ಅವಳು ಅಂದು ಒಂದು ಧೃಡ ನಿರ್ಧಾರವನ್ನು ಮಾಡಿದಳು. 'ಇನ್ನೆಂದೂ ಕೇಕ್ ಮಾಡುವದಿಲ್ಲ. ಮಾಡಿದರೂ ಮೊಟ್ಟೆರಹಿತ (eggless) ಕೇಕನ್ನಂತೂ ಸುತಾರಾಮ್ ಮಾಡುವದಿಲ್ಲ.' ಹಾಗೆಂದುಕೊಳ್ಳುತ್ತಲೇ ಕೆಟ್ಟುಹೋದ ಮೂಡಿನಲ್ಲಿ ದುಮುದುಮುಗುಟ್ಟುತ್ತಲೇ ಮನೆಯನ್ನು ಪ್ರವೇಶಿಸಿದಳು.
ಪಡಸಾಲೆಯಲ್ಲಿಯೇ ಕೂತಿದ್ದ ಗಂಡ ತಲೆಯತ್ತಿ ನೋಡಿದ. ಅವನ ಕಡೆ ಕೆಕ್ಕರಿಸಿ ನೋಡಿದಳು. 'ಇವಳ ತಲೆ ಯಾಕೋ ಗರಂ ಆಗಿರಬೇಕು,' ಅಂದುಕೊಂಡ ಪತಿ ಏನೂ ಕಿತಾಪತಿ ಮಾಡದೇ ಓದುತ್ತಿದ್ದ ತನ್ನ ಪೇಪರಿನಲ್ಲಿ ತಲೆ ಹುಗಿಸಿ ಕೂತ.
ಹೊರಗಿಂದ ಬಂದವಳು ಬಟ್ಟೆ ಬದಲಾಯಿಸಲು ಮಹಡಿ ಮೇಲಿನ ಕೋಣೆಗೆ ಹೋಗುವದು ಸಹಜ. ಆದರೆ ಇವಳು ಇಂದು ಸೀದಾ ಅಡಿಗೆಮನೆಗೆ ಹೋಗಿಬಿಟ್ಟಳು. ಸ್ವಲ್ಪೇ ತಲೆ ಎತ್ತಿ ನೋಡಿದ ಪತಿ ಸ್ವಲ್ಪ ಆಶ್ಚರ್ಯಪಟ್ಟ. ಯಾಕೆ ಸುಮ್ಮನೇ ರಿಸ್ಕ್ ಅಂತ ಏನೂ ಕೇಳಲು ಹೋಗಲಿಲ್ಲ.
ಅವಳು ಅಡಿಗೆಮನೆಗೆ ಹೋದಳು. ಅಲ್ಲಿ ಕಿಚನ್ ಕೌಂಟರ್ ಮೇಲೆ ಸಣ್ಣ ದೆವ್ವದಂತೆ ಕೂತಿತ್ತು ಅದು. ಅದೇ. ಅದೇ. ಕೇಕ್ ಮಾಡುವ ಓವೆನ್ (oven). ಅದನ್ನು ನೋಡಿದಾಕ್ಷಣ ಏನನ್ನಿಸಿತೋ ಏನೋ. ಹುಚ್ಚಿಯಂತೆ ತಲೆ ಕೆದರಿಕೊಂಡಳು. ಹಣೆಯ ಕುಂಕುಮ ಎಲ್ಲ ಕಡೆ ಹರಡಿತು. ದೆವ್ವದ ಖರಾಬ್ ಲುಕ್ ಬಂದಿತು. ಓವೆನ್ ಬಳಿ ಹೋದವಳೇ, 'ಏss!' ಅಂತ ವಿಚಿತ್ರವಾಗಿ ಕೂಗುತ್ತ, ಆ ಓವೆನ್ ಅನ್ನು ರೋಷದಿಂದ ಎತ್ತಿದಳು. ತಲೆಯತ್ತರಕ್ಕೆ ಎತ್ತಿದವಳೇ ಕೆಳಗೆ ಬಿಸಾಕಿಬಿಟ್ಟಳು. ಸುಮಾರು ದೊಡ್ಡ ಸೈಜಿನ ಕೇಕ್ ಮಾಡುವ ಓವೆನ್ ಅಷ್ಟೆತ್ತರದಿಂದ ನೆಲಕ್ಕೆ ಬಂದು ಅಪ್ಪಳಿಸಿದರೆ ಏನಾಗಬೇಕು? ದೊಡ್ಡ ಶಬ್ದ. ಫಳಾರ್! ಢಂ! ಅಂತ ಭೀಕರ ಆವಾಜ್ ಮಾಡುತ್ತ ಅಮೃತ ಶಿಲೆಯ ನೆಲದ ಮೇಲೆ ಬಿದ್ದ ಓವೆನ್ ಚೂರು ಚೂರು. ಫುಲ್ ನುಚ್ಚುನೂರು. ಒಳ್ಳೆ ಆಟಂ ಬಾಂಬ್ ಹಾಕಿಸಿಕೊಂಡಂತೆ ಶಿವಾಯ ನಮಃ ಆಗಿಬಿಟ್ಟಿತ್ತು.
ಈ ಪ್ರಕೋಪದಿಂದ ಬೆಚ್ಚಿಬಿದ್ದ ಗಂಡ ಎದ್ದು ಓಡಿ ಬಂದ. ಉಟ್ಟಿದ್ದ ಲುಂಗಿ ಕಾಲಿಗೆ ಅಡ್ಡಡ್ಡಾಗಿ ಬಂತು. ಎಡವಿ ಬೀಳುವನಿದ್ದ. ಹೇಗೋ ಮಾಡಿ ಸಂಬಾಳಿಸಿಕೊಂಡು ಅಡಿಗೆಮನೆಗೆ ಓಡಿ ಬಂದು ನೋಡಿದರೆ ಸಿಕ್ಕಾಪಟ್ಟೆ ಖರಾಬ್ ದೃಶ್ಯ.
ನೆಲದ ಮೇಲೆ ಓವೆನ್ ಚೂರುಚೂರಾಗಿ ಬಿದ್ದಿದೆ. ಖಬರಿಲ್ಲದ ಹುಚ್ಚಿಯಂತೆ ನಿಂತಿದ್ದಾಳೆ ಅವಳು. ನೋಡಿದ ಗಂಡನ ಬಾಯಿಯ ಪಸೆಯಾರಿತು. ಒಂದು ಗ್ಲಾಸ್ ನೀರು ಕೇಳೋಣ ಅಂದುಕೊಂಡ. 'ತನ್ನನ್ನೂ ಎತ್ತಿ ಒಗೆದುಬಿಟ್ಟಾಳು. ಯಾಕೆ ರಿಸ್ಕ್?' ಅಂತ ಬಾಯಿ ಬಿಟ್ಟುಗೊಂಡು 'ಹ್ಯಾಂ!?' ಅಂತ ನೋಡಿದ.
'ಏನ ಇದು? ಯಾಕ? ಏನಾತು? ಓವೆನ್ ಯಾಕ ಒಡೆದು ಹಾಕಿಬಿಟ್ಟಿ?' ಅಂತ ಅಳಕುತ್ತಲೇ ಕೇಳಿದ.
'ಅಯ್ಯೋ! ಸುಮ್ಮನಿರ್ರೀ! ಏನೂ ಕೇಳಬ್ಯಾಡ್ರೀ. ಇನ್ನು ಮುಂದ ಎಂದೂ ಕೇಕ್ ಮಾಡಂಗಿಲ್ಲ ನಾನು. ಒಟ್ಟೇ ಮಾಡಂಗಿಲ್ಲ. ಅದರಾಗೂ eggless ಕೇಕ್ ಅಂತೂ ಒಟ್ಟೇ ಮಾಡಂಗಿಲ್ಲ. ಕೇಕನ್ನೇ ಮಾಡಂಗಿಲ್ಲ ಅಂದ ಮ್ಯಾಲೆ ಈ ಓವೆನ್ ಯಾಕ? ಯಾಕ?' ಅಂದವಳೇ ನೆಲದ ಮೇಲೆ ಬಿದ್ದಿದ್ದ ಓವೆನ್ ಚೂರುಗಳ ಮೇಲೆ ಧಿಮಿಧಿಮಿ ಅಂತ ಒಂದು ನಾಲ್ಕು ಹೆಜ್ಜೆ ಕುಣಿದಳು. ತಲೆ ಎತ್ತಿ ಕೆಕ್ಕರಿಸಿ ನೋಡಿದಳು. ಥೇಟ್ ಆಪ್ತಮಿತ್ರ ಚಿತ್ರದ ನಾಗವಲ್ಲಿ ಹುಚ್ಚಿಯಂತೆ ಕಂಡಳು. ಎಲ್ಲಿ ಇವಳಿಗೂ ಹಾಗೆಯೇ ಹುಚ್ಚೇ ಹಿಡಿಯಿತೇನೋ ಅಂತ ಗಂಡ ಬೆಚ್ಚಿದ.
'ಏ ನಿಮ್ಮ! ಏನು ನೋಡಿಕೋತ್ತ ನಿಂತೀರಿ? ಎಲ್ಲಾ ಬಳದು ಸ್ವಚ್ಛ ಮಾಡ್ರೀ! ಇಲ್ಲಂದ್ರ ಕಾಲ್ಕಾಲಿಗೆ ಚುಚ್ಚತಾವ. ಲಗೂ!' ಅಂತ ಆಜ್ಞೆ ಬೇರೆ ಮಾಡಿಬಿಟ್ಟಳು. ರಾಡಿ ಇವಳು ಎಬ್ಬಿಸುತ್ತಾಳೆ. ಸಾಫ್ ಅವನು ಮಾಡಬೇಕು. ಕರ್ಮ ಕರ್ಮ ಅಂದುಕೊಳ್ಳುತ್ತ ಕಸಬರಿಗೆ ಮತ್ತು ಕಸ ಎತ್ತುವ ಪ್ಯಾನ್ ತರಲು ಆಕಡೆ ಹೋದ. ಇವಳು ಒಂದು ಗ್ಲಾಸ್ ನೀರು ಕುಡಿದು ಬಟ್ಟೆ ಬದಲಾಯಿಸಲು ಮಹಡಿ ಹತ್ತಿದಳು. ಮಗ ಕಂಡ. ಅಮ್ಮ ಯಾಕೋ ಗುಮ್ಮನ ಅವತಾರ ತಾಳಿದ್ದಾಳೆ ಅಂತ ಅವನಿಗೂ ಗೊತ್ತಾಯಿತು. ಅವನಿಗೂ ಅದು ರೂಢಿಯಾಗಿಬಿಟ್ಟಿದೆ. ಅಮ್ಮ ಗುಮ್ಮನಂತಾದಾಗ ಅಪ್ಪ ಬೆಪ್ಪನಂತಾಗುತ್ತಾನೆ.
ಈಕಡೆ ಗಂಡ ಕಸಬರಿಗೆ ತಂದು ಅಡಿಗೆಮನೆಯಲ್ಲಿ ಬಿದ್ದು ಒಡೆದು ಹೋಗಿದ್ದ ಓವೆನ್ ತುಣುಕುಗಳನ್ನು ಗುಡಿಸಿ ಎತ್ತತೊಡಗಿದ. 'ಇವಳ್ಯಾಕೆ ಹೀಗೆ ಮಾಡುತ್ತಾಳೆ? ಜಾಸ್ತಿಯೇ ಆಗಿದೆ ಇವಳ ಹುಚ್ಚಾಟ ಈಗಿತ್ತಲಾಗೆ,' ಅಂದುಕೊಂಡ. ಒಂದೆರೆಡು ಬಾರಿ ಯಾಕೆ ಅಂತ ಕೇಳುವ ಜುರ್ರತ್ ಮಾಡಿದ್ದ. 'ರೀ, ನಿಮಗೇನು ಗೊತ್ತಾಗ್ತದರೀ? ನೀವು ಗಂಡಸೂರಿಗೆ ಏನು ಗೊತ್ತಾಗಬೇಕು? ಪ್ಯಾಂಟ್ ಜಿಪ್ ಸುದಾ ಮ್ಯಾಲೆ ಎಳೆದುಕೊಳ್ಳದೇ ಹಾಂಗೇ ಹೋಗಿಬಿಡ್ತೀರಿ. ಹೆಂಗಸೂರ ಕಷ್ಟ ನಿಮಗ ಹೆಂಗ ಗೊತ್ತಾಗಬೇಕು? ತಿಂಗಳಿಗೊಮ್ಮೆ ಕಡಿಗ್ಯಾಗ ಆಗೋದರಿಂದ ಹಿಡಿದು ಬಸಿರು, ಬಯಕಿ, ಬಾಣಂತನ, ಈ ಮಕ್ಕಳು ಮರಿ, ಜೊತಿಗೆ ಮಂಗ್ಯಾನಂತಹ ನಿಮ್ಮ ತರಹದ ಪತಿದೇವರು, ಬಂಧು ಬಳಗದವರ ತಲಿಬ್ಯಾನಿ, ಎಲ್ಲಾ ಕಷ್ಟ ದೇವರು ನಮಗs ಕೊಟ್ಟಾನ ನೋಡ್ರೀ. ನಿಮಗೇನು? ಅದಕ್ಕೇ ಸುಖಪುರುಷರು ಅನ್ನೋದು. ಅಯ್ಯೋ! ಮೆನೋಪಾಸ್ (menopause) ನಡದದರೀ. ಯಾವಾಗ ನಿಲ್ತದೋ!? ಯಾವಾಗ ಈ ಕರ್ಮದಿಂದ ಬಿಡುಗಡೆನೋ?!' ಅಂದುಬಿಡುತ್ತಾಳೆ. ನಡೀರಿ ಶಿವಾ! 'ಈ ಮಹಿಳೆಯರು ಮಧ್ಯವಯಸ್ಸಿನ ಮನ್ಮಾನಿಗಳಿಗೆಲ್ಲ ಮೆನೋಪಾಸ್ ಮೆನೋಪಾಸ್ ಅಂದುಬಿಟ್ಟರೆ ಹ್ಯಾಂಗ್ರೀ?' ಅಂತ ಗಂಡ ತಲೆ ಮೇಲೆ ಕೈಹೊತ್ತು ಕೂಡುತ್ತಾನೆ. ಮೊದಲಾಗಿದ್ದರೆ ತಿಂಗಳಲ್ಲಿ ನಾಲ್ಕಾರು ದಿನ PMS ಅಂತ ಹೇಳಿ ಸಿಡಿಮಿಡಿ ಮಾಡುತ್ತಿದ್ದಳು. ತಿಂಗಳಲ್ಲಿ ನಾಲ್ಕೇ ದಿನದ ರಂಪ. ಏನು ನಲವತ್ತು ವರ್ಷ ವಯಸ್ಸಾಯಿತೋ ಈಗ ಮೆನೋಪಾಸ್ ಅಂತ ಹೊಸ ವೇಷ. ಮಾಡೋದೆಲ್ಲ ಮಾಡಿ, ರಾಡಿ ಎಬ್ಬಿಸುವಷ್ಟು ಎಬ್ಬಿಸಿ, ಆಮೇಲೆ ಏನಾದರೂ ಕೇಳಿದರೆ 'ಹೋ!' ಅಂತ ಕೂಗಿ, ಅತ್ತು, ಕರೆದು ಎಲ್ಲದಕ್ಕೂ ಮೆನೋಪಾಸೇ ಕಾರಣ ಅಂದುಬಿಡುತ್ತಾಳೆ. ಕೇಳಿದರೆ ಮತ್ತೆ ಅದೇ ಭಾಷಣ. ಹೆಂಗಸರು, ಕಷ್ಟ, ಕರ್ಮ, ಗಂಡು ಮುಂಡೇವಕ್ಕೆ ಏನು ಗೊತ್ತು? ಅದೇ ರಗಳೆ.
ತನ್ನ ನಸೀಬಕ್ಕೆ ತಾನೇ ಬೈದುಕೊಳ್ಳುತ್ತ, ತುದಿಗಾಲ ಮೇಲೆ ಕೂತು, ಒಡೆದು ಹೋದ ಓವನ್ನಿನ ಚೂರುಗಳನ್ನು ಜಾಗರೂಕತೆಯಿಂದ ಕಸದ ಪ್ಯಾನಿಗೆ ತುಂಬಿದ. ಎಲ್ಲಾದಾರೂ ಏನಾದರೂ ಚೂರು ಪಾರು ಗಾಜಿನ ತುಣುಕುಗಳು ಉಳಿದು ಹೋಗಿವೆಯೇನೋ ಅಂತ ಮತ್ತೆ ಮತ್ತೆ ಚೆಕ್ ಮಾಡಿದ. ಯಾಕೆಂದರೆ ಏನಾದರೂ ಉಳಿದುಹೋಗಿ ಯಾರ ಕಾಲಿಗಾದರೂ ಚುಚ್ಚಿದರೆ ಮತ್ತೆ ಇವನಿಗೇ ಉರ್ಫ್ ಗಂಡನಿಗೇ ಮಂಗಳಾರತಿಯಾಗುತ್ತದೆ. ತಲೆ ಜಾಸ್ತಿ ಕೆಟ್ಟಿದ್ದರೆ ಪ್ರಸಾದ ಕೂಡ ಸಿಗುತ್ತದೆ. ಯಾರಿಗೆ ಬೇಕು ಆ ಲಫಡಾ ಅಂದುಕೊಂಡು ಬರೋಬ್ಬರಿ ಸ್ವಚ್ಛ ಮಾಡಿದ. ಹೋಗಿ ತಿಪ್ಪೆಗೆ ಎಸೆದು ಬಂದ. ಅವರ ಮದುವೆಯಾದ ವರ್ಷ ಕೊಂಡಿದ್ದ ಕೇಕ್ ಮಾಡುವ ಓವೆನ್ ಅದಾಗಿತ್ತು. ಬರೋಬ್ಬರಿ ಹತ್ತೊಂಬತ್ತು ವರ್ಷದ ಸರ್ವೀಸಿನ ನಂತರ ಶಿವಾಯ ನಮಃ ಆಗಿಹೋಯಿತು.
ಮದುವೆಯಾದ ಹೊಸದರಲ್ಲಿ 'ಓವೆನ್ ಯಾಕೆ? ನೀನು ಕೇಕ್ ಮಾಡ್ತೀಯೇನು?' ಅಂತ ಕೇಳಿದ್ದ. ಮುಂದೆ ಅಮ್ಮಾವ್ರ ಗಂಡನಾಗಬೇಕಾಗುವ ಕರ್ಮದ ಸ್ಪಷ್ಟ ಸೂಚನೆ ಆವಾಗಲೇ ಬಂದಿತ್ತು. 'ಏ, ನಿಮ್ಮ! ಸುಮ್ಮ ಕೇಳಿದ್ದು ಖರೀದಿ ಮಾಡಿ, ತಂದು ಒಗೀರಿ. ಏನು ಅದು ಇದು ಅಂತ ಪ್ರಶ್ನೆ ಕೇಳ್ತೀರಿ? ಬೇಕು ಅಂದ್ರ ಬೇಕು. ನಿಮ್ಮ ಕಡೆ ರೊಕ್ಕ ಇಲ್ಲ ಅಂದ್ರ ಹೇಳ್ರೀ. ನಮ್ಮ ಅಪ್ಪಗ ಒಂದು ಫೋನ್ ಹಚ್ಚಿದ್ರ ಒಂದಲ್ಲ ಹತ್ತು ಓವೆನ್ ತಂದು ಕೊಟ್ಟೇಬಿಡ್ತಾನ. ಬರೇ ಇದೇ ಆತು. ಪ್ರತಿಯೊಂದಕ್ಕೂ ಯಾಕ ಯಾಕ ಅಂತ ಕೇಳಿಕೋತ್ತ,' ಅಂತ ಬರೋಬ್ಬರಿ ದಬಾಯಿಸಿಬಿಟ್ಟಿದ್ದಳು. ದೊಡ್ಡವರ ಮನೆ ದೊಡ್ಡ ಮಗಳನ್ನು ಲಗ್ನ ಮಾಡಿಕೊಂಡ ಪರಿಣಾಮ. ಏನು ಮಾಡಲಿಕ್ಕೆ ಬರುತ್ತದೆ? ಅವಳ ಇಚ್ಛೆಯಂತೆಯೇ ಓವೆನ್ ತಂದಿದ್ದರು. ಯಾವಾಗ ಕೇಕ್ ಮಾಡಿದಳೋ, ಯಾರಿಗೆ ಕೇಕ್ ತಿನ್ನಿಸಿದಳೋ ಗೊತ್ತಿಲ್ಲ.
ಅದೆಲ್ಲ ಇರಲಿ ಅವಳು ಹಾಗೇಕೆ ಮಾಡಿದಳು? ಎಲ್ಲೋ ಹೊರಗೆ ಹೋಗಿದ್ದವಳು ಮನೆಗೆ ಬರಬರುತ್ತನೇ 'ಇನ್ನೆಂದೂ ಕೇಕ್ ಮಾಡುವದಿಲ್ಲ. ಅದೂ eggless ಕೇಕ್ ಅಂತೂ ಎಂದಿಗೂ ಮಾಡುವದಿಲ್ಲ,' ಅಂತೇಕೆ ನಿರ್ಧರಿಸಿದಳು? ಓವೆನ್ ಏಕೆ ನೆಲಕ್ಕೆಸೆದು ಒಡೆದು ಬಿಸಾಕಿದಳು?
ಇದೆಲ್ಲ ಪ್ರಶ್ನೆಗಳನ್ನು ಕೇಳಿದರೆ ಅದರ ಹಿಂದಿನ ಕಥೆ ಹೇಳಬೇಕಾಗುತ್ತದೆ.
****
ವರ್ಷಕ್ಕೆ ಒಂದೇ ಒಂದು ದಿನ ಆಕೆ ಕೇಕ್ ಮಾಡುತ್ತಿದ್ದಳು. ಒಂದೇ ಒಂದು ದಿನ. ಆದರೆ ಇಡೀ ವರ್ಷ ಅದೇ ಗುಂಗಿನಲ್ಲಿ ಇರುತ್ತಿದ್ದಳು. ಪ್ರತಿವರ್ಷ ಬೇರೆ ಬೇರೆ ತರಹದ ಕೇಕ್. ಅಷ್ಟೇ ಮೊಟ್ಟೆ ಮಾತ್ರ ಇಲ್ಲ. ಶುದ್ಧ ಶಾಖಾಹಾರಿ ಕೇಕ್. ಸಸ್ಯಾಹಾರಿಗಳೇನು ಜೈನರೂ ತಿನ್ನಬಹುದಾದಂತಹ ಕೇಕ್.
ಕೇವಲ ಕೇಕ್ ಮಾಡುವದೊಂದೇ ಅಲ್ಲ. ಅದೇ ಊರಿನಲ್ಲಿದ್ದ ನಾಲ್ಕಾರು ಬಾಲ್ಯದ ಗೆಳತಿಯರನ್ನು ಕರೆದು, 'ಲೀ, ಎಲ್ಲಾರೂ ಬರ್ರಿಲೇ. ಬಂದು ಕೇಕ್ ತಿಂದು ಹೋಗ್ರೀ. ಮುದ್ದಾಂ ಬರಬೇಕಾ ಮತ್ತ! ಬರಲಿಲ್ಲ ಅಂದ್ರ ನನಗ ಭಾಳ ಬೇಜಾರ ಆಗ್ತದ ಮತ್ತ! ನೋಡ್ಕೊಳ್ಳರೀ ಮತ್ತ! ಬರ್ಯಾ ಮತ್ತ! ಮರಿಬ್ಯಾಡ್ರೀ!' ಅಂತ ಒತ್ತಾಯದ ಆಹ್ವಾನ ಬೇರೆ.
ವರ್ಷದ ಒಂದು particular ದಿನ ಮಾಡುವ ಕೇಕ್ ತಿನ್ನಲು ಬನ್ನಿ ಅಂತ ಗೆಳತಿಯರಿಗೆ ಆಹ್ವಾನ. ಪದೇ ಪದೇ ಅದೇ ಆಹ್ವಾನ ಕೊಟ್ಟು ಕೊಟ್ಟು ಇವಳ ಫೋನ್ ಬಂತು ಅಂದರೆ ಗೆಳತಿಯರು, 'ನೆನಪದ. ಮರ್ತಿಲ್ಲಾ. ಜರೂರ್ ಬರ್ತೇನಿ. ಕೇಕ್ ತಿಂದೇ ಹೋಗ್ತೇನಿ. ನೀ ಏನೂ ಕಾಳಜಿ ಮಾಡಬ್ಯಾಡ,' ಅಂದೇ ಮುಂದಿನ ಮಾತು ಶುರು ಮಾಡುತ್ತಿದ್ದರು.
ಕೇಕ್ ಮಾಡುವ ದಿನದ ಮೊದಲಿನ ವಾರವಂತೂ ಕೇಳಬೇಡಿ. ಅಷ್ಟು ಬ್ಯುಸಿ ಅವಳು. ಗಂಡ ಮಗನಿಗೆ ಫುಲ್ ಲಂಗಣ. ಅವು ಏನೋ ದರ್ಶಿನಿ ಪರ್ಶಿನಿ ಅಂತ ಊಟ ತಿಂಡಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದವು. ಇವಳು eggless ಕೇಕ್ ಮಾಡುವದರಲ್ಲಿ ಫುಲ್ ಕಳೆದುಹೋಗಿರುವ ಪಿರ್ಕಿ ಗಿರಾಕಿ.
ಆ ಒಂದು ಸ್ಪೆಷಲ್ ದಿವಸ ಬೆಳಿಗ್ಗೆ ಬೆಳಿಗ್ಗೆನೇ ಕೇಕ್ ಹಿಟ್ಟನ್ನು ಓವೆನ್ ಒಳಗೆ ಇಟ್ಟಳು ಅಂದರೆ ಮುಗಿಯಿತು. ನಂತರ ಸಂಜೆ ಗೆಳತಿಯರು ಬರುವದನ್ನೆ ಕಾಯುತ್ತಿದ್ದಳು. ಕೇಕ್ ಮೇಲೆ 'I love you' ಅಂತ ಬೇರೆ icing ಮಾಡುತ್ತಿದ್ದಳು. ಅದನ್ನು ನೋಡಿ, ಆನಂದಿಸಿ ಕೇಕ್ ಕಟ್ ಮಾಡಿಬಿಡುತ್ತಿದ್ದಳು. ಚಿಕ್ಕ ಚಿಕ್ಕ bite size pieces. ಹಾಗಾಗಿ 'I love you' ಅನ್ನುವದು ಕಾಣುತ್ತಿರಲಿಲ್ಲ. ಕಂಡರೆ ನೋಡಿದವರು 'I love you' ಯಾಕೆ? ಅಂತ ಕೇಳಿಬಿಟ್ಟರೇ??
ಸಂಜೆ ಗೆಳತಿಯರು ಬರುತ್ತಿದ್ದರು. ಮತ್ತೆ ಅದೇ ರೂಟೀನ್. ಈಗ ಹತ್ತೊಂಬತ್ತು ವರ್ಷಗಳಿಂದ ನಡೆದುಕೊಂಡು ಬಂದಿದೆ. ಗೆಳತಿಯರು ಬರುತ್ತಾರೆ. ಕೊಟ್ಟ ಕೇಕ್, ಚೂಡಾ ತಿಂದು, ಚಹಾ ಕುಡಿದು, ಒಂದಿಷ್ಟು ಹಾಳುಹರಟೆ ಹೊಡೆಯುತ್ತಾರೆ. ನಾಲ್ಕು ಜನ ಸೇರಿದರೆ ಏನು ಮಾತಾಡುತ್ತಾರೋ ಅದೇ ಮಾತಾಡುತ್ತಾರೆ. ನೋಡಿ ಬೇಕಾದರೆ ನಾಲ್ಕು ಜನ ಹಾಳುಹರಟೆ ಹೊಡೆಯಲು ಕೂತರು ಅಂದರೆ ಮತ್ಯಾರೋ ಐದನೇಯವರ ಬಗ್ಗೆನೇ ಮಾತಾಡುತ್ತಾರೆ. ಅದೇ ನಾಲ್ವರಲ್ಲಿ ಯಾರಾದರೂ ಎದ್ದು ಹೋದರೆ ಉಳಿದ ಮೂವರು ಆ ಬಿಟ್ಟು ಹೋದ ನಾಲ್ಕನೆಯವರ ಬಗ್ಗೆನೇ ಮಾತಾಡುತ್ತಾರೆ. ಇವರದ್ದೂ ಅದೇ ರೀತಿ.
ಗೆಳತಿಯರು ಮೊದಲು ಒಂದೆರೆಡು ವರ್ಷ ಕೇಳಿದ್ದರು, 'ಏನಲೇ ಸ್ಪೆಷಲ್? ಯಾಕ ಕೇಕ್ ಮಾಡಿ? ಯಾರದ್ದು ಬರ್ತಡೇ?' ಅಂತ. ಇವಳು ಹೇಳಲಿಲ್ಲ. 'ಏ, ಹಾಂಗs! ಸುಮ್ಮ ಕೇಕ್ ತಿನ್ನಿರೀ! ಚುಪ್!' ಅಂತ ಸ್ನೇಹದಿಂದಲೇ ಬಾಯಿ ಮುಚ್ಚಿಸಿದ್ದಳು. ನಾಲ್ಕಾರು ವರ್ಷ ಕಳೆದ ಮೇಲೆ ಯಾರೂ ಕೆದಕಿ ಕೆದಕಿ ಕೇಳಲಿಲ್ಲ. ಆದರೆ ವರ್ಷದ ಆ ಒಂದು particular ದಿವಸದಂದೇ ಯಾಕೆ ಕೇಕ್ ಮಾಡುತ್ತಾಳೆ? ಅಂತ ಕುತೂಹಲ ಮಾತ್ರ ಇತ್ತು. ಅಷ್ಟೇ ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಇದ್ದಿದ್ದರಿಂದ ಯಾರೂ ತನಿಖೆ ಮಾಡಿರಲಿಲ್ಲ.
ಈ ವರ್ಷವೂ ಗೆಳತಿಯರು ಬಂದರು. ಬಂದು ಕೇಕ್ ಉಪಹಾರ ಮುಗಿಸಿ ತಮ್ಮ ತಮ್ಮ ಮನೆ ಕಡೆ ಹೊರಟರು. ಇವಳ ಮನೆಯಿಂದ ಹೊರಬಿದ್ದವರು ಯಾರ ಬಗ್ಗೆ ಮಾತಾಡಲು ಶುರು ಮಾಡಿದರು ಹೇಳಿ ನೋಡೋಣ? ಮತ್ಯಾರ ಬಗ್ಗೆ? ಇವಳ ಬಗ್ಗೆಯೇ. 'ಏನು ವಿಚಿತ್ರ ಇದ್ದಾಳಲೇ ಅಕಿ? ಪ್ರತಿ ವರ್ಷ ಕೇಕ್ ಮಾಡಿ ಕರಿತಾಳ ನೋಡವಾ. ಅದೂ ಪ್ರತಿವರ್ಷ ಇದೇ ತಾರೀಕಿಗೆ. ಯಾಕ ಅಂತ ಕೇಳಿದ್ರ ಮಾತ್ರ ಉತ್ತರ ಇಲ್ಲ ನೋಡವಾ. ವಿಚಿತ್ರ ಬುದ್ಧಿ,' ಅಂತ ಒಬ್ಬಳು ಹೇಳುತ್ತಾಳೆ. ಅವಳಿಗೆ ಜುಗಲಬಂದಿಯೋ ಎಂಬಂತೆ ಇನ್ನೊಬ್ಬಳು ಸಾಥ್ ಕೊಡುತ್ತಾಳೆ. 'ಹೂಂನಲೇ, ಖರೆನೇ ವಿಚಿತ್ರ ಬುದ್ಧಿ. ಅಲ್ಲ ನೋಡಲೇ, ಶ್ರಾವಣ ಮಾಸದಾಗ ಸುದಾ ಒಮ್ಮೆಯೂ ಅರಿಷಣ ಕುಂಕುಮಕ್ಕಂತ ಕರೆಯೋದಿಲ್ಲ ಇಕಿ. ಆದ್ರ ಈ ಕೇಕ್ ಮಾಡಿ, ಜುಲ್ಮಿ ಮಾಡಿ ಕರೆದು, ಕೇಕ್ ತಿನ್ನಿಸೋದನ್ನು ಮಾತ್ರ ಒಟ್ಟೇ ಬಿಟ್ಟಿಲ್ಲ ನೋಡು' ಅನ್ನುತ್ತಾಳೆ. 'ಹೌದಲೇ ಬರೋಬ್ಬರಿ ಹೇಳಿದಿ. ಶ್ರಾವಣ ಮಾಸದಾಗೂ ಇಲ್ಲ. ನವರಾತ್ರಿ ಮುಂದನೂ ಇಲ್ಲ. ಅದೆಲ್ಲಾ ಹೋಗ್ಲೀ ಮನಿ ವಾಸ್ತು ಮಾಡಿದಾಗಲೂ ಕರಿಲಿಲ್ಲ. ಕೇಕ್ ಅಂತ ಕೇಕ್. ಹುಚ್ಚ ಅದ ಅದು. ಮೊದಲಿಂದ ಒಂದು ತರಹದ ವಿಚಿತ್ರ ಪ್ರಾಣಿ ಅಕಿ,' ಅಂತ ಇನ್ನೊಬ್ಬಳು ಬಾಣ ಬಿಡುತ್ತಾಳೆ. ಅಬ್ಬಾ! ಗೆಳತಿಯರ ಸ್ನೇಹವೇ! ಈಗ ತಾನೇ ಅವಳ ಮನೆಯಲ್ಲೇ ಕಂಠ ಮಟ ಕೇಕ್, ಚೂಡಾ, ಚಹಾ ಗದುಮಿ ಬಂದವರ ಮಾತು ನೋಡಿ. 'ಹೋದ ವರ್ಷ ಮಗನ ಮುಂಜ್ವೀ ಮಾಡಿದಳು ಅದಕ್ಕೂ ಸುದಾ ಕರಿಲಿಲ್ಲ. ಕೇಳಿದರೆ, 'ಗಡಿಬಿಡಿಯಾಗ ಸ್ವಾಧಿಯೊಳಗ ಮಾಡಿಕೊಂಡು ಬಂದುಬಿಟ್ಟವೀ. ಆಮ್ಯಾಲೆ ನಮ್ಮನಿಯವರು ಫಾರಿನ್ನಿಗೆ ಹೋಗಿಬಿಟ್ಟರು. ಅದಕ್ಕೇ ಇಲ್ಲಿ function ಮಾಡಲಿಕ್ಕೆ ಆಗಲೇ ಇಲ್ಲ!' ಅಂದುಬಿಟ್ಟಳು ನೋಡವಾ. ಆದ್ರ ಈ ಕೇಕ್ ಮಾತ್ರ ಪ್ರತಿ ವರ್ಷ ಮಾಡ್ತಾಳ ನೋಡವಾ. ನಾವು ಹೋಗೋ ಮೊದಲೇ ಕೇಕಿನ ಮುಂಜ್ವೀ ಮಾಡಿಬಿಟ್ಟಿರತಾಳ!' ಅಂದು ಕೀಕೀಕೀ ಅಂತ ಕೀರಲು ಧ್ವನಿಯಲ್ಲಿ ಒಬ್ಬಳು ನಕ್ಕಳು. ಮಹಾ ಉಡಾಳಿ. 'ಏನಲೇ ಹಾಂಗಂದ್ರ? ಕೇಕ್ ಮುಂಜ್ವೀ ಮಾಡಿಬಿಟ್ಟಿರತಾಳ ಅಂದ್ರ ಏನು?' ಅಂತ ಮತ್ತೊಬ್ಬಳು ಕೇಳಿದಳು. 'ಅಲ್ಲಲೇ ಕೇಕ್ 'ಕಟ್' ಮಾಡಿಬಿಟ್ಟಿರ್ತಾಳ ನೋಡು. ಅದಕ್ಕೆ ಕೇಕ್ ಮುಂಜ್ವೀ ಅಂದೆ,' ಅಂತ ಕಣ್ಣು ಮಿಟುಕಿಸಿ ತುಂಟ ನಗೆ ಬೀರಿದಳು. 'ಛೀ! ಹೇಶಿ! ಕಟ್ ಮಾಡೋದು ಸಾಬರ ಮುಂಜವಿಯಾಗಲೇ. ಹೇಶಿ ತಂದು!' ಅಂತ ಅವಳಿಗೆ ಗೆಳತಿಯರ ಹುಸಿಮುನಿಸಿನ ಪೂಜೆಯಾಯಿತು.
ಹೀಗೆ ಇಲ್ಲದ್ದು ಸಲ್ಲದ್ದನ್ನು ಮಾತಾಡುತ್ತ ತಮ್ಮ ತಮ್ಮ ಮನೆ ಮುಟ್ಟಿಕೊಂಡರು. ಈ ವರ್ಷದ eggless ಕೇಕ್ ಪ್ರಹಸನ ಮುಗಿದಿತ್ತು. ಇನ್ನೊಂದೆರೆಡು ತಿಂಗಳು ನಿರಾಳ. ನಂತರ ಮತ್ತೆ ಶುರುವಾಗುತ್ತದೆ. ಮುಂದಿನ ವರ್ಷದ ಕಿರುಕುಳ. 'ಲೀ, ಮರಿಬ್ಯಾಡ್ರಿಲೇ! ಮುದ್ದಾಂ ಬರಬೇಕು. ಬಂದು ಕೇಕ್ ತಿಂದೇ ಹೋಗಬೇಕಾ ಮತ್ತ!'
ಈ ಪುಣ್ಯಾತ್ಗಿತ್ತಿ ಯಾಕೆ ಕೇಕ್ ಮಾಡುತ್ತಾಳೆ? ಆ ದಿನವೇ ಯಾಕೆ ಮಾಡುತ್ತಾಳೆ? ಅದೂ eggless ಕೇಕನ್ನೇ ಯಾಕೆ ಮಾಡುತ್ತಾಳೆ?
ಈ ಪ್ರಶ್ನೆಗಳಿಗೆಲ್ಲ ಉತ್ತರ ಹೇಳುತ್ತದೆ ಈ ಕಥೆಯೊಳಗಿನ ಕಥೆ.
****
ಅದೇನೋಪ್ಪಾ ಗೊತ್ತಿಲ್ಲ. ಈ ಕೆಲವು ಮಂದಿ ಹುಡುಗಿಯರಿಗೆ ಐದು ಆರನೇ ಕ್ಲಾಸಿನಿಂದೆಲ್ಲ ಪ್ರೀತಿ, ಪ್ರೇಮ, ಪ್ಯಾರ್, ಮೊಹಬ್ಬತ್ ಎಲ್ಲ ಆಗಿಬಿಡುತ್ತದೆ. ಅದು ಹೇಗೋ ಏನೋ!
ಪಾಪ ಹುಡುಗಿಯರು. ಸಣ್ಣವರಿದ್ದಾಗಿಂದಲೇ ಗಂಡ, ಮಕ್ಕಳು, ಮನೆ ಅಂತ ಎಲ್ಲರೂ ಮೊಳೆ ಹೊಡೆಯಲು ಶುರು ಮಾಡಿಬಿಡುತ್ತಾರೆ. ಅದರಲ್ಲೂ ಕೊಂಚ ಲಕ್ಷಣವಂತೆಯಾದರಂತೂ ಮುಗಿದೇಹೋಯಿತು. ಮನೆ ಮಂದಿ, ಹೊರಗಿನ ಮಂದಿ, ಬಂಧು ಬಳಗದವರು ಎಲ್ಲರೂ ಪಾಪ ಆ ಹುಡುಗಿಯನ್ನು ಗಂಡ, ಗಂಡ, ಗಂಡ, ಮಕ್ಕಳು, ಮಕ್ಕಳು, ಮನೆ ಅಂತ ಹೇಳಿ ತಲೆ ತಿಂದುಬಿಡುತ್ತಾರೆ. ಅದು ಒಂದು ತರಹದ brainwash ಆಗಿಬಿಡುತ್ತದೆ ಅಂತ ಕಾಣುತ್ತದೆ.
ಹೀಗೆ brainwash ಆದವರು ಸದಾ ಅದೇ ಗುಂಗಿನಲ್ಲಿ ಇರುತ್ತಾರೇನೋ. ಕ್ಲಾಸಿನಲ್ಲೇ ಯಾರಾದರೂ ಒಳ್ಳೆ ಹುಡುಗ ಕಂಡುಬಿಟ್ಟರೆ ಕ್ಯಾಚ್ ಹಾಕಿಬಿಡುತ್ತಾರೆ. ಐದಾರನೇ ಕ್ಲಾಸಿನಲ್ಲಿದ್ದಾಗ ಒಂದು shortlist ಮಾಡಿಟ್ಟುಕೊಂಡು ಒಂದು ನಾಲ್ಕಾರು eligible candidates ಗಳನ್ನು ಗಮನಿಸುತ್ತಾ ಇರುತ್ತಾರೆ. ಎಂಟನೇ ಕ್ಲಾಸಿನ ಹೊತ್ತಿಗೆ ಪಟ್ಟಕ್ಕೆ ಬಂದವರು ಒಬ್ಬನನ್ನು ಗಂಡ ಅಂತ ಸ್ವೀಕರಿಸಿ ಮನದಲ್ಲೇ ಮಂಡಿಗೆ ತಿನ್ನಲು ಆರಂಭಿಸಿಬಿಡುತ್ತಾರೆ. ಮನದಲ್ಲೇ ಮಂಡಿಗೆ ತಿನ್ನುವದು ಅಂದಾದ ಮೇಲೆ ಜಿಪುಣತನ ಯಾಕೆ ಅಂತ ಹೇಳಿ ಬರೋಬ್ಬರಿ ಹಾಲು, ತುಪ್ಪ, ಸಕ್ಕರೆ ಹಾಕಿಕೊಂಡೇ ತಿಂದು ಮುಂದಿನ ಕನಸು ಕಾಣಲಾರಂಭಿಸುತ್ತಾರೆ.
ನಮ್ಮ ಕೇಕ್ ಗಿರಾಕಿಯದೂ ಅದೇ ಕೇಸು. ಪಾಪ! ಆರನೇ ಕ್ಲಾಸಿನಲ್ಲೇ ಆತ ಕಣ್ಣಿಗೆ ಬಿದ್ದ. ಸಹಪಾಠಿ. ಏನೋ ಒಂದು ತರಹ ಇದ್ದ. ಇವಳಂತೂ ಲೈಕ್ ಮಾಡಿದಳು. ಮತ್ತೆ ಆತ ಶುದ್ಧ ವೈಷ್ಣವ ಆಚಾರಿ. ಇವಳದ್ದೇ ಜಾತಿ. ಹಾಗಾಗಿ ಮುಂದೆ ಲಗ್ನ ಮಾಡಿಕೊಂಡರೂ ಜಾತಿ ಕೆಡುವ ಭಯವಿಲ್ಲ. ಹಾಗಾಗಿ ಮನಸ್ಸನ್ನು ಹರಿಯಲು ಬಿಟ್ಟಳು. ಹರಿಯಲು ಬಿಟ್ಟ ಮನಸ್ಸು ಸೂತ್ರ ಹರಿದ ಗಾಳಿಪಟದಂತಾಯಿತು. ಕಟಿ ಪತಂಗ!
ಹುಡುಗ ಒಮ್ಮೆ ಲೈಕಾಗಿಬಿಟ್ಟ ಅಂದರೆ ಮುಗಿದೇಹೋಯಿತು. ಅವನ ಬೇಕುಬೇಡಗಳ ಬಗ್ಗೆ ಒಂದು ಸಮಗ್ರ ಅಧ್ಯಯನವನ್ನೇ ಶುರು ಮಾಡಿಬಿಡುತ್ತಾರೆ ಹುಡುಗಿಯರು. ಇವಳೂ ಅದೇ ಮಾಡುತ್ತಿದ್ದಳು. ಖುಲ್ಲಂ ಖುಲ್ಲಾ ದೋಸ್ತಿ ಮಾಡೋಣ ಅಂದರೆ ಅವರದ್ದು ಶುದ್ಧ ಭಟ್ಟರ ಶಾಲೆ. coeducational ಇದ್ದರೂ ಹುಡುಗರು ಮತ್ತು ಹುಡುಗಿಯರ ಮಧ್ಯೆ ಸಂಪರ್ಕ ಇಲ್ಲವೇ ಇಲ್ಲ. ಮಾತು ಕತೆಯೂ ಇಲ್ಲ. ವಿಚಿತ್ರ ಸಂಸ್ಕೃತಿ. ಹಾಗಾಗಿ ತನ್ನ ಮೆಚ್ಚಿನ ಹುಡುಗನ ಬೇಕುಬೇಡಗಳ ಬಗ್ಗೆ ಸಮಗ್ರ ಅಧ್ಯಯನವನ್ನು indirect ಆಗಿ ಮಾಡಬೇಕಾಯಿತು. ಹಾಂಗೇ ಮಾಡಿದಳು.
ತನ್ನ ಹುಡುಗನಿಗೆ ಕೇಕ್ ಅಂದರೆ ತುಂಬಾ ಇಷ್ಟ ಅನ್ನುವದನ್ನು ಕಂಡುಹಿಡಿದಿದ್ದಳು. ಅದು ಅವಳು ಮಾಡಿದ ದೊಡ್ಡ ಸಂಶೋಧನೆ. ಹುಡುಗನಿಗೆ ಕೇಕ್ ಇಷ್ಟ. ಆದರೆ ತಿನ್ನಲಾರ. ಹ್ಯಾಂ? ಯಾಕೆ?
ಎಂದೋ ಒಂದು ದಿನ ಮಧ್ಯಾನದ ಊಟದ ಬಿಡುವಿನ ವೇಳೆಯಲ್ಲಿ ತರಗತಿಯಲ್ಲಿ ಕೂತು ಹುಡುಗರು ಊಟ ಮಾಡುತ್ತಿದ್ದರು. ಹುಡುಗಿಯರೂ ಸಹ. ಹಂಚಿ ತಿನ್ನುವದು ರೂಢಿ. potluck. ಅಂದು ಹುಡುಗರಲ್ಲಿ ಯಾರೋ ಕೇಕ್ ತಂದಿದ್ದರು ಅಂತ ಕಾಣುತ್ತದೆ. ಇವಳ ಹುಡುಗನಿಗೂ ಕೇಕ್ ಕೊಟ್ಟರು. ಬೇಡವೆಂದ. ಯಾಕೆಂದು ಕೇಳಿದರೆ, 'ನನಗ ಕೇಕ್ ಅಂದ್ರ ಭಾಳ ಅಂದ್ರ ಭಾಳ ಸೇರ್ತದಲೇ. ಆದ್ರ ಏನು ಮಾಡೋಣ? ತಿನ್ನೋ ನಸೀಬ್ ಇಲ್ಲಲೇ,' ಅಂದುಬಿಟ್ಟ. 'ಯಾಕಲೇ?' ಅಂತ ಕೇಳಿದರೆ, 'ಲೇ, ಕೇಕಿನ್ಯಾಗ ತತ್ತಿ, ಕೋಳಿ ತತ್ತಿ, ಹಾಕಿರ್ತಾರಲೇ. ನಾವು ವೈಷ್ಣವ ಬ್ರಾಮಂಡರು. ಅದರಾಗೂ ಆಚಾರ್ರು. ಅವನ್ನೆಲ್ಲಾ ತಿನ್ನಂಗಿಲ್ಲ. ತಿಂದ್ರ ಪಾಪ ಬರ್ತದ. ಸ್ವಾಮಿಗಳಿಗೆ ಸಿಟ್ಟು ಬರ್ತದ. ಗೊತ್ತೇನು? ಅದಕs ನಾ ಕೇಕ್ ತಿನ್ನೋದಿಲ್ಲ. ಆದ್ರ ತಿನ್ನಬೇಕು ಅಂತ ಭಾಳ ಅನ್ನಸ್ತದಲೇ. ಅಯ್ಯೋ ಕೇಕ್!' ಅಂತ ಅಂಬೋ ಅಂದುಬಿಟ್ಟಿದ್ದ. ತಿನ್ನಲಾರ ಆದರೆ ಆಸೆ ತಾಳಲಾರ!
ಹುಡುಗರಲ್ಲಿ ನಡೆದಿದ್ದ ಈ ಮಾತನ್ನು ಕೇಳಿದ ಹುಡುಗಿ ಮನದಲ್ಲೇ ಒಂದು ನೋಟ್ ಮಾಡಿಕೊಂಡಳು. ಹುಡುಗನಿಗೆ ಕೇಕ್ ಇಷ್ಟ. ಜೀವನದಲ್ಲೇ ಕೇಕ್ ತಿಂದಿಲ್ಲ. ಯಾಕೆಂದರೆ ಅದರಲ್ಲಿ ಮೊಟ್ಟೆ ಹಾಕಿರುತ್ತಾರೆ. ಪಾಪದ ಹುಡುಗ. ಅದೂ ನನ್ನ ಹುಡುಗ. ಕೇಕ್ ತಿನ್ನಬೇಕೆಂಬುದೇ ಅವನ ಮಹದಾಸೆ.
ಮನದಲ್ಲೇ ಒಂದು ನಿಶ್ಚಯ ಮಾಡಿದಳು. ತನ್ನ ಹುಡುಗನಿಗೆ ರಾಜಾ ಅನ್ನುತ್ತಿದ್ದಳು. ಅವನ ಹೆಸರೇನೋ ಬೇರೆ ಇತ್ತು. ಇವಳು ಪ್ರೀತಿಯಿಂದ ಇಟ್ಟಿದ್ದ ಹೆಸರು ರಾಜಾ. 'ರಾಜಾ, ನೀ ಚಿಂತಿ ಮಾಡಬ್ಯಾಡ ನನ್ನ ಮುದ್ದು ರಾಜಾ. ನಾ ನಿನಗ ಕೇಕ್ ಮಾಡಿ ತಿನ್ನಸ್ತೇನಿ. eggless ಕೇಕ್ ಮಾಡಲಿಕ್ಕೆ ಬರ್ತದ. ನನಗೇನು ಕೇಕ್ ಮಾಡೋದ್ರಾಗ ಅಷ್ಟೇನೂ ಇಂಟರೆಸ್ಟ್ ಇಲ್ಲ. ಆದರೂ ನಿನ್ನ ಸಲುವಾಗಿ ಕೇಕ್ ಮಾಡೋದನ್ನ ಕಲಿತೇನಿ. ಕಲಿತು ಮಸ್ತಾಗಿ eggless ಕೇಕ್ ಮಾಡಿ ನಿನಗ ತಿನ್ನಸ್ತೇನಿ ರಾಜಾ. ನಿನ್ನ ಆಚಾರಿತನಕ್ಕೂ ಭಂಗ ಬರಂಗಿಲ್ಲ. ಕೇಕ್ ತಿನ್ನಬೇಕು ಅನ್ನೋ ನಿನ್ನ ಆಶಾನೂ ತೀರ್ತದ. ಓಕೆ ರಾಜಾ?' ಅಂತ ಮನದಲ್ಲೇ ಮಾತುಕತೆ ಮಾಡಿ ಮುಗಿಸಿದ್ದಳು.
ಹುಡುಗನ ಬರ್ತಡೇ ಅಂತೂ ಗೊತ್ತೇ ಇತ್ತು. ಯಾಕೆಂದರೆ ಬರ್ತಡೇ ದಿವಸ ಇಡೀ ಕ್ಲಾಸಿಗೇ ಚಾಕಲೇಟ್ ಕೊಡುವ ಸಂಪ್ರದಾಯವಿತ್ತು. ಹಾಗಾಗಿ ತಮಗೆ ಬೇಕಾದವರ ಬರ್ತಡೇ ನೆನಪಿಡಲು ಅದು ಸಹಾಯಕಾರಿಯಾಗಿತ್ತು. ಒಮ್ಮೆ ಆಚಾರಿ ರಾಜಾನೇ ಅವಳ ದಿಲ್ ಕಾ ರಾಜಾ ಅಂತ ನಿರ್ಧರಿಸಿದ ಮೇಲೆ ರಾಜಾನ ಬರ್ತಡೇ ಬರೋಬ್ಬರಿ ನೋಟ್ ಮಾಡಿಟ್ಟುಕೊಂಡು ಫುಲ್ ಬಾಯಿಪಾಠ ಮಾಡಿಬಿಟ್ಟಿದ್ದಳು.
ಹೀಗೆ ಮೂಕ ಪ್ರೀತಿ ನಡೆಯುತ್ತಿತ್ತು. ಇವಳು ಮೂಕಿ. ತನ್ನ ಪ್ರೇಮ ಹೇಳಿಕೊಳ್ಳಲಾರಳು. ಅವನು ಕುರುಡ. ಇವಳ ಪ್ರೇಮವನ್ನು ನೋಡಲಿಲ್ಲ. ನೋಡಲಿಲ್ಲವೋ, ತಿಳಿಯಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಲವ್ ಶುರುವಾಗಲಿಲ್ಲ.
ಹತ್ತನೇ ಕ್ಲಾಸಿಗೆ ಬಂದಾಗ ಇವಳಿಗೆ ಸಿಕ್ಕಾಪಟ್ಟೆ ಜೋರಾಗೇ ಬವ್ವಾ ಕಡಿದುಬಿಟ್ಟಿತು. ಪ್ರೀತಿಯ ಬವ್ವಾ. ಪ್ರೇಮದ ಬವ್ವಾ. ಕಡಿದುಬಿಟ್ಟಿತು ಅಂದರೆ ಅಷ್ಟೇ ಮತ್ತೆ! 'ಪ್ರಾಯ ಬಂದರೆ ಯಾಕೋ ಅದು ಯಾಕೋ ನಿದ್ದೆ ಬರೋಲ್ಲ. ದಿಂಬು ಹಾಸಿಗೆ ಇದ್ದರೂ ಮಲಗಿದ್ದರೂ ನಿದ್ದೆ ಬರೋಲ್ಲ. ಮನವ ಕಾಡುವ ಬಯಕೆಗಳು ಮಾತೇ ಕೇಳೋಲ್ಲ,' ಅನ್ನುವ ಆಕಾಲದ ಪಾಪ್ಯುಲರ್ ಗೀತೆ ಕೇಳುತ್ತ ಹಾಸಿಗೆ ತುಂಬಾ ಹಾವಿನಂತೆ ಹರಿದಾಡಿಬಿಟ್ಟಳು. 'ರಾಜಾ! ನನ್ನ ಮುದ್ದು ರಾಜಾ! ನೀ ಬೇಕಲೇ. ಬೇಕೇಬೇಕಲೇ! ಲೇ ರಾಜಾ!' ಅಂತ ರಾತ್ರಿ ಪೂರ್ತಿ ಕನವರಿಸಿದಳು. ಆವಾಗ ರಾಜಾಚಾರಿ ಏನು ಮಾಡುತ್ತಿದ್ದನೋ ಯಾವನಿಗೆ ಗೊತ್ತು. ಎಲ್ಲೋ ಘಂಟೆ ತೂಗುತ್ತ ಕೂತಿರಬೇಕು.
'ನಾನೇ ಪ್ರಪೋಸ್ ಮಾಡಿಬಿಡಲೇ?' ಅಂತ ಕೇಳಿಕೊಂಡಳು. ಆತಂಕದಿಂದ ಹೃದಯ ಕಿತ್ತು ಬಾಯಿಗೇ ಬಂತು. 'ಅದೆಲ್ಲ ಸಾಧ್ಯವಿಲ್ಲ. ಅವನೇ ಪ್ರಪೋಸ್ ಮಾಡಲಿ. ಹಾಗಂತ ದೇವರನ್ನು ಪ್ರಾರ್ಥಿಸುತ್ತೇನೆ. ರಾಜಾ ಏನಾದರೂ ಪ್ರಪೋಸ್ ಮಾಡಿಬಿಟ್ಟರೆ ತಿರುಪತಿ ವೆಂಕಪ್ಪಗ ಮುಡಿ ಕೊಡತೇನಿ. ಒಂದಲ್ಲ ಎರಡು ಸಲ ಮುಡಿ ಕೊಡ್ತೇನಿ,' ಅಂತ ಹರಕೆ ಹೇಳಿಕೊಂಡಳು. ಮುಡಿ!? ಇವಳು ತಲೆ ಬೋಳಿಸಿಕೊಳ್ಳಲು ಹೊರಟಿದ್ದಳೇ?? ಅಯ್ಯೋ! ರಾಜಾ ಸಿಕ್ಕರೆ ಅವನ ಮುಡಿಯನ್ನೇ ತಿರುಪತಿ ತಿಮ್ಮಪ್ಪನಿಗೆ ಕೊಡುತ್ತೇನೆ ಅಂತ ಹರಕೆ ಹೊತ್ತಳು. ಮೊದಲು ರಾಜಾನ ಮುಡಿ. ನಂತರದ್ದು ಹುಟ್ಟುವ ಗಂಡು ಮಗುವಿನ ಮುಡಿ. ಟೋಟಲ್ ಎರಡು ಮುಡಿ ಶಿವಾಯ ನಮಃ.
ಯಾಕೋ ಯಾವ ದೇವರೂ ಮನಸ್ಸೇ ಮಾಡಲಿಲ್ಲ. SSLC ಮುಗಿಯಿತು. ಮೂಕ ಹಕ್ಕಿಯು ಹಾಡುತಿದೆ ಎಂಬಂತೆ ಮೂಕ ಪ್ರೇಮ ಮೂಕ ಪ್ರೇಮವಾಗೇ ಉಳಿಯಿತು. ಮುಂದೆಂದಾರೂ workout ಆದೀತು ಅಂತ ಆಸೆ ಮಾತ್ರ ಇತ್ತು.
PUC ಒಂದೇ ಕಾಲೇಜ್ ಮತ್ತು ಒಂದೇ ಕ್ಲಾಸ್. ಈಕೆಯಂತೂ ಅವನನ್ನು ನೋಡುತ್ತಲೇ ಕುಳಿತಿರುತ್ತಿದ್ದಳು. ಒಮ್ಮೆ ಅವನೂ ನೋಡಿಬಿಟ್ಟ. 'ಕಣ್ಣು ಕಣ್ಣು ಕಲೆತಾಗ ಮನವು ಉಯ್ಯಾಲೆ ಆಡಿದೆ ನೋಡಿ,' ಅನ್ನುವಂತೆ ಮನಸ್ಸು ಹೃದಯ ಎಲ್ಲಾ ಒಮ್ಮೆಲೇ ತಾಳತಪ್ಪಿ ಹೆಂಗೆಂಗೋ ಬಡಿದುಕೊಂಡ ಅಬ್ಬರಕ್ಕೆ ಏಕ್ದಂ ಉದ್ವೇಗ ಉಂಟಾಗಿ, ಹಾಕಿದ್ದ ಜಂಪರ್ ಒಮ್ಮೆಲೇ ಎದೆಯನ್ನೆಲ್ಲಾ ಬಿಗಿ ಮಾಡಿ, ಉಸಿರುಗಟ್ಟಿದಂತಾಗಿ, ಒಮ್ಮೆಲೇ ದೊಡ್ಡ ಶ್ವಾಸ, ಅದೂ ಕ್ಲಾಸಿನ ಪಿರಿಯಡ್ ನಡೆದಾಗ, ಬಿಟ್ಟಿದ್ದನ್ನು ನೋಡಿ ಘಾಬರಿಯಾದ ಗೆಳತಿಯರು ಕೇಳಿದ್ದರು, 'ಏನಾತಲೀ!?' ಅಂತ. 'ಏನಿಲ್ಲಲೇ! ಹಾಂಗs ಒಂದು ಸೆಕೆಂಡ್ ಎದಿ ಒತ್ತಿ ಹಿಡದಂಗಾತು. ಈಗ ಎಲ್ಲಾ ಬರೋಬ್ಬರಿ ಅದ!' ಅಂತ ತಿಪ್ಪೆ ಸಾರಿಸಿದ್ದಳು. ಮನದಲ್ಲೇ ಪ್ರೀತಿ ಮಾಡಲಾರಂಭಿಸಿ ಐದಾರು ವರ್ಷಗಳೇ ಕಳೆದುಹೋಗಿದ್ದವು. ಆದರೆ ಹಾಕಿಕೊಂಡ ಜಂಪರ್ ಟೈಟ್ ಆಗುವಂತಹ ಸನ್ನಿವೇಶ ಬಂದಿದ್ದು ಇದೇ ಮೊದಲು. 'ರಾಜಾ, ನನ್ನ naughty ರಾಜಾ! ಎಷ್ಟು ಜೋರಾಗಿ ಅದೆಷ್ಟು ಜೋರಾಗಿ ಕಣ್ಣು ಹೊಡೆದುಬಿಟ್ಟಿ ಮಾರಾಯಾ!? ನನ್ನ ಜಂಪರ್ ಟೈಟ್ ಆಗಿಹೋಗಿತ್ತು! ಗೊತ್ತದ ಏನು!?' ಅಂತ ಮನದಲ್ಲೇ ಪ್ರೀತಿಯಿಂದ ರಾಜಾನನ್ನು ಮೈಲ್ಡಾಗಿ ಬೆಂಡೆತ್ತಿದ್ದಳು.
PUC ಸಹ ಮುಗಿಯಿತು. ರಾಜಾ ಪ್ರಪೋಸ್ ಮಾಡಲೇ ಇಲ್ಲ. ಇವಳು ಎಂದಿನಂತೆ ಮೂಕಿ. ಒಳಗೇ ಅದುಮಿಟ್ಟುಕೊಂಡೇ ಇದ್ದಳು. ಮೂಕ ಪ್ರೇಮ.
PUC ಮುಗಿಸಿದ ರಾಜಾ ವೃತ್ತಿಪರ ಶಿಕ್ಷಣಕ್ಕೆಂದು ಎಲ್ಲೋ ಹೋದ. ಇವಳ್ಯಾಕೆ ಅವನ ಬೆನ್ನತ್ತಿ ಹೋಗಲಿಲ್ಲ? ಅದು ಅವಳಿಗೇ ಗೊತ್ತು. ಅವೇನು ಅನಿವಾರ್ಯತೆಗಳು ಇದ್ದವೋ ಏನೋ. ಇವಳು ಅಲ್ಲೇ ಉಳಿದಳು. ಡಿಗ್ರಿ ಮಾಡತೊಡಗಿದಳು.
'ರಾಜಾ ದೂರ ಹೋದರೇನಾಯಿತು? ರಜೆಗೆ ಬರುತ್ತಾನೆ. ಆವಾಗ ಯಾವಾಗಲಾದರೂ ಪ್ರಪೋಸ್ ಮಾಡಬಹುದು,' ಅನ್ನುವ ಆಸೆಯಲ್ಲಿಯೇ ಬದುಕುತ್ತಿದ್ದಳು. ರಾಜಾ ರಜಾದಲ್ಲಿ ಬರುತ್ತಿದ್ದ. ಊರಿಗೆ ಬಂದವ ನೀರಿಗೆ ಬಂದ ಎಂಬಂತೆ ಇವಳ ಕಣ್ಣಿಗೂ ಬೀಳುತ್ತಿದ್ದ. ಆದರೆ ಪ್ರಪೋಸ್ ಮಾತ್ರ ಮಾಡಲೇ ಇಲ್ಲ. ಮತ್ತದೇ ಮೂಕ ಪ್ರೇಮ. ಪಾಪ!
ಇವಳ ಡಿಗ್ರಿ ಮುಗಿಯಿತು. ಆಕಡೆ ರಾಜಾನ ಡಿಗ್ರಿ ಮುಗಿದಿರಲಿಲ್ಲ. 'ಏ, ಲಗ್ನಾ ಮಾಡಿಕೋಳ. ಡಿಗ್ರಿನೂ ಮುಗೀತು. ಇಪ್ಪತ್ತೊಂದಾತು. ಬರೋಬ್ಬರಿ ವಯಸ್ಸು. ಲಗ್ನಾ ಮಾಡಿಕೊಂಡುಬಿಡು. ವರ ಹುಡುಕೋಣ ಏನು?' ಅಂತ ಮನೆ ಮಂದಿ ಸಹಜವಾಗಿ ಇವಳನ್ನು ಕೇಳಿದರು. ಇವಳಿಗೆ ರಾಜಾನದ್ದೇ ಧ್ಯಾನ. ಇನ್ನೂ ಆಸೆಯಿತ್ತು. ರಾಜಾ ಪ್ರಪೋಸ್ ಮಾಡಿದರೂ ಮಾಡಬಹುದು ಅಂತ. 'ನನಗ ಮಾಸ್ಟರ್ ಡಿಗ್ರಿ ಮಾಡಬೇಕು. ಅದು ಮುಗಿಸಿದ ಮ್ಯಾಲೆನೇ ಲಗ್ನದ ವಿಚಾರ. ಅಲ್ಲಿ ತನಕಾ ಏನೂ ಕೇಳಬ್ಯಾಡ್ರೀ,' ಅಂತ ಖಡಕ್ ಆಗಿ ಹೇಳಿದಳು. ಮನೆಯವರೂ ಪಾಪ ಒಳ್ಳೆಯವರು. ಹಾಗೇ ಆಗಲಿ ಅಂತ ಬಿಟ್ಟರು. ಮಾಸ್ಟರ್ ಡಿಗ್ರಿ ಸೇರಿಕೊಂಡಳು.
ಇತ್ತಕಡೆ ರಾಜಾ ವೃತ್ತಿಪರ ಡಿಗ್ರಿ ಮುಗಿಸಿದ. ಎಲ್ಲೋ ನೌಕರಿ ಹಿಡಿದ ಅಂತ ಸುದ್ದಿ ಬಂತು. ಈಕೆಗೆ ಒಂದು ತರಹದಲ್ಲಿ ಖುಷಿ. 'ಹುಡುಗನ ವಿದ್ಯಾಭ್ಯಾಸ ಮುಗಿಯಿತು. ನೌಕರಿ ಕೂಡ ಸಿಕ್ಕಿತು. ಇನ್ನೇನು? ಇದಕ್ಕಾಗಿಯೇ ಕಾಯುತ್ತಿದ್ದನೇನೋ ರಾಜಾ. ಈಗ ಎಲ್ಲಾ ಸೆಟಲ್ ಆದ. ಈಗ ಪ್ರಪೋಸ್ ಮಾಡಿದರೂ ಮಾಡಬಹುದು,' ಅಂದುಕೊಂಡಳು. ಕಮರಿಹೋಗುತ್ತಿದ್ದ ಆಸೆಗೆ ಗಿಚ್ಚಾಗಿ ನೀರು ಹಾಕಿದಳು. ಆಸೆಯ ಗಿಡ ಮತ್ತೆ ಜೀವ ಪಡೆದುಕೊಂಡು ಸೊಂಪಾಯಿತು.
ಇವಳ ಮಾಸ್ಟರ್ ಡಿಗ್ರಿ ಕೂಡ ಮುಗಿಯಿತು. ರಾಜಾ ಪ್ರಪೋಸ್ ಮಾಡಲೇ ಇಲ್ಲ. ನೌಕರಿ ಶುರು ಮಾಡಿದಾಗಿಂದ ಅವನು ಊರ ಕಡೆ ಜಾಸ್ತಿ ಬರುತ್ತಲೂ ಇರಲಿಲ್ಲ. ಸುದ್ದಿ ಬರುತ್ತಿತ್ತು.
ಮಾಸ್ಟರ್ ಡಿಗ್ರಿ ಮುಗಿದ ಕೂಡಲೇ ಮನೆ ಮಂದಿ ಮತ್ತೆ ಮದುವೆಯ ಬಗ್ಗೆ ಕೇಳಿದರು. ಈ ಸಲ ಸ್ವಲ್ಪ ಜಾಸ್ತಿಯೇ pressure ಹಾಕಿದ್ದರು. ಇವಳು ಐಡಿಯಾ ಮಾಡಿಟ್ಟುಕೊಂಡು ಸಿದ್ಧಳಾಗಿಯೇ ಇದ್ದಳು. 'ನನಗ MPhil ಮಾಡಬೇಕು. Just two more years. Please!' ಅಂತ ಅಂಬೋ ಅಂದಳು. ಪಾಪ ಮನೆಯವರು. ಏನು ಮಾಡಬೇಕು? 'ಹೇಗೂ ಈಗ ಮಾತ್ರ ಇಪ್ಪತ್ತಮೂರು ವಯಸ್ಸು. ಇನ್ನೂ ಎರಡು ವರ್ಷ ಅಂದರೆ ಇಪ್ಪತ್ತೈದು. ಸ್ವಲ್ಪ ಲೇಟಾಗುತ್ತದೆ. ಆದರೂ ಓಕೆ. ಅದರ ನಂತರ ಮಾತ್ರ ಮುಂದೆ ಹಾಕಬಾರದು. ಹಾಕುವದಿಲ್ಲ,' ಹಾಗಂತ ವಿಚಾರ ಮಾಡಿ, ಇವಳ ಹತ್ತಿರವೂ ನುಗ್ಗಿಕೆರೆ ಹನುಮಪ್ಪನ ಮೇಲೆ ಆಣೆ ಪ್ರಮಾಣ ಹಾಕಿಸಿ MPhil ಮಾಡಲು ಅನುಮತಿ ಕೊಟ್ಟರು.
ಜೈ ಗುರುವೇ! ಅಂತ MPhil ಸೇರಿಕೊಂಡಳು. ರಾಜಾ ಎಲ್ಲಿ ಹೋದನೋ ಏನೋ. ಪ್ರಪೋಸ್ ಮಾತ್ರ ಮಾಡಲೇ ಇಲ್ಲ. ಯಾರೋ ಹೇಳಿದರು ಕೆಲಸದ ಮೇಲೆ ಫಾರಿನ್ನಿಗೆ ಹೋಗಿದ್ದಾನೆ. ಎರಡು ವರ್ಷದ ನಂತರವೇ ಬರುತ್ತಾನೆ ಅಂತ. ಒಳ್ಳೆಯದೇ ಆಯಿತು ಅಂದುಕೊಂಡಳು ಹುಡುಗಿ. ರೊಕ್ಕ ಮಾಡಿಕೊಂಡು ಬರುತ್ತಾನೆ. ಬಂದ ಕೂಡಲೇ ಪ್ರಪೋಸ್ ಮಾಡಿಬಿಡುತ್ತಾನೆ. ಸೆಟಲ್ ಆಗಿದ್ದಾನೆ. ರೊಕ್ಕ ಇರುತ್ತದೆ. ತಾಪಡ್ತೋಪ್ ಲಗ್ನ. ಹೀಗೆಲ್ಲಾ ವಿಚಾರ ಮಾಡುತ್ತಾ ಕುಳಿತಳು. MPhil ಎಮ್ಮೆ ಕಾಯಲು ಹೋಯಿತು.
ಹೀಗಿದ್ದಾಗ ಸಡನ್ನಾಗಿ ಒಂದು ಬ್ರೇಕಿಂಗ್ ನ್ಯೂಸ್ ಬಂತು. ನೇರವಾಗಿ, ದಿಟ್ಟವಾಗಿ, ನಿರಂತರವಾಗಿ ಬಂತು. ನ್ಯೂಸ್ ಮಾತ್ರ ಬ್ರೇಕಿಂಗ್ ಇತ್ತು. ಯಾಕೆಂದರೆ ಇವಳ ಹೃದಯವನ್ನು ಬ್ರೇಕ್ ಮಾಡಿ ಛೋಟೆ ಛೋಟೆ ತುಕಡೆ ತುಕಡೆ ಮಾಡಿಬಿಟ್ಟಿತು. ರಾಜಾನ ಮದುವೆಯಾಗಿಹೋಗಿತ್ತು! ಶಿವಾಯ ನಮಃ! ಟೋಟಲ್ ಶಿವಾಯ ನಮಃ!
ದಿಲ್ ಕೆ ತುಕಡೆ ತುಕಡೆ ಕರ್ಕೆ.......... ಅಂತ ಹಾಡಿಕೊಂಡು ಡಿಗ್ರಿ ಮುಗಿಸಿದಳು. ಮನೆಯವರು ವರಾನ್ವೇಷಣೆಯನ್ನು ಸಮರೋಪಾದಿಯಲ್ಲಿ ಶುರುಮಾಡಿದರು. ಬರೋಬ್ಬರಿ ವರ ಸಿಗಲೇ ಇಲ್ಲ. ಎರಡು ವರ್ಷ ಬಹಳ ಹುಡುಕಿದ ಮೇಲೆ ಒಂದು ಒಳ್ಳೆ ವರ ಸಿಕ್ಕ. ವರನ ವಯಸ್ಸು ಜಾಸ್ತಿಯಾಗಿತ್ತು. ಸುಮಾರು ಮೂವತ್ತನಾಲ್ಕು ವರ್ಷ. ಈಕೆಗೆ ಫುಲ್ ಇಪ್ಪತ್ತೇಳು. ಲೇಟ್ ಅಂತ ಮನೆ ಮಂದಿಗೆ ಆತಂಕ. ಮತ್ತೆ ಸಿಕ್ಕ ವರ ಸ್ಮಾರ್ತರ ಪೈಕಿ. ಇವರೋ ವೈಷ್ಣವರು. ಮೊದಲಿನ ಕಾಲದಲ್ಲಿ ಸ್ಮಾರ್ತರಿಗೆ ಹೆಣ್ಣು ಕೊಟ್ಟರು ಅಂತ ವೈಷ್ಣವರ ಕುಟುಂಬವೊಂದಕ್ಕೆ ಮಠದವರು ಬಹಿಷ್ಕಾರ ಹಾಕಿದ್ದರಂತೆ. ಆ ರಿಸ್ಕ್ ಬೇಡ ಅಂತ ಸೀದಾ ಸ್ವಾಮಿಗಳನ್ನೇ ಕೇಳಿದರು. 'ವೈಷ್ಣವರ ವರ ಸಿಗಲಿಲ್ಲ ನಿಮಗ? ನಮಗ ಹೇಳಿದ್ದ್ರ ನಾವೇ ಹುಡುಕಿ ಕೊಡ್ತಿದ್ದಿವಿ. ನಮ್ಮ ಮಠದಾಗೇ ಬೇಕಾದಷ್ಟು ಮಂದಿ ಆಚಾರ್ ವರಗಳು ಅವ. ಅವರಿಗ್ಯಾರಿಗಾದರೂ ನಿಮ್ಮ ಮಗಳನ್ನು ಕೊಡಬಹುದಿತ್ತು,' ಅಂದುಬಿಟ್ಟರು ಸ್ವಾಮಿಗಳು. ಸ್ವಾಮಿಗಳ ಅಕ್ಕಪಕ್ಕ ಬಾಡಿಗಾರ್ಡಗಳಂತೆ ನಿಂತ ಖರ್ರ್ ಖರ್ರನೆ ಹೊನಗ್ಯಾ ಯಮದೂತರಂತಹ ಆಚಾರಿಗಳನ್ನು ನೋಡಿದ ಈ ಮಂದಿ, 'ಸ್ವಾಮಿಗಳೇ, ವರ ನಿಶ್ಚಯ ಆಗಿಬಿಟ್ಟದ್ರೀ. ಮೊದಲೇ ನಿಮ್ಮ ಕಡೆ ಬರದೇ ತಪ್ಪು ಮಾಡಿದಿವಿ. ಈಗ ಬಂದೇವಿ. ಏನರೆ ಪರಿಹಾರ ಹೇಳರೆಲ್ಲಾ? ಪ್ಲೀಸ್' ಅಂತ ಉದ್ದಂಡ ನಮಸ್ಕಾರ ಸಕುಟುಂಬ ಸಮೇತ ಹಾಕಿಬಿಟ್ಟರು. 'ಹೂಂ! ಸ್ಮಾರ್ತ ಮಂದಿಗೆ ಮಾತು ಕೊಟ್ಟುಬಿಟ್ಟೀರಿ ಅಂತಾತು. ಕೊಟ್ಟ ಮಾತು ಬಿಟ್ಟ ಬಾಣ ಹಿಂದ ಬರಂಗಿಲ್ಲ ನೋಡ್ರೀ. ನೀವು ಒಂದು ಕೆಲಸಾ ಮಾಡ್ರೀ,' ಅಂತ ಸ್ವಾಮಿಗಳು ಮಾತು ನಿಲ್ಲಿಸಿದರು. 'ಉಳಿದ ವಿಷಯ ಎಲ್ಲಾ ನಮ್ಮ ಮಠದ ಖಚಾಂಚಿ ಮಾಹುಲಿ ಆಚಾರ್ರು ಹೇಳ್ತಾರ. ಅವರು ಹೇಳಿದ್ದು ಮಾಡಿಬಿಡ್ರೀ. ಎಲ್ಲಾ ಸರಿಯಾಗ್ತದ. ಈಗಿನ ಕಾಲದಾಗ ಎಲ್ಲಿ ಬಹಿಷ್ಕಾರ ಅದು ಹಾಕಿಕೋತ್ತ ಕೂಡೋಣ?' ಅಂದವರೇ ಉತ್ತತ್ತಿ ಪ್ರಸಾದ ಕೊಟ್ಟು ಆಶೀರ್ವದಿಸಿ ಕಳಿಸಿದರು.
ನೋಡಲು ಥೇಟ್ ಸೈಬೇರಿಯನ್ ಹುಲಿ ಮಾದರಿ ಇದ್ದ ಮಾಹುಲಿ ಆಚಾರ್ರನ್ನು ಹೋಗಿ ನೋಡಿದರೆ ಅವರು ವಿಚಿತ್ರವಾಗಿ ಹಲ್ಲು ಕಿರಿದು, 'ಎಷ್ಟು ಅಂತ ಬರೆದುಕೊಳ್ಳಲಿ?' ಅಂತ ಕೇಳಿದರು. ಇವರಿಗೆ ಗೊತ್ತಾಗಿಯೇ ಹೋಯಿತು. ಮಠದ ಖಚಾಂಚಿ ಮಾಹುಲಿ ಮಹಾ ಹುಲಿಯಂತೆ ಬೇಟೆಗೆ ರೆಡಿಯಾಗಿದೆ ಅಂತ. ಒಂದೆರೆಡು ಲಕ್ಷ ರೂಪಾಯಿಗಳನ್ನು ಕಿತ್ತಿಕೊಂಡೇ ಬಿಡುತ್ತದೆ ಅಂತ ಖಾತ್ರಿಯಾಯಿತು. ಮಠದ ಕಾಣಿಕೆ ಲೆಕ್ಕಾಚಾರ ಅಂದರೆ footpath ಮೇಲಿನ ವ್ಯಾಪಾರಿಗಳ ಜೊತೆ ಚೌಕಾಶಿ ಮಾಡಿದಂತೆಯೇ. ಇವರು ಇಪ್ಪತ್ತು ಸಾವಿರದಿಂದ ಶುರುಮಾಡಿದರು. ಮಾಹುಲಿ ಆಚಾರ್ರು ಅಂತೂ ಒಂದು ಲಕ್ಷಕ್ಕೆ ಒಪ್ಪಿದರು. ಕೇವಲ ಅರವತ್ತು ಸಾವಿರಕ್ಕೆ ಲೆಕ್ಕ ಕೊಟ್ಟರು. ಯಾಕೆ ಅಂತ ಕೇಳಿದರೆ 'income tax ಮಂದಿದು ಭಾಳ ಪ್ರಾಬ್ಲಮ್ ರೀ. ರಾಯರ ವೃಂದಾವನ ಸುದಾ ಬಿಡದs ಎಲ್ಲಾ ಕಡೆ ಹುಡುಕ್ಯಾಡಿ ಬಿಡ್ತಾರ. ರಾಮನ ಲೆಕ್ಕ ಕೃಷ್ಣನ ಲೆಕ್ಕ ಬರಿಬೇಕು ನೋಡ್ರಿ,' ಅನ್ನುತ್ತ ತಮ್ಮ ಉದ್ದನೆಯ ಚಂಡಿಕೆಯನ್ನು ನೀವಿಕೊಂಡು, ಚಂಡಿಕೆಯನ್ನು ನೀವಿದ ಕೈಯನ್ನು ಮೂಸಿ ನೋಡಿಕೊಂಡರು. ಎಲ್ಲರೂ ಎಣ್ಣೆ ಹಾಕಿ ಕೂದಲು ಬಾಚಿದರೆ ಮಾಹುಲಿ ಆಚಾರ್ರು ತುಪ್ಪ ಹಾಕಿ ಚಂಡಿಕೆ ಕಟ್ಟುತ್ತಾರೆ. ಅದು ಅವರ ಸ್ಪೆಷಾಲಿಟಿ. ರೊಕ್ಕ ತೊಗೊಂಡು, ರಸೀದಿ ಕೊಟ್ಟು, 'ಎಲ್ಲಾ ಒಳ್ಳೆದಾಗಲಿ. ಸ್ಮಾರ್ತರ ಹುಡುಗನ ಜೊತೆಗೇ ಲಗ್ನ ಆಗ್ಲಿ. ಲಗ್ನಾದ ಮೇಲೆ ಮಠಕ್ಕ ಕರಕೊಂಡು ಬರ್ರಿ. ವೈಷ್ಣವರ ಮಠ ಆದರೇನಾತು? ಎಲ್ಲರೂ ಬರಬಹುದು,' ಅಂದವರೇ ಓಬ್! ಅಂತ ಜೋರಾಗಿ ತೇಗಿದರು. ಊಟ ಗಡದ್ದಾಗಿತ್ತು ಅಂತ ಅನ್ನಿಸುತ್ತದೆ.
ಹೀಗೆ ರಾಜಾನ ಕಳೆದುಕೊಂಡ ಹುಡುಗಿಯ ಲಗ್ನ ನಿಶ್ಚಯವಾಗಿತ್ತು. 'ವೈಷ್ಣವರ ಆಚಾರಿ ಸಿಗಲಿಲ್ಲ. ಸ್ಮಾರ್ತರ ಭಟ್ಟ ಬಿಡಲಿಲ್ಲ,' ಅಂತ ಹಾಡು ಗುಣುಗುತ್ತ ರೆಡಿ ಆದಳು ಮೂಕಪ್ರೇಮದ ಮೂಕಿ. ಮದುವೆ ದಿನ ಬಂದೇಬಿಟ್ಟಿತು. ಬಗ್ಗಿದಳು. ಇವಳು ಬಗ್ಗಿದ್ದೇ ಬಗ್ಗಿದ್ದು ಜೋರಾಗಿ ಬಾರಿಸಿದರು. ಅಯ್ಯೋ! ಇವಳು ತಾಳಿ ಕಟ್ಟಿಸಿಕೊಳ್ಳಲು ಬಗ್ಗಿದಳು ಅಂತ. ಮುಹೂರ್ತದ ಸಮಯಕ್ಕೆ ಸರಿಯಾಗಿ ಘಟ್ಟಿಮೇಳ, ಬ್ಯಾಂಡು, ಬಜಂತ್ರಿಗಳನ್ನು ಭರ್ಜರಿ ಬಾರಿಸಿದರು ಅಂತ. ಅಷ್ಟೇ.
ಹೀಗೆ ರಾಜಾನ ಬದಲು ಮತ್ತೊಬ್ಬ ಗಂಡ ಸಿಕ್ಕಿದ್ದ. 'ಲವ್ ಮಾಡಿದವರ ಜೊತೆ ಮದುವೆಯಾಗುವದಿಲ್ಲ. ಮದುವೆಯಾದವರ ಜೊತೆ ಲವ್ ಆಗುವದಿಲ್ಲ,' ಅನ್ನುವ motto ಹೊಂದಿರುವ ಸಂಸ್ಥೆ ಬಹಳ ದೊಡ್ಡದು. ಅದಕ್ಕೆ ವಿಪರೀತ ಜನ ಸದಸ್ಯರು. ಇವಳೂ ಅದೇ ಸಂಸ್ಥೆಯ ಸದಸ್ಯತ್ವ ತೆಗೆದುಕೊಂಡಳು. ಶಿವಾಯ ನಮಃ!
ಆದರೂ ರಾಜಾ ಆಗಾಗ ನೆನಪಾಗುತ್ತಲೇ ಇದ್ದ. ಅದೇನೋ FL ಅಂತೆ. FL ಒಟ್ಟೇ ಮರೆಯುವದೇ ಇಲ್ಲವಂತೆ. 'FL ಅಂದ್ರ ಏನು? Full lapse ಅಂತ ಅರ್ಥೇನು?' ಅಂತ ಕೇಳಿದರೆ ವಿಪರೀತ ರೈಸ್ ಆಗಿ, 'ಅಯ್ಯೋ! FL ಅಂದ್ರ first love ಅಂತ. first love ಯಾರೂ ಎಂದೂ ಮರಿಲಿಕ್ಕೆ ಸಾಧ್ಯವಿಲ್ಲ!' ಅಂತ ದೊಡ್ಡ ಲೆಕ್ಚರ್ ಕೊಟ್ಟುಬಿಡುತ್ತಾರೆ. ಇವಳದ್ದೂ ಅದೇ ಕೇಸ್.
ಈ FL ಗಿರಾಕಿ ತನ್ನ ರಾಜಾನ ನೆನಪನ್ನು ಅಮರ ಮಾಡಬೇಕು ಅಂದರೆ ಏನು ಮಾಡಬೇಕು? ಅಂತ ತಲೆಕೆಡಿಸಿಕೊಂಡಳು. ಹೊಸದಾಗಿ ಮದುವೆಯಾಗಿರುವ ಹೆಂಡತಿ ತಲೆಕೆಡಿಸಿಕೊಂಡಳು ಅಂತ ಗಂಡ ತಲೆಕೆಡಿಸಿಕೊಂಡ. ಪಾಪ! ಹನಿಮೂನಲ್ಲೇ ಇಬ್ಬರ ತಲೆಯೂ ಕೆಟ್ಟು ಫುಲ್ ಮಟಾಶ್!
ಇವಳು ಅಷ್ಟು ತಲೆಕೆಡಿಸಿಕೊಂಡಿದ್ದಕ್ಕೆ ಒಂದು ಅದ್ಭುತ ಐಡಿಯಾ ಹೊಳೆಯಿತು. ಅದೇ ಕೇಕ್ ಮಾಡುವದು. ಹೇಗೂ ರಾಜಾನಿಗೆ ಕೇಕ್ ತುಂಬಾ ಇಷ್ಟ ಅಂತ ಗೊತ್ತಿತ್ತು. ಮೊಟ್ಟೆ ಹಾಕಿರುತ್ತಾರೆ ಅಂತ ಆತ ಆದನ್ನು ತಿನ್ನುತ್ತಿರಲಿಲ್ಲ. ಅವನನ್ನೇ ಮದುವೆಯಾಗಿದ್ದರೆ ಮೂರೂ ಹೊತ್ತು eggless ಕೇಕ್ ಮಾಡಿ ಹಾಕಲೂ ರೆಡಿ ಇದ್ದಳು. ರಾಜಾನ ನೆನಪನ್ನು ಅಮರವಾಗಿಡಬೇಕು ಅಂತ ಪ್ರತಿ ವರ್ಷ ರಾಜಾನ ಬರ್ತಡೇ ದಿನ eggless ಕೇಕ್ ಮಾಡಬೇಕು. ಮಾಡುತ್ತೇನೆ ಅಂತ ಒಂದು ನಿಶ್ಚಯ ಮಾಡಿಕೊಂಡೇ ಹನಿಮೂನ್ ಮುಗಿಸಿ ಮರಳಿದ್ದಳು.
ಮನೆಗೆ ಪಾತ್ರೆ, ಪಗಡೆ ಖರೀದಿಸೋಣ. ಬಚ್ಚಲು ಮನೆಗೊಂದೆರೆಡು ಬಕೆಟ್, ಪಾಯಖಾನೆಗೊಂದು ಚಂಬು ಖರೀದಿಸಿ ತರೋಣ ಅಂತ ಗಂಡ ಪೇಟೆಗೆ ಕರೆದುಕೊಂಡು ಹೋದರೆ ಆ ಬಡಪಾಯಿಗೆ ರೋಪ್ ಹಾಕಿ ಕೇಕ್ ಮಾಡುವ ಓವೆನ್ ಖರೀದಿ ಮಾಡಿಸಿಕೊಂಡು ಬಂದಿದ್ದಳು. ಚಂಬಿಗಿಂತ ಮೊದಲು ಓವೆನ್ ತಂದ ದಂಪತಿಗಳು ಯಾರಾದರೂ ಇದ್ದರೆ ಇವರೇ ಇರಬೇಕು.
ಆ ವರ್ಷದಿಂದ ಶುರುವಾಗಿದೆ ನೋಡಿ ಈ egglees ಕೇಕ್ ಮಾಡುವ ಪದ್ಧತಿ. ನಿರಂತರವಾಗಿ ಹದಿನೇಳು ವರ್ಷ ಚಾಚೂ ತಪ್ಪಿಸದೇ ಒಂದು ವೃತದಂತೆ ಮಾಡಿಕೊಂಡು ಬಂದಿದ್ದಾಳೆ. ಎಲ್ಲ ತನ್ನ FL ರಾಜಾನಿಗಾಗಿ. ರಾಜಾ ನನ್ನ ಮುದ್ದು ರಾಜಾ. ಮುದ್ದು ಮಾಡಿದರೆ ಗುದ್ದು ಕೊಟ್ಟೆಯಲ್ಲೋ ರಾಜಾ. ಈ ಸ್ಮಾರ್ತರ ಭಟ್ಟನ ಜೊತೆ ಸಂಸಾರ ಕಷ್ಟ ಕಷ್ಟ. ಸ್ಮಾರ್ತರ ಪದ್ಧತಿಗಳೇ ಬೇರೆ. ಇವಳ ವೈಷ್ಣವರ ಪದ್ಧತಿಗಳೇ ಬೇರೆ. ಏನೋ ಒಂದು ರೀತಿಯಲ್ಲಿ ಸಂಸಾರ ನಡೆಸಿಕೊಂಡು ಬರುತ್ತಿದ್ದಾಳೆ. ವರ್ಷಕ್ಕೊಂದು ಬಾರಿ ರಾಜಾನ ನೆನಪಲ್ಲಿ ಶುದ್ದ ಸಸ್ಯಾಹಾರಿ ಕೇಕ್ ಮಾಡುವದರಲ್ಲಿ ಏನೋ ಒಂದು ರೀತಿಯ ಧನ್ಯತೆಯ ಫೀಲಿಂಗ್.
ಹೀಗೆ ಪ್ರಥಮ ಪ್ರೇಮ ಮೊದಲು ಮೂಕ ಪ್ರೇಮವಾಗಿದ್ದು ಕೊನೆಗೆ ಭಗ್ನಪ್ರೇಮವಾದ ನೆನಪಲ್ಲಿ ಪ್ರತಿವರ್ಷ eggless ಕೇಕ್ ಮಾಡುತ್ತಿದ್ದಾಕೆ ಈಗೇಕೆ ಒಮ್ಮೆಲೇ, 'ಇನ್ನೆಂದೂ ಕೇಕ್ ಮಾಡುವದಿಲ್ಲ. ಮಾಡಿದರೂ eggless ಕೇಕ್ ಮಾತ್ರ ಸುತಾರಾಂ ಮಾಡುವದಿಲ್ಲ,' ಅನ್ನುವಂತಹ ಬಂಡಾಯಕಾರಿ ನಿರ್ಧಾರ ತೆಗೆದುಕೊಂಡಳು? ಕೇಕ್ ಮಾಡುವದಿಲ್ಲ ಅಂದರೆ ಓಕೆ. ಆದರೆ ಆ ಪರಿ ರೋಷಗೊಂಡು, ಅಬ್ಬರಿಸಿ, ಬೊಬ್ಬಿರಿದು, ಅಪ್ತಮಿತ್ರದ ಹುಚ್ಚಿಯಂತಾಗಿ, ಕೇಕ್ ಮಾಡುವ ಓವನ್ ಯಾಕೆ ಕೆಳಗೆ ಒಗೆದು ಚೂರು ಚೂರು ಮಾಡಿ ಹಾಕಿದಳು?
ಇವಕ್ಕೆಲ್ಲ ಉತ್ತರ ಸಿಗುತ್ತದೆ ಕಥೆಯ ಮುಂದಿನ ಭಾಗದಲ್ಲಿ.
****
ಮೊನ್ನೆ ಅವಳ ಶಾಲೆಯ ಸಹಪಾಠಿಗಳ ಒಂದು ಸ್ನೇಹ ಸಮ್ಮಿಲನ ತರಹದ ಸಮಾರಂಭವಾಯಿತು. ಯಾರೋ ಒಬ್ಬವ ಆ ಊರಿನಲ್ಲಿದ್ದ ಸಹಪಾಠಿಗಳೆನ್ನೆಲ್ಲ ಫೇಸ್ಬುಕ್ ಮುಖಾಂತರ ಹುಡುಕಿ, ಎಲ್ಲರನ್ನೂ ಸಂಪರ್ಕಿಸಿ, 'ನಾವೆಲ್ಲ ಶಾಲೆ ಬಿಟ್ಟ ಮೇಲೆ ಭೆಟ್ಟಿಯಾಗಿಯೇ ಇಲ್ಲ. ಇಪ್ಪತ್ತು ವರ್ಷಗಳ ಮೇಲಾಗಿಹೋಯಿತು. ಎಲ್ಲರೂ ಭೆಟ್ಟಿಯಾಗೋಣ. ನಾನು ಎಲ್ಲದರ ವ್ಯವಸ್ಥೆ ಮಾಡುತ್ತೇನೆ. ರೆಗ್ಯುಲರ್ ಮೆನು, ವೆಜ್ ಮತ್ತು ನಾನ್ವೆಜ್, ಇರುತ್ತದೆ. ಬೇಕಾದವರು ಮನೆಯಿಂದ ಕೂಡ ಏನಾದರೂ ಖಾದ್ಯ ಮಾಡಿ ತರಬಹುದು. potluck ತರಹ. ಎಲ್ಲರೂ ಮುದ್ದಾಂ ಬನ್ನಿ. ಎಲ್ಲರೂ ಎಂಜಾಯ್ ಮಾಡೋಣ. ಹಳೆಯ ಸುಂದರ ನೆನಪುಗಳನ್ನು ಮೆಲಕು ಹಾಕೋಣ. ಎಲ್ಲರೂ ಬರಲೇಬೇಕು. ಮಿಸ್ ಮಾಡಬೇಡಿ,' ಅಂತ ಆಹ್ವಾನ ಕೊಟ್ಟೇಬಿಟ್ಟಿದ್ದ. ಇವಳಿಗೂ ಆಹ್ವಾನ ಬಂದಿತ್ತು. ಹೋಗಲೋ ಬೇಡವೋ ಅಂದುಕೊಂಡಳು. ಆದರೆ ಗೆಳತಿಯರು ಒತ್ತಾಯ ಮಾಡಿದರು. ಅವರ ಆಗ್ರಹಕ್ಕೆ ಒಪ್ಪಿ ಹೂಂ ಅಂದಿದ್ದಳು. ನಂತರ ಅದು ಮರೆತುಹೋಗಿತ್ತು. ನೆನಪೇ ಇಲ್ಲ. ಫುಲ್ ಶಿವಾಯ ನಮಃ!
ಸಮ್ಮಿಲನ ಸಮಾರಂಭದ ದಿನ ಒಂದೆರೆಡು ತಾಸುಗಳ ಮೊದಲು ಗೆಳತಿಯೊಬ್ಬಳು ಫೋನ್ ಮಾಡಿದಾಗಲೇ ನೆನಪಾಗಿದ್ದು. ಫುಲ್ ಮರೆತುಹೋಗಿತ್ತು. ಈಗ ಸಿಕ್ಕಾಪಟ್ಟೆ ಗಡಿಬಿಡಿ. ಸ್ನಾನ ಕೂಡ ಆಗಿರಲಿಲ್ಲ. ಕೆಟ್ಟ ಕೆಮ್ಮಾರಿ ಲುಕ್ಕಿನಲ್ಲಿ ಬಚ್ಚಲು ತಿಕ್ಕುತ್ತ ಕುಳಿತಿದ್ದಳು. ವೀಕೆಂಡ್ ಕೆಲಸ. ಮಾಡಲೇಬೇಕು. ಆಗ ಬಂತು ಗೆಳತಿಯ ಫೋನ್. ಮೊದಲೇ ಕಮಿಟ್ ಆಗಿಬಿಟ್ಟಿದ್ದಾಳೆ. ಕೊನೆಯ ಕ್ಷಣದಲ್ಲಿ ಬರುವದಿಲ್ಲ ಅಂತ ಹೇಳಲು ಆಗುವದಿಲ್ಲ. ಸರಿ ಹೇಗೂ ಇನ್ನೂ ಎರಡು ಘಂಟೆಗಳ ಸಮಯವಿದೆ. ಮತ್ತೆ ಸ್ಥಳ ಕೂಡ ಜಾಸ್ತಿ ದೂರವಿಲ್ಲ. ಹೋದರಾಯಿತು ಅಂದುಕೊಂಡಳು. ಬಚ್ಚಲು ತಿಕ್ಕುವ ಕೆಲಸವನ್ನು ಗಂಡನಿಗೆ ಹಚ್ಚಿದಳು. ತಿಂಗಳಲ್ಲಿ ಮೂರು ಬಾರಿ ಅವನೇ ತಿಕ್ಕುತ್ತಾನೆ. ಇದೊಂದು ವಾರ ಮೈಕೈ ನೋವು ಅಂದಿದ್ದ ಅನ್ನುವ ಕಾರಣಕ್ಕೆ ಇವಳು ತಿಕ್ಕುತ್ತಿದ್ದಳು. ಈಗ ಇವಳು ಸಮಾರಂಭಕ್ಕೆ ಹೋಗಲೇಬೇಕಾಗಿದೆ. ಹಾಗಾಗಿ ಗಂಡ ಬಚ್ಚಲು ತಿಕ್ಕಲೇಬೇಕಾಗಿದೆ. ಅವನ ಪ್ರಾರಬ್ಧ!
ಆವಾಗ ಮತ್ತೊಂದು ಲಫಡಾ ಆಯಿತು. ಸಮಾರಂಭಕ್ಕೆ ಹೋಗಲೇನೋ ಇವಳು ರೆಡಿ. ಆದರೆ potluck ಕೂಡ ಇದೆ ಅಂತ ಹೇಳಿದ್ದು ಈಗ ನೆನಪಾಯಿತು. 'ಹೆಚ್ಚಿನವರು ಏನಾದರೂ ಖಾದ್ಯ ಮಾಡಿ ತಂದೇತಂದಿರುತ್ತಾರೆ. ನಾನು ಬರಿಗೈಯಲ್ಲಿ ಹೋದರೆ ಸರಿಯಾಗುವದಿಲ್ಲ. ಏನಾದರೂ ಮಾಡೋಣ ಅಂದರೆ ಟೈಮ್ ಇಲ್ಲ. ಸ್ನಾನವಾಗಬೇಕು. ನಂತರ ಶೃಂಗಾರವಾಗಬೇಕು. ಹೀಗಿದ್ದಾಗ ಖಾದ್ಯ ಮಾಡುವದು ಹೇಗೆ? ಏನು ಮಾಡಲಿ?' ಅಂತ ಚಿಂತಿಸುತ್ತ ತಿಕ್ಕುವ ಬಚ್ಚಲನ್ನು ಬಿಟ್ಟು ಅಡುಗೆಮನೆ ಕಡೆ ಬಂದಳು. ಆಕಡೆ ಈಕಡೆ ನೋಡಿದಳು. ತಂಗುಳ ಪೆಟ್ಟಿಗೆ ಉರ್ಫ್ ಫ್ರಿಜ್ ತೆಗೆದಳು. ತಂಗುಳ ಪೆಟ್ಟಿಗೆಯಲ್ಲಿ ತಂಗುಳನ್ನ ತಂಪಾಗಿ ಕೂತಿತ್ತು. ಐಡಿಯಾ ಬಂತು. ಐಡಿಯಾ ಬಂದ ಖುಷಿಗೆ, YES! ಅಂತ ಉದ್ಗರಿಸಿದಳು. 'ತಂಗುಳನ್ನಕ್ಕೆ ಒಗ್ಗರಣೆ ಹಾಕಿಬಿಟ್ಟರಾಯಿತು. stylish ಆಗಿ ಚಿತ್ರಾನ್ನ ಅಂದುಬಿಟ್ಟರಾಯಿತು. ಅಲ್ಲಿ ಸಮಾರಂಭದಲ್ಲಿ ಯಾರಿಗೆ ಗೊತ್ತಾಗುತ್ತದೆ ನಾನು ತಂಗುಳನ್ನಕ್ಕೆ ಒಗ್ಗರಣೆ ಹಾಕಿ ತಂಗುಳು ಚಿತ್ರಾನ್ನ ಮಾಡಿಕೊಂಡು ಬಂದಿದ್ದೇನೆ ಅಂತ? ಎಲ್ಲರೂ ಗಪಾಗಪಾ ಮುಕ್ಕುತ್ತಾರೆ. ಒಗ್ಗರಣೆಯೊಂದು ಬರೋಬ್ಬರಿ ಬಿದ್ದರೆ ಸಾಕು. ನಾನಂತೂ ಚಿತ್ರಾನ್ನ ತಿನ್ನುವದಿಲ್ಲ. ಅದೇ ಸರಿ,' ಅಂದುಕೊಂಡವಳೇ ಫ್ರಿಜ್ಜಿನಿಂದ ತಂಗುಳನ್ನದ ಭಾಂಡಿ ತೆಗೆದವಳೇ ಅನ್ನವನ್ನು ಅಕ್ರಮ ಗಣಿಗಾರಿಕೆ ಮಾಡಿದ ಮಾದರಿಯಲ್ಲಿ ಕೆಬರತೊಡಗಿದಳು. ಅನ್ನ ತಳ ಹತ್ತಿತ್ತು. ಚೂಪಾದ ಚಾಕುವಿನಿಂದ ಕರಪರಾ ಅಂತ ಕೆರೆಕೆರೆದು ಅನ್ನವನ್ನು ತೆಗೆದಳು. ಒಗ್ಗರಣೆ ಹಾಕಿಯೇಬಿಟ್ಟಳು. ಅವಳಿಗೆ ಅಡುಗೆ ಬರುವದು ಅಷ್ಟರಲ್ಲೇ ಇದೆ. ಹೀಗೆ ತಯಾರಾದ ಒಗ್ಗರಣೆ ಅನ್ನವನ್ನು ಚಂದವಾದ ಡಬ್ಬಿಗೆ ಹಾಕಿ, ಮೇಲಿಂದ ಕೊತ್ತಂಬರಿ, ಗೋಡಂಬಿಗಳಿಂದ ಶೃಂಗಾರ ಮಾಡಿದಳು. ಅನ್ನ ತಂಗುಳನ್ನವಾಗಿದ್ದರೂ ಶೃಂಗಾರ ಜೋರಾಗಿತ್ತು. ಅದನ್ನೇ ತಾನೇ ಎಲ್ಲರೂ ನೋಡುವದು. ಚಿತ್ರಾನ್ನ ರೆಡಿ!
ಚಿತ್ರಾನ್ನದ ಡಬ್ಬಿ ತೆಗೆದುಕೊಂಡು, ಗೆಳತಿಯರ ಜೊತೆ ಹಳೆಯ ಸಹಪಾಠಿಗಳ ಸಮ್ಮಿಲನ ಕಾರ್ಯಕ್ರಮಕ್ಕೆ ಹೋದಳು. ಯಾವದೋ ದೊಡ್ಡ ಹಾಲಿನಲ್ಲಿ ಮಾಡಿದ್ದರು. ಸುಮಾರು ಜನ ಕೂಡಿದ್ದರು. ಅದೇ ಊರಿನ ಒಂದಿಷ್ಟು ಜನ, ಸಮಾರಂಭಕ್ಕೆ ಅಂತಲೇ ಬೇರೆ ಊರಿನಿಂದ ಬಂದ ಜನ ಎಲ್ಲ ಇದ್ದರು. ವಿದೇಶಗಳಿಂದ ದೇಶಕ್ಕೆ ಬಂದವರೂ ಆ ಸಮಾರಂಭದ ಬಗ್ಗೆ ತಿಳಿದು ಅವರೂ ಬಂದಿದ್ದರು. ಸುಮಾರು ಐವತ್ತು ಜನರಾಗಿದ್ದರು. ಸುಮಾರು ಮೂವತ್ತು ವರ್ಷಗಳ ಮೇಲೆ ನಂತರ ಭೇಟಿಯಾದ ಹಳೆಯ ಗೆಳೆಯರು ಮತ್ತು ಗೆಳತಿಯರು. ಹಳೆ ಸಹಪಾಠಿಗಳ ಸ್ನೇಹ ಸಮ್ಮಿಲನ.
ಅವಳು ಒಂದನ್ನು ಮಾತ್ರ expect ಮಾಡಿರಲೇ ಇಲ್ಲ. ಈ ಸಮಾರಂಭದಲ್ಲಿ ರಾಜಾ ಸಿಗಬಹುದು ಅಂತ ತಲೆಗೆ ಬಂದಿರಲೇ ಇಲ್ಲ. ಯಾಕೋ ಏನೋ. ಸಮಾರಂಭವನ್ನೇ ಮರೆತುಬಿಟ್ಟಿದ್ದಳು ಅಂದ ಮೇಲೆ ಮೂಕಪ್ರೇಮದ ಕಾಲದ ರಾಜಾ ಎಲ್ಲಿಂದ ನೆನಪಾಗಬೇಕು? ಆದರೆ ರಾಜಾ ಮಾತ್ರ ಅಲ್ಲಿದ್ದ. ಅಷ್ಟೊಂದು ಜನರಿದ್ದರೂ ಆಕೆಯ ಕಣ್ಣಿಗೆ ಬಿದ್ದವನೇ ಅವನು. ಫಸ್ಟ್ ಲವ್ ಅಂದರೆ ಸುಮ್ಮನೆಯೇನು? ಮತ್ತೆ ಹೃದಯ ಗುಟರ್ ಗುಟರ್! ಇವಳನ್ನು ನೋಡಿದ ರಾಜಾ ಕೂಡ ಇವಳಿದ್ದ ಕಡೆಯೇ ಬಂದುಬಿಟ್ಟ. ಮತ್ತೆ ಎದೆ ಬಿಗಿದುಬಂತು. ಜಂಪರ್ ಬಿಗಿಯಾಗಲಿಲ್ಲ. ಯಾಕೆಂದರೆ ಜಂಪರ್ ಹಾಕಿರಲಿಲ್ಲ. ಹಾಕಿದ್ದ ಬ್ರಾ ಮಾತ್ರ excitement ತಡೆಯಲಾಗದೇ ಸಿಕ್ಕಾಪಟ್ಟೆ ಬಿಗಿಯಾಗಿ, ಎಲ್ಲಿ ಹುಕ್ ಮುರಿದುಹೋಗಿ ಶಿವಾಯ ನಮಃ ಆಗಿಹೋಗುತ್ತದೋ ಎನ್ನುವಂತಾಗಿತ್ತು. ಅಷ್ಟರಲ್ಲಿ ರಾಜಾ ಎದುರಿಗೇ ಬಂದು ನಿಂತಿದ್ದ. ಕೈಯಲ್ಲಿ ಊಟದ ಪ್ಲೇಟಿತ್ತು. ಪೂರ್ತಿ ಫುಲ್ ಪ್ಲೇಟ್. ಬಫೆ ಊಟದ ಲೈನಿನಲ್ಲಿ ನಿಂತವ ಪ್ಲೇಟ್ ತುಂಬಿಸಿಕೊಳ್ಳುತ್ತಿದ್ದಾಗ ಇವಳು ಕಂಡಿದ್ದಳು. ಸುಮಾರು ಎಲ್ಲರನ್ನೂ ಮಾತಾಡಿಸಿ ಮುಗಿಸಿದ್ದ ರಾಜಾ. 'ಇವಳನ್ನು ಮಾತಾಡಿಸಿಯೇ ಇಲ್ಲವಲ್ಲ. ಈಗ ಮಾತಾಡಿಸೋಣ,' ಅಂತ ಬಂದಿದ್ದ.
'ಏನವಾ? ಹ್ಯಾಂಗಿದ್ದಿ? ಆರಾಮ್ ಏನು? ಭಾಳ ವರ್ಷ ಆಗಿತ್ತು. ಎಲ್ಲಾರನ್ನೂ ಭೆಟ್ಟಿ ಮಾಡಿ ಭಾಳ ಖುಷಿಯಾತು. ನೀ ಈಗ ಮಾತ್ರ ಬಂದಿಯೇನು?' ಅಂತ ಸಹಜವಾಗಿ ಕೇಳಿದ ರಾಜಾ.
'ರಾಜಾ! ನನ್ನ ರಾಜಾ! ಎದುರಲ್ಲೇ ನಿಂತಿದ್ದಾನೆ. ಮಾತಾಡುತ್ತಿದ್ದಾನೆ. ಇದು ನಿಜವೇ? ಅಥವಾ ಭ್ರಮೆಯೋ?' ಅಂದುಕೊಂಡು ಬೆರಗಾಗಿ ನಿಂತಿದ್ದಳು. ಮಾತೇ ಹೊರಡಲಿಲ್ಲ. ರಾಜಾನೇ ಅವಳನ್ನು ಸಮಾಧಿ ಸ್ಥಿತಿಯಿಂದ ಹೊರತರಬೇಕಾಯಿತು.
'ಏನವಾ? ಎಲ್ಲೆ ಕಳೆದುಹೋದಿ? ನನ್ನ ನೆನಪರ ಅದನೋ ಇಲ್ಲೋ? ಏನ?' ಅಂತ ಅವಳ ಮುಖದ ಮುಂದೆ ಕೈಯಾಡಿಸುತ್ತ, ನಗುತ್ತ ಕೇಳಿದ ರಾಜಾ.
'ಏ, ಇಲ್ಲ. ಹಾಂಗೇನೂ ಇಲ್ಲ. ಎಲ್ಲ ನೆನಪದ. ಭಾಳ ವರ್ಷಾಗಿತ್ತು. ನೋಡೇ ಇರಲಿಲ್ಲ. ಅದಕ್ಕೇ ಹಾಂಗಾತು,' ಅಂದವಳೇ ಮತ್ತೂ ಸ್ವಲ್ಪ ಸೇರಿಸಿದಳು. 'ಎಲ್ಲರನ್ನೂ ನೋಡಿದ ಕೂಡಲೇ ಹೀಂಗೇ ಆಗ್ಲಿಕತ್ತದ ನೋಡು. ಹಳೆ ಗೆಳತಿಯರು, ಗೆಳೆಯರು. ಭಾಳ ವರ್ಷದ ಮೇಲೆ ಸಿಕ್ಕಾರ. ಅದಕ್ಕೇ ಹೀಂಗೆ,' ಅಂತ ಸಣ್ಣದಾಗಿ ಭೋಂಗು ಬಿಟ್ಟಳು. 'ಕೇವಲ ನಿನ್ನ ನೋಡಿದಾಗ ಮಾತ್ರ ಹೀಗಾಯಿತು,' ಅಂತ ಹೇಳಿಬಿಟ್ಟರೆ ಲಫಡಾ ಆಗುತ್ತದೆ ಅಂತ ಗೊತ್ತಿದೆ ಅವಳಿಗೆ.
ರಾಜಾ ಮಾತು ಮುಂದುವರೆಸಿದ. 'ನೀ ಏನು ಅಡಿಗಿ ಮಾಡಿಕೊಂಡು ಬಂದೀ? ಎಲ್ಲಾರೂ ಮಸ್ತ ಮಸ್ತ ಅಡಿಗಿ ಮಾಡಿಕೊಂಡು ಬಂದಾರ. ನಾನಂತೂ ಎಲ್ಲಾರ ಮನಿ ಅಡಿಗಿ, ಹೋಟೆಲ್ಲಿನವರ ಅಡಿಗಿ ಎಲ್ಲ ಹಾಕ್ಕೊಂಡು ಬಂದೆ ನೋಡವಾ. ಪ್ಲೇಟ್ ನೋಡು ಹ್ಯಾಂಗ ತುಂಬ್ಯದ,' ಅಂತ ಪ್ಲೇಟ್ ತೋರಿಸಿದ. ಚಿತ್ರ ವಿಚಿತ್ರ ಭಕ್ಷ್ಯಗಳಿದ್ದವು ರಾಜಾನ ಪ್ಲೇಟಿನಲ್ಲಿ.
ರಾಜಾ ಬರುತ್ತಿದ್ದಾನೆ ಅಂತ ಗೊತ್ತಾಗಿದ್ದರೆ ಅಥವಾ ನಿರೀಕ್ಷೆಯಾದರೂ ಇದ್ದಿದ್ದರೆ ಮುದ್ದಾಂ eggless ಕೇಕನ್ನೇ ಮಾಡಿಕೊಂಡು ಬರುತ್ತಿದ್ದಳು. ಈಗ ನೋಡಿದರೆ ತಂಗುಳನ್ನದ ಚಿತ್ರಾನ್ನ ಮಾಡಿಕೊಂಡು ಬಂದುಬಿಟ್ಟಿದ್ದಾಳೆ. ರಾಜಾ ಬೇರೆ ಮನೆಯಿಂದ ಏನು ಮಾಡಿಕೊಂಡು ಬಂದಿರುವೆ ಅಂತ ಕೇಳುತ್ತಿದ್ದಾನೆ. eggless ಕೇಕ್ ಇಲ್ಲದಿದ್ದರೂ ಮೂಕಪ್ರೇಮದ ಕಾಲದ ದಿಲ್ಬರ್ ಜಾನಿ ರಾಜಾನಿಗೆ ಮಾಡಿಕೊಂಡುಬಂದಿದ್ದ ಚಿತ್ರಾನ್ನವನ್ನಾದರೂ ತಿನ್ನಿಸಲೇಬೇಕೆಂದುಕೊಂಡಳು.
'ಬಾರಪಾ, ನಾ ಏನು ಅಡಿಗಿ ಮಾಡಿ ತಂದೇನಿ ಅಂತ ತೋರಸ್ತೀನಿ. ಬಾ,' ಅಂತ ಅವನನ್ನು ಕರೆದುಕೊಂಡು ಮತ್ತೆ ಬಫೆ ಟೇಬಲ್ ಕಡೆ ನಡೆದಳು. ಕೈಹಿಡಿದು ಕರೆದುಕೊಂಡು ಹೋಗಿಬಿಡೋಣ ಅಂತ ಬಹಳ ಅನ್ನಿಸುತ್ತಿತ್ತು. ಆದರೆ ಆಭಾಸವಾದೀತು ಅಂತ ಹಾಗೇ ನಡೆದಳು. ಅವಳ ಹಿಂದೆ ರಾಜಾ ಹೆಜ್ಜೆ ಹಾಕಿದ.
ಬಫೆ ಟೇಬಲ್ ಮೇಲೆ ಎಲ್ಲ ತರಹದ ಖಾದ್ಯಗಳು ಕೂತಿದ್ದವು. ಇವಳ ಚಿತ್ರಾನ್ನದ ಡಬ್ಬಿಯೂ ಇತ್ತು. ಯಾರೂ ತೆಗೆದುಕೊಂಡ ಹಾಗೆ ಕಾಣಲಿಲ್ಲ. ಎಲ್ಲೋ ಒಂದೆರೆಡು ಚಮಚ ತೆಗೆದುಕೊಂಡಿರಬಹುದು ಅಷ್ಟೇ. ಸ್ನೇಹಿತರ ಸಮ್ಮಿಲನದಂತಹ ದೊಡ್ಡ ಮೇಜವಾನಿಗೆ ಒಗ್ಗರಣೆ ಅನ್ನ ತೆಗೆದುಕೊಂಡು ಹೋದರೆ ಮತ್ತೇನಾಗುತ್ತದೆ? ನೀವು ಅದಕ್ಕೆ ಚಿತ್ರಾನ್ನ ಅಂತಾದರೂ ಅನ್ನಿ ವಿಚಿತ್ರಾನ್ನ, ಸಚಿತ್ರಾನ್ನ ಏನು ಬೇಕಾದರೂ ಅನ್ನಿ. ಮೇಜವಾನಿಯಲ್ಲಿ ಅದರ ಸ್ಥಾನ ಬಹಳ ಕೆಳಗೆ. ಪಾಪ! ಒಗ್ಗರಣೆ ಅನ್ನ.
'ಹೂಂ! ಏನು ಅಡಿಗಿ ಮಾಡಿಕೊಂಡು ಬಂದಾರ ನಮ್ಮ ಬಾಯಾರು?' ಅಂತ ತುಂಟನಂತೆ ಕೇಳಿದ ರಾಜಾ.
'ಎಷ್ಟು ಮಸ್ತ ಮಾತಾಡುತ್ತಾನೆ. ಶಾಲೆಯಲ್ಲಿ ಚುಪ್ ಚಾಪ್ ಗಪ್ ಕೂಡ್ತಿತ್ತು ಈ ನನ್ನ ಮುದ್ದು ಆಚಾರಿ,' ಅಂದುಕೊಂಡು ಮನದಲ್ಲೇ ಕಿಸಿಕಿಸಿ ನಕ್ಕಳು.
'ಇಲ್ಲಿ ಬಾರೋ. ಬಾ ಇಲ್ಲೆ. ಇಲ್ಲಿ ಅದ ನೋಡು ನಾ ಮಾಡಿಕೊಂಡು ಬಂದ ಅಡಿಗಿ. ಬಡಿಸಲೇನು?' ಅಂತ ಕೇಳಿದಳು. ಪುರಾತನ ಪ್ರೇಮಿ ರಾಜಾನಿಗೆ ತನ್ನ ಕೈಯಾರೆ ಬಡಿಸಬೇಕು ಅಂತ ಆಸೆ, ಮಹದಾಸೆ. ಪ್ರೇಮಿಗೆ ಬಡಿಸುವಾಸೆ, ಗಂಡನಿಗೆ ಬಡಿಯುವಾಸೆ. ಶಿವನೇ ಶಂಭುಲಿಂಗ!
'ಏನು ಮಾಡಿಕೊಂಡು ಬಂದಿ ಅದನ್ನು ಹೇಳವಾ?' ಅಂದ ರಾಜಾ.
'ಚಿತ್ರಾನ್ನ,' ಅಂದಳು. ಹೇಳುವಾಗ ಧ್ವನಿಯಲ್ಲಿ ಅಳುಕು. ಇಂಟರ್ವ್ಯೂನಲ್ಲಿ ಮಾರ್ಕ್ಸ್ ಕೇಳಿದಾಗ ಥರ್ಡ್ ಕ್ಲಾಸ್ ಮಾರ್ಕ್ಸ್ ಅಂತ ಹೇಳಬೇಕಾದರೆ ಆಗುವಂತಹ ಅಳುಕು ಮತ್ತು ಸಂಕೋಚ.
ಈ ರಾಜಾನೋ ಶುದ್ಧ ಬಯಲುಸೀಮೆ ಆಚಾರಿ. ಆಕಡೆ ಮಂದಿ ಶುದ್ಧ ಜವಾರಿ ಭಾಷೆಯಲ್ಲಿ 'ಒಗ್ಗರಣಿ ಅನ್ನ' ಅನ್ನುತ್ತಾರೆ. ಚಿತ್ರಾನ್ನ, ಪತ್ರಾನ್ನ ಎಲ್ಲ ಗೊತ್ತಿಲ್ಲ ಅವರಿಗೆ. ಹಾಗಾಗಿ ರಾಜಾನಿಗೆ ಇವಳು ಚಿತ್ರಾನ್ನ ಅಂದಿದ್ದು ಸರಿಯಾಗಿ ಕೇಳಿಸಲಿಲ್ಲವೋ ಅಥವಾ ಕೇಳಿಸಿದರೂ ತಿಳಿಯಲಿಲ್ಲವೋ ಗೊತ್ತಿಲ್ಲ. ಅವನು ಮತ್ತೆ, 'ಹ್ಯಾಂ? ಏನೂ?' ಅಂತ ಸ್ವಲ್ಪ ಜೋರಾಗಿ ಕೇಳಿದ. ಅದು ಇವಳಿಗೆ ಹೆಬ್ಬುಲಿ ಬೊಬ್ಬಿರಿದಂತೆ ಕೇಳಿಸಿತು. ಹೃದಯ ಬಾಯಿಗೇ ಬಂತು.
ಮತ್ತೆ 'ಚಿತ್ರಾನ್ನ!' ಅಂದಳು. ಮತ್ತೆ ಅರ್ಥವಾಗದೇ ಅಬ್ಬರಿಸಿಬಿಟ್ಟಾನು ಅಂತ ಕೊನೆಯಲ್ಲಿ ಸಣ್ಣ ಧ್ವನಿಯಲ್ಲಿ, 'ಒಗ್ಗರಿಣಿ ಅನ್ನ' ಅಂತಲೂ ಹೇಳಿದಳು.
'ಹೋಗ್ಗೋ ಇಕಿನ! ಹೋಗಿ ಹೋಗಿ ಒಗ್ಗರಣಿ ಅನ್ನ ಮಾಡಿಕೊಂಡು ಬಂದು ಅದೇನೋ ಚಿತ್ರಾನ್ನ ಪತ್ರಾನ್ನ ಅಂತ ಡೌಲು ಬಡೀಲಿಕತ್ತಾಳ,' ಅಂತ ಈಗ ರಾಜಾನಿಗೆ ಬರೋಬ್ಬರಿ ತಿಳಿಯಿತು. ನಕ್ಕ. ಅಸಡ್ಡೆಯ ನಗೆ. ಪಾಪ. ಬಾಯ್ಬಿಟ್ಟು ಹೇಳಲಿಲ್ಲ. 'ಹೋಗಿ ಹೋಗಿ ದರಿದ್ರ ಒಗ್ಗರಣಿ ಅನ್ನ ಮಾಡಿಕೊಂಡು ಬಂದೀಯಾ? ನಿನಗ ದೊಡ್ಡ ನಮಸ್ಕಾರ' ಅನ್ನುವ ಅವನ ಲುಕ್ ಇವಳು ಮಿಸ್ ಮಾಡಿಕೊಳ್ಳುವಂತೆ ಇರಲಿಲ್ಲ. ಇವಳು ಪೆಚ್ಚಾದಳು. ಪಿಚ್ಚೆನ್ನಿಸಿತು. ಸಮಾರಂಭವನ್ನು ಮರೆತುಬಿಟ್ಟಿದ್ದಕ್ಕೆ ತನ್ನನ್ನೇ ತಾನು ಶಪಿಸಿಕೊಂಡಳು. ಗಡಿಬಿಡಿಯಲ್ಲಿ ತಂಗಳನ್ನಕ್ಕೆ ಒಗ್ಗರಣೆ ಹಾಕಿಕೊಂಡು ಬಂದರೆ ಇಲ್ಲಿ ಪುರಾತನ ಪ್ರೇಮಿ ರಾಜಾ ಸಿಕ್ಕುಬಿಡಬೇಕೇ? ಸಿಕ್ಕವ ಮನೆಯಿಂದ ಏನು ಮಾಡಿಕೊಂಡು ತಂದಿರುವೆ ಅಂತ ಮತ್ತೆ ಮತ್ತೆ ಕೇಳಬೇಕೇ? ಎಲ್ಲ ಕೂಡಿ ರಾಮ ರಾಡಿ.
ಅದರೂ formality ಗೆ ಎಂಬಂತೆ, 'ಹಾಕವಾ, ಒಂದೆರೆಡು ಚಮಚೆ ನೀ ಮಾಡಿಕೊಂಡ ಒಗ್ಗರಣಿ ಅನ್ನಾನೂ ಹಾಕು. ತಿಂದು ವಾತಾಪಿ ಜೀರ್ಣೋಭವ ಅಂದುಬಿಡ್ತೇನಿ,' ಅಂದ. ಸುಮ್ಮನೆ ಫಾರ್ಮಾಲಿಟಿಗೆ ಹೇಳುತ್ತಿದ್ದಾನೆ ಅಂತ ಅವಳಿಗೂ ಗೊತ್ತಾಯಿತು. ಆವಾಗ ಏನೋ ನೆನಪಾಯಿತು. ಮತ್ತೊಂದು ಲಫಡಾ ಆಯಿತು. ಚಿತ್ರಾನ್ನಕ್ಕೆ ಬರೋಬ್ಬರಿ ಖಡಕ್ ರುಚಿ ಮತ್ತು ವಾಸನೆ ಬರಲಿ ಅಂತ ಜಬರ್ದಸ್ತಾಗಿ ಉಳ್ಳಾಗಡ್ಡೆ ಮತ್ತು ಬಳ್ಳೊಳ್ಳಿ ಹಾಕಿಬಿಟ್ಟಿದ್ದಳು. ರಾಜಾ ಮೊದಲೇ ಆಚಾರಿ. ಕೇಕಿನಲ್ಲಿ ಮೊಟ್ಟೆಯಿರುತ್ತದೆ ಅನ್ನುವ ಕಾರಣಕ್ಕೆ ಕೇಕ್ ಕೂಡ ತಿನ್ನದಂತಹ ಕಟ್ಟರ್ ಆಚಾರಿ ಬ್ರಾಹ್ಮಣ. ಅಂತವನು ಈಗ ದಬಾಯಿಸಿ ಉಳ್ಳಾಗಡ್ಡೆ ಮತ್ತು ಬಳ್ಳೊಳ್ಳಿ ಹಾಕಿದ ಚಿತ್ರಾನ್ನವನ್ನು ತಿನ್ನುತ್ತಾನೆಯೇ? ಅವನಿಗೆ ಅದನ್ನು ಕೊಡುವದು ಸರಿಯೇ? ಆಚಾರ್ರಿಗೆ ಅಂತದ್ದನ್ನು ತಿನ್ನಿಸಿದರೆ ಪಾಪ ಬರುವದಿಲ್ಲವೇ?
'ರಾಜಾ, ಒಂದು ಮಾತು. ಇದರಾಗ ಉಳ್ಳಾಗಡ್ಡಿ, ಬಳ್ಳೊಳ್ಳಿ ಎಲ್ಲಾ ಅದ. ನೀ ಬರ್ತಿ ಅಂತ ಗೊತ್ತಿರಲೇ ಇಲ್ಲ. ಗೊತ್ತಿದ್ದರೆ ಏನರೆ ಬ್ಯಾರೆ ಮಾಡಿಕೊಂಡು ಬರ್ತಿದ್ದೆ. ಇಲ್ಲಾ at least ಉಳ್ಳಾಗಡ್ಡಿ, ಬಳ್ಳೊಳ್ಳಿ ಹಾಕದೇ ಮಾಡಿಕೊಂಡು ಬರ್ತಿದ್ದೆ. ಗೊತ್ತೇ ಇರಲಿಲ್ಲ. ನೀವು ಆಚಾರ್ರು. ಇದನ್ನೆಲ್ಲಾ ....ತಿಂತೀರಿ?' ಅಂತ ಪೇಚಾಡಿಕೊಂಡಳು.
ರಾಜಾನಿಗೆ ಪಾಪ ಎನ್ನಿಸಿರಬೇಕು. 'ಈಗ ಎಲ್ಲಾ ನಡಿತದ. ಮನಿ ಬಿಟ್ಟು ಇಂತಾ ಶಹರದಾಗ ಇದ್ದ ಮ್ಯಾಲೆ ಎಲ್ಲಿ ಆಕಾಲದ ಪದ್ಧತಿಯೆಲ್ಲಾ ಮಾಡಲಿಕ್ಕೆ ಆಗ್ತದ? ಈಗ ಎಲ್ಲಾ ಓಕೆ. ಒಂದೇ ಚಮಚ ಹಾಕು ಸಾಕು,' ಅಂದ. ಈ ಪುಣ್ಯಾತ್ಗಿತ್ತಿಯ ಚಿತ್ರಾನ್ನದ ಚಿತ್ರಹಿಂಸೆಯಿಂದ ಪಾರಾದರೆ ಸಾಕಾಗಿದೆ ಅವನಿಗೆ.
ಸಂಕೋಚಪಡುತ್ತಲೇ ಒಂದೆರೆಡು ಚಮಚ ಒಗ್ಗರಣೆ ಅನ್ನವನ್ನು ಹಾಕಿದಳು. ಮೂಕಪ್ರೇಮದ ಕಾಲದ ಕುರುಡು ಪ್ರೇಮಿ ಅಂತ ಮೇಲಿದ್ದ ಗೋಡಂಬಿಗಳನ್ನೇ ಜಾಸ್ತಿ ಹಾಕಿ ಏನೋ ಮಾನ ಉಳಿಸಿಕೊಂಡಳು. ಚಿತ್ರಾನ್ನ ಬಡ ಭಕ್ಷ್ಯವಾದರೇನು? ಗೋಡಂಬಿ ಶ್ರೀಮಂತರದು. ಅಲ್ಲವೇ?
ಒಂದು ಕಾಲದ ಕಟ್ಟರ್ ಆಚಾರಿ ರಾಜಾ ಈಗ ಉಳ್ಳಾಗಡ್ಡೆ, ಬಳ್ಳೊಳ್ಳಿ ಎಲ್ಲವನ್ನೂ ಕತ್ತರಿಸುತ್ತಾನೆ ಅಂತ ತಿಳಿದ ಮೇಲೆ ಕೇಕ್ ತಿನ್ನುತ್ತಾನೋ ಇಲ್ಲವೋ ಅನ್ನುವದನ್ನು ಕೇಳಬೇಕು ಅಂತ ಅನ್ನಿಸಿತು.
'ರಾಜಾ, ಒಂದು ಮಾತು ಹೇಳು,' ಅಂತ ಪೀಠಿಕೆ ಇಟ್ಟಳು.
'ಏನವಾ ಕೇಳು?' ಅಂತ ಆಹಾರವನ್ನು ಅಗಿಯುತ್ತಲೇ ಮಾತಾಡಿದ. ಅವನ ಬಿಟ್ಟ ಬಾಯಿಯನ್ನು ನೋಡಿದರೆ ಒಳ್ಳೆ ಮಿಕ್ಸಿಯಲ್ಲಿ ಬಗ್ಗಿ ನೋಡಿದಂತಾಯಿತು ಇವಳಿಗೆ. ಆದರೂ ಪುರಾತನ ಪ್ರೇಮಿ ರಾಜಾ. ಎಲ್ಲಾ ಓಕೆ.
'ಕೇಕ್ ತಿಂತಿಯೇನು ಈಗ? ಅಥವಾ ಕೇಕು ಈಗೂ ವರ್ಜ್ಯವೋ?' ಅಂತ ಕೇಳಿದಳು.
'ಕೇಕs?? ಕೇಕ್ ಯಾಕ ತಿನ್ನೋದಿಲ್ಲಾ? ಮಸ್ತ ತಿಂತೇನಿ. ಹಾಕ್ಕೊಂಡು ದಬಾಯಿಸಿ ಕೇಕ್ ಕಟಿತೇನಿ. ನೀಲಗಿರಿ ಬೇಕರಿಗೆ ಹೋದೆ ಅಂದ್ರ ಮುಗೀತು. ಆಮೇಲೆ ಊಟ ಇಲ್ಲ ನೋಡವಾ. ಕೇಕ್ ಅಂದ್ರ ಭಾಳ ಸೇರ್ತದ ನನಗ,' ಅಂದುಬಿಟ್ಟ ರಾಜಾ.
ಇವಳು ಡೀಪ್ ಥಿಂಕಿಂಗ್ ಮೋಡಿಗೆ ಹೋದಳು. ಮತ್ತೆ ಸಮಾಧಿ ಸ್ಥಿತಿ. 'ಈ ಚಿತ್ರಾನ್ನದ ಗಿರಾಕಿ ಹೀಗೇಕೆ ಪದೇಪದೇ ಸಮಾಧಿ ತರಹದ ವಿಚಿತ್ರ ಸ್ಥಿತಿಗೆ ಹೋಗುತ್ತಾಳೆ?' ಅಂತ ರಾಜಾನಿಗೆ ಚಿಂತೆ ಮತ್ತು ಕಿರಿಕಿರಿ.
'ಏ, ಏ, ಇಕಿನ. ಮತ್ತ ಎಲ್ಲೆ ಕಳಕೊಂಡಿ?' ಅಂತ ಜೋರಾಗಿ ಮಾತಾಡುತ್ತ ಮುಖದ ಮುಂದೆ ಕೈಯಾಡಿಸಿದ.
'ಏನಿಲ್ಲ, ಏನಿಲ್ಲ,' ಅನ್ನುತ್ತ ಇವಳು ಸಮಾಧಿ ಸ್ಥಿತಿಯಿಂದ ಹೊರಬಂದಳು.
'ಯಾಕ ಕೇಳಿದಿ, ನಾನು ಕೇಕ್ ತಿಂತೇನೋ ಇಲ್ಲೋ ಅಂತ? ಹಾಂ?' ಅಂತ ಕೇಳಿದ ರಾಜಾ.
'ಅಲ್ಲೋ ರಾಜಾ, ಕೇಕ್ ಒಳಗ ತತ್ತಿ, ಕೋಳಿ ತತ್ತಿ, ಹಾಕಿರ್ತಾರ. ಅದಕ್ಕೇ ತಿನ್ನೋದಿಲ್ಲಾ ಅಂತ ಒಮ್ಮೆ ಸಾಲಿಯಾಗ ಇದ್ದಾಗ ನಿನ್ನ ದೋಸ್ತಗ ಹೇಳೋದನ್ನ ಕೇಳಿದ್ದೆ. ಅದಕ್ಕೇ ಕೇಳಿದೆ ಕೇಕ್ ತಿಂತಿಯೇನು ಅಂತ. ಈಗ ಕೋಳಿ ತತ್ತಿ ನಡಿತದ? ತತ್ತಿ ನಡಿತದ?' ಅಂತ ಭಾಳ ಮುಗ್ಧವಾಗಿ ಕೇಳಿದಳು.
ರಾಜಾ ಬಿದ್ದು ಬಿದ್ದು ನಕ್ಕ. ಪ್ಲೇಟ್ ಟೇಬಲ್ ಮೇಲಿಟ್ಟು ಸಿಕ್ಕಾಪಟ್ಟೆ ನಕ್ಕ. ಕಣ್ಣಲ್ಲಿ ನೀರು ಬಂದವು. ತಿನ್ನುತ್ತಿದ್ದ ಆಹಾರ ಗಂಟಲಿಗೆ ಸಿಕ್ಕಂತಾಗಿ ಕೆಮ್ಮಿದ. ಕೆಮ್ಮುತ್ತಲೇ ನಕ್ಕ. ಇವಳೇ ನೀರು ಕುಡಿಸಿದಳು.
'ಮಾರಾಳ, ಮಾರಾಳ! ಈಗ ಎಲ್ಲಾ ನಡಿತದ ನಮ್ಮವ್ವಾ. ಎಲ್ಲಾ ಓಕೆ. ಕೋಳಿ ತತ್ತಿನೂ ಓಕೆ. ಬಾತುಕೋಳಿ ತತ್ತಿನೂ ಓಕೆ. ಬರೇ ಕೋಳಿ ತತ್ತಿಯೊಂದೇ ಏನು ಹಚ್ಚಿ? ತತ್ತಿ ಅವ್ವಾ ಅಂದ್ರ ಕೊಕ್ಕೋ ಕೋಳಿ ಸಹಿತ ನಡಿತದ. ನೋಡಿಲ್ಲೆ. ನೋಡು, ನೋಡು,' ಅನ್ನುತ್ತ ತುಂಬಿದ ಪ್ಲೇಟಿನ ಮೂಲೆಯಲ್ಲಿದ್ದ ತಂದೂರಿ ಕೋಳಿಯ ಕಾಲಿನ ಪೀಸನ್ನು ಕೈಯಲ್ಲಿ ತೆಗೆದುಕೊಂಡವನೇ ಕಚಾಪಚಾ ಅಂತ ಅಗಿದಗಿದು ತಿಂದ. ಅಂಅಂ ಅಂತ ಜಗಿಜಗಿದು ತಿಂದ. ರನ್ನಿಂಗ್ ಕಾಮೆಂಟರಿ ಕೊಡುತ್ತ ತಿಂದ. 'ನೋಡು, ನೋಡು, ಹ್ಯಾಂಗ ಕೋಳಿ ಕಾಲು ತಿನ್ನಲಿಕತ್ತೇನಿ ಅಂತ. ತಂದೂರಿ ಕೋಳಿ ಮಸ್ತ ಆಗ್ಯದ. ಎಲ್ಲಿಂದ ಮಾಡಿಸಿ ತಂದಾರೋ ಏನೋ,' ಅನ್ನುತ್ತ ಬೆರಳು ನೆಕ್ಕಿ ನೆಕ್ಕಿ ತಿಂದ.
ಇವಳು ಗಾಬ್ ಹೊಡೆದು ನಿಂತಿದ್ದಳು. ದೊಡ್ಡ ಶಾಕ್ ಹೊಡೆದಿತ್ತು. 'ಶಾಲಾ ಸಮಯದಲ್ಲಿ ಉಳ್ಳಾಗಡ್ಡೆ, ಬಳ್ಳೊಳ್ಳಿ ಕೂಡ ತಿನ್ನದ ಶುದ್ಧ ಆಚಾರಿ ರಾಜಾ ಎಲ್ಲಿ, ಕೋಳಿ ಮೊಟ್ಟೆ ಹಾಕಿರುತ್ತಾರೆಂದು ಕೇಕ್ ಕೂಡ ತಿನ್ನದ ರಾಜಾ ಎಲ್ಲಿ, ಈಗಿನ ಮಾಂಸಾಹಾರಿ ರಾಜಾ ಎಲ್ಲಿ! ಎಲ್ಲಿ ಹೋಯಿತು ಇವನ ಬಾಹ್ಮಣ್ಯ? ಅಸಹ್ಯವಾಗಿ ಕಚಾಪಚಾ ಅಂತ ಕೋಳಿ, ಕುರಿ ಕತ್ತರಿಸುತ್ತಿದ್ದಾನೆ. ಛೇ!' ಅಂದುಕೊಂಡಳು.
'ನೀ ಬರ್ತೀ ಅಂತ ಮೊದಲೇ ಗೊತ್ತಿದ್ದ್ರ eggless ಕೇಕ್ ಮಾಡಿ ತರ್ತಿದ್ದೆ ನೋಡು. ನಿನ್ನ ನೋಡಿದರೆ ಈಗ ಎಲ್ಲಾ ಓಕೆ ಅಂತೀ,' ಅಂದಳು. ಬೈ ಬೈ ಹೇಳುವ ಮೊದಲು ಮಾತು ಮುಗಿಸಿಯೇ ಹೋಗಬೇಕು ನೋಡಿ.
'ಏ, ಎಲ್ಲಿ eggless ಹಚ್ಚಿ? ಮಸ್ತಾಗಿ ತತ್ತಿ ಹಾಕಿಯೇ ಕೇಕ್ ಮಾಡಿಕೊಂಡು ಬಾ,' ಅಂದವನೇ, 'egg curry ಸಹಾ ಯಾರೋ ಮಾಡಿಕೊಂಡು ತಂದಾರ. ಮಟನ್ ಬಿರ್ಯಾನಿ ಮತ್ತ ಅದರ ಜೋಡಿ ಎಗ್ ಕರಿ ಮಸ್ತ ಆಗ್ತದ ನೋಡು. ನೀ ಟ್ರೈ ಮಾಡಿಯೇನು?' ಅಂದವನೇ ಮಟನ್ ಬಿರ್ಯಾನಿ ಮೇಲೆ ಎಗ್ ಕರಿ ಸುರುವಿಕೊಂಡು ಗರಗರ ಅಂತ ಕಲೆಸತೊಡಗಿದ. ಬಿರ್ಯಾನಿಯನ್ನು ಕಿವುಚಿ ಕಿವುಚಿ ಉಂಡೆ ಕಟ್ಟತೊಡಗಿದ. ಇವಳಿಗೆ ನೋಡಲಾಗಲಿಲ್ಲ. ಇವಳು ಮುಖ ಕಿವುಚಿದಳು. ಅಸಹ್ಯ.
ಪುರಾತನ ಪ್ರೇಮಿ, ಶುದ್ಧ ಬ್ರಾಹ್ಮಣ, ಸಾತ್ವಿಕ ಆಹಾರವನ್ನಲ್ಲದೇ ಬೇರೆ ಏನನ್ನೂ ಸೇವಿಸದ ರಾಜಾ ಪೂರ್ತಿ ಬದಲಾಗಿ ಹೋಗಿದ್ದ. ಕೆಟ್ಟು ಕೆರಹಿಡಿದುಹೋಗಿದ್ದ. 'ಇಂತವನಿಗಾಗಿ ನಾನು ಕಳೆದ ಹದಿನೇಳು ವರ್ಷ ತಪ್ಪದೇ eggless ಕೇಕ್ ಮಾಡಿದೆನೇ? ಛೇ! What a waste! He doesn't deserve all that. Brute fellow!' ಅಂತ ಪರಿತಪಿಸಿದಳು.
ದೊಡ್ಡ ಪ್ರಮಾಣದ ಭ್ರಮನಿರಸನವಾಯಿತು. ರಾಜಾನ ಬಗೆಗಿನ ಭ್ರಮೆ ಕರಗತೊಡಗಿತು. ರಾಜಾನ ಬಗ್ಗೆ ಕಟ್ಟಿಕೊಂಡಿದ್ದ impression ಫುಲ್ ನುಚ್ಚುನೂರಾಗಿತ್ತು. ಮೆದುಳಿನಲ್ಲಿ ಒಂದರ ಮೇಲೊಂದರಂತೆ ಸ್ಪೋಟವಾದಂತೆ ಫೀಲ್ ಆಗತೊಡಗಿತು. ದೊಡ್ಡ ಪ್ರಮಾಣದ ಭ್ರಮೆ ಹಾಗೆಯೇ ನುಚ್ಚುನೂರಾಗುತ್ತದೆಯೇ!?
ಯಾಕೋ ತಲೆಗೆ ಚಕ್ಕರ್ ಬಂದಂತಾಯಿತು. ಅಲ್ಲೇ ಇದ್ದ ಖುರ್ಚಿ ಹಿಡಿದು ಕೂತಳು. ನೀರು ಕುಡಿದಳು. ಇವಳು ಮತ್ತೆ ಸಮಾಧಿ ಸ್ಥಿತಿಗೆ ಹೋದರೆ ಕಷ್ಟ ಅಂತ ಎಸ್ಕೇಪ್ ಆಗಲು ರೆಡಿ ಆದ ರಾಜಾ. 'ನಿನ್ನ ಭೆಟ್ಟಿಯಾಗಿದ್ದು ಭಾಳ ಸಂತೋಷ ಆತು. ಮತ್ತ ಸಿಗೋಣ. ಬಾಕಿ ಮಂದಿಯನ್ನೂ ಭೆಟ್ಟಿಯಾಗೋದದ. ಬರ್ಲೀ?' ಅಂದವನೇ ರಾಜಾ ರೈಟ್ ಹೇಳಿದ. ಪ್ಲೇಟಿಗೆ ಮತ್ತೊಂದಿಷ್ಟು ನಾನ್ವೆಜ್ ಖಾದ್ಯಗಳನ್ನು ತುಂಬಿಕೊಂಡೇ ಹೋದ. ಫುಲ್ ಬರ್ಬಾದಾಗಿದ್ದಾನೆ, ಜಾತಿ ಕೆಡಿಸಿಕೊಂಡಿದ್ದಾನೆ ಅಂತ ಇವಳಿಗೆ ಖಾತ್ರಿಯಾಯಿತು.
ಆಗಲೇ ಇವಳು ನಿರ್ಧರಿಸಿದಳು. ಇನ್ನೆಂದೂ ಕೇಕ್ ಮಾಡುವದಿಲ್ಲ. eggless ಕೇಕ್ ಅಂತೂ ಸುತಾರಾಮ್ ಮಾಡುವದಿಲ್ಲ!
ಇದೇ ನಿರ್ಧಾರ ಮಾಡಿ ಮನೆಗೆ ಬಂದಳು. ಬಂದು ಏನು ಮಾಡಿದಳು ಅಂತ ಮರೆತುಹೋಗಿದ್ದರೆ ಮತ್ತೆ ಮೇಲಿಂದ ಕಥೆ ಓದಲು ಆರಂಭಿಸಿ.
ವಿ.ಸೂ: ಇದೊಂದು ಕಾಲ್ಪನಿಕ ಕಥೆ

ಕೇಕ್ ಮಾಡುವ ಓವೆನ್ |

ಆಪ್ತಮಿತ್ರದ ಹುಚ್ಚಿ ನಾಗವಲ್ಲಿ. ಓವೆನ್ ಒಡೆದು ಹಾಕಿದ ಇವಳ ರೂಪವೂ ಸುಮಾರು ಹೀಗೇ ಇತ್ತು! |

6 comments:
Nice story... Enjoyed reading
Nice story... Enjoyed reading
ಆಚಾರಿ ಆಕೀ ಹೃದಯಾನ್ನ ಒಡದಾ. ಆಕಿ ಓವನ್ ಒಡದಳು. ಆಕೀ ಗಂಡ ತಲಿ ಒಡಕೊಂಡ. ಎಲ್ಲಿಂದೆಲ್ಲೀಗೆ ಹೋತು ನೋಡ್ರಿ ಕಾರ್ಯಕಾರಣ ಸಂಬಂಧ! ಇರಲಿ, ನಮಗಂತೂ ರುಚಿಕಟ್ಟಾದ potluck ಸಿಕ್ಕಿತಲ್ಲಾ ಹೊಡೀಲಿಕ್ಕೆ!
Thank you very much, Kushi.
Thank you, Sunaath sir.
Very good!
Worth a mini-serial with YesTV.
Post a Comment