Monday, September 08, 2014

'ಫಾಲ್ಕನ್' ಎಂಬ ಖಲಿಸ್ತಾನಿ ಡಬಲ್ ಏಜೆಂಟ್ ಹೀಗೆ ಮುಗಿದುಹೋಗಿದ್ದ!

೧೯೯೦. ಅಮೃತಸರ್, ಪಂಜಾಬ್.

ಆತ ಒಬ್ಬ ಖಲಿಸ್ತಾನಿ ಮುಖಂಡ. ಸಿಖ್ ಯುವ ಮುಖಂಡ. ಉಗ್ರವಾದಿ ಅಂತ ಕೂಡ ಬ್ರಾಂಡ್ ಆಗಿದ್ದ. ಸುಮಾರು ವರ್ಷಗಳ ನಂತರ ಜೇಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಅವನನ್ನು ಭೆಟ್ಟಿ ಮಾಡುವವರ ಸಂಖ್ಯೆ ಜಾಸ್ತಿಯೇ ಇತ್ತು. ಅವತ್ತು ಸಹ ಹಾಗೇ ಆಯಿತು.

ಯಾರೋ ಎರಡು ಮೂರು ಜನ ಬಂದರು. ಮಾತಾಡಬೇಕು ಅಂದರು. ಪರಿಚಿತರೇ ಇರಬೇಕು. ಅವರೊಂದಿಗೆ ಮಾತಾಡುತ್ತ ಕೂತ. ಹೊರಗಿನ ಡ್ರಾಯಿಂಗ್ ರೂಮಿನಲ್ಲಿ. ಬಂದವರು ಹಂತಕರೆಂದು ಅವನಿಗೆ ಗೊತ್ತಿತ್ತಾ? ಇರಲಿಕ್ಕಿಲ್ಲ. ಸಂಶಯ ಬಂದಿತ್ತಾ? ಗೊತ್ತಿಲ್ಲ. ಮಾತಾಡಲು ಬಂದು ಕೂತವರು ಧರಿಸಿದ್ದ ನಿಲುವಂಗಿಯಂತಿದ್ದ ಸಿಖ್ ಜನರ ದಿರುಸಿನಲ್ಲಿ ಮಾತ್ರ ಕಾಡತೂಸು ತುಂಬಿದ ಪಿಸ್ತೂಲುಗಳು ಮೊರೆಯಲು ರೆಡಿಯಾಗಿ ಕೂತಿದ್ದವು.

ಕೊಲ್ಲಲು ಬಂದವರು ಮಾತಾಡುತ್ತ ಏಕೆ ಕೂತರು!?

ಯಾಕೆ!? why?

ಕೊಲ್ಲಲು ಬಂದವರು ಯಾಕೆ ಕಾಯುತ್ತ ಕುಳಿತರು ಅಂತ ನಂತರ ತಿಳಿಯಿತು.

ಅಷ್ಟರಲ್ಲಿ ಅವನ ಮನೆಯ ಲ್ಯಾಂಡ್ ಲೈನ್ ಫೋನ್ ರಿಂಗಾಯಿತು. ಆ ಫೋನ್ ಬೆಡ್ ರೂಮಿನಲ್ಲಿತ್ತು. ಯಾರೋ ಫೋನ್ ಎತ್ತಿದರು. ಹೊರ ಬಂದು, 'ಫೋನ್ ಇದೆ ನಿಮಗೆ,' ಅಂದು ಹೋದರು. 'ಒಂದು ನಿಮಿಷ. ಫೋನ್ ಬಂದಿದೆ. ಮಾತಾಡಿ ಬಂದು ಬಿಡುತ್ತೇನೆ. ನೀವು ಕುಳಿತಿರಿ,' ಅಂತ ಹೇಳಿದ ಖಲಿಸ್ತಾನಿ ಮುಖಂಡ ಎದ್ದು ಒಳಗೆ ಹೋದ.

ಹಂತಕರು ತಯಾರಾದರು. ಕೊಲ್ಲಲು ಮೊದಲನೇ ಸಿಗ್ನಲ್ ಬಂದಾಗಿತ್ತು. ಫೋನ್ ಬರುತ್ತದೆ ಅಂತ ಹಂತಕರಿಗೆ ಗೊತ್ತಿತ್ತು. ಅದೇ ಮೊದಲ ಸಿಗ್ನಲ್. ಆದರೆ ಇನ್ನೊಂದು ವಿಷಯ ಖಾತ್ರಿಯಾಗಬೇಕಿತ್ತು. ಅದು ಖಾತ್ರಿಯಾಗದೇ ಹಂತಕರು ಗುಂಡು ಹಾರಿಸಿ ಕೊಲ್ಲುವಂತಿರಲಿಲ್ಲ.

ಒಳಗೆ ಹೋದವ ಫೋನ್ ಎತ್ತಿಕೊಂಡು ಮಾತಾಡಲು ಶುರು ಮಾಡಿದ. ಹಂತಕರು ಸದ್ದಿಲ್ಲದೆ ಎದ್ದರು. ಕೊಲ್ಲುವ ಮೊದಲು ಹಂತಕರಿಗೆ ಒಂದು ಮುಖ್ಯ ವಿಷಯವನ್ನು ಅವನ ಫೋನ್ ಸಂಭಾಷಣೆಯ ಮೂಲಕವೇ ಖಾತ್ರಿ ಮಾಡಿಕೊಳ್ಳಬೇಕಿತ್ತು.

ಸನ್ನದ್ಧ ಹಂತಕರು ಡ್ರಾಯಿಂಗ್ ರೂಂ ಬಿಟ್ಟು ಎದ್ದು ಬಂದವರೇ, ಸೈಲೆಂಟ್ ಆಗಿ ಬೆಡ್ ರೂಂ ಹೊರಗೆ ನಿಂತು, ಫೋನ್ ಸಂಭಾಷಣೆ ಆಲಿಸಲು ನಿಂತರು. ಬಹಳ ಹೊತ್ತು ಕಾಯುವ ಸಂದರ್ಭ ಬರಲೇ ಇಲ್ಲ. ಅವನ ಸಾವಿನ ಘಳಿಗೆ ಬಂದಿತ್ತು ಅಂತ ಕಾಣುತ್ತದೆ. ಕೊಲ್ಲಲು ಎರಡನೇ ಮತ್ತು ಆಖ್ರೀ ಸಿಗ್ನಲ್ ಸಿಕ್ಕೇ ಬಿಟ್ಟಿತು.

'ಹಲೋ ! ಸತ್ ಶ್ರೀ ಅಕಾಲ್ ಜೀ! ಕೆನಡಾದಿಂದ ಮಾತಾಡುತ್ತಿದ್ದೀರಾ? ಏನು ವಿಷಯ?' ಅಂತ ಕೇಳಿದ ಖಲಿಸ್ತಾನಿ ಯುವ ಮುಖಂಡ.

ಕೆನಡಾ!

ಇದೇ! ಇದೇ ಒಂದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಫೋನ್ ಕೆನಡಾದಿಂದ ಬಂದಿದೆ ಅಂತ ಖಾತ್ರಿಯಾಯಿತು.

ಹಂತಕರಿಗೆ ಕೊಟ್ಟ ಸುಪಾರಿಯಲ್ಲಿ ಅದೊಂದು ಕರಾರನ್ನು ಹಾಕಲಾಗಿತ್ತು. 'ಕೆನಡಾದಿಂದ ಫೋನ್ ಬರುತ್ತದೆ. ಇವನು ಕೆನಡಾ  ಫೋನ್ ಕಾಲ್ ಮೇಲೆ ಇದ್ದಾನೆ ಅಂತ ಖಾತ್ರಿಯಾದ ಮೇಲೆಯೇ ಅವನಿಗೆ ಗುಂಡಿಕ್ಕಿ. ಆಕಡೆಯಿರುವ ಕೆನಡಾದ ಮನುಷ್ಯನಿಗೆ ಗುಂಡು ತಿಂದ ಇವನ ಚೀತ್ಕಾರ ಕೇಳಬೇಕು!' ಅಂತ.

ಫೋನ್ ಬಂತು. ಕೆನಡಾದಿಂದ. ಮಾತಾಡುತ್ತಿದ್ದಾನೆ. ಖಾತ್ರಿಯಾಯಿತಲ್ಲ? ಮತ್ತೇನು? ಬಂದಿದ್ದ ಹಂತಕರಿಗೆ ಕೊಲ್ಲುವದು ಹೊಸದೇ? ಒಳಗೆ ಬಂದವರೇ ಢಂ! ಢಂ! ಅಂತ ಗುಂಡು ನುಗ್ಗಿಸಿದರು. ಫುಲ್ ಮ್ಯಾಗಜಿನ್ ಖಾಲಿ ಮಾಡಿದರು. 'ವಾಹೇ ಗುರು!' ಅಂತ ಚೀರುತ್ತ ಕುಸಿದ ಸಿಖ್ ಯುವ ಮುಖಂಡ. ಗುಂಡು ಹೊಡೆದವರು ಪರಾರಿ. ಗೇಮ್ ಓವರ್!

ಆಕಡೆ ಕೆನಡಾದಲ್ಲಿ ಅದನ್ನೆಲ್ಲ ಒಂದು ತರಹದ ಸಮಾಧಿ ಸ್ಥಿತಿಯಲ್ಲಿ ಕುಳಿತು ಕೇಳಿದ ಒಬ್ಬ ಸಿಖ್ ಉಗ್ರವಾದಿ ಮುಖಂಡ, ತನ್ನ ಕೆಲಸ ಆದ ಸಂತೃಪ್ತಿಯಲ್ಲಿ ಉದ್ದನೆ ಗಡ್ಡ ನೀವಿಕೊಂಡ. 'ಬೆಹೆನ್ ಚೋದ್! ಸಾಲಾ! ಸತ್ತ' ಅಂತ ಪಂಜಾಬಿಯಲ್ಲಿ ಬೈಯುತ್ತ ಫೋನ್ ಇಟ್ಟ.

ಹರಮಿಂದರ್ ಸಿಂಗ್ ಸಂಧು ಅನ್ನುವ ಒಬ್ಬ ಸಿಖ್ ಯುವ ಮುಖಂಡ ಹೀಗೆ ಮುಗಿದುಹೋಗಿದ್ದ. ಇದರೊಂದಿಗೆ ಖಲಿಸ್ತಾನಿ ಉಗ್ರರ ಒಂದು ಸಂತತಿ ಪೂರ್ತಿ ಮುಗಿದಂತಾಗಿತ್ತು. ಹಳೆ ಉಗ್ರ ಭಿಂದ್ರನವಾಲೆ ಗುಂಪಿನ ಕೊನೇ ಪಳೆಯುಳಿಕೆ ಹೀಗೆ ಅಂತ್ಯ ಕಂಡಿತ್ತು.

ಯಾರಾಗಿದ್ದ ಈ ಹರಮಿಂದರ್ ಸಿಂಗ್ ಸಂಧು?

ಖಲಿಸ್ತಾನಿ ಉಗ್ರಗಾಮಿಗಳ ನಾಯಕ ಜರ್ನೇಲ್ ಸಿಂಗ್ ಭಿಂದ್ರನವಾಲೆಯ ಏಕ್ದಂ ಖಾಸಮ್ ಖಾಸ್ ಮನುಷ್ಯ. ಅವನೊಂದಿಗೇ ಇರುತ್ತಿದ್ದ. ಸಿಖ್ ಯುವಕರ ಉಗ್ರಗಾಮಿ ಸಂಘಟನೆಯಲ್ಲಿ ದೊಡ್ಡ ಹುದ್ದೆಯಿತ್ತು. ಭಿಂದ್ರನವಾಲೆ ಹೇಳಿದ್ದನ್ನ ಇಂಗ್ಲೀಷಿಗೆ ಇವನೇ ತರ್ಜುಮೆ ಮಾಡುತ್ತಿದ್ದ. ಇನ್ನೂ ಚಿಕ್ಕವ. ಮೂವತ್ತೈದರಕಿಂತ ಕಮ್ಮಿ ವಯಸ್ಸು.

ಇಷ್ಟೇ ಆಗಿದ್ದರೆ ದೊಡ್ಡ ಮಾತಲ್ಲ ಬಿಡಿ. ಇಂತಹ ಹರಮಿಂದರ್ ಸಿಂಗ್ ಸಂಧು ಭಾರತೀಯ ಬೇಹುಗಾರಿಕೆ ಸಂಸ್ಥೆಗಳು ಖಲಿಸ್ತಾನಿ ಉಗ್ರಗಾಮಿಗಳ ನಡುವೆ ನುಗ್ಗಿಸಿದ್ದ ಮೋಲ್ (mole) ಆಗಿದ್ದನೇ? ಒಳಗಿದ್ದೇ ಎಲ್ಲ ಮಾಹಿತಿ ಕೊಡುತ್ತಿದ್ದನೇ? ಹಾಗಾಗಿಯೇ ಆಪರೇಷನ್ ಬ್ಲೂಸ್ಟಾರ್ ಆದಾಗ, ಎಲ್ಲ ದೊಡ್ಡ ದೊಡ್ಡ ಉಗ್ರಗಾಮಿಗಳು ಅದರಲ್ಲಿ ಸತ್ತು ಹೋದರೂ, ಇವನೊಬ್ಬನೇ ಬದುಕಿ ಬಂದನೇ? ಗದ್ದಾರಿ ಮಾಡಿದ್ದ ಎಂದೇ ಮುಂದೆ ಸಿಖ್ ಉಗ್ರವಾದಿಗಳು ಇವನನ್ನು ಉಡಾಯಿಸಿಬಿಟ್ಟರೇ? ಹೀಗೆಲ್ಲ ಖತರ್ನಾಕ್ ಪ್ರಶ್ನೆಗಳು, ಊಹಾಪೋಹಗಳು ಎದ್ದವು.

೧೯೮೪ ರಲ್ಲಿ ಆಪರೇಷನ್ ಬ್ಲೂಸ್ಟಾರ್ ಮಾಡಲಾಯಿತು. ಅಮೃತಸರದ ಸ್ವರ್ಣ ಮಂದಿರದೊಳಗೆ ಹೊಕ್ಕಿಕೊಂಡಿದ್ದ ಸಿಖ್ ಉಗ್ರವಾದಿಗಳನ್ನು flush out ಮಾಡಲು ಹಾಕಿಕೊಂಡಿದ್ದ ಕಾರ್ಯಾಚರಣೆ ಅದು. 'ನಮ್ಮ ಸೇನೆ, ಟ್ಯಾಂಕ್, ಪವರ್ ಎಲ್ಲ ನೋಡಿ ಒಳಗಿದ್ದ ಉಗ್ರವಾದಿಗಳು ಹೆದರುತ್ತಾರೆ. ಶರಣಾಗತರಾಗಿ ಅಂತ ಆವಾಜ್ ಹಾಕಿದ ಕೂಡಲೇ ತೆಪ್ಪಗೆ ಹೊರಬರುತ್ತಾರೆ. ಏನೂ ಹೆಚ್ಚು ಕೆಲಸವಿಲ್ಲದೆ, ಟೆನ್ಷನ್ ಮತ್ತೊಂದು ಇಲ್ಲದೆ ಅವರನ್ನು ಅರೆಸ್ಟ್ ಮಾಡಿ, ಸ್ವರ್ಣಮಂದಿರ ಕ್ಲೀನ್ ಮಾಡಿ, ಪಂಜಾಬ್ ಸಮಸ್ಯೆಗೆ ಒಂದು ಮಂಗಳ ಹಾಡೋಣ,' ಅಂತ ಅಂದುಕೊಂಡಿತ್ತು ಆವತ್ತಿನ ಇಂದಿರಾ ಗಾಂಧಿ ಸರಕಾರ. ಉಗ್ರವಾದಿಗಳು ತಿರುಗಿ ಬಿದ್ದರೆ ಯಾವದಕ್ಕೂ ಇರಲಿ ಅಂತ ಎಲ್ಲ ಸಿದ್ಧತೆ ಕೂಡ ಮಾಡಿಟ್ಟುಕೊಂಡಿತ್ತು. ಆದರೆ ಒಳಗಿದ್ದ ಭಿಂದ್ರನವಾಲೆ ಕುದ್ದು ಹೋಗಿದ್ದ. ಒಂದು ಕಾಲದಲ್ಲಿ ತನ್ನನ್ನು ಎತ್ತಿ ಕಟ್ಟಿ, ಈಗ ಕಾಲ ಕಸದಂತೆ ಪಕ್ಕ ಸರಿಸಲು ಸರಕಾರ ಹಾಕಿಕೊಂಡಿದ್ದ ಯೋಜನೆ ಅವನಿಗೆ ಸುತಾರಾಂ ಮಂಜೂರ್ ಇರಲಿಲ್ಲ. ಅದಕ್ಕೆಂದೇ ಒಂದು do or die ಹೋರಾಟಕ್ಕೆ ಸಿದ್ಧನಾಗೇ ಕುಳಿತಿದ್ದ. ಸಾಕಷ್ಟು ಶಸ್ತ್ರಾಸ್ತ್ರ ಜಮಾ ಮಾಡಿಕೊಂಡಿದ್ದ. ಬಚ್ಚಿಟ್ಟುಕೊಳ್ಳಲು ಬಂಕರ್ ನಿರ್ಮಾಣ ಮಾಡಿಕೊಂಡಿದ್ದ. ಮುಖ್ಯವಾಗಿ ಭಾರತ ಸೈನ್ಯದ ಅರಿಭಯಂಕರ ಮಾಜಿ ಸೇನಾನಿ ಶಾಬೇಗ್ ಸಿಂಗ್ ಭಿಂದ್ರನವಾಲೆ ಜೊತೆ ಸೇರಿಕೊಂಡುಬಿಟ್ಟಿದ್ದ. ಅಲ್ಲಿಗೆ battle lines were drawn!

ಶಾಬೇಗ್ ಸಿಂಗ್ - ಸೇನೆಯಲ್ಲಿ ದೊಡ್ಡ ಹೆಸರು. ೧೯೭೧ ರಲ್ಲಿ ಆದ ಬಾಂಗ್ಲಾದೇಶ ವಿಮೋಚನೆ ಯುದ್ಧದ ಸಂದರ್ಭದಲ್ಲಿ ಬಾಂಗ್ಲಾದೇಶದ 'ಮುಕ್ತಿ ಬಾಹಿನಿ' ಗೆರಿಲ್ಲಾ ಪಡೆ ತಯಾರು ಮಾಡಿ, ಅವರನ್ನು ಪಾಕ್ ಸೈನ್ಯದ ವಿರುದ್ಧ ಬಿಟ್ಟು, ಪಾಕ್ ಸೈನ್ಯಕ್ಕೆ ಸಾಕೋ ಸಾಕಾಗಿ ಹೋಗುವಂತೆ ಮಾಡಿ, ದೊಡ್ಡ ಹೆಸರು ಸಂಪಾದಿಸಿದ್ದ ಶಾಬೇಗ್ ಸಿಂಗ್. ಮುಂದೆ ನಿವೃತ್ತನಾದ ಬಳಿಕ ಭಿಂದ್ರನವಾಲೆಯ ಮಾತಿನ ಮೋಡಿಗೆ ಸಿಕ್ಕ. ಗುರು ಭಿಂದ್ರನವಾಲೆಯ ಉಪದೇಶದ ಆಫೀಮು ಧರ್ಮದ ಮತ್ತೇರಿಸಿತು. ಮತಾಂಧತೆ ಕವಿಯಿತು. ಖಲಿಸ್ತಾನ್ ಬೇಕೇ ಬೇಕು ಅಂತ ನಿಕ್ಕಿ ಮಾಡಿಕೊಂಡು, ಖಲಿಸ್ತಾನಿ ಉಗ್ರರ ತರಬೇತಿಗೆ ನಿಂತುಬಿಟ್ಟ ಶಾಬೇಗ್ ಸಿಂಗ್. ದೊಡ್ಡ ಗೆರಿಲ್ಲಾ ಪಡೆ ತಯಾರ್ ಮಾಡಿಬಿಟ್ಟ. ಅದೇ ಗೆರಿಲ್ಲಾ ಪಡೆ ಈಗ ಭಾರತದ ಸೈನ್ಯದೊಂದಿಗೆ ಹೋರಾಟಕ್ಕೆ ನಿಂತಿತ್ತು. ಸ್ವರ್ಣ ಮಂದಿರದಲ್ಲೇ ಹೊಕ್ಕಿಕೊಂಡು ಹೇಗೆ ಗೆರಿಲ್ಲಾ ಆಪರೇಷನ್ ಮಾಡಬೇಕು ಅಂತ ಶಾಬೇಗ್ ಸಿಂಗ್ ಬರೋಬ್ಬರಿ ಸ್ಕೆಚ್ ಹಾಕಿದ್ದ. sniper ಗುಂಡು ಹೊಡೆಯಲು ಸಿದ್ಧ ಮಾಡಿಕೊಂಡಿದ್ದ ಪಿಲ್ ಬಾಕ್ಸ್ ಗೂಡುಗಳ ಎಜ್ಜೆಯಿಂದ ಹಣಕುತ್ತಿದ್ದ ಅವನ ಕಣ್ಣುಗಳಲ್ಲಿ ಕಾಣುತ್ತಿದ್ದುದು ಶುದ್ಧ ದ್ವೇಷದ ಬೆಂಕಿ. ಹಗೆಯ ಹೊಗೆ.

ಮುಂದೆ ಆಗಿದ್ದೆಲ್ಲ ಗೊತ್ತಲ್ಲ? ದೊಡ್ಡ ಪ್ರಮಾಣದ ಕಾರ್ಯಾಚರಣೆ ಮಾಡಿ, ಟ್ಯಾಂಕುಗಳನ್ನೇ ಹಚ್ಚಿ, ಸ್ವರ್ಣ ಮಂದಿರವನ್ನು ದೊಡ್ಡ ಮಟ್ಟಿಗೆ ಉಡಾಯಿಸಿ, ಸುಮಾರು ಆರು ನೂರು ಸೈನಿಕರು, ಕಮಾಂಡೋಗಳ ಆಹುತಿ ಕೊಟ್ಟು, ಹೇಗೋ ಮಾಡಿ ಉಗ್ರರ ಮಟ್ಟ ಹಾಕಿಯಾಯಿತು. ಉಗ್ರರ ನಾಯಕ ಜರ್ನೇಲ್ ಸಿಂಗ್ ಭಿಂದ್ರನವಾಲೆ, ಅವನ ಬಲಗೈ ಬಂಟ ಅಮ್ರೀಕ್ ಸಿಂಗ್, ನಿವೃತ್ತ ಸೇನಾನಿ ಶಾಬೇಗ್ ಸಿಂಗ್, ಇನ್ನೂ ಹಲವು ದೊಡ್ಡ ದೊಡ್ಡ ಉಗ್ರಗಾಮಿಗಳು ಸತ್ತು ಹೋದರು.

ಕಾರ್ಯಾಚರಣೆಯನ್ನು ಗಮನಿಸುತ್ತಿದ್ದವರಿಗೆ ಭಯಂಕರ ಆಶ್ಚರ್ಯವಾದ ಸಂಗತಿ ಅಂದರೆ ಕೊನೆಯಲ್ಲಿ ಇದೇ ಹರಮಿಂದರ್ ಸಿಂಗ್ ಸಂಧು ಕೈಯೆತ್ತಿಕೊಂಡು, ಇತರೆ ಶರಣಾಗತರ ಜೊತೆ ಹೊರಗೆ ಬಂದುಬಿಟ್ಟಿದ್ದು!

ಕಟ್ಟರ್ ಉಗ್ರವಾದಿಗಳೆಲ್ಲ ಬಡಿದಾಡುತ್ತಲೇ ವೀರಮರಣ ಹೊಂದಿದ್ದರು. ಬಂದು ಶರಣಾದವರಲ್ಲಿ ಜನ ಸಾಮಾನ್ಯರೇ ಜಾಸ್ತಿ. ಪಾಪ! ಅವರು ಪೂಜೆಗೆ ಬಂದವರು ಈ ಲಫಡಾದಲ್ಲಿ ಸಿಕ್ಕಾಕಿಕೊಂಡಿದ್ದರು. ಎಷ್ಟೋ ಜನ ನಿಷ್ಪಾಪಿಗಳು ಕ್ರಾಸ್ ಫೈರಿಂಗ್ ನಲ್ಲಿ ಸಿಕ್ಕಿ ಸತ್ತು ಕೂಡ ಹೋದರು. ಇನ್ನು ಕೆಲವರನ್ನು ಪೊರಪಾಟಿನಲ್ಲಿ ಸೈನ್ಯ, ಸಿಖ್ ಉಗ್ರವಾದಿಗಳು ಕೊಂದರು.

ಆವಾಗಲೇ ಕೆಲವರು ಕೇಳಿದ್ದರು, 'ಅಲ್ಲ, ಈ ಆಸಾಮಿ ಹರಮಿಂದರ್ ಸಿಂಗ್ ಸಂಧು ಹೇಗೆ ಬಚಾವಾದಾ? ಅವನ ಜೊತೆಗಿದ್ದವರೆಲ್ಲ ಸತ್ತು ಹೋದರು. ಇವನೊಬ್ಬನೇ ಎಸ್ಕೇಪ್. ಏನೋ ಕರಾಮತ್ತು ಇದ್ದಂಗೆ ಇದೆ ಇವನೊಬ್ಬನೇ ಜೀವಂತ ಉಳಿದುಕೊಂಡಿರುವದರಲ್ಲಿ!' ಅಂತ.

ನಂತರ ಎಲ್ಲಿಂದಲೋ ಮಾಹಿತಿ ಲೀಕ್ ಆಯಿತು. ಅಥವಾ ಬೇಕಂತಲೇ ಲೀಕ್ ಮಾಡಲಾಯಿತು. 'ಈ ಹರಮಿಂದರ್ ಸಿಂಗ್ ಸಂಧು ಸರ್ಕಾರಿ ಏಜೆಂಟ್ ಆಗಿದ್ದ. ಭಿಂದ್ರನವಾಲೆ ಜೊತೆಗೇ ಇದ್ದು, ಒಳಗಿನ ಮಾಹಿತಿಯೆಲ್ಲ ಸರ್ಕಾರಕ್ಕೆ ತಲುಪಿಸುತ್ತಿದ್ದ,' ಅಂತ.

ಮುಂದೆ ಸುಮಾರು ಐದು ವರ್ಷ ಅಂದರೆ ೧೯೮೪ ರಿಂದ ೧೯೮೯ ರ ವರೆಗೆ ಜೈಲಿನಲ್ಲಿ ಇದ್ದ. ೧೯೮೯ ರಲ್ಲಿ ಚುನಾವಣೆ ನಡೆದು, ರಾಜೀವ್ ಗಾಂಧಿ ಸರಕಾರ ಅಧಿಕಾರ ಕಳೆದುಕೊಂಡಿತು. ಕುರ್ಚಿ ಬಿಟ್ಟು ಹೋಗುವ ಮುಂಚೆ ಜೈಲಿನಲ್ಲಿ ಇದ್ದ ಸಿಖ್ ಉಗ್ರವಾದಿಗಳನ್ನು ಬಿಡುಗಡೆ ಮಾಡಿ ಹೋಗಿಬಿಟ್ಟಿತು! 'ಮುಂದೆ ಬರುವ ವೀ.ಪಿ. ಸಿಂಗ್ ಸರಕಾರಕ್ಕೆ ತೊಂದರೆ ಕೊಟ್ಟು ಸಾಯಿರಿ ಮಕ್ಕಳಾ!' ಅನ್ನುವ ರೀತಿಯಲ್ಲಿ ಬಿಡುಗಡೆ ಮಾಡಿ ಹೋಗಿಬಿಟ್ಟಿತು. ಅಧಿಕಾರ ಕಳೆದುಕೊಂಡು ಹೋಗುತ್ತಿರುವವರ ಕೆಟ್ಟ ಬುದ್ಧಿ.

ಹರ್ಮಿಂದರ್ ಸಿಂಗ್ ಸಂಧು ಬಿಡುಗಡೆಯಾದದ್ದು ಹೀಗೆ. ಜೊತೆಗೆ ಬಿಡುಗಡೆಯಾದ ಉಗ್ರಗಾಮಿಗಳಲ್ಲಿ ಮಂಜಿತ್ ಸಿಂಗ್ ಅನ್ನುವವ ಸಹಿತ ಇದ್ದ. ಈ ಮಂಜಿತ್ ಸಿಂಗ್ ಯಾರು ಅಂತ ನೋಡಿದರೆ ಅವನು ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಮೃತನಾಗಿದ್ದ ಅಮ್ರೀಕ್ ಸಿಂಗ್ ಎಂಬ ಭಿಂದ್ರನವಾಲೆಯ ಖಾಸಾ ಶಿಷ್ಯನ ತಮ್ಮ.

ಹೊರಬಂದ ಹರ್ಮಿಂದರ್ ಸಿಂಗ್ ಸಂಧು, ಮಂಜೀತ್ ಸಿಂಗ್ ಇಬ್ಬರೂ ಸಿಖ್ ವಿದ್ಯಾರ್ಥಿ ಪರಿಷತ್ತಿನಲ್ಲಿ ತಮ್ಮ ತಮ್ಮ ಸ್ಥಾನ ಅಲಂಕರಿಸಿ, ಮತ್ತೆ ಕಿತಾಪತಿ ಶುರು ಮಾಡಿದರು. ವೀಪಿ ಸಿಂಗರ ಹೊಸ ಸರಕಾರವಿತ್ತು ನೋಡಿ. ಸ್ವಲ್ಪ ಸಲುಗೆ ಕೊಟ್ಟಿತ್ತು. ಮತ್ತೆ ಏನಾದರೂ ಖಡಕ್ ನಿರ್ಧಾರ ತೆಗೆದುಕೊಳ್ಳಲು ಅವರಿಗೆ ಮೆಜಾರಿಟಿ ಇದ್ದರೆ ತಾನೇ.

ಅದೇ ಹೊತ್ತಿನಲ್ಲಿ ಈ ಹರ್ಮಿಂದರ್ ಸಿಂಗ್ ಗದ್ದಾರ್ ಅನ್ನುವ ಮಾಹಿತಿ ಲೀಕ್ ಆಯಿತು. 'ಫಾಲ್ಕನ್ ಅಂತ ಕೋಡ್ ನೇಮ್ ಹೊಂದಿದ್ದ ಸರ್ಕಾರಿ ಏಜೆಂಟ್ ಬೇರೆ ಯಾರೂ ಅಲ್ಲ. ಇದೇ ಹರ್ಮಿಂದರ್ ಸಿಂಗ್ ಸಂಧು,' ಅಂತ ಎಲ್ಲ ಕಡೆ ಗುಸು ಗುಸು. ಈ ತರಹ ಮಾಹಿತಿ ಲೀಕ್ ಔಟ್ ಆಗುವದು ಅಂದರೆ ಏಜೆಂಟ್ ಒಬ್ಬನ ಡೆತ್ ವಾರಂಟಿಗೆ ಸಹಿ ಬಿದ್ದ ಹಾಗೆಯೇ. ಬೇಹುಗಾರಿಕೆ ಭಾಷೆಯಲ್ಲಿ ಇದನ್ನು blowing off the cover ಅನ್ನುತ್ತಾರೆ. ಒಮ್ಮೆ ಒಬ್ಬ ಏಜೆಂಟನ ಕವರ್ ಬ್ಲೋ ಆಯಿತು ಅಂದರೆ ಅವನು ಟೋಟಲ್ ಸ್ಕ್ರಾಪ್. ನಸೀಬ್ ಸರಿ ಇದ್ದರೆ, ಪಿಂಚಣಿ ಗಿಂಚಣಿ ಕೊಟ್ಟರೆ, ತೆಗೆದುಕೊಂಡು ಇರಬಹುದು. ಇಲ್ಲದಿದ್ದರೆ, 'ಯಾರು ಯಾವಾಗ ಬಂದು ಮಟಾಶ್ ಮಾಡುತ್ತಾರೋ!?' ಅಂತ ದಿನ ಲೆಕ್ಕ ಮಾಡುತ್ತಿರಬೇಕಾದಂತಹ ಆತಂಕದ ಪರಿಸ್ಥಿತಿ.

ಏನೇನು ಸಮೀಕರಣಗಳು ವರ್ಕ್ ಔಟ್ ಆಗಿ, ಏನೇನು ಡೀಲಿಂಗ್ ಗಳು ಅದವೋ ಗೊತ್ತಿಲ್ಲ. ಒಟ್ಟಿನಲ್ಲಿ ಕೆನಡಾದಲ್ಲಿ ಕುಳಿತಿದ್ದ ಸಿಖ್ ಖಲಿಸ್ತಾನಿ ಮುಖಂಡನೊಬ್ಬ ಹರ್ಮಿಂದರ್ ಸಿಂಗ್ ಸಂಧುವಿನ ಹತ್ಯೆಗೆ ಸುಪಾರಿ ಕೊಟ್ಟು ಬಿಟ್ಟ. ಯಾರಿಗೆ ಕೊಟ್ಟ? ಮತ್ಯಾರಿಗೆ ಕೊಟ್ಟಾನು? ಮತ್ತೊಬ್ಬ ಯಾರೋ ಉಗ್ರಗಾಮಿಗೇ ಕೊಟ್ಟ. ಅವನೇ ಸುಪಾರಿ ತೆಗೆದುಕೊಂಡು ಕೆಲಸ ಮುಗಿಸಿದನೇ ಅಥವಾ ಸಬ್ ಕಾಂಟ್ರಾಕ್ಟ್ ಕೊಟ್ಟನೋ ಗೊತ್ತಿಲ್ಲ.

ಆ ಕೆನಡಾದ ಉಗ್ರಗಾಮಿ ನಾಯಕ ಹರ್ಮಿಂದರ್ ಸಿಂಗ್ ಸಂಧು ಮಾಡಿದ್ದ ಗದ್ದಾರಿಯಿಂದ ಅದೆಷ್ಟು ಕ್ರುದ್ಧನಾಗಿದ್ದನೋ ಏನೋ. 'ಅವನು ಗುಂಡು ತಿಂದು ಚೀರುವದನ್ನು, ನರಳುವದನ್ನು ನಾನು ಕೇಳಲೇ ಬೇಕು. ಅದಕ್ಕೇ ನನ್ನ ಫೋನ್ ಬಂದಾಗಲೇ ಅವನಿಗೆ ಗೋಲಿ ಹೊಡೆಯಿರಿ,' ಅಂತ ಹೇಳಿ ಹೆಚ್ಚಿನ ಸೂಚನೆ ಬೇರೆ ಕೊಟ್ಟಿದ್ದ. ಅದನ್ನು ಪಾಲಿಸಿದ್ದ ಸುಪಾರಿ ಹಂತಕರು, ಸರಿಯಾಗಿ ನೋಡಿಕೊಂಡು, ಕೆನಡಾದಿಂದಲೇ ಫೋನ್ ಬಂದಿದೆ ಅಂತ ಖಾತ್ರಿ ಮಾಡಿಕೊಂಡ ಮೇಲೆಯೇ ಗುಂಡು ಹಾರಿಸಿ ಕೊಂದಿದ್ದರು. ಕೊಟ್ಟ ಸುಪಾರಿ ಸರಿಯಾಗಿ ನಿಭಾಯಿಸಿದ್ದರು.

ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸತ್ತಿದ್ದ ಉಗ್ರವಾದಿ ಅಮ್ರೀಕ್ ಸಿಂಗನ ತಮ್ಮ ಮಂಜೀತ್ ಸಿಂಗನೇ ಕೆನಡಾದಲ್ಲಿ ಇದ್ದ ಉಗ್ರವಾದಿ ನಾಯಕನನ್ನು ಹಿಡಿದು, ಹರ್ಮಿಂದರ್ ಸಿಂಗನ ಗದ್ದಾರಿಯನ್ನೆಲ್ಲ ಹೇಳಿ, ಜಾಸ್ತಿ ಮಸಾಲೇನೂ ಹಾಕಿ, ಸುಪಾರಿ ಕೊಡುವಂತೆ ಮಾಡಿ, ಹರಮಿಂದರ್ ಸಿಂಗ್ ಸಂಧುವನ್ನು ತೆಗೆಸಿಬಿಟ್ಟ ಅಂತ ಗುಸು ಗುಸು ಸುದ್ದಿಯಾಯಿತು. ಒಟ್ಟಿನಲ್ಲಿ ಮಂಜಿತ್ ಸಿಂಗನ ಪ್ರತಿಸ್ಪರ್ಧಿಯೊಬ್ಬ ಹಾದಿಯಿಂದ ಪಕ್ಕಕ್ಕೆ ಸರಿದಿದ್ದ. ಸಿಖ್ ವಿದ್ಯಾರ್ಥಿ ಪರಿಷದ್ ಈಗ ಫುಲ್ ಮಂಜಿತ್ ಸಿಂಗ್ ಕೈಯಲ್ಲಿ ಬಂದಿತ್ತು.

ಹರಮಿಂದರ್ ಸಿಂಗ್ ಸಂಧು ನಿಜವಾಗಿ ಸರ್ಕಾರಿ ಏಜೆಂಟ್ ಆಗಿದ್ದನೇ?

ಇತೀಚಿನ ಕೆಲವೊಂದು ಮಾಹಿತಿ ಪ್ರಕಾರ ನಿಜವಾದ ಸರ್ಕಾರಿ ಏಜೆಂಟ್ ಅಮ್ರೀಕ್ ಸಿಂಗ್ ಆಗಿದ್ದ. ಗದ್ದಾರಿ ಮಾಡಿದವ ಅವನಾಗಿದ್ದ. ನಿಜವಾದ ಫಾಲ್ಕನ್ ಅವನೇ ಆಗಿದ್ದ. ಅವನಂತೂ ಆಪರೇಷನ್ ಬ್ಲೂಸ್ಟಾರ್ ಆದಾಗಲೇ ಸತ್ತು ಹೋಗಿದ್ದ. ಅವನೇ ಸರಕಾರಿ ಏಜೆಂಟ್ ಆಗಿದ್ದರೂ ಅವನನ್ನು ಉಳಿಸಿಕೊಂಡು ಸರ್ಕಾರಕ್ಕೆ ಆಗಬೇಕಾಗಿದ್ದು ಏನೂ ಇರಲಿಲ್ಲ ಬಿಡಿ.

ಹಾಗಿದ್ದರೆ ಈಗ ಈ ಹರಮಿಂದರ್ ಸಿಂಗ್ ಸಂಧುವಿನ ಮೇಲೆ ಗದ್ದಾರ್ ಅಂತ disinformation campaign ಅನ್ನುವಂತಹದನ್ನು ಮುದ್ದಾಂ ಬೇಕಂತಲೇ ಮಾಡಲಾಯಿತೇ? ಯಾಕೆ? ಒಂದು ವೇಳೆ ಅಮ್ರೀಕ್ ಸಿಂಗನೇ ನಿಜವಾದ ಸರ್ಕಾರಿ ಮಾಹಿತಿದಾರ ಆಗಿದ್ದರೆ, ಒಂದಲ್ಲ ಒಂದು ದಿವಸ ಅದು ಹೊರಗೆ ಬಂದು, ಅವನ ತಮ್ಮ ಮಂಜೀತ್ ಸಿಂಗನ ಬುಡಕ್ಕೇ ಬಂದರೆ ಅನ್ನುವ ಭಯದಿಂದಲೇ? ಹಾಗೇನಾದರೂ ಆದರೆ ಅವನ ರಾಜಕೀಯ ಭವಿಷ್ಯದ ಗತಿ ಏನಾಗಬೇಕು? ಅದಕ್ಕೇ ಸರ್ಕಾರದೊಂದಿಗೆ ಡೀಲ್ ಕುದುರಿಸಿದ ಮಂಜೀತ್ ಸಿಂಗ್, ಈ ಹರಮಿಂದರ್ ಸಿಂಗ್ ಸಂಧು ಗದ್ದಾರ್ ಅನ್ನುವಂತೆ ಸುಳ್ಳು ಮಾಹಿತಿ ಹರಿಬಿಟ್ಟು, ಖಾಲಿಸ್ತಾನಿ ಉಗ್ರರನ್ನು ಎತ್ತಿ ಕಟ್ಟಿ, ಅವನನ್ನು ನಿಕಾಲಿ ಮಾಡಿಸಿದನೇ? ಇದ್ದರೂ ಇರಬಹುದು. ಅಣ್ಣ ಅಮ್ರೀಕ್ ಸಿಂಗನ ಗದ್ದಾರಿಯನ್ನು ಮುಚ್ಚಿ ಹಾಕಿದ ಹಾಗೂ ಆಯಿತು, ತನ್ನ ಪ್ರತಿಸ್ಪರ್ಧಿ ಹರಮಿಂದರ್ ಸಿಂಗ್ ಸಂಧುನನ್ನು ದಾರಿಯಿಂದ ಸರಿಸಿದಂತಲೂ ಆಯಿತು, ಅಂತ ಸ್ಕೀಮ್ ಹಾಕಿದನೇ ಮಂಜೀತ್ ಸಿಂಗ್? ಗೊತ್ತಿಲ್ಲ. ಹಾಗಿತ್ತು ಅಂತಿದ್ದರೆ ಹರ್ಮಿಂದರ್ ಸಿಂಗ್ ಸಂಧು ವಿರುದ್ಧ disinformation campaign ಮಾಡಿ, ಅವನನ್ನು ಗದ್ದಾರ್ ಅಂತ ಸುಳ್ಸುಳ್ಳೇ ಜಾಹೀರು ಪಡಿಸಲು ಮಂಜೀತ್ ಸಿಂಗ್ ಸರ್ಕಾರದ ಜೊತೆ  ಡೀಲ್ ಮಾಡಿಕೊಂಡಿದ್ದನೇ? ಆ ಮೂಲಕ ಅವನೇ ಸರ್ಕಾರಿ mole ಆಗಿಬಿಟ್ಟನೇ?

ಯಾವದಕ್ಕೂ ಉತ್ತರ ಲಭ್ಯವಿಲ್ಲ. ಎಲ್ಲ ಉತ್ತರ ಸೀಲ್ ಮಾಡಿದ, classified ಸರ್ಕಾರಿ ಕಡತಗಳಲ್ಲಿ ಇರಬಹುದು. ಅಥವಾ ಆ ಸಮಯದ ಖತರ್ನಾಕ್ ಬೇಹುಗಾರರ ಮೆದುಳಲ್ಲಿ ಇರಬಹುದು. ಈ covert operations ಗಳ ದುನಿಯಾವೇ ಹೀಗೆ.

ಖಲಿಸ್ತಾನಿ ಉಗ್ರವಾದದ ಬಗ್ಗೆ ಓದುತ್ತ ಹೋದಂಗೆ ಉಗ್ರವಾದ ಎಲ್ಲಿ ಶುರುವಾಗುತ್ತದೆ, ಮುಗಿಯುತ್ತದೆ, ಎಲ್ಲಿ ಸರ್ಕಾರದ ಹಸ್ತಕ್ಷೇಪ ಶುರುವಾಗುತ್ತದೆ, ಸರ್ಕಾರ ಹೇಗೆ ಉಗ್ರವಾದಿಗಳನ್ನು ತನ್ನ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತದೆ, ಅದಕ್ಕೆ ಅಂತಲೇ ಹೇಗೆ ಉಗ್ರವಾದಿ ಸಂಘಟನೆಗಳನ್ನು infiltrate ಮಾಡುತ್ತದೆ, ಕೆಲಸ ಮುಗಿದ ನಂತರ ಏಜೆಂಟಗಳನ್ನು ಹೇಗೆ ಬಿಸಾಡುತ್ತದೆ ಅಂತೆಲ್ಲ ಅರಿಯುತ್ತ ಹೋದಂತೆ ತಿಳಿಯುವದು ಅಂದರೆ ಖಲಿಸ್ತಾನ ಸಮಸ್ಯೆ ಕೂಡ ಒಂದು ಸರ್ಕಾರವೇ ಮಾಡಿಕೊಂಡ ಕರ್ಮಕಾಂಡ ಅಂತ. ಒಮ್ಮೊಮ್ಮೆ ಅದು ನಮಗೇ ಉಲ್ಟಾ ಹೊಡೆಯುತ್ತದೆ. ಇಂದಿರಾ ಗಾಂಧಿ ಹುಟ್ಟು ಹಾಕಿದ್ದ ಭಿಂದ್ರನವಾಲೆ ಆಕೆಗೇ ಸೆಡ್ಡು ಹೊಡೆದು ನಿಂತ. ಮಾತು ಕೇಳಲಿಲ್ಲ. ಅವನನ್ನು ತೆಗೆದು, ಸಿಖ್ ಸಮುದಾಯಕ್ಕೆ ಒಂದು ದೊಡ್ಡ ಹೊಡೆತ ಕೊಟ್ಟು ಬಿಡಬೇಕು ಅಂದುಕೊಂಡು ಮಾಡಿದ ಬ್ಲೂಸ್ಟಾರ್ ಕಾರ್ಯಾಚರಣೆ ಎಕ್ಕುಟ್ಟಿ ಹೋಯಿತು. ಸಿಖ್ ಸಮುದಾಯ ಇಂದಿರಾ ಗಾಂಧಿ ವಿರುದ್ಧ ಮುರಕೊಂಡು ಬಿತ್ತು. ಎಲ್ಲಿಯವರೆಗೆ ಅಂದರೆ  ಮುಂದಿನ ನಾಕೇ ತಿಂಗಳಲ್ಲಿ ಇಂದಿರಾ ಗಾಂಧಿಯನ್ನೇ ತೆಗೆದು ಬಿಟ್ಟರು! ಶಿವನೇ ಶಂಭುಲಿಂಗ!

ಇಷ್ಟೆಲ್ಲ ಊಹೆ, ಇದ್ದರೂ ಇರಬಹುದು ಅನ್ನುವಂತಹ ಥಿಯರಿ ಎಲ್ಲ ಹಾಕಿಕೊಂಡು, ತಲೆ ಕೆಡಿಸಿಕೊಂಡು ಕೂತರೂ, 'ಎಲ್ಲ ಉಗ್ರವಾದಿಗಳು ಸತ್ತರೂ, ಹರ್ಮಿಂದರ್ ಸಿಂಗ್ ಸಂಧು ಒಬ್ಬನೇ ಹೇಗೆ ಬದುಕಿ ಬಂದ? ಅವನೇ ನಿಜವಾದ ಗದ್ದಾರ್ ಇದ್ದರೂ ಇರಬಹುದೇ?' ಅಂತ ಮತ್ತೆ ಬ್ಯಾಕ್ ಟು ಸ್ಕ್ವೇರ್ ಆದರೂ ಆಶ್ಚರ್ಯವಿಲ್ಲ. ಅದು ತಪ್ಪೂ ಅಲ್ಲ. :)

* ಹರ್ಮಿಂದರ್ ಸಿಂಗ್ ಸಂಧು ಉರ್ಫ್ ಫಾಲ್ಕನ್ ಹತ್ಯೆಯ ಬಗ್ಗೆ ಹೊಸ ಮಾಹಿತಿ ಸಿಕ್ಕಿದ್ದು ಕೆಳಗೆ ಹಾಕಿದ ಪುಸ್ತಕ ಓದಿದಾಗ. ಮೂಲ ಮಾಹಿತಿಗೆ ಚ್ಯುತಿ ಬರದಂತೆ ಹತ್ಯೆಯ ಸನ್ನಿವೇಶವನ್ನು dramatize ಮಾಡಿದ್ದು ನಾನು.  ಉಳಿದ ಮಾಹಿತಿ, ಊಹಾಪೋಹ ಬೇರೆ ಬೇರೆ ಪುಸ್ತಕಗಳಿಂದ, websites ಗಳಿಂದ ಎತ್ತಿದ್ದು.


3 comments:

ವಿ.ರಾ.ಹೆ. said...

ಕೆನಡಾದ ಗುರುದ್ವಾರ ಒಂದರಲ್ಲಿ 'ವಿ ಸಪೋರ್ಟ್ ಖಲಿಸ್ತಾನ್' ಅಂತೇನೋ ಬರೆದಿರುವ ಬೋರ್ಡು ನೋಡಿದ್ದೆ. ಕೇಳಿದಾಗ ಖಲಿಸ್ತಾನ್ ಚಳುವಳಿ ಭಾರತದಲ್ಲಿ ಇಲ್ಲದಿದ್ದರೂ ಕೆನಡಾದಲ್ಲಿ ಜೀವಂತವಿರುವುದಾಗಿ ಮಾಹಿತಿ ಸಿಕ್ಕಿತ್ತು.!

Mahesh Hegade said...

Right. Lot of supporters for Khalistan everywhere except in Punjab :)

Vimarshak Jaaldimmi said...


Story with many twists!