Showing posts with label ಹಾಸ್ಯ. Show all posts
Showing posts with label ಹಾಸ್ಯ. Show all posts

Friday, December 27, 2024

ಸದನ ಕೌತುಕ...ಕದನ ಕುತೂಹಲ

ತುಂಬಾ ಹಿಂದೆ, ಸದನ ನಡೆಯುತ್ತಿರುವಾಗ ಸದನ ಸದಸ್ಯರ ನಡುವೆ ನಡೆದ ಚರ್ಚೆಗಳಲ್ಲಿನ ಆಸಕ್ತಿದಾಯಕ ಚುಟುಕುಗಳನ್ನು ತಮಾಷೆಯ ಶೈಲಿಯಲ್ಲಿ 'ಸದನ ಕೌತುಕ' ಎಂಬ ಶೀರ್ಷಿಕೆಯಡಿ ಪ್ರಕಟಿಸುತ್ತಿದ್ದರು. ಆ ಧಾಟಿಯಲ್ಲಿ ಇತ್ತೀಚಿನ ಬೆಳವಣಿಗೆ ಆಧರಿಸಿ ಒಂದು ಕಾಲ್ಪನಿಕ ಬರಹ...

ಇವರು ಅವರಿಗೆ ಕೊಲೆಗಾರ ಅಂದರು. ಅವರು ಇವರಿಗೆ ಸೂ* ಅಂದರು. ಈಗ ಅಕ್ಕಾ, ನಾನು ಹೃದಯದಿಂದ ಕೆಟ್ಟವನಲ್ಲ ಅಕ್ಕಾ ಎಂದು ಇವರೂ, ಅಣ್ಣಾ ನಿನ್ನ ಹೃದಯ ಚೆನ್ನಾಗಿರಬಹುದು ಬಾಯಿ ಸ್ವಚ್ಛವಾಗಿಲ್ಲ ಎಂದು ಅವರೂ ಗುದಮುರಗಿ ನಡೆಸಿರುವಾಗ ಒಂದು ನೆಮ್ಮದಿಯ ವಿಷಯ ಏನೆಂದರೆ ಸುಪ್ರಿಯಾ ಸುಳೆ, ಪಂಕಜಾ ಮುಂಡೆ ಮುಂತಾದ ವಿಚಿತ್ರ ಅಡ್ಡಹೆಸರುಳ್ಳ ಜನ ನಮ್ಮಲ್ಲಿ ಇಲ್ಲ. ಅಂತವರು ಇದ್ದರೆ, ಮೇಲಿಂದ ಅವರಿಗೆ ಕನ್ನಡವೂ ಅಷ್ಟಿಷ್ಟು ಬಂದುಬಿಟ್ಟಿದ್ದರೆ ಶಿವಾ . ..ದೊಡ್ಡ ಲಫಡಾ.

ರೀ, ಸುಳೇ ಅವರೇ ಅಂದರೆ ಯಾಕ? ಎಲ್ಲಿ ಕಡಿಯಾಕ ಹತ್ತೈತಿ? ಎಂದು ಮೈಮೇಲೆ ಬಿದ್ದರೆ ಮತ್ತೆ ಅಕ್ಕಾ, ಸುಳೇ ಅಂದೆ ಕಣಕ್ಕಾ ಸೂ ಎಂದು ಮಹಾಪ್ರಾಣ ಹೇಳಿಲ್ಲ ಅಕ್ಕಾ ಅನ್ನುತ್ತಾ ಪ್ರಾಣ ಕಾಪಾಡಿಕೊಳ್ಳಬೇಕು.

ಇನ್ನು ಮುಂಡೆ. ರೀ ಮುಂಡೆ ಅಂದರೆ ಶಿವಾಯ ನಮಃ. ಅದು ಬೇಡ ಗೋಪಿನಾಥ್ ಮುಂಡೆ ಅವರ ಪುತ್ರಿ ಎಂದು ರೀ ಮುಂಡೆಮಗಳೇ ಅಂದುಬಿಟ್ಟರೆ ಮತ್ತೂ ದೊಡ್ಡ ಅಧ್ವಾನ. ರೀ ಪಂಕಜಾ ಅವರೇ ಅಂದುಬಿಟ್ಟರೆ ಪಂಕೇ ಜಾಯತೇ ಇತಿ ಪಂಕಜಾ ಅರ್ಥಾಥ್ ಕೆಸರಿನಲ್ಲಿ ಹುಟ್ಟಿದ್ದು ಉರ್ಫ್ ಕಮಲ ಎಂದು ಹೆಗಡೆ ಮಾಸ್ತರ್ ಅಂತಹ ಸಂಸ್ಕೃತ ವಿದ್ವಾನರು ಬತ್ತಿ ಇಟ್ಟರು ಅಂದರೆ ಅದನ್ನೇ ಹಿಡಿದುಕೊಂಡು ತಿರುಗಿ ಇಡುತ್ತಾರೆ. ಅಕ್ಕಾ, ನಿನ್ನನ್ನು ಮತ್ತೇನೆಂದು ಸಂಬೋಧಿಸಲಿ ಅಕ್ಕಾ? ಲೋಟಸ್ ವಿಡೋ ಅಂದುಬಿಡಲೇ??? ಲೋಟಸ್ ವಿಡೋ ಎಂದರೆ ಪಂಕಜಾ ಮುಂಡೆ ಎಂದು ಚಿಕ್ಕಿ ಹಗರಣ ಖ್ಯಾತಿಯ ಮುಂಡೆ, ಮುಂಡೆ ಮಗಳಿಗೆ ಅರ್ಥವಾಗುವುದು ಅಷ್ಟರಲ್ಲೇ ಇದೆ ಬಿಡಿ.

ಹಿರಿಯ ರಾಜಕಾರಣಿ ಮೋಟಮ್ಮ ಒಂದು ಕಾಲದಲ್ಲಿ ಸದನದಲ್ಲಿ ಇದ್ದರು. ಈಗ ಅವರ ಪುತ್ರಿ ನಯನಾ ಮೋಟಮ್ಮ ಇದ್ದಾರೆ. ಕೆಲವರಿಗೆ ಹಿಂದಿ ಮೇಲೆ ವಿಪರೀತ ಪ್ರೀತಿ. ಸುಟ್ಟರೂ ಹಿಂದಿ ಬರುವುದಿಲ್ಲ. ಚಿತ್ರಗೀತೆಗಳ ಮೂಲಕ ಹಿಂದಿ ಕಲಿಯೋಣ ಎಂದು ಹೇಳಿ, ಸಮಯ ಸಿಕ್ಕಾಗ, ಸದನದ ಸುತ್ತಮುತ್ತಾ ಎಲ್ಲಿಯಾದರೂ, ಜಿಸ್ ಕೀ ಬೀವಿ ಮೋಟಿ ಉಸ್ಕಾ ಭೀ ಬಡಾ ಕಾಮ್ ಹೈ. ಬಿಸ್ತರ್ ಪೇ ಬಿಛಾದೋ. ಗದ್ದೆ ಕಾ ಕಾಮ್ ಹೈ. ಮೇರೇ ಅಂಗಾನೇ ಮೇ ತುಮಾರಾ ಕ್ಯಾ ಕಾಮ್ ಹೈ, ಎಂದೇನಾದರೂ ಗುಣುಗುಣಿಸಿಬಿಟ್ಟರೆ ಮುಗೀತು ಕಥೆ. ಏನ್ರೀ ಮೋಟಿ ಗೀಟಿ ಅಂತ ಏನೇನೋ ಹೇಳ್ತೀರಾ ಅಂತ ಮೋಟಮ್ಮನವರೂ ಮತ್ತು ಅವರ ಪುತ್ರಿ ಜಗಳಕ್ಕೆ ಬಂದರೆ ಮತ್ತೆ ಅಮ್ಮಾ, ಅಕ್ಕಾ ಎಂದು ವಿವರಣೆ ಕೊಡಬೇಕು.

ಶಾಸಕ ರಾಜು ಕಾಗೆ ಇದ್ದಾರೆ. ಅವರ ಅಡ್ಡಹೆಸರು ಕಾಗೆ ಮೇಲೆ ಏನೆಲ್ಲಾ ಗೂಬೆ ಕೂಡಿಸಿಬಿಟ್ಟರು ಅಂದರೆ ಹಿಂದೊಮ್ಮೆ ಸದನದಲ್ಲೇ ಕಣ್ಣೇರು ಹಾಕಿಬಿಟ್ಟಿದ್ದರು ಕಾಗೆ. ಮಾಧ್ಯಮಗಳು ಕಾಗೆ, ಕಲರ್ ಕಲರ್ ಕಾಗೆ ಏನೇನೋ ಅಂತಾರೆ ಸ್ವಾಮೀ. ಮಾಧ್ಯಮವೇ ಆದರೂ ಅವರಿಗೊಂದು ಮಾರ್ಗಸೂಚಿ ಬೇಡವೇ  ಎಂದು ಕಾಗೆ ಎಂಬ ಅಡ್ಡಹೆಸರಿನ ಅವರಿಗೆ ಏನೆಲ್ಲಾ ನೋವು ಉಂಟು ಮಾಡಿದರು ಎಂದು ಹೇಳಿ ಅಂಬೋ ಅಂದಿದ್ದರು. ಅವರಿಗೆ ರಿಲೀಫ್ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ.

ಫೈರ್ ಬ್ರಾಂಡ್ ಮುಖಂಡ ಕಾಶಪ್ಪನವರ್ ಇದ್ದಾರೆ. ಅವರಿಗೆ Cashಅಪ್ಪನವರ ಅಂದುಬಿಟ್ಟರೆ ನಿಮ್ಮನ್ನು ಹುನಗುಂದದ ಅವರ ಗ್ರಾನೈಟ್ ಕ್ವಾರಿಯೊಳಗೆ ಜೀವಂತ ಹೂತುಬಿಟ್ಟಾರು. ಅವರ ಅಬ್ಬರ ಕೇಳಿದವರಾರೂ ಅವರಿಗೆ ಅಣ್ಣಾ,ಬಾಸ್ ಬಿಟ್ಟು ಬೇರೆ ಕಮಕ್ ಕಿಮಕ್ ಅನ್ನುವುದಿಲ್ಲ.

ಹಿಂದೆ ಹುಚ್ಚಮಾಸ್ತಿಗೌಡ ಎನ್ನುವ ರಾಜಕಾರಣಿ ಇದ್ದರು. ಅವರಿಗೆ ಏನೆಲ್ಲಾ ಲೇವಡಿ ಮಾಡುತ್ತಿದ್ದರೋ ಪಾಪ. 

ಹಾಗೆಯೇ ಚಿಗರೆಮಾಚಿಗೌಡ. ಅವರ ನೆನಪಿನಲ್ಲೇ ಹುಧಾ ಮಹಾನಗರದ ಚಿಗರಿ ಬಸ್ ಬಂದಿದ್ದರೆ ಅವರ ಹೆಸರು ಹಾಗೆ ಇದ್ದಿದ್ದು ಸಾರ್ಥಕ.

ಹಾರ್ದಿಕ್ ದೀಕ್ಷಿತ್ ಅಂತ ಯಾರೂ ಇಲ್ಲ ಅಂತ ಭಾವಿಸುತ್ತೇನೆ. ಅಂತಹ ಹೆಸರುಳ್ಳ ಹುಡುಗ ಶಾಲೆ ಮುಗಿಸುವುದು ಡೌಟ್. ಇಂಗ್ಲಿಷ್ ಭಾಷೆಯಲ್ಲಿ ಬರೆದರೇ ನಗು ಬರುತ್ತದೆ. ಮೂಲ ಗೊತ್ತಿಲ್ಲದವರು ಉಚ್ಚಾರಣೆ ಮಾಡಿಬಿಟ್ಟರೆ...ಶಿವಾ..ಅಷ್ಟೇ ಮತ್ತೆ.

Sunday, December 22, 2024

ಬಂಗಾರ ಮಾರಿ ಬಿಟ್ ಕಾಯಿನ್ ಕೊಳ್ಳುತ್ತಾನಂತೆ ಟ್ರಂಪ್. ವಿನಾಶಕಾಲೇ ವಿಪರೀತ ಬುದ್ಧಿ ???

Trump is looking to create a bitcoin strategic reserve. How would that work?

ಹುಚ್ಚಾ ವೆಂಕಟನ ದೊಡ್ಡಪ್ಪನಂತಿರುವ ಟ್ರಂಪ್ ಮತ್ತು ಹುಚ್ಚಾ ವೆಂಕಟನ ಹಿರಿಯಣ್ಣನಂತಿರುವ ಈಲಾನ್ ಮಸ್ಕ್ ಮತ್ತು ಕಜಿನ್ ಬ್ರದರ್ ತರಹ ಇರುವ ಅವಿವೇಕ ನಾಮಸ್ವಾಮಿ ಮುಂತಾದವರು ಟ್ರಂಪ್ ಜೊತೆ ಇರುವಾಗ ಏನೂ ಆಗಬಹುದು.

ಈ ಪುಣ್ಯಾತ್ಮ ಟ್ರಂಪ್ ಹಿಂದೆ 2016 ರಲ್ಲಿ ಬಂದಾಗ ಚೀನಾ, ಇಲ್ಲಿನ ಡೀಪ್ ಸ್ಟೇಟ್ (deep state) ಜೊತೆ ಭಾನಗಡಿ ಮಾಡಿಕೊಂಡ. ಕಾಲುಕೆರೆದು ಅವರನ್ನು ತಡವಿಕೊಂಡ. ಆಗ ಕೊಟ್ಟರು ನೋಡಿ ಒಂದು ಬರೋಬ್ಬರಿ ಗಜ್ಜು. ಅದೇ ಕೋವಿಡ್. ಆ ಕೋವಿಡ್ ಅನಾಹುತ ಎಬ್ಬಿಸಿದ್ದು ೨ ೦ ೨ ೦  ರಲ್ಲಿ ಟ್ರಂಪ್ ನನ್ನು ಸೋಲಿಸಲು ಮತ್ತು ಓಡಿಸಲು. ಆದರೆ ತೊಂದರೆ, ಪಡಿಪಾಟಲು, ತಾಪತ್ರಯ ಅನುಭವಿಸಿದ್ದು ಇಡೀ ವಿಶ್ವ. ಲಸಿಕೆ, ಚಿಕಿತ್ಸೆ ಮಣ್ಣು ಮಸಿ ಎಂದು ಅತಿ ದೊಡ್ಡ ಪ್ರಮಾಣದ wealth transfer ಆಗಿದ್ದನ್ನು ನೋಡುತ್ತಾ ಬಾಯಿ ಬಾಯಿ ಬಡಿದುಕೊಂಡು ಇಲ್ಲಿ 750 ಡಾಲರ್ stimulus ಚೆಕ್ಕನ್ನೂ,  ಬೇರೆ ಕಡೆ ಐದು ಕೇಜಿ ರೇಶನ್ ಅಕ್ಕಿಯನ್ನೂ ತೆಗೆದುಕೊಂಡು ದಣಿಗೆಗಳಿಗೆ ಸಾಷ್ಟಾಂಗ ಹಾಕಿದ್ದು ವಿಶ್ವದ ಜನತೆ. ಅಲ್ಲಿಗೆ ಸಮಾನತೆ ಮತ್ತೊಂದು ಶಿವಾಯ ನಮಃ.

ಈಗ ಮತ್ತೆ ಟ್ರಂಪ್ ಬಂದಿದ್ದಾರೆ. ಇನ್ನು ನಾಲ್ಕು ವರ್ಷ ಈ ಹುಚ್ಚಾ ವೆಂಕಟನ ಗ್ಯಾಂಗ್ ಏನೇನು ಮಾಡಲಿದೆಯೋ ದೇವರೇ ಬಲ್ಲ. 

ಬಿಟ್ ಕಾಯಿನ್ ಬಿಟ್ ಕಾಯಿನ್ ಎಂದು ಹುಯಿಲು ಎಬ್ಬಿಸಿ, ಅದನ್ನು manipulate ಮಾಡಿ, ಎಲ್ಲರೂ ತಮ್ಮ ಹೊಲ, ಮನೆ, ಬಂಗಾರ, ಸಿಂಗಾರ ಎಲ್ಲ ಮಾರಿಕೊಂಡು ಬಿಟ್ ಕಾಯಿನ್ ಕೊಳ್ಳಬೇಕು. ಆವಾಗ ಇವರು ಅದನ್ನು ಡಂಪ್ ಮಾಡಿ ಎಲ್ಲರನ್ನೂ ದಿವಾಳಿ ಮಾಡಿ ಮತ್ತೇನೋ ಮಾಡಿಕೊಳ್ಳಬೇಕು. ಹುನ್ನಾರ ಹಾಗೇ ಇದ್ದಂತೆ ಕಾಣುತ್ತದೆ. 

ಇವರ ಖತರ್ನಾಕ್ ಸ್ಕೀಮ್ ವಿಫಲವಾದರೆ ಮಸ್ಕ್ ನ  ರಾಕೆಟ್ ಅಂತೂ ಇವೆಯೆಲ್ಲ. ಎಲ್ಲರ ಪುಕುಳಿಯಲ್ಲೂ ಒಂದೊಂದು ರಾಕೆಟ್ ಹೆಟ್ಟಿ ಢಂ ಅನ್ನಿಸುತ್ತಾನೆ. ಅವು ಹಡಬೆ ರಾಜಕಾರಣಿಗಳನ್ನು ಹೊತ್ತು ಎಲ್ಲಿ ಹೋಗುತ್ತವೋ ಯಾವನಿಗೆ ಗೊತ್ತು. ಅವು ತ್ರಿಶಂಕು ಸ್ವರ್ಗಕ್ಕೆ ಹೋಗಬಹುದು. ಅಥವಾ ಅಂತರಿಕ್ಷದಲ್ಲಿ ಅಂತರ್ಪಿಶಾಚಿಗಳ ಹಾಗೆ ಗಿರಕಿ ಹೊಡೆಯುತ್ತಾ ಮುಕ್ತಿ ಸಿಗದ ರಾಜಕಾರಣಿಗಳು ಮತ್ತೆ ಮತ್ತೆ ಭೂತ ಪ್ರೇತಗಳ ಹಾಗೆ ವಕ್ಕರಿಸಿ ನಮ್ಮನ್ನು ಕಾಡುತ್ತವೆ. 

ಕೊನೆಗೆ ಒಂದು ರಾಕೆಟ್ಟನ್ನೂ ತನ್ನ ಪುಕುಳಿಯಲ್ಲಿಯೂ, ಮತ್ತೊಂದನ್ನು ಅವಿವೇಕ ನಾಮಸ್ವಾಮಿಯ  ಪುಕುಳಿಯಲ್ಲಿಯೂ ಹೆಟ್ಟಿ, ನನ್ನ ಪುಕುಳಿ ರಾಕೆಟ್ಟಿಗೆ ನೀ ಬೆಂಕಿ ಹಚ್ಚು. ನಿಂದಕ್ಕೆ ನಾ ಹಚ್ಚುತ್ತೇನೆ ಎಂದು ಮಸ್ಕಿರಿ ( ಮಸ್ಕ್ + ಕಿರಿ = ಮಸ್ಕಿರಿ, ಮಷ್ಕಿರಿ) ಮಾಡುತ್ತಾ ಆಗಲೇ ಮಂಗನ(ಳ) ಗ್ರಹದಲ್ಲೋ, ಶುಕ್ರ ಗ್ರಹದಲ್ಲೋ ಮಾಡಿಟ್ಟುಕೊಂಡಿರುವ ತಮ್ಮ ತಮ್ಮ ರಹಸ್ಯ ನೆಲೆಗಳಿಗೆ ಪರಾರ್. ಅದೇ ಪ್ರಳಯ. ಕಲಿಯುಗದ ಅಂತ್ಯ. ಅದಕ್ಕೆ ಎಲ್ಲರೂ ತಯಾರಾಗಿರೋಣ...😂😂😂😂😂😂😂

Saturday, December 21, 2024

ಮಧುಮೇಹದಿಂದ ಮಧುಚಂದ್ರದೆಡೆಗೆ...

ಜೀವನಾಂಶ ನೀಡಿಕೆ ವಿನಾಯತಿಗೆ ಮಧುಮೇಹ ನೆಪವಲ್ಲ: ಹೈಕೋರ್ಟ್

ಗಂಡ: ಸರಾ, ನನಗ ಮಧುಮೇಹ ಐತ್ರಿ. ಹೆಂಡತಿಗೆ ಡೈವೋರ್ಸ್ ಭತ್ತೆ ರೊಕ್ಕ ಕೊಡಲಿಕ್ಕೆ ಸಾಧ್ಯ ಇಲ್ಲರಿ.

ನ್ಯಾಯಾಧೀಶ: ಏ, ಮಧುಮೇಹ ಗಿಧುಮೇಹ ಏನೂ ನೆವ ಹೇಳಂಗಿಲ್ಲ. ಮದುವೆ ಆಗಿ, ಮಧುಚಂದ್ರಕ್ಕೆ ಹೋಗಿ, ಮಧುಮಂಚ ಹತ್ತಿ, ಇಳಿದು, ಬಿದ್ದು, ಪಲ್ಲಂಗ್ ತೋಡ್ ಪಾನ್ ತಿಂದು ಪಲ್ಲಂಗ ಮುರಿದು, ಸೊಂಟ ಮುರಿದುಕೊಂಡು, ಅಕಿದೂ ಮುರಿದು ಬಂದಿ ಮಗನೇ. ಈಗ ಮಧುಮೇಹ ಅಂತಿ?? ಇಡಿಯಟ್. ಮುಚ್ಚಿಕೊಂಡು ಅಕಿಗೆ ತಿಂಗಳೂ ರೊಕ್ಕ ಕೊಡು. ಇಲ್ಲಂದ್ರ ನೋಡು ಮತ್ತೆ...

ಗಂಡ: (ಮೌನಕ್ಕೆ ಜಾರಿದ)

ನ್ಯಾಯಾಧೀಶ: ಅಂದಂಗ ಎಲ್ಲಿ ಹೋಗಿದ್ದಿ ಮಧುಚಂದ್ರಕ್ಕೆ? ಅಂದ್ರ ಹನಿಮೂನಿಗೆ??

ಅಲ್ಲಿಯವರೆಗೆ ಸುಮ್ಮನಿದ್ದ ಹೆಂಡತಿ, ಚಿಟ್ಟನೆ ಚೀರಿ, "ಎಲ್ಲೂ ಕರಕೊಂಡು ಹೋಗಿಲ್ಲರೀ. ಮನ್ಯಾಗೇ ಮಾಳಿಗೆ ಮೇಲೆ ಅಮಾಶಿ ಚಂದಪ್ಪನ (ಚಂದ್ರ) ತೋರಿಸಿಕೋತ್ತ ಜೇನುತುಪ್ಪ (ಮಧು) ಚೀಪಿಸಿ, ತಾವೂ ಚೀಪಿ, ಅದನ್ನೇ ಮಧುಚಂದ್ರ ಅಂದು ಮೋಸ ಮಾಡ್ಯಾರ ಜಜ್ ಸಾಹೇಬ್ರ...." ಎಂದು ಗೊಳೋ ಎಂದಳು.

ನ್ಯಾಯಾಧೀಶ: ಬದ್ಮಾಶ್! ಹೆಂಡತಿ ಮಧುಚಂದ್ರಕ್ಕೆ ಹೋಗಿ ಬರೋ ಖರ್ಚು ಎಕ್ಸ್ಟ್ರಾ ಹಾಕೇನಿ. ಅದು ದಂಡ. ಅದನ್ನೂ ಕೂಡಿಸೇ ಅಮೌಂಟ್ ಕೊಡಬೇಕು ನೋಡು...

ಗಂಡ: ಯಾಕ್ರೀ???

ನ್ಯಾಯಾಧೀಶ: ಅಕಿ ಹೊಸ ಗಂಡನ್ನ ಜೋಡಿ ಹೋಗ್ತಾಳ ಮಧುಚಂದ್ರಕ್ಕೆ. ನೀ ಅಂತೂ ಕರಕೊಂಡು ಹೋಗಿಲ್ಲ.

😂😂😂😂😂

***

ತುಂಬಾ ಮಧುರವೂ ಸುಂದರವೂ ಆದ ಚಿತ್ರಗೀತೆ...

ಬಾ ನಲ್ಲೆ ಬಾ ನಲ್ಲೆ ಮಧುಚಂದ್ರಕೆ...

ಫೈಟರ್ ಎಂಜಿನ್ ಮತ್ತು ಫೈಟರ್ ಶೆಟ್ಟಿ

Biden, Modi announce major deal on fighter jet engines, drones

ಮೋದಿ ಮತ್ತು ಬೈಡೆನ್ ಮಧ್ಯೆ ಚರ್ಚೆ ನಡೆದಿತ್ತು. ಕೊಡು ತೊಗೊಳ್ಳೋ ವಿಚಾರ. ವ್ಯಾಪಾರ ವ್ಯವಹಾರ.

ಬೈಡೆನ್: ಮೋದಿ ಸಾಬ್, ನಿಮಗ  ಫೈಟರ್ ಎಂಜಿನ್ ಕೊಡೋಣ ಅಂತ ವಿಚಾರ ಮಾಡೇವಿ. ನೀವು ನಮಗ ಏನು ಕೊಡ್ತೀರಿ???

ಮೋದಿ ರಾಜಕೀಯ ಮುತ್ಸದ್ದಿ. ಪ್ರಧಾನಿ. ವ್ಯಾಪಾರ ಗೀಪಾರ ಏನಿದ್ದರೂ ಅದರ ಉಸ್ತುವಾರಿ ಅದಾನಿ. ಹಾಗಾಗಿ ಅವನ ಕಡೆ ನೋಡಿದರು. ಅವನೋ ತಲೆ ಕಾಣದಿದ್ದರೂ ಟೋಪಿ ಇಟ್ಟುಬಿಡುವ ಖತರ್ನಾಕ್ ಗಿರಾಕಿ.

ಸರ್, ಫೈಟರ್ ಶೆಟ್ಟಿ... ಎಂದು ಉಸುರಿ ಮುಂದೆ ಏನೋ ಹೇಳಲು ಹೋದ ಅದಾನಿ. 

ಮೋದಿ ಪೂರ್ತಿ ಕೇಳಿಸಿಕೊಳ್ಳದೇ, ಅವಸರಿಸಿ, ಪ್ರೆಸಿಡೆಂಟ್ ಬೈಡೆನ್ ನೀವು ನಮಗೆ ಫೈಟರ್ ಎಂಜಿನ್ ಕೊಡಿ. ನಾವು ನಿಮಗೆ ಫೈಟರ್ ಶೆಟ್ಟಿ ಕೊಡುತ್ತೇವೆ. ಏನಂತೀರಿ?? ಅಂದುಬಿಟ್ಟರು.

ಬೈಡೆನ್ ಮೊದಲೇ ಕೆಪ್ಪ. ಕೇಳಿಸಲಿಲ್ಲ. ಕಿವಿ ಚಟ್ಟೆ ಎಳೆದುಕೊಂಡು, ಹ್ಯಾಂ?? ಏನೂ? fighter shitty ??  ಫೈಟರ್ ಶಿಟ್ಟಿ ??? ಏ ನಮಗೆ ಶಿಟ್ಟಿ ಫೈಟರ್ ಬ್ಯಾಡ. ಕೊಡೋದಿದ್ದರೆ ಒಳ್ಳೆ ಫೈಟರ್ ಕೊಡಿ ಅಂದ. ಫೈಟರ್ ಶೆಟ್ಟಿ ಅಂದರೆ  ಅವನು ಮೋದಿ ಎಲ್ಲೋ  ಪ್ರೈಜ್ ಫೈಟರ್ ಕೊಡುತ್ತಾರೆ ಎಂದುಕೊಂಡನೋ ಏನೋ.

ಈಗಲೂ ಮಾತು ಮುಗಿಸದಿದ್ದರೆ ಅನರ್ಥವಾಗುತ್ತದೆ ಎಂದು ಖಾತ್ರಿಯಾದ ಅದಾನಿ, ಸರ್, ಫೈಟರ್ ಶೆಟ್ಟಿ ಸತ್ತು ಹೋಗಿ ಭಾಳ ವರ್ಷ ಆತ್ರಿ, ಎಂದು ಉಸುರಿದ.

ಸಿಟ್ಟಿಗೆದ್ದ ಮೋದಿ, ಮಂಗ್ಯಾನಿಕೆ, ಮೊದಲೇ ಹೇಳಲಿಕ್ಕೆ ಏನು ಧಾಡಿಯಾಗಿತ್ತಲೇ? ಎಂದು ಝಾಡಿಸಬೇಕು ಎಂದುಕೊಂಡರು. ಆದರೆ ಕಿವಿ ಚಟ್ಟೆ ಎಳೆದು ನಿಂತಿದ್ದ ಬೈಡೆನ್ ಕಂಡ. ಅವನನ್ನು ಸಂಬಾಳಿಸುವ ಕೆಲಸ ಮುಖ್ಯವಿತ್ತು. 

ಮೋದಿ ಅದಾನಿಯನ್ನು ಕುರಿತು...ಈಗ ಏನು ಮಾಡೋದು? ಫೈಟರ್ ಶೆಟ್ಟಿ ಕೊಡ್ತೇನಿ ಅಂದೆ. ಅವಾ ಶಿಟ್ಟಿ ಫೈಟರ್ ಬ್ಯಾಡ. ಒಳ್ಳೆ ಫೈಟರ್ ಕೊಡೋದಿದ್ದರೆ ಕೊಡ್ರಿ ಅಂದ. ಈಗ ಏನು ಮಾಡೋದು?

ಅದಾನಿ ಖತರ್ನಾಕ್. ಫೈಟರ್ ಶೆಟ್ಟಿ ಸತ್ತರ ಸಾಯ್ಲಿ ಬಿಡ್ರೀ. ಅವನ ಮಗ ರೋಹಿತ್ ಶೆಟ್ಟಿ ಇದ್ದಾನ. ಶಿರಹಟ್ಟಿ ಗಿರಾಕಿ. ಎಲ್ಲಾರ ತಲಿ ಹಟ್ಟು ಹದಿನಾರಾಣೆ ಮಾಡುವ ಮೂವೀ ಮಾಡಿ ಮಾಡಿ ಒಗೀತಾನ. ಅವನನ್ನ ಕೊಟ್ಟು ಬಿಡೋಣ. ಅವನೂ ಫೈಟರ್ ಶೆಟ್ಟಿನೇ. ಜೂನಿಯರ್ ಫೈಟರ್ ಶೆಟ್ಟಿ ಅಂದು ಬಿಟ್ಟರಾಯಿತು.

ಈ ಸಲಹೆ ಕೇಳಿ ಮೋದಿ ಖುಷ್. ತಲಿ ಅಂದ್ರ ನಿಂದು ನೋಡಪಾ. ಆ ಫೈಟರ್ ಶೆಟ್ಟಿ ಮಗ ರೋಹಿತ್ ಶೆಟ್ಟಿನ ಅಮೆರಿಕಾಗೆ ಕಳಿಸು. ಅಲ್ಲಿ ಹಾಲಿವುಡ್ ಮೂವಿ ಮಾಡಿ ಅವರ ತಲಿ ಹಡ್ಲಿ. ಸೂಡ್ಲಿ ತಂದು. ಅವನ್ನ ಆ ಕಡೆ ಕಳಿಸಿ ನಾವು ಸ್ವಲ್ಪರೆ ತಲಿ ಸರಿ ಮಾಡಿಕೊಳ್ಳೋಣ, ಎಂದು ಅದಾನಿಗೆ ಹೇಳಿದರು. ಹೇಗೂ ಸ್ವಚ್ಛ ಭಾರತ್ ಮಾಡಿದಂತೆ ಸ್ವಚ್ಛ ಬಾಲಿವುಡ್ ಕೂಡ ಮಾಡಬೇಕಿತ್ತಲ್ಲ. ಹಾಗಾಗಿ ಶಿರಹಟ್ಟಿ ಮೂವಿ ಮಾಡುವವರನ್ನು ಓಡಿಸುವ ಜರೂರತ್ತಿತ್ತು.

ಪ್ರೆಸಿಡೆಂಟ್ ಬೈಡೆನ್, ನಾವು ನಿಮಗೆ ಶಿಟ್ಟಿ ಫೈಟರ್ ಏನೂ ಕೊಡಂಗಿಲ್ಲ. ಒಳ್ಳೆ ಶೆಟ್ಟಿ ಫೈಟರ್ ಕೊಡ್ತೀವಿ. ಫೈಟರ್ ಶೆಟ್ಟಿ. ಫೈಟರ್ ರೋಹಿತ್ ಶೆಟ್ಟಿ ಕೊಡ್ತೇವಿ. ಬಂದು ಮಸ್ತ ಮೂವಿ ಮಾಡಿ ನಿಮ್ಮೆಲ್ಲರ ಮನರಂಜನೆ ಮಾಡ್ತಾನ. ಏನಂತೀರಿ?? ಎಂದರು ಮೋದಿ.

ಶಿಟ್ಟಿ ಫೈಟರ್ ಕೊಟ್ಟು ಎಲ್ಲಿ ಟೋಪಿ ಹಾಕುತ್ತಾರೋ ಎಂದು ಗಾಬರಿಗೊಂಡಿದ್ದ ಬೈಡೆನ್ ನಿರಾಳರಾದರು. ಶಿಟ್ಟಿ ಫೈಟರ್ ಅಲ್ಲ ಒಳ್ಳೆ ಫೈಟರ್ ರೋಹಿತ್ ಶೆಟ್ಟಿ ಅಂತ ಯಾರೋ ಬಂದು ಕುಲಗೆಟ್ಟು ಹೋಗಿರುವ ಹಾಲಿವುಡ್ ಉದ್ಧಾರ ಮಾಡುತ್ತಾರೆ ಎಂದು ಖುಷಿಯಾಗಿಬಿಟ್ಟರು.

ಅಲ್ಲಿಗೆ ಫೈಟರ್ ಎಂಜಿನ್ ಗೆ ಬದಲಾಗಿ ಫೈಟರ್ ಶೆಟ್ಟಿ ಕೊಡುವ ಒಪ್ಪಂದಕ್ಕೆ ಅಧಿಕೃತ ಮೊಹರು ಬಿತ್ತು.

Wednesday, December 18, 2024

ಹುಧಾದಲ್ಲೊಂದು ಹಜಾಮತಿ ಹಡಾಗತಿ; ರಾಯಲ್ ಹೇರಕಟಿಂಗ್ ಸಲೂನ್ ಕನವರಿಕೆಗಳು...

ಹುಧಾ ಮಧ್ಯೆ ಇರುವ ನವನಗರದ ಸಲೂನ್ ಒಂದರಲ್ಲಿ ಪಿತಾಜಿಯೊಬ್ಬ ಪಿಶಾಚಿ ರೂಪ ತಾಳಿ ಮಗನಿಗೆ ಕಟಿಂಗ್ ಮಾಡಿದ ನಾಪಿತನಿಗೆ ಮನಸೋ ಇಚ್ಛೆ ಥಳಿಸಿದನಂತೆ. ಮಗನಿಗೆ ಮಾಡಿದ ಕಟಿಂಗ್ ಸರಿಯಾಗಿಲ್ಲ ಎಂದು ಅವನ ಆಕ್ಷೇಪ. "ಬೋಡಿಕೆ, ನನ್ನ ಮಗನನ್ನು ಮಂಗ ಮಾಡಿಬಿಟ್ಟೆಯಲ್ಲೋ ಭೋಕುಡ್ ಛಾಪ್!!!" ಎಂದು ಅಬ್ಬರಿಸಿ ಬೊಬ್ಬಿರಿದು ಕಟಿಂಗ್ ಮಾಡಿದವನ ಮೇಲೆ ಫುಲ್ ಧನಾ ಧನ್ ಧನಾ ಧನ್.

ಕಾಲ ಹೆಂಗೆ ಬದಲಾಗುತ್ತದೆ ನೋಡಿ. ನಮ್ಮ ಕಾಲದಲ್ಲಿ ಅಂದರೆ ಒಂದು ನಲವತ್ತು ವರ್ಷಗಳ ಹಿಂದೆ ಕೂಡ ಪಾಲಕರು ಮಕ್ಕಳ ಹೇರ್ ಕಟಿಂಗ್ ವಿಷಯವಾಗಿ ಜಗಳ ಮಾಡುತ್ತಾ ಸಲೂನಿಗೆ ಧಾವಿಸಿ ಬರುತ್ತಿದ್ದರು. ಅವರದ್ದೂ ಆಕ್ಷೇಪ ಇರುತ್ತಿತ್ತು. ಅದು ಬೇರೇನೇ ತರಹ ಇರುತ್ತಿತ್ತು. "ಇಷ್ಟ್ಯಾಕ ಉದ್ದ ಕೂದಲು ಬಿಟ್ಟು ಕಳಿಸಿಯೋ??? ಇನ್ನೂ ಸಣ್ಣ ಮಾಡು!!!" ಶಿವನೇ ಶಂಭುಲಿಂಗ!!! ಆಗಲೇ ಜೀರೋ ಮಷೀನ್ ಇಟ್ಟು almost ತಿರುಪತಿ ಗುಂಡು ಹೊಡೆದಿದ್ದರೂ ತಲೆಯನ್ನು ಇನ್ನೆಷ್ಟು ಗುಂಡು ಹೊಡೆಯಲು ಸಾಧ್ಯ ಎಂಬಂತೆ ನಾಪಿತ ಕೊಂಯ್ಯಾ ಪಂಯ್ಯಾ ಅಂದರೂ ಇವರು ಬಿಡುತ್ತಿದ್ದಿಲ್ಲ. ಕೊಟ್ಟ ಅಮೂಲ್ಯ ಎರಡು ರೂಪಾಯಿಗೆ ಬರೋಬ್ಬರಿ ವಸೂಲಿ ಆಗಲೇಬೇಕು. ಈ ಪಾಲಕರ ಕಾಟ ತಡೆಯಲಾಗದೇ ನಾಪಿತ out of turn ಈ ಬಾಲಕನನ್ನು ಹಜಾಮತಿ ಖುರ್ಚಿ ಮೇಲಿನ ಹಲಗೆ ಮೇಲೆ ಹತ್ತಿಸಿ ಮತ್ತೊಂದು ರೌಂಡು ಮಷೀನ್ ಹಚ್ಚಿ, ಇನ್ನೂ ಕೂದಲು ಉಳಿದರೆ,  ಮತ್ತೂ ಸಣ್ಣ ಮಾಡು ಅಂತ ಪಿರಿ ಪಿರಿ ಮಾಡಿದರೆ ಒಣ ಒಣ ಕತ್ತಿಯಿಂದಲೇ ಬೋಳು ಕೆರೆದು ಹೆರೆದು ಬಿಡುತ್ತಿದ್ದ. ಆ ಒಣ ಒಣ ಹಜಾಮತಿ ಕತ್ತಿ ಮೃದು ಮೃದು ಚರ್ಮದ ಮೇಲೆ ಅತ್ಯಾಚಾರ ಮಾಡಿದಂತಾಗಿ ಆ ಬಾಲಕ ಅವನಿಗೇನು ಹಜಾಮತಿ ಮಾಡುತ್ತಿದ್ದಾರೋ ಅಥವಾ ಸುನ್ನತಿ ಮಾಡುತ್ತಿದ್ದರೋ ಎಂಬಂತೆ ಒದರಾಡಿ ಚೀರಾಡಿ ರಂಪ ಮಾಡಿದ್ದೂ ಇದೆ. ಮೊದಲೇ ಎಬಡೇಶಿ ಕಟಿಂಗ್ ಮಾಡಿಸಿಕೊಂಡು ಮಾನವನಿಂದ ಮಂಗನಾದ ಬೇಸರ. ಶಾಲೆಯಲ್ಲಿ ಇತರರು ಚುಡಾಯಿಸುತ್ತಾರೆ ಎಂಬ ಆತಂಕ. ಮೇಲಿಂದ ಈ ಚರ್ಮ ಸುಲಿಸಿಕೊಳ್ಳುವ ದಾರುಣ ಶಿಕ್ಷೆ. ಉಸಿರುಬಿಟ್ಟರೆ "ಇನ್ನು ಬೀಳ್ತಾವ ನೋಡು !!!" ಎನ್ನುವ ಬೆದರಿಕೆ ಪಾಲಕರಿಂದ. ಪಾಪ. ಬೀಳೋದು "ಕಡತ" (ಹೊಡೆತ) ಎಂದು ಬೀಳಿಸಿಕೊಂಡವರಿಗೆ ಗೊತ್ತಿರುತ್ತದೆ. 

ಅದು ಅಂದು. ಆಗ ಮಕ್ಕಳನ್ನು ಸಲೂನಿಗೆ ವಾಪಸ್ ಕರೆತಂದು ಹಾಗೆಲ್ಲಾ ಜಗಳ ಕಾಯುತ್ತಿದ್ದರು. ಈಗ ಕಟಿಂಗ್ ಸರಿಯಾಗಿಲ್ಲ ಎಂದು ಬಂದು ಜಗಳ, ಹೊಡೆದಾಟ ಎಲ್ಲ ನಡೆದುಹೋಗುತ್ತವೆ.

ಆಗ ಧಾರವಾಡದ ಮಾಳಮಡ್ಡಿಯ ಸ್ಟೇಷನ್ ರೋಡ್ ಮೇಲಿದ್ದ ರಾಯಲ್ ಹೇರ್ ಕಟಿಂಗ್ ಸಲೂನಿಗೆ ಹೋಗಿ ಕೂತುಬಿಟ್ಟರೆ ನಿಮಗೆ ಆ ಕಾಲದ ಸಾಮಾಜಿಕ ಸ್ಥಿತಿ ಗತಿಗಳ ಸಂಪೂರ್ಣ ಪರಿಚಯವಾಗಿಬಿಡುತ್ತಿತ್ತು. ಬೆಳ್ಳಂಬೆಳಿಗ್ಗೆ ಮುಲ್ಲಾನ ಹಾಲಿನ ಡೇರಿಗೆ ಹಾಲು ತೆಗೆದುಕೊಂಡು ಹೋಗಲು ಬರುತ್ತಿದ್ದ ಗೃಹಿಣಿಯರು ಸೀದಾ ಹೇರ್ ಕಟಿಂಗ್ ಸಲೂನ್ ಒಳಗೆ ತಲೆ (ಮಾತ್ರ) ಹಾಕಿಬಿಡುತ್ತಿದ್ದರು. ದೇಹ ಹೊರಗೆ ಇರುತ್ತಿತ್ತು. ಅದರ ಉದ್ದೇಶ ಪಾಳಿ ಹಚ್ಚುವುದು. "ನಮ್ಮ ಹುಡುಗ ಬರ್ತಾನ. ನಮ್ಮ ಮನಿಯವರು ಬರ್ತಾರ. ಅಜ್ಜ ಬರ್ತದ..." ಎಂದು ಹೇಳಿ ನಾಪಿತ ಪಾಂಡ್ಯಾನ ಹತ್ತಿರ ಹಜಾಮತಿಗೆ appointment ತೆಗೆದುಕೊಳ್ಳುವುದೇ ಪಾಳಿ ಹಚ್ಚುವುದು. ಇನ್ನು ಕೆಲವು ಗೃಹಿಣಿಯರು ಮನೆಗೆ ಬರಲು ಆಹ್ವಾನ ಕೊಡುತ್ತಿದ್ದರು. "ಮುದುಕಿಗೆ ಮಾಡೋದದ ಬಾರಪಾ..." ಮನೆಗೆ ಹೋಗಿ ಪಾಂಡ್ಯಾ ಮುದುಕಿಗೆ ಏನು ಮಾಡಿಬರುತ್ತಿದ್ದ ಎಂಬ ಕೆಟ್ಟ ಕುತೂಹಲ ಮೂಡುವುದು ಸಹಜ. ಏನಿಲ್ಲ ಹೋಗಿ ಮುದುಕಿಗೆ ಫಣಿಯಮ್ಮ ಕಟ್ ಹೊಡೆದು ಬ್ರಾಹ್ಮಣ ವಿಧವೆಗೆ ಶಿರೋಮುಂಡನ ಮಾಡಿ ಉಭಯ ಕುಶಲೋಪರಿ ಮಾತಾಡಿ ಬರುತ್ತಿದ್ದ. ಅದೇ ಪಾಂಡ್ಯಾ ಮುದುಕಿಗೆ ಮಾಡುತ್ತಿದ್ದ ಕಟಿಂಗ್. ನಮ್ಮ ಕಾಲದಲ್ಲಿ ಅದು ಕಮ್ಮಿಯಾಗಿತ್ತು ಆದರೆ "ಮನಿಗೆ ಬಂದು ಮುದುಕಿಗೆ ಮಾಡಿ ಹೋಗಪಾ" ಅನ್ನುವ ಬ್ರಾಹ್ಮಣ ಮುತ್ತೈದೆಯರು ಆಗಾಗ ಕಾಣುತ್ತಿದ್ದರು. ಮಕ್ಕಳಿಗೆ ಓಕೆ. ಗಂಡನಿಗೆ ಓಕೆ. ಆದರೆ ಮುದುಕಿಗೆ ಪಾಳಿ ಹಚ್ಚಲು ತಾವೇಕೆ ಹೋಗಬೇಕು ಎನ್ನುವ ಬಿಗುಮಾನ ಕೆಲವರಿಗೆ. ಅದು ಮುದುಕಿ ಉರ್ಫ್ ಅತ್ತೆ ಮೇಲಿನ ಕೋಪವೂ ಇರಬಹುದು. ಅಂತವರು ತಮ್ಮ ತಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಿದ್ದ 'ಬೂಬು'ಗಳನ್ನು ಕಳಿಸುತ್ತಿದ್ದರು. ಅವು ತಮ್ಮ ಹರಕು ಮುರುಕು ಉರ್ದು ಮಿಶ್ರಿತ ಕನ್ನಡದಲ್ಲಿ ಏನು ಹೇಳುತ್ತಿದ್ದವೋ ಅದು ಮೂಲ ತೆಲುಗು ಭಾಷಿಕನಾದ ಪಾಂಡ್ಯಾನಿಗೆ ಮಾತ್ರ ತಿಳಿಯುವಂತೆ ಇರುತ್ತಿತ್ತು. 

ನಾಪಿತ ಪಾಂಡ್ಯಾ ಮತ್ತು ಅವನ ಇಬ್ಬರು ಸಹೋದರರಿಗೆ ಈ ಮುಂಜಾನೆ ಹಾಲಿನ ಗಿರಾಕಿ ಗೃಹಿಣಿಯರು ಯಾರಿಗೆ ಪಾಳಿ ಹಚ್ಚುತ್ತಿದ್ದಾರೆ ಎಂದು ಅದು ಹೇಗೆ ತಿಳಿಯುತ್ತಿತ್ತೋ ಗೊತ್ತಿಲ್ಲ. ಅಷ್ಟ್ರರಲ್ಲಿ ಯಾರಾದರೂ ಮಾಮ (ಮಾಳಮಡ್ಡಿ ಮಹನೀಯ) ಒಬ್ಬರು "ನನ್ನ ಹೆಂಡ್ತಿ ಪಾಳಿ ಹಚ್ಚಿ ಹೋಗಿದ್ದಳಲ್ಲ. ಬಂದೆ ನೋಡಪಾ. ಲಗೂನ ಮಾಡಿ ಬಿಡಪಾ. ಆಪೀಸಿಗೆ ಬ್ಯಾರೆ ಹೋಗಬೇಕು," ಅನ್ನುತ್ತಾ ಒಳಗೆ ಬಂದು ಇದ್ದ ಮೂರು ಖುರ್ಚಿಗಳಲ್ಲಿ ಯಾವುದರ ಮೇಲೆ ರಾರಾಜಿಸಲಿ ಎಂದು ನೋಡಿದರೆ ಮೂರರ ಮೇಲೂ ಬೇರೆಯವರು ಇರುತ್ತಿದ್ದರು. "ಪಾಳಿ ಹಚ್ಚಿ ಬಂದೇನಿ ಅಂದಳಲ್ಲೋ ನನ್ನ ಹೆಂಡ್ತಿ !!! ತಡಾ ಆಗ್ತದೇನು ?? " ಎನ್ನುವ ಅವರ ಆಕ್ಷೇಪ ಫ್ರೀ. ಪಾಂಡ್ಯಾ ಅವರನ್ನು ರಮಿಸಿ, "ಒಂದ್ ನಿಮಿಟ್ ಪೇಪರ್ ಓದ್ರಿ," ಎಂದು ಕೂಡಿಸುತ್ತಿದ್ದ. ಬಿಟ್ಟಿಯಾಗಿ ಓದಲು ಸಿಗುತ್ತಿದ್ದ ಸಂಯುಕ್ತ ಕರ್ನಾಟಕ ಓದಲೆಂದೇ ಕೆಲವರು ಬಂದು ಕೂತಿರುತ್ತಿದ್ದರು. ರೊಕ್ಕ ಕೊಟ್ಟು ಕಟಿಂಗ್ ಮಾಡಿಸಲು ಬಂದ ಗಿರಾಕಿಗಳು ತುಂಬಿ ಜಾಗವಿಲ್ಲದಾಗ ಅವರು ಮನಸ್ಸಿಲ್ಲದ ಮನಸ್ಸಿನಿಂದ ಪೇಪರ್ ಬಿಟ್ಟು ಹೊರಗೆ ಹೋಗಬೇಕಾದ ಅನಿವಾರ್ಯತೆ ಬರುತ್ತಿತ್ತು. ಮಾಳಮಡ್ಡಿಯೇ ಒಂದು ಇಕ್ಕಟ್ಟಾದ ಕಿಷ್ಕಿಂಧೆ. ರಾಯಲ್ ಹೇರ್ ಕಟಿಂಗ್ ಸಲೂನ್ ಮತ್ತೂ ಇಕ್ಕಟ್ಟಾದ ಟಾಯ್ಲೆಟ್ಟಿಗಿಂತ ಚಿಕ್ಕದಾದ ಜಾಗ. ಮೂರು ಕಟಿಂಗ್ ಖುರ್ಚಿ. ಕಾಯುವವರಿಗೆ ಒಂದು ಬೆಂಚ್. ಅಷ್ಟೇ.

ಇನ್ನೊಮ್ಮೆ ಮತ್ತೊಬ್ಬ ಮಹನೀಯರು ತಮ್ಮ ಇಬ್ಬರು ಪುತ್ರರತ್ನಗಳನ್ನು ಕರೆದುಕೊಂಡು ಬಂದಿದ್ದರು. ಇಬ್ಬರೂ ಮಕ್ಕಳು ಸ್ವಲ್ಪ ಜಾಬಾದ್ ಇದ್ದಂತೆ ಇದ್ದರು. "ನನಗ ಸಣ್ಣನೆ ಗಾಂಧಿ ಕಟಿಂಗ್ ಬ್ಯಾಡ. ನಾ ಶಟಿಂಗ್ ಮಾಡಸ್ತೇನಿ," ಅಂತ ಮಕ್ಕಳು ಅಲ್ಲೇ ಹಠಯೋಗ ಅಂದರೆ ಹಟ ಮಾಡಲು ಆರಂಭಿಸಿದರು. ಸೆಟ್ಟಿಂಗ್ ಎಂಬುದು ಧಾರವಾಡಿಗರ ಬಾಯಲ್ಲಿ ಶಟಿಂಗ್ ಆಗಿದ್ದು ದುರಂತ ಅನ್ನಿಸಿದರೂ ಆ ಶಟಿಂಗ್ ಕೇಶವಿನ್ಯಾಸ ಮಾತ್ರ ಆಕರ್ಷಕವಾಗಿತ್ತು. ಮಿಡ್ಲ್ ಕ್ಲಾಸ್ ಅಪ್ಪ ಅವರನ್ನು ಅಲ್ಲಿಯೇ ಹಿಡಿದು ಬಡಿಯಬೇಕಾಗಿತ್ತು. ಆದರೆ ಸಲೂನ್ ಎಷ್ಟು ತುಂಬಿತ್ತು ಅಂದರೆ ಅವರನ್ನು ಅಲ್ಲೇ ಬಗ್ಗಿಸಿ ಬಗ್ಗಿಸಿ ಬಾರಿಸುವಷ್ಟು ಜಾಗ ನಿಜವಾಗಿಯೂ ಇರಲಿಲ್ಲ. ಅಪ್ಪ ತನ್ನ ಟ್ರಂಪ್ ಕಾರ್ಡ್ ಒಗೆದ. "ಪಾಂಡ್ಯಾ, ಇವರಿಗೆ ಹ್ಯಾಂಗ ಬೇಕು ಹಾಂಗ ಹಜಾಮತಿ ಮಾಡಪಾ. ರೊಕ್ಕನೂ ಅವರ ಕಡೆನೇ ಇಸ್ಕೊ. ಮಾಡಿ ಕಳಿಸು. ನಾ ಮತ್ತೊಮ್ಮೆ ಬರ್ತೇನಿ," ಎಂದು ಹೊರಡಲು ಸಿದ್ಧನಾಗಿಬಿಟ್ಟ. ಮುಂದೇನಾಯಿತು ಎಂದು ಹೇಳುವ ಅವಶ್ಯಕತೆ ಇಲ್ಲ ಅಲ್ಲವೇ!!?? ಸ್ವಲ್ಪ ಸಮಯದ ನಂತರ ಒಂದು ದೊಡ್ಡ ಗಾಂಧಿ ಮತ್ತು ಎರಡು ಸಣ್ಣ ಗಾಂಧಿಗಳು ಫ್ರೆಶ್ ಆಗಿ ಮುಂಡಾಯಿಸಿಕೊಂಡಿದ್ದ ತಲೆ ಸವರಿಕೊಳ್ಳುತ್ತಾ, "ತಲಿ ಹಗುರ ಆತಲಾ??" ಎಂದು ತಲೆ ಹಗುರ ಮಾಡಿಕೊಳ್ಳುವ ಅದ್ಭುತ ಐಡಿಯಾ ಕೊಟ್ಟ ತನ್ನ ತಲೆಯನ್ನೇ ಮೆಚ್ಚಿಕೊಂಡು ಮಕ್ಕಳ ಕಡೆ ನೋಡಿದರೆ ಅವು ರೆಕ್ಕ ಪುಕ್ಕ ತರಿದ ಉಷ್ಟ್ರಪಕ್ಷಿಗಳ ಲುಕ್ ಕೊಟ್ಟವು. "ಮಸ್ತ್ ಆಗ್ಯದಲ್ಲೇ ಪುಟ್ಯಾ ಹಜಾಮತಿ," ಎನ್ನುವ ಬಿಟ್ಟಿ ಮೆಚ್ಚುಗೆ ಪಿತಾಜಿ ಎಂಬ ಪಿಶಾಚಿಯಿಂದ.

ಈಗ ಹಿರಿಯ ಪಾಂಡ್ಯಾ ಇಲ್ಲ. ಪಾಂಡ್ಯಾನ ಇಬ್ಬರು ಸಹೋದರರು ಇದ್ದಾರಂತೆ. ಅವರ ಸಲೂನ್ ಗೌಳ್ಯಾರ (ಗೌಳಿಗರ) ದಡ್ಡಿಯ ಕಡೆ ಶಿಫ್ಟ್ ಆಗಿದೆಯಂತೆ. ಆಕಡೆ ಹೋದಾಗ ಮಾಡಿಸಿಕೊಂಡು ಬನ್ನಿ. ಕಟಿಂಗ್ ಮಾಡಿಸಿಕೊಂಡು ಬನ್ನಿ ಎಂದು. ಉದ್ದ ಕೂದಲು ಬಿಟ್ಟ ವಿದ್ಯಾರ್ಥಿಗಳನ್ನು ಕಂಡರೆ ಉರಿದುಬೀಳುತ್ತಿದ್ದ ನಮ್ಮ ಗುಂಜೀಕರ್ ಮಾಸ್ತರ್ ಒಮ್ಮೆ ಕ್ಲಾಸಿನಲ್ಲಿ ಉಗ್ರ  ನರಸಿಂಹನ ಅವತಾರ ತಾಳಿ, 'ಅಲ್ಲೆ ಗೌಳ್ಯಾರ ದಡ್ಡಿಯಾಗ ಎಮ್ಮಿ ಬೋಳಿಸುತ್ತಿರುತ್ತಾರ. ಅಲ್ಲಿ ಹೋಗಿ ಬೋಳಿಸಿಕೊಂಡು ಬಾ. ನಾಳೆ ಸಾಲಿಗೆ ಬರೋದ್ರಾಗ ಹಜಾಮತಿ ಆಗಿರಬೇಕು. ಇಲ್ಲಂದ್ರ ನಾನೇ ಖುದ್ ಕರಕೊಂಡು ಹೋಗಿ ಎಮ್ಮಿ ಬೋಳಿಸುವರವರ ಕಡೆ ನಿನ್ನ ಬೋಳಿಸಿಕೊಂಡು ಬರತೇನಿ...ಮಗನss" ಎಂದು ಅಂದು ಅಬ್ಬರಿಸಿದ್ದಕ್ಕೂ ಇಂದು ರಾಯಲ್ ಹೇರ್ ಕಟಿಂಗ್ ಸಲೂನ್ ಎಮ್ಮೆ ಬೋಳಿಸುವವರ ಅಲ್ಲ ಸಾಕುವವರ ಬಡಾವಣೆಗೆ ಶಿಫ್ಟಾಗಿದ್ದೂ ಕಾಕತಾಳೀಯ ಅನ್ನಿಸುವುದಿಲ್ಲ.

***

ಇದು ಶಾಲಾ ಮಿತ್ರರ ವಾಟ್ಸಾಪ್ ಗುಂಪಿನಲ್ಲಿ ಬರೆದು ಹಾಕಿದ್ದು. ಈಗಿತ್ತಲಾಗಿನ ಚೂರು ಪಾರು ಬರವಣಿಗೆ ಎಲ್ಲ ಅಲ್ಲೇ ಆಗುತ್ತಿದೆ. ಇಲ್ಲಿ ಹಾಕಬಹುದಾದವನ್ನು ಇಲ್ಲಿಯೂ ಹಾಕಿರುತ್ತೇನೆ. 

Sunday, August 18, 2019

"ಚಡ್ಡಿ ಕೊಳ್ಳಿರೋ, ನೀವೆಲ್ಲರೂ 'ಗಂಡಸರ' ಚಡ್ಡಿ ಕೊಳ್ಳಿರೋ..."

'ಕಲ್ಲುಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ...' ಅಂತ ಒಂದಾನೊಂದು ಕಾಲದಲ್ಲಿ ಪುರಂದರದಾಸರು ಹಾಡಿದ್ದರು. ನಮ್ಮ ಧಾರವಾಡ ಕಡೆ ಪುರಂದರದಾಸರು ಅಂತ ಫುಲ್ ಉಚ್ಚಾರ ಮಾಡೋದೇ ಇಲ್ಲ. ಪುರಂಧ್ರದಾಸ್ರು ಅಂತ ಅಸಡ್ಡಾಳ ಉ(ಹು)ಚ್ಚಾರ ಮಾಡಿಬಿಡ್ತಾರ. ಅಷ್ಟss, ನವರಂಧ್ರಗಳಲ್ಲಿ ಇದ್ಯಾವ ರಂಧ್ರಪಾ ಈ ಪುರಂಧ್ರ ಅಂತ ವಿಚಾರ ಮಾಡ್ಲಿಕ್ಕೆ ಹೋಗಬ್ಯಾಡ್ರಿ. ಅನಾಹುತ ಆದೀತು!

ಬ್ಯಾಕ್ ಟು ದಿ ಪಾಯಿಂಟ್.... ಆ ದಾಸರೇನೋ 'ಕಲ್ಲುಸಕ್ಕರೆ ಕೊಳ್ಳಿರೋ, ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ...' ಅಂತ ಹಾಡಿಬಿಟ್ಟರು. ಈಗ ಖತರ್ನಾಕ್ 'ಮಂದಿ' ಬಂದದ. ಹಾಂಗಾಗಿ ಅದನ್ನು ಬದಲಾಯಿಸಿ, 'ಚಡ್ಡಿ ಕೊಳ್ಳಿರೋ, ನೀವೆಲ್ಲರೂ 'ಗಂಡಸರ' ಚಡ್ಡಿ ಕೊಳ್ಳಿರೋ...' ಅಂತ ಹಾಡಬೇಕಾಗ್ತದ.

ಏನ್ರೀ ಹಾಂಗಂದ್ರ? ಯಾರೋ ಮಂದಿ ಬಂದಳಂತ. ಅದಕ್ಕಾಗಿ ಎಲ್ಲರೂ ಚಡ್ಡಿ ಅದ್ರಾಗೂ ಗಂಡಸರ ಚಡ್ಡಿ ತೊಗೋಬೇಕಂತ. ಅದೂ ರೊಕ್ಕಾ ಕೊಟ್ಟು! ಹುಚ್ಚ ಗಿಚ್ಚ ಹಿಡದದೇನು??

ಆದ್ರೂ ಈ ಮಂದಿ ಯಾರ್ರೀ? ಅಕಿಗ್ಯಾಗ ಗಂಡಸೂರ ಚಡ್ಡಿ? ಇದೊಳ್ಳೆ ಶ್ರೀನಿವಾಸ-ಪದ್ಮಾ ಟಾಕೀಸ್ ಲೇಡಿ ಸೆಕ್ಯೂರಿಟಿ ಗಾರ್ಡ್ ಕಥಿ ಆತಲ್ಲಾ. ನಮ್ಮ ಕಾಲದಾಗ ಅಂದ್ರ ಈಗ ಮೂವತ್ತೈದು ನಲವತ್ತು ವರ್ಷಗಳ ಹಿಂದೆ, ಧಾರವಾಡದ ಶ್ರೀನಿವಾಸ ಮತ್ತು ಪದ್ಮಾ ಎಂಬ ಅವಳಿ ಜವಳಿ ಸಿನಿಮಾ ಟಾಕಿಸೀನ್ಯಾಗ crowd management ಮಾಡಲಿಕ್ಕೆ ಒಬ್ಬಾಕಿ ಲೇಡಿ ಸೆಕ್ಯೂರಿಟಿ ಗಾರ್ಡ್ ಇದ್ದಳು. ಅಕಿ ಆದ್ಮಿ ಜಾಸ್ತಿ ಔರತ್ ಕಮ್ಮಿ. ಏನ್ರೀಪಾ? ಸೀರಿ ಕೆಳಗ ಸೀದಾ ಗಂಡಸೂರ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಅಡ್ಯಾಡ್ತಿದ್ದಳು. ಬಾಯಿ ಅಂದ್ರ ಬೊಂಬಾಯಿ. ಅಲ್ಲೇ ಬಾಜೂಕ ಮ್ಯಾದಾರ ಓಣಿಯಾಗ ಸಿಕ್ಕ ಬಿದರಿನ ಕೋಲೊಂದನ್ನ ಲಾಠಿ ಗತೆ ಹಿಡಕೊಂಡು, ಸಕಲ ದೇವರ 'ಸಹಸ್ರನಾಮಾಚರಣೆ' ಮಾಡುತ್ತ, ಪಾನ್ ಪಿಚಕಾರಿ ಹಾರಿಸ್ಗೋತ್ತ, ಒಂದು ಖಡಕ್ ಆವಾಜ್ ಹಾಕಿದಳು ಅಂದ್ರ ಮುಗೀತಷ್ಟss. ಎಲ್ಲರೂ ಚುಪ್ ಚಾಪ್! ಗಪ್ ಚುಪ್! ಅಂತಾ ಗಂಡಬೀರಿ ಔರತ್ ಇದ್ದಳು ಅಕಿ. ಏ, ಅಕಿ ಮುಂದ ಎಂತೆಂತಾ ಗುಂಡಾ ಮಂದಿ ಸಹಿತ ಮೆತ್ತಗ ಆಗಿ, ಪಾಳಿ ಪ್ರಕಾರ ಟಿಕೆಟ್ ತೊಗೊಂಡು, ಸುಮಡಿ ಒಳಗ ಸುಮ್ಮ ಕೂತು ಸಿನಿಮಾ ನೋಡಿ ಬರ್ತಿದ್ದರು. ಹಾಂಗಿತ್ತು ಅಕಿ ಖದರು. ಆ ಖದರಿಗೆ ಒಳಗಿನ ಪಟ್ಟಾಪಟ್ಟಿ ಕಾರಣವೇ? ಗೊತ್ತಿಲ್ಲ!

ಎಲ್ಲೋ ಹೋತು ಕಥಿ... ಫೋಕಸ್ ಫೋಕಸ್!

'ಮಂದಿ' ಬಂದದ ಅಂದೆ. ಬಂದಾಳ ಅನ್ನಲಿಲ್ಲ. ಮಂದಿ ಉರ್ಫ್ ಮಂದಾಕಿನಿ ಅಂತ ಯಾರೂ ಎಲ್ಲೂ ಬಂದಿಲ್ಲ. ಬಾಜಾರಿನ್ಯಾಗ ಮಂದಿ ಬಂದದ ಅಂತ. ಅರ್ಥಾತ್ economic slowdown. ಆರ್ಥಿಕ ಮಂದಿ. ಅದು ಬಂದದ. ಹಾಂಗಾಗಿ ಗಂಡಸೂರ ಚಡ್ಡಿ ತೊಗೋಬೇಕಂತ.

ಅಯ್ಯ! ಇದೊಳ್ಳೆ ಕಥಿ ಆತಲಾ! ಮಂದಿ, ಆರ್ಥಿಕ ಮಂದಿನೇ, ಬಂದ್ರೂ ಮಂದಿಯೆಲ್ಲ ಅಂದ್ರ ಜನರೆಲ್ಲ ಯಾಕ ಚಡ್ಡಿ ತೊಗೋಬೇಕು? ಅದೂ ಗಂಡಸೂರ ಚಡ್ಡಿನೇ ಯಾಕ ತೊಗೋಬೇಕು????

ಅದೇನೋ Men's Underwear Index ಅಂತ ಒಂದು ಎಕನಾಮಿಕ್ ಇಂಡಿಕೇಟರ್ ಅದ ಅಂತ. ಅದು ಆರ್ಥಿಕ ಮಂದಿ ಯಾವಾಗ ಶುರು ಆಗ್ತದ ಮತ್ತು ಯಾವಾಗ ಬಿಸಿನೆಸ್ ಸುಧಾರಿಸ್ತದ ಅಂತ ಹೇಳ್ತದ ಅಂತ. ಯಾವಾಗ ಗಂಡಸೂರ ಚಡ್ಡಿ ಖರೀದಿ ಕಮ್ಮಿ ಆತೋ ಆವಾಗಿಂದ ಆರ್ಥಿಕ ಮಂದಿ ಶುರು ನೋಡ್ರಿ. ಯಾವಾಗ ಗಂಡಸೂರ ಚಡ್ಡಿ ಖರೀದಿ ಪಿಕಪ್ ಆತೋ ಆವಾಗ ತಿಳಿದುಕೊಳ್ರಿ ಎಕಾನಮಿ ಇಂಪ್ರೂವ್ ಆತು ಅಂತ. ಗಂಡಸೂರ ಚಡ್ಡಿ, ಪಟ್ಟಾಪಟ್ಟಿ ಚಡ್ಡಿ, ಅದಕ್ಕೇನು ಕಿಮ್ಮತ್ತು? ಅಂತ ಅಸಡ್ಡೆ ಮಾಡಬ್ಯಾಡ್ರಿ. ಸಬ್ ಅಂದರ್ ಕಿ ಬಾತ್ ಹೈ! ಇದು ಸಹ ಒಂದು ಅಂಡರ್ವೇರ್ ಚಡ್ಡಿ advertisement ಟ್ಯಾಗ್ ಲೈನ್ ಆಗಿತ್ತಲ್ಲಾ? ಯಾವ ಬ್ರಾಂಡ್? ನೆನಪಿಲ್ಲಾ.

ಈ Men's Underwear Index ಬಗ್ಗೆ ನಾನೂ ಸ್ವಲ್ಪ ತಲಿ ಕೆಡಿಸಿಕೊಂಡೆ. ಯಾಕಪಾ ಅಂದ್ರ... ಇವರು ಗಂಡಸೂರ ಚಡ್ಡಿ ಹಿಂದೇ ಯಾಕ ಬಿದ್ದಾರ? ಚಡ್ಡಿಗಳು ಬೇಸಿಕ್ ಅವಶ್ಯಕತೆ. ಚಡ್ಡಿ ಇಲ್ಲ ಅಂದ್ರ ನಡೆಯೋದಿಲ್ಲಾ. ಗಂಡಸೂರಿಗೂ ಅಷ್ಟೇ. ಹೆಂಗಸೂರಿಗೂ ಅಷ್ಟೇ. ಹೆಂಗಸೂರಿಗೆ ಚಡ್ಡಿ ಅವಶ್ಯಕತೆ ನಮಗಿಂತ ಸ್ವಲ್ಪ ಜಾಸ್ತಿನೇ ಅದೇ ಅಂತ ನನ್ನ ಭಾವನಾ. ಅವಶ್ಯಕತೆಗಿಂತ ಚಡ್ಡಿ criticality ಅವರಿಗೇ ಜಾಸ್ತಿ ಅಂತ ನಮ್ಮ ಅಭಿಪ್ರಾಯ. ಅವರ ಚಡ್ಡಿ ಬಗ್ಗೆ ನಾವು ಜಾಸ್ತಿ ಮಾತಾಡಿದ್ರ ನಮ್ಮ ಕೆಲವು ಖಡಕ್ ಫೆಮಿನಿಸ್ಟ್ ಗೆಳತಿಯರು, 'ಏ! sexist ಗತೆ ಮಾತಾಡಿದ್ರ ನೋಡ ಮತ್ತ. ಎಲ್ಲಾ equal. ಸಮಾನತೆ. ನಮಗೂ ಚಡ್ಡಿ ಅಷ್ಟೇನೂ ಜರೂರತ್ತಿಲ್ಲ ಅಂತ ತೋರಿಸಿಕೊಳ್ಳಲು ನಾವೂ ಚಡ್ಡಿ ಕಳೆದು ಓಡಾಡತೇವಿ...' ಅಂತ ಚಾಲೆಂಜ್ ತೊಗೊಂಡು 'ಚಡ್ಡಿ ಕಳಚಿ ಒಗೆಯಿರಿ. ಸಬಲೆಯರಾಗಿರಿ' ಅಂತ ಅಭಿಯಾನ ಶುರು ಆದ್ರ ಕಷ್ಟ. ಇಲ್ಲೆ ಅಮೇರಿಕಾದಾಗ ಅಂತೂ ಇಂತಾವೆಲ್ಲಾ ಭಾಳ. ಬರೇ ಗಂಡಸೂರಷ್ಟೇ ಯಾಕ ಎದಿ ತೋರಿಸ್ಕೊಂಡು ಓಡ್ಯಾಡಬಹುದು? ನಮಗ್ಯಾಕ ಆ ಹಕ್ಕಿಲ್ಲಾ? ಅಂತ ಜಗಳ ಮಾಡಿಕೊಂಡು, ವರ್ಷದಾಗ ಒಂದು ದಿವಸ go topless day ಅಂತ ಏನೋ ಮಾಡಿಕೊಂಡು, ಅವತ್ತು ನ್ಯೂಯಾರ್ಕಿನ ಸಿಟಿ ತುಂಬಾ ಬರೇ ಬತ್ತಲೆ ಓಡ್ಯಾಡೋ ಸತ್ಸಂಪ್ರದಾಯ ಹಾಕ್ಕೊಂಡುಬಿಟ್ಟಾರ. ಇರಲಿ. ಅಬಲೆಯರ ಸಬಲೀಕರಣ ಹಾಂಗಾದ್ರೂ ಆಗ್ಲಿ ಬಿಡ್ರಿ.

ಆದ್ರೂ ಈ ಅರ್ಥಶಾಸ್ತ್ರಜ್ಞರು ಗಂಡಸೂರ ಚಡ್ಡಿಗೇ ಯಾಕ ಗಂಟು ಬಿದ್ದರು ಅಂತ ಪೂರ್ತಿ ಕ್ಲಿಯರ್ ಆಗಲಿಲ್ಲ. ಆದರೂ ಕೆಲವೊಂದು ವಿಚಾರ ತಲಿಗೆ ಬಂದವು.

ಹೆಂಗಸು ಮನಿ ಜವಾಬ್ದಾರಿ ಸಂಬಾಳಿಸಿಕೊಂಡು ಹೋಗಾಕಿ ಅಂತ ಒಂದು stereotype ಮಾಡಿಬಿಟ್ಟಾರ. ಗಂಡ ನೌಕರಿ ಮಾಡೋದಂತ. ತಿಂಗಳ ಮೊದಲ್ನೇ ತಾರೀಕಿಗೆ, ಪೈಲಾಕ್ಕ ಪಕ್ಕಾ, ಅಷ್ಟೂ ಪಗಾರ ತಂದು ಹೆಂಡ್ತಿ ಕೈಯಾಗ ಕೊಡೋದಂತ. ಇವನ ಖರ್ಚಿಗೆ ಅಕಿನೇ ರೊಕ್ಕಾ ಕೊಡಬೇಕು. ಇಂತಾ stereotype ದೃಶ್ಯಗಳನ್ನ ಸಿನಿಮಾ ಒಳಗ ಭಾಳ ನೋಡೇವಿ ಬಿಡ್ರಿ.

ಹೀಂಗಾಗಿ ರೊಕ್ಕ ಹೆಂಗಸೂರ ಕೈಯಾಗ ಬಂತು ಅಂದ್ರ ಅವರು ಮೊದಲು ತಮಗ ಎಷ್ಟು ಬೇಕು ಅಷ್ಟು ಚಡ್ಡಿ ಮತ್ತಿತರ ಒಳಉಡುಪು ಖರೀದಿ ಮಾಡ್ತಾರ. ನಂತ್ರ ಮಕ್ಕಳಿಗಂತೂ ಕಮ್ಮಿ ಮಾಡಲಿಕ್ಕೆ ಆಗೋದಿಲ್ಲ. ಅದ್ರಾಗೂ ಸಣ್ಣ ಮಕ್ಕಳಿಗಂತೂ ದಿನಕ್ಕೆ ನಾಲ್ಕ್ನಾಲ್ಕ ಜೋಡಿ ವಸ್ತ್ರ ಬೇಕಾಗ್ತಾವ. ಜಗತ್ತಿನದೇ ಇರಲಿ ಮನೆಯದೇ ಇರಲಿ, ಆರ್ಥಿಕ ಪರಿಸ್ಥಿತಿ ಎಷ್ಟೇ ಹಾಳಾಗಲಿ, ಹೆಂಗಸೂರು ತಮ್ಮ ಚಡ್ಡಿ ಮತ್ತು ಮಕ್ಕಳ ಚಡ್ಡಿಗೆ ಖೋತಾ ಮಾಡಿಕೊಳ್ಳೋದಿಲ್ಲ ಅಂತ ನಮ್ಮ ಭಾವನಾ. ಹಾಂಗಾಗಿ ಕೊನೆಗೆ ಕೊಕ್ಕೆ ಬೀಳೋದು ಗಂಡಸೂರ ಚಡ್ಡಿಗೇ ಅಂತ ನಮ್ಮ ಭಾವನಾ. 'ಹ್ಯಾಂಗೂ ಗಂಡಸೂರ ಚಡ್ಡಿ ಅಲ್ಲಾ? ಏನು ಮಹಾ? ಪಿಸದಿತ್ತು ಅಂದ್ರ ಕೈಹೊಲಿಗೆ ಹಾಕಿ ಕೊಡೋದು. ಮತ್ತೂ ದೊಡ್ಡದಾಗಿ ಪಿಸಿದು, ಗಿಲ್ಲಿ ಬೋಕಾ ಬಿಟ್ಟು ಹೊರಗ ಬರುವಷ್ಟು ದೊಡ್ಡದಾಗಿ ಹರದಿತ್ತು ಅಂದ್ರ ಹರಿದು ಹೋದ ಹಳೆ ಸೀರಿ ತುಂಡಿನ ಪ್ಯಾಚ್ ಹಚ್ಚಿಕೊಡೋದು. ಒಟ್ಟಿನ್ಯಾಗ ಹ್ಯಾಂಗೋ ಮ್ಯಾನೇಜ್ ಮಾಡೋದು. ಈ ಮಂದಿ ಹೋದ ಮ್ಯಾಲೆ ಅಂದ್ರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಮ್ಯಾಲೆ ಗಂಡಸೂರಿಗೆ ಹೊಸಾ ಚಡ್ಡಿ ತಂದ್ರ ಆತು ಬಿಡು,' ಅನ್ನುವ neglect ಮಾಡುವ ಮನೋಭಾವ ಇರ್ತದೇನೋಪಾ?? ಗೊತ್ತಿಲ್ಲ. ಇದೇ ವಾಸ್ತವಿಕತೆ ಅಂತಾದರೆ ಅಂತಹ ಗಂಡು ಮುಂಡೇವುಗಳಿಗೆ ನಮ್ಮದೊಂದು ಸಂತಾಪ. ಈ ಆರ್ಥಿಕ ಮಂದಿ ಲಗೂನ ಹೋಗಿ ನಿಮಗೆಲ್ಲಾ ಹಬ್ಬಕ್ಕೆ ಹೊಸ ಅರಿವಿ (ಬಟ್ಟೆ) ಅಲ್ಲದಿದ್ದರೂ ಹೊಸ ಚಡ್ಡಿಗಳನ್ನು ಆ ಪರಮಾತ್ಮ ದಯಪಾಲಿಸಲಿ!

ಈ ಕಾರಣಕ್ಕೇ ಇರಬೇಕು ಈ ಅರ್ಥಶಾಸ್ತ್ರಜ್ಞರು ಗಂಡಸೂರ ಚಡ್ಡಿಗೆ ಗಂಟು ಬಿದ್ದಾರ ಅಂತ. ಗಂಡಸೂರ ಚಡ್ಡಿ ಮಾರಾಟ ಕಮ್ಮಿ ಆತು ಅಂದ್ರ ಮಂದಿ ಬಂದಳು ಅಂತ.... ಅಲ್ಲಲ್ಲ... ಮಂದಿ ಬಂತು ಅಂತ ಅರ್ಥ. ಗಂಡಸೂರ ಚಡ್ಡಿ ಮಾರಾಟ ಜಾಸ್ತಿ ಆತು ಅಂದ್ರ ಮಂದಿ ಹೋದಳು...ಅಲ್ಲಲ್ಲ... ಮಂದಿ ಹೋತು ಅಂತ ಅರ್ಥ. ಮಂದಿ ಅಂದ್ರ ನನಗಂತೂ 'ರಾಮ್ ತೇರಿ ಗಂಗಾ ಮೈಲಿ' ಸಿನೆಮಾದ ಮಂದಾಕಿನಿನೇ ನೆನಪಾಗ್ತಾಳ. ಹಾಂಗಾಗಿ ಆಟೋಮ್ಯಾಟಿಕ್ ಆಗಿ ಸ್ತ್ರೀಲಿಂಗ ಪ್ರಯೋಗಾಗಿಬಿಡ್ತದ.

ಸದ್ಯದ ಪರಿಸ್ಥಿತಿ ಹೀಂಗದ ಅಂದ್ರ...ಭಾರತದಾಗಂತೂ ಗಂಡಸೂರ ಚಡ್ಡಿ ಭಾಳ ಕೆಳಗ ಇಳಿದುಬಿಟ್ಟದಂತ. ಅಯ್ಯೋ ಚಡ್ಡಿ ಕೆಳಗ ಇಳೀತು ಅಂದ್ರ ಚಡ್ಡಿ ವ್ಯಾಪಾರ ಕೆಳಗ ಇಳೀತು ಅಂತ ಅರ್ಥ. ಎಲ್ಲಾ 'ಬಿಚ್ಚಿ' ಹೇಳು ಅಂದ್ರ ಹ್ಯಾಂಗ? ಅದೂ ಚಡ್ಡಿ ಪಡ್ಡಿ ವಿಷಯ ಬಂದಾಗ ಎಲ್ಲಾ ಬಿಚ್ಚಿ ಹೇಳಬಾರದು. ಮೊನ್ನೆ mirror now ಟೀವಿ ಚಾನೆಲ್ಲಿನಾಗ ಈ ಸುದ್ದಿ ಹೇಳೋವಾಗ ಆಂಕರ್ ಹುಡುಗಿ ನಾಚಿಗೊಂಡು ಬರೇ inner wear ಅಂದುಬಿಡ್ತು. 'ಯವ್ವಾ ಬೇ! ಅದು inner wear ಅಲ್ಲಾ. specific ಆಗಿ ಗಂಡಸೂರ ಚಡ್ಡಿ ಬೇ!' ಅಂತ ಇಲ್ಲಿಂದಲೇ ಕೂತು ಒದರಿದೆ. ಕೇಳ್ಬೇಕಲ್ಲಾ!?

ಹಾಂಗಾಗಿ ಭಾರತದ ಮತ್ತು ವಿಶ್ವದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು ಅಂದ್ರ ಹೆಂಗಸೂರು ದೊಡ್ಡ ಮನಸ್ಸು ಮಾಡಬೇಕು. ಬೇಕಾಗಲಿ ಅಥವಾ ಬ್ಯಾಡಾಗ್ಲಿ, ಹುಯ್ಯ! ಅಂತ ಜಗ್ಗೆ ಗಂಡಸೂರ ಚಡ್ಡಿ ಖರೀದಿ ಮಾಡಿಬಿಡ್ರಿ. ದೊಡ್ಡ ಕೃಪಾ ಆಗ್ತದ. ನಿಮ್ಮ ನಿಮ್ಮ ಮನಿಯಾಗಿನ ಎಲ್ಲಾ ಗಂಡಸೂರಿಗೂ ಆಜ್ಞಾ ಮಾಡಿಬಿಡ್ರಿ - ಎಲ್ಲಾರೂ ಒಂದಲ್ಲ, ಎರಡೆರೆಡು ಮೂರ್ಮೂರು ಚಡ್ಡಿ, ಚಡ್ಡಿ ಮ್ಯಾಲೆ ಚಡ್ಡಿ ಹಾಕ್ಕೊಳ್ರೀ. ಒಂದೇ ಚಡ್ಡಿ ಹಾಕ್ಕೊಂಡ್ರ ಒಂದೇ ಸಲ ಊಟ or ತಿಂಡಿ. ಎರಡು ಚಡ್ಡಿ ಹಾಕ್ಕೊಂಡ್ರ ಎರಡು ಸಲ. ಮೂರು ಅಥವಾ ಜಾಸ್ತಿ ಚಡ್ಡಿ ಹಾಕ್ಕೊಂಡ್ರ ಮಾತ್ರ ಮೂರೂ ಹೊತ್ತು ಊಟ. ಇಲ್ಲಂದ್ರ ಇಲ್ಲ. no ಚಡ್ಡಿ. no ಊಟ. ಕಟ್ಟಾಜ್ಞೆ ಮಾಡಿಬಿಡ್ರಿ. ಹೀಂಗಾದ್ರೂ ಮಾಡಿ ಚಡ್ಡಿ ಮಾರಾಟ ಜಾಸ್ತಿ ಮಾಡಲಿಕ್ಕೆ ಸಹಕರಿಸಬೇಕಾಗಿ ವಿನಂತಿ. ಒಮ್ಮೆ ಗಂಡಸೂರ ಚಡ್ಡಿ ಮಾರಾಟ ಜಾಸ್ತಿ ಆದ ಮ್ಯಾಲೆ ಎಲ್ಲಾ relax ಮಾಡೀರಂತ. ಆವಾಗ ಗಂಡಸೂರೂ ಸಹಿತ ಎಲ್ಲಾ ಕಳೆದು, ಈ ಮಲ್ಟಿಪಲ್ ಚಡ್ಡಿ ಸಹವಾಸ ಸಾಕಪ್ಪೋ ಸಾಕು ಅಂತ ಎಲ್ಲಾ ಬಿಚ್ಚಿ ಒಗೆದು, ಭಂ!ಭಂ!ಭೋಲೇನಾಥ! ಅಂತ ಗೋವಾ ನಗ್ನ ಬೀಚಿನಾಗ ನಾಗಾ ಸಾಧುಗಳ ಗತೆ ಅವರವರ ಹೆಂಡ್ರ ಸಹವಾಸ ಸಾಕಾಗಿ ಗಾಂಜಾ ಹೊಡೆದು ಮಕ್ಕೊಂಡು ಬಿಡ್ತಾರ. ಚಡ್ಡಿ ವ್ಯಾಪಾರ ಹೆಚ್ಚಿಸಲಿಕ್ಕೆ ಬಹುಕೃತ 'ವೇಷ' ಭಾಳ ಜರೂರ್ ಅದ ಸದ್ಯದ ಮಟ್ಟಿಗೆ. ಹೆಂಗಸೂರು ಜಗ್ಗೆ ಗಂಡಸೂರ ಚಡ್ಡಿ ಖರೀದಿ ಮಾಡಿ ಮತ್ತು ಗಂಡಸೂರು ಬಾಯಿ ಮತ್ತೊಂದು ಮುಚ್ಚಿಕೊಂಡು ಚಡ್ಡಿ ಪೇ ಚಡ್ಡಿ ಧರಿಸಿ ಕಡ್ಡಿ ಪೈಲ್ವಾನನಿಂದ ಚಡ್ಡಿ ಪೈಲ್ವಾನರಾಗಿ ಭಡ್ತಿ ಪಡೆದುಕೊಂಡು ಆರ್ಥಿಕ ಮಂದಿಯನ್ನು ಓಡಿಸಲು ಸಹಕರಿಸಬೇಕು.

ಚಡ್ಡಿ ಮ್ಯಾಲೆ ಚಡ್ಡಿ ಅಂದ ಕೂಡಲೇ ಶರ್ಮೀಳಾ ಟಾಗೋರಳ ಹಳೆ ಹಾಡೊಂದು ನೆನಪಾತು. ಸ್ವಲ್ಪ ಬದಲಾವಣೆ ಮಾಡಿಕೊಂಡ್ರ ಬೆಷ್ಟ! ಆಹಾ! ಏನು ಹಾಡು, ಏನು ಸುಂದರಿ! ಎಲ್ಲಿ ಹೋತು ಆ ಜಮಾನಾ!!??

ಜಬ್ ಹೀ ಜೀ ಚಾಹೇ ನಯೀ ದುನಿಯಾ ಬಸಾ ಲೇತೇ ಹೈ ಲೋಗ್
ಏಕ್ ಚಡ್ಡಿ ಪೇ ಕಯೀ ಚಡ್ಡಿ ಲಗಾ ಲೇತೇ ಹೈ ಲೋಗ್

(ಬೇಕೆಂದಾಗ ಹೊಸ ಜೀವನವೊಂದನ್ನು ಜನರು ಶುರು ಮಾಡಿಕೊಳ್ಳುತ್ತಾರೆ
ಒಂದು ಚಡ್ಡಿಯ ಮೇಲೆ ಮತ್ತಿಷ್ಟು ಚಡ್ಡಿಗಳನ್ನು ಧರಿಸುತ್ತಾರೆ ಜನರು...)

ಒಂದರಮೇಲೊಂದು ಚಡ್ಡಿ ಹಾಕಿಸಿ ಚಡ್ಡಿ ವ್ಯಾಪಾರ ಏನೋ ಏರಿಸಬಹುದು. ಆದ್ರ ದಿನಕ್ಕ ಮೂರ್ಮೂರು ಚಡ್ಡಿ ಹಾಕಿಕೊಂಡ್ರ ಅವನ್ನು ಒಗಿಲಿಕ್ಕೆ (ತೊಳಿಲಿಕ್ಕೆ) ನೀರು ಎಲ್ಲಿಂದ ತರೋಣ? ಧಾರವಾಡದಾಗಂತೂ ೧೦-೧೫ ದಿನಕ್ಕೆ ಒಮ್ಮೆ, ಅದೂ ಜನಿವಾರದ ಎಳಿ ಸೈಜಿನಾಗ, ನೀರು ಬಿಟ್ಟರೆ ಅದೇ ದೊಡ್ಡ ಮಾತು. ನೀರು ಎಲ್ಲಿಂದ ತರೋಣ? ಟ್ಯಾoಕರಿನಾಗ ನೀರು ನಿಮ್ಮಜ್ಜ ತರಿಸಿಕೊಡ್ತಾನೇನು? ಅಥವಾ ಜಾಸ್ತಿ ಜಾಸ್ತಿ ಗಂಡಸೂರ ಚಡ್ಡಿ ಖರೀದಿ ಮಾಡ್ರಿ ಅಂತ ಹೇಳಿದ ಯಬಡ ಅರ್ಥಶಾಸ್ತ್ರಜ್ಞ ಮಹಾನುಭಾವ ತಂದುಕೊಡ್ತಾನೋ? ಅಂತ ನೀವು ರಾವ್ ರಾವ್ ರುದ್ರಪ್ಪ ರುದ್ರಮ್ಮ ಆದ್ರ ಅದಕ್ಕೂ ಸಮಾಧಾನ ಅದ. ಮೂರ್ಮೂರು ಚಡ್ಡಿ ಹಾಕ್ಕೊಂಡ್ರು ಅಂದಾಕ್ಷಣ ಮೂರೂ ಚಡ್ಡಿ ದಿನಾ ಒಗಿಬೇಕು ಅಂತ ಎಲ್ಲೆ ರೂಲ್ ಅದ? ಮ್ಯಾಲಿನ ಎರಡು ಚಡ್ಡಿ ಯಾವಾಗರೆ ಅಪರೂಪಕ್ಕೆ ಒಗೀರಿ. ಇಲ್ಲಾ ಮಾಳಮಡ್ಡಿ ಶಿಂಧೆ ಲಾಂಡ್ರಿಗೆ ಕೊಟ್ಟು dry clean ಮಾಡಿಸಿಬಿಡ್ರಿ. ಅಥವಾ ಎಲ್ಲಾ dry clean ಮಾಡಿಸಿಬಿಡ್ರಿ. ನೀರಿನ ಗದ್ದಲನೇ ಇಲ್ಲ. ಎಲ್ಲಾ ಪೆಟ್ರೋಲ್ ಒಳಗ ತೊಳೆದು ಕೊಟ್ಟುಬಿಡ್ತಾನ ಶಿಂಧೆ. ಅವಂದೂ ಬಿಸಿನೆಸ್ ಉದ್ಧಾರ ಆಗಿ ದೇಶದ GDP ಜಾಸ್ತಿ ಆಗ್ತದ. ಮೋದಿ ಸಾಹೇಬ್ರು, ನಿರ್ಮಲಾ ಬಾಯಾರು ಇಬ್ಬರೂ GDP ೫ ಟ್ರಿಲಿಯನ್ ಲಗೂನ ಮಾಡೋಣ ಅಂತ ಹೇಳ್ಯಾರ. ಅದಕ್ಕೂ ಇದು ಸಹಕಾರಿ. GDP ಜಾಸ್ತಿ ಮಾಡಲಿಕ್ಕೆ ನಮ್ಮಲ್ಲಿ animal spirits (ಮೃಗೀಯ ಮನೋಭಾವ) ವಾಪಸ್ ಬರಬೇಕಂತ. ಹಾಕ್ಕೊಂಡು ಜಗ್ಗೆ ಚಡ್ಡಿ ಖರೀದಿ ಮಾಡೋದು ಸಹ ಒಂದು ರೀತಿಯ ಮೃಗೀಯ ಮನೋಭಾವವೇ ಅಂತ ನಮ್ಮ ಅಭಿಪ್ರಾಯ. ಯಾಕಂದ್ರ ಮನುಷ್ಯ ಸಾಮಾಜಿಕ ಮೃಗ ನೋಡ್ರಿ. Man is a social animal. ಹಾಂಗಿಂದ್ರ What about woman? ಅಂತ ಕೇಳಿದ್ರ She is a devil! ಅಂತ ಮುಖ ಮೂತಿ ನೋಡದೇ ಹೆಂಡತಿ ಕಡೆ ಕಟಿಸಿಕೊಂಡ 'ಅದೃಷ್ಟವಂತರ' ಅಭಿಪ್ರಾಯ.

ಎಷ್ಟು ಚಡ್ಡಿ ಖರೀದಿ ಮಾಡಿದ್ರಿ ಅಂತ ಲೆಕ್ಕ ಕೊಡ್ರಿ ಅಂತ ಕೇಳೋದು, ಅದರ ಮ್ಯಾಲೆ GST ಕಟ್ಟಿರೋ ಇಲ್ಲೋ ಅಂತ ಕಾಡೋದು ಎಲ್ಲಾ ತೆರಿಗೆ ಆತಂಕವಾದದ (tax terrorism) ಪರಮೋಚ್ಚ ಸ್ಥಿತಿ ಅನ್ನಬಹುದು. ಆ ಪರಿಸ್ಥಿತಿ ಬರುವ ಮೊದಲು ಗಂಡಸರ ಚಡ್ಡಿ ವ್ಯಾಪಾರ ಗಗನಚುಂಬಿಯಾಗಲಿ. ಆರ್ಥಿಕ ಮಂದಿ ಮಾರ್ಕೆಟ್ ಬಿಟ್ಟು ಓಡಿಹೋಗಲಿ ಅಂತನೇ ನಮ್ಮ ಆಶಾ!

ಒಟ್ಟಿನ್ಯಾಗ ಚಡ್ಡಿ ಮಹಾತ್ಮೆ ಅಪಾರ.

-------------------------------------------------------------------------------

ಚಡ್ಡಿ ಬಗ್ಗೆ ಹಿಂದೆ ಬರೆದಿದ್ದ ಕೆಲವು ಬ್ಲಾಗ್ ಪೋಸ್ಟುಗಳು. ಚಡ್ಡಿಪ್ರಿಯರ ಅವಗಾಹನೆಗೆ....

* ಹಸಿ ಹಸಿ ತಾಳೆನು ಈ ಹಸಿಯ, ಚೊಣ್ಣವ ನೀನು ಒಣಗಿಸೆಯಾ?....ಮಳೆಗಾಲದ ಒಣಗದ ಬಟ್ಟೆಯ ಕಥೆ ವ್ಯಥೆ

* ಒಂದೇ ಬಣ್ಣದ ಚಡ್ಡಿಗಳ ಕಥೆ....ವ್ಯಥೆ!

* 'ನಮ್ಮ ಯಜಮಾನರ ಚೊಣ್ಣಾ ಕಳೀರಿ ಅಂದ್ರ ನನ್ನ ಚಡ್ಡಿ ಕಳದಿರಲ್ಲರೀ!' - ರೂಪಾ ವೈನಿ ಅನಾಹುತ ಉವಾಚ

* ಚಡ್ಯಾಗ ಏನೈತಿ? ಅಂಥಾದ್ದೇನೈತಿ? 

Thursday, March 08, 2018

ವಿಶ್ವ ಮಹಿಳಾ ದಿನವೆಂದಾಗ 'ತೊಂಡೆಕಾಯಿ ಅಮ್ಮ' ನೆನಪಾದಳು

ಶಾಸನ ವಿಧಿಸದ ಎಚ್ಚರಿಕೆ: ಓದಿದ ಮಡಿವಂತರಿಗೆ ಕೊಂಚ ಇರುಸುಮುರುಸಾಗಬಹುದು.

ಮಾರ್ಚ್, ೮. ಇವತ್ತು ವಿಶ್ವ ಮಹಿಳಾ ದಿವಸವಂತೆ. ಯಾಕೋ 'ತೊಂಡೆಕಾಯಿ ಅಮ್ಮ' ನೆನಪಾದರು.

ತೊಂಡೆಕಾಯಿ ಅಮ್ಮ - ೧೯೭೦ ರ ವರೆಗೂ ಇದ್ದ ಒಬ್ಬ ಮಡಿ ಅಮ್ಮ / ಅಜ್ಜಿ. ಅರ್ಥಾತ್ ಶಿರೋಮುಂಡನ ಮಾಡಿಸಿಕೊಂಡಿದ್ದ ಹವ್ಯಕ ಬ್ರಾಹ್ಮಣ ವಿಧವೆ. ಅದೆಲ್ಲೋ ನಮ್ಮ ಸಿರ್ಸಿ / ಉತ್ತರ ಕನ್ನಡದ ಕಡೆ ಇದ್ದರಂತೆ. ಅವರೊಬ್ಬ living legend. ಅವರ ಬಗ್ಗೆ ಕಥೆಗಳು, ದಂತಕಥೆಗಳು ಬಹಳ.

ತೊಂಡೆಕಾಯಿ ಅಮ್ಮನ ವಿಶೇಷ ಅಂದರೆ ಅವರು ಎಂಟ್ರಿ ಕೊಟ್ಟರು ಅಂದರೆ ಅಲ್ಲಿದ್ದ ಮಹಿಳಾಮಣಿಗಳೆಲ್ಲ ಎದ್ದೆವೋ ಬಿದ್ದೆವೋ ಎಂಬಂತೆ ಬಿದ್ದಾಕಿ ಓಡುತ್ತಿದ್ದರಂತೆ. ಒಟ್ಟಿನಲ್ಲಿ bull in a china shop ಮಾದರಿ. ಪಿಂಗಾಣಿ ಅಂಗಡಿಯೊಂದಕ್ಕೆ ಗೂಳಿ ನುಗ್ಗಿದಂತೆ ತೊಂಡೆಕಾಯಿ ಅಮ್ಮನ ಆಗಮನ.

ಯಾರೋ ಒಬ್ಬ ಫಣಿಯಮ್ಮನಂತಹ ಪಾಪದ ಮಡಿಯಮ್ಮ ಮಹಿಳಾಮಂಡಳಿಯೊಳಗೆ ಸೇರಿಕೊಂಡರೆ ಇತರೆ ಮಹಿಳೆಯರೆಲ್ಲ ಯಾಕೆ ಓಡುತ್ತಿದ್ದರು?

ತೊಂಡೆಕಾಯಿ ಅಮ್ಮ ನಿರ್ಗತಿಕ ಬಡ ವಿಧವೆ. ಆಕಾಲದಲ್ಲಿ ಮಹಿಳೆಯರಿಗೆ ವಿದ್ಯೆ ಗಿದ್ಯೆ ನಾಸ್ತಿ. ಏನೋ ನೌಕರಿ ಚಾಕರಿ ಮಾಡಿಕೊಂಡು ಇರುತ್ತಿದ್ದರು. ಹೆಚ್ಚಿನ ವಿಧವೆಯರು ಸೂಲಗಿತ್ತಿ, ಸೂಲಗಿತ್ತಿಯ ಸಹಾಯಕಿ, ಅಡುಗೆಯವರು, ಇತ್ಯಾದಿ ಕೆಲಸ ಮಾಡಿಕೊಂಡಿರುತ್ತಿದ್ದರು. ಬ್ರಾಹ್ಮಣರಾಗಿರುತ್ತಿದ್ದರಿಂದ ಕಸ ಮುಸುರೆ ಕೆಲಸ ಅವರಿಗೆ ಬೇಕೆಂದರೂ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ಏನೋ ಜುಗಾಡ್ ಮಾಡಿಕೊಂಡು ಒಪ್ಪತ್ತಿನ ಕೂಳು, ಮೆಲ್ಲಲೊಂದಿಷ್ಟು ಎಲೆಯಡಿಕೆ ತಂಬಾಕು, ಏರಿಸಲು ಒಂದು ಚಟಾಕು ನಾಶಿಪುಡಿ, ಉಡಲೊಂದು ಜೊತೆ ಕೆಂಪು ಸೀರೆಯ ಬಂದೋಬಸ್ತ್ ಮಾಡಿಕೊಂಡು, ದೇವರನಾಮ ಹೇಳಿಕೊಂಡು ಇರುತ್ತಿದ್ದವು ಆ ಪಾಪದ ಮಡಿ ಜೀವಗಳು.

'ತೊಂಡೆಕಾಯಿ ಅಮ್ಮ' ಹುಡುಕಿಕೊಂಡಿದ್ದ ಕೆಲಸ ಬಾಣಂತಿ ಸೇವೆ. ಅದರಲ್ಲೂ ನವಜಾತ ಶಿಶುಗಳ ಆರೈಕೆಯಲ್ಲಿ ಅಮ್ಮನದು ಎತ್ತಿದ ಕೈ. ಆಗಷ್ಟೇ ಹುಟ್ಟಿದ ಶಿಶುಗಳಿಗೆ ಸ್ನಾನ ಮಾಡಿಸುವದು ಭಯಂಕರ ನಾಜೂಕಿನ ಕೆಲಸವಂತೆ. ಗೋಣು ಇನ್ನೂ ಗಟ್ಟಿಯಾಗಿರುವದಿಲ್ಲ. ಹಸಿ ತಲೆ ಬುರುಡೆ ಮೃದು ಮೃದು. ಹಾಗಾಗಿ ತುಂಬಾ ಜಾಗರೂಕತೆಯಿಂದ ಶಿಶುವಿನ ಸ್ನಾನ ಆಗಬೇಕು. ಇದರಲ್ಲಿ ತೊಂಡೆಕಾಯಿ ಅಮ್ಮನದು ಎತ್ತಿದ ಕೈ. ತೊಂಡೆಕಾಯಿ ಅಮ್ಮನ ನಾಜೂಕಿನ ಕೈಯಲ್ಲಿ ಶಿಶುವಿನ ಗೋಣು ಉಳುಕಿಸಿದ ಅಥವಾ ತಲೆಯನ್ನು ತಟ್ಟಬಾರದ ರೀತಿಯಲ್ಲಿ ತಟ್ಟಿ ಚಪ್ಪಟೆ ತಲೆ ಮಾಡಿಹಾಕಿದ ಉದಾಹರಣೆಗಳೇ ಇಲ್ಲ. ತೊಂಡೆಕಾಯಿ ಅಮ್ಮನ ಕೈಯಲ್ಲಿ ಸ್ನಾನ ಮಾಡಿಸಿಕೊಂಡ ಶಿಶುಗಳು ಸಿಕ್ಕಾಪಟ್ಟೆ ಮಸ್ತಾಗಿ ತಯಾರಾಗುತ್ತಿದ್ದವು. ಅದೇ ಅವರ claim to fame.

ಇಂತಹ ತೊಂಡೆಕಾಯಿ ಅಮ್ಮ ಮಹಿಳಾಮಂಡಲದಲ್ಲಿ ಬಂದು ಶಾಮೀಲಾದರು ಅಂದರೆ ಮುಗಿಯಿತು. ಅಲ್ಲಿದ್ದ ಸುಮಂಗಳೆಯರ ಪೈಕಿ ಹೆಚ್ಚಿನವರ ಗಂಡಂದಿರು ಅಮ್ಮನ ಆರೈಕೆಯಲ್ಲಿ ಬೆಳೆದವರೇ ಆಗಿರುತ್ತಿದ್ದರು. ಅಲ್ಲಿದ್ದ ಮಹಿಳಾಮಣಿಗಳ ಪತಿದೇವರುಗಳು ಶಿಶುವಿದ್ದಾಗ ಹೇಗಿದ್ದರು, ಹೇಗೆ ಅಮ್ಮ ಅವರ ಆರೈಕೆ ಅದರಲ್ಲೂ ಸ್ನಾನ ಮಾಡಿಸಿದ್ದರು, ಇತರೆ ತರೇವಾರಿ ಬಾಲ್ಯದ ಘಟನೆಗಳನ್ನು ರಸವತ್ತಾಗಿ ವಿವರಿಸುವದೆಂದರೆ ತೊಂಡೆಕಾಯಿ ಅಮ್ಮನಿಗೆ ಇನ್ನಿಲ್ಲದ ಹುರುಪು.

ಊಹಿಸಿಕೊಳ್ಳಿ. ಮಲೆನಾಡಿನ ಹವ್ಯಕರ ಮನೆಯೊಂದರಲ್ಲಿ ಏನೋ ಸಮಾರಂಭ. ಭರ್ಜರಿ ಊಟ ಮುಗಿದಿದೆ. ಮಹಿಳೆಯರೆಲ್ಲ ಕೂಡಿ ಕುಳಿತಿದ್ದಾರೆ. ಭರ್ಜರಿ ಎಲೆಯಡಿಕೆ (ಕವಳ) ಮೆಲ್ಲುತ್ತಿದ್ದಾರೆ. ಹಾಳು ಹರಟೆ ಉತ್ತುಂಗದಲ್ಲಿದೆ. ಮಕ್ಕಳು ಬಂದು ಪೀಡಿಸುತ್ತಾರೆ. ಅವರಿಗೆ ಅಮ್ಮನಿಗೆ ಬಂದ ದಕ್ಷಿಣೆ ಕಾಸಿನ ಮೇಲೆ ಕಣ್ಣು. ಅದರಲ್ಲಿ ಪುಗ್ಗಾ ಅದು ಇದು ಕೊಳ್ಳುವ ಉಮೇದಿ. ಹೀಗೆ ಸಂತಸದ ಗೌಜುಗದ್ದಲದ ವಾತಾವರಣ ಇರುವಾಗ ತೊಂಡೆಕಾಯಿ ಅಮ್ಮ ಎಂಟ್ರಿ ಕೊಟ್ಟರು ಅಂದರೆ ಮುಗಿಯಿತು.

ತೊಂಡೆಕಾಯಿ ಅಮ್ಮ ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದರು ನಿಜ. ಅದೇಕೋ ಏನೋ ಅಮ್ಮನಿಗೆ ಶಿಶುಗಳ 'ತೊಂಡೆಕಾಯಿ' ಬಗ್ಗೆ ವಿವರಣೆ ಕೊಡುವದೆಂದರೆ ಭಯಂಕರ ಆಸಕ್ತಿ. ಈಗ 'ತೊಂಡೆಕಾಯಿ' ಅಂದರೇನು ಅಂತ ನಾನು ನಿಮಗೆ ಹೇಳಬೇಕಾಗುತ್ತದೆ. ತೊಂಡೆಕಾಯಿ ಅಂದರೆ ತರಕಾರಿ ನಿಜ. ಹಾಗೆಯೇ ತೊಂಡೆಕಾಯಿ ಇದು ಬಹುಪಯೋಗಿ ಪದ. ಅನೇಕ ಅರ್ಥಗಳಿವೆ. ಮಾನವ ಶರೀರ ಅಂದಮೇಲೆ ಎಲ್ಲ ಅಂಗಾಂಗಳೂ ಇರುತ್ತವೆ. ಗಂಡಸಿನ ಜನನಾಂಗಕ್ಕೆ ಶಾಸ್ತ್ರಬದ್ಧವಾಗಿ ಶಿಶ್ನ, ಲಿಂಗ ಅನ್ನಬಹುದು. ಸ್ವಲ್ಪ ಕಸಿವಿಸಿಯಾಗುವಂತೆ ಶುದ್ಧ ಕನ್ನಡದಲ್ಲಿ ತು* ಅನ್ನಬಹುದು. ಆದರೆ ಇದ್ಯಾವದೂ ಹವ್ಯಕರಿಗೆ ಒಪ್ಪಿಗೆಯಾದಂತೆ ಕಾಣುವದಿಲ್ಲ. ಅದರಲ್ಲೂ ಚಿಕ್ಕ ಹುಡುಗರ ಚಿಕ್ಕ ಜನನಾಂಗಕ್ಕೆ ಹಾಗೆಲ್ಲ ಅಂದುಬಿಟ್ಟರೆ ಅದು ಹೊಂದಲಿಕ್ಕೂ ಇಲ್ಲ. ಹಾಗಾಗಿ ಹವ್ಯಕ ಭಾಷೆಯಲ್ಲಿ (ಚಿಕ್ಕ) ಹುಡುಗರ ಲಿಂಗಕ್ಕೆ ತೊಂಡೆಕಾಯಿ ಅಂದುಬಿಡುತ್ತಾರೆ. ಸುಮಾರಾಗಿ ಆದ್ರೂ ಸರಿ ಸೈಜಿಗೆ ಗಾತ್ರಕ್ಕೆ ಉದ್ದಗಲಕ್ಕೆ ಸರಿ ಹೊಂದುತ್ತದೆ. ಅರ್ಥ ತಿಳಿಯುತ್ತದೆ. ಪದ ತರಕಾರಿಯ ಹೆಸರು. ಅಸಹ್ಯ ಅನ್ನಿಸುವದಿಲ್ಲ. ಮಿಣ್ಣಿಕಾಯಿ ಕೂಡ ಚಾಲ್ತಿಯಲ್ಲಿರುವ ಪರ್ಯಾಯ ಪದ.

ತೊಂಡೆಕಾಯಿ...ಇದು ತರಕಾರಿ! ;)


ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದ ಅಮ್ಮನ ಕಣ್ಣಿಗೆ ಶಿಶುಗಳ ತೊಂಡೆಕಾಯಿ ಕಂಡೇ ಕಾಣುತ್ತಿತ್ತು. ಕಾಣದೇ ಇರಲು ಶಿಶುಗಳೇನು ಕೌಪೀನ ಧರಿಸಿ ಸ್ನಾನ ಮಾಡುತ್ತವೆಯೇ? ಇಲ್ಲ. ಫುಲ್ ಗೊಮ್ಮಟೇಶ್ವರ ಅವತಾರದಲ್ಲೇ ಸ್ನಾನ. ನಂತರ ಚಡ್ಡಿ ಪಿಡ್ಡಿ ಹಾಕಿದರೆ ಪುಣ್ಯ. ಕೊಂಚ ಗಾಳಿ ಆಡಿಕೊಂಡಿರಲಿ ಅಂತ ಹಾಗೇ ಬಿಟ್ಟರೆ ಜೈ ಗೊಮ್ಮಟೇಶ್ವರ.

ನೆರೆದಿರುವಂತಹ ಮಹಿಳಾಮಂಡಳಿಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಮುತ್ತೈದೆ ಮೇಲೆ ಅಮ್ಮನ ಕಣ್ಣುಬಿತ್ತು ಅಂದುಕೊಳ್ಳಿ. ತೊಂಡೆಕಾಯಿ ಅಮ್ಮನ ಮಾತಿನ ಲಹರಿ ಹೀಗಿರುತ್ತಿತ್ತು. ಶುದ್ಧ ಹವ್ಯಕ ಭಾಷೆಯಲ್ಲಿ...

'ತಂಗೀ...ಅನ್ನಪೂರ್ಣೆ ಅಲ್ಲದನೇ? ರಾಶಿ ದಿನಾಗಿತ್ತಲೇ ನೋಡದ್ದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯಾ ಆನೇ ಮೀಸ್ತಿದ್ದಿ ಹೇಳಿ. ತೆಳತ್ತಾ? ಶ್ರೀಪತಿ ತೊಂಡೆಕಾಯಿ ಥಂಡಿಯಲ್ಲಿ ಮುರುಟಿ ಮುರುಟಿ ಇಷ್ಟ ಶಣ್ಣ ಆಕ್ಯ ಇರ್ತಿತ್ತು ಬಿಲಾ. ಒಂದ್ಹನೀಯಾ ಬಿಸಿನೀರು ಹನಿಸಿದ ಮ್ಯಾಲೆಯೇ ಅಲ್ಲೊಂದು ತೊಂಡೆಕಾಯಿ ಇದ್ದು ಹೇಳಿ ಕಾಣವು. ಅಲ್ಲಿವರಿಗೆ ತೊಂಡೆಕಾಯಿ ಕೇಳಡಾ ನೀನು.... ' ಹೀಗೆ ಶುದ್ಧ ಹವ್ಯಕ ಭಾಷೆಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಸುಮಂಗಲೆಯ ಮುಂದೆ ಆಕೆಯ ಪತಿರಾಯನ ಬಾಲ್ಯದ ತೊಂಡೆಕಾಯಿಯ ವರ್ಣನೆ ನಡೆಯುತ್ತಿತ್ತು.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ, ನೀನು ಅನ್ನಪೂರ್ಣಾ ಅಲ್ಲವೇನೇ? ಬಹಳ ದಿನಗಳಾಗಿತ್ತು ನಿನ್ನನ್ನು ನೋಡದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯನ್ನು ನಾನೇ ಸ್ನಾನ ಮಾಡಿಸುತ್ತಿದ್ದೆ. ಶ್ರೀಪತಿಯ 'ತೊಂಡೆಕಾಯಿ' ಚಳಿಯಲ್ಲಿ ಮುರುಟಿ ಮುರುಟಿ ಇಷ್ಟು ಸಣ್ಣ ಆಗಿರುತ್ತಿತ್ತು. ಕೊಂಚ ಬಿಸಿನೀರು ಹಾಕಿದ ಮೇಲೆಯೇ ಅಲ್ಲೊಂದು ತೊಂಡೆಕಾಯಿ ಇರುವ ಕುರುಹು ಕಾಣುತ್ತಿತ್ತು. ಅಲ್ಲಿಯವರೆಗೆ ತೊಂಡೆಕಾಯಿ ಬಗ್ಗೆ ನೀ ಕೇಳಬೇಡ!)

ಶಿವಾಯ ನಮಃ! ಅಲ್ಲರೀ... ಆ ಪಾಪದ ಮುತ್ತೈದೆ ಅನ್ನಪೂರ್ಣಾ ಅದೆಷ್ಟು ಸಂಕೋಚ ಅನುಭವಿಸುತ್ತಿರಬೇಕು ಊಹಿಸಿ, ಅದೂ ಬಾಕಿ ಮಹಿಳೆಯರೆಲ್ಲ ತಲೆ ಕೆಳಗೆ ಹಾಕಿ, ಒಬ್ಬರನೊಬ್ಬರು ತಿವಿದುಕೊಳ್ಳುತ್ತ ಮುಸಿಮುಸಿ ನಗುತ್ತಿರುವಾಗ!

'ಥೋ ಅಮ್ಮಾ! ಅದೆಂತದು ಹೇಳಿ ಮಳ್ಳ ಹಲಬ್ತ್ಯೆ. ಯಾವಾಗ ಎಂತಾ ಮಾತಾಡವು ಹೇಳಿ ತೆಳಿತಿಲ್ಲೆ ನಿಂಗೆ. ಇಶೀ ಮಳ್ಳೆಯಾ... ' ಎಂದು ನಾಚಿಕೆಯಿಂದ ಕೆಂಪಕೆಂಪಾಗಿ ಮುದ್ದೆಯಾಗಿರುವ ಅನ್ನಪೂರ್ಣ ತೊಂಡೆಕಾಯಿ ಅಮ್ಮನನ್ನು ಗದರಿಸಿದರೆ ತೊಂಡೆಕಾಯಿ ಅಮ್ಮನದು ಏನೂ ಅರಿಯದ ಶುದ್ಧ ಮುಗ್ಧ ನಗೆ. ಹುಚ್ಚ ಪ್ಯಾಲಿ ನಗೆ.

ಹೀಗೆ ಅನ್ನಪೂರ್ಣಳನ್ನು ಗೋಳೊಯ್ದುಕೊಂಡ ಮೇಲೆ ಕಂಡಾಕೆ ಮತ್ತೊಬ್ಬಳು. ಅವಳ ಹೆಸರು ನಾಗವೇಣಿ ಅಂತಿಟ್ಟುಕೊಳ್ಳಿ. ಅಮ್ಮನ ಕಣ್ಣು ಆಕೆಯ ಮೇಲೆ ಬಿತ್ತು. ಫುಲ್ ಬಾಡಿ ಡೀಪ್ ಸ್ಕ್ಯಾನ್ ಮಾಡಿದ ಅಮ್ಮ ನಾಗವೇಣಿಯ ಗರ್ಭದ ಹೊಸ ಪ್ರೊಡಕ್ಷನ್ ಮಿಸ್ ಮಾಡುವಂತಿರಲಿಲ್ಲ.

''ತಂಗೀ  ನಾಗವೇಣಿ. ಮತ್ತೆ ಬಸುರಿದ್ಯನೇ? ಇದು ಮೂರ್ನೇದ್ದು ಅಲ್ಲದನೇ? ಮೂರ್ನೆದ್ದೇ. ಯಂಗೆ ಗೊತ್ತಿಲ್ಯ? ಮೊದಲಿನ ಎರಡೂ ಶಿಶುಗಳನ್ನ ಮೀಸಿಕೊಟ್ಟಿದ್ದು ಆನೇ ಅಲ್ಲದನೇ. ತಂಗೀ ನಿಂಗೆ ಗೊತ್ತಿದ್ದ? ನಿನ್ನ ಗಂಡ ಪದ್ಮನಾಭ ಇದ್ದನಲೇ. ಪದ್ಮನಾಭನ ಅಮ್ಮ, ಅದೇ ಯಂಕಟು ಭಾವನ್ ಮೂರನೇ ಹೆಂಡ್ತಿ, ಸುಶೀಲತ್ತಿಗೆ ಹೇಳಿ ಇದ್ದಿತ್ತು. ಹಳೇ ಹಲ್ಕಟ್ ಮುದುಕಿ ಅದು. ಅದು ಪ್ರತಿ ಬಾರಿ ಯಂಗೆ ಹೇಳ್ತಿತ್ತು. ಶಿಶುವಿನ ಮೀಸಿಯಾದ ಮ್ಯಾಲೆ ತೊಂಡೆಕಾಯಿಯಾ ಮರಿಯದ್ದೇ ತಣ್ಣೀರಿನಿಂದ ತೊಳ್ಸವು ಹೇಳಿ. ಅದು ಯಂಗೆ ಗೊತ್ತಿಲ್ಯನೇ? ಬಿಸಿನೀರಲ್ಲಿ ಮೀಸಿದ ಮ್ಯಾಲೆ ಗಂಡುಡ್ಗ್ರ ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸದೆಯಾ. ಇಲ್ಲದಿದ್ದರೆ ಕಡಿಗೆ ಗಂಡಸ್ರಿಗೆ ಮುಂದೆ ಮಕ್ಕ ಅಪ್ಪದು ಖಾತ್ರಿಯಿಲ್ಲೆ ನೋಡು. ಬಿಶಿನೀರಿಂದ ವೀರ್ನಾಶಾ (ವೀರ್ಯನಾಶ) ಆಗೋಗ್ತಳಾ. ತೆಳತ್ತಾ? ಈಗ ನೋಡು ನಿನ್ನ ಗಂಡ ಪದ್ಮನಾಭ ಹ್ಯಾಂಗಿದ್ದಾ ಹೇಳಿ. ಎರಡು ಸಲಿ ಆತು ಈಗ ಮೂರನೇ ಸಲಿ ಅಪ್ಪ ಅಪ್ಪಲೆ ಹೊಂಟಿದ್ದ. ಅಡ್ಡಿಲ್ಲೆ ಮಾಣಿ. ಜೋರಿದ್ದ. ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸಿದ್ದು ಉಪಯೋಗಾತು ಹೇಳ್ಯಾತು. ಅಲ್ಲದನೇ? ನಿಂಗೆ ಡಾಲಿವರಿ ದಿನ ಯಾವಾಗ ಕೊಟ್ಟಿದ್ರು ಡಾಕ್ಟ್ರು? ಎಲ್ಲಿ ಹಡಿಯವು ಮಾಡಿದ್ದೆ? ಮನಿಯಲ್ಲ? ಅಪ್ಪನ ಮನಿಯಲ್ಲ? ಅಥವಾ ಆಸ್ಪತ್ರೆಯಲ್ಲ? ಯನಗೆ ಮೊದಲೇ ತಿಳಿಸಿಬಿಡು. ಅಕಾss??!!"

ಇಷ್ಟು ಕೇಳಿದ ನಾಗವೇಣಿ ಎಂಬ ಎರಡೂವರೆ ಮಕ್ಕಳ ಮಹಾತಾಯಿ ಮೊದಲು ವಿಪರೀತ ನಾಚಿಕೊಂಡು, ನಂತರ ನಾಗಿಣಿಯಂತೆ ಭುಸುಗುಟ್ಟದಿದ್ದರೆ ಅದಕ್ಕಿರುವ ಕಾರಣ ಅಮ್ಮನ ಭೋಳೆತನ, ಒಳ್ಳೆತನ ಮತ್ತು ಮಂಕುತನ.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ ನಾಗವೇಣಿ. ಮತ್ತೆ ಬಸುರಿದ್ದಿಯೇನು? ಇದು ಮೂರನೇಯದ್ದು ಅಲ್ಲವೇ? ಮೂರನೆಯದ್ದೇ. ನನಗೆ ಗೊತ್ತಿಲ್ಲವೇ? ಮೊದಲಿನ ಎರಡೂ ಶಿಶುಗಳ ಸ್ನಾನ ಮಾಡಿಸಿಕೊಟ್ಟಿದ್ದು ನಾನೇ ತಾನೇ? ತಂಗಿ ನಿನಗೆ ಗೊತ್ತಿದೆಯೇ? ನಿನ್ನ ಗಂಡ ಪದ್ಮನಾಭ ಇದ್ದಾನಲ್ಲ? ಪದ್ಮನಾಭನ ಅಜ್ಜಿ, ವೆಂಕಟ ಭಾವನ ಮೂರನೇ ಹೆಂಡತಿ, ಸುಶೀಲತ್ತಿಗೆ ಅಂತಿದ್ದರು. ಹಳೇ ಹಲ್ಕಟ್ ಮುದುಕಿ ಅವರು. ಅವರು ನನಗೆ ಪ್ರತಿಬಾರಿ ಹೇಳುತ್ತಿದ್ದರು. ಗಂಡು ಶಿಶುವಿನ ಸ್ನಾನ ಮಾಡಿಸಿದ ಮೇಲೆ ಜನನಾಂಗವನ್ನು ಮರೆಯದೇ ತಣ್ಣೀರಿನಿಂದ ತೊಳೆಯಬೇಕು ಎಂದು. ಅದು ನನಗೆ ಗೊತ್ತಿಲ್ಲವೇ? ಬಿಸಿನೀರಲ್ಲಿ ಸ್ನಾನ ಮಾಡಿಸಿದ ಮೇಲೆ ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸುವುದೇ. ಇಲ್ಲದಿದ್ದರೆ ಮುಂದೆ ಗಂಡಸರಿಗೆ ಮಕ್ಕಳಾಗುವದು ಖಾತ್ರಿ ಇಲ್ಲ. ಬಿಸಿನೀರಿನಿಂದ ವೀರ್ಯನಾಶವಾಗಿಹೋಗುತ್ತದಂತೆ. ಈಗ ನಿನ್ನ ಗಂಡ ಪದ್ಮನಾಭನನ್ನೇ ನೋಡು ಹೇಗಿದ್ದಾನೆ. ಎರಡು ಬಾರಿ ಆಯಿತು. ಈಗ ಮೂರನೇ ಬಾರಿ ತಂದೆಯಾಗಲು ಹೊರಟಿದ್ದಾನೆ. ಮಾಣಿ ಅಡ್ಡಿಯಿಲ್ಲ. ಜೋರಾಗಿದ್ದಾನೆ. ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸಿದ್ದು ಉಪಯೋಗವಾಯಿತು ಅಂದಂತಾಯಿತು. ಅಲ್ಲವೇ? ನಿನಗೆ ಡೆಲಿವರಿ ಡೇಟ್ ಎಂದು ಕೊಟ್ಟಿದ್ದಾರೆ ಡಾಕ್ಟರ್? ಎಲ್ಲಿ ಹಡೆಯುವಾಕೆ ನೀನು? ಗಂಡನ ಮನೆಯಲ್ಲೋ? ತವರುಮನೆಯಲ್ಲೋ? ಅಥವಾ ಆಸ್ಪತ್ರೆಯಲ್ಲೋ? ನನಗೆ ಮೊದಲೇ ತಿಳಿಸಿಬಿಡು. ಸರಿನೇ?)

ಹೀಗೆ ಇಬ್ಬರು ಮುತ್ತೈದೆಯರ ಪತಿಪರಮೇಶ್ವರರ ಬಾಲ್ಯದ ತೊಂಡೆಕಾಯಿ ಪುರಾಣದ ಕೇವಲ ಸ್ಯಾಂಪಲ್ ಹೇಳುವಷ್ಟರಲ್ಲಿ ಸಂಕೋಚ, ನಾಚಿಗೆ, ಕಿರಿಕಿರಿ ತಡೆಯಲಾಗದ ಮಹಿಳಾಮಂಡಲ ಅಲ್ಲಿಂದ ಗಾಯಬ್ ಆಗಿ ಬೇರೆ ಎಲ್ಲೋ ಜಮಾಯಿಸುತ್ತಿತ್ತು. 'ಆ ಮಳ್ಳ ತೊಂಡೆಕಾಯಿ ಅಮ್ಮ ಇಲ್ಲೊಂದು ಬರ್ದಿದ್ರೆ ಸಾಕು. ಮತ್ತ ಗಂಡಂದಿಕ್ಕಳ ತೊಂಡೆಕಾಯಿ ಬಗ್ಗೆ ಮಳ್ಳ ಹಲಬಲ್ಲೆ ಶುರು ಮಾಡ್ಚು ಅಂದರೆ ಮುಗತ್ತು. ಭಗವಂತಾ ಇಷ್ಟು ವರ್ಷಾತು. ಜನಕ್ಕೆ ಲೈಕ್ ಆಗ್ತಿಲ್ಲೆ ಹೇಳಿ ಅದ್ಕೆ ಗೊತ್ತಾಗ್ತಿಲ್ಯಾ? ಅದೆಂತಕ್ಕೆ ಹಾಂಗ ಮಳ್ಳ ಹರಿತನಪಾ? ಹಾಂಗೆ ಹೇಳಿ ಗನಾ ಅಮ್ಮ ಮತ್ತೆ... ' ಎಂದು ಮಹಿಳಾಮಂಡಳಿ ಬೇರೊಂದು ಜಾಗದಲ್ಲಿ ಎರಡನೇ ಹರಟೆ ಸೆಷನ್ನಿಗೆ ತೆರೆದುಕೊಳ್ಳುತ್ತಿತ್ತು.

(ಆ ಹುಚ್ಚ ತೊಂಡೆಕಾಯಿ ಅಮ್ಮ ಇಲ್ಲೂ ಕೂಡ ಬರದಿದ್ದರೆ ಸಾಕು. ಮತ್ತೆ ಗಂಡಂದಿರ ತೊಂಡೆಕಾಯಿ ಬಗ್ಗೆ ಹುಚ್ಚುಚ್ಚಾಗಿ ಮಾತಾಡುತ್ತಾರೆ. ಭಗವಂತಾ! ಇಷ್ಟು ವರ್ಷವಾಯಿತು. ಜನರಿಗೆ ಇಷ್ಟವಾಗುವದಿಲ್ಲ ಅಂತ ಅವರಿಗೆ ಅರ್ಥವಾಗುವದಿಲ್ಲವೇ? ಯಾಕೆ ಮಳ್ಳುಮಳ್ಳಾಗಿ ಆಡುತ್ತಾರೋ? ಆದರೆ ಏನೇ ಹೇಳಿ ಅಮ್ಮ ತುಂಬಾ ಒಳ್ಳೆಯವರು.)

ಅಲ್ಲಿಗೂ ಅಮ್ಮನ ಪ್ರವೇಶವಾದರೆ ಆಶ್ಚರ್ಯವಿಲ್ಲ. ಅಮ್ಮನೂ ಎಲೆಯಡಿಕೆ ಅಗಿಯುತ್ತ, ಸೊಂಟಕ್ಕೆ ಕಟ್ಟಿಕೊಂಡಿದ್ದ ಕವಳದ ಸಂಚಿಯನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತ ಎಂಟ್ರಿ ಕೊಡುತ್ತಿದ್ದರು. 'ಅಯ್ಯೋ, ನಿಂಗ ಎಲ್ಲಾ ಇಲ್ಲಿ ಬಂದು ಸೇರಿಗಿದ್ರ? ಅಲ್ಲಿಂದ ಎಂತಕ್ಕೆ ಓಡ್ಬಂದಿ?' ಎಂದು ಅಮ್ಮ ಮುಗ್ಧ ಪ್ರಶ್ನೆ. ತಮ್ಮ ತೊಂಡೆಕಾಯಿ ಪುರಾಣವೇ ಮಹಿಳಾಮಂಡಲದ ಸ್ಥಾನಪಲ್ಲಟಕ್ಕೆ ಕಾರಣ ಅಂತ ಅವರಿಗೆ ಬಿಲ್ಕುಲ್ ತಿಳಿಯುತ್ತಿರಲಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಅನ್ನುವಂತಿದ್ದರು ಅಮ್ಮ. Innocently stupid or stupidly innocent.

ತೊಂಡೆಕಾಯಿ ಅಮ್ಮನನ್ನು ನಾವಂತೂ ನೋಡಿಲ್ಲ. ಆದರೆ ಹೆಂಗಳೆಯರ ಮಾತಿನ ಮಧ್ಯೆ ತೊಂಡೆಕಾಯಿ ಅಮ್ಮ ಬಂದುಹೋಗಿದ್ದನ್ನು ಕೇಳಿದ್ದೇನೆ. ಮಹಿಳೆಯರು ತಮ್ಮತಮ್ಮಲ್ಲೇ ಪೋಲಿ ಮಾತಾಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಇಂತಹ ಕಥೆಗಳು ಹೊರಬರುತ್ತವೆ. ನಮ್ಮಂತಹ ಚಿಕ್ಕ ಹುಡುಗರಿಗೆ ಏನೂ ಗೊತ್ತಾಗುವದಿಲ್ಲ ಅಂದುಕೊಂಡಿರುತ್ತಾರೆ. ಎಂದೋ ಕೇಳಿದ್ದು ಮಂಡೆಯಲ್ಲಿ ಎಲ್ಲೋ ಶೇಖರವಾಗಿರುತ್ತದೆ. ಇವತ್ತಿನಂತೆ ಎಂದೋ ಹೀಗೆ ನೆನಪಿಗೆ ಬರುತ್ತವೆ.

ತೊಂಡೆಕಾಯಿ ಅಮ್ಮನ ತರಹದ್ದೇ ಜಾತಿಯ ಮತ್ತೊಬ್ಬ ಕರುಣಾಮಯಿ ತಾಯಿ / ಅಜ್ಜಿ  ಅಂದರೆ 'ಒದ್ದೆ ಚಡ್ಡಿ ಅಮ್ಮ'. ಅವರಿಗೆ ಮಕ್ಕಳು ಎಲ್ಲಿ ಒದ್ದೆಯಾದ ಚಡ್ಡಿ ಹಾಕಿಕೊಂಡುಬಿಟ್ಟಿದ್ದಾರೋ ಅನ್ನುವ ಚಿಂತೆ. ಹಾಗಾಗಿ ಕಂಡಕಂಡ ಹುಡುಗರ ಚಡ್ಡಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಸರಕ್ ಅಂತ ಕೈಹಾಕಿಬಿಡುತ್ತಿದ್ದರು. ಮಕ್ಕಳು ಶಾಕ್ ಹೊಡೆಸಿಕೊಂಡವರಂತೆ ಜಿಗಿದರೆ ಅಮ್ಮನದು  ಒಂದೇ ವಾರಾತ, 'ಥೋ, ಕೆಟ್ಟ ಪೋರಾ! ನೀನು ಎಲ್ಲಿ ಒದ್ದೆ ಚಡ್ಡಿ ಹಾಕಿಕೊಂಡಿಯೋ ಅಂತ ನೋಡಿದೆ ಅಷ್ಟೇ. ಒದ್ದೆ ಚಡ್ಡಿ ಹಾಕಿಕೊಂಡರೆ ಜ್ವರ ಬಂದೀತು. ಹುಷಾರ್!'

ತೊಂಡೆಕಾಯಿ ಅಮ್ಮನಂತಹ ಮಹಿಳೆಯರು ತುಂಬಾ ಅಮಾಯಕರಾಗಿರುತ್ತಿದ್ದರು. ಎಷ್ಟೋ ಜನ ಬಾಲವಿಧವೆಯರು. ವಯಸ್ಸಿಗೆ ಬರುವ ಮುನ್ನವೇ ಬಾಲ್ಯವಿವಾಹವಾಗಿರುತ್ತಿತ್ತು. ಇವರು ಋತುಮತಿಯರಾಗಿ ಪಟ್ಟಕ್ಕೆ ಬರುವ ಹೊತ್ತಿಗೆ ಗಂಡ ಚಟ್ಟಕ್ಕೆ ಏರಿರುತ್ತಿದ್ದ ಅರ್ಥಾತ್ ಕೈಲಾಸ ಸೇರಿರುತ್ತಿದ್ದ. ಹಾಗಾಗಿ ಅವರಿಗೆ ಸಂಸಾರ, ಸಂಸಾರದ 'ಸುಖ' ಗೊತ್ತಿಲ್ಲ. ಹಾಗಾಗಿ ಸಣ್ಣ ಹುಡುಗರ ತೊಂಡೆಕಾಯಿ ಬಗ್ಗೆ 'ಸಹಜವಾಗಿ' ಮಾತಾಡಿದರೆ ವಿವಾಹಿತ ಮಹಿಳೆಯರು ಯಾಕೆ ಆಪರಿ ಸಂಕೋಚ ನಾಚಿಗೆ ಪಟ್ಟುಕೊಳ್ಳುತ್ತಾರೆ ಅನ್ನುವದು ತೊಂಡೆಕಾಯಿ ಅಮ್ಮನ ಪೈಕಿಯವರಿಗೆ ಚಿದಂಬರ ರಹಸ್ಯ.

ತೊಂಡೆಕಾಯಿ ಅಮ್ಮ ಈಗಿಲ್ಲ. ಅಂತಹ ಅಮ್ಮಂದಿರ ಜಮಾನಾ ಎಂದೋ ಮುಗಿದಿದೆ. ಬೇಜಾರಿನ ಸಂಗತಿ ಎಂದರೆ ಜನರಲ್ಲಿ ಅಂತಹ trademark ಅಮಾಯಕತೆ, ಮುಗ್ಧತೆ, ಸೇವಾಮನೋಭಾವ, ನಿಷ್ಕಲ್ಮಶ ಪ್ರೀತಿ ಕೂಡ ಮಾಯವಾಗಿದೆ. ಈಗ ಎಲ್ಲರೂ ಲೆಕ್ಕಾಚಾರದವರೇ. ಎಲ್ಲ ತಾಳೆ ಹಾಕಿಯೇ ಮಾತುಕತೆ. ಶುದ್ಧ ಬೆರಕೆ ಬುದ್ಧಿ.

ತೊಂಡೆಕಾಯಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೆ ಎಂದು ಗೊತ್ತಿರಲಿಲ್ಲ. Gentleman's Toe ಅನ್ನುವದು ತೊಂಡೆಕಾಯಿಗೆ ಇರುವ ಒಂದು ಇಂಗ್ಲೀಷ್ ಪದ. ತಿಳಿದು ತುಂಬಾ ನಗು ಬಂತು. ಬೆಂಡೆಕಾಯಿಗೆ lady's finger ಅಂತೆ. ತೊಂಡೆಕಾಯಿಗೆ Gentleman's Toe ಅಂತೆ. ಶಿವಾಯ ನಮಃ!

Saturday, February 03, 2018

'ಭಜಿ' ಗೋವಿಂದಂ

ಮೊನ್ನೆ ಮೋದಿ ಸಾಹೇಬರು casual ಆಗಿ ಹೇಳಿದ ಮಾತೊಂದು ದೊಡ್ಡ ವಿವಾದಕ್ಕೆ ಕಾರಣವಾಯಿತು.

'ನಿಮ್ಮ ಆಫೀಸಿನ ಎದುರಲ್ಲಿ ಪಕೋಡಾ ಕರಿದು ಮಾರುವವ ಕೂಡ ದಿನಕ್ಕೆ ೨೦೦ ರೂಪಾಯಿ ಗಳಿಸುತ್ತಾನೆ. ಅದು ಉದ್ಯೋಗವಲ್ಲವೇ?' ಅಂತ ಟೀವಿ ಸಂದರ್ಶನದಲ್ಲಿ ಕೇಳಿದರು. ಸಂದರ್ಶಕ ಉದ್ಯೋಗಸೃಷ್ಟಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಟ್ಟ ಉತ್ತರ.

ಪಕೋಡಾ ಅಥವಾ ಭಜಿ (ಬಜೆ) ಕರಿದು ಮಾರುವದೇ ಬೆಸ್ಟ್ ಉದ್ಯೋಗ ಅಂತ ಹೇಳಿದವರಲ್ಲಿ ಮೋದಿ ಸಾಹೇಬರು ಮೊದಲನೆಯವರಲ್ಲ.

ನಮ್ಮ ಆದಿ ಶಂಕರಾಚಾರ್ಯರು ಅದನ್ನೇ ಅಲ್ಲವೇನ್ರಿ ಹೇಳಿದ್ದು? 'ಮೋಹ ಮುದ್ಗರಂ'ನಲ್ಲಿ ಏನಂತ ಹೇಳಿದರು?

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೆ
ಸಂಪ್ರಾಪ್ತೆ ಸನ್ನಿಹಿತೆ ಕಾಲೇ ನಹಿ ನಹಿ ರಕ್ಷತಿ ಡುಕೃಮ್ಕರಣೆ
ಭಜ ಗೋವಿಂದಂ ಭಜ ಗೋವಿಂದಂ

ಅರ್ಥ ಏನಪ್ಪಾ ಅಂದರೆ... ನಮ್ಮ ಹೈಸ್ಕೂಲ್ ಸಂಸ್ಕೃತ ಮಾಸ್ತರ್ ಎಸ್.ಎಸ್. ಹೆಗಡೆ ಸರ್ ಹೇಗೆ ಸಂಸ್ಕೃತ ಹೇಳಿ ಕೊಡುತ್ತಿದ್ದರೋ ಅದೇ ಮಾದರಿಯಲ್ಲಿ ವಿವರಿಸುತ್ತೇನೆ.
 
ಭಜ ಗೋವಿಂದಂ ಭಜ ಗೋವಿಂದಂ = ಗೋವಿಂದನೆಂಬ ಭಜಿ ಗೋವಿಂದನೆಂಬ ಭಜಿ

**ಭಜ ಇದರ ತತ್ಸಮ ತದ್ಭವ ಭಜಿ ಅಂದ್ರೆ ಪಕೋಡಾ, ಬಜೆ, ಬುರ್ಬುರಿ, ವಡೆ, ಗೋಳಿಬಜೆ ಇತ್ಯಾದಿ. 

ಮೂಢಮತೆ = ದಡ್ಡ ಮಂಗ್ಯಾನ್ಮಗ

ಸಂಪ್ರಾಪ್ತೆ ಸನ್ನಿಹಿತೆ ಕಾಲೇ = ಪ್ರಾಯ ಬಂದು, ಪ್ರಾಯ ಮುಗಿಯುವ ಕಾಲ ಬಂದರೂ ನೌಕರಿ ಸಿಗಲಿಲ್ಲ ಅಂದರೆ. ನೌಕರಿ ಸಿಗದೇ ಹಿತವಲ್ಲದ ಸನ್ನಿ ಹಿಡಿದರೆ.

ನಹಿ ನಹಿ ರಕ್ಷತಿ ಡುಕೃಮ್ಕರಣೆ = ನೀ ಕಲಿತ ವ್ಯಾಕರಣ (ಡುಕೃಮ್ಕರಣೆ) ನಿನ್ನನ್ನು ರಕ್ಷಿಸುವದಿಲ್ಲ. ಅರ್ಥಾತ್ ಪುಸ್ತಕದ ವಿದ್ಯೆ ವೇಸ್ಟ್.

ಹಾಂಗಾಗಿ.....

ಗೋವಿಂದನೆಂಬ ಭಜಿ ಕರಿದು ಜೀವನೋಪಾಯ ಹುಡುಕಿಕೋ....

ವಾಕ್ಯಾರ್ಥ ನೋಡಿಯಾಯಿತು. ಈಗ ಭಾವಾರ್ಥ.

ಪುಸ್ತಕದ ವಿದ್ಯೆ, ಗಳಿಸಿದ ಡಿಗ್ರಿ ಯಾವದೂ ಉಪಯೋಗಕ್ಕೆ ಬರುವದಿಲ್ಲ.
ಗೋವಿಂದ ಭಜಿ (ಪಕೋಡಾ) ಕರಿದು ಜೀವನ ಸಾಗಿಸು!

ಆದಿ ಶಂಕರರ ಪರಮೋನ್ನತ ಕೃತಿ 'ಮೋಹ ಮುದ್ಗರಂ' ಶ್ಲೋಕವನ್ನು ಹೀಗೂ ಅರ್ಥೈಸಲು ಕೇವಲ ನಮ್ಮಂತ ಯಬಡ ಹಾದಿ ಶಂಕರನಿಗೆ ಮಾತ್ರ ಸಾಧ್ಯ!

ಆದಿ ಶಂಕರಾ! ಹಾದಿ ಶಂಕರಾ! ಬೀದಿ ಶಂಕರಾ! ಗಲ್ಲಿ ಶಂಕರಾ!

***

ಜಗತ್ತಿನಲ್ಲಿ ಎಲ್ಲೂ ಮೊದಲಿನ ಅನುಪಾತದಲ್ಲಿ ಉದ್ಯೋಗಸೃಷ್ಟಿ ಆಗುವದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ automation ಬಂದು ಬೇಕಾಗುವ ಕೆಲಸಗಾರರ ಸಂಖ್ಯೆ ಕಮ್ಮಿಯಾಗುತ್ತಲೇ ಹೋಗುತ್ತದೆ. ಬೇರೆ ಬೇರೆ ಸ್ಕಿಲ್ ಇರುವ ಕೆಲಸಗಾರರು ಬೇಕಾಗುತ್ತಾರೆ. ಅದೂ ಕಮ್ಮಿ ಸಂಖ್ಯೆಯಲ್ಲಿ. ಹಾಗಾಗಿ ೧೦೦ ಕೋಟಿಯ ಪ್ರಾಜೆಕ್ಟಿಗೆ ಮೊದಲು ೧೦೦೦ ಜನ ಬೇಕಾಗಿದ್ದರೆ ಈಗ ೭೦೦ ಜನ ಸಾಕು.

ಮತ್ತೆ ಸರ್ಕಾರದ ಕೆಲಸ ಉದ್ಯೋಗಸೃಷ್ಟಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುವದೇ ವಿನಃ ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ಕೆಲಸ ಕೊಡುವದಲ್ಲ. ಆ ಮಾಡೆಲ್ ವಿಫಲವಾಗಿದ್ದನ್ನು ಭಾರತವೂ ಸೇರಿ ಎಲ್ಲ ಕಡೆ ನೋಡಿದ್ದೇವೆ. ಈಗ disinvestment ಅಂತ ಸರ್ಕಾರಿ ಸ್ವಾಮ್ಯದ ನಷ್ಟದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವದು ಯಾವ ಕಾರಣಕ್ಕೆ? ಮೊದಲು ಸೋಪಿನಿಂದ ಹಿಡಿದು ಬಿಸ್ಕೀಟಿನವರೆಗೆ ಎಲ್ಲವನ್ನೂ ಸರ್ಕಾರಿ ಕಂಪನಿಗಳೇ ಉತ್ಪಾದಿಸಿ ಸಿಕ್ಕಾಪಟ್ಟೆ 'ಲಾಭ' ಗಳಿಸಿದ್ದನ್ನು ನೋಡಿದ್ದೇವೆ! ಸಾಕು. :)

ಪಕೋಡಾ ಮಾರಿ ದಿನಕ್ಕೆ ೨೦೦ ರೂಪಾಯಿ ಗಳಿಸುವದು ಅಂದರೆ ತಿಂಗಳಿಗೆ ಕೇವಲ ೬,೦೦೦ ರೂಪಾಯಿ ಮಾತ್ರ. ಅಷ್ಟರಲ್ಲಿ ಜೀವನ ಹೇಗೆ ಸಾಧ್ಯ ಅಂತ ಕೇಳಿದರೆ ಅದಕ್ಕೆ ಉತ್ತರ - ಸ್ವಾಮೀ, ಒಬ್ಬನ ಸಂಪಾದನೆಯಲ್ಲಿ ನಾಲ್ಕು ಜನರ ಸಂಸಾರ ನಡೆಯುವ ಕಾಲ ಎಂದೋ ಹೋಗಿದೆ. ಈಗ ಎಲ್ಲರೂ ದುಡಿಯಬೇಕು. ಇದು ಹೊಸದೇನೂ ಅಲ್ಲ. ವಿಶ್ವದ ಎಲ್ಲ ಕಡೆ ಹಾಗೇ ಇದೆ. ಇಲ್ಲಿ ಅಮೇರಿಕಾದಲ್ಲಿ ಶಾಲಾ ಮಕ್ಕಳೂ ಸಹ ಪೇಪರ್ ಹಾಕಿ, ಅಂಗಡಿಯಲ್ಲಿ ಸಾಮಾನು ಕಟ್ಟಿ ಕಾಸು ಸಂಪಾದಿಸುತ್ತಾರೆ. ರಜೆಯಲ್ಲಿ ಕಂಪೆನಿಗಳಲ್ಲಿ internship ಮಾಡಿ ಅಮೂಲ್ಯ ಅನುಭವದ ಜೊತೆ ಕಾಸು ಸಂಪಾದಿಸುತ್ತಾರೆ. ಪಕೋಡಾ ಮಾರಲಿ ಅಥವಾ ಮತ್ತೇನೋ ಮಾಡಲಿ, ವೃತ್ತಿಗೆ ಮಾರ್ಯಾದೆ ಸಿಗಬೇಕು. Dignity of labor. Dignity for any productive work.

ಕೃಷಿ ಪ್ರಾಧಾನ್ಯ ದೇಶಗಳಲ್ಲಿ ಸಹ ಮೊದಲೆಲ್ಲ (ಈಗಲೂ ಸಹ) ಮನೆಯ ಎಲ್ಲ ಸದಸ್ಯರೂ ಅವರವರ ತಾಕತ್ತಿಗೆ ತಕ್ಕಂತೆ ಕೃಷಿ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುತ್ತಿದ್ದರು. ಮನೆಯಲ್ಲಿ ಅಡುಗೆ ಕೆಲಸ ಮುಗಿಸಿದ ಮಹಿಳೆಯರು ತೋಟ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳೂ ಅಷ್ಟೇ. ಸಣ್ಣ ಪುಟ್ಟ ಕೆಲಸ ಮಾಡಿ ಪಾಲಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟೂ ಜನ ಕೂಡಿ ದುಡಿದಾಗ ಮಾತ್ರ ಜೀವನರಥ ಸಾಗುತ್ತಿತ್ತು.

ಎಲ್ಲರೂ ಪಕೋಡಾ ಮಾರಿಯೇ ಜೀವನ ಸಾಗಿಸಬೇಕು ಅಂತಲ್ಲ. ಸಾಗಿಸಿದರೂ ತಪ್ಪೇನಿಲ್ಲ. ನಮ್ಮ ಧಾರವಾಡದಲ್ಲಿ ದೊಡ್ಡ ದೊಡ್ಡ ಹೋಟೆಲ್, ಬಾರ್ ಇತ್ಯಾದಿಗಳನ್ನು ನಡೆಸುವ ಶೆಟ್ಟಿ ಸಮುದಾಯದವರಲ್ಲಿ ನಮ್ಮ ವಯಸ್ಸಿನ ಸುಮಾರು ಜನ ಇಂಜಿನಿಯರಿಂಗ್, MBA, ಹೀಗೆ ಬೇರೆ ಬೇರೆ ಡಿಗ್ರಿ ಮಾಡಿಕೊಂಡಿದ್ದಾರೆ. ಬೇಕೆಂದಿದ್ದರೆ ಅವರಿಗೆ ನೌಕರಿ ಜರೂರ್ ಸಿಗುತ್ತಿತ್ತು. ಆದರೂ ಅವರು ನೌಕರಿ ಹುಡುಕಿಕೊಂಡು ಹೋಗಿಲ್ಲ. ತಲೆತಲಾಂತರಗಳಿಂದ ಹೋಟೆಲ್ ಉದ್ಯಮ ಅವರ ಕೈ ಹಿಡಿದಿದೆ. ಅದರಲ್ಲೇ ಉನ್ನತಿ ಸಾಧಿಸುತ್ತ ಸಾಗಿದ್ದಾರೆ.

ತಪ್ಪೇನಿದೆ?

Wednesday, January 17, 2018

ಬಲರಾಮ & ಎಡರಾಮ

ಶಿಷ್ಯ: ಅಣ್ಣನಿಗೆ ಬಲರಾಮ ಅಂತ ಹೆಸರಿಟ್ಟು, ತಮ್ಮನಿಗೆ ಕೃಷ್ಣ ಅಂತೇಕೆ ಹೆಸರಿಟ್ಟರು?

ಗುರು: ಎಡರಾಮ ಅಂತಿಟ್ಟಿದ್ದರೆ ತುಂಬಾ ಎಡಬಿಡಂಗಿಯಾಗಿರುತ್ತಿತ್ತು!

**

ಮನುಷ್ಯ: ದೇವರೇ, ಹುಡುಗಿಯರು ಎಷ್ಟು ಚೆನ್ನಾಗಿರುತ್ತಾರೆ. ಆದರೆ ಹೆಂಡತಿಯರು ಮಾತ್ರ ಯಾಕೆ ಹೀಗೆ? ಸದಾ ಜೀವ ತಿನ್ನುತ್ತಾರೆ.

ದೇವರು: ಭಕ್ತ, ಕೇಳು. ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ!

ವಿ. ಸೂ: ಹುಡುಗರು, ಗಂಡಂದಿರು ಅಂತ ಕೂಡ ಬದಲಾಯಿಸಿಕೊಳ್ಳಬಹುದು.

ಕೇವಲ ಜೋಕ್ ಎಂದು ಕಡೆಗಣಿಸದಿರಿ. ಇದರಲ್ಲಿ ಅದ್ವೈತದ ಪರಮ ಸತ್ಯ ಅಡಗಿದೆ. ಪರಮಸತ್ಯವಾದ ಬ್ರಹ್ಮನ (brahman) ಮೇಲೆ ಮಾಯೆಯ ಪರದೆ ಬೀಳುವದೇ ಎಲ್ಲ ದುಃಖಗಳಿಗೆ ಕಾರಣ. ಹುಡುಗಿ ಸತ್ಯ. ಅಂತಹ ಸತ್ಯದ ಮೇಲೆ ಹೆಂಡತಿ ಎಂಬ ಮಾಯೆಯನ್ನು via ನಾಮ ರೂಪದ ಮೂಲಕ ಕೊಟ್ಟುಕೊಳ್ಳುವದೇ ಸಕಲ ದುಃಖಗಳಿಗೆ ಕಾರಣ.

Superimposing unreality over the reality.

**

ಶಿಷ್ಯ: ಎಲ್ಲಾ ಬಿಟ್ಟು ಅರ್ಜುನನ ಜೊತೆ ಭೀಕರ, ಭಯಾನಕ ಯುದ್ಧಭೂಮಿಗೆ ಏಕೆ ಬಂದ ಕೃಷ್ಣ ಪರಮಾತ್ಮ?

ಗುರು: ಮನೆಯಲ್ಲಿ ೧೬,೦೦೦ ಹೆಂಡತಿಯರಿರುವ ಪುಣ್ಯಾತ್ಮ ಆ ಕೃಷ್ಣ ಪರಮಾತ್ಮ. ಅಂತಹ ಮನೆ ಹೇಗಿರಬಹುದು ಅಂತ ವಿಚಾರ ಮಾಡು. ಅದಕ್ಕೆ ಹೋಲಿಸಿದರೆ ಯುದ್ಧಭೂಮಿಯೇ ಎಷ್ಟೋ ಪಾಲು ಮೇಲು, ಎಷ್ಟೋ ಶಾಂತಿಯುತ ಅಂದುಕೊಂಡು ಯುದ್ಧಭೂಮಿಗೆ ಬಂದಿರಬಹುದು.

ಟಿಪ್ಪಣಿ: ನಿಜವಾಗಿ ವಿಚಾರ ಮಾಡಬೇಕಾದ ವಿಷಯ ಏನೆಂದರೆ - ಬ್ರಹ್ಮಚಾರಿ ಹನುಮಂತ ಯಾಕೆ ಯುದ್ಧಭೂಮಿಗೆ ಬಂದ??? ಭೀಮ ಸೌಗಂಧಿಕಾ ಪುಷ್ಪ ತರಲು ಹೋದಾಗ ಭೀಮನಿಗೆ ಆಶ್ವಾಸನೆ ಕೊಟ್ಟಿದ್ದ, 'ನಾನು ಬಂದು ಅರ್ಜುನನ ರಥದ ಮೇಲಿರುವ ಧ್ವಜದಲ್ಲಿ ಸ್ಥಾಪಿತನಾಗುತ್ತೇನೆ. ಹುರಿದುಂಬಿಸುತ್ತೇನೆ.' ಅದರ ಪ್ರಕಾರ ಭಿಡೆಗೆ ಕಟ್ಟುಬಿದ್ದು ಬಂದಿದ್ದನೋ ಹೇಗೆ? ಅಥವಾ ಸಂಸಾರಿಗಳು ಹೇಗೆ ಹೊಡೆದಾಡಿಕೊಂಡು ಎಲ್ಲರೂ ನಾಶವಾಗುತ್ತಾರೆ ಎಂಬುದನ್ನು ನೋಡಲು ಬಂದಿದ್ದನೋ? :)

**

ಗಂಡನನ್ನು 'ಈ ಕಾರಣ'ಕ್ಕಾಗಿ ಸದಾ ಬಯ್ಯುವವರು ಈ ಲೇಖನ ಓದಿಬಿಡಿ. ನಾ ಮಾತ್ರ ಅದರ ಬಗ್ಗೆ ಬರೆಯಲಾರೆ! ಸಿವಾsss! ಇನ್ನೂ ಏನೇನು ಸಂಶೋಧನೆಗಳು ಬರಲಿವೆಯೋ!

Tuesday, October 31, 2017

ಯಾವಾಗ ಸುಳ್ಳು ಹೇಳಬಹುದು?

ಕೆಳಗಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದಂತೆ.

೧. ಪುರುಷ ಮತ್ತು ಮಹಿಳೆ ಮಿಲನಸುಖ ಅನುಭವಿಸುತ್ತಿರುವಾಗ ಪುರುಷನು ಸುಳ್ಳುಗಳನ್ನು ಹೇಳಬಹುದು. ಅವುಗಳನ್ನು ಹಾಸ್ಯೋಕ್ತಿ (Jokes) ಎಂದು ಪರಿಗಣಿಸಲಾಗುತ್ತದೆ.
೨. ಮಹಿಳೆಯನ್ನು ಗೆಲ್ಲಲು (ಪಟಾಯಿಸಲು) ಸುಳ್ಳುಗಳನ್ನು ಹೇಳಬಹುದು.
೩. ಮದುವೆ ಮಾಡಿಸಲು ಸುಳ್ಳು ಹೇಳಬಹುದು ('ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು,' ಎಂಬುದು ಇಲ್ಲಿಂದಲೇ ಬಂತೋ ಹೇಗೆ!?)
೪. ಪ್ರಾಣಾಪಾಯವಿರುವಾಗ ಪ್ರಾಣ ಉಳಿಯುತ್ತದೆ ಎಂದಾದರೆ ಸುಳ್ಳು ಹೇಳಬಹುದು.
೫. ಸಕಲ ಸಂಪತ್ತು ನಾಶವಾಗಲಿದೆ, ಕಳೆದುಹೋಗಲಿದೆ ಎಂದಾದಾಗ ಸುಳ್ಳು ಹೇಳಬಹುದು.

ಲೋಕದ ಜನ ಈ ಸಂದರ್ಭಗಳಲ್ಲೇ ಅಲ್ಲವೇ ಗರಿಷ್ಠ (ಮ್ಯಾಕ್ಸಿಮಮ್) ಸುಳ್ಳುಗಳನ್ನು ಹೇಳುವದು? ಮತ್ತು ಇದೇ ಸಂದರ್ಭಗಳಲ್ಲಿ ಜನ ಸುಳ್ಳುಗಳನ್ನು ನಂಬುತ್ತಾರೆ ಕೂಡ.

ಇದು ಭಾಗವತ ಪುರಾಣದಲ್ಲಿ (ಶ್ರೀಮದ್ಭಾಗವತದಲ್ಲಿ) ಬರುತ್ತದೆ.

ಸಂದರ್ಭದೊಡನೆ ಸ್ಪಷ್ಟೀಕರಣ: ಅಸುರ ರಾಜಕುಮಾರಿ ಶರ್ಮಿಷ್ಠಾ ಮಹಾರಾಜಾ ಯಯಾತಿಯಲ್ಲಿ ಮೋಹಗೊಳ್ಳುತ್ತಾಳೆ. ಯಯಾತಿ ಆಗಲೇ ವಿವಾಹಿತ. ಆದರೆ ಶರ್ಮಿಷ್ಠಾ ಸಿಕ್ಕಾಪಟ್ಟೆ ಸುಂದರಿ. ಅವನೂ ಆಕೆಯಲ್ಲಿ ಮೋಹಗೊಳ್ಳುತ್ತಾನೆ. ಆದರೆ ದೇವಯಾನಿಯನ್ನು ಮದುವೆಯಾಗಿರುತ್ತಾನಲ್ಲ. ಈ ದೇವಯಾನಿ ಶರ್ಮಿಷ್ಠಾಳ ಗೆಳತಿ. ದೈತ್ಯಗುರು ಶುಕ್ರಾಚಾರ್ಯರ ಮಗಳು. ಹಾಗಿರುವಾಗ ದೇವಯಾನಿಗೆ ಏನೆಂದು ಹೇಳಿ ಹೇಗೆ ಶರ್ಮಿಷ್ಠಾಳನ್ನು ಮದುವೆಯಾದಾನು ಯಯಾತಿ?

ಯಯಾತಿ ತನ್ನ ಸಂಕಷ್ಟವನ್ನು ಹೇಳಿಕೊಂಡಾಗ ಶರ್ಮಿಷ್ಠಾ ಹೇಳುತ್ತಾಳೆ, 'ಸುಳ್ಳು ಹೇಳಯ್ಯಾ!'

'ಹೇಗೆ ಸುಳ್ಳು ಹೇಳಲಿ? ಸುಳ್ಳು ಹೇಳುವದು ತಪ್ಪಲ್ಲವೇ?' ಎಂದು ಕೇಳುತ್ತಾನೆ ಯಯಾತಿ.

'ಎಲ್ಲ ಶಾಸ್ತ್ರಗಳನ್ನು ಓದಿರುವ ನಿನಗೆ ಗೊತ್ತಿಲ್ಲದೇನಿದೆ? ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎಂದು ಶಾಸ್ತ್ರಗಳಲ್ಲೇ ಹೇಳಿದ್ದಾರಲ್ಲ?' ಎನ್ನುತ್ತಾಳೆ ಶರ್ಮಿಷ್ಠಾ.

ಯಾಯಾತಿಗಂತೂ ಯಾವ ಶಾಸ್ತ್ರಗಳಲ್ಲಿ ಸುಳ್ಳು ಹೇಳುವ ಅನುಮತಿ ಇದೆ ಎಂದು ನೆನಪಾಗುವದಿಲ್ಲ.

ಆಗ ಶರ್ಮಿಷ್ಠಾ ಮೇಲಿನ ಐದು ಸಂದರ್ಭಗಳಲ್ಲಿ ಸುಳ್ಳು ಹೇಳಬಹುದು ಎನ್ನುತ್ತಾಳೆ.

ಅಲ್ಲಿಗೆ ದೇವಯಾನಿಗೆ ಸವತಿ ಬರುವ ಸ್ಕೆಚ್ ತಯಾರಾಗುತ್ತದೆ.

ಆದರೆ ಸುಳ್ಳು ಹೇಳಲು ಸಮ್ಮತಿ ಯಾವ ಶಾಸ್ತ್ರದಲ್ಲಿ ಇದೆ ಎಂದು ಯಯಾತಿಯೂ ಕೇಳಿರಲಿಕ್ಕಿಲ್ಲ ಶರ್ಮಿಷ್ಠಾಳೂ ಹೇಳಿರಲಿಕ್ಕಿಲ್ಲ. ಅಲ್ಲವೇ!? ಆತುರವಾದಾಗ ರೆಫರೆನ್ಸ್ ಕೇಳುವ ಕೊಡುವ ವ್ಯವಧಾನ ಯಾರಿಗಿರುತ್ತದೆ? :)

ಭಾಗವತದಲ್ಲೇ ಬರಲಿ ಅಥವಾ ಬೇರೆ ಎಲ್ಲಾದರೂ ಬರಲಿ, ಆದಷ್ಟು ಸತ್ಯವನ್ನೇ ಹೇಳೋಣ. ಜಾಸ್ತಿ ತಲೆಬಿಸಿಯಿಲ್ಲ. ಆಕಸ್ಮಾತ್ ಸುಳ್ಳು ಹೇಳಿದ್ದರೆ ಮೇಲಿನ ಸಂದರ್ಭಗಳಲ್ಲಿ ಹೇಳಿದ್ದೀರೋ ನೋಡಿಕೊಳ್ಳಿ. ಮೇಲಿನ ಐದು ಸಂದರ್ಭಗಳಲ್ಲಿ ಬಾರಾ ಖೂನ್ ಮಾಫ್. ಬೇರೆ ಯಾವದಾದರೂ ಸಂದರ್ಭಗಳಲ್ಲಿ ಹೇಳಿದರೆ ಪ್ರಾಯಶ್ಚಿತ ಮಾಡಿಕೊಳ್ಳಬೇಕೇನೋ.  ಅದಕ್ಕೂ ಶಾಸ್ತ್ರದಲ್ಲಿ ಎಲ್ಲೋ ರೆಫರೆನ್ಸ್ ಸಿಗುತ್ತದೆ ಬಿಡಿ. :)

ಸತ್ಯಮೇವ ಜಯತೆ. ಲಲ್ಲು ಸಾಹೇಬರು ಮೇವು ತಿಂದದ್ದು ನೋಡಿದ್ದಾಗ ಅದು 'ಸತ್ಯ ಮೇವು ಜಗಿತೇ!' ಎನ್ನಿಸಿತ್ತು. ಸತ್ಯವಾಗಿ ದನದ ಮೇವು ಜಗಿದು ತಿಂದು ಅರಗಿಸಿಕೊಂಡ ಭೂಪ ಅವರಲ್ಲವೇ! :)

ಮಾಹಿತಿ ಆಧಾರ: Srimad Bhagavatam by Kamala Subramaniam

Tuesday, October 03, 2017

ಯೋಗದ ಪ್ರಭಾವ

ಒಬ್ಬರ ಮಗನಿಗೆ ಉಗುರು ಕಚ್ಚುವ ಕೆಟ್ಟ ಅಭ್ಯಾಸ. ಏನೇ ಚಿಕಿತ್ಸೆ, counseling ಮಾಡಿದರೂ ಉಪಯೋಗವಾಗಲಿಲ್ಲ. ಯಾರೋ ಪರಿಚಿತರು ಹೇಳಿದರು, 'ಯೋಗಾಭ್ಯಾಸ ಕಲಿಸಿ. ಅದರಿಂದ ಈ ಕೆಟ್ಟ ಅಭ್ಯಾಸ ಬಿಟ್ಟರೂ ಬಿಡಬಹುದು.'

ಅದೂ ಒಂದು ಆಗಿಹೋಗಲಿ ಅಂತ ಆ ಹುಡುಗನನ್ನು ಯೋಗದ ಕ್ಲಾಸಿಗೆ ಸೇರಿಸಿದರು.

ಕೆಲಕಾಲದ ಮೊದಲು ಸಿಕ್ಕಿದ್ದ ಪರಿಚಿತರು ಮತ್ತೆ ಭೇಟಿಯಾದರು.

'ನಿಮ್ಮ ಮಗನನ್ನು ಯೋಗಾಭ್ಯಾಸಕ್ಕೆ ಕ್ಲಾಸಿಗೆ ಹಾಕಿದಿರೇ?' ಎಂದು ಕೇಳಿದರು.

'ಹೌದು. ಈಗ ಚೆನ್ನಾಗಿ ಯೋಗಾಸನಗಳನ್ನು ಹಾಕುತ್ತಾನೆ,' ಎಂದರು ಹುಡುಗನ ಪಾಲಕರು.

'ತುಂಬಾ ಸಂತೋಷ. ಈಗ ಉಗುರು ಕಚ್ಚುವ ಅಭ್ಯಾಸ ಬಿಟ್ಟಿದ್ದಾನೆಯೇ?' ಎಂದು ಕೇಳಿದರು ಪರಿಚಿತರು.

'ಇಲ್ಲ.....' ಎಂದು ಹೇಳಿದರು ಪಾಲಕರು. ತಲೆ ಅಡ್ಡಡ್ಡ ಆಡಿಸಿದರು.

'ಮತ್ತೆ???!!!' ಆಶ್ಚರ್ಯಚಕಿತರಾಗಿ ಕೇಳಿದರು ಪರಿಚಿತರು.

'ಈಗ ಕಾಲ್ಬೆರಳುಗಳ ಉಗುರುಗಳನ್ನೂ ಕೂಡ ಕಚ್ಚುತ್ತಾನೆ!' ಎಂದು ನಿಟ್ಟುಸಿರು ಬಿಟ್ಟರು ಪಾಲಕರು.


ಮೂಲ: ಸ್ವಾಮಿ ಅನುಭವಾನಂದಜೀ

ಕೊಂಚ ಅಪ್ರಸ್ತುತವಾದರೂ ಯಾಕೋ ಈ ಗಾದೆ ಮಾತು ನೆನಪಾಯಿತು - Motivation is not always the answer. If you motivate an idiot, you get a motivated idiot!

Wednesday, September 20, 2017

ಬಂಗಾರದ ಹೆಂಡತಿ & ಬೆಳ್ಳಿಯ ಹೆಂಡತಿ

ಶಿಷ್ಯ: ಸ್ವಾಮೀಜಿ, ನನಗೊಬ್ಬಳು ಹೆಂಡತಿ ಬೇಕಾಗಿದ್ದಾಳೆ.

ಸ್ವಾಮೀಜಿ: ನಿನಗೆ ಬಂಗಾರದ ಹೆಂಡತಿ ಬೇಕೋ? ಬೆಳ್ಳಿಯ ಹೆಂಡತಿ ಬೇಕೋ?

ಶಿಷ್ಯ: ಬಂಗಾರದ ಹೆಂಡತಿ, ಬೆಳ್ಳಿಯ ಹೆಂಡತಿ ಅಂದ್ರೇನು ಸ್ವಾಮೀಜಿ?

ಸ್ವಾಮೀಜಿ: ಬಂಗಾರದ ಹೆಂಡತಿ ನಿನ್ನನ್ನು ಇಂಗ್ಲೀಷಿನಲ್ಲಿ, 'ಏ, ಯು,' ಎಂದು ಕರೆಯುತ್ತಾಳೆ. ಬೆಳ್ಳಿಯ ಹೆಂಡತಿ ನಿನ್ನನ್ನು ಹಿಂದಿಯಲ್ಲಿ, 'ಏ, ಜೀ' ಎಂದು ಕರೆಯುತ್ತಾಳೆ.

ಶಿಷ್ಯ: ಬಂಗಾರದ ಹೆಂಡತಿಯ 'ಏ, ಯು,' ಅಂದರೆ 'hey you' ಎಂದು ತಿಳಿಯಿತು. ಬೆಳ್ಳಿಯ ಹೆಂಡತಿಯ 'ಏ, ಜೀ' ಅಂದರೆ ಏನು ಸ್ವಾಮೀಜಿ?

ಸ್ವಾಮೀಜಿ: 'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದರ್ಥ!

ಕೇಳಿ ಶಿಷ್ಯನ ತಲೆಗೆ ಚಕ್ಕರ್ ಬಂದಂತಾಯಿತು. ಆದರೂ ಒಂದು ಕುತೂಹಲವಿತ್ತು.

ಶಿಷ್ಯ: ನಿಮ್ಮ ಬಂಗಾರದ ಮತ್ತು ಬೆಳ್ಳಿ ಹೆಂಡತಿ ಸಿಕ್ಕಾಪಟ್ಟೆ ಖತರ್ನಾಕ್. ಕೊಂಚವೂ ಗೌರವ ಕೊಡದೇ 'ಏ, ಯು,' ಎಂದು ಕರೆಯುವವಳಿಗೆ ಬಂಗಾರದ ಹೆಂಡತಿಯೆಂದೂ ಮತ್ತು ಖರಾಬಾಗಿ  'ಏ, ಜೀ' (A G) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳಿಗೆ ಬೆಳ್ಳಿಯ ಹೆಂಡತಿಯೆಂದು ಏಕೆ ಕರೆಯುತ್ತೀರಿ? ಬಂಗಾರ, ಬೆಳ್ಳಿ ಎಂದರೆ ಉತ್ತಮ ಎಂದರ್ಥವಲ್ಲವೇ?

ಸ್ವಾಮೀಜಿ: ನಿನ್ನ ತಲೆ! ನಿನಗೆ ಬೇಸಿಕ್ ಕೆಮಿಸ್ಟ್ರಿ ಕೂಡ ಗೊತ್ತಿಲ್ಲ ಅನ್ನಿಸುತ್ತದೆ. 'ಏ, ಯು,' (AU) ಎಂದು ಕೂಗುವವಳು ಬಂಗಾರದ ಹೆಂಡತಿ ಏಕೆಂದರೆ ಬಂಗಾರದ ರಾಸಾಯನಿಕ ಚಿನ್ಹೆ AU. ಹಾಗೇ ಬೆಳ್ಳಿಯ ರಾಸಾಯನಿಕ ಚಿನ್ಹೆ AG. ಹಾಗಾಗಿ 'ಏ, ಜೀ' (AG) ಅಂದರೆ 'ಅಬೇ ಗಧೆ!' ಅರ್ಥಾತ್ 'ಏ, ಕತ್ತೆ' ಎಂದು ಕೂಗುವವಳು ಬೆಳ್ಳಿಯ ಹೆಂಡತಿ.

ಕೇಳಿದ ಶಿಷ್ಯ ಢಮಾರ್!

**

ಶಿಷ್ಯ: ಪತಿಗೆ husband ಎಂದೇಕೆ ಹೇಳುತ್ತಾರೆ?

ಸ್ವಾಮೀಜಿ: husband ಅಂದರೆ ಜಿಸ್ಕಾ ಹಸ್ನಾ ಬಂದ್ ಹೋಗಯಾ ಹೈ ವೋ ಹಸಬಂದ್ ಹೈ! ಅರ್ಥಾತ್ ಯಾರ ನಗು ನಿಂತು ಹೋಗಿದೆಯೋ ಅವನೇ ಹಸ್ಬೆಂಡ್!

**

ಶಿಷ್ಯ: ಮದುವೆಯ ದಿನ ಹುಡುಗಿಯೇಕೆ ಅಳುತ್ತಾಳೆ?

ಸ್ವಾಮೀಜಿ: ಅವಳು ಮದುವೆಯ ದಿನವೊಂದೇ ಅಳುತ್ತಾಳೆ. ಹುಡುಗ ನಂತರ ಜೀವನಪರ್ಯಂತ ಅಳುತ್ತಾನೆ!

**

ಸಂಸಾರಿ ಅಂದರೇನು?

ಸಂಸಾರಿ (ಸ್ತ್ರೀಲಿಂಗ): ಅರ್ಜೆಂಟಿನಲ್ಲಿ ನೈಟಿ ಸಿಗದಿದ್ದಾಗ ಕೈಗೆ ಸಿಕ್ಕ (some) ಸೀರೆ (Saree)ಯನ್ನೇ ಸುತ್ತಿಕೊಂಡವಳು. Some Saree = ಸಂಸಾರಿ.

ಸಂಸಾರಿ (ಪುಲ್ಲಿಂಗ): ಅರ್ಜೆಂಟಿನಲ್ಲಿ ಲುಂಗಿ, ಪಂಚೆ, ಪ್ಯಾಂಟು, ಚೊಣ್ಣ ಏನೂ ಸಿಗದಿದ್ದಾಗ ಕೈಗೆ ಸಿಕ್ಕ (some) ಹೆಂಡತಿಯ ಸೀರೆ (Saree)ಯನ್ನೇ ಸುತ್ತಿಕೊಂಡವನು. Some Saree = ಸಂಸಾರಿ.

**

What is THE height of reverse gender discrimination?

Cow dung is holy. Bullshit is you-know-what :)

**

ಸ್ವಾಮಿ ಅನುಭವಾನಂದ ಸರಸ್ವತಿಗಳು ತಮ್ಮ ಪ್ರವಚನಗಳ ಮಧ್ಯೆ ಇಂತಹ ಅಮೋಘ ಜೋಕುಗಳನ್ನು ಹೊಡೆಯುತ್ತಿರುತ್ತಾರೆ. ಬಿಡಿಬಿಡಿಯಾಗಿ ಓದಿದಾಗ, 'ಏನಪ್ಪಾ ಇವರು ಕೇವಲ ಸಂಸಾರಿಗಳನ್ನು, ದಂಪತಿಗಳನ್ನು ವ್ಯಂಗ್ಯ ಮಾಡುತ್ತಾರೆ' ಎಂದೆನಿಸಬಹುದು. ಆದರೆ ಸ್ವಾಮೀಜಿಯವರ ಸ್ಪೆಷಾಲಿಟಿ ಅಂದರೆ ಜನ ನಗಲು ಬಾಯ್ತೆರೆದಾಗ ಜ್ಞಾನದ, ವಿವೇಕದ ಅಮೂಲ್ಯ ಗುಳಿಗೆಯೊಂದನ್ನು ಕೂಡ ನುಸುಳಿಸಿರುತ್ತಾರೆ. ಅದು ಭಾಳ ಮಸ್ತ!

ಈಗ ಒಂದು ವರ್ಷದಿಂದ ನಾನಂತೂ ಸ್ವಾಮಿಗಳ ಬಿಗ್ ಫ್ಯಾನ್. ಅವರೂ ಅಷ್ಟೇ. ಏಕ್ದಂ ಹೈಟೆಕ್ ಸ್ವಾಮೀಜಿ. ತಮ್ಮ ಪ್ರತಿಯೊಂದು ಪ್ರವಚನವನ್ನೂ ನೀಟಾಗಿ ವಿಡಿಯೋ ಮಾಡಿ YouTube ಮೇಲೆ ಹಾಕಿರುತ್ತಾರೆ.

ನೋಡಿ. ಮಜಾ ಮಾಡಿ. ಪ್ರಯೋಜನ ಪಡೆದುಕೊಳ್ಳಿ.

Saturday, September 02, 2017

ಏ ಜೀ! ಏ ಜೀ! (A G) ಎಂದು ಗಂಡನನ್ನು ಕೂಗುವದರ ಹಿಂದಿನ ಕಥೆ

ಒಂದಾನೊಂದು ಕಾಲದಲ್ಲಿ ಪತ್ನಿಯೊಬ್ಬಳು ಗಂಡನಿಗೆ ನೂರು ಬೆಳ್ಳಿ ವರಹಗಳನ್ನು ಕೊಟ್ಟು, 'ರೀ, ಪೇಟೆಗೆ ಹೋಗಿ ಮೂರು ಕತ್ತೆಗಳನ್ನು ಕೊಂಡು ತನ್ನಿ,' ಎಂದು ಹೇಳಿದಳು.

'ಮೂರೇ ಕತ್ತೆ ಮತ್ತೆ. ಒಂದು ಹೆಚ್ಚು ಅಥವಾ ಒಂದು ಕಮ್ಮಿ ತರಬೇಡಿ,' ಎಂದು ಎಚ್ಚರಿಸಲು ಮರೆಯಲಿಲ್ಲ.

ಏಕೆ? ಏನು? ಕತ್ತೆಯೇ ಯಾಕೆ? ಕುದುರೆ ಏಕಾಗಬಾರದು? ಅಂತೆಲ್ಲ ತಲೆಹರಟೆ ಪ್ರಶ್ನೆ ಕೇಳಲು ಗಂಡ ಹೋಗಲಿಲ್ಲ. ಶಾಣ್ಯಾ ಮನುಷ್ಯ.

ಪೇಟೆಗೆ ಹೋದ. ಏನೇನೋ ಚೌಕಾಸಿ ವ್ಯವಹಾರ ಮಾಡಿ ನೂರು ವರಹಗಳಿಗೆ ಬರೋಬ್ಬರಿ ಮೂರು ಕತ್ತೆಗಳನ್ನು ಕೊಂಡ. ಅವುಗಳನ್ನು ಮನೆಯತ್ತ ಹೊಡೆದುಕೊಂಡು ಹೊರಟ.

ಮನೆ ಹತ್ತಿರ ಬಂದಾಗ ನೋಡಿದರೆ ಎರಡೇ ಕತ್ತೆಗಳಿದ್ದವು! ಒಂದು ಕತ್ತೆ ಗಾಯಬ್! ಅತ್ತಿತ್ತ ನೋಡಿದ. ಆದರೆ ಮೂರನೇ ಕತ್ತೆ ಎಲ್ಲೂ ಕಾಣಲಿಲ್ಲ. ಇನ್ನು ಮನೆಗೆ ಹೋದ ಮೇಲೆ ಹೆಂಡತಿ ಕೈಯಲ್ಲಿ ಬರೋಬ್ಬರಿ ಮಂಗಳಾರತಿ, ಪೂಜೆ ಎಲ್ಲ ಇದೆ ಎಂದು ತಿಳಿದು, ಮುಂದಾಗಲಿರುವ ಅನಾಹುತವನ್ನು ಎದುರಿಸಲು ತಯಾರಾದ.

ಮನೆಗೆ ಹೋದವನೇ, ಹೆಂಡತಿ ಏನು ಎತ್ತ ಎಂದು ಕೇಳುವ ಮೊದಲೇ ಎಲ್ಲ ಹೇಳಿಕೊಂಡುಬಿಟ್ಟ.

'ನೀನು ಮೂರು ಕತ್ತೆಗಳನ್ನು ಕೊಂಡು ತಾ ಅಂದಿದ್ದೆ. ಅದರ ಪ್ರಕಾರವೇ ಮೂರು ಕತ್ತೆಗಳನ್ನು ಕೊಂಡುಕೊಂಡೆ. ದಾರಿಯಲ್ಲಿ ಬರುವಾಗ ಒಂದು ಕತ್ತೆ ತಪ್ಪಿಸಿಕೊಂಡಿದೆ. ಎಷ್ಟು ಹುಡುಕಿದರೂ ಸಿಗಲಿಲ್ಲ. ಪ್ಲೀಸ್ ಕ್ಷಮಿಸು!' ಎಂದವನೇ ಹೆಂಡತಿ ಕಾಲಿಗೆ ಡೈವ್ ಹೊಡೆಯಲು ಪೋಸ್ ರೆಡಿ ಮಾಡಿಕೊಂಡ.

ಹೆಂಡತಿ 'ಥಾಂಬಾ!' ಅಂದರೆ 'ಒಂದು ಕ್ಷಣ ನಿಲ್ಲು' ಅನ್ನುವಂತೆ ಕೈ ಮಾಡಿದಳು.

'ಏನು????' ಎನ್ನುವಂತೆ ನೋಡಿದ.

'ನನಗೆ ನಾಲ್ಕು ಕತ್ತೆಗಳು ಕಾಣುತ್ತಿವೆ!' ಅಂದಳು ಪತ್ನಿ.

'ನಾಲ್ಕೇ?? ಎಲ್ಲಿ?? ಹೇಗೆ??' ಎಂದು ಆಶ್ಚರ್ಯಚಕಿತನಾಗಿ ಕೇಳಿದ ಗಂಡ.

'ಎರಡು ಕತ್ತೆ ನಿನ್ನ ಮುಂದಿವೆ.... ' ಅಂದಳು ಪತ್ನಿ.

'ಸರಿ. ಮತ್ತೆರೆಡು ಎಲ್ಲಿವೆ??' ಎಂದು ಕೇಳಿದ ಪತಿ.

'ಮೂರನೆಯ ಕತ್ತೆಯ ಮೇಲೆ ಕೂತಿರುವ ನಾಲ್ಕನೇ ಕತ್ತೆ ನೀನೇ!' ಎಂದವಳೇ ಸಿಕ್ಕಾಪಟ್ಟೆ irritate ಆಗಿ ಒಂದು ಬಿಟ್ಟಳು.

ಅಂದಿನಿಂದ ಪತಿಯನ್ನು 'ಏ ಜೀ! ಏ ಜೀ!' ಎಂದು ಕರೆಯುವ ಪದ್ಧತಿ ಜಾರಿಯಲ್ಲಿ ಬಂತು.

ಏ ಜೀ = A G ಅಂದರೆ ಅಬೇ ಗಧೆ ಅಂದರೆ ಹೇ ಕತ್ತೆ!

ಮೂಲ: ಕತ್ತೆ ವ್ಯಾಪಾರದ ಕಥೆ ಮುಲ್ಲಾ ನಸ್ರುದ್ದೀನನ ಕಥೆ. ಸ್ವಾಮಿ ಸುಖಬೋಧಾನಂದರ 'Personal Excellence Through Bhagavadgita' ಪುಸ್ತಕದಲ್ಲಿ ಓದಿದ್ದು. A G = ಅಬೇ ಗಧೆ ಜೋಕ್ ಹೇಳಿದವರು ಸ್ವಾಮಿ ಅನುಭವಾನಂದ ಸರಸ್ವತಿ.

Tuesday, August 15, 2017

ಗಂಡಹೆಂಡತಿ ಖುಷಿಖುಷಿಯಾಗಿರೋದು ಅಂದರೆ...

'ಹ್ಯಾಂಗ ಇದ್ದೀರಿ ಗಂಡಹೆಂಡತಿ? ಹ್ಯಾಂಗ ನಡದದ ಸಂಸಾರ?' ಅಂತ ಮನಿಗೆ ಬಂದ ಪರಿಚಿತರು ಕೇಳಿದರು.

ಗಂಡ ಹೇಳಿದ, 'ಹೇ ಎಲ್ಲಾ ಮಸ್ತ. ಏಕ್ದಂ ಮಸ್ತ ನಡದದ. ಏನೂ ತೊಂದ್ರಿ ಇಲ್ಲ.'

'ಒಳ್ಳೇದು. ಗಂಡಹೆಂಡತಿ ಖುಷಿಖುಷಿಯಾಗಿ ಇದ್ದೀರಲ್ಲಾ?' ಅಂತ ಜಾಸ್ತಿ ಎನ್ಕ್ವೈರಿ.

'ಏಕ್ದಂ ಖುಷಿಖುಷಿಯಾಗಿ ಸಂತೋಷದಿಂದ ಇದ್ದೀವಿ,' ಅಂದ ಗಂಡ.

'ಏನೂ ತೊಂದ್ರಿ ಇಲ್ಲಲಾ??' ಅಂತ ಮತ್ತ ಕೇಳಿದ ಪರಿಚಿತ.

'ದೊಡ್ಡ ತೊಂದ್ರಿ ಏನೂ ಇಲ್ಲ. ಆದ್ರ ಸಿಟ್ಟು ಬಂದಾಗ ನನ್ನ ಹೆಂಡತಿ ಕೈಗೆ ಸಿಕ್ಕಿದ ಭಾಂಡೆ, ಪಾತ್ರೆ, ಕಪ್ಪು, ಬಸಿ ಹೀಂಗ ಏನು ಕೈಗೆ ಸಿಕ್ಕರೂ ತೊಗೊಂಡು ಮಾರಿ ಮಸಡಿ ನೋಡದೇ ರೊಂಯ್ ರೊಂಯ್ ಅಂತ ಒಗಿತಾಳ. ಅಷ್ಟು ಬಿಟ್ಟರೆ ಬ್ಯಾರೆ ಏನೂ ತೊಂದ್ರಿ ಇಲ್ಲ,' ಅಂತ ಹೆಚ್ಚಿನ ಮಾಹಿತಿ ಕೊಟ್ಟ ಗಂಡ.

'ಅವಯ್ಯಾ! ಹೀಂಗss? ಕೈಗೆ ಸಿಕ್ಕಿದ್ದನ್ನ ಮಾರಿ ಮಸಡಿಗೆ ಒಗಿತಾಳ ಅಂತಿ. ಮ್ಯಾಲಿಂದ ಇಬ್ಬರೂ ಖುಷಿಖುಷಿಯಾಗಿ ಸಹಿತ ಇದ್ದೀರಿ ಅಂತನೂ ಅಂತಿ. ಅದೆಂಗ ಸಾಧ್ಯ? How's it possible??' ಅಂದ ಪರಿಚಿತ. ಆಶ್ಚರ್ಯ ಆತು ಮನಿಗೆ ಬಂದವರಿಗೆ.

'ಅದು ನೋಡ್ರಿ... ಅಕಿ ಕೈಗೆ ಸಿಕ್ಕಿದ್ದು ಒಗೆದಾಗ ನಾ ಬಗ್ಗಿ, ಡೈವ್ ಹೊಡೆದು, ದೊಂಬರಾಟ ಮಾಡಿ ಮಿಸೈಲ್ ಗತೆ ಬರೋ ಭಾಂಡಿ, ಕಪ್ಪು ಬಸಿಂದ ತಪ್ಪಿಸಿಕೊಂಡೆ ಅಂದ್ರ ನಾ ಖುಷ್ ನೋಡ್ರಿ. ಎಲ್ಲರೆ ಅಕಿ ಒಗೆದ ಮಿಸೈಲ್ ಗುರಿ ತಪ್ಪದೆ ಬಂದು ನನಗ ಬಡಿ ಬಾರದ ಜಾಗಾದಾಗ ಬಡಿದು ಗುಮ್ಮಟಿ ಬಂತು ಅಂದ್ರ ಅಕಿ ಖುಷ್ ನೋಡ್ರಿ. ಒಟ್ಟಿನಾಗ ಒಮ್ಮೊಮ್ಮೆ ಅಕಿ ಖುಷ್. ಒಮ್ಮೊಮ್ಮೆ ನಾ ಖುಷ್. ಹೀಂಗ ಇಬ್ಬರೂ ಖುಷಿಖುಷಿಯಾಗಿ ಇದ್ದೀವಿ,' ಅಂತ ಖತರ್ನಾಕ್ ವಿವರಣೆ ಕೊಟ್ಟ ಗಂಡ.

ಅಷ್ಟರಾಗ ಏನೋ 'ರೊಂಯ್!!' ಅಂತ ಆವಾಜ್ ಬಂತು.

'ಅಯ್ಯೋ! ಲಗೂನೇ ಬಗ್ಗಿ ಕೂಡ್ರಿ! ಲಗೂ! ಅಡಿಗಿಮನಿ ಕಡೆಂದ ಮಿಸೈಲ್ ಬರ್ಲಿಕತ್ತದ,' ಎಂದು ಹೇಳಿದ ಗಂಡ ಸೊಂಯಕ್ ಅಂತ ಡೈವ್ ಹೊಡೆದು ಸೋಫಾ ಕೆಳಗ ಸೇರಿಕೊಂಡ.

ಮನಿಗೆ ಬಂದವರಿಗೆ ಏನು ಎತ್ತ ಅಂತೂ ತಿಳಿಲಿಲ್ಲ. ಅವರು ಯಬಡರ ಗತೆ 'ಏನು?? ಏನು?? ಏನಾತು??' ಅಂತ confuse ಆಗಿ ಅತ್ತಿತ್ತ ನೋಡೊದ್ರಾಗ ತಳಾ ಹಿಡಿದು ಖರ್ರ ಆದ ಹಿತ್ತಾಳೆ ಚರಿಗೆಯೊಂದು, ಅದೂ ಕಿಲುಬು ಹಿಡಿದಿದ್ದು, ಬಂದು ಅವರ ಬೋಡು ತಲೆಗೆ ಧೂಮಕೇತುವಿನಂತೆ ಅಪ್ಪಳಿಸಿಬಿಟ್ಟಿತು.

ಅವತ್ತು ಯಾರು ಖುಷ್ ಆದ್ರೋ ಗೊತ್ತಿಲ್ಲ.

ಮೂಲ: ಅನುಭವಾನಂದ ಸರಸ್ವತಿಯವರು ಹೇಳಿದ ಒಂದು ಚಿಕ್ಕ ಜೋಕ್.

Monday, August 14, 2017

ಸಿಟ್ಟನ್ನು ನಿಯಂತ್ರಿಸುವ ಒಂದು ವಿಧಾನ

ಗಂಡ: ನಾ ನಿನ್ನ ಮ್ಯಾಲೆ ಇಷ್ಟು ಒದರಾಡತೇನಿ. ಚೀರಾಡತೇನಿ. ಬೈತೀನಿ. ಸಿಡಿಮಿಡಿ ಮಾಡ್ತೇನಿ. ಜೀವಾ ತಿಂತೀನಿ. ಇಷ್ಟಾದ್ರೂ ನೀ ಹ್ಯಾಂಗ ನಿನ್ನ ಸಿಟ್ಟು ಕಂಟ್ರೋಲ್ ಮಾಡ್ಕೋತ್ತಿ ಡಾರ್ಲಿಂಗ್? ಹ್ಯಾಂಗ ಕಂಟ್ರೋಲ್ ಮಾಡ್ತೀ ನಿನ್ನ ಸಿಟ್ಟು?

ಹೆಂಡತಿ: ನಿಮ್ಮ ವರ್ತನೆ ನೋಡಿ ನಂಗೂ ಭಾಳ ಸಿಟ್ಟು ಬರ್ತದ. ಹ್ಯಾಂಗ ತಡ್ಕೋತ್ತೇನೋ ನನಗಷ್ಟೇ ಗೊತ್ತು.....

ಗಂಡ: ಹ್ಯಾಂಗ ಸಿಟ್ಟು ತಡಕೋತ್ತಿ ಹೇಳಲ್ಲಾ ಡಾರ್ಲಿಂಗ್?

ಹೆಂಡತಿ: ನಾ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದು ಬರ್ತೇನಿ. ಸಂಡಾಸ್ ಫಳಾಫಳಾ ಸ್ವಚ್ಛ ಆಗೋವಷ್ಟರಾಗ ನಿಮ್ಮ ಮ್ಯಾಲಿನ ನನ್ನ ಸಿಟ್ಟು ಕಂಟ್ರೋಲಿಗೆ ಬಂದಿರ್ತದ.

ಗಂಡ: ಹ್ಯಾಂ!!?? ಸಿಟ್ಟು ಬಂದಾಗ ಹೋಗಿ ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬಂದ್ರ ಸಿಟ್ಟು ಕಂಟ್ರೋಲಿಗೆ ಬರ್ತದ!? ಖರೇ!!??

ಹೆಂಡತಿ: ಖರೇಯಂದ್ರೂ ಖರೆ. ಶಂಬರ್ ಟಕಾ ಖರೆ.

ಗಂಡ: ಮುಂದಿನ ಸಲೆ ಸಿಟ್ಟು ಬಂದಾಗ ನಿನ್ನ ಮ್ಯಾಲೆ ಒದರಾಡೋದಿಲ್ಲ. ನಾನೂ ಹೋಗಿ ಸಂಡಾಸ್ ತಿಕ್ಕಿ ತಿಕ್ಕಿ ತೊಳೆದುಬರ್ತೇನಿ. ಓಕೆ?

ಹೆಂಡತಿ: ಒಂದು ಹೇಳೋದು ಮರ್ತಿದ್ದೆ.

ಗಂಡ: ಏನು??!!

ಹೆಂಡತಿ: ನಾ ನಿಮ್ಮ ಟೂತ್ ಬ್ರಷ್ ತೊಗೊಂಡು, ನಿಮಗ ಶಾಪಾ ಹೊಡ್ಕೋತ್ತ, ತಿಕ್ಕಿ ತಿಕ್ಕಿ ಸಂಡಾಸ್ ತೊಳೆದುಬರ್ತೇನಿ! ಆವಾಗ ಸಿಟ್ಟು ಇಳಿತದ.

ಗಂಡ: ಹ್ಯಾಂ!!!??

ಫುಲ್ ಬೇಹೋಶ್!!

ಅದೇ ಬ್ರಷ್ ನಲ್ಲಿ ಆಗಷ್ಟೇ ಹಲ್ಲು ತಿಕ್ಕಿ ಬಂದಿದ್ದ!

* ಎಲ್ಲೋ ಓದಿದ ಇಂಗ್ಲೀಷ್ ಜೋಕನ್ನು ಧಾರವಾಡ ಭಾಷೆಯಲ್ಲಿ ರೂಪಾಂತರಿಸಿದ್ದು.

Sunday, August 13, 2017

ವರ ಕೇಳುವ ಮುಂಚೆ ಎಚ್ಚರಿಕೆ!

ಮಾತಾ ಶೀತಲಾದೇವಿ

ಭಕ್ತನೊಬ್ಬ ಮಾತಾ ಶೀತಲಾದೇವಿಯನ್ನು ಕುರಿತು ಭಯಂಕರ ತಪಸ್ಸನ್ನು ಮಾಡಿದ. ಅವನ ಭಕ್ತಿಗೆ, ತಪಶ್ಚರ್ಯಕ್ಕೆ ಮೆಚ್ಚಿದ ಶೀತಲಾದೇವಿ ಪ್ರತ್ಯಕ್ಷಳಾದಳು.

ಶೀತಲಾದೇವಿ: ಭಕ್ತ, ಮೆಚ್ಚಿದೆ. ಏನು ವರ ಬೇಕೆಂದು ಕೇಳುವಂತವನಾಗು.

ಭಕ್ತ: ಅಡ್ಡಬಿದ್ದೆ ತಾಯಿ. ನನಗೆ ಒಂದೇ ಒಂದು ವರ ಬೇಕು ತಾಯಿ. ನನಗೊಂದು ಭರ್ಜರಿ ರೇಸ್ ಕುದುರೆಯನ್ನು ಕರುಣಿಸು. ಆ ಕುದುರೆ ಹೇಗಿರಬೇಕು ಅಂದರೆ ಕುದುರೆಜೂಜಿನ ಪ್ರತಿಯೊಂದು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆಲ್ಲುವಂತಹ ಕುದುರೆಯಾಗಿರಬೇಕು. ಅಂತಹ ಕುದುರೆಯನ್ನು ಕರುಣಿಸಿಬಿಡು ತಾಯೇ! ಮಹಾಮಾಯೇ! ಮತ್ತೇನೂ ಬೇಡ. ಕುದುರೆಬಾಲಕ್ಕೆ ರೊಕ್ಕ ಕಟ್ಟಿ ಕೊಂಚ ಹಣ ಮಾಡಿಕೊಳ್ಳಬೇಕಾಗಿದೆ ತಾಯಿ. ಮನೆ ಕಡೆ ತುಂಬಾ ಕಷ್ಟ.

ಹೀಗೆ ವರ ಕೇಳಿದ ಭಕ್ತ ಕೈಮುಗಿದು, ತಲೆ ತಗ್ಗಿಸಿ, ಕಣ್ಣು ಮುಚ್ಚಿದ. ದೇವಿ ವರ ಕೊಡುವದೊಂದೇ ಬಾಕಿ.

ದೇವಿ ಕೋಪದಿಂದ ಅಬ್ಬರಿಸಿದಳು, 'ಭಕ್ತ! ಕಣ್ಣು ತೆಗೆ!'

ಭಕ್ತ: ತಾಯೇ! ಇಷ್ಟು ಬೇಗ ವರವನ್ನು ಕರುಣಿಸಿಬಿಟ್ಟೆಯೇ! ನಿನ್ನ ಮಹಿಮೆ ಅಪಾರ ತಾಯಿ.

ದೇವಿ: ಅದಲ್ಲ. ಮುಖವನ್ನು ಎತ್ತಿ ಸ್ವಲ್ಪ ಈಕಡೆ ನೋಡು. ಹತ್ತಿರ ಬಾ.

ಭಯಭಕ್ತಿಯಿಂದ ದೇವಿಯ ಹತ್ತಿರ ಹೋದ ಭಕ್ತ ಆಸೆಯಿಂದ ತಲೆಯೆತ್ತಿ ನೋಡಿದ.

'ಛಟೀರ್!' ಅಂತ ಭಕ್ತನ ಕೆನ್ನೆಗೆ ಒಂದು ಬಿಟ್ಟಳು ಶೀತಲಾದೇವಿ.

ಏಟಿನ ಅಬ್ಬರಕ್ಕೆ ಭಕ್ತನ ಕಪಾಳಗೆಡ್ಡೆ ಚದುರಿಹೋಯಿತು. ನಂಬಿಕೆ ಬರದೇ ಮುಖ ಸವರಿಕೊಂಡ. ಇನ್ನೂ ಗರಮ್ಮಾಗಿ ಚುರುಚುರು ಅನ್ನುತ್ತಿತ್ತು.

ವರ ಕೇಳಿದರೆ ದೇವಿ ಕಪಾಳಕ್ಕೆ ಏಕೆ ಬಾರಿಸಿದಳು ಅಂತ ಬೆಚ್ಚಿಬಿದ್ದ ಭಕ್ತ ಸಖೇದಾಶ್ಚರ್ಯದಿಂದ, 'ಯಾಕೆ ತಾಯೀ? ಯಾಕೆ ಹೊಡೆದುಬಿಟ್ಟೆ?'

ದೇವಿ: ಹುಚ್ಚ ಮಂಗ್ಯಾನಮಗನೇ! ವರ ಕೇಳು ಅಂದರೆ ಏನಂತ ಕೇಳುವದು!? ನಿನಗೆ ಕುದುರೆಯನ್ನು ಕೊಡುವ ಶಕ್ತಿ ನನ್ನಲ್ಲಿದ್ದರೆ ನಾನು ಏಕೆ ಕತ್ತೆ ಮೇಲೆ ಸವಾರಿ ಮಾಡಿಕೊಂಡಿರುತ್ತಿದ್ದೆ ಮೂರ್ಖ! ಶತಮೂರ್ಖ!

ಅಂದವಳೇ ದೇವಿ ಭಕ್ತನ ಬುರುಡೆಗೆ ಮತ್ತೊಂದು 'ಫಟ್' ಅಂತ ಬಿಟ್ಟವಳೇ ತನ್ನ ವಾಹನವಾದ ಕತ್ತೆಗೂ ಒಂದು ಏಟು ಕೊಟ್ಟ ಅಬ್ಬರಕ್ಕೆ ಆಕೆಯ ಪ್ರೀತಿಯ ವಾಹನ ಕತ್ತೆ ಭೀಕರವಾಗಿ ಕೆನೆಯುತ್ತ, ಹಿಂಗಾಲನ್ನಷ್ಟೇ ಎತ್ತಿ ಭಕ್ತನತ್ತ ಕೆಕ್ಕರಿಸಿ ನೋಡಿತು. ದೇವಿ 'ಪ್ರಸಾದ' ಕೊಟ್ಟಾಯಿತು. ಈಗ ದೇವಿಯ ಕತ್ತೆ ತನ್ನ ಒದೆತದ ಪ್ರಸಾದ ಕೊಟ್ಟರೆ ಕಷ್ಟ ಅಂತ ಭಕ್ತ ಕೂಡ ಅಲ್ಲಿಂದ ಎಸ್ಕೇಪ್ ಆದ.

ನೀತಿ: ಲೌಕಿಕ ಸುಖಗಳಿಗಾಗಿ ದೇವರನ್ನು ಪ್ರಾರ್ಥಿಸುವದು ತಪ್ಪು. ಒಂದು ವೇಳೆ ಹಾಗೆ ಪ್ರಾರ್ಥಿಸಲೇಬೇಕು ಅಂತಾದರೆ ಸ್ವಲ್ಪ ಎಚ್ಚರ ಅಗತ್ಯ.

ಮುಂಬೈನ ಮಾಹಿಮ್ ಪ್ರದೇಶದಲ್ಲಿ ಮಾತಾ ಶೀತಲಾದೇವಿಯ ಮಂದಿರವಿದೆಯಂತೆ. ಹತ್ತಿರದಲ್ಲೇ ವಿಖ್ಯಾತ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ ಅಂತ ಕಾಣುತ್ತದೆ. ಹಾಗಾಗಿ ಕುದುರೆಜೂಜಿನ ಭಕ್ತ ಅಲ್ಲಿಗೆ ಹೋಗಿದ್ದಿರಬಹುದು! :)

****

ಶಕ್ತಿ & ಸಹನಶಕ್ತಿ

ಭಕ್ತ: ಸ್ವಾಮೀಜಿ, ಸ್ತ್ರೀಯನ್ನು ಶಕ್ತಿ ಅಂತ ಪೂಜಿಸುತ್ತಾರೆ. ಪುರುಷನನ್ನು ಏನಂತ ಪೂಜಿಸಬಹುದು.

ಸ್ವಾಮೀಜಿ: ಪುರುಷನನ್ನು ಏನಂತ ಪೂಜಿಸಬಹುದು ಅಂತ ಗೊತ್ತಿಲ್ಲ. ಆದರೆ ಒಂದು ಮಾತು....

ಭಕ್ತ: ಏನು??

ಸ್ವಾಮೀಜಿ: ವಿವಾಹವಾದ ಪುರುಷನನ್ನು ಮಾತ್ರ ಒಂದು ರೀತಿಯಲ್ಲಿ ಪೂಜಿಸಬಹುದು.

ಭಕ್ತ: ಏನದು?

ಸ್ವಾಮೀಜಿ: ಸಹನಶಕ್ತಿ! (patience, stamina, fortitude)


****

ಮೂಲ: ಸ್ವಾಮಿ ಅನುಭವಾನಂದಜೀ ಅವರ ಪ್ರವಚನಗಳು.

Sunday, July 16, 2017

ಕೈಗುಣ Vs ಮೈಗುಣ

ರೋಗಿ: ಡಾಕ್ಟರ್, ನಿಮ್ಮ ಚಿಕಿತ್ಸೆಯಿಂದ ನನಗೆ ಗುಣವಾಯಿತು. ನಿಮ್ಮ ಕೈಗುಣ ತುಂಬಾ ಚೆನ್ನಾಗಿದೆ.

ಡಾಕ್ಟರ್: ಅಯ್ಯೋ! ಕೈಗುಣ ಮತ್ತೊಂದು ಏನೂ ಇಲ್ಲ. ಎಲ್ಲಾ ನಿಮ್ಮ ಮೈಗುಣ. ನಿಮ್ಮ ಮೈಗುಣ ಚೆನ್ನಾಗಿತ್ತು. ಹಾಗಾಗಿ ನಾವು ಕೊಟ್ಟ ಚಿಕಿತ್ಸೆ ಯಶಸ್ವಿಯಾಯಿತು ಅಷ್ಟೇ.

ರೋಗಿ: ಮೈಗುಣ?? ಹಾಗೆಂದರೇನು??!!

ಡಾಕ್ಟರ್: ಈಗ ನೋಡಿ. ನನ್ನ ಹೆಂಡತಿ ನನ್ನ ಮಗನ ತಲೆ ಮೇಲೂ ಕೈ ಇಡುತ್ತಾಳೆ. ನನ್ನ ತಲೆ ಮೇಲಂತೂ ಇಟ್ಟೇ ಇಡುತ್ತಾಳೆ. (ತಮ್ಮ ಟೇಬಲ್ ಮೇಲಿದ್ದ ಪ್ರೀತಿಯ ಮಗನ ಫೋಟೋ ತೋರಿಸುತ್ತ) ಇವನ ಕೂದಲು ನೋಡಿ. ಎಷ್ಟು ಸೊಗಸಾಗಿ ಬೆಳೆಯುತ್ತಿದೆ. (ತಮ್ಮ ಬೋಡು ತಲೆಯ ಮೇಲೆ ಕೈಯಾಡಿಸುತ್ತ) ಅದೇ ನನ್ನ ಬೋಡು ತಲೆ ನೋಡಿ. ಫುಲ್ ಬಾಂಡ್ಲಿ ಆಗಿಬಿಟ್ಟಿದೆ. ಎರಡೂ ತಲೆಗಳ ಮೇಲೆ ಕೈಯಿಟ್ಟವಳು ಒಬ್ಬಳೇ. ಆದರೆ ಪರಿಣಾಮ ಮಾತ್ರ ಬೇರೆ ಬೇರೆ. ಇದು ಮೈಗುಣವೋ? ಅಥವಾ ಕೈಗುಣವೋ!?

ರೋಗಿ ಮಾತಾಡಲಿಲ್ಲ. ತನ್ನ ತಲೆ ಮೇಲೆ ಕೈಯಾಡಿಸಿದ. ಗರಮ್ಮಾಗಿ ಕಾದಿತ್ತು ಬಾಂಡ್ಲಿ. ಅವನೂ ಅದೇ ಕೇಸೇ.

ಜೋಕ್ ಹೊಡೆದವರು: ಸ್ವಾಮಿ ಅನುಭವಾನಂದ ಸರಸ್ವತಿ.

Friday, May 12, 2017

ಕೇವಿಯಿಂದ ಕೋವಿಯವರೆಗೆ...

ಅದೇನೋ ಗೊತ್ತಿಲ್ಲ. ಅದ್ಯಾಕೋ ಗೊತ್ತಿಲ್ಲ. ಕೇವಿ (KV) ಅಂತೇನಾದರೂ initials ಇದ್ದರೆ ನಾನು ಕೋವಿ ಅಂತಲೇ ಓದಿಕೊಳ್ಳುತ್ತೇನೆ. ಹಾಗೆಯೇ ಹೇಳುತ್ತೇನೆ ಕೂಡ. ಕೇವಿಯನ್ನು ಕೋವಿಯನ್ನುವದರಲ್ಲಿ ಅದೇನೋ ಮಜಾ. ಅದೇನೋ ವಿಕಟ ಆನಂದ.

ಇಲ್ಲಿ ಆಫೀಸಿನಲ್ಲಿ ಕೇ.ವಿ (K.V) ಅನ್ನುವ initials ಇರುವ ಸಹೋದ್ಯೋಗಿಯಿದ್ದಾನೆ. ಅವನಿಗೆ ಎಲ್ಲರೂ ಕೇವಿ, ಕೇವಿ ಅಂತಲೇ ಕರೆಯುತ್ತಾರೆ. ಅದು ಅವನ ಅಣತಿ, ಇಚ್ಛೆ ಕೂಡ. ಆದರೆ ನಾನು ಮಾತ್ರ, 'ಏ, ಕೋವಿ,' ಅನ್ನುತ್ತೇನೆ.

'ಏನಯ್ಯಾ ಇದು!? ಎಲ್ಲರೂ ಕೇವಿ ಅಂದರೆ ನೀನೊಬ್ಬನು ಮಾತ್ರ ಕೋವಿ, ಕೋವಿ ಅನ್ನುತ್ತೀಯಾ. ಏನಿದರ ಅರ್ಥ?' ಅಂದ ನಮ್ಮ ಕೇವಿ ಉರ್ಫ್ ಕೋವಿ.

'ನಮ್ಮ ಕನ್ನಡ ಭಾಷೆಯಲ್ಲಿ ಕೋವಿಯಂದರೆ ಬಂದೂಕು. ಗನ್. ನೀನು son of a gun ಇದ್ದಂಗೆ ಇದ್ದೀಯಾ. ಅದಕ್ಕೇ ನಿನಗೆ ಕೋವಿ ಅಂತೀನಿ. ಕೇವಿಗಿಂತ ಕೋವಿಯನ್ನುವದೇ ನಿನಗೆ ಸೂಟ್ ಆಗುತ್ತದೆ ಮಾರಾಯಾ!' ಎಂದು ಅವನ ತಲೆಗೆ ಬೋಳೆಣ್ಣೆ ತಿಕ್ಕಿದೆ. ಹೊಗಳಿಕೆಯಿಂದ ಕೋವಿ ಖುಷ್!

'ಒಹೋ, ಕೋವಿಯಿಂದರೆ ಕನ್ನಡದಲ್ಲಿ ತುಪಾಗಿಯಾss??' ಎಂದು ಎಳೆದ ಕೋವಿ ಅಲ್ಲಲ್ಲ ಕೇವಿ.

'ಹೂಂ! ಕೋವಿ ಅಂದರೆ ತುಪಾಗಿಯೇ. ಸರಿಯಾಗಿ ಹೇಳಿದೆ,' ಅಂದೆ.

ಕೊಂಗನ ಅಂದರೆ ತಮಿಳನ ಬಾಯಿಯಲ್ಲಿ ತುಪಾಕಿ ಹೋಗಿ ತುಪಾಗಿ ಆಗುತ್ತದೆ. ಇರಲಿ.

ಈ ಕೇವಿ ಅನ್ನುವದು ಕೋವಿಯಾಗಿದ್ದೂ ಒಂದು ತಮಾಷೆಯ ಕಥೆ.

೧೯೯೦ ರ ಸಮಯ. ಆಗೆಲ್ಲಾ ಫೋನ್ ಇಷ್ಟು ಕಾಮನ್ ಆಗಿರಲಿಲ್ಲ. ಮೊಬೈಲ್ ಅಂತೂ ಇರಲೇ ಇಲ್ಲ. ಲ್ಯಾಂಡ್ ಲೈನ್ ಕೂಡ ತುಂಬಾ ವಿರಳ. ನಾವು ಫೋನ್ ತೆಗೆದುಕೊಂಡಿದ್ದೂ ೧೯೮೭ ರಲ್ಲಿ. ಅದು ಏನೋ OYT ಅಂತೇನೋ ಸ್ಕೀಮಿನಲ್ಲಿ ಹೆಚ್ಚಿನ ರೊಕ್ಕ ಕೊಟ್ಟು ತೆಗೆದುಕೊಂಡಿದ್ದಾಗಿತ್ತು.

ಆಗಿನ ಕಾಲದಲ್ಲಿ ಮನೆಯಲ್ಲಿ ಫೋನ್ ಬಂತು ಅಂದರೆ ಸಮಾಜಸೇವೆಗೆ ಒಂದು ಒಳ್ಳೆ ಮಾರ್ಗ ಸಿಕ್ಕಂತೆ. ಅದರಲ್ಲೂ ಸುತ್ತಮುತ್ತ ಯಾರ ಮನೆಯಲ್ಲೂ ಫೋನ್ ಇಲ್ಲ ಮತ್ತು ನೀವು ಸ್ವಲ್ಪ ಜನರನ್ನು ಪ್ರೀತಿಸುವ, ಹಚ್ಚಿಕೊಳ್ಳುವ ಸ್ನೇಹಪರ ಜನ ಅಂತಾದರಂತೂ  ಮುಗಿದೇಹೋಯಿತು. ಸುತ್ತಮುತ್ತಲಿನ ಜನ ನಿಮ್ಮ ಫೋನ್ ನಂಬರನ್ನು ತಮ್ಮ ಬಂಧುಮಿತ್ರರಿಗೆ ಕೊಡುತ್ತಾರೆ. ಅವರು ಫೋನ್ ಮಾಡಿದಾಗ ಸಂದೇಶ ತೆಗೆದುಕೊಂಡು ನಂತರ ಮುಟ್ಟಿಸುವುದು ಅಥವಾ ತುಂಬಾ ತುರ್ತಾಗಿದ್ದರೆ ಆಗಿಂದಾಗಲೇ ಹೋಗಿ ಕರೆದು ಬರುವ 'ಪುಣ್ಯಕಾರ್ಯಗಳನ್ನು' ಮಾಡುವ 'ಸೌಭಾಗ್ಯ'ವನ್ನು ಕರುಣಿಸುತ್ತಿತ್ತು ಆಗಿನ ಟೆಲಿಫೋನ್ ಎಂಬ ಯಂತ್ರ.

ನಮ್ಮ ಮನೆಯಲ್ಲೂ ಹಾಗೇ ಆಯಿತು. ನಮ್ಮ ಮನೆಗೆ ಫೋನ್ ಬರುವ ಮೊದಲು ಪಕ್ಕದ ರೋಡಿನಲ್ಲಿದ್ದ ಶ್ರೀ ಅಗರವಾಲಾ ಅವರ ಮನೆ ಫೋನನ್ನು ನಾವು ಉಪಯೋಗಿಸುತ್ತಿದ್ದೆವು. ಕಂಪನಿಯೊಂದರ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಅಗರವಾಲಾ ಮತ್ತು ಕುಟುಂಬದವರು ತುಂಬಾ ಒಳ್ಳೆ ಜನರು. ಅವರಿಗೆ ಕನ್ನಡ ಬರುತ್ತಿದ್ದಿಲ್ಲ. ಹಾಗಾಗಿ ಜನ ಸಂಪರ್ಕ ಕಮ್ಮಿ ಇತ್ತು. ಅದೇನು ಯೋಗಾಯೋಗವೋ, ನಮಗೆ ಮತ್ತು ಅವರಿಗೆ ತುಂಬಾ ಆತ್ಮೀಯ ದೋಸ್ತಿಯಾಗಿತ್ತು. 'ಬೇಕಾದಾಗ, ಭಿಡೆ ಬಿಟ್ಟು, ಫೋನ್ ಉಪಯೋಗಿಸಿಕೊಳ್ಳಿ,' ಎಂದು ತುಂಬಾ ಪ್ರೀತಿಯಿಂದ ಹೇಳಿದ್ದರು. ತಂದೆಯವರಿಗೆ ಯಾರದ್ದಾದರೂ ಫೋನ್ ಬಂದರೆ ಕೆಲಸದವರನ್ನು ಕಳಿಸುತ್ತಿದ್ದರು. ಕೆಲಸದವರು ಇರಲಿಲ್ಲ ಅಂದರೆ ತಮ್ಮ ಮಕ್ಕಳನ್ನೇ 'ಹೆಗಡೆ ಸಾಬ್ ಕೆ ಘರ್ ಜಾಕೆ ಬೋಲ್ ಕೆ ಆಜಾ' ಅಂತ ಕಳಿಸುತ್ತಿದ್ದರು. ದೊಡ್ಡ ಮನಸ್ಸು. ಬಹಳ ಆತ್ಮೀಯತೆ. ಅವರ ಉಪಕಾರ, ಸಹೃದಯತೆಗಳನ್ನು ಮರೆಯಲು ಸಾಧ್ಯವಿಲ್ಲ. ಧಾರವಾಡ ಬಿಟ್ಟು ಮುಂಬೈ ಸೇರಿಕೊಂಡಿದ್ದರೂ ಮೂವತ್ತು ವರ್ಷಗಳ ನಂತರವೂ ನಿರಂತರ ಸಂಪರ್ಕದಲ್ಲಿದ್ದಾರೆ.

ಉಪಕಾರ ಮಾಡಿದವರಿಗೇ ತಿರುಗಿ ಉಪಕಾರ ಮಾಡುತ್ತೇವೆ ಅಂದರೆ ಅದು ಬಹಳ ಸಂದರ್ಭಗಳಲ್ಲಿ ಅಸಾಧ್ಯ. ಅದಕ್ಕೇ ಇಂಗ್ಲೀಷಿನಲ್ಲಿ Pass on the goodwill ಅಂತ ಒಂದು ಮಾತಿದೆ. ಉಪಕಾರ ಮಾಡಿದವರಿಗೇ ಅದೇ ಉಪಕಾರ ಮಾಡಲು ಸಾಧ್ಯವಿಲ್ಲ ಅಥವಾ ಅವರಿಗೆ ಅದರ ಜರೂರತ್ತಿಲ್ಲ ಅಂತಾದರೆ ಅದೇ ಉಪಕಾರವನ್ನು ನೀವು ಬೇರೆಯವರಿಗೆ ಮಾಡಿ. ಅದು ಮೂಲ ಉಪಕಾರ ಮಾಡಿದವರ ಉಪಕಾರವನ್ನು ತೀರಿಸಿದ್ದಕ್ಕೆ ಸರಿಸಮ ಎಂದು ಅರ್ಥ. ಹಾಗೆಂದುಕೊಂಡು ನಾವು ನಮ್ಮ ಮನೆಗೆ ಫೋನ್ ಬಂದ ಮೇಲೆ ಅದನ್ನೇ ಪಾಲಿಸಿಗೊಂಡು ಬರುತ್ತಿದ್ದೆವು. ಮತ್ತೆ ನಮ್ಮ ನೆರೆಹೊರೆ ಜನರೂ ಸಹ ತುಂಬಾ ಒಳ್ಳೆಯವರೇ. ಯಾರೂ ನಮ್ಮನೆಯಲ್ಲಿರುವ ಫೋನಿನ ಅಥವಾ ಮನೆ ಜನರ ಒಳ್ಳೆತನದ ದುರುಪಯೋಗ ಮಾಡಿಕೊಳ್ಳಲಿಲ್ಲ. ಅಗತ್ಯವಿದ್ದಾಗ ಫೋನ್ ಬಳಸಿಕೊಂಡು, ಮರೆಯದೇ ಒಂದು ರೂಪಾಯಿ ಇಟ್ಟೇ ಹೋಗುತ್ತಿದ್ದರು. ಅದು ಅಂದಿನ ಲೋಕಲ್ ಕರೆಯ ಚಾರ್ಜ್. STD ತುಂಬಾ ದುಬಾರಿಯೆಂದು ಮೊದಲಿನ ಕೆಲವು ವರ್ಷ ಹಾಕಿಸಿರಲಿಲ್ಲ. ನಂತರ STD ಹಾಕಿಸಿದ ಮೇಲೆ ಬೇರೆ ಊರಿಗೆ ಕರೆ ಮಾಡಬೇಕಾದರೆ ಮೊದಲೇ ಹೇಳುತ್ತಿದ್ದರು. ಟೈಮರ್ ಹಿಡಿದು  ಕೂಡುತ್ತಿದ್ದರು ಮನೆ ಮಂದಿ. ಟೆಲಿಫೋನ್ ಇಲಾಖೆಯ ಅದೇನೋ ಕೋಷ್ಟಕ ಉಪಯೋಗಿಸಿ, ಅಷ್ಟು ಸಮಯಕ್ಕೆ ಎಷ್ಟಾಯಿತು ಎಂದು ಮೊತ್ತವನ್ನು ಲೆಕ್ಕ ಮಾಡಿ ಹೇಳಿದರೆ ಅಷ್ಟು ರೊಕ್ಕ ಕೊಟ್ಟು ಹೋಗುತ್ತಿದ್ದರು. ಯಾವಾಗಲೋ ಒಮ್ಮೆ ಯಾರೋ ಪೊರ್ಕಿ ಟೈಪಿನ ಜನ STD ಮಾಡಿ, ಹೇಳದೇ ಓಡಿಹೋಗಿದ್ದರು. ಆವಾಗ ಸ್ವಲ್ಪ ಜಾಸ್ತಿ ಬಿಲ್ ಬಂದಿತ್ತು. ಅದಾದ ನಂತರ STD ಲಾಕ್ ಹಾಕಿಸಿಯಾಗಿತ್ತು. ಆದರೆ ಅದೊಂದು isolated ಘಟನೆ. ಉಳಿದೆಲ್ಲ ಸಮಯದಲ್ಲಿ ಟೆಲಿಫೋನ್ ಆಪರೇಟರ್ ನೌಕರಿಯನ್ನು ತಂದೆಯವರು ಬಹಳ ಸೊಗಸಾಗಿ ಮಾಡಿ ಬಹಳ ಪುಣ್ಯ ಕಮಾಯಿಸಿದ್ದಾರೆ. ಜೊತೆಗೆ STD ಬಗ್ಗೆ, ISD ಬಗ್ಗೆ ಉದ್ರಿ ಉಪದೇಶ ಫ್ರೀ.

ಮತ್ತೊಂದು ತರಹದ ಟೆಲಿಫೋನ್ ಸಮಾಜಸೇವೆ ಎಂದರೆ ಸಂದೇಶ ತಲುಪಿಸುವದು ಮತ್ತು ಕರೆದುಬರುವದು. ಅದೆಲ್ಲ ಅಪ್ಪ, ಅಮ್ಮ ಮಾಡುತ್ತಿದ್ದರು. ಅಥವಾ ಅದೇ ವೇಳೆ ಮನೆಯಲ್ಲಿ ಯಾರಾದರೂ ಕೆಲಸದವರಿದ್ದರೆ ಅವರ ಹತ್ತಿರ ಹೇಳಿ ಕಳಿಸುತ್ತಿದ್ದರು. ಹೆಚ್ಚಿನದು ಮೆಸೇಜ್ ಸೇವೆ ಇರುತ್ತಿತ್ತು. ಫೋನ್ ಬಂದಾಗ ಮೆಸೇಜ್ ಬರೆದಿಟ್ಟುಕೊಂಡು ಸಂಜೆ ಅಮ್ಮ ವಾಕಿಂಗ್ ಹೋದಾಗ ಸಂದೇಶ ಮುಟ್ಟಿಸಿಬರುತ್ತಿದ್ದುದೇ ಜಾಸ್ತಿ. ನಾನಂತೂ ಅಂತಹ ಕೆಲಸ ಮಾಡಿದ್ದೇ ಇಲ್ಲ. ಮಾಡಬೇಕಾದ ಮನೆಯ ಕೆಲಸಗಳನ್ನೇ ಮಾಡದ ಆಲಸಿ ಮಹಾನುಭಾವ ನಾನು. ಇನ್ನು ಇಂತಹ 'ಉದ್ಯೋಗಿಲ್ಲದ ಉಸಾಬರಿ' ಕೆಲಸಗಳನ್ನು ಮಾಡುತ್ತೇನೆಯೇ? ನನ್ನ ಪ್ರೀತಿಯ ಸವದತ್ತಿ ಮಲ್ಲಣ್ಣನ ಮನೆಗೆ ಮೆಸೇಜ್ ಕೊಟ್ಟು ಬರುವದಿದ್ದರೆ ಮಾತ್ರ ಹೋಗುತ್ತಿದ್ದೆ ಬಿಟ್ಟರೆ ಬೇರೆ ಯಾರ ಮನೆಗೂ ಹೋದ ದಾಖಲೆಯಿಲ್ಲ. 'ಹೇಳಿದ ಒಂದೂ ಕೆಲಸ ಮಾಡೋದಿಲ್ಲ ನೋಡು ನೀ. ಬರೇ ಜೀವಾ ತಿಂತಿ,' ಅಂತ ಬಾಯಿಬಾಯಿ ಬಡಿದುಕೊಳ್ಳುತ್ತ ಖುದ್ದು ಅಮ್ಮನೇ ಹೋಗಿ ಕರೆದುಬರಬೇಕೇ ವಿನಃ ನಾವು ಅದನ್ನೆಲ್ಲ ಮಾಡುತ್ತಿದ್ದಿಲ್ಲ. ಇಂಜಿನಿಯರಿಂಗ್ ನಡೆಯುತ್ತಿತ್ತು. ಸೆಮಿಸ್ಟರ್ ಮುಗಿದ ಮೇಲೆ ಎರಡೋ ಮೂರೋ ವಾರದ ರಜೆಗೆಂದು ಫುಲ್ ಮಜಾ ಮಾಡಲು ಮನೆಗೆ ಬಂದರೆ ಇಲ್ಲಿ ಇವರ ಕಿರಿಕಿರಿ. 'ಇಂಥಾ ಉದ್ಯೋಗಿಲ್ಲದ ಉಸಾಬರಿ ಎಲ್ಲಾ ನೀವೇ ಮಾಡಿಕೊಳ್ಳಿರಿ. ನನಗ ಇವೆಲ್ಲಾ ಹಚ್ಚಬ್ಯಾಡ್ರೀ,' ಅಂತ ನಮ್ಮ ಮಾತು. ಅದಕ್ಕೆ ಅಮ್ಮನ ಬಯ್ಯುವಿಕೆ. 'ಅವನಿಗೆ ಹೇಳಿ ನೀ ಯಾಕ ಶ್ರಮಾ ತೊಗೋತ್ತಿ?? ಅದು ಬದಲಾಗೋ ಪೈಕಿ ಅಲ್ಲ!' ಅನ್ನುವಂತಹ ಸ್ಥಿತಪ್ರಜ್ಞರ ಟೈಪಿನ ಶಾಣ್ಯಾ ವರ್ತನೆ ತಂದೆಯವರಿಂದ.

೧೯೯೨ ಡಿಸೆಂಬರ್ ಇರಬೇಕು. ಐದನೇ ಸೆಮಿಸ್ಟರ್ ಮುಗಿದಿತ್ತು. ರಜೆಗೆ ಬಂದಿದ್ದೆ. ಒಂದಿನ ಫೋನ್ ರಿಂಗಾಯಿತು. ಪಕ್ಕದಲ್ಲೇ ಕೂತಿದ್ದೆ. ಎತ್ತಿದರೆ ಒಬ್ಬ ಹುಡುಗಿ ಧ್ವನಿ.

'ಹಲೋ' ಎಂದೆ.

'ಹೆಗಡೆ ಅವರ ಮನೀರಿ?' ಅಂತ ಕೇಳಿತು.

'ಹೌದ್. ಏನ್ಬೇಕಾಗಿತ್ತು?' ಎಂದು ಕೊಂಚ ಗಡುಸಾಗಿ ಕೇಳಿದೆ. ಆವತ್ತಿನ ಮಾತುಕತೆ ಎಲ್ಲ ಹಾಗೇ.

ಧ್ವನಿ ಕೇಳಿಯೇ ಗೊತ್ತಾಗಿತ್ತು ಯಾರೋ ಚಿಣ್ಣ ಹುಡುಗಿ ಅಂತ. ಹಾಗಾಗಿ 'ರೀ' ಅನ್ನಲಿಲ್ಲ. ಮತ್ತೆ 'ಸಮಾಜಸೇವೆ' ಕರೆಯೆಂದು ಖಾತ್ರಿಯಾಗಿ, ಫೋನ್ ಎತ್ತಿದ್ದಕ್ಕೆ ಅಸಮಾಧಾನವಾಗಿತ್ತು. ಅಂತಹ ಕರೆಯೆಂದು ಗೊತ್ತಾಗಿದ್ದರೆ ಫೋನ್ ಎತ್ತುತ್ತಲೇ ಇರಲಿಲ್ಲ. ಅಲ್ಲೇ ಕೂತಿದ್ದರೂ ಫೋನ್ ಎತ್ತದಿದ್ದಕ್ಕೆ ಅಮ್ಮ ಅಡಿಗೆಮನೆಯಿಂದ ಬೈಯುತ್ತಾ ಬಂದು ಅವರೇ ಫೋನ್ ಎತ್ತಲು ಬಿಡುತ್ತಿದ್ದೆ. ಆದರೆ ಈಗ ಪೊರಪಾಟಿನಲ್ಲಿ ಎತ್ತಿಬಿಟ್ಟಿದ್ದೇನೆ. ಹಾಗಾಗಿ ಮಾತಾಡಲೇಬೇಕು.

'ಸುಮಾನ್ನ ಕರೀರಿ ಸ್ವಲ್ಪ,' ಅಂದಳು.

ಯಾವ ಸುಮಾ ಅಂತ ನನಗೆ ಸಮಾ ಗೊತ್ತಾಗಲಿಲ್ಲ. ಸುತ್ತಮುತ್ತಲಿದ್ದ ನಾಲ್ಕಾರು ಮನೆಗಳಲ್ಲಿ ಯಾರದೋ ಮನೆಯ ಮಗಳಿರಬೇಕು.

'ಕರೀರಿ' ಅಂದರೆ ಸ್ಟ್ಯಾಂಡರ್ಡ್ ಡೈಲಾಗ್ ಇರುತ್ತಿತ್ತು. 'ಮೆಸೇಜ್ ಕೊಡಿ. ಅವರೇ ನಿಮಗೆ ನಂತರ ಕರೆ ಮಾಡುತ್ತಾರೆ. ಸದ್ಯಕ್ಕೆ ಕರೆದುಬರಲು ಯಾರೂ ಇಲ್ಲ.'

ಹಾಗೆ ಮಾಡಿ ಎಂದು  ನೆರೆಹೊರೆ ಜನರೇ ಹೇಳಿದ್ದರು. ಫೋನ್ ಬಂದಾಗೊಮ್ಮೆ ಬಂದು ಬಂದು ಕರೆದುಹೋಗುವದು ಕಷ್ಟ ಅಂತ ಅವರಿಗೂ ಗೊತ್ತು.

'ಮೆಸೇಜ್ ಕೊಡು. ಅವರಿಗೆ ಕೊಡ್ತೇವಿ. ಅವರು ನಂತರ ಫೋನ್ ಮಾಡ್ತಾರ,' ಅಂದೆ.

'ನಾನು ವಿಜೂ ಅಂತರೀ. ಸುಮಾನ ಫ್ರೆಂಡ್. ಕೇವಿ ರಾವ್ ಅವರ ಮಗಳು,' ಅಂದಳು.

'ಸರಿ. ಮೆಸೇಜ್ ಏನು?' ಅಂದೆ.

'ಸುಮಾಗ ತಿರುಗಿ ಫೋನ್ ಮಾಡ್ಲಿಕ್ಕೆ ಹೇಳ್ರಿ,' ಅಂತು ಆಕಡೆಯ ಧ್ವನಿ.

'ಸರಿ,' ಎಂದು ಫೋನ್ ಇಡಲು ಮುಂದಾದೆ.

'ರೀ, ನನ್ನ ಹೆಸರು ವಿಜೂ. ಬ್ಯಾಂಕ್ ಮ್ಯಾನೇಜರ್ ಕೇವಿ ರಾವ್ ಅವರ ಮಗಳು ಅಂತ ಹೇಳೋದನ್ನ ಮರಿಬ್ಯಾಡ್ರೀ' ಅಂತ ಮತ್ತೊಮ್ಮೆ ಹೇಳಿದಳು.

ಹೆಚ್ಚಾಗಿ ವಿಜೂ ಅಂತ ಎರಡು ಮೂರು ಜನ ಇರಬೇಕು. ಅದಕ್ಕೇ ಇವಳು ಯಾವ ವಿಜೂ ಎಂದು differentiate ಮಾಡಲು ಮತ್ತೆ ಮತ್ತೆ 'ಕೇವಿ ರಾವ್ ಅವರ ಮಗಳು' ಎಂದು ಹೇಳಿದ್ದಾಳೆ. ಎಲ್ಲಿ ಕೇವಿ ರಾವ್ ಕೂಡ multiple ಜನರು ಇದ್ದರೋ ಏನೋ. ಅದಕ್ಕೇ ಬ್ಯಾಂಕ್ ಮ್ಯಾನೇಜರ್ ಕೇವಿ ರಾವ್ ಅವರ ಮಗಳು ಅಂತ ಬೇರೆ ಹೇಳಿದ್ದಾಳೆ.

ಫೋನಿನ ಪಕ್ಕ ಇದ್ದ ಕಾಗದದ ತುಣುಕೊಂದರ ಮೇಲೆ ಬರೆದೆ. Message for Suma. From Viju, daughter of KV Rao, bank manager. Call back.

ಇನ್ನು ಅಮ್ಮನಿಗೆ ಇದನ್ನು ಹೇಳಬೇಕಲ್ಲ. ಮೆಸೇಜ್ ಮುಟ್ಟಿಸಿಬರಬೇಕಾದವರು ಅವರೇ ತಾನೇ? ನನ್ನಂತಹ ಆಲಸಿ ಮಹಾತ್ಮ ಫೋನ್ ಎತ್ತಿ, ಯಾರೋ ಚಿಣ್ಣ ಹುಡುಗಿಯೊಂದಿಗೆ ಅಷ್ಟಾದರೂ ಮಾತಾಡಿ, ಮೆಸೇಜ್ ಬರೆದುಕೊಂಡಿದ್ದೇ ದೊಡ್ಡ ಮಾತು.

'ಏ, ಯವ್ವಾ ಬೇ! ಇಲ್ಲಿ ಕೇಳ್ ಬೇ. ಸುಮಾ ಅಂದ್ರ ಯಾರ ಪೈಕಿ ಹುಡುಗಿ? ಅಕಿಗೆ ಯಾರೋ ವಿಜೂ ಅನ್ನಾಕಿ ಫೋನ್ ಮಾಡಿದ್ದಳು. ಯಾರೋ ಕೋವಿ ರಾವ್ ಅನ್ನವರ ಮಗಳಂತ. ಕೋವಿ ರಾವ್, ಬ್ಯಾಂಕ್ ಮ್ಯಾನೇಜರ್ ಮಗಳು. ಅಕಿ ಸುಮಾಗ ತಿರುಗಿ ಫೋನ್ ಮಾಡಲಿಕ್ಕೆ ಹೇಳು ಅಂದಾಳ. ಮೆಸೇಜ್ ಮುಟ್ಟಿಸು!' ಅಂತ ಕೂತಲ್ಲಿಂದಲೇ ಕೂಗಿದೆ.

'ಅಲ್ಲಿ ಕೂತು ಏನು ಒದರ್ತೀಯೋ!? ಸುಡುಗಾಡು. ಇಲ್ಲಿ ಬಂದು ಏನು ಅಂತ ಹೇಳಿಹೋಗು ಪುಣ್ಯಾತ್ಮ!' ಅಂತ ಅಮ್ಮ ಅಲ್ಲಿಂದಲೇ ಒದರಿದರು. ಒಟ್ಟಿನಲ್ಲಿ ಡಬಲ್ ಒದರಾಟ.

ಹೋಗಿ ಹೇಳಿದೆ.

'ಸುಮಾಗ? ವಿಜೂ ಫೋನ್ ಮಾಡಿದ್ದಳೇ? ಯಾರ ಮಗಳು? ಕೋವಿ ರಾವ್ ಮಗಳೇ? ಏನು ಹೇಳ್ತೀಯೋ??? ಅಕಿ ಯಾವ ರಾವ್ ಅಂದಳೋ, ನೀ ಏನು ಕೇಳಿಸಿಕೊಂಡಿಯೋ? ತಲಿ ಎತ್ಲಾಗ ಇರ್ತದ? ಕೋವಿ ರಾವ್ ಅಂತ ಕೋವಿ ರಾವ್. ಹುಚ್ಚಾ!' ಅಂತ ರೇಗಿದರು ಅಮ್ಮ.

ಅದ್ಯಾಕೋ ಗೊತ್ತಿಲ್ಲ. ಕೇವಿ ರಾವ್ ಅಂತಲೇ ಬರೆದುಕೊಂಡಿದ್ದರೂ ಹೇಳುವಾಗ ಮಾತ್ರ, ಎರಡೂ ಸಲ, ಕೋವಿ ರಾವ್ ಅಂತಲೇ ಹೇಳಿದ್ದೆ! Unintended slip of tongue but very interesting slip of tongue! ಕೇವಿ ರಾವ್ ಹೋಗಿ ಕೋವಿ ರಾವ್ ಆಗಿತ್ತು!

ಕೇವಿ ಬದಲಿ ಕೋವಿ ಅಂದೆ ಅನ್ನುವದು ತಿಳಿದ ಮೇಲೆ ನಕ್ಕಿದ್ದೇ ನಕ್ಕಿದ್ದು. ಈಗ ಕೋವಿ ರಾವ್ ಯಾರು? ಏನು ಮಾಡುತ್ತಾರೆ? ಕೋವಿ ರಾವ್ ಬ್ಯಾಂಕ್ ಮ್ಯಾನೇಜರ್ ಆಗಲು ಹೇಗೆ ಸಾಧ್ಯ? ಬ್ಯಾಂಕಿನ ಮುಂದೆ ಬಾಗಿಲಲ್ಲಿ ಕೋವಿ ಹಿಡಿದು ನಿಂತಿರುತ್ತಾನಲ್ಲ, ಒಬ್ಬ ಕಾವಲುಗಾರ, ಅವನೇ ಕೋವಿ ರಾವ್ ಇರಬಹುದು. ಅವನ ಮಗಳು ಫೋನ್ ಮಾಡಿದ್ದಳು. ಕೋವಿ ರಾವನ ಮಗಳು. ಹಾ!!ಹಾ!! ಹೀ!! ಹೀ!! ಹೀಗೆ ಏನೇನೋ ಹೇಳಿಕೊಂಡು ಬಿದ್ದು ಬಿದ್ದು ನಕ್ಕೆ. ಆಗಿನ ಜಮಾನಾದಲ್ಲಿ ಎಲ್ಲದೂ ತಮಾಷೆಯೇ. Good old carefree days.

'ಹೀಂಗ ಹುಚ್ಚುಚ್ಚರೆ ಅಡ್ನಾಡಿ ಮಾತಾಡಿ ನಗಲಿಕ್ಕೆ ಬರ್ತದ. ಆ ಸುಮಾನ ಮನಿಗೆ ಹೋಗಿ ಮೆಸೇಜ್ ಕೊಟ್ಟು ಬಾ ಅಲ್ಲಾ? ಪ್ಲೀಸ್' ಅಂತ ಅಮ್ಮ ಕೇಳಿಕೊಂಡರು.

ನಾನು hopeless ಕೇಸ್ ಅಂತ ಗೊತ್ತಿದ್ದರೂ ಅವರು ನಂಬಲಿಕ್ಕೆ ತಯಾರಿಲ್ಲ. hoping against the hope ಅನ್ನುವ ಮಾದರಿಯಲ್ಲಿ ವಿನಂತಿಸಿಕೊಂಡಿದ್ದರು. ಅವರೂ ಬದಲಾಗುವದಿಲ್ಲ. ನಾನಂತೂ ಬದಲಾಗುವ ಚಾನ್ಸೇ ಇಲ್ಲ.

'ಏ, ಎಲ್ಲಿದ್ ಹಚ್ಚಿ ಬೇ? ಉದ್ಯೋಗಿಲ್ಲದ ಉಸಾಬರಿ. ಇವೆಲ್ಲಾ ಸಮಾಜಸೇವಾ, ಮಸಾಜಸೇವಾ ನೀವೇ ಮಾಡಿಕೊಳ್ಳಿರಿ. ನನಗ ಬಿಲ್ಕುಲ್ ಹಚ್ಚಬ್ಯಾಡ್ರೀ. ನಾವು ಯಾವಾಗೋ ಒಂದೆರೆಡು ವಾರ ಮನಿಗೆ ಆರಾಮ್ ಮಾಡೋಣ ಅಂತ ಬಂದ್ರ ಬರೇ ಇದೇ ಆತಲ್ಲಾ??? ಸುಮಾ ಅಂತ. ವಿಜು ಅಂತ. ಕೋವಿ ರಾವ್ ಅಂತ. ಅದಂತ. ಇದಂತ. ಸುಡುಗಾಡು!' ಅಂತ ನಾನೂ ರೇಗಿ ಅಲ್ಲಿಂದ ರೈಟ್ ಅಂದೆ.

ಅಮ್ಮನೋ, ಕೆಲಸದವಳೋ ಯಾರೋ ಹೋಗಿ ಮೆಸೇಜ್ ಮುಟ್ಟಿಸಿದ್ದರು ಅಂತ ಕಾಣುತ್ತದೆ.

ಮರುದಿನ ಬೆಳಿಗ್ಗೆ ತಿಂಡಿ ತಿಂದು ನಮ್ಮ ಪ್ರೀತಿಯ ಸಂಕ (ಸಂಯುಕ್ತ ಕರ್ನಾಟಕ) ಪತ್ರಿಕೆ ಓದುತ್ತ, ಧಾರವಾಡದ ಯಾವ ಸಿನೆಮಾ ಥೇಟರಿನಲ್ಲಿ ಅಂದು ಸಂಜೆ ತಿಗಣೆ ಕಚ್ಚಿಸಿಕೊಂಡರೆ ಹಿತಕಾರಿ ಅಂತ ಸ್ಕೆಚ್ ಹಾಕುತ್ತಿದ್ದೆ.

ಆಗ ಸುಮಾ ಎಂಟ್ರಿ ಕೊಟ್ಟಳು. ನಮ್ಮನೆಯಿಂದ ಎರಡು ಮನೆ ಬಿಟ್ಟು ಇದ್ದ ಮನೆಯವರ ಮಗಳು. ಆ ಮನೆಯಲ್ಲಿ ಇದ್ದ ನಾಲ್ಕಾರು ಅಕ್ಕ ತಂಗಿಯರಲ್ಲಿ ಯಾರೋ ಒಬ್ಬಳು ಸುಮಾ ಅಂತ ಅಂದಾಜಿತ್ತು. ಆದರೆ ಅವರ್ಯಾರೂ ಅಷ್ಟಾಗಿ ಪರಿಚಯವಿಲ್ಲದ ಕಾರಣ ಇವಳೇ ಸುಮಾ ಅಂತ ಗೊತ್ತಿರಲಿಲ್ಲ.

'ಅಣ್ಣಾ, ಫೋನ್ ಮಾಡಬೇಕು. ಲೋಕಲ್ ಕಾಲ್.... ' ಅಂದಳು ಎಂಟ್ರಿ ಕೊಟ್ಟ ಸುಮಾ.

ಸಂಸ್ಕಾರವಂತ ಹುಡುಗಿ. ಅನುಮತಿ ಕೇಳಿದ್ದಾಳೆ.

ಪುಣ್ಯಕ್ಕೆ ಅಣ್ಣಾ ಅಂದಳು. ಅಂಕಲ್ ಅನ್ನಲಿಲ್ಲ. ನಮ್ಮ ಪುಣ್ಯ. ಆಗಲೇ ಆರಡಿ ಎತ್ತರ, ತೊಂಬತ್ತು ಕೇಜಿ with ಸದ್ದಾಂ ಹುಸೇನ್ ಮಾದರಿಯ ದೊಡ್ಡ ಮೀಸೆಯೊಂದಿಗೆ ರಾರಾಜಿಸುತ್ತಿದ್ದ ನಮ್ಮ ಬೃಹತ್ ಹೊನಗ್ಯಾಕಾರವನ್ನು ನೋಡಿ ಎರಡು ವರ್ಷ ಮೊದಲೇ SSLC ಹುಡುಗಿಯೊಬ್ಬಳು ಅಂಕಲ್ ಅಂದುಬಿಟ್ಟಿದ್ದಳು. ಹಾಗಾಗಿ ಅಂಕಲ್ ಅನ್ನಿಸಿಕೊಂಡಿದ್ದಕ್ಕೆ ಆಗಲೇ precedence ಇತ್ತು. ಹದಿನೆಂಟು ವರ್ಷಕ್ಕೇ ಅಂಕಲ್ ಅನ್ನಿಸಿಕೊಂಡವರು ಬಹಳ ಕಮ್ಮಿ ಜನ ಇರಬೇಕು.

ನಾನೋ ಆಗ ಅಸಹನೆಯ ಮೂರ್ತಿರೂಪ.

'ಹೂಂ, ಮಾಡ್ಕೋ,' ಅಂತ ಗದರುವ ಧ್ವನಿಯಲ್ಲಿ ಹೇಳಿದೆ.

ಗಡಸು ಧ್ವನಿಗೆ ಬೆದರಿದ ಸುಮಾ, 'ಅಣ್ಣಾನ ಮೂಡ್ ಸರಿ ಇದ್ದಂಗಿಲ್ಲ,' ಅಂದುಕೊಂಡಿರಬೇಕು. ಅಂದುಕೊಂಡಿದ್ದರೆ ಅದು ಅವಳ ಕರ್ಮ.

ಸುಮಾ ಫೋನ್ ಮಾಡಿದ್ದು ಅದೇ ಗೆಳತಿಗೆ. ಅವಳೇ..... ವಿಜೂ..... ಕೋವಿ ರಾವ್.... ಅಲ್ಲಲ್ಲ ಕೇವಿ ರಾವ್ ಮಗಳು. ಕೋವಿ ರಾವ್ ಬ್ಯಾಂಕ್ ಮ್ಯಾನೇಜರ್.

ಈ ಸುಮಾನೂ ಅಷ್ಟೇ. ಫೋನ್ ಮಾಡಿ, 'ಕೇವಿ ರಾವ್ ಅವರ ಮನಿ ಏನ್ರೀ?? ಸ್ವಲ್ಪ ವಿಜೂಗ ಕರೀರಿ....' ಅಂದಳು.

ಕೇವಿ ರಾವ್ ಅಂತ ಕೇಳಿದ್ದೇ ಕೇಳಿದ್ದು. ಅಷ್ಟೇ. ಆ ನಗು ಎಲ್ಲಿಂದ ಬಂತೋ ಏನೋ ಗೊತ್ತಿಲ್ಲ. ಅಲ್ಲೇ ಪೆಕಪೆಕಾ ಅಂತ ನಕ್ಕೆ. ರಕ್ಕಸ ನಗೆ. ಫೋನಿನಲ್ಲಿ ಮಾತಾಡುತ್ತಿದ್ದ ಸುಮಾ ಕೊಂಚ ಅಪ್ರತಿಭಳಾಗಿ ನನ್ನ ಕಡೆ ನೋಡಿದಳು. ಅವಳ ಬೆದರಿದ ಮುಖ ನೋಡಿ ಪಾಪ ಅನ್ನಿಸಿತು. ಅಣ್ಣ ಅಂತ ಬೇರೆ ಕರೆದಿದ್ದಾಳೆ. ಪಾಪದ ಹುಡುಗಿ. 'ಏನಿಲ್ಲಾ ಮಾರಾಯ್ತಿ. ನೀನು ಫೋನಿನಲ್ಲಿ ಮಾತಾಡಿಕೋ,' ಅನ್ನುವಂತೆ ಸಂಜ್ಞೆ ಮಾಡಿ, ನನ್ನ ರಕ್ಕಸ ನಗೆ ಮುಂದುವರೆಸಿದೆ.

ಸ್ವಲ್ಪ ಹೊತ್ತಿನ ನಂತರ ಸುಮಾ ತನ್ನ ಗೆಳತಿ ವಿಜೂ ಅಲಿಯಾಸ್ ಕೋವಿ ರಾವ್ ಮಗಳ ಜೊತೆ ಮಾತುಕತೆ ಮುಗಿಸಿದಳು. ಮರೆಯದೇ ಒಂದು ರೂಪಾಯಿ ಇಟ್ಟು ಹೊರಟಳು.

ನಮಗೋ ಕಿತಾಪತಿ ಮಾಡುವ ಹುಮ್ಮಸ್ಸು. ಅದರಲ್ಲೂ ಬೆಳಿಗ್ಗೆ ಬೆಳಿಗ್ಗೆ ಬಕರಾವೊಂದು ಅದಾಗೇ ಬಂದಿದೆ. ಸ್ವಲ್ಪ ಮಜಾ ತೆಗೆದುಕೊಳ್ಳೋಣ ಅಂತ ಸುಮಾನ ಜೊತೆ ಮಷ್ಕಿರಿ ಶುರುವಿಟ್ಟುಕೊಂಡೆ.

'ನಿನ್ನ ಹೆಸರು ಸುಮಾ ಏನೂ?' ಅಂದೆ.

'ಹೂಂ, ಅಣ್ಣಾ' ಅಂದಳು. 'ನಿನಗೆ ಇಲ್ಲಿ ತನಕ ಅದೂ ಗೊತ್ತಿರಲಿಲ್ಲವೇ?' ಅನ್ನುವ ಲುಕ್ ಅವಳ ಮುಖದ ಮೇಲೆ.

'ಅಕಿ ವಿಜೂ ನಿನ್ನ ಫ್ರೆಂಡ್ ಏನು?'

'ಹೌದ್ ಅಣ್ಣಾ. ನನ್ನ ಕ್ಲಾಸ್ಮೇಟ್.'

'ಹಾಂಗೇನು? ಹೂಂ' ಎಂದೆ.

'ಮತ್ತೇನು?' ಅನ್ನುವ ಲುಕ್ ಕೊಟ್ಟಳು.

'ಅಕಿ ವಿಜೂ ಕೋವಿ ರಾವ್ ಅವರ ಮಗಳೇನು?' ಅನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ನಗು ಬರುತ್ತಿತ್ತು. ಆದರೂ ತಡೆದುಕೊಂಡು ಗಂಭೀರವಾಗಿಯೇ ಕೇಳಿದೆ.

'ಕೋವಿ ರಾವ್ ಅಲ್ಲ ಅಣ್ಣಾ. ಕೇವಿ ರಾವ್. ಕೇವಿ ರಾವ್ ಅಂತ ಅಕಿ ಡ್ಯಾಡಿ ಹೆಸರು. ಬ್ಯಾಂಕ್ ಒಳಗ ಕೆಲಸ ಮಾಡ್ತಾರ,' ಅಂದಳು ಸುಮಾ.

'ಏ! ಕೋವಿ ರಾವ್ ಅಂತ ಅದು. ಕೇವಿ ರಾವ್ ಅಲ್ಲ. ಕೋವಿ ರಾವ್ ಅಂತದು. ಗೊತ್ತಾತೇನು?? ಏನು ಹೇಳು??? ಕೋ ವಿ ರಾವ್. ಕೋ ವಿ ರಾವ್. ಹೇಳು ನೋಡೋಣ?' ಅಂತ ಫುಲ್ ಸೀರಿಯಸ್ ಆಗಿ ಹೇಳಿದೆ.

ಈಗ ಸುಮಾ ಫುಲ್ confuse. ಪಾಪದ ಚಿಣ್ಣ ಬಾಲೆ. ಎದುರಿಗೆ ಬಾಲವಿಲ್ಲದ ಮಂಗ್ಯಾ ನಾನು. ಇದೆಲ್ಲಾ ಆಕೆ expect ಕೂಡ ಮಾಡಿಲ್ಲ. ಫೋನ್ ಮಾಡಿ ಹೊರಟವಳನ್ನು ಅಟಕಾಯಿಸಿಕೊಂಡು ಭೇಜಾ ಫ್ರೈ ಮಾಡುತ್ತಿದ್ದೇನೆ. ಯಾರೂ confuse ಆಗಬಹದು. ಹಾಗಿರುವಾಗ ಈ ಚಿಣ್ಣ ಹುಡುಗಿ confuse ಆಗಿದ್ದೇನು ದೊಡ್ಡ ಮಾತು.

'ಕೋ.... ವೀ..... ರಾವ್. ಕೋವಿ ರಾವ್ ಅಂತೇನು ಅದು ಅಣ್ಣಾ?' ಎಂದಳು. ಅವಳಿಗೆ ಖಾತ್ರಿ ಮಾಡಿಕೊಳ್ಳಬೇಕು.

'ಹೂಂ. ಕೋವಿ ರಾವ್ ಅಂತನೇ. ನಿಮ್ಮ ಗೆಳತಿ ಡ್ಯಾಡಿ ಹೆಸರು ಕೋವಿ ರಾವ್. ಗೊತ್ತಾತ?' ಎಂದು ಫುಲ್ ಫೋರ್ಸ್ ಹಾಕಿ ಹೇಳಿದೆ.

ಗೊತ್ತಾಯಿತು ಅನ್ನುವಂತೆ ತಲೆಯಾಡಿಸಿದಳು. ಸಿಕ್ಕಾಪಟ್ಟೆ ನಗು ಬರುತ್ತಿತ್ತು. ಆದರೂ ಇನ್ನೂ ಫುಲ್ ಮಂಗ್ಯಾ ಮಾಡಿ ಮುಗಿದಿರಲಿಲ್ಲ.

'ಅವರಿಗೆ ಕೋವಿ ರಾವ್ ಅಂತ ಯಾಕ ಹೆಸರು ಬಂತು? ಗೊತ್ತದ ಏನು???' ಅಂತ ನಮ್ಮ ಮುಂದಿನ ಸವಾಲ್.

ಗೊತ್ತಿಲ್ಲ ಅನ್ನುವಂತೆ ತಲೆಯಾಡಿಸಿದಳು. ಅಲ್ಲಿಗೆ ಸುಮಾ ಫುಲ್ ಹೈರಾಣ. ಈಗ ನಾನು ಏನೇ ಹೇಳಿದರೂ ಆಕೆ ನಂಬಲು ತಯಾರ್ ಅಂತ ನಮಗೆ ಖಾತ್ರಿ.

'ಬ್ಯಾಂಕ್ ಮುಂದ ಒಬ್ಬವ watchman, ಕೈಯಾಗ ಒಂದು ಬಂದೂಕು ಅಂದ್ರ ಗನ್ ಹಿಡಕೊಂಡು ನಿಂತಿರ್ತಾನ ನೋಡು. ನೋಡಿರಬೇಕಲ್ಲಾ? ಅವನೇ ಕೋವಿ ರಾವ್. ಅವನೇ ನಿಮ್ಮ ಗೆಳತಿ ಡ್ಯಾಡಿ. ನಿನ್ನ ಗೆಳತಿ.... ಏನು ಅಕಿ ಹೆಸರು? ಹಾಂ... ವಿಜೂ. ಅಕಿ ಅದೇ ಕೋವಿ ರಾವ್ ಮಗಳು. ದೊಡ್ಡ ಮೀಸಿ ಬಿಟ್ಟುಕೊಂಡು, ಬಗಲಾಗ ಅಡ್ಡಡ್ಡ ಬಂದೂಕು ಹಾಕಿಕೊಂಡು, ಇಷ್ಟು ದೊಡ್ಡ ಹೊಟ್ಟಿ ಸುತ್ತಾ ಗಣಪ್ಪ ಹಾವು ಸುತ್ತಿಗೊಂಡ ಹಾಂಗ ಕಾರ್ತೂಸಿನ (bullet) ಮಾಲಿ ಸುತ್ತಿಕೊಂಡು, ಬೀಡಿ ಸೇದಿಕೋತ್ತ ನಿಂತಿರ್ತಾನ ನೋಡು. ಅವನೇ ಕೋವಿ ರಾವ್. ಬೇಕಾದ್ರ ನಿಮ್ಮ ಗೆಳತಿ ಕೇಳಿ ನೋಡು!' ಎಂದು ಫುಲ್ ಪಂಟು ಹೊಡೆದೆ.

ಆದರೂ ಸುಮಾ ಸ್ವಲ್ಪ ಜಾಬಾದ್ ಇದ್ದಳು. Smart girl.

'ಇಲ್ಲ ಅಣ್ಣಾ. ನಾ ಅಕಿ ಡ್ಯಾಡಿ ನೋಡೇನಿ. ಅವರು ಹಾಂಗ ಇಲ್ಲ. ಮತ್ತ ಅವರು ಬ್ಯಾಂಕ್ ಮ್ಯಾನೇಜರ್ ಇದ್ದಾರ. ಬಾಗಿಲದಾಗ ನಿಲ್ಲೋ watchman ಅಲ್ಲ. ನೀ ಬ್ಯಾರೆ ಯಾರೋ ಬಗ್ಗೆ ಹೇಳಲಿಕತ್ತಿ ಅಂತ ಕಾಣಿಸ್ತದ' ಅಂದುಬಿಟ್ಟಳು.

ಅಕಟಕಟಾ! ಇವಳ ತಲೆಯನ್ನು ಇನ್ನೂ ಸ್ವಲ್ಪ ಸರಿಯಾಗಿ ತಿಕ್ಕಿದ ಹೊರತು ಇವಳು ಫುಲ್ ಹಾಪ್ ಆಗುವದಿಲ್ಲ ಅಂದುಕೊಂಡೆ.

'ಏ, ನಿನ್ನ! ನಾ ಏನು ಸುಳ್ಳು ಹೇಳ್ತೇನಿ ಏನು??? ಆsss..... ಅವರೇ ಕೋವಿ ರಾವ್! ಕೋವಿ ರಾವ್ ! ಕೋವಿ ರಾವ್! ತಿಳಿತಿಲ್ಲೋ!?? ಏನು!? ಏನ್ ತಿಳೀತು??' ಎಂದು ಸ್ವಲ್ಪ ಧ್ವನಿ ಎತ್ತರಿಸಿ ಜಬರಿಸಿ ಹೇಳಿದೆ.

'ಆದರೂ ಅಣ್ಣಾ. ವಿಜೂನ ಡ್ಯಾಡಿ ಮನಿಯಾಗ ಹಾಂಗss ಸೀದಾ ಸಾದಾ ಇರ್ತಾರ. ನೀ ಹೇಳಿದಾಂಗ ಇದ್ದರ ಅದೆಂಗ ಬ್ಯಾಂಕ್ ಮುಂದ ಬಂದ ಕೂಡಲೇ ಅವರಿಗೆ ಒಮ್ಮೆಲೇ ದೊಡ್ಡ ಹೊಟ್ಟಿ, ದೊಡ್ಡ ಮೀಸಿ ಎಲ್ಲಾ ಬಂದು ಬಿಡ್ತಾವ? ಹಾಂ? ಹ್ಯಾಂಗ ಅಣ್ಣಾ???' ಎಂದಳು.

ಅಲಲಾ!!! ಚಿಣ್ಣ ಹುಡುಗಿಯಾದರೂ ದೊಡ್ಡ ತಲೆಯಿಟ್ಟಿದೆ. ಭಯಂಕರ ಲಾಜಿಕಲ್ ಪ್ರಶ್ನೆ ಕೇಳುತ್ತಿದೆ. ಇನ್ನೂ ಒಂದಿಷ್ಟು ಶಿಕಾಕಾಯಿ ಹಾಕಿ ತಲೆ ಉಜ್ಜಬೇಕು.

'ಮನಿಯಾಗ ಮೀಸಿ, ಹೊಟ್ಟಿ ಇಲ್ಲದೇ ಇರಬಹುದು. ಆದ್ರ ಬ್ಯಾಂಕ್ ಮುಂದ ಗನ್ ಹಿಡಕೊಂಡು ನಿಂತ ಮ್ಯಾಲೆ ನೋಡಿದ ಮಂದಿಗೆ ಅಂಜಿಕಿ ಬರಬೇಕು ನೋಡು. ಅದಕ್ಕೇ ಹಾಂಗ ಕೆಟ್ಟ ಖರಾಬ್ ಅವತಾರ ಮಾಡಿಕೊಂಡು ನಿಂತಿರ್ತಾನ. ಇಲ್ಲಂದ್ರ ಯಾರೂ ಹೆದರೋದೇ ಇಲ್ಲ. ಈಗ ನಿಮ್ಮ ಡ್ಯಾಡಿ ಕೈಯಾಗ ಬಂದೂಕು ಕೊಟ್ಟು ಬ್ಯಾಂಕ್ ಬಾಗಿಲದಾಗ ನಿಲ್ಲಿಸಿದರೆ ಯಾರರೆ ಹೆದರ್ತಾರೇನು? ಇಲ್ಲ. ಬರೇ ಗನ್ ಇದ್ದರೆ ಸಾಲೋದಿಲ್ಲ. ಪರ್ಸನಾಲಿಟಿ ಸಹಿತ ಬೇಕಾಗ್ತದ. ನಾಳೆ ನೀನೇ ಬ್ಯಾಂಕ್ ಬಾಗಿಲದಾಗ ನಿಲ್ಲಬೇಕು ಅಂತಾದರೂ ಅದೇ ಅವತಾರ ಮಾಡಿಕೊಂಡು ನಿಲ್ಲಬೇಕು ನೋಡವಾ. ನಿನ್ನ ಗೆಳತಿ ಡ್ಯಾಡಿ ಕೋವಿ ರಾವ್. ಯಾರು ಹೇಳು?? ಕೋವಿ ರಾವ್!' ಅಂದೆ.

ನಾನು ಹಾಗೆ ಒತ್ತಿ ಹೇಳಿದ್ದು ಅವಳಿಗೆ ಒಳ್ಳೆ hypnotic suggestion ಕೊಟ್ಟಂಗೆ ಆಗಿರಬೇಕು. ಸುಮಾಳ ಮುಖ ನೋಡಿದರೆ ಫುಲ್ ಸುಸ್ತಾಗಿ ಹೋಗಿದ್ದಳು. 'ಕೇವಿಯಾದರೂ ಸರಿ. ಕೋವಿಯಾದರೂ ಸರಿ. ನನ್ನ ಬಿಡು ಮಾರಾಯಾ. ಮನೆಗೆ ಹೋಗಬೇಕು,' ಅನ್ನುವ ದೀನ ಲುಕ್ ಕೊಟ್ಟಳು.

'ನೀ ನಿಮ್ಮ ಗೆಳತಿ ವಿಜೂನ ಕೇಳು ಬೇಕಾದ್ರ. ತಿರುಗಿ ಬಂದು ಹೇಳು ನನಗ. ನಿನ್ನ ಗೆಳತಿಗೆ ಖರೆ ಹೇಳು ಅಂತ ಪ್ರಾಮಿಸ್ ತೊಗೊಂಡು ಕೇಳು. ಅವರಪ್ಪನ ಹೆಸರು ಕೋವಿ ರಾವ್. ಬ್ಯಾಂಕ್ ಮುಂದ ಖರಾಬ್ ಅವತಾರ ಮಾಡಿಕೊಂಡು ಕೋವಿ ಹಿಡಕೊಂಡು ನಿಲ್ತಾರ. ಹಾಂಗಾಗೇ ಕೋವಿ ರಾವ್ ಅಂತ ಹೆಸರು ಬಂದದ ಅಂತ ಅಕಿನೇ ಒಪ್ಪಿಕೋತ್ತಾಳ ನೋಡು. ಕೋವಿ ರಾವ್ ಅನ್ನಲಿಕ್ಕೆ ನಾಚಿಗಿ ಬರ್ತಿರ್ಬೇಕು. ಅದಕ್ಕೇ ಕೇವಿ ರಾವ್ ಅಂತ ಹೇಳ್ತಿರಬೇಕು. ಇದು ಖರೇ ಅಂದ್ರೂ ಖರೆ! ಬೆಟ್ ಕಟ್ಟುತ್ತಿ ಏನು? ಹಾಂ???' ಅಂತ ಆಖ್ರೀ ಆವಾಜ್ ಹಾಕಿದೆ.

ಅಲ್ಲಿಗೆ ಸುಮಾನ brainwash ಮುಗಿದಿತ್ತು.

'ಹೂಂ ಅಣ್ಣಾ. ನೀ ಹೇಳಿದಾಂಗ ಅದು ಕೋವಿ ರಾವ್ ಅಂತನೇ ಇರಬೇಕು. ನನ್ನ ಫ್ರೆಂಡ್ ವಿಜೂ ಕಡೆ ಕೇಳ್ತೇನಿ. ಏನು ಹೇಳ್ತಾಳ ಅನ್ನೋದನ್ನ ಬಂದು ಹೇಳ್ತೇನಿ,' ಅಂದು ಎದ್ದು ಹೊರಟಳು.

'ಆಂಟಿss, ಹೋಗಿ ಬರ್ತೇನ್ರೀ. ಮೆಸೇಜ್ ಕೊಟ್ಟಿದ್ದಕ್ಕೆ ಟ್ಯಾಂಕ್ಸ್ ರೀ,' ಅಂತ ಟ್ಯಾಂಕ್ ತುಂಬಾ ಆಂಟಿಗೆ ಥ್ಯಾಂಕ್ಸ್ ಹೇಳಿದಳು.  ಅಂದರೆ ನಮ್ಮ ಮಾತಾಶ್ರೀ ಅವರಿಗೆ ಥ್ಯಾಂಕ್ಸ್ ಹೇಳಿ ಕಳಚಿಕೊಂಡಳು ಸುಮಾ. ಮೆಸೇಜ್ ಕೊಟ್ಟುಬಂದವರು ಅವರೇ ತಾನೇ. ಹಾಗಾಗಿ ಆಂಟಿಗೆ ಟ್ಯಾಂಕ್ಸ್! ಕಾನ್ವೆಂಟ್ ಹುಡುಗಿಯರ ಥ್ಯಾಂಕ್ಸ್ ಹೇಳೋ ಶೈಲಿ ನೋಡಿದರೆ ಸಾಕು!

'ಹೂಂ, ಹೋಗಿ ಬಾರವಾ. ಸಾಲಿಗೆ ಟೈಮ್ ಆತು. ಹೋಗು. ಬಸ್ ತಪ್ಪಿಹೋದೀತು,' ಅಂತ ಆಂಟಿಯ ಮಾತೃಸಹಜ ಕಳಕಳಿಯ ಮಾತು ಸುಮಾಳನ್ನು ಹಿಂಬಾಲಿಸಿ ಹೋಯಿತು.

ಸುಮಾ ಗೇಟ್ ದಾಟಿದ್ದೇ ಅಮ್ಮ ಅಡುಗೆಮನೆ ಬಿಟ್ಟು ಈ ಕಡೆ ಬಂದರು. ನಾನು ಭೂಪ ತುಂಟ ನಗೆ ಹೊತ್ತು ಅಲ್ಲೇ ಕೂತಿದ್ದೆ. ನನ್ನ ಮಷ್ಕಿರಿಯೆಲ್ಲವನ್ನೂ ಅಡುಗೆಮನೆಯಿಂದಲೇ ಕೇಳುತ್ತಿದ್ದರು ಅಂತ ಕಾಣುತ್ತದೆ. ಅವರಿಗೂ ನಗೆ ತಡೆಯಲಾಗಿಲ್ಲ. ಸಿಕ್ಕಾಪಟ್ಟೆ ನಕ್ಕರು.

ನಗುತ್ತಲೇ ಹೇಳಿದರು, 'ಏನೋ ನೀನು!? ಹಾಂ!? ಮುಂಜ್ಮುಂಜಾನೆ ಆ ಪಾಪದ ಹುಡುಗಿಯನ್ನು ಮಂಗ್ಯಾ ಮಾಡಿಕೋತ್ತ ಕೂತಿದ್ದಿ. ಏನದು? ಕೋವಿ ರಾವ್. ಬ್ಯಾಂಕ್ watchman.. ಅಕಿ ಗೆಳತಿ ಅಪ್ಪಾ. ವೇಷ ಹಾಕಿಕೊಂಡು ಬಂದು ನಿಂತಿರ್ತಾನ.... ಅದು ಇದು ಅನ್ಕೋತ್ತ. ನಾ ಒಳಗಿಂದಲೇ ಕೇಳ್ಕೋತ್ತ ಇದ್ದೆ. ಭಾಳ ನಗು ಬರ್ಲಿಕತ್ತಿತ್ತು. ಆಗೇ ಬಂದು ಪಾಪ ಅಕಿಗೆ ಹೇಳೋಣ ಅಂತ ಮಾಡಿದೆ. ನೀ ಎಲ್ಲರೆ ಸಿಟ್ಟಿಗೆದ್ದು ಇಬ್ಬರಿಗೂ ಕೂಡೇ ಬೈದೀ ಅಂತ ಬರಲಿಲ್ಲ. ಮೊದಲೇ ದೂರ್ವಾಸನ ಮೊಮ್ಮಗ ನೀನು. ಏನೇನೋ ಹೇಳಿ ಆ ಸುಮಾನ್ನ ಫುಲ್ ಮಂಗ್ಯಾ ಮಾಡಿ ಕಳಿಸಿದಿ ನೋಡು. ಅಕಿ ಖರೇ ಹೋಗಿ ಅಕಿ ಗೆಳತಿ ಕಡೆ ಕೇಳ್ತಾಳ ನೋಡು. 'ಏನಲೇ, ನಿಮ್ಮ ಡ್ಯಾಡಿ ಹೆಸರು ಕೋವಿ ರಾವ್ ಅಂತೇನು? ಬ್ಯಾಂಕ್ ಮುಂದ ಗನ್ ಹಿಡಿದು ನಿಂತಿರ್ತಾರ? ಅದರ ಸಲುವಾಗಿ ದೊಡ್ಡ ಮೀಸಿ, ಹೊಟ್ಟಿ ಎಲ್ಲಾ ವೇಷಾ ಹಾಕ್ತಾರ? ಹೌದ???' ಅಂತ ಕೇಳ್ತಾಳ ನೋಡು. ಪಾಪದ ಹುಡುಗಿನ ಫುಲ್ ಮಳ್ಳು ಮಾಡಿ ಕಳಿಸಿ ನೀನು. ಇನ್ನು ಅಕಿ ಗೆಳತಿ ಕಡೆ ಬೈಸಿಕೊಂಡು ಬಂದು ನಿನಗ ಮಂಗಳಾರತಿ ಮಾಡ್ತಾಳ ನೋಡು. ಮಾಡಿಸ್ಕೊಂಡಿ ಅಂತ. ಬರೇ ಇದೇ ಆತು. ನೀ ಬಂದಿ ಅಂದ್ರ ಮುಗೀತು ನೋಡು. ಮನಿ ಮಂದೀದು ಮುಗೀತು, ಈಗ ಬಾಜೂ ಮನಿ ಮಂದೀದೂ ಜೀವಾ ತಿನ್ನು!' ಎಂದು ಮೈಲ್ಡ್ ಆಗಿ ಬೆಂಡೆತ್ತಿದರು.

'ಅಕಿಗೆ ಹೀಂಗ ನಂಬುವ ಹಾಂಗ ಹೇಳಿದಿ ಅಂದ್ರ ಕೇಳಿದ ಗಿಡದ ಮ್ಯಾಲಿನ ಮಂಗ್ಯಾ ಕೂಡ ನಂಬಿ ಹಿಡಕೊಂಡ ಟೊಂಗಿ ಕೈ ಬಿಡಬೇಕು. ಹಾಂಗ ನಂಬಿಸಿ ಕಳಿಸಿದಿ ನೋಡು!' ಅನ್ನುತ್ತ ಅಮ್ಮ ಕಳಚಿಕೊಂಡರು.

'ಶಭಾಷ್! ವೆಲ್ ಡನ್' ಅಂತ ಬಾಯ್ಬಿಟ್ಟು ಹೇಳಲಿಲ್ಲ. ಅಮ್ಮಂದಿರು ಹಾಗೆಲ್ಲ ಖುಲ್ಲಂ ಖುಲ್ಲಾ ಹೊಗಳುವದಿಲ್ಲ.

ಸಿಕ್ಕಾಪಟ್ಟೆ ನಕ್ಕು ಮತ್ತೆ ಪೇಪರ್ ಓದುವದರಲ್ಲಿ ಮಗ್ನನಾದೆ. ಸುಮಾರು ಹೊತ್ತಿನ ನಂತರ ಹೊರಗೆ ಹೋಗಿ ಕಟ್ಟೆ ಮೇಲೆ ಕೂತೆ. ಆಗ ಮತ್ತೆ ಸುಮಾ ಕಂಡಳು. ರೆಡಿ ಆಗಿ, ಯುನಿಫಾರ್ಮ್ ಹಾಕಿಕೊಂಡು, ತಲೆ ಮೇಲೆ ಚಿಗರೆ ಕೊಂಬಿನ ಹಾಗೆ ಮೂಡಿದ್ದ ಎರಡು ಜುಟ್ಟುಗಳನ್ನು ಕುಣಿಸುತ್ತ, ಮಣಭಾರದ ಬ್ಯಾಗ್, ಟಿಫನ್ ಡಬ್ಬಿ, ವಾಟರ್ ಬಾಟಲಿ ಇತ್ಯಾದಿ ಪೇರಿಸಿಕೊಂಡು ಬಸ್ ಹಿಡಿಯಲು ಓಡುತ್ತಿದ್ದಳು. ಶಾಲೆಗೆ ಹೋಗುವ ಸಂಭ್ರಮ.

'ಏ, ಸುಮಾ!' ಎಂದು ಕೂಗಿ ಕರೆದು ಅಂತಹ ಗಡಿಬಿಡಿಯಲ್ಲಿದ್ದವಳನ್ನೂ ತಡೆದೆ.

ಪಾಪದ ಹುಡುಗಿ ಬಸ್ ಮಿಸ್ಸಾಗುತ್ತದೆ ಅಂತ ಪೀಟಿ ಉಷಾ, ಅಶ್ವಿನಿ ನಾಚಪ್ಪ ಮಾದರಿಯಲ್ಲಿ ಓಡುತ್ತಿತ್ತು. ಆದರೂ 'ಅಣ್ಣಾ' ಆದ ನಾನು ಕರೆದೆ ಅಂತ ಬ್ರೇಕ್ ಹಾಕಿ ಗಕ್ಕನೆ ನಿಂತಿತು. 'ಏನು??? ಬೇಗ ಹೇಳೋ!' ಅನ್ನುವ ಲುಕ್ ಅವಳ ಮುಖದ ಮೇಲೆ.

'ಏ, ನಿನ್ನ ಗೆಳತಿ ವಿಜೂನ ಕಡೆ ಕೋವಿ ರಾವ್ ಬಗ್ಗೆ ಕೇಳೋದನ್ನ ಮರಿಬ್ಯಾಡ ಮತ್ತ. ಮರೆಯದೇ ಕೇಳು ಮತ್ತ. ಓಕೆ?' ಅಂದು, 'ಈಗ ಬೇಕಾದ್ರ ಹೋಗು. ಪೋ,' ಅನ್ನುವಂತೆ ತಲೆಯಾಡಿಸಿ ಅನುಮತಿಸಿದೆ.

ಮುಕ್ತಿ ಸಿಕ್ಕ ಮಾದರಿಯಲ್ಲಿ, 'ಹೂಂ, ಕೇಳ್ತೇನಿ,' ಎನ್ನುತ್ತ ಓಡಿದಳು. ಅಷ್ಟರಲ್ಲಿ ಬಸ್ ಬಂತು. ಮತ್ತೂ ಜೋರಾಗಿ ಓಡಿ ಹೇಗೋ ಮಾಡಿ ಬಸ್ ಹಿಡಿಯುವಲ್ಲಿ ಯಶಸ್ವಿಯಾದಳು.

ಅಡುಗೆಮನೆಯಲ್ಲಿ ಸೊಪ್ಪು ತೊಳೆದ ನೀರನ್ನು ತುಳಸಿಗಿಡಕ್ಕೆ ಸುರಿಯಲು ಬಂದಿದ್ದ ಅಮ್ಮ ಅದನ್ನು ಗಮನಿಸಿದ್ದರು.

'ಆವಾಗ ಕಾಡಿಸಿದ್ದು ಸಾಕಾಗಲಿಲ್ಲ ಅಂತ ಈಗ ಮತ್ತ ಆ ಪಾಪದ ಹುಡುಗಿಯನ್ನು ಹಿಡಕೊಂಡು ಕೋವಿ ರಾವ್ ಅಂತ ಹಚ್ಚಿದ್ದಿ ಏನು? ಭಾಳಾತು ನೋಡು ಇದು!' ಅಂದರು.

ನಮಗೋ ಫುಲ್ ಮಸ್ತಿ. ಬಿದ್ದು ಬಿದ್ದು ನಕ್ಕೆ. 'ಇಕಿ ಸುಮಾ ಅಂತ. ಸಮಾ ಹಾಪ್ ಮಾಡಿದೆ. ಇಂತಾಕಿ ಗೆಳತಿ ವಿಜೂ ಅಂತ. ಅದೂ ಕೋವಿ ರಾವ್ ಮಗಳು. ಹಾ!!! ಹಾ!! ಹೀ!! ಹೀ!!' ಅಂತ ನಮ್ಮ ಕೇಕೆ.

'ಸಾಕು ಸಾಕು. ಇಂತಾದ್ರಾಗ ಭಾಳ ಶಾಣ್ಯಾ ಇದ್ದಿ. ಇನ್ನೇನೂ ಮಾಡೋದು ಬೇಕಾಗಿಲ್ಲ. ಅಕಿನ್ನ ಭಾಳ ಕಾಡಬ್ಯಾಡೋ!' ಅಂದರು ಅಮ್ಮ.

'ಯಾಕ????' ಅಂತ ನಮ್ಮ ಕೌಂಟರ್ ಪ್ರಶ್ನೆ. ಅದು ಇದ್ದಿದ್ದೇ. ಏನೇ ಹೇಳಿದರೂ ವಿವರಣೆ ಬೇಕೇ!

'ಅಕಿ ಈಗ ದೊಡ್ಡ ಹುಡುಗಿ ಆಗ್ಯಾಳ. ಹಾಂಗೆಲ್ಲಾ ಭಾಳ ಕಾಡಬಾರದು!' ಅಂತ ಮುಗುಮ್ಮಾಗಿ ಹೇಳಿ ಕಳಚಿಕೊಂಡರು.

'ಹ್ಯಾಂ? ದೊಡ್ಡ ಹುಡುಗಿಯಾದಳೇ? ಅಥವಾ ಹುಡುಗಿ ದೊಡ್ಡವಳಾದಳೇ???' ಅಂತ ಡೌಟ್ ಬಂತು. ನಂತರ ಒಳಾರ್ಥ ಅರ್ಥವಾಗಿ ಸುಮಾಳಿಗೆ 'ಪ್ರಮೋಷನ್' ಸಿಕ್ಕಿದೆ. ಇನ್ನು ಇಂತಹ ಮಂಗ್ಯಾತನವನ್ನು ಮಾಡಬಾರದು. 'ಭಾಳ' ಕಾಡಬಾರದು,' ಅಂತ ನೋಟ್ ಮಾಡಿಕೊಂಡೆ. ಸ್ವಲ್ಪ ಕಾಡಿದರೆ ಓಕೇನಾ? ಕಾಡಿ ನೋಡಬೇಕು. ಹೇಳಿಕೇಳಿ ಕಾಡು(ವ)ಪ್ರಾಣಿ ನಾನು.

ಅಂದಿಗೆ 'ದೊಡ್ಡ ಹುಡುಗಿಯಾಗಿದ್ದ' ಸುಮಾ ಆಕೆಯ ಗೆಳತಿ ವಿಜೂನ ಬಳಿ ಕೋವಿ ರಾವ್, ಕೋವಿ ರಾವ್ ಅಂತ ನಾನು ಬ್ಲೇಡ್ ಹಾಕಿದ ವಿಷಯದ ಬಗ್ಗೆ ಕೇಳಿದಳೋ ಇಲ್ಲವೋ ಗೊತ್ತಾಗಲಿಲ್ಲ. ಅಷ್ಟರಲ್ಲಿ ರಜೆ ಮುಗಿದು ಧಾರವಾಡದಿಂದ ನಾನೂ ವಾಪಸ್ ಕಳಚಿಕೊಂಡೆ. ನನಗಂತೂ ಮಂಗಳಾರತಿ ಮಾಡಲಿಲ್ಲ. ಮತ್ತೆ ಸುಮಾ ಆ ಟೈಪಿನ ಜೋರ್ ಹುಡುಗಿ ಅಲ್ಲ ಅಂತ ಕಾಣುತ್ತದೆ.

ಮುಂದೆ ಆಕೆ ಜಾಸ್ತಿ ಕಾಣಲೂ ಇಲ್ಲ.

ಆಗ 'ದೊಡ್ಡ ಹುಡುಗಿ' ಅಂತ ಪ್ರಮೋಷನ್ ಪಡೆದಾಕೆ ನಂತರ 'ಮುತ್ತೈದೆ' ಅಂತ ಮತ್ತೊಂದು ಪ್ರಮೋಷನ್ ಪಡೆದು ಎಲ್ಲೋ ಗಾಯಬ್ ಆಗಿದ್ದಾಳೆ. ಬಹಳ ವರ್ಷಗಳಾದವು ಕಂಡಿಲ್ಲ. ಮತ್ತೆ ಈಗ ಎಲ್ಲರ ಕಡೆ ಫೋನ್. ಅದೂ ಸ್ಮಾರ್ಟ್ ಫೋನ್! ಹೊಡೀರಿ ಹಲಗಿ! ಹಾಗಾಗಿ ಫೋನ್ ಮಾಡಲು ಮನೆಗೆ ಯಾರೂ ಬರುವದಿಲ್ಲ.

ಇದೇ 'ಕೇವಿಯಿಂದ ಕೋವಿಯವರೆಗೆ' ಅನ್ನುವ ಬದಲಾವಣೆಯ ಹಿಂದಿರುವ ಕಥೆ. ಇದಾದ ನಂತರ ನಾನು ಕೇವಿಗೆ ಕೇವಿ ಅಂದಿದ್ದೇ ಇಲ್ಲ. ಯಾವಾಗಲೂ ಕೋವಿ ಅಂದೇ ರೂಢಿ. ಸಕತ್ ಮಜಾ!

ಈಗ ಕೋವಿ ಅನ್ನಲು ಸಹೋದ್ಯೋಗಿ ಬೇರೆ ಇದ್ದಾನೆ. ಫುಲ್ ಮಜಾ!

** ಹೆಸರುಗಳನ್ನು ಬದಲಾಯಿಸಲಾಗಿದೆ. ಪೂರ್ಣ ವಾಸ್ತವಿಕತೆಯನ್ನು ಮರೆಮಾಚಲು ಕೊಂಚ ಮಸಾಲೆ ಸೇರಿಸಲಾಗಿದೆ.

Friday, May 05, 2017

ಉಪದೇಶಾಮೃತ

'ಶಾಂತಿಯಿದ್ದರೆ ಮಾತ್ರ ಸಂತೋಷ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಹಾಗಾಗಿ ಅರ್ಜೆಂಟಾಗಿ ಶಾಂತಿ ಬೇಕಾಗಿದೆ. ಹೇಗೆ ಸಂಪಾದಿಸುವದು ಸ್ವಾಮೀಜಿ?'

'ಹಂ! ಅರ್ಜೆಂಟಾಗಿ ನಿನಗೆ ಶಾಂತಿ ಬೇಕಾಗಿದೆ. ಅಲ್ಲವೇ?'

'ಹೌದು ಸ್ವಾಮೀಜಿ.'

'ಒಂದು ವಿಷಯ ಹೇಳಿ.'

'ಏನು ಸ್ವಾಮೀಜಿ?'

'ನಿಮಗೆ ಮದುವೆಯಾಗಿದೆಯೇ?'

'ಹೌದು ಆಗಿದೆ ಸ್ವಾಮೀಜಿ.'

'ಪತ್ನಿ ಇದ್ದಾಳೋ ಅಥವಾ...... '

ಭಕ್ತ ದಂಗು ಹೊಡೆದ. ಅರ್ಥಮಾಡಿಕೊಂಡ ಸ್ವಾಮೀಜಿಯೇ ವಿವರಣೆ ಕೊಟ್ಟರು.

'ಮದುವೆಯಾದವರೆಲ್ಲರ ಜೊತೆ ಹೆಂಡತಿ ಇರಬೇಕಂತಿಲ್ಲ ನೋಡಿ. ಪತಿಯನ್ನು ಬಿಟ್ಟು ಪರದೇಶ, ಪರಲೋಕ ಸೇರಿರುವ ಚಾನ್ಸ್ ಇರುತ್ತದೆ ನೋಡಿ. ಅದಕ್ಕೇ  ಕೇಳಿದೆ. ನಿಮ್ಮ ಪತ್ನಿ ಜೊತೆಗಿದ್ದಾರೆ ಅಂತಾಯಿತು. ಒಳ್ಳೇದು. ಇನ್ನೊಂದು ಪ್ರಶ್ನೆ.... '

'ಏನು ಸ್ವಾಮೀಜಿ?'

'ನಿಮ್ಮ ಹೆಂಡತಿ ಹೆಸರೇನು?'

'ಭ್ರಾಂತಿ. ಬೆಂಗಾಲಿ ಪೈಕಿ. ಹಾಗಾಗಿ ಕೊಂಚ ವಿಚಿತ್ರ ಹೆಸರು.'

'ತೊಂದರೆಯಿಲ್ಲ. ಒಂದು ಕೆಲಸ ಮಾಡಿ.'

'ಏನು ಸ್ವಾಮೀಜಿ?'

'ನಿಮ್ಮ ಹೆಂಡತಿಯ ಹೆಸರನ್ನು ಶಾಂತಿ ಎಂದು ಬದಲಾಯಿಸಿಬಿಡಿ. ಶಾಂತಿ ಇದ್ದವರಿಗೆ ಮಾತ್ರ ಸಂತೋಷ ತಾನೇ? ಇನ್ನು ಮುಂದೆ ನಿಮ್ಮ ಪತ್ನಿ ಶಾಂತಿ. ಅವಳಿದ್ದಾಳೆ ಅಂದ ಮೇಲೆ ಇನ್ನು ಮುಂದೆ ನಿಮಗೆ ಸಂತೋಷವೋ ಸಂತೋಷ. ಹೋಗಿ ಬನ್ನಿ. ಒಳ್ಳೆದಾಗಲಿ!'

ಇದನ್ನು ಕೇಳಿ, ಒಂಬತ್ತು ಮಾರಿನ ರೇಷ್ಮೆ ಸೀರೆಯುಟ್ಟು ಬಂದ ಕ್ಯಾಬರೆ ನರ್ತಕಿ ಡಿಸ್ಕೋ ಶಾಂತಿಯನ್ನು ನೋಡಿ, ಬಿಚ್ಚಮ್ಮನನ್ನು ಫುಲ್ ಮುಚ್ಚಮ್ಮನ ಅವತಾರದಲ್ಲಿ ನೋಡಿದಷ್ಟು ಶಾಕ್ ಆಗಿ ಭಕ್ತ ಢಮಾರ್! ಜಿಂಗಾ ಚಿಂಕಾ ಡಿಸ್ಕೋ ಶಾಂತಿಯನ್ನು ಆ ರೂಪದಲ್ಲಿ ನೋಡುವದು ಅಸಾಧ್ಯ ಬಿಡಿ. ಭ್ರಾಂತಿ ಇರಬೇಕು.

ಆಕಸ್ಮಾತ ಯಾವದಾದರೂ ಮಹಿಳೆ ಹೀಗೇ ಹೇಳಿಕೊಂಡು ಬಂದಿದ್ದರೆ 'ಗಂಡನ ಹೆಸರನ್ನು ಶಾಂತಕುಮಾರನೋ, ಶಾಂತರಸನೋ, ಶಾಂತವೀರನೋ ಎಂದು ಬದಲಾಯಿಸು. ಶಾಂತಿಯಿದ್ದ ಮೇಲೆ ನಿನಗೂ ಸಂತೋಷ!' ಎಂದು ಹೇಳಿ ಕಳಿಸುತ್ತಿದ್ದರೇನೋ!

**

'ಸ್ವಾಮೀಜಿ, ಅರ್ಧ ಕಣ್ಣು ಮುಚ್ಚಿ ಧ್ಯಾನ ಮಾಡಬೇಕು ಅಂತಿದೆ. ಕಷ್ಟವಾಗುತ್ತಿದೆ. ಅರ್ಧ ಕಣ್ಣು ಮುಚ್ಚಲು ಸುಲಭವಾದ ಉಪಾಯವೇನಾದರೂ ಇದೆಯೇ ಸ್ವಾಮೀಜಿ??'

'ಹಂ! ಅರ್ಧ ಕಣ್ಣು ಮುಚ್ಚಬೇಕು. ಅಷ್ಟೇ ತಾನೇ?'

'ಹೌದು ಸ್ವಾಮೀಜಿ.'

'ನಿನಗೆ ಎಷ್ಟು ಕಣ್ಣುಗಳಿವೆ?'

ಇದೇನಪಾ ಸ್ವಾಮೀಜಿ ಹೀಂಗೆ ಕೇಳುತ್ತಾರೆ ಎಂದು ಭಕ್ತ ಫುಲ್ ಕನ್ಫ್ಯೂಸ್.

'ಎರಡು ಸ್ವಾಮೀಜಿ.'

'ಎರಡರ ಅರ್ಧ ಎಷ್ಟು?'

'ಒಂದು ಸ್ವಾಮೀಜಿ.'

'ಹಾಗಾದರೆ ಎರಡರಲ್ಲಿ ಒಂದು ಕಣ್ಣು ಮುಚ್ಚಿಬಿಡು. ಅರ್ಧ ಕಣ್ಣು ಮುಚ್ಚಿದಂತಾಯಿತು ತಾನೇ?? ನಡಿ  ಇನ್ನು.'

ಪ್ರಾಯದಲ್ಲಿ ಕಣ್ಣು ಹೊಡೆಯುವಾಗ ಒಂದು ಕಣ್ಣು ಮುಚ್ಚಿ, ವಾಕಡಾ ಮುಖ ಮಾಡಿ, ಹಲ್ಲುಕಿರಿದಿದ್ದು ನೆನಪಾಗಿ ಆವಾಗ ಮಾಡಿದ್ದೆಲ್ಲ ಹಾಗಾದರೆ ಧ್ಯಾನವೇ ಎಂಬ ಯೋಚನೆಯಲ್ಲಿ ಭಕ್ತ ಫುಲ್ ಢಮಾರ್!

**

ಸ್ವಾಮಿ ಅನುಭವಾನಂದ ಸರಸ್ವತಿಗಳ ಅಣಿಮುತ್ತುಗಳು. ಪ್ರವಚನ ಒಣ ಒಣ ಆಗದಿರಲು ಇಂತಹ ಹಾಸ್ಯ ರಸವತ್ತಾದ ಅಣಿಮುತ್ತುಗಳು ಅವಶ್ಯ.

**

ಅರ್ಧ ಕಣ್ಣು ತೆರೆದು ಧ್ಯಾನ ಮಾಡುವದಕ್ಕೆ 'ಅರ್ಧ ನಿಮಿಲೀತ ನೇತ್ರ / ನಯನ' ಅಂತೇನೋ ಇದೆ. ತಿಳಿದವರು ತಿಳಿಸಿ.

Thursday, May 04, 2017

ಖತರ್ನಾಕ್ ಉಪದೇಶ

ಅವನೊಬ್ಬ ಎಂಟತ್ತು ವರ್ಷದ ಚಿಕ್ಕ ಹುಡುಗ. ಸೈಕಲ್ ಸವಾರಿ ಮಾಡುವದೆಂದರೆ ಅವನಿಗೆ ತುಂಬಾ ಖುಷಿ. ಅವನ ಹತ್ತಿರ ಒಂದಲ್ಲ, ಎರಡಲ್ಲ, ಮೂರ್ಮೂರು ಸೈಕಲ್ಲುಗಳಿದ್ದವು. ಹೀಗಿರುವಾಗ ಪಕ್ಕದ ಮನೆಯ ಹುಡುಗನಿಗೂ ಅವನ ಪಾಲಕರು ಹೊಸ ಸೈಕಲ್ ಖರೀದಿ ಮಾಡಿ ಉಡುಗೊರೆ ಕೊಟ್ಟರು. ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ ನೋಡಿದ್ದೇ ನೋಡಿದ್ದು ಈ ಪುಣ್ಯಾತ್ಮ ತನ್ನಲ್ಲಿ ಮೂರು ಸೈಕಲ್ಲುಗಳಿದ್ದರೂ ಪಕ್ಕದ ಮನೆಯ ಹುಡುಗನ ಸೈಕಲ್ ಹತ್ತಿಬಿಟ್ಟ. ಏನೋ ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ಲಿನ ಸ್ಯಾಂಪಲ್ ನೋಡಲು ಅಂತ ಒಂದೆರೆಡು ರೌಂಡ್ ಹೊಡೆದು ವಾಪಸ್ ಕೊಟ್ಟನೇ ಎಂದು ನೋಡಿದರೆ ಇಲ್ಲ. ಇವನು ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ ಬಿಟ್ಟು ಇಳಿಯಲು ಸುತಾರಾಂ ತಯಾರಿಲ್ಲ.

ಎಲ್ಲರಿಗೂ ಇದೊಳ್ಳೆ ತಲೆನೋವಾಯಿತು. ಪರಿಪರಿಯಾಗಿ ಹೇಳಿದರು. ಇವನು ಕೇಳಲಿಲ್ಲ. ಸೈಕಲ್ ಬಿಟ್ಟು ಇಳಿಯಲಿಲ್ಲ. ಪಕ್ಕದ ಮನೆಯ ಹುಡುಗ ಅವನಿಗಂತಲೇ ಹೊಸ ಸೈಕಲ್ ಕೊಡಿಸಿದ್ದರೂ ಅದನ್ನು ಹತ್ತಿ ಸವಾರಿ  ಮಾಡುವ ಭಾಗ್ಯವಿಲ್ಲವೆಂದು ಪರಿತಪಿಸುತ್ತ ರಗಳೆ ಮಾಡುತಿದ್ದ. ಒಂದು ಕಡೆ ಸೈಕಲ್ ಬಿಟ್ಟು ಇಳಿಯದವನ ರಗಳೆ. ಮತ್ತೊಂದು ಕಡೆ ಸೈಕಲ್ ಸವಾರಿ ಭಾಗ್ಯ ವಂಚಿತನ ರಗಳೆ. ದೊಡ್ಡ ತಲೆನೋವಾಯಿತು ಹಿರಿಯರಿಗೆ.

ಆಗ ಒಬ್ಬರು ಸ್ವಾಮೀಜಿ ಅಲ್ಲಿಗೆ ಬಂದರು. ಅವರಾದರೂ ಈ ಸಮಸ್ಯೆಯನ್ನು ಬಗೆಹರಿಸಿಯಾರು ಎನ್ನುವ ಆಸೆಯಲ್ಲಿ ಮನೆ ಜನ ತಮ್ಮ ಸಮಸ್ಯೆ ಹೇಳಿಕೊಂಡರು. ಹೀಗೀಗೆ....ಏನೇ ಹೇಳಿದರೂ ಹುಡುಗ ಸೈಕಲ್ ಬಿಟ್ಟು ಇಳಿಯಲು ತಯಾರಿಲ್ಲ. ಹೇಗಾದರೂ ಮಾಡಿ ಅವನನ್ನು ಸೈಕಲ್ಲಿನಿಂದ ಇಳಿಯುವಂತೆ ಮಾಡಿ ಎಂದು ಕೇಳಿಕೊಂಡರು. ಪ್ರಯತ್ನ ಮಾಡೋಣ ಎಂದರು ಸ್ವಾಮೀಜಿ.

ಸ್ವಾಮೀಜಿ ಹುಡುಗನನ್ನು ಕರೆದರು. ಸೈಕಲ್ ಸವಾರಿ ಮಾಡುತ್ತಲೇ ಬಂದ. ಸ್ವಾಮೀಜಿಗಳ ಪಕ್ಕಕ್ಕೆ ಬಂದವ ನೆಲಕ್ಕೆ ಕಾಲು ಕೊಟ್ಟು ಸೈಕಲ್ ನಿಲ್ಲಿಸಿದ. ಆಗಲೂ ಇಳಿಯಲಿಲ್ಲ. ಸ್ವಾಮೀಜಿ ಹುಡುಗನ ಬಳಿ ಹೋದರು. ಕಿವಿಯಲ್ಲಿ ಏನೋ ಹೇಳಿದರು. ಏನು ಹೇಳಿದರೋ ಏನೋ. ಅವರು ಹೇಳಿದ್ದನ್ನು ಕೇಳಿದ ಹುಡುಗ ಏಕ್ದಂ ಒಮ್ಮೆಲೆ ಸೈಕಲ್ ಬಿಟ್ಟು ಇಳಿದವನೇ, ಅದನ್ನು ಪಕ್ಕದ ಮನೆಯ ಹುಡುಗನಿಗೆ ವಾಪಸ್ ಕೊಟ್ಟವನೇ, ಸ್ವಾಮೀಜಿಗಳಿಗೆ ನಮಸ್ಕಾರ ಮಾಡಿ ಅಲ್ಲಿಂದ ಓಡಿಬಿಟ್ಟ!

ಅದ್ಭುತ! ಮಿರಾಕಲ್!

ನಿಮ್ಮ ಸಮಸ್ಯೆ ಪರಿಹಾರವಾಯಿತಲ್ಲ? ಎನ್ನುವವರಂತೆ ಸ್ವಾಮೀಜಿ  ಮುಗುಳ್ನಕ್ಕರು. ಯಬಡ  ಹುಡುಗನ ಸೈಕಲ್ ಸಮಸ್ಯೆ ಪರಿಹಾರವಾದ ಖುಷಿಯಲ್ಲಿ ಮನೆಯವರು ಪರಿಪರಿಯಾಗಿ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದರು. ಅಡ್ಡಡ್ಡ ಉದುದ್ದ ಎಲ್ಲಾ ನಮಸ್ಕಾರ ಹಾಕಿದರು.

ಎಲ್ಲರ ತಲೆಯಲ್ಲಿ ಗಿರ್ಕಿ ಹೊಡೆಯುತ್ತಿದ್ದ ಪ್ರಶ್ನೆ ಒಂದೇ. ಸ್ವಾಮೀಜಿ  ಹುಡುಗನ ಕಿವಿಯಲ್ಲಿ ಏನು ಹೇಳಿರಬಹದು? ಯಾರೇ ಏನೇ ಹೇಳಿದರೂ ಯಾರ ಮಾತೂ ಕೇಳದ ಆ ಹುಡುಗ ಅದು ಹೇಗೆ ಸ್ವಾಮೀಜಿ ಮಾತು ಕೇಳಿದವನೇ ಸೈಕಲ್ ಬಿಟ್ಟು ಇಳಿದ? ಅದೇನು ಕಮಾಲ್ ಮಾಡಿರಬಹದು ಸ್ವಾಮೀಜಿ? ಹೀಗೆ ಸಿಕ್ಕಾಪಟ್ಟೆ ಕೌತುಕಮಯ ಪ್ರಶ್ನೆಗಳು ಎಲ್ಲರ ಮನದಲ್ಲಿ.

ಸ್ವಾಮೀಜಿ ಯಾವದೋ ರಹಸ್ಯ ಮಂತ್ರವನ್ನು ಹುಡುಗನ ಕಿವಿಯಲ್ಲಿ ಹೇಳಿರಬಹುದು. ಆ ಮಂತ್ರದ ಪ್ರಭಾವದಿಂದಲೇ ಹುಡುಗನ ಮನಸ್ಸು ಪರಿವರ್ತನೆ ಆಗಿರಬಹುದು. ಅದಕ್ಕೇ ಸೈಕಲ್ ಬಿಟ್ಟು ಇಳಿದ. ವಾಪಸ್ ಕೊಟ್ಟು ಹೋದ, ಅಂದರು ಕೆಲವರು.

ಇಲ್ಲಿಲ್ಲ. ಮಂತ್ರ ಗಿಂತ್ರ  ಏನೂ ಹೇಳಿರಲಿಕ್ಕಿಲ್ಲ. ಶಬ್ದ ಸಮ್ಮೋಹಿನಿ ಮಾಡಿರಬಹುದು. ಅದರ ಪರಿಣಾಮದಿಂದ ಹುಡುಗ ಸೈಕಲ್ ಬಿಟ್ಟು ಇಳಿದ. ಇದು ಶಬ್ದ ಸಮ್ಮೋಹಿನಿಯೇ. ಸಂಶಯವೇ ಇಲ್ಲ, ಎಂದರು ಉಳಿದ ಒಂದಿಷ್ಟು ಜನ.

ಸ್ವಾಮೀಜಿಯ ಒಂದೇ ಒಂದು ಮಾತಿನಿಂದ ಹುಡುಗ ಸೈಕಲ್ ಬಿಟ್ಟು ಇಳಿದಿದ್ದಕ್ಕೆ ಜನ ಹೀಗೆ ತಲೆಗೊಂದರಂತೆ ಮಾತಾಡಿಕೊಂಡರು. ಆದರೆ ಯಾರಿಗೂ ಖಾತ್ರಿಯಿರಲಿಲ್ಲ. ನಿಜ ವಿಷಯ ತಿಳಿದ ಹೊರತೂ ಸಮಾಧಾನವಿಲ್ಲ. ಕೆಟ್ಟ ಕುತೂಹಲ.

ಹೀಗಾಗಿ ಸ್ವಾಮೀಜಿಯವರನ್ನೇ ಕೇಳಬೇಕು ಎಂದು ನಿರ್ಧರಿಸಿದರು.

ಸ್ವಾಮೀಜಿ, ಅದೇನು ಮೋಡಿ ಮಾಡಿದಿರಿ? ಅದೇನು ಹೇಳಿದಿರಿ? ನಿಮ್ಮ ಒಂದು ಮಾತು ಕೇಳಿದ ಹುಡುಗನ ವರ್ತನೆ ಬದಲಾಯಿತು. ಬೆಳಗಿಂದ ನಮ್ಮನ್ನೆಲ್ಲ ಅದೆಷ್ಟು ಸತಾಯಿಸಿದ್ದ. ನಾವು ಏನೆಲ್ಲಾ ಹೇಳಿದೆವು. ಏನೆಲ್ಲಾ ಆಮಿಷ ತೋರಿಸಿದೆವು. ನಮ್ಮ ಯಾವದೇ ಮಾತನ್ನೂ ಕೇಳಲಿಲ್ಲ. ಆದರೆ ನಿಮ್ಮ ಮಾತು ಕೇಳಿದ್ದೇ, ಒಂದೇ ಕ್ಷಣದಲ್ಲಿ ಸೈಕಲ್ಲಿನಿಂದ ಇಳಿದ. ನಿಜವಾದ ವಾರಸುದಾರನಿಗೆ ವಾಪಸ್ ಕೊಟ್ಟ. ಕೈಮುಗಿದು ಹೋದ. ಅದೇನು ಕಮಾಲ್ ಮಾಡಿದಿರಿ ಸ್ವಾಮೀಜಿ? ದಯವಿಟ್ಟು ಹೇಳಿ, ಎಂದು ಬಿನ್ನವಿಸಿಕೊಂಡರು.

ಅವರು ಹೇಳಿಕೇಳಿ ಧಾರವಾಡ ಕಡೆಯ ಜವಾರಿ ಸ್ವಾಮೀಜಿ. ಗಡ್ಡ ನೀವಿಕೊಳ್ಳುತ್ತ ದೇಶಾವರಿ ನಗೆ ನಕ್ಕರು.

ನಾ ಆ ಹುಡುಗನ ಕಿವಿಯಾಗ ಏನು ಹೇಳಿದೆ ಅಂದ್ರss..... ಅಂದವರೇ ಬ್ರೇಕ್ ತೆಗೆದುಕೊಂಡರು.

ಸ್ವಾಮೀಜಿ ಏನು ಹೇಳಿರಬಹದು?  ಈಗ ಕ್ಲೈಮಾಕ್ಸ್. ಎಲ್ಲರ ಕುತೂಹಲದ ಕಟ್ಟೆ ಒಡೆಯುತ್ತಿದೆ.

ಏ ತಮ್ಮಾ, ಒಳ್ಳೆ ಮಾತಿನಾಗ ಹೇಳಾಕತ್ತೇನಿ. ಸೈಕಲ್ ಬಿಟ್ಟು ಇಳಿಯಪ್ಪಾ. ಇಲ್ಲಾ ಅಂದ್ರ ನಿನ್ನ ಮು*ಳಿಗೆ ಹೀಂಗ ಒದಿತೇನಿ ಅಂದ್ರ ಈ ಹೊಸಾ ಸೈಕಲ್ ಒಂದೇ ಏನು ಬಂತು ಜಗತ್ತಿನ್ಯಾಗಿನ ಯಾವದೇ ಸೈಕಲ್ ಸೀಟ್ ಮ್ಯಾಲೆ ಒಂದು ತಿಂಗಳು ಕುಂಡಿ ಊರಿ ಕುಂದ್ರಾಕ ಆಗಿರಬಾರದು. ಹಾಂಗ ಒದಿತೇನಿ ಮಗನ! ಇಳಿತಿಯೋ ಇಲ್ಲಾ ಒದಿಲೋ!?? ಲಗೂನ ಇಳಿ ಮಂಗ್ಯಾನಮಗನ. ಇಲ್ಲಂದ್ರ ನಾನೇ ಇಳಿಸಿ ಝಾಡಿಸಿ ಝಾಡಿಸಿ ಮು*ಳಿ ಮ್ಯಾಗ ಒದಿತೇನಿ. ಆಟಾ ಹಚ್ಚಿ ಏನ?!

ನಾ ಹೇಳಿದ್ದು ಇಷ್ಟೇ. ಅಲಖ್ ನಿರಂಜನ್! ಅನ್ನುತ್ತ ಸ್ವಾಮೀಜಿ ಹೊರಟುಹೋದರು.

ಕೇಳಿದ ಮಂದಿ ಹ್ಯಾಂ! ಅಂತ ಬೆರಗಾದರು.

ನೀತಿ: ತುಂಬಾ ಕಠಿಣ ಅನ್ನಿಸುವಂತಹ ಸಮಸ್ಯೆಗಳಿಗೆ ಒಮ್ಮೊಮ್ಮೆ ತುಂಬಾ ಸರಳ ಅನ್ನಿಸುವಂತಹ ಪರಿಹಾರಗಳು ಇರುತ್ತವೆ. ಬೇರೆ ದೃಷ್ಟಿಕೋನಗಳಿಂದ ನೋಡುವ ಜ್ಞಾನ, ವ್ಯವಧಾನ ಇರಬೇಕಷ್ಟೆ!

ಮತ್ತೊಂದು ನೀತಿ: ಸಮಸ್ಯೆಗೆ ಪರಿಹಾರ ಹುಡುಕುವಾಗ ಯಾರಿಗೆ ಏನು ಮುಖ್ಯವೋ ಅದು ಗಮನದಲ್ಲಿರಲಿ. ಹುಡುಗನಿಗೆ ಸೈಕಲ್ ಸವಾರಿ ತುಂಬಾ ಇಷ್ಟ. ಯಾವಾಗ ಸ್ವಾಮೀಜಿ ಕೊಡಬಹುದಾದ ಶಿಕ್ಷೆಯಿಂದ ತನ್ನ ಪ್ರೀತಿಯ ಹವ್ಯಾಸಕ್ಕೆ ಭಂಗ ಬರಬಹುದು ಎಂಬ ಭಯ ಮನದಲ್ಲಿ ಮೂಡಿತೋ ಹುಡುಗ ತಾಪಡ್ತೋಪ್ ಸೈಕಲ್ ಬಿಟ್ಟು ಕೆಳಗಿಳಿದ. ಬೇರೆ ಯಾವ ತರಹದ ಶಿಕ್ಷೆಗೆ ಆತ ಬಗ್ಗುವ ಸಾಧ್ಯತೆಗಳು ಕಮ್ಮಿ. ಯಾಕೆಂದರೆ ಆ ಶಿಕ್ಷೆಗಳಿಂದ ಸೈಕಲ್ ಸವಾರಿಗೆ ಭಂಗ ಬರುವ ಸಾಧ್ಯತೆಗಳು ಕಮ್ಮಿ. WIIFM -What's in it for me - is very important and needs be addressed from each stakeholder's point of view.

ಇದು ಮಾತ್ರ ನೀತಿ ಅಲ್ಲ: ಯಾವದೇ ಸಮಸ್ಯೆ ಬಂದರೂ ಹಿಂದೆ ಮುಂದೆ ವಿಚಾರ ಮಾಡದೇ ಕಂಡವರ ಮು*ಳಿ ಮೇಲೆ ಒದೆಯವದು ಸಮಸ್ಯೆಯನ್ನು ಪರಿಹರಿಸುವದಿರಲಿ ನಿಮಗೇ ಬೂಮರಾಂಗ್ ಆಗಿ ರಿವರ್ಸ್ ಹೊಡೆದೀತು. ಎಚ್ಚರ! :)