪಿಹೋಗಿದ್ದಕ್ಕೆ ಹುಳಿಹುಳಿ ಫೀಲಿಂಗ್ ಮಾಡಿಕೊಂಡರು. ಸರಿಯಾಗಿ ಬೈದು, ತಪ್ಪಾಗಿ ಬ್ಯಾಂಡ್ ಬಾರಿಸಿದವನಿಗೆ ತಮ್ಮ ಶೈಲಿಯಲ್ಲಿ ರಪಾರಪಾ ಬ್ಯಾಂಡ್ ಬಾರಿಸಿಬಿಡೋಣ ಅಂದುಕೊಂಡರೆ ಬಸೂ ಅವರ ಪ್ರೀತಿಯ ಶಿಷ್ಯ. ಹೇಗೆ ಬಾರಿಸಿಯಾರು??

ಆಗ ನಾನು ಎಂಟ್ರಿ ಕೊಟ್ಟೆ. ನನ್ನ ನೋಡಿದವರೇ ಕಾತ್ರಾಳೆ ಸರ್ ರೌದ್ರಾವತಾರ ತಾಳಿ, 'ಏ, ಬೇವಕೂಫ್! ನೀ ಏನು ದೊಡ್ಡ ಗವರ್ನರ್ ಏನಲೇ? ದೊಡ್ಡ ಕರ್ಚೀಪ್ ಹಾಸಿಗೋತ್ತ ಟೈಮ್ ಖೋಟಿ ಮಾಡಿದಿ. ಸುಮ್ಮ ನೆಲದ ಮೇಲೆ ಕೂಡಲಿಕ್ಕೆ ಏನು ಧಾಡಿಯಾಗಿತ್ತು ನಿನಗ? ಎಲ್ಲಾ ನಿನ್ನಿಂದಲೇ ಹಾಳಾತು. ನೋಡು ಫಸ್ಟ್ ಬರಬೇಕಾಗಿದ್ದವರು ಥರ್ಡ್ ಬಂದೇವಿ. ಗವರ್ನರ್ ಗವರ್ನರ್ ಆಗ್ಯಾನ ಮಂಗ್ಯಾನಿಕೆ. ಡೌಲ್! ಡೌಲ್ ನೋಡು!' ಅನ್ನುತ್ತ ನನ್ನ ಕಡೆ ಧಾವಿಸಿ ಬಂದರು. ಅವರಿಗೆ ಬಂದ ಕೋಪಕ್ಕೆ ನನಗೆ ಬಾರಿಸಿಯೇ ಬಿಡುತ್ತಿದ್ದರೇನೋ. ಆದರೆ ನಾನು ನಮ್ಮ ಶಿಕ್ಷಕರಾಗಿದ್ದ ಗ್ರಾಮಪುರೋಹಿತ ಸರ್ ಪಕ್ಕ ಹೊಕ್ಕೊಂಡು ನಿಂತಿದ್ದೆ. ಹಿರಣ್ಯಕಶಿಪುವನ್ನು ನೋಡಿ, ಹೆದರಿ ನರಸಿಂಹನ ಪಕ್ಕ ನಿಂತ ಪ್ರಹಲ್ಲಾದನ ಮಾದರಿಯಲ್ಲಿ. ಮತ್ತೆ ನಾನು ಗ್ರಾಮಪುರೋಹಿತ ಸರ್ ಅವರ ಪಟ್ಟದ ಶಿಷ್ಯ. ಗ್ರಾಮಪುರೋಹಿತ ಸರ್ ಮತ್ತು ಕಾತ್ರಾಳೆ ಸರ್ ಬಹಳ ಕ್ಲೋಸ್ ಫ್ರೆಂಡ್ಸ್. ತಮ್ಮ ಮಿತ್ರ ಗ್ರಾಮಪುರೋಹಿತ ಸರ್ ಮುಖ ನೋಡಿ ಬಿಟ್ಟರೋ ಅಥವಾ ತಮ್ಮ ಥರ್ಡ್ ಡಿಗ್ರಿ ಶಿಕ್ಷೆ ಕೊಟ್ಟರೆ ಆವಾಗ ಡೆಲಿಕೇಟ್ ಡಾರ್ಲಿಂಗ್ ಮಾದರಿಯಲ್ಲಿದ್ದ ನಾನು ತಡೆದುಕೊಳ್ಳಲಾಗದೆ ಸತ್ತು ಗಿತ್ತು ಹೋದರೆ ಕಷ್ಟ ಅಂತ ಬಿಟ್ಟರೋ ಗೊತ್ತಿಲ್ಲ. ಒಟ್ಟಿನಲ್ಲಿ ನನಗೆ ಕೇವಲ ಬೈದು, ಹಲ್ಲು ಕಡಿದು ಅಷ್ಟಕ್ಕೇ ಬಿಟ್ಟರು. ನಮ್ಮ ಪುಣ್ಯ. ಕಾತ್ರಾಳೆ ಸರ್ ಅವರ ಹೊಡೆತ ತಡೆದುಕೊಳ್ಳುವ ದೈಹಿಕ ಶಕ್ತಿ, ಅವಮಾನವನ್ನು ಭರಿಸಲು ಬೇಕಾಗುವ ಮಾನಸಿಕ toughness ಅಂದು ಇರಲ್ಲಿಲ್ಲ. ಇವತ್ತು ಬಿಡಿ. ಫುಲ್ ಕೋಣದ ದಪ್ಪ ಚರ್ಮ ಬೆಳೆಸಿಕೊಂಡು ಆರಾಮಿದ್ದೇವೆ. ಯಾರೇ ಕೂಗಾಡಲಿ, ಯಾರೇ ಹಾರಾಡಲಿ ನಮಗೆ ಏನೂ ಫರಕ್ ಇಲ್ಲ. ಆವತ್ತಿನ ಮಾತು ಬೇರೆ.

ನಂತರ ಬಸವರಾಜ ಸಿಕ್ಕ. ಅವನ ಮುಖವೂ ಮಳ್ಳ ಮುಖವಾಗಿತ್ತು. ಯಾರು ಬೈಯ್ಯದಿದ್ದರೂ ಬ್ಯಾಂಡ್ ಬಾರಿಸುವಾಗ ತಪ್ಪು ಮಾಡಿದ್ದು ಅವನಿಗೇ ಗೊತ್ತಿತ್ತು. ನಾನಂತೂ ಬಿಡಿ. ದೊಡ್ಡ ಲಫಡಾ ಮಾಡಿಕೊಂಡು, ಕಾತ್ರಾಳೆ ಸರ್ ಹತ್ತಿರ ರಪಾರಪಾ ಬೈಸಿಕೊಂಡು, ದೊಡ್ಡ ಕೆಂಪ ಮಂಗ್ಯಾನ ಮುಖ ಮಾಡಿಕೊಂಡು ನಿಂತಿದ್ದೆ. ನಾನೇ ಬಸವರಾಜನ ಹತ್ತಿರ ಹೋಗಿ, 'ಬಸೂ, ನೀನೂ ತಪ್ಪು ಮಾಡಿದಿ. ನಾನೂ ತಪ್ಪು ಮಾಡಿದೆ. ನಾವಿಬ್ಬರು ತಪ್ಪು ಮಾಡದೇ ಇದ್ದಿದ್ದರೆ ನಾವೇ ಫಸ್ಟ್ ಬರಿತ್ತಿದ್ದಿವಿ ನೋಡಪಾ,' ಅಂದೆ. ಸಣ್ಣ ಪ್ರಮಾಣದ ಸ್ವಾಂತನ ಹೇಳಿದೆ. ಬಸೂ ಹೂಂ ಹೂಂ ಅಂತ ಹೂಂಕರಿಸಿದ್ದ ಅಂತ ನೆನಪು.

So ಅಂದು, ಬರೋಬ್ಬರಿ ಮೂವತ್ತನಾಲ್ಕು ವರ್ಷಗಳ ಹಿಂದೆ, ನಾಲ್ಕನೆಯ ತರಗತಿಗೆ ಬಂದಾಗ ಕಾತ್ರಾಳೆ ಸರ್ ಅವರ ಪೆಟ್ ಶಿಷ್ಯ ಬಸವರಾಜನ ಬಗ್ಗೆ ಹೇಳುತ್ತ, 'ಒಂದು ವಾರ ಊಟ ಬಿಟ್ಟಿದ್ದ,' ಅಂದಾಗ ಒಂದು ವರ್ಷದ ಹಿಂದೆ ಆಗಿದ್ದ ಇದೆಲ್ಲ ನೆನಪಾಯಿತು.

ಇಂತಹ ಬಸವರಾಜನಿಗೆ ಬಸೂ ಅಥವಾ ರಾಜಾ ಅಥವಾ ರಾಜ್ಯಾ ಅಂದರೆ ಓಕೆ. ಎಲ್ಲಾದರೂ ಬಸ್ಯಾ ಅಂದಿರೋ, ಅದೂ ಕುಹಕವಾಡಿದಂತೆ ಬಸ್ಯಾ ಅಂದಿರೋ ಎಲ್ಲಿಲ್ಲದ ಕೋಪ ಬಂದುಬಿಡುತ್ತಿತ್ತು. ನಾನು ಹಾಗೆಂದೂ ಅನ್ನಲಿಲ್ಲ ಬಿಡಿ. ಆದರೆ ಯಾವಾಗಲೋ ಒಮ್ಮೆ ಅವರ ಏರಿಯಾದೊಂದಿಗೆ ಕ್ರಿಕೆಟ್ ಮ್ಯಾಚ್ ಇತ್ತು. ನಮ್ಮ ತಂಡ ಸೋಲುತ್ತಿದ್ದಾಗ, ನಮ್ಮ ಕಡೆಯವರ್ಯಾರೋ ಆಗಾಗ, 'ಏ, ಬಸ್ಯಾ! ಏ, ಬಸ್ಯಾ!' ಅಂತ ಕೂಗಿ ಅವನನ್ನು irritate ಮಾಡುತ್ತಿದ್ದುದು ನೆನಪಿದೆ. ಅದೂ ಈ ಬಸವರಾಜನೆಂಬ ಪುಣ್ಯಾತ್ಮ ಬಾಲಿಂಗ್ ಮಾಡಲೆಂದು ಓಡಲು ಶುರುಮಾಡಬೇಕು. ಆಗಲೇ ನಮ್ಮ ಕಡೆಯ ಯಾರೋ ಕಿತಾಪತಿ, 'ಏ, ಬಸ್ಯಾ!' ಅಂತ ಕೂಗಬೇಕು. 'ಯಾಕ್ರಿಲೇ ನಿಮ್ಮೌರಾ! ಮೈಯಾಗಿನ ಸೊಕ್ಕೇನು?' ಅಂತ ತೋಳು ಏರಿಸುತ್ತ, ಮಾಡುತ್ತಿದ್ದ ಬಾಲಿಂಗ್ ಬಿಟ್ಟು ನಮ್ಮ ಕಡೆಯವರನ್ನು ವಿಚಾರಿಸಿಕೊಳ್ಳಲು ಬಂದರೆ ನಮ್ಮ ಕಡೆಯವರು ಫುಲ್ ಗಪ್ ಚುಪ್! ಯಾರಿಗೆ ಅಂತ ರೋಪ್ ಹಾಕುತ್ತಾನೆ? ಏನೋ ಬೈದು ಮತ್ತೆ ಬಾಲಿಂಗ್ ಮಾಡಲು ಹೋದರೆ ಮತ್ತೆ ಬಸ್ಯಾ, ಬಸ್ಯಾ ಅಂತ ರಗಳೆ. ಒಂದೊಂದು ಓವರ್ ಮುಗಿಯಲು ಒಂದು ತಾಸು. ಅಂತೂ ಕೊನೆಗೊಮ್ಮೆ ಮ್ಯಾಚ್ ಮುಗಿದು, ನಾವು ಸೋತು, ತಲೆಗೆ ಎಂಟಾಣೆ ಅಂತ ಇಟ್ಟಿದ್ದ ಶೀಲ್ಡ್ ರೊಕ್ಕ ಅವರಿಗೆ ಕೊಟ್ಟು ಬರುವಷ್ಟರಲ್ಲಿ ನಮ್ಮ ತಲೆ ಹನ್ನೆರಡಾಣೆ ಆಗಿತ್ತು.

ಇದೆಲ್ಲ ಇವತ್ತು ಯಾಕೆ ನೆನಪಾಯಿತು ಅಂದರೆ ಇಂತಹ ಬಸವರಾಜ ನಿನ್ನೆ ತೀರಿಹೋದನಂತೆ. ಪಾಪ. ನಮಗೆ ಒಂದು ವರ್ಷಕ್ಕೆ ಹಿರಿಯ ಅಂದರೆ ಇನ್ನೂ ನಲವತ್ತೈದು ವರ್ಷ ಅಷ್ಟೇ. ಧಾರವಾಡದಲ್ಲಿ ಆರಾಮಿದ್ದ. ಅವನ ತಮ್ಮ ನಮ್ಮ ಕ್ಲಾಸ್ಮೇಟ್. ಅಣ್ಣ, ತಮ್ಮ ಎಲ್ಲಾ ಒಳ್ಳೆ ರೀತಿಯಿಂದ ಸೆಟಲ್ ಆಗಿದ್ದರು. ಆದರೆ ಅನಾರೋಗ್ಯದಿಂದ ಬಸವರಾಜ ಹೋಗಿಬಿಟ್ಟ ಅಂತ ದೋಸ್ತರು ಸುದ್ದಿ ಹೇಳಿದರು. ಕೇಳಿ ಬೇಸರವಾಯಿತು.

'ಸರ್ರಾ, ಆವಾಗ ಊಟ ಬಿಟ್ಟಿದ್ದ ಬಸೂ ಈಗ ಲೋಕವನ್ನೇ ಬಿಟ್ಟುಹೋದ ನೋಡ್ರಿ ಸರ್,' ಅಂತ ಕಾತ್ರಾಳೆ ಸರ್ ಅವರಿಗೆ ಹೇಳೋಣ ಅಂದರೆ ಅವರೇ ದಿವಂಗತರಾಗಿ ಎಂಟು ಹತ್ತು ವರ್ಷಗಳ ಮೇಲಾಗಿಹೋಯಿತು.

ಬಸವರಾಜನ ಆತ್ಮಕ್ಕೆ ಆ ಭಗವಂತ ಶಾಂತಿ ಕರುಣಿಸಲಿ. ಅವನ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ಬಸವರಾಜನ ತಂದೆ ೧೯೫೦-೬೦ ರ ದಶಕದಲ್ಲಿ ನಮ್ಮ ತಂದೆಯವರ ಸಮಕಾಲೀನರು. ಕೆಲಕಾಲ ಒಂದೇ ಹಾಸ್ಟೆಲ್ಲಿನಲ್ಲಿ ಇದ್ದವರು ಅಂತೆ ಕೇಳಿದ್ದೆ. ಅವರಿಗೆಲ್ಲ ಪುತ್ರಶೋಕ ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ಕೊಡಲಿ.

Sunday, March 27, 2016

ಸಂಜೀವ್ ಕುಮಾರ್, ಸುಲಕ್ಷಣಾ ಪಂಡಿತ್ - ಬಾಲಿವುಡ್ಡಿನ ಪುರಾತನ ಹಿಟ್ ಜೋಡಿಯ ದುರಂತ ಕಥೆ

ಎಪ್ಪತ್ತನೇ (೧೯೭೦) ಇಸವಿಯ ಆಸುಪಾಸಿರಬಹುದು. ಮುಂಬೈ. ಆಗಿನ ಬಾಂಬೆ. ಸ್ಥಳ - ಯಾವದೋ ಒಂದು ಫಿಲ್ಮ್ ಸ್ಟುಡಿಯೋ.

'ಛಟೀರ್!' ಅಂತ ಆವಾಜ್  ಕೇಳಿಸಿತು. ಸಂಶಯವೇ ಬೇಡ. ಕಪಾಳಕ್ಕೆ ಬಾರಿಸಿದಾಗ ಹೊರಹೊಮ್ಮುವ ಶಬ್ದ. ಯಾರೋ ಯಾರಿಗೋ ಕಪಾಳಕ್ಕೆ ಬಾರಿಸಿದ್ದರು. ಸಾಕಷ್ಟು ಜೋರಾಗೇ ಬಾರಿಸಿದ್ದರು.

ನೋಡಿದರೆ ಒಬ್ಬ ಸಿನೆಮಾ ನಟ ಲಗುಬಗೆಯಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಒಂದು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು, ನೆಲ ನೋಡುತ್ತ, ಅಪಮಾನದಿಂದ ಗಡಿಬಿಡಿಯಲ್ಲಿ ಹೊರನಡೆಯುತ್ತಿದ್ದ. ಅನಿರೀಕ್ಷಿತವಾಗಿ ವಿನಾಕಾರಣ ಕಪಾಳಕ್ಕೆ ಏಟು ತಿಂದವರು ಒಂದು ತರಹದ ಪಾಪಪ್ರಜ್ಞೆ, ಮುಜುಗರ, ಅವಮಾನ, ಸಿಟ್ಟು, ಖೇದ, ವಿಷಾದ ಇತ್ಯಾದಿ ಭಾವನೆಗಳ ಮಿಶ್ರಣದಂತಿರುವ ಒಂದು ವಿಶೇಷ ಭಾವನೆಯನ್ನು ಮುಖದ ಮೇಲೆ ಹೊತ್ತು, ಒಂದು ವಿಶೇಷ ರೀತಿಯಲ್ಲಿ ನಡೆದು ಹೋಗುತ್ತಿರುತ್ತಾರೆ ನೋಡಿ. ಅದೇ ಮಾದರಿಯಲ್ಲಿ.

ಯಾವದೋ ಸಿನೆಮಾದ ಶೂಟಿಂಗಿನ ದೃಶ್ಯ ಅಂತ ಎಲ್ಲರೂ ಅಂದುಕೊಂಡರು. ಆದರೆ ಅದು ಯಾವದೇ ಸಿನಿಮಾದ ಶೂಟಿಂಗ್ ಆಗಿರಲಿಲ್ಲ. ಸಂಜೀವ್ ಕುಮಾರ್ ಎಂಬ ನಟನ ಕಪಾಳಕ್ಕೆ ನೂತನ್ ಎಂಬ ನಟಿ ಎಲ್ಲರ ಮುಂದೆಯೇ ಬಾರಿಸಿದ್ದಳು. ಎಲ್ಲರ ಸಮ್ಮುಖದಲ್ಲಾದ ದೊಡ್ಡ ಅವಮಾನದಿಂದ ಕುಸಿದುಹೋದ ನಟ ಅಲ್ಲಿಂದ ಹೊರಹೋಗುತ್ತಿದ್ದ.

ಸಂಜೀವ್ ಕುಮಾರ್

ಸಂಜೀವ್ ಕುಮಾರ್ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ. Sanjeev Kumar the great actor ಅಂತ ಇನ್ನೂ ಖ್ಯಾತನಾಗಿರಲಿಲ್ಲ. ನೂತನ್ ಮಾತ್ರ ಆಗಲೇ ದೊಡ್ಡ ನಟಿ. ಮತ್ತೆ ನೂತನ್ ಸಿನಿಮಾ ಹಿನ್ನೆಲೆಯಿಂದ ಬಂದವಳು. ಅವಳ ತಾಯಿ ಶೋಭನಾ ಸಮರ್ಥ ಒಂದು ಕಾಲದ ದೊಡ್ಡ ನಟಿ. ತಂಗಿ ತನುಜಾ ಕೂಡ ನಟಿ. ಮತ್ತೆ ನೂತನಳಿಗೆ ದೊಡ್ಡ ಹೆಸರಿತ್ತು. ೧೯೫೦ ರ ದಶಕದಲ್ಲೇ ರಸ್ತೆ ಬದಿಯಲ್ಲಿ ಸ್ನಾನ ಮಾಡುವ ಬಡ ಹೆಂಗಸಿನ bold ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದಳು. ಮಡಿವಂತಿಕೆಯ ಆಕಾಲದಲ್ಲಿ ಒಬ್ಬ ನಟಿ ಅದನ್ನು ನಿಭಾಯಿಸಿದ್ದು ದೊಡ್ಡ ಮಾತು.

ಅಂತಹ ಖ್ಯಾತ ನಟಿ ನೂತನ್ ಸಂಜೀವ್ ಕುಮಾರನಿಗೆ ಯಾಕೆ ಬಾರಿಸಿದಳು?

ಎರಡು ವಿವರಣೆಗಳು ಇವೆ. ಒಂದು ಸಂಜೀವ್ ಕುಮಾರ್ ಆಕೆಯಲ್ಲಿ ನಿಜವಾಗಿಯೂ ಅನುರಕ್ತನಾಗಿದ್ದ. ದಿಲ್-ಓ-ಜಾನ್-ಸೇ ಪ್ರೀತಿಸುತ್ತಿದ್ದ. ಪ್ರೇಮ ನಿವೇದಿಸಿಕೊಂಡ. ಆಕೆಗೆ ಇಷ್ಟವಾಗಲಿಲ್ಲ. ಅವತ್ತು ಮೂಡು ಕೆಟ್ಟಿತ್ತು ಅಂತ ಕಾಣುತ್ತದೆ. ಮತ್ತೆ ಅದೇ ಮಾತು ಎತ್ತಿದ್ದ ಪಾಗಲ್ ಪ್ರೇಮಿಯ ಕೆನ್ನೆ ಊದಿಸಿ ಕಳಿಸಿದ್ದಳು.

ಮತ್ತೊಂದು ವಿವರಣೆ ಅಂದರೆ ಸಂಜೀವ್ ಕುಮಾರ್ ತನಗೆ ನೂತನ್ ಜೊತೆ ಸಂಬಂಧ (affair) ಇದೆ ಅಂತ ಗಾಳಿಸುದ್ದಿ ಹರಿಬಿಟ್ಟಿದ್ದ. ಯಾಕೆ? ಸಂಜೀವ್ ಕುಮಾರ್ ಆಗ ಇನ್ನೂ ಹೇಳಿಕೊಳ್ಳುವಂತಹ ನಟನಾಗಿರಲಿಲ್ಲ. ದೊಡ್ಡ ನಟಿಯೊಬ್ಬಳೊಂದಿಗೆ affair ಇದೆ ಅಂತ ಗಾಳಿಸುದ್ದಿ ಹಬ್ಬಿಸಿ scope ತೆಗೆದುಕೊಳ್ಳಲು ನೋಡಿದ್ದನೇ? ಇರಬಹುದು. ಅದು ನೂತನಳನ್ನು ಕೆರಳಿಸಿತ್ತು. ಅದಕ್ಕೇ ಬಾರಿಸಿದ್ದಳು. ಕೆನ್ನೆ ಊದಿಸಿದ್ದಳು.

ಏನೇ ಕಾರಣವಿರಲಿ ಆದರೆ ಸಂಜೀವ್ ಕುಮಾರ್ ಅನ್ನುವ ಸೂಕ್ಷ್ಮ ಸಂವೇದನೆಗಳ, ನಾಜೂಕು ಹೃದಯದ ನಟ ಮಾತ್ರ ಆ ಘಟನೆಯಿಂದ ಕುಸಿದುಹೋದ. ಮತ್ತೂ ಅಂತರ್ಮುಖಿಯಾದ. ಮದ್ಯದ ಬಾಟಲಿ ಮತ್ತೂ ಆತ್ಮೀಯವಾಯಿತು. ಸಿಗರೇಟ್ ಮತ್ತೂ ಪ್ರಿಯವಾಯಿತು. ಸಂಜೀವ್ ಕುಮಾರನ ಅವಸಾನ ಆರಂಭವಾಗಿತ್ತು.

ಹೀಗೆ ನೂತನಳಿಂದ ತಿರಸ್ಕೃತನಾಗಿ, ಅವಮಾನಿತನಾದ ಸಂಜೀವ್ ಕುಮಾರ್ ಒಳ್ಳೆ ನಟನಾಗುವತ್ತ ಗಮನ ಹರಿಸಿದ. ಪ್ರೀತಿ, ಪ್ರೇಮ ಎಲ್ಲ backseat ಗೆ ಹೋಯಿತು. ೧೯೬೫ ರಿಂದ ೧೯೭೦ ರ ವರೆಗೆ ಸಾಧಾರಣ ನಟನಾಗಿದ್ದವ ೧೯೭೦ ರ ನಂತರ ಏಕ್ದಂ ಟಾಪ್ ನಟನಾಗಿಬಿಟ್ಟ. ಸೂಪರ್ ಸ್ಟಾರ್ ಆಗಿರಲಿಕ್ಕಿಲ್ಲ. ಆದರೆ ಅದ್ಭುತ ನಟ ಅಂತ ಮಾತ್ರ ಖ್ಯಾತನಾದ. ಆಕಾಲದ ದೊಡ್ಡ ದೊಡ್ಡ ನಟರಿದ್ದ ಸಿನೆಮಾಗಳಲ್ಲಿ ತನ್ನದೇ ಒಂದು ಛಾಪು ಮೂಡಿಸಿಕೊಂಡು, ಅವರೆಲ್ಲರ ಕರಿಷ್ಮಾವನ್ನು ಮೀರಿ, ತನ್ನದೇ ಒಂದು ಬ್ರಾಂಡ್ ಸೃಷ್ಟಿಸಿಕೊಂಡಿದ್ದು ಸಣ್ಣ ಸಾಧನೆಯಲ್ಲ. ಮತ್ತೆ ಯಾವದೇ ನಖರಾಗಳಿಲ್ಲದ ಕಲಾವಿದ ಅಂತಲೇ ಖ್ಯಾತನಾದ. ನಿರ್ಮಾಪಕರ, ನಿರ್ದೇಶಕರ favorite ಆದ. ಒಂದಾದಮೇಲೊಂದು ಅದ್ಭುತ ಸಿನೆಮಾಗಳನ್ನು ಕೊಟ್ಟ.

ಮುಂದೆ 'ಶೋಲೆ' ಅನ್ನುವ blockbuster ಸಿನಿಮಾ ಬಂತು. ಶೋಲೆ ಅನ್ನುವ phenomenon ಬಗ್ಗೆ ಹೇಳುವದೇನಿದೆ. ಅಂತಹ ಮತ್ತೊಂದು ಮೂವಿ ಬರಲಿಲ್ಲ. ಬರಲಿಕ್ಕೂ ಇಲ್ಲ. ಅದರಲ್ಲಿ ಸಂಜೀವ್ ಕುಮಾರ ಅಭಿನಯಿಸಿದ ತೋಳಿಲ್ಲದ ಠಾಕೂರನ ಪಾತ್ರವನ್ನು ಮರೆಯಲಾದೀತೇ? ಸಾಧ್ಯವೇ ಇಲ್ಲ.

'ಶೋಲೆ' ಮಾಡುವ ಸಮಯದಲ್ಲಿ ಸಂಜೀವ್ ಕುಮಾರನನ್ನು ಸಂಪೂರ್ಣವಾಗಿ ಆವರಿಸಿಕೊಂಡವಳು ಸಹನಟಿ ಹೇಮಾಮಾಲಿನಿ. ಆಕೆ dream girl ಅಂತಲೇ ಖ್ಯಾತಳಾಗಿದ್ದಳು. ಆಕೆಗೆ ಭರತನಾಟ್ಯದಲ್ಲಿ ದೊಡ್ಡ ಮಟ್ಟದ ಸಾಧನೆಯಿತ್ತು. ಪ್ರಧಾನಿ ನೆಹರು ಮುಂದೆ ನೃತ್ಯ ಪ್ರದರ್ಶನ ಮಾಡಿದಾಗ ನೆಹರು 'ಹ್ಯಾಂ!' ಅಂತ ಬಿಟ್ಟ ಬಾಯಿ ಮುಚ್ಚದೇ ನೋಡುತ್ತ ಕುಳಿತಿದ್ದರಂತೆ. ಆ ಮಟ್ಟದ ಸುಂದರಿ ಅವಳು. ಏಕ್ದಂ ಅಪ್ಸರೆ.

'ಶೋಲೆ' ಸಿನಿಮಾದ ಸೆಟ್ಟಿನಲ್ಲಿ ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಇಬ್ಬರ ಜೊತೆಗೆ ನಡೆಯುತ್ತಿತ್ತು. ಆಕಡೆ ಪೈಲ್ವಾನ ಧರ್ಮೇಂದ್ರ ಕಾಳು ಹಾಕುತ್ತಿದ್ದ. ಈಕಡೆ ಸಂಜೀವ್ ಕುಮಾರ್ ತನ್ನದೇ dignified ಶೈಲಿಯಲ್ಲಿ ಓಲೈಸುತ್ತಿದ್ದ. ಇಬ್ಬರ ಜೊತೆಗೂ ಇವಳ ಸರಸ.

'ಶೋಲೆ' ಮುಗಿಯುವ ಹೊತ್ತಿಗೆ ಎಲ್ಲ ತೈರಾಗಿತ್ತು. ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಮುಗಿದಿತ್ತು. ಕಳ್ಳ ಧರ್ಮೇಂದ್ರ ಹೇಮಾಮಾಲಿನಿಯ ಹೃದಯವನ್ನು ಕದ್ದಿದ್ದ. ಗೆದ್ದಿದ್ದ. ಆಕಡೆ ಆ ಕಳ್ಳ ಗೆದ್ದರೆ ಕಳ್ಳಾಮಳ್ಳಿಯಲ್ಲಿ ಮಳ್ಳನಾದವ ಮತ್ತೆ ಇದೇ ಸಂಜೀವ್ ಕುಮಾರ್.

ನೂತನ್ ಕೆನ್ನೆಗೆ ಬಾರಿಸಿ ಕೈಕೊಟ್ಟಾಗ ಹೇಗೋ ಮಾಡಿ ಸುಧಾರಿಸಿಕೊಂಡಿದ್ದ. ಆದರೆ ಈಗ ಫುಲ್ crush ಆಗಿಹೋದ. ಹೇಮಾಮಾಲಿನಿ ಇವನ ಹೃದಯದ ಮೇಲೆಯೇ ಥೈಯ್ಯಾಥಕ್ಕಾ ಅಂತ ಕುಣಿದು, ಅದನ್ನು ಹೊಸಕಿಹಾಕಿ, ಕೈಕೊಟ್ಟು ಪೋಯಾಚ್ ಆಗಿದ್ದಳು. ಈ ಆಘಾತದಿಂದ ಮಾತ್ರ ಸಂಜೀವ್ ಕುಮಾರ್ ಚೇತರಿಸಿಕೊಳ್ಳಲೇ ಇಲ್ಲ. ದೊಡ್ಡ ಮಟ್ಟದ ಖಿನ್ನತೆ (depression) ಆವರಿಸಿಕೊಂಡಿತು.

೧೯೭೫ ರ ಹೊತ್ತಿಗೆ ಸಂಜೀವ್ ಕುಮಾರ್ ದೊಡ್ಡ ನಟ. ಒಂದರಮೇಲೊಂದು ಹಿಟ್ ಮೂವಿಗಳನ್ನು ಕೊಟ್ಟ. ಎಂತೆಂತಹ ಮೂವಿಗಳು! ಇವತ್ತಿಗೂ ನೋಡಿ ಖುಷಿಪಡಬಹುದು. ಪ್ರಬುದ್ಧ ನಟನೆ. ಮನಮುಟ್ಟುವ ಸಂಭಾಷಣೆ. Powerful screen presence. Totally awesome performance. ಅದು ಸಂಜೀವ್ ಕುಮಾರನ ಸ್ಪೆಷಾಲಿಟಿ.

೧೯೭೬ ರಲ್ಲಿ ಬಂತು 'ಉಲ್ಝನ್' ಎನ್ನುವ suspense thriller ಮೂವಿ. ಸಂಜೀವ್ ಕುಮಾರನೇ ನಾಯಕ. ನಾಯಕನಟಿ ಹೊಸಬಳು. ಅದು ಅವಳ ಮೊದಲ ಸಿನಿಮಾ. ಅವಳೇ ಸುಲಕ್ಷಣಾ ಪಂಡಿತ್. ಆಗ ಆಕೆಗೆ ಇನ್ನೂ ಮಾತ್ರ ಇಪ್ಪತ್ತು ವರ್ಷ. ಸಂಜೀವ್ ಕುಮಾರನಿಗೆ ಬರೋಬ್ಬರಿ ಮೂವತ್ತೆಂಟು. ಖ್ಯಾತ ಲೇಖಕಿ ಶೋಭಾ ಡೇ ಹೇಳುತ್ತಾಳೆ ಒಂದು ಪುಸ್ತಕದಲ್ಲಿ. ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ. ಆದರೆ ಹೀರೋಯಿನ್ನಗಳನ್ನು ಮಾತ್ರ ಇಪ್ಪತ್ತೈದು ವರ್ಷ  ಆಗುವಷ್ಟರಲ್ಲೇ ಹುರಿದು ಮುಕ್ಕಿರುತ್ತದೆ ಈ ಬಾಲಿವುಡ್! ಅದು ನಿಜ ಅನ್ನಿ.

ಸುಲಕ್ಷಣಾ ಪಂಡಿತ್

ಈ ಸುಲಕ್ಷಣಾ ಪಂಡಿತ್ ಯಾರೋ ಅಬ್ಬೇಪಾರಿಯಲ್ಲ. ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ, ದಿಗ್ಗಜ, ಪಂಡಿತ್ ಜಸರಾಜ್ ಅವರ ಖಾಸಾ ಸಹೋದರನ ಮಗಳು. ನಂತರ ಆಕೆಯ ತಂಗಿ ವಿಜೇತಾ ಪಂಡಿತ್ ಕೂಡ ನಟಿಯೆಂದು ಮಿಂಚಿದ್ದಳು. ಸಂಗೀತ ಸಂಯೋಜಕರಾದ ಜತಿನ್-ಲಲಿತ್ ಸಹ ಈಕೆಯ ಖಾಸಾ ಸಹೋದರರು.

ಪ್ರಪ್ರಥಮ ಸಿನೆಮಾದಲ್ಲಿ ಸಂಜೀವ್ ಕುಮಾರನಂತಹ ಪ್ರಬುದ್ಧ ನಟನೊಂದಿಗೆ ನಟಿಸುವದು ಅಂದರೆ ಸಣ್ಣ ಮಾತಲ್ಲ. ಮತ್ತೆ 'ಉಲ್ಝನ್' ತುಂಬಾ intense ಅನ್ನುವಂತಹ ಸಿನೆಮಾ. ನೀವು ನೋಡಿ. ನಿಮಗೇ ಗೊತ್ತಾಗುತ್ತದೆ. ಅತಿ ಹತ್ತಿರದ ಸಂಬಂಧಗಳ ಮಧ್ಯೆ ಇರುವ complexity ಗಳನ್ನು ತೆರೆ ಮೇಲೆ ತೋರಿಸುವದು ಅಂದರೆ ಸುಲಭದ ಮಾತಲ್ಲ. ಸಂಜೀವ್ ಕುಮಾರ್ ಅಂತಹ ಅನೇಕ ಪಾತ್ರಗಳನ್ನು ನಿಭಾಯಿಸಿದ್ದ. ಅಂತಹ ಕಠಿಣ ಪಾತ್ರಗಳಲ್ಲೇ ಆತನ ಪ್ರತಿಭೆ ಮೂಡಿಬರುತ್ತಿತ್ತು. ಆದರೆ ತನ್ನ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವ ಸುಲಕ್ಷಣಾ ಪಂಡಿತ್ ಎಂಬ ಇಪ್ಪತ್ತೂ ಪೂರ್ತಿ ತುಂಬದ ಹುಡುಗಿ ಸಂಜೀವ್ ಕುಮಾರ್ ಎದುರಲ್ಲಿ ತಕ್ಕ performance ಕೊಡಬಲ್ಲಳೇ ಅಂತ ಎಲ್ಲರೂ ವಿಚಾರ ಮಾಡುತ್ತಿದ್ದರು. But she delivered a stellar performance and the movie was a super duper hit of 1976.

'ಉಲ್ಝನ್' ಚಿತ್ರದಲ್ಲಿ ಸುಲಕ್ಷಣಾ ಪಂಡಿತಳ ಅಭಿನಯ ನೋಡಿದ ಬಾಲಿವುಡ್ಡಿನ ಹಿರಿತಲೆಗಳೆಲ್ಲ 'ವಾಹ್!' ಅಂದಿದ್ದರು. ಒಬ್ಬ ಪ್ರತಿಭಾವಂತ ನಟಿ ಬಂದಳು ಅಂದುಕೊಂಡರು. ಸೌಂದರ್ಯದಲ್ಲಂತೂ ಅಪ್ಸರೆಯರನ್ನು ಮೀರಿಸುವಂತಿದ್ದಳು. ಜೊತೆಗೆ ಒಳ್ಳೆ ನಟಿ. ಮತ್ತೆ ಸಂಗೀತಗಾರರ ಕುಟುಂಬದಿಂದ ಬಂದಿದ್ದಕ್ಕೆ ಸಂಗೀತ ರಕ್ತದಲ್ಲೇ ಇತ್ತು. ಎಷ್ಟೋ ಚಿತ್ರಗೀತೆಗಳನ್ನು ತಾನೇ ಹಾಡಿದ್ದಳು. ಹಿನ್ನೆಲೆ ಗಾಯನಕ್ಕಾಗಿ Film Fare ಪ್ರಶಸ್ತಿ ಪಡೆದ ನಟಿ ಇವಳೊಬ್ಬಳೇ ಇರಬೇಕು.

ಅದೇ ಸಮಯದಲ್ಲಿ ನಟಿ ಶಬಾನಾ ಆಜ್ಮಿ ಒಮ್ಮೆ ಹೇಳಿದ್ದಳು. 'ಈ ಸುಲಕ್ಷಣಾ ಪಂಡಿತ್ ನೋಡಿದರೆ ಒಂದು ತರಹದ ಅಸೂಯೆಯಾಗುತ್ತದೆ. ಎಂತಹ  ಅಪೂರ್ವ ಸೌಂದರ್ಯವತಿ! ಎಂತಹ ಪ್ರಬುದ್ಧ ಅಭಿನೇತ್ರಿ! ಎಂತಹ ಮಧುರ ಕಂಠದ ಗಾಯಕಿ! ಇವೆಲ್ಲವೂ ಒಬ್ಬಳಲ್ಲೇ ಇವೆ ಅಂದರೆ ಎಷ್ಟು rare! ನಟಿ ಅಂತ ಇದ್ದರೆ ಸುಲಕ್ಷಣಾಳಂತಿರಬೇಕು. ನನಗೆ ಆಕೆ ತುಂಬಾ ಇಷ್ಟ. ನನ್ನ ಮೆಚ್ಚಿನ ನಟಿ ಆಕೆ.' ಒಬ್ಬ ಮಹಾನ್ ನಟಿಯಿಂದ ಮತ್ತೊಬ್ಬ budding star ಗೆ genuine compliments. ಶಬಾನಾ ಆಜ್ಮಿ ಆಗಲೇ ದೊಡ್ಡ ನಟಿ. ಅಂತವಳೇ ಹೊಸ ಹುಡುಗಿ ಸುಲಕ್ಷಣಾ ಪಂಡಿತ್ ಬಗ್ಗೆ ಹೀಗೆ ಹೇಳಿದಳು ಅಂದರೆ ವಿಚಾರ ಮಾಡಿ ಸುಲಕ್ಷಣಾ ಪಂಡಿತಳ potential ಬಗ್ಗೆ.

'ಉಲ್ಝನ್' ಸಿನಿಮಾ ಏನೋ ಮುಗಿಯಿತು. ಹಿಟ್ ಕೂಡ ಆಯಿತು. ಆದರೆ ಬೇರೊಂದು ಶುರುವಾಯಿತು. love at first sight ಅನ್ನುವ ಹಾಗೆ love at first film ಆಗಿಬಿಟ್ಟಿತು. ಸಂಜೀವ್ ಕುಮಾರನೊಡನೆ ನಟಿಸಿದ್ದ ಸುಲಕ್ಷಣಾ ಪಂಡಿತ್ ಅವನ ಮೇಲೆ ಫುಲ್ ಫಿದಾ. head over heels in love ಅಂತಾರಲ್ಲ ಆ ಮಾದರಿಯ ಹುಚ್ಚು ಪ್ರೀತಿ.

ಆದರೆ ಸಂಜೀವ್ ಕುಮಾರನ ಸಂವೇದನೆಗಳು, ಭಾವನೆಗಳು ಸತ್ತುಹೋಗಿದ್ದವು. ಮೊದಲು ನೂತನ್ ನಂತರ ಹೇಮಾಮಾಲಿನಿಯಿಂದ ತಿರಸ್ಕೃತನಾಗಿದ್ದ ಸಂಜೀವ್ ಕುಮಾರನ ಹೃದಯ ಮುರುಟಿಹೋಗಿತ್ತೋ ಅಥವಾ ಕಲ್ಲಾಗಿಹೋಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸುಲಕ್ಷಣಾ ಪಂಡಿತಳ ಪ್ರೀತಿಗೆ ಆತ ಸ್ಪಂದಿಸಲೇ ಇಲ್ಲ.

ಅವನು ಸ್ಪಂದಿಸಲಿಲ್ಲ ಅಂದ ಮೇಲೆ ಇವಳಾದರೂ ಬಿಟ್ಟಳೇ? ಇಲ್ಲ. ಅದು ಹುಚ್ಚು ಪ್ರೀತಿ. ಉಡದಂತೆ ಕಚ್ಚಿ ಹಿಡಿದಿತ್ತು. ಈಕಡೆ ಈ ಪುಣ್ಯಾತ್ಮ ಸಂಜೀವ್ ಕುಮಾರನಾದರೂ ಇಷ್ಟವಿಲ್ಲವೆಂದು ಬಿಟ್ಟುಹೋದನೇ? ಇಲ್ಲ. ಅಂತಹ ದಿವ್ಯ ಸುಂದರಿ ಮೈಮೇಲೆ ಬಿದ್ದು ಬಂದಾಗ ಅದೆಂಗೆ ಬಿಟ್ಟಾನು? ಹೇಳಿಕೇಳಿ ಗಂಡಸಿನ ಹಡಬೆ ಮನಸ್ಸು. ಸುಂದರಿಯ ಸಾಂಗತ್ಯ ಬಿಟ್ಟಿ ಸಿಗುತ್ತದೆ ಅಂದರೆ ನಾಯಿಯಂತಾಗಿಬಿಡುತ್ತದೆ. ಇಲ್ಲೂ ಅದೇ ಆಯಿತು.

ಸುಲಕ್ಷಣಾ ಪಂಡಿತ್ & ಸಂಜೀವ್ ಕುಮಾರ್. ಸೂಪರ್ ಜೋಡಿ

ಏನೋ ಒಂದು ತರಹದ ಸಂಬಂಧ ಇಬ್ಬರ ನಡುವೆ ಏರ್ಪಟ್ಟಿತು. live in relationship. ಇಬ್ಬರೂ ದಂಪತಿಯಂತೆಯೇ ಇದ್ದರು. ಅಷ್ಟೇ ದಾಂಪತ್ಯದ ಅಧಿಕೃತ ಮೊಹರು ಬಿದ್ದಿರಲಿಲ್ಲ. ಆದರೆ ಸುಲಕ್ಷಣಾ ಪಂಡಿತ್ ಮಾತ್ರ ಸಂಜೀವ್ ಕುಮಾರನನ್ನು ಯಾವದೇ ಪತ್ನಿಗಿಂತ ಹೆಚ್ಚಾಗಿ ನೋಡಿಕೊಂಡಳು. ಅವನ ಬೇಕುಬೇಡಗಳನ್ನು ಗಮನಿಸಿಕೊಂಡಳು.

ಸಂಜೀವ್ ಕುಮಾರನ ಖಿನ್ನತೆ ಜಾಸ್ತಿಯಾಯಿತು. ಅದಕ್ಕೆ ತಕ್ಕಂತೆ ಕುಡಿತ, ಸಿಗರೇಟ್ ಮಿತಿ ಮೀರತೊಡಗಿತ್ತು. ಒಂದು ಸಣ್ಣ ಹೃದಯಾಘಾತವೂ ಆಯಿತು. ಅಮೇರಿಕಾಗೆ ಹೋಗಿ ವೈದ್ಯರನ್ನು ಕಂಡು ಬಂದ. ಸಂಜೀವ್ ಕುಮಾರನ ಕುಟುಂಬದಲ್ಲಿ ಹೆಚ್ಚಿನ ಜನರಿಗೆ ಅದೇನೋ congenital heart problem ಇತ್ತಂತೆ. ಸಂಜೀವ್ ಕುಮಾರನ ಒಬ್ಬನೋ, ಇಬ್ಬರೋ ಸಹೋದರರು ಐವತ್ತು ವರ್ಷಗಳಾಗುವ ಮೊದಲೇ ಹೃದಯ ಸಂಬಂಧಿ ತೊಂದರೆಗಳಿಂದ ನಿಧನರಾಗಿದ್ದರು. ತಪಾಸಣೆ ಮಾಡಿದ ವೈದ್ಯರು ಖಡಕ್ ಎಚ್ಚರಿಕೆ ಕೊಟ್ಟಿದ್ದರು, 'ಮದ್ಯಪಾನ, ಸಿಗರೇಟ್ ಬಿಡಿ. ಇಲ್ಲವಾದರೆ ನಿಮಗೂ ಅದೇ ತೊಂದರೆ ಕಾದಿದೆ.'

ಎಲ್ಲ ಚಟ ಬಿಡೋಣ ಅಂದರೆ ಹೇಗೆ ಬಿಟ್ಟಾನು? ಕಣ್ಮುಚ್ಚಿ ಕೂತರೆ ನೂತನ್ ಕಪಾಳಕ್ಕೆ ಬಾರಿಸಿದ್ದು ನೆನಪಾಗುತ್ತಿತ್ತು. ಹೇಮಾಮಾಲಿನಿ ಕಳ್ಳಾಮಳ್ಳಿ ಆಟ ಆಡಿ ಮಳ್ಳನನ್ನಾಗಿ ಮಾಡಿಹೋಗಿದ್ದು ನೆನಪಾಗಿ ವಿಪರೀತ ವೇದನೆಯಾಗುತ್ತಿತ್ತು. ಅದನ್ನೆಲ್ಲ ಮರೆಸಲು, ತಾತ್ಕಾಲಿಕವಾಗಿ ಶಮನ ಮಾಡಲು ಮತ್ತೆ ಅವೇ ವಿಷಗಳು ಬೇಕು. ಮದ್ಯ, ಸಿಗರೇಟ್.

ಆಕೆಯನ್ನು ಅವನು ಪತ್ನಿ ಅಂತ ಸ್ವೀಕರಿಸದಿದ್ದರೂ ಸುಲಕ್ಷಣಾ ಮಾತ್ರ ಸಂಜೀವ್ ಕುಮಾರನನ್ನು ಪತಿಯಂತಲೇ ಭಾವಿಸಿ ಎಲ್ಲ ಸೇವೆ ಮಾಡಿದಳು. ಚಟಗಳಿಂದ ಬಿಡಿಸಲು ನೋಡಿದಳು. ಒಳೊಳಗೇ ಫುಲ್ ಖೋಕ್ಲಾ ಆಗಿಹೋಗಿದ್ದ ಸಂಜೀವ್ ಕುಮಾರ್ ಯಾವದಕ್ಕೂ ಸ್ಪಂದಿಸಲಿಲ್ಲ.

ಹೀಗೆ ಸಂಜೀವ್ ಕುಮಾರನ ಪ್ಯಾರ್ ಮೊಹಬ್ಬತ್ತಿನ ಮೋಹದಲ್ಲಿ ಕಳೆದುಹೋದ ಸುಲಕ್ಷಣಾಗೆ ಹೆಚ್ಚಿನ ಅವಕಾಶಗಳೂ ಬರಲಿಲ್ಲ. ಮತ್ತೆ ಬಾಲಿವುಡ್ಡಿನಲ್ಲಿ ಕೇವಲ ಸೌಂದರ್ಯ, ಪ್ರತಿಭೆ ಇದ್ದಾಕ್ಷಣ ಎಲ್ಲರೂ ಟಾಪ್ ಹೀರೋಯಿನ್ ಆಗುವದಿಲ್ಲ. ಎಷ್ಟೋ ಮಂದಿಯ ಹಾಸಿಗೆಯನ್ನು ಗರಮ್ ಮಾಡಬೇಕಾಗುತ್ತದೆ. ಯಾರ್ಯಾರದ್ದೋ ಜೊತೆ ಚಿತ್ರ ವಿಚಿತ್ರ ಒಂದು ರಾತ್ರಿಯ ಸಂಬಂಧಗಳನ್ನು ಮಾಡಿಕೊಂಡು ಯಶಸ್ಸಿನ ಏಣಿ ಹತ್ತಬೇಕಾಗುತ್ತದೆ. ಯಶಸ್ಸೇ ಮುಖ್ಯ ಅನ್ನುವ ನಟಿಯರು ಎಲ್ಲದಕ್ಕೂ ರೆಡಿ ಇರುತ್ತಾರೆ. ಹಾಗೆ ಮಾಡಿಯೇ ಒಂದು ಮಟ್ಟಕ್ಕೆ ಯಶಸ್ವಿ ಕೂಡ ಆಗುತ್ತಾರೆ. ಸಂಜೀವ್ ಕುಮಾರನನ್ನು ಆರಾಧಿಸುತ್ತಿದ್ದ ಸುಲಕ್ಷಣಾ ಇವೆಲ್ಲ ಮಾಡಲಿಲ್ಲ. ಮತ್ತೆ ಒಳ್ಳೆ ಸಂಸ್ಕಾರವಂತ ಮನೆತನದ ಹುಡುಗಿ. ಒಟ್ಟಿನಲ್ಲಿ ೧೯೮೦ ರ ಹೊತ್ತಿಗೆ ಆಕೆಯನ್ನು ಬಾಲಿವುಡ್ ಹಳೆಯ ಮಾಲು, old stock ಅಂತ discard ಮಾಡಿಯಾಗಿತ್ತು. ಆಗ ಆಕೆಗೆ ಕೇವಲ ಇಪ್ಪತ್ತನಾಲ್ಕು ವರ್ಷ ವಯಸ್ಸು.

ಈಕಡೆ ಸಂಜೀವ್ ಕುಮಾರ್ ವಿಪರೀತವಾಗಿ ಊದಿಕೊಳ್ಳತೊಡಗಿದ್ದ. ಅವನಿಗೂ ನಲವತ್ತು ವರ್ಷದ ಮೇಲಾಗಿತ್ತಲ್ಲ. ಸಣ್ಣ ಪ್ರಮಾಣದ ಬೊಜ್ಜು ಬರುವದು ಸಹಜ. ಆದರೆ ಇವನ ಕುಡಿತ ಇತ್ಯಾದಿ ಸೇರಿ ಜಾಸ್ತಿಯೇ ದಪ್ಪಗಾದ. ಸಂಜೀವ್ ಕುಮಾರ್ ಮೊದಲಿಂದಲೂ ಸ್ವಲ್ಪ heavyset ಮನುಷ್ಯ. ಆದರೆ ಗಾತ್ರದಿಂದಾಗಿ ವಿಕಾರವಾಗಿ ಎಂದೂ ಕಾಣುತ್ತಿರಲಿಲ್ಲ. ಸುಂದರನಾಗಿದ್ದ. pleasantly plump ಅನ್ನಬಹುದಿತ್ತು ಅಷ್ಟೇ.

೧೯೮೦ ರ ಸಮಯದಲ್ಲಿ ಸಂಜೀವ್ ಕುಮಾರ್ ಜಾಸ್ತಿ ದಪ್ಪಗಾದರೂ ಅವಕಾಶಗಳೇನೂ ಕಮ್ಮಿಯಾಗಲಿಲ್ಲ. ಮತ್ತೆ ಸಂಜೀವ್ ಕುಮಾರ್ ಸಹಿತ ತನ್ನ ವಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ನಟನೆಗೆ ನಿಂತ ಅಂದರೆ ಮುಗಿಯಿತು. ಯಾವಾಗಲೂ stellar performance. ಅದರ ಬಗ್ಗೆ ದೂಸರಾ ಮಾತೇ ಇಲ್ಲ.

ಎಂತೆಂತಹ ಮಂಗ್ಯಾ ತರಹ ಇರುವವರನ್ನೇ ಸುಂದರರನ್ನಾಗಿ ತೋರಿಸುವ ಬಾಲಿವುಡ್ ಮಂದಿಗೆ ವಿಪರೀತವಾಗಿ ಊದಿಕೊಂಡಿದ್ದ ಸಂಜೀವ್ ಕುಮಾರನನ್ನು presentable ಅಂತ ತೋರಿಸುವದು ಒಂದು ದೊಡ್ಡ ಕಷ್ಟವೇ? ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಸಂಜೀವ್ ಕುಮಾರ್ ಸದಾ ಸೂಟ್ ಧರಿಸಿಕೊಂಡೇ ಪಾತ್ರ ಮಾಡುತ್ತಿದ್ದ. ಅದು ಅವನಿಗೆ ಒಪ್ಪುತ್ತಿತ್ತು ಕೂಡ. ಮತ್ತೆ ಒಳ್ಳೆ ಸೂಟ್ ಇದ್ದುಬಿಟ್ಟರೆ ಸಾಕು. ಎಲ್ಲ ಸಣ್ಣ ಪುಟ್ಟ ನ್ಯೂನ್ಯತೆಗಳು ಅದರಲ್ಲಿ ಮುಚ್ಚಿಹೋಗುತ್ತವೆ. ಆಕರ್ಷಕ ಸೂಟ್, ಇಲ್ಲ ಕನಿಷ್ಠ ಪಕ್ಷ ಒಂದು ಕೋಟ್ ಧರಿಸಿಯೇ ನಟಿಸುತ್ತಿದ್ದ. ಹೀಗಾಗಿ ಸಂಜೀವ್ ಕುಮಾರನ ಸ್ಥೂಲ ಕಾಯ ಒಂದು obstacle ಆಗಲೇ ಇಲ್ಲ. ಅದಕ್ಕೇ ಅಲ್ಲವೇ ಹೇಳೋದು, ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ ಅಂತ.

ನವೆಂಬರ್ ೬, ೧೯೮೫. ದೊಡ್ಡ ದುರ್ದಿನ. ಸಂಜೀವ್ ಕುಮಾರ್ ತೀರಿಹೋದ. ವೈದ್ಯರು ಹೇಳಿದ ಮಾತು ನಿಜವಾಗಿತ್ತು. ಅವನ ಸಹೋದರರು ತೀರಿಹೋದ ರೀತಿಯಲ್ಲೇ ತೀರಿಹೋಗಿದ್ದ. ದೊಡ್ಡ ಹೃದಯಾಘಾತವಾಗಿತ್ತು. ಹೆಚ್ಚಿನ ಸಿನೆಮಾಗಳಲ್ಲಿ ಐವತ್ತು ವರ್ಷ ಮೀರಿದ ವ್ಯಕ್ತಿಯ ಪಾತ್ರಗಳಲ್ಲೇ ಪ್ರಬುದ್ಧ ಅಭಿನಯ ನೀಡಿದ್ದ ಮಹಾನ್ ನಟ ಸಂಜೀವ್ ಕುಮಾರ್ ತಾನು ಮಾತ್ರ ಐವತ್ತು ವರ್ಷ ಮುಟ್ಟುವ ಮೊದಲೇ ತನ್ನ ನಲವತ್ತೇಳನೆಯ ವಯಸ್ಸಿನಲ್ಲಿ ನಿಧನನಾಗಿದ್ದು ಒಂದು ದೊಡ್ಡ ವಿಪರ್ಯಾಸ. ಅದಕ್ಕಿಂತ ಹೆಚ್ಚಾಗಿ ದೊಡ್ಡ ದುರಂತ. ಅಂತಹ ಮನೋಜ್ಞ ಕಲಾವಿದ ಇನ್ನೊಂದಿಷ್ಟು ವರ್ಷ ಇರಬೇಕಿತ್ತು. Miss him a lot. What an actor he was!

ಸಂಜೀವ್ ಕುಮಾರನ ನಿಧನ ಸುಲಕ್ಷಣಾ ಪಂಡಿತ್ ಗೆ ದೊಡ್ಡ ಆಘಾತ. big shock. ಅದ್ಯಾವ ಮಟ್ಟದ ಆಘಾತ ಎಂದರೆ  ಅವಳು ಆ ಆಘಾತದಿಂದ ಅಂದು ಒಂದು ತರಹದ trans ಸ್ಥಿತಿಗೆ ಹೋದವಳು ಅದರಿಂದ ಇನ್ನೂ ಹೊರಗೇ ಬಂದಿಲ್ಲ. She has become a total mental wreck. 

ಸಂಜೀವ್ ಕುಮಾರ್ ಹೋಗಿದ್ದೇ ಹೋಗಿದ್ದು ಸುಲಕ್ಷಣಾ ಪಂಡಿತ್ ತನ್ನಲ್ಲೇ ತಾನು ಕಳೆದುಹೋದಳು. ಆಕೆಗಿನ್ನೂ ಆವಾಗ ಜಸ್ಟ್ ಇಪ್ಪತ್ತೊಂಬತ್ತು ವರ್ಷ. ಬಾಲಿವುಡ್ ಅಂತೂ ಎಂದೋ ಬಾಗಿಲು ಮುಚ್ಚಿತ್ತು. ಅಲ್ಲಿ ಇಲ್ಲಿ ಹಾಡುವ ಅವಕಾಶಗಳು ಸಿಗುತ್ತಿದ್ದವು. ಅವೂ ಅಷ್ಟಕಷ್ಟೇ. ಈಗಂತೂ ಒಂದು ತರಹದ ಹುಚ್ಚಿ ಬೇರೆ ಆಗಿಬಿಟ್ಟಳು. ನಿರುಪದ್ರವಿ ಹುಚ್ಚಿ.

ತಲೆ ಮೇಲೊಂದು ಸೂರು ಅಂತ ಮುಂಬೈನಲ್ಲಿ ಒಂದು ಫ್ಲಾಟ್ ಇತ್ತು. ಸಂಜೀವ್ ಕುಮಾರ್ ಸತ್ತುಹೋದ ಮೇಲೆ ಇವಳು ಒಬ್ಬಳೇ. ತಲೆ ಪೂರ್ತಿ ಕೆಟ್ಟುಹೋಯಿತು. ಸದಾ ಅವನ ಧ್ಯಾನದಲ್ಲೇ ಇರುತ್ತಿದ್ದಳು. ಅವಳ ಭ್ರಮೆಯ ಲೋಕದಲ್ಲಿ ಆತ ಸತ್ತಿರಲಿಲ್ಲ. ಮತ್ತೆ ಮತ್ತೆ 'ಉಲ್ಝನ್' ಸಿನೆಮಾದ ವೀಡಿಯೊ ಹಾಕಿಕೊಂಡು ನೋಡುತ್ತ ದಿನ ಕಳೆಯುತ್ತಿದ್ದಳು. ಬಾಕಿ ಯಾವುದರ ಬಗ್ಗೆಯೂ ಖಬರೇ ಇಲ್ಲ. ಯಾವಾಗಲೋ ಅಪರೂಪಕ್ಕೆ ಕೆಲಸದವಳು ಬಂದು ಮನೆ ಕ್ಲೀನ್ ಮಾಡಿಕೊಟ್ಟರೆ ಅದೇ ದೊಡ್ಡ ಮಾತು. ಸ್ನಾನ, ಊಟ, ತಿಂಡಿ, ನಿದ್ರೆ ಯಾವದರ ಬಗ್ಗೆ ಕೂಡ ಖಬರಿಲ್ಲ. ಮತ್ತೆ ಆಕೆಗೆ ಇದ್ದ ಸಂಬಂಧಿಕರಾದರೂ ಯಾರು? ಆಗಷ್ಟೇ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದ ತಂಗಿ ವಿಜೇತಾ ಪಂಡಿತ್ ಬ್ಯುಸಿ. ತಮ್ಮಂದಿರಾದ ಜತಿನ್-ಲಲಿತ್ ಆಗ ತುಂಬಾ ಚಿಕ್ಕವರು. ಬಾಲಿವುಡ್ಡಿನಲ್ಲಿ ಕಾಲಿಟ್ಟಿರಲೂ ಇಲ್ಲ. ಯಾರಾದರೂ ಬಂದು ಸಹಾಯ ಮಾಡೋಣ ಅಂದರೆ ಸುಲಕ್ಷಣಾ ಅದಕ್ಕೆ ತೆರೆದುಕೊಳ್ಳಬೇಕಲ್ಲ? ಒಪ್ಪಬೇಕಲ್ಲ? ಅದೆಲ್ಲ ತಲೆಗೆ ಹೋಗಬೇಕಲ್ಲ? ಪಾಪದವಳು ಸುಲಕ್ಷಣಾ. ತನ್ನದೇ ಲೋಕದಲ್ಲಿ ಇರುತ್ತಿದ್ದಳು. ಸಂಜೀವ್ ಕುಮಾರ್ ಜೊತೆ ನಟಿಸಿದ ದೃಶ್ಯಗಳನ್ನು ಮತ್ತೆ ಮತ್ತೆ ನೋಡುವದು. ಅವನ ಜೊತೆ ಹಾಡಿ ಕುಣಿದ ಡುಯೆಟ್ ಹಾಡುಗಳನ್ನು ನಿರಂತರವಾಗಿ ಕೇಳುವದು ಮತ್ತು ಹಾಡುವದು. ಇವನ್ನೇ ಮಾಡುತ್ತ ಹೇಗೋ ಬದುಕಿದ್ದಳು.

ಹೇಳಿದರೆ ನೀವು ನಂಬಲಿಕ್ಕಿಲ್ಲ. ಆದರೆ ಸುಲಕ್ಷಣಾ ಪಂಡಿತಳ ವಿಚಿತ್ರ ಭ್ರಮಾಲೋಕದ ಜೀವನ ಯಾವ ಮಟ್ಟವನ್ನು ಮುಟ್ಟಿತ್ತು ಅಂದರೆ ಆಕೆಯ ಮನೆಯ ಒಳಭಾಗದ ತುಂಬೆಲ್ಲ ಪಾಚಿ (moss, fungus) ಫುಲ್ ಬೆಳೆದುಬಿಟ್ಟಿತ್ತು. ಅದೂ ಆಕೆಗೆ ಖಬರಿಲ್ಲ. ಸಂಜೀವ್ ಕುಮಾರನ ಸುತ್ತ ಒಂದು ಭ್ರಮಾಲೋಕ ಸೃಷ್ಟಿಸಿಕೊಂಡು ಅದರಲ್ಲೇ ಕಳೆದುಹೋಗಿದ್ದಳು. ಇದು ಸುಮಾರು ೧೯೯೦ ರ  ಮಾತಿರಬಹುದು. ಸಂಜೀವ್ ಕುಮಾರ್ ತೀರಿಹೋಗಿ ಐದಾರು ವರ್ಷಗಳ ಬಳಿಕ. ನೀವೇ ಊಹಿಸಿಕೊಳ್ಳಬಹುದು ಪಾಪ ಅವಳ ಮನಃಸ್ಥಿತಿ ಹೇಗಿತ್ತು ಅಂತ.

ಪರಿಸ್ಥಿತಿ ಎಲ್ಲಿಯವರೆಗೆ ಬಿಗಡಾಯಿಸಿತು ಅಂದರೆ ಅವಳಿದ್ದ ಆ ಮನೆಯಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಅಲ್ಲೇ ಆಕೆಯನ್ನು ಉಳಿಯಲು ಬಿಟ್ಟರೆ ಸತ್ತೇಹೋಗುತ್ತಾಳೆ ಅನ್ನುವ ಪರಿಸ್ಥಿತಿ ಬಂದಾಗ ತಂಗಿ ವಿಜೇತಾ ಪಂಡಿತ್, 'ಈ ಅಕ್ಕನನ್ನು ಹೀಗೇ ಬಿಟ್ಟರೆ ಇನ್ನು ಕೆಲವೇ ದಿವಸಗಳಲ್ಲಿ ಇವಳು ಕೂಡ ಸ್ವರ್ಗ ಸೇರುತ್ತಾಳೆ. ಬೇರೆ ಏನಾದರೂ ವ್ಯವಸ್ಥೆ ಮಾಡಬೇಕು' ಅಂತ ನಿರ್ಧರಿಸಿದಳು. ಆದರೆ ಬೇಕಲ್ಲ ರೊಕ್ಕ? ಅದೇ ದೊಡ್ಡ ಪ್ರಾಬ್ಲಮ್. ಸುಲಕ್ಷಣಾ ಪಂಡಿತ್ ಅಂತೂ ಫುಲ್ ಠಣ್ ಠಣ್ ಗೋಪಾಲ್. ರೊಕ್ಕ ಹೋಗಲಿ ಆಕೆಗೆ ದಿನ ನಿತ್ಯದ ಊಟಕ್ಕೂ ತೊಂದರೆ. ಆಗ ಆಪತ್ಬಾಂಧವನಂತೆ ಬಂದವನು ನಟ ಜಿತೇಂದ್ರ. ಸುಲಕ್ಷಣಾ ಪಂಡಿತ್ ಜೊತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ. ಅವರದ್ದು ಹಿಟ್ ಜೋಡಿ ಕೂಡ. ಅದನ್ನೆಲ್ಲ ನೆನಪಿಸಿಕೊಂಡ ಜಿತೇಂದ್ರ ದೊಡ್ಡ ಮನಸ್ಸು ಮಾಡಿ, ಪೂರ್ತಿ ಎಕ್ಕುಟ್ಟಿಹೋಗಿದ್ದ ಆ ಸುಲಕ್ಷಣಾ ಪಂಡಿತಳ ಪಾಚಿಗಟ್ಟಿ ಹಾಳುಬಿದ್ದಿದ್ದ ಮನೆಯನ್ನು ಕೊಂಡುಕೊಂಡ. ಮಾರ್ಕೆಟ್ ರೇಟಿಗಿಂತ ಜಾಸ್ತಿ ಬೆಲೆಯನ್ನು ಕೊಟ್ಟೇ ಖರೀದಿ ಮಾಡಿದ. ಹಳೆಯ ಸಹನಟಿಯ ಉಳಿದ ಜೀವನಕ್ಕೆ ಉಪಯೋಗವಾಗಲಿ ಅನ್ನುವ ಉದಾತ್ತ ಭಾವನೆ. ಜಿತೇಂದ್ರ ಕೊಟ್ಟ ರೊಕ್ಕದಿಂದ ಒಂದು ಪುಟ್ಟ ಮನೆ ಖರೀದಿ ಮಾಡಿದರು. ಸುಲಕ್ಷಣಾ ಪಂಡಿತಳನ್ನು ಅಲ್ಲಿಗೆ ಶಿಫ್ಟ್ ಮಾಡಿದ ತಂಗಿ ವಿಜೇತಾ ಅಕ್ಕನ ದೇಖರೇಖಿಗೆ ನಿಂತಳು. ಆಕೆಗೂ ಅವಳ ಸಂಸಾರವಿತ್ತು. ಸಂಗೀತ ಸಂಯೋಜಕ ಆದೇಶ ಶ್ರೀವಾತ್ಸವ ಎಂಬುವವನನ್ನು ವಿವಾಹವಾಗಿದ್ದ ವಿಜೇತಾ ಎರಡು ಚಿಕ್ಕಮಕ್ಕಳ ತಾಯಿ. ಹಾಗಿದ್ದರೂ ಅಕ್ಕನನ್ನು ಬೇರೆ ಮನೆಗೆ ಶಿಫ್ಟ್ ಮಾಡಿದ ನಂತರ ಆಗಾಗ ಬಂದು ನೋಡಿ ಹೋಗುತ್ತಿದ್ದಳು. ತಕ್ಕಮಟ್ಟಿಗೆ ಅಕ್ಕನನ್ನು ನೋಡಿಕೊಂಡಳು. ಇಲ್ಲವಾದರೆ ಸುಲಕ್ಷಣಾ ಪಂಡಿತ್ ಎಂದೋ ಹರೋಹರ ಆಗಿರುತ್ತಿದ್ದಳು.

ಸುಲಕ್ಷಣಾಗೆ ಸುಮಾರು ನಲವತ್ತು ವರ್ಷ ವಯಸ್ಸು ಆಗುವ ಹೊತ್ತಿಗೆ ಇಷ್ಟೆಲ್ಲ ಆಗಿಹೋಗಿತ್ತು. ಒಂದು ಕಾಲದ ದಿವ್ಯ ಸುಂದರಿ ಈಗ ಜೀವಚ್ಚವ. Walking dead.

ಇಷ್ಟೆಲ್ಲ ಆಗಿಯೇ ಇಪ್ಪತ್ತು ವರ್ಷಗಳ ಮೇಲಾಗಿದೆ. ಈಗ ಸುಲಕ್ಷಣಾ ಪಂಡಿತ್ ಗೆ ಅರವತ್ತು ವರ್ಷ. ಮನಃಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ಸಂಜೀವ್ ಕುಮಾರ್ ತೀರಿಹೋಗಿ ಆಗಲೇ ಮೂವತ್ತು ವರ್ಷದ ಮೇಲಾಗಿಹೋಯಿತು. ಇವಳು ಮಾತ್ರ ಕಳೆದ ಮೂವತ್ತು ವರ್ಷಗಳಿಂದ ತನ್ನದೇ ಭ್ರಮಾಲೋಕದಲ್ಲಿ ಇದ್ದಾಳೆ. She lives in the time frozen reality of her own.

ಈಗ ಸ್ವಲ್ಪ ವರ್ಷಗಳ ಹಿಂದೆ ಮನೆಯಲ್ಲೇ ಬಿದ್ದು ಮೂಳೆ ಮುರಿಯಿತಂತೆ. ಆವಾಗ ತನ್ನ ಮನೆಗೇ ಕರೆದುಕೊಂಡು ಬಂದಳು ವಿಜೇತಾ ಪಂಡಿತ್. ಅವಳ ಮನೆಯ ಒಂದು ಕೋಣೆಯಲ್ಲಿ ಸದಾ ಮಲಗಿಯೇ ಇರುತ್ತಾಳೆ ಸುಲಕ್ಷಣಾ ಪಂಡಿತ್. ತಾನೇ ಹಾಡಿದ್ದ ಹಳೆಯ ಹಾಡುಗಳೇ ಸಂಗಾತಿ. ಅವು ಬೇಜಾರಾದಾಗ ಮತ್ತೆ ಮತ್ತೆ ಸಂಜೀವ್ ಕುಮಾರನ ಜೊತೆ ನಟಿಸಿದ್ದ ಸಿನೆಮಾಗಳ ವೀಡಿಯೊ ನೋಡುವದು. ಅದರಲ್ಲಿ ಏನೂ ಬದಲಾವಣೆ ಇಲ್ಲ. ತಂಗಿ ವಿಜೇತಾ ಬಿಟ್ಟರೆ ಬೇರೆ ಯಾರ ಜೊತೆಗೂ ಮಾತಿಲ್ಲ, ಕಥೆಯಿಲ್ಲ. ಬೇರೆಯೇ ಲೋಕದಲ್ಲಿ ಇರುತ್ತಾಳೆ ಅಂದ ಮೇಲೆ ಆ ಭ್ರಮಾಲೋಕದಲ್ಲಿ ಬೇರೆ ಜನ ಇದ್ದರೆ ತಾನೇ ಪರಿಚಯ ಹಿಡಿಯುವದು, ಮಾತಾಡುವದು ಇತ್ಯಾದಿ? Totally lost case!

ಸುಲಕ್ಷಣಾ ಪಂಡಿತಳ ಈಗಿನ ಹಾಲತ್ ಇಷ್ಟು ನಾಜೂಕಾಗಿದೆ ಅಂದರೆ ಕೆಲವು ವಿಷಯಗಳನ್ನು ಅವಳಿಗೆ ತಿಳಿಸುವದೇ ಇಲ್ಲವಂತೆ. ತಿಳಿಸಿದರೆ ಮತ್ತೆಲ್ಲಿ ಮತ್ತೊಮ್ಮೆ ಆಘಾತಕ್ಕೆ ಒಳಗಾಗಿ ಮತ್ತೇನಾದರೂ ಆದೀತೋ ಅಥವಾ ಇವಳೂ ತೀರಿಹೋದರೆ ಅಂತ ಆತಂಕ. ತಂಗಿ ವಿಜೇತಾ ಪಂಡಿತ್ ಯಾವದೋ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಳು, 'ಎಲ್ಲರಿಗಿಂತ ಹಿರಿಯವಳಾಗಿದ್ದ ನಮ್ಮಕ್ಕ ಸಂಧ್ಯಾ ಭಯಾನಕವಾಗಿ ಕೊಲೆಯಾದಳು. ಅದನ್ನೂ ನಾವು ಸುಲಕ್ಷಣಾಳಿಗೆ ತಿಳಿಸಲಿಲ್ಲ. ಮೊನ್ನೆ ನನ್ನ ಪತಿ ಆದೇಶ ಕ್ಯಾನ್ಸರ್ ಗೆ ಬಲಿಯಾದ. ಅದನ್ನೂ ನಾವು ಸುಲಕ್ಷಣಾಳಿಗೆ ಹೇಳಲಿಲ್ಲ. ಯಾಕೆಂದರೆ ಅವಳದ್ದು ಮೊದಲೇ ಘಾಸಿಗೊಂಡಿರುವ ಮನಸ್ಸು. ಇಂತಹ ಆಘಾತಕಾರಿ ವಿಷಯಗಳನ್ನು ತಿಳಿಸಿದರೆ ಅವಳಿಗೆ ಮತ್ತೇನಾದರೂ ಆಗಿಬಿಟ್ಟರೆ ಅಂತ ಆತಂಕ. ಆಕೆಗೆ ಸಣ್ಣ ಪ್ರಮಾಣದ ಆಘಾತವನ್ನೂ ಸಹ ಸಹಿಸುವ ಶಕ್ತಿಯಿಲ್ಲ.' ಪಾಪ!

ಸುಲಕ್ಷಣಾ ಪಂಡಿತಳ ಹಿರಿಯಕ್ಕ ಸಂಧ್ಯಾ ಪಂಡಿತ್ ಸಿಂಗ್. ಸಹೋದರಿಯರಲ್ಲೇ ಅತ್ಯಂತ ಸುಂದರಿ ಅವಳಂತೆ. ಆಕೆಯನ್ನು ಸಿನೆಮಾ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಸಿನೆಮಾದಲ್ಲಿ ಆಸಕ್ತಿಯಿರದ ಆಕೆ ಯಾವದೋ ದೊಡ್ಡ ಸರ್ಕಾರಿ ಬಾಬು ಸಿಂಗ್ ಎಂಬುವವನನ್ನು ಮದುವೆಯಾಗಿ ಆರಾಮ್ ಇದ್ದಳು. ಒಂದೆರೆಡು ವರ್ಷಗಳ ಹಿಂದೆ ಭೀಕರವಾಗಿ ಕೊಲೆಯಾದಳು. ಸ್ವಂತ ಮಗನೇ ಅಮ್ಮನ ಬಳಿಯಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಡವೆಗಳನ್ನು ದೋಚಲು ಅಮ್ಮನನ್ನು ಕೊಂದುಬಿಟ್ಟ ಅಂತ ಪೋಲೀಸರ ಆರೋಪ. ಇನ್ನೂ ಕೋರ್ಟಿನ ತೀರ್ಮಾನ ಬಂದಿಲ್ಲ. ಇಂತಹ ಅಕ್ಕನ ಮಗನನ್ನು ಬಾಲ್ಯದಲ್ಲಿ ಆಡಿಸಿ ಬೆಳೆಸಿದವರು ಇದೇ ಸುಲಕ್ಷಣಾ ಮತ್ತು ವಿಜೇತಾ ಅನ್ನುವ ಚಿಕ್ಕಮ್ಮಂದಿರು. ಅಂತಹ ಹುಡುಗ ಇವರ ಅಕ್ಕನನ್ನು, ಸ್ವಂತ ತಾಯಿಯನ್ನು ಕೊಂದುಬಿಟ್ಟ ಅನ್ನುವ ಸುದ್ದಿ ಕೇಳಿದರೆ ಸುಲಕ್ಷಣಾಳ ಹಾಲತ್ ಅಷ್ಟೇ ಮತ್ತೆ. ಅಥವಾ ಅವಳಿಗೆ ಅವೆಲ್ಲ ಗೊತ್ತಾದರೂ ಆಗುತ್ತದೆಯೋ ಇಲ್ಲವೋ ಅನ್ನುವದೂ ದೊಡ್ಡ ಡೌಟ್. ಯಾಕೆಂದರೆ ಕಳೆದ ಮೂವತ್ತು ವರ್ಷಗಳಿಂದ ಆಕೆಯ brain ಬಂದಾಗಿಬಿಟ್ಟಿದೆ.

ಮೊನ್ನಿತ್ತಲಾಗೆ ಯಾಕೋ ನನ್ನ ಮೆಚ್ಚಿನ ನಟ ಸಂಜೀವ್ ಕುಮಾರ್ ಮತ್ತು ನೆಚ್ಚಿನ ನಟಿ ಸುಲಕ್ಷಣಾ ಪಂಡಿತ್ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಗ ಇದೆಲ್ಲ ವಿಷಯ ತಿಳಿಯಿತು. ಹೃದಯ ಭಾರವಾಯಿತು. ಇಂತಹ ಪರಿಸ್ಥಿತಿ ಬರಬಾರದಿತ್ತು.

ಸಂಜೀವ್ ಕುಮಾರನ ನಸೀಬ್ ನೋಡಿದರೆ ಪಾಪ ಅನ್ನಿಸುತ್ತದೆ. ತಾನಾಗೇ ಒಲಿದು ಬಂದು, ಶಾಸ್ತ್ರೋಕ್ತವಾಗಿ ಮದುವೆಯಾಗದಿದ್ದರೂ ಯಾವದೇ ಪತ್ನಿಗೆ ಕಮ್ಮಿಯಿಲ್ಲದಂತೆ ಸೇವೆ ಮಾಡಿದ್ದ, ತಾಯಿಯಂತೆ ಸಲುಹಿದ್ದ, ಅಪರೂಪದ ಸುಂದರಿ ಸುಲಕ್ಷಣಾಳನ್ನು ಒಪ್ಪಿ, ಅವಳ ಭಾವನೆಗಳಿಗೆ ಸ್ಪಂದಿಸಿ, ಅವಳಿಗೊಂದು ಬಾಳು ಕೊಟ್ಟಿದ್ದರೆ ಎಲ್ಲಿ ಇವನ ಬಾಳೂ ಹಸನಾಗುತ್ತಿತ್ತೇನೋ!? ಯಾರಿಗೆ ಗೊತ್ತು. ಒಂದು ಅದ್ಭುತ ಫಿಲ್ಮಿ ಜೋಡಿಯಂತೂ ಆಗುತ್ತಿತ್ತು. ಅದರಲ್ಲಿ ಡೌಟೇ ಇಲ್ಲ. ಅವರಿಬ್ಬರ ಮಧ್ಯೆ super chemistry ಇತ್ತು.

ಏನು ಮಾಡಲಿಕ್ಕೆ ಬರುತ್ತದೆ? ಸಂಜೀವ್ ಕುಮಾರ್ ನೂತನ್, ಹೇಮಾಮಾಲಿನಿಯ ಗುಂಗಿನಿಂದ ಹೊರಗೇ ಬರಲಿಲ್ಲ. ಅದರಲ್ಲೇ ಕೊರಗಿ ಕೊರಗಿ ಕಳೆದುಹೋದ. ಸತ್ತೂಹೋದ. ಸುಲಕ್ಷಣಾ ಅವನ ಗುಂಗಿನಲ್ಲಿ ಕಳೆದುಹೋಗಿದ್ದಾಳೆ. ಜೀವಂತ ಶವದಂತೆ ಬದುಕಿದ್ದಾಳೆ. ಮುಂದೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಜೋಡಿಯದು ದುರಂತ ಕಥೆ.

ಸುಲಕ್ಷಣಾ ಪಂಡಿತ್

Monday, March 21, 2016

ಮೀರ್ ಡಾಗನ್ - ಇಸ್ರೇಲಿ ಬೇಹುಗಾರಿಕೆಯ ಧೀಮಂತ ನಾಯಕ

ಮೊಸ್ಸಾದ್ (Mossad)! ಹೆಸರು ಕೇಳಿರಬೇಕಲ್ಲ? ಇಸ್ರೇಲ್ ಎಂಬ ಪುಟ್ಟ ದೇಶದ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ. ಮೊಸ್ಸಾದ್ ಅಂತ ನೆನಪಾದರೂ ಸಾಕು ಇಸ್ರೇಲಿನ ವಿರುದ್ಧ ಕಿತಾಪತಿ ಮಾಡುವವರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಅದಕ್ಕೆ ಕಾರಣವಿಲ್ಲದಿಲ್ಲ. 'ನೀವು ಇಸ್ರೇಲಿಗೆ ಯಾವದೇ ತರಹದಲ್ಲಿ ಅಪಾಯವನ್ನು ತಂದೊಡ್ಡುತ್ತೀರಿ ಅಥವಾ ಇಸ್ರೇಲ್ ವಿರುದ್ಧ ಪಾತಕ ಎಸೆಗಿದ್ದೀರಿ ಅಂತಾದರೆ ಇಸ್ರೇಲ್ ನೀವು ಬ್ರಹ್ಮಾಂಡದ ಯಾವ ಮೂಲೆಯಲ್ಲಿದ್ದರೂ ಬಂದು ನಿಮ್ಮನ್ನು ಬೇಟೆಯಾಡುತ್ತದೆ. No exceptions!' ಅನ್ನುವ ಅಲಿಖಿತ ನಿಯಮವೊಂದನ್ನು ಒಂದಾದಮೇಲೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಸಾಬೀತು ಮಾಡಿ ತೋರಿಸಿದ್ದು ಮೊಸ್ಸಾದ್. ವಿಶ್ವದ ಬೇಹುಗಾರಿಕೆ ಸಂಸ್ಥೆಗಳಲ್ಲೇ ಮೊಸ್ಸಾದಿಗೆ ಅಗ್ರಸ್ಥಾನ. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೂಡ ಮೊಸ್ಸಾದಿನಿಂದ ಪಾಠ ಹೇಳಿಸಿಕೊಳ್ಳುತ್ತದೆ. ತನ್ನ ಹತ್ತಿರ ಸಾಧ್ಯವಿಲ್ಲದ ಅಥವಾ ಕೆಲವು ಅನಿವಾರ್ಯತೆಗಳಿಂದ ಮಾಡಲಾಗದ ಕಪ್ಪು ಕಾರ್ಯಾಚರಣೆಗಳನ್ನು (black ops, covert operations) ಮೊಸ್ಸಾದ್ ಮೂಲಕ ಮಾಡಿಸಿಬಿಡುತ್ತದೆ. When it comes to executing sensational black ops, no one is better than Israelis. They are the supreme experts.

ಮೀರ್ ಡಾಗನ್

ಇಂತಹ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಯ ನೇತೃತ್ವ ವಹಿಸಿದ್ದ ಟಾಪ್ ಬೇಹುಗಾರ ಮೀರ್ ಡಾಗನ್ ತಮ್ಮ ಎಪ್ಪತ್ತೊಂದನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ೨೦೦೨ ರಿಂದ ೨೦೧೦ ರ ವರಗೆ ನಿರಂತರವಾಗಿ ಎಂಟು ವರ್ಷಗಳ ಕಾಲ ಮೊಸ್ಸಾದಿನ ಡೈರೆಕ್ಟರ್ ಆಗಿದ್ದವರು ಅವರು. ಎಂಟು ವರ್ಷಗಳ ಕಾಲ ಮೊಸ್ಸಾದಿನಂತಹ ಸಂಸ್ಥೆಯ ಡೈರೆಕ್ಟರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವದೆಂದರೆ ಸಾಮಾನ್ಯ ಮಾತಲ್ಲ. ಹುಲಿಯ ಮೇಲಿನ ಸವಾರಿಯದು. ಮೊಸ್ಸಾದಿನ ರಹಸ್ಯ ಕಾರ್ಯಾಚರಣೆಗಳು ವಿಶ್ವದ ಎಲ್ಲಾ ಕಡೆ ನಡೆಯುತ್ತಲೇ ಇರುತ್ತವೆ. ಸದಾ ಸಿಕ್ಕಾಪಟ್ಟೆ ಒತ್ತಡ. ಎಲ್ಲಿಯಾದರೂ ಏನಾದರೂ ಕೊಂಚ ಹೇರಾಪೇರಿಯಾದರೂ ಇಸ್ರೇಲಿಗೆ ದೊಡ್ಡ ಮಟ್ಟದ ಗಂಡಾಂತರ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಮಾನ ಹೋಗುತ್ತದೆ. ಸ್ಕೆಚ್ ಹಾಕಿದ್ದ ಉಗ್ರಗಾಮಿಯನ್ನು ಗಮನಿಸುವದು ಅಥವಾ ಅವನನ್ನು ಕೊಲ್ಲುವದು ಎಲ್ಲಿಯಾದರೂ ಹೆಚ್ಚುಕಮ್ಮಿಯಾದರೆ ಇಸ್ರೇಲಿಗೆ ದೊಡ್ಡ ಅಪಾಯ ಎದುರಾಗುತ್ತದೆ. ನಿಮಿಷ ನಿಮಿಷಕ್ಕೆ ಹೊಸ ಹೊಸ ಖತರ್ನಾಕ್ ಮಾಹಿತಿ ಪ್ರವಾಹದ ಮಾದರಿಯಲ್ಲಿ ಹರಿದು ಬರುತ್ತಿರುತ್ತದೆ. ಮೊಸ್ಸಾದಿನ ಡೈರೆಕ್ಟರ್ ಕೆಲಸ ಅಂದರೆ must be the most stressful job. ಮತ್ತೆ ವರ್ಷಕ್ಕೊಮ್ಮೆ ಬೇರೆ ರಾಜಕೀಯ ಪಕ್ಷದ ನಾಯಕ ಬಂದು ಕೂಡುತ್ತಾನೆ. ಹೀಗೆಲ್ಲ ಇರುವಾಗ ಮೊಸ್ಸಾದಿನಂತಹ ಸಂಸ್ಥೆಯ ನೇತೃತ್ವವನ್ನು ಅಖಂಡ ಎಂಟು ವರ್ಷ ಯಶಸ್ವಿಯಾಗಿ ನಿಭಾಯಿಸುವದು ಅಂದರೆ ಸಣ್ಣ ಮಾತಲ್ಲ.

ಮೀರ್ ಡಾಗನ್ ಇಸ್ರೇಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಇಸ್ರೇಲಿನಲ್ಲಿ ಮೊಸ್ಸಾದಿನ ಡೈರೆಕ್ಟರ್ ಮುಂತಾದ ಪ್ರಮುಖ ಸ್ಥಾನಗಳಿಗೆ ಯಾರೋ ಅಬ್ಬೇಪಾರಿ ಸರ್ಕಾರಿ ಬಾಬುವನ್ನು ತಂದು ಕೂಡಿಸುವ ಪದ್ಧತಿ ಇಲ್ಲ. ಸೈನ್ಯ, ಬೇಹುಗಾರಿಕೆ, ಇತರೆ ರಕ್ಷಣಾ ಇಲಾಖೆಗಳಿಂದಲೇ ಬಂದಿರಬೇಕು. ಎಲ್ಲ ಕೆಲಸ ಗೊತ್ತಿರಬೇಕು. ಸಮಯ ಬಂದಾಗ ಮಾಡಲೂ ಬರಬೇಕು. ನೀವು ನಂಬಲಿಕ್ಕಿಲ್ಲ ಆದರೆ ಕೆಲವೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮೊಸ್ಸಾದಿನ ಡೈರೆಕ್ಟರ್ ಅವರೇ ಖುದ್ದಾಗಿ spot ಮೇಲಿರುತ್ತಾರೆ. ಇತರೆ ಬೇಹುಗಾರರಂತೆ ಮಾರುವೇಷ ಧರಿಸಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುತ್ತಾರೆ. ಉಳಿದವರು ತೆಗೆದುಕೊಂಡ ದೊಡ್ಡ ಮಟ್ಟದ risk ಇವರೂ ತೆಗೆದುಕೊಂಡಿರುತ್ತಾರೆ. ಒಂದೆರೆಡು ಉದಾಹರಣೆ ಕೊಡುತ್ತೇನೆ.

೧೯೯೨ ರಲ್ಲಿ ಇಪ್ಪತ್ತು ವರ್ಷಗಳ ನಿರಂತರ ಹುಡುಕಾಟದ ನಂತರ ಪ್ಯಾಲೆಸ್ಟೈನ್ ಉಗ್ರಗಾಮಿ ಅತಿಫ್ ಬೆಸೋ ಎಂಬುವನನ್ನು ಮೊಸ್ಸಾದಿನ ರಹಸ್ಯ ಹಂತಕರು ಪ್ಯಾರಿಸ್ಸಿನಲ್ಲಿ ಗುಂಡಿಟ್ಟು ಕೊಂದರು. ೧೯೭೨ ರಲ್ಲಿ ಜರ್ಮನಿಯ ಮ್ಯೂನಿಕ್ ಶಹರದಲ್ಲಿ ನಡೆದ ಒಲಿಂಪಿಕ್ ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಇಡೀ ತಂಡವನ್ನು ಪ್ಯಾಲೆಸ್ಟೈನ್ ಉಗ್ರಗಾಮಿಗಳು ಅಪಹರಿಸಿದ್ದರು. ಜರ್ಮನಿ ನಡೆಸಿದ rescue ಕಾರ್ಯಾಚರಣೆ ಎಕ್ಕುಟ್ಟಿಹೋಗಿತ್ತು. ಅಷ್ಟೂ ಇಸ್ರೇಲಿ ಕ್ರೀಡಾಪಟುಗಳನ್ನು ಉಗ್ರರು ಕೊಂದಿದ್ದರು. ಇಸ್ರೇಲ್ ಅಂದೇ ಒಂದು ನಿರ್ಧಾರ ಕೈಗೊಂಡಿತ್ತು. 'ಇವರನ್ನು ಬಿಡುವದಿಲ್ಲ. ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣವಾದವರನ್ನು ಒಬ್ಬೊಬ್ಬರನ್ನಾಗಿ ಹಿಡಿಹಿಡಿದು ಕೊಲ್ಲುತ್ತೇವೆ,' ಅಂತ ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಇಸ್ರೇಲಿಗಳು ಅದೇ ಪ್ರಕಾರ ಮಾಡಿತೋರಿಸಿದ್ದರು. ೧೯೭೯ ರ ಹೊತ್ತಿಗೆ ಸುಮಾರು ಎಲ್ಲರನ್ನೂ ಮೊಸ್ಸಾದ್ ಒಂದಕ್ಕಿಂತ ಒಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮುಗಿಸಿಹಾಕಿತ್ತು. ಅಂದಿನ ಮೊಸ್ಸಾದಿನ ಡೈರೆಕ್ಟರ್ ಝ್ವೀ ಝಾಮಿರ್ ಕೆಲವು ಕಾರ್ಯಾಚರಣೆಗಳ ನೇತೃತ್ವವನ್ನು ತಾವೇ ವಹಿಸಿದ್ದರು. ಅದೂ ಹಂತಕರ ತಂಡದ ಕಾರ್ ಡ್ರೈವರ್ ಆಗಿ. ಎಲ್ಲಿಯಾದರೂ ಕೇಳಿದ್ದೀರೇನು ಈ ತರಹದ ನಾಯಕತ್ವದ ಬಗ್ಗೆ? Leading from the front ಅಂದರೆ ಇದು. ಮೊಸ್ಸಾದಿನ ಡೈರೆಕ್ಟರ್ ಅಂದರೆ ಹೀಗೆ. ಮೇಲೆ ಹೇಳಿದ ಅತಿಫ್ ಬೆಸೋ ಎಂಬ ಉಗ್ರಗಾಮಿ ಮ್ಯೂನಿಕ್ ಹತ್ಯಾಕಾಂಡದ ಹಂತಕರಲ್ಲಿ ಉಳಿದುಕೊಂಡಿದ್ದ ಕೊನೆಯ ಕೊಂಡಿ. ಇಪ್ಪತ್ತು ವರ್ಷ ತಲೆ ಮರೆಸಿಕೊಂಡಿದ್ದ. ಇಸ್ರೇಲ್ ನಿರಂತರವಾಗಿ ಹುಡುಕಿ ೧೯೯೨ ರಲ್ಲಿ ಅವನನ್ನು ಕೊಂದಿತು. ಅತಿಫ್ ಬೆಸೋನ ತಲೆಗೆ ಗುಂಡು ಬೀಳುವದನ್ನು ಮೊಸ್ಸಾದಿನ ಅಂದಿನ ಡೈರೆಕ್ಟರ್ ಶಾಬಟೈ ಶಾವಿತ್ ಕೇವಲ ಕೆಲವೇ ಅಡಿಗಳ ದೂರದಲ್ಲಿ ಮಾರುವೇಷದಲ್ಲಿ ಕಾರಿನಲ್ಲಿ ಕೂತು ನೋಡುತ್ತಿದ್ದರು. ಇಪ್ಪತ್ತು ವರ್ಷಗಳಿಂದ ಬೇಟೆಗಾಗಿ ಕಾದಿದ್ದ ಮಿಕ ಗುಂಡು ತಿಂದು ನೆಲಕ್ಕೆ ಉರುಳಿದಾಗಲೇ 'let's move' ಅಂದಿದ್ದರು ಶಾಬಟೈ ಶಾವಿತ್. ಉಳಿದೆಲ್ಲ ಮೊಸ್ಸಾದಿನ ಬೇಹುಗಾರರಂತೆ ರಹಸ್ಯವಾಗಿ ಫ್ರಾನ್ಸ್ ಪ್ರವೇಶಿಸಿದ್ದ ಅವರೂ ಸಹ ಅಲ್ಲಿಂದ ಅಷ್ಟೇ smooth ಆಗಿ ಕಳಚಿಕೊಂಡಿದ್ದರು. ಹೀಗಿರುತ್ತಾರೆ ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಮುಖ್ಯಸ್ಥರು. Always leading from the front.

ಮೊಸ್ಸಾದಿನ ನಾಯಕ ಅಂತ ಯಾರೋ ಸರ್ಕಾರಿ ಬಾಬುವನ್ನು ತಂದು ಕೂಡಿಸುವದಿಲ್ಲ ಅಂತ ವಿವರಿಸಲು ಮೇಲಿನ ಉದಾಹರಣೆಗಳನ್ನು ಕೊಟ್ಟೆ. ಮೊನ್ನೆ ತೀರಿಹೋದ ಮೊಸ್ಸಾದಿನ ಮಾಜಿ ಡೈರೆಕ್ಟರ್ ಮೀರ್ ಡಾಗನ್ ಇದೇ ಮಾದರಿಯ ನಾಯಕರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಬಂದಿಲ್ಲ. ಇಸ್ರೇಲ್ ಹಾಗೆಲ್ಲ ಮಾಹಿತಿ ಕೊಡುವದೇ ಇಲ್ಲ. ಎಷ್ಟೋ ದಶಕಗಳ ನಂತರ ಯಾರೋ ಲೇಖಕರು ಹೇಗೋ ಮಾಡಿ ಒಂದಿಷ್ಟು ಮಾಹಿತಿ ಹೊರತೆಗೆಯುತ್ತಾರೆ. ಆಗ ತಿಳಿಯುತ್ತವೆ ಕೆಲವು ಖತರ್ನಾಕ್ ಮಾಹಿತಿ. ಇನ್ನು ಇಪ್ಪತ್ತು ಮೂವತ್ತು ವರ್ಷಗಳ ಮೇಲೆ ಮೀರ್ ಡಾಗನ್ ಅವರು ಖುದ್ದಾಗಿ on the spot ನೇತೃತ್ವ ವಹಿಸಿದ್ದ ಕಾರ್ಯಾಚರಣೆಗಳು, ಅವುಗಳಲ್ಲಿ ಇವರ ಪಾತ್ರ, ಇತ್ಯಾದಿಗಳ ಮೇಲೆ ಪುಸ್ತಕಗಳು, ಮಾಹಿತಿಗಳು ಹೊರಬಂದರೆ ಏನೂ ವಿಶೇಷವಿಲ್ಲ.

೨೦೦೨ ರಲ್ಲಿ ಮೊಸ್ಸಾದಿನ ಡೈರೆಕ್ಟರ್ ಅಂತ ನೇಮಕವಾದವರು ಮೀರ್ ಡಾಗನ್. ಆಗ ಇರಾಕಿನಲ್ಲಿ, ಅಫಘಾನಿಸ್ತಾನದಲ್ಲಿ ಅಮೇರಿಕಾ ಯುದ್ಧ ಮಾಡುತ್ತಿತ್ತು. ಇರಾಕ್ ಬಗ್ಗೆ ಇಸ್ರೇಲಿಗೆ ಬರೋಬ್ಬರಿ ಮಾಹಿತಿ ಇತ್ತು. ಯಾಕೆಂದರೆ ಅದು ಇಸ್ರೇಲಿನ ಪಕ್ಕದ ದೇಶ ಮತ್ತು ಬದ್ಧ ವೈರಿ. ಸದ್ದಾಮ್ ಹುಸೇನ್ ಅಂತೂ ಇಸ್ರೇಲಿನ ಹುಟ್ಟಡಗಿಸಿಯೇ ತೀರುತ್ತೇನೆ ಅನ್ನುತ್ತಲೇ ಸತ್ತ. ಇರಾಕಿನಲ್ಲಿ ಬರೋಬ್ಬರಿ ಬೇಹುಗಾರಿಕೆ ಮಾಡಿಕೊಟ್ಟಿದ್ದು ಮೊಸ್ಸಾದ್. ಅವೆಲ್ಲದರ overall in-charge ಇದೇ ಮೀರ್ ಡಾಗನ್. 'ಹರಿವ ಗಂಗೆಯಲ್ಲಿ ಮಿಂದವರೇ ಜಾಣರು,' ಎಂಬಂತೆ ಅಮೇರಿಕಾ ಸದ್ದಾಮ್ ಹುಸೇನನ ಹಿಂದೆ ಹೋದರೆ ಈ ಅವಕಾಶವನ್ನು ಬರೋಬ್ಬರಿ ಉಪಯೋಗಿಸಿಕೊಂಡ ಇಸ್ರೇಲ್ systematic ಆಗಿ ಇರಾಕಿನ ಬುದ್ಧಿವಂತರನ್ನು, ಮಿಸೈಲ್ ತಂತ್ರಜ್ಞಾನದ ಪರಿಣಿತರನ್ನು, ವಿಜ್ಞಾನಿಗಳನ್ನು ಕೊಂದುಹಾಕಿತು. ಮುಂದೊಂದು ದಿವಸ ಇಸ್ರೇಲ್ ವಿರುದ್ಧ ಕೆಲಸ ಮಾಡದಿರಲಿ ಅನ್ನುವ ದೂರಾಲೋಚನೆ. ಎಲ್ಲಿಯ ಮಟ್ಟಿಗೆ ಅಂದರೆ ಇನ್ನು ಐವತ್ತು ವರ್ಷಗಳ ಕಾಲ ಇರಾಕಿನಲ್ಲಿ ಯಾವದೇ ತರಹದ ದೊಡ್ಡ ಪ್ರಮಾಣದ ಮಿಸೈಲ್, ಪರಮಾಣು ತಂತ್ರಜ್ಞಾನ ಇತ್ಯಾದಿ ತಯಾರಾಗುವದೇ ಇಲ್ಲ. ಎರಡು ಮೂರು ತಲೆಮಾರಿನ ವಿಜ್ಞಾನಿಗಳ ಸಂಕುಲವನ್ನೇ ಇಸ್ರೇಲಿನ ಮೊಸ್ಸಾದ್ ಮೀರ್ ಡಾಗನ್ ಅವರ ನೇತೃತ್ವದಲ್ಲಿ ನಿರ್ನಾಮ ಮಾಡಿಹಾಕಿತು. ದಮ್ಮು ಅಂದರೆ ಅದು. ದೂರದೃಷ್ಟಿ ಅಂದರೆ ಅದು. ಉರಿವ ಮನೆಯಲ್ಲಿ ಗಳ ಹಿರಿದು ತಮ್ಮ ಬೀಡಿ ಹಚ್ಚಿಕೊಳ್ಳುವದು ಅಂದರೆ ಅದು. ಇಸ್ರೇಲಿನ ಭದ್ರತೆಯ ಮಾತು ಬಂತು ಅಂದರೆ ಅವರಿಗೆ ಎಲ್ಲ ಓಕೆ. ಹೇಗೂ ಅಮೇರಿಕಾ ಇರಾಕಿನಲ್ಲಿ ಅಬ್ಬರಿಸುತ್ತಿತ್ತು. ಒಂದಿಷ್ಟು ಬೆಂಕಿ ಹಚ್ಚಿತ್ತು. ಈಗಲ್ಲದೆ ಮತ್ತೆ ಯಾವಾಗ ಮೈ ಕಾಸಿಕೊಳ್ಳೋಣ ಅಂತ ಇಸ್ರೇಲಿಗಳೂ ತಮ್ಮ ಮೈ ಬಿಸಿಮಾಡಿಕೊಂಡು, ಬೇಕಾದ ಫಾಯಿದೆ ಮಾಡಿಕೊಂಡರು. ಇದಕ್ಕೆಲ್ಲ ಒಂದು ದೊಡ್ಡ ಪ್ರಮಾಣದ vision, overall strategy, orchestration ಕೊಟ್ಟು, ಇತರೆ ನಾಯಕತ್ವದ ಗುರುತರ ಜವಾಬ್ದಾರಿ ನಿಭಾಯಿಸಿದವರು ಇದೇ ಮೀರ್ ಡಾಗನ್. ಇಸ್ರೇಲಿ ಸೈನ್ಯದಲ್ಲಿ paratrooper commando ಆಗಿ ಸೇವೆ ಶುರು ಮಾಡಿದ್ದ ಮೀರ್ ಡಾಗನ್ ಮೇಜರ್ ಜನರಲ್ ಅಂತ ರಿಟೈರ್ ಆಗಿದ್ದರು. ಎಲ್ಲ ಯುದ್ಧಗಳಲ್ಲಿ ಭಾಗವಹಿಸಿದ್ದರು. ಸರಿಸುಮಾರು ಮೂವತ್ತು ವರ್ಷಗಳ ಖಡಕ್ ಅನುಭವವಿತ್ತು. ಅವೆಲ್ಲವನ್ನು ಮೊಸ್ಸಾದಿಗೆ ಧಾರೆಯರೆದಿದ್ದರು ಮೀರ್ ಡಾಗನ್.

ಇಮಾದ್ ಮುಗ್ನಿಯೇ

ಇಮಾದ್ ಮುಗ್ನಿಯೇ. ಜಾಸ್ತಿ ಜನ ಈ ಕಿರಾತಕನ ಹೆಸರು ಕೇಳಿರಲಿಕ್ಕಿಲ್ಲ. ಯಾಕೆಂದರೆ ಅವನು background operator. ತೆರೆಮರೆಯಲ್ಲಿದ್ದು ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ. ಹೆಝಬೊಲ್ಲಾ ಎಂಬ ಉಗ್ರಗಾಮಿ ಸಂಘಟನೆಯ ಹಿರಿಯ ನಾಯಕ. ಮಿಲಿಟರಿ ವಿಭಾಗದ ಮುಖ್ಯಸ್ಥ. ಒಂದು ಕಾಲದಲ್ಲಿ ಯಾಸಿರ್ ಅರಾಫತ್ ಅವರಿಗಾಗಿ ಕೆಲಸ ಮಾಡಿದ್ದ. ೧೯೮೩ ರಲ್ಲಿ ಅರಾಫತ್ ಅವರ ಅಂಡಿನ ಮೇಲೆ ಒದ್ದು, ಅವರನ್ನು ಮತ್ತು ಅವರ ಫತಾ ಬಣದ ಉಗ್ರಗಾಮಿಗಳನ್ನು ಲೆಬನಾನಿನ ಬಿರೂಟ್ ನಗರದಿಂದ ಓಡಿಸಿತ್ತು ಇಸ್ರೇಲ್. ಆಗ ಈ ಇಮಾದ್ ಮುಗ್ನಿಯೇ ಎಂಬ ಕಿರಾತಕ ಎಲ್ಲೋ ಸಿಂಕ್ ಆಗಿದ್ದ. ಮುಂದೆ ಪ್ರತ್ಯಕ್ಷನಾಗಿದ್ದು ಹೆಝಬೊಲ್ಲಾ ಎಂಬಾ ಶಿಯಾ ಉಗ್ರಗಾಮಿ ಸಂಘಟನೆಯ ದೊಡ್ಡ ತಲೆಯಾಗಿ. ಹೆಝಬೊಲ್ಲಾ ಹಿಂದೆ ಇರಾನ್ ನಿಂತಿತ್ತು. ಸಿರಿಯಾ ಸಪೋರ್ಟ್ ಮಾಡುತ್ತಿತ್ತು. ಲೆಬನಾನಿನ ರಾಜಧಾನಿ ಬಿರೂಟಿನಲ್ಲಿ ತಳಊರಿದ ಹೆಝಬೊಲ್ಲಾ ವಿಪರೀತವಾಗಿ ಬೆಳೆಯಿತು. ಇಡೀ ಲೆಬನಾನನ್ನೇ ನಿಯಂತ್ರಿಸತೊಡಗಿತು. ಇರಾನ್ ಮತ್ತು ಸಿರಿಯಾ ದೇಶಗಳು ಹೇಳಿಕೊಟ್ಟಂತೆ ಇಸ್ರೇಲ್ ಮೇಲೆ ದಾಳಿ ಮಾಡತೊಡಗಿತು. ಉಗ್ರಗಾಮಿಗಳು ಕಿರಿಕಿರಿ ಶುರು ಮಾಡಿದರು. ಮತ್ತೇ ಅವೇ ಕಿತಾಪತಿಗಳು. ವಿಮಾನ ಅಪಹರಣ, ವಿದೇಶಿಗಳ ಹತ್ಯೆ, ಗಡಿಯಲ್ಲಿರುತ್ತಿದ್ದ ಇಸ್ರೇಲಿ ಸೈನಿಕರನ್ನು ಮರಾಮೋಸದಿಂದ ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಲ್ಲುವದು, ಇತ್ಯಾದಿ. ಇಂತಹ ಎಲ್ಲ ಕೃತ್ಯಗಳ ಹಿಂದಿದ್ದವ ಪೈಶಾಚಿಕ ಮನೋಭಾವದ ಇದೇ ಇಮಾದ್ ಮುಗ್ನಿಯೇ.

ಈ ಇಮಾದ್ ಮುಗ್ನಿಯೇ ಎಲ್ಲಿರುತ್ತಾನೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಲೆಬನಾನಿನ ಬಿರೂಟ್ ನಗರದ ಒಂದು ಭಾಗ ಪೂರ್ತಿ ಹೆಝಬೊಲ್ಲಾ ಕೈಯಲ್ಲಿತ್ತು. ಅಲ್ಲಿ ಅವರದ್ದೇ ಹುಕುಮ್ಮತ್. ಅಲ್ಲೆಲ್ಲೋ ಒಂದು ನೆಲಮಾಳಿಗೆಯಲ್ಲಿ ಈ ಇಮಾದ್ ಮುಗ್ನಿಯೇ ಇರುತ್ತಾನೆ ಅಂತ ಗೊತ್ತಿತ್ತೇ ವಿನಃ ಬಾಕಿ ಏನೂ ಮಾಹಿತಿ ಇರಲಿಲ್ಲ. ಮತ್ತೆ ಅವನ ಮೇಲೆ ಇರಾನ್ ಮತ್ತು ಸಿರಿಯಾ ದೇಶಗಳ ಛತ್ರಛಾಯೆ. ಆ ದೇಶಗಳ ಬೇಹುಗಾರಿಕೆ ಸಂಸ್ಥೆಗಳು ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದವು. ಅವರಿಗೆ ಅಷ್ಟು ಮುಖ್ಯ ಅವನು. ಅವಕಾಶ ಸಿಕ್ಕರೆ ಮೊಸ್ಸಾದಿನ ಹಂತಕರು ಇಮಾದ್ ಮುಗ್ನಿಯೇನನ್ನು ಉಡಾಯಿಸುತ್ತಾರೆ ಅಂತ ಅವರಿಗೂ ಗೊತ್ತಿತ್ತು. ಹಾಗಾಗಿಯೇ ಇಮಾದ್ ಮುಗ್ನಿಯೇಗೆ extra protection ಕೊಟ್ಟಿದ್ದವು.

ಈ ಇಮಾದ್ ಮುಗ್ನಿಯೇ ಮೇಲೆ ಕಣ್ಣಿಟ್ಟಿದ್ದ ಮತ್ತೊಂದು ದೇಶ ಅಮೇರಿಕಾ. ಬಹಳ ಹಿಂದೊಮ್ಮೆ ಅಮೇರಿಕಾದ ವಿಮಾನವೊಂದನ್ನು ಅಪಹರಿಸಿದ್ದ ಈ ಇಮಾದ್. ಒಂದು ಖಡಕ್ ಸಂದೇಶ ಮುಟ್ಟಿಸಲು ವಿಮಾನದಲ್ಲಿದ್ದ ಒಬ್ಬ ಅಮೇರಿಕನ್ ನಾಗರಿಕನನ್ನು ಕೊಂದಿದ್ದ ಬೇರೆ. ಬಿರೂಟ್ ನಗರದಲ್ಲಿ ೧೯೮೩ ರಲ್ಲಿ ಅಮೇರಿಕಾದ ಶಾಂತಿಪಡೆಗಳ ಮೇಲಾದ ದೊಡ್ಡ ಪ್ರಮಾಣದ ಬಾಂಬ್ ದಾಳಿಗಳ ಹಿಂದೆಯೂ ಇಮಾದ್ ಮುಗ್ನಿಯೇಯ ಕೈವಾಡವಿತ್ತು. ಸರಿಸುಮಾರು ಮುನ್ನೂರು ಅಮೇರಿಕನ್, ಐವತ್ತು ಫ್ರೆಂಚ್ ಸೈನಿಕರ ರಕ್ತ ಈ ದುಷ್ಟನ ಕೈಗೆ ಮೆತ್ತಿಕೊಂಡಿತ್ತು. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೈತೊಳೆದುಕೊಂಡು ಇವನ ಹಿಂದೆ ಬಿದ್ದಿತ್ತು. ಒಸಾಮಾ ಬಿನ್ ಲಾಡೆನ್ ಹಿಂದೆ ಹೇಗೆ ಬಿದ್ದಿದ್ದರೋ ಅದೇ ಮಾದರಿಯಲ್ಲಿ. ಅಮೇರಿಕಾದವರ ದೃಷ್ಟಿಯಲ್ಲಿ ಈ ಇಮಾದ್ ಮುಗ್ನಿಯೇ ಲಾಡೆನ್ ಗಿಂತ ಏನೂ ಕಮ್ಮಿ ಅಪಾಯಕಾರಿಯಾಗಿರಲಿಲ್ಲ.

ಹೀಗೆ ಮೊಸ್ಸಾದ್ ಮತ್ತು ಸಿಐಎ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದವು. ತುಂಬಾ ಪರಿಶ್ರಮದ ನಂತರ ಇಮಾದ್ ಮುಗ್ನಿಯೇ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಮಾಹಿತಿ ಬರತೊಡಗಿತು. ಆಗಾಗ ಪಕ್ಕದ ಸಿರಿಯಾ ದೇಶಕ್ಕೆ ಹೋಗಿ ಬರುತ್ತಾನೆ ಅಂತ ಗೊತ್ತಾಗಿತ್ತು. ಅಷ್ಟು ಗೊತ್ತಾಗಿದ್ದೇ ಗೊತ್ತಾಗಿದ್ದು ಮೊಸ್ಸಾದ್ ಮತ್ತು ಸಿಐಎ ಸಿರಿಯಾ ದೇಶದಲ್ಲಿದ್ದ ತಮ್ಮ ಬೇಹುಗಾರಿಕೆ ಜಾಲವನ್ನು ಮತ್ತೂ ಬಲಪಡಿಸಿದವು. ಹೊಸ ಹೊಸ ರಹಸ್ಯ ಏಜೆಂಟಗಳ ನೇಮಕಾತಿಯಾಯಿತು. ಮೊಸ್ಸಾದಿನ ಬೇಹುಗಾರರು ಸಿರಿಯಾದ ರಾಜಧಾನಿ ಡಮಾಸ್ಕಸ್ ಗೆ ಹೋಗಿ ಝೇಂಡಾ ಹೊಡೆದರು. ಅತ್ಯಂತ ರಿಸ್ಕಿ ಕೆಲಸ ಅದು. ಶತ್ರು ದೇಶದಲ್ಲಿ ಹೋಗಿ ಕಾರ್ಯಾಚರಣೆ ಮಾಡುವದು ಅಂದರೆ ಕತ್ತಿಯ ಅಲಗಿನ ಮೇಲೆ ನಡೆದಂತೆ. ಮತ್ತೆ ಹಿಂದೆ ಸೆರೆ ಸಿಕ್ಕಿದ್ದ ಮೊಸ್ಸಾದಿನ ಬೇಹುಗಾರರನ್ನು ಸಿರಿಯಾ ಹಿಂಸಿಸಿ ಹಿಂಸಿಸಿ ಕೊಂದಿತ್ತು. ಪಬ್ಲಿಕ್ ನಲ್ಲಿ ಗಲ್ಲಿಗೆ ಹಾಕಿತ್ತು. ಹೀಗೆಲ್ಲ ಇರುವಾಗ ಅಪಾಯಕಾರಿ ಉಗ್ರವಾದಿ ಇಮಾದ್ ಮುಗ್ನಿಯೇ ವಿರುದ್ಧ ಸಿರಿಯಾದಲ್ಲಿ ಕಾರ್ಯಾಚರಣೆ ಮಾಡುವದೆಂದರೆ ಸಿಂಹದ ಗುಹೆಯನ್ನು ಹೊಕ್ಕು ಸಿಂಹ ಬರಲಿ ಅಂತ ಕಾದು ಕೂತಂತೆ!

ಹಲವಾರು ವರ್ಷಗಳ ಮೊಸ್ಸಾದ್, ಸಿಐಎ ತಂಡಗಳ ಪರಿಶ್ರಮ ಫಲ ಕೊಟ್ಟಿತ್ತು. ೨೦೦೮ ರ ಹೊತ್ತಿಗೆ ಇಮಾದ್ ಮುಗ್ನಿಯೇ, ಅವನು ಡಮಾಸ್ಕಸ್ ನಗರಕ್ಕೆ ಬಂದು ಹೋಗಿ ಮಾಡುವದು, ಅವನಿಗೆ ಅಲ್ಲಿದ್ದ ಪ್ರೇಯಸಿ ಎಲ್ಲದರ ಬಗ್ಗೆ ಬರೋಬ್ಬರಿ ಮಾಹಿತಿ ಸಿಕ್ಕಿತ್ತು. ಮೊಸ್ಸಾದಿನ ಹಂತಕರಿಗೆ ಬುಲಾವಾ ಹೋಯಿತು. 'ಮಿಕವನ್ನು ಹುಡುಕಿಕೊಟ್ಟಿದ್ದೇವೆ. ಬೇಟೆ ನಿಮಗೆ ಬಿಟ್ಟಿದ್ದು. ಒಟ್ಟಿನಲ್ಲಿ ಇಮಾದ್ ಮುಗ್ನಿಯೇ ಈ ಲೋಕ ಬಿಟ್ಟುಹೋಗಬೇಕು. ಅಷ್ಟೇ!' ಅಂದ ಶುದ್ಧ ಬೇಹುಗಾರರು ಪಕ್ಕಕ್ಕೆ ಸರಿದರು. ಮೊಸ್ಸಾದಿನ ಮತ್ತು ಸಿಐಎ ತಂಡಗಳ ನುರಿತ ಹಂತಕರು ಮುಂಚೂಣಿಗೆ ಬಂದರು. ಇಮಾದ್ ಮಿಯಾನನ್ನು ಮೇಲೆ ಕಳಿಸುವ ಪ್ಲಾನಿಂಗ್ ಶುರುವಾಯಿತು.

ಸಿಐಎ ಮತ್ತು ಮೊಸ್ಸಾದಿನ ರಹಸ್ಯ ಪ್ರಯೋಗಶಾಲೆಯಲ್ಲಿ ಅತಿ ಚಿಕ್ಕ ಸೈಜಿನ ಸ್ಪೋಟಕವನ್ನು ತಜ್ಞರು ತಯಾರಿಸಿದರು. ಮೊಸ್ಸಾದ್ ಅದನ್ನು ತನ್ನದೇ ರಹಸ್ಯ ರೀತಿಯಲ್ಲಿ ಡಮಾಸ್ಕಸ್ ನಗರಕ್ಕೆ ತಲುಪಿಸಿತು. ಮೊಸ್ಸಾದಿನ ಬೇಹುಗಾರರು ಅದು ಹೇಗೋ ಮಾಡಿ ಇಮಾದ್ ಮುಗ್ನಿಯೇ ಡಮಾಸ್ಕಸ್ ನಗರಕ್ಕೆ ಬಂದಾಗ ಸದಾ ಉಪಯೋಗಿಸ್ತುತ್ತಿದ್ದ Mitsubishi Pajero ವಾಹನವನ್ನು compromise ಮಾಡಿಬಿಟ್ಟಿದ್ದರು. ಒಂದು ವಾಹನ ಒಮ್ಮೆ compromise ಆಯಿತು ಅಂದರೆ ಸಾಕು. ಮುಗೀತು. ಉಳಿದಿದ್ದನ್ನು ಬಾಂಬ್ ಪರಿಣಿತರು ನೋಡಿಕೊಳ್ಳುತ್ತಾರೆ. ಮೊದಲೇ ತಯಾರುಮಾಡಿಟ್ಟುಕೊಂಡಿದ್ದ ಚಿಕ್ಕ ಶಕ್ತಿಶಾಲಿ ಸ್ಪೋಟಕವನ್ನು ಡ್ರೈವರ್ ಸೀಟಿನ headrest ನಲ್ಲಿ ಅತ್ಯಂತ ಕೌಶಲ್ಯದಿಂದ ಹುದುಗಿಸಿಟ್ಟರು ಮೊಸ್ಸಾದಿನ ಬಾಂಬ್ ತಂತ್ರಜ್ಞರು. ಇನ್ನು ಸರಿಯಾದ ಸಮಯಕ್ಕೆ ಕಾಯುವ ಕೆಲಸ.

ಕೆಲವು ದಿವಸಗಳ ನಂತರ ಮತ್ತೊಮ್ಮೆ ಡಮಾಸ್ಕಸ್ ನಗರಕ್ಕೆ ಬಂದ ಕಿರಾತಕ ಇಮಾದ್ ಮುಗ್ನಿಯೇ. ಸಿರಿಯಾದ ದೊಡ್ಡ ದೊಡ್ಡ ತಲೆಗಳ ಜೊತೆ ಮಾತುಕತೆ, ಮೇಜವಾನಿ ಎಲ್ಲ ಆಯಿತು. ಇಸ್ರೇಲ್ ವಿರುದ್ಧ ಮುಂದೆ ಮಾಡಬೇಕಾದ ಹೊಸ ಹೊಸ ವಿಧ್ವಂಸಕ ಕೃತ್ಯಗಳಿಗೆ ಬರೋಬ್ಬರಿ ಸುಪಾರಿ ತೆಗೆದುಕೊಂಡ. ಹೊಟ್ಟೆ ತುಂಬಾ ಊಟ ಮಾಡಿದ. ಹೊಟ್ಟೆ ತುಂಬಿದ ಮೇಲೆ ಹೊಟ್ಟೆ ಕೆಳಗಿನದರ ಬಗ್ಗೆ ಆಸಕ್ತಿ ಮೂಡಿತು. ಪ್ರೇಯಸಿ ನೆನಪಾದಳು. ಅದೇ Mitsubishi Pajero ವಾಹನವನ್ನು ತೆಗೆದುಕೊಂಡು ಹೋದ. ತಲೆ ಹಿಂದೆ ಬಾಂಬ್ ಕೂತಿರುವದು ಅವನಿಗೆ ಗೊತ್ತೇ ಇರಲಿಲ್ಲ. ಇಮಾದ್ ಮುಗ್ನಿಯೇನ ಪ್ರತಿಯೊಂದು ಚಲನವಲನಗಳನ್ನು ಡಮಾಸ್ಕಸ್ ನಗರಕ್ಕೆ ಬಂದಿಳಿದಿದ್ದ ಮೊಸ್ಸಾದ್ ಮತ್ತು ಸಿಐಎ ಜಂಟಿ ತಂಡ ಗಮನಿಸುತ್ತಿತ್ತು. ಅದರಲ್ಲಿ ಒಬ್ಬನ ಕೈಯಲ್ಲಿ ರಿಮೋಟ್ ಕಂಟ್ರೋಲ್. ಅದನ್ನು ಒತ್ತಿದರೆ ಮುಗಿಯಿತು. ಇಮಾದ್ ಮುಗ್ನಿಯೇ ಕೂತಿದ್ದ ವಾಹನ ಬ್ಲಾಸ್ಟ್ ಆಗಿಹೋಗುತ್ತಿತ್ತು.

೧೨ ಫೆಬ್ರವರಿ ೨೦೦೮. ಪ್ರೇಯಸಿ ಮನೆಗೆ ಹೋದ ಇಮಾದ್ ಮುಗ್ನಿಯೇ ಹೊಟ್ಟೆ ಕೆಳಗಿನ ಕೆಲಸ ಮುಗಿಸಿಬಂದ. ಕೊಂಚ ದೂರದಲ್ಲಿ ಕಾದಿದ್ದ ಮೊಸ್ಸಾದ್ ಮತ್ತು ಸಿಐಎ ಬೇಹುಗಾರರು ಎಲ್ಲ ಖಾತ್ರಿ ಮಾಡಿಕೊಂಡರು. ಇಮಾದ್ ಮುಗ್ನಿಯೇ ಡೋರ್ ತೆಗೆದು ವಾಹನ ಚಲಾಯಿಸಲು ಕೂತ. ಈ ಕಡೆ ರಿಮೋಟ್ ಕಂಟ್ರೋಲ್ ಹಿಡಿದವ ಸ್ವಿಚ್ ಒತ್ತಿಬಿಟ್ಟ. ದೊಡ್ಡ ಸ್ಪೋಟ. ಇಮಾದ್ ಮುಗ್ನಿಯೇ ಎಂಬ ಖತರ್ನಾಕ್ ಉಗ್ರಗಾಮಿ ಹರೋಹರ. ಅವನ ವಾಹನ, ಅವನು ಎಲ್ಲ ಆ ದೊಡ್ಡ ಸ್ಪೋಟದಲ್ಲಿ ಶಿವಾಯ ನಮಃ!

ಪೂರ್ತಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮೊಸ್ಸಾದಿನ ಮುಖ್ಯಸ್ಥ ಇದೇ ಮೀರ್ ಡಾಗನ್ ಅಮೇರಿಕಾಗೆ ಫೋನ್ ಮಾಡಿ ಸಿಐಎ ಮುಖ್ಯಸ್ಥನಿಗೆ ಕಾರ್ಯಾಚರಣೆ ಯಶಸ್ವಿಯಾಗಿದ್ದನ್ನು ನಿರ್ಭಾವುಕರಾಗಿ ತಿಳಿಸಿದ್ದರು. ಇಡೀ ವಿಶ್ವಕ್ಕೇ ಇದೊಂದು most sensational ಕಾರ್ಯಾಚರಣೆಯಾದರೂ ಪಕ್ಕಾ ವೃತ್ತಿಪರ ಬೇಹುಗಾರ ಮೀರ್ ಡಾಗನ್ ತರಹದವರಿಗೆ ಇದು just a part of the job. ಅವರು ತಮ್ಮ ಮುಂದಿದ್ದ ಪಟ್ಟಿಯಲ್ಲಿ ಇಮಾದ್ ಮುಗ್ನಿಯೇ ಎಂಬ ದಿವಂಗತನ ಹೆಸರನ್ನು ತೆಗೆದುಹಾಕಿ ಮುಂದಿನ ಮಿಕ ಯಾರು ಅಂತ ನೋಡಿದರು. ಮುಂದಿನ ಟಾರ್ಗೆಟ್ ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ದೊಡ್ಡ ತಲೆ ಮಹಮೂದ್ ಅಲ್-ಮಾಭೂ. ಅವನ ಪಾಪದ ಕೊಡ ತುಂಬಿತ್ತು. ಮೀರ್ ಡಾಗನ್ ಅವರ ರೇಡಾರಿನಲ್ಲಿ ಬಂದುಬಿಟ್ಟ. ಆದರೆ ಎರಡು ವರ್ಷ ಆಯುಸ್ಸು ಬಾಕಿ ಇತ್ತು. ೨೦೧೦ ರ ವರೆಗೆ ಸಾಯಲಿಲ್ಲ. ಅಷ್ಟು ಸಮಯ ಬೇಕಾಗಿತ್ತು ಒಂದು ದೊಡ್ಡ ಪ್ರಮಾಣದ ರಹಸ್ಯ ಕಾರ್ಯಾಚರಣೆಯನ್ನು ಪ್ಲಾನ್ ಮಾಡಲು. ಮೀರ್ ಡಾಗನ್ ಒಂದು ನೀಲನಕ್ಷೆ ಹಾಕಿಕೊಟ್ಟರು. ಮೊಸ್ಸಾದಿನ ಇತರೆ ಬೇಹುಗಾರರು ಮಹಮೂದ್ ಅಲ್-ಮಾಭೂನ ಹತ್ಯೆಗೆ ಮುಹೂರ್ತ ಹುಡುಕತೊಡಗಿದರು. ಸ್ಕೆಚ್ ಹಾಕತೊಡಗಿದರು.


ಮಹಮೂದ್ ಅಲ್-ಮಾಭೂ

ಮಹಮೂದ್ ಅಲ್-ಮಾಭೂ - ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ಹಿರಿ ತಲೆ. ಇಸ್ರೇಲ್ ವಿರುದ್ಧ ಮಾಡುವ ಕಾರ್ಯಾಚರಣೆಗಳಿಗೆ ಬೇಕಾಗುವ ಯುದ್ಧ ಸಾಮಗ್ರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬರೋಬ್ಬರಿ ಚೌಕಾಶಿ ಮಾಡಿ ಖರೀದಿಸುವದೇ ಅವನ ಕೆಲಸ. He was a weapons procurement specialist.

ಹಮಾಸ್ ಎಂಬುದು ಇಸ್ರೇಲಿಗೆ ಮಗ್ಗುಲ ಮುಳ್ಳು. ಯಾಕೆಂದರೆ ಹಮಾಸ್ ಉಗ್ರರು ಎಲ್ಲೋ ದೂರದಲ್ಲಿ ಇರುವವರಲ್ಲ. ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ದೇಶದ ಗಾಜಾ ಪಟ್ಟಿಯಲ್ಲಿ (Gaza strip) ಇರುವವರು. ಸಾಮಾನ್ಯ ಅರಬ್ ಜನರಂತೆಯೇ ಇರುವವರು. ಕೆಲಸಕ್ಕಾಗಿ ಇಸ್ರೇಲ್ ಒಳಗೂ ಬರುತ್ತಿದ್ದರು. ಗಾಜಾ ಪಟ್ಟಿಯ ಅದೆಷ್ಟೋ ಜನ ಬೆಳಿಗ್ಗೆ ಇಸ್ರೇಲಿಗೆ ಕೆಲಸಕ್ಕೆ ಬಂದು ಸಂಜೆ ಗಾಜಾ ಪಟ್ಟಿ ಸೇರಿಕೊಳ್ಳುತ್ತಿದ್ದರು. ಬೇರೆ ಬೇರೆ ದೇಶವಾದರೂ ಆ ತರಹದ ವ್ಯವಸ್ಥೆ ಇತ್ತು. ಒಮ್ಮೊಮ್ಮೆ ಇಂತವರಲ್ಲಿ ಹಮಾಸ್ ಉಗ್ರಗಾಮಿಗಳೂ ಇರುತ್ತಿದ್ದರು. ಗಡಿರಕ್ಷಣಾ ಪಡೆಗಳ ಕಣ್ಣು ತಪ್ಪಿಸಿ ಬಂದು, ಒಳಗೆ ನುಗ್ಗಿ, ಆತ್ಮಹತ್ಯಾ ಬಾಂಬಿಂಗ್ (suicide bombing) ಮಾಡಿಕೊಂಡು ಒಂದೇ ಏಟಿನಲ್ಲಿ ಹತ್ತಿಪ್ಪತ್ತು ಇಸ್ರೇಲಿಗಳನ್ನು ಕೊಂದುಬಿಡುತ್ತಿದ್ದರು. ಇಸ್ರೇಲಿಗೆ ದೊಡ್ಡ ತಲೆನೋವು.

ಈ ಗಾಜಾ ಪಟ್ಟಿಯಲ್ಲಿ ಕುಳಿತ ಈ ಹಮಾಸ್ ಉಗ್ರಗಾಮಿ ಮಂದಿಗೆ ಎಲ್ಲಿಂದ ಆಯುಧ ಬರುತ್ತವೆ? ಯಾರು ಕಳಿಸುತ್ತಾರೆ? ಅಂತೆಲ್ಲ ತನಿಖೆ ಮಾಡಲು ಹೋದಾಗ ಎದ್ದು ಕಂಡ ಹೆಸರು - ಮಹಮೂದ್ ಅಲ್-ಮಾಭೂ ಎಂಬ weapons procurement specialist. ಅವನಿಗೆ ಒಂದು ಠಿಕಾಣಿ ಇಲ್ಲ. ಇಡೀ ಮಧ್ಯಪ್ರಾಚ್ಯದ ತುಂಬಾ ತಿರುಗುತ್ತಲೇ ಇರುತ್ತಿದ್ದ. ಒಂದಿನ ಕಟಾರಿನ ದೋಹಾದಲ್ಲಿದ್ದರೆ ಮರುದಿನ ಬಹರೇನಿನ ಮನಾಮಾದಲ್ಲಿ ಯಾವದೋ ಡೀಲ್ ಕುದುರಿಸುತ್ತಿದ್ದ. ಅಲ್ಲಿಂದ ದುಬೈಗೆ ಬಂದು ಹವಾಲಾ ರೊಕ್ಕ ತೆಗೆದುಕೊಂಡು ಮತ್ತೆಲ್ಲೋ ಹೋಗಿಬಿಡುತ್ತಿದ್ದ. ಒಟ್ಟಿನಲ್ಲಿ ಗಾಜಾ ಪಟ್ಟಿಯ ಹಮಾಸ್ ಉಗ್ರರಿಗೆ ಮಹಮೂದ್ ಅಲ್-ಮಾಭೂ ಅಂದರೆ ಉಡುಗೊರೆ ಕಳಿಸಿಕೊಡುತ್ತಿದ್ದ ದೂರ ದೇಶದ ಅಂಕಲ್ ಇದ್ದ ಹಾಗೆ. ಅಷ್ಟೇ ಈ ಅಂಕಲ್ ಕಳಿಸುತ್ತಿದ್ದ ಉಡುಗೊರೆ ಇಸ್ರೇಲಿಗೆ ತೊಂದರೆ ತಂದಿಡುತ್ತಿತ್ತು. ಆಗಲೇ ಅವನ ಮರಣಶಾಸನಕ್ಕೆ ಒಂದು ಸಹಿ ಹಾಕಿತು ಇಸ್ರೇಲ್. ಸಹಿ ಹಾಕಿದ ಮರಣಶಾಸನದ ಪತ್ರ ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರ ಟೇಬಲ್ ಮೇಲೆ ಬಂದು ಬಿತ್ತು. ತಮ್ಮ ಖಾಸ್ ಜನರನ್ನು ಕರೆದು, ಒಂದು ತಂಡ ಮಾಡಿ, ಅವರಿಗೊಂದು ನೀಲನಕ್ಷೆ ಹಾಕಿಕೊಟ್ಟು, 'Take care of him' ಅಂತ ಒಂದೇ ಸಾಲಿನ ಆಜ್ಞೆ ಕೊಟ್ಟು ಎದ್ದು ಹೋಗಿದ್ದರು ಮೀರ್ ಡಾಗನ್. ಸಾವಿರ ಕೆಲಸ ಅವರಿಗೆ.

ಮೀರ್ ಡಾಗನ್ ಅವರಿಗೆ ಈ ಮಹಮೂದ್ ಅಲ್-ಮಾಭೂ ಮತ್ತೆ ನೆನಪಾಗಿದ್ದು ಯಾವಾಗ ಗೊತ್ತೇ? ದುಬೈನ ಪೋಲಿಸ್ ಕಮಿಷನರ್ ಲಬೋ ಲಬೋ ಅಂತ ಬಾಯಿಬಾಯಿ ಬಡಿದುಕೊಂಡು, ಟೀವಿ ಕ್ಯಾಮರಾಗಳ ಮುಂದೆ ನಿಂತು, 'ಅಯ್ಯೋ! ಎಲ್ಲರೂ ನೋಡಿ. ಇಸ್ರೇಲಿನ ಮೊಸ್ಸಾದ್ ನಮ್ಮ ದುಬೈಗೆ ಬಂದು ಹಮಾಸ್ ನಾಯಕ ಮಹಮೂದ್ ಅಲ್-ಮಾಭೂವಿನ ಹತ್ಯೆ ಮಾಡಿ ಎಸ್ಕೇಪ್ ಆಗಿದೆ. ಇದ್ದಕ್ಕಾಗಿ ನಾನು ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತೇನೆ. ಅವರನ್ನು ದುಬೈ ಕಾನೂನಿನ ಪ್ರಕಾರ ಬುಕ್ ಮಾಡುತ್ತೇನೆ,' ಅಂತ ಅಪದ್ಧ ಪ್ರಲಾಪ ಮಾಡಿದಾಗಲೇ ಮೀರ್ ಡಾಗನ್ ಅವರಿಗೆ ಮಹಮೂದ್ ಅಲ್-ಮಾಭೂ ನೆನಪಾದ. ಪೆಕಪೆಕಾ ಅಂತ ನಕ್ಕು ಟೀವಿ ಆಫ್ ಮಾಡಿದ್ದರು ಡಾಗನ್. ದುಬೈ ಪೋಲಿಸ್ ಕಮಿಷನರನ ಅಸಂಬದ್ಧ ಪ್ರಲಾಪ ನೋಡುತ್ತಾ ಕೂಡಲು ಅವರಿಗೆ ಬೇರೆ ಕೆಲಸವಿಲ್ಲವೇ?

ಎರಡು ವರ್ಷಗಳ ಹಿಂದೆ ಶುರುಮಾಡಿದ್ದ ಒಂದು ರಹಸ್ಯ ಕಾರ್ಯಾಚರಣೆ ಫಲ ಕೊಟ್ಟಿತ್ತು. ಮಹಮೂದ್ ಅಲ್-ಮಾಭೂವನ್ನು ಮೊಸ್ಸಾದಿನ ಹಂತಕರು ಜನನಿಬಿಡ ದುಬೈನ ಹೋಟೆಲ್ ಒಂದರಲ್ಲಿ ಮುಗಿಸಿದ್ದರು. ಅಷ್ಟೂ ವಿವರ CC ಟೀವಿಯಲ್ಲಿ ದಾಖಲಾಗಿತ್ತು. ಹಾಗಾಗುತ್ತದೆ ಅಂತ ಗೊತ್ತೇ ಇತ್ತು. ಆ ರಿಸ್ಕ್ ತೆಗೆದುಕೊಂಡೇ ಮಾಡಿದ್ದರು. ಅಷ್ಟೇ, ಮಹಮೂದ್ ಅಲ್-ಮಾಭೂವಿನ ಕೊಲೆಯಾಗಿದೆ ಅಂತ ದುಬೈನ ಪೋಲೀಸರಿಗೆ ಗೊತ್ತಾಗುವಷ್ಟರಲ್ಲಿ ಮೊಸ್ಸಾದಿನ ಹಂತಕರು ದುಬೈ ಬಿಟ್ಟು ಹಾರಿದ್ದರು.

೧೯ ಜನೇವರಿ  ೨೦೧೦. ಅಂದು ಮಹಮೂದ್ ಅಲ್-ಮಾಭೂ ಸಿರಿಯಾದ ಡಮಾಸ್ಕಸ್ ನಗರದಿಂದ ದುಬೈಗೆ ಆಗಮಿಸಿದ. ಅವನಿಗೆ ಗೊತ್ತಿಲ್ಲದಂತೆಯೇ ಫಾಲೋ ಮಾಡಿತ್ತು ಮೊಸ್ಸಾದಿನ ಹಂತಕರ ತಂಡ. ಬೇರೆ ಬೇರೆ ದೇಶಗಳ ನಕಲಿ ಪಾಸ್ಪೋರ್ಟ್ ಬಳಸಿ ದುಬೈ ಶಹರವನ್ನು ಪ್ರವಾಸಿಗರಂತೆ ಪ್ರವೇಶಿಸಿದ್ದ ಮೊಸ್ಸಾದಿನ ಹಂತಕರು ಎಲ್ಲ ಕಡೆ ಕಣ್ಣಿಟ್ಟಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ಏನು ಲ್ಯಾಂಡ್ ಆದನೋ ಆದ. ನಂತರ ಮಹಮೂದ್ ಅಲ್-ಮಾಭೂವಿನ ಮೇಲಿಟ್ಟ ಹದ್ದಿನ ಕಣ್ಣನ್ನು ಅವರು ತೆಗೆಯಲಿಲ್ಲ. ಮಹಮೂದ್ ಅಲ್-ಮಾಭೂವಿನ ಕಾರ್ಯಕ್ರಮದ ಪ್ರತಿಯೊಂದು ವಿವರಗಳನ್ನೂ ಹೆಕ್ಕಿ ತೆಗೆದಿದ್ದರು. ಎಲ್ಲಿಯ ವರೆಗೆ ಅಂದರೆ ಅವನು ಯಾವ ಹೋಟೆಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಯಾವ ಕೋಣೆಯನ್ನು ಕೊಡಲಾಗುತ್ತದೆ ಅನ್ನುವ ವಿವರಗಳಷ್ಟೇ ಅಲ್ಲ. ಮತ್ತೊಂದು ಖತರ್ನಾಕ್ ಕೆಲಸ ಮೊಸ್ಸಾದ್ ಮಾಡಿತ್ತು. ಮಹಮೂದ್ ಅಲ್-ಮಾಭೂವಿನ ಕೋಣೆಗೊಂದು ಡೂಪ್ಲಿಕೇಟ್ ಕೀ ಸಹಿತ ತಯಾರಿತ್ತು. ಬಕ್ರಾ ಬೋನಿಗೆ ಬರುತ್ತಿತ್ತು. ಬೋನಿನ ಕೀ ಮೊಸ್ಸಾದಿನ ಬೇಹುಗಾರರ ಕೀ ಚೈನಿನಲ್ಲಿ ತಿರುಗುತ್ತಿತ್ತು.

ಮಹಮೂದ್ ಅಲ್-ಮಾಭೂ ಸೀದಾ ಹೋಟೆಲ್ಲಿಗೆ ಬಂದ. check-in  ಮಾಡಿದ. ಮತ್ತೆ ಎದ್ದು ಬರಲಿಲ್ಲ. ಅವನ ಎದುರಿನ ಕೋಣೆಯಲ್ಲೇ ಇದ್ದರು ಮೊಸ್ಸಾದಿನ ಕಿಡೋನ್ ಎಂಬ ವಿಭಾಗದ ನುರಿತ ಹಂತಕರು. ಹತ್ಯೆಯ ಕೊನೆಯ ಭಾಗವನ್ನು ಸಂಬಾಳಿಸುವದು ಕಿಡೋನ್ ವಿಭಾಗದ ಕೆಲಸ. ನುರಿತ ಹಂತಕರು. actual ಹತ್ಯೆ ಮಾಡುವವರು, ಹತ್ಯಾಸ್ಥಳದಲ್ಲಿ ಯಾವದೇ ಕುರುಹುಗಳನ್ನು ಬಿಡದೇ ಕ್ಲೀನ್ ಮಾಡುವವರು ಎಲ್ಲ ಕಿಡೋನ್ ವಿಭಾಗದವರು. ಕಿಡೋನ್ ಅಂದರೆ ಹೀಬ್ರೂ ಭಾಷೆಯಲ್ಲಿ bayonet ಅಂತರ್ಥ.

ಯಾವದೋ ಮಾಯೆಯಲ್ಲಿ ಮಹಮೂದ್ ಅಲ್-ಮಾಭೂನ ಕೋಣೆ ಪ್ರವೇಶಿಸಿದ ಮೊಸ್ಸಾದಿನ ಕಿಡೋನ್ ಹಂತಕರ ತಂಡ ಅವನನ್ನು ಕೊಂದು ಮಿಂಚಿನ ವೇಗದಲ್ಲಿ ಹೋಟೇಲಿನಿಂದ ಮಾತ್ರವಲ್ಲ ದುಬೈನಿಂದಲೇ ಪರಾರಿಯಾಗಿತ್ತು. Another perfect assassination pulled off. Flawless execution. ಮೀರ್ ಡಾಗನ್ ಅವರ ಕಿರೀಟಕ್ಕೆ ಮತ್ತೊಂದು ಗರಿ.

ಮೀರ್ ಡಾಗನ್ ಅವರ ಉಸ್ತುವಾರಿಯಲ್ಲಾದ ಮತ್ತೊಂದು ಖತರ್ನಾಕ್ ಕಾರ್ಯಾಚರಣೆ ಅಂದರೆ ಇರಾನಿನ nuclear reactor ಗಳನ್ನು ಪೂರ್ತಿಯಾಗಿ ಕೆಡಿಸಿಬಿಟ್ಟಿದ್ದು. ಇದಕ್ಕಾಗಿ ಡಾಗನ್ ತಮ್ಮ ಜನರನ್ನು ಕಳಿಸಲಿಲ್ಲ. ಕಂಪ್ಯೂಟರ್ ಮೂಲಕ ಈ ಕಾರ್ಯಾಚರಣೆ ಮಾಡಿಸಿಬಿಟ್ಟರು. ಅದೇ ಅವರ ಮೇಧಾವಿತನ. ಎಲ್ಲ ಕಡೆ ದಂಡಂ ದಶಗುಣಂ ಅನ್ನುವ ಹುಂಬರ ಪೈಕಿ ಅಲ್ಲ ಅವರು.

ಮೊದಲು ೧೯೮೦ ರ ದಶಕದಲ್ಲಿ ಇರಾಕ್ ಆಟಂ ಬಾಂಬ್ ಮಾಡಲು ಹೊರಟಿತ್ತು. ಘಾಬರಿಬಿದ್ದ ಇಸ್ರೇಲ್ ಒಂದು dare devil ವೈಮಾನಿಕ ಕಾರ್ಯಾಚರಣೆ ಮಾಡಿ, ಇರಾಕಿನ ಅಣುಸ್ಥಾವರದ ಮೇಲೆ ಬಾಂಬ್ ದಾಳಿ ಮಾಡಿ, ಸದ್ದಾಮ್ ಹುಸೇನನ ಆಟಂ ಬಾಂಬ್ ಆಸೆಗೆ ತಣ್ಣೀರೆರೆಚಿ ಬಂದಿತ್ತು. ಆಮೇಲೆ ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಆಟಂ ಬಾಂಬ್ ಮಾಡಲು ಹೊರಟ. ಅವನ ಅಣುಸ್ಥಾವರಕ್ಕೂ ಅದೇ ಗತಿ ಕಾಣಿಸಿತು ಇಸ್ರೇಲ್. ಆದರೆ ಇರಾನಿನ ಸಮಸ್ಯೆ ಸ್ವಲ್ಪ ಬೇರೆ ತರಹದ್ದು.

ಇರಾನ್ ಆಟಂ ಬಾಂಬ್ ಮಾಡುತ್ತೇನೆ ಅಂತ ಹೊರಡಲಿಲ್ಲ. ಶಾಂತಿಗಾಗಿ ಪರಮಾಣು ಶಕ್ತಿ ಅಂತ ಭೋಂಗು ಬಿಟ್ಟುಕೊಂಡು ಹೊರಟಿತ್ತು. ಹಾಗಂತ ಅಂತರರಾಷ್ಟ್ರೀಯ ಸಮುದಾಯವನ್ನು ನಂಬಿಸಿತ್ತು ಕೂಡ. ಹೀಗಿರುವಾಗ ವೈಮಾನಿಕ ದಾಳಿ ಮಾಡಿ ಇರಾನಿನ ಅಣುಸ್ಥಾವರವನ್ನು ಢಂ ಅನ್ನಿಸುವದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮತ್ತೆ ಇರಾನ್ ಶಕ್ತಿಶಾಲಿ ದೇಶ. ಪ್ರತಿಭಾವಂತರ ದೇಶ.

ಅಂದಿನ ಇಸ್ರೇಲಿನ ಪ್ರಧಾನಿ ಮೀರ್ ಡಾಗನ್ ಅವರನ್ನು ಕರೆದು, 'ಸ್ವಲ್ಪ ಇರಾನನ್ನು ಗಮನಿಸಿಕೊಳ್ಳಿ,' ಅಂತ ಸೂಕ್ಷ್ಮವಾಗಿ ಹೇಳಿದ್ದು ಸಾಕಾಯಿತು ಮೀರ್ ಡಾಗನ್ ಅವರಿಗೆ. ಖತರ್ನಾಕ್ ಸ್ಕೀಮ್ ಹಾಕಲು ಕುಳಿತರು. ಇದು ದೇಹಶಕ್ತಿಯಿಂದಲ್ಲ ಮೆದುಳಿನ ಶಕ್ತಿಯಿಂದಲೇ ನಿವಾರಿಸಬೇಕಾದ ತೊಂದರೆ ಅಂತ ಅವರಿಗೆ ಗೊತ್ತಿತ್ತು. ಮೀರ್ ಡಾಗನ್ ನಂತರ ಮಾಡಿದ ಕೆಲಸ ಅಂದರೆ ಒಂದಿಷ್ಟು ಫೈಲುಗಳನ್ನು ಜೋಡಿಸಿಕೊಂಡು ಅಮೇರಿಕಾಗೆ ವಿಮಾನ ಹತ್ತಿಬಿಟ್ಟರು. ರಾಜಧಾನಿ ವಾಷಿಂಗ್ಟನ್ ತಲುಪಿದವರೇ ಸಿಐಎ ಮುಖ್ಯಸ್ಥರ ಜೊತೆ ದೊಡ್ಡ ಮಟ್ಟದ ಸಮಾಲೋಚನೆಯಲ್ಲಿ ಕುಳಿತರು. ಇರಾನನ್ನು ಹಣಿಯುವ ತಮ್ಮ ಯೋಜನೆಯ ರೂಪುರೇಷೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಡಾಗನ್ ಅವರ ಖತರ್ನಾಕ್ ಪ್ಲಾನ್ ಕೇಳಿದ ಸಿಐಎ ಸಮುದಾಯದಲ್ಲಿ ಸಿಕ್ಕಾಪಟ್ಟೆ excitement. ಮತ್ತೊಮ್ಮೆ ಮೊಸ್ಸಾದ್ ಮತ್ತು ಸಿಐಎ ಜಂಟಿ ಕಾರ್ಯಾಚರಣೆಗೆ ಸಿದ್ಧವಾದವು.

ನುರಿತ ಕಂಪ್ಯೂಟರ್ ತಂತ್ರಜ್ಞರ ತಂಡ ಒಂದು ಟೈಪಿನ ಕಂಪ್ಯೂಟರ್ ವೈರಸ್ ತಯಾರಿಸಲು ಕುಳಿತಿತು. ಅವರೆಲ್ಲ ಸಾಮಾನ್ಯ ಸಾಫ್ಟ್ವೇರ್ ಇಂಜಿನಿಯರ್ ಜನರಲ್ಲ. hacker ಟೈಪಿನ ಜನ. ಕಂಪ್ಯೂಟರ್ ವೈರಸ್ ತಯಾರಿಸಬಲ್ಲರು. ತಯಾರಿಸಿದ ವೈರಸ್ಸುಗಳನ್ನು ಕಂಪ್ಯೂಟರ್ ಜಾಲಗಳಲ್ಲಿ ಸೇರಿಸಿ, compromise ಆದ ಕಂಪ್ಯೂಟರಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಲ್ಲರು. ಇರಾನಿನ ಅಣುಸ್ಥಾವರದ ಕಂಪ್ಯೂಟರ್ ಜಾಲದಲ್ಲಿ ಹೊಕ್ಕು, ಅಲ್ಲಿನ control system software ಮೇಲೆ ಅಧಿಪತ್ಯ ಸ್ಥಾಪಿಸಿ, ಅಲ್ಲಿನ ಯಂತ್ರಗಳಿಗೆ ಒಂದಕ್ಕೆರೆಡು ಸೂಚನೆಗಳನ್ನು ಕೊಟ್ಟು, ಆ ಯಂತ್ರಗಳು ಹದಗೆಟ್ಟುಹೋಗುವಂತೆ ಮಾಡುವ ವೈರಸ್ಸಿನ ನಿರ್ಮಾಣದಲ್ಲಿ ಅಂತಹ ನುರಿತ ಕಂಪ್ಯೂಟರ್ ತಂತ್ರಜ್ಞರು ತೊಡಗಿಸಿಕೊಂಡರು.

ಹೀಗೆ ತಯಾರಿಸಿದ stuxnet ಎಂಬ ಕಂಪ್ಯೂಟರ್ ವೈರಸ್ಸನ್ನು ಇಂಟರ್ನೆಟ್ ಮೂಲಕ ಇರಾನಿನ ಕಂಪ್ಯೂಟರ್ ಜಾಲದಲ್ಲಿ ತಳ್ಳಿದರು. ನಂತರ step by step ಆ stuxnet ವೈರಸ್ಸನ್ನು ಇರಾನಿನ ಪರಮಾಣು ಸ್ಥಾವರದ ಕಂಪ್ಯೂಟರ್ ಜಾಲದಲ್ಲಿ, ಎಲ್ಲ ರಕ್ಷಣೆಗಳನ್ನೂ ಭೇದಿಸಿ, ಒಳ ನುಗ್ಗಿಸುವಲ್ಲಿ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯಶಸ್ವಿಯಾದರು. ಮೊಸ್ಸಾದ್ ಮತ್ತು ಸಿಐಎ ಸಂಸ್ಥೆಗಳ ಹಿರಿ ತಲೆಗಳು go ahead ಅಂತ ಅನುಮತಿ ಕೊಟ್ಟವು. ನಂತರ ಆಗಿದ್ದು ಇರಾನಿನ ಅಣುಸ್ಥಾವರದ ಅತ್ಯಂತ ಮುಖ್ಯ ಯಂತ್ರಗಳಾದ centrifuge ಗಳ ಮಾರಣಹೋಮ. centrifuge ಯಂತ್ರಗಳನ್ನು ನಿಯಂತ್ರಿಸುವ control system software ಒಳಹೊಕ್ಕಿದ್ದ stuxnet ವೈರಸ್ ಅದರ ಸಂಪೂರ್ಣ ನಿಯಂತ್ರಣವನ್ನು ದೂರದಲ್ಲಿ ಕುಳಿತಿದ್ದ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರ ಕೈಗೆ ಅರ್ಪಿಸಿಬಿಟ್ಟಿತು. ನಂತರ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯದ್ವಾತದ್ವಾ ಕಮಾಂಡ್ ಕೊಟ್ಟ ಅಬ್ಬರಕ್ಕೆ ಎಲ್ಲ centrifuge ಯಂತ್ರಗಳು ಮೈ ಮೇಲೆ ದೆವ್ವ ಬಂದವರಂತೆ ತಿರುಗಿ ಪೂರ್ತಿ ಎಕ್ಕುಟ್ಟಿಹೋದವು. ಹುಚ್ಚಾಪಟ್ಟೆ ವರ್ತಿಸುತ್ತಿದ್ದ ಅವನ್ನು ನಿಯಂತ್ರಿಸಲು ಇರಾನಿನ ತಂತ್ರಜ್ಞರು ಬೇರೆ ಕಮಾಂಡ್ ಕೊಟ್ಟರೆ ಅವು ಮಾತು ಕೇಳಲೇ ಇಲ್ಲ. ಯಾಕೆಂದರೆ ಅವುಗಳ ಜುಟ್ಟು ಬೇರೆಯವರ ಕೈಯಲ್ಲಿತ್ತು. ಇರಾನಿನ ಪರಮಾಣು ಪ್ರೋಗ್ರಾಮ್ at least ಹತ್ತು ವರ್ಷ ಹಿಂದಕ್ಕೆ ಹೋಯಿತು. ಈ remote attack ನಿಂದ ಅವರು ಸುಧಾರಿಸಿಕೊಳ್ಳಲಿಕ್ಕೆ ಬಹಳ ವರ್ಷ ಬೇಕು ಬಿಡಿ. ಆ ಮಟ್ಟಿಗೆ ಇಸ್ರೇಲ್ ಸೇಫ್.

ಹೀಗೆ ಕಂಪ್ಯೂಟರ್ ಮೂಲಕ ಕಾರ್ಯಾಚರಣೆ ಮಾಡಲಾಯಿತು ಅಂದ ಮಾತ್ರಕ್ಕೆ ಮೊಸ್ಸಾದಿನ ಹಂತಕರಿಗೆ ಕೆಲಸ ಏನೂ ಕಮ್ಮಿಯಿರಲಿಲ್ಲ. ಅವರಿಗೆ ಖಡಕ್ ಆಜ್ಞೆ. ಇರಾನಿನ ಪರಮಾಣು ವಿಜ್ಞಾನಿಗಳು ಎಲ್ಲೇ ಕಂಡುಬಂದರೂ ದೂಸರಾ ವಿಚಾರ ಮಾಡದೇ ಕೊಂದುಬಿಡಿ. ಸುಮಾರು ಜನ ಇರಾನಿನ ವಿಜ್ಞಾನಿಗಳನ್ನು ಆಯ್ಕೆ ಮಾಡಿ ಮಾಡಿ ಕೊಂದರು ಮೊಸ್ಸಾದಿನ ಹಂತಕರು. ಇರಾನ್ ಉರಿದುಕೊಂಡಿತು. ಇಸ್ರೇಲಿನ ಜಾಗತಿಕ ಆಸಕ್ತಿಗಳ ಮೇಲೆ ಅಲ್ಲಲ್ಲಿ ದಾಳಿಯಾಯಿತು. ದೊಡ್ಡ ನಷ್ಟವೇನೂ ಆಗಲಿಲ್ಲ. ಇಸ್ರೇಲಿಗಳಿಗೆ ಗೊತ್ತು ತಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತ. ದೆಹಲಿಯಲ್ಲಿ ಇಸ್ರೇಲಿ ರಾಯಭಾರಿಯೊಬ್ಬರ ಕಾರಿಗೆ ಬಾಂಬ್ ಅಂಟಿಸಿದ್ದರು. ಸ್ಪೋಟವಾದರೂ ಪ್ರಾಣಹಾನಿಯಾಗಲಿಲ್ಲ. ಇರಾನ್ ಅದನ್ನು ಮಾಡಿಸಿತ್ತು ಅಂತ ಬೇಹುಗಾರಿಕೆ ವಲಯದಲ್ಲಿ ಚರ್ಚೆಯಾಗಿತ್ತು.

ಹೀಗೆ ಅನೇಕಾನೇಕ ರೋಚಕ ಕಾರ್ಯಾಚರಣೆಗಳನ್ನು ರೂಪಿಸಿ, ಅವುಗಳ ಉಸ್ತುವಾರಿ ವಹಿಸಿಕೊಂಡು, ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಮುಂಚೂಣಿಯಲ್ಲಿದ್ದು ಅವುಗಳನ್ನು ಮುನ್ನೆಡಿಸಿದ ಧೀಮಂತ ನಾಯಕ ಮೀರ್ ಡಾಗನ್, ಮೊಸ್ಸಾದಿನ ಮಾಜಿ ಡೈರೆಕ್ಟರ್.

ರಿಟೈರ್ ಆದ ನಂತರ ಡಾಗನ್ ಅವರಿಗೆ ದುರದೃಷ್ಟವಶಾತ್ ಕ್ಯಾನ್ಸರ್ ಬಂತು. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಸಫಲರಾಗಲಿಲ್ಲ. ತಮ್ಮ ಎಪ್ಪತ್ತೊಂದನೆಯ (೭೧) ವಯಸ್ಸಿನಲ್ಲಿ ಇದೇ ಮಾರ್ಚ್ ೧೭ ರಂದು ಧೀರ ಮೀರ್ ಡಾಗನ್ ನಿಧನರಾಗಿದ್ದಾರೆ.

ತಮ್ಮ ಧೀರತನದಿಂದ, ಧೀಮಂತ ವ್ಯಕ್ತಿತ್ವದಿಂದ, extraordinary leadership ನಿಂದ ತುಂಬಾ ಇಷ್ಟವಾಗುತ್ತಾರೆ ಮೀರ್ ಡಾಗನ್. ಅವರ ಸಮಯದಲ್ಲಿ ನಡೆದ ರಹಸ್ಯ ಕಾರ್ಯಾಚರಣೆಗಳ ರೋಚಕ ವಿವರಗಳು ಅವರ ಬಗೆಗೊಂದು ಅನನ್ಯ ಗೌರವವನ್ನು ಮೂಡಿಸುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Rest in peace, Mr. Meir Dagan. Not only Israel but the whole world is grateful to you for making it a little more safe.

Monday, June 29, 2015

ನೀರು ತಂದು ಕುಡಿಸೋ ಅಂದರೆ ಲಿಮ್ಕಾ ತಂದು ಕುಡಿಸಿದ ಮಿತ್ರನೊಬ್ಬನ ನೆನಪಲ್ಲಿ...

ಸಚಿನ್ ತೆಂಡೂಲ್ಕರ್ ಜೊತೆ ಮಿತ್ರ ಗಿರೀಶ್ ಕಾಮತ್

ಪುರಾತನ ಆತ್ಮೀಯ ಮಿತ್ರ ಗಿರೀಶ್ ಕಾಮತ್ ಬೆಂಗಳೂರಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ನಿಧನನಾಗಿದ್ದಾನೆ. ಅವನ ನೆನಪಲ್ಲಿ ಈ ಲೇಖನ.

ಇಸ್ವೀ ೧೯೮೫, ನವೆಂಬರ್ ಅಥವಾ ಡಿಸೆಂಬರ್ ಅಂತ ನೆನಪಿದೆ. ನಾವು ಎಂಟನೆಯ ಕ್ಲಾಸ್. ಆವತ್ತು ಶನಿವಾರ. ಶಾಲೆ ಮುಂಜಾನೆ ಅರ್ಧ ದಿವಸ ಅಷ್ಟೇ. ಹನ್ನೊಂದೂವರೆ ಹೊತ್ತಿಗೆ ಶಾಲೆ ಬಿಟ್ಟಿತು. ಮಧ್ಯಾನದಿಂದ ಹಿಡಿದು ಸಂಜೆಯಾಗುವ ತನಕ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಬೇಕು. ಅದು ನಮ್ಮ ಆವತ್ತಿನ ಪ್ಲಾನ್. ಹಾಗಂತ ದೋಸ್ತ ಲಂಬ್ಯಾ ಉರ್ಫ್ ಸಂದೀಪ್ ಪಾಟೀಲನ ಜೊತೆ ಮಾತಾಡಿ, ಎಲ್ಲಿ ನಮ್ಮ ಭಟ್ಟರ ಶಾಲೆ ಕೋರ್ಟಿನಲ್ಲಿ ಆಡುವದೋ, KCD ಕೋರ್ಟಿನಲ್ಲಿ ಆಡುವದೋ ಅಥವಾ KUD ಜಿಮಕಾನಾ ಕೋರ್ಟಿನಲ್ಲಿ ಆಡುವದೋ ಅಂತ ಕೇಳೋಣ ಅಂತ, 'ಲೇ, ಲಂಬ್ಯಾ, ಇವತ್ತ ಮಧ್ಯಾನ ಎಲ್ಲಲೇ???' ಅನ್ನುವಷ್ಟರಲ್ಲಿ ಲಂಬ್ಯಾ ಬಾಂಬ್ ಹಾಕಿಬಿಟ್ಟ. 'ಮಹೇಶಾ, ಇವತ್ತು ಮಧ್ಯಾನ ಬಾಸೆಲ್ ಮಿಷನ್ ಸಾಲಿ ಜೋಡಿ ಕ್ರಿಕೆಟ್ ಮ್ಯಾಚ್ ಕೊಟ್ಟುಬಿಟ್ಟೇನಿ. ನೀನೂ ಬಂದುಬಿಡು. ಲಗೂನೆ ಹೋಗಿ ಊಟ ಮುಗಿಸಿ ಬಂದೇಬಿಡು.......' ಅಂತ ಹೇಳುತ್ತ ಉಳಿದ ಹತ್ತು ಆಟಗಾರರ ಜುಗಾಡ್ ಮಾಡುವತ್ತ ಗಮನ ಹರಿಸಿದ. ಆಗ ಅರ್ಥವಾಯಿತು. ಈ ಪುಣ್ಯಾತ್ಮ ಲಂಬ್ಯಾ ಯಾವಾಗಲೋ ಮ್ಯಾಚ್ ಕೊಟ್ಟುಬಿಟ್ಟಿದ್ದಾನೆ. ಕಮಿಟ್ ಆಗಿಬಿಟ್ಟಿದ್ದಾನೆ. ನಂತರ ಫುಲ್ ಮರೆತುಬಿಟ್ಟಿದ್ದಾನೆ. ಶನಿವಾರ ಮಧ್ಯಾನ ಶಾಲೆ ಗೇಟಿನಲ್ಲಿ ಬಾಸೆಲ್ ಮಿಷನ್ ಶಾಲೆಯ ಟೀಮು ಪೂರ್ತಿ ಸನ್ನದ್ಧವಾಗಿ ಪ್ರತ್ಯಕ್ಷವಾದಾಗಲೇ ಇವನಿಗೆ ಮ್ಯಾಚಿನ ನೆನಪಾಗಿದೆ. ಹೇಳಿ ಕೇಳಿ ಅವನೇ ಕ್ಯಾಪ್ಟನ್ ಮತ್ತು ಟಾಪ್ ಪ್ಲೇಯರ್. ಅದಕ್ಕೇ ತರಾತುರಿಯಲ್ಲಿ ಒಂದು ಟೀಮ್ ಒಟ್ಟು ಕೂಡಿಸಲು ಓಡಾಡುತ್ತಿದ್ದಾನೆ, ಒದ್ದಾಡುತ್ತಿದ್ದಾನೆ. ಹಾಗಾಗಿ ಬ್ಯಾಟ್ ಹಿಡಿಯಲು, ಬಾಲ್ ಒಗೆಯಲು ಬಂದ ಎಲ್ಲರಿಗೂ 'ಊಟ ಮಾಡಿ ಬಂದುಬಿಡ್ರೀ,' ಅಂತ ಆಫರ್ ಕೊಡುತ್ತ, ಆಫರ್ ಕೊಟ್ಟ ಇಪ್ಪತ್ತು, ಮೂವತ್ತು ಮಂದಿಯಲ್ಲಿ ಕಮ್ಮಿ ಕಮ್ಮಿ ಎಂಟೊಂಬತ್ತು ಜನ ಬಂದರೂ ಸಾಕು. 'ನಮ್ಮ ಕಡೆ ಹನ್ನೊಂದು ಮಂದಿ ಆಗಿಲ್ಲಲೇ ರಾಜ್ಯಾ. ಎಂಟ ಮಂದಿ ಅದೇವಿ. ಸಾಕು. ಆಡೋಣ ನಡ್ರೀ,' ಅಂತ ಎದುರು ಪಾರ್ಟಿಯ ಕ್ಯಾಪ್ಟನ್ ರಾಜೇಶ್ ಪಾಟೀಲ್ ಉರ್ಫ್ ಮಾಳಮಡ್ಡಿಯ ಗಿಡ್ಡ ರಾಜ್ಯಾನ ಜೊತೆಗೆ ಏನೋ ಒಂದು ತರಹದ ಮಾಂಡವಲಿ ಮಾಡುವ ಸ್ಕೆಚ್ ಹಾಕಿದ್ದ ಅಂತ ಕಾಣುತ್ತದೆ ನಮ್ಮ ಕ್ಯಾಪ್ಟನ್ ಲಂಬ್ಯಾ. ನಮ್ಮ ದೋಸ್ತ ಕ್ಯಾಪ್ಟನ್ ಲಂಬ್ಯಾ ಅಂದರೆ ಹಿಂಗೇ!

ಅದೊಂದು ಆರು ತಿಂಗಳು ಕ್ರಿಕೆಟ್ ಎಲ್ಲರಿಗೂ ಮರ್ತೇ ಹೋಗಿತ್ತು. ಆಗ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಹುಡುಗರು, ಹುಡುಗಿಯರು ಎಲ್ಲರೂ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಿದವರೇ. ಮಾಸ್ತರರು, ಮಾಸ್ತರಣಿಯರು ಸಹ ತಲಬು ತಡೆಯಲಾಗದೇ ನಮ್ಮ ಹತ್ತಿರ ರಾಕೆಟ್, ಶಟಲ್ ಕಾಕ್ ತೆಗೆದುಕೊಂಡು ಆಡಿದ್ದೇ ಆಡಿದ್ದು. ಮಾಸ್ತರುಗಳು ಪ್ಯಾಂಟ್ ಎತ್ತಿ, ಮಡಚಿ ಹಾಪ್ ಪ್ಯಾಂಟ್ ಮಾಡ್ಕೊಂಡು ಆಡಿದರೆ, ಮಾಸ್ತರಣಿಯರು ಸೀರೆ ಎತ್ತಿ ಸೊಂಟಕ್ಕೆ ಸಿಗಿಸಿಕೊಂಡು ಆಡಿದ್ದೇ ಆಡಿದ್ದು. ಹೀಗೆ ಬ್ಯಾಡ್ಮಿಂಟನ್ ಗುಂಗಿನಲ್ಲಿ ಕ್ರಿಕೆಟ್ ಅನ್ನುವದು ಮರ್ತೇ ಹೋಗಿದ್ದಾಗ ಒಂದು ಕ್ರಿಕೆಟ್ ಮ್ಯಾಚ್ ಅಚಾನಕ್ ಬಂದುಬಿಟ್ಟಿದೆ. ಪ್ರಾಕ್ಟೀಸ್ ಇಲ್ಲ. ಆದರೂ ಆಡಬೇಕು. ಕ್ಯಾಪ್ಟನ್ ಲಂಬ್ಯಾ ಮಾತು ಕೊಟ್ಟುಬಿಟ್ಟಿದ್ದಾನೆ. ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ವಿರುದ್ಧ ಟೀಂ ಬಾಗಿಲಲ್ಲಿ ಬಂದು ನಿಂತಿದೆ. ಈಗ ಶಸ್ತ್ರ ತ್ಯಜಿಸಿ ಹೋಗಲಿಕ್ಕೆ ನಾವು ಹೇಳಿಕೇಳಿ ಕೆ.ಇ. ಬೋರ್ಡ್ ಶಾಲೆ ವಿದ್ಯಾರ್ಥಿಗಳು. ಅಂದರೆ ಏನು? ನಮ್ಮ ಹೈಸಿಯೆತ್ತೇನು? ನಮ್ಮ ಕ್ರಿಕೆಟ್ ಕಾಬೀಲಿಯತ್ತೇನು? ಬಂದದ್ದೆಲ್ಲ ಬರಲಿ ಅಂತ ಮ್ಯಾಚ್ ಆಡಲು ರೆಡಿ ಆದೆವು. ಗಡಿಬಿಡಿಯಲ್ಲಿ ಮನೆ ಕಡೆ ಹೊರಟೆವು. ಊಟ ಮಾಡಿ ಲಗೂನೆ ವಾಪಸ್ ಬರಬೇಕಿತ್ತು.

ಸರಿ ಮನೆಗೆ ಬಂದೆ. ನೋಡಿದರೆ ಮನೆಯಲ್ಲಿ ದುಬೈನಿಂದ ಹಿಂತಿರುಗಿದ ಬಂಧುಗಳು. ಅವರ ಅಚಾನಕ್ ವಿಸಿಟ್. ಹಾಗಾಗಿ ಅಮ್ಮನ ಅಡಿಗೆ ಸ್ವಲ್ಪ ತಡ. ನಮಗೋ ಲಗೂನೆ ಒಂದಿಷ್ಟು ಮುಕ್ಕಿ, ಕಬಳಿಸಿ, ಕಿಟ್ ಎತ್ತಿಕೊಂಡು, ವಾಪಸ್ ಶಾಲೆ ಮೈದಾನಕ್ಕೆ ಓಡಬೇಕು. ಇಲ್ಲಿ ನೋಡಿದರೆ ಅಮ್ಮ ಬಂದ ನೆಂಟರ ಖಾತಿರ್ದಾರಿ ಮಾಡುತ್ತ, ಜೊತೆಗೆ ಸ್ವಲ್ಪ ವಿಶೇಷ ಅನ್ನಿಸುವಂತಹ elaborate ಅಡಿಗೆಯಲ್ಲಿ ನಿರತಳು. 'ಏ, ಲಗೂ ಊಟಕ್ಕ ಹಾಕ. ನನಗ ಮ್ಯಾಚ್ ಅದ. ಲಗೂ, ಲಗೂ...... ಟೈಮ್ ಇಲ್ಲ. ಲಗೂ ಊಟಕ್ಕ ಹಾಕಬೇ!' ಅಂತ ಅಮ್ಮನಿಗೆ ಒಂದು ಆವಾಜ್ ಹಾಕಿ, ಬಂದ ನೆಂಟರಿಗೊಂದು ನಮಸ್ಕಾರ, ದುಬೈನಿಂದ ಗಿಫ್ಟ್ ತಂದುಕೊಟ್ಟಿದ್ದಕ್ಕೆ ಒಂದು ಥ್ಯಾಂಕ್ಸ್ ಹೇಳಿ ಬಟ್ಟೆ ಬದಲಾಯಿಸಲು ಹೋದೆ. ಯುನಿಫಾರ್ಮ್ ಬಿಳಿ ಅಂಗಿಯಂತೂ ಇತ್ತು. ಖಾಕಿ ಪ್ಯಾಂಟ್ ಬಿಚ್ಚಿ ಬಿಳಿಯ ಪ್ಯಾಂಟ್ ಏರಿಸಿಕೊಂಡು ಹೋದರೆ ಆಯಿತು. ಅದೆಲ್ಲ ಬೇಕು ಅಂತ ಏನೂ ಇರಲಿಲ್ಲ. ಏನೋ ಮಹಾ ಕ್ರಿಕೆಟ್ ಆಡುವವರಂತೆ ಹೊಲಿಸಿದ ಬಿಳಿಯ ಪ್ಯಾಂಟ್ ಇದ್ದಾಗ ಹಾಕಿಕೊಳ್ಳಲಿಕ್ಕೆ ಏನು ಧಾಡಿ? ಅಂತ ನಮ್ಮ ವಿಚಾರ. ಬಾಸೆಲ್ ಮಿಷನ್ ಶಾಲೆ ಮಂದಿಗಂತೂ ಶನಿವಾರ ವೈಟ್ ಡ್ರೆಸ್ ದಿವಸ. ಹಾಗಾಗಿ ಅವರೆಲ್ಲ ಬರೋಬ್ಬರಿ ವೈಟ್ ಡ್ರೆಸ್ ಹಾಕಿಕೊಂಡೇ ಬಂದಿದ್ದರು. ನಾವೇ ಭಟ್ಟರ ಶಾಲೆ ಮಂದಿ, ಧೋತ್ರ ಒಂದು ಉಟ್ಟುಕೊಂಡು ಕ್ರಿಕೆಟ್ ಆಡದಿದ್ದರೆ ಅದೇ ದೊಡ್ಡ ಮಾತು. ಬಾಕಿ ಎಲ್ಲಾ ಡ್ರೆಸ್ ಓಕೆ.

'ಏ! ಆತೇನss ಊಟಕ್ಕ? ನನಗ ಹೋಗಬೇಕು. ಎಲ್ಲೆ ಊಟ??? ಲಗೂ, ಲಗೂ!' ಅಂತ ಮತ್ತ ನನ್ನ ಗಡಿಬಿಡಿ. 'ಏನಿದ್ದಿಯೋ ನೀನು? ಮೊದಲು ಹೇಳಂಗಿಲ್ಲ ಬಿಡಂಗಿಲ್ಲ. ಒಮ್ಮೆಲೇ ಬಂದು ಹಿಂಗ ಹುಚ್ಚರ ಗತೆ ಗಡಿಬಿಡಿ ಮಾಡ್ತಿ. ಸ್ವಲ್ಪ ತಡಿ. ನನಗ ಭಾಳ ಕೆಲಸ ಅದ,' ಅಂತ ಅಮ್ಮನ ವಿವರಣೆ. ಅದೆಲ್ಲ ನಮಗೆ ತಿಳಿದರೆ ತಾನೇ? ನಮ್ಮ ಗಡಿಬಿಡಿ ಮಾಡುವದು, ಅಮ್ಮನನ್ನು ಕಾಡುವದು ನಡದೇ ಇತ್ತು. ಕಾಟ ತಡಿಯಲಾಗದ ಅಮ್ಮ, 'ಏನು ಜೀವಾ ತಿಂತಿ ಮಾರಾಯಾ? ಹೂಂ. ಕೈಕಾಲ್ಮುಖ ಆದರೂ ತೊಳ್ಕೊಂಡು ಬಂದು ಕೂಡ್ತಿಯೋ ಅಥವಾ........? ಜೀವಾ ತಿಂದು ತಿಂದು ಹಾಕ್ತಾನ!!!' ಅನ್ನುತ್ತ ಅಮ್ಮ ತುರ್ತಿನಲ್ಲಿ ನಮ್ಮ ಊಟಕ್ಕೆ ಏನೋ ಒಂದು ಜುಗಾಡ್ ಮಾಡಲು ಮುಂದಾದರು. ನಮಗೂ ತಿಮಿರು. ಸುಮ್ಮನಿರಲಿಲ್ಲ. 'ನಿನ್ನ ಜೀವಾ ತಿಂದರ ಹೊಟ್ಟಿ ಏನೂ ತುಂಬಂಗಿಲ್ಲ. ಈಗ ಬಂದೆ. ಲಗೂ ಲಗೂ ರೆಡಿ ಮಾಡು,' ಅಂತ ಹೇಳಿ ಹೊರಟೆ. ಅದು ಬಿಡಿ ಅಮ್ಮ ಮಗನ ಪ್ರತಿದಿನದ ಜಗಳ. ಅದು ಎಂದೂ ಮುಗಿಯದ ಪ್ರೀತಿಯ ಜಗಳ ಅಂತ ಅಮ್ಮನ ಮಾತು. ಏನೋ ಗೊತ್ತಿಲ್ಲ.

ಕೈಕಾಲ್ಮುಖ ಎಲ್ಲ ತಣ್ಣಗೆ ಮಾಡಿಕೊಂಡು ಬಂದು ಕೂಡುವ ಹೊತ್ತಿಗೆ ನಾಲ್ಕು ಬಿಸಿ ಬಿಸಿ ಚಪಾತಿ, ಗಡಿಬಿಡಿಯಲ್ಲಿ ಹೆಂಗೋ ಮಾಡಿಮುಗಿಸಿದ್ದ ಒಂದು ಪಲ್ಯಾ ಎಲ್ಲ ತಯಾರಿತ್ತು. ಮೇಲಿಂದ ಒಂದಿಷ್ಟು ಖರೇ ತುಪ್ಪ. ಮೇಡ್ ಇನ್ ಸಿರ್ಸಿ. ನಮ್ಮ ಅಜ್ಜಿ ಉರ್ಫ್ ಅಮ್ಮನ ಅಮ್ಮ ಮುದ್ದು ಮಮ್ಮಗನಿಗೆ ಅಂತ ಮಾಡಿ ಕಳಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ನಮಗೆ ಅಮ್ಮನ ಜೀವ ಇನ್ನೊಂದಿಷ್ಟು ತಿನ್ನಲಿಲ್ಲ ಅಂದರೆ ಸಮಾಧಾನವಿಲ್ಲ. 'ಏನು ದರಿದ್ರ ಪಲ್ಯಾ ಇದು? ಹೋಗಿ ಹೋಗಿ ಬೆಂಡಿಕಾಯಿ ಪಲ್ಯಾ ಮಾಡಿ. ಸವತಿಕಾಯಿದು ಮಾಡಲಿಕ್ಕೆ ಏನು ಧಾಡಿಯಾಗಿತ್ತು ನಿನಗ?' ಅಂತ ಇಲ್ಲದ ಕಿರಿಕ್ ನಮ್ಮದು. ಸವತೆಕಾಯಿಯದೇ ಮಾಡಿದ್ದರೆ ಬದನೆಕಾಯಿದು ಯಾಕೆ ಮಾಡಿಲ್ಲ ಅಂತ ಕೇಳುತ್ತಿದ್ದೆ ಅನ್ನುವದರಲ್ಲಿ ಯಾರಿಗೂ ಡೌಟ್ ಇಲ್ಲ. ಅಲ್ಲಿಗೆ ಅಮ್ಮನ ಆವತ್ತಿನ ಸಹನೆಯ ಲಿಮಿಟ್ ಮುಟ್ಟಿತ್ತು. 'ನೋಡು, ಬೇಕಾದ್ರ ತಿನ್ನು. ಇಲ್ಲಾ ಬಿಡು. ನನಗ ಭಾಳ ಕೆಲಸ ಅದ,'  ಅಂತ ಹೇಳಿದ ಅಮ್ಮನ ಮಾತು ಆಖ್ರೀ ಫೈಸ್ಲಾ ಅಂತ ಗೊತ್ತಾಯಿತು. ಇನ್ನು ನಾವು ಏನೇ ಮನ್ಮಾನಿ ಮಾಡುತ್ತಾ ಕುಳಿತರೂ ಯಾರೂ ಏನೂ ಭಾವ ಕೊಡುವದಿಲ್ಲ ಅಂತ ತಿಳಿದು, ಅದರೂ ಇನ್ನಷ್ಟು ಸೊಕ್ಕು ಹಾರಿಸಿಯೇ ಊಟ ಮಾಡಬೇಕು ಅಂತ ಹೇಳಿ, 'ದರಿದ್ರ ಪಲ್ಯಾ ಮಾಡಿ. ಸಕ್ಕರಿ ಪುಡಿಯಾದರೂ ಕೊಡು ಇತ್ಲಾಗ. ನಿನ್ನ ಪಲ್ಯಾ ನೀನೇ ತಿಂದ್ಕೋ,' ಅಂತ ಅವಾಜ್ ಹಾಕಿ, ಅಮ್ಮ ತಲೆ ಚಚ್ಚಿಕೊಳ್ಳುತ್ತ ಕೊಟ್ಟ ಸಕ್ಕರೆ ಪುಡಿಯಲ್ಲಿ ಪಾವಶೇರ್ ಸಕ್ಕರೆ ಪುಡಿಗೆ ತುಪ್ಪ ಬರೋಬ್ಬರಿ ಮಿಕ್ಸ್ ಮಾಡಿ, ನಾಕು ಚಪಾತಿ ಗುಳುಂ ಮಾಡುವ ಹೊತ್ತಿಗೆ ಅಮ್ಮ ಪಾವ್ ಲೀಟರ್ ಬಿಸಿ ಹಾಲು ತಂದು ಇಟ್ಟಳು. 'ಪೂರ್ತಿ ಊಟಂತೂ ಮಾಡಿಲ್ಲ. ಒಂದಿಷ್ಟು ಹಾಲು ಕುಡಿದು ಹೋಗು. ಏನು ಮಾಡತಿಯೋ, ಎಲ್ಲೆ ಹೋಗತಿಯೋ ಏನೋ??' ಅಂದಳು. ಅಮ್ಮನ ಕಾಳಜಿ. ಎಲ್ಲ ತಿಂದು, ಕುಡಿದು, 'ವಾತಾಪಿ ಜೀರ್ಣೋ ಭವ' ಅನ್ನುವ ಮಾದರಿಯಲ್ಲಿ ಎದ್ದು ಬಂದಾಯಿತು. ಕ್ರಿಕೆಟ್ ಕಿಟ್ ರೆಡಿ ಇತ್ತು. ನಡ್ರೀ ಮತ್ತ ಶಾಲೆ ಗ್ರೌಂಡಿಗೆ.

ಇಷ್ಟೆಲ್ಲಾ ಗಡಿಬಿಡಿಯಲ್ಲಿ ಊಟ ಮುಗಿಸಿ, ಮ್ಯಾಚ್ ಇದೆ ಅಂತ ಓಡಿ ಬಂದರೆ ನಮ್ಮ ಟೀಮ್ ರೆಡಿ ಆಗಿರಲೇ ಇಲ್ಲ. ಗ್ರೌಂಡಿನಲ್ಲಿ ಕ್ಯಾಪ್ಟನ್ ಲಂಬ್ಯಾ ಇದ್ದ. ಮತ್ತೊಂದು ನಾಲ್ಕಾರು ಜನ ಇದ್ದರು. ಹನ್ನೊಂದು ಜನರ ತಂಡಕ್ಕೆ ಕಮ್ಮಿ ಕಮ್ಮಿ ಅಂದರೂ ಇನ್ನೂ ನಾಲ್ಕಾರು ಜನ ಬೇಕಾಗಿತ್ತು. ಟೈಮ್ ಸುಮಾರು ಮಧ್ಯಾನ ಒಂದೂವರೆ. ಎದುರಾಳಿ ಪಾರ್ಟಿ ಬಾಸೆಲ್ ಮಿಷನ್ ಜನರ ಮುಖ ನೋಡಿದರೆ ನಮ್ಮ ಬಗ್ಗೆ ಒಂದು contemptuous ಲುಕ್. 'ಏನು ದರಿದ್ರ ಮಂದಿಲೇ ಈ ಕೆ ಬೋರ್ಡ್ ಸಾಲಿ ಮಂದಿ? ನಾವು ಬಂದು ಕೂತು ದೀಡ ತಾಸ್ ಮ್ಯಾಲೆ ಆತು. ಇನ್ನೂ ಇವರ ಟೀಮ್ ರೆಡಿ ಆಗವಲ್ಲತು,' ಅನ್ನುವ ಲುಕ್ ಅವರ ಮುಖದ ಮೇಲೆ.

ಮತ್ತೊಂದು ಹತ್ತು ಹದಿನೈದು ನಿಮಿಷ ಕಾದ ನಂತರ ನಮ್ಮ ಇನ್ನೂ ಇಬ್ಬರು ಆಟಗಾರರು ಬಂದರು. ಆಗ ಸುಮಾರು ಒಂಬತ್ತು ಜನ ಆದಂಗೆ ಆಯಿತು. ಅಷ್ಟು ಸಾಕು ಅಂತ ಹೇಳಿ ಟಾಸ್ ಮಾಡಲು ನಮ್ಮ ಕ್ಯಾಪ್ಟನ್ ಲಂಬ್ಯಾ ಮತ್ತು ಅವರ ಕ್ಯಾಪ್ಟನ್ ಗಿಡ್ಡ ರಾಜ್ಯಾ ಹೋದರು. ಯಾರು ಟಾಸ್ ಗೆದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ನಮಗೆ ಬ್ಯಾಟಿಂಗ್ ಬಂತು. ಒಳ್ಳೆಯದೇ ಆಯಿತು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದಿಬ್ಬರು ಆಟಗಾರರು ಬಂದು ಮುಟ್ಟಿಕೊಳ್ಳುತ್ತಾರೆ. ಎಲ್ಲ ಸರಿಯಾಗುತ್ತದೆ ಅಂತ ಅಂದುಕೊಂಡೆವು.

ಮೊದಲೇ ಹೇಳಿದಂತೆ ಆ ವರ್ಷ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಕ್ರಿಕೆಟ್ ಪ್ರಾಕ್ಟೀಸ್ ಇಲ್ಲವೇ ಇಲ್ಲ. ಮೇಲಿಂದ ಲೆದರ್ ಬಾಲ್ ಬೇರೆ. ಅಷ್ಟೇ ಮತ್ತೆ. ಒಬ್ಬರ ನಂತರ ಒಬ್ಬ ಬ್ಯಾಟ್ಸಮನ್ ಪಟಪಟ ಅಂತ ಔಟ್ ಆಗಿಹೋದರು. ಹತ್ತು ರನ್ ಆಗುವಷ್ಟರಲ್ಲಿ ನನ್ನನ್ನೂ ಹಿಡಿದು ನಾಲ್ಕು ಜನ ಔಟ್. ಮುಂದೆ ಹೆಂಗೋ ಮಿಡ್ಲ್ ಆರ್ಡರ್ ಮಂದಿ, ಅದರಲ್ಲೂ ಕ್ಯಾಪ್ಟನ್ ಲಂಬ್ಯಾ, ಒಂದಿಷ್ಟು ರನ್ ಸ್ಕೋರ್ ಮಾಡಿ ಸುಮಾರು ನಲವತ್ತು ನಲವತ್ತೈದು ರನ್ ಆಗುವಷ್ಟರಲ್ಲಿ ನಮ್ಮ ಇನ್ನಿಂಗ್ಸ್ ಮುಗಿಯಿತು. ಶಿವಾಯ ನಮಃ. ನಮ್ಮ ಎದುರಾಳಿಗಳು ಬೌಲಿಂಗ್ ಮಾಡಿದ ರೀತಿಯಲ್ಲಿಯೇ ಬ್ಯಾಟಿಂಗ್ ಸಹ ಮಾಡಿಬಿಟ್ಟರೆ ಒಂದು ಏಳೆಂಟು ಓವರುಗಳಲ್ಲಿ ನಮ್ಮನ್ನು ಸೋಲಿಸಿ, ಮನೆ ಕಡೆ ಹೊರಡುತ್ತಾರೆ ಅಂತ ಅನ್ನಿಸಿಬಿಟ್ಟಿತ್ತು. ಗೆಲ್ಲುವ ಚಾನ್ಸ್ ಭಾಳ ಕಮ್ಮಿ ಅನ್ನಿಸಿತ್ತು. ಡಿಫೆಂಡ್ ಮಾಡಲು ಸಾಧ್ಯವಿಲ್ಲದ ಸ್ಕೋರ್ ಅನ್ನಿಸಿದರೂ ಫೀಲ್ಡಿಂಗ್ ಮಾಡಲೇಬೇಕು. ದರಿದ್ರ. ಕರ್ಮ. ಕೆಟ್ಟ ಬಿಸಿಲು ಬೇರೆ.

ಸರಿ. ಬಾಸೆಲ್ ಮಿಷನ್ ಮಂದಿಯ ಬ್ಯಾಟಿಂಗ್ ಶುರುವಾಯಿತು. ಎಲ್ಲ ಒಳ್ಳೆ ಫಾರ್ಮಿನಲ್ಲಿ ಇದ್ದವರೇ. ಹತ್ತು ಹದಿನೈದು ರನ್ ಬೇಗ ಬೇಗ ಸ್ಕೋರ್ ಮಾಡಿಬಿಟ್ಟರು. ನಮ್ಮವರ ಬೌಲಿಂಗ್, ಫೀಲ್ಡಿಂಗ್ ಎಲ್ಲ ದೇವರಿಗೇ ಪ್ರೀತಿ. ವಿಕೆಟ್ ಲಾಸ್ ಇಲ್ಲದೇ ಗೆದ್ದು ಬಿಡುತ್ತಿದ್ದರೋ ಏನೋ. ಏನೋ ಪೊರಪಾಟಿನಲ್ಲಿ ಒಂದರೆಡು ವಿಕೆಟ್ ಬಿದ್ದುಬಿಟ್ಟವು. ನಂತರ ಅವರು ತುಂಬಾ careful ಆಗಿ ಆಡುತ್ತ, ಅಲ್ಲಿ ಇಲ್ಲಿ ಒಂದು ಎರಡು ರನ್ ಕದಿಯುತ್ತ ಹೊರಟಿದ್ದರು.

ಕೆಟ್ಟ ಬಿಸಿಲು. ಸಿಕ್ಕಾಪಟ್ಟೆ ದಾಹ. ನೀರಡಿಕೆ. ನೀರಿಲ್ಲ. ಲೆಗ್ ಸೈಡ್ ನಲ್ಲಿ ನನ್ನ ಫೀಲ್ಡಿಂಗ್. ದೂರದಲ್ಲಿ ನಿಂತಿದ್ದೆ. ಕೆಟ್ಟ ಬೋರ್. ನಮ್ಮ ಕಡೆ ಬಾಲಂತೂ ಬರುತ್ತಿರಲಿಲ್ಲ. ಅದೇ ಒಳ್ಳೆಯದು. ಫೀಲ್ಡಿಂಗ್ ರೂಢಿಯೇ ತಪ್ಪಿಹೋಗಿತ್ತು ಅಂದೆನಲ್ಲ. ಅದರೂ ಆ ಬಾಸೆಲ್ ಮಿಷನ್ ಮುಂಡೆ ಮಕ್ಕಳು ನಮ್ಮನ್ನು ಸೋಲಿಸುವವರೆಗೆ ಈ ಗಧಾ ಮಜದೂರಿ ಫೀಲ್ಡಿಂಗ್ ಮಾಡಲೇಬೇಕು. ನಮಗೆ ತುರ್ತಾಗಿ ಬೇಕಾಗಿರುವದು ಒಂದಿಷ್ಟು ನೀರು. ದಾಹ ದಾಹ. ಎಲ್ಲರೂ ಭಕ್ತಿಯಿಂದ ಆಡುತ್ತಿರುವಾಗ ನಾವೊಬ್ಬರೇ ನೀರು ಕುಡಿಯಲು ಹೇಗೆ ಹೋಗೋಣ? ಅದೂ ನಮ್ಮ ಭಟ್ಟರ ಶಾಲೆಯ ಹಾವು, ಹಾವರಾಣಿ ಬಿದ್ದ ನೀರಿನ ಟಂಕಿಯಲ್ಲಿ ಶನಿವಾರ ಮಧ್ಯಾನ ನೀರು ಇರುತ್ತದೆಯೋ ಇಲ್ಲವೋ. ಯಾವನಿಗೆ ಗೊತ್ತು?

ಹೀಗೆ ನೀರಿಗಾಗಿ ದಾಹ ದಾಹ ಅಂತ ಚಡಪಡಿಸುತ್ತಿರುವಾಗ ಒಂದು ಆಕೃತಿ ಕಣ್ಣಿಗೆ ಬಿತ್ತು. ಅದು ಸೈಕಲ್ ಮೇಲೆ ಗ್ರೌಂಡ್ ಸುತ್ತುತ್ತಿತ್ತು. ಆ ಕಾಲದ ಕ್ರಿಕೆಟ್ ಮ್ಯಾಚ್ ಅಂದರೆ ಏನು ಕೇಳುತ್ತೀರಿ! ಗ್ರೌಂಡಿನ ಒಂದು ಮೂಲೆಯಲ್ಲಿ ಯಾರೋ ಎಮ್ಮೆ ಮೇಯಿಸಿಕೊಂಡು ಇದ್ದರೆ, ಇನ್ನೊಂದು ಮೂಲೆಯಲ್ಲಿ ಹಂದಿಗಳು ತಿಪ್ಪೆ ಕೆದರಿಕೊಂಡು ಇರುತ್ತಿದ್ದವು. ಇನ್ನು ಗ್ರೌಂಡಿನ ತುಂಬಾ ಆಟಗಾರರು ಮಾತ್ರವಲ್ಲದೇ ಎಲ್ಲಾ ತರಹದ ಜನರೂ ಇರುತ್ತಿದ್ದರು. ಸೈಕಲ್ ಇದ್ದವರು ಸೈಕಲ್ ಹೊಡೆಯುತ್ತಿದ್ದರು. ನಮ್ಮ ಕಡೆಯವರಾದದರೆ ಸೈಕಲ್ ಮೇಲೆ ಬಂದು ಉದ್ರಿ ಉಪದೇಶ ಮಾಡಿ, ಎದುರಾಳಿಗಳ ಸ್ಕೋರ್ ಇತ್ಯಾದಿ ತಿಳಿಸಿ ಹೋಗುತ್ತಿದ್ದರು.

ಆಗ ಸೈಕಲ್ ಹೊಡೆಯುತ್ತ ಬಂದವ ಕಾಮ್ಯಾ ಉರ್ಫ್ ಕಾಮ ಉರ್ಫ್ ಕಾಮತ್ ಉರ್ಫ್ ಗಿರೀಶ್ ಕಾಮತ್. ನಮ್ಮ ಕ್ಲಾಸ್ಮೇಟ್. ಗೆಳೆಯ. ಮ್ಯಾಚ್ ನೋಡಲು ಬಂದಿದ್ದ ಅಂತ ಕಾಣುತ್ತದೆ. ಅಥವಾ ಯಾರೂ ಬರದಿದ್ದರೆ ಇವನನ್ನೇ ಹಾಕಿಕೊಂಡು ಆಡಿದರಾಯಿತು ಅಂತ ಕ್ಯಾಪ್ಟನ್ ಲಂಬ್ಯಾನೇ ಎಲ್ಲಿ ಇವನನ್ನೂ ಕೂಡ ಕರೆದಿದ್ದನೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅಂದು ಗಿರೀಶ್ ಕಾಮತ್ ಉರ್ಫ್ ಕಾಮ್ಯಾ ಅಲ್ಲಿಗೆ ಬಂದಿದ್ದಾನೆ. ಸೈಕಲ್ ಹೊಡೆಯುತ್ತ, ತನ್ನ ಮಿತ್ರರನ್ನು ಮಾತಾಡಿಸುತ್ತ ಕ್ರಿಕೆಟ್ ಆಟ ನೋಡುತ್ತಿದ್ದಾನೆ.

ನಾನು ಫೀಲ್ಡಿಂಗ್ ಮಾಡುತ್ತಿದ್ದ ಕಡೆಗೂ ಬಂದ. ನನಗೆ ವಿಶ್ ಮಾಡುವವನಂತೆ ಅವನ characteristic ಭೋಲಾ, ಮುಗ್ಧ, ಮಳ್ಳು ನಗೆ ನಕ್ಕ.

'ಲೇ, ಕಾಮ್ಯಾ, ಬಾರಲೇ ಇಲ್ಲೆ. ಸ್ವಲ್ಪ ಬಾರಲೇ' ಅಂತ ಕರೆದೆ.

'ಏನ್ ಮಹೇಶಾ?' ಅಂತ ಕೇಳುತ್ತ, ಸೈಕಲ್ ಆಕಡೆ ಈಕಡೆ ವಾಲಿಸಿ ಹೊಡೆಯುತ್ತ ಬಂದ.

'ಕಾಮ್ಯಾ, ಭಾಳ ನೀರಡಿಕಿಲೇ. ಕೆಟ್ಟ ಆಸ್ರ ಆಗ್ಯದ. ಎಲ್ಲಿಂದರೆ ಒಂದಿಷ್ಟು ನೀರು ತಂದು ಕುಡಿಸೋ ಮಾರಾಯಾ. ಪ್ಲೀಸ್ ಲೇ,' ಅಂತ ಕೇಳಿಕೊಂಡೇಬಿಟ್ಟೆ. ಅಷ್ಟು ದಾಹ.

ಕಾಮತ್ ಒಂದು ಕ್ಷಣ ದಂಗಾದ. ಯಾತಕ್ಕೋ ಕರೆದಿರಬೇಕು ಅಂತ ಬಂದರೆ ನಮ್ಮಿಂದ ನೀರಿಗಾಗಿ ಡಿಮ್ಯಾಂಡ್. ಏನು ಮಾಡಬೇಕು ಅಂತ ತಿಳಿಯಲಿಲ್ಲ ಅವನಿಗೆ. ಮತ್ತೆ ಎಲ್ಲಿಂದ ನೀರು ತರಬೇಕು? ಹೇಗೆ ತರಬೇಕು? ಕೈ ಬೊಗಸೆಯಲ್ಲಿ ನೀರು ತಂದು ಕುಡಿಸಬೇಕೇ? ಹಾಂ? ಕೆಟ್ಟ confusion ಪಾಪ ಅವನಿಗೆ. ಏನೋ ಹೇಳಿ, ಸೈಕಲ್ ಎತ್ತಿಕೊಂಡು ಹೋದ. ಅಷ್ಟರಲ್ಲಿ ಮತ್ತೊಂದು ವಿಕೆಟ್ ಸಹಿತ ಬಿತ್ತು. ಕಾಮತ್ ನಾಪತ್ತೆಯಾಗಿದ್ದನ್ನು ನಾನು ಗಮನಿಸಲಿಲ್ಲ. ಮ್ಯಾಚ್ ಮತ್ತೆ ರೋಚಕ ಘಟ್ಟಕ್ಕೆ ಬಂದಿತ್ತು. ದಾಹ ತಾತ್ಕಾಲಿಕವಾಗಿ ಮರೆತಿತ್ತು. ಕ್ಯಾಪ್ಟನ್ ಲಂಬ್ಯಾ ಫುಲ್ ಫೈಟ್ ಕೊಡುವವನ ಹಾಗೆ ಏನೇನೋ strategy ಉಪಯೋಗಿಸತೊಡಗಿದ್ದ. ಮತ್ತೆ ಅದು ನಮ್ಮ ಹೋಂ ಪಿಚ್. ಚಿತ್ರ ವಿಚಿತ್ರವಾಗಿ ವರ್ತಿಸಲು ಶುರು ಮಾಡಿರಬೇಕು. ವಿಕೆಟ್ ನಷ್ಟವಿಲ್ಲದೆ ಗೆಲ್ಲುವ ಹಾಗೆ ಬ್ಯಾಟಿಂಗ್ ಮಾಡುತ್ತಿದ್ದ ಎದುರಾಳಿಗಳು ಈಗ defensive ಆಗಿದ್ದರು.

ಕಾಮತನಿಗೆ ನೀರು ತಂದು ಕುಡಿಸುವಂತೆ ಹೇಳಿದ್ದೆ ನಿಜ. ಮರ್ತೇ ಬಿಟ್ಟಿದ್ದೆ. ಆಟದ adrenaline rush ಹಾಗೇ ಇರುತ್ತದೆ. ಆ ಕ್ಷಣದ excitement ಒಂದಿಷ್ಟು ಹೊತ್ತು ಎಲ್ಲವನ್ನೂ ಮರೆಸಿಬಿಡುತ್ತದೆ. ಆದ್ರೆ ಆ ನನ್ನ ಕೋರಿಕೆಯನ್ನು ಕಾಮತ್ ಮರೆತಿರಲಿಲ್ಲ.

ಸ್ವಲ್ಪ ಸಮಯದ ನಂತರ ಮತ್ತೆ ದೂರದಲ್ಲಿ ತನ್ನ ಸೈಕಲ್ ಮೇಲೆ ಕಾಮತ್ ಪ್ರತ್ಯಕ್ಷನಾದ. ಒಂದೇ ಕೈಯಲ್ಲಿ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮತ್ತೊಂದು ಕೈಯಲ್ಲಿ ಏನೋ ಇತ್ತು. ಹತ್ತಿರ ಬಂದಾಗ ಏನೋ ಬಾಟಲಿ ತರಹದ್ದು ಏನೋ ಕಂಡಿತು. 'ವೆರಿ ಗುಡ್. ಹುಡುಗ ನೀರು ತಂದಿದ್ದಾನೆ. ಅದಕ್ಕೆ ಬಾಟಲಿಯನ್ನೂ ಸಹ ಎಲ್ಲಿಂದಲೋ ಜುಗಾಡ್ ಮಾಡಿಕೊಂಡು ಬಂದಿದ್ದಾನೆ. ವೆರಿ ಗುಡ್,' ಅಂದುಕೊಂಡು, ಕಾಮತ್ ತಂದು ಕುಡಿಸಲಿರುವ ಜೀವಜಲಕ್ಕೆ ತುಂಬ ಬೇಚೈನಿಯಿಂದ ಕಾಯುತ್ತಿದ್ದೆ.

ಕಾಮತ್ ನೀರು ತಂದಿರಲಿಲ್ಲ. ದುಬಾರಿ ಸಾಫ್ಟ್ ಡ್ರಿಂಕ್ ಲಿಮ್ಕಾ ತಂದುಬಿಟ್ಟಿದ್ದ! ನೀರು ಹುಡುಕಿಕೊಂಡು ಶಾಲೆ ತುಂಬಾ ಅಲೆದಿರಬೇಕು. ಎಲ್ಲೂ ಸಿಕ್ಕಿಲ್ಲ. ಐಡಿಯಾ ಮಾಡಿದ್ದಾನೆ. ಸೀದಾ ಅಲ್ಲೇ ಹತ್ತಿರವಿದ್ದ ಬೃಂದಾವನ ಹೋಟೆಲ್ಲಿಗೆ ಹೋಗಿದ್ದಾನೆ. ಅಲ್ಲೇ ಮಾಳಮಡ್ಡಿ ಕೆನರಾ ಬ್ಯಾಂಕ್ ಮುಂದೆ ಇತ್ತು. ಅದು ಈ ಕಾಮತ್ ಪೈಕಿಯವರದೇ. ಅಲ್ಲಿಂದ ನೀರು ತರುವದು ಕಷ್ಟ. ಯಾಕೆಂದರೆ ಆವಾಗೆಲ್ಲ ಮಿನರಲ್ ವಾಟರ್ ಬಾಟಲಿ ಇರಲಿಲ್ಲ. ಹಾಗಾಗಿ ಹೆಂಗೋ ಮಾಡಿ ಒಂದು ಲಿಮ್ಕಾ ಸಂಪಾದಿಸಿಬಿಟ್ಟಿದ್ದಾನೆ. ಬಾಟಲಿ ಓಪನ್ ಮಾಡಿಸಿಕೊಂಡವನೇ, ಒಂದು ಕೈಯಲ್ಲಿ ಲಿಮ್ಕಾ ಬಾಟಲಿ ಹಿಡಿದುಕೊಂಡು, ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡು ಬಂದು, ನನ್ನ ಮುಂದೆ ಪ್ರತ್ಯಕ್ಷನಾಗಿ ನೀರು ಕೇಳಿದರೆ ಲಿಮ್ಕಾ ಕುಡಿಸುತ್ತಿದ್ದಾನೆ. ಏನನ್ನೋಣ ಇದಕ್ಕೆ? ಅದೇನು ಪ್ರೀತಿಯೋ? ಆತ್ಮೀಯತೆಯೋ? ಅಥವಾ ನೀರು ತಂದುಕೊಡುತ್ತೇನೆ ಅಂತ ಹೇಳಿ ಬಂದುಬಿಟ್ಟಿದ್ದೇನೆ ಈಗ ಆ ಮಾತು ಉಳಿಸಿಕೊಳ್ಳಲೇಬೇಕು. ಅದಕ್ಕೆ ನೀರಲ್ಲದಿದ್ದರೆ ಮತ್ತೇನಾದರೂ ಕುಡಿಸಲೇಬೇಕು ಅನ್ನುವ commitment ತರಹದ ಭಾವನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಲಿಮ್ಕಾ ಜೀವನದಲ್ಲೇ ಕುಡಿದ ಬೆಸ್ಟ್ ಸಾಫ್ಟ್ ಡ್ರಿಂಕ್. ಯಾಕೆಂದರೆ ಅದರಲ್ಲಿ ಕಾಮತನ ಗೆಳೆತನ, ಪ್ರೀತಿ, ಆತ್ಮೀಯತೆ, ಮತ್ತೆ ಏನೇನೋ ಎಲ್ಲ ಕೂಡಿತ್ತು. ನಮಗೆ ಅವನ್ನೆಲ್ಲ ಕಾವ್ಯಾತ್ಮಕವಾಗಿ, ಭಾವುಕತೆಯಿಂದ ಹೇಳಲಿಕ್ಕೆ ಬರಲಿಕ್ಕಿಲ್ಲ. ಆದರೆ, 'ನೀರು ತಂದು ಕುಡಿಸೋ ಅಂದರೆ ಲಿಮ್ಕಾ ತಂದು ಕುಡಿಸಿದ,' ಕಾಮತ್ ಮಾತ್ರ ನೆನಪಾಗುತ್ತಲೇ ಇರುತ್ತಾನೆ. ಸದಾ.

ಸರಿ, ಆ ಲಿಮ್ಕಾ ಪ್ರಭಾವವೋ ಏನೋ ಗೊತ್ತಿಲ್ಲ. ಏನೇನೋ strategy ಮಾಡುತ್ತಿದ್ದ ಕ್ಯಾಪ್ಟನ್ ಲಂಬ್ಯಾ ನನಗೂ ಬೌಲಿಂಗ್ ಮಾಡು ಅಂದ. ಸರಿ ಅಂತ ಏನೋ ಒಂದು ತರಹದಲ್ಲಿ ಮಾಡಿದೆ. ಎರಡು ಓವರಿನಲ್ಲಿ ಎರಡು ವಿಕೆಟ್. ಈಗ ಮ್ಯಾಚ್ ರೋಚಕ ಘಟ್ಟಕ್ಕೆ ಬಂದು ತಲುಪಿತ್ತು. ವಿರುದ್ಧ ಪಾರ್ಟಿಗೆ 'ಸುಲಿದ ಬಾಳೆಹಣ್ಣು' ಅಂತ ತಿಳಿದ ಮ್ಯಾಚ್ ಈಗ ಯಾರಿಗಾದರೂ ಹೋಗಬಹುದಿತ್ತು. ವಿರುದ್ಧ ಪಾರ್ಟಿಗೆ ಇನ್ನೂ ಹದಿನೈದೂ ಚಿಲ್ಲರೆ ರನ್ ಮಾಡಬೇಕಿದೆ. ವಿಕೆಟ್ ಉಳಿದಿದ್ದು ಎರಡೋ ಮೂರೋ ಅಷ್ಟೇ. ಈಗ ಅವರ ಮೇಲೆ ಫುಲ್ ಪ್ರೆಷರ್. ನಮಗೆ ಹೋಂ ಪಿಚ್ ಅಂತ ಫುಲ್ ಸಪೋರ್ಟ್ ಮತ್ತು ಹುರುಪು ಬೇರೆ. ಕ್ಯಾಪ್ಟನ್ ಲಂಬ್ಯಾ ಮತ್ತೆ ಯಾರಿಗೋ ಬೌಲಿಂಗ್ ಕೊಟ್ಟ. ಅದೂ ಅಪರೂಪಕ್ಕೆ ಬೌಲಿಂಗ್ ಮಾಡುವ ಆಸಾಮಿಗೆ. ಅವನು ಲಿಮ್ಕಾ ಕುಡಿದಿರಲಿಲ್ಲ. ಆದರೂ ಎರಡು ವಿಕೆಟ್ ಕಿತ್ತೇಬಿಟ್ಟ. ಹಾಕ್ಕ! ಈಗ ಅವರ ಹತ್ತಿರ ಉಳಿದದ್ದು ಒಂದೇ ವಿಕೆಟ್. ಇನ್ನೂ ಕಮ್ಮಿ ಕಮ್ಮಿ ಅಂದರೂ ಹತ್ತು ರನ್ ತೆಗೆಯಬೇಕು. ಸಿಕ್ಕಾಪಟ್ಟೆ ಪ್ರೆಷರ್. ಕ್ಯಾಪ್ಟನ್ ಲಂಬ್ಯಾ ಮತ್ತೆ ಬೌಲಿಂಗ್ ಮಾಡಿ ಸ್ಟಂಪ್ ಹಾರಿಸಿಯೇಬಿಟ್ಟ. ಲಾಸ್ಟ್ ವಿಕೆಟ್ ತೆಗೆದೇಬಿಟ್ಟ. ಗೆದ್ದಿದ್ದೆವು. 'ಸೋತೆವು, no hopes,' ಅನ್ನುವಂತಹ ಮ್ಯಾಚ್ ಗೆದ್ದಿದ್ದೆವು.

ಕಾಮತ್ ತಂದುಕೊಟ್ಟು, ಕುಡಿಸಿದ್ದ ಲಿಮ್ಕಾನೇ ಎಲ್ಲದಕ್ಕೂ ಕಾರಣ ಅಂತ ನಮ್ಮ ನಂಬಿಕೆ. ಪುಣ್ಯಾತ್ಮ ತಂದುಕೊಟ್ಟ ಲಿಮ್ಕಾವನ್ನಂತೂ ಗಟಗಟ ಕುಡಿದು ಮುಗಿಸಿದ್ದೆ. ಆದರೂ ತೀರದ ದಾಹ. 'ಇದೇ ಬಾಟ್ಲ್ಯಾಗ ಇನ್ನೊಂದಿಷ್ಟು ನೀರು ತುಂಬಿಸ್ಕೊಂಡು ಬಾರಲೇ ಕಾಮ್ಯಾ,' ಅಂತ ಕೇಳಿಕೊಂಡಿದ್ದೆ. ನೀರು ತಂದು ಕುಡಿಸಿದ್ದ ಅಂತ ನೆನಪು. ನೀರು ಕುಡಿಸಿದವ ಎಲ್ಲೇ ಇರಲಿ ತಣ್ಣಗಿರಲಿ ಶಿವಾ!

ಈ ಸದರಿ ಕಾಮತ್ ನಮಗೆ ಜೊತೆಯಾಗಿದ್ದು ಎಂಟನೆಯ ಕ್ಲಾಸಿನಲ್ಲಿ. ಎಲ್ಲೋ ದಕ್ಷಿಣ ಕನ್ನಡದ ಕಡೆಯಿಂದ ಬಂದಿದ್ದ ಅಂತ ನೆನಪು. ಅವರ ಕುಟುಂಬದವರು ಮಾಳಮಡ್ಡಿಯ ಬೃಂದಾವನ ಹೋಟೆಲ್ಲನ್ನು ನಡೆಸಲು ತೆಗೆದುಕೊಂಡಿದ್ದರು. ಅದಕ್ಕೇ ಧಾರವಾಡಕ್ಕೆ ಬಂದಿದ್ದರು. ಅದಕ್ಕೇ ಇವನು ನಮ್ಮ ಶಾಲೆಗೆ ಬಂದವ ಅಂತ ನೆನಪು.

ಕಾಮತ್ ಉರ್ಫ್ ಕಾಮ್ಯಾ ಮುಗ್ಧ ಅಂದರೆ ಅಷ್ಟು ಮುಗ್ಧ. ಸರಳ ಜೀವಿ. ಎಲ್ಲರಿಗೂ ಸ್ನೇಹಿತ. ಎಲ್ಲರಿಗೂ ಕೆಲವು ಕಾಮತ್ ನಂತಹ ಸ್ನೇಹಿತರು ಇದ್ದೇ ಇರುತ್ತಾರೆ. ಎಲ್ಲರೂ ಅವರನ್ನು ಕಿಚಾಯಿಸುತ್ತಾರೆ, ಕಾಲೆಳೆಯುತ್ತಾರೆ, ಚೇಷ್ಟೆ ಮಾಡುತ್ತಾರೆ, ಅವರ ಮೇಲೆ ತರಹ ತರಹದ ಜೋಕ್ಸ್ ಮಾಡುತ್ತಾರೆ. ಅವರು ಮಾತ್ರ ಎಲ್ಲವನ್ನೂ ನಗುನಗುತ್ತ ಸಹಿಸಿಕೊಂಡು, ಬೇಕಾದರೆ ತಾವೂ ತಮ್ಮ ಮೇಲೆಯೇ ಒಂದಿಷ್ಟು ಜೋಕ್ಸ್ ಮಾಡಿಕೊಂಡು ಎಲ್ಲರಿಗೂ ಬೇಕಾದವರಾಗಿ ಇರುತ್ತಾರೆ. ಅಂತಹ ಆಸಾಮಿ ಈ ಕಾಮ್ಯಾ ಉರ್ಫ್ ಕಾಮತ್.

ಕಾಮತನಿಗೆ ಎಲ್ಲರೂ ಬೇಕು ಅಂದೆನಲ್ಲ. ಅವನ ಎತ್ತರದ (height) ಪ್ರಕಾರ ಅವನಿಗೆ ಸುಮಾರು ಮುಂದೆ ಎಲ್ಲೋ ಡೆಸ್ಕ್, ಬೆಂಚ್ ಸಿಕ್ಕಿತ್ತು. ನಾವೊಂದಿಷ್ಟು 'ಉಡಾಳ' ಮಂದಿಯದು ಹಿಂದಿನ ಬೆಂಚು. ನಮ್ಮ ಹರಟೆ, ಜೋಕ್ಸ್, ಗದ್ದಲ ಎಲ್ಲ ನಿರಂತರ. ಆಗಾಗ ನಮ್ಮ ವಲಯಕ್ಕೂ ಭೆಟ್ಟಿ ಕೊಡುತ್ತಿದ್ದ ಕಾಮತ್. ಸುಖಾಸುಮ್ಮನೆ ಬಿಟ್ಟಿಯಲ್ಲಿ ಕಾಡಿಸಿಕೊಂಡು, ನಮ್ಮ ಜೋಕುಗಳಿಗೆ ಬಲಿಯಾಗಿ, 'ಏನು ಇದ್ದೀರಿಲೇಪಾ?? ಬರೇ ಇದss ಆತು ನಿಮ್ಮದು. ಕಾಡಿಸಿಕೊಳ್ಳಾಕ ನಾ ಒಬ್ಬವ ಸಿಕ್ಕೇನಿ ನೋಡು,' ಅಂತ ಒಂದು ತರಹದ ಅಮಾಯಕ ಲುಕ್ ಕೊಟ್ಟು ಈ ಪುಣ್ಯಾತ್ಮ ತನ್ನ ಡೆಸ್ಕಿಗೆ ವಾಪಸ್ ಹೋಗುತ್ತಿದ್ದರೆ, 'ಏ, ಕಾಮ, ಬಾರಲೇ. ಇಷ್ಟ ಲಗೂ ಎದ್ದು ಹೋದರ ಹ್ಯಾಂಗ? ಈಗ ಮಾತ್ರ absentee ಪಿರಿಯಡ್ ಶುರು ಆಗ್ಯದ. ಬಾರಲೇ ಕಾಮಾ,' ಅಂತ ಇಲ್ಲದ ಗೋಳು ಹೊಯ್ದುಕೊಳ್ಳುತ್ತಿದ್ದರು ಹಿಂದಿನ ಬೆಂಚಿನ ಮಂದಿ. ಮತ್ತೆ ಬೇಜಾರಾದಾಗೊಮ್ಮೆ ಕಾಮತ್ ವಾಪಸ್ ಬರುತ್ತಿದ್ದ. ಮತ್ತೆ ಅದೇ ಜೋಕ್ಸ್, ಅದೇ ನಗು, ಅದೇ ಭೋಳೆತನ.

ಎಂಟು, ಒಂಬತ್ತನೇ ಕ್ಲಾಸ್ ಹಾಗೆ ನಡೆದಿತ್ತು. ಹತ್ತನೇ ಕ್ಲಾಸಿನಲ್ಲಿ ಕಾಮತನ ಕುಟುಂಬ ಧಾರವಾಡ ಬಿಟ್ಟು ಬೇರೆ ಕಡೆ ಹೋಯಿತು. ಬೃಂದಾವನ ಹೋಟೆಲ್ಲನ್ನು ಬೇರೆ ಯಾರಿಗೋ ವಹಿಸಿಕೊಟ್ಟು ಹೋದರು. ಹತ್ತನೇ ಕ್ಲಾಸ್ ಓದುತ್ತಿದ್ದ ಮಗನ ಓದಿಗೆ ಭಂಗ ಬರುವದು ಬೇಡ ಅಂತ ಇವನನ್ನು ಧಾರವಾಡದಲ್ಲೇ ಬಿಟ್ಟು ಹೋಗಿದ್ದರು ಅಂತ ನೆನಪು. ಒಟ್ಟಿನಲ್ಲಿ ಹತ್ತನೇ ಕ್ಲಾಸಿನಲ್ಲೂ ನಮ್ಮ ಜೊತೆಗೇ ಇದ್ದ. ಆದರೆ ಈಗ ಕಾಮತ್ ಬೇರೆ ಕಡೆ ಮನೆ ಶಿಫ್ಟ್ ಮಾಡಿದ್ದ. ಅಲ್ಲಿ ಸ್ವಂತ ರೂಂ ಮಾಡಿಕೊಂಡಿದ್ದನೋ ಅಥವಾ ಸಂಬಂಧಿಕರ ಮನೆಯಲ್ಲಿ ಇದ್ದನೋ ನೆನಪಿಲ್ಲ. ನಮ್ಮ ಬ್ಯಾಚಿನ ಅಪ್ರತಿಮ ಸುಂದರಿಯೊಬ್ಬಳು ಕೂಡ ಅದೇ ಕಂಪೌಂಡಿನಲ್ಲಿ ಇರಬೇಕೇ! ಸರಿಯಾಯಿತು. ಕಾಮತನನ್ನು ರೇಗಿಸಲು, ಚುಡಾಯಿಸಲು ಮತ್ತೊಂದು ವಿಷಯ. ಇವನು ತೀರ ಮುಗ್ಧ. ಆಕೆ ಡೆಡ್ಲಿ ಸುಂದರಿಯಾದರೂ ತೀರ ಸಭ್ಯಳು. ಆದರೆ ಕಾಡಿಸುವವರಿಗೆ ಏನು? ಎಲ್ಲ ಓಕೆ.

ಮತ್ತೆ ಈ ಕಾಮತ್ ಪುಣ್ಯಾತ್ಮನೋ ಒಳ್ಳೆ ಬಾಡಿ ಗಾರ್ಡನಂತೆ ಆ ಸುಂದರಿ ಮತ್ತೆ ಆಕೆಯ ಸಖಿಯರ ಹಿಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮುಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಅವು ನಾಲ್ಕಾರು ಹುಡುಗಿಯರು. ಹಿಂದೆ ಎತ್ತರ ಪತ್ತರ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಈ ಕಾಮತ್. ಅವರೆಲ್ಲರ ಹಿಂದೆ ಮತ್ತೊಬ್ಬ. ಅವನು ಯಾರು ಅಂದರೆ ಈ ಕಾಮತ್ ಮತ್ತು ಆ ಸುಂದರಿ ಇಬ್ಬರಿಗೂ ಮನೆ ಭಾಡಿಗೆ ಕೊಟ್ಟವರ ಮೊಮ್ಮಗ. ಅವನೂ ನಮ್ಮ ಕ್ಲಾಸ್ಮೇಟ್. ಶಿವನೇ ಶಂಭುಲಿಂಗ!

ಹೀಗೆ ಹತ್ತನೆಯ ಕ್ಲಾಸಿನಲ್ಲಿ ನಮ್ಮ ಬ್ಯಾಚಿನ ಡೆಡ್ಲಿ ಸುಂದರಿಯ ನೇಬರ್ (neighbor) ಆಗುವ ಭಾಗ್ಯ ಪಡೆದುಕೊಂಡ ಕಾಮತ್ ಸಿಕ್ಕ ಅಂದರೆ ಹಿಡಿದು ರೇಗಿಸಿದ್ದೇ ರೇಗಿಸಿದ್ದು. ಪಾಪ ಬಡಪಾಯಿ. ನಮ್ಮ ಜೊತೆಗೆಲ್ಲ ಬಂದು, ಕೂತು, ಮಾತಾಡಿ, ನಾವು ಹೊಡೆಯುತ್ತಿದ್ದ ಏನೇನೋ ಹರಟೆಗಳಲ್ಲಿ ಭಾಗಿಯಾಗಲಿಕ್ಕೆ ಆಗದಿದ್ದರೂ ಅದನ್ನು ಕೇಳಿಯಾದರೂ ಹೋಗಬೇಕು ಅಂತ ಅವನ ಆಸೆ. ನಮ್ಮ ಗ್ಯಾಂಗಿಗೋ ಈ ಕಾಮತನನ್ನು ನೋಡಿದ ಕೂಡಲೇ ಆ ಸುಂದರಿಯದೇ ಧ್ಯಾನ. 'ಲೇ, ಕಾಮ್ಯಾ, ಜೋರಾತಲ್ಲಲೇ ನಿಂದು. ಹೋಗಿ ಹೋಗಿ ಮಸ್ತ ಮನಿ ಹಿಡದಿ ನೋಡಲೇ. ಏನಂತಾಳ ಹೀರೋಯಿನ್? ನಿಂಜೋಡಿ ಮಾತಾಡಿದಳು ಏನು? ಇಲ್ಲಾ? ಬರೇ ಸ್ಮೈಲ್ ಕೊಟ್ಟಳು??? ನೀ ಏನು ಕೊಟ್ಟಿ??? ಹಾಂ?'  ಅಂತ ಬರೇ ಇದೇ ಮಾತು. ಹೆವಿ ಮಷ್ಕಿರಿ. 'ಏನ್ರಿಲೇ ನೀವು??? ನನ್ನ ನೋಡಿದ ಕೂಡಲೇ ಬರೇ ಅಕಿ ಬಗ್ಗೆನೇ ಮಾತಾಡ್ತೀರಲ್ಲಾ?' ಅಂತ ಅವನ ರೋಧನ. 'ನಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಅಕಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಏನಪಾ ಕಾಮ್ಯಾ?? ನೀ ಒಟ್ಟೇ ನೆನಪ ಆಗೋದೇ ಇಲ್ಲಲೇ ಕಾಮ್ಯಾ! ಏನು ನಸೀಬಲೇ ನಿಂದು?! ಹೋಗಿ ಹೋಗಿ ಅಕಿ ಮನಿ ಕಾಂಪೌಂಡ್ ಒಳಗ ಹೋಗಿ ಕೂತುಬಿಟ್ಟಿಯಲ್ಲಲೇ. ಲಕ್ಕಿ ನೋಡಲೇ ನೀ!' ಅಂತ ಕಾಡಿಸಿದ್ದೇ ಕಾಡಿಸಿದ್ದು. ಅವನೂ ಎಂಜಾಯ್ ಮಾಡುವಷ್ಟು ಮಾಡಿ, 'ಬರೇ ಹಲ್ಕಟ್ ಇದ್ದೀರಿ ನೋಡ್ರಿಲೇ!' ಅಂತ ಪ್ರೀತಿಯಿಂದ ಬೈದುಕೊಳ್ಳುತ್ತ ತನ್ನ ಡೆಸ್ಕಿನತ್ತ ನಡೆದರೆ ಯಾರೋ ಒಬ್ಬವ ಕಿಡಿಗೇಡಿ husky ಧ್ವನಿಯಲ್ಲಿ 'ಏ ಕಾಮ, ಕಾಮ, ಕಾsssಮ,' ಅಂತ ಕೂಗುತ್ತಿದ್ದ.  ಆಗಲೇ ಕಾಶಿನಾಥನ ಪರಮ ಪೋಲಿ ಸಿನೆಮಾ 'ಅನಂತನ ಆವಾಂತರ' ಕೂಡ ಬಂದಿತ್ತು. ಅದರಲ್ಲಿ 'ಕಾಮ, ಕಾಮ' ಅನ್ನುವದನ್ನು ವಿಚಿತ್ರ ರೀತಿಯಲ್ಲಿ ಹೇಳುವದನ್ನು ನೋಡಿ ಕಲಿತುಬಂದಿದ್ದ ಕಿಡಿಗೇಡಿಗಳು ಅದನ್ನು ಪಾಪದ ಕಾಮತನಿಗೆ ಅನ್ನಬೇಕೇ? ಅದೇ ಪೋಲಿ ಮೂವಿಯಲ್ಲಿ 'ಕಮಾನ್ ಕಮಾನ್ ಕಾಮಣ್ಣ' ಅನ್ನುವ ಒಂದು ಹಾಡು ಸಹ ಇತ್ತು. ಅದನ್ನೂ ಸಹ ಕಾಮತನ ಮೇಲೆ ಉಪಯೋಗಿಸಿದ್ದರೇ? ಇವತ್ತು ನೆನಪಿಲ್ಲ ಬಿಡಿ. ಯಾಕೆಂದರೆ ನಾವು ಆ ಅನಾಹುತ ಮೂವಿ ನೋಡಿದ್ದು ಭಾಳ ವರ್ಷಗಳ ನಂತರ.

'ಮಹೇಶಾss, ಇವನ ಅಡ್ಡಹೆಸರಾಗss 'ಕಾಮ' ಐತಿ. ಬಾಜೂಕೇ ಅಕಿ ಡೆಡ್ಲಿ ಸುಂದರಿ ಮನಿ. ಹೀಂಗಿದ್ದಾಗ ಈ ಕಾಮ್ಯಾನ ಪರಿಸ್ಥಿತಿ ಏನಾಗಿರಬಹುದು???' ಅಂತ ಖಾಸಗಿ ಜೋಕ್ ಮಾಡಿದ ದೋಸ್ತನ ಹೆಸರನ್ನು ನಾನಂತೂ ಇವತ್ತು ಹೇಳುವದಿಲ್ಲ. ನಮ್ಮಲ್ಲಿ ಏನೇ ಜೋಕಿದ್ದರೂ ಎಲ್ಲ ಓಕೆ. ಅಷ್ಟು ಕ್ಲೋಸ್ ನಾವೆಲ್ಲಾ ಲಾಸ್ಟ್ ಬೆಂಚ್ ಫ್ರೆಂಡ್ಸ್.

೧೯೮೮ ರಲ್ಲಿ ಹತ್ತನೇ ಕ್ಲಾಸ್ ಮುಗಿದ ಮೇಲೆ ಕಾಮತ್ ಧಾರವಾಡ ಬಿಟ್ಟ. ಹೆಚ್ಚಾಗಿ ದಕ್ಷಿಣ ಕನ್ನಡದ ಕಡೆ ಇದ್ದ ಕುಟುಂಬ ಸೇರಿಕೊಂಡ ಅಂತ ನೆನಪು. ಆಮೇಲೆ ಎಷ್ಟೋ ವರ್ಷ ಟಚ್ ಇರಲೇ ಇಲ್ಲ. ೨೦೧೧ ವರೆಗೆ. ೨೦೧೧ ರಲ್ಲಿ ಫೇಸ್ಬುಕ್ ಅಕೌಂಟ್ ತೆಗೆದು ಕೂತಾಗ ಕಾಮ್ಯಾ ಕಂಡುಬಂದ. ಬೆಂಗಳೂರಿನಲ್ಲಿ ಒಂದು ದೊಡ್ಡ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ. ಫೈನಾನ್ಸ್ ವಿಭಾಗದಲ್ಲಿ. ಆ ಹೋಟೆಲ್ಲಿಗೆ ಭೇಟಿ ಕೊಟ್ಟಿದ್ದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜೊತೆ ಸ್ಮಾರ್ಟಾಗಿ ನಿಂತ ಫೋಟೋ ಹಾಕಿದ್ದ ಕಾಮ್ಯಾನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಹಿಂದೆಂದೋ ಲಿಮ್ಕಾ ಕುಡಿಸಿದ ಗೆಳೆಯನ ಜೊತೆಗೆ ದೋಸ್ತಿ ತುರ್ತಾಗಿ ಬೇಕಾಗಿತ್ತು. ಫೇಸ್ಬುಕ್ ಫ್ರೆಂಡ್ ಆದವನಿಗೆ ಒಂದಿಷ್ಟು ಕಾಡಿಸಿ ಮಷ್ಕಿರಿ ಮಾಡಿದ್ದೆ. ನಮ್ಮ ೧೯೮೮ ರ ಶಾಲೆ ಬ್ಯಾಚಿನ ಫೇಸ್ಬುಕ್ ಗ್ರುಪ್ಪಿಗೆ ನನ್ನನ್ನು ಸೇರಿಸಿದವನೇ ಅವನು. ಅವನು ಸೇರಿಸಿರದಿದ್ದರೆ ನನಗೆ ಅಂಥದ್ದೊಂದು ಗ್ರೂಪ್ ಇರುವದೂ ಗೊತ್ತಾಗುತ್ತಿರಲಿಲ್ಲ. ಅನೇಕಾನೇಕ ಸಹಪಾಠಿಗಳ ಮರು ಪರಿಚಯ ಕೂಡ ಆಗುತ್ತಿರಲಿಲ್ಲ. ಅದಕ್ಕೆಲ್ಲ ಒಂದು ದೊಡ್ಡ ಥ್ಯಾಂಕ್ಸ್ ಕಾಮತನಿಗೆ.

೧೯೮೮ ರ ನಂತರ ಕಾಮತ್ ಭೆಟ್ಟಿಯಾಗಿದ್ದು ೨೦೧೨ ರಲ್ಲಿ. ೨೦೧೨ ಡಿಸೆಂಬರ್. ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವ ಸಮಾರಂಭ. ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಿದೆವು. ಧಾರವಾಡದ ದೋಸ್ತರೆಲ್ಲರೂ ಕೂಡಿ ಸಿಕ್ಕಾಪಟ್ಟೆ ಶ್ರಮವಹಿಸಿ ಒಂದು ಖತರ್ನಾಕ್ ಸಮಾರಂಭ ಏರ್ಪಡಿಸಿದ್ದರು. ಎಲ್ಲ ಕಡೆಯಿಂದ ಸುಮಾರು ೧೫೦-೧೭೫ ಜನ ಬಂದಿದ್ದರು. ಬೆಂಗಳೂರಿಂದ ಕಾಮತ್ ಸಹಿತ ಬಂದಿದ್ದ. ಅದೇ ದಿನಗಳಲ್ಲಿ ಅವನ ಚಿಕ್ಕ ವಯಸ್ಸಿನ ಮಗಳ ನೃತ್ಯದ ಒಂದು ಮುಖ್ಯ ಸಮಾರಂಭ ಕೂಡ ಬೆಂಗಳೂರಿನಲ್ಲಿ ಇತ್ತು. ಆದರೆ ಹಳೆಯ ದೋಸ್ತರನ್ನು ಭೆಟ್ಟಿಯಾಗುವ ಅವಕಾಶ ಮತ್ತೆ ಸಿಗದು ಅಂದುಕೊಂಡ ಕಾಮತ್ ಬಂದೇಬಿಟ್ಟಿದ್ದ. That was simply great. He had put his school friends ahead of his own family.

ಸರಿ. ಮೊದಲ ದಿವಸದ ಸಮಾರಂಭ ಶಾಲೆಯಲ್ಲಿ ಮಸ್ತಾಗಿ ಆಯಿತು. ಹಳೆಯ ಗುರುವೃಂದಕ್ಕೆ ನಮನ, ಸತ್ಕಾರ ಎಲ್ಲ ಸಲ್ಲಿಸಿ, ಹಳೆಯ ಮಿತ್ರರನ್ನು, ಅವರ ಕುಟುಂಬ ವರ್ಗದವರನ್ನು ಎಲ್ಲ ಭೆಟ್ಟಿಮಾಡಿ, ಸಂತಸಪಟ್ಟಿದ್ದು ಆಯಿತು. ಇನ್ನು ಸಂಜೆ ಪ್ರೋಗ್ರಾಂ. ಮತ್ತೇನು? ಪಾರ್ಟಿ. ಅಷ್ಟೇ.

ಶಾಲೆಯ ಸಮಾರಂಭ ಮುಗಿಸಿ, ಸಂಜೆ ಮನೆಗೆ ಬಂದು, ಒಂದು ರೌಂಡ್ ಫ್ರೆಶ್ ಆಗುವ ಪುರಸತ್ತಿಲ್ಲ ಮನೆ ಬಾಗಿಲಲ್ಲಿ ಗಾಡಿ ತಂದು ನಿಲ್ಲಿಸಿದವ ನಮ್ಮ ಹೀರೋ ಅಜೇಯ್ ಕುಲಕರ್ಣಿ. ಅವನ ಕಾರಿನಲ್ಲಿ ಪಯಣ. ದಾರಿಯಲ್ಲಿ ಮಿತ್ರ ಬೀಎಂ ಗಿರೀಶನನ್ನೂ ಪಿಕಪ್ ಮಾಡಿದ್ದಾಯಿತು. ನಂತರ ಸೀದಾ ಹೋಗಿದ್ದು 'ಕರ್ನಾಟಕ ಭವನ' ಹೋಟೆಲ್ಲಿಗೆ. ಅಲ್ಲಿದ್ದ ಮತ್ತೊಬ್ಬ ಖಾಸ್ ದೋಸ್ತ ಅರುಣ ಭಟ್ಟನನ್ನು ಪಿಕಪ್ ಮಾಡಬೇಕಿತ್ತು. ಅಲ್ಲಿ ಮತ್ತೆ ಕಂಡ ಈ ಕಾಮತ್.

ಆವತ್ತು ಬೆಳಿಗ್ಗೆ ಧಾರವಾಡಕ್ಕೆ ಬಂದು ಮುಟ್ಟಿದ್ದ ಕಾಮತ್ ಯಾವದೋ ಸಂಬಂಧಿಕರ ಮನೆಯಲ್ಲಿ ಸ್ನಾನ ಮುಗಿಸಿ ಸೀದಾ ಶಾಲೆಯ ಸಮಾರಂಭಕ್ಕೆ ಬಂದುಬಿಟ್ಟಿದ್ದ. ರಾತ್ರಿಯ ರೂಮಿನ ಬುಕಿಂಗ್ ಆಗಿರಲಿಲ್ಲ. ಕಾಮತನ ಖಾಸ್ ದೋಸ್ತ್ ಅರುಣ ಭಟ್ಟ ತಾನಿರುವ ಜಾಗಕ್ಕೇ ಕರೆದುಕೊಂಡುಹೋಗಿದ್ದ. ನಾವು ಭಟ್ಟನನ್ನು ಪಿಕಪ್ ಮಾಡಲು 'ಕರ್ನಾಟಕ ಭವನ'ಕ್ಕೆ ಹೋದರೆ ಅಲ್ಲಿ ಈ ಕಾಮತ್ ಕೂಡ ಸಿಕ್ಕ. ಪಾರ್ಟಿ ಮಾಡಲು ಹೊರಟವರು ನಾವು. ಜಾಸ್ತಿ ಜನ ದೋಸ್ತರು ಸಿಕ್ಕರೆ ಒಳ್ಳೆಯದೇ. 'ನೀನೂ ಬಾರಲೇ ಕಾಮ್ಯಾ,' ಅಂತ ಅವನನ್ನೂ ಕರೆದುಕೊಂಡೇ ಹೊರೆಟೆವು.

ಅಷ್ಟರಲ್ಲಿ ಕಾಮತನಿಗೂ ರೂಂ ಸಿಕ್ಕು, ಅವನು ರೂಮಿಗೆ ಹೋಗಿ ಸಾಮಾನಿಟ್ಟು ಬಂದ. ಕಾಮತ್ ಮತ್ತು ಭಟ್ ಒಂದು ಕಾರಲ್ಲಿ. ನಾವು ಮತ್ತೊಂದರಲ್ಲಿ. ಗಾಡಿ ತಿರುಗಿಸಿದ್ದು ಹಳೆ NH - ೪ ಮೇಲಿರುವ Ozone ಎಂಬ ಬಾರ್ & ರೆಸ್ಟೋರೆಂಟ್ ಕಡೆಗೆ. ಅದು ಅಜೇಯನ ಸೆಲೆಕ್ಷನ್. ಹೋದ ಮೇಲೆ ಗೊತ್ತಾಯಿತು ಎಂತಹ ಸಕತ್ choice ಅಂತ. ಮಾವಿನ ತೋಪಿನಲ್ಲಿರುವ ಒಳ್ಳೆ ರೆಸ್ಟೋರೆಂಟ್. ಒಳ ಹೋಗಿ ನೋಡಿದರೆ ಮತ್ತೊಂದು ದೋಸ್ತರ ಗುಂಪು ಆವಾಗಲೇ ಅಲ್ಲಿ ಸೇರಿತ್ತು. ಪಾನಕ, ಕೋಸಂಬರಿ ಎಲ್ಲ ಬಂದು ಟೇಬಲ್ ಮೇಲೆ ಕೂತಿತ್ತು. ನಾವೂ ಕೂಡ ಹೋಗಿ ಸೇರಿಕೊಂಡು, ಗಿಚ್ಚಾಗಿ ಪಾರ್ಟಿ ಶುರುಮಾಡಿಕೊಂಡೆವು.

ಜೋರಾಗಿ ಪಾರ್ಟಿ ನಡೆಯಿತು. ಇಪ್ಪತ್ತೈದು ವರ್ಷಗಳ ನಂತರ ಸೇರಿರುವ ಮಿತ್ರರು ಅಂದರೆ ಕೇಳಬೇಕೇ? ಒಂದೆರೆಡು ಪೆಗ್ ಒಳಗೆ ಹೋದ ನಂತರ ಕಾಮತ್ ಕೂಡ ಸಡಿಲವಾಗತೊಡಗಿದ್ದ. ಮೂಡಿಗೆ ಬಂದಿದ್ದ. ಆವಾಗ ನಾನು ಭಾಳ ಮಿಸ್ ಮಾಡಿಕೊಂಡಿದ್ದು ನನ್ನ ಹಳೆ ಲಾಸ್ಟ್ ಬೆಂಚ್ ದೋಸ್ತರಾದ ಅರವಿಂದ ಪಾಟೀಲ, ಮನೋಜ್ ಕರಜಗಿ, ಅಶ್ವಿನ್ ಕಟೀರಾ, ಮಹೇಶ್ ಮುದಗಲ್, ಗಲಗಲಿ ಮುಂತಾದ ಮಿತ್ರರನ್ನು. ಅವರೆಲ್ಲ ಇದ್ದರೆ ಇನ್ನೂ ಮಜಾ ಬರುತ್ತಿತ್ತು. ಕಾಮತ್ ಮೂಡಿಗೆ ಬಂದಾಗ ಅವರೆಲ್ಲ ಇದ್ದರೆ ಹಳೆಯ ನೆನಪುಗಳನ್ನು ಇನ್ನೂ ತಾಜಾ ಮಾಡಿಕೊಂಡು, ಮೊದಲಿನ ಹಾಗೆ, ಅನಂತನ ಆವಾಂತರ ಶೈಲಿಯಲ್ಲಿ 'ಕಾಮ, ಕಾಮ, ಕಾssಮ,' ಅಂತ ಮೂಡಿಗೆ ಬರುತ್ತಿದ್ದ ಕಾಮತನನ್ನು ರೇಗಿಸಿ, ಹಳೆಯ ಡೆಡ್ಲಿ ಸುಂದರಿಯನ್ನು ಮತ್ತೆ ನೆನಪಿಸಿ ಮತ್ತೂ ಒಂದಿಷ್ಟು ಕಿಚಾಯಿಸಬಹುದಿತ್ತು. ಆದರೆ ಅವರ್ಯಾರೂ ಇರಲೇ ಇಲ್ಲ. ಕೆಲವರು reunion ಗೇ ಬಂದಿರಲಿಲ್ಲ. ಇನ್ನೂ ಕೆಲವರು ಪಾರ್ಟಿಗೆ ಬಂದಿರಲಿಲ್ಲ.

ಮೂಡಿಗೆ ಬಂದ ಕಾಮತ್ ಮಜಾ ಮಜಾ ಸುದ್ದಿ ಹೇಳಿದ. ಅದೂ ನಾನು ಕೂಡ ಪ್ರಾಂಪ್ಟ್ ಮಾಡಿದೆ ನೋಡಿ. ಅವನು ಕೆಲಸ ಮಾಡುತ್ತಿದ್ದುದು ಒಂದು ದೊಡ್ಡ ಪಂಚತಾರಾ ಹೋಟೆಲ್ಲಿನಲ್ಲಿ. ಅಲ್ಲಿ ಆದ ಕೆಲವು ಲಫಡಾ ಕಾರ್ನಾಮೆಗಳು ನನಗೆ ಗೊತ್ತಿದ್ದವು. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ. ಅವುಗಳ ಬಗ್ಗೆ ಸುಮ್ಮನೆ ಕೆದಕಿಕೊಂಡೆ. ಯಾರಿಗೂ ಗೊತ್ತಿಲ್ಲದಂತಹ ಕೆಲವು ಮಾಹಿತಿಗಳನ್ನು ಕಾಮತ್ ಅಂದು ಹೊರಹಾಕಿದ್ದ. ಕೆಲವು ನಟ ನಟಿಯರು ಆ ಹೋಟೆಲ್ಲಿನಲ್ಲಿ ಮಾಡಿಕೊಂಡ ಲಫಡಾಗಳ ಬಗ್ಗೆ ನನಗೆ ಓದಿ ಗೊತ್ತಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಕಾಮತನಿಗೆ ಅದರ ಹತ್ತು ಪಟ್ಟು ಮಾಹಿತಿ ಗೊತ್ತಿತ್ತು. ಒಂದು ಹತ್ತು ಕಥೆ ಬರೆಯಬಹುದು ಅವನು ಕೊಟ್ಟ ಮಾಹಿತಿಯಿಂದ. ಮುಂದೆ ಎಂದದಾರೂ ಆ ಮಾಹಿತಿಗಳ ಮೇಲೆ ಕಥೆ ಬರೆದರೆ ಕಾಮತನಿಗೆ ಕ್ರೆಡಿಟ್ ಕೊಡಲೇಬೇಕು. ಜರೂರ್ ಕೊಡೋಣ.

ರಾತ್ರಿ ಜಬರ್ದಸ್ತ್ ಪಾರ್ಟಿ ನಡೆಯಿತು. ನಾನು ಯಾವ ಹೊತ್ತಿಗೆ ಮನೆ ಮುಟ್ಟಿಕೊಂಡೆನೋ ನೆನಪಿಲ್ಲ. ಮನೆ ಮುಟ್ಟಿಸಿದವ ಮಾತ್ರ ಅಜೇಯ್ ಕುಲಕರ್ಣಿ. ಥ್ಯಾಂಕ್ಸ್!

ಮರುದಿವಸ ಕೂಡ ನಮ್ಮ ರಿಯೂನಿಯನ್ ಕಾರ್ಯಕ್ರಮ ಇತ್ತು. ಸಂಜೆ ಧಾರವಾಡ ಸಮೀಪದ ಮಯೂರ್ ರೆಸಾರ್ಟ್ ನಲ್ಲಿ ಪಾರ್ಟಿ. ದಿನ ಪೂರ್ತಿ ಫ್ರೀ. ಬೆಳಿಗ್ಗೆ ಅರುಣ ಭಟ್ ಮನೆಗೆ ಬಂದಿದ್ದ. ನನ್ನ ಅವನ ಸ್ನೇಹಕ್ಕಿಂತ ಅವರ ಕುಟುಂಬ ಮತ್ತು ನಮ್ಮ ಕುಟುಂಬಗಳ ಸ್ನೇಹ ತುಂಬ ಹಳೆಯದು. ಭಟ್ಟನ ಅಜ್ಜ ಐತಾಳರು ನಮ್ಮ ತಂದೆಯವರಿಗೆ ಗುರುಗಳು. ಭಟ್ಟನ ಅಜ್ಜಿ ನಮಗೆ ಲೋಕಲ್ ಅಜ್ಜಿ. ಹಾಗಾಗಿ ಮನೆಗೆ ಬಂದಿದ್ದ ಭಟ್ಟ. ಭಟ್ಟನ ಜೊತೆಗೆ ಕಾಮತ್ ಕೂಡ ಬಂದಿದ್ದ. ಮಾತಾಡುತ್ತ ಕೂತೆವು.

ಶಾಲಾ ದಿವಸಗಳಲ್ಲಿ ಒಂದು ಸಾರೆ ನಮ್ಮ ಮನೆಗೆ ಬಂದಿದ್ದನ್ನು ಕಾಮತ್ ನೆನಪಿಸಿಕೊಂಡ. ಆವಾಗ ನಮ್ಮ ಅಮ್ಮ ಮಾಡಿಕೊಟ್ಟ ಕಾಫಿ ಕೂಡ ನೆನಪಿಸಿಕೊಂಡ. 'ಆವಾಗಿನ ಕಾಫೀ ಸಹಿತ ನೆನಪಿಟ್ಟಿಯಾ ನೀನು? ಈಗ ಇನ್ನೊಮ್ಮೆ ಕಾಫಿನೇ ಮಾಡಿಕೊಡ್ತೇನಿ. ಕುಡಿದು ಹೋಗಿಯಂತ,' ಅಂತ ಹೇಳಿದ ಅಮ್ಮನ ಅಕ್ಕರೆಯಿಂದ ಭಟ್ಟ, ಕಾಮತ್ ಎಲ್ಲ ಫುಲ್ ಖುಷ್.

ಸಂಜೆ ಆರರಿಂದ ಮಯೂರ್ ರೆಸಾರ್ಟ್ ನಲ್ಲಿ ನಮ್ಮ ಪಾರ್ಟಿ. ಕಾಮತನಿಗೆ ಅಂದು ರಾತ್ರಿಯೇ ವಾಪಸ್ ಬೆಂಗಳೂರಿಗೆ ಹೋಗಬೇಕಿತ್ತು. ಆದರೂ ಸುಮಾರು ಒಂಬತ್ತು ಘಂಟೆವರೆಗೆ ಇದ್ದ. ಪಾರ್ಟಿ, ಹಾಡು, ನೃತ್ಯ ಎಲ್ಲ ಶುರುವಾಗಿದ್ದೇ ನಂತರ. ಅದನ್ನೆಲ್ಲ ಮಿಸ್ ಮಾಡಿಕೊಂಡ. ನಾವೂ ಅವನನ್ನು ಮಿಸ್ ಮಾಡಿಕೊಂಡೆವು. ಎಲ್ಲರಿಗೂ ಗುಡ್ ಬೈ ಹೇಳಿ ಬೆಂಗಳೂರ್ ಬಸ್ ಹತ್ತಿದ ಕಾಮತ್. ಅದೇ ಕೊನೆ. ನಮ್ಮ ಪಾರ್ಟಿ ರಾತ್ರಿ ಎರಡು ಘಂಟೆ ತನಕ ನಡೆಯಿತು. ಧಾರವಾಡದ ಡಾನ್, ನಮ್ಮ ಮಿತ್ರ, ಜಂಗಣ್ಣವರ ಎಲ್ಲರ ಖಾತಿರ್ದಾರಿ ಮಾಡಿದ. ಬಾರ್ ಬಂದಾದ ಮೇಲೂ, 'ಲೇ, ಜಂಗ್ಯಾ, ಇನ್ನೂ ಬಿಯರ್ ಬೇಕಲೇ. ತರಿಸೋ ಮಾರಾಯಾ' ಅಂತ ನಮ್ಮಂತವರು ರೋಧಿಸಿದರೆ, 'ಒಂದೇ ಮಿನಿಟ್ ಅಣ್ಣಾ. ತರಿಸೇಬಿಟ್ಟೆ. ಎಂಜಾಯ್ ಮಾಡು ನೀ!' ಅಂದ ಡಾನ್ ಜಂಗಣ್ಣವರ ಬರೋಬ್ಬರಿ 'ತೀರ್ಥ'ಯಾತ್ರೆ ಮಾಡಿಸಿದ್ದ. ಕಾಮತ್ ಎಲ್ಲೋ ಬಸ್ಸಿನಲ್ಲಿ ಕೂತಿರಬೇಕು ಆ ಹೊತ್ತಿನಲ್ಲಿ. ಎಷ್ಟು ಮಿಸ್ ಮಾಡಿಕೊಂಡನೋ. ನಾವೂ ಅಷ್ಟೇ ಮಿಸ್ ಮಾಡಿಕೊಂಡೆವು.

ನಂತರ ಫೋನ್ ನಲ್ಲಿ ಟಚ್ ಇತ್ತು. ೨೦೧೩, ೨೦೧೪ ಡಿಸೆಂಬರ್ ನಲ್ಲಿ informal reunion ಗಳನ್ನು ಮಾಡಿದಾಗ ಧಾರವಾಡಕ್ಕೆ ಬರಲಾಗದಿದ್ದಕ್ಕೆ ತುಂಬಾ ಫೀಲ್ ಮಾಡಿಕೊಂಡಿದ್ದ. We also missed you, Kamat!

ಕೆಲವು ತಿಂಗಳ ಹಿಂದೆ ಸಹಜವಾಗಿ ಫೋನ್ ಮಾಡಿದ್ದೆ. ಬೆಂಗಳೂರಿನಲ್ಲಿ ಕೆಂಗೇರಿ ಕಡೆ ಒಂದು ಫ್ಲಾಟ್ ತೆಗೆದುಕೊಂಡೆ ಅಂದ. 'ನಿನ್ನ ಕೆಲಸದ ಜಾಗಕ್ಕೆ ಅದು ತುಂಬಾ ದೂರವಲ್ಲವೇ?' ಅಂತ ಕೇಳಿದೆ. 'ದೂರ ಹೌದು. ಆದರೆ ಪತ್ನಿಗೆ, ಮಕ್ಕಳಿಗೆ ಎಲ್ಲ ಅನುಕೂಲವಾಗುತ್ತದೆ. ಅವರ ಕಂಫರ್ಟ್ ಮುಖ್ಯ. ನನ್ನದೇನು? ಮ್ಯಾನೇಜ್ ಮಾಡುತ್ತೇನೆ. ನನ್ನ ಹತ್ತಿರ ಬೈಕಿದೆ. It's OK,' ಅಂದ. What a devoted family man! ಅಂತ ಅನ್ನಿಸಿತ್ತು. ಮನದಲ್ಲೇ ಒಂದು hats off ಹೇಳಿ ಸಂಭಾಷಣೆ ಮುಗಿಸಿದ್ದೆ.

ನಂತರವೂ ಒಂದೆರೆಡು ಸಲ ಮಾತಾಡಿದ್ದೆ. ಈ ವರ್ಷ ಅಯ್ಯಪ್ಪ ಮಾಲೆ ಹಾಕಿದ್ದ. ವ್ರತ ಮುಗಿಸಿಬಂದ ಮೇಲೋ ಅಥವಾ ಅಲ್ಲಿಗೆ ಹೋಗುತ್ತಿರುವಾಗಲೋ ಫೋನ್ ಮಾಡಿದ್ದೆ. ಅಯ್ಯಪ್ಪನ ಮಾಲೆ ವ್ರತವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಅಭಿನಂದಿಸಿದ್ದೆ. ಅದೇ ಕೊನೆ ಬಾರಿ ಮಾತಾಡಿದ್ದು ಅಂತ ಕಾಣುತ್ತದೆ. ಹೊಸ ಫ್ಲಾಟಿನ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದ. ನಂತರ ಬೆಂಗಳೂರಿನ ಲೋಕಲ್ ಮಂದಿ ಮಾಡಿದ ಕಾರ್ಯಕ್ರಮಗಳಲ್ಲೂ ಅವನ ಫೋಟೋ ನೋಡಿದ್ದೆ. ಖುಷಿಪಟ್ಟಿದ್ದೆ.

ಮೊನ್ನೆ ಮಾತ್ರ ತನ್ನ ನಲವತ್ತಮೂರನೆಯ ಜನ್ಮದಿನ ಆಚರಿಸಿಕೊಂಡಿದ್ದ. ಆದರೆ ಇವತ್ತು ಇಲ್ಲ. ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತವೊಂದರಲ್ಲಿ ಕಾಮತ್ ಮೃತನಾಗಿದ್ದಾನೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಮೊನ್ನೆ ರಾತ್ರಿ ಸುಮಾರು ೯.೩೦ ರ ಹೊತ್ತಿಗೆ ಆಫೀಸ್ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೊರಟಿದ್ದಾನೆ. ಮನೆ ಹತ್ತಿರ ಬಂದಾಗ ಕೆಂಗೇರಿಯಲ್ಲಿ ಹಿಂದಿನಿಂದ ಟಿಪ್ಪರ್ ಲಾರಿ ಬಂದು ಅಪ್ಪಳಿಸಿದೆ. ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟ. ಕಾಮತ್ ಬದುಕುಳಿಯಲಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ, ಮೈ ಫ್ರೆಂಡ್, ಕಾಮತ್!

ನಮಗೆ ಯಾರಿಗೂ ಸುದ್ದಿ ಗೊತ್ತಿರಲಿಲ್ಲ. ಅವನ ಪರಿಚಿತರಾರೋ ಕಾಮತನ ಫೇಸ್ಬುಕ್ ವಾಲ್ ಮೇಲೆ ಒಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅದನ್ನು ನೋಡಿದ ನಮ್ಮ ಮತ್ತೊಬ್ಬ ಕ್ಲಾಸ್ಮೇಟ್ ಅದನ್ನು ನಮ್ಮ ಸ್ಕೂಲ್ ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಕಾಮತನಿಗೆ ಭಾಳ ಕ್ಲೋಸ್ ಆಗಿದ್ದ ಅರುಣ ಭಟ್ಟನನ್ನು ಸಂಪರ್ಕಿಸಿದ್ದಾರೆ. ಭಟ್ಟನಿಗೂ ಮಾಹಿತಿಯಿಲ್ಲ. ಏನೇ ಇರಲಿ ಅಂತ ಕಾಮತನ ಮೊಬೈಲ್ ನಂಬರಿಗೇ ಫೋನ್ ಮಾಡಿದ್ದಾನೆ ಭಟ್. ಫೋನ್ ಎತ್ತಿದಾಕೆ ಕಾಮತನ ಧರ್ಮಪತ್ನಿ. ತಣ್ಣಗೆ ಹೇಳಿದ್ದಾಳೆ, 'ನಿಮ್ಮ ಮಿತ್ರ ಇನ್ನಿಲ್ಲ!' ಅಂತ. ಅದೇನು ಸಂಯಮ, ಅದೇನು fortitude ಆಕೆಯದು! ಅದಕ್ಕೊಂದು ಸಲಾಂ!

ಕಾಮತ್ ತೀರಿಹೋಗಿದ್ದಾನೆ ಅಂತ ಹೀಗೆ ಖಾತ್ರಿಯಾಗಿದೆ. ನಾವಿಲ್ಲಿ ಮುಂಜಾನೆ ಎದ್ದು ಬಂದು FB ಮೇಲೆ ನೋಡಿದರೆ ಇಷ್ಟು ಸುದ್ದಿ. ಕಾಮತ್ ಏನೋ ಹೋಗಿಬಿಟ್ಟ. ಆದರೆ ನೆನಪುಗಳು ಮತ್ತು ನೋವು??? ಅದು ನಿರಂತರ.

ಹೇಳಲು ಕೇಳಲು ಏನೂ ಉಳಿದಿಲ್ಲ. ಕಾಮತನ ಆತ್ಮಕ್ಕೆ ಶಾಂತಿ ಸಿಗಲಿ. ಅವನ ಕುಟುಂಬಕ್ಕೆ ಅವನ ಸಾವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರಿಗೆ ಎಲ್ಲ ಒಳ್ಳೆಯದಾಗಲಿ. ಇದು ಎಲ್ಲ ದೋಸ್ತರ ಹಾರೈಕೆ.

Kamat, miss you man. May your soul rest in peace!

ಮಯೂರ್ ರೆಸಾರ್ಟ್ ನಲ್ಲಿ ಕಾಮತ್ . ಇದೇ ಕೊನೆ. ನಂತರ ಭೆಟ್ಟಿಯಾಗಲೇ ಇಲ್ಲ! :(

Thursday, April 16, 2015

ಅಗಲಿದ ಪ್ರೊ. ಭೂಸನೂರಮಠರ ಬಗ್ಗೆ ಕೆಲವು ನೆನಪುಗಳು



೧೯೯೦. ಮೇ, ಜೂನ್ ತಿಂಗಳ ಒಂದು ದಿವಸ. ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜ್. ಭೌತಶಾಸ್ತ್ರ ವಿಭಾಗ.

'ಏ ಇವನೇ! ಮೆತ್ತಗಿಂದು ತೊಗೊಂಡು ಬಾರss ಮತ್ತ. ಒಳ್ಳೆ ಮೆತ್ತಗಿಂದು ಇರಬೇಕು. ಹಾಕ್ಕೊಂಡು ಕುಂತ್ರ ಮಸ್ತ ಅನ್ನಿಸಬೇಕು,' ಅಂತ ಒಬ್ಬ ದೊಡ್ಡ ಮಾಸ್ತರ್ರು ತಮ್ಮ ವಿಭಾಗದ ಚಪರಾಸಿಯೊಬ್ಬನಿಗೆ ಹೇಳುತ್ತಿದ್ದರು. ಅವರು ಆ ವಿಭಾಗದ ಮುಖ್ಯಸ್ಥರು (HoD). ಅಂತವರು ಒಬ್ಬ ಚಪರಾಸಿ (peon) ಮನುಷ್ಯನೊಂದಿಗೆ ಅಷ್ಟು ಆತ್ಮೀಯತೆಯಿಂದ, ತಮ್ಮ ಮನೆಯವನೋ ಎಂಬಂತೆ ಸಲಿಗೆಯಿಂದ ಮಾತಾಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದೆ. ತಮ್ಮ ಜೊತೆ ಕೆಲಸ ಮಾಡುವ ಎಲ್ಲರನ್ನೂ, ಅವರ ಸ್ಥಾನ ದೊಡ್ದದು ಚಿಕ್ಕದು ಅಂತ ಭೇದಭಾವ ಮಾಡದೇ, ಒಳ್ಳೆ ರೀತಿಯಿಂದ ನೋಡಿಕೊಳ್ಳಬೇಕು ಅನ್ನುವ ಮ್ಯಾನೇಜ್ಮೆಂಟ್ ಪಾಠ ಆವತ್ತು ನನ್ನ ಮುಂದೆಯೇ ಆಗುತ್ತಿತ್ತು. ಆವತ್ತು ಆದರ ಮಹತ್ವ ತಿಳಿಯಿತೇ? ಗೊತ್ತಿಲ್ಲ. ಇವತ್ತು ಬರೋಬ್ಬರಿ ತಿಳಿದಿದೆ. ಅದನ್ನು ಕಾಯಾ, ವಾಚಾ, ಮನಸಾ ಆಚರಿಸಿ ತೋರಿಸಿದ ಮಹನೀಯರು ನೆನಪಾಗಿದ್ದಾರೆ. 'ಶರಣರ ಗುಣ ಮರಣದಲ್ಲಿ ಕಾಣು' ಅನ್ನುವಂತೆ ಧಾರವಾಡದ ದೊಡ್ಡ ಶರಣರೊಬ್ಬರ ನೆನಪು ಅವರ ಮರಣದಲ್ಲಿ ಜರೂರ್ ಆಗುತ್ತಿದೆ.

ಆವತ್ತು ಅಷ್ಟು ಆತ್ಮೀಯತೆಯಿಂದ, ಕಾಳಜಿಯಿಂದ, ತಮ್ಮ ಚಪ್ರಾಸಿಗೆ ತಮ್ಮ HoD ಖುರ್ಚಿಗೆ ಒಂದು ಮೆತ್ತನೆ ದಿಂಬು ತಂದು ಕೊಡು ಅಂತ ಕೇಳುತ್ತಿದ್ದವರು ಪ್ರೊ. ಭೂಸನೂರಮಠ. ಮೊನ್ನೆ ಮಾತ್ರ ಅಗಲಿದ್ದಾರೆ. ತುಂಬ ನೆನಪಿಗೆ ಬರುತ್ತಿದ್ದಾರೆ.

ಆರ್ಸೀರೇಮಠರು, ಆರ್ಸೀರೇಮಠರು ಅಂತ ಅಂದಿನ ಕವಿವಿ ಕುಲಪತಿ ದಿವಂಗತ ಆರ್. ಸೀ. ಹಿರೇಮಠ ಅವರ ನಂತರ ಯಾರಾದರೂ ಮಠರ ಹೆಸರು ಕೇಳಿದ್ದರೆ ಅದೂ ಭೂಸನೂರಮಠರೇ! ಯಾಕೆಂದರೆ ಅವರು ಕೆಸಿಡಿಯಲ್ಲಿ ತಂದೆಯವರ ಸಹೋದ್ಯೋಗಿ.

ಭೂಸನೂರುಮಠರ ಹೆಸರು ಇಷ್ಟೊಂದು ಕೇಳಿದ್ದೆ ಆದರೆ ಆವರನ್ನು ಖುದ್ದಾಗಿ ನೋಡಲಿಕ್ಕೆ ಹದಿನಾರು ವರ್ಷ ಅಂದರೆ ಪಿಯೂಸಿ ಮೊದಲನೇ ವರ್ಷದ ತನಕ ಕಾಯಬೇಕಾಯಿತು. ಮಾತಾಡಿಸಲು, ಅವರ ಸಲಹೆ, ಸೂಚನೆ, ಸಹಾಯ ಕೇಳಲು? ಇನ್ನೂ ಎರಡು ವರ್ಷ ಅಂದರೆ ಪಿಯೂಸಿ ಮುಗಿಯಬೇಕಾಯಿತು.

ಭೂಸನೂರಮಠ ತಂದೆಯವರ ಸಹೋದ್ಯೋಗಿಯಾಗಿದ್ದರು. ಕುಟುಂಬಗಳ ಮಧ್ಯೆ ಆತ್ಮೀಯತೆಯಿತ್ತು. ಅವರ ಇಬ್ಬರು ಪುತ್ರರು ನಮ್ಮ ಅಣ್ಣನಿಗೂ ಹಿರಿಯರಾಗಿದ್ದು ಅವನ ಒಳ್ಳೆ ಸ್ನೇಹಿತರಾಗಿದ್ದರು. ತರಂಗದಲ್ಲಿ, ಸುಧಾದಲ್ಲಿ ಬರುತ್ತಿದ್ದ ಅವರ ವೈಜ್ಞಾನಿಕ ಸಾಹಿತ್ಯ ಕಣ್ಣಿಗೆ ಬೀಳುತ್ತಿತ್ತು. ಆದರೆ ಆವಾಗ ನಮಗೆ ವಿಜ್ಞಾನ, ಸಾಹಿತ್ಯ ಎರಡೂ ತಿಳಿಯುತ್ತಿರಲಿಲ್ಲ. ಇವರು ಬರೆದ sci-fi ಅರ್ಥವಾಗದೇ, ನಮಗೆ ಅರ್ಥವಾದ ಪತ್ತೇದಾರಿ ಕಾದಂಬರಿಗಳಿಗೇ ಮರಳುತ್ತಿದ್ದೆವು.  ಹಿರಿಯರು ಆಗಾಗ ಎಚ್ಚರಿಸುತ್ತಿದರು, 'ಭಾಳ ಪತ್ತೇದಾರಿ ಓದಿದರೆ ಕತ್ತೇದಾರ ಆಗ್ತಿ ನೋಡು. ಭಾಳ mystery ಪುಸ್ತಕ ಓದಿದರೆ ಮೇಸ್ತ್ರೀ ಆಗಿಹೊಗ್ತೀ ನೋಡು!' ಅನ್ನುವ ಎಚ್ಚರಿಕೆಗಳನ್ನು ಧಿಕ್ಕರಿಸಿ, ಅವನ್ನೇ ಓದಿ ಓದಿ, ಈಗ software ಮೇಸ್ತ್ರಿ (project manager) ಆಗಿ ಕೂತಿದ್ದೇವೆ. ಅದೆಲ್ಲ ಇರಲಿ. ಅಂದು ರಾಭೂ (ರಾಜಶೇಖರ ಭೂಸನೂರಮಠ) ಅವರ ವೈಜ್ಞಾನಿಕ ಕಥೆ ಓದಲಿಲ್ಲ. ಮುಂದೆ ಓದೋಣ. ತಾವು ಹೋದರೂ ತಮ್ಮ ಸಾಹಿತ್ಯ ಬಿಟ್ಟು ಹೋಗಿದ್ದಾರೆ ರಾಭೂ.

೧೯೯೦ ರ ಮೇ, ಜೂನ್ ವೇಳೆಯಲ್ಲಿ ರಾಭೂ ಅವರನ್ನು ಭೆಟ್ಟಿಮಾಡುವ ಸಂದರ್ಭ ಬರುತ್ತಲೇ ಇರಲಿಲ್ಲವೇನೋ. But, thanks to BITS, Pilani. ಪಿಯೂಸಿ ನಂತರ, ಪ್ರೀತಿಯ ಅಣ್ಣ ಹೇಳಿದ ಅಂತ ಕೊನೇ ಕ್ಷಣದಲ್ಲಿ ಅರ್ಜಿ ಹಾಕಿದ್ದೆ. ಹಾಕಿದ್ದು ಒಂದೇ ವಿಷಯಕ್ಕೆ. ಕಂಪ್ಯೂಟರ್ ಸೈನ್ಸ್. ಇಂಜಿನಿಯರಿಂಗ್ ಮಾಡಿದರೆ ಅದರಲ್ಲೇ ಮಾಡಬೇಕು. ಯಾಕೆ, ಏನು ಗೊತ್ತಿಲ್ಲ. ಅಣ್ಣ ಅದರಲ್ಲೇ ಮಾಡಿದ್ದಾನೆ. ಆ ಕಾರಣ ಸಾಕು. ಅದೇನು ನಮ್ಮ ನಸೀಬವೋ ಗೊತ್ತಿಲ್ಲ. ಅಲ್ಲಿ ಪ್ರವೇಶ ಸಿಕ್ಕೇ ಬಿಡಬೇಕೇ! ಪಿಯೂಸಿ ಮಾರ್ಕ್ಸ್ ಅಷ್ಟಕಷ್ಟು ಛೊಲೋ ಇತ್ತು ಅನ್ನಿ. ಒಂದೇ ಮಾರ್ಕಿನಿಂದ ಹತ್ತನೇ ರಾಂಕ್ ಮಿಸ್. ಪಿಲಾನಿಯಲ್ಲಿ ಪ್ರವೇಶ ಸಿಕ್ಕ ನಂತರ ಹೋಗಲೋ ಬೇಡವೋ ಅಂತ ದ್ವಂದ್ವ ನಮಗೆ ಮತ್ತೆ ತಂದೆತಾಯಿ ಇಬ್ಬರಿಗೂ. 'ಸಿಕ್ಕಿದೆ. ಅಲ್ಲೇ ಹೋಗು. Don't think otherwise,' ಅಂತ ಸಿಕ್ಕಾಪಟ್ಟೆ ಪ್ರೋತ್ಸಾಹ, ಉತ್ತೇಜನ ನೀಡಿದವರು ಒಬ್ಬ ನಮ್ಮ ಅಣ್ಣ, ಇನ್ನೊಬ್ಬರು ಕೆಸಿಡಿಯ ಮಾಜಿ ಪ್ರೊಫೆಸರ್ ಕೆಮಿಸ್ಟ್ರಿ ವಿಭಾಗದ ದಿವಂಗತ ಡಾ. ಜಮಖಂಡಿ. ಇನ್ನೂ ಕೆಲವು ಸಹೃದಯಿಗಳೂ, well wishers ಎಲ್ಲ ಸಕತ್ತಾಗಿ ಪಂಪ್ ಹೊಡೆದರು ಅಂತ ಹೇಳಿ ಪಿಲಾನಿಗೇ ಹೋಗಿ ಸೇರೋಣ ಅಂತ ನಿರ್ಧಾರ ಮಾಡಿದ್ದಾಯಿತು. ಆವಾಗ ನೆನಪಾದವರೇ ಇದೇ ಪ್ರೊ. ಭೂಸನೂರಮಠ. ಯಾಕೆಂದರೆ ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಎಲ್ಲ BITS, Pilani ಯಿಂದಲೇ ಡಿಗ್ರಿ ಮಾಡಿದ್ದರು. ಅದು ಗೊತ್ತಿತ್ತು. ಅದು ಬಿಟ್ಟರೆ ಮತ್ತೊಬ್ಬ ಕೆಸಿಡಿ ಪ್ರೊಫೆಸರ್ ಪ್ರೊ. ಏ. ಜಿ. ಹಿರೇಮಠ ಅವರ ಮಕ್ಕಳು ಸಹ ಅಲ್ಲಿ ಓದಿದ್ದರು ಅಂತ ನೆನಪು. ಆದರೆ ಮಾಹಿತಿ ತೆಗೆಯಲು ನಾವು ಆರಿಸಿಕೊಂಡಿದ್ದು ಪ್ರೊ. ಭೂಸನೂರಮಠ ಅವರನ್ನು. ಪ್ರೊ. ಏ. ಜಿ. ಹಿರೇಮಠ ಸಹಿತ ಒಳ್ಳೆ ಪರಿಚಯದವರೇ. ಅವರ ಮಾವ ಪ್ರೊ. ಪರಮಶಿವಯ್ಯ ನಮ್ಮ ತಂದೆಯವರಿಗೆ ಪರಮ ಗುರುಗಳು. ಪ್ರೊ. ಪರಮಶಿವಯ್ಯ ಅವರನ್ನು, ಅವರ ಸಹಾಯವನ್ನು ನೆನಪಿಸಿಕೊಂಡೇ ಇಂದಿಗೂ ಸಂಜೆಯ ದೀಪ ಹಚ್ಚುತ್ತಾರೆ ನಮ್ಮ ತಂದೆಯವರು. ಆದರೂ ಭೂಸನೂರಮಠರನ್ನೇ ಆಶ್ರಯಿಸಿದೆ.

ಇದೇ ನಿಮಿತ್ತ, ಒಂದು ದಿವಸ ತಂದೆಯವರೊಡನೆ ಕೆಸಿಡಿ ಭೌತಶಾಸ್ತ್ರ ವಿಭಾಗದಲ್ಲಿ ರಾಭೂ ಅವರನ್ನು ಕಂಡೆ. ಪಿಯೂಸಿಗೆ ಬಂದಾಗ ಅವರನ್ನು ನೋಡಿದ್ದೆ. ಆದರೆ ಮಾತಾಡಿಸಿರಲಿಲ್ಲ. ಅವರು ನಮಗೆ ಕಲಿಸಿರಲೂ ಇಲ್ಲ. ಮತ್ತೆ ನಾವು ಪಿಯೂಸಿಯಲ್ಲಿ ಪೂರ್ತಿಯಾಗಿ ನೆಚ್ಚಿಕೊಂಡಿದ್ದು 'ಗಣಿತ ಲೋಕ'ದ ದಿವಂಗತ ಪ್ರೊ. ಶ್ರೀನಿವಾಸ ದೇಶಪಾಂಡೆ ಅವರನ್ನು. ಹಾಗಾಗಿ ಪಿಯೂಸಿಯಲ್ಲಿ ಕ್ಲಾಸಿಗೆ ಹೋಗಿದ್ದು, ಕೂತಿದ್ದು ಎಲ್ಲ ಭಾಳ ಕಮ್ಮಿ. ಗತಿಯಿಲ್ಲ ಅಂತ ಪ್ರಾಕ್ಟಿಕಲ್ ಒಂದಕ್ಕೆ ಹೋಗಿ ಬಂದರೆ ಅದೇ ದೊಡ್ಡದು. 'ಮತ್ತೆ ಸಹೋದ್ಯೋಗಿಯ ಮಗ. ಕ್ಲಾಸಿಗೆ ಬರದಿದ್ದರೂ ಮನೆಯಲ್ಲಿ ಕೂತು ಓದುತ್ತಾನೆ(!),' ಅಂತ ಅರ್ಥಮಾಡಿಕೊಂಡಿದ್ದ ತಂದೆಯವರ ಅನೇಕ ಸಹೋದ್ಯೋಗಿಗಳು ನಮಗೆ 'ಬಾರಾ ಖೂನ್ ಮಾಫ್' ಅನ್ನುವಂತೆ ಎಲ್ಲ ರಿಯಾಯಿತಿ ಕೊಟ್ಟಿದ್ದರು. Except Statistics ಶೆಟ್ಟಿ ಮೇಡಂ ಮತ್ತು ಆರ್ಗಾನಿಕ್ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದ ಡಾ. ಕಟ್ಟಿ. ಅದರ ಬಗ್ಗೆಲ್ಲ ಮತ್ತೆ ಬರೆಯೋಣ ಬಿಡಿ. ಹೀಗೆಲ್ಲ ಇರುವಾಗ ರಾಭೂ ಸರ್ ನಮಗೆ ಕಲಿಸಿದ್ದರೂ ಎಷ್ಟು ಪರಿಚಯವಾಗುತ್ತಿದ್ದರೋ ಏನೋ ಗೊತ್ತಿಲ್ಲ.

ತಂದೆಯವರೊಂದಿಗೆ ಹೋಗಿ ರಾಭೂ ಅವರನ್ನು ಕಂಡೆ. ಸಹೋದ್ಯೋಗಿಯೊಂದಿಗೆ ತಂದೆಯವರೇ ಮಾತಾಡಿದರು. ನಾನು ಒಂದು ನಮಸ್ಕಾರವೋ, ಹಾಪ್ ನಮಸ್ಕಾರವೋ ಹೊಡೆದುಕೊಂಡು, ಅಪರೂಪಕ್ಕೆ ಭಕ್ತ ಪ್ರಹಲ್ಲಾದನ ಹಾಗೆ ನಿಂತಿದ್ದೆ. ಆಕಾಲದಲ್ಲಿ ನಾನು ಕೀಚಕನಂತೆ ಲುಕ್ ಕೊಡುತ್ತ ನಿಂತಿದ್ದೇ ಜಾಸ್ತಿ ಅಂತ ಗೆಳೆಯರ, ಗೆಳತಿಯರ ಇಂದಿನ ಕುಚೋದ್ಯ.

ರಾಭೂ ಒಳ್ಳೆ ರೀತಿಯಲ್ಲಿ ಮಾತಾಡಿದರು. ತಮ್ಮ ಪುತ್ರರಿಬ್ಬರ ಬಿಟ್ಸ್, ಪಿಲಾನಿ ದಿನಗಳ ಬಗ್ಗೆ ಸುದ್ದಿ ಹೇಳಿದರು. ತಮ್ಮ ಎರಡನೇ ಸೊಸೆ ಸಹಿತ ಪಿಲಾನಿಯಲ್ಲೇ ಓದಿದ್ದು. ಆಕೆಯ ತಂದೆ ಅಲ್ಲಿಯೇ ಪ್ರೊಫೆಸರ್ ಅಂತೆಲ್ಲ ಹೇಳಿದರು. ಅದೆಲ್ಲ ಗೊತ್ತೇ ಇತ್ತು ಬಿಡಿ. 'ಸರಿ, ಒಮ್ಮೆ ಮನೆಗೆ ಬಂದು ಬಿಡಿ. ಆರಾಮ್ ಕೂತು ಮಾತಾಡೋಣ. ನನ್ನ ಕೈಯಲ್ಲಿ ಎಷ್ಟಾಗತ್ತೋ ಅಷ್ಟಂತೂ ಮಾಡೇ ಮಾಡ್ತೀನಿ. ನಮ್ಮ ಹುಡುಗ,' ಅಂತ ಹೇಳಿ, ಶಭಾಶಿ ಕೊಟ್ಟು, 'ಪಿಲಾನಿಗೇ ಹೋಗಿ ಸೇರು,' ಅಂತ ಹೇಳಿ ಕಳಿಸಿದ್ದರು. ಅವರ ಮನೆಗೆ ಎಂದು, ಯಾವ ಸಮಯಕ್ಕೆ ಹೋಗಬೇಕು ಅಂತ ನಿರ್ಧರಸಿ ವಾಪಸ್ ಬಂದಾಯಿತು.

ರಾಭೂ ತಮ್ಮ ಚಪರಾಸಿಗೆ ಅವರ ಖುರ್ಚಿಗೆ ಯಾವ ತರಹದ ಮೆತ್ತಗಿನ ದಿಂಬು ಸರಿ ಹೊಂದುತ್ತದೆ ಅನ್ನುವದರ ಬಗ್ಗೆ, ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳುವದನ್ನು ಮುಂದುವರೆಸಿದರು. ಆ ಪುಣ್ಯಾತ್ಮ ತಲೆಯಾಡಿಸುತ್ತ, 'ಹೂಂನ್ರೀ ಸರ್ರಾ, ಹೂಂನ್ರೀ ಸರ್ರಾ' ಅಂತ ಅನ್ನುತ್ತ ನಿಂತಿದ್ದ. ಮುಂದೆ ಎಂತಹ ದಿಂಬು ತಂದು ಕೊಟ್ಟನೋ ಏನೋ?

***

ನಿರ್ಧರಿಸಿದ ಸಮಯಕ್ಕೆ ಸರಿಯಾಗಿ ಪ್ರೊ. ಭೂಸನೂರಮಠರ ಮನೆಗೆ ಬಂದೆವು. ನಮ್ಮನ್ನು ನಿರೀಕ್ಷೆ ಮಾಡುತ್ತಿದ್ದ ಸರ್ ಆತ್ಮೀಯವಾಗಿ ಸ್ವಾಗತಿಸಿದರು. ಚಹಾ ಇತ್ಯಾದಿ ಬಂತು. ಸರ್ ಅವರೇ ತಂದು ಕೊಟ್ಟಿದ್ದರಿಂದ ಅವರ ಮನೆಯಲ್ಲಿದ್ದ ಅವರ ಶ್ರೀಮತಿಯವರನ್ನು, ಇತರೆ ಕುಟುಂಬ ವರ್ಗದವರನ್ನು ನಾನು ನೋಡಲಿಲ್ಲ.

ಸರ್ ಸಕತ್ತಾಗಿ ಕಥೆ ಹೇಳಿದರು. ಎರಡು ಪರಿಚಯ ಪತ್ರ ಬರೆದುಕೊಡುವದಾಗಿ ಹೇಳಿದರು. ಒಂದು ಗೊತ್ತಿತ್ತು. ಆವಾಗ ಅಲ್ಲೇ ಪಿಲಾನಿಯಲ್ಲಿ ಮಾಸ್ತರಿಕೆ ಕೆಲಸ ಮಾಡಿಕೊಂಡಿದ್ದ ಅವರ ಸೊಸೆಗೆ. ಎರಡನೇ ಮಗ ಎಲ್ಲೋ ವಿದೇಶಕ್ಕೆ ಹೋಗಿದ್ದ ಅಂತ ನೆನಪು. ಹಾಗಾಗಿ ಸೊಸೆ, ತಂದೆಯ ಮನೆ ಪಿಲಾನಿಗೆ ಬಂದು, ತಾನು ಕಲಿತ ಸಂಸ್ಥೆಯಲ್ಲಿಯೇ ಮಾಸ್ತರಿಕೆ ಮಾಡಿಕೊಂಡಿದ್ದಳು. ಸರಿ ಅವರಿಗೆ ಒಂದು ಪರಿಚಯ ಪತ್ರ. ಇನ್ನೊಂದು ಪರಿಚಯ ಪತ್ರವನ್ನು ಯಾರಿಗೆ ಬರೆದು ಕೊಡುವರಿದ್ದಾರೆ ಸರ್? ಅಂತ ಸಿಕ್ಕಾಪಟ್ಟೆ ಕುತೂಹಲ. ಅವರ ಬೀಗರಿಗೆ ಬರೆದು ಕೊಡುತ್ತಾರೋ ಹೇಗೆ? ಯಾಕೆಂದರೆ ಅವರ ಸೊಸೆ ತಂದೆ, ಪ್ರೊ. ಗೋಪಾಲನ್, ಆಗ ಬಿಟ್ಸ್, ಪಿಲಾನಿಯ ಪ್ರವೇಶ ವಿಭಾಗದ (admissions department) ಮುಖ್ಯಸ್ಥರಾಗಿದ್ದರು. ನಮಗೆ ಬರುತ್ತಿದ್ದ ಪತ್ರಗಳ ಮೇಲೆಲ್ಲ ಅವರದೇ ರುಜು ಇರುತ್ತಿತ್ತು. ಯಾರಿಗೆ ಇನ್ನೊಂದು ಪತ್ರ ಬರೆದುಕೊಡುತ್ತಾರೆ ರಾಭೂ?????

ರಾಭೂ ಇನ್ನೊಂದು ಪರಿಚಯ ಪತ್ರ ಬರೆದುಕೊಡುತ್ತೇನೆ ಅಂತ ಹೇಳಿದ್ದು ಅವರಿಗೆ, ಅಂದರೆ ಸ್ವಂತ ಪ್ರೊ. ಭೂಸನೂರಮಠರಿಗೇ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಬೋಧಿಸಿ, ಕಾಲಾನಂತರ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ  BITS, Pilani ಭೌತಶಾಸ್ತ್ರದ ವಿಭಾಗ ಸೇರಿದ್ದ ಅವರ ಮಾಜಿ ಗುರು ಡಾ. ಖರೆ ಅವರಿಗೆ. ಯಪ್ಪಾ! ಎಲ್ಲಿಯ ಧಾರವಾಡದ ರಾಭೂ, ಎಲ್ಲಿ ಅವರಿಗೆ ವಾರಣಾಸಿಯಲ್ಲಿ ಪಾಠ ಮಾಡಿದ್ದ ಅದ್ಯಾರೋ ಮರಾಠಿ ಆದಮೀ ಡಾ. ಖರೆ. ಇರಲಿ ಪಿಲಾನಿಯ ಮಾಸ್ತರಿಗೆ ಪರಿಚಯ ಪತ್ರ ಬರೆದುಕೊಡುತ್ತೇನೆ ಅನ್ನುತ್ತಿದ್ದಾರೆ. ಒಳ್ಳೆಯದೇ ಆಯಿತು. ಯಾಕೆಂದರೆ ನಮಗೆ ಧಾರವಾಡವಿರಲಿ, ಪಿಲಾನಿಯಿರಲಿ, ಅಮೆರಿಕಾನೇ ಇರಲಿ, ಕ್ಲಾಸಿಗೆ ಹೋಗಿ ಕೂಡಲಿಕ್ಕೆ ಸುತಾರಾಂ ಇಷ್ಟವಿಲ್ಲ. ಸ್ವಂತ ಓದಿ ಎಷ್ಟು ತಿಳಿಯಿತೋ ಅಷ್ಟೇ ಸಾಕು ಅನ್ನುವ ಸ್ವಲ್ಪ 'self study' ಹಮ್ಮು ಆವಾಗಿತ್ತು. ಹಾಗಾಗಿ ಮುಂದೆ ಎಲ್ಲಿಯಾದರೂ ಪಿಲಾನಿಯಲ್ಲಿ ಇದೇ ಡಾ. ಖರೆ ಪ್ರೊಫೆಸರ್ ಕ್ಲಾಸಿಗೆ ಚಕ್ಕರ್ ಹೊಡೆಯುವ ಸಂದರ್ಭ ಬಂದರೆ ತಮ್ಮ ಶಿಷ್ಯ ರಾಭೂನ ಶಿಷ್ಯ ಅಂತ ಸ್ವಲ್ಪ ಡಿಸ್ಕೌಂಟ್ ಕೊಟ್ಟಾರು, ಹಾಜರಾತಿ ಮುಫತ್ತಿನಲ್ಲಿ ಕೊಟ್ಟಾರು ಆತನ ದೂ(ದು)ರಾಲೋಚನೆ ನಮ್ಮ ಮನಸ್ಸಿನಲ್ಲಿ ಬಂದಿತ್ತೇ? ಈಗ ನೆನಪಿಲ್ಲ. ಪಿಲಾನಿಗೆ ಹೋದ ಮೇಲೆ ತಿಳಿಯಿತು ಅಲ್ಲಿ ಹಾಜರಾತಿ ಕಡ್ಡಾಯ ಇಲ್ಲವೇ ಇಲ್ಲ ಅಂತ. ನಂತರ ಇನ್ನೂ ಒಂದು ಸ್ವಲ್ಪ ತಡವಾಗಿಯಾದರೂ ಬರೋಬ್ಬರಿ ತಿಳಿಯಿತು. ಅದೇನೆಂದರೆ ಹಾಜರಾತಿ ಜರೂರತ್ತಿಲ್ಲ, ಹೆಚ್ಚಿನವು open book ಪರೀಕ್ಷೆಗಳು, ಮೊದಲು ಓದಿದರೂ ಅಷ್ಟೇ, ಪರೀಕ್ಷೆಯಲ್ಲಿ ಪುಸ್ತಕ ತೆಗೆದು ನೋಡಿದರೂ ಅಷ್ಟೇ. ಅವೆಲ್ಲ misunderstanding ಗಳನ್ನು ದೂರಮಾಡಿದ ಪಿಲಾನಿಯ radical ಶಿಕ್ಷಣ ಪದ್ಧತಿಗೆ ಒಂದು ದೊಡ್ಡ ಸಲಾಂ.

ಭೂಸನೂರಮಠರು ಏನೇನೋ ಸುದ್ದಿ ಹೇಳಿದರು. ಹೇಳಿ ಕೇಳಿ ಅವರು ಕಥೆಗಾರರು. ನಾವು ಕಥೆ ಓದುವವರು. ಹೀಗಾಗಿ ಓಕೆ. 'ಏ ಏಳೋ! ತಡಾ ಆಗ್ಲಿಕತ್ತದ' ಅಂತ ಲುಕ್ ಕೊಡುತ್ತ ಕೂತವರು ನಮ್ಮ ತಂದೆಯವರು. ಯಾಕೆಂದರೆ ಸ್ವಲ್ಪ ಹೊತ್ತಿಗಾಗಲೇ ಧಾರವಾಡ ರೈಲ್ವೆ ಸ್ಟೇಷನ್ ರಿಸರ್ವೇಶನ್ ಖಿಡಕಿ ಬಂದಾಗುವದರಲ್ಲಿತ್ತು. ದೆಹಲಿಗೆ ಹೋಗುವ ನಮ್ಮ ಟಿಕೆಟ್ ಇನ್ನೂ ಬುಕ್ಕಾಗಿರಲಿಲ್ಲ. ಅದೇ ವರ್ಷ ಗೋವಾ - ದೆಹಲಿ ನಿಜಾಮುದ್ದೀನ್ ಅಂತ ಒಂದು ಡೈರೆಕ್ಟ್ ಟ್ರೈನ್ ಶುರುವಾಗಿ, ಅದಕ್ಕೆ ಧಾರವಾಡದಿಂದ ಲಿಂಕ್ ಎಕ್ಸಪ್ರೆಸ್ ಮೂಲಕ ಕನೆಕ್ಷನ್ ಇದ್ದು, ದೆಹಲಿಗೆ ಹೋಗುವ ಮಂದಿಗೆ ಭಾಳ ಅನುಕೂಲ ಕೂಡ ಆಗಿತ್ತು. ಅದೂ ಸಹ ಒಂದು ಶುಭ ಸಂದೇಶ ಅಂತ ಮಂದಿ ವಿಮರ್ಶಿಸಿ ಪಿಲಾನಿಗೇ ಹೋಗಲು ಹೇಳಿದ್ದರು ಕೆಲವರು. ಇಲ್ಲ ಅಂದರೆ ಮೊದಲು ಪೂನಾಕ್ಕೆ, ಮುಂಬೈಗೆ ಅಲ್ಲಿ ಇಲ್ಲಿ ಹೋಗಿ ದೆಹಲಿ ತಲುಪಿ, ನಂತರ ಬಸ್ಸೋ, ಮತ್ತೊಂದು ಟ್ರೈನೋ ಹಿಡಿದು, ಮರಳುಗಾಡಿನ ಮೂಲೆಯಲ್ಲಿರುವ ಪಿಲಾನಿ ಮುಟ್ಟಬೇಕಾಗಿತ್ತು. ಈಗ ಗೋವಾ - ನಿಜಾಮುದ್ದೀನ್ ಟ್ರೈನ್ ಆಗಿದ್ದು ಬೆಸ್ಟ್. ಧಾರವಾಡ ಒಳಗೆ ಹತ್ತಿ ಒಮ್ಮೆ ಮೀರಜ್ ಒಳಗೆ ಬದಲು ಮಾಡಿದರೆ ಸೀದಾ ದೆಹಲಿ.

ಆದರೂ ಭೂಸನೂರಮಠ ಅವರು ಹೇಳಿದ ಪಿಲಾನಿ ಕಥೆಗಳು ಇನ್ನೂ ನೆನಪಲ್ಲಿವೆ. 'ಅಲ್ಲೆ ನೋಡಪಾ ಎಲ್ಲಾ ಭಾಳ ಶಿಸ್ತುಬದ್ಧ. Everything runs like a clockwork. ಮತ್ತ ಪ್ರತಿ ಪರೀಕ್ಷೆಯ ಉತ್ತರ ಪತ್ರಿಕೆ ನಿನ್ನ ಕೈಯಾಗ ಹಿಡಿಸೇ ಬಿಡ್ತಾರ ನೋಡು. Because they insist on transparency. ಅಕಸ್ಮಾತ ಯಾರರೆ ಮಾಸ್ತರು ನಿನ್ನ ಉತ್ತರ ಪತ್ರಿಕೆ ಬರೋಬ್ಬರಿ ತಿದ್ದಿಲ್ಲ ಅಂದ್ರ ನೀನು ಹೋಗಿ ಅವರ ಜೋಡಿ ಜಗಳ ಸಹ ಮಾಡಬಹದು. ನಮ್ಮ ಕಾಶ್ಯಾ (ಅಂದರೆ ಸಣ್ಣ ಮಗ ಕಾಶಿನಾಥ) ಮನ್ನೆ ಜರ್ಮನಿಯಿಂದ ಪತ್ರ ಬರೆದಿದ್ದ. ಆವಾ ಅಲ್ಲೆ ಯಾವದೋ ಜರ್ಮನ್ ಮಾಸ್ತರ್ ಜೋಡಿ ಹಾಕ್ಕೊಂಡು ಗುದ್ದಾಡಿದ ಅಂತ ಹೇಳಿ. ಹೇಳಿ ಕೇಳಿ ಪಿಲಾನಿಯೊಳಗ ನಾಲ್ಕು ವರ್ಷ ಮಾಸ್ತರ್ ಮಂದಿ ಜೋಡಿ ಗುದ್ದಾಡಿ, ವಾದ ಮಾಡಿ ರೂಢಿ ನೋಡು. You can be very frank with your teachers there. You can argue and if you convince them that you deserve more marks they will give you,' ಅಂತ ಹೇಳಿ ಭೂಸನೂರಮಠ ಬಿಟ್ಸ್, ಪಿಲಾನಿಯ ಶೈಕ್ಷಣಿಕ ವಾತಾವರಣದ ಬಗ್ಗೆ ಏನೋ ಒಂದು ಬಗೆಯ ಅಚ್ಚರಿ ಮೂಡಿಸಿದ್ದರು. ಆದರೆ ಅವರು ಹೇಳದ ಒಂದು ಮಾತು ನಂತರ ಅರ್ಥವಾಯಿತು. ಮಾಸ್ತರ್ ಜೋಡಿ ಹೋಗಿ ಗುದ್ದಾಡಬಹುದು. ಮಾಸ್ತರದ್ದು ತಪ್ಪಿದ್ದರೆ ತಿದ್ದಿಕೊಂಡು, ಹೆಚ್ಚಿನ ಮಾರ್ಕ್ಸ್ ಹಾಕಿ ಕಳಿಸುತ್ತಾರೆ. on the flip side, ಮಾಸ್ತರ್ ಮತ್ತೊಮ್ಮೆ ಚೆಕ್ ಮಾಡಿದಾಗ, ನಿಮ್ಮ ಹೆಚ್ಚಿನ ತಪ್ಪುಗಳು ಕಂಡು ಬಂದರೆ, ಮಾರ್ಕ್ಸ್ ಕಮ್ಮಿ ಸಹಿತ ಮಾಡಿ ಕೊಡುತ್ತಾರೆ. ಆ ಪಾಠ ನನಗೆ ಮರೆಯಲಾರದಂತೆ ಕಲಿಸಿದವರು inorganic chemistry ಕಲಿಸಿದ್ದ ಪ್ರೊ. ಎಲ್. ಕೆ. ಸಿಂಗ್. ಹೇಗೂ ಬಿಟ್ಟಿ revaluation ಇದೆ, ಕರೆದು ಕೇಳಿದರೆ ಹೋಗಿ ನಮ್ಮ ಧಾರವಾಡ ಶೈಲಿಯಲ್ಲಿ ವಾದ ಮಾಡಿ ಬಂದಾರಾಯಿತು, ಅಂತ ಒಂದು ಟೆಸ್ಟಿನ ಉತ್ತರ ಪತ್ರಿಕೆಯ ಮೌಲ್ಯಮಾಪನ ಸರಿಯಾಗಿಲ್ಲ ಅಂತ ಪ್ರೊ. ಎಲ್. ಕೆ. ಸಿಂಗ್ ಅವರಿಗೆ ವಾಪಸ್ ಕೊಟ್ಟು ಬಂದರೆ, ಒಂದು ವಾರದ ನಂತರ ಕರೆದು, ಹೊಸದಾಗಿ ಮೌಲ್ಯಮಾಪನ ಮಾಡಿದ ಪೇಪರ್ ಕೈಯಲ್ಲಿಟ್ಟಿದ್ದರು. ನೋಡಿದರೆ ಮೊದಲಿನಗಿಂತ ಎರಡು ಮಾರ್ಕ್ಸ್ ಕಡಿಮೆ. ಅಕಟಕಟಾ! ಮೊದಲು ಕಂಡಿರದಿದ್ದ ತಪ್ಪು ಈಗ ಕಂಡಿತ್ತು ಸರ್ ಅವರಿಗೆ. ಬರೋಬ್ಬರಿ ಮಾರ್ಕ್ಸ್ ಕಳೆದು ಕಳಿಸಿದ್ದರು. ಸುಖಾ ಸುಮ್ಮನೆ ಬಿಟ್ಟಿಯಲ್ಲಿ ಚಡ್ಡಿ ಕಳೆಯಿಸಿಕೊಂಡು ಬಂದ ಕೆಟ್ಟ ಫೀಲಿಂಗ್. ಅದೇ ಕೊನೆ! ನಂತರ ನಾನು ಮತ್ತೆ ಯಾವದೇ ತರಹದ ಮರುಮೌಲ್ಯಮಾಪನಕ್ಕೆ ಅರ್ಜೀ ಹಾಕಲಿಲ್ಲ. ಮುಂದಿನ ಮೂರೂವರೆ ವರ್ಷ 'ಪಾಲಿಗೆ ಬಂದಷ್ಟು ಪಂಚಾಮೃತ' ಅಂತ ಸ್ವೀಕರಿಸಿ, ತಲೆಗೂ ಪ್ರೋಕ್ಷಿಸಿಕೊಂಡು, ಡಿಗ್ರಿ ಸರ್ಟಿಫಿಕೇಟು ತೊಗೊಂಡು ಬಂದೆ. ನಂತರ ಅದಕ್ಕೆ ತರಹ ತರಹದ ಉಪ್ಪಿನಕಾಯಿ ಹಚ್ಚಿಕೊಂಡು ನೆಕ್ಕುತ್ತಿದ್ದೇನೆ. ಡಿಗ್ರಿ ಸರ್ಟಿಫಿಕೇಟ್ ಗಳ ಹಣೆಬರೆಹವೇ ಅಷ್ಟು. ಎಲ್ಲರೂ ಅದನ್ನೇ ತಾನೇ ಮಾಡುತ್ತಿರುವದು???? ;)

ಇದೆಲ್ಲ ಕಥೆ ಭೂಸನೂರುಮಠ ಅವರ ಜೊತೆ ಆದ ಮಾತುಕತೆಗಳ ಮಧ್ಯೆ ಕಳೆದುಹೋಗಿತ್ತು. ಮೊದಲೇ ಹೇಳಿದಂತೆ ಪಿಲಾನಿಯಲ್ಲಿರುವ ತಮ್ಮ ಸೊಸೆಗೆ (ಪ್ರೊ. ಸುಜಾತಾ ಗೋಪಾಲನ್ ಭೂಸನೂರಮಠ) ಮತ್ತು ಅಲ್ಲಿನ ಭೌತಶಾಸ್ತ್ರ ವಿಭಾಗದ ಡಾ. ಖರೆಯವರಿಗೆ ಪತ್ರ ಬರೆದುಕೊಡುವದಾಗಿ ಹೇಳಿದರು. ಇಂತಹ ದಿನ, ಇಷ್ಟು ಹೊತ್ತಿಗೆ ಬಂದು ಪತ್ರಗಳನ್ನು ತೆಗೆದುಕೊಂಡು ಹೋಗು ಅಂತ ಬೀಳ್ಕೊಟ್ಟರು. ಬೀಳ್ಕೊಡುವ ಮೊದಲು ಡಾ. ಖರೆ ಅವರ ಬಗ್ಗೆ ಒಂದು ಮಜವಾದ ಘಟನೆ ಹೇಳಿದರು ರಾಭೂ.

ಮೊದಲೇ ಹೇಳಿದಂತೆ ಡಾ. ಖರೆ ಭೂಸನೂರಮಠರಿಗೆ ವಾರಣಾಸಿಯಲ್ಲಿ ಭೌತಶಾಸ್ತ್ರ ಕಲಿಸಿದವರು. ನಂತರ ಪಿಲಾನಿಗೆ ಬಂದು ಅಲ್ಲಿ ಮಾಸ್ತರಿಕೆ ನಡೆಸಿದ್ದರು. ಎಂಬತ್ತರ ದಶಕದಲ್ಲಿ ಭೂಸನೂರಮಠರ  ಹಿರಿಯ ಮಗ ವಿಶ್ವನಾಥ ಅವರು ಪಿಲಾನಿಯಲ್ಲಿ  ಕೆಮಿಕಲ್ ಇಂಜಿನಿಯರಿಂಗ್ ಓದಲು ಹೋದರು. ಮೊದಲನೇ ಸೆಮಿಸ್ಟರ್ ನ ಯಾವದೋ ಒಂದು ಫಿಸಿಕ್ಸ್ ಕೋರ್ಸ್ ಇದೇ ಡಾ. ಖರೆ ಪಾಠ ಮಾಡುತ್ತಿದ್ದರು. ಎಂದೋ ಒಂದು ದಿವಸ ಭೂಸನೂರಮಠರ ಮಗ ಅವರ ಕಣ್ಣಿಗೆ ಬಿದ್ದಿದ್ದಾನೆ. ಅವರಿಗೆ ಏನೋ ಸಂಶಯ ಬಂದಿದೆ. ಹುಡುಗನನ್ನು ನಿಲ್ಲಿಸಿ ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ, 'Are you Bhoosnoormath's son????' ಅಷ್ಟೇ. ಡಾ. ಖರೆ ಅಂದರೆ ಖತರ್ನಾಕ್. ಸರಿ ಸುಮಾರು ಮೂವತ್ತು ವರ್ಷದ ಹಿಂದೆ ನೋಡಿದ್ದ ಅಪ್ಪ (ರಾಭೂ) ಅವರ ಚಹರಾಪಟ್ಟಿ ನೆನಪಿಟ್ಟುಕೊಂಡು, 'ಇವನು ಅವರ ಮಗನೇ ಇರಬೇಕು' ಅಂತ ಬರೋಬ್ಬರಿ ಆಟಕಾಯಿಸಿಕೊಂಡಿದ್ದರು. ಆದರೆ ಅಂತಹ ಡಾ. ಖರೆ ನಮ್ಮನ್ನು ಹಿಡಿದು, 'Are you Bhoosnoormath's student????' ಅಂತ ಮಾತ್ರ ಕೇಳಲಿಲ್ಲ. ಅಕಸ್ಮಾತ ರಾಭೂ ನಮಗೆ ಪಾಠ ಮಾಡಿ, ನಾವು ಅವರ ಕ್ಲಾಸ್ ಅಟೆಂಡ್ ಮಾಡಿ, ಏನೇನೋ ಮಾಡಿದ್ದರೆ, ಅದೇನೋ quantum effect ಆಗಿ ಕೇಳುತ್ತಿದ್ದರೋ ಏನೋ. ಆದರೆ ಹಾಗಾಗಲಿಲ್ಲ.

ಸರಿ. ರಾಭೂ ಅವರಿಗೆ ವಂದನೆ ಅರ್ಪಿಸಿ, ಧನ್ಯವಾದ ಹೇಳಿ ಅವರ ಮನೆಯಿಂದ ಹೊರಟೆವು. ದೆಹಲಿಗೆ ರೈಲ್ವೆ ಟಿಕೆಟ್ ಸಹಿತ ಸಿಕ್ಕಿತು. ಮುಂದೆ ರಾಭೂ ಹೇಳಿದ ವೇಳೆಗೆ ಹೋಗಿ, ಅವರು ನೀಟಾಗಿ ಬರೆದು, ಲಕೋಟೆಯಲ್ಲಿ ಹಾಕಿ, ಸೀಲ್ ಮಾಡಿ, ಮೇಲೆ ಹೆಸರು ಬರೆದಿಟ್ಟಿದ್ದ ಎರಡು ಪರಿಚಯ ಪತ್ರಗಳನ್ನು ತಂದೆ. ಒಂದು ಅವರ ಸೊಸೆಗೆ. ಇನ್ನೊಂದು ಅವರ ಗುರುಗಳಾದ ಡಾ. ಖರೆ ಅವರಿಗೆ.

ಪಿಲಾನಿಗೆ ಹೋಗಿ ಸೇರಿಕೊಳ್ಳಲು ಒಂದೋ ಎರಡು ವಾರಗಳಿದ್ದವು. ಧಾರವಾಡ ಬಿಟ್ಟು ಹೋಗಲು ಮನಸ್ಸೇ ಇರಲಿಲ್ಲ. ಕಾರಣ ಒಂದು ಚಿಗರೆ ಮರಿ. ಅದರೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿ ಹೋಗಿತ್ತು. ಮುಂದೆ ಅದು ಒಂದು ಟ್ರಾಜಿಡಿ ಆಗಿಹೋಯಿತು. ದೊಡ್ಡ ಟ್ರಾಜಿಡಿ. ಅದರ ಬಗ್ಗೆ ಹಿಂದೆ ಬರೆದಿದ್ದೆ. ಸಮಯವಿದ್ದಾಗ ಓದಿಕೊಳ್ಳಿ.

***

ಸರಿ, ಆಗಸ್ಟ್ ೧೯೯೦ ರ ಮೊದಲ ವಾರದಲ್ಲಿ ಪಿಲಾನಿಗೆ ಬಂದು ಮುಟ್ಟಿದ್ದಾಯಿತು. ಆಗ ಧಾರವಾಡದಲ್ಲೇ ಇದ್ದ, ನಮ್ಮ ಆತ್ಮೀಯರಾದ, ನವಲೂರಿನ ಭೋರುಕಾ ಟೆಕ್ಸ್ಟೈಲ್ MD ಆಗಿದ್ದ ಅಗ್ರವಾಲಾ ಸಾಹೇಬರು ತುಂಬ ಸಹಾಯ ಮಾಡಿದರು. ಅವರು ಸಹ ಪಿಲಾನಿ ಸಮೀಪದವರೇ. ಹಾಗಾಗಿ ಅವರ ದೆಹಲಿಯ ಮನುಷ್ಯನೊಬ್ಬನನ್ನು ನಮ್ಮ ಜೊತೆಗೇ ಕಳಿಸಿಬಿಟ್ಟರು. ಛೋಟ್ ಮಲ್ಲ ಜೋಷಿ ಅಂತ ಆತನ ಹೆಸರು. ಆ ಪುಣ್ಯಾತ್ಮರ ಬಗ್ಗೆ ಮತ್ತೆ ಬರೆಯೋಣ ಬಿಡಿ. ಅವರೇ ನಮ್ಮನ್ನು ದೆಹಲಿಯಿಂದ ಕರೆದೊಯ್ದು, ಪಿಲಾನಿಗೆ ಮುಟ್ಟಿಸಿ, ನಾವು 'ನೀವು ಹೋಗಿ. ಮುಂದಿನದು ನಾವು ನೋಡಿಕೊಳ್ಳುತ್ತೇವೇ,' ಅಂದ ಮೇಲೆ ನಮ್ಮನ್ನು ಬಿಟ್ಟು ಹೋಗಿದ್ದರು. Thanks CM Joshi Sir.

ಪಿಲಾನಿ ಅಂದರೆ ಎಲ್ಲದೂ very well organized, everything runs like a clockwork ಅಂತ ಎಲ್ಲರಿಂದ ಕೇಳಿದ್ದು, ಓದಿದ್ದು ಯಾವದರಲ್ಲೂ ಏನೂ ಅತಿಶಯೋಕ್ತಿ ಇರಲೇ ಇಲ್ಲ. ಅಷ್ಟು ಚನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. Hats off to the way they run the institution! Role model for any educational institution.

ಸರಿ. ಪಿಲಾನಿ ಸೇರಿದ್ದಾಯಿತು. ಹಾಸ್ಟೆಲ್ ರೂಂ ಸಿಕ್ಕಿದ್ದಾಯಿತು. ಎರಡು ದಿನ ಬಿಟ್ಟು ತಂದೆಯವರು ವಾಪಸ್ ಹೊರಡಲಿಕ್ಕೆ ಇದೆ. ಅಷ್ಟರೊಳಗೆ ಭೂಸನೂರಮಠ ಅವರ ಸೊಸೆ ಮತ್ತೆ ಅವರ ಬೀಗರನ್ನು ಭೆಟ್ಟಿಯಾಗಿ, ಭೂಸನೂರಮಠ ಅವರು ಕೊಟ್ಟ ಪರಿಚಯ ಪತ್ರ ಎಲ್ಲ ಕೊಟ್ಟು, ನಮ್ಮ ಪರಿಚಯ ಮಾಡಿಕೊಳ್ಳಬೇಕು. ಮುಂದಿನ ಹೆಜ್ಜೆ ಅಂದರೆ ಪಿಲಾನಿಯ ಕ್ಯಾಂಪಸ್ಸಿನಲ್ಲಿ ಭೂಸನೂರಮಠ ಅವರ ಬೀಗರ ಮನೆ ಹುಡುಕಬೇಕು. ಏನು ಮಾಡಬೇಕು? ಸರಿ ಅಂತ ಹೇಳಿ ಪಿಲಾನಿ ಕ್ಯಾಂಪಸ್ಸಿನ ತುಂಬ ಚಕ್ಕರ್ ಹೊಡೆದಿದ್ದು ಆಯಿತು. ಮೊದಲು ಹೋಗಿದ್ದು ಅವರ ಬೀಗರಾದ ಪ್ರೊ. ಗೋಪಾಲನ್ ಅವರ ಆಫೀಸ್ ಚೇಂಬರ್ ಹುಡುಕಿಕೊಂಡು. ಅದೇನೋ ಸಿಕ್ಕಿತು. ಆದರೆ ಬೀಗ ಹಾಕಿತ್ತು. ಅವರ ಸೊಸೆಯ ಚೇಂಬರ್ ಸಿಕ್ಕಿತ್ತೇ ಇಲ್ಲವೇ ಅಂತ ನೆನಪಿಲ್ಲ. ಸರಿ, ಯಾರನ್ನಾದರೂ ಹಿಡಿದು ಗೋಪಾಲನ್ ಅವರ ಸ್ಟಾಫ್ ಕ್ವಾರ್ಟರ್ ಎಲ್ಲಿದೆ ಅಂತ ಕೇಳೋಣ ಅನ್ನುವಷ್ಟರಲ್ಲಿ ಒಬ್ಬರು ಸಿಕ್ಕರು. ಅವರು ಗಣಿತ ವಿಭಾಗದ ಮಹಾ eccentric ಆದರೆ ತುಂಬಾ funny ಆದ ಡಾ. ಪೀ.ಕೆ. ರಾಮನ್ ಅಂತ ಆಮೇಲೆ ಗೊತ್ತಾಯಿತು. ಹೆಸರು ಪೀಕೆ ಆದರೂ ಎಂದೂ ಶೆರೆ ಪಿರೇ ಕುಡಿದವರೇ ಅಲ್ಲ ಅವರು. ಅಂತಹ ಡಾ. ಪೀ. ಕೆ. ರಾಮನ್ ನಾವು ಮಾತಾಡಿಸಿದಾಗ ಪ್ರೀತಿಯಿಂದ ಮಾತಾಡಿ, ಭೂಸನೂರಮಠರ ಬೀಗರಾದ ಪ್ರೊ. ಗೋಪಾಲನ್ ಅವರ ಮನೆಗೆ ಬರೋಬ್ಬರಿ ದಾರಿ ತೋರಿಸಿದ್ದರು. ಮತ್ತೆ ಪಿಲಾನಿ ಕ್ಯಾಂಪಸ್ ಅಂದರೆ ಪೂರ್ತಿ ಗ್ರಿಡ್ ಸಿಸ್ಟಮ್. ಅಡ್ರೆಸ್ ಸಿಕ್ಕರೆ ಹುಡುಕುವದು ತುಂಬ ಸುಲಭ. ಡಾ. ಪೀ. ಕೆ. ರಾಮನ್ ಅವರಿಗೆ ಥ್ಯಾಂಕ್ಸ್ ಹೇಳಿದರೆ ತಮ್ಮ ಪಕ್ಕಾ ತಮಿಳು ಶೈಲಿಯಲ್ಲಿ 'mention not. mention not' ಅಂದರು. ತಮಿಳು ಅವರ specialty ಅಂತ ಅವರ ಕೆಳಗೆ ಎರಡನೇ semester ನಲ್ಲಿ 'Probability & Statistics' ಎಂಬ ಕೋರ್ಸಿನಲ್ಲಿ ವಿಷಯ ಕಲಿಯುವದರಕಿಂತ ಹೆಚ್ಚಾಗಿ ತಮಿಳು ಕಲಿತಾಗ ಅರ್ಥವಾಯಿತು.

ಸರಿ, ಡಾ. ಪೀ. ಕೆ. ರಾಮನ್ ಕೊಟ್ಟ ದಾರಿ ಹಿಡಿದು ಭೂಸನೂರಮಠ ಅವರ ಪಿಲಾನಿ ಬೀಗರ ಮನೆ ಬಾಗಿಲು ತಟ್ಟಿದೆವು. ಬಾಗಿಲು ತೆರೆದು, ಒಳಗೆ ಸ್ವಾಗತಿಸಿದವರು ಪ್ರೊ. ಗೋಪಾಲನ್ ಅವರ ಪತ್ನಿ ಅಂತ ನೆನಪು. ನಮ್ಮ ಪರಿಚಯ ಮಾಡಿಕೊಂಡೆವು. ಧಾರವಾಡದ ತಮ್ಮ ಬೀಗರ ಪೈಕಿ ಅಂತ ತಿಳಿದ ನಮಗೆ ಸಿಕ್ಕಾಪಟ್ಟೆ ಸತ್ಕಾರವಾಯಿತು. ಭೂಸನೂರಮಠ ಅವರ ಸೊಸೆ ಸುಜಾತಾ ಮೇಡಂ ಸಹಿತ ಬಂದು, ಸಿಕ್ಕಾಪಟ್ಟೆ ಖಾತಿರ್ದಾರಿ ಮಾಡಿದರು. ಅವರು ಶುದ್ದ ತಮಿಳೆ. ಬೆಳೆದಿದ್ದು ರಾಜಸ್ಥಾನದ ಪಿಲಾನಿಯಲ್ಲಿ. ಭೂಸನೂರಮಠರ ಸೊಸೆಯಾಗಿ ಬಂದ ಮೇಲೆ ಎಲ್ಲೋ ಅಷ್ಟಿಷ್ಟು ಧಾರವಾಡ ಕನ್ನಡ ಕಲಿದ್ದರು ಅಂತ ಕಾಣುತ್ತದೆ. 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಅವರು ಆತ್ಮೀಯತೆಯಿಂದ, ಪ್ರೀತಿಯಿಂದ, ತಮಿಳ accent ನಲ್ಲಿ ಧಾರವಾಡ ಕನ್ನಡ ಮಾತಾಡಿ, ಅಷ್ಟೊಂದು ಖಾತಿರ್ದಾರಿ ಮಾಡಿದ್ದನ್ನು ಹೇಗೆ ಮರೆಯೋಣ!? ಅವರು ಎಲ್ಲೇ ಇದ್ದರೂ ತಣ್ಣಗಿರಲಿ.

ಸರಿ, ಭೂಸನೂರಮಠರ ಬೀಗರ ಆತಿಥ್ಯ ಭರ್ಜರಿಯಾಗಿತ್ತು. ಮಗ ಏನಾದರೂ ಲಫಡಾ ಮಾಡಿಕೊಂಡರೆ ಆಪತ್ಕಾಲಕ್ಕೆ ದೂರದ ಊರಿನಲ್ಲಿ ಪರಿಚಯದವರು ಯಾರಾದರೂ ಇದ್ದಾರೆ ಅಂತೆ ತಂದೆಯವರು ನೀರಾಳವಾಗಿದ್ದರೋ ಏನೋ!? ಗೊತ್ತಿಲ್ಲ. ಅವರ ಮನೆಯಿಂದ ವಾಪಸ್ ಬರುವಾಗ, 'ನಿನಗೆ ಸೈಕಲ್ ಏನಾದರೂ ಕೊಳ್ಳುವದಿದ್ದರೆ ಭೂಸನೂರಮಠ ಬಾಯಿಯನ್ನು ಕರೆದುಕೊಂಡು ಹೋಗು' ಅಂತ ಅಂದುಬಿಟ್ಟರು ತಂದೆಯವರು. ಅಕಟಕಟಾ! ಪಾಪ ಬಹಳ ಭೋಳೆ ಸ್ವಭಾವದವರು ತಂದೆಯವರು. ಪಿಲಾನಿ ಕ್ಯಾಂಪಸ್ ನಲ್ಲಿ ಎಲ್ಲರೂ ಸೈಕಲ್ ಹೊಡೆಯುತ್ತಿದ್ದಿದ್ದನ್ನು ನೋಡಿದ ಅವರು ಹೋಗುವ ಮೊದಲೇ ಒಂದು ಸೈಕಲ್ ಕೊಡಿಸಲೇ ಅಂತ ಕೇಳಿದ್ದರು. ನಾನು ಉರಿದುಕೊಂಡು ಬೈದಿದ್ದೆ. ಆದರೂ ಹೋಗೋವಾಗ ಇರಲಿ ಅಂತ ಮತ್ತೊಮ್ಮೆ ಹೇಳಿದ್ದರು. ಉದ್ರಿ ಉಪದೇಶ ಮಾಡಿದ್ದರು. ಎಲ್ಲಿಯಾದರೂ ಹಿಂದಿ ಭಾಷೆ, ವ್ಯವಹಾರಿಕೆ ಬರದ ಮಗ ೮೦೦ ರೂಪಾಯಿ ಸೈಕಲ್ಲಿಗೆ ೧೬೦೦ ರುಪಾಯಿ ಕೊಟ್ಟು, ತಮ್ಮ ತಲೆ ನುಣ್ಣಗೆ ಬೋಳಿಸಿಯಾನು ಅಂತ ಕಾಳಜಿ. 'ಅಪ್ಪಾ! ನೀ ಸುಮ್ಮ ಕೂಡೋ ಮಾರಾಯಾ. ನಮ್ಮ ಹಾಸ್ಟೆಲ್ ಬೇಕಾದಷ್ಟು ಹತ್ರ ಅದ. ಸೈಕಲ್ ಏನೂ ಸದ್ಯಕ್ಕೆ ಬ್ಯಾಡ,' ಅಂತ ತಂದೆಯವರನ್ನು ಸುಮ್ಮನಿರಿಸಿ ಸಾಗಹಾಕಿದ್ದೆ. ಅದೇನು ಅದೃಷ್ಟವೋ ಏನೋ. ನಾಲ್ಕೂ ವರ್ಷ ನಮ್ಮ ಮೂರೂ ಹಾಸ್ಟೆಲ್ ನಮಗೆ ಹೋಗಬೇಕಾದ ವಿಭಾಗಗಳಿಗೆ ಹತ್ತಿರವೇ ಇದ್ದವು. ಸೈಕಲ್ ಖರೀದಿ ಮಾಡುವ ಪ್ರಸಂಗವೇ ಬರಲಿಲ್ಲ. ಮೇಲಿಂದ ಸೈಕಲ್ ಹೊಡೆಯುವುದು ಅಂದರೆ ಒಂದು ತರಹದ lower level ಮಂದಿ ಮಾಡುವದು ಅಂತ ತಲೆಯಲ್ಲಿ ಬೇರೆ ಇತ್ತು ನೋಡಿ. ಹಾಗಾಗಿ ಒಟ್ಟೇ ಸೈಕಲ್ ಹೊಡೆಯಲೇ ಇಲ್ಲ. ಪಿಲಾನಿ ಕ್ಯಾಂಪಸ್ ತುಂಬ ನಮ್ಮದು ನಟರಾಜಾ ಸರ್ವೀಸ್. ಅಂದರೆ ಶುದ್ಧ ಕಾಲ್ನಡಿಗೆ.

ಸರಿ. ಪಿಲಾನಿಯಲ್ಲಿ ಇಷ್ಟೆಲ್ಲ ಸೆಟಲ್ ಮಾಡಿಸಿ ತಂದೆಯವರು ವಾಪಸ್ ಧಾರವಾಡ ಸೇರಿಕೊಂಡರು. ವಾರಕ್ಕೊಮ್ಮೆ ಪತ್ರ ವ್ಯವಹಾರ. 'ಆಗಾಗ ಹೋಗಿ ಭೂಸನೂರಮಠ ಬಾಯಿಯನ್ನು ತಪ್ಪದೇ ಭೆಟ್ಟಿಮಾಡುತ್ತಿರು,' ಅಂತ ಕಾಳಜಿ ಭರಿತ ಸಲಹೆ ಧಾರವಾಡದಿಂದ. ಹೋಗಿ ಭೆಟ್ಟಿ ಮಾಡಿದ್ದೂ ಆಯಿತು. ಅವರೂ ಸಹ ಧಾರವಾಡದ ಬೀಗರ ಪೈಕಿ ಹುಡುಗ ಬಂದಿದ್ದಾನೆ ಅಂತ ಸಿಕ್ಕಾಪಟ್ಟೆ ಪ್ರೀತಿಯಿಂದ ಮತ್ತೆ ಮತ್ತೆ, 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಸತ್ಕಾರ ಮಾಡಿಯೇ ಮಾಡಿದರು. ನಮಗೇನು?? ಕೊಟ್ಟಿದ್ದೆಲ್ಲವನ್ನೂ ಸ್ವಾಹಾ ಮಾಡಿ, ಒಂದಲ್ಲ ಎರಡು ಕಪ್ಪು ಚಹಾ ಕುಡಿದು ಬಂದೆವು. ಕಂಪನಿಗೆ ಇರಲಿ ಅಂತ ಸೂತ್ರ ಸಂಬಂಧವಿಲ್ಲದ ಬೆಂಗಾಲಿ ದೋಸ್ತನೊಬ್ಬನನ್ನೂ ಸಹ ಕರೆದುಕೊಂಡು ಹೋಗಿದ್ದೆ. homesick ಆಗಿ ತುಂಬಾ ಅಬ್ಬೇಪಾರಿಯಾಗಿತ್ತು ಅದು. ಅದಕ್ಕೇ ಅಂತಲೂ ಆಯಿತು, ರಾಗ್ಗಿಂಗ್ (ragging) ಸಮಯದಲ್ಲಿ ನಮ್ಮ ಕಂಪನಿಗೂ ಅಂತ ಆಯಿತು ಅಂತ ಕರೆದುಕೊಂಡು ಹೋಗಿದ್ದೆ. ಆಗಸ್ಟ್ ಮೊದಲನೇ ವಾರದಿಂದ ಹಿಡಿದು ಅಕ್ಟೋಬರ್ ಮೊದಲನೇ ವಾರದ ವರೆಗೆ ರಾಗಿಂಗ್ ಸಮಯ. ಒಬ್ಬೊಬ್ಬರೇ ಓಡಾಡುವದು ಡೇಂಜರ್. ಇಬ್ಬರಿದ್ದರೆ ಒಳ್ಳೆಯದು. ಸಿಕ್ಕೊಂಡು ಬಿದ್ದರೂ ೫೦%  ೫೦% ಆಗಿಬಿಡುತ್ತದೆ. ಮತ್ತೆ ವಯಸ್ಸಿಗೆ ಮೀರಿ ಹೊನಗ್ಯಾ ಹಾಂಗೆ ಅಡ್ಡಾದಿಡ್ಡಿ ಬೆಳೆದು, ಸದ್ದಾಮ್ ಹುಸೇನ್ ಮಾದರಿ ಮೀಸೆ ಬಿಟ್ಟಿದ್ದ ನಮ್ಮನ್ನು ಎಷ್ಟೋ ಜನ ಮಾಸ್ಟರ್ ಡಿಗ್ರಿ (ME) ಮಾಡಲಿಕ್ಕೆ ಬಂದವ ಅಂತ ತಿಳಿದುಕೊಂಡು, ಸಿಳ್ಳೆ ಹೊಡೆದು ರಾಗ್ಗಿಂಗ್ ಮಾಡಲು ಕರೆಯುತ್ತಿರಲೇ ಇಲ್ಲ. ಜೊತೆಗೊಬ್ಬ ಕುರಿಯಂತಹ ಒಬ್ಬ ಅಬ್ಬೇಪಾರಿಯನ್ನು ಕರೆದುಕೊಂಡು ಹೋಗಿಬಿಟ್ಟರೆ ನಾವು ಅದೆಷ್ಟೋ ಸೇಫ್.

ಹೀಗೆ ಮೊದಲನೇ ಸೆಮಿಸ್ಟರ್ ಜೀವನ ನಡೆಯುತ್ತಿತ್ತು. ೧೯೯೦ ಸೆಪ್ಟೆಂಬರ್ ಇರಬೇಕು. ಒಂದು ದಿವಸ ನಮ್ಮ ಕೃಷ್ಣಾ ಭವನ ಹಾಸ್ಟೆಲ್ಲಿನ ರೂಂ ನಂಬರ್ ೨೪೫ ರಲ್ಲಿ ಕೂತಿದ್ದೆ. ಅದು ನನ್ನ ಖುದ್ದು ರೂಮು. ಸಂಜೆ ಸುಮಾರು ಆರು, ಆರೂವರೆ ಹೊತ್ತು. ಯಾರೋ ಬಾಗಿಲು ತಟ್ಟಿದರು. ಯಾರೋ ಸೀನಿಯರ್ ಇರಬೇಕು. ರಾಗ್ಗಿಂಗ್ ಗಾಗಿ ಎತ್ತಾಕಿಕೊಂಡು ಹೋಗಲು ಬಂದಿರಬೇಕು ಅಂತ ದೂಸರಾ ಮಾತಾಡದೇ ಬಾಗಿಲು ತೆಗೆದೆ. ಹೊರಗೆ ನಿಂತವರು ಒಬ್ಬ ಆದಮೀ. ಸೀನಿಯರ್ ಇರಬಹುದೇನೋ ಎನ್ನುವಂತೆ, ರಾಗ್ಗಿಂಗ್ ಟೈಮ್ ಪದ್ಧತಿ ಪ್ರಕಾರ, ಶಿಸ್ತಿನಿಂದ, 'Good evening, Sir,' ಅಂದುಬಿಟ್ಟೆ. ಮಳ್ಳ ಮುಖ ಮಾಡಿದೆ. 'ಹೋಗ್ಗೋ ನಿನ್ನ! ನಾ ನಿಮ್ಮ ಅಣ್ಣ ಇದ್ದಾಂಗ ಮಾರಾಯಾ. ನಾ ಕಾಶಿನಾಥ ಭೂಸನೂರಮಠ. ಪ್ರೊ. ಭೂಸನೂರಮಠ ಅವರ ಮಗ,' ಅಂತ ಹೇಳಿದ ಅವರು ಡುಬ್ಬ ಚಪ್ಪರಿಸಿ, ಚಪ್ಪರಿಸಿ ನಕ್ಕರು. ನಾನು ಮತ್ತೂ ಭಾಳ ಸಣ್ಣಾದೆ. ಕರಗಿಹೋದೆ. ಭೂಸನರಮಠ ಪ್ರೊಫೆಸರ್ ಹೇಳುತಿದ್ದ, ಮತ್ತೆ ನಮ್ಮ ಅಣ್ಣ ಯಾವಾಗಲೂ ಹೇಳುತ್ತಿದ್ದ 'ಈಶ್ಯಾ, ಕಾಶ್ಯಾ'ರಲ್ಲಿ ಇವರೇ ಕಾಶ್ಯಾ ಉರ್ಫ್ ಕಾಶಣ್ಣ ಅಂತ ಆವಾಗ ತಿಳಿಯಿತು. ಭೂಸನೂರಮಠ ಕುಟುಂಬದಲ್ಲಿ ಮೊದಲು ನೋಡಿದ್ದು ಪ್ರೊಫೆಸರ್, ನಂತರ ಅವರ ಬೀಗರು & ಸೊಸೆ ಇತ್ಯಾದಿ, ನಂತರ ಇವರೇ ಸಣ್ಣ ಮಗ ಕಾಶಿನಾಥ.

ತಮ್ಮ ಧಾರವಾಡದ ಹುಡುಗ, ಅದೂ ತಮ್ಮ ಕುಟುಂಬದ ಸ್ನೇಹಿತರ ಮಗ ಒಬ್ಬ ಪಿಲಾನಿಗೆ ಬಂದಿದ್ದಾನೆ ಅಂತ ಖುದ್ದಾಗಿ ಭೇಟಿಯಾಗಿ ಮಾತಾಡಿಸಿಕೊಂಡು ಹೋಗಲು ಬಂದಿದ್ದರು ಕಾಶಿನಾಥ ಭೂಸನೂರಮಠ. ಎಷ್ಟು ದೊಡ್ಡ ಮನಸ್ಸು ಅವರದು! ಎಷ್ಟು ಪ್ರೀತಿ! ಆಗ ಅವರು ವಿದೇಶದಲ್ಲಿ ಓದುತ್ತಿದ್ದರು ಅಂತ ನೆನಪು. ರಜೆಗಾಗಿ ಬಂದವರು ಧಾರವಾಡಕ್ಕೆ, ಮಾವನ ಮನೆ ಪಿಲಾನಿಗೆ ಬಂದಿದ್ದರು. ಧಾರವಾಡಕ್ಕೆ ಹೋದಾಗ ಹೀಗೆ ಹೆಗಡೆಯವರ ಹುಡುಗ ಒಂದು ಪಿಲಾನಿಗೆ ಹೋಗಿ ಕೂತಿದೆ ಅಂತ ತಿಳಿದಿದೆ. ಮತ್ತ ನಮ್ಮ ತಂದೆ ತಾಯಿ ಕೂಡ ಹೋಗಿ ಭೆಟ್ಟಿಯಾಗಿದ್ದಾರೆ. ನಮ್ಮ ಹುಡುಗ, ಒಂದು ಸಲ ಭೆಟ್ಟಿಯಾಗೋಣ ಅಂತ ಬಂದೇ ಬಿಟ್ಟಿದ್ದರು ಅವರು. ಭಾಳ ಖುಷಿಯಾಯಿತು ಅವರನ್ನು ಭೆಟ್ಟಿಯಾಗಿ.

'ನಡಿ, ಸ್ವಲ್ಪ ಅಡ್ಯಾಡಿ ಬರೋಣ,' ಅಂದರು ಕಾಶಿನಾಥ. ಸಂಜೆ ಹೊತ್ತು. ಓಡ್ಯಾಡಲು ಹೇಳಿ ಮಾಡಿಸಿದಂತಹ ಸುಂದರ ಕ್ಯಾಂಪಸ್.  ನಮಗೆ ರಾಗ್ಗಿಂಗ್ ಕಾಟ ಅಂತ ರೂಮಿನಲ್ಲೇ ಗೂಟ ಹೊಡೆದುಕೊಂಡು ಕೂತಿದ್ದೆವು. ಈಗ ನಮ್ಮ ಸೂಪರ್ ಸೀನಿಯರ್ ಅನ್ನುವಂತಹ ವ್ಯಕ್ತಿ ಬಂದು, 'ಹೋಗೋಣ ಬಾ' ಅನ್ನುತ್ತಿದ್ದಾರೆ. ರೈಟ್ ಅಂತ ಹೇಳಿ, 'ಒನ್ ಮಿನಿಟ್ ಪ್ಲೀಸ್,' ಅಂತ ಹೇಳಿ, ಅವರನ್ನು ಹೊರಗೇ ನಿಲ್ಲಿಸಿ, ಬಾಗಿಲು ಹಾಕಿ, ಉಟ್ಟಿದ್ದ ಸಾಬರ ಚೌಕಳಿ ಲುಂಗಿ ಕಳೆದು, ಟೆರ್ರಿಕಾಟ್ ಪ್ಯಾಂಟ್ ಹಾಕಿಕೊಂಡು, ಧಾರವಾಡದ ಲೈನ್ ಬಜಾರ್ ಪುಟಾಣೆ ಟೈಲರ್ ಹೊಲೆದಿದ್ದ ಫುಲ್ ಶರ್ಟ್ ಹಾಕಿಕೊಂಡು, Nike (ಅಣ್ಣ ತಂದುಕೊಟ್ಟಿದ್ದು) ಶೂ ಹಾಕಿಕೊಂಡು ಹೊರಗೆ ಬಂದೆ. ರಾಗ್ಗಿಂಗ್ ಟೈಮ್ ನಲ್ಲಿ ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಚಪ್ಪಲ್ ಎಲ್ಲ  ನಿಷಿದ್ಧ. ಶುದ್ದ ಫಾರ್ಮಲ್ ಇರಬೇಕು. ಪ್ರಾರಬ್ಧ. ಅದರ ಬಗ್ಗೆಲ್ಲ ಮತ್ತೊಮ್ಮೆ ಬರೆಯೋಣ.

ಸರಿ, ತಯಾರಾಗಿ ಹೊರಬಿದ್ದೆವು. ಕಾಶಿನಾಥ ಭೂಸನೂರಮಠ ಅವರೇ ಪಿಲಾನಿಯ ಮಾಜಿ ವಿದ್ಯಾರ್ಥಿ. ಅವರಿಗೆ ಎಲ್ಲೆಲ್ಲಿ ಓಡಾಡಿ, ಏನೇನು ನೆನಪು ಮಾಡಿಕೊಳ್ಳುವದಿತ್ತೋ? ಒಟ್ಟಿನಲ್ಲಿ ಗಿಚ್ಚಾಗಿ ಪಿಲಾನಿ ಕ್ಯಾಂಪಸ್ ತುಂಬ ಒಂದೆರೆಡು ಘಂಟೆ ಅಡ್ಯಾಡಿ, ಏನೇನೋ ಸುದ್ದಿಯೆಲ್ಲ ಮಾತಾಡಿ, ಕೊನೆಗೆ ಪಿಲಾನಿಯ ಕ್ಯಾಂಪಸ್ ಒಳಗೆ ಇರುವ Connaught Place ಸೇರಿದೆವು. ದೆಹಲಿಯಲ್ಲಿ ದೊಡ್ಡ Connaught Place ಇದ್ದರೆ ನಮ್ಮ ಪಿಲಾನಿಯದು ಸಣ್ಣ Connaught Place. ಅಲ್ಲಿ ಕಾಶಿನಾಥ ಭೂಸನೂರಮಠರು ಒತ್ತಾಯ ಮಾಡಿ, ನನ್ನಿಷ್ಟ ಕೇಳಿ, ಅದರ ಪ್ರಕಾರ milkshake ಆರ್ಡರ್ ಮಾಡಿ, ತಾವೂ ತಮ್ಮ milkshake ಆರ್ಡರ್ ಮಾಡಿ ಕಾಯುತ್ತ ಕುಳಿತೆವು. ಹರಟೆ ನಿರಂತರ. ಅದೂ ಇಬ್ಬರು ಧಾರವಾಡ ಮಂದಿ ಸಿಕ್ಕಿದರೆ ಕೇಳಬೇಕೇ?

milkshake ಇತ್ಯಾದಿ ಬಂತು. ಕುಡಿದಾಯಿತು. ಹರಟೆ ಏನೋ ಜೋರಾಗಿಯೇ ನಡೆದಿತ್ತು. ಆದರೆ ಅವರಿಗೆ ಮನೆಗೆ, ಮಾವನ ಮನೆಗೆ, ಹೋಗುವ ಅನಿವಾರ್ಯತೆ ಇತ್ತು. ನನಗೆ ಯಾವದೇ ತರಹದ ಅನಿವಾರ್ಯತೆ ಇರಲಿಲ್ಲ. ಆದರೆ ಒಬ್ಬನೇ ಹೋದರೆ ಹಾಸ್ಟೆಲ್ ಮುಟ್ಟಿಕೊಳ್ಳುವ ಚಾನ್ಸೇ ಇರಲಿಲ್ಲ. Connaught Place ನಿಂದ ನನ್ನ ಹಾಸ್ಟೆಲ್ ಆದ ಕೃಷ್ಣಾ ಭವನಕ್ಕೆ ಬರಬೇಕು ಅಂದರೆ ಕಮ್ಮಿ ಕಮ್ಮಿ ಅಂದರೂ ಅರ್ಧ ಡಜನ್ ಹಾಸ್ಟೆಲ್ ಸಿಗುತ್ತಿದ್ದವು. ಯಾರೋ ಸೀನಿಯರ್ ಗಳು ಎತ್ತಾಕಿಕೊಂಡು ಹೋಗುವದು ಖಾತ್ರಿಯಿತ್ತು. ನಂತರ ಹಾಸ್ಟೆಲ್ ಮುಟ್ಟುವದು ಎಂದೋ? ಯಾವ ಸ್ಥಿತಿಯಲ್ಲೋ? ಅದೆಲ್ಲ ಕಾಶಿನಾಥ ಭೂಸನೂರಮಠ ಅವರಿಗೆ ಗೊತ್ತೇ ಇತ್ತು. ಹಾಗಾಗಿ ಅವರ ಮಾವನ ಮನೆಯ ಪೂರ್ತಿ ವಿರುದ್ಧ ದಿಕ್ಕಿನಲ್ಲಿ, ಒಂದು ಮೂರು ಮೈಲಿ ದೂರವಿದ್ದರೂ, ನಮ್ಮ ಹಾಸ್ಟೆಲ್ ತನಕ, ರೂಂ ತನಕ ಮುಟ್ಟಿಸಿ ಹೋಗಿದ್ದರು. ಒಳ್ಳೆ ಅಣ್ಣನ ಹಾಗೆ. ಅವರು ಹೋದ ಮರುಕ್ಷಣವೇ ಸೀನಿಯರ್ ಮಂದಿ ರೈಡ್ ಮಾಡಿ, ನಾವು ರಾತ್ರಿಯೆಲ್ಲ ರಾಗ್ಗಿಂಗ್ ಮಾಡಿಸಿಕೊಂಡಿದ್ದು ಬೇರೆ ಮಾತು ಬಿಡಿ. ಆದರೆ ಅವರ ಕಾಳಜಿಗೆ, ಪ್ರೀತಿಗೆ, ಆತ್ಮೀಯತೆಗೆ ಸದಾ ಕೃತಜ್ಞ.

ಸರಿ, ಮತ್ತೊಂದು ಪರಿಚಯ ಪತ್ರ ಇತ್ತು ನೋಡಿ. ಡಾ. ಖರೆ ಅವರಿಗೆ ಕೊಡಬೇಕಾಗಿದ್ದು. ಅದು ಹಾಗೆಯೇ ಇತ್ತು. ಮೊದಲನೇ ಸೆಮಿಸ್ಟರ್ ನಲ್ಲಿ modern physics ಅನ್ನುವ ಒಂದು ವಿಷಯ ಇತ್ತು. ಅದನ್ನು ಡಾ. ಖರೆ ಪಾಠ ಮಾಡುತ್ತಿದ್ದರು. ಅಷ್ಟೇ ನಮ್ಮ ತರಗತಿಗೆ ಅಲ್ಲ. ನಮ್ಮ ತರಗತಿಗೆ ಡಾ. ಸುಬುದ್ಧಿ ಅಂತ ಒಬ್ಬರಿದ್ದರು. ಮಜಾ ಕೇಳಿ. ಈ ಸುಬುದ್ಧಿ ಸಹ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಬಂದವರೇ. ಧಾರವಾಡದಲ್ಲಿ ರಾಭೂ ಇವರ ಬಗ್ಗೆ ಕೂಡ ಹೇಳಿದ್ದರು. ಆದರೆ ಇವರಿಗೆ ಪರಿಚಯ ಪತ್ರ ಇತ್ಯಾದಿ ಕೊಟ್ಟಿರಲಿಲ್ಲ. ಪಿಲಾನಿಯಲ್ಲಿ ಇಂತಹದೇ ಮಾಸ್ತರ್ ಕ್ಲಾಸಿಗೇ ಹೋಗಿ ಕೂಡಬೇಕು ಅಂತ ಏನೂ ನಿರ್ಬಂಧನೆ ಇಲ್ಲ. ನಿಮಗೆ ಯಾರು ಇಷ್ಟವಾಗುತ್ತರೋ ಅವರ ಕ್ಲಾಸಿಗೆ ಹೋಗಿ ಕೂಡಬಹುದು. ಸುಮ್ಮನೆ ತಲುಬಿಗೆ ಅಂತ ಒಂದು ದಿವಸ ಡಾ. ಖರೆ ಕ್ಲಾಸಿಗೆ ಹೋಗಿ ಕೂತಿದ್ದೆ. ಏನೋ ಸಕತ್ತಾಗಿ ಪಾಠ ಮಾಡಿದರು. ನಾವೇನೂ ಪಾಠ ಕೇಳಲಿಕ್ಕೆ ಹೋಗಿರಲಿಲ್ಲ. ಅಕಸ್ಮಾತ ಡಾ. ಖರೆ ಸಿಕ್ಕರೆ ಭೂಸನೂರಮಠ ಅವರು ಕೊಟ್ಟಿದ್ದ ಪತ್ರ ಅವರಿಗೆ ಕೊಟ್ಟು, ನಮಸ್ಕಾರ ಹೇಳಿ ಬಂದರಾಯಿತು ಅಂತ ಹೋಗಿದ್ದೆ.

ಕ್ಲಾಸು ಮುಗಿಯಿತು. ಯಾರ್ಯಾರೋ 'ಶಾಣ್ಯಾ' ಮಂದಿ ಡಾ. ಖರೆ ಹತ್ತಿರ ಏನೇನೋ ಪ್ರಶ್ನೆ ಕೇಳುತ್ತ ನಿಂತರು. ಆವತ್ತು ನಮಗೆ ಈ quantum physics, time-travel ಇತ್ಯಾದಿ ನಿಜವಾಗಿಯೂ ಅರ್ಥವಾಗಿರಲಿಲ್ಲ. ಹಾಗಾಗಿ ಅದನ್ನು 'ಅರ್ಥ ಮಾಡಿಕೊಂಡು', ಡೌಟ್ ಕೇಳುತ್ತ ನಿಂತ ಪಿಲಾನಿಯ ಶಾಣ್ಯಾ ದೋಸ್ತರನ್ನು, 'ಹ್ಯಾಂ???????' ಅನ್ನುತ್ತ ಧಾರವಾಡ ಶೈಲಿಯಲ್ಲಿ ಬೆಚ್ಚಿ ನೋಡುತ್ತ ನಿಂತಾಯಿತು. ಅದೇ ಹೊತ್ತಿಗೆ ಸೀನಿಯರ್, ಅದೂ ಒಬ್ಬಾಕೆ ಹುಡುಗಿ, 'ಏ, ಫ್ರೆಶರ್! ಬಾ ಇಲ್ಲಿ' ಅನ್ನಬೇಕೇ? 'ಸ್ವಲ ತಡಿ. ಇಲ್ಲಿ ಡಾ. ಖರೆ ಸಾಹೇಬರನ್ನು ಭೆಟ್ಟಿ ಆಗೋದೈತಿ. ನಿಂದರ್ ಬೇ ನಿಮ್ಮೌನ್!' ಅಂತ ಆಕೆಗೆ ಸನ್ನೆ ಮಾಡಿ ಖರೆ ಸಾಹೇಬರನ್ನು ಕಾದಿದ್ದಾಯಿತು. ಅಂದು ಅವರು, ಮತ್ತೆ ಬೇರೆ ಪ್ರೊಫೆಸರುಗಳು ಯಾರೂ ಹೇಳಿದಾಗ ತಿಳಿಯದ modern physics ಇಂದು ಆದಿ ಶಂಕಾರಾಚಾರ್ಯರರ ಅದ್ವೈತ ವೇದಾಂತ ಓದಿದಾಗ ಫಟಾಕ್, ಫಟಾಕ್ ಅಂತ ಅರ್ಥವಾಗುತ್ತಿದೆ. ಇದಕ್ಕೆ ಏನೆನ್ನೋಣ? Was I not ready yet back then??? May be not.

ಡಾ. ಖರೆ ಶಾಣ್ಯಾ ಹುಡುಗರ ಸಮಸ್ಯೆ ಇತ್ಯಾದಿ ಬಗೆಹರಿಸಿ, ನಿಧಾನವಾಗಿ ಹೊರಗೆ ಬಂದರು. ಸರಕ್ಕನೆ ಹೋಗಿ, ಧಾರವಾಡ ಶೈಲಿಯಲ್ಲಿ ಆಟಕಾಯಿಸಿಕೊಂಡು, ನಮಸ್ಕಾರ ಮಾಡಿದೆ. ವಿವರ ಹೇಳಿದೆ. ಭೂಸನೂರಮಠ ಅವರಿಗೆ, ನಮ್ಮ ಕುಟುಂಬಕ್ಕೆ ಇರುವ ದೋಸ್ತಿ ಎಲ್ಲ ವಿಷಯ ಹೇಳಿದೆ. ಡಾ. ಖರೆ ಸಮಾಧಾನದಿಂದ ಎಲ್ಲ ಕೇಳಿದರು.

ಎಲ್ಲ ಸಮಾಧಾನದಿಂದ ಕೇಳಿದ ಡಾ. ಖರೆ ಶುದ್ಧ ಮರಾಠಿಯಲ್ಲಿ ಶುರು ಹಚ್ಚಿಕೊಂಡುಬಿಟ್ಟರು. ಅವರಂತೂ ಮರಾಠಿ ಮಾನುಸ್ ಬಿಡಿ. ಆದರೆ ನಾನು ಕಾನಡಿ (ಕನ್ನಡದ) ಹೆಗಡೆ. ಎಲ್ಲಿ ನನ್ನ ಅಡ್ದೆಸರು ಹೆಗಡೆಯನ್ನು ಮರಾಠಿಯ ಹೇಗಡೆ ಅಂತ ಮಾಡಿಕೊಂಡು ಮರಾಠಿಯಲ್ಲಿಯೇ ಶುರು ಹಚ್ಚಿಕೊಂಡರೋ ಏನೋ ಗೊತ್ತಿಲ್ಲ. ನಿಮಗೆ ನಿಜ ಹೇಳಬೇಕು ಅಂದರೆ ಆವತ್ತಿಗೆ ನಮಗೆ ಧಾರವಾಡ ಕನ್ನಡ ಬಿಟ್ಟರೆ ಬೇರೆ ಯಾವದೇ ಭಾಷೆ ಸರಿಯಾಗಿ ಬರುತ್ತಿದ್ದಿಲ್ಲ. ಅದೂ ಸುನೀಲ್ ಶೆಟ್ಟಿ ಹಾಗೆ ತೋತ್ಲಾ ಮಾತಾಡುವದು ಮಾತ್ರ ಬರುತ್ತಿತ್ತು. ಇವರು ಹೋಗಿ ಹೋಗಿ ಮರಾಠಿಯಲ್ಲಿ ಬ್ಲೇಡ್ ಹಾಕತೊಡಗಿದರೆ ನಾವೇನು ಮಾಡೋಣ? ಹೆಂಗೋ ಮಾಡಿ, 'ಮರಾಠಿ ಮುಲಾಂ (ಮಾಲೂಮ್) ನಹಿ,' ಅಂತ ಹೇಳಿದ್ದಾಯಿತು. ಆವಾಗ ಡಾ. ಖರೆ ಮರಾಠಿಯಲ್ಲಿ ಕೊರೆಯುವದನ್ನು ನಿಲ್ಲಿಸಿದರು.

(ಹೆಗಡೆ ಉರ್ಫ್ ಹೇಗಡೆ ಉರ್ಫ್ 'ಹೇ ಗಧೆ' ಅಂದರೆ  'ಏ ಕತ್ತೆ' ಅಂತ ಪಿಲಾನಿಯ ಉತ್ತರ ಭಾರತದ ಮಿತ್ರರು ಸುಮ್ಮನೆ ಕಿಚಾಯಿಸಲು ನಮಗಿಟ್ಟ ಹೆಸರು. Standard across all national campuses. All Hegdes have to bear with it ;))

ಇಷ್ಟೆಲ್ಲ ಆದ ಮೇಲೆ ಡಾ. ಖರೆ ವಿಷಯಕ್ಕೆ ಬಂದರು. ಪ್ರೊ. ಭೂಸನೂರಮಠ, ಅವರ ಮಕ್ಕಳನ್ನೆಲ್ಲ ತುಂಬಾ ನೆನಪಿಸಿಕೊಂಡರು. ನಾನೂ ಸಹ ಅದೇ ಘರಾಣಾದಿಂದ ಹೊರಬಿದ್ದವನು ಅಂತ ಕೇಳಿ ತುಂಬ ಖುಷಿ ಪಟ್ಟರು. ರಾಭೂ ಕೊಟ್ಟಿದ್ದ ಪತ್ರ ಕೊಟ್ಟೆ. ಓದುತ್ತ ಓದುತ್ತ ಡಾ. ಖರೆ ಅವರ ಮುಖದ ಮೇಲೆ ಮಂದಹಾಸ ಮೂಡಿತು. ಮಸ್ತಾಗಿ ಬರೆದಿರಬೇಕು ರಾಭೂ.

***

ಮನ್ನಿತ್ತಲಾಗೆ ಪ್ರೊ. ರಾಜಶೇಖರ ಭೂಸನೂರಮಠ ಉರ್ಫ್ ರಾಭೂ, ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ, ನಿಧನರಾದರು ಅಂತ ತಿಳಿಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.

ಒಮ್ಮೊಮ್ಮೆ ಒಂದು ಘಟನೆ ನಡೆದಾಗ ಮೆದುಳಿನ ಅದು ಯಾವ್ಯಾವ ಕವಾಟಗಳು ತೆಗೆದುಕೊಳ್ಳುತ್ತವೋ ಏನೋ ಗೊತ್ತಿಲ್ಲ. ನೆನಪುಗಳು ಉಕ್ಕಿ ಬಂದು ಬಿಡುತ್ತವೆ. ಬರೆದು ಹಾಕುವ ತನಕ ಸಮಾಧಾನವಿಲ್ಲ.

'ರಾಭೂ ಬಗ್ಗೆ ಇಷ್ಟೇ ನೆನಪುಗಳೇ?' ಅಂತ ಕೇಳಿದರೆ 'ಇನ್ನೂ ಭಾಳ ಇವೆ,' ಅಂತನೇ ಹೇಳಬೇಕಾಗುತ್ತದೆ. ಸದ್ಯಕ್ಕೆ ಇಷ್ಟು ಸಾಕಲ್ಲವೇ?