Wednesday, June 18, 2014

ಮೋದಿ ಸರಕಾರ, ಬಿಜೆಪಿ ಸ್ವರ್ಣಯುಗ ನೋಡಲು ಈ ಮಹನೀಯರು ಇನ್ನೊಂದಿಷ್ಟು ವರ್ಷ ಇರಬೇಕಿತ್ತು

ಪ್ರೊ. ದಯಾನಂದ ಶಾನಬಾಗ
ಮೋದಿ ಸರಕಾರ ಬಂದಿದೆ. ಹಿಂದೆಂದೂ ಬಂದಿರದಿದ್ದ ಪೂರ್ಣ ಮೆಜಾರಿಟಿ ಬಿಜೆಪಿಗೆ ಬಂದಿದೆ. ಸಂಘ ಪರಿವಾರದ ಹಲವಾರು ದಶಕಗಳ ಆಸೆ, ಆಕಾಂಕ್ಷೆ ಸಾಕಾರವಾಗಿದೆ. ಇಂತದೊಂದು ಸುವರ್ಣಯುಗ ನೋಡಲು ಧಾರವಾಡದ ಡಾ. ದಯಾನಂದ ಶಾನಬಾಗರು ಇನ್ನೂ ಇರಬೇಕಿತ್ತು.

ಯಾರಾಗಿದ್ದರು ಈ ದಯಾನಂದ ಶಾನಬಾಗ? ಅವರು ವೃತ್ತಿಯಿಂದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು. ಆದರೆ ಧಾರವಾಡದ ಮಟ್ಟಿಗೆ ಸಂಘ ಪರಿವಾರದ (RSS) ದೊಡ್ಡ ಮುಖಂಡರು. ಕೇವಲ ಹೆಸರಿನಲ್ಲಿ ಮಾತ್ರ ಅಲ್ಲ. ಸಣ್ಣ ಕೆಲಸ ಮಾಡುವದರಿಂದ ಹಿಡಿದು ಯಾವದೇ ಕೆಲಸಕ್ಕೂ ರೆಡಿ. ನಮಗಂತೂ ಧಾರವಾಡದ ಸಂಘ ಪರಿವಾರ, RSS ಚಟುವಟಿಕೆಗಳನ್ನು ನೆನಪಿಸಿಕೊಂಡಾಗ ಮೊತ್ತ ಮೊದಲು ನೆನಪಿಗೆ ಬರುವವರು ಶಾನಬಾಗ ಪ್ರೊಫೆಸರರೇ.

೧೯೭೫, ೧೯೭೬ ರ ವೇಳೆಯ ಮಾತು. ದೇಶದ ತುಂಬ ಇಂದಿರಾ ಗಾಂಧಿ ವಿಧಿಸಿದ್ದ ಕರಾಳ ತುರ್ತು ಪರಿಸ್ಥಿತಿ. ಅಕ್ಷರಶ  ಪ್ರಜಾಪ್ರಭುತ್ವದ, ನಾಗರೀಕರ ಮೂಲಭೂತ ಹಕ್ಕುಗಳ ಖುಲ್ಲಾ ಖುಲ್ಲಾ ರೇಪ್, ಬಲಾತ್ಕಾರ. ಇಂದಿರಾ ಸರ್ವಾಧಿಕಾರದ  ವಿರುದ್ಧ ಮಾತೆತ್ತಿದರೆ ಸೀದಾ ಜೈಲಿಗೆ. ದೂಸರಾ ಮಾತೇ ಇಲ್ಲ. ಮೊದಲೇ ತಯಾರು ಮಾಡಿಕೊಂಡಿದ್ದ ಲಿಸ್ಟ್ ಪ್ರಕಾರ ಎಲ್ಲರನ್ನೂ ಹಿಡಿಹಿಡಿದು ಜೈಲಿಗೆ ಹಾಕುತ್ತಿತ್ತು  ಸರಕಾರ. RSS ತರಹದ ಸಂಘಟನೆಗಳ ಸದಸ್ಯರ ಮೇಲೆ ವಿಶೇಷ ಹದ್ದಿನ ಕಣ್ಣು.

ಇಂತಹ ಕಠಿಣ ಸಂದರ್ಭದಲ್ಲಿ ಸಂಘ ಪರಿವಾರದ ಖಾಕಿ ಚಡ್ಡಿ ಕಳಚಿಟ್ಟು, ಪ್ಯಾಂಟು ಏರಿಸಿ, ಹುಳ್ಳಗೆ ದೇಶಾವರಿ ನಗೆ ಮಳ್ಳನ ಹಾಗೆ ನಕ್ಕು, "ಏ! ನಮಗೂ RSS ಗೂ ಏನೂ ಸಂಬಂಧ ಇಲ್ಲೇ ಇಲ್ಲರಿ. ನಿಮಗ ಯಾರೋ ತಪ್ಪು ಮಾಹಿತಿ ಕೊಟ್ಟಿರಬೇಕು. ನಮ್ಮನ್ನ ಬಿಡ್ರೀಪಾ!" ಅಂತ ಅಂಬೋ ಅಂದು, ಟೈಮಿಗೆ ಸರಿಯಾಗಿ ಮಂಗ್ಯಾನ ಗತೆ RSS ಬಿಟ್ಟು ಜಿಗಿದಿದ್ದ ನಕಲಿ ಸಂಘಿಗಳು ಬೇಕಾದಷ್ಟು ಜನ ಇದ್ದರು ಬಿಡಿ. ನಂತರ ಸಂಘವನ್ನೇ ಬಯ್ಯುತ್ತ, ಪೂರ್ತಿ ಪ್ರಮಾಣದ ಕಾಂಗ್ರೆಸ್ ಏಜೆಂಟರಾಗಿ, ತಮ್ಮ ಅಮೂಲ್ಯ 'ಬ್ಯಾಕ್' ಬಚಾವ್ ಮಾಡಿಕೊಂಡು, ತಮ್ಮ ಬೇಳೆ ಬೇಯಿಸಿಕೊಂಡ ಜನ ಇದ್ದರು ಬಿಡಿ. ಗೆದ್ದೆತ್ತಿನ ಬಾಲ ಹಿಡಿಯೋ ಮಂದಿ. ಸರ್ವಕಾಲೀನರು.

ಇನ್ನು ಪರಿಸ್ಥಿತಿ ಇಷ್ಟು ಕೆಟ್ಟದಾಗಿತ್ತು ಅಂದರೆ ಕೆಲವು ಸಂಘದ ಬಿಸಿರಕ್ತದ ತರುಣರಿಗೆ ಹಿರಿಯರೇ ತಿಳಿಸಿ ಹೇಳಿ, "ಅಪ್ಪಾ! ಮಗನೇ! ಸಂಘಾ ಗಿಂಗಾ ಎಲ್ಲಾ ಆಮೇಲೆ ಮಾಡಿಯಂತ. ಖಾಕಿ ಚಡ್ಡಿ ಕಳದು, ಸ್ವಲ್ಪ ಅಭ್ಯಾಸ, ನೌಕರಿ ಬಗ್ಗೆ ಗಮನ ಕೊಡು. ಎಲ್ಲರೆ ಪೋಲೀಸ್ ಗಿಲೀಸ್ ಲಫಡಾ ಒಳಗ ಸಿಕ್ಕೊಂಡ್ರ ಪೂರ್ತಿ ಲೈಫ್ ಮುಂದ ಬರ್ಬಾದ್ ಆಗ್ತದ. ಖಾಕಿ ಚಡ್ಡಿ ಕಳದು ಪ್ಯಾಂಟ್ ಹಾಕ್ಕೋ ರಾಜಾ!" ಅಂತ ಹೇಳಿ ಎಷ್ಟೋ ಜನ ಬಿಸಿ ರಕ್ತದ ತರುಣರ RSS ಖಾಕಿ ಚಡ್ಡಿ ನಿಕಾಲಿ ಮಾಡಿ, ಪ್ಯಾಂಟೋ, ಲುಂಗಿಯನ್ನೋ ಉಡಿಸಿ ಮಕ್ಕಳನ್ನು ಬಚಾವ್ ಮಾಡಿಕೊಂಡಿದ್ದರು ಪಾಲಕರು. ಮನೆಯಲ್ಲಿ ಮಾತು ಕೇಳದ ಕೆಲ ಹುಡುಗರಿಗೆ, ಖಾಕಿ ಚಡ್ಡಿ ಬಿಚ್ಚಿ ಅನ್ನುವ ಉಪದೇಶ ಮಾಡಿಸಿಲು, ಮಂಡೆ ಬಿಸಿಯಾದ ಪಾಲಕರು ನಮ್ಮ ತಂದೆಯವರ ಬಳಿ ಮಕ್ಕಳನ್ನು ಕರೆ ತಂದಿದ್ದೂ ಇದೆ. ಪಾಲಕರ ಮಾತು ಕೇಳದವರು ಹಿರಿಯರೂ, ಮಾಸ್ತರರೂ ಆದ ನಮ್ಮ ತಂದೆಯವರ ಮಾತು ಕೇಳಿಯಾರು ಅನ್ನುವ ಒಂದು ಆಸೆ, ನೀರಿಕ್ಷೆ. ತಂದೆಯವರ ಉಪದೇಶ ಕೇಳಿ ಖಾಕಿ ಚಡ್ಡಿ ಕಳಚಿಟ್ಟವರೂ ನೆನಪಾದರು ಬಿಡಿ. "ನೋಡು! ನಿಮ್ಮ ತಂದೆಯವರು ತೀರಿಕೊಂಡಾರ. ಮನಿಗೆ ನೀನೇ ಹಿರಿ ಮಗಾ. ಸ್ವಲ್ಪ ಜವಾಬ್ದಾರಿ ತೊಗೋಬೇಕು. ಅದಕ್ಕ ಸದ್ಯಾ ಈ RSS ಅದು ಇದು ಬಿಟ್ಟು ಬಿಡಪಾ. ಮುಂದ ಬೇಕಾದ್ರ ಮಾಡಿಯಂತ. ಈಗ ಪರಿಸ್ಥಿತಿ ಬಹಳ ಕೆಟ್ಟ ಅದ. ಅದಕ್ಕ ಹೇಳಿದೆ. ಹೇಳಿದ ಮಾತ ಕೇಳಪಾ," ಅಂತ ಫುಲ್ ಸೆಂಟಿ ಹಾಕಿ ನಮ್ಮ ಪಿತಾಜಿ ಫಿಟ್ಟಿಂಗ್ ಇಡುತ್ತಿದ್ದರೆ ಹಟಮಾರಿ ಹುಡುಗರು RSS ಚಡ್ಡಿ ಕಳಚಿಟ್ಟು, "ಹೂನ್ರೀ ಸರ್!" ಅನ್ನುತ್ತ ಆ ಮಟ್ಟಿಗೆ ಸಂಘಕ್ಕೆ ನಮಸ್ಕಾರ ಹಾಕಿ ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ಹುಡುಗ ಹಾದಿಗೆ ಬಂದ ಅಂತ ಎಲ್ಲರೂ ಖುಷ್.

ಹಿರಿಯರಿಗೆ ಜೈಲು, ಯುವಕರಿಗೆ ಚಿತ್ರಹಿಂಸೆ, ಎನ್ಕೌಂಟರ್ ಹತ್ಯೆ, ಲಾಕಪ್ ಡೆತ್ ಇದು ಎಮರ್ಜೆನ್ಸಿ ಟೈಮಿನಲ್ಲಿ ನಡೆದ ಅತಿರೇಕಗಳ ಸ್ಯಾಂಪಲ್ಲು. ಧಾರವಾಡ ಮಟ್ಟಿಗೆ ಕೇವಲ ಜೈಲು, ಹೊಡೆತ, ಬಡಿತ, ಮಾನಸಿಕ ಕಿರುಕುಳ ಅಷ್ಟೇ ಅಂತ ನಮಗೆ ನೆನಪು. ಎಷ್ಟೇ ಅಂದ್ರೂ ಪೇಡಾ ನಗರಿಯ ಪೊಲೀಸರೂ ಸಹ ಸ್ವಲ್ಪ ಮೃದು, ಅಲ್ಲಿನ ಜನರಂತೆ.

ಯುವಕರು ಮುಂದೆ ಲೈಫ್ ಬರ್ಬಾದ್ ಆದೀತು ಅಂತ ಸಂಘದ ಸಹವಾಸ ಬಿಟ್ಟಿದ್ದರು. ಹಿರಿಯರು ಆಗಲೇ ಸೆಟ್ ಆಗಿದ್ದ ಲೈಫ್ ಬರ್ಬಾದ್ ಆದರೆ ಸಂಸಾರ ಬರ್ಬಾದ್ ಆಗಿ, ಬೀದಿಗೆ ಬಂದು, ಕೇರ್ ಆಫ್ ಫುಟ್ ಪಾತ್ ಆದೀತು ಅಂತ ತಿಳಿದು ಸಂಘದ ಸಹವಾಸ ಬಿಟ್ಟಿದ್ದರು. ಎಮರ್ಜೆನ್ಸಿ ವಿರುದ್ಧ ಪ್ರತಿಭಟಿಸಿದವರ ಸರಕಾರೀ ನೌಕರಿ ಹೋಗುತ್ತದೆ, ಮುಂದೆ ಎಂದಿಗೂ ಸರ್ಕಾರಿ ನೌಕರಿ ಸಿಗುವದಿಲ್ಲ ಅನ್ನುವ ಸುದ್ದಿಗೆ ವ್ಯಾಪಕ ಪ್ರಚಾರ ಸಿಕ್ಕು ಎಲ್ಲರೂ ಭಯಭೀತರಾಗಿದ್ದರು. ಆ ಕಾಲದ ಮಧ್ಯಮ ವರ್ಗದ ಮಂದಿ ಪ್ರಾಣವನ್ನಾದರೂ ಬಿಟ್ಟಾರು ಆದರೆ ಸರಕಾರಿ ನೌಕರಿ ಮಾತ್ರ ಸುತಾರಾಂ ಕಳೆದುಕೊಳ್ಳಲು ತಯಾರಿರುತ್ತಿರಲಿಲ್ಲ.

ಇಂತಹ ಸಂದರ್ಭದಲ್ಲಿ ಡಾ.ದಯಾನಂದ ಶಾನಬಾಗರು ಸಹ ಎಲ್ಲರಂತೆ ಸಂಘಕ್ಕೆ ಒಂದು ದೊಡ್ಡ ನಮಸ್ಕಾರ ಹಾಕಿ, ಇದ್ದ ಯೂನಿವರ್ಸಿಟಿ ನೌಕರಿಯಲ್ಲಿ ಆರಾಮಾಗಿದ್ದು ಬಿಡಬಹುದಿತ್ತು. ಆದರೆ ಅವರು ಆ ಟೈಪಿನ ಜನರು ಅಲ್ಲವೇ ಅಲ್ಲ. ಎಂದಿನಂತೆ ತಮ್ಮ ಸಂಘದ ಚಟುವಟಿಕೆ ಮುಂದುವರಿಸಿಕೊಂಡೇ ಇದ್ದರು. ಆ ಹೊತ್ತಿಗೆ ಅವರ ಅನೇಕ ಇತರೆ ಸ್ನೇಹಿತ ಸಂಘಿಗಳು ಸಂಘ ಬಿಟ್ಟಿದ್ದರಿಂದ ಅವರ ಎಮರ್ಜೆನ್ಸಿ ವಿರೋಧ ಆಂದೋಲನಗಳ ಕಾವು ಅಷ್ಟಿರಲಿಲ್ಲ ಅಷ್ಟೇ. ತಮ್ಮ ಪಾಡಿಗೆ ತಾವು ಎಷ್ಟು ಸಾಧ್ಯವೋ ಅಷ್ಟು ಸಂಘದ ಕೆಲಸ ಮಾಡಿಕೊಂಡು, ತಮ್ಮ ನೌಕರಿ, ಸಂಶೋಧನೆ ಮಾಡಿಕೊಂಡು ಇದ್ದರು.

ಬಿತ್ತಲ್ಲ ಸರ್ಕಾರದ ಹದ್ದಿನ ಕಣ್ಣು! ಶಾನಬಾಗರನ್ನು ಎಳಕೊಂಡು ಹೋಗಿ ಜೈಲಿಗೆ ಹಾಕೇ ಬಿಟ್ಟರು. ಮೊದಲು ಎಚ್ಚರಿಕೆ ಕೊಟ್ಟಿರಬಹುದು ಬಿಡಿ. ಎಷ್ಟೇ ಎಮರ್ಜೆನ್ಸಿ ಅತಿರೇಕಗಳು ನೆಡದರೂ ಕರ್ನಾಟಕದ ಆಡಳಿತಶಾಹಿ ಅಷ್ಟು ಕುಲಗೆಟ್ಟು ಹೋಗಿರಲಿಲ್ಲ. ಬೇರೆ ಗತಿಯಿಲ್ಲ ಅಂತ ಹೇಳಿ ಇಂದಿರಾ ಗಾಂಧಿ, ಸಂಜಯ್ ಗಾಂಧಿ ಕಡೆಯಿಂದ ಬರುತ್ತಿದ್ದ ಉಲ್ಟಾ ಸೀದಾ ಆದೇಶಗಳನ್ನು ಪಾಲಿಸುತ್ತಿದ್ದರು. ಉತ್ತರದ ಕೆಲವು ರಾಜ್ಯಗಳಲ್ಲಿ ನಡೆದ ಕ್ರೌರ್ಯ, ಅತಿರೇಕಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಡೆದ ಅತಿರೇಕಗಳು ಏನೂ ಅಲ್ಲ.

೧೯೭೫-೭೬ ರಲ್ಲಿ ಶಾನಭಾಗ್ ಪ್ರೊಫೆಸರನ್ನು ಜೈಲಿಗೆ ಒಗೆದಾಗ  ಅವರ ಕುಟುಂಬದ ಪರಿಸ್ಥಿತಿ ನೋಡಿ. ಹತ್ತು ವರ್ಷಕ್ಕಿಂತ ಚಿಕ್ಕವರಾದ ಮೂರು ಸಣ್ಣ ಸಣ್ಣ ಮಕ್ಕಳು ಮನೆಯಲ್ಲಿ. ಅಂದಾಜು ಎರಡು, ಆರು, ಎಂಟು ವಯಸ್ಸಿನ ಮೂರು ಮಕ್ಕಳು. ಪತ್ನಿ ಸೀದಾ ಸಾದಾ ಗೃಹಿಣಿ. ಮನೆ ಬಿಟ್ಟು ಹೊರಗೆ ಹೋದವರಲ್ಲ ಆಕೆ. ಆಸ್ತಿ, ಪಾಸ್ತಿ, ದುಡ್ಡು, ಕಾಸು ಇಲ್ಲ. ಜೈಲಿಗೆ ಹಾಕಿದ್ದರಿಂದ ತಿಂಗಳ ಪಗಾರ್ ಕಟ್. ಅದು ಹೇಗೆ ಮನೆ ಕಡೆ ನಿಭಾಯಿಸಿದರೋ! ಏನೇನು ಕಷ್ಟ ಕೋಟಲೆ ಅನುಭವಿಸಿದರೋ! ಊಹಿಸಲೂ ಅಸಾಧ್ಯ. ಇದೆಲ್ಲದರ ಮೇಲೆ ಜೈಲಿಗೆ ಹೋಗಿ ಪತಿಯನ್ನು ಭೆಟ್ಟಿಯಾಗಬೇಕು. ಬಿಡಿಸುವ ಪ್ರಯತ್ನ ಮಾಡಬೇಕು. ಅಬ್ಬಾ! ಅವರ ಕಷ್ಟ ಕಾರ್ಪಣ್ಯಗಳ ಬಗ್ಗೆ ಮನೆಯಲ್ಲಿ ದೊಡ್ಡವರು ಮಾತಾಡುತ್ತ ಇದ್ದಿದ್ದು ನೆನೆಪಾದರೆ ಇವತ್ತಿಗೂ ಒಂದು ತರಹದ ಕಳವಳ, ಸಂಕಟ.

ಸುಮ್ಮನೆ ಜೈಲಲ್ಲಿ ಕುಳಿತೆದ್ದು ಬಂದಿರಲಿಲ್ಲ ಶಾನಬಾಗ ಪ್ರೊಫೆಸರ್. ಲಾಠಿ ಏಟು, ಬೂಟಿನ ಒದೆ ಎಲ್ಲದರ ಬೇಕಾದಷ್ಟು ಕಾಣಿಕೆ ಸಂದಾಯವಾಗಿತ್ತು ಅವರಿಗೆ. ಯಾಕೆಂದ್ರೆ ಅವರು RSS ನವರು. ಸಂದರ್ಭಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ, ಪೋಲೀಸರ ಬಕೆಟ್ ಹಿಡಿಯೋ ಪೈಕಿ ಅಲ್ಲ. ಮತ್ತೆ  'RSS ಜನರನ್ನು ಬೇರೆಯ ರೀತಿಯೇ ವಿಚಾರಿಸಿಕೊಳ್ಳಿ' ಅಂತ ಅಲಿಖಿತ ಆಜ್ಞೆ ಜಾರಿಯಲ್ಲಿತ್ತು ನೋಡಿ.

ಎಮರ್ಜೆನ್ಸಿ ಶುರು ಶುರುವಿನಲ್ಲಿ ಪ್ರತಿಭಟಿಸಿದ್ದ 'ಬೇರೆ ತರಹದ ಜನ' ಎಲ್ಲ ಜೈಲಿಗೆ ಹೋಗುವ ಆಪತ್ತು ಬಂದಾಗ ಪೋಲೀಸರ ಬಕೆಟ್ ಹಿಡಿದು ಬಚಾವ್ ಆಗಿದ್ದರು. ಅವರ ಮೌಲ್ಯಗಳು, ಹೋರಾಟ, 'ಬಂಡಾಯ' ಎಲ್ಲ ಅಲ್ಲಿಗೇ ಮುಗಿದಿತ್ತು. ಎಲ್ಲೋ ಓದಿದ ನೆನಪು......ಧಾರವಾಡದ ಆ ಕಾಲದ ಬಹುಪತ್ನಿವಲ್ಲಭ ಬಂಡಾಯ ಸಾಹಿತಿಯೊಬ್ಬರು ಪೋಲೀಸ್ ಜೀಪಿನಲ್ಲಿ ಕುಳಿತು ಹೋಗುತ್ತಿರುವಾಗಲೇ ಪೊಲೀಸರೊಂದಿಗೆ ಏನೋ ಡೀಲು ಕುದರಿಸಿಕೊಂಡು ಜೈಲಿಗೆ ಹೋಗುವದನ್ನು ತಪ್ಪಿಸಿಕೊಂಡಿದ್ದರಂತೆ. ಅದರ ಪ್ರತಿಫಲವೋ ಏನೋ ಎಂಬಂತೆ ಆ ಕಾಲದ ಯಾವದೇ ರಿಟೈರ್ಡ್ ಪೋಲೀಸ್ ಪಾಪಣ್ಣ ಏನೇ ಪುಸ್ತಕ, ಮಣ್ಣು, ಮಸಿ ಬರೆದರೂ ಇವರು ಮುಫಾತ್ತಾಗಿ, ಇಲ್ಲದ ಸಲ್ಲದ ಮುನ್ನುಡಿ, ಬೆನ್ನುಡಿ, ಎಲ್ಲ ಬರೆದೂ ಬರೆದೂ, ಕೊಟ್ಟೂ ಕೊಟ್ಟೂ ತಮ್ಮ ಆವತ್ತಿನ ಋಣ ಇವತ್ತಿಗೂ ಸಂದಾಯ ಮಾಡುತ್ತಿದ್ದಾರಂತೆ. ಇದು ಆ ಬಂಡಾಯ ಸಾಹಿತಿಗಳ ಬಗ್ಗೆ ಇನ್ನೊಬ್ಬ ಬಂಡಾಯಿ ಬರೆದುಕೊಂಡಿದ್ದ. ಸುಳ್ಳೇನೂ ಇರಲಿಕ್ಕಿಲ್ಲ. ಆ ತರಹದ ಗೋಸುಂಬೆಗಳು ಬೇಕಾದಷ್ಟು ಜನ ಇದ್ದರು ಬಿಡಿ. ಆದರೆ ಶಾನಬಾಗ ಪ್ರೊಫೆಸರ್ ಆ ಪೈಕಿ ಅಲ್ಲ.

ಸುಮಾರು ಒಂದು ವರ್ಷದ ಆಸು ಪಾಸು ಜೈಲಿನಲ್ಲಿ ಇದ್ದು ಬಂದಿದ್ದರು ಶಾನಬಾಗ್ ಪ್ರೊಫೆಸರ್ ಅಂತ ನೆನಪು. ನಂತರ ಬಿಡುಗಡೆಯಾಗಿತ್ತು. ನಂತರ ಎಂದಿನಂತೆ ತಮ್ಮ ಕೆಲಸ, ಸಂಘದ ಚಟುವಟಿಕೆ ಇತ್ಯಾದಿ ನಡೆಸಿಕೊಂಡು ಹೋಗುತ್ತಿದ್ದರು.

ಕುಮಟಾ ಮೂಲದ ಅವರು ನಮ್ಮ ಕುಟುಂಬಕ್ಕೆ ತುಂಬ ಹತ್ತಿರದವರು. ತಾವು RSS ಆದರೂ ಎಂದೂ ಅವರು ಯಾರಿಗೂ RSS ಸೇರಿ, ಶಾಖೆಗೆ ಬನ್ನಿ ಅಂತ ಒಂದು ಮಾತು ಹೇಳಿದ್ದು ನೆನಪಿಲ್ಲ. ದೊಡ್ಡವರು ಮಾತಾಡುವಾಗ ಸ್ವಲ್ಪ ರಾಜಕೀಯದ ಸುದ್ದಿ ಕೇಳಿದ್ದು ನಿಜ. ಆದರೆ ತಾವು ಕಟ್ಟರ್ RSS ಆದರೂ ಇನ್ನೊಬ್ಬರ ಮೇಲೆ ಅದನ್ನು ಹೇರಬೇಕು, ಅವರನ್ನು RSS ಸೇರುವಂತೆ ಪ್ರೇರೇಪಿಸಬೇಕು ಅನ್ನುವ ಸ್ಕೀಮ್ ಗೀಮು ಎಂದೂ ಅವರು ಹಾಕಲಿಲ್ಲ. ಎಲ್ಲೋ RSS ನವರ ಪುಸ್ತಕ, ಉತ್ಥಾನ ಪತ್ರಿಕೆ ಅದು ಇದು ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಇಲ್ಲ. ನಾವು ಮಾಳಮಡ್ಡಿಯಲ್ಲಿ, ರಾಯರ ಮಠದ ರಸ್ತೆಯಲ್ಲಿಯೇ ಭಾಡಿಗೆ ಮನೆಯಲ್ಲಿ ಇದ್ದಾಗ, ಪ್ರತಿ ಗುರುವಾರ ರಾಯರ ಮಠಕ್ಕೆ ಮಕ್ಕಳ ಸಮೇತ ಬರುತ್ತಿದ್ದ ಶಾನಬಾಗ ಪ್ರೊಫೆಸರ್ ವಾಪಸ್ ಹೋಗುವಾಗ, ನಮ್ಮ ಮನೆಯಲ್ಲಿ ಒಂದು ನಿಮಿಷ ನಿಂತು, ಕಲ್ಲುಸಕ್ಕರೆ ಪ್ರಸಾದ ಕೊಡದೇ ಹೋದವರೇ ಅಲ್ಲ. ಅದಕ್ಕೇ ಏನೋ ಈಗ ಮೋದಿ ಸರಕಾರ ಬಂದಾಗ ಆ ಖಡಕ್ ಒರಿಜಿನಲ್ RSS ಮನುಷ್ಯ ತುಂಬ ನೆನಪಾಗುತ್ತಾರೆ.

೧೯೮೯ ರ ಟೈಮಿನಲ್ಲಿ ರಾಮ ಮಂದಿರ ಕಟ್ಟಲು ಶಿಲೆ ಸಂಗ್ರಹ, ದೇಣಿಗೆ ಸಂಗ್ರಹ ಮಾಡುವ ಎಲ್ಲ ಕೆಲಸದಲ್ಲಿ ಸಕ್ರೀಯರಾಗಿದ್ದರು ಅವರು.  ಆವಾಗ ನಮಗೆ ಹಿರಿಯರೊಂದಿಗೆ ಎಲ್ಲದರ ಮೇಲೆ ವಾದ ವಿವಾದ ಮಾಡುವ ಗೀಳು. ರಾಮ ಮಂದಿರ ನಿರ್ಮಾಣದ ಬಗ್ಗೆ ಒಮ್ಮೆ ಸುಮ್ಮನೆ ಅವರನ್ನು ಫ್ರೆಂಡ್ಲಿ ಆಗಿಯೇ ತಡವಿಕೊಂಡಿದ್ದೆ. ನಮ್ಮ ಆ ಕಾಲದ ಅಪ್ರಬುದ್ಧ ತರಲೆ ವಾದ ವಿವಾದಗಳನ್ನು ನಗು ನಗುತ್ತಲೇ ಕೇಳಿ, "ನಮ್ಮ ಪಾರ್ಟಿಗೆ ಫುಲ್ ಪವರ್ ಬಂದಾಗ ಇದರ ಬಗ್ಗೆ ಮತ್ತೆ ಮಾತಾಡೋಣ," ಅಂತ ಮಾತು ನಿಲ್ಲಿಸಿದ್ದರು ಶಾನಬಾಗ ಪ್ರೊಫೆಸರ್. ಈಗ ಪಾರ್ಟಿಗೆ ಫುಲ್ ಪವರ್, ಪೂರ್ಣ ಮೆಜಾರಿಟಿ ಎಲ್ಲ ಬಂದಿದೆ. ಮಾತಾಡಲು, ಮಾಡಿ ತೋರಿಸಿಲು ಅವರೇ ಇಲ್ಲ. ತೀರಿಹೋಗಿ ಐದಾರು ವರ್ಷಗಳಾದವು ಅಂತ ಕೇಳಿದ್ದು.

ತಾವು ಕಟ್ಟರ್ RSS ಆದರೂ ಪ್ರಜಾಪ್ರಭುತ್ವದಲ್ಲಿ ಫುಲ್ ವಿಶ್ವಾಸ ಅವರಿಗೆ. ನಿರಂತರವಾಗಿ ಆಳಿಕೊಂಡು ಬರುತ್ತಿದ್ದ ಕಾಂಗ್ರೆಸ್ ಪಕ್ಷವನ್ನು ವಾಚಾಮಗೋಚರವಾಗಿ ಬೇಕಾದಷ್ಟು ಬೈದು, ಚುನಾವಣೆ  ದಿವಸ ಮಾತ್ರ ಮತ ಹಾಕದೇ ಮುಸುಕು ಹೊದ್ದು ಮಲಗಿ ಬಿಡುವವರನ್ನು ಲೈಟಾಗಿಯೇ ಬೆಂಡೆತ್ತುತ್ತಿದ್ದರು ಅವರು. "ಕಾಂಗ್ರೆಸ್ ಆರಿಸಿ ತಂದವರು ಯಾರು? ನಾವೇ ಅಲ್ಲವೇನ್ರೀ? ಹಾಂ? ಈಗ ಬೈದು ಏನು ಉಪಯೋಗ? ಬೇರೆ ಪಾರ್ಟಿ ಆರಿಸಿ ತನ್ನಿ," ಅಷ್ಟೇ ಅವರ ಉಪದೇಶ. ಬಿಜೆಪಿಗೇ ಮತ ಹಾಕಿ ಅದು ಇದು ಅಂತ ಎಂದೂ ಮಾತಿಲ್ಲ. ಚುನಾವಣಾ ಪ್ರಚಾರಕ್ಕಾಗಲೀ, ಮತ್ಯಾವದೇ ಕಾರಣಕ್ಕೇ ಆಗಲಿ ಅವರು ಮನೆ ಮನೆ ಸುತ್ತಿದ್ದು ಇಲ್ಲವೇ ಇಲ್ಲ. ಕೇವಲ ಶುದ್ಧ RSS.

RSS ಸೇರಿ ಅಂತ ಶಾನಬಾಗ ಪ್ರೊಫೆಸರ್ ನಮಗೆ ಹೇಳದಿದ್ದರೂ ನಾವು ಒಂದೆರೆಡು ವಾರ ಒಂದು RSS ಶಾಖೆಗೆ ಹೋಗಿ ಬಂದಿದ್ದು ನೆನಪು ಇದೆ. ಅಲ್ಲೇ ಮಾಳಮಡ್ಡಿ ರಾಯರ ಮಠದ ಆಕಡೆ, ಜೇವೂರ ಮಾಸ್ತರ್ ಮನೆ ಪಕ್ಕ, ಆ ಕಾಲದಲ್ಲಿ ಖಾಲಿ ಇದ್ದ ದೊಡ್ಡ ಮೈದಾನದಲ್ಲಿ RSS ಶಾಖೆ ನಡೆಯುತ್ತಿತ್ತು. ಅರುಣ ಭಟ್ಟ ನಮ್ಮ ಖಾಸ್ ದೋಸ್ತ. ಅವನ ಸೋದರಮಾವಂದಿರಾದ ಕಿಟ್ಟಣ್ಣ, ರಾಮಣ್ಣ ಎಲ್ಲ ಕಟ್ಟರ್ RSS. ಎಮರ್ಜೆನ್ಸಿ ಟೈಮ್ ನಲ್ಲಿ ಹಿರಿಯರ ಮಾತು ಕೇಳಿ ಸ್ವಲ್ಪ RSS ಕಮ್ಮಿ ಮಾಡಿದ್ದರು. ಆದರೆ ಪೂರ್ತಿ ಬಿಟ್ಟಿರಲಿಲ್ಲ. ಹೀಗಾಗಿಯೋ ಏನೋ ಕೇವಲ ಕುತೂಹಲಕ್ಕೆ ಆ RSS ಶಾಖೆಗೆ ಹೋಗಿದ್ದೆ. ಜೊತೆಗೆ ಸುತ್ತಮುತ್ತಲಿನ ಭಟ್ಟ, ಕುಬೇರ, ಜೇವೂರ, ಮಾಲಗಾವಿ ಇತರ ಮಿತ್ರರೂ ಸೇರಿಕೊಂಡಿದ್ದರು. ಏನೋ ಹೊಸ ವೇಷ! ಏನೋ ಒಂದು ಮಜಾ! ಆವಾಗ ಇನ್ನೂ ಒಂದನೇ ಕ್ಲಾಸ್. ೧೯೭೮-೭೯ ಅಂತ ನೆನಪು. ಸಂಘದವರು ಆಡಿಸುತ್ತಿದ್ದ ಆಟ, ಹಾಡು ಏನೋ ಸ್ವಲ್ಪ ದಿವಸ ಮಜವಾಗಿ ಕಂಡಿತ್ತು.

ಆ ಸಂಘದ ಶಾಖೆ ಬಿಡಲು ಕಾರಣವಾಗಿದ್ದು ದೊಡ್ಡ ಹುಡುಗರ ಸಣ್ಣ ಪ್ರಮಾಣದ ದಬ್ಬಾಳಿಕೆ ಮತ್ತು ಕೆಟ್ಟ ನಡುವಳಿಕೆ. ಆ ಕಾಲದ ದೊಡ್ಡ ಉಡಾಳ ಹಿಂಗಮೀರೆ ಪಕ್ಯಾ ಮತ್ತು ಅವನ ಕೆಲ ಸಂಗಡಿಗರೂ ಸಹ ಅದೇ ಸಂಘದ ಶಾಖೆಗೆ ಬರಬೇಕೇ! ಶಿವನೇ ಶಂಭುಲಿಂಗ! ಹಿಂಗಮೀರೆ ಪಕ್ಯಾ, ಅವನ ಚೇಲಾ ಪಾರಿವಾಳದ ಟಿಬೇಟಿ ಶಂಬ್ಯಾ ಮುಂತಾದವರ ಇರುವಿಕೆ ಸರಿಯಾಗದೆ ನಮ್ಮ ಸಣ್ಣ ಹುಡುಗರ ಗ್ಯಾಂಗ್ ಸಂಘಕ್ಕೆ ದೊಡ್ಡ ನಮಸ್ಕಾರ ಹಾಕಿ ಬಿಟ್ಟು ಬಂತು. ಆಗಲೇ ಬೇರೆ ಬೇರೆ ಕಾರಣಕ್ಕೆ ಪೋಲೀಸರ ಬೆತ್ತದ ರುಚಿ ಕಂಡಿದ್ದ ಹಿಂಗಮೀರೆ ಪಕ್ಯಾನಂತವರು ಸಂಘದ ಶಾಖೆಯಲ್ಲಿದ್ದಾರೆ ಅಂತ ಶಾನಬಾಗ ಪ್ರೊಫೆಸರಿಗೆ ಗೊತ್ತಾಗಿದ್ದರೆ ಆ ಶಾಖಾ ಪ್ರಮುಖನ ಗ್ರಹಚಾರ ಬಿಡಿಸುತ್ತಿದ್ದರು ಬಿಡಿ. ಅಂತಹ ಜನರನ್ನೆಲ್ಲ RSS ನಲ್ಲಿ ಸೇರಿಸಿಕೊಳ್ಳುವದಕ್ಕೆ ಅವರ ತಾತ್ವಿಕ ವಿರೋಧ ಇದ್ದೇ ಇತ್ತು ಅನ್ನುವದರ ಬಗ್ಗೆ ಎರಡು ಮಾತಿಲ್ಲ. ನಾವೇ ಸಂಘದ ಶಾಖೆ ಬಿಟ್ಟು ಬಂದಿದ್ದರಿಂದ ಶಾನಬಾಗ ಪ್ರೊಫೆಸರಿಗೆ ದೊಡ್ಡ ಹುಡುಗರ ದಬ್ಬಾಳಿಕೆ ಬಗ್ಗೆ ಕಂಪ್ಲೇಂಟ್ ಮಾಡುವ ಪ್ರಮೇಯ ಬರಲಿಲ್ಲ ಬಿಡಿ.

ಮುಂದೆ ನಾವು ಮಾಳಮಡ್ಡಿ ಬಿಟ್ಟು, ಸ್ವಂತ ಮನೆ ಮಾಡಿಕೊಂಡು, ನಿರ್ಮಲ ನಗರಕ್ಕೆ ಬಂದ ಮೇಲೆ ಅಲ್ಲೂ ಸುತ್ತ ಮುತ್ತ ಸಂಘದ ಶಾಖೆ ಇದ್ದರೂ ಆ ಹೊತ್ತಿಗೆ ಓದುವ ಹುಚ್ಚು ಶುರುವಾಗಿ, ಮನೆಯಲ್ಲಿದ್ದ ಬಾಲ ಭಾರತಿ, ಅಮರ ಚಿತ್ರ ಕಥೆಗಳಲ್ಲಿ ಕಳೆದುಹೋಗುವದರಲ್ಲಿ ಇರುವ ಸುಖ ಮತ್ತೆಲ್ಲೂ ಇಲ್ಲ ಅಂತ ಅನ್ನಿಸಿ, ಮತ್ತೆ ಸಂಘ ಅದು ಇದು ಅಂತ ಸೇರಲಿಲ್ಲ. ಮುಂದೆ ಏನಿದ್ದರೂ ವರ್ಷಕ್ಕೊಮ್ಮೆ RSS ನವರು ಆಚರಿಸುತ್ತಿದ್ದ ರಕ್ಷಾ ಬಂಧನಕ್ಕೆ ಹೋಗಿ, ನೂಲಿನ ಸ್ಟ್ಯಾಂಡರ್ಡ್ ರಾಖಿ ಕಟ್ಟಿಸಿಕೊಂಡು, ಪ್ರಸಾದ ತೆಗೆದುಕೊಂಡು, ಶಾಖೆಯ ಹಿರಿಯರು ಮಾಡಿದ ಒಂದು ಭಾಷಣ ಕೇಳಿ ಬಂದರೆ RSS ನೆನಪು ಮುಂದಿನ ವರ್ಷವೇ. ಸುಮಾರು ಸಲ RSS ನವರ ರಕ್ಷಾ ಬಂಧನ ಸಮಾರಂಭದಲ್ಲೇ ಶಾನಬಾಗ ಪ್ರೊಫೆಸರ್ ಅವರನ್ನು ಕಂಡ ನೆನಪು.

ವಿಪರ್ಯಾಸ ನೋಡಿ. ಆ ಕಾಲದಲ್ಲಿ RSS ಶಾಖೆಯಲ್ಲಿ ರೋಪ್ ಹಾಕಿಕೊಂಡು ಮೆರೆಯುತ್ತಿದ್ದ ಹಿಂಗಮೀರೆ ಪಕ್ಯಾ ಮುಂದೆ ೧೯೯೦ ರ ಸಮಯದಲ್ಲಿ ಪೂರ್ತಿ ಕಾಂಗ್ರೆಸ್ ಪುಡಾರಿಯಾಗಿಬಿಟ್ಟ ಅಂತ ಪತ್ರಿಕೆಗಳಲ್ಲಿ ಓದಿ ತಿಳಿಯಿತು. ಸೋನಿಯಾ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿಕೊಳ್ಳಲೇ ಬೇಕು. ಇಲ್ಲಂದ್ರೆ ಆತ್ಮಾಹುತಿ ಮಾಡಿಕೊಳ್ಳುತ್ತೇವೆ, ಅಂತ ಪ್ರಕಟಣೆ ಕೊಟ್ಟ ಯುವ ಕಾಂಗ್ರೆಸ್ ಮುಖಂಡರ ಹೆಸರಲ್ಲಿ ಇವನ ಹೆಸರೂ ಇತ್ತು. ಅಕಟಕಟಾ! ಸಂಘದ ಆ ರಾಯರ ಮಠದ ಶಾಖೆಯ ದೌರ್ಭಾಗ್ಯ! ಅಂದಿನ ಸಂಘದ 'ಸ್ವಯಂ ಸೇವಕ' ಈಗ ಸೋನಿಯಾ ಗಾಂಧಿಗಾಗಿ ಆತ್ಮಾಹುತಿ ಮಾಡಿಕೊಳ್ಳಲು ತಯಾರು! ಮುಂದೆ ಮರ್ಡರ್ ಕೇಸೊಂದರಲ್ಲಿ ಬಂಧಿತನಾಗಿ, ಜಾಮೀನ ಮೇಲೆ ಬಿಡುಗಡೆಯಾಗಿದ್ದ ಹಿಂಗಮೀರೆ ಪಕ್ಯಾ ಸತ್ತೂ ಹೋದ ಅಂತ ಓದಿದ್ದೆ. ಮಿತ್ರ ಶಿವಾನಂದ ಮಾಲಗಾವಿಯನ್ನು ಅನೇಕ ವರ್ಷಗಳ ನಂತರ ಫೇಸ್ ಬುಕ್ ಮೇಲೆ ಹಿಡಿದು, ಹರಟೆ ಶುರು ಮಾಡಿದಾಗ ಮೊದಲು ಕೇಳಿದ್ದು, "ಏ! ಆವಾ ಟಿಬೇಟಿ ಶಂಬ್ಯಾ ಎಲ್ಲೆ ಹೋದ ಮಾರಾಯಾ? ನಿಮ್ಮ ಮನಿ ಬಾಜೂಕ ಇದ್ದಾ ನೋಡ. ಪಾರಿವಾಳ ಸಾಕಿದ್ದಾ. ನೆನಪಾತ?" ಅಂತ. "ಮಹೇಶಾ! ಟಿಬೇಟಿ ಶಂಬ್ಯಾ ಈಗ ಮೈಸೂರಾಗ ಅದಾನೋ. ಅವರ ಸಿಸ್ಟರ ಅರವಿ ಅಂಗಡಿ ಐತಂತ ನೋಡಪಾ. ಜಾಸ್ತಿ ಏನ ಗೊತ್ತಿಲ್ಲ," ಅಂತ ಹೇಳಿ ಮಾತು ಮುಗಿಸಿದ ಮಾಲಗಾವಿ. ಅಷ್ಟರ ಮಟ್ಟಿಗೆ ಆ ಕಾಲದ ಇಬ್ಬರು ಖೊಟ್ಟಿ RSS ಮಂದಿ ಈಗ RSS ಗೆ ಹತ್ತಿರ ಕೂಡ ಇಲ್ಲ ಅಂತ ತಿಳಿದು, ಹೋಗ್ಗೋ! ಇಂತವರೂ ಒಮ್ಮೆ RSS ನಲ್ಲಿ ಹೊಕ್ಕಿದ್ದರಾ? ಅಂತ ಅನ್ನಿಸಿದ್ದು ಮಾತ್ರ ನಿಜ.

ಬಾಲ್ಯದಲ್ಲಿ ಅಮ್ಮನ ಹಾಲಿನೊಂದಿಗೆ ಒಂದಿಷ್ಟು RSS, ನಿಗಿ ನಿಗಿ ತಾರುಣ್ಯದಲ್ಲಿ ಒಗರು ಬಿಯರ್ ಜೊತೆ ಕಮ್ಯುನಿಸಂ / ಕಮ್ಯುನಿಸ್ಟ್ ಅನ್ನೋ ಗುಂಗು, ನಂತರದಲ್ಲಿ ಚುನಾವಣೆ ದಿವಸ ಗಿಚ್ಚಾಗಿ ಕಂಟ್ರಿ ಸೆರೆ ಕುಡಿದು, ಮುಸುಕೆಳೆದು ಮಲಗಿ, ಓಟು ಹಾಕಲು ಹೋಗಲಿಕ್ಕೂ ಬೇಸರ ಅನ್ನುವ ಮನಸ್ಥಿತಿ. ಇದು ನಮ್ಮ ಜನರ ಕರ್ಮ! ಅಂತ ರವಿ ಬೆಳಗೆರೆ ಎಲ್ಲೋ ಬರೆದಿದ್ದರು. ತಾರುಣ್ಯದಲ್ಲಿ ಕಮ್ಯುನಿಸಂ ಬಗ್ಗೆ ಗೊತ್ತಿಲ್ಲ. ಆದ್ರೆ ಬಾಲ್ಯದಲ್ಲಿ RSS ಮತ್ತೆ ನಂತರ ಮತ ಹಾಕಲು ನಿರುತ್ಸಾಹ ಮಾತ್ರ ಹೌದು ಅನ್ನಿಸುತ್ತದೆ ಬಹಳ ಜನರ ಕರ್ಮ ನೋಡಿದರೆ.

ಈಗ ಬಿಜೆಪಿ, ಸಂಘ ಪರಿವಾರದ ಅಮೋಘ ಯಶಸ್ಸನ್ನು ನೋಡಲು ಶಾನಬಾಗ ಪ್ರೊಫೆಸರ್ ಇರಬೇಕಿತ್ತು ಅಂತ ಅನ್ನಿಸಿದರೂ ಅವರ ಇನ್ನೊಂದು ಅಕ್ಕರೆಯ ಕೂಸಾಗಿದ್ದ ಕವಿವಿ ಸಂಸ್ಕೃತ ವಿಭಾಗದ ಹಾಲತ್ ನೋಡಿದರೆ ಮಾತ್ರ ಶಾನಬಾಗ ಪ್ರೊಫೆಸರ್ ಮಮ್ಮಲ ಮರಗುತ್ತಿದ್ದರು ಅನ್ನುವದು ಖಾತ್ರಿ. ಯಾಕೆಂದರೆ ಕವಿವಿಯ ಸಂಸ್ಕೃತ ವಿಭಾಗ ಪೂರ್ತಿಯಾಗಿ ಬಂದಾಗಿ ಹೋಗಿದೆ. ವಿದ್ಯಾರ್ಥಿಗಳು ಇಲ್ಲವೇ ಇಲ್ಲವಂತೆ. ಸ್ನಾತಕೋತ್ತರ ಪದವಿ ಪಡೆಯಲು ಒಂದೋ ಎರಡೋ ಜನ ಮಾತ್ರ ಬಂದು, ಕೆಲವೊಂದು ವರ್ಷ ಅಷ್ಟೂ ಬರದೇ ಸಂಸ್ಕೃತ ವಿಭಾಗ ಪೂರ್ತಿ ಖಾಲಿಯಾಗಿದೆ. ಅದಕ್ಕೇ ಎಲ್ಲ ಕೋರ್ಸ್ ಬಂದ್. ಇದ್ದ ಬಿದ್ದ ಸಂಸ್ಕೃತ  ಅಧ್ಯಾಪಕರನ್ನು ಆಡಳಿತ ಮತ್ತಿತರೇ ಕೆಲಸಗಳಿಗೆ ನಿಯುಕ್ತಿ ಮಾಡಿ 'ಹಜಾಮರ ಕೆಲಸ ಹಕೀಮರ ಕೈಯಲ್ಲಿ' ಮಾಡಿಸುವಂತಾಗಿದ್ದು ದೊಡ್ಡ ದುರಂತ. ಮೊದಲು ನಮ್ಮ ಹೈಸ್ಕೂಲಿನಲ್ಲಿ ಮಾಸ್ತರಾಗಿದ್ದು, PhD ಮಾಡಿದ ನಂತರ ದೊಡ್ಡ ನೌಕರಿ ಅಂತ ಯೂನಿವರ್ಸಿಟಿ ಸೇರಿದ್ದ ಮಹಾನ್ ಮೇಧಾವಿ ಜೋಶಿ ಸರ್ ಇವತ್ತು ಸಂಸ್ಕೃತ ಕಲಿಸುವದನ್ನು ಬಿಟ್ಟು, ಯೂನಿವರ್ಸಿಟಿ ಜಿಮ್ಖಾನಾದಲ್ಲಿ, ಕೈಯಲ್ಲಿ ಕ್ಲಿಪ್ ಬೋರ್ಡ್ ಹಿಡಿದುಕೊಂಡು ಕ್ರೀಡಾಪಟುಗಳ ಲೆಕ್ಕ ಬರಿಯಬೇಕಾಗಿ ಬಂದಿದ್ದು ದೊಡ್ಡ ವಿಪರ್ಯಾಸ ಮತ್ತು ದುರಂತ. ಹಾಗಂತ ಯಾರೂ ಸಂಸ್ಕೃತ ಅಧ್ಯಯನ ಮಾಡುತ್ತಿಲ್ಲ ಅಂತಲ್ಲ. ನಿಜವಾಗಿ ಶ್ರದ್ಧೆಯಿದ್ದವರು ಸರಿಯಾದ ಜಾಗಕ್ಕೇ ಹೋಗಿ, ಕಲಿಯಬೇಕಾದವರಿಂದ ಸರಿಯಾಗೇ ಕಲಿಯುತ್ತಿದ್ದಾರೆ. ಅದಕ್ಕೇ ದಿವಂಗತ ಭಾಲಚಂದ್ರ ಶಾಸ್ತ್ರಿಗಳ ಗುರುಕುಲದಂತಹ ಸಂಸ್ಕೃತ ಕಾಲೇಜು ತುಂಬಿ ತುಳುಕುತ್ತಿದೆ. ಇಲ್ಲಿ ಕವಿವಿಯ ಸಂಸ್ಕೃತ MA ಎಮ್ಮೆ ಕಾಯಲು ಹೋಗಿದೆ. ಸಂಸ್ಕೃತ ಕಲಿಸಲು ಬೇಕಾದಂತ ಸಂಸ್ಕೃತಿ ಯೂನಿವರ್ಸಿಟಿಗಳಿಂದ ಮಾಯವಾಗಿದ್ದೇ ಶ್ರದ್ಧಾವಂತ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಪಂಡಿತರ ಕೆಳಗೆ ಅಧ್ಯಯನ ಮಾಡಿ, ಹೊರಗಿಂದಲೇ ಬೇಕಾದ ಡಿಗ್ರಿ ಮತ್ತೊಂದು ಮಾಡಿಕೊಳ್ಳುತ್ತಿರುವದಕ್ಕೆ ಕಾರಣ. ಸಂಸ್ಕೃತಕ್ಕೇ ಅಂತ ಪ್ರತ್ಯೇಕ ಯೂನಿವರ್ಸಿಟಿ ಸಹಿತ ಬಂದಿದೆಯಲ್ಲ. ತಾವು ಕಟ್ಟಿ ಬೆಳೆಸಿದ ಸಂಸ್ಕೃತ ವಿಭಾಗ ಮುಚ್ಚಿಹೋಗಿರುವದನ್ನು ನೋಡಿದ ಶಾನಬಾಗ ಪ್ರೊಫೆಸರ್ ಭಾವನೆಗಳನ್ನು ಊಹಿಸಲು ಸಾಧ್ಯ ಇಲ್ಲ ಬಿಡಿ. ಅದೆಷ್ಟು ವಿಲಿವಿಲಿ ಒದ್ದಾಡಿ  ಹೋಗುತ್ತಿದ್ದರೋ ಏನೋ. ಎಮರ್ಜೆನ್ಸಿಯಲ್ಲಿ ಬೂಟಿನ ಒದೆ, ಲಾಠಿ ಏಟು ತಿಂದಿದ್ದರಿಕಿಂತ ಹೆಚ್ಚಿನ ನೋವಾಗುತ್ತಿತ್ತು ಅವರಿಗೆ.

ಮೋದಿ ಸರಕಾರ, ಬಿಜೆಪಿಯ ಸ್ವರ್ಣಯುಗ ನೋಡಲು ಇರಬೇಕಾದ ಧಾರವಾಡದ ಇನ್ನೊಬ್ಬ ಸಂಘ ಜೀವಿ ಅಂದ್ರೆ ಶಿರೂರ್ ಮಾಸ್ತರರು. ಅವರು ಭಾರತ ಹೈಸ್ಕೂಲಿನ ನಿವೃತ್ತ ಶಿಕ್ಷಕರು. ಹಲವಾರು ವರ್ಷ ಇಡೀ ಧಾರವಾಡವನ್ನು ತಮ್ಮ ಸೈಕಲ್ ಮೇಲೆ ಸುತ್ತಿ, ಸಂಘದ ಮುಖವಾಣಿಯಂತಿರುವ ಇಂಗ್ಲಿಷ್ ಪತ್ರಿಕೆ 'Organizer' ನ್ನು ಚಂದಾದಾರರಿಗೆ ಹಂಚಿದವರು ಅವರು. ಇದು ಅವರು ರಿಟೈರ್ ಆದ ಮೇಲೆ ಮಾಡಿದ ಸಂಘ ಸೇವೆ. ಮೊದಲು ಇದರ ಹತ್ತು ಪಟ್ಟು ಸಂಘದ ಸೇವೆ ಮಾಡಿರಬೇಕು ಬಿಡಿ. ಸುಮಾರು ಎಪ್ಪತ್ತು ವರ್ಷದವರೆಗೂ ಊರ ತುಂಬಾ ಸೈಕಲ್ ಹೊಡೆದು, ಪೇಪರ್ ಹಂಚಿ, ಶಿಸ್ತಾಗಿ ಚಂದಾ ಸಂಗ್ರಹಿಸಿ, ಆ RSS ಪತ್ರಿಕೆ ಧಾರವಾಡ ಜನರ ಮನೆಮನೆಗಳಲ್ಲಿ, RSS ಸಿದ್ಧಾಂತ ಸ್ವಲ್ಪ ಮಟ್ಟಿಗಾದರೂ ಜನರ ಮನಮನದಲ್ಲಿ ಇರುವಂತೆ ನೋಡಿಕೊಂಡಿದ್ದು ಶಿರೂರ್ ಮಾಸ್ತರರು ಮತ್ತು ಅವರ ಸಂಘ ನಿಷ್ಠೆ. ಅವರಾದರೂ ಇನ್ನೂ ಇದ್ದಾರಾ? ಗೊತ್ತಿಲ್ಲ. ಬದುಕಿದ್ದರೆ ಬಿಜೆಪಿಯ ಅಭೂತಪೂರ್ವ ಯಶಸ್ಸು ನೋಡಿ ಸಂಭ್ರಮಿಸುತ್ತಿರಬೇಕು ಬಿಡಿ ಶಿರೂರ್ ಮಾಸ್ತರರು.

ಶಾನಬಾಗ ಪ್ರೊಫೆಸರಂತೂ ಇಲ್ಲ. ಶಿರೂರ್ ಮಾಸ್ತರ್ ಗೊತ್ತಿಲ್ಲ. ಇರಲಿ ಬಿಡಲಿ ಅಂತಹ ನಿಸ್ಪ್ರಹ ಸಂಘ ಪರಿವಾರದ ಜನರ ಅರವತ್ತಕ್ಕೂ ಹೆಚ್ಚು ವರ್ಷಗಳ ಶ್ರಮದಾನ, ಬಲಿದಾನದಿಂದಲೇ ಇವತ್ತಿನ ಈ ಶುಭ ಪರಿಸ್ಥಿತಿ. ಅವರ ಶ್ರಮ, ಬಲಿದಾನಗಳಿಗೊಂದು ಒಳ್ಳೆಯ ಮನ್ನಣೆ ಸಿಗಲಿ. ಅಷ್ಟು ಸಾಕು.

* ಶಾನಬಾಗ ಪ್ರೊಫೆಸರ್, ಶಿರೂರ್ ಮಾಸ್ತರ್ ಫೋಟೋ ಸಿಕ್ಕಿಲ್ಲ. ಯಾರಾದರೂ ಧಾರವಾಡಿಗಳು ಕೃಪೆ ಮಾಡಿ ಕಳಿಸಿಕೊಟ್ಟರೆ ಮುದ್ದಾಂ ಹಾಕುತ್ತೇನೆ.

* ಜುಲೈ ೧೩, ೨೦೧೫: ಧಾರವಾಡದಲ್ಲಿ ನನ್ನ ಸ್ಕೂಲ್ ಮಿತ್ರನೂ, ಶಾನಬಾಗ ಪ್ರೊಫೆಸರ್ ಮನೆಯ ಪಕ್ಕದಮನೆಯವನೂ ಆದ ಸಮೀರ್ ಇನಾಂದಾರ್ ಪ್ರೊಫೆಸರ್ ಅವರ ಫೋಟೋ ಸಂಪಾದಿಸಿ ಕಳಿಸಿದ್ದಾನೆ. ಅದಕ್ಕೆ ಅವನಿಗೊಂದು ದೊಡ್ಡ ಧನ್ಯವಾದ. ಥ್ಯಾಂಕ್ಸ್, ಸಮೀರ್ ಇನಾಂದಾರ್!

6 comments:

Vimarshak Jaaldimmi said...

Excellent!

Interesting to see the phrase

"ಧಾರವಾಡದ ಬಹುಪತ್ನಿವಲ್ಲಭ ಬಂಡಾಯ ಸಾಹಿತಿ."

ವಿ.ರಾ.ಹೆ. said...

Organizer ಪತ್ರಿಕೆ ನಿಮ್ಮನೇಲ್ಲೆ ಓದಿದ್ದ ನೆನಪಿದ್ದು ನಂಗೆ. ಈಗ ಸುಮಾರು ವರ್ಶಾತು. ತರಸ್ತಾ ಇಲ್ಲೆ ಕಾಣ್ತು.

ವಿ.ರಾ.ಹೆ. said...

ಮಾರವಾಡಿಗಳು ಇದ್ಹಾಂಗೆ 'ಧಾರವಾಡಿಗಳು' ಪದ ಚೆನ್ನಾಗಿದೆ :)

Mahesh Hegade said...

ಹಾ!

Organizer ಬತ್ತಾ ಇಲ್ಲೆ ಅಂದ್ರೆ ಶಿರೂರ್ ಮಾಸ್ತರ್ ಇದ್ದಿದ್ದು ಸುಳ್ಳು. ಅವರ ಸಲುವಾಗೇ ಅದನ್ನ ತಗಂಡ ಹಾಂಗೆ ಆಗಿತ್ತು.

ಧಾರವಾಡಿ ಹಳೆ ಶಬ್ದ. 'ಏಕ್ ಧಾರವಾಡಿ ಸೌ ಮಾರವಾಡಿ' ಹೇಳಿ. ಎಂತರಲ್ಲಿ ಒಬ್ಬ ಧಾರವಾಡಿ ನೂರು ಜನ ಮಾರ್ವಾಡಿಗಳಿಗೆ ಸರಿ ಹೇಳಿ ಗೊತ್ತಿಲ್ಲೆ. ಪೊಕಳೆ ಹೊಡೆಯದರಲ್ಲಿ ಇರವು. ಅವು ಪೊಕಳೆ ಹೊಡೆಯದ್ದೆ ದುಡ್ಡು ಮಾಡ್ತಾ :)

Unknown said...

good one...

Mahesh Hegade said...

Thanks, Kamat.