೧೯೭೮ ರ ದೀಪಾವಳಿ. ಅಂದರೆ ಮೂವತ್ತೇಳು ವರ್ಷಗಳ ಹಿಂದೆ. ಆ ದೀಪಾವಳಿ ಮಾತ್ರ ಪ್ರತಿವರ್ಷ ಮುದ್ದಾಂ ನೆನಪಾಗುತ್ತದೆ. ಅದು ಸ್ಪೆಷಲ್ ದೀಪಾವಳಿ.
ಏನು ಸ್ಪೆಷಲ್ ಆ ದೀಪಾವಳಿಯದು? ಅಯ್ಯೋ! ಆ ಒಂದು ವಾರ ಫುಲ್ ಜ್ವರ ಬಂದು ಬಕ್ಕಾ ಬೋರಲಾಗಿ ಮಲಗಿಸಿಬಿಟ್ಟಿತ್ತು. ದೀಪಾವಳಿಯ ಎಲ್ಲ ಪ್ಲಾನುಗಳು ಫುಲ್ ಚೌಪಟ್. ಎಷ್ಟೊಂದು ಪಟಾಕಿ ತಂದಿಟ್ಟುಕೊಂಡಿದ್ದೆ. ಸಿರ್ಸಿ ಕಡೆಯಿಂದ ಬಂದಿದ್ದ ನೆಂಟರೂ ಮತ್ತೊಂದಿಷ್ಟು ರೊಕ್ಕ, ಪಟಾಕಿ ಕೊಟ್ಟು ಹೋಗಿದ್ದರು. ಅದು ಬೋನಸ್. ಮತ್ತೆ ಖಾದ್ಯಗಳಂತೂ ಬಿಡಿ. ಅವು ಇದ್ದದ್ದೇ. ದೀಪಾವಳಿ ಫರಾಳ ಮುಕ್ಕುವದು ಇದ್ದೇ ಇರುತ್ತದೆ. ಮನೆ ಫರಾಳ, ಮಂದಿ ಮನೆ ಫರಾಳ ಎಲ್ಲ ಕೂಡಿಯೇ ಮುಕ್ಕುವದು.
ಹೀಗೆ ಏನೇನೋ ಪ್ಲಾನ್ ಮಾಡಿಕೊಂಡರೆ ಭರ್ಜರಿ ಜ್ವರ ಬಂದು ಅಮರಿಕೊಂಡುಬಿಡಬೇಕೇ!? ಎಲ್ಲ ಫುಲ್ ಶಿವಾಯ ನಮಃ! ಫುಲ್ ಬೆಡ್ ರೆಸ್ಟ್.
ಆ ದೀಪಾವಳಿಗೆ ಸಿಹಿ ಅಂತೇನಾದರೂ ಸೇವಿಸಿದ್ದರೆ ಅದು ಡಾಕ್ಟರ್ ಕೊಟ್ಟ ಸಿಹಿ mixture ಮಾತ್ರ. ಆ ಕಾಲದಲ್ಲಿ ಮಕ್ಕಳಿಗೆ ಡಾಕ್ಟರ್ ಮಂದಿಯೇ ನಾಲ್ಕಾರು ಔಷಧಿ ಮಿಕ್ಸ್ ಮಾಡಿ ಒಂದು ತರಹದ ಸಿರಪ್ ಮಾಡಿಕೊಡುತ್ತಿದ್ದರು. ಥಂಡಿ, ಕೆಮ್ಮು, ಜ್ವರ ಬಂತು ಅಂದರೆ ಒಂದಿಷ್ಟು ಬಿಳಿ ಮಾತ್ರೆ ಮತ್ತು ಸಿರಪ್ mixture. ಅದೇ ಖಾಯಂ. ಜ್ವರ ಜಾಸ್ತಿಯಾದರೆ ಒಂದೋ ಎರಡೋ ಇಂಜೆಕ್ಷನ್. ಅಂಗಡಿಯಿಂದ ಮೆಡಿಸಿನ್ ತರಬೇಕು ಅನ್ನುವ ಪರಿಸ್ಥಿತಿ ಕಮ್ಮಿ. ಹಾಗಿತ್ತು ಆಗಿನ ಕಾಲ.
ಈ ಸಿರಪ್ ಕೆಲವು ಡಾಕ್ಟರ್ ಜನ ಸ್ವಲ್ಪ ಸಿಹಿಯಾಗಿ ಮಾಡಿಕೊಡುತ್ತಿದ್ದರು. ಹಾಕುವ ಬೇಸ್ ಸಿಹಿ ಇರುತ್ತಿತ್ತು. ಆ mixture ನ್ನು ಸಿಹಿಯಾಗಿ ಮಾಡಲೂ ಬರುತ್ತದೆ ಅಂತ ಗೊತ್ತಾಗಿದ್ದೇ ಆ ೧೯೭೮ ರ ದೀಪಾವಳಿಗೆ ಜಡ್ಡು ಬಿದ್ದಾಗ. ಅದಕ್ಕೆ ಕಾರಣವೂ ಇತ್ತು. ನಮ್ಮ ರೆಗ್ಯುಲರ್ ಫ್ಯಾಮಿಲಿ ಡಾಕ್ಟರ್ ಆಗಿದ್ದ ಡಾ. ಜೀ.ಟಿ. ಪಾಟೀಲರು ಎಲ್ಲೋ ರಜೆ ಮೇಲೆ ಹೋಗಿಬಿಟ್ಟಿದ್ದರು ಅಂತ ಕಾಣುತ್ತದೆ. ಅವರಿದ್ದಿದ್ದರೆ ಕೆಟ್ಟ ಕಹಿಯಾಗಿರುತ್ತಿದ್ದ mixture ಮಾಡಿಕೊಟ್ಟುಬಿಡುತ್ತಿದ್ದರು. ಅದು ಅವರ ಟ್ರೇಡ್ಮಾರ್ಕ್ mixture. ಅದರ ಕೆಟ್ಟ ಕಹಿ ರುಚಿಗೇ ಅರ್ಧ ಆರಾಮ್ ಆಗಿಬಿಡುತ್ತಿತ್ತು. ಯಾಕೆಂದರೆ ಅದನ್ನು ಕುಡಿಯಲು ಅಷ್ಟು ಕಷ್ಟ ಪಡಬೇಕಾಗುತ್ತಿತ್ತು. ಮಾತ್ರೆಗಳನ್ನೇ ಕುಟ್ಟಿ ಪುಡಿಮಾಡಿ, ನೀರು ಬೆರೆಸಿ ಕೊಟ್ಟುಬಿಡುತ್ತಿದ್ದರು ಡಾಕ್ಟರ್ ಜೀ.ಟಿ.ಪಾಟೀಲ. ನಮ್ಮದೇ ಬಾಟಲಿಯಲ್ಲಿ ತುಂಬಿಸಿಕೊಂಡು ಬಂದು, ಕುಡಿದು, ನಮ್ಮ ಜ್ವರ ನಾವು ಬಿಡಿಸಿಕೊಳ್ಳಬೇಕು. ಜ್ವರ ಒಂದೇ ಏನು ಆ ಕಹಿ ಸಿರಪ್ ರುಚಿಗೆ ಮೈಯಲ್ಲಿ ದೆವ್ವವಿದ್ದರೂ ಓಡಿಹೋಗಬೇಕು. ಹಾಗಿರುತ್ತಿತ್ತು ಡಾ. ಜೀ.ಟಿ.ಪಾಟೀಲರ ಔಷಧ.
ಅದು ಏನೋ ಆಗಿ ಆ ಹೊತ್ತಿನಲ್ಲಿ ಜೀ.ಟಿ.ಪಾಟೀಲರು ಇರಲಿಲ್ಲ. ಅವರಿಲ್ಲ ಅಂದರೆ ನಂತರದ alternative ಡಾಕ್ಟರ್ ಅಂದರೆ ಕಮಲಾಪುರ ಡಾಕ್ಟರ್ ಬಾಯಿ (ಮೇಡಂ). ಧಾರವಾಡದ ಕಮಲಾಪುರ ಮನೆತನವೇ ದೊಡ್ಡ ಡಾಕ್ಟರ್ ಮನೆತನ. ಪ್ರಸೂತಿ ತಜ್ಞರು ಮತ್ತು ಹೆರಿಗೆ ಆಸ್ಪತ್ರೆ ಮಾಲೀಕರು. ನಾನು ಹುಟ್ಟಿದ್ದೇ ಅಲ್ಲಿ. ಅಂತಹ ಕಮಲಾಪುರ ಹಿರಿಯ ಡಾಕ್ಟರರ ಸೊಸೆ ಈ ಕಮಲಾಪುರ ಡಾಕ್ಟರಣಿ ಬಾಯಿ. ಚಿಕ್ಕಮಕ್ಕಳ ತಜ್ಞರು (pediatrician) ಆಗಿದ್ದರು ಅಂತ ನೆನಪು. ಆದರೆ ಜನರಲ್ ಪ್ರಾಕ್ಟೀಸ್ ಸಹಿತ ಮಾಡಿಕೊಂಡಿದ್ದರು.
ಆಗಿನ ಕಾಲದಲ್ಲಿ ಡಾಕ್ಟರ್ ಜನ ಮನೆಗೇ ಬಂದು ನೋಡಿ ಹೋಗುವ ಹೌಸ್ ವಿಸಿಟ್ ಪದ್ಧತಿ ಇತ್ತು. ದೊಡ್ಡ ಮನಸ್ಸಿನ ಡಾಕ್ಟರ ಮಂದಿ. ಬೆಳಿಗ್ಗೆ ಒಂದು ಸುತ್ತು ತಮ್ಮ ಕ್ಲಿನಿಕ್ ನಲ್ಲಿ ಪೇಷಂಟುಗಳನ್ನು ನೋಡಿ, ಸುಮಾರು ಮಧ್ಯಾನ ಹನ್ನೆರೆಡು ಘಂಟೆ ಹೊತ್ತಿಗೆ ಹೌಸ್ ವಿಸಿಟ್ ಗಳಿಗೆ ಹೊರಡುತ್ತಿದ್ದರು. ಮೊದಲೇ ಹೋಗಿ ಹೇಳಿಬರಬೇಕಾಗುತ್ತಿತ್ತು. ಮತ್ತೆ ಅದಕ್ಕಂತ ಜಾಸ್ತಿ ಚಾರ್ಜ್ ಮಾಡಿದ್ದು ನೆನಪಿಲ್ಲ. ರೆಗ್ಯುಲರ್ ಫೀ. ಮತ್ತೆ ಎಲ್ಲರೂ ಪರಿಚಯದವರೇ. ಮನೆಗೆ ಬಂದು, ಪೇಷಂಟ್ ನೋಡಿ, ಮನೆ ಮಂದಿ ಜೊತೆ ಒಂದು ನಾಲ್ಕು ಮಾತಾಡಿ, ಚಹಾ ಪಹಾ ಕುಡಿದು ಹೋಗುತ್ತಿದ್ದರು ಡಾಕ್ಟರ್ ಮಂದಿ. ನಂತರ ಯಾರಾದರೂ ಹೋಗಿ ಔಷಧಿ, ಗುಳಿಗೆ ತಂದರೆ ಆಯಿತು. ಅದನ್ನೂ ಪೇಷಂಟ್ ಮನೆಯಲ್ಲೇ ಮಾಡಿಕೊಡುವ ಅವಿಷ್ಕಾರ ಆಗಿರಲಿಲ್ಲ. ಈಗ ಬಿಡಿ. ಮನೆ ವಿಸಿಟ್ ಯಾವ ಡಾಕ್ಟರ್ ಕೂಡ ಮಾಡಲಿಕ್ಕಿಲ್ಲ. 'ಸೀದಾ ಆಸ್ಪತ್ರೆಗೆ ಅಡ್ಮಿಟ್ ಮಾಡಿಬಿಡಿ. ಅಲ್ಲೇ ಬಂದು ನೋಡುತ್ತೇವೆ,' ಅನ್ನುತ್ತಾರೇನೋ ಈಗ. ಆದರೆ ಯೂರೋಪಿನ ಕೆಲವೊಂದು ದೇಶಗಳಲ್ಲಿ ಮನೆ ವಿಸಿಟ್ ಪದ್ಧತಿ ಇನ್ನೂ ಇದೆ ಅಂತ ಓದಿದ ನೆನಪು. ಅದೂ ಸರ್ಕಾರಿ ಖರ್ಚಿನಲ್ಲಿ. ಪುಣ್ಯವಂತರು ಬಿಡಿ ಅಲ್ಲಿಯವರು.
ಸರಿ. ನಾನು ಜ್ವರ ಬಂದು, ನರಳುತ್ತ ಮಲಗಿಬಿಟ್ಟಿದ್ದೆ. ಎದ್ದು ಡಾಕ್ಟರ ಕ್ಲಿನಿಕ್ಕಿಗೆ ಹೋಗುವಷ್ಟೂ ಕಸುವು ಇರಲಿಲ್ಲ. ಫುಲ್ ಫ್ಲಾಟ್ ಆಗಿಬಿಟ್ಟಿದ್ದೆ. ಹೋಗಿ ಹೇಳಿಬಂದರು ಕಮಲಾಪುರ ಡಾಕ್ಟರ್ ಬಾಯಿಗೆ. ಅವರ ಹತ್ತಿರ ಟ್ರೀಟ್ಮೆಂಟ್ ತೆಗೆದುಕೊಂಡಿದ್ದು ಅದೇ ಮೊದಲಿರಬೇಕು. ಮಾಳಮಡ್ಡಿಯ ಮೇನ್ ರೋಡ್ ಮೇಲಿದ್ದ ಅವರ ಮನೆ, ಕ್ಲಿನಿಕ್ ಮುಂದೆ ಸಾವಿರ ಸರ ಓಡಾಡಿದರೂ ಅವರ ಬೋರ್ಡ್ ನೋಡಿ ಹೋಗುತ್ತಿದ್ದೆನೇ ಹೊರತೂ ಒಳಗೆ ಹೋಗಿರಲಿಲ್ಲ. ಈಗ ಮೈಯಲ್ಲಿ ಸ್ವಲ್ಪ ಕಸುವಿದ್ದರೆ ಹೋಗುತ್ತಿದ್ದೆನೋ ಏನೋ. ಇರಲಿಲ್ಲ. ಹಾಗಾಗಿ ಹೋಗಲಿಲ್ಲ. ಡಾಕ್ಟರ್ ಬಾಯಿಯೇ ಮನೆಗೆ ಬಂದರು. ತಂದೆಯವರೋ, ಅಣ್ಣನೋ ಹೋಗಿ ಪಾಳಿ ಹಚ್ಚಿ ಬಂದಿದ್ದರು ಅಂತ ಕಾಣುತ್ತದೆ. ಸುಮಾರು ಹನ್ನೆರೆಡು ಘಂಟೆ ಹೊತ್ತಿಗೆ ಮನೆಗೆ ಬಂದರು. ಅಲ್ಲೇ ಒಂದೆರೆಡು ಫರ್ಲಾಂಗ್ ದೂರದಲ್ಲಿ, ರಾಯರಮಠದ ರೋಡಿನಲ್ಲೇ ನಮ್ಮ ಮನೆ. ಪರಿಚಯ ಕೂಡ ಇತ್ತು. ಹಾಗಾಗಿ ತಮ್ಮ ಡಾಕ್ಟರ್ ಕಿಟ್ ಬ್ಯಾಗಿನೊಂದಿಗೆ ಡಾಕ್ಟರ್ ಮೇಡಂ ಹಾಜರ್.
ಸುಮಾರು ಮೂವತ್ತು, ಮೂವತ್ತೈದು ವರ್ಷದ ಮೇಡಂ. ಅವರನ್ನು ನೋಡಿದ್ದು ಅದೇ ಮೊದಲು. ನೋಡಿದರೆ ಅಂಜಿಕೆ ಬರುವಂತಹ ಡಾಕ್ಟರ್ ಆಗಿರಲಿಲ್ಲ. ಅದು ಬಹಳ ಮುಖ್ಯ. Very decent lady doctor.
ಎಲ್ಲ ತಪಾಸಣೆ ಮಾಡಿ, ಒಂದು ಇಂಜೆಕ್ಷನ್ ಕೊಡುತ್ತೇನೆ ಅಂದರು. ಯಪ್ಪಾ! ಇಂಜೆಕ್ಷನ್ ಅಂದ ಕೂಡಲೇ ಹೃದಯ ಕಿತ್ತಿ ಎಲ್ಲೆಲ್ಲೋ ಬಂತು. ಡಾ. ಜೀ.ಟಿ.ಪಾಟೀಲ ಅವರ ಭಯಾನಕ ಇಂಜೆಕ್ಷನ್ ನೆನಪಾಯಿತು. ಅದು ಯಾವ ತರಹದ ಇಂಜೆಕ್ಷನ್ ಕೊಡುತ್ತಿದ್ದರೋ ಏನೋ. ಸಹಿಸಲು ಅಸಾಧ್ಯವಾದ ಯಮನೋವಾಗುತ್ತಿತ್ತು. ಆ ನೋವಿನಲ್ಲಿ ಮೊದಲಿನ ಜಡ್ಡು ಎಲ್ಲ ಮರೆತು ಹೋಗುತ್ತಿತ್ತು. ಅವರ ಒಂದು ಇಂಜೆಕ್ಷನ್ ತೆಗೆದುಕೊಂಡ ನಂತರ ಆ ಇಂಜೆಕ್ಷನ್ ನೋವಿನ ಆರೈಕೆ ಮಾಡುವದೇ ದೊಡ್ಡ ಕೆಲಸವಾಗಿ ಹೋಗುತ್ತಿತ್ತು. ಅದಕ್ಕೇನು ಬಿಸಿ ಶಾಖ ಕೊಡುವದು! ಅದಕ್ಕೇನು ಐಯೋಡೆಕ್ಸ್ ಹಚ್ಚಿ ನೀವಿಕೊಳ್ಳುವದು! ರಾಮಾ ರಾಮಾ! ಮೊದಲಿನ ಜ್ವರ ಅದು ಇದು ಎಲ್ಲ ಮರೆತೇ ಹೋಗುತ್ತಿತ್ತು. ಈಗ ಕಮಲಾಪುರ ಡಾಕ್ಟರಿಣಿ ಬಾಯಿ ಇಂಜೆಕ್ಷನ್ ಕೊಡುತ್ತೇನೆ ಅಂದಾಗ ಅದೇ ನೆನಪಾಯಿತು. ಸ್ವಲ್ಪವಾದರೂ ತ್ರಾಣವಿದ್ದಿದ್ದರೆ ತಪ್ಪಿಸಿಕೊಳ್ಳಲು ಎದ್ದು ಓಡುತ್ತಿದ್ದ. ಇಂಜೆಕ್ಷನ್ ಬೇಡ ಅಂತ ಹಟ ಮಾಡುತ್ತಿದ್ದೆ. ಆದರೆ ಅವತ್ತು ಫುಲ್ ಫ್ಲಾಟಾಗಿ ಶಿವಾಯ ನಮಃ ಆಗಿಬಿಟ್ಟಿದ್ದೆ. ಮತ್ತೇನು ಮಾಡುವದು? ಒಂದು ಭಯಂಕರ ಯಮನೋವಿನ ಅನುಭವಕ್ಕೆ ಎಲ್ಲ ತೆರೆದುಕೊಂಡು ಮಲಗಿಬಿಟ್ಟೆ. ಎಲ್ಲ ತೆರೆಯದೇ, ಕೆಳಗೆ ಇಳಿಸಬೇಕಾಗಿದ್ದನ್ನು ಕೆಳಗೆ ಇಳಿಸದೇ ಇದ್ದರೆ ಇಂಜೆಕ್ಷನ್ ಹೇಗೆ ಕೊಟ್ಟಾರು?
ಮೊದಲೇ ಮೈಯಲ್ಲಿ ಮಾಂಸವಿಲ್ಲದ ಕೊಳಕೇಶಿ (ತೆಳ್ಳಗಿರುವವ) ನಾನು. ಅಂತವನಿಗೂ ಡಾ.ಜೀ.ಟಿ.ಪಾಟೀಲ ಡಾಕ್ಟರರು ಕೈ ರಟ್ಟೆ ಮೇಲೆಯೇ ಇಂಜೆಕ್ಷನ್ ಚುಚ್ಚಿ ಕಳಿಸಿಬಿಡುತ್ತಿದ್ದರು. ಮೊದಲೇ ತೆಳ್ಳಗಿನ ರಟ್ಟೆ. ಸೀದಾ ಎಲುಬಿಗೇ ಹೋಗಿ ಚುಚ್ಚಿದಷ್ಟು ನೋವಾಗುತ್ತಿತ್ತು. ಹಾಗಾಗಿ ಕಮಲಾಪುರ ಡಾಕ್ಟರ್ ಮೇಡಂ 'ರಟ್ಟೆಗೆ ಬೇಡ. ಕೆಳಗೆ ಬೆಟರ್' ಅಂದಾಗ ಎಲ್ಲಾ ಬಿಚ್ಚಾಮಿ ಆಗಿ ಫುಲ್ ರೆಡಿ!
ಇಂಜೆಕ್ಷನ್ ಅನುಭವದ ಭೀಕರತೆ ಕಡಿಮೆ ಮಾಡಿಕೊಳ್ಳಲು ನಮ್ಮದೇ ಆದ ಕೆಲವು ತಂತ್ರಗಳಿದ್ದವು. ಕಣ್ಣು ಮುಚ್ಚಿಬಿಡುವದು. ಮತ್ತೆ ಆದರೆ ಮೂಗನ್ನು ಕೂಡ ಮುಚ್ಚಿಬಿಡುವದು. ಡಾಕ್ಟರ್ ಮಂದಿ ಇಂಜೆಕ್ಷನ್ ಕೊಡಲು ತಯಾರಿ ಮಾಡಿಕೊಳ್ಳುವದನ್ನು ನೋಡಿದರೆ ಸಾಕು ಸಿಕ್ಕಾಪಟ್ಟೆ tension ಆಗಿಬಿಡುತ್ತದೆ. ಇಂಜೆಕ್ಷನ್ ಮಾಡುವ ಮೊದಲು ಹಚ್ಚುವ ಸ್ಪಿರಿಟ್ ವಾಸನೆ ಬಂದರೆ tension ಮತ್ತೂ ಹೆಚ್ಚು. ಕಣ್ಣು, ಮೂಗು ಮುಚ್ಚಿ ಮಲಗಿಬಿಟ್ಟರೆ ಇದ್ದುದರಲ್ಲಿಯೇ ಎಷ್ಟೋ ಆತಂಕ ಕಮ್ಮಿ.
ಅವತ್ತೂ ಹಾಗೆ ಮಾಡಿ ಮಲಗಿಬಿಟ್ಟೆ. 'Alright! Good boy! ಮುಗೀತು' ಅಂತ ಡಾಕ್ಟರ್ ಬಾಯಿಯ ಧ್ವನಿ ಕೇಳಿಬಂದಾಗಲೇ ಗೊತ್ತಾಗಿದ್ದು ಇಂಜೆಕ್ಷನ್ ಚಿತ್ರಹಿಂಸೆ ಮುಗಿಯಿತು ಅಂತ. ಏನೂ ಜಾಸ್ತಿ ನೋವಾದ ಅನುಭವವೇ ಆಗಲಿಲ್ಲ. ಅರೇ ಇಸ್ಕಿ! ಇಷ್ಟು ನಾಜೂಕಾಗಿಯೂ ಇಂಜೆಕ್ಷನ್ ಮಾಡಲು ಬರುತ್ತದೆಯೇ!? ಹಾಗಾದರೆ ಡಾ.ಜೀ.ಟಿ.ಪಾಟೀಲ ಡಾಕ್ಟರ್ ಇಂಜೆಕ್ಷನ್ ಕೊಡುವಾಗೇಕೆ ಅಷ್ಟು ನೋವಾಗುತ್ತದೆ? What's the secret?
ತಪಾಸಣೆ ಮಾಡಿ, ಇಂಜೆಕ್ಷನ್ ಕೊಟ್ಟು, ಚಹಾ ಪಹಾ ಕುಡಿದು, ನಾಲ್ಕು ಮಾತಾಡಿ ಹೊರಟರು ಡಾಕ್ಟರ್ ಬಾಯಿ. ನಂತರ ಬಂದು ಔಷಧ, ಮಾತ್ರೆ ತೆಗೆದುಕೊಂಡು ಹೋಗಲು ಹೇಳಿದರು. ಮನೆಯಲ್ಲಿ ಯಾರಾದರೂ ಹೋಗಿ ತರುತ್ತಾರೆ.
ಡಾಕ್ಟರ್ ಹೋದ ಮೇಲೆ ತಂದೆಯವರನ್ನು ಕೇಳಿದೆ. 'ಜೀ.ಟಿ.ಪಾಟೀಲ ಡಾಕ್ಟರರು ಇಂಜೆಕ್ಷನ್ ಕೊಡುವಾಗ ಆ ಪರಿ ಭಯಂಕರ ನೋವಾಗುತ್ತದೆ. ಈ ಡಾಕ್ಟರಿಣಿ ಬಾಯಿ ಇಂಜೆಕ್ಷನ್ ಕೊಟ್ಟಾಗ ಜಾಸ್ತಿ ಏನೂ ನೋವಾಗಲೇ ಇಲ್ಲ. ಎಲ್ಲಿ ಒಂದು ಗುಂಗಾಡು (ಸೊಳ್ಳೆ) ಕಡಿದಂಗಾಯಿತು ಅಷ್ಟೇ. ಹ್ಯಾಂ?' ಮುಖದ ಮೇಲೆ ದೊಡ್ಡ ಪ್ರಶ್ನಾರ್ಥಕ ಕೊಕ್ಕೆ ಚಿನ್ಹೆ.
ತಂದೆಯವರು ನಕ್ಕು ಹೇಳಿದರು. ತಾತ್ಪರ್ಯ ಇಷ್ಟು. ನೀವೂ ಸಹ ನಮ್ಮ ಜಮಾನಾದವರಾಗಿದ್ದರೆ ನಿಮಗೆ ನೆನಪಿರಬಹುದು. ಇಂಜೆಕ್ಷನ್ ಔಷಧಿ ಬಾಟಲಿಗೆ ಒಂದು ರಬ್ಬರ್ ಬಿರಡೆ ಇರುತ್ತಿತ್ತು. ಸ್ಪಿರಿಟ್ ನಿಂದ ಅದನ್ನು ಒರೆಸಿ, disinfect ಮಾಡಿಕೊಂಡು, ಇಂಜೆಕ್ಷನ್ ಸೂಜಿಯನ್ನು ಅದರೊಳಗೆ ನುಗ್ಗಿಸಿ, ಬೇಕಾಗುವಷ್ಟು ಔಷಧವನ್ನು ಎಳೆದುಕೊಳ್ಳುತ್ತಿದ್ದರು. ನಂತರ ಚುಚ್ಚುತ್ತಿದ್ದರು. ಆದರೆ ಮಧ್ಯ ಒಂದು ಮುಖ್ಯ ಸ್ಟೆಪ್ ಇತ್ತು. ರಬ್ಬರ್ ಬಿರಡೆಗೆ ಚುಚ್ಚಿ ಔಷದಿ ಎಳೆಯುವ ಸೂಜಿಯೇ ಬೇರೆ ಮತ್ತು ನಂತರ ರೋಗಿಗೆ ಚುಚ್ಚುವಾಗ ಉಪಯೋಗಿಸುವ ಸೂಜಿಯೇ ಬೇರೆ. ರಬ್ಬರ್ ಬಿರಡೆಗೆ ಚುಚ್ಚಿ ಔಷಧಿ ಎಳೆಯುವ ಸೂಜಿ ದಪ್ಪಗಿರುತ್ತದೆ. ಸಹಜ. ರಬ್ಬರ್ ಎಮ್ಮೆ ಚರ್ಮದ ತರಹದ ಇರುತ್ತದೆ ನೋಡಿ. ಹಾಗಾಗಿ ದಪ್ಪನೆಯ ಸೂಜಿ. ನಂತರ ಮನುಷ್ಯರಿಗೆ ಚುಚ್ಚುವ ಸೂಜಿ ತುಂಬ ತೆಳ್ಳಗೆ ಸಪೂರಕ್ಕೆ ಇರುತ್ತದೆ. ಅಂತಹ ಸಪೂರನೇ ಸೂಜಿಯಲ್ಲಿ ಚುಚ್ಚಿದರೆ ಜಾಸ್ತಿ ನೋವಾಗುವದಿಲ್ಲ. ಈಗ ಗೊತ್ತಾಗಿರಬೇಕಲ್ಲ ಡಾ. ಜೀ.ಟಿ.ಪಾಟೀಲ ಡಾಕ್ಟರರ ಇಂಜೆಕ್ಷನ್ ಯಾಕಷ್ಟು ನೋವಾಗುತ್ತಿತ್ತು ಅಂತ? ಪುಣ್ಯಾತ್ಮರದು ಎರಡಕ್ಕೂ ಒಂದೇ ಸೂಜಿ. ದಪ್ಪನೆಯ ಸೂಜಿಯಲ್ಲಿಯೇ ಔಷಧ ಎಳೆದು, ಅದರಲ್ಲಿಯೇ ಚುಚ್ಚಿಬಿಡುತ್ತಿದ್ದರು. ಶಿವಾಯ ನಮಃ! ಅದಕ್ಕೇ ಆ ತರಹದ ಯಮನೋವು!
ಓಹೋ! ವಿಷಯ ಹೀಗಿದೆ ಅಂತ ಜ್ಞಾನೋದಯವಾಯಿತು. 'ಏ, ಇಷ್ಟೇ ಅಲ್ಲ ಮಾರಾಯಾ. ಸೈನ್ಯದ ವೈದ್ಯರು ಯುದ್ಧಭೂಮಿಯಲ್ಲಿ ಕೊಡುವ ಇಂಜೆಕ್ಷನ್ ಇನ್ನೂ ಖರಾಬಾಗಿರುತ್ತವೆ. ಅಲ್ಲಿ ಸಾಕಷ್ಟು ಜನ ಯೋಧರು ಗಾಯಾಳುಗಳಾಗಿ ಬಿದ್ದಿರುತ್ತಾರೆ. ತ್ವರಿತ ಗತಿಯಲ್ಲಿ ಜಾಸ್ತಿ ಜನರಿಗೆ ಇಂಜೆಕ್ಷನ್ ಚುಚ್ಚಬೇಕಾಗಿರುತ್ತದೆ. ನಡುನಡುವೆ ಸೂಜಿ ಬದಲಾಯಿಸುತ್ತ ಕೂತರೆ ಸಮಯ ವ್ಯರ್ಥವಾಗುತ್ತದೆ. ಸೂಜಿ ಬದಲಾಯಿಸದೇ ಒಬ್ಬರಿಂದ ಒಬ್ಬರಿಗೆ ಒಂದೇ ಸೂಜಿಯಲ್ಲಿ ಚುಚ್ಚಿದರೆ ಸೋಂಕು ತಗಲಿ ಲಫಡಾ ಆಗುತ್ತದೆ. ಅದಕ್ಕೆ ಸೈನ್ಯದ ವೈದ್ಯರು ಕಂಡುಕೊಂಡ ಉಪಾಯವೆಂದರೆ ಒಂದು ಸ್ಪಿರಿಟ್ ದೀಪವನ್ನು ಸೆಟಪ್ ಮಾಡಿಕೊಳ್ಳುವದು. ಅದರ ಜ್ವಾಲೆಯಲ್ಲಿ ಇಂಜೆಕ್ಷನ್ ಸೂಜಿ ಹಿಡಿದುಬಿಡುವದು. ಕಾದು ಗರಮ್ ಆದ ಸೂಜಿ ಏಕ್ದಂ ಫುಲ್ sterile ಆಗಿಬಿಡುತ್ತದೆ. ನಂತರ ಚುಚ್ಚುವದು. ಮತ್ತೆ ಸೂಜಿಯನ್ನು ಬಿಸಿ ಮಾಡುವದು, ಮತ್ತೆ ಚುಚ್ಚುವದು,' ಅಂತ ಯುದ್ಧಭೂಮಿಯಲ್ಲಿ ಆ ಕಾಲದಲ್ಲಿ ಇಂಜೆಕ್ಷನ್ ಕೊಡುವ ಪದ್ಧತಿ ವಿವರಿಸಿದರು. ಯಪ್ಪಾ! ಮೊದಲೇ ದಬ್ಬಣದಂತಹ ಸೂಜಿ. ಮೇಲಿಂದ ಬೆಂಕಿಯಲ್ಲಿ ಕಾಯಿಸಿ ಚುಚ್ಚುತ್ತಾರೆ! ಟೋಟಲ್ ಶಿವಾಯ ನಮಃ! ಪುಣ್ಯಕ್ಕೆ ಡಾ. ಜೀ. ಟಿ. ಪಾಟೀಲರು ಇನ್ನೂ ಆ ಮಟ್ಟಕ್ಕೆ ಹೋಗಿರಲಿಲ್ಲ. ಸೂಜಿ ಬದಲಾಯಿಸುತ್ತಿದ್ದರು. ಅಷ್ಟೇ ಒಂದು ರೋಗಿಗೆ ಒಂದೇ ಸಲ. ಔಷದ ಹೀರಲು ಒಂದು ದೊಡ್ಡ ಸೂಜಿ, ಮತ್ತೆ ಚುಚ್ಚಲು ಮತ್ತೊಂದು ಅಂತ ಬದಲಾಯಿಸುತ್ತ ಕೂಡುತ್ತಿರಲಿಲ್ಲ ಅಷ್ಟೇ. ಎಲ್ಲಿ ಡಾ. ಜೀ.ಟಿ ಪಾಟೀಲರು ಸೈನ್ಯದಲ್ಲಿ ಕೆಲಸ ಮಾಡಿ ಬಂದಿದ್ದರೋ ಹೇಗೆ? ಗೊತ್ತಿಲ್ಲ. ಆದರೆ ಅವರ rough & tough ಬಾಹ್ಯ ವ್ಯಕ್ತಿತ್ವ ನೋಡಿದರೆ ಮಿಲಿಟರಿ ಜನರಂತೆಯೇ ಇದ್ದರು. ದೊಡ್ಡ ಪರ್ಸನಾಲಿಟಿ. ಗರ್ಜನೆಯಂತಹ ಮಾತು. ಖಡಕ್ ಡಾಕ್ಟರ್.
ಕಮಲಾಪುರ ಡಾಕ್ಟರ್ ಮೇಡಂ ಹೊರಟುಹೋದ ಹೊತ್ತಿಗೆ ಮಧ್ಯಾನದ ಊಟದ ಸಮಯ. ದೀಪಾವಳಿಯ ಮುಖ್ಯ ದಿನ ಅಂತ ಬಡಾ ಖಾನಾ. ಒಂದು ನಾಲ್ಕು ಜನ ನೆಂಟರೂ ಬಂದಿದ್ದರು.
'ಅಯ್ಯೋ! ದೀಪಾವಳಿಗೇ ಸರಿಯಾಗಿ ಜಡ್ಡು ಬಂದು ಮಲಗಿಬಿಟ್ಟಿಯಲ್ಲೋ! ಒಂದು ತಿನ್ನೋ ನಸೀಬಿಲ್ಲ. ಒಂದು ಉಣ್ಣೋ ನಸೀಬಿಲ್ಲ,' ಅಂತ ಪರಿತಪಿಸುತ್ತ ಅಮ್ಮ ಊಟದ ತಯಾರಿಗೆ ಹೋದಳು. ಬಕಾಸುರನಂತಹ ನನಗೆ ಅವಳು ಮಾಡಿದ ತರಹತರಹದ ತಿಂಡಿ ತಿನಿಸನ್ನು ತಿನ್ನುವ ಅದೃಷ್ಟವಿಲ್ಲವಲ್ಲ ಅಂತ ಅವಳ ಸಂಕಟ. ಏನು ಮಾಡಲಿಕ್ಕೆ ಬರುತ್ತದೆ? ಮುಂದೆ ಎರಡು ಮೂರು ದಿವಸಗಳಲ್ಲಿ ಆರಾಮಾದರೂ ಕಟ್ಟುನಿಟ್ಟಾದ ಪಥ್ಯ ಇನ್ನೂ ಎರಡು ವಾರ ನಡೆಯುತ್ತದೆ. ಅದು ನಮ್ಮ ಪಾಲಕರ ಕಾಳಜಿ ವಹಿಸುವ ಪದ್ಧತಿ. ಆರಾಮಾಯಿತು ಅಂತ ಒಮ್ಮೆಲೇ ಮೊದಲಿನ ಜೀವನಶೈಲಿಗೆ ಬಂದು, ಮೊದಲಿನ ರೂಟೀನ್ ಆಹಾರ, ವಿಹಾರ ಶುರುಮಾಡಿಕೊಂಡರೆ ಅನಾರೋಗ್ಯ ಮತ್ತೆ ಮರುಕಳಿಸುತ್ತದೆ. ಅದು ಅವರ ತತ್ವ. ಹಾಗಾಗಿ ಪಥ್ಯ ಮುಂದುವರೆಯಬೇಕು. ಪಥ್ಯ ಮುಗಿಯುವ ಹೊತ್ತಿಗೆ ದೀಪಾವಳಿಯ ಫಳಾರ ಎಲ್ಲ ಹರೋಹರವಾಗಿಬಿಟ್ಟಿರುತ್ತದೆ. ಪ್ರಾರಬ್ಧ!
ಸಂಜೆ ಹೋಗಿ ಯಾರೋ ಕಮಲಾಪುರ ಡಾಕ್ಟರ್ ಬಾಯಿ ಕೊಟ್ಟ ಸಿರಪ್, ಗುಳಿಗೆ ತಂದುಕೊಟ್ಟರು. ಸಿರಪ್ ಮಸ್ತ ಸಿಹಿಸಿಹಿಯಾಗಿತ್ತು. ಡಾ. ಜೀ.ಟಿ.ಪಾಟೀಲರ mixture ಹಾಗೆ ಕೆಟ್ಟ ಕಹಿಯಾಗಿರಲಿಲ್ಲ. ಗುಳಿಗೆಗಳೂ ಸಣ್ಣವಿದ್ದವು. ದೊಡ್ಡ ಹೊನಗ್ಯಾ ಸೈಜಿನಲ್ಲಿ ಇರಲಿಲ್ಲ. ದೊಡ್ಡ ಸೈಜಿನ ಗುಳಿಗೆಗಳ ತೊಂದರೆ ಅಂದರೆ ಅವನ್ನು ನುಂಗಲೇ ಆಗುತ್ತಿರಲಿಲ್ಲ. ಮನೆಯವರು ಮತ್ತೆ ಪುಡಿ ಮಾಡಿ ನೀರಲ್ಲಿ ಕದಡಿ ಕೊಡುತ್ತಿದ್ದರು. ಮತ್ತೆ ಕೆಟ್ಟ ಕಹಿ ನೀರು. ಮೊದಲೇ ಕಹಿ ಸಿರಪ್ ಪ್ರಾರಬ್ಧ. ಜೊತೆಗೆ ಮತ್ತೊಂದು. ಆದರೆ ಕಮಲಾಪುರ ಡಾಕ್ಟರ್ ಬಾಯಿ ಕೊಟ್ಟ ಸಿರಪ್ ಸಿಹಿಯಾಗಿತ್ತು. ಅದೇ ದೊಡ್ಡ ಮಾತು.
ಆ ದೀಪಾವಳಿಗೆ ಸಿಹಿ ಅಂತ ಏನಾದರೂ ಸೇವಿಸಿದ್ದರೆ ಅದು ಆ ಸಿಹಿ ಸಿರಪ್ ಮಾತ್ರ. ಬಾಕಿ ಎಲ್ಲ ವರ್ಜ್ಯ. ಪಥ್ಯದ ಊಟ.
ನಂತರ ಮತ್ತೊಮ್ಮೆ ಕಮಲಾಪುರ ಡಾಕ್ಟರ್ ಬಾಯಿಯವರ ಹತ್ತಿರ ಟ್ರೀಟ್ಮೆಂಟ್ ತೆಗೆದುಕೊಳ್ಳುವ ಸಂದರ್ಭ ಬಂದ ನೆನಪಿಲ್ಲ. ಮುಂದಿನ ವರ್ಷ ಜಾಸ್ತಿ ಸಲ ಜ್ವರ ಬಂದು ಮಲಗಿದ ನೆನಪೂ ಇಲ್ಲ. ಯಾಕೆಂದರೆ ಮುಂದಿನ ವರ್ಷ ಎರಡನೇ ಕ್ಲಾಸ್. ಅಷ್ಟೊತ್ತಿಗೆ ಕನ್ನಡವನ್ನು ಬರೋಬ್ಬರಿ ಓದಲು ಕಲಿತಿದ್ದೆ. ಮನೆಯಲ್ಲಿದ್ದ ಸಾವಿರಾರು ಮಕ್ಕಳ ಪುಸ್ತಕಗಳ ವಿಶಿಷ್ಟ ಪ್ರಪಂಚ ತೆರೆದುಕೊಳ್ಳುತ್ತಿತ್ತು. ಓದುವದರಲ್ಲಿ ಕಳೆದುಹೋದೆ. ಬಿಸಿಲಲ್ಲಿ ಮಾಳಮಡ್ಡಿಯ ಹಾದಿ ಬೀದಿ ಅಲೆಯುತ್ತ, ಮಾವಿನ ಕಾಯಿ, ಹುಂಚಿ ಕಾಯಿ, ಪ್ಯಾರಲ ಕಾಯಿ ತಿಂದು, ನೀರು ಕುಡಿದು, ನಂತರ ಬಾಕಿ ದಾಂಡಿಗ ಹುಡುಗರಂತೆ ದಾರಿಸಿಕೊಳ್ಳಲಾಗದೇ ಜಡ್ಡು ಬೀಳುತ್ತಿದ್ದ ಪರಂಪರೆಗೆ ಒಂದು ಬ್ರೇಕ್ ಬಿತ್ತು.
ನಂತರ ಮುಂದಿನ ವರ್ಷ ನಾವೇ ಆ ಏರಿಯಾ ಬಿಟ್ಟು ಕರ್ನಾಟಕ ಯೂನಿವರ್ಸಿಟಿ ಕೆಳಗಿನ ನಿರ್ಮಲ ನಗರದ ಸ್ವಂತ ಮನೆಗೆ ಶಿಫ್ಟಾದ ಮೇಲೆ ಮಾಳಮಡ್ಡಿ ಡಾಕ್ಟರ್ ಮಂದಿ ದೂರವಾಗಿಬಿಟ್ಟರು. ಹೊಸ ಏರಿಯಾದ ಮೂರ್ನಾಲ್ಕು ಜನ ಡಾಕ್ಟರ್ ಮಂದಿಯನ್ನು ಟ್ರೈ ಮಾಡಿ ನೋಡಿದ ಮೇಲೆ ಬರೋಬ್ಬರಿ ಫಿಟ್ ಆದವರು ಡಾ.ಧಡೂತಿ ಅನ್ನುವ ಡಾಕ್ಟರ್. ಈಗ ತೀರಿಹೋಗಿದ್ದಾರೆ. ಹೆಸರಲ್ಲಿ ಮಾತ್ರ ಧಡೂತಿ. ಸಣ್ಣ ಪರ್ಸನಾಲಿಟಿ. ಭಾಳ ಮೃದು ಸ್ವಭಾವದ ಸೂಕ್ಷ್ಮ ಡಾಕ್ಟರ್. ಅವರು ಕೊಡುತಿದ್ದ mixture ಕೂಡ ತುಂಬಾ ಸಿಹಿಯಾಗಿರುತ್ತಿತ್ತು. ಇಂಜೆಕ್ಷನ್ ಸಹಿತ ಬಹಳ ನಾಜೂಕಾಗಿ ಕೊಡುತ್ತಿದ್ದರು. ಹಾಗಾಗಿ ಒಂದೇ ಸಲ ಎರಡು ಇಂಜೆಕ್ಷನ್ ಕೊಟ್ಟರೂ ಏನೂ ಅನ್ನಿಸುತ್ತಿರಲಿಲ್ಲ. ಡಾ. ಧಡೂತಿ ಒಮ್ಮೆ ನನಗೆ ಒಂದು ವಾರದಲ್ಲಿ ಕಮ್ಮಿ ಕಮ್ಮಿಯಂದರೂ ಒಂದು ಇಪ್ಪತ್ತು ಇಂಜೆಕ್ಷನ್ ಚುಚ್ಚಿಬಿಟ್ಟಿದ್ದರು. ಆಪರಿ ಜಡ್ಡು ಬಿದ್ದುಬಿಟ್ಟಿದ್ದೆ. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ.
ನಾವೆಲ್ಲಾ ಡಾ. ಧಡೂತಿಯವರಿಗೆ ಬೇಗನೆ ಅಡ್ಜಸ್ಟ್ ಆಗಿಬಿಟ್ಟೆವು. ಅಡ್ಜಸ್ಟ್ ಆಗದೇ ಇದ್ದವರು ಅಂದರೆ ತಂದೆಯವರೇ. ಅವರು ಹೇಳಿ ಕೇಳಿ ಡಾ. ಜೀ.ಟಿ. ಪಾಟೀಲರ ತುಂಬಾ ಹಳೆಯ ಪೇಷಂಟ್. ಮೇಲಿಂದ ಇಬ್ಬರೂ ಅತ್ಯುತ್ತಮ ಸ್ನೇಹಿತರು ಬೇರೆ. ಹಾಗಾಗಿ ಹೊಸ ಮನೆಗೆ ಬಂದ ಹೊಸತರಲ್ಲಿ ಮತ್ತೆ ಡಾ. ಜೀ.ಟಿ.ಪಾಟೀಲರೇ ಬೇಕಾಯಿತು. ಒಮ್ಮೆ ತಂದೆಯವರು ಸಿಕ್ಕಾಪಟ್ಟೆ ಜಡ್ಡು ಬಿದ್ದರು. ಹೊಸ ಡಾಕ್ಟರ್ ಮಂದಿ ಕೊಟ್ಟ ಚಿಕಿತ್ಸೆ ಏನೂ ಫಲಕಾರಿಯಾಗಲಿಲ್ಲ. ಮತ್ತೆ ಡಾ. ಜೀ.ಟಿ.ಪಾಟೀಲರನ್ನೇ ಹೌಸ್ ವಿಸಿಟ್ ಗೆ ಕರೆದು ಬರಬೇಕಾಯಿತು. ಅವರ ಮನೆ ದೂರದ ಬಾಗಲಕೋಟೆ ಪೆಟ್ರೋಲ್ ಬ್ಯಾಂಕ್ ಹತ್ತಿರವೆಲ್ಲೋ ಇತ್ತು. ಅಷ್ಟು ದೂರದಿಂದ ತಮ್ಮ ಸ್ಕೂಟರ್ ಮೇಲೆ ಮನೆಗೆ ಬಂದರು. ಮೊದಲಿನ ಹೌಸ್ ವಿಸಿಟ್ ತರಹವೇ. ಬಂದು, ತಪಾಸಣೆ ಮಾಡಿ, ಏನು ಒಂದು ತಮ್ಮ ಟ್ರೇಡ್ಮಾರ್ಕ್ ದಬ್ಬಣದ ಇಂಜೆಕ್ಷನ್ ಹೆಟ್ಟಿದರು ನೋಡಿ. ಅಷ್ಟೇ. ಆ ಇಂಜೆಕ್ಷನ್ ಯಮನೋವಿಗೆ 'ಕುಂಯ್ಕ್!' ಅಂತ ಒಂದು ದೊಡ್ಡ ಸೌಂಡ್ ಮಾಡಿದ ತಂದೆಯವರು ನಂತರ ಮುಸುಕು ಹಾಕಿ ಮಲಗಿ ಒಂದು ನಾಲ್ಕು ತಾಸು ಜಬರ್ದಸ್ತ್ ನಿದ್ದೆ ಮಾಡಿ ಎದ್ದುಬಿಟ್ಟರು. ಜ್ವರ, ಅದು, ಇದು ಎಲ್ಲ ಫುಲ್ ಬಿಟ್ಟು ಓಡಿಹೋಗಿತ್ತು. ಅದು ಡಾ. ಜೀ.ಟಿ. ಪಾಟೀಲರ ಇಂಜೆಕ್ಷನ್ ಕಮಾಲ್. ಮೂವತ್ತೈದು ವರ್ಷಗಳ ನಂತರವೂ ಅದು ನಮ್ಮ ಮನೆಯ ದೊಡ್ಡ ಜೋಕ್. ನಂತರ ಜೀಟಿ ಪಾಟೀಲರ ಸಂಪರ್ಕ ಕಮ್ಮಿಯಾಗುತ್ತ ಬಂತು. ಈಗ ಸ್ವಲ್ಪ ವರ್ಷಗಳ ಹಿಂದೆ ತೀರಿಯೂ ಹೋದರು ಅಂತ ಕೇಳಿದೆ. ಪುಣ್ಯಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ.
ಡಾಕ್ಟರ್ ಜೀ.ಟಿ. ಪಾಟೀಲರು, ಅವರ ಇಂಜೆಕ್ಷನ್ ಕೊಡುವ ಪದ್ಧತಿ, ಅವರ ಕೆಟ್ಟ ಕಹಿ ಔಷಧಗಳು, ಅವರ rough & tough exterior ಬಗ್ಗೆ ತಮಾಷೆ ಮಾಡಿರಬಹುದು. ಆದರೆ ಅವರು ಒಬ್ಬ ಅತ್ಯುತ್ತಮ ವೈದ್ಯರಾಗಿದ್ದರು. ಸುಖಾ ಸುಮ್ಮನೆ ಔಷಧಿ, ಚಿಕಿತ್ಸೆ ಕೊಡಲೇಬಾರದು ಅಂತ ಅವರ ಧೃಡ ನಂಬಿಕೆ. ಬರೋಬ್ಬರಿ ನೆನಪಿದೆ. ಹತ್ತು ಬಾರಿ ಹೋದರೆ ಐದು ಬಾರಿ ಏನೂ ಔಷಧಿ, ಚಿಕಿತ್ಸೆ ಕೊಡದೇ ಕಳಿಸಿಬಿಡುತ್ತಿದ್ದರು. ಆರೋಗ್ಯದ ತಪಾಸಣೆ ಮಾಡುತ್ತಿದರು. 'ಏನಾಗಿಲ್ಲ ತೊಗೋ. ಏನೂ ಬ್ಯಾಡ. ಮುಂದ ಹೆಚ್ಚಾದ್ರ ನೋಡೋಣಂತ. ನಡಿ ಈಗ ಮನಿಗೆ,' ಅಂತ ಹೇಳಿ ವಾಪಸ್ ಕಳಿಸಿಬಿಡುತ್ತಿದ್ದರು. ತಪಾಸಣೆ ಫ್ರೀ. ನಮ್ಮ ಮನೆಯಲ್ಲೋ ವಿಪರೀತ ಕಾಳಜಿಯ ಪಾಲಕರು. ಸ್ವಲ ಮೈ ಬಿಸಿಯಾದರೂ, 'ಒಮ್ಮೆ ಜೀ.ಟಿ.ಪಾಟೀಲ ಡಾಕ್ಟರ್ ಕಡೆ ಹೋಗಿ ಬಂದು ಬಿಡೋಣ. ನಡಿಯೋ,' ಅಂತ ಎತ್ತಾಕಿಕೊಂಡು ಹೊರಟೇಬಿಡುತ್ತಿದ್ದರು. ಜೀ.ಟಿ.ಪಾಟೀಲರ ಹತ್ತಿರ ಹೋಗೋಣ ಅಂದ ಮರುಕ್ಷಣ ಎಲ್ಲ ಆರಾಮ್ ಆಗಿಬಿಡುತ್ತಿತ್ತು ಅಂತ ನಮ್ಮ ಜೋಕ್. ಅವರ ದವಾಖಾನೆ ಮುಟ್ಟುವಷ್ಟರಲ್ಲಿ ಅವರ ಇಂಜೆಕ್ಷನ್ ಹೆದರಿಕೆಯಿಂದಲೇ ಫುಲ್ ಆರಾಮ್. ಹಾಗಾಗಿ ಚಿಕಿತ್ಸೆ ಕ್ಯಾನ್ಸಲ್. ಅವರೇ ಕೊನೆಯ ಡಾಕ್ಟರ್ ಅಷ್ಟು selective ಆಗಿ ಅತಿ ಕಮ್ಮಿ ಚಿಕಿತ್ಸೆ ಕೊಟ್ಟವರು. ಉಳಿದವರೆಲ್ಲ, ಅದೂ ಈ ಅಮೇರಿಕಾದಲ್ಲಿ, ಬೇಕಾಗಲಿ ಬೇಡವಾಗಲಿ over treatment ಕೊಟ್ಟಿದ್ದೇ ಜಾಸ್ತಿ. ಅಮೇರಿಕಾದ over treatment ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಅದರ ಮೇಲೆಯೇ ನಿಂತಿದೆ ಔಷಧ ಕಂಪನಿಗಳ ಲಾಭ ನಷ್ಟ. Excessive / unnecessary medication is a sad reality.
ಇರಲಿ. ೧೯೭೮ ರ ದೀಪಾವಳಿ ಹಾಗೆ ಕಳೆದುಹೋಯಿತು. ಯಾವದೇ ತರಹದ celebration ಇಲ್ಲ. ಎಲ್ಲ ಒಣ ಒಣ. ತಂದಿಟ್ಟುಕೊಂಡಿದ್ದ ಹೊಸ ಬಟ್ಟೆ, ಪಟಾಕಿ ಸಹಿತ ಎಲ್ಲ ಪಥ್ಯದ ಕಾಟದಿಂದ ನೇಪಥ್ಯಕ್ಕೆ ಸರಿಯಿತು.
ಈ ವರ್ಷದ ದೀಪಾವಳಿಯೂ ಇಲ್ಲ. ಇಡೀ ಮನೆತನಕ್ಕೆ ಸೂತಕ ಬಂದುಹೋಗಿದೆ. ಅತ್ಯಂತ ಹಿರಿಯ ಕಸಿನ್ ಒಬ್ಬವ ತೀರಿಹೋದ. ೬೮ ವರ್ಷ ವಯಸ್ಸಾಗಿತ್ತು. ಸ್ವಲ ದಿವಸಗಳ ಹಿಂದೆ ಜಡ್ಡು ಬಿದ್ದು, ಆಸ್ಪತ್ರೆ ಸೇರಿದ್ದ. ಮೊನ್ನೆ ನಿಧನನಾದ. ಜಾಸ್ತಿ ತೊಂದರೆ ಪಡಲಿಲ್ಲ. ಅದು ಪುಣ್ಯ. ಮನೆ ಕಡೆ ಮಕ್ಕಳೆಲ್ಲ ಸೆಟಲ್ ಆಗಿ ಆರಾಮ್ ಇದ್ದಾರೆ. ಹಾಗಾಗಿ ಅದೂ ಓಕೆ. ಆದರೂ ಕುಟುಂಬದ ಒಬ್ಬ ಸದಸ್ಯ ಮೇಲೆ ಹೋದ. ಸೂತಕ ಬಂತು. ಇಲ್ಲವಾದರೆ ಏನೋ ಒಂದು ಒಳ್ಳೆ ಊಟ ಮಾಡುತ್ತಿದ್ದೆನೋ ಏನೋ. ಅದನ್ನು ಒಂದು ಹತ್ತು ದಿನಕ್ಕೆ ಮುಂದೂಡಿದೆ. ಅಷ್ಟೇ ಫರಕ್. ಜಾಸ್ತಿ ಏನಿಲ್ಲ.
'ಎಕ್ಕುಟ್ಟಿ ಹೋದ ದೀಪಾವಳಿ' ಅಂದಾಗ ನೆನಪಾಗುವದು ಹಳೆಯ ಸಿನೆಮಾ 'ನಝರಾನಾ'ದ ಹಾಡು. ಮುಕೇಶನ ಆರ್ದ್ರ ಧ್ವನಿಯಲ್ಲಿ. ಅದ್ಭುತವಾದ ಗೀತಸಾಹಿತ್ಯವಿದೆ. ಮೊದಲೆಲ್ಲ ಈ ಹಾಡನ್ನು ಕೇಳುತ್ತಿದ್ದೆ. melodious ಅನ್ನಿಸುತ್ತಿತ್ತು. ಈಗ youtube ಮೇಲೆ ನೋಡುವದೇ ಜಾಸ್ತಿ. ನೋಡುವಾಗ 'ಅಯ್ಯೋ!ಪಾಪ,' ಅನ್ನಿಸುತ್ತದೆ. ರಾಜ ಕಪೂರನ ನಝರಾನಾ (೧೯೬೧) ಒಂದು ದೊಡ್ಡ ಟ್ರಾಜಿಡಿ ಫಿಲಂ. ಮುಕೇಶನ ಹಾಡುಗಳನ್ನು ಕೇಳುವದೇ ಸಂತೋಷ. ನೋಡಿಬಿಟ್ಟರೆ 'ಅಯ್ಯೋ ಪಾಪ!' ಫೀಲಿಂಗ್.
ನಿಮಗೆ ದೀಪಾವಳಿ ಶುಭಾಶಯಗಳು. ಗಡದ್ದಾಗಿ ಆಚರಿಸಿ.
ಯಾರ ದೀಪಾವಳಿಯೂ ನಝರಾನಾ ಫಿಲ್ಮಿನ ರಾಜ ಕಪೂರನ ದೀಪಾವಳಿಯಷ್ಟು ಖರಾಬ್ ಆಗದೇ ಇರಲಿ. ಬೇಕಾದರೆ ಕೆಳಗಿನ ಟ್ರಾಜಿಡಿ ಹಾಡಿನ ವೀಡಿಯೊ ದೀಪಾವಳಿಯ ಸಂಭ್ರಮಗಳೆಲ್ಲ ಮುಗಿದ ಮೇಲೆ ನೋಡಿ!
Ek vo bhi deewaali thi, ek ye bhi deewaali hai
Ujada hua gulashan hai, rota hua maali hai

Baahar to ujaala hai magar dil men andhera
Samajho na ise raat, ye hai gham ka savera

Kya deep jalaayen ham ,taqadeer hi kaali hai

Aise na kabhi deep kisi dil ka bujha ho
Main to vo musaafir hun, jo raste men luta ho

Ai maut tu hi aa ja, dil tera sawaali hai

Ujada hua gulashan hai, rota hua maali hai.
ನನ್ನ ಹರಕುಮುರಕು ಭಾಷಾಂತರ. ನಮಗೆ ಕವಿತೆ ಗಿವಿತೆ ಬರೋದಿಲ್ಲ. ಒಳ್ಳೆ lyrics ಇಷ್ಟವಾಗುತ್ತವೆ. ಅದೂ ಹಳೆಯ ಹಿಂದಿ ಹಾಡುಗಳ lyrics ಎಷ್ಟು meaningful ಮತ್ತು ಮನೋಜ್ಞವಾಗಿರುತ್ತಿದ್ದವು. ಅಲ್ಲವೇ?
ಅವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ
ಧ್ವಂಸವಾದ ಉದ್ಯಾನವಿದೆ, ದುಃಖಿಸುತ್ತಿರುವ ಮಾಲಿಯಿದ್ದಾನೆ

ಹೊರಗೆಲ್ಲ ಬೆಳಕಿದೆ ಆದರೆ ಹೃದಯದಲ್ಲಿ ಮಾತ್ರ ಕತ್ತಲೆ
ಇದನ್ನು ರಾತ್ರಿಯೆಂದು ತಿಳಿಯದಿರು, ಇದು ದುಃಖದ ಹಗಲು

ಯಾವ ದೀಪ ಹಚ್ಚಲಿ, ಅದೃಷ್ಟವೇ ಖಾಲಿಯಾಗಿದೆ

ಹೀಗೆ ಎಂದೂ ಯಾರ ಹೃದಯದ ದೀಪವನ್ನೂ ಆರಿಸಬೇಡ
ನಾನೊಬ್ಬ ಪಯಣಿಗ, ರಸ್ತೆಯಲ್ಲೇ ದರೋಡೆಗೊಳಗಾದೆ
ಹೀಗೆ ಎಂದೂ ಯಾರ ಹೃದಯದ ದೀಪವನ್ನೂ ಆರಿಸಬೇಡ
ನಾನೊಬ್ಬ ಪಯಣಿಗ, ರಸ್ತೆಯಲ್ಲೇ ದರೋಡೆಗೊಳಗಾದೆ
ಏ ಸಾವೇ ಬಂದು ಬಿಡು, ಈ ಹೃದಯ ನಿನ್ನದೇ

ಆವತ್ತೂ ಒಂದು ದೀಪಾವಳಿ ಇತ್ತು, ಇವತ್ತೂ ಒಂದು ದೀಪಾವಳಿ ಇದೆ

2 comments:
ಮಹೇಶ,
ನಿಮಗೂ ದೀಪಾವಳಿಯ ಶುಭಾಶಯಗಳು. ನಿಮ್ಮ ಬಾಳಿನಲ್ಲಿ ಸಿಹಿ mixture ಮಾತ್ರ ಇರಲಿ ಎಂದು ಹಾರೈಸುತ್ತೇನೆ.
ಧನ್ಯವಾದಗಳು, ಸುನಾಥ್ ಸರ್.
Post a Comment