Tuesday, July 08, 2014

ಧಾರವಾಡದ ಮಹಿಷಿ ರೋಡಿನ 'ವಿಠಲ ಮಹಿಷಿ' ಎಂಬ ಹಿರಿಯ ಮಿತ್ರನ ನೆನಪಲ್ಲಿ....

"ಏ ವಿಠಲ್! ಸಾವಕಾಶೋ! ನಂದು ಹೊಸಾ ಅಟ್ಲಾಸ್ ಅದನೋ!" ಅಂತ ನಾನು, ಎಲ್ಲಿ ಈ ವಿಠಲ ಎಂಬ ಪುಣ್ಯಾತ್ಮ ನನ್ನ ಹೊಸ ಅಟ್ಲಾಸ್ ಹರಿದು, ನಾಮಾವಶೇಷ ಮಾಡಿ ಬಿಟ್ಟಾನು ಅಂತ ಆತಂಕದಿಂದ ಹೇಳುತ್ತಿದ್ದರೆ, ವಿಠಲ ಎಂಬ ಹಿರಿಯ ದೋಸ್ತ, "ಏ, ಇರಪಾ ಇವನ. ಜಾಂಬಿಯಾ ದೇಶ ಎಲ್ಲದ ಅಂತ ಹುಡುಕೋಣ. ಓಕೆ? ನಮ್ಮಕ್ಕಾ ಅಲ್ಲೇ ಇದ್ದಾಳೋ," ಅಂತ ಒಂದು ಕಡೆ ವಿಶ್ವದ ಅಟ್ಲಾಸದಲ್ಲಿ ಜಾಂಬಿಯಾ ದೇಶವನ್ನು ಹುಡುಕುತ್ತ, ಇನ್ನೊಂದು ಕಡೆ ಆ ದೇಶದಲ್ಲಿದ್ದ ಅವನ ಅಕ್ಕನ ಬಗ್ಗೆ ನಮ್ಮ ಅಮ್ಮ ಕೇಳುತ್ತಿದ್ದ ಪ್ರಶ್ನೆಗಳಿಗೆ ಅನ್ಯಮನಸ್ಕನಾಗಿ ಏನೋ ಒಂದು ಉತ್ತರ ಕೊಡುತ್ತ, "ಜಾಸ್ತಿ ಏನೂ ಗೊತ್ತಿಲ್ಲ ಮಾರಾಳಾ ಅವರ ಸುದ್ದಿ. ಯಾವಾಗೋ ಒಂದು ಐದು ವರ್ಷಕ್ಕ ಒಮ್ಮೆ ಊರಿಗೆ ಬರತಾರ. ಮಸ್ತಾಗಿ ಒಂದಿಷ್ಟು ವಸ್ತ್ರಾ ಗಿಸ್ತ್ರಾ ಕೊಟ್ಟು ಹೋಗ್ತಾರ ನೋಡವಾ. ಆರಾಮ ಇದ್ದಾಳ ಅಂತ ಅನ್ನಸ್ತದ. ಮಕ್ಕಳನ್ನ ಇಲ್ಲೇ ಊಟಿ ಒಳಗ ಸಾಲಿಗೆ ಹಾಕ್ಯಾಳ," ಅಂತೇನೋ ಹೇಳುತ್ತ ಮತ್ತೆ "ಯಾವ ಮೂಲ್ಯಾಗ ಅದನೋ ಈ ಸೂಡ್ಲಿ ಜಾಂಬಿಯಾ ಅನ್ನೋ ದೇಶ?" ಅಂತ ಹೇಳುತ್ತ, ಕಣ್ಣಿನ ಹತ್ತಿರ ಅಟ್ಲಾಸ್ ತೆಗೆದುಕೊಂಡು ಹೋಗಿ, ಹೇಗೋ ಜಾಂಬಿಯಾ ಕಂಡು ಹಿಡಿದು, "ಹಾಂ! ಈಗ ಸಿಕ್ಕತು ನೋಡು. ಇದೇ ಜಾಂಬಿಯಾ. ಇಲ್ಲೇ ಇದ್ದಾಳ ನಮ್ಮಕ್ಕ. ಗೊತ್ತೇನ?" ಅಂತ ಅಂದು ಹೇಳಿದ್ದ ವಿಠಲ ಎಂಬ ಹಿರಿಯ ದೋಸ್ತ ಸರಿಯಾಗಿ ಹತ್ತೊಂಬತ್ತು ವರ್ಷಗಳ ನಂತರ ಆಫ್ರಿಕಾದ ಮತ್ತೊಂದು ದೇಶ ಟಾಂಜಾನಿಯಾಕ್ಕೆ ಹೋಗಲೂ ಸಹ ಸಹಾಯ ಮಾಡುತ್ತಾನೆ ಅಂತ ಅವತ್ತು ಕನಸು ಮನಸಲ್ಲೂ ನೆನೆಸಿರಲಿಲ್ಲ.

೧೯೭೬-೭೭ ರ ಸಮಯ. ನಮಗೆ ನಾಕೈದು ವರ್ಷ ಅಷ್ಟೇ. ಇನ್ನೂ ಬಾಲವಾಡಿ. ಸರಿಯಾಗಿ ಓದಲು, ಬರೆಯಲು ಏನೂ ಬರುತ್ತಿರಲಿಲ್ಲ. ಆದರೆ ಪುಸ್ತಕ ಪ್ರೇಮ ಆಗಲೇ ಶುರುಗಾಗಿತ್ತು. ನೋಟ್ ಪುಸ್ತಕಗಳಲ್ಲಿ 'ಜೀರಕ್ಕೆ ಜೀರೋ' ಅಂತ ರಾಗವಾಗಿ ಹಾಡುತ್ತ, ಶೂನ್ಯದ ಮೇಲೆ ಶೂನ್ಯ ಗೀಚಿ, ಗೀಚಿ, ದಿನಕ್ಕೆರಡರಂತೆ ನೋಟ್ ಪುಸ್ತಕ ತುಂಬಿಸಿ ತುಂಬಿಸಿ, ಒಗೆದು ಒಗೆದು, "ಈ ಮಳ್ಳ ಮಾಣಿಗೆ ದಿನಕ್ಕೆರೆಡು ನೋಟ್ ಬುಕ್ ತಂದು ತಂದು ಕೊಟ್ಟು ಹೇಗೆ ಪೂರೈಸುವದು?" ಅನ್ನುವ ಸಣ್ಣ ಚಿಂತೆ ಮನೆಯವರಿಗೆ ಶುರುವಾಗಿತ್ತು. ಅದೇ ಹೊತ್ತಿನಲ್ಲಿ ಒಮ್ಮೆ ಧಾರವಾಡದ ನಮ್ಮ ಪ್ರೀತಿಯ 'ಭಾರತ ಬುಕ್ ಡಿಪೊ' ಅಂಗಡಿಗೆ ಭೆಟ್ಟಿ ಕೊಟ್ಟಾಗ ಕಣ್ಣು ಬಿದ್ದಿದ್ದು ರಂಗು ರಂಗಾದ 'ಬ್ರಿಜಬಾಸಿ ಅಟ್ಲಾಸ್' ಎಂಬ ಜಗತ್ತಿನ ಅಟ್ಲಾಸದ ಮೇಲೆ. ಕಣ್ಣು ಬಿದ್ದು, ಬೇಕು ಅಂತ ತಲೆಗೆ ಬಂದಾಕ್ಷಣ ಬೇಕೇ ಬೇಕು. ದೂಸಾರಾ ಮಾತೇ ಗೊತ್ತಿಲ್ಲ. ಕೊಡಿಸಲಿಲ್ಲ ಅಂದರೆ ಶರಂಪರ ಹಠ. ದೇಶ, ಕಾಲ, ನಿಮಿತ್ತ ಮೀರಿದ ಹಠ. ಮತ್ತೆ ಪುಸ್ತಕ ಕೊಡಿಸಲಿಕ್ಕೆ ಮನೆ ಮಂದಿ ಯಾವಾಗಲೂ ಸ್ವಲ್ಪ ಧಾರಾಳವೇ. ಹಾಗಾಗಿ ಅಮ್ಮ ಕೂಡ ಜಾಸ್ತಿ ಚೌಕಾಶಿ ಮಾಡದೇ ಆ ಅಟ್ಲಾಸ್ ಕೊಡಿಸಿಕೊಂಡು ಬಂದಿದ್ದಳು. ಭಾರತ ಬುಕ್ ಡಿಪೋದ ಮಾಲೀಕ ಹುದ್ದಾರರು ಆತ್ಮೀಯತೆಯಿಂದ ಎಲ್ಲ ಡಿಸ್ಕೌಂಟ್ ಹಾಕಿ ಕೊಟ್ಟ ನಂತರವೂ ಆ ಕಾಲದಲ್ಲೇ ಅದಕ್ಕೆ ಐದು ರೂಪಾಯಿ! ದೊಡ್ಡ ಮೊತ್ತ. ಅಟ್ಲಾಸಿಗೆ ಬ್ರೌನ್ ಪೇಪರ್ ಕವರ್ ಹಾಕಿಸಿಕೊಂಡು, ಬಹಳ ಜತನದಿಂದ ಕಾದಿಟ್ಟುಕೊಂಡು, ಒಂದೊಂದೇ ಅಕ್ಷರ ಕೂಡಿಸಿ ಕೂಡಿಸಿ, ಓದಿ, ಒಂದೊಂದೇ ದೇಶದ ಹೆಸರು ಕಲಿಯುತ್ತ ಇದ್ದಾಗ ಈ ವಿಠಲನೆಂಬ ಆಸಾಮಿ  ಮನೆಗೆ ಬಂದವ ಒಮ್ಮೆಲೇ ಅಟ್ಲಾಸ್ ಇ(ಕ)ಸಿದುಕೊಂಡು, ಜಾಂಬ್ಯಾ ಅನ್ನೋ ದೇಶ ಹುಡುಕಲು ಹೋಗಿಬಿಟ್ಟಿದ್ದ. ಕೇವಲ 'ಟಿಬೇಟಿ ಶಂಬ್ಯಾ' ಎನ್ನುವ ವಿಚಿತ್ರ ಹೆಸರಿನ, ಪಾರಿವಾಳ ಸಾಕಿದ್ದ, ಅಡ್ನಾಡಿ ಟಿಬೇಟಿ ಹುಡುಗನನ್ನು ಧಾರವಾಡದ ಮಾಳಮಡ್ಡಿಯ ನೆರೆಹೊರೆಯಲ್ಲಿ ನೋಡಿದ್ದ ನಮಗೆ ಆವತ್ತು ಈ ಜಾಂಬ್ಯಾ (ಜಾಂಬಿಯಾ) ಅನ್ನುವದು ಆ ಟಿಬೇಟಿ ಶಂಬ್ಯಾನ ಅಣ್ಣನೋ ತಮ್ಮನೋ ಅಂತ ಅನ್ನಿಸಿತ್ತೋ ಏನೋ ನೆನಪಿಲ್ಲ.

ಕೆಲ ತಿಂಗಳ ಹಿಂದೆ ಧಾರವಾಡದ ಈ ವಿಠಲ ಎಂಬ ಹಿರಿಯ ಮಿತ್ರ ತನ್ನ ಅರವತ್ತೂ ಚಿಲ್ಲರೆ ವಯಸ್ಸಿನಲ್ಲಿ ತೀರಿ ಹೋದ ಅಂದಾಕ್ಷಣ ಈ ಘಟನೆ ನೆನಪಿಗೆ ಬಂತು. ವಿಠಲನ ಬಗ್ಗೆ ನೆನಪಿರುವ ಅತೀ ಹಳೆಯ ಘಟನೆ ಅಂದರೇ ಅದೇ ಇರಬೇಕು.

ವಿಠಲ ಉರ್ಫ್ ಶ್ರೀರಾಮ. ಅವನ ಅಫೀಷಿಯಲ್ ಹೆಸರು ಶ್ರೀರಾಮನಂತೆ. ಅವನಿಗೆ ಯಾರೂ ಶ್ರೀರಾಮ ಅಂದಿದ್ದು ಕೇಳಿಲ್ಲ ಬಿಡಿ. ಎಲ್ಲರಿಗೂ ಅವನು ವಿಠಲನೇ. ಅಂತಹ ವಿಠಲ ಇಂದು ಇಲ್ಲವಾಗಿ 'ಎಲ್ಲಿ ಮರೆಯಾದೇ? ವಿಠಲ ಏಕೇ ದೂರಾದೇ? ವಿಠಲ! ವಿಠಲ!' ಅಂತ 'ಭಕ್ತ ಕುಂಬಾರ' ಚಿತ್ರದ ಹಾಡನ್ನು ಧಾರವಾಡದ ಶೈಲಿಯಲ್ಲಿ ಲಬೋ ಲಬೋ ಹೊಯ್ಕೊಂಡು ಹಾಡಿದರೂ ಹಿಂತಿರುಗಿ ಬರದ ಲೋಕಕ್ಕೆ ಹೋಗಿಬಿಟ್ಟಿದ್ದಾನೆ ಪ್ರೀತಿಯ ಗೆಳೆಯ ವಿಠಲ .

ವಿಠಲ್ ಮಹಿಷಿ ಉರ್ಫ್ ಶ್ರೀರಾಮ ಮಹಿಷಿ. ದೊಡ್ಡ ಮನೆತನದ ಹುಡುಗ. ಖ್ಯಾತ ಮಹಿಷಿ ಮನೆತನ. ಧಾರವಾಡದ ಮಾಳಮಡ್ಡಿಯಲ್ಲಿದ್ದ ಎಮ್ಮೆಕೆರೆಯನ್ನು ನ್ಯಾಷನಲ್ ಹೈವೇ - ೪ ಕ್ಕೆ ಸೇರಿಸುವ ಒಂದು ದೊಡ್ಡ ರಸ್ತೆಗೆ 'ಮಹಿಷಿ ರಸ್ತೆ' ಅಂತೇ ಹೆಸರು. ಅದೇ ಕುಟುಂಬದ ಏಕೈಕ ಕುಲದೀಪಕನೇ ಆಗಿದ್ದ ಈ ವಿಠಲ ಮಹಿಷಿ. ಏಕೈಕ ಕುಲದೀಪಕ ಏಕೆಂದರೆ ಒಬ್ಬನೇ ಗಂಡು ಮಗ. ಎಂಟೋ ಒಂಬತ್ತೋ ಅಕ್ಕಂದಿರ ನಂತರ ಹುಟ್ಟಿದ ಒಬ್ಬ ಮುದ್ದಿನ ಮಗ. ಮಹಿಷಿ ಅನ್ನುವ ಹೆಸರು ರಸ್ತೆಗೆ ಬರಲಿಕ್ಕೆ ಕಾರಣ ಇವನ ಅಜ್ಜನೋ, ಅಪ್ಪನೋ ಅಂತ ನೆನಪು. ಅವರೆಲ್ಲ ದೊಡ್ಡ ಡಾಕ್ಟರ್ ಆಗಿ ಹೆಸರು ಮಾಡಿದ್ದರು.

"ಮಾಜಿ ರಾಜಕಾರಣಿ, ಮಂತ್ರಿ  ಸರೋಜಿನಿ ಮಹಿಷಿ ಅವರ ಪೈಕಿ ಏನ್ರೀ?" ಅಂತ ಕೇಳಿದರೆ, "ಏ! ಅವರು ಬ್ಯಾರೇರೀ. ಅವರು ಶಿರಹಟ್ಟಿ ಮಹಿಷಿ. ನಾವು ಧಾರವಾಡ ಮಹಿಷಿ," ಅಂತ ವಿಠಲನ ವಿವರಣೆ ಬೇರೆ. ಧಾರವಾಡದವರೇ ಆದರೂ ಬೇರೆ ಬೇರೆ ಮಹಿಷಿ ಫ್ಯಾಮಿಲಿ ಅಂತೆ.

ಈ ವಿಠಲನ ಒಬ್ಬ ಅಕ್ಕ ನಮ್ಮ ಅಮ್ಮನ ಶಾಲೆ ಕ್ಲಾಸ್ಮೇಟ್. ಆತ್ಮೀಯ ಗೆಳತಿ. ಹಾಗಾಗಿ ಉಳಿದ ಅಕ್ಕಂದಿರೆಲ್ಲ ಅಮ್ಮನ ಗೆಳತಿಯರೇ. ಅಂತಹ ಗೆಳತಿಯರ ತಮ್ಮ, ಅಷ್ಟೊಂದು ಅಕ್ಕಂದಿರ ನಡುವೆ 'ಅಳ್ಳಿಗುಂಡಿ'ಯಂತಹ ತಮ್ಮ ಅವನೂ ಆಪ್ತನೇ ನಮ್ಮ ಕುಟುಂಬಕ್ಕೆ. ಮದುವೆಯಾಗಿ ಒಂದಿಬ್ಬರು ಅಕ್ಕಂದಿರು, ಕೆಲಸಕ್ಕೆ ಅಂತ ಉಳಿದ ಅವಿವಾಹಿತ ಅಕ್ಕಂದಿರು ಎಲ್ಲ ಬೇರೆ ಬೇರೆ ಊರು, ದೇಶ ಸೇರಿಕೊಂಡು ಧಾರವಾಡದಲ್ಲಿ ಉಳಿದವರು ಅಂದರೆ ವಿಠಲ ಮತ್ತೆ ಒಂದು ಮೂರು, ನಾಕು ಜನ ಅವಿವಾಹಿತ ಅಕ್ಕಂದಿರು, ವೃದ್ಧ ತಾಯಿ. ತಂದೆ ಬಹಳ ಮೊದಲೇ ತೀರಿ ಹೋಗಿದ್ದರು ಅಂತ ಕೇಳಿದ್ದು.

ಮಹಿಷಿ ರೋಡಿನ ರಾಯಲ್ ಕಾಂಪೌಂಡ್ ಅಂದರೆ ಅದೇ ಮಹಿಷಿ ಕಾಂಪೌಂಡ್. ಸುಮಾರು ಮೂರ್ನಾಕು ಎಕರೆಗಟ್ಟಲೆ ಇದ್ದ ದೊಡ್ಡ ಜಾಗ. ಹಲವಾರು ತರಹದ ಗಿಡ ಮರಗಳು. ಹಚ್ಚ ಹಸಿರು. ದೆವ್ವದಂತಹ ದೊಡ್ಡ ಬಂಗಲೆ. ಒಳ ಹೊಕ್ಕಿ ತಿರುಗಾಡಲು ಶುರುಮಾಡಿದರೆ ಕಳೆದು ಹೋಗುವಷ್ಟು ದೊಡ್ಡ ಬಂಗಲೆ. ಅಮ್ಮನ ಗೆಳತಿ, ವಿಠಲನ ಅಕ್ಕ ಮುಂಬೈದಲ್ಲಿದ್ದಳು. ಆಕೆ ರಜೆಗೆ ಧಾರವಾಡಕ್ಕೆ ಬಂದಾಗೊಮ್ಮೆ ಮಹಿಷಿ ಕಾಂಪೌಂಡಿಗೆ ಅಮ್ಮನ ಜೊತೆ ಒಂದು ವಿಸಿಟ್ ಗ್ಯಾರಂಟಿ. ಅಲ್ಲಿದ್ದ ದೊಡ್ಡ ಆಕರ್ಷಣೆ ಎಂದರೆ ಒಂದು ಹಳೇ ಕಾರು. ೧೯೩೦ ರ ಕಾಲದ ಕಾರನ್ನು ಹಾಗೇ ಸುಮ್ಮನೆ ಮನೆ ಮುಂದೆ ಪೋರ್ಟಿಕೋದಲ್ಲಿ ನಿಲ್ಲಿಸಿಕೊಂಡಿದ್ದರು. ನಮ್ಮಂತ ಚಿಕ್ಕ ಹುಡುಗರಿಗೆ ಅದನ್ನು ಹತ್ತಿ, ಅದರ ಸ್ಟಿಯರಿಂಗ್ ತಿರುಗಿಸುವದೇ ಒಂದು ದಿವ್ಯಾನುಭವ. ಹ್ಯಾಂಗೆ ಕಾರ್ 'ಹೊಡಿಯಬೇಕು' ಅಂತ ಉದ್ರಿ ಉಪದೇಶ ಕೊಡಲು ಅಲ್ಲೇ ಸಿಗುತ್ತಿದ್ದ ಹಿರಿಯ ಮಿತ್ರ ಇದೇ ವಿಠಲ.

ವಿಠಲ ವಯಸ್ಸಿನಲ್ಲಿ ಸುಮಾರು ಇಪ್ಪತ್ತು ವರ್ಷಕ್ಕೆ ದೊಡ್ಡವ. ಆದರೆ ಬಹಳ ದಿಲ್ದಾರ್ ಆದಮೀ. ಮಕ್ಕಳ ಜೊತೆ ತಾನೂ ಮಕ್ಕಳೇ ಆಗಿ, ಅವರಕಿಂತ ಒಂದು ಕೈ ಮೇಲೆಯೇ ಆಗಿ, ಜಾಸ್ತಿಯೇ ಗದ್ದಲ ಮಾಡಿ, "ವಿಠಲ್! ಏನಿದು ನಿಂದು ಗದ್ದಲಾ? ಸಣ್ಣು ಹುಡುಗೂರ ಜೋಡಿ ಕೂಡಿ ನೀನು ಸಣ್ಣ ಹುಡುಗೂರ ಗತೆ ದಾಂಧಲೆ ಹಾಕ್ತಿಯಲ್ಲಪಾ?" ಅಂತ ಅಕ್ಕಂದಿರು, ಅವನ ತಾಯಿ ಗದರಿಸಿದರೆ ನಮ್ಮೆಲ್ಲ ಚಿಕ್ಕ ಮಕ್ಕಳ ಪರವಾಗಿ ವಕಾಲತ್ತು ಮಾಡಿ, ಮಂಗ್ಯಾತನ ಮುಂದುವರಿಸಲು ಅನುಕೂಲ ಮಾಡಿಕೊಡುತ್ತಿದ್ದ ಹಿರಿಯ ಮಿತ್ರ ವಿಠಲ.

ವಿಠಲ್ ಫಾರ್ಮಸಿ ಡಿಪ್ಲೋಮಾ ಮಾಡಿಕೊಂಡಿದ್ದ ಅಂತ ನೆನಪು. ಆದರೆ ಮಾಡಿದ ದಂಧೆ LIC ಏಜನ್ಸಿ, ಪೋಸ್ಟಲ್ ಸೇವಿಂಗ್ಸ್ ಸರ್ಟಿಫಿಕೇಟ್ ಮಾರಿದ್ದು, ಇತ್ಯಾದಿ. ಬೇಕಾದಷ್ಟು ಆಸ್ತಿ ಇತ್ತು. ಒಬ್ಬನೇ ಗಂಡು ಮಗ. ಅವಿವಾಹಿತ. ಆದರೂ ಇರಲಿ ಅಂತ ಒಂದು ಕೆಲಸ. ಆಸ್ತಿ ನುಂಗಿದ್ದ ಜನರೊಂದಿಗೆ ಕೋರ್ಟಿನಲ್ಲಿ ಬಡಿದಾಡಿ ಕೊನೆಗೂ ಕೇಸ್ ಗೆದ್ದುಕೊಂಡಿದ್ದು ಮಾಡಿದ ಇನ್ನೊಂದು ಕೆಲಸ. ಕೇಸ್ ಗೆದ್ದರೂ ಆಸ್ತಿ ನುಂಗಿ ಕೂತಿದ್ದ ಅತಿಕ್ರಮಣಕಾರರು ಜಾಗ ಖಾಲಿ ಮಾಡಿರಲಿಲ್ಲ. ಅವರನ್ನು ಹೇಗೆ ಒಕ್ಕಲೆಬ್ಬಿಸುವದು ಅನ್ನುವದೇ ವಿಠಲನ ಕೊನೆಯ ಚಿಂತೆಯಾಗಿತ್ತು.

ಮೊದಲೇ ಹೇಳಿದಂತೆ ವಿಠಲ ಅವಿವಾಹಿತ. ಆರಾಮಾಗಿ ತಿರುಗಾಡಿಕೊಂಡಿದ್ದ. ಒಂದು ವಯಸ್ಸಿನವೆರೆಗೆ ವಿವಾಹವಾಗಬೇಕು ಅಂತಿತ್ತು. ಯಾಕೋ ಕಂಕಣ ಬಲ ಕೂಡಿ ಬರಲಿಲ್ಲ. "ಏನೋ ವಿಠಲ ಎಲ್ಲೂ ಕನ್ಯಾ ಕೂಡಿ ಬರಲಿಲ್ಲೇನೋ?" ಅಂತ ಅಮ್ಮ ಕೇಳಿದರೆ, "ಇಲ್ಲ ಇಕಿನ. ಎಲ್ಲೂ ಕೂಡಿ ಬಂದಿಲ್ಲ. ಮತ್ತ ಮನ್ಯಾಗ ಯಾರೂ ಹಿರಿಯರಿಲ್ಲ ನೋಡು. ಅದಕs ಲಗ್ನ ಆಗವಲ್ಲತವಾ," ಅಂತ ವಿಠಲನ ಬ್ರಹ್ಮಚಾರಿ ರೋಧನ. ತಂದೆ ತೀರಿಹೋಗಿದ್ದರು. ಉಳಿದವರೆಲ್ಲ ಏಳೆಂಟು ಜನ ಅಕ್ಕಂದಿರು. ಅವರಲ್ಲೂ ಹೆಚ್ಚಿನ ಜನ ಅವಿವಾಹಿತರೇ. ಇದ್ದ ಒಬ್ಬ ಕಿಟ್ಟಿ ಕಾಕಾ ಎಂಬ ಚಿಕ್ಕಪ್ಪನೇ ಮಹಿಷಿ ಕುಟುಂಬದ ಹಿರಿಯ. ಅವರೋ ಇದ್ದಿದ್ದು ಮುಂಬೈನಲ್ಲಿ. ಮತ್ತೆ ಅವರೋ ಅಖಂಡ ಬ್ರಹ್ಮಚಾರಿ ಪ್ರೊಫೆಸರ್. ಹೀಗೆಲ್ಲ ಇರುವಾಗ ವಿಠಲ್ ಅವಿವಾಹಿತನಾಗಿ ಉಳಿದ್ದಿದ್ದರಲ್ಲಿ ಆಶ್ಚರ್ಯವಿರಲಿಲ್ಲ. ನಮ್ಮ ಅಮ್ಮನೇ ಅವನಿಗೆ ನಮ್ಮ ಸಿರ್ಸಿ ಕಡೆಯ ನಮ್ಮ ಪೈಕಿಯದೇ ಒಂದು 'ಕೂಸನ್ನು' (ಹುಡುಗಿಯನ್ನು) ಕಟ್ಟೋಣ ಅಂತ ಸ್ವಲ್ಪ ಅಡ್ಯಾಡಿದ್ದರು. ಅವನ ನಸೀಬಲ್ಲಿ ಮದುವೆ ಇರಲಿಲ್ಲ ಅಂತ ಕಾಣುತ್ತದೆ. ಹಾಗಾಗಿ ವರ್ಕ್ ಔಟ್ ಆಗಿರಲಿಲ್ಲ.[೧೯೭೬ ರಲ್ಲಿ ಮೊತ್ತ ಮೊದಲ ಬಾರಿಗೆ ಮುಂಬೈಗೆ ಹೋದಾಗ, ವಿಠಲನ ಅಕ್ಕ, ಅಮ್ಮನ ಗೆಳತಿಯ ಮನೆಯಲ್ಲೂ ಇದ್ದು ಬಂದಿದ್ದು, ಮೊತ್ತ ಮೊದಲ ಬಾರಿಗೆ ಟೀವಿ ನೋಡಿದ್ದು ನೆನಪಿದೆ. ಆವಾಗ ಮುಂಬೈಯಲ್ಲಿ ವಿಮಾನ ಅಪಘಾತವಾಗಿ, ಅದರ ಭೀಕರ ದೃಶ್ಯಗಳನ್ನು ನೋಡಿದ್ದು ನೆನಪಿದೆ. ಮಕ್ಕಳು ಮನೆಗೆ ಬಂದರೆ ಕಿರಿಕಿರಿ ಅಂದುಕೊಂಡಿದ್ದ ಬ್ರಹ್ಮಚಾರಿ ಕಿಟ್ಟಿ ಕಾಕಾ,"ಭಾಳ ಚೊಲೋ ಹುಡುಗುರು ಅವ," ಅಂತ ಶಭಾಶಿ ಸಹಿತ ಕೊಟ್ಟಿದ್ದರು ಅನ್ನುವದೂ ಗೊತ್ತು. ಸಂಗ್ತಿಗೆ ಗದ್ದಲ ಹಾಕಲಿಕ್ಕೆ ವಿಠಲ ಇರಲಿಲ್ಲ ಅಂತ ಕಿಟ್ಟಿ ಕಾಕಾ ಬಚಾವು. ಇಲ್ಲಂದ್ರೆ ಅಷ್ಟೇ! :)]

ವಿಠಲ ಧಾರವಾಡದ ಮನೆಗೆ ಬಂದ ಅಂದರೆ ಏನೋ ಒಂದು ತರಹದ ಖುಷಿ. ನೋಡಿದರೆ ನಗು ಬರುವಂತೆ ಇದ್ದ. ಮೀಡಿಯಂ ಬಿಲ್ಡ್. ಸ್ವಲ್ಪ ಗುಂಡಗುಂಡಗೆ, ಕೆಂಪ ಕೆಂಪಗೆ ಇದ್ದ. ಸಣ್ಣ ಹೊಟ್ಟೆ. ಜಾರಿ ಜಾರಿ ಬೀಳುತ್ತಿದ್ದ ಪ್ಯಾಂಟ್. ಪದೇ ಪದೇ ಅದನ್ನು ಸೊಂಟದ ಮೇಲೆ ಎತ್ತಿಕೊಳ್ಳುತ್ತಿದ್ದ ಅವನ ಕಾರಬಾರೇ ನೋಡಲು ಮಜ.  ಕಿವಿ ಮುಚ್ಚುವ ಕೂದಲದ ಹಿಪ್ಪಿ ಕಟಿಂಗ್ ಹೇರ್ ಸ್ಟೈಲ್. ಕೊಂಚ ವಿರಳವಾದ ಕೂದಲು ಗಾಳಿಗೆ ಹಾರಿ ಹಾರಿ  'ಕ್ಯಾ ಬಾ?' ಅನ್ನುವಂತೆ ಉದ್ದುದ್ದ, ಅಡ್ಡಡ್ಡ ನಿಂತು 'ಎಲ್ಲೆ ವಿಠಲನಿಗೆ ಕರೆಂಟ್ ಶಾಕ್ ಹೊಡೆದದೋ ಏನೋ?' ಅನ್ನಿಸಿ ನಗು ಬರುತ್ತಿತ್ತು. ದಿನಪೂರ್ತಿ ಅಡಿಕೆ (ಹಾಲಡಿಕೆ) ಜಗಿದೂ ಜಗಿದೂ, ನಾಲಿಗೆ ದಪ್ಪವಾಗಿ, ಒಂದು ತರಹದ ವಿಶಿಷ್ಟ ತೊದಲುವಿಕೆ ಅವನ ಮಾತಿಗೊಂದು ರಂಗು ತಂದು ಕೊಡುತ್ತಿತ್ತು. ಆ ಮಾತುಗಳಲ್ಲಿ ವಿಠಲನ ಜೋಕುಗಳನ್ನು ಕೇಳುವದೇ ಒಂದು ಮಜಾ. ಜೋಕು ಬೇಕಾಗಿರಲೇ ಇಲ್ಲ. ಅವನು ಸಹಜ ಮಾತಾಡಿದರೂ ನಗು ಬರುತ್ತಿತ್ತು. ಮತ್ತೆ ಆ ಪುಣ್ಯಾತ್ಮ ಮನಸ್ಸು ಬಿಚ್ಚಿ, ಭಿಡೆ ಬಿಟ್ಟು ನಗುತ್ತಿದ್ದ ಪರಿ. ಗಹಗಹಿಸಿ ನಗುತ್ತಿದ್ದ ರಕ್ಕಸ ನಗೆ. ವಿಠಲ ಮನೆಗೆ ಬಂದನೆಂದರೆ ಒಂದೆರೆಡು ತಾಸು ಫುಲ್ ಮಜಾ. ಬಹಳ ಹಿಂದೆ ನಮ್ಮ ಶಾಲೆಗೇ ಹೋಗಿದ್ದ ವಿಠಲನಿಗೆ ನಮಗೆ ಮತ್ತೆ ಅವನಿಗೆ ಕಾಮನ್ ಆಗಿದ್ದ ಮಾಸ್ತರು, ಟೀಚರುಗಳನ್ನು ಕಂಡಾಪಟ್ಟೆ ಹಾಸ್ಯ ಮಾಡುವದು ಹವ್ಯಾಸ. ಮತ್ತೆ ಮಾಳಮಡ್ಡಿಯಲ್ಲಿಯೇ ಸದಾ ಇದ್ದು, ಎಲ್ಲ ವಿಷಯ ತಿಳಿದುಕೊಂಡಿರುತ್ತಿದ್ದ ಅವನಿಗೆ ನಮ್ಮ ಮಾಸ್ತರುಗಳು ಎಲ್ಲೋ ಕದ್ದು ಬೀಡಿ ಸೇದಿದ್ದು, ಎಲ್ಲೋ ಹೋಗಿ ಗಂಟಲಿಗೆ ಒಂದಿಷ್ಟು ಎಣ್ಣೆ ಸುರುವಿಕೊಂಡಿದ್ದು ಎಲ್ಲ ಗೊತ್ತಿರುತ್ತಿತ್ತು. ಅದನ್ನೆಲ್ಲ ತುಂಬ ಮಜವಾಗಿ ಹೇಳಿ ನಗಿಸಿದ್ದೇ ನಗಿಸಿದ್ದು ವಿಠಲನ ಸ್ಪೆಷಾಲಿಟಿ. 

ತುಂಬ ಸಣ್ಣವನಿದ್ದಾಗ ಜಗತ್ತಿನ ಅಟ್ಲಾಸಿನಲ್ಲಿ ಆಫ್ರಿಕಾದ ಜಾಂಬಿಯಾ ದೇಶ ತೋರಿಸಿದ್ದ ವಿಠಲ ೧೯೯೫ ರ ಸಮಯದಲ್ಲಿ ಟಾಂಜಾನಿಯಾಕ್ಕೆ ಹೋಗುವ ದಾರಿ ತೋರಿಸಿದ್ದ. ೧೯೯೫ ರಲ್ಲಿ ನನಗೆ ಪೂರ್ವ ಆಫ್ರಿಕಾದ ಟಾಂಜಾನಿಯಾಕ್ಕೆ ಒಂದು ವರ್ಷ ಕೆಲಸದ ಮೇಲೆ ಹೋಗುವ ಅವಕಾಶ ಬಂದಿತ್ತು. ಆದರೆ ಆಫ್ರಿಕಾದ ಬಗ್ಗೆ ಮಾಹಿತಿ ದುರ್ಲಭವಾಗಿತ್ತು. ಆಗೆಲ್ಲ ಇಂಟರ್ನೆಟ್ ಇಲ್ಲವೇ ಇಲ್ಲ. ನೌಕರಿ ಕೊಡಿಸಿದ್ದ ಅಹಮದಾಬಾದಿನ ಕನ್ಸಲ್ಟೆಂಟ್ ಸರಿಯಾಗಿ ಮಾಹಿತಿ ಕೊಡುತ್ತಿರಲಿಲ್ಲ. ನಮಗೆ ಗೊತ್ತಿದ್ದವರು ಯಾರಾದರೂ ಆಫ್ರಿಕಾದಲ್ಲಿ ಇದ್ದು ಬಂದಿದ್ದಾರಾ ಅಂತ ನೆನಪು ಮಾಡಿಕೊಳ್ಳುತ್ತ ಹೋದಾಗ ನೆನಪಾಗಿದ್ದು ಇದೇ ವಿಠಲನ ಇನ್ನೊಬ್ಬ ಅಕ್ಕ, ಖ್ಯಾತ ಸಾಹಿತಿ ಸುನಂದಾ ಬೆಳಗಾಂಕರ್ ಅವರು. ಅವರು ಹಲವಾರು ವರ್ಷ ಆಫ್ರಿಕಾದ ಜಾಂಬಿಯಾ, ಸೂಡಾನ್ ದೇಶಗಳಲ್ಲಿ ಇದ್ದು, ೧೯೯೫ ರ ಹೊತ್ತಿಗೆ ಬೆಂಗಳೂರಿಗೆ ವಾಪಸ್ ಬಂದು ನೆಲೆಸಿದ್ದರು. ಅವರ ಬೆಂಗಳೂರಿನ ಫೋನ್ ನಂಬರ್ ಸಂಪಾದಿಸಿಕೊಂಡು ಅಮ್ಮ ಬೆಂಗಳೂರಿಗೆ ಬಂದಿದ್ದಳು. ಸುನಂದಾ ಅವರೂ ಸಹ ಅಮ್ಮನಿಗೆ ಪರಿಚಯದವರೇ. ನಾನು ವಿದೇಶಕ್ಕೆ ಹೋಗುವ ಮುನ್ನ ಕಳಿಸಲು ಬೆಂಗಳೂರಿಗೆ ಬಂದಿದ್ದ ಅಮ್ಮ, ಫೋನ್ ಮಾಡಿ, ಸುನಂದಾ ಬೆಳಗಾಂಕರ್ ಜೊತೆ ಮಾತಾಡಿ, ಅವರಿಗೆ ನನ್ನ ಪರಿಚಯ ಮಾಡಿಕೊಟ್ಟಿದ್ದರು. ಅವರ ಮನೆಗೆ ಹೋಗಿ ಮಾತಾಡಿ, ಸಿಕ್ಕಷ್ಟು ಮಾಹಿತಿ ತೆಗೆದುಕೊಂಡು ಬರೋಣ ಅಂತ ವಿಚಾರ ಮಾಡಿದ್ದೆ. ಅದೇ ಹೊತ್ತಿನಲ್ಲಿ ಗೆಳೆಯ ವಿಠಲ ಕೂಡ ಬೆಂಗಳೂರಿನಲ್ಲಿಯೇ ಅಕ್ಕನ ಮನೆಯಲ್ಲಿಯೇ ಇರಬೇಕೇ! ತುಂಬ ಒಳ್ಳೆಯದೇ ಆಯಿತು. ಧಾರವಾಡದಲ್ಲಿ ವಿಠಲನ ಭೆಟ್ಟಿ ಆಗದೇ ಎರಡು ಮೂರು ವರ್ಷ ಆಗಿ ಹೋಗಿತ್ತು. ಹೋಗಿ ಅವನ ಜೊತೆ ಮಂಗ್ಯಾತನ ಮಾಡಿಯೂ ಬಂದಂತಾಯಿತು ಅಂತ ಹೇಳಿ ಅವನ ಅಕ್ಕ ಸುನಂದಾ ಬೆಳಗಾಂಕರ್ ಅವರನ್ನು ಭೆಟ್ಟಿ ಮಾಡಲು ಅವರ ಕನಿಂಗಹ್ಯಾಮ್ ರೋಡ್ ಮನೆಗೆ ಹೋದೆ. ಸುನಂದಾ, ಅವರ ಪತಿ ಬೆಳಗಾಂಕರ್, ಅವರ ಮಗ ಎಲ್ಲ ತುಂಬ ಪ್ರೀತಿಯಿಂದ ಕಂಡು, ಆಫ್ರಿಕಾ, ಟಾಂಜಾನಿಯಾ ಬಗ್ಗೆ ಎಲ್ಲ ಮಾಹಿತಿ ಕೊಟ್ಟು, ಮಸ್ತಾಗಿ ನಾಷ್ಟಾ ಮಾಡಿಸಿದ್ದರು. ಅದಕ್ಕೆ ಚಿರಋಣಿ. ಆ ಮಾಹಿತಿಯೆಲ್ಲ ಟಾಂಜಾನಿಯಾಕ್ಕೆ ಹೋಗಲು, ಹೋಗಿ ಸೆಟಲ್ ಆಗಲು ಎಲ್ಲ ತುಂಬಾ ಉಪಯೋಗವಾಯಿತು. ನಮ್ಮದೆಲ್ಲ ಮಾತುಕತೆ ನಡೆಯುತ್ತಿದ್ದಾಗ ಮಂಗ್ಯಾತನ ಮಾಡಲು ಅವಕಾಶ ಸಿಗದೇ ಚಡಪಡಿಸುತ್ತ ಕುಳಿತಿದ್ದ ವಿಠಲ! ಯಾವಾಗ ಬಂದ ಕೆಲಸ ಮುಗಿದು, ನಾನು ಮತ್ತು ವಿಠಲ ಹೊರಗೆ ಬಂದು, ಚಹಾ ಕುಡಿಯುತ್ತ ಮಂಗ್ಯಾತನ ಮಾಡಬಹುದೋ, ಹರಟೆ ಹೊಡೆಯಬಹುದೋ ಅಂತ ನಾನೂ ಕಾತುರದಲ್ಲೇ ಇದ್ದೆ ಅನ್ನಿ. ನಮ್ಮ ಟಿಪಿಕಲ್ ಧಾರವಾಡಿ ಮಂಗ್ಯಾತನ ಮತ್ತು ಹರಟೆ!

ಬಂದ ಕೆಲಸ ಮುಗಿಯಿತು. ಸುನಂದಾ ಬೆಳಗಾಂಕರ್ ಕುಟುಂಬಕ್ಕೆ ಒಂದು ದೊಡ್ಡ ಧನ್ಯವಾದ ಅರ್ಪಿಸಿ ಹೊರಡಲು ತಯಾರಾದೆ. "ಹೆಗಡೆಯವರ ಮಗನ್ನ ಇಲ್ಲೇ ಕಳಿಸಿ ಬರ್ತೇನಿ ಅಕ್ಕಾ," ಅಂತ ಹೇಳುತ್ತ ವಿಠಲ ಕೂಡ ಹೊರ ಬರಲು ಚಪ್ಪಲಿ ಮೆಟ್ಟಿದ. ಅವ ಬರದಿದ್ದರೆ ನಾನೇ, "ಏ ವಿಠಲ್ ಅಲ್ಲಿ ತನಕಾ ಬಾ ಅಲ್ಲಾ?" ಅಂತ ಕರೆಯುತ್ತಿದ್ದೆ. ಆ ಮಾತು ಬೇರೆ ಬಿಡಿ.

ಕನಿಂಗಹ್ಯಾಮ ರೋಡಿನ ಆಕಡೆ, ಎಲ್ಲೋ ಪೋಲೀಸ್ ಕಮಿಷನರ್ ಆಫೀಸಿನ ಹಿಂದುಗಡೆ, ಒಂದು ಡಬ್ಬಾ ಅಂಗಡಿಯಲ್ಲಿ ಕೂತು ಚಹಾ ಹೀರಿದೆವು. ಧಾರವಾಡದಲ್ಲಿ ಹೆಡ್ ಪೋಸ್ಟ್ ಆಫೀಸಿನ ಪಕ್ಕದ ಡಬ್ಬಾ ಅಂಗಡಿಯಲ್ಲಿ ಹಲವಾರು ಬಾರಿ ನಾನು ವಿಠಲ ಚಹಾ ಕುಡಿದಂತೆಯೇ. ವಿಠಲ ಸಿಗರೇಟು ಹಚ್ಚಿದ. ಅವನಿಗೆ ಚಹಾದ ಜೊತೆ ಅದು ಬೇಕು. ನನಗೂ ಆಫರ್ ಮಾಡಿದ. ನನಗೆ ಸಿಗರೇಟ್ ಅಭ್ಯಾಸವಿಲ್ಲ. "ಏ ಸಿಗರೇಟ್ ಬ್ಯಾಡೋ. ನಾ ಚಹಾ ಕುಡದು ಮಾಣಿಕ್ ಚಂದ್ ಹಾಕ್ಕೋತ್ತೀನಿ. ನೀ ಹೊಡಿ ದಂ," ಅಂತ ಹೇಳಿದೆ. "ಸಿಗರೇಟ್ ಅಲ್ಲದಿದ್ದರೂ ಮಾಣಿಕ್ ಚಂದ್ ಚಟಾನಾದ್ರೂ ಅದ ಅಲ್ಲ ಹುಡುಗಗ," ಅಂತ ಹೇಳಿ ವಿಠಲ ಖುಶಿಯಾದ. "ಎಲ್ಲಾ ಚಟಾ ಒಮ್ಮೆ ಮಾಡಿ ನೋಡಿಬಿಡಬೇಕು ನೋಡಪಾ ಇವನs," ಅಂತ ವಿಠಲೋಪದೇಶ.

"ಏ ವಿಠಲ್, ನಾಳೆ ನಮ್ಮನಿಗೆ ಮಧ್ಯಾನ ಊಟಕ್ಕೆ ಬಂದು ಬಿಡೋ. ನಮ್ಮ ಅಮ್ಮ ನಿನ್ನ ಊಟಕ್ಕ ಕರೆದು ಬಾ ಅಂತ ಹೇಳ್ಯಾಳ ನೋಡು," ಅಂತ ಅಮ್ಮ ಹೇಳಿದಂತೆ ಮರುದಿವಸದ ಊಟಕ್ಕೆ ಆಹ್ವಾನ ಕೊಟ್ಟೆ. "ನಿಮ್ಮ ಅವ್ವಾ ಅಂದ್ರ ಅಕಿ ಅನ್ನಪೂರ್ಣೇಶ್ವರಿ ಇದ್ದಂಗ ನೋಡು. ಮುದ್ದಾಂ ಬರ್ತೇನಿ," ಅಂತ ಹೇಳಿದ ವಿಠಲ ನನ್ನ ಮನೆ ಕಡೆ ಹೋಗುವ ಬಸ್ ಹತ್ತಿಸಿ ವಾಪಸ್ ಹೋಗಿದ್ದ.

ಮರುದಿವಸ ಡೇಟ್ ಬರೋಬ್ಬರಿ ನೆನಪಿದೆ. ೯ ಅಕ್ಟೋಬರ್ ೧೯೯೫. ಟಾಂಜಾನಿಯಾಕ್ಕೆ ಹೊರಡುವ ಹಿಂದಿನ ದಿವಸ. ಹೇಳಿದ ಟೈಮಿಗೆ ಸರಿಯಾಗಿ ವಿಠಲ್ ಹಾಜರ್. ಸುಂದರ ಹೂವಿನ ಗುಚ್ಚದೊಂದಿಗೆ ಬಂದುಬಿಟ್ಟಿದ್ದ. ಫಾರೆನ್ನಿಗೆ ಹೊರಟಿದ್ದ ನನಗೆ ಹೂಗುಚ್ಛ ಕೊಟ್ಟು ಕಳಿಸಲಿಲ್ಲ ಅಂದ್ರೆ ಹೇಗೆ? ವಿಠಲನ ಅಂತಹ ವಿಚಾರಕ್ಕೆ, ಭಾವನೆಗಳಿಗೆ, ಪ್ರೀತಿಗೆ, ವಿಶ್ವಾಸಕ್ಕೆ  ನಮೋ ನಮಃ!

ಆಗ ಬೆಂಗಳೂರಿನ ದೋಮಲೂರಿನ ಅಣ್ಣನ ಮನೆಯಲ್ಲಿ ಇದ್ದೆ. ಅಣ್ಣ, ಅತ್ತಿಗೆ ಆಫೀಸಿಗೆ ಹೋಗಿದ್ದರು. ಮನೆಯಲ್ಲಿ ನಾನು, ಅಮ್ಮ ಮತ್ತೆ ಊಟಕ್ಕೆ ಬಂದಿದ್ದ ವಿಠಲ. ಮಸ್ತ ಊಟ ಮಾಡಿ, ಪಕ್ಕಾ ಮಂಗ್ಯಾತನ ಮಾಡುತ್ತ, ಎರಡು ಮೂರು ವರ್ಷದಿಂದ ಮಾತಾಡಿರದೇ ಇದ್ದ ಎಲ್ಲ ಹಾಳು ಹರಟೆ ಹೊಡೆದು, ಒಂದರ ಮೇಲೊಂದು ಎಲೆ ಅಡಿಕೆ ಜಗಿದು ಮುಗಿಸುವ ತನಕ ಮಧ್ಯಾನದ ಚಹಾ ಕುಡಿಯುವ ಹೊತ್ತು. "ಇಬ್ಬರೂ ಕೂಡಿ ಏನು ಗದ್ದಲಾ ಹಾಕ್ಲೀಕತ್ತಿದ್ದಿರೋ!? ಹಾಂ!?" ಅಂತ ಹಾಂಗೇ ಸುಮ್ಮನೆ ಜಬರಿಸುತ್ತ ಎದ್ದು ಬಂದ ಅಮ್ಮ ಮಾಡಿಕೊಟ್ಟ ಚಹಾ ಕುಡಿದ ವಿಠಲ ಹೊರಟು ನಿಂತಿದ್ದ. ಹತ್ತಿರದ ದೋಮಲೂರ ಬಸ್ ಸ್ಟ್ಯಾಂಡಿಗೆ ಹೋಗಿ ಬಿಟ್ಟು ಬಂದಿದ್ದೆ. ಕೊನೇ ಬಾರಿಗೂ, ಏನೋ ಒಂದು ಖತರ್ನಾಕ್, ಪಕ್ಕಾ ಧಾರವಾಡಿ ಜೋಕ್, ತನ್ನದೇ ಶೈಲಿಯಲ್ಲಿ ಹೊಡೆದೇ ಬಸ್ ಹತ್ತಿದ್ದ ವಿಠಲ ಕೊನೇ ಬಾರಿಗೆ 'ಆಲ್ ದಿ ಬೆಸ್ಟ್' ಹೇಳಿ, ಕೈ ಬೀಸಿ ಮರೆಯಾಗಿದ್ದ. ೧೯೯೫, ಅಕ್ಟೋಬರ್ ೯.

ಅದೇ ಕೊನೆ. ಮತ್ತೆ ವಿಠಲನ ಭೆಟ್ಟಿ ಆಗೇ ಇಲ್ಲ. ನಂತರ ನಾವು ವಿದೇಶದಲ್ಲಿ ಸೆಟಲ್ ಆದ ಮೇಲೆ ಎರಡು ವರ್ಷಕ್ಕೋ, ಮೂರು ವರ್ಷಕ್ಕೋ ಒಂದು ಸಲ, ಎರಡು ಮೂರು ವಾರದ ಮಟ್ಟಿಗೆ ಧಾರವಾಡಕ್ಕೆ ಹೋಗುವದು ಅಷ್ಟೇ. ಮತ್ತೆ ಅದೆಲ್ಲ ಫೇಸ್ ಬುಕ್ ಇಲ್ಲದ ಕಾಲ. ಟಚ್ ತಪ್ಪಿ ಹೋದವರು ಹೋಗಿಯೇ ಬಿಟ್ಟಿದ್ದರು. ಧಾರವಾಡಕ್ಕೆ ಹೋದ ಟೈಮಿನಲ್ಲಿ ವಿಠಲನೂ ನಮ್ಮ ಮನೆಗೆ ಬಂದಿರಲಿಲ್ಲ ಅಂತ ಅನ್ನಿಸುತ್ತದೆ. ಅಲ್ಲಿ ಇಲ್ಲಿ ಅವನ, ಮಹಿಷಿಯವರ ಮನೆಯ ಸುದ್ದಿ ಬರುತ್ತಿತ್ತು ಮಾತಾಡುವಾಗ. ಅವನನ್ನು, ಅವನ ಜೋಕುಗಳನ್ನು ನೆನೆಸಿಕೊಂಡು ನಕ್ಕಿದ್ದು ಇದೆ. ಆದ್ರೆ ಮತ್ತೆ ವಿಠಲ ಮುಖತಃ ಸಿಕ್ಕಿರಲಿಲ್ಲ.

೨೦೧೧ ರಲ್ಲಿ ಫೇಸ್ ಬುಕ್ ಮೇಲೆ ಬಂದು, ಧಾರವಾಡದ ಅನೇಕಾನೇಕ ಹಳೆಯ ಸಂಪರ್ಕಗಳು ವಾಪಸ್ ಸಿಕ್ಕರೂ ವಿಠಲ ಎಲ್ಲೂ ಕಂಡು ಬರಲಿಲ್ಲ. ಆದರೆ ಆತ್ಮೀಯ ಹಳೆಯ ಮಿತ್ರ 'ಅಜೇಯ ಕುಲಕರ್ಣಿ' ಸಿಕ್ಕ. ಅವನು ವಿಠಲನಿಗೆ ದೂರದ ಸಂಬಂಧಿ ಅಂತ ನಾನೇ ಕಂಡು ಹಿಡಿದು, ಖಾತ್ರಿ ಮಾಡಿಕೊಂಡ ನಂತರ ವಿಠಲನ ಬಗ್ಗೆ ಮಾತಾಡದೇ ನಮ್ಮಿಬ್ಬರ ಮಾತುಕತೆ ಮುಗಿಯುತ್ತಿರಲಿಲ್ಲ. ಫೋನ್ ಮಾಡುತ್ತಿದ್ದುದು ಅಜೇಯನಿಗೇ ಆದರೂ ವಿಠಲನ ಸುದ್ದಿ ಕೇಳಿ, ಒಂದಿಷ್ಟು ವಿಠಲನ ಜೋಕ್ ನೆನಪಿಸಿಕೊಂಡು ಬಿದ್ದು ಬಿದ್ದು ನಗದೇ ನಮ್ಮ ಮಾತೇ ಮುಗಿಯುತ್ತಿರಲಿಲ್ಲ. ಮತ್ತೆ ಈ ಅಜೇಯ ಕುಲಕರ್ಣಿ ಒಂದು ಕಾಲದಲ್ಲಿ ವಿಠಲನ ಜೊತೆ ಇನ್ಸೂರೆನ್ಸ್ ಬಿಸಿನೆಸ್ಸ್ ಕಲಿಯುವ, ಮಾಡುವ ಶಿಷ್ಯನಾಗಿದ್ದ ಅಂತ ಕೇಳಿದಾಗಿಂದ ಅವನನ್ನು ರೇಗಿಸಿದ್ದೇ ರೇಗಿಸಿದ್ದು. ರೇಗಿಸಿಕೊಂಡು ರೇಗಿಸಿಕೊಂಡು ಸುಸ್ತಾಗಿದ್ದ ಅಜೇಯ ನನಗೆ ವಾರ್ನಿಂಗ್ ಕೊಡುತ್ತಿದ್ದ, "ಮಹೇಶ್! ಮುಂದಿನ ಸಲೆ ನೀ ಇಂಡಿಯಾಕ್ಕ ಬರೋದನ್ನ ತಿಳಿಸಿ ನೋಡು! ಹೋಗಿ ನಿನ್ನ ಪರಮ ಮಿತ್ರ ವಿಠಲಗ ಹೇಳಿ ಬಿಡ್ತೇನಿ. ಈಗ ನೀ ಹ್ಯಾಂಗ ಅವನ ಬಗ್ಗೆ ಕೇಳಿ ಕೇಳಿ ನನ್ನ ತಲಿ ತಿನ್ನಲಿಕತ್ತಿ ಹಾಂಗ ನಿನ್ನ ತಲಿ ತಿನ್ನಲಿ ಆವಾ ವಿಠಲ್!" ಅಂತ ಅಜೇಯ ಹೇಳಿದರೆ ಹುಚ್ಚರ ಹಾಗೆ ನಗುವೇ ನಮ್ಮ ಉತ್ತರ. ಇದಾದ ನಂತರವೂ ಒಂದೆರೆಡು ಬಾರಿ ಧಾರವಾಡಕ್ಕೆ ಹೋದರೂ ವಿಠಲ ಸಿಗುವ ಸಂದರ್ಭ ಬರಲಿಲ್ಲ. ಅವನನ್ನು ಹುಡುಕಿಕೊಂಡು ನಾವೂ ಹೋಗಲಿಲ್ಲ. ಹಳೆಯ ಗೆಳೆಯರ ಜೊತೆ ಕನೆಕ್ಟ್ ಆಗಿ, ಅವರ ಜೊತೆ ರಾತ್ರಿಯಿಡಿ ಪಾರ್ಟಿ ಮಾಡಿ, ಹಗಲಿಡೀ ಮಲಗಿ, ಎರಡು ವಾರ ಹೋಗಿದ್ದೇ ತಿಳಿಯಲಿಲ್ಲ. ಹೀಗಾಗಿ ಮತ್ತೊಮ್ಮೆ ವಿಠಲ ಸಿಗಲೇ ಇಲ್ಲ. ಮತ್ತೊಮ್ಮೆ ಫುಲ್ ಮಂಗ್ಯಾತನ ಮಾಡಲೇ ಇಲ್ಲ. ಇಲ್ಲದ ಹಾಳು ಹರಟೆ ಹೊಡೆಯಲೇ ಇಲ್ಲ. ಇದೆಲ್ಲ ವಿಠಲ ಪರಲೋಕವಾಸಿಯಾದ ನಂತರ ನೆನಪಾಯಿತು.

ಯಾವಾಗಲೂ ಒಂದು ತುಂಟ ಮಗುವಿನಂತಹ ನಗೆ ನಗುತ್ತ, ತಾನೂ ನಕ್ಕು, ಎಲ್ಲರನ್ನೂ ನಗಿಸುತ್ತಲೇ, ನಗೆ ಮುಗಿಸಿ ಲೋಕಕ್ಕೆ ವಿದಾಯ ಹೇಳಿದ ವಿಠಲನ ಆತ್ಮಕ್ಕೆ ಶಾಂತಿ ಸಿಗಲಿ!

[ವಿಠಲನ ಫೋಟೋ ಸಿಕ್ಕಿಲ್ಲ. ಯಾರಾದರೂ ಧಾರವಾಡಿಗಳು ಕೃಪೆ ಮಾಡಿ ಕಳಿಸಿಕೊಟ್ಟರೆ ಮುದ್ದಾಂ ಹಾಕುತ್ತೇನೆ.]

* ಇಂಟರ್ನೆಟ್ ನೋಡಿದರೆ ವಿಠಲ ಮತ್ತು ವಿಠ್ಠಲ ಎರಡೂ ತರಹ ಬರೆಯುತ್ತಾರೆ ಅಂತ ಕಾಣಿಸುತ್ತದೆ. ಯಾವದು ಹೆಚ್ಚು ಸರಿ ಅಂತ ಗೊತ್ತಿಲ್ಲ. ಧಾರವಾಡ ಕಡೆ ಮಾತಾಡುವಾಗ ವಿಠ್ಠಲ ಅಂತ ಒತ್ತು ಕೊಟ್ಟು ಮಾತಾಡುತ್ತಿದ್ದುದು ಅಂತ ನೆನಪು. ಇಲ್ಲಿನ ಕನ್ನಡ ಎಡಿಟರ್ ವಿಠಲ ಅಂತ ಬರೆದು ಹಾಗೇ ಎಲ್ಲ ಕಡೆ ಬಂದಿದೆ. 

1 comment:

Vimarshak Jaaldimmi said...


Very nice memories!

May Vitthal's soul rest in peace, and his "be happy" attitude live long!

Did he have a buddy named "Sneezappa?"