Wednesday, August 19, 2015

ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?

ಕೆಲವು ಮಂದಿ ಕೆಟ್ಟ ತಲಿ ತಿಂತಾರ. ಅದೂ ಮುಂಜಾನೆ ಮುಂಜಾನೆ. ನಮ್ಮ ಬಾಜೂ ಮನಿಯ ಮಹಾನುಭಾವ ಅದೇ ಪೈಕಿ. ಪಿಶಾಚಿ ಜಾತಿಯವ.

ಮನ್ನೆ ಹಾಂಗss ಆತು. ಮುಂಜಾನೆ ಎದ್ದು, ಹಲ್ಲು ತಿಕ್ಕಿ, ಮಾರಿ ತೊಳೆದು ಹೋಗೋಣ ಅಂತ ನಮ್ಮ ಹಿತ್ತಲದ ಕಡೆ ಬಂದೆ. ಕೈಯಾಗ ಟೂತ್ ಬ್ರಷ್ ಮತ್ತ ಅದರ ಮ್ಯಾಲಿಷ್ಟು ಪೇಸ್ಟ್. ಅಲ್ಲೇ ಕಂಡನಲ್ಲ ಈ ಮಹಾನುಭಾವ ನಮ್ಮ ಬಾಜೂಕಿನ ಮನಿಯವ. ಅವನೂ ಎದ್ದು, ಅದೇ ಕೆಲಸಕ್ಕೆ ಬಂದಿದ್ದ. ಇಬ್ಬರದ್ದೂ ಹಿತ್ತಲದಾಗ ಭೆಟ್ಟಿ.

ಆ ಹಾಪಾ ಮುಂಜ್ಮುಂಜಾನೆ ತಲಿ ತಿನ್ನುವ ಮೂಡಿನ್ಯಾಗ ಇದ್ದ ಅಂತ ಅನ್ನಿಸ್ತದ. ಶುರು ಮಾಡಿಯೇಬಿಟ್ಟ. ಸೂತ್ರ ಸಂಬಂಧವಿಲ್ಲದ ಮಾತು.

'ನಿಮ್ಮ ಟೂತ್ ಪೇಸ್ಟಿನಲ್ಲಿ ಉಪ್ಪು ಇದೆಯೇ??' ಅಂತ ರಾಗವಾಗಿ ಕೇಳಿಬಿಟ್ಟ ಹಾಪನ ತಂದು. ಪಕ್ಕಾ ಧಾರವಾಡಿಯಾಗಿ ಮೈಸೂರ್ ಕನ್ನಡ ಒಳಗ ಮಾತು ಮಗಂದು. ಸ್ಟೈಲ್ ನೋಡ್ರಿ!

'ಏನss????' ಅಂತ ಕೆಕ್ಕರಿಸಿ ನೋಡಿ ಕೇಳಿದೆ.

'ನಿನ್ನ ಟೂತ್ ಪೇಸ್ಟಿನ್ಯಾಗ ಉಪ್ಪು ಅದ ಏನು???' ಅಂತ ಆವಾ ಸ್ವಚ್ಛ ಧಾರವಾಡ ಕನ್ನಡದಾಗ ಕೇಳಿದಾಗ ತಿಳಿಯಿತು.

'ಟೂತ್ ಪೇಸ್ಟಿನ್ಯಾಗ ಏನು ಉಪ್ಪೋ ಮಾರಾಯಾ? ಉಪ್ಪು ಇರಲಿಕ್ಕೆ ಅದೇನು ಸಾರೋ, ಹುಳಿಯೋ, ಪಲ್ಯಾನೋ, ಕೋಸಂಬ್ರಿನೋ, ರಸಾನೋ? ಏನು ಅಡಿಗಿ ಅಂತ? ಏನಂತ ಮಾತು ಮಾರಾಯಾ, ಅದೂ ಮುಂಜಾನೆ ಮುಂಜಾನೆ. ಹಾಂ?' ಅಂದೆ.

ನನಗ ತಿಳಿಲಿಲ್ಲ ಅಂತ ಅವಂಗ ತಿಳೀತು. ತಟ್ಟಿಕೊಂಡು ಪೆಕಪೆಕಾ ಅಂತ ನಕ್ಕ. ತನ್ನ ತಲಿ ತಿನ್ನುವ ಕಾರ್ಬಾರ್ ಮುಂದುವರೆಸಿದ.

'ನಿಮ್ಮ ಟೂತ್ ಪೇಸ್ಟಿನಲ್ಲಿ ಇದ್ದಿಲು ಇದೆಯೇ???' ಅಂತ ಮತ್ತೊಂದು ಬಾಂಬ್ ಒಗೆದ. ಮತ್ತ ಮೈಸೂರ್ ಕನ್ನಡದಾಗ. ಏನು ಹುಚ್ಚ ಹಿಡದದ ಈ ಹಾಪ್ ಮಂಗ್ಯಾನಿಕೆಗೆ ಅಂದುಕೊಂಡೆ.

'ಏನss????' ಅಂತ ಮತ್ತ ಕೆಕ್ಕರಿಸಿ ನೋಡಿ ಕೇಳಿದೆ.

'ನಿನ್ನ ಟೂತ್ ಪೇಸ್ಟಿನ್ಯಾಗ ಇದ್ದಿಲು ಅದ ಏನು???' ಅಂತ ಕೇಳಿಬಿಟ್ಟ.

'ಲೇ, ಹಾಪಾ! ಟೂತ್ ಪೇಸ್ಟಿನ್ಯಾಗ ಇದ್ದಿಲು ಎಲ್ಲಿಂದ ಬರಬೇಕು? ಇದ್ದಿಲು ಬರಲಿಕ್ಕೆ ಅದೇನು ಮಡಿ ಇದ್ದಿಲ ಒಲಿಯೇನು? ಅಥವಾ ಉಗಿ ಬಂಡಿ ಅಂದ್ರ ಇದ್ದಿಲಿನ ಮ್ಯಾಲೆ ಓಡುವ ರೈಲ್ವೆ ಇಂಜಿನ್ ಏನು?' ಅಂದೆ. ದೊಡ್ಡ ಹಾಪಾ! ಏನೇನೋ ಮಂಗ್ಯಾತನ ಹಚ್ಚ್ಯಾನ. ಅದೂ ಮುಂಜ್ಮುಂಜಾನೆ.

ನಾ ಹೇಳಿದ್ದು ಕೇಳಿ ನಮ್ಮ ಬಾಜೂಕಿನ ಮನಿಯವ ಮತ್ತೂ ಬಿದ್ದು ಬಿದ್ದು ನಕ್ಕ. ಆವಾ ಆ ಪರಿ ಬಿದ್ದು ಬಿದ್ದು ನಗೋದು ನೋಡಿ ನನಗ  ಏನೋ ನೆನಪಾತು. ಇದು ಯಾವದೋ ಟೂತ್ ಪೇಸ್ಟಿನ advertisement ಇದ್ದಂಗ ಅದಲ್ಲಾ? ಇಲ್ಲಾ? ಕರೆಕ್ಟ್. ಅದೇ  ಕರೆಕ್ಟ್. ನನ್ನ tingle ಮಾಡಲಿಕ್ಕೆ, ಅಣಗಿಸಲಿಕ್ಕೆ ಬೇಕಂತಲೇ ಏನೇನೋ ಕೇಳಲಿಕತ್ತಾನ. ನೋಡ್ರಿ, ನಾವು ಉಪಯೋಗ ಮಾಡುವ ಟೂತ್ ಪೇಸ್ಟ್ ಒಳಗ ಪೇಸ್ಟ್ ಇದ್ದರೆ ಅದೇ ದೊಡ್ಡ ಮಾತು. ಯಾಕಂದ್ರ ನಾವು ಎಂದೂ ಟೂತ್ ಪೇಸ್ಟ್ ಖರೀದಿ ಮಾಡಂಗೇ ಇಲ್ಲ. ನಮ್ಮ ಆಪ್ತ ಡೆಂಟಿಸ್ಟ್ ಮಂದಿ ಅವರ ಕಡೆ ಬಂದ ಫ್ರೀ ಸ್ಯಾಂಪಲ್ ಏನು ಕೊಡ್ತಾರ ಅವೇ ನಮ್ಮ ಟೂತ್ ಪೇಸ್ಟುಗಳು. ಹಾಂಗಿದ್ದಾಗ ನಮ್ಮ ಕಡೆ ಎಲ್ಲಿಂದ ಲೇಟೆಸ್ಟ್ ಉಪ್ಪಿರುವ, ಇದ್ದಿಲಿರುವ, ಮತ್ತೊಂದಿರುವ, ಮಗದೊಂದಿರುವ ಟೂತ್ ಪೇಸ್ಟ್ ಬರಬೇಕು? ನಮ್ಮ ಬಾಜೂ ಮನಿಯವ ಅಂಥಾ ಟೂತ್ ಪೇಸ್ಟ್ ಖರೀದಿ ಮಾಡಿರಬೇಕು. ಅದಕ್ಕೇ ನನ್ನ tingle ಮಾಡಿ ಅಣಗಿಸಲಿಕತ್ತಾನ. ಮಂಗ್ಯಾನಿಕೆ ತಂದು. ತಡಿ ಇವಂಗ ಬರೋಬ್ಬರಿ ಇಡತೇನಿ ಈಗ.

'ನನ್ನ ಟೂತ್ ಪೇಸ್ಟಿನ್ಯಾಗ ಉಪ್ಪೂ ಇಲ್ಲ. ಇದ್ದಿಲೂ ಇಲ್ಲ. ಪೇಸ್ಟ್ ಇದ್ದರೆ ಅದೇ ದೊಡ್ಡ ಮಾತು. ಈಗ ನಾ ಒಂದು ಪ್ರಶ್ನೆ ಕೇಳತೇನಿ. ಉತ್ತರ ಹೇಳ್ತಿಯೇನಪಾ???' ಅಂತ ಕೇಳಿದೆ. ಪೀಠಿಕೆ ರೆಡಿ ಮಾಡಿಕೊಂಡೆ.

'ಏನು? ಏನು ಕೇಳ್ತಿ? ಕೇಳು,' ಅಂದ.

ನಾನೂ ಅವನ ತರಹನೇ ಅಣಕ ಮಾಡುತ್ತ, 'ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?' ಅಂತ ಕೇಳಿ ಗಪ್ಪಾಗಿಬಿಟ್ಟೆ.

'ಏನೂ!!?? ಏನಂತ ಮಾತಾಡ್ತೀ?? ಹಾಂ!!??' ಅಂತ ರೈಸ್ ಆಗಿ ಅಬ್ಬರಿಸಿದ ಬಾಜೂ ಮನಿ ಮಂಗ್ಯಾನಿಕೆ.

'ತಿಳಿಲಿಲ್ಲ?? ನಿನ್ನ ಚಡ್ಯಾಗ ಕಡ್ಡಿ ಅದ ಏನು ಅಂತ ಕೇಳಿದೆ. ತಿಳೀತು???' ಅಂತ ಧಾರವಾಡ ಭಾಷಾದಾಗ ಕೇಳಿದೆ.

'ಏನು? ಏನು ಮತ್ತ ಅದೇ ಅದೇ ಹಚ್ಚಿ??? ತಲಿ ಕೆಟ್ಟದ ಏನು? ಮುಂಜಾನೆ ಮುಂಜಾನೆ ಚಡ್ಡಿ, ಅದರ ಒಳಗಿನ ಕಡ್ಡಿ ಅಂತ ಏನೇನೋ ಅಸಹ್ಯ ಮಾತಾಡ್ಲಿಕತ್ತಿಯಲ್ಲಾ??? ನಿನ್ನೆ ರಾತ್ರಿ ಕುಡಿದಿದ್ದರ ನಶಾ ಇನ್ನೂ ಇಳಿದಿಲ್ಲ ಏನು? ಏನು ಇದ್ದೀಪಾ? ನಾ ಏನೋ ಕೇಳಿದೆ. ಅದಕ್ಕಂತೂ ಬರೋಬ್ಬರಿ ಉತ್ತರ ಹೇಳಲಿಲ್ಲ. ಈಗ ಹುಚ್ಚುಚ್ಚರೆ ಏನೇನೋ ಅಂತಿ. ಹಾಂ???' ಅಂತ ನನಗs ಝಾಡಿಸಿದ.

'ಅಲೀ ಇವನ. ಕೇಳಿದಷ್ಟಕ್ಕ ಉತ್ತರಾ ಕೊಡಪಾ ಹೀರೋ. ಜಾಸ್ತಿ ಮಾತು ಬ್ಯಾಡ. ಬೋಲ್ ಬಚನ್ ನಹಿ ಮಾಂಗ್ತಾ. ನಿನ್ನ ಪೇಸ್ಟಿನ್ಯಾಗ ಉಪ್ಪು, ಇದ್ದಿಲು ಎಲ್ಲಾ ಇದ್ದಂಗ ನಿನ್ನ ಚಡ್ಡಿ, ಅದೂ ಈಗ ಹಾಕ್ಕೊಂಡು ನಿಂತಿಯಲ್ಲಾ ಪಟ್ಟಾಪಟ್ಟಿ ಚಡ್ಡಿ, ಅದರಾಗ ಕಡ್ಡಿ ಅದನೋ ಇಲ್ಲೋ? ಅಷ್ಟೇ. ಆಪ್ ಕಿ ಚಡ್ಡಿ ಮೇ ಕಡ್ಡಿ ಹೈ? ಹೈ ಕ್ಯಾ??? ' ಅಂತ ನಾನೂ ಬತ್ತಿ ಬರೋಬ್ಬರಿ ಪ್ರೈಮ್ ಮಾಡಿಯೇ ಇಟ್ಟೆ.

ನಾನು ಅಷ್ಟು ಸಸಾರಿಲೆ ಬಿಡುವ ಪೈಕಿ ಪಿಶಾಚಿ ಅಲ್ಲ ಅಂತ ಅವಂಗ ಗೊತ್ತಾತು. ಕೆಟ್ಟ ಮಾರಿ ಮಾಡಿಕೊಂಡು, ಮನಿ ಒಳಗ ಹೊಂಟ ನಮ್ಮ ಮಷ್ಕಿರಿ ಬಾಜೂ ಮನಿಯವ. ರಿವರ್ಸ್ ಬತ್ತಿ ಬರೋಬ್ಬರಿ ಇಟ್ಟಿದ್ದೆ ನೋಡ್ರಿ. ಅದಕ್ಕೇ ರಿವರ್ಸ್ ಹೊಂಟ್ತು ಗಾಡಿ.

'ಏ, ಸ್ವಲ್ಪ ತಡೀಪಾ. ನಿನ್ನ ಚಡ್ಯಾಗ ಕಡ್ಡಿ ಅದನೋ ಇಲ್ಲೋ ಅಂತ ಹೇಳಿ ಹೋಗಪಾ. ಹೇಳಿ ಹೋಗಲೇ ಬೋಕಡ್ ಛಾಪ್!' ಅಂತ ಆವಾಜ್ ಹಾಕಿದೆ.

'ಏನು ಚಡ್ಡಿ? ಏನು ಅದರ ಒಳಗಿನ ಕಡ್ಡಿ? ಕೆಟ್ಟ ಅಸಹ್ಯ. ಮುಂಜ್ಮುಂಜಾನೆ ಅಸಹ್ಯ ಅಸಹ್ಯ ಮಾತಾಡಿಕೋತ್ತ. ಹೇಶಿ ತಂದು,' ಅಂತ ಕೆಟ್ಟ ಮಸಡಿ ಮಾಡಿ ಬೈದ.

'ಅಲ್ಲಲೇ, ನಿನ್ನ ಚಡ್ಯಾಗ ಕಡ್ಡಿ ಅದಯೇನು ಅಂತ ನಾ ಕೇಳಿದ್ದರ ಅರ್ಥ ಏನು ಅಂತ ಮಾಡಿ???' ಅಂತ ಕೇಳಿದೆ.

'ಏನು ಅರ್ಥ? ಆ ಅಸಹ್ಯಕ್ಕ ಅರ್ಥ ಬ್ಯಾರೆ. ಬರೇ ಅನರ್ಥ ಅಷ್ಟ!' ಅಂತ ಉರಕೊಂಡ. ಇಟ್ಟಿದ್ದ ಬತ್ತಿ ಅವನ ಬ್ಯಾಕ್ ಬ್ಲಾಸ್ಟ್ ಮಾಡಿತ್ತು.

'ಲಕ್ಷ ವಹಿಸಿ ಕೇಳು. ನಾ ಕೇಳಿದ್ದರ ಅರ್ಥ ಏನಪಾ ಅಂದ್ರ, ನೀ ಹಾಕ್ಕೊಂಡ ಪಟ್ಟಾಪಟ್ಟಿ ಚಡ್ಡಿಗೆ ಒಂದು ಕಿಸೆ ಅದ. ಆ ಕಿಸೆದಾಗ ಯಾವಾಗಲೂ ಒಂದು ಕಡ್ಡಿಪೆಟ್ಟಿಗಿ ಇಟ್ಟೇ ಇಟ್ಟಿರ್ತಿ. ಆ ಕಡ್ಡಿಪೆಟ್ಟಿಗಿ ಒಳಗ ಕಡ್ಡಿ ಅದಯೇನು ಅಂತ. ಚಡ್ಡಿ ಮೇ ಕಿಸೆ, ಕಿಸೆ ಮೇ ಕಡ್ಡಿಪೆಟ್ಟಿಗಿ, ಕಡ್ಡಿಪೆಟ್ಟಿಗೆ ಮೇ ಕಡ್ಡಿ, ಕಡ್ಡಿ ಪೇ ದಿಲ್ ಆಗಯಾ, ವೋ ಕಡ್ಡಿ ಪೇ ದಿಲ್ ಆಗಯಾ ಅಂತ ಉದ್ದ ಹೇಳೋದರ ಬದಲಾಗಿ ಶಾರ್ಟ್ & ಸ್ವೀಟ್ ಆಗಿ 'ನಿಮ್ಮ ಚಡ್ಡಿಯಲ್ಲಿ ಕಡ್ಡಿ ಇದೆಯೇ?' ಅಂತ ಕೇಳಿದೆ. ನೀ ಹ್ಯಾಂಗ ನನ್ನ ಕಡೆ, 'ನಿಮ್ಮ ಪೇಸ್ಟಿನಲ್ಲಿ ಉಪ್ಪು ಇದೆಯೇ? ಇದ್ದಿಲು ಇದೆಯೇ?' ಅಂತ ಕೇಳಿದಿ ನೋಡು ಹಾಂಗ. ಈಗರೆ ತಿಳಿತೇನು???' ಅಂತ ಫುಲ್ ವಿವರಣೆ ಕೊಟ್ಟೆ.

'ಇಷ್ಟs  ಏನು ಅರ್ಥ? ಚಡ್ಯಾಗ ಕಡ್ಡಿ ಅಂದ್ರ ನಾ ಏನೋ ತಿಳ್ಕೊಂಡಿದ್ದೆ,' ಅಂತ ಎಳೆದ.

'ನೀ ಏನು ತಿಳ್ಕೊಂಡಿದ್ದಿ ಮಹಾನುಭಾವ? ಎಲ್ಲೆ, ಹ್ಯಾಂಗ ಓಡಿತ್ತು ರಾಯರ ತಲಿ ಅನ್ನೋ ಹುಚ್ಚ ಕುದರಿ??? ಹಾಂ?? ಹೇಳೋ! ಹೇಳೋ! Tell I say. Nation wants to know. What is ಕಡ್ಡಿ ಇನ್ ಚಡ್ಡಿ?? Tell I say!' ಅಂತ ಬರೋಬ್ಬರಿ verbal ಬತ್ತಿ ಜಡಿಜಡಿದು ಇಟ್ಟೆ. 'ನನಗ ಕಾಡ್ಲಿಕತ್ತಿದ್ದಿ ಮಂಗ್ಯಾನಿಕೆ???' ಅಂತ ಅಂದುಕೊಂಡು ಸಿಟ್ಟಿಲೆ ಉಪ್ಪು, ಇದ್ದಿಲು ಎಲ್ಲಾ ಕೂಡಿಸಿಯೇ ಇಟ್ಟೆ ನೋಡ್ರಿ. ಫುಲ್ ಮಂಗ್ಯಾ ಆದ.

'ಅದು ಏನರೆ ಇರಲಿ. ಹೂಂ. ನನ್ನ ಚಡ್ಯಾಗ ಕಡ್ಡಿ ಜರೂರ್ ಅದ. ಅಂದ್ರ ನನ್ನ ಪಟ್ಟಾಪಟ್ಟಿ ಚಡ್ಡಿ ಕಿಸೆದಾಗಿರೋ ಕಡ್ಡಿಪೆಟ್ಟಿಗ್ಯಾಗ ಕಡ್ಡಿ ಜರೂರ್ ಅವ. ಅದ್ಯಾಕ ಬೇಕು?' ಅಂದ. ಹೇಳಿ ಕೇಳಿ ಗಣೇಶ್ ಬೀಡಿ ಸೇದೋ ಬೆರಕಿ ಮಂಗ್ಯಾನಿಕೆ ಇವಾ. ಕಡ್ಡಿ ಇರಲಿಲ್ಲ ಅಂದ್ರ ಹೆಂಗ?

'ಕಡ್ಡಿ ಅವನೇ? ಗುಡ್. ಒಂದು ಉದ್ದನೆ ಕಡ್ಡಿ ಈ ಕಡೆ ಕೊಡಪಾ. ಒಂದು ಕಡ್ಡಿ ಕೊಡು ಸಾಕು. ಉಳಿದ ಕಡ್ಡಿ ನೀನು ನಿನ್ನ ಚಡ್ಯಾಗೇ ಇಟ್ಟುಕೋ!' ಅಂದೆ.

ಚಡ್ಯಾಗಿನ ಕಿಸೆದಾಗಿಂದ ಕಡ್ಡಿಪೆಟ್ಟಿಗಿ ತೆಗೆದು ಒಂದು ಕಡ್ಡಿ ಕೊಟ್ಟ. 'ಯಾಕ? ಯಾಕ ಬೇಕಾಗಿತ್ತು?' ಅಂತ ಕೇಳಿದ.

'ಸ್ಟವ್ ಹಚ್ಚಿ ಚಹಾ ಮಾಡಿಕೊಂಡು ಕುಡಿಯೋಣ ಅಂದ್ರ ಕಡ್ಡಿನೇ ಇರಲಿಲ್ಲ ನೋಡಪಾ. ಖಾಲಿ ಕಡ್ಡಿಪೆಟ್ಟಿಗಿ ಮಾತ್ರ ಇತ್ತು. ಇನ್ನು ಕಡ್ಡಿಪೆಟ್ಟಿಗಿ ತರಲಿಕ್ಕೆ ಅಂಗಡಿಗೆ ಹೋಗಬೇಕು. ಆದಕ್ಕೇ ನಿನ್ನ ಕಡೆ ಕೇಳಿದೆ. ನೀ ಈಗ ಕಡ್ಡಿ ಕೊಟ್ಟಿ. ದೊಡ್ಡ ಥ್ಯಾಂಕ್ಸ್!' ಅಂದೆ.

ಹೇಳಿಕೇಳಿ ಮುಂಜಾನೆಯ ಚಹಾ ಮಾಡಿಕೊಳ್ಳಲಿಕ್ಕೆ ಕಡ್ಡಿ, ಅದೂ ಚಡ್ಯಾಗಿನ ಕಡ್ಡಿ, ಕೊಟ್ಟ ಮಹಾದಾನಿ ನಮ್ಮ ಬಾಜೂಕಿನ ಮನಿಯವ. ಅದನ್ನು ಸ್ಮರಿಸಿಕೊಂಡು, 'ಬಾರಲೇ, ನೀನೂ ಒಂದು ಕಪ್ಪು ಚಹಾ ಕುಡಿದು ಹೋಗು. ನೀ ಕೊಟ್ಟ ನಿನ್ನ ಚಡ್ಯಾಗಿನ ಕಡ್ಡಿಲೇ ಒಲಿ ಹಚ್ಚಿ ಚಹಾ ಮಾಡತೇನಿ. ಎಲ್ಲರೆ ನಿನ್ನ ಕಡ್ಡಿ ಭಾಳ ಮಂದಿ ಗಂಡಸೂರ ಕಡ್ಡಿ ಗತೆ ಟಿಸಮದ್ದು ಅಥವಾ ಥಂಡಿ ಹಿಡಿದಿದ್ದು ಮತ್ತೊಂದು ಆದರೆ ಇನ್ನೊಂದು ಕಡ್ಡಿ ಬೇಕಾಗಬಹದು. ಆವಾಗ ಮತ್ತ ಇನ್ನೊಂದು ಕಡ್ಡಿ ಕೊಟ್ಟಿಯಂತ. ಬಾ!! ಬಾ!! ಚಹಾ ಮಾಡಿ, ಕುಡಿಯೋಣ. ಬಾ! ಬಾ!' ಅಂತ ಕರೆದೆ.

ಬರೋಬ್ಬರಿ ರಿವರ್ಸ್ ಬತ್ತಿ ಇಡಿಸಿಕೊಂಡಿದ್ದ ನಮ್ಮ ಬಾಜೂ ಮನಿಯವ ತಲಿ ಕುಣಿಸಿಗೋತ್ತ ಬಂದ. ಇನ್ನು ಚಹಾ ಮಾಡಬೇಕು. ಇವನ ಚಡ್ಯಾಗಿನ ಕಡ್ಡಿಯಿಂದ ಮೊದಲು ಒಲಿ ಹಚ್ಚಬೇಕು. ಭಗ್! ಅಂತ ಹತ್ತತದೋ ಅಥವಾ ಟಿಸಮದ್ದು ಆಗ್ತದೋ ನೋಡಬೇಕು ಇವನ ಚಡ್ಡಿಯೊಳಗಿನ ಕಡ್ಡಿಯ ಕಮಾಲ್!

ನಿಮ್ಮ ಪೇಸ್ಟಿನಲ್ಲಿ ಉಪ್ಪು ಇದೆಯೇ? ಬೇವು ಇದೆಯೇ? ಮುಂದ? ಬೇವಿನ ನಂತರ ಬೆಲ್ಲ ಇದೆಯೇ??

4 comments:

Vimarshak Jaaldimmi said...


Ha! Ha!!

May be a good idea to advertise as "with sea salt!"



M. Muguleppa said...


Nice mimicry dialogs!

sunaath said...

ನಕ್ಕ ನಕ್ಕ ಸಾಕಾತ್ರೀ, ಮಹೇಶ!
ಒಂದ ಕಾಲಕ್ಕ `ಮಾಕಡ ಛಾಪ' ಕಡ್ಡೀ ಪೆಟಗಿ ಮತ್ತು `ಹತ್ತೀ ಛಾಪ' ಸಿಗರೇಟ ಪಾಕೀಟ ಬರತಿದ್ದವು.
ಸಂಡಾಸಕ್ಕ ಹೋಗಲಾಕ ಕೆಲವರಿಗೆ ಇವು ಅವಶ್ಯ ಬೇಕಾಗತಿದ್ದವು.

Mahesh Hegade said...

ಹಾ, ಹಾ, ಸುನಾಥ್ ಸರ್!

`ಮಾಕಡ ಛಾಪ' ಕಡ್ಡೀ ಪೆಟಗಿ ಮತ್ತು `ಹತ್ತೀ ಛಾಪ' - ಎಲ್ಲೋ ಕೇಳಿದ, ನೋಡಿದ ನೆನಪು.ಉಪಯೋಗ ಮಾಡಿಲ್ಲ ಬಿಡ್ರಿ!