ನಿನ್ನೆ ನವೆಂಬರ್ ೧. ಕನ್ನಡ ರಾಜ್ಯೋತ್ಸವ. ಹಳೆಯ ತಮಾಷೆಯ ಘಟನೆಯೊಂದು ಮತ್ತೊಮ್ಮೆ ನೆನಪಾಯಿತು.
೧೯೮೦ - ೮೨ ರ ಸಮಯ. 'ಗೋಕಾಕ ವರದಿ ಜಾರಿಗೆ ಬರಲಿ,' ಅಂತ ಚಳುವಳಿ ರಾಜ್ಯಾದಂತ ಜೋರಾಗಿ ನಡೆಯುತ್ತಿತ್ತು. ನಮ್ಮ ಧಾರವಾಡದಲ್ಲೂ ಚಳುವಳಿಯ ಕಾವು ಸಾಕಷ್ಟು ಜೋರಾಗಿತ್ತು. ಮತ್ತೆ ಗೋಕಾಕರು ಧಾರವಾಡದಲ್ಲಿ ಬಹಳ ವರ್ಷಗಳ ಕಾಲ ಮಾಸ್ತರಿಕೆ ಮಾಡಿದ್ದರು. ಹಾಗಾಗಿ ಗೋಕಾಕರು ಮತ್ತು ಅವರು ತಯಾರಿಸಿದ ವರದಿ ಅಂದರೆ ಧಾರವಾಡ ಮಂದಿಗೆ ಏನೋ ಒಂದು ತರಹದ ಆತ್ಮೀಯತೆ, ಅಕ್ಕರೆ. ಮತ್ತೆ ಆ ಕಾಲದಲ್ಲಿ ಧಾರವಾಡದಲ್ಲಿ ನಿಜವಾದ passionate ಚಳುವಳಿಗಾರರೂ ಇದ್ದರು.
ಎಲ್ಲದೂ ಕನ್ನಡಮಯವಾಗಬೇಕು ಅಂತ ಆಶಯ. ಒಳ್ಳೆಯದೇ. ಎಲ್ಲ ನಾಮಫಲಕಗಳು ಕನ್ನಡದಲ್ಲಿ ಇರಬೇಕು ಅಂತ ಫತ್ವಾ ಜಾರಿಯಾಯಿತು. ಅದು ಹೆಚ್ಚಾಗಿ ಅಂಗಡಿ, ಬಿಸಿನೆಸ್ಸು, ಹೋಟೆಲ್ಲು ಅಂತಹವುಗಳ ನಾಮಫಲಕಗಳಿಗೆ ಅನ್ವಯವಾಗುತ್ತದೆ ಅಂತ ಎಲ್ಲರೂ ತಿಳಿದರು. ಫತ್ವಾ ಹೊರಡಿಸಿದವರ ಮೂಲ ಉದ್ದೇಶವೂ ಅದೇ ಇತ್ತು ಅಂತ ಕಾಣುತ್ತದೆ. ಅದರ ಪ್ರಕಾರ ಅಂಗಡಿ ಜನ ಎಲ್ಲ ಕನ್ನಡದಲ್ಲಿ ಬೋರ್ಡುಗಳನ್ನು ಬರೆಯಿಸಿ ಹಾಕಿಕೊಂಡರು. ಯಾರು ಕನ್ನಡಕ್ಕೆ ಶಿಫ್ಟ್ ಆಗಲಿಲ್ಲವೋ ಅಂತವರ ಅಂಗಡಿ ಮುಂದೆ ಪ್ರತಿಭಟನೆ, ಇಂಗ್ಲೀಷ್ ಬೋರ್ಡುಗಳಿಗೆ ಡಾಂಬರ್ ಬಳಿಯುವದು ಇತ್ಯಾದಿ ಆಯಿತು ಅಂತ ಪತ್ರಿಕೆಗಳಲ್ಲಿ ಬಂದಿತ್ತು. ಡಾಂಬರ್ ಡಬ್ಬಿ, ಪೇಂಟ್ ಬ್ರಷ್ ಹಿಡಿದು ನಿಂತಿದ್ದ ವೀರಕೇಸರಿ ಡಾಂಬರ್ ಏಜೆಂಟುಗಳ ಚಿತ್ರ ಮರುದಿನ ಪೇಪರಿನಲ್ಲಿ ಬಂತು.
ನಮ್ಮ ಏರಿಯಾದಲ್ಲೂ ಕೆಲವು ಜನ ಕನ್ನಡ ಹೋರಾಟಗಾರರು ಇದ್ದರು. ಅವರಿಗೆ ಅದು ಏನು ಹುಳ ಕಡಿಯಿತೋ ಗೊತ್ತಿಲ್ಲ. ಒಂದು ವಿಚಿತ್ರ ಕೆಲಸ ಮಾಡಲಿಕ್ಕೆ ಹೊರಟುಬಿಟ್ಟರು. 'ಅಂಗಡಿಗಳ ನಾಮಫಲಕಗಳು ಮಾತ್ರ ಕನ್ನಡಕ್ಕೆ ಬದಲಾದರೆ ಸಾಲದು. ಜನರು ತಮ್ಮ ತಮ್ಮ ಮನೆ ಮುಂದೆ, ಮನೆ ಬಾಗಿಲಿಗೆ ಹಾಕಿಕೊಂಡಿರುವ ನಾಮಫಲಕಗಳನ್ನೂ ಕನ್ನಡಕ್ಕೆ ಬದಲಾಯಿಸಬೇಕು!' ಹಾಗಂತ ಒಂದು ಪತ್ರಿಕಾ ಪ್ರಕಟಣೆ ಕೂಡ ಕೊಟ್ಟುಬಿಟ್ಟರು. ಅದು 'ಸಂಯುಕ್ತ ಕರ್ನಾಟಕ'ದಲ್ಲಿ ಬಂದೂ ಬಿಟ್ಟಿತು. 'ಎಲ್ಲರೂ ತಮ್ಮ ತಮ್ಮ ಮನೆ ಮುಂದಿರುವ ನಾಮಫಲಕಗಳನ್ನು ಕನ್ನಡದಲ್ಲಿಯೇ ಬರೆಯಿಸಬೇಕು. ಒಂದು ತಿಂಗಳು ಕಾಲಾವಕಾಶವಿರುತ್ತದೆ. ಆ ಅವಧಿಯ ನಂತರವೂ ಯಾರ ಮನೆಯ ಮುಂದಾದರೂ ಬೇರೆ ಭಾಷೆಯಲ್ಲಿ ನಾಮಫಲಕ ಕಂಡುಬಂದರೆ ಅಂತವರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವದು,' ಅಂತ ಸುದ್ದಿ. ಜೊತೆಗೆ ಪ್ರಕಟಣೆ ಕೊಟ್ಟ ಹೋರಾಟಗಾರರ ಹೆಸರುಗಳು, ಅವರ ಹುದ್ದೆಗಳು, ಅವರುಗಳು ಕನ್ನಡಕ್ಕೆ ಕೊಟ್ಟ ಕೊಡುಗೆಗಳು, ಮಾಡಿದ ಸಾಧನೆಗಳು ಎಲ್ಲ ಇದ್ದವು. ಫ್ರೀ ಪಬ್ಲಿಸಿಟಿ.
ಆಗ ನಾನು ಇನ್ನೂ ಮೂರನೇ ಅಥವಾ ನಾಲ್ಕನೇ ಕ್ಲಾಸಿನಲ್ಲಿದ್ದೆ. ಕನ್ನಡ ಓದುವದನ್ನು ಬರೋಬ್ಬರಿ ಕಲಿತಿದ್ದೆ. ಓದುವ ಹುಚ್ಚು ಸುಮಾರು ಹತ್ತಿತ್ತು. ಬರೆಯುವ ಹುಚ್ಚು ಸಣ್ಣ ಪ್ರಮಾಣದಲ್ಲಿ ಹತ್ತಿತ್ತು. ಶಾಲೆಯಲ್ಲಿ ನಾಲ್ಕನೇ ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದ ಈಗ ದಿವಂಗತರಾಗಿರುವ ಶ್ರೀ ಕಲ್ಲಿನಾಥ ಕಾತ್ರಾಳೆ ಸರ್ ಸಣ್ಣ ಪ್ರಮಾಣದ ಸಾಹಿತಿಗಳಾಗಿದ್ದರು. ಬರೆಯಲು ಅವರೇ ಸ್ಫೂರ್ತಿ. ಮತ್ತೆ ಮನೆಯಲ್ಲಿ ಎಲ್ಲರೂ ಸಿಕ್ಕಾಪಟ್ಟೆ ಓದುವವರೇ. ಹಾಗಾಗಿ ನಾನೂ bookworm ಆಗಿದ್ದು ದೊಡ್ಡ ಮಾತಲ್ಲ.
'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯನ್ನು ಮೇಲಿಂದ ಕೆಳಗಿನ ತನಕ ಫುಲ್ ಓದುತ್ತಿದ್ದೆ. ಯಾವದನ್ನೂ ಬಿಡುತ್ತಿರಲಿಲ್ಲ. 'ಎಮ್ಮೆ ಕಳೆದಿದೆ', 'ಕೋಣ ಸಿಕ್ಕಿದೆ', ಅದು, ಇದು ಎಲ್ಲ ಫುಲ್ ಸ್ಕ್ಯಾನಿಂಗ್ ಮತ್ತು ಫುಲ್ ರೀಡಿಂಗ್. ಆವಾಗಲೇ ಈ ಕನ್ನಡ ಹೋರಾಟಗಾರರು ಕೊಟ್ಟಿದ್ದ ಪ್ರಕಟಣೆ ಕಣ್ಣಿಗೆ ಬಿತ್ತು.
ಬೆಳಿಗ್ಗೆ ಸುಮಾರು ಒಂಬತ್ತರ ಸಮಯ. ಅಮ್ಮ ಮುಂಜಾನೆಯ ತಿಂಡಿ ಪಂಡಿ ಮಾಡಿ, ಕೊಟ್ಟು, ಮುಗಿಸಿ, ಮಧ್ಯಾನದ ಅಡುಗೆ ತಯಾರಿ, ಇತ್ಯಾದಿ ಕೆಲಸ ಮಾಡುತ್ತಿದ್ದಳು. ತಂದೆಯವರು ಕೆಲಸಕ್ಕೆ ಹೋಗುವ ಮುನ್ನದ ಸ್ನಾನ, ಪೂಜೆ, ಅದರಲ್ಲಿ, ಇದರಲ್ಲಿ ತೊಡಗಿದ್ದರು ಅಂತ ಕಾಣುತ್ತದೆ.
ನಾನು ಮನೆ ಜನರಿಗೆ announcement ಮಾಡಿದೆ. 'ಏ, ಎಲ್ಲಾರೂ ಕೇಳ್ರಿ ಇಲ್ಲಿ. ಪೇಪರಿನ್ಯಾಗ ಸುದ್ದಿ ಬಂದದ ನೋಡ್ರಿ. ಎಲ್ಲಾರೂ ಅವರವರ ಮನಿ ಮುಂದಿನ ನಾಮಫಲಕ ಅಂದ್ರ ನೇಮ್ ಪ್ಲೇಟ್ ಕನ್ನಡದಾಗೇ ಬರೆಸಬೇಕಂತ. ಒಂದು ತಿಂಗಳು ಟೈಮ್ ಕೊಟ್ಟಾರ. ಕನ್ನಡದಾಗ ಬರೆಸಲಿಲ್ಲ ಅಂದ್ರ ಅಂತವರ ಮನಿ ಮುಂದ ಸ್ಟ್ರೈಕ್ ಮಾಡ್ತಾರಂತ,' ಅಂತ ಒದರಿ ಹೇಳಿದೆ. ನಮ್ಮ ಮನೆ ಮುಂದಿನ ಬಾಗಿಲ ಪಕ್ಕದಲ್ಲಿ ಕೂಡ ಒಂದು ನೇಮ್ ಪ್ಲೇಟ್ ಇತ್ತು. ಆದರ ಮೇಲೆ ತಂದೆಯವರ ಹೆಸರು ಇತ್ತು. ಅಷ್ಟೇ. ಅದು ಬಿಟ್ಟರೆ ನಮ್ಮ ಮನೆಗೆ ಹೆಸರಾಗಲಿ ಅಥವಾ ಮತ್ಯಾವದೇ ತರಹದ ನಾಮಫಲಕ ಇತ್ಯಾದಿ ಇರಲಿಲ್ಲ. ಇದ್ದ ಆ ಒಂದು ಸಣ್ಣ ನಾಮಫಲಕ ಇಂಗ್ಲೀಷಿನಲ್ಲೇ ಇತ್ತು. ಅದು ಸುಮಾರು ಇಪ್ಪತ್ತು ವರ್ಷ ಹಿಂದಿನದು ಅಂದರೆ ೧೯೬೦ ರ ಕಾಲದ್ದು. ತಂದೆಯವರು ನೌಕರಿ ಶುರುಮಾಡಿ, ಮನೆ ಅಂತ ಮಾಡಿಕೊಂಡಾಗ ಮಾಡಿಸಿದ್ದು ಅಂತ ಕಾಣುತ್ತದೆ. ಮೊದಲು ಮಾಳಮಡ್ಡಿಯ ಭಾಡಿಗೆ ಮನೆ ಬಾಗಿಲಲ್ಲಿ ಇತ್ತು. ಹೊಸದಾಗಿ ಮನೆ ಕಟ್ಟಿಕೊಂಡು ಕವಿವಿ ಕೆಳಗೆ ಇರುವ ನಿರ್ಮಲ ನಗರಕ್ಕೆ ಬಂದಾಗ ಅದೂ ಜೊತೆಗೆ ಬಂದು, ಹೊಸ ಮನೆ ಗೋಡೆ ಮೇಲೆ ಮುಂಬಾಗಿಲಿನ ಪಕ್ಕ ಸ್ಥಾಪಿತವಾಗಿತ್ತು.
'ಅಲ್ಲಿ ಕೂತು ಏನು ಒದರ್ತಿಯೋ??' ಅಂತ ಆಕಡೆಯಿಂದ ತಾಯಿಯವರು ಒದರಿದರು. ನಾನು ಸಹಜ ಮಾತಾಡಿದ್ದೇ ಇಲ್ಲ. ಒದರಾಡುವದು, ಚೀರಾಡುವದು, ಬೈದಾಡುವದು ನಮ್ಮ ಮಾತಿನ ಸಹಜ ಶೈಲಿ.
ಅವರಿಗೆ ಸರಿ ಕೇಳಿಸಲಿಲ್ಲ ಅಂತ ತಿಳಿಯಿತು. ಆಕಡೆ ಹೋಗಿ ಮತ್ತೆ ಹೇಳಿದೆ. ಅದೇ ಸುದ್ದಿ.
'ಹಾಂಗೇನು? ಯಾರು ಹಾಂಗಂತ ಸ್ಟೇಟ್ಮೆಂಟ್ ಕೊಟ್ಟಾರ?' ಅಂತ ಕೊಂಚ ಅಸಹನೆ ಮಿಶ್ರಿತ ಆಕ್ರೋಶಭರಿತ ಧ್ವನಿಯಲ್ಲಿ ಅಮ್ಮ ಕೇಳಿದರು. ಅವರಿಗೆ ಅಂತದ್ದೆಲ್ಲ ನೌಟಂಕಿ ಸ್ಟ್ರೈಕ್ ಅಂದರೆ ಒಟ್ಟೇ ಇಷ್ಟವಾಗುವದಿಲ್ಲ. ಸ್ಟ್ರೈಕ್ ಮಾಡಲಿಕ್ಕೂ ಕಾರಣವಿರಬೇಕು. ಅದಕ್ಕೊಂದು ನೈತಿಕ ಸತ್ವ ಇರಬೇಕು ಅಂತ ಅವರ ನಿಲುವು.
ಪತ್ರಿಕೆಯಲ್ಲಿ ಬಂದಿದ್ದ ಕೆಲವು ಜನರ ಹೆಸರು ಹೇಳಿದೆ. ಮೊದಲೇ ಹೇಳಿದಂತೆ ಎಲ್ಲ ನಮ್ಮ ಏರಿಯಾದ ಪ್ರಭೃತಿಗಳೇ. ನಮ್ಮ ಏರಿಯಾದ so called ದೊಡ್ಡ ಹೋರಾಟಗಾರರೇ, ಬುದ್ಧಿಜೀವಿಗಳೇ. ಕೆಲವರು ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿದ್ದರು. ಹೆಚ್ಚಿನವರು ಟೈಮ್ ಪಾಸ್ ಹೋರಾಟಗಾರರು. ಹೆಚ್ಚಿನವರು ಮಾಸ್ತರ್ ಮಂದಿ. ಮೊದಲೇ ಕೆಲಸ ಕಮ್ಮಿ. ಅದನ್ನೂ ಸರಿಯಾಗಿ ಮಾಡದೇ, ಬರೀ ಇಂತಹದೇ ಎಡಬಿಡಂಗಿ ಕೆಲಸ ಮಾಡುತ್ತ, ಸಂಜೆಯಾದೊಡನೆ ರಸ್ತೆ ಕೂಟುಗಳಲ್ಲಿ ಹಾಳು ಹರಟೆ ಹೊಡೆಯುತ್ತ, ಊರ ಸುದ್ದಿ ಮಾತಾಡುತ್ತ, ರಾತ್ರಿ ಮನೆ ಕಡೆ ಹೋಗಿ, ಊಟ ಗೀಟ ಮಾಡಿ, ಮುಚ್ಚಾಕಿಕೊಂಡು ಮಲಕೊಂಡುಬಿಡುವ ದೊಡ್ಡ ಮಂದಿ. ಎಲ್ಲರ ಪರಿಚಯವಿತ್ತು. ಹೆಚ್ಚಿನವರೊಂದಿಗೆ ಸಾಕಷ್ಟು ಆತ್ಮೀಯತೆ ಕೂಡ ಇತ್ತು. ಹಾಗಂತ ಅವರು ಮಾಡಿದ್ದೆಲ್ಲ ಸರಿ ಅಂತ ಒಪ್ಪಿಕೊಳ್ಳಬೇಕು ಅಂತೇನೂ ಇಲ್ಲವಲ್ಲ. ನಮ್ಮ ಎಲ್ಲ ಸಂಬಂಧಗಳೂ ಹಾಗೆಯೇ. It's OK to disagree without being disagreeable.
'ಬರೇ ಇದs ಆತು ಈ ದೊಡ್ಡ ಮಂದಿದು! ಕನ್ನಡ ಭಾಷಾದ ಮೇಲೆ ಪ್ರೀತಿ, ಪ್ರೇಮ ತೋರಿಸಲಿಕ್ಕೆ ಬ್ಯಾರೆ ಏನೂ ಹೊಳಿಲಿಲ್ಲ ಏನು ಇವರಿಗೆ? 'ಮನಿ ಮುಂದಿನ ನೇಮ್ ಪ್ಲೇಟ್ ಬದಲು ಮಾಡ್ರೀ. ಕನ್ನಡದಾಗ ಬರೆಸಿರಿ,' ಅಂತ ಅನ್ಕೋತ್ತ. ಬರೇ ಹುಚ್ಚಾಟ,' ಅಂತ ಅಮ್ಮ ಯಥಾ ಪ್ರಕಾರ ಅವರದ್ದೇ ಶೈಲಿಯಲ್ಲಿ brush off ಮಾಡಿದರು.
ಆದರೆ ನಾನು ಬಿಡಬೇಕಲ್ಲ. ಹೆಚ್ಚಿನ build up ಕೊಟ್ಟೆ. 'ಏ, ಏನಂತ ತಿಳ್ಕೊಂಡೀ? ನೇಮ್ ಪ್ಲೇಟ್ ಕನ್ನಡದಾಗ ಬರೆಸಲಿಲ್ಲ ಅಂದ್ರ ಮನಿ ಮುಂದ ಬಂದು ಸ್ಟ್ರೈಕ್ ಮಾಡ್ತಾರಂತ. ನಮ್ಮನಿ ಮುಂದಿನ ನೇಮ್ ಪ್ಲೇಟ್ ಇಂಗ್ಲೀಷ್ ಒಳಗದ. ಏನು ಮಾಡೋಣ? ಅವರು ಬಂದು ಸ್ಟ್ರೈಕ್ ಮಾಡಿಬಿಟ್ಟರೇ?!' ಅಂತ ಕೇಳಿದೆ. ನನಗೆ ನನ್ನದೇ ಟೆನ್ಶನ್, ಆತಂಕ. ಯಾರಿಗೆ ಅರ್ಥವಾಗಬೇಕು?
ಇದನ್ನು ಕೇಳಿದ ತಂದೆಯವರು ನಕ್ಕರು. 'ಅದಕ್ಯಾಕ ಚಿಂತಿ ಮಾಡ್ತಿಯೋ? ಇನ್ನೊಂದು ನೇಮ್ ಪ್ಲೇಟ್ ಮಾಡಿಸೋಣ ತೊಗೋ. ಶುದ್ದ ಕನ್ನಡದಾಗ!' ಅಂತ ಹೇಳಿದರು. ಅವರದ್ದು 'take it easy' ಅನ್ನುವ ನಿಯಮ. ಎಲ್ಲದಕ್ಕೂ ತಲೆ ಬಿಸಿ ಮಾಡಿಕೊಳ್ಳಬಾರದು. ತಲೆ ಬಿಸಿ ಮಾಡಿಕೊಳ್ಳಬೇಕಾದ ವಿಷಯಗಳು ಬಹಳ ಕಮ್ಮಿಯಿರುತ್ತವೆ. ಸಣ್ಣ ಸಣ್ಣ ವಿಷಯಗಳಿಗೆ ತಲೆ ಕೆಡಿಸಿಕೊಂಡರೆ ಅದು ವ್ಯರ್ಥ. ಇದು ಅವರ ಫಿಲಾಸಫಿ. very practical ಮನೋಭಾವ ಬಿಡ್ರಿ ಅದು. ನಮಗೋ ಎಲ್ಲದಕ್ಕೂ ಚಿಂತೆ, ಟೆನ್ಶನ್.
ತಂದೆಯವರ ಮಾತು ಕೇಳಿದ ಅಮ್ಮ ರೈಸ್ ಆದರು. 'ಏ, ಏನು ಕನ್ನಡದಾಗ ಹೊಸ ನೇಮ್ ಪ್ಲೇಟ್ ಮಾಡಿಸಲಿಕ್ಕೆ ಹೊಂಟೀರಿ? ಸುಮ್ಮನಿರ್ರಿ. ನಾನೂ ನೋಡ್ತೇನಿ ಯಾರು ಬಂದು ಏನು ಸ್ಟ್ರೈಕ್ ಮತ್ತೊಂದು ಮಾಡ್ತಾರ ಅಂತ. ಏನು ಆಟಾ ಹಚ್ಚ್ಯಾರ ಏನು?' ಅಂತ ಅಬ್ಬರಿಸಿದವರು ಅಮ್ಮ. ಮೊದಲೇ ಹೇಳಿದೆನಲ್ಲ ಅವರಿಗೆ ಇಂತಹ ಹುಚ್ಚಾಟಗಳು, ನೌಟಂಕಿಗಳು ಒಟ್ಟೇ ಸೇರುವದಿಲ್ಲ ಅಂತ.
'ಇರಲಿ ತೊಗೋ. ಎಲ್ಲಾ ಕಡೆ ಅಂಗಡಿ ಬೋರ್ಡ್ ಬದಲಾವಣೆ ಆಂದೋಲನ ನಡೆದದ. ನಮ್ಮ ಏರಿಯಾ ಒಳಗ ಅಂಗಡಿ ಜಾಸ್ತಿ ಇಲ್ಲ. ಹಾಂಗಾಗಿ ಮನಿ ನೇಮ್ ಪ್ಲೇಟ್ ಚೇಂಜ್ ಮಾಡಿಸಲಿಕ್ಕೆ ಹೊಂಟಿರಬೇಕು. ಇನ್ನೊಂದು ನೇಮ್ ಪ್ಲೇಟ್ ಮಾಡಿಸೋಣ ತೊಗೋ. ಕನ್ನಡದಾಗ ಚಂದಾಗಿ ಬರೆಸೋಣ. ಏನು ಒಂದು ಇಪ್ಪತ್ತು ಮೂವತ್ತು ರೂಪಾಯಿ ಆಗಬಹುದು,' ಅಂದರು ತಂದೆಯವರು. cool as cucumber ಟೈಪಿನ ಕೂಲ್ ಮಂದಿ ಅವರು.
'ಏ, ನೀವು ಸುಮ್ಮನ ಇರ್ರಿ. ರೊಕ್ಕದ ವಿಷಯ ಅಲ್ಲ. ನೇಮ್ ಪ್ಲೇಟ್ ಗೀಮ್ ಪ್ಲೇಟ್ ಏನೂ ಹೊಸಾದು ಮಾಡಿಸೋ ಜರೂರತ್ತಿಲ್ಲ. ಈ ಕನ್ನಡ ಮಂದಿದು ಇದ್ದಿದ್ದೇ. ಬರೇ ಮಂಗ್ಯಾನಾಟ. ಶುದ್ಧ ನೌಟಂಕಿ,' ಅಂದರು ಅಮ್ಮ. ಆಟದಿಂದ ಹುಚ್ಚಾಟ, ಹುಚ್ಚಾಟದಿಂದ ಮಂಗ್ಯಾನಾಟವಾಯಿತು ಅಂದರೆ ಅವರಿಗೆ ಕೆಟ್ಟ ಸಿಟ್ಟು, ಆಕ್ರೋಶ ಬರುತ್ತಿದೆ ಅಂತ ಅರ್ಥ. ನಾನೋ ಮೊದಲೇ ಪ್ರಳಯಾಂತಕ. ಅವರಿಗೆ ಏನೂ ಸಿಟ್ಟು ಬರದಿದ್ದಾಗಲೇ ಕೆತ್ತೆಬಜೆ ಕಿತಬಿ ಮಾಡಿ ಅಮ್ಮನ ಬೀಪಿ ಹೆಚ್ಚಿಸುತ್ತಿದ್ದೆ. ಈಗಂತೂ ಅಮ್ಮನಿಗೆ ಸಿಕ್ಕಾಪಟ್ಟೆ irritate ಆಗಿಬಿಟ್ಟಿದೆ. ಹಾಂಗೆ ಬಿಟ್ಟರೆ ಹ್ಯಾಂಗೆ? ಹಾಗೆಂದುಕೊಂಡು ನನ್ನ ಕೆತ್ತೆಬಜೆ ಕಾರ್ಬಾರದ notch ಒಂದು ಸುತ್ತು ಏರಿಸಿದೆ.
'ಅವರು ಬಂದು ಮನಿ ಮುಂದ ಸ್ಟ್ರೈಕ್ ಮಾಡಿದರೆ? ಆವಾಗ ಏನು ಮಾಡೋದು? ಕನ್ನಡ ಹೋರಾಟಗಾರರು ಮನಿ ಮುಂದ ಬಂದು ಒದರಾಟ, ಚೀರಾಟ ಎಲ್ಲ ಮಾಡಿ, ಸ್ಟ್ರೈಕ್ ಮಾಡಿದರೆ? ಆವಾಗ???' ಅಂತ ಫಿಟ್ಟಿಂಗ್ ಇಟ್ಟೆ. ಅಷ್ಟು ಸಾಕಾಯಿತು ಅಮ್ಮನ ಜ್ವಾಲಾಮುಖಿ ಸ್ಪೋಟವಾಗಲಿಕ್ಕೆ.
'ಬರಲಿ ನೋಡೋಣ. ಒಬ್ಬೊಬ್ಬರದ್ದೂ ಕೈ ಹೀಂಗ ತೊಗೋತ್ತೀನಿ ಅಂದ್ರ ನೀವೆಲ್ಲಾ ನೋಡೀರಂತ. ಹಾಕ್ಕೊಂಡು ಥಡಾಯಿಸ್ತಿನಿ. ಏನು ಆಟಾ ಹಚ್ಚ್ಯಾರ ಏನು?' ಅಂತ ಶುದ್ಧ ಮಾಳಮಡ್ಡಿ ವೈಷ್ಣವ ಆಚಾರ್ರ ಭಾಷೆಯಲ್ಲಿ ಹೂಂಕರಿಸಿತು ಅಮ್ಮ. ಅಮ್ಮನಿಗೆ ಸಿಟ್ಟು ಬಂದಾಗ ಹವ್ಯಕ ಭಾಷೆ ಗೋವಿಂದವಾಗಿ ಏಕ್ದಂ ಆ ಖಡಕ್ ಭಾಷೆ ಬಂದುಬಿಡುತ್ತದೆ. ಯಾಕೆಂದರೆ ಅಮ್ಮ ತಮ್ಮ ಹತ್ತನೇ ವಯಸ್ಸಿನಲ್ಲೇ, ನಾಲ್ಕನೇ ಕ್ಲಾಸಿಗೇ, ಸಿರ್ಸಿಯಿಂದ ಧಾರವಾಡಕ್ಕೆ ಬಂದು, ಅದೂ hardcore ಬ್ರಾಹ್ಮಣರ ಅಗ್ರಹಾರದಂತಿದ್ದ ಮಾಳಮಡ್ಡಿಗೆ ಬಂದು ನೆಲೆಗೊಂಡವರು. ಅಲ್ಲಿನ ಮೂಲನಿವಾಸಿಗಳಿಗಿಂತ ಸ್ವಲ್ಪ ಜಾಸ್ತಿಯೇ hardcore ಅನ್ನುವ ಹಾಗಿದ್ದಾರೆ. ಅಖಂಡ ಮೂವತ್ತು ವರ್ಷ ಅಂತಹ ಮಾಳಮಡ್ಡಿಯಲ್ಲಿಯೇ ಕಳೆದುಬಿಟ್ಟಿದ್ದಾರೆ. ಹಾಗಾಗಿ ಸಹವಾಸ ದೋಷ! ದೋಷದ ಫಲ!
'ಏನು ಮಾಡಾಕಿ ನೀನು? ಹಾಂ? ಏನು ಮಾಡಾಕಿ ಅಂತ? ಬಂದು ಮನಿ ಮುಂದ ಸ್ಟ್ರೈಕ್ ಮಾಡವರಿಗೆ ಏನು ಮಾಡಾಕಿ? ದೊಡ್ಡ ಡೌಲು ಬಡಿತಿಯಲ್ಲಾ?' ಅಂತ ನನ್ನ ಮುಂದುವರೆದ ಕಿತಾಪತಿ. ಶಾಲೆಗೆ ಹೋಗಲು ಇನ್ನೂ ಸಾಕಷ್ಟು ಟೈಮ್ ಇದೆ. ಅಲ್ಲಿಯವರೆಗೆ ಟೈಮ್ ಪಾಸ್ ಕೆತ್ತೆಬಜೆ.
'ಇನ್ನೊಮ್ಮೆ ಹೇಳು. ಆವಾಗ ಕೆಲವು ಮಂದಿ ಹೆಸರು ಹೇಳಿದ್ಯಲ್ಲಾ? ಪ್ರಕಟಣೆ ಕೊಟ್ಟಾರ ಅಂತ. ಅವರ ಹೆಸರು ಹೇಳು ನೋಡೋಣ!' ಅಂತ ಕೋಪದಿಂದ ಕೇಳಿದರು ಅಮ್ಮ. ಮತ್ತೊಮ್ಮೆ ಆ ಹೋರಾಟಗಾರರ ಹೆಸರುಗಳನ್ನು ಹೇಳಿದೆ.
'ಬರಲಿ, ಬರಲಿ. ಸ್ಟ್ರೈಕ್ ಮಾಡಲಿಕ್ಕೆ ಬರಲಿ. ನೋಡೋಣ. ಒಬ್ಬೊಬ್ಬರನ್ನೇ ಹಿಡಿದು ಹಿಡಿದು ಕೇಳತೇನಿ. ಒಬ್ಬಬ್ಬರದ್ದೂ ಆವಾಜ್ ಗಪ್ (ಬಂದ್) ಮಾಡಿಸೇ ಕಳಸ್ತೇನಿ. ಬಿಡಂಗಿಲ್ಲ,' ಅಂದು ಸೀರೆ ಮಡಿಕೆ ಎತ್ತಿ ಸ್ವಲ್ಪ ಮೇಲೆ ಸೊಂಟಕ್ಕೆ ಸಿಗಿಸಿಕೊಂಡರು. ಎಲ್ಲಿ ಅಮ್ಮ ಈಗಲೇ ಬೆಳವಡಿ ಮಲ್ಲಮ್ಮನಂತೆ ವೀರಗಚ್ಚೆ ಹಾಕಿ ಕನ್ನಡ ಹೋರಾಟಗಾರರ ಮೇಲೆ ಮೇಲೆ ಯುದ್ಧಕ್ಕೆ ಹೊರಟುಬಿಟ್ಟರೇನೋ ಅಂತ ಸಂಶಯ ಬಂತು. ನೋಡಿದರೆ ವೀರಗಚ್ಚೆ ಹಾಕಿ ಆಕಡೆ ತೆಂಗಿನಕಾಯಿ ಸುಲಿಯಲಿಕ್ಕೆ ಹೋದರು. ಅಡುಗೆಗೆ ಬೇಕಲ್ಲ ದಿನಕ್ಕೊಂದು ತೆಂಗಿನಕಾಯಿ. ಇಲ್ಲದಿದ್ದರೆ ನಮ್ಮ ಹವ್ಯಕ ಮಂದಿಯ ಅಡುಗೆ ಆಗುವದಿಲ್ಲ. 'ಅಕಿ ಬೆಳವಡಿ ಮಲ್ಲಮ್ಮ. ನೀ ಹೆಗಡೆ ಮಳ್ಳಮ್ಮ' ಅಂತ ಅಮ್ಮನನ್ನು ಆ ದಿನಗಲ್ಲಿ ಸುಮ್ಮನೇ ಚೇಷ್ಟೆ ಮಾಡುತ್ತಿದ್ದೆ. ಬೆಳವಡಿ ಮಲ್ಲಮ್ಮನ ಪಾಠ ಬೇರೆ ಇತ್ತಲ್ಲ ನಾಲ್ಕನೇ ಕ್ಲಾಸಿನಲ್ಲಿ. ಮಂದಿಗೆ ಚಿತ್ರವಿಚಿತ್ರ ಹೆಸರಿಡುವದರಲ್ಲಿ ಎತ್ತಿದ ಕೈ ನಾವೆಲ್ಲ. All in good jest.
'ಏನು ಮಾಡಾಕಿ? ಬರೇ ಬಾಯಿ ಮಾಡಿದರೆ ನಡೆಯಂಗಿಲ್ಲ. ಅವರು ಬಂದು ಸ್ಟ್ರೈಕ್ ಮಾಡ್ತಾರ. ನೇಮ್ ಪ್ಲೇಟ್ ಯಾಕ ಕನ್ನಡದಾಗ ಬರೆಸಿಲ್ಲ ಅಂತ ಕೇಳಿ ಜೋರ್ ಮಾಡ್ತಾರ. ಬೈತಾರ. ಒದರ್ತಾರ. ಏನು ಮಾಡಾಕಿ?' ಅಂತ ಮತ್ತೂ ಬತ್ತಿ ಇಟ್ಟೆ.
ಹೀಗೆ ಚಾಲೆಂಜ್ ಒಗೆದರೆ ಅಮ್ಮ ಬಿಟ್ಟಾರೆಯೇ? ಅವರ ವಂಶದ ಸ್ತ್ರೀಯರೆಲ್ಲ ಗಟ್ಟಿಗಿತ್ತಿಯರು. ಹೆದರಿಕೆ, ಪದರಿಕೆ ಏನೂ ಇಲ್ಲ. ಏನೇ ಇದ್ದರೂ ಆರಾಮ್ ನಿಭಾಯಿಸಿಕೊಂಡು ಬರೋ ಮಂದಿ.
'ನಾನೂ ಅವರನ್ನು ಕೇಳ್ತೇನಿ, 'ಅಲ್ಲರೀಪಾ ದೊಡ್ಡ ಮನುಷ್ಯಾರ, ದೊಡ್ಡ ಕನ್ನಡ ಅದೂ ಇದೂ ಅಂತ ಹೇಳಿಕೋತ್ತ ಸ್ಟ್ರೈಕ್ ಮಾಡಲಿಕ್ಕೆ ಬಂದುಬಿಟ್ಟಿರಿ. ಮೊದಲು ನನ್ನ ಪ್ರಶ್ನೆಗೆ ಉತ್ತರ ಕೊಡ್ರಿ. ನಿಮ್ಮೊಳಗ ಎಷ್ಟು ಮಂದಿ ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಶಾಲೆಗೆ ಹಾಕೀರಿ? ಹೇಳ್ರೀ. ಹೇಳ್ರೀ? ಯಾರ್ಯಾರು ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕೀರಿ. ಹೇಳ್ರೀ?' ಅಂತ ಬರೋಬ್ಬರಿ ಸವಾಲ್ ಒಗಿತೇನಿ ನೋಡು. ನೋಡೋಣ ಏನು ಹೇಳ್ತಾರ ಅಂತ. ನನಗ ಗೊತ್ತಿಲ್ಲೇನು? ಇಷ್ಟು ಮಂದಿಯಾಗ ಒಬ್ಬರ ಮಕ್ಕಳೂ ಕನ್ನಡ ಮೀಡಿಯಂ ಸಾಲಿಗೆ ಹೋಗೋದಿಲ್ಲ. ನೋಡಿದರೆ ಕೆಲವು ಮಂದಿಯಂತೂ ಕನ್ನಡ ಮಾಸ್ತರುಗಳು ಬ್ಯಾರೆ. ಅಂತವರೂ ತಮ್ಮ ತಮ್ಮ ಮಕ್ಕಳನ್ನ ಬಾಲವಾಡಿಯಿಂದಲೇ ಇಂಗ್ಲೀಷ್ ಮೀಡಿಯಂ ಸಾಲಿಗೆ ಹಾಕ್ಯಾರ. ಕನ್ನಡ ಮೀಡಿಯಂ ಸಾಲಿಗೆ ಹಾಕಲಿಕ್ಕೆ ಏನು ಧಾಡಿಯಾಗಿತ್ತು? ಮಾಡಬೇಕಾಗಿದ್ದು ಒಂದೂ ಮಾಡಂಗಿಲ್ಲ. ಮ್ಯಾಲಿಂದ ಹೀಂಗ ಉದ್ಯೋಗಿಲ್ಲದ ಯಬಡ ಕೆಲಸ ಮಾಡ್ತಾವ ನೋಡು ಈ ಯಡಬಿಡಂಗಿ ಮಂದಿ. ಬಂದರೆ ಬರಲಿ. ಬರೋಬ್ಬರಿ ಗಜ್ಜು ಅದ ಅವರಿಗೆಲ್ಲ,' ಅಂತ ಸಣ್ಣಗೆ ಆರ್ಭಟಿಸುತ್ತ ಇನ್ನೂ ಸಿಪ್ಪೆಯಿದ್ದ ತೆಂಗಿನಕಾಯಿಯನ್ನು ಕಾಯಿ ಸುಲಿಯುವ ಶೂಲ ಅಂದರೆ ನೆಲಕ್ಕೆ ಹುಗಿದು ನಿಲ್ಲಿಸಿದ್ದ ಪಿಕಾಸಿಗೆ ಹಾಕ್ಕೊಂಡು ಚುಚ್ಚಿಬಿಟ್ಟರು. ಬಂದ ಸಿಟ್ಟಷ್ಟೂ ಆದರ ಮೇಲೆಯೇ ಹೋಯಿತೋ ಏನೋ. ತೆಂಗಿನಕಾಯಿ ಎಲ್ಲ ಊರಕಡೆಯಿಂದ ಬರುತ್ತಿತ್ತು. ಹೆಚ್ಚಾಗಿ ಸಿಪ್ಪೆ ತೆಗೆದು ಕಳಿಸುತ್ತಿದ್ದರು. ಒಮ್ಮೊಮ್ಮೆ ಹಾಗೆಯೇ ಕಳಿಸುತ್ತಿದ್ದರು. ತೆಂಗಿನಕಾಯಿ ಸಿಪ್ಪೆ ಗಿಪ್ಪೆ ತೆಗೆಯುವದು ನಮ್ಮ ಜನಕ್ಕೆ ಬರುತ್ತದೆ ಬಿಡಿ. ಅದೂ ಬರದಿದ್ದರೆ ಹವ್ಯಕರಾಗಿ ಏನುಪಯೋಗ?
ಅಮ್ಮನ ಆರ್ಭಟ ನಿಂತಿರಲಿಲ್ಲ. 'ಸ್ಟ್ರೈಕ್ ಅಂತ ಸ್ಟ್ರೈಕ್. ಮನಿ ಮುಂದ ಬಂದರೆ ಬರಲಿ ಹೇಳತೇನಿ. 'ನೋಡ್ರಿ, ನಮ್ಮ ಇಬ್ಬರೂ ಮಕ್ಕಳನ್ನ ಕನ್ನಡ ಮೀಡಿಯಂ ಶಾಲೆಗೆ ಹಾಕೇವಿ. ಹಾಂಗಂತ ನಾವೇನೂ ಅಶಿಕ್ಷಿತ ಮಂದಿಯಲ್ಲ. ಹೆಂಗಸಾಗಿ ನಾನೇ BA ಡಿಗ್ರಿ ಹೋಲ್ಡರ್ ಇದ್ದೇನಿ. ಹಿಸ್ಟರಿ ಮೇಜರ್. ಸೈಕಾಲಜಿ, ಇಂಗ್ಲೀಷ್ ಮೈನರ್. ೧೯೬೭ ರಲ್ಲೇ BA ಮುಗಿಸೇನಿ. ನಾವೂ ಸಹಿತ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗೇ ಹಾಕಬಹುದಿತ್ತು. ಆದರೆ ಹಾಕಲಿಲ್ಲ. ನಾವು ಕನ್ನಡದವರು ಅಂದ ಮ್ಯಾಲೆ ನಮ್ಮ ಮಕ್ಕಳು ಕನ್ನಡದಾಗೇ ಕಲಿಯಬೇಕು. ಅದಕ್ಕೇ ಕನ್ನಡ ಮೀಡಿಯಂ ಸಾಲಿಗೆ ಹಾಕೇವಿ. ನಮ್ಮಿನಿಯಾಗ ಕನ್ನಡ ಸೇವಾ ಎಲ್ಲ ಛಲೋತ್ನಾಗೇ ನಡಸೇವಿ. ಸಾಕಷ್ಟು ಕನ್ನಡ ಪುಸ್ತಕ, ಪತ್ರಿಕೆ ಎಲ್ಲ ರೊಕ್ಕ ಕೊಟ್ಟು ತರ್ತೇವಿ. ಎಲ್ಲಾರೂ ಓದ್ತೇವಿ. ಮಂದಿಗೂ ಓದಸ್ತೇವಿ. ಕನ್ನಡ ಸೇವಾ ಅಂದರೆ ಬರೇ ನೇಮ್ ಪ್ಲೇಟ್ ಚೇಂಜ್ ಮಾಡಿಸೋದು ಅಲ್ಲ. ಹೋಗಿ ನಾವು ಮಾಡಿದ್ದನ್ನು ಮೊದಲು ಮಾಡಿ ಬರ್ರಿ. ನಿಮ್ಮ ನಿಮ್ಮ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕಿ ಬರ್ರಿ. ನಂತರ ನೇಮ್ ಪ್ಲೇಟ್ ಬದಲಾಯಿಸೋಣ. ಕನ್ನಡದಾಗ ಬರೆಸೋಣ. ತಿಳೀತಾss?' ಅಂತ ಹಾಕ್ಕೊಂಡು ಝಾಡಿಸಿಬಿಡತೇನಿ ನೋಡು. ತಿರುವ್ಯಾಡಿ ಒಗಿತೇನಿ,' ಅನ್ನುತ್ತ ಮುಕ್ಕಾಲು ಸಿಪ್ಪೆ ಸುಲಿದಿದ್ದ ತೆಂಗಿನಕಾಯಿಯನ್ನು ಕೊನೆಯ ಬಾರಿಗೆ ರೋಷದಿಂದ ಶೂಲಕ್ಕೆ ಚುಚ್ಚಿ, ಉಳಿದ ಸಿಪ್ಪೆ ತೆಗೆದು ಒಗೆದರು.
'ಏ, ತೆಂಗಿನಕಾಯಿ ತೊಗೊಂಡು ಬಾರ. ದೇವರಿಗೆ ಒಡೆದು ಕೊಡ್ತೇನಿ,' ಅಂತ ಒಳಗಿಂದ ದೇವರ ಮುಂದೆ ಕೂತ ತಂದೆಯವರು ಬೋಂಗಾ ಹೊಡೆದರು. ದಿನಕ್ಕೊಂದು ತೆಂಗಿನಕಾಯಿಯನ್ನಂತೂ ಒಡೆಯಲೇಬೇಕು. ಹಾಗಾಗಿ ಮೊದಲು ದೇವರಿಗೇ ಒಡೆದು ನಂತರ ಅಡುಗೆಯಲ್ಲಿ ಸ್ವಾಹಾ ಮಾಡುವದು ಪದ್ದತಿ.
'ಏ, ಬಂದೆ ಇರ್ರಿ. ಏನು ಗಡಿಬಿಡಿ ಮಾಡ್ತೀರಿ? ಇಲ್ಲೆ ಇವಾ 'ನಿಮ್ಮ' ಅಡ್ನಾಡಿ ಮಗ ಸ್ಟ್ರೈಕ್ ಅದು ಇದು ಅಂತ ಹೇಳಿ ನನ್ನ ತಲಿ ತಿನ್ನಲಿಕತ್ತಾನ. ನೀವು ಬ್ಯಾರೆ. ಅಅಅss,' ಅಂತ ಅನ್ನುತ್ತ ಸುಲಿದ ತೆಂಗಿನಕಾಯಿ ಕೊಡಲು ಒಳಗೆ ಹೋದರು. ಅಡ್ನಾಡಿ, ಗಿಡ್ನಾಡಿ ಅಂತೆಲ್ಲ ನನ್ನನ್ನು ಬೈಯಬೇಕಾದರೆ 'ನಿಮ್ಮ' ಮಗ. ಇರಲಿ ಎಲ್ಲ ಅಮ್ಮಂದಿರ ಸ್ಟ್ಯಾಂಡರ್ಡ್ ಡೈಲಾಗ್ ಅದು. ನಮಗೋ ಇನ್ನೂ ತಿಮಿರು. ಹ್ಯಾಂಗೂ ಅಮ್ಮ ರೈಸ್ ಆಗಿದ್ದಾಳೆ. ನೋಡೋಣ ನನ್ನ ಕಿತಾಪತಿ ಸಹಿಸಿಕೊಳ್ಳೋ ಸಹನೆ ಯಾವಾಗ ಖಾಲಿಯಾಗುತ್ತದೆ ಅಂತ ವಿಚಾರ ಮಾಡಿದೆ. ಅದು ಎಂದಿನ modus operandi.
'ಸ್ಟ್ರೈಕ್ ಮಾಡಲಿಕ್ಕೆ ಬಂದರೆ ನೀ ಖರೆ ಅಂದರೂ ಅವರಿಗೆ ಹೀಂಗೇ ಬೈದು ಕಳಸಾಕಿ? ಖರೇ?' ಅಂತ ಮತ್ತೂ ಕಡ್ಡಿಯಿಟ್ಟೆ. ಅಮ್ಮ ನನ್ನೊಂದಿಗೆ ಸಿಕ್ಕಾಪಟ್ಟೆ ಜೋರ್ದಾರ, ಜಬರ್ದಸ್ತ್, ಖಡಕ್ ಮಾತಾಡಿದರೂ ಬೇರೆ ಎಲ್ಲರ ಜೊತೆ smooth operator. ಸಿಕ್ಕಾಪಟ್ಟೆ diplomatic. ಹಾಗೆಲ್ಲ ಉಲ್ಟಾ ಸೀದಾ ಮಾತಾಡಿ, ಜಗಳಾಡಿದ್ದು ಇಲ್ಲವೇ ಇಲ್ಲ. ನನಗೆ ಸೀದಾ ಮಾತಿನಲ್ಲಿ ಹೇಳಿದ್ದು ಒಂದೂ ತಿಳಿಯುತ್ತಿರಲಿಲ್ಲ ಅಂತ ಸ್ವಲ್ಪ ಜೋರು ಮಾತು ಅಷ್ಟೇ.
'ಮತ್ತs ಸುಮ್ಮನೆ ಬಿಡತೇನಿ ಏನು? ಈಗ ನೀ ನನ್ನ ಭಾಳ ಕಾಡಬ್ಯಾಡ. ಈ ಸುದ್ದಿ ಕೇಳಿ ಭಾಳ ಸಿಟ್ಟು ಬಂದದ ನನಗ. ಇನ್ನೂ ಸಿಟ್ಟು ಬಂತು ಅಂದ್ರ ಅವರು ನಮ್ಮನಿಗೆ ಸ್ಟ್ರೈಕ್ ಮಾಡಲಿಕ್ಕೆ ಬರೋಕಿಂತ ಮೊದಲು ನಾನೇ ಅವರ ಮನಿಗೆ ಹೋಗಿ ಸ್ಟ್ರೈಕ್ ಮಾಡಿಬರ್ತೇನಿ. ತಿಳಿತೇನು?' ಅಂದುಬಿಟ್ಟರು ಅಮ್ಮ.
ಹ್ಯಾಂ!? ಇದೇನು? ಗೇಮ್ ಫುಲ್ ಚೇಂಜ್ ಆಗಿಬಿಟ್ಟಿತಲ್ಲ? ಸ್ಟ್ರೈಕ್ ಮಾಡುತ್ತೇವೆ ಅಂತ ಹೇಳಿದವರು ಅವರು. ಅದೂ ಒಂದು ವೇಳೆ ನಾಮಫಲಕ ಕನ್ನಡಕ್ಕೆ ಬದಲಾಯಿಸದಿದ್ದರೆ ಮಾತ್ರ. ಇಲ್ಲಿ ನೋಡಿದರೆ ಅವರ ಮಂಗಾಟಗಳಿಂದ ಸಿಟ್ಟಿಗೆದ್ದಿರುವ ಅಮ್ಮ ತಾನೇ ಅವರುಗಳ ಮನೆಗೆ ಹೋಗಿ ಜಬರಿಸಿ, ಝಾಡಿಸಿ ಬರುತ್ತೇನೆ ಅನ್ನುತ್ತಿದ್ದಾಳೆ. ಗಝಬ್ ಹುಯಿ ಗವಾ ರೇ!
'ಏನಬೇ, ಏನು ಹಾಂಗದ್ರ? ಹಾಂ?' ಅಂತ ವಿವರಣೆ ಕೇಳಿದೆ. ನಂಬಲು ಅಸಾಧ್ಯವಾದದ್ದನ್ನು ಹೇಳಿದರೆ ಅದರ ಬಗ್ಗೆ ವಿವರಣೆ ಕೇಳುವಾಗ ಮಾತಿನಲ್ಲಿ 'ಬೇ' ಕೂಡ ಬಂದು ಬಿಡುತ್ತದೆ. ಆವಾಗ ಆ ಬೇ. ಈಗ bay area. San Francisco bay area.
'ಏ, ಮತ್ತೇನೋ? ಅವರವರ ಮನಿಗೇ ಹೋಗಿ ಅವರಿಗೆಲ್ಲ ಸರೀತ್ನಾಗಿ ದಬಾಯಿಸಿ ಹೇಳತೇನಿ. 'ಅಲ್ಲರೀಪಾ ದೊಡ್ಡ ಮನುಷ್ಯಾರ, ಸ್ಟ್ರೈಕ್ ಮಾಡ್ತೇವಿ ಅಂತ ದೊಡ್ಡದಾಗಿ ಪೇಪರಿನ್ಯಾಗ ಕೊಟ್ಟೀರಲ್ಲಾ. ನೀವೆಲ್ಲಾ ಇಷ್ಟು ದೊಡ್ಡ ಕನ್ನಡದ ಹೋರಾಟಗಾರರಾಗಿ ನಿಮ್ಮ ನಿಮ್ಮ ಮಕ್ಕಳನ್ನು ಯಾಕ ಕನ್ನಡ ಮೀಡಿಯಂ ಶಾಲೆಗೆ ಹಾಕಲಿಲ್ಲ? ಅದನ್ನು ಮೊದಲು ಹೇಳ್ರೀ. ಅದನ್ನು ಪ್ರತಿಭಟಿಸಲಿಕ್ಕೆ ನಾ ಬಂದೇನಿ. ನೀವೇನು ನಮ್ಮ ಮನಿ ಮುಂದ ಬಂದು ಸ್ಟ್ರೈಕ್ ಮಾಡ್ತೀರಿ? ನಾನೇ ಮೊದಲು ಸ್ಟ್ರೈಕ್ ಮಾಡಾಕಿ. ನಮ್ಮಂತವರು ಭಾಳ ಮಂದಿ ಇದ್ದೇವಿ. ನಮ್ಮ ಪಾಡಿಗೆ ನಾವು ನಮಗ ತಿಳಿದಂಗ ಕನ್ನಡದ ಸೇವಾ ಮಾಡಿಕೊಂಡು, ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕಿಕೊಂಡು, ಕನ್ನಡ ಪುಸ್ತಕ ರೊಕ್ಕ ಕೊಟ್ಟು ತೊಗೊಂಡು, ಓದಿ, ಮಂದಿಗೂ ಓದಿಸಿಕೊಂಡು ಇದ್ದೇವಿ. ನೀವು ಅದನ್ನೆಲ್ಲಾ ನೋಡೋದೇ ಇಲ್ಲ. ಬರೇ ನೇಮ್ ಪ್ಲೇಟ್ ಬದಲಾಯಿಸಲಿಕ್ಕೆ ಕರೆ ಕೊಟ್ಟೆ. ಬೋರ್ಡ್ ಮ್ಯಾಲೆ ಡಾಂಬರ್ ಹಚ್ಚಿ ಬಂದೆ ಮಾಡ್ತೀರಿ. ಇದೆಲ್ಲ ಹುಚ್ಚಾಟ ಮಾಡಿದ ಮಹಾನುಭಾವರು ಏನು ಮಾಡ್ಯಾರ ಅಂತ ನೋಡಿದರೆ ನಿಮ್ಮ ಮಕ್ಕಳನ್ನು ಮಾತ್ರ ಇಂಗ್ಲಿಷ್ ಮೀಡಿಯಂ ಕಾನ್ವೆಂಟ್ ಸಾಲಿಗೆ ಕಳಿಸಿ, ಟಸ್ ಪುಸ್ ಅಂತ ಮನಿಯೊಳಗೂ ಅಸಡ್ಡಾಳ ಇಂಗ್ಲೀಷ್ ಮಾತಾಡಿಸಿ ಖುಷಿ ಪಡ್ತೀರಿ ನೋಡ್ರಿ. ಅಲ್ಲಾ? ಇದೇ ಏನ್ರೀ ನಿಮ್ಮ ಕನ್ನಡ ಪ್ರೀತಿ? ಹಾಂ?' ಅಂತ ಬರೋಬ್ಬರಿ ಆವಾಜ್ ಹಾಕಿ ಬರ್ತೇನಿ. ಬಿಡಂಗಿಲ್ಲ. ಏನಂತ ತಿಳ್ಕೊಂಡಾರ?' ಅನ್ನುತ್ತ ಭುಸುಗುಡುತ್ತಲೇ ಒಳಗೆ ಕೆಲಸ ನೋಡಲು ಹೋದರು.
ಈ ಲಫಡಾ ಉತ್ತುಂಗಕ್ಕೆ ಹೋದಾಗ ಆಗಲಿರುವ ಒಂದು ಐತಿಹಾಸಿಕ ಮುಖಾಮುಖಿಗೆ ಕಾಯುತ್ತಿದ್ದೆ. ಆದರೆ ಅದು ಆಗಲೇ ಇಲ್ಲ. ಯಾರೂ ಸ್ಟ್ರೈಕ್ ಗೀಕ್ ಏನೂ ಮಾಡಲಿಲ್ಲ. ನಮಗೆ ಗೊತ್ತಿದ್ದ ಮಟ್ಟಿಗೆ ನಮ್ಮ ಏರಿಯಾದ ಯಾವದೇ ಜನ ನೇಮ್ ಪ್ಲೇಟ್ ಗೀಮ್ ಪ್ಲೇಟ್ ಬದಲು ಮಾಡಲಿಲ್ಲ. ಮನೆ ಮೇಲೆ ಇಂಗ್ಲೀಷಿನಲ್ಲಿ ಹೆಸರು ಬರೆಸಿದ್ದವರೂ ಏನೂ ಚೇಂಜ್ ಮಾಡಿಸಲಿಲ್ಲ. ಹೆಚ್ಚಿನವರು ಪತ್ರಿಕೆಯಲ್ಲಿ ಬಂದ ಆ ಪ್ರಕಟಣೆ ಓದಿರಲಿಕ್ಕೂ ಇಲ್ಲ. ಅಲ್ಲಿಗೆ ಆ ನಾಮಫಲಕ ಚಳುವಳಿಗೇ 'ನಾಮ' ಬಿದ್ದಿರಬೇಕು ಅಂದುಕೊಂಡೆ. ಅನೇಕ ಯಡವಟ್ಟು ಚಳುವಳಿಗಳ ಹಣೆಬರಹವೇ ಅಷ್ಟು.
ನನಗೆ ಇವತ್ತಿಗೂ ಒಂದು ಸಂಶಯವಿದೆ. ಎಲ್ಲಿ ಅಮ್ಮನ ಖಡಕ್ ಧಮಕಿ ಆ ಹೋರಾಟಗಾರರ ಕಿವಿಗೆ ಬಿದ್ದು ಸ್ಟ್ರೈಕ್ ಇತ್ಯಾದಿ ಮಾಡುವ ಯಬಡ ಯೋಚನೆಯನ್ನು ಕೈಬಿಟ್ಟರೋ ಹೇಗೆ? ಅಮ್ಮನಿಗಂತೂ ಆವತ್ತು ಸಾಕಷ್ಟು ರೋಷ ಬಂದಿತ್ತು. ಅದು ಸಾತ್ವಿಕ ರೋಷ. ಮತ್ತೆ ಹೋರಾಟಗಾರರ ಬಣ್ಣ ಕೂಡ ಬಯಲಾಗಿತ್ತು. ಅಮ್ಮ ಕೂಡ ಆ ಕುರಿತು ನೆರೆಹೊರೆಯಲ್ಲಿ ಟಾಮ್ ಟಾಮ್ ಹೊಡೆದಿದ್ದರೋ ಏನೋ. ಎಲ್ಲಿ ಅಮ್ಮ ತಮ್ಮ ಆಕ್ರೋಶ ಅಲ್ಲಿ ಇಲ್ಲಿ ವ್ಯಕ್ತಪಡಿಸಿದ್ದು ಹೋರಾಟಗಾರರ ಕಿವಿಗೂ ಹೋಗಿ ಮುಟ್ಟಿ, 'ಏ, ಹೆಗಡೆ ಬಾಯಾರು ಭಾಳ ಜೋರ್ ಅದಾರು. ಮತ್ತ ನಮ್ಮ ಭಾಂಡಾ ಎಲ್ಲ ಬರೋಬ್ಬರಿ ತಿಳಕೊಂಡುಬಿಟ್ಟಾರು. ಸ್ಟ್ರೈಕ್ ಮಾಡಾಕ ಹೋದ್ರ ನಮ್ಮ ಮಾರ್ಯಾದಿನs ಹೋಕ್ಕೈತಿ. ಎಲ್ಲರೆ ಮಕ್ಕಳನ್ನು ಕನ್ನಡ ಮೀಡಿಯಂ ಸಾಲಿಗೆ ಹಾಕ್ರಿ ಅಂತ ಜಗಳಾ ತೆಗೆದು ಕುಂತರು ಅಂದ್ರ ಮುಗೀತು ಕಥಿ. ಯಾಕ ಸುಮ್ಮನs?' ಅಂತ ಅಂದುಕೊಂಡು ಸ್ಟ್ರೈಕ್ ಮಾಡುವ ಆಲೋಚನೆ ಬಿಟ್ಟು, ಮುಂದಿನ ಚಳುವಳಿ ನೋಡಿಕೊಂಡು ಹೋದರೋ ಏನೋ? ಮಾಡಲಿಕ್ಕೆ ಬೇರೆ ಉದ್ಯೋಗಿಲ್ಲ ಅಂದವರಿಗೆ ಮಾಡಲಿಕ್ಕೆ ಚಳುವಳಿಗೇನು ಕಮ್ಮಿಯೇ?
ನಮ್ಮ ಮನೆಯಲ್ಲಿನ ಕನ್ನಡ ಪ್ರೇಮ ಹೀಗಿತ್ತು. ಎಲ್ಲರೂ ಕನ್ನಡ ಮೀಡಿಯಂನಲ್ಲೇ ಓದಿದದವರು. ಅಣ್ಣ, ನಾನು ಎಂಟನೇ ಕ್ಲಾಸಿನಿಂದ ಇಂಗ್ಲೀಷ್ ಮೀಡಿಯಂ. ಅದೂ ನಮ್ಮ KEBHS ಶಾಲೆಯಲ್ಲಿಯೇ ಇಂಗ್ಲಿಷ್ ಮೀಡಿಯಂ ಇತ್ತು ಮತ್ತು ಅಲ್ಲಿನ ಮಾಸ್ತರುಗಳೇ ಪ್ರೋತ್ಸಾಹಿಸಿದರು ಅನ್ನುವ ಕಾರಣಕ್ಕೆ. ಆಕಸ್ಮಾತ ಅವರು ಪ್ರೋತ್ಸಾಹಿಸದಿದ್ದರೆ ಅಥವಾ ನಾವೇ, 'ಬೇಡ. ಕನ್ನಡ ಮೀಡಿಯಂನಲ್ಲೇ SSLC ತನಕವೂ ಓದುತ್ತೇವೆ,' ಅಂದಿದ್ದರೆ ಅದರ ಬಗ್ಗೆ ಪಾಲಕರು ಏನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮತ್ತೆ ನಮ್ಮ ಎಲ್ಲ cousins ಹೆಚ್ಚಾಗಿ ಕನ್ನಡ ಮೀಡಿಯಂನಲ್ಲೇ ಓದಿದವರು. ಒಬ್ಬರಕಿಂತ ಒಬ್ಬರು ಮುಂದೆ ಚೆನ್ನಾಗಿ ಮಾಡಿಕೊಂಡಿದ್ದರು. 'ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವಾಗಬೇಕು. ಅದೇ ಅತ್ಯುತ್ತಮ,' ಅಂತ ನಮ್ಮ ಪಾಲಕರ ದೃಢ ನಂಬಿಕೆ. ಹಾಂಗಾಗಿ ನಾನು, 'ಇಂಗ್ಲೀಶ್ ಮೀಡಿಯಂ ಶಾಲೆಗೇ ಹೋಗುತ್ತೇನೆ. ಕನ್ನಡ ಮೀಡಿಯಂ ಬೇಡ,' ಅಂತ ಬಾಲ್ಯದಲ್ಲಿ ರಚ್ಚೆ ಹಿಡಿದಾಗಲೂ ಕ್ಯಾರೇ ಮಾಡದೇ ಕನ್ನಡ ಶಾಲೆಗೇ (ಬಡಿದು) ಅಟ್ಟಿದ್ದರು. ಇಂಗ್ಲೀಷ್ ಶಾಲೆ ದೂರದಲ್ಲಿತ್ತು. ಅಲ್ಲಿ ಸೇರಿಕೊಂಡಿದ್ದರೆ ಮೊದಲು ಆಟೋ ರಿಕ್ಷಾ, ನಂತರ ಬಸ್ಸು ಇತ್ಯಾದಿಗಲ್ಲಿ ಸ್ಟೈಲ್ ಆಗಿ ಹೋಗಬಹುದಿತ್ತು. ಮತ್ತೆ ಅವರ ಯುನಿಫಾರ್ಮ್, ಬೂಟು, ಹ್ಯಾಟು ಎಲ್ಲ ಸ್ವಲ್ಪ ಚಮಕಾಯಿಸುತ್ತಿದ್ದವು. ಹಾಗಾಗಿ ಅಲ್ಲಿ ಸೇರಿಬಿಡಬೇಕು ಅಂತ ನಮ್ಮ ಆಸೆ. ಶಾಲೆಗೆ ಹೋಗುವದು ಅಂದರೆ ಪರಮ ಬೋರು. ಇನ್ನು ಹೋಗಲೇಬೇಕು ಅಂತ ದರಿದ್ರ ಕರ್ಮವಿದ್ದರೆ ಎಲ್ಲಿಯಾದರೂ ಸ್ವಲ್ಪ ಸ್ಟೈಲ್ ಹೊಡೆಯಲು ಅನುಕೂಲವಿದ್ದ ಶಾಲೆಗೇ ಹೋಗೋಣ ಅಂತ ನಮ್ಮ ಅಂದಿನ ಚಿಣ್ಣ ಆಸೆ. ಸೇರಿದ ಕನ್ನಡ ಮೀಡಿಯಂ ಶಾಲೆ ಎಲ್ಲ ದೃಷ್ಟಿಯಿಂದಲೂ simple living, high thinking ಮಾದರಿಯ ಶಾಲೆ. ಎಲ್ಲ ಸರಳ. ಮತ್ತೆ ಮನೆ ಹತ್ತಿರಕ್ಕೇ ಇತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಅಮ್ಮನ ಕಡೆಯ ಎಲ್ಲರೂ ಓದಿದ್ದು ಅಲ್ಲಿಯೇ. ಹಾಗಾಗಿ ಮಕ್ಕಳಾದ ನಮ್ಮನ್ನು ಬೇರೆ ಶಾಲೆಗೆ ಹಾಕುವ ಪ್ರಶ್ನೆಯೇ ಬರುತ್ತಿದ್ದಿಲ್ಲ. ಅದನ್ನು ಅಮ್ಮ consideration ಗೇ ತಂದುಕೊಂಡಿರಲೇ ಇಲ್ಲ. It was out of question.
ಮನೆಯಲ್ಲಿ ಕನ್ನಡ ದಿನಪತ್ರಿಕೆ ಬರುತ್ತಿತ್ತು. ನಮ್ಮ ಸಂಯುಕ್ತ ಕರ್ನಾಟಕ. ಇಂಗ್ಲೀಶ್ ಪತ್ರಿಕೆಗಳೂ ಬರುತ್ತಿದ್ದವು. ಕನ್ನಡದ ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಎಲ್ಲ ನನ್ನ ಫೇವರಿಟ್. ಲೆಕ್ಕವಿಲ್ಲದಷ್ಟು ಅಮರ ಚಿತ್ರ ಕಥೆ, ಭಾರತ ಭಾರತಿ ಪುಸ್ತಕಗಳು ಇದ್ದವು. ಅವನ್ನೆಲ್ಲ ಮತ್ತೆ ಮತ್ತೆ ಓದಿದ್ದೇ ಓದಿದ್ದು. ಕಸ್ತೂರಿ, ಕರ್ಮವೀರ ಅಮ್ಮನ ಫೇವರಿಟ್. ಅವುಗಳನ್ನು ಈಗ ಸುಮಾರು ಅರವತ್ತು ವರ್ಷಗಳಿಂದ ನಿರಂತರವಾಗಿ ಓದಿಕೊಂಡು ಬಂದಿದ್ದಾರೆ. ಅವು ನಡುವೆ ನಿಂತುಹೋದ ಸಮಯಗಳಲ್ಲಿ ಒಂದು ಬಿಟ್ಟು ಸದಾ ಓದಿದ್ದಾರೆ. ಸರ್ಕಾರಿ ಲೈಬ್ರರಿ, ಕವಿವಿ ಲೈಬ್ರರಿಗಳ ಫುಲ್ ಉಪಯೋಗ. ಓದದ ಕನ್ನಡದ ಒಳ್ಳೆ ಕಾದಂಬರಿಗಳಿಲ್ಲ. ಅಮ್ಮನಂತೂ ಫುಲ್ ಕನ್ನಡ ಪ್ರೇಮಿ. ಅವರು ಓದುವದೆಲ್ಲ ಕನ್ನಡವೇ. ಮೊದಲು ನಾನೂ ಅವಳ ಪುಸ್ತಕಗಳನ್ನೆಲ್ಲ ಓದಿಬಿಡುತ್ತಿದ್ದೆ. ತಿಳಿಯಲಿ ಬಿಡಲಿ ಒಟ್ಟಿನಲ್ಲಿ ಓದುವದು. ನನ್ನ ಕನ್ನಡ ಓದಿನ ಚಟ ಒಂದು ಕಾಲದಲ್ಲಿ ಪಾಲಕರನ್ನು ಚಿಂತೆಗೂ ದೂಡಿತ್ತು. ೧೯೮೩ ರಲ್ಲಿ ಒಬ್ಬ ಮಿತ್ರ ಮತ್ತು ಅವನ ಅಣ್ಣ ನನಗೆ ಪತ್ತೇದಾರಿ ಕಾದಂಬರಿ ಓದುವ ಹುಚ್ಚು ಹಚ್ಚಿಬಿಟ್ಟರು. ಅಲ್ಲಿಗೆ ಫುಲ್ ಶಿವಾಯ ನಮಃ! ಆಗ ಕೇವಲ ಹನ್ನೊಂದು ವರ್ಷ ಅಷ್ಟೇ. ಆ ವಯಸ್ಸಿನಲ್ಲಿ ಪತ್ತೇದಾರಿ, ರೋಚಕ ಕಾದಂಬರಿಗಳನ್ನು ಓದುವದು ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ ಅವು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದ್ದವು. 'ಏ, ಭಾಳ ಮಿಸ್ಟರಿ ನಾವೆಲ್ ಓದಿದರೆ ಮುಂದ ಮೇಸ್ತ್ರಿ ಆಗ್ತಿ ನೋಡು,' ಅಂತ ಮನೆಯವರು ಮೆತ್ತಗೆ ಎಚ್ಚರಿಕೆ ಕೊಟ್ಟಿದ್ದರು. ನಾನು ಕೇಳಲಿಲ್ಲ. 'ಹೋಗಲಿ, ಓದುತ್ತಾನೆಯೇ ಹೊರತೂ ಮತ್ತೇನೂ ಭಾನಗಡಿ ಮಾಡುವದಿಲ್ಲ. ಅಷ್ಟು ಸಾಕು,' ಅಂತ ಹೆಚ್ಚಿಗೆ ಏನೂ ಹೇಳದೇ ಸುಮ್ಮನಿದ್ದರು. ಮತ್ತೆ ಅವನ್ನೇನೂ ಖರೀದಿ ಮಾಡುತ್ತಿದ್ದಿಲ್ಲ. ಎಲ್ಲ ಲೈಬ್ರರಿ ಮಾಲು. ಮುಂದೆ ತಂತಾನೇ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ಹರಿಯಿತು. ಧಾರವಾಡದ ಎಲ್ಲ ಲೈಬ್ರರಿಗಳಲ್ಲಿ, ಕವಿವಿ ಲೈಬ್ರರಿಯಲ್ಲಿ ಇದ್ದ ಕನ್ನಡದ ಎಲ್ಲ ಪತ್ತೇದಾರಿ ಕಾದಂಬರಿಗಳನ್ನು ಓದಿ ಮುಗಿಸಿದ್ದೆ. ಮತ್ತೆ ಆಗ ಪತ್ತೇದಾರಿ ಕಾದಂಬರಿಗಳ ಜಮಾನಾ ಮುಗಿದಿತ್ತು. ಯಾರೂ ಜಾಸ್ತಿ ಬರೆಯುತ್ತಿದ್ದಿಲ್ಲ. ಹಾಗಾಗಿ ೧೯೮೫ ರ ಹೊತ್ತಿಗೆ ಆ ಹುಚ್ಚು ಬಿಟ್ಟು ಹೋಯಿತು. ಮನೆಯವರು ಮೇಲೆ ನೋಡಿ ಕೈಮುಗಿದಿರಬೇಕು. ನಂತರ fiction ಓದಿದ್ದೇ ಭಾಳ ಕಮ್ಮಿ. non-fiction ಓದಿದ್ದೇ ಜಾಸ್ತಿ. ಅದೂ ಇಂಗ್ಲೀಷಿನಲ್ಲಿ. ಯಾಕೆಂದರೆ ಕನ್ನಡದಲ್ಲಿ ಅಂತಹ ಪುಸ್ತಕಗಳು ಕಮ್ಮಿ. ಆದರೂ ಕನ್ನಡದ ಕಾದಂಬರಿಗಳನ್ನು ದಿನಗಟ್ಟಲೇ, ಪಟ್ಟು ಬಿಡದೇ, ಒಂದೇ ಗುಕ್ಕಿನಲ್ಲಿ ಓದಿದ ಸವಿನೆನಪುಗಳು ಬೇಕಾದಷ್ಟಿವೆ. ಮುಂದೊಮ್ಮೆ ರಿಟೈರ್ ಆದ ಮೇಲೆ ಫುಲ್ ಟೈಮ್ ರೀಡರ್ ಆದ ಕೂಡಲೇ ಅವನ್ನೆಲ್ಲ ಮತ್ತೊಮ್ಮೆ ಓದಬೇಕು. ಈಗ ಇರುವ ಲಿಮಿಟೆಡ್ ಟೈಮಿನಲ್ಲಿ ಓದಬೇಕಾದ ಹಲವಾರು ಪುಸ್ತಕಗಳನ್ನು prioritize ಮಾಡಿ ಓದಬೇಕಾಗಿದೆ. ಹಾಗಾಗಿ ಕನ್ನಡದ ಅನೇಕ ಕಾದಂಬರಿಗಳು ಬ್ಯಾಕ್ ಸೀಟಿಗೆ ಹೋಗಿವೆ.
ತಂದೆಯವರದ್ದು ಕನ್ನಡದ ಓದು ಕಮ್ಮಿ. ಯಾಕೆಂದರೆ ಅವರು ಇಂದಿಗೂ ಸಿಕ್ಕಾಪಟ್ಟೆ ಇಷ್ಟಪಟ್ಟು ಓದುವ popular science, international events, spirituality, self help, ಮುಂತಾದ ವಿಷಯಗಳ ಮೇಲೆ ಕನ್ನಡದಲ್ಲಿ ಆಗ ಪತ್ರಿಕೆಗಳು, ಪುಸ್ತಕಗಳು ಇರಲಿಲ್ಲ. ಈಗಲೂ ಜಾಸ್ತಿಯಿಲ್ಲ. ಹಾಗಾಗಿ ಅವರು ಖಾಯಂ ಓದಿದ್ದು ಇಂಗ್ಲೀಷಿನ Reader's Digest. ಸುಮಾರು ೬೫ ವರ್ಷದಿಂದ ಬಿಟ್ಟೂ ಬಿಡದೇ ಓದಿದ್ದಾರೆ. ಮೊದಲಿಂದಲೂ ಪರಮ ದುಬಾರಿ ಪತ್ರಿಕೆ ಅದು. ಆದರೂ ನಾವು ಅದರ ಅಷ್ಟು ಹಳೆಯ ಚಂದಾದಾರರು. ಎಷ್ಟೋ ವರ್ಷಗಳ ಹಳೆಯ ಪತ್ರಿಕೆಗಳು ಇನ್ನೂ ಇವೆ. ಮತ್ತೆ Reader's Digest ಅಂದರೆ ಅದೊಂದು ಚಟ. ಅದರಲ್ಲಿ ಒಂದು ಆರ್ಟಿಕಲ್ ಓದಿದರೆ ಅಂತ್ಯದಲ್ಲಿ ಅದರ ಬಗ್ಗೆ ಹತ್ತು ಪುಸ್ತಕಗಳ ರೆಫರೆನ್ಸ್ ಕೊಟ್ಟಿರುತ್ತಾರೆ. ಅವನ್ನು ಕೊಂಡು ಓದಬೇಕು. ಓದದಿದ್ದರೆ ಸಮಾಧಾನವಿಲ್ಲ. ವಿದೇಶದಲ್ಲಿ ನೆಲೆಸಿದ್ದ ತಂದೆಯವರ ದೋಸ್ತರು, 'ಏನು ತಂದುಕೊಡಲಿ?' ಅಂತ ಕೇಳಿದಾಗ ಬಾಕಿ ಜನ ಹಾಳುವರಿ ಇಲೆಕ್ಟ್ರಾನಿಕ್ ಅದು ಇದು ತರಿಸಿಕೊಂಡರೆ ಪುಸ್ತಕ ತರಿಸಿಕೊಂಡು ಓದಿದವರು ನಮ್ಮ ತಂದೆಯವರು. ಯಾಕೆಂದರೆ ಆಗ ಅವೆಲ್ಲ ಪುಸ್ತಕಗಳು ಇಂಡಿಯಾದಲ್ಲಿ ಕಾಸು ಕೊಟ್ಟರೂ ಸಿಗುತ್ತಿರಲಿಲ್ಲ. ಹೀಗೆ ಪುಸ್ತಕ ಪ್ರೇಮ ನಿರಂತರ. ಬೇರೆ ವಸ್ತುಗಳ ಮೇಲೆ ರೊಕ್ಕ ಖರ್ಚು ಮಾಡುವಾಗ ದೂಸರಾ ಯೋಚನೆ ಮಾಡಿದರೂ ಮಾಡಿಯೇವು. ಆದರೆ ಪುಸ್ತಕದ ವಿಷಯಕ್ಕೆ ಬಂದಾಗ ನಮ್ಮದು ಬಿಂದಾಸ್ ಖರ್ಚು. ಈಗೂ ಅಷ್ಟೇ. ಮೊದಲೆಲ್ಲ ಎಷ್ಟೆಷ್ಟೋ ಪುಸ್ತಕಗಳನ್ನು ಮನೆಯವರ ಹತ್ತಿರ ಅಷ್ಟಷ್ಟು ದುಡ್ಡು ತೆತ್ತಿಸಿ ಕೊಡಿಸಿಕೊಂಡರೂ ಪೂರ್ತಿ ಓದಿ ಮುಗಿಸುತ್ತಿದ್ದಿಲ್ಲ. ಈಗ ಹಾಗಲ್ಲ. ಗುದ್ದಾಡಿಯಾದರೂ ಓದಿ ಮುಗಿಸುತ್ತೇನೆ. ಅದೇನೋ ಅಂತಾರಲ್ಲ....ಅಪ್ಪನ ರೊಕ್ಕ ಉಡಾಯಿಸುವಾಗ ಇಲ್ಲದ ಪ್ರಜ್ಞೆ ಸ್ವಂತ ರೊಕ್ಕ ಉಡಾಯಿಸುವಾಗ ಏಕ್ದಂ ಬಂದುಬಿಡುತ್ತದೆಯಂತೆ!
ಮಕ್ಕಳನ್ನು ಮುದ್ದಾಂ ಕನ್ನಡ ಮೀಡಿಯಂ ಶಾಲೆಗೆ ಹಾಕುವದು. ಸಾಧ್ಯವಾದಷ್ಟು ಎಲ್ಲ ಕಡೆ ಕನ್ನಡ ಮಾತಾಡುವದು. maximum ಕನ್ನಡ ಓದುವದು ಮತ್ತು ಓದಿಸುವದು. ಇವೆಲ್ಲ ನಮ್ಮ ಕುಟುಂಬದಲ್ಲಿನ ಕನ್ನಡ ಪ್ರೇಮದ ಪರಿ. ಯಾರೂ ಅಷ್ಟೆಲ್ಲ ಚಲನಚಿತ್ರ ಪ್ರಿಯರಲ್ಲ. ಹಾಗಾಗಿ ಕನ್ನಡ ಸಿನೆಮಾಗಳನ್ನು ಅಷ್ಟೆಲ್ಲ ನೋಡಿಲ್ಲ. ಆದರೆ ಒಳ್ಳೆಯ ಸಿನೆಮಾ ಬಂದರೆ ಮುದ್ದಾಂ ನೋಡಿದ್ದೇವೆ. ಅದು ಬಿಟ್ಟರೆ ಒಳ್ಳೆ ಹಿಂದಿ ಸಿನೆಮಾಗಳತ್ತ ಆಸಕ್ತಿ ಜಾಸ್ತಿ. ಯಾಕೆಂದರೆ ಧಾರವಾಡ ಕಡೆ ಮೊದಲೆಲ್ಲ ಅವೇ ಜಾಸ್ತಿ ಪಾಪ್ಯುಲರ್. ಹೇಳಿಕೇಳಿ ಮುಂಬೈ ಕರ್ನಾಟಕ.
ನಿನ್ನೆ ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ. ಇದೆಲ್ಲ ನೆನಪಾಯಿತು. ಕನ್ನಡದ ಸೇವೆ, ಪ್ರೇಮ, ಕನ್ನಡಕ್ಕಾಗಿ ಬಲಿದಾನ ಎಲ್ಲ ದೊಡ್ಡ ಮಾತುಗಳು. ಅವೆಲ್ಲ ನಮ್ಮಂತವರಿಗೆ ಅಲ್ಲ ಬಿಡಿ. ಮತ್ತೆ ಎಲ್ಲರೂ ಒಂದೇ ರೀತಿಯಲ್ಲಿ ಕನ್ನಡವನ್ನು ಇಷ್ಟಪಡಬೇಕು, ಪ್ರೀತಿಸಬೇಕು, ಸಪೋರ್ಟ್ ಮಾಡಬೇಕು ಅಂತೇನೂ ಇಲ್ಲ. ನಾವು, ನಮ್ಮ ಪಾಲಕರು ಮಾಡಿದ್ದೊಂದೇ ಸರಿ, ಬೇರೆಯವರು ಮಾಡಿದ್ದು ತಪ್ಪು ಅಂತಲೂ ಅಲ್ಲ. ಅಷ್ಟೇ ನಾಮ್ಕೇವಾಸ್ತೆ ಮನೆ ಮುಂದೆ ನೇಮ್ ಪ್ಲೇಟ್ ಒಂದನ್ನು ಮಾತ್ರ ಕನ್ನಡದಲ್ಲಿ ಹಾಕಿಕೊಂಡು, ತಾವು ಖುದ್ದು ಕನ್ನಡದ ಮಾಸ್ತರಿಕೆ ಮಾಡಿಕೊಂಡು, ಮಕ್ಕಳನ್ನು ಮಾತ್ರ ಇಂಗ್ಲೀಶ್ ಮೀಡಿಯಂ ಶಾಲೆಗೆ ಹಾಕಿ, ಮತ್ತೊಬ್ಬರು ಬೇರೆಯಲ್ಲ ವಿಷಯಗಳಲ್ಲಿ ಕನ್ನಡವನ್ನು ಸಿಕ್ಕಾಪಟ್ಟೆ ಬಳಸಿ, ಪ್ರೀತಿಸುತ್ತಿರುವಾಗ ಮನೆ ಮುಂದಿನ ನಾಮಫಲಕ ಇಂಗ್ಲೀಷಿನಲ್ಲಿದೆ ಅನ್ನುವ ಚಿಲ್ಲರೆ ಕಾರಣಕ್ಕೆ ಸ್ಟ್ರೈಕ್ ಮಾಡುತ್ತೇವೆ ಅಂತೆಲ್ಲ ಪ್ರಕಟಣೆ ಕೊಡುವದು ತಪ್ಪಲ್ಲದಿದ್ದರೂ ಬಾಲಿಶ , ಸ್ಟುಪಿಡ್ ಅಂತ ಅನಿಸಿದ್ದು ಮಾತ್ರ ನಿಜ.
ಕಿರಿಕ್ ಕೀರ್ತಿ ಎಂಬ anchor ನ ಕೆಳಗಿನ ವೀಡಿಯೊ ನೋಡಿಬಿಡಿ. ಅದರಲ್ಲಿನ ಸಂದೇಶದೊಂದಿಗೆ ನನ್ನ ಪೂರ್ತಿ ಸಹಮತವಿದೆ.
ಅವಕಾಶ ಸಿಕ್ಕಲ್ಲಿ ಕನ್ನಡ ಓದಿ, ಬರೆದು, ಎಲ್ಲಕ್ಕಿಂತ ಮುಖ್ಯವಾಗಿ ಇತರೆ ಕನ್ನಡಿಗರೊಂದಿಗೆ ಅವಕಾಶ ಸಿಕ್ಕಾಗೆಲ್ಲ ಕನ್ನಡದಲ್ಲೇ ಮಾತಾಡಿಬಿಟ್ಟರೆ ಕನ್ನಡದ ಬಳಕೆ, ಉಳಿಕೆ ಬೇಕಾದಷ್ಟು ಆಗಿಬಿಡುತ್ತದೆ. ಜೊತೆಗೆ ಕನ್ನಡದ ಒಳ್ಳೆ ಪುಸ್ತಕ, ಸಿನೆಮಾಗಳನ್ನು ರೊಕ್ಕ ಕೊಟ್ಟು ಕೊಂಡು, ಓದಿ, ನೋಡಿ ಪ್ರೋತ್ಸಾಹಿಸಿಬಿಟ್ಟರೆ ಬೇಕಾದಷ್ಟಾಯಿತು. ಕನ್ನಡ ಪುಸ್ತಕಗಳ ಪ್ರಕಾಶಕರೂ ಕೂಡ ಪುಸ್ತಕಗಳನ್ನು e-books ಮಾಡುವತ್ತ ಗಮನಹರಿಸಬೇಕು. ಯಾಕೆಂದರೆ ನಮ್ಮಂತವರು ನಮ್ಮದೇ ಕಾರಣಗಳಿಗಾಗಿ ಹೆಚ್ಚಾಗಿ e-books ಗಳನ್ನೇ ಓದುತ್ತೇವೆ ಮತ್ತು prefer ಮಾಡುತ್ತೇವೆ. ಮತ್ತೆ ಕನ್ನಡ ಸಿನೆಮಾಗಳು. ಎಲ್ಲೋ ಒಂದು ೫% ಚೆನ್ನಾಗಿರುತ್ತವೆ. ಡಿಫರೆಂಟ್ ಆಗಿರುತ್ತವೆ. ಬಾಕಿಯೆಲ್ಲ ಶುದ್ಧ ಡಬ್ಬಾ. ಕೇವಲ ನಮ್ಮ ಕನ್ನಡ ಭಾಷೆಯ ಸಿನೆಮಾ ಅಂತ ನೋಡುತ್ತ ಕೂಡಲಾಗುವದಿಲ್ಲ. ಅದನ್ನು ಚಿತ್ರ ಮಾಡುವವರು ಗಮನಿಸಿದರೆ ಸಾಕು. ಮತ್ತೆ ನಾವು ಡಬ್ಬಾ ಅನ್ನುವಂತಹ ಚಿತ್ರಗಳಿಂದಲೇ ಅವರಿಗೆ ಲಾಭವಾಗುತ್ತಿದೆ ಅಂತಾದರೆ ಸರಿ ಬಿಡಿ. ಅವರ audience ಬೇರೆಯೇ ಇದ್ದಾರೆ ಅಂತಾಯಿತು. That's perfectly fine. ಮತ್ತೆ ಕನ್ನಡ ಸಿನೆಮಾಗಳನ್ನು ದಯಮಾಡಿ online ಬಿಡುಗಡೆ ಮಾಡಿ. ರೊಕ್ಕ ಕೇಳಿದರೂ ಕೊಟ್ಟು online ನೋಡುತ್ತೇವೆ. ನೀವು ಹಾಗೆ ಮಾಡದೇ ಇದ್ದರೆ ಯಾರೋ pirated ಕಾಪಿ ತೇಲಿಬಿಡುತ್ತಾರೆ. ಇಳಿಸಿಕೊಂಡು ನೋಡುತ್ತೇವೆ. ಮತ್ತೇನು ಮಾಡೋಣ? online ನೋಡಲು ಅನುಕೂಲ ಮಾಡಿಕೊಡುವದು ಸುಲಭ ಈಗಿನ ಕಾಲದಲ್ಲಿ. ಮಾಡಿಕೊಡಿ ಅಂತ ಕೋರಿಕೆ
ಕನ್ನಡ ಸೇವೆ ಗೀವೆ, ಬಲಿದಾನ ಅಂತ ದೊಡ್ಡ ಮಾತೆಲ್ಲ ನಾವು ಪುಂಗೋದಿಲ್ಲ. ಬಳಕೆ ಅನ್ನುತ್ತೇವೆ. ಮಾಡಿಕೊಂಡೇ ಬಂದಿದ್ದೇವೆ. ಸಾಧ್ಯವಾದಷ್ಟು ಜಾಸ್ತಿ ಮಾಡುತ್ತೇವೆ. ಆದರೆ one size fits all ಅನ್ನುವ ಹುಂಬಗುದಕಿತನ ಯಾವ ವಿಷಯದಲ್ಲೂ ನಮಗೆ ಸರಿ ಕಾಣುವದಿಲ್ಲ. ಕನ್ನಡ ಸೇವೆ ವಿಷಯದಲ್ಲೂ ಅಷ್ಟೇ.
6 comments:
ಹೌದು. ಎಲ್ಲೆಡೆ ಬಳಕೆ ಮಾಡೋದೆ ನಿಜವಾದ ಕನ್ನಡ ಸೇವೆ.
ಥ್ಯಾಂಕ್ಸ್ ವಿಕಾಸ್!
ರ್ರೀ! ನಮ್ಮ ಉಟ್ಟು ಓರಾಟಗಾರರ ಒಟ್ಟೀ ಮ್ಯಾಲ ಒಡೀಬ್ಯಾಡ್ರೆಪಾ!!
ಅದು ಸರಿ ಸುನಾಥ್ ಸರ್! :)
Anamika: Tumba Chenagide Sir a!
@Anamika - ಧನ್ಯವಾದಗಳು.
Post a Comment