Thursday, September 24, 2015

ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್!

ಈಗ ಕೆಲವು ತಿಂಗಳ ಹಿಂದೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿದ್ದೆವು. ಪ್ರವಾಸ ಮುಗಿಸಿ ಅಮೇರಿಕಾಗೆ ವಾಪಸ್ ಹೊರಟಿದ್ದೆವು. ಅಮೇರಿಕಾಗೆ ನಮ್ಮ ವಾಪಸ್ ಪ್ರಯಾಣ ಟರ್ಕಿಯ ಇಸ್ತಾಂಬುಲ್ ಶಹರದಿಂದ ಡೆನ್ಮಾರ್ಕಿನ ಕೋಪನ್ ಹೇಗನ್ ಮಾರ್ಗವಾಗಿ  ಇತ್ತು. ಇಸ್ತಾಂಬುಲ್ಲಿನಿಂದ ಕೋಪನ್ ಹೇಗನ್ ವರೆಗಿನ ಪ್ರಯಾಣದಲ್ಲಿ ನನ್ನ, ನನ್ನ ಪತ್ನಿಯ ಮತ್ತು ಮಗಳ ಸೀಟುಗಳು ಬೇರೆ ಬೇರೆ ಕಡೆ ಬಂದುಬಿಟ್ಟವು. ಹಾಗಂತ ತೊಂದರೆಯೇನೂ ಇರಲಿಲ್ಲ. ಬೇರೆಬೇರೆಯಾಗಿ ಕೂಡಬೇಕಾಯಿತು ಅಷ್ಟೇ.

ನನ್ನ ಪಕ್ಕದ ಸೀಟಿನಲ್ಲಿ ಬಂದು ಕುಳಿತವಳು ಒಬ್ಬಳು ಯುವತಿ. ವಯಸ್ಸು ಸುಮಾರು ಇಪ್ಪತ್ತೈದು ವರ್ಷಗಳ ಆಸುಪಾಸು ಇದ್ದೀತು. ಅವಳ ವೇಷಭೂಷಣ ನೋಡಿ ಅರಬ್ ಸಂಸ್ಕೃತಿಯ ಯುವತಿ ಅಂತ ಖಚಿತವಾಯಿತು. ತಲೆಗೆ ಸಾಂಪ್ರದಾಯಿಕ ಹಿಜಾಬ್ ಧರಿಸಿದ್ದಳು.

ವಿಮಾನ ಹಾರಿದ ಮೇಲೆ ಸೀಟ್ ಬೆಲ್ಟ್ ತೆಗೆದಿಡೋಣ ಅಂತ ಆಕಡೆ ಈಕಡೆ ತಿರುಗಿದಾಗ ಒಬ್ಬರನ್ನೊಬ್ಬರು ನೋಡಿದೆವು. ಹಲೋ, ಹಾಯ್ ಅನ್ನುವ ಮಾದರಿಯಲ್ಲಿ ಮುಗುಳ್ನಗೆಗಳ ವಿನಿಮಯವೂ ಆಯಿತು.  ಪ್ರಯಾಣದಲ್ಲಿ ಪಕ್ಕದಲ್ಲಿ ಕೂತವರಿಗೆ ಇಷ್ಟವಿದ್ದರೆ ಒಂದು ನಾಲ್ಕು ಮಾತಾಡಿ ಪರಸ್ಪರ ಪರಿಚಯ ಮಾಡಿಕೊಳ್ಳುವದು ನನ್ನ ಸ್ವಭಾವ. ಆ ದಿನ ಕೂಡ ಹಾಗೇ ಮಾಡಿದೆ. ಸಂಕ್ಷಿಪ್ತವಾಗಿ ನನ್ನ ಪರಿಚಯ ಮಾಡಿಕೊಂಡೆ. ಪ್ರವಾಸದ ಬಗ್ಗೆ ಹೇಳಿದೆ. ಆಕೆಯ ಪರಿಚಯ ತಿಳಿಯುವ ಬಗ್ಗೆ ಆಸಕ್ತಿ ತೋರಿಸಿದೆ.

ಆಕೆಗೋ ಅರೇಬಿಕ್ ಬಿಟ್ಟರೆ ಬೇರೆ ಭಾಷೆ ಬರುವದಿಲ್ಲವಂತೆ. ಇಂಗ್ಲಿಷ್ ತಕ್ಕಮಟ್ಟಿಗೆ ತಿಳಿಯುತ್ತದೆ ಅಂದಳು. ಆದರೆ ಸರಿಯಾಗಿ ಮಾತಾಡಲು ಬರುವದಿಲ್ಲ ಅಂದಳು. 'ಓಕೆ. ತೊಂದರೆಯಿಲ್ಲ. ನಿನಗೆ ತಿಳಿದಂತೆ, ಬಂದಷ್ಟು ಮಾತಾಡು. ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಸರಳ ಅರೇಬಿಕ್ ನನಗೂ ಕೊಂಚ ಮಟ್ಟಿಗೆ ಅರ್ಥವಾಗುತ್ತದೆ,' ಅಂತ ಆತ್ಮೀಯತೆಯಿಂದ ಹೇಳಿದೆ. ಆಕೆಗೂ ಅದು ಇಷ್ಟವಾಗಿರಬೇಕು. ತನ್ನ ಹರಕು ಮುರುಕು ಇಂಗ್ಲೀಷಿನಲ್ಲಿ ಮಾತಾಡತೊಡಗಿದಳು. ಇಂಗ್ಲಿಷ್ ಕೈಕೊಟ್ಟಾಗ ಅರೇಬಿಕ್. ಅರೇಬಿಕ್ ನನಗೆ ತಿಳಿಯಲಿ ಅಂತ ಮಾತಿನ ಜೊತೆಗೆ ಸಿಕ್ಕಾಪಟ್ಟೆ ಹಾವಭಾವ, ಕೈಸನ್ನೆ ಮಾಡುತ್ತ ಮಾತಾಡಿದಳು. ತನ್ನ ಪರಿಚಯ ಮಾಡಿಕೊಂಡಳು.

ಆಕೆ ಸಿರಿಯಾ ದೇಶದವಳಂತೆ. ಹಾಂ, ಅದೇ ಸಿರಿಯಾ ದೇಶ, ಎಲ್ಲಿ ಈಗ ಸುಮಾರು ಮೂರು ವರ್ಷಗಳಿಂದ ಅಂತರ್ಯುದ್ಧದಲ್ಲಿ ರಕ್ತ ನೀರಿನಂತೆ ಹರಿದಿದೆಯೋ ಅದೇ ಸಿರಿಯಾ. ಒಂದು ಕಡೆ ಅಪ್ಪನ ನಿಧನದ ನಂತರ ಸಿಕ್ಕ ಖುರ್ಚಿಯನ್ನು ಬಿಡಲು ಹರ್ಗೀಸ್ ಮನಸ್ಸಿಲ್ಲದ ಸರ್ವಾಧಿಕಾರಿ ಅಸ್ಸಾದ್. ಮತ್ತೊಂದು ಕಡೆ ತಮ್ಮ ಪೈಶಾಚಿಕ ಕೃತ್ಯಗಳ ಮೂಲಕವೇ ಪ್ರಸಿದ್ಧರಾದ ISIS ಮತ್ತು ಇತರೇ ಉಗ್ರರು, ಬಂಡುಕೋರರು. ದೊಡ್ಡ ಪ್ರಮಾಣದ ಅಂತರ್ಯುದ್ಧ. ಅದರಲ್ಲೂ ಆಕೆ ಮೂಲತಃ ಹೋಮ್ಸ್ ಶಹರದವಳು ಅಂತ ಕೇಳಿ ಒಂದು ಕ್ಷಣ ಬೆಚ್ಚಿಬಿದ್ದೆ. ಸಿರಿಯಾದ ಹೋಮ್ಸ್ ಪಟ್ಟಣದ ಬಗ್ಗೆ ಕೇಳಿರಬೇಕಲ್ಲವೇ? ಸರ್ವಾಧಿಕಾರಿ ಅಸ್ಸಾದ್ ಆ ಪಟ್ಟಣದ ಮೇಲೆ ಹೀಗೆ ಮುರಕೊಂಡು ಬಿದ್ದ ಅಂದರೆ ಯರ್ರಾಬಿರ್ರಿ ಬಾಂಬಿನ ಮಳೆಗರೆದು, ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿ, ದೊಡ್ಡ ಪ್ರಮಾಣದ ಕಾರ್ಯಾಚರಣೆ ಮಾಡಿ ಪೂರ್ತಿ ನೆಲಸಮ ಮಾಡಿಬಿಟ್ಟ. ದೊಡ್ಡ ಪ್ರಮಾಣದ ಸಾವುನೋವುಗಳಾಗಿ ಎಲ್ಲ ಕಡೆ ಸುದ್ದಿಯಾಗಿತ್ತು. ಇವಳು ಅಂತಹ ಹೋಮ್ಸ್ ಪಟ್ಟಣದವಳು ಅಂತ ಹೇಳುತ್ತಾಳೆ. ಅಲ್ಲಿರುವ ಇವಳ ಕುಟುಂಬ ಹೇಗಿದೆಯೋ ಏನೋ? ಅಸ್ಸಾದ್ ಮಾಡಿದ ದಾಳಿಯಲ್ಲಿ ಇವರ ಕುಟುಂಬಕ್ಕೆ ಏನಾದರೂ ತೊಂದರೆಯಾಯಿಯೋ ಏನೋ? ಅಂತೆಲ್ಲ ಕೇಳಬೇಕು ಅನ್ನಿಸಿತು. ಆದರೆ ಕೇಳಲಿಲ್ಲ. ಊಹೆ ಮಾಡಿಕೊಳ್ಳಲೂ ಆಗದಂತಹ ದುರಂತಗಳು ಹೋಮ್ಸ್ ಪಟ್ಟಣದಲ್ಲಿ ನಡೆದುಹೋಗಿವೆ.

ಒಟ್ಟಿನಲ್ಲಿ ಅವಳು ಮೂಲತಃ ಸಿರಿಯಾದ ಹೋಮ್ಸ್ ಪಟ್ಟಣದವಳು ಅಂತ ತಿಳಿಯಿತು. 'ಮತ್ತೆ ನೀವು ಇಲ್ಲಿ ಟರ್ಕಿಯ ಇಸ್ತಾಂಬುಲ್ಲಿನಲ್ಲಿ ಹೇಗೆ? ಮತ್ತೆ ಡೆನ್ಮಾರ್ಕಿನ ಕೋಪನ್ ಹೇಗನ್ ಕಡೆ ಏನು ಪಯಣ?' ಅಂತ ಸಹಜವಾಗಿ ಕೇಳಿದೆ.

ಮುಂದಿನ ಕಥೆ ಮಜವಾಗಿತ್ತು. ಆಕೆಗೆ ಇಂಗ್ಲಿಷ್ ಮತ್ತು ನನಗೆ ಅರೇಬಿಕ್ ಬರದ ಕಾರಣ ಹೇಳಲು, ಕೇಳಲು, ತಿಳಿಯಲು ಸ್ವಲ್ಪ ಸಮಯ ಹಿಡಿಯಿತು. ಕೆಲವು ಕಡೆ trial & error ಆದರೂ ಒಂದು ಮಟ್ಟಿಗೆ ಅರ್ಥವಾಯಿತು.

ಆಕೆ ಇಜಿಪ್ಟಿನ ರಾಜಧಾನಿ ಕೈರೋದಲ್ಲಿರುವ ಅಮೇರಿಕನ್ ಯೂನಿವರ್ಸಿಟಿಯ ವಿದ್ಯಾರ್ಥಿನಿಯಂತೆ. ಅಲ್ಲಿದ್ದಾಗಲೇ ಯಾರೋ ಒಬ್ಬ ಡೆನ್ಮಾರ್ಕಿನ ವಿದ್ಯಾರ್ಥಿಯ ಪರಿಚಯವಾಗಿದೆ. ಸ್ನೇಹವಾಗಿ ನಂತರ ಪ್ರೇಮಕ್ಕೆ ತಿರುಗಿದೆ. ಈಗ ಅವನೊಂದಿಗೆ ವಿವಾಹ ನಿಕ್ಕಿಯಾಗಿದೆ. ಆತನ ಕುಟುಂಬವನ್ನು ಭೇಟಿಯಾಗಿ, ನಿಶ್ಚಿತಾರ್ಥ (engagement) ಮಾಡಿಕೊಳ್ಳಲು ಡೆನ್ಮಾರ್ಕಿಗೆ ಹೊರಟಿದ್ದಾಳೆ. ಹಾಗಾಗಿ ಕೈರೋನಿಂದ ಇಸ್ತಾಂಬುಲ್, ಇಸ್ತಾಂಬುಲ್ಲಿನಿಂದ ಕೋಪನ್ ಹೇಗನ್ನಿಗೆ ಪಯಣ.

ವಿಷಯ ಕೇಳಿ ಸಂತೋಷವಾಯಿತು. ಆಕೆಗೆ, ಆಕೆಯ ಕೈಹಿಡಿಯಲಿರುವ ಡೆನ್ಮಾರ್ಕಿನ ವರನಿಗೆ ಅಭಿನಂದನೆ ಸಲ್ಲಿಸಿದೆ. ಧನ್ಯವಾದ ಅಂದಳು. 'ನೀವು ಹೇಗೂ ಅಮೇರಿಕಾಗೆ ಡೆನ್ಮಾರ್ಕ್ ಮೂಲಕವೇ ಹೋಗುತ್ತಿದ್ದೀರಿ. ನಮ್ಮ ನಿಶ್ಚಿತಾರ್ಥಕ್ಕೂ ಬಂದು ಹೋಗಿ,' ಅಂತ ಆಮಂತ್ರಣ ಬೇರೆ ಕೊಟ್ಟುಬಿಟ್ಟಳು. ಕೇಳಿ ಹೃದಯ ತುಂಬಿಬಂತು. ಕೆಲವೇ ನಿಮಿಷಗಳ ಹಿಂದೆ ನಾವಿಬ್ಬರೂ ಅಪರಿಚಿತರು. ಮೇಲಿಂದ ಒಬ್ಬರ ಭಾಷೆ ಇನ್ನೊಬ್ಬರಿಗೆ ಸರಿಯಾಗಿ ತಿಳಿಯುತ್ತಲೂ ಇಲ್ಲ. ಆದರೆ ಭಾಷೆಯನ್ನು ಮೀರಿದ ಭಾವನೆಗಳಿಗೆ, ಸ್ನೇಹಕ್ಕೆ ಮಾತ್ರ ಯಾವದೇ ರೀತಿಯ ಅಡೆತಡೆ ಇಲ್ಲ. ಕೆಲವೇ ನಿಮಿಷಗಳ ಹಿಂದೆ ಪರಿಚಯವಾದ ನನ್ನನ್ನು ಬಂಧುವೋ ಮಿತ್ರನೋ ಎಂಬಂತೆ ಖಾಸಗಿ ಸಮಾರಂಭಕ್ಕೆ ಕರೆಯುತ್ತಿದ್ದಾಳೆ. ರಕ್ತ ಸಂಬಂಧಗಳೇ ಜೊಳ್ಳಾಗುತ್ತಿರುವ ಸಮಯದಲ್ಲಿ ಇದೊಂದು refreshing ಬದಲಾವಣೆ ಅಂತ ಅನ್ನಿಸಿತು.

'ವಿವಾಹದ ನಿಶ್ಚಿತಾರ್ಥ ನಡೆಯುತ್ತಿರುವದು ಸಂತಸದ ಸಂಗತಿ. ನೀನು ಒಬ್ಬಳೇ ಪ್ರಯಾಣ ಮಾಡುತ್ತಿರುವ ಹಾಗೆ ಕಾಣುತ್ತದೆ. ನಿನ್ನ ಕುಟುಂಬದವರು ಎಲ್ಲಿ? ಆಗಲೇ ಡೆನ್ಮಾರ್ಕಿಗೆ ಹೋಗಿ ತಲುಪಿದ್ದಾರೋ ಅಥವಾ ನಂತರ ಬರಲಿದ್ದಾರೋ?' ಅಂತ ಕೇಳಿದೆ.

'ನನ್ನ ಕುಟುಂಬದಲ್ಲಿ ಯಾರೂ ಇಲ್ಲ!' ಅಂದುಬಿಟ್ಟಳು.

ನನಗೆ ಒಂದು ಕ್ಷಣ ಏನು ಅಂತ ತಿಳಿಯಲಿಲ್ಲ. ಕುಟುಂಬದಲ್ಲಿ ಯಾರೂ ಇಲ್ಲ ಅಂದರೆ ಏನು ಅರ್ಥ? ಕೇಳಬೇಕು. ಏನಂತ ಕೇಳಲಿ? ಅಥವಾ ಅವಳು ಹೇಳಿದ್ದು ನನಗೆ ಸರಿಯಾಗಿ ತಿಳಿದಿಲ್ಲವೋ? ಗೊಂದಲವಾಯಿತು.

ಆಕೆಗೆ ನನ್ನ ಗೊಂದಲ ಅರ್ಥವಾಯಿತು ಅಂತ ಕಾಣುತ್ತದೆ.

'ಬಂಬಾ!' ಅಂದಳು. ಎರಡೂ ಕೈ ಮೇಲೆ ಎತ್ತಿ ಹಿಡಿದು ಏನೋ ಹಾವಭಾವ ಮಾಡಿದಳು.

ಹ್ಯಾಂ? ಏನು ಬಂಬಾ? ಓಹೋ! ಬಾಂಬೇ? ಬಾಂಬುಗಳೇ?? ಹೋಮ್ಸ್ ಪಟ್ಟಣದವಳು ಅಂತ ಮೊದಲೇ ಹೇಳಿದ್ದಾಳೆ. ಹಾಗಿದ್ದರೆ ಅದರ ಮೇಲಾದ ಬಾಂಬ್ ದಾಳಿಯ ಬಗ್ಗೆ ಏನೋ ಹೇಳುತ್ತಿರಬೇಕು ಅಂತ ನನ್ನ ಊಹೆ.

'ಬಂಬಾ ಅಂದರೆ?? ಬಾಂಬೇ?? ಅದೇ ಯುದ್ಧದಲ್ಲಿ ಹಾಕುತ್ತಾರಲ್ಲಾ ಆ ಬಾಂಬೇ? ಢಂ! ಅಂತ ಶಬ್ದ ಮಾಡುತ್ತದಲ್ಲಾ ಆ ಬಾಂಬೇ?' ಅಂತ ಸನ್ನೆ ಮಾಡಿ, ಢಂ ಅಂತ ಶಬ್ದ ಮಾಡಿ ಕೇಳಿದೆ.

ಹೌದು ಅಂದಳು.

'ಮುಂದೆ?' ಅನ್ನುವ ಲುಕ್ ಕೊಟ್ಟೆ.

'ಬಂಬಾ. ಬಹಳ ಬಹಳ ಬಂಬಾ. ಮೇಲಿಂದ ಬಿತ್ತು. ಒಂದರಮೇಲೊಂದು ನಿರಂತರವಾಗಿ ಬಿತ್ತು. ಅಪ್ಪ, ಅಮ್ಮ, ಅಣ್ಣ, ತಮ್ಮ ಎಲ್ಲ ಖಲಾಸ್!' ಅಂದಳು. ಬಾಂಬ್ ದಾಳಿಯಲ್ಲಿ ಇಡೀ ಕುಟುಂಬವೇ ಸರ್ವನಾಶವಾಗಿ ಹೋಗಿದೆ, ಎಲ್ಲರೂ ಸತ್ತು ಹೋಗಿದ್ದಾರೆ ಅನ್ನುವ ರೀತಿಯಲ್ಲಿ ಕೈಗಳನ್ನು ನಮಸ್ಕಾರ ಮಾಡುವ ರೀತಿಯಲ್ಲಿ ಜೋಡಿಸಿ, ಕಿವಿಗಳ ಪಕ್ಕ ತಂದು, ಸೀಟಿನ ಮಧ್ಯೆ ಇರುವ ವಿಭಜಕದ ಮೇಲೆ ತಲೆಯಿಟ್ಟು ಮಲಗಿ ತೋರಿಸಿದಳು. ಸತ್ತವರು ಮಲಗಿರುತ್ತಾರೆ ನೋಡಿ. ನನಗೆಲ್ಲಿ ಅರ್ಥವಾಯಿತೋ ಇಲ್ಲವೋ ಅಂತ ಆಕೆಗೆ ಸಂಶಯ ಬಂದಿರಬೇಕು. ಅದಕ್ಕೇ ಸತ್ತವರು ಮಲಗಿದ ನಟನೆ ಬೇರೆ ಮಾಡಿತೋರಿಸಿಬಿಟ್ಟಳು.

ನನ್ನ ಹೃದಯ ಕಿತ್ತಿ ಬಂತು. ದುಃಖ ಉಕ್ಕಿ ಬಂತು. ಸಿರಿಯಾದ ಹೋಮ್ಸ್ ಪಟ್ಟಣದಲ್ಲಿದ್ದ ಈಕೆಯ ಕುಟುಂಬದಲ್ಲಿ ಯಾರೂ ಬದುಕುಳಿದಿಲ್ಲ. ಸರ್ವಾಧಿಕಾರಿ ಅಸ್ಸಾದ್ ಮತ್ತು ಬಂಡುಕೋರರ ಮಧ್ಯೆ ನಡೆದ ಯುದ್ಧದಲ್ಲಿ ಎಲ್ಲರೂ ಖಲಾಸ್. ದೂರದ ಇಜಿಪ್ಟ್ ದೇಶದಲ್ಲಿ ಓದುತ್ತಿದ್ದ ಈಕೆ ಬಚಾವಾಗಿದ್ದಾಳೆ. ಹಾಗಾಗಿ ಈಕೆಯ ನಿಶ್ಚಿತಾರ್ಥದಲ್ಲಿ, ಮದುವೆಯಲ್ಲಿ ಮತ್ತೆ ಯಾವದೇ ಸಂಭ್ರಮಗಳಲ್ಲಿ ಪಾಲ್ಗೊಳ್ಳಲು ಈಕೆಯ ಕಡೆಯವರೂ ಯಾರೂ ಇಲ್ಲ.

ನನಗೆ ಬಹಳ ದುಃಖವಾಯಿತು. ಕೆಲವೇ ಕ್ಷಣಗಳ ಹಿಂದೆ ಆಕೆಯ ಪರಿಚವಾಗಿದ್ದು ಅದೆಷ್ಟು ಖುಷಿಯಾಗಿತ್ತು. ಒಬ್ಬರ ಭಾಷೆ ಒಬ್ಬರಿಗೆ ಬರುತ್ತಿರಲಿಲ್ಲ. ಒಬ್ಬರು ಮಾತಾಡುವಾಗ ಇನ್ನೊಬ್ಬರಿಗೆ ತುಂಬಾ ತಮಾಷೆಯನ್ನಿಸುತ್ತಿತ್ತು. ನಾಚುತ್ತಲೇ, ಒಂದು ತರಹ ಮುಜುಗರ ಪಡುತ್ತಲೇ ಮಾತಾಡಿ, ಪರಿಚಯ ಮಾಡಿಕೊಂಡು ಆತ್ಮೀಯರಾಗಿಬಿಟ್ಟಿದ್ದೆವು. ಅದೆಲ್ಲ ಸಂತೋಷ ಈಗ ಇಲ್ಲ. ಈಗ ವಿಪರೀತ ದುಃಖ, ಸುಡುವ ಹಾಳು ಸಂಕಟ.

ಆಕೆಗೆ ಏನೋ ಒಂದು ರೀತಿಯ ಸಮಾಧಾನ ಹೇಳಿದೆ. ಆಕೆ ಮಾತ್ರ ಸ್ಥಿತಪ್ರಜ್ಞಳಂತೆ ಕೇಳಿಸಿಕೊಂಡಳು. ನಾನು ಸಂತಾಪ ವ್ಯಕ್ತಪಡಿಸಿದ್ದು ಜಾಸ್ತಿ ತಿಳಿದ ಹಾಗೆ ಕಾಣಲಿಲ್ಲ. ನಾನು ಮತ್ತೆ ಮತ್ತೆ ಹೇಳುತ್ತಲೇ ಇದ್ದೆ. 'I am so sorry to hear all this. This is so terrible. I just can't believe such a thing can happen to anybody. I am so sorry, dear!'

ನನ್ನ ಮಾತುಗಳು ಖಾಲಿಯಾದಾಗ ಆಕೆ ಒಂದೇ ಮಾತು ಹೇಳಿದಳು. ಅದನ್ನು ಕೇಳಿದ ನಾನು ಮಾತ್ರ ದಂಗಾಗಿಹೋದೆ.

'ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್! ಅಲ್ಲಾಹುವಿಗೆ ಏನು ಸರಿಯನ್ನಿಸುತ್ತದೆಯೋ ಅದೇ ಆಗುತ್ತದೆ. ಅದನ್ನು ಎಲ್ಲರೂ ಒಪ್ಪಲೇಬೇಕು. ಎಲ್ಲ ಅಲ್ಲಾಹುವಿನ ಮರ್ಜಿ. ಮಕ್ತೂಬ್! ಎಲ್ಲ ವಿಧಿ!' ಅಂದಳು. ತನ್ನ ಸಹಜ ಮುಗಳ್ನಗೆ ಕೂಡ ಬೀರಿದಳು. ಅವುಗಳ ಹಿಂದೆ ಅದೆಷ್ಟು ದುಃಖವಿತ್ತೋ!?

ಈ ಕಥೆ ಹೇಳಿದವ ಜಾನ್. ನನ್ನ ಹಿರಿಯ ಮಿತ್ರ. ಕೊಲೊರಾಡೊದ ಡೆನ್ವರ್ ಶಹರದಲ್ಲಿ ವೈದ್ಯ. ಈಗ ಕೆಲವು ತಿಂಗಳ ಹಿಂದೆ ಟರ್ಕಿ ದೇಶಕ್ಕೆ ಪ್ರವಾಸ ಹೋಗಿಬಂದನಂತೆ. ಆಗ ಆದ ಕಥೆ. ಜಾನ್ ನನಗೆ ಕಥೆ ಹೇಳುತ್ತಿದ್ದಾಗ ಆತನ ಪತ್ನಿ ಆನ್ನಿ (Annie) ಅವನ ಪಕ್ಕದಲ್ಲಿ ಕೂತಿದ್ದಳು. ಆಕೆ ದುಃಖದಿಂದ ಬಿಕ್ಕಿದಳು. ಸಂತೈಸುವವರ ಹಾಗೆ ಜಾನ್ ಆಕೆಯ ಮುಂಗೈ ಒತ್ತಿದ. ಆಕೆ ಅವನ ಎದೆಯಲ್ಲಿ ಮುಖ ಹುಗಿಸಿ ಮತ್ತೆ ಬಿಕ್ಕಿದಳು. ನಾನು ನೋಡುತ್ತಲೇ ಉಳಿದೆ.

ನನಗೆ ಅನ್ನಿಸಿದ್ದು ಇಷ್ಟು. 'ಆ ಸಿರಿಯಾದ ಯುವತಿಯಂತೆ ಎಲ್ಲವೂ ದೇವರ ಇಚ್ಛೆ ಅಂತ ಹೇಳುವ ವಿವೇಕ ನಮಗೆ ಯಾವಾಗ ಬರುತ್ತದೆ? ದೇವರು ಅಂತಾದರೂ ಅನ್ನಿ ಅಥವಾ ಯಾವದೋ ಒಂದು ಅಗೋಚರ ಶಕ್ತಿ ಅನ್ನಿ ಅಥವಾ ವಿಧಿ ಅಂತಲೇ ಅಂದುಬಿಡಿ. ಓಕೆ. ಆದರೆ ಅಂತಹ ಅಚಲ (unshakable) ಶ್ರದ್ಧೆ ಬರಲು ಸಾಧ್ಯವೇ? ಅಂತಹ ಶ್ರದ್ಧೆಯೇ ತಾನೇ ಎಷ್ಟೋ ಜನರನ್ನು ಇಂದೂ ಜೀವಂತವಾಗಿ ಇಟ್ಟಿರುವದು? ಅದಿಲ್ಲದಿದ್ದರೆ ಅಷ್ಟೇ ಮತ್ತೆ!'

ಅಂತಹ ಶ್ರದ್ಧೆಯುಳ್ಳವರು ಬಹಳ ಕಡಿಮೆ. ಎಂತಹ ಭಕ್ತರೂ ಸಹ ತಮಗೆ ಸಹ್ಯವಾಗದ್ದು ಆಗಿಹೋದಾಗ ದೇವರಿಗೇ ಶಾಪ ಹಾಕೇಬಿಡುತ್ತಾರೆ. 'ದೇವರಾಟ ತಪ್ಪು. ನಂಬಿದ ದೇವರು ದ್ರೋಹ ಮಾಡಿದ,' ಅಂದುಬಿಡುತ್ತಾರೆ. ಅದು ಒಂದು ರೀತಿಯ ignorance as well as arrogance.

ಜಾನ್ ಈ ಕಥೆ ಹೇಳುವ ದಿನಗಳಲ್ಲೇ ಒಂದು ಪುಸ್ತಕ ಓದುತ್ತಿದ್ದೆ. ಆ ಪುಸ್ತಕ - Revealing Maya. ಅದ್ವೈತ ವೇದಾಂತದ ತಿರುಳನ್ನು ಕಥೆಯ ಮೂಲಕ ಹೇಳುವ ಒಂದು ಒಳ್ಳೆಯ ಪ್ರಯತ್ನ. ಆ ಪುಸ್ತಕ ಓದುತ್ತಿರುವಾಗ ಕೆಳಗಿನ ವಾಕ್ಯಗಳನ್ನು highlight ಮಾಡಿಕೊಂಡಿದ್ದೆ. ಸಿರಿಯನ್ ಯುವತಿಯ ಕಥೆ ಕೇಳಿದಾಗ ಅವೇ ಮತ್ತೆ ನೆನಪಿಗೆ ಬಂದವು. ಮಕ್ತೂಬ್! ಮಕ್ತೂಬ್ ಅಂದರೆ ವಿಧಿ, ವಿಧಿಲಿಖಿತ ಅಂತ ಅರ್ಥ.

“Okay, let’s get to the arrogance part. I don’t see where arrogance fits in at all.” He nodded several times. “All right, you and all those who purport to believe in God claim that all is God’s will. I take this to mean that whatever happens is due to God’s will. ‘Thy will be done Lord.’ Don’t you agree?” I thought that I could see where he was going with this. I said, “Sure, Thy will be done.” “So why is it that whenever something you consider bad or not to your liking occurs, you question God’s will? Is it not arrogance on your part to question God’s will? I see it as arrogance any time that you presume to know better than God how things should be.”

ಅಂತರ್ಯುದ್ಧದಲ್ಲಿ ಸರ್ವನಾಶವಾದ ಹೋಮ್ಸ್ ಪಟ್ಟಣದ ಒಂದು ಮನಕಲಕುವ ದೃಶ್ಯ

2 comments:

sunaath said...

ಮನ ಕಲಕುವ ಸಂಗತಿ. ಬದುಕಿನಲ್ಲಿ ಎಷ್ಟೋ ಸಂಕಷ್ಟಗಳು ಬರುತ್ತವೆ, ಆದರೆ ಬಾಳು ಮುಂದುವರಿಯಲೇ ಬೇಕಲ್ಲವೆ?
ನಮ್ಮ ಹೋರಾಟವನ್ನು ನಾವು ಮಾಡಲೇ ಬೇಕು, ಮುಂದಿನದು ದೇವರಿಚ್ಛೆ. ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ!
ಒಂದು ಹೃದಯಸ್ಪರ್ಶಿ ಘಟನೆಯನ್ನು ತಿಳಿಸಿದಿರಿ. ಧನ್ಯವಾದಗಳು.

Mahesh Hegade said...

ನೀವು ಹೇಳಿದ್ದು ಸರಿ ಇದೆ, ಸುನಾಥ್ ಸರ್!